ನಂಬಿದ ದೈವವನ್ನು ಜೋಗಕ್ಕೆ ಬರಿಸುವ ದರ್ಶನವನ್ನು ‘ಮ್ಯಾನ್ಯೆಚ್ಚಿಲ್’ ಬರಿಸುವುದು ಎನ್ನುತ್ತಾರೆ. ಮಾನಿ + ಎಚ್ಚಿಡ್ = ಮಾನ್ಯೆಚ್ಚಿಡ್ = ಮಾನ್ಯೆಚ್ಚಿಲ್ (ಎಚ್ಚಿ = ದರ್ಶನ). ದರ್ಶನದಲ್ಲಿ ಬಂದ ದೈವ ಮುಖ್ಯಸ್ಥರನ್ನು ಹೆಸರೆತ್ತಿ ಕರೆಯುವುದಂಟು. ಇದು ಒಂದು ರೀತಿಯ ಗೌರವ. ಸೇರಿರುವ ಹತ್ತು ಸಮಸ್ತರ ಪರಿಚಯ ಮಾಡಿಕೊಳ್ಳುವ ಉದ್ದೇಶ ಇಲ್ಲಿ ಮುಖ್ಯವಾಗಿದೆ. ಈ ಮೂಲಕ ಒಂದು ಸಂದರ್ಭವನ್ನು ಒಂದು ಸ್ಥಳಾವರಣವನ್ನು ನಿರ್ಮಿಸಿಕೊಳ್ಳುವುದೂ ಮುಖ್ಯವಾಗಿದೆ.

ದೈವ ಕರೆಯುವುದು ಯಾರನ್ನು?

ನಂಬಿದ ಸಂಸಾರವನ್ನು, ಮೂಲ್ಯನನ್ನು, ಮಧ್ಯಸ್ಥನನ್ನು, ಪರವೂರವತನ್ನು, ಉದಾ: ಪೂಜಾರಿ, ಶೆಟ್ಟಿ ವರ್ಗದವರನ್ನು. ಹೀಗೆ ಎಲ್ಲರನನ್ನೂ ವಿಚಾರಿಸುತ್ತ ತನ್ನನ್ನು ಏತಕ್ಕಾಗಿ ಕರೆದಿರಿ ಎಂದು ಕೇಳುತ್ತದೆ.

ಕಾಲಾಧಿಯ ಕರ್ಪವೇ? ಹಬ್ಬದ ಪಾಡ್ಯವೇ? ವಿಷವೇ? ಅಮೃತವೇ? ಎಂದು ಕೇಳುತ್ತದೆ.

ಆಗ ಮುಖ್ಯಸ್ಥ:

ನೀನು ಮಾಯದೃಷ್ಟಿ, ನಾನು ಚರ್ಮದೃಷ್ಟಿ. ಒಂದೂವರೆ ಕುಟುಂಬವನ್ನು ಉದ್ಧರಿಸುವ ದೈವ ನೀನು ಎನ್ನುತ್ತಾನೆ.

ಆಗ ದೈವ:

ಕಳಸೆ ಹಿಡಿದು ಅಳೆಯಲಾ? ಸೇರು ಹಿಡಿದು ಅಳೆಯಲಾ? ಎಂದು ಪ್ರಶ್ನಿಸುತ್ತದೆ.

ಕುಟುಂಬದ, ಬೆಳೆ ಸಲೆ, ಆಸ್ತಿ ಸಂಪತ್ತುಗಳ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಗಳಲ್ಲಿ ಭೂತ ದೈವಗಳ ಪಾತ್ರವಿದೆಯೆಂಬುದನ್ನು ಬಲವಾಗಿ ನಂಬಿದವರು ಈ ಜನರು.

‘ಕಳ್ಳರ ಕಾಟ ಹೆಚ್ಚಾಯಿತು, ಭೂತದ ಕಾರಣಿಕ ಕಡಿಮೆಯಾಯಿತು, ಹಿತ್ತಿಲ ಮಾವು ಹಲಸು ಗದ್ದೆಯ ಬೆಳೆ ಪೈರು ಮನೆಯ ಅಂಗಳಕ್ಕೆ ಬರಲಿಲ್ಲ. ಮನೆ ಮಂದಿ ಕೈಬಾಯಿಗೆ ಸಿಗಲಿಲ್ಲ’ ಎಂಬುದಾಗಿ ದೈವಕ್ಕೆ ದೂರು ಕೊಡುವ ಆಶಯ ಪಿಲಿಚಂಡಿ ದೈವದ ಪಾಡ್ದನದಲ್ಲಿದೆ (ಲೋಕಯ್ಯ ಪಂಬದ, ೧೯೮೬). ನಂಬಿದ ದೈವ ತಮ್ಮನ್ನು ರಕ್ಷಿಸದೆ ಹೋದಾಗ ಅದರ ಕಾರಣಿಕದ ಕುರಿತು ಅದನ್ನೇ ಪ್ರಶ್ನಿಸುವ ಪರಿಯೊಂದು ಇಲ್ಲಿ ವ್ಯಕ್ತವಾಗುತ್ತದೆ. ಕೆಲವೊಮ್ಮೆ ‘‘ನಿಮ್ಮ ಭಕ್ತಿಯೂ ಕಡಿಮೆಯಾಯಿತು. ನನ್ನ ಶಕ್ತಿಯೂ ಕಡಿಮೆಯಾಯಿತು’’ ಎಂದು ದೈವವೂ ಉತ್ತರಿಸುತ್ತದೆ. ಇಲ್ಲಿ ಭೂತ ಕುಣಿತ ಕಾಲವಿದನ ಜಾಣ್ಮೆಯೂ ವ್ಯಕ್ತವಾಗುತ್ತದೆ.

ಭೂತವನ್ನು ರಕ್ಷಣೆಯ ಭಟನಿಗೂ, ಕಾವಲು ನಾಯಿಗೂ ಹೋಲಿಸುವುದುಂಟು. ತುಳುವಿನ ಜನಪ್ರಿಯ ಶಿಶುಪ್ರಾಸವೊಂದರ ಎರಡು ಪಾಠಾಂತರಗಳು ಹೀಗೆ ಕೊನೆಗೊಳ್ಳುತ್ತವೆ : ನಾಯಿಯೇ ನಾಯಿಯೇ ನೀನೇಕೆ ಕಳ್ಳರನ್ನು ಹಿಡಿಯಲಿಲ್ಲ? (ನೋಡಿ : ವಿವೇಕ ರೈ, ೧೯೮೫, ೩೦) ಭೂತವೇ ಭೂತವೇ ನೀನೇಕೆ ಕಳ್ಳರನ್ನು ಹಿಡಿಯಲಿಲ್ಲ? (ನೋಡಿ: ಅದೇ ಪುಟ ೩೦೫). ಆದರೆ ಭೂತ ‘ನನಗೆ ವರ್ಷಕ್ಕೊಂದು ಕೋಲ ಕೊಡದಿರುವಾಗ ನಾನೇಕೆ ಕಳ್ಳರನ್ನು ಹಿಡಿಯಬೇಕು’ ಎಂದು ತನ್ನ ಜವಾಬ್ದಾರಿಯನ್ನು ಹಸ್ತಾಂತರಿಸುವುದನ್ನೂ ಗಮನಿಸಬಹುದು.

ಒಪ್ಪಿಸಿದ ಹರಕೆಯಿಂದ ತೃಪ್ತಿಗೊಂಡ ದೈವ ‘‘ಸೂರ್ಯ ಚಂದ್ರರು ಇರುವವರೆಗೆ ಈ ರಾಜ್ಯವನ್ನು ಹೂವಿನ ಹಿತ್ತಿಲು ಕಾಯುವ ಹಾಗೆ ಕಾಯುವ ಅಧಿಕಾರ ನನ್ನದು’’ ಎಂದು ಅಭಯ ಕೊಡುತ್ತದೆ. ತುಳುವರ ನಂಬಿಕೆಯಂತೆ ‘‘ಉದಯಕ್ಕೆ ಸೂರ್ಯ, ಅಸ್ತಮಕ್ಕೆ ಚಂದ್ರ, ಕಲ್ಲಿನಲ್ಲಿ ನಾಗ, ಹುತ್ತದಲ್ಲಿ ಸರ್ಪ, ಬನದಲ್ಲಿ ಬೆರ್ಮೆರ್’’ ಅವರನ್ನು ಕಾಪಾಡುವ ಶಕ್ತಿಗಳು.

ಒಂದೂರಿನ ಜಾತ್ರೆಯಲ್ಲಿ ನಡೆಯುವ ದೈವದ ನೇಮವೊಂದನ್ನು ಇನ್ನೊಂದೂರಿನವರು ನೋಡಿ ಅದಕ್ಕಿಂತಲೂ ವೈಭವದಿಂದ ತಮ್ಮೂರಲ್ಲಿ ನಡೆಸಬೇಕೆಂದು ಪೈಪೋಟಿ ನಡೆಸುವ ಸಂದರ್ಭಗಳೂ ಇವೆ.

‘‘ಉಂದೆಂಚಿನ ಕೋಲ ಎಂಕ್ಲೆ ಊರುಡಾಂಡ ಸಾರಪಾಲೆದ ಅಣಿಕಟ್ಟ್‌ದ್ ಕೋಲ ಮಲ್ಪಾದುವ’’

(ಇದೆಂತಹ ಕೋಲ ನಮ್ಮ ಊರಲ್ಲಾದರೆ ಸಾವಿರ ಹಾಳೆ ಅಣಿ ರಚಿಸಿ ಕೋಲ ನಡೆಸುತ್ತಿದ್ದೇವು) ಎಂಬುದಾಗಿ ಮಾತಾಡಿಕೊಳ್ಳುವುದುಂಟು (ಮುದ್ದು ಮೂಡುಬೆಳ್ಳೆ, ೨೦೦೪, ೭೦).

ಆರಾಧಿಸುವುದಕ್ಕೆ ಇವರಿಗೆ ದೈವಗಳು ಬೇಕು. ಅಂತಹ ದೈವಗಳನ್ನು ತರಲು ಹೋಗುವ ಪದ್ಧತಿಯೂ ಇತ್ತು. ಬೇಕಾದ ದೈವವನ್ನು ಒದಗಿಸಿಕೊಡುವ ವ್ಯವಸ್ಥೆಯೂ ಇತ್ತು. ಪಿಲಿಚಂಡಿ ಪಾಡ್ದನದಲ್ಲಿ ಅಂತಹ ಉಲ್ಲೇಖವಿದೆ. ‘ಯಾವ ದೈವ ಬೇಕು?’ ಗರಿಯ ವೀರನೋ? ಆಕಾಶ ಮರುಳನೋ? ಕಂದರ ಕಾವೆಯೋ? ಕಳ್ಳರನ್ನು ಹಿಡುಯುವ ಬಾಲೊಲಿ ಭಜನೆಯ ಹುಲಿಭೂತವೋ? ಎಂದು ಬಂದವರನ್ನು ಭೂತಗಳ ದಾಸ್ತಾನುಕಟ್ಟೆಯವರು ಕೇಳುತ್ತಾರೆ. ಹಾಗೆಂದು ಹೋದವರ ಬೆನ್ನು ಹಿಡಿದು ಎಷ್ಟೋ ದೈವಗಳು ಬಂದದ್ದಿದೆ. ಭಟ್ಟರ ಜನಿವಾರದಲ್ಲಿ ಬಂದ ಭೂತಗಳಿವೆ. ಕೆಲವೊಮ್ಮೆ ದೈವಗಳನ್ನು ನಂಬಿದರೂ ಕಷ್ಟವೇ. ಅವುಗಳನ್ನು ಆಳುವುದೂ ಸುಲಭವಲ್ಲ. ಹಾಗಾಗಿಯೇ ಇರಬೇಕು ‘‘ನನಗೊಂದು ಭೂತವಿದೆ, ಲೆಕ್ಕೆಸಿರಿ. ನಾನು ಮಾಡಿದ ಬದುಕೆಲ್ಲ ಅದಕ್ಕೇ ಸರಿ’’ ಎನ್ನುವ ಗಾದೆ ಹುಟ್ಟಿರುವುದು.

ಸ್ಥಳೀಯ ಅರಸು ಮನೆತನಗಳ ಆಡಳಿತ ಕಾಲದಲ್ಲಿ (೧೪ನೆಯ ಶತಮಾನದ ಬಳಿಕ) ಭೂತಾರಾಧನೆಗೆ ರಾಜಕೀಯ ಬೆಂಬಲ ದೊರೆಯಿತೆನ್ನಬಹುದು. ಮುಖ್ಯವಾಗಿ ಭೈರವರಸರು, ಬಲ್ಲಾಳರು, ಅಜಿಲರು, ಬಂಗರು, ಚೌಟರು, ಸಾವಂತರು ಮೊದಲಾದವರ ಕಾಲದಲ್ಲಿ ಬಹುಶಃ ಧಾರ್ಮಿಕ ಆರಾಧನಾ ಸ್ವರೂಪವೊಂದು ಬಣ್ಣ – ವೇಷ – ಕುಣಿತ ರೂಪದ ಕಲೆಯೊಡನೆ ಬೆರೆತು ಸಾಂಸ್ಕೃತಿಕ ಸ್ವರೂಪ ಪಡೆದು ಮುಖ್ಯವಾಗಿ ರಾಜಕೀಯ ಆಡಳಿತದ ಹಿನ್ನೆಲೆಯಲ್ಲಿ ಗಟ್ಟಿಗೊಂಡಿರಬೇಕು. ಒಡೆಯ ತನ್ನ ಅಡಿಯಾಳುಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಭೂತಾರಾಧನೆಯನ್ನು ಒಂದು ತಂತ್ರವನ್ನಾಗಿ ಬಳಸಿಕೊಂಡ ಸಾಧ್ಯತೆಯಿದೆ.

ದುಷ್ಟ ಜಂತು ಹಿಂಸ್ರ ಪ್ರಾಣಿಗಳಿಂದ ರಕ್ಷಣೆ ಹೊಂದುವುದು, ಕಳ್ಳರನ್ನು ಹಿಡಿಯುವುದು, ತಪ್ಪು ಮಾಡಿದವರನ್ನು ದಂಡಿಸುವುದು, ಬದುಕಿನ ಸಮಸ್ಯೆಗಳನ್ನು ಪರಿಹಾರ ತೀರ್ಮಾನ ಪಡೆದುಕೊಳ್ಳುವುದು, ಊರಿನ ಜನರನ್ನು ಒಂದುಗೂಡಿಸಿ ಸಾಮೂಹಿಕವಾಗಿ ತೊಡಗಿಸಿಕೊಳ್ಳುವುದು ಆ ಮೂಲಕ ವಿನೋದ, ಮನೋರಂಜನೆ ಪಟ್ಟುಕೊಳ್ಳುವುದು ಭೂತಾರಾಧನೆಯ ಕಾರ್ಯದಲ್ಲಿ ಬಹುಮುಖ್ಯವಾದವುಗಳು. ಪ್ರೇತಬಾಧೆ ಬಿಡಿಸಿ ತೀರ್ಥಪ್ರಸಾದ ನೀಡುವ ವೈದ್ಯ ಚಿಕಿತ್ಸೆ, ಕೊಡಿ ಕಟ್ಟುವುದರ ಮೂಲಕ ಕಳ್ಳಕಾಕರನ್ನು ತಡೆಗಟ್ಟಿದರೆ ಪ್ರಮಾಣ ಮಾಡಿಸುವುದರ ಮೂಲಕ ಕಳ್ಳತನವನ್ನು ಪತ್ತೆಹಚ್ಚಲಾಗುತ್ತದೆ. ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಹರಕೆ, ಕಾಣಿಕೆಗಳನ್ನೂ ಅರ್ಪಿಸಲಾಗುತ್ತದೆ. ಹಾಗಾಗಿ ಭೂತಾರಾಧನೆ ಒಂದು ಮಾನಸಿಕ ಚಿಕಿತ್ಸೆಯಾಗಿಯೂ ಜನಪದರ ಬದುಕಿನಲ್ಲಿ ಮಹತ್ವ ಪಡೆದಿದೆ.

ಗುಂಡಾಲು ಮಹಾಬಲ ಶೆಟ್ಟಿ (೧೯೭೭ : ೨೩೧ -೨೩೩) ‘ಮದು ನುಡಿಕಟ್ಟು’ಗಳು ಲೇಖನದಲ್ಲಿ ಕೋಲ ಕಟ್ಟುವ ಪಾತ್ರಿಯ ಮೇಲೆ ಭೂತದ ಆವೇಶ ಬರುವಂತೆ ಮದು ಹೇಳುವುದನ್ನು (ಕೃಪೆ : ಗುಂಡ್ಲಾಡಿ ಶೀನ ಶೆಟ್ಟಿ) ಸಂಗ್ರಹಿಸಿ ಕೊಟ್ಟಿದ್ದಾರೆ. ಅವರ ಪ್ರಕಾರ ಮದು (ಮದಿಪು) ಎನ್ನುವುದು ದೈವಗಳಿಗೆ ಪ್ರಾರ್ಥನೆ ಮಾಡವ ರೀತಿ. ಇದು ನಮ್ಮ ಹಿರಿಯರು ಮಾಡಿದ ನಿರ್ಣಯ. ಊರಿನ ಗುತ್ತು ಬರ್ಕೆಯವರು ಸೇರಿ ‘ದೈವಚರ’ ಆಗದ ಹಾಗೆ ನೂಲು ಹಾಕಿದ ಬ್ರಾಹ್ಮಣರೂ ಅಗತ್ಯ ಆಗಿರುವುದರಿಂದ ಅವರನ್ನು ಇಟ್ಟುಕೊಂಡು ಕೆಲಸ ಮಾಡುವ ರೀತಿ. ಆ ಪ್ರಕಾರ ಊರು ಕೊಡಿ ಸಾನದ ಬಾಗಿಲು ಒಳ್ಳೆಯ ದಿವಸದಲ್ಲಿ ತೆರೆದು ಹತ್ತು ಸಮಸ್ತರು ಇದ್ದು ದೈವವನ್ನು ಪಾತ್ರಿಯ ಮೈಮೇಲೆ ಬರಿಸುವ ಕ್ರಮ.

‘‘ಇನಿ ಈ ದಿನೊಟ್ಟು ಎಂಕುಲು ಕೂಡ್‌ದ್‌ ಧೂಮಾವತಿಡ ಪ್ರಾರ್ಥನೆ ದಾನಿ ಮಲ್ಪುನು ಕೇಂಡ – ಒಂಜಿ  ಗ್ರಾಮೊನು ಕೂಡು ಪಾಡಾವೊಂದು ಗ್ರಾಮಸ್ಥೆರ್‌ಏಕತ್ರ ಆಯೆರ್, ಇನಿಕ್ ಮಲ್ಪಾದ್‌ಂಡ್‌ದಿನ,  ಮಲ್ದ್‌ಂಡ್‌ಶುದ್ಧ, ಜಪ್ಪಾದ್‌ಂಡ್ ಬಾಕಿಲ್, ಪಾರಾದ್‌ಂಡ್ ಪಚ್ಚಂಬಿ, ಪೊತ್ತಾದ್‌ಂಡ್ ನಂದಲ,  ಪಾಡಾದ್‌ಂಡ್‌ಗಜಕಂಬ, ಏರಾದ್‌ಂಡ್ ಚಪ್ಪರ, ಕುತ್ತಾದ್‌ಂಡ್, ಮತ್ತರ್ಮೆ (ಮಣೆ ಮಂಚವು),  ಏರ್ಪಾದ್ಂಡ್ ಮುಖಮೂರ್ತಿ, ಒಯ್ಪಾದ್‌ಂಡ್ ಕೊಡಿ, ಬಳಸ್‌ದ್‌ಂಡ್ ಪಂಚ ಪನಿಯಾರ,  ಕೊಡದಿಂಡ್‌ ಬೊಂಡ, ದೀತ್‌ಂಡ್‌ ಪುಷ್ಪ, ಬರೆಪಾದ್‌ಂಡ್‌ಮಂಡಲ, ಕಟ್ಟಾದ್‌ಂಡ್‌ ಬಳೊಲಿ,  ಒತ್ತಾದ್‌ಂಡ್‌ ಅನ್ನ ನೇದ್ಯ – ದೀಪಾದಿನ ಶುದ್ಧದ ಹೋಮೊನು ಸಾಮಿಗ್‌ಅರ್ಪಿತ ಮಲ್ತೊಂದು,  ಮದಿಪುಂಚಿತ್ತಿನ ಮದ್ಯಸ್ಥೆರೆಡ್ದ್‌ ಆವಡ್, ಉಂತಿಂಚಿತ್ತಿನ ಪತಿಮಾನ್ಯೆಚ್ಚಿಡ್ ಆವಡ್, ಹಲವಾರು ತರತ  ದೋಷ ಇತ್ತ್ಂಡಲಾ ಅಥವಾ ಇತ್ತೆ ವಿಸ ಗಳಿಗೆ ಇತ್ತ್ಂಡಲಾ ತೆರಪುಲ್ಲ ಸತ್ಯ ತೆರಕಯಿ ಮಲ್ತೊಂದು,  ಅಪ್ಪೆ ಪೆದ್ದಿನ ಮಗ ಎಚ್ಚಿಡ್ ಮುಕ್ಕಾಲ್ ಮೂಜಿ ಗಳಿಗೆ ಪದಿನಾಜಿ ಕಲೆ ಪರಿಪೂರ್ಣ ಆವೊಂದು  ಕೊರ್ಪಾಯಿನ ಆಯುದೊನು ತೊಲಂಕಾವೊಂದು ರಾಜಸ್ಥಾನೊಗು ಬತ್ತ್‌ದ್, ಕಂತ್‌ ಬೇಸ್ ಎಡ್ಡೆ ಪಡಿಕೆ,  ವಿವರ ಮಲ್ಪಾದ್‌ ಇಂದ್‌ಪನ್ಪಿನ ಎಂಕಲ್ನ ಮದಿಪುದ ಪ್ರಾರ್ಥನೆ.

(ಇಂದು ಈ ದಿನದಲ್ಲಿ ನಾವು ಸೇರಿ ಧೂಮಾವತಿಯಲ್ಲಿ ಪ್ರಾರ್ಥನೆ ಮಾಡುವುದು ಕೇಳಿದರೆ – ಒಂದು  ಗ್ರಾಮವನ್ನು ಕೂಡಿ ಹಾಕಿ ಗ್ರಾಮಸ್ಥರು ಒಟ್ಟಿಗಾದರು. ಇಂದು ದಿನ ಇಟ್ಟಿದೆ. ಮಾಡಿಸಿದೆ ಶುದ್ಧ. ತೆರೆಸಿದೆ  ಬಾಗಿಲು, ಹಾರಿಸಿದೆ ಪಚ್ಚಂಬಿ, ಉರಿಸಿದೆ ನಂದಾದೀಪ, ಹಾಕಿಸಿದೆ ಗಜಕಂಬ. ಏರಿಸಿದೆ ಚಪ್ಪರ,  ಜೋಡಿಸಿದೆ ಮಣೆಮಂಚ, ಪೇರಿಸಿದೆ ಮುಖಮೂರ್ತಿ, ಬಿಡಿಸಿದೆ ಮಡಿವಸ್ತ್ರ, ಬಡಿಸಿದೆ ಪಂಚ ಪನಿವಾರ,  ಕೆತ್ತಿಸಿಟ್ಟಿದೆ ಸೀಯಾಳ, ಸಿಂಗರಿಸಿದೆ ಹೂ, ಬರೆಸಿದೆ ಮಂಡಲ, ಕಟ್ಟಿಸಿದೆ ಬಾಲೊಲಿ, ಅರ್ಪಿಸಿದೆ ಅನ್ನ  ನೈವೇದ್ಯ – ಮಾಡಿಸಿದೆ ಶುದ್ಧ ಹೋಮವನ್ನು ಸ್ವಾಮಿಗೆ ಅರ್ಪಿಸಿದೆ ಅನ್ನ ನೈವೇದ್ಯ – ಮಾಡಿಸಿದೆ ಶುದ್ಧ  ಹೋಮವನ್ನು ಸ್ವಾಮಿಗೆ ಅರ್ಪಿಸುತ, ಪ್ರಾರ್ಥನೆ ಸಲ್ಲಿಸುತ್ತಿರುವ ಮಧ್ಯಸ್ಥರಲ್ಲಾಗಲೀ, ನಿಂತಿರುವ  ಪಾತ್ರಿಯಲ್ಲಾಗಲೀ ಹಲವು ತರದ ದೋಷವಿದ್ದರೂ ಅಥವಾ ಈಗ ವಿಷ ಗಳಿಗೆಯಿದ್ದರೂ ಮರೆಯಲ್ಲಿರುವ  ಸತ್ಯ ಮೈದೋರಿ ತಾಯಿ ಹೆತ್ತ ಮಗನ ಮೈಮೇಲೆ ಮುಕ್ಕಾಲು ಮೂರು ಗಳಿಗೆ ಹದಿನಾರು ಕಲೆ ಪರಿಪೂರ್ಣ  ಆಗಿಸುತ್ತ ಕೊಡಿಸಿರುವ ಆಯುಧವನ್ನು ಝಳಪಿಸುತ್ತ (ತೊಲಂಕಾವೊಂದು) ರಾಜಸ್ಥಾನಕ್ಕೆ ಬಂದು ಒಳಿತು  ಕೆಡುಕುಗಳನ್ನು ವಿವರ ಮಾಡಿಕೊಡ ಬೇಕೆಂದು ನಮ್ಮ ಪ್ರಾರ್ಥನೆ.

ವಾಮನ ನಂದಾವರ (೧೯೮೫ :೧೯೮೭ : ೨೭ -೪೧) ಭೂತಾರಾಧನೆಯಲ್ಲಿ ಸಾಹಿತ್ಯಕ ಅಂಶಗಳು ಎನ್ನುವ ಲೇಖನದಲ್ಲಿ ಆರಾಧನೆಯ ಸಂದರ್ಭಗಳಲ್ಲಿ ಬಳಕೆಯಾಗುವ ಬೇರೆ ಬೇರೆ ದೈವಗಳ ಪಾಡ್ದನಗಳನ್ನು ಉದಾಹರಿಸಿ ಅಲ್ಲೆಲ್ಲ ಪ್ರಕಟವಾಗುವ ಸಾಹಿತ್ಯಾಂಶಗಳನ್ನು ಪರಿಚಯಿಸಲು ಪ್ರಯತ್ನಿಸಿದ್ದಾರೆ. ಈ ಸಾಹಿತ್ಯಾಂಶಗಳಲ್ಲಿ ವ್ಯಕ್ತವಾಗುವ ತುಳುನಾಡಿನ ಚಾರಿತ್ರಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಿತ್ರಣಗಳನ್ನು ವಿಶ್ಲೇಷಿಸಿ ಭಾಷಾವೈಶಿಷ್ಟ್ಯವನ್ನು ಬಿಂಬಿಸುವ ಸಾಂಕೇತಿಕತೆಗಳನ್ನು ಎತ್ತಿ ತೋರಿಸಿದ್ದಾರೆ.

ಅವರ ಜನಪದ ಸುತ್ತಮುತ್ತ, ಅಂಕಣ ಲೇಖನಗಳ ಸಂಗ್ರಹ ಕೃತಿಯ ‘ಸಂದರ್ಭಕ್ಕೆ ಸಿಕ್ಕಿದ ಗಾದೆಗಳು (೧೯೯೨ : ೪೭-೫೧) ಲೇಖನದಲ್ಲಿ ದೈವಗಳು ಕೊಡುವ ನುಡಿ, ಮದಿಪು, ಅಭಯ ವಾಕ್ಯಗಳಲ್ಲಿ ತುಳು ಜನಪದ ಸಾಹಿತ್ಯ ಪ್ರಕಾರದ ಗಾದೆಗಳು ಹೇಗೆ ಬಳಕೆಯಾಗುತ್ತವೆ ಎನ್ನುವುದನ್ನು ಉದಾಹರಿಸಿ ವಿಶ್ಲೇಷಣೆ ನಡೆಸಿದ್ದಾರೆ.

ಶ್ರೀಮತಿ ಸುಶೀಲಾ ಪಿ. ಉಪಾಧ್ಯಾಯ (೧೯೮೫ : ೪೨ – ೪೫) ಅವರು ಭೂತದ ‘ನುಡಿಗಟ್ಟಿನ ಭಾಷೆ’ ಎನ್ನುವ ಲೇಖನದಲ್ಲಿ ‘ನುಡಿಕಟ್ಟು’, ಮದಿಪು ಅಥವಾ ಮದು ಇವುಗಳ ಅರ್ಥ ಪರಿಚಯ ವ್ಯವಹಾರಿಕ ಭಾಷೆಯಿಂದ ಭಿನ್ನವಾದ ಶೈಲಿಯಿರುವ ಶಬ್ದಾಲಂಕಾರ, ಅರ್ಥಾಲಂಕಾರ ಮತ್ತು ಭೂತದ ಕಾರಣಿಕದ ಅದ್ಭುತವಾದ ವರ್ಣನೆಗಳ ಮಹತ್ವವನ್ನು ವಿವರಿಸಿದ್ದಾರೆ. ಇಂತಹ ಏಳೆಂಟು ನುಡಿಕಟ್ಟುಗಳನ್ನು ಸಂಗ್ರಹಿಸಿ ಅವುಗಳ ಕನ್ನಡ ಅನುವಾದ ಸಹಿತ ದಾಖಲಿಸಿದ್ದಾರೆ.

ಭೂತಾರಾಧನೆಯು ಧಾರ್ಮಿಕ ಜನಪದ ರಂಗಭೂಮಿಯಾಗಿ ವಿಕಾಸ ಹೊಂದಿರುವುದನ್ನು ಪರಿಶೀಲಿಸುತ್ತಾ ಚಿನ್ನಪ್ಪ ಗೌಡ (೧೯೯೦:೨೨೬) ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳ ಮೂಲಕ ನಿರ್ವಹಿಸುವ ಕಣ್ಣಿಗೆ ಕಾಣುವ ಬಣ್ಣಗಾರಿಕೆ, ವೇಷಭೂಷಣ, ಆಯುಧ ಆಭರಣಗಳ ಒಂದು ಗುಂಪನ್ನೂ ಕಿವಿಗೆ ಕೇಳುವ ಹಾಡು, ಮಾತು, ಅಟ್ಟಹಾಸ ವಾದನಗಳ ಇನ್ನೊಂದು ಗುಂಪನ್ನೂ ಗುರುತಿಸಿ ಅವರೆಡರೂ ಒಂದಕ್ಕೊಂದು ಹೇಗೆ ಪೂರಕವಾಗಿ ಅಭಿವ್ಯಕ್ತಿ ಮಾಧ್ಯಮಗಳಾಗಿ ಭೂತಾರಾಧನೆಯಲ್ಲಿ ಕೆಲಸ ಮಾಡುತ್ತವೆ ಎಂಬುದನ್ನು ಚರ್ಚಿಸಿದ್ಗಾರೆ.

ಅವರು ಹೇಳುವ ಹಾಗೆ (ಅದೇ, ಪುಟ : ೧೫೭) ಭೂತಾರಾಧನೆಯ ಮಾತು ಸಂಭಾಷಣೆಯ ರೂಪದಲ್ಲಿರುತ್ತದೆ. ಧಾರ್ಮಿಕ ರಂಗಭೂಮಿಗೆ ನಾಟಕೀಯ ಮೆರುಗನ್ನು ಆ ಸಂದರ್ಭದಲ್ಲಿ ನಡೆಯುವ ಮಾತುಗಳು ತಂದುಕೊಡುತ್ತವೆ. ಭೂತಗಳ ಜೊತೆ ಸಂಭಾಷಣೆ ನಡೆಸುವಾಗ ‘ಭೂತದ ಪಟ್ಟಿ’ಯಾದವರು ಪಾರಿ ಹೇಳುತ್ತಾರೆ. ಪಾರಿ, ಮದಿಪು, ನುಡಿಗಟ್ಟುಗಳು ಜರಗುವ ಸನ್ನಿವೇಶದಲ್ಲಿ ಭೂತ ಮತ್ತು ಭಕ್ತಜನರ ನಡುವೆ ಅಭಿವ್ಯಕ್ತಿ ವಿನಿಮಯವಾಗತ್ತದೆ. ಜನರು ಮತ್ತು ಭೂತಗಳ ಪ್ರತೀಕವಾದ ಕಲಾವಿದರು ತಮ್ಮ ತಮ್ಮ ಅಭಿಪ್ರಾಯಗಳನ್ನು ತುಳುವಿನ ಪ್ರೌಢ (Classic) ಎನ್ನಬಹುದಾದ ಭಾಷಾಶೈಲಿಯ ಮೂಲಕ ತಾರ್ಕಿಕವಾಗಿ ಮಂಡಿಸುತ್ತಾರೆ. ಕುಣಿತ, ಅಟ್ಟಹಾಸ ಹಾಗೂ ಭಕ್ತಿಯ ಪ್ರದರ್ಶನಕ್ಕೆ ಪೋಷಕವಾಗಿ ಉಪಮೆ, ರೂಪಕ, ದೃಷ್ಟಾಂತಗಳಿಂದ ಕೂಡಿದ ಆಲಂಕಾರಿಕವೂ, ವೈಭವಯುತವೂ ಆದ ತುಳುಭಾಷೆಯನ್ನು ಬಳಸುತ್ತಾರೆ. ಪ್ರಬುದ್ಧ ಶೈಲಿಯ ಭಾಷೆಯ ಪ್ರಯೋಗ ಭೂತಾರಾಧನೆಯ ದೃಶ್ಯದ ಗಾಂಭಿರ್ಯವನ್ನು ಜೀವಂತವಾಗಿ ಹಿಡಿದಿಡುತ್ತದೆ… ಮಾತಿನ ಬಳಕೆ ‘ದೈವಿಕ’ವಾಗಿರುತ್ತದೆ. (ಅದೇ, ಪುಟ ೧೫೧).

ವಿವಿಧ ಭೂತಗಳಿಗೆ ಹೇಳುವ ಪಾರಿಗಳ ಪಠ್ಯಗಳನ್ನು ಸಂಗ್ರಹಿಸಿ ಅವುಗಳ ಕನ್ನಡ ರೂಪಗಳನ್ನು ನೀಡಿದ್ದಾರೆ. ಗುತ್ತಿನ ಮುಖ್ಯಸ್ಥ ಮತ್ತು ಭೂತಕ್ಕೆ ಕಟ್ಟಿದ ಕಲಾವಿದ ಇವರಿಬ್ಬರ ನಡುವೆ ಆರಾಧನೆಯ ಸನ್ನಿವೇಶದಲ್ಲಿ ನಡೆದ ಸಂಭಾಷಣೆಯ ಮಾದರಿಯೊಂದನ್ನು ಸಂಗ್ರಹಿಸಿ ಅದರ ಕನ್ನಡ ಅನುವಾದ ರೂಪವನ್ನು ನೀಡಿದ್ದಾರೆ ಮತ್ತು ಭೂತದ ನುಡಿಕಟ್ಟಿನ ಒಂದು ಪಠ್ಯವನ್ನು ಪ್ರತ್ಯೇಕ ನೀಡಿದ್ದಾರೆ (ನೋಡಿ : ಅದೇ, ಪುಟ ೧೫೨ -೧೬೪, ೨೬೧ -೨೬೫).

ಭೂತಾರಾಧನೆ ಮತ್ತು ಯಕ್ಷಗಾನ ತೌಲನಿಕತೆ ವಿವೇಚನೆಯಲ್ಲಿ ಭೂತಾರಾಧನೆಯ ಪಾಡ್ದನಗಳ ಭಾಷಾಶೈಲಿ ಮತ್ತು ಯಕ್ಷಗಾನದ ಪದಗಳ ಭಾಷಾಶೈಲಿ ಇವುಗಳ ನಡುವೆ ಹೋಲಿಕೆಗಳಿರುವುದನ್ನು ವಾಕ್ಯರಚನೆ, ವರ್ಣನೆಯ ಸೊಗಸು, ಸರಳವಾದ ನಿರೂಪಣೆ – ಈ ಅಂಶಗಳಲ್ಲಿರುವ ಸಾಮ್ಯಗಳಿಂದ ಸಮರ್ಥಿಸುತ್ತ ಪಾಡ್ದನಗಳು ಮತ್ತು ಪಾರ್ತಿಸುಬ್ಬನಂತಹ ಯಕ್ಷಗಾನ ಕವಿ ಚಿತ್ರಿಸುವ ಪ್ರಾದೇಶಿಕ ವರ್ಣನೆಯನ್ನು ಪರಿಶೀಲಿಸಿದ್ದಾರೆ (ನೋಡಿ : ಅದೇ ಪಟ ೧೩೧ -೧೩೨).

ಭೂತಗಳಿಗೆ ಹೇಳುವ ಮದು, ಮದಿಪು, ಪಾರಿ, ಬೀರ, ನುಡಿಗಟ್ಟುಗಳಲ್ಲಿರುವ ಬಿಗುಬಂಧ ಸುಂದರವಾದ ಭಾಷೆಯಲ್ಲಿರುವ ಶಬ್ದಶಕ್ತಿಯನ್ನು ತೋರಿಸುತ್ತದೆ (ಅಮೃತ ಸೋಮೇಶ್ವರ, ೧೯೮೯, ೫-೬).

ಸಾಮಾಜಿಕವಾಗಿ ಹಿಡಿತವನ್ನು ಸಾಧಿಸಿದ, ಯಜಮಾನ ವ್ಯವಸ್ಥೆಯ ಮುಂಚೂಣಿಯಲ್ಲಿರುವ ಶಕ್ತಿಯುತ ಸಮುದಾಯವೊಂದು ಮಾಂತ್ರಿಕ ಶಕ್ತಿಯನ್ನು ಹೊಂದಿದ ಸಮುದಾಯದ ಮೂಲಕ ಆಳ್ವಿಕೆ ನಡೆಸಲು, ವ್ಯವಸ್ಥೆಯ ನಿರ್ದೇಶನ ಮಾಡಲು ಪ್ರಯತ್ನಿಸಿದೆ. ಈ ಪ್ರಯತ್ನದ ಹಿನ್ನೆಲೆಯಲ್ಲಿ ಮದಿಪು ನುಡಿಗಟ್ಟುಗಳನ್ನು ಸಾಧನವಾಗಿ ಬಳಸಿಕೊಳ್ಳಲಾಗಿದೆ.

ಭೂತಾರಾಧನೆಯನ್ನು ಚಲನಶೀಲ ರಂಗಭೂಮಿಯಾಗಿ ಮಾರ್ಪಡಿಸುವ ಜವಾಬ್ದಾರಿ ನುಡಿಗಟ್ಟುಗಳಿಗಿದೆ. ಕಲಾಜಗತ್ತು ಮತ್ತು ಧಾರ್ಮಿಕ ಜಗತ್ತು ಒಂದಾಗಬೇಕು. ನಂಬಿಕೆಯ ಪ್ರಪಂಚವನ್ನು ರಂಜನೆಯ ಪ್ರಪಂಚದ ಬಳಿಗೆ ತರಬೇಕು . ರಂಗಪ್ರಕಾರ ಮತ್ತು ಆರಾಧನಾ ಪ್ರಕಾರಗಳ ಸಂಗಮವಾಗಬೇಕು. ಪರ್ಯಾಯ, ಮಧ್ಯಂತರ, ಅರೆ ಧಾರ್ಮಿಕ ಎನ್ನಬಹುದಾದ ಒಂದು ಮಾಧ್ಯಮವನ್ನು ಸೃಷ್ಟಿಸಬೇಕು (ಗಣೇಶ ಅಮೀನ್ ಸಂಕಮಾರ್, ೨೦೦೬, ೩೪೭)

ಆರಾಧನ ರಂಗಭೂಮಿಯ ಸಾಹಿತ್ಯಾಂಶಗಳನ್ನು ಅಮೃತ ಸೋಮೇಶ್ವರ, ಎಂ. ವೀರಪ್ಪ ಮೊಯಿಲಿ, ಆನಂದಕಂದ (ಡಿ.ಕೆ. ಚೌಟ) ಮೊದಲಾದ ಅನೇಕ ನಾಟಕಕಾರರು, ಲೇಖಕರು ತಮ್ಮ ಕೃತಿಗಳಲ್ಲಿ ಬಳಸಿಕೊಂಡಿದ್ದಾರೆ.

ಏರ್ಯ ಲಕ್ಷ್ಮೀನಾರಾಯಣ ಆಳ್ವರು (೧೯೯೬, ೪೧) ದೈವೊದ ನಡೆನೆಲೆ ಎನ್ನುವ ಕಿರುಲೇಖನ, ಅಭಯಕುಮಾರ್ (೧೯೯೭, ೧೫೧), ಮಂಜದ ಆಚರಣೆ ಮತ್ತು ಪಾರಿಯ ಸಂಬಂಧವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಕದ್ರಿ ನವನೀತ ಶೆಟ್ಟಿ (೨೦೦೧, ೧೭೧) ಬೀರೆ ದೇವುಪೂಜೆ ತುಳು ನಾಟಕದಲ್ಲಿ ಕಾಂತಣಧಿಕಾರಿ ಜುಮಾದಿ ದೈವವನ್ನು ಅರಿಕೆ ಮಾಡಿಕೊಳ್ಳುವ ಸನ್ನಿವೇಶವನ್ನು ಚಿತ್ರಿಸಿದ್ದಾರೆ.

‘‘ಅಪ್ಪೆ ಜುಮಾದಿ, ನಿಕುಲು ಐವೆರ್ ದೈವೊಲು ಈತ್‌ನೆಟ್ಟ… ಬೆರಿ ಸಾಯ ಕೊರ್ಲೆ. ಸ್ವಾಮಿ ಜೀಮಾದಿ   ಬಂಟೆರೇ ನಿಕುಲೇ ಕಾತೊನೊಡು’’

ಕಳ್ಳು ಮತ್ತು ಕೋಳಿ ಇಲ್ಲದೇನೇ ತೆಯ್ಯಂ ಕಳೆಯಿತು (ಸಿ.ರಾಘವನ್, ೧೯೯೮,೮೧).

‘ಏಯ್‌ಸೂ… ನಿನಗೆ ಹೂವು ನೀರು ಕೊಡುವುದಾದರೂ ಯಾಕೆ?

ದೈವಸ್ಥಾನದ ಯಜಮಾನರಿಂದ ಗುರಿಕಾರರಿಗೆ ಏನೋ ಅನ್ಯಾಯವಾಗಿದೆ. ಕೇಳುವ ಹೊಣೆ       ಭಗವತಿಯದ್ದೇ ಅಲ್ಲವೇ? ಆಕೆ ತನ್ನ ಕರ್ತವ್ಯವನ್ನು ಮರೆತಿದ್ದಾಳೆ’’

ಕೆರಳಿದ ಗುರಿಕಾರರು ಭಗವತಿಯನ್ನೇ ಹೀಗೆ ತರಾಟೆಗೆ ತೆಗೆದರು (ಸಿ.ರಾಘವನ್, ೧೯೯೮,೮೩).

ಗಣೇಶ್‌ಅಮೀನ್‌ಸಂಕಮಾರ್‌(೨೦೦೨,೯) ಮಾಯದ ಕಾಯಿ ತುಳು ಜಾನಪದ ನಾಟಕದಲ್ಲಿ ಉಳ್ಳಾಯ ದೈವದ ಬೀರನುಡಿ ಬಳಸಿಕೊಂಡಿದ್ದಾರೆ.

ಭೂತೊಗು ಮಲ್ಲೆ ದೇವೆರೆಗ್ ಎಲ್ಲಿ… ಭೋಗೊನು ದೆತ್ತೊಂದು ಜೋಗೊಗು ಬತ್ತೆ’.

ಬನ್ನಂಜೆ ಬಾಬು ಅಮೀನ್ (೨೦೦೨,೧೨೭) ಪೂ ಪೊದ್ದೊಲು ತುಳು ಕಾದಂಬರಿಯಲ್ಲಿ ಕುಪ್ಪೆಟ್ಟು ಪಂಜುರ್ಲಿ ದೈವದಲ್ಲಿ ಅರಿಕೆ ಮಾಡಿಕೊಳ್ಳುವ ಸಂದರ್ಭವಿದೆ.

ಬಾಯಿಡ್‌ಮಗಮಗ ಬಂಜಿಡ್‌ದಗದಗ (ಬಾಯಲ್ಲಿ ಮಗಮಗ ಒಡಲಲ್ಲಿ ಧಗೆ ಧಗೆ). ಸಿರಿ ತನ್ನ ಮಗನಿಗೆ ಹೀಗೆ ಅಂದುಕೊಳ್ಳುವಳು.

ಸಿರಿ ದೈವಾವೇಶ ಹೊಂದಿದ ಅಥವಾ ಪೀಡಿತರಾದ ಹೆಣ್ಣುಗಳನ್ನು ಕುಮಾರ ಪ್ರಶ್ನಿಸಿ ಪರಿಹಾರ ಕಂಡುಕೊಳ್ಳುವ ಸಂದರ್ಭದಲ್ಲಿ ಬಳಸುವ ಸಾಹಿತ್ಯಕ್ಕೆ ಒಂದು ನಿದರ್ಶನ.

‘ಇದ್ದ ಭೂತವಾಗಲಿ, ದೈವವಾಗಲಿ, ಆದಿಯಾಯೆಯಾಗಲಿ ಬಾಯಿ ಬಿಟ್ಟು ಹೇಳಬೇಕು’.

ಆದರೆ ಈ ಹುಡುಗಿ ಆಗಿನಿಂದ ಎಷ್ಟು ಹೊತ್ತಾದರೂ ಹೇಳುತ್ತಿಲ್ಲ. ಈಗ ಸೊನ್ನೆ ಎಂದು ತಿಳಿದುಬಂತು.

ಸಿರಿ ಜಾತ್ರೆಯಲ್ಲಿ ಸಾಮೂಹಿಕ ದೈವಾವೇಶದಲ್ಲಿ ಪಾಲುಗೊಂಡು ಬಂದ ಹೆಣ್ಣೊಬ್ಬಳು ನೀಡಿದ ಹೇಳಿಕೆ:

ಮನಸ್‌ದ ಮೋಕೆಲಾ ಸರ್ರೊದ ಬಯಕೆಲಾ ತೀರ್ತ್‌ದ್‌ಬತ್ತೆ

(ಮನಸ್ಸಿನ ಪ್ರೀತಿಯನ್ನೂ ದೇಹದ ಬಯಕೆಯನ್ನೂ ತೀರಿಸಿ ಬಂದೆ.)

ಭೂತಾರಾಧನೆಯಂತಹ ಆರಾಧನಾ ರಂಗಭೂಮಿಯಲ್ಲಿ ವೇಷ, ಬಣ್ಣಗಾರಿಕೆ, ಕುಣಿತ, ಹಿಮ್ಮೇಳದ ಜೊತೆ ಜೊತೆಯಲ್ಲೇ ಪ್ರದರ್ಶಕ ಮತ್ತು ಪ್ರೇಕ್ಷಕರ ನಡುವೆ ಸಂವಹನ ಭಾಷೆಯೊಂದರ ಬಳಕೆ ಅತ್ಯಂತ ಮಹತ್ವವಾದುದು. ಆ ಭಾಷೆಯಲ್ಲಿರುವ ಮೌಖಿಕ ಸಾಹಿತ್ಯ ಅಷ್ಟೇ ಪರಿಣಾಮಕಾರಿಯಾದುದು. ಅದೊಂದು ಸಾಂದರ್ಭಿಕ ಭಾಷೆಯಾಗಿ ಅಲ್ಲಿ ರೂಪುಗೊಳ್ಳುತ್ತದೆ. ಅಂತಹ ಭಾಷೆಯೆನ್ನುವುದು ಜನಪದರ ಆಡುನುಡಿಯೇ ಆಗಿದ್ದರೂ ಆರಾಧನಾ ಪ್ರದರ್ಶನ ಸಂದರ್ಭಗಳಲ್ಲಿ ಅದು ಹೆಚ್ಚು ನಾಟಕೀಯವೂ, ಶೈಲೀಕೃತವೂ ಆಗಿ ಪರಿವರ್ತನೆಗೊಳ್ಳುತ್ತಿರುತ್ತದೆ. ಹಾಗೆ ಪರಿವರ್ತನೆಗೊಳ್ಳುವ ಭಾಷೆಗೆ ಅದ್ಭುತವಾದ ಒಂದು ಮಾಂತ್ರಿಕ ಶಕ್ತಿ ಸಿದ್ಧಿಸಿರುತ್ತದೆ. ಅನೇಕ ಬಾರಿ ಅದು ನಿರ್ದೇಶನಾತ್ಮಕ, ಸಾಂಕೇತಿಕ, ಆಜ್ಞಾಪಕ, ಚಮತ್ಕಾರ, ಕೌಶಲ, ನೀತಿಬೋದಕ, ಹಿತೋಪದೇಶ, ಸಮಸ್ಯಾ ಪರಿಹಾರಾತ್ಮಕ ಸಲಹೆ ನುಡಿ, ಚಿಕಿತ್ಸಕ ನ್ಯಾಯತೀರ್ಮಾನ ಮೊದಲಾದ ಅರ್ಹತೆಗಳ ಪ್ರವೃತ್ತಿಗಳನ್ನು ಪಡೆದುಕೊಳ್ಳುತ್ತದೆ.

ಮಧ್ಯಂತರ ಜಗತ್ತಿನ ಕಲ್ಪನೆಯ ಅಗೋಚರ ಶಕ್ತಿದೈವಗಳನ್ನು ವಾಹಕ ಪಾತ್ರಿಯ ಮೂಲಕ ಜೋಗ ದರ್ಶನದಲ್ಲಿ ಕಂಡುಕೊಳ್ಳುವ ಕಾಲಕ್ಕೆ ಈ ಮಾಂತ್ರಿಕ ಭಾಷೆ ಒಂದು ವಿಶಿಷ್ಟ ಸಂವಹನ ಭಾಷೆಯಾಗಿ ಬಳಕೆಯಾಗುತ್ತದೆ. ಅಂತಹ ಭಾಷೆಯೊಂದು ಹೆಚ್ಚು ಅನುಭವ ಸಾಂದ್ರವಾಗಿರುತ್ತದೆ ಮತ್ತು ಅದು ಪರಂಪರಾಗತವಾಗಿ ಸಿದ್ಧಿಗೊಂಡಿರುವಂತದ್ದು ಕೂಡ. ಅದೇ ಕಾಲಕ್ಕೆ ಆ ಭಾಷೆ ಪರಿಣಾಮಕಾರಿಯಾಗಿ ಕಲಾತ್ಮಕ ಸಂಯೋಜನೆಯಲ್ಲಿ ಸಂವಹನಗೊಳ್ಳಬೇಕಾಗುತ್ತದೆ. ಆ ಸಂವಹನ ಭಾಷೆ ಅಪ್ರಜ್ಞಾಪೂರ್ವಕ ವಾಗಿಯೂ ಕಾವ್ಯಾತ್ಮಕವಾಗಿಯೂ ಇರುವುದು ಒಂದು ವೈಶಿಷ್ಟ್ಯ. ಆರಾಧನಾ ರಂಗಭೂಮಿಯಲ್ಲಿ ಬಳಕೆಯಾಗುವ ಮದಿಪು, ಪಾರಿನುಡಿಗಳೆಲ್ಲವೂ ಇಂತಹ ಒಂದಲ್ಲ ಒಂದು ಗುಣಾಂಶಗಳನ್ನು ಪಡೆದುಕೊಂಡಿರುವುದನ್ನು ನಾವು ಗಮನಿಸುವುದಕ್ಕೆ ಸಾಧ್ಯವಿದೆ. ಈ ಭಾಷೆಗೆ ಪುರಾಣ ಮತ್ತು ವಾಸ್ತವ ನೆಲೆಗಳೆರಡನ್ನೂ ಸ್ಪರ್ಶಿಸಿ, ಸ್ಪಂದಿಸಿ ಪ್ರಚೋದಿಸುವ ಶಕ್ತಿಯಿರುತ್ತದೆ.

ಆಕರಸೂಚಿ

೧. ಅಭಯಕುಮಾರ್, ೧೯೯೭, ಮುಗೇರರು ಜನಾಂಗ ಜಾನಪದ ಅಧ್ಯಯನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.

೨. ಅಮೃತ ಸೋಮೇಶ್ವರ, ೧೯೭೮, ಅವಿಲು, ಕರ್ನಾಟಕ ಸಂಘ, ಪುತ್ತೂರು

೩. ಅಮೃತ ಸೋಮೇಶ್ವರ, ೧೯೮೪, ತುಳು ಬದುಕು, ಪ್ರಕೃತಿ ಪ್ರಕಾಶನ ಕೋಟೆಕಾರು

೪.ಅಮೃತ ಸೋಮೇಶ್ವರ, ೧೯೮೯, ತುಳುನಾಡ ಕಲ್ಕುಡೆ, ಪ್ರಕೃತಿ ಪ್ರಕಾಶನ ಕೋಟೆಕಾರು

೫.ಅಮೃತ ಸೋಮೇಶ್ವರ, ೧೯೯೮, ಪೂಮುಡಿ, ಅಡ್ಕ ಭಗವತೀ ಕ್ಷೇತ್ರ ಸ್ಮರಣ ಸಂಚಿಕೆ

೬. ಅಶೋಕ ಆಳ್ವ, ೧೯೯೭, ಬಾಲೆಸಾಂತು, ಮದಿಪು -೬, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

೭. ಆದಿರಾಜ ಕಡಂಬ, ೧೯೯೯, ಪಾರಿ ಪಲಯ ನುಡಿಕಟ್ಟು, ಮದಿಪು -೧೪, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಲಾಲ್‌ಭಾಗ್‌, ಮಂಗಳೂರು -೩

೮ ಆನಂದಕಂದ, ೨೦೦೫, ಮಿತ್ತಬೈಲ್ ಯಮುನಕ್ಕೆ – ಒಂಜಿ ಗುತ್ತುದ ಕತೆ, ಹೇಮಾಂಶು ಪ್ರಕಾಶನ, ಮಂಗಳೂರು – ೭

೯. ಏರ್ಯ ಲಕ್ಷ್ಮೀನಾರಾಯಣ ಆಳ್ವ, ೧೯೭೨, ತುಳು ಸಾಹಿತ್ಯ ಮತ್ತು ಸಂಸ್ಕೃತಿ, ಬಾಸಿಗ, ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ,ಸಂ.ಎಂ. ರಾಮಚಂದ್ರ ಕಾರ್ಕಳ

೧೦. ಏರ್ಯ ಲಕ್ಷ್ಮೀನಾರಾಯಣ ಆಳ್ವ (ಸಂ), ೧೯೮೭, ಮಂಗಳತಿಮರು, ತುಳುನಾಡ ಆಆಧನೆಗಳು ಬಹುಮುಖಿ ಅಧ್ಯಯನ, ಅಮಟಾಡಿ, ಬಂಟ್ವಾಳ ತಾಲೂಕು, ದ.ಕ.

೧೧. ಏರ್ಯ ಲಕ್ಷ್ಮೀನಾರಾಯಣ ಆಳ್ವ , ೧೯೯೬, ದೈವದ ನಡೆ ನೆಲೆ, ಮದಿಪು-೩, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಂ. ವಾಮನ ನಂದಾವರ, ಬಾಲಕೃಷ್ಣ ಶೆಟ್ಟಿ ಪೊಳಲಿ

೧೨. ಕದ್ರಿ ನವನೀತ ಶೆಟ್ಟೊ, ೨೦೦೧

೧೩. ಕುದ್ಕಾಡಿ ವಿಶ್ವನಾಥ ಶೆಟ್ಟಿ, ೧೯೮೨, ಮಂಜದ ಕಾಪಡೆ ಸತ್ಯೊಮ್ಮೆ ದೈಯ್ಯಾರೆ, ವಿಶ್ವ ಕಲಾನಿಕೇತನ, ಪುತ್ತೂರು, ದ.ಕ.

೧೪. ಗಣೇಶ್‌ ಅಮೀನ್‌ ಸಂಕಮಾರ್,೨೦೦೨, ಮಾಯಿದ ಕಾಯಿ, ಅಗೋಳಿ ಮಂಜಣ ಜಾನಪದ ಕೇಂದ್ರ, ಪಾವಂಜೆ

೧೫. ಗಣೇಶ್‌ ಅಮೀನ್‌ ಸಂಕಮಾರ್,೨೦೦೬, ನುಡಿಸಿಂಗಾರ, ಸಿರಿ ಪ್ರಕಾಶನ, ಪಾವಂಜೆ, ಹಳೆಯಂಗಡಿ – ೬೭೪೧೪೬

೧೬. ಗುಂಡಾಲು ಮಹಾಬಲ ಶೆಟ್ಟಿ, ೧೯೭೭, ಮದು ನುಡಿಗಟ್ಟುಗಳು, ಸುದಶನ, ವಿಜಯ ಕಾಲೇಜು ಟ್ರಸ್ಟ್‌, ಮುಲ್ಕಿ, ದ.ಕ.

೧೭. ಚಿನ್ನಪ್ಪ ಗೌಡ ಕೆ., ೧೯೯೦, ಭೂತಾರಾಧನೆ ಜಾನಪದೀಯ ಅಧ್ಯಯನ, ಮದಿಪು ಪ್ರಕಾಶನ, ಮಂಗಳಗಂಗೋತ್ರಿ – ೫೭೪ ೧೯೯

೧೮. ಪೊಳಲಿ ಶೀನಪ್ಪ ಹೆಗ್ಗಡೆ, ೧೯೯೧ (೧೯೫೪), ಶೀನಪ್ಪ ಹೆಗ್ಗಡೆ ಸಮಗ್ರ ಸಾಹಿತ್ಯ, ಪೊಳಲಿ ಶೀನಪ್ಪ ಹೆಗ್ಗಡೆ ಜನ್ಮ ಶತಾಬ್ದಿ ಸಮಿತಿ, ಹೇಮಾ, ವಿದ್ಯಾರತ್ನ ನಗರ, ಮಣಿಪಾಲ

೧೯. ಬನ್ನಂಜೆ ಬಾಬು ಅಮೀನ್, ೧೯೯೪, ತುಳು ಜನಪದ ಆಚರಣೆಗಳು, ಗುರುಭಾರತಿ ಅಧ್ಯಯನ ಕೇಂದ್ರ, ಮಾತೃ ನಿಲಯ, ಬಣ್ಣಾರ್ಹಿತ್ಲು, ಮುಂಬಯಿ.

೨೦. ಬನ್ನಂಜೆ ಬಾಬು ಅಮೀನ್, ೨೦೦೫, ಮಾನ್ಯೆಚ್ಚಿ, ಕೆಮ್ಮಲಜೆ ಪ್ರಕಾಶನ, ಉಡುಪಿ

೨೧. ಬನ್ನಂಜೆ ಬಾಬು ಅಮೀನ್, ೨೦೦೬, ನುಡಿಕಟ್ಟು, ಕೆಮ್ಮಲಜೆ ಪ್ರಕಾಶನ, ಉಡುಪಿ

೨೨. ಬನ್ನಂಜೆ ಬಾಬು ಅಮೀನ್, ೨೦೦೩, ಪೂಪೊದ್ದೊಲು, ಕೆಮ್ಮಲಜೆ ಪ್ರಕಾಶನ, ಉಡುಪಿ

೨೩. ಮನು ಇಡ್ಯಾ, ೧೯೮೯, ಬಲಿ ಪೊಸ ದೇಕಿದ ತುಳು ನಾಟಕ, ಸಿಂಗಾರ ಸುರತ್ಕಲ್

೨೪. ಮುದ್ದು ಮೂಡುಬೆಳ್ಳೆ, ೨೦೦೪, ಸತ್ಯದ ಸುರಿಯ ಸಾಯದ ಪಗರಿ, ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಬೆಳ್ಳೆ

೨೫. ರಾಘವನ್ ಸಿ., ೧೯೯೮, ಯಾಜಮನ್ಯ ಅಥವಾ ಕೋಯಿಮ್ಮೆ, ಪೂಮುಡಿ ಸಂ. ರಾಮಚಂದ್ರ ಉಚ್ಚಿಲ್, ಅಮೃತ ಸೋಮೇಶ್ವರ, ಅಡ್ಕ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವ ಸಮಿತಿ, ಕೋಟೆಕಾರು, ದ.ಕ.

೨೬. ವಾಮನ ನಂದಾವರ, ೧೯೮೭, ಭೂತಾರಾಧನೆಯಲ್ಲಿ ಸಾಹಿತ್ಯಿಕ ಅಂಶಗಳು, ಸಿಂಗದನ, ಹೇಮಾಂಶು ಪ್ರಕಾಶನ, ಕಾಟಿಪಳ್ಳ, ದ.ಕ. -೫೭೪ ೧೪೯

೨೭. ವಾಮನ ನಂದಾವರ, ೧೯೯೨, ಸಂದರ್ಭಕ್ಕೆ ಸಿಕ್ಕಿದ ಗಾದೆಗಳು, ಜನಪದ ಸುತ್ತಮುತ್ತ, ಪ್ರಬಂಧು ಪ್ರಕಾಶನ, ಮಂಗಳೂರು – ೫೭೫೦೦೧

೨೮. ವಾಮನ ನಂದಾವರ, ೨೦೦೧, ಕೋಟಿ ಚೆನ್ನಯ ಜಾನಪದೀಯ ಅಧ್ಯಯನ, ಹೇಮಾಂಶು ಪ್ರಕಾಶನ, ಗೊಲ್ಲಚ್ಚಿಲ್, ದೇರೆಬೈಲ್, ಮಂಗಳೂರು – ೫೭೫೦೦೬

೨೯. ವಿವೇಕ ರೈ ಬಿ.ಎ., ೧೯೮೫, ತುಳು ಜನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು -೫೬೦ ೦೧೮

೩೦. ಶ್ರೀನಿವಾಸ ಭಟ್ಟ ಕಟೀಲು, ಪ್ರ. ೨೦೦೫, ಜನಪದ ಶತಪಥ, ಯುಗಪುರುಷ ಕಿನ್ನಿಗೋಳಿ -೫೭೪ ೧೫೦, ದ.ಕ.

೩೧. ಶ್ರೀನಿವಾಸ ಭಟ್ಟ ಕಟೀಲು, ೨೦೦೫, ಚುಂಗುಡಿ ಭೂತಗಳು, ಕೋಲಬಲಿ, ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳಿ -೫೭೪ ೧೫೦

೩೨. ಸುಶೀಲಾ ಪಿ. ಉಪಾಧ್ಯಾಯ, ೧೯೮೫, ಜನಪದ ಆರಾಧನೆ ಮತ್ತು ರಂಗಕಲೆ, ಪ್ರಾದೇಶಿಕ ಜಾನಪದ ಕಲೆಗಳ ಅಧ್ಯಯನ ಕೇಂದ್ರ, ಉಡುಪಿ

೩೩. ಹರಿಶ್ಚಂದ್ರ ಸಾಲಿಯಾನ್, ೨೦೦೬, ಮದು ಮದಿಪು ನುಡಿಕಟ್ಟುಲು, ಯುಗಪುರುಷ, ಕಿನ್ನಿಗೋಳಿ, ದ.ಕ.