‘ಅಜ್ಜೇರ್ ಗೆನಾ ಸತ್ಯನಾಪುರದ ಎರಮನೆ ಜೈದೆರ್ ಗೆನಾ
ಪಾಡಾಯಿ ಪಣೆನಡೆಗ್ ತೋಡಾಯಿ ಕೆರೆ ನಡೆಗ್ ಪೋತೆರ್ ಗೆನಾ
ಕಂಕಣಿತ್ತಿ ಕಲ್ಲ ಮರಯಿನ್ ಮರಂಕಣೆ ಪಾಡ್ಯೇರ್ ಗೆನಾ
ಅಕ್ಕಸದ ಅಟ್ಟೆಪಣೆ ಕೈಕಾರೊ ಬಗ್ಗಾವೆರಜ್ಜೇರೋ ಓ ಓ ಅಜ್ಜೇರೊ…..
ಒಂಜಿ ತೊಟ್ಟೆ ಮರಯಿ ಪಾತಾಲದ ಪನಿನೀರ್ ಒಯ್ದೇರ್ ಗೆನಾ
ಕಲ್ಲು ಮರಾಯಿಗ್ ಗಿಡ್ಡಾಯ್ಯೆರ್ ಗೆನಾ ಕಂಚಿನ್ನ ಕೈ ಮರಯಿ ಪಾಡಿಯೆರ್ ಗೆನಾ
ಬುತ್ತಿ ಬಿನ್ನೆರೆಗ್ ನೀರ್ ಕೊರ್ಪೆರ್ ಗೆನಾ ಅಜ್ಜೇರೊ
ಕೊರಿ ನೀರ್ ಪತ್ಯೇರ್ ನಲುವೇರ್ ಬಿನ್ನೇರ್ ಓ…..
ಆ ಆ….. ಬಸರೂರುದ ಬಿನ್ನೇರ್ ಓ ಸತ್ಯನಾಪುರೊಡ ಓ….

ಸತ್ಯನಾಪುರದ ಬೆರ್ಮು ಮಾಲವರು ಅರಮನೆಗೆ ಬಂದ ಅತಿಥಿಗಳನ್ನು ಕಾಲು ತೊಳೆಯಲು ನೀರು ಕೊಟ್ಟು ಸತ್ಕರಿಸಿರುವ ಸಿರಿ ಪಾಡ್ದನದ ಈ ಒಂದು ಸಂದರ್ಭ ತುಳುನಾಡಿನ ಅತಿಥಿ ಸತ್ಕಾರದ ಸುಂದರ ಚಿತ್ರಣವನ್ನು ನಮಗೆ ನೀಡುತ್ತದೆ. ನಮ್ಮ ಎಲ್ಲಾ ಸಂಧಿ ಪಾಡ್ದನಗಳಲ್ಲಿ ಬರುವ ಭೌತಿಕ ಪರಿಸರ, ಪರಿಕರ, ಆಹಾರ ಅಹಾರ್ಯದ ವಿವಿರ ತುಳುವರು ಬಾಳಿ ಬದುಕಿದ ರೀತಿ ರಿವಾಜುಗಳಿಗೆ ಕೈ ಕನ್ನಡಿಯಿದ್ದಂತೆ, ಆಧುನಿಕ ಜೀವನದಲ್ಲಿ ಯಾಂತ್ರಿಕ ಬದುಕು ನಡೆಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಐತಿಹಾಸಿಕ, ಜಾನಪದ, ತುಳುವ ಪರಂಪರೆಯ ಜೀವನ ಶೈಲಿ ನೆನಪು ಮಾತ್ರ. ತುಳುನಾಡು ಹಿಂದೆ ಹೀಗಿತ್ತು ಇಂದು ಹೇಗಾಗಿದೆ ಎಂಬ ಪ್ರಶ್ನೆಗೆ ಉತ್ತರ ದೊರಯಬೇಕಾದರೆ ಇತಿಹಾಸ ಜಾಲಾಡಬೇಕಾಗುತ್ತದೆ. ಅಲ್ಲಿ ಶಬ್ದಗಳಲ್ಲಿ ಮೂಡಿರುವ ಚಿತ್ರಣವನ್ನು ಕಣ್ಣ ಮುಂಎ ತಂದುಕೊಳ್ಳಬೇಕಾಗುತದೆ.

ಒಂದು ಪ್ರದೇಶದ ಇತಿಹಾಸ,ಸಂಸ್ಕೃತಿ, ಪರಂಪರೆಯನ್ನು ಜನಪದ ವಸ್ತುಗಳು ಪ್ರತಿಬಿಂಬಿಸುತ್ತವೆ.ಅದರೆ ಈಗ ನಮ್ಮ ಜನಪದ ಸಂಸ್ಕೃತಿ, ವೈಜ್ಞಾನಿಕ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ನೇರ ದಾಳಿಗೆ ತುತ್ತಾಗಿ ನಲಗುತ್ತಿದೆ.

ತುಳುನಾಡಿನ ಬಡಗಿಗಳು, ಅಕ್ಕಸಾಲಿಗರು,ಕಂಚುಗಾರರು ಸಿದ್ಧಗೊಳಿಸುವ ವಿವಿಧ ವಸ್ತುಗಳಲ್ಲಿಕಂಡು ಬರುವ ಸಾಂಪ್ರಾದಾಯಿಕ ಚಿತ್ರ ವೈಖರಿ ಗಮನಾರ್ಹ. ದೇವಸ್ಥಾನ-ದೈವಸ್ಥಾನಗಳಲ್ಲಿ ಉಪಯೋಗಿಸುವ ವಿವಿಧ ಪೂಜಾ ಸಾಮಾಗ್ರಿಗಳು, ಪಾತ್ರೆ ಪರಡಿಗಳು,ಆಭರಣಗಳು, ಮೂರ್ತಿ, ಮೊಗ, ಕಡ್ತಲೆಗಳು, ಲೋಹ ಶಿಲ್ಪದ ಕಲಾವಂತಿಕೆ ಮಾದರಿಗಳಾಗಿವೆ. ಹಾಗೆಯೇ ತೇರು, ಗದ್ದಿಗೆ, ಬೋದಿಗೆ, ಕಂಬಗಳಲ್ಲೂ ವಿಗ್ರಹಾದಿಗಳಲ್ಲೂ ಪ್ರಕಟವಾಗಿರುವ ದಾರು ಶಿಲ್ಪದ ವಿಶೇಷತೆಯನ್ನು ಗಮನಿಸಬಹುದು.ಮರ ಬೀಳು,ಕವುಂಗಿನ ಹಾಳೆ, ತಾಳೆಗರಿ ಮುಂತಾದವುಗಳಿಂದ ರಚಿತವಾಗುತ್ತಿದ್ದ ಮನೆವಾರ್ತೆಗೆ ಬೇಕಾಗುವ ಅನೇಕ ವಸ್ತುಗಳಲ್ಲಿ ಕಂಡುಬರುವ ಜನಪದ ಕಲಾ ವಿನ್ಯಾಸ, ಶೈಲಿ ಪ್ಲಾಸ್ಟಿಕ್ ಯುಗದ ಈ ದಿನಗಳಲ್ಲಿ ಮರೆಯಾಗುತ್ತಿದೆ.ಆದರೆ ನಮಗೆಲ್ಲಾ ತಿಳಿದಿರುವಂತೆ ಬದುಕು ನಿರಂತರ ಪರಿವರ್ತನಶೀಲವಾದುದು. ನಿನ್ನೆ ಇಂದಿಗೆ ಹಳತಾಗುತ್ತದೆ. ಇಂದು ನಾಳೆಯ ಹೊಸತಿಗೆ ದಾರಿ ಬಿಟ್ಟು ಕೊಡಬೇಕಾಗುತ್ತದೆ. ಬದುಕಿನ ಬದಲಾವಣೆಯ ಈ ಅನಿವಾರ್ಯತೆ ನಮಗೆಲ್ಲಾ ಮನದಟ್ಟಾಗಿದ್ದರೂ ಸಾಧ್ಯವೋ ಅಸಾಧ್ಯವೋ ಹಳೆಯ ಮಧುರ ಸ್ಮೃತಿಗಳು, ಅನುಭವಗಳು ಯಾವುದಾದರೊಂದು ರೀತಿಯಲ್ಲಿ ಶಾಶ್ವತವಾಗಿಸುವ ಪ್ರಯತ್ನವನ್ನು ಸದಾ ನಡೆಸುತ್ತಲೇ ಇರುತ್ತವೆ.

ಜಾನಪದ ಅಧ್ಯಯನದ ಜನ ಜನಾಂಗದ, ಒಂದು ಪರಿಸರ ಕಳೆದು ಹೋದ ಬದುಕಿನ ಕುರಿತು ಅಭಿಪ್ರಾಯದಂತೆ ಕಾಯ್ದಿರಿಸುವಿಕೆ ಮತ್ತು ಸಂರಕ್ಷಣೆಯೇ (Conservation and Preservation) ಜಾನಪದ ಅಧ್ಯಯನದ ಮುಖ್ಯ ಕಾರ್ಯವಾಗಿದೆ. ಈ ಹೊತ್ತು ಜಾನಪದ ಜಾಗೃತಿ ಎಲ್ಲೆಡೆಯಲ್ಲೂ ಕಂಡುಬರುವಂತೆ ತುಳು ವಿಷಯದಲ್ಲಿಯೂ ಹೊಸ ಹುರುಪಿನಿಂದ ಮೂಡಿ ಬರುತ್ತಿರುವುದನ್ನು ನಾವು ಕಾಣಿತ್ತಿದ್ದೇವೆ. ತುಳುಜಾನಪದ ಕುರಿತಂತೆ ವೈಯುಕ್ತಿಕ ಅಧ್ಯಯನಗಳು, ಸಾಂಸ್ಥಿಕ ಪ್ರತಿಷ್ಠಾನಗಳೂ, ಸರಕಾರದ ಕೃಪಾಪೋಷಿತ ಅಕಾಡೆಮಿಗಳು ನಾನಾ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಈ ಪ್ರಯತ್ನಗಳಲ್ಲಿ ಬಹುಪಾಲು ವಿದ್ವತ್ವಲಯಕ್ಕೆ ಸೀಮಿತವಾಗಿ ಹೆಚ್ಚಾಗಿ ಶೈಕ್ಷಣಿಕ ಅಥವಾ Academic ನಿಟ್ಟಿನಲ್ಲಿ ಸಾಗುತ್ತಿವೆ ಎಂದು ನನಗನಿಸುತ್ತದೆ. ಈಚೆಗೆ ವಿಪುಲವಾಗುತ್ತಿರುವ ವಿಚಾರಗೋಷ್ಠಿಗಳಲ್ಲಿ, ಕಾರ್ಯಗಾರಗಳಲ್ಲಿ ತುಳು ಸಂಸ್ಕೃತಿಯ ನಾನಾ ಮುಖಗಳನ್ನು ಕುರಿತ ಆಳವಾದ,ವಿಶ್ಲೇಷಣಾತ್ಮಕವಾದ ಮಹತ್ವದ ಚಿಂತನೆಗಳು ಮುಡಿ ಬರುತ್ತಿರುವುದೇನೋ ನಿಜ. ಆದರೆ ಇದು ಅಧ್ಯಯನದ ಒಂದು ಮಗ್ಗಲು ಮಾತ್ರ. ತಾತ್ವಿಕ ಅಥವಾ ಸೈದ್ದಾಂತಿಕ ಎನ್ನಬಹುದಾದ ಮಗ್ಗುಲು. ಇದಕ್ಕೆ ಪೂರಕವಾಗಿ, ಪ್ರಾಯೋಗಿಕವಾದ ಪ್ರಾತ್ಯಕ್ಷಿಕವಾದ ಮಗ್ಗಲು ಒಂದಿದೆ. ಅದು ಪೂರಕಗೊಳ್ಳದ ಹೊರತು ನಮ್ಮ ಅಧ್ಯಯನ ಅರ್ಥಪೂರ್ಣವಾಗಲಾರದು.

ಈ ನಿಟ್ಟಿನಲ್ಲಿ ಒಂದು ಪ್ರದೇಶದ ಸಂಸ್ಕೃತಿ ಹಿನ್ನೆಲೆಯನ್ನು ಸಮಗ್ರವಾಗಿ ಅರಿತುಕೊಳ್ಳುವಲ್ಲಿ ವಸ್ತು ಸಂಗ್ರಹಾಲಯಗಳ ಪಾತ್ರವೇನು ಎಂಬುದನ್ನು ಅರ್ಥೈಸಿಕೊಳ್ಳಬಹುದು. ವಸ್ತು ಸಂಗ್ರಹಾಲಯವು ತನ್ನ ವಸ್ತುಗಳ ವ್ಯಾಖ್ಯಾನವನ್ನು ಸಂಶೋಧನೆ ಮತ್ತು ಪ್ರದರ್ಶನವೆಂಬ ಎರಡು ವಿಧದಿಂದ ಮಾಡುತ್ತದೆ.ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂಗ್ರಹಿಸಿ,ಸಂರಕ್ಷಿಸಿ ಕಾಪಾಡಿಕೊಂಡು ಬರಬೇಕೆಂಬ ಹೆಬ್ಬಯಕೆಯು ಭಾರತದ ವಸ್ತು ಸಂಗ್ರಹಾಲಯಗಳ ಬಗ್ಗೆ ಬ್ರಿಟಿಷರು ಹೊಂದಿದ್ದ ನೀತಿಯಾಗಿತ್ತು. ಆದುದರಿಂದ ವಸ್ತು ಸಂಗ್ರಹಾಲಯಗಳು ಸಂಶೋಧನಾ ಕೇಂದ್ರಗಳಾದವು. ವಿದ್ವಾಂಸರು ತಮ್ಮ ಆಸಕ್ತಿಯ ವಸ್ತುಗಳ ಮೇಲೆ ಅಭ್ಯಾಸ ಮಾಡಲು ಅನಕೂಲವಾಯಿತು. ಆದರೆ, ಸಮಾಜಕ್ಕೆ ಅವುಗಳ ಕೊಡುಗೆ ಬಹಳ ಅತ್ಯಲ್ಪವಾಗಿದೆ. ಸ್ವತಂತ್ರ ಭಾರತದ ವಸ್ತು ಸಂಗ್ರಹಾಲಯಗಳು ಸಾಧ್ಯವಾದ ಎಲ್ಲಾ ರೀತಿ-ನೀತಿಗಳಿಂದ ವಸ್ತು ಸಂಗ್ರಹಾಲಯಗಳು ಆಕರ್ಷಕ ಹಾಗೂ ಶಿಕ್ಷಣ ಪ್ರಧಾನವಾಗಿರುವಂತೆ ನೋಡಿಕೊಳ್ಳುತ್ತಿದೆ.

ಆಯಾ ಪ್ರದೇಶದ ಸಂಸ್ಕೃತಿಗೆ ಸಂಬಂಧಪಟ್ಟಂತೆ ಪ್ರಬಂಧ ಮಂಡನೆಯಾಗಿರುವ ಸಂದರ್ಭಗಳಲ್ಲಿ ಇದಕ್ಕೆ ಪೂರಕವಾದ ವಸ್ತುಗಳನ್ನು ಪ್ರತ್ಯಕ್ಷವಾಗಿಯೇ, ಮಾದರಿ ಅಥವಾ ಚಿತ್ರಗಳ ಮೂಲಕವೋ ತೋರಿಸದೆ ಹೋದರೆ ವಿಷಯವನ್ನು ಸಮಗ್ರವಾಗಿ ಗ್ರಹಿಸಿಕೊಳ್ಳುವಲ್ಲಿ ಅವರಿಗೆ ತೊಡಕುಂಟಾಗುವುದರಲ್ಲಿ ಸಂದೇಹವೇ ಇಲ್ಲ. ಆದುದರಿಂದ ತುಳುನಾಡಿನ ಸಂಸ್ಕೃತಿಯ ಸಾರ್ಥಕ ಅಧ್ಯಯನಕ್ಕೆ ಸೈದ್ಧಾಂತಿಕ ಹಾಗೂ ಪ್ರಾತ್ಯಕ್ಷಿಕ ಮಗ್ಗುಲುಗಳೆರಡರ ಅಧ್ಯಯನವು ಅನಿವಾರ್ಯವಾಗಿದೆ.

ದುರಂತವೆಂದರೆ ಆಧುನಿಕತೆಯ ಧಾವಂತದಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಸಾರಿಹೇಳಬಲ್ಲ ಅದೆಷ್ಟೊ ಪರಿಕರಗಳು, ವಸ್ತು ವಿಶೇಷಗಳು ನಾಶಗೊಂಡಿವೆ. ಕಂಚು, ಹಿತ್ತಾಳೆಯಿಂದ ನಿರ್ಮಿತವಾದವುಗಳಾದರೆ ಗುಜರಿ ಅಂಗಡಿ ಸೇರಿದರೆ, ಮರ-ಮಟ್ಟಿನಿಂದ ಸಿದ್ಧವಾದವುಗಳು ಒಲೆಯ ಪಾಲಾಗಿವೆ. ಪ್ಲಾಸ್ಟಿಕ್ ಯುಗದ ನಮಗೆ ನಮ್ಮ ಸಂಧಿ- ಪಾಡ್ದನಗಳಲ್ಲಿ ಕಂಡುಬರುವ ವಸ್ತು ವಿಶೇಷತೆಗಳು ಸಖೇದಾಶ್ಚರ್ಯವನ್ನುಂಟುಮಾಡುತ್ತವೆ. ನಮ್ಮ ಪೂರ್ವಜರು ಕೇಶಾಲಂಕಾರಕ್ಕೆ ಚಿನ್ನ, ಬೆಳ್ಳಿ, ಹಿತ್ತಾಳೆಯ ಬಾಚಣಿಗೆಯನ್ನು ಬಳಸುತ್ತಿದ್ದ ಉಲ್ಲೇಖಗಳು ಪಾಡ್ದನಗಳಲ್ಲಿ ಬಂದಾಗ ನಂಬಲಸಾದ್ಯವಾಗುತ್ತದೆ. ಅಳಿದುಳಿದು ಸಂಗ್ರಹಾಲಯಗಳನ್ನು ಸೇರಿಕೊಂಡು ಈ ವಸ್ತುಗಳನ್ನು ಕಂಡಾಗ ‌ಹೌದೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಸಾಮಾನ್ಯ ಪ್ರಾಚ್ಯ ವಸ್ತುವೊಂದು ಗತಕಾಲದ ಅನೇಕ ಅಂಶಗಳನ್ನು ತನ್ನದೇ ಆದ ರೀತಿಯಲ್ಲಿ ಆಧುನಿಕರಿಗೆ ರವಾನಿಸುವ ಕೆಲಸ ಮಾಡುತ್ತದೆ. ನಮಗೆ ಆ ಬಗ್ಗೆ ಆಸಕ್ತಿಯಿರಬೇಕು, ಅವುಗಳನ್ನು ಮಾತನಾಡಿಸುವ ಬುದ್ಧಿಯಿರಬೇಕು. ಆಗ ಮಾತ್ರ ಸಾಧ್ಯವಾಗುತ್ತದೆ.

ನಮ್ಮ ಪೂರ್ವಿಕರು ಬದುಕು ಪ್ರಕೃತಿಗೆ ತೀರಾ ಸಮೀಪವಾಗಿತ್ತು ಪ್ರಕೃತಿಯಲ್ಲಿ ಸುಲಭವಾಗಿ ಲಭ್ಯವಾಗುವ ಬಿದಿರು, ಮಣ್ಣು, ಮರ ಕಬ್ಬಿಣವೇ ಮುಂತಾದ ವಸ್ತುಗಳಿಂದ ತಮ್ಮ ಜೀನನಾನುಕೂಲಕ್ಕೆ ಬೇಕಾದ ವಸ್ತುಗಳನ್ನು ತಯಾರಿಸಿಕೊಂಡು ಬದುಕು ಸವೆಸಿ ಪ್ರಕೃತಿಯ ಒಂದು ಭಾಗವೇ ಆಗಿ ಬಾಳುತ್ತಿದ್ದರು. ಅವರ ನಂಬಿಕೆ ನಡವಳಿಕೆಗಳು ಪ್ರಕೃತಿಗೆ ಮಾರಕವಾಗಿರದೆ ಪೂಕರವಾಗಿರುತ್ತಿತ್ತು. ನನ್ನ ಸಂಗ್ರಹ ಕಾರ್ಯ ಸಂದರ್ಭದ ಒಂದು ನೆನಪು ಇಲ್ಲಿ ಪ್ರಸ್ತುತವೆನಿಸುತ್ತದೆ. ವಿಜಯನಗರದ ರಾಯರ ಆಳ್ವಿಕೆಯ ಕಾಲದಲ್ಲಿ ಬಜಪೆ ಸಮೀಪದ ಬೈಲಬೀಡಿನ ಬಲ್ಲಾಳರು ಪಾಳೇಗಾರರಾಗಿ ಮೆರೆದವರು. ಬಹಳ ಶ್ರಮಪಟ್ಟು ಜನವಾಸವಿಲ್ಲದ ಆ ಬೀಡಿನಲ್ಲಿ ಅಳಿದುಳಿದ ಅಪರೂಪವಾದ ವಸ್ತುಗಳನ್ನು ಕಾಣುವ ಅವಕಾಶ ಪಡೆದುಕೊಂಡೆ. ಕತ್ತಿ, ಭರ್ಚಿ, ಈಟಿ, ಬಾರಿ ಗಾತ್ರದ ಪೀಕದಾನಿ, ಪೂಜಾ ಸಾಮಾಗ್ರಿಗಳು, ಅಲಂಕಾರಿಕ ವಸ್ತುಗಳು ಮುಂತಾದವುಗಳು ಗಮನ ಸೆಳೆಯುವಂತಿತ್ತು. ಆದರೆ, ಅವುಗಳಾವುದು ನನ್ನಲ್ಲಿ ಅಂತಹ ಪರಿಣಾಮವನ್ನುಂಟು ಮಾಡಲಿಲ್ಲವೆಂದೇ ಹೇಳಬೇಕು.

ಇನ್ನೇನು ಬೀಡಿನಿಂದ ಹೊರಡಬೇಕನ್ನುವಷ್ಟರಲ್ಲಿ ವಿಶೇಷ ವಸ್ತುವೊಂದು ನನಗೆ ಗೋಚರಿಸಿತು. ಕುತೂಹಲದಿಂದ ವಿಚಾರಿಸಿದಾಗ ಅದೊಂದು ಹುಲಿ ಓಡಿಸುವ ಸಾಧನವೆಂದು ತಿಳಿಯಿತು. ಮೇಲ್ನೋಟಕ್ಕೆ ಬಡಗಿಯ ಕೀಸುಳಿಯಂತಿರುವ ಆ ವಸ್ತು ಮರದಿಂದ ತಯಾರಿಸಿದುದಾಗಿತ್ತು. ತಿರುಗು ಚಕ್ರವೊಂದರ ತಿರುಗಣೆಯಿಂದ ಕರ್ಕಶ ಶಬ್ದವೊಂದು ಸೃಷ್ಟಿಯಾಗಿವಂತೆ ಮಾಡಲಾದ ಬಡಗಿಯ ಜಾಣ್ಮೆಗೆ ತಲೆದೂಗಲೇ ಬೇಕು.

ನಮ್ಮ ಪೂರ್ವಜರು ಬಳಸಿದ ಸಾಮಾನ್ಯ ಗೆರೆಟೆಗೂ ಸಾಂಸ್ಕೃತಿಕ ಮೌಲ್ಯವಿದೆಯೆಂಬುದು ಬಲ್ಲವರ ಮಾತು. ಯಾಕೆಂದರೆ ಅವುಗಳ ತಯಾರಿಯ ಹಿಂದೆ ಒಂದು ಸಿದ್ಧಾಂತವಿರುತ್ತದೆ, ಒಂದು ಉದ್ದೇಶವಿರುತ್ತದೆ. ಅಂತಿರುವಲ್ಲಿ ಈ ಹುಲೆ ಓಡಿಸುವ ಸಾಧನೆ ನನ್ನಲ್ಲಿಒ ಆಶ್ವರ್ಯ ಹಾಗೂ ಕೂತೂಹಲವನ್ನುಂಟು ಮಾಡಿತ್ತು. ಹಿಂದಿನ ಕಾಲದಲ್ಲಿ ಹಾಡುಹಗಲೇ ಹಟ್ಟಿಯೊಳಗೆ ನುಗ್ಗಿ ದನ ಕರುಗಳನ್ನು ಕೊಂಡೊಯ್ಯುತ್ತಿದ್ದ ಕಾಡು ಪ್ರಾಣಿಗಳ ಹಾವಳಿಯ ಬಗ್ಗೆ ಕೇಳಿದ್ದೆ. ಆದರೆ, ಇವುಗಳನ್ನು ಈಟಿ-ಬಲ್ಲೆ ಅಥವಾ ಕೋವಿಯಂತಹ ಆಯುಧಗಳನ್ನು ಬಳಸಿ ಕೊಲ್ಲುವ ಅಥವಾ ಓಡಿಸುವ ಬದಲಿಗೆ ಹೆದರಿಸಿ ಓಡಿಸುತ್ತಿದ್ದರೆಂದರೆ ಒಂದೋ ಕಾಡು ಪ್ರಾಣಿಗಳನ್ನು ಎದುರಿಸಲಾಗದ ಅಸಹಾಯಕ ಸ್ಥಿತಿ ಅಥವಾ ಜೈನರ ಅಹಿಂಸಾವಾದ ಇದಕ್ಕೆ ಕಾರಣವಾಗಿರಬಹುದೆಂಬುದಾಗಿ ಊಹಿಸಿಕೊಳ್ಳಬಹುದು.

ನನ್ನ ಅನುಭವದಂತೆ ಈ ಹುಲಿ ಓಡಿಸುವ ಸಾಧನವೊಂದರ ಸಹಾಯದಿಂದ ಆ ಕಾಲದ ಭೌಗೋಳಿಕ ಹಾಗೂ ಸಾಮಾಜಿಕ ಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಬಹುದು. ಮನೆಯೊಂದರಲ್ಲಿ ಹುಲಿ, ಹಂದಿ, ವಿವಿಧ ಪಕ್ಷಿ ಪ್ರಕಾರಗಳನ್ನು ಓಡಿಸುವ ಸಾಧನಗಳನ್ನು ಧಾರಾಳವಾಗಿ ಬಳಸುತ್ತಿದ್ದರೆಂದರೆ ಆ ಕಾಲದಲ್ಲಿರಬಹುದಾದ ದಟ್ಟವಾದ ಕಾಡು, ಬಾರಿ ಸಂಖ್ಯೆಯಲ್ಲಿದ್ದ ಕಾಡು ಪ್ರಾಣಿಗಳ ಹಾವಳಿ, ಅವುಗಳಿಂದಾಗುತ್ತಿದ್ದ ತೊಂದರೆ ಇವೆಲ್ಲದರ ಕಲ್ಪನೆಗೆ ಇದು ದಾರಿ ಮಾಡುಕೊಡುತ್ತದೆ. (ಈ ಸಂಗ್ರಹಕಾರನಿಗೆ ಹೆಚ್ಚಿನ ಮನೆ, ಬೀಡುಗಳಲ್ಲಿ ದೊರೆತಿರುವ ವಿವಿಧ ಕಾಡು ಪ್ರಾಣಿಗಳ ಅವಶೇಷಗಳೇ ಸಾಕ್ಷಿ)

ಕೃಷಿ, ಮೀನುಗಾರಿಕೆ, ಮೂರ್ತಿಗಳು ತುಳುನಾಡಿದ ಪ್ರಮುಖ ವ್ಯವಸಾಯಗಳಾಗಿದ್ದು, ಈ ಮೂರು ವೃತ್ತಿಗೆ ಸಂಬಂಧಪಟ್ಟಂತೆ ಬಳಕೆಯಾಗುತ್ತಿದ್ದ, ಬಹುತೇಕ ಎಲ್ಲಾ ವಸ್ತು ಪರಿಕರಗಳು ಕಣ್ಮರೆಯಾಗತೊಡಗಿವೆ. ನಿರ್ಮಾಣಕಾರರಾದ ಕಮ್ಮಾರರು, ಬಡಗಿಗಳು ಜೀವನಾಧಾರಕ್ಕೆ ಅನ್ಯದಾರಿ ಹಿಡಿಯುವ ಅನಿವಾರ‍್ಯತೆ ಉಂಟಾಗಿದೆ. ಗೃಹಕೃತ್ಯಕ್ಕೆ ಬಳಕೆಯಾಗುತ್ತಿದ್ದ ವಿವಿಧ ಮಣ್ಣಿನ ಪಾತ್ರೆಗಳನ್ನು ರಚಿಸುತ್ತಿದ್ದ ಕುಂಭಕಾರರು, ಕಂಚು ಹಿತ್ತಾಳೆಯ ಪಾತ್ರೆಗಳನ್ನು ರಚಿಸುತ್ತಿದ್ದ ಕಂಚುಕಾರನು, ಬಗೆ ಬಗೆಯ ಬಟ್ಟೆಗಳನ್ನು ನೇಯುತ್ತಿದ್ದ ನೇಕಾರರು, ಎಣ್ಣೆ-ಅವಲಕ್ಕಿ ಇತ್ಯಾದಿಗಳನ್ನು ತಯಾರಿಸುತ್ತಿದ್ದ ಗಾಣಿಗರು, ಹೀಗೆ ವಿವಿಧ ವೃತ್ತಿಕಾರರು ತಯಾರಿಸುತ್ತಿದ್ದ ವೃತ್ತಿ ಸಾಧನಗಳು ಇನ್ನಿಲ್ಲವಾಗುತ್ತಿವೆ.

ಕೆಲವು ದಶಕಗಳ ಹಿಂದಿನ ಸಮಾಚಾರ, ಸಾಮಾನು ಸರಂಜಾಮುಗಳ ಸಾಗಾಟ ವ್ಯವಸ್ಥೆಯ ಪ್ರಥಮ ಸಾಧನವಾಗಿದ್ದ ಎತ್ತಿನ ಗಾಡಿಗಳು ಇಂದು ಇತಿಹಾಸವೇ ಸರಿ. ಇಂದಿನ ತಲೆಮಾರಿಗೆ ಇವುಗಳನ್ನು ಕಣ್ಣಲ್ಲಿ ಕಾಣುವುದು ದುಸ್ತರವಾಗಿದೆ. ಎತ್ತಿನ ಗಾಡಿಯೊಂದನ್ನು ಹೊಂದಿದ್ದಾತ ಆ ಕಾಲದಲ್ಲಿ ಸಾಹುಕಾರನೇ ಸರಿ. ಈ ಎತ್ತಿನ ಗಾಡಿಯ ಪ್ರಯಾಣದ ಅನುಭವಗಳನ್ನು ಇಂದಿನ ಪೀಳಿಗೆ ಕತೆ ಕಾದಂಬರಿಗಳನ್ನು ಓದಿ ತಿಳಿಯಬೇಕಾದ ದುರಂತ ಎದುರಾಗಿದೆ. ವಿಶೇಷ ಉಲ್ಲೇಖಗಳಿಲ್ಲದ ಸಂಧಿ ಪಾಡ್ದನಗಳಿಲ್ಲವೆಂದೇ ಹೇಳಬೇಕು. ಅಷ್ಟು ಮಹತ್ತರ ಸ್ಥಾನ ಈ ಏತಕ್ಕೆ.ಪಣೆ ಅಥವಾ ಚೊಟ್ಟೆ ಮರಾಯಿಯೆಂದು ಕರೆಯಲ್ಪಡುವ ಈ ನೀರೆತ್ತುವ ಸಾಧನ ತುಳುವರು ಕೃಷಿ ಬದುಕಿನ ಅವಿಭಾಜ್ಯ ಅಂಗ. ಒಂದು ಕಾಲದಲ್ಲಿ ನೂರಾರು ಪಣೆಗಳನ್ನು ಹೊಂದಿದ್ದುದರಿಂದಲೇ ಪಾಣೆಮಂಗಳೂರು, ಪಣೆಗಳು ಊರಿ ಪಾಣೀರಾಯಿತೆಂದು ಹೇಳಲಾಗಿದೆ. ಹಿಂದಿನ ದಿನಗಳಲ್ಲಿ ಒಂದು ಮನೆಗೆ ಕನಿಷ್ಟ ಐದಾರು ಏತಗಳಿರುತ್ತಿದ್ದವು. ಕೆಲವು ಪ್ರದೇಶಗಳಲ್ಲಿ ಸುಗ್ಗಿ ಕೊಳಕೆಗಳೆರಡೂ ಈ ಏತಗಳ ನೀರಿನ ಆಧಾರದಿಂದಲೇ ಬೆಳೆಯುವಂತಹವು. ಮನೆ ಮಂದಿಗೆಲ್ಲಾ ಈ ಏತದಲ್ಲಿ ನೀರೆತ್ತುವುದೇ ನಿತ್ಯ ಕಸುಬಾಗಿತ್ತು. ಬೆಳಗ್ಗೆ ಹಾಗೂ ಸಂಜೆಯ ಹೊತ್ತಿಗೆ ಏತಗಳಲ್ಲಿ ನೀರೆತ್ತುವಾಗಿನ ಶಬ್ದ, ನಿಶ್ಯಬ್ದ ಬಯಲಿನಲ್ಲಿ ಹೊಸತೊಂದು ವಾತಾರವಣವನ್ನೇ ನಿರ್ಮಿಸುತ್ತಿತ್ತು. ಇಂದು ಏತ ಕಣ್ಮರೆಯಾಗಿದೆ.ಅದರೊಂದಿಗೆ ಅದರ ವಿವಿಧ ಭಾಗಗಳಲ್ಲಿನ ತುಳು ಹೆಸರುಗಳು ಬಳಕೆಯಿಂದ ದೂರವಾಗಿದೆ, ಮರಾಯಿ, ಕರಿ, ನಾವು, ಕುಂಡಚ್ಚೆ, ಗಿರ್ ಗೋಲು ಬೆರ್ ಸೋಲು, ದಂಬೆ, ನೊಗ, ಹೀಗೆ ೩೦ಕ್ಕಿಂತಲೂ ಹೆಚ್ಚು ಶಬ್ದಗಳನ್ನು ಏತವೊಂದಕ್ಕೆ ಸಂಬಂಧಪಟ್ಟಂತೆ ಕಾಣಬಹುದು. ಇದು ಏತಗಳಿಗಷ್ಟೇ ಸೀಮಿತವಲ್ಲ. ಕೃಷಿ ಸಂಬಂಧಿತ ಹಲವು ವಸ್ತುಗಳ ಸ್ಥಿತಿಯೂ ಇದೇ ಆಗಿದೆ. ಅಧುನಿಕ ಇಲೆಕ್ಟ್ರಿಕ್ ಪಂಪುಸೆಟ್ಟುಗಳ ಭರಾಟೆಯಲ್ಲಿ ಏತದಂತೆಯೇ ವಿವಿಧ ನೀರೆತ್ತುವ ಸಾಧನಗಳು ಮಾಯವಾಗಿ ಬಿಟ್ಟಿವೆ.

ಅಕ್ಕಿ, ಭತ್ತ, ದವಸ ಧಾನ್ಯಗಳನ್ನು ಮುಡಿ ಕಟ್ಟಿ ರಕ್ಷಿಸಿಡುವ ತುಳುವರ ಕಲಾತ್ಮಕ ವಿಧಾನ ಇಂದು ಬಹುತೇಕ ಮರೆತೇ ಹೋಗಿದೆ. ಸ್ಟೋನ್ ಲೆಸ್ ಅಕ್ಕಿ, ಫೈಬರ್ ಚೀಲಗಳಲ್ಲಿ ಇಂದು ಲಭ್ಯ. ಆದರೆ ಇಂದೆಂದಿಗೂ ತುಳುವರು ಅಕ್ಕಿ ಮುಡಿಗೆ ಸಾಟಿಯಾಗಲಾರದು.ಮುಡಿ ಕಟ್ಟಲು ಬಳಸುತ್ತಿದ್ದ ಬೈಹುಲ್ಲಿನ ಮೊರಜ್ಜವನ್ನು ತಿಂಗಳ ಬೆಳಕಿನಲ್ಲಿ ಮಕ್ಕಳ ಸಹಾಯದಿಂದ ಹಿರಿಯರು ರಚಿಸುತ್ತಿದ್ದ ಆ ದಿನಗಳನ್ನು ನೆನೆಯುವಾಗ ಮನಸ್ಸು ಮುದಗೊಳ್ಳುತ್ತದೆ. ಇದು ಮೊರಜ್ಜ ಬಿಡುವವರಿಲ್ಲ. ಮುಡಿ ಕಟ್ಟುವವರಿಲ್ಲ. ಇದರ ಪೂರಕ ಪರಿಕರಗಳಾದ ಕೊದಂಟಿ, ಕಲ್ಲೆ, ಮುರ್ನಾಲಿ, ಮೂಲೆ ಸೇರಿದೆ. ಅಳತೆ ಸಾಮಾಗ್ರಿಗಳಾದ, ಕಳಸೆ, ಬಳ್ಳ, ಸೇರು ಪಾವು, ಚಟಕ್,ಮರೆತೇ ಹೋಗಿದೆ.

ಇಜಿಪ್ಟಿನಿಯರು ಸಹಸ್ರಾರು ವರ್ಷಗಳ ಹಿಂದೆ ನೇಗಿಲ ನೊಗವನ್ನು ಕಂಡು ಹುಡಕುವುದರೊಂದಿಗೆ, ಅಧುನಿಕ ಕೃಷಿ ಪದ್ದತಿಗೆ ಚಾಲನೆ ನೀಡಿದ್ದಾರೆ. ಆದರೆ, ಇಂದು ಮರದಿಂದ ನಿರ್ಮಿತವಾದ ನೇಗಿಲೇ ಕಾಣ ಸಿಗದು. ಇದರ ರಚನೆಗೆ ಬೇಕಾಗುವ ಮರಮುಟ್ಟುಗಳೂ ಅಲಭ್ಯವೆನ್ನಿ. ನೊಗದ ತಯಾರಿಕೆಯಲ್ಲಿಯೂ ಬಡಗಿಗಳೂ ತಮ್ಮ ಕಲಾ ಕೌಶಲ್ಯವನ್ನು ಮರೆಯುತ್ತಿದ್ದರು. ಸುಂದರ ಕೆತ್ತನೆಯನ್ನೊಳಗೊಂಡ ನೊಗಗಳು ಗುತ್ತಿನ ಗತ್ತಿಗೆ ಸಾಕ್ಷಿಯಾಗಿ ನಿಲ್ಲಬಲ್ಲವಂತಾಗಿದ್ದವು.

ತುಳುನಾಡಿನ ಪ್ರಮುಖ ವ್ಯವಸಾಯಗಳಲ್ಲೊಂದಾದ ಮೀನುಗಾರಿಕೆ ನಿಜವಾಗಿಯೂ ಇಂದು ಕಷ್ಟದಲ್ಲಿದೆ. ಯಾಂತ್ರೀಕೃತ ದೋಣಿಗಳ ಅಕ್ರಮಣಕ್ಕೆ ತುತ್ತಾಗಿ, ಪಾರಂಪರಿಕ ಮೀನುಗಾರಿಕೆ ನೇಪಥ್ಯಕ್ಕೆ ಸರಿಯುತ್ತಿದೆ. ವಿವಿಧ ಋತುಗಳಿಗೆ, ಕಾಲಕ್ಕೆ ತಕ್ಕಂತೆ ಉಪಯೋಗಿಸುತ್ತಿದ್ದ ಮಾರಿಬಲೆ ರಂಪಣಿ, ಪಟ್ಟಿಬಲೆ ಕಂತಲೆ, ರಾತ್ರಿಬಲೆ ಇತ್ಯಾದಿ ವೈವಿಧ್ಯಮಯ ವಸ್ತುಗಳು ಇಂದು ನಾಶವಾಗಿ ಹೋಗುತ್ತಿವೆ.ಇನ್ನು ಸಿಹಿನೀರಿನ ಅಥವಾ ಒಳಪ್ರದೇಶದಲ್ಲಿ ಮೀನು ಹಿಡಿಯಲು ಬಳಸುತ್ತಿದ್ದ ಕೂರಿ, ಮಕ್ಕೇರಿ, ಕುಂಜೊಲುಗಳೆಂಬ ಹೆಸರುಗಳು ಇಂದಿ ತಲೆಮಾರಿಗೆ ವಿಚಿತ್ರವೆನಿಸಬಹುದು. ಅಂತರ್ಜಲದ ಮಟ್ಟ ಕುಸಿಯುತ್ತಿದ್ದಂತೆ, ಅಳಿದುಳಿದ ವಿವಿಧ ಜಾತಿಗಳು ವಿನಾಶದ ಅಂಚಿನಲ್ಲಿವೆ.

ತುಳುನಾಡು ಸಾಗರೋತ್ತರ ವ್ಯಾಪಾರದಲ್ಲೂ ಮಂಚೂಣಿಯಲ್ಲಿತ್ತು. ವಿದೇಶಿ ವ್ಯಾಪಾರದ ಪ್ರಾಚೀನತೆಗೆ ಹಲವು ಖಚಿತ ಸಾಕ್ಷಿಗಳಿವೆ. ಅಂದು ಬಳಸುತ್ತಿದ್ದ ದುಗ್ಗಿ, ಕಪ್ಪಲು, ಮಂಜಿ, ಮಚ್ವೆ, ಪತ್ತೆಮಾರುಗಳೂ ಇಂದು ನಾಪತ್ತೆಯಾಗಿವೆ. ತುಳುನಾಡಿನ ದೈವ ದೇವರುಗಳೂ ಮೂರ್ತೆಗಾರನಿಗೆ ಒಲಿದ ಉದಾಹರಣೆಗಳಿವೆ. ಈ ವೃತ್ತಿಯ ಹಿಂದೆ ಅನೇಕ ಐತಿಹ್ಯಗಳೇ ಅಡಿಗಿವೆ.ಅದರೆ, ಮೂರ್ತೆಗಾರಿಕೆ ಮಾತ್ರ ಇಂದು ಬೇಡದ ಕಸುಬಾಗಿದೆ. ಈ ವೃತ್ತಿಗೆ ಬಳಕೆಯಾಗುತ್ತಿದ್ದ ಪರಿಕರಗಳು ಅವುಗಳ ಹೆಸರುಗಳೂ ನಾಪತ್ತೆಯಾಗುತ್ತಿವೆ. ಕಡ್ಯ, ಕುಜಿಲ್, ತೂರಿ, ತೊಡಂಕ್, ತರ್ಕತ್ತಿ, ಲಾದರ್, ಲಟಪಟ ದೊಣ್ಣೆ ಹಾಗೆಯೇ ಬೆಲಲ್ ತಯಾರಿಕೆಯ ವಿವಿಧ ಸಾಮಾಗ್ರಿಗಳು ಮುಂದಿನ ಪೀಳಿಗೆಗೆ ಕಾಣಸಿಗದು.

ಗೃಹಪಯೋಗಿ ವಸ್ತುಗಳ ಬಳಕೆಯಲ್ಲೂ ತುಳುವರು ಕಲಾವಂತಿಕೆ ಪ್ರಕಟವಾಗುತ್ತದೆ. ವಿವಿಧ ಗಾತ್ರದ ಮಣ್ಣಿನ ಪಾತ್ರೆಗಳಾದ ಕರ, ಬಿಸಲೆ, ಬಂಡಿ ಬಿಸಲೆ, ಒಗ್ಗಿ ಬಿಸಲೆ, ಕುದ್ದೆ, ನೀರಡ್ಯರ, ಮಂಡೆಗದ್ದವು, ಗದ್ದವು, ಪಲ್ಲಯಿ, ಬಾವಡೆಯಿಂದ ತೊಡಗಿ ಬೃಹತ್ ಮಂಡೆಗಳವರೆಗೆ ಮಣ್ಣಿನ ಮಕ್ಕಳಿದಂಲೇ ತಯಾರಿಸಲ್ಪಡುತ್ತಿತ್ತು.ಪುಟ್ಟ ಪೆಟ್ಟಿಗೆಗಳಿಂದ ತೊಡಗಿ, ಬಾರಿ ಗಾತ್ರದ ಕಲೆಂಬಿ, ಪತ್ರಾಯಿ ಅಪೂರ್ವವಾದುದು. ತುಳುವರಿಗೆ ತಾಂಬೂಲ ಸೇವನೆ ಅತ್ಯಂತ ಪ್ರಿಯವಾದುದು.ಅತಿಥಿ ಸತ್ಕಾರದಲ್ಲಿ ಇದರ ಪಾತ್ರವಂತೂ ಮಹತ್ವಪೂರ್ಣ. ಅವರವರ ಸ್ಥಾನಮಾನಕ್ಕೆ ಸರಿಯಾಗಿ ತಾಂಬೂಲಕ್ಕೆ ಸಂಬಂಧಪಟ್ಟ ಪರಿಕರಗಳು ಬಳಕೆಯಾಗುತ್ತಿದ್ದವು. ಜಾರುಹರಿವಾಣಗಳನ್ನು ಮೊದಲ್ಗೊಂಡು ವಿವಿಧ ನಮೂನೆಯ ಅಡಕತ್ತರಿಗಳು, ಪೀಕದಾನಿಗಳು ತುಳುವರು ರಸಿಕತೆಗೆ, ಕಲಾವೈವಿಧ್ಯಕ್ಕೆ ಸಾಕ್ಷಿಯಾಗುತ್ತವೆ. ಕಂಚಿ, ಹಿತ್ತಾಳೆ, ತಾಮ್ರ, ಕಬ್ಬಿಣದಿಂದ ತಯಾರಿಸಲ್ಪಟ್ಟ ಲೋಟಗಳು, ತಟ್ಟೆ-ಬಟ್ಟಲುಗಳು, ಚೆಂಬುಗಳು, ಕೊಡಪಾನಗಳು, ರೈಲು ಚೆಂಬುಗಳು, ಗಿಂಡೆಗಳು, ದೀಪಗಳು ಇತ್ಯಾದಿ ಸ್ಥಾನಪಲ್ಲಟಗೊಂಡು ಇಲ್ಲಿ ಪ್ಲಾಸ್ಟಿಕ್, ಸ್ಟೀಲ್ ನಿಂದ ನಿರ್ಮಿತಗೊಂಡಿರುವ ವಸ್ತುಗಳು ತುಂಬಿಕೊಂಡಿವೆ.

ನಾನಾ ಕೆಲಸಗಳಿಗೆ ಬಳಕೆಯಾಗುತ್ತಿದ್ದ ವಿವಿಧ ಮಾದರಿಯ ಕತ್ತಿಗಳಾದ ಗೆಜ್ಜೆ ಕತ್ತಿ, ತರ್ಕತ್ತಿ, ಕೊಯ್ಲತ್ತಿ, ಅಂಡೆ ಕತ್ತಿ, ಕಡ್ ಪತ್ತಿ, ಮುಟ್ಟತ್ತಿ ಇಂದು ಯಾರಿಗೂ ಬೇಡವಾಗಿವೆ. ತೆಂಗು, ತಾಳೆಗರಿ, ಮಂಡಕನ ಗರಿಗಳಿಂದ ತಯಾರುಗೊಳ್ಳುತ್ತಿದ್ದ ಚಾಪೆ, ಬುಟ್ಟಿ, ಬೀಸಣಿಕೆಗಳು, ಬೀಳಲುಗಳುಂದ ಸಿದ್ದವಾಗುತ್ತಿದ್ದ ಬುಟ್ಟಿ, ಕುರುವೆ, ತಡ್ಪೆ, ಕಂಚಿ ತಡ್ಪೆ ಮುಂತಾದವುಗಳು ಸ್ಥಳೀಯರಿಂದ ರಚನೆಯಾಗುತ್ತಿತ್ತು.

ಆಹಾರ-ಆಹಾರ್ಯದಲ್ಲೂ ಅದೆಷ್ಟು ವೈವಿದ್ಯತೆ! ಎಂತಹ ಸರಳ ಬದುಕಿಗೂ ಒಗ್ಗಿಕೊಳ್ಳಬಲ್ಲ ಇವರು, ಸಂದರ್ಭ ಅವಕಾಶ ಸಿಕ್ಕಿದಾಗಲೆಲ್ಲಾ ಅಹಾರ ವಿಧಾನದಲ್ಲಿಯೂ ತಮ್ಮ ವೈವಿದ್ಯತೆಯನ್ನು ಮೆರೆಯುತ್ತಿದ್ದರು.

ಹೋಟೇಲು ಉದ್ಯಮದಲ್ಲಿಯೂ ತುಳುವರಿಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಎಂತವರ ಬಾಯಲ್ಲೂ ನೀರೂಡಿಸಬಲ್ಲ ನಮ್ಮ ವಿವಿಧ ಖಾದ್ಯಗಳ ರುಚಿಯನ್ನು ಇತರ ಪ್ರಾಂತ್ಯದವರಿಗೂ ಅಂಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ನೆಚ್ಚಿನ ತಿಂಡಿಗಳಾದ ಸೇಮಯಿದಡ್ಡೆ, ಸಿಕೆತ್ತಡ್ಡೆ,ಉಬ್ಬುರೊಟ್ಟಿ, ಕಪ್ಪ ರೊಟ್ಟಿ ಇವೆಲ್ಲವುಗಳ ತಯಾರಿಗೆ ಬಳಸಲಾಗುತ್ತಿದ್ದ ಪಾರಂಪರಿಕ ಸಾಧನಗಳ ತಯಾರಿಯೇ ಇಂದು ನಿಂತು ಹೋಗಿದೆ.

ಉಡುಗೆ-ತೊಡುಗೆಗಳೋ ಇಲ್ಲಿನ ಹವಾಮಾನಕ್ಕನುಗುಣವಾಗಿದೆ. ಆದರೆ ಇದು ಕೂಡಾ ಏಕರೂಪಿ ಸಂಸ್ಕೃತಿಯಿಂದ ಹೊರತಾಗಿ ಉಳಿದೆಲ್ಲವೆಂಬುದು ಖೇದಕರ ವಿಚಾರ. ಆಟ-ಮನೋರಂಜನೆ, ಆರಾಧನಾ ಸಂಬಂಧಿ ಆಚರಣೆಗಳು ಇಂದು ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಭಯವಿದೆ. ಹಿಂದೆ ಹೇಳಿರುವಂತೆ ಕಾಲದಲ್ಲಿ ವೇಗದಲ್ಲಿ ಕೊಚ್ಚಿಕೊಂಡು ಬದುಕಿನ ಬಹುತೇಕ ಅಂಶಗಳು ಕಣ್ಮರೆಯಾಗುತ್ತಲೇ ಇರುತ್ತವೆ. ಆದರೆ ಆ ಸಾಂಸ್ಕೃತಿಕ ಸಂಪತ್ತಿನ ವಾರಿಸುದಾರರಾದ ಮುಂದಿನ ಯುವ ಪೀಳಿಗೆಯವರು ಇದರಿಂದ ವಂಚಿತರಾಗದಂತೆ ನೋಡುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಆಕರಸೂಚಿ

೧. ಪ್ರೊ. ಎ.ವಿ. ನಾವಡ (ಸಂ), ೧೯೯೯
ಸಿರಿ ಪಾಡ್ದನ ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೨.ಬಿ.ಎ. ವಿವೇಕ ರೈ, ೧೯೮೫
ತುಳು ಜಾನಪದ ಸಾಹಿತ್ಯ ಪ್ರ.: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೩. ತಾಳ್ತಜೆ ವಸಂತಕುಮಾರ್, ೨೦೦೧
ಮುತ್ತಿಗೆ ಸತ್ತಿಗೆ, ಪ್ರ.: ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ,ಮುಂಬಯಿ

೪. ಕೇಶವ ಉಚ್ಚಿಲ್, ೧೯೮೪
ಕಣ್ಮರೆಯಾಗುತ್ತಿರುವ ತುಳು ಬದುಕು (ಸಂ)ತುಕಾರಾಂ ಪೂಜಾರಿ

೬. ಯಶಸ್ವಿನಿ, ೨೦೦೭
ತುಳು ಬದುಕಿನಲ್ಲಿ ಕಲಾವಂತಿಕೆ