ಭಾರತೀಯ ಪರಂಪರೆಯಲ್ಲಿ ಭೂತಾರಾಧನೆ ಅತಿ ಪ್ರಾಚೀನವಾದುದು. ಸಿಂಧೂ ಕಣಿವೆ ಸಂಸ್ಕೃತಿಯಲ್ಲಿ ಭೂತಾರಾಧನೆಯ ಮಾಹಿತಿಗಳು ದೊರಕುತ್ತವೆ. ತಮಿಳಿನ ಪ್ರಸಿದ್ಧ ಮಹಾಕಾವ್ಯವಾದ ಶಿಲಪ್ಪದಿಕಾರಮ್ ಇದರಲ್ಲಿ ಕೂಡ ಈ ಕುರಿತ ಉಲ್ಲೇಖವಿದೆ. ಚೋಳರ ರಾಜಧಾನಿಯಾಗಿದ್ದ ಕಾವೇರಿ ಪೂಂಪಟ್ಟಣಮ್‌ನಲ್ಲಿ ಭೂತಕಾಟುಕ್ಕಮ್‌ ಎನ್ನುವ ಒಂದು ಸ್ಥಳದಲ್ಲಿ ಭೂತವೊಂದು ನಾಲ್ಕು ಮುಖ್ಯ ಬೀದಿಗಳು ಕೂಡುವಲ್ಲಿ ತನ್ನ ಬಲಿಪೀಠದಲ್ಲಿ ವಿವಿಧ ಜನರನ್ನು ಹಿಡಿದು ನುಂಗುತ್ತಿತ್ತೆನ್ನಲಾಗಿದೆ. ತುಳುನಾಡಿನಲ್ಲಿ ಭೂತಾರಾಧನೆಯು ಮುಖ್ಯವಾಗಿ ಧಾರ್ಮಿಕ ಪರಂಪರೆಯಲ್ಲಿ ಮೆರೆಯುತ್ತಿದೆ. ಹೀಗಿದ್ದರೂ ಗ್ರಾಮೀಣ ಮನೋರಂಜನಾ ಸಾಧನಗಳಲ್ಲಿ ಭೂತಾರಾಧನೆಯೂ ಒಂದಾಗಿದ್ದು ಅದು ತುಳುನಾಡಿನ ಒಂದು ವಿಶಿಷ್ಟ ಕಲೆಯೂ ಹೌದಾಗಿದೆ. ಜೊತೆಗೆ ಇದೊಂದು ಜನಪದ ರಂಗಭೂಮಿಯೂ ಹೌದು.

ಭೂತದ ಅದ್ಭುತ ರಮ್ಯ ವೇಷ, ಅಲಂಕಾರ ಆಭರಣಗಳು, ಬೆಳ್ಗೊಡೆ, ಪಾಲಕಿ, ಧ್ವಜಸ್ತಂಭ, ಗರುಡ, ಬಸವ, ತಾಸೆ, ತೆಂಬರೆ, ನಾಗಸ್ವರ, ವಾದ್ಯ ಮೇಳಾದಿ ಭವ್ಯತೆಯ ಸಂಕೇತಗಳಾಗಿ ಕಣ್ಣು, ಮನ, ಕಿವಿಗಳಿಗೆ ಒಂದು ಬಗೆಯಲ್ಲಿ ರಂಜನೆಯನ್ನು ಉಂಟುಮಾಡಿದರೆ ಭೂತಕ್ಕೆ ಸಂಬಂಧಿಸಿದ ಕತೆ, ಪಾಡ್ದನ, ಸಂಧಿಗಳು, ಮದಿಪು, ಪಾರಿ, ನುಡಿಗಟ್ಟುಗಳು, ಹರಕೆ, ಹೇಳಿಕೆಗಳು, ಅರಿಕೆ, ವಚನಗಳು ಇನ್ನೊಂದು ಬಗೆಯಲ್ಲಿ ರಂಜನೆ ನೀಡುತ್ತವೆ. ಭೂತದ ಮುಂದುಗಡೆ ನೆರೆದ ಹತ್ತು ಸಮಸ್ತರ ಸಮ್ಮುಖದಲ್ಲಿ ನಡೆಯುವ ನ್ಯಾಯತೀರ್ಮಾನಗಳಲ್ಲಿ, ಒಪ್ಪಿಸುವ ದೂರುಗಳಲ್ಲಿ, ಇದಿರಿಡುವ ಸಮಸ್ಯೆಗಳಲ್ಲಿ ಕಲಾತ್ಮಕತೆಯ ಮಾತುಗಳನ್ನು ಚಮತ್ಕಾರಗಳನ್ನೂ ನಾವು ಸಾಕಷ್ಟು ಗುರುತಿಸಬಹುದಾಗಿದೆ. ಅತ್ಯುತ್ತಮ ಸಾಹಿತ್ಯಾಂಶಗಳು, ಕಾವ್ಯಾಂಶಗಳು ಈ ಮದಿಪು ಮಾತುಗಳಲ್ಲಿ, ಹೇಳಿಕೊಳ್ಳುವ ಹರಕೆಗಳಲ್ಲಿ, ಮಾಡಿಕೊಳ್ಳುವ ಅರಿಕೆಗಳಲ್ಲಿ ಬೆಳೆದು ಬಂದಿರುವುದನ್ನು ನಾವು ಗಮನಿಸಬಹುದಾಗಿದೆ.

ದೈವಭೂತಗಳು ತಮ್ಮ ಪರಾಕ್ರಮ, ದಿಗ್ವಿಜಯಗಳನ್ನು, ಸಾಹಸ, ಸಾಧನೆಗಳನ್ನು ತಾವೇ ಹೇಳಿಕೊಳ್ಳಬಹುದು. ಅಥವಾ ನಂಬಿಕೊಂಡು ಬಂದ ಜನರು ದೈವಭೂತಗಳ ಚರಿತ್ರೆ, ಮಹಿಮೆಗಳನ್ನು ಭಕ್ತಿಯಿಂದ ಭಾವುಕತನದಿಂದ ವರ್ಣಿಸಬಹುದು. ತಾವೇ ಹೇಳಿಕೊಳ್ಳುವುದೆಂದರೇನು? ದೈವಕ್ಕೆ ಕಟ್ಟಿದ ಪರವ, ಪಂಬದ ಪಾತ್ರಿಗಳು, ದೈವಪಾತ್ರಿಗಳು ಜೋಗದಲ್ಲಿ ನಿಂತಾಗ, ನೇಮದಲ್ಲಿ ಆದಾಗ ದರ್ಶನದಲ್ಲಿ ಬಂದಾಗ ಆಯಾ ದೈವಗಳು ಆವಾಹನೆಯಾದಾಗ ಇಲ್ಲವೇ ಮೈಮೇಲೆ ಬಂದಾಗ ಆವೇಶದಿಂದ ಹೇಳಿಕೊಳ್ಳುವುದು. ಈ ರೀತಿಯ ಹೇಳಿಕೆಗಳು ಅವುಗಳ ಆತ್ಮಕತೆಗಳಾಗಿರಬಹದು. ಈ ವರ್ಣನೆಗಳು ದರ್ಶನದಲ್ಲಿರುವ ಪಾತ್ರಿಯ ಪ್ರತಿಭೆ, ಪ್ರತ್ಯುತ್ಪನ್ನಮತಿ, ಲೋಕಾನುಭವ, ಭಾಷಾ ಸಾಮರ್ಥ್ಯ, ಕಲ್ಪನಾ ಚಾತುರ್ಯ, ನಿರೂಪಣಾ ಶೈಲಿ ಮೊದಲಾದ ಅಂಶಗಳನ್ನು ಅವಲಂಬಿಸಿರುತ್ತವೆ. ಹೀಗಾಗಿ ಒಬ್ಬ ಪಾತ್ರಿಯೂ ಓರ್ವ ಕವಿಯ ಕೆಲಸವನ್ನೇ ಮಾಡುತ್ತಾನೆ. ಅನೇಕ ಸಂದರ್ಭಗಳಲ್ಲಿ ಆತ ಆಶುಕವಿಯೂ ಆಗಿರುತ್ತಾನೆ.

ಸಂಕಷ್ಟ ಕಾಲದಲ್ಲಿ ಸತ್ಯದೈವಗಳನ್ನು ಸ್ಮರಿಸಿ ಕಷ್ಟ ಪರಿಹಾರಕ್ಕೆ ನಂಬಿದ ದೈವಗಳಲ್ಲಿ ನಿವೇದಿಸಿಕೊಳ್ಳುವುದು ದೈವಾರಾಧನೆಯ ನಂಬಿಕೆಯ ಒಂದು ಮುಖ್ಯ ಅಂಶ. ಕೈ ಉಂಗುರ ಅಥವಾ ನಾಣ್ಯಕ್ಕೆ ನೀರು ಹೊಯ್ದು ತಲೆಗೆ ಸುತ್ತು ಬರಿಸಿ (ತರೆತೊರತ್ತ್‌) ದೈವದ ಹಲಗೆಯ ಮೇಲೆ ಇಡುವುದರಿಂದ (ಈಡ್ ದೀಪುನಿ) ಇದು ಮೊದಲಾಗುತ್ತದೆ.

‘ಬತ್ತಿ ಪಾರ ದೂರ ಆವಡ್‌, ಬಲ್ಯಾಯ ಬಲಿಮೆಡ್‌ವಾ ದೈವ ದೇವೆರೆ ಉಪದ್ರಾಂದ್‌ತೋಜಿದ್‌ಬತ್ತ್ಂಡ ಅಕ್ಲೆ ಸಂಕಲ್ಪದಲೆಕೊ ಎಂಕುಳು ನಡತೋನುವ’

(ಬಂದ ಆಪತ್ತು ದೂರವಾಗಲಿ, ಬಲ್ಯಾಯ ಬಲಿಮೆಯಲ್ಲಿ ಯಾವ ದೈವ ದೇವರ ಉಪದ್ರವ ಎಂದು ಕಂಡುಬಂದರೂ ಅವರ ಸಂಕಲ್ಪದಂತೆ ನಾವು ನಡೆದುಕೊಳ್ಳುತ್ತೇವೆ.)

ಎನ್ನುತ್ತಾ ಈಡು ತೆಗೆದಿಡುವುದು ಒಂದು ರೀತಿಯಲ್ಲಿ ಪ್ರಥಮ ಚಿಕಿತ್ಸೆಯೇ ಆಗಿರುತ್ತದೆ.

ನಾಗಾರಾಧನೆ, ಸಿರಿ ಆರಾಧನೆ ಮತ್ತು ಭೂತಾರಾಧನೆ ಇವು ತುಳುನಾಡಿನ ಆರಾಧನ ರಂಗಭೂಮಿ ಪ್ರಕಾರಗಳಲ್ಲಿ ಮುಖ್ಯವಾಗಿವೆ. ಪ್ರೇಕ್ಷಕರು ಮತ್ತು ಪ್ರದರ್ಶಕರ ನಡುವೆ ನಡೆಯುವ ಸಂವಹನ ಪ್ರಕ್ರಿಯೆಯೇ ರಂಗಕ್ರಿಯೆ. ರಂಗಕ್ರಿಯೆಯಲ್ಲಿ ಸಾಹಿತ್ಯ, ಅಭಿನಯ, ರಂಗತಂತ್ರಗಳು ಮೊದಲಾದ ಸರ್ವ ಅಂಗಗಳನ್ನೊಳಗೊಂಡ ಸಂಘಟಿತ ಮಾಧ್ಯಮವೇ ರಂಗಭೂಮಿ. ರಂಗತಂತ್ರ ಎಂದಾಗ ಬಣ್ಣಗಾರಿಕೆ, ವೇಷಾಲಂಕಾರ ಮೊದಲಾದ ಪ್ರಸಾಧನ ಪರಿಕರ, ವಾದ್ಯ ಪರಿಕರ, ದೀಪ ದೀವಟಿಗೆಗಳು, ರಂಗಸ್ಥಳದಂತಹ ಆವರಣ, ಧ್ವನಿಬೆಳಕಿನ ವಿನ್ಯಾಸಗಳು ಇರಬೇಕಾಗುತ್ತವೆ.

ನಿರ್ದಿಷ್ಟ ಆರಾಧನಾ ಕೇಂದ್ರದಂತಹ ಸ್ಥಳಾವರಣ/ರಂಗಸ್ಥಳದಲ್ಲಿ ಭಕ್ತಮಂಡಳಿಯೇ ಪ್ರೇಕ್ಷಕರು. ಆರಾಧನ ಕೇಂದ್ರದ ವ್ಯವಸ್ಥಾಪಕ ಮಂಡಳಿಯೇ ಪ್ರದರ್ಶಕರು. ಇಲ್ಲಿ ಪ್ರದರ್ಶಕರೆಂದರೆ ಒಂದು ಆಡಳಿತ ಮಂಡಳಿ/ಮೊಕ್ತೇಸರ ಮಂಡಳಿ, ಚಾಕ್ರಿಮಾನಿಗಳು, ಕಲಾವಿದರಂತಹ ವಾಹಕ ನಟರು ಮೊದಲಾದವರು ಇರಬಹುದು.

ಆರಾಧನ ರಂಗಭೂಮಿಯಲ್ಲಿ ಬಳಕೆಯಾಗುವ ಸಾಹಿತ್ಯ ಪ್ರಕಾರವೆಂದರೆ ಅಲೌಕಿಕ ಶಕ್ತಿಯೊಂದನ್ನು ಜೋಗಕ್ಕೆ ಬರಿಸುವ ಮತ್ತು ಜೋಗದಲ್ಲಿ ಅದರೊಡನೆ ಸಂವಹನ ನಡೆಸುವ ಮಾತುಕತೆಯಲ್ಲಿ ಬಳಸುವ ಸಂಭಾಷಣ ರೂಪದ ಸಾಹಿತ್ಯ, ನಿರೂಪಣ ಸಾಹಿತ್ಯ. ಆದರೆ ಅವೆಲ್ಲವೂ ಮೌಖಿಕ ಪರಂಪರೆಯ ಸಾಹಿತ್ಯ. ಅವು ತುಳು ಜನಪದ ಸಾಹಿತ್ಯದ ಕಾವ್ಯ ಪ್ರಕಾರದ ಪಾಡ್ದನ ಮತ್ತು ನುಡಿಕಟ್ಟು ಪರಂಪರೆಯಲ್ಲಿ ಪ್ರಧಾನವಾಗಿ ಸಿಗುತ್ತವೆ.

ಪಾಡ್ದನ ಬಳಕೆಯಾಗುವ ಸಂದರ್ಭ ಮತ್ತು ಕಾರ್ಯದ ಆಶಯದಂತೆ ಅವು ಸಂಧಿ, ಬೀರ ಎನ್ನುವ ಹೆಸರುಗಳಲ್ಲಿಯೂ ಬಳಕೆಯಾಗುತ್ತವೆ. ನುಡಿಕಟ್ಟುಗಳು ಸ್ಥೂಲವಾಗಿ ಹೇಳಿಕೆ, ಮಾತುಗಳು, ಗಾದೆಗಳು, ಒಗಟುಗಳು, ನುಡಿಮುತ್ತುಗಳು, ವಚನಗಳು, ರೂಪಕಗಳು ಮೊದಲಾದವುಗಳಲ್ಲಿ ಸಿಗುತ್ತವೆ. ಈ ನುಡಿಗಟ್ಟುಗಳು ಬಳಕೆಯಾಗುವ ಸಂದರ್ಭಕ್ಕೆ ಅನುಗುಣವಾಗಿ ಅವುಗಳನ್ನು ಮದು, ಮದಿಪು, ಪಾರಿ, ಬೀರ, ನುಡಿ, ಪಟ್ಟಾವು,ಪುಟ್ಟುಬಳಕೆ, ಹುಟ್ಟುಕಟ್ಟು, ಮದಿಪು ನುಡಿ ಎಂದೆಲ್ಲ ಎನ್ನುವುದುಂಟು.

ಪ್ರತಿಯೊಂದು ಕಾರ್ಯಕ್ಕೂ ‘ದೇವರಿಟ್ಟು’ ಅರಿಕೆ ಮಾಡಿಕೊಳ್ಳುವುದು ಪದ್ಧತಿ. ದೇವರಿಡುವುದು ಎಂದರೆ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ, ಐದು ಕವಳೆ ವೀಳ್ಯೆದೆಲೆ, ಐದು ಅಡಿಕೆ, ಒಂಡು ತುಂಡು ಬೆಲ್ಲ, ಎರಡು ಬಾಳೆಹಣ್ಣು, ಊದುಬತ್ತಿ, ಕರ್ಪೂರ ಮತ್ತು ಒಂದು ಬೆಳ್ಳಿ (ಮೂರು ಆಣೆ) – ಇವನ್ನೆಲ್ಲ ಒಂದು ಬಾಳೆಯ ಎಲೆಯಲ್ಲಿ ಇಲ್ಲವೇ ಹರಿವಾಣದಲ್ಲಿ ಮೂಡು ಮುಖ ಮಾಡಿ ದೀಪ ಹಚ್ಚಿ ಇಡುತ್ತಾರೆ. ಬಳಿಕ ಊದುಬತ್ತಿಯಿಂದ ಧೂಪಕೊಟ್ಟು ಕರ್ಪೂರದಿಂದ ಆರತಿ ಮಾಡಿ ಪೂಜೆ ಮಾಡುತ್ತಾರೆ. ಆಮೇಲೆ ಅದರಿಂದ ಸ್ವಲ್ಪ ಅಕ್ಕಿ ಕಾಳುಗಳನ್ನು ತೆಗೆದು ಅಲ್ಲಿ ನೆರೆದವರಿಗೆಲ್ಲಾ ಹಂಚಿ ಪ್ರಾರ್ಥಿಸಿಕೊಳ್ಳುತ್ತಾರೆ.

‘ನಮ ಇತ್ತೆ ಪತ್ತ್‌ ಕೂಡುದು ದೀಯಿಂಚಿತ್ತಿ ದೇವೆರೆ ಸುತ್ತಿಗೆಡ್‌ ದಾದ ಒಂಜಿ ವಿಘ್ನ ಬರ್ಪಿನ ಅತ್ತ್ಂಡ ಪತ್ತ್‌ ತರತ್ತ ದೋಸಯಿಂತ್ತ್ಂಡಲಾ ಅವೆನ್ ಗರುಡ ಬಾಯಿಗ್‌ ಕೊರ್ದು ಕಡಪ ರಾಜ್ಯೊಗು ಪಾಡಾದ್‌ಇಸ ಕಲೇದ್‌ ಅಮುರ್ತೊನು ಕೈಗೂಡಾದ್‌ ಕೊರ್ಪಿನಂಚಿನ  ಬವುಬಾರ ಈ ರಾಜ್ಯದ ದೇವೆರೆಗ್‌, ಈ ಜಾಗೆದ ನಾಗಬೆರ್ಮೆರ್, ಲೆಕ್ಕೆಸಿರಿ, ಐಯೆರ್‌ ಬೂತೊಳೆಗ್‌, ನಮ್ಮ  ಗುರು ಹಿರಿಯೆರ್‌ ಇತ್ತ್‌ದ್ ಈ ಶುಭ ಕೆಲಸೊನು ಪೊರ್ಲುಡು ನಡಪಾದ್ ಕೊರ್ಪಿನ ಪುನ್ಯ ಕೀರ್ತಿ  ಸತ್ಯೊಲೆಗ್ ಕೂಡ್‌ದಿನವು, ಸ್ವಾಮೀ….’ (ಶೀನಪ್ಪ ಹೆಗ್ಗಡೆ ಪೊಳಲಿ, ೧೯೫೪,೧೯೯೧,೧೮೯).

(ನಾವೀಗ ಹತ್ತು ಸಮಸ್ತರು ಸೇರಿ ಇಟ್ಟಂತಹ ದೇವರ ಸ್ವಸ್ತಿಕದಲ್ಲಿ ಏನೊಂದು ವಿಘ್ನ ಬರುವುದಿದ್ದರೂ ಹತ್ತು  ತರದ ದೋಷ ಇದ್ದರೂ ಅದನ್ನು ಗರುಡಬಾಯಿಗೆ ಕೊಟ್ಟು ಪರರಾಜ್ಯಕ್ಕೆ ಹಾಕಿ ವಿಷಕಳೆದು ಅಮೃತವನ್ನು  ಕೈಗೂಡಿಸಿ ಕೊಡುವಂತಹ ಬಹುಭಾರ ಈ ರಾಜ್ಯದ ದೇವರಿಗೆ, ಈ ಸ್ಥಳದ ನಾಗಬ್ರಹ್ಮ, ರಕ್ತೇಶ್ವರಿ, ಐವರು  ಭೂತಗಳಿಗೆ, ನಮ್ಮ ಗುರು ಹಿರಿಯರು ಇದ್ದೂ ಈ ಶುಭ ಕೆಲಸವನ್ನು ಚಂದದಲ್ಲಿ ನಡೆಸಿಕೊಡುವ  ಪುಣ್ಯಕೀರ್ತಿ ಸತ್ಯಗಳಿಗೆ ಸೇರಿದ್ದು. ಸ್ವಾಮೀ … ಎಂದು ಹೇಳಿ ಕೈಮುಗಿದು ಎಲ್ಲರೂ ಏಕಕಾಲಕ್ಕೆ  ದೇವರಿಟ್ಟಲ್ಲಿಗೆ ಅಕ್ಕಿಕಾಳು ಹಾಕುವರು.)

ಕೆಲವು ಮನೆಗಳಲ್ಲಿ ಪ್ರತಿ ವರ್ಷವೂ ಇನ್ನು ಕೆಲವು ಮನೆಗಳಲ್ಲಿ ಹೇಳಿಕೊಂಡ ಹರಕೆಯಂತೆ ಮನೆದೈವಗಳಿಗೆ ಕೋಲ ನಡೆಯಬಹುದು. ಹಾಗೆಯೇ ಗ್ರಾಮ, ಮಾಗಣೆ ದೈವಗಳಿಗೆ ವಾರ್ಷಿಕ ನೇಮ ನಡೆಯುವುದುಂಟು. ಕೋಲ ಅಥವಾ ನೇಮದ ದಿನ ಅದನ್ನು ನಡೆಸುವವರು ಕೋಲ/ನೇಮ ಕಟ್ಟುವ ನಲಿಕೆ ಇಲ್ಲವೆ ಪರವ ಅಥವಾ ಪಂಬದ ಕಲಾವಿದರಿಗೆ ಮೊದಲಾಗಿ ಪಡಿಯಕ್ಕಿ ಕೊಡಬೇಕು. ಬಳಿಕ ಎಲ್ಲರೂ ಕೂಡಿದ ಮೇಲೆ ಎಣ್ಣೆ ಕೊಡಬೇಕು. ನಿಗದಿತ ಕಲಾವಿದ ಎಣ್ಣೆ ಹಚ್ಚಿ ಸ್ನಾನ ಮಾಡಿದ ಬಂದು ದೈವದ ಸಂಧಿ/ಬೀರ ಪಾಡ್ದನ ಹೇಳುತ್ತಾ ಮುಖಕ್ಕೆ ಅರದಲ ಹಚ್ಚುವನು. ಆಗ ಆತನ ಸಂಗಡಿಗರಲ್ಲಿ ಒಬ್ಬರು ತೆಂಬರೆ ಬಾರಿಸುವರು. ಇನ್ನೊಂದೆಡೆ ದೈವಪೂಜಾರಿಯು ಹೋಮವಿಟ್ಟು ಗುರಿಕಾರರಿಗೆ ತಿಳಿಸುವನು. ಆಗ ಅವರು ಕ್ರಮಪ್ರಕಾರ ಪ್ರಾರ್ಥನೆ ಮಾಡುತ್ತಾರೆ. ಮುಂದಿನ ಹಂತಗಳಲ್ಲಿ ದೈವಪಾತ್ರಿ(ದೈವದ ಮಾನಿ)ಗೆ ದೈವದರ್ಶನವಾಗುವುದು. ಅದಾದ ಮೇಲೆ ದೈವನರ್ತನ ಕಲಾವಿದ ಅರದಾಲ ಹಚ್ಚಿ ಗಗ್ಗರ ಇಡುವುದಕ್ಕೆ ಬಂದು ನಿಲ್ಲುತ್ತಾನೆ. ಆಗಲೂ ಮದು ಹೇಳಿ ಪ್ರಾರ್ಥಿಸುವುದುಂಟು. ಗಗ್ಗರದೆಚ್ಚಿಯ ಬಳಿಕ ಅಣಿಕಟ್ಟಿ (ಅಣಿತೆಚ್ಚಿ) ನೇಮವಾಗುವುದು. ಈ ಹಂತದಲ್ಲೂ ದೈವ ಬಾಯಿಬಿಟ್ಟು ಗುರಿಕಾರ ನೂಲುಪಾಲು ಊರು ಪರವೂರು ಹತ್ತು ಸಮಸ್ತರನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕರೆದು ಗುರಿಕಾರನಲ್ಲಿ ಹೆಚ್ಚಿನ ನ್ಯಾಯವೇನೆಂದು ಕೇಳಿ ನ್ಯಾಯತೀರ್ಮಾನ ನಡೆಸುವುದು.

‘‘ಪತ್ತ್ ಕೂಡ್ದಿನ ತಳೊಟ್ಟು ಮುತ್ತುಂಡುಗೇಂದ್‌ ಹಿರಿಯಾಕುಲು ಮಲ್ತಿ ಕಟ್ಟ್‌, ಎಂಕುಲು ತೆರಿಯಂದಿ  ನರಮಾನಿಲು, ನಿಕುಲು ಮಾಮಲ್ಲ ಸತ್ಯೊಲು, ಎಡ್ದೆ ಮಲ್ತಿನಾಯಗ್ ಅಮುರ್ತದ ಮಿರೆನ್ ಕೊರ್ದು ಹಾಳ್  ಮಲ್ತಿನಾಯಗ್ ಇಸತ್ತ ಮಿರೆನ್ ಕೊರ್ತಿನ ದೆಯ್ಯೊಂಗಳು ನಿಕುಲು. ಇತ್ತೆ ನಮ ಮಲ್ತಿ ಹೋಮೊಡು, ಕಟ್ಟಿ  ತಿರಿಟ್, ಗೋತಿ ಗಗ್ಗರೊಡು, ಬಳಸಿ ಪಸಾರ್ನೆಡ್ ಕೊಡತಿ ಬೊಂಡೊಡು ಶುಭನಾ ಅಶುಭನಾ, ಉರಿಯಾ  ಸಿರಿಯಾ, ಲಾಭನಾ ನಷ್ಟನಾಂದ್‌ ನಂಕ್ ಪಣ್ಯೆರೆ ಬಲ್ಲಿ. ನೇಮದ ಎಚ್ಚಿಗ್‌ ಉಂತುದಿನ ಪತಿಮಾನಿ ಮಿತ್ತ್‌ ಮುಕ್ಕಾಲ್ ಮೂಜಿ ಗಳಿಗೆ ವಸಯ ಆದ್ ಪೊರ್ಲುದ ನಾಲ್ ಅಭಯೊನು ಕೊರ್ದು ಜಾಗೆದ ಕಲೆ  ತಗ್ಗಂದಿಲೆಕೊ ಮಣ್ಣ್‌ಗ್‌ ಕೊರತೆ ಬರಂದಿಲೆಕೊ ನಾಲ್‌ ಕೋಡಿದ ಮುಗಲ್ ಒಂಜಿ ಕೋಡಿಗ್‌ಸೆಲೆಪಾದ್‌,  ಈರೆನ್‌ ನಂಬಿನಾಕ್ಲೆ ಎರುಕ್ ಇಣೆ, ಬಿತ್ತ್‌ಗ್‌ ಮುದೆಲ್‌ಗ್, ಸಂತಾನೊಗು ಸಾಯಿರ ಮಲ್ತ್‌ದ್ ಮೇಲ್  ಕಾಲೊಗು ಉಂದೆಡ್ದ್‌ಎಚ್ಚಿಗೆ ಮಲ್ಪಾವೊಡು, ಜನಕ್ಲು ದೈವೊನು ಬುಡಿಜೆರ್‌, ದೈವ ಜನಕ್ಲೆನ್ ಬುಡಿಜೆರ್‌ಗೆ  ಪನ್ಪಿ ಕೀರ್ತಿನ್ ಕಣಪಾವೊಡು’’(ಅಮೃತ ಸೋಮೇಶ್ವರ, ೧೯೭೮, ೬೮).

(ಹತ್ತು ಕೂಡಿದ ಸ್ಥಳದಲ್ಲಿ ಮುತ್ತುಂಟಂತೆ ಎಂದು ಹಿರಿಯರು ಮಾಡಿದ ಕಟ್ಟಳೆ. ನಾವು ತಿಳಿಯದ  ಮನುಷ್ಯರು, ನೀವು ಮಹಾಸತ್ಯಗಳು. ಒಳ್ಳೆಯ ಕೆಲಸ ಮಾಡಿದವನಿಗೆ ಅಮೃತದ ಮೊಲೆ ಕೊಟ್ಟು, ಹಾಳು  ಮಾಡಿದವನಿಗೆ ವಿಷದ ಮೊಲೆ ಕೊಟ್ಟಿರುವ ದೈವಗಳು ನೀವು. ಈಗ ನಾವು ಮಾಡಿದ ಹೋಮದಲ್ಲಿ, ಕಟ್ಟಿದ  ಸಿರಿಯಲ್ಲಿ, ಇಟ್ಟ ಗಗ್ಗರದಲ್ಲಿ, ಬಡಿಸಿದ ಪ್ರಸಾರಣೆಯಲ್ಲಿ, ಕುಡಿಯಲಿಟ್ಟ ಸೀಯಾಳದಲ್ಲಿ ಶುಭವೋ  ಅಶುಭವೋ, ಉರಿಯೋ, ಸಿರಿಯೋ, ಲಾಭವೋ, ನಷ್ಟವೋ ಎಂದು ನಮಗೆ ಹೇಳಲು ತಿಳಿಯದು. ದೈವ  ದರ್ಶನಕ್ಕೆ ನಿಂತಿರುವ ಪಾತ್ರಿಯ ಮೇಲೆ ಮುಕ್ಕಾಲು ಮೂರು ಗಳಿಗೆ ಆವಾಹನೆಯಾಗಿ ಒಳ್ಳೆಯ ನಾಲ್ಕು  ಅಭಯವನ್ನು ಕೊಟ್ಟು ಸ್ಥಳದ ಕಳೆ ಕುಂದದಂತೆ ಮಣ್ಣಿಗೆ ದೋಷ ಬರದಂತೆ, ನಾಲ್ಕು ಕಡೆಯ ಮೋಡ  ಒಂದು ಕಡೆ ಸರಿವಂತೆ ನಿಮ್ಮನ್ನು ನಂಬಿದವರ ಕೋಣಕ್ಕೆ ಜತೆ, ಬೀಜಕ್ಕೆ ಬುಡ, ಸಂತಾನಕ್ಕೆ ಸಾವಿರ  ಮಾಡಿ ಮೇಲು ಕಾಲಕ್ಕೆ ಇದಕ್ಕಿಂತ ಹೆಚ್ಚು ಮಾಡಿಸಬೇಕು. ಜನರು ದೈವವನ್ನು ಬಿಡಲಿಲ್ಲ, ದೈವ ಜನರನ್ನು  ಬಿಡಲಿಲ್ಲ ಎನ್ನುವ ಕೀರ್ತಿಯನ್ನು ತಂದು ಕೊಡಬೇಕು.)

‘‘ಅವೇ ಅವೇ ಒಂಜಿ ಉಮಿಲ್ ಆನೆದ ಕಿನ್ನಿನ್ ತುಚೊಂದು ಬಲಿಪುನೆ ಅವೇ ತೂಏಏಲೆ ರಾವೊಂದು  ಪೋಪುನೆ!’’

(ನೋಡಿ ನೋಡಿ ಒಂದು ಸೊಳ್ಳೆ ಆನೆಮರಿಯನ್ನು ಕಚ್ಚಿಕೊಂಡು ಓಡುತ್ತಿರುವುದು! ನೋಡಿ ನೋಡಿ       ಹಾರಿಕೊಂಡು ಹೋಗುವುದು)

ಗುಡ್ಡದಲ್ಲಿ ಗುಳಿಗ ಬನದಲ್ಲೊ ರಾವು ದೈವದ ಕಲ್ಲಿನಲ್ಲೋ ಪನಿಯಾರ ಬಡಿಸಿ ಕೇಪಳದ ಹೂ ಹಾಕಿ ಕೂಡಿದವರೆಲ್ಲ ಭೂತವನ್ನು ನಿವೇದಿಸಿಕೊಳ್ಳುತ್ತಾರೆ. ಬಡಿಸಿದವನು (ಅಥವಾ ಮುಖ್ಯಸ್ಥ) ಅಯ್ಯಂಗಾಯಿ ಒಡೆದ ಕೂಡಲೇ ಈಚೆಗೆ ಬಂದು ಹೀಗೆ ಹೇಳುವುದುಂಟು. ದೈವ ಆಹಾರ (ಆವಾರ) ಸ್ವೀಕರಿಸುತ್ತಿರುವುದನ್ನು ಯಾರೂ ನೋಡಬಾರದೆಂಬುದು ನಿಯಮ. ಅವರೆಲ್ಲರ ಗಮನವನ್ನು ಹೀಗೆ ಒಂದು ಆಶ್ಚರ್ಯಕರ, ಅಷ್ಟೇ ಕುತೂಹಲಕರ ಘಟನೆಯತ್ತ ಸೆಳೆಯುವಲ್ಲಿ ಆತ ಬಹಳಷ್ಟು ಜಾಣ್ಮೆ ವಹಿಸಬೇಕಾಗುತ್ತದೆ. ಸೂಕ್ಷ್ಮ ಜೀವಿಯೊಂದನ್ನು ದೊಡ್ಡ ಗಾತ್ರದ ಪ್ರಾಣಿಯೊಂದಿಗೆ ಸಮೀಕರಿಸಿ ನೋಡುವವರೆಲ್ಲ ಒಂದೇ ಕಡೆಗೆ ಕೇಂದ್ರೀಕೃತರಾಗುತ್ತಾರೆ. ಈ ಮಾತಿನ ಹಿನ್ನೆಲೆಯೂ ಇಲ್ಲಿ ಮುಖ್ಯವಾಗುತ್ತದೆ. ಆನೆಯೊಂದು ಸೊಳ್ಳೆಗೆ ಹೆದರುತ್ತದೆ ಎನ್ನುವ ಸಾಮಾನ್ಯ ತಿಳುವಳಿಕೆಯೂ ಇಲ್ಲಿ ಪ್ರಕಟವಾಗುತ್ತದೆ. ಗುಳಿಗ ಅಥವಾ ರಾವು ದೈವಕ್ಕೆ ಎಂದು ಮಾತ್ರವಲ್ಲ, ಇಂತಹ ಯಾವುದೇ ಆರಾಧನೆಯ ಸಂದರ್ಭದಲ್ಲಿಯೂ ಹೀಗೆ ದೈವಗಳು ಬಲಿ ಸ್ವೀಕರಿಸುತ್ತಿರುವಾಗ ಯಾರಾದರೂ ನೋಡಿದಲ್ಲಿ ಅವುಗಳಿಗೆ ತೃಪ್ತಿಯಾಗುವುದಿಲ್ಲ ಎಂಬುದು ನಂಬಿಕೆ. (ವಾಮನ ನಂದಾವರ, ೧೯೮೮, ೨೮).

ಇಲ್ಲಿ ಸೊಳ್ಳೆಯೇ ಆನೆಯನ್ನು ಕಚ್ಚಿಕೊಂಡು ಹೋಗಬೇಕಾಗಿಲ್ಲ. ಇರುವೆಯೂ ಆಗಬಹುದು. ‘ಓ ಅಲ್ಲಿ ಇರುವೆ ಆನೆಯನ್ನು ಎಳೆಯುತ್ತಾ ಇದೆ’ (ಶ್ರೀನಿವಾಸ ಭಟ್ಟ ಕಟೀಲು, ಪು. ೨೦೦೫, ೩೯).

ಆರಾಧನಾ ರಂಗಭೂಮಿಯ ಮಂಜದ ಕಾಪಡನ ನಂಬಿಕೆಯ ಮಂಜ ಎನ್ನುವುದು ಭಾವನಾತ್ಮಕವಾದ ಒಂದು ಸಾಂಕೇತಿಕ ನೆಲೆ. ಹಿರಿಯರ ನಂಬಿಕೆ ನಡಾವಳಿಗಳನ್ನು ನಂಬಿಕೊಂಡು ವಿಶ್ವಾಸದಿಂದ ಮಂಜದ ಶಕ್ತಿಗಳ ಮೇಲೆ ಪೂರ್ಣ ಭಾರ ಹಾಕಿ ಆಚರಿಸಿಕೊಂಡು ಬರುವವನು ಮೇರ ವರ್ಗದ ಹಿರಿಯ ವ್ಯಕ್ತಿ. ಆತನನ್ನು ಕಾಪಡ ಎನ್ನುತ್ತಾರೆ. ಕಷ್ಟಕಾಲದಲ್ಲಿ ಕಾಪಡ ಮಂಜದ ಎದುರು ನಿಂತು ಕೈಜೋಡಿಸಿ ತನ್ನ ಸಮಸ್ಯೆಗಳನ್ನು ಹೀಗೆ ನಿವೇದಿಸಿಕೊಳ್ಳುತ್ತಾನೆ:

‘‘ಓ ಮಂಜದ ಹಿರಿಯ ಶಕ್ತಿಗಳೇ, ನನ್ನನ್ನೂ, ನನ್ನವರನ್ನೂ ಇದುವರೆಗೆ ಕಾಪಾಡಿಕೊಂಡು ಬಂದವರು  ನೀವು. ಒಂದು ಚೂರು ಕಳ್ಳು, ಕರಕಲು ಒಣ ಸೂಂಟಾಯಿ (ಮಾಂಸ)ಯನ್ನಾದರೂ ಇದುವರೆಗೆ  ಕಟ್ಟುನಿಟ್ಟಾಗಿ ಅರ್ಪಿಸಲು ತಪ್ಪದವನು ನಾನು. ಆದುದರಿಂದಲೇ ಈ ಶಕ್ತಿಗಳೂ ನನ್ನ ಕೈಬಿಟ್ಟಿಲ್ಲ. ನನ್ನ  ಸಂತಾನವನ್ನು ಆರಕ್ಕೆ ಹೆಚ್ಚಿಸದೆ ಮೂರಕ್ಕೆ ಕುಂದಿಸದೆ ನೋಡಿಕೊಂಡು ಬಂದಿವೆ. ನನ್ನ ಮಕ್ಕಳು ಈ  ಕಾಡಿನಲ್ಲಿ ಬಿದಿರು, ಓಟೆ ಕಡಿದು ಕೊಳಲು ಮಾಡುತ್ತಾರೆ. ಅದರಲ್ಲಿ ಒಡಲ ಸಂತೋಷವನ್ನೂ, ದುಃಖವನ್ನೂ ಹಗುರ ಮಾಡಿಕೊಳ್ಳುತ್ತಾರೆ. ಕೇನೆ ಕೆಸು ಬೆಳೆಸುತ್ತಾರೆ. ಅದರಿಂದ ಹೊಟ್ಟೆ ಹೊರೆಯುತ್ತಾರೆ.  ಕಾಡಿಗೆ ಹೋಗಿ ಉಪಾಯ ಹೂಡಿ ಹಕ್ಕಿಗಳನ್ನು ಹಿಡಿಯುತ್ತಾರೆ. ಅದಕ್ಕಾಗಿ ಉರುಳು ಮರಕೋಲು ಇಡುತ್ತಾರೆ. ತೋಕೋಲು ಹಾಕಿ ಏಡಿಮೀನು ಹಿಡಿಯುತ್ತಾರೆ. ಬಲೆ ಕಟ್ಟುತ್ತಾರೆ. ಇದಕ್ಕೆಲ್ಲ ಬೇಕಾದುದನ್ನು  ಈ ಮಂಜದ ಶಕ್ತಿಗಳು ದಯಪಾಲಿಸುತ್ತಾರೆ. ಯಾವುದಕ್ಕೂ ಕಡಿಮೆ ಮಾಡುವುದಿಲ್ಲ.’’

ಕೆಲವೊಮ್ಮೆ ತಿಂಗಳ ಬೆಳಕು ಇದ್ದಾಗಲೆಲ್ಲ ಒತ್ತುಕೋಲು ಹಾಕಿ, ಬಾಣೆ ಹಾಕಿ ದುಡಿ ನುಡಿಸುತ್ತಾ ಕುಣಿಯುತ್ತಾರೆ. ಮನೆಯ ಹಿರಿಯನೊಬ್ಬ ಇತರರನ್ನು ಹುರಿದುಂಬಿಸುತ್ತಾನೆ. ತಾನೇ ದುಡಿಯ ಹಗ್ಗವನ್ನು ಹೆಗಲಿಗೇರಿಸಿ ಕುಟ್ಟಿ ಹಿಡಿದು ಬಿಗಿಯುವ ಹಗ್ಗವನ್ನು ಎಳೆದು ನೋಡಿ ದುಡಿ ಬಾರಿಸಲು ತೊಡಗುತ್ತಾನೆ.

‘‘ಓ ಗುಡ್ಡದ ಶಕ್ತಿಗಳೇ, ಮಂಜದ ದೈವಗಳೇ ನೀವು ಈ ಮಕ್ಕಳನ್ನು ಅವರ ಹರ್ಷ, ಕುಣಿತಗಳನ್ನು, ನಗು ನಲಿವನ್ನು ಇದೇ ರೀತಿ ಉಳಿಸಿಕೊಂಡು ಬರಬೇಕು. ತಿನ್ನುವ ಹಣ್ಣಿಗೆ, ಕುಡಿಯುವ ನೀರಿಗೆ, ಉಸಿರಾಡುವ ತಂಗಾಳಿಗೆ ಏನೊಂದೂ ಕುಂದು ಬರದಂತೆ ನೋಡಿಕೊಳ್ಳಿ’’ ಎಂದು ಮೊದಲಾಗಿ ಪ್ರಾರ್ಥಿಸುತ್ತಾನೆ (ಕುದ್ಕಾಡಿ ವಿಶ್ವನಾಥ ರೈ, ೧೯೮೨, ೧-೨).

ದೈವಗಳ ದಿಗ್ವಿಜಯಗಳ ಆತ್ಮ ಕಥನಗಳು ತುಳುನಾಡಿನ ಅವೆಷ್ಟೋ ಸ್ಥಳಗಳಿಗೆ ಇತಿಹಾಸ ನಿರ್ಮಿಸಿಕೊಟ್ಟಿವೆ. ಮಹಾತ್ಮೆ ಸೃಷ್ಟಿಸಿಕೊಟ್ಟಿವೆ. ಅವನ್ನು ಆಯಾ ಭೂತ ಸಾಹಿತ್ಯ ಭಾಷೆಯಲ್ಲೇ ಕೇಳಬೇಕು :

‘‘ರಾಮೇಶ್ವರ ಗಡಿಡ್ದ್‌ನೀಲೇಶ್ವರ ಗಡಿಕ್ಕ್‌, ನೀಲೇಶ್ವರ ಗಡಿಡ್ದ್‌ತುಳುನಾಡ ಗಡಿಕ್ಕ್, ತುಳು ರಾಜ್ಯ  ಐವತ್ತರಡ್ದ್‌ಗಾವುದ, ಮೂಡಾಯಿ ಕುಡುಮ ಪಡ್ಡೆಯಿ ಪೈಪೊಳಿಗೆ, ನಡು ಕಣಂದೂರುಳಿಯಾಂದ್‌ ಪಣ್ಪವೊಂಡ. ತುಳು ರಾಜ್ಯೋ…’’(ತೋಡಕುಕ್ಕಿನಾರ್ – ಕಣ್ಣಂತೂರು).

(ರಾಮೇಶ್ವರ ಗಡಿಯಿಂದ ನೀಲೇಶ್ವರದ ಗಡಿಗೆ, ನೀಲೇಶ್ವರ ಗಡಿಯಿಂದ ತುಳುನಾಡಿನ ಗಡಿಗೆ, ತುಳುರಾಜ  ಐವತ್ತರೆಡು ಗಾವುದ, ಮೂಡು ಕುಡುಮ, ಪಡು ಪೈವಳಿಕೆ, ನಡು ಕಣ್ಣಂತೂರು ಉಳಿಯ  ಎಂದೆನಿಸಿಕೊಂಡೆವು. ತುಳುರಾಜ್ಯ….!)

ಈಗಿನ ಬಂಟ್ವಾಳ ತಾಲೂಕಿನ ಕಣಂತೂರು ಮತ್ತು ಮಂಗಳೂರು ತಾಲೂಕಿನ ಉಳಿಯ ಪ್ರದೇಶಗಳು ಧರ್ಮಸ್ಥಳ (ಕುಡುಮಪುರ) ಮತ್ತು ಪೈವಳಿಕೆಗಳಿಂದ ಸುಮಾರಾಗಿ ಸಮಾನ ದೂರದಲ್ಲಿರುವುದನ್ನು ಇಲ್ಲಿ ಗಮನಿಸಬೇಕು. ತುಳುನಾಡಿನ ವ್ಯಾಪ್ತಿ ವಿಸ್ತಾರಗಳ ಬಗೆಗೆ, ಮುಖ್ಯ ಸ್ಥಳಗಳ ಬಗೆಗೆ ಒಂದು ವಿಧದಲ್ಲಿ ದಾಖಲೆಗಳು ಇವಾಗಲೂಬಹುದು.

‘‘ಉಮ್ಮ ಬಾಳೊಲಿ ಉಮ್ಮಣ ಬಾಳೊಲಿ, ನಾವಡ್ಯಂತಾಯ ನಲ್ವೇರ್‌ ಬಾಳೊಲಿ, ಅಕ್ಲೆನ್ನ ಕೈ ತಪ್ಪುನ್ನೆ  ಯಾನ್ ಪುತ್ಯೆಡ್ ಮೂಲೊ, ಬಂಗಾರ್ಡ ಜನನೊ. ಅಲ್ತ್‌ಡ್ತ್‌ ಸಾರ್ಲಪಟ್ಟ ಜತ್ತೆ. ಸಾರ್ಲಪಟ್ಟ ತಪ್ಪುನ್ನೆ  ಇರ್ನಲಪಟ್ಟ ಜತ್ತ್‌ದ್‌ ಓಲಗ ಆಯೆ… ಆರ್ಯ ಬನ್ನಾಯಕ್ಲೆ ಬೆರಿಪತ್ಯೆ. ಬೆರಿಪತ್ತ್‌ದ್ ಕೊಂಡಾಣ  ಕೋಡಿಂಗೆರೆ ಸಂಹಾರ ಮಲ್ತೆ. ಒಂಜಿ ಕುಂದ ನಲ್ಪ ಜೋಕ್ಲೆನ್ ಕೊಡಂಗೆದಣೆ ಬೆರಿಪತ್ಯೆ’’ (ಪಿಲಿಚಂಡಿ  ಪಾಡ್ದನ, ಕೊಂಡಾಣ)

(ಉಮ್ಮ ಬಾಳೊಲಿ, ಉಮ್ಮಣ ಬಾಳೊಲಿ, ನಾವಡ್ಯಂತಾಯ, ನಾಲ್ವರು ಬಾಳೊಲಿ, ಅವರೆನ್ನ ಕೈ ತಪ್ಪಿ  ಹೋಗಲು ನಾನು ಪುತ್ತಿಗೆಯಲ್ಲಿ ಮೂಲ, ಬಂಗಾರದಲ್ಲಿ ಜನನ, ಅಲ್ಲಿಂದ ಸಾರಾಳ ಪಟ್ಟಕ್ಕೆ ಇಳಿದೆ.  ಸಾರಾಳ ಪಟ್ಟ ತಪ್ಪಿ ಹೋಗಲು ಇರ್ನಲ ಪಟ್ಟಕ್ಕೆ ಇಳಿದು ಓಲಗ ಆದೆ… ಆರ್ಯ ಬನ್ನಾರರನ್ನು ಬೆಂಬತ್ತಿದೆ.  ಬೆಂಬತ್ತಿ ಕೊಂಡಾಣ ಕೋಡಿಂಗೆರೆಯನ್ನು ಸಂಹಾರ ಮಾಡಿದೆ. ಒಂದು ಕುಂದು ನಲುವತ್ತು ಮಕ್ಕಳನ್ನು  ಕೊಡಂಗೆ ಗುಡ್ಡಕ್ಕೆ ಓಡಿಸಿದೆ.)

ತಂಗಿ (ಉಳ್ಳಾಲ್ತಿ)ಯ ಬಯಕೆಗಾಗಿ ಪಲ್ಲಕ್ಕಿ ತರಿಸಿದ ಅಣ್ಣ ದೈವ (ತೋಡಕುಕ್ಕಿನಾರ್) ತಾನು ಚೆನ್ನಮಂಗಳ ಚೆಲುವರಾಯನ ಮೇಲೆ ಕುಳಿತು ರಾತ್ರಿ ತನ್ನ ಪರಿವಾರ ದೈವಗಳಾದ ಜುಮಾದಿ, ದುರ್ಗಲಾಯಾದಿಗಳ ಸಂಗಡ ಹೊರಟು ಉಳ್ಳಾಲದಲ್ಲಿ ಸಮುದ್ರಸ್ನಾನ ಮಾಡಿತು. ಅಲ್ಲಿ ಸೋಮನಾಥ             ದೇವರ ದರ್ಶನ ಪಡೆದು ಬಡಗು ದಿಕ್ಕು ನೋಡಿದಾಗ ಮಂಗಳೂರು ಮಲ್ಲಿಗೆಯ ಪರಿಮಳ ಬಂತು.

‘‘ಮಂಗಳೂರು ಮಲ್ಲಿಗೆ ಮೋಹ ಪಡೆಯಿಂಚಿತ್ತಿ ಎಂಕ್ಲೆ ತಂಗಡಿ ಮಡಿತ್ತ ಮಾಯ’’

(ಮಂಗಳೂರು ಮಲ್ಲಿಗೆಯ ಮೋಹ ಪಡೆದ ನಮ್ಮ ತಂಗಿ ಶುದ್ಧವಾದ ಸ್ಥಳ)

ಹುಡುಕುತ್ತ ಹೋಗಲು ನೇತ್ರಾವತಿಯ ಕೈ, ಉಳಿಯದ ಕುದುರು ಸಿಕ್ಕಿತು. ‘‘ಇದು ತಂಪಿನ ಸ್ಥಳ, ಇಲ್ಲಿ ಮಾಡಆಗಬೇಕು’’ ಎಂದು ಉಳ್ಳಾಲ್ತಿ ದೈವ ಬಯಸಿದಾಗ ಅಲ್ಲಿ ಪಲ್ಲಕಿ ಇಳಿಯಿತು. ಊರ ಎಂಟು ಒಕ್ಕಲು ಕೂಡಿ ಮಾಡ ಕಟ್ಟಿಸಲಾಯಿತು. ಒಂದೇ ಮಾಡದಲ್ಲಿ ಉತ್ಸವವಾಯಿತು. ‘‘ನಾವಿಬ್ಬರೂ ಒಂದೇ ಮಾಡದಲ್ಲಿದ್ದರೆ ಜನರು ನಗಬಹುದು. ಅಪವಾದ ತರಬಹುದು. ನಿನಗೆ ಈ ಮಾಡ ಇರಲಿ. ನಾವು ಎಂಟು ಒಕ್ಕಲು ಮನೆಯವರನ್ನು ಮೆಚ್ಚಿಸಿ, ಪಶ್ಚಿಮದಲ್ಲಿ ಮಾಡ ಕಟ್ಟಿಸಿಕೊಳ್ಳುತ್ತೇವೆ’’ ಎಂಬುದಾಗಿ ತೋಡಕುಕ್ಕಿನಾರ್ ದೈವ ಹೇಳಿತು.

‘‘ಗಂಗಾದೇವಿ ಕೈಯಿಡ್ದ್‌ ಅಂಗೈದಾತ್ ಜಾಗೆ ದೆತೊಂದು ಅಯಿಕ್ ಮುಂಗೈ ದಾತ್ ಪುಣಿಪಾಡ್ದ್‌ ಒಂಜುಂಡೆ  ಗಂಧೊನು ಸಂಜೀವನದ ಗುಳಿಗೆಗ್ ಸರಿಮಲ್ಪಾದ್ ಕೊರ್ದು ಇನಿಮುಟ್ಟ ಮೆರೆವೊಂಡ ಭಟ್ರೆ! ಎಂಚ  ಅಪಕೀರ್ತಿ ಬತ್ತ್‌ಪೋವಾ?’’

(ಗಂಗಾದೇವಿಯ ಕೈಯಿಂದ ಅಂಗೈಯಷ್ಟು ಸ್ಥಳ ಪಡೆದು ಅದಕ್ಕೆ ಮುಂಗೈಯಷ್ಟು ಹುಣಿ ಹಾಕಿ ಒಂದು  ಉಂಡೆ ಗಂಧವನ್ನು ಸಂಜೀವನದ ಗುಳಿಗೆಗೆ ಸರಿ ಮಾಡಿಸಿಕೊಟ್ಟು ಇದುವರೆಗೆ ಮೆರೆಯಿಸಿದೆವು ಭಟ್ಟರೆ!  ಹೀಗೆ ಅಪಕೀರ್ತಿ ಬಂದುಹೋದೀತೇ?)

‘‘ಅಪಕೀರ್ತಿ ದುಂಬುಗು ಬೈದ್‌ಜಿ, ನನೊಗು ಬರಂದ್‌, ತನ್ಕುಲು ನಡಪಾವೊನೊಡು’’

(ಅಪಕೀರ್ತಿ ಹಿಂದಕ್ಕೆ ಬಂದಿಲ್ಲ, ಮುಂದಕ್ಕೆ ಬರದು. ತಾವು ನಡೆಸಿಕೊಡಬೇಕು)

ಅಪಕೀರ್ತಿ ಕೇಳಲು ದೈವಗಳೂ ತಯಾರಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು.

‘‘ಎಂಕ್ಲು ಪತ್ತ್‌ ಮಲ್ಲಾಕ್ಲೆನ್ ಪತ್ತಿಜ, ಪತ್ತ್ ಬಡವೆರೆನ್ ಪತ್ತೊಂದು ಒಂಜಂಡೆ ಗಂಧೊನು ಸಂಜೀವನದ  ಗುಳಿಗೆಗ್ ಸರಿ ಮಲ್ಪಾದ್ ಕೊರ್ದು ಇನಿಮುಟ್ಟ ಮೆರೆವೊಂಡ!’’

(ನಾವು ಹತ್ತು ಮಂದಿ ಶ್ರೀಮಂತರನ್ನು ಹಿಡಿದಿಲ್ಲ. ಹತ್ತು ಪಾಲು ಬಡವರನ್ನು ಹಿಡಿದು ಒಂದು ಗುಳಿಗೆ  ಗಂಧವನ್ನು ಸಂಜೀವನ ಗುಳಿಗೆಗೆ ಸರಿಮಾಡಿಸಿಕೊಟ್ಟು ಇದುವರೆಗೆ ಮೆರೆದೆವು)

ಇಲ್ಲಿಯ ಸಂಭಾಷಣೆ ಮುಧುರವಾದುದು, ಆತ್ಮೀಯವಾದುದು. ಹೀಗೆ ಇಂತಹ ಸಂಭಾಷಣೆ ಮುಂದುವರಿದು ದೈವ ಮತ್ತು ಭಜಕರ ನಡುವೆ ಒಂದು ವಿಶ್ವಾಸಪೂರ್ಣ ಸಂಬಂಧ ನಿರ್ಮಾಣವಾಗುತ್ತದೆ.

‘‘ಎಂಚ ತಂತ್ರಿದಾರೆ, ಎಂಕ್ಲು ಲೆತ್ತಿಂಚಿತ್ತಿ ಕೋಡಂಬುದ ಗಳಿಗೆ ಇಸನೋ ಅಮುರ್ತನೋ?’’

(ಹೇಗೆ ತಂತ್ರಿಯವರೇ, ನಾವು ಕರೆದಂತಹ ಕೋಡಂಬಿನ ಗಳಿಗೆ ವಿಷವೇ ಅಮೃತವೇ?)

‘‘ಇಸ ಇತ್ತ್ಂಡ ಕಡಪ ರಾಜ್ಯೊಗು ಪಾಡ್ದ್‌ ಅಮುರ್ತೊನು ಈ ಸ್ಥಳೊಕುಲಾ ಸಂತೇಸಿಗ್‌ಲಾ ಪಟ್ಟ್‌ದ್‌ ನಡಪುಡಾವೊಡಾಯಿನ ಬಹುಭಾರ ನಿಕ್ಲೆ ಚಿತ್ತದವು’’

(ವಿಷ ಇದ್ದರೆ ಅನ್ಯ ರಾಜ್ಯಕ್ಕೆ ಹಾಕಿ ಅಮೃತವನ್ನು ಈ ಸ್ಥಳಕ್ಕೂ ಸಂತಾನಕ್ಕೂ ಹಂಚಿ ನಡೆಸಿಕೊಡುವ  ಬಹುಭಾರ ನಿಮ್ಮ ಚಿತ್ತದ್ದು.)

ತನ್ನ ಹೆಚ್ಚುಗಾರಿಕೆಯನ್ನು ಕೊಂಡಾಡುವುದರಲ್ಲಿ ತೃಪ್ತಿಪಟ್ಟುಕೊಳ್ಳುವ ಉದಾಹರಣೆಗಳಿರುವಂತೆ, ತನ್ನವರ ಹೆಚ್ಚುಗಾರಿಕೆಯನ್ನೂ ಎತ್ತಿ ಹಿಡಿಯುವ ಹಿರಿಯ ಗುಣಗಳಿಗೂ ಸಾಕಷ್ಟು ಸಾಕ್ಷ್ಯಗಳು ಸಿಗುತ್ತವೆ. ಉಳ್ಳಾಲ್ತಿ ತನ್ನ ಹಿರಿಯಣ್ಣನ ಬಗೆಗೆ ಹಿರಿಮೆ ವ್ಯಕ್ತಪಡಿಸುವ ಮಾತು ಹೀಗಿದೆ :

‘‘ಎಂಕ್ಲೆ ನೇಲ್ಯಣ್ಣೆ ಅಸ್ತಮಾನೊಡು ಧರ್ಮೆತ್ತಿಮಾಯೆ’’.

ತಂಗಿಯ ಬಗೆಗೆ ಅಣ್ಣ ತೋಡಕುಕ್ಕಿನಾರ್ ದೈವವೂ ಹೀಗೆಯೇ ಗುಣವರ್ಣನೆ ಮಾಡುವುದು ಹೀಗೆ ವ್ಯಕ್ತವಾಗುತ್ತದೆ:

(ನಮ್ಮ ಹಿರಿಯಣ್ಣ ಅಸ್ತಮಾನದಲ್ಲಿ ಧರ್ಮ ರಕ್ಷಣೆಗೈಯುವವರು)
‘‘ಎಂಕ್ಲೆ ತಂಗಡಿ ಉದಿಪುಡು ಉರಿಉಷ್ಣದ ಮಾಯಾಂದ್‌ಪಣ್ಪವೊಂಡೆರ್’’

(ನಮ್ಮ ತಂಗಿ ಉದಯದಲ್ಲಿ ಉರಿ ಉಷ್ಣದ ಮಾಯೆ ಎಂದೆನಿಸಿಕೊಂಡರು)
ಶಾಂತ ದುರ್ಗೆ ಎನ್ನುವುದು ಉಳ್ಳಾಲ್ತಿಗಿರುವ ಹೆಸರು.

‘‘ಎಂಕ್ಲು ಸತ್ಯೊಡು ಮೆರೆಯಿನ ಪರಿಮಳದ ಮಾಯೊ. ಒಂಜಾನೊಂಜಿ ಕಾಲೊ ಸೂರ್ಯ ಉದಿಪಿ  ಪೊರ್ತುಡೊಂಜಿ ಎಡ್ಡೆ ಗಳಿಗೆ ತೂದು ಕಬುಲ್ತಿ ಪೆತ್ತಲಾ ಪಿಲಿಲಾ ಭೇಟಿಯಾಯಿ ಜಾಗೆಡ್ ನೆಲೆಯಾಯಿಂಚಿ  ಆದಿಚಿತ್ತೊ’’

(ನಾವು ಸತ್ಯದಲ್ಲಿ ಮೆರೆದ ಪರಿಮಳದ ಮಾಯಾವಿಗಳು, ಒಂದಾನೊಂದು ಕಾಲಕ್ಕೆ ಸೂರ್ಯ ಉದಿಸುವ  ಹೊತ್ತು ಒಂದು ಒಳ್ಳೆಯ ಗಳಿಗೆ ನೋಡಿ ಕಪಿಲೆ ದನವೂ, ಹುಲಿಯೂ ಭೇಟಿಯಾದ ಜಾಗದಲ್ಲಿ  ನೆಲೆಗೊಂಡಂತಹ ಆದಿಚಿತ್ತ)

‘‘ಸೊಮನಾಥನಿರ್ಪೊ ಸಾರ್ಲಪಟ್ಟ ಸತ್ಯೊ, ಎಂಕ್ಲು. ಎಂಕ್ಲೆ ಚಿತ್ತ ಒತ್ತಟ್ಟಾದ್‌ಪ್ರಾಕ್‌ದ ಕಟ್ಟ್‌ಇನಿಮುಟ್ಟ  ನಡಪುಡಾವೊಂಡ.’’

(ಸೋಮನಾಥನಿರೂಪ ಸಾರಾಳಪಟ್ಟ ಸತ್ಯ, ನಾವು ನಮ್ಮ ಚಿತ್ತ, ಒತ್ತಟ್ಟಾಗಿ ಪ್ರಾಚೀನ ಕಟ್ಟಳೆಯನ್ನು  ಇಂದು ತನಕ ನಡೆಸಿಕೊಂಡೆವು.)

ಸೊಗಸಾದ ಹಾಗೂ ಪರಿಣಾಮಕಾರಿಯಾದ ವರ್ಣನೆಗಳು, ವಿವರಣೆಗಳು, ಪಾಡ್ದನ, ಮದಿಪು, ಪಾರಿಗಳಲ್ಲಿ ವಿಪುಲವಾಗಿ ದೊರೆಯುತ್ತವೆ.

‘‘ಕಳುವೆರೆ ಕಳ್‌ಕಡೆ ಎಚ್ಚಾಂಡ್‌. ಭೂತದ ಙರಸಯ ಕಡಮೆ ಆಂಡ್‌. ಕುಕ್ಕುಡು ಗುಜ್ಜೆಡ್‌ಙಾಲ್‌ಡ್‌ಙಲ್‌ಮೊಡು ಒರಿನೆಜ್ಜಿ ಕಂಡೊಡು ಸೂಡಿಯೇ ಜಾಲ್‌ಡ್‌ಪೇಜಿಯೇ ಒರಿನೆಜ್ಜಿ’’ (ಪಿಲಿಚಂಡಿ ಪಾಡ್ದನ, ಕೊಂಡಾಣ)

(ಕಳ್ಳರು ಕಳುವ ಕಡೆ ಹೆಚ್ಚಾಯಿತು, ಭೂತದ ಅರಸುತನ ಕಡಿಮೆಯಾಯಿತು. ಮಾವಿನಲ್ಲಿ, ಹಲಸಿನಲ್ಲಿ  ಯಾವುದರಲ್ಲೂ ಉಳಿದಿಲ್ಲ. ಗದ್ದೆಯಲ್ಲಿ ಪೈರಿನ ಸೂಡಿ, ಅಂಗಳದಲ್ಲಿ ತೆನೆ ಉಳಿದಿಲ್ಲ.)

‘‘ಅಂಗೈ ಪತ್ತಲ್ಲ ಜಾಗೆಡ್ ವಾಮಂದ ಕೊಟ್ಯ ಕಟ್ಟೊಡು ಪನ್ಪೆರ್ ಅರಿಯಡ್ ನೈಯ್ಯೆ ಕಲ್ಪೊಡು ಎಣ್ಣೆ  ಜೋಡ್ಯದೆರ್‌ಗೆ.

ವಾಮಂದ ಕರಿಪುಗೆ ಲಕ್ಕುಂಡು ತಾರಿದಾತ್‌ಎತ್ತರೊಡು ತತ್ತ್‌ರದಾತ್ ಅಗೆಲೊಡು ಲಕ್ಕುಂಡು’’(ಮುಂಡತ್ತಾಯ ಪಾಡ್ದನ, ಕೋಟೆಕಾರು)

(ಅಂಗೈ ಹಿಡಿಯುವಷ್ಟು ಜಾಗದಲ್ಲಿ, ಹೋಮದ ಕೊಟ್ಟಿಗೆ ಕಟ್ಟಬೇಕು ಎನ್ನುವರು. ಪಾತ್ರೆಯಲ್ಲಿ ತುಪ್ಪ,  ಕಲ್ಪದಲ್ಲಿ ಎಣ್ಣೆ ಜೋಡಿಸಿರುವಂತೆ, ಹೋಮದ ಕರಿಹೊಗೆ ಏಳುವುದು ತಾಳೆಮರದಷ್ಟು ಎತ್ತರಕ್ಕೆ,  ಛತ್ರದಷ್ಟು ಅಗಲಕ್ಕೆ.)