ವ್ಯಕ್ತಿ ಐತಿಹ್ಯಗಳು

೧. ಅಸಾಮನ್ಯ ಬಲ ಪ್ರದರ್ಶಕ ವ್ಯಕ್ತಿಗಳು
ಪುಳ್ಳೂರು ಬಾಚ (ಮಾಯಿಪ್ಪಾಡಿ ಅರಮನೆ ಜಟ್ಟಿ)
ಸ್ಥಳ: ಪುಳ್ಳೂರು, ಸಿರಿಬಾಗಿಲು ಗ್ರಾಮ, ಕಾಸರಗೋಡು ತಾಲೂಕು

ವಕ್ತೃಗಳು: ೧. ಗೋಪಾಲಕೃಷ್ಣ ಶ್ಯಾನುಭಾಗ, ಕೂಡ್ಲು ಕಾಸರಗೋಡು

೨. ರಾಮಯ್ಯ ನಾಯ್ಕ, ಸಿರಿಬಾಗಿಲು, ಕಾಸರಗೋಡು

ಗ್ರಂಥಾಧಾರ: ‘ಪುಳ್ಕೂರು ಬಾಚ’- ಬೇಕಲ ರಾಮ ನಾಯಕ

ಬಾಚನು ಭಾರೀ ಗಾತ್ರ (ಬಾರ)ದ ಕಲ್ಲು ಹೊತ್ತ ಎರಡು ಪ್ರಸಂಗಗಳು

ಮಾಯಿಪ್ಪಾಡಿ ಅರಮನೆಯ ಮುಂದಿನ ತೋಡಿಗೆ ಸಂಕ (ಪಾಪು, ಸೇತುವೆ) ಹಾಕಿಸಲು ನಿರ್ಧರಿಸಿದ ಅರಸನು ತನ್ನ ಪಾರುಪತ್ಯಗಾರರನ್ನು ಕರೆದು ಆ ಕುರಿತು ಸಮಾಲೋಚನೆ ನಡೆಸುತ್ತಾನೆ. ಆಗ ಪಾರುಪತ್ಯಗಾರನನ್ನು ಪಟ್ಲದ ಕೋಟೆ ಕಣಿಯಲ್ಲಿ ಸಂಕಕ್ಕೆ ತಕ್ಕುದಾದ ಒಂದು ಹಾಸುಗಲ್ಲು ಇದೆಯೆಂದೂ ಬಾಚನು ಮನಸ್ಸು ಮಾಡಿದರೆ ತಾನೊಬ್ಬನೇ ಅದನ್ನು ಹೊತ್ತು ತರಬಲ್ಲನೆಂದೂ ಹೇಳುತ್ತಾನೆ. ಅದರಂತೆ, ಅರಸನ ಅಪೇಕ್ಷೆಯ ಮೇರೆಗೆ ಆತನು ಬಾಚನನ್ನು ಕರೆದುಕೊಂಡು ಪಟ್ಲಕ್ಕೆ ಹೊರಡುತ್ತಾನೆ. ಬಾಚನು ಆ ಕಲ್ಲನ್ನು ಹೊರುವುದು ಬಿಟ್ಟು ಅಲುಗಿಸುವುದೇ ಕನಸಿನ ಮಾತೆಂದು ನೆರೆದ ಜನರೆಲ್ಲಾ ಪಿಸು ಮಾತಲ್ಲಿ ಗೇಲಿ ಮಾಡುತ್ತಿದ್ದಂತೆಯೇ ಆತನು ಮಣ್ಣಲ್ಲಿ ಹೋಗಿದ್ದ ಕಲ್ಲಿನ ಒಂದು ತುದಿಗೆ ಕೈಯಿಕ್ಕಿ ಜಗ್ಗಿಯೇ ಬಿಟ್ಟನು. ದಪ್ಪವಾಗಿ, ಹರವಾಗಿ, ಉದ್ದವಾಗಿದ್ದ ಈ ಹಾಸುಗಲ್ಲು ಅಲ್ಲಿ ಮಾಯಿಲಕೋಟೆಯ ಕಂದಕಕ್ಕೆ ಹಾಕಿದ್ದ ಸಂಕದ ಕಲ್ಲಾಗಿತ್ತು. ಬಾಚನು ಹೊದೆದ್ದ ಹಚ್ಚಡವನ್ನು ಸುತ್ತಿ ಸಿಂಬಿಮಾಡಿ ತಲೆಗಿಟ್ಟು ಕುಳಿತುಕೊಂಡನು. ಒಕ್ಕಲುಗಳ ಸನ್ನೆ, ಸಬಳ-ಸಲಕರಣೆಗಳ ಸಹಾಯದಿಂದ ಹೇಗಾದರೂ ಮಾಡಿ ಆ ಕಲ್ಲಿನ ಒಂದು ತುದಿಯನ್ನು ಬಾಚನ ತಲೆಗಾನಿಸಿದರು. ಅದನ್ನು ಸರಿಪಡಿಸಿಕೊಂಡು ಎದ್ದು ನಿಂತ ಬಾಚನು ಒಂದೇ ಉಸುರಿಗೆ ದಾಪುಗಾಲಿಕ್ಕುತ್ತ ಅರಮನೆದಾರಿ ಹಿಡಿದ. ಅರಸನು ಹಿಂದೆ ಸೂಚಿಸಿದ್ದ ಪ್ರಕಾರ ಅರಮೆ ಎದುರಿನ ತೋಡಿಗೆ ಸಂಕವಾಗಿ ಅದನ್ನು ಇರಿಸಿದ. ಅರಸ ಮತ್ತು ಪಾರುಪತ್ಯಗಾರರೂ ಸೇರಿದಂತೆ ಜನರೆಲ್ಲರೂ ಬಾಚನನ್ನು ಕೊಂಡಾಡಿದರು. ಈಗಲೂ ಜನ ಆ ಕಲ್ಲನ್ನು ‘ಪಾಪುಕಲ್ಲು’ ಎಂದು ಕರೆಯುತ್ತಾರೆ. (ಈಗ ಆ ಹಾಸುಗಲ್ಲು ಸಂಕವಾಗಿರದೆ ತೋಡಿಗೆ ಕಟ್ಟಿದ ಒಡ್ಡಿಗೆ ಉಪಯೋಗವಾಗಿದೆ)

ಮಾಯಿಪ್ಪಾಡಿ ಅರಸರ ಸೇನಬೋವಾರಾಗಿದ್ದು ಪ್ರಸಿದ್ಧಿ ಪಡೆದವರು ಕೊಡಲು ಸುಬ್ಬಯ್ಯ ಸೇನಬೋವರು. ಅವರು ಮಂಟಮೆಯಲ್ಲಿ ವಿವಿಧ ಭಂಗಿಗಳಿಂದ ಕೂಡಿದ ದೇವತೆಗಳ ಶಿಲ್ಪಗಳುಳ್ಳ ಪೆರಿಬಲಿ ಕಲ್ಲೊಂದನ್ನು ನೋಡಿ ಮನಸೋತಿದ್ದರು. ಅದನ್ನು ಅಲ್ಲಿಂದ ತಂದು ತಮ್ಮ ಆಡಳಿತ ವ್ಯಾಪ್ತಿಯಲ್ಲಿರುವ ಗೋಪಾಲಕೃಷ್ಣ ದೇವಸ್ಥಾನದ ಇದಿರು ನಡೆಸಬೇಕೆಂದು ಯೋಚಿಸಿದರು. ಬಾಚನಿಂದ ಮಾತ್ರ ಅದನ್ನು ಹೊತ್ತು ತರುವ ಕೆಲಸ ಸಾಧ್ಯವೆಂದರಿತ ಸೇನಬೋವರು ಅವನನ್ನು ಕರೆಸಿ, ಆ ಕಲ್ಲಿನ ವಿಚಾರ ಪ್ರಸ್ತಾಪಿಸಿದರು. ‘ನೋಡುವ ಸ್ವಾಮೀ, ದೇವರಿದ್ದಾನೆ’ ಎಂಬ ಬಾಚನು ಸೇನಬೋವರ ಜೊತೆಗೆ ಮಂಟಮೆಗೆ ಹೊರಟನು. ಮಂಟಮೆಗೆ ತಲುಪಿ ಇತರ ಆಳುಮಕ್ಕಳು ಮಣ್ಣಿನೊಳಗೆ ಹೂತು ಹೋಗಿದ್ದ ಪೆರಿಬಲಿ ಕಲ್ಲನ್ನು ಹೊರತೆಯುವ ಪ್ರಯತ್ನದಲ್ಲಿದ್ದಾಗ ಬಾಚನು ತನ್ನವಲ್ಲಿಯನ್ನೂ, ಸೇನಬೋವರ ಜೋಡು ಎಲೆ ವಸ್ತ್ರವನ್ನೂ ಸುತ್ತಿ ಸಿಂಬಿ ಮಾಡಿದನು. ಆ ಹೊತ್ತಿಗಾಗಲೇ ಹೊಂತಗಾರಿಗಳು ಮಣ್ಣಿನ ದಿನ್ನೆಯೊಂದನ್ನು ತಯಾರಿಸಿ ಹೇಗಾದರೂ ಮಾಡಿ ಕಲ್ಲನ್ನು ಅದರ ಮೇಲಿರಿಸಿದ್ದರು. ಸಿಂಬಿಯನ್ನು ತಲೆಗಿಟ್ಟು ಮಣ್ಣದಿನ್ನೆಯ ತಳಭಾಗದಲ್ಲಿ ಉಳಿತ ಬಾಚನ ತಲೆಯ ಮೇಲೆ ಹಿಂದೆ ಹತ್ತು ಜನರು ಮುಂದೆ ಹತ್ತು ಜನರು ಸೇರಿ ಅಡ್ಡೆ ಹಾಕಿ ಆ ಕಲ್ಲನ್ನು ಎತ್ತಿಟ್ಟರು. ತಲೆ ಮೇಲಿರಿಸಿದ ಕಲ್ಲಿನ ಭಾರವನ್ನು ಸರಿಪಡಿಸಿಕೊಂಡ ಬಾಚನು ಉಸಿರನ್ನು ಬಿಗಿಹಿಡಿದು ಎದ್ದು ಕೊಡಲಿನ ಕಡೆಗೆ ನಡೆದೇ ಬಿಟ್ಟನು. ದಾರಿಯಲ್ಲಿ ಮೊಗ್ರಾಲು ಕಡವಿನಲ್ಲಿ ಹೊಳೆ ದಾಟಬೇಕಿತ್ತು. ಆ ಭಾರೀ ಗಾತ್ರದ ಕಲ್ಲನ್ನು ಸಾಗಿಸಬಲ್ಲ ದೋಣಿ ಆ ಕಡವಿನಲ್ಲಿರಲಿಲ್ಲ. ಅದನ್ನರಿತ ಬಾಚನು ಜೊತೆಗಿದ್ದ ವರು ಕಡವನ್ನ ಸಮೀಪಿಸುವಷ್ಟರಲ್ಲೇ ಹೊತ್ತ ಕಲ್ಲಿನೊಂದಿಗೆ ಹೊಳೆಗೆ ಇಳಿದೇ ಬಿಟ್ಟಿದ್ದ. ನೆಲೆ ಸಿಗದ ನೀರಿನ ಪ್ರವಾಹದಲ್ಲಿ ಕಲ್ಲನ್ನೂ ಹೊತ್ತುಕೊಂಡು ಆಚೆ ದಡ ಸೇರಿದ. ಇದನ್ನು ನೋಡಿ ಜನರೆಲ್ಲರೂ ಮೂಗಿನ ಮೇಲೆ ಬೆರಳಿರಿಸಿ, ಆಶ್ಚರ್ಯಪಡುತ್ತಿದ್ದಂತೆಯೇ ಮುಂದೆ ಸಾಗಿದ ಬಾಚನು ಕೂಡಲನ್ನು ತಲಪಿ ಗೋಪಾಲಕೃಷ್ಣ ದೇವಾಲಯದ ನಡೆಯಲ್ಲಿ ಕಲ್ಲನ್ನಿಳಿಸಿದ. (ಬಾಚನು ಹೊತ್ತು ತಂದುದೆಂದು ಹೇಳಲಾಗುವ ಆ ಕಲ್ಲು ಈಗ ದೇವಾಲಯದ ಎದುರಿನ ಗದ್ದೆಯಲ್ಲಿದೆ).

ಇನ್ನೊಂದು ಬಾರಿ ಪ್ರಸಿದ್ಧವಾದ ಮಧೂರು ಕಂಬಳವು ನಡೆಯ ಬೇಕಿದ್ದರೆ ಅಲ್ಲಿನ ಸಿಡಿಮದ್ದುಗಳ ಗರ್ಜನೆ, ವಾದ್ಯ ಘೋಷ, ಜನರ ಗದ್ದಲದಿಂದ ಹುಚ್ಚೆದ್ದು, ಬಿಗಿದಿದ್ದ ಸಂಕಲೆಯನ್ನೂ ಕಡಿದೊಗೆದು, ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಪುಡಿಗಟ್ಟುತ್ತಾ ಕಂಡ ಕಂಡಲ್ಲಿ ಓಡಿ, ನೆರೆದ ಜನರೆಲ್ಲರೂ ಚೆಲ್ಲಾಪಿಲ್ಲಿಯಾಗಿಸಿದ ಕೋಟಕುಂಜ ಗುತ್ತಿನ ಒಂದು ಕುಂಬಳದ ಕೋಣದೊಂದಿಗೆ ಸೆಣಸಿ, ಅದನ್ನು ಹದ್ದುಬಸ್ತಿಗೆ ತಂದುದಾಗಿಯೂ ಈತನ ಬಗೆಗಿನ ಐತಿಹ್ಯವು ವಿವರಿಸುತ್ತದೆ.

ಮತ್ತೊಂದು ಸಲ ಜಟ್ಟಿ ಕಾಳಗಕ್ಕೆಂದು ಕೊಚ್ಚಿಯಿಂದ ಅರಮನೆಗೆ ಬಂದಿದ್ದ ಜಟ್ಟಿಯೊಬ್ಬನು ಬಾಚನ ಅಸಾಧಾರಣ ಮೈಕಟ್ಟು, ಮಧ್ಯಾಹ್ನದ ಸಮಾರಾಧನೆಯ ವೇಳೆಗೆ ಆತನು ಎಳ್ಳು-ಕೊಬ್ಬರಿಯನ್ನು ತನ್ನ ಕೈಯಿಂದಲೆ ಹಿಂಡಿ ಎಣ್ಣೆ ತೆಗೆದ ಪರಿ-ಇವನ್ನು ಕಂಡು ಆತನೊಂದಿಗೆ ಸೆಣಸುವ ಮುನ್ನವೇ ಹೆದರಿ ಓಡಿಹೋದನೆಂದಿದೆ.

ಇಂತಹ ಬಲ ಪ್ರದರ್ಶನದ ಘಟನೆಗಳಲ್ಲದೆ ಬಾಚನನ್ನು ಕುರಿತ ಕೆಲವು ತಮಾಷೆಯ (ರಸನಿಮಿಷ) ಪ್ರಸಂಗಗಳೂ ಪ್ರಚಾರದಲ್ಲಿವೆ. ಊರಿನ ಒಕ್ಕಲು ಮಕ್ಕಳು ಅರಮನೆಗೆ ಕಾಣಿಕೆಯಾಗಿ ಸಾಗಿಸುತ್ತಿದ್ದ ಎರಡು ಹಲಸಿನ ಹಣ್ಣುಗಳಲ್ಲಿ ಜಜ್ಜಿ ಹೋದ ಒಂದನ್ನು ದಾರಿಯಲ್ಲೇ ಬಾಚನು ಹಿಡಿದಿರಿಸಿ, ತಿಂದುದಕ್ಕೆ ಅರಸನು ಆತನನ್ನು ‘ಕಕ್ಕೆ ಮಡೆತ್ತಾಯ’ನೆಂದು ಕರೆದು ಹಂಗಿಸಿದುದು; ರಾಜಾಂಗಣದಲ್ಲಿ ಹರಡಿದ್ದ ಬತ್ತವನ್ನು ಕಾಗೆಗಳು ಮುತ್ತಿ ತಿನ್ನುತ್ತಿರಬೇಕಾದರೆ ಬಾಚನು ಅದನ್ನು ಬಾಚಿ; ಹೆಡಗೆಗಳಲ್ಲಿ ತುಂಬುವ ಮೂಲಕ ಹಿಂದೆ ಅರಸನು ತನ್ನನ್ನು ‘ಕಕ್ಕೆ ಮಡೆತ್ತಾಂಯ’ ನೆಂದಿದ್ದಕ್ಕೆ ಸರಿಯಾದ ಪ್ರತೀಕಾರವನ್ನು ತೀರಿಸಿದುದು; ಇನ್ನೊಂದು ಅರಸನು ಪಕ್ಕದಲ್ಲಿದ್ದ ಬಾಚನಲ್ಲಿ ‘ಬೆತ್ತ್ ಜಾನೆ ಬಾಚ? (ಮತ್ತೇನು ಬಾಚ?) ಎಂದು ಕೇಳಲು, ಮರುದಿನದ ಔತಣದ ಗುಂಗಿನಲ್ಲಿ ಬಾಚನು ‘ಬೆತ್ತ್ ಅಳೆ ಅಪ್ಪುಡ್ ಬುದ್ದಿ’ (ಮತ್ತೆ ಮಜ್ಜಿಗೆ, ಉಪ್ಪಿನಕಾಯಿ ಬುದ್ದಿ) ಎಂದದ್ದು. ಅರಸನು ನಕ್ಕದ್ದು. ಮುಂದೆ ಅದುವೇ ಗಾದೆ ಮಾತಾಗಿ ಬಳಕೆಗೆ ಬಂದದ್ದು. ಇವನ್ನೆಲ್ಲ ಅಲ್ಲಿ ಉಲ್ಲೇಖಿಸಬಹುದು.

ಮುಂದೆ ಮುದುಕನಾದ ಬಾಚನು ಒಂದು ದಿನನ ಅರಮನೆಯ ಸಮಾರಾಧನೆಗೆಂದು ಹೊಳೆ ದಾಟಿ ಹೋಗುತ್ತಿರಲು ನೀರಿನ ಸೆಳವಿಗೆ ಸಿಕ್ಕು ದುರಂತವನ್ನು ಕಂಡುದಾಗಿಯೂ ಹೇಳಲಾಗುತ್ತದೆ.

ಅಗೋಳಿ ಮಂಜಣ್ಣ
(ವಕ್ತೃ: ಶಂಭು ಸಾಮನಿ, ಚೇಳ್ಯಾರು ಗುತ್ತು, ಮಂಗಳೂರು ತಾಲೂಕು)

ಪುಳ್ಕೂರು ಬಾಚನಂತೆಯೇ ಅಸಾಮಾನ್ಯ ಬಲಶಾಲಿಯಾಗಿದ್ದ ಈತನ ಕಾರ್ಯಕ್ಷೇತ್ರ ಈಗಣ್ಣ ಮಂಗಳೂರು ತಾಲೂಕಿನ ಚೇಳೈರು, ಎರ್ಮಳು, ಬಪ್ಪನಾಡು ಮುಂತಾದ ಸ್ಥಳಗಳು. ಈತನ ತಂದೆ ಕಟ್ಲ ಬಾಳಿಕೆ (ಬರಿಕೆ?) ನಾರಾಯಣಶೆಟ್ಟಿ, ತಾಯಿ ದುಗ್ಗುಶೆಡ್ತಿ, ಚೇಳೈರು ಗುತ್ತು ಬಗ್ಗಣ್ಣ ಅಡ್ಯಂತಾಯ ಮಂಜಣನ ಸೋದರಮಾವ. ಈ ಮಾವನ ಮನೆಯಲ್ಲಿದ್ದುಕೊಂಡು ಆತನು ಹಲವಾರು ಸಂದರ್ಭಗಳಲ್ಲಿ ತನ್ನ ಆಸಾಮಾನ್ಯ ಬಲವನ್ನು ಪ್ರದರ್ಶಿಸಿದುದಾಗಿ ತಿಳಿದು ಬರುತ್ತದೆ.

ಸೊಪ್ಪು ತರಲೆಂದು ಕಾಡಿಗೆ ಹೋದ ಮಂಜಣನು ದೈತ್ಯ ಗಾತ್ರದ ಸೊಪ್ಪಿನ ಹೊರೆಯೊಂದನ್ನು ಮಾಡಿ, ಕಾಯುತ್ತಿರಲು ಮೂಲ್ಕಿ ಸೀಮೆಯ ಕೆಲಮಂದಿ ಯುವಕರು ಕಂಬಳಕ್ಕೆಂದು ಪಣಂಬೂರಿಗೆ ಹೋಗುತ್ತಿದ್ದರು. ಅವರಲ್ಲಿ ಮಂಜಣನು ಸೊಪ್ಪಿನ ಕಟ್ಟನ್ನು ತನ್ನ ತಲೆಗೇರಿಸಲು ಸಹಕರಿಸುವಂತೆ ಕೇಳಿಕೊಂಡನು. ಆದರೆ ಎಷ್ಟೇ ಪ್ರಯತ್ನಿಸಿದರೂ ಆ ಹೊರೆಯನ್ನು ಅಲುಗಾಡಿಸುವುದೇ ಅವರಿಂದ ಸಾಧ್ಯವಾಗಲಿಲ್ಲ. (ಅಗೋಳಿ ಮಂಜಣನು ಆ ಸೊಪ್ಪಿನ ಹೊರೆಯ ಒಳಗಡೆ ಕಾಡ ಹಂದಿ ಮರಿಯೊಂದನ್ನು ಕೊಂದು ಇರಿಸಿದ್ದ ಎಂದು ಹೇಳಲಾಗುತ್ತದೆ) ಕೊನೆಗೆ ಸ್ವತಃ ತಾನೇ ಹೊರೆಯನ್ನು ಎತ್ತಿ ತನ್ನ ತಲೆಗಿರಿಸಿಕೊಂಡು, ಮನೆಯತ್ತ ಬಂದು ಹಟ್ಟಿಯ ಸಮೀಪ ಹೊರೆಯನ್ನು ಹೊತ್ತು ಹಾಕುತ್ತಾನೆ. ಆಗ ಅದಷ್ಟು ಭಾಗದ ನೆಲವು ಅದುರಿ, ಸುಮಾರು ೨೦ ಕೋಲು ದೂರದಲ್ಲಿದ್ದ ಕಡೆಯುವ ಕಲ್ಲೊಂದು ಭೂಮಿಯೊಳಗೆ (ಮಣ್ಣಿನಲ್ಲಿ) ಹೂತುಹೋಯಿತು. (ಆ ಕಲ್ಲನ್ನು ಅಲ್ಲಿಂದ ತೆಗೆದು ಮುಂದೆ ಅದಕ್ಕೆ ಪೂಜೆ ನಡೆಸಿಕೊಂಡು ಬರಲಾಯಿತು. ಈಗ ಆ ಕಲ್ಲನ್ನು ದುಗ್ಗು ಶೆಡ್ತಿ ಕೋಣೆಯಲ್ಲಿ ಮಂಜಣನಿಗೆ ಆತನ ತಾಯಿಯು ಉಣಬಡಿಸುತ್ತಿದ್ದ ಕಂಙಣವನ್ನಿರಿಸುತ್ತಿದ್ದ ಮಣೆ-ಈಗ ಇರುವುದು ಅಂದಿನ ಮೂಲ ಮಣೆಯಲ್ಲ- ಮತ್ತು ಕಂಬಳದ ಎತ್ತುಗಳನ್ನು ಓಡಿಸುವ ಸಂದರ್ಭದಲ್ಲಿ ಆತನು ಅವುಗಳ ಹಣೆಗಿರಿಸುತ್ತಿದ್ದ ಶಿರೋಭೂಷಣ- ಇತ್ಯಾದಿಗಳೊಂದಿಗೆ ಇರಿಸಲಾಗಿದೆ.

ಮಂಜಣನು ಮಗುವಾಗಿದ್ದಾಗ ಆತನಿಗೆ ಏನೋ ಅಸೌಖ್ಯವಿತ್ತು. ಹಾಗಾಗಿ ಆತನನ್ನು ಬಪ್ಪನಾಡಿನ ದೇವಿ ಸನ್ನಿಧಿಗೆ ಕರೆದುಕೊಂಡು ಹೋದ ಆತನ ತಾಯಿಯು ಆತನ ಕಾಯಿಲೆ ವಾಸಿಯಾದರೆ ಆತನಿಂದ ಸನ್ನಿಧಿಗೆ ಯಾವುದಾದರೂ ಸೇವೆಯನ್ನು ಮಾಡಿಸುತ್ತೇನೆಂದು ಹರಕೆ ಹೊತ್ತಿದ್ದಳು. ಆತನು ಆರೋಗ್ಯವಂತನಾಗಿ ಬೆಳೆದುದೊಡ್ಡವನಾದನು. ಆದರೆ ಹಿಂದೆ ಹೊತ್ತಿದ್ದ ಹರಕೆಯ ವಿಷಯ ಮರೆತು ಹೋದುದರಿಂದ ಮತ್ತೆ ಅಸೌಖ್ಯ ತಲೆದೋರಿತು. ಆಗ ದೇವೀ ಸನ್ನಿಧಿಗೆ ಹೋಗಿ ಪ್ರಾಥಿಸಲು ದೇಗುಲದ ಉಡುಪರು ಹಿಂದಣ ರತ್ರಿ ತನಗೆ ಬಿದ್ದಿದ್ದ ಕನಸೊಂದನ್ನು ಜ್ಞಾಪಿಸಿ- ದೇವಿಯ ಅಪೇಕ್ಷೆಯಂತೆ ಮಂಜಣನು ಎರ್ಮಾಳಿನಿಂದ ದಂಬೆ ಕಲ್ಲೊಂದನ್ನು ತಂದನೆಂದಾದರೆ ಆತನ ಕಾಯಿಲೆ ವಾಸಿಯಾಗುತ್ತದೆ ಎಂದರು. ಅದರಂತೆ ಎರ್ಮಾಳಿಗೆ ಹೋದ ಮಂಜಣನು ಅಲ್ಲಿನ ಹುರಿಯಾಳುಗಳೊಂದಿಗೆ ಸೆಣಸಿ, ಸ್ಪರ್ಧಿಸಿ ಗೆದ್ದು, ಅಲ್ಲಿಂದ ದಂಬೆ ಕಲ್ಲನ್ನೂ ಜೊತೆಗೆ ಹಾಸುಗಲ್ಲನ್ನೂ ಬಪ್ಪನಾಡಿಗೆ ತಂದು ತನ್ನ ತಾಯಿ ಹೊತ್ತಿದ್ದ ಹರಕೆಯನ್ನೂ ತೀರಿಸಿದನು. ಅವನು ತಂದುದೆಂದು ಹೇಳಲಾಗುವ ಅಸಾಮಾನ್ಯ ಗಾತ್ರದ ಭಾರವಾದ ಕಲ್ಲುಗಳೆರಡೂ ಈಗಲೂ ದೇವಾಲಯದ ಅಂಗಣದಲ್ಲಿವೆ.

. ಸಾಹಸಿಗಳು (ಅವಳಿ ವೀರರು) ಕೋಟಿ- ಚೆನ್ನಯರು
(ವಕ್ತೃ: ಲಕ್ಷ್ಮೀನಾರಾಯಣ ರೈ, ಎಣ್ಮೂರು ಕಟ್ಟ ಬೀಡು, ಸುಳ್ಯ ತಾಲೂಕು- ಪಾಡ್ದನಾಧಾರ)

ಈಗಿನ ಪುತ್ತೂರು ತಾಲೂಕಿನ ಪರ್‌ಮಲೆ (ಪಡುಮಲೆ)ಯಲ್ಲಿ ದೇಯಿ ಬೈದೈತಿಯ ಮಕ್ಕಳಾಗಿ ಹುಟ್ಟಿದ ಕೋಟಿ ಚೆನ್ನಯರು ಪೆರುಮಾಳ ಬಲ್ಲಾಳ ಮತ್ತು ಮಾವನಾದ ಸಾಯನ ಬೈದ್ಯರ ರಕ್ಷಣೆಯಲ್ಲಿ ಬೆಳೆಯುತ್ತಾರೆ. ಅಸಾಮಾನ್ಯ ತೇಜಸ್ಸಿನಿಂದ ಬೆಳೆಯುತ್ತಿದ್ದ ಇವರನ್ನು ಕಂಡು ಕರುಬಿದ ಬೂಡು ಬುದ್ಯಂತನು ಅವರ ಎಲ್ಲಾ ಕೆಲಸ ಕಾರ್ಯಗಳಲ್ಲೂ ಅವರಿಗೆ ಅಡಚಣೆ-ಅಡ್ಡಿಗಳನ್ನುಂಟು ಮಾಡುತ್ತಾನೆ. ಅವನ ಉಪಟಳ, ಹಂಗಿಸುವಿಕೆಗಳು ಮಿತಿ ಮೀರಲು ಅವನನ್ನು ಕೊಂದು ಕೋಟಿ ಚೆನ್ನಯರು ಬಲ್ಲಾಳನ ದ್ವೇಷ ಕಟ್ಟಿಕೊಳ್ಳುತ್ತಾರೆ. ಕೊನೆಗೆ ಪರ್‌ಮಲೆಯಿಂದ ಅವರು ಹೊರಟು ಹೋಗಬೇಕಾಗುತ್ತದೆ. ಹೀಗೆ ಅವರು ಪಂಜದ ಸೀಮೆಗೆ ಬಂದು ಅಲ್ಲಿನ ಕೇಮರ ಬಲ್ಲಾಳನ ಆಶ್ರಯದಲ್ಲಿರಲು ಅವರನ್ನು ಸೆರೆಹಿಡಿದು ಕಳುಹಿಸುವಂತೆ ಪೆರುಮಳ ಬಲ್ಲಾಳನಿಂದ ಓಲೆ ಬರುತ್ತದೆ. ಅದರಂತೆ ಕೇಮರ ಬಲ್ಲಾಳನ ದಳಪತಿ ಚಂದುಗಿಡಿಯು ಅವರಿಬ್ಬರನ್ನೂ ಕತ್ತಲೆ ಕೋಣೆಯಲ್ಲಿ ಕೂಡಿಹಾಕುತ್ತಾನೆ.

ಅಲ್ಲಿಂದ ಹೇಗಾದರೂ ಮಾಡಿ (ಬ್ರಹ್ಮ ದೇವರ ಅನುಗ್ರಹದಿಂದ) ತಪ್ಪಿಸಿಕೊಂಡು ಎಣ್ಮೂರು ಸೇರಿದ ಕೋಟಿ-ಚೆನ್ನಯರಿಗೆ ಅಲ್ಲಿನ ಮಂಜು ಪೆಗ್ಡೆಯು ಆಶ್ರಯ ನೀಡುತ್ತಾನೆ. ಇದೇ ವೇಳೆಯಲ್ಲಿ ಪಂಜದ ಬಲ್ಲಾಳನು ಪಂಜ-ಎಣ್ಮೂರು ಗಡಿಯನ್ನು ಅತಿಕ್ರಮಿಸಿ ಗಡಿಕಲ್ಲನ್ನು ಎಣ್ಮೂರು ಸೀಮೆಯೊಳಗೇ ಹಾಕಿಸಿದ್ದ. ಅದನ್ನು ಕಿತ್ತಂತಹ ಕೋಟಿ-ಚೆನ್ನಯರು ಹಿಂದಿದ್ದ ಸರಿಯಾದ ಜಾಗದಲ್ಲೇ ಅದನ್ನು ಮತ್ತೆ ನೆಟ್ಟರು. ಒಂದು ಬಾರಿ ಬೇಟೆಯಾಡುತ್ತಾ ನಡೆದ ಕೋಟಿ-ಚೆನ್ನಯರು ಪಂಜ ಸೀಮೆಯ ಕಾಡಿಗೂ ಮುಂದುವರಿಯಬೇಕಾದ ಅನಿವಾರ್ಯತೆಯೊದಗಿತು. ಈ ಎಲ್ಲಾ ಕಾರಣಗಳಿಂದಾಗಿ ಸಿಟ್ಟುಕೊಂಡ ಪಂಜದ ಬಲ್ಲಾಳನು ಎಣ್ಮೂರಿನ ಮೇಲೆ ಯುದ್ಧ ಸಾರಿದನು. ಕೋಟಿ-ಚೆನ್ನಯರು ಎಣ್ಮೂರು ಸೇನೆಯ ಮುಖಂಡರಾಗಿ ಕಾದಿದರು. ಪಂಜದ ಬಲ್ಲಾಳನ ಪಕ್ಷದಲ್ಲಿ ಪರ್‌ಮಲೆಯ ಬಲ್ಲಾಳನೂ ಇದ್ದನು. ವೀರಾವೇಶದಿಂದ ಹೋರಾಡಿದ ಕೋಟಿ-ಚೆನ್ನಯರು ಪಂಜದ ಸೇನಾಧಿಪತಿ ಚಂದು ಗಿಡಿಯನ್ನು ಕೊಂದರು. ಎಣ್ಮೂರಿನ ಸೇನೆಗೆ ಗೆಲುವು ಪ್ರಾಪ್ತವಾಗುವ ಹಂತದಲ್ಲಿದ್ದಾಗ ಹಿಂದಿನಿಂದ ಹಾರಿ ಬಂದ ಪರ್‌ಮಲೆ ಬಲ್ಲಾಳನು ಕೋಟಿಯ ಬೆನ್ನಿಗೆ ಇರಿದನು (ಬಾಣ ಪ್ರಯೋಗಿಸಿದನು?) ಕೋಟಿಯು ಬಿದ್ದುದನ್ನು ಕಂಡು, ಅವನಿಗೆ ಈ ಅವಸ್ಥೆಯನ್ನು ತಂದೊಡ್ಡಿದ ಪೆರುಮಳ ಬಲ್ಲಾಳನ ಮೇಲೆ ರೋಷಗೊಂಡಂತಹ ಎಣ್ಮೂರಿನ ಮಂಜು ಪೆರ್ಗಡೆಯು ಆತನನ್ನೆದುರಿಸಲು ಮುಂದೊತ್ತಿದನು. ಆದರೆ ಕೋಟೆಯು ಬಿದ್ದಲ್ಲಿಂದಲೇ ಆತನನ್ನು ತಡೆದನು. ದೂರದಲ್ಲಿ ಇನ್ನೊಂದು ತುಕಡಿ ಶತ್ರು ಸೇನೆಯೊಂದಿಗೆ ಯುದ್ಧ ಮಾಡಿದ್ದ ಚೆನ್ನಯನು ಅಣ್ಣನ ಸ್ಥಿತಿಯನ್ನು ನೋಡಿ ಮರುಗಿದನು. ಅಣ್ಣನ ಕೊನೆಯಾಸೆಯನ್ನೆಲ್ಲಾ ಸಲ್ಲಿಸಿ, ಆತನ ಪ್ರಾಣ ಪಕ್ಷಿ ಹಾರಿಹೋದ ಬಳಿಕ ತಾನೂ ಪಕ್ಕದಲ್ಲಿದ್ದ ಬಂಡೆ ಕಲ್ಲಿಗೆ ತಲೆ ತಾಗಿಸಿ ಪ್ರಾಣ ತ್ಯಾಗ ಮಾಡಿದನು. ಕೋಟೆಯ ಕೊನೆಗಾಲದ ಅಪೇಕ್ಷೆಯಂತೆ ಮೂರು ಮಂದಿ ಅರಸರೂ ಮುಂದೆ ದ್ವೇಷವನ್ನು ಮರೆತು ಬಾಳುತ್ತಾರೆ. ಇವಲ್ಲದೆ ತಮ್ಮ ಜೀವಿತಾವಧಿಯಲ್ಲಿ ಕೋಟೆ-ಚೆನ್ನಯರು ಇನ್ನೂ ಹಲವು ಸಾಹಸ ಕಾರ್ಯಗಳನ್ನೆಸಗಿದುದಾಗಿಯೂ ತಿಳಿದುಬರುತ್ತದೆ.

ಹೆಡ್ಡ ವ್ಯಕ್ತಿ– ಹೈದ್ರೂಸ್
(ವಕ್ತೃ: ಅಮೃತ ಸೋಮೇಶ್ವರ, ಕೋಟೆಕಾರು, ಮಂಗಳೂರು)

ಪಣೆಮಂಗಳೂರಿನಲ್ಲಿ ಹಿಂದೆ ಹೈದ್ರೂಸ್ ಎಂಬ ವ್ಯಕ್ತಿ ತಾಲೀಮಿನಲ್ಲಿ ಬಹಳ ನುರಿತವನಾಗಿದ್ದ. ಒಂದು ಬಾರಿ ಆ ಊರಿಗೆ ಪಕ್ಕದ ಕಾಡಿನಿಂದ ಹುಲಿಯೊಂದು ಬಂದು ಸುತ್ತಾಡಿ ಸುತ್ತಾಡಿ ಬೆಳೆಗಾದುದರಿಂದ ಅಲ್ಲಿದ್ದ ಬಂಡೆಯೊಂದರ ಮೇಲೆ ಕುಳಿತುಕೊಂಡಿತು. ಇದನ್ನು ತಿಳಿದ ಜನರು ಕತ್ತಿ, ದೊಣ್ಣೆ, ಕೋವಿಗಳನ್ನು ಹಿಡಿದು ಸಾಕಷ್ಟು ಸಂಖ್ಯೆಯಲ್ಲಿ ದೂರದಲ್ಲಿ ಹುಲಿಯ ಸುತ್ತ ನೆರೆದರು. ಆಗ ಮಾಪಿಳ್ಳೆಯವರು ಹೈದ್ರೂಸನು ಈ ಹುಲಿಯನ್ನು ತನ್ನ ತಾಲೀಮಿನ ಚಾಕಚಕ್ಯತೆಯಿಂದ ಕೊಲ್ಲಬಲ್ಲನೆಂದು ಸೂಚಿಸಿದರು. ಆತನಿಗೆ ಕತೆ ಕಳುಹಿಸಲಾಯಿತು. ಹೈದ್ರೂಸನು ತನ್ನ ಕೈಮೈಗಳಿಗೆಲ್ಲ ತಗಡಿನ ಚೂರುಗಳನ್ನು ಕಟ್ಟಿಕೊಂಡು, ತಾಲೀಮಿನ ತಲ್ವಾರಿನೊಂದಿಗೆ ಹುಲಿಯೆಡೆಗೆ ಬಂದ. ಹುಲಿ ಬಂಡೆಯ ಮೇಲೆ ಕುಳಿತೇ ಇತ್ತು. ಹೈದ್ರೂಸನು ತನ್ನ ಕತ್ತಿವರಸೆಯನ್ನು ಪ್ರದರ್ಶಿಸುತ್ತಾ ನಾನಾ ಸನ್ನೆಗಳಿಂದ ಹುಲಿಯನ್ನು ಕಾಳಗಕ್ಕೆ ಕರೆದ. ಚೀನಿಯಂತಹ ವಾದ್ಯಗಳನ್ನು ಊದಿದರು. ಹುಲಿ ಅಲುಗಾಡಲಿಲ್ಲ. ಕೊನೆಗೆ ಯಾರೋ ಹಿಂದಿನಿಂದ ಹೋಗಿ ಉದ್ದನೆಯ ಗಳವೊಂದರ ಸಹಾಯದಿಂದ ಹುಲಿಯನ್ನು ನೂಕಿದರು. ರೋಷಗೊಂಡ ಹುಲಿಯು ಒಂದೇ ನೆಗೆತಕ್ಕೆ ಎದುರಿಗಿದ್ದ ಹೈದ್ರೂಸನ ಮೇಲೆರಗಿತು. ಹುಲಿಯ ಈ ಆಕ್ರಮಣದೆದುರು ಆತನ ತಾಲೀಮಿನ ಆಟವೇನೂ ಫಲ ಕೊಡದೆಹೋಯಿತು. ಕೆಲ ಹೊತ್ತಿನಲ್ಲೇ ಹೈದ್ರೂಸನ ಪ್ರಾಣಪಕ್ಷಿ ಹಾರಿಹೋಯಿತು. ‘ಹೈದ್ರೂಸ ಹುಲಿ ಹೊಡೆದಂತೆ’ ಎಂಬುದು ಸುತ್ತು ಮುತ್ತಣ ಪರಿಸರದಲ್ಲಿ ಗಾದೆ ಮಾತಾಗಿ ಇಂದಿಗೂ ಬಳಕೆಯಲ್ಲಿದೆ. (ಈ ಹಿಂದೆ ಸ್ಥಳೈತಿಹ್ಯಗಳಡಿಯಲ್ಲಿ ಉದಾಹರಿಸಿದ ಎಣ್ಣೆ ಹೊಳೆಯ ಐತಿಹ್ಯವೂ ಹೆಡ್ಡ ವ್ಯಕ್ತಿಯ ವರ್ಗ ಸೂಚಿಯಡಿಯಲ್ಲಿ ಸೇರುತ್ತದೆ. ಗಾದೆಯ ಹಿಂದಿರುವ ಎಂಕು ಪಣಂಬೂರಿಗೆ ಹೋದ, ಕುಟ್ಟಿ ಕುಂದಾಪುರಕ್ಕೆ ಹೋದ ಐತಿಹ್ಯಗಳನ್ನು ಈ ಸಾಲಿಗೆ ಸೇರಿಸಬಹುದು.

ಸಮಾಜ ಸೇವಕರು– ಪರಪ್ಪಳಿ ನಾಯಕ:
ವಕ್ತೃಗಳು: ೧. ಕೆ.ಪಿ. ಆಚಾರ್ಯ, ಪಾಂಗಾಳ-ಉಡುಪಿ ತಾಲೂಕು
೨. ವಿಠಲ ಶೆಟ್ಟಿ, ಬ್ರಹ್ಮಾವರ (ಹಂದಾಡಿ)
೩. ಕೃಷ್ಣ ಬಳೆಗಾರ, ಬಸ್ರೂರು-ಕುಂದಾಪುರ ತಾಲೂಕು
೪. ಪಟೇಲ ಸೀತಾರಾಮ ಐತಾಳ, ಕೋಟೇಶ್ವರ, ಕುಂದಾಪುರ ತಾಲೂಕು

ಪರಪ್ಪಳಿ ನಾಯಕ ಅಥವಾ ಪಲಿಪ್ಪಟ ನಾಯಕನು ಉಡುಪಿ ತಾಲೂಕಿನ ಬನ್ನಂಜೆಯವನು. ಉಡುಪಿ ಮತ್ತು ಕುಂದಾಪುರ ತಾಲೂಕುಗಳ ಹಲವೆಡೆ ಈತನಿಗೆ ಸಂಬಂಧಿಸಿದ ಐತಿಹ್ಯಗಳು ಬಳಕೆಯಲ್ಲಿವೆ. ಈಗ ಉಡುಪಿ ತಾಲೂಕಿನ ಪಾಂಗಾಳ ಹೆಜ್ಜೆ ಮಠ ಮನೆಯವರು ಬಳಸುತ್ತಿರುವ ಬಾವಿಯನ್ನು ನಿರ್ಮಿಸಿದವನು ಪಲಿಪ್ಪಟ್ಟ ನಾಯಕನೆಂಬ ಪ್ರತೀತಿ ಇದೆ. ಅದೇ ರೀತಿ ಕೋಟೇಶ್ವರ ಪಟೇಲರ ಮನೆಯವರ ನಿತ್ಯ ಬಳಕೆಯ ಬಾವಿಯನ್ನು ಈತನೇ ನಿರ್ಮಿಸಿದನೆಂಬ ಹೇಳಿಕೆಯಿದೆ. ಇದಲ್ಲದೆ ಈತನು ಇದೇ ಪರಿಸರದಲ್ಲಿ ಇನ್ನೂ ಮೂರು ಬಾವಿಗಳನ್ನು ತೋಡಿಸಿರುವನೆಂದು ವಕ್ತೃಗಳು ಹೇಳುತ್ತಾರೆ. ಪರಿಪ್ಪಳಿ ನಾಯಕನ ಸಮಾಜ ಸೇವಕಾರ್ಯವು ಉಡುಪಿ ತಾಲೂಕಿನ ಬಾರ್ಕೂರು, ಹಿರಿಯಡ್ಕ ಹಾಗೂ ಕುಂದಾಪುರ ತಾಲೂಕಿನ ಬಸ್ರೂರು ತನಕವೂ ವಿಸ್ತರಿಸಿದೆ. ಉಡುಪಿಯ ಹಿರಿಯಡ್ಕ, ಪಾಂಗಾಳಗಳಲ್ಲಿ ಆತ ದಾನ ಬಿಟ್ಟುದೆಂದು ಪ್ರತೀತಿಯಿರುವ ಭೂಮಿ ಗೋಮಾಳಗಳು ಕಂಡು ಬರುತ್ತವೆ. ಹಂದಾಡಿ (ಬ್ರಹ್ಮಾವರ ಬಾರ್ಕೂರು)ಯಲ್ಲಿ ಆತ ನಿರ್ಮಿಸಿದ್ದನೆಂದು ತಿಳಿಯಲಾಗುವ ಮಠವೊಂದಿದ್ದು, ಈಗಲೂ ಅದಕ್ಕೆ ನಾಯಕರ ಮಠ ಎನ್ನುತ್ತಾರೆ.

ಬಸರೂಲ್ಲಿ ಆತ ಭೂಮಿಯನ್ನು ಪಡೆದು ಅದನ್ನು ಗೋಚರಕ್ಕೆಂದು ಬಿಟ್ಟುದರ ಕುರಿತು ‘ಬಸರೂರು ಪಂಚಾಯ್ತಿ’ಗೆ ಎಂಬ ಪಡೆನುಡಿಯು ಇಂದಿಗೂ ಬಳಕೆಯಲ್ಲಿದೆ. ಒಂದು ಸಲ ಕಾರಣಾಂತರಗಳಿದೆ ಬಸ್ರೂರಿಗೆ ಬಂದ ಪರಪ್ಪಳಿ ನಾಯಕನಿಗೆ ಅಲ್ಲಿ ಗೋಮಾಳ-ಗೋಚರಗಳೇನೂ ಕಂಡುಬಾರದೆ ಗೋವುಗಳ ಸ್ಥಿತಿಯ ಬಗ್ಗೆ ಮರುಕ ಉಕ್ಕಿ ಬಂದು. ಭೂಮಿಯನ್ನು ಪಡೆದು ಅದನ್ನು ಗೋಮಾಳವಾಗಿ ಬಿಡುವ ಉದ್ದೇಶದಿಂದ ಊರ ಪಂಚರಲ್ಲಿ ಸ್ವಲ್ಪ ನೆಲವನ್ನು ಕೇಳಿದ. ಸಾಮಾನ್ಯನಂತೆ ಕಾಣುತ್ತಿದ್ದ ಪಲಿಪ್ಪಟ ನಾಯಕನ ಮಾತನ್ನು ಲಘುವಾಗಿ ಪರಿಗಣಿಸಿದ ಊರವರು ಪಂಚಾಯ್ತಿಗೆ ಸೇರಿ ಒಂದು ಕಲ್ಲು ಮರಿಗೆಯಷ್ಟು ಹೊನ್ನು ಕೊಟ್ಟರೆ ಆ ಮರಿಗೆಯಷ್ಟು ಜಾಗ ಕೊಡಬಹುದೆಂದರು. ನಾಯಕನು ದೊಡ್ಡ ಕಲ್ಲು ಮರಿಗೆಯೊಂದನ್ನು ಚಾತುಯ್ದಿಂದ ಕಡಿಸಿದ. ಅದರ ಬಾಯಿ ಕಿರಿದಾಗಿ, ಒಡಲು ನಿಡಿದಾಗಿತ್ತು. ಹೊರಬದಿಯಲ್ಲಿ ಉಬ್ಬಿಕೊಂಡು ಹೆಚ್ಚು ಜಾಗವನ್ನು ಆಕ್ರಮಿಸುತ್ತಿತ್ತು. ಆತನು ಮಾತಿನಂತೆ ಮರಿಗೆ ತುಂಬ ಹೊನ್ನು ಕೊಟ್ಟು ಆ ಮರಿಗೆ ವ್ಯಾಪಿಸುವಷ್ಟು ನೆಲವನ್ನು ಪಡೆದ. ಊರವರು ಎಣಿಸದಿದ್ದಷ್ಟು ನೆಲವನ್ನು ಅದು ಆವರಿಸಿತ್ತು. ಆದರೆ ಅವರೆಣಿಸಿದಷ್ಟು ಹೊನ್ನನ್ನು ಮಾತ್ರ ಅದು ತನ್ನ ಹೊಟ್ಟೆಯಲ್ಲಿ ತುಂಬಿಕೊಂಡಿರಲಿಲ್ಲ. ಊರವರು ಒಡ್ಡಿದ ಜಾಲದಲ್ಲಿ ಅವರೇ ಸಿಕ್ಕಿಬೀಳಬೇಕಾದ ಪರಿಸ್ಥಿತಿಯೊದಗಿತ್ತು. ಅಂದಿನಿಂದ ಈ ‘ಬಸರೂರು ಪಂಚಾಯ್ತಿ’ಯೆಂಬ ಮಾತು-ಕಥೆಗಳು ಹಬ್ಬಿ, ಮುಂದೆ ಹೀಗೆ ಯುಕ್ತಿ ಯುಕ್ತವಾಗಿ ತೀರಿಸುವ ಪಂಚಾಯತಿಕೆಯನ್ನು ಇದೇ ‘ಬಸರೂರು ಪಂಚಾಯಿತಿಗೆ’ ಎಂದು ಕರೆಯುವ ರೂಢಿಯಾಯಿತು.

ಕೃಷಿ-ಬೇಸಾಯ ನಿರತ-ಸಣ್ಮಗು
(ವಕ್ತೃ: ವಿಠಲ ಶೆಟ್ಟಿ, ಹಂದಾಡಿ, ಬ್ರಹ್ಮಾವರ, ಉಡುಪಿ ತಾಲೂಕು)

ಹಂದಾಡಿ ಗ್ರಾಮದಲ್ಲಿ ಹಿಂದೆ ಸಣ್ಮಗು ಎಂಬ ಕೃಷಿಕನಿದ್ದ. ಅವನ ಗದ್ದೆಯಿದ್ದುದು ಸೀತಾ ನಡಿಯ ಆಚೆ ದಡದಲ್ಲಿ. ಅಲ್ಲಿಗೆ ಸಣ್ಣ ದೋಣಿಯಲ್ಲಿ ಗೊಬ್ಬರ ಸಾಗಿಸುತ್ತಿದ್ದನು. ತಿರುಗಿ ಬರುವಾಗ ದೋಣಿಯನ್ನು ತಲೆಯ ಮೇಲೆ ಕವಚಿ ಹಾಕಿ ಕಾಲ್ನಡಿಗೆಯಿಂದಲೇ ಬೇರೆ ದಾರಿಯ ಮೂಲಕ ಮನೆ ಸೇರುತ್ತಿದ್ದನು. ಗದ್ದೆಯ ಕೊಯಿಲಾದ ಮೇಲೆ ಹಲವು ಮಂದಿ ಹೊರುತ್ತಿದ್ದ ಪೈರಿನ ಹೊರೆಯನ್ನು ಮೇಲ್ಗಡೆ ಅದರ ಬದಿಯಲ್ಲಿರಿಸಿ, ತಾನು ಕೆಳಗೆ ಹೊಂಡದೊಳಗೆ ನಿಂತು ತನ್ನ ಪತ್ನಿಯೊಡನೆ ಮೇಲ್ಗಡೆಯ ಹೊರೆಯನ್ನು ತಲೆ ಹತ್ತಿರಕ್ಕೆ ಸರಿಸುವಂತೆ ಹೇಳುತ್ತಿದ್ದನು. ಹೀಗೆ ತನ್ನ ಹೊಲದ ಪೈರನ್ನೆಲ್ಲಾ ಸಣ್ಮಗು ತಾನೊಬ್ಬನೇ ಹೊರುತ್ತಿದ್ದ.

ಹತ್ತು ಪಾವು ಅಕ್ಕಿಯ ಅನ್ನವನ್ನು ಅವನೊಬ್ಬನೇ ಉಣ್ಣುತ್ತಿದ್ದನು. ಚೀನಿ ಕಾಯಿ (ಸಹಿ ಕುಂಬಳ) ಒಳಗಿನ ಬೀಜಗಳನ್ನೆಲ್ಲಾ ತೆಗೆದು ಅದರೊಳಗೆ ಅಕ್ಕಿ ಸುರುವಿ ಅದನ್ನು ಸುಡು ಮಣ್ಣಲ್ಲಿ ಬೇಯಿಸಿ ಉಣ್ಣುತ್ತಿದ್ದನು. ಅಳಿವೆ ಪ್ರದೇಶಕ್ಕೆ ಗಾಳ ಹಾಕಲು ಹೋಗಿ ಸಿಕ್ಕ ಅಸಂಖ್ಯ ಚೇಡೆ ಮೀನುಗಳನ್ನು ಹೊಳೆ ಬದಿಯಲ್ಲೇ ದೊರೆಯುವ ಕಸಕಡ್ಡಿಗಳಿಂದ ಬೆಂಕಿ ಉರಿಸಿ, ಅದರಲ್ಲಿ ಬೇಯಿಸಿ, ತಿನ್ನುತ್ತಿದ್ದನು. ಆತನ ಮೈಯ ರೋಮಗಳು ಇತರರಿಗೆ ತಾಗಿದರೆ ತುಂಬ ನೋವನ್ನುಂಟುಮಾಡುತ್ತಿದ್ದವು. ಕೊನೆಕೊನೆಗೆ ಆತ ಕುಟ್ಟಿಚ್ಚಾತನ ದರ್ಶನ ತನ್ನ ಮೈಮೇಲೆ ಬರುತ್ತದೆಂದು ಹೇಳಿಕೊಳ್ಳುತ್ತಾ ಶರೀರದಲ್ಲಿ ಯಾರಿಗಾದರೂ ಭೂತ ಹಿಡಿದರೆ ಅದನ್ನು ಬಿಡಿಸುವ ಕಾರ್ಯದಲ್ಲಿ ನಿತರನಾಗಿದ್ದ. ಕೊಟ್ಟ ಕೊನೆಯಲ್ಲಿ ಸಾಯಬೇಕಾದರೆ ಆತ ಹೆಬ್ರಿ-ಸಂತೆ ಕಟ್ಟೆಯಲ್ಲಿ ಹೋಗಿ ಇದ್ದನು.

ಕುಪ್ರಸಿದ್ಧ ಕಳ್ಳರು (ದರೋಡೆಕೋರರು)- ಸೂರಗೋಳಿ ಅಂತು:
(ವಕ್ತೃ: ವಿಠಲ ಶೆಟ್ಟಿ, ಹಂದಾಡಿ, ಬ್ರಹ್ಮಾವರ, ಉಡುಪಿ ತಾಲೂಕು)

ಗಾಣಿಗ ಸಮಾಜಕ್ಕೆ ಸೇರಿದ ಸೂರಗೋಳಿ ಅಂತುವು ಹೆಸರುವಾಸಿಯಾದ ಕಳ್ಳನೆನಿಸಿದ್ದನು. ಆತ ಶ್ರೀಮಂತರಾದವರಿಂದ ಕದ್ದು ಬಡಬಗ್ಗರಿಗೆ ನೀಡುತ್ತಿದ್ದನು. ಮಂದರ್ತಿ ಕ್ಷೇತ್ರಕ್ಕೆ ಆತ ದಾನ ಕೊಟ್ಟಿರುವನೆಂದೂ ತಿಳಿದುಬರುತ್ತದೆ. ಇತ್ತೀಚೆಗೆ ರಚನೆಯಾದ ಮಂದರ್ತಿ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗದಲ್ಲೂ ಆತನ ಉಲ್ಲೇಖವಿದೆ. ಇಂತಹ ಜಾಗಕ್ಕೆ ಇಂತಿಂಥ ಸಮಯದಲ್ಲೇ ತಾನು ಕಳ್ಳತನಕ್ಕೆ ಬರುತ್ತೇನೆಂಬ ಸೂಚನೆಯನ್ನು ಕೊಟ್ಟೇ ಎಲ್ಲರೂ ನೋಡು-ನೋಡುತ್ತಿರುವಂತೆಯೇ ಈತನು ತನ್ನ ಕಾರ್ಯಕ್ಕೆ ತೊಡಗುತ್ತಿದ್ದನು. ಯಕ್ಷಗಾನ ತಾಳಮದ್ದಳೆ ನಡೆಯುತ್ತಿದ್ದಂತೆಯೇ ಬಂದು ಜನರ ಮಧ್ಯದಿಂದ ಕಾಲುದೀಪವನ್ನು ಎಗರಿಸಿಕೊಂಡು ಹೋಗಿದ್ದಾನೆ. ತನ್ನನ್ನು ಹಿಡಿಯಲು ಯಾರಿಗೂ ಸಾಧ್ಯವಾಗದಿರಲೆಂದು ತನ್ನ ಮೈಗೆಲ್ಲಾ ಹರಳೆಣ್ಣೆ ಸವರುತ್ತಿದ್ದನು. ಲಂಗೋಟಿ ಬಿಯಲು ಬಳೆ ಗಿಡದ ಕೈಯನ್ನು ಸೊಂಟಕ್ಕೆ ಕಟ್ಟಿಕೊಳ್ಳುತ್ತಿದ್ದನು. (ಹರಳೆಣ್ಣೆ ಸುಲಭವಾಗಿ ಜಾರುವ ಸ್ವಭಾವವುಳ್ಳದ್ದು. ಸೊಂಟಕ್ಕೆ ಬಾಳೆ ಕೈಯನ್ನು ಕಟ್ಟಿಕೊಂಡರೆ ಅದಕ್ಕೆ ಬಿಗಿದ ಲಂಗೋಟಿಯನ್ನು ಹಿಡಿದರೂ ಬಾಳೆದಾರ ಬೇಗನೆ ತುಂಡಾಗಿ ಹೋಗಿ ಲಂಗೋಟಿಯಷ್ಟೇ ಎಳೆದವರ ಕೈಯಲ್ಲುಳಿಯಬಹುದು). ಕೊನೆಗೆ ಆತನನ್ನು ಹಿಡಿಯಲು ಜನರು ಒಂದು ಉಪಾಯವನ್ನು ಹೂಡಿದರು. ಇಂಥ ಕತೆಯಿಂದ ತಾನಿಂದು (ಅಥವಾ ನಾಳೆ….) ಕಳ್ಳತನ ಮಾಡಲಿರುವುದಾಗಿ ಆತ ಪೂರ್ವ ಸೂಚನೆ ಕೊಟ್ಟಿದ್ದರಿಂದ ಆತ ಬರುವ ಮುನ್ನವೇ ದಾರಿಯಲ್ಲೆಲ್ಲಾ ಹೊನ್ನೆಕಾಯಿ ಹರಡಿ ಜನರು ಕಾದುಕುಳಿತರು. ಹರಡಿಕೊಂಡಿರುವ ಹೊನ್ನೆಕಾಯಿಯ ಮೇಲಿಂದಲೇ ನಡೆದುಕೊಂಡು ಬರಬೇಕಾದ ಅಂತವು ಆ ಪ್ರಯತ್ನದಲ್ಲಿ ಆಯತಪ್ಪಿ ಬಿದ್ದುಬಿಟ್ಟನು. ಬಿದ್ದ ಆತನನ್ನು ಜನರು ಹಿಡಿದು ಕಲ್ಲಮರಿಗೆಯನ್ನು ಆತನ ಮೇಲೆ ಕವಚಿ ಹಾಕಿ ಸಾಯಿಸಿಬಿಟ್ಟರು.

ಸಿದ್ಧ ಐತಿಹಾಸಿಕ ವ್ಯಕ್ತಿಗಳು-ಟಿಪ್ಪು ಸುಲ್ತಾನ
(ವಕ್ತೃ: ಬಿ. ವಸಂತ ಶೆಟ್ಟಿ, ಹಂದಾಡಿ, ಬ್ರಹ್ಮಾವರ, ಉಡುಪಿ ತಾಲೂಕು)

ತಿಪ್ಪು ಸುಲ್ತಾನನು ಒಂದು ಬಾರಿ ಬ್ರಹ್ಮಾವರಕ್ಕೆ ಹತ್ತಿರವಿರುವ ಪೇತ್ರಿಯ ಸಂತ ಪೀಟರ್ ಇಗರ್ಜಿಯಿಂದ ಬೃಹದ್ಗಾತ್ರದ ಗಂಟೆಯೊಂದನ್ನು ಲೂಟಿ ಮಾಡಿಕೊಂಡು ಹೋಗುತ್ತಿದ್ದನು. ಹಾಗೆ ಹೋಗುತ್ತಿರಲು ಕುಂದಾಪುರದ ಶಂಕರನಾರಾಯಣಕ್ಕೆ ತಲುಪುವಾಗ ಅದನ್ನು ಸಾಗಿಸುತ್ತಿದ್ದ ಗಾಡಿಯು ಮುರಿದುಹೋಯಿತು. ಹಾಗಾಗಿ ಆ ಗಂಟೆಯನ್ನು ಆತ ಅಲ್ಲಿಂದ ಶಂಕರನಾರಾಯಣ ದೇವಾಲಯಕ್ಕೆ ಇತ್ತನು. ಈಗಲೂ ಶಂಕರನಾರಾಯಣ ದೇವಾಲಯದಲ್ಲಿ ನಾವು ಆ ಗಂಟೆಯನ್ನು ಕಾಣಬಹುದು.

(ಟಿಪ್ಪುವಿಗೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಬೇರೆ ಬೇರೆ ಕಡೆ ಹಲವು ಐತಿಹ್ಯಗಳು ಲಭಿಸುತ್ತವೆ. ಬೆಳ್ತಂಗಡಿ, ಕುಂಬಳೆ, ಮಧೂರು, ಬೇಕಲಕೋಟೆ ಮುಂತಾದವು ಅಂತಹ ಕೆಲವು ಪ್ರಮುಖ ಸ್ಥಳಗಳ. ಕೆಲವು ಐತಿಹ್ಯಗಳು ಆತನನ್ನು ಹಿಂದೂ ಸಹಿಷ್ಣುವಾಗಿ ಚಿತ್ರಿಸಿದರೆ ಇನ್ನು ಕೆಲವು ಹಿಂದೂ ವಿರೋಧಿಯಾಗಿ ಚಿತ್ರಿಸಿವೆ. ಇತರ ಸಿದ್ಧ ಇತಿಹಾಸ ಪುರುಷರ ಬಗೆಗೂ ಐತಿಹ್ಯಗಳು ಪ್ರಚಾರದಲ್ಲಿವೆ)

ಪೌರಾಣಿಕ ವ್ಯಕ್ತಿಗಳು– ಭೀಮ (ಪಾಂಡವರು)
(ವಕ್ತೃ: ನಾರಾಯಣ ಶೆಟ್ಟಿ, ವಿಟ್ಲ)

ಭೀಮನ ಪ್ರಯತ್ನದ ಫಲವಾಗಿ, ಅರಗಿನರಮನೆಯಿಂದ ಪಾರಾಗಿ ಬಂದ ಪಾಂಡವರು ಹಿಡಿಂಬ ವನವನ್ನು ಕಳೆದು ಏಕ ಚಕ್ರ ನಗರದ ಬ್ರಾಹ್ಮಣರ ಆಶ್ರಯದಲ್ಲಿರುತ್ತಾರೆ. ಆ ಸಂದರ್ಭದಲ್ಲಿ ಅವರಿದ್ದ, ಊರಿಗೆ ಗುಡ್ಡದ ಮೇಲಿನ ಬಕಾಸುರನಿಂದಾಗಿ ಅಪರಿಹಾರ್ಯವಾದ ವಿಪತ್ತೊಂದು ಎದುರಾಗಿತ್ತು. ಊರವರೇ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಪ್ರತಿಯೊಂದು ಮನೆಯಿಂದ ಸರದಿಯಂತೆ ಒಂದು ಬಂಡಿ ಅನ್ನ, ಅದಕ್ಕೆ ಸಹ ಭಕ್ಷ್ಯ- ಭೋಜ್ಯಗಳು, ಒಂದು ಜತೆ ಎತ್ತ, ಒಬ್ಬ ಆಳು- ಇಷ್ಟನ್ನು ಅವನಿಗೆ ಆಹಾರವಾಗಿ ಕಳುಹಿಸಿಕೊಡಬೇಕಿತ್ತು. ಪಾಂಡವರು ಆಶ್ರಯ ಪಡೆದಿದ್ದ ಬ್ರಾಹ್ಮಣರ ಮನೆಯ ಸರದಿ ಬಂದಾಗ ಅವರ ಮನೆಯಿಂದ ಬಕಾಸುರನಿಗೆ ಆಹಾರವಾಗಿ ಯಾರು ಹೋಗುವುದೆಂಬ ವಿಷಯದಲ್ಲಿ ಚರ್ಚೆ ನಡೆಯಿತು. ಇದನ್ನು ಕೇಳಿಸಿಕೊಂಡ ಕುಂತಿಯು ತನ್ನ ಹೊಟ್ಟಬಾಕ ಮಗನಾದ ಭೀಮನನ್ನು ಕಳುಹಿಸುವುದಾಗಿ ಮನೆಯವರನ್ನು ಒಪ್ಪಿಸಿದಳು. ಅದರಂತೆ ಅನ್ನದ ಬಂಡಿಯನ್ನು ಬಕಾಸುರನ ಗುಡ್ಡದತ್ತ ಹೊಡೆದುಕೊಂಡು ಹೋದ ಭೀಮನು ಅದರಲ್ಲಿದ್ದ ಅನ್ನ-ಭಕ್ಷ್ಯ- ಭೋಜ್ಯಗಳನ್ನೆಲ್ಲಾ ತಾನು ದಾರಿಯುದ್ದಕ್ಕೂ ಉಣ್ಣುತ್ತಾ ಸಾಗಿದನು. ಊಟದ ಮಧ್ಯೆ ಆತನ ನಿಣ್ಣಿಗೆ (ಬಾಯೊಳಗಿನ ಒಂದು ಭಾಗ) ಕಲ್ಲೊಂದು ಸಿಲುಕಿಕೊಂಡಿತು. ಅದನ್ನಾತ ತೆಗೆದು ಬಿಸಾಡಿದನು. ಅದುವೇ ಈಗ ‘ನಿಣ್ಣಿಕಲ್ಲು’ ಎಂಬ ಹೆಸರಿನಿಂದ (ಪುತ್ತೂರು ತಾಲೂಕು, ಕಬಕ ಸಮೀಪದ ಅಳಿಕೆ ಮಜಲು ಎಂಬಲ್ಲಿ) ಪ್ರಸಿದ್ಧವಾಗಿದೆ.

ಇದನ್ನೊಂದು ಸ್ಥಳೈತಿಹ್ಯವಾಗಿಯೂ ಪರಿಗಣಿಸಬಹುದಾಗಿದೆ. ಮಹಾಭಾರತದ ಒಬ್ಬ ವ್ಯಕ್ತಿಯಾದ ಭೀಮನು ಈ ಐತಿಹ್ಯದ ಕೇಂದ್ರ ಬಿಂದುವಾಗಿರುವುದರಿಂದ ಇದನ್ನಿಲ್ಲಿ ವ್ಯಕ್ತಿ ಐತಿಹ್ಯಕ್ಕೆ ಉದಾಹರಣೆಯಾಗಿ ನೀಡಲಾಗಿದೆ. ಇಲ್ಲಿ ಪೌರಾಣಿಕ ವ್ಯಕ್ತಿ ಸನ್ನಿವೇಶ ಘಟನೆಗಳನ್ನು ತೀರಾ ಸಹಜ ವೆಂಬ ರೀತಿಯಲ್ಲಿ ತಮ್ಮೂರಿಗೆ ಆರೋಪಿಸಿ ಕೊಳ್ಳುವ, ಅಳವಡಿಸಿಕೊಳ್ಳುವ ನಮ್ಮ ಜನಪದರ ಮನ ಪ್ರವೃತ್ತಿಯೂ ಗಮನಾರ್ಹ. ಇದೇ ರೀತಿ ಇತರ ಬೇರೆ ಬೇರೆ ಪುರಾಣ ಪಾತ್ರಗಳ ಬಗೆಗೂ ಐತಿಹ್ಯಗಳೂ ರೂಢಿಯಲ್ಲಿವೆ. ಎಷ್ಟೋ ಸಂದರ್ಭಗಳಲ್ಲಿ ಪುರಾಣ ಪಾತ್ರಗಳನ್ನು ಇಲ್ಲವೇ ಸನ್ನಿವೇಶಗಳನ್ನು ತಮ್ಮ ತಮ್ಮ ಊರುಗಳಿಗೆ ಆರೋಪಿಸಿ ಐತಿಹ್ಯ ರಚಿಸಲು ಆಯಾ ಸ್ಥಳದ ಪ್ರಾಕೃತಿಕ ವೈಶಿಷ್ಟ್ಯವೇ ಕಾರಣವಾಗಿರುತ್ತದೆ. ಇಂಥ ವೇಳೆಯಲ್ಲಿ ಅವು ವ್ಯಕ್ತಿ ಐತಿಹ್ಯಕ್ಕಿಂತಲೂ ಸ್ಥಳೈತಿಹ್ಯಗಳೆನಿಸಲು ಹೆಚ್ಚು ಯೋಗ್ಯವಾಗುತ್ತವೆ.

೯. ಅಸಾಮಾನ್ಯ ಸ್ತ್ರೀಯರು- ತುಳುನಾಡ ಸಿರಿ
ವಕ್ತೃಗಳು: ೧. ಕರಿಯ ಶೆಟ್ಟಿ, ಕುರೆದು ಮನೆ, ಬೋಳ, ಕಾರ್ಕಳ ತಾಲೂಕು
೨. ಬಾಬು, ಬರಬೈಲು, ಬೋಳ, ಕಾರ್ಕಳ ತಾಲೂಕು
೩. ಹೊನ್ನಮ್ಮ, ಕುಪ್ಪೆಟ್ಟಿ, ಪುತ್ತೂರು ತಾಲೂಕು
೪. ಗಿರಿಜಮ್ಮ, ಪಂಜಳ, ಪುತ್ತೂರು, ತಾಲೂಕು

ಸತ್ಯನಾಪುರದಮನೆಯಲ್ಲಿಬಿರುಮಾಳ್ವರಿಗೆ ಬೆರ್ಮರ ವರ ಪ್ರಸಾದ ರೂಪವಾಗಿ ಸಿಂಗಾರದ ಪುರ್ಪದಲ್ಲಿ ಹುಟ್ಟಿದ ಸಿರಿಯು ಮುಂದೆ ಬೆಳೆದು ದೊಡ್ಡವಳಾಗುತ್ತಾಳೆ. ಅವಳಿಗೆ ಬಸರೂರು ಬೀಡಿನ ಶಂಕರಿ ಪೂಂಜೆದಿಯ ಮಗ ಕಾಂತಣ ಪೂಂಜನೊಂದಿಗೆ ಮದುವೆಯಾಗುತ್ತದೆ. ಮದುವೆಗೆ ಮುನ್ನವೇ ಕಾಂತಣನಿಗೆ ಸೂಳೆ ಸಿದ್ಧವಿನ ಸಂಗವಿರುತ್ತದೆ. ಹೀಗಾಗಿ ಸಿರಿ-ಕಾಂತಣರ ದಾಂಪತ್ಯ ಜೀವನ ಸುಖಮಯವಾಗಿ ಸಾಗುವುದಿಲ್ಲ. ಸತ್ಯನಾಪುರದ ಅಜ್ಜರ (ಬಿರುಮಾಳ್ವ) ಆಶ್ರಯದಲ್ಲಿ ಸಿರಿಯು ಪುತ್ರ ಕುಮಾರನನ್ನು ಪಡೆಯುತ್ತಾಳೆ. ಗಂಡನೊಂದಿಗೆ ಮನಸ್ತಾಪವಾಗಿ ಆತನ ಸಂಬಂಧವನ್ನು ಕಡಿದೊಗೆದು ಸಖಿದಾರು ಮತ್ತು ಕುಮಾರನೊಂದಿಗೆ ಸಿರಿಯು ಸತ್ಯನಾಪುರದರ ಮನೆಯಿಂದ ಹೊರಬೀಳುತ್ತಾಳೆ. ದಾರಿಯುದ್ದಕ್ಕೂ ಎದುರಾದ ಅಡ್ಡಿ-ವಿಡ್ಡೂರಗಳನ್ನು ತನ್ನ ಮಾಯಾ ಶಕ್ತಿ (ದೈವಿಕ ಶಕ್ತಿ) ಯಿಂದ ಕಳೆದೊಗೆದು, ತನಗೆ ಒಳಿತುಂಟು ಮಾಡಿದವರನ್ನು ಹರಸಿ, ಕೆಡುಕು ಬಗೆದವರನ್ನು ಶಪಿಸಿ, ದಾರಿಯಲ್ಲಿ ಸಾಗುತ್ತ ಅಬ್ಬನಡ್ಕದ ಗುಡ್ಡ ಮುಟ್ಟಿದರು. ಸಿರಿಯು ಅಲ್ಲಿಯ ಗೋಳಿಮರದ ರೆಂಬೆ ಯೊಂದಕ್ಕೆ ಕುಮಾರನ ತೊಟ್ಟಿಲನ ಕಟ್ಟಿ ರಾಮರಾಗ ಹಾಡಲು ತೊಡಗಿದಳು.

ಪಕ್ಕಡ ಕಾಡಿಗೆ ಬೇಟೆಗೆಂದು ಬಂದಿದ್ದ ಬೋಳದರಮನೆಯಅ ರಸುಸ ಹೋದರರಾದ ಬಿಳಿಯ ದೇಸಿಂಗ ಮತ್ತು ಕರಿಯ ದೇಸಿಂಗರು ಸಿರಿಯ ಹಾಡಿಗೆ ಮನಸೋತು ಅವಳನ್ನು ತಮ್ಮವಳನ್ನಾಗಿಸುವ ಆಸೆಯಿಂದ ನಾಮುಂದು ತಾಮುಂದೆಂದು, ಮೊದಲು ಆಕೆಯೆಡೆಗೆ ತಲಪಿದವರೇ ಆಕೆಯನ್ನು ವರಿಸುವುದೆಂದೂ-ಸ್ಪರ್ಧೆಯಿಂದ ಓಡಿಬರುತ್ತಾರೆ. ಆದರೆ ಸಿರಿಯ ವರ್ತನೆ ‘ಅಣ್ಣಂದಿರೆ’ ಎಂದು ಆಕೆ ಅವರನ್ನು ಸಂಬೋಧಿಸಿದ ರೀತಿ- ಇವುಗಳಿಂದ ಅವರ ಮನಸ್ಸು ಪರಿವರ್ತನೆಯಾಗುತ್ತದೆ. ಆಕೆಯನ್ನು ತಂಗಿಯಾಗಿ ಸ್ವೀಕರಿಸಿ ತಮ್ಮರಮನೆಗೆ ಕರೆಯುತ್ತಾರೆ. ಒಪ್ಪಿಗೆ ಸೂಚಿಸಿದ ಆಕೆಯನ್ನು ಕರೆದುಕೊಂಡು ಹೋಗುವ ಸನ್ನಾಹಕ್ಕಾಗಿ ಸಹೋದರರಿಬ್ಬರು ಅರಮನೆಗೆ ಹೋದ ಸಂದರ್ಭದಲ್ಲಿ ಸಿರಿಯು ಬೋಳದ ಬಯಲಿಗಿಳಿದು ಅಲ್ಲಿಯೂ ಕೆಲವೆಡೆ ತನ್ನ ಮಾಯಾಶಕ್ತಿಗಳನ್ನು ತೋರಿಸಿ ದಾರು ಮತ್ತು ಪುತ್ರ ಕುಮಾರನನ್ನು ಮಾಯ ಮಾಡುತ್ತಾಳೆ. ಮಾತಿನಂತೆ ಬಿಳಿಯ ದೇಸಿಂಗ ಮತ್ತು ಕರಿಯ ದೇಸಿಂಗರು ಸಕಲ ಸಂಭ್ರಮದಿಂದ ಆಕೆಯನ್ನು ಬೋಳದವಮನೆಗೆ ಕರೆದುಕೊಂಡು ಹೋಗುತ್ತಾರೆ. ಮುಂದೆ ಆ ಸಹೋದರರಿಬ್ಬರು ಸಿರಿಯನ್ನು ಕೊಟ್ರಾಡಿಗುತ್ತು ಕೊಡ್ಸರಾಳ್ವನಿಗೆ ಮರುಮದುವೆ ಮಾಡಿಕೊಡುತ್ತಾರೆ. ಸಾಮುವೆಂಬಾಕೆಯನ್ನು ಮೊದಲೇ ಮದುವೆಯಾಗಿದ್ದ ಆಳ್ವನಿಗೂ ಇದು ಎರಡನೆಯ ಸಂಬಂಧವಾಗಿತ್ತು. ಹೀಗಾಗಿ ಕೆಲವೊಂದು ಸಂದರ್ಭಗಳಲ್ಲಿ ಅವರೊಳಗೆ (ಮುಖ್ಯವಾಗಿ ಸಾಮುವಿಗೆ) ಸವತಿ ಮತ್ಸರ ತಲೆದೋರಿತಾದರೂ ಕಾಲಕ್ರಮೇಣ ಅವೆಲ್ಲಾ ಮಾಯವಾಗಿ ಅವರಿಬ್ಬರೂ ಅನ್ಯೋನ್ಯತೆಯಿಂದ ಕೊಡ್ಸಾರಾಳ್ವನ ಜೊತೆ ಬಾಳುತ್ತಾರೆ. ಹೀಗಿರಲು ಸಿರಿ ಬಸುರಿಯಾಗಿ ಸೊನ್ನೆಯೆಂಬ ಹೆಣ್ಮಗುವನ್ನು ಹೆತ್ತು ತಾನು ಮಾಯಾವಾಗುತ್ತಾಳೆ.

ಇದು ಪಾಡ್ದನ ರೂಪದಲ್ಲಿರುವ ಸಿರಿ ಚರಿತ್ರೆಯ ಸಂಕ್ಷಿಪ್ತ ಸಾರ. ಆಕೆಯು ತನ್ನ ಮಾಯಾ ಶಕ್ತಿಯ ಮೂಲಕ ನಡೆಸುವ ಪವಾಡಗಳ ವರ್ಣನೆಯಿಂದಲೂ ಪಾಡ್ದನ ಇಡಿಕಿರಿದಿದೆ. ಪಾಡ್ದನ ಆರಂಭದಲ್ಲಿ ಬಿರುಮಾಳ್ವರಿಗೆ ಮಕ್ಕಳಿರದಿದ್ದ ಹಿನ್ನೆಲೆಯೂ ವರ್ಣಿತವಾಗಿದೆ. ಸಿರಿಯ ಮಾಯಾನಂತರ ಸೊನ್ನೆ, ಗಿಂಡಿ, ಅಬ್ಬಗ, ದಾರಗರ ವೃತ್ತಾಂತವೂ ಪಾಡ್ದನದಲ್ಲಿ ಸೇರಿಕೊಂಡಿದೆ. ಸಿರಿಯ ಬಗೆಗೆ ಬಾಯ್ದೆರೆಯಾಗಿ ಪ್ರಚಲಿತವಿದ್ದ ಹತ್ತು ಹಲವು ಐತಿಹ್ಯಗಳೇ ಒಂದು ಸೇರಿ ಪದ್ಯ ಮಾಧ್ಯಮವನ್ನು ಪಡೆದುಕೊಂಡಿತು ಎನ್ನಬಹುದಾಗಿದೆ.

ಶೋಷಿತ ಸ್ತ್ರೀಯರು-ಪರತಿ (ಕೊರತಿ) ಮಂಙಣೆ
(ವಕ್ತೃ: ಯಮುನ(ದಿ) ಏವುಂಜೆ, ಕಾಸರಗೋಡು ತಾಲೂಕು)

ಭೂತ ಕಟ್ಟುವ ಪರವನ ಮಡದಿಯಾದ ಪರತಿಯ ರೂಪಲಾವಣ್ಯಕ್ಕೆ ಮನಸೋತ ಅರಸ (ಬಲ್ಲಾಳ) ನೊಬ್ಬನು ಆಕೆಯನ್ನು ತನ್ನವಳನ್ನಾಗಿಸಿಕೊಳ್ಳುವ ಸಂಚು ಹೂಡುತ್ತಾನೆ. ಪರವನನ್ನು ಭೂತಕಟ್ಟಿರುವಾಗಲೇ ಕೊಲ್ಲಿಸುತ್ತಾನೆ. ಅದಾದ ಬಳಿಕ ಪರತಿಯ ಮನವೊಲಿಸಲು ಪ್ರಯತ್ನಿಸುತ್ತಾನೆ. ಆದರೆ ಬಲ್ಲಾಳನ ಆಮಿಷಕ್ಕೆ ತಲೆ ತಗ್ಗಿಸಿದ ಪರತಿಯು ಉಪಾಯದಿಂದ ತಾನಾತನಿಗೆ ಒಲಿದಂತೆ ನಟಿಸಿ, ಆತನ ಸಂಪತ್ತೆನ್ನೆಲ್ಲಾ ಚಿತೆಗೆ ಅರ್ಪಿಸುವಂತೆ ಮಾಡಿ, ತಾನೂ ಚಿತೆಗೆ ಬಿದ್ದು ಪ್ರಾಣತ್ಯಾಗ ಮಾಡುತ್ತಾಳೆ. ಇವಳೇ ಮುಂದೆ ಕೊರತಿ ಭೂತವಾಗುತ್ತಾಳೆ. ಇದು ಇಂದು ಪಾಡ್ದನ ರೂಪದಲ್ಲಿದೆ.

ಶೋಷಿತ ಸಾಮಾನ್ಯರು-ಕಲ್ಕುಡ ಕಲ್ಲುರ್ಟಿ
ವಕ್ತೃಗಳು: ೧. ಬಾಬು, ಬರಬೈಲು, ಬೋಳ, ಕಾರ್ಕಳ ತಾಲೂಕು
೨. ಲಿಂಗಿ ಶೆಡ್ತಿ, ಡೆಮ್ಮಾರು, ಕುಕ್ಕುಜೆ, ಕಾರ್ಕಳ ತಾಲೂಕು

ತನ್ನ ಕಾರಣದಿಂದಾಗಿಯೇ ತಂದೆ ಶಂಭುವನ್ನು ಕಳೆದುಕೊಂಡ ಬೀರ (ವೀರ) ಕಲ್ಕುಡನಿಗೆ ಕಾರ್ಕಳದ ಬೈರವರಸನಿಂದ ಕರೆಬರುತ್ತದೆ. ಅವನ ಅಪೇಕ್ಷೆಯಂತೆ ಬೀರ ಕಲ್ಕುಡನು ಕಾರ್ಕಳದಲ್ಲಿ ಭವ್ಯವಾದ ಗೊಮ್ಮಟ ವಿಗ್ರಹವನ್ನು ಕೆತ್ತಿ ನಿಲ್ಲಿಸುವನು. ಕೆಲಸವೆಲ್ಲಾ ಪೂರ್ತಿಯಾದ ಬಳಿಕ ತನ್ನ ರಾಜ್ಯದಲ್ಲಿ ನಿರ್ಮಿಸಿದ ವಿಶಿಷ್ಟ ಕಲಾಪ್ರೌಢಿಮೆಯಿಂದೊಡಗೂಡಿದ ಇಂತಹ ಗೊಮ್ಮಟ ವಿಗ್ರಹವನ್ನು ಈತನು ಬೇರೆಲ್ಲೂ ನಿರ್ಮಿಸಬಾರದು ಎಂಬ ಸ್ವಾರ್ಥ-ದುರುದ್ದೇಶಗಳಿಂದ ಶಿಲ್ಪಿಯ ಎಡಗೈ ಮತ್ತು ಬಲಗಾಲನ್ನು ಕತ್ತರಿಸುತ್ತಾನೆ. ಕೈಕಾಲು ಕಳೆದುಕೊಂಡ ಬೀರ ಕಲ್ಕುಡನಿಗೆ ವೇಣೂರಿನ ಅಜಿಲರ ಆಶ್ರಯ ದೊರೆಯುತ್ತದೆ. ಅವರ ಸೀಮೆಯಲ್ಲಿ ತನ್ನ ಉಳಿದಿರುವ ಒಂದು ಕೈಯಿಂದಲೇ ಅಪ್ರತಿಮ ಮಾದರಿಯ ಗೊಮ್ಮಟ ವಿಗ್ರಹವೊಂದನ್ನು ನಿರ್ಮಿಸಿ, ಕಾರ್ಕಳದರಸನ ಸವಾಲಿಗೆ ಪ್ರತಿ ಸವಾಲೆಸೆಯುತ್ತಾನೆ. ಅದೇ ವೇಳೆಗೆ ಆತನ ತಂಗಿಯೂ (ಕಲ್ಲುರ್ಟಿ) ಅಣ್ಣ ನನ್ನರಸಿಕೊಂಡು ಅಲ್ಲಿಗೆ ಬಂದಿರುತ್ತಾಳೆ. ಅಣ್ಣನ ಸ್ಥಿತಿಯನ್ನು ಕಂಡು ಮಮ್ಮಲ ಮರುಗುತ್ತಾಳೆ. ಕೊನೆಗೆ ಇಬ್ಬರೂ ಸೇರಿ ಮಾಯವಾಗುತ್ತಾರೆ. ಮುಂದೆ ಅವರೇ ಭೂತಗಳಾಗಿ ಕಾರ್ಕಳದರಸನನ್ನೂ, ಅವನ ಸಂತತಿಯವರನ್ನೂ ಕಾಡುತ್ತಾರೆ. ತಮ್ಮನ್ನು ನಂಬಿಕೊಂಡು ಬರುವಂತೆ ಮಾಡುತ್ತಾರೆ.

ಇದು ಕೂಡ ಇಂದು ಪಾಡ್ದನ ಇಲ್ಲವೆ ಸಂಧಿ ರೂಪದಲ್ಲಿ ದೊರೆಯುತ್ತದೆ.

ಘಟನಾ ಐತಿಹ್ಯಗಳು

ಪ್ರತಿಯೊಂದು ಐತಿಹ್ಯದಲ್ಲೂ ನಿರ್ದಿಷ್ಟ ಘಟನೆಯೊಂದು ಇದ್ದೆ ಇರುವುದರಿಂದ ಸಂಪ್ರಬಂಧದಲ್ಲಿ ಘಟನಾ ಐತಿಹ್ಯವೆಂಬ ಪ್ರತ್ಯೇಕ ವರ್ಗವೊಂದನ್ನು ಗುರುತಿಸಿಕೊಂಡಿಲ್ಲ. ಹೀಗಿದ್ದರೂ ಕೆಲವು ಐತಿಹ್ಯಗಳ ಜೊತೆಗೆ ಬಳಕೆಗೆ ಬಂದಿರುವ ಗಾದೆ ಮಾತುಗಳು, ಒಗಟುಗಳು ಮತ್ತು ಸ್ಥಳನಾಮಗಳು ಹಿಂದೆ ನಡೆದುದೆಂದು ಹೇಳಲಾಗುವ ನಿರ್ದಿಷ್ಟ ಘಟನೆಗಳಿಂದಾಗಿಯೇ ಇಂದಿನ ತನಕ ಉಳಿದು ಬಂದಿರುವುದನ್ನೂ, ಆ ಘಟನೆಗಳೇ ಅಲ್ಲಿ ಮಹತ್ವದ ಪಾತ್ರ ವಹಿಸುವುದನ್ನೂ ಗಮನಿಸಿದರೆ ಸ್ಥಳೈತಿಹ್ಯ, ವ್ಯಕ್ತಿ ಐತಿಹ್ಯಗಳೊಳಗೇ ಘಟನಾ ಪ್ರಧಾನ ಐತಿಹ್ಯಗಳನ್ನೂ ಗುರುತಿಸುವುದು ಸಾಧ್ಯವಾಗುತ್ತದೆ.

ಗಾದೆಯ ಹಿಂದಿರುವ ಐತಿಹ್ಯ- ಎಂಕು ಪಣಂಬೂರಿಗೆ ಹೋದುದು
ಆಧಾರ: ಪ್ರಚಲಿತ ಗಾದೆ ಮತ್ತು ಅದರ ಹಿಂದಿರುವ ಐತಿಹ್ಯ.
ವಕ್ತೃ: ವಾಮನ ನಂದಾವರ, ಮಂಗಳೂರು ತಾಲ್ಲೂಕು

ಹಿಂದೆ ಎಂಕು ಎಂಬ ವ್ಯಕ್ತಿಯು ಧನಿಕರೊಬ್ಬರ ಮನೆಯಲ್ಲಿ ಕೆಲಸದಾಳಾಗಿ ದುಡಿಯುತ್ತಿದ್ದ. ಒಂದು ದಿನ ಮನೆಯವರು ನಾಳೆ ದಿನ ಎಂಕುವನ್ನು ಪಣಂಬೂರಿಗೆ ಕಳುಹಿಸಬೇಕೆಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಕೇಳಿಸಿಕೊಂಡ ಎಂಕುವು ಮನೆಯೊಡೆಯನು ತನ್ನಲ್ಲಿ ಆ ಬಗ್ಗೆ ಹೇಳುವ ಮುನ್ನವೇ ಮರುದಿನ ಬೆಳೆಗಾತ ಎದ್ದು ಪಣಂಬೂರಿಗೆ ಹೋಗಿಬಂದ. ಹೋಗಬೇಕಾದ ಉದ್ದೇಶವೇನೆಂಬುದನ್ನೂ ಕೇಳಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಧನಿಗಳು ಹೇಳುವ ಮುನ್ನವೇ ಅವರ ಅಪೇಕ್ಷೆಯನ್ನು ತೀರಿಸಿ ಅವರಿಂದ ಶಹಭಾಸ್‌ಗಿರಿ ಗಿಟ್ಟಿಸುವ ಉದ್ದೇಶ ಅವನದು. ಪಣಂಬೂರಿಗೆ ಹೋಗಿ ಬಂದ. ಎಂಕುವನ್ನು ಮನೆಯೊಡೆಯರು ಕರೆದು ‘ಎಲ್ಲಿಗೆ ಹೋಗಿದ್ದಿಯಾ?’ ಎಂದು ವಿಚಾರಿಸಿದರು. ‘ಪಣಂಬೂರಿಗೆ’ ಎಂದು ಉತ್ತರಿಸಿದ. ‘ಯಾಕೆ?’ ಎಂದು ಕೇಳಿದರು ಧನಿಗಳು. ‘ನಿನ್ನೆ ನೀವು ಮನೆಯವರೊಂದಿಗೆ ನನ್ನನ್ನು ಇಂದು ಪಣಂಬೂರಿಗೆ ಕಳುಹಿಸಿಕೊಡುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿದೆ. ಅದಕ್ಕಾಗಿ ಹೋಗಿ ಬಂದೆ- ಎಂದನು ಎಂಕು. ಎಂಕುವಿನ ಮಾತನ್ನು ಕೇಳಿ ಪಣಂಬೂರಿಗೆ ಹೋಗಬೇಕಿದ್ದುದರ ಉದ್ದೇಶವನ್ನು ತಿಳಿದು ಕೊಳ್ಳದ ಅವನ ಹುಂಬತನಕ್ಕೆ ಮನೆಯವರೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಈ ಪ್ರಸಂಗದ ನಂತರ ‘ಎಂಕು ಪಣಂಬೂರಿಗೆ ಹೋದ ಹಾಗೆ’ (ಎಂಕು ಪಣಂಬೂರುಗು ಪೋಯಿಲೆಕ್ಕ) ಎಂಬ ಗಾದೆ ಮಾತು ಬಳಕೆಗೆ ಬಂತು. ಈ ಗಾದೆ ಜಿಲ್ಲೆಯ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ (ಉದಾ: ‘ಕುಟ್ಟಿ ಕುಂದಾಪುರಕ್ಕೆ ಹೋದ ಹಾಗೆ)-ಬಳಕೆಯಾಗುತ್ತಿದೆ.

ಹಾಗಾಗಿ ಸಂಚಾರಿ ಐತಿಹ್ಯವಾಗಿಯೂ ನಾವಿದನ್ನು ಪರಿಗಣಿಸಬಹುದು. ವ್ಯಕ್ತಿ ಐತಿಹ್ಯಗಳಲ್ಲಿ ಹೆಡ್ಡ ವ್ಯಕ್ತಿಯ ಐತಿಹ್ಯವಾಗಿಯೂ ಇದನ್ನು ಸೇರಿಸಬಹುದು.

ಒಗಟಿನ ಜತೆಗಿರುವ ಐತಿಹ್ಯ- ಸಿಪಾಯಿಗಳು ಮತ್ತು ಸೂಳೆಯರು
(ವಕ್ತೃ: ಚೋಮು ಹೆಂಗ್ಸು ಏವುಂಜೆ. ಕಾಸರಗೋಡು ತಾಲೂಕು)

ಪುತ್ತೂರಲ್ಲಿ ಹಿಂದೆ ನಾಲ್ವರು ಸಿಪಾಯಿಗಳಿದ್ದರು. ಅವರಿಗೆ ಒಂದು ಬಾರಿ ಮಂಗಳೂರಿನಲ್ಲಿರುವ ನಾಲ್ವರು (ಕು) ಪ್ರಸಿದ್ಧ ಸೂಳೆಯರನ್ನು ಕೂಡಬೇಕೆಂಬ ಮನಸ್ಸಾಗಿ ಅತ್ತ ಹೊರಟರು. ಅವರನ್ನು ಭೇಟಿಯಾಗಿ ತಮ್ಮ ತಮ್ಮ ಮನದಪೇಕ್ಷೆಯನ್ನು ವ್ಯಕ್ತಪಡಿಸಿದರು. ವೇಶ್ಯೆಯರು ಪ್ರತಿಯೊಬ್ಬ ಸಿಪಾಯಿಗೂ ತಮ್ಮನ್ನು ಕೂಡಬೇಕಾದ ಹೊತ್ತನ್ನು ತಿಳಿಸುವರು. ಮೊದಲನೆ ಯಾಕೆ ಮೊದಲನೆಯ ಸಿಪಾಯಿಗೆ ಪಾರೆ ಕೆಂಪಗೆ ಹೂ ಬಿಡುವ ಹೊತ್ತಿಗೆ ತನ್ನನ್ನು ಬಂದು ಕೂಡಲು ಹೇಳುತ್ತಾಳೆ. ಎರಡನೆಯವಳು ಇನ್ನೊಬ್ಬ ಸಿಪಾಯಿಗೆ ಏರಿದ ನೀರು ಇಳಿಯುವ ಸಮಯಕ್ಕೆ ತನ್ನನ್ನು ಸಂಧಿಸಲು ತಿಳಿಸುತ್ತಾಳೆ. ಮೂರನೆಯ ವೇಶ್ಯೆ ಮತ್ತೊಬ್ಬ ಸಿಪಾಯಿಯಲ್ಲಿ ದರೆ (ಮಣ್ಣಿನ ಕೋಟೆ) ಜರಿದು ಬೀಳುವ ಹೊತ್ತಿಗೆ ತನ್ನತ್ತ ಬರಲು ಸೂಚಿಸುತ್ತಾಳೆ. ಕೊನೆಯಾಕೆ ಉಳಿದೊಬ್ಬ ಸಿಮಾಯಿಗೆ ಮರಗಳೆರಡು ಸಂಧಿಸುವ ಹೊತ್ತಿಗೆ ತನ್ನನ್ನು ಬಂದು ಕೂಡುವಂತೆ ಹೇಳುತ್ತಾಳೆ. ಸಿಪಾಯಿಗಳೂ ನಾಲ್ವರೂ ವೇಶ್ಯೆಯರಂದ ಮಾತಿನ ಹೊಲಬರಿಯದೆ ದಂಗಾಗುತ್ತಾರೆ. ಅವರು ಸಂಕೇತ ಇಲ್ಲವೆ ಒಗಟಿನ ಮೂಲಕ ಸೂಚಿಸಿದ ಹೊತ್ತು ಯಾವುದೆಂಬುದನ್ನು ತಿಳಿಯಲು ಸಿಪಾಯಿಗಳು ಅಸಮರ್ಥರಾಗುತ್ತಾರೆ. ಕಥೆ ಇಲ್ಲಿಗೆ ಗಕ್ಕನೆ ನಿಂತು ಬಿಡುತ್ತದೆ. ಈಗ ಕಥೆ ಕೇಳುತ್ತಾ ಕುಳಿತವರು ಈ ಒಗಟನ್ನು ಬಿಡಿಸಬೇಕು. ಆ ಮೂಲಕ ಸಿಪಾಯಿಗಳಿಗೆ ವೇಶ್ಯೆಯರನ್ನು ಕೂಡಲು ನೆರವಾಗಬೇಕು. ಇಲ್ಲವೆ (ಒಗಟಿನ ಸಾಮಾನ್ಯ ನಿಯಮದಂತೆ) ಸೋಲೋಪ್ಪಿಕೊಂಡು ಮಂಡೆ ಹಾಕಬೇಕು. ಆಗ ಕಥೆ ಹೇಳಿದಾತನೇ ಆ ಒಗಟುಗಳನ್ನು ಬಿಡಿಸುತ್ತಾನೆ.

ಅದು ಹೀಗಿದೆ: ಪಾರೆ ಕೆಂಪಗೆ ಬಿಡುವುದೆಂದರೆ ಪಾರೆಯಂತೆ ರಕ್ರಗಿರುವ ಚಿಮಿಣಿ ದೀಪವು ಉರಿಯುವುದು. ಏರಿದ ನೀರು ಇಳಿಯುವುದೆಂದರೆ ಮೂತ್ರ ಹೊಯ್ಯುವುದು. ದರೆ ಜರಿದು ಬೀಳುವುದೆಂದರೆ ಅನ್ನ ಮಾಡಲು ಗಂಜಿ ನೀರನ್ನು ಬಸಿಯುವುದು. ಮರಗಳೆರಡು ಸಂಧಿಸುವುದೆಂದರೆ ಬಾಗಿಲುಗಳೆರಡು ಮುಚ್ಚಿಕೊಳ್ಳುವುದು. ಇವೆಲ್ಲಾ ಮುಸ್ಸಂಜೆಯ ಹೊತ್ತಿಗೆ (ಕತ್ತಲಾದಂತೆ) ಇಲ್ಲವೆ ಮಲಗುವ ಗೊತ್ತಿಗೆ ನಡೆಯುವ ಸಾಮಾನ್ಯ ಕ್ರಿಯೆಗಳು. ಇದನ್ನೆಲ್ಲಾ ಆ ವೇಶ್ಯೆಯರು ಸಿಪಾಯಿಗಳಿಗೆ ತಮ್ಮನ್ನು ಕೂಡಲಿರುವ ಹೊತ್ತಿನ ಸಂಕೇತಗಳಾಗಿ ಸೂಚಿಸಿದರೆಂಬುದನ್ನು ಇಲ್ಲಿ ತಿಳಿದಿರಬೇಕಾಗುತ್ತದೆ. ತಾವು ಉದ್ದೇಶಿಸಿರುವ ಸಮಯಕ್ಕೆ ಸರಿಯಾಗಿ ಅವರು ಸಿಪಾಯಿಗಳಿಗೆ ಕಾಣುವಂತೆ ಈ ಕ್ರಿಗೆಗಳನ್ನೆಲ್ಲಾ ಮಾಡಿ ತೋರಿಸುವವರಿದ್ದರೆಂಬುದನ್ನು ನಾವು ಅರಿತಿರಬೇಕಾಗುತ್ತದೆ. ಒಟ್ಟಿನಲ್ಲಿ ಒಗಟಿನ ರೂಪದಲ್ಲಿರುವ ಅವರ ಸಂಕೇತಗಳನ್ನು ಸಿಪಾಯಿಗಳು ಅರ್ಥೈಸಿಕೊಳ್ಳುವುದು ಇಲ್ಲಿ ಮುಖ್ಯ.

ಈ ಕಥೆಯು ಒಗಟಿನ ಜೊತೆಗೆ ಅಥವಾ ಒಗಟಿನ ಮೂಲಕ, ಇಲ್ಲವೆ ಒಗಟಿನ ರೂಪದಲ್ಲಿ ಉಳಿದು, ಬೆಳೆದುಕೊಂಡು ಬಂದಿರುವುದರಿಂದಲೂ, ಇದರಲ್ಲಿ ನಿರ್ದಿಷ್ಟ ಸ್ಥಾನ ನಿರ್ದೇಶವಿರುವುದರಿಂದಲೂ ಇದನ್ನೊಂದು ಐತಿಹ್ಯವಾಗಿ ಪರಿಗಣಿಸಬಹುದು. ಇಲ್ಲಿನ ಒಗಟು ಕೂಡ ಐತಿಹ್ಯದೊಳಗೆ ಸೇರಿಕೊಂಡಿದೆ. ವೇಶ್ಯೆಯರನ್ನು ಕೂಡಲು ಹೋದ ಸಿಪಾಯಿಗಳಿಗೆ ಅವರು ತಮ್ಮನ್ನು ಕೂಡಬೇಕಾದ ಹೊತ್ತನ್ನು ಒಗಟುಗಳ ಮೂಲಕ ತಿಳಿಸಿದರೆಂಬುದೂ ಐತಿಹ್ಯದ ಒಂದು ಭಾಗವಾಗಿದೆ. ಆದರೆ ಅವರು ಮತ್ತೆ ವೇಶ್ಯೆಯರನ್ನು ಕೂಡಿದರೊ? ಇಲ್ಲವೊ? ಎಂಬುದು ಇದರಲ್ಲಿ ಪ್ರಸ್ತಾಪವಾಗಿಲ್ಲ. ಇಲ್ಲಿ ಐತಿಹ್ಯಕ್ಕಿಂತಲೂ ಒಗಟಿನ ಭಾಗವು ನಮಗೆ ಮುಖ್ಯವಾಗುತ್ತದೆ.

ಸ್ಥಳನಾಮದ ಹಿಂದಿರುವ ಐತಿಹ್ಯ- ‘ಉರುಡೂರು’
(ವಕ್ತೃ: ಗೋಪಾಲಕೃಷ್ಣ ಶಾನುಭಾಗ, ಕೂಡ್ಲು ಕಾಸರಗೋಡು)

ಇದು ತಪಸ್ವೀ ವೇಷದ ಅರ್ಜುನ ಮತ್ತು ಕಿತಾರ ವೇಷದ ಶಿವನಿಗೆ ಯುದ್ಧವಾದ ಸ್ಥಳ. ಪಾಶುಪತಾಸ್ತ್ರವನ್ನು ಪಡೆಯುವ ಸಲುವಾಗಿ ಅರ್ಜುನನು ಶಿವನನ್ನು ಕುರಿತು ತಪಸ್ಸನ್ನಾಚರಿಸುತ್ತಿರುತ್ತಾನೆ. ಆಗ ಅವನ ಸತ್ವ ಪರೀಕ್ಷೆಯನ್ನು ಮಾಡಲೋಸುಗ ಹಂದಿ ಬೇಟೆಯ ನೆಪವೊಡ್ಡಿ ಅರ್ಜುನನ ಬಳಿ ಬರುತ್ತಾನೆ. ಹಂದಿಯ ಕಾರಣದಿಂದ ಅವರಿಬ್ಬರೊಳಗೆ ಯುದ್ಧವಾಗುತ್ತದೆ. ಹಾಗೆ ಅವರು ಪರಸ್ಪರ ಉರುಡಿದ (ಜಗಳಾಡಿದ) ಸ್ಥಳವೇ ಮುಂದೆ ಉರುಡೂರಾಯಿತು. ಅವರೀರ್ವರ ಬಾಣಾಘಾತಕ್ಕೆ ತುತ್ತಾದ ಹಂದಿಯು ಬಿದ್ದ ತಾಣವೇ ಪಂಜಿಕಲ್ಲು ಎಂದೆನಿಸಿತು. (ಈ ಎರಡು ಸ್ಥಳಗಳೂ ಸಾಧಾರಣ ಅಕ್ಕಪಕ್ಕದಲ್ಲಿವೆ)

ಪುರಾಣದ ಕಿರಾತಾರ್ಜುನೀಯ ಪ್ರಸಂಗವೂ ತಮ್ಮ ಊರಿಗೆ ಆರೋಪಿಸಿ ಐತಿಹ್ಯ ರಚಿಸುವ ನಮ್ಮ ಜನಪದರ ಪ್ರವೃತ್ತಿಯನ್ನು ಇಲ್ಲಿಯೂ ನಾವು ಗಮನಿಸಬಹುದು. ಇದನ್ನು ‘ಪೌರಾಣಿಕ ವ್ಯಕ್ತಿಗಳು’ ಎಂಬ ವರ್ಗ ಸೂಚಿಯಡಿಯಲ್ಲಿ ವ್ಯಕ್ತಿ ಐತಿಹ್ಯಕ್ಕೂ ಉದಾಹರಣೆಯಾಗಿ ನೀಡಬಹುದು.

ಆಕರಸೂಚಿ

೧. ವಸಂತಕುಮಾರ ತಾಳ್ತಜೆ: ೧೯೮೮; ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ; ಮುಂಬಯಿ, ವಿ.ವಿ. ಕನ್ನಡ ವಿಭಾಗದ ಪರವಾಗಿ ವಿನಯ ಪ್ರಕಾಶನ, ಬೆಂಗಳೂರು.

೨. ಸುಬ್ಬಣ್ಣ ರೈ. ಎ; ೧೯೯, ದ.ಕ. ಜಿಲ್ಲೆಯ ಐತಿಹ್ಯಗಳು; ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪರವಾಗಿ ಮಾಣಿ ಜೂನಿಯರ್ ಛೇಂಬರ್