ಇಂಗ್ಲಿಷ್ ಮೂಲ : ಲೌರಿ ಹಾಂಕೊ
ಕನ್ನಡಕ್ಕೆ : ವಿ.ಜಿ. ಭಟ್

 

ತುಳು ಮೌಖಿಕ ಕಾವ್ಯಗಳನ್ನು ಪಠ್ಯೀಕರಿಸುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ (ತುಳು ಇತಿಹಾಸ ಮತ್ತು ಜನಾಂಗದ ವಿವರಣೆಗಳಿಗಾಗಿ ನೋಡಿ ಹಾಂಕೋ ೧೯೯೮ : ೨೩೪-೪೪), ಸಾಂಪ್ರದಾಯಿಕ ಪ್ರದರ್ಶನ ತಂತ್ರಗಳೂ ಸಂಶೋಧಕನು ಇದಕ್ಕೆ ಒಂದು ಕಾರಣ. ತುಳು ಕಾವ್ಯ ಸಂಸ್ಕೃತಿಯೇ ಪ್ರದರ್ಶನ ಸಂದರ್ಭಗಳಲ್ಲಿ ಅಪಾರ ವೈವಿದ್ಯವನ್ನು ಹೊಂದಿದೆಯೆಂದರೆ ಹೊರಗಿನ ವೀಕ್ಷಕನೊಬ್ಬ ತಬ್ಬಿಬ್ಬಾಗುತ್ತಾನೆ. ಮೂಲಕಥವನ್ನು ಸಂಗ್ರಹಿಸಲು ‘ಸೂಕ್ತ’ ಅಥವಾ ‘ಅತ್ಯುತ್ತಮ’ವಾದ ಸಂದರ್ಭ ಯಾವುದೆಂದು ತಿಳಿಯದೆ ತಡವರಿಸುವಂತಾಗುತ್ತಾನೆ. ‘ಪಠ್ಯ;ದ ಹುಡುಕಾಟ ನಿರಾಶೆಯನ್ನುಂಟು ಮಾಡುತ್ತದೆ. ಯಾಕೆಂದರೆ ದೀರ್ಘ ಕಾವ್ಯಗಳ ಪೂರ್ಣ ಪಠ್ಯಗಳು, ಉದಾಹರಣೆಗೆ ಹೇಳುವುದಾದರೆ, ಎಲ್ಲಿಯೂ ಕೇಳಿ ಬರುವುದಿಲ್ಲ. ಅಷ್ಟೇ ಅಲ್ಲದೆ, ನಾವು ಬೇರೆ ಬೇರೆ ಸಂದರ್ಭಗಳಲ್ಲಿ ನಿಜವಾಗಿ ಏನನ್ನು ಪರಿಸ್ಥಿತಿಗಳನ್ನಾಧರಿಸಿ ತೀವ್ರ ಬದಲಾವಣೆಗೊಳ್ಳುವ ಕಥಾಭಾಗಗಳು. ಈ ‘ಬಲಿಷ್ಟ’ ಸಾಂದರ್ಭಿಕ’ ಸಂಗತಿಗಳೇ ಗಾಯಕನು ಯಾವಾಗ, ಯಾರಿಗೆ, ಎಷ್ಟು ಹೊತ್ತು ಏನನ್ನು ಹಾಡಬೇಕು. ನಿರೂಪಣೆ ಮಾಡಬೇಕು. ಎಂಬುದನ್ನು ನಿರ್ಧರಿಸುವ ಅಂಶಗಳು.

ಜನಪದ ಕಾವ್ಯ ಸಂಪತ್ತಿನ ಭಂಡಾರವಾದ ತುಳುನಾಡಿನ ಮೌಖಿಕ ಮಹಾಕಾವ್ಯಗಳ ಅಧ್ಯಯನ ನಡೆಸುವ ವೀಕ್ಷಕನೊಬ್ಬನನ್ನು ತಬ್ಬಿಬ್ಬಾಗಿಸುವ ಮೂಲ ಕಾರಣವೇ ಇಂತಹ ‘ಬಲಿಷ್ಠ ಸಂದರ್ಭಗಳು. ನಮ್ಮ ಸಾಮಾನ್ಯ ನೀರಿಕ್ಷೆ ನಿಜವಾಗುವುದಿಲ್ಲ. ಎಲ್ಲಿಯೂ ಮೌಖಿಕ ಕಾವ್ಯಗಳನ್ನು ಹಾಡಲೆಂದೇ ಪ್ರತ್ಯೇಕ ಕಾರ್ಯಕ್ರಮಗಳನ್ನು ಏರ್ಪಡಿಸುವುದೂ ಇಲ್ಲ. ಮೌಖಿಕ ಕಾವ್ಯಗಳ ಗಾಯಕನೆಂದೇ ಯಾರನ್ನೂ ಪ್ರಾಥಮಿಕವಾಗಿ ಗುರುತಿಸುವಂತಹ ಕ್ರಮವೂ ಇಲ್ಲ.ಗಾಯಕ ಹಾಗೂ ಗಾಯನಗಳೆರಡೂ ಇನ್ನಿತರ ಚಟುವಟಿಕೆಗಳೊಂದಿಗೆ, ಮುಖ್ಯವಾಗಿ ಕುಲಕಸುಬುಗಳು ಹಾಗೂ ಸಂಕೀರ್ಣ ಮತಾಚರಣೆಗಳೊಂದಿಗೆ ಒಂದರೊಳಗೊಂದು ಹಾಸುಹೊಕ್ಕಾಗಿವೆ. ಅವು ಎದ್ದು ಕಾಣುವ ವಿಶೇಷತೆಯನ್ನು ಹೊಂದಿಲ್ಲ.ಅಂದರೆ ಗಾಯಕನು ವೃತ್ತಿ ಗಾಯಕನಾಗಿರದೆ ಬೇರೆ ಯಾರೋ ಆಗಿದ್ದು ಭೂತದ ಪಾತ್ರಿಯೋ ಅಥವಾ ಗದ್ದೆಗಳಲ್ಲಿ ದುಡಿಯುವ ಕಾರ್ಮಿಕನೋ ಆಗಿರುತ್ತಾನೆ ಹಾಗೂ ಪಾಡ್ದನ ನಿರೂಪಣೆಯು ಧಾರ್ಮಿಕ ವಿಧಿಯ ಭಾಗವಾಗಿಯೋ ಅಥವಾ ಗಾಯಕನ ಮತ್ತು ಪ್ರೇಕ್ಷಕರ ನಡುವಳಿಕೆಯನ್ನಾಧರಿಸಿ ರೂಪುಗೊಳ್ಳುವ ಯಾವುದೋ ಪ್ರಾಸಂಗಿಕ ಘಟನೆಯ ಭಾಗವಾಗಿದೆಯೋ ಪ್ರದರ್ಶನಗೊಳ್ಳುತ್ತದೆ. ಒಂದರ್ಥದಲ್ಲಿ ಹೊರಗಿನ ಸಂಶೋಧಕನೊಬ್ಬ ತನ್ನ ಸಂಶೋಧನಾ ಚೌಕಟ್ಟುಗಳನ್ನಿಟ್ಟುಕೊಂಡು ತಾನು ವೀಕ್ಷಿಸುತ್ತಿರುವ ಒಂದು ಸಾಂಪ್ರದಾಯಿಕ ಘಟನೆಯಾ ಪ್ರಸಂಗದಲ್ಲಿ ‘ಗಾಯಕ’, ‘ಪ್ರೇಕ್ಷಕ’,‘ಕಾವ್ಯಗಾಯನ’ ಎಂಬಿತ್ಯಾದಿಗಳನ್ನು ಹುಡುಕತೊಡಗುತ್ತಾನೆ. ನೆರೆದ ಪ್ರೇಕ್ಷಕ ಜನರನ್ನು ಘಟನೆಯ ಬಗ್ಗೆ ಕೇಳಿದರೆ ಬೇರೆ ಬೇರೆ ಹೆಸರುಗಳನ್ನು ಹೇಳುವುದಲ್ಲದೆ ಇನ್ನಿತರ ಸಂದರ್ಭಗಳ ಸಂಗತಿಗಳನ್ನು ವಿವರಿಸುತ್ತಾನೆ. ಆದರೂ ಎಲ್ಲ ಮನಸ್ಸನ್ನಾವರಿಸಿಕೊಂಡಿವುದು ಕಾವ್ಯ. ಇದು ಮತಾಚರಣೆಗಳಿಗೆ ಪೌರಾಣಿಕ ನೆಲೆಗಟ್ಟನ್ನು ಒದಗಿಸುತ್ತದೆ ಹಾಗೂ ಪ್ರಾರ್ಥನೆ ಹಾಗೂ ಭಾಗವಹಿಸುವವರ ನಡುವೆ ಸಂಭಾಷಣೆಗಳಲ್ಲಿ ಪದೇ ಪದೇ ಪ್ರಸ್ತಾಪಿಸಲ್ಪಡುತ್ತದೆ. ಅಂದರೆ ಉದ್ದಕ್ಕೂ ಸಾಗುವ ಕಥನದ ಹೊರತಾಗಿ ಇತರ ನಿರೂಪಣಾ ಪ್ರಕಾರಗಳಲ್ಲಿ.

ಈ ಬಲಿಷ್ಟ ಸಂದರ್ಭಗಳು ಕಾವ್ಯದ ಏಕತಾನತೆಯನ್ನು ಪುಡಿಗೆಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಅಖಂಡತೆಯ ಮರೀಚಿಕೆ

ಇಂಥ ಸಂದರ್ಭಗಳಲ್ಲಿ ಮೌಖಿಕ ಕಾವ್ಯವು ಇದಕ್ಕಿದ್ದಂತೆ ಸಾಂಪ್ರಾದಾಯಿಕ ಅಳತೆಗೋಲುಗಳನ್ನೆಲ್ಲ ಮೀರಿ ನಮ್ಮ ಹಿಡಿತಕ್ಕೆ ಸಿಗದಂತಾಗುವುದು.ಆದ್ದರಿಂದ ಪ್ರಾತಿನಿಧಿಕ ಪಠ್ಯವನ್ನು ಹೊಂದಾಣಿಕೆಯ ಸೂತ್ರದಲ್ಲಿ ಸಾಂಸ್ಕೃತಿಕ ನೆಲೆಯ ಸಂದರ್ಭದಲ್ಲಿ ನಿರ್ಮಿಸಬೇಕಾಗುತ್ತದೆ. ಪಠ್ಯೀಕರಣಗೊಳ್ಳುವ ಮೊದಲ ಪಠ್ಯವು ತನ್ನವಿಷಯ ಮತ್ತು ಗಾತ್ರದ ಪರಿಮಿತಿಗೆ ಎಷ್ಟು ಒಳಪಟ್ಟಿರುವದೆಂದರೆ ಅದು ಕಥನಕ್ಕಿಂತ ಪ್ರಸ್ತುತಗೊಳ್ಳುವ ಸಂದರ್ಭವನ್ನೇ ಹೆಚ್ಚು ಪ್ರತಿನಿಧಿಸುತ್ತದೆ. ಗಾಯಕರೆಲ್ಲರಿಗೂ ಕೆಲವೊಮ್ಮೆ ಗೊತ್ತಿರುವ ಪೂರ್ಣ ಪಠ್ಯದ ಹಂಬಲ ನನಸಾಗಬೇಕಾದರೆ ಕೆಲವೊಮ್ಮೆ ಗೊತ್ತಿರುವ ಇತಿಮಿತಿಗಳಿಲ್ಲದೆ ಪ್ರೇರಿತ ಅಥವಾ ಪ್ರತ್ಯೇಕ ಸಮಾರಂಭದಲ್ಲಿ ಗಾಯಕನೊಬ್ಬ ಕಾವ್ಯವನ್ನು ಹಾಡಿ ತೋರಿಸಲು ಒಪ್ಪುವ ವ್ಯವಸ್ಥೆಯಾಗಬೇಕು. ಈ ‘ಮುಕ್ತ’ ಗಾಯನ ಕಾವ್ಯನಿರೂಪಣೆಗೋಸ್ಕರ ಸಂಶೋಧಕರು ಸಿದ್ಧಪಡಿಸಿಕೊಂಡ ಚೌಕಟ್ಟಿಗೆ ಹೊಂದಿಕೊಳ್ಳುತ್ತದೆ. ಇದರಿಂದ ಅನೇಕ ಗಾಯಕರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಇಡೀ ಕಾವ್ಯವನ್ನು ಹಾಡುವಂತಾಗಿ ಗಾಯಕನ ಪೂರ್ತಿ ಗಮನ ಕಾವ್ಯದ ಕಡೆಗಿದ್ದು ಕಾವ್ಯದ ಪೂರ್ಣ ಪಠ್ಯೀಕರಣ ಸಾದ್ಯವಾಗುತ್ತದೆ.ಹೊಂದಾಣಿಕೆಯ ಮಾರ್ಗ ಇಲ್ಲಿಗೇ ಕೊನೆಗೊಳ್ಳುವುದಿಲ್ಲ.ತದನಂತರ ಅವುಗಳನ್ನೆಲ್ಲ ಬರಹ ರೂಪದಲ್ಲಿ ಸಂಗ್ರಹಿಸಿ ಪ್ರಕಟಿಸಬೇಕೆಂದು ಹೊರಟಾಗ ವಿದ್ವಾಂಸರಿಂದಲೇ ಕಲ್ಪಿತವಾದ ಅಂತರ್ ಸಂಜ್ಞೀಯ ಭಾಷಾಂತರದ ಸಮಸ್ಯೆಗಳು ತಲೆದೋರುತ್ತವೆ.ಅಖಂಡ ಅಥವಾ ಸಮಗ್ರ ಕಾವ್ಯ ಯಾವ ರೂಪದಲ್ಲಿಯೂ ಎಲ್ಲಿಯೂ ಕಾಣಸಿಗುವುದಿಲ್ಲ ಎಂಬುದು ಸ್ಪಷ್ಟಿವಿರುವಾಗ ‘ಹೊಂದಾಣಿಕೆ’ ಎಂಬ ಪದ ಕಹಿಯಾಗಬಹುದು, ಅನಗತ್ಯವೆನ್ನಿಸಲೂಬಹುದು. ಆದರೆ ಅಖಂಡ ಅಥವಾ ಸಮಗ್ರ ಕಾವ್ಯವೆನ್ನುವುದು ಸಂದರ್ಭಕ್ಕನುಗುಣವಾಗಿ ಬಳಸಿಕೊಳ್ಳಬಹುದಾದಂತಹ, ಬದಲಾವಣೆ ಮಾಡಿಕೊಳ್ಳಬಹುದಾದಂತಹ ಮಾನಸಿಕ ಭೂಮಿಕೆ ಅಥವಾ ಬಹುಮುಖಿ ಕಾರ್ಯಕ್ಷಮತೆಯ ಅಮೂರ್ತ ವ್ಯವಸ್ಥೆಯಾಗಿರುವ ಸಾಧ್ಯತೆಯಿದೆ. ಸಂಶೋಧಕರ ಅನುಪಸ್ಥಿತಿಯಲ್ಲಿ ಗಾಯಕನ ಅಂತೆಯೇ ಕೇಳುಗರ ಮನಸ್ಸಿನಾಳದಲ್ಲಿ ಅಸ್ತಿತ್ವ ಪಡೆಯುತ್ತದೆ. ಈ ಪಠ್ಯಪೂರ್ವ ನೆಲೆಗಟ್ಟನ್ನು ನಾನು ‘ಮಾನಸಿಕ’ ಪಠ್ಯವೆಂದು ಗುರುತಿಸಿದ್ದೇವೆ. (ಹಾಂಕೋ, ೧೯೯೬: ೪-೫) ಈ ಪಠ್ಯದ ಅಸ್ತಿತ್ವವಿರುವುದು ಸಹಜ ಸಂದರ್ಭಗಳಲ್ಲಿ ಪ್ರಸ್ತುತಗೊಳ್ಳುವ ತುಣುಕು ಪ್ರಸಂಗಗಳಲ್ಲ; ಬದಲಾಗಿ ವೃತ್ತಿ ಗಾಯಕನ ಚಿತ್ತಭಿತ್ತಿಯಲ್ಲಿ ಅವನ ಬದುಕಿನುದ್ದಕ್ಕೂ ಮಾನಸಿಕ ಪಠ್ಯದ ಸಂಯೋಜನೆ ಅನೂಚಾನವಾಗಿ ನಡೆಯುತ್ತಿರುವುದು ನಮಗೆ ಗೋಚರಿಸುತ್ತದೆ.

ಎಲ್ಲರೂ ತಿಳಿದಿರುವ ಕಾವ್ಯದ ಅರಿವು ಒಂದು ಬಗೆಯದಾದರೆ ವ್ಯಕ್ತಿಗತವಾಗಿ ರೂಪಿಸಿಕೊಂಡ ಮಾನಸಿಕ ಪಠ್ಯ ಇನ್ನೊಂದು ಬಗೆ ಎಂದು ಭಾವಿಸುವುದು ಸಮಂಜಸವೆನಿಸುತ್ತದೆ. ಕಥಾವಸ್ತು ಕೇಳುಗರಿಗೆ ಮೊದಲೇ ತಿಳಿದಿರುವುದರಿಂದ ಕಾವ್ಯ ಗಾಯನದ ಪ್ರಸ್ತುತತೆಯನ್ನು ಸುಲಭವಾಗಿ ಗ್ರಹಿಸಬಲ್ಲರೇ ಹೊರತು ಅದು ಪ್ರಸ್ತುತಗೊಳ್ಳುವ ನೈಜ ಸಂದರ್ಭ, ಕಥಾನಕದ ರೂಪ ಅವರಿಗೆ ಗೊತ್ತಿರುವುದಿಲ್ಲ. ಸಕ್ರಿಯ ಗಾಯಕನ ಮಾನಸಿಕ ಪಠ್ಯಕ್ಕೆ ಹೋಲಿಸಿದರೆ ಶೋತೃಗಳ ಪಠ್ಯವು ಅಷ್ಟೊಂದು ಪರಿಪೂರ್ಣವಾಗಿರದು.ಗಾಯಕನ ನಿರೂಪಣಾ ಕೌಶಲ್ಯದಲ್ಲಿ ಕಾವ್ಯಭಾಷೆಯೂ ಅಡಗಿದೆ ಹಾಗೂ ಅವನಲ್ಲಿ ವ್ಯಕ್ತಿಗತವಾದ ಕಾವ್ಯಭಾಷೆಯನ್ನಾಡುವ ಸಾಮರ್ಥ್ಯವಿರುತ್ತದೆ. ಗಾಯಕನಿಗೆ ಕಾವ್ಯ ಗಾಯನವನ್ನು ಕಲಿಯುವಾಗ ತನ್ನ ಗುರುವಿನ ಮಾನಸ ಪಠ್ಯವನ್ನು ನೇರವಾಗಿ ಸ್ವೀಕಾರ ಮಾಡಲಾಗುವುದಿಲ್ಲ. ಆದರೆ ಸಾಂಪ್ರಾದಾಯಿಕ ಅಭಿವ್ಯಕ್ತಿಗಳನ್ನು, ನಡೆನುಡಿಗಳನ್ನು ಕೇಳುತ್ತಾ ತನ್ನದಾಗಿಸಿಕೊಳ್ಳಬೇಕು. ಅಂದರೆ ನಿರ್ದಿಷ್ಟ ಕಾವ್ಯದ ಗಾಯನ ಸಾಮರ್ಥ್ಯಕ್ಕೆ ಅಡಿಪಾಯವಾಗಬಲ್ಲ ತನ್ನದೇ ಆದ ಮಾನಸಿಕ ಪಠ್ಯವನ್ನು ತಿದ್ದಿ ತೀಡಿ ರೂಪಿಸಿಕೊಳ್ಳಬೇಕು. ಹೆಚ್ಚಿನ ಗಾಯಕರಲ್ಲಿ ಈ ಮಾನಸಿಕ ಪಠ್ಯದ ಹಂದರ ಸಾಕಷ್ಟು ವಿಶಾಲವಾಗಿರುತ್ತದೆ ಮತ್ತು ಅದು ಸಾಂಸ್ಕೃತಿಕ ಆಚರಣೆಯ ಅಂಗವಾಗಿ ಪ್ರಸ್ತುತಗೊಳ್ಳುವ ಪಠ್ಯಕ್ಕಿಂತ ಹೆಚ್ಚು ಸವಿಸ್ತಾರವಾಗಿರುತ್ತದೆ.

ಹಾಗಿದ್ದರೂ ಇದರ (ಕಾವ್ಯದ) ಸಂಪೂರ್ಣ ಪ್ರದರ್ಶನ ವಿರಳ.ಇದಕ್ಕೆ ಸಂಶೋಧಕನೊಬ್ಬನ ಉಪಸ್ಥಿತಿ ಅಗತ್ಯವೆನಿಸುತ್ತದೆ ಏಳು ವರ್ಷಕ್ಕೊಮ್ಮೆ ಕೈಲದಲ್ಲಿ ನಡೆಯುವ ಸಂಪೂರ್ಣ ಸಂಜಾಟಾ ಗಾಯನದಂತಹ ಉದಾಹರಣೆಗಳು ವಿರಳ. ಸುದೀರ್ಘ ಮೌಖಿಕ ಕಾವ್ಯಗಳಿರುವ ಪರಂಪರಾಗತ ಸಂಸ್ಕೃತಿಯಲ್ಲಿ ಸಂಪೂರ್ಣ ಕಾವ್ಯ ಗಾಯನ ಪ್ರಸ್ತುತಿಗೆಂದೇ ಪ್ರತ್ಯೇಕ ಸಂಸ್ಥೆಗಳಿರುವುದಿಲ್ಲ. ದೀರ್ಘ ಕಾವ್ಯಗಳ ಜೊತೆ ಜೊತೆಯಲ್ಲೇ ಕಿರು ಕಾವ್ಯ ಪ್ರಸಂಗಗಳೂ ಇರುತ್ತವೆ. ಕಾವ್ಯ ಸಂಸ್ಕೃತಿಗಳನ್ನು ವಿಭಾಗಿಸುವ ನಿಜವಾದ ಗಡಿ ಇರುವುದು ಕಿರು ಕಾವ್ಯ ಹಾಗೂ ಕಿರು ಮತ್ತು ದೀರ್ಘ ಕಾವ್ಯಗಳನ್ನು ಹೊಂದಿರುವವುಗಳ ನಡುವೆ. ಕಿರುರೂಪ ಹಾಗೂ ಬೃಹದ್ರೂಪ ಎರಡನ್ನೂ ಹೊಂದಿದ ಸಂಸ್ಕೃತಿಯಲ್ಲಿ ಗಾಯಕರು ಎರಡನ್ನೂ ಪ್ರಸ್ತುತಪಡಿಸುವ ಶಕ್ತಿಯುಳ್ಳವರೇ ಎಂಬುದು ಒಂದು ದೊಡ್ಡ ಪ್ರಶ್ನೆ. ಸಂಪೂರ್ಣ ಕಾವ್ಯ ತಿಳಿದಿದ್ದರೂ ಕೋರಿದಾಗಲೂ ಅದನ್ನು ಇಡಿಯಾಗಿ ಪ್ರಸ್ತುತಪಡಿಸಲು ಒಪ್ಪಿಕೊಳ್ಳದ ಗಾಯಕರಿರಬಹುದು.ಇನ್ನು ಕೆಲವು ತಮಗೆ ಈ ಮೊದಲು ಯಾವುದೇ ಸಂದರ್ಭವಾಗಲೀ ಅವಕಾಶಗಳಾಗಲೀ ಇಲ್ಲದಾಗಲೂ ಸಹ ಕೋರಿಕೆಯನ್ನು ಸಂತೋಷದಿಂದ ಸ್ವೀಕರಿಸಿ ಅನೇಕ ದಿನಗಳವರೆಗೆ ಗಾಯನ ನಡೆಸಿಕೊಡಬಹುದು. ಅವರಲ್ಲಿ ಪ್ರಸ್ತುತಪಡಿಸುವ ಈ ವಿಶೇಷ ಶಕ್ತಿ ಸಾಮರ್ಥ್ಯ ಹುಟ್ಟಿಕೊಂಡದ್ದಾದರೂ ಹೇಗೇ? ಇದಕ್ಕೆ ಪೂರ್ವಭಾವಿಯಾಗಿ ವಿಶೇಷ ರೀತಿಯ ಮನೋಪ್ರೇರಣೆ ಬೇಕಾಗುತ್ತದೆಯೇ ಮತ್ತು ದೀರ್ಘಾವಧಿಯ ಮಾನಸಿಕ ಸಂಪಾದನದ ಸಿದ್ಧತೆ ಬೇಕೋ?

ಒಂದು ಕಾವ್ಯ ರೂಪದ ಕತೆಗಳೆಲ್ಲವನ್ನಾಗಲೀ ಅಥವಾ ಇತರ ಕಾವ್ಯವಲ್ಲದ ಅಥವಾ ಅರೆಕಾವ್ಯ ಪ್ರಕಾರವನ್ನಾಗಲೀ ಕತ್ತರಿಸಿ ಬೇಕಾಬಿಟ್ಟಿ ಜೋಡಿಸಿಬಿಟ್ಟರೆ ದೀರ್ಘ (ಮಹಾ) ಕಾವ್ಯವಾಗುವುದಿಲ್ಲ. ದೀರ್ಘ ಕಾವ್ಯ ಹಂದರ ನಿತ್ಯಸತ್ಯವಾದ್ದರಿಂದ ಪ್ರತಿಯೊಂದು ಪ್ರಸ್ತುಕತೆಗೂ ಅದನ್ನು ಹೊಸದಾಗಿ ಸೃಷ್ಟಿಸುವ ಅವಶ್ಯಕತೆಯಿಲ್ಲ. ಇಲ್ಲಯೂ ಕೂಡ ದೀರ್ಘ ಕಾವ್ಯದ ‘ಮಾನಸಿಕ ಪಠ್ಯ’ದ ಅಸ್ತಿತ್ವ ನಮಗೆ ವಾಸ್ತವಿಕ ನಿದರ್ಶನಗಳಿಂದ ಮನದಟ್ಟಾಗುತ್ತದೆ.ಗಾಯಕನಲ್ಲಿ ಸಿದ್ಧ ಚೌಕಟ್ಟೊಂದಿದ್ದು ಸಾಂಸ್ಕೃತಿಕ ಆಚರಣೆಯ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ದೀರ್ಘತೆಯನ್ನು ಅದು ಪಡೆಯುವುದುಂಟು.

ತುಳುವಿನ ದೀರ್ಘ ಕಾವ್ಯದ ಆವಿಷ್ಕಾರ : ಸಿರಿಕಾವ್ಯ

ದಕ್ಷಿಣ ಕನ್ನಡ ಹಾಗೂ ಕೇರಳದ ಉತ್ತರ ಭಾಗದಲ್ಲಿ ಸುಮಾರು ಎರಡು ದಶಲಕ್ಷಕ್ಕೂ ಮಿಕ್ಕಿದ ಜನರು ಆಡುವ ತುಳುಭಾಷೆ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ್ದು. ಯಾಕೆಂದರೆ ಕನ್ನಡವು (ಕೇರಳ ಭಾಗದಲ್ಲಿ ಮಲೆಯಾಳಂ) ರಾಜಮಾನ್ಯ ಹಾಗೂ ಶಾಲಾ ಶಿಕ್ಷಣ ಮಾಧ್ಯಮದ ಭಾಷೆಯಾಗಿರುವುದರಿಂದ ತುಳು ಲಿಖಿತ ಭಾಷೆಯಾಗಿ ಬೆಳೆದು ಬರಲಿಲ್ಲ.ಆದರೂ ಸ್ವಕ್ಷೇತ್ರದಲ್ಲಿ ತನ್ನ ಗಾಢ ಅಸ್ತಿತ್ವವನ್ನುಳಿಸಿಕೊಂಡು ಬೆಳೆದುಬಂದಿದೆ. ಹೊರಗಿನಿಂದ ಬಂದವರು ಇದನ್ನು ಕಲಿತುಕೊಳ್ಳಲೇಬೇಕಾದ ಪ್ರಮೇಯ ಬಂದೊದಗುವಷ್ಟು ಇದು ಪ್ರಭಾವಶಾಲಿಯಾಗಿದೆ. ದಿನನಿತ್ಯದ ವ್ಯವಹಾರಗಳ ಮೂಲಕವೇ ಇದನ್ನು ಕಲಿತುಕೊಳ್ಳಬಹುದು. ಕಲೆ ಮತ್ತು ವಿದ್ವತ್ ವಲಯಗಳಲ್ಲಿ ತುಳುವರು ತಮ್ಮನ ಮೌಖಿಕ (ಮಹಾ) ಕಾವ್ಯಗಳಿಗೆ ಪ್ರಸಿದ್ಧರಾಗಿದ್ದು ಅವುಗಳಲ್ಲಿ ದೀರ್ಘ ಕಾವ್ಯ ಕಿರು ಕಥನ ಕಾವ್ಯ, ಕೆಲಸದ ಹಾಡು, ಧಾರ್ಮಿಕ ವಿಧಿ ಹಾಗೂ ಕುಣಿತದ ಹಾಡುಗಳು ಸಮೃದ್ಧಿಯಾಗಿರುವುದನ್ನು ನಾವು ಕಾಣಿತ್ತೇವೆ.

ಫಿನ್ನಿಶ್ – ತುಳು ಯೋಜನೆಯ (ತಂಡದ ಸದಸ್ಯರು ಲೌರಿ ಹಾಗೂ ಅನ್ನೇಲಿ ಹಾಂಕೋ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ.ವಿವೇಕ ರೈ ಹಾಗೂ ಚಿನ್ನಪ್ಪ ಗೌಡರನ್ನೊಳಗೊಂಡ) ೧೯೯೦ನೇ ಇಸವಿ ಡಿಸೆಂಬರ್ ೨೦- ೨೪ರ ಅವಧಿಯಲ್ಲಿ ಕರ್ನಾಟಕದ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಗೋಪಾಲ ನಾಯ್ಕರು ಒಂದು ಕೂರಿನಲ್ಲಿ ಪ್ರಸ್ತುತಪಡಿಸಿದ ಸಿರಿ ಕಾವ್ಯವನ್ನು ದೃಶ್ಯ ಶ್ರವಣ ಮಾಧ್ಯಮಗಳಲ್ಲಿ ದಾಖಲಿಸಿಕೊಂಡು ೧೯೯೮ರಲ್ಲಿ ಅದನ್ನು ಮೂರು ಸಂಪುಟಗಳಲ್ಲಿ ಹೊರತಂದರು. (ಹಾಂಕೋ ೧೯೯೮, ಹಾಂಕೋ ೧೯೯೮ಎ,ಬಿ) ಇದರಲ್ಲಿ ೧೫೬೮೩ ಸಾಲುಗಳಿವೆ.ಅಂದರೆ ರೋಮನ್ ಗ್ರೀಕ್ ಮಹಾಕಾವ್ಯ ಈಲಿಯಡ್ ಗಿಂತ ಕೇವಲ ಐದು ಸಾಲುಗಳು ಮಾತ್ರ ಕಡಿಮೆ. ಮೈದುಂಬುವ ಆಚರಣೆ ಹಾಗೂ ಹೊಲಗದ್ದೆಗಳಲ್ಲಿ ದುಡಿಯುವಾಗಿನ ಕೆಲಸದ ಸಂದರ್ಭಗಳಲ್ಲಿ ಇರುವ ಕಟ್ಟುಪಾಡುಗಳೀಂದ ಮುಕ್ತವಾದ ವಾತಾವರಣದಲ್ಲಿ ಗಾಯಕನೊಬ್ಬ ಇಡೀ ಕಾವ್ಯವನ್ನು ಹಾಡಿ ಪ್ರಸ್ತುತಪಡಿಸಿರುವುದು ಇದೇ ಮೊದಲು.೧೯೮೫-೮೬ರಲ್ಲಿ ಆರು ತಿಂಗಳ ಅವಧಿಯಲ್ಲಿ ಗೋಪಾಲ ನಾಯ್ಕರ ಅನೇಕ ಕೂರುಗಳಲ್ಲಿ ಸಂಪೂರ್ಣ ಸಿರಿ ಕಾವ್ಯವನ್ನು ಹಾಡಿ, ಹೇಳಬರೆಯಿಸಿದ್ದರು. ಅದರಲ್ಲಿ ಸಾಲುಗಳಿದ್ದವು. ಇದು ನಮಗಾಗಿ ಹಾಡಿದ ರೂಪಕ್ಕಿಂತ ಚಿಕ್ಕದಾಗಿತ್ತು. ಮುಂದಿನ ಪೀಳಿಗೆಗೆ ತನ್ನ ಕಾವ್ಯದ ಬಳುವಳಿ ಸಿಗಲೆಂಬ ಆಶಯದಿಂದ ಪ್ರಪ್ರಥಮ ಬಾರಿಗೆ ಗಾಯಕನೊಬ್ಬ ಮಾಡಿದ ಮಹತ್ಕಾರ್ಯವಿದು. ಅವರ ಕಥನ ಸಾಮರ್ಥ್ಯವು ಸಂಪೂರ್ಣ ಮೌಖಿಕವಾಗಿದ್ದು ಧಾರ್ಮಿಕ ವಿಧಿ ಮತ್ತು ಅನ್ಯ ಸಂದರ್ಭಗಳಲ್ಲೆಲ್ಲ ಅನೇಕಾನೇಕ ಬಾರಿ ಸಿರಿ ಕಾವ್ಯದ ವಿವಿಧ ಭಾಗಗಳನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ರೂಪಿತವಾಗಿತ್ತು.

ತುಳುನಾಡಿನಲ್ಲಿ ಸಿರಿ ಕಾವ್ಯವು ಸಂಪೂರ್ಣವಾಗಿ ಕೇಳಿಬರುವುದು ವಿರಳ. ಇದಕ್ಕೂ ಮೊದಲು ಇವರ ಮೌಖಿಕ ರೂಪದ ಕಾವ್ಯವು ಪ್ರಕಟಗೊಂಡಿರಲಿಲ್ಲ. ತುಳು ಭಾಷಿಕರಲ್ಲಿರುವ ಎರಡು ದೀರ್ಘ ಕಾವ್ಯಗಳಲ್ಲಿ ಕೋಟಿ ಚೆನ್ನಯ ಮತ್ತೊಂದು. ಇವರಡೂ ಕೂಡಿ ಗಾಯಕನ ಕಾವ್ಯಭಂಡಾರದಲ್ಲಿರುವ ಒಂದೇ ಪರಂಪರೆಗೆ ಸೇರಿದ ಕಾವ್ಯಗಳಾದರೂ ಒಂದಕ್ಕೊಂದು ವಿರುದ್ಧ ಸ್ವಭಾವದವುಗಳು. ವೀರ ಪುರುಷರಾದ ಕೋಟಿ ಚೆನ್ನಯರು ನ್ಯಾಯಕ್ಕಾಗಿ ನಡೆಸಿದ ಹೋರಾಡವನ್ನು ಕಾವ್ಯವು ವೈಭವೀಕರಿಸಿದರೆ ಸಿರಿ ಕಾವ್ಯವು ಪುರುಷ ಪ್ರಧಾನತೆ,ದಬ್ಬಾಳಿಕೆ ಅನ್ಯಾಯಗಳ ವಿರುದ್ಧ ಅಹಿಂಸಾತ್ಮಕ ಹೋರಾಟನಡೆಸಿ, ವಿಮೋಚನೆಯನ್ನು ಪಡೆದ ತುಳುವ ಹೊಣ್ಣೊಬ್ಬಳ ಸ್ತ್ರೀತ್ವವನ್ನು ಉತ್ತುಂಗ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಮಾತೃಪ್ರಧಾನ ಹಾಗೂ ಪಿತೃಪ್ರಧಾನ ಪದ್ದತಿಗಳೆರಡರ ಸಮ್ಮಿಶ್ರಣವಾದ ತುಳು ಸಮಾಜದಲ್ಲಿ ಬದುಕಿನ ಕಷ್ಟನಷ್ಟಗಳನ್ನು ಅನುಭವಿಸಿದ ದೇವಾಂಶ ಸಂಭೂತೆ ಸಿರಿಯ ಕಥೆಯಲ್ಲಿ ಅವಳ ಒಬ್ಬನೇ ಮಗ ಕುಮಾರ ಹಾಗೂ ಎರಡು ತಲೆಮಾರುಗಳಿಗೆ ಹಬ್ಬಿದ ಅವಳ ವಂಶದ ಕುಡಿಯ ಹೆಣ್ಣುಮಕ್ಕಳ ಬದುಕಿನ ಚಿತ್ರಣವನ್ನು ನಾವು ಕಾಣುತ್ತೇವೆ. ಮಾನವರ ನಡುವಣ ಸಂಘರ್ಷಕ್ಕೆ ಸಿರಿದೈವ ಮೈದುಂಬುವ ಆಚರಣೆಯಲ್ಲಿ ಪರಿಹಾರ ಕಂಡುಕೊಳ್ಳುವುದಕ್ಕೆ ಸಿರಿ ಕಾವ್ಯ ಸೂಕ್ತ ಪೌರಾಣಿಕ ಸನ್ನದನ್ನು ಒದಗಿಸುತ್ತದೆ. ವಿಸ್ತೃತವಾದ ‘ತುಳುನಾಡಿನ ಚರಿತ್ರೆ’ಯ ಭೂಮಿಕೆಯಲ್ಲಿ ಲೌಕಿಕ ಹಾಗೂ ಅಲೌಕಿಕ ಜಗತ್ತಿನ ನಡುವೆ ಮತಾಚರಣೆಗಳ ಸಂದರ್ಭದಲ್ಲಿ ಏರ್ಪಡುವ ಅಂತರ ಸಂಬಂಧಗಳು ಭಾರತೀಯ ಸಂಸ್ಕೃತಿಯ ವಿಶಿಷ್ಟತೆಗನುಗುಣವಾಗಿ ಮನುಷ್ಯ ಪ್ರಯತ್ನ ಮತ್ತು ಸಾಧನೆಗಳನ್ನು ನಿಯಂತ್ರಿಸಿ ಬದುಕಿನ ಲೋಕದೃಷ್ಟಿಯನ್ನು ಹೇಳುತ್ತೇವೆ.ಕೊನೆಯಲ್ಲಿ ಮತಾಚರಣೆಗಳಲ್ಲಿ ಮತ್ತೆ ಮತ್ತೆ ಪುನರಭಿನಯಗೊಳ್ಳುವ ಮೂಲಕ ತುಳುವ ಹೆಣ್ಣಿನ ಬದುಕಿನ ಆದರ್ಶಗಳ ಚಿತ್ರಣ ಮೂಡಿಬರುತ್ತದೆ.

ಗೋಪಾಲ ನಾಯ್ಕರು ಪ್ರಸ್ತುತಪಡಿಸಿರುವ ಸಿರಿ ಕಥಾನಗಳೆಲ್ಲವನ್ನೂ ಸಂಯೋಜಿಸಿ ಹೆಣೆಯುವುದು ಅವರ ಮಾನಸಿಕ ಪಠ್ಯ. ಇದು ಅವರ ಮನಸ್ಸಿನಾಳದ್ಲಲಿಯೇ ತಿದ್ದುಪಡಿಗೊಳ್ಳುತ್ತದೆ.ಇದು ಸ್ಥಿರಪಠ್ಯವಲ್ಲ, ಬದಲಾಗಿ ಮೌಖಿಕ ಕಾವ್ಯ ಗಾಯಕನಾಗಿ ಮತ್ತು ಸಿರಿ ಪಾತ್ರಿಯಾಗಿ ಅವರ ವೃತ್ತಿ ಜೀವನದುದ್ದಕ್ಕೂ ಬೆಳವಣಿಗೆ ಕಾಣುವಂಥದು, ಪರಿಷ್ಕೃತಗೊಳ್ಳುವಂಥದ್ದು. ಈ ವೈಯುಕ್ತಿಕ ಹಾಗೂ ಅಪೂರ್ವ ಪಠ್ಯದ ಮೂಲಗಳು ಗಾಯಕರಿಗೆ ಗೊತ್ತಿರುವ ಸ್ಥಳೀಯ ಕಾವ್ಯಭಾಷೆಯಲ್ಲಿರುವುದನ್ನು ನಾವು ನೋಡಬಹುದು;ಇದು ಮೌಖಿಕ ಕಾವ್ಯಗಳ ಬಹುರೂಪತೆಗಳಲ್ಲಿ, ಪುನರಾವರ್ತನೆಗಳಲ್ಲಿ, ನುಡಿಕೆಟ್ಟುಗಳಲ್ಲಿ, ಮತ್ತು ಸೂತ್ರಗಳ ರೂಪದಲ್ಲಿ, ನಿಗದಿತ ಸಂಭಾಷಣೆಗಳಲ್ಲಿ,ಗಾಯಕನ ವ್ಯಕ್ತಿಗತ ಕಾವ್ಯಭಾಷೆಯಲ್ಲಿ ವ್ಯಕ್ತಗೊಳ್ಳುತ್ತವೆ. ಪ್ರಸ್ತುತ ಗಾಯಕನ ಮಾನಸಿಕ ಪಠ್ಯದ ನಿರ್ದಿಷ್ಟ ಇತಿಹಾಸವನ್ನು ಸವಿವರವಾಗಿ ವಿಶ್ಲೇಷಿಸಲಾಗಿದೆ.(ಹಾಂಕೋ, ೧೯೯೮-೫೧೯-೪೭) ಅವರು ಸಿರಿ ಕಾವ್ಯದ ವಿವಿಧ ಅಂಶಗಳನ್ನು ಸ್ತ್ರೀ ಪುರುಷರಾದಿಯಾಗಿ ಅನೇಕ ಜನರಿಂದ ಕಲಿತುಕೊಂಡಿದ್ದರೂ ಅಖಂಡ ಸಿರಿಕಾವ್ಯ ಅವರದೇ ಸೃಷ್ಟಿ. ಇದು ಯಾವುದೇ ಒಬ್ಬ ವ್ಯಕ್ತಿಯಿಂದ ಅವರು ಪಡೆದುಕೊಂಡದ್ದಲ್ಲ. ಬದಲಾಗಿ ತನ್ನ ವೃತ್ತಿ ಜೀವನದದ್ದಕ್ಕೂ ನಿಧಾನವಾಗಿ ಬೆಳೆಸಿಕೊಂಡ ಬಂದ ಸಾಧನೆ. ಇದು ಮಾನಸಿಕ ಪಠ್ಯದ ಸ್ವಂತಿಕೆ- ಅನನ್ಯತೆಯನ್ನು ಬಿಂಬಿಸುತ್ತದೆ. ಬೇರೆ ಗಾಯಕರಲ್ಲಿಲ್ಲದ ಪರ್ಯಾಯ ದಾರಿಯನ್ನು ಇವರಲ್ಲಿ ಕಾಣಬಹುದು. ಆದರೂ ಅವರ ಕತೆಗಳನ್ನು ಶೋತೃಗಳು ಸಂಪೂರ್ಣ ಪಾರಂಪರಿಕವೆಂದು ಒಪ್ಪಿಕೊಳ್ಳುತ್ತಾರೆ.ಅವರದೇ ಆದ ಕೆಲವು ವೈಯುಕ್ತಿಕ ಚಹರೆಗಳ ಹೊರತಾಗಿಯೂ ‘ಸಿರಿ ಕಥೆ’ಯೆಂದು ಜನ ಅದನ್ನು ಗುರುತಿಸಬಲ್ಲರು.

ತಮ್ಮ ‘ಅಖಂಡ ಕಾವ್ಯ’ ದಾಖಲೆಗೊಂಡು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕೆಂಬುದು ಗೋಪಾಲ ನಾಯ್ಕರ ಬಯಕೆಯಾಗಿತ್ತು. ಸ್ವತಃ ಅನಕ್ಷರಸ್ಥರಾಗಿದ್ದರೂ ಸಹ ಅವರು ತಮ್ಮ ‘ತುಳುನಾಡ ಚರಿತೆ’ಯಲ್ಲಿ ತುಳುನಾಡಿನ ಜನರಿಗೆ ಅತ್ಯಮೂಲ್ಯ ಸಂದೇಶವೊಂದನ್ನು ನೀಡುತ್ತಾರೆ.“ಮುಂದಿನ ದಿನಗಳಲ್ಲಿ ಇದು ಶಾಲಾ ಕಾಲೇಜುಗಳನ್ನು ತಲುಪುತ್ತದೆಯೆಂದು ನಾನು ಕಥನವನ್ನು ನಡೆಸಿಕೊಟ್ಟೆ. ಇದು ತುಳುನಾಡಿನ ತುಳುವರು ಜ್ಯೋತಿ ಯಾರಾದರೂ ನಾನು ಹೇಳಿದ ಅಕ್ಷರಗಳನ್ನು ಕಾಪಾಡಿಕೊಂಡು ಬರುತ್ತಾರೆ. ಎಂಬುದೇ ನನ್ನ ಆಶಯ (ಹಾಂಕೋ, ೧೯೯೮,೧೩). ಗಾಯಕನು ತನ್ನ ಕಾವ್ಯಪ್ರದರ್ಶನದ ಮೂಲಕ ಸಂಶೋಧಕನಿಗೆ ಪಠ್ಯೀಕರಣ ಯೋಜನೆಯ ಮಹತ್ವವನ್ನು ಮನದಟ್ಟು ಮಾಡಿಕೊಡುವ ಮುನ್ನವೇ ಅವನಿಗೆ ದೀರ್ಘ ಕಾವ್ಯದ ಮಹತ್ವ ತಿಳಿದಿತ್ತು.

ಕಥನ ಪ್ರಕಾರಗಳ ನಕ್ಷೆಯಲ್ಲಿ ತುಳು ಮೌಖಿಕ ಕಾವ್ಯಗಳು

ತುಳು ಜನಪದ ಕಾವ್ಯಗಳ ಸಾಲಿನಲ್ಲಿ ದೀರ್ಘ ಮೌಖಿಕ ಕಾವ್ಯಗಳ ಸ್ಥಾನವನ್ನು ಗುರುತಿಸಬೇಕಾದರೆ ಸಾಮಾನ್ಯವಾಗಿ ತುಳು ಮೌಖಿಕ ಕಥನಗಳ ವರ್ಗೀಕರವನ್ನು ಗಮನಿಸಬೇಕಾಗುತ್ತದೆ. ಕಥನ ಕಾವ್ಯದ ಪ್ರಮುಖ ಐದು ಪ್ರಕಾರಗಳೆಂದರೆ:

೧. ಒಂದು ಅಥವಾ ಎರಡು ತಲೆಮಾರುಗಳ ವೃತ್ತಾಂತವನ್ನು ಬಿಂಬಿಸುವ ದೀರ್ಘ,ಬಹು ಆಖ್ಯಾಯಿಕೆಗಳನ್ನೊಳಗೊಂಡ ಕಥನ ಕವನಗಳು.ಈ ಕಥನಗಳು ಮಹಾಕಾವ್ಯದ ಪರಿಕಲ್ಪನೆಗೆ ಹತ್ತಿರವಾದವುಗಳು. ಇವು ಕಥನ ಘಟಕಗಳನ್ನು ಬೇರ್ಪಡಿಸುವ ವಿಶೇಷ ಧಾಟಿಗಳಿಂದ ಕೂಡಿದ್ದು. ಇವುಗಳನ್ನು ಲಯಬದ್ಧವಾಗಿ ಸುಶ್ರಾವ್ಯವಾಗಿ ಹಾಡುತ್ತಾರೆ. ಈ ಕಾವ್ಯಗಳನ್ನು ಗುರುತಿಸುವುದು ಸುಲಭ, ಯಾಕೆಂದರೆ ಪ್ರತಿಯೊಂದು ಮಹಾಕಾವ್ಯಕ್ಕೂ ತನ್ನದೇ ಆದ ರಾಗ ಧಾಟಿಗಳಿರುತ್ತವೆ.ಆದರೂ ಎರಡನೆಯ ವರ್ಗಗಳಿಗೆ ಹೋಲಿಸಿದರೆ ಇವು ಸಾಮಾನ್ಯ ದೀರ್ಘ ಸ್ವರೂಪದವುಗಳಾಗಿದ್ದು ಸಾವಿರಾರು ಸಾಲುಗಳಿಂದ ಕೂಡಿರುತ್ತವೆ.

೨. ಮೊದಲ ವರ್ಗದವುಗಳಿಗಿಂತ ಕಿರಿದಾಗಿದ್ದು ಹೆಚ್ಚನಂಶ ಒಂದು ಪ್ರಸಂಗದ ಕಥನವಾಗಿರುತ್ತದೆ. ನಾಯಕನ ಅತವಾ ನಾಯಕೆಯ ವೀರಗಾಥೆ ಅಥವಾ ಅವರ ಜೀವನದ ಕೆಲ ವೃತ್ತಾಂತಗಳನ್ನು ವರ್ಣಿಸುತ್ತದೆ.ಮೊದಲ ವರ್ಗದ ಕವನಗಳಲ್ಲಿರುವಂತೆ ಇಲ್ಲಿಯೂ ಹಾಡಲು ಬರುತ್ತದೆ.ಉದ್ದ ಗಿಡ್ಡ ಸಾಲುಗಳಿರುತ್ತವೆ.ಅವುಗಳಲ್ಲಿ ಕೆಲವು ಛಂದೋಬದ್ದವಾಗಿದ್ದು ಗೀತರೂಪದ ರಚನೆಯನ್ನು ಹೊಂದಿವೆ.

೩. ಕಿರು ಕಥನ ಕವನಗಳನ್ನು ಕೆಲಸದ ಹಾಡುಗಳಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಇವು ಹಾಸ್ಯಮಯವಾಗಿರುತ್ತವೆ. ಜನಪದ ಕತೆಗಳ ಘಟನೆಗಳು, ಐಹಿತ್ಯಗಳು ಅಥವಾ ನಿತ್ಯ ಜೀವನದ ಹಾಸ್ಯ ಸಂಗತಿಗಳಾಗಿರುತ್ತವೆ.ನಿರ್ದಿಷ್ಟ ಕ್ರಮದ ವಲಯ ಲಯ ವಿನ್ಯಾಸವಿದ್ದು ಕಥನದ ಸಾಲು ಮತ್ತು ಪಲ್ಲವಿಯ ಸಾಲು ಒಂದರ ನಂತರ ಮತ್ತೊಂದು ಬರುತ್ತಿರುತ್ತವೆ. ಒಬ್ಬ ಮುಖ್ಯನಾಯಕ ಹಾಗೂ ಇತರ ಸಮೂಹ ಗಾಯಕರು ಮೇಳಗೀತೆಗಳಿಗಿಂತ ಹಾಡುವುದು ಇಲ್ಲಿನ ಕ್ರಮ. ಕಥನವು ದ್ವಿಪದಿ ಅಥವಾ ನುಡಿಯ ರಚನೆಯನ್ನು ಹೊಂದಿರುತ್ತವೆ.

೪. ವಿವಿಧ ಬಗೆಯ ಕಾರ್ಯವನ್ನೊಳಗೊಂಡ ಮತಾಚರಣೆಯ ಹಾಡುಗಳನ್ನು ಮದುವೆ, ಅಂತ್ಯಸಂಸ್ಕಾರ ಮುಂತಾದ ಬದುಕಿನ ಸ್ಥಿತ್ಯಂತರ ವಿಧಿ ಆಚರಣೆಗಳ ಸಂದರ್ಭಗಳಲ್ಲಿ ಹಾಗೂ ಸುಗ್ಗಿ ಮುಂತಾದ ವಾರ್ಷಿಕಾವರ್ತನ ಆಚರಣೆಗಳಲ್ಲಿ ಹಾಡುವುದುಂಟು.

೫. ಕುಣಿತದ ಹಾಡುಗಳು- ಮನೆ ಮನೆಗೆ ತಿರುಗಿ ಪಡಿ ಬೇಡುವ ಚಾರಣಿಗರು ಹಾಡುವ ಕಥನಗಳು.

ಮೌಖಿಕ ಪಠ್ಯಗಳಲ್ಲಿ ವೈಯುಕ್ತಿಕ ಅನನ್ಯತೆಯಿರುವದನ್ನು ಸಮೀಕ್ಷೆ ತೋರಿಸಿಕೊಡುತ್ತದೆ. ಅವು ಗಾಯಕನ ಮನಸ್ಸಿನಲ್ಲಿ ನಿಜವಾಗಿ ಒಂದರೊಳಗೊಂದು ಬೆರಕೆಯಾಗುವುದಿಲ್ಲ.ಇದು ಮಾನಸಿಕ ಪಠ್ಯದ ಸಂಭಾವ್ಯತೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ವಿಶೇಷವಾಗಿ ಸಂಕೀರ್ಣ ಸ್ವರೂಪದವುಗಳಲ್ಲಿ ಪ್ರದರ್ಶನಗಳ ನಡುವಿನ ಪರಿಷ್ಕರಣೆಯು ಕಾವ್ಯಕ್ಕೆ ಸಧೃಡತೆ ಮತ್ತು ನವೀನತೆಯನ್ನು ತಂದುಕೊಡುತ್ತದೆ. ಸರಳ ಕಿರು ಕಥೆಗಳಲ್ಲಿ ನುಡಿಗಳು ಮತ್ತು ಪಲ್ಲವಿಗಳನ್ನು ಸರಪಳಿಗಳಂತೆ ಹೆಣೆದ ಸರಳ ರಚನೆಗಳಲ್ಲಿ ಕಥೆಯನ್ನು ತುಸು ಮಟ್ಟಿಗೆ ಬದಲಾಯಿಸುವ ಸ್ವಾತಂತ್ರ್ಯವಿರುತ್ತದೆ. ನಾಲ್ಕನೇ ಮತ್ತು ಐದನೇ ವರ್ಗದವುಗಳು ಕೆಲಸದ ನಿರ್ವಹಣೆಯನ್ನವಲಂಬಿಸಿದ್ದರೂ ಅವುಗಳ ರೂಪವನ್ನು ಆಧರಿಸಿ ವಿಶ್ಲೇಷಣೆಯೂ ಸಹ ಉತ್ತಮ ಫಲಿತಾಂಶವನ್ನು ನೀಡಬಲ್ಲದು.

ಪ್ರಸ್ತಕ ಸಂದರ್ಭದಲ್ಲಿ ಒಂದನೇ ಮತ್ತು ಎರಡನೇ ವರ್ಗದ ಕಾವ್ಯಗಳುನಮಗೆ ಹೆಚ್ಚು ಆಸಕ್ತಿಯಾಗಿದ್ದರೂ ಎಲ್ಲ ಐದೂ ವರ್ಗದವುಗಳು ಸಮಾನ ಕಥಾವಸ್ತು ಮತ್ತು ಆಶಯಗಳನ್ನು ಹೊಂದಿವೆ ಎಂಬುದನ್ನು ನಾವು ಮರೆಯಬಾರದು.ಆದರೂ ಅವುಗಳ ನಿರ್ವಹಣೆ ಮತ್ತು ಪ್ರದರ್ಶನಗಳು ಒಂದೇ ತೆರನಾಗಿಲ್ಲ ಹಾಗೂ ಸಾಂದರ್ಭಿಕ ಬದಲಾವಣೆಯ ಅವಶ್ಯಕತೆಗಿಂತ ಹೆಚ್ಚಿನ ಮಟ್ಟದ್ದಾಗಿದೆ. ಆದುದರಿಂದ ಕಥೆಯನ್ನು ನಿರೂಪಿಸುವ ವಿಧಾನವು ಅದರ ಪ್ರಕಾರ (Genre) ವನ್ನು ರೂಪಿಸುತ್ತದೆಯೇ ಹೊರತು ಕಥೆಯ ಸ್ವರೂಪವನ್ನಲ್ಲ.

ಈ ಎರಡು ವರ್ಗಗಳ ಮಹಾಕಾವ್ಯಗಳನ್ನು ಸಾಮಾನ್ಯವಾಗಿ ಸಂದಿ ಮತ್ತು ಪಾಡ್ದನಗಳೆಂದು ಕರೆಯುತ್ತಾರೆ. (ದ್ರಾವಿಡ ಭಾಷೆಯ ಪಾಡು=ಹಾಡು ಅಥವಾ ಪಾಟು=ಗೀತ) ಸಂದಿ ಎಂಬ ಪದವನ್ನು ಹೆಚ್ಚಾಗಿ ಗಾಯಕರೂ ಪಾಡ್ದನ ಎಂಬ ಪದವನ್ನು ವಿದ್ವಾಂಸರೂ ಬಳಸುತ್ತಾರೆ. ಮಹಾಕಾವ್ಯವೆಂದು ನಾನು ಕರೆಯುವ ಮೊದಲ ವರ್ಗದ ‘ಸಂದಿ’ಯ ಎರಡು ಉತ್ತಮ, ದೀರ್ಘ ಮೌಖಿಕ ಕಾವ್ಯಗಳು ದೊರೆಯುತ್ತವೆ.ಅತ್ಯಂತ ಪ್ರಭಾವಶಾಲಿ ಸ್ತ್ರೀಯೊಬ್ಬಳು ಮೂರು ತಲೆಮಾರುಗಳ ಕಥೆಯನ್ನು ಸಿರಿಕಾವ್ಯವು ಒಳಗೊಂಡಿದ್ದು ಚಾರಿತ್ರಿಕ ವೀರ ಪುರುಷರನ್ನು ಪ್ರತಿನಿಧಿಸುವ ಕೋಟಿ ಮತ್ತು ಚೆನ್ನಯರೆಂಬ ಅವಳಿ ಸಹೋದರ ಬದುಕಿನ ಕತೆ ಕೋಟಿ ಚೆನ್ನಯ ಕಾವ್ಯದ್ದು. ತಮ್ಮ ಧೈರ್ಯ, ಶೌರ್ಯ ಸಾಹಸಗಳಿಂದ ಆ ಕಾಲದ ಭ್ರಷ್ಟ ಜಮೀನ್ದಾರರ ಮತ್ತು ಅರಸುಗಳ ವಿರುದ್ಧ ಹೋರಾಡುವ ಇವರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾರೆ. ಇವರ ಕೊನೆ ಮಾತ್ರ ದುರಂತ.ಈ ಅವಳಿ ವೀರರು ಸಾಯುತ್ತಾರೆ. ಆದರೆ ಇತಿಹಾಸ ಪುರಾಣವಾಗಿ ಮಾರ್ಪಡುವಂತೆ ಇಲ್ಲಿಯೂ ಹುತಾತ್ಮರೂ ಸ್ಥಾನೀಯ ದೈವಗಳಾಗಿ ಪರಿವರ್ತನೆ ಹೊಂದುತ್ತಾರೆ. ಹಾಗಾಗಿ ಇವರು ಬಿಲ್ಲವರ (ಮೂರ್ತೆದಾರರ) ಹಬ್ಬದೂಟಗಳಲ್ಲಿ, ಉತ್ಸವಗಳಲ್ಲಿ ಕುಲದೈವಗಳಾಗಿ ಪೂಜೆಗೊಳ್ಳುತ್ತಾರೆ. ಹಾಗೂ ತುಳುನಾಡಿನ ನೆಚ್ಚಿನ ಸಾಂಸ್ಕೃತಿಕ ವೀರನಾಯಕರಾಗಿ ಕಾಣಿಸುತ್ತಾರೆ.

ತುಳು ಕಥನ ಕಾವ್ಯಗಳಲ್ಲಿ ಹೆಚ್ಚಿನವು ಎರಡನೇ ವರ್ಗಕ್ಕೆ ಸೇರಿದ ಭೂತಾರಾಧನೆಯ ಪಠ್ಯಗಳು ಅಥವಾ ಪಾಡ್ದನಗಳು.

ಬಿ.ಎ. ವಿವೇಕ ರೈಯವರು ತಮ್ಮ ಡಾಕ್ಟರೇಟ್ ಪ್ರಬಂಧದಲ್ಲಿ (೧೯೮೫) ಪಾಡ್ದನಗಳನ್ನು ಮೂರು ಪ್ರಮುಖ ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ೧. ಭೂತಕ್ಕೆ ಸಂಬಂಧಿಸಿದ ಪಾಡ್ದನಗಳು ೨. ಅತಿಮಾನುಷ ಅಲೌಕಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಪಾಡ್ದನಗಳು ೩. ಪೌರಾಣಿಕ ವ್ಯಕ್ತಿಗಳುಳ್ಳ ಪಾಡ್ದನಗಳು. ಈ ಕಥನಗಳು ಶೈಲಿಯಲ್ಲಿ ಸಂದಿ ಕಾವ್ಯವನ್ನು ಹೋಲುತ್ತವೆ. ಆದರೆ ಅವು ಕಿರಿದಾಗಿದ್ದು ಒಮ್ಮೆಗೆ ಒಂದು ಘಟನೆಯ ಮೇಲೆ ಕೇಂದ್ರೀಕೃತವಾಗಿರುತ್ತವೆ. ಅವುಗಳಲ್ಲಿ ದೈವಾಂಶಸಂಭೂತನೋ ಧೀರೋದಾತ್ತ ವ್ಯಕ್ತಿಯೋ ಆದ ನಾಯಕನ ಚಿತ್ರಣವಿದ್ದು ಅವನ ಸಂಚಾರ ಮತ್ತು ಮಹೋನ್ನತ ಸಾಹಸಕಾರ್ಯಗಳು ಸಾಂಪ್ರಾದಾಯಿಕ ಸ್ಥಳೀಕರಣದಲ್ಲಿ ಕೊನೆಗೊಳ್ಳುತ್ತವೆ. ಅಲ್ಲಿನ ಭೂತವು ಗ್ರಾಮದೇವತೆಯಂತೆ ಆ ಗ್ರಾಮವನ್ನೂ ಅಲ್ಲಿನ ಜನರನ್ನೂ ರಕ್ಷಿಸುತ್ತದೆ, ಹಾಗೂ ಜನರು ಅದಕ್ಕೆ ಕಾಲಾವಧಿಗೆ ಸಲ್ಲುವ ಪೂಜೆ ಪುನಸ್ಕಾರಗಳನ್ನು ಅರ್ಪಿಸಿ ಭಕ್ತಿಭಾವದಿಂದ ನಡೆದುಕೊಳ್ಳಬೇಕು.

ಭೂತಾರಾಧನೆಯಲ್ಲಿ ಕಥನವು ನಟನೆ, ಕುಣಿತ, ಹಾವಭಾವ, ಆಂಗಿಕ ಸಂಜ್ಞೆಗಳಿಂದ ಕೂಡಿದ್ದು ಕಥೆಯ ಅವಶ್ಯಕತೆಗಿಂತ ಹೆಚ್ಚಾಗಿ ಭಾವೋದ್ವೇಗದ ಅಭಿವ್ಯಕ್ತಿ ಮತ್ತು ಆವೇಶಭರಿತ ಧ್ವನಿಗಳು ಕೇಳಿಬರುತ್ತವೆ. ಮುಖ್ಯವಾಗಿ ಸಂಕೇತಗಳು, ಭೂತದ ಹಾಗೂ ಭೂತಸ್ಥಾನದ ಹೆಸರುಗಳೆಲ್ಲ ಪದೇ ಪದೇ ಪುನರಾವರ್ತನೆಗೊಳ್ಳುತ್ತದೆ. ಭೂತಾರಾಧನೆಯ ಸಂದರ್ಭದಲ್ಲಿ ಪಾಡ್ದನಗಳು ಭೂತ ಪುರಾಣಗಳ ರಚನೆ ಮತ್ತು ಪ್ರಭಾವವನ್ನು ಹೊಂದಿದ್ದು ಧಾರ್ಮಿಕ ಆಚರಣೆಗಳಿಗೆ ಮಾನಸಿಕ ಸಿದ್ಧತೆ ಮತ್ತು ವೈಚಾರಿಕ ಸನ್ನದನ್ನು ಕಲ್ಪಿಸಿ ಕೊಡುವುದಲ್ಲದೆ ಭೂತದ ಮೈದುಂಬಿಕೆ ಮತ್ತು ಗುರುತಿಸುವಿಕೆಗೆ ಬೇಕಾದ ತೀವ್ರತೆಯನ್ನು ನೀಡುತ್ತವೆ.

ದೀರ್ಘ ಕಾವ್ಯದ ಹಾದಿಯಲ್ಲಿ ಆವರ್ತನದ ಸಮಸ್ಯೆ

ತುಳು ಪರಂಪರೆಯೊಳಗೆ ದೀರ್ಘ ಹಾಗೂ ಕಿರು ಗಾತ್ರದ ಕಾವ್ಯಗಳಿವೆ. ಅವುಗಳ ಪರಸ್ಪರ ಸಂಬಂಧವೇನು?ಅವುಗಳ ಕಾಲ ಯಾವುದು? ದೀರ್ಘ ಕಾವ್ಯಗಳು ಕಿರು ಕಾವ್ಯಗಳ ವಿಸ್ತೃತ ರೂಪಗಳೆ? ಎರಡು ಬಗೆಯ ಮೌಖಿಕ ರಚನೆಗಳು ಎರಡು ರೂಪಗಳಲ್ಲೂ ಮೈದಾಳುವ ಸಾಮರ್ಥ್ಯವನ್ನುಪಡೆದಿವೆಯೇ? ಇವರೆಡೂ ಮಾನಸಿಕ ಪಠ್ಯದ ಸಹಭಾಗಿಗಳೇ? ಕಿರುಗಾತ್ರದ ಕಾವ್ಯಗಳನ್ನು ಘಟನಾವಳಿಗನುಸಾರ ವರ್ಗೀಕರಿಸಲು ಸಾಧ್ಯವೇ? ಗಾಯಕರ ಮಾನಸಿಕ ಭಂಡಾರದೊಳಗೆ ಈ ಬಗೆಯ ಆವರ್ತನಗಳ ಸಂಕೇತಗಳಿವೆಯೇ?

ಮಹಾಕಾವ್ಯ ಚಕ್ರದ ಪ್ರಶ್ನೆ ಗಾಯಕನ ಮನಸ್ಸಿನಲ್ಲಿ ಮೂಡಿದ ಕಲ್ಪನೆ ಅಲ್ಪ,ಬದಲು ಅದು ವಿದ್ವಾಂಸರಿಂದ ತಮ್ಮ ಅಧ್ಯಯನದ ಸಂದರ್ಭದಲ್ಲಿ ಕಲ್ಪಿತಗೊಂಡದ್ದು ಎಂದು ಹೇಳಬಹುದಾಗಿದೆ. ಪಾಡ್ದನಗಳಿಗೆ ಮಹಾಕಾವ್ಯ ಎನ್ನುವ ಪದ ಸರಿಹೋಗುತ್ತದೆಯೇ? ಕಥನದ ದೀರ್ಘತೆಯನ್ನು ಮಾನದಂಡವನ್ನಾಗಿಟ್ಟುಕೊಂಡರೆ ತುಳು ಪರಂಪರೆಯ ಎರಡು ಪ್ರಮುಖ ಮೌಖಿಕ ಕಾವ್ಯಗಳಾದ ಕೋಟಿ ಚೆನ್ನಯ ಮತ್ತು ಸಿರಿಯನ್ನು ಮಹಾಕಾವ್ಯದ ಸಾಲಿಗೆ ಸುಲಭವಾಗಿ ಸೇರಿಸಬಹುದು. ಭೂತಗಳಿಗೆ ಸಂಬಂಧಿಸಿದ ಪಾಡ್ದನಗಳು ನೂರಾರು ಸಾಲುಗಳಿಗೆ ಸೀಮಿತವಾಗಿದ್ದರೂ ಸಾವಿರಾರು ಸಾಲುಗಳಿಗೆ ವಿಸ್ತಾರವಾಗುವ ಸಾಧ್ಯತೆಯಿರುವುದರಿಂದ ಅವುಗಳನ್ನು ‘ಮಹಾಕಾವ್ಯ’ದ ಸಾಲಿಗೆ ಸೇರಿಸಬಹುದಾಗಿದೆ.

ಪಾಡ್ದನಗಳ ಮೂಲಭೂತ ರಚನೆ ಹೇಗಿದೆಯೆಂದರೆ ಅವುಗಳನ್ನು ಬೇರೆ ರೀತಿಯಿಂದಲೂ ನೋಡಬಹುದು. ಇಲ್ಲಿ ಬರುವ ಪುಣ್ಯಕಾಲ, ಪುಣ್ಯಸ್ಥಳಗಳ ಸಂಕೇತಗಳು ಪುರಾಣ ಹಾಗೂ ಪ್ರಾರ್ಥನೆಗಳಲ್ಲಿ ಬರುವಂತಹವು ಗಳಿಗೆ ಸಮಾನವಾಗಿರುವುದನ್ನು ನಾವು ಕಾಣುತ್ತೇವೆ. ಭೂತಾರಾಧನೆಯ ಪಾಡ್ದನಗಳು ಮುಖ್ಯವಾಗಿ ಎರಡು ಅಂಶಗಳನ್ನು ಹೊಂದಿವೆ. ೧. ಭೂತಾರಾಧನೆಯಲ್ಲಿ ಬರುವ ನಮ್ಮ ಕಾಲ ಎನ್ನುವುದು, ಪುರಾಣಗಳಲ್ಲಿ ಬರುವ ಜಗತ್ತಿನ ಆದಿಯೇ ಭೂತದ ಮೂಲ ಎಂಬುದರ ವಿವರಗಳಿಗೆ ಸಂಕೇತ. ೨. ವೇದಮಂತ್ರಗಳು, ಭಜನೆಗಳನ್ನು ನೆನಪಿಗೆ ತರುವ ಭೂತದ ಸ್ಥಳಮಹಾತ್ಮೆ, ಸ್ಥಳನಾಮಗಳು ಪುಣ್ಯಕ್ಷೇತ್ರ ಗುಡಿಯಲ್ಲಿ ದೈವದ ಆವಾಸ್ಥಾನಗಳನ್ನೆಲ್ಲ ವಿವರಿಸುವುದೊಂದೇ ಅಲ್ಲದೆ ದೈವ ಮಾನವ ಸಂಬಂಧದಲ್ಲಿ ಭಕ್ತಾದಿಗಳು ಸುಖವಾಗಿ ಸುರಕ್ಷಿತವಾಗಿದ್ದಾರೆಂದು ಸಾರುತ್ತದೆ.

ಇದರ ಸ್ಪಷ್ಟ ನಿರೂಪಣೆಗೆ ದೀರ್ಘ ಕಥನ ಬೇಕಿಲ್ಲ. ಮಂತ್ರೋಚ್ಛಾರಣೆಯನ್ನು ನೆನಪಿಗೆ ತರುವ ಆವೇಶದ ಉದ್ಗಾರಭರಿತ ಮತ್ತು, ಅಧಿಕಾರವಾಣಿ ಮುಂತಾದವುಗಳನ್ನು ಪದೇ ಪದೇ ಬಳಸುತ್ತ ಪುಣ್ಯಕ್ಷೇತ್ರ, ಪುಣ್ಯಕಾಲಗಳ ಸುತ್ತ ಸುತ್ತುತ್ತಿದ್ದರೆ ಭೂತ ಆವಾಹನೆಗೆ ಹಾಗೂ ಭೂತಾರಾಧನೆಗೆ ಕಾವೇರುತ್ತದೆ, ರಂಗೇರುತ್ತದೆ; ಪ್ರಭಾವ ಗಾಢವಾಗುತ್ತದೆ.ಆದುದರಿಂದ ಇಂತಹ ಪಾಡ್ದನ ಕಾವ್ಯವು ದೀರ್ಘವಾಗಿಲ್ಲದೆ ಇರುವುದನ್ನು ಅದರ ಕಾರ್ಯ ಹಾಗೂ ಪ್ರದರ್ಶನಗಳ ಸಂದರ್ಭದ ಹಿನ್ನೆಲೆಯಲ್ಲಿ ಪರಿಶೀಲಿಸಬೇಕೇ ಹೊರತು ಪಾಡ್ದನಕಾರರು ದೀರ್ಘ ಕಾವ್ಯರಚನೆಗೆ ಅಸಮರ್ಥರು ಎಂದು ತಿಳಿಯಬಾರದು.

ಆದರೆ ಭೂತಾರಾಧನೆಯ ನಾಟಕೀಯ ಪ್ರದರ್ಶನ ಸಂದರ್ಭವು ಎಲ್ಲವನ್ನೂ ಸಂಕೀರ್ಣಗೊಳಿಸುತ್ತದೆ. ಸುದೀರ್ಘ ಕಥನವನ್ನು ಅರೆ ಖಾಸಗಿ ಸನ್ನಿವೇಶಗಳಲ್ಲಿ ಭೂತ ಮೈಮೇಲೆ ಬರುವವನ ಹೆಂಡಿತಿಯೋ ಅಥವಾ ಅವನ ಮಗಳೋ ಅವನು ಭೂತದ ವೇಷಭೂಷಣ ಧರಿಸಿಕೊಳ್ಳುತ್ತ ಅಲಂಕಾರ ಮಾಡಿಕೊಳ್ಳುತ್ತಿರುವಾಗ ಅವನ ಮುಂದೆ ಇದನ್ನು ಹಾಡುತ್ತಾರೆ;ಅವನು ಬಳಿಕ ನೆರೆದ ನೂರಾರು ಸಭಿಕರ ಮುಂದೆ ಭೂತಾರಾಧನೆಯ ಪ್ರದರ್ಶನವನ್ನು ನೀಡಲು ಮಾನಸಿಕವಾಗಿ ಸಿದ್ಧನಾಗಲು ಇದು ಸೂಕ್ತ ಮಾನಸಿಕ ತಯಾರಿಯನ್ನು ಮಾಡುತ್ತದೆ.ಭೂತಾರಾಧನೆಯನ್ನು ಮಾತು ಅತ್ಯಂತ ಕಡಿಮೆ. ಕೆಲವು ಉದ್ಗಾರಗಳಿರುತ್ತವೆ. ನಾಟಕೀಯ ಭೂತಕುಣಿತ ಮತ್ತು ಹಾವಭಾವಗಳ ಮೂಲಕವೇ ಕಡೆಯ ಪ್ರಸಂಗವನ್ನು ನಿರೂಪಿಸಲಾಗುತ್ತದೆ.ಭೂತದ ಹುಟ್ಟು, ವಿಕಾಸ, ಸಂಚಾರವನ್ನು ನಿರೂಪಿಸುವ ಪೂರ್ಣ ಕಥನವನ್ನು ಪ್ರದರ್ಶನದ ವೇಳೆ ನಿರೂಪಿಸುವುದಿಲ್ಲ. ಆದರೂ ಭೂತಮಾಧ್ಯಮನಿಗೆ ಕಥಾನಿರೂಪಣೆಗೆ ಕೌಟುಂಬಿಕ ಪರಂಪರೆಯಿಂದ ದತ್ತವಾದ ಮಾನಸಿಕ ಪಠ್ಯವು ನೆರವಾಗುತ್ತದೆ.ಮೌಖಿಕ ಕಾವ್ಯದ ನಿರ್ಮಾಣದಲ್ಲಿ ಪ್ರದರ್ಶನ ಸಂದರ್ಭ ಹಾಗೂ ಪ್ರದರ್ಶನ ವಿಧಾನ ವಹಿಸುವ ಪಾತ್ರ ಹಾಗೂ ದೀರ್ಘ ಕಾವ್ಯರೂಪವನ್ನು ಬಹುಮಟ್ಟಿಗೆ ಅದೃಶ್ಯಗೊಳಿಸಿರುವುದನ್ನು ಇದು ವಿವರಿಸುತ್ತದೆ.ಭೂತವನ್ನು ಮೈದುಂಬಿಸಿಕೊಳ್ಳುವ ಕಲಾವಿಧನಿಗೆ ತನ್ನೊಳಗಿನ ಮಾನಸಿಕ ಪಠ್ಯವು ತಾನು ನಡೆಸಿಕೊಡುವ ನಾಟಿಕೀಯ ಪ್ರದರ್ಶನಕ್ಕೆ ತಕ್ಕ ಭೂಮಿಕೆಯನ್ನು ರೂಪಿಸುವುದಲ್ಲದೆ ಪ್ರೇಕ್ಷಕರಿಗೆ ಕಥೆಯನ್ನು ಗ್ರಹಿಸುವುದಕ್ಕೆ ಅನುಕೂಲ ಮಾಡಿಕೊಡುತ್ತದೆ.

ಇದರಿಂದ ನಿರ್ದಿಷ್ಟ ಭೂತವೊಂದರ ಪಾಡ್ದನದ ಹಲವಾರು ಪಠ್ಯಗಳು ಏರ್ಪಡುತ್ತವೆ. ಈ ಪಾಡ್ದನಗಳು ಭೂತದ ಹುಟ್ಟು ಹಾಗೂ ಸ್ಥಳೀಕರಣಗಳ ವಿವರಗಳನ್ನು ನೀಡುತ್ತವೆ. ಆದರೆ ಯಾವುದಾದರೊಂದು ಪಾಡ್ದನವೂ ಕಥೆಯ ಪೂರ್ಣ ಪಾಟವನ್ನು ನೀಡುತ್ತಿಲ್ಲ. ಆದರೆ ಒಂದು ಭೂತದ ವಿವಿಧ ಅಖ್ಯಾಯಿಕೆಗಳನ್ನು ಒಂದುಗೂಡಿಸಿದರೆ ‘ಪೂರ್ಣ’ ಪಠ್ಯ ಲಭ್ಯವಾಗಬಹುದು. ಹೀಗೆ ಸಂಯೋಜನೆಗೊಳ್ಳುವ ಮೂಲಕ ಏರ್ಪಡುವ ಒಂದು ‘ಏಕತೆ’ ಮೌಖಿಕ ಕಾವ್ಯದ ವಿಶಿಷ್ಟ ಲಕ್ಷಣ. ಸಣ್ಣ ದನಿಯಲ್ಲಿ ಪಾಡ್ದನವನ್ನು ಒಂದೆರಡು ಗಂಟೆಗಳ ಕಾಲ ಭೂತಮಾಧ್ಯಮನೆದುರು ಗುಣಿಗುಟ್ಟುವುದು ದೀರ್ಘಕಾಲಿಕ ಪಠ್ಯವನ್ನು ನಿರೂಪಿಸುವುದಕ್ಕಿಂತ ಹೆಚ್ಚು ಪ್ರಯೋಜನಕಾರಿ.ಈ ದೀರ್ಘರೂಪದ ಪಾಡ್ದನ ಕಾವ್ಯಗಳನ್ನು ಸಂಗ್ರಹಿಸುವುದರಲ್ಲಿ ವಿದ್ವಾಂಸರು ವಿಶೇಷ ಆಸಕ್ತರಾಗಿರುವುದು ಕಂಡುಬರುತ್ತದೆ.ಇಲ್ಲದೆ ಹೋದರೆ ಅವು ಜನಮಾನಸದಿಂದ ಮರೆಯಾಗುವ ಸಾಧ್ಯತೆಯೂ ಇದೆ.

ಚಿಕ್ಕ ಚಿಕ್ಕ ಪಾಡ್ದನಗಳನ್ನೆಲ್ಲ ಒಂದೆಡೆ ಸೇರಿಸಿ ದೀರ್ಘರೂಪದ ಮಹಾಕಾವ್ಯವನ್ನು ನಿರ್ಮಿಸಬಹುದೇ ಎನ್ನುವ ಪ್ರಶ್ನೆಯನ್ನು ತುಳು ವಿದ್ವಾಂಸರು ಮುಂದಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಫಿನ್ಲೆಂಡ್ ಮತ್ತು ತುಳುನಾಡಿನ ಮಹಾಕಾವ್ಯಗಳ ತುಲನೆ ಪ್ರಸ್ತುತವೆನಿಸುತ್ತದೆ. ೧೯೮೫ರಲ್ಲಿ ಜರಗಿದ ವಿಚಾರಸಂಕಿರಣವೊಂದರಲ್ಲಿ ಫಿನ್ಲೆಂಡಿನ ಲೊನ್ರೊಟ್ ಗೆ ಇದ್ದ ಸಂದಿಗ್ದತೆಯನ್ನು ತುಳು ವಿದ್ವಾಂಸರು ಪ್ರಸ್ತಾಪಿಸಿದ್ದರು. ಯು.ಪಿ. ಉಪಾದ್ಯಾಯ ಮತ್ತು ಸುಶೀಲಾ ಉಪಾಧ್ಯಾಯರು ಮಂಡಿಸಿದ ಪ್ರಬಂಧದ ಕೊನೆಯಲ್ಲಿ ಹೀಗೆ ಬರೆದಿದ್ದರೆ “ತುಳುನಾಡಿನಾದ್ಯಾಂತ ದೊರೆಯುವ ವಿವಿಧ ಭೂತಗಳ ಪಾಡ್ದನಗಳನ್ನು ಸಂಗ್ರಹಿಸಿ ಅವುಗಳ ಹುಟ್ಟು, ತುಳುನಾಡಿಗೆ ಅವುಗಳ ಆಗಮನ,ಸಂಚಾರ, ಅವುಗಳ ರಕ್ಷಕ ಮತ್ತು ಶಿಕ್ಷಕ ಗುಣಧರ್ಮಗಳಿಗನುಸಾರ ವ್ಯವಸ್ಥಿತವಾಗಿ ಜೋಡಿಸಿ ಸಂಪಾದಿಸಿದರೆ ಜಗತ್ತಿನ ಅನೇಕ ಜನಪದ ಮಹಾಕಾವ್ಯಗಳಿಗೆ ಸರಿದೂಗುವ ಮಹಾಕಾವ್ಯಗಳನ್ನು ತುಳುವಿನಲ್ಲೂ ರೂಪಿಸಿಬಹುದು. (ಉಪಾಧ್ಯಾಯ ಮತ್ತು ಉಪಾಧ್ಯಾಯ, ೧೯೮೬;೭).

ಆದರೆ ತುಳುನಾಡಿನ ವಿವಿಧ ಪಾಡ್ದನಗಳನ್ನು ‘ಜೋಡಿಸುವ’ ಈ ಆಲೋಚನೆ ಸಾಧುವಲ್ಲ ಎಂಬ ಅಭಿಪ್ರಾಯ ಮೂಡಿಬಂದಿದೆ.ಫಿನ್ಲೆಂಡಿನ ಜನಪದ ಮಹಾಕಾವ್ಯದ ಮಾದರಿಯ ಸಮಗ್ರ ತುಳು ಪಾಡ್ದನ ಕಾವ್ಯಯೋಜನೆ ಸಾಧುವಲ್ಲ ಎಂಬ ಅಭಿಪ್ರಾಯವನ್ನು ವಿವೇಕ ರೈಯವರು ವ್ಯಕ್ತಪಡಿಸಿದ್ದುಂಟು. ಅದರ ಬದಲು ಪಂಜುರ್ಲಿ, ಜುಮಾದಿ,ಗುಳಿಗ ಮುಂತಾದ ನಿರ್ದಿಷ್ಟ ಭೂತಗಳ ಸುತ್ತ ಹೆಣೆದಿರುವ ವಿವಿಧ ಕಥಾವಸ್ತುಗಳನ್ನು ಒಂದೆಡೆ ಬೆಸೆದು, ಉದಾಹರಣೆಗೆ ಈಗಾಗಲೇ ಸಂಗ್ರಹವಾಗಿರುವ ಹದಿನೈದಕ್ಕೂ ಮಿಕ್ಕು ಪಂಜುರ್ಲಿ ಪಾಡ್ದನಗಳನ್ನು ವ್ಯವಸ್ಥಿತವಾಗಿ ಜೋಡಿಸಬಹುದು(ರೈ,೧೯೮೬;೧೦-೧೧).

ಹೀಗಿದ್ದರೂ ಪಾಡ್ದನಗಳ ಸ್ವರೂಪವು ಕೆಲವೊಂದು ಸಮಸ್ಯೆಗಳನ್ನು ಹುಟ್ಟುಹಾಕುವ ಸಾಧ್ಯತೆಯಿದೆ. ಇದೇ ರೀತಿಯ ಅಥವಾ ಸಮಾನಾಂತರ ಕಾರ್ಯನಿರ್ವಹಣೆಯುಳ್ಳ ಘಟನೆಗಳನ್ನು ಸರಳ ರೇಖಾತ್ಮಕ ರೂಪದಲ್ಲಿ ಒಂದೆಡೆ ಜೋಡಿಸುವುದಾದರೂ ಹೇಗೆ? ಪಾಡ್ದನಗಳ ಪ್ರದರ್ಶನ ಸಂದರ್ಭವು ಅದಕ್ಕೆ ಸಹಕಾರಿಯಾಗದಿರುವಾಗ ಜೋಡಣೆಯ ಕೆಲಸ ಸುಲಭವಾಗುವುದು. ಎರಡನೆಯ ಮಾದರಿಯ ಕಥನಗಳನ್ನು (ಪಾಡ್ದನಗಳನ್ನು) ಮೊದಲ ಮಾದರಿ (ಸಂದಿ)ಯ ಪಾಡ್ದನಗಳಂತೆ ದೀರ್ಘರೂಪಕ್ಕೆ ತರುವುದು ಸುಲಭದ ಕೆಲಸವಲ್ಲ.

ಕೋಟಿ ಚೆನ್ನಯ ಕಾವ್ಯದ ವಿವಿಧ ಪ್ರದರ್ಶನ ಸಂದರ್ಭಗಳು

ಸಂದರ್ಭದ ಹಿನ್ನೆಲೆಯಲ್ಲಿ ರೂಪಗೊಳ್ಳುವ ಭೂತ ಕಥಾನಕಗಳ ದೀರ್ಘರೂಪ ದೊರೆಯುವುದು ಕಷ್ಟಸಾಧ್ಯ. ಇದಕ್ಕೆ ವಿರುದ್ಧವಾಗಿ ದೀರ್ಘ ಮೌಖಿಕ ಕಾವ್ಯಗಳನ್ನು ತೆಗೆದುಕೊಂಡು ಅದರ ಸಾಂದರ್ಭಿಕ ವಿತರಣೆಯನ್ನು ಅಧ್ಯಯನ ಮಾಡುವುದು ಕೂತುಹಲದಾಯಕವಾಗಬಹುದು. ಜನಪ್ರಿಯತೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಕೋಟಿ ಚೆನ್ನಯ ಪಾಡ್ದನವನ್ನು ಗಮನಿಸಿಬಹುದು. ಬಿ.ಎ. ವಿವೇಕ ರೈಯವರು ಕೋಟಿ ಚೆನ್ನಯ ಪಾಡ್ದನದ ಪ್ರದರ್ಶನಾತ್ಮಕ ಸಂದರ್ಭಗಳನ್ನು ಹೀಗೆ ಸಂಗ್ರಹಿಸಿ ಕೊಟ್ಟಿದ್ದಾರೆ:

೧. ಕೋಟಿ ಚೆನ್ನಯರ ಆರಾಧನಾ ಕೇಂದ್ರಗಳಾದ ಗರೊಡಿಗಳಲ್ಲಿ ಜರಗುವ ಅಗೆಲು ಸೇವೆ (ಸಂದುಹೋದ ಹಿರಿಯರಿಗೆ ನಡೆಸುವ ವಾರ್ಷಿಕ ಪೂಜೆ)ಯಲ್ಲಿ ಗಂಡಸರು ಕೋಟಿ ಚೆನ್ನಯ ಪಾಡ್ದನದ ಭಾಗ (ಪೂರ್ಣ ಅಲ್ಲ)ಗಳನ್ನು ಹಾಡುತ್ತಾರೆ.

೨. ಈ ಹಿಂದೆ ಹೇಳಿದ ಆಚರಣೆಯ ಮುಂದುವರಿದ ರೂಪವಾಗಿ ನಡೆಯುವ ವಾರ್ಷಿಕ ಆರಾಧನೆ (ಬೈದರ್ಲೆ ನೇಮ)ಯಲ್ಲಿ ಗಂಡಸರು ಕೋಟಿ ಚೆನ್ನಯ ಪಾಡ್ದನದ ಆಯ್ದ ಭಾಗಗಳನ್ನು ಹಾಡುತ್ತಾರೆ.

೩. ಕೆಲಸದ ಹಾಡಿನ ರೂಪದಲ್ಲಿ ಗಂಡಸರು ತಾಳೆ ಮರ ಹತ್ತಿ ಕಳ್ಳು ಇಳಿಸುವ, ಮರದ ಕೊಂಬು ಕತ್ತಿರಿಸುವ ಸಂದರ್ಭಗಳಲ್ಲಿ ಪಾಡ್ದನದ ಭಾಗಗಳನ್ನು ಹಾಡುತ್ತಾರೆ.

೪. ಮಹಿಳೆಯರು ಕೆಲಸದ ಹಾಡಿನ ರೂಪದಲ್ಲಿ ಪಾಡ್ದನದ ಭಾಗಗಳನ್ನು ಗದ್ದೆಯಲ್ಲಿ ನೇಜಿ ಕೀಳುವಾಗ ಹಾಡುತ್ತಾರೆ. ಕೆಲವೊಮ್ಮೆ ಗಂಡಸರೂ ಇವರ ಹಾಡಿಗೆ ದನಿ ಸೇರಿಸುವುದುಂಟು. ಹೆಂಗಸರು ಹೆಚ್ಚಾಗಿ ಕೋಟಿ ಚೆನ್ನಯರು ತಮ್ಮ ಅಕ್ಕ ಕಿನ್ನಿದಾರುವನ್ನು ಭೇಟಿ ಮಾಡಿದ ಪ್ರಸಂಗವನ್ನು ಆಯ್ದುಕೊಳ್ಳುತ್ತಾರೆ. ಕಿನ್ನಿದಾರುವಿನ ಉತ್ಸಾಹ ಮತ್ತು ಅವಳು ತನ್ನ ತಮ್ಮಂದಿರನ್ನು ಪ್ರೀತಿ, ವಿಶ್ವಾಸ, ಆದರಗಳಿಂದ ಬರ ಮಾಡಿಕೊಂಡ ರೀತಿ ಹೆಂಗಸರ ಮನ ಮಿಡಿಯುವಂಥಹದು.

೫. ಕೆಲಸದ ಹಾಡುಗಳ ರೂಪದಲ್ಲಿ ಅಡಿಕೆ ಸುಲಿಯುವ ಸಂದರ್ಭದಲ್ಲಿ ಕಾವ್ಯದ ಆಯ್ದ ಭಾಗಗಳನ್ನು ಗಂಡಸರೂ ಹೆಂಗಸರೂ ಹಾಡುತ್ತಾರೆ. ಕೆಲವೊಮ್ಮೆ ಜನಪದ ಕತೆಗಳೂ ನಡುವೆ ಬರುವುದುಂಟು.

೬. ಮದುವೆ ಮುಂಚಿನ ದಿನ ವಧು ಮತ್ತು ವರರ ಅಂಗೈ ಮತ್ತು ಅಂಗಾಲುಗಳಿಗೆ ಮದರಂಗಿ ಹಾಕಿ ಸಿಂಗರಿಸುವಾಗ ಬಲ್ಲಾಳನ ಆಶ್ರಮದಲ್ಲಿ ಕೋಟಿ ಚೆನ್ನಯರು ಕಳೆದ ದಿನಗಳು ಹಾಗೂ ಅವರ ಮೊದಲ ಕ್ಷೌರದ ಕಥಾಭಾಗಗಳನ್ನು ಹಾಡುತ್ತಾರೆ.

೭. ಮದುವೆ ಅಥವಾ ಶವ ಸಂಸ್ಕಾರದ ಸಂದರ್ಭಗಳಲ್ಲಿ ಹೆಂಗಸರಾಗಲೀ,ಗಂಡಸರಾಗಲೀ ಪಾಡ್ದನದ ಯಾವುದೇ ಭಾಗವನ್ನು ಹಾಡಬಹುದು. ಮರಣದ ನಂತರ ಹನ್ನೊಂದನೆಯ ದಿನದ ಸಂಸ್ಕಾರದ ಸಂದರ್ಭದಲ್ಲಿ ಗಂಡಸರು ಈ ಕಾವ್ಯವನ್ನು ಹಾಡುತ್ತಾರೆ.

೮. ಖಳನಾಯಕನೊಬ್ಬನ ಸಾಸಹವನ್ನು ವಿವರಿಸುವ ವ್ಯಂಗ್ಯ ವಿಡಂಬನೆಯನ್ನು ಒಳಗೊಂಡಿರುವ ‘ಪುರುಷ ಕುಣಿತ’ದ ಪ್ರದರ್ಶನ ಸಂದರ್ಭದಲ್ಲಿ ಕೋಟಿ ಚೆನ್ನಯ ಪಾಡ್ದನವನ್ನು ಹಾಡುತ್ತಾರೆ.

೯. ಹೆಂಗಸರು ಕೆಲವೊಮ್ಮೆ ಗಂಡಸರೂ ಕೂಡ ತಮ್ಮ ಮನೆಗಳಲ್ಲಿ ಕಲಿತುಕೊಳ್ಳುವ ಸಲುವಾಗಿ ಬಿಡುವಿನ ವೇಳೆಯಲ್ಲಿ, ಹೆಚ್ಚಾಗಿ ರಾತ್ರಿಯ ಹೊತ್ತು ಈ ಕಾವ್ಯವನ್ನು ಹಾಡುವುದುಂಟು.

ಸಂದರ್ಭಗಳಲ್ಲಿ ಕಾಣಿಸುವ ಅಪಾರ ವೈವಿಧ್ಯವು ಮೌಖಿಕ ಕಾವ್ಯದ ನಮ್ಯತೆಯನ್ನು ಸೂಚಿಸುತ್ತದೆ. ಇದು ಬರಿಯ ಕುತೂಹಲದಾಯಕ ಕಥೆಯೆಂದು ತಿಳಿಯಬಾರದು. ಬದಲಾಗಿ ಬಿಲ್ಲವರ (ಮೂರ್ತೆದಾರ) ಪವಿತ್ರ ಕುಲಚರಿತ್ರೆ ಮತ್ತು ಮದುವೆ, ಶವಸಂಸ್ಕಾರ, ಭೋಜನಕೂಟಗಳಂತಹ ಸ್ಥಿತ್ಯಂತರ ವಿಧಿಗಳಿಂದ ತೊಡಗಿ ಕೆಲಸದ ಹಾಡುಗಳ ತನಕ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಇಲ್ಲೆಲ್ಲ ಪಾಡ್ದನದ ಕೆಲವು ಸಾಲುಗಳನ್ನು ಉದ್ಧರಿಸಲಾಗುವುದು ಅಥವಾ ಸಂಕ್ಷಿಪ್ತಗೊಳಿಸಲಾಗುವುದು.ಆದರೆ ಹೀಗೆ ಪಾಡ್ದನದ ವಿವಿಧ ಸಂದರ್ಭಗಳಲ್ಲಿ ನಿರೂಪಣೆಗೊಳ್ಳುವುದಾದರೂ ಅದರ ದೀರ್ಘ ಸ್ವರೂಪಕ್ಕೆ ಭಂಗ ಬಂದಿಲ್ಲ. ಇಡೀ ಕಾವ್ಯದ ಕಥಾವಸ್ತು ಕಥಾಗಾಯಕ ಹಾಗೂ ಶೋತೃ ವರ್ಗಕ್ಕೆ ಆಪ್ತವಾಗಿ ತಿಳಿದಿರುತ್ತದೆ. ಕೋಟಿ ಚೆನ್ನಯ ಪಾಡ್ದನವು ಸುದೀರ್ಘ ಕಥಾನಕವಾಗಿದ್ದು ಮಹಾಕಾವ್ಯದ ಶೈಲಿ ಇಲ್ಲಿ ಕಾಣಿಸುತ್ತಿರುವುದನ್ನು ಗಮನಿಸಬೇಕು.