ಕೋಟಿ ಚೆನ್ನಯರ ಐತಿಹ್ಯದಲ್ಲಿ ಬೆರ್ಮೆರ್‌

ಕೋಟಿ ಚೆನ್ನಯರ ಐತಿಹ್ಯವನ್ನು ವಿವರಿಸುವ ಪಾಡ್ದನದಲ್ಲಿ ಬೆರ್ಮೆರ ಪಾತ್ರ ಪ್ರಧಾನವಾದುದು. ಬೆರ್ಮರ ಪಾತ್ರವನ್ನು ಹಾಗೂ ಪಾಡ್ದನದ ವೈಚಾರಿಕತೆಯ ರಚನೆ (ideational structure) ಯಲ್ಲಿ ಅವನ ಸ್ಥಾನವನ್ನು ಅರಿತುಕೊಳ್ಳಲು ಪಾಡ್ದನದ ಮಧ್ಯಭಾಗದ ಕಥೆಯನ್ನು ಸಮೀಕ್ಷಿಸೋಣ.

ಕೋಟಿ ಚೆನ್ನಯರ ಪಾಡ್ದನದ ಕಾಲವನ್ನು ನಿಗದಿಗೊಳಿಸುವುದು ಕಷ್ಟ. ಆದರೆ ಈಗ ದೊರೆವ ಆವೃತ್ತಿಯನ್ನು ಕಂಡರೆ ಇದು ೫-೬ ಶತಮಾನಗಳಷ್ಟು ಈಚಿನದಲ್ಲ. ಬರ್ನೆಲ್ (೧೮೯೬) ಹಾಗೂ ಮ್ಯಾನರ್‌ (೧೮೮೬) ಅವರು ನೀಡಿರುವ ಪಾಡ್ದನಗಳ ಆವೃತ್ತಿಯನ್ನು ನಾನು ಇಲ್ಲಿ ಅಧ್ಯಯನಕ್ಕೆ ಅಳವಡಿಸಿಕೊಂಡಿದ್ದೇನೆ. ೧೯೬೭ ಹಾಗೂ ೧೯೭೬ರ ನನ್ನ ಕ್ಷೇತ್ರಕಾರ್ಯಗಳಲ್ಲಿ ನಾನು ಸಂಗ್ರಹಿಸಿದ ಆವೃತ್ತಿಗಳ ನುಡಿಗಟ್ಟುಗಳನ್ನು ಹಾಗೂ ಪ್ರತಿಮಾ ಶಿಲ್ಪಗಳನ್ನು ಹೋಲಿಸಿ ನೋಡಿದಾಗ ಇವು ಆಧುನೀಕರಣಕ್ಕೆ ಗುರಿಯಾದುದು ಗೋಚರವಾಗುತ್ತದೆ. ಬರ್ನೆಲ್ ನೀಡಿರುವ ಮೂರು ಆವೃತ್ತಿಗಳಲ್ಲಿ ಕೂಡಾ ಈ ಬಗೆಯ ಬದಲಾವಣೆಯನ್ನು ನಾವು ಗುರುತಿಸಬಹುದು. ಆದರೆ ಕಥೆಯ ಕ್ರಿಯೆಯ ಮೂಲಹಂದರಲ್ಲಿ ವಿಶೇಷ ಬದಲಾವಣೆ ಆಗಿಲ್ಲ.

ಕೋಟಿ ಚೆನ್ನಯರು ಬಿಲ್ಲವ ಸಮಾಜ (ಮೂರ್ತೆಯವರು, ಈಡಿಗರು)ಕ್ಕೆ ಸೇರಿದ ಅವಳಿ ವೀರರು, ಪಾಡ್ದನದಂತೆ ಅವರು ಪೆರುಮಲೆ ಬಲ್ಲಾಳನಿಂದ ಅವಮಾನಿತರಾಗಿ ಅವನ ರಾಜಧಾನಿಯನ್ನು ಬಿಟ್ಟು ಹೊರಡುತ್ತಾರೆ. ಪಕ್ಕದ ಎಡಂಬೂರು (ಎಣ್ಮೂರು) ರಾಜ್ಯದ ಬಲ್ಲಾಳ ಇವರ ಅಸಾಮನ್ಯ ಶೌರ್ಯ ಪ್ರತಾಪವನ್ನು ಕೇಳಿ ತನ್ನ ರಾಜ್ಯಕ್ಕೆ ಇವರು ಪ್ರಯೋಜನ ಕಾರಿಯಾಗಬಹುದೆಂದು ಭಾವಿಸಿ ತನ್ನಲ್ಲಿಗೆ ಬರುವಂತೆ ಆಹ್ವಾನಿಸುತ್ತಾನೆ. ಅವರನ್ನು ಕರೆತರುವುದಕ್ಕೆ (ಕಿನ್ನಿ) ಚೆನ್ನಯನೆಂಬ ಸೇವಕನನ್ನು ಕಳುಹಿಸುತ್ತಾನೆ.

ಪೆರುವಲೆ, ಎಡಂಬೂರು ರಾಜ್ಯಗಳ ನಡುವೆ ಕೇಮುಲಜೆ ಎಂಬ ಒಂದು ಅರಣ್ಯ. ಇದು ಅತ್ಯಂತ ಅಪಾಯಕಾರಿಯಾಗಿತ್ತು. ‘‘ನಡುದಾರಿಯಲ್ಲಿ ಏನೇ ಎದುರಾಗಲಿ ನೋಡಕೂಡದು. ಕಿವಿಗೊಡಕೂಡದು’’ ಎಂಬುದಾಗಿ ಬಂದ ಸೇವಕ (ಕಿನ್ನಿ) ಚೆನ್ನಯ ಅವಳಿ ವೀರರಿಗೆ ಎಚ್ಚರಿಕೆ ಕೊಡುತ್ತಾನೆ. ‘ತಾಯಿ ಹೇಂಟೆಯನ್ನು ಮರಿಗಳು ಅನುಸರಿಸುವಂತೆ, ದಾರ ಸೂಜಿಯನ್ನು ಅನುಸರಿಸುವಂತೆ ತನ್ನ ಹಿಂದೆ ಬರಬೇಕೆಂದು ಚೆನ್ನಯ ಅವರಿಗೆ ಸೂಚಿಸುತ್ತಾನೆ. ಕಾಡಿನ ಭಯಾನಕತೆ ಎಷ್ಟಿತ್ತೆಂದರೆ ಗರ್ಭದ ಹಸು ಇಂತಹ ಕಾಡಿಗೆ ಹೋದರೆ ಅದರ ಹೊಟ್ಟೆಯೊಳಗಿನ ಕರು ಸಾಯಬಹುದಂತೆ, ಗರ್ಭವತಿ ಹೆಂಗಸಿಗೆ ಗರ್ಭಪಾತವಾಗಬಹುದಂತೆ…’ (ಬರ್ನೆಲ್ ೧೮೯೪:೪೭)

ಕಾಡಿನ ನಡುವೆ ಎತ್ತರದ ಗುಡ್ಡದ ಮೇಲೆ ವೀರರು ಒಂದು ಅದ್ಭುತವಾದ ಗುಡಿಯನ್ನು ಕಾಣುವರು. ‘‘ತೆಂಗಿನ ಮರದಷ್ಟು ಉನ್ನತವಾದ, ಬೆಳ್ಗೊಡೆಯಷ್ಟು ಎತ್ತರವಾದ…’’ ಆ ಸ್ಥಳವು ಯಾವುದೆಂದು ಕೇಳುತ್ತಾರೆ (ಮ್ಯಾನರ್ ೧೮೮೬:೪೬)

[1] ಅದು ಅರಣ್ಯದ ಅಪಾಯದ ಮೂಲವಾಗಬಹುದಾದ ಕೇಮುಲದ ಬೆರ್ಮರ ದೇವಾಲಯ(ಸಿಂಗ) ಅಥವಾ ಬೆರ್ಮರ ಗುಂಡ ಎಂಬುದಾಗಿ ತಿಳಿಯಿತು. ತಾವು ಅದರ ತೀರಾ ಸನಿಹಕ್ಕೆ ಬಂದಿರುವುದರಿಂದ ಬದುಕಿ ಉಳಿಯುವುದು ಅಸಾಧ್ಯ ಎಂಬುದಾಗಿ (ಕಿನ್ನಿ) ಚೆನ್ನಯ ಹೆದರುತ್ತಾನೆ. ಅವನ ಹೆರಿಕೆಗೆ ಪ್ರತಿಯಾಗಿ ‘‘ ಆ ಗುಡಿಗೆ ಹೋಗಿ ದೈವವನ್ನು ಪ್ರಾರ್ಥಿಸಿ ಬರೋಣ’ ಎಂಬುದಾಗಿ ಕೋಟಿ ಚೆನ್ನಯರು ನುಡಿಯುತ್ತಾರೆ.

ಕೋಟಿ ಚೆನ್ನಯರು ಗುಡಿಯ ಮುಂದೆ ಹೋಗಿ ಹೀಗೆ ನಿವೇದಿಸಿ ಕೊಳ್ಳುತ್ತಾರೆ: ‘ನಾವು ಬದುಕಿರುವಾಗ ದೊರೆಯ ಓಲಗದ ಬಂಟರು (ವೀರರು); ಸತ್ತಾಗ ಒಡೆಯನ ಓಲಗದ ಬಂಟರು (ಬೆರ್ಮೆರ ಓಲಗದ ವೀರರು) – ಮ್ಯಾನರ್, ೧೮೮೬ : ೪೬) ಹೀಗೆ ನಾವು ಉಭಯ ಲೋಕಗಳ (ಲೌಕಿಕ ಹಾಗೂ ಪಾರಲೌಕಿಕ) ದೊರೆಗಳ ನಿಜ ಸೇವಕರೆಂದಾದರೆ ಗುಡಿಯ ಬಾಗಿಲು ತನ್ನಿಂದತಾನೇ ತೆರೆಯಬೇಕು. ದೀಪ ಹೊತ್ತಿಕೊಳ್ಳಬೇಕು, ಘಂಟೆಗಳು ಮೊಳಗಬೇಕು. ನಾವು ಅರ್ಪಿಸುವ ಕಾಣಿಕೆಗಳನ್ನು ಸ್ವೀಕರಿಸಲು ಭಗವಂತ (ತು. ಉಳ್ಳಾಯೆ) ಇಳಿದು ಬರಬೇಕು’’ ಅದ್ಭುತ ಎಂಬಂತೆ ಅವರು ಹೇಳಿದ ಎಲ್ಲಾ ಕ್ರಿಯೆಗಳೂ ಜರಗುತ್ತವೆ. ಭಗವಂತ ಏಳು ನೆಲೆಯುಳ್ಳ ಗುಂಡದಿಂದ ಬಿಳಿಕುದುರೆ (ತು. ಬೊಳ್ಳಿ ಕುದುರೆ) ಯನ್ನೇರಿ ಕೈಯಲ್ಲಿ ಬೆಳ್ಳಿಯ ಸತ್ತಿಗೆ ಹಿಡಿದುಕೊಂಡು ಬರುತ್ತಾನೆ (ತು. ತತ್ರ) ಬೆರ್ಮರ್ ಅವಳಿ ವೀರರ ಕಾಣಿಕೆಗಳನ್ನು ಸ್ವೀಕರಿಸುತ್ತಾನೆ. ಘಂಟೆಯ ನಿನಾದವನ್ನು ಕೇಳಿದ ಗುಡಿಯ ಪರಿಚಾರಕ ವರ್ಗದ ಬ್ರಾಹ್ಮಣರೇ ಮುಂತಾದವರು ತಮ್ಮ ಅಧಿಕಾರದ ಎಲ್ಲೆಯನ್ನು ಅತಿಕ್ರಮಿಸಿ ಗುಡಿಯನ್ನು ಮಲಿನಗೊಳಿಸಿದವರು ಯಾರು ಎಂಬುದನ್ನು ನೋಡಲು ಓಡಿಬರುತ್ತಾರೆ. ಈ ವೀರರಿಗೆ ತನ್ನನ್ನು ಆರಾಧಿಸಲು ಬ್ರಾಹ್ಮಣರಿಗಿಂತಲೂ ಹೆಚ್ಚು ಹಕ್ಕು ಇರುವುದಾಗಿ ಬೆರ್ಮೆರ್ ಈ ಸಂಕೇತದ ಮೂಲಕ ಸೂಚಿಸಬೇಕಾಯಿತು (ಬೆರ್ಮೆಲ್, ೧೮೯೪ : ೪೮).

ಅಲ್ಲಿನ ಎಣ್ಮೂರು ಅರಸನ ಅರಮನೆಗೆ ವೀರರು ಬರುತ್ತಾರೆ. ಇವರು ತನ್ನಲ್ಲಿ ನೆಲಸುವಂತೆ ಮಾಡಲು ತನ್ನ ರಾಜ್ಯದಲ್ಲಿ ಬೇಕಾದ ಭೂಮಿಯನ್ನು ಕೇಳುವಂತೆ ಅರಸ ಆಮಿಷ ಒಡ್ಡುತ್ತಾನೆ. ಈಗಾಗಲೇ ಇನ್ನಾರಿಗೋ ಸೇರಿದ ಕೃಷಿಯೋಗ್ಯವಾದ ಭೂಮಿ ತಮಗೆ ಬೇಕಿಲ್ಲವೆಂದೂ ರಾಜ್ಯದ ಗಡಿಯಲ್ಲಿರುವ ಬಂಜರು ಭೂಮಿಯನ್ನು (ತು. ತುಂಬೆ ನೆಕ್ಕಿ ಕೊಡಿತಿ ಗುತ್ತು ) ತಮಗೆ ನೀಡಿದರೆ ಸಾಕೆಂದೂ ಅವರು ಹೇಳುತ್ತಾರೆ. ಅರಸನು ನೀಡಿದ ಭೂಮಿಗೆ ಗಡಿಗುರುತಿಸಿ ಅಲ್ಲಿನ ಕುರುಚಲು ಪೊದೆಗಳನ್ನು ಕಿತ್ತು ಸವರಿ ಸುಟ್ಟು, ಮಣ್ಣನ್ನು ಉತ್ತು ಹದ ಮಾಡಿ ಬೀಜ ಬಿತ್ತುವರು. ಬೆಳೆ ಕೊಯ್ಯುವ ಮೊದಲೇ ಪಕ್ಕದ ಕಾಡಿನಿಂದ ನುಗ್ಗಿ ಬಂದ ಕಾಡುಹಂದಿಗಳು ನಾಶ ಮಾಡಿರುವುದನ್ನು ಅವರು ಕಾಣುತ್ತಾರೆ. ‘ಎಣ್ಮೂರಿನ ಬಲ್ಲಾಳರು ಬಡವರಾಗಿದ್ದುದರಿಂದ ಅವರು ರಾಜ್ಯ ದುಸ್ಥಿತಿಯಲ್ಲಿದೆ ಎಂದು ನಾವು ಕೇಳಿದ್ದೆವು. ಆದರೆ ಅದನ್ನೀಗ ಕಣ್ಣಾರೆ ಕಂಡೆವು’ ಎನ್ನುತ್ತಾರೆ ಕೋಟಿ ಚೆನ್ನಯರು. ಒಬ್ಬ ಗೂಢಚರ ಈ ಮಾತುಗಳನ್ನು ಕೇಳಿಸಿಕೊಂಡು ಅರಸನಲ್ಲಿಗೆ ಹೋಗಿ ‘ದೊರೆಯೇ, ಇದೀಗ ಹೊಸದಾಗಿ ಬಂದ ಯುವಕರು ದೊರೆ ಕೈಸೋತ ಬಡವ; ರಾಜ್ಯಾಡಳಿತದಲ್ಲಿ ನೈಪುಣ್ಯವಿಲ್ಲದವನು; ರಾಜ್ಯದಲ್ಲಿ ಬೇಟೆಯ ಸಂಪ್ರದಾಯವಿಲ್ಲ; ದೊರೆ ಉಚಿತವಾಗಿ ದೊರೆಯಬಹುದಾದ ನಮ್ಮ ದೈಹಿಕ ಬಲವನ್ನು ಉಪಯೋಗಿಸಿಕೊಳ್ಳುತ್ತಿಲ್ಲ; ಅರಸ ತನ್ನ ಸಂದ ಹಿರಿಯರಿಗೆ ಸಲ್ಲತಕ್ಕ ಆರಾಧನೆ (ತು. ಮಾಳಕಾರ್ಯ) ಸಲ್ಲಿಸುತ್ತಿಲ್ಲ * ಎಂದು ಕೋಟಿ ಚೆನ್ನಯರು ಗೊಣಗುತ್ತಿರುವುದಾಗಿ ವರದಿ ಮಾಡಿದ. ಇದನ್ನು ಕೇಳಿದ ಅರಸ ಸಂಭ್ರಮದ ಬೇಟೆ ನಡೆಸಲು ನಿರ್ಧರಿಸಿದ. ಭೇಟೆಯಲ್ಲಿ ಅವಳಿ ವೀರರು ಒಂದು ದೊಡ್ದ ಕಾಡು ಹಂದಿ (ಕಾಡಿನ ಯೋಧ?)ಯನ್ನು ಕೊಂದರು. ಅದು ಪಕ್ಕದ ರಾಜ್ಯದ ಗಡಿಯ ಸಮೀಪಕ್ಕೆ ಓಡಿ ಸತ್ತು ಬಿದ್ದಿತು. ಅದರ ಶರೀರವನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯದಲ್ಲಿ ದೊಡ್ದ ಯುದ್ಧವೇ ಸಂಘಟ್ಟಿಸಿತು.

ಇಲ್ಲಿಗೆ ತಡೆದು ಈ ಐತಿಹ್ಯದಿಂದ ಪುನರ್ರಚಿಸಬಹುದಾದ ಮಥಿತಾರ್ಥವನ್ನು ನೋಡೋಣ. ಹಿಂದೆ ಚರ್ಚಿಸಿದ ಬೆರ್ಮೆರ್‌ನ ವಿಚಾರಕ್ಕೆ ಇದು ನೇರವಾಗಿ ಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ. ಅರಸನು ತನ್ನ ರಾಜ್ಯವನ್ನು ಕುರಿತು ಗಡಿಯನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕು ಹಾಗೂ ಉದ್ದಕ್ಕೂ ರಕ್ಷಿಸಿ ಕೊಂಡಿರಬೇಕು. ಸಮರ್ಥನಾದ ಅರಸ ತನ್ನ ರಾಜ್ಯದ ಯುವ ಯೋಧರನ್ನು ಹಾಗೂ ಬೇಟೆಗಾರರನ್ನು ಬಳಸಿಕೊಂಡು ಗಡಿಯೊಳಗೆ ಶತ್ರುಗಳಾಗಲೀ, ಪ್ರಾಣಿಗಳಾಗಲೀ ಪ್ರವೇಶಿದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯನಾಶಕ್ಕೆ ಇದು ಕಾರಣವಾಗಬಹುದು. ಇಲ್ಲವೇ ಯೋಧರಿಗೆ ಅಪಮಾನ ಉಂಟಾಗಬಹುದು. ಕಾಡಿನಿಂದ ಪ್ರಾಣಿಗಳು ನಾಡಿನೊಳಗೆ ನುಗ್ಗುವುದು ತೀರಾ ಕೇಡು. ಕಾಡಿನಲ್ಲಿ ವನಾಧಿಪತಿಯಾದ ಬೆರ್ಮೆರ್‌ವಾಸಿಸುವುದರಿಂದ ಹಾಗೂ ಅಲ್ಲಿಂದ ದುಷ್ಟ ಪ್ರಾಣಿಗಳು ಹೊರಬರುವುದರಿಂದ ಅದು ಒಂದು ಅಪಾಯಕಾರಕ ಪ್ರದೇಶ ಎಂದು ನಂಬಲಾಗುತ್ತಿದೆ. ಬೆರ್ಮೆರ್ ಪ್ರಾಣಿಗಳನ್ನು ತನ್ನ ಅಂಕೆಯೊಳಗೆ ಇರಿಸಿಕೊಂಡಿದ್ದು ಕಾಡಿನಿಂದ ಕೃಷಿಗಾಗಿ ಸೆಳೆದ ನೆಲವನ್ನು ಮತ್ತೆ ಪುನಃ ಪಡೆದುಕೊಳ್ಳಲು ಪ್ರಾಣಿಗಳಿಗೆ ಅನುಮತಿ ಇತ್ತಿದ್ದಾನೆ ಎಂಬ ತಿಳುವಳಿಕೆ ಇಲ್ಲಿ ಮೂಡುತ್ತದೆ. ಪ್ರಾಣಿಗಳ ಅತಿಕ್ರಮವನ್ನು ಅರಸು ಎರಡು ಬಗೆಯಲ್ಲಿ ಎದುರಿಸಬಹುದು: ಒಂದು, ಅರಣ್ಯ ಪ್ರದೇಶಕ್ಕೆ ಹೋಗಿ ಬೆರ್ಮೆರನ್ನು ಪ್ರಾರ್ಥಿಸಿ ಆರಾಧಿಸುವುದು; ಇನ್ನೊಂದು, ಬೇಟೆ ನಡೆಸುವುದು. ಇಲ್ಲಿ ಬೇಟೆ ಪಡೆಯ ವಿವರಣೆ ಯುದ್ಧ ಪಡೆಯ ವಿವರಣೆಯನ್ನು ಹೋಲುತ್ತದೆ. ಕಾಡು ಹಂದಿಯನ್ನು ಜಯಿಸಲು ಹೋಗುವುದಷ್ಟೇ!

ಅರಣ್ಯದ ಅಲೌಕಿಕ ಜೀವಗಳು ಗದ್ದೆಗೆ ಮಾತ್ರ ಹಾನಿಕಾರಕ ಅಲ್ಲ: ಸ್ತ್ರೀಯರಿಗೆ, ಜಾನುವಾರಗಳಿಗೆ ಅದರಲ್ಲೂ ವಿಶೇಷತಃ ಗರ್ಭಿಣಿಯರಿಗೆ ಇವುಗಳ ಕಾಟ ಹೆಚ್ಚು. ಅರಣ್ಯಪ್ರದೇಶ ಹಾಗೂ ಕೃಷಿಭೂಮಿಗಳ ನಡುವೆ ಖಚಿತವಾದ ಗಡಿಯನ್ನು ಕಾಯುವ ಸಲುವಾಗಿ, ಹಾಗೂ ರಾಜ್ಯವನ್ನು ಪುನಶ್ಚೇತನಗೊಳಿಸಿ ಪ್ರಜಾರಕ್ಷಣೆಗಾಗಿ ಅರಸನು ಕಾಡಿಗೆ ನುಗ್ಗಿ ಬೇಟೆಯಾಡುತ್ತಾನೆ. ಸಿರಿ ಐತಿಹ್ಯದಲ್ಲಿ ಕಾಣುವ ವನಪೂಜೆ ಹಾಗೂ ಇಲ್ಲಿ ಕಾಣುವ ಬೇಟೆ ಎರಡರಲ್ಲೂ ಪ್ರಕೃತಿಯನ್ನು ಜಯಿಸುವ ಮೂಲಕ ಒಂದು ನಿಯಮವನ್ನು ಸ್ಥಾಪಿಸುವ ಪ್ರವೃತ್ತಿಯನ್ನು ಕಾಣುತ್ತೇವೆ. ಅದಕ್ಕಾಗಿಯೇ ಕೋಟಿ ಚೆನ್ನಯರು ಬೆಳೆದ ಮರಗಿಡಗನ್ನು ಕಡಿದು ಚೊಕ್ಕಗೊಳಿಸಿಯೇ ಕೃಷಿಯೋಗ್ಯ ಭೂಮಿಯನ್ನು ರೂಪಿಸಿಕೊಂಡರು. ಹಾಗೆ ಮಾಡುವ ಮೂಲಕ ಮಾನವ ತನ್ನ ಶೌರ್ಯ ಚಾರಿತ್ರ್ಯವನ್ನು ಸ್ಥಾಪಿಸುತ್ತಾನೆ.

ಬೆರ್ಮೆರು ಈ ಕಥೆಯಲ್ಲಿ ಎರಡು ರಾಜ್ಯಗಳ ನಡುವೆ ಇರುವ ಅರಣ್ಯದ ಅಧಿಪತಿ ಎಂಬುದು ಸ್ಪಷ್ಟ. ಪ್ರಾಣಿಗಳು ಹಾಗೂ ಭೂತಗಳು ಬೆರ್ಮೆರ ಪ್ರಜೆಗಳು. ಸತ್ತ ಪೂರ್ವಜರು ಮತ್ತು ಹುಟ್ಟಲಿರುವ ಭವಿಷ್ಯದ ಸಂತತಿ ಇವನ ಸಾಮ್ರಾಜ್ಯಕ್ಕೆ ಒಳಪಟ್ಟವರು. ಬದುಕಿರುವವರ ಲೋಕ ‘ಜೋಗ’; ಬೆರ್ಮೆರ ಲೋಕ ‘ಮಾಯ’ – ಹೀಗೆ ಈ ಎರಡು ಲೋಕಗಳ ನಡುವೆ ನಿರಂತರ ಸಂಚಾರ ಸಾಗುತ್ತದೆ. ಕೋಟಿ ಚೆನ್ನಯರ ಲೌಕಿಕ ರಾಜನ ಸೇವೆಯಲ್ಲಿರುವುದು ‘ಜೋಗ’ ಲೋಕದಲ್ಲಿ. ‘ಮಾಯ’ ಲೋಕದಲ್ಲಿ ಅವರು ಅಲೌಕಿಕ ರಾಜನ (ಬೆರ್ಮೆರ್) ಪರಿವಾರದಲ್ಲಿರುತ್ತಾರೆ.

ವೈಷಮ್ಯವೆಂಬ ಕೇಂದ್ರ ತತ್ವದ ಮೇಲೆ ಅಲೌಕಿಕದ ಭೀತಿ ನಿಂತಿದೆ ಎಂಬುದಾಗಿ ನಾನು ಊಹಿಸುತ್ತೇನೆ. ಬೇಸಾಯ ಪ್ರಕೃತಿಯಿಂದ ಸತ್ವವನ್ನು ಪಡೆಯುವ ಕ್ರಿಯೆಯಾದರೆ ಪ್ರಕೃತಿ ಅದನ್ನು ಪುನಃ ಪಡೆಯಲು ಶ್ರಮಿಸುತ್ತದೆ. ಮಾನವ ಜೀವನವು ಪ್ರಕೃತಿಯ ಸತ್ವಹರಣದಿಂದ ನಡೆದರೆ, ರಾಜನ ಸೀಮೆಗಳ ವಿಸ್ತಾರ ನೆರೆಯ ರಾಜ್ಯಗಳ ಮೇಲಿನ ಅತಿಕ್ರಮಣದಿಂದ ಮುನ್ನಡೆಯುತ್ತದೆ. ಪ್ರಕೃತಿಯ ಮೇಲೆ ಮಾನವನ, ಮೃತ್ಯುವಿನ ಮೇಲೆ ಜೀವನದ ಸಾರ್ವಭೌಮತೆಯನ್ನು ಒಪ್ಪಿಕೊಂಡಂತೆ, ಬೆರ್ಮರ ಸಾರ್ವಭೌಮತೆಯನ್ನು ಒಪ್ಪಲೇಬೇಕು. ಪ್ರಕೃತಿಯ ಒಂದು ಭಾಗದ ಮೇಲೆ ಲೌಕಿಕ ರಾಜನ ಅಧಿಕಾರವು ವಾರ್ಷಿಕವಾಗಿ ತಪ್ಪು ಕಾಣಿಕೆಯ ಮೂಲಕ ನವೀಕರಣಗೊಳ್ಳಬೇಕು. ಈ ಕಾಣಿಕೆಯ ಪ್ರತಿಫಲವಾಗಿ ಆತನು ಪ್ರಕೃತಿಯ ಆ ಭಾಗವನ್ನು ಉಪಯೋಗಿಸಿಕೊಳ್ಳಲು ಅಧಿಕಾರವನ್ನು ಪಡೆಯುತ್ತಾನೆ. ಪಾರಲೌಕಿಕ ದೊರೆಯು ಪ್ರಕೃತಿಗೆ ಚೈತನ್ಯವನ್ನು ನೀಡುತ್ತಾನೆ. ಇದಕ್ಕೆ ಪ್ರತಿಯಾಗಿ ಲೌಕಿಕದ ರಾಜನು ಉತ್ಪನ್ನದ ಒಂದು ಭಾಗವನ್ನು ‘ಪ್ರಥಮ ಫಸಲು’ (Fruits fruits)ಗಳ ರೂಪದಲ್ಲಿ ನೀಡಬೇಕು.

ರಾಜನು ತನ್ನ ಸಾಮ್ರಾಜ್ಯದ ಗಡಿಗಳನ್ನು ರಕ್ಷಿಸಲು ವಿಫಲನಾದಾಗ ಮತ್ತು ಕೊನೆಯಲ್ಲಿ ತನ್ನ ರಾಜ್ಯ ಹಾಗೂ ಪ್ರಜೆಗಳನ್ನು ‘ಮಾಯ’ದ ವಿರುದ್ಧ ಸಂರಕ್ಷಿಸಿ ಕೊಳ್ಳಲು ಅಸಮರ್ಥನಾದಾಗ ವನಾಧಿಪತಿಯಾದ ಬೆರ್ಮೆರನ್ನು ತನ್ನ ಸಾರ್ವಭೌಮನೆಂದು ಒಪ್ಪಿಕೊಳ್ಳಬೇಕಾಗುತ್ತದೆ.[2]

ತುಳುನಾಡಿನ ಸಮಕಾಲೀನ ಸಾಮಾಜಿಕ ರಚನೆಯು ಕೂಡಾ ಈ ಬಗೆಯ ಊಳಿಗಮಾನ್ಯ ಶ್ರೇಣಿ ವ್ಯವಸ್ಥೆಯ ಮೇಲೆ (Feudal hierarchy) ಆಧಾರಿತವಾಗಿದೆ. ತುಳುವರಾಜ್ಯದ ಪ್ರತಿ ಮನೆ ಹಾಗೂ ಗ್ರಾಮಗಳಲ್ಲಿ ಈ ರೀತಿಯ ಶ್ರೇಣಿ ವ್ಯವಸ್ಥೆಯು ಕಂಡುಬರುತ್ತಿದ್ದು ಅವುಗಳು ಒಂದು ಸೂಕ್ಷ್ಮ ವಿಶ್ವದ ರೂಪದಲ್ಲಿ ತೋರಿಬರುತ್ತವೆ. ಮನೆಗಳು ಮತ್ತು ಗ್ರಾಮಗಳು ತಮ್ಮ ಉತ್ಪನ್ನದ ಒಂದು ಭಾಗವನ್ನು ರಾಜ್ಯಾಧಿಪತಿಗೂ ಗೌರವಕಾಣಿಕೆಯಾಗಿ ಕೊಡಬೇಕಾಗುತ್ತದೆ.

ಇಂದಿನ ದಿವಸಗಳಲ್ಲಿ ರಾಜರುಗಳಿಲ್ಲದಿದ್ದರೂ ವಿವಿಧ ಮಟ್ಟಗಳ ಗೇಣಿಪದ್ಧತಿ ಜಾರಿಯಲ್ಲಿದೆ. ಮಾತ್ರವಲ್ಲದೆ ಮೇಲ್ಕಾಣಿಸಿದ ಸಮಾಜ ರಚನೆಯ ತುತ್ತತುದಿಯಲ್ಲಿ ಬಲಾಢ್ಯಗುತ್ತಿನ ಮನೆಗಳಿರುತ್ತವೆ (ಕುರುಪ್, ೧೯೭೩:೧೬ ತೆಯ್ಯಂ ಪದ್ಧತಿಯಲ್ಲೂ ಸಮಾನ ಪರಿಶೀಲನಾಂಶಗಳು ಕಂಡುಬರುತ್ತವೆ). ಪರಿಕಲ್ಪನಾತ್ಮಕವಾಗಿ ಮಾನವನ ಸ್ಥಾನ, ರಾಜ್ಯ ಹಾಗೂ ಅಲೌಕಿಕಗಳ ಬಗೆಗೆ ಕೆಳಗಿನ ರೇಖಾಚಿತ್ರವನ್ನು ಗಮನಿಸಬಹುದು.

07_42_TSC-KUH

ತುಳು ಮೂಲಗಳಿಂದ ಮೂಡಿ ಬರುವ ಅರಸು ಆರಾಧನಾ ಪದ್ಧತಿ

ಪಾಡ್ದನಗಳ ಮತ್ತು ಸಮಾಕಾಲೀನ ಬ್ರಾಹ್ಮಣೇತರ ಆರಾಧನಾ ಪದ್ಧತಿಗಳ ಪರಿಶೀಲನೆಯ ಆಧಾರದ ಮೇಲೆ ಒಂದು ಮೂಲಭೂತ ಹಾಗೂ ಪ್ರಾಚೀನ ತುಳುವ ಧಾರ್ಮಿಕ ಸಂಕೀರ್ಣತೆಯ ಅಸ್ತಿತ್ವದ ಸೂಚನೆಗಳು ಪಾಡ್ದನಗಳಲ್ಲಿ ದೊರಕುತ್ತವೆಯಾದರೂ ಅಂಥ ‘ಸಂಕೀರ್ಣ’ವನ್ನು ಈ ಪಾಡ್ದನಗಳು ರುಜುಪಡಿಸುವುದಿಲ್ಲ ಎಂಬುದನ್ನು ನಾನು ಪುನಃ ಸೂಚಿಸಬಯಸುತ್ತೇನೆ. ಅವುಗಳು ಗತಕಾಲದ ಒಂದು ಬಗೆಯ ಆರಾಧನಾ ಪದ್ಧತಿಯನ್ನು ಬಿಂಬಿಸುತ್ತವೆ ಎಂದು ನಾವು ಪ್ರಾಕ್ಕಲ್ಪನೆಯನ್ನಷ್ಟೇ ಮಾಡಬಹುದು. ಈ ಧಾರ್ಮಿಕ ಸಂಕೀರ್ಣದ ಸಾರವು ಅರಸನ (ಸ್ಥಳೀಯ ಜುಮಿನ್ದಾರ ಅಥವಾ ಆಳರಸ) ಅವನ ಪೂರ್ವಿಕರ ದೈವಗಳ ಹಾಗೂ ವನದೇವತೆ (ಬೆರ್ಮೆರ್)ಯ ಸುತ್ತ ಕೇಂದ್ರೀಕೃತವಾಗಿದ್ದಿರಬೇಕು. ಈ ರಾಜ ಉಪಾಸನಾ ಪದ್ಧತಿಯು ರಾಜ್ಯದ ಧರ್ಮವಾಗಿದ್ದರೂ ಅದು ಮೂಲತಃ ಪಿತೃಪೂಜೆ (ancestral cult ಭೂತ ಅಗೆಲ್) ಹಾಗೂ ಗ್ರಾಮ ಉಪಾಸನೆ (Village cult ಭೂತಕೋಲ – ಭೂತನೇಮ) ಪದ್ಧತಿಗಳಿಗಿಂತ ಮೂಲತಃ ಭಿನ್ನರೂಪದ್ದಾಗಿರಲಿಲ್ಲ ಎಂದು ಸೂಚಿಸಬಯಸುತ್ತೇನೆ. ಅರಸು ಆರಾಧನಾ ಪದ್ಧತಿ ಹಾಗೂ ಪಿತೃ ಉಪಾಸನೆ, ಗ್ರಾಮ ಉಪಾಸನೆಗಳು ಗುಣಾತ್ಮಕವಾಗಿ ಎರಡು ವಿಷಯಗಳಲ್ಲಿ ಭಿನ್ನವಾಗಿವೆ. ಮೊದಲನೆಯದಾಗಿ, ರಾಜ ಉಪಾಸನಾ ಪದ್ಧತಿಯಲ್ಲಿ ರಾಜನು ಕೇಂದ್ರವಾಗಿದ್ದು ರಾಜನ ಕ್ಷೇಮಾಭ್ಯುದಯವು ಸಮಾಜದಲ್ಲಿ ಮಹತ್ವದ ಸಂಗತಿಯಾಗಿತ್ತು. ಎರಡನೆಯದಾಗಿ, ಎಲ್ಲ ಧಾರ್ಮಿಕ ಆಚರಣೆಗಳೂ ಅರಸನ ಅಥವಾ ಅವನ ಪರಿವಾರದವರಿಂದಲೇ ನಡೆಯಬೇಕಿತ್ತು. ಆದರೆ ಆರಾಧನೆಯ ಸಣ್ಣ ಪುಟ್ಟ ವಿಧಿವಿಧಾನಗಳನ್ನು ಇತರರಿಗೆ ಒಪ್ಪಿಸುವುದೂ ಇತ್ತು. ಏನಿದ್ದರೂ ರಾಜ್ಯದೊಳಗೆ ಅರಸನು ಅತ್ಯಂತ ಶ್ರೇಷ್ಠನೆಂದೂ, ಆರಾಧನಾ ವಿಧಿಗಳನ್ನು ನಡೆಸುವವರ ಕೇಂದ್ರ ವ್ಯಕ್ತಿಯೆಂದೂ ಪರಿಗಣಿಸಲಾಗುತ್ತಿತ್ತು. ಜನಸಾಮಾನ್ಯರನ್ನೂ ಮುನ್ನಡೆಸುವ ಹಾಗೂ ಅಲೌಕಿಕ ಶಕ್ತಿಗಳನ್ನು ಎದುರಿಸುವ ಹೊಣೆಗಾರಿಗೆ ಅರಸನದಾಗಿತ್ತು. ತನ್ನ ಸೇವಕವರ್ಗದವರಿಗೆ ಕೆಲವೊಂದು ಆರಾಧನಾ ವಿಧಿವಿಧಾನಗಳನ್ನು ನಡೆಸುವ ಹಕ್ಕನ್ನು ಅರಸನು ವರ್ಗಾಯಿಸಬಹುದು. ಅರಸು ಆರಾಧನೆಯ ಸಂದರ್ಭದ ಈ ಕರ್ತವ್ಯಗಳು ಹುದ್ದೆಯ ಸ್ವರೂಪದವುಗಳಾಗಿದ್ದು ಕ್ರಮೇಣ ಆನುವಂಶಿಕ ಸ್ವರೂಪದ್ದಾಗಿ ರೂಪುಗೊಂಡವು.

ತತ್ಕಾಲಕ್ಕೆ ಈ ಎರಡು ಗುಣವಿಶೇಷಗಳನ್ನು ಬದಿಗಿರಿಸಿ ಪ್ರಚಲಿತ ತುಳು ಸಮಾಜದಲ್ಲಿರುವ ಅರಸು ಆರಾಧನೆಗೆ ಸಂಬಂಧಿಸಿದ ಇತರ ಪಿತೃದೈವಾರಾಧನೆಗಳನ್ನು ನೋಡೋಣ. ಪ್ರಸ್ತುತ ಪಿತೃ ಆರಾಧನಾ ಪದ್ಧತಿಯು ಪಾಡ್ದನಗಳಂತೆ ಒಂದು ಪ್ರಾಚೀನ ಉಪಾಸನಾ ಪದ್ಧತಿಯ ಪುನರ್ರಚನೆಗೆ ಹಲವು ಸುಳುಹುಗಳ್ನು ನೀಡುತ್ತದೆ. ಭೂತಾರಾಧನೆಯಲ್ಲಿ ಪ್ರಧಾನವಾಗಿ ಎರಡು ಬಗೆ; ಕುಟುಂಬಗಳ ಮಟ್ಟದಲ್ಲಿ ಒಂದು (ಅಗೆಲ್, ತಂಬಿಲ) ಹಾಗೂ ಇನ್ನೊಂದು ಗ್ರಾಮ ಮಟ್ಟದಲ್ಲಿ (ನೇಮ) ಭೂತಾರಾಧನೆಯು ನಡೆದು ಬರುತ್ತದೆ.

ಕುಟುಂಬದ ಪೂರ್ವಿಕರ ಉಪಾಸನೆಯು ಕುಟುಂಬದ ಸದಸ್ಯರಿಗೆ ಮಾತ್ರ ಸೀಮಿತವಾಗಿದ್ದು, ಅದು ಕುಟುಂಬವನ್ನು ಪ್ರತಿನಿಧೀಕರಿಸುವ ಕೆಲವೊಂದು ಆಯ್ದ ಭೂತಗಳಿಗೆ ಸಂಬಂಧಿಸಿದ್ದಾಗಿದೆ. ಕುಟುಂಬದ ಹೊರಗಿನ ಸದಸ್ಯರಿಗೆ (ಬ್ರಾಹ್ಮಣರಿಗೆ) ಈ ಉಪಾಸನಾ ಪದ್ಧತಿಯಲ್ಲಿ ಅಧಿಕೃತ ಕರ್ತವ್ಯಗಳೇನೂ ಇಲ್ಲ. ಪೂರ್ವಿಕರ ಪ್ರೇತಾತ್ಮಗಳು (ತು. ಸೈತಿನಕ್ಲು), ವೀರ ದೈವಗಳು, ಕುಲಲಾಂಛನ ದೈವಗಳು(totemic spirits) ಬದುಕಿದ್ದಾಗ ತಮ್ಮ ರಹಸ್ಯಾತ್ಮಕ ಶಕ್ತಿಗಳಿಂದ ರೋಗನಿವಾರಣ ಹಾಗೂ ಶಾಪಾನುಗ್ರಹ ಶಕ್ತಿಗಳನ್ನು ಹೊಂದಿದ್ದ ವ್ಯಕ್ತಿಗಳ ಪ್ರೇತಾತ್ಮಗಳು – ಒಟ್ಟಿನಲ್ಲಿ ಇವುಗಳ ಸಮುದಾಯವನ್ನು ಭೂತಗಳೆನ್ನಬಹುದು. ಸಾರ್ವತ್ರಿಕವಾಗಿ ಅನ್ಯಯವಾಗುವಂತೆ ಮನೆತನದ ದೈವಗಳ ಸ್ವರೂಪವನ್ನು ಖಚಿತವಾಗಿ ಹೇಳಬರುವಂತಿಲ್ಲ. ಇದಕ್ಕೆ ಕಾರಣಗಳು ಎರಡು : ಒಂದು ಕೆಲವೊಂದು ಪ್ರಬಲ ಹಾಗೂ ಪ್ರಭಾವೀ ವ್ಯಕ್ತಿಗಳ ಪ್ರೇತಾತ್ಮಗಳನ್ನು ಹೊರತು ಉಳಿದೆಲ್ಲ ಪೂರ್ವಿಕರ ಪ್ರೇತಾತ್ಮಗಳಿಗೆ ಸಾಮೂಹಿಕ ಪೂಜೆ ಸಲ್ಲುತ್ತಿರುವುದು; ಎರಡನೆಯದಾಗಿ ಅಲೌಕಿಕ ಶಕ್ತಿಯನ್ನು ಹೊಂದಿದ ಪ್ರಾಣಿರೂಪದ ದೈವಗಲು (ಪಂಜುರ್ಲಿ ಇತ್ಯಾದಿ) ಈ ಆರಾಧನಾ ವಲಯದೊಳಗೆ ಹಾನಿಕಾರಕ ದೈವಗಳಾಗಿ ಪ್ರವೇಶಿಸಿದರೂ ಅಲ್ಲಿ ರಕ್ಷಕ ದೈವಗಳಾಗಿ ಉಳಿಯುವುದು. (ನೋಡಿ ಕ್ಲಾಸ್ ೧೯೭೩: ಗಾಫ್, ೧೯೫೯ ಎ) ಇವೆಲ್ಲವುಗಳ ಅಂತಿಮ ಫಲಶ್ರುತಿಯೆಂದರೆ ಐತಿಹಾಸಿಕವಾಗಿ ವಿಶಿಷ್ಟವಾದ ದೈವ ಸಮುದಾಯಗಳ ನಿರ್ಮಾಣ. ಹಾಗಿದ್ದರೂ ಹೆಚ್ಚಿನ ಕುಟುಂಬ ದೈವಗಳನ್ನು ಕುರಿತಾದ ಕಲ್ಪನೆ ಹಾಗೂ ಸಮಾಜದಲ್ಲಿ ಅವುಗಳ ಪಾತ್ರಗಳ ಬಗೆಗೆ ಒಂದು ಬಗೆಯ ಸಮಂಜಸತೆ ಇದೆ. ಉದಾಹರಣೆಗೆ, ಈ ದೈವಬಳಗದಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ಕುಲಲಾಂಛನ ದೈವವೆಂದರೆ ಪಂಜುರ್ಲಿ (ಕಾಡು ಹಂದಿ). ಕಾಡುಹಂದಿಯು ವನಾಧಿಪತಿ ಬೆರ್ಮೆರ ಯೋಧಸೇವಕನಾಗಿ ಪರಿಗಣಿತನಾಗಿರುವುದನ್ನು ನಾನು ಈಗಾಗಲೇ ಸೂಚಿಸಿದ್ದೇನೆ. ಕಾಡು ಹಂದಿಯು ತನ್ನ ಉಗ್ರತೆಗೆ ಹಾಗೂ ವಿನಾಶಕಾರೀ ಶಕ್ತಿಗೆ ಹೆಸರುವಾಸಿಯಾಗಿದೆ. ಕೆಲವೊಂದು ಪಾಡ್ದನಗಳಲ್ಲಿ ಕಾಡುಹಂದಿಯನ್ನು ರೋಗರುಜಿನಗಳನ್ನು ಹರಡಲು ಉಚ್ಚದೇವತೆ (ಶಿವ)ಯೊಬ್ಬನು ಹಳ್ಳಿಗೆ ಕಳುಹಿಸಿರುವುದಾಗಿ ಹೇಳಿದೆ. ಈ ಕಾಡು ಹಂದಿಯ ಕರ್ತವ್ಯ ಗದ್ದೆಯ ಬೆಳೆ ಪೈರುಗಳ ನಾಶ. ಜಾನುವಾರು ಹಾಗೂ ಮಕ್ಕಳಿಗೆ ಕಾಯಿಲೆ ಕಸಾಲೆಗಳನ್ನು ತಂದೊಡ್ಡಿ ಹಳ್ಳಿಗಳ ಜನರಲ್ಲಿ ಭೀತಿಯನ್ನು ಹುಟ್ಟಿಸಿ, ಅವರಿಂದ ಸಂಬಂಧಪಟ್ಟ ದೇವತೆಗಳಿಗೆ ಕಾಣಿಕೆ (ಹರಕೆ)ಯನ್ನು ಒಪ್ಪಿಸುವಂತೆ ಮಾಡುವುದಾಗಿದೆ.[3] ಇಲ್ಲಿ ಕಾಡುಹಂದಿಯು ದೇವತೆಯಿಂದ ಪಡೆದ ಆಜ್ಞೆಯು ಒಂದು ಬಗೆಯ ಅಧಿಕಾರದ ರೂಪದಲ್ಲಿರುತ್ತದೆ – ‘‘ಹಳ್ಳಿಯಲ್ಲಿ (ಊರು) ಕಾಡುಹಂದಿ (ತು. ಕಾಡಪಂಜಿ)ಯಾಗಿದ್ದು ‘ಪಂಜುರ್ಲಿ’ ಎಂಬ ಹೆಸರನ್ನು ಪಡೆದು ಜನರಿಂದ ಕಾಣಿಕೆ (ತು.ಬಲಿಬೋಗ) ಹಾಗೂ ನೇಮಗಳ ರೂಪದಲ್ಲಿ ಹರಕೆಗಳನ್ನು ಜನರಿಂದ ಸೆಳೆ…’’ (ಮ್ಯಾನ್ನರ್ ೧೮೮೬: ೪) ಈಗಾಗಲೇ ನಾನು ವನಾಧಿಪತಿ (ಬೆರ್ಮೆರ್) ಮತ್ತು ಅವನ ಮಾನವ ಪ್ರತಿರೂಪ (human counter part) ಊರಿನ ಅರಸನ ನಡುವೆ ಊಳಿಗಮಾನ್ಯ ಸಂಬಂಧವನ್ನು ಕುರಿತು ಚರ್ಚಿಸಿದ್ದೇನೆ. ಈ ಸಂದರ್ಭದಲ್ಲಿ ವನಯೋಧನಾದ ಹಂದಿಯು ಊರಿನ ಅರಸನನ್ನು ಸೇವಿಸುವ ಒಕ್ಕಲು ವರ್ಗವನ್ನು ತನ್ನ ಪ್ರತಿರೂಪವಾಗಿ ಕಂಡುಕೊಳ್ಳುತ್ತಿದೆ. ಇದಲ್ಲದೆ ಪಾಡ್ದನಗಳಲ್ಲಿ ಬರುವ ಆದರ್ಶ ಬಿಲ್ಲವ ಯೋಧರಾದ ಕೋಟಿ ಚೆನ್ನಯರು ಹಾಗೂ ಕಾಡು ಹಂದಿಯಾದ ಪಂಜುರ್ಲಿಗಳ ನಡುವೆ ಸ್ಪಷ್ಟವಾದ ಸಾಮ್ಯವು ಕಂಡು ಬರುತ್ತಿದೆ. ಕೋಟಿ ಚೆನ್ನಯರು ಹಾಗೂ ಪಂಜುರ್ಲಿ ದೈವ ತಮ್ಮ ಮೂಲ ಲೋಕ (ಮಾಯ)ದಿಂದ ಇನ್ನೊಂದು ಲೋಕಕ್ಕೆ (ಜೋಗ)ಕ್ಕೆ ಸರಿದುದು ಒಂದು ಉಳಿಗಮಾನ್ಯ ಹಕ್ಕು ಬಾಧ್ಯತೆ ಪದ್ಧತಿಯ ಸ್ಥಾಪನೆಗೆ ಅನುಮತಿ ಪಡೆದು ಮಾಯ ಲೋಕದಿಂದ ಇನ್ನೊಂದು ಲೋಕಕ್ಕೆ ಬಂದುದಾಗಿದ್ದು ರಾಜನ ಹಾಗೂ ಪ್ರಕೃತಿಯ ಸಂಬಂಧಗಳಲ್ಲಿ ಕುಟುಂಬಗಳ ಸ್ಥಾನಮಾನವನ್ನು ಸೂಚಿಸುತ್ತದೆ. ಮೇಲೆ ನಿರೂಪಿಸಿದ ಹಾಗೂ ಇನ್ನಿತರ ಹೋಲುಮೆಗಳ ಮೂಲಕ ಕಾಡು ಹಂದಿಯು ಮನೆತನಗಳ ಸ್ಥಾನಮಾನವನ್ನು – ಯಜಮಾನನೊಂದಿಗಿನ ಹಾಗೂ ಪ್ರಕೃತಿಯೊಂದಿಗಿನ ಸಂಬಂಧವನ್ನು ಪ್ರತಿನಿಧಿಸುತ್ತದೆ. ಎರಡು ಸಂದರ್ಭಗಳಲ್ಲೂ ಮನೆತನಗಳ ಸ್ಥಾನಮಾನವೂ ಊಳಿಗಮಾನ್ಯ ಅಧಿಕಾರ ಸೂತ್ರಕ್ಕೆ ಹಾಗೂ ಪ್ರಕೃತಿಯ ಸಂಬಂಧಕ್ಕೆ ಬದ್ಧವಾಗಿದೆ.

ಅಗೆಲು ಅಥವಾ ತಂಬಿಲಗಳು ಕುಟುಂಬದ ನಡವಳಿಯಂತೆ ನಡೆವ ಉಪಾಸನಾ ಕ್ರಿಯೆಗಳು. ಬೇಯಿಸಿದ ಆಹಾರ ವಸ್ತುಗಳ ನೈವೇದ್ಯವು ಈ ಉಪಾಸನೆಯ ಪ್ರಧಾನ ಅಂಶವಾಗಿದೆ. ಹಬ್ಬದ ದಿನಗಳಲ್ಲಿ ಕುಟುಂಬದ ಸದಸ್ಯರು ಉಣ್ಣುವ, ತಿನ್ನುವ ಆಹಾರ ಪದಾರ್ಥಗಳನ್ನೇ ದೈವಗಳಿಗೆ ನಿವೇದಿಸಲಾಗುತ್ತದೆ. (ಮೇಲೊಗರ ಹೊದಲು, ಕಳ್ಳು, ವೀಳೆಯದೆಲೆ ಇತ್ಯಾದಿ) ಈ ನೈವೇದ್ಯದ ಮೊದಲು ಕುಟುಂಬದ ಗುಡಿಯನ್ನು ಅಲಂಕರಿಸಲಾಗುತ್ತದೆ. ಬಳಿಕ ಪ್ರಾರ್ಥನಾರೂಪದ ಹೇಳಿಕೆಯು ಜರಗುತ್ತದೆ. ಇದು ನೈವೇದ್ಯವನ್ನು ಸ್ವೀಕರಿಸುವಂತೆ ದೈವಗಳಿಗೆ ಸದಸ್ಯರು ನೀಡುವ ಆಹ್ವಾನ (ನೈವೇದ್ಯವಾಗಿರಿಸಿದ ಆಹಾರ ವಸ್ತುಗಳು ಆಗ ತಾನೆ ಬೇಯಿಸಿದವುಗಳಾಗಿದ್ದು ಎಂಜಲಾಗಿರ ಕೂಡದು). ಕುಟುಂಬವು ದೈವಗಳಿಗೆ ಆತಿಥೇಯವಾಗಿರುತ್ತದೆ. ದೈವಗಳು ಕುಟುಂಬದ ಸದಸ್ಯನೊಬ್ಬನ ಮೈಮೇಲೆ ಆವಾಹನಗೊಳ್ಳಬಹುದು. ಒಂದು ವೇಳೆ ಈ ಬಗೆಯ ಆವಾಹನೆ ಜರಗದಿದ್ದರೂ ಕೆಲವೊಂದು ಸರಳ ಶಕುನ ಲಕ್ಷಣಗಳ ಮೂಲಕ ದೈವದ ಹಾಜರಾತಿ ಹಾಗೂ ಅವು ನೈವೇದ್ಯದಿಂದ ಸಂತೃಪ್ತಗೊಂಡ ಬಗೆಗೆ ತಿಳಿದುಕೊಳ್ಳಲಾಗುತ್ತದೆ. ದೈವಗಳಿಂದ ನೈವೇದ್ಯ ಸ್ವೀಕರಣೆಯ ಬಳಿಕ ಕುಟುಂಬದ ಶ್ರೇಯಸ್ಸಿನ ಬಗೆಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ತದನಂತರ ದೈವವು ಕುಟುಂಬವನ್ನು ಆಶೀರ್ವದಿಸಿ ತೆರಳುತ್ತದೆ. ಅಲ್ಲಿಗೆ ಈ ಸಮಾರಂಭವು ಕೊನೆಗೊಂಡು ನೈವೇದ್ಯ ಶೇಷ (ಪ್ರಸಾದ)ವನ್ನು ಕುಟುಂಬದ ಹಿರಿಯನು ಸದಸ್ಯರಿಗೆಲ್ಲಾ ಹಂಚುತ್ತಾನೆ, ಈ ಸಮಾರಂಭವನ್ನು ಬೇಕಾದಂತೆ ಪರಿಷ್ಕರಿಸಿ ವಿಸ್ತರಿಸಲು ಸಾಧ್ಯ. ಕೆಲವೊಮ್ಮೆ ಪ್ರಾರ್ಥನಾರೂಪದ ಹೇಳಿಕೆ (ತ. ಮದಿಪು)ಗಳನ್ನು ಮಾಡಲು, ನೈವೇದ್ಯ ತಯಾರಿಸಲು ದರ್ಶನ ಪಾತ್ರಿಗಳಾಗಿ ಕಾರ್ಯನಿರ್ವಹಿಸಲು, ಹಾಗೂ ದೈವ ಮಾಧ್ಯಮ ಕುಣಿತವನ್ನು ನಡೆಸಲು ವೃತ್ತಿಪರರನ್ನು ನೇಮಕ ಮಾಡುವುದಿದೆ. ಇದನ್ನು ಸಾಮಾನ್ಯವಾಗಿ ಉಚ್ಚ ವರ್ಗದ ಕುಟುಂಬಗಳಲ್ಲಿ ತಮ್ಮ ಪ್ರತಿಷ್ಠೆಯನ್ನು ಮೆರೆಸುವ ಸಲುವಾಗಿ ಮಾತ್ರ ನಡೆಸಲಾಗುತ್ತಿದೆ.

ಸಾಮಾನ್ಯವಾಗಿ ಕುಟುಂಬದ ಹಿರಿಯ ಗಂಡಸು ಈ ಸಮಾರಂಭಗಳಿಗೆ ಕಾರ್ಯ ನಿರ್ವಾಹಕನಾಗಿದ್ದು ದೈವಗಳ ಮತ್ತು ಮನುಷ್ಯ ಸಮುದಾಯದ ಮಧ್ಯಸ್ಥನಾಗಿರುತ್ತಾನೆ. ಈ ಸಮಾರಂಭದಲ್ಲಿ ಅವನ ಪಾತ್ರವು ಪ್ರಮುಖವಾಗಿದೆ. ಆತನನ್ನೇ ನಾವು ಮುಖ್ಯ ಅರ್ಚಕ ಎಂದು ತಿಳಿದುಕೊಳ್ಳತಕ್ಕದ್ದು. ದೈವವನ್ನು ಎದುರುಗೊಳ್ಳುವ, ಸ್ತುತಿ ರೂಪದ ಹೇಳಿಕೆಗಳನ್ನು ಹೇಳುವ, ನೈವೇದ್ಯವನ್ನು ಅರ್ಪಿಸುವ, ಆಶೀರ್ವಾದವನ್ನು ಪಡೆವ ಕೆಲಸಗಳನ್ನು ಆತನು ಮಾಡಬೇಕಾಗಿದ್ದು ಸಮಾರಂಭದ ಕೊನೆಯಲ್ಲಿ ಪ್ರಸಾದ ವಿತರಣೆಯು ಇವನ ಹೊಣೆಗಾರಿಕೆ. ಕುಟುಂಬದ ಇತರ ಸದಸ್ಯರು ಆಚರಣೆಗೆ ಸಂಬಂಧಿಸಿದ ಸಣ್ಣ ಪುಟ್ಟ ಕ್ರಿಯೆಗಳಾದ ಗುಡಿಯ ಸಿದ್ಧತೆ, ಅಲಂಕಾರ, ನೈವೇದ್ಯದ ತಯಾರಿ ಮತ್ತು ದರ್ಶನ ಪಾತ್ರಿಯಾಗಿ ನಿಲ್ಲುವುದು ಇತ್ಯಾದಿಗಳನ್ನು ನಿರ್ವಹಿಸುತ್ತಾರೆ. ಈ ಕುಟುಂಬದ ಸದಸ್ಯರಲ್ಲಿ ಈ ಚಾಕರಿಗಳ ಹಂಚುವಿಕೆಯಲ್ಲಿ ಯಾವುದೇ ನಿಶ್ಚಿತ ನಿಯಮಗಳಿಲ್ಲ. ಸಾಮಾನ್ಯವಾಗಿ ಸದಸ್ಯರುಗಳು ತಮ್ಮ ದೈನಂದಿನ ಬದುಕಿನಲ್ಲಿ ನಿರ್ವಹಿಸುವಂತಹ ಕಾರ್ಯಗಳನ್ನೇ ಅವರು ಈ ವಿಶಿಷ್ಟ ಸಮಾರಂಭಗಳಲ್ಲಿ ನಿರ್ವಹಿಸುತ್ತಾರೆ. ಶ್ರೀಮಂತ ಜಮಿನ್ದಾರಿ ಮನೆತನಗಳ ಕುಲ ದೈವ ಉಪಾಸನೆಗಳಲ್ಲಿ ಹಾಗೂ ಗ್ರಾಮ ಉಪಾಸನೆಗಳಲ್ಲಿ ಮೇಲೆ ಹೇಳಿದ ಸಣ್ಣಪುಟ್ಟ ಚಾಕರಿಗಳನ್ನು ಸಮಾಜದ ವಿಭಿನ್ನ ಜಾತಿಯ ಪರಿಣತರಿಗೆ ವಹಿಸಿಕೊಡಲಾಗುತ್ತದೆ. ಈ ಬಗೆಯ ವ್ಯವಸ್ಥೆಗೆ ಭೂಮಾಲಕ ಮನೆತನಗಳ ಅಜಲ್ ರೀತಿಯ ಸಂಬಂಧಗಳು (jajamani) ಮತ್ತು ಗ್ರಾಮದ ಸ್ಥಳೀಯ ಆಡಳಿತ ಪದ್ಧತಿ ಕಾರಣವಾಗಿದೆ.

ಗ್ರಾಮ ಮಟ್ಟದಲ್ಲಿ ನಡೆವ ನೇಮಗಳು ಅಗೆಲು, ತಂಬಿಲಗಳಿಗಿಂತ ಹೆಚ್ಚು ಸಂಕೀರ್ಣ. ಸಾಮಾನ್ಯವಾಗಿ ನೇಮಗಳಲ್ಲಿ ಆರಾಧನೆಗೊಳ್ಳುವ ದೈವಗಳು: ಬೆರ್ಮೆರ್ (ರಾಜನ್ ದೈವ) ಸಹಾಯಕ ದೈವ (ಬಂಟ), ಕೋಟಿ ಚೆನ್ನಯ, ಮುಗ್ಗೇರ್ಲು(ಮುಗೇರ ಎನ್ನುವ ಬೇಡರ ಜಾತಿಗೆ ಸೇರಿದ ವೀರರು) ಮುಂತಾದ ದೈವಗಳು ಹಾಗೂ ಇನ್ನಿತರ ಸಣ್ಣಪುಟ್ಟ ಭೂತಗಳು (ತು. ತುಂಡು ಬೂತೊಲು) ಈ ದೈವಗಳ ಒಳಗಣ ಸಂಬಂಧವು ಗ್ರಾಮದ ಊಳಿಗಮಾನ್ಯ ಪದ್ಧತಿಯಂತಿರುತ್ತದೆ. ಗ್ರಾಮದ ವಾರ್ಷಿಕ ನೇಮಗಳಲ್ಲಿ ಈ ದೈವಗಳು ವೇಷಾಲಂಕೃತ ಭೂತ ನರ್ತಕನಲ್ಲಿ ಪರವ, ಪಂಬದ, ನಲಿಕೆ ಜಾತಿ) ಪ್ರಕಟಗೊಂಡು ಬೇರೆ ಬೇರೆ ಜಾತಿ ವರ್ಗಗಳನ್ನು ವೈಭವೀಕರಿಸಿ ಪ್ರತಿನಿಧಿಕರಿಸುತ್ತವೆ (ಕ್ಲಾಸ್ : ೧೯೭೩) ನೇಮದ ಮೊದಲ ರಾತ್ರಿಯಲ್ಲಿ ಬೆರ್ಮೆರ ಆರಾಧನೆ ನಡೆಯುತ್ತದೆ. ಎರಡನೆಯ ರಾತ್ರಿಯು ಊರ ಜಮಿನ್ದಾರನ ರಾಜನ್ ದೈವದ ಆರಾಧನೆಗೆ ಮೀಸಲು. ಮೂರನೆಯ ರಾತ್ರಿ ವೀರ ದೈವಗಳು (warrior hero) ರಾಜನ್ ದೈವದೊಡಗೂಡಿ ಕಾಣಿಸಿಕೊಳ್ಳುತ್ತವೆ. ಪ್ರತಿಯೊಂದು ದೈವವನ್ನು ಅದರ ನಿಶ್ಚಿತ ವಸ್ತ್ರಾಲಂಕಾರ, ಆಯುಧಗಳಿಂದ ಗುರುತಿಸಬಹುದು.

ನೇಮದ ಆಚರಣೆಯು ಹೆಚ್ಚು ವಿಸ್ತೃತ ಹಾಗೂ ಸಂಕೀರ್ಣ. ಸಾಮಾನ್ಯವಾಗಿ ನೇಮವು ಮೂರು ಘಟ್ಟಗಳಲ್ಲಿ ನಡೆಯುತ್ತದೆ. ಮೊದಲ ಘಟ್ಟದಲ್ಲಿ ಪ್ರಾರ್ಥನೆ, ನೇಮದ ಕಳದ ಶುದ್ಧೀಕರಣ, ಗುಡಿಯ ಸಿದ್ಧತೆ, ದೈವದ ಪಾಡ್ದನದ ಹಾಡುವಿಕೆ, ಭೂತ ಕಟ್ಟುವವನ ಅಲಂಕಾರಗಳು ಜರಗುತ್ತವೆ. ಭೂತ ಕಟ್ಟುವವನು ಹಳ್ಳಿಯ ಗುರಿಕಾರರ ಅನುಮತಿಯನ್ನು ಪಡೆದು ಗಗ್ಗರಗಳನ್ನು ಧರಿಸಿದಾಗ ದೈವದ ಆವಾಹನೆಯಾಗುತ್ತದೆ.

ಎರಡನೆಯ ಘಟ್ಟದಲ್ಲಿ ದೈವವು ಭೂತಕಟ್ಟಿದವನ ದೇಹವನ್ನು ಬಿಟ್ಟು ತಾನು ಪ್ರತಿನಿಧೀಕರಿಸುವ ದೈವದ ಜಾತಿಯ ಪಾತ್ರಿಯೊಬ್ಬನ ದೇಹವನ್ನು ಪ್ರವೇಶಿಸುತ್ತದೆ. (ತು. ಪಂಬದ ಎಚ್ಚಿಡ್ದ್‌ಮಾನಿ ಎಚ್ಚಿಗ್‌) ಎರಡನೆಯ ಘಟ್ಟದಲ್ಲಿ ಪಾತ್ರಿ (ತು.ಮಾನಿ)ಯ ಮೈಯಲ್ಲಿ ಆವಾಹನೆಗೊಂಡಿದ್ದ ದೈವವು ಪಂಬದನ ಮೈಗೆ ವರ್ಗಾಯಿಸಲ್ಪಡುತ್ತದೆ. (ತು.ಮಾನಿ ಎಚ್ಚಿಡ್ದ್‌ಪಂಬದ ಎಚ್ಚಿಗ್‌.) ಕೆಲವೊಂದು ಸಂದರ್ಭಗಳಲ್ಲಿ ಈ ಪಾತ್ರಿಯು ಕೆಳಜಾತಿಗೆ ಸೇರಿದವನೂ ಆಗಿರಬಹುದು. ಈ ಘಟ್ಟದಲ್ಲಿ ಗ್ರಾಮದ ಗುರಿಕಾರರು ಭೂತದೊಡನೆ ಸಮಾರಂಭವು ತೃಪ್ತಿಕರವಾಗಿ ಜರಗಿತೇ ಎಂಬುದಾಗಿ ವಿಚಾರಿಸುತ್ತಾರೆ ಮತ್ತು ಹಳ್ಳಿಯ ಆಗುಹೋಗುಗಳ ಬಗೆಗೆ ಮಾಹಿತಿ ನೀಡುತ್ತಾರೆ. ಅನಂತರ ಗ್ರಾಮಸ್ಥರು ದೈವದೊಡನೆ ತಮ್ಮ ಕಷ್ಟ ಸುಖ ಹಾಗೂ ಸಮಸ್ಯೆಗಳನ್ನು ನಿವೇದಿಸಿಕೊಳ್ಳುವುದುಂಟು. ನೇಮದ ಕೊನೆಯ ಘಟ್ಟದಲ್ಲಿ ದೈವವು ಕುಣಿತಗಾರನ ಮೈಯನ್ನು ಪ್ರವೇಶಿಸುತ್ತದೆ. ಗುರಿಕಾರರು ದೈವಕ್ಕೆ ಆಹಾರ (ತು.ಆವಾರ, ಬಾರ್ನೆ)ವನ್ನು ನಿವೇದಿಸುತ್ತಾರೆ. ಬಳಿಕ ಗ್ರಾಮಸ್ಥರು ಸಣ್ಣಪುಟ್ಟ ಕೈಕಾಣಿಕೆಯನ್ನು ಅರ್ಪಿಸಿ, ಅನುಗ್ರಹವನ್ನು ಬೇಡಿ ಪಡೆಯುತ್ತಾರೆ. ಈ ರೀತಿ ಕಾಣಿಕೆಗಳನ್ನು ಸ್ವೀಕರಿಸಿ ಗ್ರಾಮಸ್ಥರನ್ನು ಹರಸಿ ಅವರಿಗೆ ತನ್ನ ರಕ್ಷಣೆಯ ಭರವಸೆ ನೀಡಿ ದೈವವು ಕುಣಿತಗಾರನ ಮೈಯಿಂದ ತನ್ನನ್ನು ವಿಸರ್ಜಿಸಿಕೊಳ್ಳುವುದರೊಂದಿಗೆ ನೇಮವು ಕೊನೆಗೊಳ್ಳುತ್ತದೆ.

ಈ ನೇಮ ಸಮಾರಂಭಗಳಲ್ಲಿ ಗ್ರಾಮದ ವಿಭಿನ್ನ ಜಮೀನ್ದಾರಿ ಮನೆತನಗಳ ಹಿರಿಯರಾದ ಗುರಿಕಾರರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ನೇಮದ ಪೂರ್ವ ತಯಾರಿಯ ಏರ್ಪಾಡುಗಳನ್ನು ನಿರ್ದೇಶಿಸುವುದು, ದೈವಮಾಧ್ಯಮರಿಗೆ ದೈವಗಳನ್ನು ಅವರ ದೇಹದೊಳಗೆ ಆವಾಹಿಸಿಕೊಳ್ಳಲು ಅನುಮತಿ ನೀಡುವುದು, ದೈವಗಳನ್ನು ಪ್ರಾರ್ಥಿಸಿ ಅವುಗಳನ್ನು ಎದುರುಗೊಳ್ಳುವುದು, ಗ್ರಾಮಸ್ಥರ ಪರವಾಗಿ ದೈವಗಳಿಗೆ ಆಹಾರ, ಕಾಣಿಕೆಗಳನ್ನು ಅರ್ಪಿಸುವುದು ಮತ್ತು ಸಮಸ್ತರ ಪರವಾಗಿ ಆಶೀರ್ವಾದಗಳನ್ನು ಪಡೆಯುವುದು ಈ ಗುರಿಕಾರರ ಹೊಣೆಗಾರಿಕೆಯಾಗಿದೆ. ಗುರಿಕಾರರು ಬೇರೆ ಬೇರೆ ವಿಷಯಗಳಲ್ಲಿ ಪರಿಣತರಿಂದ ಸಲಹೆಗಳನ್ನು ಪಡೆಯುತ್ತಾರಾದರೂ ಮೇಲೆ ಹೇಳಿದ ಕರ್ತವ್ಯಗಳನ್ನು ಸ್ವತಃ ಅವರೇ ಮಾಡಬೇಕು. ಕೆಲವು ಗ್ರಾಮಗಳಲ್ಲಿ ಬ್ರಾಹ್ಮಣ (ತು.ತಂತ್ರಿದಾರ್‌) ರನ್ನು ಕರೆಸಿ ಆರಂಭದ ಕೆಲವು ಕ್ರಿಯೆಗಳನ್ನು ಅವರಿಂದ ಮಾಡಿಸಲಾಗುತ್ತದೆ. ಆದರೆ ಆತನ ಪರಿಣತಿಯು ಸಂಸ್ಕೃತ ಮೂಲಗಳಿಂದ ಪಡೆದವಾಗಿದ್ದು ಅವು ದೇಸೀಯ ಉಪಾಸನಾ ಪದ್ಧತಿಗೆ ಒಂದು ವಿಶಿಷ್ಟ ಅನುಬಂಧವಾಗಿ ಮಾತ್ರ ನಿಲ್ಲುತ್ತದೆ. ಕುಟುಂಬದೈವ ಉಪಾಸನಾ ಪದ್ಧತಿಯಲ್ಲಿ ಬರುವ ಪೂರಕ ಕರ್ತವ್ಯಗಳು ನೇಮಗಳಲ್ಲಿ ಜಾತಿ ಪರಿಣತರ ವೃತ್ತಿಪರ ಕರ್ತವ್ಯಗಳಾಗಿ ಕಾಣಿಸಿಕೊಳ್ಳುತ್ತವೆ. ಸಹಜವಾಗಿ, ವಿವಿಧ ಜಾತಿ ಪರಿಣತರ ಕರ್ತವ್ಯಗಳು ಅವರ ಕುಲಕಸುಬಿಗೆ ಹೊಂದಿಕೊಂಡಿರುತ್ತವೆ. ಉದಾಹರಣೆಗೆ ದೇವಾಡಿಗ (ತು.ಸೇರಿಗಾರೆ – ಸಂಗೀತ ವಾದ್ಯವನ್ನು ನುಡಿಸುವವನು) ಜಾತಿಯವರು ನೇಮಗಳಿಗೆ ಸಂಗೀತ ಒದಗಿಸುತ್ತಾರೆ. ಬಡಗಿಗಳು ಮರತ ತೋರಣ (ಮಕರ ತೋರಣ ಇತ್ಯಾದಿ) ಗಳನ್ನು ಕಟ್ಟಬೇಕು. ಗಾಣಿಗರು ದೀವಟಿಗೆ ಹಿಡಿಯಬೇಕು. ನೇಮಗಳಲ್ಲಿ ಭೂತ ನರ್ತಕನ ಕರ್ತವ್ಯದ ಬಗೆಗೆ ವಿಶೇಷ ಗಮನಹರಿಸಬೇಕಾಗಿದೆ. ಅವನದು ಅತ್ಯಂತ ನೈಪುಣ್ಯ ಶೀಲವಾದ ವೃತ್ತಿಪರ ಕರ್ತವ್ಯ. ಜೊತೆಗೆ ಅವನೊಬ್ಬ ಲಾವಣಿಕಾರನೂ ಹೌದು. ದೈವದ ಹುಟ್ಟು ಬೆಳವಣಿಗೆ, ಪ್ರತಾಪ, ಪ್ರಸರಣವನ್ನು ಕುರಿತು ಪಾಡ್ದನಗಳನ್ನು ಹಾಡುವ ಕೆಲಸ ಅವನದು. ಭೂತನಲಿಕೆಗಾರರಲ್ಲಿ ಮೂರು ಜಾತಿಗಳಿವೆ. ಪರವ, ಪಂಬದ, ನಲ್ಕೆ (ಪಾಣ) ಈ ಮೂರು ಜಾತಿಗಳವರೂ ಕೆಳವರ್ಗದ ಅಸ್ಪೃಶ್ಯರು*(ಪರವ, ಪಂಬದರನ್ನು ಆಸ್ಪೃಶ್ಯರನ್ನಾಗಿ ಪರಿಗಣಿಸಲಾಗುವುದಿಲ್ಲ – ಅನುವಾದಕ) ಇವರೆಲ್ಲರೂ ಪಾಡ್ದನಗಳ ವಿವರಣೆಯಲ್ಲಿ ಹಾಗೂ ಮಾನವ ಕುಲ ಸಂಬಂಧಿ (ethnological) ವಿವರಣೆಗಳ ಪ್ರಕಾರ ನಾಡು ಹಾಗೂ ಕಾಡಿನ ಮಧ್ಯದ ಸೀಮೆಯ ವಾಸಿಗಳು. ಅವರ ಮನೆಗಳು (ತು.ಬುಡಾರ) ಮೇಲುವರ್ಗದವರ ಇಲ್ಲ್‌(ಮನೆ)ಗಳಿಗಿಂತ ಭಿನ್ನವಾದವು. ಅವರ ಮನೆಗಳು ಊರು ಮತ್ತು ಕಾಡಿನ ಮಧ್ಯದ ಬಂಜರು ಭೂಮಿಗಳಲ್ಲಿ ಇರುತ್ತವೆ. ಇವರಿಗೆ ಇತರ ಉದ್ಯೋಗ ಇಲ್ಲದಿರುವುದರಿಂದ ಮತ್ತು ಅವರ ಮನೆಗಳ ಸುತ್ತಲಿನ ಭೂಮಿಯು ಕೃಷಿಯೋಗ್ಯವಲ್ಲದಿದ್ದುದರಿಂದ ಮತ್ತು ಅವರ ಮನೆಗಳ ಸುತ್ತಲಿನ ಭೂಮಿಯು ಕೃಷಿಯೋಗ್ಯವಲ್ಲದಿದ್ದುದರಿಂದ ಸಾಮಾನ್ಯವಾಗಿ ಅವರು ಕಾಡುತ್ಪತ್ತಿಗಳನನು ಸಂಗ್ರಹಿಸಿ ಊರ ವಾರದ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ. ಭೂತಗಳ, ಸತ್ತವರ ಆತ್ಮಗಳ ಆವಾಸಸ್ಥಾನವಾದ ಅಪಾಯಕಾರಿ ಕಾಡು ಹಾಗೂ ಗ್ರಾಮಗಳ ನಡುವೆ ಇವರು ವಾಸಿಸುತ್ತಿರುವುದು ಅವರ ಈ ಕೀಳು ಸ್ಥಿತಿಗೆ ಕಾರಮ ಎಂಬುದು ನನ್ನ ಊಹೆ. ಅವರ ಜೀವನ ಸ್ಥಿತಿ ಹಾಗೂ ಪರಿಸರಗಳೇ ಗ್ರಾಮಿಣ ವಲಯಗಳಲ್ಲಿ ಭಯಕಾರಿ ದೈವಗಳ ಮಾಧ್ಯಮರಾಗಿ ಕರ್ತವ್ಯ ನಿರ್ವಹಿಸಲು ಅವರನ್ನು ತಕ್ಕುದಾಗಿ ರೂಪಿಸಿವೆ.

ತೌಲನಿಕ ಸಾಕ್ಷ್ಯಗಳು

ಸಮಕಾಲೀನ ತುಳು ಭೂತಾರಾಧನೆಗೆ ಸಂಬಂಧಿಸಿದ ಮಾಹಿತಿಗಳು, ಕೇರಳ-ತಮಿಳುನಾಡಿನ ಸಮಾನಾಂತರ ಉಪಾಸನಾ ವಿಧಿವಿಧಾನಗಳ ಬಗೆಗಿನ ಮಾಹಿತಿಗಳು ಹಾಗೂ ಪಾಡ್ದನಗಳಿಂದ ಪಡೆದ ಜ್ಞಾತಿ ಸೂಚಕ ರಚನೆಗಳು (Cognative structures) ಇವುಗಳನ್ನು ಉಪಯೋಗಿಸಿಕೊಂಡು, ವಿಶಿಷ್ಟವಾದ ದಕ್ಷಿಣ ಭಾರತೀಯ ರಾಜ ಉಪಾಸನಾ ಪದ್ಧತಿಯ ಸಾಮಾಜಿಕ ದೃಷ್ಟಿಕೋನಗಳ ಸ್ಥೂಲ ರೂಪ ರೇಷೆಯನ್ನು ಚಿತ್ರಿಸಲು ಯತ್ನಿಸುತ್ತೇನೆ. ಈ ಬಗೆಯ ಪುನರ್ರಚನೆಯ ಸಂದರ್ಭದಲ್ಲಿ ಬಹುಮಟ್ಟಿಗೆ ಸ್ಥಿರಾಂಶಗಳೆಂದು ನಾನು ಭಾವಿಸುವ ತುಳುವ ಹಾಗೂ ಕೇರಳದ ಉಪಾಸನಾ ಆಚರಣೆಗಳ ಮಾಹಿತಿಗಳಿಗೆ, ಪ್ರಾಚೀನ ತಮಿಳು ಸಾಹಿತ್ಯಗಳ ವಿವರಣೆಗಳಲ್ಲಿ ದೊರಕುವ ಸಾಕ್ಷ್ಯಾಧಾರಗಳಿಗೆ ನನ್ನ ಅಧ್ಯಯನವನ್ನು ಸೀಮಿತಗೊಳಿಸುತ್ತೇನೆ.

ರಾಜ ಉಪಾಸನಾ ಪದ್ಧತಿಯು ಕುಟುಂಬ ಹಾಗೂ ಗ್ರಾಮದೈವ ಉಪಾಸನಾ ಪದ್ಧತಿಗಿಂತ ಎರಡು ಬಗೆಗಳಲ್ಲಿ ಬೇರೆಯಾಗಿ ನಿಲ್ಲುತ್ತದೆ. ಅರಸನ ಅಭ್ಯುದಯವು ಹೇಗೆ ಸಮಗ್ರ ಸಮಾಜಕ್ಕೆ ಮುಖ್ಯವೋ ಹಾಗೆಯೆ ರಾಜ ಉಪಾಸನಾ ಪದ್ಧತಿಯೂ ಸಮಾಜಕ್ಕೆ ಕೇಂದ್ರವಾಗಿತ್ತು. ಅಲ್ಲದೆ ಈ ರಾಜ ಉಪಾಸನೆಯ ಸಂದರ್ಭದ ಧಾರ್ಮಿಕ ಆಚರಣೆಯ ಅನೇಕ ಕೆಲಸಗಳನ್ನು ಕುಟುಂಬದ ಹೊರಗಿನ ಸದಸ್ಯರಿಗೂ ವಹಿಸಿಕೊಡಲಾಗುತ್ತಿತ್ತು. ಒಂದು ರೀತಿಯಲ್ಲಿ ರಾಜ ಉಪಾಸನಾ ಪದ್ಧತಿ (ನೇಮ)ಯ ವಿಸ್ತರಣೆಯಂತೆ ತೋರುತ್ತದೆಯಾದರೂ ಅದು ರಾಜ ಉಪಾಸನಾ ಪದ್ದತಿಯ ಸರಳ ರೂಪ ಆಗಿರುವ ಸಂಭವವೇ ಹೆಚ್ಚು.

ಪ್ರಾಚೀನ ರಾಜ ಉಪಾಸನೆಯು ಅಪಾಯಕಾರಿಯೆಂದು ಪರಿಗಣಿತವಾದ ದೈವಗಳನ್ನು ಕುರಿತಾಗಿರುವುದು ಕಂಡುಬರುತ್ತದೆ. ಗುಡ್ಡ ಪ್ರದೇಶದ ಬಳಿಯ ಕಾಡುಮೇಡುಗಳು ಈ ದೈವಗಳ ನೆಲೆಯಾಗಿವೆ. ಈ ದೈವಗಳಲ್ಲಿ ಕೆಲವು ಸತ್ತವರ ಆತ್ಮದೊಂದಿಗೆ ಸಂಬಂಧಿಸಿದವುಗಳು; ‘ಮಾಯ’ ಲೋಕಕ್ಕೆ ಸಲ್ಲುವ ಮೊದಲು ಅಂದರೆ ಬದುಕಿದ್ದಾಗ ವಿಶಿಷ್ಟ ಚಾರಿತ್ರ್ಯವನ್ನು ಮೆರೆದ ಪ್ರಬಲ ಅರಸರು ಹಾಗೂ ಧೀರಯೋಧರನ್ನು ತಮ್ಮ ಪೂರ್ವಿಕರೆಂದು ತಿಳಿದು ಆರಾಧಿಸಲಾಗುತ್ತಿತ್ತು. ಹೀಗೆ ಸಂದುಹೋದ ವೀರರು ದೈವಗಳ ಪರಿವಾರದಲ್ಲಿ ಸೇರ್ಪಡೆಗೊಳ್ಳುತ್ತಿದ್ದರು. ಪ್ರಾಚೀನ ತಮಿಳು ಸಾಹಿತ್ಯದ ಹಲವೆಡೆ ಈ ಬಗೆಯ ವೀರಪೂಜೆ ಮತ್ತು ಗೌರವಾರ್ಥ ಸ್ತಂಭಗಳ ಹಾಗೂ ಗುಡಿಗಳ ಸ್ಥಾಪನೆಯ ಉಲ್ಲೇಖಗಳು ದೊರಕುತ್ತವೆ. ವಸ್ತುಶಃ ಇದೊಂದು ಪ್ರಾಗೈತಿಹಾಸಿಕ ಆಚರಣೆಯಾಗಿದ್ದು ಅದು ಇಂದಿಗೂ ಕೇರಳದಲ್ಲಿ ಉಳಿದುಕೊಂಡು ಬಂದಿದೆ(ಕುರುಪ್, ೧೯೭೩:೩-೪).

ಕೇರಳದ ನಾಯರ್ ಸಮಾಜದಲ್ಲಿ ಸಂದುಹೋದ ಕಾರ್ಣವರಿಗೆ ಗುಡಿಗಳನ್ನು ನಿರ್ಮಿಸಿ ಎಡೆ ನಿವೇದಿಸುವುದಿದೆ. ಯುದ್ಧದಲ್ಲಿ ಕೆಚ್ಚಿನಿಂದ ಹೋರಾಡಿದ ಅಥವಾ ರಾಜನಿಂದ ಪುರಸ್ಕೃತರಾದ ಕಾರ್ಣವರು ಮಾತ್ರ ಈ ರೀತಿಯ ಗೌರವಕ್ಕೆ ಅರ್ಹರಾಗಿದ್ದಾರೆಂದು ಗಾಫ್ ಬರೆಯುತ್ತಾರೆ. (ಗಾಫ್ ೧೯೫೯ ಎ:೨೪೨) ಇಂತಹ ಧೀರ ಪ್ರೇತಾತ್ಮಗಳು ಸಂತತಿ, ಬೆಳೆ, ಜಾನುವಾರು, ಮನೆಮಂದಿ, ಮಕ್ಕಳನ್ನು ಸಂರಕ್ಷಿಸಿ ತಮಗೆ ಹಿತವನ್ನು ತರುವುವುಗಳೆಂದು ನಂಬಲಾಗುತ್ತಿದ್ದರೂ ಅವುಗಳನ್ನು ಅಪಾಯಕಾರಿಗಳೆಂದೇ ತಿಳಿಯಲಾಗುತ್ತದೆ. ನಾಯರ್ಗಳಲ್ಲಿ ಪ್ರಮುಖ ಪೂರ್ವಿಕರ ಪ್ರೇತಾತ್ಮಗಳೊಂದಿಗೆ ನಿಷ್ಠ ಸೇವಕರನ್ನು ಆರಾಧಿಸುವ ಪರಿಪಾಠವಿದೆ.

‘ಯುದ್ಧ ಪ್ರಸಂಗಗಳಲ್ಲಿ ತಮ್ಮ ಧನಿಯ ಮನೆಯನ್ನು ರಕ್ಷಿಸುತ್ತಾ ಮಡಿದ, ಸ್ತ್ರೀಯರ ಮತ್ತು ಮಕ್ಕಳ ಪ್ರಾಣಗಳನ್ನು ಕಾಪಾಡಿದ, ತನ್ನ ಯಜಮಾನನನ್ನು ಅಪಮೃತ್ಯುವಿನಿಂದ ಪಾರುಮಾಡಿದ, ಒಡೆಯನ ಮರಣದ ಶೋಕದ ತೀವ್ರತೆಯನ್ನು ಸಹಿಸಲಾಗದೆ ಆತ್ಮಹತ್ಯೆಯನ್ನು ಮಾಡಿಕೊಂಡ ನಂಬಿಗಸ್ಥ ಸೇವಕರ ಐತಿಹ್ಯಗಳು ಹಲವು ನಾಯರ್‌ತರವಾಡು ಮನೆಗಳಲ್ಲಿ ಕೇಳಿಬರುತ್ತದೆ. ಹೀಗೆ ಮಡಿದ ಸೇವಕರ ಪ್ರೇತಾತ್ಮಗಳು ತರವಾಡಿನ ಪ್ರೇತಾತ್ಮ ಸಮೂಹಗಳಲ್ಲಿ ಸ್ಥಾನ ಪಡೆದು ಪೂರ್ವಿಕರ ಆರಾಧನೆಯಲ್ಲಿ ಪಾಲು ಪಡೆಯುತ್ತವೆ’ (ಗಾಫ್ ೧೯೫೯ ಎ:೨೫೮)

ಪ್ರಾಚೀನ ತಮಿಳುನಾಡಿನ ದೈವಗಳೂ ಆಪಾಯಕಾರಿಗಳೆಂದು ನಂಬಲಾಗಿದೆ (ಹಾರ್ಟ್‌, ೧೯೫೧:೨೧) ತಮಿಳು ದೈವಗಳಲ್ಲಿ ವಿಶೇಷವಾಗಿ ಉಲ್ಲೇಖಗೊಳ್ಳುವ ಮುರುಗನ್ ಮಾನವಕುಲದ ಧೀರೊದ್ಧತೆಯ ಸಂರಕ್ಷಕನೆಂದು ಹೆಸರು ಪಡೆದಿದ್ದರೂ ಜನ ಆತನ ಬಗೆಗೆ ಭೀತರಾಗಿದ್ದಾರೆ. ತಮಿಳು ಕಾವ್ಯಗಳಲ್ಲಿ ಮುರುಗನ್‌ ಹಾಗೂ ಇತರ ಪ್ರಾಚೀನ ತಮಿಳು ದೇವತೆಗಳು ಕಾಡು – ಬೆಟ್ಟಗಳೊಂದಿಗೆ ಸಂಬಂಧ ಹೊಂದಿವೆ. ಕುರುವನ್ (ಮೃತ್ಯುದೇವತೆ) ತಮಿಳುನಾಡಿನ ಪ್ರಾಚೀನ ದೈವಗಳಲ್ಲಿ ಒಬ್ಬನಾಗಿದ್ದು ಅವನನ್ನು ಯುದ್ಧರಂಗದ ರಾಜನೊಂದಿಗೆ ಅಭೇದವಾಗಿ ತಿಳಿಯಲಾಗಿದೆ. ಯೋಧರಾಜ ಹಾಗೂ ದೈವದ ನಡುವಣ ಅವಿನಾಭಾವವು ಎಷ್ಟು ಗಾಢವಾಗಿತ್ತೆಂದರೆ ಯೋಧರಾಜನನ್ನೇ (warrior king) ಜನರು ದೈವವೆಂದು ಪರಿಗಣಿಸುತ್ತಿದ್ದರೋ ಎಂಬ ಸಂದೇಹ ಬರುತ್ತದೆ (ಹಾರ್ಟ್‌, ೧೯೭೫:೧೩) ಅಪ್ಪಾದೊರೈ ಮತ್ತು ಬ್ರೆಕೆನ್‌ರಿಜ್‌ಅವರ ಹೇಳಿಕೆಯಂತೆ ತಮಿಳುನಾಡಿನ ಮುಖ್ಯ ದೇಗುಲಗಳಲ್ಲಿ ಇರುವ ದೈಗಳು ಇಂದಿಗೂ ರಾಜರುಗಳೆಂದೇ ಪರಿಗಣಿತವಾಗುತ್ತಿವೆ. ದೈವವನ್ನು ಒಂದು ವಿಶಿಷ್ಟ ವ್ಯಕ್ತಿಯನ್ನಾಗಿ ಗುರುತಿಸಿ ಕಾಣುವುದು ದಕ್ಷಿಣ ಭಾರತದ ಹಿಂದೂ ದೈವಗಳ ಬಗೆಗಿನ ಒಂದು ಜನಪ್ರಿಯ ಕಲ್ಪನೆಯಾಗಿದೆ. ಭಾಷಿಕ ಸಂಕೇತಗಳನ್ನು ಒಳಗೊಂಡಂತೆ ಎಲ್ಲ ಮಾವನ ಕುಲಸಂಬಂಧಿ ಸಾಕ್ಷ್ಯಗಳು ದೇವತೆಯನ್ನು ಸಾರ್ವಭೌಮನೆಂದು ನಿರ್ದೇಶಿಸುತ್ತವೆ. ಅಂದರೆ ಸಮುದಾಯದಲ್ಲಿ ಮೊದಲ ಮನ್ನಣೆಯನ್ನು ಪಡೆಯುವವನಾಗಿದ್ದು ಎಲ್ಲ ಸಂಪನ್ಮೂಲಗಳಿಗೆ ಒಡೆಯನಾಗಿದ್ದು, ರಾಜ್ಯದ ಸಂಪದಭಿವೃದ್ಧಿಯ ಕಾರಣಕರ್ತನಾದವನು ಅವನು (ಅಪ್ಪಾದೊರೈ ಮತ್ತು ಬ್ರೆಕೆನ್‌ರಿಚ್‌೧೯೭೬:೧೯೧). ಪ್ರಾಚೀನ ತಮಿಳುದೈವಗಳನ್ನು ವಿಶ್ವವ್ಯಾಪಿ ಅಪಾಯಕಾರಿ ಶಕ್ತಿ ಎಂಬುದಾಗಿ ಚಿತ್ರಿಸಲಾಗಿದೆಯೇ ಹೊರತು ಅವುಗಳು ಅತೀಂದ್ರಿಯ ಶಕ್ತಿಯ ಉಪಕಾರಿಗಳೆಂದು ಭಾವಿಸಲಾಗಿಲ್ಲ ಎಂದು ಹಾರ್ಟ್‌ಅವರು ಅಭಿಪ್ರಾಯ ಪಡುತ್ತಾರೆ.

ವಿಧಿವಿಧಾನಗಳ ವಿಷಯದಲ್ಲಿ ಕೇರಳದ ವೀರ ದೈವಗಳ ಉತ್ಸವಾಚರಣೆಗಳು (ತೀರ ಮತ್ತು ತೆಯ್ಯಾಟ್ಟಂ) ತುಳುನಾಡಿನ ಭೂತಾರಾಧನೆಯನ್ನು ಬಹಳಷ್ಟು ಹೋಲುತ್ತವೆ. ತೆಯ್ಯಾಟ್ಟಂ ಆರಾಧನೆಯನ್ನು ಕೇರಳದ ವಿಭಿನ್ನ ಜಾತಿಗಳವರ ಮನೆಗಳಲ್ಲಿ ಆಚರಿಸುತ್ತಾರೆ. ನಾಯರ್ ಮುಖ್ಯಸ್ಥರ ಮನೆಗಳಲ್ಲಿ, ವನಪ್ರದೇಶಗಳಲ್ಲಿ ಅಥವಾ ಅಸ್ವತ್ಥ, ಕದಂಬ ವೃಕ್ಷಗಳ ಬುಡಗಳಲ್ಲಿ ಈ ಸಮಾರಂಭವನ್ನು ವೈಭವದಿಂದ ಆಚರಿಸಲಾಗುತ್ತದೆ. ಈ ಸಮಾರಂಭವು ದೈವದ ಐತಿಹ್ಯಗಳ (ತೊಟ್ಟಂ) ಹಾಡುವಿಕೆ ನೃತ್ಯದೊಂದಿಗೆ ದೈವಾವೇಶ(possession dance – ಆಟ್ಟಂ)ವನ್ನು ಒಳಗೊಂಡಿದೆ. ದೈವವು ಮೈಯಲ್ಲಿ ಪ್ರಕಟಗೊಂಡಾಗ ಆಹಾರ ಸಮರ್ಪಣೆಯು ನಡೆಯುತ್ತದೆ. ದೈವವು ಗ್ರಾಮಸ್ಥರನ್ನು ಆಶೀರ್ವದಿಸುವುದು. ಗ್ರಾಮದ ಮತ್ತು ಕುಟುಂಬದ ಭಿನ್ನಾಭಿಪ್ರಾಯಗಳು ದೈವದ ಸಮಕ್ಷಮದಲ್ಲಿ ತೀರ್ಮಾನಗೊಳ್ಳುವುವು.

 

[1] ‘ಸಾರಿದಾತ್‌ಎತ್ತರೊಡು ಬೊಲ್ಗುಡೆದಾತ್ ತೋರೊಡು ದಾನೆ ತೋಜುನೆಯಾ?’

[2] ಪೀಟರ್ ಕ್ಲಾಸ್ ಅವರ ಲೇಖನ ‘ಮೈಂದಲ ತುಳುನಾಡಿನ ಒಂದು ಐತಿಹ್ಯ ಹಾಗೂ ಆರಾಧನೆ’ – ಈ  ಲೇಖನದಲ್ಲಿ ಕೇಡು ತರುವ ದೈವವಾದ ಜುಮಾದಿಯು ಕಾಣಿಕೆಯ ನೀಡಿಕೆಯಿಂದ ತೃಪ್ತವಾಗಿ ಯಾವ  ರೀತಿಯಲ್ಲಿ ಅರಸನ ಕೈಗೊಂಬೆಯಾಗುತ್ತದೆ ಎಂಬುದು ಚಿತ್ರಿತವಾಗಿದೆ.

[3] ಕಾಡುಹಂದಿಯನ್ನು ಕೆಲವೊಮ್ಮೆ ಜುಮಾದಿ ಮುಂತಾದ ರಾಜನ್‌ದೈವಗಳ ವಾಹನವಾಗಿ  ಚಿತ್ರೀಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾತ್ರ ಅದನ್ನು ಪ್ರತ್ಯೇಕ ಒಂಟಿ ದೈವವಾಗಿ  ಚಿತ್ರೀಕರಿಸಲಾಗಿದೆ. ಪಂಜುರ್ಲಿಯ ಪಾಡ್ದನಗಳಲ್ಲಿ ಬೇರೆ ಬೇರೆ ಆವೃತ್ತಿಗಳಿಗೆ (ನೋಡಿ : ಉದಾಹರಣೆಗೆ,  ಬರ್ನೆಲರ ಕೃತಿ) ಪಾಡ್ದನಗಳಲ್ಲಿ ಹೆಣ್ಣು ಹಾಗೂ ಗಂಡು ಹಂದಿಗಳ ಪ್ರಸ್ತಾಪ ಬರುತ್ತದೆ. ಆದರೆ  ಸಾಮಾನ್ಯವಾಗಿ ಮನೆಗಳಲ್ಲಿ ಪೂಜೆ ಕೈಗೊಳ್ಳುವ ಹಂದಿಯು ಗಂಡಾಗಿರುತ್ತದೆ. ಇದರ ಹೆಸರು ಕೂಡಾ  ಬಹಳಷ್ಟು ವೈವಿಧ್ಯಪೂರ್ಣವಾಗಿರುತ್ತದೆ. ಕುಪ್ಪೆ ಪಂಜುರ್ಲಿ, ಒರ್ತೆ ಪಂಜುರ್ಲಿ, ಮರ್ಲ್‌ಪಂಜುರ್ಲಿ  ಇತ್ಯಾದಿ.