Textualizing the Siri Epic ಎಂಬ ಮೊದಲನೆಯ ಸಂಪುಟವು ೬೯೫ ಪುಟಗಳನ್ನೊಳಗೊಂಡಿದೆ. ಲೌರಿ ಹಾಂಕೋ ಅವರ ಮುನ್ನುಡಿ ಮತ್ತು ದಕ್ಷಿಣ ಕನ್ನಡ ಜಿಲ್ಲಯೆ ನಕಾಶೆ ಆರಂಭದಲ್ಲಿ ಇವೆ. ಈ ಸಂಪುಟದಲ್ಲಿ ಪ್ರಧಾನ ವಿಷಯವಾದ ಮಹಾಕಾವ್ಯದ ಸ್ವರೂಪ, ದಾಖಲಾತಿ, ಪಠ್ಯೀಕರಣ ಹಾಗೂ ನಿರ್ದಿಷ್ಟವಾಗಿ ಸಿರಿ ಸಂದಿಯ ಸಂಗ್ರಹ, ಸಂಪಾದನೆ, ಪ್ರಕಟನೆ ಮತ್ತು ಕಥಾಸಾರಾಂಶ ಈ ವಿವರಗಳನ್ನು ನಾಲ್ಕು ಭಾಗಗಳಲ್ಲಿ ನೀಡಲಾಗಿದೆ. ಮೌಖಿಕ ಮಹಾಕಾವ್ಯಗಳ ಕುರಿತಂತೆ ಲೌರಿ ಹಾಂಕೋ ಅವರ ಸಂಶೋಧನಾತ್ಮಕವಾದ ಪ್ರಬುದ್ಧ ಆಲೋಚನೆಗಳನ್ನು ಈ ಸಂಪುಟದಲ್ಲಿ ನೋಡಬಹುದು.

a. The Enigma of long epic

b. Textualization of Oral Epics: Antecedents

c. Textualization of Oral Epics: The Present Case

d. The Siri Epic: A synopsis – ಎಂಬ ನಾಲ್ಕು ಭಾಗಗಳ ಅನಂತರ ೪೫ ವರ್ಣಚಿತ್ರಗಳು, ಗ್ರಂಥಸೂಚಿ ಮತ್ತು ಪದಸೂಚಿಗಳನ್ನು ನೀಡಲಾಗಿದೆ. ಮೊದಲನೆಯ ಭಾಗದಲ್ಲಿ ಮಹಾಕಾವ್ಯದ ಸ್ವರೂಪ, ವಿನ್ಯಾಸ, ಮೌಖಿಕತೆ ಮತ್ತು ಪರಂಪರೆ, ಮೌಖಿಕ ಪಠ್ಯ, ಮೌಖಿಕ ಸಂರಚನೆಯ ಅರ್ಥೈಸುವಿಕೆ, ಮಹಾಕಾವ್ಯ ಪರಂಪರೆ, ಪಾಠಾಂತರಗಳು, ಅಂತರ್ಪಠ್ಯ, ಗಾಯನ ಪರಂಪರೆಯ ಮಾದರಿಗಳು, ಹಾಡುವಿಕೆಯ ಶೈಲಿ, ದಾಖಲಾತಿಯ ಬಗೆಗಳು, ಹೇಳಿ ಬರೆಸಿದ ಪಠ್ಯ, ಹಾಡಿ ದಾಖಲಿಸಿಕೊಂಡ ಪಠ್ಯ, ಮಾನಸಿಕ ಪಠ್ಯ, ಮಾನಸಿಕ ಪ್ರತಿಮೆಗಳು, ಸೂತ್ರಾತ್ಮಕ ಅಭಿವ್ಯಕ್ತಿಗಳ ನಿರ್ದಿಷ್ಟತೆ ಮತ್ತು ಬದಲಾವಣೆಗಳು, ವಿವರಣೆಗಳ ಸಿದ್ಧ ಮಾದರಿಗಳು, ಕಥಾನಕಗಳ ಸಂಯೋಜನೆ, ಕಾವ್ಯದ ಅಂತರಿಕ ಸಂರಚನೆ, ಗಾಯನದ ತಂತ್ರಗಲು, ವ್ಯೂಹಗಳು, ಮಹಾಕಾವ್ಯವನ್ನು ಕಟ್ಟುವ ಬಗೆ, ಪಠ್ಯ ಶರೀರ ಮತ್ತು ಗಾಯಕರ ಬಳದನಿ, ಪಠ್ಯೀಕರಣದ ಸಮಸ್ಯೆಗಳು – ಇವುಗಳ ಸೈದ್ಧಾಂತಿಕ ಚರ್ಚೆಗಳಿವೆ.

ಎರಡನೆಯ ಭಾಗದಲ್ಲಿ ಜಗತ್ತಿನ ಹನ್ನೊಂದು ಮೌಖಿಕ ಮಹಾಕಾವ್ಯಗಳ ವಸ್ತು ವಿಷಯ, ಅವುಗಳ ದಾಖಲಾತಿ, ಸಂಪಾದನೆ ಮತ್ತು ಪ್ರಕಟಣೆಯ ಮಾಹಿತಿಗಳಿದ್ದು, ಜಾಗತಿಕ ಮೌಖಿಕ ಮಹಾಕಾವ್ಯಗಳ ಸಂಗ್ರಹ ಮತ್ತು ಅಧ್ಯಯನ ಸಾಗಿಬಂದ ವಿಧಾನವನ್ನು ಶಾಸ್ತ್ರಿಯವಾಗಿ ವಿವೇಚಿಸಲಾಗಿದೆ.

ಸಿರಿಸಂಧಿಯ ದೃಷ್ಟಿಯಿಂದ ಮೂರನೆಯ ಭಾಗವು ಅಮೂಲ್ಯವಾಗಿದೆ. ಸಿರಿಸಂಧಿಯ ದಾಖಲಾತಿ, ಸಂಪಾದನೆ ಮತ್ತು ಪ್ರಕಟಣೆಯ ಕುರಿತ ಇಡಿಯ ಯೋಜನೆಯ ಹಿನ್ನೆಲೆ ಮತ್ತು ಕಾರ್ಯವಿಧಾನಗಳನ್ನು ವ್ಯವಸ್ಥಿತವಾಗಿ ಈ ಭಾಗದಲ್ಲಿ ವಿವರಿಸಲಾಗಿದೆ. ಗೋಪಾಲ ನಾಯ್ಕರ ಶೋಧ, ಪಾಡ್ಸನ ಲೋಕದ ಪರಿಚಯ, ತುಳುನಾಡಿನ ಭಾಷೆಗಳು, ಜನರು, ಧಾರ್ಮಿಕತೆಮತ್ತು ಸಮಾಜ, ಪುರಾಣಗಳಾಗಿ ಮತ್ತು ಆಚರಣೆಯಲ್ಲಿ ಬಳಕೆಯಾಗುವ ಪಾಡ್ದನಗಳು, ಸಿರಿ ಸಂಧಿಯ ಪ್ರಕಟಿತ ಪಠ್ಯಗಳು, ಗೋಪಾಲ ನಾಕೈಕ ಹೇಳಿ ಬರೆಸಿದ ಪಠ್ಯ, ಫಿನ್ನಿಸ್ ಮತ್ತು ತುಳುವ ಅಧ್ಯಯನ ಯೋಜನೆ, ಸಿರಿಸಂಧಿಯನ್ನು ಹಾಡಿಸಿ ದಾಖಲಿಸಿಕೊಂಡ ಪಠ್ಯ, ಸಿರಿ ವಾಙ್ಮಯದ ದಾಖಲಾತಿ, ಗಾಯಕ, ಗೋಪಾಲ ನ್ಯಾಕ ಅವರ ‘ಹಾಡುಗಳ ಜಗತ್ತು’ ಗೋಪಾಲ ನ್ಯಾಕ ಅವರ ಮನೆಯಲ್ಲಿ ಜರುಗಿದ ‘ದಲಿಯೊ’ ಆಚರಣೆ, ನಿಡ್ಗಲ್ಲಿನಲ್ಲಿ ನಡೆದ ಸಿರಿ ಜಾತ್ರೆ, ಸಿರಿ ಸಂದಿಯ ಕಲಿಕೆ ಮತ್ತು ಪ್ರಸಾರ, ಸಿರಿ ಸಂದಿಯು ಬಳಕೆಯಾಗುವ ಬೇರೆ ಬೇರೆ ಸಂದರ್ಭಗಳು, ಸಿರಿ ಸಂದಿಯ ಲಿಪ್ಯಂತರ, ಪಠ್ಯೀಕರಣ ಮತ್ತು ಅನುವಾದ ಕಾರ್ಯವಿಧಾನ – ಹೀಗೆ ಸಿರಿ ಮಹಾಕಾವ್ಯ, ಗಾಯಕ ಮತ್ತು ಗಾಯನ ಪರಂಪರೆಯ ಕುರಿತ ರೋಚಕ ಮಾಹಿತಿಗಳು ಈ ಭಾಗದಲ್ಲಿವೆ. ಅನುಭವ ಕಥನ ಮತ್ತು ಸಂಶೋಧನೆಯ ಶಿಸ್ತು ಇಲ್ಲಿ ಒಟ್ಟಾಗಿದೆ.

ಕೊನೆಯ ಭಾಗದಲ್ಲಿ ಸಿರಿ ಸಂಧಿಯ ಕತೆಯನ್ನು ಅಜ್ಜೆರು, ಸಿರಿ , ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಸಂವಾದ, ಸಿರಿ ಸೊನ್ನೆ ಗಿಂಡೆ. ಅಬ್ಬಯ – ದಾಯರ ಮತ್ತು ಕುಮಾರ- ಹೀಗೆ ಉಪಸಂದಿಗಳಾಗಿ ವರ್ಗೀಕರಿಸಿ ಇಡಿ ಸಿರಿ ಸಂದಿಯ ಕಥಾಸಾರಾಂಶವನ್ನು ಕೊಡಲಾಗಿದೆ.

ಕ್ಷೇತ್ರ ಕಾರ್ಯ ನಡೆಸಿದ ಸ್ಥಳ, ಸಹಕಾರ, ಮಾರ್ಗದರ್ಶನ ನೀಡಿದ ಡಿ. ವೀರೇಂದ್ರ ಹಗ್ಗಡೆಯವರೊಂದಿಗೆ ಸಂವಾದ, ಸಿರಿ ಸಂದಿಯ ದಾಖಲಾತಿ ಸನ್ನಿವೇಶ, ನಿಡ್ಗಲ್ ಸಿರಿ ಜಾತ್ರೆ, ಮಾಚಾರಿನ ಸಿರಿ ದಲಿಯೊ, ಸಿರಿ ಸಂದಿಯನ್ನು ಹಾಡಲಾಗುವ ಬೇರೆಬೇರೆ ಸಂದರ್ಭಗಳು, ಕುಮಾರನಗಿ ಕೆಲಸ ಮಾಡುವ ಗೋಪಾಲ ನಾಕೈಕ ಅವರ ಆವೇಶದ ಕ್ಷಣಗಳು – ಇವುಗಳನ್ನು ಸೆರೆ ಹಿಡಿದ ವರ್ಣಛಾಯಾಚಿತ್ರಗಳು ಗಮನ ಸೆಳೆಯುವಂತಿವೆ. ಮೌಖಿಕ ಮಹಾಕಾವ್ಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಮರ್ಪಕ ಮತ್ತು ಸಮಗ್ರವಾದ ಗ್ರಂಥ ಋಣ ಕೊನೆಯಲ್ಲಿದೆ.

The Siri Epic as Performance by Gopal Naika (Part I) – ಈ ಸಂಪುಟದಲ್ಲಿ ೪೯೧ ಪುಟಗಳಿವೆ. ಈ ಸಂಪುಟದ ಪ್ರಸ್ತಾವನೆಯ ಭಾಗದಲ್ಲಿ ಸಿರಿ ಸಂದಿ, ಗಾಯಕ ಗೋಪಾಲ ನ್ಯಾಕ, ಫಿನ್ನಿಶ್ – ಇಂಡಿಯಾ ಜಾನಪದ ಕ್ಷೇತ್ರಕಾರ್ಯ ಮತ್ತು ದಾಖಲಾತಿ ತರಬೇತಿ ಶಿಬಿರದ ಹಿನ್ನೆಲೆ, ಮೌಖಿಕ ಮಹಾಕಾವ್ಯಗಳ ಸಂಗ್ರಹ ಮತ್ತು ಪ್ರಕಟನಾ ಯೋಜನೆ, ತುಳು ಭಾಷೆ ಮತ್ತು ಭಿನ್ನ ಪಠ್ಯಗಳು, ಸಿರಿ ಸಂದಿಯ ದಾಖಲಾತಿ, ಪಠ್ಯೀಕರಣ ಮತ್ತು ಪ್ರಕಟಣ ಪ್ರಕ್ರಿಯೆ, ತುಳು ಸಿರಿ ಸಂದಿಯ ಇಂಗ್ಲಿಷ್ ಅನುವಾದದ ವಿಧಾನ – ಮೊದಲಾದ ವಿಷಯಗಳ ಕುರಿತಂತೆ ಮಾಹಿತಿಗಳಿವೆ. Textualizing the Siri Epic ಸಂಪುಟದ ಪ್ರಸ್ತಾವನೆಯ ಭಾಗದಲ್ಲಿರುವ ಮಾಹಿತಿಗಳ ಸಂಕ್ಷಿಪ್ತ ರೂಪವು ಇದಾಗಿದೆ.

ಸಿರಿ ಸಂದಿಯ ಪ್ರಾರ್ಥನಾ ರೂಪದ ‘ಗದ್ದಿಗೆ ಏರುನೆ’ (೨೫೬ಸಾಲುಗಳು), ‘ಓಲಿ ಓಲೆಗೋ ಕೊರ್ಪನೆ’ (೨೫೭ ರಿಂದ ೪೭೦) ಮತ್ತು ‘ಉಲ್ಲಾಕುಳೆ ಶರಣ’ (೪೭೧ರಿಂದ ೫೬೩) – ಹಾಡಿನ ಈ ಸಾಲುಗಳು Part I ಆರಂಭದಲ್ಲಿವೆ. ಗೋಪಾಲ ನ್ಯಾಕ ಹಾಡಿರುವ ಸಿರಿ ಸಂದಿಯಲ್ಲಿ ಒಟ್ಟು ೧೫, ೬೮೩ ಸಾಲುಗಳಿದ್ದು, ೯, ೦೨೮ ಸಾಲುಗೆ Part I ರಲ್ಲಿವೆ. ಸಿರಿ ಸಂದಿಯಲ್ಲಿ ಅಜ್ಜೆರು ಸಂದಿ, ಸಿರಿ ಸಂದಿ, ಸೊನ್ನೆ – ಗಿಂಡ್ಯೆ ಸಂದಿ, ಅಬ್ಬಯ – ದಾರಯ ಸಂದಿ ಮತ್ತು ಕುಮಾರ ಸಂದಿ ಎಂಬ ಒಳವಿಭಾಗಗಳಿವೆ. Part I ರಲ್ಲಿ ಅಜ್ಜೆರು ಮತ್ತು ಸಿರಿ ಸಂದಿಗೆ ಸಂಬಂಧಪಟ್ಟ ಕಥಾನಕನ ಸಾಲುಗಳಿವೆ. ಬೇರೆ ಬೇರೆ ಕಥಾನಕನಗಳ ಮುಖ್ಯ ಘಟನೆ, ಪಾತ್ರ ಮತ್ತು ಸನ್ನಿವೇಷಗಳನ್ನು ಆಧರಿಸಿ ಇಡಿಯ ಸಂದಿಯ ಹಾಡಿನ ಸಾಲುಗಳನ್ನು ವಿಭಜಿಸಿ ಕೊಡಲಾಗಿದೆ.

೧೫, ೬೮೧ ಸಾಲುಗಳ ಸಿರಿ ಪಾಡ್ದನ ಮೂಲ ಪಠ್ಯವನ್ನು ಈ ಕೃತಿಯಲ್ಲಿ ಅಂತರರಾಷ್ಟ್ರೀಯ ಧ್ವನಿ ಲಿಪಿಯಲ್ಲಿ ನೀಡಲಾಗಿದೆ. ತುಳು ಪಠ್ಯದ ಇಂಗ್ಲಿಷ್ ಅನುವಾದವನ್ನು ಮೂಲ ಪಠ್ಯದ ಸಾಲು, ಧಾಟಿ ಮತ್ತು ಆಶಯಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಕೊಡಲಾಗಿದೆ. ತುಳು ಭಾಷೆ ಮತ್ತು ಸಂಸ್ಕೃತಿಯ ಜೊತೆಗೆ ಒಂದು ಅಗತ್ಯದ ಅಂತರವನ್ನು ಇಟ್ಟುಕೊಂಡು ಸಿರಿ ಸಂಧಿ ಮತ್ತು ಆರಾಧನಾ ಜಗತ್ತಿನ ಅಧ್ಯಯನವನ್ನು ಹಾಂಕೋ ನಡೆಸಿದ್ದಾರೆ. “ಸುಮಾರು ೨೦೦೦ ಪುಟಗಳ ವ್ಯಾಪ್ತಿಯ ತುಳು ಪಾಡ್ದನದ ಮೂಲ ಪಠ್ಯ, ಇಂಗ್ಲಿಷ್ ಅನುವಾದ ಹಾಗೂ ಅದರ ಅಧ್ಯಯನಗಳಲ್ಲಿ ಈ ರೀತಿಯ ಮಹಾನ್ ಪ್ರಕಟಣೆ ಜಗತ್ತಿನ ಜಾನಪದದಲ್ಲಿ ಎಲ್ಲೂ ಈವರೆಗೆ ಕಾಣಿಸಿಕೊಂಡಿಲ್ಲ”ಎಂದು ವಿವೇಕ ರೈ ಹೇಳಿರುವ ಮಾತನ್ನು ಗಮನಿಸಬಹುದು.

ಈ ಮೇಲಿನ ವಿವರಗಳನ್ನು ಆಧರಿಸಿ ಈ ಭಾಗದ ಜಾನಪದ ಅಧ್ಯಯನ ಒಲವುಗಳನ್ನು ಈ ಕೆಳಗಿನಂತೆ ಸಂಗ್ರಹಿಸಬಹುದು.

೧. ಜಾನಪದ ಅಧ್ಯಯನವು ಜನಪದ ಸಾಹಿತ್ಯಕ್ಕಷ್ಟೇ ಸೀಮಿತವಾಗಿದೆ; ಅದರ ಪರಿಧಿಯ ವಿಸ್ತಾರಗೊಳ್ಳುತ್ತಿದೆ.

೨. ನಿರ್ದಿಷ್ಠ ಜನಾಂಗಗಳನ್ನು ಆಯ್ದುಕೊಂಡು ಈ ಜನಾಂಗಗಳ ಜಾನಪದ ಸಾಮಾಗ್ರಿಗಳನ್ನು ಸಮಗ್ರವಾಗಿ ಸಂಗ್ರಹಿಸಿ , ಈ ಮಾಹಿತಿಗಳ ಮೂಲಕ ಜನಾಂಗಗಳ ಸಾಂಸ್ಕೃತಿಕ ಅನನ್ಯತೆಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ

೩. ಮಾಹಿತಿಗಳನ್ನು ವರ್ಣಿಸುವ ಮನೋಧರ್ಮವು ಕಡಿಮೆಯಾಗಿ ಅವುಗಳು ನಿರ್ದಿಷ್ಟ ಪರಿಸರ ಮತ್ತು ಜನಾಂಗಗಳಲ್ಲಿ ನಿರ್ವಹಿಸುತ್ತಿರುವ ಕಾರ್ಯಗಳ ಕುರಿತಂತೆ ಗಮನಹರಿಸಲಾಗುತ್ತದೆ.

೪. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಜನಂಗಗಳೂ ತಮ್ಮದೇ ಆದ ಜಾನಪದವನ್ನು ಹೊಂದಿವೆಯಾದರೂ ಕೆಳವರ್ಗ ಎಂದು ಪರಿಗಣಿಸಲಾಗಿರುವ ದಲಿತ ಹಾಗೂ ಶೂದ್ರ ಜನಾಂಗಗಳ ಜಾನಪದ ಮಾಹಿತಿಗಳು ಹೆಚ್ಚು ಅಧ್ಯಯನಕ್ಕೆ ಒಳಗಾಗುತ್ತಿವೆ.

೫. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಾಂಸ್ಕೃತಿಕ ಅನನ್ಯತೆಗಳನ್ನು ಶೋಧಿಸುವತ್ತ ಹೆಚ್ಚು ಗಮನವನ್ನು ಹರಿಸಲಾಗುತ್ತಿದೆ. ಬಹುಮುಖೀ ಪರಂಪರೆಗಳ ಈ ದೇಶದಲ್ಲಿ ಅವಗಣನೆಗೆ ಒಳಗಾಗಿರುವ ಪರಂಪರೆಗಳು ತಮ್ಮ ಸೃಜನಶೀಲತೆಯನ್ನು ಮತ್ತು ಪರಿಪೂರ್ಣ ಸ್ವಾಯತ್ತತೆಯನ್ನು ಗುರುತಿಸಿಕೊಳ್ಳಲು ತೊಡಗಿವೆ. ಇಂತಹ ಪ್ರಕ್ರಿಯೆಯ ಪ್ರಭಾವಕ್ಕೆ ಜಾನಪದ ಅಧ್ಯಯನವು ಒಳಗಾಗಿದೆ.

೬. ಕ್ಷೇತ್ರ ಕಾರ್ಯದ ವಿಧಾನದಲ್ಲಿಯೂ ಬಹಳ ಬದಲಾವಣೆಗಳು ಬಂದಿವೆ. ವ್ಯಕ್ತಿ ಮಟ್ಟದ ಕ್ಷೇತ್ರ ಕಾರ್ಯದ ಜೊತೆಗೆ ತಂಡ ರೂಪದ ಕ್ಷೇತ್ರಕಾರ್ಯಗಳು ನಡೆಯುತ್ತಿವೆ. ಭಾಷಿಕ ದಾಖಲಾತಿಯ ಜೊತೆಗೆ ದೃಶ್ಯ ಮತ್ತು ಸ್ರವ್ಯಗಳ ಬಹುಮುಖೀ ದಾಖಲಾತಿಯು ನಡೆಯುತ್ತಿದೆ. ಉತ್ತಮ, ಸಾಂದ್ರ ಮತ್ತು ದಟ್ಟವಾದ ದಾಖಲಾತಿಯ ಕೆಲವು ಪ್ರಯೋಗಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿವೆ.

೭. ದಕ್ಷಿಣ ಕನ್ನಡದಲ್ಲಿ ಜಾನಪದ ಅಧ್ಯಯನವು ವೈಜ್ಞಾನಿಕವಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ವ್ಯವಸ್ಥಿತವಾದ ದಾಖಲಾತಿ ಕೇಂದ್ರಗಳು ರೂಪುಗೊಳ್ಳುತ್ತಿವೆ.

ದಕ್ಷಿಣ ಕನ್ನಡ ಜಾನಪದ ಸಂಗ್ರಹ ಮತ್ತು ಅಧ್ಯಯನದ ಕೆಲಸಗಳು ಖಂಡಿತ ನಿರಾಶಾದಾಯಕವಲ್ಲ. ಇಲ್ಲಿಯ ಜಾನಪದ ಅಧ್ಯಯನವು ಸಾಗಿಬಂದಿರುವ ಇತಿಹಾಸವನ್ನು ಗಮನಿಸಿದರೆ ಈ ಅಂಸ ಸ್ಪಷ್ಟವಾಗಿತ್ತದೆ. ಹೆಮ್ಮೆ ಮತ್ತು ಅಭಿಮಾನ ಪಡುವ ರೀತಿಯಲ್ಲಿ ಸಂಗ್ರಹ ಕಾರ್ಯಗಳು ನಡೆದಿವೆ. ನಡೆಯುತ್ತಿವೆ. ಕೆಲಸವನ್ನು ಇನ್ನಷ್ಟು ಗಂಭೀರವಾಗಿ, ಆಳವಾಗಿ ಸೂಕ್ಷ್ಮವಾಗಿ ನಡೆಸುವ ಅಗತ್ಯ ಮತ್ತು ಸಾಧ್ಯ ಇದೆಯೆಬ ಗ್ರಹಿಕೆಯಿಂದ, ಇಲ್ಲಿಯ ಜಾನಪದ ಅಧ್ಯಯನದ ಹೊಸ ಸಾಧ್ಯತೆಗಳು ಮತ್ತು ನೂತನ ಆಯಾಮಗಳ ಕುರಿತಂತೆ ಕೆಲವು ವಿಚಾರಗಳನ್ನು ಪ್ರಸ್ತುತ ಮಂಡಿಸುತ್ತಿದ್ದೇನೆ.

೧. ಜಾನಪದವು ಒಂದು ಸ್ವಾಯತ್ತ ಶಿಸ್ತು ಮತ್ತು ಅದು ನಿರ್ದಿಷ್ಟ ವ್ಯಾಪ್ತಿ, ಧೋರಣೆ ಮತ್ತು ತತ್ವಗಳಿಗನುಸಾರವಾಗಿ ಇರುವ ಒಂದು ಶಾಸ್ತ್ರ ಎಂಬ ಪರಿಕಲ್ಪನೆಗೆ ಅನುಗುಣವಾಗಿ ನಮ್ಮ ಜಾನಪದ ಕ್ಷೇತ್ರ ಕಾರ್ಯಕರ್ತರು ಕ್ಷೇತ್ರ ಕಾರ್ಯವನ್ನು ನಡೆಸಬೇಕಾಗಿದೆ. ಮಾಹಿತಿ ಶರೀರದ ವಿಶ್ಲೇಷಣೆಗೆ ಅನುಸರಿಸುವ ತತ್ವ ಮತ್ತು ವಿಧಾನ, ಕ್ಷೇತ್ರ ಕಾರ್ಯದ ವಿಧಾನ ಇವುಗಳ ನಡುವೆ ತಾತ್ವಿಕ ಸಂಬಂಧವಿದೆ. ಹಾಗಾಗಿ ಮಾನವಶಾಸ್ತ್ರಜ್ಞರು ಮತ್ತು ಸಮಾಜ ಶಾಸ್ತ್ರಜ್ಞರು ನಡೆಸುವ ಕ್ಷೇತ್ರ ಕಾರ್ಯದ ವಿಧಾನಕ್ಕಿಂತ ಜಾನಪದ ಕ್ಷೇತ್ರ ಕಾರ್ಯದ ವಿಧಾನವು ಭಿನ್ನ ಎಂಬ ತಿಳುವಳಿಕೆಯನ್ನು ಅಗತ್ಯವಾಗಿ ಇಟ್ಟುಕೊಳ್ಳಬೇಕಾಗಿದೆ. ಜಾನಪದ ಕ್ಷೇತ್ರ ಕಾರ್ಯದಲ್ಲಿ ಮಾಹಿತಿಗಳನ್ನು ಸಂಗ್ರಹಿಸಲು ನಡೆಸುವ ಸಂದರ್ಶನಗಳ ವಿಧಾನ ಮತ್ತು ಅವುಗಳ ದಾಖಲಾತಿಯ ಕ್ರಮಕ್ಕೂ ಬೇರೆ ಶಾಸ್ತ್ರಗಳಲ್ಲಿ ಇರುವ ಕ್ರಮಕ್ಕೂ ವ್ಯತ್ಯಾಸಗಳಿವೆ. ಕಬಿತ, ಕತೆ, ಗಾದೆ, ಒಗಟು, ಮನೆಗಳ ರಚನೆ, ಆರಾಧನೆಗಳು, ಕ್ರೀಡೆಗಳು, ಕುಣಿತಗಳು ಇವುಗಳ ಪಠ್ಯ, ಸಾಂದರ್ಭಿಕ ವಿವರಗಳ ಮೂಲಕ ನಿರ್ದಿಷ್ಟ ಜನಾಂಗವೊಂದರ ಗ್ರಹಿಕೆ ಮತ್ತು ತಿಳುವಳಿಕೆಗಳನ್ನು ಶೋಧಿಸುವುದು ಜಾನಪದದ ಬಹಳ ಮುಖ್ಯ ಉದ್ದೇಶವೆಂಬುದನ್ನು ನೆನಪಿಟ್ಟುಕೊಳ್ಳುಬೇಕು. ಈ ಮಾಹಿತಿಗಳನ್ನು ಪರಂಪರೆಗಳು ಕಾಯ್ದುಕೊಂಡು ಬರುವುದು ಅಲಂಕಾರಕ್ಕಾಗಿ ಅಲ್ಲ, ಇವುಗಳ ಮೂಲಕ ಪರಂಪರೆಗಳು ಸಂವಹನವನ್ನು ನಡೆಸುತ್ತಲೇ ಬಂದಿರುವುದರಿಂದ ಅವುಗಳ ಕಾರ್ಯದ ಕುರಿತಂತೆ ಅಧ್ಯಯನದಲ್ಲಿ ಗಮನಹರಿಸಬೇಕಾಗಿದೆ. ಸಂಸ್ಕೃತಿ ಮತ್ತು ಉಪಸಂಸ್ಕೃತಿಗಳ ಸಂಬಂಧ ಹಾಗೂ ಅನನ್ಯತೆಯನ್ನು ಗುರುತಿಸಲು ಸಹಾಯಕವಾಗುವ ಕ್ಷೇತ್ರ ಕಾರ್ಯದ ವಿಧಾನವನ್ನು ನಾವು ರೂಪಿಸಿಕೊಳ್ಳಬೇಕಾಗಿದೆ. ಕ್ಷೇತ್ರ ಕಾರ್ಯದ ಉಪಕರಣಗಳಿಗಿಂತ ಕ್ಷೇತ್ರ ಕಾರ್ಯಕರ್ತನ ಮನೋಧರ್ಮ ಇಂತಹ ಕಡೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

೨. ಕ್ಷೇತ್ರಕಾರ್ಯ ಮತ್ತು ಯಂತ್ರೋಪಕರಣಗಳು, ಈ ಉಪಕರಣಗಳ ಬಳಕೆಯಿಂದ ಸಾಧ್ಯವಾಗುವ ಬಹುಮುಖೀ ದಾಖಲಾತಿ, ಈ ದಾಖಲಾತಿಯು ಬಯಸುವ ತಂಡದ ರಚನೆ ಮತ್ತು ಹೊಂದಾಣಿಕೆ ಇವುಗಳ ಕುರಿತಂತೆಯೂ ನಮಗೆ ಹೊಸ ತಿಳುವಳಿಕೆ ಬರಬೇಕಾಗಿದೆ. ಆಡಿಯೋ-ವಿಡಿಯೋಗಳಿಲ್ಲದೆಯೂ ಮಾನವ ಸಂಪನ್ಮೂಲದ ಬಳಕೆಯಿಂದ, ಪೆನ್ನು ಮತ್ತು ಟಿಪ್ಪಣಿ ಪುಸ್ತಕಗಳ ಉಪಯೋಗದಿಂದ ಒಳ್ಳೆಯ ಕ್ಷೇತ್ರಕಾರ್ಯವನ್ನು ನಡೆಸಲು ಸಾಧ್ಯ ಎಂಬ ಧೈರ್ಯವನ್ನು ನಮ್ಮ ಸಂದರ್ಭದಲ್ಲಿ ನಾವು ಉಳಿಸಿಕೊಳ್ಳುವ ಅಗತ್ಯವಿದೆ. ಜಾನಪದ ಅಧ್ಯಯನದಲ್ಲಿ ಕ್ಷೇತ್ರಕಾರ್ಯದ ಮಾಹಿತಿಗಳ ಜೊತೆಗೆ ಅರ್ಕೈವ್ (ಪಳೆಯುಳಿಕೆ ಸಂಗ್ರಹ)ಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ಬಳಸಿಕೊಳ್ಳುವ ಹೊಸ ಒಲವು ನಮ್ಮಲ್ಲಿ ಮೂಡಬೇಕಾಗಿದೆ.

೩. ಸಂಗ್ರಹಿಸದ ಮಾಹಿತಿ ಶರೀರವನ್ನು ಜಾನಪದ ಅಧ್ಯಯನದ ಕನಿಷ್ಠ ಎರಡು ಸಿದ್ಧಾಂತಗಳನ್ನು ಅನ್ವಯಿಸಿ ವಿಶ್ಲೇಷಿಸುವ ಸಾಧ್ಯತೆಯನ್ನು ಸಂಶೋಧನೆಯಲ್ಲಿ ನಾವು ಕಂಡುಕೊಳ್ಳಬೇಕಾಗಿದೆ. ಕಬಿತ, ಕತೆ, ಗಾದೆ, ಬಗಟುಗಳನ್ನು ರಾಚನಿಕ ಸಿದ್ಧಾಂತ ಮತ್ತು ಸಂದರ್ಭ ಸಿದ್ಧಾಂತಗಳ ಮೂಲಕ ಚರ್ಚಿಸಬಹುದು. ಜನಪದ ಆಟಗಳನ್ನು ಪ್ರದರ್ಶನ ಸಿದ್ಧಾಂತ ಮತ್ತು ಮನೋವೈಜ್ಞಾನಿಕ ಸಿದ್ಧಾಂತಗಳ ರೀತ್ಯಾ ವಿಶ್ಲೇಷಿಸಬಹುದು. ಸಿದ್ಧಾಂತಗಳಿರುವುದು ಮಾಹಿತಿ ಶರೀರವನ್ನು ಅರ್ಥ ಮಾಡಿಕೊಳ್ಳುವ ಉದ್ದೇಶಕ್ಕಾಗಿಯೇ ಹೊರತು, ಮಾಹಿತಿ ಶರೀರದ ಕೆಲವು ಭಾಗಗಳನ್ನು ಕತ್ತರಿಸಿ ಹಾಕುವುದಕ್ಕಲ್ಲ. ಮಾಹಿತಿ ಶರೀರವನ್ನು ಪೂರ್ವ ನಿಯೋಜಿತ ಸಿದ್ಧಾಂತಕ್ಕೆ ಒಗ್ಗಿಸಿಕೊಳ್ಳಲು ಹೆಣಗುವುದರ ಬದಲು, ಮಾಹಿತಿ ಶರೀರವು ಸಿದ್ಧಾಂತವು ಮಿತಿಯನ್ನೋ, ದೋಷವನ್ನೋ ಸೂಚಿಸುವಂತಿದ್ದರೆ ಅದು ನಿರ್ದಿಷ್ಟ ಸಂಸ್ಕೃತಿಬದ್ಧ ಮಾಹಿತಿ ಶರೀರವು ವೈಶಿಷ್ಟವೆಂಬುದಾಗಿ ತಿಳಿಯುವ ಮುಕ್ತ ಮನಸ್ಸನ್ನು ಸಹಜವಾಗಿ ನಾವು ಇಟ್ಟುಕೊಳ್ಳಬೇಕು.

೪. ಮಾಹಿತಿ ಶರೀರವನ್ನು ವಿಶ್ಲೇಷಿಸುವಾಗು ಅದರ ಅಧಿಕೃತ ಒಡೆಯರಾಗಿರುವ ಜನಪದರ ನಿಲುವು ಮತ್ತು ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಕ್ಷೇತ್ರ ಕಾರ್ಯ ಮತ್ತು ಸಂಶೋಧನೆಯ ಮೂಲಕ ಕಂಡುಕೊಳ್ಳುವ ತೆಗೆದುಕೊಳ್ಳುವು ಸತ್ಯಗಳನ್ನು ಮಾಹಿತಿದಾರರ ಅವಗಾಹನೆಗೆ ತರುವ ಪ್ರಯತ್ನವನ್ನು ಮಾಡಬೇಕು. ಸಂಶೋಧನಾ ಪ್ರಕ್ರಿಯೆಯಲ್ಲಿ ಸಂಶೋಧಕ ಮತ್ತು ಮಾಹಿತಿಗಾರರು ಸಮಾನ ಭಾಗಗಳೆಂಬ ನಿಜವನ್ನು ನಾವು ಅರಿತಿರಬೇಕು. ಕನ್ನಡ ಮತ್ತು ತುಳು ಜಾನಪದ ಸಂಶೋಧನೆಯನ್ನು ಮತ್ತೆ ಈ ನಿಟ್ಟಿನಲ್ಲಿ ಪರಿಷ್ಕರಿಸುವ ಪುನರ್ ವಿವೇಚಿಸುವ ಹೊಸ ಸಾಧ್ಯತೆ ಇದೆ. ೫. ಜಾನಪದವನ್ನು ವರ್ಗೀಕರಣಕ್ಕೆ ಅಳವಡಿಸಿ ಸಂಶೋಧನೆಯನ್ನು ನಡೆಸುವುದರಿಂದ ಅಂತಹ ಸಂಶೋಧನೆಗೆ ತಾನಾಗಿಯೇ ಮಿತಿಗಳು ಬರುತ್ತವೆ. ಕೃತಕ ವರ್ಗಿಕರಣವು ತರುವ ಮಿತಿಯನ್ನು ಸಂಶೋಧನೆಯು ಮೀರಬೇಕು. ಗಾದೆಗಳನ್ನು, ಒಗಟುಗಳನ್ನು, ಕತೆಗಳನ್ನು, ಕವಿತೆಗಳನ್ನು ಪಾಡ್ದನಗಳನ್ನು ವರ್ಗಿಕರಸಿ ಬಿಡಿ ಬಿಡಿಯಾಗಿ ಅದ್ಯಯನ ಮಾಡುವುದು ಒಂದು ರೀತಿ ವಾಸ್ತವಿಕವಾಗಿ ಜನಾಂಗ – ಸಂಸ್ಕೃತಿಯೊಂದರಲ್ಲಿ ಅವುಗಳು ಹಾಗೆ ಬಿಡಿ ಬಿಡಿಯಾಗಿ ವರ್ಗೀಕರಣಗೊಂಡಿರುವುದಿಲ್ಲ. ಅವುಗಳೊಳಗೆ ಅಂತರ್ ಸಂಬಂಧವಿರುತ್ತದೆ. ಸಂದರ್ಭಕ್ಕೆ ಅನುಸಾರವಾಗಿ ಒಂದು ಕತೆ ಹಾಡಾಗುತ್ತದೆ, ಹಾಡು ಕತೆಯಾಗುತ್ತದೆ. ಪರಂಪರೆಯೊಂದು ಹೊಂದಿರುವ ಇಂತಹ ಬಂಡವಾಳದ ಒಟ್ಟು ಮೊತ್ತ ಹಾಗು ಸ್ವಯಂಚಾಲಿತ ಭಾಗದ ಚಲನಶೀಲತೆಯನ್ನು ಗುರುತಿಸಬೇಕಾಗುತ್ತದೆ. ಕತೆಮತ್ತು ಹಾಡುಗಳ ರೂಪ ಮುಖ್ಯವಾಗುತ್ತದೆ. ವರ್ಗೀಕರಣವನ್ನು ಒಪ್ಪಿ ನಡೆಯುವ ಸಂಶೋಧನೆಯ ಮಿತಿಯನ್ನು ನಾವು ಮೀರಿದರೆ ಅಧ್ಯಯನದ ಹೊಸ ಸಾಧ್ಯತೆಗಳು ಗೋಚರವಾಗುತ್ತವೆ.

೫. ಜಾನಪದ ಅಧ್ಯಯನದಲ್ಲಿ ವ್ಯಕ್ತಿ ಕೇಂದ್ರಿತ ಹಾಗೂ ಸಮೂಹ ಕೇಂದ್ರಿತ ಅಧ್ಯಯನವು ಮತ್ತೊಂದು ಬಗೆಯಾಗಿದೆ. ಇಂತಹ ಅಧ್ಯಯನ ವಿಧಾನದಲ್ಲಿ ಒಬ್ಬ ನಿರ್ದಿಷ್ಟ ಮಾಹಿತಿದಾರನಲ್ಲಿರುವ ಮಾಹಿತಿಗಳನ್ನು ಸಮಗ್ರವಾಗಿ ಸಂಗ್ರಹಿಸಲಾಗುತ್ತದೆ. ಅವರಿಗೆ ತಿಳಿದಿರುವ ಕಾವ್ಯಗಳು, ಪುರಾಣಗಳು, ಐಹಿತ್ಯಗಳು, ಕತೆಗಳು, ವೈದ್ಯಕೀಯ ಜ್ಞನ, ಕೃಷಿ ಸಂಬಂಧೀ ತಿಳುವಳಿಕೆ, ಸಸ್ಯವಗ್ ಮತ್ತು ಪ್ರಾಣಿವರ್ಗದ ಪರಿಜ್ಞಾನ. ಹೀಗೆ ಎಲ್ಲವನ್ನೂ ಸಂಗ್ರಹಿಸಬೇಕು. ಅಗತ್ಯವಿದ್ದರೆ ಅವುಗಳ ಅಚರಣಾತ್ಮಕ ಸಾಂದರ್ಭಿಕ ವಿವರಗಳನ್ನು ದಾಖಲಿಸಬೇಕು. ಸಾವಿರಾರು ಗೆರೆಗಳುಳ್ಳ ಒಂದು ಕಾವ್ಯವು ಹೇಗೆ ರೂಪುಗೊಳ್ಳುತ್ತದೆ. ಕಾವ್ಯ ರಚನೆಯ ತಂತ್ರಗಳು ಸೂತ್ರಗಳು ಯಾವುವು, ಅವುಗಳು ಹೇಗೆ ಮತ್ತು ಯಾಕೆ ಬದಲಾಗುತ್ತವೆ. ಅಧಿಕೃತ ಪಠ್ಯ ಎಂದರೆ ಯಾವುದು, ಅಂತಹದ್ದೊಂದು ಇದೆಯೇ, ಮಾನಸಿಕ ಪಠ್ಯದ ಸ್ವರೂಪ ಏನು, ಅವುಗಳ ಬದಲಾವಣೆಯ ಕಾರಣ ಮತ್ತು ಅವುಗಳು ಹೊಂದಿರುವ ಸಾಮಾಜಿಕ ಪ್ರಸ್ತುತತೆ ಎನು. ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಈ ಬಗೆಯ ಅಧ್ಯಯನದಿಂದ ಸಾಧ್ಯವಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಆ ಬಗೆಯ ಅಧ್ಯಯನಕ್ಕೆ ವಿಪುಲ ಅವಕಾಶಗಳಿವೆ. ನಮ್ಮ ಸುತ್ತಮುತ್ತ ಇರುವ ಅಜ್ಜಿಕತೆ ಹೇಳುವವರನ್ನು ಪಾಡ್ದನ ಹಾಡುವವರನ್ನು, ಭೂತದ ಪಾತ್ರಿ, ಮಾನಿಗಳನ್ನು ಜನಪದ ವೈದ್ಯರನ್ನು ನೋಡಿದರೆ ಮಾಹಿತಿದಾರ – ಕೇಂದ್ರಿತ ಅಧ್ಯಯನಕ್ಕೆ ಇರುವ ಅವಕಾಶ ಸ್ಪಷ್ಟವಾಗುತ್ತದೆ.

೬. ಈಗಾಗಲೇ ಹೇಳಿರುವಂತೆ ನಮ್ಮದು ಬಹುಭಾಷೆ, ಬಹುಜಾತಿ, ಬಹುಪರಂಪರೆಗಳ ಪ್ರದೇಶವಾಗಿದೆ. ಹಾಗಾಗಿ ಇಲ್ಲಿ ತೌಲನಿಕ ಅಧ್ಯಯನ ವಿಧಾನ ಹೆಚ್ಚು ಉಪಯುಕ್ತವಾಗುತ್ತದೆ. ಒಂದು ಗ್ರಾಮ ಅಥವಾ ಒಂದು ಮಾಗಣೆ ಅಥವಾ ಒಂದು ಸೀಮೆಯನ್ನು ಕ್ಷೇತ್ರಕಾರ್ಯದ ಘಟಕವನ್ನಾಗಿಟ್ಟು ಕೊಂಡು ಅಲ್ಲಿ ದೊರೆಯುವ ಎಲ್ಲ ಜನಪದರ ಎಲ್ಲಾ ಜೈವಿಕ ಸಾಮಾಗ್ರಿಗಳನ್ನು ಸಂಗ್ರಹಿಸಿ ಆ ಪ್ರದೇಶದ ಇತಿಹಾಸ ಪರಂಪರೆಗಳ ಅಂತರ್ ಸಂಬಂಧ, ಪರಂಪರೆಗಳ ವಿಶಿಷ್ಟತೆಗಳನ್ನು ಗುರುತಿಸಬಹುದು. ಒಂದು ಜನಾಂಗದ ಪರಂಪರೆಯು ಅಧಿಕೃತವಾಗಿ ಒಪ್ಪಿಕೊಳ್ಳುವ ಅಥವಾ ತನ್ನದಲ್ಲವೆಂದು ತಿರಸ್ಕರಿಸುವ ಸಂಘರ್ಷಾತ್ಮಕ ಪ್ರಕ್ರಿಯೆಗಳನ್ನು ಇಲ್ಲಿ ಶೋಧಿಸಬಹುದಾಗಿದೆ. ಆರ್ಥಿಕವಾಗಿ ಎಷ್ಟೇ ಪ್ರಗತಿ ಹೊಂದಲಿ, ದಕ್ಷಿಣ ಕನ್ನಡದ ಕೆಲವು ಜನಾಂಗಗಳು ತಮ್ಮ ಪರಂಪರೆಯ ಜೊತೆಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವ, ನಗರದಿಂದ ಹಿಂತಿರುಗಿದರೆ ತಮ್ಮ ಕುಲ ದೇವತೆಗಳಿಗೆ ಕೋಲಗಳನ್ನು ಕೊಡುವ ಧರ್ಮಭೀರು ಮನೋಧರ್ಮವನ್ನು ಅರ್ಥೈಸಲು ಇಂತಹ ಅಧ್ಯಯನದಿಂದ ನಮಗೆ ಸಾಧ್ಯವಾಗುತ್ತದೆ. ೮. ಜಾನಪದ ಎಂದರೆ ಅದು ಬರಿ ಸಂಕಲನ ಕೆಲಸವಲ್ಲ. ಒಂದು ಸಾವಿರ ಒಗಟುಗಳು ಅಥವಾ ಒಂದು ಸಾವಿರ ಗಾದೆಗಳನ್ನು ಅವುಗಳ ಭಾಷಿಕ ರೂಪದಲ್ಲಿ ಸಂಗ್ರಹಿಸಿ ಅಕಾರಾದಿಯಾಗಿ ಜೋಡಿಸಿ ಪ್ರಕಟಿಸುವುದಕ್ಕಿಂತ, ಬರೇ ನೂರು ಒಗಟು ಅಥವಾ ಗಾದೆಗಳನ್ನು ಅವುಗಳು ಬಳಕೆಯಾಗುವ ಸಂದರ್ಭ, ಅವುಗಳ ಬೇರೆ ಬೆರೆ ಪಠ್ಯಗಳು, ಪ್ರಕಟವಾಗುವ ಅರ್ಥದ ಛಾಯೆಗಳು ಇವುಗಳನ್ನು ಸಾಂದರ್ಭಿಕ ಮಾಹಿತಿಗಳೊಂದಿಗೆ ಪ್ರಕಟಿಸಿದರೆ, ಅದರ ಶೈಕ್ಷಣಿಕ ಮಹತ್ವ ಹೆಚ್ಚುತ್ತದೆ. ಮತ್ತು ಇಂತಹ ಪ್ರಯತ್ನಗಳಿಗೆ ಪ್ರಾಯೋಗಿಕ ಆಯಾಮವೂ ಇರುತ್ತದೆ. ಜಾನಪದವನ್ನು ಜೀವಂತವಾಗಿಡುವ ಮತ್ತು ಚಲನಶೀಲಗೊಳಿಸುವ ಅನ್ವಯಿಕ ಮನೋಧರ್ಮವು ನೆರವೇರಿದಂತಾಗುತ್ತದೆ.

ದೇಶೀಯ ಹಾಗೂ ವಿದೇಶಿಯ ಜಾನಪದ ಅಧ್ಯಯನದ ಒಟ್ಟು ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ ಜಾನಪದ ಅದ್ಯಯನದ ಹೊಸ ಹೊಸ ಪ್ರಯತ್ನಗಳು ಮತ್ತು ಈಚಿನ ಒಲವುಗಳನ್ನು ಪ್ರಸ್ತುತ ಚರ್ಚಿಸಿದ್ದೇವೆ. ಈವರೆಗೆ ಆಗಿರುವ ಕ್ಷೇತ್ರ ಕಾರ್ಯ ಮತ್ತು ಅಧ್ಯಯನದ ವಿಧಾನಗಳನ್ನು ಪರಿಭಾವಿಸಿಕೊಂಡು ಮುಂದೆ ಮುಂದೆ ನಡೆಯಬಹುದಾದ, ನಡೆಯಬೇಕಾದ ಹೊಸ ಪ್ರಯತ್ನಗಳ ಸಾಧ್ಯತೆಗಳನ್ನು ಕೂಡ ಹೇಳಿದ್ದೇನೆ. ದಕ್ಷಿಣ ಕನ್ನಡ ಮತ್ತು ಉಡುಪಿಗಳಲ್ಲಿ ಸಂಘಟಿತವಾಗಿ ಚಳುವಳಿಯ ರೂಪದಲ್ಲಿ ಜಾನಪದ ಕೆಲಸ ನಡೆಯುವುದನ್ನು ನೋಡಿದರೆ ನಾನು ಸೂಚಿಸಿರುವ ಸಾಧ್ಯತೆಗಳ ನಿಟ್ಟಿನಲ್ಲಿ ಪ್ರಯತ್ನ ನಡೆದು ಅತ್ಯುತ್ತಮ ಗ್ರಂಥಗಳು ಪ್ರಕಟವಾಗಬಹುದೆಂಬ ನಿರೀಕ್ಷೆಯನ್ನು ಇರಿಸಿಕೊಳ್ಳಬಹುದು.

ಆಕರಸೂಚಿ

೧. ಅಮೃತ ಸೋಮೇಶ್ವರ, ೧೯೬೨
ತುಳು ಪಾಡ್ದನ ಕಥೆಗಳು, ಸಾಹಿತ್ಯಾಂಜಲಿ ಗ್ರಂಥಮಾಲೆ, ಕೋಟೆಕಾರು

೨. ಅಮೃತ ಸೋಮೇಶ್ವರ, ೧೯೭೮
ಅವಿಲು, ಕನ್ನಡ ಸಂಘ, ವಿವೇಕನಂದ ಕಾಲೇಜು, ಪುತ್ತೂರು

೩. ಅಮೃತ ಸೋಮೇಶ್ವರ, ೧೯೮೪
ತುಳು ಬದುಕು, ಪ್ರಕೃತಿ ಪ್ರಕಾಶನ, ಕೋಟೆಕಾರು

೪. ಅಮೃತ ಸೋಮೇಶ್ವರ, ೧೯೭೮
ಬಾಮಕುಮಾರ ಸಂದಿ, ಪ್ರಕೃತಿ ಪ್ರಕಾಶನ, ಕೋಟೆಕಾರು

೫. ಅಮೃತ ಸೋಮೇಶ್ವರ, ೧೯೯೭
ತುಳು ಪಾಡ್ದನ ಸಂಪುಟ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲು, ಹಂಪಿ

೬. ಅಭಯ್ ಕುಮಾರ ಕೆ, ೧೯೯೭
ಮುರುಗೇರು ಜನಾಂಗ ಜಾನಪದ ಅದ್ಯಯನ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಮತ್ತು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

೭. ಅಶೋಕ ಆಳ್ವ ಕೆ, ೧೯೯೪
ತುಳುನಾಡಿನ ಪ್ರಾಣಿ ಜಾನಪದ (ಅಪ್ರಕಟಿತ ಪಿಎಚ್ ಡಿ ಗ್ರಂಥ)
ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ

೮. ಕೇಶವ ಭಟ್ಟ ಟಿ, ೧೯೯೮
ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಗೀತೆಗಳು ಕನ್ನಡ ಸಾಹಿತ್ಯ
ಪರಿಷತ್ತು, ಬೆಂಗಳೂರು

೯. ಗಣಪತಿ ರಾವ್ ಐಗಳ್ ಎಂ., ೧೯೨೪
ಅತ್ತಾವರ ದೈವೊಂಗುಳು, ಶಾರದಾ ಪ್ರೆಸ್, ಮಂಗಳೂರು

೧೦. ಗಣಪತಿ ರಾವ್ ಐಗಳ್ ಎಂ., ೧೯೨೮
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ಶಾರದಾ ಪ್ರೆಸ್, ಮಂಗಳೂರು

೧೧. ಗಾಯತ್ರೀ ನಾವಡ, ೧೯೯೭
ವಿರಚನೆ, ಎನ್. ಆರ್. ಎ. ಎಂ. ಪ್ರಕಾಶನ, ಕೋಟೇಶ್ವರ

೧೨. ಗಾಯತ್ರೀ ನಾವಡ, ೧೯೯೯
ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಗೋವಿಂದ ಪೈ
ಸಂಶೋಧನಾ ಕೇಂದ್ರ ಉಡುಪಿ, ಸಿರಿ ಪ್ರಕಾಶ, ಹೊಸಪೇಟೆ

೧೩. ಚಿನ್ನಪ್ಪ ಗೌಡ ಕೆ., ೧೯೮೩
ಭೂತಾರಾಧನೆ, ಕೆಲವು ಅಧ್ಯಯನಗಳು, ತುಳುವ ಪ್ರಕಾಶನ, ಮಂಗಳೂರು

೧೪. ಚಿನ್ನಪ್ಪ ಗೌಡ ಕೆ., ೧೯೮೫
ಜಾಲಾಟ, ಚಿಂತನ ವೇದಿಕೆ, ಶ್ರೀ ಡಿ. ಎಂ. ಕಾಲೇಜು, ಉಜಿರೆ

೧೫. ಚಿನ್ನಪ್ಪ ಗೌಡ ಕೆ. ೧೯೯೦
ಭೂತಾರಾಧನೆ ಜಾನಪದೀಯ ಅಧ್ಯಯನ
ಮದಿಪು ಪ್ರಕಾಶನ, ಮಂಗಳಗಂಗೋತ್ರಿ

೧೬. ನಾವಡ ಎ, ವಿ, ೧೯೮೪
ವಿವಕ್ಷೆ, ಕರ್ನಾಟಕ ಸಂಘ, ಪುತ್ತೂರು

೧೭. ನಾವಡ ಎ. ವಿ. ೧೯೯೩
ಜಾನಪದ ಸಮಾಲೋಚನೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು

೧೮. ನಾವಡ ಎ. ವಿ. (ಸಂ. ), ೧೯೯೯
ಗಿಡಿಕೆರೆ ರಾಮಕ್ಕ ಮುಗೇರ್ತಿ ಕಟ್ಟಿದ ಸಿರಿಪಾಡ್ದನ
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ವಿದ್ಯಾರಣ್ಯ

೧೯. ಪೀಟರ್ ಜೆ. ಕ್ಲಾಸ್, ಕನ್ನಡ ಅನು: ನಾವಡ ಎ. ವಿ. ಸುಭಾಶ್ಚಂದ್ರ, ೧೯೮೭
ತುಳು ದರ್ಶನ, ಪ್ರಾದೇಶಿಕ ವ್ಯಾಸಂಗ, ಕುಂದಾಪುರ

೨೦. ಪುರುಷೋತ್ತಮ ಬಿಳಿಮಲೆ ಮತ್ತು ಇತರರು (ಸಂ. ), ೧೯೯೪
ಸಿರಿ, ಅಮೃತ ಸೋಮೇಶ್ವರ ಅಭಿನಂದನೆ ಸಂಪುಟ, ಕಲಾಗಂಗೋತ್ರಿ

೨೧. ಪುರುಷೋತ್ತಮ ಬಿಳಿಮಲೆ, ೧೯೯೭
ಕೂಡುಕಟ್ಟು, ಆನಂದಕಂದ ಪ್ರಕಾಶನ, ಮಲ್ಲಾಡಿಹಳ್ಳಿ

೨೨. ಬಾಬು ಅಮೀನ್ ಬನ್ನಂಜೆ, ಮೋಹನ್ ಕೋಟ್ಯಾನ್, ೧೯೯೯
ತುಳುನಾಡ ಗರೊಡಿಗಳು ಸಾಂಸ್ಕೃತಿಕ ಅಧ್ಯಯನ, ಶ್ರೀ ಬ್ರಹ್ಮ ಬೈದರ್ಕಳ
ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ (ರಿ. ) ಉಡುಪಿ

೨೩. ಬಾಬು ಅಮೀನ್ ಬನ್ನಂಜೆ, ಮೋಹನ್ ಕೋಟ್ಯಾನ್, ೨೦೦೧
ಕೋಟಿ ಚೆನ್ನಯ ಪಾಡ್ದನ ಸಂಪುಟ
ಕನ್ನಡ ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು

೨೪. ಮಾನ್ಯರ್ ಎ., ೧೮೮೬
ಪಾಡ್ದನೊಳು, ಬಾಸೆನ್ ಮಿಶನ್ ಪ್ರೆಸ್, ಮಂಗಳೂರು

೨೫. ರಸಿಕ ಪುತ್ತಿಗೆ, ೧೯೬೭
ಕಣಂದೂರು ಧರ್ಮ ಅರಸು ಶ್ರೀ ತೋಡಕುಕ್ಕಿನಾರ್ ದೈವಸ್ಥಾನ ಪರಿಚಯ
ಕಣಂದೂರು

೨೬. ಲಕ್ಷ್ಮೀನಾರಾಯಣ ಆಳ್ವ ಏರ್ಯ (ಸಂ. ), ಸ ೧೯೮೭
ಮಂಗಳ ತಿಮರು, ಅಮಟಾಡಿ ಮಂಗಳ ತಿಮರು ಶ್ರೀ ಅಣ್ಣಪ್ಪ ಸ್ವಾಮಿ
ದೈವಸ್ಥಾನ ಇದರ ನವೀಕರಣ ಮತ್ತು ಬ್ರಹ್ಮಕಲಶದ ನೆನಪಿನ ಸಂಚಿಕೆ.

೨೭. ವಾದಿರಾಜ ಭಟ್ಟ ಕನರಾಡಿ, ೧೯೭೪
ಪಾಡ್ದನಗಳು (ಅಧ್ಯಯನಾತ್ಮಕ ಸಂಗ್ರಹ)
ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳಿ

೨೮. ವಾಮನ ನಂದಾವರ, ೨೦೦೧
ಕೋಟಿ ಚೆನ್ನಯ ಒಂದು ಜಾನಪದೀಯ ಅದ್ಯಯನ
ಹೇಮಾಂಶು ಪ್ರಕಾಶನ, ಮಂಗಳೂರು

೨೯. ವಿವೇಕ ರೈ. ಬಿ. ಎ., ೧೯೮೦
ತುಳು ಅಧ್ಯಯನ: ಕೆಲವು ವಿಚಾರಗಳು, ತುಳುವ ಪ್ರಕಾಶನ, ಮಂಗಳೂರು

೩೦. ವಿವೇಕ ರೈ ಬಿ. ಎ., ೧೯೮೫
ಅನ್ವಯಿಕ ಜಾನಪದ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು

೩೧. ವಿವೇಕ ರೈ ಬಿ. ಎ., ೧೯೮೫
ತುಳು ಜಾನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳುರು

೩೨. ವಿಷ್ಣು ಭಟ್ಟ ಪಾದೆಕಲ್ಲು (ಸಂ.), ೧೯೯೭
ತುಳುವರಿವರು, ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ

೩೩. ಶೀನಪ್ಪ ಹೆಗ್ಡೆ ಎನ್., ೧೯೭೩
ತುಳುವಾಲ ಬಲಿಯೇಂದ್ರೆ, ಶ್ರೀ ನಿತ್ಯಾನಂದ ಗ್ರಂಥಾಲಯ, ಮಂಗಳೂರು

೩೪. ಶೀನಪ್ಪ ಹೆಗ್ಡೆ ಎನ್. ಎ., ಕಿಲ್ಲೆ ಎನ್. ಎಸ್., ೧೯೫೪
ಪ್ರಾಚೀನ ತುಳುನಾಡು, ಶ್ರೀಮತಿ ಇಂದಿರಾ ಕಿಲ್ಲೆ, ಮಂಗಳೂರು

೩೫. ಸೇವ ನಮಿರಾಜ ಮಲ್ಲ, ೧೯೭೦
ಭೂತಾರಾಧನೆಯ ಕತೆಗಳು, ಕನ್ನಡ ಅಧ್ಯಯನ ಸಂಸ್ಥೆ,
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

೩೬. Burnell A. C., 1893-1897
The Devil Wership of the Thluvas
Ind, Antiquary, Vol, XXIII, XXIV, XXV, XXVI.

೩೭. Gururaja, Bhatp., 1975
Studies in Tuluva History & culture
South Kanara, Karnataka State, India

೩೮. Heidrun Bruckner & others, 1993
Flags of Fame: Studies in South Asian Folk Culture
Manohara publisher, New Delhi

೩೯. Heidrun Bruckner, 1995
Frusreligion and der Westkuste Studinlines, Germany,

೪೦. Padmanabha P., 1971
Special Study Report On Bhuta Cult In South Kanara District
Census of India
Mysore Series 14, Director of Census Operation, Mysore.

೪೧. Saletore Bhasker Anand, 1936
Ancient Karnataka Vol. 1: History of Tuluva
Oriental Book Agency, Poona

೪೨. Subhaschandra, 1992
Women In Paddanas – A Feministic Study of Text and performance, (UnpublishedM. Phil Dissertation) Mangalore University, Mangalagangothri.

೪೩. Upadhyaya U. P., (ed), 1996
Folk Epics of Tulunand, Regional Resources Center for Folk performing Arts (RRC), M. G. M. College, Udupi

೪೪. Updhyaya U. P., Susheela P. Upadhyaya, 1964
Bhuta Worship: Aspects of A Ritualistic Theatre R. R. C. Udupi

೪೫. Upadhyaya U. P., (ed), 1996
Coastal Karnataka (Studies In Folkloristic and Linguistic Traditions of Dakshina Kannada of the Western Coasts of India), Govinda Pai Samshodhana Kendra, M. G. M. College, Udupi, Karnataka, INDIA.