ಜನಪದದ ಸಾರವತ್ತಾದ ಅನುಭವಗಳು ಜನಪದ ಸಾಹಿತ್ಯದಲ್ಲಿ ವ್ಯಕ್ತಗೊಳ್ಳುತ್ತವೆ. ಎಡೆಬಿಡದ ಕೆಲಸ ಕಾರ್ಯಗಳ ಜೊತೆ ಜೊತೆಗೇ ತಮ್ಮ ನೋವು – ನಲಿವುಗಳನ್ನು, ಆಸೆ – ಆಶೋತ್ತರಗಳನ್ನು ಹಾಡಿನ ಮೂಲಕ ಅಥವಾ ಕುಣಿತದ ಮೂಲಕ ಜನಪದರು ಅಭಿವ್ಯಕ್ತಿಸುತ್ತಾ ಬಂದಿದ್ದಾರೆ. ಗ್ರಾಮೀಣ ಸಂಸ್ಕೃತಿಯ ವಿವಿಧ ಮುಖಗಳನ್ನು ಬಿಂಬಿಸುವ ಜನಪದ ಸಾಹಿತ್ಯ ತುಳುನಾಡಿನಲ್ಲಿಯೂ ಹೇರಳವಾಗಿದೆ. ತುಳು ಮೌಖಿಕ ಸಾಹಿತ್ಯದಲ್ಲಿ ಪಾಡ್ದನ ಅಥವಾ ಸಂಧಿ, ಕಬಿತ, ಉರಲ್, ಗಾದೆ, ಒಗಟು, ಕುಣಿತದ ಹಾಡುಗಳು, ತಮಾಷೆಯ ಹಾಡುಗಳು, ಅಜ್ಜಿಕತೆಗಳು – ಹೀಗೆ ವಿವಿಧ ಪ್ರಕಾರಗಳನ್ನು ಗುರುತಿಸಬಹುದು. ಭೂತಾರಾಧನೆಯ ಸಂದಂರ್ಭದಲ್ಲಿ, ಭತ್ತ ಕುಟ್ಟುವಾಗ, ಗಾಡಿ ಹೊಡೆಯುವಾಗ, ತೊಟ್ಟಿಲು ತೂಗುವಾಗ, ಸಂತೋಷದಿಂದ ಕುಣಿಯುವಾಗ – ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಹಾಡುಗಳ ಬಳಕೆಯನ್ನು ಜನಪದಗಳಲ್ಲಿ ಕಾಣಬಹುದು.

ತುಳುನಾಡಿನ ಜವಪದರ ಜೀವನ ಬೇಸಾಯದೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ತುಳುನಾಡಿನಲ್ಲಿ ಬೇರೆ ಬೇರೆ ಭಾಷೆಗಳನ್ನಾಡುವ ಜನರಿದ್ದರೂ, ಹೆಚ್ಚಿನವರ ಮಾತೃಭಾಷೆ ತುಳು. ಬೇಸಾಯ ಇಲ್ಲಿನ ಪ್ರಧಾನ ಕಸುಬು. ಈ ಭತ್ತದ ಬೇಸಾಯ ಜನಪದದ ಕಷ್ಟ-ಸುಖ, ಸಂತೋಷ -ಸಂಭ್ರಮಗಳ ಮಿಶ್ರಣ. ಭತ್ತದ ಬೆಳೆಯ ಸಂದರ್ಭದಲ್ಲಿ ಗದ್ದೆ ಉಳುವುದು, ಬೀಜ ಬಿತ್ತುವುದು, ನೇಜಿ ಕೀಳುವುದು, ಕೊಯ್ಲು – ಇವು ಭತ್ತದ ಬೇಸಾಯದ ಪ್ರಮುಖ ಹಂತಗಳು. ಈ ಎಲ್ಲಾ ಹಂತಗಳಲ್ಲೂ ಕೃಷಿಕರು ಬಿಡುವಿಲ್ಲದೆ ಕಷ್ಟಪಟ್ಟು ದುಡಿಯುತ್ತಾರೆ. ಭತ್ತದ ಬೇಸಾಯದ ಚುರುಕಿನ ಕೆಲಸದ ಜತೆ ಜತೆಗೇ ಗದ್ದೆ ಉಳುವಾಗ, ನೇಜಿ ತೆಗೆಯುವಾಗ, ನೇಜಿ ನೆಡುವಾಗ ಬೇರೆ ಬೇರೆ ಹಾಡುಗಳನ್ನು ಹಾಡುತ್ತಾರೆ.

ನೇಜಿ ನೆಡುವಾಗ ಸಾಮಾನ್ಯವಾಗಿ ಹೆಂಗಸರು ಹಾಡುವ ಗೀತಗಳು ‘ಕಬಿತ’ಗಳು, ಉಳುವಾಗ ಅಥವಾ ಗಾಡಿ ಹೊಡೆಯುವಾಗ ಗಂಡಸರು ಹಾಡುವ ರಚನೆಗಳು ‘ಉರಾಲ್’ (ಉರಳ್‌). ಹೆಂಗಸರು ನೇಜಿಯ ಸಂದರ್ಭದಲ್ಲಿ ಕಬಿತ ಹೇಳಿದ ಮೇಲೆ ಉರಲ್ ಹೇಳುತ್ತಾರೆ. ‘ಕಬಿತ’ ಮತ್ತು ‘ಉರಲ್’ ತುಳು ಜನಪದ ಸಾಹಿತ್ಯದ ಕೆಲಸದ ಹಾಡುಗಳಲ್ಲಿ ಪ್ರಮುಖ ಪ್ರಕಾರಗಳು. ಈ ಕೆಲಸದ ಹಾಡುಗಳಾದ ಕಬಿತ ಹಾಗೂ ಉರಲ್‌ನ ರಾಚನಿಕ ಸ್ವರೂಪ ಮತ್ತು ಆ ಕೆಲಸಗಳಿಗೆ ಸಂಬಂಧವಿದೆ. ಇವುಗಳನ್ನು ಹಾಡುವ ಲಯ ನೇಜಿ ನೆಡುವ ಮತ್ತು ಉಳುವ ಕೆಲಸದ ಲಯಕ್ಕೆ ಹೊಂದಿಕೆಯಾಗುತ್ತದೆ. ಕಬಿತ ಮತ್ತು ಉರಲ್ – ಈ ಗೀತಗಳನ್ನು ಮೇಲ್ನೋಟಕ್ಕೆ ಗಮನಿಸುವಾಗ ಅವು ಆಯಾಸಮರೆಸುವ, ಮನಸ್ಸುನ್ನು ಮುದಗೊಳಿಸುವ ದುಡಿಮೆಯ ಏಕತಾನತೆಯನ್ನು ಹೋಗಲಾಡಿಸುವ ರಚನೆಗಳು ಎಂದೆನಿಸುತ್ತವೆ. ಆದರೆ ಕೇವಲ ಅಷ್ಟೇ ಅಲ್ಲ. ಇವು ಇನ್ನೂ ಕೆಲವು ಆಶಯಗಳನ್ನು ಸಂವಹನ ಮಾಡುವ ಧ್ವನಿಪೂರ್ಣ ರಚನೆಗಳು.

ತುಳು ಬದುಕು ಮತ್ತು ಸಂಸ್ಕೃತಿಯಲ್ಲಿ ಕೃಷಿಗೆ ಅನನ್ಯವಾದ ಮಾತ್ರವಲ್ಲ, ಒಂದು ಪಾವಿತ್ರ್ಯದ ಭಾವವಿದೆ. ಜೀವನಾವರ್ತನ ಹಾಗೂ ವಾರ್ಷಿಕಾವರ್ತನ ಆಚರಣೆಗಳಲ್ಲಿ, ಹಬ್ಬಗಳಲ್ಲಿ ಇತರ ಫಲವಸ್ತುಗಳ ಜೊತೆಗೆ ಭತ್ತ ಅಥವಾ ಅಕ್ಕಿ ವಿಶೇಷವಾಗಿ ಬಳಕೆಯಾಗುತ್ತದೆ. ಈ ಭತ್ತ ಮತ್ತು ಅಕ್ಕಿಯನ್ನು ತುಳುವರು ವಿಶೇಷ ಗೌರವ, ಆತ್ಮೀಯತೆ ಹಾಗೂ ಕೃತಜ್ಞತೆಯಿಂದ ಕಾಣುತ್ತಾರೆ. ಆದುದರಿಂದ ಇಂತಹ ಧಾನ್ಯವನ್ನು ಕೃಷಿ ಮಾಡುವ ಅಥವಾ ಬೆಳೆಸುವ ಸಂದರ್ಭದಲ್ಲಿ ಹಾಡಲಾಗುವ ಹಾಡುಗಳು ಆ ಸಂದರ್ಭದ ಆಶಯಕ್ಕೆ ಬದ್ಧವಾಗಿವೆ. ಪ್ರಸ್ತುತ ಈ ಪ್ರಬಂಧದಲ್ಲಿ ಮೊದಲು ಕಬಿತಗಳ ಕುರಿತಂತೆ, ನಂತರ ಉರಲ್‌ನ ಕುರಿತಂತೆ ಗಮನಿಸಲಾಗಿದೆ.

ಕಬಿತಗಳು

ತುಳು ನಾಡಿನಲ್ಲಿ ನೇಜಿ ನೆಡುವಾಗ ಹಾಡುವ ಗೀತಗಳು ‘ಕಬಿತ’ಗಳು. ಪಾಡ್ದನಗಳಿಗೆ ಹೋಲಿಸಿದರೆ ತುಳು ಕಬಿತಗಳಲ್ಲಿ ಸಂಗ್ರಹಕಾರ್ಯ ಮತ್ತು ಇವುಗಳನ್ನು ಕುರಿತ ಅಧ್ಯಯನ ನಡೆದುದು ಕಡಿಮೆ ಎನ್ನಬಹುದು. ತುಳು ಕಬಿತಗಳ ಸಂಗ್ರಹ ಕಾರ್ಯದತ್ತ ಗಮನಹರಿಸಿದರೆ, ರೂಪಕಲಾ ಆಳ್ವ ಅವರು ತಮ್ಮ ‘ನಾಟಿ’ (೧೯೯೨) ಕೃತಿಯಲ್ಲಿ ‘ಈಜೋ ಮಂಜಟ್ಟಿಗೋಣ’ ಮತ್ತು ‘ಡಿಂಬಿಸಾಲೆ’ – ಎಂಬ ಎರಡು ಕಬಿತಗಳನ್ನು ಕನ್ನಡಾನುವಾದ ಸಹಿತ ಸಂಗ್ರಹಿಸಿಕೊಟ್ಟಿದ್ದಾರೆ. ಆ ಬಳಿಕ ಬಿ.ಎ. ವಿವೇಕ ರೈ ಹಾಗೂ ರಾಜಶ್ರೀ ಇವರು ‘ತುಳು ಕಬಿತಗಳು’(೧೯೯೬) ಕೃತಿಯಲ್ಲಿ ಸುಮಾರು ನಲವತ್ತೆಂಟು ಕಬಿತಗಳನ್ನು, ಕನ್ನಡಾನುವಾದ ಸಹಿತ ಸಂಗ್ರಹಿಸಿಕೊಟ್ಟಿದ್ದಾರೆ. ಪ್ರಕಟವಾದ ತುಳು ಕಬಿತಗಳ ಮೊದಲನೆಯ ಸಂಕಲನ ಇದಾಗಿದೆ. ಕಬಿತಗಳನ್ನು ಕುರಿತಂತೆ ಈವರೆಗೆ ಪ್ರಕಟವಾಗಿರುವ ಕೆಲವು ಅಧ್ಯಯನಪೂರ್ಣ ಸಂಶೋಧನಾತ್ಮಕ ಮಾತ್ರವಲ್ಲ, ಆಂಶಿಕವಾಗಿ ಕಬಿತಗಳನ್ನು ಕುರಿತ ಲೇಖನಗಳನ್ನು ಗಮನಿಸಬಹುದು. ಅಮೃತ ಸೋಮೇಶ್ವರ ಅವರ ‘ತುಳು ಪಾಡ್ದನಗಳು, ಕಬಿತಗಳು’ (೧೯೭೭), ಇವರದೇ ಇನ್ನೊಂದು ಲೇಖನ ‘ತುಳು ಪಾಡ್ದನಗಳು, ಕಬಿತಗಳು’(೧೯೭೮), ಬಿ.ಎ.ವಿವೇಕ ರೈ ಅವರ ‘ತುಳು ಕಬಿತಗಳು’ (೧೯೮೦), ವಿದ್ವಾನ್ ಟಿ. ಕೇಶವ ಭಟ್ಟ ಅವರ ‘ನೇಜಿಯ ಹಾಡುಗಳು’(೧೯೯೬), ಎಸ್‌. ಆರ್. ಅರುಣ ಕುಮಾರ್‌ಅವರ ‘ತುಳು ನಾಡಿನ ಕಬಿತೆಗಳು’(೧೯೯೭), ವಾಮನ ನಂದಾವರ ಅವರ ‘ಪಾಡ್ದನಗಳೂ ಕಬಿತಗಳೂ ಚಿತ್ರಿಸುವ ತುಳು ಜನಪದ ವಿನೋದಗಳೂ ಕಲೆಗಳೂ’(೧೯೯೮), ರಾಜಶ್ರೀ ಅವರ ‘ತುಳು ಕಬಿತಗಳಲ್ಲಿ ವ್ಯಕ್ತವಾದ ಸ್ತ್ರೀ ಸಂವೇದನೆಯ ನೆಲೆಗಳು’ (೨೦೦೧) – ಹಾಗೂ ‘ತುಳು ಕಬಿತೊಲೆಡ್‌ಬೆನ್ಪಿ ಪೊಣ್ಣ ಅನನ್ಯತೆ’ (೨೦೦೧)- ಇವು ಕಬಿತಗಳ ಬಗ್ಗೆ ಗಮನಿಸಬಹುದಾದ ಕೆಲವು ಲೇಖನಗಳು. ಬಿ.ಎ. ವಿವೇಕ ರೈ ಅವರು ತಮ್ಮ ‘ತುಳು ಜನಪದ ಸಾಹಿತ್ಯ’ (೧೯೮೫) ಕೃತಿಯಲ್ಲಿ ‘ತುಳು ಕಬಿತಗಳು’ ಎಂಬ ಅಧ್ಯಾಯದಲ್ಲಿ ಕಬಿತಗಳ ಕುರಿತಂತೆ ತಾತ್ತ್ವಿಕವೂ, ಅಧಿಕೃತವೂ ಆದ ವಿಶ್ಲೇಷಣೆ ನಡೆಸಿದ್ದಾರೆ. ಸುಮಾರು ಹನ್ನೆರಡು ಕಬಿತಗಳ ವಸ್ತು ವಿವೇಚನೆಯನ್ನು ಅವುಗಳ ಬೇರೆ ಬೇರೆ ಪಾಠಾಂತರಗಳ ಮೂಲಕ ಬಹುವ್ಯವಸ್ಥಿತವಾಗಿ ವಿವೇಕ ರೈ ಅವರು ಮಾಡಿದ್ದಾರೆ. ತುಳುವಿನ ಕೆಲಸದ ಹಾಡುಗಳಾಗಿರುವ ಕಬಿತಗಳ ಕುರಿತಂತೆಯೂ ಅಧ್ಯಯನ ಪೂರ್ಣ ಆಕರಗ್ರಂಥ ಇದಾಗಿದೆ.

ಹೀಗೆ ಕೆಲವು ವಿದ್ವಾಂಸರು ಕಬಿತಗಳ ವಸ್ತು ರಚನೆ, ಲಯ ವೈವಿಧ್ಯದ ಕುರಿತಂತೆ ಈಗಾಗಲೇ ಚರ್ಚಿಸಿದ್ದಾರೆ.

‘ಕವಿತ’ ಎನ್ನುವುದರಿಂದ ‘ಕಬಿತ’ ಎನ್ನುವ ಪದ ಬಂದಿರಬೇಕು. ಇಲ್ಲಿ ‘ಕಬಿತ’ ಎನ್ನುವುದು ಒಂದು ವಿಶಿಷ್ಟ ರೀತಿಯ ಹಾಡುಗಳಿಗೆ ಮಾತ್ರ ಅನ್ವಯವಾಗುತ್ತದೆ.

‘ಕಬಿತಗಳಲ್ಲಿ ಶಬ್ದಗಳ ಸರಮಾಲೆ, ಹಾಸ್ಯದ ತುಣುಕು, ಒಂದು ಸಾಮಾನ್ಯ ಘಟನೆ, ಒಂದು ಚಿಕ್ಕ ವಿಚಾರ ಇರುತ್ತದೆ. ಕಬಿತಗಳ ಶುದ್ಧ ಕೆಲಸದ ಹಾಡುಗಳಾಗಿರುವುದರಿಂದ, ಇಲ್ಲಿ ಸಾಹಿತ್ಯಿಕ ಮೌಲ್ಯ ವಿಶೇಷವಾಗಿ ಕಂಡುಬರುವುದಿಲ್ಲ (ವಿವೇಕ ರೈ, ೧೯೮೫; ೨೩೭).

‘ಈ ಕೆಲಸದ ಹಾಡುಗಳು ಕೇಳುವವರಿಗೆ ಮುದ ನೀಡುವಂತಿದ್ದು, ಹಾಸ್ಯಪ್ರಜ್ಞೆಯನ್ನೊಳಗೊಂಡಿದೆ’ (ರೂಪಕಲಾ ಆಳ್ವ, ೧೯೯೨; ಪುಟ ೮೩).

‘ಕೆಲವೇ ಶಬ್ದಗಳ ಮಿತಿಯಲ್ಲಿ ರೋಚಕವಾದ ಚಿತ್ರನೀಡುವ ಚಿತ್ರಕ ಶಕ್ತಿ, ಸಂವಾದದ ಚಮತ್ಕಾರ, ಉಪಮೆಗಳ ಸೊಗಸು, ವಿನೋದ ಪ್ರವೃತಿಗಳಿಂದ ಜೀವಂತವಾಗಿರತಕ್ಕ ಸಾಹಿತ್ಯವೂ ಸಂಗೀತವೂ ಮೇಳೈಸಿದ ರಚನೆ ಕಬಿತಗಳು’ (ಅಮೃತ ಸೋಮೇಶ್ವರ, ೧೯೮೫, ಪುಟ ೫).

ಕಬಿತ ಹಾಡುವ ಸಂದರ್ಭ ಹಾಗೂ ವಸ್ತು

ಹೊಲಗಳಲ್ಲಿ ನೇಜಿ ನೆಡುವಾಗ (ನಾಟಿ ಮಾಡುವಾಗ) ಕಬಿತಗಳನ್ನು ಹಾಡುತ್ತಾರೆ. ಭತ್ತದ ಎಳೆಯ ಸಸಿಗೆ ‘ನೇಜಿ’ ಎಂಬುದು ತುಳುನಾಡಿನಲ್ಲಿ ಪ್ರಚಲಿತ ಶಬ್ದ. ಗದ್ದೆ ಉತ್ತು ಭೂಮಿ ಹದಗೊಳಿಸಿ ಬೀಜ ಬಿತ್ತಿ ಅದು ಮೊಳಕೆಯೊಡೆದು ಚಿಕ್ಕ ಸಸಿಯಾಗಿ ಬೆಳೆದು ನಿರ್ದಿಷ್ಟ ದಿನಗಳ ಬಳಿಕ ಆ ನೇಜಿಯನ್ನು ತೆಗೆಯುತ್ತಾರೆ. ಬಳಿಕ ಮತ್ತೊಮ್ಮೆ ಗದ್ದೆಯನ್ನು ಹಸನುಗೊಳಿಸಿ ಕಿತ್ತ ನೇಜಿಯನ್ನು ನೆಡುತ್ತಾರೆ. ಹೀಗೆ ಭತ್ತದ ಎಳೆಯ ಸಸಿಗೆ (ನೇಜಿಗೆ) ಬೇರೆಯೇ ನೆಲವನ್ನು ಸಿದ್ಧಪಡಿಸುತ್ತಾರೆ. ಇದರಂದ ಒಳ್ಳೆಯ ಫಸಲು ಬರುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ತುಳುನಾಡಿನಲ್ಲಿ ಹೆಂಗಸರೇ ನೇಜಿ ನೆಡುವುದು ಹಿಂದಿನಿಂದಲೂ ನಡೆದುಬಂದ ಪದ್ಧತಿ. ಹೆಂಗಸರು ಗದ್ದೆಯಲ್ಲಿ ಸಾಲಾಗಿ ನಿಂತು ಬೆಳಗ್ಗಿನಿಂದ ಸಂಜೆಯವರೆಗೂ ನೇಜಿನೆಡುತ್ತಾರೆ. ಹೀಗೆ ನೇಜಿ ನೆಡುವಾಗ ಕಬಿತೆಗಳನ್ನು ಹಾಡುತ್ತಾರೆ. ಅನೇಕ ಮಂದಿ ಹೆಂಗಸರು ಸಾಮೂಹಿಕವಾಗಿ ನೇಜಿ ನೆಡುವಾಗ, ಅವರಲ್ಲಿ ಒಬ್ಬಾಕೆ ಆ ಗುಂಪಿನ ನೇತೃತ್ವ ವಹಿಸುತ್ತಾಳೆ. ಅವಳು ಕಬಿತದ ಒಂದು ಸಾಲನ್ನು ಹಾಡುತ್ತಾಳೆ. ಉಳಿದೆಲ್ಲರೂ ಆ ಕಬಿತದ ಮುಂದಿನ ಸಾಲನ್ನು ಹಾಡಿದಂತೆ, ಉಳಿದ ಹೆಂಗಸರು ಪಲ್ಲವಿಯನ್ನು ಪುನರಾವರ್ತಿಸುತ್ತಾರೆ. ಇಲ್ಲಿ ಒಬ್ಬಳು ಕಬಿತದ ಪಠ್ಯವನ್ನು ಹಾಡುತ್ತಾಳೆ. ಉಳಿದವರು ಪ್ರತೀ ಸಾಲಿಗೊಮ್ಮೆ ಅದರ ಪಲ್ಲವಿಯನ್ನು ಪುನರಾವರ್ತಿಸುತ್ತಾರೆ.

ಹೆಂಗಸರೇ ಹಾಡುವ ಇಂತಹ ಕಬಿತಗಳ ವಸ್ತುಗಳನ್ನು ಮೇಲ್ನೋಟಕ್ಕೆ ಗಮನಿಸಿದಾಗ, ಅವು ಭತ್ತದ ಕೃಷಿಯ ವಿವರಗಳಾಗಿರಬಹುದು. ಹಳ್ಳಿಯ ಹೆಣ್ಣಿನ ಚೆಲುವನ್ನು ಬಣ್ಣಿಸುತ್ತಿರಬಹುದು, ಸ್ತ್ರೀಯ ಅಲಂಕಾರದ ಕುರಿತಾಗಿರಬಹುದು, ಮನೆಬಳಕೆಯ ಸಾಮಾಗ್ರಿಗಳ ವಿವರಗಳಾಗಿರಬಹುದು, ಸಾಂಬಾರ ಜೀನಸು, ತರಕಾರಿ, ಹೂ, ಆಭರಣ, ಮರ, ಸ್ಥಳಗಳ ಹೆಸರುಗಳನ್ನೊಳಗೊಂಡಿರಬಹುದು ಅಥವಾ ಹುಲಿ, ದನ, ಅಳಿಲು, ಕೊಕ್ಕರೆ ಮೊದಲಾದ ಪ್ರಾಣಿ – ಪಕ್ಷಿಗಳ ವರ್ಣನೆಗಳಾಗಿರಬಹುದು. ಎಷ್ಟೋ ಕಬಿತಗಳ ಸಾಲುಗಳು ಗದ್ದೆಯಲ್ಲಿ ಹೆಂಗಸರಿಂದ ಆಶುಕವಿತೆಯ ರೂಪದಲ್ಲಿ ಸೇರುವುದನ್ನು ಇಂದಿಗೂ ಕಾಣಬಹುದು. ಆಭರಣ, ಹೂ, ಊರು, ಮರ ಇತ್ಯಾದಿ ಹೆಸರುಗಳಿಂದ ಬರುವ ಕಬಿತಗಳು ಈ ರೀತಿಯವು. ಇನ್ನೂ ಕೆಲವೊಂದು ಕಬಿತಗಳು ತಮಾಷೆಗಾಗಿ ಹೊಲಗಳಲ್ಲಿಯೇ ಹೆಂಗುಸರಿಂದ ನಿರ್ಮಾಣವಾಗುವ ಸಂದರ್ಭಗಳೂ ಇವೆ. ಕಬಿತಗಳಲ್ಲಿ ಕಥೆ ಇರುವುದು ತೀರಾ ಕಡಿಮೆ. ‘ಹೀಜೋ ಮಂಜಟ್ಟಿ ಗೋಣಾ’ದಂತಹ ಕೆಲವೇ ಕಬಿತಗಳಲ್ಲಿ ಸ್ಪಷ್ಟವಾದ ಕಥೆ ಇರುವುದರಿಂದ ಇಂತಹ ಕಬಿತಗಳು ಕಥನಕವನದ ವ್ಯಾಪ್ತಿಗೆ ಸೇರುತ್ತವೆ.

ಕಬಿತಗಳಲ್ಲಿ ಸಾಹಿತ್ಯಿಕ ಮೌಲ್ಯ ವಿಶೇಷವಾಗಿ ಕಂಡುಬರುವುದಿಲ್ಲ. ಕೆಲವು ಕಬಿತಗಳಲ್ಲಿ ತುಳುನಾಡಿನ ಸಂಸ್ಕೃತಿಯ ಕೆಲವು ವಿಚಾರಗಳನ್ನು ಕಾಣಬಹುದು. ನೇಜಿ ನೆಡುವ ಸಂದರ್ಭ ಹಾಗೂ ಕಬಿತಗಳಲ್ಲಿನ ವಿವರಗಳನ್ನು ಗಮನಿಸಿದಾಗ, ಸ್ತ್ರೀ ರಚನೆಗಳಾಗಿರುವ ಕಬಿತಗಳು ದುಡಿಯುವ ವರ್ಗದ ಹೆಂಗಸರು ದಿನನಿತ್ಯದ ಬದುಕಿನಲ್ಲಿ ಎದುರಿಸಿದ ಸಂಕಟ, ಕಷ್ಟ, ದುಃಖ, ಸಂಘರ್ಷಗಳಿಗೆ, ಆಸೆ-ಆಶೋತ್ತರಗಳಿಗೆ, ವಿನೋದ – ವಿಡಂಬನೆಗಳಿಗೆ, ಇನ್ನೂ ಯಾವುದೇ ಜೀವನ ಸಂದರ್ಭದ ಸಹಜ ಸ್ಪೂರ್ತ ಭಾವನೆಗಳಿಗೆ ಧ್ವನಿಯಾಗುತ್ತವೆ. ತಾನು ಕೆಲಸದಲ್ಲಿ ನಿರತಳಾಗಿರುವಾಗ ಮನಸ್ಸು ಪಟ್ಟಪಾಡನ್ನು. ತನ್ನ ಬಯಕೆಗಳನ್ನು, ದುಡಿಯುವ ಹೆಣ್ಣು ಕಬಿತಗಳಲ್ಲಿ ಶ್ರಮಪರಿಹಾರದ ಸಾಧನವೆಂದಷ್ಟೆ ಕಾಣದೆ, ಅವಳ ಅನುಭವ ಮತ್ತು ಕನಸುಗಳ ಅಭಿವ್ಯಕ್ತಿಯ ಸಾಧ್ಯತೆಯಾಗಿಯೂ ಗಮನಿಸಬಹುದು.

ಕಬಿತಗಳು ದ್ವನಿಪೂರ್ಣ ರಚನೆಗಳು, ಮೇಲ್ನೋಟಕ್ಕೆಗಮನಿಸುವಾಗ ಕಾಣುವ ಅರ್ಥವಷ್ಟೇ ಅಲ್ಲದೆ ಹಲವು ಅರ್ಥಗಳನ್ನು ಒಳಗೊಂಡ ರಚನೆಗಳು. ಅಲ್ಲದೆ, ಕೆಲವು ಆಶಯಗಳನ್ನು ಸಂವಹನ ಮಾಡಲು ಇರುವ ರಚನೆಗಳು. ಉದಾಹರಣೆಗಾಗಿ, ಕೆಲವು ಕಬಿತಗಳನ್ನು ಗಮನಿಸಬಹುದು.

ಓ ಬೇಲೇ

ಅತ್ಯಂತ ಜನಪ್ರಿಯವಾದ ಮತ್ತು ಸಾರ್ವತ್ರಿಕವಾಗಿ ಲಭ್ಯವಾಗುವ ಕಬಿತ ‘ಓ ಬೇಲೆ’. ಈ ಕಬಿತದ ವಸ್ತು ಮತ್ತು ಅದನ್ನು ಹಾಡುವ ಸಂದರ್ಭಕ್ಕೆ ಸ್ಪಷ್ಟವಾದ, ನೇರವಾದ ಸಂಬಂಧವಿದೆ. ತುಳುವಿನಲ್ಲಿ ‘ಬೇಲೆ’ ಎಂದರೆ ಕೆಲಸ ಎಂದರ್ಥ. ನೇಜಿ ನೆಡುವುದಕ್ಕಾಗಿ ಧನಿಗಳ ಆಣತಿಯಂತೆ ಗಂಡಾಳೊಬ್ಬ ಹೆಣ್ಣಾಳುಗಳನ್ನು ಕರೆತರುವ ವಿಷಯವತನ್ನು ಓಬೇಲೆ ಕಬಿತ ಒಳಗೊಂಡಿದೆ. ‘ಎಲ್ಲ ಕಬಿತಗಳನ್ನು ರೂಢಿಯಲ್ಲಿ ‘ಓಬೇಲೆ ಹಾಡುಗಳು’ ಎಂದು ಕರೆಯುವ ಸಂಪ್ರದಾಯವಿದೆ. ಇದು ಓಬೇಲೆ ಕಬಿತದ ಭೌಗೋಳಿಕ ವ್ಯಾಪ್ತಿಯನ್ನು ಸೂಚಿಸುತ್ತದೆ. ಕಬಿತಗಳು ಕೆಲಸದ ಹಾಡುಗಳು (ಓ ಬೇಲೇ ಹಾಡುಗಳು) ಎನ್ನುವ ಅಂಶ ಇದರಿಂದ ತಿಳಿಯುತ್ತದೆ’ (ವಿವೇಕ ರೈ ೧೯೮೦; ಪುಟ ೩೬). ಓ ಬೇಲೇ ಕಬಿತದ ಬೇರೆ ಬೇರೆ ಪಾಠಾಂತರಗಳು ದೊರೆಯುತ್ತವೆ. ಆದರೆ ಮುಖ್ಯ ವಸ್ತುವಿನಲ್ಲಿ ವಿಶೇಷವಾದಂತಹ ವ್ಯತ್ಯಾಸವೇನೂ ಇಲ್ಲ. ವಿವರಣೆಗಳಲ್ಲಿ ಮುಖ್ಯ ವ್ಯತ್ಯಾಸವನ್ನು ಗಮನಿಸಬಹುದು.

‘ಓ ಬೇಲೇ’ ಕಬಿತದಲ್ಲಿ ಸುಗ್ಗಿಯ ಬೆಳೆಯಾಗಿ ಸತ್ಯದ ಬೆಳೆ ಅತಿಕಾರ, ಕಯಮ್ಮೆ ಬೆಳೆಯುವ ರೀತಿಯ ವಿವರವಿದೆ. ಅತಿಕಾರ ಭತ್ತದ ನೇಜಿ ‘ಕಣಿಲೆಯ ಮುಂಗು’ (ಬಿದಿರ ಮೊಳಕೆ) ಬಂದಂತೆ ಬರುತ್ತದೆ. ದನಿಗಳ ಆಣತಿಯಂತೆ ಹೊಲೆಯ ಆಳು ಹೆಣ್ಣಾಳುಗಳನ್ನು ನೇಜಿಗೆ ಕರೆತರಲು ಹೋಗುವಾಗ, ಭೈರರ ಹೆಣ್ಣುಗಳು ಭತ್ತ ಕುಟ್ಟುತ್ತಾ, ರಾಗಿ ಬೀಸುತ್ತಾ, ಸೋಬಾನೆ ಹಾಡುತ್ತಾ ಇರುತ್ತಾರೆ. ಕೊರಗರ ಕೇರಿಯಲ್ಲಿ ಕೊರಗರ ಹೆಣ್ಣುಗಳು ಪಾಡ್ದನ ಹೇಳುತ್ತಾ ಬುಟ್ಟಿ ಹೆಣೆಯುತ್ತಿರುತ್ತಾರೆ. ನೇಜಿಗೆ ಕರೆಯುವಾಗ ‘ನಮಗೆ ಅಳುವ ಮಕ್ಕಳು, ಹೊಡೆಯುವ ಗಂಡ, ಬಯ್ಯುವ ಅತ್ತೆ – ಮಾವ ಇದ್ದಾರೆ’ ಎನ್ನುತ್ತಾರೆ ಹೆಣ್ಣಾಳುಗಳು. ಅಳುವ ಮಕ್ಕಳಿಗೆ ಹಾಲುಕೊಟ್ಟು, ಗಂಡನಿಗೆ ಅನ್ನ ಬಡಿಸಿಟ್ಟು, ಅತ್ತೆಗೆ ಅಡುಗೆ ಮಾಡಿಟ್ಟು, ಮಾವನಿಗೆ ಬೇಕಾದಂತಹ ಕೆಲಸ ಮಾಡಿ ಬನ್ನಿ – ಎನ್ನುತ್ತಾನೆ ಹೊಲೆಯ ಆಳು. ಹೀಗೆ ‘ಓ ಬೇಲೇ’ ಕಬಿತದಲ್ಲಿ ಮನೆಯೊಳಗಿನ ಕೆಲಸಗಳನ್ನು ಮುಗಿಸಿ ದೈನಂದಿನ ಸಿಂಗಾರಗೊಂಡು ಹೊರಗೆ ದುಡಿಯಲು ಹೊರಡುವ ಹೆಣ್ಣುಗಳ ವಿವರಗಳಿಗೆ.

ಹತ್ತು ತಾಯಿಯ ಮಕ್ಕಳು, ಒಂದೇ ತಾಯಿಯ ಮಕ್ಕಳಂತೆ, ನಗುತ್ತಾ ನಲಿಯುತ್ತಾ, ದನಿ ಏರಿಸಿ, ರಾಗವಾಗಿ ಹಾಡಿರಿ, ದನದ ಹಿಂದಿನಿಂದ ಕರುಗಳು ಹೋಗುವಂತೆ, ಹೇಟೆಯ ಹಿಂದಿನಿಂದ ಮರಿಗಳು ಹೋಗುವಂತೆ ಹೇಳಿರಿ. ಮರದ ಪೆಟ್ಟಿಗೆಗೆ(ಕಲೆಂಬಿ) ರೂಪಾಯಿ ಹಾಕಿದ ಶಬ್ದದಂತೆ, ಕಣಜಕ್ಕೆ ಭತ್ತ ಹಾಕಿದ ಶಬ್ದದಂತೆ, ಮೊಟ್ಟೆ ಇಡುವ ಹೇಟೆ ಶಬ್ದ ಮಾಡುತ್ತಾ ಹೋಗುವಂತೆ, ಸ್ವರ ಕೇಳಿ ಬರಲಿ – ಎನ್ನುವ ಸಾಲುಗಳನ್ನು ಕಬಿತದಲ್ಲಿ ಕಾಣಬಹುದು.

‘ಓ ಬೇಲೇ’ ಕಬಿತದ ಒಂದು ಪಠ್ಯದಲ್ಲಿ ನಾವು ಒಟ್ಟು ಸೇರಿ ನಾಟಿ ಮಾಡುತ್ತಿರುವ ಭತ್ತದ ಸಸಿಗೆ ಹೊಸ ಚಿಗುರು ಹುಟ್ಟಿ ಬರಲಿ, ಮನೆಯೊಳಗೆ ಒಡೆಯನ ಮಡದಿಗೆ ಗರ್ಭ ನಿಲ್ಲಲಿ. ಗದ್ದೆ ತುಂಬಾ ಆ ತೆನೆಯಾಗಲಿ – ಎಂಬ ಸಾಲುಗಳಿವೆ.

ಹುಟ್ಟಿದ ಚೊಚ್ಚಲ ಮಗು ಗಂಡಾದರೆ ತಂದೆಗೆ ಸಹಾಯ ಮಾಡುತ್ತಾನೆ, ಹಾರೆ ಹಿಡಿದು ಕೆಲಸ ಮಾಡುತ್ತಾನೆ. ಹೆಣ್ಣಾದರೆ ತಾಯಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾಳೆ ಎನ್ನುವ ಅರ್ಥದ ಸಾಲುಗಳನ್ನು ಈ ಕಬಿತದಲ್ಲಿ ಗಮನಿಸಬಹುದು.

ಕಬಿತದ ಮೇಲಿನ ಸಾಲುಗಳನ್ನು ಗಮನಿಸಿದಾಗ ಸತ್ಯದ ಬೆಳೆ ಎಂದು ಅತಿಕಾರ ಭತದ ಬೆಳೆಯನ್ನು ಗುರುತಿಸಿದ್ದನ್ನು ಗಮನಿಸಬಹುದು. ಹಿಂದಿನ ಕಾಲದಲ್ಲಿ ಅತಿಕಾರ ಎಂಬ ಭತ್ತದ ತಳಿಯ ಪ್ರಸ್ತಾಪ ಮತ್ತು ಈ ಬೆಳೆ ಬೆಳೆದವನಿಗೆ ಸಮೃದ್ಧಿಯ ಫಸಲು ಕೊಡುತ್ತದೆ ಎಂಬ ಅಂಶ ಕಬಿತದಿಂದ ತಿಳಿಯುತ್ತದೆ. ಈ ಭತ್ತದ ನೇಜಿಯನ್ನು ಬಿದಿರಿನ ಮೊಳಕೆಗೆ ಹೋಲಿಸಿರುವುದರಿಂದ ಈ ಅಂಶ ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ. ಬಿದಿರು ಸಮೃದ್ಧಿಯ ಸಂಕೇತ. ಇಲ್ಲಿ ಸಮೃದ್ಧಿಯ ಆಶಯವನ್ನು ಹೇಳಲು ಬಿದಿರನ್ನು ಬಳಸಿಕೊಳ್ಳಲಾಗಿದೆ. ಹೊಲೆಯ ಆಳು ಭೈರರ ಕೇರಿಗೆ ಬರುವಾಗ ಭೈರರ ಹೆಣ್ಣಗಳು ಸೋಬಾನೆ ಹೇಳುತ್ತಾ, ಭತ್ತ ಕುಟ್ಟುತ್ತಾ, ರಾಗಿ ಬೀಸುತ್ತಾ, ಇದ್ದರಂತೆ. ಕೊರಗರ ಕೇರಿಯಲ್ಲಿ ಕೊರಗರ ಹೆಣ್ಣುಗಳು ಪಾಡ್ದನ ಹೇಳುತ್ತಾ ಬುಟ್ಟಿ ಹೆಣೆಯುತ್ತಾ ಇದ್ದರು. ತುಳುನಾಡಿನಲ್ಲಿ ಹಿಂದಿನ ಕಾಲದಲ್ಲಿ ಭತ್ತ ಕುಟ್ಟುವಾಗ, ರಾಗಿ ಬೀಸುವಾಗ, ಬುಟ್ಟಿ ಹೆಣೆಯುವಾಗ ಹಾಡುಗಳನ್ನು ಹಾಡುತ್ತಿದ್ದರೆಂಬುದು ಇದರಿಂದ ಸ್ಪಷ್ಟ. ಇಂದು ಈ ಪದ್ಧತಿ ಕಾಣಸಿಗುವುದು ಅಪೂರ್ವ. ಮನೆಯೊಳಗಿನ ಕೆಲಸಗಳನ್ನು ಅಂದರೆ ಕೌಟುಂಬಿಕ ಜವಾಬ್ದಾರಿಯನ್ನು ನಿರ್ವಹಿಸಿ, ಹೆಣ್ಣು ಹೊರಗೆ ದುಡಿಯಲು ಬರುತ್ತಾಳೆ. ಕೌಟುಂಬಿಕ ಕೆಲಸವೂ ಮುಖ್ಯ ಎಂಬುದಾಗಿ ಆಕೆ ಪರಿಭಾವಿಸುತ್ತಾಳೆ. ಕೌಟುಂವಿಕತೆಯಲ್ಲಿ ಹೆಣ್ಣಿನ ಕೆಲಸ ಮತ್ತು ಹೊಣೆಗಾರಿಕೆಯ ಎರಡು ನೆಲೆಗಳನ್ನು ಆಕೆ ಜ್ಞಾಪಿಸಿಕೊಳ್ಳುತ್ತಾಳೆ. ಕುಟುಂಬ ಕೇಂದ್ರಿತ ಹೆಣ್ಣಿನ ಬದುಕು ಮತ್ತು ಜವಾಬ್ದಾರಿಯನ್ನು ಈ ಕಬಿತ ಹೇಳುತ್ತದೆ. ಮನೆಯೊಳಗಿನ ಮತ್ತು ಹೊರಗಿನ ಕೆಲಸಗಳನ್ನು ಹೆಣ್ಣು ನಿರ್ವಹಿಸಿದ ಕ್ರಮದಲ್ಲಿ ದುಡಿಮೆಯನ್ನು ಆಕೆ ಪರಿಭಾವಿಸಿದ ರೀತಿ ತಿಳಿಯುತ್ತದೆ. ಮನೆಗೆಲಸವನ್ನೂ ಆಕೆ ಕೆಲಸ ಅಲ್ಲ ಎಂದು ನಿರ್ವಹಿಸುತ್ತಾಳೆ. ಕೌಟುಂಬಿಕ ಜವಾಬ್ದಾರಿ, ಮೆನೆಗೆಲಸ – ಇವು ಕೆಲಸ ಅಲ್ಲ ಎಂಬ ‘ ಪುರುಷ ಪ್ರಧಾನ’ ಚಿಂತನೆಯ ಕ್ರಮಕ್ಕೆ ಇದು ಸವಾಲಿನಂತಿದೆ. ಮನೆಕೆಲಸ, ಅತ್ತೆ ಮಾವ, ಗಂಡ, ಮಕ್ಕಳ ಕೆಲಸ ಮಾಡಿ ಮತ್ತೆ ಹಾಡುವುದನ್ನು ನೋಡಿದರೆ, ಹೆಣ್ಣಿನ ಅಸ್ತಿತ್ವ ಮತ್ತು ಇರವಿನ ಕುರಿತಂತೆ ಕೃಷಿ ಸಂಸ್ಕೃತಿಯ ಹೆಣ್ಣಿನ ಯೋಚನಾವಿನ್ಯಾಸಗಳನ್ನು ಈ ಕಬಿತಗಳಲ್ಲಿ ಕಾಣಬಹುದು. ಹೆಣ್ಣಿನ ದುಡಿಮೆ ಅವಗಣನೆಗೆ ಒಳಗಾಗಿದೆ ಎಂಬ ಎಲ್ಲ ಹೆಣ್ಣು ಮಕ್ಕಳ ಸಾರ್ವತ್ರಿಕ ಸಮಸ್ಯೆಯನ್ನು ಆಕೆ ಕಬಿತದಲ್ಲಿ ಹಾಡುತ್ತಾಳೆ. ತಾನು ಮಾಡಿದ ಕೆಲಸಗಳನ್ನು ತನ್ನಂತೆ ಇರುವ ಇತರರ ಜೊತೆ ಹಂಚಿಕೊಳ್ಳುತ್ತಾಳೆ. ಎಲ್ಲ ಹೆಣ್ಣುಮಕ್ಕಳ ಕುಟುಂಬದ ಕತೆ ಇದು ಎಂದು ಜ್ಞಾಪಿಸುವುದು, ಕಷ್ಟ ಸುಖಗಳನ್ನು ನೆನೆಯುವುದು – ಒಂದು ಅರ್ಥದಲ್ಲಿ ಜಾಗೃತರನ್ನಾಗಿಸುವ ಕಾರ್ಯ.

ಬೇರೆ ಬೇರೆ ವೃತ್ತಿಯ, ಬೇರೆ ಬೇರೆ ಜಾತಿಯ ಹೆಂಗಸರು ಗದ್ದೆಯಲ್ಲಿ ಒಂದೇ ಕುಟುಂಬದ ಸದಸ್ಯರಂತೆ ಸಾಮೂಹಿಕವಾಗಿ ಒಂದೇ ಸ್ವರದಲ್ಲಿ, ಲಯಬದ್ಧವಾಗಿ ಹಾಡಿ ತ್ವರಿತಗತಿಯಲ್ಲಿ ಕೆಲಸ ಮಾಡುವ ಸಂದರ್ಭವಿದೆ. ಹೆಂಗಸರು ಸಾಲಾಗಿ ಬಗ್ಗಿ ನೇಜಿ ನೆಡುವಾಗ ಕೆಲಸದ ಪ್ರಗತಿ ಸಮಭಾಗದಲ್ಲಿ ಸಾಗಬೇಕಾಗುತ್ತದೆ. ಪ್ರತಿಯೊಬ್ಬರೂ ಇತರರ ಕೆಲಸದ ಪ್ರಗತಿಯನ್ನು ಗಮನಿಸಿಕೊಂಡೇ ತಮ್ಮ ತಮ್ಮ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುವ ಮತ್ತು ಹೊಂದಿಸಿಕೊಳ್ಳುವುದನ್ನು ಮಾಡಬೇಕಾಗುತ್ತದೆ. ನೇಜಿಯ ಒಂದು ಸೂಡಿ(ಒಂದು ಹಿಡಿನೇಜಿ)ಯಿಂದ ನಿರ್ದಿಷ್ಟ ಸಂಖ್ಯೆಯ ಸಸಿಗಳನ್ನು ಪ್ರತ್ಯೇಕಿಸಿ ನೆಡುವ ಕೆಲಸದಲ್ಲಿಯೇ ಒಂದು ಲಯವಿದೆ. ಈ ನೇಜಿನೆಡುವ ಕೆಲಸದ ಲಯವನ್ನೇ ಕಬಿತಗಳಲ್ಲಿ ಗುರುತಿಸಬಹುದು. ಅಂದರೆ ಕೆಲಸದ ಲಯವನ್ನು, ವೇಗವನ್ನು ತೀರ್ವಗೊಳಿಸುವಲ್ಲಿ ಹಾಡಿನ ಲಯ ಪೂರಕವಾಗಿ ಹಾಗೂ ಧನಾತ್ಮಕವಾಗಿ ಕೆಲಸ ಮಾಡುತ್ತದೆ. ಕೆಲಸ ಲಯಬದ್ಧವಾಗಿ ಸಾಗುವುದರಿಂದ ಕೆಲಸದ ವೇಗ ಹೆಚ್ಚುತ್ತದೆ. ಇದರಿಂದ ಒಳ್ಳೆಯ ಫಸಲು ಬರುತ್ತದೆ. ಒಳ್ಳೆಯ ಫಸಲು ಬರುವ ಮೂಲಕ ಲಾಭ ಬರುತ್ತದೆ. ಇಲ್ಲಿ ಫಲವಂತಿಕೆಯ ಆಶಯವನ್ನು ಗಮನಿಸಬಹುದು. ಎಲ್ಲರೂ ಒಟ್ಟಿಗೆ ಸೇರಿ ಕೆಲಸಮಾಡುವಾಗ ನಾವೆಲ್ಲಾ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ನೇಜಿನೆಡುವ ಸ್ತ್ರೀಯರಲ್ಲಿ ಮೂಡುತ್ತದೆ. ಇಲ್ಲಿ ಒಂದು ರೀತಿಯ ಸಾಮೂಹಿಕ ಒಡನಾಟ, ಸಮಾನತೆ, ಸಹಬಾಳ್ವೆಯ ತತ್ತ್ವವಿದೆ. ಜನಪದ ಮಹಿಳೆಯ ಬದುಕಿನಲ್ಲಿದ್ದ ಹೆಣ್ಣಿನ ಸಾಮೂಹಿಕತೆಯ ಗುಣವನ್ನು ಕೃಷಿಯ ಸಂದರ್ಭ ಮತ್ತೆ ನಿರ್ಮಾಣ ಮಾಡುತ್ತದೆ. ತನ್ನ ಸುತ್ತ ಕಾಣುವ ವಸ್ತು ಪ್ರಾಣಿ ಪಕ್ಷಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಬಿತದಲ್ಲಿ ಪೋಣಿಸುವ ಮೂಲಕ ಹೆಣ್ಣು ಅವುಗಳಿಗೆ ಸ್ಪಂದಿಸಿದ ರೀತಿ, ಆ ಮೂಲಕ ಕಬಿತದ ಲಯಕ್ಕೆ ಅನುಗುಣವಾಗಿ ರೂಪಕದ ಹೋಲಿಕೆ ನೀಡುವ ರೀತಿ, ಹೆಣ್ಣಿನ ಸೂಕ್ಷ್ಮತೆ ವ್ಯಕ್ತವಾಗುತ್ತದೆ.

ಎಲ್ಲರೂ ಒಟ್ಟು ಸೇರಿ ನಾಟಿ ಮಾಡಿದ ಗದ್ದೆಯ ಬೆಳೆಗೆ ಮತ್ತು ಒಡೆಯನ ಮಡದಿಯ ಗರ್ಭಕ್ಕೆ ಈ ಕಬಿತದಲ್ಲಿ ಸಂಬಂಧ ಗುರುತಿಸಬಹುದು. ಇಲ್ಲಿ ಫಲೋತ್ಪತ್ತಿಯ ಆಶಯವನ್ನು ಹೇಳುವುದಕ್ಕೆ ಹೆಣ್ಣನ್ನು ಬಳಸಿಕೊಳ್ಳಲಾಗಿದೆ. ಪರಂಪರಾಗತ ಹೆಣ್ಣಿನ ಸಂವೇದನೆ, ಮಗುವನ್ನು ಪಡೆಯಬೇಕೆಂಬ ಬಯಕೆ, ಅಪೇಕ್ಷೆ. ದುಡಿಮೆಯೇ ಜೀವನವಾಗಿರುವ ಜನಪದ ಹೆಣ್ಣಿಗೆ ಗಂಡು – ಹೆಣ್ಣಿನ ತಾಯ್ತನದ ಅಪೇಕ್ಷೆ, ಮಕ್ಕಳ ಬಗೆಗಿನ ಸಮಾನ ಭಾವನೆಯನ್ನು ಈ ಕಬಿತದಲ್ಲಿ ಗುರುತಿಸಬಹುದು.

ಈಜೋ ಮಂಜೊಟ್ಟೀ ಗೋಣಾ

ನಿರ್ದಿಷ್ಟವಾದ ಕಥೆ ಇರುವ ಕಥನಕವನದ ವ್ಯಾಪ್ತಿಗೆ ಸೇರುವ ಕಬಿತ ‘ಈಜೋ ಮಂಜಟ್ಟಿ ಗೋಣಾ’. ಈ ಕಬಿತವನ್ನು ಗದ್ದೆ ಉಳುವ ಸಂದರ್ಭದಲ್ಲಿ (ಎತ್ತು/ಕೋಣ ಗದ್ದೆಯಲ್ಲಿ ಇರುವಾಗ) ಹೇಳಬಾರದೆಂಬ ನಂಬಿಕೆ ಜನಪದರಲ್ಲಿದೆ.

ಈ ಕಬಿತದಲ್ಲಿ ಆಳ್ವರು ಜುಮಾದಿ ಭೂತಕ್ಕೆ ಹರಕೆ ಹೇಳಿ ಕೋಣ ತರಲು ಸುಬ್ರಹ್ಮಣ್ಯದ ಕುಲ್ಕುಂದಕ್ಕೆ ಹೋಗುವುದು. ತಮಗೊಪ್ಪುವ ಬೊಳ್ಳ ಕೋಣನನ್ನು ಆರಿಸಿ ಭೂತಕ್ಕೆ ಹರಕೆ ಸಲ್ಲಿಸಿ ಮನೆಗೆ ಬಂದಾಗ ಕಂಬಳದ ಓಲೆ ಬಂದಿರುವ ವಿಷಯ ತಿಳಿದು ಕೋಣಗಳನ್ನು ಸಿಂಗರಿಸಿ ಕಂಬಳಕ್ಕೆ ಕರೆದೊಯ್ಯುವ ಕಥೆ ಇದೆ. ಕೆಲವೊಂದು ಪಾಠಾಂತರಗಳಲ್ಲಿ ಹರಕೆ ಸಲ್ಲಿಸದೆ ಕಂಬಳಕ್ಕೆ ಕೋಣಗಳನ್ನು ಇಳಿಸಿದುದರಿಂದ ಕೋಣಗಳೇ ಮಾಯವಾದ ಪ್ರಸ್ತಾಪವಿದೆ.

ಈ ಕಬಿತದಲ್ಲಿ, ಹೊಲದಲ್ಲಿ ದುಡಿಯುವ ಹೆಣ್ಣು, ಕಥೆಯನ್ನು ಹಾಡಾಗಿಸಿ ಹೇಳುವಲ್ಲಿಯೂ ಅಲ್ಲಿನ ಒಡತಿಯ (ದಾರು ಎಂಬಾಕೆ) ಜೀವನ ಚಿತ್ರಣವನ್ನು, ಅಂದರೆ ಆಕೆಯ ದೈನಂದಿನ ಕೆಲಸದ ವರ್ಣನೆ, ಅಡುಗೆಗೆ ಸಿದ್ಧತೆ ನಡೆಸುವ ವಿವರಗಳನ್ನು ನೀಡುವ ಮೂಲಕ, ತನಗೆ ಅರಿವಿಲ್ಲದಂತೆ ಆಕೆಯ ದೈನಂದಿನ ಬದುಕಿನ ಘಟನಾವಳಿಗಳು, ಕಥೆಯಲ್ಲಿ ನೇಯ್ಗೆಗೊಳ್ಳುತ್ತವೆ. ಕೌಟುಂಬಿಕ ನೆಲೆಯಲ್ಲಿ ನಿರ್ವಹಿಸುವ ಕರ್ತವ್ಯಗಳನ್ನು ಹೇಳುತ್ತಾ, ದೈನಂದಿನ ಬದುಕಿನಲ್ಲಿ ನಿರ್ವಹಿಸುವ ಕೆಸವೂ ಮಹತ್ತ್ವದ್ದು ಎಂಬುದನ್ನು ಹೆಣ್ಣು ಹೇಳುತ್ತಾಳೆ. ಹೆಣ್ಣು ಅಡುಗೆಯಲ್ಲಿ ತಾನು ನಿತ್ಯ ಬಳಸುವ ತರಕಾರಿಗಳನ್ನು ಕಬಿತದಲ್ಲಿ ಹೆಸರಿಸುತ್ತಾಳೆ. ತಾನು ನೋಡಿದ ವಸ್ತು, ತರಕಾರಿಗಳನ್ನು ಕಬಿತದಲ್ಲಿ ಪೋಣಿಸುವ ಮೂಲಕ ಹೆಣ್ಣಿನ ಕಬಿತ ಕಟ್ಟುವ ಪ್ರತಿಭೆ, ಬುದ್ಧಿವಂತಿಕೆ ವ್ಯಕ್ತವಾಗುತ್ತದೆ. ಕಬಿತಗಳಲ್ಲಿ ಬರುವ ತರಕಾರಿಗಳು ಸಮೃದ್ಧಿಯ ಸಂಕೇತಗಳು. ಇಂತಹ ಸಮೃದ್ಧಿಯ ಆಶಯವಿರುವ ಕಬಿತಗಳನ್ನು ಹೆಣ್ಣು ನೇಜಿನೆಡುವ ಸಂದರ್ಭದಲ್ಲಿ ಹಾಡುತ್ತಾಳೆ ಎಂಬುದು ಗಮನಾರ್ಹ ಸಂಗತಿ.

ಈ ಕಬಿತದಲ್ಲಿ ಆಳ್ವರ ಸ್ನಾನದ ಚಿತ್ರಣವನ್ನು ನೀಡಲಾಗಿದೆ. ನೆತ್ತಿಗೆ, ಕಿವಿಗೆ ಕೀಲೆಣ್ಣೆ, ಬೆನ್ನಿಗೆ ಬಿಸಿಯೆಣ್ಣೆ ಉಗುರಿಗೆ ಸಿರಿಯೆಣ್ಣೆ, ಎದೆಗೆ ಬಿಸಿಯೆಣ್ಣೆ ಹಾಕಿ ಎಣ್ಣೆಯ ಮಸಲತ್ತು ಮಾಡುವ, ಸಾವಿರ ಬಿಂದಿಗೆ ಬಿಸಿ ನೀರು, ಸಾವಿರ ಬಿಂದಿಗೆ ತಣ್ಣೀರಿನಲ್ಲಿ ಸ್ನಾನಮಾಡುವ ರೀತಿಯ ವಿವರವಿದೆ. ಹಿಂದೆ ಎಣ್ಣೆಯ ಮಸಲತ್ತು ಮಾಡಿ ವೈಭವಪೂರ್ಣವಾಗಿ ಸ್ನಾನ ಮಾಡುತ್ತಿದ್ದ ರೀತಿಯ ವರ್ಣನೆ ಇಲ್ಲಿ ಬಂದಿದೆ.

ಆಳ್ವರು ಕೋಣ ತರಲು ಸುಬ್ರಹ್ಮಣ್ಯದ ಕುಲ್ಕುಂದಕ್ಕೆ ಹೋಗುವ ವರ್ಣನೆ ಈ ಕಬಿತದಲ್ಲಿದೆ. ಸುಬ್ರಹ್ಮಣ್ಯದ ಕುಲ್ಕುಂದದ ಜಾನುವಾರು ಜಾತ್ರೆ ಇತಿಹಾಸ ಪ್ರಸಿದ್ಧ. ಸಾಮಾನ್ಯವಾಗಿ ತುಳುನಾಡಿನಲ್ಲಿ ಬೇಸಾಯಗಾರರು ಕೋಣ / ಎತ್ತುಗಳಿಗೆ ಸರಿಯಾದ ಜೊತೆ ತರಲು ಸುಬ್ರಹ್ಮಣ್ಯದ ಕುಲ್ಕುಂದ ಎಂಬ ಸ್ಥಳಕ್ಕೆ ಹೋಗುವುದು, ಅಲ್ಲಿಂದ ತಮ್ಮ ಮನಸ್ಸಿಗೊಪ್ಪುವ ಜಾನುವಾರು ತರುವುದು ಹಿಂದಿನಿಂದಲೂ ನಡೆದು ಬಂದಿರುವ ರೂಢಿ.

ಈ ಕಬಿತದಲ್ಲಿ ಆಳ್ವರು ತಮ್ಮ ಮನಸ್ಸಿಗೆ ಒಪ್ಪಿಗೆಯಾಗುವ ಕೋಣ ಸಿಗಲು ಜುಮಾದಿ ಭೂತಕ್ಕೆ ಹರಕೆ ಸಲ್ಲಿಸುವ ಪ್ರಸ್ತಾಪವಿದೆ. ಇಲ್ಲಿ ಭೂತಾರಾಧನೆಯ ಹಿನ್ನೆಲೆಯನ್ನು ಹೊಂದಿರುವ ತುಳುನಾಡಿನ ಒಂದು ಪ್ರಸಿದ್ಧ ಭೂತವಾದ ಜುಮಾದಿಯ ಕುರಿತ ಉಲ್ಲೇಖವಿದೆ. ತಮ್ಮ ಕಾರ್ಯಸಿದ್ಧಿಗಾಗಿ ತುಳುನಾಡಿನಲ್ಲಿ ಹಿಂದಿನಿಂದಲೂ ಜನಪದರು ಭೂತವನ್ನು ಆರಾಧಿಸುತ್ತಿದ್ದರು. ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂಬ ಅಂಶ ಇದರಿಂದ ತಿಳಿಯುತ್ತದೆ.

ತುಳುನಾಡಿನ ಜನಪ್ರಿಯ ಕ್ರೀಡೆಯಾದ ಕಂಬಳದ ಕುರಿತ ವಿವರಣೆ ಈ ಕಬಿತದಲ್ಲಿದೆ. ಕೋಣವನ್ನು ಸಿಂಗರಿಸಿ ಕಂಬಳಕ್ಕೆ ಕೊಂಡೊಯ್ಯುವ ರೀತಿಯ ವಿವರವಿದೆ.

ಏದಾಬಲ ಮಗಾ ದೂಜಿ ಕೆಮ್ಮೈರಾ

ಈ ಕಬಿತವು ಸುಂದರವಾದ ಕೆಂಬಣ್ಣದ ಹೋರಿಯೊಂದನ್ನು ಸಂಬೋಧಿಸಿ ಹೇಳುವ ರೀತಿಯಲ್ಲಿದೆ. ಹೋರಿಯ ಸೌಂದರ್ಯದ ವಿವರ, ಅದರ ಗುಣವೈಶಿಷ್ಟ್ಯ, ಅದು ಗುಟುರುಹಾಕುವ ರೀತಿಯ ವರ್ಣನೆ ಈ ಕಬಿತದಲ್ಲಿದೆ. ಈ ಕಬಿತದ ಕೊನೆಯಲ್ಲಿ ‘ಹುಲಿ ಹಿಡಿಯುವ’ ಸಂದರ್ಭವಿದೆ. (ಗದ್ದೆ ಉಳುವ ಸಂದರ್ಭದಲ್ಲಿ ಈ ಕಬಿತ ಹಾಡುವುದಿಲ್ಲ) ಈ ಸಂದರ್ಭದಲ್ಲಿ ನೇಜಿನೆಡುವ ಹೆಂಗಸರು ಒಬ್ಬರ ಮೇಲೊಬ್ಬರು ಬೀಳುತ್ತಾ, ಕೆಸರು ನೀರನ್ನು ಎರಚಿಕೊಳ್ಳುತ್ತಾರೆ, ನೇಜಿಯ ಸೂಡಿ ಹಿಡಿದು ಇತರರ ಮೇಲೆ ಸೂಡಿಯನ್ನು ಬಡಿಯುತ್ತಾ, ಹುಲಿಯಂತೆ ಅಬ್ಬರಿಸುತ್ತಾ, ಕೇಕೆ ಹಾಕುತ್ತಾ, ದನವನ್ನು ಓಡಿಸುವಂತೆ ಅಭಿನಯಿಸುತ್ತಾ ಓಡಿಸುತ್ತಾ, ಬೆನ್ನಟ್ಟುತ್ತಾರೆ, ಇತರರನ್ನು ಅಪ್ಪಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರ ಮತ್ತು ಸಣ್ಣ ಮಕ್ಕಳ ತಾಯಂದಿರ ಮೇಲೆ ಅವರು ಬೀಳಬಾರದು ಎಂಬ ನಿಯಮವಿದೆ. (ಕಬಿತವನ್ನು ಮೂರು ಬಾರಿ ಹೇಳಿಯೇ ಕೊನೆಗೊಳಿಸಬೇಕೆಂದಿದೆ) ಇಲ್ಲಿ ಹುಲಿ ಹಿಡಿಯುವ ಪ್ರಸಂಗ ಕಬಿತದಲ್ಲಿ ವಿವರಣೆಯನ್ನು ಗಮನಿಸಿದಾಗ ಅಷ್ಟು ಸಂಗತವೆನಿಸುವುದಿಲ್ಲ.

ಹೋರಿ ತಾರುಣ್ಯಕ್ಕೆ ಸಂಕೇತವಾದುದರಿಂದ ಪ್ರಣಯಭಾವವನ್ನು ಹೋರಿಯೊಂದರ ವರ್ತನೆಯ ಪ್ರತಿಮೆಯ ಮೂಲಕ ಅಭಿವ್ಯಕ್ತಿಸುವ ತಂತ್ರವನ್ನು ಈ ಕಬಿತದಲ್ಲಿ ಕಾಣಬಹುದು. ಈ ಕಬಿತ ಹಾಡುವವರು ಹೆಂಗುಸರು ಮಾತ್ರ ಎಂಬುದನ್ನು ಪರಿಗಣಿಸಿದರೆ, ಈ ವಿಚಾರ ಹೆಚ್ಚು ಅರ್ಥಪೂರ್ಣವೆಂದು ತೋರುತ್ತದೆ. ಹಳ್ಳಿಯ ಹೆಣ್ಣು ಮಕ್ಕಳ ಸುಪ್ತ ಭಾವನೆಗಳು, ಲೈಂಗಿಕತೆಯ ಕುರಿತಂತೆ ಹೆಂಗುಸರು ಹೊಂದಿರುವ ಭಾವನೆಗಳು ಇಲ್ಲಿ ವ್ಯಕ್ತವಾಗುತ್ತದೆ. ಆ ಮೂಲಕ ಹೆಂಗುಸರು ತಮ್ಮ ಕಾಮ, ಆಕಾಂಕ್ಷೆಗಳನ್ನು ಹಾಡಿನ ಮೂಲಕ ಧ್ವನಿಸುವುದನ್ನು ಇಲ್ಲಿ ಗಮನಿಸಬಹುದು. ಇಂತಹ ಕಬಿತಗಳನ್ನು ನೇಜಿನೆಡುವ ಸಂದರ್ಭದಲ್ಲಿ ಹಾಡುವುದು ಸ್ವಾರಸ್ಯದ ಸಂಗತಿ. ಹಸನುಗೊಳಿಸಿ ಹದವಾದ ಗದ್ದೆಯಲ್ಲಿ ಒಳ್ಳೆಯ ಫಸಲು ಬರಲು ನೇಜಿನೆಡುತ್ತಾರೆ. ಅಂದರೆ ಫಲವಂತಿಕೆಯ ಅಶಯವನ್ನು ಇಲ್ಲಿ ಗಮನಿಸಬಹುದು.

ಈ ಕಬಿತದಲ್ಲಿ ಬಡವರ ಕೋಲು ಬೇಲಿ ಇರಬಹುದು, ಬಡವರ ಪೈರು, ಒಣಹುಲ್ಲು ಇರಬಹುದು, ಗದ್ದೆಯ ಬದುವಿನಲ್ಲಿ ಹೋಗಿ ಬದುವಿನಲ್ಲಾಗಿಯೇ ಬಾ, ಚೆಲುವ ‘ಕೆಮ್ಮೈರಾ’ ಎನ್ನುವ ಸಾಲುಗಳನ್ನು ಗಮನಿಸಿದಾಗ ಬಡವರಲ್ಲಿ ಬೆಳೆಗಳ ಬಗ್ಗೆ ಇರುವ ಆದರ, ರಕ್ಷಣೆಯ ಆಸಕ್ತಿಯನ್ನು ಮೇಲ್ನೋಟಕ್ಕೆ ನಾವು ಗಮನಿಸಿದರೂ, ಯಾಜಮಾನ್ಯ ಪದ್ಧತಿಯ ಕುರಿತ ಸೂಕ್ಷ್ಮ ಎಳೆ ಇಲ್ಲಿ ಸಿಗುತ್ತದೆ. ಯಜಮಾನನ ಅಹಂಕಾರ, ದರ್ಪವನ್ನು ಹೋರಿಯ ಗುಟುರು ಹಾಕುವುದಕ್ಕೆ ಹೋಲಿಸಲಾಗಿದೆ. ಯಾಜಮಾನ್ಯ ಪದ್ಧತಿಗೆ ಹೆಣ್ಣು ಕಬಿತದ ಮೂಲಕ ಕೊಡುವ ಎಚ್ಚರಿಕೆಯನ್ನು ಇಲ್ಲಿ ಗಮನಿಸಬಹುದು.

ಟ್ರುವೇಲೇ ಬಾಲೆ ಬಾಲೆ ಪೊಲಿಯೇ

‘ಟ್ರುವೇಲೇ ಬಾಲೆ ಬಾಲೇ ಪೊಲಿಯೇ’ ಎನ್ನುವ ಪಲ್ಲವಿ ಇರುವ ವಿಭಿನ್ನ ವಸ್ತುಗಳನ್ನು ಒಳಗೊಂಡಿರುವ ಕೆಲವು ಕಬಿತಗಳಿವೆ. ಈ ಕಬಿತಗಳು ರಚನೆಯಲ್ಲೂ ಇತರ ಕಬಿತಗಳಿಗಿಂತ ಸ್ವಲ್ಪಮಟ್ಟಿಗೆ ಭಿನ್ನವಾಗಿದೆ.

‘ತುಳು ಕಬಿತಗಳು’ (ಸಂ. ವಿವೇಕ ರೈ, ರಾಜಶ್ರೀ) ಕೃತಿಯಲ್ಲಿ ಈ ರೀತಿಯ ಪಲ್ಲವಿಯ ಎರಡು ಕಬಿತಗಳಿವೆ. ಈ ಕೃತಿಯಲ್ಲಿರುವ ‘ಟ್ರುವೇಲೇ ಬಾಲೆ ಬಾಲೆ ಪೊಲಿಯೇ’ ಪಲ್ಲವಿಯ ಒಂದು ಕಬಿತದಲ್ಲಿ ಒಂದು ಘಟನೆ ಇದೆ. ಈ ಕಬಿತದಲ್ಲಿ ಪೌರಾಣಿಕ ಪಾತ್ರಗಳಾದ ಈಶ್ವರ, ಗಂಗೆ, ಗೌರಿ – ಇವರ ಪ್ರಸ್ತಾಪವಿದೆ. ಈಶ್ವರನಿಗೆ ಪೂಜೆಗಾಗಿ ಹೂ ತರಲು ಬ್ರಾಹ್ಮಣ ಹುಡುಗ ಹೂ ಹುಡುಕುತ್ತಾ ಹೋಗುವುದು. ಒಂದು ಹೂ ಕೂಡಾ ಕೈಗೆ ಸಿಗದಾಗ ಕೊನೆಗೆ ಗಂಗೆ-ಗೌರಿ ಎನ್ನುವ ಅಕ್ಕ ತಂಗಿ ಸಿರಿಗಳ ನಾಡಿನಲ್ಲಿ ಗೊಂಚಲು ಗೊಂಚಲು ಹೂ ಸಿಗುತ್ತದೆ. ಅಲ್ಲಿಂದ ಹೂ ತರುವಾಗ ತಡವಾದುದಕ್ಕೆ ಈಶ್ವರ ಸಿಟ್ಟುಗೊಳ್ಳುವುದು, ಆತನಿಗೆ ವಿಷಯ ತಿಳಿಸಿದಾಗ ಈಶ್ವರ ಗಿಳಿಯ ರೂಪದಲ್ಲಿ ಸಿರಿಗಳ ನಾಡಿಗೆ ಹೋಗುವುದು. ತಂಗಿ ಆ ಗಿಳಿಯನ್ನು ಹಿಡಿದು ಸಾಕುವುದು.

ಈ ಕಬಿತದಲ್ಲಿ ಒಂದು ಘಟನೆ ಇದೆ. ಬ್ರಾಹ್ಮಣ, ಕೊರಗ, ಆಚಾರಿ ಈ ಜಾತಿಗಳ ಕುಲಕಸುಬುಗಳ ವಿವರವಿದೆ.[1] ಈ ಕಬಿತದಲ್ಲಿ ಈಶ್ವರನೂ ಸಾಮಾನ್ಯ ಮನುಷ್ಯನಂತೆ ವ್ಯವಹರಿಸುತ್ತಾನೆ. ಈಶ್ವರ ಗಿಳಿಯಾಗಿ ರೂಪ ಪರಿವರ್ತನೆಗೊಳ್ಳುವಲ್ಲಿ ‘ರೂಪ ಪರಿವರ್ತನೆಯ’ ಜನಪದ ಆಶಯವಿದೆ.

ಇದೇ ಕೃತಿಯಲ್ಲಿರುವ ‘ಟ್ರುವೇಲೇ ಬಾಲೆ ಬಾಲೆ ಪೊಲಿಯೇ’ ಎಂಬ ಪಲ್ಲವಿಯ ಇನ್ನೊಂದು ಕಬಿತವಿದೆ. ಈ ಕಬಿತದಲ್ಲಿ ಹೆಣ್ಣು ಮಗುವೊಬ್ಬಳಿಗೆ ಬೇಕಾದಂತಹ ಆಭರಣ ಮಾಡಿಸುವುದು, ಆಕೆ ಸಂಭ್ರಮದಿಂದ ಮದುವೆ ನಡೆಸಿ ಸಂತೋಷದಿಂದ ಗಂಡನ ಮನೆಗೆ ಕಳುಹಿಸುವುದು, ಕೊನೆಗೆ ಮಗು ಹಡೆಯಬೇಕೆಂಬ ಆಶಯ ವ್ಯಕ್ತಪಡಿಸುವುದು ಈ ಕಬಿತದಲ್ಲಿ ಹೆಂಗುಸರ ವಿವಿಧ ಆಭರಣಗಳ, ವಸ್ತ್ರ ವಿಶೇಷಗಳ ಹೆಸರುಗಳಿವೆ. ಹೆಣ್ಣು ಮೈನೆರೆದಾಗ ಮಾಡುವ ಆಚರಣೆಗಳ, ಮದುವೆಯ ಅಲಂಕಾರ, ಅತಿಥಿ ಸತ್ಕಾರಗಳು – ಇವುಗಳ ವಿವರಗಳಿವೆ. ಸಿರಿವಂತರು, ಮದುಮಕ್ಕಳು ಹಿಂದಿನ ಕಾಲದಲ್ಲಿ ಹೋಗುತ್ತಿದ್ದ ದಂಡಿಗೆಯ ಪ್ರಸ್ತಾಪ ಈ ಕಬಿತದಲ್ಲಿದೆ.

ಬಿ.ಎ. ವಿವೇಕ ರೈ ಅವರ ‘ತುಳು ಜನಪದ ಸಾಹಿತ್ಯ’ ಕೃತಿಯಲ್ಲಿ ದೊರೆಯುವ ಈ ಪಲ್ಲವಿಯ ಪಠ್ಯದಲ್ಲಿ ಒಂದು ಚಿಕ್ಕ ಘಟನೆ ಇದೆ. ಈ ಕಬಿತದಲ್ಲೂ ಪೌರಾಣಿಕ ಪಾತ್ರಗಳಾದ ಈಶ್ವರ ಮತ್ತು ಪಾರ್ವತಿಯ ಪ್ರಸ್ತಾವಿದೆ. ಈ ಕಬಿತದಲ್ಲಿ ಬರುವಂತೆ ಈಶ್ವರನಿಗೆ ಗದ್ದೆ ಬೇಸಾಯವಿದೆ. ಅವನು ಗದ್ದೆಗೆ ಬೇಕಾದಷ್ಟು ನೀರು ಕಟ್ಟಿ ಕೈಕಾಲು ತೊಳೆಯಲು ಕೆರೆಗೆ ಹೋದಾಗ ಅಲ್ಲಿ ಒಂದು ತಾವರೆ ಹೂವಿರುತ್ತದೆ. ಅದನ್ನು ಹಿಡಿಯಲು ಹೋದಾಗ ಅದು ಅವನಿಂದ ದೂರ ಸರಿಯುತ್ತದೆ. ಕೊನೆಗೂ ತಾವರೆ ಹೂವನ್ನು ಕೊಯ್ದು ಕಿಸೆಯಲ್ಲಿ ಹಾಕಿಕೊಂಡು ಮನೆಗೆ ಬಂದು ಹೆಂಡತಿ ಪಾರ್ವತಿಗೆ ಕೊಡುತ್ತಾನೆ. ಆಕೆ ಆ ಹೂವನ್ನು ಮನೆಯ ಗಿಳಿ ಬಾಗಿಲಲ್ಲಿ ಇಡುತ್ತಾಳೆ. ಆ ಹೂ ಹೆಣ್ಣುಮಗುವಾಗುತ್ತದೆ. ಆ ಹುಡುಗಿ ದೊಡ್ದವಳಾದಂತೆ ಆಕೆಗೆ ವಿವಿಧ ಆಭರಣಗಳನ್ನು ಮಾಡಿಸಿ ಹಾಕುವ ವಿವರವಿದೆ.

ಈ ಕಬಿತದಲ್ಲಿ ಪೌರಾಣಿಕ ಪಾತ್ರಗಳಾದ ಈಶ್ವರ ಪಾರ್ವತಿಯರು ತುಳುನಾಡಿನ ಪರಿಸರದಲ್ಲಿ ವ್ಯವಹರಿಸುತ್ತಾರೆ. ಈಶ್ವರನು ಸಾವಿರ ಮುಡಿ ಬೆಟ್ಟುಗದ್ದೆಯನ್ನೂ, ನೂರು ಮುಡಿ ಬೈಲುಗದ್ದೆಯನ್ನು ಬೇಸಾಯ ಮಾಡುತ್ತಾನೆ. ಹಾರೆ ಹಿಡಿದು ಗದ್ದೆಯ ನೀರನ್ನು ಕಟ್ಟುತ್ತಾನೆ. ಇಲ್ಲಿ ತುಳುನಾಡಿನ ಭತ್ತದ ಬೇಸಾಯದ ಕ್ರಮವನ್ನು ಕಾಣಬಹುದು. ಬೇಸಾಯಕ್ಕೆ ಸಂಬಂಧಿಸಿದ ನೇಜಿ ನೆಡುವ ಹಾಡುಗಳು ಕಬಿತಗಳು. ಈ ದೃಷ್ಟಿಯಿಂದ ಈ ಕಬಿತದ ವಸ್ತು ಮತ್ತು ಹಾಡುವ ಸಂದರ್ಭಕ್ಕೆ ನೇರವಾದ ಸಂಬಂಧವಿದೆ. ಈಶ್ವರ ತಂದ ತಾವರೆ ಹೂ ಹೆಣ್ಣಾಗಿ ಮಾರ್ಪಡುವಲ್ಲಿ ‘ರೂಪಪರಿವರ್ತನೆಯ’ ಜನಪದ ಆಶಯವನ್ನು ಗಮನಿಸಬಹುದು. ಈ ಕಬಿತದಲ್ಲಿ ಆಭರಣಗಳ ಪಟ್ಟಿ ಇದೆ, ಮಾತ್ರವಲ್ಲ ಸೀರೆ, ರವಿಕೆ, ಮೊದಲಾದ ವಸ್ತು ವಿಶೇಷಗಳ ಪ್ರಸ್ತಾಪವಿದೆ. ಕಬಿತದ ಕೊನೆಯಲ್ಲಿರುವ ಜೋಗುಳದ ನುಡಿಗಟ್ಟಿನಲ್ಲಿ ತುಳುನಾಡಿನ ಹೆಣ್ಣುಗಳ ಅಲಂಕಾರ, ಎಣ್ಣೆಸ್ನಾನದ ಕ್ರಮ, ದೇವಸ್ಥಾನಕ್ಕೆ ಹರಕೆ ಹೋಗುವ ಪದ್ಧತಿಗಳ ವಿವರಗಳಿವೆ.

ಈ ಮೂರು ಕಬಿತಗಳ ಪಲ್ಲವಿ ‘ಟ್ರುವೇಲೇ’ ಬಾಲೆ ಬಾಲೆ ಪೊಲಿಯೇ ಎನ್ನುವುದು. ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ತೊಟ್ಟಿಲನ್ನು ತೂಗಿ ಬಿಡುವಾಗ ಈ ಪದದ ಬಳಕೆ ಇದೆ. ಅಂತೆಯೇ ಹಕ್ಕಿಗಳ ಹಿಂಡು ಓಡಿಸುವಾಗಲೂ ಈ ಪದದ ಬಳಕೆ ಇದೆ. ‘ಟ್ರುವೇಲೇ ಬಾಲೆ ಬಾಲೆ ಪೊಲಿಯೇ’ ಎನ್ನುವ ಪಲ್ಲವಿ ಜೋಗುಳದ ಹಾಡಿನ ದಾಟಿಗೆ ಹೊಂದಿಕೊಳ್ಳುವುದನ್ನು ಗಮನಿಸಬಹುದು. ತುಳುನಾಡಿನಲ್ಲಿ ‘ಪೊಲಿ’ ಎಂಬ ಶಬ್ದ ಬಳಕೆಯ ಎಲ್ಲಾ ಸಂದರ್ಭಗಳನ್ನೂ ಗಮನಿಸಿದಾಗ, ‘ಹುಲುಸು’, ‘ಸಮೃದ್ಧಿ’, ‘ಹೆಚ್ಚು’ ಎಂಬ ಅರ್ಥ ಬರುತ್ತದೆ. ಸಮೃದ್ಧಿಯ ಆಶಯವನ್ನು ಹೇಳುವಲ್ಲಿ ಈ ಪದ ಬಳಕೆಯಾಗಿದೆ.

ಮೇಲೆ ಸೂಚಿಸಿದ ಮೂರು ಕಬಿತಗಳಲ್ಲಿ ಬರುವ ವಿವರಗಳನ್ನು ಕಂಡಾಗ ಸಮೃದ್ಧಿಯ ಆಶಯವಿರುವುದನ್ನು ಗಮನಿಸಬಹುದು. ‘ಟ್ರುವೇಲೆ ಬಾಲೆ ಬಾಲೇ ಪೊಲಿಯೇ’ ಪಲ್ಲವಿಯ ಎರಡು ಕಬಿತಗಳು ಮಗುವಿಗೆ ಸಂಬಂಧಿಸಿವೆ. ಇನ್ನೊಂದರಲ್ಲಿ ಈಶ್ವರ ಗಿಳಿಯಾಗುವ, ಆ ಗಿಳಿಗೆ ಹಾಲುಕೊಟ್ಟು ಸಾಕುವ, ಮಲಗಿಸುವ ಪ್ರಸ್ತಾಪವಿದೆ. ಇಲ್ಲಿ ಜೋಗುಳಕ್ಕೆ ಸಂಬಂಧಿಸಿದಂತೆ ಈ ಕಬಿತದ ಪಲ್ಲವಿಯೂ ಸರಿಯಾಗಿ ಹೊಂದಿಕೊಳ್ಳುತ್ತದೆ.

ಬೇಲಿ ಬೇಲ್ಯಪ್ಪಾ ಜಗ್ಗಯೂ ನೇರ್ಯೂ

ಈ ಕಬಿತ ವಿಶಿಷ್ಟ ರೀತಿಯದು. ಹೆಣ್ಣಿನ ವಿಚಾರ ಪರತೆಯನ್ನು ಈ ಕಬಿತದಲ್ಲಿ ಗುರುತಿಸಬಹುದು.

ಬೇಲಿ ಬೇಲಿಯನ್ನು ಜಗ್ಗಿಸುವವರ್ಯಾರು
ಜಗ್ಗಿಸಿದ ಬೇಲಿಯನ್ನು ಏರಿಸದವರ್ಯಾರು
ಏರಿಸಿ ಬೇಲಿಯನ್ನು ಜಗ್ಗಿಸಿದವರ್ಯಾರು
ಜಗ್ಗ ಬೈಲಿನ ಜವ್ವನಿಗರಲ್ಲವೆ

ಕಬಿತದ ಈ ಸಾಲುಗಳು ಮತ್ತೆ ಮತ್ತೆ ಪುನರಾವರ್ತನೆಗೊಳ್ಳುವ ಘೋಷಣಾ ರೂಪದ ಸಾಲುಗಳು. ಈ ಕಬಿತದಲ್ಲಿ ಜಗ್ಗಬೈಲಿನ ಯುವಕರು ವೇಶ್ಯೆಯೊಬ್ಬಳಿಗೆ ಕೊಡುವ ಅಲಂಕಾರ ಸಾಮಗ್ರಿ, ಹೂ, ಆಭರಣಗಳ ವಿವರಗಳಿವೆ.

ಬೇಲಿಯನ್ನು ಹಾಕಿದವರು, ಬೇಲಿಯನ್ನು ಏರಿಸಿದವರು, ಆ ಬೇಲಿಯನ್ನು ಬಲವಂತವಾಗಿ ಜಗ್ಗಿಸಿದವರು ಜಗ್ಗ ಬೈಲಿನ ಯುವಕರು. ಇಲ್ಲಿ ಹೆಣ್ಣು ವೇಶ್ಯೆಯಾಗುವ ಅಥವಾ ವೇಶ್ಯೆಯ ನೆಲೆಯಲ್ಲಿ ನಿಂತು ಬಯಸುವ ಬಯಕೆ, ಅಪೇಕ್ಷೆಗಳಿಲ್ಲ. ಬದಲಾಗಿ, ಅವಳಿಗೆ ಧಾರಾಳವಾಗಿ ಉಡುಗೊರೆ ಕೊಟ್ಟು ಅಲಂಕಾರ ಸಾಮಗ್ರಿ, ಆಭರಣ, ಹೂಗಳ ವಿವರಗಳಿವೆ. ವೇಶ್ಯೆಯ ಕನಸಿಗಿಂದ ಹೆಚ್ಚಾಗಿ ಆಕೆಯನ್ನು ವೇಶ್ಯೆಯನ್ನಾಗಿಸುವ ಪುರುಷರ ಮಹಿಳಾವಿರೋಧಿ ಧೋರಣೆಗಳನ್ನು ಈ ಕಬಿತ ಸೂಕ್ಷ್ಮವಾಗಿ ತಿಳಿಸುತ್ತದೆ.

ನೇಜಿ ನೆಡುವ ಹೆಣ್ಣಿನ ಸುತ್ತ ತಾನು ನೆಡುವ ನೇಜಿಕೆ ಬೇಲಿಯ ಆವರಣ ಇರುತ್ತದೆ. ಇದನ್ನು ಗಮನಿಸಿರುವ ಹೆಣ್ಣು ಗದ್ದೆ, ನೇಜಿ, ಸುತ್ತ ಆವರಣ ಇದರ ಒಳಗಿದ್ದು ಕೊಂಡೇ ಮಹಿಳೆಯ ಸುತ್ತ ರಚಿಸಲಾದ, ಆದರೆ ಪುರುಷರ ಕಣ್ಣಿಗೆ ಕಾಣಿಸದ, ಪುರುಷನಿರ್ಮಿತ ಬೇಲಿಗಳ ಬಗ್ಗೆ ಮಾತನಾಡುತ್ತಾಳೆ. ಆವರಣವನ್ನು ಕಟ್ಟುವ ಮತ್ತು ತೆಗೆಯುವ, ಪಾತಿವ್ರತ್ಯದ ಬಂಧನ ಹಾಕುವ ಮತ್ತು ಸಡಿಲಿಸುವ ಇಡಿಯ ಪ್ರಕ್ರಿಯೆಯ ನಿರ್ಣಾಯಕ ಪಾತ್ರವನ್ನು ವಹಿಸುವವನು ಪುರುಷ ಎಂಬುದನ್ನು ಕಬಿತಗಳ ಮೂಲಕ ದಿಟ್ಟವಾಗಿ ಹೇಳುತ್ತಾಳೆ. ಆ

ದಿಟ್ಟತನದಲ್ಲಿದ್ದುಕೊಂಡೇ ಆಕೆಯ ಪ್ರತಿಭಟನೆಯನ್ನು ಗುರುತಿಸಬಹುದು. ಇಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಬಗ್ಗೆ ನಯವಾದ ನಿರಾಕರಣೆಯನ್ನು ಮಾಡುತ್ತಾಳೆ. ಪಾತಿವ್ರತ್ಯದ ಕುರಿತ ಎಲ್ಲ ನಿಲುವುಗಳನ್ನು ನಿರಾಕರಿಸುತ್ತಾ ಹೆಣ್ಣನ್ನು ಅಮಾನುಷವಾಗಿ, ಕೀಳಾಗಿ ನೋಡುವುದಾಗಿ, ಪುರುಷನನ್ನು ಹೊಣೆಗಾರನನ್ನಾಗಿಸುವ ನಿಲುವು, ಸಂಸ್ಕೃತಿ ಮತ್ತು ಮೌಲ್ಯಗಳ ನಿರ್ವಚನೆ ಮಾಡುವ ಗಂಡುಸರ ಒಟ್ಟು ಚಿಂತನಕ್ರಮವನ್ನೇ ಇಲ್ಲಿ ಪ್ರಶ್ನಿಸುವಂತಿದೆ. ಹಾಗೂ ಆ ನಿಲುವುಗಳ ನಿರಾಕರಣೆ ಇದೆ.

ಹಾತ್ತ್‌ಲೌಡಿ ಗಂಗಸರೋ

‘ಹಾತ್ತ್‌ಲೌಡಿ ಗಂಗಸರೋ’ ಕಬಿತದಲ್ಲಿ ಶೇಂದಿ – ಶರಾಬು ಕುಡಿದು ಮನೆ ಮಾರು, ಹೆಂಡತಿ – ಮಕ್ಕಳನ್ನು ಮಾರಿದರೂ ಕುಡಿಯುವುದನ್ನು ಬಿಡದೆ ಕುಟುಂಬವನ್ನು ಕಷ್ಟಕ್ಕೆ ಗುರಿಮಾಡುವ, ಕೌಟುಂಬಿಕ ವಿಚಾರವನ್ನು ನಗಣ್ಯಮಾಡಿದ ಗಂಡಸಿನ ಪ್ರವೃತ್ತಿಯನ್ನು ಲೇವಡಿ ಮಾಡಲಾಗಿದೆ.

ಇಲ್ಲಿ ಕೌಟುಂಬಿಕ ಜವಾಬ್ದಾರಿಯನ್ನು ಅಲಕ್ಷಿಸಿದ ಪುರುಷನ ಪ್ರವೃತ್ತಿಯನ್ನು ಹೆಣ್ಣು ಲೇವಡಿ ಮಾಡಿ ತನ್ನ ನೋವು, ಸಂಕಟ, ಆಕ್ರೋಶವನ್ನು ಹಾಡಿನ ಮೂಲಕ ವ್ಯಕ್ತಪಡಿಸುತ್ತಾಳೆ.

ಓಹ್ಹೋ

ಬ್ರಿಟಿಷರ ದರ್ಪ, ಅಹಂಕಾರ, ಸುಲಿಗೆಯನ್ನು ‘ಓಹ್ಹೋ’ ಕಬಿತದಲ್ಲಿ ಹಾಸ್ಯಮಯವಾಗಿ ವಿಡಂಬಿಸಲಾಗಿದೆ. ಬ್ರಿಟಿಷರು ತುಳುನಾಡಿಗೆ ಪ್ರವೇಶವಾದ, ಇಲ್ಲಿ ಆಳಲು ಬಂದ ನಂತರ ಬಂದ ಕಬಿತವಿರಬೇಕು. ಇಲ್ಲಿನ ಜನರನ್ನು ಬ್ರಿಟಿಷರು ಬಳಸಿಕೊಳ್ಳುತ್ತಿದ್ದ ರೀತಿ, ಮನೆ ಮನೆಯಿಂದ ಅಕ್ಕಿ, ಸಾಮಾನು, ಕೋಳಿ ಹೊತ್ತೊಯ್ಯುತ್ತಿದ್ದ ರೀತಿ ವಿಡಂಬನಾತ್ಮಕವಾಗಿ ಈ ಕಬಿತದಲ್ಲಿ ನಿರೂಪಿತವಾಗಿದೆ. ‘ಇವನ ಹೆಣ ಹೊತ್ತು ಹೊತ್ತು ಹೆಗಲು ಮುರಿದು ಸುಸ್ತಾಗಿ ಹೋಯಿತು ಎನ್ನುತ್ತಾರೆ ದಂಡಿಗೆಯ ಬೋವುಗಳು’ ಎನ್ನುವ ಕಬಿತದ ಸಾಲುಗಳನ್ನು ಗಮನಿಸಿದಾಗ ತನ್ನಂತೆ ದುಡಿಯುವ ಇನ್ನೊಂದು ವರ್ಗದ ಕುರಿತಂತೆ ಹೆಣ್ಣು ಸ್ಪಂದಿಸಿದ ರೀತಿ ವ್ಯಕ್ತವಾಗಿದೆ. ಅಲ್ಲದೆ ಭಿನ್ನ ಸಂಸ್ಕೃತಿಯ ಬ್ರಿಟಿಷರನ್ನು ಕುರಿತ ಆಕ್ರೋಶವನ್ನು ಹೆಣ್ಣು ವಿಡಂಬನಾತ್ಮಕವಾಗಿ ಈ ಕಬಿತದಲ್ಲಿ ತಿಳಿಸಿದ್ದಾಳೆ. ಪರಕೀಯರ ಪ್ರವೇಶವನ್ನು ನಯವಾಗಿ ವಿರೋಧಿಸುವ ಧ್ವನಿ ಈ ಕಬಿತದಲ್ಲಿದೆ.

 

[1] ಈ ಕಬಿತದಲ್ಲಿ ಈಶ್ವರ ಕೊರಗ, ಆಚಾರಿ, ಬ್ರಾಹ್ಮಣ – ಇವರನ್ನು ಕರೆದು ನಿಮ್ಮ ಜೀವನ ಹೇಗೆ ಸಾಗಿಸುತ್ತೀರೆಂದಾಗ ಕಾಡಿನ ಕೊರಗ ಚೀಮಾಂದ್ರ್ಯ(ಕಾಡಿನ ಹೆಸರು) ಕಾಡಿನಲ್ಲಿ ಬೀಳಲು ಸಾಕಷ್ಟಿದೆ. ದೇವರ ಪೂಜೆಯ ಹೂವಿಗಾಗಿ, ಹೂವಿನಬುಟ್ಟಿ, ಎಸರು ತಟ್ಟೆ, ಕುಕ್ಕೆ ಹೆಣೆಯುತ್ತೇನೆ ಎನ್ನುತ್ತಾನೆ. ಬಡಗಿಯು ಚೀಮಾಂದ್ರ್ಯ ಕಾಡಿನಲ್ಲಿ ಮರ ಸಾಕಷ್ಟಿದೆ. ಮರ ಕಡಿದು ರೀಪು ಕೊಯ್ದು ದೇವರಿಗೆ ದೇವಾಲಯ, ಭೂತಗಳಿಗೆ ಗುಡಿ ಕಟ್ಟುತ್ತೇನೆ ಎನ್ನುತ್ತಾನೆ. ಬ್ರಾಹ್ಮಣ ಹುಡುಗನಲ್ಲಿ ಕೇಳಿದಾಗ, ದೇವರಿಗೆ ಪೂಜೆಗಾಗಿ ಬೇರೆ ಬೇರೆ ರೀತಿಯ ಹೂ ಕೊಯ್ದು ಪೂಜೆಗೆ ಹೂ ತರುತ್ತೇನೆ ಎನ್ನುತ್ತಾನೆ.