– ಮೂಲ : ಪೀಟರ್ ಜೆ. ಕ್ಲಾಸ್
– ಕನ್ನಡಕ್ಕೆ : ಎ.ವಿ. ನಾವಡ, ಸುಭಾಷ್‌ಚಂದ್ರ

 

ವ್ಯಾಪಕವಾಗಿ ಹಮ್ಮಿಕೊಂಡಿರುವ ಇಂಡೋ ಆರ್ಯನ್ ಸಂಪ್ರದಾಯದೊಳಗೆ ವಿಶಿಷ್ಟವಾದ ಭಾರತೀಯ ಸಂಸ್ಕೃತಿಗೆ ಕಾರಣವಾದ ಅಂಶಗಳು ಇವೆ ಎಂಬುದಾಗಿ ಭಾರತ ತಜ್ಞರು (Indianists) ಎಂದೋ ಗುರುತಿಸಿದ್ದರು. ಇತಿಹಾಸ ಕಾಲದಿಂದಲೂ ದಕ್ಷಿಣ ಭಾರತದಲ್ಲಿ ಪ್ರಚಾರದಲ್ಲಿದ್ದ ದ್ರಾವಿಡ ಸಂಸ್ಕೃತಿಯ ದೇಸೀಯ ಸಂಪ್ರದಾಯಗಳು ಈ ಬಗೆಯ ವಿಶಿಷ್ಟ ಸಂಸ್ಕೃತಿಯ ರೂಪಣೆಗೆ ಪ್ರೇರಕವೆಂಬುದನ್ನು

ಪ್ರೇರಕವೆಂಬುದನ್ನು ಅವರು ಗಮನಿಸಿದ್ದರು. ಔತ್ತರೇಯ ಹಾಗೂ ದಾಕ್ಷಿಣಾತ್ಯ ಭಾರತೀಯ ಸಂಪ್ರದಾಯಗಳು ರೂಪುಗೊಳ್ಳುತ್ತಿದ್ದ ದಿನಗಳ ಖಚಿತ ದಾಖಲೆಗಳೇನೂ ನಮಗೆ ಸಿಗುತ್ತಿಲ್ಲ. ದೊರೆತ ಆ ಕಾಲದ ಮಾಹಿತಿಗಳು ನಿಗೂಢವು ಆಗಿವೆ. ಭಾಷಿಕ ಹಾಗೂ ಪ್ರಾಗೈತಿಹಾಸಿಕ ಸಂಶೋಧನೆಗಳ ಮೂಲಕ ಇತಿಹಾಸವನ್ನು ಮತ್ತೆ ಪುನರ್ರಚಿಸಹೋದಾಗ ಕೆಲವೊಂದು ಮಹತ್ವದ ಅಂಶಗಳು ಬೆಳಕಿಗೆ ಬರುತ್ತವೆ. ನಮ್ಮ ಮೌಖಿಕ ಸಂಪ್ರದಾಯಗಳ ಸಂಶೋಧನೆ – ಅಧ್ಯಯನ ಈ ದಿಸೆಯಲ್ಲಿ ಮಹತ್ವಪೂರ್ಣವಾದುದು. Oral Traditions, Royal cults and materials for a Reconsideration of the caste system in South India by Peter J.Claus, Published in Journal of Indian Folkoristics, Mysore, Vol.I 1978 (C) ByGolklore fellows of India.

ದ್ರಾವಿಡ ಮೌಖಿಕ ಸಂಪ್ರದಾಯದ ಕೃತಿಗಳ ಮೂಲ ಸಾವಿರಾರು ವರ್ಷಗಳ ಹಿಂದೆ ಹೋಗಬಹುದಲ್ಲದೆ ಅವು ಇಂದಿಗೂ ನಮ್ಮ ನಡುವೆ ಬದುಕಿ ಉಳಿದಿದೆ. ಈ ಮೌಖಿಕ ಸಂಪ್ರದಾಯಗಳು ಇಂಡೋ ಯುರೋಪಿಯನ್ ಮೂಲದ ಉತ್ತರ ಭಾರತದ ಕೃತಿಗಳಂತೆ (ರಾಮಾಯಣ, ಮಹಾಭಾರತ) ಸ್ವತಂತ್ರವಾಗಿ ಹುಟ್ಟಿ ಸಮಾನಾಂತರವಾಗಿ ಬೆಳೆದು ಬಂದಿರಬೇಕು.

ತೀರ ಇತ್ತೀಚಿನವರೆಗೆ ವಿದ್ವಾಂಸರಿಂದ ಭಾರತೀಯ ಮೌಖಿಕ ಸಂಪ್ರದಾಯವು ನಿರ್ಲಕ್ಷಿತವಾಯಿತು. ಇದೀಗ ಬೃಹತ್‌ ಪ್ರಮಾಣದಲ್ಲಿ ಜನಪದ ಸಾಹಿತ್ಯದ ಸಂಗ್ರಹ ನಡೆಯುತ್ತಿದ್ದರೂ ಅವುಗಳ ಗಂಭೀರ ಅಧ್ಯಯನ ಸಾಗುತ್ತಿಲ್ಲ. ಅವು ಮತ್ತೊಂದು ದೇಶೀಯ ಭಾಷೆಗೆ ಅನುವಾದಗೊಂಡು ವಹನಗೊಳ್ಳುತ್ತಿಲ್ಲ. ಭಾರತೀಯ ಸಂಸ್ಕೃತಯ ಅಧ್ಯಯನದಲ್ಲಿ ಈ ಸಂಪ್ರದಾಯಗಳ ಕೊಡುಗೆ ಮಹತ್ವದ್ದು ಎನ್ನುವ ಬಗೆಗೆ ವಿದ್ವಾಂಸರ ಗಮನ ಹರಿದಿಲ್ಲ. ಜೊತೆಗೆ ಇತಿಹಾಸಕಾಲದಿಂದ ಬಂದ ಲಿಖಿತ ಸಾಹಿತ್ಯದ ಅಧ್ಯಯನದಲ್ಲೇ ನಿರತವಾಗಿರುವ ಸಂಸ್ಕೃತಜ್ಞರು ಮತ್ತು ಇತರರು ಸುದೀರ್ಘವೂ ಶ್ರಮಪೂರ್ಣವೂ ಆದ ಮೌಖಿಕ ಸಾಹಿತ್ತದ ಅಧ್ಯಯನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ. ಇದೀಗ ಈ ಕೆಲಸ ಮಾನವಶಾಸ್ತ್ರಜ್ಞರ ಪಾಲಿಗೆ ಬಂದಂತೆ ತೋರುತ್ತದೆ. ಆದರೆ ಸಂಸ್ಕೃತದ ಸಾಮಾಜಿಕ ತಾತ್ವಿಕ ವಿಚಾರಗಳ ಕಡೆಗೆ ಅವರ (ಮಾನವ ಶಾಸ್ತ್ರಜ್ಞರ) ಗಮನ ಹರಿಯುತ್ತಿರುವಂತೆ ಮಾನವ ಸಂಸ್ಕೃತಿಯ ಅಧ್ಯಯನಕ್ಕೆ ಹರಿಯುತ್ತಿಲ್ಲ.

ಮಾನವ ಶಾಸ್ತ್ರದ ಗುರಿ ಇದಲ್ಲ. ಮಾನವ ಶಾಸ್ತ್ರವು ತನ್ನ ಹುಟ್ಟಿನಿಂದಲೂ ಅಮೆರಿಕಾ ಇಂಗ್ಲೆಂಡುಗಳಲ್ಲಿ ಸಮುದಾಯದ ಸಂಸ್ಕೃತಿಯ ಶೋಧನೆಯಲ್ಲಿ ತೊಡಗಿ ನಾಗರಿಕತೆಯ ಜೀವಸತ್ವವನ್ನು ಅದರಲ್ಲಿ ಕಂಡುಕೊಂಡು ಅದನ್ನು ಜನಸಾಮಾನ್ಯರ ತಿಳುವಳಿಕೆಗೆ ಕೊಡುಗೆಯಾಗಿ ಕೊಟ್ಟಿತು (ಬೋವಸ್ -೧೯೦೨) ಆದರೆ ಸಾಹಿತಿಗಳು ಆ ವಿಚಾರವನ್ನು ಅಮೂರ್ತ ಮತತತ್ವಗಳ ಹಾಗೂ ಗೂಢ ತತ್ವಗಳ ಮಟ್ಟಕ್ಕೆ ಏರಿಸಿದರು. ಭಾರತೀಯ ಸಾಹಿತಿಗಳೂ ಇದೇ ಕೆಲಸ ಮಾಡಿದರು. ಇಲ್ಲಿನ ಸಮಾಜ ವಿಜ್ಞಾನಿಗಳು ಜಾತಿ ಪದ್ಧತಿಯನ್ನು ವರ್ಣ ಹಾಗೂ ಭಗವದ್ಗೀತೆಯ ಬೆಳಕಿನಲ್ಲೇ ವಿವರಿಸುತ್ತಿದ್ದಾರೆ. ಆದರೆ ಈ ತಲೆಮಾರಿನ ಮಾನವ ಶಾಸ್ತ್ರಜ್ಞರು ಹಳ್ಳಿಗಾಡುಗಳಿಗಿಳಿದು ಅಲ್ಲಿನ ಜಾತಿ ವ್ಯವಸ್ಥೆಯ ಸಂಕೀರ್ಣತೆ, ಅದರ ಆರ್ಥಿಕ ಹಾಗೂ ನಡವಳಿಗಳ ಪರಸ್ವರ ಸಂಬಂಧಗಳನ್ನು ಬೆಳಕಿಗೆ ತಂದರು. ಭಾರತದ ಸಾಮಾಜಿಕ ಬೆಳವಣಿಗೆಯ ಅಧ್ಯಯನದಲ್ಲಿ ಮಾನವಶಾಸ್ತ್ರಜ್ಞರು ಲಿಖಿತ ದಾಖಲೆಗಳಿಗೆ ಹಾಗೂ ವೈದಿಕ ವಕ್ತೃಗಳಿಗೆ (Brahminical informants) ಮಹತ್ವವನ್ನು ಕೊಡುತ್ತಿದ್ದು ಮೌಖಿಕ ಸಂಪ್ರದಾಯಗಳನ್ನು ಕಡೆಗಣಿಸುತ್ತಿರುವಂತೆ ನನಗೆ ತೋರುತ್ತದೆ. ನನ್ನ ಅಭಿಪ್ರಾಯದಂತೆ ಭಾರತದ ನಾಗರಿಕತೆಯ ಬೆಳವಣಿಗೆಯ ಅಧ್ಯಯನದಲ್ಲಿ ಮಾನವ ಶಾಸ್ತ್ರಜ್ಞರು ತಳೆದಿರುವ ಈ ಧೋರಣೆ ತಪ್ಪಾಗಿದೆ. ವಾಸ್ತವಿಕವಾಗಿ ಮೌಖಿಕ ಸಂಪ್ರದಾಯಗಳು ಭಾರತೀಯ ನಾಗರಿಕತೆಯ ವಿಕಾಸದ ಅಧ್ಯಯನದಲ್ಲಿ ಮಹತ್ವದ ಆಕರಗಳಾಗಿವೆ. ಆದರೆ ಈ ಆಕರಗಳ ಉಪಯೋಗ ನಡೆದಿಲ್ಲ.

ತುಳು ಮೌಖಿಕ ಸಂಪ್ರದಾಯದ ಪ್ರಯೋಜನಗಳು

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ತುಳುನಾಡು ಎಂದು ಈ ಪ್ರದೇಶ ಖ್ಯಾತವಾಗಿದೆ) ಇಂದಿಗೂ ತುಳುವಿನ ಶ್ರೀಮಂತ ಮೌಖಿಕ ಸಂಪ್ರದಾಯಕ್ಕೆ ಆಕರವಾಗಿದೆ. ಇದನ್ನು ಪಾಡ್ದನಗಳೆಂದು ಕರೆಯುತ್ತಾರೆ. ಪಾಡ್ದನ ಸಾಹಿತ್ಯದ ವಸ್ತುವಿನ ಬಹು ಅಂಶ ಸ್ಥಳೀಯ ಭೂತ ಹಾಗೂ ದೈವಗಳ ಐತಿಹ್ಯದ ಅಂಶಗಳಾಗಿವೆ. ತುಳುವರ ಭೂತ ಉಪಾಸನೆಯನ್ನು (ಬರ್ನೆಲ್, ೧೮೯೪. ೭, ಕ್ಲಾಸ್ ೧೯೭೩, ೧೯೭೫) ಕೇರಳದ ಭೂತಾರಾಧನೆ (ಕುರುಪ್, ೧೯೭೩) ಪ್ರಾಚೀನ ತಮಿಳು ನಾಡು (ಹಾರ್ಟ್‌೧೯೭೫; ಕೈಲಾಸಪತಿ, ೧೯೬೮) ಬೌದ್ಧ ಪೂರ್ವ ಸಿಂಹಳ (ಪರಾನ ವಿತಾನ, ೧೯೨೯) ಆಧುನಿಕ ಶ್ರೀಲಂಕಾ (ವಿಡ್ಸ್‌೧೯೫೪, ಒಬೆಯ್ ಸೇಕರೆ, ೧೯೬೬, ೧೯೬೯; ಹಾಲ್ವೆರ್ ಸನ್ ೧೯೭೧; ಯಾಲ್ಮನ್ ೧೯೬೪; ಸೆಲಿಮನ್ ೧೯೦೯) ಗಳೊಂದಿಗೆ ಸ್ಥೂಲವಾಗಿ ಹೋಲಿಸಿದಾಗ ಭೂತಾರಾಧನೆಯು ಪ್ರಾಚೀನವೆಂದು ತಿಳಿದುಬರುತ್ತದೆ. ಅಂದ ಮಾತ್ರಕ್ಕೆ ಇಂದು ನಾವು ಸಂಗ್ರಹಿಸಿದ ಪಾಡ್ದನಗಳ ಕಥೆಗಳೆಲ್ಲಾ ತೀರಾ ಪ್ರಾಚೀನವೆಂದರ್ಥವಲ್ಲ. ಯಾಕೆಂದರ ‘ಜೀವಂತಿಕೆ’ಯ ಲಕ್ಷಣದಂತೆ ಅವು ನಿತ್ಯ ಪರಿವರ್ತನೆಗೊಳ್ಳುತ್ತಾ ವಿಕಾಸಗೊಳ್ಳುತ್ತಾ ಬಂದಿವೆ.ಆದರೆ ಅದರೊಳಗೆ ಸ್ವಲ್ಪವಾದರೂ ಪ್ರಾಚೀನ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ನೆರವಾಗುವ ಸಾಮಗ್ರಿ ಇರುವುದು ಖಚಿತ. ತುಳುಪಾಡ್ದನಗಳಲ್ಲಿ ದೊರೆವ ಜ್ಞಾತಿ ಸಾಮಗ್ರಿಗಳು (Cognative patterns) ಈ ಸಂಬಂಧವಾಗಿ ಶಾಸನಗಳಲ್ಲಿ, ಸಾಹಿತ್ಯ ಕೃತಿಗಳಲ್ಲಿ, ಪುರಾತತ್ವ ಶೋಧನಗಳಲ್ಲಿ ದೊರೆವ ಮಾಹಿತಿಗಳ ಕೊರತೆಯನ್ನು ತುಂಬಿಕೊಡುತ್ತವೆ. ಭಾರತೀಯ ಸಮಾಜದಲ್ಲಿ ಜಾತಿ ಪದ್ಧತಿಯ ಮುಖ್ಯ ಲಕ್ಷಣಗಳಿಗೆ ತಳಹದಿಯಾಗಿದ್ದಿರಬಹುದಾದ ಒಂದು ಸಾಮಾಜಿಕ ತತ್ವದ ಅಸ್ತಿತ್ವವನ್ನು ತುಳು ಪಾಡ್ದನಗಳಲ್ಲಿನ ಜ್ಞಾತಿ ಸಾಮಾಗ್ರಿಗಳು, ಧಾರ್ಮಿಕ ಪೂಜಾ ಸಂಪ್ರದಾಯಗಳ ವಿವರಣೆಯನ್ನು ತೋರಿಸಿ ಕೊಡುವುದಾಗಿ ನಾನು ಭಾವಿಸುತ್ತೇನೆ.

ತುಳು ಬ್ರಾಹ್ಮಣರ (ಶಿವಳ್ಳಿ, ಕೋಟ (?) ಸ್ಥಾನಿಕ) ಧಾರ್ಮಿಕ ಕಟ್ಟಳೆಗಳಿಗೆ ಮುಖವಾಣಿಯಾಗಿ ಪಾಡ್ದನಗಳು ರಚಿತವಾಗಿಲ್ಲ. ಅವರ ಧಾರ್ಮಿಕ ಸಾಹಿತ್ಯಗಳೆಲ್ಲವೂ ಸಂಸ್ಕೃತ (ಕೆಲವೊಮ್ಮೆ ಕನ್ನಡ ಮಲೆಯಾಳ (?)) ಭಾಷೆಯಲ್ಲೇ ರೂಪಿತವಾಗಿದ್ದು ಅವರ ಧಾರ್ಮಿಕ ಆಚರಣೆಗಳೆಲ್ಲವೂ ಮಾರ್ಗ ಪರಂಪರೆಯ (Greater tradition) ದೇವರನ್ನು (ತುಳುವಿನ ದೇವೆರ್‌) ಕುರಿತೆ ನಡೆಯುತ್ತಿದೆ. ತುಳುನಾಡಿನ ದೇವತಾರಾಧನಾ ಪದ್ಧತಿಯಲ್ಲಿ ಒಂದು ಬಗೆಯ ದ್ವೈಧ (duality ವೈದಿಕ ಆರಾಧನೆ ಹಾಗೂ ಭೂತಾರಧನೆ) ಕಂಡು ಬರುತ್ತಿರುವುದನ್ನು ನಾನು ಒಂದೆಡೆ ಬರೆದಿದ್ದೇನೆ (೧೯೭೩) ಇದರ ಪರಿಣಾಮವಾಗಿ ವೈದಿಕ ಮತದ ಹಿಂದೂ ದೇವಸಮೂಹಗಳು ಪರಸ್ಪರ ಪ್ರಭಾವಗೊಳ್ಳದೆ ಸಮಾನಾಂತರವಾಗಿ ಸಾಗಿ ಬಂದುದು ಭಾರತದಲ್ಲೂ ಎಲ್ಲೂ ಕಾಣದ ವಿಶಿಷ್ಟ ಮಾದರಿ. ಒಂದೆರಡು ಸಂದರ್ಭಗಳನ್ನುಳಿದು (ಬೆರ್ಮರೆ ಆರಾಧನೆ, ವಿವರ ಮುಂದೆ ನೋಡಿ) ಇತರ ದೈವಗಳಲ್ಲಾಗಲೀ, ಆರಾಧನಾ ಪದ್ಧತಿಗಳಲ್ಲಾಗಲೀ ಸಾಮ್ಯ ಹಾಗೂ ಏಕತೆ ಏರ್ಪಟ್ಟಿಲ್ಲ. ಕೇರಳದ ಪರಿಸ್ಥಿತಿಯೂ ಹೀಗೆಯೆ: ತುಳುನಾಡಿನಲ್ಲಿ ಸಾಮಾನ್ಯವಾಗಿ ಬ್ರಾಹ್ಮಣರು ಸಾರ್ವಜನಿಕವಾಗಿ ಭೂತ ಅಥವಾ ದೈವಗಳ ಆರಾಧನಾ ಸಂಪ್ರದಾಯಗಳಿಂದ ದೂರವಿರುತ್ತಾರೆ.[1] ಪಾಡ್ದನಗಳನ್ನು ಸಮಾಜದ ನಿಮ್ನ ವರ್ಗದ ಪಂಬದ, ಪರವ, ನಲ್ಕೆ ವರ್ಗಗಳ ವೃತ್ತಿಚಾರಣರು ಸಾರ್ವಜನಿಕವಾಗಿ ಹಾಡುತ್ತಾರೆ. ಬ್ರಾಹ್ಮಣೇತರ ಸ್ತ್ರೀಪುರುಷರು ಗದ್ದೆಗಳಲ್ಲಿ ನೇಜಿನೆಡುವಾಗ ಹಾಗೂ ತಮ್ಮ ಬಿಡುವಿನ ವೇಳೆಯಲ್ಲಿ ಪಾಡ್ದನಗಳನ್ನು ಹಾಡಿಕೊಳ್ಳುವುದಿದೆ.

ಪಾಡ್ದನಗಳ ವಿಶ್ಲೇಷಣೆ ಹಾಗೂ ಪ್ರಚಲಿತ ಭೂತಾರಾಧನೆಯ ಅಧ್ಯಯನವು ಮಾರ್ಗ ಪರಂಪರೆಯ ಎದುರು ದೇಸೀ ಪರಂಪರೆ (little tradition)ಯೆಂದು ಕಡೆಗಣಿತವಾದ ದಕ್ಷಿಣ ಏಷ್ಯಾದ ಶ್ರೀಮಂತ ಸಂಸ್ಕೃತಿಯ ಕಡೆಗೆ ನೂತನ ಬೆಳಕನ್ನು ಬೀರೀತು. ಆದರೆ ಜನಸಮುದಾಯದ ಮೇಲೆ ತಮಗಿದ್ದ ಹಿಡಿತದ ಮೂಲಕ ಸಾಮಾಜಿಕ ಧಾರ್ಮಿಕ ಆಚರಣೆ, ರೀತಿ ರಿವಾಜುಗಳ ವಿಕಾಸದ ಮೇಲೆ ಮತ್ತು ಸ್ವಯಂ ಪಾಡ್ದನಗಳ ಮೇಲೂ ಬ್ರಾಹ್ಮಣರು ಬೀರುತ್ತಿದ್ದ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ ಸಂಪ್ರದಾಯಗಳ ಪಾಲಕರಾದ ಈ ಬ್ರಾಹ್ಮಣರು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನವನ್ನು ಪಡೆದುದರ ಮೂಲಕ ಅದರ ಮೇಲೆ ತಮ್ಮ ಬೌದ್ಧಿಕ ಪ್ರಭಾವವನ್ನು ಬೀರಬಲ್ಲವರಾಗಿದ್ದರು.[2] ಇದರಿಂದಾಗಿ ಭೂತಾರಾಧನೆಯ ಮೂಲ ಇಂಡೋ ಯುರೋಪಿಯನ್‌ ಎಂಬುದಾಗಿ ಈ ಬ್ರಾಹ್ಮಣರು ಹೇಳತೊಡಗಿದರು. ಈ ಇಂಡೋಯುರೋಪಿಯನ್ ಹಣೆಚೀಟಿಯನ್ನು ಅಬ್ರಾಹ್ಮಣನೊಬ್ಬನು ಒಪ್ಪಿಕೊಂಡಿದ್ದರೂ ಇಂದಿಗೂ ಆತ ಭೂತ ದೈವಗಳನ್ನು ನಂಬಿಕೊಂಡು ಬಂದಿದ್ದಾನೆ. ಆದರೆ ಇವುಗಳನ್ನು ಆತ ಸಂಸ್ಕೃತ ಪದಗಳು ಹೇಳುವ ಅಲೆಮಾರಿ, ಪ್ರೇತಾತ್ಮ ದುಷ್ಟ ಶಕ್ತಿಗಳೆಂದು (wandering, malevolent spirit) ಪರಿಗಣಿಸಿಲ್ಲ.[3] ಬ್ರಾಹ್ಮಣರು, ಭೂತಾರಾಧನೆಯನ್ನು ಆರ್ಯ ಸಂಸ್ಕೃತಿತ ಅಂಗವೆಂದು ಹೇಳುತ್ತಾ ಅದನ್ನು ತಮ್ಮ ಸಂಸ್ಕೃತಿಗೆ ಆಳವಡಿಸುವುದಕ್ಕೆ ಪ್ರಯತ್ನಿಸಿದರು. ಬ್ರಾಹ್ಮಣೇತರರೂ ಇದಕ್ಕೆ ಪ್ರತಿಭಟನೆ ತೋರಲಿಲ್ಲ. ಹೀಗಿದ್ದರೂ ಭೂತಾರಾಧನೆಯು ವೈದಿಕ ಸಂಸ್ಕೃತಿಯ ಪ್ರಭಾವಕ್ಕೆ ಗುರಿಯಾಗದೆ ಬಹಳಷ್ಟು ಅಂಶಗಳಲ್ಲಿ ಸ್ವಂತಿಕೆಯನ್ನು ಪಡೆದ ಧಾರ್ಮಿಕ ಪ್ರಕ್ರಿಯೆಯಾಗಿ ಉಳಿದು ಬಂದಿತು. ವರ್ತಮಾನದ ತುಳುವ ಸಮಾಜದ ರಚನೆ ಹಾಗೂ ಚಟುವಟಿಕೆಗಳ ಅಧ್ಯಯನವನ್ನೇ ಗುರಿಯಾಗಿರಿಸಿಕೊಳ್ಳದೆ ವೈದಿಕ ಪೂರ್ವ ತೌಳವ ಧಾರ್ಮಿಕ ಸಂಸ್ಕೃತಿಯನ್ನು ಪುನರ್ರಚಿಸುವ ಆಲೋಚನೆಯಲ್ಲಿ ಬರುವ ದೊಡ್ಡ ಸಮಸ್ಯೆಯೆಂದರೆ ವೈದಿಕ ಪ್ರಭಾವವಿಲ್ಲದ ಪ್ರಾಚೀನ ತುಳು ಸಾಹಿತ್ಯವನ್ನು ಸಂಗ್ರಹಿಸುವುದಾಗಿದೆ. ವೈದಿಕ ಪ್ರಭಾವದ ಕಳೆ ಕೀಳುವ ಕೆಲಸದ ಔಚಿತ್ಯವನ್ನು ಕುರಿತು ನಡೆಸಿದ ವಿಮರ್ಶೆಯ ಫಲವಾಗಿ ಮೌಖಿಕ ಸಂಪ್ರದಾಯದ ಐತಿಹಾಸಿಕ ವಿಶ್ಲೇಷಣೆ ಕುಂಠಿತವಾಯಿತು. ತುಳುವಿಗೆ ಇಂದಿಗೂ ತನ್ನದೇ ಆದ ಲಿಪಿಯಲ್ಲ* ಪ್ರಾಗೈತಿಹಾಸಿಕ ದಾಖಲೆಗಳು ಪರಿಮಿತ, ಶಾಸನಗಳು

(ಕನ್ನಡ ಲಿಪಿಯಲ್ಲಿ) ಮೂರ್ತಿಶಿಲ್ಪಗಳು, ದೇವಾಲಯಗಳು ೮ನೆಯ ಶತಮಾನಕ್ಕಿಂತ ಹಿಂದಣ. ಮಾಹಿತಿಗಳನ್ನು ನೀಡುತ್ತಿಲ್ಲ. ಅಷ್ಟೇ ಅಲ್ಲ. ಅವು ಕೊಡುವ ಮಾಹಿತಿಗಳು ಕೆಲವೊಮ್ಮೆ ಸಂದಿಗ್ಧವೂ ಹೌದು. ಖಚಿತ ಕಾಲ ನಿರ್ಣಯಕ್ಕೊಳಗಾದ ದಾಖಲೆಗಳು ಅಪಾರ ಪ್ರಮಾಣದಲ್ಲಿ ಸಿಗದೆ ಸ್ವತಂತ್ರ, ಖಚಿತ ಸಾಕ್ಷ್ಯಾಧಾರಗಳನ್ನು ಹೊಂದುವುದು ಅಸಾಧ್ಯವಾಗಿದೆ. ತುಳು ಪಾಡ್ದನಗಳನ್ನು ವೈದಿಕ ಪ್ರಭಾವವು ಗಾಢವಾಗಿ ಆವರಿಸಿದೆ. ಜೊತೆಗೆ ಎರಡು ಸಂಪ್ರದಾಯ (ವೈದಿಕ, ಭೂತಾರಾಧನೆ)ಗಳು ಕೆಲವೆಡೆ ಚೆನ್ನಾಗಿ ಸಂಲಗ್ನಗೊಂಡಿವೆ. ಬೇಕಾದಂತೆ ಹಿಗ್ಗಿ ಬಾಗುವ ಅಂಸಗತ ವಿವರಣೆಗಳನ್ನು ಒಳಗೊಂಡ ಪಾಡ್ದನಗಳಿಂದ ನಿಸ್ಸಂಶಯವಾಗಿ ಏನನ್ನು ಬೇಕಾದರೂ ‘ಸಿದ್ದ’ಮಾಡಿ ತೋರಬಹುದು. ಅಷ್ಟೇ ಸುಲಭವಾಗಿ ಈ ಪಾಡ್ದನಗಳಲ್ಲಿನ ಭಾಷೆಯಲ್ಲಿನ ಪದಗಳು ಪ್ರಾಚೀನವಲ್ಲವೆಂದು ತೋರಿಸಿಕೊಟ್ಟು ಯಾವುದೇ ಪ್ರಾಕ್ಕಲ್ಪನೆ (hypothesis)ಯನ್ನೂ ತಳ್ಳಿಹಾಕಲೂಬಹುದು. ಪಾಡ್ದನಗಳ ವಿಶ್ಲೇಷಣೆಯ ಮೂಲಕ ಐತಿಹಾಸಿಕ ಪುನರ್ರಚನೆಯ ಸಾಧ್ಯತೆಯಿಲ್ಲವಾದರೂ, ಇವುಗಳ ಸಹಾಯದಿಂದ ಪ್ರಾಚೀನ ಸಂಪ್ರದಾಯದ ಪುನರ್ರಚನೆಯನ್ನು ಕುರಿತು ಒಂದು ಪ್ರಾಕ್ಕಲ್ಪನೆಯನ್ನು ಸೃಷ್ಟಿಸುವುದು ಅಸಂಗತವೇನಲ್ಲ. ಈ ಬಗೆಯ ಪ್ರಾಕ್‌ಕಲ್ಪನೆಗಳಿಗೆ ಪ್ರಾಗೈತಿಹಾಸಿಕ ದಾಖಲೆಗಳ ಹಾಗೂ ಶಾಸನಗಳ ಮಾಹಿತಿಗಳು ಪೂರಕವಾಗಿರಬೇಕು. ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಸಾಂಸ್ಕೃತಿಕ ಕ್ಷೇತ್ರಗಳಿಂದ ದೊರೆವ ಈ ಸಮಾಕಾಲೀನ ಮಾಹಿತಿಗಳು ಕೂಡಾ ಈ ಪ್ರಾಕ್ ಕಲ್ಪನೆಗಳನ್ನು ಸಮರ್ಥಿಸಬೇಕು. ಈ ಲೇಖನದ ಅನುಬಂಧದಲ್ಲಿ ಪ್ರಾಕ್ಕಾಲ್ಪನಿಕ ಐತಿಹಾಸಿಕ ಪುನರ್ರಚನೆ (hypothetical historical construction) ಯೊಂದನ್ನು ಮುಂದಿರಿಸಬಯಸುತ್ತೇನೆ. ಈ ಪ್ರತ್ಯೂಹೆಯು ಮೂಲತಃ ಪಾಡ್ದನಗಳಿಂದ ದೊರಕಿದ ವೈವಿಧ್ಯಪೂರ್ಣ ಮಾಹಿತಿಗಳಿಂದ ಪ್ರೇರಿತವಾಗಿರುವುದಾಗಿದೆ. ಆದರೆ ಈ ಪ್ರಬಂಧದಲ್ಲಿ ಬಳಸಿದ ಸಾಮಗ್ರಿಗಳ ಆಧಾರದ ಮೇಲೆ ನನ್ನ ಪ್ರಾಕ್ಕಲ್ಪನೆಯನ್ನು ದೃಢೀಕರಿಸಲು ನಾನು ಬಯಸುವುದಿಲ್ಲ ಆ ಕೆಲಸವನ್ನು ಇನ್ನೊಂದು ಪ್ರಬಂಧದಲ್ಲಿ ಮಾಡಲಿದ್ದೇನೆ.

ಸಿರಿ ಪಾಡ್ದನದಲ್ಲಿ ಬೆರ್ಮೆರ್‌

ನನ್ನ ಪ್ರಾಕ್ಕಲ್ಪನೆಗೆ ಸ್ಪೂರ್ತಿ ಒದಗಿಸಿದ ಪಾಡ್ದನಗಳಲ್ಲಿ ಸಿರಿಪಾಡ್ದನ ಒಂದು. ಈ ಪಾಡ್ದನವು ನನ್ನಲ್ಲಿ ಮೂಡಿಸಿದ ವಿಚಾರಗಳನ್ನು ಮುಂದಿರಿಸುವ ಮೊದಲು, ಸಂಬಂಧಿಸಿದ ಪಾಡ್ದನಗಳ ಭಾಗಗಳನ್ನು ಹೇಳಬಯಸುತ್ತೇನೆ. ಈ ಪಾಡ್ದನದ ಕಥಾ ಸಾರಾಂಸವನ್ನು ೧೯೭೫ರ ನನ್ನ ಲೇಖನವೊಂದರಲ್ಲಿ ನೀಡಿದ್ದೇನೆ. ಇದರ ಮುಂದಿನ ಪ್ರಕಟಣೆಯಲ್ಲಿ ಎರಡು ಆವೃತ್ತಿಗಳ ಪೂರ್ಣಪಾಠದ ಅನುವಾದವನ್ನು ನೀಡುವವನಿದ್ದೇನೆ. ಈ ಐತಿಹ್ಯವು ಸತ್ಯನಾಪುರದಲ್ಲಿ ಸಿರಿಯ ಜನನದ ಮೊದಲಿನ ಕಥೆಯಿಂದ ತೊಡಗುತ್ತದೆ. ಅಲ್ಲಿನ ಮುದಿ ಅರಸು ಬೆರ್ಮ (ಬಿರ್ಮ) ಆಳ್ವನು ತನ್ನ ಅರಮನೆಯಲ್ಲಿ ಕುಳಿತು ತನ್ನ ವಂಶದ ಕುಡಿಯೊಂದು ಚಿಗುರುವ ಮೊದಲೇ ತಾನು ಅಳಿಯುವೆನಲ್ಲಾ ಎಂದು ಕೊರಗುತ್ತಿರುತ್ತಾನೆ. ಅವನ ದೇಹ, ಅರಮನೆ, ಅರಸುತನ ಎಲ್ಲವೂ ಬಡಕಲಾಗಿ ಇನ್ನೇನು ಅಳಿಯುವ ಸ್ಥಿತಿಗೆ ಬಂದಿದೆ. ವ್ಯಥೆಯಿಂದ ಮನೆಯೊಳಗಿನ ಕೋಣೆಯೊಂದರಲ್ಲಿ ಕುಳಿತಿದ್ದಾನೆ. ಬೆರ್ಮೆರ್‌ಇವನ ಕುಲದೈವ. ಊರಿನ ಹೊರಗೆ, ಕಾಡಿನ ಗುಡಿಯೊಂದರಲ್ಲಿ ನೆಲೆಯಾಗಿರುವ ಈ ದೈವ ಇವನ ಕೊರಗನ್ನು ಕಂಡು ಭಿಕ್ಷುಕನ ವೇಷದಲ್ಲಿ ಬರುತ್ತದೆ. ದುಃಖಿತವಾದ ಬೆರ್ಮ ಆಳ್ವನನ್ನು ಹೊರ ಕರೆದು ಕುಲದೈವದ ಗುಡಿಯನ್ನು ಮರೆತುದರ ಬಗೆಗೆ ದಟ್ಟಿಸಿ ನುಡಿಯುತ್ತದೆ. ಜೀರ್ಣಗೊಂಡ ಈ ಗುಡಿ ಬೇಗನೇ ಕುಸಿಯುವ ಸಾಧ್ಯತೆಯಿದೆಯೆಂದೂ ಎಚ್ಚರಿಸುತ್ತದೆ. ಕುಲದೈವದ ಗುಡಿಗೆ ತೆರಳಿ, ಅದರ ಜೀರ್ಣೋದ್ಧಾರ ಮಾಡಿಸಿ ಮುಂದೆ ಸಂತಾನ ಶ್ರೀಯನ್ನು ಕರುಣಿಸುವಂತೆ ಬೆರ್ಮರಲ್ಲಿ ಬೇಡುವಂತೆ ಆ ಭಿಕ್ಷುಕ ರೂಪದ ಬೆರ್ಮರ್‌ ಸೂಚಿಸುತ್ತದೆ. ಅಂತೆಯೇ ಬೆರ್ಮ ಆಳ್ವನು ತನ್ನ ಕುಲದೈವದ ಗುಡಿಯ ಜೀರ್ಣೋದ್ಧಾರ ಮಾಡಿಸಿ ತನಗೆ ಸಂತಾನವನ್ನು ನೀಡುವಂತೆ ದೈವದ ಎದುರು ಕೈಜೋಡಿಸಿ ಬೇಡಿಕೊಳ್ಳುತ್ತಾನೆ. ಆಗ ಗುಡಿಯ ಪಾತ್ರಿಯ ಮೈಯಲ್ಲಿ ಬೆರ್ಮೆರ್‌ ಆವಾಹನಗೊಂಡು, ‘ಇಂದು ನಿನಗೆ ನಾನೂ ನಾಗಬ್ರಹ್ಮರೂ ಸೇರಿ ಸಂತಾನವನ್ನು ಕೊಡುತ್ತೇವೆ. ಹೊದೆದ ಬಟ್ಟೆಯನ್ನು ಬಿಡಿಸಿ ಅದರೊಳಗೆ ಸ್ವೀಕರಿಸು’ ಎಂದು ನುಡಿಯಿತು. ಹೀಗೆ ಬೆರ್ಮ ಆಳ್ವನಿಗೆ ಸಿರಿ (ಸತ್ಯನಾಪುರದ ಸಿರಿ, ತುಳುನಾಡ ಸಿರಿ, ಮಾಯಕದ ಮಾಲೋಕದ ಸಿರಿ ಮುಂತಾದ ಪರ್ಯಾಯ ಹೆಸರುಗಳಿವೆ) ಜನಿಸಿದಳು. ಕಥೆ ಮುಂದುವರಿಯುತ್ತಾ ಸಿರಿಯ ಬದುಕಿನ ವಿವಿಧ ಘಟ್ಟಗಳನ್ನು ವಿವರಿಸುತ್ತದೆ. ಆದರೆ ನಾನಿಲ್ಲಿ ನಿಲ್ಲಿಸಿ, ಇಲ್ಲಿಯವರೆಗೆ ನಿರೂಪಿತವಾಗಿರುವ ಸಾಮಗ್ರಿಗಳ ಆಧಾರದ ಮೇಲೆ ಐತಿಹ್ಯದ ಕಾಲ ಹಾಗೂ ಅದರಲ್ಲಿ ಬಿಂಬಿತವಾದ ಚಿಂತನೆಗಳನ್ನು ಕುರಿತು ಸಮೀಕ್ಷಿಸುತ್ತೇನೆ.

ಯಾವುದೇ ಪಾಡ್ದನದ ಕಾಲವನ್ನು ಖಚಿತವಾಗಿ ನಿರ್ದೇಶಿಸುವಂತಿಲ್ಲ. ಒಂದು ಪಾಡ್ದನದ ಆವೃತ್ತಿಯ ಧ್ವನಿಗ್ರಹಣದ ಕಾಲವನ್ನೇ ಆ ಆವೃತ್ತಿಯ ಕಾಲವೆಂದು ಪರಿಗಣಿಸಬೇಕು. (೧೯೬೫) ಐತಿಹ್ಯದ ಸ್ವರೂಪ ಹಾಗೂ ನಿರೂಪಿತ ಸಂಪ್ರದಾಯಗಳು ಪಾಡ್ದನದ ಭಿನ್ನ ಆವೃತ್ತಿಗಳಲ್ಲಿ ಏಕರೂಪವಾಗಿ ಕಂಡು ಬಂದಾಗ ಅವುಗಳ ಆಧಾರದ ಮೇಲೆ ಐತಿಹ್ಯದ ಕಾಲ, ದೇಶ ಹಾಗೂ ಮೂಲದ ಕುರಿತು ಒಂದು ನಿರ್ಧಾರಕ್ಕೆ ಬರಬಹುದು. ಸಿರಿಯ ಐತಿಹ್ಯದಲ್ಲಿ ಬರುವ ಸ್ಥಳವಾಚಕ, ವ್ಯಕ್ತಿವಾಚಕಗಳಿಂದ ಅದು ಜಿಲ್ಲೆಯ ಉತ್ತರ ಭಾಗದ ಅತ್ಯಂತ ಪ್ರಾಚೀನ ಕಾಲಕ್ಕೆ ಸಂಬಂಧಿಸಿದಂತೆ ಕಾಣುತ್ತದೆ.[4] ಕಥೆಯ ಕ್ರಿಯೆ ಬಸ್ರೂರು, ನಂದಳಿಕೆಗಳ ಸುತ್ತ ಕೇಂದ್ರೀಕೃತವಾಗಿದೆ. ಈ ಹಳ್ಳಿಗಳು ಇಂದಿಗೂ ಸಿರಿ ಆರಾಧನೆಗೆ ಹೆಸರಾಗಿವೆ.**

ಪಿ. ಗುರುರಾಜ ಭಟ್ಟರು (೧೯೭೫: ೩೫೯) ಈ ಪ್ರದೇಶಗಳು ೮-೯ನೇ ಶತಮಾನದಿಂದಲೇ ಭೂತಾರಾಧನೆಗೆ ಹೆಸರಾಂತ ಪ್ರದೇಶಗಳೆಂಬ ಬಗೆಗೆ ಆಧಾರಗಳಿವೆ ಎಂದಿದ್ದಾರೆ. ನಮಗಿಂದು ದೊರೆವ ಭೂತಾರಾಧನೆ ಖಂಡಿತ ಪ್ರಾಚೀನವಾದುದು. ಆರ್ಷೇಯ ಪುರಾಣೋಕ್ತ ಐತಿಹ್ಯಗಳ ಗಣನೀಯ ಪ್ರಭಾವವನ್ನು ಸಿರಿ ಪಾಡ್ದನದಲ್ಲಿ ಗುರುತಿಸುವುದು ಕಷ್ಟವೇ[5] ಸರಿ. ಆದರೆ ಸಿರಿ ಪಾಡ್ದನದ ಪ್ರಸ್ತುತ ಕತೆಯು ಇಂತಹ ಅನೇಕ ದೇಸಿಯ ಆರಾಧನಾ ಐತಿಹ್ಯಗಳು ಸಮ್ಮಿಲನಗೊಂಡು ವಿಕಸಿತವಾಗಿದ್ದಿರಬಹುದೆಂಬುದಕ್ಕೆ ಬಲವಾದ ಸಾಕ್ಷ್ಯಗಳಿವೆ. ಕಥೆಯು ಈ ಸುಸಂಬದ್ಧ ಬೆಳವಣಿಗೆಯು ಒಂದು ಅರಸು ಮನೆತನದ ಆಶ್ರಯದಲ್ಲಿ ಏರ್ಪಟ್ಟ ಸಮಕಾಲೀನ ರಾಜಕೀಯ ಏಕತೆಯನ್ನು ಸೂಚಿಸುತ್ತದೆ.

ಬೆರ್ಮ ಆಳ್ವೆರ್‌ ಎಂಬ ಹೆಸರಿನ ಸಾಹಿತ್ಯಕ ಅರ್ಥ, ಹಿರಿಯ ಅರಸು (ಬೆರ್‌ಪೆರ್‌ = ಹಿರಿಯ; ಆಳ್ವೆರ್ = ಅರಸು) ಎಂದಾಗಿರಬೇಕು. ತುಳುನಾಡಿನ ಪ್ರಪ್ರಥಮ ಅರಸರು ಆಲುಪರು ಅಥವಾ ಆಳುವರು ಎಂಬುದು ಇದೀಗ ಖಚಿತವಾಗಿದೆ (ಸಾಲೆತ್ತೂರು, ೧೯೩೬; ಭಟ್‌, ೧೯೭೫) ಬೆಳ್ಮಣ್ಣಿನ ಪ್ರಾಚೀನ ತಾಮ್ರ ಶಾಸನ (೮ನೇ ಶತ)ವು ಸಿರಿ ಆರಾಧನೆಯ ಪರಿಸರಕ್ಕೆ ಸಮೀಪವಾಗಿದ್ದು ಆ ಶಾಸನದಲ್ಲಿ ‘ಬ್ರಹ್ಮನಿಂದ ರಕ್ಷಿತವಾದ ಕುಲದಲ್ಲಿ ಅಭಿಮಾನವುಳ್ಳ ಶ್ರೀಮದಾಳುವರಸ ಸ…. (ಭಟ್, ೧೯೭೫; ಪಡಿಯಚ್ಚು viii1) ಎಂದಿದೆ. ಇದನ್ನು ಇನ್ನೊಂದು ರೀತಿಯಲ್ಲಿ ತರ್ಕಿಸಲು ಸಾಧ್ಯ. ಬೆರ್ಮ ಆಳ್ವರೆಂಬವರು ಆಲುಪ ಅರಸೊತ್ತಿಗೆಯ ಕಾಲಕ್ಕಿಂತ ಹಿಂದೆ ಬ್ರಹ್ಮನನ್ನು ಆರಾಧಿಸುತ್ತಿದ್ದ ಒಬ್ಬ ಸ್ಥಳೀಯ ರಾಜನಿರಲೂಬಹುದು. (ಆಳ್ವ ಎನ್ನುವುದು ಬಂಟರಲ್ಲಿ ಇಂದಿಗೂ ಪ್ರಚಲಿತವಿರುವ ಉಪನಾಮ) ಪ್ರಾಚೀನ ಆಲುಪ ಅರಸೊತ್ತಿಗೆಯು ಕ್ರಿ.ಶ. ೨ನೆಯ ಶತಮಾನದಿಂದ ಕ್ರಿ.ಶ. ೧೪ನೇ ಶತಮಾನದವರೆಗೆ ಈ ಭೂಭಾಗವನ್ನು ಆಳಿಕೊಂಡಿದ್ದುದಾಗಿ ಉಲ್ಲೇಖಿತವಾಗಿದೆ (ಸಾಲೆತ್ತೂರು ೧೯೩೬)

ಸಿರಿಪಾಡ್ದನದಲ್ಲಿ ಬಳಕೆಯಾದ ಬೆರ್ಮೆರ್‌ ಹಾಗೂ ನಾಗಬೆರ್ಮೆರ್‌ ಎನ್ನುವ ಪದಗಳು ಕುತೂಹಲದಾಯಕವಾಗಿವೆ. ಹಿಂದೆ ಹೇಳಿದ ತಾಮ್ರ ಶಾಸನದಲ್ಲಿ ಲಿಖಿತವಾದ ಬ್ರಹ್ಮ ಅಥವಾ ಅದರ ತುಳುರೂಪ ಬೆರ್ಮೆರ್‌(ಅಥವಾ ಬೆರ್ಮೆ) ಆಲುಪ ದೊರೆಗಳ ಒಂದಲ್ಲ ಒಂದು ಕುಟುಂಬದ ಕುಲದೈವವಾಗಿರಬೇಕು. ಸಿರಿ ಪಾಡ್ದನದ ಬೆರ್ಮ ಹಾಗೂ ನಾಗಬೆರ್ಮೆರ್‌ಎನ್ನುವ ಪದಗಳು ಕುತೂಹಲದಾಯಕವಾಗಿದೆ. ಹಿಂದೆ ಹೇಳಿದ ತಾಮ್ರಶಾಸನದಲ್ಲಿ ಲಿಖಿತವಾದ ಬ್ರಹ್ಮ ಅಥವಾ ಅದರ ತುಳುರೂಪ ಬೆರ್ಮೆರ್‌ (ಅಥವಾ ಬೆರ್ಮೆ) ಆಲುಪ ದೊರೆಗಳ ಒಂದಲ್ಲ ಒಂದು ಕುಟುಂಬದ ಕುಲದೈವವಾಗಿರಬೇಕು. ಸಿರಿ ಪಾಡ್ದನದ ಬೆರ್ಮ ಆಳ್ವರ ಕುಲದೇವತೆಯೂ ಆಗಿರಬಹುದು. ಯಾವೊಬ್ಬ ಪಾಡ್ದನಕಾರನಿಗೂ ಇದರ ಖಚಿತ ಐತಿಹಾಸಿಕ ಹಿನ್ನೆಲೆ ಗೊತ್ತಿಲ್ಲದಿರುವಾಗ ಇದನ್ನು ಒಂದು ಸಂದಿಗ್ಧ ದಾಖಲೆಯಾಗಿ ಮಾತ್ರ ಪರಿಗಣಿಸಬೇಕಾಗಿದೆ.

ಬ್ರಹ್ಮನ ಕುರಿತು ವೈದಿಕ ಸಾಹಿತ್ಯ ನೀಡುವ ವಿವರಣೆಗೂ ಪ್ರಾಚೀನ ಶಾಸನ, ಭೂತಾರಾಧನೆ, ಪಾಡ್ದನಗಳಲ್ಲಿ ದೊರೆವ ಪಾಠಕ್ಕೂ ಬಹಳಷ್ಟು ವ್ಯತ್ಯಾಸವಿದೆ. ತುಳುವಿನ ಬೆರ್ಮೆರ್‌ಆರಂಭಕಾಲದಲ್ಲಿ ವೈದಿಕ ಬ್ರಹ್ಮನಾಗಿದ್ದನೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಬ್ರಹ್ಮನ ಬಗೆಗೆ ಹಲವಾರು ದಾಖಲೆಗಳನ್ನು ಸಂಗ್ರಹಿಸಿದ ಡಾ. ಗುರುರಾಜ ಭಟ್ಟರು ಹೀಗೆ ಅಭಿಪ್ರಾಯ ಪಡುತ್ತಾರೆ. ‘ಕೆಲವೊಂದು ತುಳುಶಾಸನಗಳು ಬ್ರಹ್ಮನನ್ನು ದೇವರೆಂದು ಉಲ್ಲೇಖಿಸಿದ್ದು, ಆದರೆ ಬಹಳ ವಿಚಿತ್ರವೆನ್ನುವಂತೆ ಅವನನ್ನು ಭೂತಗಳ ಸಾಲಿಗೆ ಸೇರಿಸಿವೆ. ನಾಗನನ್ನು ಬ್ರಹ್ಮನೊಂದಿಗೆ ಅವಿಭಾಜ್ಯವಾಗಿ ಸಂಗಡಿಸಲಾಗಿದೆ. ನಾಗ ಹಾಗೂ ಬ್ರಹ್ಮನಿಗೆ ಹಾಲು ನೈವೇದ್ಯ ಮಾಡಿದ ಪ್ರಸಂಗದ ವಿವರಣೆ ಶಾಸನವೊಂದರಲ್ಲಿ ಸಿಗುತ್ತದೆ’ (ಭಟ್‌೧೯೭೫: ೩೫೫-೬) ಬ್ರಹ್ಮನ ಗುಡಿಯನ್ನು ಪಾಡ್ದನಗಳಲ್ಲಿ ಆಲಡೆ ಅಥವಾ ಸಿಂಗ ಎಂದು ಕರೆಯಲಾಗುತ್ತಿದೆ. (ಕೆಲವೊಮ್ಮೆ ಗ್ರಾಮ್ಯದಲ್ಲಿ ಬೆರ್ಮೆರೆ ಗುಡಿ, ಬೆರ್ಮೆರೆ ಗುಂಡ ಎಂದೂ ಕರೆಯಲಾಗುತ್ತದೆ) ಅರಮನೆಯ ವಿವರಣೆಯಲ್ಲಿ ಬಳಸುವ ಪದಗಳನ್ನೇ ಈ ಆಲಡೆಯ ವಿವರಣೆಗಳಲ್ಲಿ ಬಳಸಲಾಗಿದೆ.[6] ಈ ಗುಡಿಗಳು ಜನದೂರವಾದ ಬಂಜರು ಭೂಮಿಗಳಲ್ಲಿ, ಕಾಡಿನ ಸಮಿಪದಲ್ಲಿರುವುದು ಒಂದು ಗಮನಾರ್ಹ ಸಂಗತಿ[7] ಇದು ಸಾಮಾನ್ಯವಾಗಿ ಪವಿತ್ರಸ್ಥಾನವಾಗಿರುವ ಮೂಲಸ್ಥಾನ (ಹಿರಿಯರು ಹುಟ್ಟಿಬೆಳೆದ ಸ್ಥಾನ)ದ ಜೊತೆಗಿರುತ್ತದೆ. ಇಲ್ಲಿಯೇ ತುಳುವರು ತಮ್ಮ ಪಿತೃಪೂಜೆಯನ್ನು (ancestral worship) ನಡೆಸುತ್ತಾರೆ. ತುಳುನಾಡಿನ ಮೂಲಸ್ಥಾನದ ಕುರಿತು ವಿವರವಾದ ಅಧ್ಯಯನ ಆಗಬೇಕಾಗಿದೆ. ಈ ಮೂಲಸ್ಥಾನದಲ್ಲಿ ಬೆರ್ಮರ ಆಲಡೆಯೊಂದಿಗೆ ಪ್ರದೇಶದ ರಕ್ಷಕ ದೈವ ಕ್ಷೇತ್ರಪಾಲ, ಫಲಶಕ್ತಿಯ ದೈವ ನಾಗ, ಕುಲಲಾಂಛನ ದೈವಗಳಾದ ನಂದಿಗೋಣ, ಪಂಜುರ್ಲಿ ಹಾಗೂ ಹೆಣ್ಣುದೈವಗಳಾದ ರಕ್ತೇಶ್ವರಿ (ತು. ಲೆಕ್ಕೆಸಿರಿ), ಚಿಕ್ಕು, ಅಬ್ಬೆ ಅಥವಾ ಅಬ್ಬಗ ದಾರಗ (ಸಿರಿಯ ಮೊಮ್ಮಕ್ಕಳು) ಹಾಗೂ ಇನ್ನಿತರ ಕ್ಷುದ್ರದೈವಗಳ ಗುಡಿಗಳಿರುತ್ತವೆ. ಸಾಮಾನ್ಯವಾಗಿ ಸಿರಿದೈವಾವೇಶದ ಮತಾಚರಣೆಯು ಇಲ್ಲಿಯೇ ನಡೆಯುತ್ತದೆ. ತುಳುಜನರು ವಾರ್ಷಿಕ ಹಬ್ಬ – ಜಾತ್ರೆಗಳ ಸಂದರ್ಭಗಳಲ್ಲಿ ತಮ್ಮನ್ನು ಪ್ರತಿನಿಧಿಸಲು ಮನೆಯಿಂದ ಒಬ್ಬನನ್ನಾದರೂ ಮೂಲಸ್ಥಾನಕ್ಕೆ ಕಳುಹಿಸಿಕೊಡುತ್ತಾರೆ. ಹಾಗೆ ಹೋಗದಿದ್ದಲ್ಲಿ ಕುಟುಂಬದ ಭೂತಗಳು ಹಾಗೂ ಅವುಗಳ ಅಂಕೆಯೊಳಗಿರುವ ಕುಟುಂಬದ ಪೂರ್ವಜರ ಪ್ರೇತಾತ್ಮಗಳು (ತು. ಸೈತಿನಕ್ಲು) ಸಂತಾನಹೀನತೆ, ಕುಟುಂಬ ಕಲಹವನ್ನು ತಂದು ಹಾಕಿ ಮನುಷ್ಯರನ್ನು ಗೋಳು ಹೊಯ್ಯಿಸಿ ಸೇಡುತೀರಿಸಿಕೊಳ್ಳುತ್ತವೆ ಎಂಬ ನಂಬಿಕೆಯಿದೆ. ಮೂಲ ಸ್ಥಾನದ ಕಲ್ಪನೆಯಲ್ಲಿ ಸ್ಥಳೀಕವಾಗಿ (ತೆಂಕು – ಬಡಗು) ಭಿನ್ನತೆಯಿದ್ದರೂ ಮೂಲ ಸ್ಥಾನವು ಒಂದು ಕುಟುಂಬವು ಆದಿಯಲ್ಲಿ ವಾಸಿಸಿದ ನೆಲೆ ಎನ್ನುವುದು ಖಚಿತ. ಒಟ್ಟಿನಲ್ಲಿ ಅದು ಒಂದು ಕುಟುಂಬದ ರಾಜಕೀಯ ಹಾಗೂ ಧಾರ್ಮಿಕ ಕೇಂದ್ರ ಸ್ಥಾನ ಎನ್ನಬಹುದು[8] ಒಂದು ಕುಟುಂಬವು ಯಾವುದೋ ಅಲೌಖಿಕ ಕಾರಣಗಳಿಂದಾಗಿ ಕ್ಲೇಶಪಟ್ಟಾಗ ಅದರ ಸದಸ್ಯರು ಮೂಲಸ್ಥಾನಕ್ಕೆ ತೆರಳಿ ತಾವು ಬದುಕಿನಲ್ಲಿ ಏನು ತಪ್ಪು ಮಾಡಿದೆವು ಎಂಬುದನ್ನು ಬೆರ್ಮ ಆಳ್ವರು ಸಿರಿಪಾಡ್ದನದಲ್ಲಿ ಕೇಳಿದಂತೆ ದೈವಾವೇಶಕ್ಕೆ ಒಳಗಾದವರಲ್ಲಿ ಕೇಳುವುದಿದೆ. ಹೆಚ್ಚಿನ ಮೂಲಸ್ಥಾನಗಳಲ್ಲಿ ಕುಟುಂಬದ ಸದಸ್ಯರು ತಮ್ಮ ಕುಲದೈವಗಳಿಂದ ಸಾಮೂಹಿಕವಾಗಿ ದೈವಾವೇಶಕ್ಕೆ ಒಳಗಾಗುವುದಿದೆ. ದೈವಾವೇಶಕ್ಕೆ ಒಳಗಾಗದೆ ಹೋದ ಕುಟುಂಬದ ಸದಸ್ಯರು ಅವರಿಗೆ ಗೌರವ ಸೂಚಿಸಿ ತಮ್ಮ ಕಷ್ಟಗಳಿಗೆ ಕಾರಣವನ್ನು ಹೇಳಬೇಕಾಗಿ ಅವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಇಂತಹ ಗುಡಿಸಂಕೀರ್ಣದ ಯಜಮಾನಿಕೆಯನ್ನು ಹೊಂದಿರುವ ಶ್ರೀಮಂತ ಪ್ರಭುವರ್ಗದವರ ಪಾತ್ರ ಮಹತ್ವದ್ದು. ಕುಟುಂಬದ ಹಿರಿಯವನಾದವನು ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಹಾಜರಿದ್ದು ನಡಾವಳಿಯನ್ನು ನಡೆಸಿಕೊಡಬೇಕು. ಹಾಗೂ ದೈವಕ್ಕೆ ಗೌರವಸೂಚಕವಾಗಿ ಕಾಣಿಕೆಯನ್ನು ಒಪ್ಪಿಸಲೇಬೇಕು. ಹಾಗೂ ದೈವಕ್ಕೆ ಕುಟುಂಬದ ಪರವಾಗಿ ನಡೆಯತಕ್ಕ ಗೌರವಾಚರಣೆಗಳನ್ನು ಮೊದಲು ಸಾರ್ವಜನಿಕವಾಗಿ ಅವನೇ ನಡೆಸಿಕೊಡಬೇಕು ಮತ್ತು ಸಂಬಂಧಪಟ್ಟ ಉತ್ಸವಾಚರಣೆಗಳನ್ನು ತೊಡಗಿಸಿ ಮುಂದೆ ಸಾರ್ವಜನಿಕರಿಗೆ ಮುಂದುವರಿಸಲು ಅವಕಾಶ ಮಾಡಿಕೊಡಬೇಕು.

ತುಳುವರು ನಂಬುವ ಬ್ರಹ್ಮನ ಕಲ್ಪನೆಗೆ ಇನ್ನೊಂದು ಮುಖವಿದೆ. ಪಾಡ್ದನ ಸಾಹಿತ್ಯಗಳಲ್ಲಿ, ಗುಡಿಗಳ ಮೂರ್ತಿಗಳಲ್ಲಿ ಆತನು ಕುದುರೆಯ ಮೇಲೆ ಕುಳಿತ, ಖಡ್ಗಧಾರಿಯಾದ, ತಲೆಯ ಮೇಲೆ ಕೊಡೆಹಿಡಿದುಕೊಂಡ ರಾಜಯೋಧನಾಗಿ ಚಿತ್ರಿತನಾಗಿದ್ದಾನೆ. ಇದನ್ನು ಶ್ರೀ ಗುರುರಾಜ ಭಟ್ಟರು ವಿಶಿಷ್ಟ ಜೈನಪ್ರಭಾವವೆಂದು ಗುರುತಿಸಿದ್ದಾರೆ. ಜೈನ ಮತವು ೧೩-೧೪ನೇ ಶತಮಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಾರಕ್ಕೆ ಬಂದಿರಬೇಕು ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಆದರೆ ಮೇಲೆ ಹೇಳಿದ ರೀತಿಯ ಬ್ರಹ್ಮನ ಪರಿಕಲ್ಪನೆ ಜೈನ ಪೂರ್ವಕಾಲದಿಂದಲೇ ಬಂದಿರಲಾರದು ಎನ್ನುವುದಕ್ಕೆ ನಮ್ಮಲ್ಲಿ ಆಧಾರಗಳಿಲ್ಲ. ಆಲಡೆಯನ್ನು ಅರಮನೆ ಎಂಬುದಾಗಿ ಪರಿಭಾವಿಸಿದ್ದು (ಆಳು+ಎಡೆ-ಆಲಡೆ, ಆಳುವ ಜಾಗ) ಹಾಗೂ ಪೂಲಸ್ಥಾನವನ್ನು ಬ್ರಹ್ಮನ ಕೇಂದ್ರಸ್ಥಾನವೆಂಬುದಾಗಿ ಕಲ್ಪಿಸಿದ್ದು, ಬೆರ್ಮೆರನ್ನು ಅರಸ ಎಂಬುದಾಗಿ ಊಹಿಸಿದ್ದು, ಬ್ರಹ್ಮನನ್ನು ನಾಗನೊಂದಿಗೆ ಸಮೀಕರಿಸಿದ್ದು ಈ ಪರಿಕಲ್ಪನೆಗೆ ವಿರೋಧವಾಗದೆ ಪೂರಕವೇ ಆಗಿದೆ. ನಾಗಬ್ರಹ್ಮನ ಚಿತ್ರಣಗಳು ಆತನನ್ನು ದೇಹದ ಕೆಳಭಾಗದಲ್ಲಿ ಸರ್ಪರೂಪಿಯಾಗಿಯೂ ಮೇಲ್ಭಾಗದಲ್ಲಿ ರಾಜದಂಡ ಅಥವಾ ಖಡ್ಗವನ್ನು ಹಿಡಿದ ಮನುಷ್ಯನಾಗಿಯೂ ರೂಪಿಸಿವೆ. ಈ ನಾಗ ಹಾಗೂ ಬ್ರಹ್ಮನ ಚಿತ್ರಣಗಳು ಅರಸನಿಗಿರುವ ಎರಡು ಪರಸ್ಪರ ಪೂರಕಕರ್ತವ್ಯಗಳಾದ ರಕ್ಷಣೆ ಹಾಗೂ ಸಂಪದಭಿವೃದ್ಧಿಯನ್ನು ಸೂಚಿಸುತ್ತವೆ.

ಆಲುಪರ ಸುಮಾರು ಸಾವಿರ ವರ್ಷಗಳ ಅರಸೊತ್ತಿಗೆಯ ಕೊನೆಯವರೆಗೆ ಅಂದರೆ ಸುಮಾರು ಹದಿನಾಲ್ಕನೆ ಶತಮಾನದ ಕೊನೆಯವರೆಗೆ ಬ್ರಹ್ಮನು ವೈದಿಕ ಸ್ವರೂಪದ ಚತುರ್ಮುಖ ಬ್ರಹ್ಮನಾಗಿ ಈ ನೆಲದಲ್ಲಿ ಚಿತ್ರಿತನಾಗಿಲ್ಲ ಹಾಗೂ ನಾಗನು ಸುಬ್ರಹ್ಮಣ್ಯನೊಂದಿಗೆ ಸೇರ್ಪಡೆಗೊಂಡಿಲ್ಲ. ಬಹುಶಃ ಇದು ವೈದಿಕ ವರ್ಗದವರಿಂದ ನಡೆದ ದೇವತೆಗಳ ಪುನರ್‌ವರ್ಗೀಕರಣದ ಫಲ ಹಾಗೂ ನಾಗನನ್ನು ಪೂಜಿಸುವ ಅಧಿಕಾರವನ್ನು ಬ್ರಾಹ್ಮಣರು ಸ್ವೀಕರಿಸಿದ್ದು ಕಾರಣವಿರಬೇಕು. ವೈದಿಕರ ಪ್ರಕಾರ ‘ಅಜ್ಞಾನಿ’ಗಳೂ ‘ನಿರಕ್ಷರಕುಕ್ಷಿ’ಗಳೂ ಆದ ಬ್ರಾಹ್ಮಣೇತರರಲ್ಲಿ ಈಹಳೆಯ ಬೆರ್ಮೆರ್‌ಹಾಗೂ ಹೊಸ ಚತುರ್ಮುಖ ಬ್ರಹ್ಮ ಇವರ ಬಗೆಗೆ ಗೊಂದಲವಿದೆ. ಹೀಗೆ ಬ್ರಹ್ಮನ ಕಲ್ಪನೆಯು ಒಂದರಿಂದ ಇನ್ನೊಂದಕ್ಕೆ ಹೊರಳುತ್ತಿರುವ ಸಂಕ್ರಮಣ ಸ್ಥಿತಿಯಲ್ಲಿ ಬೆರ್ಮೆರನ್ನು ಆರಾಧಿಸುವ ಹಕ್ಕು ಯಾರದ್ದು ಎನ್ನುವ ಬಗೆಗೆ ಹಲವು ಸಂದರ್ಭಗಳಲ್ಲಿ ಪ್ರಶ್ನಿಸಲಾಗಿರುವುದು ಪಾಡ್ದನಗಳಲ್ಲಿ ಕಂಡು ಬರುತ್ತದೆ (ಬರ್ನೆಲ್ ೧೮೯೪-೪೭) ಇಂದಿಗೂ ಹಲವಾರು ಭೂತಗಳನ್ನು ಒಳಗೊಂಡಿರುವ ಬೆರ್ಮೆರ ಗುಂಡಗಳಲ್ಲಿ ಆರಾಧನೆಯು ಬ್ರಾಹ್ಮೇಣತರ ಅರ್ಚಕರಿಂದಲೇ ನಡೆಯುತ್ತಿದೆ. ಆದುದರಿಂದ ವಾಸ್ತವಿಕವಾಗಿ ಇವನು ಬ್ರಹ್ಮನೇ ಅಲ್ಲವೆ ಎನ್ನುವುದು ವಿವರಿಸಲಾಗದ ಒಂದು ಸಂಗತಿ.

ಈವರೆಗೆ ನಾವು ಸಮೀಕ್ಷಿಸಿದ ಮಾಹಿತಿಗಳನ್ನೆಲ್ಲ ಮತ್ತೆ ಗಮನಿಸೋಣ. ಅತ್ಯಂತ ಪ್ರಾಚೀನ ತೌಳವ ರಾಜಮನೆತನಗಳಿಂದ ಆರಾಧನೆಗೊಂಡ ರಾಜ ಫಲಸಮೃದ್ಧಿ (royal fertility) ವಾರ್ಷಿಕ ನವೀಕರಣ ಆಚರಣೆಯೊಂದಿಗೆ ಸಂಬಂಧ ಹೊಂದಿದ ಬೆರ್ಮೆರ್‌ಎನ್ನುವ ದೈವವನ್ನು ಕುರಿತು ಇರುವ ಶಾಸನಗಳ ಉಲ್ಲೇಖಗಳು ಅತ್ಯಂತ ಪ್ರಾಚೀನವಾಗಿವೆ. ಸಮಕಾಲೀನ ಮೌಖಿಕ ಐತಿಹ್ಯಗಳು (ಪಾಡ್ದನ) ಮತ್ತು ಪ್ರಾಚೀನ ಶಾಸನಗಳು ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ತಾಳೆಯಾಗುತ್ತವೆ. ಭೂತಾರಾಧನೆಗೆ ಹಿನ್ನೆಲೆಯಾಗಿರುವ ತಾತ್ವಿಕ ಅಂಶಗಳ ಕುರಿತು ಸಾಕಷ್ಟು ಪ್ರಮಾಣದ ಮಾಹಿತಿಗಳು ಉಳಿದುಬಂದಿಲ್ಲ. ಈ ಕೊರತೆಯನ್ನು ನೀಗಿಕೊಳ್ಳಲು ನಾವು ಪಾಡ್ದನಗಳ ಸಹಾಯವನ್ನು ಪಡೆಯಬಹುದು. ಪಾಡ್ದನಗಳಲ್ಲಿ ಬೆರ್ಮೆರ್‌ಮೂಲತಃ ರಾಜನಾಗಿದ್ದ ಒಬ್ಬ ವನದೇವತೆ. ಆದರೆ ಆತ ಲೌಕಿಕ ಅರಸನೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದನು. ರಾಜ್ಯದ ಜೀವಕಳೆ, ಸಂಪದಭಿವೃದ್ಧಿ ಹಾಗೂ ನಿಯಾಮಕ ವ್ಯವಸ್ಥೆಗಳನ್ನು ನೇರ್ಪುಗೊಳಿಸಲು ರಾಜನು ಬೆರ್ಮೆರನ್ನು ಆರಾಧಿಸಿ ಸಂತೃಪ್ತಿಗೊಳಿಸಬೇಕಾಗಿತ್ತು. ಬೆರ್ಮೆರ ಆವಾಸಸ್ಥಾನ ಕಾಡು. ಅಲ್ಲಿನ ಪ್ರಾಣಿಗಳ ಮತ್ತು ಅಲೌಕಿಕ ಜೀವಿಗಳ ಮೇಲೆ ಈ ವನಾಧಿಪತಿಯ ಹತೋಟಿಯಿಂದಾಗಿ ಇದು ಭಯಾನಕ ಪ್ರದೇಶವಾಗಿದೆ. ಅಲ್ಲಿನ ಪ್ರಾಣಿಗಳಲ್ಲಿ ಸರ್ಪವು ಸಂತಾನಾಭಿವೃದ್ದಿಗೆ ಸಂಬಂಧಿಸಿದ್ದಾಗಿದೆ. ಈ ವನಾಧಿಪತಿಯು ಮೃತ್ಯುವಿನೊಂದಿಗೂ ಸಂಬಂಧ ಹೊಂದಿದ್ದಾನೆ. ಸಿರಿಪಾಡ್ದನದಲ್ಲಿ ಸಿರಿಯು ಮೊಮ್ಮಕ್ಕಳಾದ ಅಬ್ಬಗ ದಾರಗರನ್ನು ಬೆರ್ಮೆರ್ ಕೊನೆಗೊಳಿಸುವ ಮೂಲಕ ತಾನೇ ಆರಂಭಿಸಿದ ಸಂತಾನವನ್ನು ಕೊನೆಗೊಳಿಸದಂತಾಯಿತು.

 

[1] ಸಾಮಾನ್ಯವಾಗಿ ಬ್ರಾಹ್ಮಣರು ಭೂತಾರಾಧನೆಯಲ್ಲಿ ಪ್ರಮುಖ ಪಾತ್ರ ವಹಿಸುವುದಿಲ್ಲ. ಆದರೆ ಕೆಳಗಿನ  ಉದಾಹರಣೆಗಳು ಅವರು ಭೂತಾರಾಧನೆಯಿಂದ ಪೂರ್ತಿ ಹೊರಗೆ ನಿಂತಿಲ್ಲ ಎಂಬುದನ್ನು  ಸ್ವಷ್ಟಪಡಿಸುತ್ತವೆ.

ಅ) ಭೂತಗಳಿಂದ ಉಂಟಾದ ಕೇಡುಗಳ ಸಂದರ್ಭಗಳಲ್ಲಿ ಬ್ರಾಹ್ಮಣರನ್ನು ಜ್ಯೋತಿಷಿಗಳೆಂದು  ಉಲ್ಲೇಖಿಸಲಾಗಿದೆ (ನೋಡಿ, ಕ್ಲಾಸ್ : ಅಚ್ಚಿನಲ್ಲಿ, ಬರ್ನೆಲ್ : ೧೯೯೬:೨೨೬ ಪಾರಾ, ೬,೯ ರಲ್ಲಿ ಸೂಚಿಸಿದ  ಜೋಯಿಸರ ಹೆಸರುಗಳಲ್ಲಿ ಬ್ರಾಹ್ಮಣ ಉಪನಾಮವಿದೆ; ಬನೇಲ್ ೧೮೯೪:೧೮೪ ಮತ್ತು ಇತರೆಡೆಗಳಲ್ಲಿ)  ನನಗೆ ತಿಳಿದಿರುವಂತೆ ಬ್ರಾಹ್ಮಣ ಜೋಯಿಸರೊಬ್ಬರು ಈ ಬಗೆಗೆ ಅಪಾರ ಜ್ಞಾನವನ್ನು ಗಳಿಸಿಕೊಂಡಿದ್ದು  ತಮ್ಮ ವೃತ್ತಿಯಲ್ಲಿ ಖ್ಯಾತರಾಗಿದ್ದಾರೆ.

ಆ) ಬ್ರಾಹ್ಮಣರು ಭೂತಗಳನ್ನು ಹಲವು ಬಗೆಯ ಮಾಂತ್ರಿಕ ಶಕ್ತಿ (ಮಂತ್ರ ಮತ್ತು ಮಂಡಲ)ಗಳಿಂದ  ಹತೋಟಿಯಲ್ಲಿಡಬಲ್ಲರೆಂದು ಹೇಳಿದೆ. ಬರ್ನೆಲ್ ೧೮೯೮:೨೨೬ ಅಡಿ ಟಿಪ್ಪಣಿ.

ಇ) ತಮ್ಮ ಮನೆಗಳಲ್ಲಿ ಕೆಲವೊಮ್ಮೆ ಬ್ರಾಹ್ಮಣರು ತಮ್ಮ ಕುಟುಂಬದ ಭೂತಗಳಿಗೆ ಉಪಾಸನೆ  ಮಾಡುವುದಿದೆ. ಕೆಲವೊಮ್ಮೆ ಅಂತಹ ಸಂದರ್ಭಗಳಲ್ಲಿ ಎಲ್ಲಾ ಕ್ರಿಯಾಚರಣೆಗಳನ್ನು,  ಆಹಾರನಿವೇದನೆಯನ್ನು ಮನೆಯ ಕೆಳವರ್ಗದ ಸೇವಕ ಜನರಿಂದ ಮಾಡಿಸುತ್ತಾರೆ.

ಈ) ಸಾರ್ವಜನಿಕ (ಗ್ರಾಮ) ಭೂತ ಉಪಾಸನಾ ಸಮಾರಂಭಗಳಲ್ಲಿ ಕೆಲವೊಂದು ವೈದಿಕ ಆಚರಣೆ  (ಪ್ರತಿಷ್ಠಾಪನಾ ಸಮಾರಂಭ ಇತ್ಯಾದಿ) ಗಳನ್ನು ನಡೆಸಲು ಬ್ರಾಹ್ಮಣರನ್ನು ಆಮಂತ್ರಿಸುವುದಿದೆ. ಆದರೆ  ಇದು ಭೂತಾರಾಧನೆಯ ಮೂಲಭೂತ ಅಂಶಗಳಾದ ಆವಾಹನೆ, ನೈವೇದ್ಯ ಸಮರ್ಪಣೆ, ಕುಣಿತ  ಮುಂತಾದ ಪ್ರಕ್ರಿಯೆಗಳಿಗೆ ಇತ್ತೀಚಿಗೆ ಸೇರ್ಪಡೆಗೊಂಡ ಅಂಶವಾಗಿರಬೇಕು.ಕೆಲವೊಂದು ಸಂದರ್ಭಗಳಲ್ಲಿ  ಬ್ರಾಹ್ಮಣರು ಸಾರ್ವಜನಿಕ ಸಮಾರಂಭಗಳಲ್ಲಿ ಊರ ಯಜಮಾನರ ಪರವಾಗಿ ಹಾಗೂ ಅವರ  ಅಪ್ಪಣೆಯಂತೆ ಮಧ್ಯಸ್ಥಿಕೆಗಾರ (ತು. ಮದು ಪನ್ಪಿನಾರ್)ರಾಗಿ ಕೆಲಸ ನಿರ್ವಹಿಸುವುದಿದೆ (ಉದಾ:  ಸಿರ್ಲಾಲ್‌ನ ಭೂತಗುಡಿಗಳಲ್ಲಿ)

ಉ) ಪಂಜುರ್ಲಿ ದೈವದ ಮಾಧ್ಯಮ (ಪಾತ್ರಿ)ನಾಗಿ ಬ್ರಾಹ್ಮಣನೊಬ್ಬ ಜಾತಿ ಬಹಿಷ್ಕಾರಕ್ಕೆ ಒಳಗಾಗದೆ  ಸೇವೆ ಸಲ್ಲಿಸುತ್ತಿರುವ ಏಕೈಕ ಉದಾಹರಣೆಯನ್ನು ಕಂಡುದಾಗಿ ಶ್ರೀಮತಿ ಮಾರ್ಥಾ ಆಯಸ್ಟನ್ (ಖಾಸಗೀ  ಪತ್ರದಲ್ಲಿ)ಬರೆದಿದ್ದಾರೆ.

[2] ಇಲ್ಲಿನ ಬ್ರಾಹ್ಮಣರ ಪ್ರತಿಷ್ಠೆ ಹಾಗೂ ಪ್ರಭಾವದ ಮೂಲ ಸಂದಿಗ್ಧವಾಗಿದೆ. ತುಳುನಾಡಿನಲ್ಲಿ ವಿಶೇಷವಾಗಿ  ಜ್ಯೋತಿಷ್ಯ ಹಾಗೂ ಮಂತ್ರವಾದಗಳಲ್ಲಿ ಬ್ರಾಹ್ಮಣರ ಪಾತ್ರವು ಗಣನೀಯವಾಗಿತ್ತೆಂಬುದರ ಬಗೆಗೆ  ಆಧಾರಗಳಿವೆ. ಅವರು ಬರುವಾಗ ತಮ್ಮೊಂದಿಗೆ ಹಲವು ದೈವಗಳನ್ನು, ಧಾರ್ಮಿಕ ಆಚರಣೆಗಳನ್ನು  ಧಾರ್ಮಿಕ ನಂಬಿಕೆಗಳನ್ನು ತಂದಿದ್ದು, ಇವುಗಳನ್ನು ಹೇಗೋ ತಮ್ಮ ಜ್ಯೋತಿಷ್ಯ ಹಾಗೂ ಮಂತ್ರವಾದ  (cure) ಪರಿಣತಿಗಳೊಂದಿಗೆ ಬೆಸೆದರು. ಬ್ರಾಹ್ಮಣರು ದೊಡ್ಡ ಶಕ್ತಿಯನ್ನು ತನ್ನೊಳಗೆ ಯಶಸ್ವಿಯಾಗಿ  ನಿಯಂತ್ರಿಸಿಕೊಳ್ಳಬಲ್ಲನೆಂಬುದಾಗಿ ಜನಸಾಮಾನ್ಯು ನಂಬುತ್ತಾರೆ. ಆದರೆ ಈ ಪ್ರಭಾವ ಏಕಮುಖಿಯಲ್ಲ.  ಸ್ಥಳೀಕ ದೈವಗಳು ಧಾರ್ಮಿಕ ಆಚರಣೆಗಾರರು, ಜ್ಯೋತಿಷ್ಯ ತಂತ್ರಗಳು, ಮಂತ್ರವಾದ ಇತ್ಯಾದಿಗಳನ್ನೆಲ್ಲ  ವೈದಿಕ ಬಂಡವಾಳದೊಳಗೆ ಸೇರ್ಪಡೆಗೊಳಿಸಿ ಸಂಸ್ಕೃತ ಮೂಲ ಎಂಬ ಹಣೆಚೀಟಿ ಹಚ್ಚಿದರು. ಪಾಶ್ಚಾತ್ಯ  ದೇಶಗಳಲ್ಲಿ ಆಧುನಿಕ ಭಾಷಾ ವಿಜ್ಞಾನವಿನ್ನೂ ಬೆಳೆಯದ ದಿನಗಳಲ್ಲಿ ಎಲ್ಲಾ ಭಾಷೆಗಳನ್ನು ಆಧುನಿಕ ಗ್ರೀಕ್  ಭಾಷೆಯ ಆಧಾರದ ಮೇಲೆ ವಿಶ್ಲೇಷಿಸುತ್ತಿದ್ದ ಬಗೆಯನ್ನು ಇಲ್ಲಿನ ಪರಿಸ್ಥಿತಿ ಬಹುಮಟ್ಟಿಗೆ ಹೋಲುತ್ತದೆ.

[3] ತುಳುನಾಡಿನ ಭೂತಗಳ ಬಹುಮಟ್ಟಿಗೆ ದಕ್ಷಿಣ ಏಸ್ಯಾದ ಯಕ್ಷ(ನೋಡಿ:ಕುಮಾರ ಸ್ವಾಮಿ ೧೯೨೮:  ಫಾಕ್, ೧೯೭೩) ಯಕ್ಕಗಳು (ನೋಡಿ : ಯಾಲ್ಮಾನ್, ೧೯೬೪; ಒಬಯ್‌ಸೇಕರೆ ೧೯೬೬, ೧೯೬೯, ವಿರ್ಝ,  ೧೯೫೪) ಪ್ರೇತಗಳು, ತೆಯ್ಯಂ ಮತ್ತು ಕುಟ್ಟಿಚ್ಚಾತ್ತನ್ (ಗಾಫ್‌; ೧೯೫೯ ಅ, ಲೋಗನ್, ೧೯೦೬; ಕುರುಪ್  ೧೯೭೩) ದೈವ ಮತ್ತು ದೈವ (ಹಾರ್ಪರ್ ೧೯೫೯) ಹಾಗೂ ಇತರ ಸ್ತ್ರೀ ದೈವಗಳು ವೀರ-ರಕ್ಷಕ ದೈವಗಳು,  ಪೂರ್ವಿಕರ ಪ್ರೇತ್ಮಾತಗಳು ಹಾಗೂ ಕುಲ ಸಂಕೇತ ದೈವಗಳನ್ನು ಹೋಲುತ್ತದೆ (ನೋಡಿ: ಉದಾ:  ಹೀಬರ್ಟ್‌, ೧೯೭೧).

* ತುಳುವಿಗೆ ಲಿಪಿಯಿಲ್ಲ ಎನ್ನುವುದು ಜನಪ್ರಿಯ ಹೇಳಿಕೆ. ಆದರೆ ಇತ್ತೀಚೆಗೆ ಕೆಲವೊಂದು ಶಿಲಾಶಾಸನಗಳು ಪತ್ತೆಯಾಗಿದ್ದು ಅವುಗಳ ಭಾಷೆ ತುಳುವಾಗಿದ್ದು ಲಿಪಿಯ ಬಹುಮಟ್ಟಿಗೆ ಮಲೆಯಾಳಂ ಲಿಪಿಯನ್ನು ಹೋಲುತ್ತದೆ. ಆ ಲಿಪಿಯನ್ನು ತುಳು-ಮಲೆಯಾಳಂ ಲಿಪಿ ಎನ್ನಲಾಗುತ್ತಿದೆ. ವಿವರಗಳಿಗೆ ನೋಡಿ : ತುಳು ವ – ೪ ಗೋ.ಪೈ.ಸಂ.ಕೇಂದ್ರ ಉಡುಪಿ, ೧೯೮೦, ಅನುವಾದಕ)

(ಕ್ಲಾಸ್ ಅವರು ಈ ಲೇಖನ ಬರೆವ ಹೊತ್ತಿಗೆ (೧೯೭೮) ತುಳುವಿಗೆ ತನ್ನದೇ ಆದ ಲಿಪಿಯಿದೆ, ಅದರಲ್ಲಿ ಮಾರ್ಗಕಾವ್ಯಗಳು ರಚಿತವಾಗಿವೆ, ಶಾಸನಗಳು ದೊರೆಯುತ್ತವೆ ಎನ್ನುವ ತಿಳಿವಳಿಕೆ ಇರಲಿಲ್ಲ – ಸಂ.)

[4] ಪಾಂಡ್ಯ ಹಾಗೂ ಕೇತಲ ಪುತ್ರ (ಕೇರಳ ಪುತ್ರ) ರಾಜ್ಯಗಳ ನಡುವಣ ತುಳುವಪ್ರದೇಶವು ಅಶೋಕನ  ಶಿಲಾಶಾಸನಗಳಲ್ಲಿ ಉಲ್ಲೇಖಿತವಾದ ‘ಸತಿಯಪುತ್ರ’ ರಾಜ್ಯವೇ ಇರಬೇಕು ಎನ್ನುವ ಸಾಧ್ಯತೆಯನ್ನು  ಪ್ರೊ.ಬಿ.ಎ. ಸಾಲೆತ್ತೂರು ‘ತಮ್ಮ ಹಿಸ್ಟರಿ ಆಫ್ ತುಳುವ’ ಗ್ರಂಥದಲ್ಲಿ ಚರ್ಚಿಸಿದ್ದಾರೆ. ತುಳುವರು  ಸತ್ಯವಂತರು ಎನ್ನುವ ತಮಿಳರ ಸ್ಥಾಪಿತ ಅಭಿಪ್ರಾಯಕ್ಕೆ ಈ ‘ಸತಿಯ ಪುತ್ರ’ ಪದವನ್ನು ಗಂಟು ಹಾಕುವ  ಪ್ರಯತ್ನ ಬಹಳ ಪೇಲವವಾಗುತ್ತದೆ ಎಂಬ ಕಾರಣದಿಂದಲೂ ಸಂಗಂ ಕಾಲದ ತಮಿಳರಿಗೆ ತುಳುವರ  ಪರಿಚಯವಿದ್ದರೂ ಇದನ್ನು ಸತಿಯಪುತ್ರವೆಂದು ಅವರು ಹೇಳದೆ ಇರುವುದರಿಂದಲೂ ತುಳುವ ಹಾಗೂ  ಸತಿಯ ಪುತ್ರ ಎರಡೂ ಒಂದೇ ಎಂಬ ಅಭಿಪ್ರಾಯವನ್ನು ಅವರು ತಳ್ಳಿ ಹಾಕುತ್ತಾರೆ. ಐತಿಹ್ಯದಂತೆ ಇಲ್ಲಿ  ಅಳಿಯ ಸಂತಾನ ಪದ್ಧತಿಯನ್ನು ಬಳಕೆಗೆ ತಂದನೆನ್ನಲಾಗುವ ತುಳುವ ಅರಸ ಭೂತಾಳ ಪಾಂಡ್ಯನ  ಸಂಬಂಧದಲ್ಲಿ ಮಾತ್ರ ಈ ಸತಿಯಪುತ್ರ ಎಂಬ ಹೆಸರು ಬಳಕೆಯಲ್ಲಿ ಕಂಡು ಬರುತ್ತದೆಯಲ್ಲದೆ ಬೇರೆಲ್ಲೂ  ತುಳುನಾಡು ಈ ಹೆಸರನ್ನು ತನಗೆ ಅನ್ವಯಿಸಿಕೊಂಡಂತಿಲ್ಲ. ತುಳುನಾಡು ಸತಿಯ ಪುತ್ರ ಎನ್ನುವ  ಅಭಿಪ್ರಾಯವನ್ನು ಸಮರ್ಥಿಸಲು ದೊರೆವ ಸಾಮಗ್ರಿಗಳ ಕೊರತೆಯಿಂದಾಗಿ ಡಾ. ಸಾಲೆತ್ತೂರು ಆ  ಅಭಿಪ್ರಾಯವನ್ನು ನಿರಾಕರಿಸಿದುದು ನ್ಯಾಯ ಸಮ್ಮತವಾದುದು. ಆದರೆ ಸಿರಿ ಪಾಡ್ದನಗಳಲ್ಲಿ ಬರುವ  ಸತ್ಯನಾಪುರ ಎಂಬ ಹೆಸರನ್ನು ಕಂಡರೆ ಈ ಪ್ರಕರಣವನ್ನು ಮತ್ತೆ ಆರಂಭಿಸಬಹುದೆಂದು ನನಗೆ  ತೋರುತ್ತದೆ. ಈ ನಾಡಿಗೆ ತುಳುವ ಎಂಬ ಹೆಸರನ್ನು ಕೊಟ್ಟಿರುವ ಮೊದಲ ಶಾಸನಗಳನ್ನು ಬರೆದ  ಹೊತ್ತಿಗೆ ಭೂತಾಳ ಪಾಂಡ್ಯ ಹಾಗೂ ಸಿರಿ ಐತಿಹ್ಯ ತುಳುನಾಡಿಗೆ ಕೊಟ್ಟಿದ್ದ ಹೆಸರುಗಳು ಮರೆಯಾಗಿರುವ  ಸಾಧ್ಯತೆಗಳಿವೆ.

** ಬಸ್ರೂರಿನಲ್ಲಿ ಸಿರಿ ಆರಾಧನೆ ಇಲ್ಲ – ಅನುವಾದಕ)

[5] ಈ ಐತಿಹ್ಯ (ಸಿರಿ)ದಲ್ಲಿ ಹಲವಾರು ವಸ್ತುಗಳಿದ್ದು ಅದನ್ನು ದ್ರಾವಿಡ ಮಹಾಕಾವ್ಯ ಪರಂಪರೆಗೆ  ಸೇರಿಸಬಹುದು. ರಾಜ, ಅವನ ಹೆಂಡತಿ ಹಾಗೂ ಸೂಳೆ – ಈ ತ್ರಯಗಳ ನಡುವೆ ಬೆಳೆವ ಸಿರಿ ಐತಿಹ್ಯವು  ತಮಿಳುನಾಡಿನ ಶಿಲಪ್ಪದಿಗಾರಂನ್ನು ಹೋಲುತ್ತದೆ. ಸಿರಿಯ ವ್ಯಕ್ತಿತ್ವವು ‘ಶಿಲಪ್ಪದಿಗಾರಂ’ನ ನಾಯಿಕೆ  ಕನ್ನಗಿಯನ್ನು ಹೋಲುತ್ತದೆ. ವೈಯುಕ್ತಿಕ ಸಂಕಟಗಳ ನಡುವೆಯೇ ಎದ್ದು ನಿಂತು ಅಲೌಕಿಕ ವ್ಯಕ್ತಿತ್ವವನ್ನು  ಸ್ವಪ್ರೇರಣೆಯಿಂದಲೇ ಪಡೆದುದು ಹಾಗೂ ಬದುಕಿನ ಘಟನಾವಳಿಗಳಲ್ಲಿ ಇಬ್ಬರು ನಾಯಿಕೆಯರಲ್ಲೂ  ಸಮಾನತೆಯ ಅಂಶ ಕಾಣುತ್ತಿರುವುದು ವಿಶಿಷ್ಟ ಸಂಗತಿಯಾಗಿದೆ. ಇವೆರಡರ ಕಥೆಯ ಹಂದರಲ್ಲಿ  ವ್ಯತ್ಯಾಸವಿದೆ. ಸಿರಿ ಹಾಗೂ ಕನ್ನಗಿಯರ ಗುಣಧರ್ಮದಲ್ಲಿ ಭಿನ್ನತೆಯಿಂದೆ. ಆದರೆ ಪಾತ್ರಗಳ ದುರಂತ  ವಿನ್ಯಾಸದಲ್ಲಿ ಎರಡರಲ್ಲೂ ನಿಕಟ ಸ್ವಾಮ್ಯ ಕಂಡುಬರುತ್ತಿದೆ. ಕಥೆಯ ಇತರ ವಸ್ತುಗಳಾದ – ಅವಳಿಗಳು  ವಹಿಸಿದ ಪ್ರಮುಖ ಪಾತ್ರ. ಕಥೆಯ ಪಾತ್ರಗಳಾದ ಸಿರಿಯು ತನ್ನ ಬಳಗದ ನಿರ್ಮಾಪಕಳೆಂದು  ತಿಳಿಯಲಾದದ್ದು – ಇವೆಲ್ಲಾ ದ್ರಾವಿಡ ಮೌಖಿಕ ಸಂಪ್ರದಾಯದಲ್ಲಿ ಕಾಣುವ ಸಾಮಾನ್ಯ ಸಂಗತಿಯಾಗಿವೆ.  ಮೇಲೆ ಹೇಳಿದ ತ್ರಯಗಳನ್ನು ಕುರಿತು ವಿವರವಾದ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ದ್ರಾವಿಡ  ಮೌಖಿಕ ಮಹಾಕಾವ್ಯ ಪರಂಪರೆಯೊಂದಿದೆ. ಸಿರಿಐತಿಹ್ಯ ಅದರಲ್ಲಿ ಒಂದು ಎಂಬ ನನ್ನ  ಅಂತಃಪ್ರೇರಣೆಯನ್ನು ಈ ಹೊತ್ತಿನಲ್ಲಿ ನಾನು ಖಚಿತಗೊಳಿಸಲಾರೆ.

[6] ಲೇಖನವನ್ನು ಬರೆದು ನನ್ನ ಅನೇಕ ಸಹೋದ್ಯೋಗಿಗಳಿಗೆ ಹಂಚಿದ ಬಳಿಕ ನ್ಯಾನ್ಸಿ ಇ. ಫಾಕ್ ಅವರ  ‘Wilderness and kinship in Ancient Asia’ ಹಾಗೂ ಎಲ್.ಕೆ.ಮಹಾಪಾತ್ರ ಅವರ ‘Gods,  kings and castesystem in India’ (೧೯೭೪) ಎಂಬ ಪ್ರಬಂಧಗಳು ನನ್ನ ಗಮನಕ್ಕೆ ಬಂದುವು.  ದಕ್ಷಿಣ ಏಸ್ಯಾದ ಅನೇಕ ದೇವತೆಗಳ ಕುರಿತು ಅವರು ನಡೆಸುದ ಸಂಶೋಧನೆ ದಕ್ಷಿಣ ಕನ್ನಡದ ಬೆರ್ಮೆರ  ವಿಕಾಸವನ್ನು ಕುರಿತು ಅವರು ನಡೆಸಿದ ಸಂಶೋಧನೆ ದಕ್ಷಿಣ ಕನ್ನಡದ ಬೆರ್ಮರ ವಿಕಾಸವನ್ನು ಕುರಿತು  ನಾನು ಮಾಡಿದ ಪ್ರಾಕ್ ಕಲ್ಪನೆಗಳ ನಡುವೆ ಗಮನಾರ್ಹ ಸಾಮ್ಯ ಗೋಚರಿಸುತ್ತಿರುವುದರಿಂದ  ಅವುಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ‘ಯಕ್ಷ’ರನ್ನು (೧೯೨೯) ಕುರಿತು ಕುಮಾರ ಸ್ವಾಮಿಯವರ  ಸಂಶೋಧನ ಗ್ರಂಥವನ್ನು ವಿದ್ವಾಂಸರು ಅಷ್ಟಾಗಿ ಗಮನಿಸದೆ ಹೋಗಿದ್ದು ಅದರಲ್ಲಿ ಇದೇ ಅಭಿಪ್ರಾಯವನ್ನು  ಸೂಚಿಸಲಾಗಿದೆ. ಈ ದೈವಗಳು ಮೂಲಭೂತವಾದುವುಗಳೆಂದೂ, ಆದಿವಾಸಿ ಸಂಪ್ರದಾಯದ  ಆರಾಧನೆಗಳು ಮುಂದೆ ಶಾಸ್ತ್ರೀಯವಾದ ಪೂಜೆ ಹಾಗೂ ಭಕ್ತಿ ಸಂಪ್ರದಾಯಗಳಿಗೆ  ಎಡೆಮಾಡಿಕೊಟ್ಟಿರಬೇಕು ಎಂದು ಹೇಳುತ್ತಾರೆ.

[7] ನಾನು ಸಂಗ್ರಹಿಸಿದ ಸಿರಿಪಾಡ್ದನಗಳ ನಾಲ್ಕು ಆವೃತ್ತಿಗಳಲ್ಲಿ ಕಾಡಿನ ಬಗೆಗೆ ಪ್ರಸ್ತಾಪವಿಲ್ಲ. ಆದರೆ  ಎಲ್ಲಾ ಆವೃತ್ತಿಗಳಲ್ಲೂ ಬೆರ್ಮ ಆಳ್ವರು ಗುಡಿಯಿರುವ ಪ್ರದೇಶಕ್ಕೆ ಕಾಡಿನ ಮೂಲಕ ಹಾದು ಹೋಗಿ ಅದರ  ಮಧ್ಯಭಾಗವನ್ನು ಸೇರಿರುವ ಉಲ್ಲೇಖವಿದೆ. ಭಿಕ್ಷೆ ಬೇಡುವ ನೆಪದಲ್ಲಿ ಮನೆಗೆ ನಲಿಯುತ್ತಾ ಬಂದ ದೈವವು  ಬೆರ್ಮೆ ಆಳ್ವನಲ್ಲಿ ಒಂದು ಸೇರು ಅಕ್ಕಿ ಹಿಡಿದುಕೊಂಡು ದಾರಿ ಸಾಗುತ್ತಿದ್ತಂತೆ ಒಂದೊಂದೇ ಕಾಳನ್ನು  ನೆಲಕ್ಕೆಸೆಯುವಂತೆ ಹೇಳಿತು. ಹೀಗೆ ಅತಿಮಾನವ ಶಕ್ತಿಯನ್ನು ಹೊಂದಿದ್ದ ವ್ಯಕ್ತಿಯನ್ನು ಅನುಸರಿಸಿಕೊಂಡು  ಮುಂದುವರಿಯುವುದು ದಾರಿಯ ಭಯಾನಕತೆಯನ್ನು ಸೂಚಿಸುತ್ತದೆ. ಈ ಸಂಗತಿಯನ್ನ ಕೋಟಿ ಚೆನ್ನಯ  ಪಾಡ್ದನದಲ್ಲೂ ನೋಡಬಹುದು. ಮುಂದುವರಿಯುತ್ತಾ ಬೆಳ್ತಿಗೆ ಅಕ್ಕಿಯನ್ನು ಚೆಲ್ಲುವುದು ಮರುಪ್ರಯಾಣಕ್ಕೆ  ದಾರಿಯನ್ನು ಗುರುತಿಸುವುದು ಹಾಗೂ ಬೆರ್ಮೆ ಆಳ್ವರು ಹಿಂದಿರುಗುವಾಗ ಅವರಿಗೆ ರಕ್ಷಣರೇಖೆ (line of  protection) ಯನ್ನು ನಿರ್ಮಿಸುವುದು ಉದ್ದೇಶವಾಗಿರಬಹುದು.

ಇಂಗ್ಲೀಷ್ ಜನಪದ ಸಾಹಿತ್ಯದಲ್ಲಿರುವ ‘Sleeping beauty’ ಎನ್ನುವ ಕಥೆಯಲ್ಲಿ ಕಾಣಿಸುವ ಒಂದು  ದೊಡ್ಡ ಮುಳ್ಳಿನ ಬಲ್ಲೆಯನ್ನು ಹೋಲುವ ಸೀಗೆ ಬಳ್ಳಿಯಿಂದಾವೃತವಾದ ಜಾಗವನ್ನು ಈ ಜತೆ ತಲುಪುತ್ತದೆ.  ಒಂದು ಆವೃತ್ತಿಯಲ್ಲಿ ಈ ಸ್ಥಳವನ್ನು ಬಹಳ ಒತ್ತೊತ್ತಾಗಿ ಬೆಳೆದ ತುಂಬೆನೆಕ್ಕಿ (Clerondendrum  inerine)ಯಿಂದ ಆವೃತವಾದ ಪಾಳು ಭೂಮಿಯೆಂದು ವಿವರಿಸಿದೆ. ನೆಕ್ಕಿ ಮತ್ತು ಸೀಗೆ ದಟ್ಟ ಕುರುಚಲು  ಕಾಡುಗಳಲ್ಲಿ ಕಂಡು ಬರುವ ಸಸ್ಯಗಳು, ತುಂಬೆ ನೆಕ್ಕಿ ಎಲೆಗಳನ್ನು ಅಸ್ಪೃಶ್ಯ ಕಾಡು ಜನಾಂಗದವರಾದ  ಕೊರಗರು ತಮ್ಮ ಮೈಮುಚ್ಚಿಕೊಳ್ಳಲು ಉಪಯೋಗಿಸಿಕೊಳ್ಳುತ್ತಿದ್ದರು. ಸಿರಿ ಹಾಗೂ ಬೆರ್ಮೆರ ಆರಾಧನೆಯ  ಪ್ರಮುಖ ಕೇಂದ್ರಗಳಲ್ಲಿ ಹಿರಿಯಡ್ಕ ಒಂದು (ತು. ಪೆರ್ಯಡ್ಕ, ಪೇರಡ್ಕ) ಆದರೆ ಸಿರಿಪಾಡ್ದನದ ಯಾವ  ಭಾಗದಲ್ಲೂ ಈ ಸ್ಥಳದ ಬಗೆಗೆ ಉಲ್ಲೇಖವಿಲ್ಲದಿರುವುದು ಕುತೂಹಲದಾಯಕ ಅಂಶ. ಆದರೆ ಇಲ್ಲಿ ಬೆರ್ಮೆರ  (ಬ್ರಹ್ಮ) ಆರಾಧನೆ ನಡೆಯುತ್ತದೆ. ಪ್ರತಿ ಸೋಮವಾರ ನಡೆವ ‘ದರ್ಶನ’ದಲ್ಲಿ ಪಾತ್ರಿ ಮೈದುಂಬಿ  ದೆವವಾಣಿಯನ್ನು ನುಡಿಯುವುದಿದೆ. ಇಲ್ಲಿನ ಬೆರ್ಮೆರ ಗುಡಿ ಅತ್ಯಂತ ಪ್ರಾಚೀನ ಗುಡಿಗಳಲ್ಲಿ ಒಂದು  ಎನ್ನಲಾಗಿದೆ. ಪೆರ್ಯಡ್ಕ ಪದದ ‘ಪೆರಿ’ಯ ಎಂಬ ಪದಭಾಗವು ಹಳೆಯ ದೊಡ್ಡ, ಪ್ರಾಚೀನ ಎಂಬ  ಅರ್ಥವನ್ನು ಹೊಂದಿದೆ. ‘ಅಡಕ’ ಎಂದರೆ ‘ಹೂಳಿಡುವ ಪ್ರದೇಶ, ಅಪಾಯಕಾರಿ, ಮಲಿನ ಪ್ರದೇಶ,  ಅರಣ್ಯಪ್ರದೇಶ, ವನ್ಯಭೂಮಿ’ ಎಂದರ್ಥ. ೧೮ನೇ ಶತಮಾನದ ಹಿಂದೆ ಈ ದೇವಾಲಯಕ್ಕೆ  ಹೊಂದಿಕೊಂಡಂತೆ ಯಾವುದೇ ಪೇಟೆ ಪಟ್ಟಣದ ಸಂಪರ್ಕ ಇದ್ದಿಲ್ಲ. ಬ್ರಾಹ್ಮಣನೊಬ್ಬನ ಮನೆ ಹಾಗೂ  ಅಂಗಡಿ ಮಾತ್ರ ಅಲ್ಲಿ ಇತ್ತು ಎನ್ನಲಾಗಿದೆ (ಬುಕೆನೆನ್ ೧೮೦೭, ಸಂ.೧೧೧. ೮೯) ಇಂದು ಬೆಳೆದಿರುವ  ಪಟ್ಟಣದ ಪ್ರದೇಶದಲ್ಲಿ ಇತ್ತೀಚಿನವರೆಗೂ ಕಾಡು ಬೆಳೆದಿತ್ತು ಎಂಬುದಾಗಿ ನನ್ನ ವಕ್ತೃಗಳು ಹೇಳಿದರು.

ಸತ್ತವರನ್ನು ಹೂಳಿಡುವ ಪ್ರದೇಶದೊಂದಿಗೆ ಬೆರ್ಮೆರ ಸಂಬಂಧ – ಸಹಯೋಗಗಳು ಶಿವನ  ಗುಣಧರ್ಮಗಳೊಂದಿಗೆ ಹೋಲುತ್ತವೆ. ಕಾಡು ವನ್ಯ ಮೃಗಗಳೊಂದಿಗೆ ಬೆರ್ಮೆರ ಸಂಬಂಧವು  (ವಿಶೇಷವಾಗಿ ಕಾಡು ಹಂದಿಯೊಂದಿಗೆ) ಪಶುಪತಿ, ಪ್ರಜಾಪತಿ ಹಾಗೂ ಇನ್ನಿತರ ಪ್ರಾಚೀನ ದೈವಗಳನ್ನು  (ಸಿಂಧೂ ನಾಗರಿಕತೆಯ ಮುದ್ರಿಕೆ) ನೆನಪಿಸುತ್ತವೆ. ಇದು ಬ್ರಾಹ್ಮಣಗಳಲ್ಲಿ ವರ್ಣಿತವಾದ ಬ್ರಹ್ಮನಿಗೆ  ಹತ್ತಿರವಿದ್ದಂತೆ ಕಾಣುತ್ತದೆ. ಸಿರಿಪಾಡ್ದನದಲ್ಲಿ ಮತ್ತೆ ಮತ್ತೆ ಬರುವ ನಾರಾಯಣ ನಾರಾಯಣ ಪದವು ಈ  ಬೆರ್ಮೆರನ್ನೆ ಸೂಚಿಸುತ್ತಿರಬೇಕು.

[8] ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಸಾಮಾನ್ಯವಾಗಿ ಮೂಲಸ್ಥಾನವು ಸಣ್ಣ ಅರಣ್ಯ ಪ್ರದೇಶ (೧೦೦  ರಿಂದ ೨೦೦ ಚ. ಅಡಿ)ವಾಗಿರುತ್ತದೆ. ಇಲ್ಲೇ ಸಮೀಪದಲ್ಲಿ ಕುಟುಂಬದ ಮೂಲಮನೆಯಿರುತ್ತದೆ. ಈ  ಪ್ರದೇಶವನ್ನು ನಾಗಬನ ಎನ್ನುತ್ತಾರೆ. ಬ್ರಾಹ್ಮಣ ಜಾತಿಗೆ ಸೇರಿದ ಗಂಡಸರು ಮಿಂದು ಶುದ್ಧವಾಗಿ ಈ  ಪ್ರದೇಶವನ್ನು ಪ್ರವೇಶಿಸಬೇಕು (ಕೆಳವರ್ಗದವರು ಬನಗಳಲ್ಲಿ ಬ್ರಾಹ್ಮಣನಾದವನು ಆಚರಣೆಗಳನ್ನು  ನಡೆಸಲಾರ) ವರ್ಷಕ್ಕೊಮ್ಮೆ ಕುಟುಂಬದ ಸದಸ್ಯರೆಲ್ಲರೂ ಈ ಮೂಲಸ್ಥಾನದ ಬಳಿ ನಡೆಯುವ ಆಚರಣೆಗೆ  ಬಂದು ಸೇರಬೇಕು. ಮೂಲಸ್ಥಾನದ ಬಳಿ ನಡೆಯುವ ಆಚರಣೆಗೆ ದೈವಗಳು ಈ ಹಿಂದೆ ವಿವರಿಸಿದವೇ  ಆಗಿವೆ. ಕೆಲವೆಡೆ ಬರಿಯ ನಾಗನಿಗೆ ಹಾಗೂ ಕುಲಲಾಂಛನ ದೈವವಾದ ಪಂಜುರ್ಲಿ ಇದ್ದರೆ ಹಾಗೂ  ನಾಗನ ಚಿತ್ರ ಕೆತ್ತಿದ ಕಲ್ಲುಗಳಿರುತ್ತವೆ. ನಾಗಬನವನ್ನು ಯಾರೇ ಆಗಲಿ ಸ್ನಾನಮಾಡಿ ಮಡಿಯಲ್ಲೇ  ಪ್ರವೇಶಿಸಬೇಕೆಂದೂ, ಅದು ಅತ್ಯಂತ ಅಪಾಯಕಾರಿ ಪ್ರದೇಶವೆಂದೂ ನಂಬಲಾಗುತ್ತಿದೆ. ವಾರ್ಷಿಕ  ಜಾತ್ರೆಯಲ್ಲಿ ಅನುಮತಿ ಕೇಳದೆ ನಾಗಬನದ ಮರಗಿಡಗಳನ್ನು ಕಡಿಯಕೂಡದು ಎಂಬ ನಂಬಿಕೆಯಿದೆ.