೩೩. ‘ಕಾರಣೊ ಇದ್ಯಂತೆ ಕಾರ್ಯೊ ಇದ್ದಿ
ಮಾರಣೊ ಇದ್ಯಂತೆ ಮಾಟೊ ಇದ್ದಿ’
ಕಾರಣವಿಲ್ಲದೆ ಕಾರ್ಯವಿಲ್ಲ, ಮರಣವಿಲ್ಲದೆ ಮಾಟವಿಲ್ಲ

ಯಾವುದಾದರೊಂದು ಕಾರ್ಯದ ಹಿನ್ನೆಲೆಯಲ್ಲಿ ಅದಕ್ಕೊಂದು ಕಾರಣ ಇದ್ದೇ ಇರುತ್ತದೆ. ಅದರಂತೆ ಮಾಟ ಮಾಡುವುದಕ್ಕೆ, ಒಂದು ಉದ್ದೇಶವಿದೆ. ಒಂದೋ ವೈರಿಯನ್ನು ನಾಶ ಮಾಡುವುದಕ್ಕೆ ಇಲ್ಲವೇ ತನ್ನ ಜೀವನದಲ್ಲಿ ಬರುವ ತಡೆಗಳನ್ನು ಕಿತ್ತೊಗೆಯುವುದಕ್ಕೆ. ಇದಕ್ಕೆ ಪ್ರೇರಣೆ ದ್ವೇಷ, ಮತ್ಸರ, ಮಹತ್ವಾಕಾಂಕ್ಷೆ ಏನೇ ಇರಬಹುದು. ಅಂತು ಮಾಟ ಮಾಡುವ ದುಷ್ಟ ಕೆಲಸಕ್ಕೂ ಒಂದು ಉದ್ದೇಶವಿದೆ. ಆದರೆ ಅದು ಸೌಮ್ಯ ಗುಣ ಜನ್ಮವಾದುದಲ್ಲ ಎಂಬುದು ಸ್ಪಷ್ಟವಿದೆ. ಇಂತಹ ಕ್ರೂರ ಕೆಲಸಕ್ಕೆ ಅಗತ್ಯವಾದುದು ‘ಮಾರಣ-ಮರಣ’ ಅಂದರೆ ಪ್ರಾಣಿಗಳ ಅಥವಾ ನರಬಲಿ. ಮಾಟದಿಂದ ಉದ್ಭವಿಸುವ ಶಕ್ತಿಗಳ ಮೂಲಕ ತಾನು ಉದ್ದೇಶಪಟ್ಟ ಕೆಲಸಗಳನ್ನು ವ್ಯಕ್ತಿಯು ನೆರವೇರಿಸಿಕೊಳ್ಳುತ್ತಾನೆ. ಇಂತಹ ಕ್ರಿಯೆಗಳನ್ನು ಕಾರ್ಯಸಾರ್ಥಕ ತಾನೇ ಮಾಡಬಹುದು ಅಥವಾ ಅದರಲ್ಲಿ ಪರಿಣತರಾದವರ ಮೂಲಕ ಮಾಡಬಹುದು ಎಂಬುದು ಹೇಳಿಕೆ.

೩೪. ‘ಕಾಸಿಗ್ ಪೋಂಡ ಕಾಸ್‌ಗೊಂಜಿ ಕುದುರೆ’
ಕಾಶಿಗೆ ಹೋದರೆ ಕಾಸಿಗೊಂದು ಕುದುರೆ

ಕಾಶಿ ಎಂಬುದು ತುಳುವರಿಗೆ ಬಹುದೂರದ ಪ್ರದೇಶ. ಅಲ್ಲಿಗೆ ಹೋದರೆ ಕುದುರೆ ತುಂಬಾ ಅಗ್ಗವಾಗಿ ಸಿಗಬಹುದು. ಆದರೆ ಅದನ್ನು ಅಲ್ಲಿಂತ ಇಲ್ಲಿಗೆ ತರುವ ಸಾಗಾಟ ಖರ್ಚು ತುಂಬಾ ಜಾಸ್ತಿ. ಒಂದರಲ್ಲಿ ಲಾಭವಿದೆಯೆಂದು ಯೋಚಿಸಿದರೆ ಇನ್ನೊಂದರಲ್ಲಿ ನಷ್ಟವಾಗುತ್ತದೆ. ಅಪರಿಮಿತವಾದ ದೂರದ ಕುದುರೆಯು ಅಗ್ಗದ ವ್ಯವಹಾರ ಅಷ್ಟೊಂದು ಭದ್ರವಲ್ಲ. ಮೇಲಾಗಿ ಅದು ಇಲ್ಲಿಗೆ ತಲುಪುವಾಗ ಹತ್ತಿರದಲ್ಲಿ ಸಿಗುವ ಕುದುರೆಯ ಕ್ರಯಕ್ಕಿಂತ ಹೆಚ್ಚಾಗಬಹುದು. ದೂರದ ಊರಿನ ವ್ಯವಹಾರ ವೇಡ ಎಂಬ ಅಭಿಪ್ರಾಯ.

೩೫. ‘ಕಿನ್ಯ್‌ನ ಬೆರೆಲ್ ಬಾತಂಟ ಏತ್ ಬಾಪು?
ಕಿರು ಬೆರಳು ಬೀಗಿದರೆ ಎಷ್ಟು ಬೀಗೀತು?

ಸಾಮಾನ್ಯ ಮನುಷ್ಯ ಎಷ್ಟು ಮಹತ್ಕಾರ್ಯ ಮಾಡಿಯಾನು? ಕಿರುಬೆರಳು ಬಾತರೆ ಹೆಚ್ಚು ತೋರವಾಗಲಿಕ್ಕಿಲ್ಲ. ಬಡವನೊಬ್ಬ ಶ್ರೀಮಂತನಾದರೆ, ಅಷ್ಟೇನು ದೊಡ್ಡ ಶ್ರೀಮಂತನಾಗಲಿಕ್ಕಿಲ್ಲ. ಮೊದಲಿನ ಸ್ಥಿತಿಗಿಂತ ಸ್ವಲ್ಪ ಅನುಕೂಲವಂತನಾದಾನು. ಶ್ರೀಮಂತ ಇನ್ನೂ ಶ್ರೀಮಂತನಾಗುವುದು ಬೇಗ. ಒಬ್ಬ ಸಣ್ಣ ರೈತನ ಗದ್ದೆಯಲ್ಲಿ ಉತ್ತಮ ಬೆಳೆಯಾಗಿದೆ. ಅಂದರೆ ಅವನು ಹೆಚ್ಚು ಅನುಕೂಲವಂತನೇನು ಆಗಲಿಕ್ಕಿಲ್ಲ. ಸಣ್ಣ ಊರಿನಲ್ಲಿ ಒಂದು ದೊಡ್ಡ ಸಭೆ ಸೇರಿದೆ ಅಂದರೆ ಆ ಸಣ್ಣ ಊರಿನ ಮಟ್ಟಿಗೆ ದೊಡ್ಡ ಸಭೆ ಹೊರತು ದೊಡ್ಡ ಪಟ್ಟಣದ ಸಭೆಯಷ್ಟು ಸೇರಿದೆಯೆಂದಲ್ಲ.

೩೬. ‘ಕೊಮ್ಮೆ ಬಂಜಿದಾಯನ ಬಡವು ತೆರಿಯಂದ್
ಕೊಂಗರ್ ಕೂಲಿದಾಯನ ಪ್ರಣೊ ಪೋಯಿನ ತೆರಿಯಂದ್’
ಡೊಲ್ಲು ಹೊಟ್ಟೆಯವನ ಹಸಿವು ತಿಳಿಯದು,
ಉಬ್ಬು ಹಲ್ಲಿನವನ ಪ್ರಾಣ ಹೋದುದು ತಿಳಿಯದು

ದೊಡ್ಡ ಹೊಟ್ಟೆಯನ್ನು ತುಳುವರು ಕೊಮ್ಮೆ ಎಂದು ಹೇಳುತ್ತಾರೆ. ಅವನಿಗೆ ಹಸಿವಾದಾಗಲೂ ಹೊಟ್ಟೆ ದೊಡ್ಡದೇ ಇರುತ್ತದೆ. ಅವನ ಹಸಿವು ತಿಳಿಯುವುದು ಕಷ್ಟ. ಉಬ್ಬು ಹಲ್ಲಿನವ ಸತ್ತಾಗಲೂ ಹಲ್ಲು ಹೊರಗೇ ಇರುವ ಕಾರಣ ನಗುತ್ತಿರುವಂತೆ ಕಾಣುತ್ತದೆ. ಬಾಹ್ಯ ಲಕ್ಷಣದಿಂದಾಗಿ ಕೆಲವರ ನಿಜವಾದ ಗುಣವನ್ನು ಅಥವಾ ದೋಷವನ್ನು ತಿಳಿದುಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎಂದು ಹೇಳುವುದಕ್ಕೆ ಈ ಗಾದೆ ಉದಾಹರಣೆ ಕೊಟ್ಟಿದ್ದಾರೆ.

೩೭. ‘ಗರ್ಬೊಗು ಸುಕೊ ಇತ್ತಂಡ ಅತ್ತ ಬಾಲೆಗ್ ಸುಕೊ?’
ಗರ್ಭಕ್ಕೆ ಸುಖ ಇದ್ದರಲ್ಲವೆ ಮಗುವಿಗೆ ಸುಖ?

ಆಂತರಿಕ ಸುಖ ದುಃಖಗಳು ಬಾಹ್ಯ ಸುಖ ದುಃಖಗಳಿಗೆ ಕಾರಣವಾಗುತ್ತವೆ. ತಾಯಿಯ ಆರೋಗ್ಯ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಮಾಡುತ್ತದೆ. ಕುಟುಂಬದ ನೆಮ್ಮದಿ ಸಮಾಜದ ನೆಮ್ಮದಿಗೆ ಕಾರಣವಾಗಿದೆ. ವ್ಯಕ್ತಿಯ ಒಳಗಿನ ಸಂತೋಷ ಹೊರಗೆ ಕಾಣಿಸುತ್ತದೆ. ಗರ್ಭಸ್ಥವಾದ ಮಗುವಿನ ಕ್ಷೇಮಕ್ಕೆ ಗರ್ಭಿಣಿಯನ್ನು ಕ್ಷೇಮವಾಗಿ ನೋಡಿಕೊಳ್ಳಬೇಕು. ಇದೊಂದು ಸಿದ್ಧಾಂತ.

೩೮. ‘ಗಾಳಿ ಬರಂದೆ ಇರೆ ಪಂದಂದ್, ತೂ ಇಜ್ಜಂದೆ ಪುಗೆ ಲಕ್ಕಂದ್’
ಗಾಳಿ ಬರದೆ ಎಲೆ ಅಲ್ಲಾಡದು, ಬೆಂಕಿ ಇಲ್ಲದೆ ಹೊಗೆ ಏಳದು

ಈ ಗಾದೆಯಲ್ಲಿ ಗಾಳಿ ಮತ್ತು ಬೆಂಕಿಗಳಿಂದಾಗಿ ಎಲೆ ಹಂದಾಡಿದೆ, ಹೊದೆ ಎದ್ದಿದೆ. ಒಂದು ಸುದ್ದಿ ಹರಡಬೇಕಿದ್ದರೆ, ಅದಕ್ಕೆ ಕಾರಣವಾದ ಒಂದು ಕಾರ್ಯವು ನಡೆದಿರಲೇಬೇಕು. ಹಾಗಾಯಿತಂತೆ, ಹೀಗಾಯಿತಂತೆ ಎಂಬುದಾಗಿ ಊರಲ್ಲಿ ಮಾತನಾಡಿಕೊಳ್ಳುವುದು ಸಾಮಾನ್ಯ. ಆಗ ಒಬ್ಬರು ಅದಕ್ಕೆ ಹೇಳುತ್ತಾರೆ ‘ಹಾಗಿರಲಿಕ್ಕಿಲ್ಲಾ’ ಎಂದು. ಅದಕ್ಕೆ ಸುದ್ದಿ ಕೊಡುವವರು ಹೇಳುತ್ತಾರೆ ‘ಸುದ್ದಿ ಸುಮ್ಮನಿರಲಿಕ್ಕಿಲ್ಲ’ ಎಂದು. ತನ್ನ ಅಭಿಪ್ರಾಯವನ್ನು ಸಮರ್ಥಿಸುವುದಕ್ಕೆ, ಸ್ಪಷ್ಟಪಡಿಸುವುದಕ್ಕೆ ಈ ಗಾದೆಯನ್ನು ಉಪಯೋಗಿಸುತ್ತಾರೆ. ತಿಳಿದ ವಿಚಾರದ ಆಧಾರದಿಂದ, ತಿಳಿಯದ ವಿಚಾರವನ್ನು ಸಮರ್ಥಿಸುವ ರೀತಿಗೆ ಈ ಗಾದೆಯು ಸಹಾಯಕವಾಗಿದೆ. ಸುಮ್ಮ ಸುಮ್ಮನೆ ಒಂದು ಸುದ್ದಿ ಹರಡುವುದಿಲ್ಲ. ಅದಕ್ಕೆ ಏನಾದರೂ ಸ್ವಲ್ಪ ಕಾರಣ ಇದ್ದೇ ಇರುತ್ತದೆ ಎಂಬುದು ತಾತ್ಪರ್ಯ.

೩೯. ‘ಗುಡ್ಡೆಗ್ ಗುಡ್ಡೆ ಏತೋ ಅಡ್ಡೊ ಉಂಡು’
ಗುಡ್ಡಕ್ಕೆ ಗುಡ್ಡ ಎಷ್ಟೋ ಅಡ್ಡ ಉಂಟು

ಒಂದು ಗುಡ್ಡಕ್ಕೆ ಹತ್ತಿ ನೋಡಿದರೆ ದೂರದಲ್ಲಿ ಇನ್ನೊಂದು ಗುಡ್ಡ ಎತ್ತರವಾಗಿ ಕಾಣಿಸುತ್ತದೆ. ಆ ಗುಡ್ಡದ ಮೇಲೆ ಹತ್ತಿ ನೋಡುವಾಗ ದೂರದಲ್ಲಿ ಇನ್ನೊಂದು ಶಿಖರ ಮತ್ತೂ ಎತ್ತರವಾಗಿ ಕಾಣಿಸುತ್ತದೆ. ಅಂದರೆ ಒಂದು ಬೆಟ್ಟ ಎತ್ತರವೆಂದು ಒಮ್ಮೆ ಭಾವಿಸಿ ಅದನ್ನು ಏರಿ ನೋಡಿದಾಗ ಅದಕ್ಕಿಂತ ಎತ್ತರವಾದದ್ದು ಇನ್ನೊಂದು ಗೋಚರಿಸುವುದರಿಂದ, ಮೊದಲಿನ ಭಾವನೆ ಬದಲಾಗುತ್ತದೆ. ಸಂಪತ್ತು, ಜ್ಞಾನ, ತಿಳುವಳಿಕೆ, ಶಕ್ತಿ, ಪೌರುಷ ಸಾಧನೆಗಳಲ್ಲಿ ಈ ರೀತಿ ಒಬ್ಬರಿಗಿಂತ ಒಬ್ಬರು ಹಿರಿದಾಗಿ ಕಾಣಿಸುತ್ತಾರೆ. ಅವರೇ ದೊಡ್ಡವರು, ಅವರಿಗಿಂತ ದೊಡ್ಡವರಿಲ್ಲ ಎಂದು ನಮ್ಮ ಸೀಮಿತ ತಿಳುವಳಿಕೆಯಲ್ಲಿ ನಿರ್ಣಯಿಸುತ್ತೇವೆ. ಆದರೆ ನಮ್ಮ ತಿಳುವಳಿಕೆ ಹೆಚ್ಚಿದಂತೆ, ಬೇರೆಡೆ ನಮ್ಮ ವಿದ್ವಾಂಸರಿಗಿಂತ ಮಿಗಿಲಾದ ತಿಳುವಳಿಕೆಯವರಿದ್ದಾರೆಂಬ ಅರಿವು ಮೂಡುತ್ತದೆ. ಆಗ ಗುಡ್ಡೆಗಿಂತ ಗುಡ್ಡೆ ದೊಡ್ಡದಿದೆ-ಆ ದೊಡ್ಡವರ ಮುಂದೆ ಇದು ಕಾಣಿಸುವುದಿಲ್ಲವೆಂಬ ಸತ್ಯದ ಅರಿವಾಗುತ್ತದೆ.

೪೦. ‘ಗುರು ಇಜ್ಜಂತಿ ಮಟೊ ಮಟೊ ಅತ್ತ್
ಹಿರಿಯೆರ್ ಇಜ್ಜಂತಿ ಇಲ್ಲ್ ಇಲ್ಲ್ ಅತ್ತ್’
ಗುರುವಿಲ್ಲದ ಮಠ ಮಠವಲ್ಲ, ಹಿರಿಯರಿಲ್ಲದ ಮನೆ ಮನೆಯಲ್ಲ.

ಮಠಕ್ಕೆ ಗುರುವೊಬ್ಬನಿರಬೇಕು. ಮನೆಯಲ್ಲಿ ಹಿರಿಯರಿರಬೇಕು. ಗುರುವಿಲ್ಲದ ಮಠದಲ್ಲಿ ಶುಸ್ತು ವ್ಯವಸ್ಥೆ ಇರುವುದಿಲ್ಲ. ಮಠದಲ್ಲಿರಬೇಕಾದ ನಿಯಮ ನೀತಿ, ಪರೋಪಕಾರ ಬುದ್ಧಿ ನಿಂತು ಹೋಗುತ್ತದೆ. ಸಾಮಾಜಿಕರಿಗೆ ತಮ್ಮ ಕಷ್ಟ ದುಃಖಗಳನ್ನು ಹೇಳಿಕೊಂಡು ಉಪದೇಶ ಪಡೆಯುವುದಕ್ಕೆ ಮಠವು ಕೇಂದ್ರ. ಗುರುವು ಕೇಂದ್ರದ ವ್ಯಕ್ತಿ. ಗುರುವಿನ ಮಾರ್ಗದರ್ಶನದಂತೆ ಮಠದ ಪರಿವಾರ ಮಾತ್ರವಲ್ಲ, ಸಮಾಜದ ಜನರು ನಡಕೊಳ್ಳುತ್ತಾರೆ. ತಪ್ಪಿ ನಡೆದಾಗ ಸಾಮಾಜಿಕರನ್ನು ತಿದ್ದು ಬುದ್ಧಿ ಹೇಳುವ ಗುರುವು ಮಠಕ್ಕೆ ಮಾತ್ರವಲ್ಲ ಸಮಾಜಕ್ಕೆ ಆದರ್ಶ ವ್ಯಕ್ತಿ ಶಕ್ತಿ.

ಅಂತೆಯೆ ಮನೆಗೆ ಹಿರಿಯರು ಬೇಕು. ಕಿರಿಯರಲ್ಲಿ ಉತ್ಸಾಹವಿರುತ್ತದೆ. ಜೀವನಾನುಭವವಿರುವುದಿಲ್ಲ. ಕಿರಿಯರ ಉತ್ಸಾಹ ಲಗಾಮಿಲ್ಲದ ಕಾಡು ಕುದುರೆಯಂತೆ. ಅದನ್ನು ನಿಯಂತ್ರಿಸುವ ಲಗಾಮು ಮನೆಯ ಹಿರಿಯರು. ಸಂಸಾರವೆಂಬ ವೃಕ್ಷದ ಮೂಲ ಬೇರು ಹಿರಿಯರು. ಅದರಲ್ಲಿ ಚಿಗುರಿ ಹೂ ಹಣ್ಣುಗಳನ್ನು ಬಿಡುವವನೇ ಕಿರಿಯರು. ಬೇರಿಲ್ಲದ ಮರ ಚಿಗುರುವುದಿಲ್ಲ. ಮಠಕ್ಕೆ ಗುರುಗಳು, ಮನೆಗೆ ಹಿರಿಯರು ಬರೇ ಭೂಷಣಪ್ರಾಯರಲ್ಲ ಆದರ್ಶಪ್ರಾಯರು, ಆಧಾರಪ್ರಾಯರೂ ಆಗಿದ್ದಾರೆ.

೪೧. ‘ಗೋಳಿತ ಮರತ್ತಡಿತ್ತ ನೆರ್ಲ್‌ದಂಚ’
ಆಲದ ಮರದಡಿಯ ನೆರಳಿನಂತೆ

ತುಂಬಾ ಪ್ರಾಣಿಪಕ್ಷಿಗಳು ಆ ಮರವನ್ನು ಬೇರೆ ಬೇರೆ ಕಾರಣಗಳಿಗಾಗಿ ಆಶ್ರಯಿಸುತ್ತವೆ. ಆ ಮರ ಬಹಳ ದೂರದವರೆಗೆ ತನ್ನ ಕೊಂಬೆಗಳನ್ನು ಚಾಚಿ, ವಿಸ್ತಾರ ಪ್ರದೇಶದಲ್ಲಿ ತನ್ನ ಬೇರುಗಳನ್ನು ಊರಿ ಭದ್ರವಾಗಿ ಉಳಿಯುತ್ತದೆ. ಆಲದ ಮರದಡಿಯಲ್ಲಿ ಇತರ ಗಿಡಗಳು ಬೆಳೆಯಲಾರವು. ಆ ಮರದ ನೆರಳಿನಿಂದಾಗಿ ಅದರಡಿಯ ಗಿಡಗಳು ಬೆಳಕು ಸಾರಗಳಿಲ್ಲದೆ ಸಾಯುತ್ತವೆ. ಆ ದೊಡ್ಡ ಮರ ಸಾರವೆಲ್ಲವನ್ನು ತಾನೇ ಹೀರಿಕೊಳ್ಳುತ್ತದೆ. ಅದು ಹರಡಿದ ಕೊಂಬೆಗಳ ನೆರಳಿನಿಂದಾಗಿ ಉಳಿದ ಗಿಡಗಳಿಗೆ ಬೆಳಕೇ ಇಲ್ಲ. ಕೆಲವು ಪ್ರಸಿದ್ಧ ವ್ಯಕ್ತಿಗಳು ಆಲದ ಮರದಂತೆ ತಾವು ಬೆಳೆಯುತ್ತಾರೆ. ಬೇರೆಯವರನ್ನು ಬೆಳೆಯಗೊಡುವುದಿಲ್ಲ. ಅರೆಜೀವವಾಗಿ ಬದುಕುವವುಗಳಿಗೆ ಆ ದೊಡ್ಡ ಮರದ ಆಶ್ರಯವು ಬೇಕಾಗುತ್ತದೆ. ದಷ್ಟಪುಷ್ಟವಾಗಿ ಬೆಳೆಯಬೇಕಾದ ಗಿಡಗಳು ಆ ಮರದ ಅಡಿಯಿಂದ ದೂರದಲ್ಲಿ ಬೇರೂರಬೇಕು.

೪೨. ‘ಜಂಗಮಗ್ ಜಾತಿ ಇದ್ದಿ, ಗಂಗೆಗ್ ಮಯ್ಲೆ ಇದ್ದಿ.’
ಜಂಗಮಗೆ ಜಾತಿ ಇಲ್ಲ, ಗಂಗೆಗೆ ಹೊಲೆ ಇಲ್ಲ.

ಜಂಗಮರು ಎಲ್ಲಡೆಯಲ್ಲಿಯೂ ಸಂಚರಿಸುವ ಸಾಧು ಸಂತರು. ಅವರಿಗೆ ಜಾತಿಯ ಕಟ್ಟುಪಾಡಿಲ್ಲ. ಅವರು ಎಲ್ಲರಲ್ಲಿಯೂ ಆಹಾರ ಸೇವಿಸುತ್ತಾರೆ. ಮಾನವರೆಲ್ಲರೂ ಸಮಾನರೆಂಬ ವಿಶ್ವ ಕುಟುಂಬಿಗಳಾಗಿ ಬಾಳುತ್ತಾರೆ. ಮುಖ್ಯವಾಗಿ ಶೈವ ಲಿಂಗವಂತ ಸಾಧುಗಳನ್ನು ಜಂಗಮರೆನ್ನುವುದು. ಇವರು ಧಾರ್ಮಿಕ ಕ್ರಾಂತಿ ಆಡಿದವರು. ಹೊಲೆಯ ಮಡಿವಂತನೆಂಬ ಪೂರ್ವಾಚಾರದ ಹಿಂದೂ ಧರ್ಮದ ಪದಗಳಿಗೆ ಹೊಸ ಅರ್ಥವನ್ನು ಜೀವನದಲ್ಲಿ ತೋರಿಸಿಕೊಟ್ಟವರು. ಅವರಿಗೆ ಜಾತಿ ಭೇದವಿಲ್ಲ. ವೇದದ ವರ್ಣಾಶ್ರಮ ಪದ್ಧತಿಯನ್ನು ಇವರು ಅಲ್ಲಗಳೆದರು. ಗಂಗೆಗೆ ‘ಮಯ್ಲೆ’ ಇಲ್ಲ ನೀರು ಕೊಳೆಯನ್ನು ತೊಳೆದು ಶುದ್ಧ ಮಾಡುತ್ತದೆಯಾದುದರಿಂದ, ‘ಹೊಲೆ’ಯ ಕೊಳೆಯು ಗಂಗೆಗೆ ತಟ್ಟುವುದಿಲ್ಲ. ಪವಿತ್ರರಾದವರು ಅಪವಿತ್ರರನ್ನು ಪವಿತ್ರರಾಗಿ ಮಾಡುತ್ತಾರೆ. ಆದುದರಿಂದಲೇ ಗಂಗಾಸ್ನಾನದಿಂದ ಪವಿತ್ರರಾಗುತ್ತೇವೆಂದು ತಿಳಿದುಕೊಂಡಿರುವುದು. ಅಪವಿತ್ರರ ಸಂಪರ್ಕದಿಂದ ಪವಿತ್ರಾತ್ಮವು ಇನ್ನೂ ಪವಿತ್ರವಾಗಿರುತ್ತದೆ ಹೊರತು, ಅಪವಿತ್ರವಾಗಿರುವುದಿಲ್ಲ ಎಂಬ ಉದಾತ್ತತತ್ವ ಇಲ್ಲಿ ಅಡಕವಾಗಿದೆ.

೪೩. ‘ತನ್ನ ಬೆರಿ ತನ್ಕ್ ತೋಜುಜಿ’
ತನ್ನ ಬೆನ್ನು ತನಗೆ ಕಾಣುವುದಿಲ್ಲ

ಪ್ರತಿಯೊಬ್ಬರೂ ತಪ್ಪನ್ನು ಅನ್ಯರಲ್ಲಿ ಹುಡುಕುತ್ತಾರೆ. ತನ್ನ ತಪ್ಪು ತನಗೆ ಗೊತ್ತಾಗುವುದಿಲ್ಲ. ತನ್ನದೆಲ್ಲವೂ ಸರಿ, ಬಾಕಿಯವರದ್ದೇ ತಪ್ಪು ಎಂಬುದು ಆತ್ಮ ಶೋಧನೆ ಮಾಡಿಕೊಳ್ಳದವರ ಅಭಿಪ್ರಾಯ. ದೀಪದಡಿ ಕತ್ತಲೆ ಎಂಬುದಾಗಿ ಹೇಳುತ್ತಾರಲ್ಲ ಹಾಗೆ. ನಮ್ಮ ಬೆನ್ನು ಅನ್ಯರಿಗೆ ಕಾಣಿಸುತ್ತರೆ. ನಮ್ಮ ಕೊರತೆ ಅನ್ಯರಿಗೆ ಕಾಣಿಸುತ್ತದೆ. ಆದುದರಿಂದಲೇ ನಮ್ಮ ನ್ಯೂನತೆಯನ್ನು ತೋರಿಸಿಕೊಡುವವರು, ನಮ್ಮ ಜೀವನವನ್ನು ತೋರಿಸುವ ಕೈ ಕನ್ನಡಿ.

೪೪. ‘ತಿಗಲೆಟ್ ರೋಮೊ ಇದ್ಯತಿ ಆಣನ್
ಮಿರೆ ಇದ್ಯಂತಿ ಪೊಣ್ಣನ್ ನಂಬ್ಯರಬಲ್ಲಿ’
ಎದೆಯಲ್ಲಿ ರೋಮವಿಲ್ಲದ ಗಂಡನ್ನು
ಮೊಲೆ ಇಲ್ಲದ ಹೆಣ್ಣನ್ನು ನಂಬಬಾರದು!

ಗಂಡಿಗೆ ಎದೆಯಲ್ಲಿ ರೋಮವಿರುವುದು, ಹೆಣ್ಣಿಗೆ ಎದೆಯಲ್ಲಿ ಮೊಲೆ ತುಂಬಿರುವುದು ಅವರವರ ಲೈಂಗಿಕ ಗುಣದ ಸಂಕೇತ. ಪ್ರಕೃತಿ ಸಹಜವಾದ ಈ ಅಂಶಗಳು ಇಲ್ಲದಿದ್ದರೆ ಏನೋ ಕೊರತೆ ಇದೆ ಎಂಬುದಾಗಿ ಭಾವಿಸುತ್ತಾರೆ. ಇವುಗಳು ಗಂಡು ಹೆಣ್ಣುಗಳ ಪರಸ್ಪರ ಆಕರ್ಷಣೆಗೂ ಅಗತ್ಯವಾದ ಅಂಶಗಳಾದುದರಿಂದ ಗಾದೆ ರಚಿಸಿ ಹೇಳಿದ್ದಾರೆ. ಪ್ರಕೃತಿ ಧರ್ಮವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ನಮ್ಮ ಹಿರಿಯರು ಇಂತಹ ಗಾದೆಗಳಿಂದ ನಾವು, ಅಂಗ, ಲಿಂಗ ಶಾಸ್ತ್ರಗಳನ್ನು ಅಧ್ಯಯನ ಮಾಡುವಾಗ ನೆರವು ಸಿಗುತ್ತದೆ. ಅವುಗಳು ಸಂಪೂರ್ಣ ಸತ್ಯಗಳಲ್ಲದಿದ್ದರೂ ಸತ್ಯದ ಅಂಶಗಳಾಗಿವೆ. ಇದೇ ರೀತಿಯಲ್ಲಿ ಗಡ್ಡ ಬಾರದ ಗಂಡನ್ನು ಮೀಸೆ ಬಂದ ಹೆಣ್ಣನ್ನು ನಂಬಬಾರದು ಎನ್ನುತ್ತಾರೆ. ನಾವೀಗ ಅವುಗಳು ‘ಹಾರ್ಮೊನು’ಗಳ ಏರುಪೇರಿನಿಂದ ಹಾಗೆ ಆಗುತ್ತದೆ ಎನ್ನುತ್ತೇವೆ. ಅದೇನಿದ್ದರೂ ಆ ವಿಕೃತಿಗಳನ್ನು ನಮ್ಮವರು ಗಮನಿಸಿದ್ದಾರೆ.

೪೫. ‘ತುಚ್ಚುವ ನಾಯಿ ಕೊರೆಪಂದ್, ಕೊರೆಪ್ಪುನ ನಾಯಿ ತುಚ್ಚಂದ್’
ಕಚ್ಚುವ ನಾಯಿ ಬೊಗಳದು, ಬೊಗಳುವ ನಾಯಿ ಕಚ್ಚದು.

ನಾಯಿ ಬೊಗಳುತ್ತ ಬಂದಾಗ ಅದು ಕಚ್ಚುತ್ತದೆ ಎಂದು ನಾವು ಎಚ್ಚರಿಕೆ ವಹಿಸುತ್ತೇವೆ. ಅದು ಕಚ್ಚದ ಹಾಗೆ ಕೈಯಲ್ಲಿ ಕೋಲು, ಕಲ್ಲು ಹಿಡಿದುಕೊಂಡು ಓಡಿಸುತ್ತೇವೆ. ಬೊಗಳದೆ ಮೆಲ್ಲನೆ ಬಂದು ಕಚ್ಚಿಹೋಗುವ ನಾಯಿ ನಮ್ಮ ಗಮನಕ್ಕೆ ಬಾರದೆ ಮೋಸ ಹೋಗುತ್ತೇವೆ. ಈ ಗಾದೆ ಕಚ್ಚುವ ನಾಯಿಗೆ, ಅಥವಾ ಬೊಗಳುವ ನಾಯಿಗೆ ಹೇಳಿದುದಲ್ಲ. ಕೆಲವು ಮಂದಿ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಬಾಯಲ್ಲಿ ಕೊಚ್ಚಿಕೊಳ್ಳುತ್ತಾರೆ. ಕಾರ್ಯದಲ್ಲಿ ಏನೂ ನಡೆಯುವುದಿಲ್ಲ. ಇನ್ನು ಕೆಲವು ಮಂದಿ ಯಾವ ಮಾತು ಆಡದೆ ಏನು ತಿಳಿಯದವರ ಹಾಗಿರುತ್ತಾರೆ. ಅವರು ಕೆಲಸವಾದ ಮೇಲೆ ಕಾಣಿಸಿಕೊಳ್ಳುತ್ತಾರೆ, ಇವರು ನಿಜವಾಗಿಯೂ ಕಚ್ಚುವ ನಾಯಿಗಳು.

೪೬. ‘ತುಡರ್‌ದಡಿ ಏಪೊಲಾ ಕತ್ತಲೆನೆ’
ದೀಪದಡಿ ಯಾವಾಗಲೂ ಕತ್ತಲೆಯೆ

ಮನುಷ್ಯ ಸ್ವಭಾವಕ್ಕೆ ಈ ಗಾದೆ ಬೆಳಕು ಹಿಡಿದು ತೋರಿಸುತ್ತದೆ. ಪ್ರತಿಯೊಬ್ಬನೂ ತಪ್ಪನ್ನು ಅನ್ಯರ ಮೇಲೆ ಹೊರಿಸುತ್ತಾನೆ. ತಾನು ತಪ್ಪು ಮಾಡಿದ್ದರೂ ಅದು ತನ್ನ ತಪ್ಪೆಂದು ಕಾಣಿಸುವುದಿಲ್ಲ. ತನ್ನ ತಪ್ಪು ತನಗೆ ಗೊತ್ತಾಗಬೇಕಿದ್ದರೆ ಬೇರೆಯವರು ತೋರಿಸಿಕೊಡಬೇಕು. ಒಂದು ಸೊಡರಿನ ಅಡಿಯ ಕತ್ತಲೆ ಹೋಗಬೇಕಿದ್ದರೆ ಇನ್ನೊಂದು ದೀಪದ ಬೆಳಕು ಅಲ್ಲಿಗೆ ಬೀಳಬೇಕು. ಆ ದೀಪದ ಬೆಳಕು ಅದರ ಅಡಿಗೆ ಬೀಳುವುದಿಲ್ಲ. ಇದು ಹಳೆಯ ರೀತಿಯ ಕಾಲುದೀಪ. ಸರಮಾಲೆಯಂತಹ ದೀಪಗಳನ್ನು ಉದಾಹರಿಸಿ ಕೊಟ್ಟುದು. ಈ ಗಾದೆಗಳ ಮಾತನ್ನು ಕುತರ್ಕದಿಂದ ಅಲ್ಲಗಳೆಯುವುದು ಸರಿಯಲ್ಲ.

೪೭.‘ದಿಂಜಿತಿ ಕಡ್ಯ ಅಲೆಂಚಂದ್ ಅರ್ದೊ ಕಡ್ಯ ಅಲೆಂಚುನೆ’
ತುಂಬಿದ ಕೊಡ ತುಳುಕದು ಅರ್ಧ ಕೊಡ ತುಳುಕುವುದು

ಅಲ್ಪ ವಿದ್ಯಾ ಮಹಾಗರ್ವಿ ಎಂಬುದಾಗಿ ಹೇಳುತ್ತಾರೆ. ಏನೂ ಇಲ್ಲದವನೂ ಗರ್ವ ಮಾಡುವುದಿಲ್ಲ. ತುಂಬಾ ಪಾಂಡಿತ್ಯ ಉಳ್ಳವನು ಚಂಚಲನಾಗಿರುವುದಿಲ್ಲ. ಮಧ್ಯಮ ತರಗತಿಯ ತಿಳುವಳಿಕೆಯವರು ಹೆಚ್ಚು ಬೀಗಿಕೊಳ್ಳುತ್ತಾರೆ. ಇದು ವಿದ್ಯೆಗೆ ಮಾತ್ರವಲ್ಲ ಸಂಪತ್ತಿಗೂ ಅನ್ವಯಿಸುತ್ತದೆ. ಹಿರಿಯ ಅಧಿಕಾರಿಯನ್ನು ನೀವು ಮಾತನಾಡಿಸಬಹುದು. ಆದರೆ ಕಿರಿಯ ನೌಕರನಲ್ಲಿ ವ್ಯವಹರಿಸುವುದು ಕಷ್ಟ. ಹಾಗೆಂತ ಗಾದೆಗಾರನು ಶ್ರೀಮಂತರ, ಹಿರಿಯ ಅಧಿಕಾರಿಗಳ ಮತ್ತು ಧನಿಕರ ಪಕ್ಷಪಾತಿಯೆಂದು ಹೇಳುವಂತಿಲ್ಲ. ಅವನು ಒಟ್ಟು ಸಮಾಜವನ್ನು ತೂಕ ಮಾಡಿಬಂದ ನಿರ್ಣಯ.

೪೮. ‘ದೀಪೊದ ನಿನೆತ್ತ ಲೆಕ್ಕೊ’
ದೀಪದ ಬತ್ತಿಯ ಹಾಗೆ

ದೀಪಕ್ಕೆ ಹಾಕಿದ ಬತ್ತಿಯು ಉದಿರು, ಮುಗಿದುಹೋಗುತ್ತದೆ. ತಾನು ಉರಿದು ಬೇರೆಯವರಿಗೆ ಬೆಳಕನ್ನು ಕೊಡುತ್ತದೆ. ತನ್ನ ಕಷ್ಟವನ್ನು ಲೆಕ್ಕಿಸದೆ ಪರರಿಗೆ ಉಪಕಾರ ಮಾಡುತ್ತಾ ಜೀವನ ಸವೆಸುವ ತ್ಯಾಗ ಜೀವಿಗಳು ದೀಪದ ಬತ್ತಿಯ ಹಾಗೆ. ತನ್ನ ಕುರಿತು ತನ್ನ ಸಂಸಾರದ ಕುರಿತು ಕಷ್ಟಪಡುವ ಮಂದಿ ಸಾಮಾನ್ಯ. ಆದರೆ ಸಮಾಜಕ್ಕಾಗಿ, ನಾಡಿಗಾಗಿ, ವಿಶ್ವಕಲ್ಯಾಣಕ್ಕಾಗಿ ಮರುಗಿದ, ಜೀವನ ಬಲಿದಾನ ಮಾಡಿದ, ಬುದ್ಧ, ಏಸು, ಗಾಂಧಿಯಂತವರು ದೀಪದ ಬತ್ತಿಯಂತೆ ತಾವು ಉರಿದು ಲೋಕಕ್ಕೆ ಬೆಳಕು ನೀಡಿದವರು. ಆ ಬೆಳಕನ್ನು ಕಾಣದೆ ದೀಪದಡಿಯಲ್ಲಿ ಕತ್ತಲೆಯಿದೆಯೆಂದು ಹೇಳಿದವರೂ ಇದ್ದಾರೆ. ಬೆಳಕು ಕತ್ತಲೆಗಳು ವಿರುದ್ಧ ಮುಖಗಳು.

೪೯. ‘ದೇವೆರ್ ಮರ್ಲಾಂಡ, ದೇವಸ್ತಾನೊ ಮರ್ಲೊ?’
ದೇವರು ಹುಚ್ಚಾದರೆ, ದೇವಸ್ಥಾನ ಹುಚ್ಚೆ?

ಇದು ದೇವರ ಅಸ್ತಿತ್ವವನ್ನು ಪ್ರಶ್ನಿಸುವವರಿಗೆ ಉತ್ತರ ರೂಪವಾಗಿ ಹುಟ್ಟಿದ ಗಾದೆ. ದೇವರೆಂಬುವವರು ಕಾಣುವುದಿಲ್ಲ. ಆದ ಕಾರಣ ದೇವರೆಂಬುದು ಬರೇ ಹುಚ್ಚು, ಅರ್ಥವಿಲ್ಲದ್ದು, ನಂಬಿಕೆಗೆ ದೂರವಾದುದು ಎಂಬುದಾಗಿ ಹೇಳುವ ನಾಸ್ತಿಕವಾದ ಮಾತಾಡುವವರಿದ್ದಾರೆ. ಅವರಿಗೆ ದೇವಸ್ಥಾನವನ್ನು ತೋರಿಸಿ ಹೇಳುತ್ತಾರೆ. ದೇವಸ್ಥಾನವೆಂಬುದು ಕಾಣುತ್ತದೆ. ದೇವರಿಲ್ಲದಿದ್ದರೆ ದೇವಸ್ಥಾನವಿರುತ್ತಿರಲಿಲ್ಲ. ದೇವಸ್ಥಾನವು ಇರುವ ಕಾರಣ ದೇವರು ಇದ್ದಾರೆ. ಇದು ಜನಪದರು ದೇವರು ಇದ್ದಾನೆ ಎಂದು ಸಮರ್ಥಿಸುವುದಕ್ಕೆ ಕೊಟ್ಟ ಅವರದ್ದೆ ಆದ ಉದಾಹರಣೆ. ಹೊರ ನೋಟಕ್ಕೆ ಸರಳವಾಗಿ ಕಂಡುಬಂದರೂ ಒಳಹೊಕ್ಕು ನೋಡಿದಾಗ, ಜನಪದರು ತತ್ವಪ್ರತಿಪಾದನೆಗೆ ಉಪಯೋಗಿಸಿದ ಲೌಕಿಕ ಉದಾಹರಣೆಯ ಸೊಗಸು ಕಾಣಿಸುತ್ತದೆ.

೫೦. ‘ನರಮಾನ್ಯ ಕಣ್ಣ್ ಕಟ್ಟೊಲಿ, ಮಾಯೆದ ಕಣ್ಣ್ ಕಟ್ಯರ ಬಲ್ಲಿ;
ಮನುಷ್ಯರ ಕಣ್ಣು ಕಟ್ಟಬಹುದು, ಮಾಯೆಯ ಕಣ್ಣು ಕಟ್ಟಲು ಸಾಧ್ಯವಿಲ್ಲ

ಕನಕದಾಸರ ಗುರು ವ್ಯಾಸರಾಯರು ಶಿಷ್ಯರನ್ನು ಪರೀಕ್ಷಿಸಲು ಒಬ್ಬೊಬ್ಬರಿಗೆ ಒಂದೊಂದು ಬಾಳೆಹಣ್ಣು ಕೊಟ್ಟರು. ಅದನ್ನು ಯಾರೂ ಕಾಣದಂತೆ ತಿಂದು ಬರಬೇಕೆಂದು ತಿಳಿಸಿದರು. ಶಿಷ್ಯರೆಲ್ಲರೂ ಬೇರೆ ಬೇರೆ ಕಡೆಗಳಲ್ಲಿ ಅವಿತು ಕುಳಿತು ತಿಂದು ಬಂದರು. ಕನಕದಾಸರು ತಿನ್ನಲಾರದೆ ಹಣ್ಣನ್ನು ಹಾಗೇ ಹಿಂದೆ ತಂದರು. ಗುರುಗಳ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಕನಕದಾಸರೊಬ್ಬರೇ. ಉಳಿದವರೆಲ್ಲರೂ ಮನುಷ್ಯರ ಕಣ್ಣು ತಪ್ಪಿಸಿ ತಿಂದಿದ್ದರು. ದೇವರ ಕಣ್ಣು ತಪ್ಪಿಸಲಾರದೆ ಕನಕದಾಸರು ಹಾಗೇ ಹಿಂದೆ ಬಂದಿದ್ದರು. ಅವರು ಮಾಯೆಯ ಕಣ್ಣು ತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಂಡ ಅನುಭಾವಿಗಳು. ಇದೇ ಮಹಾತತ್ವವನ್ನು ಈ ತುಳು ಗಾದೆಯು ಸಾರುತ್ತದೆ. ಮನುಷ್ಯರನ್ನು ವಂಚಿಸಬಹುದು ಮಾಯೆಯನ್ನು ವಂಚಿಸಲು ಸಾಧ್ಯವಿಲ್ಲ.

೫೧. ‘ನೀರ್‌ಡ್ ಉರ್ಚಿಂಡ ಪಿಯಿ ಮಿತ್ತ್ ಬರಂದೆ ಇಪ್ಪಂದ್’
ನೀರಲ್ಲಿ ಹೇಲು ಮಾಡಿದರೆ ಅದು ಮೇಲೆ ಬರದೆ ಇರದು

ಹೇತುದು ತಿಳಿಯಬಾರದೆಂದು ನೀರಿನ ಅಡಿಯಲ್ಲಿ ಹೇತರೆ ಅದು ಮೇಲೆ ತೇಲಿ ಬಂದು ಎಲ್ಲರಿಗೂ ತಿಳಿಯುತ್ತದೆ. ಹೇಲುವಂತಹ ಕೆಲಸವನ್ನು ಮುಚ್ಚಿಡುವುದಕ್ಕೆ ಪ್ರಯತ್ನಿಸಿದರೆ ಅದು ಪ್ರಕಟವಾಗಿಯೇ ಆಗುತ್ತದೆ. ವ್ಯಭಿಚಾರ ಮಾಡಿ ಅದನ್ನು ಅಡಗಿಸುವ ಯತ್ನಮಾಡಿದರೂ ಹೊಟ್ಟೆ ಮೇಲೆ ಬಂದಾಗ ಗುಟ್ಟು ಬಯಲಾಗುತ್ತದೆ. ಲಂಚ ವಂಚನೆಯ ಮೋಸ ಕೆಲಸ ಮಾಡುವವರು ಗುಟ್ಟಾಗಿ ಮಾಡುತ್ತಾರೆ. ಆದರೆ ಅವುಗಳು ಒಂದಲ್ಲ ಒಂದು ದಿನ ಬಯಲಾಗಿ ದುಷ್ಕೃತ್ಯದ ಜಾಲದ ಪತ್ತೆ ಆಗುತ್ತದೆ. ವಂಚನೆಯ ಮುಖವಾಡ ಕಳಚಿ ಬೀಳುತ್ತದೆ.

೫೨. ‘ಪಂಜಿ ತಾಡ್ನಾಯಗ್ ಕುರಿಕ್ಕೆ ತೂನಗ ಪೋಡಿ’
ಹಂದಿ ಹಾದವನಿಗೆ ಗುರಿಕೆ ಕಂಡರೆ ಭಯ

ಬೇಟೆಯಲ್ಲಿ ಹಂದಿ ಗಾಯಗೊಂಡು ಹಾಯಲು ಬರುತ್ತದೆ. ಹಂದಿಯ ಕೋರೆದಾಡೆಗೆ ಸಿಕ್ಕಿ ಬದುಕುವುದೇ ಕಷ್ಟ. ಹಾಗೆ ಬದುಕಿದವನು ಮುಂದೆ ಬೇಟೆಗೆ ಹೋಗುವುದಕ್ಕೇ ಹೆದರುತ್ತಾನೆ. ‘ಕುರಿಕೆ’ ಅಂದರೆ ಬಿಸಿನೀರು ಕಾಯಿಸುವ ಮಣ್ಣಿನ ಪಾತ್ರೆ, ಅದು ಉರುಟಾಗಿ ಮಬ್ಬುಕತ್ತಲೆಯಲ್ಲಿ ದೊಡ್ಡ ‘ಒರ್ಗಲೆ’ ಹಂದಿಯ ಹಾಗೆ ಕಾಣುತ್ತದೆ. ‘ಒರ್ಗೆಲೆ’ ಅಂದರೆ ಕೋರೆ ಬಂದ, ಗಂಡು ಕಾಡು ಹಂದಿ. ಆ ‘ಕುರಿಕೆ’ಯೇ ಹಂದಿಯಾಗಿ ಕಾಣುವುದಕ್ಕೆ ಭಯವೇ ಕಾರಣ. ಹಾವು ಕಚ್ಚಿದವ ಹಗ್ಗವನ್ನು ನೋಡಿ ಹೆದರಿಕೊಳ್ಳುವುದು ಹೀಗೆಯೆ. ಜೀವನದಲ್ಲಿ ಕಷ್ಟಕೋಟಲೆಗಳಿಗೆ ಈಡಾದ ವ್ಯಕ್ತಿ, ಅಂತಹ ಕಷ್ಟವನ್ನು ಸ್ಮರಿಸಿಕೊಂಡು ಹೆದರುತ್ತಾನೆ. ಆರ್ಥಿಕ ನಷ್ಟಕ್ಕೆ ಈಡಾದವ ಮುಂದೆ ಅಂತಹ ಸಂದರ್ಭಗಳಿಂದ ದೂರವಿರುವುದು ಈ ರೀತಿಯ ಭಯದಿಂದ, ಸಾವು ನೋವುಗಳನ್ನು ಕಂಡ ಮನೆಯವರು ಯಾರಿಗಾದರೂ ಸಣ್ಣ ಖಾಯಿಲೆ ಬಂದಾಗ ಗಾಬರಿಯಾಗುತ್ತದೆ.

೫೩. ‘ಪರಿದ ಅಂಗಿಗ್ ಪಾಡ್‌ನಯ್ಟೆ ಕಯ್’
ಹರಿದ ಅಂಗಿಗೆ ಹಾಕಿದಲ್ಲಿ ಕೈ

ಈ ಗಾದೆ ಇತರ ಗಾದೆಗಳೊಂದಿಗೆ ಹೋಲಿಸುವಾಗ ತುಸು ಇತ್ತೀಚೆಗಿನದೆಂದು ಕಾಣುತ್ತದೆ. ಹರಿದ ಅಂಗಿಗೆ ಎಲ್ಲಿ ಬೇಕಿದ್ದರೂ ಕೈ ಹಾಕಬಹುದು. ವ್ಯವಸ್ಥಿತವಲ್ಲದ ಜೀವನ ಹರಿದ ಅಂಗಿಯ ಹಾಗೆ. ಅಂಗಿಗಾದರೂ ಕತ್ತು, ಕೈ, ದೇಹ ಎಂಬುದು ನಿರ್ದಿಷ್ಟವಾದ ಸ್ಥಳದಲ್ಲಿ ಇರುತ್ತದೆ. ಹಾಗಿಲ್ಲದೆ ಎಲ್ಲೆಲ್ಲಿಯೋ ಹೇಗೆ ಹೇಗೋ ಇದ್ದರೆ ಅದಕ್ಕೆ ಜೀವನ ಅನ್ನುವಂತಿಲ್ಲ. ಮನೆಯ ಮಂದಿ ಯಾರು ಹೇಗಿರಬೇಕೋ ಎಲ್ಲಿರಬೇಕೋ ಹಾಗಿದ್ದರೆ ಮಾತ್ರ ಅದು ಸಂಸಾರ. ಇಲ್ಲದೆ ಹೋದರೆ ಬೇಸರ.

೫೪. ‘ಪಾಡಿ ಕುಪ್ಪಸೊ ಲೈತ್‌ಟ ಪೋವೊ?’
ಹಾಕಿದ ಕುಪ್ಪಸ ಹಾರಿದರೆ ಹೋದೀತೆ?

ಮದುವೆಯಾಯಿತು ಆ ಬಳಿಕ ಗಂಡಿಗೆ ಹೆಣ್ಣು ಚೆನ್ನಾಗಿಲ್ಲ ಹೆಣ್ಣಿಗೆ ಗಂಡು ಚೆನ್ನಾಗಿಲ್ಲ ಎಂದರೆ ಅರ್ಥವಿಲ್ಲ. ಮೊದಲಾಗಿಯೇ ತಿಳಿದು ಮಾಡಿಕೊಳ್ಳಬೇಕು. ನಮ್ಮಲ್ಲಿ ಗಂಡು ಹೆಣ್ಣುಗಳು ಪರಸ್ಪರ ತಿಳಿದುಕೊಂಡು, ಆಯ್ಕೆ ಮಾಡಿ ಮದುವೆಯಾಗುವುದಕ್ಕೆ ಹಿಂದೆ ಅವಕಾಶ ಕಮ್ಮಿ ಇತ್ತು. ಆದುದರಿಂದ ಹಿರಿಯರ ಆಯ್ಕೆ. ಯಾರಾದರೂ ರವಕೆ ಹಾಕಿಯಾಗಿದೆ. ಅದೀಗ ಬಿಗಿಯಾಗಿದೆ, ಸಡಿಲವಾಗಿದೆ ಎಂದರೆ ಹಿಂದೆ ಕೊಡುವಂತಿಲ್ಲ. ರವಿಕೆಯನ್ನು ಗುಬ್ಬಿ ಕಳಚಿ, ಕಟ್ಟು ಬಿಚ್ಚಿ ತೆಗೆಯಬೇಕೆ ಹೊರತು ಸುಮ್ಮನೆ ಹಾರಿದರೆ ಕಳಚುವಂತಿಲ್ಲ.

ತಪ್ಪು ಮಾಡಿಯಾಗಿದೆ. ಅದನ್ನು ಜಾಣ್ಮೆಯಿಂದ ನಾಜೂಕಾಗಿ ತಿದ್ದಿಕೊಳ್ಳಬೇಕೆ ಹೊರತು ಒರಟಾಗಿ ವರ್ತಿಸುವುದರಿಂದ, ನೆಗೆದಾಡಿ ಗಲ್ಲು ಮಾಡುವುದರಿಂದ ಏನೇನೊ ಪ್ರಯೋಜನವಿಲ್ಲ.

೫೫. ‘ಪಿತ್ತ್‌ಲ್ತ ಪಜಿರ್ ಮರ್ದತ್ತ್, ಜೋಕುಲೆ ಪಾತೆರೊ ನಂಬಿಗೆ ಅತ್ತ್’
ಹಿತ್ತಲ ಹುಲ್ಲು ಮದ್ದಲ್ಲ, ಮಕ್ಕಳ ಮಾತು ನಂಬುಗೆ ಅಲ್ಲ

ಹಿತ್ತಿಲಗಿಡ, ಹುಲ್ಲು ಮದ್ದು ಬೇರು ಅಂತ ನಮ್ಮ ಹಿರಿಯರು ಉಪಯೋಗಿಸಿ ತಮ್ಮ ಖಾಯಿಲೆಗಳನ್ನು ಗುಣ ಮಾಡಿಕೊಂಡಿದ್ದಾರೆ. ಸಾಧು ಸಂತರು ತಮ್ಮ ಎಳವೆಯಲ್ಲಿಯೇ ಸತ್ಯ ವಾಕ್ಯಗಳನ್ನು, ಜತೆಯಲ್ಲಿ ನಂಬಿಕೆ ವಿಶ್ವಾಸ ಮೂಡುವಂತೆ ಮಾಡಿದ್ದಾರೆ. ಕಾಲವು ಕಳೆದಂತೆ ಈ ನಂಬಿಕೆಗಳಲ್ಲಿ ಅವಿಶ್ವಾಸ ಮೂಡಿತು. ಗಿಡಮೂಲಿಕೆಗಳ ಮದ್ದು, ಆಯುರ್ವೇದ, ಅಜ್ಞಾನಿ ಭಾರತೀಯರ ಪ್ರಯೋಗಗಳೆಂಬುದಾಗಿ ಅರ್ಧ ತಿಳುವಳಿಕೆಯ ನಮ್ಮವರು ಮತ್ತು ಹೊರಗಿನವರು ಪ್ರಚಾರ ಮಾಡಿದರು. ನಮ್ಮ ಪ್ರತಿಭೆಗಳನ್ನು ನಾವು ಗುರುತಿಸದೆ ಇದ್ದಾಗ ಈ ಗಾದೆ ಹುಟ್ಟಿಕೊಂಡಿತು. ಇನ್ನೊಂದು ಮುಖದಿಂದ ನೋಡಿದರೆ, ಹುಲ್ಲು ಮದ್ದಾಗುವುದು; ಮಕ್ಕಳ ಮಾತು ನಂಬಲರ್ಹವಾಗುವುದು ಪರಿಷ್ಕಾರಗೊಂಡಾಗ ಎಂದು ತಿಳಿಯಬೇಕು.

೫೬. ‘ಪೆಜ್ಯರ ತಿಕ್ಕಂಡ್, ಬಿರ್ಕ್‌ತ್ ಪೋಂಡು’
ಹೆಕ್ಕಲು ಸಿಕ್ಕಿತು, ಬಿಸಾಡಿ ಹೋಯ್ತು

ಹಾಗೆ ಸಿಕ್ಕಿದ್ದು ಅಂತೇಹೋಯಿತು ಎನ್ನುವ ಎಲ್ಲಾ ಸಂದರ್ಭಗಳಿಗೆ ಈ ಮಾತು ಒಪ್ಪುತ್ತದೆ. ಹೆಕ್ಕಲು ಸಿಕ್ಕುವುದೂ, ಬಹಳ ಸುಲಭದಲ್ಲಿ ಸಿಕ್ಕುವುದು, ನಾವು ದುಡಿದು ಕಷ್ಟಪಟ್ಟು ಸಂಪಾದಿಸಿದುದನ್ನು ಭದ್ರವಾಗಿ ಕಟ್ಟಿಕೊಳ್ಳುತ್ತೇವೆ. ಅದರೊಂದಿಗೆ ಬೆವರಿನ ಶ್ರಮ ಅಂಟಿಕೊಂಡಿದೆ. ಬಿದ್ದು ಸಿಕ್ಕಿದುದರಲ್ಲಿ ಅಂತಹದೇನೂ ಇಲ್ಲ. ಆದುದರಿಂದ ಅದನ್ನು ಭದ್ರವಾಗಿ ಕಟ್ಟಿಕೊಂಡಿರುವುದಿಲ್ಲ. ಪರಿಣಾಮವಾಗಿ ಅದು ಬಿದ್ದು ಹೋಗುವುದು ಸುಲಭಸಾಧ್ಯ. ತಂದೆ ಮಾಡಿದ ಆಸ್ತಿ ಸಂಪತ್ತು; ಹಿರಿಯರಿಂದ ಬಂದ ಭೂಮಿ ಇವುಗಳನ್ನು ಉಳಿಸಿ ಬೆಳೆಸುವ ಕಾಳಜಿ ಹೆಚ್ಚಿನವರಿಗೆ ಇರುವುದಿಲ್ಲ. ಪರಿಣಾಮವಾಗಿ ಬೇಗನೆ ಕಳಕೊಳ್ಳುತ್ತಾರೆ. ಸುಲಭವಾಗಿ ಸಂಪತ್ತು ಬಂದಾಗ ದುಶ್ಚಟಗಳೂ ಸುಲಭವಾಗಿ ಅಂಟಿಕೊಳ್ಳುತ್ತವೆ. ಸಂಪತ್ತು ಬೇಗ ಕರಗಿಹೋಗುತ್ತದೆ.

೫೭. ‘ಪೆಟ್ಯೆ ಕುಂಡ್‌ನಾಯೆ ತರ್ಕೊಲುಗು ಬರ್ವೆನೊ?’
ಪೆಟ್ಟಿಗೆ ಕದ್ದವನು ಬೀಗದ ಕೈಗೆ ಬಂದಾನೆ?

ಇದಕ್ಕೆ ನೇರವಾದ ಉತ್ತರ ಖಂಡಿತ ಬರಲಿಕ್ಕಿಲ್ಲ ಎಂದು-ಕಳ್ಳ ಮನೆಗೆ ನುಗ್ಗಿ ಪೆಟ್ಟಿಗೆ ಕಂದ್ದುಕೊಂಡು ಹೋಗುವ ಸಾಹಸದ ಕೆಲಸ ಮಾಡಿದ್ದಾನೆ. ಪೆಟ್ಟಿಗೆ ಕದಿಯುವ ಮೊದಲು ಬಾಗಿಲು ಮುರಿದಿರಬೇಕು. ಇಲ್ಲವೆ ಗೋಡೆಗೆ ಕನ್ನ ಕೊರೆದಿರಬೇಕು. ಅಥವಾ ಮಾಡಿನಿಂದ ದಾರಿ ಮಾಡಿಕೊಂಡು ಬಂದಿರಬೇಕು.

ಈ ಗಾದೆ ಪೆಟ್ಟಿಗೆ ಬೀಗದ ಕೈಗಳಿಗಷ್ಟೇ ಸೀಮಿತ ಅರ್ಥವನ್ನು ಹೊಂದಿಲ್ಲ. ದೊಡ್ಡ ಕೆಲಸ ಮಾಡುವ ಶಕ್ತಿಯುಳ್ಳ ಜನರಿಗೆ, ಸಣ್ಣ ಕೆಲಸ ಮಾಡುವುದಕ್ಕೆ ಇನ್ನೊಬ್ಬರ ಸಹಾಯ ಬೇಕಾಗಿಲ್ಲ. ಅವರೆ ಅದನ್ನು ಮಾಡಿ ಮುಗಿಸಬಲ್ಲರು. (ಈ ಗಾದೆಯನ್ನು ಈ ರೀತಿಯ ಉತ್ತಮ ಅರ್ಥದಲ್ಲಿಯೂ ವಿಸ್ತರಿಸಿಕೊಳ್ಳಬಹುದು.)

೫೮. ‘ಪೇರ್‌ಪರ್ನ ಬಾಲೆಲೇ ಬದುಕುಜೊ
ಇಸೊ ಪರ್ನ ಬಾಲೆಲ್‌ ಬದ್‌ಕ್ಯರುಂಡೊ’
ಹಾಲು ಕುಡಿದ ಮಕ್ಕಳೇ ಬದುಕುವುದಿಲ್ಲ
ವಿಷ ಕುಡಿದ ಮಕ್ಕಳು ಬದುಕಲಿಕ್ಕಿದೆಯೆ?

ಮಕ್ಕಳು ಹಾಲುಕುಡಿದು ಬದುಕುತ್ತವೆ. ವಿಷ ಕುಡಿದರೆ ಸಾಯುತ್ತವೆ. ಹಾಲು ಕುಡಿದ ಮಕ್ಕಳು ಸಾಯುತ್ತವೆ ಎಂದರೆ, ವಿಷ ಕುಡಿದವುಗಳು ಬದುಕುವುದು ಖಂಡಿತ ಸಾಧ್ಯವಿಲ್ಲ. ‌ಪ್ರಾಮಾಣಿಕ ಕೆಲಸ ಮಾಡಿದವನು ಕೆಲವು ಸರ್ತಿ ಅಪವಾದಕ್ಕೀಡಾಗುತ್ತಾನೆ. ಹಾಗಿರುವಾಗ ಅಪ್ರಮಾಣಿಕ ವಂಚಕನ ದುಡಿಮೆಗೆ ಅಪವಾದ ಬಾರದಿರಲಿಕ್ಕಿಲ್ಲ. ದುಡಿಮೆಯ, ಶ್ರಮಜೀವನದ ಗಳಿಕೆಯೇ ಕೆಲವೊಮ್ಮೆ ಹಾಳಾಗಿ ಹೋಗುತ್ತದೆ. ಹಾಗಿರುವಾಗ ಮೋಸದ ಗಳಿಕೆಯ ಉಳಿಯುವಂತಿಲ್ಲ. ಸಜ್ಜನರೇ ಕಷ್ಟಕ್ಕೀಡಾಗುತ್ತಾರೆ ಎಂದ ಮೇಲೆ, ದುರ್ಜನರಿಗೆ ಅವರ ದುಷ್ಕೃತದ ಫಲ ತಪ್ಪಲಾರದು. ಈ ಎಲ್ಲಾ ಕಾರಣಗಳಿಂದ ತಪ್ಪಿಗೆ ಶಿಕ್ಷೆಯು ಇದ್ದೇ ಇದೆ ಎಂಬ ನೀತಿ ಅಡಕವಾಗಿದೆ.

೫೯. ‘ಪೊಣ್ಣನ ಕಣ್ಣ್‌ನೀರ್ ಎಲ್ಲಗ್ ಎಡ್ಡೆಅತ್ತ್’
ಹೆಣ್ಣಿನ ಕಣ್ಣೀರು ಮನೆಗೆ ಒಳಿತಲ್ಲ

ಭಾರತೀಯ ಸಂಸ್ಕೃತಿಯು ಹೆಣ್ಣಿಗೆ ಮಹತ್ವದ ಸ್ಥಾನ ಕೊಟ್ಟಿದೆ. ಹೆಣ್ಣು ಸಂತೋಷವಾಗಿರಬೇಕು. ಹೆಣ್ಣಿಗೆ ಗೌರವ ಪವಿತ್ರತೆಯನ್ನು ಕೊಟ್ಟು ಪೂಜನೀಯ ಸ್ಥಾನದಲ್ಲಿಟ್ಟ ಹಿಂದೂ ಧರ್ಮ, ಆಕೆಯನ್ನು ದಾಸ್ಯಕ್ಕೆ ತಳ್ಳಿದೆ ಎಂಬವರೂ ಇದ್ದಾರೆ. ಅದೇನಿದ್ದರೂ ಹೆಣ್ಣನ್ನು ಜೋಪಾನ ಮಾಡಬೇಕು. ಆಕೆ ಕಣ್ಣೀರು ಸುರಿಸಬಾರದು. ಆಕೆಯ ಕಣ್ಣೀರು ಮನೆಗೆ ಅಶುಭವನ್ನುಂಟುಮಾಡುತ್ತದೆ. ಇದು ನಮ್ಮವರು ಹೆಣ್ಣುನ ಮಹತ್ವವನ್ನು ಕಂಡ ರೀತಿ. ಇದೇ ಅಭಿಪ್ರಾಯವನ್ನು ನಮ್ಮ ಸಂಸ್ಕೃತ ಸುಭಾಷಿತಗಾರರು, ನೀತಿ, ಧರ್ಮ ಪ್ರವರ್ತಕರುಗಳೂ ಸಾರಿದ್ದಾರೆ. ಒಂದು ಹೆಣ್ಣು ಕಣ್ಣೀರು ಸುರಿಸುವುದರಿಂದ ಆ ಇಡೀ ಮನೆಗೆ ಯಾಕೆ ಊರಿಗೇ ಒಳ್ಳೆಯದಲ್ಲ ಎಂಬುದಾಗಿ ನಮ್ಮ ಹಿರಿಯರು ತಿಳಿದು ಬಾಳಿದವರು.

೬೦. ‘ಬನ್ನಗ ಬತ್ತಲೆ, ಪೋನಗ ಕತ್ತಲೆ’
ಬರುವಾಗ ಬೆತ್ತಲೆ, ಹೋಗುವಾಗ ಕತ್ತಲೆ

ಹುಟ್ಟಿ ಬರುವಾಗ ಬೆತ್ತಲೆಯಾಗಿ ಬಂದಿರುತ್ತೇವೆ. ಇಹಲೋಕಕ್ಕೆ ಕಾಲಿಟ್ಟ ಮೇಲೆ ಎಲ್ಲಾ ಆಭರಣ ಅಲಂಕಾರಗಳನ್ನೂ ಪಡೆಯುತ್ತೇವೆ. ಬಂಧು-ಬಳಗ ಇಷ್ಟ ನೆಂಟರೆಲ್ಲಾ ಆಗುತ್ತಾರೆ. ಲೌಕಿಕ ಬಂಧನಗಳಲ್ಲಿ ಸಿಲುಕಿಕೊಳ್ಳುತ್ತೇವೆ. ಈ ಉಡುಗೆ ತೊಡುಗೆಗಳ ಬಂಧನದಿಂದ ಬಿಡಿಸಿಕೊಂಡು ಹೊರಡುವ ಸಮಯ ಬಂದಾಗ ಕತ್ತಲು ಕವಿಯುತ್ತದೆ. ದಾರಿ ಗುರಿ ಒಂದೂ ಕಾಣಿಸುವುದಿಲ್ಲ, ಬರುವಾಗ ಏನನ್ನೂ ತಾರದೆ, ಹೀಗೆ ಬಂದ ನಾವು ಇಲ್ಲಿ ಎಲ್ಲವನ್ನೂ ಗಳಿಸಿದ್ದೇವೆ. ಬಳಸಿಕೊಂಡಿದ್ದೇವೆ. ಸುಖ ಸಂತೋಷದಿಂದ ಮೆರೆದಿದ್ದೇವೆ. ಆದರೆ ಹೋಗುವ ಕಾಲಕ್ಕೆ ಕತ್ತಲು ತುಂಬಿದ ದಾರಿ, ಆ ಬಗ್ಗೆ ಯೋಚಿಸಿಲ್ಲ.

೬೧. ‘ಬಾಯಿ ಪಾತೆರೊಟು ಬಂಜಿ ದಿಂಜಂದ್’
ಬಾಯಿ ಮಾತಿನಿಂದ ಹೊಟ್ಟೆ ತುಂಬದು

ಬಾಯಿಯಲ್ಲಿ ಸಿಹಿ ಮಾತಾಡಿದರೆ ಹಸಿದ ಹೊಟ್ಟೆ ತಣಿಯುವಂತಿಲ್ಲ. ಮಹಾ ಚುನಾವಣೆ ಮತ್ತು ಇನ್ನಿತರ ಮಧ್ಯಕಾಲಿಕ ಚುನಾವಣೆಗಳ ಸಂದರ್ಭದಲ್ಲಿ ಜನತೆಗೆ ನೀಡುವ ಮಾತಿನ ಭರವಸೆಯಷ್ಟೆ ಸಾಲದು. ಅಂತಹ ಮಾತುಗಳಿಂದ ಜನತೆಯ ಏಳಿಗೆಯಾಗುವುದಿಲ್ಲ. ಅದಕ್ಕೆ ಕಾಳಜಿಯಿಂದ ಕೂಡಿದ ದುಡಿಮೆಯಾಗಬೇಕು. ಹಸಿದ ಹೊಟ್ಟೆಗೆ ಪ್ರಥಮ ಬೇಡಿಕೆ ಅನ್ನ. ಅದರ ಕೊರತೆ ನೀಗದೆ ನಿಮ್ಮ ಯಾವ ಆದರ್ಶದ ಮಾತಾಗಲಿ, ರಾಷ್ಟ್ರಪ್ರೇಮದ ಸಿಹಿ ಗುಳಿಗೆಯಾಗಲಿ ಅರ್ಥಹೀನವಾಗುತ್ತವೆ.

೬೨. ‘ಬುಲೆ ಆಪಿ ಕಂಡೊ ಆವೊಡು, ಕಪ್ಪು ಬುಡೆದಿ ಆವೊಡು’
ಬೆಳೆಯಾಗುವ ಗದ್ದೆ ಆಗಬೇಕು, ಕಪ್ಪು ಹೆಂಡತಿ ಆಗಬೇಕು

ಈ ಮಾತು ಹೆಚ್ಚು ಔಚಿತ್ಯಪೂರ್ಣವಾದುದು. ಫಲ ಕೊಡುವ ಭೂಮಿಯಂತೆ ಕಪ್ಪು ಹೆಂಡತಿ-ಪತ್ನಿ ಪ್ರದರ್ಶನಕ್ಕಿರುವ ವಸ್ತುವಲ್ಲ. ಆಕೆ ಸಂಸಾರವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕಾದ ಗೃಹಿಣಿ. ರೂಪವತಿ ಪತ್ನಿಯು ಶತ್ರುವಾಗುತ್ತಾಳೆ ಎಂಬುದಾಗಿ ಹಿರಿಯರ ಮಾತಿದೆ. ಅಂದರೆ ಕಪ್ಪು ಮಣ್ಣು ಬೆಳೆಗೆ ಒಳ್ಳೆಯರು. ಕಪ್ಪು ಹೆಂಡತಿ ಸಂಸಾರಕ್ಕೆ ಒಳ್ಳೆಯರು. ರೂಪವತಿ ಪತ್ನಿ ಗಂಡನನ್ನು ಕಡೆಗಣಿಸಬಹುದು. ಅವಳ ರೂಪವನ್ನು ಬಣ್ಣವನ್ನು ಪರಪುರುಷರು ಬಯಸುವುದರಿಂದ ಕಿರುಕುಳ ಉಂಟಾಗಬಹುದು. ಆದರೆ ಕರೇ ಬಣ್ಣದವಳಾದರೆ ಯಾವ ತೊಡಕು ಇಲ್ಲ. ಇಲ್ಲವೂ ಅನುಕೂಲ ಎಂಬ ಅಭಿಪ್ರಾಯ. ಬಾಹ್ಯ ರೂಪಕ್ಕಿಂತ ಆಂತರಿಕ ಸೌಂದರ್ಯ ಗುಣವೇ ಮುಖ್ಯ ಎಂಬುದು ಇಲ್ಲಿನ ಭಾವನೆ. ಹೊರಗಿನ ಕಪ್ಪಿನಲ್ಲೂ ಒಳಗಿನ ಬೆಳಕು ಇರುತ್ತದೆ. ಆ ಪ್ರಕಾಶವನ್ನು ತಿಳಿಯಬೇಕು.

೬೩. ‘ಬೆಚ್ಚೊ ಪಾಯಿಸೊಟು ಕಯ್ ಪೊತ್ತಾವೊನ್ನ
ಬಾಲೆ ಬೆಂಞನೊ ಉರಿತ್ತ್ ಪರಂಡ್‌’

ಬಿಸಿ ಪರಮಾನ್ಯದಲ್ಲಿ ಕೈಸುಟ್ಟುಕೊಂಡ ಮಗು ಮೊಸರು ಊದಿ ಕುದಿಯಿತು.

ಈ ಗಾದೆ ಕೇಳುವಾಗ ನಮಗೆ ತೆನ್ನಾಲಿರಾಮ ಬೆಕ್ಕಿನ ಕಥೆ ನೆನಪಾಗುತ್ತದೆ. ಶ್ರೀ ಕೃಷ್ಣದೇವರಾಯ ಬೆಕ್ಕು ಸಾಕುವುದಕ್ಕೆ ಹಾಲಿಗಾಗಿ ದನವನ್ನು ಎಲ್ಲರಿಗೂ ಕೊಟ್ಟಂತೆ ತೆನ್ನಾಲಿ ರಾಮಕೃಷ್ಣನಿಗೂ ಕೊಟ್ಟಿದ್ದ. ಅವ ಬೆಕ್ಕಿಗೆ ಕೊಡುವ ಹಾಲನ್ನು ತಾನು ಕುಡಿದ. ಅವನ ಬೆಕ್ಕು ಹಾಲೇ ಕುಡಿಯುವುದಿಲ್ಲ. ಒಂದು ದಿನ ಕುದಿಯುವ ಹಾಲಿಗೆ ಮುಸುಡು ಹಾಕಿದ ಆ ಬೆಕ್ಕು ಹಾಲಿನ ಪಾತ್ರೆ ಕಂಡರೆ ಓಡುವಂತೆ ಮಾಡಿದ್ದು. ಹಾಲು ಕುಡಿಯದ ಕಾರಣ ಬೆಕ್ಕು ಬಡಕಲಾಗಿದೆ ಎಂಬ ಕಾರಣದಿಂದ ಸ್ಪರ್ಧೆಯಲ್ಲಿ ತೆನ್ನಾಲಿ ರಾಮನಿಗೇ ಬಹುಮಾನ ಸಿಕ್ಕಿತ್ತು. ಇಲ್ಲಿ ನಡೆದುದೂ ಹಾಗೆಯೆ. ಬಿಸಿ ಪರಮಾನ್ನಕ್ಕೆ ಕೈ ಹಾಕಿ ಸುಟ್ಟುಕೊಂಡ ಮಗು ಮತ್ತೆ ಎಲ್ಲವನ್ನು ತಣಿಸಿ ಕುಡಿಯಬೇಕೆಂಬುದಾಗಿ ನಿರ್ಣಯಿಸುತ್ತದೆ. ಪರಿಣಾಮವಾಗಿ ಮೊಸರನ್ನೂ ತಣಿಸಿ ಕುಡಿಯಬೇಕೆಂದು ಊದಿ ತಣಿಸುತ್ತದೆ. ಒಂದು ಕೆಲಸಕ್ಕೆ ಕೈ ಹಾಕಿ ಸೋತು ಹೋದ ವ್ಯಕ್ತಿ ಮುಂದೆ ಇನ್ನೊಂದು ಕೆಲಸಕ್ಕೆ ಕೈ ಹಾಕುವ ಸಾಹಸ ಮಾಡುವುದಿಲ್ಲ. ಭಯದಿಂದ ಸಾಹಸ ಪ್ರವೃತ್ತಿ ಕುಗ್ಗುತ್ತದೆ. ಅಲ್ಪಜ್ಞಾನ ಅಪಾಯ. ವಿಮರ್ಶೆಯಿಂದ ನಿರ್ಣಯಕ್ಕೆ ಬರಬೇಕು.