ತುಳುವಿನಲ್ಲಿ ಮಕ್ಕಳ ಹಾಡುಗಳನ್ನು ಹೇಗೆ ಬರೆಯಬೇಕೆಂಬುದನ್ನು ತೋರಿಸಿ ಕೊಟ್ಟು ಆ ದಾರಿಯಲ್ಲಿ ಸಾಗುವ ಪ್ರಯತ್ನ ಕನರಾಡಿಯವರದು (ಉಪಾಧ್ಯ ಮುರಳೀಧರ: ೧೯೮೯).

ಪಾಲ್ತಾಡಿ ರಾಮಕೃಷ್ಣ ಆಚಾರ್ (೧೯೮೭) ಅವರ ‘ಪಚ್ಚೆ ಕುರಾಲ್’ ಕವನ ಸಂಕಲನದಲ್ಲಿ ‘ತೆಲಿಪು ಬಾಲೆ’, ‘ನೇಲೆದ ಬಾಲೆ’ ಎನ್ನುವ ಎರಡು ಮಕ್ಕಳಿಗಾಗಿ ಬರೆದಿರುವ ಕವಿತೆಗಳಿವೆ.

ವಾಮನ ನಂದಾವರ (೧೯೮೭) ಅವರ ‘ಬೀರ’ ತುಳು ಕವನ ಸಂಕಲನದಲ್ಲಿ ಜನ ಮರ್ಲಾ ಜಾತ್ರೆ ಮರ್ಲಾ?, ಮದಿಮೆ, ಕಂರ್ಬು ಕಡ್ಲೆ, ಬೆಂದಂಡ ಉಣ್ಬ, ಏರ್ ತೆರಿಪಾದ್ ಕೊರಿನಕುಲು?, ಉಪ್ಪು ನಿಕ್ಕ್ ಆಸೆ ಮಲ್ಲ, ಅಜ್ಜಿ ಬೊಕ್ಕ ಪೆಲತ ಮರ ಇಂತಹ ಮಕ್ಕಳಿಗಾಗಿ ಬರೆದಿರುವ ಕವಿತೆಗಳಿವೆ.

ಪುತ್ತೂರು ವ್ಯಾಸಕೃಷ್ಣ ತಂತ್ರಿ (೧೯೮೭)ಯವರ ಒಂದು ರಚನೆ:

‘ಗೆಜ್ಜೆ ಬೋಡು ಅಪ್ಪೆ
ಗೆತ್ತ್ ಕೊರ್ಲ ಅಪ್ಪೆ
ಕಾರ್ ಗೊಂಜಿ ಗೆಜ್ಜೆ
ಬೊಳ್ಳಿದ ಗೆಜ್ಜೆ’ (ತುಳು ರಾಜ್ಯ ಮೇ ೧೯೮೭)

ಅವರದೇ ಆ (ಪು. ೧೯೯೦, ೮೨) ‘ದೀಪೊಲಿದ ಪರ್ಬ’ದ ಒಂದು ಭಾಗ ಹೀಗಿದೆ:

‘ಪಾರುಂಡು ಗಾಳಿಪಟ
ತೋಜುಂಡು ಗೂಡುದೀಪ
ರಾವೊನ್ತುಂಡು ಸುರು ಸುರು
ಬಾಣ ದುರುಸು’

(ಅರ್ಲು ಕಬಿತೆಲು ಪೊರ್ಲು ಕಬಿತೆಲು ಸಂ.- ಕೃಷ್ಣಾನಂದ ಹೆಗಡೆ)

ಕೆ. ಲೀಲಾವತಿ (೧೯೯೪) ಅವರ ‘ತಿಬಿಲೆ’ ಕವನ ಸಂಗ್ರಹದಲ್ಲಿ ‘ಲಕ್ಕ್ ಬಾಲೆ ಲಕ್ಕ್’ ಎನ್ನುವ ಮಕ್ಕಳ ಕವಿತೆ ಇದೆ. ಸುನೀತಾ ಶೆಟ್ಟಿ (೧೯೯೪) ಅವರ ‘ನಾಗಸಂಪಿಗೆ’ಯಲ್ಲಿ ‘ಕುವಾ ಕುವಾ ಕಂಡೆಚ್ಚ’ ಮಕ್ಕಳಿಗಾಗಿ ಹಾಡಿದ್ದಾರೆ. ತಿಮ್ಮಪ್ಪ ಪೂಜಾರಿ (೧೯೯೪) ಅವರ ‘ಕೂಕುಳು’ ಕವನ ಸಂಗ್ರಹದಲ್ಲಿ ‘ತಾಟಿ ತೆಂಬರೆ’, ‘ರಾಪಿನ ಚಿಟ್ಟೆ’ ಎನ್ನುವ ಎರಡು ಮಕ್ಕಳ ಕವಿತೆಗಳಿವೆ.

ಕೆದಂಬಾಡಿ ಜತ್ತಪ್ಪ ರೈ (೧೯೯೪) ಅವರ ‘ಅಸೆನಿಯಾಗ ಕಾಂತಗ ಜೋಗಿ’ ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಬೊಮ್ಮನ ಹಳ್ಳಿಯ ಕಿಂದರಿಜೋಗಿ, ಖಂಡಕಾವ್ಯದ ತುಳು ರೂಪಾಂತರ. ಆಂಗ್ಲ ಕವಿ ರಾಬರ್ಟ್‌ಬ್ರೌನಿಂಗ್ ಬರೆದಿದ್ದ ದಿ ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಎನ್ನುವ ಹತ್ತು ಸಾಳುಗಳ ಕವನವೇ ಇವರಿಗೆ ಪ್ರೇರಣೆ. ಒಂದು ಉದಾಹರಣೆ ಹೀಗಿದೆ:

‘ಅಪ್ಪೆಲಿ ಅಮ್ಮೆಲಿ ಮಾಮೆಲಿ ಮಾಮೈಲಿ
ಅಕ್ಕೆಲಿ, ಬಾವೆಲಿ, ತಗೆ ತಂಗಡಿಯೆಲಿ, ಪುಲ್ಯೆಲಿ
ಪುಡಿಕ್ಕೆಲಿ ಮಾತಾ ಬತ್ತೊ ಪಾರೊಂದು ಬರೊಂದು
ಜೋಗಿ ನುಡ್ಸಾಯೆ ಕಾಂತಗೋನು
ಬತ್ತ ಅವೆ ತರ ತರ ಬಣ್ಣದ ಎಲಿಕುಲು’ (ಅಸೆನಿಯಾ ಪುಟ-೨೦)

ಪ್ರಮೋದ ಸುವರ್ಣ (೧೯೯೬) ಅವರ ‘ಪದರಂಗಿತ’ ಕವನ ಸಂಕಲನದಲ್ಲಿ ೨೯ ಕವಿತೆಗಳಿದ್ದು ಅಪ್ಪೆ (೧೩), ಮಯಿರ್ ಕೋಗಿಲೆ ಬಾಲೆ (೨೭), ಪಕ್ಕಿ ರಾಪುಂಡು (೨೮), ಗಾಳಿಪಟ (೩೭), ಬಾಲೆ ದಿನೊಕುಲು (೪೦), ಅರಲೊಡು ಪೂ ಗೊಂಚಿಲಾದ್ (೪೧), ಬಾಲೆ (೮೮), ಗೊಬ್ಬು, ಬಾಲೆ (೮೯), ತಿಂಗೊಳು ಬಾಲೆ (೬೧), ಮಗಲೆಗ್ (೬೨), ಪಿನಿ ನಿದೆರ್ ಬಾಲೆ (೬೩) ಮೊದಲಾದ ಮಕ್ಕಳ ಕವಿತೆಗಳಿವೆ. ಅವರ (೧೯೯೯) ತಾಟಿ ತೆಂಬರೆ ತುಳು ಶಿಶು ಕಾವ್ಯ. ಈ ಶತಮಾನದ ಕೊನೆಗೆ ಬಂದಿರುವ ಒಂದು ವಿಶಿಷ್ಟ ಮಕ್ಕಳ ಸಚಿತ್ರ ಕವನ ಸಂಕಲನವಾಗಿದೆ.

ತುಳುವಿನಲ್ಲಿ ನಾಟಕ ರಚನೆಯ ಬೆಳೆ ಹುಲುಸಾಗಿದ್ದರೂ ಮಕ್ಕಳ ನಾಟಕಗಳು ಬಂದಿರುವುದು ಬೆರಳೆಣಿಕೆಯಲ್ಲಿ ಮಾತ್ರ. ಇತ್ತೀಚೆಗೆ ಮಂಗಳೂರು ಆಕಾಶವಾಣಿ ಮಕ್ಕಳ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳ ನಾಟಕಗಳನ್ನೂ ರಚಿಸುವ ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ. ಆದರೆ ಅದು ಬಲವಂತದ ಮಾಘಸ್ನಾನ ಅಷ್ಟೆ.

ವಿಶ್ವಕವಿ ರವೀಂದ್ರನಾಥ ಟಾಗೋರರ ‘ಕಾಬೂಲಿವಾಲ’ ನಾಟಕವನ್ನು ಕೆದಂಬಾಡಿ ಜತ್ತಪ್ಪ ರೈ (೧೯೮೬) ತುಳುವಿಗೆ ಅನುವಾದಿಸಿ ‘ತುಳು ಕಾಬೂಲಿವಾಲ’ ಪ್ರಕಟಿಸಿದ್ದಾರೆ. ಅಮೃತ ಸೋಮೇಶ್ವರ (೧೯೮೯)ರ ತುಳುನಾಡ ಕಲ್ಕುಡೆ, ಕ್ಯಾಥರಿನ್ ರೊಡ್ರಿಗಸ್ (೧೯೯೪) ಅವರ ‘ಸಿರಿತುಪ್ಪೆ’ ಕೃತಿಯಲ್ಲಿರುವ ನಾಗಸಿರಿ ಕನ್ನಿಕೆ, ಕಾಂತು ಕಬೇದಿ, ಸತ್ಯೊದ ಬಾಲೆಲು, ಕಾಂತಾಬಾರೆ ಬೂದಬಾರೆ ಇವು ಮಕ್ಕಳ ಮಟ್ಟಕ್ಕೂ ನಿಲ್ಲುವ ಮತ್ತು ಸಲ್ಲುವ ನಾಟಕಗಳು.

ಅಮೃತ ಸೋಮೇಶ್ವರರು ತುಳುವಿನಲ್ಲಿ ಮಕ್ಕಳ ಸಾಹಿತ್ಯ ಎನ್ನುವ ಲೇಖನವನ್ನು ತನ್ನ ‘ತುಳುವ ಬದುಕು’ (೧೯೮೪) ಕೃತಿಯಲ್ಲಿ ಪ್ರಕಟಿಸಿದ್ದಾರೆ. ಶಿಶು ಸಾಹಿತ್ಯದ ಮುಖ್ಯ ಲಕ್ಷಣಗಳನ್ನು ತಿಳಿಸಿ ತುಳು ಜನಪದ ಸಾಹಿತ್ಯದಲ್ಲಿರುವ ಶಿಶು ಪ್ರಾಸಗಳನ್ನೂ ಮಕ್ಕಳ ಹಾಡುಗಳನ್ನೂ ಸಂಗ್ರಹಿಸಿ ಅವುಗಳ ಅನುವಾದ ಅರ್ಥ ವಿಶ್ಲೇಷಣೆ ನೀಡಿದ್ದಾರೆ. ‘ಟ್ರೂವೆಲೆ ಬಾಲೆ ಬಾಲೆ ಪೊಲಿಯೆ!’ (ಎಳೆಯ ಧಾನ್ಯಲಕ್ಷ್ಮಿ), ‘ಪಕ್ಕಿಗಳು ಪಕ್ಕಿಗುಳು ರಾಮಸ್ವಾಮಿ ಪಕ್ಕಿಗುಳೂ (ಹಕ್ಕಿಗಳು ಹಕ್ಕಿಗಳು ರಾಮಸ್ವಾಮಿ ಹಕ್ಕಿಗಳೂ), ‘ಪೆರ್ಗುಡೆಕ್ಕೆ ಪೆರ್ಗುಡೆಕ್ಕ ಪೆದ್ದ್ ಜೆಯಿದನಾ?’ (ಹೆಗ್ಗಣಕ್ಕ ಹೆಗ್ಗಣಕ್ಕ ಹೆತ್ತು ಮಲಗಿರುವೆಯಾ?) ‘ಓಂತಿಯಣ್ಣೆರೆ ಓಂತಿಯಣ್ಣೆರೆ ಉಣಿಯರೆ ಬರೋಡುಗೆ’ (ಓತಿಯಣ್ಣನವರೇ ಓತಿಯಣ್ಣನವರೇ ಊಟಕ್ಕೆ ಬರಬೇಕಂತೆ). ‘ಓ ಮಗ ನಂದಪ್ಪ ನಿನ್ನ ಅಮ್ಮೆರ್’ (ಓ ಮಗ ನಂದಪ್ಪ ನಿನ್ನ ಅಪ್ಪ), ‘ಈ ಓಲು ಪುಟ್ಟಿನೆಂಬೆ ಚನಿಲಣ್ಣ’ (ನೀನೆಲ್ಲಿ ಹುಟ್ಟಿದೆ ಅಳಿಲಣ್ಣ?), ‘ತಿತ್ತಿರಿತ್ತಿರಿ ಮಜಲ್’ (ತಿತ್ತಿರಿತ್ತಿರಿ ಮಜಲು) ಮೊದಲಾದ ಹಾಡುಗಳನ್ನು ಉದಾಹರಿಸಿರುವರು. ಇದೇ ರೀತಿ ಕೆಲವು ‘ಮಂಡೆ ಕತೆ’ (ಒಗಟು)ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ.

ಬಿ.ಎ. ವಿವೇಕ ರೈ ಅವರು ತನ್ನ ತುಳು ಜನಪದ ಸಾಹಿತ್ಯ (೧೯೮೫) ಕೃತಿಯಲ್ಲಿ ತಿತ್ತಿರಿತ್ತಿರಿ ಮಜಲ್ ಓಡೆ ಪೋಪ ಕುಂಡಚ್ಚ? (ಎಲ್ಲಿಗೆ ಹೋಗುತ್ತಿ ಅಳಿಲೇ) ಎನ್ನುವ ಎರಡು ಶಿಶುಪ್ರಾಸಗಳನ್ನೂ ಅವುಗಳ ಕನ್ನಡ ಅನುವಾದಗಳೊಂದಿಗೆ ನೀಡಿ ಅವುಗಳ ವರ್ಗಗಳನ್ನು ತಿಳಿಸಿ ವಿಶ್ಲೇಷಿಸಿರುತ್ತಾರೆ. ಇದೇ ಕೃತಿಯಲ್ಲಿ ದೊರೆಯುವ ‘ಮೀನಿನ ದಿಬ್ಬಣ’ ಮಕ್ಕಳ ಸಾಹಿತ್ಯಕ್ಕೆ ಸೇರಬಹುದಾದ ಹಾಡಾಗಿದೆ.

ಪದ್ಮನಾಭ ಕೇಕುಣ್ಣಾಯ ಅವರು ‘ಜೋಕುಲೆ ಪಾತೆರೊದ ಪೊರ್ಲು’ (ಮಕ್ಕಳ ಮಾತಿನ ಸೊಗಸು) ಎನ್ನುವ ಲೇಖನಮಾಲೆಯನ್ನು ‘ತುಳುನಾಡ ಪತ್ರಿಕೆ’ (ಡಿಸೆಂಬರ್ ಮತ್ತು ಜನವರಿ ೧೯೮೫)ಗಳಲ್ಲಿ ಒದಗಿಸಿಕೊಟ್ಟಿದ್ದಾರೆ. ಮಗುವನ್ನು ಆಡಿಸುವಾಗ, ಮಲಗಿಸುವಾಗ ಬಳಕೆಯಾಗುವ ಜೋಗುಳದ ಹಾಡುಗಳು ಈ ಲೇಖನಗಳಲ್ಲಿವೆ.

ಇಂಞೊ ಉಂಞೊ ಉಂಞಂಗಾರ್
ಎಂಕೊಂಜಿ ಬಾಲೆಂಡ್ ಉಂಬ್ಳಿದಾತ್
(ನನಗೊಂದು ಮಗು ಇದೆ ದುಂಬಿಯಷ್ಟು)
ಅಯಿಕ್ಕೊಂಜೀ ಕೋಪೊಂಡೊಂಜಾನೆದಾತ್ |ಉಂಞೋ|
(ಅದಕ್ಕೊಂದು ಕೋಪ ಉಂಟು ಒಂದಾನೆಯಷ್ಟು)
ಕಾಡ್‌ಗ್ ಪೋತೊ ಕಣಕ್ಕೊಂಡ್ರೊಡು
(ಕಾಡಿಗೆ ಹೋಗಿ ಕಟ್ಟಿಗೆ ತರಬೇಕು)
ಅಂಗಡಿಗ್ ಪೋತೂ ಅರಿ ಕೊಂಡ್ರೊಡು |ಉಂಞೋ|
(ಅಂಗಡಿಗೆ ಹೋಗಿ ಅಕ್ಕಿ ತರಬೇಕು)
ಬೊಳ್ಗಲ್ಲ್ ನರ್ತ್‌ತ್ ತೂವಂಪೊಡು
(ಬೆಳುಕುಲ್ಲು ಒಡೆದು ಬೆಂಕಿ ಮಾಡಬೇಕು)
ಮಾಂತೆರ್ಲಾ ಸೇರ್‌ತ್ ಒಣಸಾಂಪೊಡು’
(ಎಲ್ಲರೂ ಸೇರಿ ಊಟ ಮಾಡಬೇಕು) |ಉಂಞೋ| (ಮಗುವೇ)
ಹಾಗೆಯೇ ಮಗುವನ್ನು ಮಡಿಲಲ್ಲಿ ಕುಳ್ಳಿರಿಸಿ ಅಪ್ಪಿ ಹಿಡಿದು ಆನೆ

ಹೇಳುವ ಪದವನ್ನೂ ಇವರ ಲೇಖನದಲ್ಲಿ ಕಾಣಬಹುದು.

‘ಆನೇ ಆನೇ ಆನೇ ಆನೇ ಬತ್ತ್‌ಡ್‌ ಅಯೆರೆಡೆ
(ಆನೆ ಬಂತು ಆ ಬದಿಯಲ್ಲಿ)
ಕುದುರೆ ಬತ್ತ್ ಡ್ ಈಯೆರೆಡ್ (ಕುದುರೆ ಬಂತು ಈ ಬದಿಯಲ್ಲಿ)
ಆನೆನ್ ಕಟ್ಯೆರೆ ಕಂಬೊದ್ದೀ (ಆನೆ ಕಟ್ಟಲು ಕಂಬ ಇಲ್ಲ)
ಕುದುರೆನ್ ಕಟ್ಯೆರೆ ಬಳ್ಳ್‌ದ್ದಿ (ಕುದುರೆಯನ್ನು ಕಟ್ಟಲು ಹಗ್ಗ ಇಲ್ಲ)
ಮದ್ದೂರು ದೇವೆರೆ ಮದ್ದಾನೆ (ಮದ್ದೂರು ದೇವರ ಮದ್ದಾನೆ)
ಆಡೂರು ದೇವರೆ ಆಡಾನೆ (ಆಡೂರು ದೇವರ ಆಡಾನೆ)
ಕೊಲ್ಲೂರು ದೇವೆರೆ ಕೊಂಬಾನೆ
(ಕೊಲ್ಲೂರು ದೇವರ ಹಲ್ಲಿನ ಕೊಂಬಾನೆ)

ಇಟ್ಟೇಲ್ ದೇವೆರೆ ಪಟ್ಟದಾನೆ’ (ವಿಟ್ಲದ ದೇವರ ಪಟ್ಟದಾನೆ) |ಆನೆ|

ಇಲ್ಲಿ ಆನೆ ಹಾಕುವ ನೆಪದಲ್ಲಿ ಬೇರೆ ಬೇರೆ ಕ್ಷೇತ್ರಗಳ ದೇವರ ಆನೆಗಳನ್ನು ಹೆಸರಿಸಿ ಎಲ್ಲ ದೇವರುಗಳನ್ನು ಸ್ಮರಿಸಿಕೊಳ್ಳುವ ಕೋರಿಕೆ ವ್ಯಕ್ತವಾಗುತ್ತದೆ.

ಶಿಶು ಪ್ರಾಸಗಳು, ನಾಲಗೆ ಹೊರಳುಗಳು ಒಂದರಿಂದ ಮೂರು ವರ್ಷದ ಮಕ್ಕಳನ್ನು ಅವು ಅಳವಾಗ, ಹಟ ಹಿಡಿಯುವಾಗ ಸಂತೈಸಲು-ಮಂಗಟಿಸಲು ಬಳಕೆಯಾಗುತ್ತವೆ. ಮಕ್ಕಳ ಕೈಗಳಿಂದ ಚಪ್ಪಾಳೆ ತಟ್ಟಿಸಿ ಅಂಗಾಂಗಗಳ ಮೂಲಕ ಅಭಿನಯ ಮಾಡಿಸಿ ಶರೀರವನ್ನು ಅತ್ತ ಇತ್ತ ಓಲಾಡಿಸಿ ಹೇಳುವಂತಹ ಅನೇಕ ಹಾಡುಗಳು ಶಿಶು ಪ್ರಾಸಗಳಲ್ಲಿ ಇರುತ್ತವೆ.

ವಾಮನ ನಂದಾವರ ಅವರ ‘ತುಳುವೆರೆ ಕುಸಾಲ್ ಕುಸೆಲ್’ (ತುಳುವರ ವಿನೋದ-ಜಾಣ್ಮೆ) ಕೃತಿಯಲ್ಲಿ ‘ಮಣ್ಣ ಕಮ್ಮೆನೊದ ಪದೊಕುಲು’ (ಮಣ್ಣ ಸೊಗಡಿನ ಪದಗಳು), ‘ಜೋಕ್ಲೆ ಕಲ್ಪೊ’ (ಮಕ್ಕಳ ತುಂಟಾಟ) ಎನ್ನುವ ಲೇಖನಗಳಲ್ಲಿ ತುಳು ಜನಪದ ಸಾಹಿತ್ಯದ ಮಕ್ಕಳ ಹಾಡುಗಳ ಸಮೀಕ್ಷೆಯಿದೆ.

ತುಳುವಿನ ಅಜ್ಜಿಕತೆಗಳನ್ನು ಸಂಗ್ರಹಿಸಿ ಕನ್ನಡಕ್ಕೆ ಅನುವಾದಿಸಿ ಮೊತ್ತ ಮೊದಲಾಗಿ ಕೊಟ್ಟವರು ಪಂಜೆ ಮಂಗೇಶರಾಯರು. ಅವರು ಕೋಟಿ ಚೆನ್ನಯ ಪಾಡ್ದನವನ್ನು ನೀಳ್ಗತೆಯಾಗಿ ಕನ್ನಡದಲ್ಲಿ ಅನುವಾದಿಸಿ ಬಾಲ ಸಾಹಿತ್ಯ ಮಂಡಲದ ಮೂಲಕ ಪ್ರಕಟಿಸಿರುವರು.

ಬಿ.ಎ. ವಿವೇಕ ರೈ ಅವರ ‘ತುಳು ಜಾನಪದ ಸಾಹಿತ್ಯ’ ಸಂಶೋಧನ ಕೃತಿಯಲ್ಲಿ ಜನಪದ ಕತೆಗಳ ಸುದೀರ್ಘ ಅಧ್ಯಯನವಿದೆ. ನರಿಯಣ್ಣನ ಬುದ್ಧಿವಂತಿಕೆ, ರಾಕ್ಷಸ ಮತ್ತು ಜಾಣಹುಡುಗ, ಅವಳಿ ಮಕ್ಕಳು, ಹೆಣ್ಣು ಹಾವು ಮೊದಲಾದ ೪೬ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಈ ಕತೆಗಳಿಗೆ ಆಶಯ ಸೂಚಿಯನ್ನೂ ನೀಡಿದ್ದಾರೆ. ಗೀತಾ ಕುಲಕರ್ಣಿಯವರು ‘ತುಳು ಜಾನಪದ ಕಥೆಗಳು’ (೧೯೮೧), ‘ತುಳು ಜಾನಪದದ ಮತ್ತಷ್ಟು ಕಥೆಗಳು’ (೧೯೮೧) ಎನ್ನುವ ಎರಡು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ‘ತುಳುವರ ಜನಪದ ಕಥೆಗಳು’ (೧೯೮೭), ವಾಮನ ನಂದಾವರ ಅವರು ‘ತುಳುಟು ಪನಿಕತೆ’ ೧೯೮೮) ಮತ್ತು ‘ಒಂಜಿ ಕೋಪೆ ಕತೆಕುಲು’ (೧೯೮೮) ಎನ್ನುವ ಎರಡು ತುಳು ಜನಪದ ಕುರುಗತೆಗಳ ಸಂಕಲಗಳನ್ನು ಪ್ರಕಟಿಸಿದ್ದಾರೆ.

ಗಣೇಶ ಆಮೀನ್ ಸಂಕಮಾರ್ (೧೯೯೮) ಅವರ ‘ತುಳು ನಡಕೆ’ ಕೃತಿಯಲ್ಲಿ ಹೇನು ಕಟ್ಟುವ ಪದ, ಮೀನುಗಳ ದಿಬ್ಬಣ ಮೊದಲಾದ ಮಕ್ಕಳ ಹಾಡುಗಳನ್ನು ಪರಿಚಯಿಸಲಾಗಿದೆ.

ಕನರಾಡಿ ವಾದಿರಾಜ ಭಟ್ (೧೯೮೮) ಅವರ ‘ತುಳು ಜಾನಪದ ಕತೆಕ್ಕುಲು’ ಕಿರುಕೃತಿಯಲ್ಲಿ ಒಂಜಿ ಅಪ್ಪೆನ ಕತೆ, ಒಂಜಿ ಬಾರ್‌ಗ್ ಒಂಜಿ ಅರಿ, ದೇವೆರ್ ಕೊರೊಡು ಯೇನ್ ಉಣೊಡು ಎನ್ನುವ ಮೂರು ಕತೆಗಳನ್ನು ತುಳು ಮತ್ತು ಕನ್ನಡ ಎರಡು ಭಾಷೆಗಳಲ್ಲೂ ನೀಡಲಾಗಿದೆ. ಆನಂದಕೃಷ್ಣ (೧೯೯೬) ಅವರ ‘ಕರಿಯವಜ್ಜೆರೆನ ಕತೆಕ್ಕುಲು’ ಕೃತಿಯಲ್ಲಿ ಕರಿಯ ಅಜ್ಜ ತನ್ನ ಸುತ್ತಲೂ ಮಕ್ಕಳನ್ನು ಕುಳ್ಳಿರಿಸಿಕೊಂಡು ಮಕ್ಕಳಿಗೆ ಕತೆಗಳನ್ನು ಹೇಳುವ ಶೈಲಿಯಲ್ಲಿ ೧೨ ರೋಚಕ ಕತೆಗಳನ್ನು ನೀರುಪಿಸಿದ್ದಾರೆ. ವಸಂತ್‌ಕುಮಾರ್ ಪೆರ್ಲ(೧೯೯೬) ಅವರು ಸಂಪಾದಿಸಿರುವ ‘ಆಕಾಶವಾಣಿ ಕತೆಕ್ಕುಲು’ ಕೃತಿಯಲ್ಲಿ ಏನ್‌ಲಾ ಕಲ್ಪೊಡು (ಕೆ.ಜೆ.ಕೊಕ್ರಾಡಿ) ಒಂಜಿ ನೆಂಪುದ ನಡುಟು (ಆತ್ರಾಡಿ ಅಮೃತಾ ಶೆಟ್ಟಿ), ಭೀಮಾಬಿರು (ಮುದ್ದು ಮೂಡುಬೆಳ್ಳೆ) ಎನ್ನುವ ಮೂರು ಮಕ್ಕಳ ಕತೆಗಳಿವೆ. ತಿಮ್ಮಪ್ಪ ಪೂಜಾರಿ ೧೯೯೮) ಅವರು ‘ಗಾದೆಲೆಡ್ ಅಡೆಂಗ್‌ದಿ ಕತೆಕ್ಕುಲು’ ಕೃತಿಯಲ್ಲಿ ಬಿನ್ನನ್ ಕಟ್ಟ್ ದೊಣ್ಣೆನ್ ನಾಡ್, ಅಜ್ಜಿ ಸಾಂಕಿನ ಪುಳ್ಳಿ ಬೊಜ್ಜೊಗುಲಾ ಆವಂದ್ ಮೊದಲಾದ ೨೭ ಕತೆಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಗಣೇಶ್ ಅಮೀನ್ ಸಂಕಮಾರ್ (೧೯೯೬) ಅವರ ‘ಅಗೋಳಿ ಮಂಜಣೆ’, ವೀರನೊಬ್ಬನ ಸಾಹಸದ ಅದ್ಭುತ ರಮ್ಯಕತೆಯಾಗಿದ್ದು ಮಕ್ಕಳ ಮನ ಸೆಳೆಯಬಲ್ಲುದು.

ಮಂಗಳೂರು ಬಾಸೆಲ್ ಮಿಶನಿನವರು ೧೯೭೭ ರಲ್ಲಿ ಸಹಸ್ತಾರ್ಧ (೫೦೦) ಗಾದೆಗಳ ಸಂಗ್ರಹವನ್ನೂ ಕೊಟ್ಟಿದ್ದಾರೆ. ಬಿ.ಎ. ವಿವೇಕ ರೈ (೧೯೭೧) ಅವರು ‘ತುಳು ಗಾದೆಗಳು’ ಎನ್ನುವ ಗ್ರಂಥದಲ್ಲಿ ೭೦೪ ತುಳು ಗಾದೆಗಳನ್ನೂ ನೀಡಿ, ಅವುಗಳ ಕನ್ನಡ ಅನುವಾದವನ್ನೂ ಕೊಟ್ಟಿದ್ದಾರೆ. ವೆಂಕಟಾಚಲ ಭಟ್ ಕುತ್ಪಾಡಿ (೧೯೮೧) ‘ಕೆಲವು ತುಳು ಗಾದೆಗಳು-ನುಡಿಗಟ್ಟುಗಳು’ ಎನ್ನುವ ಸಂಗ್ರಹವನ್ನು ‘ತುಳುವ’ ಪತ್ರಿಕೆಯಲ್ಲಿ ಒದಗಿಸಿದ್ದಾರೆ. ಈ ಸಂಗ್ರಹದಲ್ಲಿ ಮುನ್ನೂರಕ್ಕೂ ಮಿಕ್ಕಿ ಗಾದೆಗಳಿವೆ. ಶ್ರೀ ಕೃಷ್ಣ ಭಟ್ ಅರ್ತಿಕಜೆ (೧೯೮೩) ಅವರು ಬಾಸೆಲ್ ಮಿಶನ್ ಪ್ರಕಟಿಸಿದ್ದ ಸಹಸ್ರಾರ್ಧ (೫೦೦) ಗಾದೆಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಜನಪ್ರಿಯ ತುಳು ಗಾದೆಗಳು ಭಟ್ (೧೯೮೮) ಅವರ ಇನ್ನೊಂದು ಕೃತಿ. ಅಮೃತ ಸೋಮೇಶ್ವರ (೧೯೮೮) ಅವರು ‘ಪೊಸ ಗಾದೆಲು’ ಎನ್ನುವ ಕೃತಿಯಲ್ಲಿ ಸ್ವತಂತ್ರ ತುಳು ಗಾದೆಗಳನ್ನು ರಚಿಸಿ, ಅವುಗಳಿಗೆ ಕನ್ನಡ ಅನುವಾದವನ್ನೂ ಕೊಟ್ಟಿದ್ದಾರೆ.

ಮಣ್ಣಗುಡ್ಡೆ ನಾರಾಯಣ (೧೯೬೨) ಅವರು ಸುಮಾರು ೨೦೦ ತುಳು ಒಗಟುಗಳನ್ನು ಕನ್ನಡ ತಾತ್ಪರ್ಯ ಸಹಿತ ಪ್ರಕಟಿಸಿದ್ದಾರೆ. ಬಿ.ಎ. ವಿವೇಕ ರೈಯವರ (೧೯೭೧) ‘ತುಳು ಒಗಟುಗಳು’ ಎನ್ನುವ ಕೃತಿ ೫೦೭ ಒಗಟುಗಳ ಸಂಕಲನ. ವಾಮನ ನಂದಾವರ (೧೯೮೦) ಅವರ ‘ಓಲೆ ಪಟಾಕಿ’ ತುಳು ಮತ್ತು ಕನ್ನಡದ ಸ್ವತಂತ್ರ ಒಗಟುಗಳ ಸಂಕಲನವಾಗಿದ್ದು, ಇದರಲ್ಲಿ ೨೬೭ ತುಳು ಕನ್ನಡ ಸ್ವತಂತ್ರ ರಚನೆಗಳಿವೆ. ‘ತುಳುವೆರೆ ಕುಸಾಲ್ ಕುಸೆಲ್’ ಕೃತಿಯಲ್ಲಿ ‘ಅಲ್ಲೆ ಗೆಲ್ಲ್‌ಡ್ ಮುಲ್ಲೆ ಪಕ್ಕಿ’ ಎನ್ನುವ ತುಳು ಒಗಟುಗಳ ಲೇಖನವೊಂದಿದೆ. ಬಿ.ಎ. ವಿವೇಕ ರೈ (೧೯೮೫) ಅವರ ‘ತುಳು ಜಾನಪದ ಸಾಹಿತ್ಯ’ ಗ್ರಂಥದಲ್ಲಿ ಒಗಟುಗಳ ಸಾಕಷ್ಟು ಸಂಗ್ರಹವಿದ್ದು ಅದು ಅಧ್ಯಯನಾತ್ಮಕವಾಗಿದೆ. ಅ. ಬಾಲಕೃಷ್ಣ ಶೆಟ್ಟಿ ಪೊಳಲಿ (೧೯೮೯) ಅವರ ‘ಪಾತೆರ ಕತೆ’ ಕೃತಿಯಲ್ಲಿ ಮಕ್ಕಳಲ್ಲಿ ಕುತುಹೂಲ ಹುಟ್ಟಿಸುವ ಅನೇಕ ಮಾತುಕತೆಯ ಸಂದರ್ಭಗಳಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಮಕ್ಕಳಿಗಾಗಿ ಕೆಲವು ಕಾರ್ಯಕ್ರಮಗಳನ್ನು ನಡೆಸಿದೆ. ಅವುಗಳನ್ನು ಹೀಗೆ ದಾಖಲಿಸಲಾಗಿದೆ. ಮಕ್ಕಳಿಗಾಗಿ ಕತೆ ಬರುಯುವ ಕಮ್ಮಟ (೧೯೯೪) ನಡೆಸಿ ಇಪ್ಪತ್ತು ಪುಸ್ತಕಗಳನ್ನು ಸಿದ್ಧಪಡಿಸಿತ್ತು. ೧೯೯೮ ರಲ್ಲಿ ಅವು ಪ್ರಕಟಗೊಂಡವು. ಅವುಗಳ ವಿವರ ಹೀಗಿದೆ:

೧. ಕೋಟಿ ಚೆನ್ನಯ (ವಾಮನ ನಂದಾವರ), ಅಕ್ಕೆರಸು ಸಿರಿ (ಎ.ವಿ. ನಾವಡ), ಕೊಡ್ದಬ್ಬು (ಸುಶೀಲ ಉಪಾಧ್ಯಾಯ), ಪರತಿ ಮಂಗಣೆ (ಕೆ. ಲೀಲಾವತಿ), ಪುಳ್ಕೂರು ಬಾಚೆ (ವೆಂಕಟರಾಜ ಪುಣಿಂಚತ್ತಾಯ), ಅಬ್ಬಗೆ ದಾರಗೆ (ಕೆ.ಜೆ. ಶೆಟ್ಟಿ ಕಡಂದಲೆ), ಮೂಂಕು ಸಂಬಳೊ (ಕೆ. ಚಿನ್ನಪ್ಪ ಗೌಡ), ಮಗೆ ಬರವು ಕಲ್ತೆ (ಕನರಾಡಿ ವಾದಿರಾಜ ಭಟ್ಟ), ಮಾಯಂದಾಲ್ (ಯಶವಂತಿ ಸುವರ್ಣ), ಕಲ್ಲುರ್ಟಿ ಕಲ್ಕುಡೆ (ಅಮೃತ ಸೋಮೇಶ್ವರ), ಬನ್ನಾಲ್ (ಕ್ಯಾಥರಿನ್ ರೋಡ್ರಿಗಸ್), ಮಾಮಿ ಮರ್ಮಲ್ (ಗಣನಾಥ ಶೆಟ್ಟಿ ಎಕ್ಕಾರ್), ಜೋಗಿ ಪುರುಷೆರ್ (ಕುದ್ಕಾಡಿ ವಿಶ್ವನಾಥ ರೈ), ಅಗೋಳಿ ಮಂಜಣೆ (ಗಣೇಶ ಅಮೀನ್ ಸಂಕಮಾರ್), ಕಣ್ಣ್ ಡ್ ತೂವಂದಿನ ಕೆಬಿಟ್ ಕೇನಂದಿನ (ಕೆ.ಆರ್.ರೈ), ಅಪ್ಪೊದಡ್ಡೆ (ಮುದ್ದು ಮೂಡುಬೆಳ್ಳೆ), ನಾಗಸಿರಿ (ಅನಂತರಾಮ ಬಂಗಾಡಿ), ಮಾಯೊದ ಪೊಣ್ಣು (ಡಿ. ಯದುಪತಿ ಗೌಡ), ಮುಡಿಪ್ಪೆರಾವಂದಿ ಮಲ್ಲಿಗೆ (ಎನ್. ಕೊಯಿರಾ ಬಾಳೆಪುಣಿ), ಭೂತಾಳ ಪಾಂಡ್ಯ (ಪಾಲ್ತಾಡಿ ರಾಮಕೃಷ್ಣ ಆಚಾರ್).

೨. ಜೋಕುಳೆ ಸಂಚಿ: ಕುದ್ಕಾಡಿ ವಿಶ್ವನಾಥ ರೈ (೧೯೯೮) ಅವರ ‘ಜೋಕುಳೆ ಸಂಚಿ’ಯಲ್ಲಿ ತುಳು ಮಗ್ಗಿ, ವಾರದ ದಿನಗಳ, ಬಣ್ಣಗಳ, ದಿಕ್ಕುಗಳ, ಕಾಲಗಳ, ಶರೀರದ ಅವಯವಗಳ ಸಂಬಂಧ ವಾಚಕಗಳ, ಪ್ರಾಣಿ ಪಕ್ಷಿಗಳ, ತರಕಾರಿ ಹಣ್ಣುಗಳ, ಹೂವುಗಳ, ಗಿಡಮೂಲಿಕೆಗಳ, ವಿವಿಧ ಆಟಗಳ, ಆಭರಣಗಳ, ಸಂಬಾರ ಜೀನಸುಗಳ, ಮನೆಯ ವಿವಿಧ ಭಾಗಗಳ ಪರಿಚಯವಿದೆ.

೩. ತುಳು ಕೈಪಿಡಿ: ಯು.ಪಿ. ಉಪಾಧ್ಯಾಯರು ಸಿದ್ಧಪಡಿಸಿದ ಈ ಕೈಪಿಡಿ ತುಳು ಕಲಿಯುವವರಿಗೆ ಒಂದು ಮಾರ್ಗಸೂಚಿಯಾಗಿದೆ.

೪. ಅಕಾಡೆಮಿ (೧೯೯೭) ಹೆಬ್ರಿಯಲ್ಲಿ ಕೊರಗರ ಮಕ್ಕಳಿಗಾಗಿ ರಂಗ ಶಿಬಿರ ನಡೆಸಿದೆ. ಹಾಡು, ಕುಣಿತ, ನಾಟಕಗಳ ಅಭ್ಯಾಸಗಳಲ್ಲಿ ಕೊರಗರ ಮಕ್ಕಳು ಪಾಲ್ಗೊಂಡಿದ್ದರು. ಐ.ಕೆ. ಬೊಳುವಾರು, ಗೋಪಾಡ್ಕರ್, ಪುದು ಚರಣ್, ಶ್ರೀ ಮುದ್ರಾಡಿ ಮೊದಲಾದವರ ಮಾರ್ಗದರ್ಶನ ದೊರೆತಿತ್ತು.

೫. ಬೆಳ್ತಂಗಡಿ ತಾಲೂಕಿನ ನೆರಿಯದಲ್ಲಿ (೧೯೯೭) ಮಲೆ ಕುಡಿಯರ ಮಕ್ಕಳಿಗಾಗಿ ‘ಕುರಿ ಕವನಕೂಟ’ ಮತ್ತು ‘ಕುಡಿ ಕಥನ ಕೂಟ’ ತರಬೇತಿ ಕಮ್ಮಡ ನಡೆದಿತ್ತು. ಮಲೆ ಕಡಿಯರ ವಿದ್ಯಾವಂತ ಹುಡುಗ ಹುಡುಗಿಯರು ಮೊದಲ ಬಾರಿಗೆ ಈ ಸಾಹಿತ್ಯ ರಚನೆಯಲ್ಲಿ ಪಾಲ್ಗೊಂಡರು.

೬. ಮಂಗಳೂರಿನ ‘ರಾಗ ತರಂಗ’ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ (೧೯೯೭) ಎಳೆಯರಿಗಾಗಿ ತುಳು ಭಾವಗಾನ ಶಿಬಿರ ನಡೆಸಿದೆ.

೭. ಖ್ಯಾತ ರಂಗ ನಿರ್ದೇಶಕ ಬಿ.ವಿ. ಕಾರಂತರ ನಿರ್ದೇನದಲ್ಲಿ ಮಕ್ಕಳಿಗಾಗಿ ತುಳು ನಾಟಕ ತರಬೇತಿ ಕಮ್ಮಟ (೧೯೯೮) ನಡೆದು ಪ್ರೇಮಚಂದ್ರ ಅವರ ‘ಜಾತ್ರೆ’ ಕತೆಯ ನಾಟಕ ರೂಪವನ್ನು ಅಭಿನಯಿಸಲಾಯಿತು.

೮. ಉಜಿರೆಯ ಸಿದ್ಧವನದಲ್ಲಿ (೧೯೯೯) ಮಕ್ಕಳಿಗಾಗಿ ತುಳು ಸಾಹಿತ್ಯ ಕಮ್ಮಡ ನಡೆಯಿತು. ಇದರಲ್ಲಿ ಮೂವತ್ತು ಮಂದಿ ಮಕ್ಕಳು ಮತ್ತು ಹಿರಿಯರು ಭಾಗವಹಿಸಿ ‘ತುಳು ಜೋಕ್ಲೆ ದನಿ’ ಎನ್ನುವ ತುಳು ಕತೆ, ಕವನ, ಸಾಹಿತ್ಯ ರಚನೆಯಲ್ಲಿ ಪಾಲ್ಗೊಂಡರು. ಇದು ಕೃತಿರೂಪದಲ್ಲಿ ೨೦೦೦ ದಲ್ಲಿ ಪ್ರಕಟಗೊಂಡಿದೆ.

ಶಿಮುಂಜೆ ಪರಾರಿಯವರು ೧೯೯೭ ರಿಂದೀಚೆಗೆ ಪ್ರತೀ ವರ್ಷ ‘ಯಾನ್ ಪನ್ಪಿನಿ ಇಂಚ’ ಎನ್ನುವ ಕಿರುಹೊತ್ತಗೆಯಲ್ಲಿ ೧೦೦ ರಂತೆ ಚಿಂತನಶೀಲ ನೀತಿಯುಕ್ತ ಚುಟುಕುಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಅವು ಇಂದು ಅನೆಕ ಕಿರು ಸಂಪುಟಗಳಲ್ಲಿ ಪ್ರಕಟವಾಗಿವೆ. ರತ್ನಾಕರ ಶೆಟ್ಟಿ (೨೦೦೩) ಯವರ ಜೋಕುಲು ತೆಲಿಪುಲೆ ತುಕಾ’ ಎನ್ನುವ ಕೃತಿಯಲ್ಲಿ ೨೦೦ಕ್ಕೂ ಮಿಕ್ಕಿ ಹಾಸ್ಯದ ತುಣುಕು ಮಿಣುಕುಗಳನ್ನು ಪ್ರಕಟಿಸಿದ್ದಾರೆ. ಅವು ಮಕ್ಕಳಿಗಾಗಿ ಬರೆದ ಹಾಗೆ ಕಂಡರೂ ವಯಸ್ಕರ ಗಮನವನ್ನೂ ಸೆಳೆಯುವ ಮಟ್ಟದಲ್ಲೂ ಇವೆ.

ಮಲಾರ್ ಜಯರಾಮ ರೈ (೨೦೦೧) ‘ರಸೊದಿಂಜಿ ರಾಮಾಯಣೊ’ ಎನ್ನುವ ಕಿರುಕೃತಿಯನ್ನು ತುಳುವ ಮಕ್ಕಳಿಗಾಗಿ ಸರಳ ಭಾಷೆಯಲ್ಲಿ ಬರೆದು ಪ್ರಕಟಿಸಿದ್ದಾರೆ. ಪುತ್ತಿಗೆ ಈಶ್ವರ ಭಟ್ಟರು (೨೦೦೨) ‘ಮಾಣಿಗೆರಡ್ ಪಾತೆರ’ ಎನ್ನುವ ಶಿವಳ್ಳಿ ಬ್ರಾಹ್ಮಣರು ಮಾತನಾಡುವ ತುಳು ಭಾಷೆಯಲ್ಲಿ ಭಾಮಿನಿ ಷಟ್ಪದಿಯಲ್ಲಿ ಬರೆದಿರುವ ಕೃತಿ ಮಕ್ಕಳಿಗೆ ನೀತಿ ಬೋಧೆ ನೀಡುವ ಉತ್ಕೃಷ್ಟ ಗ್ರಂಥವಾಗಿದೆ.

ಮಕ್ಕಳು ಹಾಡುವಾಗ, ಕೆಲಸ ಮಾಡುವಾಗ ವಿನೋದಕ್ಕಾಗಿ ಶ್ರಮ ಪರಿಹಾರಕ್ಕಾಗಿ ಸಂತೋಷಕ್ಕಾಗಿ ಚಮತ್ಕಾರದ ಮಾತುಗಳನ್ನು ಪ್ರಾಸ ತುಂಬಿದ ಪದಗಳನ್ನು ಹಾಸ್ಯೋಕ್ತಿಗಳನ್ನು ತಮ್ಮೊಳಗೆ ಹಂಚಿಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರು ಹಂಚಿಕೊಳ್ಳುವ ಸಾಹಿತ್ಯ ಅವರಿಂದಲೇ ಹುಟ್ಟಿಕೊಳ್ಳುವುದುಂಟು. ಅವೆಲ್ಲ ಮಕ್ಕಳಲ್ಲಿರುವ ಸೃಜನಶೀಲ ಪ್ರತಿಭೆಯ ಫಲಗಳು.

ಇಂಗ್ಲಿಷ್ ಪುಸ್ತಕಗಳನ್ನು ಪ್ರಕಟಿಸುವವರು ತಮ್ಮ ಹೊಸ ಪ್ರಕಟಣೆ ಎಷ್ಟು ವರ್ಷದವರಿಗೆಂದು ಸೂಚಿಸುತ್ತಾರೆ. ೫ ರಿಂದ ೭ ವರ್ಷ, ೬ ರಿಂದ ೧೦ ವರ್ಷ, ೯ ರಿಂದ, ೧೩ ಹೀಗೆ ಹಂತ ಹಂತವಾಗಿ ಸೂಕ್ಷ್ಮ ರೀತಿಯಲ್ಲಿ ವಿಂಗಡಿಸುತ್ತಾರೆ. ಪ್ರತಿಯೊಂದು ಒಳವಿಭಾಗದ ಪುಸ್ತಕದ ಭಾಷೆ, ಮುದ್ರಣ, ಚಿತ್ರಗಳು, ವಿಷಯ- ಇವುಗಳ ಲಕ್ಷಣಗಳೇ ಪ್ರತ್ಯೇಕ. ಆಯಾ ಪ್ರಾಯದವರ ಮನಸ್ಸಿನ ಬೆಳವಣಿಗೆ, ವಾತಾವರಣೆ, ಸಹಜ ರುಚಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಅರಿತುಕೊಂಡು ಪುಸ್ತಕಗಳನ್ನು ಸಿದ್ಧಗೊಳಿಸುತ್ತಾರೆ. (ಮುಕುಂದ ರಾವ್ ಎಸ್. ೧೯೬೦). ಅವರು ಎಂದೋ ರೂಢಿಸಿಕೊಂಡ ಕ್ರಮವಿದು. ನಮ್ಮಲ್ಲಿ ಈ ಪದ್ಧತಿ ಎಂದು ಜಾರಿಗೆ ಬರುವುದೋ? ತಿಳಿಯದು.

ತುಳುವಿನಲ್ಲಿ ಮಕ್ಕಳ ಸಾಹಿತ್ಯ ರಚನೆಗೆ ವಿಪುಲ ಅವಕಾಶವಿದೆ. ಕಾರಣ, ತುಳು ಭಾಷೆಗಿರುವ ಮೌಖಿಕ ಮತ್ತು ಪ್ರಾದೇಶಿಕ ವ್ಯಾಪ್ತಿ ಬಹುದೊಡ್ಡದು. ಜೊತೆಗೆ ಪ್ರಾಚೀನ ಕಾಲದಿಂದಲೂ ತುಳು ಭಾಷೆ ಆಳುವ ಮತ್ತು ದುಡಿಯುವ ವರ್ಗಗಳ ಭಾಷೆಯಾಗಿ ಬೆಳೆದು ಬಂದಿರುವುದು. ಈ ವರ್ಗಗಳೂ ಅಷ್ಟೆ ವಿವಿಧ ಸಮುದಾಯ, ಸಂಸ್ಕೃತಿಗಳಿಗೆ ಸೇರಿ ಹೋದವುಗಳು. ಹಾಗಾಗಿ ಜೀವನ ವಿಧಾನ, ಆಚರಣೆಗಳಲ್ಲೂ ಗಮನಿಸಬಹುದಾದ ವ್ಯತ್ಯಾಸಗಳಿವೆ. ಇನ್ನೊಂದು ನೆಲೆಯಲ್ಲೂ ತುಳು ಭಾಷೆ ಶ್ರೀಮಂತವಾಗಿ ಬೆಳೆಯುವ ಅವಕಾಶ ಪಡೆದಿದೆ. ಕರಾವಳಿ ಕರ್ನಾಟಕ ಈ ಪರದೇಶ ಬಹಭಾಷಾ ಮತ್ತು ಬಹುಧರ್ಮ ಸಂಸ್ಕೃತಿಗಳ ಜೊತೆ ಹಾಸುಹೊಕ್ಕಾಗಿ ಸಾಗಿ ಬರುವುದನ್ನು ಮರೆಯುವ ಹಾಗಿಲ್ಲ. ಮುಸ್ಲಿಮ್, ಕ್ರೈಸ್ತ ಮೊದಲಾದ ಅನ್ಯ ಧರ್ಮಗಳ ಜನರ ಬಹುದು ಭಾಷೆಗಳ ಪ್ರಭಾವ ತುಳುವಿನ ಮೇಲೆ ಸಾಕಷ್ಟು ಆಗಿರುವುದು ಉಂಟು. ಕನ್ನಡ ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಪ್ರಭಾವ ಮತ್ತು ಕೊಳುಕೊಡೆ (ವಿನಿಮಯ ಧಾರಾಳವಾಗಿ ಆಗಿರುವುದು ಮತ್ತೊಂದು ಮಗ್ಗಲು. ಪಂಚ ದ್ರಾವಿಡ ಭಾಷೆಗಳಲ್ಲಿಯೇ ಅತ್ಯಂತ ಪ್ರಾಚೀನವಾಗಿದ್ದು, ಶ್ರೀಮಂತವಾಗಿ ಬೆಳೆದು ಬಂದ ಭಾಷೆಯು ಇದಾಗಿದೆ.

ಈ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ಇಂದಿನ ಕಾಲದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳ ಸಾಹಿತ್ಯ ರಚಿಸಬೇಕಾದ ಜವಾಬ್ದಾರಿ ಇದೆ. ತುಳುವಿನ ಜಾನಪದವನ್ನೇ ಗಮನಿಸಿಕೊಂಡರೂ ವ್ಯಾಪಕವಾಗಿರುವ ಜನಪದ ಕಥೆಗಳು, ಪಾಡ್ದನ ಕಬಿತಗಳು, ಒಗಟು ಗಾದೆಗಳು, ನಂಬಿಕೆ, ಆಚರಣೆ ಐತಿಹ್ಯಗಳು, ಆಡುನುಡಿ ಮಾತುಕತೆಗಳು, ಬಹುಮುಖ್ಯ ಆಕರ ಸಾಮಗ್ರಿಗಳಾಗಿ ದೊರೆಯುತ್ತವೆ. ಆದರೆ ಮಕ್ಕಳ ಸಾಹಿತ್ಯ ರಚನೆ ಮಾಡತೊಡಗುವವರು ಅಗತ್ಯವಾಗಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಈಗಾಗಲೇ ಜನಸಾಮಾನ್ಯವಾಗಿ ಹೋಗಿರುವ ತುಳು ಜನಪದ ಸಾಹಿತ್ಯ ಇಲ್ಲಿನ ಬಹುಸಂಖ್ಯೆಯ ವೃತ್ತಿ, ಜಾತಿ, ವರ್ಗ, ಪಂಗಡಗಳ ನಿಂದನೆ, ಲೇವಡಿಗಳಿಂದಲೂ ಕೂಡಿರುವುದು ಒಂದಾದರೆ, ತುಳುವ ಸಂಸ್ಕೃತಿಯ ಭೂತಾರಾಧನೆ, ಕಂಬಳ, ಕೋಳಿ ಅಂಕ, ನಂಬಿಕೆ, ಆಚರಣೆ ಮೊದಲಾದವುಗಳಿಗೆ ಸಂಬಂದಿಸಿದ ಅತಿ ಭಾವುಕತೆ ಮತ್ತು ಅಂಧಾಭಿಮಾನಗಳ ಮಿತಿಗಳಿಂದ ಕಳಚಿಕೊಳ್ಳಲು ಸಾಧ್ಯವಾಗದಿರುವ ಇಲ್ಲಿನ ಬಹುಪಾಲು ಜನರ ಬದುಕು ಇನ್ನೊಂದು. ಅದೇ ಕಾಲಕ್ಕೆ ಎನ್ನಪ್ಪೆ ತುಳುವಪ್ಪೆಯ ಮೇಲಾಗಲೀ ಪರಶುರಾಮ ಸೃಷ್ಟಿಯ ಕುರಿತಾಗಲೀ, ಪಂಜುರ್ಲಿ, ಕಲ್ಲುರ್ಟಿ ಗುಳಿಗ ಮೊದಲಾದ ಮಧ್ಯಂತರ ಜಗತ್ತಿನ ಭಾವುಕ ಭ್ರಾಮಕ ಶಕ್ತಿ ವ್ಯಕ್ತಿಗಳ ಬಗೆಗಾಗಲೀ, ೨೧ನೆಯ ಶತಮಾನದ ಮಕ್ಕಳಿಗಾಗಿ ಸಾಹಿತ್ಯ ನಿರ್ಮಿಸುವುದು ಎಷ್ಟು ಅಗತ್ಯ ಮತ್ತು ಪ್ರಸ್ತುತ ಎನ್ನುವಂತಹ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವಗಳ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಉತ್ತರಗಳನ್ನು ಕಂಡುಕೊಳ್ಳುತ್ತಲೇ ಮುಂದೆ ಸಾಗಬೇಕಾಗುತ್ತದೆ.

ಆಕರಸೂಚಿ

೧. ಅಮೃತ ಸೋಮೇಶ್ವರ, ೧೯೮೪, ತುಳುವಿನಲ್ಲಿ ಮಕ್ಕಳ ಸಾಹಿತ್ಯ, ತುಳು ಬಹುದು, ಪ್ರಕೃತಿ ಪ್ರಕಾಶನ, ಕೋಟೆಕಾರು, ೧೯೯೮, ಪೊಸ ಗಾದೆಲು, ಪ್ರಕೃತಿ ಪ್ರಕಾಶನ, ಕೋಟೆಕಾರು, ದ.ಕ.

೨. ಕನರಾಡಿ ವಾದಿರಾಜ ಭಟ್ಟ, ೧೯೮೮, ಜೋಕುಲೆ ಪದ, ತುಳುವ ಪ್ರಕಾಶನ, ಕಂಕನಾಡಿ, ಮಂಗಳೂರು

೩. ಕ್ಯಾಥರೀನ್ ರಾಡ್ರಿಗಸ್, ೧೯೯೪, ಸಿರಿತುಪ್ಪೆ, ಶಾಂತಿ ಪ್ರಕಾಶನ, ಕಟಪಾಡಿ

೪. ಕುದ್ಕಾಡಿ ವಿಶ್ವನಾಥ ರೈ, ೧೯೯೮, ಜೋಕುಲೆ ಸಂಚಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಮಂಗಳೂರು ೩.

೫. ಕೆದಂಬಾಡಿ ಜತ್ತಪ್ಪ ರೈ, ೧೯೯೪, ಆಸೆನಿಯಾಗೊ ಕಾಂತಗೊ ಜೋಗಿ, ತುಳುಕೂಟ ಉಡುಪಿ, ಸಾಹಿತ್ಯ ಸಂಘ ಮಣಿಪಾಲ, ೫೭೬೧೧೯ ೧೯೯೬, ತುಳು ಕಾಬೂಲಿವಾಲಾ, ಕೆದಂಬಾಡಿ ಪ್ರಕಾಶನ, ಪಾಣಾಜೆ ೫೭೪೨೪೯

೬. ಕೇಕುಣ್ಣಾಯ ಪದ್ಮನಾಭ ಕೆ., ೧೯೮೫, ಜೋಕುಲೆ ಪಾತೆರೊದ ಪೊರ್ಲು, ‘ತುಳುನಾಡ್’ ತುಳು ಪಾಕ್ಷಿಕ, ಜನವರಿ ೧೯೮೫, ಬುಕ್ ಹೌಸ್ ಕರಂಗಲಪಾಡಿ, ಮಂಗಳೂರು

೭. ಗಣೇಶ ಅಮೀನ್ ಸಂಕಮಾರ್, ೧೯೯೬, ಅಗೋಳಿ ಮಂಜಣೆ, ಅಗೋಳಿ ಮಂಜಣೆ ಜಾನಪದ ಕೇಂದ್ರ, ಪಾವಂಜೆ ೫೭೪೧೪೬

೮. ತಿಮ್ಮಪ್ಪ ಪೂಜಾರಿ, ೧೯೯೪, ಕೂಕುಳು, ಪ್ರತಿಭಾ ಪ್ರಕಾಶನ, ಜಪ್ಪಿನಮೊಗರು, ಮಂಗಳೂರು.

೯. ನರ್ಕಳ ಮಾರಪ್ಪ ಶೆಟ್ಟಿ, ೧೯೮೯, (೧೯೩೦), ಪೊರ್ಲಕಂಟ್ ಅಮಲ್ ದೆಪ್ಪಡೆ, ಹೇಮಾಂಶು ಪ್ರಕಾಶನ, ಕಾಟಿಪಳ್ಳ-೯.

೧೦. ನಾರಾಯಣ ಎಂ., ೧೯೬೧, ‘ತುಳು ಒಗಟುಗಳು’, ಪ್ರಭಾತ, ರಥಬೀದಿ, ಮಂಗಳೂರು-೩.

೧೧. ನಾರಾಯಣ ಕಿಲ್ಲೆ, ೧೯೬೦, ‘ಶಿಶು ಸಾಹಿತ್ಯ’, ಒಂದು ವಿಚಾರಗೋಷ್ಠಿ, ೪೨ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಮಣಿಪಾಲ.

೧೨. ಪ್ರಮೋದ ಸುವರ್ಣ, ೧೯೯೬, ‘ಪದರಂಗಿತ’, ತುಳು ಕವನ ಸಂಕಲನ, ಹೇಮಾಂಶು ಪ್ರಕಾಶನ, ಮಂಗಳೂರು-೫

೧೯೯೯, ತಾಟೆ ತೆಂಬರೆ, ಹೇಮಾಂಶು ಪ್ರಕಾಶನ, ಮಂಗಳೂರು-೫.

೧೩. ಪಾಲ್ತಾಡಿ ರಾಮಕೃಷ್ಣ ಆಚಾರ್, ೧೯೮೭, ತುಳುವರ ಜನಪದ ಕತೆಗಳು. ಸುಪ್ರಿಯಾ ಪ್ರಕಾಶನ, ಮಾಡಾವು, ಪುತ್ತೂರು.

೧೯೮೭, ಪಚ್ಚೆ ಕುರಲ್, ಸುಪ್ರಿಯಾ ಪ್ರಕಾಶನ, ಮಾಡಾವು, ಪುತ್ತೂರು

೧೪. ಪುಣಿಂಚತ್ತಾಯ ವೆಂಕಟರಾಜ, ೧೯೮೯, ಆಲಡೆ (ತುಳು ಕಬಿತೆಲು) ೧೯೮೩, ‘ತುಳುವ ಮಣ್ಣ್‌ದ ಜೋಕುಲು’, ಪೊರ್ಲು ತುಳು ಸಾಹಿತ್ಯ ಸಮ್ಮೇಳನ, ತುಳುಕೂಟ, ಬೆಂಗಳೂರು, ವೈಯಾಲಿಕಾವಲ್, ಬೆಂಗಳೂರು-೩

೧೫. ಬಾಲಕೃಷ್ಣ ಶೆಟ್ಟಿ ಪೊಳಲಿ, ೧೯೮೯, ಪಾತೆರಕತೆ, ಹೇಮಾಂಶು ಪ್ರಕಾಶನ, ಕಾಟಿಪಳ್ಳ-೫೭೩೧೪೯

೧೬. ಮುಕುಂದ ರಾವ್ ಎಸ್., ೧೯೬೦, ‘ಕನ್ನಡದಲ್ಲಿ ಬಾಲಸಾಹಿತ್ಯ’, ಒಂದು ವಿಚಾರಗೋಷ್ಠಿ, ೪೨ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಮಣಿಪಾಲ.

೧೭. ಮುರಳೀಧರ ಉಪಾಧ್ಯ ಹಿರಿಯಡ್ಕ, ೧೯೬೦, ‘ತುಳು ಕಾವ್ಯ ಕಬಿತೆ ಸಂಕಲನೊಲು’, ಪನಿಯಾರ-ಅಖಿಲ ಭಾರತ ತುಳು ಸಮ್ಮೇಳನ ಸಂಚಿಕೆ ತುಳು ಕೂಟ, ಮಂಗಳೂರು-೨.

೧೮. ಲೀಲಾವತಿ ಕೆ., ೧೯೯೪, ತಿಬಿಲೆ (ತುಳು ಕಬಿತೆಲು), ರತ್ನತ್ರಯ ಪ್ರಕಾಶನ, ಬಿಜೈ ನ್ಯೂರೋಡ್, ಮಂಗಳೂರು-೫೭೪೦೦೪

೧೯. ವಾಮನ ನಂದಾವರ, ೧೯೮೦, ಓಲೆ ಪಟಾಕಿ, ತುಖು ಕನ್ನಡ ಸ್ವತಂತ್ರ ಒಗಟುಗಳು, ಭಾರದ್ವಾಜ ಪ್ರಕಾಶನ, ಕದಿರೆ, ಮಂಗಳೂರು-೨

೧೯೮೮, ತುಳುವೆರೆ ಕುಸಾಲ್ ಕುಸೆಲ್, ಹೇಮಾಂಶು ಪ್ರಕಾಶನ, ಕಾಟಿಪಳ್ಳ-೫೭೪೧೪೯., ದ.ಕ.

೧೯೮೮, ತುಳುಟು ಪನಿಕತೆ, ಹೇಮಾಂಶು ಪ್ರಕಾಶನ, ಕಾಟಿಪಳ್ಲ

೧೯೮೮, ಒಂಜಿಕೋಪೆ ಕತೆಕುಲು, ಹೇಮಾಂಶು ಪ್ರಕಾಶನ, ಕಾಟಿಪಳ್ಳ-೫೭೪೧೪೯., ದ.ಕ.

೧೯೯೨, ಬೀರ (ತುಳು ಕವನ ಸಂಕಲನ)

೨೦. ವಿವೇಕ ರೈ. ಬಿ.ಎ., ೧೯೭೧, ತುಳು ಒಗಟುಗಳು, ಕನ್ನಡ ಸಂಘ, ಮಂಗಳಗಂಗೋತ್ರಿ, ಮಂಗಳೂರು-೫೭೫೧೯೯

೧೯೭೧, ತುಳು ಗಾದೆಗಳು, ಪಲಚಂವಿ ಪ್ರಕಾಶನ, ಮಂಗಳೂರು, ದ.ಕ.

೧೯೭೭, ತೌಳವ ಸಂಸ್ಕೃತಿ, ಸಹ್ಯಾದ್ರಿ ಪ್ರಕಾಶನ, ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಮೈಸೂರು-೧೨

೧೯೮೫, ತುಳು ಜನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೧೮.

೨೧. ಸುನೀತಾ ಎಂ. ಶೆಟ್ಟಿ, ೧೯೯೪, ನಾಗಸಂಪಿಗೆ, ಅಕ್ಷಯ ಪ್ರಕಾಶನ, ಸರ್ವೋದಯ ಸೊಸೈಟಿ, ಕುರ್ಲಾ (ಪೂ), ಮುಂಬಯಿ-೪೦೦೦೨೪