ತುಳು ಜನಪದ ನುಡಿಗಟ್ಟಗಳೆಂದು ಪ್ರಚಲಿತದಲ್ಲಿರುವ ತುಳುನಾಡಿನ ಜೀವಂತ ಸಂಸ್ಕೃತಿಯ ಉಜ್ಜಲ ಚಿತ್ರಣವನ್ನು ನೀಡುವ ನಂಬಿಕೆ, ಆಚರಣೆ, ಆರಾಧನೆ ಸಂದರ್ಭಗಳಲ್ಲಿ ಬಳಕೆಯಾಗುವ ‘ಮದಿಪು’ ನುಡಿಗಟ್ಟುಗಳು ನಂಬಿಕೆಯ ನೆಲಗಳನ್ನೂ ಹೇಳುವುದರೊಂದಿಗೆ ತುಳುನಾಡಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನೂ ನಮ್ಮ ಮುಂದಿಡುತ್ತವೆ. ಶಬ್ದ ಶಕ್ತಿಯ ವೈಶಿಷ್ಟ್ಯಗಳನ್ನು ಹೇಳುವುದರೊಂದಿಗೆ ಇಲ್ಲಿಯ ಧಾರ್ಮಿಕ ಮತ್ತು ಸಾಮಾಜಿಕ ಅಂಶಗಳು ಆಯಾ ಪ್ರದೇಶದ ಜನರ ಬದುಕಿನ ಅಂಗವಾಗಿ ಆ ಜನ ಸಮುದಾಯದ ಸಂಸ್ಕೃತಿಯನ್ನು ರೂಪಿಸಿವೆ.

ಮದಿಪು ನುಡಿಗಟ್ಟುಗಳನ್ನು ಭೂತಾರಾಧನೆ ಸಂಬಂಧಿ ಮತ್ತು ಜೀವನಾವರ್ತನ ಸಂಬಂಧಿ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಆರಾಧನಾ ಸಂಬಂಧಿ ನುಡಿಗಟ್ಟುಗಳು ಅಲೌಕಿಕ ಪರಿಕಲ್ಪನೆಯನ್ನು ಅವಲಂಬಿಸಿವೆ. ಪಾಡ್ದನಗಳಿಗೆ ಮತ್ತು ಮದಿಪು ನುಡಿಗಟ್ಟುಗಳಿಗೆ ವಸ್ತುವಿನ ಮತ್ತು ಆಶಯದ ದೃಷ್ಟಿಯಿಂದ ನೇರ ಸಂಬಂಧವಿದೆ. ಸಾಂಸ್ಕೃತಿಕ ಘಟಕದ ಶೋಧನೆ ಇವುಗಳಿಂದ ನಡೆಯುತ್ತದೆ. ಮದಿಪು ನುಡಿಗಟ್ಟಗಳು ದೈವಮಾಧ್ಯಮಿಗಳು, ಮಧ್ಯಸ್ಥರು ಮತ್ತು ಊರಿನ ಗುರಿಕಾರರ ಮೂಲಕ ಪ್ರಯೋಗವಾಗುತ್ತವೆ. ಮಧ್ಯಂತರ ಜಗತ್ತಿನ ನ್ಯಾಯ ತೀರ್ಮಾನಗಳನ್ನು ಈ ಭಾಷಾ ಘಟಕ ಮಾಡುತ್ತದೆ. ಇವುಗಳು ಪ್ರಮಾಣದ ಮಾತುಗಳಾಗುತ್ತವೆ. ಭಾಷೆ ಒಂದು ಶಕ್ತಿ ಎನ್ನುವುದಕ್ಕೆ ನುಡಿಗಟ್ಟುಗಳು ನಿದರ್ಶನ. ಮದಿಪು ನುಡಿಗಟ್ಟುಗಳನ್ನು ಮದು, ಮದಿಪು, ಪಾರಿ, ಬೀರ, ನುಡಿ ಎಂಬ ಐದು ಪ್ರಕಾರಗಳಲ್ಲಿ ಗುರುತಿಸಬಹುದು. ಇವುಗಳಲ್ಲಿ ಸಂದರ್ಭ, ಪ್ರದೇಶ, ಮಾಧ್ಯಮದ ವ್ಯಕ್ತಿಗಳಿಗನುಗುಣವಾಗಿ ಬದಲಾಗುತ್ತವೆ ಎಂದು ಮತ್ತು ಬೀರದಲ್ಲಿ ಸಂಚಾರದ ಕ್ರಿಯೆಯಿದೆ ಎಂದು ದಲಿತ ಜಗತ್ತಿನ ದುರಂತ ಚಿತ್ರಣವನ್ನು ಬೀರ ಹೇಳುತ್ತದೆ. ಬೀರರಲ್ಲಿ ನಾಟಕೀಯ ಗುಣವಿದೆ. ರೂಪಕದ ಭಾಷೆಯ ಮೂಲಕ ಸಮೂಹವನ್ನು ಗೊಂದಲಕ್ಕೀಡುಮಾಡುವುದು ನುಡಿಗಟ್ಟುಗಳ ಆಶಯ. ಇವುಗಳು ಒಂದು ಮಾಂತ್ರಿಕ ಭಾಷಾ ಘಟಕ. ಆರಾಧನೆಯ ಅಸ್ತಿತ್ವವೇ ನುಡಿಗಟ್ಟುಗಳಲ್ಲಿದೆ. ಇವು ದೇಸೀ ಪರಿಭಾಷೆಗಳು. ಇಲ್ಲಿಯ ಚಿಂತನೆ ಆಧ್ಯಾತ್ಮದ ಕಡೆಗೆ ಇರುವುದರಿಂದ ಮಾತು ದೈವಿಕವಾಗಿರುತ್ತದೆ. ಭೂಮಿ ಪೂಜೆಯ ನುಡಿಗಟ್ಟುಗಳು ಕೃಷಿ ಬದುಕನ್ನು ಬಿಂಬಿಸುತ್ತವೆ. ಕೃಷಿ ಸಂಸ್ಕೃತಿಯ ರಕ್ಷಣೆ ಮತ್ತು ಸಾಮಾಜಿಕ ಚಿಂತನೆ ಕೆಡ್ಡಸ ಕರೆಯಲ್ಲಿದೆ. ತುಳುನಾಡಿನ ರಾಜನೊಬ್ಬನಿಗಾದ ಮೋಸವನ್ನು ಪುರಾಣದ ಆಯಾಮದೊಂದಿಗೆ ಬಚ್ಚಿಡುವ ಪ್ರಯತ್ನ ಬಲೀಂದ್ರ ಬೀರದಲ್ಲಿದೆ. ಪೊಲಿ ಕರೆಯ ನುಡಿಗಟ್ಟುಗಳು ಸಮೃದ್ಧಿಯ ಬಯಕೆಯ ಆಶಯಗಳು. ಜೀವನಾವಧಿ ಸಂಬಂಧಿ ನುಡಿಗಟ್ಟುಗಳಲ್ಲಿ ಆರಾಧನೆಯ ಅಂಶಗಳಿಲ್ಲ. ಅಲೌಕಿಕ ಶಕ್ತಿಯ ಆವೇಶದ ನಿರೀಕ್ಷೆ ಇಲ್ಲ. ವೈಭವೀಕರಣವಿಲ್ಲ. ಭೂತಾರಾಧನೆಯ ನುಡಿಗಟ್ಟುಗಳು ಸತ್ಯದ ಶೋಧನೆಯನ್ನು ಮಾಡುತ್ತವೆ. ನುಡಿಗಟ್ಟುಗಳು ಆಡಳಿತ ವ್ಯವಸ್ಥೆಯ ಒಂದು ಭಾಗ. ಇವುಗಳಿಗೆ ಚಿಕಿತ್ಸಕ ಗುಣವಿದೆ. ಮದಿಪು ನುಡಿಗಟ್ಟುಗಳ ನಿರೂಪಕ ಒಬ್ಬ ಮನೋವೈದ್ಯನಂತೆ ಕಂಡುಬರುತ್ತಾನೆ. ಜನಪದ ಧಾರ್ಮಿಕ ರಂಗಭೂಮಿಯನ್ನು ಇವು ನಿರ್ವಹಿಸುತ್ತವೆ.

ಭಾಷಾ ಪ್ರಯೋಗ

ನುಡಿಗಟ್ಟುಗಳಲ್ಲಿ ಅಭಿವ್ಯಕ್ತಗೊಳ್ಳುವ ಭಾಷೆ ಆಲಂಕಾರಿಕ ಭಾಷೆ. ಇವೂ ಸಾಮಾನ್ಯ ಜನಜೀವನದ ಭಾಷೆಯಾಗಿರದೆ ಕಾವ್ಯಾತ್ಮಕವಾಗಿರುತ್ತದೆ. ಜನಪದರ ಸುತ್ತುಮುತ್ತ ಇರುವ ಘಟನೆ ಸನ್ನಿವೇಶಗಳನ್ನು ಆಧರಿಸಿವೆ. ಬದುಕಿನ ಅನುಭವಕ್ಕಿಂತ ಹೊರತಾದ ವಿಷಯ, ಅಲಂಕಾರಗಳು ಇಲ್ಲಿ ಕಂಡುಬರುವುದಿಲ್ಲ. ಇವು ಜನಪದ ಅಭಿವ್ಯಕ್ತಿಯ ಶಾಬ್ಧಿಕ ರಚನೆಗಳು. ಸಂಸ್ಕೃತಿಯ ಪ್ರತೀಕಗಳು. ಇವು ಪ್ರಾದೇಶಿಕ ಸಂಸ್ಕೃತಿಯೊಂದಿಗೆ ಒಂದು ಸೃಜನಶೀಲ ಮಿಥ್ ಆಗಿ ರೂಪುಗೊಳ್ಳುತ್ತವೆ.

ಅಲಂಕಾರಗಳು

ನುಡಿಗಟ್ಟುಗಳು ಸಾಮಾಜಿಕ ನಿಯಂತ್ರಣದ ಕಾರ್ಯವನ್ನು ಮಾಡುವುದರಿಂದ ಸಂಕೇತಗಳ ಮೂಲಕ ಪ್ರಯೋಗವಾಗುತ್ತವೆ. ಕಲಾತ್ಮಕತೆಯ, ಚಮತ್ಕಾರದ ಮಾತುಗಳನ್ನು ಇಲ್ಲಿ ಕಾಣಬಹುದು. ಇಲ್ಲಿಯ ವರ್ಣನೆಗಳು ಕಲಾವಿದನ ಪ್ರತಿಭೆ, ಪ್ರತ್ಯುತ್ಪನ್ನಮತಿ, ಲೋಕಾನುಭವ, ಭಾಷಾ ಸಾಮರ್ಥ್ಯ, ಕಲ್ಪನಾ ಚಾತುರ್ಯ, ನಿರೂಪಣಾ ಶೈಲಿ, ಮೊದಲಾದ ಅಂಶಗಳನ್ನೂ ಹೊಂದಿಕೊಂಡಿರುತ್ತದೆ. ಹಾಗಾಗಿ ಇಲ್ಲಿಯ ಭಾಷೆ ಆಲಂಕಾರಿಕವಾಗಿರುತ್ತದೆ. ಇವು ಆತ್ಮಕತೆಗಳಂತಿರಬಹುದು. ಅಭಯದ ಮಾತುಗಳಾಗಿರಬಹುದು. ಪರಾಕ್ರಮ, ದಿಗ್ವಿಜಯದ ಸಾಹಸ ಸಾಧನಗಳಾಗಿರಬಹುದು. ಒಟ್ಟು ವ್ಯವಸ್ಥೆಯ ನಿಯಂತ್ರಣಕ್ಕೆ ಭಾಷೆಯ ಬಳಕೆ ಪೂರಕವಾಗುತ್ತದೆ.

ಪ್ರಯೋಗ

ದೈವ: ‘ವರ್ಷ ಪೋಂಡು ಕಾಲ ಬತ್ತ್ಂಡ್ ಕಾಲದಿ ಪೋದು ವರ್ಷಾದಿ ಬನ್ನಗ ಇನಿತ್ತ ದಿಮಾನೊಡು  ಉಂದು ವಾ ಲೆಕ್ಕದ ನೇಮ?’ (ವರ್ಷ ಹೋಯಿತು ಕಾಲ ಬಂತು. ಕಾಲ ಹೋಗಿ ವರ್ಷ ಬರುವಾಗ  ಇವತ್ತಿನ ದಿನದಲ್ಲಿ ಕೊಟ್ಟ ನೇಮ ಯಾವ ಲೆಕ್ಕದ ನೇಮ?)

ಮಧ್ಯಸ್ಥ:- ‘ಕಟ್ಟ್‌ಕಟ್ಟಲೆ ತಪ್ಪನ ದೈವ ಈಯೆತ್ತ್. ತತ್ತ್ಂಡ ತಡೆತೊನ್ಳೆ ಗುತ್ತು ಸಂಸಾರ ಎಂಕಲ್ಳವತ್ತ್.  ಉಂದು ಧರ್ಮನೇಮದ ಬಲಿ. ಉಂದೆನ್ ಸ್ವೀಕಾರ ಮಲ್ಪು’’ (ಕಟ್ಟಳೆ ಮೀರುವ ದೈವ ನೀನಲ್ಲ. ಮೀರಿದರೆ  ತಾಳಿಕೊಳ್ಳುವ ಗುತ್ತು ಸಂಸಾರ ನಮ್ಮದ್ದಲ್ಲ. ಇದು ಧರ್ಮ ನೇಮದ ಬಲಿ-ಒಪ್ಪಿಕೊಳ್ಳು)

ದೈವ: ‘ಭಯ ಮಲ್ಪೊಡ್ಚಿ. ಕೋಡೆಮುಟ್ಟ ಸುಯಿಂತ್‌ಂಡ ಇಸೆ ಇತ್ತ್ಂಡ್. ಇನಿ ತುಚ್ಚಿಂಡಲಾ ಇಸ  ಇಜ್ಜಿಂದ್‌ಕಡೆಕೂಲಿಗ್‌ಕೈ ಪಾಡ್‌ಂಡ ಜಾಗ್ರತೆ. ತುಚ್ಚುನ ಕೂಲಿಲಾ ಉಂಡು. ಇಸತ್ತ ನರಂಬುಲಾ  ಉಂಡು. ಆವಡ್ ಕೋಡೆ ಮುಟ್ಟ ತುಚ್ಚುನ ನಾಯಿಡ್ದ್, ಸುಯಿಂಪುನ ಉಚ್ಚುಡ್ದು ಪಿಲಿತ್ತ ಕಾಟೊಡ್ದು ರಕ್ಷೆ  ಮಲ್ದೆ. ಮಿತ್ತ್‌ಗಲ ಕಾಪುವೆ’ (ಭಯಪಡಬೇಡಿ. ನಿನ್ನಯವರೆಗೆ ಬುಸುಗುಟ್ಟಿದರೆ ವಿಷವಿತ್ತು. ಇಂದು ಕಚ್ಚಿದರೂ  ವಿಷವಿಲ್ಲವೆಂದು ಕಡೆಹಲ್ಲಿನವರೆಗೆ ಕೈ ಹಾಕಿದರೆ ಜಾಗ್ರತೆ. ಕಚ್ಚುವ ನಾಯಿಯಿಂದ, ಬುಸುಗುಟ್ಟುವ  ಹಾವಿನಿಂದ ಹುಲಿ ಕಾಟದಿಂದ ರಕ್ಷಿಸಿದ್ದೇನೆ. ಹಾಗೆಯೇ ಮುಂದಕ್ಕೂ ಮಾಡುತ್ತೇನೆ)

ಮಧ್ಯಸ್ಥ : (ಗಿಳಿ ಬಾಸೆ ಏನಡುಂಡು, ಮೈರೆ ನಲಿಕೆ ನಿನಡ ಉಂಡು, ಕೋಗಿಲೆ ಗಾನ ಎನಡುಂಡು ಅರಿನ  ನಡೆ ನಿನಡ ಉಂಡು. ಮತಿಯಿತ್ತಿ ಮದ್‌ಮಯೆ ಯಾನ್ ಮಾಯೆದ ಮದ್‌ಮಲ್ ಈ ಮತ್ತಿತ ಬೀಗ ಎನಡ  ಮಾಯೆದ ಬೀಗ ನಿನಡ. ನಿನ್ನ ಮಾಯೆದ ಕೈಟ್ಟ್ ಬೀಗ ದೆಪ್ಪು )

(ಗಿಳಿ ಮಾತು ನನ್ನಲ್ಲುಂಟು, ನವಿಲು ನೃತ್ಯ ನಿನ್ನಲ್ಲುಂಟು. ಮತಿಯಿರುವ ಮದುಮಗ ನೀನು ಮಾಯದ  ಮದುಮಗಳು ನಾನು. ಮತಿಯ ಬೀಗ ನನ್ನಲ್ಲಿ ಮಾಯದ ಬೀಗ ನಿನ್ನಲ್ಲಿ.ನಿನ್ನ ಮಾಯೆಯ ಕೈಯಲ್ಲಿ ಬೀಗ  ತೆಗೆ).

ದೈವ: ‘ಮತಿತ ಮದಿಮಾಯೆ ಈರ್. ಮಾಯೆದ ಮದ್‌ಮಲ್ ಯಾನ್. ಇರೆಡ ಮನ ಉಂಡು. ಎನಡ  ಮಾಯ ಉಂಡು. ಮುಡ್ತಿ ಮಲ್ಲಿಗೆ ಪೂಬಾಡಂದಿಲೆಕ್ಕ, ಮುಂಡದ ಕುಂಕುಮ ಮಾಜಂದಿಲೆಕ್ಕ ಕೆಬಿತ್ತ  ಕೊಡಂಗೆ ತಾಲಂದಿಲೆಕ್ಕ, ಕಣ್ಣ್‌ದ ಮೈ ಮಾಜಂದಿಲೆಕ್ಕ ಮೂಂಕುದ ಮುತ್ತೇಸನ, ಕೆಕ್ಕಿಲ್ದ ಕರಿಮಣಿ, ಕಾರ್ದ  ಉಂಗಿಲ, ಸೊಂಟದ ಪಟ್ಟಿ ತಾಲಂದಿಲೆಕ್ಕ, ಕಂಬುಲದ ಪೂಕರೆ ಮಾಲಂದಿಲೆಕ್ಕ ಪೇರ್ದ ಕುದುಪೆ  ದರಿಯಂದಿಲೆಕ್ಕ, ಪೆತ್ತದ ಕೆರ್‌ಂದೆಲ್ ಆಜಂದಿಲೆಕ್ಕ ಮದ್‌ಮಯನ ಕೈ ಪತ್ತುವೆ. ಮೋನೆದ ಮುಸುಕ  ದೆತ್ತ್‌ದ್‌ ತಿರ್ತ್‌ ಜಪ್ಪುವೆ.ಕಟ್ಲೆದ ಗುತ್ತುಡು ಕಟ್ಲೆದ ದೈವ ಯಾನ್. ಕಟ್ಲೆದ್ ಕರ್ತೆವೆರ್‌ ನಿಕುಲು. ಕಟ್ಲೆನ್  ದೀವೊನ್ಲೆ. ಕುಂದೆಲ್ ಕನವಡೆ, ಪರತ್ತ್ ನಿಗಿಪಡೆ. ಪೊಸತ್ತ್‌ ತೊಡಡೆ, ನಿಕುಲ್ಳ ಮೊಕೆದಗ ಸೇಕೆಡ್‌ಸಂಪು  ಮಲ್ತೊನುವೆ’ (ಮತಿಯರುವ ಮದುಮಗ ನೀವು. ಮಾಯದ ಮದುಮಗಳು ನಾನು. ಮನಸ್ಸು ನಿಮ್ಮಲ್ಲಿದೆ.  ಮಾಯ ನನ್ನಲ್ಲಿದೆ. ಮುಡಿದ ಹೂ ಬಾಡದಂತೆ, ಹಣೆಯ ಕುಂಕುಮ ಮಾಸದಂತೆ, ಕಿವಿಯ ಓಲೆ  ಬೀಳದಂತೆ, ಕಣ್ಣಿನ ಕಾಡಿಗೆ ಮಾಸದಂತೆ, ಮೂಗಿನ ಮೂಗುತಿ, ಕುತ್ತಿಗೆಯ ಕರಿಮಣಿ, ಕಾಲಿನ ಉಂಗುರ,  ಸೊಂಟದ ಪಟ್ಟಿ, ಉದುರದಂತೆ ಕಂಬಳದ ಪೂಕರೆ ಮಾಲದಂತೆ, ಹಾಲಿನ ಪಾತ್ರೆ ಒಡೆಯದಂತೆ  ಕಂಬಳದ ಪೂಕರೆ ಮಾಲದಂತೆ, ಹಾಲಿನ ಪಾತ್ರೆ ಒಡೆಯದಂತೆ ದನದ ಕೆಚ್ಚಲು ಆರದಂತೆ ಮದುಮಗನ  ಕೈ ಹಿಡಿಯುವೆ. ಮುಖದ ಮುಸುಕು ತೆಗೆದು ಕೆಳಕ್ಕೆ ಇಳಿಯುವೆ, ಕಟ್ಟಳೆಯ ಗುತ್ತಿನಲ್ಲಿ ಕಟ್ಟಳೆಯ ದೈವ  ನಾನು. ಕಟ್ಟಳೆಯ ಕರ್ತೃಗಳು ನೀವು. ಕಟ್ಟಳೆಯನ್ನು ಇಟ್ಟುಕೊಳ್ಳಿ. ಕುಂದು ತರಬೇಡಿ. ಹಳತನ್ನು  ಹುಗಿಯಬೇಡಿ. ಹೊಸತಕ್ಕೂ ಜೋಡಬೇಡಿ. ನಿಮ್ಮ ಅಕ್ಕರೆಯ ಸಕ್ಕರೆಯಲ್ಲಿ ತಂಪಾಗಿರುತ್ತೇನೆ.)

ಮೇಲಿನ ಭಾಷಾ ಪ್ರಯೋಗದಿಂದ ಒಂದು ರೀತಿಯ ನಾಟಕೀಯ ಮೆರುಗು ಅಲ್ಲಿಯ ಸಂಭಾಷಣೆಗೆ ಬಂದಿದೆ. ಇಲ್ಲಿಯ ದ್ವಂದ್ವವೆಂದರೆ ಒಂದು ಕಡೆಯಲ್ಲಿ ಧಾರ್ಮಿಕ ಭಾವನೆಗಳಿಂದ ವಿಮುಖರಾಗುತ್ತಿರುವ ಜನರನ್ನು ಸೂಕ್ಷ್ಮವಾಗಿ ಎಚ್ಚರಿಸುವ ಧಾಟಿಯೂ ಇದೆ. ‘ಬುಸುಗುಟ್ಟಿದರೆ ಇದ್ದ ವಿಷ ಕಚ್ಚಿದರೂ ಇಲ್ಲ’ ಎನ್ನುವಲ್ಲಿ ಕಾರಣಿಕದ ಕುಂದನ್ನು ನಂಬಬೇಡಿ ಎಂಬ ಕಿವಿ ಮಾತು ಇದೆ. ಮತಿಯ ಬೀಗ, ಮಾಯದ ಬೀಗ’ ಎಂಬ ರೂಪಕಗಳು ಲೌಕಿಕ ಅಲೌಕಿಕ ಸಂಬಂಧಗಳನ್ನು ಹೇಳುತ್ತವೆ. ಮಾಯದ ಮದುಮಗಳಾಗಿ ದೈವ ಕೈ ಹಿಡಿಯುವುದು ಎನ್ನುವಲ್ಲಿಯ ಅಲಂಕಾರ ಉತ್ಪ್ರೇಕ್ಷೆಯಾದರೂ ಕೂಡಾ ಮತಿಯಿದ್ದರೆ ಮಾತ್ರ ಮಾಯ ಕೈ ಹಿಡಿಯುವುದು, ದೈವ ಸಹಾಯ ಇರುವುದು ಎನ್ನುವುದರ ಸೂಚನೆ. ಸಂಪ್ರದಾಯ ಕಟ್ಟಳೆಯನ್ನು ಮೀರಬಾರದು. ಬದಲಾವಣೆಗೆ ಅವಕಾಶವಿಲ್ಲ ಎನ್ನುವ ಎಚ್ಚರಗಳು ಇಲ್ಲಿಯ ರೂಪಕದ ಭಾಷೆಯಲ್ಲಿವೆ.

ಅದೇ ರೀತಿ ವಿವಾದಗಳ ಸಂದರ್ಭಗಳಲ್ಲಿ ‘ನ್ಯಾಯದ ಚಾವಡಿಯಲ್ಲಿ ಜಯವನ್ನು ತಂದುಕೊಟ್ಟರೆ ದೇಹಬಲಕ್ಕೆ ಭುಜಬಲ ನೀಡಿದರೆ ನಿನ್ನ ಭುಜಕ್ಕೆ ಭುಜಪಾಳೆ ಒಪ್ಪಿಸುತ್ತೇನೆ’ ಎಂಬ ಮಾತಿಗೆ ಉತ್ತರವಾಗಿ ‘ಏನು ಮಾಡಲಿ ಹುಣಿಯನ್ನೂ ಚೆಂಡನ್ನೂ ಒಟ್ಟಿಗೇ ಕುಟ್ಟಬೇಕು. ಮಾಯದ ನೆಲೆಯನ್ನು ಶೋಧಿಸಬೇಕು. ಮದಿಪು ಅಡಗಿಸಬೇಕೆಂದು ನೋಡುತ್ತಾರೆ. ಮಂಡಲ ಬರೆಯುವುದು ಬೇಡ, ನಾಗದರ್ಶನ ಬೇಡ, ರಾಮಾಯಣ ಪಾರಾಯಣ ಬೇಡ, ಭಾಗವತ ವಾಚನ ಬೇಡ. ಮೂಗು ಚುಚ್ಚಿ ಹುರಿ ಹಗ್ಗ ಹಾಕುತ್ತೇನೆ. ನಿಮ್ಮ ಕೈಗೆ ಒಪ್ಪಿಸುತ್ತೇನೆ. ಕೈಗೆ ಎಣ್ಣೆ ಕಣ್ಣಿಗೆ ತಾಗೀತು ಜಾಗ್ರತೆ’ ಎನ್ನುವ ನುಡಿಗಟ್ಟುಗಳು ಪ್ರತಿಮೆಗಳ ಮೂಲಕ ಸಂದರ್ಭವನ್ನು ತೇಲಿಸಿ ನಿವಾರಿಸುವುದಕ್ಕೆ ನೆರವಾಗುತ್ತವೆ.

ಭೂಮಿಯ ಸೃಷ್ಟಿಯ ಕುರಿತಾಗಿ ಪಂಜುರ್ಲಿ ಬೀರದಲ್ಲಿ ಬರುವ ಪುರಾಣ ಸಂಸ್ಕೃತಿ(Mythical culture)ಯ ಉಲ್ಲೇಖ ಉತ್ತಮ ನಿದರ್ಶನ

‘ಮುಡಾಯಿಡ್ದ್‌ ಬೊಲ್ಪುಗು ಸೂರ್ಯದೇವೆರ್ ಪಡ್ಡಯಿಡ್ದ್‌ ಅಸ್ತಮಾನೊಗು ಚಂದ್ರನಾರಾಣ ದೇವೆರ್. ಉದಿಪುಗು ಸೂರ್ಯೆ ಕಂತ್‌ಗ್‌ ಚಂದ್ರೆ, ತೆನ್ಕಯಿ ಸೆಲಿಯೇಂದ್ರೆ, ಬಡಕಯಿ ಬಾಲ್ಯನ ಕುಮಾರೆ, ನಾಲ್ ಲೋಕೊಡು ನಲ್ಗುಂಡು ದೇವೆರ್‌, ಮೂಜಿ ಲೋಕೊಡು ಮೂಜಿತಾನ ಬೂತೊಲು ಉದಿಮೆ ಬೆಂದೆರ್. ಆವಕಾಲೊಗು ಪನ್ನಗ ಬಾನ ಪತ್ತೊಡು ಸ್ವಾಮಿ ಭೂಮಿ ತಿರ್ಗವೊಡು ಭೂಮಿ ಪತ್ತೊಡು ಸ್ವಾಮಿ ಬಾನ ತಿರ್ಗವೊಡು ಬಲಗೈ ಪತ್ಯೆರ್ ಸ್ವಾಮಿ ಬಾನ ತಿರ್ಗುಂಡೆ. ಎಡಗೈ ಪತ್ಯೆರ್ ಸ್ವಾಮಿ ಭೂಮಿ ತಿರ್ಗುಂಡೆ. ಬಾನ ನಡಪರೆ ಭೂಮಿ ಉಪ್ಯರೆ’

(ಮೂಡು ದಿಕ್ಕಿನಲ್ಲಿ ಬೆಳಕಿಗೆ ಸೂರ್ಯದೇವರು ಪಡುದಿಕ್ಕಿನಲ್ಲಿ ಅಸ್ತಮಾನಕ್ಕೆ ಚಂದ್ರನಾರಾಯಣ ದೇವರು. ಓಲಗ ಆಗುತ್ತಾರೆ. ನಾಲ್ಕು ಲೋಕಗಳಲ್ಲಿಯೂ ದೇವರು ನಲುಗಿಸುತ್ತಾ ಮೂರು ಲೋಕಗಳಲ್ಲಿ ಮೂರು ಕಡೆಗಳಲ್ಲಿ ಭೂತಗಳನ್ನು ಸೃಷ್ಟಿಸಿದರು. ಆಕಾಶ ಹಿಡಿದರು ಭೂಮಿ ತಿರುಗಿತು, ಭೂಮಿ ಹಿಡಿದರು ಆಕಾಶ ತಿರುಗಿತು. ಬಲಗೈಯಲ್ಲಿ ಆಕಾಶ ತಿರುಗಿಸಿದರು ಎಡಗೈಯಲ್ಲಿ ಭೂಮಿ ತಿರುಗಿಸಿದರೂ ಆಕಾಶ ನಡೆಯಲು ಭೂಮಿ ವಾಸಿಸಲು)

ಮೇಲಿನ ನುಡಿಗಟ್ಟುಗಳಲ್ಲಿ ಬರುವ ಸೂರ್ಯ, ಚಂದ್ರ, ಭೂಮಿ ಆಕಾಶ ಈ ಪ್ರತಿಮೆಗಳು ನಮ್ಮ ಸಂಸ್ಕೃತಿಯಲ್ಲಿ ಅಚ್ಚೊತ್ತಿರುವ ಪುರಾಣ ಕಲ್ಪನೆಯನ್ನು ಪ್ರತಿಪಾದಿಸುತ್ತದೆ.

ಪೌರಾಣಿಕ ಕಲ್ಪನೆ

ಭೂಮಿ ಪೂಜೆಯ ಸಂದರ್ಭದ ಬಲೀಂದ್ರ ಕರೆಯ ನುಡಿಗಟ್ಟುಗಳು, ಪಂಜುರ್ಲಿಯ ಉಗಮದ ಬಗ್ಗೆ ಹೇಳುವ ಭೂಮಿಯ ಸೃಷ್ಟಿಯ ಕುರಿತಾದ ನುಡಿಗಟ್ಟುಗಳು ಮಾತ್ರವಲ್ಲದೆ ಜೀವನಾವರ್ತನ ಸಂಬಂಧಿ ನುಡಿಗಟ್ಟುಗಳನ್ನು ಹೊರತುಪಡಿಸಿ ಉಳಿದ ನುಡಿಗಟ್ಟುಗಳು ಪುರಾಣದ ಕಲ್ಪನೆಯನ್ನೇ ನಮ್ಮ ಮುಂದಿಡುತ್ತವೆ. ಭೂತಾರಾಧನೆಗೆ ಸಂಬಂಧಿಸಿದ ಎಲ್ಲಾ ನುಡಿಗಟ್ಟುಗಳೂ ಜನಪದ ಪುರಾಣಗಳೇ ಆಗಿವೆ. ಅದರಲ್ಲೂ ದಲಿತ ಜಗತ್ತಿನಿಂದ ಬಂದಿರುವ ಶೋಷಣೆಗೆ ಒಳಗಾಗಿ ಮಾಯಾ ಜಗತ್ತು ಸೇರಿದ ಭೂತಗಳ ನುಡಿಗಟ್ಟುಗಳು ಪುರಾಣಗಳೇ ಆಗಿವೆ. ಕೋಡ್ದಬ್ಬು ತನ್ನಿಮಾನಿಗ, ಕಲ್ಕುಡ, ಕಲ್ಲುರ್ಟಿ ಮುಂತಾದ ದೈವಗಳ ಚರಿತ್ರೆಯಲ್ಲಿ ಹೇಳುವ ನುಡಿಗಟ್ಟುಗಳನ್ನು ದಲಿತ ಪುರಾಣಗಳೆಂದು ಕರೆಯಬಹುದು. ಈ ಪುರಾಣ ಕತೆಯ ನಿರೂಪಣೆ ನುಡಿಗಟ್ಟುಗಳಿಂದ ನಡೆಯುತ್ತದೆ. ಮದಿಪು ಮಧ್ಯಸ್ಥರು ಮತ್ತು ಭೂತ ಮಾಧ್ಯಮದ ವ್ಯಕ್ತಿಗಳು ಈ ಕತೆಯ ನಿರೂಪಕರು. ಮೌಖಿಕ ಪರಂಪರೆಯಲ್ಲಿ ಇವರೇ ಸ್ವತಂತ್ರರು. ವ್ಯಕ್ತಿಯಿಂದ ವ್ಯಕ್ತಿಗೆ ಪ್ರದೇಶದಿಂದ ಪ್ರದೇಶಕ್ಕೆ, ಸಂದರ್ಭದಿಂದ ಸಂದರ್ಭಕ್ಕೆ ಈ ಪುರಾಣ ಕತೆಗಳು ಬದಲಾಗುತ್ತಾ ಹೋಗುತ್ತವೆ. ಇದು ನಿರೂಪಕನ ಸ್ವಾತಂತ್ರ್ಯ, ಅನುಭವಕ್ಕೆ ಒಳಗೊಂಡು ಅವರ ಮೂಲಕ ತನ್ನ ಕಾಲದ ಜನಾಂಗದ ಅನುಭವವನ್ನು ಜನಪದ ಜಗತ್ತೂ ವಿಸ್ತರಿಸಿಕೊಳ್ಳುತ್ತದೆ. ಮೂಲ ಆಶಯ ಒಂದೇ ಇದ್ದು ನಿರೂಪಕನ ಮೂಲಕ ಪ್ರಾದೇಶಿಕ ವ್ಯಕ್ತಿಗತ ಆಶಯಗಳು ಸೇರಿಕೊಳ್ಳುತ್ತವೆ.

ಮದಿಪು ನುಡಿಗಟ್ಟುಗಳಲ್ಲಿ ರೂಪಕಗಳು

ರೂಪಕಗಳ ಬಳಕೆಯ ಪ್ರಮುಖ ಆಶಯಗಳೆಂದರೆ, ಭಾಷೆಗೆ ಶಕ್ತಿಯನ್ನು ನೀಡುವುದು. ರಹಸ್ಯವನ್ನು ಕಾಯ್ದುಕೊಳ್ಳುವುದು, ಭಯವನ್ನು ಹುಟ್ಟಿಸುವುದು ಗೊಂದಲವನ್ನು ಉಂಟು ಮಾಡುವುದು. ಸಮಾಧಾನವನ್ನು ನೀಡುವುದು, ತೀರ್ಮಾನಕೊಡುವುದು, ರಕ್ಷಣೆಯ ಮಾತನ್ನು ಅಭಯವಾಗಿ ಕೊಡುವುದು. ಸಾಮಾನ್ಯವಾಗಿ ಆರಾಧನೆಯ ಸಂದರ್ಭದ ನುಡಿಗಟ್ಟುಗಳಲ್ಲಿ ಮಾತ್ರ ರೂಪಕಗಳು ಬಳಕೆಯಾಗುತ್ತವೆ. ಅಲೌಕಿಕದ, ಆಧ್ಯಾತ್ಮಿಕವಾದದ ಆಯಾಮದೊಳಗಡೆ ಬರುವ ನುಡಿಗಟ್ಟುಗಳಲ್ಲಿ ಮಾತ್ರ ರೂಪಕಗಳು ಬಳಕೆಯಾಗುತ್ತವೆ. ಅಲೌಕಿಕದ, ಆಧ್ಯಾತ್ಮಿಕದ ಆಯಾಮದೊಳಗಡೆ ಬರುವ ನುಡಿಗಟ್ಟುಗಳಲ್ಲಿ ರೂಪಕಗಳ್ನು ಕಾಣಬಹುದು, ಭಕ್ತಿ ಪರಂಪರೆಯಲ್ಲಿ ಆಧ್ಯಾತ್ಮದ ಬಗೆಗೆ ಹೇಳಿದ, ಧರ್ಮವನ್ನು ಪ್ರಧಾನ ಅಸ್ತ್ರವನ್ನಾಗಿಟ್ಟುಕೊಂಡು ವಿಡಂಬನೆಯ ಮೂಲಕವೇ ಸಮಾಜವನ್ನು ತಿದ್ದಲು ಪ್ರಯತ್ನಿಸಿದ ವಚನಾಕಾರರಲ್ಲಿ ಕೀರ್ತನಕಾರರಲ್ಲಿ, ಕುಮಾರವ್ಯಾಸನಂತಹ ಭಕ್ತ ಕವಿಗಳಲ್ಲಿ ರೂಪಕಗಳು ಬಳಕೆಯಾಗಿವೆ. ಜೀವನಾವರ್ತದ ನುಡಿಗಟ್ಟುಗಳಲ್ಲಿ ರೂಪಕಗಳ ಬಳಕೆ ಕಡಿಮೆ. ಕೆಲವು ಗಾದೆಗಳು, ಒಗಟುಗಳು ರೂಪಕಗಳಂತೆ ಬಳಕೆಯಾಗುತ್ತವೆ. ಆರಾಧನೆಯ ಸಂದರ್ಭಗಳಲ್ಲಿಯೂ ಕೇವಲ ಮದಿಪು ಮತ್ತು ದೈವ ಹೇಳುವ ನುಡಿಗಳಲ್ಲಿ ಮಾತ್ರ ‘ರೂಪಕ’ಗಳು ಬರುತ್ತವೆ. ಇಂದು ಬೀರ, ಪಾರಿಗಳಲ್ಲಿ ಆರಾಧನೆಯ ಅಂಶಗಳೇ ಪ್ರಧಾನವಾಗಿ ದೈವದ ಚರಿತ್ರೆಗಳೇ, ಪರಾಕ್ರಮಗಳೇ, ಪ್ರಧಾನವಾಗುತ್ತವೆ.

ಅಭಯ ಮತ್ತು ರಕ್ಷಣೆಯನ್ನು ನೀಡುವ ರೂಪಕಗಳು

೧.         ಮುಂಡ ಒರಿತ್‌ದ್‌ ಗಂಧ ಪಾಡುವೆ
(ಹಣೆ ಉಳಿಸಿ ಗಂಧ ಹಾಕಿಸುತ್ತೇನೆ)

೨.         ಪೇರ ನೀರದ ಲೆಕ್ಕ ಮೆರೆಪಾವೆ
(ಹಾಲು ನೀರನಂತೆ ಮೆರೆಸುತ್ತೇನೆ)

೩.         ಪೊಯ್ಯೆದ ಪುದೆನ್ ಮಾಯ ತುಂಬೊಂದು ಪೂತ್ತ ಪುದೆನ್ ಸಂಸಾರೊನು ತುಂಬಾವೆ
(ಹೊಯಿಗೆಯ ಹೊರೆಯನ್ನೂ, ಮಾಯ ಹೊತ್ತ ಹೂವಿನ ಹೊರೆಯನ್ನೂ ಸಂಸಾರಕ್ಕೆ ಹೊರಿಸುತ್ತೇನೆ)

೪.         ಮುಳ್ಳುದಾತ್ ಮುನೆ ಇಜ್ಜಿ ಬಾರ್‌ದಾತ್‌ ಕೋರೆ ಇಜ್ಜಿಂದ್‌ ಪನ್ಪಾವೆ
(ಮುಳ್ಳಿನಷ್ಟು ಮೊನೆ, ಭತ್ತದಷ್ಟು ನ್ಯೂನತೆ, ಇಲ್ಲವೆನಿಸುತ್ತೇನೆ)

೫.         ಗೆಂಡದ ಬರ್ಸೊಗು ಕರ್ಬದ ಕೊಡೆ ಆದ್‌ ಕಾಪಾವೆ
(ಕೆಂಡದ ಮಳೆಗೆ ಕಬ್ಬಿಣದ ಕೊಡೆಯಾಗಿ ಕಾಯುತ್ತೇನೆ)

೬.         ಕಂಚಿದ ಕೋಟೆಗೆ ಕರ್ಬದ ಬೇಲಿಯಾದ್‌ ಕಾಪುವೆ
(ಕಂಚಿನ ಕೋಟೆಗೆ ಕಬ್ಬಿಣದ ಬೇಲಿಯಾಗಿ ಕಾಯುತ್ತೇನೆ)

೭.         ತಾರಿನಲ್ಪ ತಾಂಗ್‌ ಆದ್‌ಕಾಪುವೆ
(ಹೂತು ಹೋದಲ್ಲಿ ಆಧಾರವಾಗಿ ಕಾಪಾಡುತ್ತೇನೆ)

೮.         ಮಾಯದ ಗಾಳಿ ಬೀಜಾವೆ
(ಮಾಯದ ಗಾಳಿಯನ್ನು ಬೀಸುತ್ತೇನೆ)

೯.         ಕಂಟೆಲ್ದ ಕರಿಮಣಿ, ಕೈತ್ತ್‌ ಕಾಜಿಮ, ಮೂಂಕುದ ಮುತ್ತೇಸನ, ಮುಂಡದ ಕುಂಕುಮ, ಕೆಬಿತ್ತ ಓಲೆ  ಒರಿತ್‌ ಕಾಪುವೆ’
(ಕೊರಳ ಕರಿಮಣಿ, ಕೈಯ ಬಳೆ, ಮೂಗಿನ ಮೂಗುತಿ, ಹಣೆಯ ಕುಂಕುಮ, ಕಿವಿಯ ಓಲೆ ಉಳಿಸಿ  ಕಾಯುತ್ತೇನೆ)

೧೦.       ದುಂಬುಡು ಸಂಗೀತ ಪಿರವುಡು ಪಾಸಾಡಿ ಆದ್‌ ಕಾಪುವೆ
(ಮುಂದಿನಿಂದ ಸಂಗೀತ ಹಿಂದಿನಿಂದ ಬೆಂಗಾವಲಾಗಿ ಕಾಯುತ್ತೇನೆ)

೧೧.       ಸೂರ್ಯಚಂದ್ರ ಕಾಲಮುಟ್ಟ ಕೀರ್ತಿ ಒರಿಪಾಲೆ’
(ಸೂರ್ಯ ಚಂದ್ರರ ಕಾಲದವರೆಗೆ ಕೀರ್ತಿ ಉಳಿಸಿ ಕಾಯುತ್ತೇನೆ)

೧೨.       ಅವುಸೊಗು ಪಟ್ಟ, ಜೂವೊಗು ರೆಂಕೆ ಕೊರ್ದು ಯಮನ ಪೂತ್ತ ಮಾಲೆನ್ ತುಂಡು ಮಲ್ತ್ ಕಾಪುವೆ.
(ಆಯುಷ್ಯಕ್ಕೆ ಪಟ್ಟಕಟ್ಟಿ, ಜೀವಕ್ಕೆ ರೆಕ್ಕೆನೀಡಿ ಯಮನ ಹೂವಿನ ಮಾಲೆಯನ್ನು ತುಂಡು ಮಾಡಿ  ರಕ್ಷಿಸುತ್ತೇನೆ)

೧೩.       ಪೆರಡೆದ ಬೆರಿಯೆ ಕಿನ್ನಿದಂಚ ಒಂಜಿ ಕೋಂಡೆಡ್‌ ತುರಿವೆ
(ಹೇಂಟೆಯ ಹಿಂದಿನ ಮರಿಗಳಂತೆ ಒಂದೇ ಹಗ್ಗದಲ್ಲಿ ನೇಯುವೆ)

ಮೇಲಿನ ಎಲ್ಲಾ ರೂಪಕಗಳು ಪ್ರಯೋಗವಾಗಿರುವುದು ದೈವ, ಮಾಧ್ಯಮದ ವ್ಯಕ್ತಿಯ ಮೂಲಕ. ಇಲ್ಲಿ ಮಾನವಾತೀತವಾದ ಶಕ್ತಿಯ ಕೈವಾಡ ಭಾಷೆಯೊಂದಿಗೆ ಕೆಲಸ ಮಾಡುತ್ತದೆ. ‘ಮಾಯ’ ಎಂಬ ನೆಲೆಯಲ್ಲಿಯೇ ಈ ನುಡಿಗಟ್ಟುಗಳನ್ನು ನೋಡಬೇಕಾಗುತ್ತದೆ. ಇವು ಮನಶ್ಯಾಸ್ತ್ರೀಯ ವೈದ್ಯನಂತೆ ಪ್ರೇಕ್ಷಕರ ಮೇಲೆ ಮಾನಸಿಕ ಪರಿಣಾಮವನ್ನು ಬೀರುತ್ತವೆ. ವಿಶೇಷವೆಂದರೆ ಇಲ್ಲಿಯ ಎಲ್ಲಾ ರೂಪಕಗಳು ಭೌತಿಕ ಜಗತ್ತನ್ನು ಒಳಗೊಂಡಿದೆ. ಪ್ರಾಣಾಪಾಯ ಬಾರದಂತೆ ರಕ್ಷಣೆ ನೀಡುತ್ತೇನೆ ಎನ್ನುವಾಗ ‘ಮಾಯದ ಗಂಧ’ದ ರಕ್ಷಣೆ ಇದೆ.

ತುಳು ಬದುಕು, ಕೌಟುಂಬಿಕ ಸಂಬಂಧ, ರಕ್ತ ಸಂಬಂಧದ ಗುಣಗಳನ್ನು ಹೇಳುವ ರೂಪಕ, ಪೇರ ನೀರ್‌ದಲೆಕ್ಕೆ ಕಾಪುವೆ’ ಎನ್ನುವುದು. ಇಲ್ಲಿಯ ರಕ್ಷಣೆ ಕೌಟುಂಬಿಕ ಸಂಬಂಧಗಳನ್ನು ಉಳಿಸುತ್ತೇನೆ ಎಂಬ ಆಶಯ ಕೌಟುಂಬಿಕ ಸಂಬಂಧಗಳಿಂದ, ರಕ್ತ ಸಂಬಂಧಗಳಿಂದ ವಂಚಿತನಾದರೆ ಆತನಿಗೆ ಬದುಕು ಇಲ್ಲ. ಮನಸ್ಸಿಗೆ ಶಾಂತಿಯಿಲ್ಲ. ರಕ್ತ ಸಂಬಂಧ, ಮಾನವೀಯ ಸಂಬಂಧಗಳು ನಮ್ಮ ಸಂಸ್ಕೃತಿಯಲ್ಲಿ ಹುದುಗಿರುವ ಭಾವುಕ ಅಂಶಗಳು, ಹಾಲು ಮತ್ತು ನೀರು ಎರಡೂ ಬದುಕಿನ ಅನಿವಾರ್ಯ ಅಂಶಗಳು. ಮನುಷ್ಯ ಎರಡನ್ನೂ ಸ್ವೀಕರಿಸಬೇಕಾಗುತ್ತದೆ. ಬದುಕಿನ ವಿಶ್ಲೇಷಣೆ ಇಲ್ಲಿದೆ. ತಾಯಿ ಮಕ್ಕಳ ಸಂಬಂಧವನ್ನೂ ಹೇಳುವಾಗ ‘ಪೆರಡೆದ ಬೆರಿಯೆ ಕಿನ್ನಿದಂಚ, ಒಂಜಿ ಕೋಂದೆಡ್‌ತುರಿವೆ, ಇತ್ಯಾದಿ ರೂಪಕಗಳು ಸಂಬಂಧದ ಬೆಸೆಯುವಿಕೆಗೆ ಸೂಚಕವಾಗಿ ನೀಡುವ ರಕ್ಷಣೆಯ ನುಡಿಗಟ್ಟುಗಳು. ಜನಪದರಿಗೆ ಪ್ರಾಣಕ್ಕಿಂತ ಮಾನ ಮುಖ್ಯ, ಅದೇ ಕೀರ್ತಿ. ಸಾಮಾನ್ಯವಾಗಿ ಸ್ತ್ರೀಯರ ಮಾನ ಮರ್ಯಾದೆಗೆ ಸಂಬಂಧಪಟ್ಟಂತೆ ಮುತ್ತೈದೆತನಕ್ಕೆ ಸಂಬಂಧಿಸಿದಂತೆ ಕರಿಮಣಿ, ಬಳೆ, ಮೂಗುತಿ, ಓಲೆ, ಕುಂಕುಮ, ಉಳಿಸಿಕೊಡುತ್ತೇನೆ ಎಂಬ ರೂಪಕದ ಮೂಲಕ ಗಂಡನಿಗೆ ರಕ್ಷಣೆಯನ್ನು ನೀಡುವುದು. ಗಂಡನ ಜೀವಕ್ಕಿಂತಲೂ ಪ್ರಧಾನ ಆಶಯ ಇವುಗಳ ರಕ್ಷಣೆ, ಇದು ತುಳು ಬದುಕಿನಲ್ಲಿ ಗಂಡ – ಹೆಂಡಿರ ಪಾವಿತ್ರ್ಯದ ಸಂಬಂಧವನ್ನು ಸೂಚಿಸುತ್ತದೆ. ಇದು ಸಂಸ್ಕೃತಿಯ ಪ್ರತೀಕ.

ಭಯ ಮತ್ತು ಗೊಂದಲವನ್ನು ಉಂಟುಮಾಡುವ ರೂಪಕಗಳು

೧.         ‘ಅರಿನಿಂಗಲ್ ಪೆಜಿದ್ ಕೊರ್ಪೆ’
(ಹುಡಿಯಕ್ಕಿ ಇಡಿಯಕ್ಕಿ ಶೋಧಿಸಿಕೊಡುತ್ತೇನೆ)

೨.         ‘ಒಂಜಿಕಣ್ಣಿಗ್ ಬೆಣ್ಣೆ ಬೊಕ್ಕೊಂಜಿ ಕಣ್ಣ್‌ಗ್‌ಸುಣ್ಣ ಪಾಡಿಯರಾ?
(ಒಂದು ಕಣ್ಣಿಗೆ ಎಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಾಕಿದಿರಾ?)

೩.         ‘ಚೆಂಡ್‌ನ್‌ಲಾ ಕಂಡೊನುಲಾ ಒಟ್ಟುಗು ದಂಟಿಯರಾ?
(ಚೆಂಡನ್ನೂ ಹುಣಿಯನೂ ಒಟ್ಟಿಗೆ ಒದ್ದಿರಾ?)

೪.         ‘ಬಾರೆದ ಕಂಡ ಮಲ್ಪೊಡಾ, ಈಂದ್‌ದ ಕಂಡ ಮಲ್ಪಾಡಾ?
(ಬಾಳೆಯ ಗದ್ದೆ ಮಾಡಬೇಕೇ ಹೊರತು ಈಚಲ ಗದ್ದೆ ಮಾಡಬೇಡ)

೫.         ‘ಮೂಡಿ ಪೊರ್ತು ಕರಿತೊಡಾಂಡ ಪೊಡಿ ಪೋದು ಕೆರೆಂಚಿ ಆವೊಡಾಂಡ ಕಾರಣಿಕ ತೋಜಾವೆ (ಹೊತ್ತು ಮೂಡಿ ಮುಳುಗುವುದರೊಳಗೆ ಒಣಗಿದ ನೆಲ ಒದ್ದೆಯಾಗುವುದರೊಳಗೆ ಕಾರಣಿಕ ತೋರಿಸುತ್ತೇನೆ)

೬.         ‘ಅಪ್ಪ ತಿನೊಡಾ ಗುರಿ ಗೆನಿಪೋಡಾ?
(ಅಪ್ಪ ತಿನ್ನಬೇಕೇ ಹೊಂಡ ಎಣಿಸಬೇಕೇ?)

೭.         ‘ಅಭಯದ ಗಂಧ ಕೊರೊಡಾ ಮಾಯದ ಗಂಧ ಕೊರೊಡಾ?
(ಅಭಯದ ಗಂಧ ಕೊಡಬೇಕೋ ಮಾಯದ ಗಂಧ ಕೊಡಬೇಕೋ)

ನುಡಿಗಟ್ಟುಗಳ ಒಳಗಡೆ ಜನಪದ ನ್ಯಾಯಾಂಗದ ಮೂಲಕ ಸತ್ಯ ಶೋಧನೆ ನಡೆಯುತ್ತದೆ. ಇಲ್ಲಿ ಭಾಷೆಯ ಶಬ್ದ ಶಕ್ತಿಯೇ ಪ್ರಧಾನ ಶೋಧಕ ಶಕ್ತಿಯಾಗುತ್ತದೆ. ಅನ್ಯಾಯವಾದ ವರ್ಗಕ್ಕೆ ಸಮಾಧಾನ, ಅನ್ಯಾಯ ಮಾಡಿದವನಿಗೆ ಎಚ್ಚರಿಕೆ ಈ ರೂಪಕವರ್ಗ ನ್ಯಾಯದ ಗುಟ್ಟು. ಇಲ್ಲಿಯ ಪ್ರತಿಯೊಂದು ವಾಕ್ಯಗಳಲ್ಲಿ ದ್ವಂದ್ವವಿದೆ. ಒಳಾರ್ಥಗಳಿವೆ, ಸಾವಿನ ಭಯವಿದೆ. ನ್ಯಾಯ ಮತ್ತು ಅನ್ಯಾಯಗಳ ತುಲನೆಯ ಕಾರ್ಯ ಇವುಗಳದು. ಪ್ರಕೃತಿಯನ್ನು ಮೀರುವ ಶಕ್ತಿ ಮನುಷ್ಯರಿಗಿಲ್ಲ. ಆದರೆ ಮಾಯಕ್ಕಿದೆ ಎಂಬ ಧ್ವನಿಯಿದೆ. ಮೇಲಿನ ಎಲ್ಲಾ ರೂಪಕಗಳು ಕ್ರಿಯಾ ರೂಪದವು. ಈ ಕ್ರಿಯೆ ಲೌಕಿಕ ಮತ್ತು ಅಲೌಕಿಕ ನೆಲೆಯಲ್ಲಿ ನಡೆಯುವಂತಾದ್ದು. ಗೊಂದಲಗೊಳಿಸದಿದ್ದರೆ ಮಾನಸಿಕ ಪರಿವರ್ತನೆ ಸಾಧ್ಯವಿಲ್ಲ. ಹಾಗಾಗಿ ಅರ್ಥವಾಗದ ರೀತಿಯಲ್ಲಿ ಭಾಷೆಯನ್ನು ದುಡಿಸಿಕೊಳ್ಳುವುದು ಕಲಾವಿದರ ಚಾತುರ್ಯ. ಇಲ್ಲಿಯ ಅರ್ಥ, ಕಲಾವಿದರನ್ನು ಮೀರಿ ಇದೆ. ಇದು ಮಾಯಕ್ಕೆ ಬಿಟ್ಟದ್ದು. ಪುರಾಣಕ್ಕೆ ಹೇಗೆ ಪ್ರಶ್ನೆ ಕೇಳಬಾರದೋ, ಹಾಗೆಯೇ ಇಲ್ಲಿಯ ಭಾಷೆಗೂ ಪ್ರಶ್ನೆ ಕೇಳುವಂತಿಲ್ಲ. ಯಾಕೆಂದರೆ ಇದು ‘ಜನಪದ ಪುರಾಣ’

ರಹಸ್ಯವನ್ನು ಕಾಯುವ ರೂಪಕಗಳು

೧.         ‘ಯಾನ್ ಮಲ್ಲ ಗುಡ್ಡೆ ಜರಿಪೊಡು ಎಂಕ್‌ತಿಕ್ಕುನು ಕಿಚ್ಚೆಲಿ’
(ನಾನು ದೊಡ್ಡ ಗುಡ್ಡ ಅಗೆಯಬೇಕು. ಆದರೆ ನನಗೆ ಸಿಗುವುದು ಬರಿಯ ಇಲಿ ಮರಿ)

೨.         ‘ಇಲ್ಲದುಲಯಿ ಕಲುವೆ ಉಲ್ಲೆ’
(ಮನೆಯೊಳಗೆ ಕಳ್ಳನಿದ್ದಾನೆ)

೩.         ‘ಪರಬಿತ್ತ್‌ಗ್‌ ಪೊಸಬಿತ್ತ್‌ ಪಗತ್‌ ಪಾಡೊಡು ಮಾಯದ ಗಾಳಿ ಬೀಜಾವೆ’
(ಹಳೆ ಬೀಜದ ಬದಲು ಹೊಸಬೀಜ ಹಾಕಬೇಕು. ಮಾಯದ ಗಾಳಿ ಬೀಸುತ್ತೇನೆ)

೪.         ‘ಬೇಲಿಯೇ ಕೈ ತಿಂದೊಂದುಂಡು’
(ಬೇಲಿಯೇ ಹೊಲ ಮೇಯುತ್ತಿದೆ)

೫.         ‘ಜಾತಿಗ್‌ ನೀತಿದ ಕೈತಾಂಗ್‌ ಪಾಡಾವೆ’
(ಜಾತಿಗೆ ನೀತಿಯ ಆಧಾರ ಕೊಡುತ್ತೇನೆ)

೬.         ‘ಪುಚ್ಚೆದ ಮಂಡೆಡ್‌ ತುಡರ್ ದೀದ್ ಕಾಪುವೆ’
(ಬೆಕ್ಕಿನ ತಲೆಯಲ್ಲಿ ದೀಪ ಇಟ್ಟು ಕಾಯುತ್ತೇನೆ)

೭.         ‘ಬಾರ್ ಬಲ್ಲಾಳಗ್ ದೂರು ಪುಂಡದಗ್‌’
(ಭತ್ತ ಬಲ್ಲಾಳರಿಗೆ ದೂರು ಪುಂಡಚ್ಚನಿಗೆ)

ರಹಸ್ಯ ಎಂದಾಗ ಒಂದು ಪರಂಪರೆಯ ಪ್ರಶ್ನೆ ಬರುತ್ತದೆ. ಆರಾಧನಾ ಪರಂಪರೆಯಾದುದರಿಂದ ರಹಸ್ಯವನ್ನು, ಗುಟ್ಟನ್ನು ಕಾಯುವ ಕ್ರಿಯೆ. ಇಲ್ಲಿ ಮನುಷ್ಯನ ರಕ್ಷಣೆ, ಬದುಕಿನ ರಹಸ್ಯ, ಒಂದು ಜನಾಂಗ, ಸಂಸ್ಕೃತಿಯ ರಹಸ್ಯ ನಿರೂಪಿತವಾಗುತ್ತದೆ. ಈ ರಹಸ್ಯ ಬಯಲಾದಾಗ ಪರಂಪರೆ ನಾಶವಾಗುತ್ತದೆ. ಅನೈತಿಕತೆಯ ಸಂದರ್ಭಗಳು, ಎದುರಾದಾಗ, ಜಾತಿಯ ಪ್ರಶ್ನೆ ಬಂದಾಗ, ಅನಾವಶ್ಯಕವಾಗಿ ಶಿಕ್ಷೆ ಕೊಡಬೇಕಾದಾಗ, ಅಣ್ಣನಿಂದಲೇ ತಂಗಿಯ ಶೀಲಪಹರಣವಾದಾಗ ರಹಸ್ಯದ ನುಡಿಗಟ್ಟುಗಳು ಈ ರೂಪಕಗಳನ್ನು ಒಳಗೊಂಡಿರುತ್ತವೆ. ಒಂದು ಸಾರ್ವಜನಿಕ ಪ್ರದರ್ಶನದ ವ್ಯವಸ್ಥೆಯಲ್ಲಿ ಹೇಗೆ ನಿರ್ವಹಿಸಿಕೊಂಡು ಬರಬೇಕು ಎನ್ನುವುದಕ್ಕೆ ಈ ರೂಪಕಗಳು ನಮಗೆ ನಿರ್ದೇಶನವನ್ನು ನೀಡುತ್ತವೆ. ವ್ಯರ್ಥ ಪ್ರಶ್ನೆಗಳಿಗೆ, ಚರ್ಚೆಗಳಿಗೆ ರೂಪಕಗಳು ಅವಕಾಶವನ್ನು ಕೊಡುವುದಿಲ್ಲ. ಮುದುಕನೊಬ್ಬ ಮಕ್ಕಳಾಗಲಿಲ್ಲ ಎಂದು ದೂರಿದಾಗ, ಹರಕೆ ಹೇಳಿಕೊಂಡಾಗ ಅವನನ್ನು ವ್ಯಂಗ್ಯವಾಗಿ ಸಮಾಧಾನ ಪಡಿಸುವ ಕ್ರಮವೂ ಇಲ್ಲಿದೆ. ‘ಬೇರ್ ಪೊಯ್ಯೆಗ್ ಪೋತುಂಡು ಮರ ಕಡಲ್‌ಗ್‌ ದೆಂಗ್‌ದ್‌ಂಡ್‌. ಈ ಬೇನೊಡಾ ಆತ್ತ್‌ಯಾನ ಬೆನೊಡಾ?(ಬೇರು ಹೊಯಿಗೆಗೆ ಹೋಗಿದೆ. ಮರ ಕಡಲಿಗೆ ವಾಲಿದೆ. ನೀನು ದುಡಿಯಬೇಕೋ ಅಲ್ಲ ನಾನು ದುಡಿಯಬೇಕೋ)

ಮದಿಪು ನುಡಿಗಟ್ಟುಗಳಲ್ಲಿ ಬರುವ ಸಾಹಿತ್ಯಿಕ, ಸಾಂಸ್ಕೃತಿಕ ಅಂಶಗಳು ಯಾವ ಶಿಷ್ಟ ಸಾಹಿತ್ಯ ಪ್ರಕಾರಗಳಿಗಿಂತಲೂ ಕಡಿಮೆಯಿಲ್ಲ. ಇವು ಸಂಸ್ಕೃತಿಯ ಬೆಳವಣಿಗೆಗೆ ಪೂರಕ. ಭೂತಾರಾಧನೆಯಂತಹ ಜನಪದ ರಂಗಭೂಮಿಯನ್ನು ಇವು ನಿರ್ದೇಶಿಸುತ್ತವೆ. ಪರಿವರ್ತನೆಯ ಮಾಧ್ಯಮವಾಗಿ, ವರ್ಣ, ವರ್ಗ ವ್ಯವಸ್ಥೆಯ ನಿರ್ಮೂಲನಕ್ಕಾಗಿ, ಇವುಗಳನ್ನು ಬಳಸಿಕೊಳ್ಳಬೇಕು. ಆಧುನಿಕ ಅಗತ್ಯತೆಗಳನ್ನು ಮನಗಂಡು ಆರಾಧನಾ ವಿಧಿಗಳ ಸಂದರ್ಭಗಳಲ್ಲಿ ಇವುಗಳನ್ನು ಬಳಸಬೇಕು. ಪರಂಪರೆಯಿಂದ ಬಂದ ಭಾಷಾ ಸ್ವರೂಪವನ್ನು ಉಳಿಸಿಕೊಂಡು ಹೋಗಬೇಕು. ಪರಂಪರೆಯನ್ನು ಮುರಿಯಬಾರದು, ವಿಸ್ತರಿಸಬೇಕು. ಪ್ರದರ್ಶನದ ಮೂಲಕ ಇತಿಹಾಸದ ಚಲನಶೀಲತೆಯನ್ನು ರೂಪಿಸಬೇಕು. ಭೌತ ಮಾಧ್ಯಮದ ವ್ಯಕ್ತಿಗಳು ಮದಿಪು ನುಡಿಗಟ್ಟುಗಳನ್ನು ಪ್ರಯೋಗಿಸುವ ಮಧ್ಯಸ್ಥರು ಸಂಪೂರ್ಣ ತಿಳುವಳಿಕೆಯಿಂದ ನಮ್ಮ ಸಾಂಸ್ಕೃತಿಕ ಅಂಶಗಳಿಗೆ ಕುಂದು ಬಾರದಂತೆ, ಭಾಷಾ ಪ್ರಕಾರದ ಅಂದಕೆಡದಂತೆ ಇವುಗಳನ್ನು ಪ್ರಯೋಗಿಸಬೇಕು. ಆಗ ಉತ್ತಮ ಸಾಹಿತ್ಯಿಕ, ಸಾಂಸ್ಕೃತಿಕ ಅಂಶಗಳುಳ್ಳ ಮದಿಪು ನುಡಿಗಟ್ಟುಗಳಿಂದ ಸಾಮಾಜಿಕ ನಿರ್ದೇಶನವೂ ಸಾಧ್ಯವಿದೆ.