ಕತೆಯ ಬೆಳವಣಿಗೆಗಿಂತಲೂ ಜನಪದ ಕವಿಯು ನಿರೂಪಿಸುವ ಕೌಶಲವು ಗಮನಾರ್ಹವಾದುದು. ‘ಮಜಲೊಡಿ’ ಅರಮನೆಯ ಮುಂದೆ ಭಿಕ್ಷುಕನಾಗಿ ಬಂದ ಬ್ರಾಹ್ಮಣ ‘ಕೋವಾರಿ’ಯೆಂದು ತಿಳಿಯುವುದು ಪಾಡ್ಡನದ ಕೊನೆಯಲ್ಲಿ. ‘ಕಿನ್ಯಗೆ’ ಬೆಂಕಿಗೆ ಹಾರಿದಳು ಎಂದಾಗ ಆಶ್ಚರ್ಯವಾಗುತ್ತದೆ. ಭಿಕ್ಷುಕನಿಗೂ ‘ಕಿನ್ಯಗೆ’ಗೂ ಯಾವ ಸಂಬಂಧವಿದೆ ಎಂಬ ಪ್ರಶ್ನೆಯೇಳುತ್ತದೆ. ಹಿಂದಿನ ‘ಕಿನ್ಯಗೆ’ಯ ಮಾತಿನ (‘ಮಜಲೋಡಿ’ ಅರಮನೆಯ ಮುಂದೆ ಸಂದಿಸುತ್ತೇನೆ) ಸೂಚನೆಯಿಂದ ಸ್ವಲ್ಪ ಮಟ್ಟಿಗೆ ಊಹಿಸಬಹುದು. ಆದರೆ ಸ್ಪಷ್ಟವಾಗಿ ತಿಳಿಸುವುದು ಪಾಡ್ದನದ ಕೊನೆಯಲ್ಲಿ; ಅದೂ ಸೂಚ್ಯವಾಗಿ. ‘ಮಜಲೊಡಿ ದೊರೆ’ಯು ಗೋರಿ ಕಟ್ಟಿ ‘ಅಣ್ಣೊಲ್ಲಿ ಕೋವಾರಿಯ ಬೊಳ್ಳುಲ್ಲಿ ಕೆನ್ಯಗೆ‘ ಎಂಬ ಹೆಸರನ್ನು ಕೆತ್ತಿಸುತ್ತಾನೆ ಎನ್ನುವಲ್ಲಿ. ‘ಕಿನ್ಯಗೆ’ ತನ್ನ ಪ್ರಾಣವನ್ನು ಜೀವನವನ್ನು ‘ಕೋವಾರಿ’ಗಾಗಿ ಮೀಸಲಿಟ್ಟಿದ್ದಾಳೆ ಎಂಬುದು ಧ್ವನಿಸುತ್ತದೆ. ‘ಕಿನ್ಯಗೆ’ಯ ಪಾತ್ರವನ್ನು ಗಂಭೀರವಾಗಿ ವಿವೇಚಿಸಿದಾಗ ‘ಮಜಲೊಡಿ ದೊರೆ’ಯೊಡನೆ ಆಗುವ ಮದುವೆಯೇ ಅವಳ ದುರಂತವಾಗಿದೆ. ಈ ದುರಂತಕ್ಕೆ ‘ಐತಗೆ’ಯಂತಹ ಪಾತ್ರಗಳ ಕ್ರಿಯೆಯು ಕಾರಣವಾಗಿದೆ. ಒಬ್ಬ ಗಂಡನನ್ನು ನಿಶ್ಚಯವಾಗಿ ಮದುವೆಯಾಗುತ್ತೇನೆ ಎಂದಿರುವಾಗ, ವರನು ಬದಲಾದರೆ ಹೆಣ್ಣಿನ ಮನಸ್ಸು ಹೊಸತಾಗಿ ಬಂದ ಗಂಡನೊಡನೆ ಬೆಸೆಯುವುದಿಲ್ಲ. ಸ್ತ್ರೀಯು ಯಾವಾಗಲೂ ಒಬ್ಬ ಗಂಡನನ್ನು ವರಿಸುತ್ತಾಳೆ ಎಂಬ ಸತ್ಯ ಸಾವಿತ್ರಿ ಮಹಾಕಾವ್ಯದಲ್ಲಿ ನಿರೂಪಿತವಾಗಿದೆ. ‘ಕಿನ್ಯಗೆ’ ತಾತಿಯ ಬೆನ್ನು ಹಿಡಿದು ಹೋಗುವವಳು’ (ಅಪ್ಪೆನ ಬೆರಿ ಪತ್‌ದ್ ಪೋಪಿನ ಬಾಲೆ ಆಲ್) ಎನ್ನುವುದು ಪಾತ್ರದ ಘಟನೆಯ ಸ್ವರೂಪಕ್ಕೆ ತುಂಬ ಪೋಷಕವಾಗಿದೆ. ‘ಕೋವಾರಿ’ ನಿರಾಕರಿಸಿದಾಗ ಮತ್ತು ‘ಮಜಲೊಡಿ ದೊರೆ’ಗೆ ನಿಶ್ಚಯವಾದಾಗ ತಾಯಿ ಕಡೆಗಣ್ಣಿನಲ್ಲಿ ಕೊಡಿ ದುಃಖ ಬಿಡುತ್ತಾಳೆ. ಸರೆಗಿನಿಂದ ಕಣ್ಣುಜ್ಜಿಕೊಳ್ಳುತ್ತಾಳೆ. ತಾಯಿಯ ಅಂತರ್ಯವನ್ನು ಅರಿತ ‘ಕಿನ್ಯಗೆ’ ಕೊನೆಗೂ ತಾನು ಮನಸ್ಸಿನಲ್ಲಿ ಭಾವಿಸಿದ ಗಂಡನೊಡನೆ ಐಕ್ಯವಾಗುತ್ತಾಳೆ.

ಈ ಪಾಡ್ದನದ ಅಮಾನುಷ ಘಟನೆಗಳು ಒಟ್ಟು ಕತೆಯ ಸಾವಯವ ಸಂಬಂಧವನ್ನು ಉಳಿಸಿ, ಜನಪದ ಕಾವ್ಯಗಳ ವಿಶಿಷ್ಟ ಗುಣವನ್ನು ಎತ್ತಿ ಹಿಡಿಯುತ್ತವೆ. ಉಳಿದ ಪಾಡ್ದನಗಳಿಗಿಂತ ಇಲ್ಲಿಯ ಭಾಷೆ ಹೆಚ್ಚು ಲಯಬದ್ಧವಾಗಿದೆ. ‘ಮಾನ್ಯೋಲ್ಲಾರದ್ದೇತಿ’ಯ ಸೀಮಂತದ ವರ್ಣನೆ ಸುಂದರವಾಗಿದೆ. ‘ಗಂಧಸಾಲೆಯ ಮುತ್ತು ವರ್ಣದ ಮುಗುಳು ಅನ್ನ ಮಾಡಿಸಿದ. ಬಳೆಯ ಬಣ್ಣದ ಪದಾರ್ಥ ಮಾಡಿಸಿದ. (ಗಂಧಸಾಲೆದ ಮುತ್ತು ವರ್ಣಂತ ಮುಗುರು ನುಪ್ಪು ಮಲ್ಪಾಯೆ. ಕಾಜಿ ವರ್ಣಂತ) ಇದನ್ನು ಬಳೆಯ ಬಣ್ಣವೆಂದೇ ಹೇಳಿರುವುದಾದರೂ, ಒಂದು ವಿಶಿಷ್ಟ ಬಣ್ಣವಿರಬೇಕು. ಕಜಿಪು ಮಾಲ್ಪಾಯೆ) ‘ಸೆಲ್ಯುಲ್ಲ ಮೋನೆಟ್ ಪುಲ್ಲ್ಯುಲ್ಲ ಬೇನೆ ಬತ್ತ್ಂಡ್ ಎಂದು ಹೆರಿಗೆಯ ನೋವಿನ ಚಿತ್ರಣವನ್ನು ಕೊಡುತ್ತಾನೆ. (ಈ ಮಾತನ್ನು ಕನ್ನಡದಲ್ಲಿ ಹೇಳುವುದು ಸ್ಪಷ್ಟವಾಗುವುದಿಲ್ಲ).

ಪಾಡ್ದನದ ಪ್ರಾರಂಭದಲ್ಲಿ ಬರುವ ‘ಮಾನ್ಯೋಲ್ಲಾರದ್ದೇತಿಯ’ ಕತೆಯು ವಸ್ತುವಿಗೆ ಪೋಷಿಕವಾಗಿಲ್ಲ. ತುಳು ಸಂಸ್ಕೃತಿಯ ಬಗ್ಗೆ ಬೆಳಕನ್ನು ಬೀರುವುದಾದರೂ ಒಟ್ಟು ಕತೆಯ ಕೇಂದ್ರಬಿಂದುವಿನ ಮೇಲೆ ಹೊಂದಿಕೊಳ್ಳುವುದಿಲ್ಲ. ಅಲೌಕಿಕ ಘಟನೆಯಿಂದಲೇ ಕತೆಯನ್ನು ಕೊನೆಗೊಳಿಸುವುದು ಜನಪದ ಕವಿಗೆ ತೃಪ್ತಿಕರ. ಅದಕ್ಕೆ ಅಂದಿನ ಜನತೆಯ ಮನೋಧರ್ಮವೇ ಕಾರಣವಾಗಿರಬಹುದು ಅಥವಾ ಅಂತಹ ಘಟನೆ ನಡೆದಿರಬಹುದು ಅಥವಾ ಜನರ ನಂಬಿಕೆ ಈ ರೀತಿ ಇರಬಹುದು. ಆದರೆ ಸೂಚ್ಯವಾಗಿ ನಿರೂಪಿಸುವ ತಂತ್ರವು ಈ ಪಾಡ್ದನದಲ್ಲಿ ಯಶಸ್ವಿಯಾಗಿದೆ. ಪಾಡ್ದನಗಳಲ್ಲಿ ಕಾವ್ಯ ಮೌಲ್ಯದ ದೃಷ್ಟಿಯಿಂದ ವಿಶೇಷ ಸ್ಥಾನವಿದೆ. ಈ ಪಾಡ್ದನವು ಅಮಾನುಷ ವಸ್ತು – ಕ್ರಿಯೆಗಳಿರುವಂತಹದು. ಭೂತಗಳಿಗೆ ಸಂಬಂಧಿಸಿದ ಪಾಡ್ದನಗಳ ಸಾಲಿನಲ್ಲಿ ಸೇರಿರಬಹುದು.

‘ಕರ್ನಗೆ’ ಪಾಡ್ಡನವು ಒಂದು ದಿವಸದಲ್ಲಿ ನಡೆದ ಘಟನೆಯನ್ನು ಸರಳ ಸುಂದರವಾಗಿ ಚಿತ್ರಿಸುತ್ತದೆ. ಈ ಪಾಡ್ದನದ ಎರಡು ಪಾಠಗಳು ಲಭಿಸಿವೆ. (ಅಮೃತ ಸೋಮೇಶ್ವರರು ಸಂಗ್ರಹಿಸಿದ ಪಾಠ (ಅ) ಹಾಗೂ ನಾನು ಸಂಗ್ರಹಿಸಿದ ಪಾಠ (ಬ). ಎರಡು ಪಾಠಗಳಲ್ಲಿಯೂ ಬರುವ ಕತೆಯು ಒಂದೇ. (ಬ) ಪಾಠದಲ್ಲಿ ಕರ್ನಕ ಎಂಬ ಹೆಸರಿದೆ. ‘ಕರ್ನಗೆ’ ಅಥವಾ ‘ಕರ್ನಕ’ ಎಂಬ ಹೆಂಗಸಿನ ದುರಂತ ಜೀವನ. ಭೂತದ ಉಪದ್ರದಿಂದ ನಡೆದ ಘಟನೆ. ‘ಜುಮಾದಿ‘ ಭೂತಕ್ಕೆ ‘ಕೊಡಿ ಕಟ್ಟಿದ’ (ಮೀಸಲಾಗಿ ಬಿಟ್ಟಿರುವ) ಫಲವನ್ನು ತಿಂದುದರಿಂದ, ಭೂತದ ಉಪದ್ರಕ್ಕೆ ಒಳಗಾಗಬೇಕಾಯಿತು. ಎರಡು ಪಾಠಗಳಲ್ಲಿರುವ ಕತೆಯ ವಸ್ತು ಇದಾದರೂ ನಿರೂಪಣೆಯಲ್ಲಿ ವ್ಯತ್ಯಾಸಗಳಿವೆ.

ಮೊದಲು (ಅ) ಪಾಠವನ್ನು ಪರಿಶೀಲಿಸುವ : ಊರಿನಲ್ಲಿ ಉತ್ತಮ ಸ್ಥಾನವಿರುವ ‘ಮಾಪು ಪಂರ್ದೆರ್’ ಎನ್ನುವವನ ತಂಗಿ ‘ಕರ್ನಗೆ’. ಅವನು ಕೋಲ, ಕೂಟ, ‘ಞಾಯ’ಗಳನ್ನು ಮುಗಿಸಿಕೊಂಡು ಬಂದು, ನಿತ್ಯ ಕರ್ಮಗಳನ್ನು ತೀರಿಸಿ, ಊಟ ಮಾಡುವಾಗ ತಲೆಕೂದಲು ಸಿಕ್ಕಿತು. ಅನ್ನದಲ್ಲಿ ಕಲ್ಲು ಇತ್ತು. ಇದರಿಂದ ಕೋಪಗೊಂಡ ಅಣ್ಣ ‘ಕರ್ನಗೆ’ಯ ಮನಸ್ಸೆಲ್ಲ ಬೇರೆಡೆಗಿರಬೇಕೆಂದು, ಯಾರನ್ನೋ ನೋಡಿ ಮರುಳಾಗಿರಬೇಕೆಂದು (‘ಕರ್ನಗೆ ಏರೆನ್ ತೂದು ಮಾಗಿನ ಆಯ?’) ‘ಈ ಏರೆನ್ ತೂದು ಮರ್ಲಾಯ?’ ಎಂಬ ಪ್ರಶ್ನೆಯನ್ನು ಕೇಳುತ್ತಾನೆ). ಭಾವಿಸಿ ಹೊಡೆಯುತ್ತಾನೆ. ಅಣ್ಣನ ಶಿಕ್ಷೆಯನ್ನು ತಡೆಯಲಾಗದೆ ದೇವಿಯ ‘ಆಜ’ ಉಂಟು ಎನ್ನುತ್ತಾಳೆ. ಬಳಿಕ ಜುಮಾದಿಯ ‘ಆಜ’ ಉಂಟು (ಆಣೆ ಉಂಟು) ಎನ್ನುತ್ತಾಳೆ. ಪೆಟ್ಟನ್ನು ತಡೆಯಲಾಗದೆ ಬಾವಿಗೆ ಬೀಳುತ್ತಾಳೆ. ಮಾಯವಾಗುತ್ತಾಳೆ.

(ಅ) ಪಾಠದಲ್ಲಿ ಅಣ್ಣ ಮತ್ತು ತಂಗಿಯರಾದರೆ (ಬ) ಪಾಠದಲ್ಲಿ ಮಾವ ಮತ್ತು ಸೊಸೆ. (ಅ) ಪಾಠದಲ್ಲಿರುವ ‘ಕರ್ನಗೆ’ಯ ನಿತ್ಯದ ಮನೆ ಕೆಲಸದ ವಿವರಣೆ (ಬ) ಪಾಠದಲ್ಲಿಲ್ಲ. ಕರ್ನಗೆಯ ಮನೆಗೆಲಸದ ಸುಂದರವಾದ ವರ್ಣನೆ ಅನಗತ್ಯ ಎಂದು ಕಾಣದ ರೀತಿಯಲ್ಲಿ ಸಹಜವಾಗಿ ಬಂದಿದೆ. ಒಬ್ಬಳು ತುಳು ಹೆಂಗಸನ್ನು ಇಲ್ಲಿ ‘ಕರ್ನಗೆ‘ ಪ್ರತಿನಿಧಿಸುವಂತಿರುವುದರಿಂದ, ತುಳು ಸಂಸ್ಕೃತಿಯ ದೃಷ್ಟಿಯಿಂದ ಗಮನಾರ್ಹವಾದುದು. ‘ಬೆಳ್ಳಂ ಬೆಳಗಾತ ಎದ್ದಳು ಕರ್ನಗೆ ಹಾಸಿಗೆ ಮಡಿಸಿದಳು. ಬಂಗಾರದ ಹಿಡಿಸೂಡಿ ಹಿಡಿದಳು, ಚಾವಡಿಯ ನಡುವನ್ನು ಬೀಸಿದಳು. ಚೆಂಬಿನ (ತಾಮ್ರದ) ಕಡ್ಯ ಹಿಡಿದಳು. ಚಾವಡಿಯ ನಡುವನ್ನು ಬೀಸಿದಳು. ಚೆಂಬಿನ (ತಾಮ್ರದ) ಕಡ್ಯ ಹಿಡಿದುಕೊಂಡು ಕಟ್ಟಿದ ಬಾವಿಯೆಡೆಗೆ ನಡೆದಳು. ಆಕಾರದ ಅಡ್ಡ ಮರವನನ್ನು ಹಿಡಿದಳು. ಪಾತಾಳದ ‘ಪನಿ’ ನೀರನ್ನು ತೆಗೆದಳು. ಕೈಮುಖ ತೊಳೆದಳು. ನೀರು ತಂದಳು. ಕಪಿಲೆ ದನದ ಬಳಿಗೆ ಬೆಳ್ಳಿಯ ಸಿರಿಗಿಂಡಿ ಹಿಡಿದುಕೊಂಡು ಹೋದಳು’. (ನೇರದೆ ಕಾಂಡೆ ಲಕ್‌ಯಳ್ ಕರ್ನಗೆ ಪಾಡಿಪಾಸ್ ಮಡಿತಳ್. ಬಂಗಾರದ ಮೈಪು ಪತ್ಯಳ್. ಚಾವಡಿ ನಡುವರ ಬೀಜಾಲ್. ಚೆಂಬಿನ ಕಡ್ಯ ದೆತ್ತೊಂದು ಕಟ್ಟಿನ ಗುವೆನಾಡೆ ಪೋಪಾಳ್. ಆಕಾಸಂದ ಪನೆ ಮರ ಪತ್ಯಳ್, ಪಾತಾಳಂದ ಪನಿನೀರ್ ದೆತ್ತಳ್. ಕೈ ಮೋಣೆ ನೆಡಿಯಾಳ್. ನೀರ್ ಕೊಂಡುಬರುವಳ್. ಕಬುಲ್ತಿ ಪೆತ್ತದ ಕೈತಡೆ ಬೊಲ್ಲಿನ ಸಿರಿಗಿಂಡೆ ಪತ್ತೊಂದು ಪೋಪಾಳ್.) ಮುಂದೆ ಅಡುಗೆ ಮಾಡುವ ಚಿತ್ರವೂ ಇದೇ ಭಾಷೆಯ ಶೈಲಿಯಲ್ಲಿ ಮುಂದುವರಿಯುತ್ತದೆ. ಸತ್ವಯುತವಾದ, ಲಯಬದ್ಧವಾದ ಭಾಷೆಯಲ್ಲಿ ಚಿತ್ರಣದ ಸೊಗಸು ಹೆಚ್ಚಿದೆ. (ಬಿ) ಪಾಠದಲ್ಲಿ ‘ಕರ್ನಕ’ ಹಿತ್ತಲಿಗೆ ಕಾಯಿಪಲ್ಯ ಕೊಯ್ಯಲು ಹೋಗುವುದರೊಂದಿಗೆ ಪಾಡ್ದನ ಪ್ರಾರಂಭವಾಗುತ್ತದೆ.

(ಅ) ಪಾಠದಲ್ಲಿ, ಕಾಯಿಪಲ್ಯಗಳಿಗೇ ‘ಕೊಡಿ ಕಟ್ಟಿ’ದ್ದಾರೆ ಎಂದು ಭೂತ ಕರೆದು ಹೇಳಿದರೆ, (ಬ) ಪಾಠದಲ್ಲಿ ಕಾಯಿಪಲ್ಯವನ್ನೆಲ್ಲ ಕೊಯ್ದು ಹಿತ್ತಿಲಿನಿಂದ ಹಿಂತಿರುಗುವಾಗ ಬಳಿಯಲ್ಲಿದ್ದ ಬಾಳೆ (ಬಂಗಬಾರೆ)ಯ ಗಿಡದ ಗೊನೆ ಹಣ್ಣಾದುದನ್ನು ನೋಡಿ ಕೊಯ್ದು ತಿನ್ನುತ್ತಾಳೆ. (ಅ) ಪಾಠದಂತೆ ‘ಕರ್ನಗೆ’ಯು ಭೂತಕ್ಕೆ ಎದುರು ಮಾತನಾಡುವ ಪ್ರಸಂಗ (ಬ) ಪಾಠದಲ್ಲಿಲ್ಲ. ಜನಪದರ ನಂಬಿಕೆಯಂತೆ (ಬ) ಪಾಠದ ಈ ನಿರೂಪಣೆಯೇ ಹೆಚ್ಚು ಯೋಗ್ಯವಾದುದು.

‘ಕರ್ನಗೆ’ಯ ಮಾವ ಸ್ನಾನ ಮಾಡುವ ಮತ್ತು ನಿತ್ಯಕರ್ಮಗಳನ್ನು ತೀರಿಸುವ ವಿವರಣೆ ಎರಡೂ ಪಾಠಗಳಲ್ಲಿ ಹೆಚ್ಚು ಕಡಿಮೆ ಸಮನಾಗಿದೆ. (ಬ) ಪಾಠದಲ್ಲಿ ಮಾವ (ಮಾಪು ಪಂರ್ದೆರ್) ಊಟಕ್ಕೆ ಕುಳಿತ ಬಳಿಕದ ಪ್ರತಿಕ್ರಿಯೆ ಉತ್ತಮ ರೀತಿಯಲ್ಲಿ ವರ್ಣಿತವಾಗಿದೆ. ಮಾವ ಊಟ ಮಾಡುವಾಗ ಜುಮಾದಿಯ ಉಪದ್ರವ ದೃಷ್ಟಾಂತಗಳು ಕಂಡುಬರುತ್ತವೆ. ಅನ್ನದಲ್ಲಿ ಕಲ್ಲು, ಬತ್ತ, ಒಣಗಿದ ಸೆಗಣಿ ತುಂಡು ಇತ್ಯಾದಿ ಸಿಗುತ್ತದೆ. ಕೋಪದಲ್ಲಿ ಸೊಸೆ ಕರ್ನಕನ್ನು ಬಡಿಯುತ್ತಾನೆ. ಅವಳ ಜುಟ್ಟನ್ನು ಹಿಡಿದರು, ಕೈ ಸೋಲುವವರೆಗೆ ಗುದ್ದಿದರು. ಕಾಲು ಸೋಲುವವರೆಗೆ ತುಳಿದರು. ಕುತ್ತಿಗೆಯ ‘ಕೇಲಬಂದಿ’ (ಸರ) ರಟ್ಟಿ ಹೋಯಿತು. ಕೈಯ ಬಳೆ ಹುಡಿಯಾಯಿತು. ಮೂಗಿನ ಮುತ್ತು ತುಂಡಾಗಿಹೋಯಿತು’. (ಆರೆ ಜುಟ್ಟು ಪತ್ಯೆರ್, ಕೈ ಬಚ್ಚಲಾತ್ ಗುದ್ಯೆರ್, ಕಾರ್ ಬಚ್ಚಲಾತ್ ತೊರ್ತೆರ್, ಕೆಕ್ಕಿಲ್ಲ ಕೇಲಬಂದಿ ರಟ್‌ದ್ ಪೋಂಡು. ಕೈತ ಕಾಜಿ ಪೊಡಿಯಾದ್ ಪೋಂಡು. ಮೂಕುದ ಟಿಕ್ಕಿ ಪೊಲ್ಯಿದ್ ಪೋಂಡು.)

(ಅ) ಪಾಠದಲ್ಲಿ ಬಾವಿಗೆ ಬಿದ್ದು ಮಾಯವಾಗುವಂತೆ (ಬ) ಪಾಠದಲ್ಲಿಲ್ಲ. (ಬ) ಪಾಠದಲ್ಲಿ ಮುಂದಿನ ಘಟನೆಯು ತೀವ್ರವಾಗಿದೆ. ಹೆಚ್ಚು ಸಹಜವಾಗಿದೆ. ಮಾವ ಹೊಡೆದಾಗ ತಪ್ಪಿಸಿಕೊಂಡು ಓಡಿಹೋಗುತ್ತಾಳೆ. ಆಲದ ಮರವನ್ನು ಹತ್ತುತ್ತಾಳೆ. ಮಾವನೂ ಹತ್ತಿದಾಗ ಕೊಂಬೆಯಲ್ಲಿ ಹೋಗುತ್ತಾಳೆ. (ಮಾವ ಕೊಂಬೆಯಲ್ಲಿ ಬೆನ್ನಟ್ಟಿದಾಗ ಎಲೆಯಲ್ಲಿ ಹೋಗುತ್ತಾಳೆ. ಇಲ್ಲಿ ಕ್ರಿಯೆಯ ವೇಗವನ್ನು ಸೂಚಿಸಲು ಈ ರೀತಿಯ ಚಿತ್ರಣವಿದೆಯೆಂದು ಗ್ರಹಿಸಬಹುದು.) ಬಳಿಕ ಹತ್ತಿರದ ಕೆರೆಗೆ ಹಾರುತ್ತಾಳೆ. ‘ಕರ್ನಕ’ನ ಹೆಣವನ್ನು ತೆಗೆದು, ಸುಟ್ಟು, ಸ್ನಾನ ಮಾಡಿ, ದುಃಖದ ‘ಗಂಜಿ’ಯನ್ನು ಉಣ್ಣುವಾಗ ‘ಜುಮಾದಿ’ಯ ಗರುಡ (ಗೆಂದಗಿಡಿ)ನ ರೂಪದಲ್ಲಿ ಬಂದು, ‘ಕರ್ನಕ’ನ ಕರುಳನ್ನು ಮುದ್ದೆ ಮಾಡಿ ಎಲೆಗೆ ಹಾಕುತ್ತದೆ. ಕರುಳಿನ ಕಟ್ಟನ್ನು ಬಿಚ್ಚಿದಾಗ ಮಾವನಿಗೆ ನಿಜ ವಿಷಯವು ಹೊಳೆಯುತ್ತದೆ. ‘ನನ್ನ ಮಾಂಸವನನ್ನು ನನಗೇ ತಿನ್ನಿಸಿದೆ, ಅಯ್ಯೋ ಜುಮಾದಿಯೇ’ ಎಂದು ದುಃಖಿಸುತ್ತಾನೆ. ಮಾವನ ಕೊನೆಯ ಮಾತು ಮನಸ್ಸನ್ನು ನಾಟುತ್ತದೆ. (ಬ) ಪಾಠದ ಪರಿಣಾಮಕಾರಿಯಾದ ಈ ನಿರೂಪಣೆಯು ಯೋಗ್ಯವಾದುದು. ಎರಡು ಪಾಠಗಳ ಭಾಷೆಯ ಶೆಲಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಭೂತದ ಉಪದ್ರವದಿಂದಾಗುವ ಅನಾಹುತಗಳನ್ನು, ಈ ರೀತಿಯ ಪವಾಡಗಳನ್ನು ಹಳ್ಳಿಯ ಜನರ ಬಾಯಿಯಿಂದ ಇವತ್ತಿಗೂ ಕೇಳಬಹುದು.

‘ಮಾನಿಗ’ ಮತ್ತು ‘ಪರತಿ ಮಂಗಣೆ’ ಎನ್ನುವ ಎರಡು ಪಾಡ್ದನಗಳ ಕತೆಯ ವಸ್ತು ಒಂದೇ ಆಗಿದ್ದರೂ, ನಿರೂಪಣೆಯಲ್ಲಿ ವ್ಯತ್ಯಾಸವಿದೆ. ‘ಮಾನಿಗ’ ಪಾಡ್ದನವು ಸಣ್ಣದಾಗಿದೆ. ವರ್ಣನೆಗಳು ಮಿತವಾಗಿವೆ. ‘ಪರತಿ’, ‘ಮಂಗಣೆ’ಯು ಅನುಚಿತವೆಂದು ಹೇಳುವಂತಿಲ್ಲದ ವರ್ಣನೆಗಳಿಂದ ಸುದೀರ್ಘವಾಗಿದೆ.

‘ಕೂಜವೆ’ ಮತ್ತು ‘ಮಾನಿಗ’ ಗಂಡ ಹೆಂಡಿರು. ಕೋಲ ಕಟ್ಟುವ ಬಡಕುಟುಂಬದವರು. ಬಲ್ಲಾಳನು ಕೋಲಕ್ಕೆ ಬರಲು ಸುಳ್ಳು ಹೇಳಿ ದಾರಿಯಲ್ಲಿ ಬರುವಾಗ ‘ಕೂಜವ’ನಿಗೆ ಗುರಿಯಿಟ್ಟು ಗುಂಡು ಬಿಡುತ್ತಾನೆ. ತನ್ನ ದೇಹ ಸುಖವನ್ನು ಪಡೆಯಲು ಬಲ್ಲಾಳನ ಮೋಸವೆಂದು ತಿಳಿದ ‘ಮಾನಿಗ’ ಉಪಾಯ ಹೂಡುತ್ತಾಳೆ. ತನ್ನ ಗಂಡನ ಕಾಷ್ಠ ಸುಟ್ಟು ಬೂದಿಯಾಗದೆ ತಾನು ಬರುವುದಿಲ್ಲವೆಂದು ಹೇಳುತ್ತಾಳೆ. ಗಂಡನ ಕಾಷ್ಠವು ಸುಡಬೇಕಾದರೆ ಮನೆಯ ಒಂದೊಂದೇ ವಸ್ತುವನ್ನು ಹಾಕಬೇಕೆನ್ನುತ್ತಾಳೆ. ಬೆಳ್ಳಿ, ಚಿನ್ನ, ಸೀಮೆಎಣ್ಣೆ, ತೆಂಗಿನ ಎಣ್ಣೆ ಡಬ್ಬಿ, ಅಕ್ಕಿ ಮುಡಿ, ಎತ್ತು, ಕೋಣ ಮೊದಲಾದ ಬಲ್ಲಾಳನ ಮನೆಯ ಸಂಪತ್ತನ್ನೆಲ್ಲ ಕಾಷ್ಠಕ್ಕೆ ಹಾಕಬೇಕೆಂದಾಗ ಮಾನಿಗಳ ಮಾತಿನಂತೆ ಹಾಕುತ್ತಾನೆ. ಒಂದೊಂದು ವಸ್ತುವನ್ನು ಕಾಷ್ಠಕ್ಕೆ ಹಾಕಿದ ಬಳಿಕ ‘ಇನ್ನಾದರೂ ಬಾ’ ಎಂದು ಬಲ್ಲಾಳನು ಹೇಳುವುದು ಅವನೆಷ್ಟು ಕಾಮಾಂಧನಾಗಿರುವನೆಂಬುದನ್ನು ವ್ಯಕ್ತಗೊಳಿಸುವುದು. ಕೊನೆಗೆ ಕಾಷ್ಠವನ್ನು ಮುಟ್ಟಿ ಬರುತ್ತೇನೆ ಎಂದು ಹೇಳಿ, ಮೂರು ಸುತ್ತು ಬಂದು ಹಾರುತ್ತಾಳೆ. ಬಲ್ಲಾಳನ ಸರ್ವ ಸಂಪತ್ತು ಒಂದು ಹೆಣ್ಣಿಗಾಗಿ ನಾಶವಾಯ್ತು ಎಂಬುದರ ಚಿತ್ರಣ ಈ ಪಾಡ್ದನಗಳಲ್ಲಿ ಬಂದಿದೆ.

‘ಪರತಿ ಮಂಗಣೆ’ ಪಾಡ್ದನವು ನಿರೂಪಣೆಯ ದೃಷ್ಟಿಯಿಂದ ಹಾಗೂ ಭಾಷೆಯ ದೃಷ್ಟಿಯಿಂದ ಮೇಲಿನ ಪಾಡ್ದನಕ್ಕಿಂತ ಉತ್ತಮವಾಗಿದೆ. ಗದ್ದೆಗೆ ನೀರನ್ನು ಕಟ್ಟಿ ಬಂದ ಬೊಟ್ಟುಡಿ ಬಲ್ಲಾಳನು ಹಲಸಿನ ಮರದ ಕಟ್ಟೆಯಲ್ಲಿ ಎಳೆ ಬಿಸಿಲು ಕಾಯಿಸುತ್ತಿರುವ ಪರತಿಯನ್ನು ನೋಡಿ ಮೂರ್ಛೆ ಹೋಗುತ್ತಾನೆ. ಪರತಿಯೇ ಬಂದು ನೀರು ಚಿಮುಕಿಸಿ ಎಬ್ಬಿಸುತ್ತಾಳೆ. ಬೊಟ್ಟುಡಿ ಬಲ್ಲಾಳರಿಗೆ ಪರತಿಯ ಮೇಲೆ ಪ್ರೇಮವುಂಟಾಗುವ ಈ ಘಟನೆ ತೀರ ಸಹಜವಾಗಿದೆ. ಬಲ್ಲಾಳನು ತಮ್ಮ ಮನೆಗೆ ಕೋಲ ಕಟ್ಟಲು ಬರಬೇಕೆಂದು ಪರವನಿಗೆ ಹೇಳುತ್ತಾನೆ. ಇದರ ಅಂತರಾರ್ಥ ಪರತಿಗೆ ತಿಳಿದಿದೆಯೆಂದು ಪಾಡ್ದನದಲ್ಲಿ ಸೂಚನೆಯಿದೆ. ಪರತಿಯು ಮನೆಯಲ್ಲಿ ಅಡುಗೆ ಮಾಡಿ ಬಡಿಸುವಾಗ ‘ಇನ್ನು ನನಗೆ ಬಡಿಸಲು ಇಲ್ಲ’ವೆಂದು ಕೂಗುತ್ತಾಳೆ. (ನನ ಬಲಸರೆ ಇಜ್ಜಿ ಅಂದ್ ಒಂಜ ಪನ್ಪಾಲ್, ಪಂಡ್ ಪಂಡ್ ಬಲ್ಪುವೊಲಾಲ್ ಪರತಿ ಬಲ್ಬ್ವಾಲ್.) ಪರವನನ್ನು ಕೋವಿಯಿಂದ ಕೊಂದ ಬಲ್ಲಾಳನು ಕುಡಿಯುತ್ತಾ ಬೀಳುತ್ತಾ ಬರುವುದನ್ನು ಚಿತ್ರಿಸುತ್ತಾನೆ. ಆಗ ಪರತಿ ಹೇಳುವ ಮಾತು ಸರಳವಾಗಿದ್ದರೂ ಪುನರಾವರ್ತನೆಯಿಂದ ದುಃಖದ ಹೆಚ್ಚಳವನ್ನು, ಆಕಸ್ಮಿಕ ಘಟನೆಯಿಂದ ಕಂಗಾಲಾದುದನ್ನು ಸಹಜವಾಗಿ ವ್ಯಕ್ತಗೊಳಿಸುವುದು – ‘ಕೊಂದಿರಲ್ಲ ಕೊಂದಿರಲ್ಲ ಬೊಟ್ಟುಡಿ ಬಲ್ಲಾಳರೆ’ (ಕೆರಿಯರೆ ಕೆರಿಯರೆ ಬೊಟ್ಟುಡಿ ಬಲ್ಲಾಳೆ)ಎಂದು ಎರಡು ಸಲ ಮೊರೆಯಿಡುತ್ತಾಳೆ. ಮುಂದಕ್ಕೆ ‘ಮಾನಿಗ’ ಪಾಡ್ದನದಂತೆಯೇ ಮನೆಯ ಸಂಪತ್ತನ್ನೆಲ್ಲ ಪರವನ ಚಿತೆಗೆ ಹಾಕುತ್ತಾರೆ. ಆದರೆ ಪಾಡ್ದನವು ಕೊನೆಗೊಳ್ಳುವ ರೀತಿ ‘ಮಾನಿಗ’ ಪಾಡ್ದನಕ್ಕಿಂತ ಉತ್ತಮವಾಗಿದೆ. ತಾನು ಕೊಂಡುಹೋದ ಗಗ್ಗರ ಮತ್ತು ಕೋಲನ್ನು ತೆಗೆದುಕೊಂಡು ಪರವನ ಚಿತೆಗೆ ಹಾರುತ್ತಾಳೆ. ಬಳಿಕ ಸರ್ವಸ್ವವನ್ನು ಕಳೆದುಕೊಂಡ ಬಲ್ಲಾಳನೂ ಕಾಷ್ಠಕ್ಕೆ ಹಾಕುವುದು ‘ಮಾನಿಗ ಪಾಡ್ದನದಲ್ಲಿಲ್ಲ. ಕತೆಯು ಒಂದೇ ಬೆಂಕಿಯಲ್ಲಿ ಮೂರು ಹೆಣಗಳು ಸುಟ್ಟುಹೋಗುವ ದುರಂತ ಯಾರಲ್ಲಿಯೂ ಕರುಣ ರಸಾನುಭವವನ್ನುಂಟುಮಾಡಬಲ್ಲುದು.

ಈ ಪಾಡ್ದನವನ್ನು ನೇಜಿ ತೆಗೆಯುವಾಗ ಹಾಡುತ್ತಾರೆ. ಭೂತದ ಪಾಡ್ಡನಕ್ಕೂ ಈ ಪಾಡ್ದನಕ್ಕೂ ಭಾಷೆಯ ಬಳಕೆಯಲ್ಲಿ ವ್ಯತ್ಯಾಸವಿದೆ. ಇಲ್ಲಿ ಪ್ರತಿಯೊಂದು ಸಾಲುಗಳೂ ಸಮನಾಗಿ ಮುಂದುವರಿಯುತ್ತದೆ. ಪ್ರತಿಯೊಂದು ಸಾಲಿನಲ್ಲಿಯೂ ಸರಳವಾಗಿ ಒಂದೊಂದು ಕ್ರಿಯೆಯನ್ನು ತೋರ್ಪಡಿಸುತ್ತಾರೆ. ಕ್ರಿಯಾತ್ಮಕವಾದ ಶೈಲಿಯಿಂದ ಪಾಡ್ದನವು ಸತ್ವಯುತವಾಗುವುದು. ಹಾಗೆಯೇ ನಿರೂಪಣೆಯ ತಂತ್ರದಿಂದ ಇಡೀ ಪಾಡ್ದನವೇ ಆಕರ್ಷಕವಾಗಿದೆ. ಪರವನನ್ನು ಕೊಂದ ಬಳಿಕ ಪರತಿಯ ಮಾತುಗಳು, ಅವಳು ಆತ್ಮಹತ್ಯೆ ಮಾಡಿಕೊಳ್ಳುವಳೆಂಬುದನ್ನು ಸೂಚಿಸುವುದಿಲ್ಲ. ತನಗೆ ಮೋಸ ಮಾಡಿದ ಬಲ್ಲಾಳರನ್ನು ದುರಂತಕ್ಕೀಡುಮಾಡುವುದು ಅವಳ ಸಂಯಮದಿಂದ ಸಾಧ್ಯವೆಂಬುದು ತಿಳಿಯುತ್ತದೆ. ಪಾಡ್ದನದಲ್ಲಿ ಪ್ರಾರಂಭದಲ್ಲಿ ಸೂಚ್ಯವಾದ ವಿಚಾರಗಳು ಹಾಗೂ ಕತೆಯ ಹೋರಟಕ್ಕೆ ಪೋಷಕವಾಗುವ ಚಿತ್ರಗಳು – ವಿವರಣೆಗಳು, ಮಧ್ಯಭಾಗದಲ್ಲಿ ಉತ್ಕಟತೆ, ಅಂತ್ಯದಲ್ಲಿ ವಿಸ್ಮಯ ಹಾಗೂ ಪಾಡ್ದನದ ಪ್ರಮುಖ ರಸಕ್ಕೆ ಪೋಷಕವಾಗುವ ಆಕಸ್ಮಿಕ ಘಟನೆ. ಉತ್ತಮ ಕಥನತಂತ್ರದಿಂದ ಈ ಪಾಡ್ದನವು ಗಮನಾರ್ಹವಾಗಿದೆ. ‘ಮಾನಿಗ’ ಮತ್ತು ‘ಪರತಿ ಮಂಗಣೆ’ ಪಾಡ್ದನವು ತೀರ ಲೌಕಿಕ ಚಿತ್ರವನ್ನು ಒಳಗೊಂಡಿರುವ ಪಾಡ್ದನಗಳು.

ಕ್ರಿಯಾತ್ಮಕವಾದ ಶೈಲಿಯನ್ನು ಕೆಳಗಿನ ಸಾಲುಗಳಲ್ಲಿ ಕಾಣಬಹುದು.

‘ಎಣ್ಣೆ ನನ ಕೊರ್ಪೆರಾರ್ ಬೊಟ್ಟುಡಿ ಬಲ್ಲಾಳ್‌
ಎಣ್ಣೆ ಕೊರ್‌ದ್‌ಮೀಯರೆ ಪೋಪೆ ಪರವೆ ಪೋಪೆನೋ,
ಮೀದ್ ನನ ಬರ್ಪೆ ಆಯೆ ಪರವೆ ಬರ್ಪೆನೊ
ಅರ್ದಲೊ ನನ ಪಾಡುಪೆಯೆ ಪರವೆ ಪಾಡ್ವೆನೊ
ಅರ್ದಲೊ ಪಾಡ್ನಗ ಪೋಪೆರಾರ್ ಬೊಟ್ಟುಡಿ ಬಲ್ಲಾಳ್
ಜೋಡು ನಳಿಗೆದ ಬೆಡಿ ಜಿಂಜಾಯೆರ್ ಬೊಟ್ಟುಡಿ ಬಲ್ಲಾಳ್,
ಬೂತ ನನ ಲಕ್ಕ್‌ದ್‌ ಉಂತುಂಡು ಒಂಜ ಉಂತುಂಡು
ಪೂವರಿ ನನ ಕೊರ್ಯೆರಾದ್ ಬೊಟ್ಟುಡಿ ಬಲ್ಲಾಳ್
ಮೇಲುಪ್ಪರಿಗೆಗ್ ಪೋಯೆರಾರ್ ಬೊಟ್ಟುಡಿ ಬಲ್ಲಾಳ್
ಗಿಳಿಸುವೆಟ್ ಜೋಡು ನಳಿಗೆದ ಬೆಡಿ ದೀಡ್ಯೆರ್
ಬೂತ ನನ ಲಕ್‌ದ್‌ ಉಂತುಂಡು ಒಂಜ ಉಂತುಂಡು
ಜೋಡು ನಳಿಗೆದೆ ಬೆಡಿ ನನ ಒಂಜ ಪುಡಾಯೆರ್
ಪುಡಾದಾನಗಾಯೆ ನನ ಒಂಜ ಮಗುರ್ಯೆನೊ’

ಈ ಸಾಲುಗಳಲ್ಲಿ ಬರುವ ಮುಖ್ಯ ಕ್ರಿಯೆ ಇಷ್ಟು : ಎಣ್ಣೆಯನ್ನು ಬಲ್ಲಾಳರು ಕೊಡುತ್ತಾರೆ. ಎಣ್ಣೆಯನ್ನು ತೆಗೆದುಕೊಂಡು ಸ್ನಾನಕ್ಕೆ ಹೋಗುತ್ತಾನೆ. ಸ್ನಾನ ಮಾಡಿ ಬರುತ್ತಾನೆ ಪರವ. ಒಂದು ‘ಅರ್ಬಟ’ ಕೊಡುತ್ತಾನೆ. ಅರ್ಬಟ ಕೊಟ್ಟಾಗ ಬಲ್ಲಾಳರು ಹೋದರು. ಜೋಡು ನಳಿಗೆಗೆ ಮದ್ದು ತುಂಬಿಸಿದರು. ಭೂತ ಎದ್ದು ನಿಂತಿತು. ಹೂ-ಅಕ್ಕಿ ಕೋವಿಯಿಟ್ಟರು. ಭೂತ ಎದ್ದು ನಿಂತಿತು. ಆಗ ಜೋಡು ನಳಿಗೆಯ ಗುಂಡನ್ನು ಹಾರಿಸಿದರು. ಗುಂಡು ಹಾರಿದಾಗ ಪರವ ಉರುಳಿದನು. ಕಣ್ಣಿಗೆ ಕಟ್ಟುವ ರೀತಿಯ ಸರಳವಾದ ಕ್ರಿಯೆ. ಬಲ್ಲಾಳರ ಕುತಂತ್ರವನ್ನು ಚಿತ್ರಿಸುವ ರೀತಿಯೂ ಸುಂದರವಾಗಿದೆ.

ಮೇಲಿನ ಸಾಲುಗಳಲ್ಲಿಯೇ ಪಾಡ್ದನದ ಭಾಷೆಯ ಬಳಕೆಯ ವೈಶಿಷ್ಟ್ಯವನ್ನು ಗುರುತಿಸಬಹುದು. ಹಿಂದೆ ಹೇಳಿದಂತೆ ಲಾವಣಿಯ ಕೆಲವು ಲಕ್ಷಣಗಳು ಕಂಡುಬರುತ್ತವೆ. ಪಾತ್ರಗಳ ಹೆಸರೇ ಪಲ್ಲವಿಯಾಗಿ ಬರುವುದು ವಿಶಿಷ್ಟ್ಯವಾದ ಕಾವ್ಯ ಶೈಲಿಯಾಗಿದೆ. ಈ ಸಾಲುಗಳಲ್ಲಿ ಪದಪೂರಣಕ್ಕಾಗಿ ಅಥವಾ ಹಾಡುವ ದಾಟಿಗಾಗಿ ‘ಒಂಜ’ ಎಂಬ ಶಬ್ದ ಮತ್ತು ಕ್ರಿಯೆಯನ್ನು ಪುನರುಕ್ತ ಮಾಡುವುದು ಕಂಡುಬರುತ್ತದೆ. ‘ಈಶ್ವರ ಪಾರ್ವತಿ’ ಮತ್ತು ‘ಮಂಜೊಟ್ಟಿ ಗೋಣ’ ಪಾಡ್ದನಗಳಲ್ಲಿ ಇದೇ ಲಕ್ಷಣಗಳು ಕಂಡುಬರುತ್ತವೆ. ಕೆಲವು ಸಾಲುಗಳೇ ಪುನರುಕ್ತವಾಗುತ್ತವೆ ಪಾಡ್ದನದ ಕೊನೆಯಲ್ಲಿ.

‘ಸಂಕೋಲೆ ಪತ್‌ದ್‌ ಚಾವಡಿ ಬಡತ್ ಪರತಿ ಕೇಂಡೆನೊ
ಸಂಕೋಲೆ ಪತ್‌ದ್‌ ಚಾವಡಿ ಬಡತ್ತೊಡಾಂಡ ಕೇಂಡರೊ
ಪುಗೆ ತೂ ಅರಲ್ದ್ ಪೊತ್ತೊಡ್ಯೆ ಬೊಟ್ಟುಡಿ ಬಲ್ಲಾಳೆ
ಅಯ್ಕ್ ದಾನೆ ಆವೊಡುಯಾ ಪರತಿ ಕೇಂಡನೊ
ಈರೆನೊಟ್ಟುಗು ಬಾರ್‌ತಕಡಿಗೆ ಒಂಜಿ ಉಂಡುಯೇ
ಅಯ್ನ್ ನನ ಕಾಟೊಗು ಪಾಡ್ಯೆರ್ ಬೊಟ್ಟುಡಿ ಬಲ್ಲಾಳ್’

ಪ್ರತಿಯೊಂದು ವಸ್ತುವನ್ನು ಹಾಕುವಾಗಲೂ ಈ ಏಳು ಸಾಲುಗಳು ಇದೇ ಶೈಲಿಯಲ್ಲಿ ಮುಂದುವರಿಯುತ್ತವೆ. ಸುಮಾರು ಏಳೆಂಟು ವಸ್ತುಗಳನ್ನು (ಮನೆಯ ಸಂಪತ್ತು) ಕಾಷ್ಠಕ್ಕೆ ಹಾಕುವಾಗ, ಏಳೆಂಟು ಸಲವೂ ಈ ಸಾಲುಗಳು (ಸಂಭಾಷಣೆ ಮತ್ತು ಕ್ರಿಯೆಯನ್ನು ಒಳಗೊಂಡವು) ಪುನರುಕ್ತವಾಗಿವೆ. ಜನಪದ ಲಾವಣಿಗಳ ಸಾಮನ್ಯ ಲಕ್ಷಣವಿದೆಂದು ಹೇಳಬಹುದು.

ಸ್ತ್ರೀ ಜೀವನಕ್ಕೆ ಸಂಬಂಧಿಸಿದ ಇನ್ನೊಂದು ಪಾಡ್ದನ ‘ಪುತ್ತಕ್ಕ’ ಈ ಪಾಡ್ದನವು ಒಂದು ಸಂಪ್ರದಾಯದ ಹಿನ್ನಲೆಯಿರುವಂತಹದು. ಹಾಗೆಯೇ ಅ ಸಂದರ್ಭದಲ್ಲಿ ಹೇಳುವ ಪಾಡ್ದನವಾಗಿದೆ. ‘ಬಾಲೆ ತಂಗಡಿ’ ಮತ್ತು ‘ಕನ್ಯಾವು’ ಎನ್ನುವ ಪಾಡ್ದನಗಳೂ ‘ಪುತ್ತಕ್ಕ’ ಪಾಡ್ದನವನ್ನೇ ಹೋಲುತ್ತದೆ. ಕನ್ಯ ತಿಂಗಳಿನಲ್ಲಿ ‘ಕನ್ಯಾವು’ ಹೋಗುವುದೆಂದು ವೇಷ ಹಾಕಿಕೊಂಡು ಮನೆ ಮನೆಗೆ ಹೋಗುತ್ತಾರೆ. ಆಗ ಹಾಡುತ್ತಾ ಕುಣಿಯುವುದು ಸಂಪ್ರದಾಯ. ಒಬ್ಬಳು (ಪುತ್ತಕ್ಕ?) ಗಟ್ಟದ ಮೇಲಿಂದ ಇಳಿದು, ಸುಂದರವಾಗಿ ಅಲಂಕಾರ ಮಾಡಿಕೊಂಡು ತುಳುನಾಡಿಗೆ ಬರುವುದನ್ನು ‘ಕನ್ಯಾವು’ ಪಾಡ್ದನವು ವರ್ಣಿಸುತ್ತದೆ. ‘ಪತ್ತಕ್ಕ’ನೇ ಆ ಹೆಂಗಸಾಗಿರುವುದರಿಂದ ‘ಪುತ್ತಕ್ಕ’ ಪಾಡ್ದನವು ಸಂಕ್ಷಿಪ್ತವಾದ ಕಥೆಯನ್ನೊಳಗೊಂಡಿರುವುದರಿಂದ ಅದನ್ನುಈ ಸಾಲಿಗೇ ಸೇರಿಸಬಹುದು. ಆದುದರಿಂದ ಈ ಮೂರು ಪಾಡ್ದನಗಳೂ ಒಂದೇ ಸಂಪ್ರದಾಯದ ಹಿನ್ನಲೆಯಿಂದ ರಚಿತವಾದವು ಎನ್ನಬಹುದು. ‘ಕನ್ಯಾವು’ ಎನ್ನುವ ಪಾಡ್ದನವು ಪುತ್ತಕ್ಕ ಗಟ್ಟ ಇಳಿದು ಬರುವ ವರ್ಣನೆಯನ್ನೇ ನಿರೂಪಿಸಿರಬೇಕು. ಒಬ್ಬಳು ಸ್ತ್ರೀಯ ಆಭರಣ, ಶೃಂಗಾರ, ಸೌಂದರ್ಯವನ್ನು ವಿವರಿಸುತ್ತದೆ. ಬಿದಿರಿನ ತೊಟ್ಟಿಲಲ್ಲಿ ಕುಳಿತುಕೊಂಡು ತುಳು ರಾಜ್ಯಕ್ಕೆ ಬರುತ್ತಾಳೆ. ಅವಳೇ ‘ಪುತ್ತಕ್ಕ’ ಎಂದು ಒಬ್ಬಳು ಪರತಿ ಹೇಳಿರುವುದೇ ನನ್ನೀ ಅಭಿಪ್ರಾಯಕ್ಕೆ ಆಧಾರ.

‘ಪುತ್ತಕ್ಕ’ ಪಾಡ್ಡನವು ಸುದೀರ್ಘವಾದುದು. ಅತಿಮಾನುಷ ಮತ್ತು ಅದ್ಭುತ ಘಟನೆಗಳಿಂದ ಮನಮೋಹಕವಾಗಿರುವುದು. ಏಳು ಮಂದಿ ಅಣ್ಣಂದಿರು ಪ್ರೀತಿಯ ಒಬ್ಬಳೇ ತಂಗಿಯನ್ನು ಏಳು ಮಾಳಿಗೆಯಲ್ಲಿ ಕುಳ್ಳಿರಿಸಿ, ಅವಳ ಕೂದಲಿಗೆ ಮುತ್ತು ಪೋಣಿಸಿ ಚಂದ ನೋಡಬೇಕೆಂದು ಏಳು ಕಡಲಿನಾಚೆಗೆ ಹೋಗುತ್ತಾರೆ. ಆದರೆ ಏಳು ಮಂದಿ ಅತ್ತಿಗೆಯಂದಿರು ಮತ್ಸರದಿಂದ ನಾದಿನಿಗೆ ಕಷ್ಟ ಕೊಡುತ್ತಾರೆ. ಅತ್ತಿಗೆಯಂದಿರು ಕೊಟ್ಟ ಅಸಾಧ್ಯ ಕೆಲಸಗಳನ್ನು ಸತ್ಯದ ಹೆಣ್ಣು ಪುತ್ತಕ್ಕ ಅಸಂಭಾವ್ಯ ಕ್ರಿಯೆಗಳಿಂದ ಪೂರೈಸುತ್ತಾಳೆ. ಕತ್ತಿ ಹಗ್ಗ ಇಲ್ಲದೆ ಸೊಪ್ಪು ತರಬೇಕೆಂದಾಗ ಸಂಕಪಾಲ (ಸರ್ಪ)ನನ್ನು ಹಗ್ಗವಾಗಿ ಕಟ್ಟಿ ಕೈಯಲ್ಲಿ ತುಂಡು ಮಾಡಿದ ಸೊಪ್ಪನ್ನು ತರುತ್ತಾಳೆ. ಒನಕೆ, ಮೊರ ಇಲ್ಲದೆ ಬತ್ತ ಕುಟ್ಟಿ ಅಕ್ಕಿ ಮಾಡಿ ತರಬೇಕೆಂದಾಗ, ಸಾವಿರ ಗುಬ್ಬಿ ಹಕ್ಕಿಗಳಿಂದ ಅಕ್ಕಿ ಮಾಡಿಸಿ ತರುತ್ತಾಳೆ. ಒಂದು ಕೊಡಪಾನಕ್ಕೆ ಸಾವಿರ ತೂತು ಮಾಡಿ ಹಗ್ಗ ಇಲ್ಲದೆ ನೀರು ತರಬೇಕೆಂದಾಗ, ಬೆಟ್ಟ ಬೀಳಲು ತಾನಾಗಿಯೇ ಬಂದು ಉರುಳಾಗಿ ಬೀಳುತ್ತದೆ. ಕೊಡಪಾನದ ತೂತಿನಲ್ಲಿ ಕಪ್ಪೆಗಳು ಕುಳಿತುಕೊಳ್ಳುವುದರಿಂದ ನೀರು ತರುತ್ತಾಳೆ. ತೆಂಗಿನ ಸಿಪ್ಪೆಯಿಲ್ಲದೆ ಬೆಂಕಿ ತರಬೇಕೆಂದಾಗ, ನೆರೆಮನೆಯ ಕಪ್ಪುಬೆಕ್ಕಿನ ಬಾಲದಿಂದ ಬೆಂಕಿ ತರುತ್ತಾಳೆ. ಈ ಕ್ರಿಯೆಗಳೆಲ್ಲ ಅಸಂಭಾವ್ಯ ಸಾಧ್ಯವೆಂದು ಕಂಡರೂ ಜನಪದ ಕವಿಯ ನಂಬಿಕೆ ಅದರಲ್ಲಿ ಅಲ್ಲ. ಸತ್ಯದ ಹೆಣ್ಣು ಪುತ್ತಕ್ಕ ಎನ್ನುವುದನ್ನು ಚಿತ್ರಿಸುವುದರಲ್ಲಿ.

ಚಮತ್ಕಾರದಿಂದ ಕತೆಯು ಮುಂದುವರಿಯುತ್ತದೆ. ‘ಮಾದೆರಿ ಮಲೆ’ಗೆ ಹೂ ತರಲು ಹೋದಾಗ ಸಂಪಗೆ ಮರದಲ್ಲೇ ಪುತ್ತಕ್ಕನನ್ನು ಬಿಟ್ಟು ಬರುತ್ತಾರೆ. ಇವಳು ಸುರಿಸಿದ ಕಣ್ಣೀರಿನ ರುಚಿಯಿಂದ ಎರಡು ಹುಲಿಗಳು ಪುತ್ತಕ್ಕನನ್ನು ಎಳೆದು ಹಾಕಿ ತಿನ್ನುತ್ತವೆ. ಆದರೆ ಪುತ್ತಕ್ಕನ ಹೇಳಿಕೆಯಂತೆ ಸಣ್ಣ ಬೆರಳನ್ನು ಬಿಟ್ಟು ಹೋಗುತ್ತವೆ. ಆ ಬೆರಳನ್ನು ನಾಲ್ಕು ಮನೆ ಬೇಡುವ ಬಾಡಜ್ಜಿ ಅರಸಿನದ ಕೋಡು ಎಂದು ಬಗೆದು ತನ್ನ ಬೇಡುವ ಚೀಲದಲ್ಲಿ ಹಾಕಿಕೊಂಡು ಹೋಗುತ್ತಾಳೆ. ಈ ಘಟನೆಗಳೆಲ್ಲ ಅನಾಯಾಸವಾಗಿ ಕತೆಯೊಡನೆ ಸೇರಿಕೊಂಡು ಬೆಳೆಯುತ್ತವೆ. ಕಾರ್ಯ ಕಾರಣಗಳು ಅಡೆತಡೆಯಿಲ್ಲ ನಿರೂಪಿತವಾಗುತ್ತವೆ. ಅಸಂಭವ ಅಥವಾ ಅಮಾನುಷ ಎನ್ನುವುದನ್ನು ಗಮನಿಸದೆ ಅಭಿರುಚಿಗೆ ತಕ್ಕಂತೆ ಕತೆಯು ಬೆಳೆಯುತ್ತದೆ.

ಮರುದಿನ ಬಾಡಜ್ಜಿ ಬೇಡಲು ಹೋದಾಗ, ಸಣ್ಣ ಬೆರಳಿನಿಂದ ಪುತ್ತಕ್ಕ ಉದಯವಾಗುತ್ತಾಳೆ. ಮನೆಯಲ್ಲಿ ಅಡುಗೆ ಕೆಲಸ ಮಾಡಿಟ್ಟು ಪುನಃ ಸಣ್ಣ ಬೆರಳಿನಲ್ಲಿ ಸೇರಿಕೊಳ್ಳುತ್ತಾಳೆ. ಅಮಾನುಷ ಚಿತ್ರಣವು ಈ ರೀತಿ ಬರುತ್ತದೆ. ಆಶ್ಚರ್ಯಗೊಂಡ ಬಾಡಜ್ಜಿ, ಪರೀಕ್ಷೆ ಮಾಡಿ ಮರುದಿವಸ ಪುತ್ತಕ್ಕನನ್ನು ಹಿಡಿಯುತ್ತಾಳೆ. ಆ ದಿವಸ ಬೇಡಲು ಕರೆದುಕೊಂಡು ಹೋಗುತ್ತಾಳೆ. ಇತ್ತ ಏಳು ಮಂದಿ ಅಣ್ಣಂದಿರು ತಂಗಿಯಿಲ್ಲವೆಂಬ ದುಃಖದಿಂದಿರುವುದನ್ನು ಪುತ್ತಕ್ಕ ನೋಡುತ್ತಾಳೆ. ಅವರ ಮನೆಗೇ ಬೇಡಲು ಹೋದಾಗ ಅಣ್ಣಂದಿರಿಗೆ ತಂಗಿಯ ಪರಿಚಯವಾಗುತ್ತದೆ. ತಂಗಿಯಿಂದ ಕತೆಯನ್ನೆಲ್ಲ ಕೇಳಿ, ಏಳು ಮಂದಿ ಹೆಂಡತಿಯರನ್ನು ಏಳು ಬಾಗಿಲಿಗೆ ಕತ್ತರಿಸಿ ಹಾಕಿ ತಂಗಿಯ ತಲೆಕೂದಲಿಗೆ ಮುತ್ತು ಪೋಣಿಸಿ ಚಂದ ನೋಡುತ್ತಾರೆ. ಕೊನೆಗೆ ತುಳುನಾಡಿನ ಶ್ರೇಷ್ಠ ವ್ಯಕ್ತಿಗಳ ಸದಾಚಾರವೊಂದು ವ್ಯಕ್ತವಾಗುತ್ತದೆ. ತಂಗಿಯನ್ನು ಕರೆದುಕೊಂಡು ಬಂದ ಬಾಡಜ್ಜಿಗೆ ಉತ್ತಾರಭೂಮಿಯನ್ನು ಬಿಟ್ಟುಕೊಡುತ್ತಾರೆ.

ಈ ಪಾಡ್ದನದಲ್ಲಿ ಏಳು ಕಡಲಿನಾಚೆ ಮುತ್ತನ್ನು ಹೇಗೆ ತಂದರು ಎಂಬ ವಿವರಣೆಯಿಲ್ಲ. ಆದರೆ ಪುತ್ತಕ್ಕನ ಅಮಾನುಷ ಕ್ರಿಯೆಗಳು ಜನಪದ ಕವಿಗೆ ಪ್ರಿಯವಾದುವು. ಅವಳು ಹರಕೆ ಹೇಳಿ ಹುಟ್ಟಿದವಳು, ಸತ್ಯದ ಹೆಣ್ಣು ಎಂಬುದು ನಂಬಿಕೆಯ ದೃಷ್ಟಿಯಿಂದ ಗಮನಾರ್ಹವಾದುವು. ‘ಪುತ್ತಕ್ಕ’ ಪಾಡ್ದನವು ಎರಡು ಅಂಶಗಳಲ್ಲಿ ವಿಶಿಷ್ಡವಾದುದು. ಒಂದು ಆಚರಣೆಯ ಹಿನ್ನಲೆಯಿಂದ ರೂಪಿತವಾದುದು. ಭೂತಗಳ ಪಾಡ್ದನಕ್ಕಿಂತ ಪ್ರತ್ಯೇಕವಾದರೂ ಅನುಮಾಷ ಕ್ರಿಯೆಗಳಿವೆ. ಎರಡು, ಕತೆಯೂ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ.

‘ಬಾಲೆ ತಂಗಡಿ’ ಪಾಡ್ದನವು ಏಳೆಂಟು ವಾಕ್ಯಗಳಲ್ಲಿದೆ. ಅತ್ತಿಗೆಯಂದಿರು ಕಷ್ಟ ಕೊಡುವ ವಿವರಣೆಯಿಲ್ಲ. ಹೂ ಕೊಯ್ಯಲು ಹೋದಾಗ ಹುಲಿಗಳ ಬಾಯಿಗೆ ಬಿದ್ದಾಗ ತಂಗಡಿ ಮಾಯವಾಗುವಳು ಎಂದಿದೆ. ‘ಪುತ್ತಕ್ಕ’ ಪಾಡ್ದನವು ಸಮಗ್ರವಾದುದು ಎಂದು ‘ಬಾಲೆ ತಂಗಡಿ’ ಪಾಡ್ದನವನ್ನು ಹೋಲಿಸಿ ಹೇಳಬಹುದು.

‘ಪುತ್ತಕ್ಕ’ ಪಾಡ್ದನ ಭಾಷೆಯು ತುಳು ಭಾಷೆಯ ಪ್ರಾದೇಶಿಕ ಭೇದವನ್ನು ವ್ಯಕ್ತಗೊಳಿಸುವುದು. ತಕಾರಾದಿಯಾದ ಶಬ್ದವೇ ಪ್ರಯೋಗವಾಗಿಲ್ಲ. ಪ್ರತಿಯೊಂದು ಶಬ್ದದ ಆದಿಯು ‘ತ’ಕಾರವು ‘ಹ’ಕಾರ ಅಥವಾ ‘ಚ’ಕಾರವನ್ನು ಪಡೆದಿದೆ. ಹಡ್ಪೆ (ತಡ್ಪೆ), ಹಪ್ಪು (ತಪ್ಪು), ಹರ್ಕೆಲ್ (ತರ್ಕೆಲ್), ಹುಂಬಾವೊಂದು (ತುಂಬಾವೊಂದು), ಚೂ (ತೂ), ಹೆಪ್ಪು (ತೆಪ್ಪು) ಇತ್ಯಾದಿ.

ತುಳುನಾಡಿನಲ್ಲಿ ಆಚರಣೆಯಲ್ಲಿರುವ ‘ಆಟಿಕಳಂಜ’ ಎಂಬ ಮನೆಗೆ ಮನೆಗೆ ಸುತ್ತುವ ಸಂಪ್ರದಾಯದ ಹಿಂದೆ ದೊಡ್ಡ ಕತೆಯೇ ಇರಬಹುದು. ‘ಕಳಂಜ’ ಎನ್ನುವವನು ಮಾಯದಲ್ಲಿ ಬೆಳೆದವನು, ಎಪ್ಪತ್ತು ತಿಂಗಳುಗಳಲ್ಲಿಯೇ ಮೀಸೆ, ಕೇಸರಿಗಡ್ಡ ಇದ್ದವನು. ಅಮೃತ ಸೋಮೇಶ್ವರರು ಸಂಗ್ರಹಿಸಿದ ‘ಆಟಿ ಕಳಂಜ’ ಪಾಡ್ದನವು ಸಂಕ್ಷಿಪ್ತ ರೂಪವಿರಬೇಕು. (‘ಬಾಲೆ ತಂಗಡಿ ಪಾಡ್ದನದಂತೆ’) ಆಟಿ (ಕರ್ಕಾಟಕ) ತಿಂಗಳಲ್ಲಿ ಎಂಟು ಹತ್ತು ವರ್ಷದ ಹುಡುಗನಿಗೆ ವೇಷ ಹಾಕುತ್ತಾರೆ. ಒಂದು ಒಲಿಯ ಕೊಡೆಯನ್ನು ತಿರುಗಿಸುತ್ತಾ ಕುಣಿಯುವುದನ್ನು ಪಂಬದ ಅಥವಾ ಪರವ (ನಲ್ಕೆ?) ಹೆಂಗಸರು ತೆಂಬರೆ ಬಡಿದು ಹಾಡು ಹೇಳುವುದನ್ನು ಪ್ರತಿವರ್ಷವೂ ಕಾಣುತ್ತೇವೆ. ಆದರೆ ಈ ಆಚರಣೆಯು ಬಡಗು ದಿಕ್ಕಿನಲ್ಲಿ ಕಂಡುಬರುವುದಿಲ್ಲ.

ತುಳುನಾಡಿನ ಬಡಗು ದಿಕ್ಕಿನಲ್ಲಿ ಇದೇ ರೀತಿಯಲ್ಲಿರುವ ಆಚರಣೆ – ‘ಮಾದಿರ’. ಕೆಲವು ನೀತಿಯ ಮಾತುಗಳನ್ನು ಅಥವಾ ಗಾದೆಗಳನ್ನು ಕೊನೆಗೆ ‘ಮಾದಿರ’ ಎನ್ನುವ ಪಲ್ಲವಿಯೊಡನೆ ಹಾಡುತ್ತಾರೆ. ಸರಸ ವಿಷಯಗಳನ್ನೊಳಗೊಂಡಿರುವುದೂ ಇದೆ. (‘ಕನ್ಯಾವು’, ‘ಆಟಿಕಳಂಜ’ ಮತ್ತು ‘ಮಾದಿರ’ ಈ ಆಚರಣೆಗಳ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಣೆ ಅಗತ್ಯ. ಅವುಗಳ ಪ್ರತ್ಯೇಕ ಅಭ್ಯಾಸ ಅಗತ್ಯವಾದುದು.)

ಸ್ತ್ರೀ ಜೀವನದ ವಿವಿಧ ಚಿತ್ರಗಳನ್ನು ಮೇಲಿನ ಪಾಡ್ದನಗಳಲ್ಲಿ ಕಾಣಬಹುದು. ಸಮಗ್ರವಾಗಿ ಎಂದು ಹೇಳುವಂತಿಲ್ಲ. ಯಾವುದೋ ಸತ್ಯದಿಂದ ಸ್ತ್ರೀಯರ ಸ್ಥಾನವು ಸಮಾಜದಲ್ಲಿ ವ್ಯತ್ಯಾಸ ಹೊಂದುವುದು. ಅವರಲ್ಲಿ ಅನಾಚಾರವು ಸುಳಿಯುವುದನ್ನು ಗಂಡಸರು ಕಾಣಲಾರರು. ಅಂತಹ ಸ್ತ್ರೀಯರಿಗೆ ಶಿಕ್ಷೆಯೂ ಕ್ರೂರವಾಗಿರುತ್ತದೆ. ಸಂಪ್ರದಾಯಬದ್ಧವಾಗಿ ಸ್ತ್ರೀಯರು ಜೀವಿಸುತ್ತಿದ್ದರು. ಇನ್ನು ಕೆಲವು ಪಾಡ್ದನಗಳಲ್ಲಿಯೂ ತುಳುನಾಡಿನ ಸ್ತ್ರೀಯ ಚಿತ್ರಣವು ಇದೆ. ಆಯಾ ಸಂದರ್ಭಗಳಲ್ಲಿ ಪರಿಶೀಲಿಸಲಾಗಿದೆ.

***

ಸಾಮಾನ್ಯ ಕತೆಯನ್ನು ನಿರೂಪಿಸುವ ಪಾಡ್ಡನಗಳತ್ತ ಗಮನಹರಿಸುವ. ಇಲ್ಲಿ ಪ್ರಮುಖವಾಗಿ ‘ಮತ್ತಾಡಿ ಬಳ್ಳು’ ಮತ್ತು ‘ಅಮಸರಂದ ಮೆನ್ನೋಡಿ’ ಎಂಬ ಪಾಡ್ದನಗಳು ವಿಚಾರಯೋಗ್ಯವಾಗಿವೆ. ಇವು ಭೂತಕ್ಕೆ ಸಂಬಂಧಿಸದ ಪಾಡ್ದನಗಳ ಸಾಲಿನಲ್ಲಿ ಸೇರುತ್ತವೆ. ‘ಮತ್ತಾಡಿ ಬಳ್ಳು’ ಪಾಡ್ಡನವು ‘ಮಾನಿಗ’ ಪಾಡ್ದನದಂತೆ ತೀರ ಲೌಕಿಕವಾಗಿದ್ದರೆ, ‘ಅಮಸರಂದ ಮೆನ್ನೋಡಿ’ ಪಾಡ್ದನವು ಅಮಾನುಷ ಹಾಗೂ ಅದ್ಭುತ ಚಿತ್ರಗಳಿಂದ – ವಿವರಣೆಗಳಿಂದ ಹೆಣೆದುದಾಗಿದೆ.

‘ಮಾನಿಗ’ ಅಥವಾ ‘ಪರತಿ ಮಂಗಣೆ’ ಪಾಡ್ದನವು ಒಬ್ಬಳು ಸ್ತ್ರೀಯ ಹಾಗೂ ಕಾಮುಕನ ದುರಂತ ಕತೆಯನ್ನು ವಿವರಿಸಿದರೆ ‘ಮತ್ತಾಡಿ ಬಳ್ಳು’ ಪಾಡ್ಡನವು ಕಾಮುಕನೊಬ್ಬನ ದುರಂತವನ್ನು ಚಿತ್ರಿಸುತ್ತದೆ. ಹೆಣ್ಣಿಗೆ ಮರುಳಾದ ಗಂಡಸರನ್ನು ಹೆಂಗಸರು ಉಪಾಯದಿಂದ ಹೇಗೆ ದುರಂತಕ್ಕೀಡುಮಾಡುತ್ತಾರೆ ಎಂಬುದರ ವಿವರಣೆಯಿದೆ.

‘ಮತ್ತಾಡಿ ಬಳ್ಳು’ವಿನ ಕಾಮುಕ ಮನಸ್ಸನ್ನು ಸುಂದರವಾಗಿ ವರ್ಣಿಸಿದ್ದಾನೆ ಜನಪದ ಕವಿ. ಮೀನಿಗೆ ಗಾಳ ಹಾಕುವ ಬಳ್ಳು, ನೀರು ಕೊಂಡು ಹೋಗಲು ಬಂದ ‘ಕಳಲೆದಿ’ಗೆ ಗಾಳ ಹಾಕಲು ನೋಡುತ್ತಾನೆ. ‘ಕಳಲೆದಿ’ಯು ನೀರಿಗಿಳಿಯುವಾಗ ಸೀರೆಯನ್ನು ಎತ್ತಿಕೊಳ್ಳುತ್ತಾಳೆ. ಆಗ ‘ಓರೆ ಕಣ್ಣಿನಲ್ಲಿ ನೋಡಿದ ಮತ್ತಾಡಿ ಬಳ್ಳು, ಮುಗುಳು ನಕ್ಕ, ಹುಚ್ಚು ಕುಣಿತ ಕುಣಿದ’ (ಓರೆ ಕಣ್ಣ್‌ಡ್ ತೂಯೆ ಮತ್ತಾಡಿ ಬಳ್ಳು, ಮುಗುಳು ತೆಲ್ತೊಂಡೆ. ಮರ್ಳ್ ನಲಿಕೆ ನಲಿತೊಂಡೆ) ಧೈರ್ಯದ ಹೆಂಗಸು ‘ಕಳೆಲೆದಿ’ ಕಾರಣ ಕೇಳುತ್ತಾಳೆ. ಕಾಮುಕ ಬಳ್ಳು ಈ ಏಕಾಂತದಲ್ಲಿ ಯಾವುದನ್ನು ಹೇಳಲು ಹಿಂಜರಿಯುವುದಿಲ್ಲ – ಈ ತೊಡೆಯನ್ನು ನೋಡಿದಾಗ ಮನಸ್ಸು ಮರುಳಾಗುತ್ತದೆ. ಮೋರೆ ನೋಡಿದಾಗ ಮೆಯ್ ಮರುಳಾಗುತ್ತದೆ. ಅಚಲ ಆಗುವುದು ನನಗೆ ಚಂಚಲ ಆಗುವುದು. ನಿಮ್ಮ ‘ಕಳಲೆ’ (ಗಂಡ)ಯರು ಎಲ್ಲಿ ಹೋಗಿದ್ದಾರೆ? [ಈರ್‌ಲ ಕೇನಿದರ ಈ ತುಡೆನ್ ತೂನಗ ಮನ ಮರ್ಲುಂಡುಯೆ, ಮೋನೆ ತೂನಗ ಮೆಯ್‌ರ್‌ ಮರ್ಳುಂಡುಯೆ. ಅಚೆಲ ಆಪುಂಡು ಎಂಕ್ ಚಂಚಲ ಆಪುಂಡು. ಈರೆನ ಕಳಲೆರ್ ಓಡೆಗ್ ಪೋತೆರ್?) ಜನಪದ ಕವಿಯ ರಸಿಕರನವು ಇಲ್ಲಿ ವ್ಯಕ್ತವಾಗುವುದು. ಬಳ್ಳುವಿನ ಅಲ್ಪ ಮನಸ್ಸಿಗೆ ಕಳಲೆದಿ ಸರಿಯಾಗಿಯೇ ಬುದ್ಧಿ ಕಲಿಸುತ್ತಾಳೆ. ಬಳ್ಳುವನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ. ಮನೆಯ ಅಟ್ಟದಲ್ಲಿ ಗಂಡ ಬಿಲ್ಲು ಬಾಣ ಹಿಡಿದು ತಯಾರಾಗಿದ್ದ – ಬಳ್ಳುವಿನ ಸೊಕ್ಕನ್ನು ಇಳಿಸಬೇಕೆಂದು. (ಬಳ್ಳುವು ಹಲವು ದಿವಸಗಳಿಂದಲೇ ಕಳಲೆದಿಯ ಮೇಲೆ ಕಣ್ಣು ಹಾಕುತ್ತಿರಬೇಕು. ಕಳಲೆದಿಯು ಮೊದಲೇ ಗಂಡನಿಗೆ ತಿಳಿಸಿರಬೇಕು. ಈ ವಿಚಾರವು ಕತೆಯಲ್ಲಿ ಬರದಿದ್ದರೂ ಸೂಚ್ಯವಾಗಿದೆ. ಗ್ರಹಿಸಬೇಕಾದುದು). ಮತ್ತಾಡಿ ಬಳ್ಳು ಮನೆಯಲ್ಲಿ ಐತ ಮುಗೇರ (ಕಳಲೆದಿಯ ಗಂಡ) ಇಲ್ಲವೆಂದು ತಿಳಿದು ಸಂತೋಷದಿಂದ ಚಾಪೆಯಲ್ಲಿ ಹೊರಳಾಡುತ್ತಾನೆ. ‘ಆಗ ರಪಕ್ಕೆಂದು ಇಟ್ಟನಲ್ಲ, ಬಿಲ್ಲುಬಾಣ ಬಿಟ್ಟನಲ್ಲ, ಐತ ಮುಗೇರ’ (ಆತ್ ಪೋರ್ತುಗು ರಪಕ ದೀಯೆನೆ, ಬಿರುಪಗರಿ ಬುಡಿಯೆನೆ ಐತಮುಗೇರೆ). ಇಲ್ಲಿ ‘ದೀಯೆನೆ’ = ಇಟ್ಟನಲ್ಲ ಎಂಬ ಶಬ್ದಪ್ರಯೋಗ ತುಳುಭಾಷೆಯ ಬಳಕೆಯ ದೃಷ್ಟಿಯಿಂದ ಸತ್ವಪೂರ್ಣವಾಗಿದೆ. ಅಲ್ಲದೆ ‘ಇಟ್ಟನಲ್ಲ’ (ದೀಯೆನೆ), ‘ಬಿಟ್ಟನಲ್ಲ’ (ಬುಡಿಯೆನೆ) ಎಂಬಲ್ಲಿ ಹೇಳುವ ಶೈಲಿಯು ವ್ಯಂಗ್ಯವಾಗಿದೆ. ಬಳ್ಳುವಿನ ಕರುಳು ಹೊರಬಂದು ಹೋಗುವಾಗ ಹಾಸ್ಯಗೈಯುತ್ತಾನೆ ಐತ ಮುಗೇರ, ಮನೆಗೆ ಹೋಗಿ ಕರುಳು ಬಿದ್ದು ಸತ್ತುಹೋಗುತ್ತಾನೆ. ಇಲ್ಲಿಯ ಘಟನೆಯು ವ್ಯಂಗ್ಯದಿಂದ ದುರಂತದ ಕಡೆ ತಿರುಗುತ್ತದೆ. ಕುತೂಹಲವನ್ನು ಕೆರಳಿಸಿ, ಕೊನೆಯಲ್ಲಿ ವಿಸ್ಮಯವನ್ನುಂಟುಮಾಡುತ್ತದೆ. ಕ್ಷಣ ಕಾಲ ನಡೆದ ಘಟನೆಯಾದರೂ ಅದನ್ನು ನಿರೂಪಿಸುವ ತಂತ್ರವು ಪಾಡ್ದನದ ಕಥನ ಕೌಶಲವನ್ನು ತೋರ್ಪಡಿಸುತ್ತದೆ.

‘ಅಮಸರಂದ ಮೆನ್ನೋಡಿ’ ಪಾಡ್ದನವು ಕತೆಯ ವಸ್ತುವಿನ ದೃಷ್ಟಿಯಿಂದ ವಿಶಿಷ್ಟವಾಗಿದೆ. ದನ ಮತ್ತು ಕರುವಿನ ಕತೆಯಿಂದ ಪ್ರಾರಂಭವಾಗಿ, ಅವುಗಳೇ ಮನುಷ್ಯರಾಗಿ ಮಹತ್ಕಾರ್ಯವನ್ನು ಸಾಧಿಸುವ ಘಟನೆಯಿಂದ ಕೊನೆಗೊಳ್ಳುತ್ತದೆ. ನಿರರ್ಗಳವಾಗಿ ಮುಂದುವರಿಯುವ ಸುದೀರ್ಘವಾದ ಪಾಡ್ದನ. ಘಟನೆಗಳ ಹಿಂದೆ ಘಟನೆಗಳನ್ನು ಪೋಣಿಸುತ್ತಾ ಕತೆಯು ಕುತೂಹಲಕಾರಿಯಾಗಿ ಬೆಳೆಯುತ್ತದೆ. ಅಮಾನುಷ, ಅದ್ಭುತ, ಕರುಣಾಪೂರಿತ ಘಟನೆಗಳು ಉಚಿತವಾಗಿ ಬಂದಿವೆ. ಪ್ರಾಣಿಗಳ ಪಾತ್ರವೂ ಬಂದಿರುವುದರಿಂದ ಭೂತಕ್ಕೆ ಸಂಬಂದಿಸಿದ ಪಾಡ್ದನಗಳಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವಿದೆ.

‘ಅಮಸರಂದ ಮೆನ್ನೊಡಿ’ಯ ಮನೆಯಲ್ಲಿರುವ ದನ ನಂದೆದಿ, ತಾಯಿ ಮರ್ದೆದಿ ಒಂದು ದಿವಸ ಹಾಲು ಕರೆದಾಗ ದನವು ತುಳಿದು ಹಾಲನ್ನು ಹಾಳು ಮಾಡಿತು. ಕೋಪದಿಂದ ಮರ್ದೆದಿಯು ದನಕ್ಕೆ ಬಡಿಯುತ್ತಾಳೆ. ಆಗ ‘ಮೆನ್ನೋಡಿ’ಗೆ ಬಡಿಸುವಾಗ ಹಾಲಿರಲಿಲ್ಲ. ಮೆನ್ನೋಡಿ ಕೇಳಿದಾಗ (ಮಾತ ಬಗೆ ಬತ್ತ್ಂಡಪ್ಪ, ಎನ್ನ ಒಣಸ್‌ದ ಒಂಜಿ ಬಗೆ ಬಯಿಜಿ. ಪುಲಿಪುಗೆ ಅಲೆ ಬೆಪ್ಪುಗು ಪೇರ್‌ಕೊರ್ತುಜರ್‌) ತಾಯಿ ನಡೆದ ಘಟನೆಯನ್ನು ವಿವರಿಸುತ್ತಾಳೆ. ತನ್ನ ಊಟವನ್ನು ಕೊಂಡು ಹೋಗಿ ಹಟ್ಟಿಯಲ್ಲಿ ನಂದೆದಿಗೆ ಹಾಕಿ ಮೈಪೂಸುತ್ತಾನೆ. ಸಮಾಧಾನ ಮಾಡುತ್ತಾನೆ-ತಿನ್ನು ನಂದೆದಿ, ಕೋಪದಲ್ಲಿ ಚಿಂತೆಯಲ್ಲಿ ಇರಬೇಡ ನಂದೆದಿ’ (ತಿನ್‌ಲ ನಂದೈದೆ, ಕೋಪೊಡು ಕೊರೆದೊಡು ಕುಲ್ಲಡ ನಂದೈದಿ) ದನಗಳನ್ನು ಮಾನವರಂತೆಯೇ ಕಾಣುವ ಗುಣವು ಸಾಮಾನ್ಯವಾದುದು, ಸಹಜವಾದುದು. ನಂದೆದಿ ಸಾಮಾನ್ಯ ದನವಲ್ಲ ಎಂಬುದನ್ನು ‘ಸ್ವಾಮಿಲ್ಲ ನಂದೆದಿ’ ಎಂಬ ಮಾತಿನಲ್ಲಿ ಸೂಚಿಸುತ್ತಾನೆ. ದನವು ಮನುಷ್ಯ ಭಾಷೆಯನ್ನು ವರ್ತನೆಯನ್ನು ಅರ್ಥಮಾಡಿಕೊಳ್ಳುವ ಪ್ರಾಣಿಯೆಂಬ ಚಿತ್ರಣವಿದೆ.

ಬಳಿಕ ನಂದೆದಿಯು ತಾನೇ ಬಿಡಿಸಿಕೊಂಡು, ತನ್ನ ಕರುವನ್ನು (ಗೋವುಮಾರು ಗೋಪಾಲ) ಬಿಡಿಸಿಕೊಂಡು ಕೋಪ ಮತ್ತು ವ್ಯಸನದಲ್ಲಿ ಮನೆಬಿಟ್ಟು ಒಂದು ಮಲೆಗೆ ಹೋಗುತ್ತದೆ. ಮಲೆಯಲ್ಲಿ ಬೆಂಕಿ ಬಿದ್ದಿತ್ತು. ಒಂದು ಹುಲಿಮರಿ ಬೆಂಕಿಯ ಮಧ್ಯದಲ್ಲಿತ್ತು. ಗೋಪಾಲ ನೋಡಿ ತಾಯಿಯೊಡನೆ ಹೇಳುತ್ತದೆ. ಎರಡೂ ಸೇರಿ ಹುಲಿಮರಿಯನ್ನು ರಕ್ಷಿಸುತ್ತವೆ. ನಂದೆದಿಯು ಒಂದಕ್ಕೆ ಮಾಡಿ ಬಾಲದಿಂದ ಬೀಸಿ ಬೆಂಕಿಯನ್ನು ನಂದಿಸಿಕೊಂಡು ಹೋಯಿತೆಂಬ ವರ್ಣನೆ ಚಮತ್ಕಾರದ್ದೆಂದೇ ಹೇಳಬೇಕು. ಆ ಹುಲಿಮರಿ ತಾನು ಅನ್ಯಾಯ ಮಾಡುವುದಿಲ್ಲವೆಂದು ದನಕರುಗಳಿಗೆ ಭಾಷೆ ಕೊಟ್ಟು ತನ್ನ ಪಂಜರಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ ಮರುದಿವಸ ಹುಲಿಮರಿ (ಉಲ್ಲಿಮಾರು ಗೋಪಾಲೆ) ಮತ್ತು ಅದರ ತಾಯಿ (ಮಕರಂದ ಪಿಲಿ) ಮೇವಿಗೆ ದನಕರುಗಳ ಜೊತೆಯಲ್ಲಿ ಹೋದಾಗ ತಾಯಿ ಹುಲಿ ನಂದೆದಿಯನ್ನು ಕೊಂದು ರಕ್ತವನ್ನು ಕುಡಿಯುತ್ತದೆ. ಹುಲಿಮರಿ ಉಪಕಾರ ಸ್ಮರಣೆಯನ್ನು ಮಾಡಿದರೆ ತಾಯಿ ಹುಲಿಯು ಆ ರೀತಿ ಭಾವಿಸುವುದಿಲ್ಲ. ತನ್ನ ಸ್ವಭಾವವನ್ನು ತೋರಿಸುತ್ತದೆ. ಹುಲಿಮರಿ ಮತ್ತು ದನದ ಕರುಗಳೆರಡೂ ಜೊತೆಯಲ್ಲಿಯೇ ಹಿಂತಿರುಗುತ್ತವೆ. ಅವುಗಳೆರಡರ ಅನ್ಯೋನ್ಯತೆಯ ಚಿತ್ರಣ ಸುಂದರವಾಗಿದೆ. ‘ನಿನ್ನ ತಾಯಿ ಬಂದಳೆ ಗೋಪಾಲ. ನಿನ್ನ ತಾಯಿ ಬರಲಿಲ್ಲವಲ್ಲ. ನೀನು ಮೊಲೆ ತಿನ್ನುವಿಯಾ ಗೋಪಾಲ ನನಗೆ ಮೊಲೆ ತಿನ್ನಲು ಇಲ್ಲ ಎಂದು ಹೇಳಿದ ಗೋವುಮಾರು ಗೋಪಾಲ. ನನ್ನ ತಾಯಿ ಬಂದರೆ ಗೋಪಾಲ, ನಿನ್ನ ತಾಯಿಯೂ ಬಂದಾಳು. ನೀನು ಮೊಲೆ ತಿಂದರೆ ಗೋಪಾಲ ನಾನೂ ಮೊಲೆ ತಿನ್ನುವೆನು. ನೀನು ಮೊಲೆ ತಿನ್ನದಿದ್ದರೆ ಗೋಪಾಲ ನಾನೂ ಮೊಲೆ ತಿನ್ನುವುದಿಲ್ಲ ಎಂದು ಹೇಳಿದ ಉಲ್ಲಿಮಾರು ಗೋಪಾಲ’. (ನಿನ್ನ ಅಪ್ಪೆ ಬತ್ತೊಲೆ ಗೋಪಾಲ. ಎನ್ನ ಅಪ್ಪೆ ಬತ್ತ್‌ಜೊಲೇ, ಈ ಮಿರೆ ತಿನ್ಪನ ಗೋಪಾಲಾ, ಎಂಕ್ ಮಿರೆ ತಿನರಿಜ್ಜಿ ಪಂಡೆ ಗೋವುಮಾರು ಗೋಪಾಲೆ. ಎನ್ನ ಅಪ್ಪೆ ಬತ್ತೊಲ್ಡ ಗೋಪಾಲಾ ನಿನ್ ಅಪ್ಪೆಲಾ ಬರುವೊಲು. ಈ ಮಿರೆ ತಿಂದಂಡ ಗೋಪಾಲ ಯಾನ್ಲೆ ಮಿರೆ ತಿನ್ಪೆ ಈ ಮಿರೆ ತಂದಿಜಡ ಗೋಪಾಲ ಯಾನ್ಲಾ ತಿನ್ಪುಜಿ ಪಂಡೆ ಉಲ್ಲಿಮಾರು ಗೋಪಾಲೆ). ಈ ಸಂಭಾಷಣೆ ತುಂಬ ಪರಿಣಾಮಕಾರಿಯಾಗಿದೆ. ಒಂದು ಪ್ರಾಣಿಯಲ್ಲಿಯೂ ಕೃತಜ್ಞತಾ ಭಾವನೆಯು ಎಷ್ಟು ಅನ್ಯೋನ್ಯತೆಯನ್ನುಂಟು ಮಾಡುವುದು ಎಂಬ (ಸಹಜ) ಸಾತ್ವಿಕ ಚಿತ್ರ ಇಲ್ಲಿದೆ.

ಉಲ್ಲಿಮಾರು ಗೋಪಾಲ ತಾಯಿಯ ಬಳಿ ಬಂದು ಎರಡು ಮೂರು ಬಾರಿ ಕೇಳಿದಾಗ ತಾಯಿ ಹುಲಿ ಸತ್ಯ ಹೇಳುತ್ತದೆ. ಆಗ ಹುಲಿಮರಿಯು ತಾಯಿಯನ್ನೇ ಕೊಂದುಹಾಕುತ್ತದೆ. ಎರಡೂ ಮರಿಗಳ ತಾಯಂದಿರು ಇಲ್ಲದೆ ಹೋದಾಗ ಉಲ್ಲಿಮಾರು ಗೋಪಾಲನ ಮಾತು ಕರುಣಾರಸಭರಿತವಾಗಿದೆ. ಅನುಕಂಪವನ್ನು ಉಂಟುಮಾಡುವಂತಿದೆ.‘ನಿನಗೂ ತಾಯಿ ಇಲ್ಲ ಗೋಪಾಲ ನನಗೂ ತಾಯಿಯಿಲ್ಲ. ನಿನಗೂ ಮೊಲೆಹಾಲಿಲ್ಲ ಗೋಪಾಲ ನನಗೂ ಮೊಲೆಹಾಲಿಲ್ಲ. ನಾವು ಬೆಟ್ಟಕ್ಕೆ ಹೋಗಿ ಗೋಪಾಲ, ಎಳೆಹುಲ್ಲ ಮೇಯುತ್ತಾ, ಒಸರು ನೀರು ಕುಡಿಯುತ್ತಾ ನಾವು ಇರುವ’ (ನಿಕ್ಕ್‌ಅಪ್ಪೆಜ್ಜಿ ಗೋಪಾಲ ಎಂಕ್‌ಲಾ ಅಪ್ಪೆಜ್ಜಿ, ನಿಕ್ಕ್‌ಲಾ ಮಿರೆ ಇಜ್ಜಿ ಗೋಪಾಲ ಎಂಕ್‌ಲಾ ಮಿರಿ ಇಜ್ಜಿ. ನಮ ಗುಡ್ಡೆಗೆ ಪೋಯಿ ಗೋಪಾಲ, ಪನಿಪಜಿರ್ ಮೇವೊಂದು ಒಸರ್ ನೀರ್ ಪರೊಂದು ನಮ ಉಪ್ಪುಗ) ಮಾತು ಬಹಳ ಸರಳವಾದುದು. ಹೇಳುವ ದಾಟಿಯೂ ಕರುಣಾರಸಪೂರಿತವಾಗಿದೆ. ಮಧ್ಯೆ ‘ಗೋಪಾಲಾ’ ಎಂಬ ಹೆಸರನ್ನು ಎತ್ತುತ್ತಾ ಹೇಳುವ ಶೈಲಿ ಅನಾಥರಾದರು ಎಂಬುದನ್ನು ಅವರಿಬ್ಬರ ಅನ್ಯೋನ್ಯತೆಯನ್ನೂ ಸೂಚಿಸುತ್ತದೆ. ಈ ಶೈಲಿ ಪಾಡ್ದನಗಳಲ್ಲಿ ಸಾಮನ್ಯವಾದುದು.

ಮುಂದೆ ಇನ್ನೊಂದು ಘಟನೆಯನ್ನು ಜೋಡಿಸುತ್ತಾನೆ. ದನದ ಕರು ಮತ್ತು ಹುಲಿಯ ಮರಿಗಳು ಜೊತೆಯಲ್ಲಿರುವುದನ್ನು ಸವಾರಿಗೆ ಹೊರಟ ನಾರಾಯಣ ದೇವರು ಮತ್ತು ಅವರ ಹೆಂಡತಿ ನೋಡಿ ಆಶ್ಚರ್ಯಪಡುತ್ತಾರೆ. ನಾರಾಯಣ ದೇವರ ಹೆಂಡತಿಯು ಈ ವಿಚಿತ್ರವನ್ನು ನೋಡಿ ಶಾಪ ಕೊಡಲು ಹೇಳುತ್ತಾರೆ. ಎರಡು ಪ್ರಾಣಿಗಳನ್ನೂ ಹನ್ನೆರಡು ವರ್ಷದ ಗಂಡು ಮಕ್ಕಳನ್ನಾಗಿ ಮಾಡುತ್ತಾರೆ.

ಒಂದು ಅದ್ಭುತ ಘಟನೆಯನ್ನು ಚಿತ್ರಿಸಿದ ಬಳಿಕ ಕತೆಗೆ ತಿರುವು ಬರುತ್ತದೆ. ಪರಿಮಳ ಬಲ್ಲಾಳನ ಊರಿನಲ್ಲಿ ಒಂದು ಹುಲಿಯ ಉಪದ್ರವು ಅತಿಯಾಗಿದೆ. ಅದನ್ನು ಕೊಂದವರಿಗೆ ತನ್ನೆರಡು ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಡುವುದೆಂದು ಸಾರುತ್ತಾನೆ. ಈ ಗಂಡು ಮಕ್ಕಳಿಬ್ಬರು ಹುಲಿಯನ್ನು ಕೊಂದು ದಾರಿಯಲ್ಲಿ ಹಾಕಿ ಬರುತ್ತಾರೆ. ಇಷ್ಟರಲೇ ಕತೆಯನ್ನು ಕೊನೆಗೊಳಿಸಲಿಲ್ಲ. ತಂತ್ರ ನೈಪುಣ್ಯದಿಂದ ಹಾಸ್ಯಕ್ಕೆ ತಿರುಗುತ್ತಾನೆ. ಜೋಡಿಸಿದ ಪ್ರತ್ಯೇಕ ಭಾಗದ ಹಾಗೆ ಕಾಣದಿದ್ದರೂ, ಅನಿವಾರ್ಯ ಚಿತ್ರಣವೆಂದು ಹೇಳುವಂತಿಲ್ಲ. ಸಹಜ ಹಾಸ್ಯವಾಗಿಯೇ ಹೊಮ್ಮಿದೆ.

ಕೊಂದ ಹುಲಿಯನ್ನು ಒಬ್ಬ ಮಾಡಿವಾಳ ನೋಡಿ ಇನ್ನು ತನಗೆ ಈ ಕಸುಬು ಬೇಡ ಎಂದುಕೊಂಡು ಬಟ್ಟೆಯ ಗಂಟನ್ನು ಎಸೆಯುತ್ತಾನೆ. ಎತ್ತನ್ನು ಕಣಿಗೆ ನೂಕುತ್ತಾನೆ. ಹುಲಿಯ ನೆತ್ತರನ್ನು ಹಿಡಿದುಕೊಂಡು ರಾಜನಲ್ಲಿಗೆ ಬರುತ್ತಾನೆ. ಅವನ ಮಾತಿನ ಧಾಟಿ, ಸುಳ್ಳನ್ನು ಮುಚ್ಚಿ ಹೇಳುವ ಶೈಲಿಗೆ ಉತ್ತಮ ನಿದರ್ಶನವಾಗಿದೆ. ‘ಹುಲಿ ಕೊಂದ ಬಂಟ ನಾನಲವೇ ಬಲ್ಲಾಳರೆ! ಪೆರ್ಮಲಕ್ಕ ದೇವಿಯಾದರೆ ಏನಾಯ್ತು? ಪಿರ್ಮಲಕ್ಕ ದೇವಿಯಾದರೆ ಏನಾಯ್ತು? (ಬಲ್ಲಾಳರ ಹೆಣ್ಣು ಮಕ್ಕಳು) ಹೇಳಿದ ಮಾತು ಉಂಟ? ಇಲ್ವಾ? ಹುಲಿ ಕೊಂದ ಬಂಟ ನಾನಲ್ಲವೇ!’ (ಪಿಲಿಕೆರಿ ಬಂಟೆ ಯಾನತ್ತೆ ಬಲ್ಲಾಳೆ. ಪೆರ್ಮಲಕ್ಕ ದೇಯ್ಯರಾಂಡ ದಾನ್ಯಾಂಡ್‌. ಪಿರ್ಮಲಕ್ಕ ದೆಯ್ಯರಾಂಡ ದಾನ್ಯಾಂಡ್. ಪಂಡಿ ಪಾತೆರ ಉಂಡ ಇಜ್ಜಾ ಪಿಲಿಕೆ ಬಂಟೆ ಯಾನತ್ತೆ) ಬಡಾಯಿ ಕೊಚ್ಚುವ ಶೈಲಿಯಲ್ಲಿ ಸುಳ್ಳನ್ನು ಮುಚ್ಚಿ ಸತ್ಯವನ್ನು ತೋರ್ಪಡಿಸುವ ಈ ಮಾತು ತೀರ ಸಹಜ ಆದರೆ ಬಲ್ಲಾಳರಿಗೆ ಚಿಂತೆ ಹತ್ತಿತು. ‘ಅಡಿಗೆ ತಲೆ ಹಾಕಿದರು. ಮೂಗು ಕೊಯ್ಯಲಿಲ್ಲ. ಬಾಯಿ ತೆರೆಯಲಿಲ್ಲ’ ಅಷ್ಟೆ (ಅಡಿಕ್ ಮಂಡೆ ದೀಯೆರ್ ಪರಿಮಳ ಬಲ್ಲಾಳ್. ಮೂಂಕುಕೊಂದು ಮೂರುಜೆರ್. ಬಾಯಿ ಕೊಂಉದ ಅಂಗವುಜೆರ್) ಎಲ್ಲ ಅವಮಾನದಿಂದ ಚಿಂತಿಸಿದರು. ಅವಮಾನದ ಚಿತ್ರಣವೂ ಸೂಚ್ಯವಾಗಿದೆ. ಅಷ್ಟಾಗುವಾಗ ಗೋವುಮಾರು ಗೋಪಾಲ ಮತ್ತು ಉಲ್ಲಿಮಾರು ಗೋಪಾಲರು ಬರುತ್ತಾರೆ. ಮುದುಕ ಮಡಿವಾಳ ಹೊರಡುತ್ತಾನೆ. ಪರಿಮಳ ಬಲ್ಲಾಳರು ತಮ್ಮಿಬ್ಬರನ್ನು ಮಕ್ಕಳನ್ನು ಇಬ್ಬರಿಗೂ ಮದುವೆ ಮಾಡಿಕೊಡುತ್ತಾರೆ.

ಹಾಸ್ಯದಲ್ಲಿ ಕೊನೆಗೊಳ್ಳುತ್ತದೆ ಕತೆ. ಮುದುಕ ಮಡಿವಾಳ ಎಸೆದ ಬಟ್ಟೆಯನ್ನು ಯಾರೋ ಕೊಂಡುಹೋಗಿದ್ದರು. ಕಣ್ಣಿಗೆ ಬಿದ್ದ ಎತ್ತನ್ನು ಏಳಿಸುತ್ತಾ ‘ಸೊಕ್ಕಿ ಹೋದವರು ನನ್ನನ್ನು ನೋಡಿ ಮರೆಯಿರಿ’ ಎನ್ನುತ್ತಾನೆ. ಸೊಕ್ಕಿ ಅಥವಾ ದುಡುಕಿ ಕೆಲಸ ಮಾಡಬಾರದೆಂಬ ನೀತಿಯ ಮೂಲಕ ಕತೆಯನ್ನು ಕೊನೆಗೊಳಿಸುವುದು ಜನಪದ ಕವಿಗೆ ಪ್ರಿಯವಾದುದು.

‘ಅಮಸರಂದ ಮೆನ್ನೊಡಿ’ ಪಾಡ್ದನದ ಚಿತ್ರಣದಲ್ಲಿ ವೈವಿಧ್ಯವಿದೆ. ಘಟನಾವಳಿಗಳೇ ಇವೆ. ಕತೆಯು ಸುದೀರ್ಘವಾಗಿದೆ. ಆದರೂ ಸಾವಯವ ಸಂಬಂಧವನ್ನು ಕಾರ್ಯಕಾರಣ ಸಂಬಂಧದಿಂಧ ಉಳಿಸಿಕೊಂಡು ಬಂದಿರುವ ಕಥನ ಕೌಶಲವಿದೆ. ಉತ್ತಮ ತಂತ್ರದಿಂದ ಸಾಹಿತ್ಯಕ ಮೌಲ್ಯವನ್ನು ಪಡೆಯುತ್ತದೆ. ಅಮಾನುಷ, ಅದ್ಭುತ ಘಟನೆಗಳಿಂದಲೇ ಕಲ್ಪನಾ ಸಾಮರ್ಥ್ಯವು ವ್ಯಕ್ತವಾಗುತ್ತದೆ. ಕೊನೆಯವರೆಗೂ ವಾಚಕರ ಅಥವಾ ಶ್ರೋತೃಗಳ ಕುತೂಹಲವನ್ನು ಉಳಿಸಿ ಬೆಳೆಸಿಕೊಂಡು ಹೋಗಿ, ಸ್ವಾರಸ್ಯವಾಗಿ ಕೊನೆಗೊಳಿಸುವ ತಂತ್ರಕೌಶಲ ಜನಪದ ಕವಿಯ ನಿರೂಪಣಾ ಶಕ್ತಿಗೆ ನಿದರ್ಶನವಾಗಿದೆ. ಕತೆಗೆ ಮೂರು ತಿರುವುಗಳಿವೆ. ಒಂದನ್ನೊಂದು ಪ್ರತ್ಯೇಕಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಅವುಗಳ ಹೊಂದಾಣಿಕೆಯಿದೆ.