‘‘ಕುಣಿತವು ಪ್ರಾಣಿವರ್ಗ ಮತ್ತು ಮಾನವ ವರ್ಗಕ್ಕೆ ಸಮಾನವಾಗಿರುವ ಒಂದು ಕ್ರಿಯೆ. ಆದರೆ ಮಾನವನ ಕುಣಿತವು ಚಾರಿತ್ರಿಕ ಅಂಶಗಳಿಂದ ಪ್ರಭಾವಿತವಾಗಿರುವುದರಿಂದ ಅದಕ್ಕೊಂದು ನಿರ್ದಿಷ್ಟವಾದ ಸ್ವರೂಪ ಮತ್ತು ಅರ್ಥ ಪ್ರಾಪ್ತಿಯಾಗಿರುತ್ತದೆ. ಕುಣಿತವು ಮಾನವನ ಆಂತರಂಗಿಕ ಅವಶ್ಯಕತೆಯೊಂದನ್ನು ಪೂರೈಸಿದ ಹಾಗೆ ಸಾಮಾಜಿಕ ಅವಶ್ಯಕತೆಯನ್ನು ಪೂರೈಸುತ್ತದೆ. ಈ ನಿಟ್ಟಿನಲ್ಲಿ ಮಾನವನ ಕುಣಿತವು ಪ್ರಾಣಿವರ್ಗದ ಕುಣಿತಕ್ಕಿಂತ ಭಿನ್ನವೂ ಮಹತ್ವಪೂರ್ಣವೂ ಆಗುತ್ತದೆ. ಮಾನವನು ಬಳಸುವ ಭಾಷೆ ಮತ್ತು ವಸ್ತುಗಳ ಹಿನ್ನೆಲೆಯಲ್ಲಿ ಆತ ಸಮಾಜಜೀವಿಯಾಗುವುದು ಅನಿವಾರ್ಯ. ಕುಣಿತಗಳನ್ನು ಚಾರಿತ್ರಿಕವಾಗಿ ವಿಶ್ಲೇಷಿಸಿದ ವಿದ್ವಾಂಸರುಗಳು ಕುಣಿತದ ಸಾಮಾಜಿಕ ಕಾರ್ಯವನ್ನು ಗುರುತಿಸಿದ್ದಾರೆ ಮತ್ತು ವಿಶ್ಲೇಷಿಸಿದ್ದಾರೆ. ಭಾರತೀಯ ಪೌರಾಣಿಕ ಪರಿಕಲ್ಪನೆಯಲ್ಲಿ ಪ್ರಸಿದ್ಧವಾದ ಶಿವನ ತಾಂಡವ ನೃತ್ಯಕ್ಕೂ ಆಧ್ಯಾತ್ಮಿಕವಾದ ಅರ್ಥವ್ಯಾಪ್ತಿ ಇದೆ. ಈ ಆಧ್ಯಾತ್ಮಿಕ ಸಿದ್ಧಿಯು ಲೌಕಿಕದ ಪರಮ ಗುರಿಯಾಗಿರುವುದರಿಂದ ಕುಣಿತವು ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಪರಿವೇಷವನ್ನು ತಾಳಿಕೊಂಡು ಬೆಳೆಯಿತು. ಏನಿದ್ದರೂ ಒಟ್ಟು, ಭಾರತೀಯ ಐತಿಹಾಸಿಕ, ಪೌರಾಣಿಕ, ಸಾಮಾಜಿಕ ದೃಷ್ಟಿಕೋನದಲ್ಲಿ ಕುಣಿತವು ತುಂಬಾ ಪ್ರಾಮುಖ್ಯವನ್ನು ಉಳಿಸಿಕೊಂಡೇ ಬಂದಿದೆ’’ (ಯದುಪತಿ ಗೌಡ, ೧೯೮೯:೦೧). ಜನಪದ ಕುಣಿತಗಳಿಗೆ ಒಂದು ಸಾಮಾಜಿಕ ವ್ಯವಸ್ಥೆಯ ಒಳಗಡೆ ನಿರ್ದಿಷ್ಟ ಕಾಲ, ಸಂದರ್ಭ ಮತ್ತು ಅರ್ಥಗಳನ್ನು ನೀಡಬಹುದು. ಒಂದು ಸಮೂಹದ ಅಥವಾ ಜನವರ್ಗದ ಆವಶ್ಯಕತೆಯ ಚಾರಿತ್ರಿಕ ಉಪ ಉತ್ಪನ್ನವೆಂದು ಕುಣಿತಗಳನ್ನು ಗುರುತಿಸಬಹುದು. ಪ್ರಾಚೀನ ಆರಾಧನಾ ಪದ್ಧತಿಯನ್ನು ಗಮನಿಸಿದಾಗ ಕುಣಿತಗಳು ದೈವದ ಒಲಿಸಿಕೊಳ್ಳುವಿಕೆಯ ಒಂದು ರೂಪವೂ ಆಗುತ್ತದೆ. ಮುಗೇರರ ಜನಪದ ಕುಣಿತಗಳನ್ನು ಗಮನಿಸಿದಾಗ ಮುಖ್ಯವಾಗಿ ಎರಡು ರೀತಿಯ ಕುಣಿತಗಳು ಕಂಡುಬರುತ್ತವೆ. ದೈವವನ್ನು ಒಲಿಸಿಕೊಳ್ಳುವುದು, ದೈವದ ಪ್ರೀತ್ಯರ್ಥವಾಗಿ ಮಾಡುವ ಕುಣಿತಗಳು ಉದಾ: ಕರಂಗೋಲು, ಆಟಿಕಳೆಂಜ, ಚೆನ್ನು ಮತ್ತು ಪಿಲಿಪಂಜಿ ಕುಣಿತಗಳು. ಶಿಷ್ಟ ಪರಂಪರೆಯಲ್ಲಿ ಈ ದೈವವನ್ನು ಒಲಿಸಿಕೊಳ್ಳುವುದಕ್ಕೆ, ದೇವರನ್ನು ಸಂತೃಪ್ತಿಗೊಳಿಸುವುದಕ್ಕೆ ಕುಣಿತವನ್ನು ವ್ಯಕ್ತಿನಿಷ್ಠವನ್ನಾಗಿಸಲಾಯಿತು. ಅಂದರೆ ಶಿಷ್ಟ ಪರಂಪರೆಯಲ್ಲಿ ಒಬ್ಬ ವ್ಯಕ್ತಿ, ಸಮೂಹದ ಪರವಾಗಿ ದೇವರನ್ನು ಕುಣಿತದ ಮೂಲಕ ಒಲಿಸಿಕೊಳ್ಳುವುದನ್ನು ಗುರುತಿಸಬಹುದು. ಆದರೆ ಜನಪದರು ಅದಕ್ಕೆ ವ್ಯತಿರಿಕ್ತವಾಗಿ ಇಡೀ ಸಮೂಹವೇ ಒಂದಾಗಿ ಕುಣಿಯುತ್ತ, ದೈವವನ್ನು ಒಲಿಸಿಕೊಳ್ಳುವುದನ್ನು ಜನಪದ ಕುಣಿತಗಳಲ್ಲಿ ಗುರುತಿಸುತ್ತೇವೆ. ಜನಸಮೂಹದ ಒಳಿತಿಗೆ ಇಡೀ ಸಮೂಹವೇ ಒಂದಾಗಿ ಕುಣಿಯುವ ಪ್ರಕ್ರಿಯೆ ಮೇಲೆ ಗುರುತಿಸಿದ ಮುಗೇರರ ಕುಣಿತಗಳಲ್ಲಿಯೂ ಕಂಡುಬರುತ್ತದೆ. ಈ ಕುಣಿತಗಳು ಲೌಕಿಕ ಪರಂಪರೆಯ ಕುಣಿತವನ್ನು ಅಳವಡಿಸಿಕೊಂಡರೂ, ಆ ಕುಣಿತದ ಮೂಲಕ ಧಾರ್ಮಿಕ ಉದ್ದೇಶವನ್ನು ಈಡೇರಿಸಿಕೊಳ್ಳುವುದೇ ಮುಖ್ಯ ಉದ್ದೇಶವಾಗಿದೆ. ಹಾಗಾಗಿಯೇ ಜಿ.ಶಂ. ಪರಮಶಿವಯ್ಯ ಅವರು ಕರ್ನಾಟಕದ ಜನಪದ ಕುಣಿತಗಳನ್ನು ಎರಡು ಪ್ರಮುಖ ವರ್ಗಗಳಾದ ಧಾರ್ಮಿಕ ಜನಪದ ನೃತ್ಯಗಳು ಮತ್ತು ಲೌಕಿಕ ಜನಪದ ನೃತ್ಯಗಳು ಎಂದು ವಿಂಗಡಿಸಿದ್ದಾರೆ. ‘ಧಾರ್ಮಿಕ ಜನಪದ ನೃತ್ಯಗಳು ವಿಶ್ವದ ಎಲ್ಲ ಕಡೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಕಂಡುಬರುತ್ತದೆ. ವಿಶಿಷ್ಟವಾದ ಆಚರಣೆಗಳು ಹಬ್ಬ ಹರಿದಿನಗಳ, ಜಾತ್ರೆ, ಉತ್ಸವಗಳು ಮುಂತಾದ ಸಂದರ್ಭಗಳಲ್ಲಿ ಧಾರ್ಮಿಕ ನೃತ್ಯಗಳು ಕಂಡು ಬರುತ್ತವೆ. ದೈವದ ಆರಾಧನೆ ಕಲೆಯ ಮಾಧ್ಯಮದಲ್ಲಿ ನಡೆಯುವ ಅಪೂರ್ವ ಸಂದರ್ಭವನ್ನು ಇಲ್ಲಿ ಕಾಣಬಹುದು. ಸೌಂದರ್ಯಾಭಿವ್ಯಕ್ತಿ ಭಕ್ತಿರೂಪದಲ್ಲಿ ಹೊರಹೊಮ್ಮಿ ಭಗವಂತನನ್ನು ಒಲಿಸಿಕೊಳ್ಳುವ ಪವಿತ್ರ ಆವರಣ ಧಾರ್ಮಿಕ ಜನಪದ ನೃತ್ಯಗಳಿಗೆ ಕಲ್ಪಿತವಾಗುತ್ತದೆ. ಲೌಕಿಕ ಜನಪದ ನೃತ್ಯಗಳಿಗೆ ಧಾರ್ಮಿಕ ದೈವದ ಚೌಕಟ್ಟಿಲ್ಲ. ಅದು ಋತು ಸಂಬಂಧಿಯಾದುದಲ್ಲ. ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಜನರನ್ನು ರಂಜಿಸಬಹುದಾದ ಕಲೆ. ಕಲೆಗಾಗಿ ಕಲೆಯಾಗಿ ಬದುಕಿಬಂದ ಹಿನ್ನೆಲೆ ಇಲ್ಲಿ ಮುಖ್ಯವಾದುದು (೧೯೭೫:೭೩). ಎಫ್. ಬೋವರ್ ‘‘ಸಾರ್ವತ್ರಿಕತೆ ಇರುವ ಜನಪದ ನೃತ್ಯಗಳು ಎರಡು ವಿಧವಾಗಿವೆ. ಅವು ಸಾಮಾಜಿಕ ಹಾಗೂ ಆದಿವಾಸಿಗಳ ರೂಪಗಳು. ಸಾಮಾಜಿಕ ನೃತ್ಯಗಳು ಇಂದಿಗೂ ವಿಶಿಷ್ಟ ಸಂದರ್ಭಗಳಲ್ಲಿ ಬೀದಿಗಳಲ್ಲಿ ಹಾಗೂ ಮನೆಗಳಲ್ಲಿ ಸಂತೋಷಕ್ಕಾಗಿ, ಹಬ್ಬದಲ್ಲಿ ಪ್ರದರ್ಶಿಸುವ ನೃತ್ಯಗಳು. ಆದಿವಾಸಿಗಳ ಜನಪದ ನೃತ್ಯಗಳು ಕರ್ಮಾಚರಣೆಗಳ ಉಳಿಕೆಗಾಗಿ ಹೆಚ್ಚಾಗಿ ಕಂಡರೂ ಅಸಂಖ್ಯಾತ ಆದಿವಾಸಿಗಳಿಗೂ, ಬೆಟ್ಟದ ಜನಾಂಗಗಳಿಗೂ ಅಲೆಮಾರಿ ಜನಾಂಗಳಿಗೂ ಸಂಬಂಧಿಸಿರುತ್ತದೆ. ಇವೆಲ್ಲ ಸೇರಿ ನಿಜವಾದ ಭಾರತದ ನೃತ್ಯಗಳಾಗಿವೆ’’ (ಪು.೬. ಉಧೃತ ಬಿ. ರಾಮರಾಜು ೧೯೭೮:೧೨೮) ಎಂದು ಹೇಳಿದ್ದಾರೆ. ಆಂಧ್ರಪ್ರದೇಶದ ಬುಡಕಟ್ಟುಗಳ ಕುಣಿತಗಳನ್ನು ಗಮನದಲ್ಲಿರಿಸಿಕೊಂಡು ಬಿ. ರಾಮರಾಜು ಅವರು ನೃತ್ಯಗಳನ್ನು ಸ್ಥೂಲವಾಗಿ ಮೂರು ವಿಂಗಡಣೆ ಮಾಡಿದ್ದಾರೆ. (೧) ಧಾರ್ಮಿಕ ನೃತ್ಯಗಳು (೨)ಸಾಮಾಜಿಕ ನೃತ್ಯಗಳು ಹಾಗೂ (೩) ವಿನೋದ ನೃತ್ಯಗಳು(೧೯೭೮:೧೨೯).

ಈ ಮೇಲಿನ ವರ್ಗೀಕರಣಗಳ ಹಿನ್ನೆಲೆಯಲ್ಲಿ ಮುಗೇರರ ಕುಣಿತಗಳನ್ನು ಗಮನಿಸಿದಾಗ ಧಾರ್ಮಿಕ ಜನಪದ ಕುಣಿತಗಳು ಮತ್ತು ಮನರಂಜನಾ (ವಿನೋದ) ಕುಣಿತಗಳು ಮುಖ್ಯವಾಗಿ ಕಂಡುಬರುತ್ತವೆ. ಜೀ.ಶಂ.ಪ. ಮತ್ತು ಎಫ್. ಬೋವರ್ ಇವರು ಗುರುತಿಸಿರುವಂತೆ ಲೌಕಿಕ ಜನಪದ ಕುಣಿತಗಳು ಅಥವಾ ಸಾಮಾಜಿಕ ಕುಣಿತಗಳು ಇಡೀ ಒಂದು ಹಳ್ಳಿಯ ಸಾಮಾಜಿಕ, ಧಾರ್ಮಿಕ ಮತ್ತು ಆರಾಧನಾ ಸಂದರ್ಭಗಳಲ್ಲಿ ಕಂಡುಬರುವಂತಹವುಗಳು. ಈ ರೀತಿಯ ಕುಣಿತಗಳು ಮುಗೇರರಲ್ಲಿ ಕಂಡುಬರುವುದಿಲ್ಲ. ಅವರಲ್ಲಿ ಧಾರ್ಮಿಕ ಜನಪದ ಕುಣಿತಗಳು ನಿರ್ದಿಷ್ಟ ಕಾಲ, ಸಂದರ್ಭವನ್ನು ಒಳಗೊಂಡು ಆಚರಣೆಯ ಸ್ವರೂಪವನ್ನು ಪಡೆದುಕೊಂಡಿದ್ದರೆ, ಮನರಂಜನಾ ಕುಣಿತಗಳು ಆಯಾ ವ್ಯಕ್ತಿಗಳ ಮಾನಸಿಕ ನೆಮ್ಮದಿ, ಸಂತೃಪ್ತಿ, ಸಂತೋಷಕ್ಕಾಗಿ ಕುಣಿಯುವಂತಹವು. ಬೇರೆ ಸಮೂಹಗಳ, ಸಾಮಾಜಿಕ ಗುಂಪುಗಳ ಸಂತೋಷಕ್ಕಾಗಿ ಕುಣಿಯುವ ಕುಣಿತಗಳು ಮುಗೇರರಲ್ಲಿ ಕಂಡುಬರುವುದಿಲ್ಲ.

ಮುಗೇರರ ಮನರಂಜನಾ ಕುಣಿತಗಳನ್ನು ‘ದುಡಿಕುಣಿತ’ಗಳೆಂದು ಕರೆಯುತ್ತಾರೆ. ‘ದುಡಿ’ ಒಂದು ರೀತಿಯ ಚರ್ಮವಾದ್ಯ. ಹಲಸಿನ ಮರವನ್ನು ಡಮರುಗದ ಆಕೃತಿಯಲ್ಲಿ ಕೊರೆದು ಅದರ ಎರಡು ಬದಿಗಳಿಗೆ ಉಡ ಅಥವಾ ಮಂಗನ ಚರ್ಮವನ್ನು ಕಟ್ಟುತ್ತಾರೆ. ಡಮರುಗಕ್ಕಿಂತ ಗಾತ್ರದಲ್ಲಿ ತುಂಬಾ ದೊಡ್ಡದಾಗಿರುತ್ತದೆ. ನಾದ ಬರಿಸುವುದಕ್ಕೆ ಗಟ್ಟಿಯಾದ ಹಗ್ಗದಿಂದ ಎರಡೂ ತುದಿಗಳನ್ನು ಕಟ್ಟುತ್ತಾರೆ. ಈ ಹಗ್ಗಕ್ಕೆ ಮತ್ತು ದುಡಿಯ ಮಧ್ಯಭಾಗಕ್ಕೆ ಇನ್ನೊಂದು ಹಗ್ಗವನ್ನು ಅಡ್ದವಾಗಿ ಸುತ್ತುತ್ತಾರೆ. ಈ ಹಗ್ಗವನ್ನು ಎಡಗೈಯಿಂದ ಎಳೆಯುತ್ತಾ, ಬಲಗೈಯಲ್ಲಿ ದುಡಿ ನುಡಿಸುತ್ತಾರೆ. ದುಡಿಯನ್ನು ನುಡಿಸುತ್ತಾ ಪಾರ್ತನ ಹೇಳಿ ಕುಣಿಯುವುದರಿಂದ ಈ ಕುಣಿತಕ್ಕೆ ‘ದುಡಿ ಕುಣಿತ’ವೆಂದು ಹೆಸರು ಬಂದಿದೆ.

‘ದುಡಿ’ಯನ್ನು ಸ್ವತಹ ಮುಗೇರರೇ ರಚಿಸಿಕೊಳ್ಳುತ್ತಾರೆ. ಕೆಲವು ಕಡೆಗಳಲ್ಲಿ ‘ಮುಸಿಯ’ ಚರ್ಮವನ್ನು ದುಡಿಗೆ ಬಳಸುತ್ತಾರೆ. ಆದರೆ ಚೆನ್ನಾಗಿ ಉಡ ಮತ್ತು ಮಂಗದ ಚರ್ಮವನ್ನೇ ಬಳಸಲಾಗುವುದು. ಮುಗೇರರ ಬದುಕಿನಲ್ಲಿ ‘ದುಡಿ’ಗೆ ವಿಶೇಷವಾದ ಸ್ಥಾನವಿದೆ. ಹಿಂದೆ ಈ ‘ದುಡಿ’ಯಿಲ್ಲದ ಮನೆಯಲ್ಲಿ ನಿಷ್ಠಾವಂತ ಮುಗೇರರು ನೀರನ್ನು ಕುಡಿಯುತ್ತಿರಲಿಲ್ಲ. ಅವರ ‘ದುಡಿ’ ಮತ್ತು ಬಿಲ್ಲು ಬಾಣಗಳು ಜಾತಿಯ ಸೂಚಕಗಳಾಗಿ ಮನೆಯ ಉದ್ದದ ಜಗಲಿಯಲ್ಲಿ ತೂಗುಹಾಕುತ್ತಿದ್ದರು. ದುಡಿಯ ಬಳಕೆ ಹಲವು ಸಂದರ್ಭಗಳಲ್ಲಿ ಆಗುತ್ತದೆ. ಜೀವನಾವರ್ತನದ ಆಚರಣೆಗಳಾದ ನಾಮಕರಣ, ಕಿವಿಚುಚ್ಚುವುದು, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿತ್ತು. ಮುಗೇರ ಜಾತಿಯ ಸಮೂಹದ ಶುಭ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಜಾತಿಯ ಮತ್ತು ಕುಟುಂಬದ ಹೆಚ್ಚಿನ ಜನರು ಸೇರುತ್ತಿದ್ದರು. ಅಂತಹ ಕಾರ್ಯಕ್ರಮಗಳಿಗೆ ‘ದುಡಿ’ಯಿದ್ದವರು ದುಡಿಯನ್ನು ತರುತ್ತಿದ್ದರು. ಪ್ರಮುಖವಾಗಿ ದುಡಿಕುಣಿತಗಳು ಎರಡು ಸಂದರ್ಭಗಳಲ್ಲಿ ಮುಖ್ಯವಾಗುತ್ತವೆ. ಮುಗೇರರ ಸಾಮೂಹಿಕ ಕಾರ್ಯಕ್ರಮಗಳು ಮತ್ತು ವಿರಾಮದ ಕಾಲದ ಕುಣಿತಗಳು. ಈ ಎರಡು ಸಂದರ್ಭಗಳಲ್ಲಿ ಮನರಂಜನೆಗಾಗಿಯೆ ದುಡಿಯನ್ನು ಬಳಸುತ್ತಿದ್ದರು. ಮನೆಯ ಅಂಗಳದಲ್ಲಿ ಹಲವು ಜನ ದುಡಿಗಳನ್ನು ನುಡಿಸುತ್ತಿದ್ದರೆ, ವಯಸ್ಸಿನ ಅಂತರವಿಲ್ಲದೆ ಗಂಡಸರು, ಹೆಂಗಸರು ಮತ್ತು ಮಕ್ಕಳು ದುಡಿ ಕುಣಿತದಲ್ಲಿ ಭಾಗವಹಿಸುತ್ತಾರೆ. ಮುಗೇರರ ಮದುವೆಗಳಿಗೆ ಹಿಂದೆ ಬೇರೆ ಯಾವುದೇ ವಾದ್ಯ ಪರಿಕರಗಳನ್ನು ಬಳಸುತ್ತಿರಲಿಲ್ಲ. ವರನ ಮನೆಯಿಂದ ‘ದಿಬ್ಬಣ’ ಹೊರಡುವಾಗ ದುಡಿ ನುಡಿಸಿಕೊಂಡೇ ಹೊರಡುತ್ತಿದ್ದರು. ಯಾವುದೇ ವಾಹನ ಸೌಕರ್ಯಗಳಿಲ್ಲದ ಆ ಕಾಲದಲ್ಲಿ ದೂರದೂರನ್ನು ನಡೆದುಕೊಂಡೇ ಹೋಗುತ್ತಿದ್ದರು. ಹತ್ತಾರು ಮೈಲಿಯ ದೂರದ ನಡಿಗೆಯ ಶ್ರಮ ಪರಿಹಾರಕ್ಕಾಗಿ ದಾರಿ ಮಧ್ಯದಲ್ಲಿ ದುಡಿಯನ್ನು ನುಡಿಸಿಕೊಂಡು ಹೋಗುತ್ತಿದ್ದರು. ಮತ್ತು ಮದುವೆಯ ದಿಬ್ಬಣ ಎಂಬ ಸೂಚನೆಯನ್ನು ಈ ದುಡಿ ನುಡಿಸುವಿಕೆ ನೀಡುತ್ತಿತ್ತು. ವಧುವಿನ ಮನೆಯನ್ನು ಪ್ರವೇಶಿಸುತ್ತಿದ್ದಂತೆ ದುಡಿಯನ್ನು ನುಡಿಸಿ, ಕುಣಿಯುವ ಮುಖಾಂತರ ತಮ್ಮ ಪ್ರಾವೀಣ್ಯತೆಯನ್ನು ತೋರುತ್ತಿದ್ದರು. ಅಲ್ಲದೆ ವರನ ಮತ್ತು ವಧುವಿನ ಮನೆಯವರಿಗೆ ಇದೇ ಸಂದರ್ಭದಲ್ಲಿ ದುಡಿ ನುಡಿಸುವುದರಲ್ಲಿ ಮತ್ತು ಕುಣಿಯುವುದರಲ್ಲಿ ಪಂಥಗಳನ್ನು ಏರ್ಪಡಿಸುತ್ತಿದ್ದರು. ಮದುವೆಯಾಗದ ಹುಡುಗಿಯರ ಕುಣಿತವನ್ನು ನೋಡಿಯೇ ಹಿಂದೆ ವಧುವಿನ ಅನ್ವೇಷಣೆ ನಡೆಯುತ್ತಿತ್ತು ಮತ್ತು ಮದುವೆಯಾದ ಮದುಮಗಳು, ಮದುವೆಯಾದ ಕೂಡಲೇ ಇತರರೊಂದಿಗೆ ಮದುವೆ ಚಪ್ಪರದಲ್ಲಿಯೆ ಕುಣಿಯುವ ಪದ್ಧತಿಯೂ ಇತ್ತು. ಹೆಣ್ಣನ್ನು ಶೃಗಂರಿಸಿ, ಮದುವೆ ಮಂಟಪಕ್ಕೆ ‘ದುಡಿ’ಯೊಂದಿಗೆ ಕರೆತರುತ್ತಿದ್ದರು. ಗಂಡಸರು ದುಡಿಯನ್ನು ನುಡಿಸುತ್ತಿದ್ದರೆ, ಹೆಂಗಸರು ಸೋಬಾನೆ ಹಾಡುತ್ತಿದ್ದರು.

ಮುಗೇರರು ಹಿಂದೆ ಮೂಲದವರಾಗಿ ಯಾವುದಾದರೂ ಒಂದು ಸವರ್ಣೀಯರ ಮನೆಯಲ್ಲಿ ಕೆಲಸಕ್ಕೆ ಇರುತ್ತಿದ್ದರು. ಮದುವೆಯಾದ ಕೂಡಲೇ ವರನ ಮತ್ತು ವಧುವಿನ ಒಡೆಯನ ಮನೆಗಳಿಗೆ ಮದುಮಕ್ಕಳು ತೆರಳಿ ‘ಕಾಣಿಕೆ’ ಇಡುವ ಪದ್ಧತಿ ಇತ್ತು. ಒಂದು ಬಾಳೆಎಲೆಯಲ್ಲಿ ಬಾಳೆಗೊನೆಯನ್ನು ಮನೆಯ ಅಂಗಳದಲ್ಲಿ ಇರಿಸಿ ಮದುಮಗ ಮತ್ತು ಮದುಮಗಳು ಮಂಡಿಯೂರಿ ನಮಸ್ಕರಿಸುವ ಪದ್ಧತಿ ಹಿಂದೆ ಇತ್ತು. ಈ ರೀತಿ ನಮಸ್ಕರಿಸಿಯಾದ ನಂತರ ಅಂಗಳದಲ್ಲಿ ಎಲ್ಲರೂ ದುಡಿಯನ್ನು ನುಡಿಸಿಕೊಂಡು, ಪಾರ್ತನ ಹೇಳಿ ಕುಣಿಯುತ್ತಿದ್ದರು. ಈ ಪದ್ಧತಿ ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕುಗಳಲ್ಲಿ ಈಗಲೂ ಕಂಡುಬರುತ್ತದೆ. ಮದುಮಗನಿಗೆ ಮತ್ತು ಮದುಮಗಳಿಗೆ ದುಡ್ಡು, ಬಟ್ಟೆ ಉಡುಗೊರೆ ನೀಡಿ, ತಲೆಗೆ ತೆಂಗಿನ ಎಣ್ಣೆಯನ್ನು ನೀಡುತ್ತಿದ್ದರು. ವರನ ಕಡೆಯ ಯಜಮಾನನ ಹೆಂಡತಿ ಮದುಮಗಳು ಸುಂದರವಾಗಿದ್ದರೆ, ಅಸೂಯೆಯಿಂದ ಸ್ವಲ್ಪ ಹೆಚ್ಚು ತೆಂಗಿನ ಎಣ್ಣೆಯನ್ನು ಸುರಿಯುತ್ತಿದ್ದಳು. ಈ ಸಂದರ್ಭವನ್ನು ಬಿಟ್ಟರೆ ಮುಗೇರರಲ್ಲಿ ಬೇರೆ ಯಾವುದೇ ಸಂದರ್ಭಗಳಲ್ಲಿ ಬೇರೆಯವರ ಮನೆಗಳಲ್ಲಿ ದುಡಿ ಕುಣಿತವನ್ನು ನಡೆಸುತ್ತಿರಲಿಲ್ಲ.

ಕಾರ್ಕಳ ತಾಲೂಕಿನಲ್ಲಿ ಮನರಂಜನಾ ಸಂದರ್ಭವನ್ನು ಬಿಟ್ಟು ಬೇರೆ ಉದ್ದೇಶಕ್ಕೆ ‘ದುಡಿ’ಯನ್ನು ಬಳಸುತ್ತಿದ್ದುದು ಕಂಡುಬರುತ್ತದೆ. ಮುಗೇರರು ಬೇಟೆಯಲ್ಲಿ ನಿಪುಣರು. ಅದರಲ್ಲಿಯೂ ಬಿಲ್ಲು ಬಾಣಗಳಿಂದ ಮೊದಲ ಬೇಟೆಯನ್ನು ಮಾಡುವುದರಲ್ಲಿ ನಿಷ್ಣಾತರಾಗಿದ್ದರು. ಪೊದೆಯಲ್ಲಿ ಅಡಗಿರುತ್ತಿದ್ದ ಮೊಲಗಳನ್ನು ಹೊರಬರುವಂತೆ ಮಾಡಲು, ಬೇಟೆಯ ಸಂದರ್ಭದಲ್ಲಿ ಜೋರಾಗಿ ದುಡಿಯನ್ನು ಬಾರಿಸಿ ಶಬ್ದ ಮಾಡುತ್ತಿದ್ದರು ಹಾಗಾಗಿ ದುಡಿಯ ಬಳಕೆ ಕೇವಲ ಮನರಂಜನೆಗೆ ಮಾತ್ರ ಇದ್ದದ್ದು ಎಂಬ ಅಂಶವನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಮನರಂಜನೆ ಜೊತೆಗೆ ಮುಗೇರರ ಮೂಲ ವೃತ್ತಿಯಾದ ಬೇಟೆಗೂ ದುಡಿ ಬಳಸುತ್ತಿದ್ದರು ಎಂಬ ಅಂಶ ಕಂಡುಬರುತ್ತದೆ. ದುಡಿಯ ಬಳಕೆಯನ್ನು ಮುಗೇರ್ಲೆ ಕೋಲದಲ್ಲಿಯೂ ಮಾಡುತ್ತಿದ್ದರು. ಮುಗೇರರ ಸಾಂಸ್ಕೃತಿಕ ವೀರರು ವೇಷಭೂಷಣ ತೊಟ್ಟು ದುಡಿಯಿಂದ ರಂಗಸ್ಥಳ ಪ್ರವೇಶ ಮಾಡುವಾಗ ದುಡಿಯ ಧ್ವನಿಯೊಂದಿಗೆ ಇಳಿಯುತ್ತಿದ್ದರು. ಅಲ್ಲದೆ ಮುಗೇರ್ಲೆ ಕೋಲದ ಸಂದರ್ಭದಲ್ಲಿ ದಾಖಲಿಸಿದಂತೆ ಕೆಲವು ಕಡೆ ‘ಒಡ್ಡು ನಲಿಕೆ’ಯ ಪದ್ಧತಿಯು ಇದೆ. ಈ ಒಡ್ಡುನಲಿಕೆಯಲ್ಲಿ ಮುಗೇರ ವ್ಯಕ್ತಿಗಳು ದುಡಿಯನ್ನು ನುಡಿಸಬೇಕು. ಭೂತಗಳು, ಪಾತ್ರಿಗಳು ಮತ್ತು ಮುಗೇರ ಪುರುಷರು ಈ ಕುಣಿತದಲ್ಲಿ ಭಾಗವಹಿಸುತ್ತಿದ್ದರು. ಹೀಗೆ ದುಡಿಯು ಮುಗೇರರ ಆರಾಧನಾ ಸಂದರ್ಭದಲ್ಲಿಯೂ ಬಳಕೆಯಲ್ಲಿದೆ.

ದುಡಿಕುಣಿತದ ಸ್ವರೂಪ

ದುಡಿ ಕುಣಿತಗಳು ಕಾಲಬದ್ಧ ಕುಣಿತಳಲ್ಲ. ವರ್ಷದ ಯಾವುದೇ ಸಂದರ್ಭಗಳಲ್ಲಿ ಬೇಕಾದರೂ ದುಡಿ ಕುಣಿತವನ್ನು ಮಾಡಬಹುದು. ಮುಗೇರರ ಮದುವೆ ಸಂದರ್ಭದಲ್ಲಿ ಇಡೀ ಮುಗೇರ ಜಾತಿಯ ಸಾಮೂಹಿಕ ಭಾಗವಹಿಸುವಿಕೆಯಿರುವುದರಿಂದ, ಆ ಸಂದರ್ಭದಲ್ಲಿ ದುಡಿಕುಣಿತ ಪ್ರಮುಖವಾಗುತ್ತದೆ. ಈ ಸಂದರ್ಭವನ್ನು ಬಿಟ್ಟು ಯಾವುದೇ ದಿನಗಳಲ್ಲಿಯೂ ತಮ್ಮ ಮನೆಯಲ್ಲಿ ದುಡಿ ಕುಣಿತವನ್ನು ಮನೆಯ ಸದಸ್ಯರು, ಅಕ್ಕಪಕ್ಕದ ಮುಗೇರರು ಸೇರಿಕೊಂಡು ನಡೆಸುತ್ತಾರೆ. ಮುಗೇರರು ಸಾಮಾನ್ಯವಾಗಿ ಗುಂಪು ಮನೆಗಳಲ್ಲಿ ವಾಸಿಸುತ್ತಾರೆ. ಒಂದು ಪ್ರದೇಶದಲ್ಲಿ ಕನಿಷ್ಠ ಅಂದರೂ ಹತ್ತು ಮನೆಗಳಿರುತ್ತವೆ. ಈ ರೀತಿಯ ಗುಂಪು ಮನೆಗಳಿಗೂ, ಪ್ರಾಚೀನ ಜಮೀನ್ದಾರಿ ಪದ್ಧತಿ ಮತ್ತು ಜೀತ ಪದ್ಧತಿಗಳ ಮಧ್ಯೆ ನಿಕಟ ಸಂಬಂಧಗಳಿವೆ. ಒಬ್ಬ ಸವರ್ಣೀಯ ಜಮೀನ್ದಾರನ ಮನೆಯಲ್ಲಿ ಮೂಲದ ಕೆಲಸಗಾರರಾಗಿ ತುಳುನಾಡಿನ ಅಸ್ಪೃಶ್ಯರನ್ನು ನೇಮಿಸಿಕೊಳ್ಳುತ್ತಿದ್ದರು. ವಿವಿಧ ಅಸ್ಪೃಶ್ಯ ಜಾತಿಗಳು ಗುಂಪಾಗಿ ಬೇರೆ ಬೇರೆ ಕಡೆಯಲ್ಲಿ ಮನೆಗಳನ್ನು ಮಾಡಿಕೊಳ್ಳುತ್ತಿದ್ದರು. ಮುಗೇರರ ಮನೆಗಳಿರುವಲ್ಲಿ ಮನ್ಸರ ಅಥವಾ ಬೈರರ ಮನೆಗಳಿರುತ್ತಿರಲಿಲ್ಲ. ಹಾಗಾಗಿ ಒಂದೊಂದು ಜಾತಿಗಳು ಒಂದೊಂದು ಕಡೆ ಗುಂಪಾಗಿ ಇರುತ್ತಿದ್ದವು. ಹಗಲು ಹೊತ್ತಿನಲ್ಲಿ ಒಡೆಯನ ಮನೆಯ ಕೆಲಸಗಳನ್ನು ಮುಗಿಸಿ ಬಂದು ಮುಗೇರ ಜಾತಿಯ ಮುಖ್ಯಸ್ಥನ ಮನೆಯಲ್ಲಿ ಇವರೆಲ್ಲ ಸೇರಿ ದುಡಿ ನುಡಿಸಿಕೊಂಡು ಕುಣಿಯುತ್ತಿದ್ದರು. ಈ ರೀತಿ ಕುಣಿಯುವುದಕ್ಕೆ ನಿರ್ದಿಷ್ಟವಾದ ಯಾವುದೇ ಕಾಲಗಳು ಬೇಕಾಗಿಲ್ಲ. ದುಡಿ ಕುಣಿತದ ಮುಖ್ಯ ಉದ್ದೇಶವೇ ಶ್ರಮ ಪರಿಹಾರ ಮತ್ತು ಮನರಂಜನೆ. ವರ್ಷ ಪೂರ್ತಿ ದುಡಿಮೆಯಲ್ಲಿಯೇ ಇರುತ್ತಿದ್ದ ಈ ವ್ಯಕ್ತಿಗಳಿಗೆ ರಾತ್ರಿಯೆಂದರೆ ಮನರಂಜನೆಯ, ಶ್ರಮ ಪರಿಹಾರದ ಕಾಲ. ಹಾಗಾಗಿಯೇ ದುಡಿಯ ನಾದದ ಜೊತೆಯಲ್ಲಿ ಕುಣಿಯುತ್ತಾ ತನ್ಮಯರಾಗಿ ತಮ್ಮ ಶ್ರಮ ಪರಿಹಾರವನ್ನು ಮಾಡಿಕೊಳುತ್ತಿದ್ದರು. ಈಗೀಗ ಈ ಕುಣಿತಗಳು ಮದುವೆಯ ಸಂದರ್ಭದಲ್ಲಿ ಮಾತ್ರ ಬಳಕೆಯಲ್ಲಿವೆ. ಜೀತ ಪದ್ಧತಿಯ ನಾಶ ಮತ್ತು ಆರ್ಥಿಕ ಸ್ವಾವಲಂಬನೆಗಳಿಂದಾಗಿ ಮುಗೇರರು ಗುಂಪು ಮನೆಗಳಲ್ಲಿ ಈಗ ಹೆಚ್ಚಾಗಿ ವಾಸಿಸದೆ ಚದುರಿ ಹೋಗಿದ್ದಾರೆ. ಸರಕಾರಿ ಜಮೀನುಗಳಲ್ಲಿ ಮನೆ ಮಾಡಿಕೊಂಡು, ಗುಂಪಿನಿಂದ ದೂರವಾಗಿ ಬದುಕುತ್ತಿದ್ದಾರೆ. ಹಾಗಾಗಿ ಹಿಂದೆ ಇದ್ದ ಸಾಮಾಜಿಕ ಸಂದರ್ಭಗಳನ್ನು ಕಳೆದುಕೊಂಡು ಕುಣಿತಗಳು ಇಂದು ಕೇವಲ ಮದುವೆ ಸಂದರ್ಭದಲ್ಲಿ ಮಾತ್ರ ಕಂಡುಬರುವುದು ಸಹಜ. ಹೀಗೆ ದುಡಿಯ ಬಳಕೆಯ ಸಂದರ್ಭವನ್ನು ಈ ರೀತಿ ಗುರುತಿಸಬಹುದು.

ದುಡಿಯನ್ನೇ ಕೇಂದ್ರವಾಗಿರಿಸಿಕೊಂಡು ಮುಗೇರರ ಬದುಕಿನ ವಿವಿಧ ಸಂದರ್ಭಗಳಲ್ಲಿ ಅದರ ಬಳಕೆಯನ್ನು ಮುಂದಿನ ಪುಟದ ರೇಖಾಚಿತ್ರದಿಂದ ಸ್ಪಷ್ಟಪಡಿಸಿಕೊಳ್ಳಬಹುದು.

ಮುಂದೆ ಕೊಟ್ಟಿರುವ ರೇಖಾಚಿತ್ರದ ಮುಖಾಂತರ ‘ದುಡಿ‘ ವಿವಿಧ ಸಂದರ್ಭಗಳಲ್ಲಿ, ವಿವಿಧ ಉದ್ದೇಶಗಳಿಗಾಗಿ ಬಳಕೆಯಾಗುತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ. ಲೌಕಿಕ ಮತ್ತು ಧಾರ್ಮಿಕ ಸಂದರ್ಭಗಳೆರಡರಲ್ಲಿಯೂ ದುಡಿಯ ಬಳಕೆ ಕಂಡುಬರುತ್ತದೆ. ವಾರ್ಷಿಕ ಆವರ್ತನದ ಕುಣಿತಗಳು, ಕುಣಿತಗಳಿಗಿಂತಲೂ ಆಚರಣಾ ಸ್ವರೂಪವನ್ನು ಪಡೆದುಕೊಂಡಿವೆ. ಅವುಗಳಲ್ಲಿ ‘ದುಡಿ’ ಪ್ರಮುಖವಾಗಿ ಬಳಕೆಯಾಗಿರುವುದನ್ನು ಗುರುತಿಸಲಾಗಿವೆ. ದುಡಿಯ ಬಳಕೆಯನ್ನು ಗಮನಿಸಿದಾಗ ಅದು ಯಾವುದೇ ಒಂದು ಕಾಲದಲ್ಲಿ ಮಾತ್ರ ಬಳಕೆಯಾಗುವುದಿಲ್ಲ, ಎಲ್ಲ ಕಾಲದಲ್ಲಿಯೂ ಬಳಕೆಯಾಗುತ್ತದೆ.

ರೇಖಾಚಿತ್ರ : ವಿವಿಧ ಸಂದರ್ಭಗಳಲ್ಲಿ ದುಡಿ ಬಳಕೆ

08_42_TSC-KUH

09_42_TSC-KUH

ದುಡಿ ಕುಣಿತಗಳಲ್ಲಿ ಗಂಡಸರು, ಹೆಂಗಸರು ಮತ್ತು ಮಕ್ಕಳಿಗೆ ಸಮಾನವಾದ ಭಾಗವಹಿಸುವಿಕೆ ಇದೆ. ‘ದುಡಿ’ಯನ್ನು ನುಡಿಸುವವರು ಪುರುಷರು ಮಾತ್ರ. ಕುಣಿತದಲ್ಲಿ ಪ್ರಮುಖಸ್ಥಾನವನ್ನು ಪಡೆಯುವವರು ಹೆಂಗಸರು. ಗಂಡಸರ ದುಡಿಯ ನಾದಕ್ಕೆ ಹೆಜ್ಜೆ ಹಾಕುವುದರಲ್ಲಿ ಅವರು ಪ್ರವೀಣರು. ಜನಪದ ಕುಣಿತಗಳ ಲಕ್ಷಣಗಳೇ ಸಾಮೂಹಿಕ ಭಾಗವಹಿಸುವಿಕೆ. ಒಬ್ಬ ವ್ಯಕ್ತಿ ಕುಣಿಯುತ್ತ ಉಳಿದವರು ಪ್ರೇಕ್ಷಕರಾಗುವ ಕುಣಿತಗಳು ಜಾನಪದದಲ್ಲಿ ಕಂಡುಬರುವುದು ಬಹಳ ವಿರಳ. ಜನಪದ ಕುಣಿತಗಳ ಸೃಷ್ಟಿಯೇ ಸಮೂಹದ ಆಶಯವನ್ನು ಹೊಂದಿಕೊಂಡಿರುತ್ತದೆ. ಒಟ್ಟಾಗಿ ಕುಣಿಯುವ, ಬದುಕುವ ಮತ್ತು ಒಟ್ಟಾಗಿ ಆರಾಧನೆ ಮಾಡುವ ಪದ್ಧತಿ ಮುಗೇರದಲ್ಲಿ ಇದೆ. ಮುಗೇರರ ಯಾವುದೇ ದುಡಿ ಕುಣಿತ ಮತ್ತು ಆಚರಣಾತ್ಮಕ ಕುಣಿತಗಳನ್ನು ಗಮನಿಸಿದರೆ ಪರಸ್ಪರ ಮೈಮುಟ್ಟಿಕೊಂಡು, ಕೈ ಹಿಡಿದುಕೊಂಡು ಕುಣಿಯುವ ಕುಣಿತಗಳು ಯಾವುವು ಇಲ್ಲ. ಕುಣಿತಗಳೆಲ್ಲ ವೃತ್ತಾಕಾರವಾಗಿ ಸಮಾನ ಹೆಜ್ಜೆಗಾರಿಕೆಯನ್ನು ಅಳವಡಿಸಿಕೊಂಡು ಇರುತ್ತದೆ. ಒಂದು ಸಂಸ್ಕೃತಿಯಲ್ಲಿ ಹೆಣ್ಣಿಗೆ ಇರುವ ಸ್ಥಾನಮಾನವನ್ನು ಆ ಸಂಸ್ಕೃತಿಯ ಆಚರಣೆ, ಆರಾಧನೆ ಮತ್ತು ಕುಣಿತಗಳಲ್ಲಿ ಗುರುತಿಸಬಹುದು. ಚೆನ್ನು ಕುಣಿತವನ್ನು ಬಿಟ್ಟರೆ ಮುಗೇರ ಹೆಂಗಸರಿಗೆ ಕುಣಿತದ ಸಂದರ್ಭದಲ್ಲಿ ಅವಕಾಶಗಳಿಲ್ಲ. ಆದರೆ ಅದೇ ಕುಣಿತಗಳ ಆಚರಣೆಯ ಸಂದರ್ಭಕ್ಕೆ ಬಂದಾಗ ಹೆಂಗಸರಿಗೆ ಹೆಚ್ಚಿನ ಜವಾಬ್ದಾರಿಗಳಿರುತ್ತವೆ. ಮನರಂಜನಾ ಕುಣಿತಗಳ ಉದ್ದೇಶವೇ ಶ್ರಮ ಪರಿಹಾರ. ಗಂಡಸಿನ ಸಮಾನವಾಗಿ ಹೆಂಗಸರು ದುಡಿಯುವವರಾದ್ದರಿಂದ ದುಡಿ ಕುಣಿತದಲ್ಲಿ ಅವರಿಗೂ ಸ್ಥಾನ ಸಿಕ್ಕಿದೆ. ಒಂದು ಸಂಸ್ಕೃತಿಯಲ್ಲಿ ಹೆಣ್ಣಿಗೆ ಇರುವ ಸ್ಥಾನಮಾನಗಳೇ ಅವರ ಭಾಗವಹಿಸುವಿಕೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ಈ ದೃಷ್ಟಿಯಿಂದ ನೋಡಿದರೆ ದುಡಿಕುಣಿತದಲ್ಲಿ ಹೆಂಗಸರು ಹೆಚ್ಚಾಗಿ ಭಾಗವಹಿಸುತ್ತಾರೆ.

ದುಡಿ ಕುಣಿತದಲ್ಲಿ ಸಾಮೂಹಿಕ ಭಾಗವಹಿಸುವಿಕೆಯಿಂದಾಗಿ ಕುಣಿತದ ಹೆಜ್ಜೆಗಾರಿಕೆಯಲ್ಲಿ ಯಾವುದೇ ಸಂಕೀರ್ಣತೆಗಳು ಇಲ್ಲ. ಯಾವುದೇ ಪೂರ್ಣ ತರಬೇತಿಯಿಲ್ಲದೆ ಪ್ರತಿಯೊಬ್ಬನು ಅನುಸರಿಸಬಹುದಾದ ಹೆಜ್ಜೆಗಾರಿಕೆ ‘ದುಡಿ ಕುಣಿತ’ದಲ್ಲಿ ಇದೆ. ‘ಮಾಣಿನಾಗೆರ್’ ಎಂಬ ದುಡಿ ಕುಣಿತದ ಒಂದು ಭಂಗಿಯ ಕುಣಿತ ಮಾತ್ರ ಸ್ವಲ್ಪ ಸಂಕೀರ್ಣವಾಗಿದೆ. ಇದನ್ನು ಅನುಭವಶಾಲಿಗಳು ಮಾತ್ರ ಮಾಡುತ್ತಾರೆ. ಮಾಣಿನಾಗೆರ್ ಪಾರ್ತನದ ಅಂತಿಮ ಘಟ್ಟಕ್ಕೆ ಬರುತ್ತಿದ್ದಂತೆ ಅನುಭವಿ ಕುಣಿತಗಾರರು ಕುಣಿಯುತ್ತ ತಮ್ಮ ಎಡಗೈಯನ್ನು ಮುಂದಕ್ಕೆ ಮಡಚಿಕೊಂಡು, ಪಕ್ಕೆಗೆ ಮಡಚಿಕೊಂಡ ಕೈಯಿಂದ ಬಡಿದುಕೊಳ್ಳುತ್ತಾರೆ. ಬಲಗೈಯಲ್ಲಿ ಬೆನ್ನಿನ ಮೇಲೆ ಬಡಿದುಕೊಳ್ಳುತ್ತಾರೆ. ಪಕ್ಕೆಗೆ ಮತ್ತು ಬೆನ್ನಿಗೆ ಬಡಿದುಕೊಳ್ಳುವುದು ಒಂದೇ ಕಾಲದಲ್ಲಿ ನಡೆಯುತ್ತಿರುತ್ತದೆ. ಈ ರೀತಿ ಹೊಡೆದುಕೊಳ್ಳುವಾಗ ಹೊಡೆತಗಳು ಪಕ್ಕದಲ್ಲಿರುವವರಿಗೂ ಬೀಳುತ್ತವೆ. ಈ ಭಂಗಿಯ ಕುಣಿತವನ್ನು ಮಾಡಬೇಕಾದರೆ ಕೈಚಳಕವು ಇರಬೇಕಾಗುತ್ತದೆ. ಉಳಿದಂತೆ ಹೆಚ್ಚಿನ ಕುಣಿತಗಳು ಕೈಕಾಲುಗಳ ಚಲನೆ ಮತ್ತು ದೇಹದ ಬಳುಕುವಿಕೆಯನ್ನು ಒಳಗೊಂಡಿರುತ್ತದೆ. ಒಂದು ಜನಪದ ನೃತ್ಯವನ್ನು ನೋಡಿದಾಗ ನಮಗೆ ಎದ್ದು ಕಾಣುವುದು ಯಾವುವು? ಸಹಜತೆ, ನೈಜತೆ, ಸ್ವಯಂಪ್ರೇರಿತ ಕ್ರಿಯೆ ಹಾಗೂ ಕೈಕಾಲುಗಳ ಜೀವಂತ ಚಲನೆ. ಪ್ರಜ್ಞಾಪೂರ್ವಕ ಪ್ರಯತ್ನವೂ ಇರುವಂತೆ ಕಂಡರೂ ನೈಜತೆ ಅದನ್ನು ಮೀರಿಸುತ್ತದೆ. (ರಾಮರಾಜು, ೧೯೭೮:೧೨೮) ಈ ಸಹಜತೆ, ನೈಜತೆ, ಸ್ವಯಂಪ್ರೇರಿತ ಕ್ರಿಯೆ ಹಾಗೂ ಕೈಕಾಲುಗಳ ಜೀವಂತ ಚಲನೆ ಮುಗೇರರ ದುಡಿ ಕುಣಿತದಲ್ಲಿಯೂ ಇದೆ. ದುಡಿಕುಣಿತಗಳು ಸಂಖ್ಯೆಯ ದೃಷ್ಟಿಯಿಂದ ಸುಮಾರು ಇವೆ. ಒಂದೊಂದು ದುಡಿ ಪಾರ್ತನಕ್ಕೂ ಒಂದೊಂದು ರೀತಿಯ ಕುಣಿತಗಳಿರುತ್ತವೆ. ಈ ದುಡಿ ಕುಣಿತಗಳನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹದು.

೧. ಸಾರ್ವತ್ರಿಕ ದುಡಿ ಕುಣಿತಗಳು

೨. ಪ್ರಾದೇಶಿಕ ದುಡಿ ಕುಣಿತಗಳು

ಸಾರ್ವತ್ರಿಕ ದುಡಿ ಕುಣಿತಗಳಲ್ಲಿ ಒಂದು ನಿರ್ದಿಷ್ಟ ಕುಣಿತದಲ್ಲಿ ಸಾಹಿತ್ಯ, ಲಯ, ಕುಣಿತದ ಹೆಜ್ಜೆಗಾರಿಕೆ ಇವುಗಳು ಸಮಾನವಾಗಿರುತ್ತವೆ. ಪಾರ್ತನದಲ್ಲಿ ಮಾತ್ರ ಅಲ್ಪಸ್ವಲ್ಪ ಬದಲಾವಣೆಯನ್ನು ಹೊಂದಿರಹುದು. ಆದರೆ ಅದರ ಹೆಜ್ಜೆಗಾರಿಕೆ ಮತ್ತು ಲಯಗಳು ಸಮಾನವಾಗಿ ತುಳುನಾಡಿನಾದ್ಯಂತ ಮುಗೇರರಲ್ಲಿ ಪ್ರಚಾರದಲ್ಲಿದೆ. ಈ ವರ್ಗೀಕರಣದಲ್ಲಿ ಬರುವ ಕುಣಿತಗಳು ಮಾಯಿಲ, ದಿಕ್ಕ, ಮಾನಿನಾಗೆರ್, ತಾಲಿ, ಧರನೆ, ಬೈರಿ, ಎಂಕಮ್ಮ, ಉರಿಕುಡ್ಪೆಲ ಇತ್ಯಾದಿ. ‘ತಾಲಿ’ ಪಾರ್ತನ ಒಂದನ್ನು ಹೊರತಾಗಿ ಉಳಿದ ಎಲ್ಲಾ ಪಾರ್ತನಗಳು ವ್ಯಕ್ತಿ ಕೇಂದ್ರಿತವಾಗಿವೆ.

ಪ್ರಾದೇಶಿಕ ದುಡಿ ಕುಣಿತದಲ್ಲಿ ಎಲ್ಲ ಕಡೆಯೂ ಕಂಡುಬರುವುದಿಲ್ಲ. ಒಂದೊಂದು ಪ್ರದೇಶದ ವಿಶಿಷ್ಟ ವ್ಯಕ್ತಿಗಳು, ಘಟನೆಗಳು, ಜಾತ್ರೆಗಳು ಇವುಗಳನ್ನು ಕುರಿತಾಗಿ ಈ ಕುಣಿತಗಳು ಇರುತ್ತವೆ. ಇವು ಆಯಾ ಪ್ರದೇಶದ ವಿಶಿಷ್ಟತೆಯನ್ನು ತಿಳಿಸುತ್ತವೆ. ಹಾಗೂ ಇವುಗಳಿಗೆ ನಿರ್ದಿಷ್ಟವಾದ ಕುಣಿತಗಳು ಇರುವುದಿಲ್ಲ. ಈ ವರ್ಗೀಕರಣದಲ್ಲಿ ಬರುವ ಕುಣಿತಗಳು ಮಲ್ಲಕ್ಕನ ಪಾರ್ತನ, ಚರಿಪಡ್ಪುತಚೋಮಕ್ಕ, ಸೂಳೆಪಾರ್ತನ, ಲೇಚಿಬೊಮ್ಮಕ್ಕ, ಉಬಾರ್ ದೇವೆರೆ ಜಾತ್ರೆ, ಕೊಕ್ಕಡ ದೇವರ ಜಾತ್ರೆ ಇತ್ಯಾದಿ ಈ ಕುಣಿತಗಳು ಹಾಡುಗಾರನ ಆಯಾ ಪ್ರದೇಶದ ಭೌಗೋಳಿಕ ಜ್ಞಾನ, ಸಾಂಸ್ಕೃತಿಕ ಮಹತ್ವದ ತಿಳುವಳಿಕೆ ಮತ್ತು ಆತನ ಸೃಜನಶೀಲತೆಯನ್ನು ನಿರ್ಧರಿಸುತ್ತದೆ. ಒಂದುನೇ ವಗೀಕರಣದ ಕುಣಿತಗಳಳ್ಲಿಯೂ ಸೃಜನಶೀಲತೆಯನ್ನು ಗುರುತಿಸಬಹುದಾದರೂ ಅದಕ್ಕೆ ಒಂದು ನಿರ್ದಿಷ್ಟ ಪಠ್ಯವಿರುತ್ತದೆ. ಈ ಪಠ್ಯವನ್ನು ಬಿಟ್ಟು ಹಾಡುಗಾರ ಹೊರಹೋಗುವುದಿಲ್ಲ.