ತುಳುನಾಡಿನ ಬದುಕನ್ನು ಬಹು ಪುರಾತನ ಕಾಲದಿಂದಲೇ ನಿರ್ದೇಶಿಸುತ್ತ ಬಂದಿರುವ ಭೂತಾರಾಧನೆಯ ಸಂದರ್ಭದಲ್ಲಿ ವಿಧಿವತ್ತಾಗಿಯೂ ಇತರ ಸಂದರ್ಭಗಳಲ್ಲಿ ಹವ್ಯಾಸಕ್ಕಾಗಿಯೂ ನಿರೂಪಿಸುವ ವಿಶಿಷ್ಟ-ಪಳಮೆಗಳೇ ‘ಪಾಡ್ದನ’ ಅಥವಾ ‘ಸಂಧಿ’ಗಳು. ಇವುಗಳನ್ನು ತುಳುನಾಡಿನ ವಿಶಿಷ್ಟ-ಪುರಾಣಗಳೆನ್ನಲು ಅಡ್ಡಿಯಿಲ್ಲ, ದೈವಗಳನ್ನು ಆವೇಶ ಬರಿಸುವ ಕಾರ್ಯಕ್ರಮದ ಅಂಗವಾಗಿ-ಸಾಮಾನ್ಯವಾಗಿ ದೈವ ಸೇವೆಯ ವಿಧಿಯ ಪೂರ್ವರಂಗದಲ್ಲಿ – ಆಯಾ ದೈವದ ಹುಟ್ಟು ಕಟ್ಟು, ಆಯ ಬೀರ, ಕಲೆ ಕಾರಣಿಕಗಳನ್ನು ವರ್ಣಿಸುವ ಪಾಡ್ದನಗಳನ್ನು ನಿರ್ದಿಷ್ಟ ಧಾಟಿಗಳಲ್ಲಿ ‘ತೆಂಬರೆ’ ಮೊದಲಾದ ಚರ್ಮವಾದ್ಯದೊಂದಿಗೆ ದೈವ ಪರಿಚಾರಕರು ಹಾಡುತ್ತಾರೆ. ಆರಾಧನಾ ಸಂದರ್ಭವಿಲ್ಲದೆಯೂ ಇವುಗಳಲ್ಲಿ ಕೆಲವನ್ನು ಹಾಡಬಹುದು. ದೈವ ಕಥನಕ್ಕೆ ಹೊರತಾದ ಲೌಕಿಕ ವಸ್ತುಗಳುಳ್ಳ ಪಾಡ್ದನಗಳೂ ಸಾಕಷ್ಟಿವೆ.

ಪಾಡ್ದನಗಳು ವೈವಿಧ್ಯಪೂರ್ಣವಾಗಿವೆ. ಅವುಗಳಲ್ಲಿ ಕೆಲವನ್ನು ಜನಪದ ಕಥನ ಕವನಗಳ (Ballads) ಸಮೂಹಕ್ಕೆ ಸೇರಿಸಬಹುದಾದರೆ ಇನ್ನು ಕೆಲವು ಜನಪದ ಮಹಾಕಾವ್ಯ (Folk Epics) ವರ್ಗಕ್ಕೆ ಸೇರ‌ಬಲ್ಲವು.

ದೈವಾರಾಧನೆಯು ತುಳುನಾಡಿನಷ್ಟೇ ಕೇರಳದಲ್ಲೂ ಪ್ರಮುಖವಾಗಿದೆಯಷ್ಟೆ. ಅಲ್ಲಿನ ತೆಯ್ಯಂ (ದೈವ) ಗಳಿಗೆ ಸಂಬಧಪಟ್ಟ (ಪಾಡ್ದನದಂತಹ) ಹಾಡುಗಳನ್ನು ತೋಟ್ರಮ್‌ ಎನ್ನುತ್ತಾರೆ. ಇದು ‘ಸ್ತೋತ್ರಂ’ ಎಂಬುದರ ತದ್ಭವವೆನ್ನಲಾಗಿದೆ. ಭಗವತೀ ಸಂಬಂಧವಾದ ಕೆಲವು ಉತ್ಸವ ಸಂದರ್ಭಗಳಲ್ಲಿ ಭಗವತೀ ಚರಿತ್ರೆಯನ್ನು ತಾಳಬದ್ದವಾಗಿ ಹಾಡುವುದಿದೆ. ಇದನ್ನು ‘ಚುದಿಪ್ಪು’ ಎನ್ನುತ್ತಾರೆ. ಇದು ‘ಸ್ತುತಿ’ ಎಂಬುದರಿಂದ ರೂಪುಗೊಂಡ ಶಬ್ದವಾಗಿದೆ. ಸ್ತುತಿ, ಪ್ರಾರ್ಥನೆ ಎಂಬ ಅರ್ಥವು ಇಲ್ಲಿ ಅನ್ವಯವಾದಂತೆ ತುಳುವಿನ ಪಾಡ್ದನ ಸಂದರ್ಭಕ್ಕೂ ಅನ್ವಯಿಸುತ್ತದೆ ಎನ್ನಬಹುದು. ಜಿಲ್ಲೆಯ ಬಡಗು ಭಾಗದ ಪಾಣಾರಾಟದ ಪಾಡ್ದನದ ಕನ್ನಡ ರೂಪವನ್ನು ‘ಹೊಗಳಿಕೆ’ ಎನ್ನುವುದು ಗಮನೀಯ. ಹಾಗೆಂದು ಪಾಡ್ದನಗಳು ಕೇವಲ ಪ್ರಾರ್ಥನಾ ರೂಪದ ರಚನೆಗಳಲ್ಲ. ಅವುಗಳು ಸಾಮಾನ್ಯವಾಗಿ ಆಯಾ ದೈವದ ಮಹಿಮಾನುವರ್ಣನೆಯ ಐತಿಹ್ಯ ಕಥನಗಳು. ಆದರೆ ದೈವ ದೇವರ ಕಥನಗಳ ನಿರೂಪಣೆಯೂ ಪರ್ಯಾಯವಾಗಿ ಪ್ರಾರ್ಥನೆಯೇ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಪಾಡ್ದನಗಳನ್ನು ಸಂಧಿಗಳೆಂದೂ ಕರೆಯುತ್ತಾರೆ. ಕೆಲವು ದೀರ್ಘ ಪಾಡ್ದನಗಳು (ಉದಾ: ಕೋಟಿ ಚೆನ್ನಯ, ಸಿರಿ) ಬೇರೆ ಬೇರೆ ಸಂದಿ (ಅಥವಾ ಅಧ್ಯಾಯ)ಗಳಿಂದ ಕೂಡಿದೆ. ತುಳುವಿನಲ್ಲಿ ಇವುಗಳನ್ನು ‘ಸಂದಿ’ ಗಳೆಂದೂ ಕರೆಯುತ್ತಾರೆ. ಒಂದೇ ಸಂಧಿಯ ಕಥನವೂ ಕ್ರಮೇಣ ಸಂಧಿಯೆಂದು ಹೆಸರನ್ನು ಪಡೆದುದನ್ನು ಕಾಣಬಹುದು.

ದೈವಗಳಿಗೆ ಸಂಬಂಧಪಟ್ಟ ಪಾಡ್ದನಗಳನ್ನು ಆಯಾ ದೈವಗಳ ನೇಮ, ಕೋಲ, ಅಯನ, ಬಂಡಿ, ಮೆಚ್ಚಿ ಮೈಮೆ, ಧರ್ಮನೇಮ – ಇತ್ಯಾದಿ ಉತ್ಸವಾಚರಣೆಗಳ ನಿರ್ದಿಷ್ಟ ಸಂದರ್ಭಗಳಲ್ಲಿ ಹಾಡುತ್ತಾರೆ.

ಪಾಡ್ದನಗಳನ್ನು ಹಾಡುವ ಮುಖ್ಯ ಸಂದರ್ಭಗಳು – ೧. ‘ಎಣ್ಣೆ ಬೂಳ್ಯ (ವೀಳ್ಯ) ಹಿಡಿಯುವಾಗ ೨. ಸ್ನಾನ ಮಾಡಿ ಬಂದು ವೇಷ ಹಾಕುವ ಸಿದ್ಧತೆ ನಡೆಸುತ್ತಿರುವಾಗ, ೩. ಅಣಿ, ಮುಖವಾಡ ಮತ್ತು ಆಯುಧ ಧರಿಸಿಕೊಳ್ಳುವಾಗ, ‘ಎಣ್ಣೆ ಬೂಳ್ಯ’ವನ್ನು ಹಿಡಿಯುವ ಸಂದರ್ಭದಲ್ಲಿ ಹಾಡುವ ಪಾಡ್ದನದ ಭಾಗವನ್ನು ‘ಒಸೆಯೋ ಸಂಧಿ’ (ಆವೇಶದ ಸಂಧಿ) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಭೂತದ ಉಗಮದ ವಿಚಾರವನ್ನು ಈ ಭಾಗವು ಒದಗಿಸುತ್ತದೆ. ಮುಖಕ್ಕೆ ‘ಅರದಳ’ ಹಚ್ಚುವಾಗ ಹಾಗೂ ಅಲಂಕಾರ ಮಾಡಿಕೊಳ್ಳುವಾಗ ಭೂತದ ಪ್ರಸರಣ ಹಾಗೂ ಮಹಿಮೆಗಳನ್ನು ಬಣ್ಣಿಸುವ ಪಾಡ್ದನ ಭಾಗಗಳನ್ನು ಹಾಡುತ್ತಾರೆ. ಅಣಿಯನ್ನು ಕಟ್ಟಿಕೊಂಡು, ಮುಖವಾಡ ಧರಿಸಿ, ಆಯುಧವನ್ನು ಹಿಡಿದುಕೊಳ್ಳುವ ಹಂತದಲ್ಲಿ ಆರಾಧನೆಯ ಚಿತ್ರಣಗಳನ್ನೊಳಗೊಂಡ ಪಾಡ್ದನದ ಭಾಗವನ್ನು ಹಾಡುತ್ತಾರೆ. ಹೀಗೆ ದೈವಾರಾಧನೆ ವಿವಿಧ ಕಲಾಪಗಳಿಗೂ ಪಾಡ್ದನಗಳಿಗೂ ನಿಕಟ ಸಂಬಂಧವಿರುವುದನ್ನು ಗಮನಿಸಬಹುದು (ವಿವರಗಳಿಗೆ ಡಾ. ಕೆ. ಚಿನ್ನಪ್ಪ ಗೌಡರ ಭೂತಾರಾಧನೆ-೧೯೯೦).

ತುಳುನಾಡಿನ ಹೊಲಗಳಲ್ಲಿ ಪಾಡ್ದನ ಹಾಗೂ ಕಬಿತಗಳನ್ನು ಹಾಡುವ ಕ್ರಮವಿದೆ. ದೈವಗಳಿಗೆ ಸಂಬಂಧಪಟ್ಟ ಕೆಲವು ಪಾಡ್ದನಗಳನ್ನು ದೈವಾರಾಧನೆಯ ಸಂದರ್ಭಗಳಿಗೆ ಹೊರತಾಗಿಯೂ ಹಾಡುವುದಕ್ಕೆ ನಿರ್ಬಂಧವೇನಿಲ್ಲ. ದೈವಗಳ ಪ್ರಸರಣ ಇತ್ಯಾದಿ ಭಾಗಗಳನ್ನು ಹಾಡುವ ವಾಡಿಕೆಯಿಲ್ಲ. ಸ್ವಾರಸ್ಯವಾದ ಮನಮುಟ್ಟುವಂಥ ಕಥಾನಕಗಳಿರುವವುಗಳನ್ನು ಹೆಚ್ಚಾಗಿ ಹಾಡುತ್ತಾರೆ.

ವಸ್ತುವಿನ ದೃಷ್ಟಿಯಿಂದ ಪಾಡ್ದನಗಳನ್ನು ಸ್ಥೂಲವಾಗಿ-

೧. ಅತಿಮಾನುಷ ವಸ್ತುಗಳುಳ್ಳ ಪಾಡ್ದನಗಳು

೨. ಮಾನವರಾಗಿದ್ದು ಭೂತತ್ವವನ್ನು ಹೊಂದಿದ ವ್ಯಕ್ತಿಗಳ ಕುರಿತಾದ ಪಾಡ್ದನಗಳು

೩. ಲೌಕಿಕ ವಸ್ತುಗಳುಳ್ಳ ಪಾಡ್ದನಗಳು – ಎಂದು ವಿಂಗಡಿಸಬಹುದು

೧. ಅತಿಮಾನುಷ ವಸ್ತುಗಳಿರುವ ಪಾಡ್ದನಗಳನ್ನು

ಅ) ಭೂತಗಳಿಗೆ ಸಂಬಂಧಿಸಿದ ಪಾಡ್ದನಗಳು

ಆ) ಪೌರಾಣಿಕ ವ್ಯಕ್ತಿಗಳುಳ್ಳ ಪಾಡ್ದನಗಳು – ಎಂದು ವಿಭಜಿಸಬಹುದು.

೧. ಅ) ಭೂತಗಳಿಗೆ ಸಂಬಂಧಿಸಿದ ಪಾಡ್ದನಗಳಿಗೆ ಉದಾಹರಣೆಯಾಗಿ ಜುಮಾದಿ, ಜಾರಂದಾಯ, ಕೊಡಮಣ್ತಾಯ, ಲೆಕ್ಕೇಸಿರಿ, ಮುಂಡಿತ್ತಾಯ, ತೊಡಕ್ಕಿನಾರ್, ಮಾಕಾಳ್ದಿ ಅಬ್ಬೆ, ಗುಳಿಗ – ಮೊದಲಾದ ದೈವಗಳ ಪಾಡ್ದನಗಳನ್ನು ನೋಡಬಹುದು. ಇವುಗಳಲ್ಲಿ ಕೆಲವು ಭೂತಗಳ ತಂದೆ ತಾಯಿಗಳ ಹೆಸರುಗಳನ್ನು ಹೇಳಿದ್ದುಂಟು. ಮತ್ತೆ ಕೆಲವು ಭೂತಗಳ ಉಗಮ ವಿಚಾರ ಸೂಚಿಸದೆ ಅವುಗಳ ಪ್ರತಾಪ ಮತ್ತು ಪ್ರಸರಣಗಳನ್ನು ವಿವರಿಸಿರುವುದುಂಟು. ಕೆಲವು ಭೂತಗಳು ನಿರ್ದಿಷ್ಟ – ಸ್ಥಳ ಅಥವಾ ವಸ್ತುಗಳಲ್ಲಿ ಪ್ರಕಟವಾದುವೆಂಬ ವಿವರ ನೀಡುವುದಿದೆ. ಒಂದೇ ದೈವಕ್ಕೆ ಸಂಬಂಧಪಟ್ಟು ಭಿನ್ನ ರೀತಿಯ ಉಗಮ ಕ್ರಮಗಳನ್ನು ಬೇರೆ ಬೇರೆ ಪಾಡ್ದನಗಳು ಸೂಚಿಸುವುದುಂಟು (ಉದಾ: ಪಂಜುರ್ಲಿ).

ಪಂಜುರ್ಲಿ, ಪಿಲಿ ಚಾಮುಂಡಿ, ನಂದಿಗೋಣ, ಮೈಸಂದಾಯ – ಮೊದಲಾದ ಪ್ರಾಣಿಮೂಲದ ದೈವಗಳೂ ಅತಿಮಾನುಷ ವರ್ಗಕ್ಕೆ ಸೇರುತ್ತವೆ. ಭೂತಾರಾಧನೆಯಲ್ಲಿ ಪ್ರಾಣಿಗಳ ಪಾತ್ರವೂ ಗಮನೀಯವಾಗಿದೆ. ಭೂತಾಲಯಗಳಲ್ಲಿ ಪಿಲಿಚಾಮುಂಡಿ, ಪಂಜುರ್ಲಿ, ಮೈಸಂದಾಯ ಮೊದಲಾದ ಭೂತಗಳ ಪ್ರತೀಕಗಳಾಗಿ ಹುಲಿ, ಹಂದಿ, ಕೋಣಗಳ ‘ಮೊಗ’ ಇರುತ್ತವೆ. ಭೂತ ಸ್ಥಾನಗಳಲ್ಲಿರುವ ಬಂಡಿಗಳಲ್ಲಿಯೂ ಭೂತವಾಹನಗಳಾಗಿ ಹಂದಿ, ಹುಲಿ, ಕುದುರೆ, ಆನೆ ಮೊದಲಾದ ವಿಗ್ರಹಗಳಿರುತ್ತವೆ. ನಾಗನಂತೂ ಪ್ರತ್ಯೇಕ ರೀತಿಯಲ್ಲಿ ಆರಾಧನೆಗೊಳ್ಳುತ್ತಾನಲ್ಲದೆ. ನಾಗಬ್ರಹ್ಮ ದೈವವಾಗಿಯೂ ಪ್ರಕಟನಾಗಿದ್ದಾನೆ. ನಾಗಬ್ರಹ್ಮನಿಗೆ ಸಂಬಂಧಿಸಿದ ಪಾಡ್ದನವೂ ಇದೆ.

ಬಲು ಹಿಂದಿನ ಕಾಲದಲ್ಲಿ ಜನ ತಮ್ಮ ನೆಮ್ಮದಿಯ ಬದುಕಿಗಾಗಿ ಪ್ರಕೃತಿಯೊಡನೆ ಹೋರಾಡಬೇಕಾಗಿತ್ತು. ನಿಸರ್ಗದ ಕ್ರೂರವೆನಿಸುವ ಶಕ್ತಿಗಳನ್ನು ಕ್ರಮೇಣ ಒಲಿಸುವ ಪ್ರಯತ್ನದ ಪ್ರತೀಕವಾಗಿ ಇಂಥ ಪ್ರಾಣಿಗಳ ಪ್ರತಿಮೆಗಳನ್ನಿಟ್ಟು ಪೂಜಿಸತೊಡಗಿರ‌ಬಹುದು. ಇಲ್ಲವೆ ಪ್ರಾಚೀನ ಜನಾಂಗದ ಬೇರೆ ಬೇರೆ ಪಂಗಡಗಳಿಗೆ ಹಂದಿ, ಹುಲಿ, ಎತ್ತು, ಕೋಣ, ಸರ್ಪಗಳ ಕುಲ ಲಾಂಛನ (Totem) ಇದ್ದಿರಲೂಬಹುದು.

ಅತಿಮಾನುಷ ಸ್ವರೂಪದ ಭೂತಗಳ ಪಾಡ್ದನಗಳಲ್ಲಿ ಸಾಕಷ್ಟು ಅತಿಮಾನುಷ ಅದ್ಭುತ ಘಟನೆಗಳ ವಿವರಗಳಿದ್ದರೂ ಕೊನೆಗಂತೂ ಪ್ರತಿಯೊಂದು ಭೂತವೂ ಮಾನವ ಸಮಾಜದ ಸಂಪರ್ಕಕ್ಕೆ ಬಂದೇ ಬರುವುದನ್ನು ಗಮನಿಸಬಹುದು. ಮಾನುಷ ಲೋಕದ ಸಂಪರ್ಕವಿಲ್ಲದಿದ್ದಲ್ಲಿ ಭೂತಗಳ ಅಸ್ತಿತ್ವಕ್ಕೆ ಅರ್ಥವಿಲ್ಲ ಎಂಬಷ್ಟರ ಮಟ್ಟಿಗೆ ಭೂತಗಳು ಲೌಕಿಕ ಸ್ತರಗಳಲ್ಲೂ ಕ್ರೀಯಾಶಾಲಿಗಳಾಗುತ್ತವೆ. ಕೆಲವು ಪಾಡ್ದನಗಳಲ್ಲಿ ಅತಿಮಾನುಷ ಭೂತಗಳು ಕೇವಲ ನಿಮಿತ್ತ ಮಾತ್ರವಾಗಿದ್ದು, ಮಾನವ ಸಮಾಜದ ವಿವಿಧ ಚಟುವಟಿಕೆಗಳೇ ಹೆಚ್ಚು ನಿಚ್ಚಳವಾಗಿ ಗೋಚರಿಸುತ್ತವೆ. (ಉದಾ: ಎ. ಮೇನರ್‌ರವರ ‘ಪಾಡ್ದನೊಳು’ ಸಂಗ್ರಹದ ಪಂಜುರ್ಳಿ iii ಪಾಡ್ದನ) ಕೆಲವೊಮ್ಮೆ ಚಾರಿತ್ರಿಕ ಸಂಗತಿಗಳ ಎಳೆಗಳೂ ಇಂಥ ದೈವಗಳ ಪಾಡ್ದನಗಳಲ್ಲಿ ಹಾಸು ಹೊಕ್ಕಾಗಿರುವುದುಂಟು (ಉದಾ: ಜುಮಾದಿ, ಕುಪ್ಪೆ ಪಂಜುರ್ಳಿ, ಮಲರಾಯಿ ಇತ್ಯಾದಿ).

ಅತಿಮಾನುಷ ಸ್ವರೂಪಕ್ಕೆ ಸೇರಿದ ಚಾಮುಂಡಿ, ರಕ್ತೇಶ್ವರಿ, ಧೂಮಾವತಿ, ಭೈರವ, ಜಟಾಧಾರಿ, ಗುಳಿಗ ಮೊದಲಾದವುಗಳು ಪುರಾಣ ಯುಗದಿಂದ ಇಳಿದು ಬಂದವುಗಳೆಂದೋ, ಬೇರೆ ಬೇರೆ ದೇವತೆಗಳ ಅವತಾರವೆಂದೋ, ಊಳಿಗದವುಗಳೆಂದೋ ಕರೆಯಿಸಿಕೊಂಡಿವೆ. ಇವುಗಳಿಗೆ ಸಂಬಂಧಪಟ್ಟ ಪಾಡ್ದನಗಳು ಆಯಾ ದೈವಗಳ ಉಗಮ, ಪ್ರತಾಪ, ಪ್ರಸಾರಗಳನ್ನು ಒಕ್ಕಣಿಸುತ್ತವೆ.

ವೈದಿಕ ಧರ್ಮದ ಹಾಗೂ ಪುರಾಣ ಸಾಹಿತ್ಯದ ಪ್ರಭಾವ ಭಾರತದ ಜನಪದರ ಮೇಲೆ ಬೇರೆ ಬೇರೆ ಮಟ್ಟಗಳಲ್ಲಿ ಆಗಿರುವುದನ್ನು ಗಮನಿಸಬಹುದಾಗಿದೆ. ತುಳು ಭಾಷೆ, ಸಂಸ್ಕೃತಿಗಳೂ ಇದಕ್ಕೆ ಹೊರತಲ್ಲ. ಶಿವ, ಪಾರ್ವತಿ, ಗಣಪತಿ, ರಾಮ, ಸೀತೆ, ಕೃಷ್ಣ, ಬಲೀಂದ್ರ – ಮೊದಲಾದ ಪೌರಣಿಕ ವ್ಯಕ್ತಿಗಳ ಕಥೆಗಳನ್ನೊಳಗೊಂಡ ಕೆಲವು ಪಾಡ್ದನಗಳು ಲಭ್ಯವಿದೆ.

‘ಸಿರಿ ಸೀತಾಮು’, ‘ಸಿರಿರಾಮ ದೇವೆರ್’, ಜನಕ ರಾಯ ಮುನಿ ಸ್ವಾಮಿ’ ಮೊದಲಾದುವು ರಾಮಾಯಣಕ್ಕೆ ಸಂಬಂಧಪಟ್ಟ ಪಾಡ್ದನಗಳು. ವೆಂಕಟರಾಜ ಪುಣಿಂಚತ್ತಾಯರು ಪರಿಶಿಷ್ಟ ವರ್ಗದ ಅನುಭವಿ ವ್ಯಕ್ತಿ ಪಕ್ರಿ ಎಂಬವರಿಂದ ತುಳು ಜನಪದ ರಾಮಾಯಣವೊಂದನ್ನು ಸಂಗ್ರಹಿಸಿದ್ದಾರೆ ಕೃಷ್ಣನ ಬಾಲಲೀಲೆಯನ್ನು ವರ್ಣಿಸುವ ‘ಕಬಿತೆ’ಗಳು ಇರುವಂತೆಯೇ ಕೃಷ್ಣ – ಸತ್ಯಮ್ಮ (ಸತ್ಯಭಾಮಾ), ರಾಧೆ, ಪಂಚವಟಿ ಗೋಪಾಲ ಮೊದಲಾದ ಪಾಡ್ದನಗಳಿವೆ. ಒಂದು ಪಾಡ್ದನದ ಕಥೆ ‘ಚಂದ್ರಾವಳೀ ಪ್ರಸಂಗವನ್ನೇ ಹೋಲುತ್ತದೆ.

ಶಿವಪಾರ್ವತಿಯರ ಕುರಿತು ಅನೇಕ ಪಾಡ್ದನಗಳಿವೆ. ಅವರು ಜೋಗಿ-ಜೋಗಿತಿಯರಾಗುವುದು, ಕೊರಗ-ಕೊರತಿಯರಾಗುವುದು, ಬೇಟೆಗೆ ಹೊರಡುವುದು – ಇತ್ಯಾದಿ ಬೇರೆ ಬೇರೆ ರೂಪಗಳಲ್ಲಿ ಗೋಚರಿಸುತ್ತಾರೆ. ಇತರ ಪಾಡ್ದನಗಳಲ್ಲಿ ಪಾತ್ರವಾಗಿಯೂ ಬರುತ್ತಾರೆ.

ಬಲೀಂದ್ರನ ಆರಾಧನೆಯಂತೂ ಕರ್ನಾಟಕ ಮತ್ತು ಕೇರಳದ ಕರಾವಳಿಯುದ್ದಕ್ಕೂ ಸಾಂಸ್ಕೃತಿಕ ಮಹತ್ವ ಪಡೆದುದಾಗಿದೆ ಆರ್ಷ ಸಾಹಿತ್ಯದಲ್ಲಿ ಚಿತ್ರಿಸಲ್ಪಟ್ಟ ರೀತಿಗೆ ಭಿನ್ನವಾಗಿ ಈ ಪೌರಾಣಿಕ ವ್ಯಕ್ತಿಗಳನ್ನೂ ಈ ಜನಪದ ಸಾಹಿತ್ಯದಲ್ಲಿ ಚಿತ್ರಿಸಲಾದುದನ್ನು ಲಕ್ಷಿಸಬಹುದು. ಉದಾ: ‘ಜನಕರಾಯ ಮುನಿಸ್ವಾಮಿ’ಯ ಸಂಧಿಯಲ್ಲಿ ಆತನ ಬೆಳಗ್ಗಿನ ಹಾಗೂ ಸಂಜೆಯ ಪೂಜೆಯನ್ನು ಹಾಳು ಮಾಡುವ ಗರುಡ ಪಕ್ಷಿಯ ರೆಕ್ಕೆಯನ್ನು ತುಂಡರಿಸಿದವರಿಗೆ ‘ಸಿರಿ ಸೀತಾಮು ದೆಯ್ಯಾರ’ನ್ನು ಧರ್ಮಧಾರೆ ಎರೆದು ಕೊಡುವೆನೆಂದು ಡಂಗುರ ಸಾರಿರುತ್ತಾನೆ. ಅದರಂತೆ ಬಂದ ಲಕ್ಷ್ಮಣ ಬಾಣ ಹೂಡಿ ಆ ಧೂರ್ತ ಗರುಡ ಪಕ್ಷಿಯ ರೆಕ್ಕೆ ಕತ್ತರಿಸುತ್ತಾನೆ. ಸಿರಿ ಸೀತಾಮುದೆಯ್ಯಾರನ್ನು ಲಕ್ಷ್ಮಣನಿಗೆ ಧರ್ಮಧಾರೆ ಎರೆಯಲು ಜನಕರಾಯ ಮುನಿ ಸಿದ್ಧನಾದಾಗ ಲಕ್ಷ್ಮಣ ತಾನು ಮೊದಲು ಮದುವೆಯಾಗಲು ಒಲ್ಲದೆ ತನ್ನಣ್ಣ ಸಿರಿ ರಾಮ ದೇವರನ್ನು ಕರೆದುಕೊಂಡು ಬರುತ್ತಾನೆ. ಮುಂದೆ ಸಿರಿ ರಾಮ – ಸಿರಿ ಸೀತಾಮು ದೆಯ್ಯಾರ್ ಇವರ ಮದುವೆ ನಡೆಯುತ್ತದೆ. (ವಿವರಗಳಿಗೆ-‘ತುಳು ಸಂಧಿಯಲ್ಲಿ ಸೀತಾ ಕಲ್ಯಾಣ’ – ‘ಅವಿಲು’ ೧೯೭೮)

ಇಂಥ ‘ಪೌರಾಣಿಕ’ ಪಾಡ್ದನಗಳ ಆವರಣ ಪೌರಾಣಿಕವಷ್ಟೇ ಹೊರತು, ಈ ಪೌರಾಣಿಕ ವ್ಯಕ್ತಿಗಳ ಸ್ವರೂಪ, ಭೂತಗಳಂತಹ ಅತಿಮಾನುಷ ಸ್ವರೂಪವಲ್ಲ. ಆಕಾರ ಮತ್ತು ವರ್ತನೆಗಳಲ್ಲಿ ಅವರು ಮಾನವ ಸ್ವಭಾವದಿಂದ ಕೂಡಿದವರೆಂದೇ ಹೇಳಬೇಕು.

ಪಿತೃಪೂಜೆ ಹಾಗೂ ವೀರಾರಾಧನೆ ಭೂತಾರಾಧನೆಯೊಂದಿಗೆ ಪ್ರತ್ಯೇಕಿಸಲಾರದ ರೀತಿಯಲ್ಲಿ ಬೆಸೆದು ಕೊಂಡಿದೆ. ವಿವಿಧ ಕಾರಣಗಳಿಂದ ಅಕಾಲ ಮೃತ ಹೊಂದಿದ ಬಳಿಕ ದೈವಗಳಾಗಿ ಮಾರ್ಪಟ್ಟು ಆರಾಧನೆಯನ್ನು ಸ್ವೀಕರಿಸುವ ಅನೇಕ ವ್ಯಕ್ತಿಗಳನ್ನು ಹೆಸರಿಸಬಹುದು. ಕೋಟಿ-ಚೆನ್ನಯ, ಕಲ್ಲುರ್ಟಿ – ಕಲ್ಕುಡ, ಬೊಬ್ಬರ್ಯ, ಆಲಿ, ಕಾಂತಾಬಾರೆ – ಬೂದಾಬಾರೆ, ಕೋಡ್ದಬ್ಬು, ತನ್ನಿಮಾನಿಗ, ನಾಡು, ಜೋಗಿ ಪುರುಷ, ಕೊರಗ ತನಿಯ, ಬಸ್ತಿ ನಾಯಕ, ಗುರ್ಕಾರ ಭೂತ, ಮುಗ್ಗೆರ್ಲು, ನಾಯರ್ ಭೂತ, ಮಾಯಂದಾಳ್, ಮದ್ಮಾಳ್ ಭೂತ, ಬಿಕ್ರ ಮೇಲಾಂಟ, ಬಿಲ್ಲರಾಯ – ಬಿಲಾರ್ತಿ, ಪೆರಿಯಾಕುಳು, ಕಾನದ-ಕಾಟದ, ಹಿರಿಯಾಯೆ, ಕುಂಞ್‌ಮಾಣಿಕೊ- ಇವರೆಲ್ಲ ದೈವತ್ವವನ್ನು ಹೊಂದಿದ ಮಾನವ ವ್ಯಕ್ತಿಗಳು.

‘ಸಿರಿ ಬಳಗ’ಕ್ಕೆ ಸೇರಿದ ಅಕ್ಕೆರಸು ಪೂಂಜೆದಿ (ಅಥವಾ ಬಾಲೆಕ್ಕೆ ಸಿರಿ), ಸೊನ್ನೆ, ಗಿಂಡೆ, ಅಬ್ಬಗ – ದಾರಗ ಮತ್ತು ಕುಮಾರ – ಇವರನ್ನು ‘ಭೂತ’ಗಳೆಂದು ಕರೆಯುವ ವಾಡಿಕೆ ಇಲ್ಲ; ಮಾತ್ರವಲ್ಲ, ಇತರ ದೈವಗಳಂತೆ ಇವರ ಆರಾಧನಾ ಉತ್ಸವದಲ್ಲಿ ‘ಅಣಿ’ ಇತ್ಯಾದಿ ವೇಷಭೂಷಣಗಳನ್ನು ಧರಿಸುವ ರೂಢಿಯಿಲ್ಲ. ವೃತ್ತಿ ನಿರತ ಭೂತ ನರ್ತಕರು ಸಿರಿ ಉತ್ಸವದಲ್ಲಿ ನಿಯೋಜಿಸಲ್ಪಡುವುದಿಲ್ಲ. ಹಾಗಿದ್ದರೂ ಸಿರಿ ಬಳಗವನ್ನು ಒಂದು ದೈವ ಸಂಕೀರ್ಣವೆಂದೇ ಪರಿಭಾವಿಸಬೇಕಾಗುತ್ತದೆ.

ದೈವೀಕರಣವನ್ನು ಹೊಂದಿದ ವ್ಯಕ್ತಿಗಳಲ್ಲಿ ಕೆಲವರು ಕಾಳಗದಲ್ಲಿ ಕಾಯವಿಟ್ಟವರು (ಉದಾ: ಕೋಟಿ-ಚೆನ್ನಯ); ಕೆಲವರು ಆತ್ಮಹತ್ಯೆ ಮಾಡಿಕೊಂಡವರು (ಕಲ್ಕುಡ-ಕಲ್ಲುರ್ಟಿ); ಕೆಲವರು ಇತರ ಭೂತಗಳ ಉಪದ್ರವದಿಂದ ಅಸುನೀಗಿದವರು ( ಕೊರಗ ತನಿಯ, ನಾಡು, ಆಲಿ, ಮಾಯಂದಾಳ್); ಕೆಲವರು ಇತರರಿಂದ ಕೊಲೆಯಾದವರು ( ಬಸ್ತಿನಾಯ, ದೇವು ಪೂಂಜ, ಬಿಲ್ಲರಾಯ).

ತುಳುನಾಡ ಭೂತ ಪ್ರಪಂಚದಲ್ಲಿ ಅರಬೀ ಭೂತ, ಚೀನೀ ಭೂತಗಳೂ ಇವೆಯೆಂಬುದು ಕುತೂಹಲಕರವಾದದ್ದು. ಅರಬಿ, ಚೀನೀ ವ್ಯಕ್ತಿಗಳು ಯಾವುದೋ ಕಾರಣಕ್ಕೆ ಕೊಲೆಗೋ, ಅಪಘಾತಕ್ಕೋ ಒಳಗಾಗಿ ಅಕಾಲ ಮರಣ ಹೊಂದಿರಬಹುದು.

ಹೀಗೆ ದೈವೀಕರಣಗೊಂಡವರಲ್ಲಿ ವೀರರಿದ್ದಾರೆ, ಜನೋಪಕಾರಿಗಳಿದ್ದಾರೆ, ಭಕ್ತರಿದ್ದಾರೆ, ಸಾಧ್ವೀ ಸ್ತ್ರೀಯರಿದ್ದಾರೆ. ಛಲವಾದಿಗಳಿದ್ದಾರೆ, ಅನ್ಯಾಯಗಾರರೆಂದು ತೋರುವ ಕೆಲವರೂ ಇಲ್ಲದಿಲ್ಲ. ಅಕಾಲ ಮೃತಿಯ ದಾರುಣತೆ, ಸುತ್ತಲ ಜನದ ಮನದಲ್ಲಿ ಉತ್ಕಟ ಪರಿಣಾಮ ಬೀರುವುದು ಸಹಜವೇ. ಅಸಾಮಾನ್ಯ ಗುಣಗಳಿದ್ದು, ಅಕಾಲ ಮರಣಕ್ಕೀಡಾದ ವ್ಯಕ್ತಿಗಳ ಸುತ್ತ ವಿಧವಿಧವಾದ ಕಥೆಗಳು ಹುಟ್ಟಿ ಹಬ್ಬುವುದು ಸ್ವಾಭಾವಿಕ. ಬದುಕಿದ್ದಾಗ ಕೆಲವರು ಒಂದಿಷ್ಟು ಅನ್ಯಾಯವಂತರೆನಿಸಿದ್ದರೂ ತೀರಿಕೊಂಡು ವಿಶಿಷ್ಟ- ಶುದ್ಧೀಕರಣಕ್ಕೆ ಒಳಪಟ್ಟು ಭೂತಗಳೆನಿಸಿದ ಬಳಿಕ ಅಂಥವರನ್ನು ಅನ್ಯಾಯಗಾರರೆಂದು ತಿಳಿಯದೆ ತಮಗೆ ಒಳಿತನ್ನು ಅನುಗ್ರಹಿಸುವ ಕಲ್ಯಾಣಕಾಂಕ್ಷೀ ಶಕ್ತಿ ಮೂರ್ತಿಗಳೆಂದು ಜನಪದರು ಭಾವಿಸುತ್ತಾರೆ.

ಮನುಷ್ಯ ಮೂಲದ ಹಿನ್ನಲೆಯುಳ್ಳ ದೈವ ಕಥಾನಕಗಳು ನಮ್ಮ ಪಾಲಿಗೆ ಹೆಚ್ಚು ಮುಖ್ಯ ಹಾಗೂ ಕುತೂಹಲಕರವೆನಿಸುತ್ತವೆ. ಇಲ್ಲಿ ವೈದಿಕೇತರ ಪುರಾಣಗಳಲ್ಲಿ ಮುಖ್ಯವಾಗಿ ಜನಪದ ಪುರಾಣಗಳಲ್ಲಿ ನಿಜ ಜೀವನದಲ್ಲಿ ದುರ್ಬಲರೂ, ಶೋಷಿತರೂ ಆಗಿದ್ದವರು ಪ್ರಬಲ ದೈವ ಶಕ್ತಿಗಳಾಗಿ ಮಾರ್ಪಟ್ಟದ್ದುಂಟು. ಅತಿ ಸಾಮಾನ್ಯ ವರ್ಗದಲ್ಲಿ ಜನಿಸಿದವರೂ ಭೂತ ಪಂಕ್ತಿಯಲ್ಲಿ ಶ್ರೇಷ್ಠ-ಸ್ಥಾನ ಪಡೆದುದೂ ಇದೆ.

ಹೆಚ್ಚಿನ ದೈವಗಳು ತಮ್ಮ ಭಕ್ತ ಸಮುದಾಯದೊಡನೆ ಮುಖಾಮುಖಿಯಾಗಿ ಮಾತನಾಡುವ, ಅವರ ಸುಖ ದುಃಖ ವಿಚಾರಿಸಿ, ಅಭಯ ನೀಡುವ ಪ್ರವೃತ್ತಿಯವುಗಳಾದುದರಿಂದ ಇವು ಜನಪದರ ಪಾಲಿಗೆ ವೈದಿಕ ದೇವರುಗಳಿಗಿಂತ ಹೆಚ್ಚು ಹತ್ತಿರ ಎನಿಸಿವೆ.

ಮತಾಚಾರಗಳಿಗೆ ಸಂಬಂಧ ಪಡದ ಲೌಕಿಕ ವಸ್ತುಗಳುಳ್ಳ ಪಾಡ್ದನಗಳು ಸಾಕಷ್ಟು ಇವೆ. ದೈವ ದೇವರುಗಳ ಉಲ್ಲೇಖ ಇವುಗಳಲ್ಲಿಯೂ ಸಹಜವಾಗಿಯೇ ಬರಬಹುದು. ಆದರೆ, ‘ಭಯ ಭಕ್ತಿ’ಯ ಸಂಬಂಧವೇನೂ ಅವುಗಳಲ್ಲಿ ಇರುವುದಿಲ್ಲ. ಈ ಪಾಡ್ದನಗಳು ಆಶಯ ದೃಷ್ಟಿಯಲ್ಲಿ ಸಾಮಾನ್ಯವಾಗಿ ಜನಪದ ಗದ್ಯಕತೆಗಳನ್ನು ಹೋಲುತ್ತವೆ.

ಲೌಕಿಕ ಪಾಡ್ದನಗಳಿಗೆ ಉದಾಹರಣೆಯಾಗಿ ಪರತಿ ಮಂಗಣೆ, ಒನ್ನಮ್ಮ ಜೇವು, ಅಣ್ಣೋರಿ ಕುಮಾರ, ಅಂಗಾಯಿ ಮದಿಯಾಳ್, ಗುರುಗುಂಜಿ ಬುಣ್ಣಾಳ್, ಮತ್ತಾಡಿ ಬಳ್ಳು, ಬಾಲೆ ಮಾಡೆದಿ, ಬಾಲೆ ಕಾಂತಗೆ, ಬಾಲೆ ಕಿನ್ಯಾಮು, ವಜ್ರಂದ ಕುಮಾರ, ಬಾಲೆ ತಂಗಡಿ, ಅಮಸರದ ಮೆನ್ನೋಡಿ, ಬಾಲೆಡ ಮುದ್ದು, ಸಣ್ಣಡಕೆ ಕೇದೆ, ಐರಪದಿ ದೇವಿ, ರುಕುಮ ಬಾರಿ ಪೆರ್ಗಡೆ, ಸಿರಿಸಿದ್ದುಲ್ಲ ರಾಯೆರ್, ಲಾಬಿನೆ ಬಂಗಾರ, ಇಂದುಲ್ಲ ಮಾಣಿಗ, ಬಾಲೆ ದುಗ್ಗಮ್ಮ, ಚಂದ್ರಾಲಿ ಬಾಲೊಳು – ಮೊದಲಾದುವನ್ನು ಸೂಚಿಸಬಹುದು.

ಲೌಕಿಕ ಪಾಡ್ದನಗಳಲ್ಲಿ ದುರಂತ ಕಥನಗಳೂ ಇವೆ: ಸುಖಾಂತ ಕಥನಗಳೂ ಇವೆ. ಇವನ್ನು ಹಾಡುವವರು ಹೆಚ್ಚಾಗಿ ಮಹಿಳೆಯರೇ ಆಗಿದ್ದಾರೆ. ರಚಿಸಿದವರೂ ಹೆಚ್ಚಾಗಿ ಮಹಿಳೆಯರೇ ಇರಬಹುದು. ಈ ಜನಪದ ಕವಿಗಳ ಕಲ್ಪನಾ ವಿಲಾಸದ ಜೊತೆಗೆ ಅವರ ಜೀವನ ದೃಷ್ಟಿ, ಅನುಭವ ವ್ಯಾಪ್ತಿ, ಚಿತ್ರಕ ಶಕ್ತಿ, ಮೌಲ್ಯ ಪ್ರತಿಪಾದನೆ ಇತ್ಯಾದಿಗಳನ್ನು ಈ ಪಾಡ್ದನಗಳಲ್ಲಿ ಗುರುತಿಸಬಹುದು. ಬದುಕಿನ ಅನೇಕ ಮಗ್ಗುಲುಗಳ ಬಗೆಗೆ, ಮನುಷ್ಯನನ್ನು ವಿಚಲಿತಗೊಳಿಸತಕ್ಕ ರಾಗದ್ವೇಷಗಳನ್ನು ಹೊತ್ತ ನೂರಾರು ಸಂಘರ್ಷ – ಸಮಸ್ಯೆಗಳ ಬಗ್ಗೆ ಪಾಡ್ದನಗಳು ವರ್ಣಿಸಬಹುದು. ಮುಚ್ಚುಮರೆ ಅಷ್ಟಾಗಿ ಕಾಣಿಸದ ಜನಪದ ಪಳಮೆಗಳಾದ ಪಾಡ್ದನಗಳು, ಉಳಿಗಮಾನ್ಯ ಪದ್ಧತಿಯ ಹಿಂದಣ ಜೀವನ ಸಂದರ್ಭಗಳಿಂದ ಮೂಡಿ ಬಂದ ವ್ಯಕ್ತಿಬಿಂಬಗಳನ್ನು ಅತ್ಯಂತ ನೈಜವಾಗಿ ತೆರೆದು ತೋರಿಸುತ್ತವೆ. ಕೊರಗರ ಕೊಪ್ಪದಿಂದ ತೊಡಗಿ ಅರಸುವಿನ ಅರಮನೆಯ ಬದುಕಿನವರೆಗೂ ವಿಸ್ತರಿಸಿಕೊಂಡಿದ್ದು ಜೀವನದ ಹರಹನ್ನು ಪಾಡ್ದನದ ಕವಿಗಳು ತಾವು ಕಂಡಂತೆ ಚಿತ್ರಿಸಿದ್ದಾರೆ.

ತುಳುನಾಡಿನ ಹಿಂದಣ ಮಂದಿ ಹೇಗೆ ಬದುಕು ಮಾಡಿದರೆಂಬುದನ್ನು, ಅವರ ತುಳು ಜೀವನ ಮೌಲ್ಯ, ನಂಬಿಕೆ, ನಡವಳಿಕೆ, ರಂಗು ರಸಿಕತೆ, ಕಲಾ ಪ್ರಜ್ಞೆ, ಉಡುಪು ತೊಡುಪು, ಆಭರಣ ಅಲಂಕಾರ, ಆಟ ಕೂಟಗಳು. ಮನೆಮಾರು, ಬೇಸಾಯ, ವ್ಯಾಪಾರ ಸಾಪಾರ, ಮದ್ದು ಮಾಯ, ಮದಿಪು – ಇತ್ಯಾದಿಗಳನ್ನು ಪಾಡ್ದನಗಳು ವರ್ಣಿಸುತ್ತವೆ. ಜೊತೆಗೆ ಬಡವ ಬಲ್ಲಿದರ ಸಂಘರ್ಷ, ಜಾತಿ ವೈಷಮ್ಯ, ಶೋಷಣೆ, ಅತ್ಯಾಚಾರ ಮೊದಲಾದುವನ್ನು ಈ ಸಾಹಿತ್ಯ ತಕ್ಕಷ್ಟು ನಿಚ್ಚಳವಾಗಿಯೇ ಚಿತ್ರಿಸುವುದರಿಂದ ಮಾನವ ಕುಲಶಾಸ್ತ್ರದ ಅಧ್ಯಯನ ದೃಷ್ಟಿಯಿಂದಲೂ ಈ ಸಾಹಿತ್ಯ ಅಪೂರ್ವ ಆಕರ ರಾಶಿಯೇ ಆಗಿದೆ. ಈ ಪಾಡ್ದನಗಳನ್ನು ದೇಶದ ಇತರೆಡೆಯ ಹಾಗೂ ಅನ್ಯದೇಶಗಳ ಜನಪದ ಪುರಾಣಗಳ ಜೊತೆಗೆ ಇಟ್ಟು ಸಮೀಕ್ಷಿಸಿದಾಗ ಇವುಗಳ ಮೌಲ್ಯ ಮಹತ್ವವೇದ್ಯವಾದಿತು. ಇವುಗಳ ಕಥನ ರೋಚಕತೆ, ನಿರೂಪಣೆಯ ವೈಖರಿ, ಭಾಷೆಯ ವಿಲಾಸ, ಕಲ್ಪನೆ ಬೆಡಗು, ಅದ್ಭುತ ರಮ್ಯ ಚಿತ್ರಣ ಮುಂತಾದ ರಾಚನಿಕ ವೈಶಿಷ್ಟ್ಯಗಳನ್ನು ಪರಿಶೀಲಿಸುವುದರ ಜೊತೆಗೆ ಮನುಷ್ಯನ ಮೂಲಭೂತ ಪ್ರವೃತ್ತಿಗಳ ವಿಜೃಂಭಣ , ಬಲ ಚಲ ದೌರ್ಜನ್ಯಗಳು, ಆಶೋತ್ತರಗಳು, ನೈತಿಕ ಪ್ರಜ್ಞೆ, ಶೋಷಣೆ, ವಿಧಿವಾದ, ದುರಂತ, ಕ್ರೌರ್ಯ, ಕುಬ್ಜತೆ, ಕುರೂಪ – ಇತ್ಯಾದಿ ಗುಣಾವಗುಣಗಳನ್ನು ಸಮೀಕ್ಷಿಸಬಹುದಾಗಿದೆ. ಸಾಮಾಜಿಕ ಮನೋವಿಜ್ಞಾನ, ಮನುಷ್ಯ ಕುಲಶಾಸ್ತ್ರ, ಸಾಂಸ್ಕೃತಿಕ ಚರಿತ್ರೆ ಇತ್ಯಾದಿ ಶಾಸ್ತ್ರಗಳ ಬೆಳಕಿನಲ್ಲಿ ಜನಪದ ಕಾವ್ಯಗಳನ್ನು ವಿಶ್ಲೇಷಿಸುವ ಅವಶ್ಯಕತೆ ಇದೆ.

ಒಟ್ಟಿನಲ್ಲಿ ಪಾಡ್ದನಗಳ ವೈಶಿಷ್ಡ್ಯಗಳನ್ನು ಹೀಗೆ ಸಂಗ್ರಹಿಸಬಹುದು:

೧. ಹೆಚ್ಚಿನ ಪಾಡ್ದನಗಳು ಈಗಲೂ ಊರ್ಜಿತಮಾಗಿದ್ದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳಲ್ಲಿ ಸಕ್ರಿಯ ಆಚರಣಾತ್ಮಕ ಸಂಬಂಧ ಇರಿಸಿಕೊಂಡಿವೆ.

೨. ಇವು ಸೂತ್ರೀಕೃತ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಲ್ಪಡುತ್ತವೆ.

೩. ಮೂಲತಃ ಸಂಸ್ಕೃತಿ ಚಿತ್ರಣದ ಉದ್ದೇಶವಿಲ್ಲದೆಯೂ ಅನೇಕ ಪಾಡ್ದನಗಳು ಆ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡುತ್ತವೆ.

೪. ಸಾಂಸ್ಕೃತಿಕ ವೀರರ, ವೀರ ಮಹಿಳೆಯರ ಕಥನಗಳು ಬಹುತೇಕ ದುರಂತ ಭೂಯಿಷ್ಠವಾಗಿವೆ. ಆದರೆ ಕೊನೆಯಲ್ಲಿ ಅಂಥವರ ದೈವೀಕರಣ ಕಥನಕ್ಕೆ ಭವ್ಯ ತಿರುವನ್ನು ಕೊಡುತ್ತವೆ.

೫. ಈ ಪಾಡ್ದನಗಳು ನಿರ್ದಿಷ್ಟ ಮೌಲ್ಯ ಪ್ರಜ್ಞೆಯಿಂದ ಕೂಡಿವೆ.

ಅಸಾಮಾನ್ಯ ಸಾಧನೆ, ಮಾಹತ್ವಾಕಾಂಕ್ಷೆ, ಅಸಾಧಾರಣ ಜನನ, ನ್ಯಾಯ ನೀತಿ, ರಾಗ ದ್ವೇಷ ಜ್ವಾಲೆಗಳ ವಿಕರಾಳತೆ, ವರ ಶಾಪಗಳ ಪ್ರಭಾವ, ಮಾನವನ ಶಕ್ತಿ ದೌರ್ಬಲ್ಯಗಳ ಅಭಿವ್ಯಕ್ತಿ, ಅದ್ಭುತ ರಮ್ಯ ಸನ್ನಿವೇಶಗಳು – ಇತ್ಯಾದಿಗಳನ್ನು ಇಂಥ ಪಾಡ್ದನಗಳಲ್ಲಿ ಗುರುತಿಸಬಹುದು. ಪುರುಷ ಪ್ರಯತ್ನದೊಂದಿಗೆ ಅದೃಷ್ಟ ಕಣ್ಣುಮುಚ್ಚಾಲೆಯಾಡುವುದನ್ನು ಅಡಿಗಡಿಗೂ ನೋಡಬಹುದಾಗುತ್ತದೆ. ತುಳುನಾಡಿನ ಪ್ರಾಕೃತಿಕ ಹಿನ್ನಲೆಯಲ್ಲಿ ವಿಶಿಷ್ಟ – ಸಾಂಸ್ಕೃತಿಕ ಪರಿಸರದಲ್ಲಿ ಮೂಡಿ ಬಂದ ಈ ತೆರನಾದ ಜನಪದ ಮಹಾಕಾವ್ಯಗಳು ಈ ನೆಲದ ಸಾಂಸ್ಕೃತಿಕ ಬದುಕಿನ ಕಂಪನ್ನು ದಟ್ಟವಾಗಿ ಹಿಡಿದಿಟ್ಟುಕೊಂಡಿವೆ.

ತುಳು ಪಾಡ್ದನಗಳು ದೈವಾರಾಧನೆಯ ಪೂರಕ ಸಾಹಿತ್ಯ ಸಾಮಗ್ರಿಗಳಾದುದರಿಂದ ಶಿಷ್ಟ – ಪುರಾಣ ಕಾವ್ಯಗಳಿಗಿಂತ ಭಿನ್ನವಾಗಿವೆ. ಇವುಗಳನ್ನು ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಯಾಕಾಗಿ ಹೇಳಿದರೆಂಬ ವಿವರಗಳಿಲ್ಲ, ಫಲಶ್ರುತಿ ಇತ್ಯಾದಿಗಳಿಲ್ಲ. ವ್ಯಕ್ತವಾಗಿ ಆಶ್ರಯವನ್ನು ಘೋಷಿಸುವುದೂ ಕಂಡುಬರುವುದಿಲ್ಲ. ಅತಿಶಯೋಕ್ತಿ ಇತ್ಯಾದಿ ಇದ್ದರೂ ಜನರ ಬದುಕಿನ ಚರಿತ್ರೆಯನ್ನು ಇವು ಹೊತ್ತಿವೆ; ವಿಶಿಷ್ಟ ಲೋಕದೃಷ್ಟಿಯನ್ನು ಹೊಂದಿವೆ.

ಜುಂಜುಪ್ಪ, ಮಲೆಮಾದೇಶ್ವರ, ಮಂಟೇಸ್ವಾಮಿ, ಮೈಲಾರಲಿಂಗ ಮೊದಲಾದ ಜನಪದ ಮಹಾಕಾವ್ಯಗಳಲ್ಲಿ ಕಾಣಿಸಿಕೊಳ್ಳುವಂಥ ಆದೆಷ್ಟೋ ವಿಶಿಷ್ಟಾಂಶಗಳು ತುಳು ಜನಪದ ಕಾವ್ಯಗಳಲ್ಲೂ ಕಂಡುಬರುತ್ತವೆ. (ಅಸಾಧಾರಣ ಜನನ, ಪೌರುಷ ಪ್ರಕಾಶನ, ಪವಾಡ ಶಕ್ತಿ, ಮಹಾಪುರುಷರ ನಿಗ್ರಹಾನುಗ್ರಹ ಸನ್ನಿವೇಶಗಳು ಇತ್ಯಾದಿ. ವಿವರಕ್ಕೆ – ‘ಜನಪದ ಆರಾಧನೆ ಮತ್ತು ರಂಗಕಲೆ’ – ಸುಶೀಲಾ ಉಪಾಧ್ಯಾಯ – ೧೯೮೯. ಪು. ೩೯)

ಹಲವು ತುಳು ಪಾಡ್ದನಗಳನ್ನು ವಿವರವಾಗಿ ಪರಿಶೀಲಿಸಿದಾಗ ಕೆಲವೊಂದು ಸನ್ನಿವೇಶಗಳ ಚಿತ್ರಣ, ಸಂದರ್ಭ ವಾಕ್ಯಗಳು, ನುಡಿಗಟ್ಟುಗಳು ಭಿನ್ನ ಭಿನ್ನ ಪಾಡ್ದನಗಳಲ್ಲಿ ಒಂದೇ ಬಗೆಯಲ್ಲಿ ಇರುವುದನ್ನು ಗುರುತಿಸಬಹುದು. ಇವುಗಳು ಮೌಖಿಕ ಕಾವ್ಯದ ಸೂತ್ರಗಳಾಗಿ ವರ್ತಿಸುತ್ತವೆ. ಯಾವನೇ ಹಾಡುಗಾರ ಇಡಿಯ ಪಾಡ್ದನವನ್ನು ಬಾಯಿಪಾಠವಾಗಿ ಒಪ್ಪಿಸುವುದಿಲ್ಲ.

ಪಾಡ್ದನಗಳನ್ನು ಪದೇ ಪದೇ ಕೇಳಿದ ಹಾಗೂ ಸ್ವತಃ ಹಾಡಿದ ಹಿನ್ನೆಲೆಯಲ್ಲಿ ಹಾಡುಗಾರರಿಗೆ ಕಥನದ ಸ್ಥೂಲ ನಡೆ ಹೃದ್ಗತವಾಗಿರುತ್ತದೆ. ಕೆಲವೊಂದು ವಿಚಾರಗಳನ್ನು ನಿರ್ದಿಷ್ಟ ಸೂತ್ರಾತ್ಮಕ ಶೈಲಿಯಲ್ಲಿಯೇ ನಿರೂಪಿಸುವ ವಾಡಿಕೆಯಿಂದಾಗಿ ಅಂಥ ಹಲವು ಸೂತ್ರಗಳು ಸಿದ್ಧಸೂತ್ರಗಳಾಗಿ ಹಾಡುಗಾರರ ಮನಸ್ಸಿನಲ್ಲಿ ಸಂಗ್ರಹವಾಗಿರುತ್ತವೆ. ಕೆಲವರು ಈ ವಿಚಾರದಲ್ಲಿ ಹೆಚ್ಚು ಪರಿಣತರಾಗುತ್ತಾರೆ. ಕಥೆಯ ಚೌಕಟ್ಟು ಹಾಗೂ ಪಾಡ್ದನ ಸೂತ್ರಗಳ ಹಿಡಿತ ಖಚಿತವಿದ್ದರೆ ಯಾವುದೇ ಕಥನವನ್ನು ಆಶುಪಾಡ್ದನವಾಗಿ ಹಾಡಲು ಸಾಧ್ಯವಾಗಬಹುದು.

ಇಂಥ ನುಡಿಕಟ್ಟು, ವಾಕ್ಯಗಳಲ್ಲದೆ, ನಿರ್ದಿಷ್ಟ – ಸನ್ನಿವೇಶಗಳನ್ನು ವರ್ಣಿಸುವ ವಾಡಿಕೆಯ ವಾಕ್ಯವೃಂದಗಳು ಹೇರಳವಾಗಿವೆ. ಬೆಳಗ್ಗೆ ಎದ್ದು ಕಲ್ಲು ಕಟ್ಟಿದ ಬಾವಿಯ ಬಳಿಗೆ ಹೋಗುವುದು, ‘ಆಕಾಶದ ಏತದಿಂದ ಪಾತಾಳದ ಹನಿನೀರು’ ಎತ್ತುವುದು, ಮುಖಮಾರ್ಜನ ಮೈಗೆ ಹಚ್ಚಿಕೊಳ್ಳುವ ಬಗೆ ಬಗೆಯ ಎಣ್ಣೆಗಳು, ಸಾವಿರ ಕೊಡ ಬಿಸಿನೀರು ಸಾವಿರ ಕೊಡ ತಣ್ಣೀರಿನ ಸ್ನಾನ, ಮೈಯೊರಸುವ ನವಿರಾದ ಬಟ್ಟೆ, ಗಂಧ ತೇಯುವಿಕೆ, ಅಂದಕ್ಕೆ ಗಂಧ, ಭಕ್ತಿಗೆ ವಿಭೂತಿ ಹಚ್ಚುವಿಕೆ, ಅಡುಗೆಯ ಸಡಗರ, ಊಟದ ಸೊಗಸು, ವೀಳ್ಯ ಹಾಕುವಿಕೆ, ಉಡುಗೆ ತೊಡುಗೆ, ಆಭರಣ ತೊಡುವಿಕೆ, ಪ್ರಯಾಣ, ದಾರಿಯ ವಿವರ, ಆಯಾಸ, ಆತಿಥ್ಯ, ಮನೆ ಮಾರುಗಳ ವರ್ಣನೆ, ಜನನದಿಂದ ತೊಡಗಿ ಮರಣದವರೆಗಿನ ಬೇರೆ ಬೇರೆ ಆಚರಣೆಗಳು, ವಿದ್ಯಾಭ್ಯಾಸ, ಓಲಗ, ಓಲೆ ಬರೆಸುವಿಕೆ, ಓಲೆ ಒಯ್ಯುವಿಕೆ, ಬೇಟೆ, ಕಂಬಳ – ಇತ್ಯಾದಿಗಳನ್ನು ವರ್ಣಿಸುವ ನಿರ್ದಿಷ್ಟ ಮಾತುಗಳಿವೆ.

ಸೃಷ್ಟಿ, ಚೋದ್ಯ, ಉತ್ಪಾತಗಳು, ದೈವಗಳ ಕಾರಣಿಕ ಇತ್ಯಾದಿಗಳನ್ನು ವರ್ಣಿಸುವ ಸೂತ್ರ ವಾಕ್ಯಗಳು ಇವೆ. (ಇಲ್ಲಿ ಉದಾಹರಣೆ ನೀಡಿಲ್ಲ. ಪಾಡ್ದನಗಳ ಒಡಲಲ್ಲಿ ನೋಡಬಹುದು).

ಕೆಲವೊಂದು ವರ್ಗಗಳನ್ನು ಅಥವಾ ವೃತ್ತಿಯವರನ್ನು ಪ್ರತಿನಿಧಿಸಲು ನಿರ್ದಿಷ್ಟ ಹೆಸರುಗಳನ್ನು ಪಾಡ್ದನಗಳಲ್ಲಿ ಬಳಸಲಾಗಿದೆ. ಇದೂ ಒಂದು ಬಗೆಯ ಸೂತ್ರ ಚಿಹ್ನೆಯೇ ಆಗಿದೆ. ಉದಾ: ಓಲೆ ಬರೆಯುವವನು – ‘ನಾರಾಯಣ ರಂಗೋಜಿ ಸೇನವೆ’, ಓಲೆ ಒಯ್ಯುವವನು – ‘ಓಲೆದ ಅಬ್ಬಣ್ಣೆ’, ಬೇಟೆ ನಾಯಿಗಳನ್ನು ಸರಬರಾಜು ಮಾಡುವವನು – ‘ನಾಯಿದ ಮಲ್ಲೋಡಿಗಾರೆ’, ಮಡಿವಾಳಗಿತ್ತಿ – ‘ಮಡ್ಯೊಲ್ದಿ ಚೆಲುವೆ’ (ಕನ್ನಡದ ಜನಪದ ಕತೆಗಳಲ್ಲೂ ಇದೇ ಹೆಸರಿದೆ.) ಸೂಲಗಿತ್ತಿ – ‘ಪದೆತಿ ಬಂಬೆ’, ಸುಂಕದವನು – ‘ಸುಂಕದ ದೇರೆ’, ದೋಣಿಯವನು – ‘ಓಡದ ಕುಂಞಿ’, ಮೂಲದವನು ಬಬ್ಬು, ಸೂಳೆ – ‘ಸಿದ್ಧು’.

ನಿರ್ದಿಷ್ಟ ನುಡಿಗಟ್ಟು, ವಾಕ್ಯ, ವಾಕ್ಯ ಸರಣಿಗಳಿಂದ ಹೆಣೆಯಲ್ಪಟ್ಟ ಸೂತ್ರಬದ್ಧ ರಚನೆಯೇ ಪಾಡ್ಡನ ಶೈಲಿಯ ಜೀವಾಳವಾಗಿದೆ; ವೈಶಿಷ್ಟ್ಯವಾಗಿದೆ. ಅಲ್ಪ ಸ್ವಲ್ಪ ವ್ಯತ್ಯಾಸಗಳಿದ್ದರೂ ಬಹುಮಟ್ಟಿಗೆ ಸಾದೃಶ್ಯವಿರುವ ಕೆಲವು ಸಾಂದರ್ಭಿಕ ವಿವರಗಳ ‘ಸೂತ್ರಬದ್ಧ ನಿರೂಪಣೆ’ ಯನ್ನು ನೋಡಬಹುದು.

ಮದುವೆಯ ಸಂಭ್ರಮದ ವರ್ಣನೆ

‘‘ಲತ್ತ್ ಪಿಂಗಾರದ ಅರಿ ಕುಡ್ತು ಬತ್ತಿನೆಂಗೆ ಪೊಣ್ಣ ಕೋಡಿಡ್ ದಿಬ್ಬಣದ ಮಂದೆ ನಿರೆದ್ ಬರ್ಪುಂಡೆ. ಪಿಜಿನ್‌ದಾರೆ ಪತ್ತಿನೆಂಗೆ ಆಣ ಕೋಡಿಡ್ ದಿಬ್ಬಣದ ಮಂದೆ ನಿರೆದ್ ಬತ್ತ್ಂಡ್. ಪಯಣದ ಬೆಡಿ, ಸೊನ್ನೆದ ಕೊಂಬು, ಗುರ್ಬಿಲೆ ನಾಟಕ, ಸೂಳೆಲೆ ಮೇಳ, ಕೆಲೆಂಜಿ ರಾಗ, ಉಮಿಲ್‌ದ ಪದ, ತಾರಾಯಿದ             ತಪ್ಪಂಗಾಯಿ, ಬಜ್ಜೆಯಿದ ದೂದು, ಡೊಂಬೆರೆ ಆಟದ ಗೌಜಿ ಲಕ್ಕ್ಂಡ್… ಎದ್ರ್‌ಗ್ ಆರೆತಿ ಕೊಂಡು             ಬತ್ತೆರ್. ಕಾರ್‌ಗ್ ನೀರ್ ಕೊರಿಯೆರ್, ದಿಬ್ಬಣೊಗು ದೊಂಪ ಪೊಗ್ಗುಂಡು ಉಣಸ್ ದುಂಬೊ, ದಾರೆ ದುಂಬೋಂದ್ ಕೇಂಡೆರ್. ಉಣಸ್ ಬಲ್ಮಣ ಆಂಡ್, ಬೊಳ್ಳಿ ಏರ್ದ್ ಬೊಳ್ಕಿರಾನಗ, ಬೊಳೆರಿಮಾಣಿಗ ಸರದನಿ ಕೊರ್ನಾಗ, ಮದಿಮಾಳೆನ್ ಜಪ್ಪುಡಾದ್ ಕೈಟೆನೆ ಪತ್ತೊಂದು ದೊಂಪ ಪೊಗ್ಗಾಯೆರ್. ದಾರೆ ಮಂಟಪ ಸಿಂಗರಿದ್ ಮದಿಮ್ಮಾಯ ಮದಿಮ್ಮಾಳೆನ್ ಪಾವಡೆ ಬಲಿ ಬರ್ಪಾದ್. ಬಾರೆದ ಮಂಟಮೆಡ್ ಕುಲ್ಲಾಯೆರ್. ಆಣಗ ಪೊಣ್ಣಗ ಕೈ ಮುಟ್ಟು ಕೈದಾರೆ, ಮೆಯ್ ಮುಟ್ಟು ಮೆಯ್‌ದೇಸೆ ಆಂಡ್, ದಾರೆ         ಮಂಟಮೆಡ್ದ್ ಲಕ್ಕಯೆರ್, ಪೊಣ್ಣು ಒಚ್ಚಿದ್ ಕೊರಿಯೆರ್’’

[ಎಳೆಯ ಅಡಿಕೆ ಹೂವಿನ ಅಕ್ಕಿ ಕೊಡಹಿ ಬಂದಂತೆ ಹೆಣ್ಣಿನ ಕಡೆಯಲ್ಲಿ ದಿಬ್ಬಣದ ಮಂದಿ ತುಂಬಿದರು. ಇರುವೆ ಧಾರೆ ಹಿಡಿದಂತೆ ಗಂಡಿನ ಕಡೆಯಲ್ಲಿ ಮಂದಿ ನೆರೆದರು. ಪಯಣದ ಸಿಡಿಮದ್ದು, ಸನ್ನೆಯ ಕೊಂಬು, ಗುಬ್ಬಿಗಳ ನಾಟಕ, ಸೂಳೆಯರ ಮೇಳ, ನೊಣದ ರಾಗ, ಸೊಳ್ಖೆಯ ಪದ, ತೆಂಗಿನ ತಪ್ಪಂಗಾಯಿ, ಅಡಕೆಯ ಜೂಜು, ಡೊಂಬರಾಟದ ಗದ್ದಲ ಎದ್ದಿತು… ಎದುರಿಗೆ ಆರತಿ ತಂದರು. ಕಾಲಿಗೆ ನೀರಿತ್ತರು. ದಿಬ್ಬಣ ಚಪ್ಪರ ಹೊಕ್ಕಿತು. ಊಟ ಮೊದಲೋ, ಧಾರೆ ಮೊದಲೋ ಎಂದು ಕೇಳಿದರು. ಊಟ  ಉಪಚಾರವಾಯಿತು. ಬೆಳ್ಳಿ (ಶುಕ್ರ) ಏರಿ ಬೆಳಕಾದಾಗ, ಬೊಳೆರಿ ಮಾಣಿಗ ಹಕ್ಕಿ ದನಿ ತೋರಿದಾಗ  ಮದುಮಗಳನ್ನು ಇಳಿಸಿ ಕೈಹಿಡಿದುಕೊಂಡು ಚಪ್ಪರ ಹೊಗಿಸಿದರು. ಧಾರಾಮಂಟಪವನ್ನು ಸಿಂಗರಿಸಿ ಮದುಮಗ ಮದುಮಗಳನ್ನು ಪಾವಡೆ (ನಡೆಮಡಿ)ಯ ಮೇಲೆ ಪ್ರದಕ್ಷಿಣೆ ಬರಿಸಿ, ಧಾರೆಯ ಮಂಟಪದಲ್ಲಿ ಕುಳ್ಳಿರಿಸಿದರು. ಗಂಡಿಗೂ, ಹೆಣ್ಣಿಗೂ ಕೈ ಮುಟ್ಟಿ ಕೈದಾರೆ, ಮೆಯ್ ಮುಟ್ಟಿ ಮೆಯ್ ಸೇವೆ ಆಯಿತು. ಧಾರೆಯ ಮಂಟಪದಿಂದ ಎಬ್ಬಿಸಿದರು. ಹೆಣ್ಣನ್ನು ಒಪ್ಪಿಸಿಕೊಟ್ಟರು].

ಮಹಾಪುರುಷರ ಪ್ರಥಮ ಕ್ಷೌರದ ವರ್ಣನೆಯ ಒಂದು ಭಾಗ

‘……ಬಲ ಕೆನ ಪತ್ಯೆ ದತ್ತ ಕೆನ್ನಿದ ಬೇಲೆ ಬೆಂದೆ. ದತ್ತ ಕೆನ್ನಿ ಪತ್ಯೆ, ಬಲತ್ತ ಕೆನ್ನಿದ ಬೇಲೆ ಬೆಂದೆ. ಪಣೆತ ಬೇಲೆ ಬೆಂದೆ. ಕಡೆಮೀಸೆ ಕತ್ತೆರಿಯೆ, ಕೊಡಿಮೀಸೆ ಮುತ್ತರಿಯೆ, ಪುರ್ಬುದಾರೆ ಪುಟ್ಟಾಯೆ. ತಿಗಲೆಡ್ ಸೂರ್ಯಚಂದ್ರ ಬೇಲೆ ಬೆಂದೆ. ಬೆರಿಟ್ ಭೀಮ ರಕ್ಕಸ ಬೇಲೆ ಬೆಂದೆ. ಮೆಯ್ ಕೈಟ್ ಪಲ್ಲಿಪರಣೆದ ಬೇಲೆ ಬೆಂದೆ. ಕೈ ಉಗುರು ದೆತ್ತೆ, ಕಾರ ಉಗುರು ಈಸಿಯೆ. ತರೆಡ್ದ್ ಪತ್ತಿನ ಕಾರ್ ಮುಟ್ಟ ಮೆಯ್ ಸಿಂಗಾರ ಬೇಲೆ ಬೆಂದೆ’

[(ಕ್ಷೌರಿಕ) ಬಲಕೆನ್ನೆ ಹಿಡಿದ ಎಡಗೆನ್ನೆಯ ಕೆಲಸ ಮಾಡಿದ. ಎಡ ಕೆನ್ನೆ ಹಿಡಿದ ಬಲದ ಕೆನ್ನೆಯ ಕೆಲಸ ಮಾಡಿದ. ಹಣೆಯ ಕೆಲಸ ಮಾಡಿದ. ಕಡೆಮೀಸೆ ಕತ್ತರಿಸಿದ, ತುದಿಮೀಸೆಯನ್ನು ಕಿರಿದುಗೊಳಿಸಿದ. ಹುಬ್ಬಿಗೆ ಧಾರೆ ಹುಟ್ಟಿಸಿದ. ಎದೆಯಲ್ಲಿ ಸೂರ್ಯಚಂದ್ರರನ್ನು ಬಿಡಿಸಿದ. ಬೆನ್ನಿನಲ್ಲಿ ‘ಭೀಮ ರಕ್ಕಸ’ ಚಿತ್ರ ಬಿಡಿಸಿದ. ಮೈಯಲ್ಲಿ ಕೈಯಲ್ಲಿ ಹಲ್ಲಿ ‘ಪರಣೆ‘ಗಳನ್ನು ಬಿಡಿಸಿದ. ಕೈಯ ಉಗುರು ತೆಗೆದ. ಕಾಲ ಉಗುರನ್ನು ನಯಗೊಳಿಸಿದ ತಲೆಯಿಂದ ತೊಡಗಿ ಕಾಲವರೆಗೆ ಮೆಯ್ ಸಿಂಗಾರ ಕೆಲಸ ಮಾಡಿದ]

ಮೆಯ್ಯೊರಸಲು ತರಿಸಿದ್ದ ಪಟ್ಟೆಬಟ್ಟೆಗಳ ನವಿರು ನಾಜೂಕು

‘ಕಾಳೂರ ಕರಿಯಪಟ್ಟೆ, ಬೋಳೂರು ಬೊಳಿಯ ಪಟ್ಟೆ, ಮದವೂರ ಮಂಜಲ್ ಪಟ್ಟೆ, ಮೂಂಕುದ ಸುಯಿಲ್‌ಗ್ ಮೂನ್ನೂದು ಗಾವುದ ಪಾರಿಪಟ್ಟೆ, ಕಣ್ಣ್ ನೀರ್‌ಡ್‌ನೆನಪಿ ಪಟ್ಟೆ, ಉಗುರುದ ನಾಳಿಡ್ ದೆಂಗಿ          ಪಟ್ಟೆ’

[ಕಾಳೂರ ಕರಿಯ ಪಟ್ಟೆ, ಬೋಳೂರ ಬಿಳಿಪಟ್ಟೆ, ಮದವೂರ ಹಳದಿ ಪಟ್ಟೆ, ಮೂಗಿನ ಸುಯ್ಲಿಗೆ ಮುನ್ನೂರು ಗಾವುದ ಹಾರುವ ಪಟ್ಟೆ, ಕಣ್ಣ ನೀರಿನಲ್ಲಿ ಒದ್ದೆಯಾಗುವ ಪಟ್ಟೆ, ಉಗುರಿನ ಎಡೆಯಲ್ಲಿ ಅಡಗುವ ಪಟ್ಟೆ’]

ತುಳುನಾಡಿನ ಭೋಜನ ಸಂಭ್ರಮ

‘ಮುತ್ತು ವರನಂದ ಉಣುಪು, ಕಾಜಿ ವರನಂದ ಕಜಿಪು, ಪಚ್ಚೆ ವರನಂದ ಪಸಂಗರಿ, ನೀಲ ವರನಂದ          ನೆಯಿ, ಅಳೆ ಕೂಟುದು ಐನೂದು ಬಗೆ, ಪುಳಿ ಕೂಟುದು ಮುನ್ನೂದು ಬಗೆ, ಎಣ್ಣೆಲ್ಲ ಕಾಯೊಡೆ, ಬಣ್ಣಲ್ಲ ಚಕ್ಕುಲಿ, ಪದೆಂಜಿದ ಪಾಯಸ, ಕಣಿಲೆ, ಕಾಮಟೆ, ಮಾಪಳಂದ ಉಪ್ಪಡ್, ಅಂಗಯಿ ಮುರ್ಕಲ್ಲ ನೆಯಿ,           ಮುಂಗಯಿ ಮುರ್ಕಲ್ಲ ಕೊಜಪು, ಪೇರ್‌ಡ್ ಉಂಡೆರ್, ಅಳೆಟ್ ಕೈ ದೆಕ್ಕಿಯೆರ್’

[ಮುತ್ತು ಬಣ್ಣದ ಅನ್ನ, ಕಾಜಿ ಬಣ್ಣದ ಪಲ್ಯ, ಪಚ್ಚೆ ಬಣ್ಣದ ಪಸಂಗರಿ, ನೀಲ ಬಣ್ಣದ ತುಪ್ಪ, ಮಜ್ಜಿಗೆ ಸೇರಿಸಿ ಐನೂರು ಬಗೆ, ಹುಳಿ ಸೇರಿಸಿ ಮುನ್ನೂರು ಬಗೆ, ಎಣ್ಣೆಯ ಕಾಯೊಡೆ, ಬಣ್ಣದ ಚಕ್ಕುಲಿ, ಹೆಸರಿನ ಪಾಯಸ, ಕಣಿಲೆ (ಎಳೆಬಿದಿರು) ಕಾಮಟೆ, ಮಾದಳದ ಉಪ್ಪಿನಕಾಯಿ, ಅಂಗಯಿ ಮುಳುಗುವಷ್ಟು ತುಪ್ಪ, ಮುಂಗಯಿ ಮುಳುಗುವಷ್ಟು ಮೊಸರು, ಹಾಲಿನಲ್ಲಿ ಉಂಡರು, ಮಜ್ಜಿಗೆಯಲ್ಲಿ ಕೈ ತೊಳೆದರು]

ಹೆಣ್ಣು ಪುಷ್ಪವತಿಯಾದಾಗ ನಡೆಸುವ ಆಚರಣೆಗಳು       

‘ಮದಿಮುಟ್ಟುಮದಿಮಾಳ್ ಆತಳೆ. ನಾಲೂರು ಪೊಣ್ಣುಳೆನ್ ಲೆತ್ತೆರ್ ನಡುಜಾಲ್‌ಡ್ ಮಂಡಲ ಪಾಡ್ಪಾಯೆರ್. ನಾಲ್ ತೂರಿಡ್ ನೀರ್ ದೀಪಾಯೆರ್. ನಾಲ್‌ಕಲಸ ಕಟ್ಟಿಯೆರ್, ಕೆರ್ಚಿದ ತಾರಾಯಿ  ದೀಪಾಯೆರ್. ಪಾಡಿ ಮಂಡಲೊಗು ಬಲತ್ತ ಕಾರ್‌ದುಂಬು ದೀಪಾದ್ ಬಲಿ ಬರ್ಪದೆರ್, ತಾರಾಯಿದ ಕೆರ್ಚಿಡ್ ಕುಳ್ಳಯೆರೆ. ನಾಲ್ ಪೊಣ್ಣುಲು ನಾಲ್ ಕಲಸ ಪತ್ಯೆರ್, ತರೆಕ್ ನೀರ್ ಪತ್ಯೆರ್. ಗೆಂದ ತಾರೆದ             ಬೊಂಡೊದ ನೀರ್ ಮೈತೆರ್. ಸೀಗೆ ಮಂಜೊಳು ಪಾಡ್ದ್ ಮಡ್ಯೊಳ್ತಿ ಮೀಪಯಳ್’

[‘ಋತುಮತಿಯಾದಳು ನಾಲ್ಕೂರಿನ ಹೆಂಗುಸರನ್ನು ಕರೆದರು. ನಡು ಅಂಗಳದಲ್ಲಿ ಮಂಡಲ ಹಾಕಿಸಿದರು. ನಾಲ್ಕು ಮಣ್ಣಿನ ಮೊಗೆಗಳಲ್ಲಿ ನೀರು ಇರಿಸಿದರು. ನಾಲ್ಕು ಕಲಶ ಕಟ್ಟಿಸಿದರು. ನಾರೆಬ್ಬಿಸಿ ಕಟ್ಟಿದ ತೆಂಗಿನಕಾಯಿ ಇರಿಸಿದರು. ಹಾಕಿದ ಮಂಡಲಕ್ಕೆ ಬಲಗಾಲು ಮೊದಲಿಟ್ಟು ಸುತ್ತು ಬರಿಸಿದರು. ತೆಂಗಿನಕಾಯಿ ಜೋಡಿಸಿ ಕಟ್ಟಿದುದರಲ್ಲಿ ಕುಳ್ಳಿರಿಸಿದರು. ನಾಲ್ಕು ಹೆಣ್ಣುಗಳು ನಾಲ್ಕು ಕಲಶ ಹಿಡಿದರು. ತಲೆಗೆ ನೀರು ಹಿಡಿದರು. ಗೆಂದಾಳಿ ಸೀಯಾಳದ ನೀರು ಎರೆದರು. ಸೀಗೆ, ಅರಸಿನ ಹಾಕಿ ಮಡಿವಾಳಗಿತ್ತಿ ಮೀಯಿಸಿದಳು’]

ಇಂಥ ವಾಕ್ಯವೃಂದಗಳಲ್ಲದೆ, ಪಾಡ್ದನಗಳಲ್ಲಿ ಕೆಲವೊಂದು ಸೂತ್ರಾತ್ಮಕ ಎನ್ನಬಹುದಾದ ವಾಕ್ಯಗಳನ್ನು ಪ್ರಯೋಗಿಸುತ್ತಾರೆ. ಇಂಥ ಉಕ್ತಿಗಳ ಕೆಲವು ಮಾದರಿಗಳು

ಉಂಡಿ ಉಣುಪುಡು ತುತ್ತುದಿ ಕುಂಟುಡು ಬರೊಡು
(ಉಂಡ ಉಣಿಸಿನಲ್ಲಿ ಉಟ್ಟ ಬಟ್ಟೆಯಲ್ಲಿ ಬರಬೇಕು)
ಸಿರಿ ಮೋಣೆಡ್ ಕಲಿ ಒಡ್ಡುದುಂಡು
(ಸಿರಿ ಮೋರೆಯಲ್ಲಿ ಕಲಿ ಒಡ್ಡಿದೆ)
ಉದಿಪುಗು ಸೂರ್ಯೊ ಕಂತ್‌ಗ್ ಚಂದ್ರೆ
(ಉದಯಕ್ಕೆ ಸೂರ್ಯ, ಅಸ್ತಮಾನಕ್ಕೆ ಚಂದ್ರ)
ತರೆಕೊಡಿ ಮಾಸ್‌ದ್‌ಂಡ್, ಮಿರೆಕೊಡಿ ದಂಗ್‌ದ್‌ಂಡ್
(ತಲೆಗೂದಲು ತುದಿ ಮಾಸಿದೆ, ಮೊಲೆ ತುದಿ ಬಾಗಿದೆ)
ದಿಕ್ಕ್ ಬುಡ್ದು ದೇಸಾಂದ್ರಿ ಪೋಯೆರ್
(ದಿಕ್ಕು ಬಿಟ್ಟು ದೇಶಾಂತರ ಹೋದರು)
ಮೈಲೆ ಮಾತೆರ್ ಮಡಿ ತುತ್ತಿಯೆರ್
(ಮೈಲಿಗೆ ಬಟ್ಟೆ ಕಳಚಿದರು, ಮಡಿಯುಟ್ಟರು )
ಕಾಯ ಬುಡುದು ಕೈಲಾಸ ಜೂವ ಬುಡುದು ವೈಕುಂಠ ಸೇರಿಯೆರ್
(ಕಾಯ ಬಿಟ್ಟು ಕೈಲಾಸ, ಜೀವ ಬಿಟ್ಟು ವೈಕುಂಠ ಸೇರಿದರು)
ಕೈಲ ಬಚ್ಚಲಾತ್ ಗುದ್ದಿಯೆರ್, ಕಾರ್ ಬಚ್ಚಲಾತ್ ತೊರ್ತೆರ್
(ಕೈ ದಣಿಯುವಷ್ಟು ಗುದ್ದಿದರು, ಕಾಲು ದಣಿಯುವಷ್ಟು ಒದ್ದರು)
ಕಲೆಪಂಡ್‌ದ್ ಕುಲೊ ದೂಸಿಯೆರ್
(ಕಳಂಕ ಹೇಳಿ ಕುಲದೂಷಣೆ ಮಾಡಿದರು)
ಜೋಗ ಬುಡುದು ಮಾಯೊಗು ಸಂದಿಯೆರ್
(ಗೋಚರದಿಂದ ಅಗೋಚರಕ್ಕೆ ಸಂದರು)

ಪಾಡ್ದನಗಳ ಸೂತ್ರಾತ್ಮಕತೆಗೆ ಇಂಬು ನೀಡುವ ಕೆಲವು ನುಡಿಗಟ್ಟು ಅಥವಾ ಕೂಡುನುಡಿಗಳು ಇಂತಿವೆ:

ಸೊಲ್ಮೆ ಸಂದಾವುನಿ – ನಮಸ್ಕಾರ ಸಲ್ಲಿಸು

ವಣಸ್ ಬಲ್ಮಣ – ಊಟ ಉಪಚಾರ
ಮಿತ್ತ್ ಮಿರಿಲೋಕ – ಮೇಲು ಲೋಕ
ಉದ್ಯ ಬೆನ್ಪುನಿ – ಉದಯಿಸು, ಉಂಟು ಮಾಡು
ಏಳದೆ ಯಮಗಂಡ – ಏಳು ನೆಲೆಯ ಒಳಕೊಠಡಿ
ದುತ್ತಾಯಿತ – ಉಡುಗೆ ತೊಡುಗೆ
ಪಾತಾಳಂದ ಪನಿನೀರ್ – ಪಾತಾಳದ (ಆಳವಾದ ಬಾವಿಯ) ಹನಿನೀರು
ಇರಿಯ ಪೆರಿಯೆರೆ ಕಾಲ – ಹಿರಿಯರ ಕಾಲ
ಮೋಣೆದ ಮುತ್ತು ಬೆಗರ್ – ಮೋರೆಯ ಮುತ್ತು ಬೆವರು
ಸಿಂತೆಡ್‌ ಲಂತಾರ ಪೋಪುನಿ – ಚಿಂತಾಮಗ್ನನಾಗು
ಕಡೆಕಣ್ಣ್‌ಡ್ ಕೊಡಿದುಕ್ಕ- ಕಡೆಗಣ್ಣಿನಲ್ಲಿ ಕಣ್ಣೀರು ಹರಿಯುವಿಕೆ
ಏಳ್‌ಗಿಂಡೆ ಕೋಪ – ಕೋಪಾವೇಶ
ಕಿದೆಕಿಲಾರ – ಹಟ್ಟಿ ಕೊಟ್ಟಿಗೆ
ನೇರನ ಕಾಂಡೆ – ಬೆಳಗು ಮುಂಜಾನೆ
ಅಂಗಾರೆ – ಬಾರ ಸಿಂಗಂದ ರಾಸಿ – ಮಂಗಳವಾರ, ಸಿಂಹರಾಶಿ.

ಪಾಡ್ದನಗಳು ಹೆಚ್ಚಾಗಿ ಹಾಡಲ್ಪಡುವುದಿದ್ದರೂ ಹೆಚ್ಚಿನ ಪಾಡ್ದನಗಳು ನಿಯತವಾದ ಛಂದಸ್ಸಿಗೆ ಒಳಗಾದ ರಚನೆಗಳಲ್ಲ. ಅವು ತಕ್ಕಮಟ್ಟಿನ ಲಯಗುಣವಿರುವ ಪದ್ಯಗಂಧಿ ಗದ್ಯರಚನೆಗಳೇ ಆಗಿವೆ. ಕೆಲವೊಂದು ಧಾಟಿಗಳಿಗೆ ಹೊಂದಿಕೊಂಡು ಸಂದರ್ಭಾನುಸಾರ ವಿಳಂಬಲಯದಲ್ಲೋ, ದ್ರುತಗತಿಯಲ್ಲೋ ಇವು ಹಾಡಲ್ಪಡುತ್ತವೆ. ಕೆಲವು ಪಾಡ್ದನಗಳ ಆರಂಭದ ಆಲಾಪನೆಯಾಗಿ ‘ಓಯೆ ಡೆನ್ನ ಡೆನ್ನ ಡೆನ್ನನ ಡೆನ್ನಾನಯೇ’ ಎಂಬ ಸೊಲ್ಲನ್ನೇ ಬಳಸುತ್ತಾರೆ. ಸಿರಿಸಂಧಿಗೆ ‘ಆ … ನಾರಾಯಿನ ನಾರಾಯಿನ ದೇವೋ…’ ಎಂಬ ಉಕ್ತಿ ಬಳಕೆಯಾಗುತ್ತದೆ. ಧಾಟಿಗೆ ಅಳವಡಿಸಲು ಕೆಲವು ಅಕ್ಷರಗಳನ್ನು ದೀರ್ಘಗೊಳಿಸುತ್ತಾರೆ. ಕೆಲವು ಅಕ್ಷರಗಳು ಪಲ್ಲಟವಾಗುತ್ತವೆ. ‘ಅ’ ಕಾರದ ಬದಲಿಗೆ ‘ಲ’ ಕಾರವೋ ‘ಓ’ ಕಾರವೋ ಬರವುದುಂಟು (ಉದಾ: ಅಂಗಾರೆ – ಲಂಗಾರೆ, ಅವುಲು – ಓವುಲು)

ಕೆಲವು ಪಾಡ್ದನಗಳಲ್ಲಿ ಛಂದಸ್ಸಿನ ಸ್ಥೂಲವಾದ ಚೌಕಟ್ಟು ಕಂಡುಬರುವುದುಂಟು. ಉದಾ:

ಓಯೆಮ್ಮ | ಬಾಲೆಳೆ| ಓಯೆಮ್ಮ | ಬಾಲೆಳೆ |
ಕಡುಬುದ್ಧಿ | ಕಡುಬಾಸೆ | ಕಲ್ಪಾಡೆ |
ಎಲ್ನೊಂಜಿ | ಪ್ರಾಯೊಡು | ಮಲ್ಲೊಂಜಿ| ಬಳಕೆಡ್|
ನಿಕುಲು | ನನಾಂಡ | ಬಳತ್ತಾರೇ |

ಇದು ಕನ್ನಡದ ‘ಸೊಬಗಿನ ಸೋನೆ’ ಛಂದಸ್ಸನ್ನು ಹೋಲುತ್ತದೆ. ಕೆಲವು ಬಾರಿ ಧಾಟಿಯ ಪೂರಣಕ್ಕಾಗಿ ಕೆಲವು ಅರ್ಥಪೂರಕವಲ್ಲದ ಶಬ್ದಗಳನ್ನು ಪಾಡ್ದನಕಾರ ಬಳಸುವುದುಂಟು. ಉದಾ: ಇನಿ, ನನ, ಒಂಜೊ, ಒಂಜಾಂಡ ಪಣ್ಣಾಗ ಉಂಡುಗೆನ, ಅಂದಾಂಡ, ದಾನೆ, ಅವುಲು, ಅವ್ವಾಂಡ ಇತ್ಯಾದಿ. ಈ ಶಬ್ದಗಳಿಗೆ ಸ್ವತಂತ್ರವಾಗಿ ಅರ್ಥವಿದ್ದರೂ ಬಳಸಲಾದ ಎಡೆಗಳಲ್ಲಿ ಹೆಚ್ಚಾಗಿ ಯಾವ ಅರ್ಥವೂ ಇರುವುದಿಲ್ಲ ಉದಾ: ‘ಬಿರ್ಮಣ್ಣ ಬಲ್ಲಾಲೆಗ್ (ಇನಿ) ಪದ್ರಾಡ್ ಪರ್ಸೊದ ಆಪತ್ತ್ (ಒಂಜಾಂಡ) ಇಲ್ಲಿ ‘ಇನಿ’ (ಈ ದಿನ) ‘ಒಂಜಾಂಡ’ (ಒಂದಾದರೋ) ಈ ಶಬ್ದಗಳಿಗೆ ಅರ್ಥಸಾಂಗತ್ಯವಿಲ್ಲ.

ಪ್ರಕೃತ ಪ್ರಚಲಿತವಿಲ್ಲದ ಅನೇಕ ಶಬ್ದಗಳಲ್ಲಿ ಭಾಷಾ ರೂಪಗಳೂ, ನುಡಿಗಟ್ಟುಗಳೂ, ಗಾದೆಗಳೂ ಪಾಡ್ದನಗಳಲ್ಲಿವೆ. ಇವುಗಳಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳೂ ಸಾಕಷ್ಟಿವೆ. ಸಮಾಜಶಾಸ್ತ್ರ, ಸಾಂಸ್ಕೃತಿಕ ಇತಿಹಾಸ, ಭಾಷಾವಿಜ್ಞಾನ ಇತ್ಯಾದಿ ಕ್ಷೇತ್ರಗಳ ಜಿಜ್ಞಾಸುಗಳಿಗೆ ಪಾಡ್ಡನ ಸಾಹಿತ್ಯದಲ್ಲಿ ಹೇರಳ ಅಧ್ಯಯನ ಸಾಮಗ್ರಿ ಲಭ್ಯವಾಗುವುದಂತೂ ನಿಶ್ಚಯ.

ಆಕರಸೂಚಿ

೧. ಪ್ರೊ. ಬಿ. ಎ. ವಿವೇಕ ರೈ, ತುಳು ಜನಪದ ಸಾಹಿತ್ಯ, ೧೯೮೫, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೨. ಪ್ರೊ. ಕೆ. ಚಿನ್ನಪ್ಪ ಗೌಡ. ಭೂತಾರಾಧನೆ-ಜಾನಪದೀಯ ಅಧ್ಯಯನ, ೧೯೯೦, ಮದಿಪು ಪ್ರಕಾಶನ, ಮಂಗಳಗಂಗೋತ್ರಿ

೩. ಪ್ರೊ. ಎ. ವಿ. ನಾವಡ, ಜಾನಪದ ಸಮಾಲೋಚನ, ೧೯೯೩, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು

೪. ಪ್ರೊ. ಎ. ವಿ. ನಾವಡ, ಸಿರಿ ಪಾಡ್ದನ, ೧೯೯೯, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೫. ಡಾ. ಸುಶೀಲಾ ಉಪಾಧ್ಯಾಯ, ಜನಪದ ಆರಾಧನೆ ಮತ್ತು ರಂಗಕಲೆ, ೧೯೮೯, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ

೬. ಪ್ರೊ. ಬಿ. ಎ. ವಿವೇಕ ರೈ, ಯದುಪತಿ ಗೌಡ, ರಾಜಶ್ರೀ, ಪುಟ್ಟು ಬಳಕೆಯ ಪಾಡ್ದನಗಳು, ೨೦೦೪, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗೊಂಗೋತ್ರಿ

೭. ಅಮೃತ ಸೋಮೇಶ್ವರ, ಅವಿಲು, ೧೯೭೮, ಕನ್ನಡ ಸಂಘ, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ.

೮. ಅಮೃತ ಸೋಮೇಶ್ವರ, ತುಳು ಬದುಕು, ೧೯೮೪, ಪ್ರಕೃತಿ ಪ್ರಕಾಶನ, ಕೋಟೆಕಾರು, ದ.ಕ.

೯. ಅಮೃತ ಸೋಮೇಶ್ವರ, ತುಳು ಪಾಡ್ದನ ಸಂಪುಟ, ೧೯೯೭, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೦. ರೆ. ಎ. ಮೇನರ್, ಪಾಡ್ದನೊಳು (ತುಳು), ೧೮೮೬, ಬಾಸೆಲ್ ಮಿಶನ್, ಮಂಗಳೂರು.