ಹೆಚ್ಚಾಗಿ ತುಳುನಾಡಿನ ನಲಿಕೆ ಜನಾಂಗದವರಲ್ಲಿ ಕಾಣಿಸುವ ಜನಪದ ಕುಣಿತ ಪ್ರಧಾನವಾದ ಒಂದು ಕಲಾರೂಪ ‘ಆಟಿಕಳೆಂಜ’. ಆಟಿ ಅಥವಾ ಆಷಾಢ ತಿಂಗಳಿನಲ್ಲಿ ಪ್ರಚಲಿತವಾಗಿರುವ ಕಲೆಯಾಗಿರುವುದರಿಂದ ಇದಕ್ಕೆ ‘ಆಟಿಕಳೆಂಜ’ ಎಂಬ ಹೆಸರು ಬಂದಿದೆ. ‘ಕಳೆಂಜ’ ಎನ್ನುವುದು ಒಂದು ವಿಧದ ಭೂತದ ಪರಿಕಲ್ಪನೆಯಿಂದ ಬಂದಿದೆ.

ನಲಿಕೆಯವರು ಆಟಿ ತಿಂಗಳಿನಲ್ಲಿ ಆಟಿಕಳೆಂಜನ ವೇಷ ಹಾಕಿ ಮನೆಗೆ ಬಂದು ಕುಣಿಯುತ್ತಾರೆ. ‘ಊರಿಗೆ ಬಂದ ಮಾರಿಯನ್ನು, ರೋಗರುಜಿನಗಳನ್ನು ಅಟ್ಟಲು ಆಟಿಕಳೆಂಜ ಬಂದಿದ್ದಾನೆ’ ಎನ್ನುವುದು ಜನಪದರ ನಂಬಿಕೆ. ಕಾಲಿಗೆ ಚಿಕ್ಕ ಗಗ್ಗರ, ಸೊಂಟಕ್ಕೆ ಕಟ್ಟಿದ ಕೆಂಪು ಮತ್ತು ಬಿಳಿ ಪಟ್ಟಿಗಳಿರುವ ಲಂಗ, ಅದರ ಮೇಲೆ ಎಳತು ತೆಂಗಿನಗರಿಯ ಜಾಲರಿಯಂತಹ ಅಲಂಕಾರ(ತಿರಿ), ತಲೆಗೆ ಅಡಿಕೆ ಹಾಳೆಯಿಂದ ಮಾಡಿದ ಉದ್ದನೆಯ ಟೊಪ್ಪಿಗೆ, ಹಣೆಗೆ ಕಂಚಿನ ಕೇದಗೆ ಮುಂದಲೆ, ಮೈಗೆ ಹಾಗೂ ಮುಖಕ್ಕೆ ಬಳಿದ ಕೆಂಪು ಹಾಗೂ ಬಿಳಿ ಬಣ್ಣದ ರೇಖೆಗಳು, ಮುಖಕ್ಕೆ ಕಪ್ಪು ಮೀಸೆ, ಕೈಯಲ್ಲಿ ತಾಳೆಗರಿಯ ಕೊಡೆ (ತತ್ರ)- ಈ ರೀತಿ ಅಲಂಕಾರ ಮಾಡಿಕೊಂಡ ಆಟಿಕಳಂಜನು ಊರಿನ ಜನರ ಮನೆ ಮನೆಯ ಮುಂದೆ ಬರುತ್ತಾನೆ. ನಲಿಕೆಯ ಹೆಣ್ಣೊಬ್ಬಳು ತೆಂಬರೆ ಬಾರಿಸುತ್ತಾ ಆಟಿಕಂಜನ ಹಾಡನ್ನು ಹಾಡುತ್ತಾಳೆ. ಆಟಿಕಳೆಂಜನು ಕೈಯಲ್ಲಿರುವ ತಾಳೆಗರಿಯ ಕೊಡೆ ಅಂದರೆ ‘ತತ್ತ’ವನ್ನು ಗರಗರನೆ ತಿರುಗಿಸುತ್ತ ತೆಂಬರೆಯ ನಾದದ ಗತಿಗೆ ಸರಿಯಾಗಿ ಕುಣಿಯುತ್ತಾನೆ. ಆಟಿಕಳೆಂಜ ಹಾಡಿನ ಬೇರೆ ಬೇರೆ ಪಾಠಗಳು ದೊರೆಯುತ್ತವೆ.

ಆಟಿಕಳೆಂಜ ಹಾಡಿನ ಎಲ್ಲಾ ಪಾಠಗಳಲ್ಲೂ ಸಮಾನವಾದ ವಿಚಾರ ಇಷ್ಟು:

ಆಟಿಕಳೆಂಜ ಆಷಾಢ ಮಾಸದಲ್ಲಿ ಮನೆ ಮನೆಗೆ ಬಂದು ‘ಮಾರಿ’ಯನ್ನು ನಿವಾರಿಸುತ್ತಾನೆ. ಮೂಡಣದ ಮಾರಿಯನ್ನು ಮೂಡಣದೂರಿಗೆ ಸಾಗಿಸುತ್ತಾನೆ. ಮನುಷ್ಯರಿಗಾಗಲೀ, ಪ್ರಾಣಿಗಳಿಗಾಗಲೀ ಬರುವ ಕಾಯಿಲೆಯನ್ನು ನಿವಾರಣೆ ಮಾಡುವ ಮಾಂತ್ರಿಕನಂತೆ ‘ಕಳೆಂಜ’ ಇಲ್ಲಿ ಕಾಣಿಸಿಕೊಳ್ಳುತ್ತಾನೆ. ಮನುಷ್ಯರಿಗೆ, ಜಾನುವಾರುಗಳಿಗೆ, ಬೆಳೆಗಳಿಗೆ ಬಂದ ಮತ್ತು ಬರುವ ರೋಗವನ್ನು ನಿವಾರಿಸುವ ಕೆಲಸವನ್ನು ಇಲ್ಲಿನ ಕಳೆಂಜನು ಕೈಗೊಂಡಿದ್ದಾನೆ.

‘ಆಟಿಕಳೆಂಜ’ ಸಂಪ್ರದಾಯದಲ್ಲಿ ಕನಿಷ್ಠತಮ ಘಟಕ-‘ಮಾರಿ ಕಳೆಯುವುದು’. ‘ಆಟಿಡ್‌ಬತ್ತೇನೋ ಕಳೆಂಜೆ, ಮಾರಿ ಕಳೆಪ್ಪೆನೋ ಕಳೆಂಜೆ’ (ಆಷಾಢದಲ್ಲಿ ಬಂದನೋ ಕಳೆಂಜ ಮಾರಿ ಕಳೆಯುತ್ತಾನೋ), ‘ಮಾರಿ ಕಳೆಪ್ಪೆನೋ ಕಳೆಂಜೆ’ (ಮಾರಿ ಗಳೆತ್ತಾನೋ ಕಳೆಂಜ), ‘ನಾನಾ ಪೋಪೇಂದ್‌ಕಳೆಂಜೆ ಮಾರಿಗಳೆಯರೆ, ಮೂವೊಡು ಈ ಕಾಲೊಡು ಕಳೆಂಜ ಮಾರಿ ಕಳೆಯುತ್ತಾನೆ ಕಳೆಂಜ; ಈವೊಡು ಈ ಕಾಲೊಡು ಕಳೆಂಜ ಮಾರಿಗಳೆಪ್ಪೊಡೊ ಕಳೆಂಜ’

(ಇನ್ನು ಹೋಗುತ್ತೇನೆಂದ ಕಳೆಂಜನು ಮಾರಿ ಕಳೆಯಲು, ಕಳೆದ ವರ್ಷ ಈ ಕಾಲದಲ್ಲಿ ಮಾರಿ ಕಳೆದವನು ಕಳೆಂಜ, ಈ ವರ್ಷ ಈ ಕಾಲದಲ್ಲಿ ಕಳೆಂಜ ಮಾರಿ ಕಳೆಯಬೇಕು ಕಳೆಂಜ.) ಇಂತಹ ಮಾತುಗಳು ಆಟಿಕಳೆಂಜದ ಹಾಡಿನಲ್ಲಿ ಬೇರೆ ಬೇರೆ ಪಾಠದಲ್ಲಿ ಬರುತ್ತವೆ.

ಮನುಷ್ಯರಿಗಾಗಲೀ, ಪ್ರಾಣಿಗಳಿಗಾಗಲೀ ಬರುವ ಮಾರಿಯನ್ನು (ರೋಗವನ್ನು) ನಿವಾರಣೆ ಮಾಡುವ ಅಥವಾ ಪರಿಹಾರ ಆಡುವ ‘ಮಾಂತ್ರಿಕತೆ’ಯು ‘ಆಟಿ ಕಳೆಂಜ’ದ ತಿರುಳು ಅಥವಾ ಕೆಚ್ಚು. ಇಂತಹ ಮಂತ್ರವಿದ್ಯೆಯ ಕೆಲಸವನ್ನು ಮಾಡುವ ಮಂತ್ರವಾದಿಯಾಗಿ ಆಟಿಕಳೆಂಜ ಕಾಣಿಸಿಕೊಳ್ಳುತ್ತಾನೆ. ‘ಮಾರಿ’ ಎನ್ನುವುದಕ್ಕೆ ‘ರೋಗ’ ಎನ್ನುವ ಅರ್ಥ ರೂಢಿಯಾಗಿದೆ. ಹಿಂದೆ ಹಳ್ಳಿಗಳನ್ನು ಬಾಧಿಸುತ್ತಿದ್ದ ಸಿಡುಬು, ಕೊಲೆರಾ, ಪ್ಲೇಗು ಮುಂತಾದ ಸಾಂಕ್ರಾಮಿಕ ರೋಗಗಳನ್ನು ‘ಮಾರಿ ರೋಗ’ ಎಂದು ಕರೆಯುತ್ತಿದ್ದರು. ಈ ರೋಗಗಳು ಉಂಟಾಗಲು ಯಾವುದೋ ಗ್ರಾಮ ದೇವತೆಯೇ ಕಾರಣ, ಆಕೆಯ ಕೋಪವನ್ನು ಶಮನ ಮಾಡಿ, ಅವಳಿಗೆ ಬಲಿಗಳನ್ನು ಅರ್ಪಿಸಿ ಮಾರಿ ಹಬ್ಬಗಳನ್ನು ಆಚರಿಸಿದರೆ, ಈ ರೋಗಗಳನ್ನು ನಿವಾರಿಸಬಹುದೆಂಬುದು ಜನಪದರ ನಂಬಿಕೆಯಾಗಿತ್ತು.

‘ಮಾರಿ’ ಎನ್ನುವ ಪದಕ್ಕ ‘ದೊಡ್ಡದು’. ಎನ್ನುವ ಅರ್ಥ ಮೂಲದ್ದು ಎಂದು ಅನ್ನಿಸುತ್ತದೆ. ಮಾರಿಕಿದೆ (ದೊಡ್ಡ ಹಟ್ಟಿ), ಮಾರಿಬಲೆ (ದೊಡ್ಡ ಬಲೆ) ಇಲ್ಲಿ ಬರುವ ‘ಮಾರಿ’ ಪದಕ್ಕೆ ‘ದೊಡ್ಡದು’ ಎನ್ನುವ ಅರ್ಥ ಸ್ಪಷ್ಟವಾಗಿದೆ. ‘ಮಹಾ’ ಎನ್ನುವ ಪದವೇ ‘ಮಾ’ ಎಂದಾಗುತ್ತದೆ. ಆದ್ದರಿಂದ ‘ದೊಡ್ಡ ರೋಗ’, ‘ಸಾಂಕ್ರಾಮಿಕ ರೋಗ’, ‘ಊರೆಲ್ಲಾ ಹರಡುವ ಬಹು ಮಂದಿಯನ್ನು ಬಲಿ ತೆಗೆದುಕೊಳ್ಳುವ ರೋಗ’ಗಳಿಗೆ ‘ಮಾರಿ ರೋಗ’ ಎಂಬ ಹೆಸರು ಬಳಕೆಯಾಗಿರಬೇಕು. ಈ ‘ಮಾರಿ ರೋಗ’ವನ್ನು ಜನರಿಗೆ, ಜಾನುವಾರುಗಳಿಗೆ ತಂದು ಹಾಕುವ ಅಂದರೆ ಉಂಟುಮಾಡುವ ಎಂದು ಭಾವಿಸಲಾದ ದೇವತೆಯನ್ನು ‘ಮಾರಿ’. ‘ಮಾರಿಯನ್ನು’ ಎಂದು ಕರೆದರು.

ತುಳು ತಿಂಗಳಾದ ‘ಅಟ್ಟಿ’ (ಆಷಾಢ)ಯಲ್ಲಿ ಆಟಿಕಳೆಂಜನು ಮನೆ ಮನೆಗೆ ಬಂದು ಮಾರಿ ಕಳೆಯುವುದು ಮುಖ್ಯವಾಗಿದೆ. ‘ಆಟಿ’ಯು ಮಳೆಗಾಲದ ಆರಂಭದ ತಿಂಗಳು. ‘ಬೇಸಗೆ ಕಾಲ’ ಮತ್ತು ‘ಮಳೆಗಾಲ’ಗಳ ನಡುವೆ ಆಟಿ ತಿಂಗಳು ಆರಂಭವಾಗುತ್ತದೆ. ಮಿಥುನ ಸಂಕ್ರಮಣ ಬರುವುದು ಜೂನ್ ತಿಂಗಳ ಕೊನೆಯ ಭಾಗದಲ್ಲಿ. ಆ ವೇಳೆಗೆ ಮಳೆಗಾಲ ಆರಂಭವಾಗಿರುತ್ತದೆ. ಹೀಗೆ ಬೇಸಗೆ ಕಾಲ ಕಳೆದು ಮಳೆಗಾಲ ಆರಂಭವಾಗುವ ಈ ‘ಸಂಕ್ರಮಣ’ ಕಾಲವು ‘ಆಟಿಕಳೆಂಜ’ ಸಂಪ್ರದಾಯದ ರಾಚನಿಕ ವಿಶ್ಲೇಷಣೆಯಲ್ಲಿ ಬಹಳ ಮುಖ್ಯವಾಗಿದೆ. ಎರಡು ವಿರುದ್ಧ ಪ್ರಕಾರ/ ವರ್ಗಗಳ ನಡುವಿನ ‘ಸಂಕ್ರಮಣ’ ಅಥವಾ ‘        ಸ್ಥಿತ್ಯಂತರ ಸ್ಥಿತಿ’ಯು (Transistion between opposed categories) ಜನರಲ್ಲಿ ಆತಂಕ, ಭಯ ಅಥವಾ ಸಂತೋಷದ ಭಾವನೆಗಳನ್ನು ಉಂಟುಮಾಡುತ್ತದೆ. ಈ ದೃಷ್ಟಿಯಿಂದ ಗಮನಿಸಿದಾಗ ಸೌರಮಾನ ಪದ್ಧತಿಯಂತೆ ಕಾಲಮಾಪನ ಮಾಡುವ ತುಳುವ ಸಂಸ್ಕೃತಿಯಲ್ಲಿ ಸಂಕ್ರಮಣ (ಸ್ಥಿತ್ಯಂತರ)ವು ವಿಶೇಷ ಮಹತ್ವವನ್ನು ಪಡೆದಿರುವುದು, ಆಚರಣೆ ಹಬ್ಬಗಳನ್ನು ಹೊಂದಿರುವುದು ಮುಖ್‌ಉವೆನಿಸುತ್ತದೆ. ಅದರಲ್ಲಿಯೂ ಮಳೆಗಾಲದ ಆರಂಭವಾದ ಬಳಿಕದ ಸಂಕ್ರಮಣ ಹಾಗೂ ಅನಂತರದ ತಿಂಗಳು ‘ಆಟಿ’ಯು ಹವಾಮಾನದ ಸ್ಥಿತ್ಯಂತರದ ದೃಷ್ಟಿಯಿಂದಲೂ ಅಧ್ಯಯನ ಯೋಗ್ಯವಾದುದು. ಬೇಸಗೆ ಮತ್ತು ಮಳೆಯಂತಹ ಎರಡು ವಿರುದ್ಧ ಋತುಗಳು ಒಂದರ ಬಳಿಕ ಇನ್ನೊಂದು ಬಂದಾಗ, ಹವಾಮಾನದ ವ್ಯತ್ಯಾಸವು ಮನುಷ್ಯನ ಬದುಕಿನ ಮೇಲೆ ಪರಿಣಾಮವನ್ನುಂಟುಮಾಡುತ್ತದೆ. ಅವುಗಳಲ್ಲಿ ಬಹಳ ಮುಖ್ಯವಾದದ್ದು ರೋಗಗಳು. ಸೂರ್ಯನ ಬಿಸಿಲಿನಲ್ಲಿ ಇರಲು ಅಸಾಧ್ಯವಾದ ಬ್ಯಾಕ್ಟೀರಿಯಾದ ಕ್ರಿಮಿಗಳು ಮಳೆಗಾಲದಲ್ಲಿ ನೀರಿನ ತೇವದಲ್ಲಿ ಆಶ್ರಯ ಪಡೆದು ಕ್ರಿಯಾಶೀಲವಾಗುತ್ತವೆ. ಬಹಳ ಬೇಗನೆ ತಮ್ಮ ಚಟುವಟಿಕೆಗಳಿಂದ ರೋಗಗಳನ್ನುಂಟುಮಾಡಿ ಅದಕ್ಕಿಂತಲೂ ಬೇಗನೆ ಅವು ಹರಡುವಂತೆ ಮಾಡುತ್ತವೆ. ಇಂತಹ ರೋಗಗಳನ್ನು ನಿವಾರಿಸಲು ಮಂತ್ರವಿದ್ಯೆಯ ಮೊರೆಹೋಗುತ್ತಿದ್ದ ಜನಪದದ ಸಂತೃಪ್ತಿಗಾಗಿ ಆಟಿಕಳೆಂಜದ ಪರಿಕಲ್ಪನೆ ಹುಟ್ಟಿಕೊಂಡಿರಬಹುದು. ಎರಡು ವಿಭಿನ್ನ ಋತುಗಳ ಸಂಕ್ರಮಣದ ಸಂದರ್ಭದಲ್ಲಿ ಜನಪದದ ಮನಸ್ಸಿನಲ್ಲಿ ಹುಟ್ಟಿಕೊಳ್ಳಬಹುದಾದ ವೈರುಧ್ಯಗಳನ್ನು ನಿವಾರಿಸಿ ಮಾನಸಿಕ ಸಮಸ್ಥಿತಿಯನ್ನು ಉಂಟುಮಾಡುವುದು ಆಟಿಕಳೆಂಜದಂತಹ ‘ಮಾಂತ್ರಿಕ ಜನಪದ ಕಲೆ’ಯ ಉದ್ದೇಶವಾಗಿತ್ತೆಂದು ಕಾಣಿಸುತ್ತದೆ.

ಆಟಿಕಳೆಂಜನ ವೇಷಭೂಷಣಗಳನ್ನು ಮತ್ತು ಹಾಡಿನಲ್ಲಿ ಆತನ ಚಿತ್ರಣವನ್ನು ಗಮನಿಸಿದಾಗ, ಕೆಲವು ಅಂಶಗಳು ಗಮನ ಸೆಳೆಯುತ್ತವೆ. ಭೂತಾರಾಧನೆಯ ವೇಷಭೂಷಣಗಳಾದ ಗಗ್ಗರ, ತಿರಿ ಮುಂತಾದವುಗಳ ಜೊತೆಗೆ ‘ಓಲೆತತ್ರ’ (ತಾಳೆಗರಿಯ ಕೊಡೆ)ವು ಆಟಿಕಳೆಂಜನ ಪರಿಕರಗಳ ಅಂಗವಾಗಿದೆ. ಹಾಡಿನಲ್ಲಿ ಪೊಂಜ ಕತ್ತಿ, ಅಡ್ಡಣ ಮತ್ತು ಓಲೆ ತತ್ರಗಳ ಉಲ್ಲೇಖವಿದೆ. ಆಟಿಕಳೆಂಜನು ಕೇಸರಿ ಗಡ್ಡ ಮತ್ತು ಕೆಂಚುಮೀಸೆಯವನು ಎಂಬ ವಿವರಣೆಯಿದೆ. ಈ ವಿವರಣೆಗಳು ಮತ್ತು ಪರಿಕರಗಳು ಆಟಿಕಳೆಂಜನ ‘ಅರಸು’ (ರಾಜ) ಸ್ವರೂಪದ ಅಭಿಪ್ರಾಯಕ್ಕೆ ಇಂಬು ಕೊಡುತ್ತವೆ. ಭೂತಾರಾಧನೆ ಸಂಸ್ಕೃತಿಯಲ್ಲಿ ವೀರರ ಆರಾಧನೆ ಬಹಳ ಮುಖ್ಯವಾದ ಒಂದು ಅಂಗ. ಯೋಧರು ಅಥವಾ ಅರಸರು ತಮ್ಮ ಮರಣದ ಬಳಿಕ ದೈವಗಳಾಗಿ ಆರಾಧನೆಗೊಂಡ ನಿದರ್ಶನಗಳು ಭೂತಾರಾಧನೆಯಲ್ಲಿ ಸಾಕಷ್ಟು ಸಿಗುತ್ತವೆ. ಆಟಿ ಕಳೆಂಜ ಸಂಪ್ರದಾಯದಲ್ಲಿ ಮಾನುಷ ಮತ್ತು ಅತಿಮಾನುಷ ಸ್ಥಿತಿಗಳ ನಡುವಿನ ರೂಪವಾದ ‘ಮಂತ್ರವಾದಿ’ ಯು ರಾಚನಿಕವಾಗಿ ಮುಖ್ಯವಾಗುತ್ತಾನೆ. ಎರಡು ವಿರುದ್ಧ ಸ್ಥಿತಿಗಳ ಮಧ್ಯಂತರ ಅನಸ್ಥೆಯು ಜಾನಪದದಲ್ಲಿ ವೈರುಧ್ಯಗಳ ನಿವಾರಣೆಯ ದೃಷ್ಟಿಯಿಂದ ಮಹತ್ವದ್ದಾಗುತ್ತದೆ. ಆ ಮೂಲಕ ಮಾನಸಿಕ ಸೆಳೆತವನ್ನು ಕಡಿಮೆ ಮಾಡುವುದಕ್ಕೆ ಸಹಾಯಕವಾಗುತ್ತದೆ. ಅಂದರೆ ‘ಆಟಿ ಕಳೆಂಜ’ದಂತಹ ಜನಪ ಕಲಾರೂಪವು ಜನಪದರಿಗೆ ಸಮಾಧಾನವನ್ನು ಕೊಡಲು ಶಕ್ತವಾಗುತ್ತದೆ.

ಟಿಪ್ಪಣಿಗಳು

೧. ಕಳೆಪುನಿ /ನೆ= to remove, to be stripped, to be deducted ಎಂಬ ಅರ್ಥಗಳಿವೆ. ಮೈಯಲ್ಲಿ ಪ್ರೇತ ಅಥವಾ ದುಷ್ಟ ಶಕ್ತಿಗಳು ಪ್ರವೇಶವಾಗಿವೆ ಎಂಬ ನಂಬಿಕೆಯಿಂದ ಅವುಗಳನ್ನು ‘ಕಳೆಯುವ’ (ಉಚ್ಚಾಟಿಸುವ) ಮಾಂತ್ರಿಕ ಆಚರಣೆ ತುಳುನಾಡಿನಲ್ಲಿ ಪ್ರಚಾರದಲ್ಲಿದೆ. ಈ ‘ಕಳೆಪುನಿ’ ವಿಧಿಯನ್ನು ನಿರ್ವಹಿಸಿಕೊಡುವ ಮಂತ್ರವಾದಿಗಳು ನಲಿಕೆಯವರೇ ಆಗಿರುತ್ತಾರೆ ಎಂಬುದು ಗಮನಾರ್ಹ ಅಂಶ. ದುಷ್ಟಶಕ್ತಿಗಳನ್ನು ಕಳೆಯುವ ಮತ್ತು ಊರಿಗೆ ಬಂದ ಮತ್ತು ಬರುವ ಮಾರಿಯನ್ನು ಕಳೆಯುವ ಮಾಂತ್ರಿಕನೇ ‘ಕಳೆಂಜ’ನಾಗಿ (ಕಳೆಯುವವನಾಗಿ-ನಿವಾರಕನಾಗಿ) ಆರಾಧನೆಯ ಸ್ವರೂಪವನ್ನು ಪಡೆದಿರಬೇಕು.

ಈ ಮಾಂತ್ರಿಕ ತಲೆಯಲ್ಲಿ ಧರಿಸುತ್ತಿದ್ದ ‘ಹೂ’ವಿಗೆ ‘ಕಳೆಂಜದ ಪೂ’ ಎನ್ನುತ್ತಿದ್ದು, ಆ ಹೆಸರು ಕಳೆಂಜನ ಕಾರಣವಾಗಿ ಬಂದಿರಬೇಕು. ‘ಕಳೆಂಜ’ ಪದದ ನಿಷ್ಪತ್ತಿಯನ್ನು ಈ ಕೆಳಗಿನಂತೆ ಕೊಡಬಹುದು.

‘ಕಳೆಂಜ’ ಪದದಲ್ಲಿ ಬರುವ ಅಂಜ (ಅಣ್ಣ) ಎಂಬುದು ಅಣ್ + ಜೇವು ಎಂಬುದರ ಸಂಕ್ಷಿಪ್ತ ರೂಪ.

ಆಣ್ + ಜೇವು > ಆಂಜೇವು > ಆಂಜೊ > ಆಂಜೆ > ಅಂಜೆ.

ಕಳೆ + ಆಣ್ + ಜೇವು > ಕಳೆ + ಆಣ್ + ಜೋವು > ಕಳೆ + ಅಣ್ + ಜೆ > ಕಳೆಂಜೆ > ಕಳೆಂಜ.

‘ಕಳೆಂಜ’ ಪುರುಷ ಎಂಬುದಕ್ಕೆ ಇವನು ಧರಿಸುವ ಗಡ್ಡ ಮೀಸೆ ಸಾಕ್ಷಿಯಾಗಿದೆ.

೨. ಸಾಮಾನ್ಯವಾಗಿ ‘ನಲಿಕೆ’ ಜನಾಂಗದವರು ಅಟಿಕಳೆಂಜ ವೇಷ ಹಾಕಿ ಮನೆ ಮನೆಗೆ ಸಂಚರಿಸುವ ಪದ್ಧತಿ. ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಮುಗೇರರು (ಮೇರರು) ಆಟಿಕಳೆಂಜದಲ್ಲಿ ಭಾಗವಹಿಸುತ್ತಾರೆ. ಸುಗ್ಗಿಯ ಹುಣ್ಣಿಮೆಯ ಸಂದರ್ಭದಲ್ಲಿ ಗ್ರಾಮದೈವ ‘ಚವುಂಡಿ’ಯ ಸನ್ನಿಧಿಯಲ್ಲಿ ಅರಿಕೆ ಮಾಡಿಕೊಂಡು ಗ್ರಾಮದಲ್ಲಿ ಸಂಚರಿಸಲು ತೊಡಗುವ ಸಂಪ್ರದಾಯವಿದೆ. ಇದರಲ್ಲಿ ‘ಮುಡಿ’ ಧರಿಸುವ ವಿಧಿ ನಡೆಯುತ್ತದೆ. ‘ಕಳೆಂಜದ ಪೂ’ ಇದರಿಂದ ಮುಡಿದ ಅಲಂಕಾರವನ್ನು ಮಾಡುತ್ತಾರೆ. ‘ತೇರೆ’ ಮರದ ಸಿಪ್ಪೆ ಮತ್ತು ‘ಕೇದಗೆ ಹೂ’ ಇಲ್ಲಿ ಬಳಕೆಯಾಗುತ್ತದೆ. ಮುಗೇರರ ಕುಲದೈವ ಬಿರ್ಮೆರ್ (ಬ್ರಹ್ಮ) ಆಗಿರುವುದರಿಂದ ಆಟಿ ಕಳೆಂಜನನ್ನು ‘ಬಿರ್ಮೆರೆ ಮಾನಿ’ ಎಂದು ಕರೆಯುತ್ತಾರೆ. ಈ ಪ್ರಾದೇಶಿಕ ಸಂಪ್ರದಾಯದ ಪ್ರಕಾರ ‘ಕಳೆಂಜೆರ್’ ಎಂದರೆ ಅಣ್ಣ-ತಮ್ಮ ಎಂಬ ಜೋಡಿ ವೇಷಗಳು. ಇವರಿಬ್ಬರಿಗೂ ತಾಳೆಗರಿಯ ಕೊಡೆ, ತೋಳಿನಡಿಯಲ್ಲಿ ದುಡಿ, ಕಾಲಿಗೆ ಗೆಜ್ಜೆ, ಬಿಳಿ ವಸ್ತ್ರದ ಕಚ್ಚೆ, ಸೊಂಟಕ್ಕೆ ತಿರಿ, ಎದೆಯಲ್ಲಿ ಹಿಟ್ಟಿನಿಂದ ಎಳೆದ ಕತ್ತರಿ ನಾಮ ಮತ್ತು ಕೈತೋಳಿಗೆ ಹೂದಂಡೆ. ಆಟಿಕಳೆಂಜದ ಹಾಡಿನ ಒಂದೊಂದೇ ಸಾಲನ್ನು ಒಬ್ಬನೇ ಹಾಡುತ್ತಾನೆ. ಅದನ್ನು ಇನ್ನೊಬ್ಬನು ಅನುಸರಿಸುತ್ತಾನೆ. (ಹಾಡು: ಪಾಠ-೪)

೩. ಪೈವಳಿಕೆ ಗ್ರಾಮದ ಕಳಾಯಿ (ಕೇರಳ ರಾಜ್ಯ)ಯಲ್ಲಿ ಸಿಕ್ಕಿದ ನಲಿಕೆಯವರ ಆಟಿಕಳೆಂಜ ಹಾಡು (ಪಾಠ-೫) ಕೆಲವು ಹೊಸ ಅಂಶಗಳನ್ನು ತಿಳಿಸುತ್ತದೆ. ಈ ಹಾಡಿನ ಕೊನೆಯಲ್ಲಿ ಗದ್ಯರೂಪದಲ್ಲಿರುವ ಕಥಾನಕವು ಆಟಿಕಳೆಂಜನ ಅಸ್ತಿತ್ವ ಮತ್ತು ಕಾರ್ಯವನ್ನು ಕುರಿತು ವಿವರಣೆಯನ್ನು ಕೊಡುತ್ತದೆ. ಭೂತಗಳ ಗುಡಿಗಳಿಗೆ ಆಟಿ ಆರಂಭವಾಗುವ ಸಂಕ್ರಮಣದಿಂದ ಸೋಣ ಆರಂಭವಾಗುವ ಸಂಕ್ರಮಣದವರೆಗೆ ಮತ್ತು ಆ ಅವಧಿಯಲ್ಲಿ ತುಳುನಾಡಿನ ಭೂತಗಳ ಬದಲು, ಆಟಿಕಳೆಂಜನು ಊರಿನ ರೋಗಾಣುಗಳನ್ನು ನಿವಾರಿಸಿ ಜನರನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದು; ಆ ಕಾರಣಕ್ಕಾಗಿಯೇ ಒಬ್ಬ ಪರಾಕ್ರಮಿ ಯೋಧನ ಹಾಗೆ ಚಿತ್ರಿತನಾಗಿರುವುದು ಕಂಡುಬರುತ್ತದೆ. ಸಂಕಷ್ಟಗಳು, ಅದರ ವಿರುದ್ಧ ಹೋರಾಟ ಮತ್ತು ಕೊನೆಯಲ್ಲಿ ಸಂತೃಪ್ತಿ-ರಾಚನಿಕವಾಗಿ ಭೂತಾರಾಧನೆಯ ತಿರುಳನ್ನು (core) ಆಟಿಕಳೆಂಜದಲ್ಲಿಯೂ ಗುರುತಿಸಬಹುದು.

೪. ಆಟಿಕಳೆಂಜ ಸಂಪ್ರದಾಯದಲ್ಲಿ ಭಾಗವಹಿಸುವವರು ಹರಿಜನ ವರ್ಗಕ್ಕೆ ಸೇರಿದ ನಲಿಕೆ ಅಥವಾ ಮೇರ ಜನಾಂಗದವರು. ಆಟಿಕಳೆಂಜ ಹಾಡಿನ ಒಂದು ಅಥವಾ ಎರಡನೇ ಹಾಡಿನಲ್ಲಿ ಆಟಿಕಳೆಂಜ ವೇಷ ಹಾಕುವವನ ಜೀವನ ವಿಧಾನದ ಚಿತ್ರಣ ದೊರೆಯುತ್ತದೆ. ಆತನು ಮನೆ ಮನೆಗೆ ಸಂಚರಿಸಿ, ಹಾಡಿ ಕುಣಿದು, ಮನೆಯವರು ಕೊಟ್ಟ ಸಾಮಗ್ರಿಗಳನ್ನು ಸಂಗ್ರಹಿಸಿ, ಆ ಮನೆಯವರು ಕೊಟ್ಟ ಹಿಂದಣ ವರ್ಷದ ಸಾಂತಾಣಿ (ಬೇಯಿಸಿ, ಒಣಗಿಸಿದ ಹಲಸಿನ ಬೀಜ), ಈ ವರ್ಷದ ಹಲಸಿನ ಬೀಜ ಇಂತಹ ವಸ್ತುಗಳನ್ನು ಬೇಡುತ್ತಾ ಜೀವನ ನಿರ್ವಹಣೆ ಮಾಡುತ್ತಾನೆ. ಮಳೆಗಾಲದ ಈ ತಿಂಗಳು ಹಳ್ಳಿಯ ಜನರಿಗೆ ಉಣ್ಣಲು ತಿನ್ನಲು ಬಹಳ ಕಷ್ಟದ ಕಾಲ. ಆದ್ದರಿಂದಲೇ ಈ ಕಾಲದಲ್ಲಿ ಬಹಳ ಬಡತನದಲ್ಲಿರುವ ಹರಿಜನರು ಕುಣಿತದ, ಮಾರಿ ಕಳೆಯುವ ಅವಕಾಶಗಳ ಮೂಲಕ ಮನೆ ಮನೆಗೆ ಸಂಚರಿಸಿ, ಜೀವನೋಪಾಯಕ್ಕೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸುತ್ತಾರೆ. ಈ ರೀತಿ ಹರಿಜನರ ಅನೇಕ ಅನಿವಾರ್ಯತೆಯಿಂದ ಹುಟ್ಟಿಕೊಂಡವುಗಳು.

ಅನುಬಂಧ

ಪಾಠ ೧

“ಆಟಿಡ್ ಮತ್ತೆ ಕಳೆಂಜೆ ಮಾರಿಕಳೆಪೆನೋ
ಮೂಡೈತ ಮಾರಿನ್ ಮೂಡಾಯಿಗ್ ಕೊಂಡೋಪೆನೋ,
ಆಟಿಡ್ ಮುಪ್ಪೊದಿನ ಮಾಮಿ ಬುಡಾರೊ
ಬಾರೆದ ಕಂಡೆ ತಿಂದನೋ ಕಳೆಂಜೆ ಬಂಜಿ ಬಳಪುಂಡೇ
ಮುಂಡಿದ ಕಂಡೆ ತಿಂದೆ ಕಳೆಂಜೆ ದೊಂಡೆ ಮೂರೊಂಡೇ
ಕಳೆಂಜೆ ಕಣ್ಣ್‌ಡ್ ತೂಪೆನೋ ಅಡ್ಡ ಬುಳೆಪ್ಪೆನೋ
ಮೂಡಾಯಿ ಪೋಪೆನೋ ಕಳೆಂಜೆ ಮಾರಿಕಳೆಪ್ಪೆನೋ
ಮೂವೊಡುತ್ತಾ ಸಾಂತಾಣಿ ನಟ್ಯೆನೋ ಕಳೆಂಜೆ
ಈವೊಡುತ್ತಾ ಪೆಲತ್ತರಿ ನಟ್ಯೆನೋ
ಬಾಕಿಲ್ ಬಾಕಿಲ್ ಪೋಪೆನೋ ಕಳೆಂಜೆ
ಮಾರಿ ಕಳೆಪ್ಪೆನೋ
ಆಟಿಡ್‌ಬತ್ತೆನೋ ಕಳೆಂಜೆ
ಸೋಣಾಡ್ ಪೋಪೆನೋ”

ಕನ್ನಡ

(ಆಷಾಡದಲ್ಲಿ ಬಂದ ಕಳೆಂಜ ಮಾರಿ ಕಳೆಯುವನೋ
ಮೂಡಣ ಮಾರಿಯ ಮೂಡಣ ದೂರಿಗೆ ಸಾಗಿಪನೋ
ಆಷಾಡದಲ್ಲಿ ಮೂವತ್ತು ದಿನ ಅತ್ತೆಯ ಮನೆಯಲ್ಲಿ
ಬಾಳೆಯ ಗೆಡ್ಡೆ ತಿಂದು ಹೊಟ್ಟೆಯು ಊದಿಹುದು
ಮುಂಡಿಯ ಗಡ್ಡೆಯ ತಿಂದು ಗಂಟಲು ಕಟ್ಟುಹುದು
ಕಳೆಂಜ ಕಣ್ಣಿಂದ ನೋಡುವನೋ, ಅಡ್ಡಕ್ಕೆ ಬೆಳೆಯುವನೋ
ಮೂಡಣದೂರಿಗೆ ಹೋಗುವನೋ ಕಳೆಂಜ ಮಾರಿಯ ಕಳೆಯುವನೋ
ಹಿಂದಣ ವರ್ಷದ ಸಾಂತಾಣಿ (ಬೇಯಿಸಿದ ಹಲಸಿನ ಬೀಜ) ಬೇಡಿದನೋ, ಕಳೆಂಜ
ಇಂದಿನ ವರ್ಷದ ಹಲಸಿನ ಬೀಜವ ಬೇಡುವನೊ
ಬಾಗಿಲು ಬಾಗಿಲು ಹೋಗುವನೋ, ಕಳೆಂಜ
ಮಾರಿಯ ಕಳೆಯುವನೋ
ಆಷಾಢದಲ್ಲಿ ಬಂದನೋ ಕಳೆಂಜ
ಶ್ರಾವಣದಲಿ ಹೋಗುವನೋ

ಪಾಠ ೨

“ಕಳೆಂಜೆ ಕಳೆಂಜೇ ಸೋಯೊಗೊಡು ಪುಟ್ಟೊಂಡೇ
ಮಾಯೊಡು ಬಳತ್ತೊಂಡೇ
ಪತ್ತ್ ಪ್ರಾಯಾಂಡೇ ಪದಿನಾಜಿ ಪ್ರಾಯಾಂಡೇ
ಏಳ್ ಪ್ರಾಯಾಂಡ್ ಎಳ್ಪ ಸಿಗೆಯಿಂಡ್
ಎಳ್ಪ ತಿಂಗೊಳುಡೆ ಕೆಂಚಿ ಮೀಸೆ ಆಂಡ್ ಕೇಸರಿ ಗಡ್ಡ ಆಂಡ್
ಗುಮ್ಮೆ ಕೊಡೆಂಜಿ ಆಂಡೇ ಬಾಮೇರಿ ಬಂಜಾಂಡೇ
ತೆನ್ಕಾಯಿ ಕೊಟಾಂಡೇ ಪೀಲಿಗ್ ಮುರಿಯಾಂಡೇ
ಆಲ್‌ಗ್ ದೋಲಾಂಡೇ ಪೀಲಿಗ್ ಮುರಿಯಾಂಡೇ
ಕೆಂಚಿ ಮೀಸೆ ಆಂಡ್ ಕೇಸರಿ ಗಡ್ಡ ಆಂಡ್
ಪಾಲ್ಯೊಗು ಪೋಪೆಂಡೇ ಅಡ್ಡಣ ದಕ್ಕ್‌ಡ್ದೇ
ಪಾಂಡ್ಯಾಲ್‌ಪಾರಾವೊಂಡೆ ತಾನ್ ಪಾರೊಂಡೆ
ಮಾಮಿನ ಇಲ್ಲಡ್ ಆಟಿದ ಮುಪ್ಪದಿನ
ಸೋಣೊಡು ಮುಪ್ಪದಿನ ಮಗಳೆ ಇಲ್ಲಡ್
ಬಾರೆದ ಕಂಡೆ ತಿಂದೆ ಕಳೆಂಜೆ ಬಂಜಿ ಬಳಪುಂಡೇ
ಮುಂಡಿದ ಕಂಡೆ ತಿಂದೆ ಕಳೆಂಜೆ ದೊಂಡೆ ಮೂರೊಂಡೇ
ಕುಕ್ಕಿನ ಉಪ್ಪಡ್ ತಿಂದೆ ಕಳೆಂಜೆ ಕೂಳಿ ಸೀರಾವುಂಡೇ
ಎರ್ಮೆದ ಪುಂಡಿ ತಿಂದೆ ಕಳೆಂಜೆ ಕಡೆಕಣ್ಣ್ ಕಂತುಂಡೇ
ಮೂವೊಡು ಈ ಬೇಲ್ಯೊಡು ಮಾರಿ ಕಳೆಪೆ
ಈಯೊಡು ಈ ಬೇಲ್ಯೊಡು ಬೀರಿ ಕಳೆಪೆ”
(ಕಳೆಂಜ ಕಳೆಂಜನು ಮನುಷ್ಯನಾಗಿ ಹುಟ್ಟಿದನು
ಮಾಯದಲ್ಲಿ ಬಳೆದನು
ಹತ್ತು ವರ್ಷವಾಯಿತು ಹದಿನಾರು ವರ್ಷವಾಯಿತು
ಏಳು ವರ್ಷವಾಯಿತು ಎಪ್ಪತ್ತು ತುಂಬಿತು
ಎಪ್ಪತ್ತು ತಿಂಗಳಲ್ಲೆ ಕೆಂಚು ಮೀಸೆ ಆಯಿತು ಕೇಸರಿ ಗಡ್ಡ ಆಯಿತು
ಕೆನ್ನೆ ಬೀಗಿತು, ಹೊಟ್ಟೆ ಬೀಗಿತು
ದಕ್ಷಿಣದಲ್ಲಿ ಕೂಟವಾಯಿತು, ಉತ್ತರದಲ್ಲಿ ರಾಜ್ಯವಾಯಿತು
ಕೆಂಚು ಮೀಸೆ ಆಯಿತು, ಕೇಸರಿ ಗಡ್ಡ ಆಯಿತು
ಪಾಳ್ಯಕ್ಕೆ ಹೋಗುತ್ತೇನೆ ಎಂದ, ಗುರಾಣಿ ಎಸೆದಿದ್ದಾನೆ
ಪಾಂಡಿಯರನ್ನು ಓಡಿಸಿದ, ತಾನು ಓಡಿಕೊಂಡ
ಅತ್ತೆಯ ಮನೆಯಲ್ಲಿ ಆಷಾಢದ ಮೂವತ್ತು ದಿನ
ಶ್ರಾವಣದಲ್ಲಿ ಮಗಳ ಮನೆಯಲ್ಲಿ ಮೂವತ್ತು ದಿನ
ಬಾಳೆಯ ಗಡ್ಡೆಯನು ತಿಂದು ಕಳೆಂಜನ ಹೊಟ್ಟೆ ಬೆಳೆಯಿತು
ಮುಂಡಿಗದ್ದೆಯನು ತಿಂದು ಕಳೆಂಜನ ಹೊಟ್ಟೆ ಬೆಳೆಯಿತು
ಮುಂಡಿಗದ್ದೆಯನು ತಿಂದು ಕಳೆಂಜನ ಗಂಟಲು ಕಟ್ಟಿತ್ತು
ಮಾವಿನ ಉಪ್ಪಿನಕಾಯಿ ತಿಂದು ಕಳೆಂಜನ ಹಲ್ಲು ಹುಳಿಯಿತು
ಎಮ್ಮೆಯ ಹಿಂಡಿ ತಿಂದು ಕಳೆಂಜನ ಕಣ್ಣು ಗುಳಿಬಿತ್ತು
ಕಳೆದ ವರ್ಷ ಈ ವೇಳೆಯಲ್ಲಿ ಮಾರಿ ಕಳೆದನು
ಈ ವರ್ಷ ಈ ವೇಳೆಯಲ್ಲಿ ‘ಬೀರ’ ಕಳೆಯುತ್ತಾನೆ.)

ಪಾಠ ೩

“ಕಳೆಂಜೆ ಕಳೆಂಜೆನೋ ಕಳೆಂಜೆ
ಏರನೆ ಮಗೆನೋ ಕಳೆಂಜೆ
ಮಾಯಂದರಸು ಮಗೆ ಕಳೆಂಜೆ
ಜೋಗದ ಪುಟ್ಟಾಂಡೇ ಕಳೆಂಜ
ಮಾಯದ ಬಳಕ್ಕೆ ಆಂಡೇ ಕಳೆಂಜ
ಪತ್ತ್ ಕೇಲೊಂಡೂ ಕಳೆಂಜೆ
ಪದ್ನಾಜಿ ಪ್ರಾಯೊಂಡೂ ಕಳೆಂಜೆ
ಕಾಳ್ಯೋಗು ಪೋವೊಡೂಂದ್ ಕಳೆಂಜೆ
ಕೂಟೊಗ್ ಪೋವೊಡೂಂದೇ ಕಳೆಂಜೆ
ಕಾಳ್ಯಾಗು ಪೋವೊಡಾಂಡ ಕಲೆಂಜೆ
ಕೂಟೊಗು ಪೊಡಾಂಡ ಕಳೆಂಜೆ
ದಾವೊಂಜ ಜೋಡಣೆ ಕಳೆಂಜ
ಮಾಯಂತ ಮಂಜಾಳ್ ಕಳೆಂಜ
ಪದ್ನಾಜಿ ತೋಟೊಗು ಪೋತೆ ಕಳೆಂಜೆ
ಪದ್ನಾಜಿ ಪಾಳೆ ಕೊಂಡತ್ತೆ ಕಳೆಂಜೆ
ಪದ್ನಾಜಿ ಕೊಟ್ಟಂಬಾಳೆ ಕಳೆಂಜೆ
ಪದ್ನಾಜಿ ಕೋಲ್‌ತ್ತಿರಿಟ್ಟ್ ಕಳೆಂಜೆ
ಮುಕ್ಕುಡ ಸಿರಿ ಬಲಿತ್ತೇ ಕಳೆಂಜೆ
ಮಾರಿಗಲೆಪ್ಪೇನೇ ಕಳೆಂಜೆ
ಮೂಡಾಯಿ ಬಾಕಿಲಿಟ್ ಕಳೆಂಜೆ
ಮಾರಿಗಳೆಪ್ಪೇನೇ ಕಳೆಂಜೆ
ಪಡ್ಡೆಯಿ ಸಮುದ್ರೊಗೂ ಕಳೆಂಜ
ಕೊಂಡುಪಾಡುಲ
ಸುತ್ತ ಕತ್ತಲೇ ಕಳೆಂಜ
ಮಂಡೆ ಮಾರ್ಯುಂಡೂ ಕಳೆಂಜ
ನಾಯಿತ ಕುತ್ತೋಣ್‌ಡಾ ಕಳೆಂಜ
ಬೊಣ್ಯೊಟು ಪೋವಾಡ್…. ಕಳೆಂಜ
ಆಡಿನುಪ್ಪೊದಿನೋ ಕಳೆಂಜೆ
ಮಾಮಿನಿಲ್ಲಾಳ್ ಕಳೆಂಜೆ
ಸೋಣೊನುಪ್ಪೊದಿನೊ ಕಳೆಂಜೆ
ಮಗಳ್ ಬುಡಾರೋ
ಮಾಮಿನಿಲ್ಲಾಳ್ ಕಳೆಂಜ
ದಾನೆ ಸಮ್ಮನಾ ಕಳೆಂಜ
ಪೊರಂಟು ಬಜಿಲೆಡ್ತೆ ಕಳೆಂಜೆ
ನಕ್‌ರಾಜಾಯೇ ಕಳೆಂಜೆ
ಒಳ್ಳಿಪುಳಿಕಜ್ಪು ಮಾಳ್ತೆ ಕಳೆಂಜೆ
ನಣ ಪೋಪೇಂದ್ ಕಳೆಂಜೆ
ಮಾರಿಗಳೆಯಾರ…..
ಮುವೋಡು ಈ ಕಾಲೊಂಡು ಕಳೆಂಜ
ಮಾರಿಗಳೆತ್ತಾನೇ ಕಳೆಂಜ
ಈವೋಡು ಈ ಕಾಲೊಂಡೂ ಕಳೆಂಜ
ಮಾರಿಗಳೆವೂಡೂ ಕಳೆಂಜ
ಅಂತಾಡೆ ಪೋಯಿನಾಯೆ ಅಲ್‌ತ್ ಪೋತೇನೇ ಕಳೆಂಜೆ
ದೇಲಂತಾಯೆ ಪೋಯಿನಾಯೆ ನಿಲ್ಕ್‌ತ್ ಸೂವೊಂಡೇ
ಕುಡ್ತ್ ಲಕ್ಕೊಂಡೇ ಕಳೆಂಜೆ ಮಡಿತ್ತ್ ಸೂತ್ತೊಂಡೇ
ಕಳೆಂಜನ ಸತ್ರೊ ಪೂಕೊಳು ದಂಡ್ಯಾಂಡ್ ಕಳೆಂಜ
ಪೂಂಜ ಕಡ್ತಲೇ ಕಳೆಂಜ
ಕೆಂಚಿಮೀಸೆ ಆಂಡೇ ಕಳೆಂಜ
ಕೇಸರಿ ಗಡ್ಡಾಂಡೇ ಕಳೆಂಜ
ಬಾಮಿರಿ ಬಂಜಾಡೇ ಕಳೆಂಜ
ಬಾರೆತ ಕಂಡೆ ತಿಂದೇ ಕಳೆಂಜೆ
ಬಂಜಿ ಬಳತ್ತ್‌ಡ್ ಕಳೆಂಜೆ
ಕೇನೆತ ಕಂಡೆ ತಿಂದೇ ಕಳೆಂಜೆ
ದೊಂಡೆ ಮೂರುಂಡೇ ಕಳೆಂಜ
ಕುಕ್ಕುತ ಉಪ್ಪಾಡ್ ಸಿಂದೇ ಕಳೆಂಜೆ
ಕೂಳಿ ಸೀರ್‌ಡೇ ಕಳೆಂಜ
ಕಾಳ್ಯ ಮುಟ್ಟಿ ಎರ್ಕ್‌ನಾಗ
ಅಡ್ಡನಡಕ್ಕೊಂಡೇ ಕಳೆಂಜೆ
ಕತ್ತಲೆ ಪಾರಾಯೇ ಕಳೆಂಜೆ
ಸತ್ರೊ ಪತ್ತೊಂಡೇ ಕಳೆಂಜೆ
ಲೆಂಚಿರೇರ್‌ಗಾ ಕಳೆಂಜ
ಲೆಂಚಿರಿ ಬೂತೊಗುಳೇ ಕಳೆಂಜ
ಕಣ್ಣ್ ಪುಡಪುಂಡೇ ಕಳೆಂಜ
ನರಮಾನ್ಯ ಕುತ್ತ ಉಂಡಾಂಡ ಕಳೆಂಜ
ಮಾಯೊಡು ಕೊತೊಣ್ಕಾ ಕಳೆಂಜ
ಕೈಕಂಜಿ ಕುತ್ತ ಉಂಡಾಂಡ ಕಳೆಂಜ
ಕಡಲ್‌ಗ್ ಪೋವಾಡ್ ಕಳೆಂಜ
ಸುತ್ತು ಕತ್ತಲೆ ಮಂಡೆ ಮಾರಿ
ಮೂಡಾಯಿ ಸಮುದ್ರೊಗೇ ಕಳೆಂಜೆ
ಕೊಂಡು ಪಾಡ್‌ಲಾ….

ಕನ್ನಡ

(ಕಳೆಂಜ ಕಳೆಂಜನೋ ಕಳೆಂಜ
ಯಾರ ಮಗನೋ ಕಳೆಂಜ
ಮಾಯದ ಅರಸುಮಗ ಕಳೆಂಜ
‘ಮಾನವ’ ಹುಟ್ಟಾಯಿತು ಕಳೆಂಜ
ಮಾಯದ ಬೆಳವಣಿಗೆ ಆಯಿತು ಕಳೆಂಜ
ಹತ್ತು ವರ್ಷವಾಯಿತು ಕಳೆಂಜ
ಹದಿನಾರು ವರ್ಷವಾಯಿತು ಕಳೆಂಜ
ಕಾಳಗಕ್ಕೆ ಹೋಗಬೇಕೆಂದು ಕಳೆಂಜ
ಕೂಟಕ್ಕೆ ಹೋಗಬೇಕು ಎಂದ ಕಳೆಂಜ
ಕಾಳಗಕ್ಕೆ ಹೋಗಲು ಕಳೆಂಜ
ಕೂಟಕ್ಕೆ ಹೋಗಲು ಕಳೆಂಜ
ಯಾವೆಲ್ಲ ಸಿದ್ಧತೆ ಕಳೆಂಜ
ಮಾಯದ ಅರಸಿನ ಕಳೆಂಜ
ಹದಿನಾರು ತೋಟಕ್ಕೆ ಹೋಗಿದ್ದಾನೆ ಕಳೆಂಜ
ಹದಿನಾರು ಹಾಳೆ ತಂದನು ಕಳೆಂಜ
ಹದಿನಾರು ಕೋಂಟು ಹಾಳೆ ಕಳೆಂಜ
ಹದಿನಾರು ‘ಕೋಲುತಿರಿ’ಯಲ್ಲಿ ಕಳೆಂಜ
‘ತುಂಡತಿರಿ’ ಸಿದ್ಧ ಮಾಡಿದನು ಕಳೆಂಜ
ಮಾರಿಗಳೆಯುತ್ತಾನೆ ಕಳೆಂಜ
ಮೂಡುಬಾಗಿಲಲ್ಲಿ ಕಳೆಂಜ
ಮಾರಿಗಳೆಯುತ್ತಾನೆ ಕಳೆಂಜ
ಪಡುವಣ ಸಮುದ್ರಕ್ಕೆ ಕಳೆಂಜ
ಕೊಂಡೊಯ್ದು ಹಾಕು
ಸುತ್ತು ಕತ್ತಲೆ ಕಳೆಂಜ
ಕಾಯಿಲೆಯಾದರೆ ಕಳೆಂಜ
ನಾಯಿಯ ರೋಗವಾದರೆ ಕಳೆಂಜ
ಬೂದಿಯಲ್ಲಿ ಹೋಗಲಿ ಕಳೆಂಜ
ಆಷಾಢದ ಮೂವತ್ತು ದಿನ ಕಳೆಂಜ
ಅತ್ತೆಯ ಮನೆಯಲ್ಲಿ ಕಳೆಂಜ
ಶ್ರಾವಣದ ಮೂವತ್ತು ದಿನ ಕಳೆಂಜ
ಮಗಳ ಬಿಡಾರ ಅತ್ತೆಯ ಮನೆಯಲ್ಲಿ ಕಳೆಂಜ
ಏನು ಸನ್ಮಾನ ಕಳೆಂಜ
ಜಳ್ಳು ಅವಲಕ್ಕಿ ಕುಟ್ಟಿದ ಕಳೆಂಜ
ಎರೆಹುಳದ ಪಲ್ಯ ಮಾಡಿದನು ಕಳೆಂಜ
ಒಳ್ಳೆಹಾವಿನ (ನೀರುಹಾವು) ಹುಳಿ ಮೇಲೊಗರ ಮಾಡಿದನು ಕಳೆಂಜ
ಇನ್ನು ಹೋಗುತ್ತೇನೆ ಎಂದು ಕಳೆಂಜ
ಮಾರಿಗಳೆಯಲು
ಕಳೆದ ವರ್ಷ ಈ ಕಾಲದಲ್ಲಿ ಕಳೆಂಜ
ಮಾರಿಗಳೆದನೋ ಕಳೆಂಜ
ಈ ವರ್ಷ ಈ ಕಾಲದಲ್ಲಿ ಕಳೆಂಜ
ಮಾರಿಗಳೆಯಬೇಕು ಕಳೆಂಜ
ಅರಮನೆಗೆ ಹೋದವನು ಯೋಚಿಸಿ ಹೋದನೋ ಕಳೆಂಜ
ದೇವಾಲಯಕ್ಕೆ ಹೋದವನು ಇಣುಕಿ ನೋಡಿಕೊಂಡನು
ಕೊಡಹಿ ಎದ್ದನು ಕಳೆಂಜ ಮಡಿಸಿ ಸುತ್ತಿಕೊಂಡನು
ಕಳೆಂಜನ ಕೊಡೆ ಹೂವಿನ ದಂಡಿಗೆ ಕಳೆಂಜ
‘ಪೂಂಜ ಕಡ್ತಲೆ’ ಕಳೆಂಜ
ಕೆಂಚುಮೀಸೆ ಆಯಿತು ಕಳೆಂಜ
ಕೇಸರಿ ಗಡ್ಡ ಆಯಿತು ಕಳೆಂಜ
ಡೊಳ್ಳು ಹೊಟ್ಟೆ ಆಯಿತು ಕಳೆಂಜ
ಬಾಳೆಯ ಗಡ್ಡೆ ತಿಂದನು ಕಳೆಂಜ
ಹೊಟ್ಟೆ ಬೆಳೆಯಿತು ಕಳೆಂಜ
ಕೇನೆ ಗಡ್ಡೆ ತಿಂದನು ಕಳೆಂಜ
ಗಂಟಲು ಕಟ್ಟಿತು ಕಳೆಂಜ
ಮಾವಿನ ಉಪ್ಪಿನಕಾಯಿ ತಿಂದನು ಕಳೆಂಜ
ಹುಲ್ಲು ಹುಳಿಯಿತು ಕಳೆಂಜ
ಕಾಳಗ ಹತ್ತಿರ ಆದಾಗ
ಅಡ್ಡಣ ಎಸೆದನು ಕಳೆಂಜ
ಖಡ್ಗ ಬೀಸಿದನು ಕಳೆಂಜ
ಕೊಡೆ ಹಿಡಿದುಕೊಂಡನು ಕಳೆಂಜ
ಏನು ಯಾರು ಕಳೆಂಜ
ಎಂತಹ ಭೂತಗಳು ಕಳೆಂಜ
ಕಣ್ಣು ಒಡೆಯುತ್ತದೆ ಕಳೆಂಜ
ಮನುಷ್ಯರ ಕಾಯಿಲೆ ಇದ್ದರೆ ಕಳೆಂಜ
ಮಾಯದಲ್ಲಿ ಕಾಪಾಡು ಕಳೆಂಜ
ಜಾನುವಾರುಗಳ ಕಾಯಿಲೆ ಇದ್ದರೆ ಕಳೆಂಜ
ಸಮುದ್ರಕ್ಕೆ ಹೋಗಲಿ ಕಳೆಂಜ
ಸುತ್ತು ಕತ್ತಲೆ ರೋಗರುಜಿನ
ಮೂಡಣ ಸಮುದ್ರಕ್ಕೆ ಕಳೆಂಜ
ತೆಗೆದುಕೊಂಡು ಹಾಕು….. )

ಪಾಠ ೪

“ಕಳೆಂಜೆ, ಕಳೆಂಜೆ ಬಿರ್‌ಮೆರಾವೊ
ಮೂವೊಡು ಪೋಯಿನಾ ಕಳೆಂಜೆ ಈಯೊಡು ಬತ್ತೆನಾ
ಅಟ್ಟೆ ರಾಟಿಡ್ ಕಳೆಂಜೆ ಮಾರಿ ಮಾರಿಯಲಾಂಡವೊ
ಮಾರಿ ಮರಿಯಲೊಡು ಕಳೆಂಜೆ ಸುದೆ ಕಡೆತ್ತನವೊ
ಸುದೆ ಕಡತ್ತ್‌ನಾ ಕಳೆಂಜೆ ಬೊಳ್ಳೊ ಪೋಯೆನವೊ
ಬೊಳ್ಳೊ ಪೋಯಿನಾ ಕಳೆಂಜೆ ಕಲ್ಲ್ ಮಲಂಗೇನಾವೊ
ಕಲ್ಲ್ ಕಾಯಿಂಡಾ ಕಳೆಂಜಗ್ ಪೀರೆ ಬೂರುಪೊಂಡಾವೊ
ಕರ್ವೊಲ್ ಕಜಿಪ್ಪಾಂಡ್ ಕಳೆಂಜೆಗ್ ಬೊಳ್ಳು ಉತ್ಪಾಂಡಾವೋ
ಮಾಮಿ ಇಲ್ಲಾಂಡ್ ಕಳೆಂಜೆಗ್ ಮಾಲ್ಯದಿಲ್ಲಾಂಡಾವೋ|
ಮಾಮಿ ಬರ್ವೊಲ್ ಕಳೆಂಜೆ ಸೇರಡಂಗ್ ಯೆನಾವೊ
ಮಗಳೆ ಪೂಜೆನಾ ಕಳೆಂಜೆ ಮಾಮಿ ಪತ್ಯೆನಾವೊ
ಮಾಮಿನ್ ಪೊತ್ಯೆನಾ ಕಳೆಂಜೆಗ್ ಪಾಪೊದೋಷಾಂಡಾವೋ|
ಪಾಪ ದೋಷಾಂಡ ಕಳೆಂಜೆ ಪದ್ರಾಡ್ ತೋಟ ಪೊಲಾವೊ
ಪದ್ರಾಡ್ ಪಾಲೆ ಕೊಂಡಾ ಕಳೆಂ ಬಿರ್ಮರೆ ಮುಡಿಕಟ್ಟ್‌ಲಾವೋ
ಏರೆ ಮಾನಿ ಕಳೆಂಜಗ್‌ಬಿರ್‌ಮರೆ ಮಾನಿಯಾವೋ
ಮುಡಿದೀಡೊದು ಕಳೆಂಜ ಬೀರೊ ಲೆಪ್ಪುಡಾವೊ
ಸತ್ಯ ಪತ್ತೊನು ಕಳೆಂಜ ಸಾವಲ್ಲ ಬೀಜೊನೋಒ
ಪಡ್ಡಾಯಿ ಪೋಪೆಂದೆ ಕಳೆಂಜೆ ಮೂಡಾಯಿ ಪೋಪೆಂದಾವೋ
ಮೂಡಾಯಿ ಪೋತೆನಾ ಕಳೆಂಜೆ ಮುಗೇರೆಗೊಲಿನಾಲ್ಲ್‌ಲ್ಲೆವೊ
ಪಡ್ಡೆಯಿ ಪೋತೆನಾ ಕಲೆಂಜೆ ಪನ್ಯೆರೊ ಪೊಯ್ಯೆಡಾತೇವೊ||
ಪನ್ಯೆರೆ ಪೋಯ್ಯೆಡ್ ಕಳೆಂಜೆಗ್ ಪೊಎಡ್ ಸಾದಗೋವೊ
ಪಾನೆರಂಗಡಿ ಕಳೆಂಜೆಗ್ ಪಾನೆ ಪತ್ತ್‌ದೆಂದೋವೋ
ಬಂಟಲಂಗಡಿ ಕಳೆಂಜೆ ಬಾರ್‌ಲಪ್ಪಾದೇವೋ
ಏನೂರಂಗಡಿ ಕಳೆಂಜಗ್ ಎಣ್ಣೆ ಲಪ್ಪಾದೆವೊ
ಅರುವ ಪೇಂಟೆಡ್ ಕಳೆಂಜಗ್ ತರಾಯಿ ದೂದಾಂಡ್‌ವೊ
ನಂದರಂಗಡಿ ಕಳೆಂಜೆ ಕೋರಿ ಕಟ್ಟಾಂಡಾವೋ
ಉಬಾರಂಗಡಿ ಕಳೆಂಜೆ ಉಪ್ಪುಲಪ್ಪಾದೇವೋ
ಬೊಳ್ತೆರಂಗಡಿ ಕಳೆಂಜೆ ಬೊಲ್ಪುಪೊತ್ತದೆವೋ
ಕಂಗಿನ ತೋಟೊಡು ಕಳೆಂಜೆ ಕೋರಿ ಕಿಲೆಪ್ಪಾದೇವೋ
ಕೊಂಟಡ್‌ಕ್ಕಾಡ್ ಕಳೆಂಜೆ ಕುದುಂಬುಲು ಗೂರಾದೇವೋ
ಮಯ್ಯೂರ ಪಾದೆಡ್ ಮಯುರ್ ಸೆಲೆಪ್ಪರಾದೆವೊ
ಗುಂಡ ಕಲ್ಲ್‌ಡ್ ಕಳೆಂಜೆ ಪಿಲಿಗೂರಾದೆವೋ
ದೇವೆರೆದಂಡಿಗೆಡ್ ಕಳೆಂಜೆ ಪುದುಗುರಾದೇವೋ
ಪಡ್ಡೆಯಿ ಬಾಕಿಲ್‌ಡ್ ಕಳೆಂಜಗ್ ಕಂಚಿಸೊಡಾರಾವೋ
ಮೂಡಾಯಿ ಬಾಕಿಲ್‌ಡ್ ಕಳೆಂಜಗ್ ಮುತ್ತಿನೋಡಾರವೋ
ಸಾರಗುತ್ತಲ್‌ಡ್ ಕಳೆಂಜಗ್ ಸರ್ವರೋಗಾಂಡಾವೋ
ಮಂಡೆ ಮಾರಿಯಾಂಡೊ ಕಳೆಂಜ್ ಮಾನ್ಯರೋಗಾಂಡಾವೋ
ಮಾನ್ಯ ರೋಗಾಂಡ ಕಳೆಂಜಗ್ ಪಲ್ಲಡ್ ಪರಿಯರಿಪ್ಪುವೋ
ಪಾಸಿರೋಗಾಂಡ ಕಳೆಂಜಗ್ ಪಲ್ಲಡ್ ಪರಿಯರಿಪ್ಪುವೋ
ಎರ್ಮಂಜಿ ರೋಗಾಂಡ ಕಳೆಂಜಗ್ ನೀರ್‌ಡ್ ಪರಿಯರಿಪ್ಪುವೋ
ಕೋರಿದ ರೋಗಾಂಡ ಕಳೆಂಜಗ್ ಬಾರ್‌ಡ್ ಪರಿಯರಿಪ್ಪುವೋ
ಪುಚ್ಚೆದ ರೋಗಾಂಡ ಕಳೆಂಜಗ್ ಪೇರ್‌ಡ್ ಪರಿಯರಿಪ್ಪುವೋ
ನಾಯಿದ ರೋಗಾಂಡ ಕಳೆಂಜಗ್‌ಬೊನ್ಯೊಡ್ ಪರಿಯರಿಪ್ಪುವೋ
ಮಂಡಿ ಮಾರಿಯಾಂಡ ಕಳೆಂಜಗ್ ಪಡ್ಡೆಯಿ ಪರಿಯರಿಪ್ಪುವೋ
ಕುಂಟಿಗುತ್ತಾಂಡ ಕಳೆಂಜಗ್ ಮುಡಾಯಿ ಪರಿಯರಿಪ್ಪವೋ”

ಕನ್ನಡ

(ಕಳೆಂಜ, ಕಳೆಂಜ, ಕಳೆಂಜ ಬ್ರಹ್ಮನೋ
ಕಳೆದ ವರ್ಷ ಹೋದ ಕಳೆಂಜ ಈ ವರ್ಷ ಬಂದನೋ
ಆಟಿಯಲ್ಲಿ ಕಳೆಂಜ ಮಾರಿ ಮಳೆಗಾಲವಾಯಿತೋ
ಮಾರಿ ಮಳೆಗಾಲದಲ್ಲಿ ಕಳೆಂಜ ಹೊಳೆ ದಾಟಿದನೋ
ಹೊಳೆ ದಾಟಿದ ಕಳೆಂಜ ಪ್ರವಾಹದಲ್ಲಿ ಹೋದನೋ
ಪ್ರವಾಹದಲ್ಲಿ ಹೋದ ಕಳೆಂಜ ಕಲ್ಲಿನಲ್ಲಿ ಒರಗಿದನೋ
ಕಲ್ಲಿನಲ್ಲಿ ಒರಗಿದ ಕಳೆಂಜ ತಾನು ಮನಗಿದನೋ
‘ಕಾರೆಕಾಯಿ’ ಉಂಟೋ ಕಳೆಂಜನಿಗೆ ಹೀರೆ ಬೀಳಲು ಉಂಟೋ
‘ಕರುವೊಳು’ ಪದಾರ್ಥವಾಯಿತು ಕಳೆಂಜನಿಗೆ ಬಿಳಿ ಅನ್ನವಾಯಿತೋ
ಅತ್ತೆಯ ಮನೆಯಾಯಿತು ಕಳೆಂಜನೆಗೆ ಮಾಳದ ಮನೆಯಾಯಿತೋ
ಮತ್ತೆ ಬರುವಳು ಕಳೆಂಜನು ಸೇರಿನಲ್ಲಿ ಅಡಗಿದನೋ
ಅತ್ತೆಯ ಮಗಳನ್ನು ಸವರಿದನೋ ಕಳೆಂಜ ಅತ್ತೆಯನ್ನು ಹಿಡಿದನೋ
ಅತ್ತೆಯನ್ನು ಹಿಡಿದನೋ ಕಳೆಂದನಿಗೆ ಪಾಪ ದೋಷವಾಯಿತೋ
ಪಾಪ ದೋಷವಾದರೆ ಕಳೆಂಜ ಹನ್ನೆರಡು ತೋಟ ಹೋಗು
ಹನ್ನೆರಡು ಹಾಳೆ ತಾ ಕಳೆಂಜ ಬ್ರಹ್ಮರ ಮುಡಿಕಟ್ಟು
ಯಾರ ಮಾನಿ ಕಳೆಂಜನಿಗೆ ಬ್ರಹ್ಮರ ಮಾನಿ
ಮುಡಿ ಧರಿಸಬೇಕು ಕಳೆಂಜ ‘ಬೀರ’ ಕರೆಯಬೇಕು
ಕೊಡೆ ಹಿಡಿದುಕೋ ಕಳೆಂಜ ಚವಳ ಬೀಸಿಕೋ
ಪಡುವಣಕ್ಕೆ ಹೋಗುವೆನೆಂದ ಕಳೆಂಜ ಮೂಡಣಕ್ಕೆ ಹೋಗುವೆನೆಂದ
ಮೂಡಣಕ್ಕೆ ಹೋದನೋ ಕಳೆಂಜ ‘ಮುಗೇರಗೋಲಿ’ಯಲ್ಲಿ ನಿಂತನೋ
ಪಡುವಣಕ್ಕೆ ಹೋದನೋ ಕಳೆಂಜ ‘ಪನಿಯಾರಪೊಯ್ಯೆ’ಯಲ್ಲಿ ನಿಂತನೋ
‘ಪನಿಯಾರಪೊಯ್ಯೆ’ಯಲ್ಲಿ ಕಳೆಂಜನಿಗೆ ಹೊಯಿಗೆಯಲ್ಲಿ ಸಾಧಕ
ಪಾನೆರಂಗಡಿಯಲ್ಲಿ ಕಳೆಂಜನು ‘ಪಾನೆ’ ಹಿಡಿದನು
ಬಂಟಲಂಗಡಿಯಲ್ಲಿ ಕಳೆಂಜನು ಭತ್ತ ಅಳತೆ ಮಾಡಿಸಿದನು
ವೇಣೂರಿನಲ್ಲಿ ಕಳೆಂಜನು ಎಣ್ಣೆ ಅಳತೆ ಮಾಡಿಸಿದನು
ಅರುವ ಪೇಟೆಯಲ್ಲಿ ಕಳೆಂಜನು ತೆಂಗಿನಕಾಯಿ ಜೂಜಾಡಿದನು
ನಂದರಂಗಡಿಯಲ್ಲಿ ಕಳೆಂಜನು ಕೋಳಿ ಕಟ್ಟಿದನು (ಕೋಳಿ ಅಂಕ)
ಉಪ್ಪಿನಂಗಡಿಯಲ್ಲಿ ಕಳೆಂಜನು ಬೆಳಕು ಹೊತ್ತಿಸಿದನು
ಕಂಗಿನ ತೋಟದಲ್ಲಿ ಕಳೆಂಜನು ಕೋಳಿ ಕೆಲೆಯುವಂತೆ ಮಾಡಿದನು
ಕೊಂಟ ಅಡ್ಕದಲ್ಲಿ ಕಳೆಂಜನು ಕುದುಂಬುಲು ಹಕ್ಕಿಯನ್ನು ಓಡಿಸಿದನು
ಮೈರ್‌ಪಾದೆಯಲ್ಲಿ ನವಿಲನ್ನು ಚದುರಿಸಿದನು
ಗುಂಡಕಲ್ಲಿನಲ್ಲಿ ಕಳೆಂಜನು ಹುಲಿಯಲ್ಲಿ ಓಡಿಸಿದನು
ದೇವರ ಗಂಡಿಗೆಯಲ್ಲಿ ಕಳೆಂಜನು ಪಾರಿವಾಳ ಓಡಿಸಿದನು
ಪಡುವಣದ ಬಾಗಿಲಲ್ಲಿ ಕಂಚಿನ ಸೊಡರು ಉರಿಸಿದನು
ಮೂಡಣದ ಬಾಗಿಲಲ್ಲಿ ಮುತ್ತಿನ ಸೊಡರು ಉರಿಸಿದನು
ಸಾರಗುತ್ತಲಿನಲ್ಲಿ ಸರ್ವರೋಗ ಬಂತು
ಕಾಯಿಲೆಯಾಯಿತು ಮನುಷ್ಯರ ರೋಗ ಬಂತು
ಮನುಷ್ಯರಾದರೆ ಅನ್ನದಲ್ಲಿ ಪರಿಹಾರ
ಹಸಿವಿನ ರೋಗವಾದರೆ ಅನ್ನದ ರಾಶಿಯಲ್ಲಿ ಪರಿಹಾರ
ಎಮ್ಮೆಯ ಕರುವಿನ ರೋಗವಾದರೆ ನೀರಿನಲ್ಲಿ ಪರಿಹಾರ
ಕೋಳಿಯ ರೋಗವಾದರೆ ಭತ್ತದಲ್ಲಿ ಪರಿಹಾರ
ಬೆಕ್ಕಿನ ರೋಗವಾದರೆ ಹಾಲಿನಲ್ಲಿ ಪರಿಹಾರ
ನಾಯಿಯ ರೋಗವಾದರೆ ಬೂದಿಯಲ್ಲಿ ಪರಿಹಾರ
ಕಾಯಿಲೆಯಾದರೆ ಪಡುವಣಕ್ಕೆ ಓಡಿಸುವುದು
ಅಸೌಖ್ಯವಾದರೆ ಮೂಡಣಕ್ಕೆ ಓಡಿಸುವುದು)

ಪಾಠ ೫

(ಈ ಪಾಠದಲ್ಲಿ ಪ್ರಾರಂಭಕ್ಕೆ ಕೆಲವು ಪದ್ಯ ಸಾಲುಗಳಿದ್ದು ಆಮೇಲೆ ಒಟ್ಟು ಕಥಾನಕವು ಗದ್ಯರೂಪದಲ್ಲಿದೆ. ಇದರ ಕನ್ನಡ ಅನುವಾದವನ್ನು ಇಲ್ಲಿ ಕೊಡಲಾಗಿದೆ.)

ಪದ್ಯ

ಕಳೆಂಜ ಕಳೆಂಜನು ಮಗ ಯಾರ ಮಗ
ಮಾಯದಲ್ಲಿ ಹುಟ್ಟಿದನು ಕಳೆಂಜ ‘ಜೋಗ’ದಲ್ಲಿ ಬಳೆದನು
ಹತ್ತು ಕಾಲವಾಯಿತು ಕೊನೆಗೆ ಹದಿನಾರು ತಿಂಗಳಾಯಿತು
ಆಲಿಗೆ (ಆಲಿಭೂತ?) ಸೋಲಲಾಯಿತು ಕಳೆಂಜನಿಗೆ ‘ಬೀರ’ಕ್ಕೆ ಮುಡಿಯಾಯಿತು
‘ಮಾರಿ’ ಬಿದ್ದಾಗ (ರೋಗ) ಕಳೆಂಜ ಭೂಮಿಗೆ ಇಳಿದನು
ಆಷಾಢ ಮೂವತ್ತು ದಿನ ಕಳೆಂಜ ಬಿಡಾರ ಸೇರಿದನು
ಮಾರಿಯನ್ನು ಓಡಿಸಬೇಕು ಕಳೆಂಜನಿಗೆ ಮಾರಿಗೋ ಬೀರಕ್ಕೋ

ಗದ್ಯ

ದ್ವಾಪರಯುಗ ಕಳೆದು ಕಲಿಯುಗದಲ್ಲಿ ಪರಮಾತ್ಮನು ಭೂಲೋಕಕ್ಕೆ ಕೆಲವು ಭೂತಗಳನ್ನು ಕಳುಹಿಸಿದನು. ಆದಿಮಾಯೆ ಮಲರಾಯೆ ಭೂತಗಣಗಳು. ಈ ಭೂತಗಣಗಳು ಭೂಲೋಕಕ್ಕೆ ಮೊದಲು ಬಂದುವು. ಹರಕೆ, ಗುಡಿ, ಬಲಿ, ನುಡಿಕಟ್ಟು ಇಂತಹ ಆಚರಣೆಗಳಿಗೆ ಈ ಭೂತಗಳು ಕಾರಣವಾಗಿದ್ದವು. ಆದ್ದರಿಂದ ಜನರು ಅವುಗಳಿಗೆ ಗುಡಿಗಳನ್ನು ಕಟ್ಟಿದರು. ಒಬ್ಬೊಬ್ಬರು ಒಂದೊಂದು ಭೂತವನ್ನು ನಂಬಿದರು. ಉತ್ತರಕ್ಕೆ ಬಂಗಾಡಿ, ದಕ್ಷಿಣದ ನೀಲೇಶ್ವರ ಘಟ್ಟದಿಂದ ಸಮುದ್ರದ ಬದಿಯವರೆಗೆ ಇವರ ಅಧಿಕಾರ ನಡೆಯುತ್ತಿದ್ದಾಗ ಅಲ್ಲಿಗೆ ಕಳೆಂಜನು ಬಂದನು. ದೇವರು ಅವನನ್ನು ಹೇಗೆ ಸೃಷ್ಟಿ ಮಾಡಿದರು?

“ಇಷ್ಟೆಲ್ಲ ನಾನು ಸೃಷ್ಟಿ ಮಾಡಿದೆ. ಮನುಷ್ಯರು ನಂಬುವಂತೆ ಮಾಡಿದರು. ಈ ಭೂತಗಳಿಗೆ ಒಂದು ಪಾದದಲ್ಲಿ ಮಹಾದೇವಿಯ ಸೃಷ್ಟಿ. ಮೊಣಕಾಲಿನಿಂದ ಮೇಲೆ ಬ್ರಹ್ಮಸೃಷ್ಟಿ. ಕಳೆಂಜನನ್ನು ಬಲದ ಉಂಗುಟದಲ್ಲಿ ಸೃಷ್ಟಿ ಮಾಡಿದರು. ಬಲದ ಉಂಗುಟಕ್ಕೆ ಏನೂ ಆರಾಧನೆ ಇಲ್ಲ. ನೀನು ಭೂಲೋಕಕ್ಕೆ ಹೋಗು. ಅಲ್ಲಿ ಸಾವಿರದೊಂದು ಜೀವರಾಶಿಯನ್ನು ಸೃಷ್ಟಿ ಮಾಡಿರುವೆ. ದೊಡ್ಡ ಸಣ್ಣ ಪೀಡೆ ಪಿಶಾಚಿಗಳನ್ನು ಉಂಟುಮಾಡಿದ್ದೇನೆ. ನೀನು ಹೋಗಿ ಅವರು ಏನು ಮಾಡಿಕೊಂಡಿದ್ದಾರೆ, ನೋಡಿಕೊಂಡು ಬಾ” ಎಂದು ಹೇಳಿದರು. ಅಷ್ಟರಲ್ಲಿ ಆಷಾಢ ತಿಂಗಳು ಬಂದಿತು.

ಕಾರ್ತಿಕ ಮಾಸ ಕಳೆದು ಆಷಾಢ ತಿಂಗಳ ಸಂಕ್ರಮಣದಂದು ಪರಮಾತ್ಮ ಸೃಷ್ಟಿ ಮಾಡಿರುವುದು, ವರ ಕೊಟ್ಟಿರುವುದು. ಹಾಗಿರುವಾಗ ಭೂಲೋಕದಲ್ಲಿ ಮನುಷ್ಯರು ಬೇಆಯ ಮಾಡುವ ಈ ಭಕ್ತರು ತಮ್ಮ ಕೆಲಸಗಳನ್ನು ಮಾಡುವಾಗ ನನ್ನನ್ನು ಸಾಕ್ಷಿಯನ್ನಾಗಿ ಇಟ್ಟುಕೊಂಡು ನನ್ನ ಬಗ್ಗೆ ಭಕ್ತಿಯನ್ನು ಹೊಂದಿದ್ದಾರೋ ನೋಡಬೇಕು ಎಂದು ದೇವರು ಕಳೆಂಜನಿಗೆ ಹೇಳಿದರು. ಆಗ ಕಳೆಂಜನು ಹೊರಟು ಊರು ಸಂಚಾರ ಮಾಡುತ್ತಾ ಬಂದನು. ಬೇಸಾಯದ ಸಮಯದಲ್ಲಿ ಪ್ರತಿಯೊಂದು ಗದ್ದೆಯಲ್ಲಿ ಸ್ವಾಮಿ ದೇವರನ್ನು ಸ್ಮರಿಸಿ ‘ಕಾಪು’ (ರಕ್ಷಣೆಯ ಸಾಕ್ಷಿ)ವನ್ನು ನೆಡುವರು. ಕಳೆಂಜನು ಇಡೀ ಜಗತ್ತನ್ನು ಪರೀಕ್ಷೆ ಮಾಡಿದನು. ಎಲ್ಲಾ ಗದ್ದೆಗಳಲ್ಲೂ ‘ಕಾಪು’ ನೆಟ್ಟಿರುತ್ತಾರೆ. ಆಷಾಢ ಆರಂಭವಾಗುವ ಸಂಕ್ರಮಣದಂದು ಬೆಳಿಗ್ಗೆ ಕಳೆಂಜನು ಮುಕ್ಕಾಲು ಮೂರು ಗಳಿಗೆಯೊಳಗೆ ಇಡಿಯ ಜಗತ್ತನ್ನು ಪರೀಕ್ಷೆ ಮಾಡಿದನು.

ಅದನ್ನು ಪರಮಾತ್ಮನಿಗೆ ವರದಿ ಮಾಡಿದನು. “ಜನರು ಬೇಸಾಯದ ಕೆಲಸದಲ್ಲಿ ಇದ್ದಾರೆ. ನಿಮ್ಮ ಮೇಲಿನ ನಂಬಿಕೆಯಿಂದ ನಿಮ್ಮನ್ನೇ ಭಕ್ತಿಯಿಂದ ಸ್ಮರಿಸಿಕೊಂಡಿದ್ದಾರೆ. ನಿಮ್ಮ ಸಾಕ್ಷಿಯಾಗಿ ಗದ್ದೆಯಲ್ಲಿ ಕಾಪುವನ್ನು ನೆಟ್ಟಿದ್ದಾರೆ” ಎಂದು ಹೇಳಿದನು. ಆಗ ಪರಮಾತ್ಮನು-“ ಹಾಗಾದರೆ ಇನ್ನು ಭೂತಗಣಗಳು ಭೂಲೋಕದಲ್ಲಿ ಏನು ಮಾಡಿದ್ದಾರೆ, ಅನ್ಯಾಯ ಮಾಡಿದ್ದಾರೋ? ನೋಡಿಕೊಂಡು ಬಾ. ನಂಬಿದವರಿಗೆ ಇಂಬು ಕೊಡುತ್ತಾರೋ? ಮಾಗಣೆ ದೈವಗಳೆಂದು ಹೇಳಿಸಿಕೊಂಡು ಜನಗಳೊಡನೆ ಅನ್ಯೋನ್ಯವಾಗಿ ಇದ್ದಾರೋ? ಅನ್ಯಾಯದವರಿಗೆ ಅನ್ಯಾಯ, ನ್ಯಾಯದವರಿಗೆ ನ್ಯಾಯ ಒದಗಿಸುತ್ತಾರೋ, ನೋಡಿಕೊಂಡು ಬಾ” ಎಂದು ಪರಮಾತ್ಮನು ಹೇಳಿದನು.

ಆಷಾಢ ಸಂಕ್ರಮಣದ ಮರುದಿನ ಈ ಭೂತಗಳನ್ನು ಪರೀಕ್ಷಿಸಲು ಕಳೆಂಜನು ಭೂಲೋಕಕ್ಕೆ ಬಂದನು. ಈ ಒಂದು ಕಡಮೆ ಸಾವಿರ ಭೂತಗಳು ವರ್ಷದ ಹನ್ನೊಂದು ತಿಂಗಳ ಕಾಲ ಇಡೀ ಜಗತ್ತಿನಲ್ಲಿಯೇ ‘ನನಗೆ ಅಲ್ಲಿ ಕಲ್ಲು, ನನಗೆ ಅಲ್ಲಿ ಗುಡಿ, ನನಗೆ ಅಲ್ಲಿ ಬನ’ ಎಂದು ಇರುತ್ತಾರೆ.

ದಾರಿಯಲ್ಲಿ ಈ ಭೂತಗಣಗಳು ಕಳೆಂಜನಿಗೆ ನೋಡಲು ಸಿಕ್ಕಿದವು ಅವುಗಳು ಸಂಚಾರ ಮಾಡುತ್ತಾ ಇರುತ್ತವೆ. ಕಳೆಂಜನು ಸಂಚಾರ ಮಾಡುವವನು. ಅವುಗಳ ಒಂದು ಕಡಮೆ ಸಾವಿರ ಭೂತಗಳು ಇವೆ. ಇವನು ಒಬ್ಬನೇ “ನೀನು ಎಲ್ಲಿಗೆ ಹೋಗುವುದು?” ಎಂದು ಭೂತಗಳು ಕೇಳಿದುವು. “ದೇವರು ನನ್ನನ್ನು ಲೋಕದ ದುಷ್ಟ ಕಷ್ಟ ಮಾರಿ ಬೀರಿ ರೋಗರುಜಿನ ಹೇಗೆ ಇದೆ, ಅದನ್ನು ಹೋಗಿ ನೋಡಿಕೊಂಡು ಬರಬೇಕು. ಒಂದು ಕಮ್ಮಿ ಸಾವಿರ ಭೂತಗಳನ್ನು ಕಳುಹಿಸಿದ್ದೇನೆ, ಅವುಗಳು ಯಾವ ಉದ್ಯೋಗದಲ್ಲಿವೆ ನೋಡಬೇಕು. ನೋಡಿ ನನಗೆ ವರದಿ ಸಲ್ಲಿಸಬೇಕು ಎಂದು ದೇವರು ಹೇಳಿದ್ದಾರೆ” ಎಂದು ಕಳೆಂಜನು ಹೇಳಿದನು.

ಸಾವಿರದೊಂದು ಗಣಗಳು ಕಳೆಂಜನನ್ನು ಕೇಳಿದವು- “ನೀನು ಯಾರು?” ಆಗ ಕಳೆಂಜ ಹೇಳಿದನು-‘ನಾನು ಊರಿಗೆ ಅರಸು’, ಆಗ ಅವರೊಳಗೆ ಚರ್ಚೆ ಆಯಿತು. “ನೀನು ಊರಿಗೆ ಅರಸು ಹೇಗೆ?” ನಾವು ನಿನಗಿಂತ ಮೊದಲು ಬಂದವರಲ್ಲವೇ? ನಾವು ಕೊಲ್ಲುವವನನ್ನು ಕೊಂದೆವು, ದುಷ್ಟತನ ಮಾಡುವವನನ್ನು ಕೊಂದೆವು, ನಂಬದವನನ್ನು ನಂಬುವಂತೆ ಮಾಡಿದೆವು, ನೀನೇನು ಮಾಡಿದಿ?” ಎಂದರು.

ಆಗ ಕಳೆಂಜನು ಈ ರೀತಿ ಉತ್ತರ ಕೊಟ್ಟನು. “ಓಹೋ, ನೀವು ಒಂದು ಕಮ್ಮಿ ಸಾವಿರ ಭೂತಗಳು. ನೀವು ಗುಡಿ ಮಾನ್ಯತೆ ಉಳ್ಳವರು. ಈ ಆಷಾಢ ತಿಂಗಳಿನಲ್ಲಿ ಈ ಕೆಸರಿನ ಸ್ಥಳಕ್ಕೆ ಯಾಕೆ ಬಂದಿರಿ? ಅಷ್ಟು ಪೌರುಷ ಇದ್ದರೆ ಮನುಷ್ಯರ ಹರಕೆಗಳನ್ನು ಕುಳಿತಲ್ಲಿಗೇ ತರಿಸಲು ನಿಮಗೆ ಯಾಕೆ ಆಗುವುದಿಲ್ಲ?” ಎಂದು ಹೇಳಿದಾಗ- “ಓಹೋ ಹಾಗೋ, ನಮಗೆ ಸಾಧ್ಯವಾಗದೆ ಅಲ್ಲ ನಾವು ಬಿಟ್ಟದ್ದು. ನಮಗೆ ಖಂಡಿತ ಸಾಧ್ಯ. ಜನರು ನಂಬದಿದ್ದರೆ ಮನೆ ಮನೆಗೆ ಹೋಗಿ ಗಂಡಾಂತರ ಕೊಡಬೇಕು. ಮಾರಿ ಬೀರಿ ರೋಗರುಜಿನಗಳನ್ನು ತಂದು ಹಾಕಿ ಅವರು ನಂಬುವಂತೆ ಮಾಡಬೇಕು. ಅದಕ್ಕಾಗಿ ಹೊರಟಿದ್ದೇವೆ” ಎಂದು ಭೂತಗಳು ಹೇಳಿದವು.

ಅದಕ್ಕೆ ಕಳೆಂಜ ಹೇಳಿದನು- “ನಾನು ಊರಿನ ಅರಸು. ಹಾಗೆಂದರೆ ಇದಕ್ಕೆ ಒಂದು ಕಾರಣ ಉಂಟು. ನೀವು ರೋಗರುಜಿನ ತಂದು ಹಾಕಿದರೆ ನಾನು ಅದನ್ನು ಗುಣಪಡಿಸುವವನು”.

ಅಷ್ಟಾಗುವಾಗ ಇವರೊಳಗೆ ಜಗಳವಾಯಿತು. ಕಳೆಂಜ ಏನು ಮಾಡಿದನೆಂದರೆ ಇವರ ಪೌರುಷವನ್ನು ಪರೀಕ್ಷಸುವುದಕ್ಕಾಗಿ ಕೊಡೆಯ ಕಾಲನ್ನು ಸರ್ರನೆ ಎಳೆದನು. ಮಸಿಯ ನೀರು, ಅರಸಿನ ನೀರು, ಮೆಣಸು, ಉಪ್ಪು, ಹುಳಿ ಇವೆಲ್ಲವುಗಳ ನೀರು-ಇಷ್ಟು ಸಾಮಾನು ಇವನಲ್ಲಿ ಉಂಟು ಯುದ್ಧವಾಗುವಾಗ ಕಳೆಂಜನ ಮೊದಲು ಈ ನೀರನ್ನು ಮುಸುಡಿಗೆ ಎರಚಿದನು. ಎರಚಿದಾಗ ಅವರಿಗೆ ಕಣ್ಣು ಉರಿಯಿತು. ಆಗ ಕಳೆಂಜನು ಅವರಲ್ಲಿ ಹೀಗೆ ಹೇಳಿದನು- “ನೀವು ನಿಮ್ಮ ನಿಮ್ಮ ಗುಡಿಗಳಲ್ಲೇ ನಿಲ್ಲಬೇಕು. ಮೂವತ್ತು ದಿನ ನಿಲ್ಲಬೇಕು. ಈ ವೇಳೆಯಲ್ಲಿ ಹೊರಟರೆ ಜಾಗ್ರತೆ. ಈ ಮೂವತ್ತು ದಿನದ ಅಧಿಕಾರ ನನಗೆ. ಉಳಿದ ಹನ್ನೊಂದು ತಿಂಗಳು ನಿನಗೆ”. ಇವರು ಓಡಿದರು. ಕಳೆಂಜನು ಊರಿನ ಮಾರಿಯನ್ನು ದೂಡಿಕೊಂಡು ಹೋದನು. ಜೀವ ಜಂತುಗಳಿಗೆ ಮಾರಿ ಬೀರಿಯನ್ನು ಎಲ್ಲಾ ಮನೆ ಮನೆಗೆ ಹೋಗಿ ತೆಗೆದುಕೊಂಡು ಮೂಡಣದ ಸಮುದ್ರಕ್ಕೆ ಕೊಂಡೊಯ್ದು ಹಾಕಿದನು.

ಆ ಬಳಿಕ ಆಟಿಕಳೆಂಜನು ಈ ಭೂತಗಣಗಳನ್ನು ಬೆನ್ನಟ್ಟಿ ಗುಡಿಯೊಳಗೆ ಮಾಡಿ, “ಇಗೋ, ಆಷಾಢದ ಮೂವತ್ತು ದಿನದವರೆಗೆ ಊರಿನ ಅಧಿಕಾರ ನನಗೆ. ಹೊರಟರೆ ಜಾಗ್ರತೆ” ಎಂದು ಬಾಗಿಲು ಹಾಕಿ ಒಂದು ಬಾರಿ ತುಳಿದನು. ಹಾಗೆಯೇ ಇಂದಿಗೂ ಆಷಾಢ ಆರಂಭವಾಗುವ ಸಂಕ್ರಮಣದಂದು ಭೂತಗಳ ಗುಡಿಗಳಿಗೆ ಬಾಗಿಲು ಹಾಕಬೇಕು. ಶ್ರಾವಣ ಆರಂಭವಾಗುವ ಸಂಕ್ರಮಣದಂದು ಬಾಗಿಲು ತೆರೆಯಬೇಕು. ಇದು ಕಳೆಂಜ ಮಾಡಿದ ಕಟ್ಟುಕಟ್ಟಳೆ.