ಆದರೆ ಇನ್ನೂ ಕೆಲವು ನರಿಪುಕತೆಗಳ ವರ್ಣನಾಂಶಗಳು ಎರಡು ಬರುರಾಗಿರುತ್ತವೆ. ವಿರೋಧವೇ ಇಲ್ಲಿಯ ಮುಖ್ಯ ಲಕ್ಷಣ. ಒಂದು ವರ್ಣನಾಂಶ ಒಂದು ವಸ್ತುವನ್ನು ವರ್ಣಿಸಿದರೆ ಇನ್ನೊಂದು ವರ್ಣನಾಂಶ ಅದಕ್ಕೆ ವಿರುದ್ಧವಾಗಿರೋ ವಿಷಯವನ್ನು ಹೇಳುತ್ತದೆ. ಆದರೆ, ಮೊದಲನೆಯ ವರ್ಣನಾಂಶ ವಸ್ತುವಿನ ಸಹಜ ರೂಪ ಅಥವಾ ಗುಣವನ್ನು ಅಥವಾ ಕಾರ್ಯವನ್ನು ಹೇಳಿದರೆ ಎರಡನೆಯ ವರ್ಣನಾಂಶ ಅದನ್ನು ಅಲ್ಲಗಳೆಯುತ್ತದೆ.

ದೈತ್ತ ಮಿತ್ತ್ ಪರಂದ್ ಪರಂದ್‌ದ ಮಿತ್ತ್ ದೈ
ಗಿಡಿದ ಮೇಲೆ ಹಣ್ಣು ಹಣ್ಣಿನ ಮೇಲೆ ಗಿಡ
ಉತ್ತರ: ಪರಂಗಿ ಪೆಲಕ್ಕಾಯಿ (ಅನಾನಾಸು)

ತೊಯೆರೆ ಚೆಂಡು, ಕುಟ್ಟೆರೆ ಮಲ್ಲೆ, ದೆರ್ಪ್ಯರೆ ದಿನ್ನೊ, ಎಂಚಿನ ಪನ್‌ಲೆ
ನೋಡಲು ಚೆಂಡು, ಕುಟ್ಟಲು ದೊಡ್ಡದು, ಎತ್ತಲು ಭಾರ, ಏನೆಂದು ಹೇಳಿರಿ
ಉತ್ತರ: ಅರಿತ್ತಮುಡಿ (ಅಕ್ಕಿ ಮುಡಿ)

ದೋಲು ಉಂಡು ಪಾಡ್ದನ ಇಜ್ಜಿ ಅಣಿ ಉಂಡು ಗಗ್ಗರ ಇಜ್ಜಿ ಈ ನಲಿಕೆದ ಬೂತ ಒವು
ಡೋಲು ಇದೆ ಪಾಡ್ದನ ಇಲ್ಲ ಆಣಿ ಇದೆ ಗಗ್ಗರ ಇಲ್ಲ ಈ ಕುಣಿತದ ಬೂತ ಯಾವುದು
ಉತ್ತರ: ನವಿಲು

ಮೇಲಿನ ನರಿಪುಕತೆಗಳಲ್ಲಿ ಡೋಲು ಉಂಡು ಅನ್ನೋದು ಒಂದು ವರ್ಣನೆ. ಪಾಡ್ದನ ಇಜ್ಜಿ ಅನ್ನೋದು ಮೊದಲಿನದನ್ನು ವಿರೋಧಿಸುವ ಇನ್ನೊಂದು ವರ್ಣನೆ. ಹಾಗೆಯೇ ಆಣಿ ಉಂಟು ಅನ್ನುವುದು ಮತ್ತೊಂದು ವರ್ಣನೆ. ಗಗ್ಗರ ಇಜ್ಜಿ ಅನ್ನೋದು ಅದನ್ನು ವಿರೋಧಿಸುವ ಇನ್ನೊಂದು ವರ್ಣನೆ. ಈ ನರಿಪುಕತೆಯಲ್ಲಿ ಜೋಡಣೆಗೊಂಡಿರುವ ಡೋಲು, ಪಾಡ್ದನ, ಅಣಿ, ಗಗ್ಗರ ಈ ಎಲ್ಲ ಪರಿಕರಗಳು ತುಳುನಾಡಿನ ಬೂತಾರಾಧನೆಗೆ ಸಂಬಂಧಪಟ್ಟವಾಗಿದ್ದರೂ ನರಿಪುಕತೆಯ ಒಡಲಲ್ಲಿ ವೈರುಧ್ಯದ ವಿನ್ಯಾಸದಲ್ಲಿ ಜೋಡಣೆಗೊಂಡಿವೆ. ಅದು ಬೂತ ಅಲ್ಲ ಅನ್ನುವುದನ್ನು ಸೂಚಿಸುತ್ತದೆ.

ಈ ನರಿಪುಕತೆಯ ಒಡಲಲ್ಲಿರುವ ವರ್ಣನಾಂಶಗಳು ವಾಸ್ತವವನ್ನು ಸೂಚಿಸುತ್ತಲೇ ಅದನ್ನು ನಿರಾಕರಿಸುತ್ತಾ ವಾಸ್ತವವನ್ನು ಭ್ರಮಾತ್ಮಕಗೊಳಿಸುವ ವಿನ್ಯಾಸದಲ್ಲಿ ಜೋಡಣೆಗೊಂಡಿವೆ. ಡೋಲು ಉಂಡು ಪಾಡ್ದನ ಇಜ್ಜಿ ಅನ್ನುವ ಪರಸ್ಪರ ವೈರುಧ್ಯದ ಮೊದಲ ವರ್ಣನಾಂಶ ಡೋಲು ಉಂಡು ಅನ್ನುವಲ್ಲಿ ಬೂತಾರಾಧನೆಗೆ ಸಂಬಂಧಪಟ್ಟ ಉತ್ತರವನ್ನು ಸೂಚಿಸುತ್ತದೆಯೇ ಅನ್ನುವ ವಾಸ್ತವಿಕ ಸಂಗತಿಯನ್ನು ನೆನಪಿಸಿಕೊಳ್ಳುವಾಗಲೇ ಅದನ್ನು ನಿರಾಕರಿಸುವ ಅದರ ವೈರುಧ್ಯದ ಇನ್ನೊಂದು ವರ್ಣನಾಂಶ ಬೂತ ಎಂದು ನಾವು ಅಂದುಕೊಳ್ಳುವ ವಾಸ್ತವ ಅದು ವಾಸ್ತವ ಅಲ್ಲ ಅದು ಭ್ರಮಾತ್ಮಕ ಅನ್ನುವುದನ್ನು ಸೂಚಿಸುತ್ತದೆ. ಪರಸ್ಪರ ವೈರುಧ್ಯದ ವರ್ಣನಾಂಶಗಳ ಜೋಡಣೆ ಒಂದನ್ನು ಹೌದು ಅಂತ ಅಂದುಕೊಳ್ಳುತ್ತಲೇ ಮತ್ತೆ ನಾವು ಅಂದುಕೊಂಡಿದ್ದನ್ನು ಅದು ಅಲ್ಲ ಅಂತ ಹೇಳುತ್ತದೆ. ನರಿಪುಕತೆಯ ಈ ರೂಪಕಾತ್ಮಕತೆ ಹಾಗೂ ದ್ವಂದ್ವಾರ್ಥತೆಯ ವಿನ್ಯಾಸ ಉತ್ತರವನ್ನು ಕಂಡುಕೊಳ್ಳುವ ನೆಲೆಯಲ್ಲಿ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಈ ಎಲ್ಲ ಪರಿಕರಗಳು ತುಳುನಾಡಿನ ಭೂತಾರಾಧನೆಯ ಪರಿಕರಗಳನ್ನು ವೈರುಧ್ಯದ ವಿನ್ಯಾಸದಲ್ಲಿ ಜೋಡಿಸಿಕೊಂಡಿರುವ ಕಾರಣದಿಂದ ಅದು ಸಂಸ್ಕೃತಿಗೆ ವಿರುದ್ಧವಾಗಿ ಪ್ರಕೃತಿಯನ್ನು ಉತ್ತರ ಅಂತ ಹೇಳುತ್ತದೆ. ಆದರೆ ಪ್ರಕೃತಿ ಮತ್ತು ಸಂಸ್ಕೃತಿ ಜನಪದದ ಗ್ರಹಿಕೆಯಲ್ಲಿ ವಿರುದ್ಧ ಸ್ಥಿತಿಯಲ್ಲಿ ಇರುವಂತದು ಅಲ್ಲ. ಯಾಕೆಂದರೆ, ಜನಪದದ ಅರಿವು ರೂಪುಗೊಳ್ಳುವುದೇ ಪ್ರಕೃತಿ ಮತ್ತು ಸಂಸ್ಕೃತಿಯ ಮುಖಾಮುಖಿಯಲ್ಲಿ. ಜನಪದ ಪ್ರಕೃತಿಯ ಅರಿವನ್ನು ಸಂಸ್ಕೃತಿಯಾಗಿಸುತ್ತದೆ. ಅಂತೆಯೆ ಸಂಸ್ಕೃತಿಯ ಅರಿವನ್ನು ಪ್ರಕೃತಿಯಾಗಿಸುತ್ತದೆ. ಹೀಗಾಗಿ ಸಂಸ್ಕೃತಿ ಮತ್ತು ಪ್ರಕೃತಿಯ ಇರವಿನ ಜೊತೆಗೆ ಅದರ ಮುಂದೂವರಿಕೆಗೆ ಪ್ರಕೃತಿ ಮತ್ತು ಸಂಸ್ಕೃತಿಯ ಮುಖಾಮುಖಿಯಲ್ಲಿ ಜನಪದ ಹೊಂದುವ ಅರಿವು ಬಹಳ ಮಹತ್ತ್ವದ್ದೆನಿಸುತ್ತದೆ.

ನರಿಪುಕತೆಯ ಸ್ವರೂಪದಲ್ಲಿರುವ ವೈರುಧ್ಯದ ಗುಣವನ್ನು ಇನ್ನೊಂದು ರೀತಿಯಲ್ಲೂ ಗುರುತಿಸಿಕೊಳ್ಳಬಹುದು. ಕೆಲವು ನರಿಪುಕತೆಗಳಲ್ಲಿ ಒಂದು ವರ್ಣನಾಂಶದ ಒಂದು ವಸ್ತು ಒಂದು ಕೆಲಸವನ್ನು ಮಾಡಿದರೆ ಅದು ಇನ್ನೊಂದು ಕೆಲಸವನ್ನು ಮಾಡಲಾರದು ಅನ್ನುವ ವರ್ಣನಾಂಶ ಇನ್ನೊಂದು ರೀತಿಯಲ್ಲಿದೆ. ಉದಾಹರಣೆಗೆ

ತೂಪುನಾಯೆ ತಿನ್ಪುಜೆ
ತಿನ್ಪುನಾನೆ ತೂಪುಜೆ
ಕೇನುನಾನೆ ಪನ್ಪುಜೆ
ಪನ್ಪುನಾಯೆ ಕೇನುಜೆ
ನೋಡುವವ ತಿನ್ನುವುದಿಲ್ಲ
ಕೇಳುವವ ಹೇಳುವುದಿಲ್ಲ
ಹೇಳುವವ ಕೇಳುವುದಿಲ್ಲ
ಉತ್ತರ: ಕಣ್ಣು ಬಾಯಿ, ಕಿವಿ, ನಾಲಗೆ

ಈ ಬಗೆಯ ನರಿಪುಕತೆಗಳಲ್ಲಿ ಒಂದು ವಾಕ್ಯ ರಚನೆಯೇ ಅಭಿವ್ಯಕ್ತಿಯ ಕನಿಷ್ಟತಮ ಘಟಕ. ಇಂಥ ಘಟಕಗಳನ್ನು ಬೇರೆ ಬೇರೆ ರೀತಿ ಜೋಡಿಸುವುದರಿಂದ ಅನೇಕ ಬಗೆಯ ನರಿಪುಕತೆಗಳನ್ನು ಉತ್ಪಾದಿಸಬಹುದು. ಅಥವಾ ಇಂತಹ ಘಟಕಗಳನ್ನು ವೈರುಧ್ಯ ವಿನ್ಯಾಸದಲ್ಲಿ ಜೋಡಿಸುವ ಮೂಲಕ ಸರಪಳಿ ರೂಪದ ನರಿಪುಕತೆಯನ್ನು ರಚಿಸಬಹುದು. ಇವು ಪ್ರತ್ಯೇಕವಾದ ನರಿಪುಕತೆಗಳಾಗಿದ್ದರೂ ಒಂದೇ ಬಗೆಯ ಅರ್ಥದ ಸಂಬಂಧ ಇವಕ್ಕೆ ಇರುತ್ತದೆ. ಸರಪಳಿಯ ನರಿಪುಕತೆಗಳಲ್ಲಿ ಪ್ರತಿಯೊಂದು ಘಟಕವೂ ಪ್ರತ್ಯೇಕವಾದ ನರಿಪುಕತೆಯಾಗಬಹುದು. ಈಗಾಗಲೇ ಗಮನಿಸಿರುವಂತೆ ವೈರುಧ್ಯ ಇದರ ಪ್ರಧಾನ ಲಕ್ಷಣ. ಆದರೂ ಇದು ಒಂದೇ ಉತ್ತರವನ್ನು ಬಯಸುವ ಸರಪಳಿ ರೂಪದ ನರಿಪುಕತೆಯಲ್ಲ. ಯಾಕೆಂದರೆ ರೂಪ ಮತ್ತು ಕ್ರಿಯೆಯ ವರ್ಣನಾಂಶಗಳು ಪ್ರತ್ಯೇಕ ಪ್ರತ್ಯೇಕವಾದ ಉತ್ತರಗಳನ್ನು ನಿರೀಕ್ಷಿಸುತ್ತವೆ. ಮೇಲಿನ ನರಿಪುಕತೆಯಲ್ಲಿ ಮೊದಲ ವರ್ಣನಾಂಶ. ತೂಪುನಾಯೆ ತಿನ್ಪುಜೆ ಅನ್ನುವಲ್ಲಿ ಕೊನೆಯ ಪದ ತಿನ್ಪುಜೆ ಹಾಗೂ ಎರಡನೆಯ ವರ್ಣನಾಂಸದ ಮೊದಲನೆಯ ಪದ ತಿನ್ಪುನಾಯೆ ಪರಸ್ಪರ ವೈರುಧ್ಯದ ಅಂಶವನ್ನು ಒಳಗೊಂಡಿದೆ. ಹೀಗಿದ್ದೂ ಅದು ಸರಪಳಿ ರೂಪದಲ್ಲಿದೆ. ಹಾಗೆಯೆ ಕೇನುನಾಯೆ ಪನ್ಪುಜೆ ಪನ್ಪುನಾಯೆ ಕೇನುಜೆ ಅನ್ನುವಲ್ಲೂ ಇದೇ ರೂಪ ಮತ್ತು ಗುಣ ಇದೆ. ಮೇಲಿನ ಸರಪಳಿ ರೂಪದ ನರಿಪುಕತೆಯಲ್ಲಿ ನಾಲ್ಕು ಉತ್ತರಗಳನ್ನು ಕಂಡರೆ ಇನ್ನು ಕೆಲವು ಸುದೀಘ್ಘ ಸರಪಳಿ ರೂಪದ ನರಿಪುಕತೆಯಲ್ಲಿ ಒಂದೇ ಉತ್ತರ ಇರುತ್ತದೆ. ಉದಾಹರಣೆಗೆ

ಉದ್ದೊ ಉಂಡು ಬಡು ಅತ್ತ್
ಬಡು ಅಂದಂಡಲಾ ನೋಪುನವತ್ತ್
ನೋತಂಡಲಾ ಪೊಲಿಯುವುನತ್ತು
ಪೊಲಿಂಡಲಾ ಕೂಡುನವತ್ತ್
ಕೂಡುಂಡಲಾ ಫಲೊಕ್ಕಿತ್ತಿನವತ್ತ್
ಉಂದು ದಾದ?
ಉದ್ದ ಉಂಟು ಬೆತ್ತವಲ್ಲ
ಬೆತ್ತವಾದರೂ ಹೊಡೆಯುವುದಲ್ಲ
ಹೊಡೆದರೂ ಮುರಿಯುವುದಲ್ಲ
ಮುರಿದರೂ ಕೂಡುವುದಿಲ್ಲ
ಕೂಡಿದರೂ ಫಲಕಾರಿಯಲ್ಲ
ಇದು ಏನು?
ಉತ್ತರ: ಬೆಡಿ (ಕೋವಿ)

ಮೇಲಿನ ನರಿಪುಕತೆಯಲ್ಲಿ ಉತ್ತರದಲ್ಲಿರುವ ವಸ್ತುವಿನ ರೂಪ ಮತ್ತು ಕಾರ್ಯದ ವರ್ಣನಾಂಶಗಳು ಪರಸ್ಪರ ವೈರುಧ್ಯದ ವಿನ್ಯಾಸದಲ್ಲಿ ಜೋಡಣೆಗೊಂಡು ಈ ವೈರುಧ್ಯವು ಸರಪಳಿಯಾಗಿ ಮುಂದುವರಿಯುವ ಮೂಲಕ ಸರಪಣಿ ರೂಪದ ಒಗಟು ನಿರ್ಮಾಣವಾಗುತ್ತದೆ.

ಸರಪಳಿ ರೂಪದ ಒಗಟುಗಳಲ್ಲಿ ಒಂದು ಘಟಕದ ಉತ್ತರದಿಂದ ಮತ್ತೊಂದು ಘಟಕವು ಆರಂಭವಾಗುತ್ತದೆ. ಉದಾಹರಣೆಗೆ,

ಅಪ್ಪೆ ಇಲ್ಲಡೆ ಮಗಳ್ ಪೋಪಳ್
ಮಗಳೆ ಇಲ್ಲಡೆ ಅಪ್ಪೆ ಪೋಪುಜಳ್
ತಾಯಿ ಮನೆಗೆ ಮಗಳು ಹೋಗುತ್ತಾಳೆ
ಮಗನ ಮನೆಗೆ ತಾಯಿ ಹೋಗುವುದಿಲ್ಲ
ಉತ್ತರ: ಸೇರು, ಪಾವು

ತಾಯಿ ಮಗಳ ಮನೆಗೆ ಹೋಗುವುದು ಅಂತೆಯೇ ಮಗಳು ತಾಯಿಯ ಮನೆಗೆ ಹೋಗುವುದು ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಸಹಜ, ಸ್ವಾಭಾವಿಕ. ಅಂತೆಯೆ ಇದು ಸಾಮಾಜಿಕ ವಾಸ್ತವ ಕೂಡಾ. ಆದರೆ ಇಲ್ಲಿ ವಾಸ್ತವ ಸತ್ಯ ಬೇರೆ ಒಗಟಿನ ಸತ್ಯ ಬೇರೆ. ವಾಸ್ತವ ಸತ್ಯ ಮತ್ತು ಒಗಟಿನ ಸತ್ಯ ತೀರಾ ವಿರುದ್ಧವಾದುದು. ಹಾಗಾಗಿಯೆ ಅದು ಒಗಟಾಯಿತು.

ಬಿಡಿ ಬಿಡಿಯಾದ ನರಿಪುಕತೆಗಳನ್ನು ಸಂಭಾಷಣೆ ರೀತಿಯಲ್ಲಿ ಜೋಡಿಸಿ ಒಂದು ಸಂಗತಿಯನ್ನು ರಚಿಸಲಾಗುವ ರೂಪದ ನರಿಪುಕತೆಗಳೂ ಇವೆ. ಇಂತಹ ನರಿಪುಕತೆಗಳು ಪ್ರಶ್ನೋತ್ತರ ರೂಪದಲ್ಲಿ ಇರುತ್ತವೆ. ಉದಾಹರಣೆಗೆ,

ಸಾದಿ ಪೋಪುನಾಯೆ ಒರಿ, ಬಂಟ್ವಾಳ ಪೇಂಟೆಗ್ ಪೋಪಿನ ಸಾದಿ ಒವುಂದು ಬಾರ್ ಎಡ್ಪುನ ಒಂಜಿ ಪೊಣ್ಣಡ ಇಂಚ ಕೇನುವೆ:

ಮಿರೆ ಬರಂದೆ ತರೆ ನರೆತ್ತ್‌ನಾಳೇ, ಬಂಟ್ವಾಳ ಪೇಂಟೆಗ್ ಪೋಪಿನ ಸಾದಿ ಒವು? ಅಯಿಕ್ ಆ ಪೊಣ್ಣು ಇಂಚ ಪನ್ಪಲ್; ಬೆರಿಟ್ಟ್ ಪೀಂಕನ್ ಬರಿಟ್ ಕಾರ್ ಇತ್ತ್‌ನಾಯಾ…. ಜ್ವರೊ ಬರಂದೆ ನರಕ್ಕುನಾಯೆ ಚಳು ಆವಂದೆ ತೂ ಕಾಯ್ಪುನಾಯೆ, ಸಯ್ತಿ ಮರಟ್ ಉಂತುದು ಪಜಿಮರ ಕಡ್ಪುನಾಯೆ ನಿಕ್ಕ್ ದುಂಬು ಪೋನಗ ತಿಕ್ಕುವೆರ್. ಅಕ್‌ಳೆಡ ಕೇಂಡ್‌ದ್ ಪೋಯಡ ಈ ಬಂಟ್ವಾಳ ಪೇಂಟೆಗ್ ಪೋದು ಮುಟ್ಟುವ.

ದಾರಿಹೋಕನೊಬ್ಬ ಬಂಟ್ವಾಳ ಪೇಟೆಗೆ ಹೋಗುವ ದಾರಿ ಯಾವುದು ಎಂದು ಭತ್ತ ಕುಟ್ಟುತ್ತಿದ್ದ ಹುಡುಗಿಯಲ್ಲಿ ಹೀಗೆ ಕೇಳುತ್ತಾಳೆ:

ಮೊಲೆ ಬಾರದೆ ತಲೆ ನರೆದವಳೇ, ಬಂಟ್ವಾಳ ಪೇಟೆಗೆ ಹೋಗುವ ದಾರಿ ಯಾವುದು?

ಅದಕ್ಕೆ ಹುಡುಗಿ ಹೀಗೆ ಹೇಳುತ್ತಾಳೆ: ಬೆನ್ನಿನಲ್ಲಿ ತಿಕ ಪಕ್ಕದಲ್ಲಿ ಕಾಲು ಇರುವವನೇ…. ಜ್ವರ ಬಾರದೆ ನರಳುವವನು, ಚಳಿಯಾಗದೆ ಬೆಂಕಿ ಕಾಯಿಸುವವನು ಮತ್ತು ಸತ್ತ ಮರದಲ್ಲಿ ನಿಂತ ಹಸಿ ಮರ ಕಡಿಯುವವನು ನಿನಗೆ ಮುಂದೆ ಹೋಗುವಾಗ ಸಿಗುವರು. ಅವರೊಡನೆ ವಿಚಾರಿಸಿ ಹೊರಟರೆ ನೀನು ಬಂಟ್ವಾಳ ಪೇಟೆಗೆ ತಲುಪುವಿ.

ಉತ್ತರ: ಪ್ರಾಯಕ್ಕೆ ಬಾರದ ಹೆಣ್ಣೊಬ್ಬಳು ಭತ್ತ ಕುಟ್ಟಿದ ಅಕ್ಕಿಯನ್ನು ಗೆರಡೆಯಲ್ಲಿ ಗೇರುತ್ತಿದ್ದು, ಅವಳ ತಲೆಯ ಮೇಲೆ ಭತ್ತದ ಹೊಟ್ಟು ಹತ್ತಿಕೊಂಡು ಆಕೆ ತಲೆನರೆದವಳಂತೆ ಕಾಣುತ್ತಿದ್ದಳು. ದಾರಿಹೋಕ ಕುದುರೆಯ ಮೇಲೆ ಕುಳಿತುಕೊಂಡು ಕುದುರೆಯ ಎರಡೂ ಪಕ್ಕಗಳಲ್ಲಿ ತನ್ನ ಕಾಲನ್ನು ಇಳಿಬಿಟ್ಟಿದ್ದನು. ಮುಂದಕ್ಕೆ ಹೋಗುವಾಗ ಇವನಿಗೆ ಸಿಗುವವರು- ಬಟ್ಟೆ ಒಗೆಯುವಾಗ ನರಳಿದಂತೆ ಹೂಂಕರಿಸುವ ಮಡಿವಾಳ, ಬೆಂಕಿ ಮುಂದೆ ಕೆಲಸ ಮಾಡುವ ಕಮ್ಮಾರ, ಏಣಿ ಮೇಲೆ ನಿಂತ ವೀಳೆದೆಲೆ ಕೊಯ್ಯುವ ತೋಟದವ.

ಒಗಟಿನ ಸ್ವರೂಪದಲ್ಲಿರುವ ಪ್ರಶ್ನೆಯ ಭಾಗ ಮತ್ತು ಉತ್ತರದ ಭಾಗವನ್ನು ಸಮಗ್ರವಾಗಿ ಸಂರಚನಾತ್ಮಕ ಏಕಕವಾಗಿ (ಸ್ಟ್ರಕ್ಟರಲ್‌ ಯುನಿಟ್) ಗ್ರಹಿಸಿ ಅದರ ಸ್ವರೂಪವನ್ನು ವಿಶ್ಲೇಷಿಸುವ ಮರಾಂಡ ಅವರ ವಿಧಾನ ನರಿಪುಕತೆಗಳ ಸ್ವರೂಪವನ್ನು ವಿವರಿಸುವುದಕ್ಕೆ ಹೆಚ್ಚು ಸಮಂಜಸವಾಗಿ ಕಾಣುತ್ತದೆ.

ಮರಾಂಡ ಅವರ ಪ್ರಕಾರ ಸಂರಚನೆ ಎಂದರೆ, ಸಮಗ್ರವಾದ ಸಂಗತಿಯೊಂದು ಒಳಗೊಂಡಿರುವ ವಿವಿಧ ಅಂಶಗಳು ಸಂಘಟಿತವಾಗಿರುವ ಆಂತರಿಕ ಸಂಬಂಧ. ಹೀಗಾಗಿ, ಸಂರಚನಾ ವಿಶ್ಲೇಷಣೆ ಎಂಬುದು, ಇವು ವ್ಯವಸ್ಥೆಗೊಂಡಿರುವ ಬಗೆಯನ್ನು ಕಂಡುಕೊಳ್ಳುವ ಪ್ರಕ್ರಿಯೆಯನ್ನು ಒಳಗೊಳ್ಳುತ್ತದೆ. (ಪುಟ ೧೬) ಮರಾಂಡ ಅವರು ವಾದಿಸುವಂತೆಯೇ ಜಾನಪದ ಅಧ್ಯಯನದಲ್ಲಿ ಸಂರಚನೆ, ವಸ್ತು, ಶೈಲಿ ಮತ್ತು ಕಾರ್ಯ ಇವುಗಳು ಬಹಳ ಉಪಯುಕ್ತ ಮಾತ್ರವಲ್ಲ. ಅವುಗಳು ಅವಶ್ಯ ಕೂಡಾ. ಯಾಕೆಂದರೆ ಅವೆಲ್ಲವೂ ಪರಸ್ಪರ ಸಂಬಂಧವನ್ನು ಹೊಂದಿವೆ. ಜನಪದ ಸಾಹಿತ್ಯದ ಸಂರಚನಾತ್ಮಕ ಅಧ್ಯಯನದಲ್ಲಿ ಡೀಪ್ ಸ್ಟ್ರಕ್ಚರ್ ಮತ್ತು ಸರ್ಫೇಸ್‌ ಸ್ಟ್ರಕ್ಚರ್ ನಡುವಿನ ವ್ಯತ್ಯಾಸಗಳಂತಹ ವ್ಯತ್ಯಾಸಗಳು ಮೌಖಿಕ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಮತ್ತು ವಿಶ್ಲೇಷಿಸಲು ಸಹಾಯ ಮಾಡುತ್ತವೆ ಎಂಬುದಾಗಿ ಮರಂಡ ಅವರು ವಾದಿಸುತ್ತಾರೆ. (ಪುಟ ೨೦)

ಒಗಟುಗಳ ತಾರ್ಕಿಕ ಸಂರಚನೆಯ ಗುಣಲಕ್ಷಣಗಳನ್ನು ಮತ್ತು ಅಂತಹ ಸಂರಚನೆಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆಗಳನ್ನು `A Tree Grows’ Transformation of a Riddle metphor ಎಂಬ ಲೇಖನದಲ್ಲಿ ಶೋಧಿಸುತ್ತಾರೆ.

ಮರಾಂಡ ಅವರ ಅಧ್ಯಯನದ ಪ್ರಕಾರ ಒಗಟಿನಲ್ಲಿ ಎರಡು ಭಾಗಗಳಿರುತ್ತವೆ; ಒಗಟಿನ ಪ್ರತಿಮೆ ಮತ್ತು ಉತ್ತರ. ಒಗಟಿನ ಪ್ರತಿಮೆ ಪ್ರಶ್ನೆಯಾಗಿರುತ್ತದೆ (ಅದು ಬಹುಮಟ್ಟಿಗೆ ಪ್ರಶ್ನೆಯ ರೂಪದಲ್ಲಿ ಇರುವುದಿಲ್ಲ). ಉತ್ತರವನ್ನು ಒಳಗೊಳ್ಳುವಂತೆ ಪ್ರತಿಮೆಯನ್ನು ಕಟ್ಟಲಾಗುತ್ತದೆ. ಅನೇಕ ಉತ್ತರಗಳನ್ನು ಹೊಂದಿರುವ ಪ್ರತಿಮೆಗಳಿವೆ. ಅದೇ ರೀತಿ, ಅನೇಕ ಒಗಟಿನ ಪ್ರತಿಮೆಗಳಿವೆ ಒಂದೇ ಉತ್ತರವೂ ಇರುವುದಿದೆ. ಆದರೆ ಇದರ ಅರ್ಥ ಒಗಟಿನ ಉತ್ತರ ಯಾದೃಚ್ಛಿಕ ಎಂದಾಗುವುದಿಲ್ಲ.

ಒಗಟಿನ ಸಂರಚನಾತ್ಮಕ ಅಧ್ಯಯನದಲ್ಲಿ ಮರಾಂಡ ಅವರು ಸಾಹಿತ್ಯದ ಮೂರು ಪರಿಭಾಷೆಗಳನ್ನು ಬಳಸಿಕೊಳ್ಳುತ್ತಾರೆ. ಸಾದೃಶ್ಯತೆ (analogy), ರೂಪಕ (metaphor) ಮತ್ತು ಅಜಹಲ್ಲಕ್ಷಣೆ (metonymy). ಸಾದೃಶ್ಯತೆಯನ್ನು ಅರಿಸ್ಟಾಟಲನ ವ್ಯಾಖ್ಯೆಯ ಪ್ರಕಾರ ಸೂಚಿಸುತ್ತಾರೆ. “ನಾಲ್ಕು ಪದಗಳಿರುವಾಗ ಎರಡನೆಯದು ಮತ್ತು ಮೊದಲನೆಯದಕ್ಕೆ ಇರುವ ಸಂಬಂಧ ಮತ್ತು ನಾಲ್ಕನೆಯದು ಮತ್ತು ಮೂರನೆಯದಕ್ಕೆ ಇರುವ ಸಂಬಂಧ ಒಂದೇ ರೀತಿ ಇದ್ದಾಗ ಅಲ್ಲಿ ಸಾದೃಶ್ಯವಿದೆ ಎನ್ನಬಹುದು”

A/B = C/D

ಭಾಷಾ ವಿಜ್ಞಾನ ಮತ್ತು ಮಾನವಶಾಸ್ತ್ರದಲ್ಲಿ ಬಳಕೆಯಲ್ಲಿರುವಂತೆ ಸೂಚಿಸುವುದಾದರೆ;

A : B :: C:D

ತುಳುವಿನ ನರಿಪುಕತೆಯೊಂದನ್ನು ಇಲ್ಲಿ ವಿವರಿಸಿಕೊಳ್ಳುವುದಾದರೆ;

ದೇವೆರ್ ಉಲಯಿ ಗಂದ ಪಿದಾಯಿ
ಉತ್ತರ: ಜೆಂಜಿ ಬೊಕ್ಕ ಮಣ್ಣ್
ದೇವರು ಒಳಗೆ ಗಂಧ ಹೊರಗೆ
ಉತ್ತರ: ಏಡಿ ಮತ್ತು ಮಣ್ಣು

ಈ ನರಿಪುಕತೆಯಲ್ಲಿ ದೇವರು: ಗಂಧ = ಏಡಿ: ಮಣ್ಣು

ಈ ನಾಲ್ಕು ಪದಗಳಲ್ಲಿ ಎರಡನೆಯ ಪದವಾಗಿರುವ ಗಂಧ ಮತ್ತು ಮೊದಲನೆಯ ಪದವಾಗಿರುವ ದೇವರು ಇವುಗಳ ನಡುವಿನ ಪರಸ್ಪರ ಸಂಬಂಧ ಹಾಗೂ ನಾಲ್ಕನೆಯ ಪದವಾಗಿರುವ ಮಣ್ಣು ಮತ್ತು ಮೂರನೆಯ ಪದವಾಗಿರುವ ಏಡಿ ಇವುಗಳ ನಡುವಿನ ಪರಸ್ಪರ ಸಂಬಂಧ ಒಂದೇ ಆಗಿದ್ದು ಅವುಗಳ ನಡುವೆ ಸಾದೃಶ್ಯವಿದೆ.

ಇದೇ ರೀತಿ, ಇನ್ನೊಂದು ನರಿಪುಕತೆಯನ್ನು ಉದಾಹರಿಸುವುದಾದರೆ,

ರಾಜೆ ದುಂಬು ಸೈನ್ಯ ಪಿರವು
ಉತ್ತರ: ಬಾರೆದ ಪೂಂಜೆ ಬಾರೆದ ಕಾಯಿ
ರಾಜ ಮುಂದೆ ಸೈನ್ಯ ಹಿಂದೆ
ಉತ್ತರ: ಬಾಳೆ ಹೂಂಬೆ ಬಾಳೆಕಾಯಿ

A: B :: C:D

ರಾಜ ಹಿಂದಿದ್ದು ರಾಜನ ರಕ್ಷಣೆ ಮಾಡುವ ಸೈನ್ಯ ಮುಂದಿರುವುದು ವಾಸ್ತವಿಕ ಸತ್ಯ. ಆದರೆ ಒಗಟಿನ ಸತ್ಯದಲ್ಲಿ ರಾಜ ಮುಂದಿದ್ದು ಸೈನ್ಯ ಹಿಂದಿದೆ. ಒಗಟಿನ ಸತ್ಯ ವಾಸ್ತವಿಕ ಸತ್ಯಕ್ಕೆ ವಿರುದ್ಧವಾಗಿರುವುದರಿಂದ ಇದು ಒಗಟಾಗಿದೆ.

ರಾಜ ಮತ್ತು ಸೈನ್ಯದ ರಾಜ್ಯ ವ್ಯವಸ್ಥೆಯ ವಾಸ್ತವಿಕ ತಿಳುವಳಿಕೆ ಒಗಟಿನ ಉತ್ತರವನ್ನು ಕಂಡುಕೊಳ್ಳುವ ರೂಪಕವನ್ನು/ ಪ್ರತಿಮೆಯನ್ನು ಸೃಷ್ಟಿಸುತ್ತದೆ. ಬಹುಷಃ ಈ ತಿಳುವಳಿಕೆ ವರ್ತಮಾನದ ತಿಳುವಳಿಕೆಯಾಗಿರಬೇಕಾಗಿಲ್ಲ. ಒಗಟಿನ ರೂಪದಲ್ಲಿ ದಾಖಲಿತಗೊಂಡಿರುವ ಪೂರ್ವ ತಿಳುವಳಿಕೆ ವರ್ತಮಾನದಲ್ಲಿ ಬಳಕೆಯಾಗುತ್ತಿರುತ್ತದೆ. ಗಾದೆಯ ಹಾಗೆ ಒಗಟುಗಳು ದ್ರವೀಕೃತ ಅರ್ಥದ ರೂಪಗಳಲ್ಲ. ಬದಲಾಗಿ, ಒಗಟುಗಳ ಒಡಲಲ್ಲಿ ಸ್ಥಿರೀಕೃತಗೊಂಡಿರುವ ಅರ್ಥವಿರುತ್ತದೆ. ಈ ನೆಲೆಯಲ್ಲಿ ಗಾದೆಗಳು ಪ್ರೋಜನ್‌ ಫಾರ್ಮ್‌ಗಳಾದರೆ ಒಗಟುಗಳು ಫಿಕ್ಸ್ಡ್ ಫಾರ್ಮ್‌ಗಳಾಗಿರುತ್ತವೆ. ಒಗಟುಗಳಲ್ಲಿ ಸಾಂದ್ರಗೊಂಡ ಅರ್ಥಗಳಿದ್ದರೆ, ಗಾದೆಗಳಲ್ಲಿ ಘನೀಕೃತಗೊಂಡಿರುವ ಅರ್ಥಗಳು ಸಹಪಠ್ಯ ಸಾನ್ನಿಧ್ಯಕ್ಕೆ ಅನುಸಾರವಾಗಿ ದ್ರವೀಕೃತಗೊಳ್ಳುತ್ತಿರುತ್ತದೆ.

ಮರಾಂಡ ವಾದಿಸುವಂತೆ ಸಾದೃಶ್ಯ ಎನ್ನುವುದು ಮನಸ್ಸಿನ ಒಂದು ಪ್ರಕ್ರಿಯೆ. ಪದಗಳ ನಡುವೆ ಇರುವ ಎರಡು ರೀತಿಯ ಸಂಬಂಧಗಳನ್ನು ಗುರುತಿಸುವ ಮೂಲಕ ಇದು ನಡೆಯುತ್ತದೆ. ಅವುಗಳೆಂದರೆ, ಸಾಮ್ಯತೆ ಮತ್ತು ಸಾಮೀಪ್ಯ/ ನಿಕಟತೆ, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ರೂಪಕ ಮತ್ತು ಅಜಹಲ್ಲಕ್ಷಣೆ. ಮೇಲಿನ ಸಾದೃಶ್ಯದ ಸೂತ್ರದಲ್ಲಿ, ಸಂರಚನಾತ್ಮಕ ಒಂದೇ ಸ್ಥಾನದಲ್ಲಿರುವ ಪದಗಳು ಒಂದು ರೂಪವನ್ನು ನಿರ್ಮಿಸುತ್ತವೆ. (A ಮತ್ತು C ಅಥವಾ B ಮತ್ತು D) A ‘ಸೂಚಕವಾದರೆ C ‘ಸೂಚಿತ’ವಾಗುತ್ತದೆ ಹಾಗೆಯೇ B ಸೂಚಕವಾದರೆ D ‘ಸೂಚಿತ’ ವಾಗುತ್ತದೆ. ಅಂದರೆ, A ಮತ್ತು C ನಡುವಿನ ಸಂಬಂಧ ರೂಪಕಾತ್ಮಕವಾದುದು.

ಸೂತ್ರದ ಒಂದೇ ಬದಿಯಲ್ಲಿರುವ ಪದಗಳು (A ಮತ್ತು B) ಅಜಹಲ್ಲಕ್ಷಣೆಯ ಸಂಬಂಧ ಹೊಂದಿವೆ. ಅಂದರೆ ಅಜಹಲ್ಲಕ್ಷಣೆ ವಾಕ್ಯ ನಿರ್ಮಾಣದ ಮೂಲಕ ಎರಡು ಪದಗಳ ನಡುವೆ ಉಂಟಾಗುವ ಸಂಬಂಧವಾದರೆ ರೂಪಕವು ರೂಪಾವಳಿಯ ಮೂಲಕ (paradigmtic) ಆಗುವ ಸಂಬಂಧ. ರೂಪಕವೆಂದರೆ, ಎರಡು ಘಟಕಗಳನ್ನು (AB) ಒಳಗೊಂಡಿರುವ ಒಂದು ಸಂಕೇತ ಎನ್ನಬಹುದು.

11_42_TSC-KUH

ಸಾಮೀಪ್ಯ / ನಿಕಟತೆ ಎಂಬುದನ್ನು ಅಜಹಲ್ಲಕ್ಷಣೆ ಆಧರಿಸುತ್ತದೆ. ಒಗಟಿನ ರೂಪಕಗಳಲ್ಲಿ ಎರಡು ‘ವಿರೋಧಿ’ ಘಟಕಗಳನ್ನು ಒಂದೇ ಸ್ಥಳಕ್ಕೆ ತಂದು ಅವುಗಳನ್ನು ಒಂದು ದೊಡ್ಡ ಘಟಕದ ಭಾಗಗಳಾಗಿ ತೋರಿಸಲಾಗುತ್ತದೆ. ಮತ್ತು ಅವುಗಳ ನಡುವೆ ನಿಕಟತೆಯನ್ನು ನಿರ್ಮಿಸಲಾಗುತ್ತದೆ. ಆ ಮೂಲಕ ಅವು ಅಜಹಲ್ಲಕ್ಷಣೆಯ ಸಂಬಂಧಕ್ಕೆ ಒಳಗಾಗುತ್ತವೆ. (ಅಜಹಲ್ಲಕ್ಷಣೆ = ಹೇಳಬೇಕಾದ ವಸ್ತುವಿಗೆ ಬದಲಾಗಿ ಲಕ್ಷಣವಾಚಿಯನ್ನು ಉಪಯೋಗಿಸುವುದು). ಆ ಮೂಲಕ ರೂಪಕಗಳು ಮತ್ತು ಅಜಹಲ್ಲಕ್ಷಣೆಗಳು ಒಂದಾಗುತ್ತವೆ. ಇದು ರೂಪಕ ಮತ್ತು ಅಜಹಲ್ಲಕ್ಷಣೆಯ ನಡುವಿನ ಭಿನ್ನತೆಯನ್ನು ಹೋಗಲಾಡಿಸುವುದಿಲ್ಲ. ಇದು ಸಾಧೃಶ್ಯದ ಮೂಲಕ ನಡೆಯುವ ಯೋಚನಾ ಪ್ರಕ್ರಿಯೆಯ ಒಂದು ಭಾಗ.

ಒಗಟಿನಲ್ಲಿರುವ ಸೂಚಕಗಳು ಒಗಟು ಪ್ರತಿಮೆಯ ತಿರುಳು ಆಗಿದ್ದರೆ, ಉತ್ತರ ಪ್ರತಿಮೆಯ ಸೂಚಿತವಾಗಿರುತ್ತದೆ. ಸೂಚಕ ಮತ್ತು ಸೂಚಿತದ ನಡುವಿನ ಸಾಮ್ಯತೆಯು ಸಂರಚನಾತ್ಮಕವಾದುದು. ಒಗಟಿನ ಪ್ರತಿಮೆ ಈ ಸಾಮ್ಯತೆ ಯಾಕೆ ಮತ್ತು ಹೇಗೆ ಇದೆ ಎಂಬುದನ್ನು ತೋರಿಸುತ್ತಿರುತ್ತದೆ. ಆದರೆ, ಒಗಟಿನ ರೂಪಕಗಳು ದೈನಂದಿನ ಸಾಮಾನ್ಯ ರೂಪಕಗಳಿಗಿಂತ ಭಿನ್ನವಾಗಿರುತ್ತವೆ. ದೈನಂದಿನ ಭಾಷೆಯಲ್ಲಿ ರೂಪಕಗಳು ಸಾಂಪ್ರದಾಯಿಕವಾಗಿರುತ್ತವೆ, ಸಂದಿಗ್ಧತೆಯಿಲ್ಲದವುಗಳಾಗಿರುತ್ತವೆ. ಯಾಕೆಂದರೆ, ಸಂವಹನದ ಉದ್ದೇಶಕ್ಕಾಗಿ ಅವು ಹಾಗೇ ಇರಬೇಕಾದ್ದು. ಆದರೆ ಒಗಟಿನ ಪ್ರತಿಮೆಯ ಅರ್ಥ, (ಯೋಚನೆಯ) ಆಟದ ಕೆಲವು ನಿಯಮಗಳನ್ನು ಅನುಸರಿಸಿ ಕಂಡುಕೊಳ್ಳಬೇಕಾದುದು. ಕಾವ್ಯಾತ್ಮಕ ರೂಪಕಗಳಂತೆ, ಒಗಟಿನ ಪ್ರತಿಮೆಗಳು ಹೊಸ ಒಳನೋಟಗಳನ್ನು ನೀಡುತ್ತವೆ. ಆದರೆ, ಕಾವ್ಯಕ್ಕಿಂತ ಭಿನ್ನವಾಗಿ, ಪೂರ್ವನಿಗದಿತವಾದ ವ್ಯವಸ್ಥೆಗಳನ್ನು ನೆನಪಿಗೆ ತಂದುಕೊಳ್ಳುವಂತೆ ಮಾಡುತ್ತವೆ.

ಒಗಟಿನ ಸಂರಚನೆಯನ್ನು ಸಂರಚನಾತ್ಮಕ ಏಕಕವಾಗಿ ಪರಿಭಾವಿಸುವ ಮರಾಂಡ ಅವರು ಒಗಟಿನ ಸಂರಚನೆಯಲ್ಲಿ ಈ ಕೆಳಗಿನ ಭಾಗಗಳನ್ನು ಈ ಹೆಸರುಗಳಿಂದ ಹೆಸರಿಸುತ್ತಾರೆ. ದತ್ತಪದ (ಒಗಟು ರೂಪಕ), ಗುಪ್ತ ಪದ (ಉತ್ತರ) ವಾಸ್ತವ ಗ್ರಹಿಕೆ, ಮಿಥ್ಯಾ ಗ್ರಹಿಕೆ. ಈ ಪದಗಳು ಮತ್ತು ಗ್ರಹಿಕೆಗಳ ನಡುವಿನ ಅಸಮತೋಲನವನ್ನು ನಿವಾರಿಸುವ ಮೂಲಕ ಒಗಟಿನ ಉತ್ತರವನ್ನು ಕಂಡುಕೊಳ್ಳಬಹುದು.

ಅಪ್ಪೆಗ್ ಒಂಜಿ ಒಟ್ಟೆ ಮಗೆಳೆಗ್‌ ರಡ್ಡ್ ಒಟ್ಟೆ
ತಾಯಿಗೆ ಒಂದು ತೂತು, ಮಗಳಿಗೆ ಎರಡು ತೂತು
ಉತ್ತರ: ಬೀಸುವ ಕಲ್ಲ್ (ಬೀಸುವ ಕಲ್ಲು)

ಮರಾಂಡ ಅವರ ವಿಧಾನದ ಪ್ರಕಾರ ನರಿಪುಕತೆಯ ಸಂರಚನೆಯನ್ನು ಹೀಗೆ ಕಾಣಬಹುದು.

12_42_TSC-KUH

ಮಾಹಿತಿಗಳು
Terms
ಆಧಾರ ವಚನಗಳು
Premises
ಮಾಹಿತಿಗಳು
Terms
ಮಾಹಿತಿಗಳು
Terms
ದತ್ತಪದ
Given
ತಾಯಿ ಪ್ರತಿಮೆ ತೂತು ಒಂದು
ಗುಪ್ತಪದ
Hidden
ಬೀಸುವ ಕಲ್ಲು ಉತ್ತರ ಎರಡು

 

ಐದು ಅಂಶಗಳು ಈ ರೀತಿ ಇವೆ.

ದತ್ತಪದ-ಸೂಚಕ ಇದು ಒಗಟಿನ ತಿರುಳು
ಸ್ಥಿರ ಗ್ರಹಿಕೆ (constant premises)
ಸಾಮಾನ್ಯ ಅಂಶ
ಗುಪ್ತವಾದ ಚರ ಗ್ರಹಿಕೆ (hidden variable)
ದತ್ತವಾದ-ಚರ ಗ್ರಹಿಕೆ
ಗುಪ್ತಪದ-ಉತ್ತರ

ಮರಾಂಡ ಅವರ ಪ್ರಕಾರ ಒಂದು ಭಾಷಾ ಸಂಸ್ಕೃತಿಯು ಮಾಡುವ ವರ್ಗೀಕರಣವನ್ನು ಗ್ರಹಿಸುವ ಮತ್ತು ಒಗಟಿನ ನಿಯಮಗಳನ್ನು ಕಂಡುಕೊಳ್ಳುವ ಮೂಲಕ ಒಂದು ಸೂಕ್ತ ಸಂಸ್ಕೃತಿಯಿಂದ ಯಾವೆಲ್ಲ ಒಗಟುಗಳು ಹುಟ್ಟಿಕೊಳ್ಳಬಲ್ಲವು ಎಂಬುದನ್ನು ಊಹಿಸಲು ಸಾಧ್ಯವಿಲ್ಲ (ಪುಟ ೧೩೬) ಪದರಚನಾ ನಿಯಮಗಳನ್ನು ಕಲಿತರೆ, ಸರಿಯಾದ ಪದಗಳನ್ನು ಸೃಷ್ಟಿಸಲು ಸಾಧ್ಯವಿರುವ ಹಾಗೆ ಅಥವಾ ವಾಕ್ಯ ರಚನಾ ನಿಯಮ ತಿಳಿದುಕೊಂಡರೆ, ಅಂತಹ ವಾಕ್ಯಗಳನ್ನು ರಚಿಸಲು ಸಾಧ್ಯ.

ಮರಾಂಡ ಅವರ ಪ್ರಕಾರ ಒಗಟು ಕಟ್ಟುವ ಪ್ರಕ್ರಿಯೆಯ ನಿಯಮಗಳನ್ನು ಹೀಗೆ ಪಟ್ಟಿ ಮಾಡಬಹುದು:

೧) ಒಂದು ಮೂಲ ಒಳನೋಟದ ಆಧಾರದಲ್ಲಿ ಎರಡು ಗಣಗಳ ನಡುವಿನ ಸಮತೋಲನವನ್ನು ಸ್ಥಾಪಿಸುವ ರೂಪಕಗಳನ್ನು ಒಗಟುಗಳು ಎನ್ನಬಹುದು. ಈ ಗಣಗಳು ಸಾಮಾನ್ಯವಾಗಿ, ಸಾಂಸ್ಕೃತಿಕ ಅಥವಾ ನೈಸರ್ಗಿಕ, ಮಾನವ ಅಥವಾ ಪ್ರಾಣಿಗಳು, ಪ್ರಾಣಿಗಳಲ್ಲಿ ಸಾಕು ಪ್ರಾಣಿಗಳು ಅಥವಾ ಕಾಡು ಪ್ರಾಣಿಗಳು ಹೀಗೆ ಯಾವುದಾದರೂ ಸಂಗತಿಗಳಾಗಿರುತ್ತವೆ.

೨) ಎರಡು ಗಣಗಳ ನಡುವಿನ ವೈರುಧ್ಯ ಹೆಚ್ಚಾಗಿದ್ದಷ್ಟು ಒಗಟಿನ ರೂಪಕ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೀಗಾಗಿ ದ್ವಿಗುಣ ವೈರುಧ್ಯಗಳು ಇದ್ದಾಗ ಒಗಟು ಹೆಚ್ಚು ಎದ್ದು ಕಾಣುತ್ತದೆ. (ಉದಾಹರಣೆಗೆ, ಕಾಡು ಪ್ರಾಣಿಗಳು ಮತ್ತು ಸಾಂಸ್ಕೃತಿಕ ಸಂಗತಿಗಳು ಎಂಬಂತೆ ಇದ್ದಾಗ) ಆದರೆ ಯಾವುದೇ ಪೂರ್ವ ಸಿದ್ಧಾಂತ ವಗೀಕರಣ ಒಂದು ಆರಂಭವಷ್ಟೇ. ಯಾಕೆಂದರೆ ಒಗಟುಗಾರರು ಇಂತಹ ವರ್ಗೀಕರಣವನ್ನು ಒಡೆಯುತ್ತಾರೆ.

೩) ಆರಂಭದ ಮೂಲ ಒಳನೋಟವು ಎರಡು ಗಣಗಳಿಗೂ ಸಮಾನವಾದ ಒಂದು ಅಂಶವನ್ನು ಆಧರಿಸುತ್ತದೆ.

೪) ಅತೀ ಸರಳ ಒಗಟುಗಳು ತಿರುಳು ವಾಕ್ಯಗಳೆನ್ನಬಹುದು. ಅಲ್ಲಿ ನಾಲ್ಕು ಭಾಗಗಳಿರುತ್ತವೆ; ಎರಡು ಗಣಗಳನ್ನು ಹೋಲಿಸಲಾಗುತ್ತದೆ. ಅವು ಎರಡು ಪದಗಳೆನ್ನಬಹುದು. ಇನ್ನೊಂದು ಸಮಾನ ನಿಯೋಗ ಅಥವಾ ಅಂಶ. ಆಮೇಲೆ ಒಂದು ವಿಥ್ಯಾಗ್ರಹಿಕೆ. ಆ ಬಳಿಕ ಉತ್ತ.

೫) ಸಂಕೇತದ ಒಳಗಿರುವ ಉತ್ತರವನ್ನು ಕಂಡುಕೊಳ್ಳುವುದೆಂದರೆ, ಮಿಥ್ಯಾ ಗ್ರಹಿಕೆಯನ್ನು ಗುರುತಿಸುವುದು ಮತ್ತು ಗ್ರಹಿಕೆಯು ನಿಜಗೊಳ್ಳುವ ಪದವನ್ನು ಗುರುತಿಸುವುದು ಇಂತಹ ಅನೇಕ ಪದಗಳನ್ನು ಕಂಡುಕೊಳ್ಳಲು ಸಾಧ್ಯವೆಂದಾದರೆ, ಆ ಒಗಟಿಗೆ ಅನೇಕ ಉತ್ತರಗಳಿರುತ್ತವೆ.

೬) ಎರಡು ಗಣಗಳ ಶೋಧನೆ ಮತ್ತು ಪರಸ್ಪರ ಹೋಲಿಸಬಹುದಾದ ಅಂಶಗಳನ್ನು ಕಂಡುಕೊಳ್ಳುವ ಮೂಲಕ ಒಗಟಿನಲ್ಲಿ ಪರಿವರ್ತನೆ ನಡೆಯುತ್ತದೆ. ಹೆಚ್ಚು ಹೆಚ್ಚು ಪರಿವರ್ತನೆಗಳನ್ನು ಕಟ್ಟಬಹುದು. ಎಲ್ಲ ಸಾಮಾನ್ಯ ಅಂಶಗಳು ಮುಗಿಯುವವರೆಗೆ ಪರಿವರ್ತನೆಗಳು ಮುಂದುವರಿಯಬಹುದು.

೭) ಹೀಗಾಗಿ ‘ಒಗಟ’ನ್ನು ಕಟ್ಟುವುದೆಂದರೆ, ಒಂದು ಭಾಷಿಕ ಸಮಾಜದಲ್ಲಿ ನಡೆಯುವ ವರ್ಗೀಕರಣ ಪ್ರಕ್ರಿಯೆಯ ಒಂದು ವ್ಯವಸ್ಥಿತ ಶೋಧನೆ ಎಂದು ಹೇಳಬಹುದು.

೮) ಒಗಟು ರೂಪಕಗಳ ವಿಶಿಷ್ಟತೆಯೆಂದರೆ, ಅವುಗಳು ತಿರುವು ಮುರುವುಗೊಳ್ಳಬಲ್ಲವು. ಹೀಗಾಗಿ ಅವು ದೈನಂದಿನ ಸಾಮಾನ್ಯ ರೂಪಕಗಳಿಗಿಂತ ಭಿನ್ನ.

೯) ಹೋಲಿಸುವ ಗಣಗಳಿಗೆ (ಸೆಟ್)‘ಪೂರಕ’ ಗಣಗಳು ಇರುವುದಾದರೆ (ಗಂಡು ಒಂದು ಗಣ, ಹೆಣ್ಣು ಪೂರಕ ಗಣ ಅಥವಾ ಹೆಣ್ಣಿಗೆ ಗಂಡು) ಇಂತಹ ಒಗಟುಗಳಿಗೆ ಪರಿವರ್ತನೆ ಕೂಡಾ ಇರುತ್ತದೆ.

೧೦) ಈ ಮೇಲಿನ ನಿಯಮಗಳ ಮೂಲಕ ಒಗಟುಗಳು ಉತ್ಪತ್ತಿಯಾಗುವ ಪ್ರಕ್ರಿಯೆ ಹೇಗಿರುತ್ತದೆ ಎಂದರೆ, ಒಂದು ಸಂಸ್ಕೃತಿಯೊಳಗಿನ ‘ವರ್ಗೀಕರಣ’ವನ್ನು ತಿಳಿದುಕೊಂಡರೆ, ಸಾಧ್ಯವಿರುವ ಎಲ್ಲ ಒಗಟುಗಳನ್ನು ಊಹಿಸಬಹುದು. ಹೀಗೆ ಸೃಷ್ಟಿಸಲಾದ ಒಗಟುಗಳ ಸಂಖ್ಯೆ ಆ ಸಂಸ್ಕೃತಿಗಳಲ್ಲಿ ಇರುವ ಒಗಟುಗಳಿಗಿಂತ ಹೆಚ್ಚಾಗಿರಬಹುದು. ಯಾಕೆಂದರೆ, ಭಾಷಿಕ ರೂಪಗಳಂತೆಯೆ (ಪದ, ವಾಕ್ಯ) ಇಲ್ಲಿಯೂ ಒಂದು ಸಂಸ್ಕೃತಿಯು ಸಾಧ್ಯವಿರುವ ಎಲ್ಲ (ಒಗಟಿನ) ನಮೂನೆಗಳನ್ನು ವಾಸ್ತವದಲ್ಲಿ ಬಳಸಿಕೊಳ್ಳುವುದಿಲ್ಲ.

ಒಗಟು ನಿರ್ಮಾಣದ ನಿಯಮಗಳು ಒಂದು ಸಂಸ್ಕೃತಿಯಲ್ಲಿ ಊರ್ಜಿತವಾಗಿವೆಯೆಂದಾದರೆ, ಹೊಸ ಹೊಸ ಒಗಟುಗಳು ಸೃಷ್ಟಿಯಾಗುತ್ತಿರಬೇಕು. ಈಗ ಕಂಡುಬರುವ ಎಲ್ಲ ಒಗಟುಗಳಿಗೆ ಅನ್ವಯಿಸುತ್ತದೋ ಇಲ್ಲವೋ ಎಂಬುದರ ಮೇಲೆ ಇಲ್ಲಿ ಹೇಳಿದ ನಿಯಮಗಳ ಸಿಂಧುತ್ವ ಅವಲಂಬಿಸಿದೆ.

ನರಿಪುಕತೆಗಳಂತಹ ಜಾನಪದದ ಮೌಖಿಕ ರೂಪಗಳು ಆಕ್ಷರಿಕ ಲೋಕಕ್ಕೆ ಪಲ್ಲಟಗೊಳ್ಳುವಂತಹ ಹಂತದಲ್ಲಿ ಆಕ್ಷರಿಕ ಲೋಕದ ಹಿತಾಸಕ್ತಿಗಳಿಗೆ ಪಕ್ಕಾಗುತ್ತವೆ. ಈ ಪಕ್ಕಾಗುವ ಪ್ರಕ್ರಿಯೆಯಲ್ಲಿ ಮೌಖಿಕತೆಯನ್ನು ‘‘ಸಾಹಿತ್ಯಿಕ’ವಾಗಿ ಪರಿಕಲ್ಪಿಸುವುದು ಕೂಡಾ ಒಂದು. ಆಕ್ಷರಿಕ ಲೋಕದ ಎಲ್ಲಾ ಬಗೆಯ ಸ್ಥಾನ-ಮಾನ, ಸೌಲಭ್ಯ- ಸವಲತ್ತುಗಳ ಸಂಕಟದ ಒತ್ತಡವೊಂದು ಈ ಪರಿವರ್ತನೆಯ ಹಿಂದಿನ ಒತ್ತಾಸೆಯಾಗಿರುತ್ತದೆ. ಅಕ್ಷರ ಕೇವಲ ಲಿಪೀಕರಣ ಮಾತ್ರವಲ್ಲ. ಅದೊಂದು ಆಳುಕಲ್ಪನೆ, ಮಾತ್ರವಲ್ಲ, ಸಾಮಾಜಿಕ ಸಾಂಸ್ಕೃತಿಕ ಮತಭೇದದ ಮಾನದಂಡವೂ ಕೂಡಾ. ಅಕ್ಷರ ಜ್ಞಾನವನ್ನು ಪುನರ್‌ಉತ್ಪಾದಿಸುವ ನಿಯಂತ್ರಕ ಶಕ್ತಿಯಾಗಿರುವುದರಿಂದಲೇ ಅಕ್ಷರ ಲೋಕದಲ್ಲಿ, ಆಧುನಿಕ ಸನ್ನಿವೇಶದಲ್ಲಿ ಅದು ಅಧಿಕಾರದ ಭಾಷೆಯೂ ಆಗುತ್ತದೆ. ಹೀಗಾಗಿ ಆಧುನಿಕ ಸನ್ನಿವೇಶದಲ್ಲಿ ತುಳುವಿನಂತಹ ಅಧಿಕಾರವಿಹೀನ ಸದ್ಯದ ರಾಜಕೀಯ ಸನ್ನಿವೇಶದ ಒತ್ತಡದಲ್ಲಿ ಆಕ್ಷರಿಕ ಭಾಷೆಯಾಗಿ ರೂಪಾಂತರಗೊಂಡು ತನ್ನ ಸಾಹಿತ್ಯಿಕತೆಯನ್ನು ಪ್ರತಿಪಾದಿಸಬೇಕಾದ ಅನಿವಾರ್ಯತೆ ಇರುತ್ತದೆ.

ಅಕ್ಷರದ ಮೂಲಕ codify ಆದ ಜ್ಞಾನವನ್ನು decodify ಮಾಡುವ ಸಾಮಾಜಿಕ ಅವಕಾಶ ಆಧುನಿಕ ಪೂರ್ವದ ಸಮಾಜಗಳಲ್ಲಿ ಎಲ್ಲ ಪಂಗಡಗಳಿಗೆ ಇರಲಿಲ್ಲ. ಹಾಗಾಗಿಯೇ ಅಕ್ಷರದ ಮೂಲಕ codify ಆದ ಜ್ಞಾನ ಕೆಲವರ ನಿಯಂತ್ರಣದಲ್ಲಿದ್ದು ಇದು ಸಾಮಾಜಿಕ ನಿಯಂತ್ರಣದ ಅಧಿಕಾರವನ್ನು ಒದಗಿಸಿತ್ತು. ಆಧುನಿಕತೆ ಈ ಸನ್ನಿವೇಶವನ್ನು ಬದಲಾಯಿಸಿ ಹೊಲೆಯ, ಶೂದ್ರ, ಬ್ರಾಹ್ಮಣ, ಹೆಣ್ಣು-ಗಂಡು ಅನ್ನುವ ಭೇದವಿಲ್ಲದೆ ಎಲ್ಲರಿಗೂ ಸಮಾನವಾದ ಓದು ಬರಹದ ಅವಕಾಶವನ್ನು ಕಲ್ಪಿಸಿತು. ರಾಷ್ಟ್ರ ಅನ್ನುವ ಆಧುನಿಕ ಕಲ್ಪನೆ ಒಡಮೂಡುವಾಗ ಭಾಷೆಗೆ ಸಾಂವಿಧಾನಿಕ ಮಾನ್ಯತೆ ಲಭ್ಯವಾಗುವುದು ಅಕ್ಷರದ ಮಾನದಂಡದಿಂದ. ಹೀಗಾಗಿ ಆಧುನಿಕ ಭಾರತದಲ್ಲಿ ಆಡುಮಾತುಗಳೆಲ್ಲ ಸಾಂವಿಧಾನಿಕ ಮಾನ್ಯತೆಯನ್ನು ಪಡೆಯಬೇಕಾದರೆ ಇನ್ನಿಲ್ಲದ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಆಡುಮಾತು ಶಿಕ್ಷಣದ ಭಾಷೆಯಾಗಿರಬೇಕು, ಅದರಲ್ಲಿ ಸಾಹಿತ್ಯ ಸೃಷ್ಟಿಯಾಗಿರಬೇಕು ಅನ್ನುವ ಅಕ್ಷರದ ಮಾನದಂಡವನ್ನು ಸಾಂವಿಧಾನಿಕ ಅರ್ಹತೆಗಾಗಿ ಮುಂದಿಡಲಾಗುತ್ತದೆ. ಈ ಕಾರಣದಿಂದಲೇ ಆಡುಭಾಷೆಯಾಗಿರುವ ತುಳು ಚರಿತ್ರೆಯ ಉದ್ದಕ್ಕೂ ಅಧಿಕಾರದ ಭಾಷೆಯಾಗಿರದೆ ಕನ್ನಡ ಮತ್ತು ಇಂಗ್ಲಿಷಿನ ಅಧೀನ ಭಾಷೆಯಾಗಿಯೇ ಉಳಿದುಕೊಂಡು ಬಂದು. ತುಳು ನರಿಪುಕತೆಗಳು ಮೌಖಿಕತೆಯಿಂದ ಆಕ್ಷರಿಕಲೋಕಕ್ಕೆ ವರ್ಗಾವಣೆಗೊಳ್ಳುತ್ತಿರುವ ಈ ಚಾರಿತ್ರಿಕ ಪ್ರಕ್ರಿಯೆ ಅಧಿಕಾರವಿಹೀನ ತುಳುವಿನಂತಹ ಆಡುಭಾಷೆಗೆ ಅಗತ್ಯವೂ, ಅನಿವಾರ್ಯವೂ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)