ನಮ್ಮ ಪಶ್ಚಿಮ ಕರಾವಳಿ ಪ್ರಾಂತದಲ್ಲಿ ಹಿಂದೂ ಧರ್ಮದ ವಿವಿಧ ದೇವಾನುದೇವತೆಗಳನ್ನು ಆರಾಧಿಸುವುದರ ಜತೆಯಲ್ಲಿ, ದೆವ್ವಗಳನ್ನು ಕುರಿತಾದ ನಂಬಿಕೆ ಮತ್ತು ಪೂಜೆಗಳು ವಿಶೇಷವಾಗಿ ರೂಢಿಯಲ್ಲಿವೆ. ‘ದೇವ’, ‘ದೈವ’ ಎಂಬ ಸಂಸ್ಕೃತ ಶಬ್ದಗಳಿಗೆ ಕನ್ನಡದಲ್ಲಿ ‘ದೇವರು’ ಎಂಬುದು ಸಮಾನ ಪದಗಳು. ದೈವದ ತದ್ಭವವೇ ಆದ ‘ದೆವ್ವ’ ಎಂಬ ಶಬ್ದ ಮಾತ್ರ ಅದೇ ಅರ್ಥದಲ್ಲಿ ಬಳಕೆಯಲ್ಲಿಲ್ಲ. ದೆವ್ವ, ಭೂತ ಎಂಬ ಪದಗಳನ್ನು ಹಾನಿಕಾರಕ ಶಕ್ತಿಯುಳ್ಳ ಅಗೋಚರವಾದ, ಅಪರಿಚಿತವಾದ ಕೆಲವು ಜೀವಗಳನ್ನು ಕುರಿತು ಬಳಸುತ್ತಾರೆ. ಪ್ರೇತಾತ್ಮರು ದೆವ್ವಗಳಾಗಿ ಜನರನ್ನು ಕಾಡಬಾರದೆಂದಿಲ್ಲ. ತುಳು ಭಾಷೆಯಲ್ಲಿ ‘ದೈವ’ ಎಂಬ ಶಬ್ದವೇ ‘ದೆಯ್ಯ’ ಎಂದಾಗಿದೆ. ಕನ್ನಡದ ‘ದೆವ್ವ’ ಎಂಬ ಶಬ್ದದಂತೆಯೇ ಬಳಕೆಯಲ್ಲಿದೆ. ಇವೇ ‘ಶಕ್ತಿ’ಗಳಿಗೆ ಭೂತ ಎಂಬ ಇನ್ನೊಂದು ಪರ್ಯಾಯ ಪದವನ್ನು ಬಳಸುತ್ತಾರೆ. ‘ಭೂತ’ ಬೇರೆ, ‘ಪ್ರೇತ’ ಬೇರೆ. ಪ್ರೇತಗಳಲ್ಲಿ ಎರಡು ಜಾತಿಗಳು. ಒಂದು ದೇಹವನ್ನು ನೈಸರ್ಗಿಕ ಸಾವಿನಿಂದ ಬಿಟ್ಟುಹೋದ ಜೀವ; ಇನ್ನೊಂದು-ಬಲವಂತದ ಸಾವಿಗೆ ಗುರಿಯಾದ ಜೀವ; ಅದನ್ನು ‘ಕೊಲೆ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಅಂತೂ, ಭೂತ, ದೈವ, ದೆಯ್ಯ ಮೊದಲಾದ ಅಗೋಚರ ದುಷ್ಟ ಶಕ್ತಿಗಳು ತಮ್ಮನ್ನು ಸದಾ ಕಾಡುತ್ತವೆ; ಅವುಗಳನ್ನು ಹೇಗಾದರೂ ಮಾಡಿ ಒಲಿಸಿ, ಅವುಗಳ ಬಾಧೆಯನ್ನು ತಪ್ಪಿಸಿಕೊಳ್ಳವೇಕು – ಎಂಬ ಭಾವನೆಯು ನಮ್ಮ ಜನಗಳಲ್ಲಿ ರೂಢಿಯಿಂದ ಬಂದಿದೆ. ಇಂಥವುಗಳಿಗೆ ಪ್ರತ್ಯೇಕವಾದ ಗುಡಿಗಳನ್ನು ಕಟ್ಟಿ, ಪ್ರತಿಮೆಯನ್ನು ನಿರ್ಮಿಸಿ, ಇಲ್ಲವೆ ಗೊಂಬೆಯನ್ನು ಮಾಡಿರಿಸಿ, ಪೂಜೆ ಸಲ್ಲಿಸುವ ವಾಡಿಕೆ ನಮ್ಮ ಗ್ರಾಮಾಂತರಗಳಲ್ಲಿ ರೂಢಿಯಲ್ಲಿದೆ. ಕೆಲಕೆಲವು ಕಡೆಗಳಲ್ಲಿ ನೈಸರ್ಗಿಕ ಕಲ್ಲನ್ನೋ, ಬಂಡೆಯನ್ನೋ ಭೂತಕ್ಕೆ ಸಂಕೇತವಾಗಿ ತಿಳಿದು ಪೂಜಿಸಲೂಬಹುದು. ಈ ಸಂಕೇತಗಳು ಯಾವುದೇ ಇರಲಿ, ಅವುಗಳನ್ನು ಪೂಜಿಸುವುದು ಮಾತ್ರ ಪ್ರೀತಿಯಿಂದಲ್ಲ; ಭಯದಿಂದ. ಅವುಗಳ ಪೀಡೆ ತಪ್ಪಬೇಕೆಂದು. ಅವು ಕೋಪಗೊಂಡರೆ, ಅತೃಪ್ತಿ ಪಟ್ಟರೆ ಏನೂ ಮಾಡಿಯಾವು. ಮನುಷ್ಯರು ಒಮ್ಮಿಂದೊಮ್ಮೆ ರಕ್ತ ಕಾರಿ ಸಾಯಬಹುದು. ಒಬ್ಬ ಮನುಷ್ಯನೇ ಆಗಲಿ, ಒಂದು ಪ್ರಾಣಿಯೇ ಆಗಲಿ ರಕ್ತಕಾರಿ ಸತ್ತರೆ ಅದು ಭೂತದ ಬಾಧೆಯೇ ಎಂದು ನಮ್ಮ ಜನರು ತಿಳಿಯುತ್ತಾರೆ. ಮಾರಿಯಮ್ಮನೂ ಅಂಥ ಒಂದು ಕ್ರೂರ ದೈವ. ದಕ್ಷಿಣ ಹಿಂದುಸ್ಥಾನದಲ್ಲೆಲ್ಲ ಅದಕ್ಕೆ ಮನ್ನಣೆಯಿದೆ. ಸೀತಾಳಿ, ಮೈಲಿಗೆ(ಸಿಡುಬು) ಬೇನೆಗಳು ಅದರಿಂದಲೇ ಉಂಟಾಗುತ್ತವೆ ಎಂಬ ನಂಬಿಕೆಯಿದೆ. ಯಾರಾದರೂ ರಕ್ತಕಾರಿ ಸತ್ತರೆ, ಆಗ ‘ಗುಳಿಗ’ ಬಡಿಯಿತು ಅನ್ನುತ್ತಾರೆ. ಗುಳಿಗ, ಹಾಯ್ಗುಳಿ – ಇಂಥ ದೈವಗಳು. ರೈತರಿಗೆ ಪ್ರಿಯವಾದ, ಅನಿವಾರ್ಯವಾದ ದನಕರುಗಳು ಸತ್ತರೂ ಹಾಗೆ, ವಿವಿಧ ರೋಗರುಜೆಗಳಿಗೆ ಗುರಿಯಾದರೂ ಹಾಗೆ ದೆವ್ವದ ಉಪದ್ರವೇ ಕಾರಣ ಎಂದು ಜನ ನಂಬುತ್ತಾರೆ. ಒಂದೊಂದು ಗ್ರಾಮಕ್ಕೂ ವಿಶಿಷ್ಟವಾದ ದೆವ್ವಗಳೂ ಇದ್ದಾವೆ. ಹತ್ತಾರು ಊರುಗಳಲ್ಲಿ ಮನ್ನಣೆ ಪಡೆದು ಬಂದ ದೆವ್ವ ಮತ್ತು ಭೂತಗಳೂ ಇವೆ. ಗೋವೆಯಿಂದ ಕನ್ಯಾಕುಮಾರಿಯ ತನಕ ಚಾಚಿರುವ ಮಲೆನಾಡಿನ ಸೆರಗಿನಲ್ಲಿ ಇಂಥ ದೈವ, ಭೂತಗಳ ಸಂಖ್ಯ ಎಷ್ಟೆಂದರಷ್ಟಿವೆ. ಉತ್ತರ ಭಾಗದ ಕನ್ನಡ ಪ್ರದೇಶಗಳಲ್ಲಿ – ಜಟ್ಟಿಗ, ಮಾಣಿ, ಹಾಯ್ಗುಳಿ, ಗುಳಿಗ, ಉಂಬಲ್ತಿ, ಬೊಬ್ಬರ್ಯ, ಮೊದಲಾದ ಹಲವಾರು ಭೂತಗಳಿವೆ. ಅವೇ ಗುಳಿಗ, ಬೊಬ್ಬರ್ಯಗಳು ತುಳುನಾಡಿನಲ್ಲಿಯೂ ಇವೆ. ತುಳುನಾಡಿನಲ್ಲಿ ಇಂಥ ಭೂತಗಳ ಸಂಖ್ಯೆ ಇನ್ನಷ್ಟು ಹೆಚ್ಚೋ ಏನೋ. ಅದಕ್ಕಿಂತಲೂ ದಕ್ಷಿಣದ ಕೇರಳಕ್ಕೆ ಸರಿದರೆ, ಅದಕ್ಕಿಂತಲೂ ಇಮ್ಮಡಿ ಸಂಖ್ಯೆಯಲ್ಲಿ ದೈವಗಳಿವೆ. ತುಳುನಾಡಿನ ‘ವಿಷ್ಣುಮೂರ್ತಿ’ ಭೂತವು, ಆ ಹೆಸರೇ ಹೇಳುವಂತೆ ನಿಜಕ್ಕೂ ‘ಭೂತ’ವಲ್ಲ; ‘ವಿಷ್ಣು’ವೆಂಬ ದೇವರು. ಅದು ಮಲೆಯಾಳದಿಂದ ಬರಬೇಕು. ಅದರ ಪೂಜಾರಿಗಳು ಮಲೆಯಾಳಿಗಳು. ಅದರ ಸ್ತುತಿಪಾಠಗಳು ಸಂಸ್ಕೃತದಲ್ಲಿವೆ. ನಿಜಕ್ಕೂ ನೋಡಹೋದರೆ – ಅದು ವಿಷ್ಣುವಿನ ನಾಲ್ಕನೆಯ ಅವತಾರವಾದ ‘ನಾರಸಿಂಹ’ ಎಂಬುದಾಗಿ ಅದನ್ನು ಕುರಿತ ಸ್ತುತಿಗಳಿಂದ ತಿಳಿದುಬರುತ್ತದೆ.

ಇಷ್ಟೆಲ್ಲ ಸಂಖ್ಯೆಯಲ್ಲಿ ಭೂತಗಳಿದ್ದರೂ, ಅವುಗಳಿಗೆ ವರ್ಷಂಪ್ರತಿ ಮನ್ನಣೆ ಸಲ್ಲುತ್ತಿದ್ದರೂ – ಅವುಗಳ ಹಿನ್ನೆಲೆಯೇನು, ಕತೆಯೇನು, ಅವುಗಳನ್ನು ಕುರಿತ ಭಾವನೆ ಎಂದು ತೊಡಗಿತು, ಏಕೆ ತೊಡಗಿತು, ಅದು ಹಿಂದೆ ಹೇಗಿತ್ತು, ಈಗ ಹೇಗಿದೆ – ಎಂದು ತಿಳಿಯಲು ಸಾಕಷ್ಟು ಸಾಹಿತ್ಯ ಮಾತ್ರ ದೊರೆಯುವುದಿಲ್ಲ. ಕನ್ನಡ ನಾಡಿನ ದೈವಗಳ ವಿಚಾರದಲ್ಲಿ ಅಂಥ ಸಾಹಿತ್ಯವೇ ಇಲ್ಲ. ಒಬ್ಬೊಬ್ಬರು ಒಂದೊಂದು ಕತೆಯನ್ನು ನೆನಪಿನಿಂದ ಹೇಳಬಹುದು. ಹೀಗಾಗಿ, ಮೂಲ ಕಲ್ಪನೆಯನ್ನು ಇಣುಕಿ ನೋಡಲು ಬರುವುದಿಲ್ಲ. ತುಳುನಾಡಿನ ದೈವಗಳ ವಿಚಾರ ಹಾಗಲ್ಲ – ಅವನ್ನು ಕುರಿತಾದ ಪಾಡ್ದನಗಳಿವೆ. ಅವಕ್ಕೆ ಸಲ್ಲಿಸುವ ಕೋಲ, ನೇಮಗಳೆಂಬ ಉತ್ಸವದ ವೇಳೆ ಅದರ ಪೂಜಾರಿಗಳು (ಹೆಚ್ಚಾಗಿ ಸ್ಥಳೀಯ ಅಬ್ರಾಹ್ಮಣ ವರ್ಗ) ಈ ಪಾಡ್ದನಗಳನ್ನು ಹಾಡುತ್ತಾರೆ. ಒಂದೇ ಭೂತವನ್ನು ಆರಾಧಿಸುವ ನಾಲ್ವರು ಬೇರೆ, ಬೇರೆ ಪೂಜಾರಿಗಳು ಹಾಡಬಹುದಾದ ಪಾಡ್ದನ – ನಾಲ್ಕು ಬೇರೆ, ಬೇರೆಯೇ ಪಾಠಾಂತರಗಳನ್ನು ತೋರಿಸಬಹುದು. ಕಥಾವ್ಯಕ್ತಿಯ ಹೆಸರೂ ಬೆಲಾದುದುಂಟು. ಕಥಾನಕದ ಕಾರಣವೂ ಬದಲಾದುದುಂಟು. ದ್ವೆವದ ಪೌರುಷ, ಪವಾಡಗಳ ವಿಸ್ತಾರವೂ ಹೆಚ್ಚು, ಕಡಿಮೆಯಾಗುವುದುಂಟು. ಪೂಜಾರಿಯು ನೆಲೆಸಿರುವ ಊರಿನ ನಂಬಿಕೆ, ಜನರು, ಅನ್ಯ ಧರ್ಮಗಳ ಪ್ರಭಾವ, ಭಾಷೆಯ ಪ್ರಭಾವ – ಎಲ್ಲವೂ ಅವುಗಳನ್ನು ಮಾರ್ಪಡಿಸಿರುವುದನ್ನು ಕಾಣಬಹುದು. ಕೇರಳದಲ್ಲಿಯೂ ಕೂಡ ಇದೇ ಬಗೆಯ ಕಥಾನಕಗಳಿವೆ. ಬರೆದಿಡದೆ, ಬಾಯ್ದೆರೆ ಹೇಳುವ ಅಂಥ ಕಥಾನಕಗಳಲ್ಲಿ ಇದೇ ರೀತಿಯ ವ್ಯತ್ಯಾಸ ಅಲ್ಲಿಯೂ ಉಂಟಾಗಿರಬಹುದು. ಒಂದೊಂದು ದೈವವನ್ನು ಕುರಿತು ಎಷ್ಟೆಲ್ಲ ಕಥಾನಕಗಳು ಉಳಿದು ಬಂದಿವೆಯೋ, ಅವುಗಳೆಲ್ಲವನ್ನೂ ಸಂಗ್ರಹಿಸಿ, ವಿಶ್ಲೇಷಣೆ ಮಾಡುವುದು ಸಾಧ್ಯವಾದರೆ, ಆಗ ಅಂಥ ಒಂದು ದೈವವನ್ನು ಕುರಿತ ಕಲ್ಪನೆ ಹೇಗೆ ಹುಟ್ಟಿತು, ಯಾಕೆ ಹುಟ್ಟಿತು – ಎಂಬುದನ್ನು ನಾವು ತಿಳಿದುಕೊಳ್ಳಲು ಸಾಧ್ಯವಾಗಬಹುದು.

ನಾನೊಮ್ಮೆ, ತುಳುನಾಡಿನ ಪಂಜುರ್ಲಿ ಭೂತದ ನಾಲ್ಕು ಕಥಾನಕಗಳನ್ನು ಪರಿಶೀಲಿಸಿ ನೋಡಿದಾಗ ಅದರ ಹಿನ್ನೆಲೆಯನ್ನು ಸ್ವಲ್ಪ ಮಟ್ಟಿಗೆ ಇಣಿಕಿ ನೋಡಲು ಸಾಧ್ಯವಾಯಿತು. ಈ ವಿಚಾರವನ್ನು ನನ್ನ ‘ಜಾನಪದ ಗೀತೆಗಳು’ ಎಂಬೊಂದು ಬರಹದಲ್ಲಿ ಸಾಕಷ್ಟು ತಿಳಿಸಿದ್ದೇನೆ. ಈ ಲೇಖನದಲ್ಲಿ ಇನ್ನೊಂದು ಭೂತವನ್ನು ಕುರಿತಾದ ವಿಚಿತ್ರ ಸಮಸ್ಯೆಯನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ. ಅದೆಂದರೆ – ಕನ್ನಡ, ತುಳು ಮತ್ತು ಮಲೆಯಾಳಿ ಪ್ರದೇಶಗಳಲ್ಲಿ ಇರುವ, ಒಂದೇ ಎಂದು ಕಾಣಿಸುವ, ಆದರೂ, ಬೇರೆ ಬೇರೆಯೇ ಹೆಸರನ್ನು ಪಡೆದಿರುವ, ‘ಕಲ್ಲುರ್ಟಿ’ ಭೂತದ ವಿಚಾರ. ನಾಡಿನ ಕನ್ನಡ ಮಾತಾಡುವ ಭಾಗದಲ್ಲಿ – ಇದನ್ನು ‘ಕಲ್ಕುಟಿಗ’ (ಕಲ್ಕುಟ್ಕ) ಎಂದು ಕರೆಯುತ್ತಾರೆ. ಆ ಹೆಸರೇ ಹೇಳುವಂತೆ – ಇದು ಗಂಡು ಭೂತ. ‘ಕಲ್ಕುಟಿಗ’ ಎಂಬ ಪದ ವೃತ್ತಿಸೂಚಕವಾದ ಪದ, ಕಲ್ಲಿನ ಕೆಲಸ ಮಾಡುವ ವೃತ್ತಿ. ಆ ಹೆಸರಿನಿಂದ ಇನ್ನೊಂದು ಅರ್ಥವನ್ನೂ ನಾವು ಹೊರಡಿಸಬಹುದು. ಕಲ್ಲಿನಿಂದ ಕುಟ್ಟುವ ಅಥವಾ ಕಲ್ಲನ್ನು ಎಸೆಯುವ ಉಪಟಳ ಮಾಡುವ ವ್ಯಕ್ತಿ ಎನ್ನಲೂಬಹುದು. ಕನ್ನಡ ಪ್ರದೇಶದಲ್ಲಿ ಕಲ್ಕುಟಿಗನ ಹಾವಳಿಯಲ್ಲಿ – ಮನೆಯ ಮೇಲೆ ಕಲ್ಲಿನ ಮಳೆ ಕರೆಯುವ, ಕಲ್ಲುಗಳನ್ನು ಎಸೆಯುವ ವಿದ್ಯಮಾನ ವಿಶೇಷವಾಗಿ ಕಾಣಿಸುತ್ತದೆ.

‘ಕಲ್ಕುಟಿಗ’ ಎಂಬ ಕನ್ನಡ ಪದಕ್ಕೆ ಪರ್ಯಾಯವಾಗಿ ‘ಕಲ್ಕುಡ’ ಎಂಬ ತುಳು ಪದವಿದೆ. ಕಲ್ಕುಡ ಗಂಡು ಭೂತ. ಅದು ಕಲ್ಲು ಕೆಲಸ ಮಾಡುತ್ತಿದ್ದವನೊಬ್ಬನ ಪ್ರೇತ. ಈ ಕಲ್ಕುಡನ ಜತೆಯಲ್ಲಿ, ಅವಳಿ ಜವಳಿಯಾಗಿ ಹುಟ್ಟಿದ ತಂಗಿಯೊಬ್ಬಳಿದ್ದಾಳೆ. ಅವಳು ‘ಕಲ್ಲುರ್ಟಿ’. ಕಲ್ಕುಡ ಭೂತಕ್ಕೂ ಆರಾಧನೆಯಿದೆ. ಕಲ್ಲುರ್ಟಿಗೂ ಇದೆ. ಆದರೆ, ಕಲ್ಕುಡನಿಗೆ ಸಂಬಂಧಿಸಿದ ಪಾಡ್ದನದಲ್ಲಿ ಅವನ ಹಸೆರು ‘ಸಂಬು’ ಎಂದು. ಈ ಸಂಬು, ಸೂವ ಎಂಬ ಕಲ್ಕುಡನ ಮಗ. ಆ ಕಲ್ಕುಡನಿಗೆ, ಕಲ್ಲುರ್ಟಿ ಮಾಡುವ ರೀತಿಯಲ್ಲಿ ಉಪಟಳ ಮಾಡುವವನೆಂಬ ನಂಬಿಕೆಯಿಲ್ಲ. ಕಲ್ಕುಡನ ತಂಗಿ ಕಲ್ಲುರ್ಟಿಯ ವಿಚಾರದಲ್ಲಿ, ಕನ್ನಡ ಪ್ರಾಂತದ ಕಲ್ಕುಟಿಗನಿಗೆ ಹೇಳತಕ್ಕ ಎಲ್ಲ ಪವಾಡಗಳನ್ನೂ ಹೇಳುತ್ತದೆ. ಕಲ್ಲುರ್ಟಿ ಹೆಣ್ಣು ಭೂತವಷ್ಟೆ. ಅದಕ್ಕೆ ಸಂಬಂಧಿಸಿದ ಪಾಡ್ದನದಲ್ಲಿ ಅವಳ ಮೂಲ ಹೆಸರು ‘ಕಾಳಿ’. ಅವಳ ಅವಳಿ ಸಹೋದರನ ಹೆಸರು ಬೀರ. ಈ ಕತೆಯ ಇನ್ನೊಂದು ಪಾಠಾಂತರದಲ್ಲಿ ಅವಳ ಹೆಸರು ‘ದುರ್ಗಿ’, ಅಣ್ಣ ಕಲ್ಕುಡನಾದವನ ಹೆಸರು ಬೀರ. ಅವರಿಬ್ಬರ ತಂದೆಯ ಹೆಸರು ಸಂಬು. ಒಂದು ಕತೆಯಲ್ಲಿ ತಂದೆ ‘ಸಂಬು’ ಎಂದು ಹೇಳುತ್ತದೆ. ಹೀಗೆ, ಈ ವ್ಯಕ್ತಿಗಳ ಮೂಲ ಹೆಸರಿನಲ್ಲೇ ಗೊಂದಲ ಕಾಣುತ್ತದೆ. ಅಂತೂ, ಈ ಪಾಡ್ದನದ ಕತೆಯನ್ನು ವಿಶ್ಲೇಷಿಸುವ ಮೊದಲು, ಕೇರಳದ ತತ್ಸಮಾನ ಭೂತದ ಹೆಸರನ್ನು ಕುರಿತು ಯೋಚಿಸುವ. ಅಲ್ಲಿ ಈ ಭೂತ ‘ಕುಟ್ಟಿಚಾತನ್’ ಎಂಬ ಹೆಸರಿನಲ್ಲಿ ರೂಢಿಯಲ್ಲಿದೆ. ಕುಟ್ಟಿ ಎಂದರೆ ಮಗು ಅಥವಾ ಚಿಕ್ಕವ. ಜಾತನ್ ಎಂಬ ಪದ ಪುಲ್ಲಿಂಗವನ್ನೇ ಸೂಚಿಸುತ್ತಿರಬೇಕು. ಪವಾಡಗಳನ್ನು ಈ ಭೂತದ ಉಪದ್ರವನ್ನು ಎಣಿಸಿದರೆ, ಕಲ್ಕುಟಿಗ, ತುಳುನಾಡಿನ ಕಲ್ಲುರ್ಟಿ ಮತ್ತು ಕೇರಳದ ಕುಟ್ಟಿಚಾತನ್ ಒಂದೇ ತೆರನ ಶಕ್ತಿಯನ್ನು ಉದ್ದೇಶಿಸುವಂತೆ ಕಾಣಿಸುತ್ತದೆ.

ಇತರ ಎಲ್ಲ ಭೂತಗಳನ್ನು ಕುರಿತು ಇರುವುದಕ್ಕಿಂತಲೂ ಅಧಿಕವಾದ ಭಯ, ಭೀತಿ ಈ ಭೂತವನ್ನು ಕುರಿತಾಗಿದೆ. ಅದರ ವಕ್ರದೃಷ್ಟಿಗೆ ಗುರಿಯಾದ ವ್ಯಕ್ತಿಯು ತನ್ನ ಮನೆಯನ್ನೋ, ಊರನ್ನೋ ಬಿಟ್ಟು ಓಡಬೇಕಾದೀತು. ಅದು ಮನೆಯನ್ನು ಹೊತ್ತಿಸಬಹುದು. ನಗ, ನಾಣ್ಯ, ಅರಿವೆಗಳನ್ನು ಕದಿಯಬಹುದು. ಮಕ್ಕಳನ್ನು ಅಡಗಿಸಬಹುದು; ನೀರಲ್ಲಿ ಮುಳುಗಿಸಿಡಬಹುದು. ಅಟ್ಟ ಅಡುಗೆಯಲ್ಲಿ ಹೊಲಸನ್ನು ತಂದು ಸುರಿಯಬಹುದು. ಅದಕ್ಕೆ ಶರಣು ಹೋಗದೆ ಗತ್ಯಂತರವೇ ಇಲ್ಲ. ಅದು ಬರಿಯ ಹಿಂದುಗಳನ್ನು ಮಾತ್ರ ಕಾಡುವುದಿಲ್ಲ. ಹಿಂದೂ ಧರ್ಮವನ್ನು ನಂಬದ ಮುಸಲ್ಮಾನರನ್ನೂ, ಕ್ರಿಶ್ಚಿಯನರನ್ನೂ, ಬಿಳಿಯರನ್ನೂ ಕಾಡಿ, ಕುಣಿಸಿದ ಅಸಂಖ್ಯ ಕತೆಗಳು ರೂಢಿಯಲ್ಲಿವೆ. ಇವು ಕೇವಲ ಕಟ್ಟುಕತೆಗಳು ಎನ್ನುವಂತೆಯೂ ಇಲ್ಲ. ಜನರು ಹೇಳುವ ಕತೆಗಳೆಲ್ಲವೂ ನಿಜವಾಗದಿದ್ದರೂ, ನಂಬಬಹುದಾದ ಕೆಲವಾದರೂ ಸಾಕ್ಷಿಗಳು ಸಿಗುತ್ತವೆ. ಕುಂದಾಪುರದಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ಒಬ್ಬ ಉಪಾಧ್ಯಾಯರನ್ನು ಅದು ಕಾಡಿದ ನಿದರ್ಶನವಿದೆ. ಅವರು ಕ್ರೈಸ್ತಮತಕ್ಕೆ ಸೇರಿದವರು. ಆ ಭೂತದ ಕಲ್ಲೊಂದನ್ನು, ತಮ್ಮ ಮನೆಯ ಬಚ್ಚಲಿಗೆ ತಂದು ಹಾಕಿದ ಪರಿಣಾಮವಾಗಿ, ಅವರಿಗೆ ಭೂತದ ಬಾಧೆ ತೊಡಗಿತು. ಅವರ ಮನೆಯ ಬಟ್ಟೆಬರೆಗಳು ಸುಟ್ಟು ಹೋದುವು, ಮನೆಯ ಮೇಲೆ ಕಲ್ಲೂ ಬೀಳತೊಡಗಿತು. ಮನೆಯಲ್ಲಿ ಅಡುಗೆ ಮಾಡುವುದೂ ಅಸಾಧ್ಯವಾಯಿತು. ಅಸಹನೀಯ ಉಪದ್ರವಾಯಿತು. ನಾನು ಕುತೂಲದಿಂದ ನೋಡಲು ಹೋದ ದಿನ – ಕ್ರೈಸ್ತ ಉಪದೇಶಿಗಳು ಅದರ ಪರಿಹಾರಕ್ಕೆ ಬಂದಿದ್ದರು. ಅವರು, ಮನೆಯ ಕೆಲಸದ ಹುಡುಗಿಯ ಕೈಯಲ್ಲಿ, ತೆಂಗಿನ ಗರಿಯಿಂದ ಮಾಡಿದ ಕ್ರೂಜೆಯೊಂದನ್ನು ಕೊಟ್ಟು, ಮನೆಯೊಳಕ್ಕೆ ಕಳುಹಿಸಿದರು. ಆ ಹುಡುಗಿ ಬೊಬ್ಬಿರಿದು ಹೊರಕ್ಕೆ ಓಡಿಬಂತು. ಅದರ ತಲೆಯ ಮೇಲೆಲ್ಲ ಚಿಮಿಣಿ ಎಣ್ಣೆ ಮತ್ತು ಮಣ್ಣು ಬಿದ್ದಿತ್ತು. ನಡು ಮಧ್ಯಾಹ್ನದಲ್ಲಿ ನಡೆದ ಘಟನೆ ಇದು.

ಈಗ, ಈ ಭೂತದ ಪಾಡ್ದನವನ್ನು ನಿಮ್ಮ ಮುಂದಿಡುತ್ತೇನೆ.

ಕೆಲ್ಲತ್ತ ಮಾರ್ನಾಡು ಎಂಬ ಊರಿನಲ್ಲಿ ಇರವದಿ ಎಂಬಾಕೆ, ಸಂಬು ಕಲ್ಕುಡ ಎಂಬ ಗಂಡನೊಡನೆ ಬಾಳಿಕೊಂಡಿದ್ದಳು. ಅವಳಿಗೆ ನಾಲ್ಕೈದು ಗಂಡು ಮಕ್ಕಳು. ಎಲ್ಲಣ್ಣ, ಮಲ್ಲಣ್ಣ, ಬಿಕ್ರು, ನಂದು ಮೊದಲಾದವರು. ಅವರೆಲ್ಲರೂ ದೊಡ್ದವರಾಗಿ ಕಂಚಿನ ಕೆಲಸ, ತಾಮ್ರದ ಕೆಲಸ, ಮರದ ಕೆಲಸ, ಕಬ್ಬಿಣದ ಕೆಲಸ ಮೊದಲಾದುವನ್ನು ಕಲಿತುಕೊಂಡು ಬೇರೆ ಬೇರೆ ಊರುಗಳಿಗೆ ಹೋಗಿ, ಜೀವನ ಸಾಗಿಸಿದರು. ತಾಯಿ ಇರವದಿ ಮತ್ತೊಮ್ಮೆ ಬಸುರಿಯಾದಾಗ, ತಂದೆ ಸಂಬು ಕಲ್ಕುಡನಿಗೆ (ಆತ ಪ್ರಸಿದ್ಧ ಶಿಲ್ಪಿ ಎಂಬುದನ್ನು ಕೇಳಿ) ಬೆಳಗೊಳದ ದೊರೆಗಳಿಗೆ ಕರೆ ಬರುತ್ತದೆ. ಈತ ಹೋಗುತ್ತಾನೆ. ಗರ್ಭಿಣಿ ಹೆಂಡತಿ ಹೆರುವ ತನಕ ಕಾದು ಕುಳಿತಿರುವುದಿಲ್ಲ. ಹೋಗಿ, ತನ್ನ ಕೆಲಸದಲ್ಲಿ ಮೈಮರೆತು ಕಾಲ ಕಳೆಯುತ್ತಾನೆ. ಅಲ್ಲಿ ಅರಮನೆ, ಬಸದಿ, ಗೊಮ್ಮಟ – ಮೊದಲಾದ ಯಾವತ್ತೂ ಶಿಲ್ಪ, ವಾಸ್ತುಶಿಲ್ಪ ರಚನೆಗಳನ್ನು ಮಾಡಿ, ಪ್ರಸಿದ್ಧನಾಗುತ್ತಾನೆ. ಅರಸರಿಂದ ಮನ್ನಣೆ ಸಂಪಾದಿಸುತ್ತಾನೆ.

ಇತ್ತ ಗಂಡನು ಬೆಳಗೊಳಕ್ಕೆ ಹೊರಟಾಗ ಗರ್ಭಿಣಿಯಾಗಿದ್ದ ಹೆಂಡತಿ ಇರವದಿಯು ಅನಂತರ ಅವಳಿ ಮಕ್ಕಳನ್ನು ಹಡೆಯುತ್ತಾಳೆ. ಹಿರಿಯ ಮಗು ಗಂಡು; ಕಿರಿಯದು ಹೆಣ್ಣು. ಈ ಅಣ್ಣ – ತಂಗಿಯರು ‘ಬೀರ’, ‘ಕಾಳಿ’ ಎಂಬ ಹೆಸರಿನಲ್ಲಿ ಬೆಳೆಯುತ್ತಾರೆ. ಬೀರ ಹುಡುಗನಾಗಿ ಬೆಳೆದಂತೆ, ಅವನ ಗೆಳೆಯರು ಅವನನ್ನು ‘ತಂದೆಯಿಲ್ಲದ ಮುಂಡೆ ಮಗ’ ಎಂದು ಹೀಯಾಳಿಸಿದುದರಿಂದ ಆತ ತನ್ನ ತಾಯಿಯನ್ನು ‘ನನ್ನ ತಂದೆ ಎಲ್ಲಿ?’ ಎಂದು ಅವಳು ಇದ್ದ ಸಂಗತಿಯನ್ನು ಹೇಳುತ್ತಾಳೆ. ಹುಡುಗ ಹಟಮಾಡಿ, ತಂದೆಯನ್ನು ಕರೆತರಲು ಪಯಣ ಹೊರಡುತ್ತಾನೆ. ದಾರಿಯಲ್ಲಿ ಒಂದು ಕಡೆ ಆತ ವಿರಮಿಸಿದ ಸ್ಥಳಕ್ಕೇನೆ, ಕುದುರೆಯನ್ನೇರಿ ಊರಿಗೆ ಮರಳುತ್ತಿದ್ದ ಸಂಬು ಕಲ್ಕುಡ ಬಂದು ಸೇರುತ್ತಾನೆ. ಆತ ಹುಡುಗನ ಊರು, ಮನೆ, ಮಠಗಳನ್ನು ಕುರಿತು ಪ್ರಶ್ನಿಸಿದಾಗ ಅವನಾರೆಂಬುದನ್ನು ತಿಳಿಯುತ್ತದೆ. ತಂದೆಗೆ ಮಗನ ಗುರುತಾಗುತ್ತದೆ. ಮಗನಿಗೆ ತಂದೆಯ ಗುರುತಾಗುತ್ತದೆ. ಮಗ ತಂದೆಯ ಶಿಲ್ಪ ಮತ್ತು ವಾಸ್ತು ಶಿಲ್ಪ ನಿರ್ಮಾಣಗಳ ಕತೆಯನ್ನು ಕೇಳಿ, ಅವನ್ನು ಕಾಣುವ ಹಟ ತೊಟ್ಟದ್ದರಿಂದ, ಇಬ್ಬರೂ ಕೂಡಿ ಬೆಳಗೊಳಕ್ಕೆ ಬರುತ್ತಾರೆ. ತಂದೆ ತೋರಿಸಿದ ಆಕೃತಿಗಳನ್ನು ಕಂಡಾಗ ಮಗನು, ಅವನು ಕೆತ್ತಿದ ಒಂದು ವಿಗ್ರಹದಲ್ಲಿ ಹುದುಗಿದ್ದ ಕಪ್ಪೆಯನ್ನು ತೋರಿಸಿಕೊಟ್ಟ. ತನ್ನಿಂದಾದ ಈ ಅಪರಾಧಕ್ಕಾಗಿ ಸಂಬು ಕಲ್ಕುಡ ಅಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮಗನು ತಂದೆಯನ್ನು ಮೀರುವ ಶಿಲ್ಪಿಯಾಗುವ ಹಟ ತೊಡುತ್ತಾನೆ. ಮುಂದೆ, ಅವನೂ ಬೆಳಗೊಳದ ಅರಸರ ಮನ್ನಣೆ ಪಡೆಯುತ್ತಾನೆ. ಅಲ್ಲಿನ ಕೆಲಸಗಳನ್ನು ಮುಗಿಸಿ ಕೊಲ್ಲೂರಿಗೆ ಹೋಗಿ, ಅಲ್ಲಿ ಮೂಕಾಂಬಿಕೆಯ ವಿಗ್ರಹವನ್ನು ನಿರ್ಮಿಸುತ್ತಾನೆ. ಅಲ್ಲಿಂದ ನಗರಕ್ಕೆ ಹೋಗಿ ಒಂದು ದೇವಾಲಯ ನಿರ್ಮಿಸುತ್ತಾನೆ. ಅವನ ಪ್ರಸಿದ್ಧಿಯು ಕಾರ್ಕಳದ ಸೂಡ ಅರಸರಿಗೂ ಕೇಳಿ ಬರುತ್ತದೆ. ಅವರು ಅವನನ್ನು ಕರೆಯಿಸಿಕೊಂಡು, ಕಾರ್ಕಳದಲ್ಲಿ ಅರಮನೆ ಕಟ್ಟಿಸುತ್ತಾರೆ; ಬಸದಿ ನಿರ್ಮಿಸುತ್ತಾರೆ. ಬೆಟ್ಟದ ಮೇಲೊಂದು ಗೊಮ್ಮಟವನ್ನು ನಿಲ್ಲಿಸಲು ಆಜ್ಞೆ ಮಾಡುತ್ತಾರೆ. ಬೀರನೇ ಕೆತ್ತಿದ ಗೊಮ್ಮಟವನ್ನು, ಇತರರು ಎತ್ತಿ ನಿಲ್ಲಿಸಲಾರದೆ ಹೋದಾಗ, ಆತನೊಬ್ಬನೇ ಕೈಕೊಟ್ಟು ಅದನ್ನು ನಿಲ್ಲಿಸುತ್ತಾನೆ. ಅರಸರಿಗೆ ತುಂಬ ಸಂತೋಷವಾಯಿತು. ಅವನಿಗೆ ಪ್ರಸಿದ್ಧಿ ಬಂತು. ಆದರೆ, ಅರಸರಿಗೆ ಒಂದು ಆಸೆಯಿತ್ತು. – ಇತರರು ಯಾರೂ ಅವನಿಂದ ಇಂಥದೇ ಕೆಲಸ ಮಾಡಿಸಬಾರದೆಂದು. ಹಾಗಾಗಿ, ಅವನ ಒಂದು ಕಾಲನ್ನು, ಒಂದು ಕೈಯನ್ನು ಕಡಿಸಿ ಹಾಕುತ್ತಾರೆ.ಈ ಸ್ಥಿತಿಯಲ್ಲಿ ಬೀರ ಕಲ್ಕುಡ ವೇಣೂರಿಗೆ ಹೋಗುತ್ತಾನೆ. ವೇಣೂರಿನ ಅರಸರು ಕಾರ್ಕಳದ ಅರಸರನ್ನು ಮೀರಿಸುವ ಆಸೆಯಿಂದ, ಅಲ್ಲೂ ಒಂದು ಗೊಮ್ಮಟ ನಿಲ್ಲಿಸುವ ಅಪೇಕ್ಷೆ ತಾಳುತ್ತಾರೆ. ಒಂದೊಂದು ಕೈಕಾಲುಗಳನ್ನು ಕಳೆದುಕೊಂಡ ಕಲ್ಕುಡ ಬೀರನ ನಿರ್ದೇಶನದಲ್ಲಿ, ಅಷ್ಟೆಲ್ಲ ಕೆಲಸವೂ ನಡೆಯಿತು.

ಈ ದೀರ್ಘಾವದಿಯಲ್ಲಿ, ತನ್ನ ಅಣ್ಣನನ್ನು ಕಳೆದುಕೊಂಡ ಕಾಳಿಯು ಅವನನ್ನು ಹುಡುಕುತ್ತ ದೇಶ, ದೇಶಗಳಿಗೆ ಅಲೆದಾಡಿ ವೇಣೂರಿಗೆ ಬಂದು, ಅವನನ್ನು ಕಂಡುಹಿಡಿಯುತ್ತಾಳೆ. ಅವನಿಗೆ ಅದ ಅನ್ಯಾಯದ ಸೇಡನ್ನು ತೀರಿಸುವ ಹಟ ತೊಡುತ್ತಾಳೆ. ಮೊದಲು ಅವರು ತಮ್ಮ ತಂದೆಗೆ ಕಾಶಿ, ತಿರುಪತಿ ಮೊದಲಾದ ಕ್ಷೇತ್ರಗಳಲ್ಲಿ ಪಿಂಡ ಸಲ್ಲಿಸಿ ಬರುತ್ತಾರೆ. ಅನಂತರ, ಮಾಯಾ ರೂಪವನ್ನು ತಾಳಿ ಕಾರ್ಕಳಕ್ಕೆ ಹೋಗುತ್ತಾರೆ. ಮಾಯಾ ರೂಪದಿಂದ ಸೂಡ ಅರಸರ ಅರಮನೆಯನ್ನು ಸುಡುತ್ತಾರೆ. ಅರಸನ ತಾಯಿಯನ್ನು ನೀರಲ್ಲಿ ಅಡಗಿಸಿಡುತ್ತಾರೆ. ಆತನಿಗೆ ಸಹಿಸಲಾರದಷ್ಟು ಉಪದ್ರ ಕೊಡುತ್ತಾರೆ. ಅರಸರಿಗೆ ಇದು, ಕಾಳಿ ಮತ್ತು ಬೀರರ ಸೇಡೆಂದು ಒಬ್ಬ ಮಂತ್ರವಾದಿಯ ಮುಖದಿಂದ ತಿಳಿಯುತ್ತದೆ. ಈ ಮಾಯಾವಿಗಳನ್ನು ವಶಗೊಳಿಸಿ, ಬಂಧನದಲ್ಲಿಡಲು ಉಪ್ಪಿನಂಗಡಿಯ ಪ್ರಸಿದ್ಧ ಮಂತ್ರವಾದಿಗಳಾದ ವೈಲಾಯರಿಗೆ ರಾಯಸ ಹೋಗುತ್ತದೆ. ರಾಯಸದ ಬೆನ್ನಿಗೇ ಈ ಮಾಯಾವಿಗಳು ಹೊರಟು, ಉಪ್ಪಿನಂಗಡಿ ನದಿಯ ದಂಡೆಯಲ್ಲಿ ಕಾದು ಕುಳಿತಿರುತ್ತವೆ. ಕಾರ್ಕಳದ ದೊರೆಯ ಆಮಂತ್ರಣ ಕಂಡು ವೈಲಾಯರು ಹೊರಟು ಬಂದರೆ, ಅವರನ್ನು ಈ ಎರಡು ಭೂತಗಳು ಅಂಜಿಸಿ ಓಡಿಸುತ್ತವೆ. ಅವರು ಯೋಚನೆ ಮಾಡಿ, ಮಾಡಿ, ತಿರುಗಿ ಅವುಗಳ ಬಳಿಗೆ ಹೋಗಿ, ಅವುಗಳನ್ನು ಒಲಿಸುವ ಪ್ರಯತ್ನ ಮಾಡುತ್ತಾರೆ. ಅವುಗಳ ತೃಪ್ತಿಗಾಗಿ ಸ್ಥಾನ, ಪೂಜೆ, ಅಲಂಕಾರ ಮೊದಲಾದವುಗಳಿಂದ ಒಲಿಸಿ, ಸದಾ ಕಾಲ ಪೂಜೆ, ಪುರಸ್ಕಾರ ನಡೆಯುವಂತೆ ಏರ್ಪಾಡು ಮಾಡುತ್ತಾರೆ….

ಪ್ರಥಮದಲ್ಲಿ – ಕಾಲಮಾನದ ದೃಷ್ಟಿಯಿಂದ – ಬೆಳಗೊಳ, ಕಾರ್ಕಳ, ವೇಣೂರುಗಳ ಗೊಮ್ಮಟಗಳು ನಾಲ್ಕೆಂಟು ಶತಮಾನಗಳ ದೂರದವು. ನಗರ ಮತ್ತು ಕೊಲ್ಲೂರುಗಳ ರಚನೆಯಾದರೂ ಹಾಗೇನೆ. ಇವು ಯಾವನೇ ಒಬ್ಬ ಶಿಲ್ಪಿಯ ಅಥವಾ ವಾಸ್ತುಕಾರನ ರಚನೆಗಳಲ್ಲ; ಮೂಲ ಕತೆಗೆ, ಕಾಲಾಂತರದಲ್ಲಿ ಈ ಎಲ್ಲ ವಾಸ್ತು ನಿರ್ಮಾಣಗಳ ಕೀರ್ತಿ ಅಂಟಿಕೊಂಡು ಬಂದಿರಬೇಕು. ಮೂಲ ಕತೆಗೆ ಕಲ್ಲುಕುಟಿಗನೊಬ್ಬನ ಆಕಸ್ಮಿಕ ಸಾವು ಕಾರಣವಾಗಿದ್ದು, ಅವನ ಪ್ರೇತದ ಭಯ, ಪ್ರೇರಣೆಯನ್ನು ಕೊಟ್ಟಿರಲೂಬಹುದು. ಕಲ್ಕುಟಿಗ ಮತ್ತು ಕುಟ್ಟಿಚಾತನ್ ಎಂಬ ದೈವಗಳು ಕೊಡುವ ಉಪಟಳದ ಚಿತ್ರವು – ಕಾರ್ಕಳದ ಸೂಡ ಅರಸರ ಮೇಲೆ ಆ ಅಣ್ಣ – ತಂಗಿಯರು ತೋರಿಸಿದ ಪ್ರತೀಕಾರದ ರೀತಿಯಲ್ಲೂ ಕಾಣಬಹುದು. ಆ ಭೂತದ ಕಾರಣಿಕವನ್ನು ಅಂಥ ವಿದ್ಯಮಾನಗಳಿಂದ ಕೇರಳ, ಕನ್ನಡ ತುಳುನಾಡುಗಳಲ್ಲೆಲ್ಲ ಬಣ್ಣಿಸುತ್ತಾರೆ. ವಾಸ್ತವಿಕವಾಗಿ – ಇವಾವುವೂ ನಮಗೆ ಈ ಭೂತದ ಹಿನ್ನೆಲೆಯನ್ನಾಗಲೀ, ಅಂಥ ಕಲ್ಪನೆಗೆ ಕಾರಣವನ್ನಾಗಲೀ ಸೂಚಿಸುವುದಿಲ್ಲ. ಸಂಬಂಧಪಡದ ಜನರು ಅದಕ್ಕೆ ಬೆದರಬೇಕೇಕೆ – ಎಂಬ ಸೂಚನೆಯನ್ನು ಈ ಕತೆ ಕೊಡುವುದಿಲ್ಲ. ಈಗ ಪಂಜುರ್ಲಿ ಭೂತದ ಕತೆಯಿದೆ. ಪಂಜುರ್ಲಿ – ಕೋಣಗಳಿಗೆ ಬಾಧೆ ಕೊಡುವ ಭೂತ. ಕೃಷಿಕರ್ಮ ಮಾಡುವ ರೈತರಿಗೆ ಕೋಣಗಳ ಅವಲಂಬನೆ ತಪ್ಪಿದ್ದಲ್ಲ. ಅದಕ್ಕೆ ಬರುವ ರೋಗರುಜೆಗೆ ಪಂಜುರ್ಲಿ ಕಾರಣವೆಂಬ ನಂಬಿಕೆ ಉಳಿದಿದ್ದರೆ, ಆ ಭೂತವನ್ನು ಜನರು ನಂಬಲೇಬೇಕಾಗುತ್ತದೆ. ಕಲ್ಲುರ್ಟಿಯ ಕತೆಯಲ್ಲಿ ಅಂಥ ಅವಕಾಶ ಇಲ್ಲ. ಮನೆ, ಅರಮನೆ, ವಾಸ್ತುಗಳನ್ನು ಕಟ್ಟಿಸುವವರು, ಅವು ಕೆಡಬಾರದೆಂದು, ಕೆಡಿಸಬಲ್ಲ ಶಕ್ತಿಯೊಂದನ್ನು ಪೂಜಿಸುವ ಸಂದರ್ಭ ಬಂದರೆ, ಆಗಲಾದರೂ ಕಥೆಗೆ ಸಮರ್ಥನೆ ಸಿಗುತ್ತದೆ.

ಪ್ರಾಯಶಃ ಕೇರಳದಲ್ಲಿ ಪ್ರಸಿದ್ಧವಾಗಿರುವ ಕುಟ್ಟಿಚಾತನ್‌ಭೂತದ ಕಥಾನಕಗಳಿಂದ, ಇದಕ್ಕಿಂತ ಪ್ರತ್ಯೇಕವಾದ ಅಥವಾ ಅರ್ಥಸೂಚಕವಾದ ಕತೆ ನಮಗೆ ದೊರೆಯಬಹುದೋ ಏನೋ. ಅಂತು ಮನಶ್ಯಾಸ್ತ್ರದ ದೃಷ್ಟಿಯಿಂದ ಮತ್ತು ಮಾನವಶಾಸ್ತ್ರದ ದೃಷ್ಟಿಯಿಂದ, ಈ ಬಗೆಯ ದೈವ್ವಗಳನ್ನು ಕುರಿತು ಅಭ್ಯಸಿಸುವುದಕ್ಕೆ ನಮ್ಮ ನಾಡು ಮತ್ತು ನೆರೆಯ ಕೇರಳ ದೇಶದ ಒಂದು ದೊಡ್ಡ ಕ್ಷೇತ್ರವಾಗಿದೆ.