ಕಳೆದ ಸುಮಾರು ನೂರು ವರ್ಷಗಳಿಂದ ಅಧಿಕ ಅವಧಿಯಲ್ಲಿ ಕರಾವಳಿ ಪ್ರದೇಶದ ಜಾನಪದದ ಕುರಿತಂತೆ ನಡೆದಿರುವ ಅಧ್ಯಯನದ ಮುಖ್ಯ ನೆಲೆಗಳನ್ನು ಈ ಲೇಖನದಲ್ಲಿ ಪ್ರಸ್ತಾವಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ, ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಪ್ರದೇಶದ ಜಾನಪದ ಅಧ್ಯಯನವನ್ನು ಪ್ರಸ್ತುತ ವಿಶ್ಲೇಷಿಸಲಾಗಿದೆ. ತುಳುನಾಡು ಅಥವಾ ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ ಅರ್ಥವೇ ಇಲ್ಲಿ ಮುಖ್ಯ. ಮೊದಲ ಹಂತದಲ್ಲಿ ವಿದೇಶೀಯ ವಿದ್ವಾಂಸರು, ಎರಡನೆಯ ಹಂತದಲ್ಲಿ ದೇಶೀಯ ವಿದ್ವಾಂಸರು ಜಾನಪದದ ಕೆಲಸವನ್ನು ಮಾಡಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳ ಮೂರನೆಯ ಹಂತದಲ್ಲಿ ದೇಶಿಯ ಮತ್ತು ವಿದೇಶೀಯ ಜಾನಪದ ವಿದ್ವಾಂಸರು ಒಟ್ಟಾಗಿ, ಕೆಲವೊಮ್ಮೆ ತಂಡದ ರೂಪದಲ್ಲಿ ಜಾನಪದ ಮಾಹಿತಿಗಳ ಸಂಗ್ರಹ ಮತ್ತು ಅಧ್ಯಯನವನ್ನು ನಡೆಸಿದ್ದಾರೆ. ಇದೇ ಅವಧಿಯಲ್ಲಿ ಉಡುಪಿಯ ಪ್ರಾದೇಶಿಕ ರಂಗ ಕಲೆಗಳ ಜಾನಪದ ಅಧ್ಯಯನ ಕೆಂದ್ರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,ಶ್ರೀ ಧರ್ಮಸ್ಥಳ ತುಳು ಪೀಠ, ಮಂಗಳೂರು ವಿಶ್ವವಿದ್ಯಾಲಯ, ಹಂಪಿಯ ಕನ್ನಡ ವಿಶ್ವವಿದ್ಯಾಲಯ, ತುಳುಕೂಟದಂತಹ ಸಂಘಟನೆಗಳು, ಅಗೊಳಿ ಮಂಜಣ ಅಧ್ಯಯನ ಕೇಂದ್ರ, ತಾಲೂಕು ಮಟ್ಟದ ತುಳುಕೂಟಗಳು ಜಾನಪದ ಅಧ್ಯಯನಕ್ಕೆ ಸಾಂಸ್ಥಿಕ ರೂಪವನ್ನು ಕಲ್ಪಸಿವೆ.

ಕಟೇಲಿಯ ‘ರಾಶಿ’ ಪತ್ರಿಕಾ ಬಳಗ, ಸುರತ್ಕಲ್ಲಿನ ಚಾವಡಿ, ಕೆಲವು ಕಾಲೇಜುಗಳ ತುಳು ಸಂಘಗಳು ಜಾನಪದವನ್ನು ಪ್ರಸಾರ ಮಾಡಿ ಜನಪ್ರಿಯಗೊಳಿಸವು ಕೆಲಸವನ್ನು ಮಾಡಿವೆ. ತುಳು ಕನ್ನಡ, ಕೊಂಕಣಿ, ಹವ್ಯಕ, ಬ್ಯಾರಿ ಭಾಷೆಗಳ ಜಾನಪದ ಅಧ್ಯಯನವನ್ನು ಒಟ್ಟಾಗಿ ಪರಿಭಾವಿಸಿದಾಗ ಇದರ ಕ್ಷೇತ್ರ ಬಹಳ ವಿಸ್ತಾರವಾಗಿದೆ ಎಂಬ ಸತ್ಯವು ಸ್ಪಷ್ಟವಾಗಿ ನಮ್ಮ ಗಮನಕ್ಕೆ ಬರುತ್ತವೆ.

ತುಳು ಜಾನಪದ ಅಧ್ಯಯನದ ಮುಖ್ಯ ಪ್ರವೃತ್ತಿಗಳನ್ನು ಗುರುತಿಸುವ ಉದ್ದೇಶಕ್ಕೆ ಅನುಗುಣವಾಗಿ ಪ್ರಸ್ತುತ ತುಳು ಜಾನಪದ ಮಹಾಕಾವ್ಯಗಳ ವಿಶ್ಲೇಷಣೆಯನ್ನು ತುಸು ವಿಸ್ತಾರವಾಗಿ ಈ ಲೇಖನದಲ್ಲಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಎಂಬುದು ಭೌಗೋಳಿಕವಾಗಿ ಒಂದು ಪ್ರಾದೇಶಿಕ ಘಟಕದ ಹೆಸರು. ಶೈಕ್ಷಣಿಕ ಮತ್ತು ಆಡಳಿತ ಭಾಷೆಯಾಗಿ ಇಲ್ಲಿ ಕನ್ನಡವು ಪ್ರಧಾನವಾಗಿ ಬಳಕೆಯಾಗುತ್ತದೆಯಾದರೂ ಸಂಪರ್ಕ ಭಾಷೆಯಾಗಿ ತುಳು ಅತಿ ಪ್ರಾಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಸಾಮಾನ್ಯವಾಗಿ ಈ ಪ್ರದೇಶವನ್ನು ತುಳುನಾಡೆಂದೂ ಇಲ್ಲಿಯ ಜನರನ್ನು ತುಳುವರೆಂದೂ ಕರೆಯುವುದನ್ನು ಗಮನಿಸಬಹುದು. ತುಳು ಮಾತನಾಡುವ ಜನರಲ್ಲದೆ ಕೊಂಕಣಿಗರು, ಹವ್ಯಕರು, ಮುಸ್ಲಿಮರು, ಕ್ರೈಸ್ತರು, ಇಲ್ಲಿದ್ದು, ತುಳು ಭಾಷೆ ಮತ್ತು ಸಂಸ್ಕೃತಿಯ ಜೊತೆಗೆ ಆಪ್ತವಾದ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಹಾಗಾಗಿ ಈ ಪ್ರದೇಶ ಹಲವು ಭಾಷೆಗಳ, ಹಲವು ಜನಾಂಗಗಳ, ಹಲವು ಸಂಸ್ಕೃತಿ ಹಾಗೂ ಹಲವು ಜೀವನ ಕ್ರಮಗಳ ನೆಲೆವೀಡಾಗಿ ಈ ಬಹುಮುಖೀ ಪರಂಪರೆಗಳ ಸಮೃದ್ಧಿಯನ್ನು ಈ ಪ್ರದೇಶದಲ್ಲಿ ವಿಶೇಷವಾಗಿ ಕಾಣಬಹುದು. ಈ ಹಿನ್ನೆಲೆಯ್ಲಲಿ ಈ ವಲಯದ ಜಾನಪದ ಅಧ್ಯಯನ ಬಹುಮುಖೀ ನೆಲಗಳನ್ನು ಗುರುತಿಸಬಹುದು. ತೌಲನಿಕವಾಗಿ ನೋಡಿದರೆ ತುಳು ಜಾನಪದ ಅಧ್ಯಯನವು ವಿಶೇಷವಾಗಿ ನಡೆದಿದ್ದು ಹವ್ಯಕ ಮತ್ತು ಇತರ ಜನಪದ ಪರಂಪರೆಗಳ ಅಧ್ಯಯನ ಗಮನ ಸೆಳೆಯುವ ರೀತಿಯಲ್ಲಿ ಆಗಿಲ್ಲ. ಹವ್ಯಕರ ಶೋಭಾನೆಗಳು, ಮದುವೆ ಮತ್ತು ಕೋಡಿ ಸಂಪ್ರದಾಯಗಳು, ಮುಸ್ಲಿಮರ ಪಾಟ್ಟುಗಳು ಹೀಗೆ ಕೆಲವು ನಿರ್ದಿಷ್ಟ ಜನಪದ ಸಾಹಿತ್ಯ ಮತ್ತು ಸಾಮಾಜಿಕ ಆಚರಣೆಗಳನ್ನು ಬಿಟ್ಟರೆ ಉಳಿದಂತೆ ಸಂಗ್ರಹ ಮತ್ತು ವಿಶ್ಲೇಷಣೆಯ ಕೆಲಸಗಳು ನಡೆದಿಲ್ಲವೆಂದು ಹೇಳಬಹುದು. ಆದರೆ ತುಳುವಿನ ಮೌಖಿಕ ಸಾಹಿತ್ಯ, ಭೌತಿಕ ಸಂಸ್ಕೃತಿ, ಸಾಮಾಜಿಕ ಹಾಗೂ ಕೌಟುಂಬಿಕ ಆಚರಣೆಗಳು ಮತ್ತು ರಂಗ ಪ್ರದರ್ಶನಗಳು ಈ ಪ್ರಕಾರಗಳಲ್ಲಿ ಪ್ರಾತಿನಿಧಿಕ ಕೆಲಸಗಳು ನಡೆದಿರುವುದು ಕಂಡುಬರುತ್ತದೆ. ಹಾಗಾಗಿ ಈ ಲೇಖನದಲ್ಲಿ ಜಾನಪದದ ಮುಖ್ಯ ಭಾಗವಾಗಿರುವ ತೌಳವ ಸಂಸ್ಕೃತಿ ಜಾನಪದೀಯ ಅಧ್ಯಯನಗಳನ್ನು ತುಸು ವಿಸ್ತಾರವಾಗಿಯೂ, ಉಡುಪಿ, ಕುಂದಾಪುರ ಪರಿಸರದ ಜಾನಪದದ ಕೆಲಸಗಳನ್ನು ಸಂದರ್ಭೋಚಿತ ವಾಗಿಯೂ ಪ್ರಸ್ತಾವಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಯ ಜಾನಪದ ಅಧ್ಯಯನದ ಮುಖ್ಯ ನೆಲೆಗಳನ್ನು, ಈ ಅಧ್ಯಯನಗಳ ಸೈದ್ಧಾಂತಿಕ ವಿಧಾನಗಳನ್ನು ಗುರುತಿಸಿ ಇಂತಹ ಪ್ರಯತ್ನಗಳು ಸಾಧಿಸಿಕೊಳ್ಳಬೇಕಾದ ನೂತನ ಆಯಾಮಗಳನ್ನು ಸೂಚಿಸುವುದು ಈ ಲೇಖನದ ಮುಖ್ಯ ಆಶಯವಾಗಿದೆ.

ದಕ್ಷಿಣ ಕನ್ನಡದ ಜಾನಪದ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಮೊದಲ ಕೆಲಸ ಮಾಡಿದವರು ಪಾಶ್ಚಾತ್ಯ ಕ್ರೈಸ್ತ ಮಿಶನರಿಗಳೇ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪ್ರಮುಖವೂ ಮಹತ್ವದ್ದೂ ಆದ ಧಾರ್ಮಿಕ ರಂಗಭೂಮಿ ಭೂತಾರಾಧನೆಯ ಕುರಿತಂತೆ ಅಧ್ಯಯನವನ್ನು ಪ್ರಾರಂಭಿಸಿದವರಲ್ಲಿ ಇವರು ಮೊದಲಿಗರಾಗಿದ್ದಾರೆ.ಕ್ರಿ.ಶ. ೧೮೭೫ರಷ್ಟು ಹಿಂದೆಯೇ ಭೂತಾರಾಧನೆಯ ಮೆಲೆ ಎಂ. ಜೆ.ವಾಲಹೌಸ್ ಲೇಖನವನ್ನು ಬರೆದಿದ್ದಾರೆ.‘on Behalf of the bhutas- devil and ghost worship in western india’ ಎಂಬ ಹೆಸರಿನ ಈ ಲೇಖನದಲ್ಲಿ ಭೂತಾರಾಧನೆಗೆ ಸಂಬಂಧಪಟ್ಟ ಆಚರಣೆಗಳ ವಿಸ್ತಾರವಾದ ವಿವರಣೆಗಳಿವೆ, ಎ.ಸಿ. ಬರ್ನೆಲ್ ಅವರ `The Devil Workship of the Tuluvas’ (೧೮೯೪-೯೭) ಸಂಶೋಧನಾ ಪ್ರಬಂಧಗಳ ಮಾಲಿಕೆಯು ಮೂಲಭೂತವಾಗಿ ಪಾಡ್ದನಗಳ ಒಂದು ಸಂಕಲನವಾಗಿದೆ. ಇದರಲ್ಲಿ ೨೬ ಭೂತಗಳ ಪಾಡ್ದನಗಳನ್ನು ಇಂಗ್ಲಿಷಿನಲ್ಲಿ ಕೊಟ್ಟಿರುವುದು ಒಂದು ವೈಶಿಷ್ಟವಾಗಿದೆ.ಆರಾಧನೆಯ ದೃಷ್ಟಿಯಿಂದ ಈ ಕೃತಿಯ ಪ್ರಾರಂಭದ ಕೆಲವು ಅಧ್ಯಾಯಗಳು ಬಹಳ ಮೌಲಿಕವಾಗಿದೆ. ಕ್ಷೇತ್ರ ಕಾರ್ಯದ ಮೂಲಕ ಭೂತಾರಾಧನೆಯ ಆಚರಣಾತ್ಮಕ ಸ್ವರೂಪಕ್ಕೆ ಸಂಬಂಧಪಟ್ಟಂತೆ ಮಾಹಿತಗಳನ್ನು ಸಂಗ್ರಹಿಸುವ ವಿಧಾನವು ಜಾನಪದ ಅಧ್ಯಯನದ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ೧೮೮೬ರಲ್ಲಿ ಬಾಸೆಲ್ ಮಿಶನ್ ಪ್ರಕಟಿಸಿದ ತುಳು-ಇಂಗ್ಲಿಷ್ ನಿಘಂಟು ಜಾನಪದ ಮಾಹಿತಿಗಳನ್ನು ಬಳಸಿಕೊಂಡಿದೆ. ಇದೇ ಸಂಸ್ಥೆಯು ೧೮೭೭ರಲ್ಲಿ ಐನೂರು ತುಳುಗಾದೆಗಳ ಸಂಗ್ರಹವನ್ನು ಪ್ರಕಟಿಸಿದೆ. ೧೮೮೬ರಲ್ಲಿ ಮ್ಯಾನರ್ ರವರು ಇಪ್ಪತ್ತೊಂದು ತುಳು ಪಾಡ್ದನಗಳನ್ನು ಸಂಗ್ರಹಿಸಿ ಪಾಡ್ದನೊಳು ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ೧೮೯೧ರ census of india vol-13 part one:madras ಸಂಪುಟದ `religion:an account of chief religion’ಎಂಬ ಅಧ್ಯಾಯ ಆರ್.ಕಾಲ್ಡ್ ವೆಲ್ಲರು ಬರೆದಿರುವ demologu in south india ಎಂಬ ಲೇಖನ, ಜೆ, ಸ್ಟರ್ರಕ್ ಸಂಪಾದಿಸಿರುವ (೧೮೯೪) district manual of south kanara vol.-1 ಸಂಪುಟದ the people ಎಂಬ ಅಧ್ಯಾಯ ಇವುಗಳಲ್ಲಿ ಭೂತಾರಾಧನೆಯ ವಿವರಣೆಗಳನ್ನು ನೀಡಲಾಗಿದೆ. ಶೀನಪ್ಪ ಹೆಗ್ಗಡೆಯವರ ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳಪಾಂಡ್ಯರಾಯನ ಕಟ್ಟು (೧೯೧೫), ತುಳುವಾಲ ಬಲಯೇಂದ್ರೆ (೧೯೨೯) , ಎಂ.ಗಣಪತಿ ರಾವ್ ಐಗಳ್ ಅವರ ‘ಅತ್ತಾವರ ದೈವೊಂಗುಳು’ (೧೯೨೮), ತುಳು ಪಾಡ್ದನೊಳು (೧೦೩೩), ಸತ್ಯಮಿತ್ರ ಬಂಗೇರ ಅವರ ಅಳಿಯ ಸಂತಾನಕಟ್ಟ್ ದ ಗುಟ್ಟು ಎಂಬ ತುಳು ಗ್ರಂಥ (೧೯೩೦), ಬಿ.ಎ. ಸಾಲೆತ್ತೂರು ಅವರ ancient karnataka vol; history of tuluva ಗ್ರಂಥದ `life in early tuluvas’ ಎಂಬ ಅಧ್ಯಾಯ (೧೯೫೬), ಎನ್ ಎಸ್. ಕಿಲ್ಲೆ ಮತ್ತು ಶೀನಪ್ಪ ಹೆಗ್ಗಡೆಯವರ ‘ಪ್ರಾಚೀನ ತುಳುನಾಡು’ (೧೯೫೪) ಗ್ರಂಥದ ನಾಲ್ಕನೆಯ ಭಾಗ, ಪಿ. ಗುರುರಾಜ ಭಟ್ ಅವರ ‘studies in tuluva history and culture’(೧೯೭೫) ಗ್ರಂಥದ ಹನ್ನೊಂದು ಮತ್ತು ಹನ್ನೆರಡನೆಯ ಅಧ್ಯಾಯಗಳು – ಇವೇ ಮೊದಲಾದ ಬರವಣಿಗೆಗಳನ್ನು ತುಳು ಸಂಸ್ಕೃತಿಯ ಆರಾಧನೆ, ಜೀವನ ಕ್ರಮಗಳ ಕಟ್ಟು ಕಟ್ಟಳೆಗಳನ್ನು ವಿವರಿಸಲಾಗಿದೆ. ಮೇಲೆ ಪ್ರಸ್ತಾಪಿಸಿರುವ ಎಲ್ಲ ಬರವಣಿಗೆಗಳಿಗೆ ಚಾರಿತ್ರಿಕ ಮಹತ್ವವಿದೆ. ಈ ವಿದ್ವಾಂಸರು ಜಾನಪದವನ್ನು ಪ್ರಧಾನ ಶಿಸ್ತಾಗಿ ಪರಿಭಾವಿಸಿಕೊಂಡು ಈ ಲೇಖನಗಳನ್ನು ರಚಿಸಿಲ್ಲ.ಮಾಹಿತಿಗಳನ್ನು ಸಂಗ್ರಹಿಸಿ, ಪ್ರಧಾನ ಉದ್ದೇಶವಾದ ಇತಿಹಾಸವನ್ನು ಬರೆಯುವಾಗ ಇವುಗಳನ್ನು ಪೂರಕವಾಗಿ ಬಳಸಿಕೊಂಡಿದ್ದಾರೆ.ರಾಷ್ಟ್ರೀಯ ಚಳುವಳಿಗಳು, ರಾಷ್ಟ್ರೀಯತೆಯ ಪರಿಕಲ್ಪನೆ, ಸಂಸ್ಕೃತಿಯ ಪುನರುತ್ಥಾನ ಇಂತಹ ರಾಜಕೀಯ ಉದ್ದೇಶಗಳ ಒಂದು ಸಾಂಸ್ಕೃತಿಕ ಭಾಗವಾಗಿ ಈ ಲೇಖನಗಳು ರಚನೆಯಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಹಂತದ ಜಾನಪದ ಸಂಗ್ರಹ ಮತ್ತು ಅಧ್ಯಯನಗಳ ಮಹತ್ವವನ್ನು ಮತ್ತು ಅವುಗಳ ಮಿತಿಯನ್ನು ಒಟ್ಟಾಗಿ ನಾವು ಅರ್ಥೈಸಿಕೊಳ್ಳಬೇಕು. ಜಾನಪದ ಅಧ್ಯಯನವು ಒಂದು ಶಿಸ್ತಾಗಿ ಇನ್ನು ರೂಪುಗೊಂಡಿಲ್ಲದ ಕಾಲಘಟ್ಟದಲ್ಲಿ ಕ್ಷೇತ್ರಕಾರ್ಯ,ಮಾಹಿತಿ ಸಂಗ್ರಹ ಮತ್ತು ದಾಖಲಾತಿ ಸೌಲಭ್ಯಗಳು ತುಂಬ ಮಿತವಾಗಿದ್ದ ಸಂದರ್ಭದಲ್ಲಿ ಈ ಬರವಣಿಗೆಗಳು ಕೆಲಸಗಳು ನಡೆದಿವೆ. ಜಾನಪದ ಅಧ್ಯಯನದ ಉದ್ದೇಶಕ್ಕಿಂತ ಈ ಲೇಖಕರಿಗೆ ಇತಿಹಾಸ ರಚನೆ ಮತ್ತು ಭಾಷೆ ಜನಾಂಗಗಳ ಸಾಂಸ್ಕೃತಿಕ ಹಿರಿಮೆಗಳನ್ನು ಶೋಧಿಸುವ ಭಿನ್ನ ಉದ್ದೇಶವು ಇದ್ದುದನ್ನು ನಾವು ಗಮನಿಸಬೇಕು. ದೇಶದ ಜನಾಂಗಗಳನ್ನು ಬಿಡಿಬಿಡಿಯಾಗಿ ಗುರುತಿಸುತ್ತ ಅಂತಹ ಜನಾಂಗಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಪೂರಕವಾಗಿ ನೀಡುವುದು ಅವರ ಉದ್ದೇಶವಾಗಿತ್ತು. ಇತಿಹಾಸಕಾರರು, ಸಮಾಜ ಶಾಸ್ತ್ರಜ್ಞರು ಮತ್ತು ಮಾನವ ಶಾಸ್ತ್ರಜ್ಞರು ಮಂಚೂಣಿಯಲ್ಲಿ ನಿಂತುಕೊಂಡು ಜನಾಂಗ ಮತ್ತು ಸಂಸ್ಕೃತಿಗಳನ್ನು ಅಧ್ಯಯನ ಮಾಡುವ ಕಾಲವು ಅದಾಗಿತ್ತು. ಜನಾಂಗ ಮತ್ತು ಜನಾಂಗ ಸಂಬಂಧೀ ಅದ್ಯಯನವು ಹೊಸ ಶೋಧಗಳೆಂಬಂತೆ ನಡೆಯುತ್ತಿದ್ದವು. ಜಾನಪದ ವಿಜ್ಞಾನವು ತನ್ನ ಆರಂಭದ ಹಂತದಲ್ಲಿ ಕ್ಷೇತ್ರ ಕಾರ್ಯ ಮತ್ತು ವಿಶ್ಲೇಷಣೆಗೆ ಸಂಬಂಧಪಟ್ಟಂತೆ ಸೈದ್ಧಾಂತಿಕವಾಗಿ ಮಾನವ ಶಾಸ್ತ್ರ ಮತ್ತು ಸಮಾಜ ಶಾಸ್ತ್ರಗಳ ವಿಧಾನ ಮತ್ತು ಸಿದ್ಧಾಂತಗಳನ್ನು ಅನುಸರಿಸುವುದು ಚಾರಿತ್ರಿಕ ಸತ್ಯವಾಗಿದೆ. ಇದೇ ತಾತ್ತ್ವಿಕತೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಹಂತದ ಜಾನಪದ ಸಂಗ್ರಹ ಮತ್ತು ವಿಶ್ಲೇಷಣೆಯ ಸೈದ್ಧಾಂತಿಕತೆಯಲ್ಲಿಯೂ ಗುರುತಿಸಬಹುದು.

ಕರಾವಳಿ ಜಾನಪದ ಅಧ್ಯಯನದ ಆಮೇಲಿನ ಘಟ್ಟವನ್ನು ನಾನು ಬಹಳ ಮುಖ್ಯವೆಂದು ಪರಿಗಣಿಸುತ್ತೇನೆ. ಭಾರತ ಮತ್ತು ಕರ್ನಾಟಕ ಜಾನಪದ ಅಧ್ಯಯನಕ್ಕೆ ತುಳು ಮತ್ತು ಪ್ರಾದೇಶಿಕ ಅಧ್ಯಯನಗಳ ಮೂಲಕ ಕರಾವಳಿಯ ಜಾನಪದ ವಿದ್ವಾಂಸರು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಜಾನಪದ ಅಧ್ಯಯನದ ಸಾಂಪ್ರದಾಯಿಕ ಸೈದ್ಧಾಂತಿಕೆಗಳನ್ನು ಪರಿಷ್ಕರಿಸುತ್ತ ಅಧ್ಯಯನದ ಹೊಸ ವಿಧಿ ವಿಧಾನಗಳನ್ನು ಮತ್ತು ಸಾಧ್ಯತೆಗಳನ್ನು ಈ ಕಾಲಘಟ್ಟದ ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ. ಜಾನಪದದ ಸಾಹಿತ್ಯಿಕ ಭಾಗಗಳಾದ ಪಾಡ್ದನ,ಕವಿತೆ, ಗಾದೆ, ಒಗಟು, ಶಿಶುಗೀತೆ, ಕತೆ ಇಂತಹ ಪ್ರಕಾರಗಳ ಮೇಲೆ ಕೇಂದ್ರೀಕೃತವಾಗಿದ್ದ ಅಧ್ಯಯನವು ಈ ಕಾಲಘಟ್ಟದಲ್ಲಿ ವಿಸ್ತಾರಗೊಳ್ಳುತ್ತಾ ಬಂದಿವೆ.ತುಳುನಾಡಿನ ಬೇರೆ ಬೇರೆ ಜನಾಂಗಗಳ ಜೀವನಾವರ್ತನ ಮತ್ತು ವಾರ್ಷಿಕಾವರ್ತನದ ಹಬ್ಬಗಳು,ಆರಾಧನೆಗಳು, ಭೌತಿಕ ಸಂಸ್ಕೃತಿಯಲ್ಲಿ ಸೇರುವ ಮನೆ ಮತ್ತು ಕಟ್ಟಡಗಳ ರಚನಾವಿನ್ಯಾಸ, ಆಯುಧ-ಆಭರಣ ಮುಂತಾದ ಉಪಕರಣಗಳು, ರಂಗಪ್ರದರ್ಶನ ಸಂಪ್ರದಾಯಗಳಾದ ನಾಗಾರಾಧನೆ, ಸಿರಿ ಆರಾಧನೆ,ಕಾಡ್ಯನಾಟ, ಢಕ್ಕೆ ಬಲಿ, ಜಾಲಾಟ ಇಂತಹ ಅನೇಕ ಜನಪದ ಪ್ರಕಾರಗಳ ಮೇಲೆ ಈ ಕಾಲಘಟ್ಟದಲ್ಲಿ ಅಧ್ಯಯನವು ನಡೆದಿದೆ.

ಗುಂಡ್ಮಿ ಚಂದ್ರಶೇಖರ ಐತಾಳ, ಟಿ.ಕೇಶವ ಭಟ್ಟ, ಶಿವರಾಮ ಐತಾಳ ಇವರ ಜನಪದ ಹಾಡುಗಳ ಸಂಗ್ರಹಗಳು; ಸೇವ ನಮಿರಾಜಮಲ್ಲ, ಅಮೃತ ಸೋಮೇಶ್ವರ, ವಿವೇಕ ರೈ, ಕನರಾಡಿ ವಾದಿರಾಜ ಭಟ್ಟ,, ಯು.ಪಿ. ಉಪಾಧ್ಯಾಯ,ಸುಶೀಲಾ ಉಪಾಧ್ಯಾಯ ಇವರ ಪಾಡ್ದನ ಸಂಗ್ರಹಗಳು; ಎ.ವಿ. ನಾವಡರ ನಾಗಮಂಡಲದ ಪಠ್ಯದ ಸಂಗ್ರಹ ವೈದ್ಯರ ಹಾಡುಗಳು: ವಾಮನ ನಂದಾವರ,ಶ್ರೀಕೃಷ್ಣ ಭಟ್ ಅರ್ತಿಕಜೆ, ವಿವೇಕ ರೈ, ಶ್ರೀನಿವಾಸ ಪುರುಷೋತ್ತಮ ಭಟ್, ಪೆರುವಾಯಿ ಸುಬ್ಬಯ್ಯ ಶೆಟ್ಟಿ, ನಾರಾಯಣ ಎಂ. ಇವರ ಗಾದೆಗಳು ಮತ್ತು ಒಗಟುಗಳು ಸಂಗ್ರಹಗಳು ಪಾಲ್ತಾಡಿ ರಾಮಕೃಷ್ಣ ಆಚಾರ್, ಕನರಾಡಿ ವಾದಿರಾಜ ಭಟ್ಟ, ವಾಮನ ನಂದಾವರ ಇವರ ಜನಪದ ಕತೆಗಳ ಸಂಗ್ರಹಗಳು ಎ.ವಿ.ನಾವಡ ಮತ್ತು ಗಾಯತ್ರಿ ನಾವಡರ ಕಾಡ್ಯನಾಟದ ಪಠ್ಯ ಸಂಗ್ರಹ, ಸಿರಿ ಮಹಾಕಾವ್ಯದ ಜನಪದ ಸಾಹಿತ್ಯದ ಸಂಗ್ರಹ ಕಾರ್ಯ ವಿಸ್ತಾರಗೊಂಡಿವುದನ್ನು ಈ ಕೃತಿಗಳು ಸ್ಪಷ್ಟಪಡಿಸುತ್ತವೆ.ವಿವೇಕ ರೈಯವರ ತುಳು ಜಾನಪದ ಸಾಹಿತ್ಯ, ಅನ್ವಯಿಕ ಜಾನಪದ, ತೌಳವ ಸಂಸ್ಕೃತಿ, ತುಳುವ ಅಧ್ಯಯನ ಕೆಲವು ವಿಚಾರಗಳು, ಅಮೃತ ಸೋಮೇಶ್ವರರ ಅವಿಲು, ತುಳು ಬದುಕು, ಕೊರಗರು, ಪುರುಷೋತ್ತಮ ಬಿಳಿಮಲೆಯವರ ಸುಳ್ಯ ಪರಿಸರದ ಗೌಡ ಜನಾಂಗ ಒಂದು ಸಾಂಸ್ಕೃತಿಕ ಅಧ್ಯಯನ (ಅಪ್ರಕಟಿತ), ಕರಾವಳಿ ಜಾನಪದ ಕೂಡುಕಟ್ಟು, ಎ.ವಿ. ನಾವಡ ಮತ್ತು ಸುಭಾಶ್ಚಂದ್ರರ ತುಳುವ ದರ್ಶನ (ಮೂಲ: ಪೀಟರ್ ಜೆ ಕ್ಲಾಸ್) ಎ.ವಿ.ನಾವಡ ಮತ್ತು ಗಾಯತ್ರಿ ನಾವಡರ ‘ಕಾಡ್ಯನಾಟ’ -ಪಠ್ಯ ಮತ್ತು ಪ್ರದರ್ಶನ, ಪಾಲ್ತಾಡಿ ರಾಮಕೃಷ್ಣ ಆಚಾರರ ಜಾನಪದ ಸ್ಪಂದನ, ಜನಪದ ಕುಣಿತಗಳು,ವಾಮನ ನಂದಾವರರ ಜನಪದ ಸುತ್ತಮುತ್ತ ತುಳುವರೆ ಕುಸಾಲ್ ಕುಸೆಲ್; ಸಿಂಗದನ, ಡಿ.ಆರ್. ಪಾಂಡುರಂಗ ಅವರ ದಕ್ಷಿಣ ಕನ್ನಡ ಜಿಲ್ಲೆಯ ಭೈರರು, ಕೆ. ಚಿನ್ನಪ್ಪ ಗೌಡರ ಭೂತಾರಾಧನೆ- ಜಾನಪದೀಯ ಅಧ್ಯಯನ, ಜಾಲಾಟ, ಭೂತಾರಾಧನೆ ಕೆಲವು ಅಧ್ಯಯನಗಳು,ಪನಿಯಾರ (ಸಂ).ಸುಶೀಲಾ ಪಿ. ಉಪಾಧ್ಯಾಯ ಅವರ ಜನಪದ ಆರಾಧನೆ ಮತ್ತು ರಂಗಕಲೆ, ಕ.ವೆಂ. ರಾಜಗೋಪಾಲ (ಸಂ) ತುಳುವರ ಆಚರಣೆಗಳಲ್ಲಿ ಕಲಾವಂತಿಕೆ, ಯು.ಪಿ.ಉಪಾಧ್ಯಾಯ,ಸುಶೀಲಾ.ಪಿ. ಉಪಾಧ್ಯಾಯ ಅವರ bhuta worship-aspects of a ritualistic theatre ಪಿ. ಪದ್ಮನಾಭ ಅವರ special study report on bhuta- cult in south kanara district (census of india ೧೯೭೧), ರಾಮಕೃಷ್ಣ ಟಿ.ಶೆಟ್ಟಿ ಅವರ ತುಳು ಸಂಪೊತ್ತು ಬನ್ನಂಜೆ ಬಾವು ಅಮೀನ್ ಮತ್ತು ಮೋಹನ ಕೋಟ್ಯಾನ್ ಅವರ ತುಳುನಾಡಿನ ಗರೊಡಿಗಳ ಸಂಸ್ಕೃತಿಯ ಅಧ್ಯಯನ ಬೋಳ ಚಿತ್ತರಂಜನದಾಸ ಶೆಟ್ಟರ ಕಂಬಳ, ಎ.ವಿ. ನಾವಡರ ವಿವಕ್ಷೆ, ಕುದ್ಕಾಡಿ ವಿಶ್ವನಾಥ ರೈಯವರ ಗಾದೆಗಳಿಗೊಂದು ಭಾಷ್ಯ, ಏರ್ಯ ಲಕ್ಷ್ಮೀನಾರಾಯಣ ಆಳ್ವರ(ಸಂ) ಮಂಗಳತಿಮರು, ಶಿವರಾಮ ಕಾರಂತರ ಭೂತಾರಾಧನೆ, ಜಾನಪದ ಗೀತೆಗಳು,ಶಿವರಾಮ ಐತಾಳರ ದಕ್ಷಿಣ ಕನ್ನಡದ ಜನಪದ ಸಾಹಿತ್ಯ ಗಾಯತ್ರೀ ನಾವಡರ ಚಿತ್ತಾರ ಬರೆದ ಬದುಕು,ವಿರಚನೆ, ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು ಮೊದಲಾದ ಗ್ರಂಥಗಳು ದಕ್ಷಿಣ ಕನ್ನಡದ ಜಾನಪದ ಸಾಮಾಗ್ರಿಗಳನ್ನು ಗಂಭೀರವಾಗಿ ವಿಶ್ಲೇಷಣೆ ಮಾಡಿವೆ.

ಜಾನಪದ ಸಂಗ್ರಹ ಮತ್ತು ಅಧ್ಯಯನಕ್ಕೆ ಸಂಬಂಧಪಟ್ಟಂತೆ ಶಿವರಾಮ ಕಾರಂತರ ಸಾಧನೆ ವಿಶಿಷ್ಟವಾಗಿದೆ. ಜಾನಪದ ಗೀತೆಗಳು (೧೯೬೬), ಭೂತಾರಾಧನೆ (೧೯೭೬), ಶಿವರಾಮ ಕಾರಂತರ ಲೇಖನಗಳು ಸಂಪುಟ-೨ ಮತ್ತು ೩ ಇವುಗಳಲ್ಲಿರುವ ಕೆಲವು ಲೇಖನಗಳು ಇವರ ಜಾನಪದ ಅಧ್ಯಯನದ ನಿಲುವುಗಳನ್ನು ಸ್ಪಷ್ಟಪಡಿಸುತ್ತವೆ. ಹೀ ಜೋ ಮಂಜೆಟಿ ಗೋಣ (೧೯೩೯), ಜಾನಪದ ಕಲೆಗಳು (೧೯೫೦), ಕಂಬಳ (೧೯೫೧), ಜಾನಪದ ನೃತ್ಯಗಳು (೧೯೫೪), ಜಾನಪದ ನೃತ್ಯಗೀತೆ(೧೯೬೪), ಕಲ್ಲುರ್ಟಿ -ಹಲವು ಭೂತಗಳಲ್ಲಿ ಇದೊಂದು (೧೯೬೬) ಈ ಲೇಖನಗಳು ಬಹಳ ಮುಖ್ಯವಾಗಿವೆ.ಉತ್ತರ ಕರ್ನಾಟಕದ ಲಾವಣಿಗಳು, ಕನ್ನಡ ಮತ್ತು ತುಳು ಗೀತೆಗಳು, ಕೊಡಗಿನ ಜನಪದ ಹಾಡುಗಳು ಇವುಗಳನ್ನು ಆಕರ ಸಾಮಾಗ್ರಿಗಳನ್ನಾಗಿ ಬಳಸಿಕೊಂಡು ಕಾರಂತರು ‘ಜಾನಪದ ಗೀತೆಗಳು’ ಕೃತಿಯನ್ನು ರಚಿಸಿದ್ದಾರೆ.ಜನಪದ ಗೀತೆಗಳನ್ನು (೧) ವಸ್ತು ಪ್ರಕಾರಗಳು (೨) ವಸ್ತುಗಳ ಹಿನ್ನೆಲೆ (೩) ವಸ್ತು ಮತ್ತು ಶರೀರ ಹೀಗೆ ವ್ಯವಸ್ಥಿತವಾಗಿ ಮೂರು ಅಧ್ಯಾಯಗಳಲ್ಲಿ ಸಮರ್ಪಕವೂ ಸಮಗ್ರವೂ ಆದ ರೀತಿಯಲ್ಲಿ ವಿವೇಚಿಸಿದ್ದಾರೆ. ಬಹುಮುಖೀ ಸಂಸ್ಕೃತಿಗಳ ತಿಳುವಳಿಕೆಯ ಹಿನ್ನೆಲೆಯಲ್ಲಿ ಜಾನಪದವನ್ನು ವಿಶ್ಲೇಷಿಸುವ ಅಗತ್ಯವನ್ನು ಕಾರಂತರು ಸ್ಪಷ್ಟಪಡಿಸಿದ್ದಾರೆ. ಜಾನಪದ ಕ್ಷೇತ್ರ ಸಮೃದ್ಧವಾಗಿದೆ, ಅದು ಬರಡಲ್ಲ.ಜಾನಪದ ಕೆಳದರ್ಜೆಯ ರಚನೆಯಲ್ಲ. ಜಾನಪದ ಮನೋಧರ್ಮ ಶಕ್ತಿಯುತವಾದುದು. ಜಾನಪದ ಎಂಬುದು ಸಂಸ್ಕೃತಿಗಳ ಅಧ್ಯಯನವೇ ಆಗಿದೆ ಎಂಬ ಮಹತ್ವದ ನಿಲುವುಗಳನ್ನು ಶಿವರಾಮ ಕಾರಂತರು ಹಲವು ದಶಕಗಳ ಹಿಂದೆಯೇ ವ್ಯಕ್ತಪಡಿಸಿದ್ದಾರೆ. ಜಾನಪದ ಅಧ್ಯಯನದಲ್ಲಿ ಪ್ರಾದೇಶಿಕ ಅಧ್ಯಯನ, ತೌಲನಿಕ ಅಧ್ಯಯನ, ಪಠ್ಯ ಸಂಗ್ರಹ, ಪಠ್ಯಗಳ ಸಾಂದರ್ಭಿಕತೆ ಇವುಗಳ ಅಗತ್ಯವನ್ನು ಸೂಚಿಸುವ ಕಾರಂತರ ಜಾನಪದ ಅಧ್ಯಯನ ಲೇಖನಗಳಿಗೆ ವಿಶೇಷ ಮಹತ್ವವಿದೆ.

ಗುಂಡ್ಮಿ ಚಂದ್ರಶೇಖರ ಐತಾಳರ ‘ಮುದ್ದುಂಟೆ ಜನನ ಮರಣಕ್ಕೆ’ (೧೯೭೩) ಕೃತಿ ಮತ್ತು ವಿದ್ವಾನ್ ಟಿ.ಕೇಶವ ಭಟ್ಟರ ‘ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಗೀತೆಗಳು’(೧೯೯೬) ಕೃತಿ ಇವುಗಳಲ್ಲ ಈ ಪ್ರದೇಶದ ಕನ್ನಡ ಜನಪದ ಸಾಹಿತ್ಯದ ವಿಸ್ತಾರವಾದ ಮಾಹಿತಿಗಳಿವೆ. ತ್ರಿಪದಿ ಛಂದಸ್ಸಿನಲ್ಲಿರುವ ನೂರಾರು ಹಾಡುಗಳನ್ನು ಗುಂಡ್ಮಿಯವರು ಸಂಗ್ರಹಿಸಿಕೊಟ್ಟಿದ್ದಾರೆ. ಈ ಕೃತಿಯ ಪ್ರಸ್ತಾವನೆಯಲ್ಲಿ ಜನಪದ ತ್ರಿಪದಿ ಸಾಹಿತ್ಯದ ವಸ್ತು ವೈಶಿಷ್ಟ್ಯಗಳನ್ನು ವಿವೇಚಿಸಿದ್ದಾರೆ. ಟಿ. ಕೇಶವ ಭಟ್ಟರ ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಗೀತೆಗಳು ಕೃತಿಯಲ್ಲಿ ಒಂಬತ್ತು ಅಧ್ಯಾಯಗಳಿವೆ. ಹವ್ಯಕ ಜನಾಂಗದ ಹವ್ಯಕ ಭಾಷೆಯಲ್ಲಿರುವ ಜನಪದ ಹಾಡುಗಳನ್ನು ಇಷ್ಟೊಂದು ಪ್ರಮಾಣದಲ್ಲಿ ಕೊಟ್ಟ ಕೃತಿ ಬೇರೆ ಅಲ್ಲ. ಹವ್ಯಕ ಭಾಷೆಯಲ್ಲಿರುವ ಹಾಡುಗಳನ್ನು ಸಂಗ್ರಹಿಸಿ ಡಾ. ಶ್ರೀ ಕೃಷ್ಣ ಭಟ್ ಅರ್ತಿಕಜೆಯವರು ಅಧ್ಯಯನ ಮಾಡಿದ್ದಾರೆ. ಅವರ ಜಾನಪದ ಜೀವನ ಎಂಬ ಗ್ರಂಥವನ್ನು ಇಲ್ಲಿ ಉಲ್ಲೇಖಿಸಬಹುದು. ಟಿ. ಕೇಶವ ಭಟ್ಟರು ಕೆಲವು ಪಾಡ್ದನಗಳನ್ನು, ಕುಣಿತದ ಹಾಡುಗಳನ್ನು, ವೃತ್ತಿ ಸಂಬಂಧಿ ಪದಗಳನ್ನು ಸಂಗ್ರಹಿಸಿ ಅವುಗಳ ಸ್ವಾರಸ್ಯ ವಿವೇಚನೆಯನ್ನು ನಡೆಸಿದ್ದಾರೆ.‘ಪರತ್ತನ’ ಎಂಬುದು ‘ಪಳಮೆ’ ಅರ್ಥವನ್ನು ಕೊಡುವುದರಿಂದ ಅದೇ ‘ಪಾರ್ತನ-ಪಾರ್ದನ’ ಅದುದೆಂದು ವ್ಯುತ್ಪತ್ತಿ ವಿಚಾರವನ್ನು ಮಂಡಿಸಿದ್ದಾರೆ ಜನಪದ ಗೀತೆಗಳ ಧಾಟಿ ಮತ್ತು ಛಂದಸ್ಸಿನ ಅಧ್ಯಯನ ಭಾಗದಲ್ಲಿ ಕೇಶವ ಭಟ್ಟರ ಪಾಂಡಿತ್ಯವನ್ನು ಅರಿಯಬಹುದು.

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ನಿರ್ದಿಷ್ಟ ಪದವಿಗಳಾಗಿ ಸಿದ್ಧಪಡಿಸಿದ್ದ ಹಲವು ಪ್ರೌಢ ಪ್ರಬಂಧಗಳ ಈ ಪ್ರದೇಶದ ಜಾನಪದವನ್ನು ಕುರಿತಾಗಿದೆ. ಗಣಪತಿ ಭಟ್ಟ ಅರಸಳಿಕೆಯವರ ತುಳುನಾಡಿನ ಜನಪದ ನಂಬಿಕೆಗಳು, ಸಿದ್ಧಾಪುರ ವಾಸುದೇವ ಭಟ್ಟರ ನಾಗಾರಾಧನೆ, ಯದುಪತಿ ಗೌಡರ ಬೆಳ್ತಂಗಡಿ ತಾಲೂಕಿನ ಜನಪದ ಕುಣಿತಗಳು, ಉಪೇಂದ್ರ ಪೆರಣಂಕಿಲ್ ಪರಿವಾರ ಬಂಟರು- ಜನಾಂಗ ಅಧ್ಯಯನ, ಗೀತಾ ಕೆ.ಅವರ ಅಡುಗೆ ಜಾನಪದ, ಸುಭಾಶ್ಚಂದ್ರರ women in paddanas: afeministic study of text and performance, ರೋಸಲಿನ್ ಸೊರ್ನತ್ತಾಯಿ ಅವರ ಪಲ್ಲಂಗುಳಿ (ಚೆನ್ನೆ ಮಣೆ ಆಟ) ಒಂದು ಅಧ್ಯಯನ, ಅಜಿತ್ ಕುಮಾರರ ಜನಪದ ನ್ಯಾಯ ಪದ್ಧತಿ, ವಿಶ್ವನಾಥ ಬದಿಕಾನರ ಗೌಡ ಕನ್ನಡದ ಜನಪದ ಕತೆಗಳ ವರ್ಗ ಮತ್ತು ಆಶಯಸೂಚಿ, ಪ್ರಕಾಶ್ಚಂದ್ರ ಶಿಶಿಲ ಅವರ ತುಳುನಾಡಿನ ಜನಪದ ವಾಸ್ತುಶಿಲ್ಪ, ಪಾ.ನ. ಮಯ್ಯರ ಕೋಟಿ ಪ್ರದೇಶ- ಸಾಂಸ್ಕೃತಿಕ ಅಧ್ಯಯನ-ಮೊದಲಾದ ಗ್ರಂಥಗಳು ಈ ಅವಧಿಯಲ್ಲಿ ನಡೆದಿರುವ ಜಾನಪದದ ಬಹುಮುಖ ಅದ್ಯಯನಗಳಾಗಿವೆ. ಪಾ.ನ. ಮಯ್ಯರ ಮತ್ತು ಡಾ. ವಿಶ್ವನಾಥ ಬದಿಕಾನ ಅವರ ಗ್ರಂಥಗಳು ಪ್ರಕಟವಾಗಿವೆ. ಉಳಿದ ಕೃತಿಗಳು ಅಶ್ಯವಾಗಿ ಪ್ರಟಕವಾಗಬೇಕಾಗಿದೆ. ದಕ್ಷಿಣ ಕನ್ನಡದ ಜಾನಪದ ಅಧ್ಯಯನವು ಪಡೆದುಕೊಳ್ಳುತ್ತಿರುವ ಹೊಸ ಹೊಸ ಸೈದ್ಧಾಂತಿಕ ಆಯಾಮಗಳನ್ನು ಈ ಕೃತಿಗಳು ಸಾದರಪಡಿಸುತ್ತೇವೆ.

ಇತ್ತೀಚಿಗಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಾನಪದವನ್ನು ಅಧ್ಯಯನ ಮಾಡುತ್ತಿರುವ ಹೊಸ ತಂಡವೊಂದು ರೂಪುಗೊಳ್ಳುತ್ತಿರುವುದು ತುಂಬಾ ಅಭಿಮಾನದ ಸಂಗತಿಯಾಗಿದೆ. ಈ ತಂಡದಲ್ಲಿ ಅನುಭವೀ ಹಿರಿದು ತಲೆಮಾರು ಮತ್ತು ಉತ್ಸಾಹೀ ಯುವ ತಲೆಮಾರು ಒಟ್ಟಾಗಿ ಇದ್ದುಕೊಂಡು ಪರಸ್ಪರ ಚರ್ಚಿಸಿ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿರುವುದು ಗಮನಾರ್ಹ ಅಂಶವಾಗಿದೆ.ಈ ಕಾಲಘಟ್ಟದಲ್ಲಿ ಈಗಾಗಲೇ ಹೆಸರು ಮಾಡಿರುವ ಹಿರಿಯ ಜಾನಪದ ವಿದ್ವಾಂಸರು ತಮ್ಮ ತಿಳುವಳಿಕೆ ಮತ್ತು ಜ್ಞಾನವನ್ನು ಪರಿಷ್ಕರಿಸಿ ಹೊಸಬಗೆಯ ಚಿಂತನೆಗಳಿಂದ ಲೇಖನ ವ್ಯವಸಾಯವನ್ನು ಮಾಡುತ್ತ, ಯುವ ಪೀಳಿಗೆಯ ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತಿರುವುದು ಉಲ್ಲೇಖನೀಯ ಅಂಶವಾಗಿದೆ. ತುಳುನಾಡಿನ ಜಾನಪದ ವಾಸ್ತು ಶಿಲ್ಪ (ಪ್ರಕಾಶಚಂದ್ರ ಶಿಶಿಲ) ಪ್ರಾಣಿ ಜಾನಪದ (ಅಶೋಕ ಆಳ್ವ), ಸಸ್ಯ ಜಾನಪದ (ಬಿ. ಶಿವರಾಮ ಶೆಟ್ಟಿ), ತುಳುನಾಡಿನ ಅವಳಿ ಸಾಂಸ್ಕೃತಿಕ ವೀರರು (ವಾಮನ ನಂದಾವರ), ನಲಿಕೆಯವರ ಕುಣಿತಗಳು (ಪಾಲ್ತಾಡಿ ರಾಮಕೃಷ್ಣ ಆಚಾರ್), ಮುಗೇರ ಜನಾಂಗದ ಸಾಂಸ್ಕೃತಿಕ ಅಧ್ಯಯನ (ಅಭಯಕುಮಾರ್), ತುಳುನಾಡಿನ ಜನಪದ ಆಟಗಳು, (ಗಣನಾಥ ಶೆಟ್ಟಿ ಎಕ್ಕಾರು)- ವಿವಿಧ ವಿಷಯಗಳಲ್ಲಿ ನಡೆದಿರುವ ಸಂಶೋಧನಾತ್ಮಕ ಅಧ್ಯಯನಗಳು ಕರಾವಳಿ ಜಾನಪದ ಅಧ್ಯಯನದ ಈಚಿನ ಒಲವುಗಳನ್ನು ಖಚಿತವಾಗಿ ನಿರ್ದೇಶಿಸುತ್ತದೆ.ತುಳುನಾಡಿನ ಐಹಿತ್ಯಗಳು ಕುರಿತಂತೆ ಎ.ಸುಬ್ಬಣ್ಣ ರೈಯವರ ಸಂಶೋಧನಾತ್ಮಕ ಅಧ್ಯಯನ, ಇದೇ ವಿಷಯದಲ್ಲಿ ತಾಳ್ತಜೆ ವಸಂತ ಕುಮಾರರು ನಡೆಸಿರುವ ಅಧ್ಯಯನ – ಇವು ದಕ್ಷಿಣ ಕನ್ನಡ ಜಾನಪದವನ್ನು ಇಲ್ಲಿಂದ ಹೊರಗಿದ್ದುಕೊಂಡು ನಡೆಸಿರುವುದಕ್ಕೆ ಉದಾಹರಣೆಗಳಾಗಿವೆ.

“ತುಳು ಜನಪದ ಸಾಹಿತ್ಯದ ಸಾಮಾಗ್ರಿಗಳ ಸಂಗ್ರಹ ಈವರೆಗೆ ಬಹಳ ಕಡಿಮೆ ಪ್ರಮಾಣದಲ್ಲಿ ಆಗಿದೆ. ತುಳು ಜನಪದ ಕತೆಗಳ ಒಂದೇ ಒಂದು ಸಂಕಲನವೂ ಪ್ರಕಟವಾಗಿಲ್ಲ. ಪ್ರಕಟಿತ ಸಂಕಲನಗಳಲ್ಲಿ ಪಾಡ್ದನಗಳ ಸಂಖ್ಯೆಯು ಒಟ್ಟು ಪಾಡ್ದನಗಳ ಸಂಖ್ಯಾ ಪ್ರಮಾಣಕ್ಕೆ ಹೋಲಿಸಿದರೆ ಬಹಳ ಸ್ವಲ್ಪ… ತುಳು ಮಾತನಾಡುವ ಪ್ರದೇಶದ ವ್ಯಾಪ್ತಿಯನ್ನು ಗಮನಿಸಿದರೆ ಸಮಗ್ರ ತುಳು ಜನಪದ ಸಾಹಿತ್ಯದ ಸಂಗ್ರಹವು ಒಬ್ಬ ವ್ಯಕ್ತಿಯಿಂದ ಕೆಲವು ವರ್ಷಗಳಲ್ಲಿ ಆಗುವಂತಹದ್ದು ಖಂಡಿತ ಅಲ್ಲ. ವಿಶ್ವವಿದ್ಯಾನಿಲಯದಂತಹ ಸಂಸ್ಥೆಗಳು ನಿರ್ದಿಷ್ಟ ಯೋಜನೆಗಳ ಮೂಲಕ ಕ್ಷೇತ್ರ ಕಾರ್ಯಕರ್ತರ ನೆರವಿನಿಂದ ಮಾಡುವ ಕೆಲಸ ಅದು” (ಬಿ.ಎ. ವಿವೇಕ ರೈ, ೧೯೮೫, ತುಳು ಜನಪದ ಸಾಹಿತ್ಯ ಗ್ರಂಥದ ಪ್ರಸ್ತಾವನೆ) ತುಳು ಜನಪದ ಸಾಹಿತ್ಯದ ವಿವಿಧ ಪ್ರಕಾರಗಳ ಸಂಗ್ರಹ ಮತ್ತು ಅವುಗಳ ಪ್ರಕಟಣೆಯ ದೃಷ್ಟಿಯಿಂದ ನೋಡಿದರೆ ಬಿ.ಎ.ವಿವೇಕ ರೈ ಅವರು ಹಲವು ವರ್ಷಗಳ ಹಿಂದೆ ಹೇಳಿದ ಮಾತು ಇಂದಿಗೂ ಸತ್ಯವಾಗಿದೆ. ಕರ್ನಾಟಕ ಯಾವುದೇ ವಿಶ್ವವಿದ್ಯಾನಿಲಯ ಜನಪದ ಮಹಾಕಾವ್ಯಗಳ ಸಂಗ್ರಹ ಮತ್ತು ಪ್ರಕಟಣೆಗೆ ಸಂಬಂಧಪಟ್ಟಂತೆ ವ್ಯವಸ್ಥಿತ ಯೋಜನೆಯನ್ನು ರೂಪಿಸಿ ಕೈಗೆತ್ತಿಕೊಂಡದ್ದು ಕಂಡುಬರುವುದಿಲ್ಲ.ಸಂಶೋಧನ ಲೇಖನಗಳನ್ನು ಬರೆಯುವ ಉದ್ದೇಶದಿಂದ, ಎಂ.ಫಿಲ್ ಮತ್ತು ಪಿಎಚ್.ಡಿ. ಪದವಿಗಾಗಿ ನಡೆಸುವ ಸಂಶೋಧನಾತ್ಮಕ ಅಧ್ಯಯನಗಳ ಸಂದರ್ಭದಲ್ಲಿ ಅಧ್ಯಯನಕಾರರು ವೈಯುಕ್ತಿಕವಾಗಿ ಸಾಹಸ ರೂಪದ ಪ್ರಯತ್ನಗಳನ್ನು ಮಾಡಿ ಜನಪದ ಮಹಾಕಾವ್ಯಗಳ ದೀರ್ಘ ಪಠ್ಯಗಳನ್ನು ಸಂಗ್ರಹಿಸಿ ಕೊಟ್ಟ ನಿದರ್ಶನಗಳು ನಮ್ಮಲ್ಲಿ ಕಂಡು ಬರುತ್ತವೆ.

ಭಾರತದ ಇತರ ರಾಜ್ಯಗಳ ಜಾನಪದ ಅಧ್ಯಯನದ ಜೊತೆಗೆ ಕರ್ನಟಕ ರಾಜ್ಯದ ಜಾನಪದ ಅಧ್ಯಯನವನ್ನು ಹೋಲಿಸಿ ಕನ್ನಡ ಜಾನಪದ ಅಧ್ಯಯನವು ಮಂಚೂಣಿಯಲ್ಲಿದೆ ಎಂಬ ಮಾತನ್ನು ವಿದ್ವಾಂಸರು ಹೇಳಿರುವುದನ್ನು ನಾನು ಕೇಳಿದ್ದೇನೆ. ಕನ್ನಡ ಜಾನಪದ ಅಧ್ಯಯನದ ಇತಿಹಾಸ ಮತ್ತು ಗಂಭೀರ ಪ್ರಯತ್ನಗಳನ್ನು ನೋಡಿದರೆ ಈ ಮೇಲಿನ ಮಾತಿನಲ್ಲಿ ಸತ್ಯಾಂಶವಿದೆ ಎಂದು ನನಗೆ ಅನಿಸುತ್ತದೆ. ಕನ್ನಡ ಜಾನಪದ ಅಧ್ಯಯನ, ಅದರಲ್ಲಿಯೂ ತುಳು ಜನಪದ ಮಹಾಕಾವ್ಯಗಳ ಅಧ್ಯಯನವನ್ನು ಪರಿಶೀಲಿಸಿದಾಗ, ತುಳು ಜಾನಪದ ಅಧ್ಯಯನವು ಕನ್ನಡ ಜಾನಪದ ಅಧ್ಯಯನದ ಮಂಚೂಣಿಯಲ್ಲಿದೆ ಎಂಬ ಮಾತನ್ನು ವಿದ್ವಾಂಸರು ಹೇಳಿರುವುದನ್ನು ನಾನು ಕೇಳಿದ್ದೇನೆ. ಕನ್ನಡ ಜಾನಪದ ಅಧ್ಯಯನದ ಇತಿಹಾಸ ಮತ್ತು ಗಂಭೀರ ಪ್ರಯತ್ನಗಳನ್ನು ನೋಡಿದರೆ ಈ ಮೇಲಿನ ಮಾತಿನಲ್ಲಿ ಸತ್ಯಾಂಶವಿದೆ ಎಂದು ನನಗೆ ಅನ್ನಿಸುತ್ತದೆ.ಕನ್ನಡ ಜಾನಪದ ಅಧ್ಯಯನ, ಅದರಲ್ಲಿಯೂ ತುಳು ಜನಪದ ಮಹಾಕಾವ್ಯಗಳ ಅಧ್ಯಯನವನ್ನು ಪರಿಶೀಲಿಸಿದಾಗ, ತುಳು ಜಾನಪದ ಅಧ್ಯಯನವು ಕನ್ನಡ ಜಾನಪದ ಅಧ್ಯಯನದ ಮಂಚೂಣಿಯಲ್ಲಿದೆ ಎಂದು ಹೇಳುವ ಮನಸ್ಸಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯೊಳಗೆ ಬರುವ ಘಟ್ಟ ತುಳು ಪ್ರದೇಶದಲ್ಲಿ ತುಳು ಮಹಾಕಾವ್ಯಗಳಿವೆ ಸಂಬಂಧಪಟ್ಟಂತೆ ನಡೆದಿರುವ ಅಧ್ಯಯನಗಳು ನನ್ನ ಮಾತನ್ನು ಸಮರ್ಥಿಸುತ್ತವೆ.

ತುಳು ಜನಪದ ಮಹಾಕಾವ್ಯಗಳ ವ್ಯಾಪ್ತಿಯಲ್ಲಿ ಸಹಜವಾಗಿ ಪಾಡ್ದನಗಳು ಸೇರುತ್ತವೆ.ಈ ಪಾಡ್ದನಗಳನ್ನು ತುಳುನಾಡಿನ ಪುರಾಣಗಳೆಂದೂ, ಜನಪದ ಮಹಾಕಾವ್ಯಗಳೆಂದೂ ವಿದ್ವಾಂಸರು ಕರೆದಿದ್ದಾರೆ. ತುಳುನಾಡಿನಲ್ಲಿ ಆರಾಧನೆಗೊಳ್ಳುವ ಭೂತಗಳ ಹುಟ್ಟು, ಕಾರಣಿಕ ಮತ್ತು ಪ್ರಸರಣವನ್ನು ವಿವರಿಸುವ ಈ ಪಾಡ್ದನಗಳನ್ನು ಜನಪದ ಮಹಾಕಾವ್ಯಗಳೆಂಬುದಾಗಿ ನಿಸ್ಸಂದೇಹವಾಗಿ ಹೇಳಬಹುದು. ಈ ಪಾಡ್ದನಗಳನ್ನು ಸಂಧಿ ಮುಗೇರ ದೈವಗಳ ಸಂಧಿ, ಪಂಜುರ್ಲಿ ಪಾಡ್ದನ, ಕೊರಗತನಿಯ ಪಾಡ್ದನ, ಕಲ್ಕುಡ-ಕಲ್ಲುರ್ಟಿ ಪಾಡ್ದನ, ಬೊಬ್ಬರ್ಯ ಪಾಡ್ದನ, ಕೋಡ್ದಬ್ಬು ತನ್ನಿಮಾನಿಗ ಪಾಡ್ದನ, ಜುಮಾದಿ ಮೊದಲಾದವುಗಳು ಗೆರೆಗಳ ಸಂಖ್ಯೆಯ ದೃಷ್ಟಿಯಿಂದಲೂ ಮಹಾಕಾವ್ಯಗಳಾಗಿವೆ. ಕೋಟಿ ಚೆನ್ನಯ ಮತ್ತು ಸಿರಿಸಂಧಿಗಳು ಸಾವಿರಾರು ಗೆರೆಗಳ ಮಹಾಕಾವ್ಯಗಳಾದರೆ ಭೂತಕ್ಕೆ ಸಂಬಂಧಪಟ್ಟ ಇತರ ಹಲವಾರು ಪಾಡ್ದನಗಳು ನೂರರಿಂದ ಐನೂರುಗಳಷ್ಟಿ ಗೆರೆಗಳ ವ್ಯಾಪ್ತಿಯನ್ನು ಪಡೆದುಕೊಂಡಿವೆ. ಒಂದು ಮಹಾಕಾವ್ಯವು ಹೊಂದಿರಬೇಕಾದ ಗೆರೆಗಳ ಸಂಖ್ಯೆಯ ಬಗ್ಗೆ ಒಮ್ಮತದ ಅಭಿಪ್ರಾಯ ಏರ್ಪಟ್ಟಂತೆ ಕಂಡುಬರುವುದಿಲ್ಲ.ವಾಸ್ತವಿಕವಾಗಿ ಮಹಾಕಾವ್ಯ ಎನ್ನವ ಶಬ್ದವೇ ಸ್ವಲ್ಪ ಮಟ್ಟಿಗೆ ದಾರಿಗೆಡಿಸುವಂತದ್ದು ವಿದೇಶಿ ವಿದ್ವಾಂಸರು ಇಂಗ್ಲಿಷ್ ಬರವಣಿಗೆಗಳಲ್ಲಿ oral epics ಎಂಬ ಪದವನ್ನು ಬಳಸುತ್ತಿದ್ದಾರೆ. ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಮೌಖಿಕ ಪುರಾಣ, ಮೌಖಿಕ ಮಹಾಕಾವ್ಯ ಎಂಬ ಪದಗಳನ್ನು ಬಳಸಲಾಗುತ್ತಿದೆ. ಪುರಾಣ, ಮಹಾಕಾವ್ಯ ಈ ಪದಗಳಿಗೆ ಶೈಕ್ಷಣಿಕ ಬಳಕೆ ಮತ್ತು ಪ್ರಯೋಗಗಳಲ್ಲಿ ನಿರ್ದಿಷ್ಟ ಅರ್ಥಗಳಿವೆ. ಈ ಅರ್ಥಗಳನ್ನೇ ಹಿನ್ನೆಲೆಯಾಗಿಟ್ಟುಕೊಂಡು ಹೊಂದಿರುವ ತಿಳುವಳಿಕೆಯನ್ನು ಅಂಚಿಗೆ ಸರಿಸುವುದು ತಪ್ಪಾಗುತ್ತದೆ. ಕನ್ನಡದಲ್ಲಿ ನಾವು ಕರೆಯುವ ಪುರಾಣ ಅಥವಾ ಮಹಾಕಾವ್ಯವನ್ನು ತುಳುವರು ಪಾಡ್ದನ ಎಂದೋ ಸಂಧಿ ಎಂದೋ ಕರೆದಿದ್ದಾರೆ. ಪಾಡ್ದನ,ಸಂಧಿಗಳ ಕುರಿತಂತೆ ತುಳುವರು ಹೊಂದಿರುವ ಗ್ರಹಿಕೆ ಮತ್ತು ತಿಳುವಳಿಕೆ ಬಹಳ ಮುಖ್ಯವಾಗಿದೆ. ತುಳು ಜನಪದ ಮಹಾಕಾವ್ಯಗಳ ಅಧ್ಯಯನ ಸಮೀಕ್ಷೆಯ ಈ ಲೇಖನದಲ್ಲಿ ಗೆರೆಗಳ ಸಂಖ್ಯೆಯನ್ನು ಒಂದು ಮಾನದಂಡವಾಗಿ ನಾನು ಇಟ್ಟುಕೊಂಡಿಲ್ಲ.ಮಹಾಕಾವ್ಯಗಳೆಂದು ನಾನು ಪರಿಭಾವಿಸಿ ಈ ಲೇಖನದಲ್ಲಿ ಇಟ್ಟುಕೊಳ್ಳುವ ಪಾಡ್ದನಗಳು ಗೆರೆಗಳ ದೃಷ್ಟಿಯಿಂದ ಜನಪದ ಹಾಡುಗಳಿಗಿಂತ ವಿಸ್ತಾರವಾಗಿರುತ್ತವೆ ಎಂಬುದು ನಿಜ ಈ ಪಾಡ್ದನಗಳಲ್ಲಿ ಅಸಾಮಾನ್ಯ ಹಾಗೂ ಅತಿಮಾನುಷ ವ್ಯಕ್ತಿಗಳ ವೃತ್ತಾಂತಗಳಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಪಾಡ್ದನಗಳಿಗೆ ಆಚರಣಾತ್ಮಕ ಸಂದರ್ಭಗಳಿರುತ್ತವೆ. ಈ ಪಾಡ್ದನಗಳ ಹಲವು ಪಠ್ಯಗಳು ದೊರೆಯುತ್ತವೆ. ಸಾಮಾಜಿಕ ಮತ್ತು ರಾಜಕೀಯವಾದ ಸಂಘರ್ಷಗಳನ್ನು ಈ ಪಾಡ್ದನಗಳನ್ನು ಹಾಗೂ ಆಚರಣಾತ್ಮಕ ಕುಣಿತಗಳು ಹಾಡುಗಳನ್ನು ಮೌಖಿಕ ಮಹಾಕಾವ್ಯಗಳೆಂಬುದಾಗಿ ಇಟ್ಟುಕೊಳ್ಳಲಾಗಿದೆ. ಪ್ರತಿಯೊಂದು ಭೂತದ ಪ್ರತ್ಯೇಕ ಪಠ್ಯವು ಕೆಲವು ನೂರು ಗೆರೆ (ಸಾಲು)ಗಳಷ್ಟು ವಿಸ್ತಾರವಿರಬಹುದು. ಒಂದು ನಿರ್ದಿಷ್ಟಭೂತಹ ಹಲವು ಪಠ್ಯಗಳನ್ನು ಸಂಗ್ರಹಿಸಿ ಅವುಗಳು ಒಳಗೊಂಡ ಘಟನೆಗಳ ವಿವರಣಾತ್ಮಕ ಭಾಗಗಳನ್ನು ವ್ಯವಸ್ಥಿತವಾಗಿ ಕ್ರೋಡಿಕರಿಸಿ ಸಂಯೋಜಿದರೆ ಪ್ರತಿಯೊಂದು ಭೂತದ ಪಾಡ್ದನವು ಸಾವಿರಾರು ಗೆರೆಗಳ ವ್ಯಾಪ್ತಿಯನ್ನು ನಿಸ್ಸಂಶಯವಾಗಿ ಪಡೆದುಕೊಳ್ಳುತ್ತವೆ.

ತುಳು ಪಾಡ್ದನಗಳ ಸಂಗ್ರಹ ಕಾರ್ಯವನ್ನು ಮೊತ್ತ ಮೊದಲು ಪ್ರಾರಂಭಿಸಿದರು ಕ್ರೈಸ್ತ ಬಾಸೆಲ್ ಮಿಶನರಿಗಳು. ಎ. ಮಾನ್ಯರ್ ರವರು ಸಂಗ್ರಹಿಸಿ ಪ್ರಕಟಿಸಿದ ‘ಪಾಡ್ದನೊಳು’ ಎಂಬ ಸಂಕಲನ (೧೮೮೬) ತುಳು ಜನಪದ ಮಹಾಕಾವ್ಯಗಳ ಮೊತ್ತ ಮೊದಲ ಸಂಕಲನವಾಗಿದೆ. ಈ ಸಂಕಲದಲ್ಲಿ ಇಪ್ಪತ್ತೊಂದು ತುಳು ಪಾಡ್ದನಗಳಲ್ಲಿ ನೂರು ವರ್ಷಗಳ ಹಿಂದೆಯೇ ಇಷ್ಟೊಂದು ಸಮರ್ಪಕವಾದ ಬೃಹತ್ತಾದ ಪಾಡ್ದನ ಸಂಪುಟ ಪ್ರಕಟವಾಗಿರುವ ಸಂತೋಷ ಮತ್ತು ಅಚ್ಚರಿಯ ಸಂಗತಿಯಾಗಿದೆ. ಪಾಡ್ದನಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಮಾನ್ಯರ್ ಅವರ ‘ಪಾಡ್ದನೊಳು’ ಸಂಕಲದ ಒಂದು ಅಪೂರ್ವ ಆಕರವಾಗಿದೆ. ಈ ಸಂಕಲನದಲ್ಲಿ ಆರಂಭದ ಇಪ್ಪತ್ತು ಪಾಡ್ದನಗಳು ತುಳು ಭಾಷೆಯಲ್ಲಿ, ಕನ್ನಡ ಲಿಪಿಯಲ್ಲಿ ಇವೆ. ಪಿಲಿಚಾಮುಂಡಿ ಎಂಬ ಕೊನೆಯ ಪಾಡ್ದನ ಇಂಗ್ಲಿಷ್ ಭಾಷೆಯಲ್ಲಿದೆ. ಈ ಸಂಕಲದಲ್ಲಿ ಇರುವ ಎಲ್ಲ ಇಪ್ಪತ್ತೊಂದು ಪಾಡ್ದನಗಳು ತುಳುನಾಡಿನ ಪ್ರಮುಖ ಭೂತಗಳಿಗೆ ಸಂಬಂಧಪಟ್ಟಿವೆ. ಈ ಸಂಕಲದಲ್ಲಿರುವ ಪಾಡ್ದನಗಳು: ೧. ಬೊಬ್ಬರ್ಯೆ ೨. ಪಂಜುರ್ಲಿ (i) ೩. ಪಂಜುರ್ಲಿ (ii) ೪. ಜುಮಾದಿ (i) ೫. ಸಾರಾಳ ಜುಮಾದಿ (ii) ೬. ಜಾರಂತಾಯೆ ೭. ಕಾಂತು ನೆಕ್ರಿ ಭೂತ ೮. ಮಗ್ರಂದಾಯೆ ೯. ಕಲ್ಕುಡ ೧೦. ಕಲ್ಲುರ್ಟಿ, ೧೧. ಪೊಸಭೂತ, ೧೨. ಪೊಸ ಮಹಾರಾಯೆ, ೧೩. ಅತ್ತಾವರ ದೆಯ್ಯೊಂಗುಳು ೧೪. ಮುಡದೇರ ಕಾಳ ಬೈರವೆ, ೧೫. ತೊಡಕಿನಾರ್, ೧೬. ದೇಯಿ ಬೈದೈದಿ ೧೭. ಕೊಟಿ ಚೆಂಣಯೆ (i) ೧೮. ಕೋಟಿ ಚೆನ್ನಯೆ (ii) ೧೯. ಧೂಮಾವತಿ ಭೂತ ೨೦. ಪಂಜುರ್ಲಿ (iii) ೨೧. ಪಿಲಿಚಾಮುಂಡಿ.

ಎ.ಸಿ. ಬರ್ನೆಲ್ ರವರು the devil worship of the tuluvas (೧೮೯೪-೯೭) ಸಂಶೋಧನ ಪ್ರಬಂಧಗಳ ಮಾಲಿಕೆಯ ಮೂಲಭೂತವಾಗಿ, ಪಾಡ್ದನಗಳ ಒಂದು ಸಂಕಲನವಾಗಿದೆ. ಇದರಲ್ಲಿ ಇಪ್ಪತ್ತಾರು ಭೂತಗಳ ಪಾಡ್ದನಗಳನ್ನು ಇಂಗ್ಲಿಷ್ ನಲ್ಲಿ ಕೊಡಲಾಗಿದೆ. ಕೆಲವು ಪಾಡ್ದನಗಳ ತುಳು ಮೂಲವನ್ನು ರೋಮನ್ ಲಿಪಿಯಲ್ಲಿ ಬರೆದು ಅವುಗಳ ಇಂಗ್ಲಿಷ್ ಅನುವಾದವನ್ನು ಕೊಟ್ಟಿದ್ದಾರೆ. ಬರ್ನೆಲ್ ರ ಹಸ್ತಪ್ರತಿಯ ರೂಪದಲ್ಲಿ ಈ ಕೃತಿಯನ್ನು ಸಂಪಾದಿಸಿ ಆರ್.ಸಿ. ಟೆಂಪಲ್ ಎಂಬುವರು ಪ್ರಕಟಿಸಿದ್ದಾರೆ. ಇವರು ತನ್ನ ಪ್ರಸ್ತಾವನೆಯಲ್ಲಿ ಭೂತಾರಾಧನೆಯ ಅಧ್ಯಯನದ ದೃಷ್ಟಿಯಿಂದ ಈ ಕೃತಿಯ ಪ್ರಾರಂಭದ ಕೆಲವು ಅಧ್ಯಯನಗಳು ಬಹಳ ಮೌಲಿಕವಾಗಿವೆ. “On bhutas : by the late a manner” ಎಂಬ ಎರಡನೆಯ ಅಧ್ಯಾಯ description of a bhuta incantation as prastised in south kanara (madras presidency), witnessed by a.c.b. and) H. on march 23rd, 1872, at mangalore ಎಂಬ ಮೂರನೆಯ ಅಧ್ಯಾಯ “extracts from burnell’s notes and the commentary thereon, made after witnessing the foregoing ceremonies”ಎಂಬ ನಾಲ್ಕನೆಯ ಅಧ್ಯಾಯ “figures of Bhutas from tulu-land” ಎಂಬ ಐದನೆಯ ಅಧ್ಯಾಯ,ರೆವ.ಎ. ಮ್ಯಾನರ್ ತಯಾರಿಸಿ ಕೊಟ್ಟ ೧೩೩ ಭೂತಗಳ ಹೆಸರುಗಳನ್ನೊಳಗೊಂಡ ಏಳನೆಯ ಅಧ್ಯಾಯ, ಭೂತಗಳ ಉಗಮಕ್ಕೆ ಸಂಬಂಧಿಸಿದ ಪಾಡ್ದನವೊಂದರ ತುಳು ಮೂಲ ಮತ್ತು ಅದರ ಇಂಗ್ಲಿಷ್ ಅನುವಾದವನ್ನೊಳಗೊಂಡ ಏಳನೆಯ ಅಧ್ಯಾಯ – ಈ ಅಧ್ಯಾಯಗಳು ಭೂತಾರಾಧನೆಯ ಕೆಲವು ಮುಖಗಳನ್ನು ವಿವರಿಸುತ್ತವೆ.ಜುಮಾದಿ, ತೊಡಕಿನಾರ್, ಕಾಳಭೈರವ ಮೊದಲಾದ ಹತ್ತು ಭೂತಗಳ ವೇಷ ಮೂಲಕ ಭೂತಾರಾಧನೆಯ ಆಚರಣಾತ್ಮಕ ಸ್ವರೂಪಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಸಂಗ್ರಹಿಸಿರುವ ವಿಧಾನವು ಜಾನಪದ ಅಧ್ಯಯನದ ದೃಷ್ಟಿಯಿಂದ ಮುಖ್ಯವಾಗುತ್ತದೆ.

ಮಹಾಕಾವ್ಯಗಳ ಸಂಗ್ರಹ ಕಾರ್ಯದಲ್ಲಿ ಕ್ಷೇತ್ರಕಾರ್ಯಕ್ಕಿರುವ ಮಹತ್ತ್ವ ಪಠ್ಯ ಮತ್ತು ಪಾರಾಂತರಗಳ ಪರಿಕಲ್ಪನೆ, ತುಳು ಪಠ್ಯಗಳ ಅದ್ಯಯನ ವಿಧಾನ- ಈ ವಿಚಾರಗಳ ಹಿನ್ನೆಲೆಯಲ್ಲಿ ಮೇಲಿನ ಮುರು ಸಂಪುಟಗಳಿಗೆ ಚಾರಿತ್ರಿಕ ಮಹತ್ತ್ವವಿದೆ. ಮಹಾಕಾವ್ಯಗಳ ಸಂಗ್ರಹ ಮತ್ತು ಅಧ್ಯಯನದಲ್ಲಿ ವಿವಿಧ ಬಗೆಯ ಪಾಡ್ದನಗಳಿಗೆ ಪ್ರಾತಿನಿಧ್ಯಸಿಗುವಂತೆ ಎಚ್ಚರ ವಹಿಸಲಾಗಿದೆ. ತುಳು ಜನಪದ ಮಹಾಕಾವ್ಯಗಳ ಮುಂದಿನ ಅಧ್ಯಯನಕ್ಕೆ ಸಮಂಜಸವಾದ ಸೈದ್ಧಾಂತಿಕ ಚೌಕಟ್ಟನ್ನು ಈ ಸಂಪುಟಗಳು ಹಾಕಿಕೊಟ್ಟಿವೆ ಎನ್ನಬಹುದು. ತುಳು ಜನಪದ ಮಹಾಕಾವ್ಯಗಳ ಮೇಲೆ ಕೆಲಸ ಮಾಡಿದ ಸ್ಥಳೀಯ ವಿದ್ವಾಂಸರಿಗೆ ಈ ಸಂಪುಟಗಳು ಪ್ರೇರಣೆಯನ್ನು ನೀಡಿವೆ.

ಅಮೃತ ಸೋಮೇಶ್ವರ ಅವರು ತುಳು ಪಾಡ್ದನ ಸಂಪುಟವನ್ನು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಪ್ರಸಾರಾಂಗವು ೧೯೯೭ರಲ್ಲಿ ಪ್ರಕಟಿಸಿದೆ. ಈ ಸಂಪುಟದಲ್ಲಿ ತುಳುನಾಡಿನ ಪ್ರಮುಖ ಭೂತಗಳಾದ ಪಂಜುರ್ಲಿ,ಪಂಚಜುಮಾದಿ, ಕೊರಗತನಿಯ, ಕೋಟೆದ ಬಬ್ಬು ಬಾರಗೆ, ಬೀರು ಕಲ್ಕುಡೆ, ಸತ್ಯಾನಾಪುರತ್ತ ಸಿರಿ, ಒಬ್ಬರ್ಯೆ ಮೊದಲಾದವುಗಳಿಗೆ ಸಂಬಂಧಪಟ್ಟಂತೆ ಪಾಡ್ದನಗಳಿವೆ. ಒಟ್ಟು ಹದಿನಾರು ಪಾಡ್ದನಗಳನ್ನೊಳಗೊಂಡ ಈ ಸಂಪುಟವು ಪಾಡ್ದನ ಪದ್ಯಗಳ ವಿಷಯದಲ್ಲಿ ಪ್ರಾತಿನಿಧಿಕ ಆಕರಗ್ರಂಥವಾಗಿದೆ. ಎಂ. ಮ್ಯಾನರ್ ಹಾಗೂ ಎ.ಸಿ. ಬರ್ನೆಲ್ ಇವರ ತುಳು ಪಾಡ್ದನ ಸಂಪುಟಗಳ ಬಂದ ಸುಮಾರು ನೂರು ವರ್ಷ ಸಂಧಿರುವ ಸಂದರ್ಭದಲ್ಲಿ ಪ್ರಕಟವಾಗಿರುವ ಈ ಸಂಪುಟಕ್ಕೆ ಚಾರಿತ್ರಿಕ ಮಹತ್ವವಿದೆ. ಪ್ರಬುದ್ಧ ಒಳನೋಟಗಳ ಪ್ರಸ್ತಾವನೆ, ಪಾಡ್ದನಗಳ ‘ಕನ್ನಡರೂಪ, ಟಿಪ್ಪಣಿಗಳು, ಶಬ್ಧಾರ್ಥಗಳು, ಪಾಡ್ದನ ಒದಗಿಸಿರುವ ಮಾಹಿತಿ, ಪರಾಮರ್ಶನ ಸಾಹಿತ್ಯ -ಹೀಗೆ ಇಡಿಯ ಸಂಪುಟದ ರಚನೆ ಶಾಸ್ತ್ರೀಯವೂ ಸಂಶೋಧನಾತ್ಮಕ ಆಗಿದೆ. ಕರ್ನಾಟಕ ಸಂಸ್ಕೃತಿಯ ಅಧ್ಯಯನದ ಸಂದರ್ಭದಲ್ಲಿ ಗಮನಿಸಲೆಬೇಕಾದ ತುಳು ಸಂಸ್ಕೃತಿಯ ದೇಶಿಯ ಚಿಂತನೆಗಳನ್ನು ಹಿಡಿದಿಟ್ಟಿರುವ ಅಮೃತ ಸೋಮೇಶ್ವರರ ತುಳು ಪಾಡ್ದನ ಸಂಪುಟವು ಸಂಸ್ಕೃತಿ ಅಧ್ಯಯನ ರಂಗಕ್ಕೆ ಒಂದು ಅಪೂರ್ವ ಕೊಡುಗೆಯಾಗಿದೆ.

ಮುದ್ದು ಮೂಡುಬೆಳ್ಳೆಯವರ ಮೂಲ್ಕಿ ಸೀಮೆಯ ಅವಳಿ ವೀರರು: ಕಾಂತಬಾರೆ- ಬೂದಬಾರೆ (ಒಂದು ಅಧ್ಯಯನ) ಎಂಬ ಕೃತಿಯು (೧೯೯೮) ತುಳುನಾಡಿನ ಸಾಂಸ್ಕೃತಿಕ ವೀರರ ಅಧ್ಯಯನದ ಇತಿಹಾಸದಲ್ಲಿ ಗಮನಸೆಳೆಯುವ ಕೃತಿಯಾಗಿದೆ. ಈ ಕೃತಿಯು ಪ್ರಧಾನವಾಗಿ ಕ್ಷೇತ್ರಕಾರ್ಯವನ್ನು ನಡೆಸಿ ಸಂಗ್ರಹಿಸಿದ ಮಾಹಿತಿಗಳನ್ನು ಆಧರಿಸಿ ರಚಿತವಾಗಿದೆ. ಹೆಚ್ಚು ಅಧ್ಯಯನಕ್ಕೆ ಒಳಗಾಗದ ಕಾಂತಬಾರೆ ಬೂದಬಾರೆಯರ ಕುರಿತಂತೆ ವಿಸ್ತಾರವಾದ ಮಾಹಿತಿ ಶರೀರವನ್ನು ಕಲೆಹಾಕಿರುವುದು ಈ ಕೃತಿಯ ವೈಶಿಷ್ಟವಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಈ ಅವಳಿ ವೀರರ ಕುರಿತಂತೆ ಆಗಿರುವ ಕೆಲಸಗಳು ಮತ್ತು ಸೃಜನಶೀಲ ಕೃತಿಗಳಲ್ಲಿ ಕಂಡುಬರುವ ಉಲ್ಲೇಖಗಳನ್ನು ಪ್ರಸ್ತಾವಿಸಿದ್ದಾರೆ.ಕಾಂತಬಾರೆ ಬೂದಬಾರೆ ಪಾಡ್ದನದ ಕೆಲವು ಸಂಧಿಗಳನ್ನು ಪದ್ಯದಲ್ಲಿ ಮತ್ತು ಆದರೆ ಕತೆಯನ್ನು ತುಳುವಿನಲ್ಲಿ ನೀಡಿ, ಈ ಕಥಾನಕದ ಕನ್ನಡ ರೂಪವನ್ನು ನೀಡಿದ್ದಾರೆ. ಅಧ್ಯಾಯ ಎರಡು ಮತ್ತು ಮೂರರಲ್ಲಿ ಬಹುತೇಕ ಈ ವೀರರಿಗೆ ಸಂಬಂಧಿಸಿದ ಐಹಿತ್ಯಗಳು ವಿಶ್ಲೇಷಣೆ ಇದೆ. ಕಾಂತಬಾರೆ ಬೂದಬಾರೆ ಅವಳಿ ವೀರರನ್ನು ಪ್ರಧಾನವಾದ ಆಕರ ಸಾಮಾಗ್ರಿಗಳನ್ನಾಗಿ ಬಳಸಿಕೊಂಡಿರುವುದು ಈ ಕೃತಿಯ ವೈಶಿಷ್ಟವಾಗಿದೆ.

ಕಮಲಾಕ್ಷ ಕೆ.ಅವರ ಬಾಲೆಪಿನವುಳ್ಳ ದೇವಪೂಂಜೆ- ಸಂಧಿ ಮತ್ತು ವಿಶ್ಲೇಷಣೆ ಎಂಬ ಮೌಲಿಕ ಕೃತಿಯು ಇತ್ತಿಚೆಗೆ ಪ್ರಟಕವಾಗಿದೆ. ನಲಿಕೆ ಜನಾಂಗದ ಚೋಮ ಮತ್ತು ಲಕ್ಷ್ಮಿ ಎಂಬ ಮಹಿಳೆಯರಿಂದ ಧ್ವನಿ ಮುದ್ರಣದ ಮೂಲಕ ಸಂಗ್ರಹಿಸಿದ, ಬಹುಮಟ್ಟಿಗೆ ಸಮಗ್ರವೂ, ಅನನ್ಯವೂ ಆದ ಸುಮಾರು ಸಾವಿರದ ನೂರು ಸಾಲುಗಳ ದೇವಪೂಂಜ ಸಂಧಿಯ ಪಠ್ಯವನ್ನು ನೀಡಿ, ಆಮೇಲೆ ಅದರ ಸೊಗಸಾದ ಕನ್ನಡ ರೂಪವನ್ನು ಡಾ. ಕಮಲಾಕ್ಷ ಅವರು ಈ ಕೃತಿಯಲ್ಲಿ ನೀಡಿದ್ದಾರೆ. ಸಂಧಿಯ ತುಳು ಪಠ್ಯದಲ್ಲಿ ಬರುವ ವಿಶಿಷ್ಟ ಪದಗಳ ಅರ್ಥವನ್ನು ನೀಡುವ ಸಾಂಸ್ಕೃತಿಕ ಪದಕೋಶ ಮತ್ತು ಕನ್ನಡ ಅನುವಾದ ಪಠ್ಯದಲ್ಲಿ ಬಂದಿರುವ ಕನ್ನಡ ಪದಗಳ ಅರ್ಥವನ್ನು ವಿವರಿಸಿರುವ ಸಾಂಸ್ಕೃತಿಕ ಅರ್ಥಕೋಶವು ಈ ಕೃತಿಯ ಉಪಯುಕ್ತತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಸಂಧಿಯ ಸ್ವರೂಪ, ಸ್ಥಿರ ಪಠ್ಯ ಮತ್ತು ಚರ ಪಠ್ಯಗಳ ಪರಿಕಲ್ಪನೆ ಮತ್ತು ಆಕರ ಪಠ್ಯಗಳನ್ನು ಸೂಚಿಸಿರುವ ಪ್ರಸ್ತಾವನೆಯ ಭಾಗ, ಈಗಾಗಲೇ ಪ್ರಕಟವಾಗಿರುವ ನಾಲ್ಕು ಸಂಗ್ರಹಿತ ಪಠ್ಯಗಳ ಕಥಾಸಾರ, ಸುಮಾರು ೨೦ ಪುಟಗಳ ದೇವಪೂಂಜ ಸಂಧಿಯ ವಿಶ್ಲೇಷಣೆ ಇವು ಡಾ. ಕಮಲಾಕ್ಷ ಅವರು ಅನುಸರಿಸಿರುವ ಸೈದ್ಧಾಂತಿಕ ವಿಧಾನ ಮತ್ತು ಅವರು ಸಂಶೋಧನಾತ್ಮಕ ಒಳನೋಟಗಳನ್ನು ಬಿಂಬಿಸಲು ಸಮರ್ಥವಾಗಿವೆ.

ಎಂ. ಗಣಪತಿ ರಾವ್ ಐಗಳ್ ಅವರು ಅತ್ತಾವರ ದೈವೊಂಗುಳು (೧೯೨೪) ತುಳು ಪಾಡ್ದನೊಳು (೧೯೩೩) ಎ. ಎನ್. ಶೀನಪ್ಪ ಹೆಗ್ಡೆಯವರ ತುಳುವಾಲ ಬಲಿಯೇಂದ್ರೆ ಪಾಡ್ದನ (೧೯೨೯), ರಸಿಕ ಪುತ್ತಿಗೆ ಅವರ ಕಣಂದೂರು ಧರ್ಮ ಅರಸು ಶ್ರೀ ತೋಡಕುಕ್ಕಿನಾರ್ ದೈವಸ್ಥಾನ ಪರಿಚಯ ಕೃತಿಯಲ್ಲಿರುವ ಪಾಡ್ದನದ ತುಳು ಮೂಲ ಹಾಗೂ ಕನ್ನಡ ಅನುವಾದ (೧೯೭೪), ಯು. ಪಿ. ಉಪಾಧ್ಯಾಯ ಮತ್ತು ಸುಶೀಲಾ ಪಿ. ಉಪಾಧ್ಯಾಯ ಇವರ ಇಂಗ್ಲಿಷ ಕೃತಿ `Bhuta Worship : Aspects of Ritualistic Theatre’ (೧೯೮೪) ಈ ಕೃತಿಯ ಮೂರನೆಯ ಅಧ್ಯಾಯ ‘The Legend of Jummadi’ ಆಗಿದ್ದು ಇದರಲ್ಲಿ ನೀಡಿರುವ ಇಂಗ್ಲಿಷ್ ಅನುವಾದ ಸಹಿತ ಜುಮಾದಿ ಪಾಡ್ದನದ ತುಳು ಪಠ್ಯ (ಈ ಮಹಾಕಾವ್ಯವು ೪೨೧ ಗೆರೆಗಳನ್ನು ಒಳಗೊಂಡಿದೆ. ) ಪಿ. ಪದ್ಮನಾಭ ಅವರ Special study Report on Bhuta Cult in South Kanara District (೧೯೭೧) ಕೃತಿಯಲ್ಲಿರುವ ಜುಮಾದಿ ಮಹಾಕಾವ್ಯದ ಇಂಗ್ಲಿಷ್ ಲಿಪಿಯಲ್ಲಿರುವ ತುಳು ಪಠ್ಯ (ಅದರ ಇಂಗ್ಲಿಷ್ ಅನುವಾದವೂ ಇದೆ) ಮಲಾರ್ ಪಂಜುರ್ಲಿಯ ಮಹಾಕಾವ್ಯದ ತುಳು ಪಠ್ಯ (ಕನ್ನಡ ಲಿಪಿ), ಪೀಟರ್ ಜೆ. ಕ್ಲಾಸ ಅವರ ಇಂಗ್ಲಿಷ ಲೇಖನಗಳ ಕನ್ನಡ ಅನುವಾದ ತುಳುವ ದರ್ಶನ (೧೯೮೭) ಕೃತಿಯಲ್ಲಿರುವ ಸುಮಾರು ೪೦೦ ಗೆರೆಗಳ ಮೈಂದಲ ಪಾಡ್ದನ ಪಠ್ಯ, ವಾಮನ ನಂದಾವರ ಅವರ ಕೋಟಿ-ಚೆನ್ನಯ-ಒಂದು ಜಾನಪದೀಯ ಅಧ್ಯಯನ (೧೯೯೪) ಎಂಬ ಪಿಎಚ್ ಡಿ ಮಹಾಪ್ರಬಂಧದಲ್ಲಿರುವ ಕೋಟಿ ಚೆನ್ನಯ ಮಹಾಕಾವ್ಯದ ಬಹಳ ವಿಸ್ತಾರವಾದ ಪಠ್ಯ -ಹೀಗೆ ಕೃತಿಗಳಲ್ಲಿ ಕಂಡುಬರುವ ಮಹಾಕಾವ್ಯಗಳ ಪಠ್ಯಗಳಲ್ಲದೆ ಪಾಡ್ದನಗಳನ್ನು ಆಧರಿಸಿದ ಕಥಾಸಾರಾಂಶಗಳು ಸಹ ಪ್ರಕಟವಾಗಿವೆ. ಎನ್. ಎಸ್. ಕಿಲ್ಲೆ ಮತ್ತು ಎ. ಎನ್. ಶೀನಪ್ಪ ಹೆಗ್ಡೆಯವರ ಪ್ರಾಚೀನ ತುಳುನಾಡು (೧೯೫೪) ಕೃತಿಯ ಎರಡನೆಯ ಭಾಗದಲ್ಲಿ ಹತ್ತು ಪಾಡ್ದನಗಳ ಕಥಾ ಸಾರಾಂಶವನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಅಮೃತ ಸೋಮೇಶ್ವರರ ತುಳುಪಾಡ್ದನದ ಕತೆಗಳು (೧೯೬೨) ಸೇವ ನಮಿರಾಜ ಮಲ್ಲರ ಭೂತಾರಾಧನೆಯ ಕತೆಗಳು (೧೯೭೦). ಪಾಡ್ದನಗಳ ಕತೆಗಳ ಜನಪ್ರಿಯ ಸಂಪುಟವಾಗಿವೆ. ಲೌರಿ ಹಾಂಕೂ ನೇತೃತ್ವದ ಮೌಖಿಕ ಪುರಾಣಗಳ ಅಧ್ಯಯನ ಯೋಜನೆಯ ಆಶ್ರಯದಲ್ಲಿ ತುಳುನಾಡಿನ ‘ಸಿರಿ’ ಮಹಾಕಾವ್ಯದ ಸಂಪುಟಗಳು ಪ್ರಕಟವಾಗಿರುವುದನ್ನೂ ಇಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕು. ಸುಮಾರು ೧೫, ೬೮೨ ಗೆರೆಗಳ ಈ ಮಹಾಕಾವ್ಯದ ಸಂಗ್ರಹ ವಿಧಾನ ಮತ್ತು ಅಧ್ಯಯನದ ಸೈದ್ಧಾಂತಿಕ ಚೌಕಟ್ಟು ತುಳು ಮಹಾಕಾವ್ಯಗಳ ವಿಶ್ಲೇಷಣೆಗೆ ಹೊಸ ನೆಲೆಗಳನ್ನು ಕಲ್ಪಿಸಿವೆ.