ಹಿಂದೆ ನಡೆದ ಘಟನೆ, ಅದರ ನಿರೂಪಣೆ ಇತ್ಯಾದಿ ಅರ್ಥಗಳಲ್ಲಿ ಇಂದು ‘ಇತಿಹಾಸ’ ‘ಚರಿತ್ರೆ’ ಒದಗಳನ್ನು ಗ್ರಹಿಸಲಾಗುತ್ತದೆ. ಸೂಕ್ಷ್ಮವಾಗಿ ಪರಿಭಾವಿಸಿದರೆ ನಾವಿಂದು ಚರಿತ್ರೆಯೆಂದು ಓದುತ್ತಿರುವ ಬಹುಪಾಲು ಸಂಗತಿಗಳು ಹಿಂದೆ ‘ನಡೆದಿರಬಹುದಾ’ ಘಟನೆಗಳ ಬಗೆಗಿನ ಬರಿಯ ವ್ಯಾಖ್ಯಾನಗಳಷ್ಟೆ ಎಂಬುದು ಮನವರಿಕೆಯಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಹಿಂದೆ ಘಟಿಸಿರಬಹುದಾದ ವಾಸ್ತವ ಸಂಗತಿ ಬೇರೆಯೇ ಇದ್ದು ಅದರ ಸುತ್ತ ಹುಟ್ಟಿಕೊಂಡ ಹಲವು ಬಗೆಯ ವ್ಯಾಖ್ಯಾನಗಳನ್ನಷ್ಟೇ ಇತಿಹಾಸವೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಒಗದಿ ಬಂದಿದೆ.

ಕಥೆ, ಐತಿಹ್ಯ ಮತ್ತು ಪುರಾಣಗಳು ಜನಪದ ಗದ್ಯ ಕಥನದಲ್ಲಿ ಸಮಾವೇಶಗೊಳ್ಳುತ್ತವೆ. ಶಬ್ದ ಸಾಮ್ಯ ಮತ್ತು ಅರ್ಥ ಕಲ್ಪನೆಗಳೆರಡರ ದೃಷ್ಟಿಯಿಂದಲೂ ಐತಿಹ್ಯಕ್ಕೆ ಇತಿಹಾಸದೊಂದಿಗೆ ಸಂಬಂಧ ಕಲ್ಪಿಸಲಾಗುತ್ತದೆ. ಅದರಂತೆ ವ್ಯಕ್ತಿ, ವಸ್ತು ಅಥವಾ ಸ್ಥಳಕ್ಕೆ ಸಂಬಂಧಿಸಿದಂತೆ ‘ಯಾವುದೋ ಒಂದು ಕಾಲದಲ್ಲಿ’ ನಡೆದಿರಬಹುದಾದ ಘಟನೆಯೊಂದರ ಕಂಠಸ್ಥ ನಿರೂಪಣೆಯೇ ಐತಿಹ್ಯವೆನಿಸುತ್ತದೆ. ಅಂದರೆ ಇದು ಒಂದು ರೀತಿಯ ಮೌಖಿಕ ಇತಿಹಾಸವಾಗುತ್ತದೆ. ನಡೆದಿರಬಹುದಾದ ಘಟನೆಯ ಸುತ್ತ ಹುಟ್ಟಿಕೊಂಡ ಲಿಖಿತ ವ್ಯಾಖ್ಯಾನವು (ಶಿಷ್ಟ) ಇತಿಹಾಸವೆನಿಸಿದರೆ, ಅಂತಹುದೇ ಘಟನೆಯ ಸುತ್ತ ಹುಟ್ಟಿಕೊಂಡ ಅಲಿಖಿತ (ಬಾಯ್ದೆರೆಯ) ವ್ಯಾಖ್ಯಾನವು ಐತಿಹ್ಯವೆನಿಸುತ್ತದೆ. ವ್ಯಾಖ್ಯಾನೆವೆಂದ ಮೇಲೆ ಉಹಾಪೋಹದ ವಿವರಣೆಗಳೂ ಅಲ್ಲಿ ಸೇರಿಕೊಂಡಿರಬಹುದಾದ ಸಾಧ್ಯತೆ ಇದೆ.

ಐತಿಹ್ಯಗಳೇ ಬೆಳವಣಿಗೆ ಹೊಂದಿ ಜನಪದ ಪುರಾಣಗಳಾಗಬಹುದು. ಹೀಗೆ ಪುರಾಣಗಳಾಗುವ ಸಂದರ್ಭದಲ್ಲಿ ಪವಾಡಗಳು, ಅಸಂಭಾವ್ಯ ಘಟನೆಗಳು, ದೈವಿಕ ಅಂಶಗಳು, ಋಷಿ-ಮುನಿಗಳ ಕಥೆಗಳೆಲ್ಲಾ ಸೇರಿಕೊಂಡು ಐತಿಹ್ಯಗಳು ಸಂಕೀರ್ಣಗೊಳ್ಳುತ್ತವೆ. ಮೂಲದಲ್ಲಿದ್ದಿರದ ಧಾರ್ಮಿಕ ಪರಿವೇಷವೂ ಅವುಗಳಿಗೆ ಪ್ರಾಪ್ತವಾಗುತ್ತದೆ. ಗದ್ಯ ಕಥನ ರೂಪದಲ್ಲಿದ್ದ ಐತಿಹ್ಯ-ಪುರಾಣಗಳು ಕಾಲಕ್ರಮೇಣ ಪದ್ಯ ಮಾಧ್ಯಮದತ್ತಲೂ ಹೊರಳುತ್ತವೆ. ತುಳುನಾಡಿನ ಪಾಡ್ದನ-ಸಂಧಿ-ಕಬಿತೊಗಳೂ ಇತರೆಡೆಯ ಲಾವಣಿ ಮಹಾಕಾವ್ಯಗಳೂ ಈ ರೀತಿ ರೂಪ ವ್ಯತ್ಯಾಸಗೊಂಡ ಐತಿಹ್ಯ ಪುರಾಣಗಳೆನ್ನಬಹುದು. ಐತಿಹ್ಯಗಳನ್ನು ಮುಖ್ಯವಾಗಿ ಸ್ಥಳೈತಿಹ್ಯ ಮತ್ತು ವ್ಯಕ್ತಿ ಐತಿಹ್ಯಗಳೆಂದು ವರ್ಗೀಕರಿಸಿಕೊಳ್ಳಲಾಗುತ್ತದೆ. ಭೌತಿಕ ವಸ್ತು, ಪ್ರಾಣಿ-ಪಕ್ಷಿಗಳಿಗೆ ಸಂಬಂಧಪಟ್ಟ ಐತಿಹ್ಯಗಳೂ ಇರುತ್ತವೆ. ಅದೇ ರೀತಿ ಪುರಾಣಗಳನ್ನೂ ಸ್ಥಳ ಪುರಾಣ, ವ್ಯಕ್ತಿ ಪುರಾಣ, ದೈವೀ ಪುರಾಣ- ಇತ್ಯಾದಿಯಾಗಿ ವರ್ಗೀಕರಿಸಿಕೊಳ್ಳಬಹುದಾಗಿದೆ. ಶಿಷ್ಟ ಇಲ್ಲದೆ ಗ್ರಂಥಸ್ಥ ಇತಿಹಾಸ, ಪುರಾಣಗಳ ಘಟನೆಗಳೂ ಐತಿಹ್ಯ ಮತ್ತು ಜನಪದ ಪುರಾಣಗಳಲ್ಲಿ ಸ್ಥಾನ ಪಡೆದಿರುತ್ತವೆ.

ಐತಿಹ್ಯ -ಪುರಾಣಗಳು ನೈಜ ಘಟನೆಗಳ ಸಹಜ ನಿರೂಪಣೆಗಳಾಗಿರಲಿ, ವೈಭವೀಕೃತ ನಿರೂಪಣೆಗಳಾಗಿರಲಿ, ಅಥವಾ ನಡೆದಿರಬಹುದಾದ ಘಟನೆಗಳ ಸುತ್ತ ಹುಟ್ಟಿಕೊಂಡಿರುವ ವ್ಯಾಖ್ಯಾನಗಳಾಗಿರಲಿ- ಅವುಗಳು ವಾಸ್ತ ಘಟನೆಯ (‘ಇತಿಹಾಸ’ದ) ಸಣ್ಣದೊಂದು ಎಳೆಯನ್ನಾದರೂ ಗರ್ಭೀಕರಿಸಿಕೊಂಡಿರುತ್ತವೆ. ಹಾಗಾಗಿಯೇ ಅವುಗಳ ಅಧ್ಯಯನದಿಂದ ಒಂದು ನಾಡಿನ ಇಲ್ಲವೆ ಜನತೆಯ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲ ಬಹುದಾಗಿದೆ. ಹೊಸ ಒಳನೋಟಗಳು ಲಭಿಸಬಹುದಾಗಿದೆ.

ಕೇವಲ ಅರಸರ ಆಡಳಿತ ವ್ಯಾಪ್ತಿಗೊಳಪಡುವ ಸಂಗತಿಗಳನ್ನಷ್ಟೇ ಚರಿತ್ರೆಯೆಂದು ತಿಳಿಯುವ; ಅಂಥ ಸಂಗತಿಗಳ ವ್ಯಾಖ್ಯಾನಕ್ಕೆ ಅವಶ್ಯಕವಾದ ಶಾಸನ, ಸಾಹಿತ್ಯ, ವಿದೇಶೀಯರ ಬರಹಗಳು, ಬಖೈರುಗಳು, ನಾಣ್ಯಗಳು, ಅವಶೇಷಗಳು, ಸ್ಮಾರಕಗಳು- ಮುಂತಾದವುಗಳನ್ನಷ್ಟೆ ಚರಿತ್ರೆ ರಚನೆಗೆ ಆಕರಗಳನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿ ಇಂದಿಗೂ ನಮ್ಮ ಇತಿಹಾಸಕಾರರಲ್ಲಿದೆ. ವಸಾಹತುಶಾಹಿ ಸಂಸ್ಕೃತಿಯು ಭಾರತೀಯರಿಗೆ ಕಲಿಸಿಕೊಟ್ಟ ಇಂತಹ ಪ್ರವೃತ್ತಿಯಿಂದ ಪೂರ್ಣ ಮುಕ್ತರಾಗಲು ನಮಗಿನ್ನೂ ಸಾಧ್ಯವಾಗಿಲ್ಲ. ಆದರೆ ತುಳುನಾಡಿನ ಮಟ್ಟಿಗೆ ಇಂತಹ ಆಕರಗಳ ಕೊರತೆಯಿತ್ತೆಂಬ ಕಾರಣಕ್ಕಾಗಿಯೆ ಏನೊ! ಇಲ್ಲಿಯ ಅನೇಕ ವಿದ್ವಾಂಸರು, ಸಂಶೋಧಕರು, ಅದೇ ರೀತಿ ಚರಿತ್ರೆಕಾರರು ಜಾನಪದ ಆಕರಗಳ ಸಹಾಯದಿಂದಲೇ ಈ ನಾಡಿನ ಸಾಂಸ್ಕೃತಿಕ- ಸಾಮಾಜಿಕ ಇತಿಹಾಸವನ್ನು ಬರೆದುದುಂಟು. ಹೀಗೆ ಜಾನಪದವನ್ನು ಇತಿಹಾಸ ರಚನೆಗೆ ಆಕರವಾಗಿ ಬಳಸಿಕೊಳ್ಳುವುದರಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಮೊದಲನೆಯದೆಂದರೆ, ಬರಿಯ ಜಾನಪದ ಆಕರಗಳನ್ನಷ್ಟೆ ಬಳಸಿಕೊಂಡು ಒಂದು ರೀತಿಯ ಮೌಖಿಕ ಇತಿಹಾಸವನ್ನು ರಚಿಸುವುದು, ಎರಡನೆಯದು, ಲಿಖಿತ ದಾಖನೆಗಳಿಗೆ ಪೂರಕವಾಗಿ ಜಾನಪದ ಸಾಮಗ್ರಿಗಳನ್ನು ಬಳಸಿಕೊಳ್ಳುವುದು. ಗಣಪತಿ ರಾವ್ ಐಗಳ್, ಎನ್. ಎ. ಶೀನಪ್ಪ ಹೆಗಡೆ, ಎನ್.ಎಸ್. ಕಿಲ್ಲೆ ಮೊದಲಾದ ವಿದ್ವಾಂಸರು ಮೌಖಿಕ ಸಂಪ್ರದಾಯದ ಆಕರಗಳನ್ನು ಬಳಸಿಕೊಂಡು ಒಂದು ರೀತಿಯ ಜನಪ್ರಿಯ ಧಾಟಿಯಲ್ಲಿ ತುಳುನಾಡಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಇತಿಹಾಸವನ್ನು ಬರೆದರು. ಗೋವಿಂದ ಪೈ, ಬಿ.ಎ. ಸಾಲೆತ್ತೂರು, ಪಿ. ಗುರುರಾಜ ಭಟ್ಟರಂಥ ಇತಿಹಾಸ ಸಂಶೋಧಕರು ಲಿಖಿತ ದಾಖಲೆಗಳು ಒದಗಿಸುವ ಮಾಹಿತಿಗೆ ಪೂರಕವಾಗಿ ಆಚರಣೆ, ನಂಬಿಕೆ, ಸಂಪ್ರದಾಯ, ಐತಿಹ್ಯ, ಪುರಾಣ ಇತ್ಯಾದಿ ಜಾನಪದ ಆಕರಗಳನ್ನು ಬಳಸಿಕೊಂಡರು.

೧೯೬೮ರಷ್ಟು ಹಿಂದೆಯೇ ಪಿ. ಕಮಲಾಕ್ಷರು ಜಾನಪದ ಆಕರಗಳ ಸಹಾಯದಿಂದ ‘ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನರ ಸಾಮಾಜಿಕ ಇತಿಹಾಸ’ವನ್ನು ಬರೆದರು. ಈ ಕೃತಿಯು ಇವತ್ತಿಗೂ ಪ್ರಸ್ತುವೆನಿಸುವ ಕೆಲವು ವಿಚಾರಗಳನ್ನು ಒಳಗೊಂಡಿದೆ. ಇವಲ್ಲದೆ ಐತಿಹ್ಯ ಪುರಾಣಗಳ ಕಥೆಗಳನ್ನು ರಂಜನೀಯವಾಗಿ ಸಂಪಾದಿಸಿಕೊಟ್ಟ ಕೃತಿಗಳೂ ನಮ್ಮಲ್ಲಿವೆ. ಬೇಕಲ ರಾಮನಾಯ್ಕರ ‘ತೆಂಕನಾಡ ಐತಿಹ್ಯಗಳು’ ‘ಬಾಳಿದ ಹೆಸರು’ ಮುಂತಾದವುಗಳನ್ನು ಇಲ್ಲಿ ಉದಾಹರಿಸಬಹುದು. ತುಳುನಾಡಿನ ಪರಿಧಿಯನ್ನು ದಾಟಿ ಹೋದರೆ ಕಲ್ಹಣನ ಸಂಸ್ಕೃತ ಕಾವ್ಯ ‘ರಾಜತರಂಗಿಣಿ’ ದೇವಚಂದ್ರನ ಕನ್ನಡ ಕಾವ್ಯ ‘ರಾಜಾವಳಿ ಕಥಾಸಾರ’ ಇತ್ಯಾದಿಗಳೂ ಐತಿಹ್ಯಗಳನ್ನಾಧರಿಸಿ ರಚನೆಯಾದ ವಿಶಿಷ್ಟ ಕೃತಿಗಳೆನಿಸಿ, ಗಮನ ಸೆಳೆಯುತ್ತವೆ. ಮೆಕೆನ್ಜಿ ಸಂಗ್ರಹಿಸಿದ ಕೈಫಿಯತ್ತುಗಳೂ ಐತಿಹ್ಯೋಪಾದಿಯ ನಿರುಕ್ತಗಳಾಗಿವೆ. ಇವೆಲ್ಲ ಒಂದಲ್ಲ ಒಂದು ರೀತಿಯಿಂದ ನಿರ್ದಿಷ್ಟ ಪ್ರದೇಶ ಮತ್ತು ಜನತೆಯ ಚರಿತ್ರೆಯನ್ನು ನಿರೂಪಿಸುತ್ತವೆ. ಅಲಿಖಿತ ದಾಖಲೆಗಳ ನಿರೂಪಣೆಗಳೆಂದು ಇವನ್ನೆಲ್ಲಾ ಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಆದರೆ ವಸಾಹತುಶಾಹಿ ಪರಂಪರೆಯಲ್ಲಿ ಬೆಳೆದು ಬಂದ ಇತಿಹಾಸತಜ್ಞತು ಇಂಥವುಗಳನ್ನೆಲ್ಲಾ ಚರಿತ್ರೆಯೆಂದು ಒಪ್ಪಿಕೊಳ್ಳಲಾರರು. ಎಂತಿದ್ದರೂ ವಾಸ್ತವ ಸಂಗತಿಯ ಸುತ್ತ ಹುಟ್ಟಿಕೊಂಡ ವ್ಯಾಖ್ಯಾನಗಳೇ ಇತಿಹಾಸವೆನ್ನುವುದಾದರೆ ಐತಿಹ್ಯ ಪುರಾಣಗಳಂತಹ ಮೌಖಿಕ ವ್ಯಾಖ್ಯಾನಗಳಿಗೂ ಅಲ್ಲಿ ಸ್ಥಾನವಿರಲೇಬೇಕಾಗುತ್ತದೆ.

ವೈಚಾರಿಕ ಪ್ರಜ್ಞೆ ಜಾಗೃತಗೊಂಡ ಇವತ್ತಿನ ಸಂದರ್ಭದಲ್ಲಿ ಜಾನಪದವನ್ನು ಆಕರವಾಗಿ ಬಳಸಿಕೊಂಡು, ಸಮಾಜಶಾಸ್ತ್ರ, ಮಾನವಶಾಸ್ತ್ರದಂತಹ ಅನ್ಯಜ್ಞಾನ ಶಿಸ್ತುಗಳ ಪರಸ್ಪರ ಸಹಾಯದಿಂದ ಒಂದು ನಾಡಿನ ಇಲ್ಲವೆ ಜನತೆಯ ಇತಿಹಾಸವನ್ನು ರಚಿಸುವ ಪ್ರವೃತ್ತಿಯು ನಮ್ಮ ಸಂಶೋಧಕರಲ್ಲಿ ಕಾಣಿಸಿಕೊಳ್ಳತೊಡಗಿದೆ. ಪ್ರತಿ ಸಂಸ್ಕೃತಿ, ಉಪ ಸಂಸ್ಕೃತಿ, ಪರ್ಯಾಯ ಸಂಸ್ಕೃತಿ ಇತ್ಯಾದಿ ಪರಿಕಲ್ಪನೆಗಳೆಲ್ಲಾ ಇಂತಹ ವೈಚಾರಿಕ ಜಾಗೃತಿಯ ಫಲಗಳನ್ನೆಬಹುದು. ಕರ್ನಾಟಕಸ ಹಿತ್ಯ ಅಕಾಡೆಮಿಯು ತನ್ನ ಉಪ ಸಂಸ್ಕೃತಿ ಮಾಲೆಯಲ್ಲಿ ಪ್ರಕಟಿಸಿದ ಹತ್ತಾರು ಜಾನಾಂಗಿಕ ಅಧ್ಯಯನ ಕೃತಿಗಳು ಈ ನಿಟ್ಟಿನಲ್ಲಿ ಗಮನಾರ್ಹವೆನಿಸುತ್ತವೆ. ಇತ್ತೀಚೆಗೆ ಎನ್.ಪಿ. ಶಂಕರನಾರಾಯಣ ರಾವ್ ಅವರು ‘ಫಲಿಯೆರವರ ಸಮಾಜ ಮತ್ತು ಜಾನಪದ ಇತಿಹಾಸ’ ಎಂಬ ತಮ್ಮ ಕೃತಿಯಲ್ಲಿ ಜನಪದ ಕಾವ್ಯದ ಸಹಾಯದಿಂದ ಬುಡಕಟ್ಟು ಜನಾಂಗವೊಂದರೆ ಸಾಮಾಜಿಕ ಇತಿಹಾಸವನ್ನು ಕಂಡುಕೊಳ್ಳಲು ನಡೆಸಿದ ಪ್ರಯತ್ನ ಅನುಕರಣೀಯವಾಗಿದೆ. ಕರ್ನಾಟಕದ ಮೈಲಾರಲಿಂಗ, ಮಂಟೇಸ್ವಾಮಿ, ಮಲೆಮಾದೇಶ್ವರ ಸಂಪ್ರದಾಯ ಹಾಗೂ ಕಾವ್ಯಗಳ ಮೂಲಕ ನಿರ್ದಿಷ್ಟ ಜನಾಂಗಗಳ ಪೂರ್ವೇತಿಹಾಸವನ್ನು ಅರಿತುಕೊಳ್ಳುವ ಪ್ರಯತ್ನವೂ ನಡೆದಿದೆ.

ಹೀಗೆ ನಿರ್ದಿಷ್ಟ ಪ್ರದೇಶದ, ಇಲ್ಲವೇ ಜನಾಂಗದ ಜಾನಪದವು ಆಯಾ ನಾಡು ಹಾಗೂ ಜನತೆಯ ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಅರ್ಥಾತ್ ಪೂರ್ವೇತಿಹಾಸವನ್ನು ತಿಳಿದುಕೊಳ್ಳಲು ವಿಶಿಷ್ಟ ರೀತಿಯಲ್ಲಿ ನೆರವಾಗುತ್ತದೆ. ತುಳುನಾಡಿಗೆ ಸಂಬಂಧಪಟ್ಟಂತೆ ಪರಶುರಾಮ ಸೃಷ್ಟಿಯ ಐತಿಹ್ಯ (ಪುರಾಣ) ಭೂತಾಳ, ಪಾಂಡ್ಯನ ಐತಿಯ ಕಲ್‌ಉಡ-ಕಲ್ಲುರ್ಟಿ ಪಾಡ್ದನೈತಿಹ್ಯ ಇತ್ಯಾದಿಗಳು ಪ್ರಸ್ತುತ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಚರ್ಚೆಗಳೊಳಗಾಗಿವೆ. ಶಿಷ್ಟ ಪುರಾಣವಾಗಿಯೂ ಜನಜನಿತವಾಗಿರುವ ಪರಶುರಾಮನ ಐತಿಹ್ಯವು ಕೊಂಕಣ, ತುಳುನಾಡು ಹಾಗೂ ಕೇರಳ ಕರಾವಳಿಯ ಸೃಷ್ಟಿಯ ಕಥೆಯನ್ನು ಹೇಳುತ್ತದೆ. ಪರಶುರಾಮನು ಕೊಡಲಿಯನ್ನೆಸೆದು ವರುಣನಿಂದ ಈ ಭೂ ಪ್ರದೇಶವನ್ನು ಪಡೆದುಕೊಂಡನೆಂದು ಕಥೆಯು ವಿವರಿಸುತ್ತದೆ. ‘ಪರಶುರಾಮನ ಕುಡರಿಗ್ ಪುಟ್ಟಿನ ತುಳುನಾಡು) ಎಂಬುದಾಗಿ ಕವಿಗಳೂ ಹಾಡಿದ್ದಾರೆ. ಆಧುನಿಕ ವಿಜ್ಞಾನವು ಇಂತಹ ಘಟನೆಗಳನ್ನೆಲ್ಲಾ ಸಮರ್ಥಿಸುವುದಿಲ್ಲ. ಆದರೆ ಪ್ರಾಕೃತಿಕ ವೈಪರೀತ್ಯದಿಂದಲಾಗಿ ಕಡಲು ಹಿಂದಕ್ಕೆ ಸರಿಯುವುದನ್ನೂ, ಮುಂದಕ್ಕೆ ಕ್ರಮಿಸುವುದನ್ನೂ ಭೂವಿಜ್ಞಾನಿಗಳು ಸಮರ್ಥಿಸುತ್ತಾರೆ. ಕರಾವಳಿ ಪ್ರದೇಶದಲ್ಲೂ ಹಾಗುದುದಕ್ಕೆ ಪುರಾವೆಗಳನ್ನೊದಗಿಸುತ್ತಾರೆ. ಅದೇನೇ ಇದ್ದರೂ ಪರಶುರಾಮನ ಕ್ಷತ್ರಿಯ ಸಂಹಾರದ ಕಥೆ, ಅದೇ ರೀತಿ ಆತ ವರುಣನಿಂದ ಕೇಳಿ ಪಡೆದ ಭೂ ಪ್ರದೇಶದಲ್ಲಿ ತನ್ನವರನ್ನು (ಬ್ರಾಹ್ಮಣರನ್ನು) ನೆಲೆಗೊಳಿಸಿದ ಕಥೆ ಇವುಗಳೆಲ್ಲಾ ನಮ್ಮ ಆಸಕ್ತಿಯನ್ನು ಕೆರಳಿಸುತ್ತವೆ. ಉತ್ತರದ ಕಡೆಯಿಂದ ಬಂದ ಬ್ರಾಹ್ಮಣರು ಸ್ಥಳೀಯರನ್ನು ದಮನಗೊಳಿಸಿ, ಈ ಭೂ ಪ್ರದೇಶದಲ್ಲಿ ನೆಲೆಯಾದುದಕ್ಕೆ ಪ್ರಸ್ತುತ ಐತಿಹ್ಯಕ್ಕೂ ಸಂಬಂಧ ಕಲ್ಪಿಸಬಹುದಾಗಿದೆ.

ತುಳುನಾಡಿನಲ್ಲಿ ಪ್ರಚಲಿತವಿರುವ ಬಲಿಯೇಂದ್ರನ ಐತಿಹ್ಯ (ಪುರಾಣ)ವೂ ಇಂತಹುದೇ ಒಳನೋಟಗಳಿಗೆ ಆಸ್ಪದ ಮಾಡಿಕೊಡುತ್ತದೆ. ಶಿಷ್ಟ ಪುರಾಣದಲ್ಲಿ ಉಕ್ತವಾದ ಬಲೀಂದ್ರನನ್ನು ತುಳುವರು ಬಲಿಯೇಂದ್ರ, ಬೊಳಿಯೇಂದ್ರ ಇತ್ಯಾದಿಯಾಗಿ ಕರೆದು ದೀಪಾವಳಿ (ಪರ್ಬ) ಸಂದರ್ಭದಲ್ಲಿ ಪೂಜಿಸುತ್ತಾರೆ. ತುಳುವರಿಗೆ ಆತ ‘ತುಳುವಾಲ’ ಅದೇ ರೀತಿ ‘ಭೂಮಿ ಪುತ್ರ’ನಾಗಿದ್ದಾರೆ. ಶಿಷ್ಟರಿಗೆ ಆತ ರಾಕ್ಷಸ, ಅನಾರ್ಯನಾಗಿದ್ದಾನೆ. ಹಾಗಾಗಿಯೆ ತಮ್ಮ ಅಂಗಳದ ತುಳಸಿಕಟ್ಟೆಯನ್ನು ದಾಟಿ ಆತ ಮುಂದಕ್ಕೆ ಬರುವಂತಿಲ್ಲ. ತುಳುನಾಡಿನಲ್ಲಿ, ದೀಪಾವಳಿ ಸಂದರ್ಭದಲ್ಲಿ ಬಾಳೆಕಂದನ್ನೊ, ಪಾಳೆ ಮರದ ಕವೆಯನ್ನೋ ನೆಟ್ಟು, ಬಲೀಂದ್ರನೆಂದು ಪೂಜಿಸುವ ಸಂಪ್ರದಾಯವಿದೆ. ಆಗ ಅಂಗಳದ ತುಳಸಿ ಕಟ್ಟೆಗಿಂತ ಹಿಂದಕ್ಕೆ ಅದನ್ನು ನೆಡುತ್ತಾರೆ. ಕನ್ನಡದಲ್ಲಿ ಬಲೀಂದ್ರನಿಗೆ ಸಂಬಂಧಪಟ್ಟು ರಚನೆಯಾಗಿರುವ ‘ಬಂದನು ಬಲೀಯೆಂದ್ರ; ನಿಂದನು ತುಲಸಿಗೆ ಹಿಂದೆ’ ಎಂಬ ಹಾಡೂ ಅದನ್ನು ಸಮರ್ಥಿಸುತ್ತದೆ. ತುಳುನಾಡಿನ ಐತಿಹ್ಯ ಹೇಳುವ ಬೊಳಿಯೇಂದ್ರ ಘಟ್ಟದ ಸಂದಿನಿಂದ ಕಡಲ ಸಂದಿನ ತನಕದ ಭೂಭಾಗವನ್ನು ಆಳುತ್ತಿದ್ದಾತ ಉತ್ತರದೂರಿಂದ ಬಂದ ಮೂವರು ‘ಬೆರಣ ಮಾಣಿಲು’ (ಬ್ರಾಹ್ಮಣ ವಟುಗಳು) ಆತನಿಂದ ಮೂರು ಹೆಜ್ಜೆ ಭೂಮಿಯನ್ನು ದಾನ ಕೇಳುತ್ತಾರೆ. ಎರಡು ಹೆಜ್ಜೆ ಅಳೆದಾಗಲೇ ಘಟ್ಟದ ಸಂದಿನಿಂದ ಕಡಲ ಸಂದಿನವರೆಗಿನ ಭೂಮಿಯೆಲ್ಲಾ ಮುಗಿದು ಹೋಗುತ್ತದೆ. ಉಳಿದೊಂದೇ ಹೆಜ್ಜೆ ಭೂಮಿಯನ್ನು ಕೊಡಲು ಅಸಮಥ್ಥನಾದ ಬೋಳಿಯೇಂದ್ರನನ್ನು ಬೆರಣ ಮಾಣಿಲ ‘ಒಟ್ಟೆ ಓಡ’ (ಒಡಕು ದೋಣಿ)ದಲ್ಲಿ ಕುಳ್ಳಿರಿಸಿ ಏಳು ಕಡಲಾಚೆ ದಾಟಿಸಿ ಬಿಡುತ್ತಾರೆ. ಹಾಗೆ ದಾಟಿಸುವಾಗ ಆತ ಆಸೆಯಿಂದ ತನ್ನೂರತ್ತಲೇ ತಿರು ತಿರುಗಿ ನೋಡುತ್ತಿರುತ್ತಾನೆ. ಅದನ್ನು ಅರ್ಥ ಮಾಡಿಕೊಂಡ ಬೆರಣ ಮಾಣಿಲು ‘ಬೊಂತೆಲ್’ (ತುಲಾ) ತಿಂಗಳ ‘ಪರ್ಬೋ’ (ದೀಪಾವಳಿ ಹಬ್ಬ) ಸಂದರ್ಭದಲ್ಲಿ ಮೂರು ದಿನಗಳ ಮಟ್ಟಿಗೆ ಮುಳುಗಿದಾಗಮ ಗುಲಗಂಜಿಯ ಕಪ್ಪು ಮಾಸಿದಾಗ ಗದ್ದೆ ಹುಣಿ ಗಡಿ (ಕದುಬೆ)ಗೆ ‘ಪಾಪು’ (ಮರದ ಕಿರು ಸೇತುವೆ) ಆದಾಗ…. ಆತನ ಊರು ಆತನಿಗೇ ಮರಳಿ ದೊರೆಯುವುದೆನ್ನುತ್ತಾರೆ.

ಇಲ್ಲಿನ ಪುರಾಣವನ್ನು ಇತಿಹಾಸವಾಗಿ ಅರ್ಥೈಸಲು ಪ್ರಯತ್ನಿಸಿದರೆ ಕೆಲವೊಂದು ಸೂಕ್ಷ್ಮ ಒಳನೋಟಗಳು ಗೋಚರಿಸುತ್ತವೆ…. ಇಲ್ಲಿ ದಾನದ ರೂಪದಲ್ಲಿ ಮೋಸದಿಂದ ಬ್ರಾಹ್ಮಣ ವಟುಗಳು ಬಲಿಯ ಭೂಮಿಯನ್ನು ಕಸಿದುಕೊಂಡುದನ್ನು ಗಮನಿಸಬಹುದು. ಈಗಾಗಲೆ ನೋಡಿದಂತೆ ತುಳುವರಿಗೆ ಬಲೀಂದ್ರ ಭೂಮಿಪುತ್ರ; ಆತ ‘ತುಳುವಾಲ ಬಲಿಯೇಂದ್ರ’ ಕೇರಳದವರಿಗೆ ತಮ್ಮೂರು ‘ಮಾವೇಲಿನಾಡ್’ (ಮಹಾಬಲಿಯ ನಾಡು); ತಮಿಳುನಾಡಿಗರಿಗೆ ‘ಮಹಾಬಲಿಪುರಂ’ ಇತಿಹಾಸ ಪ್ರಸಿದ್ಧ ಸ್ಥಳ. ಇವನ್ನೆಲ್ಲಾ ಗಮನಿಸಿದರೆ ದಕ್ಷಿಣ ಭಾರತದವರಿಗೆ ಈತ ಆರಾಧ್ಯದೇವತೆಯಾಗಿದ್ದನೆನ್ನಬಹುದು. ಅಂದರೆ ಮೂಲತಃ ಬಲೀಂದ್ರ ದಕ್ಷಿಣ ನಾಡಿದ ಒಬ್ಬ ಅಧಿಪತಿಯಾಗಿದ್ದಿರಬೇಕು. ಉತ್ತರದತ್ತಣಿಂದ ಬಂದ ಆರ್ಯ ರೆನಿಸಿಕೊಂಡವರು ಆತನನ್ನು ಮೋಸಗೊಳಿಸಿ ಬಿಡಿಸಿರಬೇಕು. ಇತ್ಯಾದಿಯಾಗಿ ಊಹಿಸಿದೆ.

ಇಂದು ಬುಡಕಟ್ಟು ಸಮುದಾಯವೆಂದು ಪರಿಗಣಿಸಲಾಗುವ ಕೊರಗರು ತುಳುನಾಡಿನ ಮೂಲ ನಿವಾಸಿಗಳಾಗಿದ್ದರೆಂಬ ಅಭಿಪ್ರಾಯವೊಂದಿದ್ದು, ಅದಕ್ಕೆ ಪೂರಕವಾದ ಐತಿಹ್ಯವೂ ಪ್ರಚಲಿತವಿದೆ. ಒಂದು ಐತಿಹ್ಯದ ಪ್ರಕಾರ ಹುಬಾಶಿಕನೆಂಬಾತ ಈ ನಾಡನ್ನಾಳಿದ ಕೊರಗರ ದೊರೆ. ಆತ ಹೊರಗಣ ಶತ್ರುಗಳಿಂದ ಕೊಲ್ಲಲ್ಪಡುತ್ತಾನೆ. ಪ್ರಾರಂಭದಲ್ಲಿ ಹುಬಾಶಿಕನು ಘಟ್ಟದ ಮೇಲಿಂದ (ಇನ್ನೊಂದು ಹೇಳಿಕೆಯಂತೆ ಅನಂತಶಯನದಿಂದ) ಸೈನ್ಯವನ್ನು ತಂದು ಮಯೂರ ಶರ್ಮನೆಂಬ ಪ್ರಸಿದ್ಧ ರಾಜನನ್ನು ಸೋಲಿಸಿದನೆಂದೂ, ಮಯೂರಶರ್ಮನ ಉತ್ತರಾಧಿಕಾರಿಗಳು ಬಳಿಕ ಹುಬಾಶಿಕನನ್ನು ಸೋಲಿಸಿ ಆತನ ಬೆಂಬಲಿಗರನ್ನು ಕಾಡು ಮೇಡುಗಳಿಗೆ ಓಡಿಸಿದರೆಂದೂ ಐತಿಹ್ಯ ವಿವರಿಸುತ್ತದೆ. ಮತ್ತೊಂದು ಐತಿಹ್ಯದ ಪ್ರಕಾರ: ಹುಬಾಶಿಕನು ಮಂಜೇಶ್ವರದ ಅರಸ ಅಂಗಾರವರ್ಮನನ್ನು ಸೋಲಿಸಿದನೆಂದೂ, ನಂತರ ಸೋತವನ ಚಿತಾವಣೆಯಿಂದ ನೆರೆಯ ದೊರೆಯೊಬ್ಬ ತನ್ನ ಮಗಳನ್ನು ಆತನಿಗೆ ಕೊಡಲೊಪ್ಪಿದಂತೆ ನಟಿಸಿ ಮದುವೆಯ ದಿಬ್ಬಣ ಬಂದಾಗ ಮದುಮಗನ (ಹುಬಾಶಿಕ) ಸಹಿತ ಸಾಮೂಹಿಕ ಕೊಲೆ ನಡೆಸಿದನೆಂದೂ, ಅಳಿದುಳಿದವರು ಕಾಡುಮೇಡುಗಳಿಗೆ ಓಡಿ ಹೋದರೆಂದೂ ಹೇಳಲಾಗುತ್ತದೆ. (ವಸಂತಕುಮಾರ್ ತಾಳ್ತಜೆ ೧೯೮೮:೪೯-೫೨). ಈ ಪ್ರದೇಶದಲ್ಲಿ ಅಲ್ಲಲ್ಲಿ ಕಂಡುಬರುವ ‘ಮಾಯಿಲನೆಂಬ ನಿಮ್ನ ವರ್ಗದ ಅರಸನೊಬ್ಬ ಹಿಂದೆ ಆಳಿದ್ದನೆಂಬುದಾಗಿ ಜನಪದರು ವಿವರಿಸುತ್ತಾರೆ. ತುಳುನಾಡಿನ ಬಹುಪಾಲು ಶಿವಾಲಯಗಳಲ್ಲಿನ ಶಿವಲಿಂಗಗಳು ಕಾಡು-ಮೇಡುಗಳ ಮಣ್ಣು-ಪೊದರುಗಳೆಡೆಯಿಂದ ಹೊಲೆಯ-ಹೊಲತಿಯರಿಗೆ ಸಿಕ್ಕಿದುದಾಗಿ ವಿವರಿಸುವ ಅಸಂಖ್ಯ ಸ್ಥಳ ಪುರಾಣಗಳು ಲಭ್ಯವಿವೆ. ಇಂತಹ ಐತಿಹ್ಯ- ಪುರಾಣಗಳು ಈ ಭೂ ಪ್ರದೇಶವನ್ನು ಹೊಂದಿದ್ದವರ ಬಗೆಗೆ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ಗ್ರಹಿಸಲು ಸಹಕಾರಿಯಾಗುತ್ತವೆ.

ಭೂತಾಳ ಪಾಂಡ್ಯನ ಐತಿಹ್ಯವು ತುಳುನಾಡಿನ ವಿಶಿಷ್ಟ ಪದ್ಧತಿಯಾದ ‘ಅಳಿಯ ಸಂತಾನಕಟ್ಟಿ’ಗೆ ಮೂಲವೆನ್ನಲಾಗುವ ಘಟನೆಯನ್ನೊಳಗೊಂಡಿದೆ. ಜತೆಗೆ ಬಾರಕೂರು ಪಟ್ಟಣವು ಒಂದು ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದುದನ್ನೂ, ಅಲ್ಲಿಂದ ಯುರೋಪಿನ ಮೂಲಕ ವಿದೇಶದೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದುದನ್ನೂ ಪ್ರಸ್ತುತ ಐತಿಹ್ಯವು ತಿಳಿಸುತ್ತದೆ. ನರಬಲಿಯ ಸಂಪ್ರದಾಯವಿತ್ತೆಂಬುದಕ್ಕೂ ಈ ಐತಿಹ್ಯದಲ್ಲಿ ಉಲ್ಲೇಖವಿದೆ. ಸಿರಿ ಆರಾಧನೆಯ ಹಿನ್ನೆಲೆಯಲ್ಲಿರುವ ಪಾಡ್ದನೈತಿಹ್ಯವು ಸ್ತ್ರೀಪ್ರಧಾನ ಕುಟುಂಬ ವ್ಯವಸ್ಥೆಯ ವಿವರಗಳನ್ನೊಳಗೊಂಡಿದ್ದು, ಬಂಡ ಸಮಾಜದಲ್ಲಿ ರೂಢಿಯಲ್ಲಿದ್ದ ಸಾಮಾಜಿಕ ಕಟ್ಟುಪಾಡುಗಳಿಗೆ ಕನ್ನಡಿ ಹಿಡಿಯುತ್ತದೆ. ತುಳುನಾಡಿನ ದಿಡ್ಡ ಮಹಿಳೆಯೊಬ್ಬಳ ಮನೋಬಲದ ವಿವಿಧ ಸಾಧ್ಯತೆಗಳನ್ನೂ ಇದು ಎತ್ತಿ ಹೇಳುತ್ತದೆ. ಕಲ್ಕುಡ- ಕಲ್ಲುರ್ಟಿ ಪಾಡ್ದನೈತಿಹ್ಯವು ಭೂತಾರಾಧನೆಯ ಹಿನ್ನೆಲೆಯಲ್ಲಿದ್ದು, ತುಳುನಾಡಿನ ಅರಸನೊಬ್ಬನು ದುರುದ್ದೇಶದಿಂದ ಅಸಾಧಾರಣ ಕಲಾನಿಪುಣನಾದ ಶಿಲ್ಪಿಯ ಕೈಕಾಲು ಕತ್ತಿರಿಸಿದ ದಾರುಣ ಘಟನೆಯನ್ನು ವಿವರಿಸುತ್ತದೆ. ಬಲ್ಲಾಳನೊಬ್ಬನು ಭೂತಕಟ್ಟುವ ಪರವನ ಮಡದಿಯ ರೂಪ ಲಾವಣ್ಯಕ್ಕೆ ಮನಸೋತು, ಆಕೆಯನ್ನು ತನ್ನವಳನ್ನಾಗಿಸಿಕೊಳ್ಳುವ ದುರಾಲೋಚನೆಯಿಂದ ಪರವನನ್ನೇ ಮೋಸದಿಂದ ಕೊಲ್ಲಿಸಿದ ಘಟನೆಯಲ್ಲಿ ‘ಪರತಿ ಮಂಙಣೆ’ ಪಾಡ್ದನವು ಚಿತ್ರಿಸುತ್ತದೆ. ಶೋಷಿತರ ನೈತಿಕತೆಯನ್ನು ಎತ್ತಿ ಹಿರಿಯುವಂತಿರುವ ಇಂತಹ ಪಾಡ್ದನಗಳ ಉತ್ತರಾರ್ಧಗಳು ಬಹಳ ಕುತೂಹಲಕಾರಿಯಾಗಿವೆ.

ವೀರಾರಾಧನೆಯ ಸಂಪ್ರದಾಯದೊಂದಿಗೆ ಉಳಿದು, ಬೆಳೆದು ಬಂದಿರುವ ಬೈದೈರ್ಲು, ಮುಗೇರ್ಲು ಮುಂತಾದ ದೈವಗಳ ಪಾಡ್ದನ ಕಥೆಗಳು ಆಯಾ ಜನಾಂಗಗಳಲ್ಲಿ ಆಗಿ ಹೋದ ಅವಳಿ ವೀರರ ವೀರಗಾಥೆಗಳಾಗಿ ಗಮನ ಸೆಳೆಯುತ್ತವೆ. ತುಳುನಾಡಿನ ನಿರ್ದಿಷ್ಟ ಜನಾಂಗಗಳ ಮತ್ತು ಅವರ ಸಂಪರ್ಕಕ್ಕೆ ಬಂದ ಇತರ ಜನವರ್ಗಗಳ ಅಂದಿನ ಸಾಮಾಜಿಕ-ಸಾಂಸ್ಕೃತಿಕ ಸ್ಥಿತಿ-ಗತಿಗಳು ಇವುಗಳಲ್ಲಿ ಬಿಂಬಿತವಾಗಿದೆ. ಬೈದೆರ್ಲು ಅಥವಾ ಕೋಟಿ ಚೆನ್ನಯರ ಪಾಡ್ದನದಲ್ಲಿ ‘ಬ್ರಾಹ್ಮಣ, ಬಿಲ್ಲವ, ಬಂಟ, ಬಲ್ಲಾಳ-ಪೆರ್ಗಡೆ-ಮೊದಲಾದ ಜಾತಿ-ಹುದ್ದೆಗಳ ಉಲ್ಲೇಖವಿದೆ. ಅವರವರ ವೃತ್ತಿ-ಕಸುಬುಗಳ ಬಗೆಗೆ, ಜೀವನ ಕ್ರಮದ ಬಗೆಗೆ, ಸಾಮಾಜಿಕ ಶ್ರೇಣೀಕರಣದ ಬಗೆಗೆ ವಿವರಣೆಗಳಿವೆ.

ಶಿಷ್ಟ ಇತಿಹಾಸವು ಮೌನ ತಾಳಿರುವ ಎಷ್ಟೋ ವ್ಯಕ್ತಿ-ಘಟನೆಗಳ ಕುರಿತು ಐತಿಹ್ಯವು ಮಾತನಾಡುತ್ತದೆ. ಕಲ್ಯಾಣಪ್ಪ ಸಿಡಿಲುಮರಿ ಕೆಂಗಣ್ಣ ನಾಯಕರಂತಹ ಸ್ವಾತಂತ್ರ ಯೋಧರ ತ್ಯಾಗಜೀವನ ಶಿಷ್ಟ ಇತಿಹಾಸಕಾರರಿಗೆ ಗೌಣವೆನಿಸಿದರೆ ಐತಿಹ್ಯಕಾರನಿಗೆ ಮಹತ್ವದ್ದೆನಿಸಿದೆ. ಶಾಸನದ ಮೂಲೆ ಯಲ್ಲೆಲ್ಲೋ ಉಲ್ಲೇಖಗೊಂಡಿರುವ ಸಮಾಜ ಸೇವಕ ಪರಪ್ಪಳ ನಾಯಕನನ್ನು ಐತಿಹ್ಯಗಳು ಉದಾತ್ತೀಕರಿಸಿವೆ. ಅಸಾಮಾನ್ಯ ಬಲಶಾಲಿಗಳಾಗಿದ್ದ ಅಗೋಳಿ ಮಂಜಣ್ಣ, ಪುಳ್ಕೂರು ಬಾಚನಂಥವರು ಪ್ರಖ್ಯಾತ ಐತಿಹ್ಯ ಪುರುಷರೆನಿದ್ದಾರೆಯೇ ಹೊರತು ಇತಿಹಾಸಪುರುಷರೆನಿಸಲಿಲ್ಲ. ಅರಸನು ದುರಾಲೋಚನೆಯಿಂದ ಶಿಲ್ಪಿಯ ಕೈಲಾಕು ಕತ್ತರಿಸಿದ್ದನ್ನಾಗಲಿ, ಬಡಪಾಯಿ ಪರವನನ್ನು ಕೊಲ್ಲಿಸಿದ್ದನ್ನಗಾಲಿ ಶಿಷ್ಟ ಇತಿಹಾಸವು ದಾಖಲಿಸುವುದಿಲ್ಲ. ಅವುಗಳನ್ನೆಲ್ಲಾ ತಿಳಿಯಲು ನಾವು ಐತಿಹ್ಯ ಅಥವಾ ಪಾಡ್ದನಗಳನ್ನೇ ಮೊರೆ ಹೋಗಬೇಕಾಗುತ್ತದೆ. ಸೂರಗೋಳ್ಳಿ ಅಂತುವಿನಂತಹ ಕುಪ್ತಸಿದ್ಧಕಳ್ಳರ ಬಗೆಗೂ ಐತಿಹ್ಯ ಹುಟ್ಟಿಕೊಳ್ಳುತ್ತದೆ. ಅಪೂರ್ವವಾದ ಸ್ವಾಮಿನಿಷ್ಠೆಯನ್ನು ಮೆರೆದು, ತನ್ನ ಒಡೆಯನ ಅಚಾತುರ್ಯದ ಫಲವಾಗಿಯೇ ಜೀವತೆತ್ತ ನಾಯಿಯಂತಹ ಮೂಕ ಪ್ರಾಣಿಯ ಬದುಕೂ ಐತಿಹ್ಯಕಾರನಿಗೆ ಮುಖ್ಯವೆನಿಸಿದೆ.

ಶಿಷ್ಟ ಇತಿಹಾಸದಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಅರಸು-ಬಲ್ಲಾಳರ ಬಗೆಗೆ ಐತಿಹ್ಯಗಳು ಕೆಲವೊಮ್ಮೆ ಬೇರೆಯದೇ ಆದ ವಿವರಣೆಗಳನ್ನು ನೀಡುತ್ತವೆ. ಶಿವಪ್ಪ ನಾಯಕ, ಟಿಪ್ಪು ಸುಲ್ತಾನರಂತಹ ರಾಜರ ಬಗೆಗೆ ತುಳುನಾಡಿನಲ್ಲಿ ಪ್ರಚಲಿತವಿರುವ ಅಸಂಖ್ಯ ಐತಿಹ್ಯಗಳನ್ನು ಕಲೆಹಾಕಿ ಅಧ್ಯಯನ ನಡೆಸಿದರೆ ಕೆಲವೊಂದು ಮಹತ್ವದ ಅಂಶಗಳು ಹೊರಬೀಳುತ್ತವೆ. ಅರಸರ ಖಾಸಗಿ ಬದುಕಿನ ಬಗೆಗೂ ಐತಿಹ್ಯಗಳೂ ಕುತೂಹಲಕಾರಿಯಾದ ಸಂಗತಿಗಳನ್ನು ನಿರೂಪಿಸುತ್ತದೆ. ವಿಟ್ಲದ ‘ಡೊಂಬ ಹೆಗ್ಗಡೆ’ ಅರಸು ಮನೆತನಕ್ಕೆ ಆ ಹೆಸರು ಬಂದುದರ ಹಿನ್ನೆಲೆಯನ್ನು ವಿವರಿಸುವ ಐತಿಹ್ಯವು ತುಂಬಾ ಸ್ವಾರಸ್ಯಕರವಾಗಿದೆ.

ಹೀಗೆ ಈ ನಾಡಿನ ಭೌಗೋಳಿಕ, ಸಾಮಾಜಿಕ, ಜಾನಾಂಗಿಕ, ಸಾಂಸ್ಕೃತಿಕ, ಧಾರ್ಮಿಕ, ಆಡಳಿತಾತ್ಮಕ, ಆರ್ಥಿಕ, ಸ್ಥಿತಿ-ಗತಿಗಳನ್ನು ಕಂಡುಕೊಳ್ಳಲು ಐತಿಹ್ಯ, ಪುರಾಣಗಳು ಬಹುವಿಧಗಳಲ್ಲಿ ನೆರವಾಗುತ್ತವೆ. ಇದುವರೆಗೆ ನಾವು ಬರಿಯ ರಾಜಕೇಂದ್ರಿತ ಇಲ್ಲವೆ ಆಡಳಿತ ಕೇಂದ್ರಿತ ಸಂಗತಿಗಳ ವ್ಯಾಖ್ಯಾನವನ್ನಷ್ಟೆ ಇತಿಹಾಸವೆಂದು ನಂಬಿಕೊಂಡು ಬಂದೆವು. ಆದರೆ ಇಂದು ಇತಿಹಾಸವನ್ನು ಕಾಣುವ ನಮ್ಮ ದೃಷ್ಟಿ ಬದಲಾಗಬೇಕಾಗಿದೆ. ಜನಕೇಂದ್ರಿತ ಇತಿಹಾಸದತ್ತ ಒಲವು ಹರಿಸಬೇಕಾಗಿದೆ. ನಮ್ಮ ಚರಿತ್ರೆಯ ಇನ್ನೊಂದು ಮುಖವನ್ನು ಅರಿತುಕೊಳ್ಳಬೇಕಾಗಿದೆ. ಅದಕ್ಕಾಗಿ ಐತಿಹ್ಯ ಪುರಾಣ ಪಾಡ್ದನಗಳಂತಹ ಜನಪದ ಕಥಗಳನ್ನು ಕೇವಲ ಸಾಹಿತ್ಯಿಕ ದೃಷ್ಟಿಕೋನ ದಿಂದಷ್ಟೇ ಅಲ್ಲದೆ ಸಮಾಜ ಶಾಸ್ತ್ರೀಯ ಮಾನವ ಶಾಸ್ತ್ರೀಯ ಹಾಗೂ ಐತಿಹಾಸಿಕ ನೆಲೆಗಳಿಂದಲೂ ಪರಿಭಾವಿಸಬೇಕಾಗಿದೆ. ಶಿಷ್ಟರೆನಿಸಿಕೊಂಡವರ ದುರಾಕ್ರಮಣದಿಂದ ತತ್ತಿರಿಸಿ ಹೋದ ಈ ಪ್ರದೇಶದ ಮೂಲನಿವಾಸಿಗಳು ಅದೇ ರೀತಿ ಕೊರಗ, ಮಲೆಕುಡಿಯರಂಥ ಬುಡಕಟ್ಟು ಜನಾಂಗಗಳು ಹಾಗೂ ಮುಗೇರ, ಮನ್ಸ, ನಲಿಕೆ, ಪರವ, ಪಂಬದರಂತಹ ಇತರ ಪರಿಶಿಷ್ಟ ಜನರು ಮುಂದೆ ಕಾಲಕಾಲಕ್ಕೆ ಪುರೋಹಿತಶಾಹಿ, ಸಾಮ್ರಾಜ್ಯಶಾಹಿ, ವಸಾಹತುಶಾಹಿ, ಬಂಡವಾಳಶಾಹಿ ಹಿಡಿತಗಳಲ್ಲಿ ಸಿಕ್ಕು, ಒದ್ದಾಡಿದ ಪರಿಯನ್ನು ಇಂತಹ ಐತಿಹ್ಯಾಧ್ಯಯನದಿಂದ ಪುನಾರಚಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಆಗಬೇಕಾದ ಕೆಲಸ ಬಹಳಷ್ಟಿದೆ.

ಕೆಲವು ಮಾದರಿ ಐತಿಹ್ಯಗಳು

ಸ್ಥಳೈತಿಹ್ಯಗಳು

೧. ಸೃಷ್ಟಿಯ ಮೂಲದ ಬಗೆಗಿನ ಐತಿಹ್ಯ (ಸ್ಥಳ ಪುರಾಣ)
ಪುರುಶುರಾಮ ಸೃಷ್ಟಿಯ ಐತಿಹ್ಯ: (ಜನಜನಿತ ವೃತ್ತಾಂತ)

ಶಿಷ್ಟ ಪುರಾಣದಲ್ಲಿ ಪರಶುರಾಮನನ್ನು ವಿಷ್ಣುವಿನ ಆರನೇ ಅವತಾರ ವೆಂದು ತಿಳಿಯಲಾಗುತ್ತದೆ. ತನ್ನ ತಂದೆಯಾದ ಜನದಗ್ನಿಗೆ ಕೇಡನ್ನುಂಟುಮಾಡಿ, ಆತನ ಆಶ್ರಮದಿಂದ ಧೇನುವನ್ನು ಅಪಹರಿಸಿದನೆಂಬ ಕಾರಣಕ್ಕಾಗಿ ಕಾರ್ತವೀರ್ಯನನ್ನು ಕೊಂದ ಪರಶುರಾಮನು ಮುಂದೆ ಕ್ಷತ್ರಿಯರ ಕುಲವನ್ನೇ ನಿರ್ನಾಮ ಮಾಡಿದನೆಂದೂ, ತನ್ನ ಬಳಿಯಿದ್ದ ಭೂಮಿಯನ್ನೆಲ್ಲಾ ಋಚಿ-ಮುನಿಗಳಿಗೆ, ಬ್ರಾಹ್ಮಣರಿಗೆ ದಾನ ಮಾಡಿದನೆಂದೂ, ಕೊನೆಗೆ ತನಗೆ ನೆಲೆ ನಿಲ್ಲಲು ಜಾಗವಿಲ್ಲದೆ ಸಮುದ್ರ ರಾಜನಿಂದ ಭೂಮಿಯನ್ನು ಕೇಳಿ ಪಡೆದನೆಂದೂ ಅಲ್ಲಿ ಹೇಳಲಾಗುತ್ತದೆ. ಹೀಗೆ ಕೊಡಲಿ ರಾಮನು ಭೂಮಿಯನ್ನು ಪಡೆಯಬೇಕಿದ್ದರೆ ಪಶ್ಚಿಮ ಘಟ್ಟದ ಸಹ್ಯಾದ್ರಿಯಲ್ಲಿ ನಿಂತು ತನ್ನ ಕೊಡಲಿಯನ್ನು ಎಸೆದನೆಂದೂ ಅದು ದಕ್ಷಿಣದ ಕನ್ಯಾಕುಮಾರಿಯಿರುವಲ್ಲಿ ಹೋಗಿ ಬಿದ್ದಿತೆಂದೂ, ಆಗ ಕನ್ಯಾಕುಮಾರಿಯಿಂದ ಗೋರ್ಕಣದವರೆಗೆ ಪಶ್ವಿಮ ಕರಾವಳಿಯುದ್ದಕ್ಕೂ ಆವರಿಸಿಕೊಂಡಿದ್ದ ಸಮುದ್ರ ಜಲವು ಹಿಂದಕ್ಕೆ ಸರಿಯಿತೆಂದೂ, ಹಾಗಾಗಿ ಕರಾವಳಿ ಕರ್ನಾಟಕ ಮತ್ತು ಕೇರಳ ಕರಾವಳಿಗಳನ್ನೊಳಗೊಂಡ ಭೂಪ್ರದೇಶವು ಪರಶುರಾಮ ಸೃಷ್ಟಿಯ ಕ್ಷೇತ್ರವೆನಿಸಿತೆಂದೂ ನಂಬಲಾಗುತ್ತದೆ.

ಈ ಜನಜನಿತ ವೃತ್ತಾಂತವು ಇಂದು ಕೊಂಕಣ, ಕರಾವಳಿ-ಕರ್ನಾಟಕ, ಕೇರಳಗಳಲ್ಲಿ ಪ್ರಚಲಿತದಲ್ಲಿದೆ. ಕೆಲವು ಪಾಠಗಳಲ್ಲಿ ಋಷಿ-ಮುನಿಗಳಿಗೆ ದಾನ ಕೊಡಲೆಂದೇ, ಬ್ರಾಹ್ಮಣರನ್ನು ನೆಲೆಗೊಳಿಸಲೆಂದೇ ಕೊಡಲಿ ರಾಮನು ಈ ಸ್ಥಳವನ್ನು ವರುಣನಿಂದ ಕೇಳಿ ಪಡೆದನೆಂದಿದೆ. ಅದೇ ರೀತಿ ಮಹಾರಾಷ್ಟ್ರ ಕೊಂಕಣ, ಕರಾವಳಿ ಕರ್ನಾಟಕ, ಕೇರಳಗಳನ್ನೂ ಕೆಲವು ಪುರಾಣ ಪಾಠಗಳಲ್ಲಿ ಪರಶುರಾಮ ಸೃಷ್ಟಿಯ ಕ್ಷೇತ್ರಗಳೆಂದು ಪರಿಗಣಿಸಲಾಗುತ್ತದೆ. ಇದು ಒಂದು ಸಂಚಾರಿ ಐತಿಹ್ಯವಾಗಿಯೂ ಕಂಡುಬರುತ್ತದೆ. ಪರಶುರಾಮನೆಂದು ಹೇಳಲಾಗುವ ವ್ಯಕ್ತಿ ಹಿಂದೆ ಬದುಕಿದ್ದು. ಆತ ವಿವಿಧೆಡೆಗಳಲ್ಲಿ ಸಂಚಾರ ಕೈಗೊಂಡಿರಬಹುದಾದೂ ಐತಿಹ್ಯದ ಈ ಸಂಚಾರಿ ಗುಣಕ್ಕೆ ಕಾರಣವೆನ್ನಬಹುದು. ರಾಮಾಯಣ (೧-೭೬) ಮಹಾಭಾರತ (೧೧೧-೧೧೪,೧೧೭) ಗಳಲ್ಲಿ ಆತ ಪೂರ್ವ ಕರಾವಳಿಯ ಮಹೇಂದ್ರ ಪರ್ವತಕ್ಕೆ ತೆರಳಿದನೆಂದಿದೆ. ಹರಿವಂಶ, ಪುರಾಣಗಳು ಪಶ್ಚಿಮದ ಸಹ್ಯಾದ್ರಿ ಘಟ್ಟದೊಂದಿಗೆ ಪರಶುರಾಮನಿಗೆ ಸಂಬಂಧ ಕಲ್ಪಿಸಿವೆ. ಸುಪಾರದಲ್ಲಿರುವ ರಾಮಕುಂಡದ ಉಲ್ಲೇಖವಿರುವ ನಾಸಿಕ ಶಾಸನ (೧೭) ವು ಈ ಐತಿಹ್ಯವು ಮೊದಲೇ (ಕ್ರಿ.ಶ.೨ನೇ ಶತಮಾನದ ಪ್ರಾರಂಭದ ಘಟ್ಟದಲ್ಲಿ) ಪಶ್ವಿಮ ಕರಾವಳಿಯಲ್ಲಿ ಬಳಕೆಯಲ್ಲಿದ್ದುದನ್ನು ಸ್ಪಷ್ಟಪಡಿಸುತ್ತದೆ.

ಮೂಲತಃ ಇದು ಯಾವ ಪ್ರದೇಶಕ್ಕೆ ಸೇರಿದ್ದಾಗಿರಲಿ, ಇದು ಸಂಚಾರ ಕೈಗೊಂಡಿರುವುದಂತೂ ಇಲ್ಲಿ ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ಈ ಐತಿಹ್ಯವು ಮೇಲೆ ಉಲ್ಲೇಖಿಸಿದ ಕೆಲವು ಪುರಾಣಗಳಲ್ಲಿ ಮಾತ್ರವಲ್ಲದೆ ‘ಸ್ಕಾಂದ ಪುರಾಣಾ’ತರ್ಗತ ‘ಸಹ್ಯಾದ್ರಿ ಖಂಡ’ ‘ಕೇರಳೋತ್ಪತ್ತಿ’ ಇತ್ಯಾದಿ ಪುರಾಣಗಳಲ್ಲೂ ತಕ್ಕಷ್ಟು ಬೆಳವಣಿಗೆ ಹೊಂದಿ ಸೇರ್ಪಡೆಯಾಗಿರುವುದರಿಂದ ಇಂದು ಇದು ಐತಿಹ್ಯದ ರೂಪದಲ್ಲಿಯೇ ಉಳಿದಿಲ್ಲ ಎನ್ನಬೇಕಾಗುತ್ತದೆ. ಹಾಗಾಗಿ ಮೂಲತಃ ಇದು ಒಂದು ಐತಿಹ್ಯದ ರೂಪದಲ್ಲಿ ಸೃಷ್ಟಿಯಾಗಿದ್ದಿರಬಹುದಾದರೂ ಈಗ ಒಂದು ಪುರಾಣ (ಸ್ಥಳ ಪುರಾಣ) ಎಂದೆನಿಸಲು ಯೋಗ್ಯವಾಗಿದೆ. ಕಂಠಸ್ಯ ಪರಂಪರೆಯಿಂದಲೇ ಇದು ಗ್ರಂಥಸ್ಥ (ಲಿಖಿತ) ರೂಪಕ್ಕಿಳಿದರಿಬಹುದೆಂಬುದನ್ನೂ ಇಲ್ಲಿ ಸೂಚಿಸಬೇಕಾಗುತ್ತದೆ.

೨. ಪ್ರಾಕೃತಿಕ ವೈಚಿತ್ರ್ಯಗಳಿಗೆ ಉತ್ತರವಾಗಿ ಹುಟ್ಟಿಕೊಂಡ ಐತಿಹ್ಯ
ಕೆದ್ದೊಟೆಯ ವಿಶಾಲವಾದ ಕೆರೆ (ಸರೋವರ)ಯೊಂದಕ್ಕೆ ಸಂಬಂಧಪಟ್ಟ ಚಲ್ಲಮೇರನ ಐತಿಹ್ಯ: (ಕುಂತೂರು ಗ್ರಾಮ, ಪುತ್ತೂರು ತಾಲೂಕು)
(ವ್ಯಕ್ತೃ: ಬಾಬು ಗೌಡ, ಕುಂಡಡ್ಕ, ಕುಂತೂರು ಗ್ರಾಮ, ಪುತ್ತೂರು ತಾಲೂಕು)

ಕೆಡ್ಡಸದ ಬೇಟೆಗಾಗಿ ಚಲ್ಲಮೇರ ಎಂಬುವನು ಕಲೆಂಜಿಮನೆಗೆ ಹೋಗುತ್ತಾನೆ. ಕಾಡಿನಲ್ಲಿ ಮಧ್ಯದಲ್ಲಿ ಆತ ಸುತ್ತಲೂ ಬೆಂಕಿಯಿಂದ ಆವರಿಸಲ್ಪಟ್ಟು ಅದರಿಂದ ಪಾರಾಗಲು ಪೇಚಾಡುತ್ತಿದ್ದ ಸರ್ಪವೊಂದನ್ನು ಕಾಣುತ್ತಾನೆ. ಸರ್ಪದ ತೀಕ್ಷ್ಣ ವಿಷಯ ಅರಿವಿದ್ದ ಚಲ್ಲನು ಅದರ ತಂಟೆ ನನಗೆ ಬೇಡವೆಂದು ತನ್ನ ಪಾಡಿಗೆ ತಾನು ಹೋಗುತ್ತಿರಲು ಆ ಸರ್ಪವು ತನ್ನನ್ನು ರಕ್ಷಿಸುವಂತೆ ಚಲ್ಲವೇರನಲ್ಲಿ ಮೊರೆಯಿಡುತ್ತದೆ. ಸುತ್ತಲೂ ಆವರಿಸಿಕೊಂಡಿರುವ ಬೆಂಕಿಯ ಮಧ್ಯದಿಂದ ಸರ್ಪವನ್ನು ತಾನು ಹೇಗೆ ಪಾರು ಮಾಡಲೆಂದು ಚಲ್ಲನು ಯೋಚಿಸುತ್ತಿರಲು ಆ ಸರ್ಪವು ಆತನ ಬಳಿಯಿದ್ದ ಬಿಲ್ಲನ್ನು ಮುಂದಕ್ಕೆ ಚಾಚಲು ಹೇಳುತ್ತದೆ. ಅದರಂತೆ ಆತನು ತನ್ನ ಬಿಲ್ಲನ್ನು ಬೆಂಕಿ ಮಧ್ಯದಲ್ಲಿದ್ದ ಸರ್ಪದತ್ತ ಚಾಚಲು ಅದಕ್ಕೆ ಸುತ್ತಿಕೊಂಡು ಹಾವು ಹೊರಬರುತ್ತದೆ. ಆದರೆ ಅದು ಚಲ್ಲನನ್ನು ಅಷ್ಟಕ್ಕೆ ಬಿಡದೆ ತನ್ನನ್ನು ಯಾವುದಾದರೂ ತಂಪು ಜಾಗಕ್ಕೆ ಕೊಂಡುಹೋಗಿ ಬಿಡುವಂತೆ ಯಾಚಿಸುತ್ತದೆ. ಆಗ ಚಲ್ಲಮೇರನು ಅದರ ಆಜ್ಞಾಪಾಲಕನಂತೆ ಅದನ್ನು ಹೊತ್ತುಕೊಂಡು ಕಲೆಂಜಿಮಲೆಯಿಂದಿಳಿದು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಹೊರಡುತ್ತಾನೆ.

ಹೀಗೆ ಬರುವಾಗ ದಾರಿಯಲ್ಲಿ ಆಯಾಸ ಪರಿಹಾರಾರ್ಥವಾಗಿ ಕೆಲವೆಡೆ ಹಾವನ್ನು ಕೆಳಗಿರಿಸಿ ವಿಶ್ರಮಿಸಿಕೊಂಡನೆಂದೂ, ಹಾಗೆ ವಿಶ್ರಮಿಸಿಕೊಂಡ ಸ್ಥಳಗಳನ್ನು ಈಗ ನೆಲ್ಲ, ಮಾಣಿಗ, ಚಲ್ಲಮೇರನ ಪಳ್ಳಗಳೆಂದೂ ಕರೆಯಲಾಗುತ್ತದೆಂದೂ, ಅಲ್ಲೆಲ್ಲ ಬೇಸಗೆಯಲ್ಲೂ ನೀರನ್ನು ಕಾಣಬಹುದೆಂದೂ ಜನಪದ ಹೇಳಿಕೆಯಿದೆ.

ಚಲ್ಲಮೇರನು ಹಾವಿನೊಂದಿಗೆ ಮತ್ತೂ ಮುಂದಕ್ಕೆ ಬಂದು ತಂಪಾದ ನೆರಳಿನಿಂದ ಕೂಡಿದ ನೀರಿನ ಹಳ್ಳವಿರುವ ಪ್ರದೇಶವೊಂದನ್ನು ತಲುಪಲು ಹಾವು ತನಗದು ಪ್ರಶಸ್ತವಾದ ಸ್ಥಳವೆಂದು ಹೇಳಿದುದರಿಂದ ಅಲ್ಲಿ ಅದನ್ನಿಳಿಸುತ್ತಾನೆ. ತದನಂತರ ಆ ಸರ್ಪವು ಚಲ್ಲನಿಗೆ ಪ್ರತ್ಯುಪಕಾರ ರೂಪದಲ್ಲಿ ನಿಧಿಯೊಂದನ್ನು ನೀಡುವ ಉದ್ದೇಶದಿಂದ ಅದನ್ನು ಎಳೆದು ಕೊಂಡು ಬರುವ ಪ್ರಯತ್ನದಲ್ಲಿದ್ದಾಗ ವಾದ್ಯ, ನಗಾರಿ, ಕೊಂಬಗಳ ಕಿವಿಗಡಚಿಕ್ಕುವ ಗದ್ದಲವುಂಟಾಗಿ ಅದರಿಂದ ಹೆದರಿದ ಚಲ್ಲನು ‘ಮಾಯಿಲ್ತಿ’ ಮಾಯಿಲ್ತಿ’ ಎಂದು ತನ್ನ ಹೆಂಡತಿಯ ಹೆಸರಿಡಿದು ಕೂಗುತ್ತಾ ಪಕ್ಕದಲ್ಲಿದ್ದ ಗುಡ್ಡ ಹತ್ತಿ ಓಡುತ್ತಾನೆ. (ಹಾಗಾಗಿಯೆ ಆ ಗುಟ್ಟಕ್ಕೆ ‘ಮಾಯಿಲ್ತಿ ಗುಡ್ಡೆ’ಯೆಂಬ ಹೆಸರು ಪ್ರಾಪ್ತವಾಯಿತೆಂದು ತಿಳಿಯಲಾಗುತ್ತದೆ) ನಿಧಿಯನ್ನು ತಂದ ಸರ್ಪವು ಚಲ್ಲನಿಗಾಗಿ ಹುಡುಕಾಡುತ್ತಾ ಅದನ್ನು ಸುಮಾರು ಎಪ್ಪತ್ತು ಕಡೆ ಎಳೆಯುತ್ತದೆ. ಇದರಿಂದ ಅಲ್ಲಿ ಎಪ್ಪತ್ತು ಮೂಲೆಗಳು ಉಂಟಾಗುತ್ತವೆ. ಕೊನೆಗೂ ಚಲ್ಲನನ್ನು ಕಾಣದೆ ನಿರಾಸೆಗೊಂಡ ಸರ್ಪವು ಆತನಿಗಾಗಿ ತಂದ ನಿಧಿಯು ಅಲ್ಲಿನ ತೇವಭರಿತ ನೆಲದಲ್ಲಿ ಹೂತುಹೋಗಲು ಅದಷ್ಟು ಭಾಗದಲ್ಲಿ ನೀರು ಮೇಲೆ ಬಂದು ಈಗಿರುವ ವಿಶಾಲೆ ಕೆರೆ ನಿರ್ಮಾಣವಾಯಿತು.

ನಿಜವಾಗಿಯೂ ಈ ಕೆರೆಯು ಅತ್ಯಂತ ವಿಶಾಲವಾಗಿದ್ದು ಇದನ್ನು ನಿರ್ಮಿಸುವುದು ಯಾರಿಗೂ ಕಷ್ಟ ಸಾಧ್ಯವೆಂಬ ವಿಚಾರ ಹೊಳೆಯುತ್ತಿದ್ದು. ಇದೊಂದು ಪ್ರಾಕೃತಿಕ ಕೆರೆಯಾಗಿರುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ. ಚಲ್ಲನೆಂಬ ಮೇರನಿಗೂ ಪ್ರಸ್ತುತ ಸರೋವರಕ್ಕೂ ಏನಾದರೂ ಸಂಬಂಧವಿದ್ದಿರ ಬಹುದೆಂಬುದನ್ನು ಒಪ್ಪಿಕೊಳ್ಳಬಹುದಾದರೂ ಮೇಲಿನ ಐತಿಹ್ಯದ ಎಲ್ಲಾ ಘಟನಾವಳಿಗಳನ್ನು ಇರುವ ರೂಪದಲ್ಲಿಯೇ ಸ್ವೀಕರಿಸಲು ಸಾಧ್ಯವಿಲ್ಲ.

೩. ಸ್ಥಳನಾಮದ ಹಿಂದಿರುವ ‘ಎಣ್ಣೆ ಹೊಳೆ’
(ಅಜೆಕಾರು-ಕಾರ್ಕಳ ತಾಲೂಕು)
(ವಕ್ತೃ: ಡಿ ಲಕ್ಷ್ಮಣ, ಕುಕ್ಕುಜೆ, ಕಾರ್ಕಳ ತಾಲೂಕು)

ಕಾರ್ಕಳದಿಂದ ಅಜೆಕಾರಿಗೆ ಹೋಗುವ ಮಾರ್ಗ ಮಧ್ಯೆ ಸುವರ್ಣಾ ನದಿಯ ಒಂದು ಕಡವು ಇದ್ದು ಅದನ್ನಲ್ಲಿ ‘ಎಣ್ಣೆ ಹೊಳೆ’ ಎಂದು ಕರೆಯಲಾಗುತ್ತದೆ. ಅದಕ್ಕೆ ಹಾಗೆ ಹೆಸರಾಗಲು ಕಾರಣವೊಂದಿದೆ. ಹಿಂದೆ ಗಾಣಿಗನೊಬ್ಬನು ಕೊಡ ತುಂಬ ಎಣ್ಣೆ ಹೊತ್ತುಕೊಂಡು ಆ ದಾರಿಯಾಗಿ ಸಾಗುತ್ತಿದ್ದ. ಪಕ್ಕದಲ್ಲಿದ್ದ ನೆಲ್ಲಿಕಾಯಿಗಳನ್ನು ಕೊಯ್ದು ತಿಂದು ಆ ಕಡವಿನಲ್ಲಿ ಹೊಳೆ ನೀರನ್ನು ಕುಡಿದ. ನೆಲ್ಲಿಕಾಯಿಗಳನ್ನು ತಿಂದ ಬಳಿಕ ನೀರು ಕುಡಿದುದರಿಂದ ಆತನಿಗೆ ಹಿಸಿಯ ಅನುಭವವಾಯಿತು. ಆದರೆ ಆ ಗಾಣಿಗನು ಈ ವಾಸ್ತವ ಕಾರಣವನ್ನು ತಿಳಿಯಲಾರದೆ ಆ ಹೊಳೆಯ ನೀರೇ ಸಿಹಿಯೆಂದು ಭ್ರಮಿಸಿ ತನ್ನ ಕೊಡದಲ್ಲಿದ್ದ ಎಣ್ಣೆಯನ್ನು ಚೆಲ್ಲಿ ಅದರ ತುಂಬ ಹೊಳೆ ನೀರನ್ನು ತುಂಬಿಕೊಂಡನು. ಆ ಘಟನೆಯಿಂದಾಗಿ ಆ ಕಡವಿನಲ್ಲಿ ಹೊಳೆಗೆ ‘ಎಣ್ಣೆ ಹೊಳೆ’ ಯೆಂಬ ಹೆಸರು ಬಂತು.

ಇದನ್ನು ಹೆಡ್ಡ ವ್ಯಕ್ತಿಯೆಂಬ ವರ್ಗಸೂಚಿಯಿಂದ ವ್ಯಕ್ತಿ ಐತಿಹ್ಯವಾಗಿಯೂ ಪರಿಗಣಿಸಬಹುದಾಗಿದೆ. ಇದು ಒಂದು ಕಾರಣ-ಕಾರ್ಯ ಇಲ್ಲವೆ ಕಾರ್ಯ-ಕಾರಣ ಕಥೆಯಾಗಿಯೂ ಕಂಡುಬರುತ್ತದೆ. ಸ್ಥಳನಾಮದ ಹಿನ್ನೆಲೆ ಕಾರಣಗಳನ್ನು ವಿವರಿಸುವ ಕೆಲವು ಸ್ಥಳ ಪುರಾಣಗಳೂ ಕಾರ್ಯ-ಕಾರಣ ಕಥೆಗಳೆನಿಸುತ್ತವೆ.

೪. ಐತಿಹ್ಯ-ಸ್ಥಳ-ಕಾರ್ಯ ಕಾರಣ ಕಥೆ
ಸ್ಥಳನಾಮದ ಹಿನ್ನೆಲೆ ಇವೆಲ್ಲವುಗಳೂ ಆಗಿ ಕಂಡುಬರುವ ಗದ್ಯ ನಿರೂಪಣೆ ಮಧೂರು: (ವಕ್ತೃ: ಚೋಮು ಹೆಂಗ್ಸು, ಏವುಂಜೆ, ಕಾಸರಗೋಡು ತಾಲೂಕು)

ಹಿಂದೆ ಉಳಿಯತ್ತಡ್ಕದಲ್ಲಿ ಮದರು ಎಂಬ ಹೊಲತಿಯೊಬ್ಬಳ ನರೆ (ಒಂದು ಬಗೆಯ ಕಾಡು ಗೆಣಸು) ಕೀಳಲು ಪಕ್ಕದ ಕಾಡಿಗೆ ಹೋದಳು. ಆಕೆ ನೆರೆ ಕೀಳುವುದರಲ್ಲಿ ತೊಡಗಿದ್ದಾಗ ಆಕೆಯ ಕತ್ತಿಗೆ ಘನವಾದ ವಸ್ತು (ಕಲ್ಲು) ವೊಂದ ತಗಲಿ, ಅದರಿಂದ ರಕ್ತ ಒಸರುತ್ತಿರುವುದು ಕಂಡುಬಂದಿತು. ಗಾಬರಿಗೊಂಡ ಮದರು ಊರ ಅರಸರ ಬಳಿಗೆ ಹೋಗಿ ವಿಷಯವನ್ನು ನಿವೇದಿಸಿಕೊಂಡಳು. ಅರಸನು ಪರಿವಾರ ಸಮೇತನಾಗಿ ಆ ಸ್ಥಳಕ್ಕೆ ಹೋಗಿ ಪರೀಕ್ಷಿಸಲು ಅದು ಶಿವಲಿಂಗವೆಂದು ತಿಳಿದು ಬರುತ್ತದೆ. ಅದನ್ನು ಅರಸನು ಪ್ರಶಸ್ತವಾದ ಸ್ಥಳವೊಂದರಲ್ಲಿ ಪ್ರತಿಷ್ಠಾಪಿಸಲು ಮನಗಂಡು, ಮದರುವಿನೊಡನೆ ಆಕೆಯ ಕತ್ತಿಯನ್ನೆಸೆಯಲು ಅದು ಹೋಗಿ ಬಿದ್ದ ಜಾಗವೇ ಪ್ರಶಸ್ತವೆಂದರಿತು. ಅಲ್ಲೇ ಗುಡಿಯೊಂದನ್ನು ಕಟ್ಟಿಸಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಯಿತು. ಮಾತ್ರವಲ್ಲ ಆ ಕ್ಷೇತ್ರಕ್ಕೆ ಮದರುವಿನಿಂದಾಗಿ ‘ಮದವೂರು’ ಎಂದು ನಾಮಕರಣವನ್ನೂ ಮಾಡಲಾಯಿತು. ಇಂದು ಕನ್ನಡ (ಸಂಸ್ಕೃತ)ದಲ್ಲಿ ಈ ಸ್ಥಳವನ್ನು ‘ಮಧೂರು’ ಎಂದೂ. ತುಳುವಿನಲ್ಲಿ ‘ಮದವೂರು’ ಎಂದು ಈ ಪರಿಸರದ ಮಲೆಯಾಳಂನಲ್ಲಿ ‘ಮರೂರು’ ಎಂದೂ ಕರೆಯಲಾಗುತ್ತದೆ. ಒಂದು ವೇಳೆ ಮದರುವಿನ ಕಾರಣದಿಂದಾಗಿಯೇ ಈ ಸ್ಥಳಕ್ಕೆ ಹೆಸರು ಪ್ರಾಪ್ತವಾದುದೆಂಬುದು ನಿಜವಾದರೆ ಮೂಲತಃ ಆ ಸ್ಥಳದ ಹೆಸರು ‘ಮದರೂರು’ ಎಂದಿದ್ದಿರಬಹುದು. ಕ್ರಮೇಣ ಅದು ಕನ್ನಡ (ಸಂಸ್ಕೃತ)ದಲ್ಲಿ ‘ಮಧೂರು’ ಎಂಬುದಾಗಿಯೂ ತುಳುವಿನಲ್ಲಿ ‘ಮದವೂರು’ ಎಂಬುದಾಗಿಯೂ ಅಸುಪಾಸಿನ ಮಲೆಯಾಳಂನಲ್ಲಿ ‘ಮರೂರು’ ಎಂಬುದಾಗಿಯೂ ಬಳಕೆಗೆ ಬಂದಿರಬಹುದು. ತೀರ ಇತ್ತೀಚಿನ ವರೆಗೂ ಈ ಕ್ಷೇತ್ರದಲ್ಲಿ ವಷಾವಧಿ ಉತ್ಸವದ ಸಂದರ್ಭದಲ್ಲಿ ಮದರುವಿನ ವಂಶಸ್ಥರೆಂದು ಹೇಳಲಾಗುವ ಹರಿಜನರಿಗೆ ತಕ್ಕ ಮನ್ನಣೆ ಸಲ್ಲುತ್ತಿತ್ತು.

(ಇದರಲ್ಲಿನ ಮುಖ್ಯ ಅಂಶವೆಂದರೆ ನಿಮ್ನ ವರ್ಗದ ವ್ಯಕ್ತಿಗೆ ಕಾಡಲ್ಲಿ ವೃತ್ತಿನಿರತವಾಗಿರುವ ಸಂದರ್ಭದಲ್ಲಿ ಲಿಂಗ ಪ್ರಾಪ್ತವಾಗುವುದು. ಜಿಲ್ಲೆಯ ಇತರ ಕೆಲವು ದೇವಾಲಯಗಳಿಗೆ ಸಂಬಂಧಪಟ್ಟ ಪುರಾಣೈತಿಹ್ಯಗಳಲ್ಲಿಯೂ ಇದೇ ಆಶಯ ವ್ಯಕ್ತವಾಗಿರುವುದುಂಟು. ಇಲ್ಲಿ ಆಶಯವು ಒಂದೂರಿಂದ ಇನ್ನೊಂದೂರಿಗೆ ಸಂಚಾರ ಕೈಗೊಂಡಿರುವ ಸಾಧ್ಯತೆ ಇರುವುದರಿಂದ ಇಂಥ ಕೆಲವು ಐತಿಹ್ಯಗಳನ್ನು ಸಂಚಾರಿ ಐತಿಹ್ಯಗಳೆಂದು ಕರೆಯಬಹುದು. ಆದರೆ ಈ ಆಶಯವು ಮೂಲತಃ ಯಾವ ಪ್ರದೇಶಕ್ಕೆ ಸಂಬಂಧಪಟ್ಟದ್ದೆಂದು ಹೇಳುವುದು ಕಷ್ಟ).

ಸಂಚಾರೀ ಸ್ಥಳ ಪುರಾಣ-ಕುಟೀಲು
ವಕ್ತೃಗಳು: ಮಹಾಬಲ ಶೆಟ್ಟಿ (ಮಾಡ) ಕಟೀಲು,
ರಾಮಕ್ಕ ಗಿಡಿಗೆರೆ, ಕಟೀಲು, ಮಂಗಳೂರು ತಾಲೂಕು

ಕೊರಪ್ಪಳೊಬ್ಬಳು ಬುಟ್ಟಿ ಹೆಣೆಯುವ ಬೂರು (ಬಳ್ಳಿ)ಹಳನ್ನು ಸಂಗ್ರಹಿಸಲೆಂದು ಕಾಡಿಗೆ ಹೋಗುತ್ತಾಳೆ. ಅಲ್ಲಿ ಬೂರು ಸಂಗ್ರಹದ ಕಾರ್ಯದಲ್ಲಿ ನಿರತಳಾಗಿರಬೇಕಾದರೆ ಆಕೆಯ ಕತ್ತಿಗೆ ಕಲ್ಲೊಂದು ತಾಗಿ ರಕ್ತವೊಸರುತ್ತದೆ. ಅದನ್ನು ಕಂಡು ಗಾಬರಿಗೊಂಡ ಕೊರಪ್ಪಳು ತನ್ನ ಮಗ ಕುಟೀಲನು ತೀರಿಕೊಮಡಾಗ ಆತನನ್ನ ಅದೇ ಪರಿಸರದಲ್ಲಿ ದಫನ ಮಾಡಿರುವುದನ್ನು ನೆನಪಿಸಿಕೊಂಡು ತನ್ನ ಕತ್ತಿಗೆ ಆತನ ದೇಹವೇ ತಾಗಿರಬಹುದೆಂಬ ಭ್ರಮೆಯಿಂದ ‘ಓ ಮಗ ಕುಟೀಲ’ ಎಂದು ಉದ್ಗರಿಸುತ್ತಾಳೆ. ಹಾಗಾಗಿಯೇ ಮುಂದೆ ಆಕೆಯ ಕತ್ತಿಗೆ ತಾಗಿದುದು ಲಿಂಗವೆಂಬುದು ಮನದಟ್ಟಾದ ಬಳಿಕ ಅದನ್ನು ಪ್ರತಿಷ್ಠಾಪಿಸಿದ ಸ್ಥಳ (ಪರಿಸರ)ಕ್ಕೆ ‘ಕುಟೀಲು’ ಎಂಬ ಹೆಸರಾಯಿತು.

ಐತಿಹ್ಯವು ಮುಂದು ಬೆಳೆಯುತ್ತಾ ಬೇರೆಯದಾದ ಮಗ್ಗುಲನ್ನು ಪಡೆದುಕೊಳ್ಳುತ್ತದೆ. ಇದೇ ಆಶಯವನ್ನು ನಾವು ಕಾಸರಗೋಡು ತಾಲೂಕಿನ ಆಡೂರು, ಪುತ್ತೂರು ತಾಲೂಕಿನ ನೆಟ್ಟಣಿಗೆ, ಬಂಟ್ವಾಳ ತಾಲೂಕಿನ ನೆಟ್ಲ, ಬೆಳ್ತಂಗಡಿ ತಾಲೂಕಿನ ಶಿಶಿಲ, ಕಾರ್ಕಳ ತಾಲೂಕಿನ ಕಾಂತಾವರ ಹಾಗೂ ಇತರ ಕೆಲವು ಸ್ಥಳಗಳಿಗೆ ಸಂಬಂಧಿಸಿದಂತೆಯೂ ಅಲ್ಪ ಸ್ವಲ್ಪ ವ್ಯತ್ಯಾಸದಿಂದ ಕಾಣಬಹುದಾಗಿದೆ. ಇದು ಆಶಯವು ಒಂದೂರಿಂದ ಇನ್ನೊಂದೂರಿಗೆ ಸಂಚಾರ ಕೈಗೊಂಡುದರ ಫಲವೋ? ಅಲ್ಲ. ಒಂದನ್ನೊಂದು ಹೋಲುವಂತೆ ಪ್ರತಿಯೊಂದು ಆಯಾ ಕ್ಷೇತ್ರದಲ್ಲೂ ಸಂಭವಿಸಿರಬಹುದಾದ ಘಟನೆಯೊ? ಎಂಬ ಬಗ್ಗೆ ಸಾಧಾರ ಪರಿಶೋಧನೆ ನಡೆಯಬೇಕಾಗಿದೆ.

೪. ಪ್ರಾಣಿ ಐತಿಹ್ಯ-ನಾಯಿ ಬಸದಿ (ಸಂಚಾರಿ ಐತಿಹ್ಯ)

ನಾಯಿ ಬಸದಿಗೆ ಸಂಬಂಧಿಸಿದ ಐತಿಹ್ಯಗಳು ನಮಗೆ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕಡೆ ಲಭ್ಯವಿವೆ. ಒಂದು: ಕಾರ್ಕಳ ತಾಲೂಕಿನ ಮೂಡಬಿದರೆಯಲ್ಲಿ. ಇನ್ನುಳಿದ ಮೂರು: ಪುತ್ತೂರು ತಾಲೂಕಿನ ಮಣಿಮುಂಡ (ಕೊಂಬಾರು) ನರಿಮೊಗರು (ಪುರಸೆರೆಕಟ್ಟೆ) ಮತ್ತು ಸವಣೂರುಗಳಲ್ಲಿ. ಹೀಗಿರುವುದರಿಂದ ಇದೂ ಕೂಡ ಸಂಚಾರಿ ಐತಿಹ್ಯವಾಗಿ ಕಂಡು ಬರುತ್ತದೆ. ಇಲ್ಲಿಯೂ ಆಶಯ ಎಲ್ಲಾ ಕಡೆ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ.

ಮೂಡಬಿದಿರೆ (ನಾಯಿ ಬಸದಿ)
(ವಕ್ತೃ: ಚಂದು ಸುವರ್ಣ, ಕಲ್ಪೆಟ್ಟು, ಮೂಡಬಿದರೆ, ಕಾರ್ಕಳ)

ಮೂಡಬಿದಿರೆ ಪರಿಸರದಲ್ಲಿ ಹಿಂದೆ ಒಬ್ಬಾತ ಬಡವನು ಧನಿಕನೊಬ್ಬ ನಿಂದ ಹಣವನ್ನು ಸಾಲವಾಗಿ ಪಡೆದಿದ್ದ. ಸಾಲ ಸ್ವೀಕರಿಸುವ ಸಂದರ್ಭದಲ್ಲಿ ಒತ್ತೆಯಿಡಲು ತನ್ನ ಬಳಿ ಬೇರೇನೂ ಇಲ್ಲದಿದ್ದುದರಿಂದ ತನ್ನ ಸ್ವಾಮಿನಿಷ್ಠೆ, ಪ್ರಾಮಾಣಿಕ ಸೇವಾ ತತ್ಪರ ನಾಯಿಯನ್ನು ಧನಿಕನ ಬಳಿ ಒತ್ತೆಯಿರಿಸುತ್ತಾನೆ. ಹೀಗಿರಲೊಂದು ದಿನ ಆ ಸಾಹುಕಾರನು ತನ್ನ ಮನೆ ಮಂದಿಗಳೊಂದಿಗೆ ಮದುವೆಗೆಂದು ಹೋಗಿರಬೇಕಾದರೆ ಆತನ ಮನೆಗೆ ಕಳ್ಳರು ನುಗ್ಗಿ ಕನ್ನವಿಕ್ಕುತ್ತಾರೆ. ಹಣ-ಹೊನ್ನು ತುಂಬಿದ ಪೆಟ್ಟಿಗೆಯನ್ನು ದೋಚಿ, ಓಡುವ ಪ್ರಯತ್ನದಲ್ಲಿರುತ್ತಾರೆ. ಆದರೆ ಅದೇ ವೇಳೆಗೆ ಇದನ್ನೆಲ್ಲಾ ಗಮನಿಸುತ್ತಿದ್ದ ಆ ನಾಯಿಯು ಕಳ್ಳರನ್ನು ಬೆನ್ನಟ್ಟಿ, ಕಚ್ಚಿ ಗಾಯಗೊಳಿಸಿ ಅವರು ಚಿನ್ನಾಭರಣಗಳ ಪೆಟ್ಟಿಗೆಯನ್ನು ಬಿಸುಟು ಓಡಿಹೋಗುವಂತೆ ಮಾಡುತ್ತದೆ. ಇದರಿಂದಲಾಗಿ ಮದುವೆ ಮುಗಿಸಿಕೊಂಡು ಮನೆಗೆ ವಾಪಾಸಾದ ಮನೆಯೊಡೆಯನಿಗೆ ಕಳ್ಳರ ಕೈ ಸೇರಿದ್ದ ತನ್ನ ಸಂಪತ್ತು ಮರಳಿ ಪ್ರಾಪ್ತವಾಗುತ್ತದೆ. ಮನೆಗೆ ಬಂದವನೇ ತಾನಿಲ್ಲದಾಗ ಅಲ್ಲಿ ನಡೆದಿರಬಹುದಾದ ಘಟನಾವಳಿಗಳೆಲ್ಲವನ್ನೂ ನಾಯಿಯ ಚರ್ಯೆಯಿಂದಲೂ, ಸ್ವತಃ ಊಹೆಯಿಂದಲೂ ತಿಳಿದುಕೊಳ್ಳುತ್ತಾನೆ. ನಾಯಿಯ ಸೇವಾ ತತ್ಪರತೆ, ಪ್ರಾಮಾಣಿಕತೆಗಳನ್ನು ಕಂಡು ಮೆಚ್ಚಿ ಅದರ ಒಡೆಯನ ಋಣವು ಇದರಿಂದ ತೀರಿದಂತೆಯೇ ಸರಿ ಎಂದು ಮನಗಂಡು, ಇನ್ನು ಮೇಲೆ ಅದನ್ನು ತಾನು ದುಡಿಸಿಕೊಳ್ಳುವುದು ತರವಲ್ಲವೆಂದು ನಿಶ್ಚೈಸಿ, ಅಲ್ಲಿ ನಡೆದ ಘಟನಾವಳಿಗಳನ್ನೂ, ತನ್ನ ಮನದಭಿಮತವನ್ನೂ ಪತ್ರವೊಂದರಲ್ಲಿ ವಿವರವಾಗಿ ಬರೆದು, ಅದನ್ನು ಆ ನಾಯಿಯ ಕೊರಳಿಗೆ ಕಟ್ಟಿ, ಅದರ ಮೂಲ ಒಡೆಯನ ಬಳಿಗೆ ಕಳುಹಿಸಿಕೊಡುತ್ತಾನೆ.

ನಾಯಿಯ ತನ್ನತ್ತ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ ಅದರ ಯಜಮಾನನು. ಅದು ಸಾಲ ತೀರಿಸುವುದರೊಳಗಾಗಿಯೇ ಸಾಹುಕಾರನ ಬಳಿಯಿಂದ ಓಡಿ ಬಂದಿರಬೇಕೆಂದು ಭಾವಿಸಿ, ಇದರಿಂದಾಗಿ ತಾನು ಕೊಟ್ಟಿದ್ದ ಮಾತಿಗೆ ಬೆಲೆಯಿಲ್ಲದಂತಾಯಿತೆಂದು ಬಗೆದು, ಸಿಟ್ಟು ಅವಮಾನಗಳಿಂದ ಕುದಿದು, ಅದಕ್ಕೆ ಕಾರಣವಾದ ಬಡಪಾಯಿ ನಾಯಿಯನ್ನು ಹಿಂದು ಮುಂದು ನೋಡದೆ ಒದೆದು, ಹೊಡೆದು ಸಾಯಿಸಿಬಿಡುತ್ತಾನೆ. ಮತ್ತೆ ಅದರ ಕೊರಳಲ್ಲಿದ್ದ ಓಲೆಯನ್ನು ಗಮನಿಸಿ, ಆಶ್ಚರ್ಯಚಕಿತನಾಗಿ, ಅದನನ್‌ಉ ಬಲ್ಲವರಿಂದ ಓದಿಸುತ್ತಾನೆ. ಓಲೆಯಿಂದ ನೈಜ ಸಂಗತಿಯನ್ನರಿತು, ತನ್ನ ಅಚಾತುರ್ಯದ ಗೆಯ್ಮೆಗೆ ಪಶ್ಚಾತ್ತಾಪಪಟ್ಟು, ಧನಿಕನಿಗೂ ದುರಂತದ ಈ ಸುದ್ಧಿಯನ್ನು ತಿಳಿಸಿ, ಅವನ ಅಪೇಕ್ಷೆಯ ಮೇರೆಗೆ ಮಡಿದ ನಾಯಿಯ ನೆನಪಿಗಾಗಿ ಬಸದಿಯೊಂದನ್ನು ಕಟ್ಟಿಸುತ್ತಾನೆ. ಅದರ ಉತ್ತರ ಕ್ರಿಯಾದಿಗಳಿಗೆ, ಅಡುಗೆ ಮಾಡಲೆಂದು (ಪಾಕಶಾಲೆಯಾಗಿ) ಸಮೀಪದಲ್ಲೇ ಬಸದಿಯಾಕಾರದ ಇನ್ನೊಂದು ಕಲ್ಲಚಪ್ಪರವನ್ನೂ ನಿರ್ಮಿಸಲಾಯಿತು. ಅದಾದ ಬಳಿಕ ನಾಯಿಯ ಹೆಸರಲ್ಲಿ ತಾನು ನೀಡಲಿರುವ ವಿಶೇಷ ಊಟಕ್ಕೆ ಆತನು ಎಲ್ಲರನ್ನೂ ಕರೆದನು. ಆದರೆ ನಾಯಿಯ ಬೊಜ್ಜದೂಟಕ್ಕೆ ಬರಲು ಯಾರೂ ಸಿದ್ಧರಿರಲಿಲ್ಲ. ಆಗ ಧನಿಕನ ಸೂಚನೆಯಂತೆ ಆ ಬಡವನು ಒಂದು ‘ಗದಾರ್’ (ತುತ್ತು) ಅನ್ನ (ಊಟಕ್ಕೆ) ಒಂದು ‘ವರಾನ್’ (೧ ವರಹ=೪ ರೂಪಾಯಿ) ದಕ್ಷಿಣೆ ರೂಪದಲ್ಲಿ ಕೊಡಲಾಗುವುದೆಂದು ಡಂಗುಡ ಹೊಡೆಸಿದ. ಇದನ್ನು ಕೇಳಿ ಹಣದಾಸೆಯಿಂದ ಬಿಜ್ಜದೂಟಕ್ಕೆ ಜನ ಸೇರಿದರು. ಮೊದಲ ತುತ್ತುಣ್ಣುವ ಮುನ್ನ ಜನ ಮತ್ತೆ ಹಣಕ್ಕೆ ಕೈ ಚಾಚಿದಾಗ ಹಣ ಬರಲಿಲ್ಲ. ಆದರೂ ಹಸಿದ ಜನ ಹೊಟ್ಟೆ ತುಂಬ ಉಂಡು ಮರಳಿದರು. ಹಾಗೆ ಅಂದು ನಾಯಿಯ ಬಿಜ್ಜದೂಟವನ್ನು ಉಂಡವರಿಗೆ ‘ಗುಜ್ಜರ’ರು ಎಂದು ಹೆಸರಾಯಿತು. ಇಂದು ತುಳುನಾಡಿನಲ್ಲಿ ಕಂಡು ಬರುವ ಗುಜ್ಜರಣ್ಯ ಬರಿ (ಬಳಿ)ಯವರು ಅಂದು ನಾಯಿಯ ಬೊಜ್ಜದೂಟವನ್ನುಂಡವರ ವಂಶಸ್ಥರೆಂದು ತಿಳಿಯಲಾಗುತ್ತದೆ.

ಇಲ್ಲಿ ಐತಿಹ್ಯದ ಮುಖ್ಯ ಆಶಯ ಮೊದಲ ಭಾಗದಲ್ಲಿದೆ-ನಾಯಿಯ ಸ್ವಾಮಿನಿಷ್ಠೆ, ಸೇವಾತತ್ಪರತೆ, ಪ್ರಾಮಾಣಿಕತೆ, ಅಚಾತುರ್ಯದಿಂದಾಗಿ ಅದರ ಒಡೆಯನ ಕೈಯಿಂದಲೇ ಅದರ ಮರಣ ಸಂಭವಿಸುವುದು, ಒಡೆಯನ ಪಶ್ಚಾತ್ತಾಪ, ಅದರ ನೆನಪಿಗಾಗಿ ಗೋರಿಯೊಂದನ್ನು ನಿರ್ಮಿಸುವುದು-ಇವಿಷ್ಟು ಇಲ್ಲಿನ ಪ್ರಧಾನ ಆಶಯವಾಗಿದೆ. ಇತರತ್ರ ಲಭಿಸುವ ನಾಯಿ ಸಮಾಧಿಗೆ ಸಂಬಂಧಪಟ್ಟ ಐತಿಹ್ಯಗಳಲ್ಲಿ ಈ ಆಶಯ ಹೇಗೆ ಕಂಡು ಬರುತ್ತದೆಂಬುದನ್ನೂ ಗಮನಿಸಬಹುದು.

ನರಿಮೊಗರು (ಪುರುಸೆರೆ ಕಟ್ಟೆ)
(ವಕ್ತೃ: ಸೇಡಿಯಾಪು ಕೃಷ್ಣ ಭಟ್ಟ)

ಹಿಂದೆ ಈ ಊರಲ್ಲಿದ್ದ ಬಡ ಜೈನನೊಬ್ಬ ಧನಿಕನೊಬ್ಬನಿಂದ ಹಣ ಸಾಲ ಪಡೆಯುತ್ತಾನೆ. ಆಗ ಅದಕ್ಕೆ ಪ್ರತಿಯಾಗಿ ಒತ್ತೆಯಿಡಲು ತನ್ನ ಬಳಿ ಬೇರೆ ವಸ್ತುವೇನೂ ಇಲ್ಲದಿದ್ದುರಿಂದ ತನ್ನ ಸ್ವಾಮಿನಿಷ್ಠ ನಾಯಿಯನ್ನೇ ಒತ್ತೆಯಾಗಿ ನೀಡುತ್ತಾನೆ. ಹೀಗಿರಲೊಂದು ದಿನ ಆ ಧನಿಕನ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣಗಳ ಪೆಟ್ಟಿಗೆಯನ್ನು ದೋಚುತ್ತಾರೆ ಇದನ್ನು ಗಮನಿಸಿದ ನಾಯಿಯು ಕಳ್ಳರನ್ನು ಬೆನ್ನಟ್ಟಿ ಓಡಿಸುತ್ತದೆ. ಹಾಗೆ ಓಡುವ ಭರದಲ್ಲಿ ಕಳ್ಳರ ಕೈಯಿಂದ ಚಿನ್ನಾಭರಣಗಳ ಪೆಟ್ಟಿಗೆಯು ಬಿದ್ದುಹೋಗಿ ಮತ್ತೆ ಧನಿಕನ ಕೈ ಸೇರುತ್ತದೆ. ನಾಯಿಯ ಸ್ವಾಮಿನಿಷ್ಠೆ, ಸೇವಾತತ್ಪರತೆಗಳನ್ನೂ ಕಂಡು ಮೆಚ್ಚಿದ ಆ ಸಾಹುಕಾರನು ಅದು ಎಸಗಿದ ಉಪಕಾರದಿಂದಾಗಿ, ಅದರ ಒಡೆಯನ ಋಣ ಸಂದಾಯವಾಯಿತೆಂದು ಬಗೆದು., ಅಲ್ಲಿನ ಘಟನಾವಳಿಗಳನ್ನೂ, ತನ್ನ ಮನದಭಿಮತವನ್ನೂ ಓಲೆಯೊಂದರಲ್ಲಿ ವಿವರವಾಗಿ ಬರೆದು, ಅದನ್ನು ಆ ನಾಯಿಯ ಕೊರಳಿಗೆ ಕಟ್ಟಿ, ಅದರ ಒಡೆಯನ ಬಳಿಗೆ ಕಳುಹಿಸಿಕೊಡುತ್ತಾನೆ. ತನ್ನ ಬಳಿಗೆ ಬರುತ್ತಿರುವ ನಾಯಿಯನ್ನು ದೂರದಿಂದಲೇ ಗಮನಿಸಿದ ಬಡ ಜೈನನು ದಂಗಾಗುತ್ತಾನೆ. ತನ್ನ ಸಾಲ ಸಂದಾಯವಾಗುವ ಮುನ್ನವೇ ನಾಯಿಯು ಧನಿಕನ ಬಳಿಯಿಂದ ಓಡಿ ಬಂದಿರಬೇಕೆಂದೂ, ಆ ಮೂಲಕ ತಾನು ಧನಿಕನಿಗಿತ್ತ ಮಾತನ್ನು ಮೀರಿದಂತಾಯಿತೆಂದೂ ಸಿಟ್ಟು, ಅವಮಾನಗಳು ಏಕಕಾಲದಲ್ಲಿ ಕಾಣಿಸಿಕೊಂಡು, ಅದರ ಭರದಲ್ಲಿ ಹಿಂದು-ಮುಂದು ನೋಡದೆ ನಾಯಿಯನ್ನು ಹೊಡೆದು ಸಾಯಿಸುತ್ತಾನೆ. ಮತ್ತೆ ನಾಯಿಯ ಕೊರಳನ್ನು ನೋಡಲಾಗಿ ಓಲೆಯೊಂದು ಆತನ ಗಮನ ಸೆಳೆಯುತ್ತದೆ. ಅದನ್ನು ಓದಿ, ವಾಸ್ತವ ಸಂಗತಿಯೆಲ್ಲಾ ಮನವರಿಕೆಯಾಗಿ ಆತ ತನ್ನ ಅಚಾತುರ್ಯದ ನಡತೆಗಾಗಿ ಪಶ್ಚಾತ್ತಾಪ ಪಡುತ್ತಾನೆ. ನಾಯಿಯ ಸ್ಮರಣಾರ್ಥ ದೂಪೆ (ಗೋರಿ-ಸಮಾಧಿ)ಯೊಂದನ್ನು ನಿರ್ಮಿಸಿ ಶ್ರದ್ಧಾಂಜಲಿ ಅರ್ಪಿಸುತ್ತಾನೆ. ತನಗೆ ಮಕ್ಕಳಿಲ್ಲದಿದ್ದರೂ ತನ್ನ ಬಂಧುಗಳಲ್ಲಿ ತಾನು ಸತ್ತಾಗ ತನ್ನ ಗೋರಿಯನ್ನು ಆ ನಾಯಿಯ ಗೋರಿಯ ಪಕ್ಕದಲ್ಲಿಯೇ ಕಟ್ಟಿಸಬೇಕೆಂದು ಹೇಳುತ್ತಾನೆ. (ವಕ್ತೃಗಳೆನ್ನುಂತೆ ಅಕ್ಕಪಕ್ಕದಲ್ಲಿ ಎರಡು ಗೋರಿಗಳನ್ನು ನಾವು ಕಾಣಬಹುದಾಗಿದೆ. ಆದರೆ ಪ್ರಸ್ತುತ ಸಂಶೋಧಕನ ದೃಷ್ಟಿಗೆ ಬಿದ್ದುದು ಒಂದೇ ಗೋರಿ. ವಕ್ತೃಗಳು ಅದನ್ನು ೧೯೧೬ರಲ್ಲಿ ನೋಡಿದುದಾಗಿ ಹೇಳಿರುವುದರಿಂದ ಬಹುಶಃ ಈಗ ಅದರಲ್ಲೊಂದು ಜೀರ್ಣವಾಗಿರಲೂಬಹುದು)

ಸೇಡಿಯಾಪುರವರು ಇದೇ ಐತಿಹ್ಯಾಧಾರದಿಂದ ‘ಶ್ವಮೇಧ’ ಅಥವಾ ‘ನಾಯಿ ನಡತೆ’ ಎಂಬ ಕಥನ ಕವನವೊಂದನ್ನು ಬರೆದಿದ್ದು. ಅದರ ಸನ್ನಿವೇಶಗಳಲ್ಲಿ ಸಾಕಷ್ಟು ವ್ಯತ್ಯಾಸ ಮಾಡಿಕೊಂಡಿದ್ದಾರೆ. ಅವರ ಜೊತೆ ನಡೆಸಿದ ಸಂದರ್ಶನ ಸಂದರ್ಭದಲ್ಲಿ ಸ್ವತಃ ಕವಿಗಳೇ ಇದನ್ನು ಒಪ್ಪಿಕೊಂಡಿದ್ದಾರೆ. ಅವರ ಕಥನ ಕವನವನ್ನೂ ಅವರೇ ಹೇಳಿದ ಮೇಲಿನ ಐತಿಹ್ಯವನ್ನೂ ಅಕ್ಕ-ಪಕ್ಕದಲ್ಲಿಟ್ಟು ನೋಡಿದರೆ ನಮಗೀ ಅಂಶ ಸ್ಪಷ್ಟವಾಗುವುದು. ಕಾವ್ಯವೆನ್ನುವಾಗ ಮೂಲ ಆಶಯಕ್ಕೇನೂ ಧಕ್ಕೆ ಬಾರದಂತೆ ಇಂತಹ ಕೆಲವು ಸಣ್ಣಪುಟ್ಟ ಮಾರ್ಪಾಟುಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ಕವಿಯಾದವನಿಗಿರುತ್ತದೆ.

ಇದೇ ಸ್ಥಳಕ್ಕೆ ಸಂಬಂಧಪಟ್ಟಂತೆ ಈಗ ದೊರೆಯುವ ಐತಿಹ್ಯ ಪಾಠವು ಮೇಲಿನದಕ್ಕಿಂತ ಸನ್ನಿವೇಶದಲ್ಲಿ ಸ್ವಲ್ಪ ಭಿನ್ನವಾಗಿದೆ. ಅದನ್ನು ಕೆಳಗೆ ಗಮನಿಸಬಹುದು.

(ವಕ್ತ್ಯ: ಸಯ್ಯದ್ ಫಕೀರ್ ಸಾಹೇಬ್, ಮುಕ್ವೆ, ನರಿಮೊಗರು, ಪುತ್ತೂರು)

ಹಿಂದೆ ಬ್ರಿಟಿಷ್ ಅಧಿಕಾರಿಯೊಬ್ಬ ತನ್ನ ನಾಯಿಯೊಂದಿಗೆ ಕುದುರೆಯೇರಿ ಈ ಊರನ್ನು ಹಾದು ಹೋಗುತ್ತಿದ್ದ. ಇಲ್ಲಿಗೆ ತಲಪುವ ಹೊತ್ತಿಗೆ ಆಯಾಸಗೊಂಡ ಆತನು ಇಲ್ಲಿ ಸ್ವಲ್ಪ ತಂಗಿ ನಿದ್ದೆ ಹೋಗುತ್ತಾನೆ. ಆಯಾಸ ಪರಿಹರಿಸಿಕೊಂಡು ಎದ್ದು ಹೊರಡಬೇಕಾದರೆ ಆತನ ಹಣದ ಗಂಟು ಅಲ್ಲೇ ಮರೆತುಹೋಗುತ್ತದೆ. ಅದನ್ನು ಗಮನಿಸಿದ ಆತನ ನಾಯಿಯು ಆತನನ್ನು ಹೋಗಗೊಡದೆ ಅವರು ತಂಗಿದ ಜಾಗದತ್ತಲೇ ನೋಡಿ ಒಂದೇ ಸವನೆ ಬೊಗಳತೊಡಗುತ್ತದೆ. ಇದರಿಂದ ಕಿರುಕುಳಗೊಂಡಂತಾದ ಆ ಕುದುರೆ ಸವಾರನು ಸಿಟ್ಟಿನ ಭರದಿಂದ ಆ ನಾಯಿಯನ್ನು ಗುಂಡಿಟ್ಟು ಕೊಲ್ಲುತ್ತಾನೆ. ಗುಂಡೇಟಿನಿಂದ ಸಾಯಬೇಕಾದರೆ ನಾಯಿಯು ತನ್ನ ಒಡೆಯನು ಮರೆತು ಬಂದಿದ್ದ ಹಣದ ಗಂಟಿನ ಮೇಲೆ ಮೂತಿಯಿರಿಸಿ ಮಲಗುತ್ತದೆ. ಅದನ್ನು ಗಮನಿಸಿದ ಆ ಬ್ರಿಟಿಷ್ ಅಧಿಕಾರಿಯು ನಾಯಿಯು ಹಿಂತಿರುಗಿ ನೋಡಿ ಬೊಗಳಿದುದರ ಮರ್ಮವನ್ನರಿತು. ತನ್ನ ಅಚಾತುರ್ಯದ ಕೃತ್ಯಕ್ಕಾಗಿ ಮರುಗಿ, ಆ ನಿಷ್ಠಾವಂತ ನಾಯಿಯ ಗೌರವಾರ್ಥವಾಗಿ ಗೋರಿಯೊಂದನ್ನು ಕಟ್ಟಿಸುತ್ತಾನೆ. ಅದಾದ ಬಳಿಕ ಒಂದು ಸಾವಿರ ಬ್ರಾಹ್ಮಣರನ್ನ ಕರೆಸಿ, ಅವರಿಗೆ ಭೂರಿ ಭೋಜನವನ್ನು ಕೊಡಿಸುತ್ತಾನೆ. (ಐತಿಹ್ಯದಲ್ಲಿ ಮುಂದೆ ಅವರು ಭೋಜನವನ್ನುಂಡ ಬಗೆಗೆ, ದಕ್ಷಿಣೆಯನ್ನ ಪಡೆದ ಬಗೆಗೆ ವಿವರಣೆಗಳು ದೊರೆಯುತ್ತವೆ).

ಕೊಂಬಾರು (ಮಣಿಮುಂಡ)
(ವಕ್ತೃ: ನೋಣಪ್ಪ ಗೌಡ, ಕುಮಾರ ಪುರ, ಕೊಂಬಾರು, ಪುತ್ತೂರು ತಾಲೂಕು)

ಪುತ್ತೂರು ತಾಲೂಕಿನ ಮಣಿಮುಂಡ (ಕೊಂಬಾರು) ಎಂಬಲ್ಲಿ ಲಭ್ಯವಿರುವ ನಾಯಿ ಕಟ್ಟಿಗೆ ಸಂಬಂಧಿಸಿದ ಐತಿಹ್ಯವೂ ಇದುವರೆಗೆ ನೋಡಿದ ನಾಯಿ ಸಮಾಧಿ ಐತಿಹ್ಯಗಳಲ್ಲಿನ ಮೂಲ ಆಶಯವನ್ನೇ ಹೊಂದಿದ್ದು, ಕೆಲವು ಪೂರಕ ಸನ್ನಿವೇಶಗಳಷ್ಟೆ ವ್ಯತ್ಯಸ್ತವಾಗಿವೆ. ಇಲ್ಲಿ ಬ್ರಿಟಿಷ್ ಅಧಿಕಾರಿಗಳಿಗೆ ಅಂಚೆ ರವಾನೆಗಾಗಿ ಊರಿನ ಜೂನನೊಬ್ಬನು (ಬೊಮ್ಮಿ ಸೆಟ್ಟಿ) ತನ್ನ ನಾಯಿಯನ್ನು ಕಟ್ಟುನೆಂದಿದೆ. ನಾಯಿಯ ಪ್ರಮಾಣಿಕ ಸೇವೆಯನ್ನು ಕಂಡು ಮೆಚ್ಚಿ ಮುಂದಕ್ಕೆ ಅದನ್ನು ದುಡಿಸಿಕೊಳ್ಳಲು ಇಷ್ಟಪಡದ ಬ್ರಿಟಿಷ್ ಅಧಿಕಾರಿಗಳು ಅದನ್ನು ಬೊಮ್ಮಿ ಸೆಟ್ಟಿಯ ಬಳಿಗೆ ತಿರುಗಿ ಕಳುಹಿಸಿಕೊಟ್ಟರೆಂದಿದೆ. ಮತ್ತಿನ ಘಟನಾವಳಿಗೆಳೆಲ್ಲಾ ಮೇಲೆ ನೋಡಿದ ಇತರ ಐತಿಹ್ಯಗಳಲ್ಲಿರುವಂತೆಯೇ ಇದೆ.

(ಸುಳ್ಯ ತಾಲೂಕಿನ ಪಂಜದಿಂದ ಪುತ್ತೂರು ತಾಲೂಕಿನ ಕಡಬಕ್ಕೆ ಹೋಗುವ ಮಾರ್ಗ ಮಧ್ಯೆ ಪುಳಿ ಕುಕ್ಕು ಎಂಬಲ್ಲಿ ಕುಮಾರಧಾರಾ ನದಿಗಿರುವ ಸೇತುವೆಯ ಸ್ವಲ್ಪ ಕೆಳಕ್ಕೆ ಹೊಳೆಯಲ್ಲಿರುವ ‘ನಾಕೂರು ಕಯ’ ಎಂಬ ನೀರಿನ ಸುಳಿ (ಮಡು) ಗೆ ಸಂಬಂಧಪಟ್ಟ ಸ್ಥಳೈತಿಹ್ಯವನ್ನು ಪ್ರಾಣಿ ಐತಿಹ್ಯವಾಗಿ ಪರಿಗಣಿಸಬಹುದಾಗಿದೆ)

ಪೌರಾಣಿಕ ಸನ್ನಿವೇಶಗಳಿಗೆ ಸಂಬಂಧಪಟ್ಟ ಸ್ಥಳೈತಿಹ್ಯಗಳು:
ಕೆದ್ದೊಟೆ ಕೆರೆಗೆ ಸಂಬಂಧಪಟ್ಟ ಐತಿಹ್ಯ: ಕುಂತೂರು ಗ್ರಾಮ, ಪುತ್ತೂರು ತಾಲೂಕು (ವಕ್ತೃ: ಬಾಬು ಗೌಡ ಕುಂಡಡ್ಕ, ಕುಂತೂರು, ಪುತ್ತೂರು ತಾಲೂಕು)

ಪಾಂಡವರು ವನವಾಸದಲ್ಲಿದ್ದಾಗ ಯಕ್ಷ-ಪ್ರಶ್ನೆಗೊಳಗಾದ ‘ವಿಷ ಸರೋವರ’ವಿದು. ಅವರು ಅಂದು ಈ ಸರೋವರದ (ಕೆರೆಯ) ನೀರನ್ನು ಕುಡಿದು ಮೂರ್ಛೆಹೋಗಿ ಬಿದ್ದುದರಿಂದಲಾಗಿಯೇ ಇದಕ್ಕೆ ‘ವಿಷ ಸೋರವರ’ವೆಂದು ಹೆಸರಾಯಿತು. ಸಮೀಪದ ಬನದೊಳಗಿರುವ ಐದು ವಿಗ್ರಹಗಳು ಪಂಚ ಪಾಂಡವರದು. ಯಕ್ಷ ಪ್ರಶ್ನೆ ನಡೆದುದರ ಕುರುಹಿಗಾಗಿ ಯಕ್ಷನ (ಯಮಧರ್ಮನ) ಅಪೇಕ್ಷೆಯಂತೆ ಸ್ವತಃ ಪಾಂಡವರೇ ತಮ್ಮ ಮೂರ್ತಿಗಳನ್ನು ಅಲ್ಲಿರಿಸಿ ಹೋದರು.

ಸಮೀಪದಲ್ಲಿ ಹರಿಯುವ ಕುಮಾರಧಾರಾ ನದೀ ಪ್ರದೇಶಕ್ಕೂ ಪಾಂಡವರು ದ್ರೌಪದೀ ಸಮೇತರಾಗಿ ಬಂದಿದ್ದಾರೆ. ಅಲ್ಲಿ ದ್ರೌಪದಿಯು ಮಿಂದು ಬಟ್ಟೆ ಒಗೆದು, ತನ್ನ ಒದ್ದೆ ಸೀರೆಯನ್ನು ಒಣಗಲು ಹಾಕಿದ ಕುರುಹನ್ನು ಪಕ್ಕದ ಬಂಡೆಯ ಮೇಲೆ ಇಂದಿಗೂ ಕಾಣಬಹುದು.

ಆಮೆದಿಕಲ್ಲು (ಆಮೆ-ದಿಕ್ಕಲ್)
(ವಕ್ತೃ: ಕೆ.ಪಿ. ಸೀತಾರಾಮ ಕೆದಿಲಾಯ, ಶಿಶಿಲ)

ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಗಡಿಯಲ್ಲಿ ಅಮೆದಿಕಲ್ಲು ಎಂಬ ಬಂಡೆಯೊಂದಿದೆ. ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ಈ ಸ್ಥಳಕ್ಕೆ ಬಂದಿದ್ದರಂತೆ. ಇಲ್ಲಿ ತಂಗಿದ್ದಾಗ ದ್ರೌಪದಿ ಹೆತ್ತಳಂತೆ. ಆಗ ಆಕೆಯ ಅಮೆಸ್ನಾನಕ್ಕೆಂದು ನೀರು ಕಾಸಲು ಭೀಮನು ಒಟ್ಟಿದ ಒಲೆಯ ಕಲ್ಲೇ ಈ ‘ಅಮೆದಿಕಲ್ಲು’ ಅಥವಾ ‘ಅಮೆದಿಕ್ಕೆಲ್’

ಧಾರ್ಮಿಕ ವಿಧಿ-ನಿಷೇಧಗಳಿಗೆ ಸಂಬಂಧಿಸಿದ ಐತಿಹ್ಯ
ಕೇಪು ಉಳ್ಳಾಲ್ತಿ ಕ್ಷೇತ್ರ:
(ವಕ್ತೃ: ದುಗ್ಗಪ್ಪ ಆಳ್ವ, ಇಳಂತಾಜೆ, ಕೆಯ್ಯೂರು, ಪುತ್ತೂರು)

ಬಂಟ್ವಾಳ ತಾಲೂಕಿನ ಕೇಪು ಎಂಬಲ್ಲಿ ಪ್ರಸಿದ್ಧ ಉಳ್ಳಾಲ್ತಿ ಕ್ಷೇತ್ರವಿದೆ. ಅಲ್ಲಿ ವರ್ಷಂಪ್ರತಿ ಉಳ್ಳಾಲ್ತಿ ನೇಮ ನಡೆಯುತ್ತದೆ. ಉಳ್ಳಾಲ್ತಿ ನೇಮದಲ್ಲಿ ‘ನೆರೆಜಪ್ಪುಡುನೆ’ ಎಂಬ ಸಂದರ್ಭವು ವಿಶಿಷ್ಟತೆಯಿಂದ ಕೂಡಿದೆ. ಈ ಉತ್ಸವ ಭಾಗವನ್ನು ಸ್ತ್ರೀಯರು ಯಾರೂ ನೋಡಬಾರದೆಂಬ ಧಾರ್ಮಿಕ ನಿಷೇಧವೊಂದು ರೂಢಿಯಲ್ಲಿದೆ. ನೋಡಿದರೆ ಏನಾಗುತ್ತದೆಂಬುದನ್ನು ವಿವರಿಸುವ ಐತಿಹ್ಯವೂ ಬಳಕೆಯಲ್ಲಿದೆ. ಹಿಂದೆ ಒಬ್ಬಾಕೆ ಮೀನು ಮಾರುವ ಹೆಂಗಸು ನೆರಿಜಪ್ಪುಡುನ ಸನ್ನಿವೇಶವನ್ನು ನೋಡಿಬಿಟ್ಟರೆ ಏನಾಗುತ್ತದೆಂಬ ಹಟದಿಂದ ನೇಮ ನಡೆಯುತ್ತಿದ್ದ ಗದ್ದೆಯ ಮೇಲ್ಬದಿಯಲ್ಲಿರುವ ದಿಬ್ಬದ ಮೇಲೆ ನಿಂತು ಉತ್ಸವವನ್ನು ನೋಡಿಯೇ ಬಿಟ್ಟಳಂತೆ. ತಕ್ಷಣ ಆಕೆ ತನ್ನ ಮೀನಿನ ಬುಟ್ಟಿಯ ಸಹಿತ ಅಲ್ಲಿಯೇ ಕಟ್ಟಾಗಿ ಬಿದ್ದಳಂತೆ. ಅದೇ ಎಂದು ತಿಳಿಯಲಾಗುವ ಕಲ್ಲನ್ನು ನಾವು ಈಗಲೂ ಅಲ್ಲಿ ಕಾಣಬಹುದು.

ಬಸ್ರೂರು ಪೇಟೆಗೆ ದಾಸ್ಯಗಳು ಬರಬಾರದು-ಯಾಕೆ?
(ವಕ್ತೃ: ಬಿ. ಕೃಷ್ಣ ಬಳೆಗಾರ, ಬಸರೂರು)

ಧರ್ಮಸ್ಥಳ ಮಂಜುನಾಥೇಶ್ವರ ಮತ್ತು ಬಸ್ರೂರಿನ ಮಹಾಲಿಂಗೇಶ್ವರ ದೇವಾಲಯಗಳಲ್ಲಿ ಒಂದೇ ಮುಹೂರ್ತದಲ್ಲಿ ದೇವರನ್ನು ಪ್ರತಿಷ್ಠಾಪಿಸುವದೆಂದೂ, ಆ ಮುಹೂರ್ತಕ್ಕೆ ಸೂಚನೆಯಾಗಿ ಧರ್ಮಸ್ಥಳದಲ್ಲಿ ಶಂಖ ಊದುವುದೆಂದೂ, ಅದು ಬಸ್ರೂರಿಗೂ ಹೇಳಿಸುವುದೆಂದೂ ಒಪ್ಪಂದವಾಯಿತು. ಆದರೆ ಆ ನಿಗದಿತ ಮುಹೂರ್ತಕ್ಕೆ ಮೊದಲೇ ಬಸ್ರೂರಿಗೆ ದಾಸಯ್ಯನೊಬ್ಬನು ಬಂದು ತನ್ನ ಶಂಖವನ್ನು ಮೊಳಗಿಸಿಬಿಟ್ಟ. ಅದನ್ನು ಕೇಳಿದ ಬಸ್ರೂರಿನ ಪುರೋಹಿತರು (ತಂತ್ರಿಗಳು) ಅದುವೇ ಧರ್ಮಸ್ಥಳದ ಶಂಖ ಧ್ವನಿಯೆಂದು ಭಾವಿಸಿ ದೇವರನ್ನು ಪ್ರತಿಷ್ಠಾಪಿಸಿಯೇ ಬಿಟ್ಟರು. ಸ್ವಲ್ಪ ಹೊತ್ತು ಕಳೆದ ಬಳಿಕ ಮತ್ತೊಂದು ಶಂಖ ಧ್ವನಿ (ಧರ್ಮಸ್ಥಳದ ನಿಜವಾದ ಶಂಖ ಧ್ವನಿ) ಕೇಳಿಸುತ್ತದೆ. ವಿಚಾರಿಸಿ ನೋಡಲಾಗಿ ಸತ್ಯ ಸಂಗತಿ ವ್ಯಕ್ತವಾಗುತ್ತದೆ. ಇದರಿಂದ ಸಿಟ್ಟುಕೊಂಡ ಧರ್ಮಸ್ಥಳ ದೇವಳದ ಪ್ರಧಾನ ಅರ್ಚಕರು ಇನ್ನು ಮೇಲೆ ಬಸ್ರೂರು ಪೇಟೆಗೆ ದಾಸಯ್ಯಗಳು ಬಾರದೇ ಹೋಗಲಿ; ಬರಲೇ ಬಾರದು ಎಂದು ಶಪಿಸಿದರು. ಇತ್ತೀಚಿನವರೆಗೂ ಈ ಪೇಟೆಗೆ ದಾಸಯ್ಯಗಳು ಬರುತ್ತಿರಲಿಲ್ಲ. ಈಗ ಬರಲು ಪ್ರಾರಂಭಿಸಿದ್ದಾರೆ.