ತುಳು ಜನಪದ ಸಾಹಿತ್ಯವು ಈಚೀಚೆಗೆ ಕೆಲವು ವರ್ಷಗಳಿಂದ ಬೆಳಕಿಗೆ ಬಂದು ಸಾಹಿತ್ಯದಲ್ಲಿ ಮನ್ನಣೆಯನ್ನು ಪಡೆಯತೊಡಗಿತು. ಎಸ್.ಯು. ಪಣಿಯಾಡಿಯವರ ಪ್ರಕಾಶನದಲ್ಲಿ ‘ತುಳು ಪಾಡ್ದನಗಳು’ ಎಂಬ ಕೃತಿಯು ಮೊತ್ತಮೊದಲನೆಯದಾಗಿ ಪ್ರಕಟವಾದರೂ ಇಂದು ಅದು ದೊರಕುವುದಿಲ್ಲ. ಆಂಗ್ಲ ವಿದ್ವಾಂಸರು ಕೆಲವರು ತುಳು ಜನಪದ ಸಾಹಿತ್ಯ ಕ್ಷೇತ್ರದಲ್ಲಿ ಸಾಧಾರಣವಾಗಿ ಕೈಯಾಡಿಸಿದ್ದಾರೆ. ಬಿ.ಎ. ಸಾಲೆತ್ತೂರು ಪಾಡ್ದನಗಳನ್ನು ಸಂಗ್ರಹಿಸಿ, ಪ್ರಕಟಿಸದಿದ್ದರೂ, ಅವುಗಳ ಆಧಾರದಿಂದ ತುಳುನಾಡಿನ ಸಂಸ್ಕೃತಿ, ಜೀವನಕ್ರಮ ಮೊದಲಾದವುಗಳನ್ನು ಸ್ವಲ್ಪ ಮಟ್ಟಿಗೆ ವಿವರಿಸಿದ್ದಾರೆ. (ಅವರ ಕೃತಿ – ‘Ancient Karnataka Vol. I, History of Tuluva’) ಆದರೆ ಪುನಃ ತುಳು ಜನಪದ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಇತ್ಯಾದಿಗಳ ಮಹತ್ವವನ್ನರಿತು ವಿಶೇಷ ಆಸಕ್ತಿ ವಹಿಸಿದ ಹಲವರು ಆ ಕುರಿತು ಅಭ್ಯಾಸ ಮಾಡಲು ಹೊರಟಿದ್ದು ಸಂತೋಷದ ಸಂಗತಿ. ತುಳು ಭಾಷೆಯು ಹೇಗೆ ಅನ್ಯಭಾಷೆಗಳ ಪ್ರಭಾವದಿಂದ ತನ್ನ ನೈಜ ಸ್ವರೂಪವನ್ನು ಸ್ವಲ್ಪವೂ ಕಳೆದುಕೊಂಡಿಲ್ಲವೋ, ಹಾಗೆಯೇ ಇಲ್ಲಿನ ಸಂಸ್ಕೃತಿ ಸಂಪ್ರದಾಯಗಳು ವಿಕೃತಿ ಹೊಂದಲಿಲ್ಲ. ಪಾಡ್ದನಗಳ ಅಭ್ಯಾಸದಿಂದ ನಾವು ಈ ನಿರ್ಣಯಕ್ಕೆ ಬರಬಹುದು. ಪಾಡ್ದನಗಳಲ್ಲಿ ವ್ಯಕ್ತವಾಗುವ ಸಂಪ್ರದಾಯ, ಆಚರಣೆಗಳು ಇಂದಿಗೂ ಹಲವೆಡೆಗಳಲ್ಲಿ ಇವೆ. ತುಳು ಸಂಸಕೃತಿಯಂತೆ ಜನಪದ ಸಾಹಿತ್ಯಕ್ಕೂ ಪ್ರತ್ಯೇಕವಾದ ಸ್ವರೂಪದಿಂದ ಸ್ವತಂತ್ರ ತಳಹದಿಯಿಂದ ತನ್ನದೇ ಆದ ಸ್ಥಾನವಿದೆ. ಇತರ ಜನಪದ ಸಾಹಿತ್ಯಗಳೊಂದಿಗೆ ಸಮ ಸಮನಾಗಿ ನಿಲ್ಲುವ ಗುಣವನ್ನು ಪಡೆದಿದೆ.

ಪಾಡ್ದನ, ತುಳು ಜನಪದ ಗೀತೆಗಳ ಒಂದು ಪ್ರಕಾರ. ‘ಪಾಡ್ದನೊ’ (ತುಳು-ಇಂಗ್ಲಿಷ್ ಡಿಕ್ಷ್‌ನರಿ – ಪ್ರೊ. ಎಂ. ಮರಿಯಪ್ಪ ಭಟ್ಟ), ‘ಪಾಡ್ದನೊ’ (ದಕ್ಷಿಣ ಕನ್ನಡದ ಇತಿಹಾಸ – ಕೇಶವ ಕುಡ್ವ), ‘ಪಾಡ್‌ದಾನ’ (Padadana : Ancient Karnataka Vol. I,B.A.S), “ಪಾಡ್ದನ’ (ಸರ್ವಸಾಮಾನ್ಯವಾಗಿರುವಂತದ್ದು), ‘ಪಾರ್ದನ’ (ತೆಂಕನಾಡು – ಭೂತಾರಾಧನೆ – ರಾವ್ ಸಾಹೇಬ್ ರಂಗನಾಥ ಪೂಂಜ) ಎಂಬೀ ಹೆಸರುಗಳು ಇವೆ. ಇವುಗಳಲ್ಲಿ ಪಾಡ್ದನೊ, ಪಾಡ್ದೊನೆ, ಪಾಡ್‌ದಾನ, ಪಾಡ್ದನ ಎನ್ನುವ ಶಬ್ದಗಳು ಒಂದು ಸಾಲಿನಲ್ಲಿ ನಿಂತರೆ, ಪಾರ್ದನ ಶಬ್ದವು ಪ್ರತ್ಯೇಕವಾಗಿದೆ. ‘ರ’ಕಾರಕ್ಕೆ ‘ಡ’ ಕಾರ ಆದೇಶವಾಗುವುದಾಗಲೀ ‘ಡ’ಕಾರಕ್ಕೆ ‘ರ’ ಕಾರವು ಆದೇಶವಾಗುವುದಾಗಲೀ ಭಾಷಾಶಾಸ್ತ್ರದ ದೃಷ್ಟಿಯಿಂದ ಸಮ್ಮತವಲ್ಲ. ಮುಂದೆ ಸಮರ್ಥಿಸುವ ಅರ್ಥದ ದೃಷ್ಟಿಯಿಂದ ಇವುಗಳಲ್ಲಿ ‘ಪಾಡ್ದನ’ ಅಥವಾ ‘ಪಾಡ್ದನೊ’ ಎಂಬ ರೂಪಗಳು ಸ್ವೀಕಾರಯೋಗ್ಯವಾದವು.

‘ಪಾಡ್ದನ’ದ ನಿಷ್ಪತ್ತಿ ಮತ್ತು ಸ್ವರೂಪಗಳನ್ನು ಪರಿಶೀಲಿಸುವಾಗ ಭಿನ್ನಾಭಿಪ್ರಾಯಗಳು ಬರುತ್ತವೆ. ಭಿನ್ನಾಭಿಪ್ರಾಯಗಳನ್ನು ಪರಿಶೀಲಿಸಿ ಒಂದು ನಿರ್ಣಯಕ್ಕೆ ಬರುವಾಗ ಸಾಧಾರವಾದ ಸ್ಪಷ್ಟೀಕರಣವು ಅಗತ್ಯವಾಗಿದೆ. ಜನಪದ ಸಾಹಿತ್ಯವು ಆಯಾ ಪ್ರದೇಶಗಳ ಜನತೆಯ ಸಹಜ ಪ್ರತಿಭೆಯ ಪ್ರತಿರೂಪ.ಜೀವನದಲ್ಲಿಯ ಕಟ್ಟುಕಟ್ಟಳೆಗಳ (ಪರಂಪರಾಗತ) ಚೌಕಟ್ಟಿನಲ್ಲಿಯೇ ಜನಪದ ಕವಿ ತನ್ನ ಸೃಷ್ಟಿಗೆ ಯೋಗ್ಯ ರೂಪವನ್ನು ಕೊಡುತ್ತಾನೆ. ಆಯಾ ನಾಡಿನ ಸಂಸ್ಕೃತಿಯು ಎಷ್ಟು ಸಹಜವೋ ಸ್ವತಂತ್ರವೋ ಅಷ್ಟೇ ಜನಪದ ಸಾಹಿತ್ಯವೂ ಸಹಜ ಮತ್ತು ಸ್ವತಂತ್ರವಾಗಿರುತ್ತದೆ. ಸಾಮಾನ್ಯವಾಗಿ ಜನಪದ ಕತೆಯ ಮೇಲೆ ಅಥವಾ ಸಾಹಿತ್ಯದ ಮೇಲೆ ಆನ್ಯ ಪ್ರಭಾವಗಳು ಇಲ್ಲವೆಂದೇ ಹೇಳಬಹುದು. ಈ ಹಿನ್ನೆಲೆಯಿಂದ ಮುಂದಿನ ವಿಚಾರಗಳನ್ನು ಪ್ರತಿಪಾದಿಸಲಾಗಿದೆ.

‘‘ಭೂತಗಳ ಚರಿತ್ರೆಗಳನ್ನು ಆದ್ಯಂತವಾಗಿ ಬಣ್ಣಿಸುವ ಪಾಡ್ದನೆ (ಪ್ರಾರ್ಥನೆ)ಗಳೆಂಬ ವಚನ ಕಾವ್ಯಗಳನ್ನು ಆಯಾ ಭೂತದ ಗುಡಿಯಲ್ಲಿ ಅದರ ತೂಳು ಬಂದವನ ಬಳಗದವರು ಹಾಡುವ ಪದ್ಧತಿ ಉಂಟು’’ (ತೆಂಕನಾಡು – ಪು. ೫೦, ತುಳುನಾಡು ಪೂರ್ವಸ್ಮೃತಿ ಮಂ. ಗೋವಿಂದ ಪೈ ) ಎಂಬ ಗೋವಿಂದ ಪೈಗಳ ಮಾತಿನಲ್ಲಿ ‘ಪ್ರಾರ್ಥನೆ’ ಮತ್ತು ‘ವಚನ ಕಾವ್ಯ’ ಎಂಬಂಶಗಳನ್ನು ಗಮನಿಸಬೇಕು. ಬಿ.ಎ. ಸಾಲೆತ್ತೂರರೂ ಇದೇ ರೀತಿಯ ಅಭಿಪ್ರಾಯವನ್ನು ಕೊಡುತ್ತಾರೆ. The word PadDana resembles the Dravidian word Pat meaning a song. But the nature of a Tulu PadDana is essentially that of a Prarthana – Prayer (Ancient Karnataka Vol. I P. 371) ದ್ರಾವಿಡದ ‘ಪಾಟ್‘ ಶಬ್ದಕ್ಕೆ ಸಮನಾಗಿದೆ ಎಂದು ಹೇಳಿ, ಪಾಡ್ದನದ ಸ್ವರೂಪ ಪ್ರಾರ್ಥನೆಯದ್ದೇ ಎನ್ನುವುದರಲ್ಲಿ ಸ್ವಲ್ಪಾಂಶ ಮಾತ್ರ ಸತ್ಯವಾದುದು. ಗೋವಿಂದ ಪೈಗಳು ಹೇಳಿದಂತೆ ಪ್ರಾರ್ಥನೆ ಶಬ್ದವೇ ಪಾಡ್ದನವಾದುದಲ್ಲ. ಪ್ರಾರ್ಥನೆಯ ಅಪಭ್ರಂಶರೂಪವೆಂದು ಕೆಲವರು ‘ಪಾರ್ದನ’ ಎಂದೂ ಕರೆದಿದ್ದಾರೆ. ತುಳುವಿನಲ್ಲಿ ಸಂಸ್ಕೃತ ಶಬ್ದಗಳು ಅಪಭ್ರಂಶ ರೂಪವನ್ನು ಪಡೆಯುವಾಗ ಹೊಂದುವ ವ್ಯತ್ಯಾಸಗಳನ್ನು ಪರಿಶೀಲಿಸಿದರೆ ಮೇಲಿನ ಅಭಿಪ್ರಾಯ ಸತ್ಯಾಂಶವು ಸ್ವಷ್ಟವಾಗುವುದು.

ರೇಫ ಸಂಯುಕ್ತಾಕ್ಷರಾದಿಯಾಗಿರುವ ಸಂಸ್ಕೃತ ಶಬ್ದಗಳ ಸಂಯುಕ್ತವಾಗಿರುವ ರೇಫವು ಆದಿಯ ಅಕ್ಷರದ ಮುಂದೆ ಬರುವುದು. ಹಾಗೆಯೇ ಆಕಾರವು ಇಕಾರವಾಗುವುದು.

ಉದಾ: ಬ್ರಾಹ್ಮಣ > ಬಿರಣ
ಪ್ರಕಾರ > ಪಿರ್ಕಾರ
ಗ್ರಾಮ > ಗಿರಾಮ
ಪ್ರಾಯ > ಪಿರಯ
ಪ್ರಾಕ್ > ಪಿರಾಕ್

ಆದಿಯ ಅಕಾರವು ಎಕಾರವಾಗುವುದು.

ಉದಾ: ಬ್ರಹ್ಮ > ಬೆರ್ಮ

ಆದಿಯ ಆಕಾರವು ಉಕಾರವಾಗುವುದು

ಉದಾ: ಪ್ರಸಾದ > ಪುರ್ಸಾದ

ಈ ರೀತಿಯಲ್ಲಿ ಪ್ರಾರ್ಥನೆ ಶಬ್ದವು ಪಿರಾರ್ಥನೆ ಅಥವಾ ಪಿರತನೆ ಎಂದೋ ಆಗಬೇಕಿತ್ತು.

ಪ್ರಾರ್ಥನೆ ಶಬ್ದದ ಅಪಭ್ರಂಶವಾಗಿ ಪಾರ್ದನೆ ಎಂಬ ರೂಪದಲ್ಲಿ ಬಳಕೆಯಲ್ಲಿಲ್ಲ. ಅದರ ಬದಲು ಆದಿಯ ರೇಫವು ಲೋಪವಾಗಿಯಾದರೂ ಬಳಕೆಯಲ್ಲಿದೆ. ಪಾರ್ಥನೆ>ಪಾರ್ತನೆ. ಇಲ್ಲಿಯೂ ತಕಾರಕ್ಕೆ ದಕಾರ ಆದೇಶವಾಗಿದೆ ಎನ್ನುವಂತಿಲ್ಲ. ಸಂಧಿಯಾಗದ ಕಡೆಗಳಲ್ಲಿ ಮತ್ತು ಶಬ್ದದ ಆದ್ಯಕ್ಷರವಲ್ಲದ ತಕಾರಕ್ಕೆ ದಕಾರವು ಆದೇಶವಾಗುವುದು ತುಳು ಭಾಷೆಯಲ್ಲಿ ಕಂಡುಬರುವುದಿಲ್ಲ.

‘ಕುಪ್ಪೆ ಪಂಜುರ್ಲಿ’ ಎಂಬ ಪಾಡ್ದನದಲ್ಲಿ ‘ಪ್ರಾರ್ಥನೆ’ ಶಬ್ದದ ಬಳಕೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ. ‘ಪತ್ತ್ ಬಿರೆಳ್ದ ಪ್ರಾರ್ಥನೆ ಮಲ್ತೆರ್’.

ಬಿ.ಎ.ಸಾಲೆತ್ತೂರರು ಪಾಡ್ದನ ಶಬ್ದವು ದ್ರಾವಿಡದ ‘ಪಾಟ್’ (ಅಂದರೆ ಹಾಡು) ಶಬ್ದವನ್ನು ಹೋಲುವುದು ಎಂದು ಹೇಳಿದುದು ಸಮರ್ಪಕವಾಗಿದ್ದರೂ, ಪ್ರಾರ್ಥನೆಯ ಸ್ವರೂಪ ಪಾಡ್ದನದ್ದು ಎನ್ನುವುದು ವಿಚಾರ ಮಾಡಬೇಕಾದ ಅಭಿಪ್ರಾಯ. ತುಳುಕೂಟ ಪತ್ರಿಕೆಯಲ್ಲಿ ಪಾಡ್ದನ ಎಂದರೆ ಪ್ರಾರ್ಥನೆ ಎಂಬ ಅರ್ಥವನ್ನು ಬಳಸಿದ್ದಾರೆ. ‘ದೇವಿಗ್ ನವರತ್ನ ಮಾಲೆದ ಪಾಡ್ದನ’ – ಬಾಡೂರು ಜಗನ್ನಾಥ ರೈ (ಕ್ರಮವಾಗಿ ತುಳುಕೂಟ – ಸಂಚಿಕೆ ೭, ಜುಲೈ ೭೦, ಸಂಚಿ ೧, ಜನವರಿ ೧೯೭೨) ಪಾಡ್ದನದ ಸಹಜ ರೂಪವನ್ನು ಗಮನಿಸದೆ ಬಳಸಿದ್ದಾರೆ. ಪ್ರಾರ್ಥನೆ ಎಂದರೆ ಒಳ್ಳೆಯ ರೀತಿಯಿಂದ ಬೇಡುವುದು (ವಿನಮ್ರವಾಗಿ ಅಥವಾ ವಿಶೇಷವಾಗಿ ಯಾಚಿಸುವುದು) ಎಂದು ಹೇಳಬಹುದು. ಆದರೆ ಪಾಡ್ದನದಲ್ಲಿ ಬೇಡುವ ಅಥವಾ ಯಾಚಿಸುವ ಅಂಶವೇ ಇಲ್ಲ. ‘ಸ್ತೋತ್ರ’ದ ಸ್ವರೂಪವು ಸ್ವಲ್ಪಮಟ್ಟಿಗೆ ಅನ್ವಯಿಸುತ್ತದೇ ಹೊರತು ಪ್ರಾರ್ಥನೆಯ ಆಂತರಿಕ ಸ್ವರೂಪ ಅಥವಾ ಉದ್ದೇಶಕ್ಕೆ ಸರಿಹೊಂದುವುದಿಲ್ಲ. ಸಂಸ್ಕೃತದ ಪ್ರಾರ್ಥನೆಯ ಬಳಕೆಯನ್ನು ಕಂಡ ತುಳು ಜನಪದ ಕವಿಯು ಅದೇ ರೀತಿ ತುಳುಭಾಷೆಯಲ್ಲಿ ಪಾಡ್ದನಗಳನ್ನು ರಚಿಸಿದ ಎನ್ನುವುದು ಸಂಪೂರ್ಣ ಸುಳ್ಳು. ಹಾಗೆಯೇ ಸ್ತೋತ್ರದ ಪ್ರಭಾವ ಪಾಡ್ದನಗಳ ಮೇಲಿದೆ ಎಂಬ ಭಾವನೆ ನನ್ನ ಮೇಲಿನ ಅಭಿಪ್ರಾಯದಲ್ಲಿಲ್ಲ.

ಪಾಡ್ದನ ಶಬ್ದದ ಮೂಲ ದ್ರಾವಿಡವೇ ಆಗಿದೆ. ‘ಪಾಡ್’ ಧಾತುವಿಗೆ ‘ದ್‌ನ’ ಎಂಬ ಭೂತಕೃದಂತ ಪ್ರತ್ಯಯ ಸೇರಿ ಪಾಡ್ದ್ ನ (= ಹಾಡಿದ್ದು) ಎಂದಾಗಿರಬೇಕು. ಅದೇ ಶಬ್ದವು ಮುಂದೆ ಪಾಡ್ದನ, ಪಡ್ದನೊ, ಪಾಡ್ದೊನೆ ಎಂದು ಪ್ರಾದೇಶಿಕ ವ್ಯತ್ಯಾಸದಿಂದ ಬೇರೆ ಬೇರೆ ಧ್ವನಿಮಾಗಳನ್ನು ಪಡೆದಿರಬೇಕು. ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿರುವ ತುಳು ಜನಪದ ಸಾಹಿತ್ಯದ ಈ ಪ್ರಚಾರಕ್ಕೆ ಅನ್ಯ ಭಾಷೆಗಳ ಹೆಸರು ಇರುವುದು ಸಹಜವಲ್ಲ. ಪಾಡ್ದನ ಶಬ್ದದ ಈ ರೀತಿಯ ನಿಷ್ಪತ್ತಿ ಹೆಚ್ಚು ಸಮಂಜಸವಾಗಿದೆ.

ಪಾಡ್ದನಗಳು ‘ವಚನ ಕಾವ್ಯ’ ಎನ್ನುವ ಗೋವಿಂದ ಪೈಯವರ ಅಭಿಪ್ರಾಯ ಸಮರ್ಪಕವಾಗಿದೆ. ಕಾವ್ಯದ ಲಯವಿದ್ದರೂ ಛಂದಸ್ಸಿನ ನಿರ್ಬಂಧವಿಲ್ಲ. ಕಾವ್ಯದ ಭಾಷೆಯಿದ್ದರೂ ಪ್ರಾಸ ನಿಯಮವಿಲ್ಲ. ಹಾಡುವಾಗ ಗೇಯತೆಯಿದೆ. ಸಣ್ಣ ಸಣ್ಣ ವಾಕ್ಯಗಳಲ್ಲಿ ಕ್ರಿಯೆಯನ್ನು ಚಿತ್ರಿಸುತ್ತಾ, ಓಟವಿರುವ ಭಾಷೆಯ ಶೈಲಿ, ಅಲ್ಲಲ್ಲಿ ಒಂದೆರಡು ಕಡೆ ಪ್ರಾಸ ಮೊದಲಾದುವು ಕಂಡು ಬಂದರೂ ಒಟ್ಟಿನಲ್ಲಿ ನೋಡುವಾಗ ವಚನ ಕಾವ್ಯವಾಗಿದೆ. ಆದರೆ ರಗಳೆಯ ಲಯದ ಸ್ವರೂಪವನ್ನು ಒಳಗೊಂಡ ‘ಕವಿತೆ’ಗಳು ಇದಕ್ಕೆ ಅಪವಾದವಾಗಿವೆ.

ಪಾಡ್ದನಗಳು ಜನಪದ ಲಾವಣಿಗಳನ್ನೆ ಹೋಲುತ್ತವೆ. ಲಾವಣಿಗಳ ಲಕ್ಷಣವು ಪಾಡ್ದನಗಳಲ್ಲಿ ಕಂಡುಬರುತ್ತದೆ. ಪಾಡ್ದನ ಮತ್ತು ಲಾವಣಿಗಳ ತುಲನಾತ್ಮಕ ಅಭ್ಯಾಸದಿಂದ ಇದು ಸಾಧಿತವಾಗುವುದರಲ್ಲಿ ಸಂಶಯವಿಲ್ಲ(ಆದರೆ ಕನ್ನಡದ ಅಥವಾ ಇತರ ಲಾವಣಿಗಳ ಪ್ರಭಾವವು ಪಾಡ್ದನಗಳ ಮೇಲಾಗಿದೆ ಎಂಬ ಅಭಿಪ್ರಾಯವಲ್ಲ). ಪರಂಪರಾಗತವಾಗಿರುವುದು, ಕತೆಯನ್ನು ನಿರೂಪಿಸುವುದು, ವಸ್ತುನಿಷ್ಠವಾಗಿರುವುದು, ಪುನರುಕ್ತಿಗಳಿರುವುದು, ಪಲ್ಲವಿಯಿರುವುದು, ಕತೆಯ ಓಟವಿರುವುದು ಮೊದಲಾದ ಅಂಶಗಳನ್ನು ಲಾವಣಿಗಳಲ್ಲಿ ಕಾಣುವಂತೆ ಪಾಡ್ದನಗಳಲ್ಲಿಯೂ ಕಾಣುತ್ತೇವೆ. ಪಾಡ್ದನಗಳ ಪಲ್ಲವಿ, ಕನ್ನಡದ ಲಾವಣಿಗಳ ಪಲ್ಲವಿಗಿಂತ ಭಿನ್ನವಾಗಿದೆ. ಸರ್ವಸಾಮಾನ್ಯವಾಗಿ ‘ಏsssss’ ‘ಏsssssಆss’ ಎಂಬ ಆಲಾಪನೆಯೇ ಅಥವಾ ಸ್ವರೂಪವನ್ನು ಎಳೆಯುವುದೇ ಪಾಡ್ದನಗಳಲ್ಲಿ ಪಲ್ಲವಿಯಾಗಿದೆ. ನೇಜಿ ನೆಡುವಾಗ ಹಾಡುವ ಕಬಿತೆಗಳಲ್ಲಿ ಪಲ್ಲವಿಯು ಕನ್ನಡದ ಲಾವಣಿಗಳಂತೆಯೇ ಇರುವುದು. ‘ಮಂಜೊಟ್ಟಿಗೋಣ’ ಕಬಿತೆಯಲ್ಲಿ ‘ಈ ಜೋ ಮಂಜೊಟ್ಟಿ ಗೋಣ’ ಎನ್ನುವುದು ಪಲ್ಲವಿಯಾಗಿದೆ. ಹಾಗೆಯೇ ಪಾತ್ರಗಳ ಕ್ರಿಯೆಗೆ ಸಂಬಂಧಿಸಿದ ಸಾಲುಗಳಲ್ಲಿ ಆಯಾ ಪಾತ್ರದ ಹೆಸರೇ ಪಲ್ಲವಿಯಾಗಿರುವುದನ್ನು ಕಾಣುತ್ತೇವೆ. ‘ಮಂಜೊಟ್ಟಿ ಗೋಣ’ ಕಬಿತೆಯಲ್ಲಿ ‘ದಾರಾಂಬು’ ಮತ್ತು ಆಳ್ವೇರ್’ ಎನ್ನುವ ಪಾತ್ರಗಳ ಹೆಸರೂ, ‘ಪಾರ್ವತಿ ಮಂಗಣೆ’ ಕಬಿತೆಯಲ್ಲಿ ‘ಬೊಟ್ಟುಡಿ ಬಲ್ಲಾಳ್’ ಎಂದು ಮೊದಲಾದ ಹೆಸರುಗಳು ಪಲ್ಲವಿಯಾಗಿವೆ. ಪಾಡ್ದನಗಳ ಪಲ್ಲವಿಯ ಇನ್ನೊಂದು ವೈಶಿಷ್ಟ್ಯವೆಂದರೆ ಪ್ರತಿ ಚರಣದ ಆದಿಯ ಸ್ವರವನ್ನು ಎಳೆದು ಪ್ರಾರಂಭಿಸುವುದು. ಪಾಡ್ದನಗಳನ್ನು ಸಾಮಾನ್ಯವಾಗಿ ಎರಡು ವ್ಯಕ್ತಿಗಳು ಜೊತೆಗೂಡಿ ಹಾಡುವುದರಿಂದ, ಒಬ್ಬರಿಗೊಬ್ಬರು ದನಿಗೂಡಿಸಲು ಆದಿಯ ಪಲ್ಲವಿಯು ಅನುಕೂಲವಾಗಿರುತ್ತದೆ. ಪಾಡ್ದನಗಳನ್ನು ಪ್ರಾರಂಭಿಸುವ ವಿಧಾನವು ಸ್ವತಂತ್ರವಾದುದು. ‘ಡೆಣ್ಣ ಡೆಣ್ಣಾಣ ಡೆಣ್ಣಾ ಣ ಯೇssssಆss’ ಭೂತಗಳ ಪಾಡ್ದನದಲ್ಲಿ ಸಾಲಿನ ಕೊನೆಯಲ್ಲಿ ಏರಿದ ಸ್ವರವೂ ಸಂಪೂರ್ಣವಾಗಿ ಇಳಿಯುವುದು. ಇತರ ಪಾಡ್ದನಗಳಲ್ಲಿ ಈ ರೀತಿಯಲ್ಲಿ ಪ್ರಾರಂಭಿಸಿದಾಗಲೇ ಯಾವುದೋ ಆಕರ್ಷಕ ಸೌಂದರ್ಯವೂ ಹೊರಹೊಮ್ಮುವುದು. ಪಾಡ್ದನಗಳನ್ನು ಹಾಡುವ ರೀತಿಯನ್ನು ಶಿವರಾಮ ಕಾರಂತರು ಈ ರೀತಿಯಾಗಿ ವರ್ಣಿಸಿದ್ದಾರೆ ‘ಡೆಣ ಡೆಣ್ಣಾ ಡೆಣ ಡೆಣಾ ಡೆಣ್ಣಾ ಎಂದು ಸಂಧಿಕಾರನ ಒಕ್ಕೊರಲಿನಿಂದ ಹೊರಡುವ ಧ್ವನಿತರಂಗ ವಿನ್ಯಾಸವು ಗಂಭೀರವಾಗಿ ಮೊರೆಯುವ ಬಿರುಸಿನ ಕಡಲಿನ ಅಲೆಗಳಂತೆ ಒಂದೇ ತೆರನಾಗಿ ಬಂದು ಕಿವಿಯ ಮೇಲೆ ಅಪ್ಪಳಿಸುತ್ತದೆ’ (ತೆಂಕನಾಡು – ದಕ್ಷಿಣ ಕನ್ನಡದ ಕಲೆ)

‘ತೆಂಬರೆ’ (ಸಣ್ಣ ಡೋಲು)ಯನ್ನು ಬಡಿಯುತ್ತಾ (ಒಂದು ಬದಿಯನ್ನು ಕೋಲಿನಿಂದ ಬಡಿಯುತ್ತಾರೆ. ಇನ್ನೊಂದು ಬದಿಯನ್ನು ಕೈಯಿಂದ ಬಾರಿಸುತ್ತಾರೆ. ಪಾಡ್ದನವನ್ನು ಹಾಡುತ್ತಾರೆ. ಗದ್ಯರೂಪದ ಭಾಷೆಯನ್ನು ರಾಗದ ಏರಿಳಿತಗಳಿಂದ ವಿರಳವಾಗಿ ಹಾಗೂ ವೇಗವಾಗಿ ಹಾಡುವಾಗ ನಿಶ್ಚಿತ ತಾಳವನ್ನು ಅಥವಾ ಪೆಟ್ಟನ್ನು ‘ತೆಂಬರೆ’ಯಲ್ಲಿ ಬಾರಿಸುತ್ತಾರೆ. ‘ತೆಂಬರೆ’ಯ ಸ್ವರ (ಪಗ್‌ರ್)ವು ಸ್ವರದ ಏರಿಳಿತಗಳಿಗನುಗುಣವಾಗಿ ಇರುತ್ತದೆ.

ಪಾಡ್ದನವನ್ನು ಹಾಡುವ ಧಾಟಿಯು ನಾಲ್ಕೈದು ವಿಧಗಳಲ್ಲಿ ಇದೆ. ಒಂದು ಭೂತದ ಪಾಡ್ದನದ ಧಾಟಿಯಂತೆ ಇನ್ನೊಂದು ಭೂತದ ಪಾಡ್ದನದ ಧಾಟಿಯಿರುವುದಿಲ್ಲ. ಉದಾಹರಣೆಗೆ: ‘ಪಂಜುರ್ಲಿ’, ‘ಲೆಕ್ಕೆಸಿರಿ’ ಮೊದಲಾದ ಪಾಡ್ದನಗಳನ್ನು ಎತ್ತರದ ಸ್ವರದಲ್ಲಿ ಹೇಳಿದರೆ, ‘ಕಲ್ಕುಡ’, ‘ಬೊಬ್ಬರ್ಯೆ’ ಮೊದಲಾದ ಪಾಡ್ದನಗಳನ್ನು ಮಧ್ಯಮ ಸ್ವರದಲ್ಲಿ ನಿಧಾನವಾಗಿ ವಿರಳವಾಗಿ ಹೇಳುತ್ತಾರೆ. ಉಗ್ರರೂಪದ ಭೂತವು ಏರಿದ ಸ್ವರದಲ್ಲಿ ಹಾಡುವಾಗ ವೀರರಸವು ಗೋಚರವಾಗುವುದು. ಧಾಟಿಗನುಗುಣವಾಗಿ ತೆಂಬರೆಯ ಪೆಟ್ಟಿನ ಗತಿಯೂ ವ್ಯತ್ಯಾಸವಾಗುವುದು. ಆದರೆ ಆ ಪೆಟ್ಟುಗಳಿಗೆ ಪ್ರತ್ಯೇಕವಾದ ಹೆಸರುಗಳಿಲ್ಲ ಎಂದು ಹೇಳಬಹುದು. ವೇಷ ಹಾಕಲು (ಅಯ್ತಕ್ಕೆ) ಕುಳಿತುಕೊಳ್ಳುವಾಗ ಹೆಂಗಸರು ( ಪರತಿ, ಕೊರತಿ) ಹಾಡುವ ರೀತಿಗೂ, ಭೂತದ ವೇಷವನ್ನು ಹಾಕಿಕೊಳ್ಳುತ್ತಿರುವ ಗಂಡಸು ಹೇಳುವ ರೀತಿಗೂ ವ್ಯತ್ಯಾಸವಿದೆ.

ಕೆಲಸದ ವೇಳೆಯಲ್ಲಿ ಹಾಡುವ ಧಾಟಿ ಬೇರೊಂದು ರೀತಿಯದ್ದು. ಕೆಲವು ಆಚರಣೆ (ಮಾದಿರ, ಕನ್ಯಾವು, ಆಟಿಕಳಂಜ) ಗಳಲ್ಲಿ ಹಾಡುವ ಧಾಟಿ ಪ್ರತ್ಯೇಕವಾಗಿರುತ್ತದೆ. ಕೆಲವು ಪಾಡ್ದನಗಳನ್ನು ಹಾಡುವಾಗ ತೆಂಬರೆಯನ್ನು ಬಡಿಯದೆ, ಮಧ್ಯೆ ಮಧ್ಯೆ ಹಾಡನ್ನು ನಿಲ್ಲಿಸಿ ಬಡಿಯುವ ಸಂಪ್ರದಾಯವಿದೆ. ದೀಪಾವಳಿ ಸಮಯದಲ್ಲಿ ಹಾಡುವ ‘ಬಲೀಂದ್ರ’ ಪಾಡ್ಡನವನ್ನು ಈ ರೀತಿಯಾಗಿ ಹಾಡುತ್ತಾರೆ.

ಪಾಡ್ದನಗಳನ್ನು ಹಾಡುವಾಗ ಶಬ್ದೋಚ್ಚಾರವಂತೂ ಬಹಳ ಚಳಕವಾಗಿರುತ್ತದೆ. ಪಾಡ್ದನಗಳ ರಾಗವನ್ನೂ, ಲಯವನ್ನೂ ಭಾಷೆಯ ಗತ್ತನ್ನು ಹಾಡುವಾಗ ಕಾಣುವಷ್ಟು ನಾವು ಓದುವಾಗ ಕಾಣಲಾರೆವು.

ಕತೆಯನ್ನು ನಿರೂಪಿಸಿದ ಪಾಡ್ದನಗಳಿಲ್ಲ. ಹಾಡುವುದು ಪ್ರಧಾನ ಲಕ್ಷಣವಾದರೂ ಕತೆಯಿಲ್ಲದ ಹಾಡಿಲ್ಲ ಎನ್ನುವಂತಿದೆ. ಭೂತಕ್ಕೆ ಸಂಬಂಧಿಸಿದ ಅಥವಾ ಇತರ ಕತೆಗಳ ಘಟನೆಯು ತೀರ ಸಣ್ಣದಾಗಿದ್ದರೂ ನಿತ್ಯ ಜೀವನದ ಕ್ರಿಯೆಗಳಿಂದ ಹೆಣೆದುಕೊಂಡು ನಿರೂಪಿಸುವುದು ಪಾಡ್ದನಗಳ ಸಾಮಾನ್ಯ ಸ್ವರೂಪ. ನಿತ್ಯಜೀವನದ ಕ್ರಿಯೆಗಳು ಅನುಚಿತವಾಗಿ ಬರುವುದಿಲ್ಲ. ಹಾಡು ಜೀವಾಳವಾದರೆ, ಕತೆ ಶರೀರ, ಘಟನೆಗಳು ಇಂದ್ರಿಯ ಮನಸ್ಸು. ಒಟ್ಟಿನಲ್ಲಿ ಇವೆಲ್ಲವುಗಳಿಂದ ಬಾಹ್ಯ ಮತ್ತು ಆಂತರಿಕ ಸೌಂದರ್ಯವನ್ನು ಪಡೆಯುವುದು.

ಕತೆಯ ವಸ್ತುವಿನಲ್ಲಿ ವೈವಿಧ್ಯವಿರುತ್ತದೆ. ‘ತುಳು – ಇಂಗ್ಲೀಷ್ ಡಿಕ್ಷ್‌ನರಿ’ಯಲ್ಲಿ ‘A legendary account of damons and heroes of the Tulu Country’ ಎಂದು ಮರಿಯಪ್ಪ ಭಟ್ಟರು ಅರ್ಥವನ್ನು ಹೇಳಿದ್ದಾರೆ. ಇಷ್ಟರಲ್ಲೇ ಪಾಡ್ದನದ ಸಂಪೂರ್ಣ ಅರ್ಥವನ್ನು ಕೊಟ್ಟಂತಾಗಲಿಲ್ಲ. ಪಾಡ್ದನದ ವಸ್ತುಭೂತಗಳನ್ನು ಮತ್ತು ತುಳು ನಾಯಕರನ್ನು ಕುರಿತಾಗಿರುವುದಾದರೂ, ಕತೆಯ ವಸ್ತುವಿನ ದೃಷ್ಟಿಯಿಂದಲೂ ಅದರ ಸ್ವರೂಪ ಇನ್ನೂ ವ್ಯಾಪಕವಾದುದು.

ಪಾಡ್ದನಗಳು ಭೂತಗಳ, ಪೌರಾಣಿಕ ಮತ್ತು ಲೌಕಿಕ ಕತೆಗಳನ್ನೊಳಗೊಂಡ ಲಾವಣಿಗಳು ಎನ್ನಬಹುದು. ಭೂತಗಳೆಂದರೇನು ಎನ್ನುವುದಕ್ಕೆ ಗೋವಿಂದ ಪೈಗಳು ಈ ರೀತಿಯಾಗಿ ವ್ಯಾಖ್ಯಾನಿಸಿದ್ದಾರೆ – ‘ ಕಣ್ಣಿಗೆ ಕಾಣುವ ಅಥವಾ ಸಂಸಾರದಲ್ಲಿಯ ವಿಶೇಷ ದರ್ಶನಗಳನ್ನು ಅಥವಾ ಸಂಭವಗಳನ್ನು ಇಲ್ಲವೇ ಕೆಲವೊಮ್ಮೆ ವ್ಯಕ್ತಿಗಳ್ನು ಏವಂಚ ಕಣ್ಣಿಗೆ ಕಾಣುವ ಹಾಗೂ ಮನಸ್ಸಿನಲ್ಲಿ ಒತ್ತುವ ವಿಷಯಗಳನ್ನು ವ್ಯಕ್ತೀಕರಿಸುವುದು ಅಥವಾ ದೇವೀಕರಿಸುವುದು’’. ಇಷ್ಟ ಸಮರ್ಪಕವಾಗಿ ಬೇರೆ ಮಾತುಗಳಲ್ಲಿ ಹೇಳುವುದೂ ಸಾಧ್ಯವಿಲ್ಲ. ಪಾಡ್ದನಗಳಲ್ಲಿ ವರ್ಣಿತವಾಗಿರುವ ಭೂತಗಳಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಒಂದು ದೇವರಿಂದಲೇ ಅವತಾರವೆತ್ತಿದ ಕೆಲವು ಶಕ್ತಿಗಳು. ಪುರಾಣಗಳ ಪ್ರಭಾವದಿಂದ ಈ ನಂಬಿಕೆ ಪರಂಪರಾಗತವಾಗಿ ಹರಿದುಬಂದಿರಬಹುದು. ಇಲ್ಲಿಯ ವಸ್ತು ಅಲೌಕಿಕವಾಗಿದ್ದರೂ ಕತೆಯ ಬೆಳವಣಿಗೆ ಮತ್ತು ಚಿತ್ರಣಗಳು ಲೌಕಿಕದ ಚೌಕಟ್ಟಿನಲ್ಲಿಯೇ ಇರುತ್ತವೆ. ಎರಡನೆಯದು – ಲೌಕಿಕ ವ್ಯಕ್ತಿಗಳು ದೈವೀವ್ಯಕ್ತಿತ್ವದಿಂದಲೋ, ಭೂತದ ಮಹಿಮೆ ಅಥವಾ ಪ್ರತಾಪದಿಂದಲೋ ಭೂತಗಳಾಗಿರುವುದು. ಇಲ್ಲಿಯ ಕತೆಯ ಲೌಕಿಕದಿಂದ ಅಲೌಕಿಕದ ಕಡೆಗೆ ಮುಂದುವರಿಯುವುದು. ಜೀವನದಲ್ಲಿ ಮಹತ್ತನ್ನು ಸಾಧಿಸಿದ ವ್ಯಕ್ತಿಗಳು ಜನರ ಮನಸ್ಸಿನ ಮೇಲೆ ವಿಶೇಷವಾದ ಪ್ರಭಾವ ಬೀರಿದವರು ಜನಪದರ ಪೂಜೆಗೆ ಪಾತ್ರರಾಗಿದ್ದಾರೆ. ಅಮಾನುಷ ಕೃತ್ಯವಿದೆಂದು ಜನರಿಗೆ ಮನದಟ್ಟಾದರೆ ಅಂಥವರನ್ನು ಗೌರವದಿಂದ ಕಾಣುತ್ತಾರೆ. ತಮ್ಮ ಪಾಲಿನ ದೈವವೆಂದು ನಂಬಿಕೊಂಡಿರುತ್ತಾರೆ. ದೈವೀಶಕ್ತಿಯ ಪರಾಕಾಷ್ಠೆಯನ್ನು ನಿದರ್ಶನಗಳ ಮೂಲಕ ಕಂಡಾಗ ಪೂಜಿಸುವ ವಿಶಾಲ ಮನೋಭಾವವನ್ನು ಜನತೆ ತಾಳಿತ್ತು. (ವರ್ತಮಾನ ಕಾಲದಲ್ಲೂ ಸಾಕಷ್ಟು ನಿದರ್ಶನಗಳಿವೆ) ‘Practically every ‘Bhuta’ worshiped by Tuluvas, represents some famous man ro woman who performed deeds of valour’ (Ancient History of Karnatka Vol I P. 372) ಹೀಗೆ ಅವ್ಯಕ್ತ ಶಕ್ತಿಗಳಾದ ಭೂತಗಳನ್ನು, ಅಸಾಮಾನ್ಯ ಕಾರ್ಯಗಳನ್ನು ಮಾಡಿದ ಮಹಾಪುರುಷರನ್ನು ಆರಾಧಿಸುವಾಗ, ಹುಟ್ಟು ಬೆಳವಣಿಗೆ, ಸಾಹಸ ಕಾರ್ಯ ಮೊದಲಾದವುಗಳ ಕತೆಯನ್ನು ಹಾಡುವ ಲಾವಣಿಗಳೇ ಪಾಡ್ದನಗಳು.

ಪಾಡ್ದನಗಳ ಕತೆಯ ವಸ್ತುವಿನಲ್ಲಿ ಹಲವಾರು ಉಪ ವಿಭಾಗಗಳನ್ನು ಮಾಡಬಹುದು. ಭೂತದ ಹುಟ್ಟನ್ನು ಮಾತ್ರ ನಿರೂಪಿಸುವ ಪಾಡ್ದನಗಳಿವೆ. ಭೂತದ ಬೆಳವಣಿಗೆ ಅಂದರೆ ಬೇರೆ ಬೇರೆ ಪ್ರದೇಶಗಳಲ್ಲಿ ನೆಲೆಯೂರುವ ಕತೆಗಳನ್ನು ವಿವರಿಸುವ ಪಾಡ್ದನಗಳು ಇವೆ. ಭೂತದ ಮಾಹತ್ಮೆ ಮತ್ತು ಪ್ರತಾಪವೇ ಅದಕ್ಕೆ ಸಂಬಂಧಿಸಿದ ಘಟನೆಗಳೇ ಕತೆಯ ವಸ್ತುವಾಗಿರಬಹುದು. ಪೌರಾಣಿಕ ಕತೆಗಳನ್ನು ತಮ್ಮದೇ ಆದ ಕಲ್ಪನೆಯಿಂದ ಕಟ್ಟಿ ಹಾಡುವ ಪಾಡ್ದನಗಳು ಕೆಲವು ಇವೆ. ಭೂತಕ್ಕೆ ಸಂಬಂಧಿಸಿದ ಅಮಾನುಷ ವಸ್ತುಗಳನ್ನು ಒಳಗೊಂಡ ಪಾಡ್ದನಗಳು ಸುಂದರವಾಗಿ ನಿರೂಪಿತವಾಗಿವೆ. ಯಾವ ಅನುಮಾಷ ಅಂಶಗಳೂ ನುಸುಳದ ತೀರ ಲೌಕಿಕ ವಸ್ತುವನ್ನು ಒಳಗೊಂಡ ಪಾಡ್ದನಗಳು ದುರಂತ ಹಾಗೂ ನೀತಿಯುಕ್ತವಾಗಿರುತ್ತವೆ. ಇನ್ನು ಕೆಲವು ಆಚರಣೆ ಅಥವಾ ಸಂಪ್ರದಾಯಗಳಿಗೆ ಮೀಸಲಾದ ಪಾಡ್ದನಗಳು ಆಯಾ ಆಚರಣೆಗಳ ಹಿನ್ನೆಲೆಯನ್ನು ವಿವರಿಸುತ್ತವೆ. ಪಾಡ್ದನಗಳನ್ನು ಇನ್ನೂ ವ್ಯಾಪಕವಾಗಿ ಸಂಗ್ರಹಿಸಿದಾಗ ವಿವಿಧ ರೀತಿಯ ಪಾಡ್ದನಗಳ ವಿಭಾಗಗಳು ಹೆಚ್ಚಾಗಬಹುದು.

ಮೇಲಿನ ವಿವಿಧ ರೀತಿಯ ಪಾಡ್ದನಗಳಲ್ಲಿ ಕತೆಯ ನಿರೂಪಣೆ, ಘಟನೆಗಳ ಸಂಯೋಜನೆ, ಭಾಷೆ, ಶೈಲಿ ಮೊದಲಾದವು ಗಮನಾರ್ಹವಾದುವು. ಕೆಲವು ಪಾಡ್ದನಗಳಲ್ಲಿ ಪ್ರಾದೇಶಿಕ ವ್ಯತ್ಯಾಸವನ್ನು ತೋರ್ಪಡಿಸುವ ಭಾಷೆಯಿರುವುದು. ಹಾಗೆಯೇ ಶೈಲಿಯಲ್ಲಿಯೂ ವ್ಯತ್ಯಾಸವಿರುವುದು. ಭೂತಗಳ ಪಾಡ್ದನದ ಭಾಷೆಯ ಬಿಗು, ಗತ್ತು ಇತರ ಪಾಡ್ದನಗಳಲ್ಲಿ ಕಂಡುಬರುವುದಿಲ್ಲ. ಹಾಡುವಾಗಿನ ವೈವಿಧ್ಯತೆಯನ್ನು ಹಿಂದೆ ಪರಿಶೀಲಿಸಿದ್ದೇವೆ.

ಇನ್ನೊಂದು ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದು ಉಚಿತವಾಗಿದೆ. ಪಾಡ್ದನಗಳಲ್ಲಿಯ ಪ್ರಭೇದಗಳನ್ನು ಅರ್ಥಮಾಡಿಕೊಳ್ಳದೆ ಸಂಧಿ, ಕಬಿತೆ ಎಂಬೆರಡು ಶಬ್ದಗಳು ಬಳಕೆಯಲ್ಲಿವೆ. ಇವುಗಳಲ್ಲಿ ಸಂಧಿ ಮತ್ತು ಪಾಡ್ದನಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಪಾಡ್ದನವು ವ್ಯಾಪಕಾರ್ಥವುಳ್ಳ ಶಬ್ದವೆಂದು ಹೇಳಬಹುದು. ಭೂತಗಳ ಕುರಿತಿರುವ ಹಾಡುಗಳನ್ನು ಸಂಧಿ ಎಂದೂ ಕರೆಯುತ್ತಾರೆ. ಇನ್ನು ನಾಟಿ ನೆಡುವಾಗ, ನೇಜಿ ತೆಗೆಯುವಾಗ ಹಾಡುವ ಹಾಡುಗಳನ್ನು ‘ಕಬಿತೆ’ ಎಂದು ಕರೆಯುತ್ತಾರೆ. ಆದರೆ ತುಳುನಾಡಿನ ಕೆಲವು ಪ್ರದೇಶಗಳಲ್ಲಿ ಪಾಡ್ದನ ಎಂಬ ಹೆಸರೇ ಬಳಕೆಯಲ್ಲಿದೆ. ಪಾಡ್ದನವು ವ್ಯಾಪಕವಾದ ಶಬ್ದವೆಂದು ಇಟ್ಟುಕೊಂಡರೆ, ಸಂಧಿ ಮತ್ತು ಕಬಿತೆಗಳು ಪಾಡ್ದನ ಶಬ್ದದ ಅರ್ಥದೊಳಗೇ ಬರುವ ಹೆಸರುಗಳು ಅಥವಾ ಪಾಡ್ದನದ ಪ್ರಭೇದಗಳೆಂದು ಹೇಳಬಹುದು. ಸಂಧಿ, ಕವಿತೆ ಎನ್ನುವ ಗೊಂದಲಕ್ಕೀಡಾಗುವುದರ ಬದಲು ಅವುಗಳನ್ನು ಪಾಡ್ದನಗಳೆಂದು ಕರೆಯುವುದು ಉಚಿತ. ಪಾಡ್ದನಗಳೆಂದು ಕರೆಯುವುದರಲ್ಲಿ ತಪ್ಪಿಲ್ಲ. (ಕೆಲವು ಭೂತದ ಪಾಡ್ದನಗಳನ್ನು ನೇಜಿ ನೆಡುವಾಗಲೂ ಹಾಡುತ್ತಾರೆ. ಉದಾ: ಸಿರಿ ಪಾಡ್ದನ, ಕೋಟಿ ಚೆನ್ನಯ ಪಾಡ್ದನ ಇತ್ಯಾದಿ. ಕೆಲವು ಪಾಡ್ದನಗಳನ್ನು ನೇಜಿ ನೆಡುವಾಗ ಮಾತ್ರ ಹೇಳಬೇಕೆಂಬ ಕಟ್ಟು ಇದೆ. ಉದಾ: ಮಂಜೊಟ್ಟಿಗೋಣ, ಆದರೆ ಬತ್ತ ಕೊಯ್ಯುವಾಗ ಪಾಡ್ದನವನ್ನು ಹಾಡುವ ಸಂಪ್ರದಾಯವಿಲ್ಲ.)

ಪಾಡ್ದನಗಳನ್ನು ಸ್ಥೂಲವಾಗಿ ಈ ಕೆಳಗಿನಂತೆ ವಿಂಗಡಿಸಬಹುದು:

06_42_TSC-KUH

ಪಾಡ್ದನಗಳು ‘ಹಾಡಿದ‘ವುಗಳು, ಬಾಯಿಯಿಂದ ಬಾಯಿಗೆ ಹರಿದು ಬಂದವುಗಳು. ಬ್ರಾಹ್ಮಣ ಜಾತಿಯವರನ್ನು ಬಿಟ್ಟರೆ ಉಳಿದ ತುಳುವರು ಸಾಮಾನ್ಯವಾಗಿ ಪಾಡ್ಡನಗಳನ್ನು ಹಾಡುತ್ತಾರೆ. ಆದರೆ ಹೆಚ್ಚಾಗಿ ನಲ್ಕೆ, ಪರವ, ಪಂಬದ (ಬೆಳ್ಚಪ್ಪಾಡ) ಮೊದಲಾದ ವರ್ಗದವರು ಹಾಡುವವರು. ಪಾಡ್ಡನಗಳು ಹಿಂದಿನಿಂದ ಹರಿದು ಬಂದು ಇಂದಿನವರೆಗೆ ಉಳಿದಿರುವುದು ಇವರಿಂದಲೇ ಎಂದು ಹೇಳಬಹುದು. ನಲ್ಕೆಯವರು, ಪರವರು ಮತ್ತು ಪಂಬದರು ಪಾಡ್ದನಗಳನ್ನು ಮತ್ತು ಕೋಲದ ನಿಯಮಾವಳಿಗಳನ್ನು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಮನೆಯಲ್ಲಿ ಕಲಿಸುತ್ತಾರೆ. ಇವರ ಕುಲಕಸುಬೇ ಇದು ಆಗಿರುವುದರಿಂದ ಕಡ್ಡಾಯವಾಗಿ ಕಲಿಸಬೇಕಾಗುವುದು. ಕೋಲದ ದಿವಸವೂ ಕಟ್ಟುವವನ ಮನೆಯವರಲ್ಲೆರೂ ಬರುವುದನ್ನು ಕಾಣುತ್ತೇವೆ. ಕೋಲ ಪ್ರಾರಂಭವಾಗುವ ಮೊದಲು ಅಥವಾ ವೇಷಕ್ಕೆ (ಅಯ್ತಕ್ಕೆ) ಕುಳಿತುಕೊಳ್ಳುವಾಗ ತಾಯಿ ಮಗಳನ್ನು ಕರೆದು ತಾನು ಹೇಳದುದನ್ನೇ ಹೇಳುವಂತೆ ಆದೇಶವನ್ನೀಯುತ್ತಾಳೆ. ಕೆಲವೆಡೆ ಭೂತ ಕಟ್ಟುವವನು ಮತ್ತು ಅಭ್ಯಾಸ ಮಾಡುವ ಮಗಳು ಇಬ್ಬರೂ ತಾಯಿ (ಕೋಲದಲ್ಲಿ ಪರತಿ ಅಥವಾ ಕೊರತಿ) ಹೇಳಿದುದನ್ನೇ ಒಟ್ಟಿಗೆ ಪುನಾ ಹೇಳುವುದಿದೆ. ಒಂದು ವೇಳೆ ತಂದೆ ತಾಯಿಗಳು ತೀರಿಕೊಂಡಿದ್ದರೆ ಸೋದರ ಮಾವನ ಜೊತೆಯಲ್ಲಿ ಅಭ್ಯಾಸ ಮಾಡುತ್ತಾರೆ. ಸೋದರಮಾವನೂ ಇಲ್ಲದೆ ಇದ್ದರೆ ಆಗ ವೇರೆ ಪಂಗಡಗಳಲ್ಲಿ ಸೇರಿಕೊಂಡು ಅಭ್ಯಾಸ ಮಾಡಬೇಕಾಗುತ್ತದೆ.

ಪಾಡ್ದನಗಳನ್ನು ಈ ಜಾತಿಯವರೇ ರಚಿಸಿದರೆಂದು ಹೇಳುವಂತಿಲ್ಲ. ಯಾವನೋ ಒಬ್ಬ ಪ್ರತಿಭಾವಂತ ಕವಿಯಿಂದ ಪಾಡ್ದನವು ಮೊದಲು ಸೃಷ್ಟಿಯಾಗುವುದು. ಇದನ್ನು ಸಮುದಾಯ ಸೃಷ್ಟಿ ಎನ್ನುವುದು ಸಮಂಜಸವಾಗುವುದಿಲ್ಲ. ಪಾಡ್ಡನಗಳನ್ನು ಹಾಡುವುದರಲ್ಲಿ ನಲ್ಕೆ, ಪರವ ಮತ್ತು ಪಂಬದ – ಈ ವರ್ಗಗಳದ್ದು ಹುಟ್ಟು ಪ್ರತಿಭೆಯಾಗಿದೆ ಎಂದೆನಿಸುತ್ತದೆ. ವೇದಮಂತ್ರವನ್ನು ಹೇಳುವ ರೀತಿಯು ಬ್ರಾಹ್ಮಣರಲ್ಲಿ (ಕೆಲವರಲ್ಲಿ, ಉಳಿದುಬಂದಿರುವಂತೆ) ಪಾಡ್ದನಗಳು ನಲ್ಕೆ, ಪರವ, ಪಂಬದರಲ್ಲಿ ಇಂದು ಉಳಿದಿದೆ.

ವಸ್ತು, ವರ್ಣನೆ, ಶೈಲಿ, ಮಹತ್ವ….

‘ಕೋಟಿ – ಚೆನ್ನಯ’ ಪಾಡ್ದನವು ಜನಪದ ಸಾಹಿತ್ಯದ ದೃಷ್ಟಿಯಿಂದ ಅತ್ಯಂತ ಶ್ರೇಷ್ಠವಾದುದು. ಉಳಿದೆಲ್ಲ ಪಾಡ್ದನಗಳಿಗಿಂತ ಸುದೀರ್ಘವಾದುದು. ಒಂದು ಕಾದಂಬರಿಯ ವಸ್ತು ಇದರದಾಗಿದೆ. ಎರಡು ತಲೆಮಾರುಗಳ ಕತೆಯನ್ನು ಎಷ್ಟು ಬೇಕೋ ಅಷ್ಟೇ ಹೇಳುತ್ತಾ ಹೋಗಿ ಜನಪದ ಕವಿಯು ತನ್ನ ಮತ್ತು ತನ್ನ ಜನಾಂಗದ ನಿಲುವು, ನಂಬಿಕೆ, ಆಚರಣೆಗಳನ್ನು ಸರಳ ಸುಂದರವಾಗಿ ನಿರೂಪಿಸಿದ್ದಾನೆ. ಕೋಟಿಚೆನ್ನಯರೆಂಬ ಮಹಾಪುರುಷರ ಜೀವನ ಸಾಧನೆಗಳನ್ನು ಸಹಜವಾಗಿಯೂ, ಕೆಲವು ಕಲ್ಪನೆಗಳಿಂದಲೂ ಚಿತ್ರಿಸಿದ್ದಾನೆ. ಕತೆಯನ್ನು ನಿರೂಪಿಸುವಲ್ಲಿ ಜೀವನಾನುಭವಗಳೊಂದಿಗೆ ಚಿತ್ರಣವನ್ನು, ಘಟನೆಗಳನ್ನು ಬೆಸೆದಿದ್ದಾನೆ. ಸಹಜ ಜೀವನದ ಚಿತ್ರಣಗಳೊಂದಿಗೆ ಅಮಾನುಷ ಗುಣವು ಕೆಲವು ಘಟನೆ ಮತ್ತು ಪ್ರಮುಖ ಪಾತ್ರಗಳಲ್ಲಿ ಸಮಸಮನಾಗಿ ಎನ್ನುವಂತೆ ಬೆರೆತಿದೆ. ಜೀವನಾನುಭವವು ಎಷ್ಟು ಮುಖ್ಯವೋ, ಅಮಾನುಷತೆಯೂ-ಜನಪದರ ಮನೋಧರ್ಮಕ್ಕೆ ಸರಿಯಾಗಿ ಅಷ್ಟೇ ಮಹತ್ವಪೂರ್ಣವಾದುದು. ದೇಯಿ ಬೈದ್ಯೆತಿ, ಕೋಟಿ – ಚೆನ್ನಯ, ಚೆಂದುಗಿಡಿ ಪಾತ್ರಗಳಲ್ಲಿ ಮತ್ತು ಒಂದೆರಡು ಸಂದರ್ಭಗಳಲ್ಲಿ ಅಮಾನುಷ ಗುಣವು ಕಂಡುಬರುತ್ತದೆ. ದೇಯಿ ಬೈದ್ಯೆತಿ, ಕೇಂಜವ ಹಕ್ಕಿಯ ಮೊಟ್ಟೆಯಿಂದ ಹುಟ್ಟಿದವಳು. ಅದು ಕೇಂಜವ ಹಕ್ಕಿಗಳು ಬ್ರಹ್ಮದೇವರಲ್ಲಿ ಪ್ರಾರ್ಥಿಸಿದುದರಿಂದ ಅವುಗಳಿಗೆ ಸಂತಾನಪ್ರಾಪ್ತಿಯಾಯಿತು. ಇವಳು ಒಬ್ಬ ಬ್ರಾಹ್ಮಣನ ಮನೆಯಲ್ಲಿ ಬೆಳೆದ ದೈವಾಂಶ ಸಂಭೂತೆಯಾದ ಕನ್ಯೆ. ಸಮಾಜದ ಕಟ್ಟುನಿಟ್ಟಿನಿಂದ ಬಿಲ್ಲವನ ಮನೆಗೆ ಬರಬೇಕಾಯಿತು. ‘ಅವಳು ಮಾಯದವಳು’ ಎಂದು ಒಂದು ಪಾತ್ರದ ಮೂಲಕ ಹೇಳುತ್ತಾನೆ ಕವಿ. ಅವಳು ಮಂತ್ರಬಲದಿಂದ ಮದ್ದು ಕೊಡುತ್ತಾಳೆ. ಪೆರ್ಮಲೆ ಬಲ್ಲಾಳನ ಕಾಲುನೋವಿಗೆ, ದೇಯಿಯನ್ನು ಕರೆದುಕೊಂಡು ಹೋಗಲು ತಂದಿರುವ ದಂಡಿಗೆಯಲ್ಲಿ ದೇಯಿಯು ಕುಳಿತುಕೊಳ್ಳಲು ಒಪ್ಪದೆ, ತನ್ನ ಮದ್ದಿನ ಕಟ್ಟನ್ನು ಮಾತ್ರ ಇಟ್ಟಾಗ ಹೊರುವವರಿಗೆ ಸಹಿಸಲಾರದ ಆಯಾಸವಾಗುವುದು. ಬಳಿಕ ದೇಯಿಯು ಕೈಯಲ್ಲಿಯೇ ಹಿಡಿದುಕೊಂಡು ಹೋಗುವಳು.

ಸಾಯನ ಬೈದ್ಯನು ಕಾಡಿನಿಂದ ಕರೆದು ತಂದು, ಕಾಂತಣ್ಣ ಬೈದ್ಯನಿಗೆ ದೇಯಿಯನ್ನು ಮದುವೆ ಮಾಡಿಕೊಟ್ಟ ಮೇಲೆ ಕಿನ್ನಿದಾರು ಎಂಬ ಮಗಳು ಹುಟ್ಟುತ್ತಾಳೆ. ಕಿನ್ನಿದಾರು ಕೂಡ ಇಂದು ಭೂತವಾಗಿ ಪೂಜೆಯನ್ನು ಪಡೆಯುತ್ತಾಳೆ. ಕೋಟಿ – ಚೆನ್ನಯರ ಗರಡಿಯಲ್ಲಿ ಕಿನ್ನಿದಾರುವಿನ ಗುಡಿಯೂ ಇರುತ್ತದೆ. ದೇಯಿ ಬೈದೆತಿ ಮಾತ್ರ ದೈವಾಂಶ ಸಂಭೂತೆಯಲ್ಲ. ಅವಳ ಮಕ್ಕಳು ಕೂಡಾ ದೈವಾಂಶ ಸಂಭೂತರು ಎಂಬುದು ಕತೆಯಲ್ಲಿ ವ್ಯಕ್ತವಾಗುತ್ತದೆ. ಕೋಟಿ – ಚೆನ್ನಯರು ಸಾಮಾನ್ಯರಲ್ಲ, ಮಾಯದ ಮನುಷ್ಯರು ಎನ್ನುವುದಕ್ಕೆ ಒಂದು ಹಿನ್ನೆಲೆಯನ್ನು ಮೊತ್ತಮೊದಲು ಕಾಣಬಹುದು. ದೇಯಿ ಬೈದ್ಯೆತಿಯು ‘ಗಂಗನಾಡಿ’ ಕೆರೆಯ ನೀರು ಕುಡಿದುದರಿಂದ ಬಸುರಿಯಾದಳು ಎನ್ನುವುದು ಅಮಾನುಷ ಚಿತ್ರಣದ ಒಂದು ಮಾದರಿ. (ಇವತ್ತಿಗೂ ಇಂತಹ ನಂಬಿಕೆ ಜನಪದರಲ್ಲಿ ಇದೆ.) ಕೋಟಿ ಚೆನ್ನಯರ ಹುಟ್ಟಿನಲ್ಲಿಯೇ ಇಂತಹ ಮಹಿಮೆಯನ್ನು ತೋರ್ಪಡಿಸುತ್ತಾನೆ ಕವಿ. ಕೋಟಿ – ಚೆನ್ನಯರಿಗೆ ಹೆಸರಿಡುವಾಗಲೂ ಇವರು ಮಹಾಪುರುಷರು, ಅಮಾನುಷ ವ್ಯಕ್ತಿಗಳು, ಅಸಾಮಾನ್ಯರು ಎಂಬುದು ಸೂಚ್ಯವಾಗಿದೆ.

‘‘ಮೊದಲು ಹುಟ್ಟಿದವನು ಕೋಟೇಶ್ವರದ ಕೋಟಿದೇವರ ಬಲಿ ಕಲ್ಲು ಬಾಳಿ ಬಂದ ಹಾಗೆ ಬಾಳು, ನಿನ್ನ ಹೆಸರು ಕೋಟಿ ಎಂದು ಹೇಳಿದರು. ಅನಂತರದವನು ಚೆನ್ನಯ. ಚೆನ್ನಯ ದೇವರ ಬಲಿಕಲ್ಲು ಬಾಳಿ ಬಂದ ಹಾಗೆ ಬಾಳು ಎಂದು ಹೇಳಿದರು. ನಾನು ಇಟ್ಟ ಹೆಸರು ಸೂರ್ಯಚಂದ್ರರ ಕಾಲದವರೆಗೆ ಹೋಗಕೂಡದು ಎಂದು ಹೇಳಿದರು’’ ಪೆರ್ಮಲೆ ಬಲ್ಲಾಳರು. (ದುಂಬು ಪುಟ್ನಾಯೆ ಕೋಟೇಶ್ವರೊಡು ಕೋಟಿದೇವೆರೆ ಬದಿಗಲ್ಲ್ ಬಾಲ್ದ್ ಬತ್ತಿಲೆಕ್ಕ ಬಲ್ಲ, ನಿನ್ನ ಪುದಾರ್ ಕೋಟಿಂದ್ ಪಂಡೆರ್. ಬೊಕ್ಕದಾಯೆ ಚೆನ್ನಯೆ. ಚೆನ್ನಯ ದೇವೆರೆ ಬದಿಗಲ್ಲ್ ಬಾಲ್ದ್ ಬತ್ತಿಲಕ್ಕ ಬಲ್ಲಾಂದ್ ಪಂಡೆರ್. ಯಾನ್ ದೀಯಿನ ಪುದಾರ್ ಸುರಿಯ ಚಂದ್ರ ಕಾಲಮುಟ ಪೋವರೆ ಬಲ್ಲಿಂದ್ ಪಂಡೆರ್ ) ಕೋಟಿ – ಚೆನ್ನಯರ ವ್ಯಕ್ತಿತ್ವ ವಿಶೇಷವನ್ನು ಪ್ರಾರಂಭದಲ್ಲಿಯೇ ಸೂಚಿಸುವ ತಂತ್ರ ಗಮನಾರ್ಹವಾದುದು.

ಪರ್ಮಲೆ ಬಿಟ್ಟು ಹೋದ ಬಳಿಕ, ಬ್ರಹ್ಮ ದೇವರ ಗುಡಿಗೆ ಹೋದಾಗ ತಾನಾಗಿಯೇ ಬಾಗಿಲು ತೆರೆಯುತ್ತದೆ. ಗಂಟೆಯ ನಿನಾದ ಕೇಳುತ್ತದೆ. ಯುದ್ಧ ಎಲ್ಲ ಮುಗಿದು ದೇಶತ್ಯಾಗ ಮಾಡಿ ಸದ್ಗತಿಗಾಗಿ ‘‘ಬಡಕಾಯಿ ಮೂಗುರಿಗಂಗೆ ಸ್ನಾನ ಮಾಡಲು ಹೋಗುತ್ತಾರೆ. ಹೋಗುವಾಗ ಬೊಬ್ಬರ್ಯ ಭೂತದ ಕಾಲು ಕಡಿಯುತ್ತಾರೆ’’ (ಬೇರೆ ಸಂಗ್ರಹಗಳಲ್ಲಿ ಈ ಘಟನೆಯಿಲ್ಲ. ನಾನು ಸಂಗ್ರಹಿಸಿದುದರಲ್ಲಿ ಮಾತ್ರ ಇದೆ). ‘ಮಾಯದ ಪುರುಷೆರ್’ ಎಂದು ಬ್ರಹ್ಮದೇವರಿಂದ ಹೇಳಿಸಿಕೊಂಡ, ‘ಈ ಗದ್ದಿಗೆ ಬಿಟ್ಟು ಬ್ರಹ್ಮನ ಗದ್ದಿಗೆಗೆ ಹೋಗುತ್ತಾರೆ’.

ಈ ಪಾಡ್ದನಗಳಲ್ಲಿ ಅಮಾನುಷ ಕ್ರಿಯೆಯ ಚಂದುಗಿಡಿಗೂ, ಕೋಟಿ ಚೆನ್ನಯರಿಗೂ ನಡೆದ ಯುದ್ಧದಲ್ಲಿ ವ್ಯಕ್ತಮಾಗುವುದು. ಬ್ರಹ್ಮದೇವರ ಗುಡಿಯಲ್ಲಿ ತಾನಾಗಿಯೇ ಬಾಗಿಲು ತೆರೆಯುವುದು. ಈ ಪಾಡ್ದನದಲ್ಲಿ ಮಾತ್ರವಲ್ಲ ಇತರ ಪಾಡ್ದನಗಳಲ್ಲಿಯೂ ಬರುತ್ತದೆ. ಜನಪದರು ಅಂತಹ ಘಟನೆಗೆ ಕಾರಣರಾದವರನ್ನು ಸತ್ಯದ ವ್ಯಕ್ತಿಗಳು ಎಂದು ಅಭಿಮಾನದಿಂದ ಕಾಣುತ್ತಾರೆ.

ಕತೆಯಲ್ಲಿ ಅನುಮಾಷ ಕ್ರಿಯೆಗಳು, ಪಾತ್ರಗಳು ಇದ್ದರೂ, ಜೀವನದ ಸ್ವಾಭಾವಿಕತೆಯನ್ನು, ಸಹಜ ಮಾನವೀಯ ಗುಣಗಳನ್ನು, ಜನರ ಸಂಸ್ಕೃತಿಯ ಹಿನ್ನೆಲೆಯಲ್ಲಿರುವ ನಂಬಿಕೆಯನ್ನು ಬಿಟ್ಟು ದೂರ ಹೋಗುವುದಿಲ್ಲ. ಕೋಟಿ – ಚೆನ್ನಯರು ಮಾಯದ ಪುರುಷರು ಎಂದು ಕವಿ ಹೇಳಿದರೂ, ಮಾನವೀಯ ಸಹಜ ಗುಣಗಳನ್ನು ಪರಿಣಾಮಕಾರಿಯಾಗುವಂತೆ ಚಿತ್ರಿಸಿದುದನ್ನು ಕಾಣುತ್ತೇವೆ. ಕೋಟಿ – ಚೆನ್ನಯರ ಗುಣಗಳಲ್ಲಿ ಎಲ್ಲವೂ ಆದರ್ಶ ಗುಣಗಳೇ ಎನ್ನುವಂತಿಲ್ಲ. ತಾಮಸ ಪ್ರವೃತ್ತಿಯೂ ಕಂಡುಬರುತ್ತದೆ. ಪೆರ್ಮಲೆ ಬಿಟ್ಟು ಹೋಗುವಾಗ ಬಡಗಿಯನ್ನು ಮತ್ತು ಅಗಸನನ್ನು ಕೊಂದು ಹಾಕುತ್ತಾನೆ ಚೆನ್ನಯ. ಚೆನ್ನಯನು ಕೋಟಿಗಿಂತ ಹೆಚ್ಚು ಮುಂಗೋಪಿ, ಶೂರ, ಪ್ರತೀಕಾರ ಮನೋಭಾವದವನು. ಆದರೆ ಅವರಲ್ಲಿ ಕಾಣುವ ಆದರ್ಶಗುಣಗಳು ಮಾನವಾತೀತ ಅಥವಾ ಮಾನವರಿಗೆ ಅಸಾಧ್ಯ ಎನ್ನುವಂಥವುಗಳಲ್ಲ. ಉಂಬಳಿಯ ಗದ್ದೆಯ ಒಂದು ಭಾಗವು ಬುದ್ಧಿವಂತನಿಗಿರುವುದರಿಂದ, ಅವನಿಗೆ ಅನ್ಯಾಯ ಮಾಡಬೇಡಿ ಎಂದು ಬಲ್ಲಾಳರು ಹೇಳಿದಾಗ ‘ಅವರಾಗಿ ಅನ್ಯಾಯ ಮಾಡಿದರೆ ನಾವು ಬಿಡುವುದಿಲ್ಲ. ನಾವಾಗಿ ಅನ್ಯಾಯ ಮಾಡುವುದಿಲ್ಲ’ ಎಂದು ಹೇಳುವಲ್ಲಿ ಅವರ ಮನೋಧರ್ಮ, ಜೀವನಾದರ್ಶ ಎಂತಹದೆಂದು ಅರಿವಾಗುತ್ತದೆ. ಬಲ್ಲಾಳರಿಗೆ ಆಳು ಎಂಬ ಕೀಳು ಭಾವನೆಯಿಂದ ಬಾಗುವವರಲ್ಲ. ಅಭಿಮಾನಕ್ಕೆ ಕುಂದು ಬರುವುದೆಂದು ಕಂಡಾಗ ಪೆರ್ಮಲೆಯನ್ನೇ ಬಿಟ್ಟುಹೋಗುತ್ತಾರೆ. ಯುದ್ಧದಲ್ಲಿ ಚೆನ್ನಯನ ಕಾಲು ಮುರಿದ ಬಳಿಕ ‘ಊನವಿದ್ದು ಬದುಕಬಾರದು’(ಊನ ಇತ್ತ್‌ದ್ ಬದ್‌ಕರೆ ಬಲ್ಲಿ) ಎಂಬ ಸ್ವಾಭಿಮಾನಭರಿತರಾದವರು. ಅವರೆಷ್ಟು ಅನ್ಯೋನ್ಯವಾಗಿದ್ದರೆಂದರೆ ಚೆನ್ನಯನ ಕಾಲು ಮುರಿದು ಹೋದಾಗ, ಕೋಟಿಯೊಬ್ಬನೇ ಯುದ್ಧರಂಗದಲ್ಲಿರುವಾಗ, ಅವನಿಗೆ ತಂದ ಹಾಲು ಹಣ್ಣುಗಳನ್ನು ತಮ್ಮನಿರದ ಕಾರಣ ತಿರಸ್ಕರಿಸುತ್ತಾನೆ. ಕೋಟಿ – ಚೆನ್ನಯರ ಸ್ವಾಭಿಮಾನದಂತೆ ದೇಯಿಯಲ್ಲಿಯೂ ಆತ್ಮಾಭಿಮಾನವಿತ್ತು – ಎನ್ನುವುದನ್ನು ಚಿತ್ರಿಸುವಲ್ಲಿ ಕವಿಯ ಸೂಕ್ಷ್ಮತೆಯನ್ನು ಗಮನಿಸಬೇಕು. ಹೆರುವ ಬೇನೆ ಬಂದಾಗ ಬಲ್ಲಾಳರ ಮನೆಯ ಹಟ್ಟಿ, ಕೊಟ್ಟಿಗೆಗಳಲ್ಲಿ ಹೆರಲು ಒಪ್ಪುವುದಿಲ್ಲ. ಜಾತಿಯವನ ಮನೆಯಲ್ಲಿ ಹೆರುತ್ತಾಳೆ.

ಕೋಟಿ – ಚೆನ್ನಯರ ಪಾತ್ರದ ಇನ್ನೊಂದು ಮುಖ ಶೌರ್ಯ ಸಾಹಸ ಜಗಜಟ್ಟಿಗಳ ಹಾಗೆ ಅವರ ಕಾಯ ಮತ್ತು ಬಲ, ಪಂಜದ ಕೇಮರ ಬಲ್ಲಾಳನು ಮೋಸದಿಂದ ಸೆರೆಮನೆಗೆ ಹಾಕಿದಾಗ ಭುಜಬಲದಿಂದಲೇ ಸೆರೆಮನೆಯನ್ನು ಒಡೆದು ಪಾರಾಗುತ್ತಾರೆ. ‘ಏಳು ಮುಡಿ’ ಗದ್ದೆಯಲ್ಲಿ ನಡೆದ ಯುದ್ಧದಲ್ಲಿ ಏಕಾಂಗ ವೀರರಾಗಿ ಹೋರಾಡಿ ಜಯ ಗಳಿಸುತ್ತಾರೆ.

ಕೋಟಿ – ಚೆನ್ನಯರ ಶೌರ್ಯದ ನಾಜೂಕುತನವನ್ನು ಕವಿ ಸುಂದರವಾಗಿ ವರ್ಣಿಸುತ್ತಾನೆ. ‘ಇವರು ಹೋಗುವಾಗ ನೆಲ್ಲಿಕಾಯಿಯನ್ನು ಕಾಲಿನ ಉಂಗುಷ್ಠದಲ್ಲಿ ಹಾರಿಸಿ ತಮ್ಮ ‘ಸುರಿಯ‘ ಎಂಬ ಕತ್ತಿಯಿಂದ ಹದಿನಾರು ತುಂಡು ಮಾಡುತ್ತಾ ಆಡುತ್ತಾ ಹೋಗುತ್ತಾರೆ’ (ಮೊಗುಲು ಪೋನಗ ನೆಲ್ಲಿಕಾಯಿ ಕಾರ್‌ದ ಉಂಗುಟೊಡು ಪಾರಾದ್ ಸುರ್ಯೊಡು ಪದ್ನಾಜಿ ತುಂಡು ಮಲ್ತ್‌ದ್ ಗೊಬ್ಬೊಂದು ಪೋಪೆರ್). ತುಳುನಾಡಿನ ವೀರ ಪುರುಷರು, ಸತ್ಯದ ದಾರಿಯಲ್ಲಿ ನಡೆದವರು, ಮಾಯದ ಪುರುಷರು ಎಂದು ಜನರಿಗೆ ಇವರ ಮೇಲೆ ಭಕ್ತಿಯಿದೆ.

ಪೆರ್ಮಲೆ ಬಲ್ಲಾಳನ ಪಾತ್ರವು ಉದಾತ್ತವಾದುದು. ದೇಯಿ ಬೈದ್ಯೆತಿ ಕಾಲು ನೋವಿನಿಂದ ಮರಣೋನ್ಮುಖವಾದ ತನ್ನನ್ನು ಬದುಕಿಸಿದವಳು ಎಂದು ಅವಳ ಮೇಲೆ ವಿಶ್ವಾಸವಿದೆ. ದೇಯಿಯು ಹೆರಿಗೆಯ ನೋವಿನಿಂದ ನರಳುತ್ತಿರುವಾಗ ಬ್ರಹ್ಮದೇವರಿಗೆ ತನ್ನ ಕೈಬೆರಳಿನ ವಜ್ರದುಂಗುರವನ್ನು ಮುಡಿಪಾಗಿ ಇಡುತ್ತಾನೆ. ಕೋಟಿ ಚೆನ್ನಯರು ಬೆಳೆಯುತ್ತಿರುವಾಗ ಅನ್ನ ವಸ್ತ್ರಾದಿಗಳ ಅನುಕೂಲತೆಯನ್ನು ಮಾಡಿಕೊಡುತ್ತಾನೆ. ಅವರು ಬಲ್ಲಾಳನ ‘ಬೂಡಿಗೆ‘ ಬಂದಾಗ ಆದರದಿಂದ ಸ್ವಾಗತಿಸುವುದು ಮನೋಜ್ಞವಾಗಿದೆ.

ಬುದ್ಧಿವಂತ, ಚಂದುಗಿಡಿ ಮೊದಲಾದ ಪಾತ್ರಗಳು ಸಮಾಜದಲ್ಲಿರುವ ಖಳರನ್ನು ಪ್ರತಿನಿಧಿಸುತ್ತವೆ. ಜಾತಿಯ ವೈಷಮ್ಯ, ಮತ್ಸರ, ಪರಪೀಡೆ ಮೊದಲಾದ ಗುಣಗಳು ಸಹಜವಾಗಿ ಅಂತಹ ಪಾತ್ರಗಳಲ್ಲಿ ವ್ಯಕ್ತವಾಗುವುದು. ಕತೆಯ ಘಟನೆಗಳ ಜೋಡಣೆಗೆ, ಬೆಳವಣಿಗೆಗೆ ಈ ಪಾತ್ರಗಳು ಪೋಷಕವಾಗಿವೆ.

ಹಲವಾರು ಘಟನೆಗಳಿಂದ ತುಂಬಿರುವ ಪಾಡ್ಡನವು ಕುಂಟುತ್ತಾ ಹೋಗುವುದಿಲ್ಲ. ಒಂದು ಘಟನೆಗಿಂತ ಮತ್ತೊಂದು ಘಟನೆಯು ಕುತೂಹಲಜನಕವಾಗಿದೆ. ಅಲ್ಲಿಯ ಸಂಭಾಷಣೆಯ ಸತ್ವಯುತ ಶೈಲಿ ಈ ಪಾಡ್ದನಕ್ಕೆ ಮಾತ್ರ ಮೀಸಲಿಟ್ಟಂತಿದೆ. ಘಟನೆಯು ಭಯಂಕರದಿಂದ ವ್ಯಂಗ್ಯಕ್ಕೆ ತಿರುಗುವುದು ವಾಚಕರಲ್ಲಿ ವಿಶೇಷ ಪರಿಣಾಮವನ್ನು ಬೀರುವುದು. ಚೆನ್ನಯ ಮತ್ತು ಬುದ್ಧಿವಂತರ ಜಗಳ, ಬುದ್ಧಿವಂತನನ್ನು ಕೊಂದು, ಹುಣಿಯ ನೀರಿನ ‘ಕಡಿ’ಯಲ್ಲಿ ಶರೀರವನ್ನು ಹಾಕಿ ಅದರ ಮೇಲೆ ಮಣ್ಣು ಹಾಕುವುದು, ಬಳಿಕ ಬುದ್ಧಿವಂತನ ಹೆಂಡತಿಯ ಬಳಿಗೆ ಹೋಗಿ ತಮ್ಮ ಚೆಂಡನ್ನು ಕೊಡಲು ಹೇಳುವುದು, ಹಾಗೆಯೇ ವೀಳ್ಯದೆಲೆ ಮತ್ತು ಹೂವನ್ನು ಹಿಡಿದುಕೊಂಡು ಹೋಗಬೇಕೆಂದು ತಿಳಿಸುವುದು ಮೊದಲಾದ ಕ್ರಿಯೆಗಳು ವಿಶಿಷ್ಟ ತಂತ್ರವೆಂದೇ ಹೇಳಬೇಕು. ಜನಪದ ಕವಿಯು ಇಂತಹ ನಿರೂಪಣೆಯ ರೀತಿಯನ್ನು ತಂತ್ರವೆಂದೇ ಅಳವಡಿಸದೆ, ಸಹಜವಾಗಿ, ಸುಂದರವಾಗಿ, ಆಕರ್ಷಕವಾಗಿ ಹೇಳುವ ಸಾಮರ್ಥ್ಯವನ್ನು ತೋರ್ಪಡಿಸುತ್ತಾನೆ.

ಜನಪದ ಕವಿಗೆ ಪಾಡ್ದನಗಳಲ್ಲಿ ಚಿತ್ರಿಸುವುದು ಮುಖ್ಯ. ಅನಾಯಾಸವಾಗಿ ಸಹಜ ಪ್ರತಿಭೆಯಿಂದ ಹೊರಹೊಮ್ಮುವ ಚಿತ್ರಣಗಳು, ಅದು ಮನೋಧರ್ಮವಿರಲಿ, ಬಾಹ್ಯಚಿತ್ರಣವಿರಲಿ ಸಹಜತೆಯನ್ನು ಮೀರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಪಾತ್ರಗಳ ಮನೋವ್ಯಾಪಾರವನ್ನು ಸೂಕ್ಷ್ಮವಾಗಿ ಚಿತ್ರಿಸುತ್ತಾನೆ. ‘ನೋವಿನ ಕರ್ಮಕ್ಕೆ ಬಲ್ಲಾಳನು ದೇಯಿ ಬಂದಳೊ, ದೇಯಿ ಬಂದಳೊ’ ಎಂದು ಭ್ರಮೆಯಿಂದ ಮಾತನಾಡುತ್ತಿದ್ದನಂತೆ(ಬಂಗ್ರ ಬರ್ಪುನಿ). ಬಲ್ಲಾಳನ ಕಾಲುನೋವು ಗುಣವಾಗುತ್ತಾ ಬರುವುದನ್ನು ‘ದಿನದಿಂದ ದಿನಕ್ಕೆ ಬಾಪು ಕಡಿಮೆಯಾಗುತ್ತಾ ಬಂತು, ಕಣ್ಣಿಗೆ ನಿದ್ದೆ ಹತ್ತತೊಡಗಿತು’ ಎಂದು ಹೇಳುವುದರ ಮೂಲಕ ತಿಳಿಸುತ್ತಾನೆ. ದೇಯಿಯು ಹೆರುವ ಸಂದರ್ಭದಲ್ಲೂ ಜನಪದ ಕವಿಯು ವಿವರಿಸುವ ರೀತಿಯು ಸಹಜ ಮಾತ್ರವಲ್ಲದೆ ಸೂಚ್ಯವಾಗಿದೆ. ‘ತುಂಬೆ ಮಾದುರಿ ಬೊಂಬೆ ಬಲ್ಲಾಲ್ದಿ’ ಎಂಬ ಹೆರಿಗೆಯವರು ಎಣ್ಣೆ ಹಚ್ಚುವಾಗ ಅವಳ ಹೊಟ್ಟೆಯಲ್ಲಿ ಎರಡು ಕವಲಾಗಿ ಎಣ್ಣೆ ಇಳಿಯುತ್ತದಂತೆ. ಅವಳ ಹೊಟ್ಟೆಯೊಳಗೆ ಅವಳಿ ಮಕ್ಕಳಿರುವರೆಂದು ಹೇಳುವುದಿಲ್ಲ. ಸೂಚ್ಯವಾದ ಚಿತ್ರಣವನ್ನು ಕೊಟ್ಟು, ನಮ್ಮ ಮುಂದಿಟ್ಟು ಮೌನವಾಗುತ್ತಾನೆ.

ಕಂಬಳದಲ್ಲಿ ಬುದ್ಧಿವಂತನ ಗದ್ದೆ ಎಷ್ಟು ವಿಶಾಲವಾಗಿತ್ತು ಎನ್ನುವುದರ ಬಗ್ಗೆ ಯಾವ ಅಂಕೆಸಂಖ್ಯೆಯೂ ಇಲ್ಲ. ಆದರೆ ವೈಶಾಲ್ಯವನ್ನು ಸೂಚಿಸುವ ಚಿತ್ರಣವನ್ನು ಕೊಡುವುದರಲ್ಲೇ ತೃಪ್ತಿ – ಬುದ್ಧಿವಂತನ ಕೋಣಗಳ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಿ ಪುನಃ ಮೊದಲಿನ ಬದಿಗೆ ಬರುವಾಗ ಅಲ್ಲಿಯ ಕೆಸರು ನೀರು ತಿಳಿಯಾಗುತ್ತಿತ್ತಂತೆ.

ಕೋಟಿ – ಚೆನ್ನಯ, ದೈಯಿ ಬೈದ್ಯೆತಿ ಪಾತ್ರಗಳು ಓದುಗರ ಮೇಲೆ ಪರಿಣಾಮಕಾರಿಯಾಗುವಂತೆ ಚಿತ್ರಿತವಾಗಿದೆ. ಕತೆಯಲ್ಲಿಯ ಹಲವಾರು ಪಾತ್ರಗಳು ಕತೆಯ ಬೆಳವಣಿಗೆಯ ಕ್ರಿಯೆಗಳಲ್ಲಿ ಉಚಿತವಾಗಿ ಬರುತ್ತವೆ. ಕತೆಯು ಕೋಟಿ – ಚೆನ್ನಯರ ಜೀವನವನ್ನು ಮಾತ್ರ ನಿರೂಪಿಸುತ್ತಾ ಹೋಗದೆ ವಿವಿಧ ಸಾಮಾಜಿಕ ಚಿತ್ರಗಳನ್ನು ನಮ್ಮ ಮುಂದಿಡುತ್ತದೆ. ಬಲ್ಲಾಳರ ಮನೆತನ, ಅವರಾಡುವ ಬೇಟೆ, ಕಾಲು ನೋವಾಗುವ ಘಟನೆ, ದೇಯಿಯು ಮದ್ದು ಕೊಟ್ಟು ಅಲ್ಲೇ ಮಕ್ಕಳನ್ನು ಹೆರುವುದು ಮೊದಲಾದ ಪೂರ್ವಕತೆಯು ಕಾರ್ಯ ಕಾರಣ ಸಂಬಂಧವನ್ನು ತಿಳಿಯಪಡಿಸುತ್ತದೆ. ಕತೆಯು ಕುಂಟುತ್ತಾ ಹೋಗದೆ ವಾಚಕರ ಉತ್ಸುಕತೆಯನ್ನು ಕೊನೆಯವರೆಗೂ ಉಳಿಸುವಂತೆ ಮಾಡುವ ಉತ್ತಮ ನಿರೂಪಣಾ ಕೌಶಲ್ಯವನ್ನು ಕಾಣಬಹುದು. ಒಂದು ದೃಷ್ಟಿಯಿಂದ ತಂತ್ರವು ವೈಜ್ಞಾನಿಕವಾಗಿದೆ ಎಂದು ಹೇಳಬಹುದು, ಇಲ್ಲಿ ಬರುವ ಆಗಿನ ಕಾಲದ ಜನಜೀವನದ ವಿವಿಧ ಕ್ಷೇತ್ರಗಳ ಸ್ವರೂಪವನ್ನು ಮುಂದೆ ವಿವರಿಸಲಾಗಿದೆ.

ಇಲ್ಲಿ ಬರುವ ಒಂದೆರಡು ವರ್ಣನೆಗಳನ್ನು ನೋಡುವ : ದೇಯಿಯು ‘ಉಡುವ ಪಟ್ಟೆ ಸೀರೆ, ಜಾಕಿನ ಪಟ್ಟೆ, ಕುಪ್ಪಸ, ಎಣ್ಣೆ ಓಲೆ, ಇಸಾಲ್ ಬುಗುಡಿ ಹಾಕಿ ಮದುಮಗಳ ರೂಪವಾಗಿ’ ಬಲ್ಲಾಳನ ‘ಬೂಡಿ’ಗೆ ಹೋಗುತ್ತಾಳೆ. ದೇಯಿ ಬೈದ್ಯೆತಿಗೆ ಸೀಮಂತ ಮಾಡಿಸುವಾಗ ಬಲ್ಲಾಳನ ಮನೆಯ ಅಡುಗೆಯ ವರ್ಣನೆ ಅಲ್ಲಿಯ ಶ್ರೀಮಂತಿಕೆಯನ್ನು ಸೂಚಿಸುತ್ತದೆ. ‘ಸಂಸಾರ ಬೆರೆಸಿ ಸಾವಿರ ಬಗೆಯ ಮೇಲೋಗರ… ಮುತ್ತು ವರ್ಣದ ಅನ್ನ, ಹದಿನಾರು ಬಗೆಯ ಭಕ್ಷ್ಯ. ಬಡಗು ಬದಿಗೆ ಹೋದ ಬಂಗ ಬಾಳೆಯ ಕೊಡಿ ಎಲೆ (ಸಂಬರ್ ಕೂಟುದು ಸಾವಿರ ಬಗೆತ ಕೈಪು… ಮುತ್ತು ವರಣದ ನುಪ್ಪು, ಪದ್ನಾಜಿ ಬಗೆತ ಭಕ್ಷೆ, ಬಡಕಾಯಿ ಪೋತಿನ ಬಂಗಬಾರೆದ ಕೊಡಿಕುಂಟ ಇರೆ) ‘ಮುತ್ತು ವರ್ಣದ ಅನ್ನ’ ಎನ್ನುವಲ್ಲಿ ಜನಪದ ಕವಿಯ ಸೌಂದರ್ಯ ಪ್ರಜ್ಞೆಯನ್ನು ಮೆಚ್ಚುತ್ತೇವೆ. (ಇದೇ ವರ್ಣನೆ ಇತರ ಪಾಡ್ದನಗಳಲ್ಲೂ ಇದೆ.) ಬಲ್ಲಾಳರ ಒಡ್ಡೋಲಗವನ್ನು ವರ್ಣಿಸುವ ರೀತಿ ಹೀಗಿದೆ ‘ಸರಿಪ ಲಿಂಗೊಡು ಮೈರ ಬಾನೊಡು ಜಾತಿ ಕೇದಗೆ ನೀತಿ ಸಂಪಗೆದ ಒಡ್ಡೋಲಗೊಡು ಕುಲ್ಲುದೆರ್’ ಹೀಗೆ ವರ್ಣನೆಯು ಹಿತಮಿತವಾಗಿ ಸೂಚ್ಯವಾಗಿದೆ. ಜನಪದ ಕವಿಯ ಸಹಜ ಪ್ರತಿಭೆಯ, ಜೀವನಾನುಭವದ ಫಲವೇ ಸೂಚ್ಯ. ಸ್ವಾಭಾವಿಕತೆ ಮತ್ತು ಸೌಂದರ್ಯಗಳಾಗಿವೆ.

ಕಲ್ಕುಡ ಪಾಡ್ದನವು ಆಚಾರಿಗಳ ಜಾತಿಯ ಶ್ರೇಷ್ಠ ಶಿಲ್ಪಿಯೊಬ್ಬನು ‘ಯೋಗ ಬಿಟ್ಟು ಮಾಯವಾದ’ (ಜೋಗ ಪೋದು ಮಾಯ ಆಯಿನ) ಕತೆಯನ್ನು ಒಳಗೊಂಡಿದೆ. ಈ ಪಾಡ್ದನವು ಐತಿಹಾಸಿಕ ಮಹತ್ವವನ್ನು ಪಡೆದಿದೆಯೆಂಬುದನ್ನು ಹಿಂದೆ ನೋಡಿದ್ದೇವೆ.