ಜೀವನ ಅನುಭವದ ರಸಪಾಕವಾಗಿ ಈ ಗಾದೆಗಳು ಹುಟ್ಟಿವೆ. ಮುಂದಿನವರಿಗೆ ಇವು ಮಾರ್ಗ ತೋರುವ ದಾರಿದೀಪಗಳಾಗಿವೆ. ಯಾವ ಸಂದರ್ಭದಲ್ಲಿ ಹೇಗಿರಬೇಕು? ಯಾವುದು ಏನು? ಎಂದು ನೇರವಾಗಿ ತಿಳಿಸುತ್ತದೆ.

೧. ‘ಅಂಗಯ್ ತೂಯೆರೆ ಕನ್ನೆಟ್ಟಿ ಬೋಡಾ?’
ಅಂಗೈ ನೋಡಲು ಕನ್ನಡಿ ಬೇಕೋ?

ಅಂಗೈ ನೋಡಲು ಕನ್ನಡಿ ಬೇಕಾಗಿಲ್ಲ. ಕೈಯನ್ನು ನಮ್ಮ ಎದುರಿಗೆ ಹಿಡಿದುಕೊಂಡರೆ, ಕೈಯಲ್ಲಿರುವುದು ಎಲ್ಲಾ ಸರಿಯಾಗಿ ಕಾಣಿಸುತ್ತದೆ. ನಮ್ಮ ವಿಚಾರ ತಿಳಿಯುವುದಕ್ಕೆ ನಾವು ಇನ್ನೊಬ್ಬರಲ್ಲಿ ಕೇಳುವ ಅಗತ್ಯವಿರುವುದಿಲ್ಲ. ನಮ್ಮದು ನಮಗೆ ಗೊತ್ತಿರುವಷ್ಟು ಇನ್ನೊಬ್ಬರಿಗೆ ಗೊತ್ತಿರುವುದಿಲ್ಲ. ಗೊತ್ತಾಗುವುದು ಸಾಧ್ಯವಿಲ್ಲ. ಒಬ್ಬನ ಗುಣಯೋಗ್ಯತೆಗಳನ್ನು ನೋಡುವುದಕ್ಕೆ ಅವನ ಜಾತಕ ನೋಡಬೇಕಾಗಿಲ್ಲ. ಅವನ ಕೆಲಸಗಳನ್ನು ನೋಡಿದರೆ, ಜೀವನದ ಕ್ರಮಗಳನ್ನು ನೋಡಿದರೆ ತಿಳಿಯುತ್ತದೆ. ಅದನ್ನೇ ಪ್ರತ್ಯಕ್ಷಕ್ಕೆ ಪ್ರಮಾಣ ಯಾಕೆ ಎಂದು ಹಿಂದಿನವರು ಹೇಳಿರುವುದು.

೨. ‘ಅಂಚನೆ ಜೆರ್ಪುನೆಗ್ ಅರ್ದೊರೊಟ್ಟಿ’
ಹಾಗೇ ಮಲಗುವುದಕ್ಕೆ ಅರ್ಧರೊಟ್ಟಿ

ಬರಿ ಹೊಟ್ಟೆಯಲ್ಲಿ ಏನೂ ಇಲ್ಲದೆ ಮಲಗುವ ಪರಿಸ್ಥಿತಿಯಲ್ಲಿ ಅರ್ಧರೊಟ್ಟಿಯಾದರೂ ಸಿಕ್ಕಿದರೆ ಸ್ವಲ್ಪ ಮಟ್ಟಿಗೆ ಹಸಿವು ಹಿಂಗುತ್ತದೆ. ಅರ್ಧರೊಟ್ಟಿಯಲ್ಲಿ ಹೊಟ್ಟೆ ತುಂಬಲಾರದು ನಿಜ. ಆದರೆ ಉಪವಾಸ ಬೀಳುವುದಕ್ಕಿಂತ ವಾಸಿ. ಒಬ್ಬರಿಂದ ದೊಡ್ಡ ನೆರವನ್ನು ನಿರೀಕ್ಷಿಸಿರುವಾಗ ಅದು ಸಿಗದೆ, ಸಣ್ಣ ಸಹಾಯ ಸಿಕ್ಕಿದರೆ ಈ ಗಾದೆಯಂತಾಗುತ್ತದೆ. ಯೋಗ್ಯ ಸಂಬಂಧ ಸಿಗದಿದ್ದರೆ, ಸಿಕ್ಕಿದ್ದರಲ್ಲಿಯೇ ತೃಪ್ತಿ ಪಡುವುದು. ಓದು ಶಿಕ್ಷಣ ಮುಗಿಸಿ ನೌಕರಿಗಾಗಿ ಅರ್ಜಿಗಳನ್ನು ಹಾಕಿ ಹಾಕಿ ವರ್ಷಗಟ್ಟಲೆ ಕುಳಿತವನಿಗೆ ಒಂದು ಸಣ್ಣ ನೌಕರಿ ಸಿಕ್ಕಿದರೆ ಈ ಗಾದೆಯಂತೆ ಎಂದು ಹೇಳಬಹುದು. ಮನೆಯೇ ಇಲ್ಲದ ಬಡ ಜನರಿಗೆ ಐದು ಸೆಂಟ್ಸಿನ ಮನೆಗಳು ಸಿಕ್ಕಿದ ಹಾಗೆ.

೩. ‘ಅಂಡೆದ ಬಾಯಿ ಕಟ್ಟೊಲಿ ದೊಂಡೆದ ಬಾಯಿ ಕಟ್ಟೊಲಿಯೋ?
ಅಂಡೆಯ ಬಾಯಿ ಕಟ್ಟಬಹುದು ಮನುಷ್ಯರ ಬಾಯಿ ಕಟ್ಟಬಹುದೇ?

ಅಂಡೆಯ ದೊಡ್ಡ ಬಾಯಿಯನ್ನು ಮುಚ್ಚಿ ಬಿಡಬಹುದು. ಮನುಷ್ಯನ ಬಾಯಿಯನ್ನು ಮುಚ್ಚಿಸುವುದು ಕಷ್ಟ. ಅವನ ಗಂಟಲಿಂದ ಸದ್ದು ಹೊರಡದ ಹಾಗೆ ಕಟ್ಟು ಹಾಕುವಂತಿಲ್ಲ. ಅದಲ್ಲ ಇಲ್ಲಿನ ಮುಖ್ಯ ಅಭಿಪ್ರಾಯ. ನಾವು ಇನ್ನೊಬ್ಬರ ಕುರಿತು ಕೆಟ್ಟ ಮಾತು ಆಡಲಿಕ್ಕಿಲ್ಲವೆಂದು ಕುಳಿತುಕೊಳ್ಳಬಹುದು. ಆದರೆ ಇತರರು ಮಾತಾಡದೆ ಇರುವ ಹಾಗೆ ಮಾಡುವುದು ನಮ್ಮ ಮಿತಿಯೊಳಗಿಲ್ಲ. ಹೇಳುವವರು ಹೇಳುತ್ತಾರೆ. ಅದಕ್ಕೆ ನಾವು ಏನೂ ಮಾಡುವಂತಿಲ್ಲ ಎಂಬ ಸಮಾಧಾನಕ್ಕೆ ಈ ಗಾದೆಯನ್ನು ಉಪಯೋಗಿಸುತ್ತಾರೆ.

೪. ‘ಅಜ್ಜೆರೆಗ್ ತೆಮ್ಮ ಲಪ್ಯರ ಪಂಡ್ ಕೊರೊಡೊ?’
ಅಜ್ಜನಿಗೆ ಕೆಮ್ಮಲು ಹೇಳಿ ಕೊಡಬೇಕೆ?

ಯಾರು ಯಾವ ಕೆಲಸದಲ್ಲಿ ತಜ್ಞರೊ ಅವರಿಗೆ ಆ ಕೆಲಸವನ್ನು ಹೇಳಿಕೊಡುವ ಅಗತ್ಯವಿಲ್ಲ. ಅಜ್ಜ ಕೆಮ್ಮುತ್ತಿರುತ್ತಾನೆ. ಅವನಿಗದು ರೂಢಿಯಾಗಿದೆ. ಅಜ್ಜನಿಗೆ ಮೊಮ್ಮಕ್ಕಳು ಕೆಮ್ಮುವುದು ಹೀಗೆ ಅಂತ ಹೇಳಿ ಕೊಡಲು ಹೋದರೆ ಅದು ಅಧಿಕ ಪ್ರಸಂಗ. ಆಯಾಯ ವೃತ್ತಿಯ ಕೆಲಸ ಅವರವರಿಗೆ ರೂಢಿಯಿಂದ ಬಂದಿರುತ್ತದೆ. ಸರ್ಕಾರದಿಂದ ನೇಮಿತರಾದ ಕೆಲವು ತಜ್ಞರು ಆ ವೃತ್ತಿಯ ಬಗ್ಗೆ ಪುಸ್ತಕದಲ್ಲಿ ಸಾಕಷ್ಟು ತಿಳಿದಿರುತ್ತಾರೆ. ಆದರೆ ನಿಜ ಕೆಲಸಕ್ಕೆ ಇಳಿಯುವಾಗ ಆಯಾಯ ಕ್ಷೇತ್ರದಲ್ಲಿ ದುಡಿದು ಅನುಭವಿಗಳಾದವರಿಂದ ಕಲಿತುಕೊಳ್ಳಬೇಕಾದುದು ತುಂಬಾ ಇದೆ. ಅದರ ಬದಲಿಗೆ ಪುಸ್ತಕದ ಬದನೆಕಾಯಿಯನ್ನು ಅವರ ಮುಂದೆ ಬಿಚ್ಚಿದಾಗ ಈ ಗಾದೆಯ ಉತ್ತರ ಸಿಗುತ್ತದೆ.

೫. ‘ಅಡಿತೂದ್ ಕಾರ್ ದೇರ್ಪು’
ಅಡಿ ನೋಡಿ ಕಾಲಿಡು

ಅನುಕೂಲವನ್ನು ನೋಡಿಕೊಂಡು ಒಂದು ಕೆಲಸಕ್ಕೆ ತೊಡಗಬೇಕು. ನಮ್ಮ ಸ್ಥಿತಿಗತಿಗೆ ಮಿಕ್ಕಿದ ಯೋಜನೆ ಹಾಕಿಕೊಂಡು ತೊಡಗಿದರೆ ಮುಂದೆ ಕಷ್ಟಕ್ಕೆ ಈಡಾಗುತ್ತೇವೆ. ಅದೇ ರೀತಿಯಲ್ಲಿ ನಡೆಯುವಾಗ ದಾರಿ ನೋಡಿ, ಕಾಲಿನ ಬುಡದಲ್ಲಿ ಹೊಂಡ, ಕಲ್ಲು ಮುಳ್ಳು ಇದೆಯೇ ಎಂದು ನೋಡಿ ತಿಳಿದು ನಡೆಯಬೇಕು. ಹಾಗೆ ಮಾಡುವುದರಿಂದ ಅಪಾಯದಿಂದ ಪಾರಾಗಬಹುದು. ಕಷ್ಟವನ್ನು ತಪ್ಪಿಸಿಕೊಳ್ಳಬಹುದು. ‘ಅಡಿತತ್ತಂಡ ಅನೆಲಾ ಮಗುರುಂಡು’ ಅಡಿತಪ್ಪಿದರೆ ಆನೆಯೂ ಬೀಳುತ್ತದೆ.

೬. ‘ಅನ್ನಯೊದವು ಅಂಚನೆ ಪೋಂಡ್’
ಅನ್ಯಾಯದ್ದು ಹಾಗೇ ಹೋಯಿತು

ಅನ್ಯಾಯವಾಗಿ ಸಂಪಾದನೆ ಮಾಡಿದ ಸಂಪತ್ತು ಅನ್ಯಾಯವಾಗಿಯೇ ಖರ್ಚಾಗಿ ಹೋಗುತ್ತದೆ. ‘ಅಂಚನೆ’ ಅಂದರೆ ಯಾವ ರೀತಿಯಲ್ಲಿ ಗಳಿಸಿದ್ದಾರೋ ಹಾಗೇ ಹೋಯಿತು ಎಂದು. ಇದು ಅನುಭವ ಸಿದ್ಧವಾದ ಮಾತು. ಅನ್ಯಾಯದ ದಾರಿಯಲ್ಲಿ ಸಂಪತ್ತುಗಳಿಸಿ ಮೆರೆದ ಮಂದಿ ಇನ್ನೊಂದು ಕಾಲದಲ್ಲಿ ಅದನ್ನೆಲ್ಲಾ ಕಳೆದುಕೊಂಡು ಭಿಕಾರಿಗಳಾಗಿದ್ದಾರೆ. ಜನರಿಂದ ಛಿ, ಥೂ ಅಂತ ಉಗುಳಿಸಿಕೊಂಡಿದ್ದಾರೆ. ಹತ್ತು ಮಂದಿ ಬಡವರ ತಲೆಯೊಡೆದು ಶ್ರೀಮಂತನಾದವನು ಆ ಸಂಪತ್ತಿನಿಂದ ಸುಖ ಪಡೆಯುವುದಿಲ್ಲ. ಅವನನ್ನು ತಿಂದು ಹಾಕುವ ಇನ್ನೊಬ್ಬ ಇದ್ದೇ ಇರುತ್ತಾನೆ. ಅನ್ಯಾಯದ ಸಂಪಾದನೆಯ, ವಂಚನೆಯ ಪ್ರಜ್ಞೆ ಪ್ರೇತವಾಗಿ ಕಾಡುತ್ತಿರುತ್ತದೆ. ಬಾಳಿನ ನೆಮ್ಮದಿ ಕದಡುತ್ತದೆ. ಅಶಾಂತಿಯಿಂದಾಗಿ ಜೀವನ ಹದಗೆಡುತ್ತದೆ.

೭. ‘ಅಪ್ಪೆಡ್ತ್ ಮಲ್ಲ ಬಂದು ಇದ್ದಿ, ಉಪ್ಪಡ್ತು ಮಲ್ಲ ರಿತಿ ಇದ್ದಿ’
ತಾಯಿಗಿಂತ ದೊಡ್ಡ ಬಂಧುವಿಲ್ಲ, ಉಪ್ಪಿಗಿಂತ ದೊಡ್ಡ ರುಚಿ ಇಲ್ಲ.

ಜಗತ್ತಿನ ಜನಾಂಗಗಳೆಲ್ಲಾ ಮೂಲದಲ್ಲಿ ಮಾತೃ ಪ್ರಧಾನವಾಗಿದ್ದವು. ಕ್ರಮೇಣ ಗಂಡಸು ಆ ಸ್ಥಾನವನ್ನು ಆಕ್ರಮಿಸಿಕೊಂಡು ಎಂಬುದಾಗಿ ಮಾನವ ಶಾಸ್ತ್ರಕಾರರು ಹೇಳುತ್ತಾರೆ. ಅದೇನಿದ್ದರೂ ಗಂಡು, ತಾಯಿಯ ಮಹತ್ವದ ಸ್ಥಾನವನ್ನು ತಲುಪಿಲ್ಲ. ನಮಗೆ ಇರುವ ಅನೇಕ ಬಂಧುಗಳಲ್ಲಿ ತಾಯಿಯ ತೂಕ ಒಂದಾದರೆ ಉಳಿದವರದ್ದು ಇನ್ನೊಂದು, ರುಚಿಗಳನ್ನು ತಿಳಿದುಕೊಂಡ ಮೂಲ ಮಾನವನೇ, ಉಪ್ಪು ರುಚಿಗಳಲ್ಲೇ ಅತಿಶ್ರೇಷ್ಠ ಎಂಬುದಾಗಿ ನಿರ್ಣಯಿಸಿದ್ದಾನೆ. ತಾಯಿ ಶ್ರೇಷ್ಠ ಬಂಧು. ಅವುಗಳ ಮತ್ತೆಯೇ ಉಳಿದವುಗಳೆಂಬ ಸಾರ್ವಕಾಲಿಕ ನಿರ್ಣಯವಾಗಿದೆ.

೮. ‘ಅರೆತ್ತ್ ಮೊರೆತ್ತ್ ಕೊರ್ಯರೆ ಮಾಂತೆರ್ಲ ಉಳ್ಳೆರ್, ಪರ್ಯರೆ ಏರ್ಲಾ ಇದ್ಯೆರ್’
ಅರೆದು ಮಿಶ್ರ ಮಾರಿ ಕೊಡಲು ಎಲ್ಲರು ಇದ್ದಾರೆ ಕುಡಿಯಲು ಯಾರು ಇಲ್ಲ

ಈ ಮಾತಿನಲ್ಲಿ ವಾಚ್ಯ ಅರ್ಥ ಒಂದಾದರೆ, ಸೂಚ್ಯ ಅರ್ಥಗಳು ಹಲವು. ಕಹಿ ಮದ್ದು ಅರೆದು ಎಲ್ಲರೂ ಕೊಡುತ್ತಾರೆ. ಆದರೆ ಅದನ್ನು ಕುಡಿಯುವುದಕ್ಕೆ ಯಾರೂ ಇರುವುದಿಲ್ಲ. ಕುಡಿಯುವವನಿಗೆ ಮಾತ್ರ ಅದರ ಕಹಿ ಅನುಭವ ಆಗುವುದು. ಕೆಟ್ಟ ಸಲಹೆ ಕೊಡುವವರ ಕುರಿತು ಈ ಮಾತು ಹೇಳುತ್ತಾರೆ. ಎಲ್ಲರೂ ಹಾಗೆ ಮಾಡು, ಹೀಗೆ ಮಾಡು ಎಂದು ತಿಳಿಸುತ್ತಾರೆ. ಅವರು ಹೇಳಿದರೆಂದು ನಾವು ಮುಂದಾಲೋಚನೆಯಿಲ್ಲದೆ ಮಾಡಿದರೆ, ಮುಂದೆ ಬರುವ ಕಷ್ಟಕ್ಕೆ ನಾವೆ ಹೊಣೆಗಾರರಾಗುತ್ತೇವೆ. ಹೇಳಿಕೊಟ್ಟವರು ತಪ್ಪಿಸಿಕೊಳ್ಳುತ್ತಾರೆ. ಅವರು ಹೇಳಿಕೊಟ್ಟದರಿಂದ ಒಳಿತಾದರೆ ಅದಕ್ಕೆ ಅವರು ಪಾಲುದಾರರು. ಆದರೆ ಆಗುವ ಕೆಡುಕಿಗೆ ನಾವೇ ಹೊಣೆ ಎಂದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಾರೆ. ಬೇರೆಯವರು ಹೇಳಿದರೆಂದು ನಾವು ಮಾಡುವುದಲ್ಲ. ಯುಕ್ತಾಯುಕ್ತ ವಿವೇಚನೆಯಿಂದ ಕಾರ್ಯಪ್ರವೃತ್ತರಾಗಬೇಕು. ಬೋಧನೆಯ ಹಿನ್ನೆಲೆಯಲ್ಲಿರುವ ಉದ್ದೇಶ ಏನಿದೆ ಎಂಬುದನ್ನು ಒರೆಹಚ್ಚಿ ನೋಡುವ ವಿವೇಕ ನಮಗಿರಬೇಕು. ಹಾಗೆ ಮಾಡಿದರೆ ಅರೆದುಕೊಟ್ಟರೆಂದು, ಕೊಟ್ಟ ಮದ್ದನ್ನೆಲ್ಲಾ ಕುಡಿದರೆ ರೋಗ ವಾಸಿಯಾಗುವ ಬದಲಿಗೆ, ಇನ್ನಷ್ಟು ರೋಗಕ್ಕೆ ಗುರಿಯಾಗುತ್ತೇವೆ. ಕಷ್ಟದಿಂದ ಪಾರಾಗಲು ಯೋಗ್ಯ ಸಲಹೆಯನ್ನು ಮಾತ್ರ ಸ್ವೀಕರಿಸಬೇಕು.

೯. ‘ಅಣ್ ಬಾಲೆಲ್ ಇದ್ಯಂದ್‌ನ ಅಪ್ಪೆ, ಅಂಬಡೆದ ಮರಕ್ಕ್ ಅನ್ನದಲ್‌ಗೆ’
ಗಂಡು ಮಕ್ಕಳಿಲ್ಲದ ತಾಯಿ ಅಂಬಟೆಯ ಮರವನ್ನು ನೋಡಿದಳಂತೆ.

ಗಂಡು ಮಕ್ಕಳಿರುವ ತಾಯಂದಿರಿಗೆ ಮಕ್ಕಳು ಮರಹತ್ತಿ ಅಂಬಟೆಯನ್ನು ಕೊಯ್ದು ಕೊಡುತ್ತಿದ್ದರು. ಗಂಡು ಮಕ್ಕಳಿಲ್ಲ ತಾಯಿಗೆ ಯಾರೂ ಕೊಯ್ದು ಕೊಡುವವರಿಲ್ಲದೆ ಅವರು ಮರವನ್ನು ನೋಡಿಕೊಂಡು ನಿಂತುಕೊಂಡಳಷ್ಟೆ. ಅಂಬಟೆಯ ಮರಕ್ಕೆ ಹತ್ತಿ ಅಂಬಟೆಯನ್ನು ಕೀಳುವುದಕ್ಕೆ ಗಂಡುಮಕ್ಕಳಿಗಷ್ಟೇ ಸಾಧ್ಯ. ಹೆಣ್ಣು ಮಕ್ಕಳಿಂದ ಸಾಧ್ಯವಿಲ್ಲ. ಗಂಡಿನ ಬಲವಿಲ್ಲದ ಹೆಣ್ಣು ಸಂತಾನ ನೆರವಿಗಾಗಿ ಬೇರೆಯವರನ್ನು ಕಾಯಬೇಕು. ಅವರು ಪರಾಧೀನರಾಗಿ ಬಾಳಬೇಕಾಗುತ್ತದೆ ಎಂಬುದು ಈ ಗಾದೆಯ ಅಭಿಪ್ರಾಯ.

೧೦. ‘ಆನೆ ಸಿರ್ಕಂಡ ಕಡ್ಚಿಲ್ ನೂರಂದ್’
ಆನೆ ಕ್ಷೀಣಿಸಿದರೆ ಕರುವಿನ ಕೊಟ್ಟಿಗೆಗೆ ಹೋಗದು

ಆನೆ ದೊಡ್ಡ ಪ್ರಾಣಿ, ಅದರ ಎಲುಬಿನ ಹಂದರವೇ ದೊಡ್ಡದು. ದನದ ಕರುಗಳನ್ನು ‘ಕಡ್ಚಿಲ್’ನಲ್ಲಿ ಕಟ್ಟುವುದು. ಆ ಕಡ್ಚಿಲ್‌ಗೆ ಕಂಚಿಲ್ (ಕಂಜಿ+ಇಲ್ಲ್‌ಗೆ) ಆನೆ ಬಡಕಲಾದರೂ ಹೋಗುವುದು ಸಾಧ್ಯವಿಲ್ಲ. ಅದರ ಗಾತ್ರ ಕಡ್ಚಿಲ್‌ಗೆ ಅಳವಡುವಂತಿಲ್ಲ. ದೊಡ್ಡ ವ್ಯಕ್ತಿಗಳು ಎಷ್ಟು ಸೋತರೂ ಅವರು ತಮ್ಮ ದೊಡ್ಡತನವನ್ನು ಬಿಟ್ಟು ಸಣ್ಣವರಾಗುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕೆ ಅವರ ಪ್ರಕೃತಿ ಒಡಂಬಡುವುದಿಲ್ಲ. ಹುಟ್ಟಿನಿಂದ ದೊಡ್ಡ ವ್ಯಕ್ತಿ, ಶ್ರೀಮಂತ, ಬಡತನದಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾನೆ.

೧೧. ‘ಅರ್‌ಲ ಎಡ್ದೆ ಇಂಬೆರ್‌ಲ ಎಡ್ಡೆ, ಉಪ್ಪು ಪಾಡ್‌ತ್ ತೆಳಿಮಯಿಪ್ಪಿರೆ ಇದ್ದೆನ ದೆತ್ತಿ ಎಡ್ಡೆ’
ಅವರೂ ಒಳ್ಳೆಯದು, ಇವರೂ ಒಳ್ಳೆಯರು, ಉಪ್ಪು ಹಾಕಿ ತೆಳಿ ಎರೆಯಲು ಭಟ್ಟರ ಹೆಂಡತಿ ಒಳ್ಳೆಯದು

ಇದು ಮೇರ ಪರಿಶಿಷ್ಟನೊಬ್ಬನ ಮಾತು. ಎಲ್ಲರೂ ಅವನ ಮಟ್ಟಿಗೆ ಒಳ್ಳೆಯವರೆ. ಅದರಲ್ಲಿಯೂ ‘ಇದ್ದೆನ ದೆತ್ತಿ’ ಎಲ್ಲರಿಗಿಂತಲೂ ಒಳ್ಳೆಯವರು. ‘ಇದ್ದೆ’ ಅಂತ ಬ್ರಾಹ್ಮಣರನ್ನು ‘ಮೇರರು’ ಸಂಬೋಧಿಸುವುದು. ‘ವಿದ್ಯೆ’ಯಿಂದ ‘ಇದ್ದೆ’ ಬಂದಿರಬಹುದೆಂಬುದು ನಮ್ಮ ಊಹನೆ. ‘ದೆತ್ತಿ’ ಅಂದರೆ ಹೆಂಡತಿ. ಭಟ್ಟರ ಪತ್ನಿ ಉಪ್ಪು ಹಾಕಿ ಗಂಜಿ ತೆಳಿ ಕೊಡುತ್ತಾರೆ. ಅದರಿಂದಾಗಿ ಅವರು ತುಂಬಾ ಒಳ್ಳೆಯವರು. ಇತರರು ತೆಳಿಕೊಡುವಾಗ ಉಪ್ಪುಕೂಡ ಹಾಕುವುದಿಲ್ಲ. ಹರಿಜನನೊಬ್ಬನ ದೀನತೆಗೆ ಈ ಗಾದೆಯು ಕೈಗನ್ನಡಿ ಮಾತ್ರವಲ್ಲ, ಅವನ ಕೃತಜ್ಞತಾಗುಣಕ್ಕೆ ಸಾಕ್ಷಿಯಾಗಿದೆ. ‘ಬಾಣರೆ ದೆತ್ತಿ ಎಡ್ಡೆ’ ಎಂದೂ ಈ ಗಾದೆ ಬೇರೆಡೆ ಇದೆ. ‘ಬಾಣರ್’ ಎಂದು ಬಂಟ, ಬಲ್ಲಾಲ, ಜೈನ ಮತ್ತು ಬ್ರಾಹ್ಮಣರನ್ನು ಮೊಗೇರ ಹರಿಜನರು ಸಂಬೋಧಿಸುತ್ತಾರೆ.

೧೨. ‘ಇಡಿ ಮುರ್‌ಗ್ ನಾಯಗ್ ಚಳಿದಾನೆ’?
ಪೂರ್ತಿ ಮುಳುಗಿದವನಿಗೆ ಚಳಿಯೇನು?

ತಣ್ಣೀರಿನಲ್ಲಿ ಸ್ನಾನ ಮಾಡಲು ಇಳಿದಾಗ ಪ್ರಾರಂಭದಲ್ಲಿ ಸ್ವಲ್ಪ ಚಳಿಯಾಗುತ್ತದೆ. ಪೂರ್ಣ ಮುಳುಗಿದ ಮೇಲೆ ಮತ್ತೆ ಚಳಿ ಗೊತ್ತಾಗುವುದಿಲ್ಲ. ಒಂದು ಕೆಲಸಕ್ಕೆ ತೊಡಗಿದ ಪ್ರಾರಂಭದಲ್ಲಿ ಏನಾಗುತ್ತದೊ, ಎಂಬ ಭಯವಿರುತ್ತದೆ. ಕೆಲಸದಲ್ಲಿ ಸ್ವಲ್ಪ ಮುಂದುವರಿದ ಮೇಲೆ ಭಯವು ಹೋಗಿ ಧೈರ್ಯವು ಮೂಡುತ್ತದೆ. ಇದು ಉತ್ತಮ ಕಾರ್ಯಗಳನ್ನು ಮಾಡುವಾಗ ಉಂಟಾಗುವ ಧೈರ್ಯಕ್ಕೆ ಮಾತ್ರ ಹೇಳುವುದಲ್ಲ. ಎಲ್ಲಾ ರೀತಿಯ ಕೆಲಸಗಳಿಗೂ ಈ ಧೈರ್ಯಬೇಕು. ಸೋಲು ಅನುಭವಿಸಿ ಸಂಪೂರ್ಣ ನಾಶವಾದ ಮೇಲೆಯೂ ಇನ್ನು ಭಯವಿಲ್ಲ ಎನ್ನುತ್ತಾನೆ. ಮುಳುಗುವುದು ಸರ್ವನಾಶದ ಸಂಕೇತ.

೧೩. ‘ಉಡಲ್‌ಡ್ ಪುಟ್ಟೊಡು ಬುದ್ಧಿ, ಬೆನ್ನಿಟ್ ಪುಟ್ಟೊಡು ಒರಕ್ಕೊ’
ಒಡಲಲ್ಲಿ ಹುಟ್ಟಬೇಕು ಬುದ್ಧಿ, ಭೂಮಿಯಲ್ಲಿ ಹುಟ್ಟಬೇಕು ಒರತೆ

ಮನುಷ್ಯನ ಒಡಲ ಬುದ್ಧಿಯು, ಭೂಮಿಯ ಒಡಲಲ್ಲಿ ಹುಟ್ಟಿದ ನೀರಿನ ಒರತೆಯಂತೆ ಬತ್ತರ ತೊರೆ. ಬುದ್ಧಿಯು ಹುಟ್ಟಿನಿಂದ ಬರುವುದು ಅದು ಜ್ಞಾನದ ಮೂಲರೂಪ. ಅದಿಲ್ಲದೆ ಯಾವ ಕ್ಷೇತ್ರದಲ್ಲಿಯೂ ಬೌದ್ಧಿಕ ಬೆಳವಣಿಗೆಯಾಗದು. ಪ್ರಜ್ಞೆ, ವಿಚಾರಶೀಲತೆ, ಚುರುಕುತನ, ಗ್ರಹಣಶಕ್ತಿ ಇವು ಬುದ್ಧಿಪೂರ್ವಕವಾದ ಜ್ಞಾನದ ಶಾಖೆಗಳು. ಅವುಗಳ ಬೆಳೆಗೆ, ಬೆಳವಣಿಗೆಗೆ ಪ್ರತಿಭೆ ಅಗತ್ಯ. ಕೃಷಿಯಾಗಬೇಕಿದ್ದರೆ, ಭೂಮಿಯಲ್ಲಿ ಒರತೆಯ ನೀರು ಬೇಕು.

೧೪. ‘ಉಣ್ಯರ ಇದ್ಯಂತಿ ಉಪ್ಪಡ್ ದಾಯೆ’?
ಊಟಕ್ಕಿಲ್ಲದ ಉಪ್ಪಿನಕಾಯಿ ಯಾತಕ್ಕೆ

ಒಂದು ವಸ್ತುವಿನ ತಯಾರಿಗೆ ಒಂದು ನಿರ್ದಿಷ್ಟ ಉದ್ದೇಶವಿದೆ. ಆ ವಸ್ತು ಆ ಕೆಲಸಕ್ಕೆ ಬೇಕು. ಒಬ್ಬ ವ್ಯಕ್ತಿಯಿಂದಲೂ ಒಂದು ಕಾರ್ಯವಾಗಲಿಕ್ಕಿದೆ. ಆ ಕಾರ್ಯಕ್ಕೆ ಆ ವ್ಯಕ್ತಿ ಬೇಕು. ಅಂತೆಯೇ ಉಪ್ಪಿನಕಾಯಿಯನ್ನು ತಯಾರಿಸಿದ ಉದ್ದೇಶ ಊಟಕ್ಕೆ ಉಪಯೋಗಿಸಿಕೊಳ್ಳಲು ಮಾರಾಟದ ಉಪ್ಪಿನಕಾಯಿ ಯಾರದೂ, ಅದನ್ನು ಖರೀದಿಸಿದವನು ಊಟಕ್ಕಾಗಿಯೇ ಕೊಂಡು ಹೋಗುತ್ತಾನೆ. ಅಂದರೆ ಉಪ್ಪಿನ ಕಾಯಿ ಊಟಕ್ಕೆ ಅಗತ್ಯ- ಅದರ ಉಪಯೋಗ ಊಟದಲ್ಲಿ.

ಒಬ್ಬ ಬಂಧು ಅಥವಾ ಸ್ನೇಹಿತ ನಮ್ಮ ಕಷ್ಟ ಕಾಲದಲ್ಲಿ ನಮಗೆ ನೆರವಾಗುತ್ತಾನೆ. ಹಾಗೆ ನೆರವಾಗದಿದ್ದಲ್ಲಿ ಅವರು ಊಟಕ್ಕಿಲ್ಲದ ಉಪ್ಪಿನಕಾಯಿಯ ಹಾಗೆ. ಒಂದು ಶುಭಕಾರ್ಯಕ್ಕೆ ಅಥವಾ ಅಗತ್ಯದ ಕೆಲಸಕ್ಕೆ ಒಬ್ಬ ಶ್ರೀಮಂತರಿಂದ ಸ್ವಲ್ಪ ಸಾಲ ಒಬ್ಬ ಕೇಳಿದ್ದಾನೆಂದು ಇಟ್ಟುಕೊಳ್ಳಿ. ಅಥವಾ ಒಂದು ಬೆಂಕಿನಿಂದ ಹಣ ಪಡೆಯಲು ಅರ್ಜಿ ಸಲ್ಲಿಸಿದ್ದಾನೆಂದು ಇಟ್ಟುಕೊಳ್ಳಿ. ಅದು ಸಕಾಲಕ್ಕೆ ಸಿಗದಿದ್ದರೆ ಊಟಕ್ಕಿಲ್ಲದ ಉಪ್ಪಿನಕಾಯಿ. ನಿಯತ್ತಿನಿಂದ ದುಡಿದ ನೌಕರನೊಬ್ಬನಿಗೆ, ನಿವೃತ್ತನಾದ ಮೇಲೆ ಸಿಗಬೇಕಾದರೆ ನಿವೃತ್ತಿ ವೇತನ ಸಕಾಲಕ್ಕೆ ಸಿಗದಿದ್ದರೂ ಅದನ್ನೂ ಹೀಗೆ ಹೇಳಬಹುದು. ಊಟದಲ್ಲಿ ಉಪ್ಪಿನಕಾಯಿ ರುಚಿ ಹೆಚ್ಚಿಸುವಂತೆ ಸಕಾಲಿಕ ನೆರವು ಜೀವನವನ್ನು ರುಚಿರಕವಾಗಿ ಮಾಡುತ್ತದೆ.

೧೫. ‘ಉಣ್ಯರ ತೆರಿನಾಯಗ್ ರೋಗೊ ಇದ್ದಿ, ಪಾತೆರೊ ತೆರಿನಾಯಗ್ ಜಗಳೊ ಇದ್ದಿ’
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.

ಊಟ ಮಾಡಲು ಎಲ್ಲರಿಗೂ ಗೊತ್ತು. ಬಾಯಿ ಬರುವವರೆಲ್ಲ ಮಾತನಾಡುತ್ತಾರೆ. ಯಾವ ಆಹಾರ ಎಷ್ಟೆಷ್ಟು ತೆಗೆದುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳನ್ನು ತಿಳಿದು ಊಟ ಮಾಡುವವರು ಅಪರೂಪ. ಆದುದರಿಂದಲೇ ರೋಗವಿಲ್ಲದ ಮಂದಿಯೂ ಕಮ್ಮಿ. ಕ್ರಮವರಿತು ಊಟ ಮಾಡಲು ತಿಳಿದವನಿಗೆ ರೋಗ ಬರಲಿಕ್ಕಿಲ್ಲ ಎಂಬುದು ಖಂಡಿತ. ಹಾಗೆಯೇ ಸಮಯ, ಸಂದರ್ಭದ ಔಚಿತ್ಯವರಿತು ಮಾತಾಡಬಲ್ಲ ವ್ಯಕ್ತಿ ಇದ್ದರೆ ಜಗಳಕ್ಕೆ ಎಡೆಯಿಲ್ಲ.

೧೬. ‘ಉಣೊಡು ತಿನೊಡಂಟ ಎರ್ಮೆ ಕಟ್ಟೊಡು, ಕಂಜಿ ಕೈಕಂಜಿ ಬೋದಂಟ ಪೆತ್ತ ಕಟ್ಟೊಡು’
ಉಂಡು ತಿನ್ನಬೇಕಾದರೆ ಎಮ್ಮೆ ಕಟ್ಟಬೇಕು, ಕರುದನ ಬೇಕಾದರೆ ದನ ಕಟ್ಟಬೇಕು.

ಎಮ್ಮೆ ಕಟ್ಟಿದರೆ ಹಾಲು ಮೊಸರು ಧಾರಾಳ ಸಿಗುತ್ತದೆ. ದನಕರುಗಳು ಹೆಚ್ಚು ಬೇಕಿದ್ದರೆ, ದನವನ್ನು ಸಾಕಿದರೆ ಒಳ್ಳೆಯದು. ಎಮ್ಮೆ ಜಾತಿಗಿಂತ ದನದ ಸಂತಾನ ಬೇಗ ಬೆಳೆಯುತ್ತದೆ. ದನ ಕರು ಹಾಕಬೇಕಿದ್ದರೆ ಒಂಭತ್ತು ತಿಂಗಳು ಸಾಕು. ಎಮ್ಮೆ ಕರು ಹಾಕುವುದು ಹನ್ನೆರಡು ತಿಂಗಳಿಗೆ. ಎಮ್ಮೆ ಒಮ್ಮೆ ಕರು ಹಾಕಿದರೆ, ಹೆಚ್ಚು ಕಾಲ ಹಾಲು ಕರೆಯುವುದಕ್ಕೆ ಆಗುತ್ತದೆ. ದನ ಅಷ್ಟು ದೀರ್ಘ ಕಾಲ ಹಾಲು ಕೊಡುವುದಿಲ್ಲ. ಆದರೆ ದನ ಬೇಗ ಬೇಗ ಕರು ಹಾಕುವುದರಿಂದ ಕರುಗಳ ಸಂಖ್ಯೆ ಹೆಚ್ಚುತ್ತದೆ.

೧೭. ‘ಉಪ್ಪು ತಿಂದ್‌ನಾಯೆ ನೀರ್ ಪರ್ವೆ’
ಉಪ್ಪು ತಿಂದವ ನೀರು ಕುಡಿದಾನು

ಉಪ್ಪಿಗೆ ನೀರು ಕುಡಿಸುವ ಗುಣವಿದೆ. ಆದ ಕಾರಣವೇ ಜಾನುವಾರುಗಳಿಗೆ ಕಲಕಚ್ಚು ನೀರು ಕುಡಿಸಲು ಅದಕ್ಕೆ ಉಪ್ಪು ಹಾಕುತ್ತಾರೆ. ಉಪ್ಪು ಶಕ್ತಿದಾಯಕವೂ ಹೌದು. ಆದರೆ ಇಲ್ಲಿ ಉಪ್ಪು ತಿನ್ನುವುದೆಂದರೆ ತಪ್ಪು ಕೆಲಸ ಮಾಡುವುದು. ತಪ್ಪು ಕೆಲಸ ಮಾಡಿದವನು ಶಿಕ್ಷೆ ಅನುಭವಿಸಲೇಬೇಕು. ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗುತ್ತದೆ ಎಂಬುದು ಗಾದೆಯ ಒಟ್ಟು ಅಭಿಪ್ರಾಯ.

೧೮. ‘ಉಪಾಸೊ ಆವೊಲಿ, ಉಪದ್ರೊ ಅತ್ತ್’
ಉಪವಾಸ ಆಗಬಹುದು, ಉಪದ್ರ ಸಲ್ಲ

ಉಪವಾಸವಿದ್ದು ಹೊಟ್ಟೆ ಹಸಿವುದನ್ನಾದರೂ ಸಹಿಸಬಹುದು. ಆದರೆ ನೆರೆಕರೆಯವರು ಕೊಡುವ ಕೀಟಲೆಯನ್ನು ಸಹಿಸಿಕೊಂಡು ಬದುಕುವುದು ಕಷ್ಟ ಎಂದಿದ್ದಾರೆ. ಉಪವಾಸ ಇರುವಾಗ ಆಗುವ ಹಿಂಸೆಗಿಂತಲೂ ನೆರೆಯವರ, ಇಲ್ಲವೇ ಸಹೋದ್ಯೋಗಿಗಳ ಅಥವಾ ಹೊರಗಿನವರು ಕೊಡುವ ಉಪದ್ರ ಹೆಚ್ಚು ಹಿಂಸೆಯನ್ನುಂಟು ಮಾಡುತ್ತದೆ. ಸಹಿವಿನಿಂದಾಗುವ ದೈಹಿಕ ಕಷ್ಟಕ್ಕಿಂತಲೂ, ಈ ಮಾನಸಿಕ ಉಪದ್ರ ಹೆಚ್ಚು ತೀವ್ರವಾಗಿ ನೋಯಿಸುತ್ತದೆ. ಅನ್ಯರಿಗೆ ಉಪದ್ರ ಕೊಡುವುದೂ ಕೆಟ್ಟದು. ಇದರಿಂದ ಉಪದ್ರ ಕೊಟ್ಟವನಿಗೂ ನೆಮ್ಮದಿಯಿರುವುದಿಲ್ಲ.

೧೯. ‘ಎಲ್ಲೆಂದ್‌ಪನ್ಪುನಾಯನ ಇಲ್ಲ್ ಹಾಳ್’
ನಾಳೆ ಎನ್ನುವವನ ಮನೆ ಹಾಳು

ನಾವು ಮಾಡುವ ಎಲ್ಲಾ ಕಾರ್ಯಗಳನ್ನು ಇವತ್ತಿನದನ್ನು ಇವತ್ತೆ ಮಾಡಿ ಮುಗಿಸಬೇಕು. ನಾಳೆಗೆ ಎಂದು ಇಟ್ಟುಕೊಳ್ಳುವುದು ಸರಿಯಲ್ಲ. ಒಬ್ಬ ಸಹಾಯ ಯಾಚಿಸಿ ಬಂದಾಗ ನಾಳೆ ಬಾ ನಾಡಿದ್ದು ಬಾ ಎಂದು ಅಲೆದಾಡಿಸುವುದು ಸರಿಯಲ್ಲ. ಕೊಡುವುದಿದ್ದರೆ ಆಗಲೇ ಕೊಟ್ಟು ಕಳಿಸುವುದು ಒಳ್ಳೆಯದು. ಇವತ್ತು ಮಾಡಬೇಕಾದ ಕೃಷಿ ಕೆಲಸವಿರಲಿ, ಅದನ್ನು ಈ ದಿನವೇ ಮಾಡುವುದು ಪ್ರಗತಿಗೆ ಕಾರಣವಾಗುತ್ತದೆ. ಈ ದಿನ ಮಾಡಬೇಕಾದ ಕೆಲಸವನ್ನು ನಾಳೆಗಿಟ್ಟರೆ ಅದು ಜೀವನದ ಕೊನೆಯವರೆಗೆ ನಾಳೆಗಾಗಿ ಉಳಿಯುತ್ತದೆ. ಅಂದರೆ ಆ ದಿನದ ಕೆಲಸ ನಮ್ಮ ಜೀವಮಾನದಲ್ಲಿಯೇ ಮಾಡಲಾಗದೆ ಬಾಕಿಯಾಗುತ್ತದೆ. ಆದ ಕಾರಣವೇ ನಾಳೆ ಎನ್ನುವುದು ಹಾಳು ಎಂದಿರುವುದು ಕಳೆದ ಗಳಿಗೆ ಮರಳಿ ಬರುವುದಿಲ್ಲ.

೨೦. ‘ಎಳ್ಪೊಡು ಬರ್ಪುನವು ಏಳೆಡ್ ಬರಡ್?
ಎಪ್ಪತ್ತರಲ್ಲಿ ಬರುವುದು ಏಳರಲ್ಲಿ ಬರಲಿ

ಕಷ್ಟ ಬರುವುದು ತಡವಾಗಿ ಬರುವುದು ಬೇಡ ಬೇಗನೆ ಬರಲೆಂದು ಹಾರೈಸುವುದು. ಎಪ್ಪತ್ತರ ವೃದ್ಧಾಪ್ಯದಲ್ಲಿ ಕಷ್ಟ ಬಂದರೆ ಅದನ್ನು ನಿವಾರಿಸಿಕೊಳ್ಳುವುದಕ್ಕೆ ದೈಹಿಕ ಶಕ್ತಿಯೂ ಇರುವುದಿಲ್ಲ. ಮಾನಸಿಕ ಸ್ಥೈರ್ಯವೂ ಕುಂದಿರುತ್ತದೆ. ಏಳನೇ ವಯಸ್ಸಿನಲ್ಲಿ ಅಂದರೆ ಎಳೆ ವಯಸ್ಸಿನಲ್ಲಿ ಬಂದ ಕಷ್ಟದ ಪರಿವೆಯಿರುವುದಿಲ್ಲ. ಸಹಿಸಿಕೊಂಡು ನಡೆದರೆ ಮುಂದೆ ಸುಖಪಡುವುದಕ್ಕೆ ಸಾಕಷ್ಟು ಅವಧಿ ಇರುತ್ತದೆ. ವೃದ್ಧಾಪ್ಯದಲ್ಲಿ ಜೀವನದ ಆಸಕ್ತಿಯಾಗಲಿ, ಉತ್ಸಾಹವಾಗಲಿ ಇಲ್ಲದಿರುವುದರಿಂದ ಕಷ್ಟ ಕಡೆಯ ಕಾಲಕ್ಕೆ ಬೇಡ, ಬರುವುದಿದ್ದರೆ ಮೊದಲೇ ಬಂದು ಹೋಗಲಿ ಎಂಬ ಬಯಕೆ. ಸಂಖ್ಯೆಯ ದೃಷ್ಟಿಯಿಂದ ನೋಡಿದರೆ ಎಪ್ಪತ್ತರ ಸಂಖ್ಯೆಯಲ್ಲಿ ಬರೋದು ಏಳರ ಸಂಖ್ಯೆಯಲ್ಲಿ ಕಷ್ಟವು ಸುಳಬವಾಗಲಿ ಎಂಬುದೂ ಸರಿಯೆ.

೨೧. ‘ಏನ್ ಉಪ್ಪುತಿಂದ್ ನಾತ್ ಈ ಉಣ್ಬು ತಿನ್ತ್‌ಜ’
ನಾನು ಉಪ್ಪು ತಿಂದಷ್ಟು ನೀನು ಅನ್ನ ತಿಂದಿಲ್ಲ.

ಊಟದಲ್ಲಿ ಉಪ್ಪು ತಿನ್ನೋದು ಕಮ್ಮಿ. ಅನ್ನ ತಿನ್ನೋದು ಹೆಚ್ಚು. ಒಬ್ಬ ಅನ್ನ ತಿಂದಷ್ಟು ಪ್ರಮಾಣದಲ್ಲಿ ಇನ್ನೊಬ್ಬ ಉಪ್ಪು ತಿಂದಿರಬೇಕಿದ್ದರೆ, ಅವನಿಗೆ ತುಂಬಾ ವಯಸ್ಸಾಗಿರಬೇಕು. ಅಷ್ಟು ವಯಸ್ಸಾದವನು ಪ್ರಾಯದಲ್ಲಿ ಮಾತ್ರ ಹಿರಿಯವನಲ್ಲ. ಅನುಭವದಲ್ಲಿಯೂ ಹಿರಿತನವಿದೆ. ಆ ಹೆಗ್ಗಳಿಕೆಯಿಂದ ಕಿರಿಯವನ ಮುಂದೆ ಈ ಮಾತಾಡುತ್ತಾನೆ. ಹಿರಿಯರ ಜೀವನಾನುಭವವನ್ನು ಕಡೆಗಣಿಸಿ ಮಾತಾಡುವಾಗ ಅದನ್ನು ಪ್ರತಿಭಟಿಸಿ ಈ ಗಾದೆ ಹುಟ್ಟಿದೆ.

೨೨. ‘ಏರಿ ತಿಂದಿನಾಯೆ ಬೋರಿ ಮಾರುವೆ’
ಏರಿ ಮೀನು ತಿಂದವನು ಹೋರಿ ಮಾರಿಯಾನು

ಏರಿ ಎಂಬುದು ಸಮುದ್ರದ ಮೀನು. ಇದು ಮೀನುಗಳಲ್ಲಿಯೇ ಹೆಚ್ಚು ರುಚಿಯಾದುದು. ಅದರ ರುಚಿಗೆ ಮಾರು ಹೋದವ ಉಳುವ ಹೋರಿಯನ್ನಾದರೂ ಮಾರಿಯಾನು. ಅಂತಹ ರುಚಿ. ನಾಲಿಗೆಯ ರುಚಿಗೆ ದಾಸನಾದವನು ಏರಿಗಾಗಿ ಹೋರಿ ಮಾರುವುದಲ್ಲ ಎಲ್ಲವನ್ನೂ ಮಾರಿಯಾನು. ಹೋರಿಯನ್ನು ಕೃಷಿಕ ಮಾರಿದ ಮೇಲೆ ಇನ್ನೇನು ಉಳಿಯುತ್ತದೆ. ಹೋರಿ ಇಲ್ಲದೆ ವ್ಯವಸಾಯವಿಲ್ಲ, ವ್ಯವಸಾಯವಿಲ್ಲದೆ ಕೃಷಿ ಉತ್ಪತ್ತಿಯಿಲ್ಲ-ಕೃಷಿಕನೂ ಇಲ್ಲ. ಇಲ್ಲಿ ಏರಿ ಮೀನಿನ ಮತ್ತು ಉಳುವ ಹೋರಿಯ ಮಹತ್ವವನ್ನು ಹೇಳಿದ್ದಾರೆ. ನಾಲಿಗೆಯ ದಾಸರಾಗಬಾರದೆಂಬ ಸೂಕ್ಷ್ಮವೂ ಇದೆ.

೨೩. ‘ಏಲೆಟ್ ಎಜಮಾನಿಗೆ ತಿಕ್ಯರೆ ಬಲ್ಲಿ, ಎಲ್ಪಟ್‌ಪೀ ಸುರುವಾಯರ ಬಲ್ಲಿ’
ಏಳರಲ್ಲಿ ಯಜಮಾನಿಕೆ ಸಿಗಬಾರದು, ಎಪ್ಪತ್ತರಲ್ಲಿ ಮಲರೋಗ ಪ್ರಾರಂಭವಾಗಬಾರದು.

ಏಳನೇಯ ವಯಸ್ಸಿನಲ್ಲಿ ಅಂದರೆ ಚಿಕ್ಕ ವಯಸ್ಸಿನಲ್ಲಿ ಯಜಮಾನಿಕೆ ಸಿಕ್ಕಿದರೆ ಅಧಿಕಾರದ ದುರುಪಯೋಗವಾಗುತ್ತದೆ. ಅನುಭವ ಇಲ್ಲದ ಹುಡುಗ ತಪ್ಪು ಮಾಡುತ್ತಾನೆ. ಅವನ ನಿರ್ಬಲತೆಯನ್ನು ಉಪಯೋಗಿಸಿಕೊಂಡು ಸ್ವಾರ್ಥಿಗಳಾದ ಅಧಿಕಾರಿಗಳು ತಮ್ಮ ಬೇಳೆ ಬೇಯಿಸಿಕೊಂಡು ಆಡಳಿತೆಯನ್ನು ಶಿಥಿಲಗೊಳಿಸುತ್ತಾರೆ. ಹಾಗೇ ಎಪ್ಪತ್ತನೆಯ ಮುದಿವಯಸ್ಸಿನಲ್ಲಿ ತೂರುವ ಖಾಯಿಲೆ ಪ್ರಾರಂಭವಾದರೆ ಉಳಿಯುವುದು ಕಷ್ಟ. ಭೇದಿಯಿಂದಾಗಿ ನಿತ್ರಾಣ ಉಂಟಾಗುತ್ತದೆ. ಮೊದಲೆ ವಯಸ್ಸಿನ ತೊಡಕು ಅದರೊಂದಿಗೆ ಮಲರೋಗ ಸೇರಿದರೆ ಬದುಕುವಂತಿಲ್ಲ.

೨೪. ‘ಒಣಸ್ ಸೆಟ್ಟ್‌೦ದಿನೊ ಸೆಟ್‌೦ಡ್, ಬುಡೆತಿ ಸೆಟ್ಯಳ್‌೦ಟ ಜನ್ಮೊ ಸೆಟ್ಟಂಡ್’
ಊಟ ಕೆಟ್ಟರೆ ದಿವಸ ಕೆಟ್ಟೀತು, ಹೆಂಡತಿ ಕೆಟ್ಟರೆ ಜನ್ಮ ಕೆಟ್ಟೀತು

ಊಟ ಕೆಟ್ಟು ಹೋದರೆ ಆ ದಿನ ಮಾತ್ರ ಹಾಳಾಯಿತು. ಇನ್ನೊಂದು ದಿನ ಸರಿಯಾದ ಊಟ ಮಾಡಿಕೊಳ್ಳಬಹುದು. ಆದರೆ ಪತ್ನಿಯಾದವಳು ಕೆಟ್ಟು ಹೋದರೆ, ಕೆಟ್ಟ ನಡತೆಯವಳಾದರೆ ಬಾಳೇ ಕೆಟ್ಟೀತು. ಅದನ್ನು ಅಡುಗೆ ಮಾಡಿದಷ್ಟು ಸುಲಭದಲ್ಲಿ ಸರಿಪಡಿಸಿಕೊಳ್ಳುವುದು ಸಾಧ್ಯವಿಲ್ಲ. ಸಂಸಾರದಲ್ಲಿ ಹೆಣ್ಣಿನ ಚಾರಿತ್ರ್ಯ ಶುದ್ಧಿಗೆ ಹೆಚ್ಚು ಮಹತ್ವ ಕೊಟ್ಟಂತೆ ಕಾಣುತ್ತದೆ. ಇಲ್ಲದೆ ಹೋಗಿದ್ದರೆ ಗಂಡನ ಚಾರಿತ್ರ್ಯದ ಬಗ್ಗೆಯೂ ಹೇಳುತ್ತಿದ್ದರು. ಹೆಂಡತಿಯು ಕೆಡುವುದರಿಂದ ಜನ್ಮ ಕೆಟ್ಟೀತು ಎಂದಷ್ಟೇ ಹೇಳಿ ಮುಗಿಸುತ್ತಿರಲಿಲ್ಲ.

೨೫. ‘ಕನಟ್ಟ್ ಪರ್೦ದ್ ತಿಂದಿಲೆಕ್ಕೊ’
ಕನಸಿನಲ್ಲಿ ಹಣ್ಣು ತಿಂದ ಹಾಗೆ

ಅಲ್ಪಕಾಲ ಅನುಭಿಸಿದ ನೆನಪು ಸವಿಯಾಗಿದ್ದರೆ, ತಾತ್ಕಾಲಿಕವಾಗಿದ್ದರೂ ಆನಂದವನ್ನು ಕೊಟ್ಟಿದ್ದರೆ, ಅದನ್ನು ‘ಕನಟ್ಟ್ ಪರಂದ್ ತಿಂದಿ ಲೆಕ್ಕೊ’ ಎಂದು ಹೇಳುತ್ತಾರೆ. ನನ್ನ ತಾಯಿಯವರು ಈ ಗಾದೆಯನ್ನು ಸಂದರ್ಭ ಸಿಕ್ಕಿದಾಗಲೆಲ್ಲ ಹೇಳುತ್ತಿದ್ದರು. ನನ್ನ ತಾಯಿ ಸುಖದ ಸಂಸಾರ ಮಾಡಿದುದು ಕೆಲವೇ ವರ್ಷ. ಆ ಅಲ್ಪಾವಧಿಯ ಸವಿನೆನಪಿಗಾಗಿ ನಾವಿಬ್ಬರು ಮಕ್ಕಳು ಜನಿಸಿದ್ದೆವು. ತಂದೆಯವರು ಚಿಕ್ಕವಯಸ್ಸಿನಲ್ಲಿ ತೀರಿಕೊಂಡರು. ಮತ್ತಿನ ಸುದೀರ್ಘ ಜೀವನದಲ್ಲಿ ಅವರಿಗೆ ಕನಸಿನಲ್ಲಿ ಹಣ್ಣು ತಿಂದ ಹಾಗೆ ಆದರೂ, ಸುಂದರ, ಮಧುರ ನೆನಪಾಗಿ ಉಳಿದಿದೆ. ಆತ್ಮೀಯರೊಬ್ಬರು ಸ್ವಲ್ಪ ಹೊತ್ತಿಗೆ ಬಂದು ಮಾತಾಡಿಸಿಕೊಂಡು ಹೋದ ಮೇಲೆ ಆ ನೆನಪು ಸಿಹಿಯಾಗಿಯೇ ಉಳಿಯುತ್ತದೆ. ಸ್ವಪ್ನದಲ್ಲಿ ಹಣ್ಣು ತಿನ್ನುವುದು ಹುಸಿಯಾದರೂ ಅದರಲ್ಲೊಂದು ಆನಂದವಿದೆ.

೨೬. ‘ಕಪ್ಪಲ್ ದಿಂಜಯರ ಪೋತಿನಾಯೆ ವೈದೆ
ಬಂಜಿ ದಿಂಜಯರ ಪೋತಿನಾಯೆ ಬೈದ್‌ಜೆ’

ಹಡಗು ತುಂಬಿಸಲು ಹೋದವ ಬಂದ
ಹೊಟ್ಟೆ ತುಂಬಿಸಲು ಹೋದವ ಬಂದಿಲ್ಲ

ಹಡಗು ತುಂಬಿಸುತ್ತಾ ಹೋದರೆ ತುಂಬುತ್ತದೆ. ಹೊಟ್ಟೆ ತುಂಬಿಸುವುದು ಹಾಗಲ್ಲ. ಅದನ್ನು ತುಂಬಿಸುತ್ತಲೇ ಇರಬೇಕು. ತುಂಬಿಸಿದಷ್ಟು ಅದು ಖಾಲಿಯಾಗುತ್ತಿರುವುದರಿಂದ ಮತ್ತೆ ಮತ್ತೆ ತುಂಬಿಸಬೇಕಾಗುತ್ತದೆ. ಕೊಟ್ಟೆ ತುಂಬಿತು ಅನ್ನೋದು ತಾತ್ಕಾಲಿಕವಾದುದು. ಮತ್ತೆ ಸ್ವಲ್ಪ ಹೊತ್ತಿನಲ್ಲಿ ಅದು ಬರಿದಾಗುತ್ತದೆ. ಅಂದರೆ ಹೊಟ್ಟೆ ಅನ್ನೋದು ದೊಡ್ಡ ಹಡಗಿಗಿಂತಲೂ ದೊಡ್ಡದು. ಮನುಷ್ಯ ಬರೇ ಹೊಟ್ಟೆ ತುಂಬಿಸುವ ಕೆಲಸವಷ್ಟೇ ಮಾಡಿದರೆ ಅದು ಮುಗಿಯುವಂತಿಲ್ಲ. ಬೇರೇನಾದರೂ ಪುರುಷಾರ್ಥದ ಕೆಲಸಗಳನ್ನು ಮಾಡಬೇಕು ಎಂದು ಹೇಳುವಾಗ ಈ ಗಾದೆಯನ್ನು ಹೇಳುತ್ತಾರೆ. ಮರ, ಮಣ್ಣು, ಕಲ್ಲಿನ ದೊಡ್ಡ ಪಾತ್ರಗಳನ್ನು ‘ಕಪ್ಪಲ್’ ಎಂದು ಕರೆಯುತ್ತಾರೆ.

೨೭. ‘ಕರಕರೆದ ಸೇಮಯದಡ್ಯೆಡ್ತ್ ನಿರ್ಮಲೊದ ಪುಂಡಿ ಎಡ್ಡೆ’
ಕರಕರೆಯ ಸೇಮಿಗೆಗಿಂತ, ನಿರ್ಮಲದ ಕಡುಬು ಒಳ್ಳೆದು

ಸೇಮಿಗೆ ಮಾಡಬೇಕಿದ್ದರೆ ತುಂಬಾ ಕೆಲಸವಿದೆ. ಸೇಮಿಗೆ ಒತ್ತಿ ಮತ್ತೆ ಕಾಯಿಸಿ ಮಾಡಬೇಕಿದ್ದರೆ ತುಂಬಾ ಕರಕರೆ. ‘ಪುಂಡಿ’ ಅಂದರೆ ಕಡುಬು ಅದನ್ನು ಕಡೆದು ಬೇಯಿಸಲಿಕ್ಕೆ ಇಟ್ಟರೆ ಆಯಿತು. ಮತ್ತೆ ತಿನ್ನುವುದೇ, ಶುಚಿಯಾಗಿ ಅದನ್ನು ಮಾಡಿ ತಿನ್ನುವುದು ಸೇಮಿಗೆದ ‘ಅಡ್ಯೆ’ಗಿಂತ ಒಳ್ಳೆಯರು. ‘ಅಡ್ಯೆ’ ಎಂಬುದು ಅಕ್ಕಿಯಿಂದ ಮಾಡಿದ ಎಲ್ಲಾ ತಿಂಡಿಗಳಿಗೆ ತುಳುವರು ಹೇಳುವ ಮಾತು. ‘ಪುಂಡಿ’ (ಮುಷ್ಟಿ) ಕಡುಬು ಅಗ್ಗದ ತಿಂಡಿ. ಆದರೆ ತುಂಬಾ ಆರೋಗ್ಯಕರವಾದ ತಿಂಡಿಯೂ ಹೌದು.

೨೮. ‘ಕರನರಿ ಟ ಕಕ್ಕೆಗ್ ಲಾಬೊ’
ಮಡಿಕೆ ಒಡೆದರೆ ಕಾಗೆಗೆ ಲಾಭ

ಮಡಿಕೆ ಒಡೆದರೆ ಅದರಲ್ಲಿರುವ ಆಹಾರ ಚೆಲ್ಲುತ್ತದೆ. ಅದು ಕಾಗೆಗೆ ಹೆಕ್ಕಿ ತಿನ್ನಲು ಸಿಗುತ್ತದೆ. ಕಾಗೆಯ ಗುಣದ ದುಷ್ಟ ಜನರು ನೆರೆಯವರ ಕಷ್ಟದ ಕಾಲದಲ್ಲಿ ಲಾಭ ಪಡೆಯುತ್ತಾರೆ. ಒಗ್ಗಟ್ಟಿನ ಸಂಸಾರ ಒಡೆದರೆ ಇವರಿಗೆ ಸಂತೋಷ, ಏನಾದರೂ ಅನಿರೀಕ್ಷಿತ ಘಟನೆಯಿಂದಾಗಿ ಒಬ್ಬರಿಗೆ ಆರ್ಥಿಕ ಅಡಚಣೆ ಬಂದರೆ, ಹೆಚ್ಚಿನ ಬಡ್ಡಿಗೆ ಸಾಲ ಕೊಡುವ ಲಾಭ ಬಡಕನಿಗೆ ಸಂತೋಷ. ಸಣ್ಣ ವಯಸ್ಸಿನಲ್ಲಿ ಒಬ್ಬಾಕೆ ವಿಧವೆಯಾದರೆ, ಅವಳನ್ನು ವಶಪಡಿಸಿಕೊಳ್ಳಬೇಕೆಂಬ ಕಾಮುಕನಿಗೆ ಅನುಕೂಲ, ಈ ರೀತಿ ಹಲವು ಸಂದರ್ಭಗಳಿಗೆ ಈ ಗಾದೆಯನ್ನು ಹೇಳುತ್ತಾರೆ.

೨೯. ‘ಕರಿನ ನೀರ್‌ಗ್‌ ಕಟ್ಟ ಇದ್ದಿ’
ಹರಿದು ಹೋದ ನೀರಿಗೆ ಕಟ್ಟವಿಲ್ಲ

ಹರಿಯುವ ಹೊಳೆ, ತೋಡಿಗೆ ಕಟ್ಟ ಹಾಕಿ ನೀರನ್ನು ತಡೆದು ಕೃಷಿ ಭೂಮಿಗೆ ಹರಿಯಿಸುತ್ತಾರೆ. ಹಾಗೆ ಕಟ್ಟ ಹಾಕುವು ಮೊದಲೇ, ಹರಿದು ಹೋದ ನೀರು, ಆ ಕಟ್ಟದಲ್ಲಿ ಸಂಗ್ರಹವಾಗುವುದಿಲ್ಲ. ಹುಡುಗಿಯೊಬ್ಬಳಿಗೆ ಮದುವೆ ಮಾಡುವುದು ಹರಿಯುವ ನೀರಿಗೆ ಕಟ್ಟ ಹಾಕಿದ ಹಾಗೆ. ಆ ಮೂಲಕ ಸಂಸಾರವು ಸುಖಮಯವಾಗಿ, ಒಳ್ಳೆಯ ಫಲವನ್ನು ಕೊಡುತ್ತದೆ. ಆ ರೀತಿ ಕಟ್ಟ ಹಾಕುವ ಮೊದಲೇ ನೀರು ಹರಿದು ಹೋಗಿದ್ದರೆ ಅದನ್ನು ಕಟ್ಟಕ್ಕೆ ತರುವುದು ಕಷ್ಟ. ಒಂದು ಸದವಕಾಶ ತಪ್ಪಿಹೋಗುವುದೂ ಹೀಗೆ. ಕಾಲವು ಮಿಂಚಿ ಹೋದ ಮೇಲೆ ಯೋಚಿಸಿ ಪ್ರಯೋಜನವಿಲ್ಲ. ಮಕ್ಕಳು ಕೈ ಮೀರಿ ಹೋಗುವ ಮೊದಲೇ ಅವರನ್ನು ಸರಿಯಾದ ರೀತಿಯಲ್ಲಿ ಕಟ್ಟಿ ರೂಪಿಸಬೇಕು ಎಂಬಿತ್ಯಾದಿ ವಿಚಾರಗಳು ಈ ಗಾದೆಯಿಂದ ಒಡಮೂಡುತ್ತವೆ.

೩೦. ‘ಕರ್ಬೊಗ್ ಕೊರ್ನ ನೀರ್‌ದ ಲೆಕ್ಕೊ’
ಕಬ್ಬಿಣಕ್ಕೆ ಕೊಟ್ಟ ನೀರಿನ ಹಾಗೆ

ಕೊಟ್ಟುದ್ದನ್ನು ಹಿಂದೆ ಪಡೆಯುವುದು ಯಾವಾಗ ಸಾಧ್ಯವಾಗುವುದಿಲ್ಲವೋ ಅಂತಹ ಸಂದರ್ಭದಲ್ಲಿ ಈ ಗಾದೆಯನ್ನು ಹೇಳುತ್ತಾರೆ. ಕಮ್ಮಾರನು ಕತ್ತಿ, ಕೊಡಲಿ ಮಾಡುವಾಗ, ಕಬ್ಬಿಣ ಕಾಯಿಸಿ ಆಕಾರ ಬರಿಸಿ, ಅದರ ಬಾಯಿ ಬಗ್ಗಿ ಹೋಗದ ಹಾಗೆ, ಗಡಸುತನ ಬರುವ ಹಾಗೆ ನೀರಲ್ಲಿ ಮುಳುಗಿಸಿ ಹದ ಬರಿಸುವ ಕ್ರಮವಿದೆ. ಹಾಗೆ ಕಬ್ಬಿಣಕ್ಕೆ ಕೊಟ್ಟ ನೀರನ್ನು ಮತ್ತೆ ಪಡೆಯುವಂತಿಲ್ಲ. ಅದು ಆ ಬಿಸಿಗೆ ಆವಿಯಾಗಿ ಹೋಗುತ್ತದೆ. ಒಬ್ಬನಿಗೆ ಸಾಲ ಕೊಟ್ಟು ಅವ ಹಿಂದೆ ಕೊಡುವುದಿಲ್ಲ ಎಂದಾದರೆ ಅದು ಕಬ್ಬಿಣಕ್ಕೆ ಕೊಟ್ಟ ನೀರಿನ ಹಾಗೆ. ಇದನ್ನೆ ಆನೆಯ ಬಾಯಿಗೆ ಕೊಟ್ಟ ಕಬ್ಬಿನ ಹಾಗೆ ಎಂದೂ ಹೇಳುತ್ತಾರೆ. ಹಾಗೆ ಕೊಟ್ಟದ್ದು ಮರಳಿ ಎಂದೂ ಸಿಗುವುದಿಲ್ಲ. ‘ಕಜಿಪ್ಪುಗು ಪಾಡ್ನ ಉಪ್ಪು’ ಪದಾರ್ಥಕ್ಕೆ ಹಾಕಿದ ಉಪ್ಪು ಇದನ್ನು ಮತ್ತೆ ಪಡೆಯುವಂತಿಲ್ಲ.

೩೧. ‘ಕಲೆ ಕಲ್ತ್ ಕರ್ಪುನವತ್ತ್, ಕಲ್ಪಂತೆ ಬರ್ಪನವುಲಾ ಅತ್ತ್’
ಕಲೆ ಕಲಿತು ಬರುವುದಲ್ಲ, ಕಲಿಯದೆ ಬರುವುದೂ ಅಲ್ಲ

ಲಲಿತ ಕಲೆಗಳಿರಲಿ, ಉಪಯುಕ್ತ ಕಲೆಗಳಿರಲಿ ಇವುಗಳನ್ನು ಕಲಿಯುವ ಮಂದಿಯಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಒಂದೇ ಮಟ್ಟದಲ್ಲಿ ಕಲಿಯಲಾರರು, ಕಲಿಯುವಿಕೆಯ ಈ ಅಂತರಗಳಿಗೆ ಶಿಕ್ಷಣ ತಜ್ಞರು ಮುಖ್ಯವಾಗಿ ಎರಡು ಕಾರಣಗಳನ್ನು ಕೊಡುತ್ತಾರೆ. ಅವೇ ಪರಂಪರೆ ಮತ್ತು ಪರಿಸ್ಥಿತಿಗಳು. ಈ ಎರಡು ಅಂಶಗಳನ್ನೇ ಈ ತುಳು ಗಾದೆಯು ಸಮರ್ಥಿಸುತ್ತಿರುವುದು. ಮುಖ್ಯವಾಗಿ ಲಲಿತ ಕಲೆಗಳಾದ ನೃತ್ಯ, ಸಂಗೀತ, ಚಿತ್ರ, ಶಿಲ್ಪ, ಸಾಹಿತ್ಯ ಇತ್ಯಾದಿ ಕಲೆಗಳು ಎಲ್ಲರಿಗೂ ಒಲಿಯುವುದಿಲ್ಲ. ಒಬ್ಬ ಬಿದಿರು ಕೊಳವೆಯ ಕೊಳಲು ಮಾಡಿ ದನ ಮೇಯಿಸುವಾಗ ತನಗೆ ಕಂಡಂತೆ ಬಾರಿಸಿದಾಗ ಅದರಲ್ಲೊಂದು ಇಂಪು ಮೂಡುತ್ತದೆ. ಅವ ಕೊಳಲು ಚೆನ್ನಾಗಿ ಬಾರಿಸುತ್ತಾನೆ. ಆದರೆ ಅವ ಸಂಗೀತಗಾರನಾಗಬೇಕಿದ್ದರೆ, ಗುರುವಿನ ಮಾರ್ಗದರ್ಶನ ಬೇಕು. ಅವನಿಗೆ ಸಂಗೀತದ ಸಂಸ್ಕಾರವಿದೆ. ಆದರೆ ಅದನ್ನು ವಿಕಾಸಗೊಳಿಸುವುದಕ್ಕೆ ಉತ್ತಮ ಪರಿಸರ ಬೇಕು. ದನ ಮೇಯಿಸುತ್ತ ಅವನು ಎಷ್ಟೇ ಕಾಲ ಕೊಳಲು ಊದುತ್ತಾ ಕುಳಿತರೂ ಸಂಗೀತಗಾರನ ಮಟ್ಟಕ್ಕೆ ಅವ ತಲುಪಲಾರನು. ಆ ಅರ್ಹತೆಯನ್ನು ಅವನು ಮುಟ್ಟಬೇಕಿದ್ದರೆ, ಉತ್ತಮ ಸಂಗೀತವನ್ನು ಕೇಳುವ ಅವಕಾಶ ಸಿಗಬೇಕು. ಅಲ್ಲಿ ಇವನನ್ನು ತಿದ್ದಿ ಆಕಾರ ಕೊಡುವ ಮಾರ್ಗದರ್ಶನ ಮಾಡುವ ಗುರು ಬೇಕು. ಅದನ್ನೇ ಪರಿಸರವೆಂದು ಹೇಳಬಹುದು. ಒಬ್ಬನಿಗೆ ದೈವದತ್ತವಾದ ಗಟ್ಟಿಮುಟ್ಟಿನ ಬಲಿಷ್ಟ ದೇಹವಿದೆಯೆಂದರೆ,ಅ ವ ಕುಸ್ತಿಪಟುವಲ್ಲ. ಅವನಲ್ಲಿ ಕುಸ್ತಿಪಟುವಾಗಲಿಕ್ಕೆ ಬೇಕಾದ ಮೂಲಗುಣವಿದೆ. ಅವನು ಮಲ್ಲರ ಗರಡಿಯಲ್ಲಿ, ಗುರುವಿನ ಸಲಹೆಯಂತೆ ಸಾಧನೆ ಮಾಡಬೇಕು. ಬೇಕಾದ ಪಟ್ಟುಗಳನ್ನು ತಿಳಿದುಕೊಳ್ಳಬೇಕು. ಹೀಗೆ ಕಲಿತವರೆಲ್ಲರೂ ಒಂದೇ ಮಟ್ಟವನ್ನು ಪ್ರದರ್ಶಿಸಲಾರರು. ಅದಕ್ಕೆ ಅವರವರ ಸಾಧನೆ, ಸಂಸ್ಕಾರ ಹಾಗೂ ಪುರಸ್ಕಾರಗಳೂ ಕಾರಣವಾಗುತ್ತದೆ. ಉತ್ತಮ ಕಲಾವಿದನಾದವನೂ ಸಮಾಜದಿಂದ ಪುರಸ್ಕಾರವಿಲ್ಲದೆ ಮೂಲೆಗೆ ಸೇರಬಹುದು. ಇದೂ ಒಂದು ರೀತಿಯ ಯೋಗ್ಯ ವಾತಾವರಣ ಎಂಬುದಾಗಿ ಗಣಿಸಬಹುದು.

೩೨. ‘ಕಾಟ್‌ಕೋರಿಗ್ ಕಾವೇರಿ ಸಂಕ್ರಾಂತಿ ಉಂಡೋ?’
ಕಾಡುಕೋಳಿಗೆ ಕಾವೇರಿ ಸಂಕ್ರಮಣವಿದೆಯೇ?

ಬಡವರು, ಕೀಳು ಜನರು ಸಾಮಾನ್ಯವಾಗಿ ಶುಭಾಶುಭ ಆಚರಣೆ ಮಾಡುವುದಿಲ್ಲ. ಕಾಡು ಜನರಿಗೆ ಮಕರ ಸಂಕ್ರಮಣ, ಇನ್ನೊಂದೂ ಸಂಕ್ರಮಣವೆಂಬ ತಿಳಿವಿರುವುದಿಲ್ಲ. ಅದೆಲ್ಲಾ ನಾಗರಿಕ ಜನರಿಗೆ ಕಾಡುಕೋಳಿ ಅಂತ ಸಾಂಕೇತಿಕವಾಗಿ ಹೇಳಿರುವುದು ಕಾಡು ಜನರನ್ನು. ಅನಾಕರಿಕರಾದ ಅವರು ನಾಗರಿಕವಾದ ಯಾವ ಆಚರಣೆಯನ್ನೂ ಮಾಡುವುದಿಲ್ಲ. ಮಕರ ಸಂಕ್ರಮಣ ದಿವಸ ಮತ್ತು ಅದರ ಮರುದಿವಸ ‘ತಿಂಗಲ್ತೊದ್ಯೊ’ (ತಿಂಗಳ ಮೊದಲ ದಿನ) ಕೂಡಾ ಯಾವ ಶುಭ ಕೆಲಸಗಳನ್ನು ಮಾಡುವುದಿಲ್ಲ. ಅದು ಕೆಲಸ ಕಾರ್ಯಗಳಿಗೆ ಬಿಡುವಿನ ದಿನಗಳು. ಅಂದು ಸ್ನಾನ ಮಾಡಿ, ಮುಡಿಯುಟ್ಟು ವಿಶ್ರಾಂತಿ ಆಚರಿಸಬೇಕು. ಗಿಡ ನೆಡುವುದು, ಬೀಜ ಹಾಕುವುದು ಮಾತ್ರವಲ್ಲ ಗರ್ಭದಾನ ಮಾಡುವುದೂ ನಿಷಿದ್ಧ. ಆದರೆ ಕಾಟುಕೋಳಿ ಜನರಿಗೆ (ಈ ಆಚರಣೆ ಮಾಡದವರು) ಯಾವುದೂ ಇಲ್ಲ. ವ್ರತಿನಿಷ್ಠೆ ಇಲ್ಲದವರನ್ನು ಹೀಗೆ ಸಂಭೋಧಿಸುತ್ತಾರೆ.