ತುಳುನಾಡಿನ ಜನರು ವೈಶಿಷ್ಟ್ಯಪೂರ್ಣವಾದ ತುಳು ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಂತೆ, ಸಾಹಿತ್ಯಿಕ ಮೌಲ್ಯವುಳ್ಳ ತುಳು ಭಾಷೆಯನ್ನೂ ಉಳಿಸಿಕೊಂಡಿರುತ್ತಾರೆ. ಪರಿಸರದ ಪ್ರಭಾವದಿಂದ ಕೆಲವೊಂದು ಕಾಲಘಟ್ಟಗಳಲ್ಲಿ ಭಾಷೆಗಳ ಸ್ವರೂಪವು ಬದಲಾಗುತ್ತಿರುವುದು ಸಹಜವಾಗಿರುತ್ತದೆ. ಇತ್ತೀಚಿಗಿನ ವರ್ಷಗಳಲ್ಲಿ ತುಳು ಭಾಷೆಗೂ ಅನೇಕ ಪದಪುಂಜಗಳು ಹೊಸತಾಗಿ ಸೇರಿವೆ. ಆದರೂ ಗ್ರಾಮಾಂತರ ಪ್ರದೇಶಗಳಲ್ಲಿ ನೆರವೇರುವ ಆಟ-ಕೂಟ, ಅಂಕ-ಆಯನ, ಕೋಲ-ಬಲಿ, ಮದುವೆ-ಮುಂಜಿ, ಆಯ-ನ್ಯಾಯ, ಹೋಮ-ನೇಮಗಳಲ್ಲಿ ಹಳೆಯ ತುಳುವಿನ ಸೌಂದರ್ಯವನ್ನು ಕಾಣಬಹುದು. ಸಾಹಿತ್ಯಾಂಶಗಳನ್ನೂ, ನೀತಿಯ ವಿಚಾರಗಳನ್ನೂ. ಹೇಳುವ ಅನೇಕ ನುಡಿಗಟ್ಟುಗಳಿದ್ದುವು. ಕಾಲ ಕಳೆದಂತೆ ಬೇರೆ ಬೇರೆ ಕಾರಣಗಳಿಂದ ಭಾಷೆಯು ವ್ಯವಹಾರದಲ್ಲಿ ಬದಲಾವಣೆಯನ್ನು ಹೊಂದುವುದು ಸಹಜವಾಗಿದೆ. ಇದು ತುಳುವಿಗೆ ಮಾತ್ರವಲ್ಲ ಎಲ್ಲಾ ಭಾಷೆಗಳಿಗೂ ಅನ್ವಯಿಸುತ್ತದೆ. ತುಳುನಾಡಿನ ಸಂಸ್ಕೃತಿಯ ಬೇರುಗಳಾದ ಭೂತದ ಕೋಲ, ಹಬ್ಬಗಳ ಆಚರಣೆ, ದೇವರ ಉತ್ಸವ, ಕೋಳಿ ಅಂಕ, ಮದುವೆ, ಸೀಮಂತಗಳಂತಹ ಶುಭ ಕೆಲಸಗಳು, ನ್ಯಾಯ ಪಂಚಾಯಿತಿಕೆಗಳಲ್ಲಿ, ಅನೇಕ ಪಾರಿಭಾಷಿಕ ಪದಗಳನ್ನು ಅರ್ಥಗರ್ಭಿತ ವಾಕ್ಯಗಳನ್ನು ಕೇಳುವ ಅವಕಾಶಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಆರಿಸಿ ಬರೆಯಲಾಗಿದೆ.

೧. ಕಂಗ್‌ಗ್ಲ, ತಾರೆಗ್ಲ ಒಂಜೆ ಅಲೆ ಅತ್ತ್

ಅಡಕೆ ಮರ, ತೆಂಗಿನ ಮರಗಳನ್ನು ಏರುವಾಗ ಎರಡು ಕಾಲುಗಳನ್ನು ಸಿಕ್ಕಿಸಲು, ಹಗ್ಗದಿಂದ ಮಾಡುವ ಸಾಧನಕ್ಕೆ ‘ತಲೆ’ ಎನ್ನುತ್ತಾರೆ. ಮರಗಳ ತೋರವನ್ನು ಅನುಸರಿಸಿ ಅದನ್ನು ನಿರ್ಮಾಣ ಮಾಡುತ್ತಾರೆ. ಯಾವುದಾದರೊಂದು ಕಾರ್ಯಕ್ರಮದಲ್ಲಿ ‘ಸಂಭಾವನೆ’ ಕೊಡುವಾಗ ಈ ಮಾತನ್ನು ಹೇಳುವುದಿದೆ. ಬಡವರಿಗೂ, ಶ್ರೀಮಂತರಿಗೂ ಒಂದೇ ರೀತಿಯ ಸಂಭಾವನೆ ಹೇಳಬಾರದು. ಕೆಲಸ ಒಂದೇ ಆದರೂ, ಮಾಡಿಸಿದ ವ್ಯಕ್ತಿಯ ಸ್ಥಿತಿಗನುಸಾರವಾಗಿ ವ್ಯವಹರಿಸಬೇಕೆಂಬ ಒಳಾರ್ಥವಿಲ್ಲಿದೆ.

೨. ದುಂಬು ಕುಡು ತಿನ್ತಿನೆಕ್, ಇತ್ತೆ ಮರಾಯಿ ನಕ್ಕುನು

ಒಮ್ಮೆ ವೈಭವದಲ್ಲಿ ಮೆರೆದು ಹೀನ ಸ್ಥಿತಿಗೆ ಬಂದವರು ತಮ್ಮ ಪಾಡನ್ನು ಹೇಳುವಲ್ಲಿ ಇಂತಹ ಮಾತುಗಳನ್ನು ಹೇಳುವುದಿದೆ. ಕೋಣಗಳನ್ನು ಓಡಿಸಲು, ಗದ್ದೆ ಉಳಲು ಉಪಯೋಗಿಸುವಾಗ ಹುರುಳಿ (ಕುಡು) ಹಾಕುತ್ತಾರೆ. ಅವುಗಳು ಮುದಿಯಾದಾಗ ಹುರುಳಿ ಹಾಕುವವರಿಲ್ಲ. ಆಗ ಹಿಂದಿನ ನೆನಪಿಗೆ ಹುರುಳಿ ಹಾಕುವ ಮರಿಗೆ ಮಾತ್ರ ನೆಕ್ಕಬೇಕಾಗುತ್ತದೆ.

೩. ನಕ್ಕುರು ಪಾಡ್ದ್, ಏರಿ ಒಯಿಪುನು

ಒಬ್ಬನಿಗೆ ಸಣ್ಣ, ಸಣ್ಣ ಸಹಾಯ ಮಾಡಿ, ಅವನಿಂದ ದೊಡ್ಡ ಸಹಾಯವನ್ನು ಹೊಂದೆ ಪಡೆಯುವುದು, ಗಾಳದ ತುದಿಗೆ ನಕ್ಕುರು (ಎರೆಹುಳ) ಸಿಕ್ಕಿಸಿ, ಅದರ ಆಸೆಗೆ ಬಂದು, ದೊಡ್ಡ ಮೀನು ಗಾಳಕ್ಕೆ (ಏರಿ) ಬೀಳುವಂತೆ ಮಾಡುವುದು.

೪. ಕೈಟ್ ಒಯಿಪುನಗ ಬರಂದಿನಾಲ್, ಕಣ್ಣಸನ್ನೆಗ್ ಬರುವೊಲಾ?

ಬಹಳ ಒತ್ತಾಯ ಮಾಡಿದಾಗಲೂ ಒಂದು ಕೆಲಸ ಮಾಡದವ, ಸಣ್ಣ ಆಮಿಸಕ್ಕೆ ಒಳಗಾಗಿ ಆ ಕೆಲಸವನ್ನು ಮಾಡಿಯಾನೇ? ಖಂಡಿತ ಮಾಡಲಾರ. ತನ್ನ ಜೊತೆ ಬರುವಂತೆ ಕೈ ಹಿಡಿದು ಎಳೆದಾಗಲೂ ಬಾರದ ಹುಡುಗಿ, ಕಣ್ಣ ಸನ್ನೆಯಿಂದ ಕರೆದಾಗ ಬರಲಾರಳು ಎಂಬುದನ್ನು ಇಲ್ಲಿ ಹೊಂದಿಸಲಾಗಿದೆ.

೫. ದಪ್ಪರೆ ಪೋನಗ ಪೆತ್ತ, ಬೊರಿಯೆರೆ ಪೋನಗ ಬೋರಿ

ಸ್ಥಿರ ಮನಸ್ಸಿಲ್ಲದ ವ್ಯಕ್ತಿಯನ್ನು ಉಪೇಕ್ಷಿಸುವಲ್ಲಿ ಈ ಆತನ್ನು ಹೇಳುವುದಿದೆ. ಒಂದು ಪಶು ಒಮ್ಮೆ ತಾನು ದನ ನನ್ನ ಉಳಬೇಡಿ ಎಂದರೆ, ಹಾಲು ಕರೆಯಲು ಹೋದಾಗ ತಾನು ದನವಲ್ಲ ಎತ್ತು ಎನ್ನುತ್ತದೆ. ಚಂಚಲ ಮನಸ್ಸಿನವರ ವ್ಯವಹಾರವೂ ಹೀಗಿರುತ್ತದೆ ಎಂದು ಸೂಚ್ಯಾಥವಿಲ್ಲಿದೆ.

೬. ದೋಲ ಸೊರೊಕು ಬೈದಿನಾಯೆ ಅತ್ತ್, ಓಲೆ ಮಾನಿಗ್ ಬೈದಿನಾಯೆ

ಒಂದು ಸಮಾರಂಭಕ್ಕೆ ತಾನು ಹೇಳದೆ ಬಂದವನಲ್ಲ. ಆಮಂತ್ರಣ ಪತ್ರ ಬಂದುದಕ್ಕೆ ಬಂದವನೆಂಬಲ್ಲಿ ಈ ಮಾತು ಸೂಕ್ತವಾಗಿರುತ್ತದೆ. ಒಂದು ಕಡೆಯಲ್ಲಿ ಕಾರ್ಯಕ್ರಮವಿದೆಯೆಂದು ದೋಲ ಸೊರ (ಡೋಲಿನ ಶಬ್ದ, ವಾದ್ಯ ಘೋಷ) ಕೇಳಿಬರಲಿಲ್ಲ. ಸರಿಯಾದ ಹೇಳಿಕೆ (ಓಲೆ) ಯಿದ್ದು ಬಂದವನೆಂಬ ಹೆಗ್ಗಳಿಕೆಯ ಭಾವವಿಲ್ಲಿದೆ.

೭. ಪೆತ್ತದ ಕೆಂರ್ದೆಲ್‌ಡ್ಲ ಉಂಡು, ಕಂಜಿದ ದುಡಿಟ್ಲ ಉಂಡು

ಒಂದು ವಿವಾದದಲ್ಲಿ ಇತ್ತಂಡದವರಲ್ಲೂ ತಪ್ಪು ಇದೆ ಎಂಬ ಭಾವವನ್ನು ಈ ನುಡಿತದಿಂದ ವ್ಯಕ್ತಪಡಿಸುವುದಿದೆ. ಹಾಲು ಕರೆಯುವಾಗ ದನದ ಕೆಚ್ಚಲನ್ನು ತೊಳೆದಂತೆಯೇ ಕಡುವಿನ ದುಡಿ (ಮುಸುಡು)ಯನ್ನು ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಹಾಲು ಹುಳಿಯಾದೀತು. ಇಬ್ಬರೂ ತಮ್ಮನ್ನು ಸರಿಪಡಿಸದೆ ನ್ಯಾಯ ತೀರ್ಮಾನವಾಗಲಾರದು.

೮. ಕೋರಿಡ ಕೇಂಡ್‌ದ್‌ ಸಂಬರ ಕಡೆವುಜಿ

ತಾನು ಇನ್ನೊಬ್ಬರಲ್ಲಿ ಕೇಳಿ ಕೆಲಸ ಮಾಡುವವಲ್ಲ. ಇಚ್ಛಾನುಸಾರ ಮಾಡುವವ ಎಂಬ ಆಶಯವಿಲ್ಲಿದೆ. ಮನೆಗೆ ನೆಂಟರು ಬಂದಾಗ ಕೋಳಿ ಮಾಂಸದ ಪದಾರ್ಥ ಮಾಡುವುದು ತುಳುವರ ಸಂಪ್ರದಾಯ. ಆದರೆ ಕೋಳಿಯೊಡನೆ ಕೇಳಿ ಮತ್ತೆ ಅದರ ಕುತ್ತಿಗೆ ಕಿಚುಕುವುದಿಲ್ಲ.

೯. ತವುಡು ಮುಕ್ಕೆಲೆ ಪೋದು, ಉಮಿ ಮುಕ್ಕೆಲೆ ಬತ್ತೆ

ಒಂದು ಸಂಸ್ಥೆಯ ಲಂಚಕೋರ ಅಧಿಕಾರಿಗಳಿಗೆ ಹೇಳುವ ಮಾತಿದು. ಒಬ್ಬ ತವುಡನ್ನು ಲಂಚವಾಗಿ ತೆಗೆದುಕೊಳ್ಳುವವನಿದ್ದ. ಅದನು ಹೋದ ಬಳಿಕೆ ಒಳ್ಳೆಯವ ಬಂದಾನೆಂಬ ನಿರೀಕ್ಷೆಯಲ್ಲಿದ್ದರೆ ಮೊದಲಿನವನಿಗಿಂತಲೂ ಕೆಟ್ಟವ ಬಂದರೆ, ಆಗ ಈ ಉದಾಹರಣೆ ಕೊಡುವುದಿದೆ.

೧೦. ಮೋನೆಗ್ ಮೂಜಿ ಕಾಸಾಂಡ ಕೈಟ್ ಆಜಿ ಕಾಸಾವು

ಹಣ ಸಂಪಾದನೆಯೇ ಜೀವನದ ಮುಖ್ಯ ಗುರಿ ಎನ್ನುವವರು ಮಾನ, ಮರ್ಯಾದೆ ಕಡೆ ನೋಡುವುದಿಲ್ಲ.

೧೧. ಜೆಂಜಿಲ ಇಜ್ಜಿ, ಜೆಂಜಿಗ್ ಪಾಡ್ನ ಕೈಯಿಲ ಇಜ್ಜಿ

ಒಂದು ಕೆಲಸಕ್ಕೆಂದು ಹೋಗಿ ಆಗದೆ ಬೇರೆ ಕಷ್ಟ ನಷ್ಟಗಳೂ ಒದಗಿದಾಗ ಈ ಆತು ಬರುತ್ತದೆ. ಏಡಿ (ಜೆಂಜಿ) ಹಿಡಿಯಲೆಂದು ಬಿಲಕ್ಕೆ ಕೈ ಹಾಕಿದಾಗ ಅದು ಕೈಗೆ ಕಚ್ಚಿ ಓಡಿದಂತೆ ಎಂಬ ಹೋಲಿಕೆಯಿಲ್ಲಿದೆ.

೧೨. ಪಂಜಿ ತಾಡ್ದಿ ನಾಯಗ್ ಗುರ್ಕೆ ತೂನಕ ಪೋಡಿಗೆ ಆಪುಂಡು

ದೊಡ್ಡ ದೊಡ್ಡ ಕಷ್ಟನಷ್ಟಗಳನ್ನು ಅನುಭವಿಸಿದವನಿಗೆ ಅವುಗಳ ಸ್ವರೂಪವನ್ನು ನೆನೆದಾಗಲೂ ಭಯವಾಗುತ್ತದೆ. ಕಾಡು ಹಂದಿಯ ತಿವಿತವನ್ನು ಅನುಬವಿಸಿದವನು ಹಂದಿಯಂತೆ ಕಾಣುವ ಗುಡಾಣವನ್ನು ಕಂಡಾಗಲೂ ಹೆದರುತ್ತಾನೆ.

೧೩. ಗುರಿಟ್ ಕಲ್ಲುದು, ಉಜ್ಜೆರ್‌ದ ಪೆಟ್ಟ್ ತಪ್ಪಾವಡ

ಭತ್ತ ಕುಟ್ಟುವ ಒರಳಿನಲ್ಲಿ (ಬಾರಗುರಿ) ಕುಳಿತುಕೊಂಡವ, ಸ್ವಲ್ಪ ಹೊತ್ತು ಒನಕೆಯ ಪೆಟ್ಟುಗಳನ್ನು ತಪ್ಪಿಸಿಕೊಂಡರೂ, ಸ್ವಲ್ಪ ಹೊತ್ತಿನೊಳಗೆ ಒನಕೆಯ ಹೊಡೆತಕ್ಕೆ ಸಿಕ್ಕಿಯೇ ಸಿಗುತ್ತಾನೆ. ಹಾಗೆಯೇ ಒಂದು ಕೆಟ್ಟ ವ್ಯವಹಾರದಲ್ಲಿ ಸೇರಿಕೊಂಡವನು, ಹೇಳುವಾಗ ತಾನು ಯಾವುದರಲ್ಲೂ ಇಲ್ಲವೆಂದರೂ, ಒಂದಲ್ಲ ಒಂದು ಸಂದರ್ಭದಲ್ಲಿ ಅವನ ಗುಟ್ಟು ಹೊರಬಿದ್ದು, ಸರ್ವನಾಶವಾಗುವನೆಂಬ ಭಾವನೆಯಿಲ್ಲಿದೆ.

೧೪. ಪರ ಎರುಕು ಬರೆತ ಪಜಿರ್ ದಾಯೆ?

ಕೋಣಗಳಿಗೆ ಹಸಿ ಹುಲ್ಲೆಂದರೆ ಪಂಚಪ್ರಾಣ. ಸಣ್ಣ ಪ್ರಾಯ ಗಟ್ಟಿಮುಟ್ಟದ ಕೋಣಗಳು, ದರೆಯ ಬದಿಯಲ್ಲಿ ಎತ್ತರದಲ್ಲಿದ್ದ ಹುಲ್ಲನ್ನೂ, ಕುತ್ತಿಗೆ ಉದ್ದ ಮಾಡಿ ತಿನ್ನುತ್ತವೆ. ಕಾಲು ಜಾರಿದರೂ ಸಾವರಿಸಿಕೊಳ್ಳುವ ತ್ರಾಣ ಅವುಗಳಿಗಿದೆ. ಪ್ರಾಯ ಸಂದ ಹಳೆ ಕೋಣಗಳು ಹೀಗೆ ಮಾಡಿದರೆ, ಬಿದ್ದು ಸೊಂಟ ಮುರಿಸಿಕೊಳ್ಳಬೇಕಾದೀತು. ಹಾಗೆಯೇ ವೃದ್ಧರು ತಾವು ಎಳೆಯರಾಗಿದ್ದಾಗ ಮಾಡಿದ ಸಾಹಸವನ್ನು ಮುದುಕರಾದಾಗಲೂ ಮಾಡಲು ಹವಣಿಸಬಾರದೆಂದರ್ಥ.

೧೫. ದಾನೆ, ತೆತ್ತಿಡ್ ಕೆಲೆಪುವ

ಮೊಟ್ಟೆಯೊಡೆದು ಬಂದ ಹುಂಜ ಕೋಳಿ, ತಾಯಿಯ ಆರೈಕೆಯಲ್ಲಿ ಬೆಳೆದು, ಸ್ವಲ್ಪ ಸಮಯದ ಬಳಿಕ ರೆಕ್ಕೆ ಬಡದು ತಲೆಯೆತ್ತಿ ಜಂಬದಿಂದ ಧ್ವನಿಕೊಟ್ಟು ಕೂಗುತ್ತವೆ (ಕೆಲೆಪುನು), ಮೊಟ್ಟೆಯ ಒಳಗಿರುವಾಗ ಅಥವಾ ಹೊರಬಂದು ಅವಧಿಗಿಂತ ಮೊದಲು ಈ ಕ್ರಿಯೆ ಅದಕ್ಕೆ ಅಸಾಧ್ಯ. ಹಾಗೆಯೆ ಮಕ್ಕಳು ಅವರು ತಮ್ಮ ಪ್ರಾಯಕ್ಕೆ ಮೀರಿದ ಮಾತು ಆಡಬಾರದು. ಅವರನ್ನು ಮೂದಲಿಸುವಲ್ಲಿ ಹಿರಿಯರು ಈ ನುಡಿಗಟ್ಟನ್ನು ಹೇಳುವುದಿದೆ.

೧೬.ಅಂಬಡೆಗ್ ಅಮೆ ತಪ್ಪರೆ ಇಜ್ಜಿ

ಅಮೆ ಎಂದರೆ ಹೆತ್ತ ಸೂತಕ. ಇದು ಹತ್ತು ದಿನಗಳವರೆಗೆ ಇರುತ್ತದೆ. ಒಂದು ಆಮೆ ಮುಗಿದ ಮರುದಿನ ಇನ್ನೊಂದು ಜನನವಾದರೆ ಮತ್ತೆ ಅಮೆ ಬರುತ್ತದೆ. ಗಿಡಗಳಿಗೆ ಇದನ್ನು ಅನ್ವಯಿಸಿದರೆ, ವರ್ಷಕ್ಕೊಮ್ಮೆ ಫಲ ಬಿಡುವುದನ್ನು ಜನನವೆಂದು ನೆನೆಯಬಹುದು. ಇದು ಒಂದೇ ಸಲ ಆಗುವುದು ಆದರೆ ಅಂಬಡೆ ಮರದಲ್ಲಿ ವರ್ಷದಲ್ಲಿ ಮೂರು ಸಲ ಹೂವಾಗಿ ಫಲ ಬರುತ್ತದೆ. ಅದಕ್ಕೆ ಅಮೆ ತಪ್ಪುವುದಿಲ್ಲವಂತೆ. ಮನೆವಾರ್ತೆಯಲ್ಲಿ ತಲ್ಲೀನರಾಗಿರುವ ಗೃಹಿಣಿಯರಿಗೂ ಮನೆಬಿಟ್ಟು ಯಾವ ಕಾರ್ಯಕ್ರಮಕ್ಕೂ ಹೋಗಲು ಬೇರೆ ಬೇರೆ ಕಾರಣಗಳು ಅಡ್ಡಿ ಬರುತ್ತವೆ. ಅವರು ತಮ್ಮ ಸ್ಥಿತಿಯನ್ನು ಈ ನುಡಿಗೆ ಹೋಲಿಸುತ್ತಾರೆ.

೧೭. ಕುಕ್ಕುಡೆ ಪೋದು, ಪೆಲೋಟು ಬರೋಡ್ಚಿ

ಮಾತುಕತೆಯನ್ನು ಆರಂಭಿಸುವಾಗ, ಒಂದು ವಿಷಯದಲ್ಲಿ ಆರಂಭಿಸಿ ಮುಂದುವರಿದಂತೆ ವಿಷಯಾಂತರ ಮಾಡಿ, ಒಣ ಚರ್ಚೆ ಮಾಡುವವರನ್ನು ಹೀಗೆ ಆಕ್ಷೇಪಿಸುವುದಿದೆ. ಮಾವಿನ ಮರ ಹತ್ತಿ, ಹತ್ತಿರದ ಹಲಸಿನ ಮರಕ್ಕೆ ಹಾರಿ ಇಳಿಯುವವರಂತೆ ಮಾಡುವುದು ಸರಿಯಲ್ಲ.

೧೮. ಕಂಡನ್ಲ, ಪುಣಿನ್ಲ ಒಟ್ಟುಗು ದಂಟದ

ಗದ್ದೆಗಳಿಗೆ ದಂಡೆ ಇದ್ದಂತೆ, ಗುರುಹಿರಿಯರ ಅನುಗ್ರಹ ನಮ್ಮ ವ್ಯವಹಾರಕ್ಕೆ ಶ್ರೀರಕ್ಷೆ ಎಂದು ಭಾವಿಸುತ್ತೇವೆ. ಅವರ ನೈತಿಕ ಬೆಂಬಲ ಅಗತ್ಯ. ಹಿರಿಯರ ಅಥವಾ ಗೌರವಾನ್ವಿತ ವ್ಯಕ್ತಿಗಳ ಮನ ನೋಯಿಸಬಾರದು. ಆದರೆ ಸಣ್ಣ ಪ್ರಾಯದವರು ತಮಗೆ ಯಾರೂ ಇದಿರಿಲ್ಲವೆಂದು ಅಹಂಕಾರದಿಂದ ಹಿರಿಯರನ್ನು ಧಿಕ್ಕರಿಸಿ ಮಾತಾಡಿದಾಗ ಈ ನುಡಿಯ ಮೂಲಕ ಬುದ್ಧಿವಾದ ಹೇಳುತ್ತಾರೆ.

೧೯. ಮುಂಗೈಕ್ ಬೆಲ್ಲ ರೆಂಕಾವುನು ದಾಯೆ

ಒಬ್ಬನಿಗೆ ಒಂದು ವಸ್ತುವನ್ನು ಕೊಡುತ್ತೇವೆ ಎಂದು ಇವತ್ತು, ನಾಳೆ ಎಂದು ಸತಾಯಿಸಿದಾಗಲೂ, ಭೂತಗಳಿಗೆ ಹೇಳಿದ ಹರಕೆಯನ್ನು ಕೊಡಲು ಹಿಂದೆ ಮುಂದೆ ನೋಡಿದಾಗಲೂ ಯಾವ ರೀತಿಯಲ್ಲೂ ಬಾಯಿಗೆ ಎಟಕುವುದಿಲ್ಲ. ಅದು ನೋಡಲಿಕ್ಕೆ ಮಾತ್ರ, ತಿನ್ನಲು ಸಿಗುವುದಿಲ್ಲ.

೨೦. ಎರುತ ಬೇನೆ ಕಕ್ಕೆಗ್ ದಾನೆ ಗೊತ್ತು

ಮೇಲ್ನೊಟಕ್ಕೆ ಸುಖಿಗಳಂತೆ ಕಂಡರೂ, ನಾನಾ ವಿಧಗಳ ಕಷ್ಟಗಳಿಂದ ತತ್ತರಿಸುವವರಿದ್ದಾರೆ. ಇದನ್ನು ಅರ್ಥ ಮಾಡದೆ ಕೆಲವರು ಅವರಿಂದ ಸಹಾಯ ಸಾಲ ಪಡೆಯಲು ಹೋಗಿ ಅವರು ನಾಸ್ತಿ ಎಂದರೂ, ಮತ್ತೆ ಮತ್ತೆ ಒತ್ತಾಯಿಸಿದಾಗ ಈ ಮಾತಿನಿಂತ ತಮ್ಮ ಅಸಹಾಯಕತೆಯನ್ನು ತಿಳಿಸುತ್ತಾರೆ. ಕೋಣನೆ ಮೈಯಲ್ಲಿ ಸಣ್ಣ ಗಾಯವಾದಾಗ ಕಾಗೆ ಅದರ ಬೆನ್ನ ಮೇಲೆ ಕೂತು ಕುಟುಕಿ ಕುಟುಕಿ ಕಿತ್ತು ಮಾಂಸೆ ತೆಗೆಯುತ್ತದೆ. ಕಾಗೆಗೆ ಆಹಾರ ಸಿಕ್ಕಿದರೆ ಸರಿ, ಕೋಣನ ವೇದನೆ ಅದಕ್ಕೆ ತಿಳಿಯುವುದಿಲ್ಲ.

೨೧. ನಟ್ಟುನಾಯೆ ಬೊಲೆಂತರಿ ಬೊಡ್ಚಿ ಪಣ್ತೆಗೆ

ನಾವು ಧರ್ಮಾಥವಾಗಿ, ಒಂದು ವಸ್ತುವನ್ನು ಒಬ್ಬನಿಗೆ ಕೊಡುವಾಗ, ಅದನ್ನು ಸ್ವೀಕರಿಸುವವನು ನನಗೆ ಅದು ಬೇಡ, ಇದು ಬೇಡ, ಹೆಚ್ಚು ಕೊಡಿ ಎಂದು ವಾಚಾಟ ಮಾಡಿದಾಗ, ಈ ನುಡಿಗಟ್ಟಿನಿಂದ ಅವನ ತಪ್ಪನ್ನು ತೋರಿಸಿ ಬಿಡುತ್ತಾರೆ. ಭಿಕ್ಷುಕ ಮನೆ ಬಾಗಿಲಿಗೆ ಬಂದಾಗ ಬೆಳ್ತಿಗೆ ಅಕ್ಕಿ ಕೊಟ್ಟರೆ ಅದನ್ನು ಬೇಡವೆನ್ನುವುದಿಲ್ಲ. ಯಾಕೆಂದರೆ ಸಿಕ್ಕಿದ್ದು ಲಾಭವಲ್ಲವೇ? ಅದೇ ರೀತಿ ಒಂದು ವಸ್ತುವನ್ನು ನೀಡಿದಾಗ ಅದನ್ನು ನಾವು ನಿಂದಿಸಬಾರದು.

೨೨. ಕಾಳಗ್ ಬತ್ತಿನ ಬಡುವೆ ಬೊಳ್ಳಗ್ಲ ಬರ್ಪಿನಿ

ಗದ್ದೆ ಉಳಲು ಕಟ್ಟುವ ಕೋಣಗಳ ಜೊತೆಯಲ್ಲಿ ಒಂದಕ್ಕೆ ಕಾಣ (ಕಪ್ಪು) ಇನ್ನೊಂದಕ್ಕೆ ಬೊಳ್ಳ (ಬಿಳಿ) ಎಂದು ಸಾಮಾನ್ಯ ಹೆಸರುಗಳಿವೆ. ಉಳುವ ರೈತನು ಬೆತ್ತದಿಂದ (ಉರಬಡು) ಕಾಳನಿಗೆ ಹೊಡೆಯುವಾಗ, ಬೊಳ್ಳ ಇದು ನನಗಲ್ಲ ಮತ್ತೊಬ್ಬನಿಗೆಂದು ನಿಶ್ಚಿಂತೆಯಿಂದಿರುತ್ತದೆ. ಆದರೆ ಅದು ಶಾಶ್ವತವಲ್ಲ. ಕೆಲವೇ ನಿಮಿಷಗಳಲ್ಲಿ ರೈತನು ಕಾಳನಿಗೆ ಹೊಡೆದ ಬೆತ್ತದಿಂದಲೇ ಬೊಳ್ಳನಿಗೂ ಬಡಿಯುತ್ತಾನೆ. ಒಂದು ಸಂಸ್ಥೆಯಲ್ಲಿ, ಸ್ವಾರ್ಥ ಪರಾಯಣರಾದ ಮಾಲಿಕರು ಕೆಲಸಗಾರರಲ್ಲಿ ಕೆಲವರನ್ನು ಎತ್ತಿ ಕಟ್ಟಿ, ಜಗಳ ಮಾಡಿಸಿದಾಗ, ಇನ್ನೊಂದು ಗುಂಪಿನವರು ಇಂತಹ ಮಾತುಗಳನ್ನು ಹೇಳುತ್ತಾರೆ.

೨೩. ತರೆಕ್ ಮಯಿತಿನ ನೀರ್, ಕಾರ್‌ಗ್‌ಜಪ್ಪಂದೆ ಕುಲ್ಲಂದ್

ಕುಟುಂಬ ವ್ಯವಹಾರದಲ್ಲಿ ಈ ಮಾತು ಕೇಳಿ ಬರುತ್ತದೆ. ಕಿರಿಯರು, ಹಿರಿಯರ ಮನನೋಯುವ ಕೆಲಸ ಮಾಡಿದಾಗ ಅವರ ಬಾಯಿಯಿಂದ ಇಂತಹ ಮಾತು ಬರುತ್ತದೆ. ಭಾವಾರ್ಥವೇನೆಂದರೆ ಅವರಿಗೆ ದುಃಖ ತಂದವರಿಗೆ, ಅವರಿಗಿಂತ ಕಿರಿಯರು ಮುಂದೆ ಮನಸ್ಸಿಗೆ ಬೇಸರ ತರಿಸುತ್ತಾರೆ.

೨೪. ಗಟ್ಟಿಯಾಂಡ ರೊಟ್ಟಿ, ತೆಲುಪಾಂಡ ತೆಲ್ಲಾವು

ಒಂದು ವಿಷಯದ ಬಗ್ಗೆ ಅಭಿಪ್ರಾಯ ಕೇಳಿದಾಗ ಹಾಗೂ ಆದೀತು, ಹೀಗೂ ಆದೀತು, ಹೇಗಾದರೂ ಅಡ್ಡಿಯಿಲ್ಲವೆನ್ನುವವರಿಗೆ ಈ ಮಾತು ಸಲ್ಲುತ್ತದೆ. ರೊಟ್ಟಿಗೆ ಅಕ್ಕಿಯನ್ನು ಕಡೆಯುವಾಗ ನೀರು ಕಡಿಮೆ ಹಾಕಿ ಮುದ್ದೆ ಮಾಡಿ ಕಡೆಯುವುದು ಕ್ರಮ. ದೋಸೆಗಾದರೆ (ತೆಲ್ಲಾವು) ಸ್ವಲ್ಪ ತೆಳ್ಳಗೆ, ನೀರು ಹಾಕಿ ಕಡೆಯುವುದು ಕ್ರಮ. ಕಡೆಯುವವನಲ್ಲಿ ಕೇಳಿದಾಗ ಅವನು ಸ್ಥಿರ ಬುದ್ಧಿಯವನಲ್ಲದಿದ್ದರೆ, ಗಟ್ಟಿಯಾದರೆ ರೊಟ್ಟಿ ಮಾಡುತ್ತೇನೆ. ತೆಳ್ಳಗಾದರೆ ದೋಸೆ ಮಾಡುತ್ತೇನೆ ಎನ್ನುತ್ತಾರೆ. ಚಂಚಲ ಮನಸ್ಸಿನ ವ್ಯಕ್ತಿಗಳ ವ್ಯವಹಾರಕ್ಕೆ ಈ ನುಡಿತ ಸರಿಯಾಗಿದೆ.

೨೫. ನುಪ್ಪು ಪೋದು ಗಂಜಿ ಆತಂಡ್

ಒಂದು ರೋಗ ಗುಣಪಡಿಸಲಾಗದಷ್ಟು ಮೀರಿದೆ ಎನ್ನುವುದನ್ನು ಹಳ್ಳಿಯ ವೈದ್ಯರು ಈ ಮಾತಿನಿಂದ ಸೂಚಿಸುತ್ತಿದ್ದರು. ಎಂದರೆ ಅಕ್ಕಿಯನ್ನು ಬೇಯಿಸುವಾಗ ಅನ್ನಕ್ಕಾದರೆ ಹದ ಬೇಯುವಾಗಲೇ ಬೆಂಕಿ ಆರಿಸಬೇಕು. ಗಂಜಿಯಾದರೆ ಸ್ವಲ್ಪ ಹೆಚ್ಚು ಬೇಯಿಸಬೇಕು. ಒಮ್ಮೆ ಗಂಜಿಯಾದುದನ್ನು ಮತ್ತೆ ಅನ್ನ ಮಾಡಲಾಗುವುದಿಲ್ಲ ಎಂದಿದರರ್ಥ. ಸರಿಪಡಿಸಲಾಗದ ಇತರ ವ್ಯವಹಾರಗಳಲ್ಲೂ ಈ ಮಾತು ಹೇಳುವುದುಂಟು.

೨೬. ಬುಡು ಕಡ್ತಂಡ್ ರಡ್ಡ್ ಆಂಪುಡು, ನೀರ್ ಕಡ್ತಂಡ್ ರಡ್ಡ್ ಆಪುಜಿ

ಬಂಧು ಕಲಹಗಳನ್ನು ಉಪಶಮನಗೊಳಿಸಲು ಹೇಳುವ ಹಿತನುಡಿಗಳಲ್ಲಿ ಇದೊಂದು. ಮರದ ಕೊರಡನ್ನು ತುಂಡು ಮಾಡಿದರೆ ಮತ್ತೆ ಜೋಡಿಸಲಾಗುವುದಿಲ್ಲ. ಆದರೆ ನೀರಿಗೆ ಕತ್ತಿಯಿಂದ ಕಡಿದರೂ ತಕ್ಷಣ ಒಂದಾಗುತ್ತದೆ. ಹಾಗೆಯೇ ಬಂಧುಗಳಲ್ಲಿ ಜಗಳವಾದರೂ, ಒಂದಲ್ಲ, ಒಂದು ದಿನ ಅವರು ಒಟ್ಟಾಗಿಯೆ ಆಗುತ್ತಾರೆ ಎಂಬ ಆಶಯವಿಲ್ಲಿದೆ.

೨೭. ಒಂಜಿ ಕೈಟ್ ಮಲ್ತಿನೆನ್, ರಡ್ಡ್ ಕೈಟ್ ತಿನರೆ ಉಂಡು

ಒಬ್ಬ ವ್ಯಕ್ತಿ ಅನ್ಯಾಯ ಮಾರ್ಗದಲ್ಲಿ ನಡೆದಾಗ ಅವನಿಗೆ ಸುಲಭವೆನಿಸಬಹುದು. ಅನ್ಯಾಯಕ್ಕೆ ತಕ್ಕ ಶಾಸ್ತಿ ದೇವರಿಂದ ದೊರಕುವುದೆಂಬ ನಂಬಿಕೆ ನಮ್ಮಲ್ಲಿದೆ. ಫಲವನ್ನುಣ್ಣುವಾಗ ಎರಡು ಕೈಗಳಿಂದ ಉಣ್ಣ ಬೇಕಾಗುತ್ತದೆ ಎಂದರೆ ಅವನಿಗೆ ದಾರುಣ ಸ್ಥಿತಿ ಒದಗುವುದೆಂಬ ಭಾವವಿಲ್ಲಿದೆ.

೨೮. ಕುದನೆ ಕೊರ್ದು ಬದನೆ ಗೆತೊಣಡ

ಕುದನೆಯೆಂದರೆ ಬದನೆಯಾಕಾದ ಸಣ್ಣ ಕಾಯಿ, ಒಬ್ಬ ಅವನಷ್ಟಕ್ಕೆ ಇದ್ದಾಗ, ಅವನಿಗೆ ಏನಾದರೂ ತಂಟೆ ಮಾಡಿ, ಅವನಿಂದ ಬೈಗಳನ್ನು ತಿಂದವರಿಗೆ ಇದೊಂದು ನೀತಿ ಮಾತು.

೨೯. ಎಡ್ಡೆಬಾರ್‌ನ್, ಎಡ್ಡೆ ಬೈಯಿಟ್ ಕಟ್ಟ್‌ಗ

ಇತ್ತಂಡದವರಲ್ಲೂ ತಪ್ಪುಗಳಿದ್ದು, ಜಗಳವನ್ನು ಮುಂದುವರಿಸಿದರೆ ಅವರ ಹುಳುಕುಗಳು ಹೊರಬೀಳುವ ಸಂದರ್ಭವಿದ್ದಾಗ ಪರಸ್ಪರ ದೂಷಣೆಗಳನ್ನು ಬಿಟ್ಟು ರಾಜಿಮಾಡಿಕೊಳ್ಳುವ ಎಂಬ ಸೂಚ್ಯಾರ್ಥವಿಲ್ಲಿದೆ.

೩೦. ಕುರಿದಿ ಕುಂಬುಡನ್ ಮುಟ್ಟೆರೆ ಪೋವಡ

ಕುಂಬಳಕಾಯಿ ಕೊಳೆತಾಗ ಅದನ್ನು ಮುಟ್ಟಲು ಹೋದರೆ, ಅದು ತಕ್ಷಣ ಒಡೆದು ಮೈಮೇಲೆ ಬೀಳುತ್ತದೆ. ಹಿಂದೆ ಕುಂಬಳಕಾಯಿಗಳನ್ನು ಹಗ್ಗದಲ್ಲಿ ಕಟ್ಟಿ ನೇತಾಡಿಸುತ್ತಿದ್ದರು. ಅದೇ ರೀತಿ ಯಾವುದಕ್ಕೂ ಹೇಸದ ಅಲ್ಪರೊಡನೆ ಸಹವಾಸ ಮಾಡಿದರೆ, ನಮ್ಮ ಮರ್ಯಾದೆಗೆ ಕೊರತೆ ಬಂದೀತು.

೩೧. ರಾವರೆ ರೆಂಕೆ, ಕೊಡಪರೆ ಕೋಕಾಯಿ ಆಂಡ್, ನನ ಏರ್ಲ ಎಂಚಿನೆಕ್

ಹಕ್ಕಿಗಳು ಮರಿಗಳನ್ನು ಬಹಳ ಮಮತೆಯಿಂದ ಪೋಷಣೆ ಮಾಡುತ್ತವೆ. ಆದರೆ ಮರಿಗಳಿಗೆ ರೆಕ್ಕೆ, ಪುಕ್ಕ ಕೊಕ್ಕುಗಳು ಬಲಿತ ಬಳಿಕ ತಮ್ಮ ಇಚ್ಛಾನುಸಾರ ಕಂಡ ಕಡೆಗೆ ಹಾರಿ ಬಿಡುತ್ತವೆ. ಮಾನವರಲ್ಲಿ ಹಾಗಲ್ಲ, ಮಕ್ಕಳನ್ನು ಸಾಕುವುದು ಹೆತ್ತವರ ಕರ್ತವ್ಯ. ಅದೇ ರೀತಿ ತಂದೆ, ತಾಯಿಗಳನ್ನು ಅವರ ವೃದ್ಧಾಪ್ಯದಲ್ಲಿ ಸಾಕುವುದು ಮಕ್ಕಳ ಹೊಣೆಗಾರಿಕೆ. ಹೀಗೆ ಆಗದೆ ಹೋದಾಗ ಹಿರಿಯರು ಪಶ್ಚಾತ್ತಾಪದಿಂದ ಈ ನುಡಿಗಟ್ಟಿನಿಂದ ದುಃಖವನ್ನು ವ್ಯಕ್ತಪಡಿಸುತ್ತಾರೆ.

೩೨. ಒಂಜಿ ಕಿದೆತ ಯೆರ್ಲು ತಾಡೊಂದಲ, ನುಗೊಕು ಒಟ್ಟುಗೆ ಪುಗೆಲ್ ಕೊರೊಡತ್ತ

ಹಟ್ಟಿಯಲ್ಲಿ ಕೋಣಗಳು ಹುಲ್ಲು ತಿನ್ನುವಾಗ ತನಗೆ ತನಗೆಂದು ದೂಡಿಕೊಳ್ಳುತ್ತವೆ. ಮತ್ತೆ ಕೆಲವು ಜೋಡಿಗಳಿಗೆ ಹಾಯ್ದುಕೊಳ್ಳುವ ಅಭ್ಯಾಸವೂ ಇಲ್ಲವೆಂದಲ್ಲ. ಏನಿದ್ದರೂ ಗದ್ದೆ ಉಳುವ ಕೆಲಸದಲ್ಲಿ ಅವುಗಳೆರಡೂ ಒಂದಾಗಬೇಕಷ್ಟೇ? ಅದೇ ಕ್ರಮದಲಲ್‌ಇ ಒಂದು ಮನೆಯವರು, ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವವರು, ನೆರೆಕರೆಯವರು ಜಗಳ ಮಾಡಿಕೊಂಡರೂ ಒಂದಾಗುವ ಸಂದರ್ಭ ಬಂದೇ ಬರುತ್ತದೆ.

೩೩. ಕೂಲಿ ಎದ್‌ರ್‌ದಾಯನ ಜುವ ಪೋಯಿನ ಗೊತ್ತಾವಂದ್

ತುಟಿ ಮೀರಿದ ಹಲ್ಲಿನವರ ಮುಖ ಯಾವಾಗಲೂ ನಗು ಮುಖದಂತಿರುವುದು ಸಹಜ. ಅವರು ಸತ್ತು ಹೆಣವಾದಾಗಲೂ ಅವರ ಹಲ್ಲುಗಳು ಹಾಗೆಯೇ ಇರುತ್ತವೆ. ಹೊಸದಾಗಿ ಅವರನ್ನು ಕಾಣಲು ಬಂದವರು ಅವರು ನಗುತ್ತಾ ಇದ್ದಾರೆಂದು ಭಾವಿಸಿದರೆ ತಪ್ಪಲ್ಲವಷ್ಟೇ? ಕೆಲವರು ತಮ್ಮ ದೌಲತ್ತನ್ನು ಉಳಿಸಿಕೊಳ್ಳಲು ಮನೆಯ ಸಮಾರಂಭಗಳನ್ನು ವೈಭವದಿಂದ ಮಾಡಿಸುತ್ತಾರೆ. ಹೋದವರೆಲ್ಲ ಅವರನ್ನು ಶ್ರೀಮಂತರೆಂದು ಎಣಿಸಿದರೂ ಅವರ ನಿಜ ಬಯಲಾಗುವುದು ಮುಂದಿನ ದಿನಗಳಲ್ಲಿ ಸಾಲಗಾರರು ಬಂದು ಪೀಡಿಸಿದಾಗ ಮಾತ್ರ.

೩೪. ಸತ್ಯಮಿತ್ಯ ತೂವರೆ ಮಿತ್ತ್ ಒರಿ ಉಲ್ಲೆರತ್ತ

ನಾವು ಯಾರೂ ಕಾಣದಂತೆ, ಒಂದು ಕೆಲಸ ಮಾಡುತ್ತೇವೆ. ಆದರೆ ಅದು ಮಾನವರ ಕಣ್ಣಿಗೆ ಕಾಣಿಸದಿದ್ದರೂ, ಸರ್ವಾಂತರ್ಯಾಮಿಯಾದ ದೇವರಿಗೆ ತಿಳಿಯದುಳಿಯುವುದಿಲ್ಲ. ದೇವರು ಇರುವ ಸ್ಥಳ ಮೇಲೆ ಎಂದು ತುಳುವರ ಭಾವನೆ. ಇಲ್ಲಿ ಸೂರ್ಯದೇವರಿಗೂ ಈ ಮಾತನ್ನು ಅನ್ವಯಿಸಬಹುದು. ಪ್ರತಿಯೊಂದು ಜಗಳದಲ್ಲಿಯೂ ನಿಗೂಢ ಕಾರಣ ಬೇರೆಯೇ ಆಗಿರುತ್ತದೆ. ಒಬ್ಬನು ಮಾಡುವ ಅನ್ಯಾಯದಲ್ಲಿಯೂ ಯಾವುದೋ ಒಂದು ತತ್ತ್ವವಿರಬಹುದು. ಅದನ್ನು ಎಲ್ಲರೂ ಒಪ್ಪಬೇಕೆಂದಿಲ್ಲ. ನಿಜವಾದ ನ್ಯಾಯಾನ್ಯಾಯದ ವಿಮರ್ಶೆ ಪರಮಾತ್ಮನಲ್ಲಿದೆ.

೩೫. ಪೆರ್ಗುಡನ್ ಉಲಾಯಿ ದೀದ್ ಮಾಟೆಗ್ ಮಣ್ಣ್ ಮೆತ್ತರೆ ಬಲ್ಲಿ

ಇತ್ತಂಡದವರಿಗೆ ಜಗಳ ಯಾಕೆ ಆರಂಭವಾಯಿತು? ಅವರ ಬೇಡಿಕೆಗಳೇನು? ಇಷ್ಟರವರೆಗೆ ಅದು ಜಗಳಕ್ಕೆ ಪರಿಹಾರವೇನು? ಇವುಗಳನ್ನೆಲ್ಲ ಚೆನ್ನಾಗಿ ವಿಮರ್ಶೆ ಮಾಡಿ ತೀರ್ಮಾನ ಕೊಡುವುದು ತೀರ್ಪುಗಾರನ ಕರ್ತವ್ಯ. ಅವರ ಅಸಮಾಧಾನ ಬಿಲದೊಳಗಿರುವ ಹೆಗ್ಗಣಗಳಂತಿವೆ. ಹೆಗ್ಗಣ ಒಳಗಿರುವಾಗ, ಬಿಲದ ಬಾಯಿಗೆ ಮಣ್ಣು ಮುಚ್ಚಿದರೂ, ನಾವು ಹೋದ ತಕ್ಷಣ ತೂತು ಮಾಡಿ ಹೊರಗೆ ಬರುತ್ತದೆ. ಮನಸ್ಸಿನ ಕೋಪವನ್ನು ತಣಿಸಿ ಅಸಮಾಧಾನವನ್ನು ಕಳೆದು ಅವರು ಒಂದಾಗುವಂತೆ ಮಾಡುವುದು ಬುದ್ಧಿವಂತ ತೀರ್ಪುಗಾರನ ಲಕ್ಷಣ. ಹಾಗೆ ಮಾಡದಿದ್ದರೆ ಪರಿಣಾಮ ಈ ನುಡಿಮುತ್ತಿನಂತೆಯೇ ಆದೀತು.

೩೬. ಅಪ್ಪ ತಿಂದಂಡ ಯಾವು, ಗುರಿ ಗೆಣ್ಪುನು ಬೊಡ್ಚಿ

೩೭. ಅಲೆಕ್ ಬೈದಿನಾಯಗ್, ಎರ್ಮೆದ ಕಿರಯ ದಾಯೆಗ್?

ಈ ನೀತಿಯುಕ್ತ ನುಡಿಗಳು ಅಧಿಕ ಪ್ರಸಂಗಿಗಳಿಗೆ ಕಿವಿಮಾತಾಉದೆ. ನಮ್ಮ ಕೆಲಸ ಎಷ್ಟಿದೆ, ಅಷ್ಟನ್ನು ಮಾತ್ರ ಮಾಡಬೇಕು. ಒಂದು ಮನೆಯಲ್ಲಿ ಕೊಟ್ಟ ಅಪ್ಪವನ್ನು ತಿನ್ನುವುದು ಮಾತ್ರ ನಮ್ಮ ಕೆಲಸ. ಅದರ ಬದಲಿಗೆ ನಿಮ್ಮ ಮನೆಯ ಅಪ್ಪದ ಕಲ್ಲಿನಲ್ಲಿ ಗುಳಿ ಎಷ್ಟಿದೆ? ಕೇಳುವುದು ಅನಗತ್ಯ. ನಮಗೆ ಮಜ್ಜಿಗೆ ಸಿಕ್ಕಿದರೆ ಸಾಕು. ಎಮ್ಮೆಯನ್ನು ಎಷ್ಟು ಕ್ರಯಕ್ಕೆ ಕೊಡುತ್ತೀರಿ ಎಂದು ಕೇಳುವುದು ಅನಗತ್ಯ ಅಧಿಕ ಪ್ರಸಂಗವಲ್ಲವೇ?

೩೮. ಉಂತುದಿನ ಅಂಬಡೆದ ಗೆಲ್ಲ್, ಪತ್‌ದಿನ ನುರ್ಗೆದ ಗೆಲ್ಲ್

ಇದರಲ್ಲಿ ಅಸಹಾಯಕತೆಯ ಭಾವವಿದೆ ಸಾಮಾನ್ಯವಾಗಿ ಸ್ತ್ರೀಯರು ಹೇಳಿಕೊಳ್ಳುವ ಮಾತಾಗಿದೆ. ತಾಯಿ ಮನೆಯಲ್ಲೂ ಸರಿಯಾದ ಆಸರೆಯಿಲ್ಲದೆ, ಪತಿಗೃಹದಲ್ಲೂ ಸುಖವಿಲ್ಲದಾಗ, ತನ್ನ ಸ್ಥಿತಿಯನ್ನು ಈ ಮಾತುಗಳಿಂದ ಹೇಳಿಕೊಳ್ಳುವುದಿದೆ. ಇದರಲ್ಲಿ ಹೇಳಿದ ವೃಕ್ಷಗಳೆರಡೂ ಅತ್ಯಂತ ಮೆದುವಾದ ಬಲಹೀನ ಮರಗಳಾಗಿವೆ.

೩೯. ದುಂಬು ಬೈದಿನ ಕೆಬಿಡ್ದ್ ಬೊಕ್ಕ ಬೈದಿನ ಕೊಂಬು ಗಟ್ಸ್

ಒಂದು ತಾಯಿಯ ಮಕ್ಕಳಲ್ಲಿ ಮೊದಲು ಹುಟ್ಟಿದವ (ಕಡೀರ ಮಗ) ತುಸು ಮೃದು ಸ್ವಭಾವದವನಾಗಿರುತ್ತಾನೆ. ಮತ್ತೆ ಹುಟ್ಟಿದವರು ತುಸು ಬಿಗುವಾಗಿರುವುದು ಸಾಮಾನ್ಯ ಕ್ರಮ. ಇದನ್ನು ಕಿವಿ ಮತ್ತು ಕೋಡಿಗೆ ಹೋಲಿಸಿರುತ್ತಾರೆ. ಪ್ರಾಣಿಗಳು ಹುಟ್ಟುವಾಗಲೇ ಕಿವಿಯಿರುತ್ತದೆ. ಆದರೆ ನಂತರ ಮೂಡಿ ಬರುವ ಕೊಂಬುಗಳಿಂದ ಅಪಾಯ ಹೆಚ್ಚು.

೪೦. ದುಂಬುಡ್ದೆ ಪೋಪಿನ ಎರ್ಮೆನ್ ತೂದು, ಪಿರಾವುದ ಎರ್ಮೆ ತೆಲ್ತಿನಂಚ

ನಮ್ಮ ದೌರ್ಬಲ್ಯ ನಮಗೆ ತಿಳಿಯುವುದಿಲ್ಲ. ತಿಳಿದರೂ ಒಪ್ಪಿಕೊಳ್ಳುವವರಿಲ್ಲ. ಆದರೆ ಇನ್ನೊಬ್ಬರ ನೋವುಗಳು ನಮಗೆ ಬೇಗ ಕಾಣಿಸಿಕೊಳ್ಳುತ್ತವೆ. ಇದನ್ನು ಈ ನುಡಿಗಟ್ಟಿನಲ್ಲಿ ಮಾರ್ಮಿಕವಾಗಿ ಸೂಚಿಸಲಾಗಿದೆ. ಒಂದರ ಹಿಂದೆ, ಇನ್ನೊಂದು ಹೀಗೆ ಸಾಲಾಗಿ ಮುನ್ನಡೆಯುವ ಎಮ್ಮೆಗಳು ತಮ್ಮ ಮುಂದಿನ ಎಮ್ಮೆ ಬತ್ತಲೆಯಾಗಿದೆ ಎಂದು ಹಾಸ್ಯ ಮಾಡುತ್ತವೆ. ಆದರೆ ಅದರ ಹಿಂಭಾಗವೂ ಬತ್ತಲೆಯಾಗಿದೆ ಎಂಬ ಜ್ಞಾನ ಅದಕ್ಕಿಲ್ಲ. ನಮ್ಮ ಬೆನ್ನು ನಮಗೆ ಕಾಣುವುದಿಲ್ಲ ಎಂಬ ಭಾವನೆಯಿಲ್ಲಿದೆ. ಮನುಷ್ಯರ ಸ್ವಭಾವವೂ ಹಾಗೆಯೇ.

೪೧. ನಲಿಪೆರೆ ಗೊತ್ತಾಂತಿನಾಯೆ, ರಂಗಸ್ಥಳ ಒರ್ದಂದ್ ಪಣ್ತೆಗೆ

ತನ್ನ ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸುವವರಿಗೆ ಈ ಮಾತು ಸಲ್ಲುತ್ತದೆ. ಒಬ್ಬನಿಂದ ಆಗಿ ಹೋದ ತಪ್ಪನ್ನು ತೋರಿಸಿಕೊಟ್ಟಾಗ ಅದಕ್ಕೊಂದು ಕಾರಣ ಹೇಳುವವರೆ ಬಹುಮಂದಿ. ಕುಣಿತದಲ್ಲಿ ತಪ್ಪಾಯಿತು ಯಾಕೆಂದಾಗ ರಂಗಸ್ಥಳ ಸರಿಯಿಲ್ಲ ಎಂದರೆ ಮತ್ತೆ ಮಾತಿಲ್ಲವಲ್ಲ.

೪೨. ಮರ ಬೂರುಂಡು, ಪಕ್ಕಿ ಪಾರಂಡ್

ಒಂದು ಸಂಸ್ಥೆ ಅಥವಾ ಮನೆಯಲ್ಲಿ ಒಬ್ಬ ವ್ಯಕ್ತಿಯನ್ನು ಹೊಂದಿಕೊಂಡು ಅನೇಕ ಪರಿವಾರದವರಿರುತ್ತಾರೆ. ಆದರೆ ಆ ವ್ಯಕ್ತಿ ಸತ್ತ ತಕ್ಷಣ ಅಲ್ಲಿಯ ಸಂಪರ್ಕ ಕಡಿದು ಹೋಗುತ್ತದೆ. ಹೊಸದಾಗಿ ಬರುವವರ ಮರ್ಜಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಹಿಂದೆ ಅಳಿಯ ಸಂತಾನ ಪದ್ಧತಿಯಲ್ಲಿ ಗಂಡ ಇದ್ದಷ್ಟು ಕಾಲ ಗಂಡನ ಮನೆಯಲ್ಲಿ ಮೆರೆದು, ಅವನ ಸಾವಿನ ಮರುಕ್ಷಣದಲ್ಲಿ ಆ ಮನೆಯ ಸಂಪರ್ಕ ಕಡಿಕೊಳ್ಳುವಾಗ ಈ ಮಾತನ್ನು ಹೇಳುವುದಿತ್ತು.

೪೩. ಪರವೂರ್ದ ಸುಬಗಡ್ದ್, ಊರ್ದ ಕಲುವೆ ಆವೊಲಿ

ನಮ್ಮ ಊರಿನ ಅಂತೆಯೇ ನೆರೆಕೆರೆಯವರಲ್ಲಿ ಜಗಳ ಒಳ್ಳೆಯದಲ್ಲ ವೆಂಬ ಹಿತನುಡಿಯಿಲ್ಲಿದೆ. ಅನಿರೀಕ್ಷಿತ, ಕಷ್ಟ ಬಂದಾಗ ಸಹಾಯಕ್ಕೆ ಬರುವವರು ನೆರೆಕರೆಯವರು. ಆದ ಕಾರಣ ಅವರಲ್ಲಿ ಕೆಲವು ದೋಷಗಳಿದ್ದರೂ ತುಸು ಸಹಿಸಬೇಕಾಗುತ್ತದೆ.

೪೪. ಸಾರ ಮಣೋಲಿ ಮೂರ್ನೆಡ್ದ್ ಒಂಜಿ ಕುಂಬುಡ ಮೂರ್ನ ಎಡ್ಡೆ

ಒಂದು ದೊಡ್ಡ ಕೆಲಸ ಮಾಡುವಾಗ ಸಣ್ಣ ಸಣ್ಣ ಅನೇಕ ವಸ್ತುಗಳನ್ನು ಸೇರಿಸುವುದರಿಂದ ಕಾಲ ವ್ಯಯವಾಗುತ್ತದೆ. ಸಾರ್ವಜನಿಕ ಕೆಲಸದಲ್ಲಿ ಒಬ್ಬ ಉದಾರಿ ಬಂದು ವೆಚ್ಚವನ್ನು ತಾನೊಬ್ಬನೇ ಭರಿಸುತ್ತೇನೆ ಎಂದಾಗ ಈ ನುಡಿತ ಅನ್ವಯವಾಗುತ್ತದೆ. ನೂರಾರು ಮಂದಿಯಲ್ಲಿ ದೇಣಿಗೆ ಸಂಗ್ರಹಿಸುವುದಕ್ಕಿಂತ ಇದು ಒಳ್ಳೆಯದಲ್ಲವೆ? ಸಾವಿರಾರು ತೊಂಡೆಗಳ ಬದಲಿಗೆ ಒಂದು ದೊಡ್ಡ ಕುಂಬಳಕಾಯಿ ಪದಾರ್ಥ ಮಾಡುವುದು ಸೂಕ್ತವಲ್ಲವೇ?

ಇಂತಹ ಅನೇಕ ನುಡಿಗಟ್ಟಗಳನ್ನು ಸಂಗ್ರಹಿಸಿ, ಓದಿ ಅರ್ಥ ಮಾಡಿಕೊಂಡಾಗ, ಅವುಗಳ ಸರಸತೆ ಸಂತೋಷವನ್ನೀಯುದೆ.

ಇಂತಹ ಸಾವಿರಾರು ಅರ್ಥಪೂರ್ಣವಾದ ನುಡಿಗಟ್ಟುಗಳು ತುಳು ಭಾಷೆಯಲ್ಲಿವೆ. ಇವುಗಳನ್ನು ಸಂದಭಾನುಸಾರವಾಗಿ, ಭಾಷಣಗಳಲ್ಲೂ, ಲೇಖನಗಳಲ್ಲೂ, ದೈನಂದಿನ ಮಾತುಕತೆಗಳಲ್ಲೂ ಸೇರಿಸಿಕೊಂಡಾಗ ಸಂದರ್ಭೋಷಿತವಾಗಿ ಮಾತುಕತೆಗಳಲ್ಲಿ ಸೇರಿಸಿ, ಉಳಿಸಿಕೊಳ್ಳುವುದು ತುಳುನಾಡಿನ ಜನರ ಆದ್ಯ ಕರ್ತವ್ಯವೆಂದು ಭಾವಿಸೋಣ.

ನಮ್ಮ ದೇಶದ ಎಲ್ಲಾ ಭಾಷೆಗಳಿಗೂ, ಅವುಗಳದ್ದೆ ಆದ ವೈಶಿಷ್ಟ್ಯಗಳಿವೆ. ನಮ್ಮ ತಾಯಿನುಡಿಯಾದ ತುಳುವಿನಲ್ಲೂ ಅದರ ಸ್ವಂತಿಕೆಯನ್ನು ಮೆರೆಸಬಲ್ಲ ಅನೇಕ ನೀತಿ ಬೋಧಕ ನುಡಿಗಟ್ಟುಗಳಿರುವುದು ಗಮನಾರ್ಹವಗಿದೆ. ಇತ್ತೀಚೆಗೆ ಬೇರೆ ಬೇರೆ ಕಾರಣಗಳಿಂದ ಹಳೆಗಾಲದ ತುಳುವಿನ ಸತ್ವ ಕುಂದುತ್ತಾ ಬಂದಿದೆ. ಆದರೂ ಕೋಲದ ಕೂಟದಲ್ಲಿ, ಮದುವೆ ಚಪ್ಪರದಲ್ಲಿ, ಪಂಚಾಯಿತಿಕೆಯ ಕಳದಲ್ಲಿ, ಸಾವಿನ ಮನೆಯಲ್ಲಿ ಸಾಂತ್ವನ ಹೇಳುವಲ್ಲಿ, ಈಗಲೂ ಅರ್ಥಗರ್ಭಿತ ನೀತಿ ಮಾತುಗಳು ಪ್ರಚಲಿತವಾಗಿವೆ.

ಅವಕಾಶ ಸಿಕ್ಕಿದಾಗಲೆಲ್ಲ ಇಂತಹ ಅರ್ಥಗರ್ಭಿತ ನುಡಿಗಟ್ಟುಗಳನ್ನು ವ್ಯವಹಾರದಲ್ಲಿ ಬಳಸಿಕೊಂಡು, ಇವುಗಳ ಅಸ್ತಿತ್ವವನ್ನುಳಿಸುವುದು ತುಳುವರ ಕರ್ತವ್ಯವಾಗಿದೆ.

ಪ್ರಪಂಚದ ಎಲ್ಲಾ ಭಾಷೆಗಳಲ್ಲಿಯೂ ಅರ್ಥಗರ್ಭಿತ ಹಾಗೂ ಕಾಲೋಚಿತವಾಗಿ ಹೇಳಬಹುದಾದ ಅನೇಕ ನುಡಿಗಟ್ಟುಗಳಿವೆ. ತುಳುಭಾಷೆಯಲ್ಲೂ ಅಸಂಖ್ಯಾತ ನುಡಿಗಟ್ಟುಗಳಿದ್ದು, ಇವುಗಳಲ್ಲಿ ಕೆಲವು ಹಿರಿಯರ ಸ್ವಾನುಭವಗಳಿಂದ ಮೂಡಿ ಬಂದವುಗಳಾದರೆ, ಮತ್ತೆ ಕೆಲವು ಘಟನೆಗಳನ್ನು ಆದರಿಸಿ ರಚನೆಗೊಂಡಿವೆ. ಇವುಗಳಲ್ಲು ಅಡಕವಾಗಿರುವ ಅರ್ಥಗಳು ಮಹತ್ವಪೂರ್ಣವಾಗಿವೆ. ‘ಕಿರಿದರೊಳ್ ಪಿರಿದರ್ಥ’ ಎಂಬಂತೆ ಈ ನುಡಿಗಟ್ಟುಗಳಿರುತ್ತವೆ. ಇಂತಹ ನುಡಿಗಟ್ಟುಗಳನ್ನು ವ್ಯವಹಾರದ ಆಡು ಮಾಡುಗಳಲ್ಲೂ, ನಾಟಕ, ಬಯಲಾಟಗಳಲ್ಲೂ ಸಾಂದರ್ಭಿಕವಾಗಿ ಉಪಯೋಗಿಸದಿದ್ದರೆ, ಕ್ರಮೇಣ ಇವುಗಳು ಜನಮನದಿಂದ ಮರೆಯಾಗಬಹುದು. ಭಾಷಾ ಸೌಂದರ್ಯ ಹೆಚ್ಚಿಸುವಲ್ಲಿ ಇವುಗಳ ಅಸ್ತಿತ್ವ ಅಗತ್ಯವಾಗಿದೆ.