ಆಭರಣ / ಅಲಂಕಾರದ ಸಾಮಗ್ರಿಗಳು

ಅನೇಕ ಕಬಿತಗಳಲ್ಲಿ ಯಾವುದೇ ನಿರ್ದಿಷ್ಟ ಘಟನೆ ಅಥವಾ ಪ್ರಸಂಗಗಳು ಇರುವುದಿಲ್ಲ ಕೇವಲ ಶಬ್ದಗಳ ಸರಮಾಲೆ ಇರುವ ಕಬಿತಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತವೆ. ಈ ಕಬಿತಗಳಿಗೆ ಸಾಹಿತ್ಯವಾಗಿ ಯಾವುದೇ ಮಹತ್ವವೂ ಇಲ್ಲ. ಆದರೆ ಇಂತಹ ಕಬಿತಗಳಲ್ಲಿ ತುಳುನಾಡಿನ ಸ್ತ್ರೀಯರ ಅಲಂಕಾರ ಸಾಮಗ್ರಿಗಳ, ಪ್ರಾಚೀನ ಆಭರಣಗಳ, ವಸ್ತ್ರ ವಿಶೇಷಗಳ ಹೆಸರುಗಳು ಸಿಗುತ್ತವೆ. ಕೊಕ್ಕರೆಯನ್ನು ಸಂಬೋಧಿಸಿ ಆಭರಣಗಳನ್ನು ತೊಡುವಂತೆ, ಅಲಂಕಾರ ಮಾಡುವಂತೆ ಕರೆದು ಮಾತನಾಡಿಸುವ ರೂಪಕದ ರೀತಿಯ ಕಬಿತವೂ ಇದೆ. ರಾವೋ ರಾವು ಕೊರುಂಗೋ ರಾವಂದೇನ್ ದಾನ್‌ಬಿ, ಮುಪ್ಪೊದಿನತ್ತ ಬಾಲೆ ಆಲ್, ಪಾಡ್ಯರಲಿಂಗ ಕೇಂಡಾಲೇ, ಎಲ್ಯಾಲ್ ಎಲ್ಯಬಾಲೆ ತೆಲಿಕೇದಾ ಮೋನೆದಾಲೇ, ಪೊಣ್ಣು ರಾಮಸ್ವಾಮಿ, ಅಲ್ಯೇರಕ್ಕೇರ್ ಆಲ್ಯೇರ್ ನೆರೆಟೊಂಜಿ ಮದ್ಮೆಂದಾಲ್ಯೇರ್ ಡಿಂಬಿಸಾಲೆ- ಇತ್ಯಾದಿ ಅನೇಕ ಕಬಿತಗಳು ಈ ರೀತಿಯವು.

ತುಳುನಾಡಿನಲ್ಲಿ ಒಂದು ಕಾಲದಲ್ಲಿ ಪ್ರಚಲಿತವಾಗಿದ್ದ ಗೋಧಿಮಾಲೆ, ಬುಲಾಕ್, ಬುಗುಡಿ, ರಾಕುಟಿ, ಬೋರಿಸರ, ಮೋನುಮಾಲೆ, ತಿರುಪ್ಪುದಪೂ, ಜಡೆಕೊಂಡೆ, ಬಂಗಾರ ಕೇದಗೆ, ತಾರ್, ಕಾಪಿಸರ, ಕೊಪ್ಪುಸರಪೊಳಿ ಮೊದಲಾದ ಅನೇಕ ಆಭರಣಗಳ ಹೆಸರುಗಳು ಮತ್ತು ಅವು ದೇಹದ ಯಾವ ಅಂಗಗಳಿಗೆ ಧರಿಸುವಂತಹವು ಎಂಬ ಬಗ್ಗೆ ಕಬಿತಗಳಲ್ಲಿ ಉಲ್ಲೇಖವಿದೆ. ಅಲ್ಲದೆ ಎಣ್ಣೆ ಓಲೆ, ಮುಳ್ಳೊಳ್ಳ ಬಾಲ್‌ಸರ, ಕಲ್ಲುಳ್ಳ ಕೊಪ್ಪು, ಮುಳ್ಳು ಕೊಪ್ಪು, ಎಸಳ್ ಬುಗುಡಿ ಇತ್ಯಾದಿ ಆಭರಣಗಳ ಹೆಸರುಗಳ ಜೊತೆಗೆ ಅವುಗಳ ವೈಶಿಷ್ಟ್ಯ, ವಿಶೇಷಣಗಳನ್ನೂ ಗಮನಿಸಬಹುದು. ಇಂದು ಈ ಆಭರಣಗಳು ಕಾಣಸಿಗುವುದು ಅಪೂರ್ವ.

ವಾಸ್ತವದಲ್ಲಿ ತನ್ನ ಕೈಗೆ ಎಟಕದುದನ್ನು, ತನ್ನಲ್ಲಿಲ್ಲದುದನ್ನು ತನ್ನಲ್ಲಿದೆ ಎಂದ ಕಬಿತಗಳಲ್ಲಿ ಹೆಣ್ಣು ಹಾಡುತ್ತಾಳೆ. ಆಭರಣಗಳು ಆಕೆಯ ಬಯಕೆಗಳು. ಈ ಬಯಕೆಗಳನ್ನು ಕಬಿತಗಳ ಮೂಲಕ ಸೃಷ್ಟಿಮಾಡುತ್ತಾಳೆ. ಹೆಣ್ಣು ತನ್ನ ದುಃಸ್ಥಿತಿಯನ್ನು, ಕೊರತೆಯ ಅಪೇಕ್ಷೆಯನ್ನು, ಕನಸುಗಳನ್ನು ಇಲ್ಲಿ ಹೇಳುತ್ತಾಳೆ. ಆ ಮೂಲಕ ಇವುಗಳಲ್ಲಿ ಕೆಲವಾದರೂ ತನ್ನ ಕೈಗೆಟುಕಲಿ ಎಂಬ ಅವಳ ಬಯಕೆ, ಅಪೇಕ್ಷೆಯನ್ನು ಕಾಣಬಹುದು.

‘ಹರಿನಾರಾಯಣ ಗೋವಿಂದಾ’, ‘ಸತ್ಯನಂಗಡಿ ದೇಲಗುಡು. ದುಂಬಾಂಡಣ್ಣೆರೆ ಪಿರವಾಂಡಾ’, ‘ಅರಿಕಡೆಪ್ಪಲ್ ಸಾಂಬಲಾ’, ‘ಗಿಜಿಗಿಜಿ ಕೆಮ್ಮಾಲೂ ತೇರಂಟೆ ಮಗಲ್ ಕೊಟ್ಯಾನ್ ನೂರ್ಯಲೋಯಾ’, ‘ಗೋವಿಂದ ಬದನೆ’ – ಇತ್ಯಾದಿ ಕಬಿತಗಳಲ್ಲಿ ತರಕಾರಿಗಳ ಹೆಸರುಗಳನ್ನು ಪೋಣಿಸಿರುವುದು ಕಂಡು ಬರುತ್ತದೆ.

ಗೋವಿಂದ ಬದನೆ ಕಬಿತದಲ್ಲಿ ಕ್ರೈಸ್ತ ಹೆಂಗುಸೊಬ್ಬಳು ಬದನೆ ಬೆಳೆಸಿ ಬೇರೆ ಬೇರೆ ಸ್ಥಳಗಳಿಗೆ ಮಾರಿಕೊಂಡು ಹೋಗುವ ವಿವರಗಳಿವೆ. ತುಳುನಾಡಿನಲ್ಲಿ ಬದನೆ ಬೆಳೆಸುವ ಮತ್ತು ಮಾರುತ್ತಿದ್ದ ಕ್ರಮಗಳನ್ನು ಈ ಕಬಿತಗಳಿಂದ ತಿಳಿಯಬಹುದು. ಈ ಪಾಡ್ದನದಲ್ಲಿ ಕೆಲವು ಪೇಟೆಗಳ ಹೆಸರೂಗಳೂ ಇವೆ. ಸಾಮಾನ್ಯವಾಗಿ ತುಳುನಾಡಿನಲ್ಲಿ ಮಾರಾಟದ ದೃಷ್ಟಿಯಿಂದ ತರಕಾರಿಗಳನ್ನು ಬೆಳೆಸುವವರು ಕ್ರೈಸ್ತ ಹೆಂಗಸರು. ರೂಢಿಯಲ್ಲಿ ಇವರನ್ನು ಬಾಯಮ್ಮ ಎಂದು ಕರೆಯುತ್ತಾರೆ. ಹೀಗೆ ಬೆಳೆದ ತರಕಾರಿಗಳನ್ನು ಹಿಂದಿನ ಕಾಲದಲ್ಲಿ ಮನೆಮನೆಗೆ ಅಥವಾ ಪೇಟೆಗೆ ಕೊಂಡು ಹೋಗಿ ಮಾರುತ್ತಿದ್ದರು ಎಂಬ ಬಗ್ಗೆ ಈ ಕಬಿತದಿಂದ ತಿಳಿಯುತ್ತದೆ. ದೇವಾಲಯಗಳ ಜಾತ್ರೆಗಳಲ್ಲಿ ತೇರು ಎಳೆಯುವಾಗ ಅಥವಾ ಭಜನೆ ಇತ್ಯಾದಿ ಧಾರ್ಮಿಕ ಆಚರಣೆಗಳ ಸಂದರ್ಭಗಳಲ್ಲಿ ಭಕ್ತಿಯ ಆವೇಶದಿಂದ ಗೋವಿಂದಾ ಎನ್ನುತ್ತಾರೆ. ಅಂತಹ ಸೊಲ್ಲಿಗೆ ಹಾಸ್ಯದ ಲೇಪ ಕೊಡುವ ದೃಷ್ಟಿಯಿಂದ ಅದಕ್ಕೆ ‘ಬದನೆ’ ಎಂಬ ತರಕಾರಿಯ ಹೆಸರನ್ನು ಜೋಡಿಸಲಾಗಿದೆ. ಗೋವಿಂದ ಎನ್ನುವುದಕ್ಕೆ ವಿಡಂಬನಾತ್ಮಕವಾಗಿ ಮುಗಿಯಿತು ಎನ್ನುವ ಅರ್ಥವೂ ರೂಢಿಯಲ್ಲಿದೆ.

ಮಾಲ್‌ಂಡ್‌ಮರ ಮಾಲ್‌ಂಡ್ ಸೇಕೇ ಸೇಕ್ ಬಡೆಕ್ಕಿಯಿ ಜಾಯಿನ ಮರ ಕೊಚ್ಚಿನರೇ, ಲೇಲಲೇಲೆಲೇಗಾ ಉರಿಕುಡುಪ್ನೆಲಾ ದಿಕ್ಕಾ – ಇತ್ಯಾದಿ ಕಬಿತಗಳಲ್ಲಿ ಮರಗಳ ಹೆಸರುಗಳ ಪಟ್ಟಿಯೇ ದೊರೆಯುತ್ತದೆ. ಮರ, ತರಕಾರಿಗಳು – ಸಮೃದ್ಧಿಯ ಸಂಕೇತಗಳು. ಅನೇಕ ಕಬಿತಗಳಲ್ಲಿ ಮರಗಳ ತರಕಾರಿಗಳ ಹೆಸರುಗಳು ಬಂದಿರುವುದನ್ನು ಗಮನಿಸಿದಾಗ ಹೆಣ್ಣು ಸಂಘರ್ಷಕ್ಕಿಂತ ಸಮೃದ್ಧಿ ಹಾಗೂ ಸಾಮರಸ್ಯದ ಆಶಯವನ್ನು ಇಟ್ಟುಕೊಂಡಿದ್ದಾಳೆ ಎಂಬುದು ವ್ಯಕ್ತವಾಗುತ್ತದೆ. ಇಂತಹ ಸಮೃದ್ಧಿ ತರುವ ಆಶಯಗಳನ್ನು ಕಬಿತಗಳನ್ನು ವೃತ್ತಿಯ ಸಂದರ್ಭದಲ್ಲಿ ಹೆಣ್ಣು ಹಾಡುತ್ತಾಳೆ.

ತೇರ್‌ಡ್ ತೇರೆಡ್ದೇನೋ – ಈ ಕಬಿತದಲ್ಲಿ ಬೇರೆ ಬೇರೆ ಊರುಗಳ ಹೆಸರುಗಳಿವೆ. ಧರ್ಮಸ್ಥಳ, ಸುಬ್ರಹ್ಮಣ್ಯ, ವಿಟ್ಲ, ಕೇಪು, ಅನಂತಾಡಿ, ಉಡುಪಿ, ಕದ್ರಿ, ಉಜಿರೆ, ಉಪ್ಪಿನಂಗಡಿ – ಇಂತಹ ತುಳುನಾಡಿನ ಪ್ರಸಿದ್ಧ ದೇವಾಲಯಗಳ ರಥೋತ್ಸವದ ಉಲ್ಲೇಖವಿದೆ. ಜಾತ್ರೆಯ ಜನಸಂದಣಿಯಲ್ಲಿ ಸೂಳೆಯರೂ ಸೇರಿರುತ್ತಿದ್ದರು. ಇಂತಹ ಸಂದರ್ಭಗಳನ್ನು ಅವರ ಮೈಮುಟ್ಟುಲು ರಸಿಕರು ಬಳಸಿಕೊಳ್ಳುತ್ತಿದ್ದರು ಎಂಬ ಅಂಶ ಈ ಕಬಿತದಿಂದ ತಿಳಿಯುತ್ತದೆ.

ಬಲ್ಲಲೆ ಬೊಟ್ಟುಡು ತಂಬಿಲ ಲಕ್ಕ್‌ತುಕ ಪೋಯಿ, ‘ಪೊಯಮ್ಮಾ ಜೇವೂ ಪೋಯಿ ಕಾವೇರಮ್ಮಾ ಕನ್ಯಾಸೀರ್ಥೋಗೂ’ – ಈ ಕಬಿತಗಳಲ್ಲಿ ಬಲ್ಲಾಳರ ಬೆಟ್ಟಿನಲ್ಲಿ ನಡೆಯುವ ತಂಬಿಲಕ್ಕೆ ಹಾಗೂ ಕಾವೇರಿ ತೀರ್ಥಕ್ಕೆ ಹೆಣ್ಣೊಬ್ಬಳನ್ನು ಕರೆಯುವ ಪ್ರಸ್ತಾಪಬರುತ್ತದೆ. ವರ್ಷಕ್ಕೊಮ್ಮ ನಡೆಯುವ ಕೊಡಗಿನ ತಲಕಾವೇರಿಯ ತೀರ್ಥಸ್ನಾನಕ್ಕೆ, ತಂಬಿಲಕ್ಕೆ ಹಳ್ಳಿಯ ಹೆಂಗುಸರು ವೈಭವದಿಂದ ಹೊರಡುತ್ತಿದ್ದರು. ದಿನನಿತ್ಯದ ಕೆಲಸ ಕಾರ್ಯಗಳಿಂದ ಬಿಡುಗಡೆ ಪಡೆದು ಇಂತಹ ಜಾತ್ರೆ, ಹಬ್ಬಗಳಲ್ಲಿ ಹಳ್ಳಿಯ ಹೆಂಗಸರು ಸಂತೋಷದಿಂದ ಭಾಗವಹಿಸುತ್ತಿದ್ದರು ಎನ್ನುವ ಅಂಶ ಈ ಕಬಿತಗಳಿಂದ ತಿಳಿಯುತ್ತದೆ.

ಬಲ್ಲಾಯ ಬೂತೋ ಬಲ್ಲಾಯ ಬಲ್ಲಂಜದ ಮೆಲೆಡ್ದೇ ಬಲ್ಲಾಯ – ಈ ಕಬಿತದಲ್ಲಿ ತುಳುನಾಡಿನ ಧಾರ್ಮಿಕ ರಂಗಭೂಮಿಯಾದ ಭೂತಾರಾಧನೆಯ ಸುಳಿವು ಸಿಗುತ್ತದೆ. ಭೂತಗಳು ಪಶ್ಚಿಮ ಘಟ್ಟದಿಂದ ಇಳಿದು ತುಳುನಾಡಿಗೆ ಬಂದ ಬಗ್ಗೆ ಪಾಡ್ದನಗಳಲ್ಲಿ ಉಲ್ಲೇಖಗಳಿವೆ. ಈ ಅಂಶ ಕಬಿತದಲ್ಲೂ ವ್ಯಕ್ತವಾಗಿದೆ. ಇಂತಹ ಭೂತಕ್ಕೆ ಆವಾರ ಕೊಡುವ ಕ್ರಮವಿದೆ. ಇದನ್ನು ಹೆಣ್ಣು ಕಬಿತದಲ್ಲಿ ಸೇರಿಸಿದ್ದಾಳೆ. ಗಗ್ಗರ, ತಿರಿ, ಸೀಯಾಳ, ಕಡ್ತಲೆ – ಹೀಗೆ ಭೂತಕ್ಕೆ ಬಳಸುವ ಪರಿಕರಗಳ ಬಗ್ಗೆ ಈ ಕಬಿತದಲ್ಲಿ ಉಲ್ಲೇಖವಿದೆ. ಭೂತಾರಾನೆಯಲ್ಲಿ

ಜನಪದರು ಬೆಳೆ-ಭಾಗ್ಯ, ಸುಖ-ಸಂಪತ್ತು ಕೊಟ್ಟು ಕಾಪಾಡಲು ಭೂತಗಳನ್ನು ಪ್ರಾರ್ಥಿಸುತ್ತಾರೆ. ಕೃಷಿ ಹಾಗೂ ಭೂತಾರಾಧನೆಗೆ ಸಾಂಸ್ಕೃತಿಕವಾಗಿ ಸಂಬಂಧವಿದೆ. ಇಂತಹ ಭೂತಾರಾಧನೆಯನ್ನು ಗಮನಿಸಿದ ಹೆಣ್ಣು ಭತ್ತದ ನಾಟಿಯ ಸಂದರ್ಭದಲ್ಲಿ ಹಾಡುವ ಕಬಿತದಲ್ಲಿ ಭೂತಾರಾಧನೆಯ ವಿವರಗಳನ್ನು ಹೆಣೆದಿದ್ದಾಳೆ.

ಏಳೇ ಮತ್ತು ಓಯ್ಯಾ ಏಲೇ (ಏಳೇ) ಹಾಗೂ ಓಯ್ಯಾ (ಹೋಯ್ಯ) ಕಬಿತಗಳು ನೇಜಿನೆಟ್ಟು ಮುಗಿಯುವ ಹಂತದಲ್ಲಿ ಹಾಡುವ ಕಬಿತಗಳು ‘ಓಯ್ಯಾ’ ಹಾಡುವ ಮೊದಲು ‘ಏಲೇ’ ಕಬಿತವನ್ನು ಹಾಡುತ್ತಾರೆ. ಕೆಲಸದ ಮುಕ್ತಾಯದ ಹಂತದಲ್ಲಿರುವ ತ್ವರೆಯ ಪ್ರವೃತ್ತಿಯನ್ನು ಈ ಕಬಿತಗಳ ಲಯದಲ್ಲಿ ಕಾಣಬಹುದು. ಈ ಎರಡೂ ಕಬಿತಗಳ ಲಯಗಳು ತ್ವರಿತಗತಿಯಲ್ಲಿ ಸಾಗುವ ಕೆಲಸದ ಲಯಕ್ಕೆ ತಕ್ಕಂತೆ ಇದೆ. ‘ಏಲೇ’, ಓಯ್ಯಾ ಎನ್ನುವ ಪಲ್ಲವಿಯಂತೆಯೇ ಉಳಿದ ಸಾಲುಗಳನ್ನು ಬೇಗಬೇಗನೆ ಹೇಳುತ್ತಾರೆ. ನಂತರದ ಪ್ರತೀ ಸಾಲಿನ ಆರಂಭದಲ್ಲಿ ‘ಓ’ ಎಂದು ಬರುತ್ತದೆ.

ಏಲೇ ಮತ್ತು ಓಯ್ಯಾ ಕಬಿತಗಳಲ್ಲಿ ಸುದ್ದಿ ತಿಳಿಸಲು ಬಳಸುತ್ತಿದ್ದ ಓಲೆಯ ಪ್ರಸ್ತಾಪವಿದೆ. ತಾಳೆಗರಿಯಿಂದ ಓಲೆ ತಯಾರಿಸುವ ರೀತಿಯ ವಿವರವೂ ಇದೆ. ಓಲೆಗರಿಯಿಂದ ಓಲೆ ಬರೆಯುವವ ಬ್ರಾಹ್ಮಣ, ಮಣ್ಣಿನ ಕೆಲಸ ಮಾಡುವವ ಮಣ್ಣೊಡ್ಡು, ಮರ ಕಡಿಯುವವ ಸೇನಾವ, ಕಲ್ಲು ಕಡಿಯುವವ ಕಲ್ಲುಕುಟಿಗ – ಹೀಗೆ ಬೇರೆ ಬೇರೆ ವೃತ್ತಿ ಕಸುಬುಗಳನ್ನು ಮಾಡುವ ವಿವಿಧ ಜಾತಿಗಳ ಜನರ ಹೆಸರುಗಳಿವೆ.

ಭಾರ ಹೊತ್ತು ಸಾಗುವ ಸಂದರ್ಭದಲ್ಲಿ ಆಯಾಸವಾದಾಗ ಹೊರೆ ಇಳಿಸಲು ಸಹಾಯಕವಾಗುವಂತಹ ರಚನೆಗಳ ಪ್ರಸ್ತಾಪವಿದೆ. ಅಕ್ಕಿಮೂಟೆ ಇಳಿಸಲು ‘ಅಟ್ಟೆ ಕಲ್ಲು’ ಉಪ್ಪಿನ ಮೂಟೆ ಇಳಿಸಲು ‘ಉಪ್ಪುಕಲ್ಪು’ – ಇವುಗಳನ್ನು ಬಳಸುತ್ತಿದ್ದುದು ಕಬಿತದಿಂದ ಸ್ಪಷ್ಟವಾಗುತ್ತದೆ.

ಹತ್ತು ತಾಯಿಯ ಮಕ್ಕಳು ಒಂದೇ ತಾಯಿ ಮಕ್ಕಳಂತೆ ನಗುತ್ತಾ ನಲಿಯುತ್ತಾ ನಾಟಿ ಮಾಡೋಣ ಎನ್ನುವ ಸಾಲುಗಳು ನೇಜಿ ನೆಡುವ ಪ್ರಾರಂಭದಲ್ಲಿ ಹಾಡುವ ‘ಓ ಬೇಲೇ‘ ಕಬಿತದಲ್ಲಿ ಕಂಡು ಬರುವಂತೆಯೇ, ನೇಜಿಯ ಕೊನೆಯಲ್ಲಿ ಹಾಡುವ ‘ಓಯ್ಯಾ’ ಕಬಿತದಲ್ಲೂ ಕಾಣಬಹುದು. ಸಮಾನತೆಯ, ಸಹಬಾಳ್ವೆಯ ತತ್ತ್ವವನ್ನು ಇಲ್ಲಿಯೂ ನಾವು ಗಮನಿಸಬಹುದು.

ನೇಜಿನೆಟ್ಟು ಮುಗಿಯುವ ಹಂತದಲ್ಲಿ ಹಾಡುವ ‘ಓಯ್ಯಾ‘ ಕಬಿತದಲ್ಲಿ ಗಟ್ಟನಾಟಿ ಬಿದಿರಿನ ಹಿಂಡಿಲಿನಂತೆ, ಬಾಳೆ ಗೊನೆಯಂತೆ ಎದ್ದು ಬರಲಿ, ಎನ್ನುವ ಸಾಲುಗಳನ್ನು ಗಮನಿಸಬಹುದು. ಪೈರು ಚೆನ್ನಾಗಿ ಬೆಳೆಯಬೇಕೆಂಬ ಹಾರೈಕೆಯನ್ನು ಇಲ್ಲಿ ಕಾಣಬಹುದು. ಬಿದಿರಿನ ಹಿಂಡಿಲು, ಬಾಳೆಯ ಗೊನೆ ಸಮೃದ್ಧಿಯ ಸಂಕೇತಗಳು. ಬಿದಿರಿನ ಹಿಂಡಿಲಿನಲ್ಲಿ ಅನೇಕ ಬಿದಿರುಗಳು ಇರುವಂತೆ, ಬಾಳೆಯ ಗೊನೆಯಲ್ಲೂ ಅನೇಕ ಬಾಳೆಕಾಯಿಗಳು ಇರುತ್ತವೆ. ಅಂತಯೇ ಅನೇಕ ಭತ್ತದ ತೆನೆಗಳು ಬಂದು ಒಳ್ಳೆಯ ಬೆಳೆ ಬರಲಿ, ಎಲ್ಲೆಡೆ ಸಮೃದ್ಧಿ ನೆಲೆಸಲಿ ಎಂಬ ಹೆಣ್ಣಿನ ಸಮೃದ್ಧಿಯ ನಿಲುವನ್ನು ಇಲ್ಲಿ ಕಾಣಬಹುದು.

ಉರಲ್‌

ತುಳು ಜನಪದ ಸಾಹಿತ್ಯದಲ್ಲಿ ‘ಉರಲ್’ (ಉರಳ್) ಎಂಬುದು ಕೆಲಸದ ಹಾಡುಗಳ ಒಂದು ಸಣ್ಣ ಪ್ರಕಾರವಾಗಿದೆ. ಇದು ಸಾಮಾನ್ಯವಾಗಿ ಎರಡು ವಾಕ್ಯಗಳಿಂದ ಕೂಡಿ ಕನ್ನಡದ ಚುಟುಕದಂತಿದೆ. ಗಂಡಸರು ಗದ್ದೆ ಉಳುವಾಗ ಅಥವಾ ಗಾಡಿ ಹೊಡೆಯುವಾಗ ದೀರ್ಘವಾದ ಆಲಾಪನೆಯೊಂದಿಗೆ ‘ಉರಲ್‘ ಹೇಳುತ್ತಾರೆ. ಉರಲ್ ಹೇಳಿದ ಬಳಿಕ ಕೊನೆಯಲ್ಲಿ ಓಓಓಓ ಎನ್ನುತ್ತಾರೆ. ಇದನ್ನು ‘ಉರಲ್ ಕೊಡುವುದು‘ ಎನ್ನುತ್ತಾರೆ. ಹೆಂಗುಸರು ನೇಜಿ ನೆಡುವ ಸಂದರ್ಭದಲ್ಲಿ ಉರಲ್ ಹಾಡುತ್ತಾರೆ.

ಉರಲ್‌ನ್ನು ಕುರಿತಂತೆ ಅಧ್ಯಯನ ಹಾಗೂ ಸಂಗ್ರಹಕಾರ್ಯ ನಡೆದುದು ತೀರಾ ಕಡಿಮೆ. ಬಿ.ಎ. ವಿವೇಕ ರೈ ಅವರು ತಮ್ಮ ‘ತುಳುಜನಪದ ಸಾಹಿತ್ಯ’ (೧೯೮೫) ಕೃತಿಯಲ್ಲಿ ಉರಲ್‌ನ್ನು ಕುರಿತಂತೆ ವಿಶ್ಲೇಷಿಸಿದ್ದಾರೆ. ಇದರಲ್ಲಿ ಸುಮಾರು ಏಳು ಉರಲ್‌ಗಳ ವಸ್ತು ವಿವೇಚನೆಯನ್ನು ಮಾಡಿದ್ದಾರೆ. ಇವರದೇ ‘ತುಳುವ ಅಧ್ಯಯನ : ಕೆಲವು ವಿಚಾರಗಳು’ (೧೯೮೦)ಕೃತಿಯಲ್ಲಿ ‘ಉರಲ್‘ನ್ನು ಕುರಿತಂತೆ ಅಧ್ಯಯನ ಪೂರ್ಣ ಲೇಖನವಿದೆ. ಇದನ್ನು ಬಿಟ್ಟರೆ, ಕೆಲವು ವಿದ್ವಾಂಸರು ತುಳು ಜನಪದ ಗೀತಗಳ ಬಗ್ಗೆ ಹೇಳುವಾಗ ಉರಲ್‌ನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಯಾರೂ ಈ ಬಗ್ಗೆ ವಿವರವಾಗಿ ಅಧ್ಯಯನ ನೆಡಸಿಲ್ಲ. ರೂಪಕಲಾ ಆಳ್ವ ಅವರು ತಮ್ಮ ನಾಟಿ (೧೯೯೨) ಕೃತಿಯಲ್ಲಿ ಹೆಂಗುಸರು ನೇಜಿ ನೆಡುವ ಸಂದರ್ಭದಲ್ಲಿ ಹಾಡುವ ಸುಮಾರು ಹದಿನೆಂಟು ಉರಲ್‌ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಉಳಿದಂತೆ ಉರಲ್‌ನ ಸಂಗ್ರಹ ಕಾರ್ಯವೂ ನಡೆದಿಲ್ಲ ಎನ್ನಬಹುದು.

ಉರಲ್‌ನ ಕುರಿತಂತೆ ಕೆಲವು ವಿದ್ವಾಂಸರ ಅಭಿಪ್ರಾಯವನ್ನು ಗಮನಿಸಬಹುದು.

‘ಉರಲ್ ಎಂದರೆ ಉಳುವಾಗ ಹೇಳುವ ಹಾಡು. ಮೂಲತಃ ಉಳುವಾಗ ಹೇಳುತ್ತಿದ್ದಂತಹ ಈ ಉರಲ್‌ಅನಂತರ ಗಾಡಿ ಹೊಡೆಯುವಾಗಲೂ ಬಳಕೆಯಾಗಿರಬೇಕು(ವಿವೇಕ ರೈ, ೧೯೮೦; ಪುಟ ೫೦).

‘ಹೆಂಗಸರು ಹೇಳುವ ಉರಲ್‌ಗಳನ್ನು ಗದ್ದೆ ಉತ್ತ ಬಳಿಕ ಎತ್ತುಗಳನ್ನು ಗದ್ದೆಯಿಂದ ಮೇಲೆ ಅಟ್ಟಿದ ನಂತರ ಹೇಳುತ್ತಾರೆ. ಎತ್ತು ಅಥವಾ ಕೋಣಗಳ ಗದ್ದೆಯಲ್ಲಿರುವಾಗ ಈ ಉರಲ್‌ಗಳನ್ನು ಹಾಡಬಾರದು ಎಂಬ ಕ್ರಮವಿದೆ. ಕಬಿತ ಹಾಡಿದ ಬಳಿಕ ನೇಜಿ ನೆಡುವುದು ಕೊನೆಯಾಗುತ್ತಾ ಬಂದಂತೆ, ಸಂತೋಷದಲ್ಲಿ ಈ ಉರಲ್‌ಗಳನ್ನು ಹಾಡುತ್ತಾರೆ. ಉರಲ್‌ಹಾಡುವಾಗ ಹೆಂಗಸರು ಒಬ್ಬರ ಮೇಲೆ ಇನ್ನೊಬ್ಬರು ಕೆಸರು ನೀರನ್ನು ಮೈಗೆ ಎರಚುತ್ತಾ ಸಂಭ್ರಮಿಸುತ್ತಾರೆ. ದೇಹಕ್ಕಾದ ಆಯಾಸವನ್ನು ಮರೆಯಲು ಮತ್ತು ಸಂತೋಷಕ್ಕಾಗಿ ಉರಲ್‌ಗಳನ್ನು ಹಾಡುತ್ತಾರೆ. ಇದು ಕೇಳಲು ಸ್ವಾರಸ್ಯಕರವಾಗಿದ್ದು ತಿಳಿ ಹಾಸ್ಯವನ್ನೊಳಗೊಂಡಿರುತ್ತದೆ. ‘ಮಂಜೊಟ್ಟಿಗೋಣ’ ಕಬಿತ ಹಾಡಿದ ನಂತರ ಯಾವುದಾದರೂ ಮೂರು ಉರಲ್‌ಗಳನ್ನು ಹಾಡಲೇಬೇಕೆಂಬ ನಿಯಮವಿದೆ. ಈ ಉರಲ್‌ನ ಕೊನೆಯಲ್ಲಿ ಓ… ಹೋಯ್‌ ಅಥವಾ ಓ… ಹೊಡ್ತೋ ಎನ್ನುತ್ತಾರೆ. (ರೂಪಕಲಾ ಆಳ್ವ, ೧೯೯೨; ಪುಟ ೧೦೬).

ಉರಲ್‌ನ ಕಾರ್ಯ : ದ್ವಿಪದಿ ಜಾತಿಗೆ ಸೇರುವ ಕೆಲಸದ ಹಾಡುಗಳಿಂದ ಉರಲ್‌ನ ರಾಚನಿಕ ಸ್ವರೂಪ ಮತ್ತು ಆ ಕೆಲಸಗಳಿಗೆ ಸಂಬಂಧವಿದೆ. ಉರಲ್ ಹಾಡುವ ರೀತಿ ಮತ್ತು ಅದರ ಲಯ ಉಳುವಾಗ ಮತ್ತು ಗಾಡಿ ಹೊಡೆಯುವಾಗ ಅನುಕೂಲವಾಗಿದೆ. ಅಂದರೆ ಉಳುವ ಅಥವಾ ಗಾಡಿ ಹೊಡೆಯುವಾಗ ಅನುಕೂಲಕರವಾಗಿದೆ. ಅಂದರೆ ಉಳುವ ಅಥವಾ ಗಾಡಿ ಎಳೆಯುವ ಕೆಲಸದ ಲಯಕ್ಕೆ ಹೊಂದಿಕೆಯಾಗುತ್ತದೆ. ಪ್ರತಿಪದದ ಕೊನೆಯಲ್ಲಿ ಎಳೆದು ದೀರ್ಘವಾಗಿ ಹೇಳುವ ಕಾರಣ ಕೆಲಸದ ಒಂದೊಂದು ಗತಿಯೂ ಮುಂದಿನ ಗತಿಗೆ ಸಂಬಂಧದ ಕೊಂಡಿಯನ್ನು ಕೊಡುತ್ತದೆ. ಇದಕ್ಕೆ ಪೂರಕವಾಗಿ ಓಓಓಓ ಎಂದು ಕೂಡುವ ಆಲಾಪನೆ ಕ್ರಿಯಾತ್ಮಕವಾಗಿ ಪರಿಣಾಮಕಾರಿಯಾಗಿದೆ. ರಾಗವಾಗಿ ಆಲಾಪನೆಯಿಂದ ಹೇಳುವ ಉರಲ್ ಉಳುವ ಅಥವಾ ಗಾಡಿ ಎಳೆಯುವ ಎತ್ತುಗಳಿಗೆ ಉತ್ತೇಜನವನ್ನು, ಹೊಸ ಚೈತನ್ಯವನ್ನು ನೀಡಿ ಅವು ಲವಲವಿಕೆಯಿಂದ ಮುಂದಕ್ಕೆ ಹೋಗಲು ಸಹಾಯಕವಾಗುತ್ತದೆ. ಅದರೊಂದಿಗೇ ಉಳುವ ವ್ಯಕ್ತಿಗೂ ಉತ್ಸಾಹವನ್ನು ಉಂಟು ಮಾಡಿ ಆಯಾಸ ಮರೆಸುತ್ತದೆ. ಕೆಲಸದ ದಕ್ಷತೆ ಹೆಚ್ಚಿಸುತ್ತದೆ.

ವಸ್ತು : ಎರಡು ಸಾಲಿನ ಜನಪದ ಹಾಡುಗಳಾದ ಉರಲ್‌ಗಳಲ್ಲಿ ಶಬ್ದ ಮತ್ತು ಅರ್ಥದ ಸೊಗಸು, ಲಾಲಿತ್ಯ ಸಮ್ಮಿಳಿತವಾಗಿರುತ್ತದೆ. ಪ್ರಾಸದ ವಿವಿಧ ವಿನ್ಯಾಸಗಳಿರುತ್ತವೆ. ಸಾಮಾನ್ಯವಾಗಿ ನವುರಾದ ಹಾಸ್ಯ ಸೇರಿಕೊಂಡಿರುತ್ತದೆ. ಕೆಲವೊಂದು ಉರಲ್‌ಗಳು ಗಾದೆಯ ರೀತಿಯಲ್ಲಿರುತ್ತವೆ. ಉರಲ್‌ಗಳನ್ನು ಮೇಲ್ನೋಟಕ್ಕೆ ಗಮನಿಸಿದಾಗ ಅವುಗಳ ವಸ್ತು ಉಳುವ ಎತ್ತು ಅಥವಾ ಕೋಣಗಳಿಗೆ ಸಂಬಂಧಿಸಿರಬಹುದು, ಉಳುವವನ ಕುರಿತಾಗಿಬಹುದು, ಒಡೆಯನ ಗುಣಸ್ವಭಾವದ ಕುರಿತಾಗಿರಬಹದು, ಸುತ್ತಮುತ್ತ ಗಮನಿಸುವ ಗಿಡುಗ, ಬಾವಲಿ, ಎಮ್ಮೆಯಕರು ಇತ್ಯಾದಿ ಪಕ್ಷಿ-ಪ್ರಾಣಿಗಳ ಕುರಿತಂತೆ ಇರಬಹುದು, ಅನ್ಯಸಂಸ್ಕೃತಿಯ ಜನರನ್ನು ಕುರಿತ ವಿಡಂಬನೆಯಾಗಿರಬಹುದು, ಕೆಲವೊಂದು ತಮಾಷೆಗಾಗಿ ನಿರ್ಮಾಣವಾದುದಾಗಿರಬಹುದು. ಉರಲ್‌ನ ವಸ್ತು ಮತ್ತು ಅದನ್ನು ಹಾಡುವ ಸಂದರ್ಭಗಳಿಗೆ ಕೆಲವೊಂದು ಬಾರಿ ಮಾತ್ರ ಸಂಬಂಧವನ್ನು ಗುರುತಿಸಬಹುದು, ಅನೇಕ ಬಾರಿ ಯಾವುದೇ ಸಂಬಂಧವಿರುವುದಿಲ್ಲ. ಉದಾಹರಣೆಗಾಗಿ ಕೆಲವು ಉರಲ್‌ಗಳನ್ನು ಗಮನಿಸಬಹುದು.

೧. ಕುಮೆರಡ್ಕದ ಕುಡುವೋ ಕಾಳಗ್‌
ಕಾಯೊರಡ್ಕದ ಬಡುವೋ ಬೊಳ್ಳಗ್‌|| ಓಓಓಓ||
(ಕುಮೇರಿಯ ಹುರುಳಿ ಕಾಳನಿಗೆ
ಕಾಯೆರಡ್ಕದ (ಕಾಸರಕನ ಕಾಡಿನ) ಬೆತ್ತ ಬೊಳ್ಳನಿಗೆ)

ಇದು ಉಳುವ ಕೋಣಗಳಿಗೆ ಸಂಬಂಧಿಸಿದ ಒಂದು ಉರಲ್. ಎರಡು ಕೋಣಗಳ ಕೆಲಸದ ತಾರತಮ್ಯವನ್ನು ಗಮನಿಸಿಕೊಂಡು ಅವುಗಳಿಗೆ ಕೊಡುವಂತಹ ಬಹುಮಾನ ಮತ್ತು ಶಿಕ್ಷೆ – ಇವು ಇಲ್ಲಿನ ವಸ್ತು. ಈ ದೃಷ್ಟಿಯಿಂದ ಉರಲ್‌ನ ವಸ್ತು ಮತ್ತು ಹಾಡುವ ಸಂದರ್ಭ (ಉಳುವುದು ಅಥವಾ ಗಾಡಿ ಹೊಡೆಯುವುದು) ಕ್ಕೆ ನೇರವಾದ ಸಂಬಂಧವಿದೆ. ಸರಿಯಾಗಿ ನೊಗ, ನೇಗಿಲು ಎಳೆಯುವ ಕಾಳನಿಗೆ ಹುರುಳಿ, ಸರಿಯಾಗಿ ಎಳೆಯದ ಬೊಳ್ಳನಿಗೆ ಬೆತ್ತದ ಪೆಟ್ಟು.

ಇದಕ್ಕೆ ಪೂರಕವಾಗಿ ಹೆಂಗುಸರು ನೇಜಿಯ ಸಂದರ್ಭದಲ್ಲಿ ಹಾಡುವ ಉರಲನ್ನು ಗಮನಿಸಬಹುದು.

ಓ… ಕಾಯೆರಡ್ಕದ ಬಡುಗೆ ಬೊಳ್ಳನಂಕ್‌
ಓ… ಕುಮೆರಡ್ಕದ ಕುಡುಗೆ ಬೊಳ್ಳ ನಂಕ್||
ಓ… ಹೊಡ್ತೋ …|| ಕಾಯೆರಡ್ಕದ ಬೆತ್ತ ಬೊಳ್ಳನಿಗೆ
ಕುಮೇರಿಯ ಹುರುಳಿ ಬೊಳ್ಳ ನಮಗೆ)

ಈ ಉರಲ್‌ನಲ್ಲಿ ಕೇವಲ ಬೊಳ್ಳ ಕೋಣನ ಪ್ರಸ್ತಾಪ ಮಾತ್ರ ಇದೆ. ಬೊಳ್ಳೆ ಕೋಣ/ಎತ್ತಿನೊಂದಿಗೆ ಹೆಣ್ಣು ತನ್ನನ್ನು ಒಳಗೊಳ್ಳುವಂತೆ ಹಾಡಿದ ಉರಲ್ ಇದು. ಸರಿಯಾಗಿ ದುಡಿಯದಿದ್ದಲ್ಲಿ ಬೆನ್ನಿಗೆ ಬೆತ್ತದ ಪೆಟ್ಟು, ದುಡಿದಲ್ಲಿ ಹೊಟ್ಟೆತುಂಬಾ ಆಹಾರ. ದುಡಿಮೆಯನ್ನು ಹೆಣ್ಣು ಸ್ವೀಕರಿಸಿರುವ ದೃಷ್ಟಿ ಇಲ್ಲಿ ವ್ಯಕ್ತವಾಗಿದೆ.

ಮೇಲಿನ ಎರಡೂ ಉರಲ್‌ಗಳಲ್ಲಿ ವ್ಯಕ್ತವಾದ ತತ್ತ್ವ ಒಂದೇ. ಕೆಲಸಕ್ಕೆ ತಕ್ಕ ಪ್ರತಿಫಲ ಎಂಬ ಅಂಶ ಇಲ್ಲಿ ವ್ಯಕ್ತವಾಗಿದೆ.

ಗಾಳಿಗಪ್ಪಾ ಪೋಪುಂಡೋ ಗೋಳಿದಾ ಗೆಲ್ಲೇ
ದೋಲುಗಪ್ಪಾ ನಲಿಪ್ಪುವೇ ಜವ್ವಾನಾದಿಕ್ಕೇ || ಓಓಓಓ ||
(ಗಾಳಿಗೆ ಹೋಗುತ್ತಿದೆ ಗೋಳಿಯ ಗೆಲ್ಲು
ಡೋಲಿಗೆ ಕುಣಿಯುತ್ತಾನೆ ತರುಣ ಹೊಲೆಯನು)

ವಸ್ತುವಿನ ದೃಷ್ಟಿಯಿಂದ ಈ ಉರಲ್‌ನಲ್ಲಿ ಹೊಲೆಯರ ಪ್ರಸ್ತಾಪವಿದೆ. ತುಳುನಾಡಿನ ಹಳ್ಳಿಗಳಲ್ಲಿ ಹಿಂದೆ ಸಾಮಾನ್ಯವಾಗಿ ಹೊಲೆಯರು ಡೋಲು ಬಡಿದು ಕುಣಿಯುತ್ತಿದ್ದರು. ಅಂತಹ ಒಂದು ಚಿತ್ರಣವನ್ನು ಇಲ್ಲಿ ಕೊಡಲಾಗಿದೆ. ಗಾಳಿಗೆ ಗೋಳಿಯ ರೆಂಬೆ ಲಯಬದ್ಧವಾಗಿ ಚಲಿಸುವಲ್ಲಿ, ಗಾಳಿಯ ಬೀಸುವಿಕೆಯಿಂದ ಪ್ರಕೃತಿಯಲ್ಲಾಗುವ ಚಲನೆಯ ಜೊತೆಗೆ ಆನಂದದ ವಾತಾವರಣವನ್ನು ಅದು ಸೃಷ್ಟಿಸುತ್ತದೆ ಎನ್ನುವ ಭಾವನೆಯೂ ಬರುತ್ತದೆ. ಇಂತಹ ಉಲ್ಲಾಸದ, ಸಂತೋಷದ ವಾತಾವರಣದಲ್ಲಿ ಡೋಲಿನ ಬಡಿತಕ್ಕೆ ಅನುಗುಣವಾಗಿ ಹೊಲೆಯರ ತರುಣ ಕುಣಿದಿರಬೇಕು. ಹಿಂದಿನ ಕಾಲದಲ್ಲಿ ಉಳುವವನು ಮತ್ತು ಉರಲ್ ಹಾಡುವವನು ಹೆಚ್ಚಾಗಿ ಹೊಲೆಯ ಆಳು ಎಂಬುದನ್ನು ಗಮನಿಸಿದಾಗ ಉಳುವ ಸಂದರ್ಭದಲ್ಲಿ ಆತ ತನ್ನ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುತ್ತಾನೆ. ಜ್ಞಾಪಿಸಿಕೊಳ್ಳುತ್ತಾನೆ. ಆ ಮೂಲಕ ಆತ ಮಗದೊಮ್ಮೆ ಹೊಸ ಚೈತನ್ಯವನ್ನು ಪಡೆಯುತ್ತಾನೆ, ದುಡಿಮೆಯ ಆಯಾಸವನ್ನು ನೀಗುತ್ತಾನೆ.

೩. ಎಂಕುಳೆ ಬೊಳ್ಳೆ ಪೋವಂದಿ ಕಂಬುಳ ಇದ್ದಿ
ಎಂಕುಳೆ ಉಳ್ಳಾಯೆ ಪೋವಂದಿ ಪೊಣ್ಣು ಇದ್ದಿ || ಓಓಓಓ ||
(ನಮ್ಮ ಬೊಳ್ಳ ಹೋಗದ ಕಂಬಳ ಇಲ್ಲ
ನಮ್ಮ ಒಡೆಯ ಹಿಡಿಯದ ಹೆಣ್ಣು ಇಲ್ಲ)

ಈ ಉರಲ್ ಹೊಲೆಯ ಆಳೊಬ್ಬ ಹೇಳುವ ರೀತಿಯಲ್ಲಿದೆ. ತನ್ನ ಬೊಳ್ಳ ಕೋಣನ ಪರಾಕ್ರಮವನ್ನು ಹೊಲೆಯನೊಬ್ಬ ಈ ಉರಲ್‌ನಲ್ಲಿ ಬಹಳ ಹೆಮ್ಮೆಯಿಂದ ಸಾರುತ್ತಿದ್ದಾನೆ. ಎಲ್ಲ ಕಂಬಳಗಳಲ್ಲಿಯೂ ಗೆದ್ದ ಬೊಳ್ಳ ಕೋಣನ ಕುರಿತು ಅದರ ಜೊತೆಗೆ ಹೋಗಿರಬಹುದಾದ ಹೊಲೆಯನೊಬ್ಬನ ಅಭಿಮಾನ, ಗೌರವ ಇಲ್ಲಿ ವ್ಯಕ್ತವಾಗಿದೆ. ಉರಲ್‌ನ ನಂತರದ ಭಾಗದಲ್ಲಿ ತನ್ನ ಧಣಿ(ಒಡೆಯ) ಪಡೆಯದ ಹೆಣ್ಣು ಇಲ್ಲ ಎಂಬಲ್ಲಿ ತನ್ನ ಒಡೆಯನ ಕುರಿತಂತೆ ಹೇಳುತ್ತಾನೆ. ಭೂಮಿಯ ಒಡೆಯರು ಅನೇಕ ಹೆಣ್ಣುಗಳ ಸಂಪರ್ಕ ಹೊಂದುವುದು ಹಿಂದೆ ಸಾಮಾನ್ಯವಾಗಿತ್ತು. ಮದುವೆಯಾದ ಗಂಡಸರೂ ಕೆಲವು ಹೆಣ್ಣುಗಳನ್ನು ಉಪಪತ್ನಿಯರ ಹಾಗೆ ಇಟ್ಟುಕೊಂಡಿದ್ದರು. ಈ ರೀತಿಯಲ್ಲಿ ಒಂದು ಗಂಡು ಅನೇಕ ಹೆಣ್ಣುಗಳನ್ನು ಇಟ್ಟುಕೊಳ್ಳುವುದು ಆ ಕಾಲದ ಸಮಾಜದಲ್ಲಿ ಪ್ರತಿಷ್ಠೆಯ ವಿಷಯವಾಗಿತ್ತು. ಕಂಬಳದಲ್ಲಿ ಒಂದು ಕೋಣ ಜಯಗಳಿಸುವುದು ಮತ್ತು ಒಂದು ಗಂಡು ತನಗೆ ಬೇಕಾದ ಹೆಣ್ಣನ್ನು ಪಡೆಯುವುದು – ಇವೆರಡೂ ಅಂಶಗಳೂ ಆ ಕಾಲದ ಸಮಾಜದಲ್ಲಿ ಪ್ರತಿಷ್ಠೆಯ ವಿಷಯಗಳು ಎನ್ನುವುದಕ್ಕೂ ಹೊಲೆಯ ಸಾರುತ್ತಿದ್ದಾನೆ. ಒಂದು ಕಾಲದ ತುಳುನಾಡಿನ ಸಂಸ್ಕೃತಿಯನ್ನು ಈ ಉರಲ್‌ನಲ್ಲಿ ಕಾಣಬಹುದು.

ಓ…. ಕಂಬುಲಾಗೆ ಪೋನಾಗ ಬೊಳ್ಳೆ ಮದಿಮ್ಮಾಯೆ
ಓ… ಇಲ್ಲಾಡೆ ಬನ್ನಗವು ದೆತ್ತಿ ಮದಿಮಾಲತೆರ್ || ಓ… ಹೊಡ್ತೋ
(ಕಂಬಳಕ್ಕೆ ಹೋಗುವಾಗ ಬೊಳ್ಳ ಮದುಮಗ
ಮನೆಗೆ ಬರುವಾಗ ಒಡತಿ ಮೈನೆರೆದಿದ್ದಾಳೆ)

ಇದು ನೇಜಿ ನೆಡುವಾಗ ಹೆಂಗುಸರು ಹಾಡುವ ಉರಲ್‌. ಈ ಉರಲ್ ಹೊಲೆಯ ಹೆಂಗಸೊಬ್ಬಳು ಹೇಳುವ ರೀತಿಯಲ್ಲಿದೆ. ಮೊದಲ ಭಾಗದಲ್ಲಿ ಕಂಬಳಕ್ಕೆ ಹೋಗುವ ಸಂದರ್ಭದಲ್ಲಿ ಬೊಳ್ಳ ಕೋಣ ಮದುಮಗನಂತೆ ಸಿಂಗಾರವಾದ ಅದ್ದೂರಿಯಿಂದ ಮೆರಗಣಿಗೆಯಲ್ಲಿ ಹೋಗುವ ರೀತಿಯ ಬಗ್ಗೆ ಹೇಳಲಾಗಿದೆ. ಎರಡನೆ ಭಾಗದಲ್ಲಿ ಒಡತಿಯ ಬಗ್ಗೆ ಹೇಳಲಾಗಿದೆ. ಕಂಬಳ ಹಾಗೂ ಅದಕ್ಕೆ ಕೊಂಡೊಯ್ಯುವ ಕೋಣಗಳು ಫಲವಂತಿಕೆಯ ಸಂಕೇತಗಳು. ಒಡತಿ ಫಲವಂತಿಕೆಗೆ ಅಣಿಯಾದುದನ್ನು ಕಂಬಳದ ಎತ್ತಿಗೆ ಹೋಲಿಸಲಾಗಿದೆ. ಇಂತಹ ಫಲವಂತಿಕೆಯ ಆಶಯವುಳ್ಳ ಉರಲ್‌ಗಳನ್ನು ಕೃಷಿಯ ಸಂದರ್ಭದಲ್ಲಿ ಹೇಳುವುದೂ ಹೆಚ್ಚು ಸೂಕ್ತವಾಗಿದೆ.

ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳದ ಕುರಿತ ಪ್ರಸ್ತಾವ ಹಾಸ್ಯದ ಉರಲ್‌ಗಳಲ್ಲಿದೆ.

ಕೆಲವೊಮ್ಮೆ ತಮ್ಮ ದಣಿಗಳನ್ನೇ ಲೇವಡಿ ಮಾಡುವ ಹಾಸ್ಯದ ತುಣುಕುಗಳು ಉರಲ್‌ನಲ್ಲಿ ಹುದುಗಿರುತ್ತವೆ.

– ಎಂಕ್ಲೆ ಉಲ್ಲಾಯೆ ಊರುಗಾಪಿ ಬಾರಗೆ
ಆರೆಗೊಂಜಿ ಕಾಣಿಕೆ ಪೊಟ್ಟು ತಾರಗೆ || ಓಓಓಓ ||
(ನಮ್ಮ ಒಡೆಯ ಊರುಗೊಪ್ಪುವ ಯಜಮಾನ
ಅವರಿಗೊಂದು ಕಾಣಿಕೆ, ಹೊಟ್ಟು ತೆಂಗಿನಕಾಯಿ)
– ಮಾನೊಗು ಬಲ್ಲಾಳಗ್‌ಅಡಿಯೆನೆ
ಮಂದ ತೆಲಿಕ್ಕ್‌ಉಪ್ಪು ಪಾಡ್ದ್‌ಪರಿಯೆನೆ ||ಓಓಓಓ||
(ಮಾನಕ್ಕೆ ಬಲ್ಲಾಳರನ್ನು ಮದುವೆಯಾದೆ
ದಪ್ಪತಿಳಿಗೆ ಉಪ್ಪು ಹಾಕಿ ಕುಡಿದೆನಲ್ಲಾ)

ಮೇಲಿನ ಎರಡೂ ಉರಲ್‌ಗಳಲ್ಲಿ ನಯವಾದ ಹಾಸ್ಯದ ಮೂಲಕ ಒಡೆಯನನ್ನು ವಿಡಂಬಿಸಲಾಗಿದೆ.

ಮೊದಲನೆಯ ಉರಲ್‌ನಲ್ಲಿ ನಮ್ಮ ಉಳ್ಳಾಯ ಊರಿಗೆಲ್ಲಾ ಯಜಮಾನ ಎಂದು ಹೊಗಳುವಂತೆ ತೋರಿದರೂ ಆತನ ಬಗೆಗಿನ ವಿಡಂಬನೆ, ಅಲಕ್ಷ್ಯತನ ಉರಲ್‌ನ ನಂತರದ ಸಾಲಿನಲ್ಲಿ ಸ್ಪಷ್ಟವಾಗುತ್ತದೆ, ಅವರಿಗೆ ಕಾಣಿಕೆ ಹೊಟ್ಟು ತೆಂಗಿನ ಕಾಯಿ ಎಂಬಲ್ಲಿ, ಯಾಜಮಾನ್ಯ ಪದ್ಧತಿಯ ಕುರಿತ ನಯವಾದ ಆಕ್ರೋಶ, ಅಲಕ್ಷ್ಯಭಾವನೆಯ ಸೂಕ್ಷ್ಮ ಎಳೆಯನ್ನು ಇಲ್ಲಿ ಗಮನಿಸಬಹುದು.

ಎರಡನೆಯ ಉರಲ್‌ನಲ್ಲಿ ಮರ್ಯಾದೆಗಾಗಿ ಬಲ್ಲಾಳರನ್ನು ಮದುವೆಯಾದರೂ ಗಂಜಿಯ ತಿಳಿಗೆ ಉಪ್ಪು ಹಾಕಿ ಕುಡಿಯುವ ಪಾಡು ತಪ್ಪಲಿಲ್ಲ ಎಂಬುದಾಗಿ ವಿಡಂಬಿಸಲಾಗಿದೆ. ಅಲ್ಲದೆ, ತನ್ನಂತೆ ಇರುವ ದುಡಿಯುವ ವರ್ಗದ ಸಾಮಾನ್ಯ ಸ್ತ್ರೀಯೊಬ್ಬಳ ಅಂತರಂಗದ ನೋವನ್ನು, ತುಡಿತವನ್ನು ಗಮನಿಸಿದ, ಅದಕ್ಕೆ ಸ್ಪಂದಿಸಿದ ವ್ಯಕ್ತಿಯೊಬ್ಬ ಉರಲ್‌ನಲ್ಲಿ ಅದಕ್ಕೆ ಧ್ವನಿ ನೀಡಿದ್ದಾನೆ.

ಭೂತಾರಾಧನೆಯ ಕುರಿತಂತೆ ಉರಲ್‌ನಲ್ಲೂ ಪ್ರಸ್ತಾಪವಿದೆ.

ಎಂಕೊಂಜಿ ಭೂತ ಉಂಡು ಲೆಕ್ಕೇಸಿರಿ
ಯಾನ್‌ಮಲ್ತಿನ ಮಾತ ಅಯಿಕ್ಕೆ ಸರಿ || ಓಓಓಓ ||
ನನಗೊಂದು ಭೂತವಿದೆ ಲೆಕ್ಕೆಸಿರಿ
ನಾನು ಮಾಡಿದ್ದೆಲ್ಲಾ ಅದಕ್ಕೆ ಸರಿ

ಈ ಉರಲ್‌ ಗಾದೆಯ ರೂಪದಲ್ಲಿಯೂ ಬಳಕೆಯಲ್ಲಿದೆ. ತುಳುನಾಡಿನ ಸಾಂಸ್ಕೃತಿಕ ವಿಶೇಷವಾದ ಭೂತರಾಧನೆಯನ್ನು ಕುರಿತಂತೆ ಈ ಉರಲ್‌ಇದೆ. ‘ಲೆಕ್ಕೆಸಿರಿ’ (ರಕ್ತೇಶ್ವರಿ) ಭೂತಕ್ಕೆ ಹರಕೆಯ ರೂಪದಲ್ಲಿ ಸಲ್ಲಿಸಬೇಕಾದ ಖರ್ಚು ಹೆಚ್ಚು – ಈ ಕಾರಣದಿಂದಾಗಿ ಸಾಮಾನ್ಯನ ಸಂಪಾದನೆಯೆಲ್ಲಾ ಆ ಭೂತದ ಸಂತೃಪ್ತಿಗಾಗಿ ವಿನಿಯೋಗಿಸಬೇಕಾಗುತ್ತದೆ. ಭೂತದ ಆರಾಧನೆ ಮುಖ್ಯವಾಗುವಂತೆ, ತನ್ನ ಹೊಟ್ಟೆ ಪಾಡೂ ಅಷ್ಟೆ ಮುಖ್ಯ. ಆದರೆ ತಾನು ದುಡಿದದ್ದೆಲ್ಲವೂ ಅದಕ್ಕೆ ಸರಿ ಎನ್ನುವಲ್ಲಿ ಸಾಮಾನ್ಯನೊಬ್ಬನ ಅಸಹಾಯಕತೆ, ನೋವು ಸಂಕಟ ವ್ಯಕ್ತವಾಗಿದೆ.

ಇದಕ್ಕೆ ಪೂರಕವಾಗಿ ನಾಟಿಯ ಸಂದರ್ಭದಲ್ಲಿ ಹೆಂಗುಸರು ಹಾಡುವ ಉರಲ್‌ನ್ನು ಗಮನಿಸಬಹುದು.

ಓ… ಇಲ್ಲ ಬೆರ್ತಲೆ ಭೂತದ ಸಾನ ಉಂಡವು
ಓ ಬಂಜಿ ಬಂಜರೆ ಉನಿಯೆರವು ಬೂತ ಬುಡ್ಪುಜಿ||ಓ… ಹೊಡ್ತೋ…
(ಮನೆಯ ಹಿಂದುಗಡೆ ಭೂತದ ಗುಡಿ ಇದೆ.
ಹೊಟ್ಟೆ ತಂಬಾ ಉಣ್ಣಲು ಭೂತ ಬಿಡುವುದಿಲ್ಲ)

ಭೂತದ ಕುರಿತಂತೆ ಜನಪದರ ನಂಬಕೆ ಈ ಉರಲ್‌ನಲ್ಲಿ ವ್ಯಕ್ತವಾಗಿದೆ. ಭೂತಾರಾಧನೆ ಖರ್ಚು ಜಾಸ್ತಿ ಮತ್ತು ಹೊಟ್ಟೆಕಟ್ಟಿಯಾದರೂ ಭೂತಕ್ಕೆ ಸಲ್ಲಿಸದಿದ್ದಲ್ಲಿ ಸಮೃದ್ಧಿ ಇಲ್ಲ ಎಂಬ ಅಂಶ ಇಲ್ಲಿ ವ್ಯಕ್ತವಾಗಿದೆ.

೬. ಭಿನ್ನ ಸಂಸ್ಕೃತಿಯ ಜನರ ಕುರಿತಂತೆ ಹಾಸ್ಯ ಹಾಸ್ಯಪೂರ್ಣ ಉರಲ್‌ಗಳೂ ಕೆಲವು ಇವೆ.

ಕದ್ರದ ಪದವುಡು ಕರು ರಾಪುಂಡು
ತೆಟ್ಯಾಲೇ ಮಂಡೆಗ್‌ ತೆಡಿಲ್ ಹಾಕುಂಡು || ಓಓಓಓ ||
(ಕದ್ರಿಯ ಪದವಿನಲ್ಲಿ ಹದ್ದು ಹಾರುತ್ತಿದೆ
ಬ್ಯಾರಿಗಳ ತಲೆಗೆ ಸಿಡಿಲು ಬಡಿಯುತ್ತದೆ)
ಓ… ಬಾರೆದ ಪುಂಡೂಡೂsಬಾವೊಲಿ ರಾಪುಂಡು
ಓ… ಬ್ಯಾರಿನ ಮಂಡೆಗ್‌ತೆಡಿಲ್ ಬೂರ್‌ದ್‌ಂಡ್ || ಓ… ಹೋಯ್… ||
(ಬಾಳೆಯ ಹಿಂಡಿಲಿನಲ್ಲಿ ಬಾವಲಿ ಹಾರುತ್ತಿದೆ
ಬ್ಯಾರಿಯ ತಲೆಗೆ ಸಿಡಿಲು ಬಿದ್ದಿದೆ)

ಇವು ಹಾಸ್ಯಮಯವಾದ ಉರಲ್‌ಗಳು. ಭಿನ್ನ ಸಂಸ್ಕೃತಿಯ ಜನರನ್ನು ಒಂದು ಪ್ರದೇಶದ ಜನರು ನೋಡುವ ರೀತಿ ಇಲ್ಲಿ ವ್ಯಕ್ತವಾಗಿದೆ. ತುಳುನಾಡಿನಲ್ಲಿ ಸಾಮಾನ್ಯವಾಗಿ ಮುಸಲ್ಮಾನರು ತಲೆಯನ್ನು ನುಣ್ಣಗೆ ಬೋಳಿಸುವುದು ಸಂಪ್ರದಾಯ. ಅನ್ಯಜಾತಿಯ ಜನರಿಗೆ ಇದು ತಮಾಷೆಯ ವಿಷಯ. ಈ ವಿಷಯವನ್ನು ಉರಲ್‌ನಲ್ಲಿ ಜನಪದರು ತಂದಿದ್ದಾರೆ. ಹಾರುತ್ತಿರುವ ಹದ್ದು ಕೆಳಗೆ ಎರಗುವುದನ್ನು, ಬಾಳೆಯ ಹಿಂಡಿಲಿನಲ್ಲಿ ಬಾವಲಿ ರಭಸದಿಂದ ಹಾರುವುದನ್ನು ಸಿಡಿಲಿಗೆ ಹೋಲಿಸಿರುವ ದೃಷ್ಟಾಂತವನ್ನು ಇಲ್ಲಿ ಗಮನಿಸಬಹುದು. ತಾವು ಸುತ್ತು ಗಮನಿಸುವ ವಸ್ತು, ವ್ಯಕ್ತಿಗಳು, ಪಕ್ಷಿಗಳು ಇಲ್ಲಿ ಉರಲ್‌ಗೆ ವಸ್ತುಗಳಾಗಿವೆ. ಇದು ಜನಪದರ ಹಾಸ್ಯಪ್ರಜ್ಞೆಯ ರಸಿಕತೆಯ ದ್ಯೋತಕವಷ್ಟೇ, ಅವಹೇಳನ ಮಾಡುವ ಉದ್ದೇಶವಿಲ್ಲ. ಮೊದಲ ಭಾಗದಲ್ಲಿ ಅಭಿವ್ಯಕ್ತಗೊಂಡ ವಿಚಾರಕ್ಕೆ ತೀರ ಭಿನ್ನವಾದ ವಿಚಾರವಿರುವ ನಂತರದ ಭಾಗ, ಅದರಲ್ಲಿ ಹುದುಗಿರುವ ನವುರಾದ ಹಾಸ್ಯ – ಇವು ಉರಲ್‌ಗಳ ಸ್ವರೂಪದಲ್ಲಿ ಮುಖ್ಯವಾದುದು.

ಕೊನೆ ಮಾತು

ಒಟ್ಟಿನಲ್ಲಿ ‘ಕಬಿತ‘ ಮತ್ತು ‘ಉರಲ್’ – ಇವುಗಳನ್ನು ಗಮನಿಸಿದಾಗ ಇವೆರಡೂ ಕೆಲಸದ ಹಾಡುಗಳು. ಸಾಮಾನ್ಯವಾಗಿ ಕೃಷಿಗೆ ಸಂಬಂಧಿಸಿದ ಸಂದರ್ಭಗಳಲ್ಲಿ ಬಳಕೆಯಾಗುವ ರಚನೆಗಳು. ತುಳುನಾಡಿನಲ್ಲಿ ಸಾಮಾನ್ಯವಾಗಿ ಹೆಂಗುಸರು ನೇಜಿನೆಡುವಾಗ ‘ಕಬಿತ’ಗಳನ್ನು ಹಾಡುತ್ತಾರೆ. ಗಂಡಸರು ಉಳುವಾಗ ಅಥವಾ ಗಾಡಿ ಹೊಡೆಯುವಾಗ ‘ಉರಲ್‌’ಗಳನ್ನು ಹಾಡುತ್ತಾರೆ. ಕಬಿತ ಮತ್ತು ಉರಲ್‌ಗಳ ವಸ್ತು ಲಘುವಾದುದು. ರಚನೆ ಸಡಿಲವಾದುದು. ಮೇಲ್ನೋಟಕ್ಕೆ ಇವೆರಡೂ ಆಯಾಸ ಪರಿಹರಿಸಲು, ತ್ವರಿತಗತಿಯಿಂದ ಕೆಲಸ ಸಾಗಲು, ದುಡಿಮೆಯ ದಕ್ಷತೆ ಹೆಚ್ಚಿಸಲು, ಮನಸ್ಸಿನ ಉಲ್ಲಾಸಕ್ಕಾಗಿ ಹಾಡುವ ಹಾಡುಗಳು ಎಂದೆನಿಸುತ್ತವೆ. ಆದರೆ ಈ ಕೆಲಸದ ಹಾಡುಗಳು ಬಳಕೆಯಾಗುವ ಸಂದರ್ಭ ಮತ್ತು ಪ್ರದರ್ಶನದ ವಿವರಗಳನ್ನು ಗಮನಿಸಿದಾಗ ಅವುಗಳಿಂದ ಹೆಚ್ಚಿನ ಅರ್ಥವನ್ನು, ಧ್ವನಿಪೂರ್ಣತೆಯನ್ನು ಗ್ರಹಿಸಲು ಸಾಧ್ಯ ಎಂಬುದು ವ್ಯಕ್ತ.

ಕೆಲಸದ ಹಾಡುಗಳಾದ ಕಬಿತ ಮತ್ತು ಉರಲ್‌ ಇವುಗಳ ಹುಟ್ಟಿನ ಕುರಿತಂತೆ ಯೋಚಿಸಿದಾಗ, ಈ ಹಾಡುಗಳು ಅವು ಬಳಕೆಯಾಗುವ ಕೆಲಸದ ಜೊತೆಜೊತೆಗೇ ಉಗಮಗೊಂಡಿರಬಹುದು. ಮಾನವ ಆದಿ ಮಾನವತೆಯಿಂದ ನಾಗರಿಕತೆಗೆ ಪ್ರವೇಶಿಸಿದ ಬಳಿಕ ಈ ಹಾಡುಗಳು ಉದಿಸಿರಬಹುದೆಂಬುದು ಸ್ಪಷ್ಟ. ಆದರೆ ನಿರ್ದಿಷ್ಟ ಕಥಾವಸ್ತು, ಘಟನೆಗಳು ಇಲ್ಲದಿರುವುದರಿಂದ ಇವುಗಳ ಕಾಲ ನಿರ್ಣಯ ಕಷ್ಟ ಮತ್ತು ಇದಕ್ಕೆ ಯಾವುದೇ ಸುಳುಹೂ ದೊರೆಯುವುದಿಲ್ಲ.

ಇತ್ತೀಚೆಗೆ ಎಲ್ಲಾ ಕಡೆಗಳಲ್ಲೂ ಕೆಲಸದ ಹಾಡುಗಳೂ ಅಂಚಿಗೆ ಸರಿಯುತ್ತಿವೆ. ಅದಕ್ಕೆ ಮುಖ್ಯ ಕಾರಣ ಆ ಹಾಡುಗಳ ಬಳಕೆಗೆ ನಿರ್ದಿಷ್ಟ ಸಂದರ್ಭವಿಲ್ಲ. ಇಂದು ಯಂತ್ರಗಳ ಬಳಕೆಯಿಂದಾಗಿ ಸಾಂಸ್ಕೃತಿಕ ಸಂದರ್ಭವಿಲ್ಲದೆ ಕೆಲಸದ ಹಾಡುಗಳು ಬಳಕೆಯಾಗುತ್ತಿಲ್ಲ. ಅಂತೆಯೇ ಕೆಲಸದ ಹಾಡುಗಳು ಕಬಿತ ಮತ್ತು ಉರಲ್‌ ಕ್ರಿಯಾತ್ಮಕವಾಗಿರುವುದು ನೇಜಿನೆಡುವ, ಉಳುವ ಅಥವಾ ಗಾಡಿ ಹೊಡೆಯುವ ಸಂದರ್ಭದಲ್ಲಿ. ಇತ್ತೀಚೆಗೆ ಭತ್ತದ ಬೇಸಾಯದಲ್ಲಿ ಯಂತ್ರಗಳ ಬಳಕೆ, ಆರ್ಥಿಕವಾಗಿ ಲಾಭಕರ ಎನ್ನುವ ದೃಷ್ಟಿಯಿಂದ ಒಂದು ಬಾರಿ ಬೀಜ ಹಾಕಿ ಬಿತ್ತಿದ ನೇಜಿಯನ್ನೇ, ಭತ್ತದ ಪೈರನ್ನಾಗಿ ಕೊಯ್ಯುವದು, ಲಾಭದ ದೃಷ್ಟಿಯಿಂದ ಭತ್ತದ ಗದ್ದೆಗಳಲ್ಲಿ ಅಡಿಕೆ, ತೆಂಗು ನೆಡುವುದು – ಇಂತಹ ಕ್ರಮದಿಂದಾಗಿ ಹೆಂಗಸರು ನೇಜಿ ನೆಡುವ, ಎತ್ತು ಅಥವಾ ಕೋಣಗಳ ಮೂಲಕ ಉಳುವ ಕೆಲಸಗಳಿಗೆ ಆಸ್ಪದವಿಲ್ಲವಾಗಿದೆ. ಅಂತೆಯೇ ಬಸ್ಸು ಕಾರು, ಲಾರಿ ಮೊದಲಾದ ಆಧುನಿಕ ವೇಗದೂತ ವಾಹನಗಳಿಂದಾಗಿ ಎತ್ತಿನ ಗಾಡಿಯ ಬಳಕೆಯೂ ಕಡಿಮೆಯಾಗಿದೆ. ಆದರೂ ಕೆಲವೆಡೆ ಮನುಷ್ಯರ ಹಾಗೂ ಕೃಷಿಯುತ್ಪನ್ನಗಳ ಸಾಗಾಟಕ್ಕೆ ಗಾಡಿಯ ಬಳಕೆ ತೀರಾ ಅನಿವಾರ್ಯವಾಗಿದೆ. ಅಂತೆಯೇ ಒಳ್ಳೆಯ ಫಸಲಿನ ದೃಷ್ಟಿಯಿಂದ ನೇಜಿ ಹಾಕಿ ಅದನ್ನು ತೆಗೆದು ಮತ್ತೆ ನೆಡುವ ಸಂಪ್ರದಾಯ ಕೆಲವೆಡೆ ಇನ್ನೂ ಇದೆ. ಭೌಗೋಳಿಕವಾಗಿ ತುಳುನಾಡಿನ ಗದ್ದೆಗಳು ಎತ್ತರ ತಗ್ಗಿನಲ್ಲಿರುವುದರಿಂದ ಬೇಸಾಯದಲ್ಲಿ ಯಂತ್ರಗಳ ಬಳಕೆಗೆ ಸರಿಯಾದ ಅವಕಾಶವಿಲ್ಲ. ಅಂತೆಯೇ ಭೂಸುಧಾರಣೆಯಿಂದಾಗಿ ಇಂದು ದೊಡ್ದ ದೊಡ್ಡ ಗದ್ದೆಗಳು ತುಂಡುತುಂಡಾಗಿ ಸಣ್ಣ ಸಣ್ಣ ಗದ್ದೆಗಳ ಒಡೆಯರು ಕಾಣಿಸಿಕೊಂಡಿರುವುದರಿಂದ ಚಿಕ್ಕ ಚಿಕ್ಕ ಗದ್ದೆಗಳಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಆರ್ಥಿಕವಾಗಿ ಅಷ್ಟಾಗಿ ಲಾಭಕರವಲ್ಲ. ಹೀಗೆ ಯೋಚಿಸಿದಾಗ ಕಬಿತ ಮತ್ತು ಉರಲ್‌ಗಳ ಬಳಕೆ ಸ್ಪಲ್ಪಮಟ್ಟಿಗೆ ಉಳಿದುಕೊಂಡು ಬರಬಹುದು ಎನ್ನಿಸುತ್ತದೆ.

ಇಂದು ಜಾಗತೀಕರಣ ಕೃಷಿಯ ಮೇಲೂ ಗಾಢವಾದ ಪರಿಣಾಮ ಬೀರುತ್ತಿದೆ. ಇದರ ನೇರ ಪ್ರಭಾವ ಜಾನಪದದ ಮೇಲೂ ಉಂಟಾಗುತ್ತದೆ. ಈ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಗದ್ದೆ ಬೇಸಾಯದ ಭವಿಷ್ಯದ ಕುರಿತಂತೆ ಆಲೋಚಿಸಬೇಕಾಗಿದೆ. ಗದ್ದೆ ಬೇಸಾಯದ ಜೊತೆ ಜೊತೆಗೇ ಸಂಬಂಧವನ್ನು ಹೊಂದಿದ ಕಬಿತ ಮತ್ತು ಉರಲ್‌ಗಳು ಎಷ್ಟರಮಟ್ಟಿಗೆ ಉಳಿಯಬಹುದು ಎಂಬ ಕುರಿತಂತೆಯೂ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯತೆ ಇದೆ. ಕಬಿತ ಮತ್ತು ಉರಲ್‌ನಂತಹ ಕೆಲಸದ ಹಾಡುಗಳಿಗೆ ಅವು ಬಳಕೆಯಾಗುವ ಸಂದರ್ಭ (ನೇಜಿ ನೆಡುವ, ಉಳುವ ಅಥವಾ ಗಾಡಿ ಹೊಡೆಯುವ) ದೊರೆಯದಿದ್ದಲ್ಲಿ ಅವುಗಳ ನಿಜವಾದ ಅರ್ಥ ತಿಳಿಯುವುದು ಕಷ್ಟ. ಜಾನಪದ ಪ್ರಕಾರಗಳು ಉಳಿಯಬೇಕಾದರೆ ಅವು ಬಳಕೆಗೊಳ್ಳುವ ಸಂದರ್ಭ ಸೃಷ್ಟಿಸಬೇಕಾಗುತ್ತದೆ. ನಿಜವಾದ ಸಂದರ್ಭವಿಲ್ಲದೆ ಕಬಿತ ಅಥವಾ ಉರಲ್‌ಹಾಡಿದರೆ ಅವು ಕೇವಲ ಹಾಡಾಗಬಹುದು ಅಥವಾ ಕುಣಿತದ ಹಾಡಾಗಬಹುದು. ಅವುಗಳಲ್ಲಿ ಫಲವಂತಿಕೆಯ ಅಥವಾ ಇತರ ಆಶಯಗಳು ಇರಲಾರದು. ಆದುದರಿಂದ ಕಬಿತ ಮತ್ತು ಉರಲ್‌ಗಳ ಉಳಿವಿನ ದೃಷ್ಟಿಯಿಂದ, ಅವುಗಳ ಅರ್ಥದ ದೃಷ್ಟಿಯಿಂದ ಅವು ಬಳಕೆಯಾಗುವ ಕೃಷಿಯ ಸಂದರ್ಭದ ಅಗತ್ಯತೆ ಇದೆ.

ಆಕರಸೂಚಿ

೧. ಅಮೃತ ಸೋಮೇಶ್ವರ, ೧೯೭೬
ಅವಿಲು, ಕನ್ನಡ ಸಂಘ, ವಿವೇಕಾನಂದ ಕಾಲೇಜು, ಪುತ್ತೂರು

೨. ಅಮೃತ ಸೋಮೇಶ್ವರ, ೧೯೮೪
ತುಳು ಬದುಕು, ಪ್ರಕೃತಿ ಪ್ರಕಾಶನ, ಕೋಟೆಕಾರು, ದ.ಕ.

೩. ಅರುಣಕುಮಾರ್ ಎಸ್.ಆರ್.೧೯೯೭
ಜಾನಪದ ಅನುಶೀಲನ,
ಪೂರ್ಣ ಪ್ರಕಾಶನ, ಶ್ರೀ ಗುರು ನಿಲಯ, ಕನ್ಯಾಡಿ, ಧರ್ಮಸ್ಥಳ

೪. ಅನಂತ ಕೃಷ್ಣ ಹೆಬ್ಬಾರ್ ಎಂ. ಮತ್ತು ಇತರರು (ಸಂ) ೨೦೦೧
‘ಕಣಜ’, ವಿಠಲ ವಿದ್ಯಾಸಂಘ ಸುವರ್ಣ ಮಹೋತ್ಸವ ನೆನಪಿನ ಸಂಪುಟ),
ವಿಠಲ ವಿದ್ಯಾಸಂಘ, ವಿಟ್ಲ

೫. ಕೇಶವ ಭಟ್ಟ ಟಿ, ೧೯೯೬
ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಗೀತೆಗಳು,
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೬. ಕೃಷ್ಣ ಭಟ್, ಅಡ್ಯನಡ್ಕ (ಸಂ) ೧೯೭೭
ಸುದರ್ಶನ (ಡಾ. ತೋನ್ಸೆ ಮಾಧವ ಅನಂತ ಪೈ ಅಭಿನಂದನ ಗ್ರಂಥ),
ವಿಜಯಾ ಕಾಲೇಜ್‌ಟ್ರಸ್ಟ್

೭. ರಾಮಕೃಷ್ಣ ಆಚಾರ್, ಪಾಲ್ತಾಡಿ (ಸಂ) ೨೦೦೧
ಒಡಿಯೂರು ತುಡರ್ ತುಳು ಸಾಹಿತ್ಯ ಸಮ್ಮೇಳನ ಸಮಿತಿ
ಶ್ರೀ ಗುರು ದೇವದತ್ತ ಸಂಸ್ಥಾನಮ್‌, ಒಡಿಯೂರು

೮. ರಾಮಚಂದ್ರೇಗೌಡ ಹಿ.ಶಿ. ಮತ್ತು ಕೃಷ್ಣಮೂರ್ತಿ ಹನೂರು (ಸಂ) ೧೯೯೮
ಸುವರ್ಣ ಜಾನಪದ (ಸಂಪುಟ ೨),
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ, ಬೆಂಗಳೂರು

೯. ರೂಪಕಲಾ ಆಳ್ವ, ೧೯೯೨,
ನಾಟಿ,
ಸಂದೇಶ ಪ್ರಕಾಶ, ಪ್ರೇಮ ನಗರ, ಬಜ್ಜೋಡಿ,ಮಂಗಳೂರು

೧೦. ವಿವೇಕ ರೈ ಬಿ. ಎ ೧೯೮೦
ತುಳುವ ಅಧ್ಯಯನ : ಕೆಲವು ವಿಚಾರಗಳು,
ತುಳುವ ಪ್ರಕಾಶನ, ಮಂಗಳೂರು

೧೧. ವಿವೇಕ ರೈ ಬಿ. ಎ ೧೯೮೫
ತುಳು ಜನಪದ ಸಾಹಿತ್ಯ
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೧೨. ವಿವೇಕ ರೈ ಬಿ. ಎ ರಾಜಶ್ರೀ, ೧೯೯೬
ತುಳು ಕಬಿತಗಳು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ
ಮಂಗಳೂರು ವಿಶ್ವವಿದ್ಯಾನಿಲಯ

೧೩. ಸ.ಸ. ಮಾಳವಾಡ (ಸಂ) ೧೯೬೭
ಹೊನ್ನ ಬಿತ್ತೇವು ಹೊಲಕೆಲ್ಲ

(ಅಖಿಲ ಕರ್ನಾಟಕ ಜನಪದ ಸಾಹಿತ್ಯ ಸಮ್ಮೇಳನ ತರೀಕೆರೆ ಸಂಸ್ಮರಣ ಗ್ರಂಥ), ಸಾಹಿತ್ಯ ಸಮಿತಿ, ಅಖಿಲ ಕರ್ನಾಟಕ ಜನಪದ ಸಾಹಿತ್ಯ ಸಮ್ಮೇಳನ ತರೀಕೆರೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)