ಆಧುನಿಕೀರಣದ ಪ್ರಕ್ರಿಯೆಯ ಭಾಗವಾಗಿಯೆ ಕನ್ನಡದಲ್ಲಿ ‘ಜನಪದ ಸಾಹಿತ್ಯ’ ಪರಿಕಲ್ಪಿತ ಗೊಂಡಿರುವುದು ಕಳೆದ ಶತಮಾನದ ಉತ್ತರಾರ್ಧದ ಹೊತ್ತಿಗೆ. ಆಧುನಿಕತೆಗೆ ಎದುರಾಗಿ, ಪಾರಂಪರಿಕ, ನಗರಕ್ಕೆ ಎದುರಾಗಿ ಗ್ರಾಮೀಣ, ಔದ್ಯೋಗಿಕತೆಗೆ ಎದುರಾಗಿ ವ್ಯವಸಾಯಿ ಎಂಬುದಾಗಿ ಮಾತ್ರವಲ್ಲ, ಅಕ್ಷರಕ್ಕೆ ಎದುರಾಗಿ ಮೌಖಿಕ/ ತೋಂಡಿ/ ಕಂಠಸ್ಥ ಎಂಬಂತೆ ಜಾನಪದ ಪರಿಕಲ್ಪಿತಗೊಂಡಿತು. ಈ ಕಾರಣದಿಂದಲೇ ಸಾಂಸ್ಕೃತಿಕ ಪಳೆಯುಳಿಕೆಯಾಗಿ ವರ್ತಮಾನದಲ್ಲಿ ನಶಿಸಿಹೋಗುತ್ತಿದೆ ಎನ್ನುವ ಗ್ರಹೀತದಿಂದ ಸಂಸ್ಕೃತೀಕರಣಗೊಳ್ಳುವ ತತ್ಪೂರ್ವದ ಸಾಂಸ್ಕೃತಿಕ ಅಂಶಗಳನ್ನು ಮೌಲ್ಯಾತ್ಮಕವಾಗಿ ಸಂಗ್ರಹಿಸುವ ಮತ್ತು ಪುನಾರಚಿಸುವ ಶೈಕ್ಷಣಿಕ ಚಟುವಟಿಕೆಗಳು ಜಾನಪದ ಅಧ್ಯಯನದ ಆರಂಭಿಕ ಕಾಲಘಟ್ಟದಲ್ಲಿ ಕಂಡುಬಂದವು. ಹೀಗೆ ಆಧುನೀಕರಣದ ಸಂದರ್ಭದಲ್ಲಿ ಆಕ್ಷರಿಕವಲ್ಲದ ಪಾರಂಪರಿಕ ಸಮಾಜದ ಭಾಷಿಕ ರೂಪಗಳನ್ನು ಮಾತ್ರ ಜನಪದ ಸಾಹಿತ್ಯವಾಗಿ ಪರಿಕಲ್ಪಿಸಿಕೊಂಡ ಕಾರಣ ಗಾದೆ, ಒಗಟು, ಲಾವಣಿ ಮುಂತಾದ ಭಾಷಿಕ ರೂಪಗಳ ಸಂಗ್ರಹ ಕಾರ್ಯ ನಡೆದುವು. ಅವು ಲಿಪೀಕರಣಗೊಂಡು ಆಕ್ಷರಿಕ ಪಠ್ಯಗಳಾಗಿ ರೂಪಾಂತರಗೊಂಡವು. ಮಿತ ವಿಶೇಷಣಗೊಂಡ ನಿರ್ದಿಷ್ಟ ಭಾಷಿಕ ಪಠ್ಯಗಳನ್ನೇ ಸಾಹಿತ್ಯಿಕವಾಗಿ ಪರಿಕಲ್ಪಿಸಿಕೊಂಡ ಮತ್ತು ಅದನ್ನೇ ಶೈಕ್ಷಣಿಕವಾಗಿ ಬೋಧಿಸುವ ಮತ್ತು ಅಧ್ಯಯನ ನಡೆಸುವ ವರ್ಗದಿಂದ ಜಾನಪದವೂ ಪರಿಕಲ್ಪಿತಗೊಂಡಿರುವ ಕಾರಣದಿಂದಲೇ ಸಾಹಿತ್ಯದ ರೂಪಾವಳಿಯಲ್ಲೇ (ಪ್ಯಾರಡೈಮ್) ಆಕ್ಷರಿಕ ಸಾಹಿತ್ಯಕ್ಕೆ ಸಮಾನಾಂತರವಾಗಿ ಮೌಖಿಕ ಜನಪದ ‘ಸಾಹಿತ್ಯ’ ಪರಿಕಲ್ಪಿತಗೊಂಡಿತು. ಸಾಹಿತ್ಯಿಕತೆಯ ಜೊತೆಗೆ, ಈ ಪಠ್ಯಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನೂ ಗುರುತಿಸಿಕೊಳ್ಳುವ ಮುಖೇನ ಈ ಪಠ್ಯಗಳಿಗೆ ‘ಜನಪದ ಸಾಹಿತ್ಯ’ ಎಂಬ ವಿಶೇಷಣಗಳು ಆರೋಪಿತವಾದುವು.

ಚರಿತ್ರೆಯ ಉದ್ದಕ್ಕೂ ಅಧಿಕಾರದ ಭಾಷೆಯಾಗಿರದ ಹಾಗೂ ಶೈಕ್ಷಣಿಕ ಮಾನ್ಯತೆಯನ್ನು ಪಡೆದಿರುವ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತ ಅಧ್ಯಯನಗಳು ಸಾಂಸ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ನಡೆದಿರುವುದು ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ. ಹದಿನಾರನೆಯ ಶತಮಾನವೆಂದು ಗುರುತಿಸಿಕೊಳ್ಳಲಾಗುವ ಶ್ರೀ ಭಾಗವತೊ, ಶ್ರೀ ಕಾವೇರಿ, ದೇವಿ ಮಹಾತ್ಮೆ ಈ ಮುಂತಾದ ಪ್ರಾಚೀನ ತುಳು ಮಹಾಕಾವ್ಯಗಳು ಇತ್ತೀಚೆಗೆ ಸಂಪಾದಿತಗೊಳ್ಳುವವರೆಗೆ, ಬಾಸೆಲ್ ಮಿಶನಿನ ಪ್ರಕಟಣೆಗಳೇ ಆಧುನಿಕ ತುಳು ಸಾಹಿತ್ಯ ಚರಿತ್ರೆಯ ಮೊದಲ ಘಟ್ಟ ಎಂಬಂತೆ ಗುರುತಿಸಲ್ಪಟ್ಟಿದೆ. ತುಳು ಜನಪದ ಸಾಹಿತ್ಯದಲ್ಲಿ ಗುರುತಿಸಲ್ಪಡುವ, ರೆವರೆಂಡ್ ಎ. ಮ್ಯಾನರ್ ಸಂಪಾದಿಸಿರುವ ‘ಪಾಡ್ದೊನೊಳು’ ಎಂಬ ತುಳು ಪಾಡ್ದನಗಳ ಸಂಗ್ರಹವನ್ನು ಹೊರತು ಪಡಿಸಿದರೆ, ಇದಕ್ಕಿಂತ ಪೂರ್ವದಲ್ಲಿ ತುಳು ‘ಜನಪದ ಸಾಹಿತ್ಯ’ದ ಸಂಗ್ರಹ, ವಗೀಕರಣ ಅಥವಾ ವಿಶ್ಲೇಷಣೆಯ ಉದಾಹರಣೆಗಳು ಯಾವುವೂ ದೊರೆಯುವುದಿಲ್ಲ. ಕುತೂಹಲದ ಸಂಗತಿ ಎಂದರೆ, ಪಾಡ್ದನಗಳನ್ನು ಸಂಗ್ರಹಿಸಿರುವ ಈ ಗ್ರಂಥದ ಕೊನೆಯ ಭಾಗದಲ್ಲಿ ತುಳುಗಾದೆಗಳ ಸಂಗ್ರಹವನ್ನು ಕಾಣುತ್ತೇವೆಯೇ ಹೊರತಾಗಿ ನಾವಿಂದು ಜನಪದ ಸಾಹಿತ್ಯವಾಗಿ ಗುರುತಿಸಿಕೊಳ್ಳುವ, ವರ್ಗೀಕರಿಸಿಕೊಳ್ಳುವ ತುಳು ಒಗಟುಗಳ ಸಂಗ್ರಹವನ್ನು ಕಾಣಲಾಗುವುದಿಲ್ಲ. ಪಾಡ್ದನ, ಗಾದೆಗಳಂತೆ, ಭಾಷಿಕ ರೂಪವಾಗಿರುವ ತುಳು ಒಗಟುಗಳು ಇಲ್ಲಿ ಯಾಜೆ ಸಂಗ್ರಹವಾಗಿಲ್ಲ ಎಂಬುದು ಕುತೂಹಲದ ಸಂಗತಿ. ಮಿಶನರಿಯಾಗಿದ್ದ ರೆವರೆಂಡ್ ಮ್ಯಾನರ್‌ಗೆ ತನ್ನ ಮತೀಯ ಉದ್ದೇಶಗಳಿಗಾಗಿ ತುಳುವಿನ ಸಾಂಸ್ಕೃತಿಕ ಚರಿತ್ರೆಯನ್ನು ಗ್ರಹಿಸುವುದಕ್ಕೆ ಮತ್ತು ಕಟ್ಟುವುದಕ್ಕೆ ಪಾಡ್ದನಗಳು, ಗಾದೆಗಳು ಮುಖ್ಯ ಎಂದೆನಿಸಿತಲ್ಲದೆ, ತುಳು ಒಗಟುಗಳು ಮುಖ್ಯವೆನಿಸಲಿಲ್ಲ. ನಾವಿಂದು ನಮ್ಮ ಸಾಂಸ್ಕೃತಿಕ ಜರೂರುಗಳಿಗೆ ಅನುಸಾರವಾಗಿ ಸಾಂಸ್ಕೃತಿಕ ಅನನ್ಯತೆಯ ರಾಷ್ಟ್ರೀಯ ಪ್ರಜ್ಞೆಯ ನೆಲೆಯಲ್ಲಿ ‘ಜಾನಪದ’ವನ್ನು ಸಂಗ್ರಹಿಸಿ, ವಿವೇಚಿಸುವಂತೆ, ಮ್ಯಾನರ್‌ತುಳು ಪಾಡ್ದನಗಳನ್ನು ಸಂಗ್ರಹಿಸಿಕೊಳ್ಳಲಿಲ್ಲ. ಬದಲಾಗಿ, ವಸಾಹತುವಿನ ಅನಾಗರಿಕ ಸ್ಥಿತಿಯಿಂದ ಆಧುನಿಕತೆಯ ನಾಗರಿಕ ಸ್ಥಿತಿಗೆ ವಸಾಹತನ್ನು ವಿಕಾಸಗೊಳಿಸುವ, ಅಭಿವೃದ್ಧಿಗೊಳಿಸುವ ವಸಾಹತುಶಾಹಿ ಆಡಳಿತ ಕಾರ್ಯಯೋಜನೆಗಳ ಧರ್ಮಬದ್ಧತೆಗೆ ಅನುಕೂಲವಾಗುವಂತೆ ಆತ ಮೌಖಿಕ ಪಾಡ್ಡನಗಳನ್ನು ಸಂಗ್ರಹಿಸಿ, ಲಿಪೀಕರಿಸಿ, ಪಠ್ಯೀಕರಿಸುತ್ತಾರೆ. ಆ ಮೂಲಕ, ಸಾಂಸ್ಕೃತಿಕವಾಗಿ ಸ್ಥಾವರಗೊಂಡಿದೆ ಎಂದು ವಾದಿಸಲಾಗುವ ಪೂರ್ವದ ಪಠ್ಯೀಕೃತ ಪರಾವೃತ್ತಿಯನ್ನು ಮ್ಯಾನರ್ ಪಶ್ಚಿಮಕ್ಕೆ ರವಾನಿಸುತ್ತಾನೆ. ‘ದಿ ಡೆವಿಲ್ ವರ್ಶಿಪ್ ಆಫ್ ತುಳುವ’ ಎನ್ನುವ ಪಠ್ಯೀಕೃತ ಪಾಡ್ದನಗಳ ಸಾಂಸ್ಕೃತಿಕ ವರ್ಗಾವಣೆಯಲ್ಲಿ ತುಳುವರ ಆರಾಧ್ಯ ದೈವವಾಗಿರುವ ಭೂತಗಳು ಕ್ರೈಸ್ತೀಯ ನೆಲೆಯಲ್ಲಿ ಡೆವಿಲ್‌ಆಗಿ ರೂಪಾಂತರಗೊಳ್ಳುವುದು ಬಹಳ ಕುತೂಹಲದ ಸಂಗತಿ. ನಾವಿಂದು ಸಾಹಿತ್ಯವಾಗಿ ಪರಿಗಣಿಸುವ ತುಳು ಒಗಟುಗಳ ಸಂಗ್ರಹ, ಪ್ರಕಟಣೆ ಹಾಗೂ ವಿಶ್ಲೇಷಣೆಯ ಕಾರ್ಯ ಈ ಸನ್ನಿವೇಶದಲ್ಲಿ ಕಂಡುಬರುವುದಿಲ್ಲ ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬಹುದು. ಮೌಖಿಕವಾಗಿರುವ ಒಗಟುಗಳು ಸಾಂಸ್ಕೃತಿಕ ಚರಿತ್ರೆಯ ಪುನರುತ್ಪತ್ತಿಯಲ್ಲಿ ಆಕ್ಷರಿಕವಾಗಿ ಯಾಕೆ ಪಠ್ಯೀಕೃತವಾಗಿಲ್ಲ? ಒಗಟಿನ ಸ್ವರೂಪದ ಗ್ರಹಿಕೆಯ ನೆಲೆಗಳು ಇದಕ್ಕೆ ಕಾರಣವಿದ್ದಿರಬಹುದೇ?

ಮುಂದೆ, ಎಸ್‌.ಯು. ಪಣಿಯಾಡಿಯವರ ತುಳುವ ಸಾಹಿತ್ಯಮಾಲೆಯಲ್ಲಿ ‘ತುಳುನಾಡಿನ’ ರಾಷ್ಟ್ರೀಯ ಪ್ರಜ್ಞೆಯ ನೆಲೆಯಲ್ಲಿ ತುಳುವಿನ ಅನನ್ಯತೆಯನ್ನು ಬಿಂಬಿಸುವ ಸೃಜನಾತ್ಮಕ ಕೃತಿರಚನೆಗಳು ಕಾಣಿಸಿಕೊಂಡವು. ಆದರೆ ಈ ಸಂದರ್ಭದಲ್ಲೂ ಜನಪದ ಸಾಹಿತ್ಯದ ಸಂಗ್ರಹ ಕಾರ್ಯಗಳು ವಿಶೇಷವಾಗಿ ನಡೆಯಲಿಲ್ಲ. ಬಹಳ ಸ್ವಾರಸ್ಯಕರವಾದ ಸಂಗತಿ ಎಂದರೆ, ತುಳು ಒಗಟುಗಳ ಪ್ರಕಟಣೆ ಕಂಡುಬರುವುದು ಕಳೆದ ಶತಮಾನದ ಎಪ್ಪತ್ತರ ದಶಕಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಗಳಲ್ಲಿ. ಆಕ್ಷರಿಕವಲ್ಲದ ತುಳು ಭಾಷೆಯಲ್ಲಿ ಎಪ್ಪತ್ತರ ದಶಕಗಳಲ್ಲಿ ಪ್ರಕಟಗೊಳ್ಳುತ್ತಿದ್ದ ತುಳು ಸಿರಿ, ತುಳುನಾಡು ಪತ್ರಿಕೆಗಳಲ್ಲಿ ಕೆಲವು ತುಳು ಒಗಟುಗಳು ಪ್ರಕಟಗೊಂಡಿವೆ.

[1] ಆಡುಮಾತು ಆಗಿರುವ ತುಳುವಿಗೆ ಓದುಗವರ್ಗವನ್ನು ನಿರ್ಮಾಣಗೊಳಿಸುವ ಉದ್ದೇಶದಿಂದ ತುಳು ಪತ್ರಿಕೆಗಳಲ್ಲಿ ಎಲ್ಲ ಬಗೆಯ ಸಂಗತಿಗಳ ಜೊತೆಗೆ, ತುಳು ಭಾಷೆಯ ಸಾಹಿತ್ಯಿಕ ಮೌಲ್ಯಗಳನ್ನು ಪ್ರಚುರಪಡಿಸುವ ಕೆಲವು ಗಾದೆ, ಒಗಟುಗಳು ಪ್ರಕಟಣೆಗೊಂಡಿವೆ. ಇದಾದ ಬಳಿಕ ತುಳು ಒಗಟುಗಳ ಸಂಕಲನವೊಂದು ಮೊತ್ತಮೊದಲು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿರುವುದು ಪ್ರಭಾತ ಗ್ರಂಥಮಾಲೆಯ ‘ಒಂದಾಣೆ ಮಾಲೆ’ಯಲ್ಲಿ.[2] ಎಂ. ನಾರಾಯಣ ಅವರು ಸಂಗ್ರಹಿಸಿರುವ ‘ತುಳು ಒಗಟುಗಳು’ (ಕನ್ನಡ ತಾತ್ಪರ್ಯ ಸಹಿತ) ೧೯೬೨ರಲ್ಲಿ ಪ್ರಕಟಗೊಂಡಿತು. ಆ ಬಳಿಕ ಮಂಗಳಗಂಗೋತ್ರಿಯ ಪಲಚಂವಿ ಪ್ರಕಾಶನದಿಂದ ಬಿ.ಎ. ವಿವೇಕ ರೈಯವರ ‘ತುಖು ಒಗಟುಗಳು’ ಅನ್ನುವ ಸಂಪಾದಿತ ಸಂಕಲನವೊಂದು ಪ್ರಕಟಗೊಂಡಿದೆ.[3] ಈ ಸಂಕಲನದಲ್ಲಿ ಸುದೀರ್ಘವಾದ ಪ್ರಸ್ತಾವನೆಯ ಮಾತುಗಳೊಂದಿಗೆ, ಒಗಟು ಪದ ನಿಷ್ಪತ್ತಿ, ಒಗಟುಗಳ ಲಕ್ಷಣ, ಸ್ವರೂಪ, ಒಗಟುಗಳ ವಗೀಕರಣ ಇತ್ಯಾದಿ ನೆಲೆಗಳಲ್ಲಿ ಒಗಟುಗಳ ಸಂಗ್ರಹ ಹಾಗೂ ವರ್ಗೀಕರಣವನ್ನು ಮಾಡಲಾಗಿದೆ. ವಾಮನ ನಂದಾವರ ಅವರು ಸ್ವತಂತ್ರವಾಗಿ ರಚಿಸಿದ ತುಳು ಒಗಟುಗಳ ಸಂಕಲನ ‘ಓಲೆ ಪಟಾಕಿ’ ೧೯೮೦ ರಲ್ಲಿ ಪ್ರಕಟಗೊಂಡಿತು. ತುಳು ಒಗಟುಗಳನ್ನು ಜನಪದ ಸಾಹಿತ್ಯವಾಗಿ ಪರಿಕಲ್ಪಿಸಿ ವಿಶ್ಲೇಷಣಾತ್ಮಕ ಅಧ್ಯಯನವನ್ನು ನಡೆಸಿರುವ ಮತ್ತು ತುಳುವಿಗೆ ಶೈಕ್ಷಣಿಕ ಮಾನ್ಯತೆಯನ್ನು ತಂದುಕೊಟ್ಟ ಮೊದಲ ಮಾದರಿಯನ್ನು ಬಿ.ಎ. ವಿವೇಕ ರೈಯವರ ತುಳು ‘ಜನಪದ ಸಾಹಿತ್ಯ’ ಎಂಬ ಪಿ.ಎಚ್.ಡಿ. ಮಹಾಪ್ರಬಂಧದಲ್ಲಿ ಕಾಣಬಹುದು.[4] …. [5]

ತುಳುವಿನ ಬಗ್ಗೆ ನಡೆದಿರುವ ಮೊತ್ತ ಮೊದಲ ಮಹತ್ವದ ಅಧ್ಯಯನವಾಗಿರುವ ಈ ಅಧ್ಯಯನದಲ್ಲಿ ಸಂಗ್ರಹಿತ ತುಳು ಒಗಟುಗಳನ್ನು ಸಮಗ್ರವಾಗಿ ಮತ್ತು ವಿಶ್ಲೇಷಣಾತ್ಮಕವಾಗಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಒಗಟುಗಳನ್ನು ಜನಪದ ಸಾಹಿತ್ಯ ಎಂಬುದಾಗಿ ಪರಿಕಲ್ಪಿಸಿಕೊಂಡಿರುವ ಕಾರಣದಿಂದ ಒಗಟುಗಳ ವಿವೇಷನೆಯಲ್ಲಿ ಎರಡು ನೆಲೆಗಳ ಅಧ್ಯಯನವನ್ನು ಕಾಣುತ್ತೇವೆ. ಒಂದು, ಒಗಟಿನ ಪಠ್ಯಗಳಲ್ಲಿ ಸಾಹಿತ್ಯಿಕ ಅಥವಾ ಕಲಾಮೌಲ್ಯವನ್ನು ಗುರುತಿಸುವ ನೆಲೆಯಾದರೆ; ಇನ್ನೊಂದು, ಸಾಂಸ್ಕೃತಿಕ ಅಂಶಗಳನ್ನು ಗುರುತಿಸುವ ಸಾಂಸ್ಕೃತಿಕ ನೆಲೆ. ಈ ಅಧ್ಯಯನದ ಆರಂಭದಲ್ಲಿ ಕನ್ನಡದ ಒಗಟು ಪದಕ್ಕೆ ಸಂವಾದಿಯಾಗಿ ತುಳುವಿನಲ್ಲಿರುವ ಎದುರುಕತೆ ಮತ್ತು ಮಂಡೆಕತೆ ಎಂಬ ಪದಗಳ ಅರ್ಥವಿವರಣೆಯೊಂದಿಗೆ ತುಳು ಒಗಟುಗಳ ಸ್ವರೂಪವನ್ನು ವಿವರಿಸಲಾಗಿದೆ. ಜನಪದದ ಭಾಷಿಕ ಆಟವಾಗಿ (ಸ್ವೀಚ್‌ಗೇಮ್) ಒಗಟುಗಳನ್ನು ಗ್ರಹಿಸಿಕೊಳ್ಳುವುದಕ್ಕೆ ಈ ಅರ್ಥವಿವರಣೆ ಹೆಚ್ಚು ಪೂರಕವಾಗಿದೆ. ತುಳು ಒಗಟುಗಳನ್ನು ಒಂದು ಒಳಾಂಗಣ ಆಟ ಎಂಬುದಾಗಿ ಪ್ರತಿಪಾದಿಸಿ ಅದು ಬಳಕೆಯಾಗುವ ಸಂದರ್ಭ ಹಾಗೂ ಅದರ ಕಾರ್ಯವನ್ನು ಗುರುತಿಸಿಕೊಳ್ಳಲಾಗಿದೆ. ಕಾಲದ ನಿರ್ಬಂಧವಿಲ್ಲದೆ ವರ್ಷದ ಯಾವುದೇ ಸಮಯದಲ್ಲಾದರೂ ತುಳು ಒಗಟುಗಳನ್ನು ಕೇಳಬಹುದಾದರೂ ಹೆಚ್ಚಾಗಿ ಮಳೆಗಾಲದಲ್ಲಿ ಹಾಗೆಯೇ ಸಂಜೆ ಅಥವಾ ರಾತ್ರಿಯ ವಿರಾಮದ ಕಾಲದಲ್ಲಿ ಒಗಟುಗಳನ್ನು ಕೇಳಲಾಗುತ್ತದೆ ಎಂಬುದನ್ನು ಹೇಳಲಾಗಿದೆ. ತುಳು ಒಗಟುಗಳ ಕಾರ್ಯ ಹಾಗೂ ಅವುಗಳು ಬಳಕೆಯಾಗುವ ಸಂದರ್ಭವನ್ನು ಸೂಚಿಸುತ್ತಾ ಪ್ರಧಾನವಾಗಿ ಮನೋರಂಜನೆಯ ಉದ್ದೇಶಕ್ಕಾಗಿ ಮಾತ್ರ ತುಳು ಒಗಟುಗಳು ಬಳಕೆಯಾಗುತ್ತವೆಯೇ ಹೊರತಾಗಿ ಅವುಗಳಿಗೆ ಧಾರ್ಮಿಕವಾದ ಅಥವಾ ಆಚರಣೆಯ ಯಾವುದೇ ಸಂದರ್ಭಗಳಿಲ್ಲ ಎಂಬುದನ್ನು ಈ ಅಧ್ಯಯನದಲ್ಲಿ ಗುರುತಿಸಲಾಗಿದೆ.

ತುಳು ಒಗಟುಗಳ ಸ್ವರೂಪವನ್ನು ಅಭ್ಯಾಸ ಮಾಡಿರುವ ಈ ಅಧ್ಯಯನದಲ್ಲಿ ಒಗಟುಗಳ ರಾಚನಿಕ ಸ್ವರೂಪವನ್ನು ವಿಶ್ಲೇಷಣೆ ಮಾಡುತ್ತಾ ಪ್ರಶ್ನೆಯ ಭಾಗ ಹಾಗೂ ಉತ್ತರದ ಭಾಗ ಅನ್ನುವ ಪ್ರತ್ಯೇಕ ಘಟಕಗಳ ವಗೀರ್ಕರಣದಲ್ಲಿ ತುಳು ಒಗಟುಗಳ ಸ್ವರೂಪವನ್ನು ಗ್ರಹಿಸಿರುವುದನ್ನು ಕಾಣಬಹುದು. ಪ್ರಶ್ನೆಯ ಭಾಗದಲ್ಲಿ ಪ್ರಶ್ನೆಯ ರೂಪದ ಒಗಟು, ಒಂದು ವಾಕ್ಯದ ಹೇಳಿಕೆ ರೂಪದ ಒಗಟು, ಎರಡು ವಾಕ್ಯ (ಸಾಲು)ದ ಒಗಟು, ಮೂರು ವಾಕ್ಯದ (ಸಾಲಿನ) ಒಗಟು, ನಾಲ್ಕು ವಾಕ್ಯದ (ಸಾಲಿನ) ಒಗಟು, ಆರು ಸಾಲಿನ ಒಗಟು ಹಾಗೆಯೇ ಉತ್ತರದ ಭಾಗದಲ್ಲಿ ಒಂದು ಶಬ್ಧದ ಉತ್ತರ, ಎರಡು ಶಬ್ದದ ಉತ್ತರ, ವಿಶೇಷಣ ಸಹಿತವಾದ ಒಂದು ನಾಮಪದ ರೂಪದ ಉತ್ತರ, ಒಂದು ನಾಮಪದ ಮತ್ತು ಒಂದು ಕ್ರಿಯಾಪದವನ್ನು ಒಳಗೊಂಡ ಉತ್ತರ, ಒಂದೇ ಕ್ರಿಯಾಪದವನ್ನು ಒಳಗೊಂಡ ಉತ್ತರ, ವಾಕ್ಯರೂಪದ ಉತ್ತರ, ಕಥೆ ಅಥವಾ ಘಟನೆಯ ರೂಪದ ವಿವರಣಾತ್ಮಕ ಉತ್ತರ ಹಾಗೂ ಇತರ ರೂಪದ ಉತ್ತರಗಳನ್ನೂ ಗುರುತಿಸಿಕೊಳ್ಳಲಾಗಿದೆ. ತುಳು ಒಗಟುಗಳ ಭಾಷಿಕ ರಚನೆಯನ್ನು ಅಭ್ಯಾಸ ಮಾಡುತ್ತಾ ತುಳು ಒಗಟುಗಳಲ್ಲಿ ಕೆಲವು ವಿಶಿಷ್ಟ ಶಬ್ದಗಳು ಅಥವಾ ವ್ಯಾಕರಣ ರೂಪಗಳನ್ನು ಗುರುತಿಸಿಕೊಳ್ಳಲಾಗಿದೆ. ಹಾಗೆಯೇ ಬಂಧುಗಳ ಉಲ್ಲೇಖ, ವ್ಯಕ್ತಿ, ಪ್ರಾಣಿ, ಪಕ್ಷಿ, ಸಸ್ಯಗಳಿಗೆ ಸಂಬಂಧಿಸಿದಂತೆ ವ್ಯಕ್ತಿ ನಾಮಗಳ ಬಳಕೆಗಳಿರುವುದನ್ನು ಗುರುತಿಸಿಕೊಳ್ಳಲಾಗಿದೆ. ಸಾಂಸ್ಕೃತಿಕ ನೆಲೆಯಲ್ಲಿ ಒಗಟುಗಳ ಸ್ವರೂಪವನ್ನು ವಿಶ್ಲೇಷಿಸುತ್ತಾ ಯಾವುದೇ ದೇಶದ, ಯಾವುದೇ ಭಾಷೆಯ ಒಗಟುಗಳಂತೆಯೇ ತುಳು ಒಗಟುಗಳೂ ಸಾರ್ವತ್ರಿಕ ಸಂಗತಿಗಳನ್ನು ಹೇಳುವಂತೆಯೆ ಪ್ರಾದೇಶಿಕ ಸಂಸ್ಕೃತಿಯನ್ನೂ ಪ್ರತಿಬಿಂಬಿಸುತ್ತವೆ. ಈ ವಿಚಾರದಲ್ಲಿ ಜನಪದ ಸಾಹಿತ್ಯದ ಉಳಿದ ಪ್ರಕಾರಗಳಿಗಿಂತ ಒಗಟುಗಳು ಸ್ವಲ್ಪ ಭಿನ್ನವಾಗಿವೆ ಎಂದು ಹೇಳಲಾಗಿದೆ. ಒಗಟುಗಳಲ್ಲಿ ವ್ಯಕ್ತವಾಗುವ ಸಂಸ್ಕೃತಿ ಒಗಟಿನ ಪ್ರಶ್ನೆಯ ಭಾಗದಲ್ಲಿ ಅಥವಾ ಅದರ ಉತ್ತರದ ಭಾಗದಲ್ಲಿ ಇರಬಹುದು. ಕೆಲವೊಮ್ಮೆ ಎರಡೂ ಕಡೆ ಕಾಣಿಸಬಹುದು ಎಂದು ಹೇಳುತ್ತಾ ಒಗಟುಗಳ ಉತ್ತರದಲ್ಲಿ ಎರಡು ವಿಧಗಳನ್ನು ಗುತುರಿಸಲಾಗಿದೆ. ೧) ವಸ್ತು ರೂಪದವು ೨) ಕ್ರಿಯಾರೂಪದವು. ತುಳು ಒಗಟುಗಳಲ್ಲಿ ಉತ್ತರಗಳು ವಸ್ತುಗಳೇ ಆಗಿರುವುದು ಅಧಿಕವಾಗಿವೆ ಎಂಬುದನ್ನು ಗುರುತಿಸಲಾಗಿದೆ. ಈ ವಸ್ತು ರೂಪದ ಉತ್ತರಗಳನ್ನು ವರ್ಗೀಕರಿಸುತ್ತಾ ತುಳುನಾಡಿನ ಸಂಸ್ಕೃತಿಯು ಒಗಟುಗಳಲ್ಲಿ ಹೇಗೆ ಸ್ಥಾನ ಪಡೆದಿದೆ ಎಂಬುದನ್ನೂ ಗುರುತಿಸಲಾಗಿದೆ. ಒಗಟುಗಳಲ್ಲಿ ವ್ಯಕ್ತವಾಗುವ ತುಳುನಾಡಿನ ಸಂಸ್ಕೃತಿಯಲ್ಲಿ ಪ್ರಾಣಿ-ಪಕ್ಷಿ-ಕೀಟ, ಗೃಹೋಪಯೋಗಿ-ಅಡುಗೆ ಸಾಮಗ್ರಿ ಇವುಗಳನ್ನು ಗುರುತಿಸಿಕೊಂಡು ಈ ನೆಲೆಯಲ್ಲಿ ಒಗಟುಗಳನ್ನು ವರ್ಗೀಕರಿಸಿಕೊಳ್ಳಲಾಗಿದೆ. ಆರ್ಚರ್ ಟೇಲರ್‌ಎಂಬ ಜಾನಪದ ವಿದ್ವಾಂಸ ಒಗಟುಗಳ ವರ್ಗೀಕರಣಕ್ಕೆ ಬಳಸಿದ ದಶಮಾಂಕ ಪದ್ಧತಿಯನ್ನು ಕೆಲವು ಮಾರ್ಪಾಟುಗಳೊಂದಿಗೆ ಈ ಅಧ್ಯಯನದಲ್ಲಿ ಬಳಸಲಾಗಿದೆ. ಈ ಅಧ್ಯಯನದ ವಾದದ ಪ್ರಕಾರ, ಟೇಲರನ ವರ್ಗೀಕರಣದಲ್ಲಿ ಯಾವುದೇ ಒಂದು ಒಗಟಿನಲ್ಲಿ ಕಾಣಿಸುವ ಪ್ರಾಣಿ, ಮನುಷ್ಯ, ಸಸ್ಯ, ಇತರ ಜೀವಿಗಳು, ವಸ್ತುಗಳು ಪ್ರಮುಖವಾಗುತ್ತವೆ. ಆದರೆ ಈ ಎಲ್ಲಾ ಹೋಲಿಕೆಗಳು ಒಗಟಿನ ಪ್ರಶ್ನೆಯ ಭಾಗಕ್ಕೆ ಮಾತ್ರ ಸೀಮಿತವಾಗಿವೆ. ಒಗಟಿನ ಪ್ರಶ್ನೆಯ ಭಾಗ ಒಂದು ರೂಪಕ ಮಾತ್ರ. ಅದರ ನಿಜವಾದ ಅರ್ಥ ಅಂದರೆ ಒಗಟಿನ ವಸ್ತು ಅಥವಾ ವಿಷಯ ಇರುವುದು ಒಗಟಿನ ಉತ್ತರದಲ್ಲಿ. ಇಂತಹ ಉತ್ತರವನ್ನು ಪರಿಗಣಿಸದೆ ಬರೇ ಪ್ರಶ್ನೆಯ ಭಾಗಕ್ಕೆ ಮಾತ್ರ ಮಹತ್ವವನ್ನು ಕೊಡುವುದರ ಮೂಲಕ ಒಗಟಿನ ವಸ್ತು ಅಥವಾ ವಿಷಯವನ್ನು ಸಂಪೂರ್ಣ ಕಡೆಗಣಿಸಿದಂತಾಗುತ್ತದೆ. ರೈಯವರ ಅಧ್ಯಯನದಲ್ಲಿ ಒಗಟುಗಳ ಉತ್ತರಗಳಲ್ಲಿ ಕಂಡು ಬರುವ ವಸ್ತು ವಿಷಯವನ್ನು ಗಮನಿಸಿಕೊಂಡು ಟೇಲರ್‌ನ ದಶಮಾಂಕ ಪದ್ಧತಿಯನ್ನು ಕೆಲವು ಮಾರ್ಪಾಡುಗಳೊಂದಿಗೆ ಅನ್ವಯಿಸಲಾಗಿದೆ.[6]

ಎಂಪಿರಿಕಲ್ ಅಧ್ಯಯನದ ಮಾದರಿಯಾಗಿರುವ ಜಾನಪದ ಅಧ್ಯಯನದಲ್ಲಿ ಮೌಖಿಕ ಅಭಿವ್ಯಕ್ತ ರೂಪಗಳು ಲಿಪೀಕರಣ ಮೂಲಕ ಆಕ್ಷರಿಕ ಒಡಲನ್ನು ಪಡೆದು ಪಠ್ಯೀಕರಣದ ಪ್ರಕ್ರಿಯೆಗೆ ಒಳಗಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಮೌಖಿಕ ರೂಪಗಳು ತಮ್ಮ ಮೌಖಿಕತೆಯನ್ನು (ಸಹಪಠ್ಯ, ಸಂದರ್ಭ/ ಸಾನಿಧ್ಯ) ಕಳಚಿಕೊಂಡು ದಾಖಲಿತವಾಗಿ ಆಕ್ಷರಿಕ ಪಠ್ಯಗಳಾಗಿ ರೂಪಾಂತರಗೊಳ್ಳುತ್ತವೆ. ಹೀಗೆ ಆಕ್ಷರಿಕ ಪಠ್ಯಗಳಾಗಿ ರೂಪಾಂತರಗೊಂಡ ಪಠ್ಯದ ಒಳವಿವರಗಳನ್ನು ಕೇಂದ್ರವಾಗಿಟ್ಟುಕೊಂಡು ವಿವೇಚಿಸುವ ಪಠ್ಯಕೇಂದ್ರಿಕ ರೂಪನಿಷ್ಠ ವಿಮರ್ಶೆ ಜಾನಪದ ಅಧ್ಯಯನದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಮೌಖಿಕವಾಗಿದ್ದ ಗಾದೆ, ಒಗಟುಗಳು ಆಕ್ಷರಿಕ ರೂಪದಲ್ಲಿ ಒಡಲುಗೊಂಡು ಪಠ್ಯೀಕೃತವಾದಾಗಲೂ ಅದರ ಮೌಖಿಕತೆಯ ಅಂಶಗಳನ್ನು ಸಂಪೂರ್ಣವಾಗಿ ಕಳೆದುಕೊಂಡು ಕೇವಲ ಆಕ್ಷರಿಕ ಪಠ್ಯಗಳಾಗಿ ರೂಪಾಂತರಗೊಂಡ ಗಾದೆ ಒಗಟುಗಳ ಆಕ್ಷರಿಕ ದೃಗ್ಗೋಚರವಾಗುವ ಅಂಶಗಳಿಂದ ಅವುಗಳ ವಗೀಕರಣ ಮಾಡುವುದನ್ನು ಕಾಣಬಹುದು. ತುಳು ಜನಪದ ಸಾಹಿತ್ಯದ ಅದರಲ್ಲೂ ತುಳುಗಾದೆ ಒಗಟುಗಳ ಅಧ್ಯಯನದಲ್ಲೂ ಈ ವಿಧಾನ ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ.

ಆಕ್ಷರಿಕ ಪಠ್ಯವಾಗಿ ರೂಪಾಂತರಗೊಂಡ ಗಾದೆ, ಒಗಟುಗಳನ್ನು ಜನಪದ ಸಾಹಿತ್ಯವಾಗಿ ಪರಿಕಲ್ಪಿಸಿಕೊಂಡು ರೂಪಕ, ಪ್ರತಿಮೆ, ಉಪಮೆ, ವಡಿ, ಪ್ರಾಸ ಮುಂತಾದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಅಂಶಗಳು ಎಂದು ಪ್ರತಿಪಾದಿಸಲಾಗುವ ಜಾತಿ, ಕಸುಬು, ಆರಾಧನೆ, ಆಚರಣೆ, ಪ್ರಾಣಿ, ಪಕ್ಷಿ, ಅದರಲ್ಲೂ ಮತ್ತೆ ಒಳವಿಭಾಗಗಳನ್ನಾಗಿ ಮಾಡಿಕೊಂಡು ಸಾಕುಪ್ರಾಣಿ, ಕಾಡು ಪ್ರಾಣಿ ಎಂದು ಮುಂತಾದ ಅನುಭವಕ್ಕೆ ಬರುವ ಪ್ರತ್ಯಕ್ಷ ಪ್ರಮಾಣವಾಗಿರುವ ಅಂಶಗಳ ಆಧಾರದಲ್ಲಿ ಗಾದೆ, ಒಗಟುಗಳನ್ನು ವರ್ಗೀಕರಿಸಲಾಗುತ್ತದೆ. ತುಳು ಒಗಟುಗಳ ಬಗ್ಗೆ ನಡೆದಿರುವ ಅಧ್ಯಯನವನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ಒಗಟುಗಳನ್ನು ನಾವಿಂದು ಜನಪದ ಸಾಹಿತ್ಯವೆಂದು ಪರಿಕಲ್ಪಿಸಿಕೊಳ್ಳುವ ಮತ್ತು ವರ್ಗೀಕರಿಸಿಕೊಳ್ಳುತ್ತಿರುವ ವಿಧಾನವು ಪಾಶ್ಚಿಮಾತ್ಯ ಜಾನಪದ ಅಧ್ಯಯನದಿಂದ ಕೊಡಮಾಡಿರುವುದು. ಪಾಶ್ಚಿಮಾತ್ಯ ವಿದ್ವಾಂಸರ ಪರಿಕಲ್ಪನೆ ಮತ್ತು ವರ್ಗೀಕರಣ ಸೂತ್ರಗಳು ನಮ್ಮಲ್ಲೂ ಜಾನಪದವನ್ನು ಅದೇ ರೀತಿಯಲ್ಲಿ ಪರಿಕಲ್ಪಿಸಿಕೊಳ್ಳುವ, ವರ್ಗೀಕರಿಸಿಕೊಳ್ಳುವ ವಿಧಾನವನ್ನು ರೂಪಿಸಿವೆ. ಜಾನಪದ ವಗೀಕರಣದಲ್ಲಿ ಸಮರ್ಥವಾದ ವರ್ಗೀಕರಣವನ್ನು ಸೂಚಿಸಲು ಜಾನಪದ ವಿದ್ವಾಂಸರಿಂದ ಹಲವಾರು ಪ್ರಯತ್ನಗಳು ನಡೆದಿವೆ. ಸ್ಟಿತ್ ಥಾಮ್ಸನ್, ಆರ್. ಎಸ್. ಬಾಗ್ಸ್, ರಿಚರ್ಡ್‌ ಡಾರ್ಸನ್, ಅಲೆನ್ ಡಂಡೆಸ್ ಮುಂತಾದವರು ಬಾಗ್ಸ್ ವರ್ಗೀಕರಣ ಸೂಚಿ ತುಂಬಾ ವಿಶಾಲ ವ್ಯಾಪ್ತಿಯುಳ್ಳ ದ್ದಾದ್ದರಿಂದ ಅದನ್ನೇ ಬಳಸಿದ್ದಾರೆ. ಬಾಗ್ಸ್ ವರ್ಗೀಕರಣದಲ್ಲಿ ಒಗಟುಗಳು ಸಾಹಿತ್ಯಿಕ ಬಗೆಯಾಗದೆ, ಭಾಷಿಕ ಬಗೆಯಾಗಿ ಗುರುತಿಸಲ್ಪಟ್ಟಿದೆ. ಬಾಗ್ಸ್ ವರ್ಗೀಕರಿಸುವ ಸಾಹಿತ್ಯಿಕ ಹಾಗೂ ಭಾಷಿಕ ಬಗೆ ಎರಡನ್ನೂ ಆರ್ಚರ್ ಟೇಲರ್‌ ಒಟ್ಟು ಸೇರಿಸಿ ಅವನ್ನು ಶಾಬ್ದಿಕ ಬಗೆ ಎನ್ನುತ್ತಾನೆ. ಹೀಗಾಗಿ ಆರ್ಚರ್ ಟೇಲರ್‌ನ ವರ್ಗೀಕರಣದಲ್ಲಿ ಒಗಟುಗಳು ಶಾಬ್ದಿಕ ಬಗೆಯಲ್ಲಿ ಗುರುತಿಸಲ್ಪಡುತ್ತವೆ.

ಆರ್. ಎಸ್. ಬಾಗ್ಸ್‌

10_42_TSC-KUH

 

ಆರ್ಚರ್‌ ಟೇಲರ್‌

ಸಾಹಿತ್ಯಿಕ ಬಗೆ + ಭಾಷಿಕ ಬಗೆ = ಶಾಬ್ದಿಕ ಬಗೆ

* * *

ಒಗಟು ಅನ್ನುವ ಪದ ದಿನನಿತ್ಯದ ಮಾತಲ್ಲಿ ಒಂದು ಸಾಮಾನ್ಯ ಅರ್ಥದಲ್ಲಿ ಬಳಕೆಯಾಗುತ್ತಿರುತ್ತದೆ. ಮಾತು ಅರ್ಥ ಆಗದೆ ಇದ್ದಾಗ ಅದು ಒಗಟು ಎನಿಸಿಬಿಡುತ್ತದೆ. ಅಂದರೆ ನಮ್ಮ ತಿಳುವಳಿಕೆಗೆ ಬಾರದೆ ಅಸ್ಪಷ್ಟವಾಗುವ ಮಾತು ಒಗಟು ಎನಿಸುತ್ತದೆ. ಒಗಟಾದ ಮಾತು ಎಂದಾಗ ಅದನ್ನು ಬಿಡಿಸಿ ಹೇಳಬೇಕಾದ ಇಂಗಿತವೂ ಒಗಟು ಅನ್ನುವ ಪದದಲ್ಲಿ ವ್ಯಕ್ತವಾಗುತ್ತಿರುತ್ತದೆ. ಕನ್ನಡದಲ್ಲಿರುವಂತೆ ಒಗಟು ಅನ್ನುವ ಪದ ತುಳುವರ ಮಾತುಕತೆಯಲ್ಲಿ ಬಳಕೆಯಲ್ಲಿಲ್ಲ. ಆದರೆ, ಒಗಟಿನಂತಹ ಮೌಖಿಕ ಭಾಷೆಕ ರೂಪಗಳು ತುಳುವಿನಲ್ಲಿ ಪ್ರಯೋಗದಲ್ಲಿವೆ. ಒಗಟಿಗೆ ತುಳುವಿನಲ್ಲಿ ಮಂಡೆಕತೆ, ಎದುರುಕತೆ, ನರಿಪುಕತೆ ಎಂಬ ಸಂವಾದಿ ಪದಗಳಿವೆ. ತುಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕ ವರ್ಗದವರು ವಿರಾಮದ ವೇಳೆಯಲ್ಲಿ ಮನೋರಂಜನೆಗಾಗಿ ಎದುರುಕತೆ, ಮಂಡೆಕತೆ ಅಥವಾ ನರಿಪುಕತೆಯನ್ನು ಹೇಳುತ್ತಿರುತ್ತಾರೆ. ಎರಡು ಗುಂಪುಗಳಿದ್ದು ಅವು ಎದುರು ಬದುರಾಗಿದ್ದು (ಒಬ್ಬನೂ ಇರಬಹುದು) ಎದುರುಗುಂಪಿನವರಿಗೆ ಸವಾಲಿನ ರೂಪದಲ್ಲಿ ಒಂದು ಎದುರುಕತೆಯನ್ನು ಹೇಳಲಾಗುತ್ತದೆ. ಎದುರುಗುಂಪಿನವರು ಇದನ್ನು ಬಿಡಿಸಿ ಉತ್ತರ ಹೇಳಬೇಕು. ಉತ್ತರ ಕೊಟ್ಟ ಬಳಿಕ ಉತ್ತರ ಕೊಟ್ಟವರು ಇನ್ನೊಂದು ಎದುರುಕತೆಯನ್ನು ಎದುರು ಗುಂಪಿನವರಿಗೆ ಸವಾಲಾಗಿ ಹೇಳಬೇಕು. ಇದಕ್ಕೆ ಎದುರುಗುಂಪಿನವರು ಉತ್ತರವನ್ನು ಕೊಡಬೇಕು. ಹೀಗೆ ಪರಸ್ಪರ ಎದುರುಬದುರಾಗಿ ಪಾರಸ್ವರ್ಯ ಕ್ರಿಯೆಯಾಗಿ ಎದುರುಕತೆಯನ್ನು ಹೇಳುತ್ತಿರುತ್ತಾರೆ. ಈ ಕಾರಣದಿಂದ ಇದನ್ನು ಎದುರುಕತೆ ಎನ್ನಲಾಗಿದೆ. ಒಂದು ವೇಳೆ ಉತ್ತರವನ್ನು ಕೊಡಲು ಸಾಧ್ಯ ಆಗದೇ ಇದ್ದಾಗ ತಲೆ (ಮಂಡೆ) ತಗ್ಗಿಸಬೇಕಾಗುತ್ತದೆ. ಅಂದರೆ ಸೋಲು ಒಪ್ಪಿಕೊಳ್ಳಬೇಕು. ಈ ಕಾರಣದಿಂದ ಇದಕ್ಕೆ ಮಂಡೆಕತೆ ಎನ್ನುತ್ತಾರೆ. ಇಬ್ಬರು ಅಥವಾ ಎರಡು ಗುಂಪುಗುಳ ಮಧ್ಯೆ ಒಂದು ಬಗೆಯ ಭಾಷಿಕ ಆಟವಾಗಿ ಎದುರುಕತೆ ಅಥವಾ ಮಂಡೆಕತೆಗೆ ನರಿಪುಕತೆ ಅನ್ನುವ ಇನ್ನೊಂದು ಹೆಸರೂ ಇದೆ. ನರಿಪು ಅಂದರೆ ತುಳುವಿನಲ್ಲಿ ಒಡೆಯು ಎಂಬರ್ಥವಿದೆ. ಒಗಟನ್ನು ಒಡೆದು ಅದರ ಉತ್ತರವನ್ನು ಹೇಳಬೇಕಾದ ಕಾರಣದಿಂದ ಇದಕ್ಕೆ ನರಿಪುಕತೆ ಎಂಬ ಹೆಸರಿದೆ. ಒಗಟಿನ ಸ್ವರೂಪವನ್ನು ವಿವರಿಸಿಕೊಳ್ಳುವುದಕ್ಕೆ ಎದುರುಕತೆ, ಮಂಡೆಕತೆ ಎಂಬ ಪದಗಳಿಗಿಮತ ನರಿಪುಕತೆ ಪದ ಹೆಚ್ಚು ಸಮಂಜಸವೆನಿಸುತ್ತದೆ.

ಗಾದೆ ಹಾಗೂ ಒಗಟುಗಳ ಸ್ವರೂಪವನ್ನು ವ್ಯಾಖ್ಯಾನಿಸುವಾಗ ಎ. ಕೆ. ರಾಮಾನುಜನ್ ನೀತ್ಯಾತ್ಮಕ ಹೇಳಿಕೆಗಳಾಗಿ ಗಾದೆಗಳನ್ನು ವ್ಯಾಖ್ಯಾನಿಸಿದರೆ, ಒಗಟುಗಳನ್ನು ತಾರ್ಕಿಕ ಆಟಗಳು ಎಂದು ವ್ಯಾಖ್ಯಾನಿಸುತ್ತಾರೆ.[7] ಒಗಟಿನ ಸ್ವರೂಪವನ್ನು ಗಮನಿಸಿದರೆ ಗಾದೆಗಳ ಹಾಗೆ ನೀತ್ಯಾತ್ಮಕತೆ ಅದರ ನಿಯೋಗವಾಗದೆ ಒಂದು ಬಗೆಯ ಭಾಷಿಕ ಆಟವಾಗಿ ಅವುಗಳು ಗೋಚರಿಸುತ್ತವೆ. ಹೀಗಾಗಿ ಇದರಲ್ಲಿ ಬುದ್ಧಿವಂತಿಕೆಯ ಅಂಶ ಪ್ರಕಟಗೊಳ್ಳುತ್ತಿರುತ್ತದೆ. ಒಗಟನ್ನು ಕಟ್ಟುವ ಮತ್ತು ಒಗಟನ್ನು ಒಡೆದು ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಎರಡೂ ಗುಂಪುಗಳಲ್ಲಿ ಈ ಬುದ್ಧಿವಂತಿಕೆಯ ಅಂಶ ಪ್ರಕಟಗೊಳ್ಳುತ್ತಿರುತ್ತದೆ. ಇದು ಕೇವಲ ಬುದ್ಧಿವಂತಿಕೆಯ ಪ್ರದರ್ಶನ ಮಾತ್ರವಾಗಿರದೆಯೇ, ತನ್ನ ಇರವಿನ ಬಗೆಗಿನ ಅರಿವನ್ನು ಭಾಷೆಯಲ್ಲಿ ಕಟ್ಟುವ ಮನುಷ್ಯನ ಭಾಷಾ ಕೌಶಲದ ಕಲಾವಂತಿಕೆಯೂ ಆಗಿರುತ್ತದೆ.

ಒಗಟುಗಲ್ಲಿ ಸಂಸ್ಕೃತಿ ಮತ್ತು ಪ್ರಕೃತಿಯ ಅರಿವನ್ನು ಭಾಷೆಯಲ್ಲಿ ಒಗಟಾಗಿಸುವ ಬೌದ್ಧಿಕ ತಂತ್ರಗಾರಿಕೆಯನ್ನು ಕಾಣುತ್ತೇವೆ. ಸಂಸ್ಕೃತಿ ಮತ್ತು ಪ್ರಕೃತಿಯ ಅಂಶಗಳನ್ನು ಗ್ರಹಿಸುವ ಮನುಷ್ಯನ ಯೋಚನಾಕ್ರಮ ಒಗಟಲ್ಲಿ ವ್ಯಕ್ತಗೊಳ್ಳುತ್ತಿರುತ್ತದೆ. ಒಗಟುಗಳಿಗೆ ಪ್ರಕೃತಿ ಮತ್ತು ಸಂಸ್ಕೃತಿ ಅರಿವು ವಿಭಿನ್ನವಾಗಿ ವರ್ಗಾವಣೆಯಾಗುತ್ತಿರುತ್ತದೆ. ಸಂಸ್ಕೃತಿಯಿಂದ ಪ್ರಕೃತಿಗೆ; ಪ್ರಕೃತಿಯಿಂದ ಪ್ರಕೃತಿಗೆ ಮಾನವನ ಅರಿವು ವರ್ಗಾವಣೆಗೊಳ್ಳುತ್ತಿರುತ್ತದೆ. ಈ ವರ್ಗಾವಣೆಯ ತರ್ಕವೇ ಒಗಟಿನ ಒಡಲನ್ನು ರೂಪಿಸುತ್ತದೆ. ಒಗಟಿನ ಸ್ವರೂಪದಲ್ಲಿ ತರ್ಕವೇ ಪ್ರಧಾನವಾಗಿರುತ್ತದೆ. ತರ್ಕ ಪ್ರಧಾನವಾದುದರಿಂದಲೇ ಒಗಟಿನ ಉತ್ತರ ಸ್ವೇಚ್ಛೆಯಾಗಿರುವುದಿಲ್ಲ. ಒಗಟಿನ ತರ್ಕದ ಗುಣವೇ ಒಗಟಿನ ಉತ್ತರವನ್ನು ಕಂಡುಕೊಳ್ಳುವ ಸೂಚನೆಗಳನ್ನು ಒದಗಿಸುತ್ತದೆ. ತರ್ಕ ಪ್ರಧಾನವಾಗಿದ್ದರೂ ಒಗಟು ಯಾಕೆ ಒಗಟು ಆಗುತ್ತದೆ ಎಂದರೆ ಒಗಟಿನ ಒಡಲಲ್ಲಿ ದ್ವಂದ್ವಾರ್ಥಗಳು ಅಥವಾ ವೈರುಧ್ಯಗಳು ಇರುವುದರಿಂದ.

ತುಳುವಿನ ನರಿಪುಕತೆಯೊಂದನ್ನು ಉದಾಹರಣೆಯಾಗಿ ವಿವೇಚಿಸುವುದಾದರೆ,

ಬಂಗಾರ್‌ದ ಸರ್ಪೆ ಬೀಲೊಡು ನೀರ್‌ಪರ್ಪೆ
ಬಂಗಾರದ ಸರ್ಪ ಬಾಲದಲ್ಲಿ ನೀರು ಕುಡಿಯುತ್ತಾನೆ
ಉತ್ತರ: ಎಣ್ಣೆ ದೀಪ

ಮಾನವಿಕ ಕ್ರಿಯೆಯನ್ನು ಸೂಚಿಸುವ ಭಾಷೆ ಇಲ್ಲಿ ಒಗಟಾಗಿದೆ. ಮೇಲಿನ ನರಿಪುಕತೆಯಲ್ಲಿ ಸರ್ಪ ಅದರಲ್ಲೂ ಬಂಗಾರದ ಸರ್ಪ ಬಾಲದಲ್ಲಿ ನೀರು ಕುಡಿಯುವ ಅವಾಸ್ತವಿಕತೆಯ ಕಾರಣದಿಂದ ಅದು ಒಗಟಾಯಿತು. ವಾಸ್ತವಿಕವಾಗಿ ಬಂಗಾರದ ಸರ್ಪ ಇರುವಂತಹದೂ ಅಲ್ಲ. ಅಂತೆಯೇ, ಅದು ಬಾಲದಲ್ಲಿ ನೀರು ಕುಡಿಯುವುದು ಕೂಡಾ ಇಲ್ಲ. ಹಾಗಾಗಿಯೇ ಇದು ಒಗಟಾಯಿತು. ಇಲ್ಲಿ ಒಗಟು ಅಥವಾ ಪ್ರತಿಮೆ ಹಾಗೂ ಉತ್ತರದ ನಡುವೆ ತರ್ಕಬದ್ಧತೆ ಇದೆ. ದೀಪ ಉರಿಯುವಾಗ ಅದು ಬಂಗಾರದ ಬಣ್ಣದಲ್ಲಿ ಇರುವುದು ಹಾಗೂ ಉರಿಯುತ್ತಾರೆ ಇರುವಾಗ ಅದು ಹಾವಿನ ಹೆಡೆಯಂತೆ ಭಾಸವಾಗುತ್ತಿರುವುದು ಮತ್ತು ಎಣ್ಣೆ ಬತ್ತಿ ಹಾವಿನ ದೇಹದಂತೆ ಎಣ್ಣೆಯಲ್ಲಿ ಅದ್ದಿಕೊಂಡು ಎಣ್ಣೆಯನ್ನು ಹೀರುತ್ತಿರುವುದು ಇದು ಸಾದೃಶ್ಯ ಗ್ರಹಿಕೆಯ ತರ್ಕವಾಗಿದ್ದು, ಇದು ಒಗಟಿಗೆ ರೂಪಕಾತ್ಮಕತೆಯನ್ನು ಒದಗಿಸುತ್ತದೆ. ಹಾವಿನಂತೆ ಇರುವ ಆದರೆ ಹಾವು ಅಲ್ಲದ ಇನ್ನಾವುದೋ ಒಂದು ಅನ್ನುವುದನ್ನು ಕಂಡುಕೊಳ್ಳುವುದಕ್ಕೆ ಒಗಟು ಪ್ರತಿಮೆ ಹಾಗೂ ಉತ್ತರದ ಸಾದೃಶ್ಯದ ತರ್ಕ ಒಗಟನ್ನು ಬಿಡಿಸಿ ಉತ್ತರವನ್ನು ಕಂಡುಕೊಳ್ಳುವ ಸೂಚನೆಯನ್ನು ಕೊಡುತ್ತದೆ. ಹೀಗಾಗಿ ನರಿಪುಕತೆಯಲ್ಲಿ ಸೂಚಕ ಮತ್ತು ಸೂಚಿತ ಅಥವಾ ಪ್ರತಿಮೆ ಮತ್ತು ಉತ್ತರ ಅನ್ನುವ ಸಾವಯವ ಸಂರಚನೆಯ ಸ್ವರೂಪದಲ್ಲಿ ಸಾದೃಶ್ಯದ ತರ್ಕವನ್ನು ಕಾಣಬಹುದಾಗಿದೆ.

ನರಿಪುಕತೆಯ ಸ್ವರೂಪವನ್ನು ಗಮನಿಸಿದರೆ, ಅದರ ಭಾಷಿಕ ಒಡಲಲ್ಲಿ ಯಾವುದೋ ಒಂದು ಸಮಸ್ಯೆ ಇರುತ್ತದೆ. ಈಗಾಗಲೇ ಸೂಚಿಸಿರುವಂತೆ, ಅದೊಂದು ಭಾಷಿಕ ಆಟವಾಗಿರುವುದರಿಂದ, ಅದನ್ನು ಒಡೆದು ಅಥವಾ ಬಿಡಿಸಿ ಉತ್ತರವನ್ನು ಹೇಳುವಂತಿರುತ್ತದೆ. ಹೀಗಾಗಿ ನರಿಪುಕತೆಗೆ ಒಂದು ಸಂದರ್ಭ ಅನ್ನುವುದು ಇಲ್ಲ. ತುಳುವಿನಲ್ಲಿ ನರಿಪುಕತೆಯನ್ನು ಹೇಳುವ ನಿರ್ದಿಷ್ಟ ಸಂದರ್ಭಗಳು ಕಂಡುಬಾರದಿದ್ದರೂ ಕರ್ನಾಟಕದ ಕೆಲವು ಪ್ರದೇಶಗಳ ಕೆಲವು ಸಮುದಾಯಗಳಲ್ಲಿ ಮದುವೆಯ ಸಂದರ್ಭದಲ್ಲಿ ಒಗಟುಗಳು ಬಳಕೆಯಾಗುತ್ತಿರುತ್ತವೆ.[8] ಒಗಟಿನ ಒಡಲಲ್ಲಿ ಸ್ವಾಭಾವಿಕವಾಗಿ ಪ್ರಶ್ನೋತ್ತರ ಸಂರಚನೆ ಇರುವ ಕಾರಣದಿಂದಲೇ ಹೆಣ್ಣು ಗಂಡಿನ ನಡುವೆ ಪಾರಸ್ಪರ್ಯ ಕ್ರಿಯೆಯನ್ನು ಉಂಟುಮಾಡುವ ಸಾಮಾಜಿಕ ಉದ್ದೇಶದಿಂದಲೇ ಮದುವೆಯ ಸಂದರ್ಭದಲ್ಲಿ ಒಗಟನ್ನು ಪರಸ್ಪರ ಒಡ್ಡಲಾಗುತ್ತದೆ. ಈ ನೆಲೆಯಲ್ಲಿ ಸಾಮಾಜಿಕ ನಿಯೋಗವೊಂದನ್ನು ಗುರುತಿಸಿಕೊಳ್ಳಬಹುದಾಗಿದೆ.

ಒಗಟುಗಳು ಪೂರ್ವ ನಿಗದಿತವಾಗಿದ್ದು, ಉತ್ತರವನ್ನು ಒಳಗೊಂಡು ಸಾಂಕೇತಿಕತೆಯನ್ನು ಹೊಂದಿದಂತವುಗಳಾಗಿರುತ್ತವೆ.[9]ಜೀವನ್ಮರಣದ ಪ್ರಶ್ನೆ ಎಂಬಂತೆ ಒಗಟುಗಳು ಉತ್ತರ ಗೊತ್ತಿಲ್ಲದವರನ್ನು ಪೇಚಿಗೆ ಸಿಲುಕಿಸುವ ಒಂದು ಮಾಧ್ಯಮ. ರೂಪಕಾತ್ಮಕತೆ ಮತ್ತು ದ್ವಂದ್ವಾರ್ಥತೆಯಿಂದಾಗಿ ಒಗಟುಗಳು ನಮ್ಮನ್ನು ಮಂತ್ರಮುಗ್ಧ ಲೋಕಕ್ಕೆ ಕೊಂಡೊಯ್ಯುವುದು ಮಾತ್ರವಲ್ಲ, ನಮ್ಮನ್ನು ಗೊಂದಲಗೊಳಿಸುತ್ತವೆಯೂ ಕೂಡಾ. ಅಂತೆಯೇ, ಅವು ವಿನೋಧವನ್ನುಂಟು ಮಾಡುವ ಮೂಲಕ ನಮ್ಮನ್ನು ಕಾಲಕಳೆಯುವ ಹಾಗೂ ಮಾಡುತ್ತವೆ.[10] ಸೊಲೊಮನ್ ದ್ವೀಪದ ಲಾವೊ ಒಗಟುಗಳ ಸಂರಚನಾತ್ಮಕ ಅಧ್ಯಯನವನ್ನು ಕೈಗೊಂಡಿರುವ ಮರಾಂಡ ಅವರು ಒಗಟುಗಳನ್ನು ಕಟ್ಟುವ ಪ್ರಕ್ರಿಯೆಯನ್ನು ಮಾನಸಿಕ ಪ್ರಕ್ರಿಯೆ ಎನ್ನುತ್ತಾರೆ. ಮರಾಂಡ ಅವರ ಅಭಿಪ್ರಾಯದ ಹಿನ್ನೆಲೆಯಲ್ಲಿ ಹೇಳುವುದಾದರೆ, ಜನರು ಒಗಟುಗಳನ್ನು ಕಲಿತು ನೆನಪಲ್ಲಿ ಇಟ್ಟುಕೊಳ್ಳುವುದಿಲ್ಲ. ಬದಲಾಗಿ, ಅವುಗಳನ್ನು ಕಟ್ಟುವ ನಿಯಮಗಳನ್ನು ಅವರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ.[11]

ರೂಪಕವೇ ಒಗಟಿನ ಸಂವೇದನೆಯ ತಳಹದಿ.[12] ಒಗಟು ಪ್ರಾಥಮಿಕವಾಗಿ ಒಂದು ಪರಶ್ನೆಯನ್ನೂ, ಎರಡನೆಯದಾಗಿ ಒಂದು ಉತ್ತರವನ್ನೂ ಒಳಗೊಂಡಿರುತ್ತದೆ. ಪ್ರಶ್ನೆಯಲ್ಲಿ ಒಂದು ಸಂಗತಿಯು ರೂಪಕದ ರೂಪದಲ್ಲಿ ಅಡಕವಾಗಿರುತ್ತದೆ. ಉತ್ತರದಲ್ಲಿ ಆ ಗೂಢಾರ್ಥವು ಬಯಲಾಗುತ್ತದೆ ಮತ್ತು ಧ್ವನಿತವಾಗಿರುವ ವಿಚಾರದ ನಿಜವಾದ ಅರ್ಥವು ಸಂಪೂರ್ಣವಾಗಿ ವ್ಯಕ್ತವಾಗುತ್ತದೆ. ಈ ರೀತಿ ಗೋಪ್ಯವು ಒಗಟಿನ ಅತ್ಯಂತ ಪ್ರಮುಖ ಕಾರ್ಯವಾಗಿರುತ್ತದೆ.

ಸಾಮಾನ್ಯವಾಗಿ ಒಗಟಿನಲ್ಲಿ ಒಂದು ವಸ್ತು (theme) ಆ ವಸ್ತುವಿನ ರೂಪ ಅಥವಾ ಕಾರ್ಯದ ಕುರಿತು ವಿವರಣೆ (comment) ಹಾಗೂ ಇಂತಹ ವಸ್ತು ವಿವರಣೆಗಳಿಗೆ ಒಟ್ಟಾಗಿ ಒಂದು ವರ್ಣನಾಂಶ (descriptive element) ಇರುತ್ತದೆ. ಇಂತಹ ವರ್ಣನಾಂಶಗಳನ್ನು ಬೇರೆ ಬೇರೆ ರೀತಿಯಾಗಿ ಜೋಡಿಸುವುದರ ಮೂಲಕ ಬೇರೆ ಬೇರೆ ಒಗಟುಗಳು ರಚನೆಯಾಗಬಹುದಾಗಿದೆ.

ಒಗಟು ಸಂರಚನೆಯ ಈ ವಿವರಣೆಯ ಆಧಾರದಲ್ಲಿ ತುಳು ನರಿಪುಕತೆಗಳ ಸಾಹಿತ್ಯಿಕ ಅಂಶಗಳನ್ನು ಈ ರೀತಿಯಾಗಿ ವಿವರಿಸಬಹುದು. ನೇರವಾದ ಅರ್ಥವನ್ನೊಳಗೊಂಡ ವಾಚ್ಯಾರ್ಥದ ನರಿಪುಕತೆಗಳು ಒಂದು ಬಗೆಯವಾದರೆ, ಇನ್ನೊಂದು ಬಗೆ, ಅದರ ಅರ್ಥ ಅಲಂಕಾರಿಕವಾಗಿರೋದು. ಅಂದರೆ ತೋರಿಕೆಯ ಅರ್ಥಾನೇ ಬೇರೆ, ನಿಜವಾದ ಅರ್ಥ ಇನ್ನೇನೋ ಆಗಿರೋದು.

ನೇರವಾದ ಅರ್ಥವನ್ನೊಳಗೊಂಡ ವಾಚ್ಯಾರ್ಥದ ನರಿಪುಕತೆಗಳು:-
ನೋಪಂದೆ ಬುಳ್ಪಾವುನೆ ಏರ್?
ಹೊಡೆಯದೆ ಅಳುವ ಹಾಗೆ ಮಾಡುವವರು ಯಾರು>
ಉತ್ತರ: ಪುಗೆ (ಹೊಗೆ)

ಅಮ್ಮೆ ಪುಟ್ಟುನೆಕ್ಕ್ ದುಂಬು ಮಗೆ ಪುಟ್ಟುಬೆ
ತಂದೆ ಹುಟ್ಟುವುದಕ್ಕೆ ಮೊದಲು ಮಗ ಹುಟ್ಟುತ್ತಾನೆ.
ಉತ್ತರ: ಸೂ; ಪುಗೆ (ಬೆಂಕಿ, ಹೊಗೆ)

ತುಚ್ಚಿನಕ್‌ಲೆಗ್ ತುಚ್ಚುಬೆ
ಕಚ್ಚಿದವರಿಗೆ ಕಚ್ಚುತ್ತಾನೆ.
ಉತ್ತರ: ಮುಣ್ಚಿ (ಮೆಣಸು)

ಕಿನ್ನಿ ಕಿನ್ನಿ ಜೋಕುಲೆಗ್ ಕಿನ್ನಿ ಕಿನ್ನಿ ಮುಟ್ಟಾಲೆ
ಚಿಕ್ಕ ಚಿಕ್ಕ ಮಕ್ಕಳಿಗೆ ಚಿಕ್ಕ ಚಿಕ್ಕ ಟೊಪ್ಪಿ
ಉತ್ತರ: ಬಿರೆಲ್‌ಡ್ ಉಗುರು (ಬೆರಳಲ್ಲಿ ಉಗುರು)

ಸುತ್ತು ಮುತ್ತು ಉರಿಗೆಜ್ಜೆ, ನಡುಟ್ಟು ನಾಗಪ್ಪಣೆ
ಸುತ್ತಮುತ್ತ ಉರಿಗೆಜ್ಜೆ, ನಡುವಿನಲ್ಲಿ ನಾಗಪಣ್ಣ
ಉತ್ತರ: ಕೂಲಿಲು, ನಾಲಾಯಿ (ಹಲ್ಲುಗಳು, ನಾಲಗೆ)

ಆಯೆರೆದೆ ಬೊಳ್ಳುಳ್ಳಿ ಈರೆದ ಬೊಳ್ಳುಳ್ಳಿ ತಾಂಟ್‌ದ್‌ಬೂರುಂಡು
ಆ ಕಡೆಯ ಬೆಳ್ಳುಳ್ಳಿ ಈ ಕಡೆಯ ಬೆಳ್ಳುಳ್ಳಿ ತಾಗಿಕೊಂಡು ಬೀಳುತ್ತದೆ.
ಉತ್ತರ: ಕೂಲಿ (ಹುಲ್ಲು)

ಅಣ್ಣೆಲ ತಮ್ಮೆಲ ಒಟ್ಟುಗು ಪೋಪುನೆ, ಅಣ್ಣೆ ತಪ್ಪಾವೊಂಡೆ ತಮ್ಮೆ ತಿಕ್ಕೊಂಡೆ
ಅಣ್ಣ ತಮ್ಮ ಜೊತೆಗೆ ಹೋಗುವುದು, ಅಣ್ಣ ಸಿಕ್ಕಿ ಹಾಕಿಕೊಂಡ ತಮ್ಮ ತಪ್ಪಿಸಿಕೊಂಡ
ಉತ್ತರ: ಸೂಜಿ ನೂಲು

ಅಪ್ಪೆ ಮಗಳೆ ಕಾರ್‌ಬಾರ್‌ಡ್‌ ಬತ್ತಿನಕುಲು ಮಾತ ಪೊಡಿ ಪೊಡಿ
ತಾಯಿ ಮಗಳ ಕಾರುಬಾರಿನಲ್ಲಿ ಬಂದವರೆಲ್ಲ ಪುಡಿ ಪುಡಿ
ಉತ್ತರ: ಕಡೆಪ್ಪಿಕಲ್ಲ್‌ಡ್‌ ಅರೆಪ್ಪು (ಕಡೆಯುವ ಕಲ್ಲಿನಲ್ಲಿ ಮಸಾಲೆ)

ಮಗನ್‌ಕಡ್ತಂಡ್ ಅಪ್ಪೆನ್ ತಿಗ್ತಂಡ್
ಮಗನನ್ನು ಕಡಿಯಿತು, ತಾಯಿಯನ್ನು ಸಿಗಿಯಿತು
ಉತ್ತರ: ಕೈಲ್ ಕಡ್ತದ್ ಬಾರೆದ ಬಂಬೆ ಲಕ್ಕಾವುನೆ
(ಬಾಳೆಗೊನೆ ಕಡಿದು, ಬಾಳೆಗಿಡವನ್ನು ಸಿಗಿಯುವುದು)

ಪೊರ್ಲುದ ಪೊಣ್ಣು ಮುಳ್ಳುಡು ತಿಕ್ಕೊಂದಲ್
ಚಂದದ ಹೆಣ್ಣು ಮುಳ್ಳಲ್ಲಿ ಸಿಕ್ಕಿಕೊಂಡಿದ್ದಾಳೆ
ಉತ್ತರ: ಕೇದಯಿ (ಕೇದಗೆ)

ಪೊರ್ಲುದ ಅಕ್ಕ ಮುಳ್ಳುಡು ತಿಕ್ಕೊಂದಲ್
ಚಂದದ ಅಕ್ಕ ಮುಳ್ಳಲ್ಲಿ ಸಿಕ್ಕಿಕೊಂಡಿದ್ದಾಳೆ
ಉತ್ತರ: ಕೇದಯಿ (ಕೇದಗೆ)

ಆಯೆರೆಟ್ ಮದ್ಮಲ್ ಆಂಡ್ ಈಯೆರ್‌ಟ್ ಸುದ್ದಿ ಆಪುಂಡು
ಆ ಕಡೆಯಲ್ಲಿ ಮದುಮಗಳಾದರೆ ಈ ಕಡೆಯಲ್ಲಿ ಸುದ್ದಿ ಆಗುತ್ತದೆ
ಉತ್ತರ: ಕೇದಯಿ (ಕೇದಗೆ)

ಅಪ್ಪೆ ಕಪ್ಪು ಮಗಲ್ ಬೊಲ್ಲೆನ
ತಾಯಿ ಕಪ್ಪು ಮಗಳು ಬಿಳಿ
ಉತ್ತರ: ಕಾವಲಿ (ದೋಸೆ)

ಗಟ್ಟಡ್ದ್ ಒಂಜಿ ಎರು ಕೊನತ್‌ದೆ ಅವು ನೀರ್ ತೊಯಿನವುಲು ಉಂತುಂಡು
ಗಟ್ಟದಿಂದ ಒಂದು ಜೊತೆ ಕೋಣಗಳನ್ನು ತಂದಿದ್ದೇನೆ ಅವು ನೀರು ಕಂಡಲ್ಲಿ ನಿಲ್ಲುತ್ತವೆ
ಉತ್ತರ: ಮುಟ್ಟು (ಚಪ್ಪಲಿ)

ಗಟ್ಟದ ಬದನೆಗ್ ತೊಟ್ಟು ಇಜ್ಜಿ
(ಗಟ್ಟದ ಬದನೆಗೆ ತೊಟ್ಟು ಇಲ್ಲ)
ಉತ್ತರ: ತೆತ್ತಿ (ಕೋಳಿ ಮೊಟ್ಟೆ)

ತೋರಿಕೆ ಅರ್ಥ ಒಂದು, ನಿಜವಾದ ಅರ್ಥ ಇನ್ನೊಂದು ಇರೋ ನರಿಪುಕತೆಗಳಲ್ಲಿ ಈ ವರ್ಣನಾಂಶಗಳು ಎರಡು ಎರಡು ಇರುತ್ತವೆ. ತೋರಿಕೆಯ ಅರ್ಥ ಒಂದು, ನಿಜವಾದ ಅರ್ಥ ಇನ್ನೊಂದು. ಉದಾಹರಣೆಗೆ,

ಬಂಜಿಡಿತ್ತಿ ಬಾಲೆ ಬಚ್ಚಿರೆ ತಿನ್ಪುಂಡು
ಹೊಟ್ಟೆಯಲ್ಲಿದ್ದ ಮಗು ವೀಳೆದೆಲೆ ತಿನ್ನುತ್ತದೆ
ಉತ್ತರ: ಮನೊಲಿ (ತೊಂಡೆಕಾಯಿ)

ಸಾರೊತ್ತೊಂಜಿ ಜೋಕುಲೆಗ್ ಒಂಜೆ ಒಕ್ಕನೂಲು
(ಸಾವಿರದ ಒಂದು ಮಕ್ಕಳಿಗೆ ಒಂದೇ ಸೊಂಟದ ನೂಲು)
ಉತ್ತರ: ಮಯ್ಪು (ಹಿಡಿಸೂಡಿ)

ತಿರ್ತ ಕಂಡೊಂಡು ನೀರ್ ಇತ್ತಂಡ ಮಿತ್ತ ಕಂಡೊಂಡು ಬುಲೆ ಬರ್ಪುಂಡು
ಕೆಳಗಿನ ಗದ್ದೆಯಲ್ಲಿ ನೀರಿದ್ದಲ್ಲಿ ಮೇಲಿನ ಗದ್ದೆಯಲ್ಲಿ ಬೆಳೆ ಬರುತ್ತದೆ
ಉತ್ತರ: ತುಡರ್ (ದೀಪ)

ಎಲ್ಯೆ ಇಪ್ಪುನಗ ಕೋಮನ ಕಟ್ಟ್‌ದೆ ಮಲ್ಲೆ ಆನಗ ಗಿಚ್ಚ್‌ದ್ ಅಡಕ್‌ದೆ ಚಿಕ್ಕವನಿದ್ದಾಗ ಲಂಗೋಟಿ ಕಟ್ಟಿದ್ದಾನೆ, ದೊಡ್ಡವನಾದಾಗ ತೆಗೆದು ಬಿಸಾಡಿದ್ದಾನೆ.
ಉತ್ತರ: ಕಣಿಲೆ, ಬೆದ್‌ರ್ (ಕಣಿಲೆ, ಬಿದಿರು)

 

[1] ೧.೧. ತುಳುಕೂಟ, ಸಂಚಿಕೆ ೧, ಪಗ್ಗು, ಬೇಸ, ಕಾರ್ತೆಲ್ (ಏಪ್ರಿಲ್ ೧೫, ೧೯೮೪), ಪುಟ ೫

೧.೨. ತುಳುಕೂಟ, ಸಂಚಿಕೆ ೨, ಮಾಯಿ, ಫೆಬ್ರವರಿ ೧೯೭೧, ಪುಟ ೧೩

೧.೩. ತುಳುಕೂಟ, ಸಂಚಿಕೆ ೪, ಪಗ್ಗು, ಏಪ್ರಿಲ್ ೧೯೭೧, ಪುಟ ೯

೧.೪. ತುಳುಕೂಟ, ಸಂಚಿಕೆ ೫, ಕಾರ್ತೆಲ್, ಜೂನ್ ೧೫, ೧೯೭೧, ಪುಟ ೯

೧.೫. ತುಳುಕೂಟ, ಸಂಚಿಕೆ ೬, ಮೇ ೧೫, ೧೯೭೧, ಪುಟ ೧೬

೧.೬. ತುಳುನಾಡ್, ಸಂ.೧, ಸಂ.೨, ಆಟಿ, ಸೋಣ, ಆಗೋಸ್ತು ೧೯೭೯, ಪುಟ ೨೨

೧.೭. ತುಳುನಾಡ್, ಸಂ.೧, ಸಂ.೫, ಬೊಂತೆಲ್-ಜಾರ್ದೆ, ನವಂಬರ್ ೧೯೭೯, ಪುಟ ೧೯

೧.೯. ತುಳುನಾಡ್, ಸಂ.೧, ಸಂ.೧೦, ಸುಗ್ಗಿ-ಪಗ್ಗು, ಏಪ್ರಿಲ್ ೧೯೮೦, ಪುಟ ೧೩

[2] ಸಂಗ್ರಾಹಕ: ಎಂ. ನಾರಾಯಣ, ತುಳು ಒಗಟುಗಳು, ಪ್ರಭಾತ, ರಥಬೀದಿ, ಮಂಗಳೂರು, ೧೯೬೨

[3] ವಿವೇಕ ರೈ ಬಿ.ಎ. ತುಳು ಒಗಟುಗಳು, ಕನ್ನಡ ಸಂಘ, ಮಂಗಳೂರು, ಮಂಗಗಂಗೋತ್ರಿ, ೧೯೭೧

[4] ವಿವೇಕ ರೈ. ಬಿ.ಎ., ತುಳು ಜನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೫

[5] ವಿವೇಕ ರೈ ಬಿ.ಎ., ತುಳು ಜನಪದ ಸಾಹಿತ್ಯ, ಪುಟ ೫೫೪, ಕನ್ನಡ ಸಾಹಿತ್ಯ ಪರಿಷತ್ತು, ೧೯೮೫

[6] ಸತ್ಯನಾಥ್ ಟಿ.ಎಸ್., ಕನ್ನಡ ಜಾನಪದ: ಕೆಲವು ಮುಖಗಳು, ಶಾರದಾ ಪ್ರಕಾಶನ, ಬೆಂಗಳೂರು, ೧೯೮೮

[7] Ramanunaj A.K., The relevance of South Asian Folklore, Indian Folklore (ed.), Clauss Peter J., Hand J and Pattnayaka D.P., Central Institute of Indian Languages, Mysore; 1987.

[8] Elli Kongas Maranda and Pierre Maranda, Strctural Models in Folklore and Transformational Essays, Mounton & Co., N.V. Publishers, The Hague, 1971.

[9] Folklore Fellows Communications, Dept. of Folklore Studies, University of Helsinki, No. 29, Dec. 2005

[10] ಮೂಲ: ದುರ್ಗಾ ಭಾಗವತ್, ಕನ್ನಡಕ್ಕೆ: ವಿವೇಕ ರೈ, ಭಾರತೀಯ ಪರಂಪರೆ ಹಾಗೂ ಸಾಹಿತ್ಯದಲ್ಲಿ ಒಗಟು, ಲೇಖಕರು, ಮಂಗಳೂರು, ೧೯೮೮, ಪುಟ ೨೫.

[11] ಪಂಡಿತಾರಾಧ್ಯ, ಪ್ರಥಮ, ಪ್ರಬೋಧ ಪುಸ್ತಕಮಾಲೆ, ಮೈಸೂರು, ೧೯೭೬, ಪುಟ ೧೮-೧೯.

[12] ಹಿರಿಯಣ್ಣ ಅಂಬಳಿಕೆ, ಜಾನಪದ ರಾಚನಿಕ ಅಧ್ಯಯನ, ದಾಮಿನಿ ಸಾಹಿತ್ಯ, ಬೆಂಗಳೂರು, ೨೦೦೪.