ತುಳುನಾಡಿನ ಭೂತಾರಾಧನೆಯಲ್ಲಿ ಆದಿಮೂಲ ದೈವವಾಗಿ ಪ್ರಧಾನ ಸ್ಥಾನ ಪಡೆಯುವ ‘ಬೆರ್ಮೆರ್‌’ ಕುರಿತಾದ ತಳಸ್ಪರ್ಶಿ ಸಂಶೋಧನೆ ಇನ್ನೂ ನಡೆದಿಲ್ಲವೆಂದು ಹೇಳಬಹುದು. ‘ಬೆರ್ಮೆರ್‌’ ಮತ್ತು ‘ನಾಗಬ್ರಹ್ಮ’ ಎಂಬ ವೈದಿಕ ಮತ್ತು ದ್ರಾವಿಡ ಪದಗಳೊಡ್ಡಿದ ಗೊಂದಲವನ್ನು ಮೊದಲು ಪರಿಹರಿಸಿಕೊಳ್ಳಬೇಕು. ಸಂಸ್ಕೃತ ಪದವಾದ ‘ಬ್ರಹ್ಮ’ದ ದ್ರಾವಿಡ ರೂಪವೇ ‘ಬೆರ್ಮೆರ್’ ಎಂದು ಸುಲಭವಾಗಿ ನಿರ್ಣಯಿಸಲಾರೆವು. ದಕ್ಷಿಣ ಕನ್ನಡದಲ್ಲಿ ಆರಾಧನೆಗೊಳ್ಳುವ ಬ್ರಹ್ಮರು ಹಲವಾರು. ವೈದಿಕರ ಚತುರ್ಮುಖ ಬ್ರಹ್ಮ, ಜೈನರ ಯಕ್ಷಬ್ರಹ್ಮ, ತುಳುವರ ಭೂತಬ್ರಹ್ಮ, ನಾಗಬ್ರಹ್ಮರಲ್ಲದೆ ಬ್ರಹ್ಮಲಿಂಗೇಶ್ವರ ಎಂಬ ಹೆಸರಿನ ಶಿವನೂ ಇದ್ದಾನೆ.

ಬೆರ್ಮೆರ್‌ ಪದವು ಸಂಸ್ಕೃತ ಬ್ರಹ್ಮ ಪದದ ತದ್ಭವ ಅಥವಾ ಅಪಭ್ರಂಶವಾಗಿರಲಾರದೆಂದು ಕಾಣುತ್ತವೆ. ಬಿರ್ಮ, ಬಿರ್ಮಣ್ಣ, ಬಿರುಮ ಎಂಬವೂ ಈ ಪ್ರದೇಶದಲ್ಲಿ ಜನಪದರ ಸಾಮಾನ್ಯ ಹೆಸರುಗಳು. ತುಳುನಾಡ ಸಿರಿಯ ಕತೆಯಲ್ಲಿ ಆಕೆಯ ಅಜ್ಜನ ಹೆಸರು ಬಿರ್ಮಾಳ್ವ ಮತ್ತು ಪ್ರಧಾನ ದೈವ ಬೆರ್ಮೆರ್. ಬೆರ್ಮೆರ್‌ ಎಂಬುದು ಪೆರ್ಮೆಯನ್ನು ಸೂಚಿಸುವ ಪದವಾಗಿರಬಾರದೇಕೆ? ಇದಕ್ಕಾಗಿ ತುಳುನಾಡಿನ ಇತಿಹಾಸವನ್ನು ಅವಲೋಕಿಸಬೇಕು. ‘ಬೆರ್ಮೆರ್’ ಶಬ್ದದ ಅರ್ಥವನ್ನು ಕಂಡುಹಿಡಿಯಬೇಕು.

ಪ್ರಾಚೀನ ತುಳುನಾಡು ನಾಗರಲೋಕವೆಂದೂ, ನಾಗರೆಂಬ ಜನರು ಇಲ್ಲಿಯ ಮೂಲನಿವಾಸಿಗಳಾಗಿದ್ದರೆಂದೂ, ಅವರು ನಾಗಲಾಂಛನ ಧರಿಸುತ್ತಿದ್ದರೆಂದೂ Totem ಆಗಿ ನಾಗನನ್ನೇ ಆರಾಧಿಸುತ್ತಿದ್ದರೆಂದೂ ಸಂಶೋಧಕರ ಅಭಿಪ್ರಾಯ. ನಾಡಿನ ಉದ್ದಗಲಕ್ಕೆ ಹರಡಿರುವ ನಾಗನ ಕಲ್ಲುಗಳು, ಪ್ರಾಚೀನವಾದ ಕುಕ್ಕೆ ಸುಬ್ರಹ್ಮಣ್ಯ, ಬಳ್ಳಮಂಜ, ಕುಡುಪು ಮೊದಲಾದ ನಾಗ ದೇವಾಲಯಗಳೂ, ನಾಗಪ್ರೀತ್ಯರ್ಥವಾಗಿ ಆಚರಿಸುವ ನಾಗಮಂಡಲ, ಢಕ್ಕೆ ಬಲಿ, ಆಶ್ಲೇಷಾ ಬಲಿ ಮೊದಲಾದ ಆರ್ಯ ಆರ್ಯೇತರ ಸಾಂಸ್ಕೃತಿಕ ಮಹತ್ವವನ್ನುಳ್ಳ ಆರಾಧನಾ ಸಂಪ್ರದಾಯಗಳೂ ಈ ನಾಡಿನಲ್ಲಿ ನಾಗನಿಗೆಷ್ಟು ಪ್ರಾಧಾನ್ಯವಿದೆಯೆಂದು ಸ್ಪಷ್ಟಪಡಿಸುತ್ತವೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದ ನಾಗನಿಗೂ ಬೆರ್ಮರಿಗೂ ಅವರ ನಿವಾಸವೆನಿಸಿದ ಆಲಡೆಗೂ ಇರುವ ಸಂಬಂಧವನ್ನು ತಿಳಿಯಬೇಕು. ‘ಆಲಡೆ’ ಎಂದರೆ ಬೆರ್ಮೆರು ಪ್ರಧಾನ ದೈವವಾಗಿದ್ದು ನಾಗ, ನಂದಿಗೋಣ, ಲೆಕ್ಕೆಸಿರಿ, ಕ್ಷೇತ್ರಪಾಲ, ಪಂಜುರ್ಲಿ ಸೇರಿರುವ ಸಂಕೀರ್ಣ. ಕೆಲವು ಆಲಡೆಗಳಲ್ಲಿ ಚಿಕ್ಕುಹಾಯ್ಗುಳಿ ಮೊದಲಾದ ದೈವಗಳೂ ಸೇರಿರುತ್ತವೆ. ಆಲಡೆಯನ್ನು ಕನ್ನಡ ಪ್ರದೇಶದಲ್ಲಿ ಚಿತ್ತಾರಿಗಳೆನ್ನುತ್ತಾರೆ. ತುಳುಭಾಷೆಯನ್ನಾಡುವಲ್ಲಿ ಬ್ರಹ್ಮಜ್ಞಾನ ಬೆರ್ಮೆರೆ ಗುಂಡ (ಗುಡಿ) ಎಂದೂ ಹೇಳುವುದುಂಟು. It is abode of the Bhuthas, the original habitation of Bhuthas and Nagas ಎಂದು ಶಬ್ದಕೋಶದ ಅರ್ಥ. ಪಡುಬಿದ್ರಿ ನಾಗಪ್ರಧಾನ್ಯವನ್ನುಳ್ಳ ಬ್ರಹ್ಮಸ್ಥಾನ. ಇಲ್ಲಿ ಬ್ರಾಹ್ಮಣರಿಂದ ನಾಗದರ್ಶನ, ವೈದ್ಯರಿಂದ ಢಕ್ಕೆಬಲಿ ನಡೆಯುತ್ತದೆ. ಆರ್ಯ – ಆರ್ಯೇತರ ಆರಾಧನಾ ವಿಧಿಗಳು ಏಕತ್ರ ಕಂಡುಬರುತ್ತವೆ. ಪ್ರತಿಯೊಂದು ತುಳುವ ಕುಟುಂಬವೂ ಒಂದಲ್ಲ ಒಂದು ಆಲಡೆಯ ಸಂಬಂಧವನ್ನುಳ್ಳದ್ದು. ಇಲ್ಲಿ ಪಿತೃಪೂಜೆ, ವರ್ಷಾವಧಿ ತಂಬಿಲ, ಅಗೆಲು ನಡೆಸಿ ಭೂತಗಳನ್ನು ತೃಪ್ತಿಪಡಿಸುತ್ತಾರೆ. ತುಳುನಾಡಿನಲ್ಲಿರುವ ಅಸಂಖ್ಯ ನಾಗಬನಗಳಲ್ಲಿ ಇಂತಹ ಆಲಡೆಯ ದೈವಗಳನ್ನು ಅಲ್ಲಿನ ಪ್ರತೀಕದಿಂದ ಆರಾಧಿಸುತ್ತಾರೆ. ಕೇರಳದಲ್ಲಿ ನಾಗಬನಗಳನ್ನು ‘ಕಾವು’ ಎನ್ನುತ್ತಾರೆ. ನಾಗನ್‌ ಕಾವು, ಪಾಂಬನ್‌ ಕಾವು ಪ್ರಸಿದ್ಧವಾದ ನಾಗಸ್ಥಾನಗಳು. ತುಳುನಾಡಿನ ನಾಗಬನ – ಆಲಡೆ ಎಂಬುದು ಹೇಗೆ? ವೇದಗಳಲ್ಲಿ ಸರ್ಪಾರ್ಥದಲ್ಲಿ ನಾಗ ಶಬ್ದವಿಲ್ಲ. ಅಲ್ಲಿರುವುದು ‘ಅಹಿ’ ಶಬ್ದ. ಆದರೆ ಆರ್ಯರಲ್ಲೂ ಸರ್ಪಾರಾಧನೆ ಇದ್ದಿತೆಂಬ ಸೂಚನೆ ಸಿಗುತ್ತದೆ. ಗೋವಿಂದ ಪೈಯವರ ಸಂಶೋಧನೆಯಂತೆ ‘ನೀರಹಾವಿಗೆ’ ಸಂಸ್ಕೃತದಲ್ಲಿ ಅಲ ಎಂದೂ ತುಳುವಿನಲ್ಲಿ ವಿಷಕ್ಕೆ ಆಲ್, ಆಲಂ ಎಂದೂ ಸರ್ಪಕ್ಕೆ ‘ಆಲವಾಯಿ’ ಎಂದೂ ಪದಗಳು ದೊರೆಯುತ್ತವೆ. ಆದ್ದರಿಂದ ದ್ರಾವಿಡ ಮೂಲದ ಆಲಡೆ (ಆಲ+ಅಡೆ?)(ಎಡೆ)ನಾಗಬನ ಎಂದಾಗುತ್ತದೆ. ಕರಾವಳಿಯ ನಾಗರೆಂಬ ಕಾರಣ ನೀರಹಾವುಗಳೆಂಬ ಅರ್ಥದಲ್ಲಿ ಆಲ (ಆದಿಶೇಷನ ಸಂತತಿಯವರಾದುದರಿಂದ) ಆಲು ಎಂದರೆ ಸರ್ಪಗಳೆಂಬ ಅರ್ಥದಲ್ಲಿ ಆಲುವಾಯ್ ಇತ್ಯಾದಿ ಹೆಸರುಗಳಿಂದ ಆಳುವ ಆಳುಪ ರಾಜವಂಶಕ್ಕೆ ಹೆಸರಾಗಿರಬಹುದೇನೋ ಎನಿಸುತ್ತದೆ’’ ಎಂದಿದ್ದಾರೆ. ತುಳುನಾಡ ಪ್ರಾಚೀನ ಹೆಸರು ಆಳ್ವಖೇಡ, ಆಳುಪರ ನಾಡು. ಆಳುಪರ ಲಾಂಛನ ಐದು ಹೆಡೆಯ ಸರ್ಪವಾಗಿರುತ್ತದೆ. ನಾಗಾರಾಧಕರಾದ ಆಲೂಪರು ಸುಮಾರು ಕ್ರಿಸ್ತಶಕ ೭ನೆ ಶತಮಾನದಿಂದ ೧೪ನೆಯ ಶತಮಾನದವರೆಗೆ ತುಳುನಾಡನ್ನು ಆಳಿದರು. ಬೆಳ್ಮಣ್ಣಿನಲ್ಲಿ ದೊರೆತ…‘‘ಬ್ರಹ್ಮನಿಂದ ರಕ್ಷಿತವಾದ ಕುಳದಲ್ಲಿ ಅಭಿಮಾನವುಳ್ಳ ಶ್ರೀಮದಾಳುವರಸ….’’ ಎಂಬ ಆಳುಪರ ಶಾಸನವನ್ನು ಗುರುರಾಜ ಭಟ್ಟರು ಉಲ್ಲೇಖಿಸಿದ್ದಾರೆ. ಈ ಶಾಸನದ ಬ್ರಹ್ಮ ಎಂದರೆ ಬೆರ್ಮೆರು ಆಗಿರಬಹುದು. ನಾಗಪ್ರತಿಮಾ ವಿಚಾರದಲ್ಲಿ ಶ್ರೀ ಶಂಬಾ ಜೋಶಿಯವರು ‘‘ಭರಮ / ಬ್ರಹ್ಮ ಇವನು ಅಂತರಂಗದಲ್ಲಿ ನಾಗನೆ’’ (ಅದು ಹೇಗೆ?) ಎಂದಿದ್ದಾರೆ. ‘‘ಕರಾವಳಿಯಲ್ಲಿ ನಾಗಮಂಡಲ / ಢಕ್ಕೆ ಬಲಿಯನ್ನು ಹೋಲುವ ಬ್ರಹ್ಮಮಂಡಲ ಎಂಬ ಆಚರಣೆಯನ್ನು ನಡೆಸುತ್ತಾರೆ. ಇದು ಚಿತ್ತಾರಿಯ ನಾಗ ಹಾಗೂ ಬ್ರಹ್ಮನ ಆರಾಧನೆಯಲ್ಲಿ ಕಂಡುಬರುತ್ತದೆ. ಬ್ರಹ್ಮ ಮಂಡಲದಲ್ಲಿ ಚಿತ್ರಿಸುವ ಮುಂಡವಿಲ್ಲದ ಮಾನವ ಮುಖ ಮತ್ತು ನಾಗಚಿತ್ರದಿಂದ ಕರಾವಳಿಯ ಬೆರ್ಮ ನಾಗನೊಂದಿಗೆ ಸಮೀಕರಣಗೊಂಡ ಫಲೀಕರಣ ದೇವತೆ ಎಂದು ತಿಳಿಯಬಹುದು’’ (ಕಾಡ್ಯನಾಟ, ಎ.ವಿ. ನಾವಡ, ಗಾಯತ್ರಿ ನಾವಡ – ಪ್ರಸ್ತಾವನೆ).

ಬೆರ್ಮೆರು ಮತ್ತು ಸಿರಿ ಐತಿಹ್ಯದ ಕುರಿತು ಆಳವಾದ ಅಧ್ಯಯನ ನಡೆಸಿದ ಅಮೇರಿಕೆಯ ಜಾನಪದ ವಿದ್ವಾಂಸರು ಪೀಟರ್ ಕ್ಲಾಸ್ ತುಳು ಮೌಖಿಕ ಸಂಪ್ರದಾಯದ ಪಾಡ್ದನಗಳನ್ನೇ ವಿಶೇಷವಾಗಿ ಆಧರಿಸಿ ಅನೇಕ ಉಪಯುಕ್ತ ವಿವರಗಳನ್ನೀಯುತ್ತಾರೆ. ಆದರೆ ಅವರೆನ್ನುವಂತೆ ಆಳುವ + ಎಡೆ, ಆಳುವ ಜಾಗ ಎಂದರೆ ಆಲಡೆಯಲ್ಲ. ಕೋಟಿ ಚೆನ್ನಯ, ಸಿರಿ ಐತಿಹ್ಯ, ಸೊನ್ನೆ ಗಿಂಡೆ, ಮಾಯಗೆ ಮೈಪಗೆಯರ ಪಾಡ್ದನಗಳಲ್ಲಿ ಬೆರ್ಮರ ಕುರಿತಾದ ಮಹತ್ತ್ವದ ವಿಷಯ ಸಂಗ್ರಹಿಸಿದ್ದಾರೆ. ಕೋಟಿ ಚೆನ್ನಯರಿಗೆ ಬಿಳಿಯ ಕುದುರೆಯನ್ನೇರಿ ಬೆಳ್ಳಿಯ ಸತ್ತಿಗೆ ಹಿಡಿದ ಬ್ರಹ್ಮ (ಕೆಮ್ಮಲೆ ಬ್ರಹ್ಮ) ಪ್ರತ್ಯಕ್ಷನಾಗುತ್ತಾನೆ. ಈ ಕಲ್ಪನೆ ಗುಂಡದಲ್ಲಿದ್ದ ಬ್ರಹ್ಮ ವಿಗ್ರಹದಿಂದ ಬಂದುದಾಗಿದೆ. ಕುದುರೆಯನ್ನೇರಿದ, ಕೈಯಲ್ಲಿ ಖಡ್ಗವನ್ನು ಧರಿಸಿದ ರಾಜನಂತಿರುವ ಬೆರ್ಮೆರು ವಿಗ್ರಹಗಳು ಜೈನಧರ್ಮದ ಜೈನ ಬ್ರಹ್ಮನ ಪ್ರತಿರೂಪಗಳು. ಆದರೆ ಜೈನಬ್ರಹ್ಮ ಯಕ್ಷನ ಕಾಲ ಬಳಿ ಹುಲಿಯೂ ಒಂದು ಕೈಯಲ್ಲಿ ಮಾತುಲಂಗ ಫಲವೂ ಇರುತ್ತದೆ. ತುಳುವ ಬ್ರಹ್ಮನ ಮೂರ್ತಿಯಲ್ಲಿ ಇವೆರಡೂ ಲಾಂಛನಗಳಿಲ್ಲ.

ಕ್ರಿ.ಶ. ಎರಡನೆಯ ಶತಮಾನದಿಂದೀಚೆಗೆ ಜೈನಧರ್ಮ ಈ ನಾಡಿಗೆ ಕಾಲಿರಿಸಿದೆ. ಸುಮಾರು ೭-೮ನೆಯ ಶತಮಾನದಲ್ಲಿ ಜೈನ ಪಾಳೆಯಗಾರರೂ ಸಣ್ಣಪುಟ್ಟ ಒಡೆಯರೂ ಕಂಡುಬರುತ್ತಾರೆ. ಆಗಲೇ ಜೈನಧರ್ಮ ತುಳುನಾಡಿನಲ್ಲೆಲ್ಲ ಪ್ರಚಾರಗೊಂಡು ನೆಲೆಯೂರಿತ್ತು. ಬಾರಕೂರು, ವರಂಗಗಳಲ್ಲಿ ೧೨ನೆಯ ಶತಮಾದಲ್ಲೇ ಬಸದಿಗಳಾಗಿರಬೇಕು. ಶೀತಲ ತೀರ್ಥಂಕರನ ಯಕ್ಷನಾದ ಬ್ರಹ್ಮನನ್ನು ಪಾರ್ಶ್ವನಾಥ ತೀರ್ಥಂಕರನ ಯಕ್ಷಿ ಪದ್ಮಾವತಿಯನ್ನು ಐಹಿಕ ಆಕಾಂಕ್ಷೆಗಳ ಈಡೇರಿಕೆಗಾಗಿ ಬಸದಿಗಳಲ್ಲೂ ಪ್ರತ್ಯೇಕವಾದ ಗುಡಿಗಳಲ್ಲೂ ಸ್ಥಾಪಿಸಿದ್ದರು. ಬಂಗವಾಡಿಯ ಶ್ರವಣಗುಂಡ, ಬಾರಕೂರಿನ ಮಹಿಷಾಸುರ ಗುಡಿ, ನೆಲ್ಲಿಕಾರು ಮತ್ತು ಮೂಡಬಿದಿರೆಯ ಅನೇಕ ಬಸದಿಗಳಲ್ಲಿ ಕಲ್ಲಿನ ಬ್ರಹ್ಮ ಯಕ್ಷನ ವಿಗ್ರಹಗಳಿವೆ. ಈ ವಿಗ್ರಹಗಳ ವೈಶಿಷ್ಟ್ಯವೆಂದರೆ ಬ್ರಹ್ಮನು ಕುದುರೆ ಸವಾರ, ಕುದುರೆಯ ಕಾಲಡಿ ಹುಲಿಯ ಲಾಂಛನವಿದೆ; ಬ್ರಹ್ಮನ ಒಂದು ಕೈಯಲ್ಲಿ ಖಡ್ಗ ಇನ್ನೊಂದರಲ್ಲಿ ಮಾತಲಂಗ ಫಲವಿದೆ. ಹುಲಿ ಮತ್ತು ಫಲವಿರಹಿತವಾದ ವಿಗ್ರಹಗಳನ್ನು ತುಳುಬ್ರಹ್ಮನ ವಿಗ್ರಹಗಳೆಂದು ಸುಲಭವಾಗಿ ಗುರುತಿಸಬಹುದು. ಇವೆಲ್ಲ ಕಂಚಿನ ಮೂರ್ತಿಗಳು ಕೋಟಿ ಚೆನ್ನಯರ ಐತಿಹ್ಯದ ಕಾಲಕ್ಕೇ ಇಂಥ ವಿಗ್ರಹಗಳು ಗುಂಡಗಳಲ್ಲಿರಬಹುದಾದ ಸಾಧ್ಯತೆ ಇದೆ.

‘‘ಢಕ್ಕೆ ಬಲಿಯಲ್ಲಿ ಬಿಡಿಸಲಾದ ಚಿತ್ರವನ್ನು ‘ಬ್ರಹ್ಮಯಕ್ಷ’ನೆನ್ನುತ್ತಾರೆ. ಇವನು ವೈದಿಕರ ಚತುರ್ಮುಖ ಬ್ರಹ್ಮನಲ್ಲ. ತುಳುವರು ಹೇಳುವ ಬೆರ್ಮೆರ್ – ಇದನ್ನು ಸಂತಾನದ ಅಧಿದೇವತೆ ಎಂದು ಹೇಳಲಾಗುತ್ತದೆ. ಆದರೆ ಮಂಡಲದಲ್ಲಿ ಹಾಡಿ ಕುಣಿವ ವೈದ್ಯರಿಗೆ ಈ ಬ್ರಹ್ಮ ಚತುರ್ಮುಖ ಬ್ರಹ್ಮನೆ’’ (ವೈದ್ಯರ ಹಾಡುಗಳು, ಎ.ವಿ.ನಾವಡ).

ಕರವು ಎಂಟು ನಿಮಗೆ ಶಿರವು ನಾಲ್ಕು
ಹಿರಿದಪ್ಪಂತ ದೇಹ ಬ್ರಹ್ಮರಾಯರೆ
ಹರಿದ ತಲೆ ನಿಮಗೆ ಮುರಿದ ಮೀಸೆ -(ವೈದ್ಯರ ಹಾಡು ಪುಟ ೧೦)

ಹಾಗೆಯೆ,

ಕಾಶ್ಮೀರದಿಂದ ಹೊರವಂಟಂತವರು
ಹಾರುಕುದ್ರೆಯನ್ನೇ ಏರಿಕೊಳ್ಳುವಂಥವರು -(ವೈದ್ಯರ ಹಾಡು ಪುಟ ೪)

– ಇದು ಜೈನ ಬ್ರಹ್ಮನ ವರ್ಣನೆ ಎಂಬುದು ಸ್ಪಷ್ಟ. ಅವನನ್ನು ಗೆಜ್ಜೆಯ ಬ್ರಹ್ಮ, ಉರಿಬ್ರಹ್ಮ, ತ್ಯಾಗದ ಬ್ರಹ್ಮ, ಗುಂಡದ ಬ್ರಹ್ಮ, ಬೆಟ್ಟದ ಬ್ರಹ್ಮ, ಜಡೆಬ್ರಹ್ಮ, ಕೊಡೆಬ್ರಹ್ಮ ಮೊದಲಾದ ಹತ್ತು ಹಲವು ಹೆಸರುಗಳಿಂದ ಕರೆಯುತ್ತಾರೆ. ಜೈನ ಯಕ್ಷದಲ್ಲಿ ಧರಣೇಂದ್ರ ಮತ್ತು ಬ್ರಹ್ಮ ಅತ್ಯಂತ ಜನಪ್ರಿಯರು. ಧರಣೇಂದ್ರ ನಾಗರೂಪಿ. ಪಾರ್ಶ್ವನಾಥನ ರಕ್ಷಣೆಗೆ ಹೆಡೆ ಬಿಚ್ಚಿದವನು. ಧರಣೇಂದ್ರನೆಂಬ ನಾಗ ಮತ್ತು ಬ್ರಹ್ಮ ಎಂಬ ಜೈನ ಯಕ್ಷರನ್ನು ನಾಗಬ್ರಹ್ಮರೆಂದು ಪರಭಾವಿಸುವ ಸಾಧ್ಯತೆಯೂ ಇದೆ. ಯಕ್ಷ ಯಕ್ಷಿಯರ ಪೂಜೆ ತಾಂತ್ರಿಕ ರೀತಿಯಲ್ಲಿ ನಡೆಯುವಂಥದ್ದು. ನಾಗಮಂಡಲ, ಢಕ್ಕೆ ಬಲಿ / ಬ್ರಹ್ಮ ಮಂಡಲಗಳು ತಾಂತ್ರಿಕ ವಿಧಾನದಲ್ಲೇ ಜರಗುತ್ತವೆ. ಆದರೆ ಅಲ್ಲಲಿ ಜೀವಿತವಾದ (animistic) ಆಚರಣೆಯಿಲ್ಲ. ‘‘ಯಕ್ಷ ಯಕ್ಷಿಯರು ಎಂಬ ಗ್ರಂಥದಲ್ಲಿ ಹಂ.ಪ. ನಾಗರಾಜಯ್ಯ ಅವರು ಬ್ರಹ್ಮ ಯಕ್ಷನ ಮೂರ್ತಿ ಲಕ್ಷಣಗಳನ್ನು ಹೀಗೆ ಕೊಟ್ಟಿರುತ್ತಾರೆ. ತುರಗವಾಹನ, ಅಷ್ಟಬಾಹು, ಚತುರ್ಮುಖನೆಂದು ಶಾಸ್ತ್ರಕೃತಿಗಳಲ್ಲಿ ವರ್ಣಿತನಾಗಿದ್ದರೂ ದ್ವಿಬಾಹು ಹಾಗೂ ಏಕವಕ್ತ ಮೂರ್ತಿಗಳೇ ದಕ್ಷಿಣ ಕನ್ನಡದಲ್ಲಿ ಕಂಡುಬರುತ್ತವೆ. ಮಾತುಲಂಗ ಸಂತಾನಭಾಗ್ಯ ಸೂಚಕ, ಶ್ವೇತಾಂಬರ ದಿಗಂಬರ ಎರಡೂ ಪಂಥಗಳ ಚತುರ್ಮುಖ, ಅಷ್ಟಭುಜ ಮತ್ತು ಹಲವು ಆಯುಧ ವಿಕೋಪಗಳನ್ನು ಧರಿಸಿದ ಬ್ರಹ್ಮನ ವಿಕೋಪಗಳು ಜೈನಶಾಸ್ತ್ರ ಗ್ರಂಥಗಳಲ್ಲಿವೆ.

ಸುಮಾರು ೧೬೨೩ರಲ್ಲಿ ದಕ್ಷಿಣ ಕನ್ನಡದ ಸಂಚಾರ ಕೈಗೊಂಡ ಇಟೆಲಿ ದೇಶದ ಪ್ರವಾಸಿ ಪಿಯೊತ್ರೊದೆಲ್ಲಾವೆಲ್ಲೆ ಎಂಬವನು ಉಳ್ಳಾಲದ ರಾಣಿಯನ್ನು ಕಾಣಲು ಹೋದ ಸಂದರ್ಭದಲ್ಲಿ ಅವನಿತ್ತ ಪ್ರವಾಸದ ವಿವರ ಹೀಗಿದೆ (ಪ್ರವಾಸಿ ಕಂಡ ದಕ್ಷಿಣ-ಎಸ್.ಎಲ್.ನಾಗೇಗೌಡ) ‘‘ಊರಿನ ಕೊನೆಯಲ್ಲಿ ಗುಡ್ಡದ ಮೇಲಿದ್ದ ‘ನಾರಾಯಣ’ ಎಂಬ ದೇವಸ್ಥಾನ ನೋಡಲು ಹೋದೆ. ಮಾಡಿಗೆ ತೆಂಗಿನ ಸೋಗೆ ಹೊದಿಸಿದ್ದರು. ಮರದ ಹಲಗೆಗಳನ್ನು ಜೋಡಿಸಿ ಕಟ್ಟಿದ ಗುಡಿ ಇದು. ಇದನ್ನು ರಾಣಿ ಕಟ್ಟಿಸಿದಳಂತೆ. ಇದರೆ ಒಳಗೆ ಭೂತ (devil) ವಿಗ್ರಹವಿತ್ತು… ಬ್ರಾಹ್ಮಣ ದುಬಾಶಿ ಭೂತಕ್ಕೆ ಹೆದರಿ ದೂರ ನಿಂತುಬಿಟ್ಟ… ನಾನು ಜೀಸಸ್ ಕ್ರೈಸ್ತನ ಧ್ಯಾನ ಮಾಡುತ್ತಾ ಗುಡಿಯ ಬಾಗಿಲು ತೆಗೆದು ಒಳಕ್ಕೆ ಹೋದೆ. ವಿಗ್ರಹ ಬಿಳಿಯ ಕಲ್ಲಿನದು. ಒಂದು ಆಳು ಪ್ರಮಾಣಕ್ಕಿಂತ ದೊಡ್ಡದು. ಅದಕ್ಕೆ ಬಣ್ಣ ಹಚ್ಚಿ ಸುಂದರ ಯುವಕನಂತೆ ಕಾಣುವ ಹಾಗೆ ಮಾಡಿದ್ದರು. ತಲೆಯ ಮೇಲೆ ಕಿರೀಟವಿತ್ತು. ನಾಲ್ಕು ಕೈಗಳಿದ್ದು ವಿಗ್ರಹದ ಕಾಲುಗಳ ಮಧ್ಯೆ ಉದ್ದನೆಯ ಗಡ್ಡ ಬಿಟ್ಟ ಬೆತ್ತಲೆಯ ಮನುಷ್ಯನ ವಿಗ್ರಹವಿತ್ತು. ಅದರ ಕೈಗಳು ನೆಲಕ್ಕೆ ಊರಿದ್ದುವು ಪ್ರಾಣಿಯೊಂದು ನಡೆಯುವ ರೀತಿಯಲ್ಲಿ. ಇದರ ಮೇಲೆ ಭೂತ ಕುಳಿತು ಸವಾರಿ ಮಾಡುತ್ತಿರುವಂತೆ ಕಾಣುತ್ತಿತ್ತು. ರಾಣಿ ಇಲ್ಲಿ ಗುಡಿ ಕಟ್ಟಿಸಿ Brimore ಎಂಬ ವಿಗ್ರಹವನ್ನು ಸ್ಥಾಪನೆ ಮಾಡಿದ್ದಾಳೆ. Brimore ಎಂಬ ಭೂತ ಬಹಳ ದೊಡ್ಡ ಭೂತವಂತೆ. ಸಾವಿರ ಭೂತಗಳಿಗೆ ಒಡೆಯನಂತೆ. ನನ್ನ ಈ ಊಹೆ ಸರಿ ಎಂದು ಆಮೇಲೆ ಇಲ್ಲಿಯವರು ಹೇಳಿದರು. ಈ ವಿಗ್ರಹಕ್ಕೆ ‘ಬುತೊ’ (Buto -ಭೂತ) ಎಂದು ಹೆಸರು’’.

‘‘ಗುಡಿಯೊಳಗೆ ಇದ್ದುದನ್ನೆಲ್ಲಾ ನೋಡಿ ವಿಗ್ರಹದ ಮುಖದ ಮೇಲೆ ಹಲವಾರು ಸಲ ಉಗುಳಿ ಹಿಂದಿರುಗಿ ಬಂದೆ. ಪುಕ್ಕಲು ಬ್ರಾಹ್ಮಣನನ್ನು ಹಂಗಿಸಿದೆ. ನನ್ನ ಧರ್ಮದ ದೊಡ್ದದೋ ಅಲ್ಲವೕ ಎಂಬುದನ್ನು ನೀನು ನೋಡಬೇಕಾಗಿತ್ತು ಎಂದು ಹೀಯಾಳಿಸಿದೆ. ಭೂತ ತನಗೇನೂ ಮಾಡಲಿಲ್ಲವೆಂದು ಹೇಳಿದೆ’’. ಪ್ರವಾಸಿ ಕಂಡ ಭೂತ ಜೈನಬ್ರಹ್ಮನಾಗಿರದೆ ಬೆರ್ಮೆರು ಆಗಿದ್ದಿರಬೇಕು. ಮುಂಗಾಲು ಮಡಚಿದ ಓಟದ ಕುದುರೆಯನ್ನು ಕಂಡು ಮನುಷ್ಯ ಪ್ರಾಣಿಯೆಂದು ಭ್ರಮಿಸಿರಬಹುದು. ಗುಡಿ ಕಟ್ಟಿಸಿದಾಕೆ ಜೈನರಾಣಿ ಅಬ್ಬಕ್ಕದೇವಿ. ವಿಗ್ರಹ ಜೈನಬ್ರಹ್ಮನದ್ದಾಗಿದ್ದರೆ ಅದಕ್ಕೆ ಭೂತದ ಗುಡಿ ಎಂಬ ಹೆಸರು ಬರುತ್ತಿರಲಿಲ್ಲ. ಬೆರ್ಮೆರಿಗೆ ಮೊದಲೆಲ್ಲ ಜೈನಬ್ರಹ್ಮನ ಲಕ್ಷಣದಂತೆ ಚತುರ್ಭುಜಗಳಿದ್ದಿರಬಹುದು.

ಬೆರ್ಮೆರು ಮತ್ತು ನಾಗಬ್ರಹ್ಮರ ಕುರಿತಾದ ತಾತ್ವಿಕ ವಿಚಾರಗಳ ಕೊರತೆಯಿಂದ ನಾವೊಂದು ಸಿದ್ಧಾಂತಕ್ಕೆ ಬರಲಾರೆವು. ಆದರೆ ಇವರಿಬ್ಬರೂ ಬೇರೆ ಬೇರೆ ದೈವಗಳೆಂಬುದಕ್ಕೆ ಪಾಡ್ದನಗಳಲ್ಲಿ ಒಂದು ಸೂಚನೆ ಸಿಕ್ಕುತ್ತದೆ. ಸಿರಿಯ ಐತಿಹ್ಯದ ಪಾಡ್ದನಗಳಲ್ಲಿ ಬಿರ್ಮಾಳ್ವನು ಸಂತಾನಾಪೇಕ್ಷೆಯಿಂದ ಲಂಕೆ ಲೋಕನಾಡ ಬೆರ್ಮರನ್ನು ಬೇಡುತ್ತಾನೆ. ಆಗ ಭಿಕ್ಷುಕ ವೇಷದಲ್ಲಿ ಬಂದ ಬೆರ್ಮೆರ್‌ಲಂಕೆ ಲೋಕನಾಡಿನ ಪಾಳುಬಿದ್ದ ಬೆರ್ಮೆರು ಗುಡಿಯ ಜೀರ್ಣೋದ್ಧಾರ ಮಾಡಿಸಿದರೆ ಆಳ್ವನ ಇಷ್ಟಾರ್ಥ ಪೂರೈಸುತ್ತದೆ ಎನ್ನುತ್ತಾನೆ. ಗುಡಿಯನ್ನು ಕಟ್ಟಿಸಿದ ಮೇಲೆ ಆಳ್ವನ ಪ್ರಾರ್ಥನೆಗೆ ಪಾತ್ರಿಯ ಮೈಮೇಲೆ ಆವೇಶ ಬಂದು ಬೆರ್ಮೆರು ‘‘ಇಂದು ನಿನಗೆ ನಾನೂ ನಾಗಬ್ರಹ್ಮನೂ ಸೇರಿ ಸಂತಾನವನ್ನು ಕೊಡುತ್ತೇವೆ. ಹೊದೆದ ಬಟ್ಟೆಯನ್ನು ಬಿಡಿಸಿ ಅದರೊಳಗೆ ಸ್ವೀಕರಿಸು’’ ಎಂದು ವರವನ್ನು ನೀಡುತ್ತಾನೆ. ಇದರಿಂದ ಬೆರ್ಮರು ಮತ್ತು ನಾಗಬ್ರಹ್ಮರು ಬೇರೆ ಬೇರೆ ದೈವಗಳೆಂದು ಸ್ಪಷ್ಟವಾಗುತ್ತದೆ. ದೈವ ಸಂಕೀರ್ಣದಲ್ಲಿ ಬೆರ್ಮರಿಗೆ ಪರಮಶ್ರೇಷ್ಠ ಸ್ಥಾನ. ಸಿಂಧೂ ಕಣಿವೆಯ ಉತ್ಖನನದ್ಲಲಿ ದೊರೆತ, ಪಶುಪತಿಯ ಚಿತ್ರದ ಬಿಲ್ಲೆಯಲ್ಲಿ ಕೋಡುಗಳುಳ್ಳ ಪದ್ಮಾಸನಸ್ಥ ಮೂರ್ತಿ, ಅದರ ಸುತ್ತಲೂ ಗೂಳಿ ಮೊದಲಾದ ಪ್ರಾಣಿವರ್ಗ ಇದ್ದುದನ್ನು ಕಾಣಬಹುದು. ಅದರಂತೆಯೇ ಬೆರ್ಮರು ಪ್ರಧಾನ ಸ್ಥಾನದಲ್ಲಿದ್ದು ಮುಂಭಾಗದಲ್ಲಿ ಲೆಕ್ಕೆಸಿರಿ, ಚಿಕ್ಕು ಮೊದಲಾದ ಹೆಣ್ಣು ದೈವಗಳು, ಎದುರು ಪಕ್ಕದ ಎರಡು ಬದಿಗಳಲ್ಲಿ ನಾಗ, ನಂದಿಗೋಣ, ಕ್ಷೇತ್ರಪಾಲ, ಪಂಜುರ್ಲಿ ಮೊದಲಾದ ದೈವಗಳ ಸ್ಥಾನ ನಿರ್ದೇಶಿಸಿ ಮಾಯ ಲೋಕದ ಯಜಮಾನ ಬೆರ್ಮರ ಸ್ಥಾನ ಸಂಶೋಧಕರಿಗೆ ಉತ್ತಮ ಮಾರ್ಗದರ್ಶನವಿತ್ತಿದ್ದಾರೆ (ತುಳುವ ದರ್ಶನ). ಅವರ ಸಂಶೋಧನೆ kinship ಮತ್ತು ರಾಜ ಉಪಾಸನಾ ಪದ್ಧತಿಯ ಜಾಡಿನಲ್ಲಿ ಮುಂದುವರಿಯುತ್ತದೆ. ಈ ವಿಷಯ ಇಲ್ಲಿ ಅಪ್ರಸ್ತುತ.

ಬೆರ್ಮರ್ ಮತ್ತು ನಾಗಬ್ರಹ್ಮ ಒಟ್ಟಿನ ಮೇಲೆ ಪ್ರತ್ಯೇಕ ಎರಡು ದೈವಗಳಾಗಿದ್ದು ಬೆರ್ಮರ ಒಡೆತನದಲ್ಲಿ ದೈವ ಸಾಮ್ರಾಜ್ಯ ನಡೆಯುತ್ತದೆ. ಸಂತಾನಭಾಗ್ಯವನ್ನು ಅನುಗ್ರಹಿಸುವ ಕುಷ್ಠ ಮೊದಲಾದ ದುಷ್ಟರೋಗಗಳನ್ನು ನಿವಾರಿಸುವ ಶಕ್ತಿಯೆಂದು ನಾಗನನ್ನು ಆರಾಧಿಸುತ್ತಾರೆ. ಅವನು ನಾಗಬ್ರಹ್ಮ ಎನಿಸಿದರೆ ಅವನ ಸ್ವರೂಪವೇನು? ನಾಗ ಮತ್ತು ಬ್ರಹ್ಮ ಎಂಬ ದ್ರಾವಿಡ – ಆರ್ಯ ಪದಗಳ ಸಂಯೋಜನೆಯಿಂದ ಉಂಟಾದ ಸಂಯುಕ್ತ ಪದವು ನಂದಿಗೋಣ ಪದದಂತೆ. ಕ್ಷೇತ್ರಪಾಲ, ರಕ್ತೇಶ್ವರಿ ಮೊದಲಾದ ದ್ರಾವಿಡರದಲ್ಲವಾದ ದೈವಗಳು ಆಲಡೆಯನ್ನು ಸೇರಿದಂತೆ ಸಂಸ್ಕೃತದ ಶಬ್ದಗಳೂ ಸೇರಿ ದೈವಗಳ ಹೆಸರುಗಳು ಕೂಡಾ ಆರ್ಯೀಕರಣಗೊಂಡವು. ಶುದ್ಧ ದ್ರಾವಿಡ ಮೂಲದ ಪಂಜುರ್ಲಿಯೊಂದೇ ತನ್ನ ಪೂರ್ವರೂಪವನ್ನು ಉಳಿಸಿಕೊಂಡಿತು (ವಾರಾಹಿಯಾಗಲಿಲ್ಲ).

ನಾಗಾರಾಧನೆಯನ್ನು ಜಾಗತಿಕ ನೆಲೆಯಲ್ಲಿ ಪರಿಶೀಲಿಸಿದಾಗ ಸರ್ವತ್ರ ನಾಗಶಿಲ್ಪಗಳು ಅರ್ಧಮನುಷ್ಯಾಕೃತಿಯವುಗಳಾಗಿ ಕಂಡುಬರುತ್ತವೆ. ಗ್ರೀಸ್ ದೇಶದಲ್ಲಂತೂ ನಾಗನಿಲ್ಲದೆ ರಾಜತ್ವವಿಲ್ಲವೆನ್ನಬಹುದಾದಷ್ಟು ರಾಜರಾಣಿಯರ ನಿಕಟವರ್ತಿಗಳು. ನಾಗರು – ಭೌದ್ಧ ಕಾಲಾನಂತರ ನಾಗಯಕ್ಷ ನಾಗಯಕ್ಷಿ – ಹೀಗೆ ಅನೇಕಾನೇಕ ಹೆಸರುಗಳಲ್ಲಿ ನಾಗವಿಗ್ರಹಗಳು ಕಂಡುಬರುತ್ತವೆ. ಜೈನರ ಬಸದಿಗಳಲ್ಲೂ ನಾಗವಿಗ್ರಹಗಳಿಲ್ಲದೆ ಇಲ್ಲೇ ತುಳುವರ ನಾಗಬ್ರಹ್ಮನಂಥ ವಿಗ್ರಹಗಳು ಬೇರೆಡೆ ಕಾಣಸಿಗುವುದರಿಂದ ಇವು ಅಪೂರ್ವ ಶಿಲ್ಪವೇನೂ ಅಲ್ಲ. ಪಾಶ್ಚಾತ್ಯರು ನಾಗನನ್ನು ಫಲೀಕರಣ ದೇವತೆ ಎಂದು ಮಾತ್ರ ತಿಳಿಯುತ್ತಾರೆ. ದುಷ್ಟರೋಗ, ಅಂಧತ್ವ ನಿವಾರಕನಾಗಿ, ಕುಂಡಲಿನೀ ಶಕ್ತಿಯ ಸಂಕೇತವಾಗಿ, ನಾಗ ಆತ್ಮೋತ್ಕರ್ಷಕ್ಕೆ, ಮಾನವನ ಜೀವನದ ಪರಿಶುದ್ಧತೆಗೆ ಸಂಕೇತನಾಗಿದ್ದಾನೆ. ನಾಗ ಕೇವಲ ಹರಿದಾಡುವ ಸರೀಸೃಪವಾಗಿರದೆ ಗೂಢವಾದ ಯಾವುದೋ ಶಕ್ತಿಯ ಪ್ರತೀಕನಾಗಿರಬೇಕು. ನಾಗನಿಗೆ ಬ್ರಾಹ್ಮಣರೇ ಅರ್ಚಕರು, ದ್ರಾವಿಡ – ಆರ್ಯ ಎರಡೂ ಜನಾಂಗಗಳಿಗೆ ಆರಾಧ್ಯನಾದವನು ನಾಗ.

ತುಳುವರ ಆಲಡೆಗಳು ನಾಗಬನಗಳಾಗಿಯೇ ಉಳಿಯದೆ ಕಾಲಾನುಕ್ರಮದಲ್ಲಿ ಆರ್ಯೀಕರಣಗೊಂಡುವೆಂಬುದಕ್ಕೆ ಕವತ್ತಾರು, ನಂದಳಿಕೆ, ಹಿರಿಯಡ್ಕದ ಆಲಯಗಳೇ ಸಾಕ್ಷಿ. ಪ್ರಧಾನ ದೇವತೆ ಬೆರ್ಮರು ಸ್ಥಾನವನ್ನು ಮಹಾಲಿಂಗೇಶ್ವರ ಮತ್ತು ವೀರಭದ್ರರು ಆಕ್ರಮಿಸಿದ ಉದಾಹರಣೆ. ಈ ಮೇಲಿನ ದೇವಾಲಯಗಳಲ್ಲಿ ಸಿಗುತ್ತದೆ. ಈ ಮೂರು ಸ್ಥಳಗಳಲ್ಲಿ ವರ್ಷಾವಧಿ ಸಿರಿಜಾತ್ರೆ ನಡೆಯುವುದು ಬೆರ್ಮರ ಸನ್ನಿಧಿಯಲ್ಲೇ. ಬೆರ್ಮರಿಗೆ ಮತ್ತು ಸಿರಿಗೆ ಪ್ರತ್ಯೇಕ ಗುಂಡಗಳಿದ್ದರೂ ಪ್ರಧಾನ ದೇವತೆಗಳಿಗೇ ರಥೋತ್ಸವ ನಡೆಯುತ್ತದೆ. ಹಿರಿಯಡ್ಕ ಹಿರಿಯ ಆಲಡೆ, ಸಿರಿಗಳೊಡನೆ ಭೂತಬ್ರಹ್ಮ, ಆದಿಬ್ರಹ್ಮ, ಚತುರ್ಮುಖ ಬ್ರಹ್ಮನ ಗುಡಿಗಳಿದ್ದು ವೈದಿಕ ಮತಾಚರಣೆಯ (ಜೊತೆಯಾಗಿ) ಸಂವಾದಿಯಾಗಿ ಬೆರ್ಮರು ಮತ್ತು ಅವನ ಪರಿವಾರದ ಆರಾಧನೆ, ಜಾತ್ರೆ ನಡೆದು ಬಂದಿರುವುದು ಈ ನಾಡಿನ ವೈಶಿಷ್ಟ್ಯ. ತುಳುನಾಡ ಸಿರಿಯ ಜನನದಿಂದ ಹಿಡಿದು ಮುಂದಿನ ಮೂರು ತಲೆಮಾರುಗಳ ಅಂತ್ಯದವರೆಗಿನ ಆಗುಹೋಗುಗಳಲ್ಲಿ ಪ್ರಧಾನ ಸೂತ್ರಧಾರನಾದವನು ಬೆರ್ಮರು. ತುಳುವರ ಕುಟುಂಬ ವ್ಯವಸ್ಥೆ ವೈಯುಕ್ತಿಕವಾದ ಸದಾಚಾರ, ಸತ್ಯ, ನೀತಿಯ ಬದುಕಿಗೆ ಆಧಾರ. ಕೆಡುಕನ್ನು ನಿಯಂತ್ರಿಸುವ ಶಕ್ತಿ ಬೆರ್ಮರು ಆಗಿರುತ್ತಾನೆ.

ಆಕರಸೂಚಿ

೧. ಕಿಲ್ಲೆ ಎನ್.ಎಸ್., ೧೯೫೪, ಪ್ರಾಚೀನ ತುಳುನಾಡು

೨. ಕೇಶವ ಕೃಷ್ಣ ಕುಡುವ, ೧೯೪೮, ದಕ್ಷಿಣ ಕನ್ನಡದ ಇತಿಹಾಸ (ತುಳುವ ಚರಿತ್ರೆ)

೩. ಕೃಷ್ಣ ಭಟ್‌ ಅಡ್ಯನಡ್ಕ (ಸಂ), ೧೯೭೭, ಸುದರ್ಶನ-

೪.ಕೃಷ್ಣ ಭಟ್‌ ಎಚ್‌., ೧೯೯೫, ಗೋವಿಂದ ಪೈ ಸಂಶೋಧನ ಸಂಪುಟ

೫. ಗಣಪತಿ ರಾವ್‌ಐಗಳ್‌, ೧೯೨೪, ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ

೬. ಪೀಟರ್‌ಕ್ಲಾಸ್, ೧೯೮೭, ತುಳುವ ದರ್ಶನ (ಅನು. ಎ.ವಿ. ನಾವಡ, ಸುಭಾಶ್ಚಂದ್ರ)

೭. ನಾಗರಾಜಯ್ಯ ಹಂ.ಪ., ೧೯೭೬, ಜೈನ ಯಕ್ಷ -ಯಕ್ಷಿಯರು

೮. ನಾವಡ ಎ.ವಿ.(ಸಂ), ವೈದ್ಯರ ಹಾಡುಗಳು

೯. ನಾವಡ ಎ.ವಿ., ಗಾಯತ್ರಿ ನಾವಡ, ೧೯೯೨, ಕಾಡ್ಯನಾಟ

೧೦. ರಾಜಗೋಪಾಲ ಕ.ವೆಂ. (ಸಂ), ೧೯೮೯, ತುಳುವ ಆಚರಣೆಗಳಲ್ಲಿ ಕಲಾವಂತಿಕೆ

೧೧. ಶೀನಪ್ಪ ಹೆಗಡೆ ಎನ್.ಎ., ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ

೧೨. ಸತ್ಯಮಿತ್ರ ಬಂಗೇರ, ೧೯೩೦, ಅಳಿಉ ಸಂತಾನ ಕಟ್ಟ್‌ದ ಗುಟ್ಟು.

13. Gururaja Bhat P., 1975 Studies in Tuluva History and Culture

14. Sturrock J., 1894, South Kanara Mannual.