‘ನಂಬಲೇ, ನಂಬಾದ್ ಕೊರ್ಪೆ… ಪತ್ತಪ್ಪೆ ಬಾಲೆಲೆನ್ ಒಂಜಪ್ಪೆ ಬಾಲೆಲೆಕ್ಕ ತೂದು, ಅಪ್ಪೆ ಆದ್ ಮೋಕೆಡ್  ಮಾಯೊದ ಮಿರೆಪೇರ್ ಕೊರ್ದು, ತಮ್ಮಲೆ ಆದ್ ಅಂದ್‌ಮಲ್ತ್‌ದ್‌ ಬುದ್ಧಿ ನೀತಿ ಪಂಡ್‌ದ್‌ ಪೊರ್ವೆಲ್ಡ್‌ ದೀದ್‌ ತಾಂಕೊನ್ಪೆ. ಇಡೀ ಊರುಗು ಮಾಯೊದ ಬೇಲಿ ಆದ್‌ಪೂತ ಬಿತ್ತ್‌ಲ್‌ದ ಲೆಕ್ಕ ತೂವೊನ್ಬೆ….’- ಭೂತದ ನುಡಿಗಟ್ಟಿನಿಂದ.

‘ನಂಬಿ, ನಂಬುವಂತಹ ಸ್ಥಿತಿ ನಿರ್ಮಾಣ ಮಾಡಿ ಕೊಡುತ್ತೇನೆ… ಹತ್ತು ತಾಯಿಯ ಮಕ್ಕಳನ್ನು ಒಂದು  ತಾಯಿಯ ಮಕ್ಕಳಂತೆ ಕಂಡು, ತಾಯಿಯಾಗಿ ಅಕ್ಕರೆಯಿಂದ ಅದೃಶ್ಯವಾಗಿ ಮೊಲೆಹಾಲು ಕೊಟ್ಟು,  ಮಾವನಾಗಿ ಮನಸ್ಸು ಒಪ್ಪಿಸಿ ಬುದ್ಧಿ ನೀತಿ ಹೇಳಿ ಮಡಿಲಲ್ಲಿ ಇಟ್ಟು ಸಾಕುತ್ತೇನೆ. ಸಮಸ್ತ ಊರಿಗೆ  ಮಾಯಕದ ಬೇಲಿಯಾಗಿ, ಹೂವಿನ ತೋಟದಂತೆ ನೋಡಿಕೊಳ್ಳುತ್ತೇನೆ…’

ಪ್ರಪಂಚದ ಎಲ್ಲೆಡೆಗಳಂತೆ ತುಳು ಆದಿಮಾನವನೂ ಕಣ್ಣು ತೆರೆದಾಗ ಈ ಪ್ರಪಂಚದ ಮಹಾಶಕ್ತಿಗಳು – ಅಗ್ನಿ, ವಾಯು, ನಕ್ಷತ್ರ, ಸೂರ್ಯ, ಚಂದ್ರಾದಿಗಳು ಆತನನ್ನು ಎದುರುಗೊಂಡುವು. ರಮ್ಯಾದ್ಭುತವಾದ ಅವು ಆತನ ಗಮನ ಸೆಳೆದಿರಬೇಕು. ಈ ಶಕ್ತಿ ವಿಶೇಷಗಳನ್ನು ದಿನವೂ ಆತ ಎದುರುಗೊಂಡು ಅರ್ಥವಿಸಲು ಪ್ರಯತ್ನಿಸಿದಾಗ ಆತನಿಗೆ ತಿಳಿಯಿತು – ಇವು ತನ್ನ ಅಳವಿಗೆ ಒಳಪಟ್ಟಿಲ್ಲ. ತಾನು ಎಷ್ಟೇ ಪ್ರಯತ್ನಿಸಿದರೂ ಇವುಗಳ ಪ್ರಭಾವಲಯದಿಂದ ತಪ್ಪಿಸಿಕೊಳ್ಳಲಾರೆ. ಅವು ತನ್ನನ್ನು ಆಳುತ್ತವೆಯೇ ಹೊರತು ತಾನು ಅವುಗಳ ಮೇಲೆ ಕಿಂಚಿತ್ತೂ ಅಧಿಕಾರ ಚಲಾಯಿಸಲಾರೆ. ಈ ಅರಿವು ಆತನಿಗೆ ಆದಾಗ ಆತ ಅವುಗಳಿಗೆ ಶರಣಾದ. ಭಯಭಕ್ತಿಗಳಿಂದ ನಡೆದುಕೊಳ್ಳಹತ್ತಿದ. ಆದರೆ ಇವುಗಳನ್ನೂ ಮೀರಿದ, ಇವೆಲ್ಲವುಗಳನ್ನೂ ನಿಯಂತ್ರಿಸುವ ಮಹಾಶಕ್ತಿಯೊಂದರ ಅರಿವು ತುಳುವನಿಗೆ ಇದ್ದುದು ಒಂದು ಪಂಜುರ್ಲಿ ಪಾಡ್ದನದ ಮಾತಿನಿಂದ ತಿಳಿದುಕೊಳ್ಳಬಹುದಾಗಿದೆ. ‘ಬಾನ ಪತ್ಯೆರ್ ದೇವೆರ್‌, ಭೂಮಿ ತಿರ್ಗಾಡ್‌ಂದೆರ್, ಭೂಮಿ ಪತ್ಯೆರ್‌ದೇವೆರ್‌, ಬಾನ ತಿರ್ಗಾಡ್‌ಂಡೆದೆರ್, ಎಡಗೈ ತಟ್ಯೆರ್ ಭೂಮಿ ತಿರ್ಗ್‌ಂಡ್‌, ಬಲಗೈ ತಟ್ಯೆರ್ ಬಾನ ತಿರ್ಗ್‌ಂಡ್‌, ನಡಪೆರೆ ಭೂಮಿ, ತಿರ್ಗೆರೆ ಬಾನ, ಉದಿಪುಗ್‌ ಸೂರ್ಯ ದೇವೆರ್‌, ಕಂತ್‌ಗ್‌ಚಂದ್ರದೇವೆರ್‌….

ಆಕಾಶವವನ್ನು ಹಿಡಿದರು ದೇವರು. ಭೂಮಿ ತಿರುಗಲಿ ಎಂದರು. ಭೂಮಿಯನ್ನು ಹಿಡಿದರು. ಆಕಾಶ ತಿರುಗಲಿ ಎಂದರು. ಎಡಗೈ ತಟ್ಟಿದರು, ಭೂಮಿ ತಿರುಗಿತು. ಬಲಗೈ ತಟ್ಟಿದರು. ಆಕಾಶ ತಿರುಗಿತು. ಭೂಮಿ ನಡೆಯಲಿಕ್ಕೆ, ಆಕಾಶ ತಿರುಗಾಡಲಿಕ್ಕೆ, ಉದಯಕ್ಕೆ ಸೂರ್ಯ, ಅಸ್ತಮಾನಕ್ಕೆ ಚಂದ್ರ….

ಆದಿ ತುಳುವನಿಗೆ ಸೂರ್ಯ, ಚಂದ್ರ, ಅಗ್ನಿ, ವಾಯುಗಳು ಅದ್ಭುತ ಶಕ್ತಿಗಳೆಂಬುದು ಅರ್ಥವಾಯಿತೇನೋ ನಿಜ. ಆದರೆ ಅಂದಿನ ಆತನ ಬೆಳೆಯದ ಬುದ್ಧಿಗೆ ‘ವಸ್ತುರೂಪದಲ್ಲಿ’ ಇವುಗಳನ್ನು ಹಿಡಿದಿಟ್ಟುಕೊಳ್ಳಲಾಗಲಿಲ್ಲ. ವಸ್ತುರೂಪಕ್ಕೆ ತರಲಾಗದುದನ್ನು ಅಂತರಂಗದಲ್ಲಿ ಕಲ್ಪಿಸಿಕೊಂಡು ಆರಾಧಿಸುವುದು ಆತನಿಗೆ ಕಷ್ಟವಾಗಿರಬಹುದು. ಆದ್ದರಿಂದಲೇ ಆತ ಅಗ್ನಿ, ವಾಯು, ಸೂರ್ಯ, ಚಂದ್ರಾದಿಗಳನ್ನು ತನ್ನ ನಂಬಿಗೆಯ ನೆಲೆಯಾಗಿಸಿಕೊಳ್ಳಲಿಲ್ಲ – ಆರಾಧನಾ ದೇವತೆಯಾಗಿಸಿಕೊಳ್ಳಲಿಲ್ಲ. ಅವುಗಳಿಗೆ ದೂರದಿಂದ ವಂದಿಸಿ ಸಮಾಧಾನಪಟ್ಟು ಕೊಂಡ. ಆದರೆ ಬೇರೆ ನೆಲೆಯಲ್ಲಿ ನಿಂತು ಇವುಗಳನ್ನು ಸಾಕ್ಷಿಯಾಗಿಟ್ಟುಕೊಂಡದನ್ನು ಕಾಣುತ್ತೇವೆ. ಭೂತದ ನುಡಿಗಟ್ಟುಗಳಲ್ಲಿ ‘ಸೂರ್ಯಚಂದ್ರೆರ್‌ ಉಪ್ಪಿಮುಟ್ಟ ಈ ಕಟ್ಟ್‌ಕಟ್ಟಲೆಗ್‌ ಅಲಿವೊಲಿದಾಂತಿಲೆಕ ನಡಪುಡಾದ್‌ಕೊರುವೆ’

‘ಸೂರ್ಯ ಚಂದ್ರರಿರುವವರೆಗೆ ಈ ಕಟ್ಟುಕಟ್ಟಲೆಗೆ ಅಳಿವು ಇಲ್ಲದ ಹಾಗೆ ನಡೆಸಿಕೊಂಡು ಬರುತ್ತೇನೆ’ ಎಂಬ ಭರವಸೆ ಕೊಡುವುದನ್ನು ಕಾಣುತ್ತೇವೆ.

ಯಾವನೇ ಮಾನವ ತನ್ನ ನಂಬಿಕೆಗೆ ನೆಲೆಯಾಗಿ ಒಂದು ವ್ಯಕ್ತಿಯನ್ನೋ ಶಕ್ತಿಯನ್ನೋ ವಿಚಾರವನ್ನೋ ಆಧರಿಸಿಕೊಂಡಿರದೆ ಜೀವನ ನಡೆಸುವುದು ಕಷ್ಟಸಾಧ್ಯವೆಂದು ಮನಶ್ಯಾಸ್ತ್ರಜ್ಞರ ಅಭಿಮತ. ಅದು ನಮ್ಮ ನಿಮ್ಮ ಅನುಭವದ ಸಾಮಾನ್ಯ ಮಾತೂ ಹೌದು. ಅಮೂರ್ತವಾದ ಶಕ್ತಿ ಮತ್ತು ವಿಚಾರಗಳನ್ನು ಅರ್ಥವಿಸಿಕೊಂಡು ಆರಾಧಿಸುವಷ್ಟು ಬೆಳೆಯದ ತುಳುವ ಮೊದಲಲ್ಲಿ ತನ್ನ ಸುತ್ತಮುತ್ತಲ ವಸ್ತುವಿಶೇಷಗಳನ್ನೇ ತನ್ನ ನಂಬಿಗೆಯ ನೆಲೆಯಾಗಿಸಿಕೊಂಡ. ನೆಲದ ಮೇಲೆ ಸಣ್ಣ ಪುಟ್ಟ ಶೃಂಗಗಳಾಗಿ ಎದ್ದು ನಿಂತ ಸುಂದರ ಹುತ್ತಗಳು, ರೆಂಬೆಕೊಂಬೆಗಳು ವಿಶಾಲವಾಗಿ ಹಬ್ಬಿಕೊಬ್ಬಿ ರಮ್ಯಾದ್ಭುತವಾಗಿ ಬೆಳೆದಿರುವ ವೃಕ್ಷಗಳು, ನಿಸರ್ಗದಲ್ಲಿ ಅಲ್ಪಸ್ವಲ್ಪ ಆಕಾರದಿಂದ ರೂಪುಗೊಂಡ ಆಕರ್ಷಕವಾದ ಕಲ್ಲುಗಳು ಅಥವಾ ಕೆಲವೊಮ್ಮೆ ವಿಚಿತ್ರವಾದ ಇನ್ನಾವುದೋ ವಸ್ತುಗಳು ಆತನ ಆರಾಧನಾ ಮೂಲಗಳಾದುವು. ಅವು ಆತನ ಕಣ್ಮನಗಳಿಗೆ ಕಾಣುವಂತೆಯೂ ಇದ್ದುವು. ಕಲ್ಪನೆಯನ್ನು ಕೆಣಕುವಂತೆಯೂ ಇದ್ದುವು. ಅಲ್ಲಿ ಆತ ತನಗೆ ನಿರ್ದಿಷ್ಟವಾಗಿ ವಿವರಿಸಿ ಹೇಳಲಾಗದ ಅಗೋಚರ ಶಕ್ತಿಯನ್ನು ಕಲ್ಪಿಸಿ, ನಂಬಿ ಆರಾಧಿಸತೊಡಗಿದ.

ಬಹಳ ಕಡೆ ಇಂದು ಕೂಡಾ ತುಳುವರು ನಂಬಿ ಆರಾಧಿಸುವ ಶಕ್ತಿಗಳು – ಭೂತಗಳು – ಇಂತಹ ಮರದ ಬುಡದಲ್ಲೋ ಕಲ್ಲುಗಳಲ್ಲೋ ಇವೆ. ತುಳುವರಲ್ಲಿ ಒಂದು ಕಾಲದಲ್ಲಿ ಬಹಳ ಹಿಂದುಳಿದ ಜನಾಂಗವಾಗಿದ್ದ ಮಾರಿಹೊಲೆಯರು ಆರಾಧಿಸಿಕೊಂಡು ಬರುತ್ತಿದ್ದ ದೈವಗಳಾದ ಕೊರಗ-ಕೊರತಿಯರ ಆರಾಧನೆಯ ಮೂಲನೆಲೆಗಳನ್ನು ಕಂಡರೆ ನಮಗೆ ಪ್ರಾಚೀನ ಒಟ್ಟು ತುಳು ಜನಾಂಗದ ಆರಾಧನಾ ಮೂಲದ ಕಲ್ಪನೆ ಅಷ್ಟೋ ಇಷ್ಟೋ ಆಗಬಹುದು.

ಮುಂದೆ ಲೋಹದ ಆವಿಷ್ಕಾರವಾದಾಗ ಒಮ್ಮೆ ಅದರ ತುಂಡೊಂದು ಆತನ ಕೈಗೆ ಬಂತು. ಅದರ ಗುಣವಿಶೇಷಗಳನ್ನು ಕಂಡು ಆತನಿಗೆ ಆಶ್ಚರ್ಯವಾಯಿತು. ಅದನ್ನೂ ಆತ ತನ್ನ ಆರಾಧನಾ ಸ್ಥಳದಲ್ಲಿ ಇಟ್ಟುಕೊಂಡ – ಇಂದು ದೇವರ ಪಾಲಕಿಯಲ್ಲಿ ಕನ್ನಡಿಯನ್ನು ಇಟ್ಟುಕೊಂಡು ಮೆರೆಸುವಂತೆ. ತುಳುವರ ಅತೀ ಪ್ರಾಚೀನವಾದ ಆರಾಧನಾ ಸ್ಥಳಗಳಲ್ಲಿ ಕೆಲವೆಡೆ ಕಬ್ಬಿಣದ ತುಂಡು ಇರುವುದು ಕಂಡುಬಂದಿದೆ.

ಕಾಲ ಕಳೆದಂತೆ ನಾಗರಿಕೆ ಬೆಳೆಯಿತು. ಹುತ್ತ, ಕಲ್ಲು, ಮರಗಳ ಸ್ಥಾನದಲ್ಲಿ ಮಾಡ, ಗುಡಿ, ಗುಂಡ, ಗೋಪುರಗಳು ಎದ್ದು ನಿಂತುವು. ಆರಾಧನೆಯ ವಿಧಿವಿಧಾನಗಳಲ್ಲಿ ಕೆಲವು ಹೊಸತನಗಳು ಬೆರೆತುಕೊಂಡುವು. ಮರ, ಕಲ್ಲು ಗುಂಡುಗಳ ಬದಲು ಕಡ್ತಲೆ, ಮುಗಮೂರ್ತಿಗಳು ಮೂಡಿಕೊಂಡವು. ಅಲಂಕಾರದಲ್ಲಿ ಕಂಗಿನ ಹಾಳೆ, ಕೇಪುಳದ ಹೂ, ತೆಂಗಿನ ಗರಿಯ ಜೊತೆ ಮಲ್ಲಿಗೆ ಹೂ, ಬೆಳ್ಳಿಬಂಗಾರಗಳು ಕೂಡಿಕೊಂಡವು. ಆದರೂ ಸೂಕ್ಷ್ಮವಾಗಿ ಅವಲೋಕಿಸುವವನಿಗೆ ಇಂದಿನ ಆರಾಧನೆಯಲ್ಲಿ ಹಿಂದಿನ ಆರಾಧನೆಯ ಬಗೆಯನ್ನು ಗುರುತಿಸಬಹುದಾಗಿದೆ. ಶತಶತಮಾನಗಳು ಕಳೆದರೂ ಆರಾಧನಾ ವಿಧಾನ ಮೂಲವನ್ನೇ ಮರೆಮಾಡುವಷ್ಟು ಬದಲಾಗದಿರುವುದರಲ್ಲಿ ಅದರ ಗಟ್ಟಿತನ ಇದೆ.

ಮುಂದಿನ ದಿನಗಳಲ್ಲಿ ತನ್ನ ಸುತ್ತಮುತ್ತಲಿನ ಕಾಡುಗಳಲ್ಲಿ ತಂಡತಂಡವಾಗಿ ವಾಸಿಸುತ್ತಿದ್ದು ಅತ್ಯಂತ ಶಕ್ತಿಶಾಲಿಯಾಗಿದ್ದ, ಭಯಪ್ರದವಾದ ಪ್ರಾಣಿಗಳು ಶಕ್ತಿರೂಪದಲ್ಲಿ ತುಳುವನಿಂದ ಆರಾಧಿಸಲ್ಪಡತೊಡಗಿದುವು. ನಾಗಾರಾಧನೆ ಇವುಗಳಲ್ಲಿ ಮುಖ್ಯವಾದುದು. ಪಿಲಿಚಾಮುಂಡಿ, ಪಂಜುರ್ಲಿ, ಮೈಸಂದಾಯ, ಮರ್ಲ್‌ ಮೈಸಂದಾಯ, ನಂದಿಗೋಣ – ಇಂತಹ ಭೂತಗಳು ಆಯಾಯಾ ಪ್ರಾಣಿಗಳ ಶಕ್ತಿವಿಶೇಷಗಳನ್ನು ಗುರುತಿಸಿ ತುಳುವ ಆರಾಧಿಸ ತೊಡಿಗಿದ್ದಕ್ಕೆ ಸಾಕ್ಷಿ. ಇಂದು ಕೂಡಾ ಈ ಭೂತಗಳು ತುಳುನಾಡಿನ ಉದ್ದಗಲಕ್ಕೆ ವ್ಯಾಪಕವಾಗಿ ಆರಾಧಿಸಲ್ಪಡುತ್ತಿವೆ.

ತುಳುವರ ನಂಬಿಕೆಯ ಮುಂದಿನ ಮಜಲು ಮೃತಾತ್ಮರುಗಳ ಆರಾಧನೆ. ಇದು ತುಳುವರ ಅತ್ಯಂತ ಪ್ರಾಚೀನ ನಂಬಿಕೆಯಾಗಿರಲೂ ಸಾಧ್ಯವಿದೆ. ಆಗ ಇದ್ದವ ಈಗ ದೇಹವಿದ್ದರೂ ಹೇಗೆ ಇಲ್ಲವಾದ ಎಂಬ ಕೌತುಕವೂ, ತಮ್ಮವರ ಕುರಿತಾದ ಮೋಹವೂ ಸೇರಿ ಮೃತಾತ್ಮರ ಆರಾಧನೆ ಮೊದಲಾಗಿರಬೇಕು. ಇಂದು ಕೂಡಾ ಮೃತಾತ್ಮರಿಗೆ ‘ಅಗೆಲು ಬಡಿಸು’ವ ಸಂಪ್ರದಾಯ ತುಳುವರ ಎಲ್ಲಾ ಮನೆಗಳಲ್ಲೂ ಸಾಮಾನ್ಯ. ಮೃತಾತ್ಮ ಆರಾಧನೆ ಪ್ರಪಂಚದ ಎಲ್ಲಾ ಕಡೆ ಒಂದಲ್ಲ ಒಂದು ರೀತಿಯಿಂದ ಇದ್ದೇ ಇತ್ತು; ಇಂದು ಕೂಡಾ ಇದೆ.

ಪರಿಸರದಲ್ಲಿದ್ದ ಪ್ರತಾಪಶಾಲಿಗಳನ್ನೋ, ಕುಶಲಕರ್ಮಿಗಳನ್ನೋ, ಅಸಾಮಾನ್ಯ ಕೆಲಸ ಮಾಡಿದವರನ್ನೋ ಅವರ ಮರಣಾನಂತರ ಶಕ್ತಿಗಳಾಗಿ -ಸತ್ಯಗಳಾಗಿ – ಭೂತಗಳಾಗಿ ಆರಾಧಿಸುವ ತುಳುವರ ನಂಬಿಕೆಯ ಮುಂದಿನ ಹಂತವನ್ನು ಗುರುತಿಸಬಹುದಾಗಿದೆ. ಈ ಅಸಾಮಾನ್ಯರ ಕುರಿತಾದ ಪ್ರೀತಿ, ಭೀತಿಗಳು ಅವರ ಮರಣಾನಂತರ ಭಕ್ತಿಯಾಗಿ ಪರಿವರ್ತಿತವಾಯಿತು. ಭಯ ಭಕ್ತಿಯ ಭರದಲ್ಲಿ ಮೃತಾತ್ಮರ ಸುತ್ತು ಮುತ್ತು ರಮ್ಯಾದ್ಭುತವಾದ ಕಥೆಗಳ ಪ್ರಭಾವಲಯಗಳು ವಿಸ್ತರಿಸಿಕೊಂಡು ಮೆಲ್ಲ ಮೆಲ್ಲನೆ ಈ ಮೃತಾತ್ಮರು ಭೂತಗಳಾಗಿ ಮೈದುಂಬಿಕೊಂಡು; ಆರಾಧಿಸಲ್ಪಡಹತ್ತಿದರು.

ಹೀಗೆ ಭೂತಗಳಾಗಿ ಮೈದುಂಬಿಕೊಂಡು ಬೆಳೆದು ನಿಂತು ಕೆಲವರು ಮೆಲ್ಲ ಮೆಲ್ಲನೆ ಕೌಟುಂಬಿಕ ಪರಿಧಿಯನ್ನು ಮೀರಿ ಗ್ರಾಮದ ಮೇರೆಯನ್ನು ಉತ್ತರಿಸಿ ತುಳುನಾಡಿನ ಉದ್ದಗಲಗಳಿಗೆ ಹಬ್ಬಿಕೊಂಡು ಆರಾಧನೆಗೊಳ್ಳತೊಡಗಿದ ಕಥೆ ಚೇತೋಹಾರಿಯಾದುದು. ಕೋಟಿ, ಚೆನ್ನಯ, ಸಿರಿ, ಅಬ್ಬಗ, ದಾರಗ, ಕಲ್ಕುಡ, ಕಲ್ಲುಟ್ಟಿ, ಕೋರ್ದಬ್ಬು, ಬೊಬ್ಬಯ, ಅಜ್ಜೆರ್, ಅಲಿ – ಈ ಭೂತಗಳೆಲ್ಲ ಈ ವರ್ಗಕ್ಕೆ ಸೇರಿದವುಗಳು…

ಈ ದಿಸೆಯಲ್ಲಿ ಮುಂದಿನ ಬೆಳವಣಿಗೆಯಾಗಿ ಪುರಾಣಗಳಲ್ಲಿ ಬರುವ ವ್ಯಕ್ತಿಗಳನ್ನು – ಶಕ್ತಿಗಳನ್ನು- ಭೂತಗಳಾಗಿ ನಂಬಿ ಆರಾಧನೆ ಮಾಡತೊಡಗಿದುದನ್ನು ಕಾಣಬಹುದಾಗಿದೆ. ಕಾಲಘಟ್ಟಕ್ಕೆ ಸ್ವಲ್ಪ ಮೊದಲೇ ತುಳುನಾಡಿನ ಮೇಲೆ ಆಗಿನ ಮೂಲದ ಬ್ರಾಹ್ಮಣದ ಪ್ರಭಾವ ಬಿದ್ದಿರಬೇಕು; ಮತ್ತು ಪೌರಾಣಿಕ ಕಥೆಗಳು ಈ ಪ್ರದೇಶದಲ್ಲಿ ಹಬ್ಬಿ ಹರಡಿರಬೇಕು. ಆಗ ರಕ್ತೇಶ್ವರಿ, ಚಾಮುಂಡಿ, ವಿಷ್ಣುಮೂರ್ತಿ ಮೊದಲಾದ ದೈವಗಳ ಆರಾಧನೆ ಮೊದಲಾಯಿತು. ಈ ಪೌರಾಣಿಕ ಶಕ್ತಿಗಳು ಭೂತಗಳ ನೆಲೆಗೆ ಬಂದು ಆರಾಧನೆಗೊಳ್ಳತೊಡಗಿದುದು ಕುತೂಹಲದಾಯಕವಾದುದು. ಹೀಗೆ ಹಂತ ಹಂತವಾಗಿ ಬೆಳೆದುಬಂದ ತುಳುನಾಡಿನ ಭೂತಾರಾಧನೆ ಸಮರ್ಥ ಮನಶಾಸ್ತ್ರಜ್ಞರ, ಯೋಗ್ಯ ಮಾನವ ಶಾಸ್ತ್ರಜ್ಞರ, ಪ್ರಾಮಾಣಿಕ, ಐತಿಹಾಸಿಕಾತ್ಮಕವಾದ ಆಳವಾದ ಅಧ್ಯಯನವನ್ನು ಇನ್ನೂ ಕಾದು ಕುಳಿತಿದೆ.

ಆಯಾಯ ಭೂತಗಳ ‘ಸ್ಥಳೀಯ ಯೋಗ್ಯತೆ’, ಆರಾಧಿಸುವವರ ಅಭಿಮಾನ, ಹೆಚ್ಚುಗಾರಿಗೆ ಇವುಗಳನ್ನು ಹೊಂದಿಕೊಂಡು ಆಯಾಯ ದೈವಗಳ ‘ಪರಿಮಿತಿ’ ಇರುತ್ತದೆ. ದೈವಗಳಲ್ಲಿ ಕೆಲವು ಕೌಟುಂಬಿಕ ದೈವಗಳೆಂದೂ, ಇನ್ನು ಕೆಲವು ರಾಜ್ಯ ದೈವಗಳೆಂದೂ, ಮತ್ತೆ ಕೆಲವು ಮಾಗಣೆ ದೈವಗಳೆಂದೂ, ಕೆಲವು ಸೀಮೆ ದೈವಗಳೆಂದೂ ಆರಾಧನಾ ಕ್ಷೇತ್ರದ ವಿಸ್ತಾರಕ್ಕೆ ಅನುಗುಣವಾಗಿ ಕರೆಯಲ್ಪಡುತ್ತವೆ. ಈ ಭೂತಗಳ ಉತ್ಸವಗಳನ್ನು ಅವುಗಳ ಸ್ವರೂಪ ಮತ್ತು ಪ್ರದೇಶಗಳಿಗೆ ಹೊಂದಿಕೊಂಡು ಅಗೆಲು, ತಂಬಿಲ, ಓಮ, ಪಂಚಕಜ್ಞಾಯ, ಕೋಲ, ನೇಮ, ಅಯನ, ಮೆಚ್ಚಿ, ಬಂಡಿ, ಜಾಲಾಟ, ಓಲಸರಿ, ಕೆಂಡಸೇವೆ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.

‘ನಂಬಿನಕ್‌ಲೆಗ್‌ ಇಂಬು, ನಂಬಂದಿನಕ್‌ಲೆಗ್‌ ಅಂಬು’
ನಂಬಿದವರಿಗೆ ಇಂಬು, ನಂಬದವರಿಗೆ ಅಂಬು

ಎಂಬ ಭೂತದ ನುಡಿಗಟ್ಟು ಭೂತಾರಾಧನೆಯ ಪ್ರಾರಂಭವಾದ ಒಳಹೊರಗುಗಳಿಗೆ ಒಂದು ನೆಲೆಯಲ್ಲಿ ಕನ್ನಡಿ ಹಿಡಿಯುತ್ತದೆ. ಇಲ್ಲಿಯ ಆರಾಧನೆಯಲ್ಲಿ ಭಯಭಕ್ತಿಗಳು ಬೆರೆತಿರುತ್ತವೆ. ಇದು ಬರೇ ಭೂತಾರಾಧನೆಗೆ ಮಾತ್ರ ಸೀಮಿತ ಅಲ್ಲ, ಎಲ್ಲಾ ಆರಾಧನೆಗಳ ಮೂಲಗಳಲ್ಲೂ ಇವೇ ವಿಚಾರಗಳೂ ಇವೆ. ಇದರ ಜೊತೆಗೆ ತಾನು ನಂಬಿ ಆರಾಧಿಸುವ ಸತ್ಯದ ಕುರಿತು ತಿಳಿಸಿ ಹೇಳಲಾರದಂತಹ ಪ್ರೀತಿಯ ಭಾವವೊಂದು ಉದ್ದಕ್ಕೂ ಹೊಸೆದು ಬೆಸೆದುಕೊಂಡಿರುವುದನ್ನು ಕಾಣಬಹುದಾಗಿದೆ.

ತನ್ನಿಂದ ಹಿರಿದಾದುದನ್ನು ಆರಾಧಿಸುವ ಮೂಲಕ ತುಳುವ ತನ್ನ ಅಂತರಂಗದಲ್ಲಿ ತಾನು ಇನ್ನೂ ಬೆಳೆಯಬೇಕು, ‘ದೊಡ್ಡವನಾಗಬೇಕು’ ಎಂಬ ಭಾವಕ್ಕೆ ಅಭಿವ್ಯಕ್ತಿ ಕೊಟ್ಟ. ಈ ಆರಾಧನೆಯ ವಿಧಾನದಲ್ಲಿ ಅವನದೇ ಛಾಪು ಎದ್ದು ಕಾಣುತ್ತದೆ. ಯಾರು ತನಗಿಂತ ಹಿರಿದಾದುದನ್ನು ಗೌರವಿಸಿ ಆದರಿಸುತ್ತಾರೋ ಅಲ್ಲಿ ಅದರ ಜೊತೆಗೆ ಪ್ರೀತಿಯೂ ಮಿಳಿತವಾಗಿರುತ್ತದೆ. ನಾರದೀಯ ಭಕ್ತಿಸೂತ್ರದಂತೆ ‘ಪ್ರೀತಿಯ ಪರಮೋಚ್ಚ ಸ್ಥಿತಿಯೇ ಭಕ್ತಿ’. ಈ ರೀತಿಯ ಭಕ್ತಿಭಾವದ ತೀವ್ರತೆ ಹೆಚ್ಚಾದಷ್ಟೂ ಭೂತಗಳ ಕಾರಣಿಕ-ಶಕ್ತಿ-ಹೆಚ್ಚಾಗುತ್ತದೆ.     ‘ನಿಕ್‌ಲೆನ ಭಕ್ತಿ ಏತಾ ಎನ್ನ ಶಕ್ತಿ ಆತ್’

ನಿಮ್ಮ ಭಕ್ತಿ ಎಷ್ಟೋ ನನ್ನ ಶಕ್ತಿ ಅಷ್ಟು
ಎನ್ನುವ ಭೂತದ ನುಡಿಗಟ್ಟಿನ ಮಾತು ತುಂಬಾ ಅರ್ಥವತ್ತಾಗಿದೆ.

ನಾವು ಪ್ರೀತಿಸಿ ಭಜಿಸುವ ನಮಗಿಂತ ಹಿರಿದಾದ ಶಕ್ತಿಯೊಂದರ ಅಭಯರಕ್ಷೆಯಲ್ಲಿದ್ದೇವೆ ಎನ್ನುವ ನಂಬಿಕೆ ಬಂದಾಗ ಮಾನವನಿಗೆ ನಿರಾತಂಕವಾದ ಬಾಳನ್ನು ಬಾಳಲು ಸಾಧ್ಯವಾಗುತ್ತದೆ. ಈ ನಿರಾತಂಕ ನಿಶ್ಚಿಂತ ಭಾವದಿಂದ ಒಂದು ತೆರನಾದ ಸಮತೋಲನ ಚಿತ್ತವೃತ್ತಿ ಮೂಡಿಬರುತ್ತದೆ. ಮನುಕುಲದ ಬೆಳವಣಿಗೆಯ ಬೇರು ಇಲ್ಲಿ ಹುಲುಸಾಗಿ ಹಬ್ಬಿಕೊಳ್ಳಲು ಸಾಧ್ಯವಾಗುತ್ತದೆ. ಇದನ್ನೇ ಗೀತೆ ಹೇಳುತ್ತದೆ ‘ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ’. ಇದರಿಂದ ವ್ಯಕ್ತಿ-ಸಮಾಜಗಳೆರಡೂ ಊರ್ಧ್ವ ಮುಖವಾಗಿ ಬೆಳೆಯಲು ಸಾಧ್ಯವಾಗುತ್ತದೆ. ತುಳುನಾಡಿನ ಭೂತಾರಾಧನೆಯು ಅಧ್ಯಯನ ಈ ನಿಟ್ಟಿನಲ್ಲೂ ಕೂಲಂಕಷವಾಗಿ ನಡೆಯಬೇಕಾಗಿದೆ.

ತುಳುವರು ತಾವು ನಂಬಿದ ಭೂತಗಳನ್ನು ‘ಸತ್ಯೊಲು’(ಸತ್ಯಗಳು) ಎಂದೇ ಕರೆಯುತ್ತಾರೆ. ಅವರ ಮಾತುಮಾತಿನಲ್ಲೂ ‘ಎಂಕ್ಲು ನಂಬಿ ಸತ್ಯೊಲು’ (ನಾವು ನಂಬಿದ ಸತ್ಯಗಳು), ‘ಸತ್ಯ ತೂಂಡ ಆಂಡ್‌’ (ಸತ್ಯ ನೋಡಿದರೆ ಸಾಕು), ‘ಸತ್ಯದೀಯಿಲೆಕ ಆವಡ್‌ (ಸತ್ಯ ಬಯಸಿದಂತೆ ಆಗಲಿ) – ಎಂಬ ನುಡಿಗಟ್ಟುಗಳು ಬರುತ್ತವೆ. ತುಳುನಾಡಿನಲ್ಲಿ ‘ಸತ್ಯೊಲು’ ಎಂಬುದು ಭೂತಗಳಿಗೆ ಪರ್ಯಾಯ ನಾಮವೇ ಆಗಿದೆ. ಭೂತದ ನುಡಿಕಟ್ಟುಗಳಲ್ಲಿ ಕೂಡಾ ಬರುವ ‘ಸತ್ಯೊದ ಮಣ್ಣ್ ಉಂದು, ಸತ್ಯೊದ ಐಂದಾಳ್‌ನಿಕುಲು, ಸತ್ಯೊದ ರಾಜ್ಯ ಉಂದ್, ಸತ್ಯೊದ ದೈವ ಯಾನ್‌ಈ ರಾಜ್ಯೊಡ್ ಸತ್ಯ ಆತ್ತಂದೆ ಅಸತ್ಯ ಕೋಡಿಯೆತ್ತ್ಯೆರೆ ಬುಡಯೆ’

ಸತ್ಯದ ಮಣ್ಣು ಇದು, ಸತ್ಯದ ಹತ್ತು ಸಮಸ್ತರು ನೀವು, ಸತ್ಯದ ರಾಜ್ಯ ಇದು, ಸತ್ಯದ ದೈವ ನಾನು. ಈ ರಾಜ್ಯದಲ್ಲಿ ಸತ್ಯ ಅಲ್ಲದೆ ಅಸತ್ಯ ಗೆಲ್ಲಲು ಬಿಡಲಿಕ್ಕಿಲ್ಲ.

ಎಂಬ ಈ ಮಾತುಗಳು ಕೂಡಾ ತುಳುವರು ಭೂತಗಳನ್ನು ಯಾವ ನೆಲೆಯಲ್ಲಿ ನಿಲ್ಲಿಸಿ ಪೂಜಿಸಿದರು ಎಂಬುದನ್ನು ಅರ್ಥವಿಸಿಕೊಳ್ಳಲು ಸಹಕಾರಿಯಾಗುತ್ತದೆ.

ತುಳುವರು ಭೂತಾರಾಧನೆಯ ಹೊತ್ತಿಗೆ ‘ಮೈದುಂಬಿದ’ ವ್ಯಕ್ತಿಯನ್ನಾಗಲೀ ಅಲಂಕರಿಸಿದ ಮುಗಮೂರ್ತಿ, ಕಡ್ತಲೆ ಮಣಿಗಳನ್ನಾಗಲೀ ಪರಮ ಸತ್ಯವೆಂದು ಭಾವಿಸಲಿಲ್ಲ. ತಾವು ಆರಾಧಿಸುವ ಈ ಎಲ್ಲಾ ನಾಮರೂಪಗಳ ಹಿಂದಿರುವ ಮೂಲ ಸತ್ಯವೇ ಅವರ ಆರಾಧನೆಯ ಪರಮ ಲಕ್ಷ್ಯವಾಗಿತ್ತು. ಆದ್ದರಿಂದಲೇ ಭೂತದ ವೇಷ ಧರಿಸಿದವನೂ ತನ್ನ ನುಡಿಗಟ್ಟಿನಲ್ಲಿ ‘ಕಟ್ಟಿ ರಥೊಟ್ಟಾಯಿ ದೈವ ಯಾನ್’ (ಸಿಂಗರಿಸಿದ ರಥಕ್ಕೆ ‘ಆಗಮಿಸಿದ’ ದೈವ ನಾನು) ಎಂದೇ ಹೇಳುತ್ತೇನೆ. ‘ನಾನೆ ರಥ ನೀನೆ ರಥಿಕ’ ಎಂಬ ಕನ್ನಡದ ಕವಿವಾಣಿ ಇಪ್ಪತ್ತನೆ ಶತಮಾನದಲ್ಲಿ ನುಡಿದುದು ಶತಮಾನ ಶತಮಾನಗಳ ಹಿಂದೆ ಭೂತಗಳ ‘ನುಡಿಗಟ್ಟಾಗಿ’ ತುಳುನಾಡಿನಲ್ಲಿ ಅನುರಣಿತವಾಗುತ್ತಿತ್ತು. ಈ ಪ್ರಜ್ಞೆಯಿಂದಲೇ ಭೂತದ ಪಾತ್ರಿಗೆ ‘ಮೈದುಂಬುವ’ ಮೊದಲು ಪ್ರಾರ್ಥಿಸುವಾಗಲೂ, ಮೈದುಂಬಿದ ಮೇಲೂ, ಮೈದುಂಬಿದ ಪಾತ್ರಿ ಪ್ರಸಾದ ಕೊಡುವಾಗಲೂ ಭಕ್ತರು ಕೈಮುಗಿಯುವುದು, ಪೊಡಮಡುವುದು ಮೈದುಂಬಿದ ವ್ಯಕ್ತಿಗೆ ಅಲ್ಲ, ಮೂಲ ನೆಲೆಗೆ! ಈ ‘ನಡವಳಿಕೆ’ಯನ್ನು ಅರ್ಥ ಮಾಡಿಕೊಂಡಾಗ ತುಳುವರ ಭೂತಾರಾಧನೆಯ ಹಿಂದಿರುವ ಚಿಂತನೆಯ ‘ನಿಜದ ನೆಲೆ’ಯನ್ನು ಗುರುತಿಸಬಹುದಾಗಿದೆ.

ಭೂತಾರಾಧನೆ ತುಳುವರ ಅಂತರಂಗದ ನಂಬಿಕೆಗೆ ನೆಲೆಯಾದಂತೆ ಬಹಿರಂಗದ ಸಾಮಾಜಿಕ ನಡವಳಿಕೆಗಳಿಗೂ ಕೇಂದ್ರ ಬಿಂದುವಾದುದರಲ್ಲಿ ಆದ ಗರಿಮೆ, ಗಟ್ಟಿತನಗಳ ಇನ್ನೊಂದು ಮುಖ ಇದೆ. ಇಡೀ ತುಳುವ ಸಮಾಜದ ಎಲ್ಲಾ ಕೆಲಸ ಕಾರ್ಯಗಳೂ ಈ ಮೂಲವನ್ನೇ ಹೊಂದಿಕೊಂಡು ನಡೆಯುತ್ತಿದ್ದುವು. ಆಯಾಯ ಭೂತಗಳ ಆರಾಧನೆಯ ಪರಿಸರದ ಹುಟ್ಟು, ಸಾವು, ಮದುವೆ, ನಿಷೇಕ, ಚವಲ, ಪ್ರಸೂತ – ಎಲ್ಲಾ ಶುಭಾಶುಭ ಕೆಲಸ ಕಾರ್ಯಗಳು ಈ ಕೇಂದ್ರ ಬಿಂದುವನ್ನು ಬಿಟ್ಟು ನಡೆಯುತ್ತಿರಲಿಲ್ಲ.

ಗ್ರಾಮದ ಎಲ್ಲಾ ಜನವರ್ಗದವರೂ ಭೂತಾರಾದನೆಯಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಪಾಲ್ಗೊಳ್ಳುವಂತಹ ಕಟ್ಟುಪಾಡುಗಳಿದ್ದುವು. ಇದರಿಂದ ಹೊರನೋಟಕ್ಕೆ ಹೊಲೆಯ, ಬಿಲ್ಲವ, ನಲ್ಕೆ, ಹಾಣಿಗ, ಬಂಟ, ಕುಲಾಲ, ಪಂಬದ, ಆಚಾರಿ, ಪುರುಷ, ಮಡಿವಾಳ, ಕ್ಷೌರಿಕ – ಹೀಗೆ ಹತ್ತಾರು ಉಪವರ್ಗಗಳಾಗಿ ವಿಂಗಡಿಸಲ್ಪಟ್ಟಿದ್ದ ತುಳು ಸಮಾಜ ಭೂತಗಳನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ಆಂತರಂಗಿಕವಾಗಿ ಒಂದು ಸೂತ್ರದಿಂದ ಬಂಧಿತವಾಗಿತ್ತು. ಒಂದು ದೊಡ್ಡ ಕುಟುಂಬದಂತೆ ಪರಸ್ಪರ ಕಷ್ಟಸುಖಗಳಲ್ಲಿ, ಶುಭಾಶುಭಗಳಲ್ಲಿ ಒಂದಾಗಿ ಬಾಳುವ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ಒಬ್ಬನು ಇನ್ನೊಬ್ಬನಿಂದ, ವರ್ಗ ಇನ್ನೊಂದು ವರ್ಗದಿಂದ ಬೇರಾಗದಂತೆ ಬೆಸೆದ ಸಾಮಾಜಿಕ ಸಂಬಂಧಗಳು ಬೆಳೆದು ಇಡೀ ಗ್ರಾಮ ಒಂದು ಘಟಕವಾಗಿ ರೂಪುಗೊಂಡಿತು; ಒಲವಿನಿಂದ ಕೂಡಿ ಬಾಳಿತು.

ಸೀಮೆ, ರಾಜ್ಯ, ಗ್ರಾಮಗಳ ಭೂತಾರಾಧನೆಯಲ್ಲಿ ತುಳು ಸಮಾಜದ ಎಲ್ಲಾ ವರ್ಗದ ಜನರಿಗೂ ಗುರಿಕಾರಿಕೆಯ ಹೆಸರಲ್ಲಿ ಒಂದೊಂದು ಕೆಲಸದ ಹೊರೆ ಹೊಣೆ ಇತ್ತು. ಭೂತಾಲಯಗಳಲ್ಲಿ ದುಡಿಯುವ ಈ ಜನರು ಆಯಾಯ ಜನವರ್ಗದಲ್ಲಿ ಗುರಿಕಾರರಾಗಿಯೂ ಪರಿಗಣಿಸಲ್ಪಟ್ಟಿದ್ದರು. ಈ ಗುರಿಕಾರಿಮೆ ಇಂದು ಕೆಲವು ‘ಬುದ್ಧಿಜೀವಿಗಳು’ ಭಾವಿಸುವಂತೆ ‘ಯಜಮಾನ ಪದ್ಧತಿಯ’ ನಡವಳಿಕೆಯಾಗಿರಲಿಲ್ಲ. ಬದಲು ವ್ಯಕ್ತಿ ಸಾರ್ವಜನಿಕ ಸೇವಾಕ್ಷೇತ್ರದಿಂದ ತಪ್ಪಿಸಿಕೊಳ್ಳಲಾರದಂತೆ ಗೌರವದ ಹೆಸರು ನೀಡಿ ದೀಕ್ಷೆ ಕೊಟ್ಟು ಕಟ್ಟಿಹಾಕುವ ಯೋಚನಾಭರಿತ ಯೋಜನೆಯಾಗಿತ್ತು!

ಭೂತಾಲಯಗಳಲ್ಲಿ ಗುರಿಕಾರರಾಗಿ ದುಡಿಯುವ ಜನವೇ ಅವರವರ ಸಮಾಜದ ಎಲ್ಲಾ ಶುಭಾಶುಭಗಳ ಆಗುಹೋಗುಗಳ ಹೊತ್ತಿನಲ್ಲಿ ಮುಂದೆ ನಿಂತು ಎಲ್ಲಾ ಕೆಲಸ ಕಾರ್ಯಗಳ ಹೊರೆ, ಹೊಣೆ ಹೊತ್ತು ಆಗುಮಾಡಿಸಲು ದುಡಿಯಬೇಕಾಗುತ್ತಿತ್ತು. ಆಯಾಯ ಸಮಾಜದಲ್ಲಿ ಯಾವುದೇ ವಿವಾದಗಳಿದ್ದರೂ ಅವರೇ ತೀರ್ಮಾನಿಸಿ ಸರಿಪಡಿಸಿ ನಡೆಯಿಸಿಕೊಂಡು ಹೋಗಬೇಕಾಗುತ್ತಿತ್ತು. ಅಲ್ಲಿ ತೀರ್ಮಾನವಾಗದೆ ಹೋದ ನ್ಯಾಯಗಳು ಮಾತ್ರ ಭೂತಾರಾಧನೆಯ ಹೊತ್ತಿನಲ್ಲಿ ‘ಸತ್ಯದ ಸಾನ್ನಿಧ್ಯದಲ್ಲಿ’ ವಿಚಾರಣೆ ನಡೆದು ತೀರ್ಮಾನವಾಗುತ್ತಿದ್ದುವು. ಇದು ಕೊನೆಯ ತೀರ್ಮಾನ. ಇದಕ್ಕೆ ಜನ ಒಪ್ಪಿ ನಡೆಯುತ್ತಿದ್ದರು; ತಪ್ಪಿ ನಡೆಯುತ್ತಿರಲಿಲ್ಲ. ಹೀಗೆ ಭೂತಗಳು – ತುಳುವರು ನಂಬಿದ ಸತ್ಯಗಳು – ಸಾಮಾಜಿಕ ಸಂಪರ್ಕ ಮಾಧ್ಯಮ ಮಾತ್ರವಲ್ಲ ನ್ಯಾಯ ನಿರ್ಣಾಯಕರುಗಳೂ ಆಗಿ ಒಟ್ಟು ಸಮಾಜ ಸುವ್ಯವಸ್ಥಿತ ರೀತಿಯಲ್ಲಿ ನಡೆದು ಸಹೋದರತೆ, ಶಾಂತಿ, ಸಮಾಧಾನಗಳಿಂದ ಬಾಳಲು ದೊಡ್ಡ ರೀತಿಯಲ್ಲಿ ನೆರವಾದುವು.

ಮುಂದೆ ‘ಹೊಸ ನಂಬಿಕೆ’ಗಳನ್ನು ಹೊಂದಿದ, ತಮ್ಮದೇ ದೇವರುಗಳನ್ನು ಆರಾಧಿಸುವ ಜನ ತುಳುನಾಡಿಗೆ ಬಂದರು. ಅವರು ತಮ್ಮ ನಂಬಿಕೆ ನಡವಳಿಕೆಗಳನ್ನು ಇಲ್ಲಿ ಪ್ರಸಾರ ಮಾಡಿದರು. ಆದರೆ ತುಳು ಮಣ್ಣಿನಲ್ಲಿ ಮೊಳೆತು, ಚಿಗುರಿ, ಗಟ್ಟಿಯಾಗಿ ಬೇರುಬಿಟ್ಟು ಬೆಳೆದಿದ್ದ ಭೂತಾರಾಧನೆಯ ಪ್ರಭಾವದಿಂದ ಅವರಿಗೂ ತಪ್ಪಿಸಿಕೊಳ್ಳಲಿಕ್ಕೆ ಆಗಲಿಲ್ಲ. ಒಂದಲ್ಲ ಒಂದು ರೀತಿಯಿಂದ ಇವರೂ ತುಳುನಾಡಿನ ಈ ‘ಸತ್ಯಗಳನ್ನು’ ತಮ್ಮದಾಗಿ ಸ್ವೀಕರಿಸಿಕೊಂಡರು. ಅಥವಾ ಆ ಸತ್ಯಗಳೇ ತಮ್ಮ ನೆಲೆಗೆ ಬಂದ ಈ ‘ಅನ್ಯ’ರನ್ನು ತಮ್ಮ ಶಕ್ತಿವಿಶೇಷದಿಂದ ತಮ್ಮ ವರನ್ನಾಗಿಸಿಕೊಂಡು ತಮ್ಮ ಪ್ರಭಾವಲಯದಲ್ಲಿ ಬದುಕಗೊಟ್ಟವು ಎಂದೆನ್ನಬಹುದೇನೋ. ಇವರಲ್ಲಿ ಅಹಿಂಸೆಯ ಕಟ್ಟಾ ಆರಾಧಕರಾದ ಜೈನರನ್ನು ಮೊದಲಾಗಿ ಎತ್ತಿಹೇಳಬಹುದು. ಇವರು ಜಿಲ್ಲೆಯ ದೊಡ್ಡ ದೊಡ್ಡ ಭೂತಾರಾಧಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ನಿಂತು ಭೂತಾರಾಧನೆಯನ್ನು ನಡೆಯಿಸಿಕೊಂಡು ಬಂದರು. ಇಂದು ಕೂಡಾ ನಡೆಯಿಸಿಕೊಂಡು ಬರುತ್ತಿದ್ದಾರೆ. ಆ ನಂತರ ಬಂದ ಬ್ರಾಹ್ಮಣರೂ ಅಷ್ಟೆ. ಅವರಿಗೂ ತುಳುವರು ನಂಬಿದ ‘ಸತ್ಯಗಳ’ ಪ್ರಭಾವಲಯದಿಂದ ಪೂಣವಾಗಿ ತಪ್ಪಿಸಿಕೊಳ್ಳಲಿಕ್ಕೆ ಆಗಲಿಲ್ಲ. ಅಷ್ಟು ಶಕ್ತಿಶಾಲಿಯಾಗಿತ್ತು ತುಳುವರ ಆ ನಂಬಿಕೆಯ ನೆಲೆ; ಮತ್ತು ಅದರ ಕಳೆ!

ಈ ಸಂಕ್ರಮಣ ಕಾಲದಲ್ಲೇ ಎರಡು ಭಿನ್ನ ಸಂಸ್ಕೃತಿಗಳು ಪರಸ್ಪರ ಕೊಳುಕೊಡೆಯನ್ನು ಮಾಡಿಕೊಂಡುದನ್ನು ಕಾಣಬಹುದಾಗಿದೆ. ತುಳುನಾಡಿನ ಬಹಳಷ್ಟು ದೇವಾಲಯಗಳು ಮೊದಲು ಭೂತಾರಾಧನೆಯ ಕ್ಷೇತ್ರಗಳಾಗಿದ್ದವು. ಮುಂದೆ ಅಲ್ಲಿ ದೇವರುಗಳು ಎಡೆಪಡೆದು ಮೆಲ್ಲ ಮೆಲ್ಲನೆ ಪ್ರಧಾನ ಸ್ಥಾನವನ್ನು ಆಕ್ರಮಿಸಿಕೊಂಡುದನ್ನು ನಾವು ಗುರುತಿಸಬಹುದಾಗಿದೆ. ಜೊತೆಗೆ ಕೆಲವು ದೈವಗಳೇ ಸಂಸ್ಕೃತಿಕರಿಸಿಕೊಂಡು ದೇವರುಗಳಾದುದನ್ನು ಕಾಣಬಹುದಾಗಿದೆ. ಆದರೆ ಇಲ್ಲಿ ಎಲ್ಲೂ ದೈವಗಳನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲು ಯಾರಿಗೂ ಸಾಧ್ಯವಾಗಲಿಲ್ಲ ಎನ್ನುವುದು ಗಮಿನಿಸಬೇಕಾದ ಅಂಶ. ಅಷ್ಟು ಮಾತ್ರವಲ್ಲ ತುಳುನಾಡಿನ ಎಷ್ಟೋ ಕಡೆ ದೇವತಾರಾಧನೆಗಳು ಭೂತಾರಾಧನೆಯ ಅಂಶಗಳನ್ನು ತಮ್ಮದಾಗಿಸುವ ಮೂಲಕ ಬೆಳೆದು ಬಂದುದನ್ನು ಕಂಡುಕೊಳ್ಳಬಹುದು. ದೇವರ ದರ್ಶನ ಬಲಿ, ದೇವಸ್ಥಾನಗಳಲ್ಲಿಯ ದರ್ಶನಗಳು, ಅಲಂಕಾರದ ವಸ್ತು ಪರಿಕರಗಳು – ಇಲ್ಲೆಲ್ಲ ಭೂತಾರಾಧನೆಯ ಛಾಪು ಎತ್ತಿತೋರಿತ್ತದೆ. ಇದೇ ಹೊತ್ತಿಗೆ ಭೂತಾರಾಧನೆಯೂ ದೇವತಾರಾಧನೆಯ ಎಷ್ಟೋ ಅಂಶಗಳನ್ನು ಸ್ವೀಕರಿಸಿಕೊಂಡಿತು. ‘ತಂತ್ರ’ ಅವುಗಳಲ್ಲಿ ಮುಖ್ಯವಾದದು. ಈ ದಿಸೆಯಲ್ಲಿ ಆಳವಾದ ಅಧ್ಯಯನ ನಡೆಯಬೇಕಾಗಿದೆ. ಆಗ ಎರಡು ಸಂಸ್ಕೃತಿಗಳು ಹೇಗೆ ಸಂಘರ್ಷವಿಲ್ಲದೆ ಸೌಹಾರ್ದದಿಂದ ಕೊಳುಕೊಡೆಯ ಮೂಲಕ ಬೆರೆತು ಬಾಳಿದುವು ಎಂಬ ರೋಚಕ ಇತಿಹಾಸ ನಮ್ಮ ಮುಂದೆ ತೆರೆದುಕೊಂಡೀತು.

ಈ ಕುರಿತೇ ಎಸ್‌.ಕೆ. ರಾಮಚಂದ್ರರಾಯರು ತಮ್ಮ ಪ್ರಗಲ್ಭ ಕೃತಿ ‘ಮೂರ್ತಿಶಿಲ್ಪ ನೆಲೆ-ಹಿನ್ನೆಲೆ’ ಗ್ರಂಥದಲ್ಲಿ ಹೇಳಿದ್ದಾರೆ. ‘ಧರ್ಮಗಳ ಸಂಕ್ರಮಣ ಈ ಪ್ರದೇಶದಲ್ಲಿ (ತುಳುನಾಡಿನಲ್ಲಿ) ವಿಶೇಷವಾಗಿ ನಡೆದಿದೆ. ಸಂಕ್ರಮಣ ನಡೆದಿದ್ದರೂ ಸಂಯೋಗ ಸಹಯೋಗಗಳಂತೂ ಸ್ಪಷ್ಟವಾಗಿವೆ. ಪ್ರಾಚೀನ ಭೂತಾರಾಧನೆಯ ಪದರದ ಮೇಲೆ ಶೈವ, ಜೈನ, ವೈಷ್ಣವ, ಶಾಕ್ತ ಸಂಪ್ರದಾಯದ ವಿವರಗಳು ಹೇರಳವಾಗಿ ಮೂಡಿಕೊಂಡು ಬಂದುವು. ಆದರೆ ಯಾವ ಸಂಪ್ರದಾಯದ ಕೊಡುಗೆ ಎಷ್ಟು ಎಂಬುದಾಗಲೀ, ಯಾವ ದೇವತೆಯ ಹಿನ್ನೆಲೆ ನಿಖರವಾಗಿ ಏನು ಎಂಬುದಾಗಲೀ ಹೇಳುವುದು ಕಷ್ಟ.’

ಇಂದು ನಾಗರಿಕತೆ ನಾಗಾಲೋಟದಿಂದ ‘ಮುಂದೆ’ ಧಾವಿಸುತ್ತಿದೆ. ವಿಜ್ಞಾನ ತನ್ನ ವಿಶ್ವರೂಪದಲ್ಲಿ ಮೈದೋರಿದೆ. ಮಾನವ ಶಂಕರನ ಜಟಾಜೂಟದ ಚಂದ್ರನನ್ನು ಮುಟ್ಟಿ ಮೆಟ್ಟಿಯಾಯಿತು. ಇನ್ನು ಮುಂದಿನವು ಗ್ರಹಗಳಿಂದ ಗ್ರಹಗಳಿಗೆ ಸೇತುಕಟ್ಟಿ ಸಾಗಿಹೋಗುವ ದಿನಗಳು. ಮಂಗಳಲೋಕದ ಅಂಗಳದಲ್ಲಿ ಚೆಂಡಾಟವಾಡುವ ಕಾಲ ಹೆಚ್ಚು ದೂರವಿಲ್ಲ. ಜೊತೆಗೆ ಭಾರತದಲ್ಲೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಮಟ್ಟದ ವಿದ್ಯಾಭ್ಯಾಸ ಪಡೆಯುವ ಭಾಗ್ಯ ತುಳುನಾಡವರದಾಗಿದೆ. ಅಲ್ಲದೆ ತುಳುವರು ದೇಶವಿದೇಶಗಳನ್ನು ಸುತ್ತಿ ಬರುತ್ತಿದ್ದಾರೆ. ಇಂತಹ ದಿನಗಳಲ್ಲೂ ತುಳುವರ ಅತ್ಯಂತ ಪ್ರಾಚೀನ ನೆಲಗಳು ಅಲುಗಾಡದೆ ಗಟ್ಟಿಯಾಗಿ ನಿಂತಿವೆ ಎನ್ನುವುದು ವಿಚಾರಯೋಗ್ಯವಾದ ಸಂಗತಿ. ಇಂದು ಬೆಳೆದು ಬಲಿತ ತುಳುವರು ಕೂಡಾ ಆ ಹಳೆಯ ನಂಬಿಕೆಯ ನೆರಳಲ್ಲಿ ಹಾಯಾಗಿ ಹೆಚ್ಚಿನ ಮಾನಸಿಕ ತೊಳಲಾಟವಿಲ್ಲದೆ ಸುಖವಾಗಿ ಬಾಳುತ್ತಿದ್ದಾರೆ. ಹತ್ತಾರು ಬಗೆಯಿಂದ ಸಮಾಜವನ್ನು ಛಿದ್ರಗೊಳಿಸುವ ಈ ಕಾಲದ ಹಲವು ‘ಶಕ್ತಿ‘ಗಳ ನಡುವೆ ಕೂಡಾ ತುಳುವರ ಗ್ರಾಮಿಣ ಬದುಕು ಈ ಸತ್ಯಗಳ ಹಳೆಯ ಸೂತ್ರದಲ್ಲಿ ಸೊಗಸಾಗಿ ನೇಯ್ದುಕೊಂಡು ಒಂದಾಗಿ ನಡೆಯುತ್ತಿದೆ. ಅಲ್ಲೋ ಇಲ್ಲೋ ಇದಕ್ಕೆ ಅಪವಾದ ಇಲ್ಲವೆಂದಲ್ಲ.

ಸುದೀರ್ಘ ಕಾಲದಿಂದ ನಂಬಿದ ಈ ಬಗೆ, ನಡೆದು ಬಂದ ಈ ವ್ಯವಸ್ಥೆ ನೂರಕ್ಕೆ ನೂರು ದೋಷದೂರವಾದುದು ಎಂದು ಯಾರೂ ಹೇಳಲಾರರು. ಹಾಗೆಂದು ಇಪ್ಪತ್ತನೆಯ ಶತಮಾನದ ವೈಜ್ಞಾನಿಕ ಯುಗದಲ್ಲೇ ಹುಟ್ಟಿದ ನಂಬಿಕೆ, ವ್ಯವಸ್ಥೆಗಳಲ್ಲೇ ಸಂಪೂರ್ಣ ದೋಷದೂರವಾದುದು ಯಾವುದಿದೆ? ನಂಬಿಕೆಗಳು, ವ್ಯವಸ್ಥೆಗಳು ಇತಿಹಾಸ ಪೂರ್ವದ್ದಾಗಲೀ, ಇಪ್ಪತ್ತನೆಯ ಶತಮಾನದ್ದಾಗಲೀ ಎಲ್ಲೆಲ್ಲಿ ಸ್ವಾರ್ಥಿ ಜನರಿದ್ದರೋ ಅಲ್ಲೆಲ್ಲ ಲೋಪದೋಷಗಳು ಇದ್ದೇ ಇರುತ್ತವೆ. ಈ ಅಪವಾದಗಳೇ ಸಿದ್ಧಾಂತಗಳಾಗುವುದಿಲ್ಲ.

ಶ್ರದ್ಧೆ, ಭಕ್ತಿ, ಸೇವೆಗಳ ಸಮರ್ಪಣಾಭಾವದಿಂದ ತುಳುವರು ಶತಶತಮಾನಗಳ ಹಿಂದೆ ನಂಬಿ ನಡೆದ ‘ಸತ್ಯ’ಕ್ಕೆ ಶತಶತ ಪ್ರಣಾಮಗಳು.