ಭೂತಾರಾಧನಾ ಸಂದರ್ಭದಲ್ಲಿ ವಿಧಿವತ್ತಾಗಿಯೂ, ಇತರ ಸಂದರ್ಭಗಳಲ್ಲಿ ಹವ್ಯಾಸಕ್ಕಾಗಿಯೂ ಹಾಡುವ ಪಾಡ್ದನ ಅಥವಾ ಸಂಧಿ ಎಂಬ ವಿಶಿಷ್ಟವಾದ ತುಳು ಪಳಮೆಗಳು ಆಯಾ ಭೂತದ ಚರಿತ್ರೆ ಹಾಗೂ ಮಹಿಮಾನುವರ್ಣನೆಯನ್ನೇ ಪ್ರಧಾನ ಉದ್ದೇಶವಾಗಿರಿಸಿಕೊಂಡಿದ್ದರೂ ಅದಕ್ಕಿಂತಲೂ ಹೆಚ್ಚಿನ ಅನೇಕ ಉಪಯುಕ್ತ ವಿಚಾರಗಳನ್ನು ಅವನು ಗರ್ಭೀಕರಿಸಿಕೊಂಡಿರುವುದು ಗಮನಾರ್ಹ. ಭೂತ ಸಂಬಂಧವಿಲ್ಲದ ಇತರ ಜನಪದ ಕಥನಾತ್ಮಕ ಸಂಧಿಗಳೂ, ಕಬಿತಗಳೂ ಬೇಕಾದಷ್ಟಿವೆ. ವಿಪುಲವಾದ ಈ ತುಳು ಜನಪದ ವಾಙ್ಮಯ ರಾಶಿಯನ್ನು ತುಳುನಾಡ ಪುರಾಣ ಸಂಹಿತೆ ಎನ್ನಲು ಅಡ್ಡಿಯಿಲ್ಲ. ಜನಪದ ಕವಿಗಳ ಕಲ್ಪನಾ ವಿಲಾಸದ ಬಣ್ಣ ಬೇಗಡೆಗಳು ಈ ರಚನೆಗಳಲ್ಲಿ ತಕ್ಕಷ್ಟಿದ್ದರೂ ತುಳುನಾಡಿನ ಇತಿಹಾಸ ಸಂಸ್ಕೃತಿಗಳು ನಡೆದು ಬಂದ ದಾರಿಯು ಕೆಲವು ನೆನವುಗಳನ್ನೂ ಅಲ್ಲಲ್ಲಿ ಗುರುತಿಸಬಹುದು.

ತುಳುನಾಡಿನ ಶಾಸನಗಳು, ಲಿಖಿತ ಸಾಹಿತ್ಯ ಇತ್ಯಾದಿ ದಾಖಲೆಗಳು ಉಲ್ಲೇಖಿಸದೆ ಇರತಕ್ಕ ಅನೇಕ ಸಾಂಸ್ಕೃತಿಕ ಸಾಮಾಜಿಕ, ಧಾರ್ಮಿಕ ವಿಚಾರಗಳನ್ನು ಪಾಡ್ದನಗಳು ಹೆಜ್ಜೆ ಹೆಜ್ಜೆಗೂ ಬಣ್ಣಿಸಿ ತೋರಿಸುತ್ತವೆ. ಹಾಗೆ ನೋಡಿದರೆ ಶಿಷ್ಟ ಅಥವಾ ಮಾರ್ಗ ಸಾಹಿತ್ಯಕ್ಕಿಂತ ಇಂಥ ಜನಪದ ಸಾಹಿತ್ಯವು ಹೆಚ್ಚು ಪ್ರಾಮಾಣಿಕ ಹಾಗೂ ಪ್ರಾತಿನಿಧಿಕವೆನ್ನಲೂಬಹುದು. ಕೊರಗರ ಕೊಪ್ಪದಿಂದ ತೊಡಗಿ ಅರಸುವಿನ ಅರಮನೆಯ ಬದುಕಿನವರೆಗೂ ವಿಸ್ತರಿಸಿಕೊಂಡಿದ್ದ ಜೀವನದ ಹರಹನ್ನು ಪಾಡ್ದನದ ಕವಿಗಳು ತಾವು ಕಂಡಂತೆ ಚಿತ್ರಿಸಿದ್ದಾರೆ. ಈ ಹೊತ್ತು ತುಳುನಾಡಿನಲ್ಲಿ ಪ್ರಚಲಿತವಾಗಿರುವ ಅನೇಕ ಪರಂಪರಾಗತ ನಡವಳಿಕೆಗಳ ತಾಯಿಬೇರನ್ನು ಈ ದೇಸಿ ಸಾಹಿತ್ಯದಲ್ಲಿ ಕಾಣಬಹುದಲ್ಲದೆ ಕಾಲದ ಪ್ರಭಾವದಿಂದಾಗಿ ಕಳಚಿ ಹೋಗಿರಬಹುದಾದ ಕೆಲವು ಚಾರಿತ್ರಿಕ ಗೊಣಸುಗಳನ್ನು ಹೆಕ್ಕಿ ಜೋಡಿಸಲೂ ಅನ್ವೇಷಕರಿಗೆ ಸಾಧ್ಯವಾಗಲೂಬಹುದು.

ತುಳುನಾಡಿನ ಹಿಂದಣ ಮಂದಿ ಹೇಗೆ ಬದುಕು ಮಾಡಿದರೆಂಬುದನ್ನೂ, ಅವರ ತಿಳಿವು, ಜೀವನ ಮೌಲ್ಯ, ನಂಬಿಕೆ, ನಡವಳಿಕೆ, ರಸಿಕತೆ, ಕಲಾಪ್ರಜ್ಞೆ, ಉಡುಪು ತೊಡುಪು, ವ್ಯಾಪಾರ ಸಾಪಾರ, ಮದ್ದು ಮಾಯ ಇತ್ಯಾದಿಗಳನ್ನೂ ಬಡವ ಬಲ್ಲಿದರ ಸಂಘರ್ಷ, ಜಾತಿ ವೈಷಮ್ಯ, ಶೋಷಣೆ, ಅತ್ಯಾಚಾರ ಮೊದಲಾದುವನ್ನು

ತುಳು ಜನಪದ ಸಾಹಿತ್ಯ ತಕ್ಕಷ್ಟು ನಿಚ್ಚಳವಾಗಿಯೇ ಚಿತ್ರಿಸುವುದರಿಂದ ಮಾನವ ಕುಲಶಾಸ್ತ್ರದ ಅಧ್ಯಯನ ದೃಷ್ಟಿಯಿಂದಲೂ ಈ ಸಾಹಿತ್ಯ ಅಪೂರ್ವ ನಿಧಿಯೇ ಆಗಿದೆ.

ತುಳುನಾಡಿನಲ್ಲಿ ಇಂದು ನಾವು ಸಂಧಿಸುವ ಅನೇಕ ಜಾತಿ ಅಥವಾ ಸಮಾಜಗಳನ್ನು ಪಾಡ್ದನಗಳಲ್ಲೂ ನೋಡುತ್ತೇವೆ. ವೃತ್ತಿಗೂ ಜಾತಿಗೂ ನಿಕಟ ಸಂಬಂಧವಿದ್ದುದನ್ನೂ ವೃತ್ತಿಯಿಂದಲೇ ಹೆಚ್ಚಾಗಿ ಜಾತಿಯು ಗುರುತಿಸಲ್ಪಡುತ್ತಿದ್ದುದನ್ನೂ ಕಾಣುತ್ತೇವೆ. ಪಾಡ್ದನಗಳಲ್ಲಿ ಮುಖ್ಯವಾಗಿ ಬೈದ್ಯ, ಬಂಟ, ಜೈನ, ಬ್ರಾಹ್ಮಣ, ಮೋಗೇರ, ಪಂಬದ, ಪರವ, ನಲಿಕೆ, ಮೇರ, ಬಾಕುಡ, ಕೊರಗ, ಮೂಲ್ಯ, ಬಲ್ಯಾಯ ಅಕ್ಕಸಾಲೆ, ಜೋಗಿ, ಕ್ಷೌರಿಕ, ಮಡಿವಾಳ, ಗಾಣಿಗ, ಮಾಪಿಳ್ಳೆ – ಮೊದಲಾದ ಸಮುದಾಯಗಳ ಉಲ್ಲೇಖವಿದೆ. ‘ಕುಡುಂಬ’ ಎಂಬುದಾಗಿ ಕ್ರೈಸ್ತರನ್ನೂ ಕೆಲವೆಡೆ ಉಲ್ಲೇಳಿಸಲಾಗಿದೆ.

ಶೀನಪ್ಪ ಹೆಗ್ಡೆಯವರು ತಮ್ಮ ‘ಪ್ರಾಚೀನ ತುಳುನಾಡು’ ಪುಸ್ತಕದಲ್ಲಿ ಕೊಟ್ಟಿರುವ ಮೂಲದ ಹರಿಜನರು ಹಾಡುವರೆಂದಿರುವ ಈ ಕೆಳಗಿನ ಹಾಡಿನಲ್ಲಿ ಕೆಲವು ಜಾತಿಗಳ ಹೆಸರೂ, ಅವುಗಳ ಪರಸ್ಪರ ಸಂಬಂಧವೂ ವಿದಿತವಾಗುತ್ತದೆ.

‘ಮಲ್ಲ ಮಲ್ಲ ಒಕ್ಕೆಲಾಕುಲು ಪಟ್ಟಣೇರೆ ಮೆಗ್ದಿ ಬಾಲೆಲು |
ಮಡಲೇರೆ ಪಲ್ದಿ ಬಾಲೆಲು | ಲೇಲೆ ಲೇಲೆಲಾ ||
ಕಡಲೇರ್ ಮಡಲೇರ್ ಪಾಲ್ ಪಾಲ್ ಕೇಂಡೆರ್
ಪಾಲ್ ಮಲ್ತೊಂಡೇರ್‌ ||
ಒಡಿದಾಂತಿ ಉಪ್ಪುನೀರ ಕಡಲ ಕಂಡ ಮರಕಲೆರ್ ಪಾಲ್‌ದೆತ್ತರ್‌ |
ಚಪ್ಪೆನೀರ ನೆಲನಕಂಡ ಬಾರಗೆರ್‌ ಪಾಲ್‌ದೆತ್ತೆರ್‌ |
ಕರೆಬರಿತ ಚೀಪೆನೀರ ಮರನ ಕಲ ಬೆಂದೆರ್‌ ಮಡಲೆರೆಡೋ…
ದೊಡ್ಡ ದೊಡ್ಡ ಬಂಟರು ಮೊಗವೀರರ ತಂಗಿಮಕ್ಕಳು
ಬೆಲ್ಲವರ ಅಕ್ಕನ ಮಕ್ಕಳು | ಲೇಲೆ ಲೇಲೆಲಾ ||
ಮೊಗವೀರರೂ ಬಿಲ್ಲವರೂ ಪಾಲು ಕೇಳಿದರು
ಪಾಲು ಮಾಡಿಕೊಂಡರು
ಹುಣಿ ಇಲ್ಲದ ಉಪ್ಪುನೀರಿನ ಕಡಲ ಹೊಲವನ್ನು ಮೊಗವೀರರು ಪಾಲು ಪಡೆದರು
ಸಪ್ಪೆನೀರನ ನೆಲದ ಹೊಲವನ್ನು ಬಂಟರು ಪಾಲು ಪಡೆದರು
ಕರೆ ಬಳಿಯ ಸಿಹಿನೀರಿನ ಮರದ ವ್ಯವಸಾಯ ಮಾಡಿದರು ಬಿಲ್ಲವರು

ಎಂದು ಮುಂದುವರಿಯುವ ಈ ಹಾಡು ಮೂಲತಃ ಒಂದೇ ಸಮುದಾಯವಾಗಿದ್ದ ಜನ ಕ್ರಮೇಣ ಭಿನ್ನ ಭಿನ್ನ ಕಸುಬುಗಳನ್ನು ರೂಢಿಸಿಕೊಂಡ ಬಗೆಯನ್ನು ಬಿತ್ತರಿಸುತ್ತದೆ. ತುಳುನಾಡಿನ ಮಾತೃಪ್ರಧಾನ ಸಮಾಜಗಳಿಗೆ ಸಂಬಂಧಪಟ್ಟ ವಿವಿಧ ಬಳಿಗಳ ಹೆಸರುಗಳನ್ನು ಪರಿಶೀಲಿಸಿದರೂ ಈ ಬಂಧುತನದ ಕಲ್ಪನೆಗೆ ಇಂಬು ದೊರಕುವಂತಿದೆ.

ಒಂದೇ ತಂದೆಯ ಮಕ್ಕಳು ಒಂದು ವೃತ್ತಿಯ – ಉದಾ: ಶಿಲ್ಪ ವೃತ್ತಿಯ – ವಿವಿಧ ಕವಲುಗಳನ್ನು ಹಿಡಿದುಕೊಂಡದ್ದನ್ನು ಕಲ್ಕುಡನ ಪಾಡ್ದನವು ವಿವರಿಸುತ್ತದಲ್ಲದೆ ವೃತ್ತಿಗನುಸಾರ ಉಪಜಾತಿಗಳು ಉಂಟಾಗತಕ್ಕ ಬಗೆಯನ್ನು ಸೂಚಿಸುತ್ತದೆ.

‘ಐಯೆರೆಗ್‌ ಐನ್‌ ಬಿನ್ನಣದ ಬೇಲೆ. ಕಡೀರ ಮಗಕ್‌ ಮರತ ಬೇಲೆ, ಮಡೀರ ಮಗಕ್‌ ಕರ್ಬೊದ ಬೇಲೆ, ನಡ್ತ ಮಗಕ್‌ ಬಂಗಾರ್ದ ಬೇಲೆ, ಒರಿಯಗ್ ಚೆಂಬುದ ಬೇಲೆ, ಶಿದ್ದಿ ಮಗಕ್‌ ಕಲ್ಲ್‌ದ ಬೇಲೆ, ಮರತಬೇಲೆ ಬೆಂದಿನಾಯೆ ಮಲೆನಾಡಚ್ಚವೆ ಕರ್ಬೊದ ಬೇಲೆ ಬೆಂದಿನಾಯೆ ನುಡ್ತ ಎಚ್ಚವೆ. ಚೆಂಬುದ ಬೇಲೆ ಬೆಂದಿನಾಯೆ ಚೆಮ್ಮುಟಿಗಾರೆ, ಬಂಗಾರ್ದ ಬೇಲೆ ಬೆಂದಿನಾಯೆ ಯಾರಣ್ಣೆ, ಕಲ್ಲ್‌ದ ಬೇಲೆ ಬೆಂದಿನಾಯೆ ಕಲ್ಕುಡೆ’ (ಕಲ್ಲುರ್ಟಿ ಸಂಧಿ)

ಐವರಿಗೆ ಐದು ಬಿನ್ನಾಣದ ಕೆಲಸ. ಚೊಚ್ಚಲ ಮಗನಿಗೆ ಮರದ ಕಸುಬು. ಮತ್ತಿನವನಿಗೆ ಕಬ್ಬಿಣದ ಕೆಲಸ, ನಡುವಣ ಮಗನಿಗೆ ಬಂಗಾರದ ಕೆಲಸ, ಒಬ್ಬಿಗೆ ತಾಮ್ರದ ಕೆಲಸ, ಚಿಕ್ಕ ಮಗನಿಗೆ ಕಲ್ಲಿನ ಕೆಲಸ. ಮರದ ಕೆಲಸ ಮಾಡಿದವ ಮಲೆನಾಡ ಅಚ್ಚವ. ಕಬ್ಬಿಣದ ಕೆಲಸ ಮಾಡಿದವ ನುಡ್ತ ಎಚ್ಚವ, ತಾಮ್ರದ ಕೆಲಸ ಮಾಡಿದವ ಚೆಮ್ಮುಟಿಗಾರ, ಬಂಗಾರದ ಕೆಲಸ ಮಾಡಿದವ ಯಾರಣ್ಣ, ಕಲ್ಲಿನ ಕೆಲಸದವ ಕಲ್ಕುಡ

ತುಳುನಾಡಿನ ಬದುಕಿನಲ್ಲಿ ಬೇರೆ ಬೆರೆ ಕಾಲ ಘಟ್ಟಗಳಲ್ಲಿ ಭಿನ್ನ ಭಿನ್ನ ಜನವರ್ಗ ವಿವಿಧ ಕಾರಣಗಳಿಂದ ಬಂದು ಬೆರೆತುಹೋದುದನ್ನು ಕಾಣುತ್ತೇವೆ. ಚಿಕ್ಕ ಪುಟ್ಟ ವೈಷಮ್ಯಗಳು ಘಟಿಸಿರಬಹುದಾದರೂ ತೀರ ವಿಶೇಷವಾದ ಸಾಮೂಹಿಕ ಸಂಘರ್ಷವೇನೂ ಸಂಭವಿಸಿದಂತೆ ಪಾಡ್ದನ ಸಾಹಿತ್ಯದಲ್ಲಿ ತೋರುವುದಿಲ್ಲ. ಒಟ್ಟಿನಲ್ಲಿ ವಿವಿಧ ಜಾತಿ, ಮತಗಳಿಗೆ ಸೇರಿದ ಮಂದಿ ಬಹುಮಟ್ಟಿಗೆ ಸಾಮರಸ್ಯದಿಂದ (ರಾಜಕೀಯ ಕಾಳಗಳ ವಿಚಾರವನ್ನುಳಿದು) ಬಾಳುತ್ತಿದ್ದರೆನ್ನಬೇಕು. ಈ ಒಕ್ಕಟ್ಟಿನ ಚಿತ್ರವನ್ನು ಭೂತಾರಾಧನೆಯಂಥ ಸಂದರ್ಭದಲ್ಲಿ ಕಾಣಬಹುದು.

‘ಜುಮಾದಿ ಬೂತೊದ ಉಪದ್ರೊ ತೋಜಿ ಬತ್ತ್ಂಡ್. ಗ್ರಾಮೊನು ಕೂಡಾಯೆರ್‌. ದುಗ್ಗ ಭಂಡಾರಿಳು ಪಂಡೆರ್‌, ಎಂಕುಳೆ ಇಲ್ಲ್‌ಡ್‌ ಸಂಕಡೊ ಬತ್ತ್ಂಡ್, ಬಲಿಮೆಡ್‌ ಕೇಣ್ಣಗ ಜುಮಾದಿ ಬೂತೊದ ಉಪದ್ರೊಂದು ತೋಜಿ ಬತ್ತ್ಂಡ್‌. ಸಾನ ಆವೊಡುಗೆ, ಐಕ್‌ನಿಕುಳೆಡ ಕೇಣಂದೆ ಬಲ್ಲಿ. ದಾನೆ ಮುಳ್ಪುನೆಂದ್‌ದ್‌ ಗ್ರಾಮದಾಕುಳೆಡ ಕೇಂಡೆರ್‌. ಐಕ್‌ ಗ್ರಾಮದಾಕುಳು ಪಂಡೆರ್‌, ‘ಇನಿ ನಿಕುಳೆ ಇಲ್ಲಗ್‌ ಅನುಪತ್ಯೊಬತ್ತ್ಂಡ್, ಎಲ್ಲೆ ಎಂಕುಳೆ ಒಟ್ಟುಗು ಬರು. ಒಟ್ಟುಗು ಇತ್ತ್‌ದೇ ಸಾನೊ ಕಟ್ಟಾಗೊ’ ಅಂದ್‌ದ್‌ ಪಂಡೆರ್. ಆಕುಲು ಮಾತ ಒಟ್ಟುಗು ಕೂಡುದು ಸಾರ ಬರಿಸಾನೊ ಕಟ್ಯೆರ್‌. ನೇಮ ಮಳ್ಪಾಯೆರ್‌’

          [ಸಾರಾಳ ಜುಮಾದಿ]

ಜುಮಾದಿ ಭೂತದ ಉಪದ್ರವ ತೋರಿಬಂತು. ಗ್ರಾಮವನ್ನು ಕೂಡಿಸಿದರು. ದುಗ್ಗ ಭಂಡಾರಿಗಳು  ಹೇಳಿದರು – ನಮ್ಮ ಮನೆಯಲ್ಲಿ ಸಂಕಟ ಬಂತು. ನಿಮಿತ್ತದಲ್ಲಿ ಕೇಳುವಾಗ, ಜುಮಾದಿ ಭೂತದ ಉಪದ್ರವವೆಂದು ತೋರಿಬಂತು. ಸ್ಥಾನ ಆಗಬೇಕಂತೆ. ಅದಕ್ಕೆ ನಿಮ್ಮಲ್ಲಿ ಕೇಳದೆ ಆಗದು. ಏನು ಮಾಡುವುದೆಂದು ಗ್ರಾಮದವರಲ್ಲಿ ಕೇಳಿದರು. ಅದಕ್ಕೆ ಗ್ರಾಮದವರು ಹೇಳಿದರು – ಇಂದು ನಿಮ್ಮ ಮನೆಗೆ ಅನಿವಾರ್ಯ ಬಂತು. ನಾಳೆ ನಮ್ಮ ಒಟ್ಟಿಗೆ ಬಂದೀತು. ಒಟ್ಟಿಗೆ ಇದ್ದೇ ಸ್ಥಾನ ಕಟ್ಟಿಸುವ ಎಂದು ಹೇಳಿದರು. ಅವರೆಲ್ಲ ಒಟ್ಟು ಸೇರಿ ‘ಸಾರಬರಿ’ ಸ್ಥಾನ ಕಟ್ಟಿದರು. ನೇಮ ಮಾಡಿಸಿದರು.

‘ಮಗ್ರನ ಕಾಲೊ ಕೋಚಾಳ್ವೆರ್ ಒರಿ ಕೊಂರ್ಡ ಸಮ ಅತ್ತ್‌. ಈ ಅಂಬಟಾಡಿ ಮಾಗಣೆಲಾ ಈರ್ಲಾ  ಒಟ್ಟುಗು ಆದ್‌ಎಂಕ್‌ಸಾನೊ ಆವೊಡುಂದು ಪಂಡೆ ಬಲ್ಲಾಳ್‌ಲಾ ಅಂಬಟಾಡಿ ಮಾಗಣೆಲಾ ಒಟ್ಟಾದ್‌ ಲಕ್ಕಿಯೆರ್‌, ಪಾದೆಟ್‌ಸಾನೊ ಕಟ್ಟಾಯೆರ್‌, ನೇಮ ಮಲ್ಪಾಯೆರ್… ಮಾಡೊಡು ಒಕ್ಕೆಲ್ ಆಯೆರೆ ಮಡ್ಯೆಲ್ದಿ  ಅಬ್ಬಗ ಮಡಿಕೊಂಡು ಬರೊಡು, ಓಡಾರ್ದಿ ಬಬ್ಬು ಕಲಸ ಕಟ್ಯೆರೆ, ಸುದ್ದ ಮಳ್ಪೆರೆ ಬ್ರಾಣೆರೆ ಕಿನ್ನಿ ಮಾಣಿ  ಬರೊಡುಂದರ್’ (ಪೊಸ ಬೂತ) ಮರುವರ್ಷ ಕೋಚಾಳ್ವರು ಒಬ್ಬರು ಕೊಟ್ಟರೆ ಸರಿಯಲ್ಲ. ಈ ಅಂಬಡಾಡಿ  ಮಾಗಣೆಯೂ ನೀವು ಒಟ್ಟಾಗಿ ನನಗೆ ಸ್ಥಾನ ಆಗಬೇಕೆಂದು ಹೇಳಿದ. ಬಲ್ಲಾಳರೂ ಅಂಬಡಾಡಿ  ಮಾಗಣೆಯೂ ಒಟ್ಟಾಗಿ ಎದ್ದರು. ಪಾದೆಯಲ್ಲಿ ಸ್ಥಾನ ಕಟ್ಟಿಸಿದರು. ನೇಮ ಮಾಡಿಸಿದರು. ಮಾಡದಲ್ಲಿ  ಒಕ್ಕಲು ಆಗಲು ಮಡಿವಾಳತಿ ಅಬ್ಬಗ ಮಡಿ ತರಬೇಕು. ಕುಂಬಾರಗಿತ್ತಿ ಬಬ್ಬು ಕಲಶ ಕಟ್ಟಲು, ಶುದ್ದ  ಮಾಡಲು ಬ್ರಾಹ್ಮಣರ ಚಿಕ್ಕಮಾಣಿ ಬರಬೇಕು ಎಂದರು.

ಇಲ್ಲಿ ಇಂಥ ಸಂದರ್ಭದಲ್ಲಿ ಕೆಲವು ವರ್ಗದವರ ಕರ್ತವ್ಯ ಭಾಗವನ್ನೂ ನಿರ್ದೇಶಿಸಲಾಗಿದೆ.

ಆಯಾ ವರ್ಗದವರು ತಮ್ಮ ವೃತ್ತಿಗೂ, ಇತರ ಅನುಕೂಲಗಳಿಗೂ ಬೇಕಾಗಿ ಹೆಚ್ಚಾಗಿ ತಮ್ಮದೇ ಆದ ಗುಂಪುಗಳನ್ನೋ ಕೇರಿಗಳನ್ನೋ ಮಾಡಿಕೊಂಡು ಜೀವಿಸುತ್ತಿದ್ದರು. ಒಂದೊಂದು ಸಮುದಾಯದ ಕೇರಿಗೂ ಪ್ರತ್ಯಪ್ರತ್ಯೇಕ ಹೆಸರಿದೆ. ಉದಾ: ಬೆರಣರೆ ಬೆರಂಪಳ್ಳಿ, ಸೆಟ್ಟಿ ಪತ್ತಾನ, ಮರಕಳೆರೆ ಪಟ್ಣ, ಮುಗರೆರೆ ಓಣಿ, ಕೊರಗೆರೆ ಓಣಿ, ಕೊರಗೆರೆ ಕೊಪ್ಪ, ಬಾಕುಡೆರೆ ಬೈಲ್, ಬೈದ್ಯರೆ ನಟ್ಟಿಲ್, ಕಂಚಿಗಾರರ ಕೇರಿ. (ಬ್ರಾಹ್ಮಣರ ಬೆರಂಪಳ್ಳಿ, ಸೆಟ್ಟಿ ಪಟ್ಟಣ ಮರಕಳರ ಪಟ್ಣ, ಮುಗೇರರ ಓಣಿ, ಕೊರಗರ ಕೊಪ್ಪ, ಬಾಕುಡರ ಬೈಲು, ಬೈದ್ಯರ ನಟ್ಟಿಲ್, ಕಂಚಿಗಾರರ ಕೇರಿ) ಇತ್ಯಾದಿ ಹಾಗೆಯೇ ಬೇರೆ ಬೇರೆ ಜಾತಿ ಅಂತಸ್ತುಗಳಿಗನುಸಾರವಾಗಿ ಅವರವರ ಮನೆಗಳಿಗೆ ಬೇರೆ ಬೇರೆಯ ಹೆಸರಿರುವುದೂ ಕಂಡು ಬರುತ್ತದೆ. ದಟ್ಟಿಗೆ, ಕೊಪ್ಟ, ಕೊಟ್ಟ, ಜೇರ, ಗುಡಿಚಿಲ್, ಕೊಟ್ಯ, ಪಟ್ಟ್‌, ಬೊಟ್ಟ, ಬೂಡು, ಬರ್ಕೆ, ನಟ್ಟಿಲ್ ಇತ್ಯಾದಿ.

ಜಾತಿ ಪದ್ಧತಿಯ ಹಿಡಿತ ಹಿಂದೆ ಪ್ರಬಲವಾಗಿದ್ದರೂ ಕೆಲವೊಂದು ಸಂದರ್ಭಗಳಲ್ಲಿ ಜಾತಿಯ ಸೀಮೆಯನ್ನು ಮೀರಿದ ಪ್ರಮೇಯಗಳೂ ಇಲ್ಲದಿಲ್ಲ. ಜಾತೀಯತೆಯನ್ನು ಮೀರಿದ ಮಾನವತೆ ಕೆಲವೊಮ್ಮೆ ಮಿಂಚಿ ತೋರುತ್ತದೆ. ಅನಾಥವಾದ ಕೊರಗರ ಮಗುವನ್ನು ಮೈರಕ್ಕೆ ಬೈದೆದಿ ತನ್ನ ಮಗನಂತೆ ಸಾಕುತ್ತಾಳೆ. (ಕೊರಗ ತನಿಯ) ಕಣ್ಣು ಕಟ್ಟಿ ಕಾಡಿಗೆ ಬಿಡಲ್ಪಟ್ಟಿದ್ದ ಬ್ರಾಹ್ಮಣ ಕನ್ಯೆ ದೇಯಿಯನ್ನು ಸಾಯಿನ ಬೈದ್ಯ ಕರುಣೆದೋರಿ ತಂದು ಸಾಕುತ್ತಾನೆ. (ದೇಯಿ ಬೈದ್ಯೆತಿ) ಕೊಡಂಗೆ ಬನ್ನಾರ ತನ್ನ ಹೊಲದ ಬಳಿಯ ಗುಡಿಸಲಲ್ಲಿ ಹೆತ್ತು ಸತ್ತ ಮೇರರ ಹೆಂಗಸಿನ ಕೂಸೊಂದನ್ನು ತಂದು ಪ್ರೀತಿಯಿಂದ ಸಾಕುತ್ತಾನೆ. (ಕೋಡ್ದಬ್ಬು) ದೇಯಿಗೆ ಹೆರಿಗೆಯ ನೋವು ವಿಪರೀತವಾದಾಗ ಪೆರ್ಮಾಲೆ ಬಲ್ಲಾಳ ತನ್ನ ಕೈಯ ವಜ್ರದ ಉಂಗುರವನ್ನು ಬ್ರಹ್ಮ ದೇವರಿಗೆ ‘ಈಡು’ ಇಟ್ಟು ಪ್ರಾರ್ಥಿಸುತ್ತಾನೆ. (ಕೋಟಿ ಚೆನ್ನಯ)

ತುಳುನಾಡಿನ ಜಾತಿ ವ್ಯವಸ್ಥೆಯಲ್ಲಿ, ಆಗಂತುಕರಾಗಿ ಕ್ರಮೇಣ ಬಂದವರಾದರೂ ಬ್ರಾಹ್ಮಣರೇ ಪ್ರಥಮ ಪಂಕ್ತಿಯಲ್ಲಿ ಕುಳ್ಳಿರಿಸಲ್ಪಟ್ಟಿದ್ದಾರೆ. ಜೈನ, ಬಂಟ ಮೊದಲಾದ ಪ್ರತಿಷ್ಠಿತ ವರ್ಗಗಳ ವರ್ಚಸ್ಸು ಇಲ್ಲಿ ಪ್ರಬಲವಾಗಿದ್ದರೂ, ಸಾಮಾಜಿಕ ಮಾನ ಮರ್ಯಾದೆಗಳಲ್ಲಿ ಬ್ರಾಹ್ಮಣರಿಗೆ ಅಗ್ರಸ್ಥಾನವಿದ್ದಿತು. ಅದಕ್ಕೆ ಅವರ ಜಾಣ್ಮೆ ಮಯ್‌ಬಣ್ಣ, ತಮ್ಮೊಂದಿಗೆ ತಂದ ವೈದಿಕ ಸಂಸ್ಕೃತಿ, ಸಾಹಿತ್ಯ – ಇತ್ಯಾದಿ ಕಾರಣವಿರಬೇಕು. ವೈದಿಕ ಸಂಸ್ಕೃತಿಯನ್ನು ಇಲ್ಲಿನ ಪುರಾತನ ಅವೈದಿಕ ಸಂಸ್ಕೃತಿಯೊಡನೆ ನಯವಾಗಿ ಬೆರೆಸಿ, ಭೂತಾರಾಧನೆಯಂಥ ತುಳುನಾಡಿನ ಜೀವಾಳ ಸಂಪ್ರದಾಯದ ಮೇಲೂ ವಿಶಿಷ್ಟ ಪ್ರಭಾವನ್ನು ಬೀರಿದ ಬ್ರಾಹ್ಮಣರು ಉಳಿದೆಲ್ಲ ಸಮಾಜಗಳ ಮಂದಿಗೆ ಗೌರವಾರ್ಹರಾಗಿ ಉಳಿದರು. ದೇವಸ್ಥಾನದ ಪೂಜೆ, ನಿಮಿತ್ತ, ಮುಹೂರ್ತ, ಕಟ್ಟಡಗಳ ಪಂಚಾಂಗಳ ಆಯ ಹೇಳುವುದು, ಬ್ರಹ್ಮ ಕಲಶ ಇತ್ಯಾದಿ ಮಾಡುವುದು ಇವರ ವೃತ್ತಿಯಾಗಿತ್ತು. ಕೃಷಿಯನ್ನೂ ಇವರು ಅವಲಂಬಿಸುತ್ತಿದ್ದರೆಂದು ಪಾಡ್ದನಗಳು ಹೇಳುತ್ತವೆ. ದೇವಸ್ಥಾನದ ಪೂಜೆಗಾಗಿ ಇವರಿಗೆ ಉಂಬಳಿ ಕೊಡುವ ಕ್ರಮವೂ ಇತ್ತು. ‘ಕಾಂಡೆದ ಪನಿಪೂಜೆ, ಮದ್ಯಾನದ ಮಾಪೂಜೆ, ರಾತ್ರೆದ ಸಾಂತಿಪೂಜೆ, ಕರಿಪುಲ ವರ್ಸ ಪದ್ರಾಡ್‌ತಿಂಗೊಳ್ಡು ಪದ್ರಾಡ್‌ಮುಡಿ ಉಂಬೊಳಿ ನಿಕ್ಕ್‌’ (ಬಾಮಕುಮಾರ ಸಂಧಿ)

ಬ್ರಹ್ಮಘಾತದ ಭಯ ಈ ಕೆಳಗಿನಂತೆ ಚಿತ್ರಿತವಾಗಿದೆ:

‘ನೋಪಡ ಬ್ರಾಣನ್ ಕಬುಲ್ತಿ ಪೆತ್ತನ್ ಕೆರಿ ದೋಸ ಉಂಡು. ಅಪ್ಪೆನ್ ಕೆರಿದೋಸ ಉಂಡು. ಎನನ್ ಕೆರಿ ದೋಸ ಉಂಡು’ (ಮುಗ್ಗೆರ್ಲೆ ಸಂಧಿ) ಹೊಡೆಯಬೇಡ ಬ್ರಾಹ್ಮಣನನ್ನು ಕಪಿಲೆ ದನವನ್ನು ಕೊಂದ ದೋಷವಿದೆ. ತಾಯಿಯನ್ನು ಕೊಂದ ದೋಷವಿದೆ. ನನ್ನನ್ನು ಕೊಂದ ದೋಷವಿದೆ.

ತುಳುನಾಡಿನ ಬ್ರಾಹ್ಮಣರು ಕೇರಳಕ್ಕೆ ‘ಶಾಂತಿಪೂಜೆ’ಗೆಂದು ಹೋಗುತ್ತಿದ್ದುದುಂಟೆಂದು ‘ಮೂಕಾಂಬೆ ಜೇವು’ ಮೊದಲಾದ ಸಂಧಿಗಳು ಉಲ್ಲೇಖಿಸುತ್ತವೆ.

‘ಧರ್ಮದ ಕಟ್ಟೆಡ್‌ ಪುಣ್ಯೊದ ನೀರ ದೀದ್ ಕುಳ್ದುಂಡು ಬೆರಣ ಮಾಣಿ’
ಧರ್ಮದ ಕಟ್ಟೆಯಲ್ಲಿ ಪುಣ್ಯದ ನೀರ ಇಟ್ಟುಕೊಂಡು ಕೂತಿದೆ ಬ್ರಾಹ್ಮಣ ಮಾಣಿ

ಎಂಬಂಥ ಉದಾರ ಕಾರ್ಯನಿರ್ವಾಹಕರೂ ಇದ್ದರು. ಯಾಚಕ ವೃತ್ತಿಯ ಬಡಬ್ರಾಹ್ಮಣರೂ ಪಾಡ್ದನಗಳಲ್ಲಿ ಅಲ್ಲಿ ಇಲ್ಲಿ ಕಾಣಸಿಗುತ್ತಾರೆ.

ಜೈನ ಧರ್ಮವೂ ತುಳುನಾಡಿನಲ್ಲಿ ಪ್ರಚಲಿತವಾಗಿತ್ತು. ತುಳುನಾಡಿನ ಹೆಚ್ಚಿನ ಜೈನರು ಅಳಿಯ ಕಟ್ಟನ್ನೆ ಆಚರಿಸುತ್ತ ಬಂದಿದ್ದಾರೆ. ಕಾರ್ಕಳ ವೇಣೂರುಗಳ ಗುಮ್ಮಟ ಮೂರ್ತಿಗಳ ನಿರ್ಮಾಣದ ವೃತ್ತಾಂತ ಕಲ್ಕುಡ ಪಾಡ್ದನದಲ್ಲಿ ವರ್ಣಿತವಾಗಿದೆ. ತಮ್ಮ ಧರ್ಮದಲ್ಲಿ ನಿಷಿದ್ಧವಾಗಿದ್ದರೂ ತುಳು ನಾಡಿನ ಹೆಚ್ಚಿನ ಜೈನರು. ಭೂತಗಳನ್ನು ಸನಾತನ ದೇವರುಗಳನ್ನೂ ನಂಬುವವರೇ ಆಗಿದ್ದರು. ಭೂತಗಳನ್ನು ಅವರು ಅನಿವಾರ್ಯವಾಗಿ ನಂಬಲೇ ಬೇಕಾಯಿತೆಂಬುದನ್ನು ಕೆಲವು ಪಾಡ್ದನಗಳು ಒಕ್ಕಣಿಸುತ್ತವೆ.

‘ಇನಿ ಮುಟ್ಟ ಎಂಕುಳೆ ಬಸ್ತಿದ ಕೈತಳ್ ಬೇತೆ ಬೂತೆಳೆನ್ ನಂಬುದುಜಿ. ನನ ಪೊಸತಾದ್‌ನಂಬುನೆ  ಎಂಚ? ಬೊಕ್ಕಲಾ ಎಂಕುಳೆ ಗುರು ಬತ್ತೆಡ ದಿಂಜ ಕೋಪ ಮಲ್ಪೆ. ಉಂದೆಕ್ ದಾನೆ ಮಲ್ಪುನಿ’ ಅಂದ್  ಪಣ್ಣಗ ಭೂತ ದಿಂಜ ಉಗುಡಾದ್ ಕುಡ ಒರಿ ಜೈನನ್ ಮರತ್‌ದ್ ಮುರ್ಕದ್ ಪಾಡ್‌ಂಡ್. ಆಯಗ್  ಕೈಲಾ ಬತ್ತ್‌ಜಿ ಬಾಯಿಲಾ ಬತ್ತ್‌ಜಿ. ಅಪಗ ಜೈನರ್‌ಪಂಡಿನಿ, ‘ನಮ ಆ ಬೂತೊಗು ಎದ್ರ್‌ಉತ್ತರ ಕೊರ್ದು  ಪಂಡಿನವು ಆಯಿಜಿ. ಎಂಚಾಂಡ್ಲಾ ಆವಡ್ ನಮ ಅವೆನ್ ನಂಬುಗ ಆಯಿಕ್ ತಕ್ಕ ಸದುಪಣ್ಕ. ತಡವು  ಮಲ್ಪುನೆ ದಾಯೆಗ್‌?’ (ಧೂಮಾವತಿ ಸಂಧಿ)

ಇದುವರೆಗೆ ನಮ್ಮ ಬಸದಿಯ ಹತ್ತಿರ ಬೇರೆ ಭೂತಗಳನ್ನು ನಂಬಲಿಲ್ಲ. ಇನ್ನು ಹೊಸತಾಗಿ ನಂಬುವುದು ಹೇಗೆ? ಮತ್ತೆ ನಮ್ಮ ಗುರು ಬಂದರೆ ತುಂಬ ಕೋಪಗೊಂಡಾನು. ಇದಕ್ಕೇನು ಮಾಡಲಿ ಎನ್ನುವಾಗ, ಭೂತ ಬಹು ಉಗ್ರವಾಗಿ ಮತ್ತೊಬ್ಬ ಜೈನನನ್ನು ಗಾಸಿಗೊಳಿಸಿ ಬೀಳಿಸಿತು. ಅವನಿಗೆ ಕೈಯೂ ಬರಲಿಲ್ಲ. ಬಾಯಿಯೂ ಬರಲಿಲ್ಲ. ಆಗ ಜೈನರು ಹೇಳಿದ್ದು – ನಾವು ಆ ಭೂತಕ್ಕೆ ಎದುರುತ್ತರ ಕೊಟ್ಟು ನುಡಿದುದು ಆಗಲಿಲ್ಲ. ಹೇಗೂ ಆಗಲಿ. ನಾವು ಅದನ್ನು ನಂಬೋಣ. ಅದಕ್ಕೆ ತಕ್ಕ ಸದುತ್ತರ ಹೇಳೋಣ. ತಡ ಮಾಡುವುದೇಕೆ?

ಊಳಿಗಮಾನ್ಯ ಪದ್ಧತಿ ಚಲಾವಣೆಯಲ್ಲಿ ಭೂತಗಳ ಪಾತ್ರ ಅತ್ಯಂತ ಹಿರಿದು. ತುಳುನಾಡನ್ನು ಆಳಿದ ಜೈನ ಬಲ್ಲಾಳರು ಈ ರಹಸ್ಯವನ್ನು ಬೇಗನೆ ಹಿಡಿದುಕೊಂಡರು. ಉಳಿದವರೂ ಸಂದರ್ಭ ಒದಗಿದಂತೆ ಭೂತಗಳನ್ನು ತಮ್ಮ ಸ್ವಾರ್ಥಕ್ಕಾಗಿ ಧಾರಾಳವಾಗಿ ದುಡಿಸಿಕೊಂಡಿದ್ದಾರೆ. ಹೀಗಾಗಿ ಭೂತಾರಾಧನೆ ಸಾಂಸ್ಕೃತಿಕ ಹೆಚ್ಚಳವನ್ನು ಗುರುತಿಸುವಾಗ ಕೇವಲ ಅದರ ಉದಾತ್ತ ಮುಖವನ್ನು ಮಾತ್ರ ನೋಡದೆ ಅದರೊಳಗಿರುವ ಸ್ವಾರ್ಥ ಹಾಗೂ ಶೋಷಣೆಯ ಮುಖವನ್ನೂ ನೋಡಬೇಕಾಗುತ್ತದೆ.

ಪಾಡ್ಡನಗಳಲ್ಲಿ ಆಗಿಂದಾಗ ಕುಲ ಪ್ರಜ್ಞೆ, ಕುಲ ವೃತ್ತಿಯ ಪ್ರಜ್ಞೆಯ ಪ್ರಸ್ತಾಪ ಬರುತ್ತದೆ.

‘ಅಂದೆಯೆ ಅಮ್ಮೆರೆ ನಮ್ಮ ಕುಲ ಜಲ್ಮಂದ ಬೇಲೆ ದಾನೆಂದ್ ಕೇಣುವಲ್ ಸುಬ್ಬಿಯಮ್ಮ ‘ವರಣ ತೂಕಂದ  ಪೂಕಾಜಿ ಕಣಪುನಿ. ಅವೆನ್ ಮಾರೊಂದು ಪೋಪಿನಿಂ’ದ್ ಪಂಡೆ’ (ಸುಬ್ಬಿಯಮ್ಮ) ಅಪ್ಪಾ ನಮ್ಮ  ಕುಲಜನ್ಮದ ಕಸುಬು ಏನೆಂದು ಕೇಳುತ್ತಾನೆ. ಸುಬ್ಬಿಯಮ್ಮ. ‘ವರಹ ತೂಕದ ಹೂಬಳೆ ತರುವುದು,  ಅವುಗಳನ್ನು ಮಾರುತ್ತ ಹೋಗುವುದು’ ಎಂದ

‘ಎಂಕೊಂಜಿ ಪೀಂಪಿಲಿ ಕತ್ತಿ ಕೊರ್ಲೆ ಎನ ಕುಲ ಜಲ್ಮಂದ ಬೇಲೆ ಬೆನ್ಪೆಂದೆ ಬಲ್ಲೆ ಬೂರು ಪರಿತೊಂಡೆ.  ಸಾವಿರ ಕೈ ಕುಡ್ಪು ಮಲ್ತೆ’ (ಕೊರಗ ತನಿಯ)

‘ನನಗೊಂದು ಪೀಂಪಿಲಿ ಕತ್ತಿ ಕೊಡಿ. ನನ್ನ ಕುಲದ ಕಸುಬು ಮಾಡುತ್ತೇನೆ’ ಎಂದ ಪೊದರು ಬಳ್ಳಿ ಸವರಿದ.  ಸಾವಿರ ‘ಕೈ ಕುಡುಪು’ ಮಾಡಿದ

‘ಕಿಲೆಸಿ ಬಂಡಾರಿನ್ ತೂದು, ‘ನಿನ್ನ ಕುಲ ಜಲ್ಮಂದ ಬೇಲೆ ಬೆನ್ನಾಂ’ದೆರ್ (ಅತ್ತಾವರ ದೆಯ್ಯೊಂಗಳು)

ಕೆಲಸಿ ಭಂಡಾರಿಯನ್ನು ನೋಡಿ. ನಿನ್ನ ಕುಲಕಸುಬನ್ನು ಮಾಡು ಎಂದರು

‘ನಮ್ಮೊಂಜಿ ಕುಲ ಜಲ್ಮಂದ ಬೇಲೆ ನಾಲ್ ಇಲ್ಲ್‌ನಟ್ಟುನ, ಮೂಜಿಲ್ಲ್‌ ಬೇಡುನವು’ (ಪುರುಷೆರ್‌)

ನಮ್ಮೊಂದು ಕುಲ ಕಸುಬು ನಾಲ್ಕು ಮನೆ ಬಿಕ್ಕೆ ಎತ್ತುವುದು ಮೂರು ಮನೆ ಬೇಡುವುದು

‘ನಮ್ಮೊಂಜಿ ಕುಲ ಜಲ್ಮಂದ ಬೇಲೆ ಉಂಡಣ್ಣ, ಈಂದ್‌ ಈಚಿಲ್‌ದ ಮೂರ್ತೆ, ಕರ್ತುಡ ಅಪ್ಪಣೆ ಕೇನೊಡು.  ಕರ್ತುಳೆ ಪೋವೊಡಾಂಡ ಕೆರ್ಚಿಲ್ಲ ಜೋಡು ಬೊಂಡ, ತೊಟ್ಟೆಡ್‌ಪಲಪತ್ತ್, ಸೂಡಿಲ್ಲ ಬಚ್ಚಿರೆ, ಮೊಗಡಿತ್ತಿನ  ಬಜ್ಜೆಯಿ ಆವೊಡು’ (ಕುಪ್ಪೆ ಪಂಜುರ್ಳಿ)

ನಮ್ಮೊಂದು ಕುಲ ಕಸುಬು ಉಂಟಣ್ಣ, ಬೈನಿ ಈಚಲು ಮರದಿಂದ ಕಳ್ಳು ಇಳಿಸುವುದು, ಒಡೆಯರಲ್ಲಿ ಅಪ್ಪಣೆ  ಕೇಳಬೇಕು. ಒಡೆಯರ ಇದಿರಿಗೆ ಹೋಗಬೇಕಿದ್ದರೆ ಹೊಸೆದು ಕಟ್ಟಿದ ಜೋಡು ಸೀಯಾಳ, ದೊನ್ನೆಯಲ್ಲಿ  ಫಲವಸ್ತು, ವೀಳ್ಯದ ಸೂಡಿ, ಮೊಗಡ ಇರುವ ಅಡಕೆ ಆಗಬೇಕು

ಎಂಬಲ್ಲಿ ಮೂರ್ತೆ ಕಟ್ಟುವ ಕುಲ ಕಸುಬನ್ನು ಕೈಗೊಳ್ಳಲು ಊರ ಬಲ್ಲಾಳನ ಅಪ್ಪಣೆಬೇಕೆಂಬುದೂ ವ್ಯಕ್ತವಾಗಿದೆ.

ಅತಿಥಿ ಸತ್ಕಾರದ ಕ್ರಮದಲ್ಲೂ ಜಾತಿಗಳಿಗನುಸಾರವಾಗಿ ವ್ಯತ್ತಾಸ ತಲೆದೋರುತ್ತಿತ್ತು.

‘ಸೆಟ್ಟಿ ಮಗೆ ಸೇನವೆ ಅಂದಾಂಡ ಮೂಡಾಯಿ ಮಂಜಲಪಿಲ ಕಟ್ಟೆ ಉಂಡು; ಮಣೆಕೊಂಡು ದೀಪೆ. ಬಂಟ  ಮಗೆ ಬಾರಗೆ ಅಂದಾಂಡ, ಪಡ್ಡೊಯಿ ಬಾಕಿಲ್ಡ್‌ ತರೊಳಿದ ಕಟ್ಟೆ ಉಂಡು; ಮಣೆ ಕೊಂಡು ದೀಪೆ. ಎಂಕುಳೆ  ಸರಿ  ಜಾತಿ ಮಂದೆ ಆಂಡ, ಪೂಜಿದಿ ಬಾಜಿರೊನ್ ಬೀಜಪ್ಪ ಅಡಿಪುವೆ. ಪೂವಿನ ಸಕ್ಕಣೊ ಪಾರಾವು  ಪಾಡುವೆ. ಕುಳ್ಯೆರೆ ಬಲೆಂದ ಪಂಡಳ್’ [ಅಚ್ಚವೆರೆ ಸಂಧಿ]

ಸೆಟ್ಟಿ ಮಗ ಸೇನವನಾದರೆ ಮೂಡು ಮಂಜ ಹಲಸಿನ ಕಟ್ಟೆ ಇದೆ. ಮಣೆ ತಂದಿಡುತ್ತೇನೆ. ಬಂಟ ಮಗ  ಬಾರಗನಾದರೆ ಪಡು ಬಾಗಿಲಲ್ಲಿ ಸರೊಳಿಯ ಕಟ್ಟೆ ಇದೆ. ಮಣೆ ತಂದಿಡುತ್ತೇನೆ. ನಮ್ಮ ಸರಿಜಾತಿ ಮಂದಿ  ಆದರೆ ಪೂಸಿದ ಬಾಜಿರ ಹಲಗೆಯನ್ನು ಬೀಸಿ ಗುಡಿಸುತ್ತೇನೆ ಹೂವಿನ ಚೌಕವನ್ನು ಹಾಸುತ್ತೇನೆ. ಕುಳ್ಳಿರಲು  ಬನ್ನಿ

‘ನಿಕುಳು ನೂಲು ಪಾಡಿ ಬೆರಮಣೆರ್‌ಅಂಡ. ಗೆಂದ ತಾರೆ ಪದ್ಮ ಕಟ್ಟೆ ಉಂಡು ವೊಕ್ಕತೆರೆ ಮಂದೆ ಆಂಡ,  ಪಾಡಿನ ಪನಿದೊಂಪ ಉಂಡು, ಜಾತಿ ವರ್ಣದ ಮಂದೆ ಆಂಡ ಸೇರಿ ಪದೊಳಿಡ್‌ ಸೂಂಕಣದ ಉಜ್ಜಾಲ್  ಉಂಡು’ (ಕೋಟಿ ಚೆನ್ನಯ)

ನೀವು ನೂಲು ಹಾಕಿದ ಬ್ರಾಹ್ಮಣರಾದರೆ ಗೆಂದಾಳಿಯ ಪದ್ಮಕಟ್ಟೆ ಇದೆ. ಬಂಟರ ಮಂದಿ ಆದರೆ ಹಾಕಿದ  ಚಪ್ಪರ ಇದೆ. ಜಾತಿ ವರ್ಣದ ಮಂದಿ ಆದರೆ ಸೇರಿದ ಚಾವಡಿಯಲ್ಲಿ ತೂಗಾಡುವ ಉಯ್ಯಾಲೆ ಇದೆ.

ಧರ್ಮದ ಕಟ್ಟೆಯಲ್ಲಿ ನೀರು ಕೊಡುವ ಸಂದರ್ಭದಲ್ಲೂ ಜಾತಿ ನೀತಿ ವಿಚಾರಿಸುತ್ತಿದ್ದುದುಂಟು. ‘ಆಸರ್ಗ್‌ ನೀರ್‌ ಕೊರೊಡಾಂಡ ಜಾತಿ ನೀತಿ ಗೊತ್ತಾವೊಡು’… ಓಲೆದ ಮಾನಿ ಬಗಲ್‌ಡ್ದ ಸುರೆತ ಪಾತ್ರೊದೆತ್ತೆ, ನೀರ್‌ಪರ್ಯೆ (ಬೈರವ ತೋಡವ)

ಬಾಯಾರಿಕೆಗೆ ನೀರು ಕೂಡಬೇಕಾದರೆ ಜಾತಿ ನೀತಿ ತಿಳಿಯಬೇಕು… ಓಲೆಯ ಮನುಷ್ಯ ಬಗಲಿಂದ ಸೋರೆಪಾತ್ರೆ ತೆಗೆದ, ನೀರು ಕುಡಿದ. ಕೋಟಿ ಚೆನ್ನಯರಂತೂ ಸಾವಿರಜನ ಕುಡಿದ ಕಂಚಿನ ಕೈದಂಬೆಯಲ್ಲಿ ಕುಡಿಯದೆ ತಮ್ಮ ಸುರಿಗೆಯ ಮೊನೆಯಿಂದಲೆ ನೀರು ಕುಡಿಯುತ್ತಾರೆ.

ಇತರ ವರ್ಗದವರನ್ನೂ ಅವರು ನಂಬುವ ದೈವಗಳನ್ನೂ ಪರಿಹಾಸ್ಯ ಮಾಡುವುದೂ ಇತ್ತು. ‘ಯಾನ್ ಬಿರುವ ಬೂತೊಡ್ದು ಬೂಳ್ಯ ದೆತ್ತೊಣಾಯೆ’ (ನಾನು ಬಿಲ್ಲವನ ಭೂತದಿಂದ ವೀಳ್ಯ ಪ್ರಸಾದ ಪಡೆಯಲಾರೆ) ಎಂದು ಬಿಲ್ಲವನೊಬ್ಬನ ಬೂತದ ನೇಮವನ್ನು ಅವಹೇಳನ ಮಾಡಿ ಪ್ರಸಾದ ಸ್ವೀಕರಿಸದೆ ಹೋಗುತ್ತಾನೆ. ಉಳ್ಳಾಲ ಗುತ್ತಿನ ಸೇಕ ಕೋಚಾಳು

ಅಸ್ಪೃಶ್ಯತೆ ವಿಧವಿಧವಾದ ರೀತಿಗಳಲ್ಲಿ ಪ್ರಚಲಿತವಾಗಿತ್ತು. ಅದೊಂದು ಸಾಮಾಜಿಕ ಅನಿಷ್ಟವೆಂಬ ಭಾವನೆ ವಿಶೇಷವಾಗಿ ಇದ್ದಂತಿರಲಿಲ್ಲ.

‘ದೇಯಿ ಬೈದ್ಯೆತಿ ಮುಟ್ಟಿ ದೋಸೊಗು ಏಳ್ ದೇವಸ್ಥಾನ ಕಟ್ಟಾವೆ. ಎನ್ನ ಬಲತ ಏಳ್ ಜಡೆ ಜನಿವಾರೊ  ಕಡ್ತ್‌ದ್‌ಬೇತೆ ಪಾಡಾವೊಂಬೆ’ ದೇಯಿ ಬೈದ್ಯೆತಿ ಮುಟ್ಟಿದ ದೋಷಕ್ಕೆ ಏಳು ದೇವಸ್ಥಾನ ಕಟ್ಟಿಸುತ್ತೇನೆ. ನನ್ನ  ಬಲಭಾಗದ ಏಳುಜಡೆ ಜನಿವಾರ ಕಡಿದು ಬೇರೆ ಹಾಕಿಕೊಳ್ಳುತ್ತೇನೆ ಎನ್ನುತ್ತಾನೆ ಪೆರ್ಮಾಲೆ ಬಲ್ಲಾಳ.

‘ಕಿಲೆಸಿ ಬಂಡಾರಿ ಮಗೆ ಮುಟ್ಟಿ ದೋಸೊಗು ಎಣ್ಣೆ ಪೂಜಿದ್‌ಸುದ್ದೊ ನೀರ್ಡ್‌ಜಳಕಾವೊಡುಂದೆರ್  (ತೊಡಕ್ಕಿನಾರ್)

ಕೆಲೆಸಿ ಭಂಡಾರಿ ಮಗ ಮುಟ್ಟಿದ ದೋಷಕ್ಕೆ ಎಣ್ಣೆ ಪೂಸಿ ಶುದ್ಧ ಸ್ನಾನ ಆಗಬೇಕೆಂದರು.

ಕೃಷಿ, ವ್ಯಾಪಾರ ಸಾಪಾರ

ಮುಖ್ಯವಾಗಿ ಬಂಟರು ಹಾಗೂ ಜೈನರು ಕೃಷಿಯನ್ನು ಅವಲಂಬಿಸಿದ್ದು ಕಂಡುಬರುತ್ತದೆ. ಅನೇಕ ಪಾಡ್ದನಗಳಲ್ಲಿ ಬಂಟ ಬಾರಗರು ಅಥವಾ ಸ್ವತಃ ಬಲ್ಲಾಳನೇ ಹಾರೆ ಹಿಡಿದುಕೊಂಡು ಗದ್ದೆಯ ತೆವರನ್ನು ಸಜ್ಜುಗೊಳಿಸುವ ನೀರು ಬಿಡಿಸುವ ಚಿತ್ರವನ್ನು ಕಾಣುತ್ತೇವೆ. ಕೋಟಿ ಚೆನ್ನಯರಂಥ ಪಾಡ್ದನಗಳು ಬೇಸಾಯದ ವಿವಿಧ ಘಟ್ಟಗಳನ್ನು ವಿವರವಾಗಿ ಬಣ್ಣಿಸುತ್ತವೆ. ಬಿಲ್ಲವರ ಮುಖ್ಯ ಕಸುಬು ಹೆಂಡ ಇಳಿಸುವುದಾಗಿದ್ದರೂ ಕೃಷಿಯನ್ನು ಅವರು ಹೊಂದಿಕೊಂಡಿದ್ದಾರೆಂಬ ಅಂಶ ‘ಕೋಟಿ ಚೆನ್ನಯ’ರ ಕಥೆಯಿಂದ ತಿಳಿಯುತ್ತದೆ. ಕಳ್ಳು ಇಳಿಸುವ ಕಸುಬಿನಲ್ಲಿ ಅವರಿಗೆ ಸ್ವರ್ಧೆ ಕೊಡುವವರು ಇರಲಿಲ್ಲ. ಸಾಗುವಳಿಯ ಸಮಸ್ಯೆಗಳಿಂದಲೇ ಬುದ್ಯಂತನಿಗೂ ಕೋಟಿ ಚೆನ್ನಯರಿಗೂ ವೈರಬೆಳೆದು ಬರುತ್ತದೆಂಬುದನ್ನು ಗಮನಿಸಬೇಕು. ಎಂದರೆ ಬಿಲ್ಲವರು ಭೂಮಾಲಿಕರಾಗಿ ಗದ್ದೆ ಬೇಸಾಯ ಮಾಡಿ ಜೀವಿಸುವ ವಿಚಾರ ಬುದ್ಯಂತನಂಥ ಪ್ರತಿಷ್ಠಿತ ವ್ಯಕ್ತಿಗಳಿಗೆ ಸಹನವಿದ್ದಿಲ್ಲ. ವರ್ಗ ಸಂಘರ್ಷದ ಬೀಜವನ್ನು ಇಂಥ ಸಂದರ್ಭದಲ್ಲಿ ಸಂದರ್ಶಿಸುತ್ತೇವೆ.

ವ್ಯಾಪಾರರಂಗವೂ ಅಸೂಯಾಪರವಾದದ್ದೇ. ಬಬ್ಬರ್ಯನ ಪಾಡ್ದನವೊಂದರಲ್ಲಿ ‘ನಿಕುಳು ಜಾತಿ ನೀತಿದ ಬ್ಯಾರಿಳೋ, ಜಾತಿ ಸೆಟ್ಟಿ ಬ್ಯಾರಿಳೋ (ನೀವು ಜಾತಿ ನೀತಿಯ ವ್ಯಾಪಾರಿಗಳೋ, ಜಾತಿ ಕೆಟ್ಟ ವ್ಯಾಪಾರಿಗಳೋ) ಎಂದು ಬ್ರಹ್ಮದೇವನೇ ಕೇಳುವನೆಂದಿದೆ. ಅಡ್ಡ ಕಸಬಿಗಳನ್ನು ಅಸಡ್ಡೆ, ಅಸಹನೆಗಳಿಂದ ನೋಡುವ ದೃಷ್ಟಿ ಇಲ್ಲಿ ಕಾಣುತ್ತದೆ.

ತುಳುನಾಡಿಗೆ ವಿಶಾಲವಾದ ಕರಾವಳಿಯ ಸೆರಗು ಇರುವುದರಿಂದ, ಹಳಗಾಲದಿಂದಲೇ ಇಲ್ಲಿ ಸಮುದ್ರ ವ್ಯಾಪರ ಸಮೃದ್ಧವಾಗಿಯೆ ಸಾಗುತ್ತಿತ್ತು. ಅರಬ್‌, ಪರ್ಸಿಯನ್ ವ್ಯಾಪಾರಿಗಳು ಕ್ರಿ. ಶ. ಏಳೆಂಟನೇ ಶತಮಾನಗಳ ವೇಳೆಗೇ ವ್ಯಾಪಾರ ನಿಮಿತ್ತವಾಗಿ ಈ ಕಡೆ ಬರುತ್ತಿದ್ದರೆನ್ನಲಾಗಿದೆ. ಒಳನಾಡಿನ ವ್ಯಾಪಾರವು ನಡೆಯುತ್ತಿತ್ತು.

ಬ್ಯಾರಿ, ಸೆಟ್ಟಿ, ಮರಕಲ ಮೊದಲಾದವರು ಪಾಂಡಿ, ಪಡವು, ಮಚುವೆಗಳನ್ನೇರಿ ಕೊಚ್ಚಿ, ಭಟ್ಕಳ, ಗೋವೆ, ಮಕ್ಕಾಯಿ, ದೀವಿ ಮೊದಲಾದ ಕಡೆಗಳಿಗೆ ವ್ಯಾಪಾರದ ಸಲುವಾಗಿ ಹೋಗುತ್ತಿದ್ದರೆಂಬ ವಿವರಗಳು ಬಬ್ಬರ್ಯ ಮೊದಲಾದ ಸಂಧಿಗಳಲ್ಲಿ ಲಭ್ಯವಾಗುತ್ತದೆ. ಸಮುದ್ರ ಕಾಳಗದಲ್ಲಿ ಹತನಾದ ಒಬ್ಬ ಮುಸ್ಲಿಮ್‌ಹರದನೇ ಬಬ್ಬರ್ಯನೆಂದು ತಿಳಿದು ಬರುತ್ತದೆ. ಹಡಗು ಕಟ್ಟುವ ವಿವರವೂ ಈ ಬಬ್ಬರ್ಯ ಪಾಡ್ದನದಲ್ಲಿದೆ.

ಕುಳ್ಕುಂದ, ಸಂತೆದ ಗೋಳಿ ಮೊದಲಾದೆಡೆಗಳಲ್ಲಿ ಜಾನುವಾರು ಸಂತೆ ನೆರೆಯುತ್ತಿದ್ದ ಉಲ್ಲೇಖ ಪಂಜುರ್ಳಿ ಪಾಡ್ದನವೊಂದರಲ್ಲಿ ಬರುತ್ತದೆ. ಘಟ್ಟದ ಮೇಲಿಂದ ಜಾನುವಾರುಗಳನ್ನು ತರುತ್ತಿದ್ದ ವ್ಯಾಪಾರಿಗಳು (ಎರುತ್ತ ಗೌಂಡೆ, ಎರುತ್ತ ಕನ್ನಡೆ – ಎತ್ತಿನ ಗೌಡ- ಎತ್ತಿನ ಕನ್ನಡ) ವ್ಯಾಪಾರ ನಡೆಸುತ್ತಿದ್ದ ಕ್ರಮವನ್ನು ವಿಸ್ತಾರವಾಗಿ ಬಣ್ಣಿಸಿದ್ದುಂಟು.

ಬೈಂದೂರು, ಬಸರೂರು, ಕಾರ್ಕಳ, ಮಂಗಳೂರು, ಬಂಟವಾಳ – ಇತ್ಯಾದಿ ವ್ಯಾಪಾರ ಕೇಂದ್ರಗಳ ಪ್ರಸ್ತಾವ ಪಾಡ್ದನಗಳಲ್ಲಿ ಬರುತ್ತದೆ. ನವಾಯಿತರೆಂಬ ಮುಸಲ್ಮಾನ ವರ್ತಕರ ಉಲ್ಲೇಖವಿದೆ. ಅಂಥ ನವಾಯಿತನೊಬ್ಬನ ಮಳಿಗೆಯಿಂದ ಅರುವತ್ತು ಮೊಳದ ಪಟ್ಟೆ ಸೀರೆಯನ್ನು ಕಾಂತುಪೂಂಜ ತನ್ನ ಪತ್ನಿಯ ಸಿರಿಯ ಸೀಮಂತಕ್ಕಾಗಿ ಖರೀದಿ ಮಾಡುತ್ತಾನೆ.

‘ಬಸ್ರೂರ ಪನ್ನೆ ಕೊಟ್ರೆ’ (ಹಾರೆ) ‘ಸೂರತಿ ಪುಗ್ಗೆರೆ’ (ಹೊಗೆಸೊಪ್ಪು) ಈರೋಡಿ ಬಾಳ್ (ಕ್ಷೌರದ ಕತ್ತಿ) – ಮುಂತಾದ ಹೇಳಿಕೆಗಳು ಆಯಾ ವಸ್ತುಗಳು ಮೂಲಸ್ಥಳಗಳನ್ನು ಸೂಚಿಸುತ್ತವೆ. ‘ಕಡಲ ಪರೆಂಗಿ’ ಎಂಬ ಶಬ್ದ ಮುಖ್ಯವಾಗಿ ಪೋರ್ಚುಗೀಸ್ ವ್ಯಾಪಾರಿಗಳನ್ನು ನಿರ್ದೇಶಿಸುತ್ತದೆ.

‘ನಕರ’(ನಖರ) ಎಂಬ ವ್ಯಾಪಾರೀ ಪ್ರತಿನಿಧಿಗಳ ಸಂಘಟನೆಯನ್ನು ಕೆಲವು ಪಾಡ್ದನಗಳು ಹೆಸರಿಸುತ್ತವೆ.

ಓದು, ಬರಹ, ಕಲೆ

ವಿದ್ಯಾಭ್ಯಾಸದ ಸ್ವರೂಪದ ವಿಚಾರವಾಗಿ ಹೆಚ್ಚು ವಿವರ ದೊರಕುವುದಿಲ್ಲವಾದರೂ ಪಾಡ್ದನಗಳಲ್ಲಿ ಅಲ್ಲಿಲ್ಲಿ ಓದು ಬರೆಹ. ಸಾದಕಗಳ ಸಾಲೆಗಳ ಪ್ರಸ್ತಾಪ ಬರುತ್ತದೆ. ಮಲೆಯಾಳದ ‘ವಡಕ್ಕನ್ ಪಾಟು’ಗಳಲ್ಲಿ ತುಳುನಾಡ ವಿದ್ಯೆಯನ್ನು ಕಲಿಯಲಿಕ್ಕೆಂದು ಕೇರಳದಿಂದ ಈ ಕಡೆಗೆ ವಿದ್ಯಾಸಕ್ತರು ಬರುತ್ತಿದ್ದರೆಂಬ ಉಲ್ಲೇಖಗಳಿವೆ. ‘ಬರವಿನ ಸಾಲೆ, ಐಗುಳೆ ಮಠ, ಸಾದಕದ ಕೊಟ್ಯ, ಪೊಯ್ಯೆದ ಬರವು, ಬಳಪ ಬಳವುತ ಅಚ್ಚರೊ, ಓಲೆ ಕಂಟಗೊ, ಗೆರಂತ, ಸಾತ್ರ ಬೇದ, ಪದ್ರಾಡ್‌ಬಳ್ಳಿ, ಇರ್ವತ್ತನಾಲ್ ಮಗ್ಗಿ’ (ಬರೆಹದ ಸಾಲೆ, ಐಗಳ ಮಠ, ಗ್ರಂಥ, ಶಾಸ್ತ್ರವೇದ, ಹನ್ನೆರಡು ಬಳ್ಳಿ, ಇಪ್ಪತ್ತನಾಲ್ಕು ಮಗ್ಗಿ) ಮುಂತಾದ ವಿವರಗಳು ಕೆಲವೆಡೆ ಸಿಗುತ್ತವೆ. ಬರೆಯಬೇಕಾದ ತಾಳೆಯೋಲೆಯನ್ನು ಪರಿಷ್ಕಾರಗೊಳಿಸಿ ಒಕ್ಕಣೆ ಬರೆಯುವ ಓಲೆಯ ಮಾನಿ ಓಲೆಯನ್ನು ಒಯ್ಯುವ ಪ್ರಸ್ತಾಪ ಹಲವೆಡೆ ಬಂದಿದೆ.

ಹೆಣ್ಣು ಮಕ್ಕಳೂ ಅಕ್ಷರಾಭ್ಯಾಸ ಹೊಂದುವುದಿತ್ತು. ಸಿರಿ ಅಕ್ಕೆರಸು ಪೂಂಜೆದಿ ಓಲೆ ಓದಿಕೊಂಡು ಪತ್ತೇರಿ ಕೂಟಕ್ಕೆ ಹೋಗುತ್ತಾಳೆ. ಅಬ್ಬಗೆ ತನ್ನ ಆತ್ಮಹತ್ಯದ ವಿಚಾರವನ್ನು ವೀಳ್ಯದೆಲೆಯ ಮೇಲೆ ಬರೆದು ಬಾವಿಕಟ್ಟೆಯ ಮೇಲಿಟ್ಟು ಬಾವಿಗೆ ಹಾರುತ್ತಾಳೆ.

ವೀಣೆ, ಕೊಳಲು, ತಂಬೂರಿ ನುಡಿಸುವ ಮಾತು ಹಾಗೂ ನಾಟಕ ಆಡುವ ಮಾತು ಕೆಲವೆಡೆ ಬಂದಿರುವುದರಿಂದ ಅಂಥ ಕಲೆಗಳ ಪರಿಚಯ ಅಷ್ಟಿಷ್ಟು ಅಂದು ಇದ್ದಿರಬೇಕೆಂದು ಊಹಿಸಬಹುದು.

ರಂಬೆಲೆ ನಾಟಕ, ಸೂಳೆಲೆ ಮೇಳ (ಸೂಳೆಯರ ಮೇಳ) ಗಿನಿಗಿನಿ ಗೆಜ್ಜೆ, ಸಂಗೀತ, ಮೈರ ನಲ್ಕೆ (ನವಿಲ ನಾಟ್ಯ) ರಾಗ, ಪದ ಇತ್ಯಾದಿ ಶಬ್ದಗಳ ಪ್ರಯೋಗ ನಾಟ್ಯ ಕಲೆಯ ಸೂಚನೆ ನೀಡುತ್ತದೆ.

‘ಅಡ್ದ ಪದ್ರಾಡ್ ಕೋಲು, ನೀಟ ಪದ್ರಾಡ್ ಕೋಲು, ಕಂಚಿ ಕಳೆರಿ ಸಾದಕದ ಕೊಟ್ಯ ಕಟ್ಟಾಯೆರ್, ಸನ್ಕಾಯಿ ನಂದಿಕಂಬೊತ ಮುದೆಲ್‌ಟ್‌ ದೇಬೆರೆಗ್‌ ದೀಡ್ಯೆರ್, ಗುರು ಬಿನ್ನಾಯ ನಟ್ಯೆರ್‌. ಪೊಯ್ಯೆತ ಬರವು ಕಲ್ತೆರ್’[ಮೈಮೆ]

ಅಡ್ದ ಹನ್ನೆರಡು ಕೋಲು, ನೀಟ ಹನ್ನೆರಡು ಕೋಲು, ಶಸ್ತ್ರವಿದ್ಯೆಯ ಸಾಧಕದ ಕೊಟ್ಟಿಗೆಯನ್ನು ಕಟ್ಟಿಸಿದರು. ದಕ್ಷಿಣದ ನಂದಿಕಂಬದ ಬುಡದಲ್ಲಿ ದೇವರಿಗೆ ಕಾಣಿಕೆ ಇರಿಸಿದರು. ಗುರುವಿನಲ್ಲಿ ಬಿನ್ನಹ ಬೇಡಿದರು. ಮರಳಿನ ಬರೆಹ ಕಲಿತರು.

ಆಡಳಿತ ವ್ಯವಸ್ಥೆ

ರಾಜ್ಯವು ಹೋಬಳಿ, ಸೀಮೆ, ಮಾಗಣೆ, ಗ್ರಾಮ – ಹೀಗೆ ವಿಂಗಡಿಸಲ್ಪಟ್ಟಿದ್ದು ಅರಸು, ಬಲ್ಲಾಳ, ಹೆಗ್ಗಡೆ, ಗುರಿಕಾರ ಮೊದಲಾದ ವಂಶ ಪರಂಪರೆಯ ಅಧಿಕಾರಿಗಳು ಪ್ರಾದೇಶಿಕ ಆಡಳಿತೆ ನಡೆಸುತ್ತಿದ್ದರು. ಗ್ರಾಮದ ಆಡಳಿತಕ್ಕೆ ಸಹಾಯಕವಾಗಿ ಬೀಡು, ಗುತ್ತು, ಬಾಳಿಕೆ ಪರಾರಿ (ಡಿ) ಬಾವ, ಇತ್ಯಾದಿ ವಿಶಿಷ್ಟ ಮನೆತನಗಳ ವ್ಯವಸ್ಥೆ ಇತ್ತು. ಗುತ್ತುಮನೆಗೆ ನೆರವಾಗಲು ಒತ್ತುಗುತ್ತು, ದತ್ತ್ (ಸತ್ತ್‌) ಗುತ್ತು, ಅಂತರಗುತ್ತು ಎಂಬ ಮನೆಗಳಿದ್ದುದುಂಟು. ಐಂದಾಳ ಗುತ್ತು, ಸಾರಾಳ ಗುತ್ತು, ಮುಸ್ರಾಳ ಗುತ್ತು, ಐಸ್ರಾಳ ಗುತ್ತು ಹೀಗೆ ಆಯಾ ಸ್ಥಾನದ ಅಧಿಕಾರದ ಅಂತಸ್ತು ಏರುತ್ತಿತ್ತು. ಆಯಾ ಪ್ರದೇಶವನ್ನು ಐಂದಳೆ ಪಟ್ಟ, ಸಾರಾಳ ಪಟ್ಟ, ಮುಸ್ರಾಳ ಹೀಗೆ ಕರೆಯಲಾಗುತ್ತಿತ್ತು. ಆಯಾ ಅಧಿಕಾರದ ‘ಗಡಿ’ ಎಂಬ ಮರ್ಯಾದೆಯನ್ನು ವಿಧಿವತ್ತಾಗಿ ಸಂಬಂಧಪಟ್ಟ ದೈವದನೇಮದ ಸಂದರ್ಭದಲ್ಲಿಯೇ ನೀಡಲಾಗುತ್ತಿತ್ತು. ಹೀಗೆ ಗಡಿ ಹಿಡಿದ ಗುರಿಕಾರರಿಗೆ ಸಾಮಾಜಿಕ ಸಂದರ್ಭಗಳ ಮೇಲೆ ಹತೋಟಿ ಇರುತ್ತಿತ್ತು.

‘ಮಂಗ್ಲೂರು ಸಾರಾಳ್ ಪಣ್ಪಿ ಪಾರಿ ಕೇಣ್ಲ, ಮೂಲ್ಕಿ ಒಂರ್ಬ ಮಾಗಣೆ ಪಣ್ಪಿ ಪಾರಿ ಕೇಣ್ಲ, ಬಂಟೆರ್‌ಸಾರ  ಸೀಮೆ ಪಣ್ಪಿ ಪಾರಿ ಕೇಣ್ಲ. ಮಣೇಲ್ ಹೋಬಳಿ ಪಣ್ಪಿ ಪಾರಿ ಕೇಣ್ಲ, ಮುಗೆರ್‌ಮುನ್ನೂದಾಳ್ ಪಣ್ಪಿ ಪಾರಿ  ಕೇಣ್ಲ’ (ಕಲ್ಕುಡ)

ಮಂಗಳೂರು ಸಾವಿರಾಳು ಹೇಳುವ ಬಿನ್ನಹ ಕೇಳು, ಮೂಲ್ಕಿ ಒಂಬತ್ತು ಮಾಗಣೆ ಹೇಳುವ ಬಿನ್ನಹ ಕೇಳು,  ಬಂಟರು ಸಾವಿರ ಸೀಮೆ ಹೇಳುವ ಬಿನ್ನಹ ಕೇಳು, ಮಣೇಲ ಹೋಬಳಿ ಕೇಳು, ಮುಗೆರ್ ನಾಡ  ಮುನ್ನೂರಾಳು ಹೇಳುವ ಬಿನ್ನಹ ಕೇಳು

ಎಂಬಲ್ಲಿ ರಾಜ್ಯ ವ್ಯವಸ್ಥೆಯ ಕೆಲವು ಪಾರಿಭಾಷಿಕ ಶಬ್ದಗಳನ್ನು ಗುರುತಿಸಬಹುದು.

ಒಂದು ಗ್ರಾಮದ ಪ್ರಾತಿನಿಧಿಕ ಕೂಟಕ್ಕೆ ‘ಪತ್ತೇರಿ ಕೂಟ’ ಅಥವಾ ‘ಅಜಲ್’ ಎನ್ನುತ್ತಿದ್ದರು. ಮಿತ್ತಕರೆ ಪಾಲವೆರ್, ತಿರ್ತಕರೆ ಬಾರಗೆರ್, ಕೋಟೆ ಪೇಂಟೆ ಸೆಟ್ಟಿ ಸಿನಿವಾರೆರ್, ಪಟ್ಣದ ಗುರಿಕಾರೆರ್ ನಾಲ್‌ನಕರಂದ ಬುದ್ಯಂತೆರ್, ಸೇನವೆರ್ ನಟ್ಟಿಲ್ಲ್ ನಾಲಿಲ್ಲ್‌ದಾಕ್ಲು ಕೂಟ ಮಲ್ತೆರ್’ (ಮೇಲುಕರೆ ಪಾಲವರು, ಕೆಳಕರೆ ಬಾರಗರು, ಕೋಟೆಪೇಟೆ ಸೆಟ್ಟಿ ಚಿನಿವಾರರು, ಪಟ್ಣದ ಗುರಿಕಾರರು, ನಾಲ್ಕು ನಕರಗಳ ಬುದ್ಧಿವಂತರು, ಸೇನ ಬೋವರು. ನಟ್ಟಿಲ್ಲು ನಾಲ್ಕು ಮನೆಗಳವರು ಕೂಟ ಜರುಗಿಸಿದರು) ಎಂಬಲ್ಲಿ ಈ ಕೂಟಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ವಿವರ ಸಿಗುತ್ತದೆ. ಇಲ್ಲಿ ಹೆಸರಿಸದ ಸಮಾಜದ ಪ್ರತಿನಿಧಿಗಳೂ ಇದಕ್ಕೆ ಒಳಪಟ್ಟಿರಬಹುದು. ಈ ಪತ್ತೇರಿ ಕೂಟದಲ್ಲಿ ಊರಿನ ಮುಖ್ಯ ನ್ಯಾಯಗಳನ್ನು ಇತ್ಯರ್ಥಗೊಳಿಸಲಾಗುತ್ತಿತ್ತು. ಇಂಥ ಕೂಟಗಳಲ್ಲೂ ಲಂಚದ ವರ್ಚಸ್ಸು ನಡೆಯುತ್ತಿತ್ತೆನ್ನುವುದಕ್ಕೆ ಸೂಡದ ಶಂಕರಾಳ್ವ ತನಗೆ ಬೇಕಾದಂತೆ ನ್ಯಾಯ ಹೇಳಿಸದ್ದೇ ಸಾಕ್ಷಿ. ಕ್ರುದ್ಧಳಾದ ಸತ್ಯನಾಪುರ ಸಿರಿ ಅನ್ಯಾಯದ ಪತ್ತೇರಿ ಕೂಟವನ್ನು ಶಪಿಸುವುದರಲ್ಲಿ ವ್ಯವಸ್ಥೆಯ ಶೋಷಣೆಗೆ ಬಗೆಗೆ ನಿಸ್ಸಹಾಯಕ ಬಡಪಾಯಿಗಳ ಆಕ್ರೋಶದ ಧ್ವನಿಯನ್ನು ಗುರುತಿಸಬಹುದು.

ಆಡಳಿತದ ಬೊಕ್ಕಸವನ್ನು ತುಂಬಿಸಲು ತೀರ್ವೆ, ಧಾನ್ಯರೂಪದ ತೆರಿಗೆ, ಸುಂಕ, ಕಡವಿನ ತೆರ, ಕಳ್ಳು ಇಳಿಸುವ ಮರಗಳ ತೆರಿಗೆ ಇತ್ಯಾದಿಗಳನ್ನು ವಸೂಲು ಮಾಡಲಾಗುತ್ತಿತ್ತು. ಸುಂಕದ ಕಟ್ಟೆಗಳ ಪ್ರಸ್ತಾಪ ಅಲ್ಲಲ್ಲಿ ಬರುತ್ತದೆ. ಕೋಟಿ ಚೆನ್ನಯರ ಬಂಟ ಕತ್ತಿಗಳಿಗೂ ಸುಂಕವನ್ನು ಹೇರುತ್ತೇನೆಂದು ಹುಚ್ಚು ಧ್ಯೆರ್ಯದಿಂದ ಹೇಳಿಬಿಡುತ್ತಾನೆ ಸುಂಕದ ದೇರೆ.