ಕೂಟದ ಕಳಕ್ಕೆ ಹೋದ ಮಕ್ಕಳು ತಂದೆಯಿಲ್ಲದ ಮಕ್ಕಳು ಎಂಬ ಅಪವಾದವನ್ನು ಕೇಳಿ ಅವಮಾನದಿಂದ ಮನೆಗೆ ಬಂದು ಕತ್ತಲೆ ಕೋಣೆಯಲ್ಲಿ ಬಿದ್ದುಕೊಳ್ಳುತ್ತಾರೆ. ತಾಯಿ ನಿಜ ವಿಷಯವನ್ನು ತಿಳಿಸಿದ ಬಳಿಕ ತಂದೆ ಯುದ್ಧ ಮಾಡುವಲ್ಲಿಗೆ ಹೋಗಿ ಯುದ್ಧದಲ್ಲಿ ಸೋಲುತ್ತಾರೆ. ಈ ಸುದ್ದಿ ಕೇಳಿ ತಾಯಿಯು ಅಲ್ಲಿಗೆ ಓಡಿಹೋಗಿ ಮಲ್ಲರಸನಿಗೆ ಬಲದ ಮೊಲೆಯನ್ನೂ, ಮೆಯ್ಯಸುರನಿಗೆ ಎಡದ ಮೊಲೆಯನ್ನು ಹಿಂಡಿದಳು. ಮಲ್ಲಸುರನಿಗೆ ಬಾಲೆನಂದಿ ಬಸವನ ರೂಪವಾಗಲು ಮತ್ತು ತಮ್ಮನಿಗೆ ಗರುಡ ಪಕ್ಷಿಯ ರೂಪವಾಗಲು ವರ ಕೊಡುತ್ತಾಳೆ. ಹೀಗ ಮೈಸಂದಾಯ ಭೂತವುಂಟಾಯಿತು. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಶೈಲಿಯ ದೃಷ್ಟಿಯಿಂದ (ಅ) ಪಾಠವು ಗಮನಾರ್ಹವಾದುದು.

(ಬ) ಪಾಠವು ‘ಅಬ್ಬಗದಾರಗ’ ಸಿರಿಗಳು ನಂದಳಿಗೆ ಜಾತ್ರೆಗೆ ಹೋದ ಮತ್ತು ಮೈಸಂದಾಯನನ್ನು ನಂಬಿದ ವಿವರಣೆಗಳನ್ನು ನೀಡುತ್ತದೆ. ಕಥಾ ರೂಪದಲ್ಲಿ ನಿರೂಪಣೆಯು ಸುಂದರವಾಗಿದೆ. ಸಿರಿಗಳು ಅಮಾನುಷ ಶಕ್ತಿಯುಳ್ಳವರು. ಹೊಳೆಬದಿಗೆ ಹೋದಾಗ ಕಟ್ಟಿದ ದೋಣಿಯು ಸತ್ಯಬಲದಿಂದ ತಾನಾಗಿಯೇ ಬರುತ್ತದೆ. ಎದುರು ಮಾತನಾಡಿದ ಮಾಪ ಹೆಂಗಸಿಗೆ ಶಾಪ ಕೊಡುತ್ತಾರೆ. ನಂದಳಿಗೆಯ ಕಂದೆಗ ಕುಮಾರ ದೇವಾಲಯದ ಹಾಕಿದ ಬಾಗಿಲು ತಾನಾಗಿಯೇ ತೆರೆಯುತ್ತದೆ. ಈ ಸಂದರ್ಭಗಳಲ್ಲಿ ಅಮಾನುಷ ಸ್ತ್ರೀಯರೆಂದು ಸೂಚಿಸುತ್ತಾನೆ. ಸಿರಿಗಳು ಶೃಂಗಾರ ಮಾಡಿಕೊಂಡ ವರ್ಣನೆ ಸುಂದರವಾಗಿದೆ. – ‘ಬೆಳ್ಳಿಯಲ್ಲಿ ಬೆಳ್ಳಗಾದರು. ಬಂಗಾರದಲ್ಲಿ ಶೃಂಗಾರವಾದರು, ಪಟ್ಟೆ ಹರಿದು ತಲೆಗೆ ಪಾವಡೆ ಕಟ್ಟಿಕೊಂಡರು’ (ಬೊಲ್ಲಿಡ್ ಬೊಲ್ಪಾಯೆರ್, ಬಂಗಾರ್‌ಡ್ ಸಿಂಗಾರ ಆಯೆರ್, ಪಟ್ಟೆ ಪರ್ತ್‌ದ್‌ತರೆಕ್ ಪಾವಡೆ ಕಟ್ಟಿಯೆರ್). ಬೆಳ್ಳಿಯ ಆಭರಣದ ಕಾಂತಿಯಿಂದ ಅವರ ಸೌಂದರ್ಯ ಅಧಿಕವಾಯಿತೆಂಬುದನ್ನು ವರ್ಣಿಸುವ ಶೈಲಿ ಗಮನಾರ್ಹವಾದುದು. ಉತ್ತಮ ಕಾವ್ಯಗುಣವನ್ನು ತೋರ್ಪಡಿಸುವುದು ಅವರು ಹೋಗುವುದನ್ನು ಕವಿಯು ವಿಶಿಷ್ಟ ರೀತಿಯಲ್ಲಿ ಭಾಷಾ – ಸೌಂದರ್ಯದಿಂದ ನಿರೂಪಿಸಿದ್ದಾನೆ – ‘ಮೈರ ಹಾದೆಯಲ್ಲಿ ಹೋಗುವಾಗ ನವಿಲಿನ ಕುಣಿತ ಕುಣಿದರು. ಇಬ್ಬರು ಹೋಗಿ ಮೂವರು ಆದರು’ (ಮೈರನ ಪಾದೆಡ್‌ಪೋನಗ ಮೈರ ನಲ್ಕೆ ನಲ್ತೆರ್. ಇರ್ವೆರೆಗ್ ಮೂವೆರ್ ಆವೊಂಡೆರ್.) ನಂದಳಿಕೆಗೆ ಬರುವಾಗ ತಂದ ಹರಕೆಯು ಅವರ ಶ್ರೀಮಂತಿಕೆಯನ್ನು ವ್ಯಕ್ತಪಡಿಸುವುದು ಬೆಳ್ಳಿಯ ಚಾಪೆ ಮತ್ತು ಬಂಗಾರದ ಹೆಣ್ಣಿನ ಮೂರ್ತಿಗಳನ್ನು ಬೆಳ್ಳಿ ಮತ್ತು ಚಿನ್ನದ ತೊಟ್ಟಿಲಲ್ಲಿ ಹೊತ್ತುಕೊಂಡು ಬರುತ್ತಾರೆ.

ಪಾಡ್ದನದ ಘಟನೆ ಸಾಮಾನ್ಯವಾದುದಾದರೂ, ಭೂತ ಮತ್ತು ಭೂತವನ್ನು ಆದಿಯಲ್ಲಿ ನಂಬಿದ ವ್ಯಕ್ತಿಗಳ ಮಹತ್ವವನ್ನು ಸಾರುವ ಉದ್ದೇಶದಿಂದ ಪಾಡ್ದನವು ಕಥನ ರೂಪದಲ್ಲಿಯೇ ಇದೆ.

‘ಗುಳಿಗ’ವು ‘ಗಾಳಿದೇವರು’ ಮತ್ತು ‘ಭಾಗ ಭದ್ರಕಾಲಿ’ ಎಂಬ ಇಬ್ಬರು ದೇವತೆಗಳಿಗೆ ಹುಟ್ಟಿದ ದೈವ. ‘ಗುಳಿಗ’ನ ಜನನ ಅಸಾಮಾನ್ಯವಾದುದು. ತಿಂಗಳು ತುಂಬಿದಾಗ ಮಗು ತಾಯಿಯೊಡನೆ ಕೇಳುತ್ತಾನೆ. ತಾನು ಎಲ್ಲಿಂದ ಹೊರಗೆ ಬರಬೇಕೆಂದು. ದೇವರು ಕೊಟ್ಟ ಬಾಗಿಲಿನಲ್ಲಿ ಬರಲು ಒಪ್ಪುವುದಿಲ್ಲ. ಬೆನ್ನಿನಲ್ಲಿ ಬರಲೂ ಒಪ್ಪುವುದಿಲ್ಲ. ತಾನು ಬರುವ ಬಾಗಿಲೇ ಬೇರೆ ಇದೆಯೆಂದು ಬಲದ ಮೊಲೆ ಒಡೆದು ಬರುತ್ತಾನೆ. ಆ ದೈವದ ಗುಣವು ಹುಟ್ಟಿನಲ್ಲಯೇ ಸೂಚಿತವಾಗಿದೆ. ಬಳಿಕ ಬಲಮೊಲೆಯನ್ನು ತಿಂದು ಚಪ್ಪಾಳೆ ತಟ್ಟಿ ನಗುತ್ತಾನೆ. ಗುಳಿಗ ದೈವವು ಸ್ವಾತಿಕ ಗುಣದ್ದಲ್ಲ ಎಂಬುದು ಇವತ್ತಿಗೂ ನಂಬಿಕೆಯಲ್ಲಿದೆ.

ಹುಟ್ಟಿದ ಬಳಿಕ ಹಲವಾರು ರೂಪವನ್ನು ಪಡೆಯುತ್ತದೆ ದೈವ. ಆಕಾಶಕ್ಕೆ ಹಾರಿ, ನಾರಾಯಣ ದೇವರಲ್ಲಿ ಬಲಿ ತೆಗೆದುಕೊಳ್ಳುತ್ತದೆ. ಈ ವಿವರಣೆಯು ‘ಮಲಾರ ಪಂಜುರ್ಲಿ’ ಪಾಡ್ದನದಲ್ಲಿ ಬಂದಂತೆಯೇ ಇದೆ. ಇಲ್ಲಿ ‘ಗುಳಿಗ’ವು ನಾರಾಯಣ ದೇವರನ್ನು ಹಣ್ಣು ಎಂದು ತಿನ್ನಲು ಹೊಗುವುದು. ನಾರಾಯಣ ದೇವರು ಕೊಟ್ಟ ಹಂದಿ, ಕುರಿ, ಆನೆ, ಒಂಟೆ ಮೊದಲಾದ ರಕ್ತಬಲಿಯಿಂದ ತೃಪ್ತವಾಗುವುದಿಲ್ಲ. ಆಗ ನಾರಾಯಣ ದೇವರು ಕೆಳಲೋಕದಲ್ಲಿ ನರಹುಳ (ನರಪುರಿ)ವನ್ನು ಸೃಷ್ಟಿಸಿದ್ದೇನೆ; ಅಲ್ಲಿಗೆ ಹೋಗು ಎಂದು ಕಳುಹಿಸುತ್ತಾರೆ. ಪುನಃ ತಿರುಗಿಬರಲು ಹಾಗೂ ಬಲಿ ಕೊಡಲು ಕೆಲವು ಶರ್ತಗಳನ್ನು ಹಾಕುತ್ತಾರೆ. ಆಕಾಶಕ್ಕೆ ಏಣಿ, ಪಾತಾಳವನ್ನು ಹೊಲಿಯುವ ಸೂಜಿ, ಹೊಯ್ಗೆಯ ಹಗ್ಗ, ಸಮುದ್ರ ಅಳೆಯುವ ಸೇರು ಮೊದಲಾದ ಅಸಾಧ್ಯ ವಸ್ತುಗಳನ್ನು ತರಲು ಹೇಳುತ್ತಾರೆ. ಅಲ್ಲಿಂದ ಭೂಲೋಕಕ್ಕೆ ಇಳಿದ ದೈವವು ಮೋಂಟ ಬೈದ್ಯನ ಕಳ್ಳನ್ನು ಹಾರವಾಗಿ ತೆಗೆದುಕೊಳ್ಳುತ್ತದೆ. ಅಲ್ಲಿಂದ ಚಾರಸೀಮೆಗೆ ಬಂದು ಭೂತವಾಗಿ ನಿಲ್ಲುತ್ತದೆ.

ಭೂತವು ಉಂಟಾದ ಕತೆಯನ್ನು ಅಮಾನುಷ ಅಥವಾ ಅಲೌಕಿಕ ಘಟನೆಗಳಿಂದ ವಿವರಿಸಿದರೆ, ಭೂತದ ಪ್ರತಾಪವನ್ನು ಅದರ ಸ್ವಭಾವವನ್ನು ವ್ಯಕ್ತಪಡಿಸುವುದರ ಮೂಲಕ ‘ಸುಬ್ಬಿಯಮ್ಮ’ ಮತ್ತು ‘ಕೊಲ್ಲೂರ ಮುಕಾಂಬಿ ಜೇವು’ ಪಾಡ್ದನಗಳಲ್ಲಿ ಕರುಣಾರಸಭರಿತವಾಗಿ ವರ್ಣಿಸಿದ್ದಾನೆ. ಗುಳಿಗವು ಆಕಾಶಮಾರ್ಗದಲ್ಲಿ ತಿರುಗುತ್ತಿರುವ ದೈವವೆಂದು ನಂಬಿಕೆಯಿದೆ.

***

ಪೌರಾಣಿಕ ಅಂಶಗಳು ಭೂತಗಳ (ಸಂಬಂಧಿಸಿದ) ಪಾಡ್ದನಗಳಲ್ಲಿ ಬಂದರೂ, ಭೂತಗಳಿಗೆ ಸಂಬಂಧಿಸದ ಪೌರಾಣಿಕ ಅಂಶಗಳನ್ನೊಳಗೊಂಡ ಪಾಡ್ದನಗಳು ವಿಶಿಷ್ಟ ಸ್ಥಾನವನ್ನು ಪಡೆಯುತ್ತವೆ. ಇಲ್ಲಿ ಜನಪದ ಕವಿಯು ಸ್ವತಂತ್ರವಾಗಿ ಪೌರಾಣಿಕ ಕತೆಯನ್ನು ಬಳಸುತ್ತಾನೆ. ಅವುಗಳಲ್ಲಿ ವೈವಿಧ್ಯವಿದೆ. ಪುರಾಣಗಳ ಪಾತ್ರಗಳನ್ನು ಕಾಣುವ ಮನೋಧರ್ಮ ಎಂತಹುದೆಂದು ಮುಂದಿನ ವಿವರಣೆಗಳಿಂದ ತಿಳಿಯುವುದು.

‘ಅಸುರೆತಿ ಬಂಗಾರ್‌’ ಪಾಡ್ದನದಲ್ಲಿ ಪೌರಾಣಿಕ ಪಾತ್ರಗಳ ಜೊತೆಯಲ್ಲಿ ಲೌಕಿಕ ಪಾತ್ರಗಳೂ ಇವೆ. ಆದರೆ ಇಲ್ಲಿಯ ಪಾತ್ರಗಳ ಕಲ್ಪನೆಯಲ್ಲಿ ಏನಾದರೂ ಅರ್ಥವಿರಬಹುದು ಅಥವಾ ಸ್ವತಂತ್ರ ಕಲ್ಪನೆಯಾಗಿರಬಹುದು. ‘ಅಸುರೆತಿ ಬಂಗಾರ್‌’ ಪಾಡ್ದನವು ವೀರಭದ್ರ ದೇವರ ಮತ್ತು ಅಸುರೆತಿ ಬಂಗಾರುವಿನ ಪ್ರೇಮಪ್ರಸಂಗವನ್ನು ನಿರೂಪಿಸುತ್ತದೆ. ‘ಅಸುರೆತಿ ಬಂಗಾರು’, ‘ಚೀಮುಳ್ಳ’ ಬನಕ್ಕೆ ‘ಕೇಪುಳ’ದ (ಕಿಸುಗಾರ ಹೂ) ಅಡ್ಡಕ್ಕೆ ದನಕರುಗಳನ್ನು ಮೇಯಿಸಲು ಹೋಗುತ್ತಾಳೆ. ದನಕರುಗಳನ್ನು ಮೇಯಿಸುತ್ತಾ ಭಾರತ ಜಾತಕಗಳನ್ನು ಓದುತ್ತಾಳೆ. ಉತ್ತಮ ಮನೆತನದ ಹೆಣ್ಣು ಎಂಬುದು ಈ ರೀತಿಯಲ್ಲಿ ಸೂಚಿತವಾಗಿದೆ. ಒಂಟಿಯಾಗಿರುವ ಬಂಗಾರುವನ್ನುವೀರಭದ್ರ ದೇವರು ನೋಡುತ್ತಾರೆ. ಎಲೆ, ಮೆದೆ ಪೊದರುಗಳ ಮರೆಯಲ್ಲಿ ಮೆಲ್ಲಮೆಲ್ಲನೆ ಬರುತ್ತಾರೆ. ಅಸುರೆತಿ ಬಂಗಾರುವನ್ನು ಪ್ರೇಮಿಸಲು ಬರುವ ಚಿತ್ರವು ನೈಜವಾಗಿದೆ, ಸುಂದರವಾಗಿದೆ. ಕವಿ ಎಷ್ಟು ಬೇಕೋ ಅಷ್ಟನ್ನೇ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಒಂದೊಂದೆ ಚಿತ್ರವನ್ನು ಭಾಷೆಯಲ್ಲಿ ಬಿಡಿಸುತ್ತಾನೆ. ವೀರಭದ್ರ ದೇವರನ್ನು ಕಂಡ ಬಂಗಾರು ತಲೆ ತಗ್ಗಿಸುತ್ತಾಳೆ. ಓದುವುದನ್ನು ಬಿಡುತ್ತಾಳೆ. ವೀರಭದ್ರ ದೇವರು ನಿಧಾನವಾಗಿ ಮಾತನಾಡಿಸುತ್ತಾರೆ, ನೀನಾರು, ಯಾರ ಮಗಳು ಎಂದು ಕೇಳಿದಾಗ, ನಿಮಗೆ ನಾನು ಯಾರಾದರೇನು ಎಂದು ಹೇಳಿದ್ದಕ್ಕೆ, ವೀರಭದ್ರ ದೇವರ ಉತ್ತರ – ‘ನೀನು ನನಗೆ ಹಡುತ್ತಿಯಾ, ನನ್ನ ಜೊತೆಯಲ್ಲಿ ಇರುತ್ತಿಯಾ?’ ಎಂದು ಜನಪದ ಕವಿಯು ದೇವರ ಪಾತ್ರವನ್ನು ಮಾನವೀಯ ಸಹಜತೆಗೆ ಇಳಿಸಿಬಿಡುತ್ತಾನೆ. ನಿರ್ಜನ ಪ್ರದೇಶದಲ್ಲಿ ಇಂತಹ ಮಾತು ಅಸಹಜವಲ್ಲ. ಇದನ್ನು ಅಶ್ಲೀಲವೆಂದು ಹೇಳುವಂತಿಲ್ಲ. ಈ ರೀತಿಯಲ್ಲಿ ಹಳ್ಳಿಯ ಗಂಡಸರು ನಿಸ್ಸಂಕೋಚವಾಗಿ ಮಾತನಾಡುತ್ತಾರೆ. ಇಲ್ಲಿ ವೀರಭದ್ರ ದೇವರ ಗಂಡಸುತನ, ಅದರಲ್ಲೂ ದಿಟ್ಟತನ, ನೇರವಾದ ಮಾತುಗಾರಿಕೆ, ಪಾತ್ರಕಲ್ಪನೆಯಲ್ಲಿ ವಿಶಿಷ್ಟ ರೀತಿಯಿಂದ ಭಾವಿಸಬೇಕಾಗುತ್ತದೆ. ಬಂಗಾರು ನಿರಾಕರಿಸಿದಾಗ – ‘ನನಗೆ ಹಡದಿದ್ದರೆ, ನನ್ನ ಜೊತೆ ಇರದಿದ್ದರೆ, ಕಾಡಸೊಪ್ಪು ತಿನ್ನಿಸುತ್ತೇನೆ, ತೋಡಿದ ನೀರು ಕುಡಿಸುತ್ತೇನೆ’ ಎಂದು ಹೇಳಿ ಮಾಯವಾಗುತ್ತಾರೆ. (ಎಂಕ್‌ ಅಡ್‌ಜಿಡ, ಎನಡೊಪ್ಪ ಇತ್ತಜಿಡ ಕಾಡಸೊಪ್ಪು ತಿನ್ಪಾವೆ, ತೋಡ ನೀರ್‌ ಪರ್ಪಾವೆ.)

ಮುಂದೆ ಬಂಗಾರುವಿನ ಪಾತ್ರ ಸಹಜ ಸುಂದರವಾಗಿ ಬಂದಿದೆ. ಒಂದು ಹೆಣ್ಣು ಮಾನವುಳಿಯುವಂತೆ ಇಂತಹ ವಿಷಮ ಸಮಸ್ಯೆಯನ್ನು ಎದುರಿಸುವುದು ಕಷ್ಟಕರ. ಮನೆಗೆ ಬಂದವಳೇ ತಾಯಿಯ ಮಡಿಲಿಗೆ ಜೋತು ಬಿದ್ದು ಒಂದೇ ಸವನೆ ಅಳುತ್ತಾಳೆ. (ಉಳಯಿ ಸೂತ್ರೊಗು ಪೋದು ಅಪ್ಪೆನ ನಡುಂಗಿಲಡ್‌ಪತ್ಯಲ್‌) ತಾಯಿಯೊಡನೆ ಮಾತ್ರ ಹೆಣ್ಣು ಹುಡುಗಿ ತನ್ನ ಸಮಸ್ಯೆಯನ್ನು ತೋಡಿಕೊಳ್ಳುವುದು ಸಾಧ್ಯ. ತಾಯಿಯು ಸೋದರ ಮಾವ ನಾರಾಯಣ ಬಂಗೇರರಲ್ಲಿಗೆ, ಮೇಲಿನ ಲೋಕಕ್ಕೆ ಕಳುಹಿಸಿದ ಮೇಲೆ, ಅಲ್ಲಿಗೆ ಬಂದವಳು ಚಾವಡಿ ನಡುವಿಗೆ ಹೋಗಿ, ಗಜ ಕಂಬ ಹಿಡಿದು ನಿಂತಳು. ಬಿಕ್ಕಿ ಬಿಕ್ಕಿ ಅತ್ತು ಜೋರಾಗಿ ಕೂಗುವಳು. (ಚಾವಡಿ ನಡುವರ ಪೋಯಳ್‌,ಗಜಕಂಬ ಮುದೆಲ್‌ಪೋದು ಉಂತ್ಯಲ್‌ದುಕ್ಕಿ ದುಕ್ಕಿದ್‌ಬುಳಿಪುವಳ್‌) ಬಂಗಾರುವು ತಾಯಿಯ ಮಡಿಲಿಗೆ ಜೋತು ಬೀಳುವಾಗ ತಾಯಿ ಕೇಳುವ ಪ್ರಶ್ನೆ ‘ಏನು ಮಗು ಹಸಿವಾಗುತ್ತದೆಯೇ? ಹಚ್ಚಿದ ಎಣ್ಣೆಗೆ ಸ್ನಾನ ಮಾಡು, ಹಾಲುಗಂಜಿ ಕುಡಿ’ (ದಾನೆ ಮಾಗ ಬಡವು ಆಪುಂಡ. ಪೂಜಿದಿ ಎಣ್ಣೆಗ್‌ಮೀಲ, ಪೇರಗಂಜಿ ಪರ್ಲ,) ತಾಯಿ ಹೃದಯವನ್ನು ತೆರೆದು ತೋರಿಸುವ ರಾಮಾಯಣದ ಒಂದು ಘಟನೆ ನೆನಪಿಗೆ ಬರುತ್ತದೆ. ತೀರ ಸಹಜವಾದ ಚಿತ್ರಣವು ರಸಸ್ಯಂದಿಯಾಗುವುದು ವಾಚಕರ ಹೃದಯವನ್ನು ಕಲುಕಿದಾಗ.

ಮೇಲಿನ ಲೋಕದಲ್ಲಿ ನಡೆಯುವ ಘಟನೆಯಾದರೂ, ಜನಪದ ಕವಿಯು ತನ್ನ ಅನುಭವ ಮಾತ್ರದಿಂದ ಸಹಜವಾಗಿ ಚಿತ್ರಿಸಿದ್ದು ಉತ್ತಮ ಕಾವ್ಯಲಕ್ಷಣಕ್ಕೆ ಉದಾಹರಣೆಯಾಗಿದೆ. ಆದರೆ ಮುಂದಿನ ಘಟನೆಗಳು, ವರ್ಣನೆಗಳು ಅಲೌಕಿಕವಾಗಿವೆ. ಜನಪದ ಕವಿಯು ತಮ್ಮದೇ ಆದ ಕಲ್ಪನೆಯಲ್ಲಿ ಚಿತ್ರಿಸುವ ರೀತಿಯನ್ನು ಪ್ರತಿನಿಧಿಸುತ್ತದೆ. ಬಂಗಾರುವು ನಾರಾಯಣ ಬಂಗೇರರಲ್ಲಿ ನಡೆದ ಘಟನೆಯನ್ನು ತಿಳಿಸಿದ ಬಳಿಕ ವೀರಭದ್ರ ದೇವರಿಗೆ ಯುದ್ದಕ್ಕೆ ಬರಲು ಓಲೆ ಕೊಡುತ್ತಾರೆ. ವೀರಭದ್ರ ದೇವರ ಸತ್ವಪರೀಕ್ಷೆಗಾಗಿ ಹೊರತು ದ್ವೇಷಕಲ್ಲ ಎಂಬುದು ಪಾಡ್ದನದ ಕೊನೆಯಲ್ಲಿ ತಿಳಿಯುತ್ತದೆ.

ನಾರಾಯಣ ಬಂಗೇರರನ್ನು ಮನೆಯನ್ನು ಹೊಗಲು ಏಳು ಬಾಗಿಲುಗಳಿವೆ. ಏಳು ಬಾಗಿಲುಗಳಿಗೆ ಏನು ಕಾವಲುಗಳಿವೆ. ನಾಯಿ, ಹುಲಿ, ಕರಡಿ, ಏಳು ಹೆಡೆಯ ಸರ್ಪ, ಸಂಕಪಾಲ, ಗೊಂಬೆಗಳು ಮತ್ತು ಹೆಂಗಸರು. ಇದು ಜನಪದ ಕವಿಯ ವಿಶಿಷ್ಡ ಕಲ್ಪನೆ. ಯುದ್ದಕ್ಕೆಂದು ಬಂದ ವೀರಭದ್ರ ದೇವರು ಉಪಾಯದಿಂದಲೇ ಏಳು ಬಾಗಿಲುಗಳನ್ನು ದಾಟಿ ಹೋಗುತ್ತಾರೆ. ನಾಯಿಗಳಿಗೆ ತೆಂಗಿನಕಾಯಿ, ಹುಲಿಗೆ ದನ,ಕರಡಿಗೆ ಮದಿಮಾಲ್‌ಲಾಕಿ(?) ಸರ್ಪಕ್ಕೆ ಹುಂಚ, ಸಂಕಪಾಲನಿಗೆ ಕೋಳಿ ಮೊಟ್ಟೆ, ಗೊಂಬೆಗಳಿಗೆ ಕತ್ತರಿ ಮತ್ತು ಹೆಂಗಸರಿಗೆ ಅಪ್ಪದ ತಿನಿಸು – ಕೊಡುತ್ತಾ ಮನೆಯೊಳಗೆ ಹೋಗುತ್ತಾರೆ. ಏಳು ಬಾಗಿಲುಗಳೆಂದು ಅಲೌಕಿಕ ಚಿತ್ರವನ್ನು ಕೊಟ್ಟ ಕವಿಯು ಅಲ್ಲಿಯ ಕಾವಲು ಮತ್ತು ಜಯಿಸುವ ರೀತಿಯನ್ನು ಅನುಭವಕ್ಕೆ ಸೀಮಿತವಾದ ವರ್ಣನೆಯಿಂದಲೇ ಸ್ವಾರಸ್ಯವಾಗಿ ಚಿತ್ರಿಸಿದ್ದಾನೆ. ಜನಪದ ಕವಿಯ ನಿರ್ಮಲ ಮನಸ್ಸು, ಸಹಜ ಪ್ರತಿಭೆಗಳ ಮುಂದೆ ಇಂತಹ ಆಭಾಸಗಳು ದೋಷವಾಗುವುದಿಲ್ಲ. ಒಟ್ಟಿನಲ್ಲಿ ಅದ್ಭುತ ಚಿತ್ರವನ್ನು ಕೊಡುವುದು ಅವನ ಉದ್ದೇಶ.

ವೀರಭದ್ರ ದೇವರು ನಾರಾಯಣ ಬಂಗೇರರಿಗೆ ಹೊಟ್ಟೆನೋವು ಬರುವಂತೆ ಮಾಡುತ್ತಾರೆ – ಮಾಯದಿಂದ ಅದು ಗುಣವಾಗಲು ಬಂಗೇರರ ಆದೇಶದಂತೆ ಬಂಗಾರುವೇ ವೀರಭದ್ರ ದೇವರ ಅರಮನೆಗೆ ಬರುತ್ತಾಳೆ. ಅಳುತ್ತಾ ಬಂದ ಕಾರಣವನ್ನು ಹೇಳುತ್ತಾಳೆ. ವೀರಭದ್ರ ದೇವರಿಗೆ ಮನಸ್ಸಿನ ಆಸೆಯನ್ನು ತೀರಿಸುವ ಸದವಕಾಶ. ತನಗೆ ಮಣಿದು ಬಂದ ಬಂಗಾರುವನ್ನು ಅಪ್ಪಿ ಹಿಡಿದು (ತರ್ಕ್‌ದ್‌ಪತ್ತ್‌ದ್‌) ‘ನಿನ್ನ ಮಾವನ ಹೊಟ್ಟೆನೋವು ಗುಣವಾಯ್ತು’ ಎನ್ನುತ್ತಾರೆ. ಬಂಗಾರುವಿಗೆ ಸಂತೋಷವಾಗುತ್ತದೆ. ಮಾವ ನರಾಯಣ ಬಂಗೇರರು ವೀರಭದ್ರ ದೇವರಿಗೆ ಧರ್ಮದಾರೆಯೆರೆದು ಕೊಡುತ್ತಾರೆ. ವೀರಭದ್ರ ದೇವರ ಪ್ರೇಮ ವಿಜಯದ ಕತೆಯು ಜನಪದ ಕವಿ ವಿಶಿಷ್ಟ ಕಲ್ಪನೆಯಿಂದ ನಿರೂಪಿತವಾಗಿದೆ. ಇಲ್ಲಿ ನಾರಾಯಣ ಬಂಗೇರರು ಎಂದರೆ ನಾರಾಯಣ ದೇವರೆಂಬ ಸೂಚನೆ ‘ಮೇಲಿನ ಲೋಕದಲ್ಲಿ’ (ಮಿತ್ತ್‌ಮಿರಿ ಲೋಕೊಡು) ಎಂಬಲ್ಲಿದೆ. ಪುರಾಣದ ಪಾತ್ರಗಳ ಆಧಾರದಿಂದ, ಲೌಕಿಕ ಚಿತ್ರಣವನ್ನೊಳಗೊಂಡ, ನಿರರ್ಗಳವಾದ ಭಾಷೆಯಲ್ಲಿ ರಚಿತವಾದ ಪ್ರೇಮದ ಕತೆಯ ಈ ಪಾಡ್ದನವು ವಿಶಿಷ್ಟ ಸ್ಥಾನವನ್ನು ಪಡೆಯುವುದರಲ್ಲಿ ಸಂಶಯವಿಲ್ಲ.

ಕೃಷ್ಣದೇವರ ಪ್ರೇಮ ಪ್ರಸಂಗವನ್ನು ನಿರೂಪಿಸುವ ಮೂರು ಪಾಡ್ದನಗಳು ಲಭ್ಯವಾಗಿದೆ – ‘ಬಾಲಕೃಷ್ಣೆ’, ‘ಶ್ರೀಕೃಷ್ಣ ದೇವೆರೆ ಆರ್ಯಗಿಳಿ’ ಮತ್ತು ‘ಗಂಗಮ್ಮ ಸತ್ಯಮ್ಮ’. ಇವುಗಳಲ್ಲಿ ‘ಶ್ರೀಕೃಷ್ಣ ದೇವೆರೆ ಆರ್ಯಗಿಳಿ’ ಮತ್ತು ‘ಗಂಗಮ್ಮ ಸತ್ತಮ್ಮ’ ಪಾಡ್ದನಗಳೆರಡು ಅಲ್ಪಸ್ವಲ್ಪ ವ್ಯತ್ತಾಸವುಳ್ಳ ಸಮಾನ ಕಥಾವಸ್ತು ಇರುವವುಗಳು.

‘ಬಾಲಕೃಷ್ಣೆ’ ಪಾಡ್ದನವು ಸಣ್ಣದಾದರೂ ಕೃಷ್ಣದೇವರ ಲೀಲೆಯನ್ನು ಸರಸ ಸುಂದರವಾಗಿ ವರ್ಣಿಸುತ್ತದೆ. ಈ ಪಾಡ್ದನದಲ್ಲಿ ಶ್ರೀಕೃಷ್ಣ ಮುಗುವಾಗಿರುವಾಗಿನ ಒಂದು ಘಟನೆ ಮತ್ತು ವಸ್ತ್ರಾಪಹರಣದ ಕತೆಯು ನಿರೂಪಿತವಾಗಿದೆ. ಕತೆಯಂತೂ ಜನಪದ ಕವಿಯ ಸ್ವಂತ ಕಲ್ಪನೆಯೇ ಆಗಿದೆ. ಜನಪದ ಕವಿಯ ಶೃಂಗಾರ ರಸವನ್ನು ಹೇಗೆ ಪ್ರತಿಪಾದಿಸಬಲ್ಲ ಎಂಬುದು ಕೃಷ್ಣದೇವರ ಪಾಡ್ದನಗಳಲ್ಲಿ ವ್ಯಕ್ತವಾಗುವುದು.

ನಂದಗೋಕುಲದಲ್ಲಿ ಗೋಪಿಯು ಶ್ರೀಕೃಷ್ಣನನ್ನು ಹೆತ್ತು ಮಲಗಿದ್ದಾಳೆ. ಮಗುವನ್ನು ನೋಡಲು ಏಳು ಗೊಲ್ಲರ ಹೆಂಗಸರು ಬರುತ್ತಾರೆ. ಶೃಂಗಾರ ಮಾಡಿಕೊಂಡ ಸುಂದರ ಸ್ತ್ರೀಯರು ನಂದಗೋಕುಲದ ಅರಮನೆಗೆ ಬಂದರು. ‘ಇಷ್ಟು ದಿವಸ ಬರದವರು ಇವತ್ತು ಯಾವ ಕಾರ್ಯದಲ್ಲಿ ಬಿಂದಿರಿ’ (ಇನಿಮುಟ ಬರಂದಿನಗುಲು ಇನಿ ದಾನಿ ಕಜಕಾರ್‌ಡು ಬತ್ತರ್) ಎಂದು ಗೋಪ್ಯಮ್ಮ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಬಂದವರಿಗೆ ಕುಳಿತುಕೊಳ್ಳಲು ಮಣೆ ಕೊಡುತ್ತಾರೆ. ಮಣೆಯಲ್ಲಿ ಕುಳಿತ ಹೆಂಗಸರು ಮಗುವನ್ನು ಹಿಡಿಯುತ್ತಾರೆ. ಕೈಯಿಂದ ಕೈಗೆ ಕೊಡುತ್ತಾರೆ. ಮುಂದೆ ಕವಿ ಒಂದು ರಸನಿಮಿಷವನ್ನು ಸ್ವಂತ ಕಲ್ಪನೆಯಿಂದ ಚಿತ್ರಿಸುತ್ತಾನೆ. ಶ್ರೀಕೃಷ್ಣ ಲೀಲೆ! ‘ಮಗು ಹೆಂಗಸರ ಮುಖ ನೋಡಿತು, ಕಿಸಕ್ಕೆಂದು ನಕ್ಕಿತು. ಕೈಯಲ್ಲಿ ಹಿಡಿಯಿತು ಬಳೆ ಹುಡಿಮಾಡಿತು. ಮೊಲೆಯನ್ನು ಹಿಡಿಯಿತು, ಮೀಸೆ ತಿರುಗಿಸಿತು’ (ಪೊಣ್ಣುಲೆ ಮೋನೆ ತೂಂಡು ಬಾಲೆ ಕಿಸ್ಕ ತೆಲ್ತ್‌ಂಡ್. ಕೈಟ್ ಪತ್‌ಂಡ್ ಕಾಜಿ ನುರ್ತಂಡ್. ಮಿರೆಟ್ ಪಸ್‌ದ್ ಮೀಸೆ ತಿರ್ಗಾಂಡ್) ಬಂದ ಗೊಲ್ಲರ ಹೆಂಗಸರಿಗೆ ಆಶ್ಚರ್ಯ! ಕೃಷ್ಣನ ವರ್ತನೆಗೆ ಸರಿಯಾದ ವ್ಯಾಖ್ಯಾನ ಅವರದ್ದು -‘ಮಗು ಮಗು ಎಂದು ಹೇಳಿದಿರಿ ಗೋಪ್ಯಮ್ಮ ನಿಮ್ಮ ಮಗು ಮಗು ಹೋಗಿ ಮದನಗೋಪಾಲ’.(ಬಾಲೆ ಬಾಲೆಂದ್ ಪಂಡರ್ ಗೋಪ್ಯಮ್ಮ, ಇರೆನ ಮಗೆ ಬಾಲೆ ಪೋದು ಮದನಗೋಪಾಲೆ) ಮದನ ಗೋಪಾಲ ಎನ್ನುವ ಪದಪ್ರಯೋಗವು ಅರ್ಥಪೂರ್ಣವಾಗಿದೆ.

ಕೂಡಲೇ ಯಾವ ವಿವರಣೆಯೂ ಇಲ್ಲದೆ ವಸ್ತ್ರಾಪಹರಣದ ಕತೆಗೆ ಹಾರುತ್ತಾನೆ. ನಂದಗೋಕುಲದ ಅರಮನೆಯ ಎದುರು ಮಾಯದ ಬಿಳಿಯ ಅಶ್ವತ್ಥಮರವನ್ನು ನಿರ್ಮಿಸುತ್ತಾರೆ. ಮಾಯದ ಕೆರೆ ನಿರ್ಮಿಸುತ್ತಾರೆ. ಗೊಲ್ಲರ ಹೆಂಗಸರು ನೀರಿನ ಚಂದ ನೋಡಿ ಸ್ನಾನಕ್ಕೆ ಬರುತ್ತಾರೆ. ಗೊಲ್ಲರ ಹೆಂಗಸರು ಸ್ನಾನ ಮಾಡುತ್ತಿರುವಾಗ ವಸ್ತ್ರಗಳನ್ನು ಅಶ್ವತ್ಥಮರದಲ್ಲಿಡುತ್ತಾರೆ. ಹೆಂಗಸರು ನೀರಿನಿಂದ ಮೇಲೆ ಬಂದು ಸೊಂಟದಲ್ಲೊಂದು ಕೈಹಿಡಿದು ಸೀರೆಗಳನ್ನು ಬೇಡಿದಾಗ ಕೃಷ್ಣ ದೇವರ ಕೊಂಕುಬುದ್ಧಿಯ ಚಿತ್ರಣವು ಸುಂದರವಾಗಿದೆ – ‘ಕೆಳಗೆ ನೋಡಿದರು ಕೃಷ್ಣ ಕಿಸಕ್ಕ ನಕ್ಕರು. ಮೇಲೆ ನೋಡಿದರು ಕೊಳಲು ಊದಿದರು’ (ತಿರ್ತ್ ತೂಯೆರ್ ಕೃಷ್ಣೆ ಕಿಸ್ಕ ತೆಲ್ತೆರ್, ಮಿತ್ತ್ ತೂಯೆರ್ ಕೊಲಲ್ ಊದಿಯೆರ್). ಕೃಷ್ಣನ ತುಂಟತನ ಮತ್ತು ಕುಹಕ ವರ್ತನೆ ಮನೋಜ್ಞವಾಗಿ ಚಿತ್ರಿತವಾಗಿದೆ. ಕೊನೆಗೆ ಕೃಷ್ಣನ ಉತ್ತರ ‘ನಿಮ್ಮ ಸೀರೆಯನ್ನು ಕೊಡಬೇಕಾದರೆ ನನ್ನನ್ನು ಮಾವನ ಮಗನೆಂದು ಭಾವಿಸಬೇಕು’. ಗೊಲ್ಲರ ಹೆಂಗಸರು ಒಪ್ಪುತ್ತಾರೆ. ಸೀರೆಯನ್ನು ಕೊಟ್ಟ ಬಳಿಕ ಏಳು ಜನ ಹೆಂಗಸರನ್ನು ಮಾಯ ಮಾಡುತ್ತಾರೆ. ಕೃಷ್ಣ ದೇವರ ಅಲೌಕಿಕ ಶಕ್ತಿಯನ್ನು ತೋರ್ಪಡಿಸಲು ಜನಪದ ಕವಿಯು ಇಂಥ ಪವಾಡದ ಚಿತ್ರಗಳನ್ನು ತನ್ನ ಕಲ್ಪನೆಯಿಂದ ಚಿತ್ರಿಸುತ್ತಾನೆ.

ಹಾಡಲು ಯೋಗ್ಯವಾಗಿರುವ ಭಾಷೆಯ ಗತಿ, ಸುಂದರವಾದ ಸ್ವಾರಸ್ಯವಾದ ಸಂಭಾಷಣೆ, ಕ್ರಿಯೆಯ ಶಬ್ದ ಚಿತ್ರ ಮೊದಲಾದವು ಈ ಪಾಡ್ದನದ ಕಾವ್ಯ ಮೌಲ್ಯಕ್ಕೆ ಸಾಕ್ಷ್ಯವಾಗಿವೆ.

ಶ್ರೀಕೃಷ್ಣ ದೇವರಿಗೆ ಸಂಬಂಧಿಸಿ ಸ್ವತಂತ್ರ ಕಲ್ಪನೆಯ ಕತೆಯು ‘ಗಂಗಮ್ಮ – ಸತ್ಯಮ್ಮ’ ಮತ್ತ ‘ಶ್ರೀಕೃಷ್ಣ ದೇವೆರೆ ಆರ್ಯಗಿಳಿ’ ಎಂಬ ಪಾಡ್ದನಗಳಲ್ಲಿದೆ. ಎರಡು ಪಾಡ್ದನಗಳಲ್ಲಿ ಬರುವ ಘಟನೆಗಳ ಹಲವಂಶಗಳಲ್ಲಿ ಒಂದೇ ಆಗಿವೆ. ಆದರೆ ಭಾಷೆ, ಹೇಳುವ ಶೈಲಿ, ನಿರೂಪಣೆಗಳಲ್ಲಿ ತುಂಬ ವ್ಯತ್ಯಾಸವಿದೆ.

ಮುಖ್ಯ ಕತೆ ಇಷ್ಟು – ಶ್ರೀ ಕೃಷ್ಣ ದೇವರು ಬೇಸರ ಕಳೆಯಲು ಸಾವಿರದ ಒಂದು ಗಿಳಿಗಳನ್ನು ಸೃಷ್ಟಿ ಮಾಡುತ್ತಾರೆ. ಸತ್ಯಭಾಮೆ (ಸತ್ಯಮ್ಮ)ಯ ಜೊತೆಯಲ್ಲಿ ಸಾಕುತ್ತಾರೆ. ದೊಡ್ಡದಾದಾಗ ಗಿಳಿಗಳು ಸ್ವತಂತ್ರವಾಗಿ ಹೊರಗೆ ಹೋಗುತ್ತವೆ, ಮೇವನ್ನು ಹುಡುಕುತ್ತಾ ಏಳು ಕಡಲಿನ ಆಚೆ ಇರುವ ಗಂಗಮ್ಮನ ತೋಟಕ್ಕೆ ಹೋಗುತ್ತವೆ. ಅಲ್ಲಿ ಕೃಷ್ಣ ದೇವರ ಗಿಳಿಗಳೆಂದು ತಿಳಿದ ಗಂಗಮ್ಮ, ಕೃಷ್ಣ ದೇವರನ್ನು ಕಪಟ, ಕಳ್ಳ ಎಂದು ಮೊದಲಾಗಿ ದೂರುತ್ತಾಳೆ. ಗಿಳಿಗಳಿಗೆ ಶಿಕ್ಷೆ ಕೊಡುತ್ತಾಳೆ. ಆ ಗಿಳಿಗಳು ದೇವರಲ್ಲಿಗೆ ಬಂದು ದೂರು ಕೊಡುತ್ತವೆ. ಬಳಿಕ ಕೃಷ್ಣ ದೇವರು ಕಪಟ ವೇಷದಲ್ಲಿ ಗಂಗಮ್ಮನಲ್ಲಿ ಹೋಗಿ ತನ್ನವಳನ್ನಾಗಿ ಮಾಡಿಕೊಂಡು ಬರುತ್ತಾಳೆ.

ವಿಸ್ಮಯಕಾರಿ ಅಮಾನುಷ ಘಟನೆಗಳಿಂದ ಹೆಣೆದ ಈ ಕತೆಯು ಕನ್ನಡದ ಕೆಲವು ಜನಪದ ಕತೆಗಳನ್ನು ನೆನಪಿಗೆ ತರುತ್ತವೆ. ಆದರೆ ಅವುಗಳ ಪ್ರಬಾವವೆಂದು ಹೇಳುವುದು ಸರಿಯಾಗುವುದಿಲ್ಲ. ಎರಡು ಪಾಡ್ದನಗಳೂ ಒಂದೇ ಕಥಾವಸ್ತುವಿನ ಎರಡು ಪಾಠಗಳು. ಈ ಎರಡು ಪಾಠಗಳಲ್ಲಿ ‘ಗಂಗಮ್ಮ -ಸತ್ಯಮ್ಮ’ – ‘ಪ‘ ಪಾಠ; ‘ಕೃಷ್ಣ ದೇವರೆ ಅರ್ಯಗಿಳಿ’ – ‘ಅ’ ಪಾಠ) ಮುಖ್ಯವಾಗಿರುವ ವತ್ಯಾಸಗಳನ್ನು ಗಮನಿಸುವ. (ಅ) ಪಾಠದಲ್ಲಿ ಬರುವ ಗಿಳಿಗಳ ವರ್ಣನೆ (ಪ)ದಲ್ಲಿಲ್ಲ. ಕೃಷ್ಣ ದೇವರು ಸೃಷ್ಟಿಸಿದ ಗಿಳಿಗಳಿಗೆ ಬೆಳ್ಳಿಯ ರೆಕ್ಕೆ. ಬಂಗಾರದ ಕೊಕ್ಕು, ಕಬ್ಬಿಣದ ಕೈಕಾಲು, ಸಾವಿರದ ಒಂದು ಬಣ್ಣ ಹಚ್ಚಿದರು. ಸತ್ಯಮ್ಮನಿಗೆ ಸಾಕಲು ಒಪ್ಪಿಸುತ್ತಾರೆ. ಗಿಳಿಗಳು ದೇವರಿಂದ ಸೃಷ್ಟಿಯಾದವುಗಳಾದುದರಿಂದ ಅವುಗಳ ವಿಶಿಷ್ಟ ರೂಪವು ಕಾಲ್ಪನಿಕವಾಗಿದ್ದರೂ ಯೋಗ್ಯವಾಗಿದೆ.

ಏಳು ಕಡಲು ಆಚೆಗೆ ಗಂಗಮ್ಮನ ಹೂವಿನ ತೋಟಕ್ಕೆ ಗಿಳಿಗಳು ಹೋಗುವುದು ಎರಡು ಪಾಡ್ದನಗಳಲ್ಲಿ ಸಮಾನವಾಗಿದ್ದರೂ, (ಅ) ಪಾಠವು ಗಂಗಮ್ಮ ದೇವಿಯ ತೋಟದಲ್ಲಿ ಸಾವಿರದ ಒಂದು ಸೇವಕಿಯರು (ಸದ್ಮಾಲ್‌ಪೊಣ್ಣುಲು) ಬರುವ, ಮಲ್ಲಿಗೆ ಗಿಡದ ಮೊಗ್ಗಿನಲ್ಲಿ ಕುಳಿತು ಕುಸುಮವನ್ನು ತಿನ್ನುವ, ಇದನ್ನು ನೋಡಿದ ಸೇವಕಿಯರ ಮಾತಿಗೆ ಗಿಳಿಗಳು ಕೇಳದಿದ್ದಾಗ ಗಂಗಮ್ಮನಲ್ಲಿ ದೂರಿಡುವ ವರ್ಣನೆಗಳಿಂದ ಹೆಚ್ಚು ಕಾವ್ಯಾತ್ಮಕವಾಗಿದೆ.

(ಪ) ಪಾಠದಲ್ಲಿ ಕೃಷ್ಣ ದೇವರು ಹೆಣ್ಣುಮಗಳ ವೇಷದಲ್ಲಿ ಹೋಗುತ್ತಾರೆ. ನಾಲ್ಕು ಲೋಕದ ಮಗು ತಾನು; ದ್ವಾರಕೆಯಲ್ಲಿ ಸತ್ಯಮ್ಮನ ಚಾಕರಿಯವಳು ಎನ್ನತ್ತಾರೆ. ಕಸ ಗುಡಿದತ್ತೇನೆ. ಮುಸುರೆ ತೊಳೆಯುತ್ತೇನೆ, ಹೇನು ತೆಗೆಯುತ್ತೇನೆ ಎಂದು. ಬಳಿಕ ಗಂಗಮ್ಮನ ತಲೆ ಬಾಚಿ ಹೇನು ತೆಗೆಯುತ್ತಾರೆ. ಹೆಣ್ಣು ಮಗಳ ತೊಡೆಯಲ್ಲಿ ತಲೆಯಿಟ್ಟು ಒರಗಿದ ಗಂಗಮ್ಮನಿಗೆ ಸ್ವಲ್ಪ ಹೊತ್ತಾದಾಗ ನಿದ್ರೆ ಬರುತ್ತದೆ. ಆದರೆ ಎಚ್ಚರವಾಗಿ ನೋಡಿದಾಗ ಶ್ರೀಕೃಷ್ಣ ದೇವರ ತೊಡೆಯಲ್ಲಿ ತಲೆಯಿದೆ. ಸುಂದರವಾದ ಕಲ್ಪನೆ, ತುಂಬ ಆಕರ್ಷಕವಾದ ಚಿತ್ರಣ, ಕೃಷ್ಣದೇವರ ಮಾಯವನ್ನು ನಿರೂಪಿಸುವ ತಂತ್ರ ಕೌಶಲವೂ ಅಸಾಮಾನ್ಯವಾದುದು. ಬಳಿಕ ಗಂಗಮ್ಮ ಕೊರಗುತ್ತಾಳೆ. ಆದರೆ ಕೃಷ್ಣ ಕೇಳುವುದಿಲ್ಲ. (ಅ) ಪಾಠದಲ್ಲಿ ಹೀಗಿಲ್ಲ, ಕೃಷ್ಣದೇವರು ಮಗುವಾಗಿ ಗಂಗಮ್ಮನ ಮನೆ ಬಾಗಿಲಲ್ಲಿ ಆಡುತ್ತಾರೆ. ಸೇವಕಿಯರಿಂದ ಮಗುವಿನ ಸುದ್ದಿ ಕೇಳಿ, ಗಂಗಮ್ಮ ಮಗುವನ್ನು ಎತ್ತಿಕೊಂಡು ಏಳು ಮಾಳಿಗೆಗೆ ಹೋಗುತ್ತಾಳೆ. ಏಳು ಮಾಳಿಗೆಯನ್ನು ಪ್ರವೇಶಿಸಿದಾಗ ಮಗು ದೊಡ್ಡದಾಗಿ ಕೃಷ್ಣದೇವರು ಗಂಗಮ್ಮನ ಆಲಿಂಗನದಲ್ಲಿ ಇದ್ದಾರೆ! ಅವಳ ಎದೆಗೆ ಕೈಹಾಕುತ್ತಾರೆ. ಮೋಸ ಮಾಡಿದಿರೆಂದು ದುಃಖಿಸಿದಾಗ, ಕೃಷ್ಣ ದೇವರು ತನ್ನ ಸಾವಿರದ ಒಂದನೆಯ ಹೆಂಡತಿಯನ್ನಾಗಿ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ. ಎಂಟು ದಿನಗಳಲ್ಲಿ ಅಲ್ಲೇ ಇದ್ದು ಬಳಿಕ ರಥದಲ್ಲಿ ದ್ವಾರಕೆಗೆ ಕರೆದುಕೊಂಡು ಬರುತ್ತಾರೆ. ಎರಡು ಪಾಠಗಳಲ್ಲಿಯೂ ಕೃಷ್ಣ ದೇವರು ಮಾಯದ ರೂಪದಿಂದ ನಿಜರೂಪವನ್ನು ಪಡೆಯುವ ಚಿತ್ರಣವು ಉತ್ತಮ ಕಲ್ಪನೆಗೆ ಸಾಕ್ಷ್ಯವಾಗಿದೆ, ಮನೋಜ್ಞವಾಗಿದೆ. ಶೃಂಗಾರ ರಸದ ಪ್ರತಿಪಾದನೆಯು ಸಫಲವಾಗಿದೆ. ಆಲಂಕಾರಿಕ ಮಾತಿನಲ್ಲಿ ಹೇಳುವುದಾದರೆ ‘ನವೋನವ’ವಾಗಿದೆ. ಅದ್ಭುತ ಚಿತ್ರಣವು ಪೌರಾಣಿಕ ಪಾತ್ರ ಕಲ್ಪನೆಯ ದೃಷ್ಟಿಯಿಂದ ಯೋಗ್ಯವಲ್ಲವೆಂದು ಎನಿಸುವುದಿಲ್ಲ.

(ಪ) ಪಾಠದಲ್ಲಿ ಗಂಗಮ್ಮನನ್ನು ಕರೆದುಕೊಂಡು ಬರು ವಿವರಣೆಯು ತೀರ ಅಮಾನುಷವಾಗಿದೆ. ಒಂದು ಅಡಿಕೆಯನ್ನು ಎರಡು ಹೋಳು ಮಾಡಿ ಅದರ ನಡುವೆ ಇಟ್ಟು, ಹಿಡಿದುಕೊಂಡು ಬರುತ್ತಾರೆ. ಸತ್ಯಮ್ಮ ಅಡಿಕೆಯನ್ನು ಎರಡು ಭಾಗ ಮಾಡಿದಾಗ ಒಂದು ಭಾಗವು ದೂರ ಬೀಳುತ್ತದೆ. ಅಲ್ಲಿಂದ ಗಂಗಮ್ಮ ಏಳುತ್ತಾಳೆ. ಇನ್ನೊಂದು ಘಟನೆಯೂ ಕವಿಯ ಕಲ್ಪನೆ- ಗಂಗಮ್ಮ ಎಂದರೆ ಗಂಗಾನದಿಯ ದೇವತೆ ಅಥವಾ ನೀರಿನ ಅಧಿದೇವತೆ ಎಂಬುದರಿಂದ. ಸತ್ಯಮ್ಮ ಒಬ್ಬಳೇ ಹೋದಾಗ ನೀರಿಲ್ಲದೆ ಬರಿದಾದ ಕೆರೆಗಳು, ಗಂಗಮ್ಮನ ಜೊತೆಯಲ್ಲಿ ಹೋದಾಗ ನೀರಿನಿಂದ ತುಂಬುತ್ತವೆ, ಹೀಗೆ ಒಂದೇ ಕಥಾವಸ್ತುವಿನ ಎರಡು ಪಾಡ್ದನಗಳು ಚಿತ್ರಣಗಳಲ್ಲಿ ವ್ಯತ್ಯಾಸಗಳನ್ನು ಪಡೆದಿವೆ.

ಈ ಎರಡು ಪಾಠಗಳಲ್ಲಿ ಭಾಷೆಯ ವ್ಯತ್ತಾಸವೂ ಸುಸ್ಪಷ್ಟವಾಗಿದೆ. ಶರತೊಂಜಿ (ಪ) -ಸಾರತ್ತೊಂಜಿ (ಅ). (ಪ) ಪಾಠದಲ್ಲಿ ಸಾಮಾನ್ಯ ಗ್ರಾಮ್ಯ ತುಳುಭಾಷೆಯಿದ್ದರೆ, (ಅ) ಪಾಠದಲ್ಲಿ ಭೂತದ ಪಾಡ್ದನದ ಶೈಲಿಯ ತುಳುಭಾಷೆ ಇದೆ. ಹೇಳುವ ವ್ಯಕ್ತಿಗಳಿಗನುಗುಣವಾಗಿರಬಹುದು. (ಪ) ಪಾಠದಲ್ಲಿ ಭೂತದ ಪಾಡ್ದನದ ದಾಟಿಯ ಸ್ವಲ್ಪಾಂಶವೂ ಕಂಡುಬರುವುದಿಲ್ಲ. (ಅ) ಪಾಠದ ಭಾಷೆಯ ಶೈಲಿಯನ್ನು ಕೆಲವೆಡೆ ಗುರುತಿಸಬಹುದು, ‘ಕಾಲ್ಯ ಕಡಸುಂಡು ವೇಳ್ಯ ಪೋಪುಂಡು’, ‘ಏರ್‌ಯ ಪೊಣ್ಣುಲೆ’,‘ಏಲ್‌ ಇರ್ಲ್‌ದ ಎಣ್ಮ ಪಗೆಲ್‌ದ ತಡವು ತಡಯೆರ್‌ ದೇವರ್‌’, ‘ಏರ್‌ಯ ಗಂಗಮ್ಮ ದೇವಿಯ ಕೇಂಡನ’, ‘ಸದ್‌ಮಾಲ್‌ ಪೋಣ್ಣುಲು’, ‘ಎಲ್ಲೆ ಕರಿದ್‌ಎಲ್ಲಂಜಿ ಬರ್ಪ’ ಅಯ್ಯಯ್ಯೊ ದೇವರೆ ಆಸೆ ಮೋಸ ಮನ್ತಾರೆ, ಮೋಸ ಗಾತಕ ಮನ್ತಾರೆ ಎಂದ್‌ದ್‌ದುಕ್ಕಿ ದುಕ್ಕಿತ್‌ ಬುಳಿಪರ್‌’. ಮಿತ್ತ್‌ಮಿರಿ ಲೋಕೊಗು ಗಂಗಮ್ಮ ದೇವಿಲ ಶ್ರೀಕೃಷ್ಣ ದೇವೇರ್‌ಲ ಒಪ್ಪತಪ್ಪ ಪೋತೆರ್‌’ ಇಂತಹ ಕೆಲವು ಪ್ರಯೋಗಗಳು ಭೂತದ ಪಾಡ್ದನದ ಶೈಲಿಯನ್ನು ತೋರ್ಪಡಿಸುತ್ತವೆ. ಒಟ್ಟಿನಲ್ಲಿ (ಪ) ಪಾಠಕ್ಕಿಂತ (ಅ) ಪಾಠವು ಪಾಡ್ದನದ ಗತ್ತನ್ನು ಪಡೆದಿದೆ.

ಕೃಷ್ಣ ದೇವರ ಪಾತ್ರದ ಕಲ್ಪನೆ ಪಾಡ್ದನಗಳಲ್ಲಿ ಅಥವಾ ಜನಪದ ಕವಿಗಳಲ್ಲಿ ಪುರಾಣದ ಒಂದಂಶದಲ್ಲಿ ಮಾತ್ರ ಇದೆ. ಕೃಷ್ಣದೇವರು ಸ್ತ್ರೀಯರ ಹುಚ್ಚು ಇರುವವರು. ಕಪಟದಿಂದ ಸ್ತ್ರೀಯರನ್ನು ತನ್ನ ಬಲೆಗೆ ಹಾಕಿಕೊಂಡವರು ಎಂದು. ಈ ವಿಚಾರಕ್ಕೆ ಮೇಲಿನ ಮೂರು ಪಾಡ್ದನಗಳ ಜೊತೆಯಲ್ಲಿ ‘ಕಲ್ಲುರ್ಟಿ’ ಪಾಡ್ದನವೂ ಆಧಾರವಾಗಿದೆ. ತನ್ನ ಅಣ್ಣನನ್ನು ಹುಡುಕುತ್ತಾ ಉಡುಪಿಗೆ ಬಂದ ಸತ್ಯಮ್ಮಳಿಗೆ, ಅವಳ ಅಣ್ಣನ ರೂಪವನ್ನು ತಾಳಿ ಅಪ್ಪಿ ಹಿಡಿಯಲು ಬರುತ್ತಾರೆ ಎಂಬ ವಿವರಣೆಯಿದೆ. ಕೃಷ್ಣ ದೇವರ ಲೀಲೆಗೆ ಜನಪದರು ತಮ್ಮದೇ ಆದ ರೂಪವನ್ನು ಕೊಡುತ್ತಾರೆ.

‘ಸಿರಿ ಸೀತಾಮು ದೆಯ್ಯಾರ್’ ಪಾಡ್ದನವು ಸೀತಾಸ್ವಯಂವರದ ಕುರಿತಾಗಿರುವ ಪಾಡ್ದನ. ಇಲ್ಲಿ ಜನಪದ ಕವಿಯ ಸ್ವಕಪೋಲ ಕಲ್ಪನೆಯು ವಿಚಿತ್ರವಾಗಿದೆ. ಸೀತೆ ಜನಕರಾಜನ ಮಗಳಾದುದು ಪುರಾಣ ಹೇಳಿದಂತೆ ಅಲ್ಲ. ‘ಪಡ್ಡೆಯಿ ಮಾಮೇರಿ ಗಂಗೆ’ಯಲ್ಲಿ ಒಬ್ಬ ಮರಕಲ ಗಂಡಸು ‘ಜಿಡಪಾಲೆ ಒಯಿಪು’ ತರಲು ಹೋದಾಗ ಒಂದು ದೇವದಾರೆಯ ಪೆಟ್ಟಿಗೆ ಸಿಗುತ್ತದೆ. ಪೆಟ್ಟಿಗೆಯನ್ನು ಅರಮನೆಯಲ್ಲಿ ತೆಗೆದು ನೋಡಿದಾಗ ಏಳೂವರೆ ವರ್ಷದ ಹುಡುಗಿಯ ಉದಯವಾಯಿತು. ‘ಸೀತಾಮು ದೆಯ್ಯಾರ್’ ಎಂದು ಹೆಸರಿಟ್ಟು ಸಾಕುತ್ತಾರೆ. (ಇದೇ ಘಟನೆಯು ತುಳುನಾಡಿನ ಮರಾಠಿಗರು ಹಾಡುವ ರಾಮಾಯಣದ ಹಾಡಿನಲ್ಲಿ ಸುಂದರವಾಗಿ ವರ್ಣಿತವಾಗಿದೆ.) ಒಂದು ದಿವಸ ಜನಕರಾಯ ಮುನಿಸ್ವಾಮಿಯ ಸಾಯಂಕಾಲದ ಪೂಜೆಗೆ ಒಂದು ಗರುಡ ಪಕ್ಷಿಯು ತೊಂದರೆ ಕೊಡಲು ಪ್ರಾರಂಭಿಸುತ್ತದೆ. ಏನು ಕಲಿಯುವ ಮಾಯೆಯೋ ಎಂದು ಗರುಡ ಪಕ್ಷಿಯನ್ನು ಕೊಂದವರಿಗೆ ಸಿರಿಸೀತಾಮು ದೇವಿಯನ್ನು ಧರ್ಮದಾರೆಯೆರೆದು ಕೊಡುವೆನೆಂದು ಸಾರುತ್ತಾನೆ. ರಾವಣ ಬಂದು ಪಕ್ಷಿಗೆ ಹೊಡೆದಾಗ ಪಕ್ಷಿಯೇ ಬಂದು ರಾವಣನ ತೋಳಿಗೆ ಚುಚ್ಚುತ್ತದೆ. ಅಷ್ಟು ಹೊತ್ತಿಗೆ ಅಯೋಧ್ಯೆಯ ಲಕ್ಷ್ಮಣ ದೇವರು ಬಂದು ಬಿಲ್ಲುಬಾಣ ಹಿಡಿದು ಹೊಡೆದಾಗ ಬಲದ ರೆಕ್ಕೆ ತುಂಡಾಗಿ ಬೀಳುತ್ತದೆ. ಅಷ್ಟರಲ್ಲಿ ಜನಕರಾಯರು ಲಕ್ಷ್ಮಣನಿಗೆ ಧರ್ಮಧಾರೆಯೆರೆದು ಕೊಡುವೆನೆಂದು ಕರೆಯುತ್ತಾರೆ. ಆದರೆ ಲಕ್ಷ್ಮಣನು, ತನಗೆ ಅಣ್ಣ ಸಿರಿರಾಮ ದೇವರು ಇದ್ದಾರೆ. ಅವರನ್ನು ಕಳುಹಿಸುತ್ತೇನೆ ಎಂದು ಅಯೋಧ್ಯೆಗೆ ಬಂದು ರಾಮದೇವರನ್ನು ಕರೆದುಕೊಂಡು ಹೋಗುತ್ತಾನೆ. ಸಿರಿರಾಮ ದೇವರಿಗೂ, ಸಿರಿಸೀತಾಮು ದೇವಿಗೂ ಮದುವೆ ನೆರವೇರುತ್ತದೆ. ಪುರಾಣದ ಕತೆಗಿಂತ ತೀರ ಭಿನ್ನವಾದ ಕತೆ. ಲಕ್ಷ್ಮಣನ ಶೌರ್ಯ, ತ್ಯಾಗ ಮನೋಭಾವ, ಭ್ರಾತೃ ಪ್ರೇಮಗಳು ಸೂಚಿತವಾಗಿವೆ. ಭಾಷೆ ಮತ್ತು ವರ್ಣನೆಗಳ ವಿಶೇಷ ಸೌಂದರ್ಯವನ್ನು ಈ ಪಾಡ್ದನದಲ್ಲಿ ಗುರುತಿಸಲಾರೆವು.

ಪೌರಾಣಿಕ ಪಾಡ್ದನಗಳಲ್ಲಿ ಮಹತ್ವದ ಸ್ಥಾನವನ್ನು ಪಡೆಯುವ ಪಾಡ್ಡನವೆಂದರೆ ‘ಬಲೀಂದ್ರೆ’. ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಗಮನಾರ್ಹವಾದ ಪಾಡ್ದನವಾಗಿದೆ. ‘ತುಳುವಾಲ ಬಲಿಯೇಂದ್ರೆ’ ಎನ್ನುವ ಪಾಡ್ದನವನ್ನು ನಂದೊಳ್ಗೆ ಶೀನಪ್ಪ ಹೆಗ್ಗಡೆಯವರು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಸವಿಸ್ತಾರವಾದ ವರ್ಣನೆ, ವಿವರಣೆಗಳಿಂದ ಕತೆಯು ನಿಧಾನಗತಿಯಲ್ಲಿ ಸಾಗುತ್ತದೆ. ವಿಷ್ಣುವು ವಾಮನಾವತಾರದಲ್ಲಿ ಬಲಿ ಚಕ್ರವರ್ತಿಯಿಂದ ಮೂರು ಹೆಜ್ಜೆ ದಾನ ಪಡೆಯುವ, ದೀಪಾವಳಿ ಹಬ್ಬಕ್ಕೆ ಹಿನ್ನೆಲೆಯಾಗಿರುವ ಕತೆಯೇ ಇಲ್ಲಿಯ ವಸ್ತು. ಪಾಡ್ಡನಗಳ ದಾಟಿಯಲ್ಲೇ ಇದೆ. ಇದನ್ನು ದೀಪಾವಳಿ ಹಬ್ಬದ ಮೊದಲಿನ ಕೆಲವು ದಿನಗಳಲ್ಲಿ ಪ್ರತಿಯೊಂದು ಮನೆಗೆ ಹೋಗಿ ಹಾಡುತ್ತಾರೆ. (ನಲ್ಕೆಯವರು, ಪಂಬದರು? ಪರವರು?) ಬಲೀಂದ್ರನ ವ್ಯಕ್ತಿತ್ವದ ಹಿರಿಮೆ, ತ್ಯಾಗಗಳ ಕತೆಯನ್ನು ಜನರ ಕಿವಿಗಳಲ್ಲಿ ತುಂಬುತ್ತಾರೆ. ಈ ಪಾಡ್ದನದ ಎರಡು ಪಾಠಗಳು ಲಭ್ಯವಾಗಿವೆ. ಒಂದು ಮೇಲೆ ಹೇಳಿರುವ ‘ತುಳುವಾಲ ಬಲಿಯೇಂದ್ರ’ ಇನ್ನೊಂದು ನಾನು ಸಂಗ್ರಹಿಸಿದ ‘ಬಲೀಂದ್ರೆ’ ಪಾಡ್ಡನಗಳು. ನಾನು ಸಂಗ್ರಹಿಸಿರುವ ಪಾಠವು ದೀರ್ಘವಾಗಿಲ್ಲ. ಕೆಲವಂಶಗಳಲ್ಲಿ ವ್ಯತ್ಯಾಸಗಳಿದ್ದರೂ ಇಲ್ಲಿ ‘ತುಳುವಾಲ ಬಲಿಯೇಂದ್ರೆ’ ಎನ್ನುವ ಪಾಠವನ್ನೇ ಪ್ರಧಾನವಾಗಿ ಇಟ್ಟುಕೊಂಡಿದ್ದೇನೆ. ಉಚಿತವೆಂದು ಕಂಡಾಗ ನನ್ನ ಸಂಗ್ರಹವನ್ನು ಪ್ರಸ್ತಾಪಿಸಿದ್ದೇನೆ.

ಜನಪದ ಕವಿಯು ತನ್ನ ಕಲ್ಪನೆಯಿಂದ ಹೊಸ ರೀತಿಯಲ್ಲಿ ಕತೆಯನ್ನು ನೇಯ್ದುಕೊಂಡು ಹೋಗುತ್ತಾನೆ. ಇಲ್ಲಿಯ ಬಲೀಂದ್ರನು ಉತ್ತರ ಘಟ್ಟದಿಂದ ದಕ್ಷಿಣದ ಸಮುದ್ರದವರೆಗೆ (ಬಡಕಾಯಿ ಗಟ್ಟಡ್ದ್ ತೆನ್ಕಾಯಿ ಕಡಲ್ ಮುಟ) ರಾಜ್ಯವಾಳುತ್ತಿದ್ದನು. (ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಎಂದೂ ಅರ್ಥವಾಗುತ್ತದೆ.) ಬಲೀಂದ್ರನು ಆ ಕಾಲದ ಅರಸನಾಗಿದ್ದನು. ಅವನ ವೈಭವೆಲ್ಲ ತುಳುನಾಡಿನ ಅರಸರ ವೈಭವವನ್ನೇ ಪ್ರತಿನಿಧಿಸುತ್ತದೆ. ಪಾಡ್ದನದ ಆರಂಭದಲ್ಲಿ ಬಲೀಂದ್ರನು ದಿಗ್ವಿಜಯಕ್ಕೆ ಹೊರಡುವ ವರ್ಣನೆಯಿದೆ. ಬಲೀಂದ್ರನ ದಿಗ್ವಿಜಯದ ಅಬ್ಬರವನ್ನು ನೋಡಿ ದೇವತೆಗಳು ಮತ್ಸರದಿಂದ ಕಲಿಯನ್ನು ಅವನ ರಾಜ್ಯಕ್ಕೆ ಕಳುಹಿಸುವುದು ಜನಪದರ ಕಲ್ಪನೆ. ಇಲ್ಲಿಯ ಕಲಿಯು ಪುರಾಣದ ಕಲಿಯ ಸ್ವರೂಪವನ್ನೇ ಹೋಲುತ್ತಾನೆ. ಆದರೆ ಜನಪದ ಕವಿ ತ್ರೇತಾಯುಗದಲ್ಲಿ ನಡೆದ ಕತೆಗೆ ಕಲಿಯನ್ನು ಪ್ರವೇಶಿಸುತ್ತಾನೆ. ಡೊಂಕು ಮೂಗಿನ, ಕುಪ್ಪುಳು ಕಣ್ಣಿನ, ಮೋಂಟು ಕಾಲಿನ, ಚೊಟ್ಟ ಕೈಯ ಕಲಿ, ಬಲೀಂದ್ರನ ರಾಜ್ಯಕ್ಕೆ ಬಂದು, ಅನ್ಯಾಯವನ್ನು ಮಾಡಿದನು. ಈ ಕಲಿಯನ್ನು ಸಂಕೋಲೆಗಳಿಂದ ಬಲೀಂದ್ರನು ಕಟ್ಟಿಹಾಕಿದನು. ದೇವತೆಗಳಿಂದಾದ ಉಪದ್ರವವನ್ನು ತಿಳಿದು, ದೇವತೆಗಳೊಡನೆ ಯುದ್ಧ ಮಾಡಿ, ಅವರನ್ನು ದಿಕ್ಕು ದಿಕ್ಕಿಗೆ ಓಡಿಸಿದನು. ದೇವತೆಗಳು ನಾಲ್ಕು ಕೈಯ ನಾರಾಯಣ ದೇವರನ್ನು ಮೊರೆಹೋದರು. ನಾರಾಯಣ ದೇವರು ತಕ್ಕ ಪರಿಹಾರವನ್ನೇ ಕೈಕೊಳ್ಳಬೇಕೆಂದು ವಾಮನಾವತಾರಿಯಾಗಿ ಬಂದರು.

ವಾಮನ ಹುಟ್ಟಿದ ರೀತಿಯನ್ನು ವರ್ಣಿಸಿದುದು ವಿಶಿಷ್ಟವಾಗಿದೆ – ‘ಕರಿಮಿನಾ ಸಾಲೆಯಲ್ಲಿ, ಹೂವಿನ ಹಿತ್ತಲಿನಲ್ಲಿ, ತಾವರೆಯ ಕೆರೆಯಲ್ಲಿ, ಸಾಕಿದ ಕುಲದಲ್ಲಿ, ಬಿಳಿಯ ತಾವರೆಯ ಹೂವಿನಲ್ಲಿ ಆರು ಎಸಳು, ಮೂರು ಕುಸುಮದಲ್ಲಿ ಬ್ರಹ್ಮಚಾರಿ ವಾಮನ ಉದಯವಾದರು’ (ಕರಿ ಮಿನಾ ಸಾಲೆಡ್, ಪೂವಿನಾ ಬಿತ್ತ್‌ಲ್‌ಡ್‌, ಮುತ್ತಿ ತಾವರೆನ ಕಿರೆಟ್‌, ಪಾಲಿಕುಲೊಟ್‌, ಬೊಲಿಯ ತಾವರೆ ಪೂಟು, ಆಜಿ ಎಸಲ್‌ಡ್‌ಮೂಜಿ ಕುಸುಮೊಡು, ಉದಿಯಕೊಂದು ಬೆಂದೆರ್‌ಗೇ)‘ಕರಿಮಿನಾ ಸಾಲೆ’ ಎಂಬ ಹೆಸರು ‘ಕೋಟಿ-ಚೆನ್ನಯ’ ಮತ್ತು ‘ಒಡ್ತೆ ಪಂಜುರ್ಲಿ’ ಪಾಡ್ದನಗಳಲ್ಲಿಯೂ ಬಂದಿದೆ.

ಅನ್ನದಾನ, ವಸ್ತ್ರದಾನ ಮೊದಲಾದ ದಾನಗಳನ್ನು, ಕರ್ಮಕ್ಕೆ ಹೋಮ, ಧರ್ಮಕ್ಕೆ ನೇಮಗಳನ್ನು ‘ನಾಮಂದ’ ನದೀ ತೀರದಲ್ಲಿ ಮಾಡುತ್ತಿರುವ ಬಲೀಂದ್ರನಲ್ಲಿಗೆ ಬಂದರು ವಾಮನ ದೇವರು. ಬೇರೆ ಯಾವ ದಾವನ್ನು ಬಯಸದೆ, ಮೂರು ಹೆಜ್ಜೆ ಭೂಮಿದಾನವನ್ನು ಕೇಳಿದರು. ಜೀವನದಲ್ಲಿ ಶ್ರೇಷ್ಠ ವ್ಯಕ್ತಿಯು ಮಾಡಿಸುವ ವಿಶೇಷ ಆಚರಣೆಗಳನ್ನು, ನಮ್ಮ ಪರಂಪರೆಯಿಂದ ಬಂದ ಧರ್ಮವನ್ನು ಉಳಿಸುತ್ತೇನೆಂಬ ಭರವಸೆ ಕೊಟ್ಟೇ ವಾಮನ ದೇವರು ಮೂರು ಹೆಜ್ಜೆ ಭೂದಾನವನ್ನು ಕೇಳಿದರು. ಶುಕ್ರಾಚಾರ್ಯರ ಮಾತು ಕೇಳದೆ ಬಲಿಯು ನೀರೆರೆದು ದಾನವನ್ನು ಕೊಟ್ಟನು. ಶುಕ್ರಾಚಾರ್ಯರ ಮಾತು ಕೇಳದೆ ಬಲಿಯು ನೀರೆರೆದು ದಾನವನ್ನು ಕೊಟ್ಟನು. ಶುಕ್ರಾಚಾರ್ಯರ ಕಣ್ಣು ಹೋಗುವ ಪ್ರಸಂಗವೂ ಸ್ವಾರಸ್ಯವಾಗಿದೆ. ದಾನವನ್ನು ಪಡೆದ ಬಳಿಕ ಮೂರು ಹೆಜ್ಜೆಗಳಿಂದ ಮೂರು ಲೋಕಗಳನ್ನು ಅಳೆಯುವ ಚಿತ್ರವು ಭವ್ಯವಾಗಿದೆ. ತನ್ನದೇ ಆದ ಕಲ್ಪನೆಯ ವರ್ಣನೆಯಿದೆ.

‘ಮೂರು ಅಚ್ಚರದ (ಅಕ್ಷರದ) ಮಾಣಿ ಮಾಯವಾಗಿ, ಆರು ಅಚ್ಚರದ ಮಾಣಿಯಾದರು. ಮಾಣಿಯವರ ತಲೆ, ಮೇಲಿನ ಲೋಕವನ್ನು ದಾಟಿತು. ಬಲದ ಕೈ ಮೂಡು ಕಡಲು ದಾಟಿತು. ಎಡದ ಕೈ ಪಡುಕಡಲು ದಾಟಿತು. ನಿಂತ ಹೆಜ್ಜೆ ತೆಂಕು ಕಡಲಿನಿಂದ ಬಡಗು ಕಡಲನ್ನು ದಾಟಿತಂತೆ… ಮಾಣಿಯವರ ಕಾಲಿನಿಂದ ತಲೆಯವರೆಗೆ ನೋಡುವಾಗ ಭೂಮಿಯ ಪಾತಾಳದ ಅಡಿ, ಮೇಲಿನ ಆಕಾಶ ಲೋಕದಲ್ಲಿ ಇರುವಂತಹ ದೈವದೇವರು, ರಾಹು ರಕ್ಕಸರು, ಆನೆ ಕುದುರೆ, ಹಾವು ಕಂದೊಡಿ, ಇಲಿ ಹೆಗ್ಗಣ, ಮೊಸಳೆಗಳು, ಮಂಗ ಸಿಂಗ ಎಲ್ಲವೂ ಕಂಡುಬಂತು. ನರಸಾಮಾನ್ಯರಿಗೆ ನೋಡಲು ಕಣ್ಣು ಕಾಣಲಿಲ್ಲವಂತೆ. ಜನಸಾಮಾನ್ಯರು ತಲೆತಿರುಹಿ ಮತಿಗೆಟ್ಟು ಬಿದ್ದರಂಥೆ’ (ಮೂಜಿ ಅಚ್ಚರದ ಮಾಣಿ ಮಾಯಾದ್‌ಆಜಿ ಅಚ್ಚರದ ಮಾಣಿ ಆಯೆರ್. ಮಾಣಿಗುಳೆ ತರೆ ಮೇಗ್‌ಲೋಕ ಕಡತ್ತ್ಂಡ್, ಬಲತ ಕೈ ಮುಡಾಯಿ ಕಡಲ್, ಎಡತ ಕೈ ಪಡ್ಡಾಯಿ ಕಡಲ್‌ಕಡತ್ತ್ಂಡ್. ಉಂತ್‌ದೀ ಪೆಜ್ಜ ತೆನ್‌ಕಾಯಿ ಕಡಲ್‌ಡ್ದ್‌ಬಡಕಾಯಿ ಕಡಲ್‌ಗ್‌ಮುಟ್ಟುಂಡ್‌ಗೇ… ಮಾಣಿಗುಲೆ ಕಾರ್‌ಡ್ದ್‌ತರೆ ಮುಟ ತೂನಗ ಭೂಮಿ ಪಾತಾಲ ಆದಿ, ಅಕ್ಕಸ ಮೇಗ್ ಮೇಲೊಕೊಡು ಉಪ್ಪಿಂಚಿ ದೆಯ್ಯದೇವೆರ್, ರಾವು ರಕ್ಕಸೆ, ಬೂತ ಪಿಶ್ವಾಚಿ, ಪಕ್ಕಿಪರಣೆ, ಪಿಲಿಬಲಿಪೆ, ಕೈಕಂಜಿ, ಆನೆ ಕುದುರೆ, ಮರಿ ಕಂದೊಡಿ, ಎಲಿಪೆರ್ಗುಡೆ, ನೆಗರ್ ಮುದಲೆ, ಉರೆ ಕಡಮೆ, ಮಂಗೆ ಸಿಂಗೆ ಮಾತ ತೋಜಿದ್ ಬತ್ತ್ಂಡ್‌ಗೇ. ತೂಪಿಂಚಿ ನರಮಾನ್ಯರೆಗ್‌ತೂವರೆ ಕಣ್ ತೋಜಿಜಿಗೇ. ಜನಮಾನಿ ತರೆಗಿರಿದ್‌ಮತಿಗೆಟ್ಟ್‌ದ್‌ಮಗ್‌ರ್‌ಯೆರ್‌ಗೇ.) ಭವ್ಯ ಚಿತ್ರಣವನ್ನು ಕೊಡುವಾಗ ಮಾನವ ಲೋಕದ ಕೆಲವಂಶಗಳನ್ನು ಮರೆಯದಿರುವುದ ಜನಪದ ಕಾವ್ಯದ ವಸ್ತುನಿರೂಪಣೆಯ ವೈಶಿಷ್ಟ್ಯವಾಗಿದೆ.

ಬಲೀಂದ್ರನು ಪಾತಾಳ ಲೋಕಕ್ಕೆ ಹೋಗುವಾಗ ಹಿಂತಿರುಗಿ ನೋಡಿದನಂತೆ. ಬಲಿಯ ಮೋಹವನ್ನು ನೋಡಿ, ವರ್ಷಕ್ಕೊಂದು ಬಾರಿ ಭೂಮಿಗೆ ಬಂದು ಹೋಗು ಎಂದರು. ಯಾವಾಗ ಎಂದರೆ – ‘ಕಾಲಾದಿಯಿಂದ ಕಾಲಾದಿಗೆ, ವರ್ಷದ ಹನ್ನೆರಡು ತಿಂಗಳುಗಳಲ್ಲಿ ಆಟಿಯ ಅಮಾವಾಸ್ಯೆ, ಸೋಣ ಸಂಕ್ರಾಂತಿ, ಬೊಂತೆಲ್ (ತುಲಾ) ತಿಂಗಳಿನ ಕೊಡಿ ಹಬ್ಬಕ್ಕೆ ನಿನ್ನ ಬೆಳೆಸಲೆ, ದನಕರು, ನೊಗ ನಾಯೆರ್, ಕೊಟ್ಟು, ಗುದ್ದಲಿ, ಗೆರಸೆ ಬಟ್ಟಿ, ಚಿನ್ನ ಬೆಳ್ಳಿ ಬದುಕಿನ ಭಾಗ್ಯಗಳನ್ನು ಹೂ ಹಿಂಗಾರಗಳಲ್ಲಿ ಶೃಂಗಾರ ಮಾಡಿ, ದೂಪ ದೀಪದಲ್ಲಿ ಮಕ್ಕಳನ್ನು ಕರೆದು ಪೂಜೆ ಮಾಡಿ, ‘ಕಟ್ಟಪುಣಿ’ ಯನ್ನು ಪೂಸಿ, ಮನೆ ಮನೆಯ ಗದ್ದೆಗಳಲ್ಲಿ ದೀಪ, ಮನೆ ಬಾಗಿಲಿನಲ್ಲಿ ದೀಪದ ಮರ (ಬಿಲೆಕಿಮರ), ದೈವಸ್ಥಾನ ಮೊದಲಾದೆಡೆ ದೀಪದ ಕಂಪಬ, ಏಳುನೆಲೆ ದೀಪದ ಆರು ದಿವಸದ ಬಲಿ, ಮೂರು ದಿವಸದ ಪೊಲಿ’ ಎಂದು ಬಲೀಂದ್ರನಿಗೆ ಪೂಜೆ ಮಾಡುವಾಗ, ಈ ವಿವರಣೆಯು ನಮ್ಮ ಸಂಕ್ಕೃತಿಯನ್ನು, ವಿಶೇಷ ಆಚರಣೆಯ ಕ್ರಮವನ್ನು, ಅದರ ಪರಂಪರೆಯನ್ನು ವ್ಯಕ್ತಗೊಳಿಸುವುದು.

ಇನ್ನು ಬಲೀಂದ್ರ ಭೂಮಿಯ ಅರಸನಾಗುವುದು ಉಪ್ಪು ಕರ್ಪೂರವಾದಾಗ, ಉದ್ದು ಮದ್ದಳೆಯಾದಾಗ, ಎಂದು ಅಸಾಧ್ಯವಾದ, ಅಸಂಭವವಾದ ಹಲವು ಚಿತ್ರಗಳನ್ನು ಕೊಡುತ್ತಾನೆ.

ನಾನು ಸಂಗ್ರಹಿಸಿದ ಪಾಠವು (ಕ.) ಶೀನಪ್ಪ ಹೆಗ್ಗಡೆಯವರ ಪಾಠದಷ್ಟು (ನ) ದೀರ್ಘವಾಗಿಲ್ಲ. ಕೆಲವು ವ್ಯತ್ಯಾಸಗಳೂ ಇವೆ. ಮೇಲಿನ ಕತೆಯು (ನ) ಪಾಠದಲ್ಲಿರುವುದು. (ಕ) ಪಾಠದಲ್ಲಿ ಮೂವರು ಮಾಣಿಗಳು ಬಲೀಂದ್ರನಲ್ಲಿಗೆ ಬಂದರು ಎಂದಿದೆ. ಮೂವರು ಮಾಣಿಗಳ ಹೆಸರೇನೆಂಬುದು ಇಲ್ಲ. ಪ್ರಾಯಶಃ ‘ಮೂರು ಅಚ್ಚರದ’ ಮಾಣಿಗಳು ಎಂಬುದರ ಬದಲು ಮೂವರು ಮಾಣಿಗಳು ಎಂದು ಹೇಳಿರಬಹುದು. ಬಂದ ಮಾಣಿಗಳಿಗೆ ‘ಇವತ್ತಿನ ದಿವಸ ಹೋಗಿ ನಾಳೆಯಷ್ಟು ದಿವಸಕ್ಕೆ ಬನ್ನಿ’ (ಇನಿತಾತ್ ದಿನೊಕು ಪೋಲೆ ಮಾಣಿಗುಲೆ ಎಲ್ಲೆದಾತ್‌ದಿನೊಕು ಬಲ್ಲೆ) ಎಂದು ಹೇಳಿ ವಾಸುಪಂತ ಪತ್ರಕಾರರನ್ನು ಕೊಟ್ಟನು. ಈ ಘಟನೆಯಿಂದಾಗಿ ಬಲಿ ಚಕ್ರವರ್ತಿಯು ಒಂದು ದಿವಸಕ್ಕೆ ಮಾತ್ರವಲ್ಲ ಇದ್ದಷ್ಟು ಕಾಲವೂ ದಾನ ಮಾಡಲು ನಿಶ್ಚಯಿಸಿದ್ದ ಎನ್ನುವುದು ವ್ಯಕ್ತವಾಗುತ್ತದೆ. (ಕ) ಪಾಠದಲ್ಲಿ ಭೂಮಿಯನ್ನು ಅಳೆಯುವ ಭವ್ಯ ಚಿತ್ರವಿಲ್ಲ. ‘ಆಕಾಶ ಅರ್ಧ ಹೆಜ್ಜೆಯಾಯ್ತು. ಭೂಮಿ ಒಂದೂವರೆ ಹೆಜ್ಜೆ ಆಯ್ತು’ ಎಂದು ಇರುವುದು. ಇನ್ನೊಂದು ಹೆಜ್ಜೆಯನ್ನು ತನ್ನ ಎದೆಯಿಂದ ಪಡೆದುಕೊಳ್ಳಿ ಎಂದು ಬಲೀಂದ್ರ ಹೇಳಿದಾಗ ‘ಪುಣ್ಯ ಪುರುಷನ ಎದೆಗೆ ಪಾದ ಊರುವುದಿಲ್ಲ. ಪಾಪ ಹೊರುವುದಿಲ್ಲ’ (ಪುಣ್ಯ ಪುರ್ಸನ ತಿಗಲೆಗ್‌ಪಾದ ಊರಯೆ, ಪಾಪ ತುಂಬಯೆ) ಎಂದು ಬಲಿಯನ್ನು ಪಾತಾಳಕ್ಕೆ ಕಳುಹಿಸಿಕೊಟ್ಟರು. ಬಲೀಂದ್ರನ ಬಗ್ಗೆ ಗೌರವ ಮೂಡುವ ಸಂದರ್ಭವನ್ನು ಚಿತ್ರಿಸುವಾಗ, ಜನಪದರಿಗೆ ಬಲೀಂದ್ರನಲ್ಲಿರುವ ಗೌರವ ಎಂತಹದ್ದೆಂದು ತಿಳಿಯುವುದು. ಬಲೀಂದ್ರ ಹಿಂದೆ ತಿರುಗಿ ನೋಡಿದಾಗ ವರ್ಷಕ್ಕೆ ಒಂದು ಸಾರಿ ಭೂಲೋಕಕ್ಕೆ ಬಂದು ಹೋಗು ಎಂದು ವಾಮನ ಹೇಳಿದರು. ಆದರೆ ಬಲೀಂದ್ರ ಕೇಳುವುದಿಲ್ಲ. ತಾನು ಬರಬೇಕಾದರೆ ಉಪ್ಪು ಕರ್ಪೂರವಾಗಬೇಕು, ಅಂಗಳ ಪಾದೆಯಾಗಬೇಕು, ಕಾರ್ಕಳದ ಮೈದಾನು ಅಡಿಮೇಲಾಗಬೇಕು ಎಂದು ಮೊದಲಾದ ಶರ್ತಗಳನ್ನು ಹಾಕುತ್ತಾನೆ. ಇದು ಜನರ ನಂಬಿಕೆ ಆಚರಣೆಗೆ ದೂರವಾಗಿರುವುದರಿಂದ ಪಾಠದೋಷವಾಗುತ್ತದೆ. (ನ) ಪಾಠದಲ್ಲಿರುವಂತೆ ತಿದ್ದಿಕೊಳ್ಳುವುದು ಯೋಗ್ಯವಾದುದು. ಈಗಲೂ ಆಚರಣೆಯಲ್ಲಿರುವ ಒಂದು ಪದ್ಧತಿಯ ವಿವರಣೆ (ಕ) ಪಾಠದಲ್ಲಿ ದೊರೆಯುತ್ತದೆ. ಬಲೀಂದ್ರನು ಬಂದು ಬಂದು ಮೂಲ್ಕಿಯ ಹೊಳೆ ದಾಟುವಾಗ ಬೆಳಗಾಯಿತಂತೆ. ಹಾಗಾಗಿ ಮೂಲ್ಕಿ ಹೊಳೆಯ ತೆಂಕುಬದಿಯವರು ಭೂಮಿಗೆ ದೀಪ ಇಡುವುದು, ಬಡಗು ಬದಿಯವರು ದೀಪ ಇಡುವುದರ ಮರುದಿನ.

(ಕ) ಪಾಠದಲ್ಲಿ ಒಂದು ವರ್ಣನೆಯು ತುಂಬ ಸುಂದರವಾಗಿದೆ. ಕಾವ್ಯಾತ್ಮಕವಾಗಿದೆ. ಪಾಡ್ದನದ ಶೈಲಿಯನ್ನು ಪ್ರತಿನಿಧಿಸುತ್ತದೆ – ‘ಬೆಳ್ಳಿ ಮೂಡುವ ಬೆಳಗಿಗೆ ಕೋಳಿಯ ಕೂಗಿಗೆ, ಬೆಳ್ಳನೆ ಎಮ್ಮೆಗಳು ಸ್ವರ ಕೊಡುವ ಮೊದಲು, ಸಗುಮಾಲ್ ಹೆಣ್ಣು ಕಸಬರಿಕೆ ಹಿಡಿದು ಕಸ ಗುಡಿಸುವ ಮೊದಲು, ಬಲೀಂದ್ರನ ಅರಮನೆಗೆ ಮೂವರು ಮಾಣಿಗಳು ಬಂದರು. (ಬೊಲ್ಮೊಡು ಬೊಲ್ಪುಗು, ಕೋರಿದ ಕಿಲೆಪುಗು, ಬೊಲ್ಲಿಯೆರ್ಮಾಲ್ ಉಂತುವೆರ್ ಮೂವೆರ್ ಮಾಣಿಗುಲು) ಬೆಳಗಾಗುವುದರ ಚಿತ್ರವನ್ನು ಕೆಲವು ಪರಿಸರಗಳ ಕ್ರಿಯೆಗಳ ನಿದರ್ಶನದಿಂದ ವಾಚಕರ ಮುಂದಿಡಯವುದು ಪಾಡ್ದನಗಳಲ್ಲಿ ಕೆಲವೆಡೆ ಕಾಣುತ್ತೇವೆ.

(ಕ) ಪಾಠದ ಕತೆಯು ತೀವ್ರವಾಗಿದೆ. ಪಾಡ್ದನದ ಶೈಲಿಯ ಗತ್ತನ್ನು ವ್ಯಕ್ತಗೊಳಿಸುತ್ತದೆ. ಸತ್ವಯುತವಾಗದ ಭಾಷೆಯಲ್ಲಿ ಸಂಕ್ಷಿಪ್ತವಾಗಿ (ಹಿತಮಿತವಾಗಿ) ಹೇಳುವ ಪಾಡ್ದನದ ಕಥನ ಕೌಶಲವಿದೆ. (ನ) ಪಾಠವು ಪ್ರಾಯಶಃ ಮೂಲವೇ ಆಗಿರಲಾರದು. ಕತೆಯ ಓಟವು ಕುಂಠಿತಗೊಂಡು ಕೆಲವೆಡೆ ವರ್ಣನೆಗಳು ಅತಿಯಾಗಿವೆ. ಪಾಡ್ದನಗಳ ಸ್ವರೂಪಕ್ಕೆ ಇದು ಸಹಜವಾಗಿ ಇಲ್ಲಿ ತನ್ನ ಕಲ್ಪನೆಗೆ, ತನ್ನ ಪರಂಪರೆಯಲ್ಲಿ ಹರಿದು ಬಂದ ಸಂಸ್ಕೃತಿಗೆ ಮಹತ್ವವನ್ನು ಕೊಡುವುದು ಸಹಜ. ಆದರೆ ಅಲ್ಲಿ ಅತಿರೇಕವಿರುವುದಿಲ್ಲ. ಭಾಷೆ ಸಡಿಲವಾಗಿರುವ ಪಾಡ್ಡನಗಳು ಮೂಲಪಾಠಗಳು ಎಂದು ಹೇಳುವುದು ಸಮಂಜಸವಾಗುವುದಿಲ್ಲ. ಆದುದರಿಂದ (ನ) ಪಾಠವು ಈ ಪಾಡ್ದನದ ಮೂಲ ಪಾಠಗಳ ಸಾಲಿನಲ್ಲಿ ನಿಲ್ಲುವುದಿಲ್ಲ.

ಪೌರಾಣಿಕ ವಸ್ತುಗಳಿರುವ ಪಾಡ್ದನಗಳ ಸಂಗ್ರಹ ಇನ್ನೂ ಆಗಬೇಕಾಗಿದೆ. ಆದರೆ ಅವು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಕ್ಕಿಲ್ಲ. ಜನಪದರ ಒಲವು, ನಂಬಿಕೆ ಭೂತಗಳೆಡೆಗೆ ಇರುವಷ್ಟು, ಪುರಾಣದ ಕಡೆಗಿಲ್ಲ. ಹರಿಕಥೆ, ಕಾವ್ಯವಾಚನ, ಭಜನೆಗಳಿಗಿಂತ ಹೆಚ್ಚು ನೇಮ, ಕೋಲ, ಭೂತಾರಾಧನೆಗಳಿಗೆ ಪ್ರಾಧಾನ್ಯ.

ಆಕರಸೂಚಿ

೧. ‘ತುಳುಕೂಟ’ (ಮಾಸಪತ್ರಿಕೆ – ೧೯೭೧ ರಿಂದ ೭೪ರ ವರೆಗಿನ ಸಂಚಿಕೆಗಳು)

೨. Ancient Karnataka Volm. I History of Tulva Baskara Ananda Saltore

3. ಪ್ರಾಚೀನ ತುಳುನಾಡು – ಎಸ್. ಎನ್. ಕಿಲ್ಲೆ ಮತ್ತು ಶೀನಪ್ಪ ಹೆಗ್ಡೆ.

೪. ತುಳುನಾಡಿನ ಇತಿಹಾಸ – ಡಾ. ಕೆ. ವಿ. ರಮೇಶ್

೫. ದಕ್ಷಿಣ ಕನ್ನಡದ ಇತಿಹಾಸ – ಕೇಶವ ಕೃಷ್ಣ ಕುಡ್ವ, ಕಾರ್ಕಳ

೬. ತೆಂಕನಾಡು – ಸಂಪಾದಿತ

೭. Tulu – English Dictionary – Prop.: Mariyyappa Bhat

8. ಭೂತಾರಾಧನೆಯ ಕತೆಗಳು – ನೇಮಿರಾಜ ಮಲ್ಲ

೯. ಕಲಾದರ್ಶನ (ಸಂ. ೧. ಸಂ.೨. ಸಂ.೩. ಸಂ. ೧೦)

೧೦. ಜನಪದ ಗೀತೆಗಳು – ಡಾ. ಶಿವರಾಮ ಕಾರಂತ

೧೧. ತುಳುವಾಲ ಬಲಯೇಂದ್ರೆ – ನಂದೊಳ್ಗೆ ಶೀನಪ್ಪ ಹೆಗ್ಡೆ