ದಕ್ಷಿಣ ಕನ್ನಡ ಜಿಲ್ಲೆಯ ಪರವ, ಪಂಬದ, ನಲಿಕೆ, ಮೇರ, ಮನ್ಸ, ಕೊರಗ ಮೊದಲಾದ ಸಮುದಾಯಗಳಲ್ಲಿ ಹಲವಾರು ಬಗೆಯ ‘ಕುಣಿತ’ಗಳಿದ್ದು ಅವುಗಳ ಸಮಗ್ರವಾದ ಮತ್ತು ತೌಲನಿಕವಾದ ಅಧ್ಯಯನ ಸಮರ್ಪಕವಾಗಿ ಆಗಿಲ್ಲ. ಬಹಳ ಬಾರಿ ಇಂತಹ ಕುಣಿತಗಳು ಒಳಗೊಂಡಿರುವ ಸಾಹಿತ್ಯಿಕ ಭಾಗ ವಾದ ಹಾಡುಗಳನ್ನು, ವೇಷಧಾರಿಗಳು ಧರಿಸಿರುವ ವೇಷಭೂಷಣಗಳನ್ನು, ಅಲಂಕಾರ ಸಾಮಗ್ರಿಗಳನ್ನು ಮತ್ತು ಕುಣಿತದ ಶೈಲಿಗಳನ್ನು ಪರಸ್ಪರ ಸಂಬಂಧವಿಲ್ಲದ ಪ್ರತ್ಯೇಕ ಪ್ರತ್ಯೇಕ ಅವಯವಗಳೆಂಬುದಾಗಿ ಪರಿಭಾವಿಸಿಕೊಂಡು ವರ್ಣಿಸುವ, ವಿವರಿಸುವ ಮತ್ತು ಅರ್ಥೈಸುವ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳ ಹಿಂದೆ ಮೆಚ್ಚುಗೆಯನ್ನು ಧಾರಾಳವಾಗಿ ವ್ಯಕ್ತಪಡಿಸುವ ಪ್ರಶಂಸಾಪರ ಮನಸ್ಸೊಂದು ಕೆಲಸ ಮಾಡಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹೀಗಾಗಿ ‘ಸುಂದರವಾದ ಕುಣಿತ’ ‘ಮನ ಸೆಳೆಯುವ ವೇಷಭೂಷಣ’,‘ಅನಿಷ್ಟವನ್ನು ತೊಡೆದು ಹಾಕುವ ಆಶಯ’, ‘ಉಳಿಸಿ ಬೆಳೆಸಬೇಕಾದ ಕಲೆ’ – ಎಂಬಂತಹ ಸರಳಾತ್ಮಕ, ನಿರ್ಧಾರಾತ್ಮಕ ಮತ್ತು ಘೋಷಣಾತ್ಮಕ ಹೇಳಿಕೆಗಳನ್ನು ಕೊಡುತ್ತಿರುವುದು ಕಂಡುಬರುತ್ತದೆ. ಕುಣಿತವೊಂದು ಸಂಕೀರ್ಣ ರೂಪದ ಅಭಿವ್ಯಕ್ತಿ ಮಾಧ್ಯಮ ಎಂದಾಗಲೀ, ತುಳುನಾಡಿನ ಜಾತ್ಯಾಧಾರಿತ ಸಮಾಜವೊಂದರ ಚಾರಿತ್ರಿಕ ಉತ್ಪನ್ನವೆಂದಾಗಲೀ, ಬರಿಯ ಹಾಡು ಮಾತ್ರ ಪಠ್ಯ ಅಲ್ಲ ಎಂದಾಗಲೀ, ಪಠ್ಯ ಸಂದರ್ಭ, ಪ್ರದರ್ಶನ ಮತ್ತು ಅರ್ಥ – ಇವುಗಳೊಳಗಿನ ನಿಕಟವಾದ ಸಂಬಂಧವಿದೆಯೆಂದಾಗಲೀ ಸರಿಯಾದ ತಿಳುವಳಿಕೆಯಿಲ್ಲದಿರುವುದೇ ಈ ಬಗೆಯ ಸರಳ ತೀರ್ಮಾನಗಳಿಗೆ ಕಾರಣವಾಗಿದೆ. ಕರ್ರಂಗೋಲು ಕುಣಿತದ ಸಂಬಂಧವಾಗಿ ಬಂದಿರುವ ಲೇಖನಗಳನ್ನು ನೋಡಿದರೆ ಅವುಗಳಲ್ಲಿಯೂ ‘ಒಟ್ಟಾರೆ’ ಅರ್ಥವೇ ಕಂಡುಬರುತ್ತದೆ. ‘‘ಕೃಷಿ ಚಟುವಟಿಕೆಗೆ ಸಂಬಂಧಿಸಿದ ಒಂದು ಹವ್ಯಾಸಿ ಕಲೆ ಕರ್ರಂಗೋಲು ಕುಣಿತ. ಕರಂಗೋಲು ಪದಕ್ಕೆ ಸ್ಪಷ್ಟವಾದ ಅರ್ಥ ದೊರೆಯುವುದಿಲ್ಲವಾದರೂ ಕಲಾವಿದರು ಹಿಡಿಯುವ ಕೋಲು ಕರಿಯದಾದುದರಿಂದ ಈ ಅರ್ಥ ಬಂದಿರಬಹುದೆನಿಸುತ್ತದೆ ಅಥವಾ ಕರದಲ್ಲಿ ಹಿಡಿಯುವ ಕೋಲು ಕರ್‌ಂಗೋಲು ಆಗಿರಬಹುದು… ಸುಗ್ಗಿಯ ಕಾಲದಲ್ಲಿ ಕಲಾವಿದರು ವೇಷ ಹಾಕಿಕೊಂಡು ಮನೆಮನೆಗೆ ಹೋಗಿ ಮುಂದಿನ ಬಿತ್ತನೆಯ ಬೀಜ ಸಂಗ್ರಹಿಸುತ್ತಾರೆ… ಅವರು ಮೈಮೇಲೆ ಅಲಂಕರಿಸಿಕೊಳ್ಳುವ ಸೊಪ್ಪು ಸುಗ್ಗಿಯ ಸಮೃದ್ಧಿಯ ಸಂಕೇತ… ಸವರಿಕೊಳ್ಳುವ ಕರಿಯ ಬಣ್ಣ ತಮ್ಮ ಬದುಕಿನ ಕತ್ತಲೆ ಸ್ವರೂಪ’’. (ಚನ್ನಬಸಪ್ಪ ಗೊ.ರು.(ಸಂ) ೧೯೭೭:೨೬). ‘‘ಇದೂ ಹರಿಜನರ ಕುಣಿತವೇ. ಮೈಗೆ ಕರಿಯ ಬಣ್ಣ ಸವರಿ, ಮೈ ತುಂಬ ಸೊಪ್ಪು, ಗುಂಡುಮಣಿ, ಅಡಿಕೆಯ ಸಿಂಗಾರಗಳ ಅಲಂಕಾರ ಮಾಡಿಕೊಳ್ಳುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುತ್ತಾರೆ. ಕುಣಿತದ ತಂಡದಲ್ಲಿ ಹೆಂಗಸರೂ, ಗಂಡಸರೂ ಇರುತ್ತಾರೆ. ಕೈಯಲ್ಲಿ ಹಿಡಿದ ಉದ್ದವಾದ ಕೋಲನ್ನು ನೆಲಕ್ಕೆ ಕುಟ್ಟುತ್ತಾ, ಹಿಂದು ಮುಂದಕ್ಕೆ ಚಲಿಸುತ್ತಾ, ಕರ್ರಂಗೋಲು ಎಂಬ ಸೊಲ್ಲು ಪುನರಾವರ್ತನೆಯಾಗುವ ಹಾಡನ್ನು ಹಾಡುತ್ತಾ ಕುಣಿಯುತ್ತಾರೆ… ಈ ಕುಣಿತವು ಮುಖ್ಯವಾಗಿ ಕೃಷಿಗೆ ಸಂಬಂಧಪಟ್ಟದ್ದಾಗಿದ್ದು ‘ಕರ್ರಂಗೋಲು’ ಎಂಬುದು ಒಂದು ವಿಧದ ವಿಸಿಷ್ಟ ಧಾನ್ಯದ ತಳಿ ಎಂಬ ಅಭಿಪ್ರಾಯವು ಕರ್ರಂಗೋಲು ಪದಗಳಿಂದ ಹೊರಡುವಂತಿದೆ’’ (ಅಮೃತ ಸೋಮೇಶ್ವರ ೧೯೬೮;೧೪೮) ಪ್ರಸ್ತುತ ಉದ್ಧರಿಸಿರುವ ವಾಕ್ಯಗಳಲ್ಲಿ ಕರ್ರಂಗೋಲು ಕುರಿತಂತೆ ತಿಳಿದು ಬರುವ ಅರ್ಥವು ಇಡಿಯ ಕುಣಿತದ ಒಂದು ಸ್ತರದಲ್ಲಿ ಅಥವಾ ಹಾಡಿನ ಒಂದು ಭಾಗದಲ್ಲಿ ವ್ಯಕ್ತವಾಗುತ್ತದೆ. ಇಂತಹ ಒಂದು ಅರ್ಥದ ಸಮರ್ಥನೆಗೆ ಕೊಟ್ಟಿರುವ ವಿವರಗಳು ಜನಾಂಗ, ಪ್ರದರ್ಶನದ ಕಾಲ, ಸನ್ನಿವೇಶ, ಸಾಮಾಜಿಕ ಸಂದರ್ಭ, ಸ್ಥಳ – ಈ ಅಂಶಗಳನ್ನು ಕುರಿತಂತೆ ನಿರ್ದಿಷ್ಟವಾಗಿರದೆ ಸ್ಥೂಲವಾಗಿರುವುದನ್ನು ಗಮನಿಸಬೇಕು. ‘ಕರ್ರಂಗೋಲು’ ಕುಣಿತದಲ್ಲಿ ಹಾಡು, ನೃತ್ಯ, ವೇಷಭೂಷಣ, ಮಾತು, ಸಂಭಾಷಣೆ, ಸಂಪ್ರದಾಯ, ಸಾಮಾಜಿಕತೆ, ಜಾತೀಯತೆ, ವೃತ್ತಿ, ಐತಿಹಾಸಿಕತೆ, ಆರಾಧನೆ, ಸಂಭಾವನೆ, ಸಮೂಹದ ಪಾಲ್ಗೊಳ್ಳುವಿಕೆ- ಹೀಗೆ ಹಲವು ಸಂಗತಿಗಳಿರುವುದರಿಂದ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಮೇಲಿನ ಸಂಗತಿಗಳನ್ನೊಳಗೊಂಡ ಒಂದು ‘ಪೂರ್ಣ ಪಠ್ಯ’ವನ್ನು ಗಮನಕ್ಕೆ ತೆಗೆದುಕೊಂಡು ವಿಶ್ಲೇಷಿಸಬೇಕಾಗುತ್ತದೆ. ಇಂತಹ ಪ್ರಯತ್ನವೊಂದರ ಮೂಲಕ ‘ಕರ್ರಂಗೋಲು’ ಕುಣಿತದ ವಿವರ ಮತ್ತು ಅರ್ಥವನ್ನು ಶೋಧಿಸುವುದೇ ಈ ಲೇಖನದ ಉದ್ದೇಶವಾಗಿದೆ.[1]

 

ಕರ್ರಂಗೋಲು ಹಾಡು

ವಿಸ್ತಾರವಾಗಿರುವ ಒಂದು ತುಳು ಪಾಠದ ಕನ್ನಡ ಅನುವಾದವು ಈ ಕೆಳಗಿನಂತಿದೆ:

‘ಪೊಲಿ ಪೊಲಿ’[2] ಎಂದು ಕರೆವೆವು ‘ಕರ್ರಂಗೋಲು’ ಹುಟ್ಟಿದ
ಕರ್ರಂಗೋಲು ಹುಟ್ಟಿದ್ದು ಎಲ್ಲಿ ಕಾಂತಕ್ಕ
ಮೂಡುದಿಕ್ಕಿನಲ್ಲಿ ಗದ್ದೆಯ ಗಡಿಯಲ್ಲಿ
ಪಡುದಿಕ್ಕಿನಲ್ಲಿ ಹೊಳೆಬದಿ ನಡುವಿನಲ್ಲಿ
ಎಲ್ಲಿ ಕಾಂತಕ್ಕ ಏಳು ಕಡಲು ಆ ಬದಿಯಲ್ಲಿ
‘ಮಾದೆರು’[3]ವಿನ ದೊಡ್ಡ ಕಾಡು ತಿರುಗಿಸಿ ತರಬೇಕು
‘ಕೊಟ್ಟೆ’[4]ಯ ಮುಳ್ಳಿನಲ್ಲಿ ಸಿಕ್ಕಿಸಿ ತರಬೇಕು
‘ಸೂರಿ’[5] ಮುಳ್ಳಿನಲ್ಲಿ ಹೆಣೆದು ತರಬೇಕು
‘ಈಂಬುಳ’[6] ಮುಳ್ಳಿನಲ್ಲಿ ತಿರುಗಿಸಿ ತರಬೇಕು
‘ಇಟ್ಟೆಯ’[7]ದ ಸೊಪ್ಪಿನಲ್ಲಿ ಹೊದಿಸಿ ತರಬೇಕು
‘ಬೈದ್ಯರ’[8] ಕೋವಿಯಲ್ಲಿ ಗುಂಡು ಹಾರಿಸಿ ತರಬೇಕು
ಕೈಯ ಬಿಲ್ಲಿನಲ್ಲಿ ಸಿಕ್ಕಿಸಿ ತರಬೇಕು
ನೆಕ್ಕಿ ಸೊಪ್ಪಿನಲ್ಲಿ ಬೀಸಿ ತರಬೇಕು
ಗೆರಟೆಯ ನೀರಿನಲ್ಲಿ ಮುಳುಗಿಸಿ ತರಬೇಕು
ಮರದ ಪಾತ್ರೆಯ ನೀರಿನಲ್ಲಿ ಈಜಿಸಿ ತರಬೇಕು
ಆ ಕರ್ರಂಗೋಲು ತರಲು ಯಾರು ಬಲ್ಲರು?
ಮಂಗಾರ ಮಾನಿಗ ಅವಳಾದರೆ ಬಲ್ಲಳು
ಕಾಂತಾರ ಕರಿಯ ಕುರೋವು ಅವನಾದರೆ ಬಲ್ಲನು
‘ಕಟ್ಟಿದ’ ಮಕ್ಕಳು ಅವರಾದರೆ ಬಲ್ಲರು
ಯಾರು ಮದುಮಗಳೆ (ಹೆಂಗಸು) ಬಾಗಿಲು ತೆಗೆಯಿರಿ
ಬಾಗಿಲು ತೆಗೆಯುವ ಉಪಾಯವನ್ನು ತಿಳಿಯೆನು
ಬೀಗದ ಕೈ ಹಿಡಿದು ಚಿಲಕವನ್ನು ಜಾರಿಸಿರಿ
ಯಾರು ಒಡತಿಯೆ ಒಡೆಯನನ್ನು ಎಚ್ಚರಿಸಿರಿ
ಒಡೆಯನನ್ನು ಎಚ್ಚರಿಸುವ ಉಪಾಯವನ್ನು ತಿಳಿಯೆನು
ಗಿಂಡ್ಯೆ ನೀರು ಕೊಂಡು ಹೋಗಿ ಒಡೆಯನನ್ನು ಎಚ್ಚರಿಸಿರಿ
ಯಾರು ಒಡತಿಯೆ ಮಗುವನ್ನು ಎಚ್ಚರಿಸಿರಿ
ಮಗುವನ್ನು ಎಚ್ಚರಿಸುವ ಉಪಾಯವನ್ನು ತಿಳಿಯೆನು
ಬಟ್ಟಲು ಹಾಲು ಕೊಂಡು ಹೋಗಿ ಮಗುವನ್ನು ಎಬ್ಬಿಸಿರಿ
ಒಡೆಯ ಇದ್ದಾರೊ ಇಲ್ಲವೋ ದೇಯಿ ಮದುಮಗಳೇ
ಕರೆದರೆ ಕೂಗಿದರೆ ‘ಕೂಟಕ್ಕೆ’ ಹೋದರು
ಕೂಟದಲ್ಲಿ ಒಡೆಯ ಏನು ಮಾಡಿದರು?
ಹಂಡೆ ಕೊಂಡು ಹೋಗಿ (ಹಾಲು) ಕರೆಯಲು ಎಮ್ಮೆ ತಂದರು
ಗಿಂಡ್ಯೆ ಕೊಂಡು ಹೋಗಿ ಹಾಲು ಕರೆಯಲು ದನ ತಂದರು
ಕಾರಿ ಕಬಿಲ ಎಂಬ ಎತ್ತುಗಳನ್ನು ತಂದರು
ಕಾಣದ ಕಾಟದ ಎಂಬ ಆಳುಗಳನ್ನು ನೇಮಿಸಿದರು
‘ಕೊಂಕಣ’, ‘ಬಂಕಣ’ ಎಂಬ ಗದ್ದೆ ಮಾಡಿದರು
ಕಟ್ಟೆ ಹುಣಿಯ ಮೇಲೆ ತೆಂಗು ನೆಡಿಸಿದರು
ತೋಟಕ್ಕೆ ಮೇಲಾದ ಕಂಗು ನೆಡೆಸಿದರು
ಬಳ್ಳಿಗೆ ಮೇಲಾದ ಬಾಳೆ ನೆಡಿಸಿದರು
ಬೆಟ್ಟಿನಲ್ಲಿ ಮೇಲಾದ ಹಲಸು ಬೆಳೆಸಿದರು
ಕಾಡಿಗೆ ಮೇಲಾದ ‘ಶಾಂತಿ’ಮರ ಬೆಳೆಸಿದರು
ಪಡು ‘ಪದೊಳಿ’[9]ಯಲ್ಲಿ ಕಂಚಿಯ ಗಂಟೆ ಜೋಡಿಸಲು
ಕಂಚಿಯ ಗಂಟೆ ಜೋಡಿಸಲು ‘ನಾಲಗೆ’ ತುಂಡಾಯಿತು
ಮೂಡು ‘ಪದೊಳಿ’ ಯಲ್ಲಿ ಮುತ್ತಿನ ಗಂಟೆ ಜೋಡಿಸಲು
ಮುತ್ತಿನ ಗಂಟೆ ಜೋಡಿಸಲು ಮುರಿದು ಹೋಯಿತು
ನಾಲ್ಕೆತ್ತು ತಿರುಗಿಸಲು ಕಾಣದ ಕಾಟದ
ನಾಲ್ಕೆತ್ತು ತಿರುಗಿಸಲು (ಹೂಡಲು) ನೇಗಿಲು ಇರಲಿಲ್ಲ
ಕಾಸರಕನ ಮರ ಕಡಿದು ನೇಗಿಲು ಮಾಡಿಸಬೇಕು
ನಾಲ್ಕೆತ್ತು ಹೂಡಲು ಕಾಣದ ಕಾಟದ
ನಾಲ್ಕೆತ್ತು ಹೂಡಲು ನೊಗ ಇರಲಿಲ್ಲ
ಹಲಸಿನ ಮರಕಡಿದು ನೊಗಮೊಂದು ಕೆತ್ತಿಸಬೇಕು
ನಾಲ್ಕೆತ್ತು ಹೂಡಲು ‘ಗುಂಡಲ’[10] ಇರಲಿಲ್ಲ
‘ಪಾವೊರಿ’[11]ಯನ್ನು ಹಿಡಿದು ‘ಗುಂಡಾಲ’ ಹಾಕಬೇಕು
ನಾಲ್ಕೆತ್ತು ಹೂಡಲು ಕೊರಳ ಹಗ್ಗ ಇರಲಿಲ್ಲ
ಕೇರೆಯನ್ನು ಹಿಡಿದು ಕೊರಳ ಹಗ್ಗ ತೊಡಿಸಬೇಕು
ನಾಲ್ಕೆತ್ತು ಹೂಡಲು ಕೋಂಟು ಹಗ್ಗ ಇರಲಿಲ್ಲ
ಸರ್ಪವನ್ನು ಹಿಡಿದು ಕೋಂಟು ಹಗ್ಗ ಹಾಕಬೇಕು
ನಾಲ್ಕೆತ್ತು ಹೂಡಲು ಕಟ್ಟುವ ಹಗ್ಗ ಇರಲಿಲ್ಲ
ಒಳ್ಳೆ ಹಾವನ್ನು ಹಿಡಿದು ಕಟ್ಟುವ ಹಗ್ಗ ಹಾಕಬೇಕು
ನಾಲ್ಕೆತ್ತು ಹೂಡಲು ಬೆತ್ತವೂ ಇರಲಿಲ್ಲ
ಬುಳೆಕ್ಕರಿ ಹಾವನ್ನು ಹಿಡಿದು ಪೀಲಿ ಬೆತ್ತ ನೆಯ್ಯಬೇಕು
ನಾಲ್ಕೆತ್ತು ಹೂಡಲು ‘ಪಣೊರು’[12] ಇರಲಿಲ್ಲ
‘ಅರಣೆ’[13]ಯನ್ನು ಹಿಡಿದು ‘ಪಣೊರು’ ಬಡಿಯಬೇಕು
ನಾಲ್ಕೆತ್ತು ಹೂಡಲು ‘ಪತ್ತೊಂಜಾನಿ’ (ಸಣ್ಣ ಮೊಳೆ) ಇರಲಿಲ್ಲ
ಉಂಬುಳು ಹಿಡಿದು ಸಣ್ಣ ಮೊಳೆ ಹೊಡೆಯಬೇಕು
ನಾಲ್ಕೆತ್ತು ಹೂಡು ಕಾಣದ ಕಾಟದ
ಪಡುದಿಕ್ಕಿಗೊಮ್ಮೆ ಹೂಡು ಕಾಣದ ಕಾಟದ
ಮೂಡುದಿಕ್ಕಿಗೊಮ್ಮೆ ಹೂಡು ಕಾಣದ ಕಾಟದ
ಎರಡು ಸಾಲು ಹೂಡಿಸಿದ ಕಿನ್ನಿ ಮಾನಿ ಒಡೆಯ
ಎರಡನೇ ಸಾಲಿಗೆ ಹಟ್ಟಿಗೊಬ್ಬರ ಹಾಕಿಸಿದರು ಒಡೆಯ
ಐದು ಸಾಲು ಹೂಡಿಸಿದ ನಾರಾಯಣ ಬ್ರಾಹ್ಮಣ
ಐದು ಸಾಲಿಗೆ ಅಡಿಗೊಬ್ಬರ ಹಾಕಿಸಿದರು ಒಡೆಯ
ಮೂಡಣಕ್ಕೆ ಹೋಗಬೇಕು ಬಿಳಿ ‘ಕಯಮೆ’[14] ತರಬೇಕು
ಪಡುವಣಕ್ಕೆ ಹೋಗಬೇಕು ಕಪ್ಪು ‘ಕಯಮೆ’ ತರಬೇಕು
ಒಂದು ಗದ್ದೆಗೆ ಒಂದು ತಳಿ ಬಿತ್ತಬೇಕು
ಮತ್ತೊಂದು ಗದ್ದೆಗೆ ಮತ್ತೊಂದು ತಳಿ ಬಿತ್ತಬೇಕು
ಮೂರರಲ್ಲಿ ಮೂರನೆಯ ನೀರು ಇಳಿಸಿದ್ದಾರೆ ಒಡೆಯ
ಏಳರಲ್ಲಿ ಏಳನೇ ನೀರು ನಿಲ್ಲಿಸಿದ್ದಾರೆ ಒಡೆಯ
ಅದೊಂದು ಮೊಳಕೆಯಾಯಿತು ಸೂಜೆ ಮೊಳಕೆಯಾಯ್ತು
ಅದೊಂದು ಚಿಗುರಿತು ಹಿಂಗಾರ ಮಾಲೆ ಚಿಗುರಿತು
ಭತ್ತ ಹಣ್ಣಾಯಿತು ಹಳದಿ ವರ್ಣವಾಯಿತು
ಪೈರು ಹಣ್ಣಾಯಿತು ಕೇದಗೆ ವರ್ಣವಾಯಿತು
ನಿಂತು ಬೆಳೆಯಲು ಗಿಳಿಯಣ್ಣ ಬಿಡಲಿಲ್ಲ
ಗಿಳಿಯಣ್ಣನನ್ನು ಹಿಡಿದು ಪಂಜರದಲ್ಲಿ ಹಾಕಬೇಕು
ಪಂಜರದಲ್ಲಿ ಗಿಳಿಯಣ್ಣ ಓದಿದಂತೆ ಕೇಳಿಸುತ್ತದೆ
ನೆಲ ಹಿಡಿದು ಬೆಳೆಯಲು ಹಂದಿಯಣ್ಣ ಬಿಡಲಿಲ್ಲ
ಹಂದಿಯಣ್ಣನನ್ನು ಹಿಡಿದು ಗೂಡಿನಲ್ಲಿ ಹಾಕಬೇಕು
ಗೂಡಿನಲ್ಲಿ ಹಂದಿಯಣ್ಣ ಜಿಗಿದಂತೆ ಆಗುತ್ತದೆ
ಕೆಯ್‌ಕೊಯ್ಯಲು ‘ಪರುಕತ್ತಿ’[15] ತರಬೇಕು
ಕೆಯ್ ಕಟ್ಟಲು ‘ಸೋಣಬಳ್ಳಿ’ ತರಬೇಕು
ಕೇಯ್‌ ಹೊರಬೇಕು ಅಂಗಳಕ್ಕೆ ತರಬೇಕು
ಕೆಯ್ ಹೊಡೆಯಲು ಕಲ್ಲಿನ ಮಂಚ ತರಬೇಕು
ಕುಂಟು ಪೊರಕೆಯಲ್ಲಿ ಗುಡಿಸಿ ತರಬೇಕು
ಗಾಳಿಸುವ ಗೆರಸೆಯಲ್ಲಿ ಗಾಳಿಸಿ ತರಬೇಕು
ರಾಶಿ ಮಾಡಿದ ಭತ್ತ ಮಾಳಿಗೆ ಮನೆ ಇರಬೇಕು
ಮಾಯಿ ತಿಂಗಳಲ್ಲಿ ಭತ್ತ ರಾಶಿ ಹಾಕಿದ್ದಾರೆ ಒಡೆಯ
ಸುಗ್ಗಿ ತಿಂಗಳಲ್ಲಿ ಭತ್ತ ತೋಡಿಸಿದ್ದಾರೆ ಒಡೆಯ
ಕರ್ರಂಗೋಲಿನ ಮಕ್ಕಳಿಗೆ ಗೆರಸೆ ತುಂಬಕೊಡಬೇಕು
ಒಡೆಯ ಒಡತಿ ಗುಣುಗುಣು ಹೇಳುತ್ತಾರೆ
ಐವರಿಗೆ ಐದು ಪಡಿ ಬೇರೆಯೇ ಅಳೆಯಿರಿ
ಐವರಿಗೆ ಐದು ವೀಳ್ಯ ಬೇರೆಯೇ ಹಿಡಿಯಿರಿ
ಹಾಗೆ ಹೇಳುವುದಾದರೆ ಒಡೆಯ ಮಂಜಾನೆಯವರೆಗಿದೆ.
ಪ್ರದರ್ಶನದ ವಿವರಗಳು

ಮನ್ಸ ಜನಾಂಗಕ್ಕೆ ಸೇರಿದ ಒಟ್ಟು ಐದು ಜನರು ಈ ಕರ್ರಂಗೋಲು ತಂಡದಲ್ಲಿರುತ್ತಾರೆ. ಇಬ್ಬರು ವೇಷ ಹಾಕಿ ಕುಣಿದರೆ ಮತ್ತಿಬ್ಬರು ಹಾಡು ಮತ್ತು ಗಂಟೆಯ ಸದ್ದಿನ ಹಿಮ್ಮೇಳವನ್ನು ಒದಗಿಸುತ್ತಾರೆ. ಮನೆ ಮನೆಗೆ ಹೋಗಿ ಪ್ರದರ್ಶನ ನೀಡಿದಾಗ ದೊರೆಯುವ ವಸ್ತುರೂಪದ ಸಂಭಾವನೆಯನ್ನು ಹೊತ್ತುಕೊಂಡು ಬರಲು ಮತ್ತೊಬ್ಬನಿರುತ್ತಾನೆ. ಭತ್ತ ಹೊರುವವನು ಎಂದೇ ಅವನನ್ನು ಕರೆಯಲಾಗುತ್ತದೆ. ಕರ್ರಂಗೋಲಿಗೆ ಕೂಲಿಯಾಗಿ ಭತ್ತ ಕೊಡಬೇಕೆಂಬ ವಾಡಿಕೆಯಿದೆ. ಸುಗ್ಗಿ ಹುಣ್ಣಿಮೆಯ ಮುಂಚಿನ ದಿನ, ಸುಗ್ಗಿ ಹುಣ್ಣಿಮೆ ಮತ್ತು ಅದರ ಮರುದಿನ – ಹೀಗೆ ಮೂರು ದಿನ ಮಾತ್ರ ಎರಡು ಮೂರು ಗ್ರಾಮಗಳೊಳಗೆ ಸಂಚರಿಸುತ್ತಾರೆ. ಪ್ರತಿದಿನ ರಾತ್ರಿ ಸುಮಾರು ಒಂಬತ್ತು ಗಂಟೆಗೆ ಹೊರಟು ಮುಂಜಾನೆ ಐದು ಗಂಟೆಯ ವೇಳೆಗೆ ಸಂಚಾರವನ್ನು ಮುಕ್ತಾಯಗೊಳಿಸುತ್ತಾರೆ. ಇಬ್ಬರಿಗೆ ಬಣ್ಣ ಹಾಕಿ ವೇಷಭೂಷಣ ತೊಡಿಸುವ ಮೊದಲು ಮನ್ಸ ಜನಾಂಗದ ಆರಾಧ್ಯ ದೈವಗಳಾಗಿರುವ ‘ಕಾಣದ’ ಮತ್ತು ‘ಕಾಟದ’ ಎಂಬಿಬ್ಬರಿಗೆ ಒಂದು ತಂಬಿಗೆ ನೀರಿಟ್ಟು, ಕೈ ಮುಗಿಯುತ್ತಾರೆ. ‘‘ಮೂರು ದಿನದ ಆಟ, ಈ ಆಟವನ್ನು ಪ್ರದರ್ಶಿಸುವ ವೇಳೆಗೆ ಕೈಕಾಲಿಗೆ ಏನೂ ತೊಂದರೆಯಾಗದಂತೆ ಕಾಪಾಡಿದರೆ ನಿಮಗೆ ಈ ಪೂಜೆಯನ್ನು ಸಲ್ಲಿಸುತ್ತೇನೆ’’ ಎಂದು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಜೇಡಿ ಮಣ್ಣನ್ನು ಕಲಸಿ ‘ಲೆಂಕಿರಿ ಓಟೆ’(ಬಿದಿರಿನ ಜಾತಿ)ಯ ಸಹಾಯದಿಂದ ಕರ್ರಂಗೋಲು ಕಟ್ಟಿದವರ ಮುಖ, ತೋಳು, ಎದೆ, ಬೆನ್ನು, ಹೊಟ್ಟೆ – ಹೀಗೆ ಮೈಮೇಲೆಲ್ಲ ಹತ್ತಿರ ಹತ್ತಿರ ವರ್ತುಲಗಳನ್ನು ಬಿಡಿಸುತ್ತಾರೆ. ಕಪ್ಪು ಚರ್ಮದ ಮೇಲೆ ನಿಬಿಡವಾದ ಈ ವರ್ತುಲಗಳು ನೆಗೆದು ಕಾಣುತ್ತವೆ. ಇದೇ ಜೇಡಿ ಮಣ್ಣಿನಿಂದ ಎದೆ, ಹೊಟ್ಟೆ ಮತ್ತು ಬೆನ್ನಿನ ಮೇಲೆ ಬರುವಂತೆ ಸಮಾನಾಂತರದ ಅಗಲವಾದ ಎರಡು ಗೆರೆಗಳನ್ನು ಎಳೆಯುತ್ತಾರೆ. ಇದಕ್ಕೆ ‘ಗೇಂಟಿ’ ಎಳೆಯುವುದು ಎನ್ನುತ್ತಾರೆ. ತಲೆಗೆ ಬಿಳಿಯ ಮುಂಡಾಸು ಸುತ್ತುತ್ತಾರೆ. ಸೊಂಟದಿಂದ ಕೆಳಗೆ ಬಿಳಿಯ ವಸ್ತ್ರ, ಕೈ ಮತ್ತು ಕಾಲುಗಳಿಗೆ ‘ಜೇಡಿ’ಯ ದಂಡೆ ಹಾಕುತ್ತಾರೆ. ಇಬ್ಬರೂ ಕೈಗಳಲ್ಲಿ ನೆಕ್ಕಿ ಸೊಪ್ಪಿನ ಸೂಡಿಯನ್ನು ಹಿಡಿದುಕೊಳ್ಳುತ್ತಾರೆ. ಮತ್ತಿಬ್ಬರದು ಮಾಮೂಲಿ ಉಡುಪು, ತಲೆಗೆ ಮುಂಡಾಸು, ಬಲದ ಕೈಯಲ್ಲಿ ‘ಗಂಟೆ’[16]ಯನ್ನು ಹಿಡಿದುಕೊಂಡಿರುತ್ತಾರೆ. ಗ್ರಾಮ ಸಂಚಾರದ ಅವಧಿಯಲ್ಲಿ ತಂಡದ ಸದಸ್ಯರು ‘ಶುದ್ಧ’ದಲ್ಲಿರಬೇಕು. ಕರ್ರಂಗೋಲು ಹಾಡಿನ ಮೊದಲ ಸೊಲ್ಲು ಹೇಳಿ ‘ಪೊಲಿ ಲೆತ್ತೊಂದು ಬತ್ತೊ’ (‘ಪೊಲಿ’ಯನ್ನು ಕರೆದುಕೊಂಡು ಬಂದಿದ್ದೇವೆ) ಎಂದು ಗಟ್ಟಿಯಾಗಿ ಹೇಳುತ್ತಾರೆ. ಆಗ ಮನೆಯವರು ಬಾಗಿಲು ತೆಗೆದು ದೀಪ ಉರಿಸಿ ಜಗಲಿಯಲ್ಲಿ ತಂದಿಡುತ್ತಾರೆ, ‘ಕರ್ರಂಗೋಲು ನಲಿಪುಲೆ’ – ಕರ್ರಂಗೋಲು ಕುಣಿಯಿರಿ ಎಂದು ಮನೆಯವರು ಸೂಚನೆ ಕೊಟ್ಟ ಮೇಲೆ ಇಬ್ಬರ ಹಾಡು ಮತ್ತು ಮತ್ತಿಬ್ಬರ ಕುಣಿತ ಪ್ರಾರಂಭವಾಗುತ್ತದೆ. ಹಾಡಿನ ಪ್ರತಿ ಸೊಲ್ಲನ್ನು ಆವರ್ತನೆಯ ರೂಪದಲ್ಲಿ ಹಾಡಲಾಗುತ್ತದೆ. ಹಾಡನ್ನು ಪ್ರಾರಂಭಿಸುವ ಮೊದಲು ಮತ್ತು ಕೊನೆಗೊಮ್ಮೆ ಗಂಟೆಯ ಸದ್ದನ್ನು ಚೆನ್ನಾಗಿ ಮಾಡುತ್ತಾರೆ. ಹಾಡುವ ಇಬ್ಬರು ಅಂಗಳದ ಒಂದು ಬದಿಯಲ್ಲಿ ನಿಲ್ಲುತ್ತಾರೆ. ಕರ್ರಂಗೋಲು ಕುಣಿಯುವವರು ಹಾಡುವವರಿಗಿಂತ ಮುಂದೆ ಸಾಲಾಗಿ ನಿಂತು ಅಲ್ಲಿಂದ ಒಂದು ಹೆಜ್ಜೆಯನ್ನು ಮುಂದಕ್ಕಿಟ್ಟು ಮತ್ತೆ ಹಿಂದಕ್ಕೆ ಹೆಜ್ಜೆಯಿಟ್ಟು ನಿರಂತರವಾಗಿ ಇದೇ ಶೈಲಿಯಲ್ಲಿ ಕುಣಿಯುತ್ತಾರೆ. ಮುಂದಕ್ಕೆ ಹೋಗಿ ಹಿಂದಕ್ಕೆ ಬರುವುದಷ್ಟೇ ಕುಣಿತ. ಮುಂದಕ್ಕೆ ಹೆಜ್ಜೆಯಿಟ್ಟು ಮೊಣಕಾಲನ್ನು ತುಸು ಬಗ್ಗಿಸುವುದು, ಕೈಗಳಲ್ಲಿ ಹಿಡಿದಿರುವ ನೆಕ್ಕಿ ಸೊಪ್ಪನ್ನು ಎತ್ತಿ ತಮ್ಮ ತಮ್ಮ ತಲೆಯ ಮೇಲಕ್ಕೆ ಸವರುವಂತೆ ಹಾಕಿಕೊಳ್ಳುವುದು, ಕುಣಿತದ ನಡುವೆ ಎರಡು ಮೂರು ಬಾರಿ ಜೊತೆಯಾಗಿ ಅಟ್ಟಹಾಸವನ್ನು ಕೊಟ್ಟು ತಿರುಗಿ ದಿಕ್ಕು ಬದಲಾಯಿಸಿ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕಿ ಕುಣಿಯುವುದು – ಇವಿಷ್ಟು ಕುಣಿತದಲ್ಲಿ ವಿವರಿಸಬಹುದಾದ ಅಂಶಗಳು. ಗಂಟೆಯ ತಾಳ ಗತಿಗೆ ಸುಶ್ರಾವ್ಯವಾಗಿ ಇಬ್ಬರು ಹಾಡುತ್ತಾರೆ. ಹಾಡಿನಲ್ಲಿ ಅನೇಕ ಘಟನೆಗಳ ನಿರೂಪಣೆಯಿದ್ದರೆ ಕುಣಿತ ಮಾತ್ರ ಒಂದೇ ರೀತಿಯಲ್ಲಿರುತ್ತದೆ. ಕುಣಿತಕ್ಕೂ ಹಾಡಿಗೂ ವಸ್ತುವಿನಲ್ಲಾಗಲೀ. ಭಾವಾಭಿನಯದಲ್ಲಾಗಲೀ ಯಾವುದೇ ಸಂಬಂಧ ಸ್ಪಷ್ಟವಾಗುವುದಿಲ್ಲ. ಹಾಡು ಮತ್ತು ಕುಣಿತದ ಮುಕ್ತಾಯದಲ್ಲಿ ತಂಡದ ಮುಖ್ಯಸ್ಥ ‘ಪೊಲಿ ಲೆತೊಂದ್‌ ಬತ್ತ್‌ ಇಲ್ಲ್‌ ಇಂಜಾಯೊ’ (ಪೊಲಿ ಕರೆದು ತಂದು ಮನೆ ತುಂಬಿಸಿದೆವು) ಎಂದು ಹೇಳುತ್ತಾನೆ. ಒಂದು ರಾತ್ರಿಯ ಸಂಚಾರ ಮುಗಿದ ಮೇಲೆ ಕರ್ರಂಗೋಲು ತಂಡವು ಒಂದು ಕಾಸರಕನ ಬುಡದ ಬಳಿಗೆ ಬರುತ್ತದೆ. ಬಣ್ಣ ತೆಗೆದು, ವೇಷ ಕಳಚುವ ವಿಧಿಯು ಈ ಮರದ ಬುಡದಲ್ಲಿ ನಡೆಯುತ್ತದೆ. ಬಣ್ಣ ತೆಗೆದು, ವೇಷ ಕಳಚಿ ಕಾಸರಕನ ಮರದಿಂದ ಏಳು ಎಲೆಗಳನ್ನು ಕಿತ್ತು ನೆಲದ ಮೇಲೆ ಸಾಲಾಗಿ ಇಟ್ಟು ಅದರಲ್ಲಿ ಹಿಡಿ ಅಕ್ಕಿ ಹಾಕಿ ಕೈ ಮುಗಿಯುತ್ತಾರೆ. ನೆಕ್ಕಿ ಸೊಪ್ಪಿನ ಸೂಡಿಯನ್ನು ಇದೇ ಕಾಸರಕನ ಮರದ ಬುಡದಲ್ಲಿಟ್ಟು ಹೋಗುತ್ತಾರೆ. ಅಮೇಲೆ ಸ್ನಾನ ಮಾಡಿ, ಉಪಾಹಾರ ಸೇವಿಸುತ್ತಾರೆ. ಊಟ ಮಾಡುತ್ತಾರೆ. ಹೀಗೆ ಮೂರು ರಾತ್ರಿ ಕರ್ರಂಗೋಲು ಕುಣಿತ ನಡೆಯುತ್ತದೆ.

ಸಾಮೂಹಿಕ ಭೋಜನ ಮತ್ತು ಪ್ರಸಾದ ವಿತರಣೆ

ಕಾಣದ ಮತ್ತು ಕಾಟದ ಹೆಸರಿನ ಕುಲದೈವಗಳಿಗೆ ‘ಕರ್ರಂಗೋಲು ಕುಣಿತ’ದ ತಿರುಗಾಟ ಮುಗಿದ ಮೇಲೆ ಒಂದು ನಿರ್ದಿಷ್ಟ ದಿನದಂದು ಎಡೆಗಳನ್ನು ಬಿಡಿಸಿ ಪ್ರಾರ್ಥನೆ ಸಲ್ಲಿಸುವ ವಿಧಿಯನ್ನು ಕರ್ರಂಗೋಲು ಪಠ್ಯದ ಒಂದು ಭಾಗವೆಂದು ತಿಳಿಯಬೇಕಾಗುತ್ತದೆ. ಈ ಆಚರಣೆಯನ್ನು ನಡೆಸಲು ಆದಿತ್ಯವಾರ ಅಥವಾ ಮಂಗಳವಾರ ಶುಭವೆಂದು ಜನಪದರು ಭಾವಿಸುತ್ತಾರೆ. ಪ್ರದರ್ಶನದ ವೇಳೆ ಸಂಗ್ರಹಿಸಿ ಭತ್ತ, ತೆಂಗಿನಕಾಯಿ ಇವುಗಳನ್ನು ಬಂಡವಾಳವನ್ನಾಗಿ ಉಪಯೋಗಿಸಿಕೊಂಡು ಅವಲಕ್ಕಿ, ಬೆಲ್ಲ, ಅಕ್ಕಿ, ಕೋಳಿ, ಬಾಳೆಹಣ್ಣು, ಶೇಂದಿ ಇತ್ಯಾದಿ ಆಹಾರ ಪದಾರ್ಥಗಳನ್ನು ಖರೀದಿಸುತ್ತಾರೆ. ರಾತ್ರಿಯ ವೇಳೆ ವಿಶಾಲವಾದ ಗದ್ದೆಯಲ್ಲಿ ‘ಮುಂಡೇವು’[17] ಜಾತಿಯ ಹೊಸ ಚಾಪೆಯ ಮೇಲೆ ವಿವಿಧ ಬಗೆಯ ಹದಿನಾರು ಎಡೆಗಳನ್ನು ಬಡಿಸುತ್ತಾರೆ. ಹದಿನಾರರಲ್ಲಿ ಐದು ಎಡೆ ಕಡುಬು, ಕೋಳಿ ಪದಾರ್ಥ, ಹನ್ನೊಂದು ಎಡೆ ಬೆಲ್ಲದ ಅವಲಕ್ಕಿ, ಹಣ್ಣು, ಕಲಸಿದವಲಕ್ಕಿಯ ಪ್ರತ್ಯೇಕವಾದುದೊಂದು ರಾಶಿ. ಗ್ರಾಮದೊಳಗಿನ ಇತರ ಜಾತಿಯವರು ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಅವಲಕ್ಕಿ, ತೆಂಗಿನಕಾಯಿಗಳನ್ನು ತಮ್ಮ ವತಿಯ ದೇಣಿಗೆಯಾಗಿ ನೀಡುತ್ತಾರೆ. ಈ ಸಂದರ್ಭದಲ್ಲಿ ಕರ್ರಂಗೋಲು ಕುಣಿತದ ಸಾಂಕೇತಿಕ ಪ್ರದರ್ಶನವಿರುತ್ತದೆ. ಜೇಡಿಯ ಏಳೇಳು ವರ್ತುಲಗಳನ್ನು ಹಾಕಿ ನೆಕ್ಕಿ ಸೊಪ್ಪು ಹಿಡಿದು ಕುಣಿಯುತ್ತಾರೆ. ಕೊನೆಗೆ ಪ್ರಸಾದ ವಿತರಣೆ ನಡೆಯುತ್ತದೆ.

ಕಾಣದ ಕಾಟದ ಮತ್ತು ಐತಿಹಾಸಿಕತೆ

ಕರ್ರಂಗೋಲು ಹಾಡಿನಲ್ಲಿ ಕಾಣದ ಮತ್ತು ಕಾಟದ – ಈ ಇಬ್ಬರು ವ್ಯಕ್ತಿಗಳ ಉಲ್ಲೇಖವು ಬರುತ್ತದೆ. ಇವರ ಕುರಿತಂತೆ ವಕ್ತೃಗಳು ನೀಡಿರುವ ಮಾಹಿತಿಗಳು ಈ ಕೆಳಗಿನಂತಿವೆ :

ಕಾಣದ ಮತ್ತು ಕಾಟದ ಇವರು ‘ಮಾಯಕ’ ಹೊಂದಿದ ವೀರರು. ಮನ್ಸ ಜನಾಂಗಕ್ಕೆ ಸೇರಿದ ಯೋಧರು. ಇವರನ್ನು ‘ಮನ್ಸೆರೆ ದೈವೊಳು’(ಮನ್ಸರ ದೈವಗಳು)ಎಂದು ಕರೆಯುತ್ತಾರೆ. ಕಾಣದ ಮತ್ತು ಕಾಟದ ಸತ್ತು ‘ದೈವತ್ತ’ವನ್ನು ಹೊಂದಿದವರಾಗಿದ್ದಾರೆ. ಈ ದೈವಗಳಿಗೆ ನೇಮ ರೂಪದ ಆರಾಧನೆಯನ್ನು ಸಲ್ಲಿಸಲಾಗುತ್ತದೆ. ನಲಿಕೆಯವರು ಈ ದೈವಗಳಿಗೆ ನೇಮವನ್ನು ಕಟ್ಟುತ್ತಾರೆ. ಬೈದ್ಯೆರ್‌(ಬಿಲ್ಲವ) ಜನಾಂಗಕ್ಕೆ ಕೋಟಿ ಚೆನ್ನಯರಿದ್ದಂತೆ, ಮೇರ ಜನಾಂಗಕ್ಕೆ ಮುದ್ದ ಕಳಲರಿದ್ದರೆ, ಮನ್ಸ ಜನಾಂಗಕ್ಕೆ ಕಾಣದ ಮತ್ತು ಕಾಟದ ಇವರು ಆರಾಧ್ಯ ದೈವವಾಗಿದ್ದಾರೆ. ಕಾಣದ ಮತ್ತು ಕಾಟದ ಇವರು ಅಣ್ಣ – ತಮ್ಮಂದಿರು, ಕಾಣದ ಮತ್ತು ಕಾಟದ ‘ಮಾಯಕ’ ಹೊಂದಿದ ಸಂದರ್ಭ ಹೀಗಿದೆ: ಒಂದು ದಿನ ಕೋಟಿ ಚೆನ್ನಯ, ಮುದ್ದ ಕಳಲ ಮತ್ತು ಕಾಣದ ಕಾಟದ – ಈ ಆರು ಮಂದಿ ಒಟ್ಟಾಗಿ ಬೇಟೆಯಾಡಲು ಕಾಡಿಗೆ ಹೋದರು. ಬೇಟೆಯಾಡುವ ಒಂದು ಹಂತದಲ್ಲಿ ಅವರಿಗೆ ಬಾಯಾರಿಕೆಯಾಗುತ್ತದೆ. ಹಾಸುಬಂಡೆಯನ್ನು ಒಡೆದು ನೀರು ಕುಡಿಯುವ ಸಾಹಸಕ್ಕೆ ತೊಡಗುತ್ತಾರೆ. ಹಾಸುಬಂಡೆಗೆ ಕೋಟಿ ಚೆನ್ನಯರು ‘ಸುರಿಯ’ (ಖಡ್ಗ) ಹಾಕಲು ಬಂಡೆ ಒಡೆಯದೆ ಕತ್ತಿಯೇ ಮೊಂಡಾಗುತ್ತದೆ. ಮುದ್ದಕಳಲ ಇವರು ಬಿಲ್ಲಿನಿಂದ ಬಾಣ ಹೂಡಿದರೂ ಪ್ರಯೋಜನವಾಗಲಿಲ್ಲ. ಆಗ ಕಾಣದ ಕಾಟದ ಅವರು ತಾವು ಕೈಯಲ್ಲಿ ಹಿಡಿದಿದ್ದ ‘ಅಲ್‌ಂಬುಡ’[18] ಗಿಡದ ದಂಟನ್ನು ಬಂಡೆಗೆ ಹಾಕಲು ಬಂಡೆ ಭಾಗವಾಗಿ ನೀರು ಚಿಮ್ಮಿತು! ಆಗ ಇತರರು ‘ಮನ್ಸೆರ್ ದೆತ್ತಿ ನೀರ್‌ಪರಾಯೊ’ (ಮನ್ಸರು ತೆಗೆದ ನೀರು ಕುಡಿಯೆವು) ಎಂದು ಅವಮಾನದಿಂದ ಪ್ರತಿಭಟಿಸುತ್ತಾರೆ. ಆರು ಮಂದಿಗಳೊಳಗೆ ಜಗಳ ಏರ್ಪಡುತ್ತದೆ. ಪರಸ್ಪರ ಹೊಡೆದಾಡಿಕೊಂಡು ಆರು ಮಂದಿಯೂ ಸಾವನ್ನಪ್ಪುತ್ತಾರೆ. ಹಾಗೆ ಸತ್ತ ಕಾಣದ ಮತ್ತು ಕಾಟದ ಈ ವೀರರು ಮನ್ಸ ಜನಾಂಗದ ಕಾರಣಿಕ ಪುರುಷರಾದರು.

ಪೂರಕವಾಗುವ ಇತರ ಮಾಹಿತಿಗಳು

ಕರ್ರಂಗೋಲು ಕುಣಿತದ ಅವದಿಯಲ್ಲಿ ವೇಷಧಾರಿಗಳನ್ನು ಶುದ್ಧದಿಂದ, ಗೌರವದಿಂದ ನೋಡಿಕೊಳ್ಳಬೇಕಾಗುತ್ತದೆ. ತಿರುಗಾಟ ಮತ್ತು ಪ್ರದರ್ಶನದ ಸಂದರ್ಭದಲ್ಲಿ ‘ಸೂತಕ’ದ ಹೆಂಗಸರು (ಮುಟ್ಟಾದವರು, ಬಾಣಂತಿಯರು) ಎದುರಿಗಿದ್ದು ನೋಡಬಾರದು, ನೋಡಿದರೆ ‘ಕರ್ರಂಗೋಲು ಮಕ್ಕಳು’ (ಕರ್ರಂಗೋಲು ಜೇರ್ಲು) ಸ್ಮೃತಿ ತಪ್ಪಿ ನೆಲಕ್ಕೆ ಬೀಳುತ್ತಾರೆ. ಕರ್ರಂಗೋಲು ವೇಷಧಾರಿಗಳು ಕೈಗಳಲ್ಲಿ ಹಿಡಿಯುವ ನೆಕ್ಕಿ ಸೊಪ್ಪು ಹಲವು ಕಾರಣಗಳಿಗಾಗಿ ತೌಳವ ಸಂಸ್ಕೃತಿಯಲ್ಲಿ ಮುಖ್ಯವಾಗುತ್ತದೆ. ಗದ್ದೆಗೆ ಬಿತ್ತುವ ಭತ್ತಕ್ಕೆ ಸೆಗಣಿ ಬೆರೆಸಿ ಮೊಳಕೆ ಬರಿಸುವ ಸಂದರ್ಭದಲ್ಲಿ ನೆಕ್ಕಿ ಸೊಪ್ಪನ್ನು ಬಿತ್ತನೆಯ ಬೀಜದ ಮೇಲೆ ಮುಚ್ಚುತ್ತಾರೆ. ಔಷಧಿಯ ಗುಣವುಳ್ಳ ನೆಕ್ಕಿ ಸೊಪ್ಪನ್ನು ನುಸಿಗಾಗಿ ಹಟ್ಟಿಯಲ್ಲಿ ತೂಗಾಡಿಸುತ್ತಾರೆ. ಕಾಯಿಲೆಯಿಂದ ಬಳಲುವ ರೋಗಿಗೆ ‘ಸೊಪ್ಪು ಹಾಕುವ’ ಮಾಂತ್ರಿಕ ವಿಧಿಯನ್ನು ನೆರವೇರಿಸುವಾಗ ನೆಕ್ಕಿ ಸೊಪ್ಪನ್ನು ಉಪಯೋಗಿಸುತ್ತಾರೆ. ಕರ್ರಂಗೋಲು ವೇಷಧಾರಿಗಳ ಕೈಯಿಂದ ತೆಂಗಿನ ಮರಕ್ಕೆ ಒಂದು ತಂಬಿಗೆ ನೀರು ಹಾಕಿಸಿ ನೆಕ್ಕಿ ಸೊಪ್ಪಿನಿಂದ ಸವರುವಂತೆ ಮಾಡಿದರೆ ಬಂಜೆ ತೆಂಗು ಫಲ ಬಿಡುತ್ತದೆ.

ಕರ್ರಂಗೋಲು ವೇಷ ಹಾಕಿ ಕುಣಿಯುವವರು ಅಣ್ಣ – ತಮ್ಮ ಸಂಬಂಧ ಹೊಂದಿದವರೇ ಆಗಬೇಕು. ಮಾವ – ಅಳಿಯ, ತಂದೆ-ಮಗ, ಭಾವ – ಮೈದುನ – ಈ ಸಂಬಂಧ ಹೊಂದಿದವರು ಕರ್ರಂಗೋಲು ವೇಷ ಹಾಕಿ ಕುಣಿಯಬಾರದು.

ಮನ್ಸ ಜನಾಂಗದವರು ತಮ್ಮನ್ನು ‘ಮೂಲೊದಕ್ಲು’(ಮೂಲದವರು, ಮೂಲನಿವಾಸಿಗಳು, Aboriginals) ಎಂದು ಕರೆದುಕೊಳ್ಳುತ್ತಾರೆ. ಇವರಿಗೂ ಬೇಸಾಯಕ್ಕೂ ಗಾಢ ಸಂಬಂಧವಿದೆ. ಪ್ರಾಚೀನ ಕಾಲದಿಂದಲೂ ಬೇಸಾಯದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಾ ಬಂದಿದ್ದಾರೆ. ಕಂಬಳ, ಬೇಟೆ, ಆರಾಧನೆ, ಮದುವೆ, ಹಬ್ಬ ಹರಿದಿನಗಳಲ್ಲಿ ಈ ಮನ್ಸ ಜನಾಂಗದವರು ವಿಶಿಷ್ಟವಾದ ರೀತಿಯಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಮನೆ ತುಂಬಿಸುವ, ಕಣಜ ತುಂಬಿಸುವ, ಭತ್ತದ ತೆನೆಯನ್ನು ತರುವ ಸಂದರ್ಭಗಳಲ್ಲಿ ಇವರಿಗೆ ನಿರ್ದಿಷ್ಟ ರೀತಿಯ ಕೆಲಸಗಳಿದ್ದವು. ಉದಾಹರಣೆಗೆ : ಭತ್ತದ ತೆನೆ ತಂದು ಮನೆ ತುಂಬಿಸುವ ಸಂದರ್ಭದಲ್ಲಿ ಮನೆಯ ಕೆಲಸದಾಳುವಾದ ಮನ್ಸ ಜನಾಂಗದ ವ್ಯಕ್ತಿಯೊಬ್ಬನು ಗದ್ದೆಗೆ ಹೋಗಿ ತೆನೆಯನ್ನು ತಂದು ಅಂಗಳದಲ್ಲಿ ತುಳಸಿ ಕಟ್ಟೆಯಿದ್ದರೆ ಅದರ ಬಳಿ ಇಡಬೇಕು. ಅಲ್ಲಿಂದ ಮತ್ತೆ ಮನೆಯ ಯಜಮಾನರು ತೆನೆಯನ್ನು ಪೂಜಿಸಿ, ಮನೆಯೊಳಗೆ ತಂದು ಮನೆ ತುಂಬಿಸಿಕೊಳ್ಖುತ್ತಾನೆ.

ಕರ್ರಂಗೋಲು ‘ಪಠ್ಯ’ ಮತ್ತು ವಿಶ್ಲೇಷಣೆ

೧. ಕರ್ರಂಗೋಲು ಹಾಡು. ೨. ಕರ್ರಂಗೋಲು ಪ್ರದರ್ಶನದ ವಿವರಗಳು ೩. ಸಾಮೂಹಿಕ ಭೋಜನ ಮತ್ತು ಪ್ರಸಾದ ವಿತರಣೆ ೪. ಕಾಣದ ಕಾಟದ ಮತ್ತು ಐತಿಹಾಸಿಕತೆ ೫. ಪೂರಕವಾಗುವ ಇತರ ಮಾಹಿತಿಗಳು – ಕರ್ರಂಗೋಲು ಪ್ರದರ್ಶನದ ಕುರಿತಂತೆ ಮೇಲಿನ ಶೀರ್ಷಿಕೆಗಳಲ್ಲಿ ಸಂಗ್ರಹಿಸಿರುವ ‘ಮಾಹಿತಿ ಶರೀರ’ವನ್ನು ನಾನು ‘ಕರ್ರಂಗೋಲು ಪಠ್ಯ’ ಎಂದು ಕರೆಯುತ್ತೇನೆ. ಅಂದರೆ ‘ಕರ್ರಂಗೋಲು’ ಪ್ರದರ್ಶನದ ಅರ್ಥವನ್ನು ಹಾಡಿನಲ್ಲಿ, ಕುಣಿತದಲ್ಲಿ , ವೇಷಭೂಷಣಗಳಲ್ಲಿ, ಸಂಪ್ರದಾಯಗಳಲ್ಲಿ, ಐತಿಹಾಸಿಕತೆಯಲ್ಲಿ, ಸಾಮಾಜಿಕತೆಯಲ್ಲಿ ಮತ್ತು ಅವುಗಳ ಅಖಂಡತೆಯಲ್ಲಿ ಶೋಧಿಸಬೇಕಾಗುತ್ತದೆ. ಆದುದರಿಂದ ಯಾವುದೇ ಒಂದು ಪ್ರದರ್ಶನದ ಅರ್ಥವು ಪ್ರದರ್ಶನದ ಸಂದರ್ಭದಲ್ಲಿ ಮಾತ್ರ ಹುದುಗಿರದೇ ಪ್ರದರ್ಶನ ಆಚೆಗಿನ ಸಾಮಾಜಿಕ, ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ವಿವರಗಳಲ್ಲಿ ಹುದುಗಿರುವ ಸಾಧ್ಯತೆಗಳು ಬಲವಾಗಿವೆ. ಪ್ರದರ್ಶನವೊಂದರ ರಾಚನಿಕ ಅಧ್ಯಯನ ತತ್ತ್ವ, ಚಾರಿತ್ರಿಕ ಭೌಗೋಳಿಕ ವಿಧಾನ, ಕಂಠಸ್ಥ ಸಿದ್ಧ ಮಾದರಿಗಳ ತತ್ತ್ವ, ಸಂದರ್ಭ ಸಿದ್ಧಾಂತ, ಪ್ರದರ್ಶನ ಸಿದ್ಧಾಂತಗಳು ಅಧ್ಯಯನ ಸಂದರ್ಭದಲ್ಲಿ ಸರಳ ರೂಪದ ಒಂದು ಪಠ್ಯವನ್ನು ಸ್ವೀಕರಿಸಿಕೊಂಡು ಅರ್ಥವನ್ನು ಹುಡುಕುತ್ತವೆ. ಹೀಗೆ ಮಾಡುವುದರ ಬದಲಾಗಿ, ಒಂದು ಪ್ರದರ್ಶನವು ಒಳಗೊಂಡಿರಬಹುದಾದ ಅರ್ಥದ ಅನೇಕ ಮುಖಗಳನ್ನು ಶೋಧಿಸುವ ಅಗತ್ಯವಿದ್ದು ಈ ಉದ್ದೇಶಕ್ಕಾಗಿ ವ್ಯಾಪಕ ಮಾಹಿತಿಗಳ ಬೃಹತ್‌ಶರೀರವನ್ನು ‘ಪಠ್ಯ’ ಎಂದು ಪರಿಭಾವಿಸಿಕೊಳ್ಳಬೇಕಾಗಿದೆ. ಪ್ರದರ್ಶನದ ಒಂದು ಅರ್ಥದ ಬದಲಾಗಿ ‘ಹಲವು ಅರ್ಥಗಳ’ ಅನಾವರಣ ಮತ್ತು ಗ್ರಹಿಕೆ ಮುಖ್ಯವಾಗುತ್ತದೆ.

ಹಾಗಾದರೆ ಕರ್ರಂಗೋಲು ಕುಣಿತದ ‘ಅರ್ಥಗಳು‘ ಯಾವುವು?

೧. ಕರಿಯ ಕೋಲು ಕರ್ರಂಗೋಲು ಅಥವಾ ಕರ್ರಂಗೋಲು, ಕರಂಗೋಲು

ಕಲಾವಿದರು ಹಿಡಿಯುವ ಕೋಲು ಕರಿಯದಾದುದರಿಂದ ಕರ್ರಂಗೋಲು ಎಂಬ ಹೆಸರು ಬಂದಿರಬಹುದು ಅಥವಾ ಕೈಯಲ್ಲಿ ಹಿಡಿಯುವ ಕೋಲು ಕರ್ರಂಗೋಲು ಆಗಿರಬಹುದು. ಕರ್ರಂಗೋಲು ಪದ ನಿಷ್ಪತ್ತಿಯ ಈ ವಾದ ಮತ್ತು ವಿವರಣೆಗೆ ‘ಪಠ್ಯ’ದಲ್ಲಿ ದೊರೆಯುವ ಸಮರ್ಥನೆಗಳನ್ನು ಹೀಗೆ ಸಂಗ್ರಹಿಸಬಹುದು. ಹಾಡಿನ ‘ಕರ್ರಂಗೋಲು ಹುಟ್ಟಿದ’ ಎಂಬ ಉಲ್ಲೇಖವನ್ನು ‘ಕರಿಯ ಕೋಲು’ ಎಂದು ಅರ್ಥೈಸಿ ಈ ಕೋಲಿನ ಅಸಾಮಾನ್ಯ ಹುಟ್ಟು, ಅದನ್ನು ತರುವಲ್ಲಿನ ಅಲೌಕಿಕತೆ, ಕರಿಯ ಕೋಲನ್ನು ತರಲು ಮಂಗಾರ ಮಾನಿಗ ಮತ್ತು ಕಾಂತಾರ ಕರಿಯ ಕುರೊವು ಇವರಿಗೆ ಮಾತ್ರ ಸಾಧ್ಯ ಎಂಬ ವಿವರಣೆಯನ್ನು ಹಾಡಿನ ಪ್ರಾರಂಭದ ಭಾಗದಿಂದ ಹೊರಡಿಸಬಹುದು. ಹಾಡಿನ ಮುಂದಿನ ಭಾಗದಲ್ಲಿ ಬರುವ ಕೃಷಿಯ ವಿವರಗಳಿಗೂ, ಈ ಕರಿಯ ಕೋಲಿಗೂ ಇರಬಹುದಾದ ಸಂಬಂಧ ಸ್ಪಷ್ಟವೇ ಆಗುವುದಿಲ್ಲ. ಪಠ್ಯದಲ್ಲಿ ಕೋಲೊಂದರ (ಅಲ್‌ಂಬುಡದ ದಂಟು) ಪ್ರಸ್ತಾಪ ಮತ್ತೊಂದು ಕಡೆ ಬರುವುದು: ಕಾಣದ ಮತ್ತು ಕಾಟದ ಈ ಯೋಧರು ಬೇಟೆಗೆ ಹೋಗಿದ್ದಾಗ ಬಂಡೆ ಒಡೆದು ನೀರು ಬರಿಸುವ ಸಂದರ್ಭದಲ್ಲಿ – ಆ ಕೋಲನ್ನು ‘ಕರಿಯಕೋಲು’ ಎಂದು ಕರೆಯುವುದು ಹೇಗೆ? ಮತ್ತು ಕುಣಿತದ ಸಂದರ್ಭದ ಊರುಗೋಲಿನ ಬಳಕೆ ಮನ್ಸರಲ್ಲಿ ಇಲ್ಲ. ‘‘ತಾವು (ಹಾಡುವವರು) ಒಂದು ಕೈಯಲ್ಲಿ ‘ದಂಟೆ’ ಹಿಡಿದುಕೊಳ್ಳುವುದುಂಟು. ಅದು ರಾತ್ರಿ ಮನೆ ಮನೆಗೆ ಹೋಗುವಾಗ ನಾಯಿಗಳನ್ನು ಓಡಿಸಲಷ್ಟೆ. ಪ್ರದರ್ಶನಕ್ಕೂ ಅದಕ್ಕೂ ಸಂಬಂಧವಿಲ್ಲ’’ ಎಂಬುದಾಗಿ ವಕ್ತೃಗಳು ಹೇಳುತ್ತಾರೆ. ಕರಿಯಕೋಲು ಮತ್ತು ಕೈಕೋಲು ಈ ನಿಷ್ಪತ್ತಿಯನ್ನು ಅವರಿಗೆ ವಿವರಿಸಿ ಹೇಳಿದಾಗ ಅದಕ್ಕೂ ಕರ್ರಂಗೋಲು ಕುಣಿತಕ್ಕೂ ಸಂಬಂಧವೇ ಇಲ್ಲ ಎನ್ನುತ್ತಾರೆ. ಆದರೆ ‘ಪಠ್ಯ’ದ ವಿವರಗಳನ್ನು ಕ್ರೋಡೀಕರಿಸಿ ‘ಕಾರಣಿಕದ ಕೋಲು’ ಕರ್ರಂಗೋಲು ಎಂದು ಅರ್ಥ ಮಾಡುವ ಮನಸ್ಸಾಗುತ್ತದೆ.

ಕರ್ರಂಗೋಲು ಎಂಬುದು ಒಂದು ವಿಧದ ವಿಶಿಷ್ಟ ಧಾನ್ಯ ತಳಿ

ತುಳುನಾಡಿನ ಬೇಸಾಯಗಾರರನ್ನು ಮತ್ತು ಕರ್ರಂಗೋಲು ಕುಣಿತದ ವಕ್ತೃಗಳನ್ನು ವಿಚಾರಿಸಿ ‘ಕರ್ರಂಗೋಲು’ ಎಂಬುದು ಒಂದು ‘ವಿಶಿಷ್ಟ ಧ್ಯಾನ್ಯದ ತಳಿ’ಯನ್ನು ನಿರ್ದೇಶಿಸುತ್ತದೆಯೇ ಎಂದು ಕೇಳಿದರೆ ಅವರೆಲ್ಲ ಒಪ್ಪುವುದಿಲ್ಲ. ನಿಜ, ಕುಣಿತವು ಕೃಷಿಗೆ ಸಂಬಂಧಪಟ್ಟದ್ದು. ಮುಖ್ಯವಾಗಿ ಹಾಡು ಬೇಸಾಯದ ವಿವರಗಳನ್ನೇ ಮಂಡಿಸುತ್ತದೆ. ‘ಪೊಲಿ’. ‘ಪೊಲ್ಸು’ ಅಂದರೆ ಅದೃಷ್ಟವನ್ನು ತರುವ, ತೆನೆಯನ್ನು ತಂದು ಮನೆಯನ್ನು ತುಂಬಿಸುವ ಆಶಯವನ್ನು ಈ ಕುಣಿತವು ಪ್ರಾರಂಭವಾಗುವ ರೀತಿಯು ಧ್ವನಿಸುತ್ತದೆ. ಅಂದರೆ ‘ತೆನೆ’ಯು ‘ಅದೃಷ್ಟ’, ‘ಸಮೃದ್ಧಿ’ಯ ಸಂಕೇತವಾಗುತ್ತದೆ. ‘ಅದೃಷ್ಟವನ್ನು ಕರೆತಂದೆವು. ಬಾಗಿಲನ್ನು ತೆಗೆಯಿರಿ, ದೀಪ ಉರಿಸಿರಿ’ ಎಂದು ತಂಡ ಹೇಳುವುದು, ಸಂಭಾವನೆಯಾಗಿ ಭತ್ತವನ್ನು ತಂಡಕ್ಕೆ ನೀಡುವುದು, ಪಠ್ಯದ ಹಲವು ಕಡೆಗಳಲ್ಲಿ ‘ಕರ್ರಂಗೋಲು ಮಕ್ಕಳು’ ‘ಕರ್ರಂಗೋಲು ನಲಿಕೆ’ ಎಂಬ ಉಲ್ಲೇಖ ಬರುವುದು – ಈ ವಿವರಗಳನ್ನು ನೋಡಿದರೆ ‘ಕರ್ರಂಗೋಲು’ ಎಂಬುದಕ್ಕೆ ತಳಿ, ಅದೃಷ್ಟ ಎಂಬ ಅರ್ಥಕ್ಕಿಂತ ‘ಅದೃಷ್ಟವನ್ನು ತಂದು ಸಮೃದ್ಧಿಯನ್ನು ತುಂಬಬಲ್ಲ ಸಾಮರ್ಥ್ಯವುಳ್ಳ ವ್ಯಕ್ತಿಸೂಚಕ’ ಅರ್ಥವಿರುವುದು ಸ್ಪಷ್ಟವಾಗುತ್ತದೆ.

ಕರ್ರಂಗೋಲು ಮತ್ತು ‘ಕೊಂರ್ಗು’ ಎಂಬ ಪಕ್ಷಿ ಸಂಬಂಧೀ ಅರ್ಥ:

ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಸಮ್ಮೇಳನದ ಚರ್ಚೆಯ ವೇಳೆ, ಶ್ರೀ ಏರ್ಯ ಲಕ್ಷ್ಮಿನಾರಾಯಣ ಆಳ್ವ ಅವರು ಈ ವಾದವನ್ನು ಮುಂದಿಟ್ಟು ‘ಕೊಂರ್ಗು’ ಪಕ್ಷಿಯ ಬಣ್ಣಕ್ಕೂ, ಕರ್ರಂಗೋಲು ವೇಷಧಾರಿಗಳ ಬಣ್ಣಕ್ಕೂ ಸಂಬಂಧವಿದೆ ಎಂದು ಹೇಳಿದರು. ಪಠ್ಯದ ಯಾವತ್ತೂ ಸಮರ್ಥನೆಯಾಗಲೀ, ಮಾಹಿತಿಯಾಗಲೀ ಇಲ್ಲದ ‘ಕಾಲ್ಪನಿಕ’ ಅರ್ಥವಿದು.

ಈಗ, ‘ಕರ್ರಂಗೋಲು ಪಠ್ಯ’ದ ವಿಕೇಂದ್ರಿತ ಅರ್ಥಗಳನ್ನೂ (Decentralised meanings) ಅವುಗಳೊಳಗಿನ ಸಂಬಂಧಗಳನ್ನೂ ಪರಿಶೀಲಿಸೋಣ.

ಕರ್ರಂಗೋಲು ಹಾಡು, ಪ್ರದರ್ಶನ, ಆರಾಧನೆಯ ಪರಿಕಲ್ಪನೆ, ಮಾಂತ್ರಿಕತೆ, ಸಾಮಾಜಿಕತೆ, ಐತಿಹಾಸಿಕ, ಜನಾಂಗೀಯ ವಿವರಗಳು, ಮಾಲಿಕ ಮತ್ತು ಕಾರ್ಮಿಕ ಸಂಬಂಧಗಳು – ಈ ಅಂಶಗಳು ‘ಕರ್ರಂಗೋಲು’ ಕುಣಿತವನ್ನು ‘ಸಾಮಾಜಿಕ ಹಾಗೂ ಚಾರಿತ್ರಿಕ ಉತ್ಪನ್ನ’ ಎಂಬುದಾಗಿ ಸಾಬೀತುಪಡಿಸುತ್ತವೆ. ತುಳುನಾಡಿನಲ್ಲಿ ಮಾದಿರ ನಲಿಕೆ, ಚೆನ್ನು ನಲಿಕೆ, ಕೊರಗ ತನಿಯ ಕುಣಿತ, ಆಟಿಕಳೆಂಜ ಇಂತಹ ಕುಣಿತ ಪ್ರಕಾರಗಳಿದ್ದು ಇವು ನಿರ್ದಿಷ್ಟ ವ್ಯಕ್ತಿ ಮತ್ತು ಜನಾಂಗದ ಸಂಬಂಧವನ್ನು ಪಡೆದುಕೊಂಡಿವೆ. ಈ ನಿಟ್ಟಿನಲ್ಲಿ ನೋಡಿದರೆ ಕರ್ರಂಗೋಲು ಕೂಡ ಇದೇ ರೀತಿಯಲ್ಲಿ ಸಂಬಂಧವನ್ನು ಪಡೆದಿದ್ದು, ‘ಕರ್ರಂಗೋಲು’ ಎಂಬ ಪದವನ್ನು ‘ಕಾರಣಿಕದ ಜೇರ್ಲು’ (ಕಾರ್ನಿಕದ ಜೇರ್ಲು) ಎಂಬ ವಿಭಜಿಸಿ ನೋಡಬಹುದಾಗಿದೆ. (ಜೇರ್ಲು = ಮಕ್ಕಳು) ಕಾಣದ ಮತ್ತು ಕಾಟದ ಇವರೇ ಈ ಕಾರಣಿಕದ ಮಕ್ಕಳಾಗಿದ್ದಾರೆ. ಕಾಣದ ಕಾಟದ ಈ ಐತಿಹಾಸಿಕ ಪುರುಷರ ಅಲೌಕಿಕತೆ ಮತ್ತು ಮಾಂತ್ರಿಕ ಶಕ್ತಿಯು ಇಡಿಯ ಪಠ್ಯದ ಬೇರೆ ಬೇರೆ ಭಾಗಗಳಲ್ಲಿ ಅನುರಣಿತವಾಗುತ್ತದೆ. ಮಂಗಾರ ಮಾನಿಗ ಮತ್ತು ಕರಿಯ ಕುರೊವು ದಂಪತಿಗಳ ಮಕ್ಕಳು (ಅವಳಿ?) ಈ ಕಾಣದ ಕಾಟದ ಆಗಿದ್ದರೆ ‘ಕರಿಯ ಕುರೊವು ಜೇರ್ಲು’ ಈ ‘ಕರ್ರಂಗೋಲು ಜೇರ್ಲು’ ಆಗಿರಬಹುದು. ವೇಷಭೂಷಣ, ಆರಾಧನೆ, ಸಂಪ್ರದಾಯದ ವಿಧಿವಿಧಾನಗಳನ್ನು ನೋಡಿದರೆ ಈ ಇಬ್ಬರು ವ್ಯಕ್ತಿಗಳು ಮನ್ಸ ಜನಾಂಗದ ಆರಾಧನಾ ಪುರುಷರು. ಆಟಿಕಳೆಂಜನಿಗಿರುವಂತೆ ಕೆಟ್ಟದನ್ನು ಕಳೆಯುವ, ಅದೃಷ್ಟ ಮತ್ತು ಸಮೃದ್ಧಿಯನ್ನು ತರುವ ಮಾಂತ್ರಿಕ ಗುಣ ಈ ‘ವ್ಯಕ್ತಿತ್ವ’ಗಳಿಗಿವೆ. ಒಂದು ಕಾಲಕ್ಕೆ ಮೇಲ್ವರ್ಗ ಭೂ ಒಡೆತನ ಹೊಂದಿದ್ದ ಅವಧಿಯಲ್ಲಿ ಕೂಲಿ ಕಾರ್ಮಿಕರಾಗಿ ಈ ಸಾಹಸಿಗಳು ದುಡಿದಿರಬಹುದು. ನಿಗೂಢ ಸಂಘರ್ಷದಲ್ಲಿ ‘ಮಾಯಕ’ ಹೊಂದಿ ಸಾಂಸ್ಕೃತಿಕ ವೀರರಾಗಿ ಮನ್ಸ ಜನಾಂಗದ ಪರಿಧಿಯನ್ನು ದಾಟಿ ಸಾಮಾಜಿಕ ವಲಯದೊಳಗೆ ಪ್ರವೇಶ ಪಡೆದಿರುವ ಕಾರಣವಾಗಿ ಕರ್ರಂಗೋಲು ವೇಷ ಮತ್ತು ಕುಣಿತಗಳಲ್ಲಿ ಈ ವೀರರ ‘ವ್ಯಕ್ತಿತ್ವ’ಗಳು ಮರುಹುಟ್ಟನ್ನು ಪಡೆಯುತ್ತವೆ. ಕರ್ರಂಗೋಲಿನಲ್ಲಿ ಇತಿಹಾಸ ಮತ್ತು ವರ್ತಮಾನವನ್ನು, ಲೌಕಿಕತೆ ಮತ್ತು ಅಲೌಕಿಕತೆಯನ್ನು, ವಾಸ್ತವ ಮತ್ತು ಆದರ್ಶವನ್ನು, ಬದುಕು ಮತ್ತು ಸಾವನ್ನು – ಹೀಗೆ ವಿರೋಧ ದ್ವಂದ್ವಗಳನ್ನು ಬೆಸೆಯುವ ತಾತ್ವಿಕತೆ ಇದೆ. ಕರ್ರಂಗೋಲು ಕುಣಿತದ ಹಿಂದಿರುವ ‘ಪುರಾಣ’ (Myth) ಹೀಗೆ ಜನಾಂಗಗಳನ್ನು ದಾಟುತ್ತಾ ಬಂದಿದೆ.

ಕರ್ರಂಗೋಲು ಹಾಡಿನ ವರ್ಣನೆ ಮತ್ತು ನಿರೂಪಣೆಯಲ್ಲಿ ಈ ವಿರೋಧ ದ್ವಂದ್ವಗಳ ಬೆಸುಗೆ ಇದೆ. ಅವಾಸ್ತವ ಮತ್ತು ಅಲೌಕಿಕ ವಿವರಗಳನ್ನು ಹಾಡಿನ ಪ್ರಾರಂಭದ ಗೆರೆಗಳನ್ನು ಪ್ರಸ್ತಾವಿಸುತ್ತವೆ. ಕಾಣದ ಕಾಟದ ಈ ವೀರರ ಸಾಹಸ ಮತ್ತು ಕಾರಣಿಕ ಗುಣಗಳು ಅಮೂರ್ತವಾದ ‘ಅದೃಷ್ಟ‘ವನ್ನು ಮನೆ ಮನೆಗಳಲ್ಲಿ ತುಂಬಿಸುವ ಉದ್ದೇಶವು ವ್ಯಕ್ತವಾಗುತ್ತದೆ. ‘ಕರ್ರಂಗೋಲು ಮಕ್ಕಳು ಬಂದಿದ್ದಾರೆ. ಬಾಗಿಲು ತೆಗೆಯಿರಿ. ಒಡೆಯ, ಒಡತಿ, ಮಗು ಎಲ್ಲರೂ ನಿದ್ದೆಯಿಂದ ಎದ್ದು ಕುಳಿತುಕೊಳ್ಳಿರಿ…’ ಅಂದರೆ ಪ್ರದರ್ಶನ ನೀಡುವ ತಂಡವು ತನ್ನ ಅಸ್ತಿತ್ವವನ್ನು ವರ್ತಮಾನದಲ್ಲಿ, ವಾಸ್ತವದಲ್ಲಿ ಕಂಡುಕೊಳ್ಳುವ ಪ್ರಯತ್ನವಾಗಿದೆ. ಮುಂದೆ ‘‘ಒಡೆಯನ ಸಾಧನೆಗಳು, ಕಾಣದ ಮತ್ತು ಕಾಟದ ಕಾರ್ಮಿಕರು ಒಡೆಯನ ಸವಾಲನ್ನು ಎದುರಿಸಿ ಬೇಸಾಯದ ಕೆಲಸದಲ್ಲಿ ತೊಡಗುವುದು…’’ ಇಂತಹ ವಿವರಗಳು ಹಾಡಿನಲ್ಲಿ ಬರುತ್ತವೆ. ಬೇಸಾಯದ ಚಟುವಟಿಕೆಗಳನ್ನು, ತಾಂತ್ರಿಕ ಅವಶ್ಯಕತೆಗಳನ್ನು ಪ್ರಾಕೃತಿಕ ತೊಂದರೆಗಳನ್ನು ವಿವರಿಸುತ್ತಾ, ಹಾಡು, ಮಾಲಿಕನ ಮಾಳಿಗೆಯಲ್ಲಿರುವ ಭತ್ತದ ರಾಶಿಯ ಕುರಿತು ಹೇಳುತ್ತದೆ. ‘‘ಕರ್ರಂಗೋಲಿನ ಮಕ್ಕಳಿಗೆ ಗೆರಸೆ ತುಂಬ ಕೊಡಬೇಕು. ಒಡೆಯ ಒಡತಿ ಗುಣುಗುಣು ಹೇಳುತ್ತಾರೆ’’ ಅಂದರೆ ಒಡೆಯ ಒಡತಿಯ ಸ್ವಾರ್ಥ ಮತ್ತು ಕಾರ್ಮಿಕರ ಉತ್ಕಟ ಯಾಚನೆ – ಹೀಗೆ ಬೇಡಿಕೆ ಮತ್ತು ನಿರಾಕರಣೆ – ಈ ದ್ವಂದ್ವದ ಘರ್ಷಣೆಯ ಧ್ವನಿ ಕೇಳಿಸುತ್ತದೆ.

ಕರ್ರಂಗೋಲು ಕುಣಿತದಲ್ಲಿ ಕಾಣಿಸಿಕೊಳ್ಳುವವರು ಸಾಂಸ್ಕೃತಿಕವಾದ ಅಲೌಕಿಕ ವೀರರ ಪ್ರತಿನಿಧಿಗಳೆಂಬುದು ಪ್ರದರ್ಶನ ವಿವರಗಳಿಂದಲೂ ಸ್ಪಷ್ಟವಾಗುತ್ತದೆ. ‘ಗೇಂಟಿ’ ಹಾಕುವ ಜೇಡಿ ಮಣ್ಣಿನಿಂದ ವರ್ತುಲಗಳನ್ನು ಬಿಡಿಸುವ, ಕೈಕಾಲುಗಳಿಗೆ ಜೇಡಿಯ ‘ದಂಡೆ’ ಬರೆಯುವ, ಗಂಟೆ ನುಡಿಸುವ ಇಂತಹ ಅಂಶಗಳು ಭೂತಾರಾಧನೆಯಲ್ಲಿಯೂ ಕಂಡು ಬರುತ್ತವೆ.

ಈ ‘ವ್ಯಕ್ತಿತ್ವ’ಗಳ ಮಾಂತ್ರಿಕತೆ ಸ್ಪಷ್ಟವಾಗುವುದು ವೇಷ ಕಳಚುವ ಸ್ಥಳ, ಅಂದರೆ ಕಾಸರಕನ ಮರದ ಬುಡ ಮತ್ತು ಅಲ್ಲಿ ಮಾಡುವ ವಿಧಿವಿಧಾನಗಳಿಂದ. ಮನೆ ಮನೆಯೊಳಗೆ ಸಂಚರಿಸಿದ ಸಂದರ್ಭದಲ್ಲಿ ಅಲ್ಲಿಯ ಅನಿಷ್ಟ ರೋಗ ರುಜಿನಗಳನ್ನು ತಮ್ಮ ಮೈಮೇಲೆ ಹಾಕಿಕೊಂಡು ಅವುಗಳನ್ನೆಲ್ಲಾ ಕಾಸರಕನ ಮರದ ಬುಡದಲ್ಲಿ ಹಾಕುವುದರ ಆಶಯ ಸ್ಪಷ್ಟವಾಗಿದೆ. ದುಷ್ಟ ಶಕ್ತಿಗಳ ವಿಸರ್ಜನೆಗೆ ಕಾಸರಕನ ಮರ ಸೂಕ್ತ ಎಂಬ ನಂಬಿಕೆಯು ಜನಪದರದಲ್ಲಿದೆ. ಸಾಮೂಹಿಕ ಭೋಜನ ಮತ್ತು ಪ್ರಸಾದ ವಿತರಣೆ – ಈ ಆಚರಣೆಯು ಪಿತೃಪೂಜೆಯ ಆಶಯವನ್ನು ಧ್ವನಿಸುತ್ತದೆ. ಹಾಡಿನಲ್ಲಿ ಪ್ರಸ್ತಾವಿತವಾಗಿರುವ ಕಾಣದ ಮತ್ತು ಕಾಟದ ಇವರು ಐತಿಹಾಸಿಕ ವ್ಯಕ್ತಿಗಳೆಂಬುದನ್ನು ಕಾಣದ ಕಾಟದ ಕುರಿತಂತೆ ಆ ಜನಾಂಗದಲ್ಲಿ ಪ್ರಚಲಿತವಾಗಿರುವ ಐತಿಹ್ಯವೂ ಸ್ಪಷ್ಟಪಡಿಸುತ್ತದೆ. ಪೂರಕ ಮಾಹಿತಿಗಳೆಂದು ನಾನು ಕೊಟ್ಟಿರುವ ವಿವರಗಳು ಮೇಲೆ ತಾಳಿರುವ ಅಭಿಪ್ರಾಯವನ್ನು ಇನ್ನಷ್ಟು ಖಚಿತಪಡಿಸುತ್ತವೆ.

ಉಪಸಂಹಾರ

ಕರ್‌ಂಗೋಲು ಕುಣಿತದ ಪ್ರದರ್ಶನದ ನಿರ್ವಹಣೆ ಮತ್ತು ಪೂರಕ ಮಾಹಿತಿಗಳ ಆಕರ ಸಾಮಗ್ರಿಗಳನ್ನು ಒಂದು ಕಡೆ ಕಲೆ ಹಾಕಿ ವಿಶ್ಲೇಷಿಸುವುದು ಸರಿಯಾದ ವಿಧಾನವಾಗುತ್ತದೆ. ಹೀಗೆ ಮಾಡುವುದರಿಂದ ಅರ್ಥಗಳ ಹಲವು ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಯಾವತ್ತೂ ಒಂದು ಕುಣಿತದ ಕೇಂದ್ರೀಯ ಅರ್ಥ ಮತ್ತು ಉದ್ದೇಶ ಎಂದರೆ ವಿಕೇಂದ್ರಿತ ಅರ್ಥ ಮತ್ತು ಉದ್ದೇಶಗಳ ಒಟ್ಟು ಮೊತ್ತವಾಗಿರುತ್ತದೆ. ಪಠ್ಯದ ಅಧ್ಯಯನವೆಂದರೆ ಅದು ಹಲವು ಅರ್ಥಗಳ ಅನಾವರಣದ ಕಡೆಗೆ ತನ್ನ ನಿಜವಾದ ಒತ್ತನ್ನು ಹಾಕಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್‌ಂಗೋಲು ಕುಣಿತದ ಅರ್ಥಗಳು:

೧. ಅಲೌಕಿಕ ವೀರರ ಆರಾಧನೆಯ ಪರಿಕಲ್ಪನೆಯನ್ನು ಪಡೆದುಕೊಂಡಿದೆ.

೨. ಅನಿಷ್ಟವನ್ನು ತೊಡೆದು ಹಾಕುವ ಮಾಂತ್ರಿಕತೆಯ ಶಕ್ತಿ ಇಲ್ಲಿಯ ಯೋಧರಿಗೆ ಇದೆ ಎಂಬ ನಂಬಿಕೆಯು ಕುಣಿತದ ರೀತಿ ಮತ್ತು ಸಂಪ್ರದಾಯಗಳಿಂದ ಸ್ವಷ್ಟವಾಗುತ್ತದೆ.

೩. ವಾರ್ಷಿಕವಾಗಿ ಆವರ್ತನೆಗೊಳ್ಳುವ ಈ ಕರ್‌ಂಗೋಲು ಕುಣಿತವು, ಜಾತ್ಯಾಧಾರಿತ ಮತ್ತು ಶ್ರೇಣೀಕೃತ ಆಡಳಿತ ಮತ್ತು ಸಾಮಾಜಿಕ ವ್ಯವಸ್ಥೆಯ ಚಾರಿತ್ರಿಕ ಉತ್ಪನ್ನವಾಗಿದೆ. ಮತ್ತು ಆ ವ್ಯವಸ್ಥೆಯಲ್ಲಿ ತನ್ನ ಅರ್ಥ ಮತ್ತು ಸಾರ್ಥಕ್ಯವನ್ನು ಕಂಡುಕೊಳ್ಳುವ ಕ್ರಿಯೆಯಾಗಿದೆ.

೪. ತಮ್ಮ ಜನಾಂಗದ ಸಾಂಸ್ಕೃತಿಕ ವೀರರ ‘ವ್ಯಕ್ತಿತ್ವ’ಗಳನ್ನು ಕಲಾತ್ಮಕವಾಗಿ ಪ್ರತಿನಿಧಿಸಿ, ಸಂಘರ್ಷ, ಕೊಲೆ,  ಶೋಷಣೆ, ಬಡತನಗಳನ್ನು ಉದಾತ್ತೀಕರಿಸುವ ಮನ್ಸ ಜನಾಂಗದ ಆಲೋಚನೆಗಳನ್ನು ಇಲ್ಲಿ  ಕಾಣಬಹುದು.

೫ ತುಳುನಾಡಿನ ಜನಾಂಗಗಳ ಅಧ್ಯಯನ ಮತ್ತು ಇತಿಹಾಸದಲ್ಲಿ ಇಂತಹ ಕುಣಿತಗಳನ್ನು ಪ್ರಮುಖ ಆಕರವಾಗಿ  ಬಳಸಿಕೊಳ್ಳಬಹುದು.

೬. ಹಾಡಿನ ಸಾಂಪ್ರದಾಯಿಕ ರಮ್ಯ ಕಥನಗುಣ, ಕುಣಿತ, ವೇಷಭೂಷಣ ಮತ್ತು ಸಂಪ್ರದಾಯಗಳ ಅರ್ಥಗಳು  ಅಲೌಕಿಕತೆಯ ಪರಿಕಲ್ಪನೆಯನ್ನು ಸ್ಪಷ್ಟಪಡಿಸುತ್ತವೆ.

ಗ್ರಂಥ ಋಣ

೧. ಅಮೃತ ಸೋಮೇಶ್ವರ, ೧೯೮೮
ತುಳುನಾಡಿನ ಜನಪದ ಕಲೆಗಳು ಲೇಖನ, (ಹೆಜ್ಜೆ ಗುರುತು, ವಿದ್ಯಾಬೋಧಿನಿ ಪ್ರೌಢಶಾಲೆ, ಬೆಳ್ಳಿಹಬ್ಬದ  ನೆನಪಿನ ಸಂಚಿಕೆ, ಬಾಳಿಲ, ಪ್ರ.ಸಂ, : ಬಿ.ವಿ. ಶಗ್ರಿತ್ತಾಯ) ರಜತೋತ್ಸವ ಸಮಿತಿ, ಬಾಳಿಲ.

೨. ಚನ್ನಬಸಪ್ಪ ಗೊ.ರು. (ಸಂ.), ೧೯೭೭
ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೩. ಪಾಲ್ತಾಡಿ ರಾಮಕೃಷ್ಣ ಆಚಾರ್‌, ೧೯೮೯
ತುಳುನಾಡ್‌ದ ಜನಪದ ನಲಿಕೆಲು (ತುಳು ಲೇಖನ)
(ಪನಿಯಾರ ಸಂ. : ಚಿನ್ನಪ್ಪ ಗೌಡ ಕೆ.) ಅಖಿಲ ಭಾರತ ತುಳು ಸಮ್ಮೇಳನ,
ನೆನಪು ಸಂಚಿಕೆ, ತುಳುಕೂಟ, ಮಂಗಳೂರು.

೪. ಮರಿಯಪ್ಪ ಭಟ್ಟ, ಎಂ., ಶಂಕರ ಕೆದಿಲಾಯ ಎ., ೧೯೬೭
ತುಳು – ಇಂಗ್ಲೀಷ್ ನಿಘಂಟು, ಮದರಾಸು ವಿಶ್ವವಿದ್ಯಾನಿಲಯ.

 

[1] ಕರ್‌ಂಗೋಲು ಹಾಡು, ಕುಣಿತ ಮತ್ತು ಸಂಪ್ರದಾಯಗಳ ಮಾಹಿತಿಗಳನ್ನು ಬೆಳ್ತಂಗಡಿ ತಾಲೂಕಿನ ಉಜಿರೆ  ಗ್ರಾಮದ ಪೆರ್ಲ ಎಂಬ ಸ್ಥಳದಲ್ಲಿ ವಾಸಿಸುವ ಮನ್ಸ ಜನಾಂಗದವರಿಂದ ಸಂಗ್ರಹಿಸಲಾಗಿದೆ. ಮನ್ಸ  ಸಮುದಾಯದವರು ಪ್ರದರ್ಶಿಸುವ ಕರ್‌ಂಗೋಲು ಕುಣಿತವನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.  ೧೯೮೫,೧೯೮೭,೧೯೮೯ – ಈ ಇಸವಿಗಳಲ್ಲಿ ಕ್ಷೇತ್ರ ಕಾರ್ಯ ನಡೆಸಿ ಮನ್ಸ ಜನಾಂಗದ ಬಾಬು, ಸಾಂತಪ್ಪ,  ಬಾಬು ಮತ್ತು ಸೀನ ಎಂಬ ನಾಲ್ವರು ವಕ್ತೃತಳಿಂದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ತಾವು  ನಿರ್ವಹಿಸುವ ಈ ಕುಣಿತದ ಹಾಡು, ಸಂಪ್ರದಾಯಗಳ ಕುರಿತಂತೆ ಅವರು ಸ್ವತಃ ನೀಡುವ ಅರ್ಥ ಮತ್ತು  ವಿವರಣೆಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಪ್ರತ್ಯೇಕವಾಗಿ ನಡೆಸಿದ ಸಂದರ್ಶನಗಳ ಮೂಲಕ,  ವಿದ್ವಾಂಸರು ಈಗಾಗಲೇ ಅರ್ಥೈಸಿರುವ ರೀತಿಗಳನ್ನು ಕಲಾವಿದರ ಗಮನಕ್ಕೆ ತಂದು ಅವರ  ಪ್ರತಿಕ್ರಿಯೆಗಳನ್ನು ಸ್ವಾಗತಿಸಿ ಈ ಲೇಖನದಲ್ಲಿ ಅಳವಡಿಸಿಕೊಳ್ಳಲಾಗಿದೆ.

[2] ತುಳುವರು ಆಚರಿಸುವ ಹಬ್ಬಗಳಲ್ಲಿ ಕಾವೇರಿ ಸಂಕ್ರಮಣವು ಒಂದು. ಹೊಸ ಭತ್ತವನ್ನು ಮುಡಿಕಟ್ಟಿ ಮನೆಯ  ಅಟ್ಟಕೇರಿಸುವ ಕೆಲಸವನ್ನು ಆ ದಿನ ವಿಶೇಷವಾದ ಕೆಲವು ಆಚರಣೆಗಳೊಂದಿಗೆ ಮಾಡುತ್ತಾರೆ. ನಸು  ಬೆಳಕಿನ ಮುಂಜಾನೆ ಅಂಗಳದಲ್ಲಿ ನಿಂತು ಮನೆಯ ಮುಖ್ಯಸ್ಥನು (ರೈತ) ಏರುದನಿಯಲ್ಲಿ ಹೀಗೆ  ಆಮಂತ್ರಿಸುತ್ತಾನೆ: ‘‘ಆ ಜಾಲ ಪೊಲಿ ಈ ಜಾಲ ಪೊಲಿ ಪಂಚ ಪಾಂಡವರ ಪೊಲಿ ಎನ್ನ ಜಾಲ್‌ಗೇ ಬತ್ತ್‌ ಬೂರಡ್‌’’ (ಆ ಅಂಗಳದ ಪೊಲಿ ಈ ಅಂಗಳದ ಪೊಲಿ ಪಂಚ ಪಾಂಡವರ ಪೊಲಿ ನನ್ನ ಅಂಗಳಕ್ಕೇ ಬಂದು  ಬೀಳಲಿ) ಮೂರು ಬಾರಿ ಅಥವಾ ಐದು ಬಾರಿ ಹೀಗೆ ಹೇಳುವುದಲ್ಲದೆ ಪ್ರತಿಬಾರಿಯೂ ಭತ್ತದ (ಬೈಹುಲ್ಲಿನ)  ಸೂಡಿಯನ್ನು ನೆಲಕ್ಕೆ ಬಡಿಯುತ್ತಾನೆ. ಅದೃಷ್ಟವನ್ನು ಮನೆಯೊಳಗೆ ತಂದು ತುಂಬುವ ಆಶಯ ಇಲ್ಲಿದೆ.  ಅಲ್ಲದೆ ಒಂದು ಬಗೆಯ ‘ಕೀಟ’ವನ್ನು ಕೂಡ ‘ಪೊಲಿ’ ಎಂದು ಕರೆಯುತ್ತಾರೆ. ಹೊಸ ಭತ್ತದ ಕೊಯಿಲು ಮತ್ತು  ಕಣಜ ತುಂಬುವ ಸಮಯದಲ್ಲಿ ಭತ್ತದ ರಾಶಿಯ ಮೇಲೆ ಈ ‘ಪೊಲಿ’ (ಕೀಟ) ಹಾರಾಡುತ್ತಿರುತ್ತದೆ. ‘ಪೊಲಿ  ಪೊಲಿ’ ಎಂಬ ಒಂದು ಬಳ್ಳಿಯೂ ಇದೆ.

[3] ‘ಮಾದೆರು’ – ಒಂದು ಜಾತಿಯ ಬಳ್ಳಿ, ಸೊಪ್ಪು, ಹುಲ್ಲು ಇತ್ಯಾದಿ ಕಟ್ಟುವುದಕ್ಕೆ, ಬುಟ್ಟಿಯನ್ನು ಹೆಣೆಯುವುದಕ್ಕೆ  ಈ ಬಳ್ಳಿಯನ್ನು ಸಾಮಾನ್ಯವಾಗಿ ಹಳ್ಳಿಗರು ಉಪಯೋಗಿಸುತ್ತಾರೆ.

[4] ಕೊಟ್ಟೆ ಮುಳ್ಳಿನ ಮರದ ಹಣ್ಣನ್ನು ತಿನ್ನುತ್ತಾರೆ. ಅದರ ಸೊಪ್ಪನ್ನು ಕಜ್ಜಿಗೆ ಔಷಧವಾಗಿ ಉಪಯೋಗಿಸುತ್ತಾರೆ.

[5] ಸೂರಿಮುಳ್ಳಿನ ಹಣ್ಣನ್ನು ತಿನ್ನುತ್ತಾರೆ. ಇದರ ಚಿಗುರಿನ ರಸವನ್ನು ಕಣ್ಣಿಗೆ ಔಷಧವಾಗಿ ಉಪಯೋಗಿಸುತ್ತಾರೆ.

[6] ಈಂಬುಳ ಮುಳ್ಳಿನ ಚಿಗುರು – ಸೊಪ್ಪಿನಿಂದ ಚಟ್ನಿಯನ್ನು ತಯಾರಿಸುತ್ತಾರೆ.

[7] ‘ಇಟ್ಟೆಯ’ ಗಿಡ ಹೂ ಬಿಡುತ್ತದೆ. ಮನೆ ತುಂಬಿಸುವಾಗ ಭತ್ತದ ತೆನೆಯ ಜೊತೆ ಈ ಸೊಪ್ಪನ್ನು ತರುತ್ತಾರೆ.

[8] ಕೋಟಿ – ಚೆನ್ನಯರನ್ನು ‘ಬೈದ್ಯೆರ್’ ಎಂದು ತುಳುವರು ಕರೆಯುತ್ತಾರೆ.

[9] ಪದೊಳಿ ಎಂಬ ಶಬ್ದಕ್ಕೆ ಎತ್ತರವಾದ ದಿನ್ನೆ, ದಾಸ್ತಾನು ಇಡುವ ಜಾಗ, ಭೂತಕ್ಕೆ ಆಹಾರ ಬಡಿಸಿಡುವ  ಕೊಠಡಿ ಎಂಬ ಅರ್ಥಗಳಿವೆ, ಪದೊಳಿ = Principal hall of a house.

[10] ಗುಂಡಲ = ಕಬ್ಬಿಣದಿಂದ ಮಾಡಿದ ವರ್ತುಲ(ಬಳೆ) ಅದರೊಳಗಿನಿಂದ ಹಗ್ಗವನ್ನು ತುರುಕಿ ನೊಗವನ್ನು  ಎತ್ತು ಅಥವಾ ಕೋಣಗಳ ಕೊರಳಿಗೆ ಬಿಗಿಯಲಾಗುತ್ತದೆ.

[11] ಪಾವೊರಿ = ಹಳ್ಳದಲ್ಲಿರುವ ಒಂದು ಬಗೆಯ ಹುಳ.

[12] ಪಣೊರು = ಗದ್ದೆಯನ್ನು ಸೀಳುವ ನೇಗಿಲಿನ ಚೂಪಾದ ಭಾಗಕ್ಕೆ ಹೊಂದಿಸುವ ಕಬ್ಬಿಣದ ರಚನೆ.

[13] ಅರಣೆ = A greenish kind of lizard which is said to poison by licking, Lacetra  inter – punchula (ಕಿಟೆಲ್, ೧೯೬೮).

[14] ಕಯಮೆ = ಭತ್ತದ ಒಂದು ವಿಧದ ತಳಿ.

[15] ‘ಪರುಕತ್ತಿ’(ಪರ್ದತ್ತಿ)= ಚೂಪಾದ ಹಲ್ಲುಗಳಿರುವ ಕತ್ತಿ; ಭತ್ತದ ಕೆಯ್ ಕೊಯ್ಯಲು ಉಪಯೋಗಿಸುತ್ತಾರೆ.

[16] ಮಲೆಕುಡಿಯ ಎಂಬ ಒಂದು ಜನಾಂಗದ ಹೆಂಗಸರು ಬಟ್ಟೆ ಉಡುವ ರೀತಿಯನ್ನು ‘ಗೇಂಟಿ ಹಾಕುವುದು’  ಎಂದು ಕರೆಯುತ್ತಾರೆ.

[17] ಮುಂಡುಪು (ಮುಂಡೊಲಿ, ಮುಂಡೊವು) = ಗರಿಗಳನ್ನು ಒಣಗಿಸಿ ಚಾಪೆಗೆ ಉಪಯೋಗಿಸುತ್ತಾರೆ. (A  kind of wild screw – pine)

[18] ಅಲ್‌ಂಬುಡ = ಔಡಲಬೇರು; ಹರಳು Recins Communis (Lia); the caster plant.