ಪಠ್ಯೀಕರಣ ಲೌಕಿಕ ಸಂದರ್ಭ: ಬತ್ತದ ಗದ್ದೆಯಲ್ಲಿ ಸಿರಿಕಾವ್ಯ

ತುಳುವ ಸಂಸ್ಕೃತಿಯಲ್ಲಿ ಕೋಟಿ ಚೆನ್ನಯ, ಸಿರಿಗಳಂತಹ ಸುದೀರ್ಘ ಮಹಾಕಾವ್ಯಗಳಲ್ಲಿ ಇತರ ಕಿರುಗಾತ್ರದ ಆದರೆ ಸಾವಿರಕ್ಕೂ ಮಿಕ್ಕು ಸಾಲುಗಳಿರುವ ಪಾಡ್ದನಗಳು ಪರಿಣತ ಗಾಯಕರ ಬಾಯಲ್ಲಿ ಸಿಗುವಾಗ ಮತ್ತೆ ದೀರ್ಘ ಮಹಾಕಾವ್ಯಗಳ ಬಗೆಗೆ ನಾವು ಹಾತೊರೆಯಬೇಕಿಲ್ಲ.ಇವುಗಳ ತುಳು ಸಂಸ್ಕೃತಿಯ ಅನನ್ಯತೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಆದರೆ ಮೌಖಿಕ ಪ್ರದರ್ಶನ ಹಿನ್ನೆಲೆಯಲ್ಲಿ ಒಂದು ತೃಪ್ತಿಕರವಾದ ಪಠ್ಯವನ್ನು ಪಡೆಯುವಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಇತ್ತೀಚಿನವರೆಗೂ ಮೌಖಿಕ ರೂಪದ ಸಿರಿಕಾವ್ಯ ಮುದ್ರಣ ಕಂಡಿರಲಿಲ್ಲ. ಆದರೂ ಕಳೆದ ಕೆಲವು ದಶಕಗಳಲ್ಲಿ ಅದರ ಜನಪ್ರಿಯತೆ ಹೆಚ್ಚುತ್ತಾ ಬಂದಿದೆ .ಇದನ್ನು ಆಧರಿಸಿ ಚಲನಚಿತ್ರ, ಕಾದಂಬರಿ, ಯಕ್ಷಗಾನ ರೂಪದ ಧ್ವನಿಸುರುಳಿಗಳೆಲ್ಲ ಹೊರಬಂದಿವೆ.ಗ್ರಾಮೀಣ ಪ್ರದೇಶಗಳಲ್ಲಿ ಜರಗುವ ವಾರ್ಷಿಕ ಸಿರಿ ಜಾತ್ರೆಗಳಲ್ಲಿ ಮೈದುಂಬುವ ಆಚರಣೆ ಹಾಗೂ ಪಾಡ್ದನದ (ಸಿರಿ)ಹಾಡುವಿಕೆಯು ದೊಡ್ಡ ಪ್ರಮಾಣದ ಪ್ರೇಕ್ಷರನ್ನು ಆಕರ್ಷಿಸಿದೆ.ಆದರೆ ಸಿರಿ ಪಾಡ್ದನ ಪಠ್ಯವು ವಿದ್ವಾಂಸರಿಗೆ ಇತ್ತೀಚಿನವರೆಗೂ ಮುದ್ರಣವಾಗದೆ ಹೋದ ಕಾರಣವಾಗಿ ಲಭ್ಯವಾಗಲಿಲ್ಲ. ಕೋಟಿ ಚೆನ್ನಯ ಪಾಡ್ದನವು ನೂರು ವರ್ಷಕ್ಕೂ ಹಿಂದೆ ಪ್ರಕಟವಾಗಿರುವುದನ್ನು ಗಮನಿಸಬೇಕು. ಮುದ್ರಿತ ಪಠ್ಯವು ಕೊರತೆಯು ತುಳುವ ಸಂಸ್ಕೃತಿಗೆ ಒಂದೆ ಅರೆಕೆಯೆಂದೇ ತಿಳಿಯಬೇಕು. ಹಾಗೂ ಅದನ್ನು ಮೀರುವ ಪ್ರಯತ್ನವನ್ನು ತುರ್ತಾಗಿ ನಡೆಸಬೇಕಾಗಿದೆ. ತುಳು ಪಾಡ್ದನಗಳು ಪ್ರದರ್ಶನಗೊಳ್ಳುವ ವೈವಿಧ್ಯಮಯ ಸಂದರ್ಭಗಳಿಂದಾಗಿ ಸುದೀರ್ಘ ಕಾವ್ಯದ ದಾಖಲಾತಿ ಕಾರ್ಯವು ಸುಗಮಗೊಳ್ಳಲಿಲ್ಲ.

ಸಿರಿ ಕಾವ್ಯವು ಮೂರು ತಲೆಮಾರಿನ ಕಥೆಯನ್ನೊಳಗೊಂಡಿದ್ದು, ದೇವತಾನುಗ್ರಹದಿಂದ ಸಂತಾನ ಭಾಗ್ಯ ಪಡೆಯುವುದನ್ನು ಸಾರುತ್ತೇವೆ. ನೂರ ವರ್ಷಕ್ಕೂ ಹೆಚ್ಚು ಪ್ರಾಯದ ಅಜ್ಜರಿಗೆ ‘ಸಿರಿ’ ಮಗಳಾಗಿ ಹುಟ್ಟುವ ಪವಾಡ, ಅವಳ ಮದುವೆ, ಅವಳ ಮಗ ಕುಮಾರನ, ಜನನ, ಅವಳ ಮರುಮದುವೆ, ಅವಳ ಮಕ್ಕಳಾದ ಸೊನ್ನೆ ಮತ್ತು ಗಿಂಡ್ಯೆರ ಜನನವನ್ನು ವಿವರವಾಗಿ ವರ್ಣಿಸುತ್ತದೆ. ಸೊನ್ನೆಯ ಮಕ್ಕಳಾದ ಅಬ್ಬಯ ದಾರಯರ ನಡುವೆ ನಡೆದ ಚೆನ್ನೆಯಾಟದಲ್ಲಿ ಅಕ್ಕ ಅಬ್ಬಯ ತಂಗಿ ದಾರಯಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಕಾವ್ಯವು ‘ಮಾಯ’ದಿಂದ ‘ಚೋಗ’ಕ್ಕೆ ಇಳಿದು ಬಂದು ಆ ಬಳಿಕ ಪರಲೋಕಕ್ಕೆ ಮರುಳುತ್ತಾನೆ.

ತುಳು ಪಾಡ್ದನ ಕವಿ ಗೋಪಾಲ ನಾಯ್ಕರು ತುಳುನಾಡಿನ ಸುಂದರ ಬತ್ತದ ಗದ್ದೆಗಳ ಅಂಚಿನಲ್ಲಿರುವ ಮಾಚಾರು ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಅವರು ತಮ್ಮ ಜೀವನಕ್ಕಾಗಿ ಭತ್ತ, ಅಡಿಕೆ, ತೆಂಗು ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ಸಿರಿಆಚರಣೆಯ ಭಾಗವಾಗಿ ಮನೆಯಲ್ಲಿ ಜರಗುವ ‘ಪಾಲಿಯೊ ದಲ್ಯ’ ಹಾಗೂ ಗುಡಿಯಲ್ಲಿ ಜರಗುವ ‘ಸಿರಿ ದಲ್ಯ’ದಲ್ಲಿ ಇವರು ಸಿರಿ ಬಳಗದವರಿಗೆ ಧಾರ್ಮಿಕ ನೇತಾರರು. ಇವರು ‘ಕುಮಾರ’ರಾಗಿರುವ ದಲ್ಯಕ್ಕೆ ಸುತ್ತಮುತ್ತಲಿಂದ ಸುಮಾರು ೮೦ಹೆಂಗಸರು ಬರುತ್ತಾರೆ. ಇವರನ್ನು ಜನ ಸಿರಿ ಆಚರಣೆ ಸಂದರ್ಭದಲ್ಲಿ ಸಿರಿಯ ಮಗ ‘ಕುಮಾರ’ ಎಂದು ಗುರುತಿಸುತ್ತಾರೆ. ಸಿರಿ ಬಳಗದಲ್ಲಿರುವ ಸ್ತ್ರೀಯರು ತಮ್ಮನ್ನು ಪಾಡ್ದನ ಕಾವ್ಯದಲ್ಲಿ ಬರುವ ಏಳು ಜನ ಸ್ತ್ರಿಯರು ಎಂಬುದಾಗಿ ಗುರುತಿಸಿಕೊಳ್ಳುತ್ತಾರೆ.

ಸಿರಿ ಕಾವ್ಯದ ಪಠ್ಯೀಕರಣ ಪ್ರಯತ್ನದಲ್ಲಿ ನಮಗೆ ಮೂರು ಬಗೆಯ ಸಂದರ್ಭಗಳು ಎದುರಾದವು. ಮೊದಲನೆಯದು ಲೌಕಿಕ, ಎರಡನೆಯದು ಧಾರ್ಮಿಕ ಹಾಗೂ ಮೂರನೆಯದು ಪ್ರೇರಿತ ಸಂದರ್ಭಗಳು. ಪೂರ್ಣ ಕಾವ್ಯವನ್ನು ಅಥವಾ ಆಂಶಿಕವಾಗಿ ಪಠ್ಯವನ್ನು ಮೇಲಿನ ಮೂರು ಸಂದರ್ಭಗಳಲ್ಲಿ ಹಾಡಲಾಗುತ್ತಿದ್ದರೂ ಮೌಖಿಕ ಪಠ್ಯದ ಪಠ್ಯೀಕರಣದ ಸ್ವರೂಪ ಮಾತ್ರ ಬೇರೆ ಬೇರೆಯಾಗಿತ್ತು.

ಮೊದಲನೆಯದನ್ನು ಲೌಕಿಕ ಸಹಜ ಸಂದರ್ಭ ಎಂದು ಗುರುತಿಸಬಹುದು. ಇಲ್ಲಿ ಪಾಡ್ದನ ಹಾಡುಗಾರಿಕೆಯ ಗದ್ದೆಯ ನೇಜಿ ಕೀಳುವ ಕೆಲಸದೊಂದಿಗೆ ಸಂಬಂಧ ಹೊಂದಿದೆ ಬತ್ತದ ಗದ್ದೆಯನ್ನು ಪಾಡ್ದನ ಹಾಡುಗಾರಿಕೆಯ ಶಕ್ತಿಕೇಂದ್ರ ಎಂದು ಹೇಳಬಹುದು. ಪಾಡ್ದನ ಕಾವ್ಯವನ್ನು ಕಲಿಯಲು ಇದು ಪ್ರಶಸ್ತವಾದ ವೇದಿಕೆ. ಮಹಿಳಾ ಪಾಡ್ದನ ಪರಂಪರೆಯು ಇಲ್ಲಿ ಪ್ರಭಾವಶಾಲಿಯಾಗಿರುತ್ತದೆ. ಭತ್ತದ ಗದ್ದೆಯಲ್ಲಿ ನೇಜಿ ಕೀಳುವಾಗ ಅಥವಾ ನೆಡುವಾಗ ಪಾಡ್ದನಗಳನ್ನು ಹಾಡುವವರಲ್ಲಿ ಮಹಿಳೆಗೇ ಪ್ರಾಧಾನ್ಯ. ಸಮೀಪದಲ್ಲಿದ್ದು ಇದೇ ಕೆಲಸವನ್ನು ನಿರ್ವಹಿಸುತ್ತಿರುವ ಅಥವಾ ಪಕ್ಕದ ಗದ್ದೆಯಲ್ಲಿ ಎತ್ತುಗಳನ್ನು ಬಳಸಿ ಉಳುತ್ತಿರುವ ಗಂಡಸರು ಇವರ ಜೊತೆ ದನಿಗೂಡಿಸುವ ಮೂಲಕ ಪಾಡ್ದನಗಳನ್ನು ತಮ್ಮೊಳಗೆ ಅಂತಸ್ಥಗೊಳಿಸಿಕೊಳ್ಳಬಹುದು. ಒಂದು ಗದ್ದೆಯಲ್ಲಿ ನೇಜಿಯನ್ನು ಕಿತ್ತು,ಸೂಡಿ ಕಟ್ಟಿ, ಇನ್ನೊಂದು ಗದ್ದೆಗೆ ಕೊಂಡೊಯ್ದು ಅಲ್ಲಿ ಅವುಗಳನ್ನು ನಾಡಿ ಮಾಡುವ ಮಹಿಳೆಯರ ಬಳಗದ ಸದಸ್ಯರಾಗಿ ‘ಪಾಡ್ದನ ಗಾಯನ ಶಾಲೆ’ ಗೆ ಗೋಪಾಲ ನಾಯ್ಕರು ಎಳವೆಯಿಂದಲೇ ಹೋಗುತ್ತಿದ್ದರು. ಹತ್ತು ಹನ್ನೆರಡು ಜನ ಹೆಂಗಸರು ನಾಡಿಗದ್ದೆಯಲ್ಲಿ ಸಾಲಾಗಿ ನಿಂತು ಬೆನ್ನು ಬಗ್ಗಿಸಿ ನೇಜಿ ಕೀಳುತ್ತಾ ಹೆಜ್ಜೆ ಎತ್ತಿ ಮುಂದೆ ನಿಧಾನವಾಗಿ ಸಾಗುತ್ತಿರುವಾಗ ನೀರಿನ ತೊನೆದಾಟವು ಹಾಡಿಗೆ ಹಿತವಾದ ಹಿಮ್ಮೇಳದಂತೆ ವರ್ತಿಸುತ್ತದೆ.ಈ ಕೆಲಸದ ಏಕನಾತೆಯನ್ನು ಮುರಿಯುವುದರಲ್ಲಿ ಕೆಲಸದ ಹಾಡುಗಳು ಪರಿಣಾಮಕಾರಿಯಾಗುತ್ತದೆ. ಹಾಡಿನ ಲಯಕ್ಕೆ ನೀರಿನ ತಾಳವು ಒಂದಕ್ಕೊಂದು ಪೂರಕವಾಗಿ ವರ್ತಿಸುತ್ತದೆ. (ಹಾಂಕೋ,೧೯೯೮; ೫೪೮).

ನೇಜಿ ಕೀಳುವಾಗ ಸಾಮಾನ್ಯವಾಗಿ ಗಂಭೀರ ಸ್ವರೂಪದ ಮಹಾಕಾವ್ಯಗಳು ಕೇಳಿಬರುತ್ತವೆ. ನಾಡಿ ಮಾಡುವಾಗ ಹಾಸ್ಯಮಿಶ್ರಿತ ಗೀತೆಗಳು ಮುಖ್ಯ ಪಾತ್ರ ವಹಿಸುತ್ತವೆ. ಇವುಗಳಲ್ಲಿ ಸ್ವಲ್ಪ ಮಟ್ಟಿಗೆ ಪ್ರಭಟನೆಯ ಧ್ವನಿಯೂ ಕೇಳಿಬರುವುದುಂಟು. ಮಹಿಳೆಯರು ಪುರುಷನನ್ನು ತಮ್ಮ ಗೀತಗಳಲ್ಲಿ ಲೇವಡಿ ಮಾಡುವುದು ಸಾಮಾನ್ಯ. ಒಟ್ಟಿನಲ್ಲಿ ಇಲ್ಲಿ ಮನೋರಂಜನೆ ವಿಶೇಷ ಒತ್ತು ಕಾಣಿಸುತ್ತದೆ. ಕೆಲವು ಕಥನಗಳು, ಐಹಿತ್ಯಗಳು ಹಾಗೂ ಕಥನ ಆಶಯಗಳು ದೀರ್ಘ ಮಹಾಕಾವ್ಯಗಳ ಮುಖ್ಯ ಗಾಯಕಿ ಹಾಗೂ ಮೇಳ ಗೀತೆಗಳೊಂದಿಗೆ ಪ್ರಸ್ತುತಗೊಳ್ಳುತ್ತವೆ. ಹೀಗೆ ಏಕಕಾಲಕ್ಕೆ ಲಘು ಹಾಗೂ ಗಂಭೀರ, ದಿಟ್ಟ ಹಾಗೂ ಚುಚ್ಚುವ ಮಾತಿನ ಸನ್ನಿವೇಶಗಳು ಎಲ್ಲೂ ಕಾಣಸಿಗದ ವಿಶಿಷ್ಟ ವಾತಾವರಣವನ್ನು ಸೃಷ್ಟಿಸುತ್ತವೆ. ಸರಳ, ಸಹಜ ಸನ್ನಿವೇಶಗಳಾದರೂ ಉನ್ನತ ಆದರ್ಶಗಳನ್ನು ಒಳಗೊಂಡಿದೆ. ಆದರೂ ನೇಜಿ ಕೀಳುವಾಗ ಸಿರಿ ಆರಾಧನೆ ಅಥವಾ ಭೂತಾರಾಧನೆಗಳಲ್ಲಿನಂತೆ ಗಂಭೀರ ಸ್ವರೂಪದ ಹಾಡುಗಳು ಕೇಳಿಬರುತ್ತವೆ.

೧೯೯೩ರ ನವೆಂಬರನಲ್ಲಿ ಮಾಚಾರಿಗೆ ನಾವು ಹೋದಾಗ ಗೋಪಾಲ ನಾಯ್ಕರು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಜೊತೆ ಒಂಬತ್ತು ಜನ ಮಹಿಳೆಯರಿದ್ದರು. ಇವರೆಲ್ಲ ಸಾಲಾಗಿ ನೇಜೀ ಕೀಳುತ್ತಾ ಅಡಿ ಮುಂದೆಡೆಯಿಡುತ್ತಾ ಸಿರಿಕಾವ್ಯವನ್ನು ಲಯಬದ್ಧವಾಗಿ ಹಾಡುತ್ತಿದ್ದರು. ಇದನ್ನು ಚಿತ್ರೀಕರಣ ಧ್ವನಿಮುದ್ರಣ ಮಾಡಿಕೊಳ್ಳುವ ಅವಕಾಶ ನಮಗೆ ಲಭಿಸಿತ್ತು. ನಾವು ಹೋದಾಗ ಹೆಂಗಸೊಬ್ಬರು ಕಾವ್ಯದ ಆರಂಭಿಕ ಭಾಗ ಅಜ್ಜೆರೆ ಸಂದಿಯನ್ನು ಹಾಡುತ್ತಿದ್ದರು. ಚಿರಪರಿಚಿತವಾದ ಸೂತ್ರಾತ್ಮಕ ಅಭಿವ್ಯಕ್ತಿಗಳ ಮೂಲಕ ಸಿರಿಯ ಜನನಕ್ಕೆ ಹಿನ್ನೆಲೆಯಾಗಿ ಮುದುಕನಿಗೆ ಮಕ್ಕಳಿಲ್ಲದೆ ಹೋದುದನ್ನು ಆಕೆ ವಿವರವಾಗಿ ಹಾಡುತ್ತಿದ್ದರು. ಅಜ್ಜೆರು ಸುರಿಸಿದ ಕಣ್ಣೀರು ಬೆರ್ಮಸ್ಥಾನಕ ತನಕ ಹರಿದಾಗ ಅದನ್ನು ಕಂಡ ಬೆರ್ಮರು ಕರುಣೆಯಿಂದ ಬಡಬ್ರಾಹ್ಮಣನ ರೂಪ ತಾಳಿ ಅವರ ಬಳಿ ಬಂದು ಸಮಾಧಾನಪಡಿಸುವ ಪ್ರಸಂಗ ನಿರೂಪಣೆಗೊಳ್ಳುತ್ತಿತ್ತು. ಈ ಹಂತದಲ್ಲಿ ಒಮ್ಮೆ ಅಲ್ಲಿ ಸಣ್ಣ ವಿರಾಮ ಮತ್ತು ಚರ್ಚೆ ನಡೆಯಿತು.ಮತ್ತೆ ಅದೇ ಹೆಂಗಸಿನ ಧ್ವನಿ ಕೇಳಿಸಿತು. ಸುಮಾರು ೩೦ ಸಾಲುಗಳ ಹಾಡಿನ ನಂತರ ನಿಲ್ಲಿಸಿಬಿಟ್ಟರು. ಮತ್ತೆ ಪಾಡ್ದನ ಗಾಯನ ಆರಂಭಗೊಂಡಾಗ ಗೋಪಾಲ ನಾಯ್ಕ ಹಾಗೂ ಇನ್ನೊಬ್ಬ ಮುಖ್ಯ ಗಾಯಕಿಯ ಜೊತೆ ಅನೇಕ ಮಹಿಳೆಯರು ‘ನಾರಾಯಿನ’ ಎಂಬ ಪಲ್ಲವಿಯನ್ನು ಗಟ್ಟಿಯಾಗಿ ಹೇಳುತ್ತಿದ್ದರು ಮುಂದೆ ನನಗೆ ತಿಳಿದುಬಂದಂತೆ ಇದೊಂದು ಅಸಾಧಾರಣ ಬಗೆಯ ಪ್ರದರ್ಶನ. ಸಾಮಾನ್ಯವಾಗಿ ಇಬ್ಬರು ಹೆಂಗಸರು ಒಬ್ಬರಾದ ಬಳಿಕ ಇನ್ನೊಬ್ಬರು ತಮ್ಮಸ್ಥಾನ ಬದಲಾವಣೆ ಮಾಡಿಕೊಳ್ಳುತ್ತಾರೆ. ಉಳುಮೆ ಗಂಡಸರ ಕೆಲಸ, ನೇಜೀ ಕೀಳುವ, ನಾಟಿ ಮಾಡುವ ಕೆಲಸ ಹೆಂಗಸರದ್ದು. ಈ ಗದ್ದೆಯ ಹಿಂಭಾಗದಲ್ಲಿ ಇತರ ಗಂಡಸರು ಎತ್ತುಗಳಿಂದ ಉಳುಮೆ ಮಾಡುತ್ತಿದ್ದರು. ಗೋಪಾಲ ನಾಯ್ಕರು ಹತ್ತು ಹನ್ನೊಂದರ ವಯಸ್ಸಿನಲ್ಲಿ ಗಂಡಸರು ನಿರ್ವಹಿಸುವ ಕೆಲಸವನ್ನು ಮಾಡಲಾಗದ ಕಾರಣ ಅವರು ಅನಿವಾರ್ಯವಾಗಿ ಮಹಿಳೆಯರಿಂದ ಪಾಡ್ದನಗಳನ್ನು ಕಲಿಯಬೇಕಾಗಿ ಬಂತು. ನಮ್ಮೆದುರು ನಡೆದ ಪ್ರದರ್ಶನದಲ್ಲಿ ಗೋಪಾಲ ನಾಯ್ಕರ ಮುಖ್ಯ ಗಾಯಕರಾಗಿಯೂ ಇನ್ನೊಬ್ಬ ಮಹಿಳೆ ಸಹಗಾಯಕಿಯಾಗಿಯೂ ಹಾಡಿನ ಪುನರಾವೃತ್ತಿ ಕೆಲಸವನ್ನು ಮಾಡಿದರು. ನೇಜಿ ಕೀಳುವ ಇತರ ಹೆಂಗಸರು ಪಲ್ಲವಿಯನ್ನು ಒಟ್ಟಾಗಿ ಗಟ್ಟಿಯಾಗಿ ಹಾಡಿದರು. ಅಜ್ಜೆರು ಸತ್ಯನಾಪುರ ಅರಮನೆಯಿಂದ ಗದ್ದೆಯ ಕಡೆಗೆ ಸಾಗಿ ಗದ್ದೆಯಿಂದ ಗದ್ದೆಗೆ ನೀರು ಹಾಯಿಸುತ್ತಾ ಸೂಚಿ ಮೊನೆಯಂತಹ ಹಸುರು ಬತ್ತದ ಚಿಗುರುಗಳು ಸೌಂದರ್ಯವನ್ನು ಸವಿಯುವ ಭಾಗದ ವರ್ಣನೆ ಮನೋಜ್ಞವಾಗಿತ್ತು.

ಕಥನ ಇಲ್ಲಿ ಮಂಗದತಿಯಿಂದ ಸಾಗುತ್ತದೆ. ಪಲ್ಲವಿಯ ಪುನರಾವೃತ್ತಿಗೂ ಸಾಕಷ್ಟು ಸಮಯ ಹಿಡಿಯುತ್ತದೆ. ಸಹಗಾಯಕಿಯು ಮುಖ್ಯ ಗಾಯಕನು ಹಾಡಿದ ಭಾಗವಷ್ಟನ್ನೂ ಪುನರಾವೃತ್ತಿ ಮಾಡಬೇಕಾಗುತ್ತದೆ. ಹೀಗಾಗಿ ಒಂದು ಹಂತದ ಕೆಲಸ(ನಾಡಿ ಮಾಡುವ) ಆರಂಭಗೊಂಡರೂ ಕಥೆಯ ಹರಿವು ಅಷ್ಟಾಗಿ ಮುಂದುವರಿಯುವುದಿಲ್ಲ. ಸಹಜ ಸನ್ನಿವೇಶದಲ್ಲಿ ಪಾಡ್ದನ ನಿರೂಪಣೆಯನ್ನು ಕಲಿಯಲು ಇದು ಅತ್ಯತ್ತಮ ಸಂದರ್ಭ ಎಂದು ನಾನು ಭಾವಿಸುತ್ತೇನೆ. ಇಲ್ಲಿ ಕಥನವು ಸರಳ ರೇಖಾತ್ಮಕವಾಗಿ ಪ್ರಥಮ ಪುರುಷ ಧಾಟಿಯಲ್ಲಿ ಸಾಗುತ್ತದೆ.

ಸಾಕಷ್ಟು ನೇಜಿ ಕೀಳುವ ಕೆಲಸ ನಡೆದ ಬಳಿಕ ಕಿತ್ತ ನೇಜಿಗಳ ಕಟ್ಟುಗಳನ್ನು ಪಕ್ಕದ ಇನ್ನೊಂದು ಗದ್ದೆಗೆ ಕೊಂಡೊಯ್ದು ಅಲ್ಲಿ ನಾಟಿ ಮಾಡುವ ಕೆಲಸ ಕಬಿತ ಅಥವಾ ಓಬೇಲೆ ಮಾದರಿಯ ಕೆಲಸದ ಹಾಡುಗಳೊಂದಿಗೆ ಆರಂಭಗೊಂಡಿತು. ನಮ್ಮ ಹಿಂದಿನ ವರ್ಗೀಕರಣದಂತೆ ಇದು ಮೂರನೆಯ ವರ್ಗಕ್ಕೆ ಸೇರುತ್ತದೆ. ಈ ಹಿಂದೆ ಪಾಡ್ದನ ಹಾಡುಗಾರಿಕೆ ಹೇಗೆ ಕೆಲಸಕ್ಕೆ ಒಂದು ಬಗೆಯ ಸಹಜ ವಲಯವನ್ನು ಒದಗಿಸಿತೋ ಅಂತೆಯೇ ಈ ದ್ವಿಪದಿ ರೂಪದ ಹಾಡುಗಳಲ್ಲಿ ಪಲ್ಲವಿ ‘ದಿಮ್ಮಿಸಾಲೆ’ ಮೇಳಗಾನವಾಗಿ ಪುನರಾವೃತ್ತಿಗೊಳ್ಳುತ್ತದೆ. ಈ ಹಾಡುಗಳು ಹಾಸ್ಯಮಯವಾಗಿರುತ್ತದೆ. ಆದರೆ ಈ ಸಂದರ್ಭದಲ್ಲಿ ಗಂಡಸನೊಬ್ಬ ಉಪಸ್ಥಿತಿಯಿಂದಾಗಿ ಹಾಡಿಗೆ ಹದವಾದ ಮಸಾಲೆಯನ್ನು ಒದಗಿಸುವ ಗಂಡಸರನ್ನು ಕುರಿತ ಲೇವಡಿಗೆ ಒಂದು ಮಿತಿ ಒದಗಿತು. ಹಾಡಿದ ಪ್ರತಿ ಸಾಲಿನಲ್ಲಿಯೂ ಪುನರಾವರ್ತನೆಗೊಳ್ಳುವ ಪಲ್ಲವಿ ಬರುವುದರಿಂದ ಕತೆ ತೀರಾ ಮಂದಗತಿಯಲ್ಲಿ ಸಾಗಿತು.

ನೇಜಿ ಕೀಳುವ ಕೆಲಸ ಬೆಳಿಗ್ಗೆ ನಡೆಯುವುದಾದರೂ ನಾಟಿ ಕೆಲಸ ಮಧ್ಯಾಹ್ನದಲ್ಲಿ ನಡೆಯುವಂತಹದೆಂದು ಗೋಪಾಲ ನಾಯ್ಕರು ಮೊದಲೇ ವಿವರಿಸಿದ್ದರು. ಮೂರನೇ ದಿನ ಮುಂಚಿನ ದಿನದ ಹಾಡು ಪುನರಾವರ್ತನೆಯಾಯಿತು, ಅಥವಾ ಮುಂದುವರೆಯಿತು. ಅದರಿಂದ ಭಿನ್ನವಾದ ಹಾಡೂ ಕೇಳಿಬಂತು. ಸುದೀರ್ಘ ನಿರಂತರ ಗಾಯನಕ್ಕೆ ಸೂಕ್ತವಾಗಿರದಿದ್ದುದರಿಂದ ಗಾಯನವೆಲ್ಲ ಬಿಡಿ ಬಿಡಿ ಪ್ರಸಂಗಗಳಾಗಿದ್ದುವು.

ಪರಿಣಿತ ಗಾಯಕಿಯೂ ಗೋಪಾಲ ನಾಯ್ಕರಿಗೆ ಗುರುಗಳೂ ಆದ ಸೇಸಮ್ಮ ಅವರ ಜತೆ ಇತರ ಮಹಿಳೆಯರು ದನಿಗೂಡಿಸಲು ಅಸಮರ್ಥರಾದುದರಿಂದ ಆಕೆ ದೀರ್ಘ ಪಾಡ್ದನ ಕಾವ್ಯಗಳನ್ನು ಒಂಟಿಯಾಗಿಯೇ ಹಾಡುತ್ತಿದ್ದರು. ಅವರು ಪ್ರತಿದಿನವೂ ಪಾಡ್ದನ ಕಾವ್ಯ ಗಾಯನವನ್ನು ಮುಂದುವರಿಸುತ್ತಿದ್ದುದರಿಂದ ಪಾಡ್ದನ ಗಾಯನದ ಆರಂಭಿಕರಿಗೆ ಇಡಿಯ ಕಾವ್ಯವನ್ನು ಅವರಿಂದ ಕೇಳುವ ಅವಕಾಶ ದೊರೆಯುತ್ತಿತ್ತು. ಇಂತಹ ಕಲಿಕೆಯ ಸನ್ನಿವೇಶಗಳು ಸುದೀರ್ಘ ಪಾಡ್ದನಗಳ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದವು. ಮುಂದೆ ಸಿರಿ ಆರಾಧನೆಯ ಸಂದರ್ಭದಲ್ಲಿ ಪಾಡ್ದನ ನಿರೂಪಣೆಯು ಗಮನಾರ್ಹವಾದ ಮಹತ್ವವನ್ನು ಪಡೆಯಿತು. ಏಕೆಂದರೆ ಅಲ್ಲಿ ಮನುಷ್ಯ ಜೀವಿಗಳು ಪಾಲ್ಗೊಳ್ಳುತ್ತವೆಯೇ ಹೊರತು, ಭತ್ತದ ಸಸಿಗಳಲ್ಲ. ಹೀಗಾಗಿ ಇಡಿಯ ಸುದೀರ್ಘ ಕಾವ್ಯದ ನಿರೂಪಣೆ ಹಾಗೂ ಸಂಗ್ರಹದ ಕಲ್ಪನೆ ಮುಂದಿನ ದಿನಗಳಲ್ಲಿ ಬಂದಿರಬೇಕು(ಹಾಂಕೋ,೧೯೯೮;೫೪೮-೫೯).ಬತ್ತದ ಗದ್ದೆಯ ಪಾಡ್ದನ ನಿರೂಪಣ ಸಂದರ್ಭವು ಪಾಡ್ದನದ ಪೂರ್ಣ ಪಠ್ಯೀಕರಣಕ್ಕೆ ಅನು ಮಾಡುಕೊಡುತ್ತಿಲ್ಲ.

ಪಠ್ಯೀಕರಣ ಧಾರ್ಮಿಕ ಸಂದರ್ಭ: ಮೈದುಂಬುವ ಆಚರಣೆಯಲ್ಲಿ ಸಿರಿಕಾವ್ಯ

ಎರಡನೆಯ ಮುಖ್ಯ ಪ್ರದರ್ಶನ ಸಂದರ್ಭವು ಸಿರಿಯ ಮೈದುಂಬುವ ಆಚರಣೆಗಳ ಸಂದರ್ಭಗಳಲ್ಲಿ ಏರ್ಪಡುತ್ತದೆ. ಅದರಲ್ಲಿ ಎರಡು ಬಗೆ (i) ಮನೆಗಳಲ್ಲಿ ಜರಗುವ ‘ಪಾಲಿಯ ದಲಿಯ’ದಲ್ಲಿ ಸುಮಾರು ಇಪ್ಪತ್ತು ಮಂದಿ ಮಹಿಳೆಯರು ಸಿರಿಯ ಕಥಾಭಾಗವನ್ನು ಹಾಡುತ್ತಾರೆ. ಇದು ರಾತ್ರಿಯಿಡೀ ಜರಗುವ ಮೈದುಂಬುವ ಆಚರಣೆಯಾಗಿದ್ದು ಗೋಪಾಲ ನಾಯ್ಕರ ನೇತೃತ್ವದಲ್ಲಿ ಎರಡು /ಮೂರು ಗಂಡಸರ ನೆರವಿನೊಂದಿಗೆ ನಡೆಯುತ್ತದೆ. (ii) ಎರಡನೆಯದು ಸಿರಿ ಜಾತ್ರೆಯ ಸಂದರ್ಭ. ಉಜಿರೆಗೆ ಸಮೀಪದ ನಿಡ್ಗಲ್ ದೇವಸ್ಥಾನದ ಆವರಣದಲ್ಲಿ ಈ ಜಾತ್ರೆ ನಡೆಯುತ್ತದೆ. ಅಲ್ಲಿ ಮನೆಯಲ್ಲಿ ನಡೆದಂತೆ ಮೈದುಂಬುವ ಆಚರಣೆಯ ಸುಮರು ಎಂಬತ್ತು ಹೆಂಗಸರ ಪಾಲ್ಗೊಳ್ಳುವಿಕೆಯಿದ ಸಿರಿ ಪಾಡ್ದನದ ತುಣುಕುಗಳನ್ನು ಹಾಡುವ ಮೂಲಕ ಹುಣ್ಣಿಮೆಯ ರಾತ್ರಿಯಿಡೀ ಜರಗುತ್ತದೆ. ಸಿರಿಯ ಮೈದುಂಬುವಿಕೆಗೆ ಹಿನ್ನೆಲೆಗಾಗಿ ಪಾಡ್ದನನು ಕಾರ್ಯನಿರ್ವಹಿಸುತ್ತದೆ. ಆದರೆ ಕಥನವು ನಾಟಿ ಗದ್ದೆಗಳಲ್ಲಿನಂತೆ ನೇರವಾಗಿ ನಿರೂಪಿತಗೊಳ್ಳುವುದಿಲ್ಲ. ಆದರೆ ಕಥನವು ನಾಡಿ ಗದ್ದೆಗಳಲ್ಲಿನಂತೆ ನೇರವಾಗಿ ನಿರೂಪಿತಗೊಳ್ಳುವುದಿಲ್ಲ. ಬದಲಾಗಿ ಉತ್ತಮಪುರುಷ ಧಾಟಿಗಳಲ್ಲಿ ಸಂಭಾಷಣೆಯ ರೂಪದಲ್ಲಿ ಸಾಗುತ್ತದೆ. ಪಠ್ಯೀಕರಣಕ್ಕೆ ಹೇಳಿ ಮಾಡಿಸಿದ ಸಂದರ್ಭ ಇದಲ್ಲ.

ಸಿರಿ ಕಾವ್ಯದಲ್ಲಿ ಏಳು ಮಹಿಳಾ ಪಾತ್ರಧಾರಿಗಳು ಹಾಗೂ ಒಂದು ಪುರುಷ ಪಾತ್ರವು ಬರುತ್ತದೆ. ಮತಾಚರಣೆಯ ಸಂದರ್ಭದಲ್ಲಿ ಪಾತ್ರಧಾರಿಗಳು ಭಾವೋದ್ರೇಕಕ್ಕೆ ಒಳಗಾಗಿ ತಾವು ನಿರ್ವಹಿಸುವ ಪಾತ್ರದಲ್ಲಿ ಲೀನವಾಗುತ್ತಾರೆ. ದೈವದ ಆವಾಹನೆ ಮತ್ತು ತಲ್ಲೀನತೆ ಕಾವ್ಯ ಗಾಯನದಿಂದ ಉಂಟಾಗುತ್ತದೆ. ಮೊದಲಿಗೆ ಸಿರಿಯ ಹುಟ್ಟು, ನಾಮಕರಣ ಮುಂತಾದವುಗಳ ಕುರಿತು ಗೋಪಾಲ ನಾಯ್ಕರು ಸಾಕಷ್ಟು ದೀರ್ಘವಾಗಿ ಹಾಡುತ್ತಾರೆ. ಕಥನದ ನೇರ ನಡೆಗೆ ಇದು ಅತ್ಯತ್ತಮ ಘಳಿಗೆ. ಒಂದು ಸಂದರ್ಭದಲ್ಲಿ ಎಂಬತ್ತು ನಿಮಿಷಗಳ ಕಾಲ ನಿರಂತರವಾಗಿ ಹಾಡಿದರು. ಅಜ್ಜೆರು ಸಂದಿಯಿಂದ ತೊಡಗಿ ಸಿರಿಯ ಮಗ ಕುಮಾರನ ಜನನದವರೆಗೆ ಹಾಡಿದರು.ಮೊದಮೊದಲು ಗಾಯಕರು ಕಾವ್ಯದ ಗಾಯಕರಾದ ಗೋಪಾಲ ನಾಯ್ಕರಾಗಿಯೇ ಇದ್ದರು. ಚಪ್ಪರದಲ್ಲಿದ್ದ ಮುಖ್ಯ ದೇವ, ದೇವತೆಗಳಿಗೆಲ್ಲ ದೀರ್ಘವಾದ ಪ್ರಾರ್ಥನೆ ಸಲ್ಲಿಸಿದರು. ಕಾವ್ಯದ ಕಥನವನ್ನು ಮುಂದುವರಿಸುತ್ತ ಇತರ ದೇವರುಗಳ ಕಡೆಗೆ ತಿರುಗಿದರು. ಬರಬರುತ್ತ ಹಾಡುವ ಶೈಲಿ ಬದಲಾಗಿ ಕೊನೆಗೆ ಒಮ್ಮೆಲೇ ಕುಮಾರನಾಗಿ ಮಾತನಾಡಲು ಆರಂಭ ಮಾಡಿದರು. ಈ ಹಂತದಲ್ಲಿ ಗಾಯಕನ ಮೇಲೆ ಸಿರಿಯ ಮಗ ಕುಮಾರನ ಆವಾಹನೆಯಾಗುತ್ತದೆ. ಪ್ರಥಮ ಪುರುಷ ಏಕವಚನದ ಕಥನಶೈಲಿ ಉತ್ತಮ ಪುರುಷ ವಿವೇಕವನಾದ ಸ್ವತಃ ಕುಮಾರನೇ ತಾನು ಎಂಬುದಾಗಿ ತಿಳಿಯುತ್ತಾನೆ. ಕೈಯಲ್ಲಿ ಸಿಂಗಾರ (ಅಡಕೆ ಹೂ) ಹಿಡಿದು ತನ್ನ ಹಿಂದೆ ನಿಂತಿರುವ ಸಿರಿಗಳ ಕಡಗೆ ತಿರುಗುತ್ತಾನೆ. ಅವನ ಸಹಾಯಕರ ಮೇಲೆ ದೈವ ಆವಾಹನೆಯಾಗಿ ಅವರು ಸಿರಿ ಪಾತ್ರಿಣಿಯರನ್ನು ಹಾಡಲು ಪ್ರೇರೇಪಿಸಬೇಕೆಂಬ ಸೂಚನೆ ಇದು. ಆದರೆ ಆ ಸಹಾಯಕರು ಗಾಯನದಲ್ಲಿ ಅಷ್ಟಿ ನಿಪುಣರಿರಲಿಲ್ಲ ಮತ್ತು ಅವರಲ್ಲಿ ನಾಲ್ಕು ಮಹಿಳೆಯರು ಮಾತ್ರ ಕಥನಕಗಳನ್ನು ಹಾಡಲು ಶಕ್ತರಾಗಿದ್ದರು. ಈ ಹಂತದಲ್ಲಿ ಮಹಿಳೆಯರಿಗೆ ಹಾಡಲು ಸಿಗುವ ಪ್ರಸಂಗವೆಂದರೆ ತಾವು ನಿರ್ವಹಿಸುತ್ತಿರುವ ಪಾತ್ರವು ಹುಟ್ಟುಕತೆ ಭಾಗವಹಿಸಿದವರೆಲ್ಲರೂ ಪಲ್ಲವಿ ಹಾಡುವುದಕ್ಕೆ ದನಿಗೂಡಿಸುತ್ತಾರೆ.

ಇದು ಕಾವ್ಯ ಪ್ರದರ್ಶನಗೊಳ್ಳುವ ನೈಜ ಧಾರ್ಮಿಕ ಸಂದರ್ಭ.ಧಾರ್ಮಿಕ ಭಾವನೆಗಳು ಮತ್ತು ಆಚರಣೆಯ ನಡುವಳಿಕೆಗಳಿಗೆ ಅಂತಯೇ ಕಾವ್ಯಕ್ಕೆ ಸಂಬಂಧವಿಲ್ಲದ ಕೆಲವು ಅಂಶಗಳೂ ಗಾಯನದ ಗತಿಯನ್ನು ನಿರ್ಧರಿಸುತ್ತವೆ.ಬೇರೆ ಬೇರೆ ಕಾರಣಗಳಿಂದಾಗಿ ಸನ್ನಿವೇಶವು ಕಾವ್ಯಪಠ್ಯವನ್ನು ಅರ್ಥೈಸಿಕೊಳ್ಳಲು ಸೂಕ್ತವಾದುದಲ್ಲ.

ಮುಖ್ಯ ಗಾಯಕನು ಮೂರು ರೀತಿಯ ಪ್ರದರ್ಶನ ಶೈಲಿಯನ್ನೂ ಬಳಸುತ್ತಾನೆ. ಮೊದಲನೆಯದು: ಕಥನ ನೇರಗುಡಿಗೆಯಲ್ಲಿ ಸಾಗುತ್ತದೆ, ಪ್ರಥಮ ಪುರುಷವಾಚಕದಲ್ಲಿ ನಿರೂಪಣೆಯಾಗುತ್ತದೆ.ಎರಡನೆಯದು:ಕುಮಾರ ಮೈಮೇಲೆ ಆವಾಹನೆಯಾದಾಗ, ಉತ್ತಮ ಪುರುಷವಾಚಕದಲ್ಲಿ ಗಟ್ಟಿಯಾಗಿ ಹಾಡುತ್ತಾನೆ. ಮೂರನೆಯದು: ಇಲ್ಲಿ ನೇರ ನಡಿಗೆಯ ಕಥನವಿಲ್ಲ. ಒಂದು ಮೇಲೊಂದು ಸೇರಿಕೊಂಡ ಸಾಲುಗಳ ಗಾಯನ, ಕಾವ್ಯವನ್ನಾಧರಿಸಿದ ಉದ್ಗಾರ, ಘೋಷಣೆ ಹೀಗೆ ಏಕಮುಖ ಕಥನ ಹೋಗಿ ಸಂಭಾಷಣೆ ಪ್ರಾರಂಭವಾಗುತ್ತದೆ. ಹಾಗಾಗಿ ಕಥೆಯ ಹೆಜ್ಜೆಯನ್ನು ಗುರುತಿಸಲಾಗುವುದಿಲ್ಲ. ಇಲ್ಲಿ ಏರ್ಪಡುವ ಸಂಕಥನ ಪ್ರೇಕ್ಷಕರಿಗೆ ನಿರ್ದಿಷ್ಟ ಸೂಚನೆ ನೀಡುವುದಿರಬಹುದು. ಇಲ್ಲಿ ದೈವ ಆವಾಹನೆಯಾದಾಗ ಭಾವೋದ್ರೇಕತೆ ಉತ್ತುಂಗಕ್ಕೇರುವುದು, ನಿರೂಪಣೆಗೊಳ್ಳುವ ಶೈಲಿ ಬದಲಾಗುವುದು. ಇದು ದೈವಶಕ್ತಿ ಬಂದು ನೆಲೆಸುವುದರ ಸಾಂಕೇತಿಕ ಶಕ್ತಿಯ ಪ್ರಬಲ ಸಂಕೇತ. ಯಾಕೆಂದರೆ ಸಿರಿ ಹುಟ್ಟಿದ್ದು ಹಿಂಗಾರದ ಹೂವಿನಲ್ಲಿ ಎಂದು ಪುರಾಣ ಹೇಳುತ್ತದೆ. ಹಿಂಗಾರನ್ನು ಅವರು ಕೈಯಲ್ಲಿ ಹಿಡಿದುಕೊಂಡು ತೊನೆದಾಡುತ್ತಿರುತ್ತಾರೆ. ಸುತ್ತಲೂ ಹಿಂಗಾರದ ಸೂವಾಸನೆ ಹರಡುತ್ತದೆ. ಸಣ್ಣ ಸಣ್ಣ ಚೂರುಗಳು ಅತ್ತಿತ್ತ ಚೆಲ್ಲಿ ಚದುರುತ್ತದೆ.

ದೈವ ಆವಾಹನೆಯಾದ ಮೇಲೆ ನೇರ ನಡಿಗೆಯ ಕಥನ ನಿಲ್ಲುವುದು.‘ಕಾಲ ವ್ಯತ್ಯಾಸ’ದಿಂದ ಮೂರು ತಲೆಮಾರುಗಳು ವರ್ತಮಾನಕ್ಕೆ ಬಂದು ಒಟ್ಟಾಗಿ ಮಾತನಾಡಿಕೊಳ್ಳುತ್ತಾರೆ. ಒಂದೇ ವೇದಿಕೆಯಲ್ಲಿ ಎಲ್ಲ ತಲೆಮಾರಿನವರೂ ಒಟ್ಟಾಗಿ ಸೇರಿದ ಕಥೆ ಮುಂದುವರಿಯಲು ಹೇಗೆ ಸಾಧ್ಯ? ಕಥೆಯ ಸಹಜ ಬೆಳವಣಿಗೆಗೆ ಅಲ್ಲಿ ಅವಕಾಶವಿಲ್ಲ. ಸಾಧ್ಯತೆ ಇರುವುದಿಷ್ಟೇ; ಸ್ತ್ರೀಪಾತ್ರಿಣಿಯೊಬ್ಬಳು ಸಿರಿಗಳ ಸಾಲಿನಲ್ಲಿ ಪಕ್ಕದಲ್ಲಿರುವ ಇನ್ನೋರ್ವ ಪ್ರಾತಿಣಿಯನ್ನು ತಾಯಿ, ಅಕ್ಕ,ತಂಗಿ,ಮಗಳು, ಸವತಿ ಅಥವಾ ಸೇವಕಿಯೆಂದು ಭಾವಿಸಿ ಕರೆಯುತ್ತಾರೆ. ಭಾಗವಹಿಸಿದವರು ಒಬ್ಬರು ಇನ್ನೊಬ್ಬರನ್ನು ಹೇಗೆ ಕರೆಯಬೇಕು ಎಂಬುದಕ್ಕೆ ಕಟ್ಟುನಿಟ್ಟಾದ ನಿಯಮವಿದೆ. ಅದು ಅವರ ಪಾತ್ರಕ್ಕೆ ತಕ್ಕಂತೆ ಇರಬೇಕು. ಕುಮಾರ ಮತ್ತು ಸೊನ್ನೆ ಪಾತ್ರಧಾರಿಗಳು ಸಿರಿಯನ್ನು ‘ಅಮ್ಮ’ ಎಂದು ಕರೆಯಬೇಕು. ಅಕ್ಕ ತಂಗಿಯರಾಗಿಲ್ಲದ ಇಬ್ಬರು ಪಾತ್ರಿಣಿಯರಲ್ಲಿ ಒಬ್ಬಳು ಇನ್ನೊಬ್ಬಳನ್ನು ಅಕ್ಕ ಎಂತಲೋ ತಂಗಿ ಎಂತಲೋ ಕರೆದರೆ ಅವಳನ್ನು ಅಲ್ಲಿಗೇ ತಡೆದು ತಿದ್ದಿಕೊಳ್ಳಲು ಸೂಚಿಸಲಾಗುತ್ತದೆ.

ಪಠ್ಯೀಕರಣದ ದೃಷ್ಟಿಯಿಂದ, ಮತಾಚರಣೆಯ ಸಂದರ್ಭ ಅತ್ಯಂತ ಹತಾಶ ಹುಟ್ಟುಸುವಂತಹದು. ಕುಮಾರನ ಜನನ ಹಾಗೂ ಮೈದುಂಬುವ ರಭಸದಲ್ಲಿ ಉತ್ತಮ ಕಥಾಭಾಗವನ್ನು ಅವಸರವಸರವಾಗಿ ಹಾಡಿಬಿಡುತ್ತಾರೆ. ತದನಂತರ ‘ಹುಟ್ಟುಕತೆ’ಗಳು ಎಂಬ ಕಿರುಗತೆಗಳನ್ನು ಬಿಟ್ಟರೆ ಯಾವುದೇ ಕಥನವಿಲ್ಲ. ದೀರ್ಘ ಕಾವ್ಯ ಅಥವಾ ಅಖಂಡ ಕಾವ್ಯ ಎಂದಿನಂತೆಯೇ ಮರೆಯಾಗಿ ಹೋಗುತ್ತದೆ.

 

ಪಠ್ಯೀಕರಣದ ಪ್ರೇರಿತ ಸಂದರ್ಭ: ತಾಳೆಮರದ ತೋಟದಲ್ಲಿ ಸಿರಿಕಾವ್ಯ

೧೯೯೦ರ ಡಿಸೆಂಬರ್ ೨೦-೨೮ರ ಅವಧಿಯಲ್ಲಿ ನಮ್ಮ ತಂಡ ಗೋಪಾಲ ನಾಯ್ಕರ ಜೊತೆ ಕೆಲಸಕ್ಕೆ ತೊಡಗಿತು. ಗೋಪಾಲ ನಾಯ್ಕರಿಗೆ ಸಿರಿ ಕಾವ್ಯವನ್ನು ಮೊದಲಿನಿಂದ ಕಡೆಯವರೆಗೆ ಅವರು ಬಯಸಿದಂತೆ ಪ್ರಸ್ತುತಪಡಿಸಲು ಅವರಿಗೆ ಮುಕ್ತ ಅವಕಾಶ ನೀಡಲಾಯಿತು. ಅದಕ್ಕೆ ಸೂಕ್ತವಾದ ಸ್ಥಳ ಉಜಿರೆಯ ದೇವಪ್ಪ ಗೌಡರ ತಾಳೆಮರದ ತೋಟವೆಂದು ಅವರೇ ಆಯ್ಕೆ ಮಾಡಿಕೊಂಡರು. ಇದೊಂದು ಕೃತಕ ಪ್ರೇರಿತ ಸಂದರ್ಭವಾಗಿತ್ತು.ಗಾಯಕನಿಗೆ ನಮ್ಮ ತಂಡದ ಸದಸ್ಯರು ಹಾಗೂ ಒಬ್ಬಿಬ್ಬರು ಆಗಂತುಕರನ್ನುಬಿಟ್ಟರೆ ಬೇರೆ ಯಾರು ಪ್ರೇಕ್ಷಕರಿರಲಿಲ್ಲ. ಎಲ್ಲ ಗೌಜು ಗದ್ದಲಗಳಿಂದ ಮುಕ್ತವಾದ ವಾತಾವರಣವಾಗಿತ್ತು. ಕಾವ್ಯದ ದೀರ್ಘತೆ ಅಥವಾ ಅಖಂಡತೆ, ಸಮಯದ ಕೊರತೆ ಕ್ರಿಯಾವ್ಯತ್ಯಾಸದ ಪರಿಜ್ಞಾನದ ಕೊರತೆ ಮುಂತಾದ ಸಾಂದರ್ಭಿಕ ಅಂಶಗಳಿಂದಾಗಿ ಸಹಜ ಸನ್ನಿವೇಶದಲ್ಲಿ ಸಂಪೂರ್ಣ ಅಖಂಡ ಕಾವ್ಯದ ನಿರೂಪಣೆ ಅಸಾದ್ಯ. ನಮ್ಮ ಈ ದಾಖಲಾತಿ ಕಾರ್ಯಕ್ರಮ ಪ್ರತಿದಿನ ಬೆಳಗ್ಗೆ ಸೂರ್ಯೋದಯದಿಂದ ಹಿಡಿದು ಸಂಜೆ ಸೂರ್ಯಾಸ್ತದವರೆಗೆ ಏಳು ದಿವಸಗಳ ಕಾಲ ಸಾಗಿತು. ನಡುವೆ ದಣಿದ ದೇಹ ಹಾಗೂ ನಾಲಗೆಗೆ ಎರಡು ದಿನಗಳ ಬಿಡುವು ನೀಡಲಾಯಿತು.

ಪ್ರತಿದಿನ ಸೂರ್ಯೋದಯವಾದ ಒಂದು ತಾಸಿನ ಬಳಿಕ ನಮ್ಮ ಕೆಲಸ ಆರಂಭಗೊಳ್ಳುತ್ತಿತ್ತು. ಸೂರ್ಯಾಸ್ತಕ್ಕೆ ಒಂದು ಗಂಟೆ ಮುಂಚೆ ನಿಲ್ಲುತ್ತಿತ್ತು. ಯಾಕೆಂದರೆ ಹಗಲಿನ ಬೆಳಕಿನಲ್ಲಿ ಚಿತ್ರೀಕರಣ ಮಾಡಿಕೊಳ್ಳಬೇಕಾಗಿತ್ತು. ಒಂದು ದಿನದಲ್ಲಿ ಒಂದು ಕೂರು ಮಾತ್ರ ನಡೆಸುತ್ತಿದ್ದು ಅದು ಮಧ್ಯಾಹ್ನದ ಬಳಿಕ ಕೊನೆಗೊಳ್ಳುತ್ತಿತ್ತು. ಒಬ್ಬಬ್ಬರು ಆಗಂತುಕರನ್ನು ಬಿಟ್ಟರೆ ಶ್ರೋತೃಗಳನ್ನು ದಾಖಲಾತಿ ಮಾಡಿಕೊಳ್ಳುವ ತಂಡದ ಮೂವರು ಮಾತ್ರ ಇದ್ದೆವು. ಟಿಪ್ಪಣಿ ಮಾಡಿಕೊಳ್ಳುವ ಚಿನ್ನಪ್ಪ ಗೌಡರು, ಧ್ವನಿಮುದ್ರಣ ಮಾಡಿಕೊಳ್ಳುವ ಅನ್ನೆಲಿ ಹಾಂಕೋ ಮತ್ತು ವಿಡಿಯೋ ಚಿತ್ರೀಕರಣ ಮಾಡುವ ಲೌರಿ ಹಾಂಕೋ, ಗಾಯಕನಿಗೆ ತನ್ನ ಗಾಯವನ್ನು ತಾನು ಬಯಸಿದಂತೆ ವಿಭಾಗಿಸಿಕೊಳ್ಳುವ, ನಿಲ್ಲಿಸುವ ಸ್ವಾತಂತ್ರ್ಯವಿತ್ತು. ಮೂವತ್ತರಿಂದ ಎಪ್ಪತ್ತು ನಿಮಿಷಗಳವರೆಗಿನ ಗಾಯನ ಅವರತವಾಗಿ ಜರಗುತ್ತಿತ್ತು.ಮಧ್ಯಾಹ್ನ ಊಟಕ್ಕೆ ಮೂರು ತಾಸಿನ ಬಿಡುವು.ಚಹಾ,ಕಾಪಿ ಅಥವಾ ಎಳನೀರು ಕುಡಿಯಲು ನಡುವೆ ಅಲ್ಪವಿರಾಮವಿರುತ್ತಿತ್ತು. ಚರ್ಚೆಗಳೇನಿದ್ದರೂ ದಾಖಲಾತಿ ಕೆಲಸವಾದ ನಂತರ ನಡೆಸುತ್ತಿದ್ದೆವು. ಗಾಯಕ ಬಯಸಿದರೆ ನಡು ನಡುವೆ ಸಿರಿ ಆರಾಧನೆಯ ವಿವರಗಳ ಬಗ್ಗೆ, ಕಥೆಯ ಬಗ್ಗೆ ಸಣ್ಣಪುಟ್ಟ ಚರ್ಚೆ ನಡೆಯುತ್ತಿತ್ತು. ಚರ್ಚೆ ನಡೆಯುವಾಗಲೂ ಟೇಪ್ ರೆಕಾರ್ಡರ್ ಮತ್ತು ವಿಡಿಯೋ ಕ್ಯಾಮರಾಗಳು ಚಾಲನೆಯಲ್ಲಿದ್ದವು. ದೇವಪ್ಪಗೌಡರ ಮನೆಗೆ ಊಟಕ್ಕೆ ಅಥವಾ ಕಾಫಿಗೆ ಹೋದಾಗ ಮಾತ್ರ ಅವುಗಳನ್ನು ನಿಲ್ಲಿಸಲಾಗುತ್ತಿತ್ತು. ಅಲ್ಲಿಗೆ ಆಗಾಗ ಬರುತ್ತಿದ್ದವರೆಂದರೆ ವಿವೇಕ ರೈಯವರು ಸದಾ ನಮ್ಮೊಡನೆ ಇರಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಬಂದಾಗ ಕೆಲಸದ ಪ್ರಗತಿಯ ಅವಲೋಕನ ನಡೆಯುತ್ತಿತ್ತು.

ಗೋಪಾಲ ನಾಯ್ಕರು ಈ ಹಿಂದೆ ಎಂದೂ ಕಾವ್ಯವನ್ನು ಇಷ್ಟು ಸುದೀರ್ಘವಾಗಿ ಹಾಡಿರಲಿಲ್ಲ. (೧೫,೬೮೩ ಸಾಲುಗಳು ಇದ್ದವು).ಅವರ ಮನದಾಳದ ‘ಮಾನಸಿಕ ಪಠ್ಯ’ ಸಂಪೂರ್ಣವಾಗಿ ಹೊರಹೊಮ್ಮಿದ ಸಂದರ್ಭವಿದು. ೧೯೮೬ರ ಅವರ ಉಕ್ತರೂಪದ ಪಾಡ್ದನವು ಕಥಾಹಂದರದ ದೃಷ್ಟಿಯಿಂದ ಪರಿಪೂರ್ಣವಾಗಿತ್ತು.ನಿರೂಪಣೆಯ ಸಂದರ್ಭ ಹೊಸತಾದರೂ ಫಲಿತಾಂಶದಿಂದ ಗೋಪಾಲ ನಾಯ್ಕರು ಸಂತೋಷಗೊಂಡಿದ್ದರು. ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಂತರವಾಗಿ ಹಾಡಲು ಅವಕಾಶ ಸಿಕ್ಕಿದುದ್ದಕ್ಕೆ ಆನಂದ ಪಟ್ಟಿದ್ದರು. ನಿರೂಪಣೆಗೆ ಅವರು ಆಯ್ದುಕೊಂಡ ಶೈಲಿ ಎಲ್ಲ ಸಂದರ್ಭಗಳಲ್ಲೂ ನೇರ ಹಾಗೀ ಸ್ಪಷ್ಟ.ಅವರ ನಿರೂಪಣೆ ಪ್ರಥಮ ಪುರುಷವಾಚಕದಲ್ಲಿತ್ತು. ಅತ್ಯಂತ ಸುದೀರ್ಘವಾಗಿದ್ದರೂ ಗಟ್ಟಿಯಾಗಿ ಮತಾಚರಣೆಯ ಸಂದರ್ಭದ ಗಾಯನದಂತೆ ವೇಗವಾಗಿ ಇದು ಮುಂದೆ ಸಾಗುತ್ತಿತ್ತು. ಬೇರೆ ಸಂದರ್ಭಗಳಿಗಿಂತ ಇಲ್ಲಿ ಪಠ್ಯ ಹೆಚ್ಚು ದೀರ್ಘವಾಗಿತ್ತು. ಅಲ್ಲದೆ ಕಾವ್ಯವೊಂದರಲ್ಲಿ ಕಾಣಿಸುವ ಬಹುರೂಪತೆ ಹಾಗೂ ಕಾವ್ಯಮಯತೆಯನ್ನು ಇಲ್ಲಿ ನೋಡಬಹುದು.

ಮೊದಲನೆಯ ಕೂರಿನಲ್ಲಿ ದೇವರಿಗೆ, ದೇವತೆಗಳಿಗೆ,ಗಣನಾಯಕರಿಗೆ ವೀರ ಪುರುಷರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಅವರೆಲ್ಲ ತಮ್ಮ ಸ್ಥಾನಕ್ಕೆ ಬಂದು ನೈವೇದ್ಯ ಸ್ವೀಕರಿಸಿ, ದೇವ-ಮಾನವರ ಉತ್ಸವಗಳಲ್ಲಿ ಭಾಗಿಯಾಗಿ, ಅವರ ನಡುವೆ ಬಾಂಧವ್ಯ ಸುಮಧುರವಾಗಿಲೆಂದೂ, ಕುಲಬಾಂಧವರೆಲ್ಲ ಸುಖ-ಸಂತೋಷ, ಆಯುರಾರೋಗ್ಯದಿಂದಿರಲೆಂದೂ, ಹರಸುವಂತೆ ಪ್ರಾರ್ಥನೆ ನಡೆಯಿತು. ಗೋಪಾಲ ನಾಯ್ಕರ ಚಿನ್ನಪ್ಪ ಗೌಡರಿಗೆ ೧೯೮೬ರಲ್ಲಿ ಈ ಕಾವ್ಯವನ್ನು ನಿರೂಪಿಸಿದ್ದರು. ಅದು ಉಕ್ತರೂಪದಲ್ಲಿದ್ದು ಕಥಾಹಂದರದ ದೃಷ್ಟಿಯಿಂದ ಪರಿಪೂರ್ಣವಾಗಿತ್ತು. ಆದರೆ ಈ ಪ್ರಾರ್ಥನೆಯ ಭಾಗ ಅಲ್ಲಿ ಬಿಟ್ಟು ಹೋಗಿತ್ತು. ಕಾರಣಾಂತರಗಳಿಂದ ಆ ನಂತರ ಅವು ದಾಖಲೆಗೊಂಡಿರಲಿಲ್ಲ.

ಪ್ರಾರ್ಥನೆಗಳು ಕಾವ್ಯದಲ್ಲಿ ಪ್ರತ್ಯೇಕವಾದ ಪ್ರಕಾರಕ್ಕೆ ಸೇರುತ್ತವೆ. ಅವು ಕಾವ್ಯದ ಕಥೆಯ ಭಾಗವಲ್ಲ.ದೈವಶಕ್ತಿಯನ್ನು ಆವಾಹಿಸಿಕೊಂಡು ಅಚಲ ಏಕಾಗ್ರತೆಯನ್ನು ಸಾಧಿಸುವುದಕ್ಕೆ ಅವಶ್ಯವಾದವುಗಳು. ಇಡಿಯ ಪುರಾಣದ ಲೋಕವು ಒಂದು ನಿರ್ದಿಷ್ಟ ಕಾರಣಕ್ಕಾಗಿ ಪುನರ್ ಸಂಘಟನೆಗೊಂಡು, ಒಂದು ‘ಪವಿತ್ರ ಜಗತ್ತಿ’ನ ನಕ್ಷೆಯಲ್ಲಿ ಅಳವಟ್ಟು ಸಂಬಂಧಪಟ್ಟ ದೇವಸ್ಥಾನಗಳು, ರಾಜ್ಯಗಳು, ಪಾಳೆಯಪಟ್ಟುಗಳನ್ನು ಒಂದರ ಬದಿಯಲ್ಲಿ ಮತ್ತೊಂದನ್ನು ಇರಿಸಿದುದು ಕಂಡುಬರುತ್ತದೆ.

ಪಠ್ಯೀಕರಣದ ಸಂದರ್ಭದಲ್ಲಿ ಪ್ರಾರ್ಥನಾ ಭಾಗವು ನಮಗೊಂದು ಸಂದೇಶವನ್ನು ಹೇಳುತ್ತದೆ. ಕಾವ್ಯವೊಂದು ಮಾನಸಿಕ ಪಠ್ಯವು ರೂಪದಲ್ಲಿ ಪ್ರತ್ಯೇಕ ಅಸ್ತಿತ್ವವನ್ನು ಪಡೆದಿರುವುದಿಲ್ಲ. ಬದಲಾಗಿ ಧಾರ್ಮಿಕ ಹಾಗೂ ಸಾಮಾಜಿಕ ಚಿಂತನೆಯ ಜೊತೆ ಗಾಢವಾದ ಸಂಬಂಧವನ್ನು ಹೊಂದಿದೆ. ಗೋಪಾಲ ನಾಯ್ಕರ ಪ್ರಕಾರ ಪ್ರಾರ್ಥನೆಗಳು ಅಖಂಡ ಅಥವಾ ಸಂಪೂರ್ಣ ಕಾವ್ಯದ ಭಾಗವೇ. ಎಲ್ಲಕ್ಕಿಂತ ಹೆಚ್ಚಾಗಿ ಈ ಪ್ರಾರ್ಥನೆಗಳು ಭೂಮಿಯು ಅನೇಕ ಶಕ್ತಿಗಳು ಸಂಗಮಸ್ಥಾನವೆಂದು ಬಿಂಬಿಸುತ್ತವೆ. ಇದು ದೇವ, ಮಾನವರಿಬ್ಬರಿಗೂ ನಡುವೆ ಏರ್ಪಟ್ಟ ಮಧ್ಯಂತರ ನಿಗೂಢ ಜಗತ್ತಿನ ಜೊತೆ ಸಂಬಂಧ ಏರ್ಪಡುತ್ತದೆ. ಪವಿತ್ರ ಕಾವ್ಯಭಾಷೆಯ ಮೂಲಕ ಮಾನವನ ಮನಸ್ಸನ್ನು ನಿಯಂತ್ರಿಸುವ ವ್ಯವಸ್ಥೆ ಸೃಷ್ಟಿಯಾಗುತ್ತದೆ.

ದಾಖಲಾತಿ ಪ್ರಕ್ರಿಯೆಯ ಪ್ರತಿ ನಿಮಿಷದ ಬೆಳವಣಿಗೆಯನ್ನು ಸವಿವರವಾಗಿ ನೀಡಲಾಗಿದೆ (ನೋಡಿ: ಹಾಂಕೋ ೧೯೯೮: ೨೭೦-೩೨೧). ನಾಲ್ಕು ದಿನಗಳ ನಿರಂತರ ಗಾಯನದ ಬಳಿಕ ಗಾಯಕರ ಕಂಠ ಸಾಕಷ್ಟು ಕ್ಷೀಣಿಸಿತ್ತು.ಗಾಯನವನ್ನು ನಿಲ್ಲಿಸಿ ಬಳಿಕ ಅವರು ನಾವು ಕೊಟ್ಟ ಕೆಮ್ಮಿನ ಔಷದವನ್ನು ಕುಡಿದು ಎರಡು ದಿನ ವಿಶ್ರಾಂತಿಯನ್ನು ತೆಗೆದುಕೊಂಡ ಮೇಲೆಯೇ ಸುಧಾರಿಸಿಕೊಂಡರು. ಕಾವ್ಯದಲ್ಲಿ ನಮೂದುಗೊಂಡಿರುವ ಸ್ಥಳಗಳಿಗೆ ಭೇಟಿಯಿತ್ತೆವು. ಮರುದಿನ ಎಲ್ಲರೂ ವಿಶ್ರಾಂತಿಯನ್ನು ತೆಗೆದುಕೊಂಡೆವು.ಈ ಮೊದಲೇ ಹೇಳಿದಂತೆ, ಗೋಪಾಲ ನಾಯ್ಕರು ಮೊದಲ ಬಾರಿಗೆ ಸಂಪೂರ್ಣ ಕಾವ್ಯವನ್ನು ಹಾಡಿದ್ದರಿಂದ ಹಿಂದೆಂದಿಗಿಂತಲೂ ಈ ಸಲ ದೈಹಿಕವಾಗಿ ತುಂಬಾ ದಣಿದಿದ್ದರು. ಇದಕ್ಕೆ ನಾಲ್ಕು ವರ್ಷಗಳ ಹಿಂದೆ ಸಂಪೂರ್ಣ ಸಿರಿ ಕಾವ್ಯವನ್ನು ಅವರು ಆರು ತಿಂಗಳ ಅವಧಿಯಲ್ಲಿ ಕಥಾರೂಪದಲ್ಲಿ ನಿರೂಪಿಸಿದ್ದರು. ಹಿಂದೆ ಹೇಳಿದ ಕಾವ್ಯಕ್ಕೂ ಇಂದು ಹಾಡಿದ ಕಾವ್ಯಕ್ಕೂ ಮೂಲ ಅದೇ ಮಾನಸಿಕ ಪಠ್ಯ. ಆದರೆ ಈ ನಡುವೆ ಗಾಯಕರು ಅದನ್ನು ಬೆಳಸಿರಬಹುದು ಅಥವಾ ಪರಿಷ್ಕರಿಸಬಹುದು. ನಿಜವಾಗಿಯೂ ಕೆಲ ತಿದ್ದುಪಡಿಗಳಾದದ್ದು ಕಂಡುಬಂತು. ನಮ್ಮ ದಾಖಲಾತಿ ಪ್ರಕ್ರಿಯೆಯಿಂದ ಹಿಂದೆ ಹೇಳಿದ ಕಾವ್ಯದ ಆವೃತ್ತಿ ಹಾಗೂ ಇಂದಿನ ಹಾಡಿದ ಕಾವ್ಯದ ಆವೃತ್ತಿ ಹೇಗಿರಬಹುದೆಂಬುದಕ್ಕೆ ಮಾರ್ಗದರ್ಶಿಯಾಗಿ ಸಹಾಯ ಮಾಡಿತು. ಅನೇಕ ವ್ಯತ್ಯಾಸಗಳು ಕಂಡುಬರಬಹುದೆಂದು ಮೊದಲೇ ನಮಗೆ ನಿರೀಕ್ಷೆಯಿದ್ದುದರಿಂದ ಸ್ಥಳದಲ್ಲಿಯೇ ಅವುಗಳ ನಡುವೆ ತುಲನೆಯನ್ನು ಮಾಡಲಿಲ್ಲ.

ಈ ನೂತನ ಸನ್ನಿವೇಶದಲ್ಲಿ ನಡೆಸಿದ ದಾಖಲಾತಿಯಿಂದ ಅಧ್ಯಯನ ಮಾಡಬೇಕಾದ ಅಂಶವೆಂದರೆ ವಿಭಾಗೀಕರಣ. ಈ ಹಿಂದೆ ಇಷ್ಟೊಂದು ವಿಸ್ತೃತ ಚೌಕಟ್ಟಿನ ಪರಿಧಿಯಲ್ಲಿ ಕಥನ ಪ್ರಸಂಗಗಳನ್ನು ಜೋಡಿಸಿ ಗಾಯನ ರೂಪದಲ್ಲಿ ಪ್ರಸ್ತುತಪಡಿಸಿದ್ದೇ ಇಲ್ಲ. ಇಂಥದೊಂದು ಸಂದರ್ಭ ಗಾಯಕನಿಗೆ ಹೊಸತು. ಗಾಯಕನಿಗೆ ತಡೆಯೊಡ್ಡದೆ ನಮಗೆ ನಾವೇ ಪ್ರಶ್ನೆಗಳನ್ನು ನಿಲ್ಲಿಸಬೇಕೆಂದು ಗಾಯಕನಿಗೆ ಹೇಗೆ ಗೊತ್ತಾಗುತ್ತದೆ? ಒಂದು ಪ್ರಸಂಗದ ಅಥವಾ ಕಥೆಯ ಒಳಗೆ ಯಾ ಎರಡು ಕತೆಗಳ ನಡುವೆ ಜಾಗ ಮಾಡಿಕೊಂಡು ಕತೆಯಿಂದ ಹೊರಬರಲು ಮತ್ತು ಪ್ರವೇಶಿಸಲು ಹೇಗೇ ಅವನು ದಾರಿಯನ್ನು ನಿರ್ಮಿಸಿಕೊಳ್ಳುತ್ತಾನೆ? ಕತೆಯೊಂದನ್ನು ಇಲ್ಲಿಗೆ ಮುಗಿಸಬೇಕೆಂದೇನಾದರೂ ಸಾಂಪ್ರಾದಾಯಿಕ ನಿಯಮಗಳಿವೆಯೇ? ಕಥನದಲ್ಲಿ ಕೆಲವೊಂದು ಘಟನೆಗಳು ಮತ್ತು ಪ್ರಕ್ರಿಯೆಗಳು ತಡೆಯಿಲ್ಲದೆ ಸಾಗಬೇಕೆಂಬ ಪದ್ಧತಿಯಿರುವುದು ನಮಗೆ ನಂತರ ತಿಳಿಯಿತು. ಈ ಪದ್ಧತಿಗೆ ಗಾಯಕನು ಮಾಡುವ ಕಾವ್ಯದ ವಿಭಾಗೀಕರಣದ ಮೇಲೆ ಏನಾದರೂ ಪ್ರಭಾವ ಬೀರುತ್ತದೆಯೇ? ತಾನು ನಿಲ್ಲಿಸಿದಲ್ಲಿಂದಲೇ ಪುನಃ ಮುಂದುವರಿಸುತ್ತಿದ್ದೇನೆ ಎಂದು ಗಾಯಕನಿಗೆ ಖಾತ್ರಿಯಾಗುವುದು ಹೇಗೆ? ಅಂದರೆ, ತಾನು ಹಾಡಿದ್ದನ್ನೇ ಮತ್ತೆ ಹಾಡುತ್ತಿದ್ದೇನೆ ಎಂದಾಗಲಿ ಅಥವಾ ಕೆಲವು ಹೇಳಲು (ಹಾಡಲು) ಬಿಟ್ಟುಹೋಯಿತು ಎಂದಾಗಲೀ ಗಾಯಕನಿಗೆ ತಿಳಿಯಲು ಹೇಗೆ ಸಾಧ್ಯ? ಗಾಯಕನು ತನ್ನ ಮರುಪ್ರವೇಶವನ್ನು ಸುಲಭವಾಗುವಂತೆಯೂ, ಸರಾಗವಾಗಿರುವಂತೆಯೂ, ತಪ್ಪಿಲ್ಲದಂತೆಯೂ ಮಾಡಿಕೊಳ್ಳಲು ತಂತ್ರ ಯಾ ಉಪಾಯಗಳೇನಾಂದರೂ ಇವೆಯೇ? ಕಷ್ಟಕರ ಪುರನರ್ ಪ್ರವೇಶ ಮತ್ತು ಸುತ್ತುಬಳಕೆಯ ಕೊಂಡಿಗಳು ಎಂಬಂತಹ ಸಂಕೇತಗಳೇನಾದರೂ ಕಾವ್ಯದ ಪಠ್ಯದಲ್ಲಿವೆಯೇ?

ಹೀಗೆ ಗಾಯಕನ ಮಾನಸಿಕ ಪಠ್ಯದ ಅಪೂರ್ಣ ಚಿತ್ರಣ ಸಂಶೋಧನೆಗೆ ಸಾಕಷ್ಟು ಹೊಸ ಅವಕಾಶಗಳಿವೆ ಎಡೆ ಮಾಡಿಕೊಡುತ್ತದೆ. ವಿರಾಮಕ್ಕೂ ಮೊದಲು ಮತ್ತು ವಿರಾಮದ ನಂತರ ಕಥನ ಪ್ರಸಂಗಗಳನ್ನು ಜೋಡಣೆ ಮಾಡಲು ಕೆಲವು ಜ್ಞಾಪಕ ಶಕ್ತಿಯ ತಂತ್ರಗಳನ್ನು ಉಪಯೋಗಿಸುತ್ತಿದ್ದರು ಎಂಬುದು ತಿಳಿದುಬಂತು. ಉದಾಹರಣೆಗೆ, ಹಿಂದಿನ ಜೋಡಣೆಯ ಕೊನೆಯಲ್ಲಿಯೇ ‘ಬೀಜ’ ಬಿತ್ತಿ ಪೂರ್ವ ತಯಾರಿ ಮಾಡಿಕೊಂಡಿರುತ್ತಿದ್ದರು. ಪುನಃ ಗಾಯನವನ್ನು ಆರಂಭ ಮತ್ತು ತಾನು ನಿಲ್ಲಿಸುವುದಕ್ಕೆ ಮುಂಚೆ ಹಾಡಿದ ಸಾಲುಗಳನ್ನು ಮತ್ತೂ ಸ್ಪಷ್ಟವಾಗಿ ಹೇಳಬೇಕೆಂದರೆ, ಅವುಗಳ ಪದಗಳನಲ್ಲ, ಬದಲಿಗೆ ಅರ್ಥವನ್ನು (ವಿಷಯವನ್ನು) ನೆನಪಿಸಿಕೊಳ್ಳುಲು ಈ ಏಳು ದಿನಗಳ ಗಾಯನ ಪ್ರಕ್ರಿಯೆಯಲ್ಲಿ ಹೊಸ ಹೊಸ ತಂತ್ರಗಳನ್ನು ಹುಡುಕಿ ಪ್ರಯೋಗಿಸಲಾಯಿತು (ಹಾಂಕೋ, ೧೯೯೮, ೫೧೪-೨೧).

ಗರಿಷ್ಠ ಮಟ್ಟದ ಮೌಖಿಕತೆಯನ್ನು ಕಾಪಾಡಲು ಬಳಸುವ ನಿಯಮಗಳನ್ನು ಪಾಲಿಸಿ ಕಾವ್ಯದ ಪಠ್ಯೀಕರಣ ಮಾಡಲು ಪ್ರಯತ್ನಪಟ್ಟಾಗ ನಮಗೆ ಸ್ಪಷ್ಟವಾದದ್ದು ಎರಡು ಸಂಗತಿಗಳು: ಮೊದಲನೆಯದಗಿ ಕಾವ್ಯ ಪ್ರದರ್ಶನಗೊಳ್ಳುವ ‘ಸಹಜ ಸಂದರ್ಭಗಳು’ ಅನೇಕ ಕಾರಣಗಳಿಗಾಗಿ ಕಥೆಯು ಪಠ್ಯವನ್ನು ನೇಪಥ್ಯಕ್ಕೆ ಸರಿಸಿಬಿಡುತ್ತದೆ. ಎರಡನೆಯದಾಗಿ, ಪ್ರೇರತ ಸಂದರ್ಭವು ಪಠ್ಯೀಕರಣಕ್ಕೆ ಅತ್ಯಂತ ಉತ್ತಮವಾದದ್ದು ಸೂಕ್ತವಾದದ್ದು. ಇಂತಹ ಕೃತಕ ಸಂದರ್ಭದಲ್ಲಿ ಗಾಯಕನು ಕಾವ್ಯದ ಆಕೃತಿಯ ಮೇಲೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ತನ್ನ ಗಮನವನ್ನು ಕೇಂದ್ರೀಕರಿಸಬಹುದು. ಇದರಿಂದ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿದ್ದ ಮೌಖಿಕ ಪಠ್ಯವನ್ನು ಪಡೆಯಲು / ಹಿಡಿಯಲು ಸಾಧ್ಯವಾಯಿತು. ಗಾಯಕನ ಮನಸ್ಸಿನಲ್ಲಿ ಅಮೂರ್ತ ರೂಪದಲ್ಲಿದ್ದ ಸಿರಿಕಾವ್ಯದ ಮಾನಸಿಕ ಪಠ್ಯದ ಅಪೂರ್ಣ ಚಿತ್ರಣ ಬೆಳಕು ಕಾಣುವಂತಾಯಿತು.

ಟಿಪ್ಪಣಿಗಳು

೧. ಅಧ್ಯಯನದ ವಿವರಗಳನ್ನುಉಪಾದ್ಯಾಯ ಮತ್ತು ಉಪಾಧ್ಯಾಯರ ಗ್ರಂಥ (೧೯೮೬:೨-೩) ದಿಂದ ಅಳವಡಿಸಿಕೊಳ್ಳಲಾಗಿದೆ.

೨. ಈ ಸಂಪ್ರಬಂಧವನ್ನು ೧೯೯೬ರಲ್ಲಿ ತುರ್ಕುವಿನಲ್ಲಿ ಜರಗಿದ ವಿಚಾರ ಸಂಕಿರಣಕ್ಕಾಗಿ ಸಿದ್ಧಪಡಿಸಲಾಗಿತ್ತು. ಮುಂದೆ ಹೊಂಕೊದಲ್ಲಿ ಜರಗಿದ ವಿಚಾರ ಸಂಕಿರಣದಲ್ಲಿ ಬಳಸಿಕೊಳ್ಳಲಾಯಿತು.

೩. ರೈ ೧೯೯೬:೧೬೯-೭೧ ವೈಯುಕ್ತಿಕ ಸಂಭಾಷಣೆ ದಿನಾಂಕ ಫೆಬ್ರುವರಿ ೧೮, ೧೯೯೬.

Reference

Honko lauri

1996 : Epics along with Silk Roads: Mental Text, Performance, And Written Codification Oral Tradition 11/1:1-7

1998:Textualising the siri epic (FF commiunicatiions 264) Helsinki: Academia Scientiarum fennica

Honko,lauri in collabwitjh chinnappa gowda, anneli honko and viveka rai

1998 a,b: the siri epics as performed by gopala naika,i,ii (ff communication 265,266) helsinki: academia scientifarumfennica

Rai, b.a.viveka

1985: Tulu Janapada Sahitya (Tulu Folk Literature) (in kannada) bangalore: kannada sahitya parishath.

1986: paaddanas as folk epics in upadhyaya 1986:9-13

1996: epics in the oral genre sysytem of tulunadu. Oraltradition 11/1:163-72

Upadhyaya, yliyar padmanabha in upadhyaya 1986:1-8 upadhyaya u.p.(ed)

1986: folk epics of tulunad. Papers presented on the even of the kalevala festival of upupi 12.10.1985. Udupi: the regional resources centre for folk performing arts, m.g.m. College.