ಈ ಲೇಖನಕ್ಕೆ ಪ್ರಮುಖವಾದ ಮೂರು ಉದ್ದೇಶಗಳಿವೆ:

೧. ಜನಪದ ಕಥೆಯೊಂದರ ಪಾಠಾಂತರಗಳ ಅಭ್ಯಾಸದಿಂದ ಅವುಗಳ ಅರ್ಥ ನಿಷ್ಪತ್ತಿಗೆ ಆಗುವ ಪ್ರಯೋಜನಗಳನ್ನು ಪರಿಶೀಲಿಸುವುದು.

೨. ಜನಪದ ಕಥೆಯೊಂದು ಪ್ರಯೋಗವಾಗುವ ಸಂದರ್ಭಕ್ಕೂ, ರಚನೆ ಮತ್ತು ಅರ್ಥಕ್ಕೂ ಇರುವ ಗಾಢ ಸಂಬಂಧವನ್ನು ವಿಶ್ಲೇಷಿಸುವುದು. ಇಲ್ಲಿನ ಸಂದರ್ಭವು ಕಾಲ, ದೇಶ, ವ್ಯಕ್ತಿ ಮೊದಲಾದ ಸಾಮಾನ್ಯ ವಿಷಯಗಳಿಗೆ ಸೀಮಿತವಾಗಿರದೆ ಮಾನವನ ಬಂಧುತ್ವದೊಂದಿಗೂ ಸಂಬಂಧ ಹೊಂದಿರುವುದು.

೩. ಜನಪದ ಕಥೆಯ ಪ್ರತೀಕ ಗುಣವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು. ಈ ಪ್ರಯತ್ನವು ಅಂತಿಮವಾಗಿ ಜನಪದ ಕತೆಗಾರರ ಸೃಜನಶೀಲತೆಯನ್ನು ಪರಿಚಯಿಸುತ್ತದೆ.

ಈ ಬಗೆಯ ಪ್ರಯತ್ನಗಳು ಕನ್ನಡ ಜನಪದ ಅಧ್ಯಯನದಲ್ಲಿ ನಡೆದಿಲ್ಲವೆಂಬುದು ಸ್ಪಷ್ಟ. ಕಥೆಯ ರಾಚನಿಕ ಅಧ್ಯಯನ ನಡೆದದ್ದೇ ನಮ್ಮಲ್ಲಿ ಅಂತಿಮ ಪ್ರಯತ್ನ. ಮಾನವನ ಬಂಧುತ್ವದ ಸಂದರ್ಭವನ್ನು ಕಥೆಯ ಅಧ್ಯಯನಕ್ಕೆ ಬಳಸಿಕೊಂಡದ್ದೇ ಅಲ್ಲ. ಅಂತಾರಾಷ್ಟ್ರೀಯ ಜಾನಪದ ಅಧ್ಯಯನದಲ್ಲಿಯೂ ಈ ಬಗೆಯ ಪ್ರಯತ್ನಗಳು ನಡೆದದ್ದು ನನ್ನ ಗಮನಕ್ಕೆ ಬಂದಿಲ್ಲ.

ಅಧ್ಯಯನಕ್ಕೆ ಆಯ್ದುಕೊಂಡ ಕಥೆಯ ಹೆಸರು ‘ಬಾಳೆ ಮೀನು-ಮುಗುಡು ಮೀನು’ ಕರಾವಳಿ ಕರ್ನಾಟಕದ ತುಳು ಮಾತನಾಡುವ ಪ್ರದೇಶಗಳಲ್ಲಿ ಈ ಕಥೆ ತುಂಬ ಜನಪ್ರಿಯವಾಗಿದೆ. ‘ಒರೊ ಜಪ್ಪೊ ಜಮನೇರಳೆಯೇ’ (ಒಮ್ಮೆ ಇಳಿಯೇ ಜಮನೇರಳೆಯೇ) ಎಂಬ ಹೆಸರಿನಲ್ಲಿಯೂ ಈ ಕಥೆ ಪ್ರಚಲಿತದಲ್ಲಿದೆ.

ಬಂಟ್ವಾಳ ತಾಲ್ಲೂಕಿನ ಸಜಿಪ ಎಂಬಲ್ಲಿ ವಾಸವಾಗಿರುವ ಕಲ್ಯಾಣಿ ಎಂಬುವರು (ಪ್ರಾಯ ಸುಮಾರು ೬೦ ವರ್ಷ) ಹೇಳಿದ ಕಥೆಯ ಪೂರ್ಣ ಪಾಠ ಈ ಕೆಳಗಿನಂತಿದೆ:

ಒಂದಾನೊಂದು ಊರಿನಲ್ಲಿ ಗಂಡ-ಹೆಂಡತಿ ಇಬ್ಬರಿದ್ದರಂತೆ. ಅವರು ಬಡವರಂತೆ. ಅವರಿಗೆ ಏಳು ಜನ ಗಂಡು ಮಕ್ಕಳು. ಅನಂತರ ಒಬ್ಬಳು ಹುಟ್ಟಿದಳು. ಗಂಡು ಮಕ್ಕಳಲ್ಲಿ ಆರು ಜನಕ್ಕೆ ಮದುವೆಯಾಯಿತು. ಏಳನೆಯವನು ಮನೆಯ ಹತ್ತಿರ ಒಂದು ಹೂವಿನ ಹಿತ್ತಲನ್ನು ಮಾಡಿದ. ಅದರಲ್ಲಿ ಹೂ ಆಯಿತು. ಹೂ ಆದದ್ದನ್ನು ಕೊಯ್ದ. ಹೂವಿನ ಚೆಂಡು ಕಟ್ಟಿಸಿದ. ಅದರಲ್ಲಿ ಒಂದನ್ನು ಬಾಗಿಲ ಮೇಲಿನ ದಾರಂದದಲ್ಲಿ ಇರಿಸಿದ. ಅನಂತರ ತನ್ನ ಅಣ್ಣಂದಿರ ಹೆಂಡತಿರಾದ ಅತ್ತಿಗೆಯವರಲ್ಲಿ ಹೇಳಿದ. ‘ಯಾರರು ಆ ಹೂವಿನ ಚೆಂಡನ್ನು ತೆಗೆದು ತಲೆಗೆ ಮುಡಿಯುವರೋ ಅವರು ನನ್ನ ಹೆಂಡತಿಯಾಗುತ್ತಾರೆ’-ಎಂದು ಇಷ್ಟು ಹೇಳಿ ಉಳಿದ ಹೂವನ್ನು ತಲೆಯ ಮೇಲೆ ಇರಿಸಿಕೊಂಡು ಹೊರಗಡೆಗೆ ಹೋದ. ಆತನು ಆ ಕಡೆ ಹೋದಾಗ ಗುಡ್ಡೆಗೆ ಸೊಪ್ಪು ತರಲೆಂದು ಹೋದ ಅವನ ತಂಗಿ ಮನೆ ಕಡೆ ಬಂದಳು. ಸೊಪ್ಪನ್ನು ಹಟ್ಟಿಗೆ ಹಾಕಿದಳು. ಕತ್ತು ಮತ್ತು ಮುಟ್ಟಾಳೆಯನ್ನು ಕೆಳಕ್ಕೆ ಇರಿಸಿದಳು. ಕೈ ಕಾಲು ಮುಖ ತೊಳೆದುಕೊಂಡು ಒಳಗೆ ಬಂದಳು. ಒಳಗೆ ಬರುವಾಗ ಅವಳ ಮೂಗಿಗೆ ಹೂವಿನ ಪರಿಮಳ ಬಂತು. ‘ಎಲ್ಲಿಂದಪ್ಪಾ ಇದು ಹೂವಿನ ಪರಿಮಳ’ ಎಂದುಕೊಂಡು ಬಾಗಿಲ ಮೇಲ್ಬದಿಗೆ ನೋಡಿದಳು. ಅದಕ್ಕೆ ಕೈ ಹಾಕಿದಳು. ಅಷ್ಟರಲ್ಲಿ ಅವಳ ಅತ್ತಿಗೆಯವರು ಹೇಳುತ್ತಾರೆ: ‘ಆ ಹೂವನ್ನು ಮುಡಿದವರು ಸಣ್ಣ ಭಾವನಿಗೆ ಹೆಂಡತಿಯಾಗುವರಂತೆ!’

“ಹೌದು… ಅವನು ಹೇಳಿದ ಎಂದು ಹೆಂಡತಿ ಆಗಲು ಸಾಧ್ಯವೇ?” ಎಂದು ಆಕೆ ತಲೆಬಾಚಿ ಕಟ್ಟುವಳು. ಹಣೆಗೆ ಸೂರ್ಯನ ಬೊಟ್ಟು ಇಡುವಳು. ಹೂವಿನ ಚೆಂಡನ್ನು ತಲೆಗೆ ಮುಡಿದಳು.

ಅಷ್ಟಾಗುವಾಗ ಅಣ್ಣ ಬಂದ. ನೋಡುವಾಗ ಹೂವಿನ ಚೆಂಡು ಇಲ್ಲ. ಅತ್ತಿಗೆಯವರಲ್ಲಿ ಕೇಳಿದ. ‘ನಿನ್ನ ತಂಗಿ ಹೂವನ್ನು ಮುಡಿಗೇರಿಸಿದ್ದಾಳೆ’ ಎಂದರು. ಅದನ್ನು ಕೇಳಿದ ಅಣ್ಣನು ಅಂಗಳವನ್ನು ಕೆತ್ತಿಸಿದ. ಚಪ್ಪರ ಹಾಕಿಸಿದ. ಮದುವೆಯ ಸರ್ವಸಿದ್ಧತೆ ನಡೆಸಿದ. ಅಚ್ಚುಬೆಲ್ಲದ ಒಲೆ ಹಾಕಿಸಿದ. ಸಾಮಾನು ಸರಂಜಾಮು ತರಿಸಿದ. ನಾಡಿದ್ದು ಗುರುವಾದ ಮದುವೆಯಿದೆ ಎಂದ. ಮನೆಗೆ ನೆಂಟರು ಇಷ್ಟರು ಬರತೊಡಗಿದರು. ಮದುವೆಯ ದಿನವೂ ಬಂತು. ಅಡುಗೆ ಮನೆಯಲ್ಲಿ ಮದುವೆಯ ಊಟ ತಯಾರುಗುತ್ತಾ ಇದೆ. ಕೆಲವರು ತರಕಾರಿ ತುಂಡರಿಸುತ್ತಿದ್ದಾರೆ. ಸೇರಿದ ಗ್ರಾಮದ ಜನಗಳು ಸಾಂಬಾರು ಅರೆಯುತ್ತಿದ್ದಾರೆ. ಹೀಗೆ ಇರುವಾಗ ಆ ಕಡೆಯಲ್ಲಿ ಆ ಹುಡುಗಿ ಕಣ್ಣ ನೀರನ್ನು ಸುರಿಸಿಕೊಂಡು, ಮನಸ್ಸನ್ನು ಕರಗಿಸಿಕೊಂಡು, ಮನೆಯ ಹಿಂದಿನ ಬಾಗಿಲ ಬದಿಯಲ್ಲಿ ಕುಳಿತು ತೆಂಗಿನಕಾಯಿ ತುರಿಯುತ್ತಿದ್ದಳು. ‘ನನ್ನ ಗತಿ ಹೀಗಾಯಿತಲ್ಲಾ… ಇನ್ನು ಮುಂದೆ ನನಗೇನು ಗತಿ?’ ಎಂದು ರೋಧಿಸುತ್ತಿರುವಾಗ ಅಲ್ಲಿಗೆ ಎರಡು ಬಿಳಿ ಇಲಿಗಳು ಬಂದವು. ಅವುಗಳನ್ನು ನೋಡಿ, ಆ ಹೆಣ್ಣು “ಇಲಿಗಳೇ, ನನಗೊಂದು ದಾರಿ ತೋರಿಸಿರಿ. ನಿಮಗೆ ತಿನ್ನಲು ತೆಂಗಿನಕಾಯಿ ಕೊಡುವೆ, ನಾನು ಕುಳಿತ ಈ ಬಾಗಿಲಿನಿಂದ ಆ ಜಂಬುನೇರಳೆಯ ಮರದ ಬುಡದವರೆಗೆ ಒಂದು ಸುರಂಗವನ್ನು ಕೊರೆದು ಕೊಡಿ” ಎಂದಳು. ಇಲಿಗಳಿಗೆ ಅವು ತಿನ್ನುವಷ್ಟು ತೆಂಗಿನಕಾಯಿ ಕೊಟ್ಟಳು. ಆಕೆ ಕುಳಿತಲ್ಲಿಂದ ಜಂಬುನೇರಳೆ ಮರದ ಬುಡದವರೆಗೆ ಆ ಇಲಿಗಳು ಸುರಂಗವನ್ನು ಕೊರೆದುಕೊಟ್ಟವು. ಆಕೆ ಸುರಂಗದಲ್ಲಿ ಇಳಿದು ಮರದ ಹತ್ತಿರ ಹೋದಳು. ಹೋಗಿ ಮರದ ಮೇಲೆ ಕುಳಿತಳು.

ಮದುವೆಯ ಮನೆಯಲ್ಲಿ ಮದುಮಗಳನ್ನು ಶೃಂಗರಿಸಲೆಂದು ಜನರು ಹೋದಾಗ ಅಲ್ಲಿ ಮದುಮಗಳು ಇರಲಿಲ್ಲ. ಎಲ್ಲೆಡೆಯೂ ಆಕೆಯನ್ನು ಹುಡುಕಲಾಯಿತು. ಗಡಿಬಿಡಿ ಉಂಟಾಯಿತು. ಜನರು ಕಂಗಾಲಾದರು, ಇನ್ನೇನು ಮಾಡುವುದೆಂದು ಚಿಂತಿತರಾದರು.

ಆ ಕಡೆ ಮರದಲ್ಲಿ ಕುಳಿತ ಮದುಮಗಳ ಕಣ್ಣೀರು ಹರಿದೂ ಹರಿದೂ ಮರದ ಬುಡದಲ್ಲಿ ಒಂದು ಕೆರೆಯೇ ಸಿದ್ಧವಾಯಿತು. ಮದುವೆಗೆಂದು ಹೋಗುವ ಬಡ ಮುದುಕಿಯೊಬ್ಬಳು ಆ ಕೆರೆಯ ಬದಿಯಲ್ಲಿ ನಡೆದು ಬಂದಳು. ಆಕೆಗೆ ಶುಭ್ರವಾದ ಕೆರೆಯ ನೀರು ಕಂಡಿತು. ಮುಖ ತೊಳೆಯಲೆಂದು ಕೆರೆಗೆ ಇಳಿದಳು. ಮುಖ ತೆಳೆದು ನೆಟ್ಟಗೆ ನಿಲ್ಲುವಾಗ ಆಕೆಯ ಬೆನ್ನಿಗೆ ಒಂದು ತೊಟ್ಟು ನೀರು ಬಿದ್ದಿತು. ಅಜ್ಜಿ ಮೇಲೆ ನೋಡಿದಳು. ನೋಡುವಾಗ ಹುಡುಗಿ ಮರದಲ್ಲಿ ಇರುವುದು ಕಂಡಿತು. ‘ಇದೇನಪ್ಪ ಕಲಿಕಾಲ!’ ಅಂತ ಅಜ್ಜಿ ವಿಸ್ಮಯಗೊಂಡಳು. ಆಗ ಆ ಹುಡುಗಿಯೇ ಹೇಳಿದಳು.

‘ಅಜ್ಜಿ… ಅಜ್ಜಿ… ನಾನು ಇಲ್ಲಿ ಇದ್ದೇನೆಂದು ಮನೆಯಲ್ಲಿ ಹೇಳಬೇಡಿ’

ಅಜ್ಜಿ ಹೇಳಿದಳು- ‘ನಾನು ಹೇಳುತ್ತೇನೆ… ನೀನಿಲ್ಲಿ ಯಾಕೆ ಕುಳಿತೆ ಹೇಳು’

ಆಗ ಆ ಹುಡುಗಿ ಎಲ್ಲಾ ಕಥೆಯನ್ನು ಹೇಳಿ ‘ಇದನ್ನು ಮನೆಯಲ್ಲಿ ಮಾತ್ರ ಹೇಳಬೇಡ’ ಎಂದು ಕೈಯಲ್ಲಿರುವ ಚಿನ್ನದ ಉಂಗುರವನ್ನು ಅಜ್ಜಿಗೆ ಕೊಟ್ಟಳು. ‘ಆಯಿತು… ನಾನಿದನ್ನು ಯಾರಿಗೂ ಹೇಳುವುದಿಲ್ಲ’ ಎಂದು ಅಜ್ಜಿ ಮದುವೆ ಮನೆಗೆ ಹೋದಳು. ಮದುವೆ ಮನೆಯಲ್ಲಿ ಊಟದ ಸಿದ್ಧತೆ ನಡೆಯುತ್ತಿತ್ತು. ಜನರ ನಡುವಿನಲ್ಲಿ ಅಜ್ಜಿಯೂ ಊಟಕ್ಕೆ ಕುಳಿತಳು. ಊಟಕ್ಕೆ ಬಾಳೆ ಎಲೆ ಹಾಕುತ್ತಾ ಬಂದರು. ಅದರ ಮೇಲೆ ನೀರು ಚಿಮುಕಿಸುತ್ತಾ ಬಂದರು. ಮದುಮಗನೇ ಅನ್ನ ಬಡಿಸಿಕೊಂಡು ಬಂದ. ಅಜ್ಜಿಗೂ ಅನ್ನ ಬಡಿಸಿದ. ಇನ್ನೊಂದು ಸೌಟು ಬಡಿಸಲೆಂದು ಅನ್ನವನ್ನು ತಂದಾಗ ‘ಬೇಡ… ಬೇಡ’ ಎಂದು ಅಜ್ಜಿ ಕೈ ಮುಂದೆ ಮಾಡಿದಳು. ಆಗ ಅವಳ ಕೈಯಲ್ಲಿದ್ದ ಉಂಗುರ ಮದುಮಗನಿಗೆ ಕಂಡಿತು. ಆಗ ಅವನು ‘ಅಜ್ಜೀ… ಈ ಉಂಗುರ ಎಲ್ಲಿ ಸಿಕ್ಕಿತು?’ ಎಂದು ಕೇಳುತ್ತಾನೆ. ಅಜ್ಜಿ ಹೇಳುತ್ತಾಳೆ. ‘ನಾನು ಬರುವಾಗ ಜಂಬುನೇರಳೆ ಮರದ ಅಡಿಯಲ್ಲಿ ಒಂದು ಕೆರೆ ನೋಡಿದೆ. ಅದು ಕಣ್ಣೀರಿನ ಕೆರೆ. ಒಂದು ಹೆಣ್ಣು ಮರದ ಮೇಲೆ ಕುಳಿತು ಕಣ್ಣೀರು ಸುರಿಸುತ್ತಿದ್ದಳು. ‘ನಾನಿಲ್ಲಿ ಇದ್ದೇನೆಂದು ಯಾರಿಗೂ ಹೇಳಬೇಡಿ’ ಎಂದು ಈ ಉಂಗುರವನ್ನು ನನಗೆ ಕೊಟ್ಟಳು’ ಎಂದಳು. ಈಗ ಮದುಮಗಳು ಅಲ್ಲಿ ಇದ್ದಾಳೆಂದು ಎಲ್ಲರಿಗೂ ತಿಳಿಯಿತು.

ಮದುಮಗಳನ್ನು ಕರೆತರಲೆಂದು ಮದುಮಗಳ ತಂದೆ ಕೆರೆಯ ಬದಿಯ ಮರದ ಬಳಿ ಹೋದ. ಮಗಳನ್ನು ನೋಡಿ ಹೇಳಿದ:

‘ಯಾರು ಮಗಳೆ ಸಣ್ಣ ಮದುಮಗಳೆ
ಬಂದ ನೆಂಟರು ಬೇಸತ್ತಿದ್ದಾರೆ
ಹಾಕಿದ ಚಪ್ಪರ ವಾಲುತ್ತಿದೆ
ಕಡಿದಿಟ್ಟ ಎಲೆಗಳು ಬಾಡುತ್ತಿವೆ
ಮಾಡಿಟ್ಟ ಅನ್ನ ಹಾಳಾಗುತ್ತಿದೆ
ತುಂಡರಿಸಿದ ವೀಳ್ಯದೆಲೆ ಬಾಡುತ್ತಿದೆ
ಮಲ್ಲಿಗೆ ಚೆಂಡು ಮಸುಕಾಗುತ್ತಿದೆ
ಒಮ್ಮೆ ಇಳಿಯೇ ಸಣ್ಣ ಮದುಮಗಳೇ
ಒಮ್ಮೆ ಇಳಿಯೇ ಸಣ್ಣ ಮದುಮಗಳೇ’

ಆಗ ಮರದ ಮೇಲಿಂದ ಮದುಮಗಳು ಹೇಳುತ್ತಾಳೆ:

‘ಯಾರು ಬಂದವರು ಅಪ್ಪನೆ ಹೌದಾದರೆ
ಬಂದ ನೆಂಟರಿಗೆ ಬೇಸರವಾಗಲಿ
ಹಾಕಿದ ಚಪ್ಪರ ಬಿದ್ದು ಹೋಗಲಿ
ಕಡಿದಿಟ್ಟ ಎಲೆಗಳು ಬಾಡಿ ಹೋಗಲಿ
ಮಾಡಿದ ಅನ್ನ ಹಳಸಿ ಹೋಗಲಿ
ತುಂಡರಿಸಿದ ವೀಳ್ಯದೆಲೆ ಬಾಡಿ ಹೋಗಲಿ
ಮಲ್ಲಿಗೆ ಚೆಂಡು ಬಾಡಿ ಹೋಗಲಿ
ನಿನ್ನೆವರೆಗೆ ಅಪ್ಪ ಎಂದು ಕರೆಯುತ್ತಿದ್ದವನನ್ನು ಮಾವ ಎಂದು ಹೇಗೆ ಕರೆಯಲಿ?
‘ನಾನಿಳಿಯಲಾರೆ, ಮರದಿಂದ ನಾನಿಳಿಯಲಾರೆ’

ತಂದೆ ಹಿಂದಿರುಗುತ್ತಾನೆ. ಅನಂತರ ತಾಯಿ ಬರುತ್ತಾಳೆ. ತಂದೆಯಂತೆಯೇ ಆಕೆ ಮದುಮಗಳನ್ನು ಕರೆಯುತ್ತಾಳೆ. ಕರೆದಾಗ ತಂದೆಗೆ ಉತ್ತರಿಸಿದಂತೆ ತಾಯಿಗೂ ಉತ್ತರಿಸುವ ಆಕೆ ಕೊನೆಯಲ್ಲಿ ‘ನಿನ್ನೆವರೆಗೆ ತಾಯಿ ಎಂದು ಕರೆಯುತ್ತಿದ್ದವಳನ್ನು ಇಂದಿನಿಂದ ಅತ್ತೆ ಎಂದು ಹೇಗೆ ಕರೆಯಲಿ?’ ಎಂದು ಕೇಳುತ್ತಾಳೆ. ತಾಯಿ ಹಿಂದಿರುಗುತ್ತಾಳೆ. ಅಣ್ಣಂದಿರು ಬಂದು ಹಿಂದಿನಂತೇ ಕೇಳುತ್ತಾರೆ. ಮದುಮಗಳು ಹಿಂದಿನಂತೇ ಉತ್ತರಿಸುತ್ತ ಕೊನೆಗೆ ‘ನಿನ್ನೆವರೆಗೆ ಅಣ್ಣ ಎಂದು ಕರೆಯುತ್ತಿದ್ದವರನ್ನು ಇಂದಿನಿಂದ ಭಾವ ಎಂದು ಹೇಗೆ ಕರೆಯಲಿ?’ ಎಂದು ಪ್ರಶ್ನಿಸುತ್ತಾಳೆ. ಅಣ್ಣಂದಿರು ಹಿಂದಿರುಗುತ್ತಾರೆ. ಅನಂತರ ಅಣ್ಣಂದಿರ ಹೆಂಡತಿಯರು ಬಂದು ಕರೆವಾಗಲೂ ಆಕೆ ‘ನಿನ್ನೆವರೆಗೆ ಅತ್ತಿಗೆ ಎಂದು ಕರೆಯುತ್ತಿದ್ದವರನ್ನು ಇಂದಿನಿಂದ ಅಕ್ಕ ಎಂದು ಹೇಗೆ ಕರೆಯಲಿ?’ ಎಂದು ಪ್ರಶ್ನಿಸುತ್ತಾಳೆ. ಅತ್ತಿಗೆಯವರೂ ಹಿಂದಿರುಗುತ್ತಾರೆ. ಕೊನೆಗೆ ಮದುಮಗನೇ ಬಂದು ಆಕೆಯನ್ನು ಕೆಳಗಿಳಿಯುವಂತೆ ಕೇಳಿಕೊಳ್ಳುತ್ತಾನೆ. ಆಕೆ ಉತ್ತರಿಸುತ್ತಾಳೆ. ‘ನಿನ್ನೆವರೆಗೆ ಅಣ್ಣ ಎಂದು ಕರೆಯುತ್ತಿದ್ದವನನ್ನು ಇಂದಿನಿಂದ ಗಂಡ ಎಂದು ಹೇಗೆ ಸಂಬೋಧಿಸಲಿ?’

ಆದರೆ ಮದುಮಗ ಹಿಂದಿರುಗಿ ಹೋಗುವುದಿಲ್ಲ. ಆತ ಸರಸರನೆ ಮರವೇರುತ್ತಾನೆ. ಅವನು ಮರವೇರುವುದನ್ನು ಕಂಡು ಆಕೆ ಮರದ ಗೆಲ್ಲಿನಲ್ಲಿ ಓಡುತ್ತಾಳೆ. ಮದುಮಗ ಗೆಲ್ಲಿನಲ್ಲಿ ಹಿಂಬಾಲಿಸಿದ. ಆಕೆ ಎಲೆಯ ಮೇಲೇರಿ ಹೊರಟಳು. ಆತನೂ ಎಲೆಯಲ್ಲಿ ನಡೆದ. ಆಕೆ ಎಲೆಯ ತುದಿಯಲ್ಲಿ ನಿಂತಳು. ಆತನೂ ಎಲೆಯ ತುದಿಗೆ ತಲುಪಿದ. ಆಗ ಆಕೆ ಸರಕ್ಕನೆ ಕೆರೆಗೆ ಜಿಗಿಯುತ್ತಾಳೆ. ಆತನೂ ಜಿಗಿಯುತ್ತಾನೆ. ಅವಳು ಬಾಳೆ ಮೀನಾಗಿ ಪರಿವರ್ತನೆ ಹೊಂದಿದಳು. ಆಗ ಮುಗುಡು ಮೀನಾಗಿ ಪರಿವರ್ತನೆ ಹೊಂದಿದ. ಎರಡೂ ಮೀನುಗಳು ನೀರಿನಲ್ಲಿ ಈಜುತ್ತಿದ್ದವು.

ಅಷ್ಟರಲ್ಲಿ ಅಲ್ಲಿಗೆ ಒಬ್ಬ ನಲಿಕೆಯವನು (ಭೂತಕಟ್ಟುವ ಉದ್ಯೋಗಿ-ಅಸ್ಪೃಶ್ಯ ಜನಾಂಗಕ್ಕೆ ಸೇರಿದವನು) ಗಾಳ ಹಾಕಿ ಮೀನು ಹಿಡಿಯಲೆಂದು ಬಂದ. ಅವನ ಗಾಳಕ್ಕೆ ಮೀನು ಸಿಕ್ಕಿಕೊಂಡಿತು. ಅದನ್ನು ಹಿಡಿದುಕೊಂಡು ತನ್ನಲ್ಲಿರುವ ಮೀನಿನ ಬುಟ್ಟಿಗೆ ಹಾಕಿದ. ಆಗ ಬಾಳೆ ಮೀನು ಹೇಳಿತು-

‘ಈ ಹೊಳೆಯಲ್ಲಿ ನಾವಿಬ್ಬರು
ನಮ್ಮಿಬ್ಬರನ್ನು ಒಂದು ಬುಟ್ಟಿಯಲ್ಲಿ ಹಾಕಬೇಡ
ಒಂದೇ ಕತ್ತಿಯಲ್ಲಿ ತುಂಡರಿಸಬೇಡ
ಒಂದು ಪಾತ್ರಯಲ್ಲಿ ಬೇಯಿಸಬೇಡ
ಅಣ್ಣನ ತಂಗಿ ಕುಚು ಕುಚು’

ಅದನ್ನು ಕೇಳಿಸಿಕೊಂಡ ನಲಿಕೆಯವರು ಇನ್ನೊಮ್ಮೆ ಗಾಳವನ್ನು ಕೆರೆಗೆ ಹಾಕಿದ. ಆಗ ಮುಗುಡು ಮೀನು ಸಿಕ್ಕಿತು. ಅದನ್ನು ಹಿಡಿದು ಅದೇ ಬುಟ್ಟಿಗೆ ಹಾಕಿದ. ಮನೆಗೆ ತೆಗೆದುಕೊಂಡು ಹೋದ. ಹೋಗಿ ಒಂದು ಪಾತ್ರಯಲ್ಲಿ ಹಾಕಿದ. ಒಂದು ಕತ್ತಿಯಲ್ಲಿ ತುಂಡು ಮಾಡಿದ. ಮಣ್ಣಿನ ಪಾತ್ರಯೊಂದರಲ್ಲಿ ಬೇಯಿಸಿದ. ಅಷ್ಟರಲ್ಲಿ ಪಾತ್ರಯಿಂದ ಸಣ್ಣ ಶಬ್ದ ಕೇಳಿಸಿತು. ಇಣುಕಿ ನೋಡಿದ. ಮಾತ್ರಯಲ್ಲಿ ಬಿಳಿ ಮತ್ತು ಕೆಂಪು ನೊರೆ ಕಾಣಿಸಿತು. ನಲಿಕೆಯವರಿಗೆ ಭಯವಾಯಿತು. ಆಗ ಸಣ್ಣ ಶಬ್ದವೂ ಹೇಳಿತು:

‘ಅಣ್ಣನ ತಂಗಿ ಕುಚು ಕುಚು
‘ಅಣ್ಣನ ತಂಗಿ ಕುಚು ಕುಚು

ಇನ್ನಷ್ಟು ಹೆದರಿದ ನಲಿಕೆಯವರು ಆ ಪಾತ್ರಯನ್ನು ಎತ್ತಿಕೊಂಡು ಹೋಗಿ ಬಸಲೆ ಬಳ್ಳಿಯ ಬುಟಕ್ಕೆ ಚೆಲ್ಲಿದ. ಅಲ್ಲಿ ಸ್ವಲ್ಪ ಕಾಲದಲ್ಲಿ ಒಂದು ಹರಿವೆ ಗಿಡ ಹುಟ್ಟಿತು. ಕಾಲಾನಂತರದಲ್ಲಿ ಒಂದು ದಿನ ನಲಿಕೆಯವರು ಬಸಲೆಯನ್ನು ಹರಿವೆಯನ್ನೂ ಕತ್ತರಿಸಿ ಒಂದು ಒಲೆ ಮೇಲಿಟ್ಟು ಬೇಯಿಸಿದ. ಆಗಲೂ ಪಾತ್ರೆಯಲ್ಲಿ ಬಿಳಿ ನೊರೆ, ಕೆಂಪು ನೊರೆ ಕಾಣಿಸಿತು.

‘ಅಣ್ಣನ ತಂಗಿ ಕುಚು ಕುಚು
‘ಅಣ್ಣನ ತಂಗಿ ಕುಚು ಕುಚು

ಎಂಬ ಶಬ್ದವೂ ಪಿಸುಗುಟ್ಟಿದಂತೆ ಕೇಳಿಸಿತು. ಗಾಬರಿಕೊಂಡ ನಲಿಕೆಯವನು ಅದನ್ನು ಎತ್ತಿಕೊಂಡು ಹೋಗಿ ಮನೆಯಿಂದ ಹೊರಗೆ ಎಸೆದ. ಅಂದಿನಿಂದ ಮುಂದೆ ಬಾಳೆ ಮತ್ತು ಮುಗುಡು ಮೀನನ್ನೂ ಬಸಲೆ ಮತ್ತು ಹರಿವೆಯನ್ನು ಒಟ್ಟಿಗೆ ಬೇಯಿಸಿ ತಿನ್ನುವುದಿಲ್ಲ. ಬೇಯಿಸಿದರೆ ಪಾತ್ರೆಯಲ್ಲಿ ರಕ್ತ ಕಾಣುತ್ತದೆ.

ತುಳುನಾಡಿನಾದ್ಯಂತ ಈ ಕತೆ ತುಂಬ ಜನಪ್ರಿಯವಾಗಿದೆ. ನನ್ನ ವೈಯುಕ್ತಿಕ ಸಂಗ್ರಹದಲ್ಲಿ ಈ ಕಥೆಯು ೨೧ ಪಾಠಾಂತರಗಳಿವೆ[1] ಕನ್ನಡ ಮಾತನ್ನಾಡುವ ಕರ್ನಾಟಕದ ಇತರ ಪ್ರದೇಶಗಳಲ್ಲಿಯೂ ಈ ಕಥೆ ಜನಪ್ರಿಯವಾದಂತಿದೆ. ಕನ್ನಡ ಜನಪದ ಕಥೆಗಳ ಕೆಲವು ಸಂಗ್ರಹಗಳಲ್ಲಿ ಇದೇ ಆಶಯದ ಕಥೆ ಸೇರ್ಪಡೆಯಾಗಿದೆ.[2] ಕಾಶ್ಮೀರದಲ್ಲಿ ಉಪಲಬ್ದವಿರುವ ಒಂದು ಕಥೆಯನ್ನು ಸಂಗ್ರಹಿಸಲಾಗಿದೆ. (Claus and Korom 1988:69-70) ತಮಿಳುನಾಡಿನ ತಿರುನಲ್ವೇಲಿ ಪ್ರದೇಶದಲ್ಲಿ ಈ ಕಥೆ ಜನಪ್ರಿಯವಾಗಿದೆ ಎಂದು ಡಾ. ಪೀಟರ್ ಜೆ. ಕ್ಲಾಸ್ ಹೇಳಿದ್ದಾರೆ.[3] ತಿರುವನಂತಪುರವಿ ಚಾರ ಗೋಷ್ಠಿಯೊಂದರಲ್ಲಿ ಭಾಗವಹಿಸಿದ ಸಂದರ್ಭ, ಅಲ್ಲಿ ಕೆಲವು ಜಾನಪದ ವಿದ್ವಾಸಂರು ಈ ಕಥೆಯು ಮಲೆಯಾಳದಲ್ಲಿಯೂ ಜನಪ್ರಿಯವಾಗಿರುವುದನ್ನು ನನಗೆ ತಿಳಿಸಿದ್ದಾರೆ.[4] ಇದನ್ನು ಗಮನಿಸಿದರೆ ಈ ಕಥೆಯು ಭಾರತದಾದ್ಯಂತ ಜನಪ್ರಿಯವಾಗಿದೆ ಎಂದು ಹೇಳಬಹುದು. ಕನಿಷ್ಠ ದಕ್ಷಿಣ ಭಾರತದಲ್ಲಂತೂ ಇದು ಇಡಿಯಾಗಿ ಪಸರಿಸಿಕೊಂಡಿದೆ.

ಆರ್ನೆ-ಥಾಂಸನ್ನರ ವರ್ಗ ಸೂಚಿಯಲ್ಲಿ ಇದೇ ಕಥೆಯನ್ನು ಹೋಲುವ ಬೇರೆ ಕಥೆಗಳ ಉಲ್ಲೇಖವಿಲ್ಲ. ೭೨೨* ರಲ್ಲಿ ‘ಭೂತದಲ್ಲಿರುವ ತಂಗಿ’ ಎಂಬ ಕಥೆಯಿದ್ದು ಅದರ ವಿವರ ಇಂತಿದೆ.: ‘ಒಬ್ಬ ಸಹೋದರನು ತನ್ನ ಸಹೋದರಿಯನ್ನು ಮದುವೆಯಾಗಬಯಸುತ್ತಾನೆ. ಆದರೆ ನೆಲವನ್ನು ಅಗೆದು ಆಕೆ ಪಾತಾಳಕ್ಕೆ ಪಯಣಿಸಿ ಬೇರೊಂದು ರಾಜ್ಯವನ್ನು ಸೇರಿಕೊಳ್ಳುತ್ತಾಳೆ. ಅಲ್ಲಿ ಆಕೆ ಅನೇಕ ಸಾಹಸಗಳನ್ನು ಮಾಡಿ, ಕೊನೆಗೆ ಆ ರಾಜ್ಯದ ಅರಸನನ್ನೇ ಮದುವೆಯಾಗುತ್ತಾಳೆ. ಮದುವೆಯಾದ ನಂತರ ಆಕೆ ತನ್ನ ಸಹೋದರನೊಂದಿಗೆ ರಾಜಿ ಮಾಡಿಕೊಳ್ಳುತ್ತಾಳೆ.’ (Arne Thompson 1964:250) ಕನ್ನಡ ಮತ್ತು ತುಳುವಿನ ಯಾವುದೇ ಪಾಠದಲ್ಲಿಯೂ ತಂಗಿಯು ಪಾತಾಳಕ್ಕೆ ಹೋಗುವುದಿಲ್ಲ. ಸಾಹಸವನ್ನು ಮಾಡುವುದಿಲ್ಲ. ಬದಲಾಗಿ ಕೆಲವು ಪಾಠಗಳಲ್ಲಿ ಆಕೆ ಆಕಾಶಕ್ಕೆ ಹೋಗಿಯ ಸೂರ್ಯವನ್ನು ಮದುವೆಯಾಗುತ್ತಾಳೆ. ಅಣ್ಣನೊಂದಿಗೆ ರಾಜಿಯಾಗುವ ಪ್ರಸಂಗವೂ ಇಲ್ಲ. ಆಕೆಗೆ ಮೀನಾಗಿ ಪರಿವರ್ತನೆ ಹೊಂದಿದ ಅನಂತರವೂ ಅಣ್ಣನೊಡನೆ ತನ್ನ ದ್ವೇಷವನ್ನು ಉಳಿಸಿಕೊಳ್ಳುತ್ತಾಳೆ. ‘ನಮ್ಮಿಬ್ಬರನ್ನು ಒಂದೇ ಬುಟ್ಟಿಯಲ್ಲಿ ಹಾಕಬೇಡ, ಒಂದೆ ಕತ್ತಿಯಲ್ಲಿ ತುಂಡರಿಸಬೇಡ, ಒಂದೇ ಬುಟ್ಟಿಯಲ್ಲಿ ಹಾಕಬೇಡ, ಒಂದೆ ಕತ್ತಿಯಲ್ಲಿ ತುಂಡರಿಸಬೇಡ, ಒಂದೇ ಪಾತ್ರೆಯಲ್ಲಿ ಬೇಯಿಸಬೇಡ’ ಎಂಬುದೇ ಅವಳ ಅಂತಿಮ ನುಡಿ. ಅಣ್ಣ ತಂಗಿಯನ್ನು ಮದುವೆಯಾಗ ಬಯಸುವುದು ಮಾತ್ರ ಎರಡೂ ಕಡೆಯಲ್ಲಿರುವ ಸಮಾಜ ಅಂಶವಾಗಿದೆ.

ರಾಮಚಂದ್ರೇಗೌಡರು ಈ ಕತೆಯ ವರ್ಗವನ್ನು AT451B ಎಂದು ಗುರುತಿಸಿದ್ದಾರೆ. (1982:575) ಅವರು ಹೀಗೆ ಗುರುತಿಸಲು ಕಾರಣವಾದ ಅಂಶವೆಂದರೆ ತಂಗಿಯ ಅಸ್ವಾಭಾವಿಕವಾದ ಹುಟ್ಟು. ಕಟ್ಟಡದಲ್ಲಿ ಉಪಲಬ್ಧವಿರುವ ಕಥೆಯೊಂದರಲ್ಲಿ ತಂಗಿಯು ಗುಲಗಂಜಿಯಲ್ಲಿ ಹುಟ್ಟುತ್ತಾಳೆ. ಸಂಧ್ಯಾರೆಡ್ಡಿಯವರು ಈ ಕಥೆಯ ಆಶಯವೊಂದನ್ನು ಗುರುತಿಸಿ ಅದನ್ನು AT722 (1982:156) ಕ್ಕೆ ಸೇರಿಸಿದ್ದಾರೆ. ಅಣ್ಣನು ತಂಗಿಯನ್ನು ಮದುವೆಯಾಗ ಬಯಸುವ ಆಶಯವನ್ನು ಮಾತ್ರ ಅವರು ಗಮನಿಸಿದ್ದಾರೆ.

ರಾಮಚಂದ್ರೇಗೌಡ ಮತ್ತು ಸಂಧ್ಯಾರೆಡ್ಡಿಯವರು ಈ ಕಥೆಯ ವರ್ಗವನ್ನು ಬೇರೆ ಬೇರೆಯಾಗಿ ಸೂಚಿಸಿದ್ದರಲ್ಲಿಯೆ ಕಥೆಯ ಸಂರ್ಕೀರ್ಣತೆ ಸ್ಪಷ್ಟವಾಗುತ್ತದೆ ಮತ್ತು ಅಂತಾರಾಷ್ಟ್ರೀಯ ವರ್ಗಸೂಚಿಯಲ್ಲಿ ಈ ಕಥೆಗೆ ಸಂಬಂಧಿಸಿದ ಸ್ಪಷ್ಟ ವರ್ಗ ವಿಂಗಡನೆ ಇಲ್ಲವೆಂಬುದು ಸೂಚಿತವಾಗುತ್ತದೆ. ತುಳುನಾಡಿನಲ್ಲಿ ಇದುವರೆಗೆ ಸಿಕ್ಕಿದ ಈ ಕಥೆಯ ಪಾಠಗಳಲ್ಲೆಲ್ಲವೂ ಇತರೆಡೆಗಳಲ್ಲಿ ಸಿಕ್ಕಿದ ಪಾಠಗಳಿಗಿಂತ ಭಿನ್ನವಾಗಿವೆ. ಕಥೆಯ ಅಂತ್ಯವಂತೂ ತುಂಬಾ ಭಿನ್ನವಾಗಿದೆ. ಮೀನಾಗಿ ಪರಿವರ್ತನೆ ಹೊಂದಿದ ಅಣ್ಣ-ತಂಗಿಯರನ್ನು ನಲಿಕೆಯವನೊಬ್ಬನು ಹಿಡಿದು ಮನೆಗೆ ತಂದು ಬೇಯಿಸುತ್ತಾನೆ. ಬೇಯಿಸಿದಾಗ ಕಂಡ ರಕ್ತ ರಂಜಿತ ನೊರೆಯಿಂದಾಗಿ ಬೆದರಿದ ಆತ ಅದನ್ನು ಮತ್ತೆ ಹೊರಕ್ಕೆ ಎಸೆಯುತ್ತಾನೆ. ಅಲ್ಲಿ ಹರಿವೆ ಮತ್ತು ಬಸಲೆ ಬೆಳೆಯುತ್ತದೆ. ಅದನ್ನು ಬೇಯಿಸಿದಾಗ ಅಲ್ಲಿಯೂ ರಕ್ತರಂಜಿತ ನೊರೆ, ಪಿಸುಗುಟ್ಟುವ ಧ್ವನಿ ಕೇಳುತ್ತದೆ. ಅದನ್ನು ಮತ್ತೆ ಹೊರಗೆಸೆಯುತ್ತಾನೆ. ಹಿರಿಯಡಕದಲ್ಲಿ ಸಂಗ್ರಹಿತವಾದ ಕಥೆಯಲ್ಲಿ ಅಲ್ಲಿ ಮತ್ತೆ ಕೆಸು, ತಿಮರೆಗಳು ಹುಟ್ಟುತ್ತವೆ. ಇಲ್ಲಿ ಮುಖ್ಯವಾದ ಅಂಶವೆಂದರೆ ಪರಿವರ್ತನೆ ಹೊಂದಿದ ಅಣ್ಣ-ತಂಗಿಯರು ಮತ್ತೆ ಮತ್ತೆ ಮನೆಯೊಳಕ್ಕೆ ಬರಲು ಮಾಡಿದ ಸಾಹಸವನ್ನು ಸಾಕಷ್ಟು ವಿವರವಾಗಿ ಹೇಳಲಾಗಿದೆ. ಕನ್ನಡದ ಪಾಠಗಳಲ್ಲಿಯೂ ಹೊರಗೆ ಎಸೆಯಲ್ಪಟ್ಟ ಅಣ್ಣ-ತಂಗಿಯರು ದಾಳಿಂಬೆ ಹೂ ಮತ್ತು ನೆಗ್ಗಿಲು ಮುಳ್ಳಾಗಿ ಪರಿವರ್ತನೆ ಹೊಂದುತ್ತಾರೆ. ಸಿಂಪಿ ಲಿಂಗಣ್ಣನವರ ಸಂಗ್ರಹದಲ್ಲಿರುವ ಕಥೆಯಲ್ಲಿ ತಂಗಿಯು ಮರವೇರಿದ ಅನಂತರ ಸೂರ್ಯ ಲೋಕಕ್ಕೆ ಹೋಗುತ್ತಾಳೆ. ಅಲ್ಲಿ ಸೂರ್ಯನನ್ನು ಮದುವೆಯಾಗುತ್ತಾಳೆ. ಕೊನೆಗೆ ಸೂರ್ಯನೊಂದಿಗೆ ತನ್ನ ತಂದೆ-ತಾಯಿಯರನ್ನು ನೋಡಲು ಹಿಂದಿರುಗುತ್ತಾಳೆ. ಕೊನೆಗೆ ಸೂರ್ಯನೊಂದಿಗೆ ತನ್ನ ತಂದೆ-ತಾಯಿಯರನ್ನು ನೋಡಲು ಹಿಂದಿರುತ್ತಾಳೆ. ಆದರೆ ಅವರು ಬರುವಾಗ ಮನೆಯಲ್ಲಿ ಯಾರೂ ಇರುವುದಿಲ್ಲ. ಇದನ್ನು ಗಮನಿಸಿದರೆ ಕನ್ನಡದ ಪಾಠಗಳಲ್ಲಿ ತಂಗಿಗೆ ಮತ್ತೆ ಮನೆಯೊಳಕ್ಕೆ ಬರಲು ಅವಕಾಶವಿಲ್ಲದಿರುವುದು ಸ್ಪಷ್ಟವಾಗುತ್ತದೆ. ಆ ಆಶಯವು ತುಳುವಿನ ಪಾಠಗಳಿಗೆ ವಿರುದ್ಧವಾಗಿದೆ. ಬಹುಶಃ ಈ ವ್ಯತ್ಯಾಸಕ್ಕೆ ಕಾರಣ ಆ ಕಥೆಗಳು ಹುಟ್ಟಿಕೊಂಡ ಸಂದರ್ಭವೇ ಇರಬೇಕು. ಅದನ್ನು ಪ್ರಬಂಧದಲ್ಲಿ ಮುಂದೆ ಚರ್ಚಿಸಲಾಗುವುದು.

ತುಳುವಿನ ಈ ವಿಶಿಷ್ಟತೆಯನ್ನು ಗಮನಿಸಿ, ಈ ಕಥೆಯನ್ನು ಒಂದು ಉಪವರ್ಗವನ್ನಾಗಿ ಗುರುತಿಸಿಕೊಳ್ಳುವುದು ಒಳ್ಳೆಯದು ಎಂದು ಅನ್ನಿಸುತ್ತದೆ. AT 722 ರಲ್ಲಿ ಸೂಚಿತವಾದ ಇಷ್ಟಿದ್ದರೂ ಆರ್ನೆ ಥಾಂಸನ್ನಡ ವರ್ಗ ಸೂಚಿ 722* ರ ಆಶಯವು ಈ ಕಥೆಯ ಆಶಯವು ಆಗಿರುವುದರಿಂದ, ಅದರಲ್ಲಿಯೇ ಈ ತುಳು ಕಥೆಯನ್ನು ಉಪ ವರ್ಗವನ್ನಾಗಿ ಮಾಡಿಕೊಳ್ಳಬಹುದು. ಹೀಗೆ ಮಾಡಿದರೆ ತುಳು ಕಥೆಯ ಒಟ್ಟಾರೆ ಸ್ವರೂಪವನ್ನೂ, ವಿಶಿಷ್ಟತೆಯನ್ನು ಗುರುತಿಸಿಕೊಂಡಂತಾಗುತ್ತದೆ.

ಮೇಲೆ ವಿವರಿಸಲಾದ ಕಥೆಯ ಪಾಠಾಂತರ, ಸಂದರ್ಭ ಮತ್ತು ಅರ್ಥವನ್ನು ವಿವರಿಸುವುದಕ್ಕೆ ನಾಲ್ಕು ತುಳು ಪಾಠಗಳನ್ನೂ, ಎರಡು ಕನ್ನಡ ಪಾಠಗಳನ್ನೂ ಆಧಾರವಾಗಿ ಇರಿಸಿಕೊಳ್ಳಲಾಗಿದೆ. ಅವುಗಳೆಂದರೆ:

ತುಪಾ: ಶ್ರೀಮತಿ ಕಲ್ಯಾಣಿ ಹೇಳಿದ ಕಥೆ (ಸಜಿಪ, ಬಂಟ್ವಾಳ ಸಂಗ್ರಹ: ಬಿ. ಸುಮಂಗಲ, ೧೯೮೮, ತುಳು)

ತುಪಾ: ಶ್ರೀ ಣಾರಾಣಪ್ಪಗೌಡರು ಹೇಳಿದ ಕಥೆ (ಕಂಬಳ, ಪಂಜ ಸಂಗ್ರಹ: ದಯಾಮಣಿ ಕಂಬಳ, ೧೯೮೮, ತುಳು)

ತುಪಾ: ಶ್ರೀಮತಿ ಕರ್ಗಿ ಹೇಳಿದ ಕಥೆ (ಹಿರಿಯಡಕ, ಉಡುಪಿ ಸಂಗ್ರಹ, ಪೀಟರ್‌ಜೆ. ಕ್ಲಾಸ್‌, ೧೯೮೬, ತುಳು)

ತುಪಾ : ಪೂವಾಳೆ ಹೇಳಿದ ಕಥೆ (ಪುತ್ತೂರು, ಸಂಗ್ರಹ: ಶುಭ ಲಕ್ಷ್ಮಿ ಪಿ.ಎನ್. ೧೯೮೮, ತುಳು)

ಕಪಾ: ಸುಂದರಮ್ಮ ಹೇಳಿದ ಕಥೆ (ನಾಗಮಂಗಲ, ಮಂಡ್ಯ ಸಂಗ್ರಹ: ಪರಮಶಿವಯ್ಯ ಜೀ. ಶಂ., ೧೯೬೫, ಕನ್ನಡ)

ಕಪಾ: ಸಿಂಪಿ ಲಿಂಗಣ್ಣನವರ ಸಂಗ್ರಹ (ಉತ್ತರ ಕರ್ನಾಟಕ, ೧೯೭೭, ಕನ್ನಡ)

ಮೇಲಿನ ಆರು ಪಾಠಗಳಲ್ಲಿ ಕಂಡುಬರುವ ಪ್ರಧಾನವಾದ ವ್ಯತ್ಯಾಸಗಳನ್ನು ಮತ್ತು ಸಮಾನ ಅಂಶಗಳನ್ನು ಪ್ರತ್ಯೇಕವಾದ ಪಟ್ಟಿಯಲ್ಲಿ ಗುರುತಿಸಬಹುದು ಅದರಲ್ಲಿ ನಮ್ಮ ಅಭ್ಯಾಸಕ್ಕೆ ಸಹಕಾರಿಯಾಗುವು ಅಂಶಗಳನ್ನು ಈ ಕೆಳಗಿನಂತೆ ಕ್ರೋಡೀಕಡಿಸಬಹುದು. (ವಿವರಗಳಿಗೆ ಪಟ್ಟಿ ನೋಡಿರಿ):

೧. ಎಲ್ಲ ಪಾಠಗಳಲ್ಲಿಯೂ ಅಣ್ಣನೇ ತಂಗಿಯನ್ನು ಮದುವೆಯಾಗಲು ಇಷ್ಟಪಡುತ್ತಾನೆ. ಆದರೆ ತುಪ್ಳಾರಲ್ಲಿ ಮಾತ್ರ ಅಕ್ಕನನ್ನು ಮದುವೆಯಾಗಲು ತಮ್ಮ ಬಯಸುತ್ತಾನೆ.

೨. ಕಪಾರ ಹೊರತಾಗಿ ಉಳಿದೆಲ್ಲ ಕಡೆಗಳಲ್ಲಿಯೂ ಅಣ್ಣ ತಂಗಿಯರು ಮನುಷ್ಯರಿಗೇ ಜನಿಸುತ್ತಾರೆ. ಕಪಾ ರಲ್ಲಿ ಮಾತ್ರ ರಾಣಿ ಗುಲಗಂಜಿ ಕಾಯನ್ನು ತಿಂದು ಹೆಣ್ಣು ಮಗುವನ್ನು ಹೆರುತ್ತಾಳೆ. ಇಲ್ಲಿ ಹೆಣ್ಣಿನ ಹುಟ್ಟನ್ನು ಅ ಸಾಮಾನ್ಯಗೊಳಿಸಿ, ಕಥೆಗೆ ವಿಶಿಷ್ಟವಾದ ಆವರಣವನ್ನು ಕಲ್ಪಿಸಲಾಗಿದೆ.

೩. ತುಪಾ ಮತ್ತು ಕಪಾರಲ್ಲಿ ಅಣ್ಣನು ತಂಗಿಯ ನೀಳವಾದ ಕೂದಲನ್ನು ಕಂಡು ಮೋಹಗೊಂಡು, ಆಕೆಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಉಳಿದ ಪಾಠಗಳಲ್ಲಿ ಅಣ್ಣನೇ ತಂದಿಟ್ಟ ಹೂವನ್ನು ಮುಡಿದ ತಂಗಿಯನ್ನು ಮದುವೆಯಾಗ ಬಯಸುವ ಉಲ್ಲೇಖವಿದೆ.

೪. ತುಪಾ ಮತ್ತು ತಪಾರಲ್ಲಿ ತಂಗಿಯು ಇಲಿಗಳ ಸಹಾಯದಿಂದ ಮನೆಯಿಂದ ತಪ್ಪಿಸಿಕೊಳ್ಳುತ್ತಾಳೆ. ಇತರೆಡೆಗಳಲ್ಲಿ ಆಕೆಯೇ ಮನೆಯಿಂದ ಓಡುತ್ತಾಳೆ.

೫. ತುಪಾರಲ್ಲಿ ತಂಗಿಯು ತಾನೇ ತಿಂದೆಸೆದ ಮಾವಿನ ಗೊರಟಿನಿಂದ ಹುಟ್ಟಿ ಬೆಳೆದ ಮಾವಿನ ಮರವನ್ನು ಏರುತ್ತಾಳೆ. ಕಪಾರಲ್ಲಿ ಆಕೆ ನೀರಂಜಿ ಮರವನ್ನೇರಿದರೆ, ಕಪಾರಲ್ಲಿ ಆಕೆ ಆಶ್ವತ್ಥ ಮರವನ್ನೇರುತ್ತಾಳೆ. ಉಳಿದ ಪಾಠಗಳಲ್ಲಿ ಆಕೆ ಜಂಬುನೇರಳೆ ಮರವನ್ನು ಏರುತ್ತಾಳೆ.

೬. ತುಪಾ ತುಪಾ ರಲ್ಲಿ ತಂಗಿಯ ಕಣ್ಣ ನೀರಿನಿಂದ ಕೆರೆ ಸಿದ್ಧವಾಗುತ್ತದೆ. ತುಪಾ ಮತ್ತು ಕಪಾರಲ್ಲಿ ತಂಗಿ ಮರವೇರುವಷ್ಟರಲ್ಲಿಯೇ ಕೆರೆ ಇರುತ್ತದೆ. ತುಪಾ೪ ಮತ್ತು ಕಪಾರಲ್ಲಿ ಕೆರೆಯ ಉಲ್ಲೇಖವಿಲ್ಲ.

೭. ತುಪಾ೪ ಮತ್ತು ಕಪಾರಲ್ಲಿ ತಂಗಿ ಮರವೆರುವ ಉಲ್ಲೇಖವಿಲ್ಲ.

೮. ಕಪಾರಲ್ಲಿ ಅಣ್ಣನು ತಂಗಿ ಏರಿದ ಮರವನ್ನು ಬುಡದಿಂದ ಕಡಿಯುತ್ತಾನೆ. ತುಪಾ೪ ಮತ್ತು ಕಪಾರ ಹೊರತು ಉಳಿದ ಪಾಠಗಳಲ್ಲಿ ತಂಗಿಯನ್ನು ಬೆಂಬತ್ತಿದ ಅಣ್ಣನೂ ಮರವೇರುತ್ತಾನೆ.

೯. ತುಪಾರಲ್ಲಿ ಮರವೇರಿದ ತಂಗಿ ಅಲ್ಲಿಂದ ನೇರವಾಗಿ ಸೂರ್ಯ ಲೋಕಕ್ಕೆ ಹೋಗಿ ಸೂರ್ಯನನ್ನು ಮದುವೆಯಾಗುತ್ತಾಳೆ. ಕಪಾರಲ್ಲಿಯೂ ಹೀಗೆ ಆಗಿದೆ. ಉಳಿದ ಪಾಠಗಳಲ್ಲಿ ಅಣ್ಣನೂ ತಂಗಿಯೂ ಕೆರೆಗೆ ಹಾರಿ ಮೀನುಗಳಾಗುತ್ತಾರೆ. ಎರಡೂ ಮೀನುಗಳು ಭಿನ್ನ ಭಿನ್ನ ಜಾತಿಗೆ ಸೇರಿದವರಾಗುತ್ತಾರೆ. ತುಪಾ೪ರ ಕಥೆ ಇಲ್ಲಿಗೆ ಮುಕ್ತಾಯ ಹೊಂದುತ್ತದೆ.

 

[1] ೨೧ ಪಾಠಾಂತರಗಳನ್ನು ಸಂಗ್ರಹಿಸಿದ ಸ್ಥಳ ಮತ್ತು ಆ ಕಥೆಗಳನ್ನು ಸಂಗ್ರಹಿಸಿ ಕೊಟ್ಟವರ ವಿವರ ಈ ಕೆಳಗಿನಂತಿವೆ.

೧.೧: ಬಾಯಾರು (ಕಾಸರಗೋಡು ಜಿಲ್ಲೆ): ಶಂಕರನಾರಾಯಣ ಖಂಡಿಗೆ ೧೯೮೮

೧.೨: ಬಿಳಿಮಲೆ (ಸುಳ್ಯ ತಾ): ಪುರುಷೋತ್ತಮ ಬಿಳಿಮಲೆ ೧೯೮೬

೧.೩: ಸಜಿಪ (ಬಂಟ್ವಾಳ ತಾ.): ಸುಮಂಗಲ ಬಿ. ೧೯೮೮

೧.೪: ವಗ್ಗ (ಬಂಟ್ವಾಳ ತಾ): ವಾಮನ ನಂದಾವರ ೧೯೮೮

೧.೫: ಕಂಬಳ (ಸುಳ್ಯ ತಾ): ದಯಾಮಣಿ ೧೯೮೮

೧.೬: ಪುದುವೆಟ್ಟು (ಬೆಳ್ಳಂಗಡಿ ತಾ): ಯದುಪತಿಗೌಡ ೧೯೮೮

೧.೭: ಪುತ್ತೂರು (ಪುತ್ತೂರು ತಾ): ಶುಭಲಕ್ಷ್ಮಿ ಪಿ.ಎನ್. ೧೯೮೮

೧.೮: ಸಂಪಾಜೆ (ಕೊಡಗು): ಸುಬ್ರಾಯ ಸಂಪಾಜೆ ೧೯೮೮

೧.೯: ಅಜ್ಜಾವರ (ಸುಳ್ಯ ತಾ): ವೇದಾವತಿ ೧೯೮೮

೧.೧೦: ಮುಳ್ಯ (ಸುಳ್ಯ ತಾ): ಪಾರ್ವತಿ ೧೯೮೮

೧.೧೧: ಕನಕಮಜಲು (ಸುಳ್ಯ ತಾ): ದಯಾಕಿರಣ್ ೧೯೮೮

೧.೧೨: ಪೆರಾಲು (ಸುಳ್ಯ ತಾ): ಮಹಾಲಿಂಗ ೧೯೮೮

೧.೧೩: ಹಿರಿಯಡಕ (ಉಡುಪಿ ತಾ): ಪೀಟರ್ ಜೆ. ಕ್ಲಾಸ್ ೧೯೮೬

೧.೧೪: ಮಂಚಿ (ಬಂಟ್ವಾಳ ತಾ): ನಾಗವೇಣಿ ೧೯೮೮

೧.೧೫: ತೆಂಕಿಲ (ಪುತ್ತೂರು ತಾ): ಸದಾನಂದ ಬಿ. ೧೯೮೮

೧.೧೬: ಕುಂದಾಪುರ (ಕುಂದಾಪುರ ತಾ): ಅನಿತಾ ಬಿ. ೧೯೮೮

೧.೧೭: ಕೊಕ್ಕರ್ಣೆ (ಉಡುಪಿ ತಾ): ಕೃಷ್ಣಪ್ಪ ಎನ್. ೧೯೮೮

೧.೧೮: ಸುರತ್ಕಲ್ಲು (ಮಂಗಳೂರು ತಾ): ಗಣೇಶ ಎಸ್. ೧೯೧೯

೧.೧೯: ಉಚ್ಚಿಲ (ಮಂಗಳೂರು ತಾ.): ಪುರುಷೋತ್ತಮ ಬಿಳಿಮಲೆ ೧೯೮೯

೧.೨೦: ಮುಲ್ಕಿ (ಮುಲ್ಕಿ): ಪುರುಷೋತ್ತಮ ಬಿಳಿಮಲೆ ೧೯೮೯

೧.೨೧: ಮೂಲ್ಕಿ (ಮೂಲ್ಕಿ): ಪುರುಷೋತ್ತಮ ಬಿಳಿಮಲೆ ೧೯೮೮

[2] ಕನ್ನಡದ ಕಥೆಗಳಿಗಾಗಿ ನೋಡಿರಿ: ಪರಮಶಿವಯ್ಯ ಜಿ. ಶಂ. ೧೯೭೦, ರಾಗೌ ೧೯೭೦, ಲಿಂಗಣ್ಣ ಸಿಂಪಿ ೧೯೭೭, ಶಿವಕುಮಾರ ೧೯೭೦ ಪುನರ್ವಸು ೧೯೭೪, ಕೃಷ್ಣಮೂರ್ತಿ ಮತಿಘಟ್ಟ ೧೯೬೯

[3] ಕ್ಲಾಸ್‌ ಅವರು ನನಗೆ ನೀಡಿದ ವೈಯಕ್ತಿಕ ಮಾಹಿತಿ ೧೯-೧೧-೧೯೮೮

[4] ಅಕ್ಟೋಬರ್ ೩೦, ೩೧, ೧೯೮೮