ಕರ್ನಾಟಕದ ಸಾಂಸ್ಕೃತಿಕ ಬೆಳವಣಿಗೆಗೆ ಪ್ರಾದೇಶಿಕವಾಗಿ ಬೆಳೆದು ಬಂದ ಭಿನ್ನ ಭಿನ್ನ ಜನಪದ ಸಂಸ್ಕೃತಿಗಳು ತಮ್ಮ ಅಪಾರ ಕೊಡುಗೆಯನ್ನು ನೀಡಿವೆ. ಅವಿಭಜಿತ ದಕ್ಷಿಣ ಕನ್ನಡದ ತುಳುವ – ಕೊಂಕಣಿ ಸಮುದಾಯ, ಕೊಡಗಿನ ಕೊಡವರು, ಉತ್ತರ ಕನ್ನಡದ ವಿವಿಧ ಜನಸಮುದಾಯ, ಹುಬ್ಬಳ್ಳಿ – ಧಾರವಾಡ, ಶಿವಮೊಗ್ಗ ಹಾಗೂ ಬಯಲುಸೀಮೆ ಮೊದಲಾದೆಡೆ ಬೆಳೆದು ಬಂದ ವೈವಿಧ್ಯಮಯ ಜನಪದ ಸಂಸ್ಕೃತಿಗಳೇ ಕರ್ನಾಟಕ ಸಂಸ್ಕೃತಿಯ ನೆಲೆಗಟ್ಟು.

ಒಂದು ಪ್ರಾದೇಶಿಕ ಜನ ಸಮುದಾಯ ತನ್ನ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಭಿರುಚಿ, ಕಾಳಜಿ ವಹಿಸಿ ಆ ಮೂಲಕ ಅಭಿವ್ಯಕ್ತಿಸುವ ಸೃಜನಾತ್ಮಕ ಕಲಾ ಪ್ರಕಾರಕ್ಕೆ ಆ ಸಮಾಜದ ಮಾನಸಿಕ ತುಡಿತವೇ ಕಾರಣವಾಗುವುದು ಅಂತಹ ಸಮಾಜದ ಅಂತರಾಳದಲ್ಲಿ ಅಡಗಿರುವ ಈ ಮಾನಸಿಕ ತುಡಿತವನ್ನೇ ‘ಜಾನಾಂಗೀಯ ಸುಷುಪ್ತಿ’ (Racial subconscious) ಎಂದು ಸಮಾಜ ವಿಜ್ಞಾನದಲ್ಲಿ ಗುರುತಿಸಲಾಗಿದೆ. ಇಲ್ಲಿಂದ ಹೊರಹೊಮ್ಮಿದ ಭಾವ ಪರಿವರ್ತನೆಯೇ ಜನಪದ ಸಾಹಿತ್ಯವಾಗಿ ರೂಪುಗೊಳ್ಳುತ್ತದೆ. ಇದು ಮೌಖಿಕ ಸಾಹಿತ್ಯವಾಗಿ ಪ್ರಕಟವಾಗಬಹುದು ಅಥವಾ ಲಿಖಿತ ರೂಪವನ್ನು ಪಡೆಯಬಹುದು. ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ.

ತುಳುನಾಡು ಎಂಬುದು ವೈವಿಧ್ಯಮಯ ಮತಧರ್ಮಗಳ ಸಂಗ್ರಹಾಲಯದಂತಿದೆ. ನಾನಾ ರೀತಿಯ ಧರ್ಮ, ಭಾಷೆ, ವಿಚಾರಗಳಿಗೆ ತುಳುನಾಡು ಆಶ್ರಯ ತಾಣ. ಬೌದ್ಧರು, ಜೈನರು, ಶೈವರು, ವೈಷ್ಣವರು, ಶಾಕ್ತ, ಗಾಣಪತ್ಯ ಮೊದಲಾದ ಹಿಂದೂ ಧರ್ಮದ ವಿವಿಧ ಪಂಥದವರು, ಕ್ರೈಸ್ತರು, ಮುಸ್ಲಿಮರು ಎಲ್ಲರೂ ಸಾಮರಸ್ಯದಿಂದ ಕೂಡಿಬಾಳುತ್ತಿರುವ ಸಾಂಸ್ಕೃತಿಕ ಪ್ರದೇಶ. ಕೋಮು ಸಾಮರಸ್ಯ ಇಲ್ಲಿನ ಮಣ್ಣಿನ ಗುಣ. ಬಪ್ಪಬ್ಯಾರಿಗೂ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ಅಪೂರ್ವ ಸಂಬಂಧ. ಈ ದೇವಿ ದೇವಸ್ಥಾನವನ್ನು ಕಟ್ಟಿಸಿದವನು ಮುಸ್ಲಿಂ ಮೂಲದ ಬಪ್ಪ ಬ್ಯಾರಿ. ಮುಸ್ಲಿಂ ಮೂಲದ ಬೊಬ್ಬರ್ಯ ಮತ್ತು ಆಲಿ ಭೂತವನ್ನು ತುಳುವರು ನಂಬಿ ಹರಕೆ ಸಲ್ಲಿಸುತ್ತಾರೆ. ಕೆಲವು ದೇವಸ್ಥಾನಗಳೊಡನೆ ಮುಸ್ಲಿಂ, ಕ್ರೈಸ್ತ, ಕುಟುಂಬದ ಸಂಬಂಧ ಇವತ್ತಿಗೂ ಇದೆ. ಎಷ್ಟೋ ದೇವಸ್ಥಾನಗಳಲ್ಲಿ ದೇವರಿಗೆ ಅಲಂಕಾರ ಸೇವೆ, ವಾದ್ಯ ಸೇವೆ ಸಲ್ಲಿಸುವ ಮುಸ್ಲಿಂ ಕುಟುಂಬಗಳಿವೆ. ಮುಸ್ಲಿಂ ಮಸೀದಿಗೂ ಹಾಗೂ ಕ್ರೈಸ್ತರ ಇಗರ್ಜಿಗೆ ಹರಕೆ ಸಲ್ಲಿಸುವ ಹಿಂದುಗಳೂ ಇದ್ದಾರೆ. ಬಯಲಾಟ, ಭೂತಕೋಲ, ಬಲಿಸೇವೆ, ನಾಗಮಂಡಲ, ಸಾಂತುಮಾರಿ, ಉರೂಸು ಮೊದಲಾದ ವಿವಿಧ ಪಂಥದವರ ಸಾಂಸ್ಕೃತಿಕ ಉತ್ಸವಗಳಲ್ಲಿ ತುಳುನಾಡಿನ ಜನಸಾಮಾನ್ಯರೆಲ್ಲರೂ ಪಾಲ್ಗೊಳ್ಳುವುದು ರೂಢಿ. ದೇವರು ಮತ್ತು ಭೂತ ಜತೆಜತೆಯಾಗಿ ಪೂಜಿಸಲ್ಪಡುವ ಆರಾಧನಾ ಸ್ಥಳಕ್ಕೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಒಂದು ನಿದರ್ಶನ.

ಹೀಗೆ ತುಳುನಾಡ ಸಂಸ್ಕೃತಿಯು ಇಲ್ಲಿನ ಆರಾಧನಾ ಪದ್ಧತಿಯಲ್ಲಿ ನಿಚ್ಚಳವಾಗಿ ವ್ಯಕ್ತಗೊಳ್ಳುತ್ತಿದೆ. ಇಲ್ಲಿನ ಜನಪದ ಆರಾಧನಾ ರಂಗಪರಂಪರೆಯಲ್ಲಿ ಹುತಾತ್ಮರ ಉದ್ಭೋಧಕ ಇತಿಹಾಸವಿದೆ. ಹಿರಿಯ ಜೀವಿಗಳ ತ್ಯಾಗದ ಪರಿಚಯವಿದೆ. ಇಂತಹ ಆರಾಧನಾ ಪದ್ಧತಿಯಲ್ಲಿ ಅತ್ತ ದೇವಸ್ಥಾನವೂ ಅಲ್ಲ, ಇತ್ತ ಭೂತಸ್ಥಾನವೂ ಅಲ್ಲದ ವಿಶಿಷ್ಟ ಪೂಜಾಸ್ಥಳವಾಗಿ ಬೆಳೆದು ಬಂದ ಬ್ರಹ್ಮ ಬೈದೆರ್ ಗರೊಡಿಗಳು ತೌಳವ ನೆಲದ ಇತಿಹಾಸದಲ್ಲೇ ಒಂದು ಸಾಂಸ್ಕೃತಿಯ ಕುರುಹಾಗಿ ತಲೆ ಎತ್ತಿ ಇಂದಿಗೂ ನಿಂತಿದೆ. ತೆಂಕಣದ ಚಂದ್ರಗಿರಿಯಿಂದ ಉತ್ತರದ ಭದ್ರಗಿರಿಯವರೆಗಿನ ಕರ್ನಾಟಕ ಕರಾವಳಿಯ ತುಳುಭಾಷಾ ಪ್ರದೇಶದಲ್ಲಿ ಭದ್ರಗಿರಿಯಿಂದ ಬೈಂದೂರಿನವರೆಗಿನ ಕನ್ನಡ ಭಾಷಾ ಪ್ರದೇಶದ ಸುತ್ತಮುತ್ತ ಗರೊಡಿಗಳೆಂಬ ವಿಶಿಷ್ಟ ಆರಾಧನಾ ಪದ್ಧತಿ ಹರಡಿರುವುದನ್ನು ಕಾಣಬಹುದು.

ಬ್ರಹ್ಮಬೈದೆರ್ ಗರೊಡಿಗಳ ಹಿನ್ನೆಲೆ

ತುಳುನಾಡಿನಾದ್ಯಂತ ಇಂದು ೨೨೫ ಕ್ಕೂ ಹೆಚ್ಚು ಬ್ರಹ್ಮಬೈದೆರ್ ಗರೊಡಿಗಳೆಂಬ ಆರಾಧನಾ ಕೇಂದ್ರಗಳಿದ್ದು ಅವುಗಳಲ್ಲಿ ತುಳುವ ಸಂಸ್ಕೃತಿಯಲ್ಲಿ ಹಾಗೂ ಜನಮಾನಸದಲ್ಲಿ ಅಚ್ಚೊತ್ತಿ ನಿಂತಿರುವ ‘ನಾಗಬ್ರಹ್ಮ’ನೊಂದಿಗೆ ತುಳುನಾಡಿನ ಅಲೌಕಿಕ ವೀರಪುರಷನಾದ ಕೋಟಿಚೆನ್ನಯರನ್ನು ಆರಾಧಿಸುವ ವಿಶಿಷ್ಟ ಪದ್ಧತಿಯಿದೆ. ತೌಳವ ಸಂಸ್ಕೃತಿಯಲ್ಲಿ ನಾಗಬ್ರಹ್ಮರನ್ನು ಕುರಿತ ನಂಬಿಕೆ, ಕೋಟಿಚೆನ್ನಯರ ಸುತ್ತ ಬೆಳೆದಿರುವ ಕಥಾನಕ ಹಾಗೂ ಗರೊಡಿಗಳು ಆರಾಧನಾ ಕೇಂದ್ರವಾಗಿ ಬೆಳೆದು ಬಂದ ವಿಚಾರವನ್ನು ಪರಿಶೀಲಿಸಿದರೆ ಮಾತ್ರ ತೌಳವ ಸಂಸ್ಕೃತಿಗೆ ಬ್ರಹ್ಮ ಬೈದೆರ್ ಗರೊಡಿಗಳ ಕೊಡುಗೆಯನ್ನು ಅರ್ಥೈಸಬಹುದಾಗಿದೆ.

ತುಳುನಾಡಿನ ನಾಗಬ್ರಹ್ಮ

ತೌಳವ ಜಾನಪದ ಸಂಸ್ಕೃತಿಯಲ್ಲಿ ಅತ್ಯುನ್ನತ ಆರಾಧನಾ ಸ್ಥಾನ ಪಡೆದ ಶಕ್ತಿಯನ್ನು ‘ನಾಗ ಬೆರ್ಮೆರ್’ ಎಂದು ಗುರುತಿಸಲಾಗಿದೆ. ಗರೊಡಿಗಳಲ್ಲಿ ಪೂಜೆಗೊಳ್ಳುವ ಈ ಬ್ರಹ್ಮ ಯಾವ ‘ಶಕ್ತಿ’ಯ ಪ್ರತೀಕ ಎಂಬುದು ಜಿಜ್ಞಾಸೆಯ ವಿಷಯ. ತುಳುವರ ‘ಬೆರ್ಮೆರ್’ ತ್ರಿಮೂರ್ತಿಗಳಲ್ಲೊಬ್ಬನಾದ ಪುರಾಣದ ಬ್ರಹ್ಮನಲ್ಲ, ಜೈನ ಸಂಪ್ರದಾಯವಾದಿಯಾಗಿ ತುಳುವ ಸಂಸ್ಕೃತಿಯಲ್ಲಿ ಸೇರಿಹೋದ ಯಕ್ಷಬ್ರಹ್ಮನೋ ಅಥವಾ ತುಳುವರದ್ದೇ ಆದ ನಾಗಬ್ರಹ್ಮನೋ ಇರಬೇಕು ಎಂಬುದಾಗಿ ಡಾ. ಸುಶೀಲಾ ಉಪಾಧ್ಯಾಯರ ಅಭಿಪ್ರಾಯ.

ತುಳುವ ಸಂಸ್ಕೃತಿಯಲ್ಲಿ ‘ಆಲಡೆ’ ಎಂದು ಕರೆಯಲ್ಪಡುವ ವಿಶಿಷ್ಟ ಶಕ್ತಿ ಕೇಂದ್ರದಲ್ಲಿ ತುಳುನಾಡಿನ ‘ಬೆರ್ಮೆರ್’, ಕ್ಷೇತ್ರಪಾಲ, ರಕ್ತೇಶ್ವರಿ, ನಂದಿಗೋಣ ಮತ್ತು ನಾಗ ಎಂಬ ಐದು ಶಕ್ತಿಗಳನ್ನು ಸಾಮೂಹಿಕವಾಗಿ ಆರಾಧಿಸುತ್ತಾರೆ. ಇದನ್ನು ‘ನಾಗಬೆರ್ಮೆರ್’ ಸ್ಥಾನವೆಂದೂ ಕರೆಯುತ್ತಾರೆ. ತುಳುನಾಡಿನ ಪಡುಬಿದ್ರಿ, ಕವತ್ತಾರು, ಅನಂತಾಡಿಯ ನಾಗಬೆರ್ಮೆರ ಸ್ಥಾನಗಳು ಹೆಸರುವಾಸಿ ಯಾದವುಗಳು. ತುಳುವರೆಲ್ಲರೂ ಮೂಲತಃ ಒಂದಲ್ಲ ಒಂದು ಆಲಡೆಯನ್ನು ನಂಬಿಕೊಂಡು ಬಂದವರು. ಈ ‘ನಾಗಬೆರ್ಮೆರ್’ ಸ್ಥಾನದಲ್ಲಿ ನಾಗ ಮತ್ತು ‘ಬೆರ್ಮೆರ್’ ಪ್ರಬಲ ಶಕ್ತಿದೇವತೆಗಳು. ಈ ಪರಿಕಲ್ಪನೆಯ ವಿಸ್ತಾರವೆನ್ನುವಂತೆ ನಾಗಬ್ರಹ್ಮನ ಆರಾಧನೆಯು ತುಳುನಾಡಿನಲ್ಲಿಂದು ನಡೆದು ಬರುತ್ತಿದೆ.

ಇಲ್ಲಿನ ಬದುಕಿನ ವಿಕಸನವನ್ನು ಜಾತಿ, ಧರ್ಮ ಮತ್ತು ಹೊರಗಿನ ಪ್ರಭಾವವನ್ನು ಹೊರತುಪಡಿಸಿ ಪರಿಶೀಲಿಸಿದರೆ ಮುಖ್ಯವಾಗಿ ನಾಗಾರಾಧನೆ ಮತ್ತು ಭೂತಾರಾಧನೆಗಳೆರಡೂ ಇಲ್ಲಿನ ಇತಿಹಾಸದ ಮೊದಲ ಹಂತದಿಂದಲೂ ಬಂದಿರಬೇಕೆಂಬ ಅನುಮಾನಕ್ಕೆ ಸಮರ್ಥನೆ ದೊರಕುವಂತಾಗಿದೆ ಎನ್ನುತ್ತಾರೆ. ಜಾನಪದ ವಿದ್ವಾಂಸ ಕ.ವೆಂ. ರಾಜಗೋಪಾಲರವರು.

‘ನಾಗಬೆರ್ಮೆರ್’ ಆರಾಧನೆ ತುಳುವರಲ್ಲಿ ಬಲವಾಗಿ ಬೇರೂರಿದ ಜಾನಪದ ನಂಬಿಕೆಯಾದುದರಿಂದ ತುಳುನಾಡಿನಲ್ಲಿ ಸತ್ತ ನಾಗನನ್ನು ಯಾರು ಕಾಣುತ್ತಾರೋ ಆತನು ಆ ಸತ್ತ ನಾಗನಿಗೆ ಶಾಸ್ತ್ರೋಕ್ತ ಉತ್ತರಕ್ರಿಯೆ ಮಾಡಬೇಕೆಂಬ ಬಲವಾದ ನಂಬಿಕೆಯೊಂದಿದೆ. ಶಾಸ್ತ್ರೋಕ್ತವಾಗಿ ಉತ್ತರಕ್ರಿಯೆ ಮಾಡುವಾತ ಸತ್ತ ವ್ಯಕ್ತಿಯ ವಂಶಜನಿರಬೇಕಲ್ಲವೇ? ತುಳುನಾಡಿನ ಪ್ರದೇಶಕ್ಕೆ ನಾಗರಖಂಡವೆಂದು ಹೆಸರಿತ್ತಲ್ಲದೆ, ಇಲ್ಲಿ ನಾಗರೆಂಬ ಆದಿವಾಸಿಗಳು ವಾಸಿಸುತ್ತಿದ್ದರು. ಸರ್ಪಕುಲಲಾಂಛನವಾಗಿದ್ದ ಈ ಜನರಲ್ಲಿ ಸರ್ಪಾರಾಧನೆ ಒಂದು ಸ್ಥಳೀಯ ಮತಾಚರಣೆಯಾಗಿ ಬಳಕೆಯಾಗುತ್ತಿದ್ದಿರಬೇಕು ಎಂಬ ಗೋವಿಂದ ಪೈಯವರ ಉಲ್ಲೇಖವು ಬಹಳ ಮಹತ್ತ್ವದ್ದು (ಗೋವಿಂದ ಪೈ, ೧೯೪೭)

ನಾಗಾರಾಧನೆ ಇಲ್ಲಿನ ಅದಿಮ ಆರಾಧನಾ ವಿಧಿಯಾದುದರಿಂದಲೇ ನಾಗಮಂಡಲದಂತಹ ಅಪೂರ್ವ ಸಾಂಸ್ಕೃತಿಕ ಆಚರಣೆ ತುಳುನಾಡಿಗೆ ಸೀಮಿತ. ಸರ್ಪಾರಾಧನೆ ಮತ್ತು ತುಳುವ ಸಂಸ್ಕೃತಿಗೂ ಇರುವ ನಿಕಟ ಸಂಬಂಧದ ಬಗ್ಗೆ ಬಹಳಷ್ಟು ವಿಷಯ ಸಂಗ್ರಹವಾಗಿದ್ದರೂ ನಾಗಬ್ರಹ್ಮನ ಕಲ್ಪನೆ ತುಳುನಾಡಿನಲ್ಲಿ ಬೆಳೆದು ಬರಲು ನಿಖರವಾದ ಮೂಲ ಆಧಾರವೊಂದು ಇನ್ನೂ ದೊರೆತಿಲ್ಲ.

‘ತುಳುನಾಡಿನ ನಾಗಮಂಡಲದಲ್ಲಿ’ ಬಿಡಿಸಲಾಗುವ ಕೈಕಾಲುಗಳಿಲ್ಲದ ತಲೆಯ ಚಿತ್ರವನ್ನು ‘ಬ್ರಹ್ಮಯಕ್ಷ’ ಎನ್ನಲಾಗುವುದು. ಈ ಬ್ರಹ್ಮಯಕ್ಷ ವೈದಿಕರ ಚತುರ್ಮುಖ ಬ್ರಹ್ಮ ಅಲ್ಲ, ತುಳುವರು ಹೇಳುವ ಬೆರ್ಮೆರ್. ಇದನ್ನು ಸಂತಾನದ ಅಧಿದೇವತೆ ಎಂದು ಹೇಳಲಾಗುತ್ತದೆ (ನಾವಡ, ೧೯೮೯) ಇಲ್ಲಿನ ನಾಗಬೆರ್ಮೆರ್ ಆರಾಧನೆಯಲ್ಲಿ ತನ್ನ ಪೂರ್ವಜರಾದ ‘ನಾಗ ಜನಾಂಗದ’ ಸಂತಾನದ ಅಧಿದೇವತೆಯಾಗಿ ವಂಶೋದ್ಧಾರದ ಕಲ್ಪನೆಯಿದೆಯೇ?

ತುಳುವಿನಲ್ಲಿ ವಂಶೋದ್ಧಾರಕ್ಕೂ ನಾಗಾರಾಧನೆಗೂ ನಿಕಟ ಸಂಬಂಧವನ್ನು ಕಲ್ಪಿಸುವ ಬಲವಾದ ನಂಬಿಕೆ ಪ್ರಚಲಿತವಾಗಿದೆ. ತುಳುನಾಡಿನ ಜನರೆ ತನ್ನ ಪೂರ್ವಜರನ್ನು ಸ್ಮರಿಸುವುದಕ್ಕೂ ನಾಗಬೆರ್ಮೆರ್ ಆರಾಧನೆಗೂ ಸಂಬಂಧವಿದ್ದಂತಿದೆ.

ಕೆಲವು ವಿದ್ವಾಂಸರ ಅಭಿಪ್ರಾಯದಂತೆ ತುಳುನಾಡಿನಲ್ಲಿದ್ದ ಈ ಪ್ರಾಚೀನ ತಾಂತ್ರಿಕ ಪರಿಣತ ಜನವರ್ಗವೊಂದು ಅಧ್ಯಾತ್ಮ ವಿದ್ಯೆಯಲ್ಲಿ ಬಹಳಷ್ಟು ಪ್ರಗತಿ ಹೊಂದಿದವರಾಗಿದ್ದರು. ಇದನ್ನು ಸೂಚಿಸುವ ಹಲವಾರು ಆಚರಣೆಗಳು ಇಂದು ಕೂಡಾ ಉಳಿದು ಬಂದಿರುವ ತುಳುನಾಡಿನ ನಾಗಮಂಡಲ, ಡಕ್ಕೆ ಬಲಿ ಮೊದಲಾದವು ಇವು ತಾಂತ್ರಿಕ ಮೂಲದ ಆಚರಣೆಯಾಗಿರುವಂತೆ ಕಾಣುತ್ತದೆ ಇದರಲ್ಲಿ ಅಳವಡಿಸಲಾಗಿರುವ ತಾಂತ್ರಿಕ ವಿಧಿಗಳು ವೈದಿಕ ವಿಧಿಗಳಷ್ಟೇ ಪ್ರಾಚೀನವಾಗಿರಬೇಕು. (೧೯೮೩ ದೇವಪ್ರಸಾದ್ ಚಟ್ಟೋಪಾಧ್ಯಾಯ ಲೋಕಾಯದ ಕನ್ನಡಾನುವಾದ ವೇಣುಗೋಪಾಲ್, ಶೈಲಜ) ಇದೊಂದು ಅವೈದಿಕ ಮೂಲದ ತಂತ್ರಪಂಥವಾಗಿದ್ದು ಮುಂದೆ ಜೈನ ಮತ್ತು ವೈದಿಕ ಧರ್ಮಗಳ ಪ್ರಭಾವಕ್ಕೊಳಗಾಗಿ ಬದಲಾವಣೆಯನ್ನು ಹೊಂದಿರಬೇಕು. ಡಕ್ಕೆಬಲಿ ಸಂದರ್ಭದಲ್ಲಿ ಬಿಡಿಸುವ ‘ಗಣೇಶ’ನ ಸಂಕೇತದಲ್ಲಿ ಎರಡು ತ್ರಿಕೋನಗಳನ್ನು ಮೇಲು ಕೆಳಗು ಮಾಡಿ ಜೋಡಿಸಿದ ‘ಶ್ರೀಚಕ್ರ’ ಎಂಬ ತಾಂತ್ರಿಕ ಆಕೃತಿಯೊಂದಿದೆ. ತುಳುನಾಡಿನ ಪೂರ್ವಿಕರು ತಾಂತ್ರಿಕ ವಿದ್ಯೆಯಲ್ಲಿ ಪರಿಣಿತರಾಗಿದ್ದಿರಬಹುದೇ? ಇದೊಂದು ಇವತ್ತಿಗೂ ಪರಿಹರಿಸಲ್ಪಡದ ಅಧ್ಯಯನಾತ್ಮಕ ಸಮಸ್ಯೆ. ಹೀಗೆ ತಾಂತ್ರಿಕರಾಗಿದ್ದು ಅಧ್ಯಾತ್ಮ ವಿದ್ಯೆಯಲ್ಲಿ ಮುಂದುವರಿದ ಜನಾಂಗವೊಂದು ಪ್ರಾಚೀನ ಕಾಲದಲ್ಲಿ ತುಳುನಾಡಿನಲ್ಲಿ ಅಸ್ತಿತ್ವದಲ್ಲಿತ್ತು ಎಂಬ ನಂಬಿಕೆಗೆ ಪೂರಕವಾಗುವ ಸಂಶೋಧನಾತ್ಮಕ ಲೇಖನವೊಂದು ಜ್ಯೇಷ್ಠವರ್ಮನ್ ಪ್ರಕಟಿಸಿದ್ದಾರೆ. ಅದರಂತೆ ತುಳುನಾಡಿನ ಪ್ರಾಚೀನ ಜನಾಂಗವೊಂದು ಅಧ್ಯಾತ್ಮ ವಿದ್ಯೆಯಲ್ಲಿ ನಿಷ್ಣಾತರಾಗಿದ್ದ ಭೃಗು ಮಹರ್ಷಿ ಗೋತ್ರಾಪತ್ಯರಾದ ಭಾರ್ಗವರೊಂದಿಗೆ ಇರುವ ಸಂಬಂಧವನ್ನು ಜೇಷ್ಟವರ್ಮನ್ ಪ್ರೌಢಪ್ರಬಂಧವೊಂದರ ಮೂಲಕ ನಿರೂಪಿಸಿದ್ದಾರೆ. ಅಧ್ಯಾತ್ಮ ವಿಶಾರದ ಋಷಿಮೂಲದ ಜನಾಂಗವೊಂದು ತನ್ನ ಮೂಲವನ್ನೇ ಮರೆತು ಪತನ ಹೊಂದಿ ತುಳುನಾಡಿನ ತಾಂತ್ರಿಕ ಆರಾಧನೆಯೊಂದಿಗೆ ಬೆಳೆದು ಬಂದರು ಎಂಬ ಈ ಅಭಿಪ್ರಾಯ ಕೆಲವು ವಿದ್ವಾಂಸರಿಗೆ ಸಂಪೂರ್ಣ ಸ್ವೀಕೃತವಾಗದಿದ್ದರೂ ಜ್ಯೇಷ್ಠವರ್ಮರ ನಿರೂಪಣೆಯು ವಸ್ತು ವಿಚಾರವನ್ನು ಪೂರ್ತಿ ಅಲ್ಲಗಳೆಯಲಾಗದು (ಜ್ಯೇಷ್ಠವರ್ಮನ್, ೧೯೮೯). ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಆಧ್ಯಾತ್ಮ ವಿದ್ಯೆ ಕರಗತವಾಗಲು ಸಹಕಾರಿಯಾದ ಯೋಗಜ್ಞಾನದ ಮೂಲಕ ಯೌಗಿಕ ಚಕ್ರ (ಷಡ್ಚಕ್ರ)ಗಳಲ್ಲಿ ಕುಂಡಲಿನೀ ಶಕ್ತಿ ವಿಕಸನಗೊಳ್ಳುತ್ತಾ ಕಟ್ಟಕಡೆಗೆ ‘ಸಹಸ್ರಾರ’ ಎಂಬ ಯೌಗಿಕ ಚಕ್ರದಲ್ಲಿ ಸಂಯೋಗ ಹೊಂದುವ ಪ್ರಕ್ರಿಯೆಯನ್ನು ಪತಂಜಲಿ ಮುನಿಯ ಅಷ್ಟಾಂಗ ಯೋಗಶಾಸ್ತ್ರ ಉಲ್ಲೇಖಿಸುತ್ತದೆ (ಸುಧಾಕರ ಚತುರ್ವೇದಿ, ೧೯೮೨).

ಕುಂಡಲಿನೀ ಶಕ್ತಿಯು ಸಹಸ್ರಾರದಲ್ಲಿ ವಿಕಸಿತಗೊಂಡಾಗ ಯೋಗಿಯೊರ್ವನಿಗೆ ಆಗುವ ಅನುಭವದಲ್ಲಿ ಸಾವಿರ ಹೆಡೆಗಳನ್ನು ಹೊಂದಿದ ನಾಗನು ತನ್ನ ಹೆಡೆಯನ್ನು ಅರಳಿಸಿ ನಿಂತ ಅಪೂರ್ವ ದೃಶ್ಯದೊಡನೆ ಬ್ರಹ್ಮಜ್ಞಾನವಾಗುವುದೆಂಬ ವಿಚಾರವನ್ನು ಪತಂಜಲಿ ಯೋಗಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಬ್ರಹ್ಮಜ್ಞಾನದೊಡನೆ ನಾಗನ ಸಂಬಂಧದ ದೃಶ್ಯಾನುಭವವನ್ನು ಹೆಣೆಯುವ ತುಳುನಾಡಿನ ತಾಂತ್ರಿಕರಾದ ಪೂರ್ವಜರ ನಾಗಬ್ರಹ್ಮನ ನೆನಪು ಹಾಗೂ ಕಲ್ಪನೆಯೇ ಮುಂದೆ ಪತನ ಹೊಂದಿ ಇಲ್ಲಿನವರಲ್ಲಿ ಕೇವಲ ದೈವಾರಾಧನೆಯು ಉಳಿಯಿತೆ? ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿರುವುದಂತೂ ಸತ್ಯ.

ಹೀಗೆ ತುಳುವ ಸಂಸ್ಕೃತಿಯಲ್ಲಿ ನಾಗಬೆರ್ಮೆರ್ ಆರಾಧನೆಯ ಹಿಂದೆ ಹಲವಾರು ಕುತೂಹಲಕಾರಿ ಸಂಗತಿಗಳು ಬೆಳೆದು ಬಂದಿವೆ. ನಾಗನ ಆಕೃತಿಯೊಂದಿಗೆ ಬ್ರಹ್ಮನ (ಚತುರ್ಮುಖ ಬ್ರಹ್ಮನಲ್ಲ) ಅರ್ಚನಾಮೂರ್ತಿ ತುಳುನಾಡಿನ ಗರೊಡಿಗಳಲ್ಲಿರುವ ಹಿನ್ನೆಲೆಯಲ್ಲಿ ಇದನ್ನು ಅವೈದಿಕ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ.

ಕೋಟಿ ಚೆನ್ನಯರ ಕಥಾನಕ

ತುಳುನಾಡಿನ ಜನಮಾನಸದಲ್ಲಿ ಅಲೌಕಿಕ ವೀರಪುರುಷರೂ ಐತಿಹಾಸಿಕ ವೀರರೂ ಆದ ಕೋಟಿಚೆನ್ನಯರ ಕಥೆ ಗಾಢವಾಗಿ ನೆಲೆಯೂರಿದೆ. ತುಳುನಾಡಿನ ಸಾಂಸ್ಕೃತಿಕ ವೀರರಾದ ಕೋಟಿಚೆನೃನಯರ ಕಥಾನಕ ಕಾವ್ಯಧಾರೆಯಾಗಿ ತುಳುಭಾಷೆಯ ಮೌಖಿಕ ಕಥನಕಾವ್ಯ ಪಾಡ್ದನದಲ್ಲಿ ಹಲವಾರು ತಲೆಮಾರಿನಿಂದ ಕಾಪಿಡಲಾಗಿದೆ. ಇತ್ತೀಚೆಗೆ ಇದರ ಕಥಾನಡಿಗೆ ಗದ್ಯ ಸಾಹಿತ್ಯದಲ್ಲಿ, ಕಥನಕಾವ್ಯವಾಗಿ ಯಕ್ಷಗಾನ, ನಾಟಕ, ಚಲನಚಿತ್ರ, ಧ್ವನಿಸುರುಳಿ ಮೊದಲಾದ ದೃಶ್ಯ ಶ್ರಾವ್ಯ ಮಾಧ್ಯಮಗಳ ಮೂಲಕ ಬೆಳಕು ಕಂಡು ತುಳುವರ ಲಕ್ಷ್ಯ ಸೆಳೆದಿದೆ. ಸಾಂಸ್ಕೃತಿಕ ವೀರರಾಗಿ ಗುರುತಿಸಲ್ಪಟ್ಟಿರುವ ಈ ಯಮಳರನ್ನು ಗರೊಡಿಗಳಲ್ಲಿ ತುಳುನಾಡಿನ ‘ಬೆರ್ಮೆರ್’ ಶಕ್ತಿಯೊಂದಿಗೆ ಆರಾಧಿಸಲ್ಪಡುತ್ತಿರುವುದು ವೀರ ಆರಾಧನೆಯ ಪ್ರತೀಕ. ಅವರ ಕಥಾನಕವನ್ನೂ ಪ್ರಸ್ತುತಪಡಿಸುವುದು ಲೇಖನದ ಸೀಮಿತ ಚೌಕಟ್ಟಿನಲ್ಲಿ ಅಸಾಧ್ಯವಾದರೂ ಅವರ ಜೀವನದ ಉದ್ದೇಶವನ್ನು ತಿಳಿಸುವುದು ಸೂಕ್ತ. ತುಳುನಾಡಿನ ಅಂದಿನ ನಂಬುಗೆಗಳನ್ನು ಅನುಸರಿಸಿಕೊಂಡು ಬಂದ ಜಾತಿಪದ್ಧತಿ, ವರ್ಗಭೇದ, ದಬ್ಬಾಳಿಕೆಯಿಂದ ಜನಸಾಮಾನ್ಯರು ತತ್ತರಿಸಿಕೊಂಡಿದ್ದ ಹದಿನೇಳನೇ ಶತಮಾನದ ಸಂಘರ್ಷಮಯ ಸಂದರ್ಭದಲ್ಲಿ ತುಳುನಾಡಿನ ಪಡುಮಲೆ-ಪಂಜ-ಎಣ್ಮೂರು ಪರಿಸರದಲ್ಲಿ ಸಮಾಜದ ಮಧ್ಯೆ ಎದ್ದು ನಿಂತು, ಎದೆ ಮೆರೆಸಿ ಸತ್ಯ ಧರ್ಮದ ರಕ್ಷಣೆ ಮಾಡಿದವರು ಕೋಟಿಚೆನ್ನಯರು. ಅಸಹಾಯಕ ಜನವರ್ಗಕ್ಕೆ ನ್ಯಾಯದೊರಕಿಸಿದ, ಅನ್ಯಾಯವನ್ನು ತುಳಿದು ತಮ್ಮ ಇಚ್ಛೆಯಂತೆ ಸುಧಾರಣೆ ಮಾಡುವಾಗ ಎದುರಾದ ದುಷ್ಟ ಶಕ್ತಿಗಳ ದಮನಕ್ಕೆ ಕಾರಣರಾದವರು ಕೋಟಿಚೆನ್ನಯರು. ಅಂದಿನ ತುಳುನಾಡಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅನ್ಯಾಯವನ್ನು ಪೋಷಿಸುವ ರಾಜ್ಯಾಧಿಕಾರವನ್ನು ಎದುರಿಸುವುದು ಅಸಾಧ್ಯ ಘಟನೆಯಾದುದರಿಂದ ಕೋಟಿಚೆನ್ನಯರು ಇಲ್ಲಿನ ಜನಪದ ರಂಗದಲ್ಲಿ ಅಲೌಕಿಕ ವೀರಪುರುಷರೆಂದು ಪರಿಗಣಿಸಲ್ಪಟ್ಟಿದಾರೆ. ಆದುದರಿಂದ ತುಳುನಾಡಿನ ಅಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆಯೊಂದು ಕೋಟಿಚೆನ್ನಯರಿಂದ ನಡೆಯಿತು. ಈ ಅವಳಿ ವೀರರನ್ನು ತುಳುನಾಡಿನಾದ್ಯಂತ ಜಾತಿ ಮತ ವರ್ಗ ಭೇದವಿಲ್ಲದೆ ಹಳ್ಳಿಹಳ್ಳಿಗಳಲ್ಲಿ ಗರೊಡಿ ಎನ್ನುವ ದೇವ ಮಂದಿರಗಳಲ್ಲಿ ನಾಗಬ್ರಹ್ಮರ ಜೊತೆಗೆ ಪೂಜಿಸುತ್ತಿದ್ದಾರೆ. ಈ ಗರೊಡಿಗಳೆಂಬ ಆರಾಧನಾ ಸ್ಥಳಗಳು ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳಾಗಿ ಬೆಳೆಯುತ್ತಿವೆ.

ತುಳುನಾಡಿನ ಐತಿಹಾಸಿಕ ವೀರಪುರುಷರಾದ ಕೋಟಿಚೆನ್ನಯರನ್ನು ಇಲ್ಲಿನ ಸಾಂಸ್ಕೃತಿಕ ವೀರರಾಗಿ ಪರಿಗಣಿಸಿದ ಜನಸಮುದಾಯ. ಅವರ ಬಗೆಗಿನ ಕಥನ ಕಾವ್ಯವನ್ನು (ಪಾಡ್ದನ) ರಚಿಸಿದಾಗ ಪರಂಪರೆಯಾಗಿ ಬಂದ ಐತಿಹ್ಯ ಹಾಗೂ ಪುರಾಣಗಳೊಂದಿಗೆ ರಂಜನೆಯನ್ನು ಸೇರಿಸಿ, ನಂಬಿಕೆ, ಸಮರ್ಪಣ ಭಾವ ಬೆರೆತ ಧ್ವನಿಯಾಗಿ ಪ್ರಕಟಪಡಿಸಿದರು. ಹೀಗೆ ರಚಿತವಾದ ಎಲ್ಲಾ ಜನಪದ ಕಾವ್ಯ-ಕತೆಗಳಲ್ಲೂ ಮಣ್ಣಿನ ವಾಸನೆಯ ಅತಿಭಾವುಕತೆಯ ಕಲ್ಪನಾ ವಿಲಾಸಗಳನ್ನೂ, ಅತಿಮಾನವತೆಯ ಅಲೌಕಿಕ ಪವಾಡಗಳನ್ನೂ ಕಾಣುತ್ತೇವೆ. ಆದರೆ ಇವುಗಳ ಹಿಂದೆ ಸತ್ಯ ಧರ್ಮಗಳಿಂದ ಬದುಕಬೇಕೆಂಬ ತುಳುನಾಡಿನ ಸಾಂಸ್ಕೃತಿಕ ಮೌಲ್ಯದ ಕಾಳಜಿಯು ಗಾಢವಾಗಿದೆ. ಕೋಟಿ ಚೆನ್ನಯರ ಕಥಾನಕದಲ್ಲೂ ನಾವು ಇದನ್ನು ಕಾಣಬಹುದು.

ಬ್ರಹ್ಮಬೈದೆರ್ ಗರೊಡಿಗಳೆಂಬ ಆರಾಧನಾ ಕೇಂದ್ರ

ಕೋಟಿಚೆನ್ನಯರು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಲು ಬೇಕಾದ ದೈಹಿಕ ಶಕ್ತಿ ಸಂಚಯ, ಮನೋಸ್ಥೈರ್ಯ ಧೀರೋದ್ಧತ ಗುಣ, ಧೈರ್ಯ-ಸ್ಥೈರ್ಯಗಳನ್ನು ಹೊಂದುವಲ್ಲಿ ಅವರು ತುಳುನಾಡಿನ ಗರೊಡಿಗಳಲ್ಲಿ ಮಾಡಿದ ಸಾಧನೆಯು ಮಹತ್ವದ ಸಂಗತಿ. ಅಂದಿನ ದಿನಗಳಲ್ಲಿ ಕೇರಳದಿಂದಲೂ ಬರುತ್ತಿದ್ದ ಹಲವಾರು ಮಂದಿ ವೀರರು ತುಳುನಾಡಿನಲ್ಲಿ ಪ್ರಚಲಿತವಿದ್ದ ‘ಕಳರಿ’ಯಂತಹ ಯುದ್ಧ ತಂತ್ರಗಳನ್ನು ಕಲಿತು ಹೋಗುತ್ತಿದ್ದರು ಎಂಬುದಾಗಿ ಕೇರಳದ ಮೌಖಿಕ ಸಾಹಿತ್ಯ ‘ವಡಕ್ಕನ್‌ ಪಾಟ್’ಲ್ಲಿ ಹೇಳುತ್ತದೆ. ಈ ಬಗೆಯ ಕ್ಲಿಷ್ಟ ವಿದ್ಯೆಗಳನ್ನು ಗರೊಡಿಗಳಲ್ಲಿ ತುಳುವ ಗುರುಗಳಿಂದ ಕಲಿಸಲಾಗುತ್ತಿತ್ತು. ಇಂತಹ ಗರೊಡಿಗಳು ತುಳುನಾಡಿನಲ್ಲಿ ಬೆಳಗಲಿ ಎಂಬ ಉದ್ದೇಶದಿಂದಲೂ, ತುಳುನಾಡಿನ ಜನಸಾಮಾನ್ಯರು ತಮ್ಮ ದೇಹದಾಢ್ಯ, ಮನೋನಿಗ್ರಹ, ಮನೋಸ್ಥೈರ್ಯವನ್ನು ತಮ್ಮಂತೆ ಬೆಳೆಸುವಂತಾಗಲಿ ಎಂಬ ಉದ್ದೇಶದಿಂದ ಕೋಟಿಯು ತನ್ನ ಅವಸಾನ ಕಾಲದಲ್ಲಿ ಊರಿನ ಅರಸರಾದ ಬಲ್ಲಾಳರಲ್ಲಿ ಗರೊಡಿ ಕಟ್ಟಿಸುವ ವಚನ ಕೇಳುತ್ತಾರೆ. ಅದರಂತೆ ತುಳುನಾಡಿನಲ್ಲಿ ೬೬ ಮೂಲ ಗರೊಡಿಗಳು ಮತ್ತು ೩೩ ‘ತಾವು’ ಎಂಬ ಬಯಲು ಗರೊಡಿಗಳು ಸ್ಥಾಪನೆಯಾದವು.

ತುಳುನಾಡಿನಲ್ಲಿ ಗರೊಡಿ ಸ್ಥಾಪನೆಯ ಇನ್ನೊಂದು ಮೂಲ ಉದ್ದೇಶವೆಂದರೆ ಇಲ್ಲಿನ ಜನವರ್ಗದಲ್ಲಿ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವುದೇ ಆಗಿದೆ. ಕೋಟಿಚೆನ್ನಯರು ಬಿಲ್ಲವ ಸಮಾಜದಿಂದ ಹುಟ್ಟಿ ಬಂದ ವೀರರು. ಇಲ್ಲಿನ ಎರಡು ಪ್ರಮುಖ ಸಮಾಜವಾದ ಬಿಲ್ಲವರು ಮತ್ತು ಬಂಟರು ಯೋಧ ಪ್ರವೃತ್ತಿಯ ಜನವರ್ಗ. ಮೂಲತಃ ಪ್ರತಿರೋಧ ಪ್ರವೃತ್ತಿಯ ಈ ಜನಾಂಗ ಪರಸ್ಪರ ಸಾಮರಸ್ಯದಿಂದ ಬದುಕಿದರೆ ಮಾತ್ರ ತುಳುನಾಡಿನಲ್ಲಿ ಏಳಿಗೆಯನ್ನು ಪಡೆಯಬಹುದು. ಹಾಗೂ ಇಲ್ಲಿನ ಸಾಂಸ್ಕೃತಿಕ ಮೌಲ್ಯವನ್ನು ಉಳಿಸಿ ಬೆಳೆಸಬಹುದು. ಈ ವಿಶಾಲ ದೃಷ್ಟಿಯಿಂದಲೂ ಗರೊಡಿಗಳ ಸ್ಥಾಪನೆಯ ಔಚಿತ್ಯವಿದೆ.

ಪ್ರಸಕ್ತ ಕಾಲದ ಸಾಮಾಜಿಕ ಬದಲಾವಣೆಯಿಂದಾಗಿ ಗರೊಡಿಗಳು ತುಳುನಾಡಿನಲ್ಲಿ ಭಕ್ತಿಭಾವ ಬೆಳಗುವ ಆರಾಧನಾ ಕೇಂದ್ರವಾಗಿ, ಬಹಳಷ್ಟು ಕಾರಣೀಕದ, ಸಾಮಾಜಿಕ ಸಾಮರಸ್ಯವನ್ನು ಉಳಿಸಿ ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಬಂಟ ಸಮಾಜ ಮತ್ತು ಬಿಲ್ಲವ ಸಮಾಜದ ಹಿರಿಯರು ಒಟ್ಟು ಸೇರಿ ಗರೊಡಿಗಳಲ್ಲಿ ಸೇವೆ, ಉತ್ಸವ, ನೇಮ, ಕೋಲ ಎಲ್ಲವನ್ನೂ ನಡೆಸುವಂತೆ ವ್ಯವಸ್ಥೆಯಿದ್ದು ಸಮಾಜದ ಇತರ ವರ್ಗದವರನ್ನೂ ಸೇರಿಸಿ ಊರಿನ ಉತ್ಸವವಾಗಿ ಮೂಡಿಬಂದಿದೆ. ಇದರೊಂದಿಗೆ ತುಳುನಾಡಿನ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಭಕ್ತಿ ಕೇಂದ್ರವಾಗಿ ಶ್ರೀ ಬ್ರಹ್ಮ ಬೈದೆರ್ ಗರೊಡಿಗಳು ಬೆಳಗುತ್ತಿವೆ. ಇಂದು ತುಳುನಾಡಿನಲ್ಲಿ ೨೨೫ ಕ್ಕೂ ಹೆಚ್ಚು ಗರೊಡಿಗಳು ತುಳುವ ಸಂಸ್ಕೃತಿಗೆ ವಿಶಿಷ್ಟ ಕೊಡುಗೆ ನೀಡುವ ಸಾಂಸ್ಕೃತಿಕ ಬೆಳಕು ನೀಡುವ ದೀಪ ಸ್ತಂಭಗಳು.

ಪ್ರಕೃತಿಯ ಅದ್ಭುತ ಶಕ್ತಿಗಳನ್ನು ದೇವರೆಂದೇ ಪೂಜಿಸಿದ ತುಳುನಾಡಿನ ಮೂಲ ಸಂಸ್ಕೃತಿಯಲ್ಲಿ ಬೆರ್ಮೆರ್ ಎಂಬ ದೇವರ ನಂಬುಗೆ ಪ್ರಾಚೀನ ಕಾಲದಿಂದಲೂ ಬೆಳೆದುಬಂದಿದೆ. ವಿವರಿಸಲಾರದ ‘ಅಣೋರಣಿಯಾನ್, ಮಹತೋಮಹಿಯಾನ್’ ಎಂಬ ಮಹತ್ ಶಕ್ತಿಯನ್ನು ಬೆರ್ಮೆರ್ ಎಂದು ಅರ್ಪಣಾಭಾವದಿಂದ ಇಲ್ಲಿನ ಜನ ಪೂಜಿಸಿದರು. ಇದರೊಂದಿಗೆ ಮನುಷ್ಯ ಮತ್ತು ದೈವಗಳ ಸಂಬಂಧಿತ ಪೂಜಾ ವಿಧಾನ ಭೂತಾರಾಧನೆಯಾಗಿ ಇನ್ನೊಂದು ರೀತಿಯ ಆರಾಧನಾ ಪದ್ಧತಿ ತುಳುನಾಡಿನ ವೈಶಿಷ್ಟ್ಯ. ಪ್ರಕೃತಿಯ ಭಯಾನಕ ಶಕ್ತಿಗಳನ್ನು, ಅದ್ಭುತಗಳನ್ನು ಸಾಧಿಸಿದ್ದರೆಂಬ ಗತಕಾಲದ ಕೆಲವು ವ್ಯಕ್ತಿಗಳನ್ನು ದೈವಗಳೆಂದು ನಂಬಿ ಅಂತರವನ್ನು ತೃಪ್ತಿಪಡಿಸುವುದಕ್ಕಾಗಿ ಬೆಳೆದು ಬಂದ ಆರಾಧನಾ ಕ್ರಮವೇ ಭೂತಾರಾಧನೆ. ಇಲ್ಲಿ ಸಾತ್ವಿಕ ಆರಾಧನೆಗಿಂತಲೂ ತಾಮಸ ಆರಾಧನಾ ಪದ್ಧತಿಗೇ ಹೆಚ್ಚು ಪ್ರಾಶಸ್ತ್ಯ. ಮೂರನೆಯ ಸಂಬಂಧ ‘ಮನುಷ್ಯ-ಮನುಷ್ಯ ಸಂಬಂಧ’. ಇತಿಹಾಸದಲ್ಲಿ ಸಂದುಹೋದ ತುಳುನಾಡಿನ ಮಹಾಮಾನವರು ತಮ್ಮ ಅಲೌಕಿಕ ಸಾಧನೆಯಿಂದ ಪೂಜಾರ್ಹರಾಗಿ ದೇವರ ಸಾನ್ನಿಧ್ಯದೊಂದಿಗೆ ಸಾತ್ವಿಕ ಪೂಜೆಯೊಡನೆ ಆರಾಧಿಸಲ್ಪಡುವರು. ಅಂತಹ ಗುಡಿಗಳಲ್ಲಿ ಬ್ರಹ್ಮಬೈದೆರ್ ಗರೊಡಿಗಳೂ ಇನ್ನೂ ತನ್ನ ಮೂಲ ಸತ್ವವನ್ನು ಉಳಿಸುತ್ತಾ ಬಂದಿವೆ.

ಈ ಗರೊಡಿಗಳಲ್ಲಿನ ರಚನಾ ಕ್ರಮ, ಅಲ್ಲಿರುವ ಆರಾಧನಾ ವಿಧಾನ, ಅಲ್ಲಿ ನಡೆಯುವ ವಿಶಿಷ್ಟ ಆಚರಣೆಗಳು, ಸಮಾಜಿಕ ಕಾರ್ಯಕ್ರಮಗಳು, ಜನಪದ ನಂಬಿಕೆಗಳಲ್ಲಿ ಪ್ರತಿಬಿಂಬಿಸುವ ವಿಚಾರಗಳು, ಗರೊಡಿಗಳಲ್ಲಿರುವ ‘ಬೆರ್ಮೆರ್’ ದೇವರ ಬಗೆಗಿನ ಅಧ್ಯಯನ, ದರ್ಶನ ಪಾತ್ರಿಗಳು ಅನುಸರಿಸಬೇಕಾದ ನಿಯಮ, ನಿಷ್ಠೆ, ದೀಕ್ಷಾ ಬದ್ಧನಾದ ಗರೊಡಿ ಪೂಜಾರಿಯ ಜೀವನ ಕ್ರಮ, ವರ್ಷಾವಧಿ ಜಾತ್ರೆಗಳಲ್ಲಿರುವ ವಿಶಿಷ್ಟ ಅನುಷ್ಠಾನಗಳು ಇವನ್ನೆಲ್ಲಾ ಅಧ್ಯಯನಕ್ಕೊಳಪಡಿಸಿದಾಗ ಬ್ರಹ್ಮ ಬೈದೆರ್ ಗರೊಡಿಗಳು ಸಾತ್ವಿಕ ಪೂಜೆಯ ಆರಾಧನಾ ಕೇಂದ್ರಗಳ ರಚನೆಯೆಡೆಗೆ ಒಲವು ತೋರಿದುದು ಆರಾಧನಾ ರಂಗದಲ್ಲಿ ತೋರಿ ಬಂದ ಮಹತ್ತ್ವದ ಕವಲು. ಗರೊಡಿಗಳ ಬಗ್ಗೆ ವಿದ್ವಾಂಸರೋರ್ವರು ವಿವರಿಸಿದ್ದು ಹೀಗೆ – ‘‘ತುಳುನಾಡಿನ ಪ್ರಾಣಿ ಬಲಿಯ ಭೂತಾರಾಧನೆಯಿಂದ ಸಾತ್ವಿಕ ಆರಾಧನಾ ಪದ್ಧತಿಯೆಡೆಗೆ ಜನಮನದಲ್ಲಾದ ಬದಲಾವಣೆ ಹಾಗೂ ಆರಾಧನೆಯಲ್ಲೊಂದು ಸಾತ್ವಿಕ ಸಂಕ್ರಾಂತಿ ಗರೊಡಿಗಳಿಂದಾಯಿತು. ದೇವಸ್ಥಾನ ಪ್ರವೇಶ ನಿಷಿದ್ಧವಾಗಿದ್ದ ಜನಾಂಗಗಳಿಗೆ ಸಾತ್ವಿಕ ಆರಾಧನಾ ಪದ್ಧತಿಯನ್ನು ಕಲಿಸಿಕೊಟ್ಟು, ಆರಾಧನೆಯಲ್ಲಿ ಸಂಕ್ರಾಂತಿ ತಂದ ಗ್ರಾಮ ದೇಗುಲವಾಗಿ ಗರೊಡಿಗಳು ಬೆಳೆದು ಬಂದುವು’’. ಇದು ಒಪ್ಪ ತಕ್ಕ ಮಾತು.

ಆಕರಸೂಚಿ

೧. ಗೋವಿಂದ ಪೈ, ೧೯೪೭, ತುಳುನಾಡ ಪೂರ್ವಸ್ಮೃತಿ, ‘ತೆಂಕನಾಡು’ ಗ್ರಂಥದಲ್ಲಿ ಪ್ರಕಟಿತ.  ಪ್ರ.:ಕಾಸರಗೋಡು ಸಾಹಿತ್ಯ ಸಮ್ಮೇಳನ ನೆನಪಿನ ಸಂಪುಟ, ಕಾಸರಗೋಡು

೨. ಜ್ಯೇಷ್ಠವರ್ಮನ್, ೧೯೮೨

೩. ನಾವಡ ಎ.ವಿ., ಗಾಯತ್ರಿ ನಾವಡ, ೧೯೮೯, ಕಾಡ್ಯನಾಟ : ಪಠ್ಯ ಮತ್ತು ಪ್ರದರ್ಶನ, ಪ್ರ: ರಾಷ್ಟ್ರಕವಿ  ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.