ಮೂಲ : ಹೈಡ್ರೂನ್ ಬ್ರೂಕ್ನರ್
ಕನ್ನಡಕ್ಕೆ : ಮಾಧವ ಪೆರಾಜೆ

ಪುಗಿಲು

ಪ್ರಸ್ತುತ ಲೇಖನದಲ್ಲಿ ಜಾನಪದ ಸಂಸ್ಕೃತಿಗೆ ಸೇರಿದ ಮೌಖಿಕ ಪರಂಪರೆಯ ಆಚರಣೆಯೊಂದರ ಅಧ್ಯಯನ ಮಾಡಲಾಗಿದೆ. ಇದರಲ್ಲಿ ದಕ್ಷಿಣ ಕನ್ನಡದಲ್ಲಿಯ ಸ್ಥಳೀಯ ದೈವಗಳ ಆರಾಧನೆಯನ್ನು ಗಮನಿಸಲಾಗಿದೆ. ಹೆಚ್ಚುಕಡಿಮೆ ಸುಮಾರು ೮೦ ಮೈಲು ಉದ್ದ ಮತ್ತು ಹತ್ತರಿಂದ ನಲವತ್ತೈದು ಮೈಲು ವಿಸ್ತಾರದ, ಅರಬ್ಬೀ ಸಮುದ್ರದಿಂದ ಬೇರ್ಪಟ್ಟ ಪಶ್ಚಿಮ ಘಟ್ಟ ಪ್ರದೇಶದ ಮಂಗಳೂರು ಮತ್ತು ಉಡುಪಿ ನಡುವಣ ಕರಾವಳಿ ಪ್ರದೇಶದ ವ್ಯಾಪ್ತಿ ಎಂದು ಪರಿಗಣಿಸಬಹುದು. ತುಳು ಮಾತಾಡುವ, ಭತ್ತ ಬೆಳೆಯುವ ರೈತಾಪಿ ವರ್ಗಕ್ಕೆ, ಬಿಲ್ಲವ ಜಾತಿಯವರು ಹಾಗೂ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅವರಿಗೆ ಹತ್ತಿರದವರಾದ ಗಾಣಿಗ, ಕ್ಷೌರಿಕ ಮತ್ತು ಭೂತ ಕಟ್ಟುವ ಅನೇಕ ಜಾತಿಯವರಿಗೆ ಈ ಸ್ಥಳೀಯ ದೈವಗಳ ಆರಾಧನೆ ಸಂಪ್ರದಾಯದಿಂದ ಬಂದಿರುತ್ತದೆ. ಸಾಮಾಜಿಕ ಸ್ತರ ವಿನ್ಯಾಸ ಈ ಜಾತಿಗಳಲ್ಲಿ ಇನ್ನೂ ಊಳಿಗಮಾನ್ಯ ಪದ್ಧತಿಯನ್ನು ಎಷ್ಟರಮಟ್ಟಿಗೆ ಉಳಿಸಿಕೊಂಡಿದೆಯೆಂದರೆ, ಶ್ರೀಮಂತನೊಬ್ಬ ಬಡವನನ್ನು ಮೂಲೆಗೆ ತಳ್ಳಿ ಮೇಲೇರಿದನೆಂದರೆ ಆತ ಈ ದೈವದ ಹೆಸರಿನಲ್ಲಿಯೇ ಅಧಿಕಾರ ನಡೆಸಬಲ್ಲವನಾಗಿರುತ್ತಾನೆ. ಈ ದೈವಗಳೂ ಅರಸು, ವೀರನಾಯಕ, ನಿರ್ಧಾರ, ತೀರ್ಮಾನಗಾರ ಎಂಬಂತಿದ್ದು ಸ್ಥಳೀಯ ಅಧಿಕಾರಿಗಳ ಪ್ರತಿನಿಧಿಗಳಾಗಿರುತ್ತದೆ. ಅನೇಕ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳಾದಾಗಲೂ ಈ ಪ್ರಾಚೀನ ಸಾಮಾಜಿಕ ಸ್ತರವಿನ್ಯಾಸ ಇನ್ನೂ ಹಾಗೆಯೇ ವ್ಯವಸ್ಥಿತವಾಗಿ ಮುಂದುವರಿಯುತ್ತಿದ್ದು, ಇಂತಹ ಆಚರಣೆಗಳ ಮೂಲಕ ಅಭಿವ್ಯಕ್ತಿಗೊಳ್ಳುತ್ತಿದೆ. ಅವುಗಳು ಫಲವಂತಿಕೆ ಆಚರಣೆ, ಪಿತೃಪೂಜೆ, ಸ್ಥಳೀಯ ವೀರರು ಮತ್ತು ಊರ ದೈವಗಳಿಗೆ ಸಂಬಂಧಿಸಿದ್ದಾಗಿವೆ.

ಪ್ರಸ್ತುತ ಪ್ರಬಂಧದಲ್ಲಿ ದೈವತ್ವಕ್ಕೇರಿಸ್ವಟ್ಟ ದನಗಾಹಿಯೊಬ್ಬನ ಕಥೆಯನ್ನು ಹೇಳುವ ಮೌಖಿಕ ಪಠ್ಯವೊಂದನ್ನು ಚರ್ಚಿಸಲಾಗಿದೆ. ಈ ವ್ಯಕ್ತಿ ಒಂದೇ ಹಳ್ಳಿಯಲ್ಲಿ ಎರಡು ಕಡೆಗಳಲ್ಲಿ ಮಾತ್ರ ಆರಾಧನೆ ಹೊಂದುತ್ತಾನೆ. ಮೊದಲ ಬಾರಿಗೆ ಈ ಕಥೆ ಒಂದೇ ಎನಿಸುವಂತೆ ತೋರುತ್ತದೆ. ಆದರೆ ಸಂಬಂಧಿತ ಪಠ್ಯ ಮತ್ತು ಆಚರಣಾತ್ಮಕ ಸಂಪ್ರದಾಯಗಳು ಅವುಗಳ ಜತೆ ಜತೆಗೆ ಇದಕ್ಕೂ ಹತ್ತಿರ ಸಂಬಂಧವಿದೆ ಎಂದೆನಿಸುತ್ತದೆ. ತುಳುವ ಸಂಸ್ಕೃತಿಯ ವೈವಿಧ್ಯಮಯವಾದ ವ್ಯವಸ್ಥೆಯಲ್ಲಿ ನಿರ್ದಿಷ್ಟ ಪಠ್ಯವನ್ನು ಅರ್ಥೈಸುವುದು ಮತ್ತದೇ ಸಮಯದಲ್ಲಿ ಕಥೆ ಮತ್ತು ಆಚರಣೆಯಲ್ಲಾಗುವ ಸೂಕ್ಷ್ಮವಾದ ಮಾರ್ಪಾಡುಗಳು ಸ್ಥಳೀಯ ಸಂಪ್ರದಾಯಕ್ಕೊಂದು ಸಮಗ್ರತೆಯನ್ನು ತರುವ ಪರಿಯನ್ನು ವಿವರಿಸುವುದು ಇಲ್ಲಿಯ ಉದ್ದೇಶವಾಗಿದೆ.

ಮುಂದಿನ ಭಾಗದಲ್ಲಿ (ii) ಈ ಪ್ರಕಾರದ ಸಾಮಾನ್ಯ ಸ್ವರೂಪವೊಂದರ ಚೌಕಟ್ಟನ್ನು ನೀಡುವುದರೊಂದಿಗೆ ಅದಕ್ಕೆ ಸಂಬಂಧಿಸಿದ ವಿವರಣೆ ಮತ್ತು ಅದರ ಆಚರಣಾತ್ಮಕ ಪ್ರದರ್ಶನದ ಬಗೆಗೂ ಗಮನಹರಿಸಲಾಗಿದೆ. ಅದರ ಮುಂದಿನ ಭಾಗದಲ್ಲಿ (iii) ಅಂತರ್ಸಂಬಂಧಿತ ಮತ್ತು ಪ್ರದರ್ಶನ ಸಂಪ್ರದಾಯವನ್ನು ನಿರೂಪಿಸಲು ಪೂರ್ಣವಾಗಿ ಪಠ್ಯ, ಅದರ ಭಿನ್ನ ಪಾಠಗಳು, ಮತ್ತು ವ್ಯಕ್ತಿಗಳ ನಂಬಿಕೆಗಳನ್ನು ಬಳಸಿಕೊಳ್ಳಲಾಗಿದೆ. ಕೊನೆಯ ಹಂತದಲ್ಲಿ (iv) ಪಠ್ಯವನ್ನು ವಿಸ್ತೃತ ನೆಲೆಗಟ್ಟಿಗೆ ಒಯ್ದ ಮೇಲೆ ಅದರ ವೈಶಿಷ್ಟ್ಯವನ್ನು ಮರು ಪರಿಶೀಲನೆಗೊಳಪಡಿಸಲಾಗಿದೆ.

ಪಠ್ಯ, ಸ್ಥಳೀಕರಣ ಮತ್ತು ಆಚರಣಾತ್ಮಕ ಪ್ರದರ್ಶನ

ಒಟ್ಟಾರೆಯಾಗಿ ಒಂದು ಮಿಲಿಯ ತುಳು ಭಾಷಿಕರಿರುವ ತುಳುನಾಡಿನಲ್ಲಿ ಭಾಷಾ ಮತ್ತು ಧಾರ್ಮಿಕ ವೈಶಾಲ್ಯತೆಯನ್ನು ಗಮನಿಸಿ ಹೇಳುವುದಾದರೆ ಒಟ್ಟು ಭಾಷಾ ಪ್ರದೇಶ ಕಿರಿದೇ ಎಂದೆನಿಸುತ್ತದೆ. ಇವೆರಡರಲ್ಲಿಯೂ ಧಾರ್ಮಿಕ ಮತ್ತು ಸಾಮಾಜಿಕ ಭಿನ್ನತೆಗಳಿವೆ. ಉದಾಹರಣೆಗಾಗಿ ಹೇಳುವುದಾದರೆ ದಕ್ಷಿಣ ಮತ್ತು ಆಗ್ನೇಯ ಭಾಗದ ಭೂತಾರಾಧನೆಯು ಕೇರಳದ ಬಡಗಣ ಭಾಗದ ತೆಯ್ಯಂ ಸಂಪ್ರದಾಯಕ್ಕೆ ಹೆಚ್ಚು ಹತ್ತಿರವಾಗಿದೆ. ಆದರೆ ತುಳುನಾಡಿನ ತೆಂಕಣ ಭಾಗದಲ್ಲಿ ಕನ್ನಡ ಸಂಪ್ರದಾಯದ ಯಕ್ಷಗಾನದ ಪ್ರಭಾವವಾಗಿರುವುದು ಕಂಡುಬರುತ್ತದೆ.

ತುಳುನಾಡಿನ ಮಧ್ಯಭಾಗದಲ್ಲಿರುವ ಭೂತ ಕಟ್ಟುವ ಜನಾಂಗಗಳಲ್ಲೊಂದಾದ ಪಂಬದರಿಂದ ಲಭ್ಯವಿರುವ ಆಕರಗಳತ್ತ ಗಮನಹರಿಸಿದ್ದೇನೆ. ಕರಾವಳಿಯಲ್ಲಿ ಸುಮಾರು ೨೦ ಮೈಲುಗಳ ಅಂತರದಲ್ಲಿ, ಮಂಗಳೂರಿನ ಸುತ್ತಮುತ್ತ ಈ ಪಂಬದರು ವಾಸಿಸುತ್ತಿದ್ದಾರೆ. ಪೂರ್ವ ಮತ್ತು ಉತ್ತರ ಭಾಗದಲ್ಲಿ ಪರವರು ಕಂಡುಬರುತ್ತಾರೆ. ಪರವ ಮತ್ತು ಪಂಬದರು ಹೇಗೆ ಭಿನ್ನರು ಎಂದು ನಿರ್ಧರಿಸುವಲ್ಲಿ ಅವರು ಯಾವ ಪ್ರದೇಶದಲ್ಲಿ ನೆಲೆಸಿದ್ದಾರೆ ಎನ್ನುವುದಕ್ಕಿಂತ, ಯಾವ ಭೂತ ಕಟ್ಟುತ್ತಾರೆ ಎಂಬುದೇ ನಿರ್ಣಾಯಕ ಅಂಶವಾಗುತ್ತದೆ. ದಕ್ಷಿಣದಲ್ಲಿ ನೇತ್ರಾವತಿ ನದಿ ಮತ್ತು ಗುರುಪುರ ನದಿಯಿಂದ ಉತ್ತರಕ್ಕೆ ಹದಿನೈದು ಮೈಲುಗಳ ವ್ಯಾಪ್ತಿಯಲ್ಲಿ ತಾವು ಕಟ್ಟುವ ಭೂತಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪರವರು ವಾಸಿಸುತ್ತಿದ್ದಾರೆ.

ತಮ್ಮ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಭೂತ ಕಟ್ಟುವವರಲ್ಲಿ ಅನೇಕ ಪಾಡ್ದನಗಳಿವೆ. ಈ ನಾಡಿನಲ್ಲಿ ದೊರೆಯುವ ನೂರಾರು ಪಾಡ್ದನಗಳು ಸಾಮಾನ್ಯವಾಗಿ ಸ್ಥಳೀಯ ಭೂತಗಳ ಹುಟ್ಟು, ಪ್ರಸರಣ ಮತ್ತು ಸಾಧನೆಗಳನ್ನು ಹೇಳುತ್ತವೆ. ಈ ಭೂತಗಳು ತಮಗೆ ನಡೆದುಕೊಳ್ಳುವ ಮನುಷ್ಯರ ಭೌಗೋಳಿಕ ವ್ಯಾಪ್ತಿಯಲ್ಲೇ ನೆಲೆಸಿವೆಯಾದರೂ ‘ಕಾಣಿಸುವಿಕೆ’ ಮತ್ತು ‘ಕಾಣದಿರುವಿಕೆ’ (ಜೋಗ ಮತ್ತು ಮಾಯ)ದ ನಡುವಿನ ಇರುವಿಕೆಯಲ್ಲಿರುತ್ತವೆ. ತುಳುವಿಗೆ ಲಿಖಿತ ದಾಖಲೆಯಿಲ್ಲದಿರುವುದರಿಂದ ಒಂದು ರೀತಿಯಲ್ಲಿ ಸ್ಥಳೀಯ ಚಾರಿತ್ರಿಕ ಅಂಶಗಳನ್ನೊದಗಿಸುವ ಪರಿಕರಗಳಾಗಿ ಈ ಪಾಡ್ದನಗಳಿವೆ.

ಪಂಬದರು ಸಾಂಪ್ರದಾಯಿಕ ವಾರ್ಷಿಕ ಆಚರಣೆಯಲ್ಲಿ ನಿರೂಪಿಸುವ ಪಠ್ಯಗಳಲ್ಲಿಯೇ ಮತ್ತೆ ಅನೇಕ ಬಗೆಯ ಪಠ್ಯಗಳು, ಪ್ರಭೇದಗಳು, ಪ್ರಕಾರಗಳನ್ನು ಗುರುತಿಸಬಹುದು. ಪ್ರತಿಯೊಂದು ಪಾಡ್ದನದ ಮೂಲ ಸಂದರ್ಭವೊಂದನ್ನು ನಿಖರವಾಗಿ ಗುರುತಿಸಿಕೊಂಡ ಮೇಲೆ, ಒಂದು ವರ್ಗದ ಪಠ್ಯಗಳ ಬಂಧ ಮತ್ತು ರಚನೆಗೆ ಸಂಬಂಧಿಸಿದ ಒಳನೋಟಗಳನ್ನು ಪಡೆಯಬಹುದು. ಈ ರೀತಿಯ ಅನೇಕ ದೈವಗಳು ಹಾಗೂ ಅವುಗಳ ನೂರಾರು ‘ತಾಣ’ಗಳು ಈ ಪ್ರದೇಶದಲ್ಲಿವೆ. ಕೆಲವೊಂದು ಭೂತಗಳು ಒಂದೇ ಸ್ಥಳದಲ್ಲಿ ಆರಾಧನೆಗೊಂಡರೆ ಕೆಲವೊಂದು ನಾಲ್ಕೈದು ಕಡೆ ಹಾಗೂ ಇನ್ನೂ ಕೆಲವು ನೂರಾರು ಕಡೆ ಅರಾಧನೆಗೊಳ್ಳುತ್ತವೆ. ಹಾಗೆಯೇ ಪಾಡ್ದನಗಳೂ ಕೂಡ ಒಂದೇ ಕಡೆ ಅಥವಾ ಅನೇಕ ಕಡೆ ಹೇಳುವಂತದ್ದಾಗಿರುತ್ತವೆ.

ಇಲ್ಲಿ ನಿರೂಪಿಸುವ ಪಾಡ್ದನವು ಮೊದಲ ವರ್ಗಕ್ಕೆ ಸೇರುತ್ತದೆ. ಇದರ ನಿರೂಪಕರು ಐತ್ತಪ್ಪ ಪಂಬಂದ. ಇವರು ತಮ್ಮ ಜಾತಿಯರಲ್ಲಿ ಹಿರಿಯನಲ್ಲದೆ ಅವರಿಗೆ ಮೀಸಲಾದ ಐವತ್ತರಿಂದ ಅರುವತ್ತು ಸ್ಥಳದಲ್ಲಿ ಸುಮಾರು ಹತ್ತರಿಂದ ಹನ್ನೊಂದು ಭೂತಗಳಿಗೆ ಕಟ್ಟುತ್ತಾರೆ. ಪ್ರತಿಯೊಂದು ಪಾಡ್ದನವೂ ಯಾವ ಸ್ಥಳದಲ್ಲಿ ಅದು ನಿರೂಪಣೆಗೊಳ್ಳುತ್ತದೋ ಅಲ್ಲಿಯ ಹೆಸರಿನೊಂದಿಗೆ ಕೊನೆಗೊಳ್ಳುತ್ತದೆ. ಈ ಕನ್ನೆಲಾಯ ಪಾಡ್ದನವನ್ನು ಅದರ ಆಂಶಿಕತೆಯ ಮಧ್ಯೆಯೂ – ಇಲ್ಲಿ ನಿರೂಪಿತವಾಗಿರುವ ದೈವ ಕೇವಲ ಒಂದೇ ಸ್ಥಳದಲ್ಲಿ ಮಾತ್ರ ಆರಾಧನೆಗೊಳ್ಳುತ್ತಾನೆ ಎಂಬ ಅಭಿಪ್ರಾಯವಿರುವಾಗಲೂ – ಹೇಗೆ ಅದು ಇದೇ ತುಳುವರ ಸಾಂಸ್ಕೃತಿಕ ಸಂದರ್ಭದ ಸಮಗ್ರಾಂಶವೂ ಆಗಿದೆ ಎಂಬ ಕಡೆಗೆ ಬೆಳಕು ಚೆಲ್ಲುವ ಹಿನ್ನಲೆಯಲ್ಲಿಯೇ ಆಯ್ದುಕೊಳ್ಳಲಾಗಿದೆ. ಈ ಸಂದರ್ಭವನ್ನು ಅನೇಕ ಸ್ತರಗಳಲ್ಲಿ ಕಟ್ಟಲಾಗಿದೆ.

ಒಂದೇ ಸ್ಥಳದಲ್ಲಿ ಆರಾಧನೆಗೊಳ್ಳುವ ದೈವಗಳ ನೇಮ ಮತ್ತು ಪಾಡ್ದನಗಳು ಈ ವಿವರಕ್ಕೆ ಮೊದಲ ಚೌಕಟ್ಟನ್ನೊದಗಿಸುತ್ತವೆ. ಕನ್ನೆಲಾಯ ಪಾಡ್ದನ ಮತ್ತು ಆರಾಧನೆಗೆ ತುಳುನಾಡಿನಾದ್ಯಂತ ಪ್ರಸಿದ್ಧವಿರುವ ಇನ್ನೊಂದು ದೈವ ಜುಮಾದಿಯೊಂದಿಗೆ ಸಂಬಂಧವಿದೆ. ಸ್ಥಳೀಯ ಪಾಡ್ದನಗಳಲ್ಲಿ ಜುಮಾದಿಯು ಈಗಾಗಲೇ ಅಲೌಕಿಕ, ದೈವಿಕ ಸ್ಥಾನಗಳಲ್ಲಿರುವಂತೆ ಕಂಡುಬರುತ್ತದೆ. ಆದರೆ ದನಗಾಹಿಯಾದ ಕನ್ನಲಾಯನನ್ನೂ ದೈವೀಕರಿಸುವ ಈ ಪಾಡ್ದನದಲ್ಲಿ ಒಂದು ಭಾಗದಲ್ಲಿ ಮಾತ್ರ ಜುಮಾದಿಯ ಪ್ರಸ್ತಾಪವಿದ್ದು ಅದರ ಪ್ರಭಾವಗಳಿಗೆ ಒಳಗಾಗಿರುವುದು ಕಂಡುಬರುತ್ತದೆ. ಎರಡನೇ ಹಂತದಲ್ಲಿ ನಿರೂಪಕ ಹೇಳಿರುವ ಪಾಡ್ದನ ಮತ್ತು ಅದರ ಆಚರಣಾತ್ಮಕ ಪ್ರದರ್ಶನದ ನೆಲೆಯನ್ನು ಗಮನಿಸಲಾಗಿದೆ. ಮೂರುನೆಯದಾಗಿ ಇದಕ್ಕೆ ಸಮಾನಾಂತರವಾಗಿ ಇತರರು ಹೇಳುವ ಪಾಡ್ದನಗಳನ್ನು ಗಮನಿಸಲಾಗಿದೆ.

ಪಠ್ಯ (ಪಾಡ್ದನ)

ನಾನು ೧೯೮೪ರಲ್ಲಿ ಐತ್ತಪ್ಪ ಪಂಬದರನ್ನು ಪ್ರತ್ಯೇಕವಾಗಿ ಹಾಡಿಸಿ ರೆಕಾರ್ಡಿಂಗ್‌ ಮಾಡಿಕೊಂಡೆ. ಮತ್ತೆ ೧೯೮೬ರಲ್ಲಿ ನಿಜವಾದ ಪ್ರದರ್ಶನದ ಸಂದರ್ಭದಲ್ಲಿಯೇ, ಕುಳವೂರಿನಲ್ಲಿ, ಅದನ್ನು ಸಂಗ್ರಹಿಸಿದೆ. ಈ ಕುಳವೂರು ಗ್ರಾಮವು ಪಶ್ಚಿಮ ಘಟ್ಟಗಳ ತಡಿಯಲ್ಲಿ, ಮಂಗಳೂರಿನಿಂದ ಈಶಾನ್ಯಕ್ಕೆ ೨೦ ಮೈಲು ಅಂತರದಲ್ಲಿದೆ. ಪ್ರದರ್ಶನದ ಸಂದರ್ಭದಲ್ಲಿ ಅದು ಒಟ್ಟಾಗಿ ೧೧೪ ಸಾಲುಗಳಷ್ಟು ದೀರ್ಘವಾಗಿದ್ದು ಅದನ್ನು ಎರಡು ವಿಭಾಗಗಳಾಗಿ ವರ್ಗೀಕರಿಸಲಾಯಿತು. ಮೊದಲ ಭಾಗದಲ್ಲಿ ೧-೫೨ ಸಾಲುಗಳೂ ಮತ್ತು ಎರಡನೇ ಭಾಗದಲ್ಲಿ ೫೩ -೧೧೪ ಸಾಲುಗಳೂ ಇವೆ. ಈ ಭಾಗದಲ್ಲಿ ಒಟ್ಟು ನಿರೂಪಣೆಯನ್ನೂ ಮತ್ತಷ್ಟು ಸ್ಪಷ್ಟಗೊಳಿಸುವುದಕ್ಕೆ ಆಗ ಎರಡು ಭಾಗಗಳನ್ನೂ ನಾನು ಮತ್ತೆ ಎರಡೆರಡಾಗಿ ವಿಭಾಗಿಸಿಕೊಂಡೆ.

೧. ಮೊದಲ ಭಾಗದಲ್ಲಿ (೧ ರಿಂದ ೩೪) ಒಂದು ಕುಟುಂಬದ ಪರಿಚಯ, ತಂದೆ, ತಾಯಿ ಮತ್ತು ನಾಲ್ಕು ಮಕ್ಕಳು ಹಾಗೂ ಅವರ ಮಕ್ಕಳ ಹೆಸರುಗಳಿವೆ. ಮುಂದಿನ ಸಾಲುಗಳು ನಾಲ್ಕು ಮಕ್ಕಳ ಶಿಕ್ಷಣದ ಕುರಿತಾಗಿ ಹೇಳುತ್ತವೆ. ಅವರು ಏಳೂವರೆ ವರ್ಷಕ್ಕೆ ಕಾಲಿಟ್ಟುದನ್ನು ತಿಳಿಸುತ್ತವೆ. ಅವರು ನಮಗೆ ಓದು, ಬರಹ, ಕಲಿಯಲು ಇಷ್ಟವಾಗಿದೆ ಎನ್ನುತ್ತಾರೆ. ಮೊದಲವರು ಮರಳಿನಲ್ಲಿ ಅನಂತರದ ಮರದ ಹಲಗೆಯಲ್ಲಿ ಕೊನೆಗೆ ತಾಳೆಗರಿಯಲ್ಲಿ ಬರೆಯುವುದನ್ನು ಕಲಿಯುತ್ತಾರೆ. ಬಳಿಕ ಆ ಅಣ್ಣ ತಮ್ಮಂದಿರು ತಾವು ಸಾಕಷ್ಟು ಕಲಿತುದಾಗಿ ತಿಳಿದುಕೊಂಡ ಮೇಲೆ ಯಾವುದಾದರೂ ವ್ಯಾಪಾರ ಮಾಡಲು ಉದ್ದೇಶಿಸುತ್ತಾರೆ. ಅದಕ್ಕಾಗಿ ಅಂಗಡಿಯನ್ನು ತೆರೆಯುತ್ತಾರೆ. ಅದರಲ್ಲಿ ಆದ ಮೇಲೆ ಬೇರೊಂದು ಸಾಹಸದಲ್ಲಿ ತೊಡಗಿ ತಮ್ಮ ಅದೃಷ್ಟವ್ನನೂ ಪರೀಕ್ಷಿಸಬಯಸುತ್ತಾರೆ. ಅವರು ಕೋಣಗಳನ್ನು ಕೊಂಡುಕೊಳ್ಳುವುದಕ್ಕಾಗಿ ಘಟ್ಟದ ಮೇಲ್ಗಡೆಗೆ ಪ್ರಯಾಣಿಸುತ್ತಾರೆ.

೨. ಘಟ್ಟದ ಮೇಲಿನಿಂದ ೨ನೇ ವಿಭಾಗದ ನಿರೂಪಣೆ (೩೫-೫೨) ಆರಂಭವಾಗುತ್ತದೆ. ಘಟ್ಟದ ಮೇಲಕ್ಕೆ ಅವರು ಬಂದಾಗ ನಾಲ್ಕು ಸಾವಿರ ಕೋಣಗಳ ಮಂದೆಯನ್ನು ಹೊಂದಿರುವ ಕನ್ನಡಿಗನೊಬ್ಬನನ್ನು ಬೇಟಿಯಾಗುತ್ತಾರೆ. ಆ ವ್ಯಕ್ತಿ ತಾನವರಿಗೆ ಮಾಡಿಕೊಳ್ಳುವ ಪರಿಚಯದಿಂದಾಗಿ ಮುಂದೆ ಸಂಭವಿಸುವ ದುರಂತಗಳಿಗೆ ಕಾರಣನಾಗುತ್ತಾನೆ. ಅವನಿನ್ನು ಇರುವುದೆಲ್ಲವನ್ನೂ ಬಿಟ್ಟು ಯಾರೂ ಕಾಣದ ಯಾರು ಕೇಳದ ರಾಜ್ಯಕ್ಕೆ ಹೋಗುತ್ತಿರುವುದಾಗಿ ತಿಳಿಸುತ್ತಾನೆ. ಅವು ಅವನಲ್ಲಿರುವ ಕೋಣಗಳನ್ನು ಖರೀದಿಸಿ ತಮ್ಮೊಂದಿಗೆ ಬರುವುದಕ್ಕೆ ಅವನನ್ನು ಆಹ್ವಾನಿಸುತ್ತಾರೆ (೩೪-೪೪). ಕೋಣಗಳನ್ನು ಆತನಿಂದ ಹೊಡಕೊಳ್ಳುತ್ತ ತುಳು ರಾಜ್ಯಕ್ಕೆ ಬರುತ್ತಾರೆ. ಸಾಯಂಕಾಲದ ಊಟದ ವೇಳೆಗೆ ಅವರೊಂದು ಮೈದಾನಕ್ಕೆ ತಲುಪುತ್ತಾರೆ.

೩. ಇಲ್ಲಿಂದ ಪಾಡ್ದನದ ಧಾಟಿ ಬದಲಾಗುವುದರೊಂದಿಗೆ ಮೂರನೇ ಭಾಗ ಆರಂಭವಾಗುತ್ತದೆ. ಇದು ಈಗ ಹೇಳಿರುವ ೨ ಭಾಗಗಳಿಗಿಂತ ವಿಸ್ತಾರದಲ್ಲಿ ದೊಡ್ಡದಾಗಿದೆ (೫೩-೯೨). ಈ ಅಂಶ ಕೂಡ ಆಚರಣೆಯಲ್ಲಿ ಮುಖ್ಯವಾಗಿದ್ದು ಇದನ್ನು ಮುಂದೆ ಚರ್ಚಿಸಲಾಗಿದೆ. ಇದು ಸ್ವಾಮಿ ನಂದೇದಿ ಎನ್ನುವ ಕನ್ಯೆಯೊಬ್ಬಳ ಪರಿಚಯದೊಂದಿಗೆ ಆರಂಭವಾಗುತ್ತದೆ. ಈ ನಾಲ್ಕು ಜನ ಸಹೋದರರು ಆಕೆಯ ನಗರಿಗೆ ಬಂದು ಅಡುಗೆ ಮಾಡಿಕೊಳ್ಳಲು ಪಾತ್ರೆ ಪರಡಿಗಳನ್ನು ಕೊಡಬೇಕಾಗಿ ಕೇಳಿಕೊಳ್ಳುತ್ತಾರೆ. ಆಕೆ ತಾನೇ ಅಡುಗೆ ಮಾಡಿಕೊಡುವುದಾಗಿ ಹೇಳುತ್ತಾಳೆ. ಭೋಜನವನ್ನು ಬಹಳ ಕಾವ್ಯಾತ್ಮಕವಾಗಿ ವಿವರಿಸಲಾಗಿದೆ. ಕೊನೆಯಲ್ಲಿ (೬೭-೬೮) ಅತಿಥಿಗಳು ಆತಿಥೇಯರನ್ನು ಬಹಳವಾಗಿ ಹೊಗಳುತ್ತಾರೆ. ಆ ಕನ್ನಿಕೆ ನಾಲ್ಕು ಸಾವಿರ ಕೋಣಗಳನ್ನು ನೋಡುವ ತನ್ನ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ (೬೯). ಆಕೆ ಸುಂದರವಾದ ಉಡುಗೆ ತೊಡುಗೆಗಳನ್ನು ತೊಟ್ಟು ಚಿಕ್ಕ ಬೆಳ್ಳಿಯ ಚಾಕನ್ನು ತೆಗೆದುಕೊಂಡು ‘ತತ್ರ’ ಹಿಡಿದು ಹೊರಡುತ್ತಾಳೆ (೮೧). ಮೈದಾನಕ್ಕೆ ಬಂದು ನಾಲ್ಕು ಸಾವಿರ ಕೋಣಗಳನ್ನು ನೋಡಿ ಅವುಗಳ ಸೌಂದರ್ಯಕ್ಕೆ ಮನಸೋತು ಅವುಗಳಲ್ಲಿ ಒಳ್ಳೆಯ ಜೋಡಿಗಳನ್ನು ಖರೀದಿಸಲು ಬಯಸುತ್ತಾಳೆ.

೪. ಇಲ್ಲಿಂದ ನಾಲ್ಕನೆಯ ಮತ್ತು ಕೊನೆಯ ಭಾಗ (೯೩-೧೧೪) ಪ್ರಾರಂಭವಾಗುತ್ತದೆ. ನಾಲ್ಕು ಸಹೋದರರು ಬೆಲೆ ನಿರ್ಧಾರ ಮಾಡುವುದರೊಂದಿಗೆ ಜಗಳವು ಪ್ರಾರಂಭವಾಗುತ್ತದೆ. ಏಕೆಂದರೆ ನಿಗದಿತ ಬೆಲೆಗೆ ಇವರು ಒಪ್ಪುವುದಿಲ್ಲ. ಇದರಿಂದಾಗಿ ತಲೆಕೆಡಿಸಿಕೊಂಡು ತನ್ನ ಗುತ್ತುವಿಗೆ ಹಿಂದಿರುಗುವಾಗ ಆಕೆಯ ಆರಾಧ್ಯ ದೈವ ಜುಮಾದಿಯನ್ನು ಸಹಾಯಕ್ಕೆ ಮೊರೆಯಿಡುತ್ತಾಳೆ (೯೪-೯೯). ಅದೇ ವೇಳೆಗೆ ಕೋಣಗಳನ್ನು ಹೊಡೆಯುವವನು ಹತ್ತಿರದ ಕೆರೆಗೆ ಅವುಗಳನ್ನು ನೀರು ಕುಡಿಸಲು ಹೊಡೆದುಕೊಂಡು ಬರುತ್ತಾನೆ (೧೦೦-೧೦೨). ಅದೇ ವೇಳೆಗೆ ಜುಮಾದಿ ಆ ನಾಲ್ಕು ಸಾವಿರ ಕೋಣಗಳನ್ನು ಕಲ್ಲಾಗಿ ಪರಿವರ್ತಿಸುತ್ತದೆ. ಆತ ಕೋಣಗಳನ್ನು ಮರೆತುಬಿಟ್ಟು ‘ತನಗೇನಪ್ಪಣೆ’ ಎಂದು ಜುಮಾದಿಯನ್ನು ಪ್ರಾರ್ಥಿಸುತ್ತಾನೆ. ಆಗ ಅವನಿಗೆ ದೇವರಿಗಿಂತ ಕಡಿಮೆಯ ಮತ್ತು ಭೂತಕ್ಕಿಂತ ಮೇಲಿನ ಸ್ಥಾನವನ್ನು ಕೊಡಲಾಗುತ್ತದೆ.

ಹೀಗೆ ಪಠ್ಯವು ನಾಯಕನಿಗೆ ತುಳುವ ಸಂಸ್ಕೃತಿಯ ಅಸ್ತಿತ್ವವನ್ನು ಕಲ್ಪಿಸುವುದರ ಮೂಲಕ ಕೊನೆಕೊಳ್ಳುತ್ತದೆ. ಆತ ಜೀವಿತ ಕಾಲದಲ್ಲಿ ನಿರ್ದಿಷ್ಟವಾದ ಸ್ಥಾನವನ್ನು ಪಡೆಯದಿದ್ದರೂ ಅಕಾಲಿಕ ಮರಣದಿಂದಾಗಿ ಒಂದು ಸ್ಥಾನವನ್ನು ಅಮೂರ್ತ ಮತ್ತು ಮೂರ್ತ ಜಗತ್ತುಗಳಲ್ಲಿ ಪಡೆಯುತ್ತಾನೆ.

ಸ್ಥಳೀಯತೆ

ನಾನು ಈ ಪಾಡ್ದನವನ್ನು ದಾಖಲು ಮಾಡಿಕೊಂಡ ಬಳಿಕ ನಿರೂಪಕನೊಂದಿಗೆ ಕನ್ನೆಲಾಯನ ಗುಡಿಗೆ ಹೋಗಿ ಅಲ್ಲಿಯ ಜನರಲ್ಲಿ ಕನ್ನೆಲ್ಲಾಯ ಕಲ್ಲಾದುದೇ ಮೊದಲಾಗಿ ಪಾಡ್ಡನ ಹುಟ್ಟಿಕೊಂಡ ಸ್ಥಳದ ವಿವರಣೆಯನ್ನು ಕೇಳಿದೆ. ನನ್ನಲ್ಲಿರುವ ಪಾಡ್ದನದ ಟಿಪ್ಪಣಿ ಪುಸ್ತಕವನ್ನು ಮಾರ್ಗದರ್ಶಿಯಾಗಿ ಬಳಸಿಕೊಂಡು ನಾನು ಪಾಡ್ದನದ ಕೊನೆಯ ಭಾಗದಲ್ಲಿ ಬರುವ ಸ್ಥಳಗಳನ್ನು ಗುರುತಿಸಿದೆ.

ಪಾಡ್ದನದಲ್ಲಿ ಹೇಳಿರುವ ಅಗರಿಯಲ್ಲಿ ಕನ್ನೆಲಾಯನಿಗೆ ಒಂದು ಸಣ್ಣ ಕಲ್ಲಿನ ಗುಡಿಯಿದೆ. ಈ ಗುಡಿಯು ದಟ್ಟವಾದ ಅರಣ್ಯದ ನಡುದಾರಿಯಲ್ಲಿದೆ. ಈ ಪರ್ವತವು ಗ್ರಾನೈಟ್‌ಶಿಲೆಗಳಿಂದ ಆವೃತವಾಗಿದೆ. ಇದು ಕನ್ನೆಲಾಯನ ಕಲ್ಲಾದ ಕೋಣಗಳು. ಆ ಪರ್ವತದ ಬುಡದಲ್ಲಿ ಒಂದು ಕೊಳವಿದೆ. ಕನ್ನೆಲಾಯ ಅಲ್ಲಿಗೇ ತನ್ನ ಮಂದೆಯನ್ನು ನೀರು ಕುಡಿಸಲು ಕರೆದುಕೊಂಡು ಬಂದದ್ದು. ಅದರಿಂದಾಚೆಗೆ ಒಂದು ವಿಶಾಲವಾದ ಮೈದಾನವಿದೆ. ಅಲ್ಲಿಗೇ ಸ್ವಾಮಿನಂದೇದಿ ಕೋಣಗಳ ಸೌಂದರ್ಯವನ್ನು ನೋಡಲು ಬಂದದ್ದು. ಅಲ್ಲಿಯೂ ಕೆಲವು ಕೋಣಗಳು ಕಲ್ಲಾಗಿ ಬಿದ್ದಿದೆ. ಅವುಗಳಲ್ಲಿ ಸುಂದರವಾದ ಎರಡು ಕೋಣಗಳಿಗೆ ವಿಶೇಷವಾದ ಸ್ತಾನ ಲಭ್ಯವಾಗಿದ್ದು ಅವು ಕನ್ನೆಲಾಯನ ‘ಮಾಡ’ದ ಪಕ್ಕದಲ್ಲಿವೆ. ಅವುಗಳ ಮಧ್ಯದಲ್ಲಿ ಕಲ್ಲು ಬೆಂಚನ್ನು ಹಾಕಲಾಗಿದೆ. ವಾರ್ಷಿಕ ನೇಮೋತ್ಸವದಲ್ಲಿ ಈ ಬೆಂಚಿನಲ್ಲಿಯೇ ಕೋಣಗಳು ‘ಆವಾರ’ವನ್ನು ತಮ್ಮೊಂದಿಗಿನ ಪೂರ್ವಜರೊಡಗೂಡಿ ಪಡೆಯುತ್ತದೆ.

ಪಾಡ್ದನದಲ್ಲಿ ಸ್ವಾಮಿ ನಂದಾದೇವಿಯ ಅರಮನೆ ಎಂದು ಉಲ್ಲೇಖಿಸಲಾದ ಮನೆಯು ಹತ್ತಿರದ ಕುಳವೂರಿನಲ್ಲಿದೆ ಎಂದು ಹೇಳಲಾಗುತ್ತಿದೆ. ಆ ಮನೆಯಲ್ಲಿ ಈಗಿರುವ ಹೆಂಗಸರು ಕೂಡ ಮನೆಯ ಮುಂದಣ ದೊಡ್ದ ಚಾವಡಿಯಲ್ಲಿ ಜುಮಾದಿಯನ್ನು ತನ್ನ ಕುಲದೇವತೆಯೆಂದು ಪೂಜಿಸುತ್ತಾರೆ. ಈ ಪಾರಂಪರಿಕ ಮನೆಯಿರುವ ಕುಳವೂರು ಗುತ್ತು ಪಶ್ಷಿಮ ಘಟ್ಟದ ಪರ್ವತ ಶ್ರೇಣಿಗಳಿಂದಾರಂಭಿಸಿ ಫಾಲ್ಗುಣಿ ನದಿಯ ದಡದವರೆಗೆ ಇರುವ ವಿಶಾಲ ಜಾಗದಲ್ಲಿದ್ದು ಆರು ಮಾಗಣೆಗಳನ್ನು ಹೊಂದಿದೆ. ಅಲ್ಲಿ ಭತ್ತದ ಗದ್ದೆಗಳು, ತೆಂಗು, ಗೋಡಂಬಿ, ತಾಳೆ ಮೊದಲಾದ ಕೃಷಿ ಸಂಪತ್ತಿದೆ. ಇಲ್ಲಿರುವ ಎಲ್ಲಾ ರೈತರ ಸುಂದರ ಮನೆಗಳು ಅವುಗಳಿಗೆ ಸೇರಿದ ಹೊಲಗಳ ಮಧ್ಯದಲ್ಲಿವೆ. ಜುಮಾದಿಯು ಈ ಭೂಮಿ, ಜನ, ದನಗಳ ರಕ್ಷಕ.

ಆಚರಣಾತ್ಮಕ ಪ್ರದರ್ಶನ

ಸ್ವಾಭಾವಿಕವಾಗಿ ಸುಗ್ಗಿ ಕೊಯ್ಲಿನ ಬಳಿಕ ನಿರಂತರವಾಗಿ ಭೂಮಾಲಿಕರು, ರೈತರು, ಕೃಷಿಕಾರ್ಮಿಕರು ಮತ್ತು ಇತರ ಹಳ್ಳಿಗರು ಮೊದಲೆರಡು ಉತ್ಸವಗಳು ಜುಮಾದಿ ಮತ್ತು ಕನ್ನೆಲಾಯ ದೈವಗಳಿಗೆ ಸಂಬಂಧಿಸಿದವಾಗಿದ್ದು ಅವು ರಾತ್ರಿಯಿಡೀ ನೆರವೇರುತ್ತವೆ. ಈ ಉತ್ಸವಗಳು ಈ ಆರೂ ಮಾಗಣೆಗಳ ಗಡಿಯಾಗಿರುವ ನದಿಯೊಂದರ ಸಮೀಪ ಕೊಡಿಯಡಿಯಲ್ಲಿ ನಡೆಯುತ್ತದೆ. ಇದು ಮಾರ್ಚ್ ತಿಂಗಳ ಆರಂಭದಿಂದ ನೆರವೇರಿಸುತ್ತದೆ. ನಾಲ್ಕು ವಾರಗಳ ಬಳಿಕ ಜುಮಾದಿಯ ಎರಡು ಉತ್ಸವಗಳು ನಿರಂತರವಾಗಿ ಎರಡೂ ರಾತ್ರಿ ನೆರವೇರುತ್ತವೆ. ಮೊದಲ ಉತ್ಸವಗಳು ಕುಳವೂರು ಗುತ್ತಿನ ಮೂಲ ಸ್ಥಾನದಲ್ಲಿ ನೆರವೇರಿದರೆ ಎರಡನೆಯದು ಕೆಳ ಅಗರಿಯಲ್ಲಿ ನಡಿಯುತ್ತದೆ. ಅದೇ ರೀತಿ ಮೂರನೆ ರಾತ್ರಿ ಈಗಾಗಲೇ ಹೇಳಿರುವ ಕನ್ನೆಲಾಯನ ಗುಡಿಯಲ್ಲಿ ಕನ್ನೆಲಾಯನ ತೇರು ನಡೆಯುತ್ತದೆ. ಇದನ್ನು ಮುಂದೆ ವಿವರಿಸಲಾಗಿದೆ.

ವರ್ಷಕ್ಕೆ ಒಂದು ಸಲ, ಈ ವಾರ್ಷಿಕ ನೇಮೋತ್ಸವದಲ್ಲಿ ಕನ್ನೆಲಾಯನು ಜುಮಾದಿಯನ್ನು ಭೇಟಿಯಾಗುತ್ತಾನೆ. ಈ ಸಮಯಲ್ಲಿ ಅಲ್ಲಿರುವ ಬೆಂಚ್‌ನಲ್ಲಿ ಅವುಗಳ ‘ಭಂಡಾರ’ವನ್ನು ಇಡುತ್ತಾರೆ. ಈ ಎರಡು ಪ್ರತ್ಯೇಕ ಉತ್ಸವಗಳ ಕೊನೆಯಲ್ಲಿ ಎರಡೂ ಭೂತಗಳ ‘ಬಾಳುಭಂಡಾರ’ವನ್ನು ಪುನಃ ತೆಗೆದುಕೊಂಡಾಗ ಭೂತದ ಪೂಜಾರಿಗಳಿಗೆ ಆವೇಶ ಬರುತ್ತದೆ. ಅವರಿಬ್ಬರೂ ಜತೆಯಾಗಿ ಮೆರವಣಿಗೆ ಹೋಗಿ ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ಪರಸ್ಪರ ತಮ್ಮ ಖಡ್ಗಗಳನ್ನು ತಾಗಿಸಿಕೊಳ್ಳುವುದರ ಮೂಲಕ ಮುಂದಿನ ವರ್ಷದವರೆಗೆ ಬೀಳ್ಗೊಡುತ್ತಾರೆ. ಆಮೇಲೆ ಮೆರವಣಿಗೆಯು ಎರಡು ಸಾಲಾಗಿ ಒಡೆದು ಪ್ರತಿಯೊಂದು ಮೂರು ಮಾಗಣೆಗಳ ಪ್ರತಿನಿಧಿಗಳನ್ನು ಒಳಗೊಳ್ಳುತ್ತದೆ. ಪಾಡ್ದನದಲ್ಲಿ ಹೇಳಿರುವಂತೆ ಜುಮಾದಿ ಮೂರು ಮಾಗಣೆಗಳ ಪಾಲಕನಾದರೆ ಉಳಿದ ಮೂರು ಮಾಗಣೆಗಳ ಪಾಲಕ ಕನ್ನೆಲಾಯ.

ಕನ್ನೆಲಾಯ ಭಂಡಾರವನ್ನು ಹತ್ತಿರದ ಬಿಲ್ಲವರ ಮನೆಯೊಂದರಲ್ಲಿ ಇರಿಸಲಾಗುತ್ತದೆ. ಅವರು ಕನ್ನೆಲಾಯ ಭೂತವನ್ನು ಈವರೆಗೆ ‘ಪಾಲಿಸಿ’ಕೊಂಡು ಬಂದವರೂ ಆಗಿದ್ದಾರೆ. ಅವರಲ್ಲಿ ಒಬ್ಬ ತರುಣ ಕಳೆದ ಕೆಲವು ವರ್ಷಗಳಿಂದ ಕನ್ನೆಲಾಯ ಪೂಜಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಮತ್ತೊಬ್ಬ ಸ್ಥಳೀಯ ವ್ಯಕ್ತಿ ಕೋಣಗಳನ್ನು ಹೊಡೆದುಕೊಂಡು ಬಂದ ಕನ್ನಡಿಗನ ಸಂತತಿಯವನೆಂದು ಹೇಳಲಾಗುತ್ತಿದ್ದು; ಕನ್ನೆಲಾಯ ಮೈಸೇರುವವರೆಗೆ ದನಗಾಹಿಯಂತೆ ನಟಿಸುತ್ತಾನೆ. ಕನ್ನಲಾಯ ದನ ಹೊಡೆಯುವುದಕ್ಕೆ ಬಳಸಿದ ಕೋಲು ಭೂತದ ಭಂಡಾರದ ಬಹುಮುಖ್ಯ ಪರಿಕರ. ಭೂತ ಕಟ್ಟಿದವನು ಈ ದೊಣ್ಣೆಯನ್ನು ಹಿಡಿದುಕೊಂಡು ಕೂಡಲೇ ಭೂತ ಅವನ ಮೈಮೇಲೆ ಬರುತ್ತದೆ. ಈ ಸನ್ನಿವೇಶದಲ್ಲಿ ಕನ್ನೆಲಾಯನನ್ನು ಕಟ್ಟಿದ ಪಂಬದನೇ ಜುಮಾದಿಯನ್ನು ಆವಾಹಿಸಿಕೊಂಡು ಜುಮಾದಿಯನ್ನು ಬೇಟಿಯಾಗುವುದು, ಯುದ್ಧ ಮಾಡುವುದು ಹೀಗೆಲ್ಲ ಅಭಿನಯಿಸಿದ ಮೇಲೆ ದೊಣ್ಣೆಯನ್ನು ಕಿತ್ತುಕೊಳ್ಳುತ್ತಾನೆ. ಪಂಬದ ಮತ್ತೊಮ್ಮೆ ಕನ್ನೆಲಾಯನನ್ನು ಆವಾಹಿಸಿಕೊಂಡು ಪರೋಕ್ಷವಾಗಿ ತನಗೆ ತಾನೇ ಸಂದರ್ಭವನ್ನು ನಾಟಕೀಯಗೊಳಿಸುತ್ತಾನೆ. ಮೇಲೆ ಹೇಳಿದ ಮತ್ತೊಬ್ಬ ವ್ಯಕ್ತಿ ಸ್ಮೃತಿ ತಪ್ಪಿ ಕೆಳಗೆ ಬೀಳುತ್ತಿದ್ದಂತೆ ಅವನನ್ನು ಬದಿಗೆ ಹೊತ್ತುಕೊಂಡು ಹೋಗಲಾಗುತ್ತದೆ. ಆಗ ಅವನ ಮಟ್ಟಿಗೆ ಕನ್ನಲಾಯ ಭೂತದ ದರ್ಶನ ಮುಕ್ತಾಯಗೊಳ್ಳುತ್ತದೆ.

ಸಾಮಾನ್ಯವಾಗಿ ಪಂಬದರಲ್ಲಿರುವ ಸಂಪ್ರದಾಯದಂತೆ ಪಾಡ್ದನವನ್ನು ಭೂತ ಮೈಮೇಲೆ ಬರುವುದಕ್ಕೆ ಮುನ್ನ ‘ಬಿನ್ನೊ’ ಮಾಡಿಕೊಳ್ಳವಾಗ ಹೇಳಲಾಗುತ್ತದೆ. ಆದರೆ ಈ ಪಾಡ್ದನವನ್ನು ಮಾತ್ರ ಈಗ ಹೇಳಿದ ಮೊದಲ ಮತ್ತು ಎರಡನೆಯ ಹಂತದಲ್ಲಿ ಭೂತ ಕಟ್ಟುವಾಗ ಹೇಳಲಾಗುತ್ತದೆ. ಮೊದಲ ಹಂತದಲ್ಲಿ ಭೂತವು ದೊಂದಿಯ ಬೆಳಕಿನಲ್ಲಿ ತನ್ನನ್ನು ತೋರಿಸಿಕೊಳ್ಳುತ್ತಾ ಆಗಾಗ ಉರಿಯಿಂದ ಸುಟ್ಟುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಅದು ತನ್ನ ಭಕ್ತರೊಂದಿಗೆ ಮೌನವಾಗಿ ಸಂಜ್ಞೆಯ ಮೂಲಕವೇ ವ್ಯವಹರಿಸುತ್ತದೆ. ಆಗ ಮಾತನಾಡುವುದಕ್ಕಿಲ್ಲ. ಇದಾದ ಬಳಿಕ ಸುಮಾರು ಒಂದೂವರೆ ಗಂಟೆಗಳಲ್ಲಿ ಭೂತ ಕಟ್ಟುವವರು ಇನ್ನೂ ಹೆಚ್ಚು ಅಲಂಕರಿಸಿಕೊಳ್ಳುತ್ತಾರೆ. ಇಲ್ಲಿಂದ ಮೇಲೆ ಕನ್ನೆಲಾಯ ಪಾಡ್ದನು ಒಂದು ಸಣ್ಣ ಪ್ರಾರಂಭಿಕ ನೃತ್ಯದೊಂದಿಗೆ ಆರಂಭವಾಗುತ್ತದೆ. ಈಗಾಗಲೇ ಹೇಳಿರುವಂತೆ ಪಾಡ್ದನದ ಈ ನಿರೂಪಣೆಯಲ್ಲಿ ಸ್ವಾಮಿ ನಂದೇದಿಯ ಅರಮನೆಗೆ ಬಂದು ನಾಲ್ವರು ಸಹೋದರರು ಸೇರಿದ್ದರಿಂದ ಪಾಡ್ದನವನ್ನು ಹೇಳುವ ಧಾಟಿಯಲ್ಲಿ ಮತ್ತು ಆಚರಣೆಯಲ್ಲಿ ವ್ಯತ್ಯಾಸಗಳಾಗುತ್ತವೆ. ಪಾಡ್ದನದ ಮೊದಲ ಭಾಗವನ್ನೂ ಹೇಳುವಾಗ ಭೂತ ಕಟ್ಟುವವನು ಮುಕ್ಕಾಲಿಯ ಮೇಲೆ ಕುಳಿತಿರುತ್ತಾನೆ. ಎರಡನೆಯ ಹಂತದಲ್ಲಿ ಮೇಲೆದ್ದು ಕುಣಿಯುತ್ತಾ ಹಾಡುತ್ತಾನೆ. ಈ ರೀತಿಯಲ್ಲಿ ಗಮನಾರ್ಹವಾದ ಬದಲಾವಣೆ ಪ್ರದರ್ಶನದಲ್ಲಿ ಕಂಡುಬರುತ್ತದೆ.

ಎರಡನೆಯ ಹಂತ ಪ್ರಾರಂಭವಾಗುವಾಗ ಭೂತ ಕಟ್ಟುವವನು ‘ಮುಗ’ ಧರಿಸಿ ‘ತಿರಿ’ ಕಟ್ಟಿ ಸಿದ್ಧನಾಗುತ್ತಾನೆ. ಇದು ಭೂತ ಕಟ್ಟುವುದು ಪೂರ್ಣಗೊಂಡುದರ ಸೂಚನೆ. ಆಮೇಲೆ ಸ್ವಲ್ಪ ಹೊತ್ತಿನ ಸಂತರ ಮುಗವನ್ನು ತೆಗೆಯಲಾಗುವುದು. ದೈವವು ಸ್ಥಳೀಯ ಕುಟುಂಬಸ್ಥರಿಗೆ ಅಭಯ ವಚನವನ್ನು ನೀಡುತ್ತದೆ. ಆಗ ಅದಕ್ಕೆ ಉರಿಯುವ ಎರಡು ದೊಂದಿಗಳನ್ನು ಕೊಡುತ್ತಾರೆ. ಈ ಉರಿಯುವ ದೊಂದಿಗಳನ್ನು ಹಿಡಿದು ನರ್ತಿಸುತ್ತ ಭೂತ ತನಗೆ ನಡೆದುಕೊಳ್ಳುವವರಿಗೆ ಅಭಯ ನುಡಿಯುತ್ತದೆ. ಮುಂದೆ ನೆರೆದ ಜನಗಳೊಂದಿಗೆ ಮಕ್ಕಳೊಂದಿಗೆ ದೊಂದಿಗಳ ಸಮೇತ ಭೂತ ಹತ್ತಿರದ ದೇವಾಲಯವೊಂದರತ್ತ ಭೂತದ ‘ಪಯ್ಯೊಳಿಗೆ’ ಸಾಗುತ್ತದೆ. ಅಲ್ಲಿ ಎಲ್ಲಾ ದೊಂದಿಗಳನ್ನೂ ಒಂದೇ ಕಡೆ ಉರಿಸಿದ ಮೇಲೆ ದೈವಕ್ಕೆ ಕೋಳಿ ಕೊಯ್ಯುತ್ತಾರೆ. ಮತ್ತೆ ಗುಡಿಗೆ ಹಿಂತಿರುಗುವಾಗ ದನಗಾಹಿಯ ದೊಣ್ಣೆಗಾಗಿ ಜಗಳವಾಡುವ ದೃಶ್ಯವನ್ನು ಅಭಿನಯಿಸಲಾಗುತ್ತದೆ (ವಿವರಣೆಯನ್ನು ಮೇಲೆ ಕೊಡಲಾಗಿದೆ.) ದೊಣ್ಣೆಯೊಂದಿಗೆ ಒಂದು ಕುಣಿತ ಆದ ಮೇಲೆ ಜುಮಾದಿ ಮತ್ತು ಕನ್ನಲಾಯಗಳ ಪೂಜಾರಿಗಳು ದೈವದ ಕೈಯಿಂದ ಆ ದೊಣ್ಣೆಯನ್ನು ತೆಗೆದುಕೊಳ್ಳುತ್ತಾರೆ. ಮತ್ತೆ ಮರಳಿಕೊಡುತ್ತಾರೆ. ಕನ್ನಲಾಯ ಒಂದು ಕ್ಷಣ ಕುಸಿದಾಗ ಅದಕ್ಕೆ ಕತ್ತಿ, ಗಂಟೆ ಮತ್ತು ಚವಳಗಳನ್ನು ಕೊಡುತ್ತಾರೆ. ಅದು ತನ್ನ ಖಡ್ಗದ ಮೂಲಕ ಭಕ್ತರನ್ನು ಹರಸುತ್ತದೆ. ಈ ಸಂದರ್ಭದಲ್ಲಿ ದೈವದೊಂದಿಗೆ ಮಾತುಕತೆಗೂ ಅವಕಾಶವಿದೆ. ಆಮೇಲೆ ಭೂತಕ್ಕೆ ಕೋಳಿಮಾಂಸದ ಅಡುಗೆಯ ಎಡೆಯನ್ನು ಬಡಿಸುತ್ತಾರೆ. ಅದನ್ನು ಸ್ವೀಕರಿಸಿದ ಮೇಲೆ ಕೇಪುಳ ಹೂವನ್ನು ಮುಖಕ್ಕೆ ಮುಟ್ಟಿಸುವುದರ ಮೂಲಕ ಭೂತ ಶುಚೀರ್ಭೂತವಾಗುತ್ತದೆ. ಅದು ಮತ್ತೆ ತನ್ನ ಕತ್ತಿ, ಗಂಟೆ ಮತ್ತು ಚವಳಗಳನ್ನು ಕೈಯಲ್ಲಿ ತೆಗೆದುಕೊಂಡು ಜನಗಳನ್ನು ಇನ್ನೊಂದು ಸಲ ಹರಸುತ್ತದೆ. ಭೂತ ಹಿಂದಕ್ಕೆ ಸರಿದಾಗ ಪೂಜಾರಿ ಮತ್ತು ಜನಗಳ ನೀರನ್ನು ‘ತಳಿ’ಸುತ್ತಾರೆ. ಇಲ್ಲಿಗೆ ಭೂತ ಕಟ್ಟುವುದು ಮುಗಿತಾಯವಾಗುತ್ತದೆ. ಭೂತವು ಭೂತ ಕಟ್ಟುವವನ ಮೈಯಿಂದ ಬಿಟ್ಟುಹೋಗುತ್ತದೆ.

ಈಗಾಗಲೇ ಹೇಳಿರುವಂತೆ ಕನ್ನಲಾಯ ಭೂತವನ್ನು ಅಗರಿಯಲ್ಲಿರುವ ಮಾಡದಲ್ಲಿ ಮಾತ್ರವಲ್ಲದೆ ನಾಲ್ಕು ವಾರಗಳ ಮೊದಲೇ ಹಳ್ಳಿಯ ಗಡಿಯಾದ ನದಿಯ ದಂಡೆಯಲ್ಲಿರುವ ಕೊಡಿಯಡಿಯಲ್ಲಿಯೂ ಕಟ್ಟುತ್ತಾರೆ. ಆದರೆ ಅಗರಿಯಲ್ಲಿ ನಡೆಯುವ ಆಚರಣೆಯು ಕೇವಲ ಒಂದೇ ಕುಟುಂಬಕ್ಕೆ ಸೀಮಿತವಾಗಿದ್ದು ೧೯೮೬ರಲ್ಲಿ ತೆರೆಜಾಲ್‌ನಲ್ಲಿ ಸೇರಿದ ಗ್ರಾಮಸಭೆಯೊಂದರಲ್ಲಿ ಈ ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತಾಗಿ ದೀರ್ಘ ಚರ್ಚೆ ನಡೆದಿತ್ತು. ಅವರು ಕನ್ನಲಾಯನನ್ನು ಜುಮಾದಿ ಮತ್ತು ಇತರ ಗ್ರಾಮದೈವಗಳೊಂದಿಗೆ ಬಹುಮಟ್ಟಿಗೆ ಸಮೀಕರಿಸಿದ್ದರು. ಅವುಗಳಲ್ಲಿ ಮಾರಿ, ಮಮ್ಮಾಯಿ ಮತ್ತು ಕಲ್ಕುಡ ಹಾಗೂ ಕಲ್ಲುರ್ಟಿಗಳಿಗೂ ಸಂಬಂಧ ವೇರ್ಪಡಿಸಲಾಯಿತು. ಜುಮಾದಿ ಮತ್ತು ಕನ್ನಲಾಯ ಭೂತಗಳ ಪೂಜಾರಿಗಳು ಒಂದು ದಿನಕ್ಕೆ ಮೊದಲು ಮಾರಿಯಾರಾಧನೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಾರಿಯ ಪೂಜಾರಿಯು ಒಬ್ಬ ಕನ್ನಡಿಗನಾಗಿದ್ದು ಅವನನ್ನು ದಾಸ ಎಂದು ಕರೆಯುತ್ತಾರೆ. ಆಕೆ ಹಂದಿಯನ್ನು ಕೇಳಿದರೂ ಕೇವಲ ಕೋಳಿಯನ್ನು ಮಾತ್ರ ಕೊಡುತ್ತಾರೆ. ಜುಮಾದಿ ಮತ್ತು ಕನ್ನಲಾಯ ಭೂತಗಳ ಕೋಲದ ಮಾರನೆಯ ದಿನ ಕಲ್ಕುಡ ಮತ್ತು ಕಲ್ಲುರ್ಟಿ ಭೂತಗಳನ್ನು ನಲಿಕೆಯವರು ಕಟ್ಟುತ್ತಾರೆ. ಈ ಎರಡು ಭೂತಗಳು ಜುಮಾದಿ ಮತ್ತು ಕನ್ನಲಾಯ ಭೂತಗಳಿಗೆ ಗೌರವ ನೀಡುತ್ತವೆ. ತೆರೆಜಾಲ್‌ನಲ್ಲಿ ಕನ್ನಲಾಯೆ ಭೂತವು ಒಂದು ಹಂತದಲ್ಲಿ ಜುಮಾದಿಯ ಮೊಗವನ್ನು ಧರಿಸುತ್ತದೆ. ಜುಮಾದಿಯ ನೇಮದಲ್ಲಿ ಎಲ್ಲಾ ಕಡೆಯೂ ನಡೆಯುವ ಮಾರಿಯನ್ನು ಕಳುಹಿಸುವಾಗ ಆಚರಣೆಯಲ್ಲಿ ಕನ್ನಲಾಯ ಭೂತವು ಜುಮಾದಿಯ ‘ಬಂಟ’ನಾಗುತ್ತದೆ. ನಾನು ಈಗಾಗಲೇ ಉಲ್ಲೇಖಿಸಿದ ಅಗರಿ ಕುಟುಂಬದ ಸಮಸ್ಯೆಗಳನ್ನು ಅಗರಿಯಲ್ಲಿ ನಡೆದ ಆಚರಣೆಯಲ್ಲಿಯೂ ಚರ್ಚಿಸಲಾಯಿತು. ಹೆಚ್ಚಾಗಿ ಅದು ಇಡೀ ಹಳ್ಳಿಗೇ ಸಂಬಂಧಪಟ್ಟಿತ್ತು. ನಾನು ಗಮನಿಸಿದಂತೆ ದನಗಾಹಿಯ ದೊಣ್ಣೆಗೆ ಸಂಬಂಧಿಸಿದ ಕಾಳಗದ ಅಭಿನಯವನ್ನು ಅಲ್ಲಿ ಮಾಡಲಿಲ್ಲ.

ಕೇವಲ ಎರಡು ರೀತಿಯ ಆಚರಣೆಗಳಲ್ಲಿ ನಡೆಯುವ ಮೇಲ್ಮಟ್ಟದ ತೋರ್ಕೆಗಳಿಂದಲೇ ಒಂದು ಸಂದರ್ಭದ ಸೂಕ್ಷ್ಮ ಸ್ಥಿತ್ಯಂತರವೂ ಕೂಡ ಪ್ರದರ್ಶನದಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತದೆ ಎಂಬುದನ್ನು ಇದು ತೋರಿಸುತ್ತದೆ. ದೈವವೊಂದರ ಆರಾಧನೆಯಲ್ಲಿ ಅದರ ಸ್ಥಾನ ಮತ್ತು ಆಚರಣೆಯ ಮಹತ್ವವು ಅದರಲ್ಲಿ ಪಾಲ್ಗೊಂಡವರಿಗೆ ನೇರ ಸಂಬಂಧಿತವಾಗಿರುತ್ತದೆ. ಪ್ರದರ್ಶನಾತ್ಮಕ ಅಂಶಗಳ ವಿವರಣೆಯ ಮೂಲಕ ಸಾಮಾಜಿಕ ಮತ್ತು ಸ್ಥಳೀಯ ಅಂಶಗಳೊಂದಿಗೆ ಘಟಿಸಿದ ಸ್ಥಿತ್ಯಂತರವು ನಿರ್ಮಿಸಿದ ಇಲ್ಲವೇ ಕಟ್ಟಿದ ವ್ಯಕ್ತಿಯೊಬ್ಬನ ದೈವೀಕರಣದ ಅರ್ಥಪೂರ್ಣ ಪ್ರತಿನಿಧೀಕರಣವನ್ನು ಅರ್ಥೇಸುವಲ್ಲಿ ನಮಗೆ ನೆರವಾಗಬಲ್ಲದು.

ಮೊದಲನೆಯದು ಹಳ್ಳಿ ಮತ್ತು ಪರ್ವತ ಪ್ರದೇಶದ ಗಡಿಯಲ್ಲಿ ಕನ್ನಲಾಯನು ಭೂತವಾಗಿ ಮಾರ್ಪಾಡುಗೊಂಡಲ್ಲಿಂದ ಆರು ಮಾಗಣೆಗಳ ಇನ್ನೊಂದು ಬದಿ ಮತ್ತು ನದಿದಂಡೆಯ ಇನ್ನೊಂದು ಗಡಿಭಾಗದವರೆಗಿನ ಒಂದು ದೃಶ್ಯ. ಇಲ್ಲಿ ಇದನ್ನು ಅದರ ಮೂಲ ಭೌಗೋಳಿಕ ಚೌಕಟ್ಟಿನಿಂದ ಬೇರ್ಪಡಿಸಲಾಗಿದೆ. ಎರಡನೆಯದು ಸೋತ ದನಗಾಹಿಯನ್ನು ಇತರ ದೈವಗಳೊಂದಿಗೆ ಸಂಬಂಧವೇರ್ಪಡಿಸಿಕೊಳ್ಳುವುದು. ಕನ್ನಲಾಯನೂ ಸೇರಿದಂತೆ ಜುಮಾದಿ, ಮಾರಿ, ಕಲ್ಕುಡ ಮತ್ತು ಕಲ್ಲುರ್ಟಿ ಭೂತಗಳು ಇಡೀ ಹಳ್ಳಿಯಲ್ಲಿಯೂ ಆರಾಧನೆಗೊಳ್ಳುತ್ತವೆ. ಅದೇ ವೇಳೆಯಲ್ಲಿ ಅವುಗಳಿಗೆ ನಿರ್ದಿಷ್ಟವಾದ ಜಾತಿಗಳು ಮತ್ತು ಕುಟುಂಬದವರೂ ನಡೆದುಕೊಳ್ಳುತ್ತಾರೆ. ತೆರೆಜಾಲ್‌ನಲ್ಲಿ ನಡೆಯುವ ಆಚರಣೆಯು ವಿವಿಧ ಮೂಲದ ದೈವಗಳು ಮತ್ತು ಭಕ್ತರು ಒಂದೇ ಕಡೆಯಲ್ಲಿ ಸಮ್ಮಿಳಿತವಾಗಿರುವುದನ್ನು ತೋರಿಸುತ್ತದೆ. ಕನ್ನಲಾಯ ಮತ್ತು ಮಾರಿಭೂತಗಳನ್ನು ವಿಶೇಷವಾಗಿ ಕನ್ನಡ ಮಾತಾಡುವ ಭೂಪ್ರದೇಶದಿಂದ ಘಟ್ಟದ ಪೂರ್ವಭಾಗಗಳಲ್ಲಿಯೇ ಗುರುತಿಸಬಹುದು. ಅವುಗಳಲ್ಲಿರುವ ವ್ಯತ್ಯಾಸವೆಂದರೆ, ಮಾರಿದೈವವು ಬಹುತೇಕ ಭಾಗಗಳಲ್ಲಿ ಕಂಡುಬರುತ್ತಿದ್ದು, ವಿಶೇಷ ಆರಾಧನಾ ಸಂಪ್ರದಾಯಗಳನ್ನೊಳಗೊಂಡು (ಕನ್ನಡ ಭಾಷೆಯಲ್ಲಿಯೂ ಕೂಡ) ತೇರೆಜಾಲ್‌ನಲ್ಲಿ ಆರಾಧನೆಗೊಳ್ಳುತ್ತದೆ. ಹಾಗೆಯೇ ತುಳುದೈವಗಳು ಸ್ಥಳೀಯ ಮತ್ತು ತಾತ್ಕಾಲಿಕ ಮನ್ನಣೆಯನ್ನು ಪಡೆಯುತ್ತವೆ. ಆದರೆ ಕನ್ನಲಾಯನು ಸತ್ತ ಕ್ಷಣದಿಂದಲೇ ತುಳುನಾಡಿನ ಪೌರಾಣಿಕ ಲೋಕದಲ್ಲಿ ಪೂರ್ಣವಾಗಿ ಸೇರಿಹೋಗಿದ್ದಾನೆ. ತೆರೆಜಾಲ್‌ನಲ್ಲಿ ನಡೆಯುವ ಆಚರಣಾತ್ಮಕ ಸಂಯೋಗ ಮತ್ತು ಪಾಡ್ದನದಲ್ಲಿ ನೀಡುವ ಪೌರಾಣಿಕ ಸಂಯೋಗಗಳು ಪರಸ್ಪರ ಹೊಂದಿಕೆಯಾಗುತ್ತವೆ. ಕನ್ನಲಾಯನ ಮೂಲ ತಾಣದಲ್ಲಿ ನಡೆಯುವ ಆಚರಣೆಯ ವಿವರಗಳು ಪುರಾಣ ಮತ್ತು ಆಚರಣೆಯ ನಡುವಿನ ಸಂಬಂಧವನ್ನು ವ್ಯಕ್ತಪಡಿಸುವುದಲ್ಲದೆ ಭೌತಿಕ ಮತ್ತು ಸಾಮಾಜಿಕ ವಾಸ್ತವತೆಯ ಕುರಿತಾಗಿಯೂ ಬೆಳಕು ಚೆಲ್ಲುತ್ತವೆ. ಪುರಾಣ ಮತ್ತು ಆಚರಣೆಗಳು ಸಾಮಾಜಿಕ ಜಗತ್ತನ್ನು ನಿರೂಪಣೆಯ ಮೂಲಕ ಪರಿರಚನೆಗೊಳಿಸುತ್ತವೆ (Blackburn, Ramanujan, ೧೯೮೬;೮). ಅವು ಸಾಮಾಜಿಕ ಜೀವನದ ಕನ್ನಡಿಗಳು ಮಾತ್ರವಲ್ಲದೆ ಪ್ರತಿಫಲನಗಳೂ ಹೌದು.

ಆಚರಣೆಯಲ್ಲಿ ಭೂಮಿಯ ಹಂಚಿಕೆಗೆ ಸಂಬಂಧಿಸಿದಂತೆ ನಡೆಯುವ ವಾಗ್ವಾದಗಳು ನೇರವಾಗಿ ಕನ್ನಲಾಯ ಭೂತವನ್ನು ಒಳಗೊಂಡು ಮೇಲೆ ಹೇಳಿದ ಅಂತಹ ಮಾರ್ಪಾಡುಗಳಿಗೆ ಕಾರಣವಾಗುತ್ತವೆ. ದೈವವು ಒಂದು ಹಂತದಲ್ಲಿ ಕುಟುಂಬದ ಅನೇಕ ಸಮಸ್ಯೆಗಳ ಮೇಲುವಿಚಾರಕ ಮತ್ತು ಕುಟುಂಬದಲ್ಲಿ ಅತ್ಯಂತ ದುರ್ಬಲ ವ್ಯಕ್ತಿಯ ಪರಿಪಾಲಕನೂ ಆಗಿರುತ್ತದೆ. ಇನ್ನೊಂದಡೆ ಅದು ತನ್ನ ‘ಮಾಡ’ದ ಅಗತ್ಯ ಆರ್ಥಿಕ ಸವಲತ್ತುಗಳ ನಿರೀಕ್ಷಕ ಮತ್ತು ಆಚರಣೆಯ ಸೂಕ್ಷ್ಮದರ್ಶಿಯೂ ಆಗಿರುತ್ತದೆ. ಹಳ್ಳಿಯ ಮತ್ತು ಇತರ ಮಾಗಣೆಗಳ ಪ್ರತಿನಿಧಿಗಳು ಸ್ಥಳೀಯ ಧಾರ್ಮಿಕ ಮತ್ತು ಸಾಮಾಜಿಕ ಸಮತೋಲನವನ್ನು ಕಾಪಾಡುವುದರ ಮೂಲಕ ಸುಖ ಸಮೃದ್ಧಿಗೆ ಕಾರಣವಾಗುವ ಕನ್ನಲಾಯನ ಆರಾಧನೆಯನ್ನು ಅಗರಿಯಲ್ಲಿ ನಡೆಸಿಕೊಂಡು ಬರಲು ಉತ್ಸುಕರಾಗಿದ್ದಾರೆ.

ಹೀಗೆ ಆಚರಣೆಗಳು ಸಾಮಾಜಿಕ ಜೀವನದ ಒಂದು ಭಾಗವಾಗಿ ಮಾತ್ರ ಕಂಡುಬರುವುದಷ್ಟೇ ಅಲ್ಲದೆ ಸಮಾಜಿಕ ಜೀವನವೂ ಕೂಡ ಆಚರಣಾತ್ಮಕ ಪರಿವರ್ತನೆಯಾಗಿ ಕಂಡುಬರುತ್ತದೆ. ದೈವಕ್ಕೆ ನಡೆಸುವ ಉತ್ಸವಾದಿಗಳು ನೇರವಾಗಿ ಮನುಷ್ಯರಿಗೂ ದೈವಕ್ಕೂ ಸಂಬಂಧಪಟ್ಟವುಗಳೇ. ಇದರ ರಾಚನಿಕತೆ ಮತ್ತು ಸ್ಥಳ್ಯೆಕ್ಯ ಪಾರಸ್ಪರಿಕವಾದವು. ‘ಮಾಡ’ ಇರುವ ತಾಣವು ಹಳ್ಳಿಯ ಒಂದು ಭಾಗವಾಗಿದ್ದಂತೆ ಮಾಡವೂ ಸ್ಥಳೀಯ ದೈವಗಳ ‘ಮಾಯ’ದ ಒಂದು ಅವಿಭಾಜ್ಯ ಅಂಗವೇ ಆಗಿರುತ್ತದೆ.

ಪುರಾಣ ಮತ್ತು ಆಚರಣಾತ್ಮಕ ಮುಂದುವರಿಕೆಯಲ್ಲಿ ಒಂದು ಸಾಮಾನ್ಯ ಸಂಬಂಧ ಆಂಶಿಕ ಒಪ್ಪಂದ ಏರ್ಪಡುತ್ತದೆ. ಇದು ಇತರ ವಸ್ತುವಿಷಯದಲ್ಲಿ – ಅಂದರೆ – ಸ್ಥಳೀಯ ಮತ್ತು ತಾತ್ಕಾಲಿಕ ಆಯಾಮದ ನಡುವಿನ ಕೊಂಡಿಯಾಗಿರುತ್ತದೆ. ಪುರಾಣ ಒಂದು ಆಚರಣೆಯ ಸಂದರ್ಭದಲ್ಲಿ ನಿರೂಪಿತವಾದಾಗ ಅದು ವರ್ತಮಾನವೂ ಆಗುತ್ತಾ ಅದರ ಅರ್ಥವನ್ನು ಬಿಚ್ಚಿಕೊಳ್ಳುತ್ತದೆ. ಪಾಡ್ದನದ ಈ ನಿರೂಪಣೆಯ ಪರಿಣಾಮವು ಇತರರಿಂದ ಎಂದರೆ; ಹೇಳುವವರಿಂದ, ಭೂತ ಕಟ್ಟಿದವನ ಉದ್ಗಾರದಿಂದ ಮತ್ತು ಪೂಜಾರಿಗಳ ಆವೇಶದಿಂದ ಬಲಗೊಂಡು, ಪೌರಾಣಿಕ ನಿರೂಪಣೆ ಮತ್ತು ಸುತ್ತಲಿನ ಸಾಮಾಜಿಕ ಮತ್ತು ಭೌತಿಕ ಸಂಬಂಧಗಳು ಇನ್ನಷ್ಟು ಸ್ವಷ್ಟಗೊಂಡಾಗ ಭೂತವು ವರ್ತಮಾನದತ್ತ ಚಲಿಸುತ್ತದೆ : ಆಚರಣೆಯ ಸಂದರ್ಭದಲ್ಲಿ ಪೂಜಾರಿಗಳು ಯಾವಾಗಲೂ ಭೂತಕಾಲದಲ್ಲಿಯೇ ಮಾತಾಡುತ್ತಾರೆ. ಅವರು ಎಲ್ಲವೂ ನಿನ್ನೆಯೇ ನಡೆಯಿತೆಂಬಂತೆ ಹೇಳುತ್ತಾರೆ. ಇಷ್ಟಲ್ಲದೆ ಆಚರಣೆಯಲ್ಲಿ ಪಾಲ್ಗೊಂಡ ಜನರನ್ನು ಉದ್ದೇಶಿಸಿ ಮಾತನಾಡುವಾಗ ಅವರ ಹಳೆಯ ಹೆಸರುಗಳಿಂದಲೇ, ಅವರ ಪೂರ್ವಜರ ಕಾಲದಲ್ಲಿ ನಡೆಯತೆಂದು ನಿರೂಪಿತವಾದ ಘಟನೆಗಳಿಗೆ ಸಂಬಂಧಿಸಿದಂತೆ ಕರೆಯಲಾಗುತ್ತದೆ.

ಹೀಗೆ ಭೂತವು ಅದೇ ಕಾಲದಲ್ಲಿ ನಿರೂಪಣೆ, ಕಟ್ಟುವಿಕೆ ಮತ್ತು ಮುಂದುವರಿಕೆಯಾಗುತ್ತದೆ. ಅದು ವರ್ತಮಾದನ ಒಂದು ತೀವ್ರ ಅನುಭವವಾಗಿ ನಿಗೂಢವಾದ ರೇಖಾತ್ಮಕ, ಕ್ರಮಾಗತ ಕಾಲದ ಕಲ್ಪನೆಗೆ ವಿರುದ್ಧವಾದ ಹರಿವಾಗಿ ಕಂಡುಬರುತ್ತದೆ. ಈ ನಿಗೂಢತೆಯು ಪೌರಾಣಿಕ ಆವರ್ತನ ಸಂರಚನೆಯಿಂದ (The cyclical structure of myths) ಇನ್ನಷ್ಟು ಶಸಕ್ತವಾಗುತ್ತದೆ. ಪಾಡ್ದನದ ಕೊನೆಯಲ್ಲಿ ಭೂತ ಕಟ್ಟಿದವನು ಅದರ ಮೊದಲ ಸಾಲನ್ನು ಪ್ರತಿಸಲವೂ ಪುನರುಚ್ಚರಿಸುತ್ತಲೇ ಪ್ರಾರಂಭಿಸುತ್ತಾನೆ. ಪಠ್ಯವು ನಿರೂಪಣೆಗೊಳ್ಳುವುದು ಪ್ರೇಕ್ಷಕರಿಗೆ ಹೊಸ ಮಾಹಿತಿಯನ್ನು ಕೊಡುವುದಕ್ಕಲ್ಲ. ಬದಲಾಗಿ ಪುನರ್ನಿಖರಗೊಳಿಸುವುದಕ್ಕೆ ಮತ್ತು ಸಂಗತಿಗಳನ್ನು ಪುನರುತ್ಪಾದಿಸುವುದಕ್ಕೆ. ಇದು ಲೀಚ್‌ಹೇಳಿರುವ ಆಚರಣೆಗಳ ಸ್ವಾರೋಪಿಕ ಸಂದೇಶವನ್ನು ನೆನಪಿಗೆ ತರುವುದರೊಂದಿಗೆ ಆಚರಣೆಯ ಅನುಕ್ರಮಣಿಕೆಯ ಕುರಿತು ಅವನ ನಿಲುವನ್ನೂ ನೆನಪಿಗೆ ತರುತ್ತದೆ (Leach, ೧೯೭೬;೪೫೧, ೪೪). ಆಚರಣಾತ್ಮಕ ಹಾಗೂ ಪಠ್ಯ ಇವೆರಡೂ ನೆಲಗಳಲ್ಲಿಯೂ ಬರ್ಗರ್ಟ್‌ಹೇಳಿರುವ ವಿಮುಖೋದ್ದೇಶಿತ ಜೈವಿಕ ಜ್ಞಾನ ಎಂದರೆ ಸ್ಥಾವರ ಇರವು ಮತ್ತು ಜಂಗಮ ಇರವುಗಳು ಅನ್ವಯಿಸುತ್ತವೆ(Burghart, ೧೯೯೩).

ಪುರಾಣ ಮತ್ತು ಭೌಗೋಳಿಕ ಸತ್ಯತೆಗಳ ಸಂಬಂಧವು ಈಗ ವಿವರಿಸಿರುವ ವಿರೋಧ ದ್ವಂದ್ವದ ಒಂದು ಅಂಶವಾಗಿದ್ದು, ಅದು ಸ್ಥಳೀಯತೆಗೆ ಸಂಬಂಧಿಸಿದ ಪ್ರಶ್ನೆಯೂ ಆಗುತ್ತದೆ. ನಾವು ಈಗಾಗಲೇ ಹೇಳಿರುವಂತೆ ಪಾಡ್ದನದಲ್ಲಿ ವ್ಯಕ್ತಗೊಂಡ ಭೌಗೋಳಿಕತೆಯು ಸ್ಥಳೀಯ ಭೌಗೋಳಿಕತೆಯಾಗಿದ್ದು ಹಾಗೂ ಅದು ನಾಯಕನು ನಿಜವಾಗಿಯೂ ಆರಾಧನೆಗೊಳ್ಳುವ ಸ್ಥಳವಾಗಿರುತ್ತದೆ. ಭೌಗೋಳಿಕ ಗುಣಗಳು ಪುರಾಣದಲ್ಲಿ ಸ್ಥಳೀಯತೆಯನ್ನು ಪಡೆಯಲು ಅಲ್ಲಿಯ ಪರ್ವತಗಳಿರುವ ಗ್ರಾನೈಟ್‌ಶಿಲೆಗಳು, ಮೈದಾನಗಳು ಜನರ ಕಲ್ಪನೆಯನ್ನು ಕೆರಳಿಸಿರುವುದೂ ಕಾರಣವಾಗಿದೆ. ಆದರೆ ತದ್ವಿರುದ್ಧವಾಗಿ ಸ್ಥಳೀಯ ಜನರ ನೆನಪಲ್ಲಿ ಉಳಿದಿರುವ ಈ ಪುರಾಣವು ಸ್ಥಳೀಯತೆಯನ್ನು ಸಮೀಕರಿಸಿ ಜಾಗತಿಕ ಗುಣಗಳನ್ನು ಅರ್ಥವತ್ತಾಗಿಸುತ್ತದೆ.

ಸ್ಥಳೀಯತೆಯನ್ನು ವಿವರಿಸುವಾಗ ಕೆಲವೊಂದು ಸಮಸ್ಯೆಗಳೇಳುತ್ತವೆ. ಏಕೆಂದರೆ ನಿರೂಪಣೆಯ ಸೂಕ್ಷ್ಮ ಏರಿಳಿತದಿಂದಾಗಿ ಸ್ಥಳೀಯತೆ ತೀರಾ ತೆಳುವಾಗಿರುತ್ತದೆ. ಹೀಗಿಲ್ಲವಾದರೆ ವಿವಿಧ ಸ್ಥಳಗಳಲ್ಲಿರುವ ಕಥೆಗಳು – ಉದಾಹರಣೆಗೆ ಸ್ವಯಂಭೂಲಿಂಗಗಳು ಉದ್ಭವಿಸಬಹುದು. ಇಲ್ಲವೇ ಎಲ್ಲಾ ಸ್ಥಳಗಳಲ್ಲಿಯೂ ಉದ್ಭವವಾಗಿದೆ ಎಂದು ಹೇಳಬಹುದು. ಕನ್ನಲಾಯ ದೈವ ಮತ್ತು ಅದರ ಕತೆ ತೀರಾ ಹತ್ತಿರವಾಗಿ ಈ ಸ್ಥಳದೊಂದಿಗೆ ಸಂಬಂಧಿಸಿಕೊಂಡಿದೆಯಾದರೂ ಅದರ ಪಠ್ಯ ಮತ್ತು ಆಚರಣೆಯ ಕೆಲವು ಲಕ್ಷಣಗಳು ಇತರ ಸ್ಥಳಗಳಲ್ಲಿಯೂ ಸಮಾನಾಂತರವಾಗಿ ಕಂಡುಬರುತ್ತವೆ. ಹಾಗೆಂದರೆ ಈ ಸಮಾನಾಂತರತೆ ಒಂದು ವಿಸ್ತೃತ ಸಾಂಸ್ಕೃತಿಕ ಮುಂದುವರಿಕೆಯಾಗಿ, ಏರಿಳಿತಗಳು ನಿರ್ದಿಷ್ಟ ಸ್ಥಳೀಯ ಸಾಂದರ್ಭಿಕ ಘಟಕವಾಗಿ ವಾರ್ಷಿಕ ಆಚರಣೆಯಲ್ಲಿ ಸ್ಪಷ್ಟವಾಗುತ್ತದೆ.

ಪಠ್ಯ ಮತ್ತು ಪ್ರದರ್ಶನಾತ್ಮಕ ಸಮಾನಾಂತರತೆಗಳು

ಈ ವಿಭಾಗದಲ್ಲಿ ಕನ್ನಲಾಯ ಪಾಡ್ದನದ ಪಠ್ಯ ಮತ್ತು ಪ್ರದರ್ಶನಾತ್ಮಕ ಸಮಾನಾಂತರತೆಗಳನ್ನು ಚರ್ಚಿಸುತ್ತಾ ಅದನ್ನು ವಿಶಾಲವಾದ ಸಾಂಪ್ರದಾಯಿಕ, ಭೌಗೋಳಿಕ ಮತ್ತು ಪರಿಕಲ್ಪನೀಯ ಸಾಂದರ್ಭಿಕ ನೆಲೆಗಟ್ಟಿನಲ್ಲಿ ಚರ್ಚಿಸಲಾಗಿದೆ. ಇದರಲ್ಲಿ (ಅ) ವಿಭಾಗವು ಜುಮಾದಿಯ ಸ್ಥಳೀಯ ಪಾಡ್ದನ (ಆ) ಒಬ್ಬನೇ ನಿರೂಪಕನಲ್ಲಿ ಕಂಡುಬರುವ ಸ್ಥಳೀಯ ಆಚರಣಾತ್ಮಕ ನಿರೂಪಣೆ ಮತ್ತು ನಿರೂಪಣಾತ್ಮಕ ಸಮಾನಾಂತರತೆಗಳ ಸಾದೃಶ್ಯ ಶೈಲಿ (ಇ) ಇತರ ನಿರೂಪಕರು, ಕೊನೆಯಲ್ಲಿ (ಈ) ಹತ್ತೊಂಬತ್ತನೆಯ ಶತಮಾನದಲ್ಲಿ ಸಂಗ್ರಹಿಸಿದ ಕತೆಯೊಂದರ ತೌಲನಿಕ ಅಧ್ಯಯನಗಳನ್ನು ಒಳಗೊಳ್ಳಲಾಗಿದೆ.

(ಅ) ಪ್ರದರ್ಶನಾತ್ಮಕ ಸಂದರ್ಭವನ್ನು ಸಮೀಪಗೊಳಿಸಲು ನಮಗಿಲ್ಲಿ ಸಹಾಯಕವಾಗುವ ಒಂದು ಪಾಡ್ದನವು ಸ್ಥಳೀಯ ಜುಮಾದಿ (ಪಾಷಾಣ ಜುಮಾದಿ)ಗೆ ಸಂಬಂಧಿಸಿದುದು. ಕನ್ನಲಾಯ ಪಾಡ್ದನದಲ್ಲಿಯೇ ಹೇಳಿರುವಂತೆ ಜುಮಾದಿಯೇ ಕನ್ನಲಾಯನನನ್ನು ದೈವತ್ವಕೇರಿಸಿದುದು. ಹಾಗಿದ್ದರೂ ಈ ಘಟನೆಗೆ ಸಂಬಂಧಿಸಿದಂತೆ ಅಥವಾ ಕನ್ನಲಾಯನಿಗೆ ಸಂಬಂಧಿಸಿದಂತೆ ಯಾವುದೆ ಸೂಚನೆಗಳು ಕಂಡುಬರುವುದಿಲ್ಲ. ಇದನ್ನು ಪಠ್ಯಕ್ಕೆ ಸಮಾನಾಂತರತೆ ಎನ್ನುವುದಕ್ಕಿಂತ ಪ್ರೇರಿತವೇ ಎಂದೆನಿಸುವಂತಿದೆ. ಕನ್ನಲಾಯ ಪಾಡ್ದನದಲ್ಲಿ ಅಭ್ಯಾಗತನೊಬ್ಬನನ್ನು ಸ್ವೀಕರಿಸುವ ಮತ್ತು ಬರಮಾಡಿಕೊಳ್ಳುವ ಪ್ರಕ್ರಿಯೆಯು ಈ ಪಾಡ್ದನದಲ್ಲಿ ನಿರೂಪಿತವಾಗದೆ ಆಚರಣೆಯಲ್ಲಿ ಇತರ ದೈವಗಳು ಸೇರುವುದಷ್ಟೇ ಕಂಡುಬರುತ್ತವೆ.

ಪಾಷಾಣ ಜುಮಾದಿಯ ಕತೆಯು ರೈತಾಪಿ ವರ್ಗದವರಾದ ತುಳುವರ ಗ್ರಾಮೀಣ ಬದುಕಿನ ಅಂತರಾಳವನ್ನು ಸ್ಪಷ್ಟಪಡಿಸುತ್ತದೆ. ಇದು ಕೂಡಾ ಪಾಷಾಣ ಜುಮಾದಿಯನ್ನು ಕಟ್ಟುವ ಐತ್ತಪ್ಪ ಆಳ್ವರ ನಿರೂಪಣೆಯೇ ಆಗಿದೆ. ಈ ಪಾಡ್ದನವನ್ನು ನಿರೂಪಣೆಯ ದೃಷ್ಟಿಯಿಂದ ಮೂರು ಕಥಾಭಾಗಗಳಾಗಿ ವರ್ಗೀಕರಿಸಬಹುದು. ಮೊದಲ ಭಾಗವು (೧-೩೦) ಕುಳವೂರು ಗ್ರಾಮದ ಪೂರ್ವಕ್ಕಿರುವ ಎರಡು ಗ್ರಾಮಗಳ ಪ್ರತಿಷ್ಠಿತ ಮನೆತನವೊಂದಕ್ಕೆ ಮದುವೆಯ ದಿಬ್ಬಣದಲ್ಲಿಲ ದೈವ ಹೇಗೆ ಬಂದು ಸೇರಿತೆಂಬುದನ್ನು ನಿರೂಪಿಸುತ್ತದೆ. ಎರಡನೆಯ ಭಾಗವು (೩೦-೪೮)ಕುಳವೂರಿನ ಪಕ್ಕದ ಗ್ರಾಮವೊಂದಕ್ಕೆ ಜುಮಾದಿ ಬಂದು ಸ್ಥಳೀಯ ರೈತನೊಬ್ಬನ ಕಂಬಳದ ಗದ್ದೆಗೆ ನೀರು ಬರಿಸುವುದಕ್ಕೆ ನೆರವಾಗುವುದನ್ನು ತಿಳಿಸುತ್ತದೆ. ಆತ ಅದಕ್ಕಾಗಿ ಗುಡಿಯೊಂದನ್ನು ಕಟ್ಟಿ ನಂಬಿಕೊಂಡು ಬರುತ್ತಾನೆ. ಪಾಡ್ದನವನ್ನು ಹೇಳುವುದು ಕೂಡಾ ಆಚರಣೆಯೇ ಆಗಿರುವ ಸಂದರ್ಭದಲ್ಲಿ ಕಂಬಳ, ಮದುವೆ ಹಾಗೂ ಅದು ನಿರೂಪಿತಗೊಂಡ ಎಡೆಯನ್ನು ಈ ಪಾಡ್ದನ ನಿರ್ದೆಶಿಸುತ್ತದೆ.

ಕೊನೆಯದಾಗಿ (೪೮-೭೫) ‘ಕಾರ್ನಿಕ’ವನ್ನು ತೋರಿಸುತ್ತ ಕುಳವೂರಿನಲ್ಲಿ ಸಂಚಾರ ಮಾಡುವ ಈ ದೈವವು ಇಂದು ಕಂಡುಬರುವ ಆಚರಣೆಯನ್ನು ಪ್ರಾರಂಭಿಸುತ್ತದೆ. ಮೊದಲನೆಯ ಭಾಗದ ಎರಡು ನಿರೂಪಣೆಗಳು ಹೆಚ್ಚು ಕಡಿಮೆ ಫಲವಂತಿಕೆ ‘ಮದುವೆಯ ಮಂಗಲಕಾರ್ಯಕ್ರಮಕ್ಕೆ ಸಂಬಂಧಿಸಿದುದು ಒಂದಾದರೆ ಮತ್ತೊಂದು ಗದ್ದೆಯನ್ನು ಫಲವತ್ತೀಕರಿಸುವ ಆಚರಣೆಗೆ – ಸಂಬಂಧಿಸಿದುದು’. ಭೂತಗಳು ಸಾಮಾನ್ಯವಾಗಿ ವಧು ಮತ್ತು ದನಗಳಿಗೆ ಸಂಬಂಧಿಸಿದವಾಗಿರುತ್ತವೆ ಎಂದು ಹೇಳಲಾಗುತ್ತದೆ. ಅನೇಕ ಪಾಡ್ದನಗಳಲ್ಲಿ ಅವುಗಳು ತಾವು ವಧುವನ್ನು ಅನುಸರಿಸಿ ವಂಶ ಪರಂಪರೆಯನ್ನು ಬೆಳೆಸುವುದಾಗಿಯೂ ಮತ್ತು ದನಗಳ ಕೊರಳ ಬಳ್ಳಿಯನ್ನು ಅನುಸರಿಸುವುದಾಗಿಯೂ ಹೇಳುತ್ತವೆ. ಭತ್ತ ಬೆಳೆಯುವ ಭೂಪ್ರದೇಶದಲ್ಲಿ ಅಗತ್ಯವಾಗಿರುವ ದನಗಳಿಗೆ ಸಂಬಂಧಿಸಿದ ಪಾಷಾಣ ಜುಮಾದಿಯು ಈ ಪಾಡ್ದನವನ್ನು ಕನ್ನಲಾಯ ಪಾಡ್ದನದಲ್ಲಿ ಬರುವ ವಿವರಗಳನ್ನು ಲಕ್ಷಿಸಿ ಅದರ ಮುಂದುವರಿಕೆಯೆಂದೇ ಭಾವಿಸಲಾಗಿದೆ. ಕೆಳಗೆ ವಿವರಿಸುವಂತೆ ಇದರ ತಿರುಳನ್ನು ಸ್ವಾಮಿ ನಂದೇದಿಗೆ ಸಂಬಂಧಿಸಿದಂತೆ ಬೇರೆಯೇ ಆದ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗುತ್ತದೆ.

(ಆ) ಒಬ್ಬನೇ ಪಾಡ್ದನಗಾರ ಹೇಳಿರುವ ಉಳಿದ ಪಠ್ಯಗಳ ಸಮಾನಾಂತರ ಮಾದರಿಗಳನ್ನು ಅನುಸರಿಸಿದರೆ ಕನ್ನಲಾಯ ಪಾಡ್ದನವನ್ನು ಇನ್ನೊಂದು ತೆರನಾಗಿ ಅರ್ಥೈಸಲು ಸಾಧ್ಯವಾಗುತ್ತದೆ. ಹೀಗೆಯೇ ‘ಬಲವಾಂಡಿ’ ಪಾಡ್ದನದಲ್ಲಿಯೂ ಕನ್ನಲಾಯ ಪಾಡ್ದನದಲ್ಲಿರುವಂತೆಯೇ ಸುಮಾರು ಮುಕ್ಕಾಲು ಭಾಗದ ನಂತರ ಕತೆಗೆ ತಿರುವೊಂದು ಕಂಡುಬರುತ್ತದೆ. ಈ ನಿರ್ದಿಷ್ಟ ಭಾಗವು ಭೂತ ನರ್ತಿಸುವಾಗ ಆರಂಭವಾಗುತ್ತದೆ. ಪೆರ್ರಾದಲ್ಲಿರುವ ದೈವಬಲವಾಂಡಿಯ ಗುಡಿಯಲ್ಲಿ ಐತ್ತಪ್ಪ ಪಂಬದರಿಗೆ ‘ಕೋಲ’ ಕಟ್ಟುವುದಕ್ಕಿರುತ್ತದೆ. ಬಲವಾಂಡಿಯೊಂದಿಗೆ ಪಿಲಿಚಾಮುಂಡಿಯನ್ನು ಆತನೇ ಕಟ್ಟಬೇಕಾಗುತ್ತದೆ. ಪಿಲಿಚಾಮುಂಡಿಯ ಪಾಡ್ದನವು ಮತ್ತೊಮ್ಮೆ ನಮಗೆ ಕನ್ನಲಾಯ ಮತ್ತು ಬಲವಾಂಡಿಗಳ ಕತೆಯನ್ನು ನೆನಪಿಸುತ್ತದೆ. ಈ ಮೂರು ಭೂತಗಳಿಗೆ ಕೊಡುವ ಕೋಲವನ್ನು ಗಮನಿಸಿ ಐತ್ತಪ್ಪ ಅವರನ್ನು ಉಲ್ಲೇಖಿಸಿ ಹೇಳುವುದಾದರೆ ಪಠ್ಯಗಳು ಅವನ್ನು ಪರಸ್ಪರ ಬೇರ್ಪಡಿಸುತ್ತದೆ. ಕನ್ನಲಾಯನಿಗೆ ಸಂಬಂಧಿಸಿ ಕೋಲದಲ್ಲಿ ಹೇಳುವುದಾದರೆ ಧಾಟಿಯು ಪಾಷಾಣ ಜುಮಾದಿಯ ಕೋಲದಲ್ಲಿ ಹೇಳುವ ಪಾಡ್ದನದ ಆರಂಭದ ಸೊಲ್ಲಿನಂತಿರುತ್ತದೆ. ಇದು ಜುಮಾದಿಯ ಕೋಲಕ್ಕೆ ಸಂವಾದಿಯಾಗಿಯೂ ಅನ್ವಯಿಸುತ್ತದೆ. ಕನ್ನಲಾಯ ಮತ್ತು ಬಲವಾಂಡಿ ಭೂತಗಳು ದೈವೀಕರಿಸಿದ ಮಾನವರಾಗಿರುವುದರಿಂದ, ಅಂತೆಯೇ ಆಚರಣೆಯ ಭಾಗವಾಗಿಯೇ ನಿರೂಪಣೆಗೊಳ್ಳಬೇಕಾಗಿರುವುದರಿಂದ, ಅವುಗಳಿಗೆ ಪಾಷಾಣ ಜುಮಾದಿಯ ಪಾಡ್ದನದ ರೀತಿಯ ಮೊದಲ ಭಾಗಗಳಲ್ಲದಿರುವುದನ್ನು ಯಾರಾದರೂ ಊಹಿಸಿಕೊಳ್ಳಬಹುದು.

ಕೇವಲ ಆಚರಣೆಯ ಲಕ್ಷಣದಲ್ಲಷ್ಟೇ ಅಲ್ಲದೆ ಕನ್ನಲಾಯ ಪಾಡ್ಡನದ ನಿರೂಪಣೆಯ ದೃಷ್ಟಿಯಿಂದಲೂ ಬಲವಾಂಡಿ ಪಾಡ್ದನದೊಂದಿಗೆ ಅನೇಕ ಸಮಾನಾಂತರತೆಗಳನ್ನು ಗುರುತಿಸಬಹುದು. ಉದಾಹರಣೆಗೆ ಈಗಾಗಲೇ ಹೇಳಿರುವಂತೆ ಬಲವಾಂಡಿಯೂ ಕೂಡ ಮೂಲತಃ ಮನವನೇ ಆಗಿದ್ದು ದೈವವಾದ ಕತೆಯು ಪಾಡ್ದನದಲ್ಲಿದೆ. ಆತನು ಬೆರ್ಮೆರ್‌ ದೈವದಿಂದ ‘ಮಾಯ’ದಲ್ಲಿ ಸೇರಿ ದೇವರಿಗಿಂತ ಒಂದು ಮೆಟ್ಟಿಲು ಕೆಳಗೆ ಭೂತಕ್ಕಿಂತ ಒಂದು ಮೆಟ್ಟಿಲು ಮೇಲೆ ಸ್ಥಾಪಿತಗೊಳ್ಳುತ್ತಾನೆ. ಬೆರ್ಮೆರ್‌ಆತನ ಕುದುರೆಯನ್ನು – ಕನ್ನಲಾಯನ ದನಗಳನ್ನೂ ಕಲ್ಲಾಗಿಸುವಂತೆ – ಕಲ್ಲಾಗಿಸುತ್ತಾನೆ. ಐತ್ತಪ್ಪ ಪಂಬದ ಹೇಳುವಂತೆ ಕನ್ನಲಾಯ ಮತ್ತು ಬಲವಾಂಡಿ ಭೂತಗಳೆರಡೇ ಮಾನವನಾಗಿ ದೈವತ್ವಕ್ಕೇರಿದ, ಒಂದೇ ಸ್ಥಳದಲ್ಲಿ ಮಾತ್ರ ಆರಾಧನೆಗೊಳ್ಳುವ ಭೂತಗಳು.

ದನಗಳನ್ನು ಕೊಂಡುಕೊಳ್ಳುವ ವಿವರವು ಐತ್ತಪ್ಪ ಪಂಬದರ ಅನೇಕ ಪಾಡ್ದನಗಳಲ್ಲಿ ಕಂಡುಬರುತ್ತದೆ. ಜಾರಂದಾಯ ಭೂತದ ಪಾಡ್ದನದಲ್ಲಿ ಹೇಳಿರುವಂತೆ ನಾಲ್ಕು ಭೂತಗಳು (ಬ್ರಾಹ್ಮಣರು) ಗದ್ದೆ ಬೇಸಾಯದ ನಿಮಿತ್ತ ದನಗಳನ್ನು (ಕೋಣಗಳನ್ನು) ಕೊಂಡುಕೊಳ್ಳುವುದಕ್ಕೆ ಘಟ್ಟದ ಮೇಲಕ್ಕೆ ಹೋಗುತ್ತದೆ. ದಾರಿಯಲ್ಲಿ ಬರುವಾಗ ಅವರ ಕೋಣಗಳನ್ನು ಜಾರಂದಾಯ ಭೂತವು ಮಾಯ ಮಾಡುತ್ತದೆ.

ಕೊಡಮಣಿತ್ತಾಯ ಪಾಡ್ದನದಲ್ಲಿಯೂ ಇಬ್ಬರು ‘ಬಂಟರು’ ದೇವರ ಗುಡಿಯೊಂದಕ್ಕೆ ಕಾಣಿಕೆ ಕೊಡಲು ಹೋಗುತ್ತಾರೆ. ಕಾಣಿಕೆಗಾಗಿ ಅವರು ಕೊಂಡುಕೊಳ್ಳುವುದು ಕೋಳಿ ಮತ್ತು ಕೋಣಗಳನ್ನೇ. ಹೀಗೆ ಬರುವ ಅವರು ನಡುದಾರಿಯಲ್ಲೊಂದೆಡೆ ಅಶ್ವತ್ಥ ಮರವೊಂದರ ಕೆಳಗೆ ತಂಗುತ್ತಾರೆ. ಆಗ ಉಳ್ಳಾಯೆ ದೈವವು ಕೋಳಿಯ, ಧರ್ಮದೈವವು ಕೋಣದ ಮೈಸೇರುತ್ತದೆ. ಮತ್ತೆ ಹಿಂದಿರುಗಿ ಬಂಟರು ಬೈಲಿನ ಸಮೀಪ ಬರುವಾಗ ದೈವಗಳು ತಮ್ಮ ಇರುವಿಕೆಯನ್ನು ಬಹಿರಂಗಪಡಿಸಿ ತಮಗೆ ನೇಮ – ನಿಯಮಗಳನ್ನು ಕೇಳುತ್ತವೆ. ಆಮೇಲೆ ಅವುಗಳಿಗೆ ಅದೇ ಸ್ಥಳದಲ್ಲಿ ಗುಡಿಯನ್ನು ಕಟ್ಟಿ ‘ಸ್ಥಾಪನೆ’ ಮಾಡಲಾಗುತ್ತದೆ. ಹೀಗೆ ಕನ್ನಲಾಯ ಭೂತದ ಪಾಡ್ದನದಲ್ಲಿರುವ ಕೋಣಗಳನ್ನು ಕೊಂಡುಕೊಳ್ಳುವ ಮತ್ತು ದೈವಗಳ ದೆಸೆಯಿಂದ ಮಾಯಕವಾಗುವ ಆಶಯ ಇತರ ಪಾಡ್ದನಗಳಲ್ಲಿಯೂ ಸಮಾನವಾಗಿದೆ. ಇವುಗಳಲ್ಲಿ ಕನ್ನಲಾಯ ಪಾಡ್ದನದಲ್ಲಿ ದನಗಳು ಮತ್ತೆ ಸಿಗದಿರುವುದು ಮೊದಲನೆಯ ವ್ಯತ್ಯಾಸವಾಗಿದೆ. ಹೀಗೆಯೇ ಮಾಯಕವಾಗುವುದು ಇಲ್ಲವೇ ಮೈಸೇರುವುದು ದನಗಾಹಿಗೆ ಸಂಬಂಧಿಸಿರುವುದು ಎರಡನೆಯ ವ್ಯತ್ಯಾಸವಾಗಿದೆ.