ಶಿಷ್ಟ ಸಾಹಿತ್ಯದ ಸುದೀರ್ಘ ಪರಂಪರೆ ಇಲ್ಲದ ಕೇವಲ ಅಡುನುಡಿಯಾಗಿರುವ ಭಾಷೆಯೊಂದರಲ್ಲಿ ಮಕ್ಕಳ ಸಾಹಿತ್ಯವನ್ನು ಗುರುತಿಸುವುದು ಅಷ್ಟು ಸುಲಭದ ಕೆಲಸವಲ್ಲ. ತುಳುವಿನಲ್ಲಿ ಮಕ್ಕಳ ಸಾಹಿತ್ಯ ಸಾಕಷ್ಟು ಪ್ರಕಟವಾಗದಿರಲು ಇರುವ ಮುಖ್ಯ ತೊಡಕು ಎಂದರೆ ಅದೊಂದು ಶೈಕ್ಷಣಿಕ ಭಾಷೆಯಾಗಿಲ್ಲದಿರುವುದು. ಹೊಸದಾಗಿ ಸಾಹಿತ್ಯ ನಿರ್ಮಾಣವಾಗದಿರಲೂ ಅದೇ ಅಡ್ಡಿ. ತರಗತಿಯಲ್ಲಿ ಬೋಧನಾ ಮಾಧ್ಯಮವಾಗಿ ಪಠ್ಯದಲ್ಲಿ ತುಳು ಮಕ್ಕಳ ಸಾಹಿತ್ಯ ಬೇಕಾಗಿಲ್ಲದಿರುವುದು, ಅದು ಗ್ರಂಥಸ್ಥವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯದಿರುವುದಕ್ಕೆ ಬಹುದೊಡ್ಡ ಕಾರಣವಾಗಿದೆ. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಇಂತಹ ಕೊರತೆಯೇನೂ ಇಲ್ಲ ಎನ್ನುವ ತೀರ್ಮಾನವೂ ಅಲ್ಲ. ೧೯೬೦ರಲ್ಲಿ ಮಣಿಪಾಲದಲ್ಲಿ ನಡೆದ ೪೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಮಕ್ಕಳ ಸಾಹಿತ್ಯ ವಿಚಾರಗೋಷ್ಠಿಯಲ್ಲಿ ಪಡುಕೋಣೆ ರಮಾನಂದ ರಾಯರು ಆಡಿದ್ದ ಮಾತೊಂದನ್ನು ಇಲ್ಲಿ ಉದಾಹರಿಸಬಹುದು.

‘ಆಧುನಿಕ ಸಾಹಿತ್ಯದ ಒಂದು ಮುಖ್ಯ ಅಂಗವಾದ ಮಕ್ಕಳ ಸಾಹಿತ್ಯ ಮಾತ್ರ ಕನ್ನಡದಲ್ಲಿ ಇನ್ನೂ ಶಿಶುವಾಗಿಯೇ ಉಳಿದುವುರು ಬೇಸರದ ಸಂಗತಿ. ಮಕ್ಕಳ ತಂದೆ ತಾಯಿಗಳು ವಯಸ್ಕರು ಸಾಮಾನ್ಯವಾಗಿ ಮಕ್ಕಳ ಸಾಹಿತ್ಯವನ್ನು ಓದುವುದಿಲ್ಲ. ಅದು ಅವರಿಗೆ ಬೇಕಾಗಿಲ್ಲವೋ ಏನೋ? ಆದರೆ ಕನ್ನಡದಲ್ಲಿ ಅಲ್ಪಸ್ವಲ್ಪವಾಗಿ ನಿರ್ಮಿತವಾದ ಸಾಹಿತ್ಯವನ್ನಾದರೂ ಅವರು ತಮ್ಮ ಮಕ್ಕಳಿಗೆ ಒದಗಿಸಿ ಕೊಡಬಾರದೇ? ಅದೂ ಇಲ್ಲ. ಇದರಿಂದಾಗಿ ಮಕ್ಕಳ ಸಾಹಿತ್ಯ ನಮ್ಮ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ತಬ್ಬಲಿಯಾಗಿ ನಿಂತಿದೆ. ಅದು ನಮ್ಮ ನಾಡಿದ ದುರ್ದೈವ.’ ತುಳುವಿಗೆ ಅನ್ವಯಿಸಿಕೊಂಡು ನಾಲ್ಕು ದಶಕಗಳ ಬಳಿಕವೂ ಇದೇ ಅಭಿಪ್ರಾಯವನ್ನು ನೀಡಬೇಕಾಗಿರುವುದು ಇನ್ನೂ ದುರ್ದೈವದ ಸಂಗತಿ.

ತುಳು ಮಕ್ಕಳ ಸಾಹಿತ್ಯವನ್ನು ಸಾಕಷ್ಟು ಗುರುತಿಸಲು ಸಾಧ್ಯವಾಗುವುದಿದ್ದರೆ ಅದು ತುಳು ಜನಪದ ಸಾಹಿತ್ಯದಲ್ಲಿ ಮಾತ್ರ ಎನ್ನಬೇಕಾಗಿದೆ. ಶಾಲೆಗೆ ಹೋಗದಿರುವ ಮಕ್ಕಳ, ದನಕರು ಮೇಯಿಸುವ ಹುಡುಗರ, ಓದುಬರದ ಬಾರದ ತಂದೆತಾಯಿಗಳ ಬಾಯಿಯಲ್ಲಿ ಹಾಗೂ ಅಂತಹವುಗಳನ್ನು ಸಂಗ್ರಹಿಸಲು ಪ್ರಯತ್ನಿಸಿರುವ ಜಾನಪದ ವಿದ್ವಾಂಸರ ಒಂದೆರಡು ಕೃತಿಗಳಲ್ಲಿ, ಅಕಸ್ಮಾತ್ ಅಲ್ಲೋ ಇಲ್ಲೋ ನಿರ್ಮಾಣಗೊಂಡ ಕೆಲವು ಮಕ್ಕಳ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದು.

ತುಳುವಿನ ಮಕ್ಕಳು ಎಂದರೆ ಕಾನ್ವೆಂಟ್ ಶಾಲೆಗಳಲ್ಲಿ ಅಥವಾ ಇತರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ತಪ್ಪಿದರೆ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು. ಶಾಲಾ ಆವರಣದಲ್ಲಿ ಮಕ್ಕಳು ತುಳುಭಾಷೆಯಲ್ಲಿ ಮಾತನಾಡುವುದೂ ಅಪರಾಧವೆಂದಿರುವಾಗ ತುಳು ಪುಸ್ತಕಗಳನ್ನು ಓದುವುದರ ಬಗೆಗೆ ಬೇರೇನು ಹೇಳಬೇಕಾಗಿಲ್ಲ. ಹೀಗೆ ತುಳು ಶಿಶು ಸಾಹಿತ್ಯದ ಅನಿವಾರ್ಯತೆಯೇ ಇಲ್ಲವೆಂದಾಗ, ಮಕ್ಕಳ ಸಾಹಿತ್ಯದ ಪುಸ್ತಕಗಳ ಮಾತೇ ಹುಟ್ಟಿಕೊಳ್ಳುವುದಿಲ್ಲ.

ಹೀಗಿದ್ದರೂ ಹಳ್ಳಿಯ ಕೆಲವು ಶಾಲೆಗಳಲ್ಲಿ ವಾರ್ಷಿಕೋತ್ಸವ ಅಥವಾ ತಿಂಗಳ ಹಬ್ಬ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ವೈವಿಧ್ಯಕ್ಕಾಗಿ ತುಳು ಕಾರ್ಯಕ್ರಮಗಳನ್ನು ಇರಿಸಿಕೊಳ್ಳುವುದಿದೆ. ಇತ್ತೀಚೆಗಂತೂ ಆಕಾಶವಾಣಿ/ ದೂರದರ್ಶನ ಮಾಧ್ಯಮಗಳ ಬೆಳೆದು ಬಂದ ಬಳಿಕ ಮಕ್ಕಳ ಕಾರ್ಯಕ್ರಮದಲ್ಲಿ ತುಳು ಕಾರ್ಯಕ್ರಮಗಳಿಗೂ ತುಸು ಸಮಯ ಮೀಸಲಿರುವುದರಿಂದ ಕಾರ್ಯಕರ್ತರು ಅನಿವಾರ್ಯವಾಗಿ ಮಕ್ಕಳ ಸಾಹಿತ್ಯದ ಬೆನ್ನು ಹತ್ತಬೇಕಾಗಿ ಬಂದಿದೆ. ತುಳು ಜನಪದ ಸಾಹಿತ್ಯದಲ್ಲಿ ವಿಪುಲವಾದ ಶಿಶು ಸಾಹಿತ್ಯ ವಿರುವುದರಿಂದಲೋ ಏನೋ ಆಧುನಿಕ ಸೃಜನಶೀಲ ಈ ಸಾಹಿತ್ಯ ಬೆಳೆದು ಬಂದಿಲ್ಲವೆನ್ನಬಹುದು.

ಇದಕ್ಕೆ ಪರ್ಯಾಯವಾಗಿ ತುಳುವಿನ ಮೂಲ ದ್ರವ್ಯವನ್ನು ಬಳಸಿಕೊಂಡು ಕನ್ನಡದಲ್ಲಿ ಮಕ್ಕಳ ಸಾಹಿತ್ಯ ನಿರ್ಮಾಣವಾದ ಎಷ್ಟೋ ಉದಾಹರಣೆಗಳೂ ಇವೆ. ಬಾಲಸಾಹಿತ್ಯ ಮಂಡಲವನ್ನು ಕಟ್ಟಿ ಬೆಳೆಸಿದ ಪಂಜೆ ಮಂಗೇಶರಾಯರಾಗಲಿ, ಮಕ್ಕಳ ಸಾಹಿತ್ಯ ರಚಿಸಿದ ಉಳ್ಳಾಲ ಮಂಗೇಶರಾಯರಾಗಲಿ, ಎಂ.ಎನ್. ಕಾಮತರಾಗಲೀ ಇವರೆಲ್ಲ ತುಳು ಜನಪದ ಸಾಹಿತ್ಯದಿಂದ ಪ್ರಭಾವಿತರಾಗಿಯೇ ಕನ್ನಡದಲ್ಲಿ ಶಿಶು ಸಾಹಿತ್ಯವನ್ನು ಬರೆದರು ಎಂದರೆ ತಪ್ಪಾಗಲಾರದು.

ಹೀಗೆ ಸ್ವತಂತ್ರವಾದ ತುಳು ಸಾಹಿತ್ಯ ಕೃತಿಗಳೇ ಇಲ್ಲವೆಂದಾಗ ದೇಶವಿದೇಶಗಳ ಶಿಶು ಸಾಹಿತ್ಯದ ಭಾಷಾಂತರ ಕೃತಿಗಳು ತುಳುವಿನಲ್ಲಿ ಹುಟ್ಟಿಕೊಳ್ಳುವುದಕ್ಕೂ ಎಡೆಯೆಲ್ಲಿ? ಈ ಎಲ್ಲ ಮಿತಿಗಳ ಹಿನ್ನೆಲೆಯಲ್ಲಿ ತುಳು ಶಿಶು ಸಾಹಿತ್ಯವನ್ನು ಅವಲೋಕಿಸಬೇಕಾಗಿದೆ.

ಸ್ಥೂಲವಾಗಿ ತುಳು ಶಿಶು ಸಾಹಿತ್ಯವನ್ನು ಎರಡು ಮಗ್ಗುಲುಗಳಲ್ಲಿ ನೋಡಬಹುದಾಗಿದೆ. ‘ಮಕ್ಕಳು ತಮಗಾಗಿಯೇ ತಾವು ಹೇಳಿಕೊಂಡು ನಲಿದಾಡಿದ ರಚನೆಗಳು ಒಂದಂಶವಾದರೆ, ಮಕ್ಕಳಿಗಾಗಿ ಹಿರಿಯರು ನಿರ್ಮಾಣ ಮಾಡಿರುವ ಸಾಹಿತ್ಯ ಮತ್ತೊಂದು ವಿಭಾಗ. ತೀರ ಎಳೆಯ ಮಕ್ಕಳೊಡನೆ ಮಾತನಾಡುವಾಗ ಮಾತ್ರವೇ ಬಳಸುವ ಸುಲಭ ಉಚ್ಛಾರದ ಮುದ್ದುನುಡಿಗಳ ಶಬ್ದಕೋಶವೊಂದು ಪ್ರತಿಯೊಂದು ಭಾಷೆಯಲ್ಲೂ ಇರುವುದನ್ನು ಗಮನಿಸುವುದು ಸಾಧ್ಯ. ಎಳೆಗೂಸುಗಳ ಮುಗ್ಧ ಮನಸ್ಸಿಗೆ ಸುಲಭ ಬೋಧೆಯಾಗುವಂತೆ ಹೇಳಬೇಕೆನ್ನುವ ಎಚ್ಚರ ಹಾಗೂ ಮಕ್ಕಳ ಮನಸ್ಸಿಗೂ ಹಿರಿಯರ ಮನಸ್ಸಿಗೂ ಒಂದು ನೂಲೇಣಿಯನ್ನು ಬೆಸೆಯುವ ಪ್ರಯತ್ನ ಎಲ್ಲ ಕಾಲಕ್ಕೂ ನಡೆದು ಬಂದಿದೆ’ (ಅಮೃತ ಸೋಮೇಶ್ವರ, ೧೯೮೮, ೧೩೮).

ಆರಂಭದಲ್ಲಿ ತುಳು ಶಿಶು ಸಾಹಿತ್ಯದ ಇತಿಮಿಯನ್ನು ಸ್ವಲ್ಪ ಮಟ್ಟಿಗೆ ಹೇಳಿಕೊಳ್ಳಬೇಕಾಯಿತು. ಈ ವಿಭಾಗದಲ್ಲಿ ತುಳು ಶಿಶೂ ಸಾಹಿತ್ಯದ ಕೆಲವು ಮೂಲ ಪಾಠಗಳನ್ನು ನೀಡಿ ಅವುಗಳನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದೇನೆ.

ತುಳುವ ಹೆಣ್ಣು ಹೇನು ಕುಟ್ಟುವಾಗಲೂ ಹಾಡು ಹಾಡುತ್ತಾಳೆ. ಆಕೆ ಮಗಳ ತಲೆಯ ಬೈತಲೆ ತಿರುವಿ ಹೇನು ಹುಡುಕುತ್ತ ಹೀಗೆ ಹಾಡುವುದುಂಟು.

‘ಜಪ್ಪು ಪೇನ್! ಜಪ್ಪು ಪೇನ್ ಜಪ್ಪು!
(ಇಳಿ ಹೇನೇ ಇಳಿ! ಇಳಿ ಹೇನೇ ಇಳಿ!)
ಮಿತ್ತ ಇಲ್ಲಲ್ಡ್ ತಿರ್ತ ಇಲ್ಲಡೆ (ಮೇಲು ಮನೆಯಿಂದ ಕೆಳಮನೆಗೆ)
ಜಪ್ಪು ಪೇನ್ ಜಪ್ಪು! (ಇಳಿ ಹೇನೇ ಇಳಿ!)
ಮಿತ್ತ ಇಲ್ಲಲ್ ಮೀನ್ದ ಕಜಿಪು (ಮೇಲು ಮನೆಯಲ್ಲಿ ಮೀನು ಪಲ್ಯ)
ತಿರ್ತ ಇಲ್ಲಲ್ ಕೊರ್ದ ಕಜಿಪು (ಕೆಳಮನೆಯಲ್ಲಿ ಕೋಳಿ ಪಲ್ಯ!)
ಜಪ್ಪು ಪೇನ್ ಜಪ್ಪು!’ (ಇಳಿ ಹೇನೇ ಇಳಿ)

ಹೀಗೆ ಹಾಡು ಹೇಳುತ್ತಾ ಹೇನನ್ನೋ ಹೇನು ಕುಟ್ಟಲು ತಲೆ ಒಡ್ಡಬೇಕೆಂದು ಮಗಳನ್ನು ಮಂಗಟಿಸುತ್ತಾಳೆ. ಹೇನು ಸಿಕ್ಕಿದಾಗ ಒಂದು ಮೃಗವನ್ನೇ ಬೇಟೆಯಾಡಿದಷ್ಟು ಸಂತಸದಿಂದ ‘ಸಿಕ್ಕಿತು! ಆ ಸಿಕ್ಕಿತು’ಎನ್ನುತ್ತ ಅಂಗೈಯಲ್ಲಿ ಹಾಕಿ ಅಲ್ಲಿಂದ ಹೆಬ್ಬೆರಳ ಉಗುರಿನ ಮೇಲೆ ಹಾಕಿ ಒಯ್ಪನೆಯ ಹಿಡಿಯಿಂದ ಅಥವಾ ಇನ್ನೊಂದು ಹೆಬ್ಬೆರಳ ಉಗುರಿನ ಮೂಲಕ ಅದನ್ನು ಕುಟ್ಟಿ ಕೊಂದಾಗಲೇ ಸಂತೃಪ್ತಿ. ಕೆಲವೊಮ್ಮೆ ಬಾಚಣಿಗೆಯಿಂದ ತಲೆ ಬಾಚುತ್ತಿರುವಾಗ ಅಥವಾ ಒಯ್ಪನೆಯಿಂದ ಹೇನು ಎಳೆಯುತ್ತಿರುವಾಗ ಹೇನು ಕೆಳಗೆ ಬಿದ್ದು ತಪ್ಪಿಸಿಕೊಳ್ಳಲು ಮಗಳೇ ಕಾರಣಳಾದರೆ’ ಹಾಂ ಬಿಟ್ಟು ಬಿಟ್ಟೆಯಲ್ಲ! ಅದಿನ್ನು ಕಾಡಿಗೆ ಹೋಗಿ ಕಾಡುಕೋಣವಾಗಿ ನಿನಗೆ ಹಾಯಲು ಬರುತ್ತದೆ ನೋಡುತ್ತಿರು’ ಎಂಬುದಾಗಿ ಮಗಳಿಗೆ ಭಯ ಹುಟ್ಟಿಸುವುದೂ ಉಂಟು. ಬಹಳಷ್ಟು ಪ್ರಯಾಸದಿಂದ ಹುಡುಕಿದ ಹೇನು ಹೀಗೆ ಕೈಕೊಟ್ಟಿತಲ್ಲ ಎಂಬ ನಿರಾಶೆ ಆ ತಾಯಿಗೆ. ಹಾಗಾಗಿ ಮಗಳಿಗೊಂದು ಎಚ್ಚರದ ಮಾತು.

‘ಏಣೂರು ಎಂಕಮಗ್ ದಾನೆ ಸಂಕಡ?
(ಏಣೂರ ಎಂಕಮನಿಗೆ ಏಣು ಸಂಕಟ?)
ಪತ್ತ್ ಕಟ್ಟ ಬೆಲ್ಲ ತಿಂದ್‌ದ್‌ ಮರ್ಕ ಸಂಕಡ|’
(ಹತ್ತು ಕಟ್ಟು ಬೆಲ್ಲ ತಿಂದು ಮರುಕ ಸಂಕಟ)
ಈ ತರದ ಇನ್ನೂ ಕೆಲವು ಹಾಡುಗಳು ಹೀಗಿವೆ:
‘ಅರಿ ಕಡೆಪಲ್ ಪಾತಮ (ಅಕ್ಕಿ ಕಡೆಯುತ್ತಾಳೆ ಪಾತುಮ)
ಬಲಿ ಬರ್ಪೆ ಪೋಕರೆ’ (ಸುತ್ತು ಬರುತ್ತಾನೆ ಪೋಕರೆ)
‘ರೊಟ್ಟಿ ಪತ್ತವಲ್ ಚಟ್ಟು (ರೊಟ್ಟಿ ತಟ್ಟುತ್ತಾಳೆ ಚಟ್ಟು)
ಬಿಂಗ್ರಿ ಪೋಪೆ ಕುಟ್ಟಿ’ (ಬಿಂಗಿರಿ ಹೋಗುತ್ತಾನೆ ಕುಟ್ಟಿ)

ಅದೇ ರೀತಿ ಶ್ಯಾನುಭಾಗರೊಬ್ಬರ ಪ್ರಶ್ನೆಗೆ ನಮ್ಮ ಬಾಳಮ್ಮನ ಉತ್ತರ ನೋಡಿ:

‘ಕಂಜಿಪೆಂಚಿನ ಬಾಳಮ್ಮ? (ಪಲ್ಯವೇನು ಬಾಳಮ್ಮ?)
ಸೋನೆ ತಪ್ಪು ಸೇನೆರೆ (ಸೋನೆ ಸೊಪ್ಪು ಶ್ಯಾನುಭಾಗರೆ!)

ತಿನ್ನುವುದಕ್ಕಾದರೆ ಎಲ್ಲರೂ ಮುಂದೆ. ಕೆಲಸಕ್ಕಾದರೆ ಯಾರೂ ಉಳಿಯರು. ತಿಂದುದನ್ನು ಅಲ್ಲಲ್ಲೇ ಬಿಟ್ಟು ಹರಡಿ ಹೋಗುವ ಮಂದಿಯೇ ಹೆಚ್ಚು. ಹಾಗಾಗಿಯೇ,

‘ಪಚ್ಚಿಲ್ ದೆಪ್ಪೆರೆ ಮಾನಿ ಉಂಡು (ಸೊಳೆ ಕೀಳಲು ಆಳು ಉಂಟು!)
ಪೊದುಂಕುಳು ದೆಪ್ಪೆರೆ ಮಾನಿ ಇಜ್ಜಿ’ (ಕಳೆ ಕೀಳಲು ಮಾತ್ರ ಆಳಿಲ್ಲ!)

ಹಲಸಿನ ಹಣ್ಣು ತುಂಡು ಮಾಡುವ ವೇಳೆ ತಿನ್ನಲು ಸೂಕ್ತವಾದ ಸೊಳೆ ಕೀಳುವುದಕ್ಕೆ ಎಲ್ಲರೂ ಹಾಜರಿರುತ್ತಾರೆ. ತಿಂದ ಬಳಿಕ ಬಿದ್ದ ಕಸ ಹೆಕ್ಕಲು ಹಾರೂ ಉಳಿಯುವುದಿಲ್ಲ. ಬೇಸಾಯಗಾರರು ಹಲಸು ಹಣ್ಣು ತಿಂದು ಉಳಿದು ಅಂಶಗಳನ್ನು ತಾವು ಸಾಕುವ ಹಟ್ಟಿಯ ಹಸು ಎಮ್ಮೆಗಳಿಗೆ ಮೇವಾಗಿ ಹಾಕುತ್ತಾರೆ. ಆದರೆ ಆ ಕೆಲಸ ಮಾಡುವವರು ಬೇಕಲ್ಲ? ಅಂತಹ ಕೆಲಸಗಳಿಗೆ ಅಗತ್ಯ ಇದ್ದವರೇ ಯಾರಾದರೂ ಒದಗಬೇಕಾಗುತ್ತದೆ.

ತಿನ್ನುವವರ ಭಾಗ್ಯದಲ್ಲಿ ಮರದಲ್ಲಿ ಬೆಳೆದರೆ ವರ್ಷವಿಡೀ ಮಾವು ಹಲಸು ಹಣ್ಣು ತಿನ್ನಬಹುದು. ಒಳ್ಳೆಯತನದಲ್ಲಿ ಇದ್ದರೆ ನೆರೆಕರೆಯವರಿಗೂ ಹಂಚಬಹುದು. ಹಾಗಾಗುವುದಕ್ಕೆ ಈ ಹಿಂದೆ ಬೆಳೆಯುತ್ತಿದ್ದುದಕ್ಕಿಂತಲೂ ಹೆಚ್ಚು ಬೆಳೆಯಬೇಕು. ಹಾಗೆಂದು ಮರದಲ್ಲಿ ಕೊನೆಗೊಂದು ಹಣ್ಣು ಉಳಿದರೆ (ಮುಖ್ಯವಾಗಿ ಹಲಸಿನ ಹಣ್ಣು) ಅದನ್ನುಕಿತ್ತು ಕೆಳಗೆ ಹಾಕುವುದು ಅಷ್ಟು ಸುಲಭದ ಕೆಲಸವಲ್ಲ. ಮುಂದಿನ ವರ್ಷ ಆ ಮರದಲ್ಲಿ ಎಷ್ಟು ಬೆಳೆಯಬೇಕೆಂಬ ನಿರೀಕ್ಷೆಯ ಹರಕೆ ಹೊರದೆ ಅದನ್ನು ಕೀಳುವಂತಿಲ್ಲ. ಆದ ಕಾರಣ ‘ಸಾರ ಕಕ್ಕೆಲೆಗ್ ಸಾರ ಪಕ್ಕಿಲೆಗ್ (ಸಾವಿರ ಕಾಗೆಗಳಿಗೆ, ಸಾವಿರ ಅಳಿಲುಗಳಿಗೆ), ಸಾರ ಎಂಕ್‌ಲೆಗ್ (ಸಾವಿರ ನಮಗೆ ಮುಂದಕ್ಕಾಗಲಿ)’ ಎಂದು ಮರ ಹತ್ತಿ ಕೊಯ್ಯುವವನು ಹಣ್ಣಿನ ತೊಟ್ಟು ಕೀಳುವ ಹೊತ್ತು ಮನೆ ಮಂದಿಯೆಲ್ಲ ಕೆಳಗೆ ಕೈಯಲ್ಲಿ ಕಲ್ಲು ಮರಳು ಹಿಡಿದು ಹೇಗೆ ಹೇಳಿಕೊಳ್ಳುತ್ತ ಮರಕ್ಕೆ ಎಸೆಯುತ್ತಾರೆ. ಚಿಕ್ಕ ಮಕ್ಕಳೂ ಈ ಸಂದರ್ಭದಲ್ಲಿ ಕುತೂಹಲದಿಂದ ಹಾಡುತ್ತಾ ಕಲ್ಲು ಎಸೆಯುವ ಕ್ರಿಯೆಯಲ್ಲಿ ತೊಡಗುತ್ತಾರೆ. ಕಳ್ಳರಿಗೆ, ಕಾಗೆ, ಹಕ್ಕಿಗಳಿಗೆ ಪಾಲು ಕೇಳಿ ಉಳಿದುದನ್ನು ತಮಗೆ ಬೇಡಿಕೊಳ್ಳುವ ಒಂದು ಕ್ರಮ ಈ ಹರಕೆಯ ಮಾತಿನಲ್ಲಿ ಪ್ರಕಟವಾಗುತ್ತದೆ. ನಾವು ಬೆಳೆದುದರಲ್ಲಿ ಅಂಗಳಕ್ಕೆ, ಅಂಗಳದಿಂದ ಮನೆಯೊಳಗೆ ಬಂದು ಇಲಿ ಹೆಗ್ಗಣ ತಿಂದು ಉಳಿದುದು ಕೈ ಬಾಯಿಗೆ ಬರುವ ಕಾಲಕ್ಕೆ ಎಷ್ಟೆಷ್ಟು ಜೀವಿ ಜಂತುಗಳ ಪಾಲು ಸಂದಿರುತ್ತದೆ ಎನ್ನುವ ಸತ್ಯ ಸಂಗತಿ ತಿಳಿದೇ ನಾವು ಬದುಕಬೇಕಾಗುತ್ತದೆ. ತುಳುವರು ‘ಸರ್ವೇಜನಾಃ ಸುಖಿನೋ ಭವಂತು’ ತತ್ವವನ್ನು ಒಪ್ಪಿಕೊಂಡವರಾದ್ದರಿಂದಲೇ ‘ಕಳ್ಳರಕ್ಕಾಯಿರ ಪುಳ್ಳಾರಕ್ಕಾಯಿರ (ಕಳ್ಳರಿಗೆ ಸಾವಿರ ಮಕ್ಕಳಿಗೆ ಸಾವಿರ) ನೆಟ್ಟಾವರಕ್ ಪದಿರಂಡಾಯಿರ (ನೆಟ್ಟವರಿಗೆ ಹನ್ನೆರಡು ಸಾವಿರ)’ ಎಂಬುದಾಗಿ ಬೇಡಿಕೊಳ್ಳಬೇಕಾದದ್ದು. ಕಲ್ಲು ಮರಳು ಎಸೆಯುವುದರಲ್ಲಿ ನಿವ್ವಾಳಿಸುವ ಕ್ರಿಯೆಯ ನಂಬಿಕೆಯನ್ನು ಸೂಕ್ಷ್ಮವಾಗಿ ಗಮನಿಸಬಹುದು.

ಒಂದು ಚಕ್ರಕ್ಕೆ (ನಾಲ್ಕಾಣೆಗೆ) ಒಂದು ತೆಂಗಿನಕಾಯಿ ಸಿಕ್ಕಿದ್ದನ್ನು ಕಂಡು ಒಬ್ಬಾತನಿಗೆ ಕುಶಿಯೋ ಕುಶಿ. ಆ ಕುಶಿಯಲ್ಲಿಯೇ ಆ ಕುಶಿಯಲ್ಲಿಯೇ ಆತ ಹೀಗೆ ಹಾಡಿದ್ದು

‘ಪಣವು ಕಿನ್ನಿ ತೇಂಙೈ ಮಲ್ಲೆ (ಚಕ್ರ ಸಣ್ಣ ಕಾಯಿ ದೊಡ್ಡ)
ಪಣವು ಕಿನ್ನಿ ತೇಂಙೈ ಮಲ್ಲೆ’ (ಚಕ್ರ ಸಣ್ಣ ಕಾಯಿ ದೊಡ್ಡ)

ನಾಲ್ಕಾಣೆಗೊಂದು ಹೀಗೆ ತೆಂಗಿನಕಾಯಿ ದುಡ್ಡು ಅಗ್ಗವಾಗಿದ್ದ ಕಾಲದಲ್ಲಿ ಸಿಗುತ್ತಿತ್ತು. ಒಬ್ಬಾತ ತಾನು ತಂದ ಕಾಯಿಯನ್ನು ತನ್ನ ಮಡದಿಗೆ ಒಪ್ಪಿಸಿ ಇದನ್ನು ಒಡೆಯದೆ ಇಡಿಯೇ ಪದಾರ್ಥಕ್ಕೆ ಹಾಕಬೇಕೆಂದನಂತೆ. ಆಕೆಯೂ ಹಾಗೆಯೇ ಮಾಡಿದಳು. ಆಮೇಲೆ ಗೊರಟು ಬೇಡ ಎಂದು ಕಿಟಕಿಯ ಹೊರಗೆ ಎಸೆದಳು. ಯಾರೋ ದಾರಿಹೋಕ ಅದನ್ನು ಎತ್ತಿಕೊಂಡು ಹೋದನಂತೆ.

‘ಅಂತೋನಿನ ಇಲ್ಲಮಿತ್ತ್ (ಅಂತೋನಿಯ ಮನೆಯ ಹಿಂದೆ)
ಸಾತನೆದ ಮರ ಉಂಡು (ಹಾಳೆ ಮರವೊಂದು ಉಂಟು)
ಆಯಿತ ಒಂತೆ ಕತ್ತೆ ಕೆತ್ತ್‌ದ್ (ಅದರ ಸಿಪ್ಪೆ ಸ್ವಲ್ಪ ಕೆತ್ತಿ)
ಬೆರಿಕ್ ಪಾಡೊಡುಯಾ! ಬೆನ್ನಿಗೆ ಹಾಕಬೇಕೆಯ್ಯಾ)
‘ಪೊಟಾಂತ್ ದುಕ್ತಾ ಮಾತ’ (ಹೊಟ್ಟೆನೋವು ಇದ್ದುದೆಲ್ಲ)
ಉಂತುದು ಪೋಪುಂಡಯಾ!’ ನಿಂತು ಹೋಗುವುದಯ್ಯಾ!)

ಆಷಾಢ (ಆಟಿ)ದ ಅಮಾವಾಸ್ಯೆಗೆ ಹಾಳೆ ಮರದ ತೊಗಟೆಯ ರಸ ಕುಡಿಯುವ ರೂಢಿಯಿದೆ. ಆ ಕಾಲಕ್ಕೆ ನೆನಪಾಗುವ ಒಂದು ಹಾಡು ಇದು. ತುಳುನಾಡಿನ ಕ್ರೈಸ್ತರ ಬಾಯಿಯಿಂದ ಬರುವ ಈ ಹಾಡಿನಲ್ಲಿ ಅವರ ಭಾಷೆಯ ಪದಗಳೂ ನುಸುಳಿಕೊಂಡಿರುವುದನ್ನು ಗುರುತಿಸಬಹುದು. ಹೀಗೆ ತುಳು ಕ್ರೈಸ್ತ್ರ, ತುಳು ಮಲಯಾಳ, ತುಳು ಕನ್ನಡ ಮಾತುಗಳ ಕೊಳುಕೊಡೆ ಕೆಲವು ಹಾಡುಗಳಲ್ಲಿ ಆಗಿರುವುದು ಕಂಡುಬರುತ್ತದೆ.

‘ದುಂಬುದ ಮದ್‌ಮಲ್‌ ಎಂಚ ಪೋಪುನೆ ಮಂಗಣ್ಣಾ?’
(ಹಿಂದಿನ ಕಾಲದ ಮದುಮಗಳು ಹೇಗೆ ನಡೆಯುವುದು ಮಂಗಣ್ಣ?)

ಮನೆ ಮನೆಗೆ ಮಂಗನನ್ನು ಕುಣಿಸುತ್ತ ಬರುವ ಕಾಲಕ್ಕೆ ಅಂಗಳದಲ್ಲಿ ಮಂಗನನ್ನು ಕುಣಿಸುವಾತ ಹೀಗೆ ಮಂಗನನ್ನು ಪ್ರಶ್ನಿಸುತ್ತಾನೆ. ಆಗ ಮಂಗ ತಲೆತಗ್ಗಿಸಿ ನಾಚುಗೆ ವ್ಯಕ್ತಪಡಿಸುತ್ತ ನಿಧಾನ ಹೆಜ್ಜೆಯಿಟ್ಟು ನಡೆದು ಪ್ರದರ್ಶಿಸುತ್ತದೆ.

‘ಇತ್ತೆದ ಮದ್‌ಮಲ್‌ಎಂಚ ಪೋಪುನೆ ಮಂಗಣ್ಣಾ?’
(ಈಗಿನ ಮದುಮಗಳು ಹೇಗೆ ನಡೆಯುವುದು ಮಂಗಣ್ಣಾ?)

ಆಗ ಮಂಗ ತಲೆಯೆತ್ತಿ ಎದೆ ಮುಂದೆ ಮಾಡಿ ಮೇಲೆ ನೋಡುತ್ತಾ ವೇಗವಾಗಿ ತೋಳು ಬೀಸಿ ನಡೆದು ತೋರಿಸಿಕೊಡುವುದು. ಹಿಂದಿನ ಕಾಲದ ಹುಡುಗಿಯರ ಸ್ವಭಾವ ಈಗಿನವರಿಗಿಂತ ಭಿನ್ನವೆಂದು ಅಣಕಿಸಿ ಹೇಳುವ ಹಾಡಿನ ತುಣುಕು ಇದು. ಚಿಕ್ಕ ಮಕ್ಕಳನ್ನು ಆಡಿಸುವಾಗ ತಂದೆ ತಾಯಿಗಳು ತನ್ನ ಮಕ್ಕಳ ಮೂಲಕ ಹೇಗೆ ಅಭಿನಯಿಸಲು ಹೇಳುವುದುಂಟು. ಚಿಕ್ಕಮಕ್ಕಳು ಆಗಾಗ ಮಂಗನನ್ನು ಅನುಕರಣೆ ಮಾಡಿಕೊಂಡು ಹೀಗೆ ಹೇಳಿಕೊಂಡು ಅಭಿನಯಿಸುತ್ತಾರೆ.

ಮಕ್ಕಳು ಹೆಚ್ಚಾಗಿ ಹಾಡಿ ಕುಶಿ ಪಟ್ಟುಕೊಳ್ಳುವ ಹಾಡುಗಳಲ್ಲಿ ಮದುಮಕ್ಕಳ ಹಾಡುಗಳು ಜನಪ್ರಿಯವಾಗಿರುತ್ತವೆ. ಇಲ್ಲಿ ಮದುಮಕ್ಕಳು ಮನುಷ್ಯರಾಗಿರದೆ ಮೀನು, ಪಕ್ಷಿ, ಪ್ರಾಣಿಗಳಾಗಿರಬಹುದು. ಮಾದರಿಯಾಗಿ ಒಂದು ಹಾಡನ್ನು ಹೀಗೆ ಉದಾಹರಿಸಬಹುದು.

‘ಬಂಗುಡೆಮದಿಮಾಯೆ ಬೂತಯಿ ಮದಿಮಾಲ್
(ಬಂಗುಡೆ ಮದುಮಗ, ಬೂತಯಿ ಮದುಮಗಳು)
ಗಾಡಿಡೆ ಪೋನಗಾ! (ಗಾಡಿಯಲ್ಲಿ ಹೋಗುತ್ತಿರುವಾಗ)
ತೋಡಿಡಿತ್ತಿ ತೇಡೆ ಜವನ್ಯೆ (ತೋಡಿನಲ್ಲಿದ್ದ ತೇಡೆ ತರುಣ)
ಮಸ್ಕಿರಿ ಮಲ್ತೆ!’ (ತಮಾಷೆ ಮಾಡಿದನಂತೆ)

ಹಾಡು ಹೀಗೆ ಮುಂದುವರಿಯುತ್ತದೆ. ಉಳಿದ ಮೀನುಗಳಾದ ಅಬ್ರೋನಿ, ಮಡೆಂಜಿ, ಮುಗುಡು ಮೊದಲಾದವುಗಳ ಪೊಲೀಸು, ವಕೀಲ, ನ್ಯಾಯಾಧೀಶ ಮೊದಲಾದವರ ಪಾತ್ರ ವಹಿಸುತ್ತವೆ. ಅನುಮಾನಪಟ್ಟವರು ದೂರು ಕೊಡುವುದು, ತಪ್ಪು ಮಾಡಿದವನಿಗೆ ಶಿಕ್ಷೆಯಾಗುವುದು ಇಂತಹ ಸಾಮಾಜಿಕ ಚಿತ್ರಣ ಈ ಹಾಡಿನಲ್ಲಿದೆ.

ಒಂದು ಕುಟುಂಬದ ಒಂದು ಸಮಾಜದ ಪೂರ್ಣ ಸ್ಪಷ್ಟ ಚಿತ್ರಣವನ್ನು ರೂಪಿಸಿಕೊಂಡ ಈ ತರದ ಶಿಶುಪ್ರಾಸಗಳು ಜಗತ್ತಿನ ಬೇರೆ ಬೇರೆ ಜನಾಂಗಗಳ ಭಾಷೆಗಳಲ್ಲೂ ಇರಬಹುದು. ತುಳುವಿನಲ್ಲಿ ಇವು ಬೇಕಷ್ಟು ಸಿಗುತ್ತವೆ. ಒಂದು ಮನೆಯ, ಮನೆ ಮಂದಿಯ ಒಟ್ಟು ವ್ಯವಸ್ಥೆಗೆ ಸಂಬಂಧಿಸಿದ ಒಂದು ಶಿಶುಪ್ರಾಸ ಈ ರೀತಿಯಿದೆ.

‘ತಿತ್ತಿರಿತ್ತಿರಿ ಮಜಲ್‌ಡ್ ಪಂತಿ ಎರ್ಕ್‌ದ್‌ಡ್’
(ತಿತ್ತಿರಿತ್ತಿರಿ ಮಜಲಿನಲ್ಲಿ ಹುಲ್ಲು ಬೆಳೆದಿದೆ)
‘ದಾಯೆ ಎರ್ಮೆ ದಾಯೆ ಎರ್ಮೆ ಮೇಯೆರೆ ಪೋಯಿಜಾ!’
(ಏನು ಎಮ್ಮೆ ಏನು ಎಮ್ಮೆ ಮೇಯಲು ಹೋಗಿಲ್ಲ!)
‘ಈರೆ ದಿಕ್ಕೆ ಬಲ್ಲ್ ಬುಡಂದಿನೆಕ್ಕ್ ಯಾನ್ ದಾನೊಡು?’
(ನಿಮ್ಮ ಮನೆಯಾಳು ಹಗ್ಗ ಕಳಚದ್ದಕ್ಕೆ ನಾನೇನು ಮಾಡಲಿ)
‘ದಾಯೆ ದಿಕ್ಕ ದಾಯೆ ದಿಕ್ಕ ಬಲ್ಲ್ ಬುಡುಜಾ?’
(ಏನು ಹುಡುಗ ಏನು ಹುಡುಗ ಹಗ್ಗ ಬಿಡಲಿಲ್ಲ?)
‘ಈರೆ ದೆತ್ತಿ ತೆಳಿ ಮೈಪಂದಿನೆಕ್ಕ್ ಯಾನ್ ದಾನೊಡುಯೆ?’
(ನಿಮ್ಮ ಯಜಮಾನಿತಿ ತಿಳಿ ಗಂಜಿ ಎರೆಯದ್ದಕ್ಕೆ ನಾನೇನು ಮಾಡಲಿ?)
‘ದಾಯೆ ಪೊಣ್ಣೆ ದಾಯೆ ಪೊಣ್ಣೆ ತೆಳಿ ಮೈತ್‌ಜಾ?’
(ಏನು ಹೆಣ್ಣೇ ಏನು ಹೆಣ್ಣೇ ಗಂಜಿನೀರು ಎರೆಯಲಿಲ್ಲ?)
‘ಎನ್ನ ತರ್ಮುಚ್ಚಿನ್ ಎಲಿ ಕೊನೊಯಿನೆಕ್ ಯಾನ್ ದಾನೊಡು?’
(ನನ್ನ ಎಸರ್ಮುಚ್ಚಿಯನ್ನು ಇಲಿ ಒಯ್ದದ್ದಕ್ಕೆ ನಾನೇನು ಮಾಡಲು?)
‘ದಾಯೆ ಪುಚ್ಚೆ ದಾಯೆ ಪುಚ್ಚೆ ಎಲಿ ಪತ್ತ್‌ಜಾ?’
(ಏನು ಬೆಕ್ಕೇ ಏನು ಬೆಕ್ಕೇ ಇಲಿ ಹಿಡಿಯಲಿಲ್ಲ?)
‘ಈರೆ ಮಗಳ್ ಪೇರ ಬಿಸಲೆ ನಕ್ಕೆರೆ ಬುಡಂದಿನೆಕ್ ಯಾನ್ ದಾನೊಡು?’
(ನಿಮ್ಮ ಮಗಳು ಹಾಲುಪಾತ್ರೆ ನೆಕ್ಕಲು ಬಿಡದ್ದಕ್ಕೆ ನಾನೇನು ಮಾಡಲಿ?)
‘ದಾಯೆ ಪೊಣ್ಣೆ ದಾಯೆ ಪೊಣ್ಣೆ ಪೇರ ಬಿಸಲೆ ನಕ್ಕೆರೆ ಬುಡುಜಾ?’
(ಏನು ಹುಡುಗಿ ಏನು ಹುಡುಗಿ ಹಾಲಿನ ಪಾತ್ರೆ ನೆಕ್ಕಲು ಬಿಡಲಿಲ್ಲ?)
‘ಎನ ಕಬುಲ್ತಿ ಪೆತ್ತನ್ ಪಿಲಿ ಪತ್ತ್ ನೆಕ್ಕ್ ಯಾನೆ ದಾನೊಡು?’
(ನನ್ನ ಕಪಿಲೆ ದನವನ್ನು ಹುಲಿ ಹಿಡಿದುದಕ್ಕೆ ನಾನೇನು ಮಾಡಲಿ?)
‘ದಾಯೆ ಬೆಡಿಕಾರ ದಾಯೆ ಬೆಡಿಕಾರ ಬೆಡಿದಕ್ಕ್‌ಜಾ?’
(ಏನು ಬೇಟೆಗಾರ ಏನು ಬೇಟೆಗಾರ ಕೋವಿ ಗುಂಡು ಎಸೆಯಲಿಲ್ಲ?)
‘ಎನ್ ಬೆಡಿನ್ ಉದಲ್ ಪತ್ತ್‌ನೆಕ್ ಯಾನ್ ದಾನೊಡೊ?’
(ನನ್ನ ಕೋವಿ ಗೆದ್ದಲು ಹಿಡಿದುದಕ್ಕೆ ನಾನೇನು ಮಾಡಲಿ?)
‘ದಾಯೆ ಕೋರ್ಯೆ ದಾಯೆ ಕೋರ್ಯೆ ಉದಲ್ ಒಕ್ಕುಜಾ?’
(ಏನು ಕೋಳಿ ಏನು ಕೋಳಿ ಗೆದ್ದಲು ಹೆಕ್ಕಲಿಲ್ಲ?)
‘ಎನ್ನ ಕೋಕಯಿ ಬಡ್ಡ್ ಕಟ್ಟ್‌ನೆಕ್ಕ್ ಯಾನ್ ದಾನೊಡು?’
(ನನ್ನ ಕೊಕ್ಕು ಬಡ್ಡ್ ಕಟ್ಟಿದ್ದಕ್ಕೆ ನಾನೇನು ಮಾಡಲಿ?)
‘ದಾಯೆ ಆಚಾರಿ ದಾಯೆ ಆಚಾರಿ ಕೋಕಯಿ ಕೆತ್ತ್ ಜಾ?’
(ಏನು ಆಚಾರಿ ಏನು ಆಚಾರಿ ಕೊಕ್ಕು ಕೆತ್ತಿ ಸರಿ ಮಾಡಲಿಲ್ಲ?)
‘ಎನ್ನ ಉಳಿಬಾಜಿ ಕಳುವೆರ್ ಕೊಂಡೊಯಿನೆಕ್ಕ ಯಾನ್ ದಾನೊಡು?’
(ನನ್ನ ಉಳಿಬಾಯಿ ಕಳ್ಳರು ಒಯ್ದದಕ್ಕೆ ನಾನೇನು ಮಾಡಲಿ?)
‘ದಾಯೆ ಭೂತ ದಾಯೆ ಭೂತ ಕಳುವೆರೆನ್ ಪತ್ತ್‌ಜಾ?’
(ಏನು ಭೂತ ಏನು ಭೂತ ಕಳ್ಳರನ್ನು ಹಿಡಿಯಲಿಲ್ಲ?)
‘ಎಂಕ್ ವರ್ಸಗೊಂಜಿ ಪರ್ವ ಕೊರಂದಿನೆಕ್ಕ್ ಯಾನ್ ದಾನೊಡು?’
(ನನಗೆ ವರ್ಷಕ್ಕೊಂದು ಕೋಲ ಕೊಡದ್ದಕ್ಕೆ ನಾನೇನು ಮಾಡಲಿ?)

ಇದೊಂದು ಸುಂದರ ಅಭಿನಯ ಗೀತೆಯೂ ಹೌದು. ಕುಟುಂಬದ ಯಜಮಾನ ತನ್ನ ಕರ್ತವ್ಯವನ್ನು ಮರೆತು ಮನೆ ಮಂದಿಯನ್ನೆಲ್ಲ ಪ್ರಶ್ನಿಸುತ್ತಾ ಹೋಗುತ್ತಾನೆ. ಅವರೆಲ್ಲ ತಮ್ಮ ಜವಾಬ್ದಾರಿಯನ್ನು ಬೇರೆಯವರ ತಲೆಗೆ ಹೊರಿಸುತ್ತಾ ಹೋಗುತ್ತಾರೆ. ಕೊನೆಗೆ ಮನೆಯ ಯಜಮಾನನೇ ಕರ್ತವ್ಯದಲ್ಲಿ ಹಿಂದೆ ಉಳಿದಿರುವ ಅಂಶ ಮನೆದೈವಕ್ಕೆ ಕೋಲ ಕೊಡದೆ ಬಾಕಿ ಮಾಡಿರುವ ಸಂಗತಿಯ ಮೂಲಕ ಪ್ರಕಟವಾಗುತ್ತದೆ. ಒಂದು ವ್ಯವಸ್ಥೆಯ ಪ್ರಧಾನ ವ್ಯಕ್ತಿ ತಪ್ಪಿ ಬಿದ್ದಾಗ ಏನೆಲ್ಲ ಅವಾಂತರ ನಡೆಯುತ್ತದೆ ಎನ್ನುವುದನ್ನು ಈ ಹಾಡು ಪ್ರತಿನಿಧಿಸುತ್ತದೆ. ಮಕ್ಕಳ ಹಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪುನರಾವರ್ತನೆ ಸಂಭಾಷಣೆಗೆ ಹೇಗೆ ಕೊಂಡಿಯಾಗುತ್ತದೆ. ಈ ಮೂಲಕ ಹೇಗೆ ಘಟನೆಯನ್ನು ಸೊಗಸಾಗಿ ಬೆಳೆಸುತ್ತದೆ ಎನ್ನುವುದಕ್ಕೆ ‘ತ್ತಿತ್ತಿರಿತ್ತಿರಿ’ ಹಾಡು ಒಳ್ಳೆಯ ಉದಾಹರಣೆ.

ನಾಲ್ಕೈದು ಮಕ್ಕಳು ಒಟ್ಟು ಸೇರಿ ಮಾತಿನ ಮೂಲಕ ತುಂಟಾಟ ನಡೆಸುವುದನ್ನು ಕಾಣುತ್ತೇವೆ. ಅವರು ಬೇರೆಯವರನ್ನು ಕಂಡು ಗೇಲಿ ಮಾಡುವುದನ್ನೂ ಕಾಣುತ್ತೇವೆ. ಹಲ್ಲು ಹೋಗಿರುವ ಮಕ್ಕಳನ್ನು ಕಂಡ ಕೂಡಲೇ ನೆನಪಾಗುವ ಹಾಡೊಂದಿದೆ.

‘ಒಟ್ಟೆ ಕೂಳಿ ದವ್ವೆ (ಒಡಕು ಹಲ್ಲಿನ ಹುಡುಗಿ)
ಕಾಸ್‌ಗೊಂಜಿ ಕಡಲೆ (ಕಾಸಿಗೊಂದು ಕಡಲೆ)
ಎನ ಒಟ್ಟುಗು ಬರಡ (ನನ್ನ ಸಂಗಡ ಬರದಿರು)
ತಾದಿಡೆ ಬೂರ್ದು ತಯ್ಯಡ’ (ದಾರಿಯಲ್ಲಿ ಬಿದ್ದು ಸಾಯದಿರು)

ಕತೆ ಹೇಳಿ ಮಕ್ಕಳನ್ನು ಅಜ್ಜಿ ಮಂಗಟಿಸಿದರೆ ಕೆಲವೊಮ್ಮೆ ಮಕ್ಕಳೇ ಅಜ್ಜಿಯನ್ನು ಮಂಗಟಿಸುವುದುಂಟು.

‘ಅಜ್ಜೀ ಅಜ್ಜೀ ಕಾಡ್‌ಗ್ ಪೋಯೆ?’
(ಅಜ್ಜೀ ಅಜ್ಜೀ ಕಾಡಿಗೆ ಹೋಗೋಣವೇ?)
‘ಪೋಯಿ ಮಗಾ?’ (ಹೋಗುವ ಮಗಾ!)
‘ಪಿಲಿ ಬತ್ತ್೦ಡ್ ಪೋಡಿಪ್ಪೆರೆ ಬಲ್ಲಿ’
(ಹುಲಿ ಬಂದರೆ ಹೆದರಬಾರದು)
‘ಆವು ಮಗಾ?’ (ಆದೀತು ಮಗಾ!)

ಆಗ ಮೊಮ್ಮಗ ‘ಪ್ಹೂವಾ’ ಎಂದು ಅಜ್ಜಿಯ ಕಣ್ಣಿಗೆ ಜೋರಾಗಿ ಊದಿ ಬಿಡುತ್ತಾನೆ. ಒಮ್ಮೆಲೆ ಊದಿದಾಗ ಕಣ್ಣು ರೆಪ್ಪೆಗಳು ಮುಚ್ಚಿಕೊಳ್ಳದೆ ಉಳಿಯುತ್ತವೆಯೇ? ಆದರೆ ಹೀಗೆ ಕಣ್ಣು ಮುಚ್ಚಿದರೆ ಹೆದರಿಕೊಂಡಂತೆ ಮಾತ್ರವಲ್ಲ; ಸೋತಂತೆಯೇ. ಮಕ್ಕಳಿಗೆ ಇದೂ ಒಂದು ಆಟವಾಗಬಲ್ಲದು. ಅಜ್ಜಿ ಮಾತ್ರ ‘ಅಬ್ಬಾ! ಹುಡುಗನ ತುಂಟಾಟವೇ’ ಎಂದು ಹುಡುಗನನ್ನು ತರಾಟೆಗೆ ತೆಗೆದುಕೊಳ್ಳಬಹುದು. ಚೆನ್ನಾಗಿ ಮಕ್ಕಳ ಹಾಡುಗಳಲ್ಲಿ, ಜೋಗುಳ ಹಾಡುಗಳಲ್ಲಿ ಅಥವಾ ಶಿಶುಪ್ರಾಸಗಳಲ್ಲಿ ಒಂದೇ ರೀತಿಯ ಶಬ್ದಗಳು ಇರುತ್ತವೆ. ಅವು ಪ್ರತಿ ಬಾರಿಯೂ ಪ್ರಾಸವಾಗಿ ಮುಂದುವರಿಯುತ್ತವೆ. ಈ ಹಾಡುಗಳಲ್ಲಿ ಪ್ರಾಸ ಅಗತ್ಯವಾಗಿ ಇರಬೇಕಾದದ್ದು. ಇಂತಹ ಹಾಡುಗಳಲ್ಲಿ ಪ್ರಾಸಕ್ಕೆ ಸರಿಯಾಗಿ ಅರ್ಥ ಹುಡುಕಬೇಕೇ ಹೊರತು ಅರ್ಥಕ್ಕೆ ಸರಿಯಾಗಿ ಶಬ್ದಗಳನ್ನು ಹುಡುಕುವುದಲ್ಲ. ಪ್ರಾಸಗಳಿಗಾಗಿಯೇ ಅವು ಹೆಣೆದು ಬಂದವುಗಳು. ಆದರೆ ಅನೇಕ ಸಂದರ್ಭಗಳಲ್ಲಿ ಅವು ಸಹಜವಾಗಿ ಬಂದಿರುವುದನ್ನು ಗಮನಿಸಬೇಕು. ಉದಾ:

‘ಬೆರೆಣೆರವುಲು ಕಾರ್ಯ (ಬ್ರಾಹ್ಮಣರಲ್ಲಿ ಶ್ರಾದ್ಧ)
‘ಜೋಕುಲು ಮಾತ ಪಾರ್ಯ (ಮಕ್ಕಳೆಲ್ಲ ಓಡಿದರು)
ಪಾರ್ದ್‌ಜಾರ್ದ್‌ಬೂರ್ಯ (ಓಡಿ ಜಾರಿ ಬಿದ್ದರು)
ಮುಂಡೆದ ಬಲ್ಲೆಗ್ ನೂರ್ಯ (ಮುಂಡೇವು ಪೋದರಿಗೆ ನುಗ್ಗಿದರು)
ಕುಂಡದ ಕಿನ್ನಿ ಪತ್ಯ’ (ನೀರು ಹಕ್ಕಿ ಹಿಡಿದರು)

ಇದೇ ರೀತಿ

‘ಞಕ್ಕ್ ಬಾಲೆ ಞಕ್ಕ್ (ಞಕ್ಕ್ ಮಗು ಞಕ್ಕ್)
ಸೇಮಯಿದಡ್ಯೆ ಮುಕ್ಕು (ಸೇವಿಗೆ ಕಡುಬು ತಿನ್ನು)
ಬೈತರಿತ ನುಪ್ಪು (ಬೈಯಕ್ಕಿಯ ಅನ್ನ)
ಬಂಗುಡೆದ ಕಜಿಪು’ (ಬಂಗುಡೆಯ ಪಲ್ಯ)

ಟಿಟೀಟಿ ಹಕ್ಕಿ ಹಳ್ಳದಲ್ಲಿ ತತ್ತಿಯಿಟ್ಟಿತು. ಅದನ್ನು ದನ ಕಾಯುವ ಮಕ್ಕಳು ಹಾಳು ಮಾಡಿದರು. ಅದಕ್ಕಾಗಿ ಅವರಿಗೆ ಈ ಶಾಪ:

‘ಟಿಟೀಟಿ ಪಕ್ಕಿ ಪಳ್ಳಡೊಂಜಿ ತೆತ್ತಿ ದೀಂಡ್
(ಟಿಟೀಟಿ ಹಕ್ಕಿ ಹಳ್ಳದಲ್ಲಿ ಒಂದು ತತ್ತಿಯಿಟ್ಟಿತು)
ಜೋಕುಳೆ ಸಾವುಗಾಂಡ್ (ಮಕ್ಕಳ ಬೊಜ್ಜಕ್ಕಾಯಿತು)
ಕೈಕಂಜಿ ಮೇಪಿ ಜೋಕಳೆ ಸಾವುಗಾಂಡ್’
(ದನ ಕಾಯುವ ಮಕ್ಕಳ ಬೊಜ್ಜಕ್ಕಾಯಿತು)

‘ಕುಲು ಕುಲು ಕುಲು ಕುಲು…’ ಎನ್ನುತ್ತಾ ಹಾರುವ ಹಕ್ಕಿಯ ಕೂಗು ಮಕ್ಕಳಿಗೆ.

‘ಜೋಕುಲು ಪಾಪ! ಜೋಕುಲು ಪಾಪ!
(ಮಕ್ಕಳು ಪಾಪ, ಮಕ್ಕಳು ಪಾಪ)
ಎಂಕುಲು ಪೋಪ! ಎಂಕುಳು ಪೋಪ!’

(ನಾವು ಹೋಗುತ್ತೇವೆ, ನಾವು ಹೋಗುತ್ತೇವೆ) ಎಂದು ಕೇಳುವುದಂತೆ.
‘ಜೋಕುಳಪ್ಪ ಜೋಕುಳು (ಮಕ್ಕಳಪ್ಪ ಮಕ್ಕಳು)
ನಂಡ್ ಮೂಂಕುದ ಜೋಕುಳು (ನಂಡ್ ಮೂಗಿನ ಮಕ್ಕಳು)
ಸುರಳೆ ಅರಿಪಿ ಜೋಕುಳು (ಸಿಂಬಳ ಸುರಿಸುವ ಮಕ್ಕಳು)

ಹೀಗೆ ಮಕ್ಕಳನ್ನು ಗೇಲಿ ಮಾಡುವ ಪದ್ಯಗಳಿವೆ.

ಚಿಕ್ಕಮಕ್ಕಳಿಗೆ ಮಾತು ಕಲಿಸುವಾಗ, ಭಾಷೆ ಕಲಿಸುವಾಗ ಉಪಯೋಗವಾಗುವ ನಾಲಗೆ ಹೊರಳಿಸಲು ಸಹಾಯ ಮಾಡುವ ಹಾಡುಗಳಿವೆ.

ಬಲಾಟ್ ಬಲ್ಲ (ಸಿಕ್ಕದಲ್ಲಿ ಸೇರು)
ಬಲ್ಲಡ್ ಬಜಿಲ್ (ಸೇರಲ್ಲಿ ಅವಲು)
ಬಜಿಲ್‌ಡ್ ಬೆಲ್ (ಅವಲಕ್ಕಿಯಲ್ಲಿ ಬೆಲ್ಲ)
ಬೆಲ್ಲೊಡು ಪಿಜಿನ್ (ಬೆಲ್ಲದಲ್ಲಿ ಇರುವೆ)

ಹಾಗೆಯೇ ‘ಕಕ್ಕೆ ಕಪ್ಪು ಕಪುಳು ಕೆಂಪು (ಕಾಗೆ ಕಪ್ಪು ಕಪುಳು ಕೆಂಪು) ಈ ಸಾಲನ್ನು ವೇಗವಾಗಿ ಹೇಳಬೇಕು. ಹೀಗೆ ಅನೇಕ ಬಾರಿ ಹೇಳುತ್ತಾ ಸಾಗಿದಂತೆ ಸಿಗುವ ವಾಕ್ಯವೇ ಬೇರೆ, ಆರಂಭದ ವಾಕ್ಯವೇ ಬೇರೆ. ಹೀಗೆ ಬೇರಾಗಿ ಕೇಳುವುದರಲ್ಲೇ ಸ್ವಾರಸ್ಯವಿರುವುದು.

ಶರೀರದ ಅಂಗಾಂಗಗಳನ್ನು ಆಧಾರವಾಗಿಟ್ಟುಕೊಂಡು ಸಂಭಾಷಣೆ ಹೆಣೆಯುವ ಚಮತ್ಕಾರವನ್ನು ಮಕ್ಕಳ ಹಾಡುಗಳಲ್ಲಿ ಗರುತಿಸಬಹುದು.

ಒಂದು ಕುಟುಬಂದ ಐವರು ಅಣ್ಣ ತಮ್ಮಂದಿರನ್ನು ಕಿರುಬೆರಳಿನಿಂದ ಆರಂಭಿಸಿ ಹೆಬ್ಬೆರಳಿನವರಿಗೆ ಕೈಯ ಐದು ಬೆರಳುಗಳಲ್ಲಿ ಆರೋಪಿಸಿ ಅವರು ನಡೆಸುವ ಸಂಭಾಷಣೆಯನ್ನು ಹೆಣೆಯಲಾಗಿರುವ ಒಂದು ಮಾದರಿ ಹೀಗಿದೆ:

‘ಬಡಾಪುಂಡಣ್ಣಾ’ ಪಂಡೆ ಒರಿ (ಹಸಿವಾಗುತ್ತದೆ ಎಂದನು ಒಬ್ಬ)
ಕಿರುಬೆರಳನ್ನು ತೋರಿಸಿ,
‘ಅರಿಜ್ಜತ್ತ?’ ಪಂಡೆ ಬೊಕ್ಕೊರಿ
(ಅಕ್ಕಿಯಿಲ್ಲವಲ್ಲ? ಎಂದನು ಮತ್ತೊಬ್ಬ) ಉಂಗುರ ಬೆರಳನ್ನು ತೋರಿಸಿ.
‘ಅರಿ ಇಜ್ಜಿಡ ಸಾಲ ದೆಪ್ಪೆರೆ ಅಪುಜ?’ ಪಂಡೆ ಆಯೆ
(ಅಕ್ಕಿ ಇಲ್ಲದ್ದಿದ್ದರೆ ಸಾಲ ತಂದರಾಗದೆ? ಎಂದನು ಆತ) ನಡುಬೆರಳನ್ನು ತೋರಿಸಿ.
‘ಸಾಲ ದೆತ್ತ್೦ಡ ಬೂಟುನೇರ್?’ ಕೇಂಡೆ ಇಂಬ್ಯೆ (ಸಾಲ ತಂದರೆ ತೀರಿಸುವುದು ಯಾರು?’ ಕೇಳಿದ ಈತ) ತೋರುಬೆರಳನ್ನು ತೋರಿಸಿ.
‘ತಾಂಟೆ ಆವಡ್ ಮೋಂಟೆ ಆವಡ್’
(ತಾಂಟನಾಗಲಿ, ಮೋಂಟನಾಗಲಿ)
ಕೆಪ್ಪೆ ಆವಡ್ ಕುರುಡೆ ಆವಡ್ (ಕೆಪ್ಪನಾಗಲಿ, ಕುರುಡನಾಗಲಿ)
೧ಯಾನೊರಿ ಇಜ್ಜೆನಾ?’ (ನಾನೊಬ್ಬನಿಲ್ಲವೇ?)- ಎಂದನೊಬ್ಬ ಹೆಬ್ಬೆರಳನ್ನು ತೋರಿಸಿ.

ಎಲ್ಲರಿಗಿಂತಲೂ ಹಿರಿಯ ಅಣ್ಣನ ಉತ್ತರವಿದು. ಆ ಅಣ್ಣನೇ ಹೆಬ್ಬೆರಳು. ಉಳಿದ ತಮ್ಮಂದಿರು ಇತರ ಬೆರಳುಗಳು.

ಈ ಸಂಭಾಷಣೆಯಲ್ಲಿ ಆ ಕುಟುಂಬದ ಬಡತನದ ಚಿತ್ರಣವೂ ನಮ್ಮ ಕಣ್ಣ ಮುಂದೆ ಇದಿರಾಗುತ್ತದೆ. ವಿಡಂಬನೆ ಶಿಶು ಪ್ರಾಸಗಳಲ್ಲಿನ ಒಂದು ಬಗೆ, ಆದರೆ ಆ ವಿಡಂಬನೆಯಲ್ಲಿ ವ್ಯಕ್ತವಾಗುವುದು ಒಂದು ಕರುಣಕತೆ.

ಇನ್ನೊಂದು ಶಿಶು ಪ್ರಾಸದ ಸಂದರ್ಭವನ್ನು ನೋಡೋಣ:

‘ಮುಕ್ಕೊಂಡೆ ಅರಿ ಬೀತ್ ದೀತೆ
(ಮೂರು ಕುಡ್ತೆ ಅಕ್ಕಿ ಬೇಯಿಸಿದ್ದೇನೆ)
ಆಲಿ ಉಂಡೆ (ಆಲಿ ಉಂಡನು)
ಬೀಲುಂಡೊಲು (ಬೀಪಾತು ಉಂಡಳು)
ಸೇಕೆ ಉಂಡೆ (ಸೇಕೆ ಉಂಡನು)
ಸೆಯ್ಯಾದ್ ಉಂಡೆ (ಸೆಯ್ಯಾದ್ ಉಂಡನು)
ಯಾನುಂಡೆ (ನಾನು ಉಂಡೆನು)
ನನಲಾ ಒಂತೆ ಉಂಡು (ಇನ್ನೂ ಸ್ವಲ್ಪ ಉಂಟು)