ಪಾಡ್ದನಗಳು ತುಳು ಜನಪದ ಸಾಹಿತ್ಯದ ಒಂದು ವಿಶೇಷ ಪ್ರಕಾರ. ಇವು ತುಳುನಾಡಿನ ನಂಬಿಕೆ, ನಡವಳಿಕೆ, ಆಚಾರ, ವಿಚಾರ, ಕಟ್ಟುಕಟ್ಟಳೆ, ವಿಧಿ ನಿಷೇಧ, ಆರಾಧನೆ, ಆಚರಣೆ, ಯುದ್ಧ, ಕ್ರೀಡೆ, ಬೇಟೆ, ಆರ್ಥಿಕ, ರಾಜಕೀಯ, ನ್ಯಾಯವ್ಯವಸ್ಥೆ, ಜಾತಿ ವ್ಯವಸ್ಥೆ, ಬಂಧುತ್ವ, ವ್ಯವಸ್ಥೆ, ಹೆಣ್ಣು – ಗಂಡಿನ ಸಂಬಂಧ ಸಂಘರ್ಷಗಳನ್ನು ಸಮಗ್ರವಾಗಿ ಪ್ರಕಟಿಸುವ ಮೌಖಿಕ ದಾಖಲೆಗಳಾಗಿವೆ. ‘ಪಾಡ್ದನಗಳು ಕೇವಲ ‘ನಿಶ್ಚಲ’ ಗತವನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ ಭೂತ ವರ್ತಮಾನಗಳ ಚಲನಶೀಲ ಸಂಬಂಧಗಳನ್ನು ಪ್ರತಿನಿಧಿಸುತ್ತವೆ’ (ಕ್ಲಾಸ್‌, ಅನು: ನಾವಡ, ಸುಭಾಶ್ಚಂದ್ರ ೧೯೮೭:೪೩) ತುಳುವ ಸಂಸ್ಕೃತಿಯ ಅಧ್ಯಯನ ಹಾಗೂ ಮರುರಚನೆಯಲ್ಲಿ ಪಾಡ್ದನಗಳು ಪಾಡ್ದನಗಳು ಪ್ರಮುಖ ಮೌಖಿಕ ಅಕರಗಳಾಗಿ ನಿಲ್ಲುತ್ತವೆ.

ಪಾಡ್ದನಗಳು ತುಳುವ ಸಂಸ್ಕೃತಿಯ ಬಿತ್ತರಣೆಯ ಕೇಂದ್ರಗಳು. ಇವು ತುಳುವ ಗಂಡಸರ ಮನಸ್ಸು ರೂಪಿಸಿದ ನೇಯ್ಗೆ ಅಲ್ಲ, ತುಳುವ ಮಹಿಳೆಯರ ಮನಸ್ಸಿನ ಅಭಿವ್ಯಕ್ತಿಗಳು. ಪಾಡ್ದನಗಳನ್ನು ವಾರ್ಷಿಕಾವರ್ತನ ಹಾಗೂ ಜೀವನಾವರ್ತನಗಳ ಕೆಲವು ಸಂದರ್ಭಗಳಲ್ಲಿ ಹಾಡಲಾಗುತ್ತದೆ. ಭೂತಾರಾಧನೆಯಂತಹ ಧಾರ್ಮಿಕ ಆವರಣದಲ್ಲಿ ಪಾಡ್ದನ ಹಾಡುಗಾರಿಕೆಯ ಉದ್ದೇಶ ಧಾರ್ಮಿಕ ಸ್ವರೂಪದ್ದಾಗಿದ್ದು ಭೂತವೊಂದರ ಹುಟ್ಟು, ಸಂಚಾರ ಹಾಗೂ ಕಾರಣಿಕಗಳನ್ನು ಹೇಳಲಾಗುತ್ತದೆ. ಭೂತಕಟ್ಟುವವನು ಆಯಾ ಭೂತದ ವೇಷಭೂಷಣ ಹಾಕಿಕೊಳ್ಳುತ್ತಾ ಅವನು ಹಾಗೂ ಅವನ ಮನೆಯ ಮಹಿಳೆಯೊಬ್ಬಳು ತೆಂಬರೆ ಬಡಿಯುತ್ತಾ ಪಾಡ್ದನ ಹಾಡುವರು. ಹಾಗೆ ಹಾಡುವ ಮೂಲಕ ಅವನಲ್ಲಿ ಭೂತ ಮೈದುಂಬುತ್ತದೆ.

ಪಾಡ್ದನ ಹಾಡುವ ಮಹಿಳಾ ಸಂಪ್ರದಾಯ ಬತ್ತದ ನೇಜಿ (ಎಳೆ ಸಸಿ) ಕೀಳುವ ಮತ್ತು ನೆಡುವ ಸಂದರ್ಭಗಳಲ್ಲಿ, ಮದುಮಗಳಿಗೆ ಮದರಂಗಿ (ಮೆಹಂದಿ) ಹಚ್ಚುವ ಸಂದರ್ಭದಲ್ಲಿ ಹಾಗೂ ಬಿಡುವಿನ ವೇಳೆಯಲ್ಲಿ ಮನೆಯ ಆವರಣದೊಳಗೆ ಪ್ರದರ್ಶನಗೊಳ್ಳುತ್ತದೆ. ಈ ಎಲ್ಲ ಸಂದರ್ಭಗಳಲ್ಲೂ ಪಾಡ್ದನ ಹಾಡುಗಾರರು ಮಹಿಳೆಯರಾಗಿದ್ದು ಮೇಲುನೋಟಕ್ಕೆ ದಣಿವು ಪರಿಹಾರ ಹಾಗೂ ಮನರಂಜನೆಯ ಉದ್ದೇಶವಾಗಿ ಕಂಡರೂ ತುಳುವ ಪರಿಕಲ್ಪನಾತ್ಮಕ ಜಗತ್ತಿನ ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆಯ ಒಳ ಉದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ. ಪಾಡ್ದನ ಹಾಡುಗಾರ್ತಿಯರು ಪಾಡ್ದನದ ವಿವರಗಳನ್ನು ಚೆನ್ನಾಗಿ ಬಲ್ಲವರಾಗಿದ್ದು ಮಾತೃರೂಪಿ ಸಂಸ್ಕೃತಿಯ ವಕ್ತಾರರಾಗಿ ಕಂಡುಬರುತ್ತಾರೆ. ಈ ನೆಲೆಯಲ್ಲಿ ಮಹಿಳಾ ಪ್ರಕಾರವಾದ ಪಾಡ್ದನಗಳಲ್ಲಿನ ಸ್ತ್ರೀತ್ವದ ಪ್ರತಿನಿಧೀಕರಣ ಹಾಗೂ ಮಾತೃರೂಪಿ ಎಳೆಗಳ ಶೋಧ ಬಹಳ ಕುತೂಹಲಕರವಾದದ್ದು. ಇವು ಪ್ರಕಟಿಸುವ ವೈಯುಕ್ತಿಕ, ಕೌಟುಂಬಿಕ, ಸಾಮಾಜಿಕ ಸಂಬಂಧಗಳ ಅಘೋಷಿತ ಸತ್ಯಗಳು ಸಾಂಪ್ರದಾಯಿಕ ನಿರೀಕ್ಷಿತ ಸ್ತ್ರೀತ್ವವನ್ನು ಪ್ರಶ್ನೆಗೊಡ್ಡುತ್ತವೆ.

ಇದುವರೆಗೆ ಪಾಡ್ದನಗಳ ಸಂಗ್ರಹ, ಅಧ್ಯಯನ ಸಂಗ್ರಹ, ಅಧ್ಯಯನ ನಡೆದದ್ದು ಕಡಿಮೆ. ಹಾಗೆ ನಡೆದ ಸಂಗ್ರಹ, ಅಧ್ಯಯನಗಳೂ ಪುರುಷ ದೃಷ್ಟಿಕೋನದಿಂದಲೇ ನಡೆದಿವೆ. ಬಹುತೇಕ ಸಂಗ್ರಹಗಳು ಭೂತಕಟ್ಟುವ ವ್ಯಕ್ತಿಯಿಂದ ಸಂಗ್ರಹಿತವಾಗಿದ್ದು ಪುರುಷ ಪರಂಪರೆಯವಾಗಿವೆ. ಭೂತಾರಾಧನೆಯ ಅಧ್ಯಯನಗಳು ಭೂತ ಕಟ್ಟುವ ಹಾಗೂ ಅರಾಧನಾ ಪ್ರಕ್ರಿಯೆಗಳ ಮೇಲೆ ಕೇಂದ್ರಿತವಾಗಿದ್ದು, ಪಾಡ್ದನಗಳ ಬಗೆಗೆ ಗಂಭೀರ ಚಿಂತನೆಗಳು ನಡೆದಿಲ್ಲ. ಹೀಗಾಗಿ ಪಾಡ್ದನ ಸಂಪ್ರದಾಯ ಮಹಿಳಾ ಪರಂಪರೆಯು ಅಧ್ಯಯನ ಕಕ್ಷೆಯಿಂದ ಹೊರಗುಳಿಯಿತು. ಈಗಿನ ಅಗತ್ಯ ಎಂದರೆ ನಮ್ಮ ಅಧ್ಯಯನಕ್ಕೆ ಮಹಿಳಾ ಪರಂಪರೆಯ ಪಾಡ್ದನಗಳನ್ನು ಆಯ್ದುಕೊಂಡು ಅವುಗಳನ್ನು ಸ್ತೀವಾದಿ ನೆಲೆಯಿಂದ ನೋಡುವುದು. ಇಂತಹ ಮಹಿಳಾ ಜಾನಪದ ಪ್ರಕಾರವಾದ ಪಾಡ್ದನಗಳು ಪ್ರಕಟಿಸುವ ಸ್ತ್ರೀತ್ವದ ಮಾದರಿಗಳನ್ನು ಕಂಡುಕೊಳ್ಳುವುದು ಇಲ್ಲಿನ ನನ್ನ ಪ್ರಧಾನ ಉದ್ದೇಶ. ಇದಕ್ಕಾಗಿ ತುಳುವರು ತಮ್ಮ ಸಾಂಸ್ಕೃತಿಕ ನಾಯಕಿಯರಾಗಿ ಗ್ರಹಿಸುವ ಬಲಜೇವು ಮಾನಿಗ, ಕಲ್ಲುರ್ಟಿ, ಮಾಯಂದಾಲ್, ನಾಗಸಿರಿ ಪಾಡ್ದನಗಳನ್ನು ನನ್ನ ಈ ಹುಡುಕಾಟಕ್ಕೆ ಮೂಲ ಆಕರವಾಗಿ ಆಯ್ದುಕೊಂಡಿದ್ದೇನೆ. ಈ ಎಲ್ಲ ಪಾಡ್ದನಗಳು ಸ್ತ್ರೀಕೇಂದ್ರಿತವಾದ ಮಾತೃರೂಪಿ ಸಂಸ್ಕೃತಿಯೊಂದರ ಹೆಣ್ಣುತನದ ಅಸ್ತಿತ್ವ ಹಾಗೂ ಪ್ರಾಧಾನ್ಯವನ್ನು ವಿವಿಧ ನೆಲೆಗಳಲ್ಲಿ ದಾಖಲಿಸುತ್ತವೆ.

ಹೆಣ್ಣಿನ ವಿಜಯದ ಸಂಕೇತ : ಬಲಜೇವು ಮಾನಿಗ

ಬಲಜೇವು ಮಾನಿಗ ಪಾಡ್ದನದ ಬಹುಪಠ್ಯಗಳು ಲಭ್ಯವಾಗಿದ್ದು ಅವು ಈಗಾಗಲೆ ದಾಖಲಿತವಾಗಿವೆ(ಕ್ಲಾಸ್ ಪೀಟರ್, ೧೯೯೪) ನನ್ನ ಅಧ್ಯಯನಕ್ಕೆ ಕ್ಲಾಸ್ ಅವರು ಸಂಗ್ರಹಿಸಿದ ಎರಡು ಭಿನ್ನ ಪಠ್ಯಗಳನ್ನು ಬಳಸಿಕೊಂಡಿದ್ದೇನೆ. ವಿವಾಹಿತೆ ಮಾನಿಗಳ ಕ್ರಿಯಾಚಟುವಟಿಕೆಗಳ ವಿಶ್ಲೇಷಣೆಗೆ ದೇಯಿ ಮೂಲ್ಯೆದಿಯ ಪಾಠವನ್ನು ಹಾಗೂ ಅವಿವಾಹಿತೆ ಮಾನಿಗಳ ಬದುಕಿನ ವಿವರಗಳಿಗಾಗಿ ಅಕ್ಕು ಮತ್ತು ಕಮಲಾ ಪೂಜಾರ್ತಿಯರ ಪಠ್ಯವನ್ನು ಆಯ್ಕೆ ಮಾಡಿಕೊಂದ್ದೇನೆ. ವಿವಾಹ ಪೂರ್ವ ಮಾನಿಗಳ ಬದುಕಿನ ವಿವರಣೆಗಳು ಮಾನಿಗಳನ್ನು ಅರ್ಥೈಸಿಕೊಳ್ಳಲು ಬಹಳ ಮಹತ್ವದ ಪೂರಕ ಸಾಮಾಗ್ರಿಯಾಗಿ ನಿಲ್ಲುತ್ತವೆ ಎನ್ನುವುದು ನನ್ನ ಆಯ್ಕೆಗೆ ಕಾರಣವಾಗಿದೆ.

ಮಾತೃರೂಪಿ ತುಳುವ ಸಂಸ್ಕೃತಿಯಲ್ಲಿ ತೆರ (ವಧುದಕ್ಷಿಣೆ)ದ ಪ್ರಶ್ನೆ ವಿವಾಹ ಕುದುರುವಲ್ಲಿ ಒಂದು ಪ್ರಧಾನ ಸಂಗತಿಯಾಗಿದ್ದು ಹಲವು ಸಂದರ್ಭಗಳಲ್ಲಿ ಅದು ವಿವಾಹವೊಂದರ ನಿರ್ಧಾರಕ ಅಂಶವಾಗುತ್ತದೆ. ತಾಯಾಳಿಕೆಯ ನಿಯಮದಂತೆ ಬಲ್ಲಾಳಮಾನಿಗಳ ‘ಹಕ್ಕಿನಗಂಡ’ ನಾಗಿದ್ದು ತೆರ ನೀಡದೆ ಧರ್ಮಧಾರೆಯಾಗುವುದು ಸಂಪ್ರದಾಯ. ಈ ಹಕ್ಕಿನಿಂದಲೆ ಬಲ್ಲಾಳ ಮಾನಿಗಳನ್ನು ಧರ್ಮಧಾರೆಯಾಗುವುದು ಸಂಪ್ರದಾಯ. ಈ ಹಕ್ಕಿನಿಂದಲೆ ಬಲ್ಲಾಳ ಮಾನಿಗಳನ್ನು ಧರ್ಮಧಾರೆಯಾಗುತ್ತಾನೆ. ಹೀಗೆ ತೆರ ನೀಡದೆ ಆಗುವ ಮದುವೆ ತನ್ನ ಗೌರವಕ್ಕೆ ಕಡಿಮೆ ಎಂದು ಮಾನಿಗ ಪರಿಭಾವಿಸುತ್ತಾಳೆ, ವಿರೋಧ ವ್ಯಕ್ತಪಡಿಸುತ್ತಾಳೆ. ಮಾನಿಗ ಬಲ್ಲಾಳನಿಂದ ಕೋರುವ ವಸ್ತು ಸಂಪತ್ತನ್ನು ಆಕೆಯ ಸೋದರ ಮಾವ ಬಿಕ್ರಮ ನೀಡಬಂದಾಗ ತಾತ್ವಿಕ ಪ್ರಶ್ನೆಯ ನೆಲೆಯಲ್ಲಿ ಅವನ್ನು ಮಾನಿಗ ನಿರಾಕರಿಸುತ್ತಾಳೆ. ಮಾತೃರೂಪಿ ಕುಟುಂಬ ವ್ಯವಸ್ಥೆಯಲ್ಲಿ ಮನೆತನದ ವಸ್ತು ಸಂಪತ್ತುಗಳು ಮಹಿಳಾ ಸಂಬಂಧಿಯಾಗಿದ್ದು ವಾಸ್ತವಿಕವಾಗಿ ಅವು ತನ್ನ ತಾಯಿಯದಾಗಿದ್ದು ತಾತ್ವಿಕವಾಗಿ ತನ್ನ ಸೊತ್ತೇ ಆಗಿವೆ ಎಂದು ಪ್ರತಿಪಾದಿಸುತ್ತಾಳೆ. ಬಲ್ಲಾಳನ ಮನೆಯ ಸಂಪತ್ತನ್ನು ತೆರದ ರೂಪದಲ್ಲಿ ಪಡೆಯುವ ಮಾನಿಗಳ ಹಟದಲ್ಲಿ ಆರ್ಥಿಕ ದೃಷ್ಟಿಯ ಉದ್ದೇಶವಿಲ್ಲ. ಸೋದರಿಕೆಯ ನೆಲೆಯಲ್ಲಿ ತೆರ ನೀಡದೆ ಧರ್ಮಧಾರೆಯಾಗುವ ಗಂಡಿನ ಹಕ್ಕು ಹೆಣ್ಣೊಬ್ಬಳ ವ್ಯಕ್ತಿತ್ವಕ್ಕೆ ಮಾಡುವ ಅವಮಾನವಾಗಿ ಆಕೆ ಗ್ರಹಿಸುತ್ತಾಳೆ. ತೆರದ ಪ್ರಶ್ನೆ ಆಕೆಗೆ ಗೌರವದ ಪ್ರಶ್ನೆಯಾಗಿರುವುದರಿಂದಲೇ ಮದುವೆಯ ಸಂದರ್ಭದಲ್ಲಿ ಗಂಡಿನ ಮನೆಯಿಂದ ಹೆಣ್ಣು ಪಡೆಯಬಹುದಾದ ಸಂಪತ್ತನ್ನು – ಗೌರವವನ್ನು ಯಾವುದೇ ಮುಲಾಜಿಲ್ಲದೆ ರಿಯಾಯಿತಿ ಇಲ್ಲದೆ ಪಡೆಯುವ ನಿರ್ಧಾರ ಮಾನಿಗಳದು. ಮಾನಿಗಳ ಈ ಪ್ರತಿಪಾದನೆ ಆವರೆಗೆ ಹಕ್ಕಿನ ಗಂಡನೊಬ್ಬನಿಗೆ ಸಾಮಾನ್ಯವಾಗಿದ್ದ ತೆರ ನೀಡದೆ ವಿವಾಹಬಾಗಬಹುದಾದ ಹಕ್ಕನ್ನು ಮುರಿಯುತ್ತದೆ.

ಬಲ್ಲಾಳ ತನ್ನನ್ನು ಧರ್ಮಧಾರೆಯಾದುದು ಮಾನಿಗಳ ಸ್ವಾಭಿಮಾನಕ್ಕೆ ಆಘಾತವನ್ನು ಉಂಟು ಮಾಡುತ್ತದೆ. ಅವಳ ದೃಷ್ಟಿಯಲ್ಲಿ ಇದು ತನ್ನ ಪ್ರತಿಷ್ಠೆ ಹಾಗೂ ಹೆಣ್ಣುತನಕ್ಕೆ ಆದ ಅವಮಾನ. ಹೀಗಾಗಿ ಧಾರೆಯಾಗಿ ತವರಿಗೆ ಬಂದ ಮಾನಿಗ ಮತ್ತೆ ಗಂಡನ ಮನೆಗೆ ಹೋಗುವ ಸಂಪ್ರದಾಯವನ್ನು ದಿಕ್ಕರಿಸುತ್ತಾಳೆ. ಬಂಧುತ್ವ ಕುಟುಂಬ ರಚನೆಯಲ್ಲಿ ಸಾಧ್ಯವಾಗುವ ಅಣ್ಣತಂಗಿಯರ ನಡುವಣ ಬಾಂಧವ್ಯ ಬಹು ಗಾಢ ಹಾಗೂ ತೀವ್ರವಾದುದು. ತೀವ್ರವಾದ ಈ ಬಾಂಧವ್ಯವನ್ನು ಮಾನಿಗಳ ಅಣ್ಣ ಬಲದಂಡ ಒಂದು ತಂತ್ರವಾಗಿ ಬಳಸಿಕೊಳ್ಳುತ್ತಾನೆ. ಇಲ್ಲಿ ಬಲಾತ್ಕಾರದಿಂದ ಅಥವಾ ಒತ್ತಾಯ ಹೇರಿ ತಂಗಿಯನ್ನು ಕರೆದೊಯ್ಯುವ ಶಕ್ತಿ ಅಥವಾ ನಿಯಂತ್ರಣ ಅವನದಲ್ಲ ಎನ್ನುವುದನ್ನು ಗಮನಿಸಬೇಕು. ಅಂತಹ ಬಲಾತ್ಕಾರ ಅಥವಾ ಒತ್ತಾಯದ ಹೇರಿಕೆ ಇಲ್ಲಿ ಗಂಡಿಗೆ ಸಾಧ್ಯವಿಲ್ಲ. ಮತ್ತು ಅಂತಹ ಹೇರಿಕೆಯನ್ನು ರಾಜಿ ಮಾಡಿಕೊಳ್ಳುವ ಪ್ರವೃತ್ತಿ ಇಲ್ಲಿನ ಹೆಣ್ಣಿನದಲ್ಲ. ಹೀಗಾಗಿ ಇದನ್ನು ಪೀಟರ್‌ ಕ್ಲಾಸ್ ಹೇಳುವಂತೆ ‘ಹೆಣ್ಣಿನ ಮೇಲೆ ಪುರುಷಾಧಿಕಾರದ ನಿಯಂತ್ರಣ’ ಎನ್ನಲಾಗದು. ಅಣ್ಣ ಬಲದಂಡನ ಉದ್ದೇಶದ ನೆರವೇರಿಕೆ – ಬಲ್ಲಾಳನ ಮನೆಗೆ ಮಾನಿಗಳ ಮರುಪ್ರವೇಶ ಪ್ರಕರಣ ಅವಳ ದುರಂತದ ಮೂಲವಾಗಿ ಪಾಡ್ದನಗದೊಳಗೆ ಬೆಳೆಯುತ್ತದೆ.

ಬಲ್ಲಾಳ ಚೆನ್ನೆಯಾಡಲು ಆಹ್ವಾನಿಸಿದಾಗ ಮಾನಿಗ ‘ನಾನು ಚೆನ್ನೆ ಆಡಬೇಕಾದರೆ ನನಗೆ ಚಿನ್ನದ ಮಣೆ, ಮುತ್ತಿನ ಕಾಯಿ ಆಗಬೇಕು’, ಇನ್ನೊಂದು : ‘ಬಲ್ಲಾಳರೆ ನಾನು ಸೋತರೆ ನೀವು ನನಗೆ ಪೊರಿ ಅಳೆಯಬೇಕು, ನೀವು ಸೋತರೆ ಬಲ್ಲಾಳರೆ ನಾನು ನಿಮಗೆ ಪೊರಿ ಅಳೆಯುತ್ತೇನೆ’ ಎಂದು ಪಂಥ ಒಡ್ಡುತ್ತಾಳೆ. ಗಂಡ ಹೆಂಡಿರ ಚೆನ್ನೆಯಾಟದ ಮುನ್ನಿನ ಷರತ್ತಿನ ಈ ಪ್ರಕರಣ ಹೆಣ್ಣೊಬ್ಬಳ ಆಯ್ಕೆಯ ಸ್ವಾತಂತ್ರ್ಯವನ್ನು ದಾಖಲಿಸುತ್ತದೆ. ಪಂಥ ಒಡ್ಡುವ ಮಾನಿಗಳ ಮಾತಿನಲ್ಲಿ ತನ್ನ ಜಾಣ್ಮೆಯ ಬಗೆಗೆ ಬಲವಾದ ನಂಬಿಕೆಯಿದೆ. ಗಂಡನನ್ನು ತಾನು ಸೋಲಿಸಬಲ್ಲೆ ಎನ್ನುವ ಅಗಾಧವಾದ ಆತ್ಮವಿಶ್ವಾಸದಿಂದ ಮಾನಿಗ ಪಂಥ ಒಡ್ಡಿ ಆಟಕ್ಕೆ ತೊಡಗುತ್ತಾಳೆ.

ಒಂದೊಂದು ಆಟದಲ್ಲೂ ಬಲ್ಲಾಳ ಸೋಲು ಕಾಣತ್ತಾ ನಡೆದಾಗ ಗೆದ್ದ ಮಾನಿಗ ಅವನನ್ನ ಅಪಹಾಸ್ಯ ಮಾಡುತ್ತಾಳೆ. ಕೊನೆಯ ಸುತ್ತಿನಲ್ಲಿ ತನ್ನ ಸೋಲು ಖಚಿತವಾದಾಗ ಬಲ್ಲಾಳ ಬಾಯಾರಿಕೆಯ ನೆಪಮಾಡಿ ಹಾಲು ತರುವಂತೆ ಮಾನಿಗಳನ್ನು ಒತ್ತಾಯಿಸುತ್ತಾನೆ. ಮಾನಿಗ ಒಳಹೋದಾಗ ಬಲ್ಲಾಳನು ಮಣೆಯನ್ನು ತಿರುವುಮುರುವು ಮಾಡಿಡುತ್ತಾನೆ. ಇದನ್ನು ಗಮನಿಸಿದ ಮಾನಿಗ ಕೋಪದಿಂದ ಚೆನ್ನೆಮಣೆಯನ್ನು ಎಡಕಾಲಿನಿಂದ ತುಳಿದು ಆಟ ಮುರಿದು ಬಲ್ಲಾಳನ ಮೋಸವನ್ನು ಪ್ರತಿಭಟಿಸುತ್ತಾಳೆ. ತನ್ನ ಮೋಸ ಬಹಿರಂಗವಾದುದನ್ನು ಸಹಿಸದ ಬಲ್ಲಾಳನು ಕೋಪಗೊಂಡು ‘ಚೆನ್ನೆಮಣೆಯನ್ನು ತುಳಿದ ಹೆಣ್ಣು ನೀನು, ನನ್ನ ಅರಮನೆಯನ್ನು ಉಳಿಸುವೆಯಾ?’ ಎಂದು ಹೊಡೆಯುತ್ತಾನೆ. ಬಲ್ಲಾಳನ ಹೊಡೆತ ತುಳಿತಕ್ಕೆ ಅನ್ನ – ನೀರು – ಸ್ನಾನ ಬಿಟ್ಟು ಬೋರಲು ಮಲಗಿ, ಅರಮನೆಯ ದಿನಚರಿಯನ್ನು ಅಸ್ತವ್ಯಸ್ತಗೊಳಿಸುವ ಮಾನಿಗಳ ಪ್ರತಿಕ್ರಿಯೆಯಲ್ಲಿ ಹೆಣ್ಣಿನ ಕೆಲಸ ಕುಟುಂಬವೊಂದರ ಸಾಮರಸ್ಯಕ್ಕೆ ಎಷ್ಟು ಅವಶ್ಯ ಎನ್ನುವುದನ್ನು ತೋರುತ್ತದೆ. ಬಲ್ಲಾಳ ತನ್ನ ತಪ್ಪನ್ನು ಒಪ್ಪಿಕೊಂಡು ಮಾನಿಗಳನ್ನು ಸಾಂತ್ವನ ಮಾಡಿದರೂ ಮಾನಿ ತನ್ನ ನೈತಿಕತೆಗೆ ಅಪಚಾರವನ್ನು ರಾಜಿಯಲ್ಲಿ ಕರಗಿಸಲು ಸಿದ್ಧಳಿಲ್ಲ. ‘ಒಳ್ಳೆಯ ಬತ್ತವನ್ನು ಒಳ್ಳೆಯ ಹುಲ್ಲಿನಿಂದ ಕಟ್ಟಬೇಕು. ನನ್ನನ್ನು ಮಟ್ಟಾನ ಮಡಾಂದ್ರಕ್ಕೆ ಕೊಟ್ಟು ಕಳುಹಿಸಿ’ ಎಂದು ಪಟ್ಟು ಬಿಡದೆ ಹಟ ಹಿಡಿಯುತ್ತಾಳೆ. ಉಂಡ ಅನ್ನದಲ್ಲಿ, ಉಟ್ಟ ಬಟ್ಟೆಯಲ್ಲಿ ಹೊರಟ ಮಾನಿಗಳನ್ನು ಬಲ್ಲಾಳ ಸಿಂಗರಿಸಿದ ದಂಡಿಗೆಯಲ್ಲಿ ಎತ್ತಿ ಕುಳ್ಳಿರಿಸಿ ಕಳುಹಿಸಿಕೊಡುತ್ತಾನೆ.

ಮತ್ತೆರಡು ದಿನಕ್ಕೆ ಬಲ್ಲಾಳ ಮಾನಿಗಳನ್ನು ಆಹ್ವಾನಿಸಿ ದಂಡಿಗೆ ಕಳುಹಿಸುತ್ತಾನೆ. ಮಾನಿಗಳಿಗೆ ತನ್ನ ಸ್ವಾಭಿಮಾನದ ಬದುಕು ಮುಖ್ಯವೇ ಹೊರತು ಗಂಡನ ಹೆಂಡತಿಯಾಗಿ ಬದುಕುವ ಸ್ಥಿತಿಯಲ್ಲ. ಮಾತೃ ಪ್ರಧಾನ ಸಂಸ್ಕೃತಿಯ ಹೆಣ್ಣೊಬ್ಬಳ ಪಾತಿವ್ರತ್ಯ, ಪತಿಭಕ್ತಿಯ ಕಲ್ಪನೆ ಪಿತೃಪ್ರಧಾನ ಮಾದರಿಗಿಂತ ಭಿನ್ನವಾದುದು. ಹೀಗಾಗಿ ಬಲ್ಲಾಳರು ಸಿಂಗರಿಸಿದ ದಂಡಿಗೆ ಕಳುಹಿಸಿ ತನ್ನನ್ನು ಆಮಂತ್ರಿಸಿದರೂ ಮಾನಿಗ ಅವನ ರಾಜಿಯ ಬಯಕೆಯನ್ನು ಉಗ್ರವಾಗಿ ತಿರಸ್ಕರಿಸುತ್ತಾಳೆ. ಹಟ್ಟಿ ಕೊಟ್ಟಿಗೆಯ ಕುಂಟು ಪೊರಕೆಗೆ ತನ್ನ ಸೀರೆ ರವಕೆ ಉಡಿಸಿ, ಕರಿಮಣಿ, ಮೂಗುತಿ, ಕಾಲುಂಗುರವನ್ನು ತೊಡಿಸಿ ಆ ದಂಡಿಗೆಯಲ್ಲಿಟ್ಟು ದಂಡಿಗೆಯ ಬಾಗಿಲನ್ನು ಬಲ್ಲಾಳರೇ ತೆಗೆಯಬೇಕೆಂದು ತಾಕೀತು ಮಾಡಿ ಕಳುಹಿಸುತ್ತಾಳೆ. ಇಲ್ಲಿ ಮಾನಿಗಳ ಪ್ರತಿಭಟನೆಯ ತೀವ್ರತೆಯನ್ನು ಅರ್ಥೈಸಬೇಕಾದರೆ ಇಲ್ಲಿನ ವಸ್ತು ಪರಿಕರಗಳ ಸಾಂಸ್ಕೃತಿಕ ಸೂಕ್ಷ್ಮವನ್ನು ವಿಶ್ಲೇಷಿಸಬೇಕು. ಶ್ರೇಷ್ಠೆನೆಂದು ಪರಿಗಣಿತನಾದ ವ್ಯಕ್ತಿಗೆ ಅನಿಷ್ಟವೆಂದು ಗ್ರಹೀತವಾದ ಕನಿಷ್ಠ ವಸ್ತು ಪರಿಕರಗಳ ಮೂಲಕ ಸಲ್ಲಿಸುವ ಮಾನಿಗಳ ಪ್ರತಿಭಟನೆಗೆ ಒಂದು ವಿಶೇಷ ಶಕ್ತಿಯಿದೆ. ಕರಿಮಣಿ, ಕಾಲುಂಗುರ, ಮೂಗುತಿಯನ್ನು ಕಳಚಿ ಬಲ್ಲಾಳನಿಗೆ ಕಳುಹಿಸುವ ಪ್ರಕ್ರಿಯೆಯನ್ನು ಗಂಡು ವಿವಾಹದ ಮೂಲಕ ಹೆಣ್ಣಿನ ಮೇಲೆ ಸ್ಥಾಪಿಸುವ ಹಕ್ಕಿನ ನಿರಾಕರಣೆಯಾಗಿ ಅರ್ಥೈಸಬೇಕಾಗಿದೆ. ಗಂಡನು ಜೀವಂತವಿದ್ದು ಅವನ ಸಾವನ್ನು ಪ್ರತಿನಿಧೀಕರಿಸುವ ಮಾನಿಗಳ ಪ್ರತಿಭಟನೆ ಬಲ್ಲಾಳನ ಸಾಂಸ್ಕೃತಿಕ ಅಧಿಕಾರವನ್ನಷ್ಟೇ ಅಲ್ಲ ಅವನ ಭೌತಿಕ ಅಸ್ತಿತ್ವವನ್ನು ಕೂಡಾ ಅಲ್ಲಗಳೆಯುವಂತಹದು. ಗಂಡಿನ ಅಧಿಕಾರ ಹಾಗೂ ನಿಯಂತ್ರಣದ ವಿರುದ್ಧ ಹೋರಾಡುತ್ತ ಮಾನಿಗ ಉದ್ದಕ್ಕೂ ಸಂಘರ್ಷಕ್ಕೆ ಒಳಗಾಗುತ್ತಾಳೆ. ಹೆಣ್ಣಿನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಮಾನಿಗಳನ್ನು ಅಹಂಕಾರದ ಹಟಮಾರಿ ಸ್ವಾರ್ಥದ ಹೆಣ್ಣು ಎಂದು ತಿಳಿಯದೆ ತನ್ನತನದ ಮತ್ತು ತನ್ನ ಹಕ್ಕಿಗಾಗಿ ಹೋರಾಟ ನಡೆಸಿದ ಹೆಣ್ಣು ಎಂದು ತಿಳಿಯಬೇಕಾಗುತ್ತದೆ.

ದೂರದಿಂದ ದಂಡಿಗೆ ಬರುವುದನ್ನು ಬಲ್ಲಾಳ ಕಂಡನು. ತನ್ನ ಮದುಮಗಳು ಬಂದಳೆಂದು ಸಂಭ್ರಮದಿಂದ ಓಡಿದನು. ದಂಡಿಗೆಯ ಬಾಗಿಲು ತೆರೆದು ನೋಡಿ ಕಿಡಿಕಿಡಿಯಾದನು.

ದಂಡಿಗೆಯ ಬಾಗಿಲನ್ನೇ ತೆರೆದು ನೋಡಿದ ಬಲ್ಲಾಳ
ಏಳು ಖಂಡುಗ ಕೋಪಿಸಿದ, ಏಳು ಖಂಡುಗ ಎಗರಾಡಿದ
ಅವನು (ಗಂಡ) ಜೀವದಲ್ಲಿರುವಾಗಲೇ, ಅವಳು
ಕರಿಮಣಿ, ಮೂಗುತಿ ಕದಲಿಸಿದಳೆ
ಇಷ್ಟೊಂದು ಪಂತದ ಹೆಣ್ಣಾದರೆ ನನಗಾದರೂ ನೋಡಬೇಕು. (ಕ್ಲಾಸ್ ೧೯೯೪: ೬೪)

ಪುರುಷನೊಬ್ಬನಿಗೆ ಹೆಣ್ಣಿನ ಮೇಲಿರುವ ಹಕ್ಕು ಮತ್ತು ಅಧಿಕಾರ ಮಗಳು ಮತ್ತು ಹೆಂಡತಿಯಾಗಿರುವಲ್ಲ್ಲಿ. ಅದರಲ್ಲೂ ಆತ್ಯಂತಿಕವಾದ ನಿಗ್ರಹ ಮತ್ತು ನಿಯಂತ್ರಣಗಳು ಸಾಧ್ಯವಾಗುವುದು ಹೆಂಡತಿಯ ಸಂದರ್ಭದಲ್ಲಿ. ಇಲ್ಲಿ ಮಾನಿಗ ವಿವಾಹದ ಮೂಲಕ ಗಂಡು ಹೆಣ್ಣಿನ ಮೇಲೆ ತನ್ನ ಅಧಿಕಾರವನ್ನು ಅಧಿಕೃತಗೊಳಿಸುವ ಸೂಚಕವಾಗಿ ಹೇರುವ ಕರಿಮಣಿ ಮೂಗುತಿ ಕಾಲುಂಗುರಗಳನ್ನು ಕಳಚಿ ಕಳುಹಿಸುವುದೆಂದರೆ ವಾಸ್ತವವಾಗಿ ತಾನಿನ್ನು ಬಲ್ಲಾಳನ ಹೆಂಡತಿಯಾಗಿ ಉಳಿದಿಲ್ಲ ಎನ್ನುವುದು. ಅಂದರೆ ಗಂಡಿನ ಅಧಿಕೃತ ಅಧಿಕಾರದ ನಿರಾಕರಣವೇ ಆಗಿದೆ. ಈಗ ತನ್ನ ಹೆಂಡತಿಯಲ್ಲದ ಮಾನಿಗಳ ಮೇಲೆ ಬಲ್ಲಾಳನಿಗೆ ಇನ್ನು ಯಾವುದೇ ಅಧಿಕಾರ ಅಥವಾ ನಿಯಂತ್ರಣ ಸಾಧ್ಯವಿಲ್ಲ. ತನ್ನ ನಿಯಂತ್ರಣದಿಂದ ಮುಕ್ತಳಾದ ಮಾನಿಗಳನ್ನು ನಿಯಂತ್ರಿಸಲು ಬಲ್ಲಾಳ ನಂಬಿದ ಜುಮಾದಿಗೆ ದೀಪ ಹಚ್ಚಿ ಹರಕೆ ಹೊರುತ್ತಾನೆ.

ಬಲ್ಲಾಳ ಸೊಡರ ದೀಪ ಹೊತ್ತಿಸಿದ
ಹತ್ತು ಬೆರಳು ಜೋಡಿಸಿ ಜುಮಾದಿಗೆ ವಂದಿಸಿದ
ಮಾನಿಗನಿಗೆ ಮರುಳು ಹಿಡಿಯಬೇಕು, ಕನಸು ಕಟ್ಟಬೇಕು
ಅರಳು ಮರಳು ಹೆಚ್ಚಿ, ಕನಸು ಕಟ್ಟಿ
ಹೆಣ್ಣು ಈ ನನ್ನ ಬೀಡಿಗೆ ಬರುವಂತಾಗಬೇಕು
ಅಂದು ಚಪ್ಪರ ಏರಿಸಿ ಬಲಿನೇಮ ಕೊಡುತ್ತೇನೆ ಅವಳ ಕೈ ಮೈ ಮುಟ್ಟುವ ಮುನ್ನ
ಆಸರಿಗೆ ನೀರು ಕುಡಿವ ಮುನ್ನ
ಜುಮಾದಿಗೆ ಚಪ್ಪರ ಏರಿಸಿ ನೇಮ ಕೊಡುತ್ತೇನೆ (ಕ್ಲಾಸ್‌ ೧೯೯೪:೬೫)

ತುಳುವರ ಧಾರ್ಮಿಕ ಜಗತ್ತು ಅಖಿಲ ಭಾರತೀಯ ಪರಂಪರೆಯ ಬ್ರಹ್ಮ – ವಿಷ್ಣು – ಮಹೇಶ್ವರರದಲ್ಲ. ಅವರಿಗೆ ಅಪ್ತವಾದ ಮತ್ತು ನಂಬಿಕೆಯ ಸತ್ಯ ಕಿರುಪರಂಪರೆಯ ದೈವ ಜಗತ್ತು. ಈ ದೈವ ಭಕ್ತನೊಬ್ಬನ ಸಂರಕ್ಷಕವಾಗಿದ್ದು ಅಗತ್ಯ ಸಂದರ್ಭಗಳಲ್ಲಿ ಭಕ್ತನ ಆಜ್ಞಾಧಾರಕವಾಗಿ ವರ್ತಿಸುತ್ತದೆ. ಬಲ್ಲಾಳ ಜುಮಾದಿಗೆ ಹೊರುವ ಹರಕೆಯ ಹಿನ್ನೆಲೆಯಲ್ಲಿ ಇದೇ ವಿಶ್ವಾಸದ ಭಾವವಿರುವುದನ್ನು ಗಮನಿಸಬೇಕು. ಇಲ್ಲಿಯೂ ಬಲ್ಲಾಳನ ಆಜ್ಞಾಧಾರಕನಾಗಿ ಅವನು ನಂಬಿದ ಜುಮಾದಿ ಕಾರ್ಯಾಚರಣೆಗಿಳಿಯುತ್ತದೆ. ಜುಮಾದಿಯ ‘ಶಕ್ತಿ ಪ್ರಯೋಗ’ದಿಂದ ಮಾನಿಗಳಿಗೆ ಹುಚ್ಚು ಹಿಡಿಯುತ್ತದೆ. ಕನಸು ಕಟ್ಟುತ್ತದೆ. ನಡುರಾತ್ರಿಯಲ್ಲಿ ಬಲ್ಲಾಳನ ಇಚ್ಚೆಯಂತೆ ಅವನ ಪರವಾಗಿರುತ್ತದೆ. ಆದರೆ ಕೊನೆಯಲ್ಲಿ ಬಲ್ಲಾಳ ಹೊತ್ತ ಹರಕೆಗೆ ಪ್ರತಿಯಾಗಿ, ಬಯಸಿದ ಪ್ರತೀಕಾರಕ್ಕೆ ಬದಲಾಗಿ ಪ್ರಕರಣ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಮಾನಿಗಳ ಕೇಡಿಗೆ ಬದಲಾಗಿ ಬಲ್ಲಾಳನ ಮರಣವಾಗುತ್ತದೆ.

ಪಿತೃರೂಪಿ ಸಂಸ್ಕೃತಿಯೊಳಗೆ ಹೆಣ್ಣು ಮಾನಿಗಳ ವರ್ತನೆ ತೀರಾ ಅಸಹಜವಾಗಿ ಮಹಾ ಅಪರಾಧವಾಗಿ ಪರಿಗಣಿತವಾಗುತ್ತದೆ ಮತ್ತು ಅಂತಹ ಅಪರಾಧಕ್ಕಾಗಿ ದೈವ ಮಾನಿಗಳನ್ನು ಶಿಕ್ಷಿಸುತ್ತದೆ – ನಾಶ ಮಾಡುತ್ತದೆ. ಮಾತೃರೂಪಿಯಾದ ತುಳುವ ಸಂಸ್ಕೃತಿಯಲ್ಲಿ ಮಾನಿಗಳ ಧೈರ್ಯ, ಆತ್ಮಗೌರವ, ಸ್ವಾಭಿಮಾನ, ಪಾತಿವೃತ್ಯದ ಪರಿಕಲ್ಪನೆಗಳನ್ನು ಸ್ತ್ರೀತ್ವದ ಇತ್ಯಾತ್ಮಕ ಅಂಶವೆಂದು ತಿಳಿಯಲಾಗಿದೆ. ಹೀಗಾಗಿ ಬಲ್ಲಾಳನ ವರ್ತನೆ ಹೆಣ್ಣಿನ ಸತ್ಯ ಮತ್ತು ನೈತಿಕತೆಗೆ ಮಾಡಿದ ಅಪಚಾರವಾಗಿ ಪ್ರತಿಬಿಂಬಿತವಾಗಿದೆ. ಗಂಡನಾದವನು ಹೆಂಡತಿಗೆ ಮಾಡಿದ ಈ ಅಪಚಾರವನ್ನು ಮಹಾ ಅಪರಾಧವಾಗಿ ಕಂಡುಕೊಳ್ಳಲಾಗಿದೆ. ಬಲ್ಲಾಳನ ಮೋಸ, ಅನ್ಯಾಯಗಳ ಸಾಂಸ್ಕೃತಿಕ ಉದ್ಧಟತನವಾಗಿ ಪಾಡ್ದನದ ಒಳಗೆ ಮತ್ತು ಹೊರಗೆ ಬೆಳೆಯುತ್ತದೆ. ಹೀಗಾಗಿ ತುಳುನಾಡಿನ ಸತ್ಯ, ನ್ಯಾಯ ಪಾಲಕವಾದ ದೈವ ಜುಮಾದಿ ನಂಬಿದ ಭಕ್ತ ಬಲ್ಲಾಳನ ವಿರುದ್ಧವಾಗಿ ತೀರ್ಪು ನೀಡುತ್ತದೆ. ತನ್ನ ಆಯ್ಕೆ ಮತ್ತು ವ್ಯಕ್ತಿತ್ವದ ಮೇಲೆ ಯಾವ ನೆಲೆಯಲ್ಲೂ ಗಂಡಿನ ಅಧಿಕಾರ ನಿಯಂತ್ರಮದ ವಿರುದ್ಧ ನಿರಂತರ ಹೋರಾಟ ಹಾಗೂ ಸಂಘರ್ಷವನ್ನು ಹೂಡುವ ಮಾನಿಗಳನ್ನು ಸ್ತ್ರೀತ್ವದ ಪರಿಪೂರ್ಣ ಮಾದರಿಯಾಗಿ, ಮಾತೃರೂಪಿ ತುಳುವ ಸಂಸ್ಕೃತಿಯ ಸಾಂಸ್ಕೃತಿಕ ನಾಯಕಿಯಾಗಿ ಕಂಡುಕೊಳ್ಳಲಾಗಿದೆ.

ಉತ್ತರ ಭಾಗದ ಪಠ್ಯಗಳಲ್ಲಿ ಪಾಡ್ದನದ ಕೊನೆಯ ಭಾಗ – ಬಲ್ಲಾಳನ ಅರಮನೆಗೆ ಮಾನಿಗಳ ಮರು ಪ್ರವೇಶದ ಪರಿಣಾಮ ತೀರಾ ಭಿನ್ನವಾಗಿದೆ. ಪಯ್ಯುವಿನ ಪಠ್ಯವನ್ನು ಎತ್ತಿಕೊಂಡು ಕಥಾಭಾಗದ ಈ ಭಿನ್ನತೆಯನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಸಲು ಇಚ್ಛಿಸಿದ್ದೇನೆ. ಜುಮಾದಿಯ ಶಕ್ತಿ ಮಾನಿಗಳನ್ನು ಬಲ್ಲಾಳನ ಅರಮನೆಗೆ ಬರಮಾಡಿಸುತ್ತದೆ. ಅರಮನೆಯ ಬಾಗಿಲಲ್ಲಿ ಬಲ್ಲಾಳ ಆಕೆಯನ್ನು ತಡೆಯುತ್ತಾನೆ. ‘ಸತ್ಯದಲ್ಲೇ ನೀನು ಹೋಗಿದ್ದರೆ ಮಾನಿಗ ಸತ್ಯದಲ್ಲೇ ಒಳಹೋಗು’ ಎನ್ನುತ್ತಾನೆ. ಮಾನಿಗ ಸತ್ಯದಿಂದ ಹೋದದ್ದು ಎಂದರೆ ಬಲ್ಲಾಳನ ಹೆಂಡತಿಯಾಗಿ ಹೋಗಿದ್ದಳು. ಈಗ ವಿಧವೆಯಾಗಿ ಬಲ್ಲಾಳನ ಹೆಂಡತಿಯಲ್ಲವಾಗಿ ಬಂದಿದ್ದಾಳೆ. ಹೋದ ಸತ್ಯದಿಂದಲೆ – ಬಲ್ಲಾಳನ ಹೆಂಡತಿಯಾಗಿಯೆ ಒಳಗೆ ಹೋಗು ಎನ್ನುತ್ತಾನೆ. ಅರೆಹುಚ್ಚಿನ ಸ್ಥಿತಿಯಲ್ಲೂ ಮಾನಿಗ ಬಲ್ಲಾಳನ ‘ಸತ್ಯ’ವನ್ನು ನಿರಾಕರಿಸುತ್ತಾಳೆ. ‘ಸತ್ಯ’ದಲ್ಲಿ ಒಳಹೋಗದ ಮಾನಿಗ ಹೊಸ್ತಿಲು ದಾಟುವಾಗ ಬಿದ್ದು ಸಾಯುತ್ತಾಳೆ. ಇಲ್ಲಿ ಮಾನಿಗಳ ಸಾವನ್ನು ವಾಚ್ಯವಾಗಿ ಅರ್ಥೈಸಿದರೆ ಅಡಗಿರುವ ಬಹುದೊಡ್ಡ ಸತ್ಯವೊಂದು ನಮ್ಮ ಕೈತಪ್ಪಿಹೋಗುತ್ತದೆ. ಅಂದರೆ ಅದು ಹೆಣ್ಣಿನ ಸಾವನ್ನು – ಸೋಲನ್ನು ಸೃಷ್ಟಿಸುತ್ತದೆ. ಮಾನಿಗಳ ಸಾವು ಅಸಹಾಯಕತೆಯಲ್ಲಿ ಹತಾಶೆಯಲ್ಲಿ ಸಾಧ್ಯವಾದುದಲ್ಲ ಎನ್ನುವುದನ್ನು ಮರೆಯಬಾರದು. ಬಲ್ಲಾಳ ಸಾವು ಬದುಕುಗಳ ಎರಡು ಆಯ್ಕೆಗಳ ಅವಕಾಶವನ್ನು ಮಾನಿಗಳ ಮುಂದಿಟ್ಟಿದ್ದಾನೆ ಎನ್ನುವುದು ಕೂಡಾ ಅದೇ ಹೊತ್ತಿಗೆ ನಮಗೆ ನೆನಪಿರಬೇಕು. ಪುರುಷ ಶಕ್ತಿ ಒಡ್ಡುವ ಮರಣ ಭಯವನ್ನು ಮೀರಿ ತನ್ನತನವನ್ನು ಉಳಿಸಿಕೊಳ್ಳುವಲ್ಲಿ ಸಾವು ಕೂಡಾ ಒಂದು ಪ್ರತಿಭಟನಾ ಮಾದರಿಯಾಗುತ್ತದೆ. ಪುರುಷ ಶಕ್ತಿಯನ್ನು ಹುಸಿಯಾಗಿಸಿ ಬೆಳೆಯುವ ಮಾನಿಗಳ ಸಾವು ರೂಪಕಾರ್ಥದಲ್ಲಿ ಇದನ್ನು ಮಂಡಿಸುತ್ತದೆ. ನಾನು ಭೌತಿಕ ರೂಪದಲ್ಲಿದ್ದಾಗ ತಾನೆ ನಿನ್ನ ಅಧಿಕಾರ ಚಲಾವಣೆಗೊಳ್ಳುವುದು? ಭೌತಿಕ ನೆಲೆಯಲ್ಲಿ ನಾನೇ ಇಲ್ಲದಾಗ ನೀನು ಹೇಗೆ ಅಧಿಕಾರ ಪ್ರಯೋಗಿಸುತ್ತಿ? ಆಗ ನಿನ್ನ ಅಧಿಕಾರಕ್ಕೆ ಯಾವ ಅರ್ಥವಿದೆ? ಎನ್ನುವ ಪ್ರಶ್ನೆಗಳಲ್ಲಿ ಮಾನಿಗಳ ಸಾವನ್ನು ಕಂಡುಕೊಳ್ಳಬೇಕಾಗಿದೆ. ನಾವು ಮಾನಿಗಳಿಗೆ ತನ್ನದೇ ಪ್ರಪಂಚದಲ್ಲಿ ತಾನಾಗಿ ಉಳಿಯುವ ಸ್ವಾತಂತ್ರ್ಯವನ್ನು ಉಳಿಸಿಡುವಲ್ಲಿ ಬದುಕು ಆಗುತ್ತದೆ. ಹಾಗಾಗಿಯೆ ಬಲ್ಲಾಳನ ನಿರ್ವಚನದ ‘ಸಾವು’ ಮಾನಿಗಳಿಗೆ ‘ಬದುಕು’ ಆಗುತ್ತದೆ ಮತ್ತು ಅವನ ನಿರ್ವಚನದ ‘ಬದುಕು’ ಆಕೆಗೆ ‘ಸಾವು’ ಆಗುತ್ತದೆ. ಗಂಡಿನ ನೆಲೆಯ ಸಾವನ್ನು ಬದುಕಾಗಿ, ಬದುಕನ್ನು ಸಾವಾಗಿ ಪಲ್ಲಟಗೊಳಿಸುವ ಕ್ರಿಯೆ ಪುರುಷಾಧಿಕಾರಕ್ಕೊಂದು ಸವಾಲಾಗುವುದರಿಂದ ಮಾನಿಗಳ ಸಾವು ಸಾಂಕೇತಿಕ ಅರ್ಥವನ್ನು ಪಡೆದುಕೊಳ್ಳುತ್ತದೆ. ಈ ಸಾಂಕೇತಿಕತೆ ಗಂಡಿನ ಸೋಲಾಗಿ ಹೆಣ್ಣಿನ ಬಹುದೊಡ್ಡ ವಿಜಯವಾಗಿ ಸ್ಥಾಪಿಸಿಕೊಳ್ಳುತ್ತದೆ.

ಪತ್ನಿತ್ವದ ಹೊಸ ವ್ಯಾಖ್ಯಾನ : ನಾಗಸಿರಿ

ಪುರುಷನಿಗಿರುವ ಬಹುದೊಡ್ಡ ಭಯ ಮತ್ತು ಕುತೂಹಲ ಹೆಣ್ಣಿನ ಲೈಂಗಿಕತೆ ಕುರಿತದ್ದು. ಹೀಗೆ ಕಾಡುವ ಭಯ ಮತ್ತು ಕುತೂಹಲವನ್ನು ಹೆಣ್ಣಿನ ಮೇಲೆ ಗಂಡು ಹೇರುವ ನಿಗ್ರಹ ಮತ್ತು ಆಕ್ರಮಣಗಳಲ್ಲಿ ಗುರುತಿಸಬಹುದು. ಮದುವೆಯಾದೊಡನೆ ದಂಡಿಗೆ ಹೋಗಬೇಕಾಗಿ ಬಂದ ನಾಗಡರಾಜ (ನಾಗರಾಜ) ಒಂಟಿ ಹೆಣ್ಣು ನಾಗಸಿರಿಯನ್ನು ‘ಯಾರೂ ಬಂದರೂ, ಏನು ನೆಪ ಹೇಳಿದರೂ ಬಾಗಿಲು ತೆರೆಯದಂತೆ ಎಚ್ಚರಿಸಿ ಬೀಗ ಹಾಕಿ ಬಂಧಿಸಿಟ್ಟು ಹೋಗುತ್ತಾನೆ’. ಇಲ್ಲಿ ನಾಗಡರಾಜನಿಗೆ ಇರುವುದು ಹೆಣ್ಣಿನ ಲೈಂಗಿಕತೆ ಕುರಿತ ಭಯ. ಸಿರಿಕೃಷ್ಣನಿಗಿರುವುದು ಆ ಕುರಿತ ಕುತೂಹಲ. ಈ ಬಯಕೆಯಿಂದಲೆ ಸಿರಿಕೃಷ್ಣ ಆಕ್ರಮಣಶೀಲನಾಗಿ ಒಂಟಿ ಹೆಣ್ಣಾದ ನಾಗಸಿರಿಯಲ್ಲಿಗೆ ಬರುತ್ತಾನೆ. ಅವನ ಬೇಟೆಯಿಂದ ನಾಗಸಿರಿ ಇಲಿಯಾಗಿ, ತುಂಬಿಯಾಗಿ, ಹಾತೆಯಾಗಿ, ಉಣುವಾಗಿ ರೂಪ ಪರಿವರ್ತಿಸಿಕೊಳ್ಳುತ್ತ ತಪ್ಪಿಸಿಕೊಳ್ಳುವ ಕ್ರಿಯಾರೂಪಗಳು ಅವಳ ವ್ಯಕ್ತಿತ್ವಕ್ಕೆ ವಿಶಿಷ್ಟತೆಯನ್ನು ತಂದುಕೊಡುತ್ತವೆ. ಹೆಣ್ಣಿನ ಹರಡಿದ ಲೈಂಗಿಕತೆಯ ಮೇಲಿನ ಆಕ್ರಮಣ ಗಂಡಿನ ನೆಲೆಯಲ್ಲಿ ಅವನ ಪುರುಷತ್ವದ ವಿಜಯದ ಸಂಕೇತ ಕೂಡಾ ಹೌದು. ನಾಗಸಿರಿಯ ನುಸುಳುವಿಕೆ ಸಿರಿಕೃಷ್ಣನ ಪುರಷತ್ವದ ಪ್ರಶ್ನೆಯಾಗುವಲ್ಲಿ ಸೇಡಾಗಿ ಪರಿವರ್ತಿತವಾಗುತ್ತದೆ.

ಹೆಣ್ಣುತನ ಶೀಲಕ್ಕೆ ಸೀಮಿತವಾಗಿರುವ ಭಾರತೀಯ ಸಂದರ್ಭದಲ್ಲಿ ಅವಳ ವ್ಯಕ್ತಿತ್ವವನ್ನು ಹಾನಿಗೊಳಿಸುವ ಸುಲಭ ತಂತ್ರವಾಗಿ ಶೀಲ ಕೆಲಸ ಮಾಡುತ್ತದೆ. ಇಲ್ಲಿಯೂ ಸಿರಿಕೃಷ್ಣ ತನ್ನ ಷಡ್ಯಂತ್ರಕ್ಕೆ ಬಳಸಿಕೊಳ್ಳುವುದು ನಾಗಸಿರಯ ಶೀಲವನ್ನು. ಆ ಬಗ್ಗೆ ಗಂಡ ನಾಗಡರಾಜನಲ್ಲಿ ಅಪನಂಬಿಕೆ ಹುಟ್ಟುಹಾಕುವಲ್ಲಿ ಸಿರಿಕೃಷ್ಣ ಯಶಸ್ವಿಯಾಗುತ್ತಾನೆ. ನಾಗರಾಜ ಹೆಂಡತಿಯನ್ನು ಹೊಡೆದು ಜಂಕಿಸಿ ಬಾಯಿಬಿಡಿಸುವ ಪ್ರಯತ್ನ ಮಾಡುತ್ತಾನೆ. ಪಾತಿವ್ರತ್ಯದ ಪರೀಕ್ಷೆಗಳನ್ನು ಒಡ್ಡುತ್ತಾನೆ. ‘ನಿಮ್ಮ ಪರೀಕ್ಷೆಗಳನ್ನು ಕಂಡಿತ ಗೆಲ್ಲುವೆ’ ಎನ್ನುವ ಆತ್ಮ ವಿಶ್ವಾಸದ ಮಾತುಕೊಟ್ಟು ನಾಗಸಿರಿ ಅವರೊಡ್ಡುವ ದಿವ್ಯಗಳನ್ನು ಗೆಲ್ಲುತ್ತಾಳೆ. ಪುರುಷ ಒಡ್ಡುವ ಪರೀಕ್ಷೆಗಳಿಗೆ ಒಳಗಾಗುವ ನಿಯಮಗಳನ್ನು ಒಪ್ಪಿಕೊಂಡ ಆಕೃತಿಯಾಗಿ ಅರ್ಥೈಸಿದರೆ ಅದು ಸರಳ ತೀರ್ಮಾನವಾದೀತು. ಪುರುಷ ನೀಡುವ ಪರೀಕ್ಷೆಗಳನ್ನು ಎದುರಿಸುತ್ತ ಹೋಗುವ ಮೂಲಕ ಪಾಡ್ದನ ಹೆಣ್ಣಿನ ದೇಹ ಮತ್ತು ಶೀಲದ ಸಾಮಾಜಿಕ ಪರಿಕಲ್ಪನೆಯ ಬಗೆಗೆ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ. ಪುರುಷನ ಪರೀಕ್ಷೆಗಳಿಗೆ ಒಳಗಾಗುವ ಪ್ರಕ್ರಿಯೆ ನಾಗಸಿರಯ ಹೋರಾಟವನ್ನು ನೆಲೆಗೊಳಿಸುತ್ತದೆ. ಗಂಡಿನ ಈ ಹಿಂಸೆಯ ತೀವ್ರತೆಯಲ್ಲಿ ನಾಗಸಿರಿ ಸಾವಿನ ಪ್ರತಿಕ್ರಿಯೆ ವಿಶಿಷ್ಟ ರೀತಿಯಾಗಿ ನಿಲ್ಲುತ್ತದೆ.

ಸಾವು ಮನುಷ್ಯ ಬದುಕಿನ ಆತ್ಯಂತಿಕ ಹಿಂಸೆಯ ಸ್ಥಿತಿ. ಗಂಡಿನ ಹಿಂಸೆಯ ಬಯಕೆಗೆ ವಿರುದ್ಧವಾಗಿ ನಾಗಸಿರಿ ತಾನಾಗಿಯೇ ಸಾವನ್ನು ಸ್ವೀಕರಿಸುವಲ್ಲಿ ಸಾವು ಪುರಷಾಧಿಕಾರದ ವಿರುದ್ಧ ಹೋರಾಡುವ ಹೆಣ್ಣಿನ ಪ್ರತಿಭಟನಾ ಶಕ್ತಿಯಾಗುತ್ತದೆ. ಹೀಗಾಗಿಯೆ ನಾಗಸಿರಿಯ ಅಪೇಕ್ಷಿತ ಸಾವು ಅವಳ ಪಲಾಯನತನವಲ್ಲ. ಗಂಡನ್ನು ಏಕಾಏಕಿ ತಬ್ಬಿಬ್ಬುಗೊಳಿಸಿ ಅವನ ಆಲೋಚನೆಯನ್ನು ಪಡ್ಯಂತ್ರವನ್ನು ಮುರಿಯುವ ಹೆಣ್ಣಿನ ನಿಜವಾದ ಗೆಲುವಾಗುತ್ತದೆ. ನಾಗಸಿರಿಯ ಸಾವಿನ ಸ್ವೀಕರಣ ಸಂಸ್ಕೃತಿಯ ನಿರಾಕರಣದ ನೆಲೆಯಾಗಿ ಬಹಳ ಮಹತ್ವದ ಅರ್ಥವನ್ನು ಪಡೆದುಕೊಳ್ಳುತ್ತದೆ.

ಮಾತೃರೂಪಿ ಸ್ತ್ರೀ ಮೂಲ ತುಳುವ ಕೌಟುಂಬಿಕ ಸಂರಚನೆಯಲ್ಲಿ ಅಣ್ಣ – ತಂಗಿಯರ ಜೋಡಿ ಬಂಧುತ್ವ ಬಹಳ ವಿಶಿಷ್ಟವಾದುದು. ಅಣ್ಣನೊಬ್ಬನಿಗೆ ತನ್ನ ತಂಗಿಯನ್ನು ತೊರೆಯುವುದು, ಕಳೆದುಕೊಳ್ಳುವುದು ಸರಳ ಸಾಮಾನ್ಯ ಸಂಗತಿಯಲ್ಲ. ಅದನ್ನು ಅತ್ಯಂತ ದೌರ್ಭಾಗ್ಯದ ಸಂಗತಿಯಾಗಿ ತಿಳಿಯಲಾಗಿದೆ. ತಂಗಿ ಇಲ್ಲದ ನಿರ್ವಾತ ಸ್ಥಿತಿ ಅವನ ಕಾಲ್ಪನಿಕ ಜಗತ್ತಿನ ಬಾಗಿಲನ್ನು ತಟ್ಟಲಾರದು. ಅನೇಕ ಪಾಡ್ದನಗಳು ಈ ಅವಳಿ ಸಂಬಂಧದ ಬಗೆಗೆ ಹೇಳುತ್ತವೆ. ತಂಗಿ ನಾಗಸಿರಿಯ ಸಾವಿನ ಸುದ್ದಿ ತಿಳಿದ ಅಣ್ಣ ದೇವೇಂದ್ರರಾಯ ಬಂದು ಸತ್ತ ತಂಗಿಯನ್ನು ತನ್ನಲ್ಲಿಗೆ ಬಾ ಎಂದು ಕರೆಯುತ್ತಾನೆ. ಸಿದ್ಧವಾದ ಕಾಷ್ಠದಿಂದ ಸತ್ಯದ ಹೆಣ್ಣು ನಾಗಸಿರಿ ಸಿಂಗಾರದ ಹೂವಾಗಿ ಅಣ್ಣನ ಸೆರಗಿಗೆ ಬರುತ್ತಾಳೆ. ನಾಗಡರಾಜ ‘ನನ್ನಿಂದ ತಪ್ಪಾಯಿತು ಇನ್ನೊಬ್ಬರ ಮಾತು ಕೇಳಿ ಹೀಗಾಯಿತು’ ಎಂದು ಕ್ಷಮೆ ಕೋರಿ ಬೇಡುತ್ತಾನೆ. ನಾಗಸಿರಿ ಗಂಡನ ಬೇಡಿಕೆಯನ್ನು ಸಾಂಪ್ರದಾಯಿಕ ಆದರ್ಶ ಪತ್ನಿತ್ವದ ಚೌಕಟ್ಟಿನಲ್ಲಿ ಸ್ವೀಕರಿಸುವುದಿಲ್ಲ.

‘ದುಷ್ಟನ ಮುಖವ ನೋಡಲಾರೆ ಕೊಟ್ಟ ಕಷ್ಟವೆ ಸಾಕು
ನಿಮಗೆ ಬೇಕಾದರೆ ನಿಮ್ಮ ಹೆಂಡತಿ ಕಾಷ್ಠದಲ್ಲಿ ಇದ್ದಾಳೆ’

ಎಂದು ದಿಟ್ಟವಾಗಿ ಪ್ರತಿಭಟಿಸಿ ಅಣ್ಣನೊಂದಿಗೆ ಹೊರಟು ಹೋಗುತ್ತಾಳೆ. ನಾಗಸಿರಿಯ ಈ ಪ್ರತಿಕ್ರಿಯೆ ಗಂಡು – ಹೆಣ್ಣಿನ ಸಂಬಂಧದ ನೆಲೆಗಳನ್ನು ಶೋಧಿಸುತ್ತದೆ ಹಾಗೂ ಆ ಸಂಬಂಧದ ಮೋಸವನ್ನು, ಹುಸಿತವನ್ನು ಹೊರಗೆಳೆಯುತ್ತದೆ.

ಹೋರಾಟದ ಶಕ್ತಿಯಾಗಿ ಕಲ್ಪುರ್ಟಿ ಮತ್ತು ಬಾಲೆಮಾನಿ

ತುಳುವ ಬಂಧು ಸಮಾಜದಲ್ಲಿ ಗಂಡು – ಹೆಣ್ಣಿನ ಸಂಬಂಧದ ಆಯಾಮವು ರಕ್ತ ಬಾಂಧವ್ಯದ ಚೌಕಟ್ಟಿನೊಳಗಿದ್ದು ಅವರು ಅಣ್ಣ – ತಂಗಿ, ಸೋದರಮಾವ-ಸೊಸೆಯರಾಗಿರುತ್ತಾರೆ. ಈ ಅವಳಿತನಕ್ಕೆ ಕಲ್ಕುಡ-ಕಲ್ಲುರ್ಟಿ, ಆಲಿಬಾಲಿ-ಬಾಲೆಮಾನಿಯರನ್ನು ಗಮನಿಸಬಹುದು. ಈ ಸಂಬಂಧಗಳು ಹೆಣ್ಣು ಮೂಲವಾಗಿದ್ದು ಆಕೆಗೆ ತನ್ನದೇ ಆದ ಸ್ವತಂತ್ರ ವ್ಯಕ್ತಿತ್ವವಿದ್ದು ಪ್ರಾಮುಖ್ಯತೆ ಪಡೆದುಕೊಳ್ಳುತ್ತಾಳೆ. ಇಲ್ಲಿ ಮನೆತನದ ಪ್ರತಿಷ್ಠೆ ಗೌರವಗಳನ್ನು ಕಾಪಾಡುವವರು ಮಗಳು ಅಥವಾ ಸೋದರ ಸೊಸೆಯರೆ ಹೊರತು ಗಂಡ, ಮಗ ಮತ್ತು ಸೊಸೆಯರಲ್ಲ. ಗಂಡೊಬ್ಬ ಅಂತಸ್ತು ಮನೆತನ ಹೆಣ್ಣಿನ ಸ್ಥಾನಮಾನವನ್ನು ಹೊಂದಿಕೊಂಡಿರುತ್ತದೆ. ಇದರಿಂದಾಗಿ ಕುಟುಂಬದ ಹೆಣ್ಣೊಬ್ಬಳ ಮೇಲ್ಮೆ ಮತ್ತು ಸಂರಕ್ಷಣೆ ಮನೆತನದ ಪುರುಷನ (ಸೋದರ ಸೋದರಮಾವ) ಆದ್ಯಕರ್ತವ್ಯವೆಂದು ಭಾವಿಸಲಾಗುತ್ತದೆ. ಹೀಗಾಗಿ ಅಣ್ಣ-ತಂಗಿ, ಸೋದರಮಾವ-ಸೊಸೆಯರ ಜೋಡಿಗಳಲ್ಲಿ ಒಂದು ವಿಶಿಷ್ಟ.

ಬಂಧವನ್ನು ಕಾಣಬಹುದು ‘ಈ ಬಂಧವು ರಕ್ತಬಾಂಧವ್ಯ ಪದ್ಧತಿಯ ವಿಶಿಷ್ಟ ಲಕ್ಷಣವಾಗಿದ್ದು ಸ್ತ್ರೀ – ಪುರುಷರ ಮಧ್ಯೆ ಇರುವ ಸಾಮಾಜಿಕ ಹಕ್ಕು ಬಾಧ್ಯತೆಗಳ ವಿವಿಧ ಆಯಾಮಗಳ ಒಂದು ಗಮನಾರ್ಹ ಸಂಕೀರ್ಣವೂ ಆದ ಸಂಕೇತವಾಗಿದೆ’ (ಕ್ಲಾಸ್, ಅನು: ನಾವಡ, ಸುಭಾಶ್ಚಂದ್ರ ೧೯೮೭:೧೭೨).

ತುಳುವ ಜಗತ್ತು ಕೆಲವೊಂದು ವಿಶ್ವನಿಯಮಾವಳಿಗಳನ್ನು ರೂಢಿಸಿಕೊಂಡಿದೆ. ಪುರುಷ ಮತ್ತು ದೈವಗಳು ಕ್ರಮವಾಗಿ ಲೌಕಿಕ ಮತ್ತು ಅಲೌಕಿಕ ಜಗತ್ತನ್ನು ಪ್ರತಿನಿಧಿಸಿದರೆ ಹೆಣ್ಮು ಬಲವಾದ ನಿಗೂಢ ಶಕ್ತಿ ಹಾಗೂ ಅಲೌಕಿಕ ಗುಣವನ್ನು ಹೊಂದಿದ್ದು ಮಾಯಲೋಕಕ್ಕೆ ಹೆಚ್ಚು ಸಮೀಪದವಳು ಎಂದು ತಿಳಿಯಲಾಗಿದೆ. ಹೀಗಾಗಿ ಜೋಗದಿಂದ ಮಾಯಕ್ಕೆ ಸಂಕ್ರಮಿಸುವಲ್ಲಿ ಹಾಗೂ ಮಾಯಕ್ಕೆ ಸಂದು ಪ್ರತೀಕಾರ ತೋರುವಲ್ಲಿ ಹೆಣ್ಣು ಹೋರಾಟದ ಶಕ್ತಿಯಾಗಿ ನಿಲ್ಲುತ್ತಾಳೆ. ಈ ಸೈದ್ಧಾಂತಿಕ ಚೌಕಟ್ಟಿನಲ್ಲಿಯೆ ಕಲ್ಲುರ್ಟಿ ಮತ್ತು ಬಾಲೆಮಾನಿಯನ್ನು ವಿವರಿಸಿಕೊಳ್ಳಬೇಕು. ಅರಸನ ಅನ್ಯಾಯಕ್ಕೆ, ಕುಟಿಲತೆಗೆ ಒಳಗಾಗುವವರು ವೀರ ಕಲ್ಕುಡ ಹಾಗೂ ಅಲಿಬಾಲಿ ನಾಯಕರು. ಆದರೆ ಈ ಇಬ್ಬರು ಪುರುಷರೂ ನೋವನ್ನು ಅನುಭವಿಸುತ್ತಾರೆ ವಿನಾ ಅರಸನ ಕ್ರೌರ್ಯಕ್ಕೆ ಯಾವುದೇ ಪ್ರತೀಕಾರವನ್ನು ಕೊನೆಯ ಪಕ್ಷ ಮನಸ್ಸಿನ ಜಗತ್ತಿನಲ್ಲಿ ಕೂಡಾ ಯೋಜಿಸುವುದಿಲ್ಲ. ನೋವು ಸಂಕಟ ಅನುಭವಿಸುತ್ತಿರುವ ಅಣ್ಣಂದಿರಲ್ಲಿ ಪ್ರತಿಭಟನೆಯ ಕಿಚ್ಚನ್ನು ಹಚ್ಚುವವರು ಹಾಗೂ ಅರಸನ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಒಂದು ಹೋರಾಟದ ಶಕ್ತಿಯಾಗಿ ಕಾಣಿಸಿಕೊಳ್ಳುವವರು ತಂಗಿಯರಾದ ಕಲ್ಲುರ್ಟಿ ಮತ್ತು ಬಾಲೆಮಾನಿ.

ಶಿಲ್ಪಿ ಕಲ್ಕುಡ ಭೈರರಸನ ಕಾರ್ಕಳದಲ್ಲಿ ಗೊಮ್ಮಟನನ್ನು ಕೆತ್ತುತ್ತಾನೆ. ಆ ಶಿಲ್ಪಕಲಾ ಕೌಶಲ್ಯವನ್ನು ಕಂಡು ಬೆರಗಾದ ಅರಸ ಸ್ವಾರ್ಥದಿಂದ ಕಲ್ಕುಡನ ಕೈಕಾಲುಗಳನ್ನು ಕತ್ತರಿಸುತ್ತಾನೆ. ಅಣ್ಣನನ್ನು ಅರಸುತ್ತ ಬಂದ ತಂಗಿ ಕಲ್ಲುರ್ಟಿ ಅವನ ನೋವು ಅಪಮಾನಕ್ಕೆ ಕಣ್ಣೀರು ಸುರಿಸುತ್ತ ಕುಳಿತುಕೊಳ್ಳುವ ಹೆಣ್ಣಿನ ಸಾಂಪ್ರದಾಯಿಕ ರೂಪವಲ್ಲ. ಅರಸನ ಕ್ರೌರ್ಯಕ್ಕೆ ಸೆಟೆದು ‘ನನ್ನ ಅಣ್ಣನ ಕೈಕಾಲು ಕಡಿದ ಅರಸನನ್ನು ನೋಡಿಕೊಳ್ಳದೆ ಇರಲಾರೆ’ ಎಂದು ಪ್ರತಿಜ್ಞೆ ಮಾಡುತ್ತಾಳೆ. ವಾಸ್ತವದಲ್ಲಿ ಆಳುವ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲಾರದ ಸ್ಥಿತಿಯಲ್ಲಿ ಅಸಹಾಯಕ ಸಮುದಾಯ ಹೋರಾಟದ ಪರ್ಯಾಯ ಶಕ್ತಿದಾರಿಗಳನ್ನು ತೆರೆಯುತ್ತದೆ. ವ್ಯವಸ್ಥೆಯ ಪರವಾದ ಜೋಗವನ್ನು ತಿರಸ್ಕರಿಸಿ ಮಾಯದಲ್ಲಿ ‘ಜೋಗದ ನಿಯಂತ್ರಕ ಶಕ್ತಿ’ಯಾಗಿ ಅಸ್ತಿತ್ವವನ್ನು ಪಡೆದುಕೊಳ್ಳುತ್ತದೆ. ಕಲ್ಲುರ್ಟಿ ‘ಅಣ್ಣಾ, ಜೋಗದಲ್ಲಿ ಅರಸನ ಶೋಷಣೆಗೆ ಬಲಿಯಾದ ನಾವು ಮಾಯಕ್ಕೆ ಸಂದಾದರೂ ಅವರ ಚೆಂದ ನೋಡಬೇಕು’ ಎಂದು ಪ್ರೇರೇಪಿಸಿ ಅರಸನ ಅನ್ಯಾಯಕ್ಕೆ ತಕ್ಕ ಪ್ರತೀಕಾರಕ್ಕೆ ಸಜ್ಜಾಗುತ್ತಾಳೆ. ಜೋಗದಿಂದ ಮಾಯ ಸೇರಿದಾಗ ಅಣ್ಣನೊಡನೆ ‘ಹೆಣ್ಣುಗಳನ್ನು ನೀನು ಕೆಡಿಸು, ಗಂಡಸರನ್ನು ನಾನು ಕೆಡಿಸುತ್ತೇನೆ; ನೀನು ಕಲ್ಲು ಎಸೆ, ನಾನು ಬೆಂಕಿ ಇಡುತ್ತೇನೆ’ ಎಂದು ಹೋರಾಟದ ರೂಪ ಮತ್ತು ನಿರ್ದೇಶನ ವಹಿಸುವವಳು ಹೆಣ್ಣಾದ ತಂಗಿ ಕಲ್ಲುರ್ಟಿ. ಬೆಂಕಿ ಇಟ್ಟು ಕಾರ್ಕಳ ರಾಜ್ಯ ಸುಟ್ಟು ಅರಮನೆ ಹೊಕ್ಕ ಕಲ್ಲುರ್ಟಿ ‘ಮನುಷ್ಯರಾಗಿದ್ದಾಗ ನನ್ನ ಅಣ್ಣನ ಕೈಕಾಲು ಕಡಿದು ನಿಮ್ಮ ಹಟವನ್ನು ಸಾಧಿಸುತ್ತೇವೆ ಅರಸರೆ, ನನ್ನ ಅಣ್ಣನ ಜೀವನವನ್ನು ನಾಶ ಮಾಡಿದ ನಿನ್ನನ್ನು ನಾಶ ಮಾಡದೆ ಇರಲಾರೆವು’ ಎಂದು ಅರಸನ ಮುಂದೆ ನಿಂತು ಸವಾಲು ಹಾಕುತ್ತಾಳೆ. ಮನುಷ್ಯರಾಗಿದ್ದಾಗ ಅರಸನ ಅನ್ಯಾಯ ಅಧಿಕಾರಗಳಿಗೆ ಒಳಗಾಗಿ ದುರ್ಬಲರಾಗಿದ್ದ ಕಲ್ಲುರ್ಟಿ – ಕಲ್ಕುಡರು ದೈವಗಳಾಗಿ ಅರಸನನ್ನೆ ನಿಯಂತ್ರಿಸುವ, ಶಿಕ್ಷಿಸುವ ಶಕ್ತಿಯಾಗಿ ಬೆಳೆಯುತ್ತಾರೆ.

ಮಾಯಂದಾಲ್ ಅಥವಾ ಬಾಲೆಮಾನಿ ತುಳುನಾಡಿನ ಪ್ರಸವಾಧಿ ದೈವವಾಗಿದ್ದು ಒಂದು ವಿಶಿಷ್ಟ ಆರಾಧನಾ ಪಂಥವಾಗಿದೆ. ತುಳುವ ಪರಿಕಲ್ಪನಾತ್ಮಕ ಜಗತ್ತಿನಲ್ಲಿ ಸ್ತ್ರೀಯರು-ಪುರುಷರು-ದೈವಗಳು ಒಂದು ಅಂತರ್ ಬಂಧವನ್ನು ಹೊಂದಿದ್ದು ಕೆಲವೊಂದು ನಿರ್ದಿಷ್ಟ ಜವಾಬ್ದಾರಿಗಳನ್ನು ಹೊಂದಿರುವರು. ಲೌಕಿಕ ಹಾಗೂ ಅಲೌಕಿಕ ಕೇಡುಗಳಿಂದ ಸ್ತ್ರೀಯರನ್ನು ಸಂರಕ್ಷಿಸುವ ಜವಾಬ್ದಾರಿ ಮನೆತನದ ಗಂಡಸರು ಹಾಗೂ ದೈವಗಳದಾಗಿದೆ. ಈ ಬಗೆಯ ಸಾಂಸ್ಕೃತಿಕ ನಿಯಾಮಕತೆಯನ್ನು ಗಂಡಸರು ಕಾಯ್ದುಕೊಂಡಿರುವ ತನಕ ಸ್ತ್ರೀಯರಿಗೆ ಕೇಡು ತಟ್ಟುವುದಿಲ್ಲ ಎಂದು ಭಾವಿಸಲಾಗಿದೆ. ಈ ಸಾಂಸ್ಕೃತಿಕ ನಿಯಾಮಕತೆಯಲ್ಲಿ ಮುಖ್ಯವಾದದ್ದು ಮನೆತನದ ಗಂಡಸು ತನ್ನ ಹೊಣೆಗಾರಿಕೆ ಮತ್ತು ನಿಯಮಗಳನ್ನು ಮೀರಿದಾಗ ದೈವ ಮುನಿದು ಆಕ್ರಮಣ ಮಾಡಬಹುದು. ಈ ಆಕ್ರಮಣದ ಸ್ವರೂಪ ಸಾಮಾನ್ಯವಾಗಿ ಮನೆತನದ ಮೂಲದಲ್ಲಿ ಚೈತನ್ಯಶಿಲೆಯಾಗಿರುವ ಹೆಣ್ಣಿನ – ಆ ಮೂಲಕ ವಂಶದ ನಾಶವಾಗಿರುತ್ತದೆ. ಮಾತೃವಂಶೀಯ ಕುಟುಂಬುದಲ್ಲಿ ಸೋದರಿ ಹಾಗೂ ಸೋದರ ಸೊಸೆಯರೊಂದಿಗೆ ಮನೆತನದ ಪುರುಷರ (ಸೋದರ, ಸೋದರ ಮಾವ) ಬಂಧ ಒಂದು ವಿಶಿಷ್ಟವಾದ ಅಂಶ. ಸೋದರಿ ಅಥವಾ ಸೋದರ ಸೊಸೆಗಾಗುವ ಆಪತ್ತು ಅಥವಾ ಆಘಾತಗಳು ಮನೆತನದ ಗಂಡಸರಿಗೆ ಅತ್ಯಂತ ಯಾತನಾ ಪೂರ್ಣ ಹಿಂಸೆಯನ್ನು ತುರುವಂಥವುಗಳು. ಹೀಗಾಗಿ ಪುರುಷನೊಬ್ಬ ತನ್ನ ಕರ್ತವ್ಯಬಾಹಿರನಾದಾಗ ಕೇಡಿಗೆ, ಆಕ್ರಮಣಕ್ಕೆ ಒಳಗಾಗುವವಳು ಯಾವತ್ತೂ ಅವನ ಸೋದರಿ ಅಥವಾ ಸೋದರ ಸೊಸೆ. ಪುರುಷನ ಬೇಜವಾಬ್ದಾರಿತನಕ್ಕೆ, ಹೊಣೆಗೇಡಿತನಕ್ಕೆ ಹೆಣ್ಣುಗಳೇ ಏಕೆ ದೈವಗಳ ಆಕ್ರಮಣಕ್ಕೆ ಪಕ್ಕಾಗುತ್ತಾರೆ. ಎನ್ನುವ ಪ್ರಶ್ನೆಗೆ ಇದು ಉತ್ತರಿಸುತ್ತದೆ. ಹಾಗೆನೇ ಅಣ್ಣ ಅಥವಾ ಸೋದರ ಮಾವನ ಸಂಕಟಕ್ಕೆ, ನೋವಿಗೆ ಪ್ರತಿ ಸೇಡನ್ನು ಬಗೆದು ತೀರಿಸಿಕೊಳ್ಳುವವರು ಜೋಗದಿಂದ ಮಾಯಕ್ಕೆ ಸಂದ ತಂಗಿ ಅಥವಾ ಸೋದರ ಸೊಸೆ. ಈ ಸಾಂಸ್ಕೃತಿಕ ಸಿದ್ಧಾಂತದ ಚೌಕಟ್ಟಿನಲ್ಲಿ ನಾವು ಬಾಲೆಮಾನಿ ಪಾಡ್ದನವನ್ನು ವಿವರಿಸಿ ಕೊಳ್ಳಬಹುದು.

‘‘ಪಂಗೊಲ್ಲ ಬನ್ನಾರರ ಚಾವಡಿ (ಗುತ್ತಿನ ಮನೆ)ಯ ಹಟ್ಟಿಯಲ್ಲಿ, ತೊಟ್ಟಿಲಲ್ಲಿ ಜುಮಾದಿ ದೈವ ಆಪತ್ತಿನ ರೂಪದಲ್ಲಿ ಕಾಣಿಸಿಕೊಂಡು ‘ಬಲಿನೇಮ’ವನ್ನು ಬೇಡುತ್ತದೆ. ಊರಿನ ಹಿತರಕ್ಷಕನೆಂದು ಪರಿಭಾವಿಸಲಾಗುವ ಬನ್ನಾರರು ತಾನು ನಡೆಸುವ ಬಲಿನೇಮಕ್ಕೆ ಊರ ಜನರಿಂದ ಸಿರಿ ಸೀಯಾಳದ ಕೊಡುಗೆಗೆ ಆಜ್ಞಾಪಿಸಿದರು. ಆಲಿಬಾಲಿ ನಾಯಕ ಅರಸ ಬನ್ನಾರರ ಆಜ್ಞೆಯನ್ನು ವ್ಯಂಗ್ಯವಾಡಿ ತಿರಸ್ಕರಿಸತ್ತಾನೆ. ನೇಮದ ಕಳದಲ್ಲಿ ಬಲಿನೇಮ ಆರಂಭವಾಗುತ್ತದೆ. ಆಲಿಬಾಲಿ ನಾಯಕನ ಬಂಡಾಯವನ್ನು ನಿಯಂತ್ರಿಸಲಾಗದ ಬನ್ನಾರರು ಅವನನ್ನು ಹತ್ತಿಕ್ಕುವ ಜವಾಬ್ದಾರಿಯನ್ನು ದೈವ ಜಮಾದಿಗೆ ವರ್ಗಾಯಿಸುತ್ತಾರೆ. ಬನ್ನಾರರ ‘ವಾಕ್’ರೂಪ ಸವಾಲನ್ನು ಸ್ವೀಕರಿಸುವಲ್ಲಿ ‘ಅರಸನ ಚಾವಡಿಯಲ್ಲಿ ವಿಪತ್ತಿನ ರೂಪದಲ್ಲಿ ಕಾಣಿಸಿಕೊಂಡ ದೈವ ಹಂತ ಹಂತವಾಗಿ ಬೆಳೆದು ಇದೀಗ ಆತನ ಆಳ್ವಿಕೆಯ ಉಪಕರವಾಗಿ ರೂಪಾಂತರಗೊಂಡಿದೆ. ಈಗ ದೈವವು ಊಳಿಗಮಾನ್ಯ ನೈತಿಕತೆಯ ಹಸ್ತಕನಾಗಿ ಕೆಲಸ ಮಾಡುತ್ತಿದ್ದು ರಾಜ್ಯದೊಳಗಣ ನಿಯಾಮಕತೆಯನ್ನು ಪಾಲಿಸಿಕೊಂಡು ಬರುವ ಹಾಗೂ ಅಲ್ಲಿ ನಡೆಯುವ ಬಂಡಾಯವನ್ನು ಶಿಕ್ಷಿಸುವ ಹೊಣೆಯನ್ನು ಹೊತ್ತಿದ’’ (ಕ್ಲಾಸ್, ಅನು: ನಾವಡ, ಸುಭಾಶ್ಚಂದ್ರ ೧೯೮೭ : ೭೫)

ಈಗಾಗಲೇ ಹೇಳಿದಂತೆ ಪುರುಷನ ನೈತಿಕತೆಯ ಸೋಲಿಗೆ ಪೆಟ್ಟು ಬೀಳುವುದು ಕುಟುಂಬದ ಹೆಣ್ಣಿಗೆ. ಇಲ್ಲಿಯೂ ಅಲಿಬಾಲಿ ನಾಯಕನ ಸಾಂಸ್ಕೃತಿಕ ನಿಯಾಮಕತೆಯ ಮೀರುವಿಕೆಯಿಂದ ವಿಪತ್ತು ಎದುರಾಗುವುದು ತಂಗಿ ಬಾಲೆಮಾನಿಗೆ. ಜುಮಾದಿ ನೇಮದ ಕಳದಿಂದ ಬನ್ನಾರರ ವೇಷದಲ್ಲಿ ನಡುರಾತ್ರಿಯಲ್ಲಿ ಅಲಿಬಾಲಿ ನಾಯಕನ ಮನೆಗೆ ಬರುತ್ತದೆ. ಮೂರು ದಿನದ ಬಾಣಂತಿ ಬಾಲೆಮಾನಿಯಲ್ಲಿ ಕೆಂಡ ಬೇಡುತ್ತದೆ.

ಉರಿಕೆಂಡವ ಎಡಕೈಲಿ ಹಿಡಕೊಂಡ ಬನ್ನಾರ
ಬಲಕೈಲಿ ಮಾನಿಯ ಸೆಳೆದು ಮಾಯಕ
ಮಾಡಿದರು ಬನ್ನಾರ ಅವರು
(ಕ್ಲಾಸ್ ೧೯೮೭ ಅನು ನಾವಡ, ಸುಭಾಶ್ಚಂದ್ರ)

ಅಲಿಬಾಲಿಯ ನಾಯಕನ ನೈತಿಕತೆಯ ವಿಫಲತೆಯು ಅಪರಾಧವಾಗಿ ಬಾಲೆಮಾನಿಯ ಅಪಹರಣ ಅದಕ್ಕೆ ಶಿಕ್ಷೆಯಾಗುತ್ತದೆ. ಬಾಲೆಮಾನಿ ಮಾಯಕ್ಕೆ ಸಂದೊಡನೆ ಶಕ್ತಿಶಾಲಿ ದೈವವಾಗಿ ಅಣ್ಣ ಅಲಿಬಾಲಿ ನಾಯಕನ ಸಂರಕ್ಷಕಳಾಗಿ, ಅರಸ ಬನ್ನಾರಸ ಶಿಕ್ಷಕಳಾಗಿ ರೂಪಾಂತರಗೊಳ್ಳುತ್ತಾನೆ. ತಂಗಿಯ ನಿಗೂಢ ಸಾವು ತನ್ನ ಸಾಮಾಜಿಕ ಅಪರಾಧಕ್ಕಾಗಿ ದೈವವು ಪಡೆದುಕೊಂಡ ಬೆಲೆಯಾಗಿದೆ ಎಂದರಿತ ಅಲಿಬಾಲಿ ನಾಯಕ ಅರಸ ಬನ್ನಾರನಿಗೆ ಕಾಣಿಕೆ ಒಪ್ಪಿಸಿ ದೀನನಾಗಿ ಪರಿಪರಿಯಾಗಿ ಬೇಡುತ್ತಾನೆ. ಅರಸ ಬನ್ನಾರ ಉದ್ಧಟನಾಗಿ ವರ್ತಿಸಿದಾಗ ಮಾಯದ ತಂಗಿ ಬಾಲೆಮಾನಿ

‘ಯಾಕಣ್ಣ ದಮ್ಮಯ್ಯ ದಕ್ಕಯ್ಯ ಹಾಕುವಿರಿ
………..
ನಾನಿದ್ದರೆ ಅಣ್ಣ ನಿಮ್ಮ ಹೊಟ್ಟೆಯಲ್ಲಿ ಉರಿ ಎದ್ದಂತೆ
ಅಣ್ಣ ಅವರ ಹೊಟ್ಟೆಗೂ ಉರಿ ಹಾಕುವೆ
ಎನ್ನುವಳು ಅವಳು ಬಾಲೆಮಾನಿ’
(ಕ್ಲಾಸ್ ೧೯೮೭ ಅನು:ನಾವಡ, ಸುಭಾಶ್ಚಂದ್ರ)

ಎಂದವಳೆ ಹಡೆದು ಮಲಗಿದ ಬನ್ನಾರರ ಸೋದರ ಸೊಸೆಯನ್ನು ನೀರುಕೋಳಿಯಾಗಿ ಮಾಯ ಮಾಡಿದಳು. ಒಂದು ಸಿರಿಗೆ, ಒಂದು ಸೀಯಾಳಕ್ಕೆ ಬನ್ನಾರ ನಡೆಸಿದ ಕ್ರೌರ್ಯಕ್ಕೆ ಬಲಿಯಾದ ಬಾಲೆಮಾನಿ ಬನ್ನಾರರನ್ನು ಬಗ್ಗುಬಡಿವ ಶಕ್ತಿಯಾಗಿ ಅವನಿಂದಲೆ ಪೂಜೆಗೊಳ್ಳುತ್ತಾಳೆ. ಸಾಮಾಜಿಕ ರಾಜಕೀಯ ಪ್ರಭುತ್ವ ಹೊಂದಿದ ಬನ್ನಾರರ ಪ್ರಭುತ್ವವನ್ನು ಪ್ರಶ್ನಿಸುವ ಹಾಗೂ ನಿಗ್ರಹಿಸುವ ಶಕ್ತಿಯಾಗಿ ಬಾಲೆಮಾನಿ ಸ್ಥಾಪಿಸಿಕೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ.

ಪಾಡ್ಡನಗಳು ತುಳುವರ ವಿಶಿಷ್ಟಜೀವನ ಕ್ರಮ ಹಾಗೂ ಲೋಕ ದೃಷ್ಟಿಯ ಸೂಚಕಗಳು. ಪಾಡ್ದನಗಳು ಪ್ರಕಟಿಸುವ ಸ್ತ್ರೀತ್ವದ ಪ್ರತಿನಿಧೀಕರಣ ಅಖಿಲ ಭಾರತೀಯ ಸಾಂಪ್ರದಾಯಿಕ ಮಾದರಿಗೆ ವಿರುದ್ಧವಾದುದು. ಹೆಣ್ಣೊಬ್ಬಳ ಆತ್ಮಗೌರವ, ಧೈರ್ಯ ಸ್ವಾಭಿಮಾನ ಸ್ತ್ರೀತ್ವದ ಇತ್ಯಾತ್ಮಕ ಅಂಶವಾಗಿ ಇಲ್ಲಿ ಕಾಣಲಾಗಿದೆ. ಹೀಗಾಗಿ ಆತ್ಮ ಗೌರವಕ್ಕೆ ಧಕ್ಕೆ ಬಂದಾಗ ಹೆಣ್ಣಿನ ನೈತಿಕ ಗುಣಧರ್ಮವೆಂದು ಪರಿಭಾವಿಸುವ ಪತಿಭಕ್ತಿ, ವಿಧೇಯತೆ, ಪಾತಿವ್ರತ್ಯಗಳನ್ನು ಮೀರಿ ನಡೆದುಕೊಳ್ಳುವಲ್ಲಿ ಸ್ಥಾಪಿತ ನಿಶ್ಚಿತಗಳನ್ನು ಪಲ್ಲಟಗೊಳಿಸುತ್ತಾರೆ. ಪುರುಷ ವ್ಯವಸ್ಥೆಯನ್ನು ಪ್ರಶ್ನಿಸುವ, ಪ್ರತಿಭಟಿಸುವ, ಹೋರಾಡುವ ಮಾನಿಗ, ಕಲ್ಲುರ್ಟಿ ನಾಗಸಿರ, ಬಾಲೆಮಾನಿಯಂತಹ ಸ್ತ್ರೀ ಮಾದರಿಗಳು ಇಲ್ಲಿ ನಿಕೃತ ಪಾತ್ರಗಳಾಗುವುದಿಲ್ಲ. ಹೀಗಾಗಿಯೇ ಇಲ್ಲಿಯ ಹೆಣ್ಣುಗಳು ಪುರುಷತ್ವವನ್ನು ಮುರಿದು, ಅನ್ಯಾಯದ ವಿರುದ್ಧ ಹೋರಾಡಿ ಜಯ ಪಡೆಯುವ ಶಕ್ತಿಯಾಗುತ್ತಾರೆ.

ಆಕರ ಸೂಚಿ

ಕ್ಲಾಸ್ ಪೀಟರ್ ೧೯೮೭, ತುಳುವ ದರ್ಶನ, ಅನು: ಎ.ವಿ. ನಾವಡ, ಸುಭಾಶ್ಚಂದ್ರ ಪ್ರ: ಪ್ರಾದೇಶಿಕ ವ್ಯಾಸಂಗ, ಕುಂದಾಪುರ

ಕ್ಲಾಸ್ ಪೀಟರ್ ೧೯೯೪, ಪರ್ಮಲೆ ಬಲ್ಲಾಳ ಪಾಡ್ಡನಗಳು, ಪ್ರ: ಪೀಟರ್ ಕ್ಲಾಸ್ ಕ್ಯಾಲಿಫೊರ್ನಿಯ ವಿಶ್ವವಿದ್ಯಾಲಯ, ಅಮೆರಿಕಾ