ಇಲ್ಲಿನ ಹೋಮಕ್ಕಾಗಿ ಸನ್ನಾಹ ಸಿದ್ಧತೆ ಹಾಗೂ ಹೋಮಕಾರ್ಯದ ವರ್ಣನೆ ಯಾವುದೇ ಕಾವ್ಯದಲ್ಲಿ ನಿರೂಪಿತವಾಗಿರುವುದಕ್ಕಿಂತ ಕಡಿಮೆಯದ್ದೇನೂ ಅಲ್ಲ.

‘‘ಉದಿಪುಗು ಸೂರ್ಯೆ, ಕಂತ್‌ಗ್‌ ಚಂದ್ರೆ, ಕಲ್ಲ್‌ಡ್‌ನಾಗೆ, ಪುಂಚೊಡು ಸರ್ಪೆ, ಬನೊಟು ಬೆಮ್ಮೆರ್‌…  ಗಟ್ಟಡ್‌ಪುಟ್ಟಿ ಮುರ್ಗೊಲು ಗಟ್ಟಿಡ್ ಬಳತ್ತೊ. ತುಳುನಾಡ್ ತುಳುನಾಡ್ಂದ್ ಪಣ್ಪುನವೇ  ಕೇನ್‌ದಿನತ್ತಂದೆ ಕಣ್ಣ್‌ಕೊಂಡು ತೂತುಜೆ, ತುಳುನಾಡ್. ತುಳುವೆರ್ ಮಲ್ತಿ ಕೇನೆ ಕೆರೆಂಗ್ ಬಾರೆ ಬಲ್ಲ್ ಗಸಿ  ಮಲ್ಪೊಡು’’ಂದ್ ಪಂಡೊ ಮುರ್ಗೊಲು… ಬಾರೆಡ್ ಮೇಲ್ ಉದ್ಯ ಬೆನ್ಪುಂಡು ಆದಾಳೆ, ಬೂದಾಳೆ,  ದಯಿಬಾರೆ… ಗಾಳಿಗೊಂಜಿ ಬಜಕೂರೆ, ಬೀದಿಗೊಂಜಿ ಮೆನ್ನ್‌ಬತ್ತಿಲೆಕೊ ಬತ್ತೆ. ಇಂಡಿದ ಪುದರ್‌ದಾನೆ  ಪನ್ನಗ ಐರೊಲುದು ಇಂಡಿ, ಮೈರೋಲುದ ಇಂಡಿ, ನೆಕ್ಕಿದ ಇಂಡಿ, ನೇರೊಳುದ ಇಂಡಿ, ಬೆಲ್ಲಪತ್ರೆ ಇಂಡಿ,  ಆವೊಡು ಕೋರಿ ಬಾರೆ ಜೋಗಿ ಜಂಗಮದ ಇಂಡಿ. ಆವೊಡು ಇಂಡಿ, ಪತ್ತ್‌ಪದಿನಾಜಿ ಬಗೆತ ಇಂಡಿ’’  (ಕುಪ್ಪೆ ಪಂಜುರ್ಲಿ ಪಾಡ್ದನ)

(ಉದಯಕ್ಕೆ ಸೂರ್ಯ, ಅಸ್ತಕ್ಕೆ ಚಂದ್ರ, ಕಲ್ಲಿನಲ್ಲಿ ನಾಗ, ಹುತ್ತದಲ್ಲಿ ಸರ್ಪ, ಬನದಲ್ಲಿ ಬ್ರಹ್ಮ… ಘಟ್ಟದಲ್ಲಿ  ಹುಟ್ಟಿದ ಮೃಗಗಳು ಘಟ್ಟದಲ್ಲಿ ಬೆಳೆದವು… ತುಳುನಾಡು ತುಳುನಾಡೆಂದು ಹೇಳುವುದೇ ಕೇಳಿದ್ದಲ್ಲದೆ ಕಣ್ಣು  ಕೊಂಡು ನೋಡಿಯೇ ಇಲ್ಲ. ತುಳುನಾಡು ನೋಡಬೇಕು, ತುಳುವರು ನೆಟ್ಟ ಕೇನೆ, ಗೆಣಸು, ಬಾಳೆ ದಿಂಡು  ಪಲ್ಯ ಮಾಡಬೇಕು ಎಂದು ಹೇಳಿಕೊಂಡವು ಮೃಗಗಳು… ಬಾಳೆಯಲ್ಲಿ ಮೇಲು ಎನಿಸಿಕೊಂಡಿದೆ ಆದಾಳೆ,  ಬೋದಾಳೆ, ಗಿಡಬಾಳೆ… ಗಾಳಿಗೊಂದು ತರಗೆಲೆ, ಕಿಚ್ಚಿಗೊಂದು ಕಿಡಿ ಬಂದ ಹಾಗೆ ಬಂದ. ಇಂಡಿಯ  ಹೆಸರೇನೆಂದು ಹೇಳಿದರೆ ಅದು ಐರೋಳಿನ ಇಂಡಿ, ಮೈರೋಲಿನ ಇಂಡಿ, ನೆಕ್ಕಿಯ ಇಂಡಿ, ನೇರಳೆಯ  ಇಂಡಿ, ಬಿಲ್ವಪತ್ರೆಯ ಇಂಡಿ. ಆಗಬೇಕು, ಕೋಳಿಬಾಳೆ ಜೋಗಿ ಜಂಗಮದ ಇಂಡಿ, ಆಗಬೇಕು ಇಂಡಿ ಹತ್ತು  ಹದಿನಾರು ಬಗೆಯ ಇಂಡಿ.)

‘‘ಅಂಕೆ ಬುಡಿಯೆ, ಅರಬಾಯಿ ಕೊರಿಯೆ, ನೆಲಮೂರಿ ಪೋಂಡು, ಏಳ್ವೆರ್ ಸೆಟ್ಟಿಗಾರನಕುಲು, ಎಲ್ಯ ಸೆಟ್ಟಿ,  ಎಲ್ಯಣ ಸೆಟ್ಟಿ, ಆದು ಸೆಟ್ಟಿ, ಆದಪ್ಪ ಸೆಟ್ಟಿ, ದುಗ್ಗು ಸೆಟ್ಟಿ, ದುಗ್ಗಣ್ಣ ಸೆಟ್ಟಿ, ಮಗೆ ಮಾಲಿಂಗ ಸೆಟ್ಟಿಗಾರೆರ್’’

(ಅಂಕ ಬಿಟ್ಟ ಅರ್ಭಟ ಕೊಟ್ಟ, ನೆಲಮೂರಿ ಹೋಯಿತು. ಏಳು ಮಂದಿ ಸೆಟ್ಟಿಗಾರರು. ಚಿಕ್ಕ ಸೆಟ್ಟಿ, ಚಿಕ್ಕಣ್ಣ  ಸೆಟ್ಟಿ, ಆದು ಸೆಟ್ಟಿ, ಆದಪ್ಪ ಸೆಟ್ಟಿ, ದುಗ್ಗು ಸೆಟ್ಟಿ, ದುಗ್ಗಣ್ಣ ಸೆಟ್ಟಿ, ಮಗ ಮಾಲಿಂಗ ಸೆಟ್ಟಿಗಾರರು).

‘‘ನಿಕುಲು ಮಲ್ತಿ ಸಾಲಮೂಲೊ ಒರಿಯೊಂದು ಬತ್ತ್ಂಡ್‌. ಆನೆಡ್ ಸಂದ್‌ಬಿ ಅರಿ ಒರಿತ್‌ಂಡ್‌, ಕುದ್ರೆಡ್  ಸಂದ್‌ಬಿ ಕುಡು ಒರಿತ್‌ಂಡ್. ಒಂಟೆಡ್ ಪೇರುನ ಪತ್ತ್‌ಬಂಗಾರ್ ಒರಿತ್‌ಂಡ್, ಕತ್ತೆಡ್ ಪೇರುನಾತ್‌ಕತ್ತಿ  ಕರ್ಬ ಒರಿತ್ಂಡ್, ಕೊಂಬಿನ ಸಂಬಳ, ಬಾಂಕಿನ ಬಾಡಾಯಿ ಒರಿ ಒರಿ ಬತ್ತ್ಂಡ್’’

(ನೀವು ಮಾಡಿದ ಸಾಲಮೂಲ ಉಳಿಯುತ್ತಾ ಬಂತು, ಆನೆಯಲ್ಲಿ ಸಲ್ಲುವ ಅಕ್ಕಿ ಉಳಿದಿದೆ, ಕುದುರೆಯಲ್ಲಿ  ಸಲ್ಲುವ ಹುರುಳಿ ಉಳಿದಿದೆ, ಒಂಟೆಯಲ್ಲಿ ಹೇರುವ ಹತ್ತು ಬಂಗಾರ ಉಳಿದಿದೆ, ಕತ್ತೆಯಲ್ಲಿ ಹೇರುವಷ್ಟು ಕತ್ತಿ,  ಕಬ್ಬಿಣ ಉಳಿದಿದೆ. ಕೊಂಬಿನ ಸಂಬಳ, ಬಾಂಕೆಯ ಬಾಡಿಗೆ ಉಳಿಯುತ್ತಾ ಬಂದಿದೆ.)

‘‘ಎಂಕ್ಲೆ ಪಳಿಯಾಕುಲು ಉಲ್ಲೆರ್‌. ಕಾಯದ ಕಾಂತೆ, ಬೊಗ್ಗು ತಿರ್ಮಾಲೆ, ಪಟ್ಟದುಗ್ಗು, ಮಜಲದಾರಾಗೆ,  ಬೊಟ್ಟುಡು ಕುಂಞಿ, ಬಾಲೆ ಸಂಕೆ…’’

(ನಮ್ಮ ಅಕ್ಕಂದಿರು ಇದ್ದಾರೆ. ಕಾಯದ ಕಾಂತೆ, ಬೊಗ್ಗು ತಿರುಮಲೆ, ಪಟ್ಟದುಗ್ಗು, ಮಜಲ ದಾರಗೆ, ಬೆಟ್ಟಿನ  ಕುಂಞಿ, ಬಾಲೆ ಸಂಕೆ)

‘‘ಆನೆ ಪೋಪಿ ಅಗ್ರಸಾಲೆ, ಕುದ್ರೆ ಪೋಪಿ ಬಂಡಸಾಲೆ, ನರಮಾನಿ ಪೋಪಿ ಮಾರ್ಗೊ’’ (ಕುಪ್ಪೆ ಪಂಜುರ್ಲಿ) (ಆನೆ ಹೋಗುವ ಅಗ್ರಶಾಲೆ, ಕುದುರೆ ಹೋಗುವ ಭಂಡಸಾಲೆ, ಮನುಷ್ಯರು ಹೋಗುವ ಮಾರ್ಗ)

‘‘ಕಲ್ಲ ಗುಂಡೊಡು ಸೋಣ ನಡಾವರಿ, ಕುತ್ರೊಟ್ಟ ಮಾಡೊಡು ಮಾಯಿನಡಾವರಿ’’ (ಬಂಗವಾಡಿ  ದೈಯ್ಯೊಂಕುಳು)

(ಕಲ್ಲಗುಡಿಯಲ್ಲಿ ಸೋಣ ತಿಂಗಳ ನಡಾವರಿ, ಕುತ್ರಟ್ಟ ಮಾಡದಲ್ಲಿ ಮಾಯಿ ತಿಂಗಳ ನಡಾವರಿ)

‘‘ಪಳಿಗ್ ಪಾತೆರ ಬೈದ್‌ಂಡ್, ಕಣ್ಣ ತೋಜಂದಿ ಸೀಮೆಡ್ದ್‌.

ಮೆಗ್ದಿಗ್‌ಪಾತೆರ ಬೈದ್ಂಡ್, ಕೆಬಿ ಕೇನಂದಿ ರಾಜೊಡ್ದು’’

(ಅಕ್ಕನಿಗೆ ಸಂಬಂಧ ಬಂದಿದೆ ಕಣ್ಣು ಕಾಣದ ಸೀಮೆಯಿಂದ. ತಂಗಿಗೆ ಸಂಬಂಧ ಬಂದಿದೆ ಕಿವಿ ಕೇಳದ  ರಾಜ್ಯದಿಂದ).

‘‘ಕರಿಯನುರೆನ್ ಕಾರ್‌ದೆರ್‌, ಬೊಳ್ಯ ನುರೆನ್ ದೂಸ್ಯೆರ್, ಕಾಯ ಬುಡ್ದು ಕೈಲಾಸ ಸೇರ್ಯೆರ್’’

(ಕಪ್ಪು ನೊರೆ ಕಾರಿದ್ದಾರೆ, ಬಿಳಿ ನೊರೆ ಉಗುಳಿದ್ದಾರೆ, ಕಾಯ ಬಿಟ್ಟು ಕೈಲಾಸ ಸೇರಿದ್ದಾರೆ).

‘‘ಎಂಕ್ಲು ಮಿತ್ತ್‌ಮಿದಿಲೋಕೊಡ್ದು ತಿರ್ತ್ ಸಿದಿ ಲೋಕೊಗು ಲೆಂಚಿದಾಂತೆ ಜತ್ತಿನ ದೈಯ್ಯೊಳು’’  (ಕೇತುಪಾಂಡಿ ಪಾಡ್ದನ)

(ನಾವು ಮೇಲು ಮಿಂಚುಲೋಕದಿಂದ ಕೆಳಗೆ ಸಿರಿ ಲೋಕಕ್ಕೆ ಏಣಿಯಿಲ್ಲದೆ ಇಳಿದ ದೈವಗಳು).

‘‘ಸೂರ್ಯ ಚಂದ್ರೆರ್ ಉಪ್ಪಿ ಮುಟ್ಟ ಈ ರಾಜ್ಯೊನು ಪೂತ ಬಿತ್ತ್‌ಲ್‌ದಲೆಕೊ ಕಾಪುನ ಅಧಿಕಾರ ಎನ್ನವು’’

(ಸೂರ್ಯ ಚಂದ್ರರು ಇರುವವರೆಗೆ ಈ ರಾಜ್ಯವನ್ನು ಹೂವಿನ ಹಿತ್ತಿಲ ಹಾಗೆ ಕಾಯುವ ಅಧಿಕಾರ ನನ್ನದು).

ಇಂತಹ ನುಡಿಗಟ್ಟುಗಳಲ್ಲಿ ಭವ್ಯತೆ, ಗಂಭೀರತೆ ಪ್ರಕಟವಾಗುತ್ತವೆ. ಈ ಮಾತುಗಳೆಲ್ಲ ಕಾವ್ಯಮಯವಾಗಿರುವುದಷ್ಟೇ ಅಲ್ಲ. ಭಕ್ತಭಜಕರಲ್ಲಿ ಅಳಿವಿಲ್ಲದ ವಿಶ್ವಾಸವನ್ನೂ ಮೂಡಿಸುತ್ತವೆ.

‘‘ನರ್ಲ್‌ಂಡ್ ಬಿರು ನಾಲರೆ ಲೋಕೋಗು ಕೇನುಂಡು, ಮುರ್ಲುಂಡು ಬಿರು ಮೂಜರೆ ಲೋಕೊಗು  ಕೇನುಂಡು, ಅಡ್ಡ ಪೋಯಿ ಬೇರ್ ತುಂಡಾಪುಂಡು, ಗುಂಡು ಕಲ್ಲ್‌ನರಿಂಡ್‌, ತನೆವುಳ್ಳ ಪೆತ್ತ ಐಯ್ಯ ಕಂಜಿ  ಪಾಡ್ಂಡ್, ಪೊಟ್ಟೆದಕೆಯಿ ಕಳಬೀರ್ಯ ಪೋತುಂಡು. ಬಂಜಿನ ಪೊಂಜೊವುಗು ಗರ್ಭ ನಡುಗುಂಡು,  ಕಲ್ಲ್‌ಉಡೆಂಡ್ ಮರ ಬಾಯಿ ಬುಡ್ಪುಂಡು. ಅಂಗಲ್ ಮುಂಗಲ್ ಪನ್ಪಿ ಗಾಳಿ ಬೀಜ್‌ಂಡ್, ಗೆಂಡದ  ಬರ್ಸನೇ ಬತ್ತ್ಂಡ್.’’ (ಕಿನ್ನಿಮಾಣಿ, ಪೂಮಾಣಿ ಪಾಡ್ದನ, ಅಮೃತ ಸೋಮೇಶ್ವರ, ೧೯೭೮, ೭೦).

(ಬಿಲ್ಲು ನರಳಿತು, ನಾಲ್ಕೂವರೆ ಲೋಕಕ್ಕೆ ಕೇಳಿಸಿತು. ಬಿಲ್ಲು ಮುಲುಕಿತು, ಮೂರೂವರೆ ಲೋಕಕ್ಕೆ  ಕೇಳಿಸಿತು. ಅಡ್ದ ಹೋದ ಬೇರು ತುಂಡಾಯಿತು, ಗುಂಡುಕಲ್ಲು ಬಿರಿಯಿತು, ಗಬ್ಬದ ಹಸು ಅಕಾಲದಲ್ಲಿ ಕರು  ಹಾಕಿತು, ತೆನೆ ತುಂಬಿದ ಹೊಲ ಸೀಕರಿಯಾಯಿತು, ಬಸುರಿ ಹೆಂಗಸರ ಗರ್ಭ ನಡುಗಿತು, ಕಲ್ಲು  ಒಡೆಯಿತು, ಮರ ಬಾಯಿ ಬಿಟ್ಟಿತು. ಅಂಗಲ, ಮಂಗಲ ಎಂಬ ಗಾಳಿ ಬೀಸಿತು, ಕೆಂಡದ ಮಳೆ ಬಂದಿತು.)

ಕಿನ್ನಿಮಾಣಿ ಪೂಮಾಣಿ ಅಣ್ಣತಮ್ಮ ದೈವಗಳು. ತಮ್ಮ ಬಿಲ್ಲುಗಳನ್ನು ಅಣಿಗೊಳಿಸಿದಾಗ ಉಂಟಾದ ಠಂಕಾರದಿಂದ ಭೂಮಿ ನಡುಗಿ ಉತ್ಪಾತಗಳಿಗೆ ಕಾರಣವಾಯಿತು ಎನ್ನುವ ವರ್ಣನೆ. ‘‘ಮೇಲು ಜಗವಲ್ಲಾಡಿದವು ಕೊರಳೋಳಿ ಕೆದರಿತು ಕುಸಿದನಹಿ ಪಾತಾಳ ಗೂಳಯ ತೆಗೆಯಲಳ್ಳಿಯಿರಿತ್ತು ಬಲು ರಭಸ’’ ಎನ್ನುವ ಕುಮಾರವ್ಯಾಸನ ಪದ್ಯವನ್ನು ಸ್ಮರಣೆಗೆ ತರುತ್ತದೆ.

ಭೂತೋತ್ಸವದ ಹೊತ್ತಿನಲ್ಲಿ ಬಿರುದಾವಳಿ ಹೇಳುವುದನ್ನು (ಬಿರ್ದಾಳಿ ಪೋಪುನಿ) ಆಲಿಸಿದರೆ ಒಂದು ವಿಶಿಷ್ಟ ಅನುಭವವಾಗುತ್ತದೆ.

‘‘ಸತ್ತಿವಾ ಹರಹರಾ ಗಿಂಡೇಶ್ವರಾ…’’ (ತೋಡಕುಕ್ಕಿನಾರ್)

ಸ್ಥಳನಾಮಗಳು, ಗಡಿಸೀಮೆಗಳು ನುಡಿಗಟ್ಟುಗಳಲ್ಲಿ, ಪಾಡ್ದನಗಳಲ್ಲಿ ಸಾಕಷ್ಟು ಕಂಡುಬರುತ್ತದೆ.

‘‘ಕಟ್ಲಮಾರ ಗಡಿಡ್ದ್ ಮಂಜಲ್ಪಾದೆಮುಟ್ಟ’’ (ಜುಮಾದಿ, ಪರಾರಿ)

(ಕಟ್ಲಮಾರ ಗಡಿಯಿಂದ ಮಂಜಲಪಾದೆಯವರೆಗೆ)

‘‘ಸಾರ ಸೀಮೆ, ಮೂಜಿ ಗ್ರಾಮ ಎಂಕ್ಲು ಇರ್‌ಂದಾಳ್ ಒತ್ತಿಂಚಿತ್ತಿ ಸತ್ಯೊಲು’’

(ಸಾವಿರ ಸೀಮೆ, ಮೂರು ಗ್ರಾಮ, ನಾವು ಈರ್ವರು ನೆಲೆಗೊಂಡಂತಹ ದೈವಗಳು)

‘‘ಕಾಲಾದಿಕಾಲೊಡ್ದು ವರ್ಸೊ ಪದ್‌ರಾಡ್ ತಿಂಗೊಳು ಮುಪ್ಪ ದಿನತ ಕೋರ್ದ ಕಟ್ಟ ಅಯಿನ್ ದಿನತ      ಉಚ್ಚಯ’’

(ಕಾಲಾದಿ ಕಾಲದಿಂದ ವರ್ಷ ಹನ್ನೆರಡು ತಿಂಗಳು ಮೂವತ್ತು ದಿನಗಳ ಕೋಳಿಕಟ್ಟ, ಐದು ದಿನಗಳ           ಉತ್ಸವ).

‘‘ರಡ್ದ್‌ಕಾರ್‌ದ ನರಮಾನಿಗಾವಡ್, ನಾಲ್ ಕಾರ್‌ದ ಕಂಜಿ ಕೈಕಂಜಿಗಾವಡ್‌ದಾಲಾ ದೋಸ ಇಜ್ಜಂದೆ    ಕಾಪೊಡು’’

(ಎರಡು ಕಾಲಿನ ಮುನಷ್ಯನಿಗಾಗಲೀ, ನಾಲ್ಕು ಕಾಲಿನ ಜಾನುವಾರಿಗಾಗಲೀ ಏನೂ ದೋಷವಿಲ್ಲದೆ         ಕಾಯಬೇಕು)

‘‘ಏಳ್ ಇರ್ಲ್‌ಎಣ್ಮ ಪಗೆಲ್‌ಡ್‌ಇಟ್ಟಿ ಇಡಿಂಗಣೆ ನಡ್‌ಗಯೆ ಬೂತೊ’’

(ಏಳು ಇರುಳು, ಎಂಟು ಹಗಲಲ್ಲಿ ಒಟ್ಟು ಇಡಿ ನಡುಗಿಸಿತು ಭೂತ).

‘‘ಒಂಜಿ ಕುಂದ ನಲ್ಪ ಜೋಕ್ಲೆನ್ ಕೊಡಂಗೆದಣೆ ಬೆರಿಪತ್ಯೆ’’

(ಒಂದುಕುಂದು ನಲ್ವತ್ತು ಮಕ್ಕಳನ್ನು ಎಂದರೆ ಮೂವತ್ತೊಂಬತ್ತು ಮಕ್ಕಳನ್ನು ಕೊಡಂಗೆ ಗುಡ್ಡಕ್ಕೆ       ಬೆನ್ನಟ್ಟಿದ.)

‘‘ಬಾರೊಡು ಬಾರ ಎಣ್ಮೆನಾನಿ ತಿಂಗೊಳುಡು ಮುಪ್ಪ ದೀಪ ಪೋಪುನಾನಿ’’

(ವಾರದಲ್ಲಿ ವಾರ ಎಂಟು ದಿನದಂದು, ಮೂವತ್ತು ದೀಪಗಳು ಸಲುವಂದು)

‘‘ಎಲ್ಪ ಗಾವುದೊನು ಏಳ್‌ಗೆ ಬಕ್ಕರ್ ಮಲ್ತೆನಾ’’

(ಎಪ್ಪತ್ತು ಗಾವುದವನ್ನು ಏಳು ನೆಗೆತ ಮಾಡಿದ.)

‘‘ಒಂಜಿ ಕಾಯ್ಪುಗು ರಡ್ಡ್‌ಕೊಡಪುಗು ಎಂಟ್ ಕೊಳಿಗೆಕ್ ಪಗರಿ ಮನ್ತೆ, ಒಂಜಿ ಕಾಯ್ಪುದ ರಡ್ಡ್‌ಕೊಡಪುಗು    ಪದ್‌ನಾಜಿ ದಾರೆದ ಕೋಡಂಬು ಮಲ್ತೆ ಆಚಾರಿ’’

(ಒಂದು ಕರಗಿಸುವಿಕೆಗೆ ಎರಡು ಹೊಡೆತಕ್ಕೆ ಎಂಟು ಕೊಂಡಿಯ ಬಿಲ್ಲು ನಿರ್ಮಿಸಿದ, ಒಂದು ಕರಗಿಸುವಿಕೆಗೆ   ಎರಡು ಹೊಡತಕ್ಕೆ ಹದಿನಾರು ಧಾರೆಗಳ ಬಿಲ್ಲು ನಿರ್ಮಿಸಿದ ಆಚಾರಿ).

‘‘ದುಂಬುದ ಕಾರ್‌ಲೆಗ್‌ಒಂಜಿ ಸಾರ ವರಣ್‌, ಪಿರವುದ ಕಾರ್ಲೆಗ್‌ಒಂಜಿ ಸಾರ ವರಣ್‌’’

(ಮುಂದಿನ ಕಾಲುಗಳಿಗೆ ಒಂದು ಸಾವಿರ ವರಹ, ಹಿಂದಿನ ಕಾಲುಗಳಿಗೆ ಒಂದು ಸಾವಿರ ವರಹ)

ಒಂದು ಘಟನೆಯನ್ನು ನಿರೂಪಿಸುವಾಗ ಇನ್ನೊಂದು ಘಟನೆಗೆ ಹೋಲಿಸಿ ಆಲಂಕಾರಿಕವಾಗಿ ಸೂಕ್ತವಾಗಿ ಅಭಿವ್ಯಕ್ತಿಗೊಳಿಸುವುದು ಭೂತಾರಾಧನೆಯ ಸಾಹಿತ್ಯದಲ್ಲಿ ಹೇಗಿದೆ ನೋಡಿ:

‘‘ನಮ್ಮ ಒಂಜಿ ತಾರಾಯಿಗ್‌ಮೂಜಿ ಕಣ್ಣ್ ಇತ್ತಿಂಚಿತ್ತಿ ಸತ್ಯೊಲು, ಒಂಜಿ ಅಪ್ಪಣೆ, ಒಂಜಿ ಮಣೆ, ಒಂಜಿ   ಚಾವು ನಂಕ್.’’

ನಾವು ಒಂದು ತೆಂಗಿನಕಾಯಿಗೆ ಮೂರು ಕಣ್ಣು ಇದ್ದಂತಹ ದೈವಗಳು. ಒಂದು ಅಪ್ಪಣೆ, ಒಂದು ಮಣೆ,   ಒಂದು ಮಂಚ ನಮಗೆ.)

‘‘ತನೆವುಲ್ಲ ಪೆತ್ತಗ್‌ಪಿಲಿಗೆ ಒಡ್ಡುನೆಂಗೆ ಒಡ್ಡಿಯಾಂಡ್‌ಯೇ’’

(ಗಬ್ಬದ ಹಸುವಿಗೆ ಹುಲಿ ಇದಿರಾದಂತೆ ಇದಿರಾಯಿತು)

‘‘ಚೆಂಡ್‌ನ್‌ಲಾ ಕಂಡೊನುಲಾ ಒಟ್ಟುಗು ದಂಟ್‌ಲೆಕ್ಕ‘‘

(ಚೆಂಡನ್ನೂ, ಹೊಲವನ್ನೂ ಒಟ್ಟಿಗೇ ಕುಟ್ಟಿದ ಹಾಗೆ.)

‘‘ಪೊಸೊಕ್ಕೆಲ್ ಮೂಲ್ಯ ತಕ್ಕಟ್ಟ್‌ಗುಳಿಗ’’

(ಹೊಸ ಒಕ್ಕಲು ಮೂಲ್ಯ ತಕ್ಕಟ್ಟು ಗುಳಿಗ)

‘‘ಕೈತೆಣ್ಣೆ ಕಣ್ಣ್‌ಗಾವಂದಿಲೆಕ್ಕೊ ಆಜಿ ಭೂತೊಗು ಮೂಜಿ ಪಾರಿ’’.

(ಕೈಯ ಎಣ್ಣೆ ಕಣ್ಣಿಗಾಗದ ಹಾಗೆ ಆರು ಭೂತಕ್ಕೆ ಮೂರು ನುಡಿ)

ಹಾಗೆಯೇ ನಿತ್ಯನುಡಿಯಲ್ಲಿ ಹಾಸುಹೊಕ್ಕಾಗಿರುವ ಕೆಲವು ಬೈಗುಳಗಳು

‘ನಿಕ್ಕ್ ಏರ್ ಪಾರಿ ಪಣ್ಪುನೆ?’
(ನಿನಗೆ ಯಾರು ಪಾರಿ ಹೇಳುವುದು?)

‘ಈ ದಾನೆ ಕಾಜಿ ಲೆಪ್ಪುನೆ?’
(ನೀನು ಏನು ಕಾಜಿ ಕರೆಯುವುದು?)

‘‘ಈ ಏತ್ ಬಿರ್ದ್ಳಾಳಿ ಪೋವ?’’ ‘‘ ನಿನ್ನ ವಲಸರಿ ಮೂಲೆ ದಾನೆ?’’
(ನೀನು ಎಷ್ಟು ಬಿರುದಾವಳಿ ಹೋಗುತ್ತಿ? ನಿನ್ನ ವಾಲಸರಿ ಇಲ್ಲೇ ಏನು?)

‘‘ಆಯೆ ವಾ ಅಂಬರೆ ಮರ್ಲೆಯಾ?’’
(ಆತ ಯಾವ ಅಂಬರ ಮರುಳನೋ?)

‘‘ಆಯೆ ವಾ ಭೂತೊಗು ಪುಟ್ಟಿನಾಯೆಂದ್?’’
(ಆತ ಯಾವ ಭೂತಕ್ಕೆ ಹುಟ್ಟಿದವನೋ?)

‘‘ನಿಕ್ಕ್ ದಾನೆ ಭೂತ ಪತೊಂದುಂಡಾ?’’ ‘‘ನಿಕ್ಕ್‌ಬಾರ್ನೆಗ್‌ಮಲ್ತ್ ದೀತೆ’’
(ನಿನಗೇನು ಭೂತ ಹಿಡಿದಿದಾ? ನಿನಗೆ ಪಾರಾಣೆಗೆ ಮಾಡಿಟ್ಟಿರುವೆ)

ನಂಬಿದವರಿಗೆ ಇಂಬು ಕೊಡುವುದು ಭೂತಗಳ ಮುಖ್ಯ ನೀತಿ ಮಾತ್ರವಲ್ಲ ತಾವು ನೆಲೆಸಿದಲ್ಲಿ ಅನ್ಯಾಯವನ್ನು ತುಳಿದು ನ್ಯಾಯಪಾಲನೆ ಮಾಡುವುದೂ ಅವುಗಳ ಧರ್ಮ.

ಭೂತಾರಾಧನೆಯನ್ನು ಅದರ ವ್ಯವಸ್ಥೆ ಕಟ್ಟುಪಾಡುಗಳನ್ನು ಮೀರಿದವರಿಗೆ, ತಪ್ಪು ಮಾಡಿದವರಿಗೆ, ಭೂತಗಳ ಮೂಲಕ ಶಿಕ್ಷೆ – ದಂಡನೆ ವಿಧಿಸುವ ಕ್ರಮಗಳು ಭೂತಾರಾಧನೆಯ ಒಂದು ಉದ್ದೇಶವಾಗಿರುವ ಹಾಗೆ ಕಂಡುಬರುತ್ತದೆ. ಭೂತಾರಾಧನೆಯ ಸಾಹಿತ್ಯಾಂಶಗಳನ್ನು ಗಮನಿಸಿದರೆ ಇದಕ್ಕೆ ಕೆಲವು ಸಮರ್ಥನೆಗಳು ಸಿಗುತ್ತವೆ.

ನೇಮದ ಕಳವೊಂದು ನ್ಯಾಯತೀರ್ಮಾನದ ಕಟಕಟೆಯ ಹಾಗೆ. ಅನೇಕ ಬಗೆಯ ನ್ಯಾಯ ತೀರ್ಮಾನಗಳು, ಸಮಸ್ಯೆಗಳ ಪರಿಹಾರ ಕಾರ್ಯ ಅಲ್ಲಿ ನಡೆಯುವುದು. ದೈವವೊಂದು ಅನೇಕ ವೇಳೆ ನ್ಯಾಯಾಧೀಶನಂತೆ ವರ್ತಿಸುತ್ತದೆ. ಬ್ರಾಹ್ಮಣ – ಪುರೋಹಿತ ಆಡಳಿತ ಮುಖ್ಯಸ್ಥರ ಹಾಗೂ ಹತ್ತು ಸಮಸ್ತರ ಸಮ್ಮುಖದಲ್ಲಿ ಅಲೌಕಿಕ ಜಗತ್ತಿನ ದೈವ, ಪಾತ್ರಿಯ ಮೇಲೆ ಆವೇಶ ಬಂದು ವಿಚಾರಣೆ ನಡೆಸುವುದುಂಟು. ಅದು ಲೌಕಿಕ,ಅಲೌಕಿಕ ವ್ಯಕ್ತಿ ಶಕ್ತಿಗಳ ನಡೆಯುವ ಮುಖಾಮುಖಿ ಮಾತುಕತೆಯೂ ಹೌದು. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಇಲ್ಲಿ ನೀಡಬಹುದು.

‘‘ನ್ಯಾಯೊಗು ಅಮುರ್ತದ ಮಿರೆ, ಅನ್ಯಾಯೊಗು ಇಸತ್ತ ಮಿರೆ’’
(ನ್ಯಾಯಕ್ಕೆ ಅಮೃತದ ಮೊಲೆ, ಅನ್ಯಾಯಕ್ಕೆ ವಿಷದ ಮೊಲೆ)

‘‘ನ್ಯಾಯೊಗು ಅಂಬು ಅನ್ಯಾಯಕ್ಕೆ ಇಂಬು’’
(ನ್ಯಾಯಕ್ಕೆ ಅಂಬು ಅನ್ಯಾಯಕ್ಕೆ ಇಂಬು)

‘‘ನ್ಯಾಯೊಗು ತಿಗಲೆಡ್ ಸಾದಿ, ಅನ್ಯಾಯೊಗು ಸುರ್ಯೊಡು ಸಾದಿ’’
(ನ್ಯಾಯಕ್ಕೆ ಎದೆಯಲ್ಲಿ ಹಾದಿ, ಅನ್ಯಾಯಕ್ಕೆ ಸುರಿಯದಲ್ಲಿ ಹಾದಿ)

‘‘ನ್ಯಾಯೊಗು ಬೇಲಿಯಾದ್ ಉಂತುವೊ’’
(ನ್ಯಾಯಕ್ಕೆ ಬೇಲಿಯಾಗಿ ನಿಲ್ಲುತ್ತೇವೆ)

‘‘ನಿಕ್ಕ್‌ಧರ್ಮದ ಬೂಳ್ಯ ತಿಕ್ಕಂದ್‌, ಕರ್ಮದ ಬೂಳ್ಯ ಪತ್ತ್‌ಲ’’
(ನಿನಗೆ ಧರ್ಮದ ವೀಳ್ಯ ಸಿಗದು, ಕರ್ಮದ ವೀಳ್ಯ ಹಿಡಿ)

‘‘ಸಾಯೊಗು ದೈವ, ಮೂಲೊಗು ಭೂತ’’
(ಸಹಾಯಕ್ಕೆ ದೈವ, ಮೂಲಕ್ಕೆ ಭೂತ)

ಧ್ವನಿಪೂರ್ಣವಾದ ಮಾರ್ಮಿಕವಾದ ಮಾತುಗಳು, ಕಾವ್ಯಾತ್ಮಕ ಪ್ರಯೋಗ, ಅಲಂಕಾರ, ವರ್ಣನೆಗಳು ಭೂತದ ಪಾರಿಯಲ್ಲಿ, ಮದಿಪು ನುಡಿಗಳಲ್ಲಿ, ಪಾಡ್ದನಗಳಲ್ಲಿ ಅನೇಕ ಬಗೆಯಲ್ಲಿ ಕಂಡುಬರುತ್ತವೆ. ಈ ಪದಪ್ರಯೋಗಗಳದ್ದೇ ಒಂದು ಮಹಾಕೋಶವಾಗುತ್ತದೆ ಎನ್ನುವುದು ಅತಿಶಯೋಕ್ತಿ ಅಲ್ಲ.

‘‘ಆಕಾಸ ಗೆಲ್ಲ್‌ನ್ ಭೂಮಿಗ್‌ ಊರಾದ್‌ ಕೊರ್ಪುನೆ (ಕೋಳಿಗೂಟ ಹಾಕುವುದು), ಪಾಪೆಗ್ ಬಂಗಾರ್‌ ದೀಪುನ (ಬಂಡಿಯಲ್ಲಿರುವ ವಿಗ್ರಹಕ್ಕೆ ಬಣ್ಣ ಬಳಿಯುವುದು), ತಿರ್ತಿಂಚಿತ್ತಿ ಗಜಮರೊನ್ ಮಿತ್ತ್ ಏರಾದ್‌ ಕೊರ್ಯೊ, ಏರಿ ಕೊಡಿನ್ ಚಂದ ಮನ್ತೊಂಡ (ಅಡ್ಡ ಹಾಕಿದ್ದ ಧ್ವಜಸ್ತಂಭವನ್ನು ಮೇಲೆ ನಿಲ್ಲಿಸಿ ಗರುಡನನ್ನು  ಏರಿಸಿ ಸೊಗಯಿಸಿಕೊಂಡೆವು)’’

ಚಂದ ಮನ್ತೊಂಡ, ಪೊರ್ಲು ಮನ್ತೊಂಡ ಎನ್ನುವ ಮಾತುಗಳು ಧ್ವನಿಸುವ ಅರ್ಥ ತುಳು ಸಂಸ್ಕೃತಿಯ ವೈಶಿಷ್ಟ್ಯವನ್ನು ಪ್ರತಿಬಿಂಬಿಸುತ್ತದೆ.

‘‘ತೂಂಕನಂದ ಉಜ್ಜಾಲ್‌ಪರೆಂಗಿ, ಮಂಚಾವು, ವಾಮಂದ ಕೊಟ್ಯ, ತುಂಬೆ ಜಾಲ ಜನನ, ಕೆಕ್ಕಿದೊಟ್ಟು ಉಪಚಾರ (ಆಲಿಂಗನ), ಸಿರಿಮೋನೆ ಒಂಜಾಗೆ ನೀಡಿಯೆರ್, ಮತಿತತ್ತ್ ಗತಿ ಬೆರಮೆ ಆಯೆರ್, ಬವನಂದ ಪ್ರತಿರೂಪ, ಕೊಂಡೆ ಮೂಂಕು, ಕೊಂಡೆ ಕೆಬಿ, ಸಿರಿಕಾರೆ ಪೊಂಜೆವು, ಸೆಟ್ಟಿ ಮಗೆ ಸೇಣವೆ, ಬಟ್ರೆ ಮಗೆ ಬಾರಗೆ, ಪಾತೆರೊಡು ಅಡೆಕೊಸೊ(ಮಾತಿನಲ್ಲಿ ವ್ಯತ್ಯಾಸ), ಎಕಸ್ತೆರ್ ಮಲ್ತೆರ್ (ರಾಜಿ ಮಾಡಿದರು), ಅಪ್ಪೆ ತತ್ತ್ಂಡ್ ಅಮ್ಮೆ ಮುತ್ತುಂಡು (ತಾಯಿ ತಪ್ಪಿತು ತಂದೆ ಸತ್ತಿತು), ಬೆನಲಾತ್ ಬೇಲೆ ಉನಲಾತ್‌ನುಪ್ಪು (ದುಡಿಯುವಷ್ಟು ಕೆಲಸ, ಉಣ್ಣುವಷ್ಟು ಅನ್ನ), ಅಂಚಿಡಿಂಚಿ ಪಿಲಿ ಬಲಿಪೆ (ಅತ್ತ ಇತ್ತ ಹುಲಿಚಿರತೆ), ಸತ್ಯ ದಂಡಿಗೆ. ನಮ ಬಲೆತ್ತ ಉಲಯಿದ ಮೀನ? (ನಮ್ಮ ಬಲೆಯೊಳಗಿನ ಮೀನ?), ಎಂಕ್ ತೋಟದ ಪಾಳೆ ಗುಡ್ಡೆದ ಪೂ (ನಲ್ಕೆತ್ತಾಯಿ ದೈವ ಹೇಳುವ ಮಾತು – ಹಾಳೆಯ ಅಣಿ, ಕೇಪಳದ ಹೂ ಹೊರತು ಬೇರೆ ಬೆಳ್ಳಿ ಬಂಗಾರ ಇಲ್ಲ), ಎಂಕ್‌ದಾಯೆ ಮೋನೆ ಇಜ್ಜಂದಿನಾಳೆಗ್ (ಉಳ್ಳಾಳ್ತಿ ದೈವ ತನಗೆ ಮುಖವಾಡ (ಆಭರಣ) ಇಲ್ಲ, ಅದೂ ಚಿನ್ನದ್ದೇ ಆಗಬೇಕೆಂಬ ಅಪೇಕ್ಷೆ ಮುಂದಿಡುವ ವೈಖರಿ), ತೂನಗ ಪೊರ್ಲೆ ಬಿರಿನಗ ಮರ್ಲೆ. ಕಂಡೊಡು ಕಾಪು. ಇಲ್ಲ್‌ಡ್‌ಪುಣ. ಅಯ್ಯಯ್ಯೊ ಪಾಪನೆ ಉಳೊ ಉಳೊ ದೋಸೆನೆ. ಮಲೆಟ್ ಬತ್ತಿನವು ಮೈಂದಾದ್ ಪೋವಡ್. ಕೊಡಿ ಏರ್ದ ಕೊಟೆದಾಯನ. ಕಡ್ತ್‌ದ್‌ಂಡ್ ಕೈಲ್, ಪಾಡ್ಡ್‌ಂಡ್ ದೊಂಪ, ಏರ್ದ್‌ಂಡ್ ಕೊಡಿ, ಕಟ್ಟ್‌ದ್‌ಂಡ್ ಸಿಂಗದನ (ಗೊನೆ ಕಡಿದಿದೆ, ಚಪ್ಪರ ಹಾಕಿದೆ, ಧ್ವಜ ಏರಿಸಿದೆ, ಸಿಂಗದನ ಕಟ್ಟಿದೆ), ಬಡಕಾಯಿ ಗಂಗೆ, ತೆನ್ಕಾಯಿ ಶೀರ್ತ. ಎಣ್ಣೆಡ್ ತಲೊ ಕಲಪ್ಪಯೆರ್, ಬೆಲ್ಲೊಡ್ ದಿಕ್ಕೆಲ್ ಗೂರಾಯೆರ್, ಕಂರ್ಬುಡ್ ಕೊಂಬಾಲ್, ಪಿಂಗಾರೊಡು ಗಿಡ್ಕೆ, ಬಚ್ಚಿರೆಡ್ ಪನಿದೊಂಪ (ಎಣ್ಣೆಯಲ್ಲಿ ತಳ ಕಲಸಿದರು, ಬೆಲ್ಲದಲ್ಲಿ ಒಲೆ ಹಾಕಿಸಿದರು, ಕಬ್ಬಿನಲ್ಲಿ ತೋರಣ, ಹಿಂಗಾರದಲ್ಲಿ ತಟ್ಟಿ, ವೀಳ್ಯದೆಲೆಯಲ್ಲಿ ಹನಿಚಪ್ಪರ), ಉಳಯಿಡ್ ಮಣೆ ದೀದ್ ನಂಬಿಯೆರ್, ಪಿದಯಿಡ್ ಕಲ್ಲ್ ಪಾಡ್ದ್ ನಂಬಿಯೇರ್ (ಒಳಗೆ ಮಣೆಯಿಟ್ಟು ಆರಾಧಿಸಿದರು, ಒಳಗೆ ಕಲ್ಲು ಹಾಕಿ ಆರಾಧಿಸಿದರು), ಕಣ್ಣ್‌ಗ್‌ಕೋಲ್ಮಯಿ ಒಯ್ತೆರ್(ಕಣ್ಣಿಗೆ ಕಾಡಿಗೆ ಎಳೆದರು.)

ಹೀಗೆ ಜನಪದೀಯರು ತಾವು ನಂಬಿಕೊಂಡು ಬಂದ ಭೂತ ದೈವಗಳಲ್ಲಿ ತಮ್ಮ ಅಪೇಕ್ಷೆಗಳನ್ನು ಈಡೇರಿಸಿಕೊಡಲು ನಿವೇದನೆ ಮಾಡಿಕೊಳ್ಳುವಲ್ಲಿ ಭೂತವು ತನ್ನ ಭಕ್ತರಿಗೆ ನೀಡುವ ಅಭಯ ವಚನಗಳಲ್ಲಿ ಸಾಂತ್ವನದ ನುಡಿಗಳಲ್ಲಿ ಅಥವಾ ಭೂತ ಸಿಟ್ಟು, ಅಟ್ಟಹಾಸಗಳಿಂದ ಆರ್ಭಟಿಸುವ, ಹೂಂಕರಿಸುವ ಧ್ವನಿಗಳಲ್ಲಿ ಅಭಿವ್ಯಕ್ತಿ, ಕುಶಲತೆಯ ಒಳ್ಳೆಯ ಕಾವ್ಯಾಂಶಗಳಿವೆ. ಭೂತ ದೈವಗಳ ಪಾಡ್ಡನಗಳು, ಆತ್ಮ ಕಥಾನಕಗಳು, ಚರಿತ್ರೆಗಳು, ಪಾರಿ ನುಡಿಕಟ್ಟು ಮದಿಪುಗಳು ಒಂದು ವಿಶಿಷ್ಟ ಹಾಗೂ ವೈವಿಧ್ಯಪೂರ್ಣ ಸಾಹಿತ್ಯವಾಗಿದ್ದು ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುತ್ತವೆ.

ಭೂತ/ದೈವಗಳು ಕೊಡುವ ನುಡಿ/ಮದಿಪು/ ಅಭಯ ವಾಕ್ಯಗಳು ಭೂತಾರಾಧನೆಯಲ್ಲಿ ಬಹುಮುಖ್ಯವಾಗುತ್ತವೆ. ಒಪ್ಪಿಸಿದ ಹರಕೆಗೆ, ಕೊಟ್ಟ ಕೋಲ ಬಲಿಗೆ, ಸಂಬಂಧಪಟ್ಟ ದೈವವೊಂದು ಸಂತೃಪ್ತಿಗೊಂಡು ನೀಡುವ, ಪ್ರಸಾದ ಕೊಡುವ ಮದಿಪು, ಇವು ದೈವ ಭಕ್ತನ ಬಯಕೆಯ ಫಲಗಳು. ದೈವವೊಂದು ವರ ಕೊಡುವುದಾಗಲೀ ಶಾಪ ನೀಡುವುದಾಗಲೀ ಅದು ಬಳಸುವ ಭಾಷೆಯ ಮಾಧ್ಯಮದ ಮೂಲಕ ಸಾಧ್ಯವಾಗುತ್ತದೆ. ದೈವ ಬಳಸುವ ಭಾಷೆಯೆಂದರೆ ಆ ದೈವದ ಪಾತ್ರಿ ಬಳಸುವ ಭಾಷೆ.

ದೈವವೊಂದು ತನ್ನ ಕಾರಣಿಕ / ಪ್ರತಾಪವನ್ನು ಪ್ರದರ್ಶಿಸಿಕೊಳ್ಳುವ ಹೊತ್ತು, ಭಾಷೆಯನ್ನು ಸಾಕಷ್ಟು ಪರಿಣಾಮಕಾರಿಯಾಗಿ ದುಡಿಸಿಕೊಳ್ಳಬೇಕಾಗುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ದೈವ ಪಾತ್ರಿಯ ಭಾಷಾಶೈಲಿ, ಸಾಹಿತ್ಯ, ಒಕ್ಕಣೆ ಮೊದಲಾದವು ಇಲ್ಲಿ ಲೆಕ್ಕಕ್ಕೆ ಬರುತ್ತವೆ. ಆಂಗಿಕ ಅಭಿನಯ, ಕಣಿತ, ಅಟ್ಟಹಾಸ, ಆರ್ಭಟ, ಹೂಂಕಾರಗಳೂ ಅಭಿವ್ಯಕ್ತಿಯ ಮಾಧ್ಯಮಗಳಾಗುವಂತೆ ದೈವ ತನ್ನ ರೋಷವನ್ನೋ ತೋಷನ್ನೋ ಭಾಷಾ ಸಾಹಿತ್ಯದ ಮೂಲಕ ವ್ಯಕ್ತಪಡಿಸಬಹುದು. ಈ ಅಭಿವ್ಯಕ್ತಿ ಬಹುಪಾಲು ನುಡಿಗಟ್ಟು / ಗಾದೆಗಳ ಮೂಲಕ ಪ್ರಕಟವಾಗುತ್ತದೆ.

ಗಾದೆಗಳ ಸಂದರ್ಭ ಮತ್ತು ಬಳಕೆಯ ಬಗೆಗೆ ವಿಚಾರ ಮಾಡುವವರು ಭೂತಾರಾಧನೆಯ ಸಾಹಿತ್ಯಿಕ ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಾಗೆ ಸಂದರ್ಭಕ್ಕೆ ಸಿಕ್ಕಿದ ಕೆಲವು ಗಾದೆಗಳನ್ನು ಇಲ್ಲಿ ವಿವೇಚಿಸಲಾಗಿದೆ.

೧. ‘‘ಎಂಚ ತರೆಕ್ಕ್‌ಮೈತಿ ನೀರತ್ತ? ಕಾರ್‌ಗ್‌ಲಾ ಜಪ್ಪು!’’
(ಹೇಗೆ ತಲೆಗೆ ಹೊಯ್ದ ನೀರಲ್ಲವೇ? ಕಾಲಿಗೂ ಇಳಿದೀತು!)

ತನ್ನ ಸೇವಕ ಬಳಗವನ್ನು ದೈವವೊಂದ ವಿಚಾರಿಸುವ ವೈಖರಿಯಿದು. ತನ್ನ ಹರಕೆ ಸೇವಾ ಕಾರ್ಯಗಳನ್ನು ಬಾಕಿ ಮಾಡುವವರನ್ನು ವಾರ್ಷಿಕ ಜಾತ್ರೆಯ ಸಂದರ್ಭ ಅಂಗಣದಲ್ಲಿ ಕೊಡಿಮರದ ಬುಡದಲ್ಲಿ, ಕಟ್ಟೆಯ ಬಳಿ, ಕೂಡಿರುವ ಹತ್ತು ಸಮಸ್ತರ ಸಮ್ಮುಖದಲ್ಲಿ ವಿಚಾರಣೆ ನಡೆಸಬಹುದು. ಸೇವೆ ಬಾಕಿ ಮಾಡಿದಾತನಿಗೆ, ಕರ್ತವ್ಯ ನಿರ್ವಹಿಸದಾತನಿಗೆ ತಕ್ಕ ದಂಡನೆಯಾಗುವುದು. ಉಳಿದೆಲ್ಲ ಕೆಲಸಗಳಿಗಿಂತಲೂ ದೈವದ ಕೆಲಸಕ್ಕೆ ಹೆಚ್ಚು ಪ್ರಾಧಾನ್ಯ ನೀಡಬೇಕು. ಆ ಕೆಲಸಗಳಿಗೆ ಯಾರಿಂದಲೂ, ಯಾವುದರಿಂದಲೂ ಅಡ್ದಿಯಾಗಕೂಡದು. ಹಾಗೆ ಅಡ್ಡಿಗೆ ಕಾರಣನಾದವನು ಅಪರಾಧಿಯಾಗುತ್ತಾನೆ ಎಂದೆಲ್ಲ ವಿಧಿ ನಿಯಮಗಳು ಇರುತ್ತವೆ. ಅವನ್ನು ತಪ್ಪದೆ ಪಾಲಿಸಬೇಕು. ಭೂತಾರಾಧನೆಯಲ್ಲಿ ಈ ರೀತಿಯ ವ್ಯವಸ್ಥೆ ಬಹಳಷ್ಟು ಕೆಲಸ ಮಾಡುತ್ತದೆ.

೨. ‘‘ರಡ್ಡ್‌ ಎರು ಕಟ್‌ಪಾಡಿ ಬಡವೆಲಾ ಇಜ್ಜಿ! ನಾಲೆರು ಕಟ್‌ಪಾಡಿ ಮಲ್ಲಾಯೆಲಾ ಇಜ್ಜಿ’’

(ಎರಡು ಕೋಣ ಕಟ್ಟಿ ಹಾಕಿದ ಬಡವನೂ ಇಲ್ಲ, ನಾಲ್ಕು ಕೋಣ ಕಟ್ಟಿ ಹಾಕಿದ ಶ್ರೀಮಂತನೂ ಇಲ್ಲ)

ತನ್ನ ಸಂಸಾರದಲ್ಲಿ ತೀರ ಬಡವನೂ ಇಲ್ಲ; ತೀರ ಶ್ರೀಮಂತನೂ ಇಲ್ಲ. ಎಲ್ಲರೂ ಸಮಾನರು ಎನ್ನುವುದನ್ನು ದೈವ ಸಾರಿ ಹೇಳುತ್ತಿದೆ.

೩. ‘‘ಬಟ್ಟಲ್ಡ್‌ಅದೆ ಪಾಡ್ಯರ್‌ಂಡ ಅಯಿತ ಎಡ್ಡೆ ಪಡಿಕೆ ನಿಕ್‌ಲೆಗೇ’’

(ಬಟ್ಟಲೊಳಗೆ ಪಾಲು ಹಾಕಿದಲ್ಲಿ ಅದರ ಒಳಿತು ಕೆಡುಕು ನಿಮಗೆಯೇ)

ನಿಮ್ಮೊಳಗೆ ನೀವು ಬೇರೆ ಬೇರೆ ಯೋಚಿಸಿದರೆ, ಪಾಲಾದರೆ ಪರಿಣಾಮ ನೆಟ್ಟಗಾಗದು.

೪.‘‘ಗಟ್ಟಗ್‌ಪೋದು ಎರು ಆಯೆರೆಲಾ ಬುಡಯೆ ಸಮುದ್ರೊಗು ಪೋದು ಮಚ್ಚ ಆಯೆರೆಲಾ ಬುಡಯೆ’’

(ಗಟ್ಟಕ್ಕೆ ಹೋಗಿ ಕೋಣ ಆಗಲೂ ಬಿಡೆನು, ಸಮುದ್ರಕ್ಕೆ ಹೋಗಿ ಮೀನು ಆಗಲೂ ಬಿಡೆನು)

೫. ‘‘ಕತ್ತಿಲಾ ಬಲ್ಲ್‌ಲಾ ನಿಕ್‌ಲೆಡನೇ ಕೊರ್ತ, ಕಟ್ಟುಂಡಲಾ ಬುಡುಪುಂಡಲಾ ನಿಕ್ಲೆ ಇಷ್ಟ’’

(ಕತ್ತಿಯನ್ನೂ ಹಗ್ಗವನ್ನೂ ನಿಮ್ಮಲ್ಲೇ ಕೊಟ್ಟಿದ್ದೇವೆ. ಕಟ್ಟುವುದೂ ಬಿಡುವುದೂ ನಿಮ್ಮ ಇಷ್ಟ)

ಸಮಸ್ಯೆಗೆ ಪರಿಹಾರ ಅದನ್ನು ಮುಂದಿಟ್ಟು ನಿಮ್ಮಲ್ಲೇ ಇದೆ. ಯೋಚಿಸಿ ನಿರ್ಧಾರ ಕೈಗೊಳ್ಳುವುದು ನಿಮ್ಮ ಕೆಲಸ.

೬. ‘‘ಗುರಿಟ್ ಕುಲ್ಲುದ್‌ಪೆಟ್ಟ್ ತಪ್ಪಾವುನೆತ್ತ ನಿಕುಲು?’’

(ಗುಳಿಯಲ್ಲಿ ಕೂತು ಪೆಟ್ಟು ತಪ್ಪಿಸಿಕೊಳ್ಳುವುದಲ್ಲವೇ ನೀವು?)

ಜವಾಬ್ದಾರಿ ತಮ್ಮ ಹೆಗಲ ಮೇಲೆ ಬರದಂತೆ ನೋಡಿಕೊಳ್ಳುವವರನ್ನು ಉದ್ದೇಶಿಸಿ ಹೇಳಿದ ಮಾತು.

೭.‘‘ಉಳಿಂಡ ನಾರಾಯಣೆ; ಮುನಿಂಡ ನಾಗೆ’’

(ಒಲಿದರೆ ನಾರಾಯಣ, ಮುನಿದರೆ ನಾಗ)

೮.‘‘ಪೊಸತ್‌ತೋಡಿಯೆರೆ ಬಲ್ಲಿ, ಪರತ್‌ನಿಗ್‌ಪ್ಪೆರೆ ಬಲ್ಲಿ’’

(ಹೊಸತು ತೋಡಬಾರದು, ಹಳತು ಮುಚ್ಚಬಾರದು)

ಹೊಸ ಕಟ್ಟಳೆ ಮಾಡುವುದೂ ಬೇಡ; ಇರುವ ಕಟ್ಟಳೆ ಮೀರುವುದೂ ಬೇಡ. ಸೇವೆಯ ಕೆಲಸಕ್ಕೆ ಹೊಸಬರನ್ನು ನೇಮಿಸುವುದಿಲ್ಲ. ಇರುವವರೇ ನಡೆಸಿಕೊಡಬೇಕು.

೯. ‘‘ಪೊಯ್ಯೆಡ್ ಬರೆಯಿನೆನ್ ಕಾರ್ಡ್‌ಮಾಜಡ್ರಡೆ’’

(ಮರಳಲ್ಲಿ ಬರೆದುದನ್ನು ಕಾಲಲ್ಲಿ ಅಳಿಸಿ ಹಾಕದಿರಿ)

ಇರುವ ಸಂಪ್ರದಾಯಕ್ಕೆ ಅಡ್ದಿ ಮಾಡದೆ ಅನುಸರಿಸಿಕೊಂಡು ಬನ್ನಿ.

ಮಂಜೇಶ್ವರ ಸಮೀಪದ ಉದ್ಯಾವರ ಎಂಬಲ್ಲಿ ಅಣ್ಣ ತಮ್ಮ ದೈವಗಳ ಮಾಡಗಳಿವೆ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಸೇವಾಕಾರ್ಯಗಳನ್ನು ಪಾಲಿಸಿಕೊಂಡು ಬರದವರ ಬಗೆಗೆ ದೂರು – ವಿಚಾರಣೆ ನಡೆದ ಒಂದು ಸಂದರ್ಭ. ಅಲ್ಲಿನ ಕಾಂಜರ ಕಟ್ಟೆಯವರ ಸೇವೆಯಲ್ಲಿ ವ್ಯತ್ಯಾಸವಾದಾಗ ದೈವ ಸಂಬಂಧಪಟ್ಟವರನ್ನು ವಿಚಾರಿಸಿ ಪ್ರಶ್ನಿಸಿತು. ಆ ಸಂದರ್ಭದಲ್ಲಿ ತಮ್ಮ ದೈವ (ಅಣ್ಣ ದೈವಕ್ಕಿಂತ ಉಗ್ರ ಸ್ವಭಾವದ್ದು) ನೀಡಿದ ಹೇಳಿಕೆಗಳಲ್ಲಿ ದೊರೆತ ಗಾದೆ ಮಾತುಗಳಿವು. ಇವು ಗಾದೆಗಳಾಗಿಯೇ ಕಾಣಿಸಿಕೊಳ್ಳದೆ ಮಾತುಕತೆಗಳಲ್ಲಿ ಅವು ಸೇರಿ ಮಾತುಗಳಿಗೆ ಪುಷ್ಟಿಯನ್ನು ತುಂಬುತ್ತವೆ. ಜೊತೆಗೆ ಸಂಕ್ಷಿಪ್ತತೆಯನ್ನೂ ಕೊಟ್ಟು ಪರಿಣಾಮಕಾರಿಯಾಗಿಸುತ್ತವೆ.

ದೈವವೊಂದಕ್ಕೆ ಅದರದ್ದೇ ಆದ ಸರಹದ್ದು ಇರುತ್ತದೆ. ಅದರದ್ದೇ ಆದ ಪರಿವಾರವಿರುತ್ತದೆ. ತನ್ನ ಊಳಿಗ ಚಾಕರಿ ಕೆಲಸಗಳಿಗೆ ನಿರ್ದಿಷ್ಟ ಮನೆಗಳನ್ನೂ, ಜನಗಳನ್ನೂ ಅದು ಗೊತ್ತುಪಡಿಸಿರುತ್ತದೆ. ಆದರೆ ಸಾಮಾಜಿಕ ಬದಲಾವಣೆಯ ಕಾರಣ ಈಗೀಗ ಈ ಜನರು ದೈವದ ಸರಹದ್ದಿನಿಂದ ಆಚೆಗೆ ಹೋಗಬಹುದಾದ ಸಾಧ್ಯತೆಗಳಿವೆ. ತಂದೆ ದೈವದ ಪೂಜಾರಿಯೋ, ಪಾತ್ರಿಯೋ ಆಗಿದ್ದಲ್ಲಿ ಮಗನಾಗಲಿ, ಅಳಿಯನಾಗಲೀ ಆ ಚಾಕರಿಯನ್ನು ಮುಂದುವರಿಸಿಕೊಂಡು ಹೋಗುವಷ್ಟು ಮಾನಸಿಕ ಸಿದ್ಧತೆಯಲ್ಲಿರುವುದಿಲ್ಲ. ಶಿಕ್ಷಣ ಪಡೆದು ಉದ್ಯೋಗ ದೊರಕಿಸಿಕೊಂಡು ಬೇರೆ ಊರುಗಳಲ್ಲಿ ನೆಲೆಸಬೇಕಾಗಿ ಬರುವುದೂ ಇದಕ್ಕೆ ಮುಖ್ಯ ಕಾರಣ ದೈವದ ಪ್ರಭಾವದಿಂದ ತಾವು ದೂರವಾಗಿರುವುದರಿಂದ ನಂಬಿಕೆ, ವಿಶ್ವಾಸಗಳಲ್ಲೂ ಸಡಿಲುತನ ಉಂಟಾಗಬಹುದು. ಪರಂಪರೆಯಿಂದ ಒಂದು ಮನೆಯವರು ಒಪ್ಪಿಸಿಕೊಂಡು ಬರುತ್ತಿದ್ದ ನಿರ್ದಿಷ್ಟ ಚಾಕರಿ ಕೆಲಸವನ್ನು ಬೇರೆಯವರು ವಹಿಸಿಕೊಳ್ಳಲೂ ಸಿದ್ಧರಿರುವುದಿಲ್ಲ. ದೈವಸ್ಥಾನದ ಆಡಳಿತ ವ್ಯವಸ್ಥೆಗೆ ಇದರಿಂದ ಸ್ವಾಭಾವಿಕವಾಗಿ ಅಡ್ಡಿ ಉಂಟಾಗುತ್ತದೆ. ಹೀಗೆ ಅಡ್ಡಿ ಉಂಟಾದಾಗ ಸಂಬಂಧಪಟ್ಟ ಮೊಕ್ತೇಸರರೋ, ಗುತ್ತಿನವರೋ ಆ ಅಡ್ಡಿಗೆ ಕಾರಣರಾದವರನ್ನು ದೈವದ ಮುಂದಿಟ್ಟು ತರಾಟೆಗೆ ತೆಗೆದುಕೊಳ್ಳದೆ ಇಲ್ಲ. ದೈವದ ಮೂಲಕ ಅವರಿಗೆ ಅವರ ಕುಟುಂಬ ಸಂಸಾರಕ್ಕೆ ಶಾಪ, ಶಿಕ್ಷೆ ತಟ್ಟುವುದೆಂಬುದಾಗಿ ಭಯ, ಆತಂಕಗಳನ್ನು ಒಡ್ಡುತ್ತಾರೆ. ಪರ್ಯಾಯವಾಗಿ ಅವರ ಮಾನಸಿಕ ನೆಮ್ಮದಿಯನ್ನು ಕದಡಿ ಕೆಡಿಸುತ್ತಾರೆಂದೇ ಹೇಳಬಹುದು.

ಭೂತಾರಾಧನೆಯಂತಹ ಒಂದು ಸಂಕೀರ್ಣ ವ್ಯವಸ್ಥೆ ಎಷ್ಟು ಜಟಿಲವಾದುದು ಎಂಬುದು ಆ ವ್ಯವಸ್ಥೆಯೊಳಗೆ ಸಿಕ್ಕು ಹಾಕಿಕೊಂಡವರಿಗೇ ಗೊತ್ತು. ಒಮ್ಮೆ ಆ ವ್ಯವಸ್ಥೆಯೊಳಗೆ ಸೇರಿಹೋದರೆ ಅಲ್ಲಿಂದ ಹೊರಬರುವುದು ಸಾಧ್ಯವಾಗದ್ದು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಲ್ಲಿ ಬೆಲೆಯಿರುವುದಿಲ್ಲ. ಅಲ್ಲಿನ ಪ್ರತಿಯೊಬ್ಬ ಸದಸ್ಯನೂ ಅದಕ್ಕೆ ಬದ್ಧನಾಗಿರುತ್ತಾನೆ. ಅನೇಕ ಸಂದರ್ಭಗಳಲ್ಲಿ ಈ ವ್ಯವಸ್ಥೆಯೊಳಗಿನಿಂದ ಹೊರಬರಲು ಪ್ರಯತ್ನಪಡುವವನಿದ್ದರೆ ಆತನನ್ನು ದೈವದ್ರೋಹಿ, ಸಾಮಾಜಿಕ ಅಪರಾಧಿ ಎನ್ನುವ ಹಾಗೆ ಕಂಡು ಆತನ ಮೇಲೆ ಆರೋಪ ಹೊರಿಸಲಾಗುವುದು. ಹಾಗಾಗಿ ಅಪರಾಧಿಪ್ರಜ್ಞೆ ಅವನಲ್ಲಿ ಮೂಡಿಸಿ ಮತ್ತೆ ಆ ವ್ಯವಸ್ಥೆಯೊಳಗೇ ತಳ್ಳಿಬಿಡಲಾಗುವುದು. ಇದು ಆ ವ್ಯವಸ್ಥೆಯಿಂದ ಸ್ಥಾನಮಾನ ಪ್ರತಿಷ್ಠೆಗಳ ಲಾಭ ಸಂಪಾದಿಸಿಕೊಳ್ಳುವವರ ಹೂಟವೂ ಹೌದು. ಅಲ್ಲಿನ ಕೆಲವು ಸ್ಥಾಪಿತ ಹಿತಾಸಕ್ತಿ ಬಲಗಳು ಅಂತಹವನನ್ನೂ ಮತ್ತೆ ಆ ವ್ಯವಸ್ಥೆಯೊಳಗೇ ಅದುಮುತ್ತವೆ. ತನ್ನ ಕುಟುಂಬ ಹಾಗೂ ವಂಶಕ್ಕೆ ಶಾಪ ತಟ್ಟಿಸಿಕೊಳ್ಳಲು ಭಯ ಪಡುವ ಯಾವನೇ ಆದರೂ ಆ ವ್ಯವಸ್ಥೆಯಲ್ಲೇ ಇದ್ದು ಮುಂದುವರಿಯಬೇಕಾಗಿ ಬರುವುದು ಎಷ್ಟೋ ವೇಳೆ ಅನಿವಾರ್ಯವೂ ಆಗಿರುತ್ತದೆ. ಇಲ್ಲಿ ದೈವವೊಂದರಿಂದ ಶಾಪ ತಟ್ಟುವುದು ಎನ್ನುವುದು ಕೇವಲ ನಂಬಿಕೆಯ ಆಧಾರದ ಮೇಲೆ ಕೆಲಸ ಮಾಡುತ್ತದೆ. ಎಲ್ಲಕ್ಕಿಂತಲೂ ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಮಾನಸಿಕ ಸ್ಥಿತಿಯಲ್ಲಿ ಆಗುವ ಅಸಮತೋಲನವೇ ದೊಡ್ಡ ದುರಂತ. ಅದೇ ಆತನ ಮುಂದಿನ ಅನೇಕ ಆಗುಹೋಗುಗಳಿಗೆ ಆದಿ ವ್ಯಾಧಿಗಳಾಗಿ ಪರಿಣಮಿಸಬಹುದು. ವ್ಯಕ್ತಿಯ ಇಂತಹ ದೌರ್ಬಲ್ಯಗಳನ್ನು ಗಮನಿಸಿಕೊಂಡೇ ಆತನನ್ನು ನಿಯಂತ್ರಿಸುವ ಕೆಲಸ ಭೂತಾರಾಧನೆಯ ವ್ಯವಸ್ಥೆಯೊಳಗಡೆ ನಡೆಯುತ್ತದೆ. ಇಲ್ಲಿ ಉದಾಹರಿಸಿರುವ ಗಾದೆಮಾತುಗಳಲ್ಲಿ ಅವುಗಳ ಇಂತಹ ಕಾರ್ಯಗಳು ಸ್ಪಷ್ಟವಾಗಿ ಪ್ರಕಟವಾಗಿರುವುದನ್ನು ಗಮನಿಸಬೇಕು.