ಕಾರ್ಕಳದ ಬೈರವ ಸೂಡನಿಗೆ ಕನ್ನಡ ಕರ್ತು (ಬಹುಶಃ ಕೃಷ್ಣದೇವರಾಯ ಇರಬಹುದು)ವಿನಿಂದ ಬಂದ ಓಲೆಯೊಂದರಲ್ಲಿ ಆತನಿಂದ ಸಲ್ಲಲು ಬಾಕಿಯಾದ ಕಪ್ಪಕಾಣಿಕೆಗಳ ವಿವರಗಳನ್ನು ಹೀಗೆಂದು ಕೊಡಲಾಗಿದೆ:

‘ಪತ್ತ್‌ ಪದ್ನಾಜಿ ವರ್ಸೊಡ್ದಿಂಚ ಲೆಕ್ಕ ಲೇವಾದಿ ಒರ್ಯೊನು ಕರ್ಯೊನು ಬೈದ್‌ಂಡ್‌. ಆನೆಡ್‌ ಸಂದುಬಿ  ಅರಿಮುಡಿ, ಕುದ್ರೆಡ್‌ಸಂದುಬಿ ಕುಡುಮುಡಿ, ಒಂಟೆಡ್‌ಪೇರುನ ಬಸ್ತ್‌ಬಂಗಾರ್‌, ಕತ್ತೆಡ್ ಪೇರುನಾತ್‌ಕತ್ತಿ  ಕರ್ಬ, ಕಲಸೆಡ್‌ವರಣ್, ಸೇರ್‌ಡ್‌ಪವನ್‌, ಕೊಂಬು ತಂಬಡದ ಉಂಬೊಳಿ. ಬಾಂಕೆ ಬಾಡಾಯಿ  ಮಂಜೊಲ್ದ ಕುರುಂಟು, ಪುಳಿತ್ತ ಕುಟ್ಟಿಗೆ, ಒರಿಯೊಂದ್ ಬೈದ್‌ಂಡ್‌ಅಸಲ್‌ದ ಕಣ್ಣೊಡ್‌ತೂತುಜಿ; ಬಡ್ಡಿದ  ಕೈಟ್‌ಪತ್ತ್‌ಜಿ…’ (ಒಡ್ತೆ ಪಂಜುರ್ಳಿ)

ಹತ್ತು ಹದಿನಾರು ವರ್ಷಗಳಿಂದ ಈಚೆಗೆ ಲೆಕ್ಕ ಕೊಡುಕೊಳೆ ಉಳಿದುಕೊಂಡು ಕಳೆದುಕೊಂಡು ಬಂದಿದೆ.  ಆನೆಯ ಮೂಲಕ ಸಲ್ಲುವ ಅಕ್ಕಿಮುಡಿ, ಕುದುರೆಯಲ್ಲಿ ಸಲ್ಲುವ ಹುರುಳಿಯ ಮೂಡೆ, ಒಂಟೆಯಲ್ಲಿ ಹೇರುವ  ಒಡವೆ ವಸ್ತು, ಕತ್ತೆಯಲ್ಲಿ ಹೇರುವಷ್ಟು ಕತ್ತಿ ಕಬ್ಬಿಣ ಕಳಸಿಗೆಯಲ್ಲಿ ವರಹ, ಸೇರಿನಲ್ಲಿ ಪವನು, ಕೊಂಬು  ತಂಬಟೆಯ ಉಂಬಳಿ, ಕಹಳೆಯ ಬಾಡಿಗೆ, ಅರಸಿನ ಚಿಕ್ಕಮುಡಿ, ಹುಣಸೆಹುಳಿಯ ಮುದ್ದೆ ಉಳಿಯುತ್ತಾ  ಬಂದಿದೆ. ಅಸಲನ್ನು ಕಣ್ಣಿನಿಂದ ಕಂಡಿಲ್ಲ; ಬಡ್ಡಿಯನ್ನು ಕೈಯಲ್ಲಿ ಹಿಡಿಯಲಿಲ್ಲ.

ಇದು ಸಾಮಂತನೊಬ್ಬನು ಮೇಲರಸನಿಗೆ ಕೊಡಬೇಕಾದ ಕಪ್ಪಗಳ ವಿವರವಾದರೂ ಇದೇ ಬಗೆಯ ಕೆಲವಾದರೂ ತೆರಿಗೆಗಳನ್ನು ಜನರಿಂದ ಸ್ಥಳೀಯ ಅರಸು ಬಲ್ಲಾಳರೂ ವಸೂಲು ಮಾಡುತ್ತಿದ್ದಿರಬೇಕೆಂದು ಊಹಿಸಬಹುದು. ಸೇನಪ್ಪೆರ್‌ (ಸೇನ ಬೋವ) ಪಟ್ಲೇರ್ (ಪಟೇಲ) ಉಗ್ರಾಣಿ ಎಂಬ ಗ್ರಾಮ ಸಿಬ್ಬಂದಿಗಳ ಹೆಸರುಗಳು ಪಾಡ್ದಗನಳಲ್ಲಿವೆ. ಗುತ್ತಿನವರು ತೀರ್ವೆ ವಸೂಲು ಮಾಡಿ ಸಕಾಲಕ್ಕೆ ಆಡಳಿತದ ಪ್ರಾಧಿಕಾರಕ್ಕೆ ಮುಟ್ಟಿಸಬೇಕಾಗಿತ್ತು ಎಂಬುದು ‘ಕಿಸ್ತ್‌ದ ಪಣವು ಕಟ್ಯೆರೆ ಪೋತೆರ್‌ (ತೀರ್ವೆಯ ಹಣ ಕಟ್ಟಲು ಹೋಗಿದ್ದಾರೆ) ಇಂಥ ಮಾತುಗಳಿಂದ ತಿಳಿಯುತ್ತದೆ.

ವರಣ್(ವರಹ) ಪವನ್, ಇಕ್ಕೇರಿ ಚಕ್ರ, ರೂಪಾಯಿ, ಬೊಳ್ಳಿದ ಬೊಂಬೆ ಪಣವು (ಬೆಳ್ಳಿಯಬೊಂಬೆ ಹಣ) ತಾರ, ದುಡ್ಡು, ಕಾಸ್‌, ಪಾವಲಿ, ಕುರಿಜಾತ್‌ನಾಣ್ಯೊ ರಾಮಟಂಕೆ ಇತ್ಯಾದಿ ನಾಣ್ಯಗಳ ಹೆಸರುಗಳ ಕಾಣ ಸಿಕ್ಕುತ್ತವೆ.

ತುಳುನಾಡಿನ ಹಿಂದಿನ ರಾಜಕೀಯ ಬದುಕಿನಲ್ಲಿ ಚಿಕ್ಕ ದೊಡ್ದ ಕದನಗಳು ಸಾಮಾನ್ಯವಾಗಿದ್ದವು. ಮದುವೆಯಾದ ಮರುದಿನವೇ ದಂಡಿನ ಓಲೆ ಬಂದು ಕಾಳಗದ ಕಳಕ್ಕೆ ತೆರಳ ಬೇಕಾದ ಪರಿಸ್ಥಿತಿ ಒದಗಿದುದನ್ನು ಬಣ್ಣಿಸುವ ಪಾಡ್ದನಗಳಿವೆ. ಭೂತಾರಾಧನೆಯಂತೂ ಬಹುಮಟ್ಟಿಗೆ ವೀರಾರಾಧನೆಯೆ ಆಗಿದೆ. ಕಾಳಗದಲ್ಲಿ ಕಾಯವಿಳುಹಿದ ಎಷ್ಟೋ ವ್ಯಕ್ತಿಗಳು ಬಳಿಕ ಭೂತಗಳಾಗಿ ಆರಾಧ್ಯರೆನಿಸಿದ್ದಾರೆ. ವ್ಯೆದಿಕ ಪುರಾಣಗಳಿಗೂ ಇಂಥ ಭೂತ ಪುರಾಣಗಳಿಗೂ ಇರುವ ಒಂದು ಮುಖ್ಯ ವ್ಯತ್ಯಾಸವೆಂದರೆ, ಅಥವಾ ಯೋಗ್ಯರೇ ಗೆಲ್ಲುತ್ತಾರೆ. ಸೋತವರು, ಸತ್ತವರು ಅಧರ್ಮಿಗಳೂ ರಾಕ್ಷಸರೂ ಆಗಿದ್ದಾರೆ. ಆದರೆ ಭೂತ ಪುರಾಣಗಳಲ್ಲಿ ಸೋತವರು, ಸತ್ತವರು ಸಹ ದೈವಗಳಾಗಿದ್ದಾರೆ.

‘ಆನೆ, ಕುದ್ರೆ, ಮೂಜಿ ಮುದ ದಂಡ್‌(ಮೂರು ಮುಖದ ಸೈನ್ಯ) ಕಡ್ತಲೆ, (ಖಡ್ಗ) ಅಡ್ಡಣ (ಗುರಾಣಿ) ಬಂಟ  ಕತ್ತಿ, ಸುರಿಗೆ ಬಾಳ್, ಚಕ್ರಬಾಣ, ಈಟಿ, ಕತ್ತಿ ಸಾದಕ, ಬಿರು (ಬಿಲ್ಲು) ಪಗರಿ (ಬಾಣ) ಕೊಳಾಲೊದ ಹೊಲ)  ದಂಡ್ ಸಂಹಾರ ಇತ್ಯಾದಿ ಶಬ್ದಗಳು ವೀರ ವೃತ್ತಿ ಸೂತಕವಾದವುಗಳು. ‘ಕಾರ್ದ ಉಂಗುಟೊಡು  ನೆಲ್ಲಿಕಾಯಿ ಮಿತ್ತ್‌ ಪಾರಾದ್‌ ಸುರ್ಯೊಡು ಪದ್ನಾಜಿ ತುಂಡು ಮಲ್ತ್‌ದ್‌ ಗೊಬ್ಬೊಂದ್‌ ಪೋಪೆರ್‌’

ಕಾಲಿನ ಉಂಗುಷ್ಟದಲ್ಲಿ ನೆಲ್ಲಿಕಾಯಿಯನ್ನು ಮೇಲಕ್ಕೆ ಚಿಮ್ಮಿಸಿ ಸುರಿಗೆಯಿಂದ ಹದಿನಾರು ತುಂಡುಮಾಡಿ  ಆಡುತ್ತ ಹೋಗುತ್ತಾರೆ.

ಎಂದು ಕೋಟಿ ಚೆನ್ನಯರ ಸುರಿಗೆಯ ಚಳಕವು ವರ್ಣಿತವಾಗಿದೆ.

ತಾಯಿಬಳಿ ಕಟ್ಟು

ತುಳುನಾಡಿನ ಹೆಚ್ಚಿನ ಸಮಾಜಗಳಲ್ಲಿ ಅಳಿಯ ಸಂತಾನ ಕಟ್ಟು ಎಂದು ಕರೆಯಿಸಿಕೊಳ್ಳುವ ಮಾತೃಮೂಲ ಕಟ್ಟು ಪ್ರಧಾನವಾಗಿತ್ತು. ಹೆಣ್ಣಿನ ಕಣ್ಣೀರಿನ ಕತೆಗಳು ಸಾಕಷ್ಟಿದ್ದರೂ ಹೆಣ್ಣು ತಲೆಯೆತ್ತಿ ಧ್ಯೆರ್ಯದಿಂದ ನಡೆದುಕೊಂಡ ವೃತ್ತಾಂತಗಳೂ ಇಲ್ಲದಿಲ್ಲ. ಹೆಂಗುಸರಿಗೆ ಬಹಳಷ್ಟು ಒಳ್ಳೆಯ ಸಾಮಾಜಿಕ ಸ್ಥಾನಮಾನಗಳೂ ಕಲ್ಪಿತವಾಗಿದ್ದವೆಂದು ಧ್ಯೆರ್ಯವಾಗಿ ಹೇಳುವಂತಿಲ್ಲ. ಧೀರೆಯಾಗಿದ್ದರೂ ಸಿರಿ ತುಂಬಪಾಡು ಪಡಬೇಕಾಯಿತು. ತಾಯಿಬಳಿಯಲ್ಲಿ ಆಸ್ತಿ ಪಾಸ್ತಿಯ ಹಕ್ಕು, ಸೂತಕ ಪಾತಕ ಹೆಣ್ಣಿನ ಮೂಲಕ ಒದಗುತ್ತಿದ್ದರೂ ಒಟ್ಟಿನಲ್ಲಿ ಸಮಾಜವು ಪುರುಷ ಪ್ರಧಾನವಾಗಿತ್ತೆಂದೇ ಹೇಳಬೇಕು. ಮಾವನಿಗೆ ಮದುವೆ, ಸೀಮಂತ ಇತ್ಯಾದಿ ಸಾಮಾಜಿಕ ಸಂದರ್ಭಗಳಲ್ಲಿ ವಿಶೇಷ ಸ್ಥಾನಮಾನವಿದ್ದುದನ್ನು ಕಾಣುತ್ತೇವೆ. ಹಾಗೆಯೇ ಸೋದರಳಿಯನಿಗೂ ಸಾಕಷ್ಟು ಹೊಣೆಗಾರಿಕೆ ಇರುತ್ತಿತ್ತು. ಪಂಜುರ್ಳಿಯ ಒಂದು ಪಾಡ್ದನದಲ್ಲಿ ಮರ್ದಾಳ ಬೀಡಿನ ಯಜಮಾನ ತನ್ನ ಅಳಿಯನ ಹೊಣೆಗೇಡಿತನವನ್ನು ಕಟುವಾಗಿ ಟೀಕಿಸುತ್ತಾನೆ.

ಸೋದರನ ಸೊಸೆಯ ಜೊತೆಗೆ ಪಂಜಿಪಾಡಿ ಬರ್ಕೆಯಿಂದ ಸೋದರ ಮಾವನ ಮನೆಗೆ – ಉಳವೂರ ಅರಮನೆಗೆ ಭೂತವೊಂದು ಬರುವ ಸಂಗತಿ ಮಗ್ರಂದಯಾ ಪಾಡ್ಡನದಲ್ಲಿದೆ. ಬಿಲ್ಲವನ ಭೂತವನ್ನು ಅವಹೇಳನ ಮಾಡಿಹೋದ ಉಳ್ಳಾಲ ಗುತ್ತಿನ ಸೇಕಕೋಚಾಳಿನ ಸೊಸೆಗೆ ಮುಂಡತ್ತಾಯ ಭೂತ ಮೈಲಿಗೆಬೇನೆ ತಂದು ಹಾಕುತ್ತದೆ – ಎಂಬಲ್ಲಿ ಭೂತವೂ ಕೂಡಾ ತಾಯಿಬಳಿಯನ್ನೆ ಅನುಸರಿಸಿ ಅನುಗ್ರಹ ಅಥವಾ ಪೀಡೆಯನ್ನು ನೀಡುತ್ತಿತ್ತೆಂದು ತೋರುತ್ತದೆ.

ಆರೆ ಬಣ್ಣಾಯ, ಪುತ್ರ ಬಣ್ಣಾಯ, ಕಕ್ಕೆ ಬಣ್ಣಾಯ, ಕುಂದರ ಬಣ್ಣಾಯ, ಕಿರೋಡಿ ಬಣ್ಣಾಯ, ಬಂಗೆರನ್ನಾಯ, ಕರ್ಬುರನ್ನಾಯ – ಮೊದಲಾದ ಬಳಿ (ಗೋತ್ರ)ಗಳ ಹೆಸರುಗಳು ದೊರಕುತ್ತವೆ.

ಆಳ್ವ, ಕೆಲ್ಲ, ಹೆಗ್ಗಡೆ, ಪೂಂಜ, ಮರ್ದ, ಮಾರ್ಲ ಮುಂತಾದ ಉಪನಾಮಗಳು ಅಳಿಯ ಸಂತಾನಿಗರಲ್ಲಿ ಹಿಂದೆ ತಂದೆಯಿಂದ ಮಗನಿಗೆ ಬಾರದೆ ಮಾವನಿಂದ ಅಳಿಯನಿಗೆ ಬರುತ್ತಿತ್ತೆನ್ನುವುದಕ್ಕೆ ಸೂಡದ ಅಣ್ಣುಸೆಟ್ಟಿ ಮಗ ಶಂಕರಾಳ್ವ ಎಂಬ ಹೆಸರು ಉದಾಹರಣೆಯಾಗಿದೆ.

ಮನೆಮಾರು, ಉಡುಗೆ ತೊಡಿಗೆ

ದೊಡ್ಡ ಬೀಡುಮನೆಯನ್ನು ಅರಮನೆಯೆಂದೇ ಕರೆಯುತ್ತಿದ್ದುದುಂಟು, ಸತ್ಯನಾಪುರದ ಅರಮನೆಯಲ್ಲಿ ಚಿಕ್ಕ ಚಾವಡಿ, ಚಿತ್ರ ಮಂಟಪ, ಗಾಳಿಗೋಪುರ, ಬರಹದ ಸಾಲೆ, ಏಳಂಕಣದ ‘ಯಮಗುಂಡ’ ತೂಗುಯ್ಯಾಲೆ – ಇತ್ಯಾದಿ ಅಲ್ಲದೆ ಪದ್ಮಕಟ್ಟೆ, ಮಾರಿ (ದೊಡ್ಡ) ಕಟ್ಟಿಗೆ, ಪಾತಾಳದ ‘ಪನಿ ನೀರ’ನ್ನು ಎತ್ತುವ ಆಕಾಶದ (ಎತ್ತರದ) ಏತ ಇತ್ಯಾದಿಗಳ ವರ್ಣನೆ ಕಣ್ಣಿಗೆ ಕಟ್ಟುವಂತಿದೆ.

ತಕ್ಕಮಟ್ಟಿನ ಅನುಕೂಲಸ್ಥ ಬೈದ್ಯರ ಮನೆಯೊಂದನ್ನು ಕನ್ಯಾಪು ಪಾಡ್ದನ ಹೀಗೆ ಬಣ್ಣಿಸುತ್ತದೆ:

‘ಪದ್ರಾಡ್‌ ಮುಡಿ ಕಂಡ, ಪದ್ರಾಡ್‌ ಕಂದೆಲ್‌ಡ್‌ ಕಳಿ, ಪದ್ರಾಡ್‌ ಬರೊಣಿಡ್‌ ಉಪ್ಪಾಡ್‌, ಪದ್ರಾಡ್‌ಕಾಳಿ ಪೆರಡೆ’ (ಹನ್ನೆರಡು ಮುಡಿ ಗದ್ದೆ, ಹನ್ನೆರಡು ಗಡಿಗೆಗಳಲ್ಲಿ ಕಳ್ಳು, ಹನ್ನೆರಡು ಭರಣಿಗಳಲ್ಲಿ ಉಪ್ಪಿನಕಾಯಿ, ಹನ್ನೆರಡು ಕಪ್ಪು ಹೇಂಟೆ)

ಮನೆವಾರ್ತೆಯ ಒಂದು ಚಿತ್ರ ಹೀಗಿದೆ

ಗುರ್ಕೆಡ್‌ ಬಾರ್‌ ದಿಂಜಾದ್‌ ಬೆಯಪಾಯಳ್. ಕಾಸಿದ ಕಬೆತ್ತಿ ಪೆತ್ತೊಲೆಗ್‌ ಅರ್ಕಂಜಿ, ದೀಯಾಳ್, ಕುಡು  ಮಡ್ಡಿ ಬೆಯಿಪಾಯಳ್, ಅರ್ಕಂಜಿ ಬೆಚ್ಚ ಮಲ್ತಳ್, ಕೈಕಂಜಿಲೆಗ್‌ ಬಾಜೆಲ್ ದೀಯಾಳ್, ಪೆತ್ತೊಲೆನ್  ಬೊರಿಯಳ್, ಅಡ್ಯರದ ಅಲೆತುಲಿತಳ್, ಚೊಂಬು ಬಟ್ಟಲ್ ದೆಕ್ಯಳ್, ಇಲ್ಲ ಮುಂದಿಲ್ ಅಡಿತಳ್, ಮಲ್ಯಾಲ  ತೇವುಗು ದೇಶ ಬಾರಿ ಪದ್ಪೆಗ್ ನೀರ್ ಮಯಿತಳ್, ಎರ್ಲೆ ಕಿದೆಕ್‌ತಪ್ಪು ಕಣತ್ತ್‌ಪಾಡ್ಯಳ್, (ಪಂರ್ದೆದಿ)

ದೊಡ್ಡ ಪಾತ್ರೆಯಲ್ಲಿ ಬತ್ತ ತುಂಬಿಸಿ ಬೇಯಿಸಿದಳು. ಕಾಶಿ ಕಪಿಲೆ ಹಸುಗಳಿಗೆ ಅಕ್ಕಚ್ಚು ಇರಿಸಿದಳು. ಹುರುಳಿ  ಮಡ್ಡಿ ಬೇಯಿಸಿದಳು. ಅಕ್ಕಚ್ಚು ಬಿಸಿ ಮಾಡಿದಳು. ದನ ಕರುಗಳಿಗೆ ಆಸರಿಗೆ ಇಟ್ಟಳು. ಹಸುವನ್ನು ಕರೆದಳು.  ಅಡಿಗಡಿಗೆಯ ಮಜ್ಜಿಗೆ ಕಡೆದಳು. ತಂಬಿಗೆ ಬಟ್ಟಲು ತೊಳೆದಳು. ಮನೆಯ ಅಂಗಳ ಗುಡಿಸಿದಳು.  ಮಲಯಾಳ ಕೆಸುವಿಗೆ, ದೇಶಬಾರಿ ಹರಿವೆಗೆ ನೀರು ಎರೆದಳು. ಕೋಣಗಳ ಕೊಟ್ಟಿಗೆಗೆ ಸೊಪ್ಪು ತಂದು  ಹಾಕಿದಳು.

ಗಂಡಸಿನ ಬೆಳಗ್ಗಿನ ಕಾರ್ಯಕ್ರಮ ಹೀಗೆ ನಿರೂಪಿತವಾಗಿದೆ: ‘ತನ್ನ ಸಿರಿ ಮೋಣೆ ನೆಡಿಯೆರ್, ಬೊಳ್ಳಿನ  ಸಿರಿಗಿಂಡೆಡ್‌ ನೀರ್‌ಕೊಂಡು ಬತ್ತೆರ್‌. ಮೂಡಾಯಿ ಮುಕ ಪಾಡ್ದ್‌ ಸೂರ್ಯನ್‌ ಲೆಗ್ತೆರ್‌. ಪಡ್ಡಾಯಿ ಮುಕ  ಪಾಡ್ದ್‌ ಚಂದ್ರನ್‌ ಲೆಗ್ತೆರ್‌. ತೊಳಸಿಗ್‌ ಮೂಜಿ ಸುತ್ತು ಬತ್ತೆರ್‌. ತೊಳಸಿಗ್‌ ನೀರ್ ಮೈತೆರ್‌ ಒಂಜರೆ ಅಂಗೈ  ನೀರ್‌ದೆತ್ತ್‌ತ್ ತನ್ನ ಉಡಲ್‌ಗ್‌ ಕೊರಿಯೆರ್‌. ಒಂಜಿ ಕಿನ್ನಿ ಇರೆ ಕಿನ್ನಿಯೆರ್, ಬಲತ್ತ ಕೆಬಿತ್ತ ಪಾಲೆಡ್  ದೀಯೆರ್…. ಅಂಗೈ ಸಗ್ತಿಕೊರು ಗಂಧ ಅರತ್ತೆರ್‌. ಮುಂಗೈ ಸಗ್ತಿಕೊರು ಸಾಣೆ ತರೆತ್ತರ್‌. ಪೊರ್ಲುಗು  ಸೂರ್ಯಬೊಟ್ಟು, ಅಂದೊಗು ಬುಗ್ತಿ, ಚಂದೊಗು ಗಂಧ ಪಾಡ್ಯೆರ್’ [ಕರ್ನಗೆ]

ತನ್ನ ಸಿರಿಮೊಗವನ್ನು ತೊಳೆದರು. ಬೆಳ್ಳಿಯ ಸಿರಿಗಿಂಡೆಯಲ್ಲಿ ನೀರು ತಂದರು. ತಂದೆ ಕಟ್ಟಿಸಿದ ತುಳಸಿ  ಕಟ್ಟೆಯಲ್ಲಿಗೆ ಬಂದರು. ಮೂಡಲು ಮುಖ ಹಾಕಿ ಸೂರ್ಯನನ್ನು ಧ್ಯಾನಿಸಿದರು. ಪಡುವಲಿಗೆ ಮುಖ ಮಾಡಿ  ಚಂದ್ರನನ್ನು ಎಣಿಸಿದರು. ತುಳಸಿಗೆ ಮೂರು ಸುತ್ತು ಬಂದರು. ತುಳಸಿಗೆ ನೀರು ಎರೆದರು. ಒಂದೂವರೆ  ಅಂಗೈ ನೀರು ತೆಗೆದರು. ತನ್ನ ಒಡಲಿಗೆ ಕೊಟ್ಟರು. ಒಂದು ಶಕ್ತಿ ಕೊಟ್ಟು ಗಂಧ ತೇದರು. ಮುಂಗೈ ಶಕ್ತಿ  ಕೊಟ್ಟು ಸಾಣೆಕಲ್ಲು ಸವೆಯಿಸಿದರು. ಚೆಲುವಿಗೆ ಸೂರ್ಯಬೆಟ್ಟು ಅಂದಕ್ಕೆ ವಿಭೂತಿ. ಚಂದಕ್ಕೆ ಗಂಧ  ಇಕ್ಕಿದರು.

ಹೆಣ್ಣಿನ ಆಭರಣ, ಅಲಂಕಾರಗಳ ವರ್ಣನೆಯೊಂದರಿಂದ ಅಂದಿನ ಕಾಲದ ಕೆಲವೊಂದು ತೊಡಿಗೆಗಳ ಕುರಿತು ತಿಳಿಯಬಹುದಾಗಿದೆ.

‘ಎಡತ ಕೆಬಿಕ್ಕ್‌ಎಣ್ಣೆ ಓಲೆ, ಬಲತ್ತ ಕೆಬಿಕ್ಕ್‌ ಎಸಳ್ ಬುಗುಡಿ, ಕಲ್ಲ ಕೊಪ್ಪು, ಮುಳ್ಳ ಬಳಸರ, ಮುದ್ದುಳ್ಳ  ಮೋಣೆಗ್‌ ಪಚ್ಚೆ ಕಲ್ಲ ಮೂಂಕುತಿ, ಮುಂಡೊಗು ಮತ್ತು ಬಕ್ತಲೆ, ಸರೆಕ್ಕ್‌ ಉದ್ರಿಗೊಂಡೆ, ರಾಕುಟಿ, ಸಣ್ಣ  ಬಿರೆಲ್‌ಗ್‌ ಬಿನ್ಯೊಟಿ ಉಂಗಿಲೊ, ಒಕ್ಕೊಗು ಪಟ್ಟಿ ಸರಪುಳಿ, ಕಾರ್‌ಗ್‌ ಉರಿಗೆಜ್ಜೆ, ಎಡತ್ತ ಕೈಕ್ ಕಂಕಣ  ಕಾಜಿ, ಪೆರ್ನಡೆ ಕಾಜಿ, ಸಣ್ಣಲ್ಲ ನಡುಕು ಬಣ್ಣಲ್ಲ ರಾಗಿ ಸೀರೆ, ಮಿಂಚುಳ್ಳ ತಿಗಲೆಗ್‌ ಪಟ್ಟೆನ ರವಕೆ, ಕಣ್ಣ್‌ಗ್‌ ಕೋಳಾರ ಮಯಿ, ಪತ್ಯೆರೆ ಪನ್ನೆ ತತ್ರೊ, ಮುಡಿಯೆರೆ ಬಾಲೆ ಪಿಂಗಾರೊ, ಕಮ್ಮೆ ನೊಗು ಕಾಮ ಕಸ್ತೂರಿ,  ಪದ್ದೊಯಿಡ್ ಮೇಲಾಯಾಳ್, ಪೂವುಡು ಸಿಂಗರಾ ಆಯಳ್’ (ಕನ್ಯಾಪು)

ಎಡಕಿವಿಗೆ ಎಣ್ಣೆ ಓಲೆ, ಬಲ ಕಿವಿಗೆ  ಎಸಲು ಬುಗುಡಿ, ಕಲ್ಲ ಕೊಪ್ಪು ಮುಳ್ಳ ಬಳಸರ, ಮುದ್ದು ಮುಖಕ್ಕೆ ಪಚ್ಚೆಕಲ್ಲ ಮೂಗುತಿ, ಹಣೆಗೆ ಮುತ್ತು  ಬೈತಲೆ, ತಲೆಗೆ ಚೌರಿಗೊಂಡೆ, ರಾಕುಟಿ, ಸಣ್ಣ ಬೆರಳಿಗೆ ಬಿನ್ನಣದ (?) ಉಂಗುರ, ಸೊಂಟಕ್ಕೆ ಪಟ್ಟಿ  ಸರಪಳಿ, ಕಾಲಿಗೆ ಹುರಿಗೆಜ್ಜೆ, ಎಡಕೈಗೆ ಕಂಕಣ ಗಾಜಿನ ಬಳೆ, ದೊಡ್ಡ ಎಡೆ ಬಳೆ, ಸಣ್ಣ ನಡುವಿಗೆ ಬಣ್ಣದ  ಕೆಂಪು ಸೀರೆ, ಮಿಂಚುವ ಎದೆಗೆ ಪಟ್ಟೆಯ ರವಕೆ, ಕಣ್ಣಿಗೆ ಕೋಳಾರ (?) ಕಾಡಿಗೆ, ಹಿಡಿಯಲು, ಹಸೆಕೊಡೆ,  ಮುಡಿಯಲು ಎಳೆಯ ‘ಸಿಂಗಾರ’ ಪರಿಮಳಕ್ಕೆ, ಕಾಮಕಸ್ತೂರಿ, ಒಡವೆಗಳಲ್ಲಿ ಮೇಲಾದಳು, ಹೂವಿನಲ್ಲಿ  ಸಿಂಗಾರ ಆದಳು.

ಸಂಸ್ಕಾರಗಳು

ಪ್ರಪಂಚದ ಬಹುತೇಕ ಎಲ್ಲ ಪ್ರದೇಶದ ಜನಾಂಗಗಳಂತೆ ತುಳುನಾಡಿನ ಜನರಲ್ಲೂ ಹುಟ್ಟಿನಿಂದ ತೊಡಗಿ ಮರಣದ ವರೆಗೆ ಬದುಕಿನ ಭಿನ್ನ ಭಿನ್ನ ಸಂದರ್ಭಗಳಿಗೆ ಸಂಬಂಧಪಟ್ಟ ಆಚರಣೆಗಳು ಆಯಾ ಜಾತಿಗನುಸಾರವಾಗಿ ರೂಢಿಯಲ್ಲಿದ್ದುವು ಬದುಕಿನಲ್ಲಿ ಒದಗಿದ ಒಂದು ಸಂಭವವನ್ನು ಅದು ಸಂತೋಷದ್ದಿರಲಿ ದುಃಖದ್ದಿರಲಿ ಅದನ್ನೊಂದು ಆಚರಣೆಯಿಲ್ಲದೆ ಅನುಭವಿಸುವುದು ಮನುಷ್ಯನ ಜಾಯಮಾನವಲ್ಲ.

 

ಜನನ, ನಾಮಕರಣ

‘ಉಡ ಉಡ ಬೇನೆ ಬನ್ನಗ ಒಕ್ಕನೂಲು ಕಡಿತ್ತೆರ್‌, ನೇಲೆ ಪಾಡ್ಯೆರ್‌, ಅಂಗೈಡ್‌ಎಣ್ಣೆ ಪಾಡ್ದ್ ಬಂಜಿ  ಪೂಜೆಯೆರ್, ಮೂಜಿ ಸರ್ತಿ ಈಸ್‌ನಗ ಬಾಲೆ ಜನನಾಂಡ್, ಕಿಲಟ್‌ಕಂಟ ಬೊಟ್ಟಾಯೆರ್, ಕದ್ರ ಪೋಡಿಗೆ ಗೆತ್ತೆರ್‌, ಪುಟ್ಟಿ ಪುಲಟ್‌ ಪೂವೊಲು ಕುದ್ದೆರ್, ಚಂಡಿ ನೀರ್‌ಡ್ ಮೀಪಯೆರ್‌… ಮೂಜೆಟ್ ಮುಚ್ಚಿಲಮೆ, ಐನೆಟ್ ಐನಮೆ, ಪತ್ತೊಂಜಿ ಪದ್ನಾಜಿ ಆಮೆ ಕರಿತ್ತೆರ್, ಒಕ್ಕೆನೂಲು ಕಟ್ಯೆರ್‌, ತೊಟ್ಟಿಲ್ ಕಟ್ಯೆರ್ ಚಕ್ಕಣ ಪಾಡ್ಯೆರ್‌ನಾಲಿಲ್ಲ ಪೊಂಜೊವು ಬತ್ತೆರ್, ಪೆತ್ತ ಕಿದೆತಡೆ ಬರ್ಪಿ ಪೊರ್ತುಗು ತೊಟ್ಟಿಲ್ಡ್‌ ಪಾಡ್ದ್ ಮೂಜಿ ಸರ್ತಿ ಪುದರ್ ಪುರಪ್ಪು ಲೆತ್ತರ್‌ ಕೂಡಿ ಸಬೆಕ್ ಬಜಿಲ್ ಮೊರೆತ್ತ್‌ದ್‌ ಪಟ್ಯೆರ್’ (ಜತ್ತೋರಿ ಪೆರ್ಗಡೆ, ಕಲ್ಕುಡ ಬಾಮ ಕುಮಾರ – ಇ)

ಅಡಿಗಡಿಗೆ ನೋವು ಬರುವಾಗ ಉಂಡೆನೂಲು ಕಡಿದರು. ಕೈ ಹಗ್ಗ ಕಟ್ಟಿದರು. ಅಂಗೈಗೆ  ಎಣ್ಣೆ ಹಾಕಿ ಹೊಟ್ಟೆಯನ್ನು ನೀವಿದರು. ಮೂರು ಸಲ ನೀವಿದಾಗ ಮಗುವಿನ ಜನನವಾಯಿತು.  ಹೆರಿಗೆಮನೆಯಲ್ಲೆ ಗಂಟೆ ಬಾರಿಸಿದರು. ಕದ್ರ (?) ಹೆದರಿಗೆ ಕಳೆದರು. ಹುಟ್ಟಿದ ಜಾಗದಲ್ಲಿ ಹೊಕ್ಕುಳು  ಕೊಯ್ದರು. ತಣ್ಣೀರಿನಲ್ಲಿ ಮೀಯಿಸಿದರು. ಮೂರನೆ ದಿನ ಮುಚ್ಚಿಲಮೆ ಎಂಬ ಹೊಲೆಗಳೆಯುವ  ಸಂಸ್ಕಾರವನ್ನೂ ಐದರಲ್ಲಿ ಐದರ ಅಮೆಯನ್ನೂ ಹನ್ನೊಂದು ಹದಿನಾರರ ಅಮೆಯನ್ನೂ ಕಳೆದರು.  ತೊಟ್ಟಿಲು ಕಟ್ಟಿದರು. ಚೌಕ ಹಾಸಿದರು. ನಾಲ್ಕು ಮನೆಗಳ ಹೆಂಗಸರು ಬಂದರು. ಹಸು ಕೊಟ್ಟಿಗೆಗೆ ಬರುವ  ಹೊತ್ತಿಗೆ ತೊಟ್ಟಿಲಲ್ಲಿ ಮಗುವನ್ನು ಇರಿಸಿ ಮೂರು ಸಲ ಹೆಸರು ಹುಟ್ಟು ಹೇಳಿ ಕರೆದರು. ಕೂಡಿದ ಸಭೆಗೆ  ಅವಲಕ್ಕಿ ಕಲಸಿ ಹಂಚಿದರು

ಪುಷ್ಪವತಿಯಾದಾಗ

‘ಮದಿಮುಟ್ಟಿ ಮದಿಮಾಳ್ ಆತಳೆ. ನಾಲೂರು ಪೊಣ್ಣುಲೆನ್ ಲೆತ್ತೆರ್. ನಡು ಜಾಲ್‌ಡ್ ಮಂಡಲ  ಪಾಡ್ಪಾಯೆರೆ, ನಾಲ್ ತೂರಿಡ್‌ ನೀರ್‌ ದೀಪಾಯೆರ್‌. ಪಾಡಿ ಮಂಡಲೊಗು ಬಲತ್ತ ಕಾರ್‌ ದುಂಬು  ದೀಪಾದ್‌ ಬಲಿ ಬರ್ಪಯೆರ್. ತಾರಾಯಿದ ಕೆರ್ಚಿಡ್ ಕುಳ್ಳಯೆರ್. ನಾಲ್ ಪೊಣ್ಣುಲು ನಾಲ್ ಕೆಲಸ ಪತ್ಯೆರ್‌,  ತರೆಕ್ ನೀರ್‌ಪತ್ಯೆರ್‌, ಗೆಂದ ತಾರೆದ ಬೊಂಡೊದ ನೀರ್ ಮೈತೆರ್. ಸೀಗೆ ಮಂಜೊಳು ಪಾಡ್ದ್‌ ಮಡ್ಯೊಳ್ತಿ  ಮೀಪಯಳ್ (ಮೈಸಂದಾಯ)

ಋತುಮತಿ ಆದಳು. ನಾಲ್ಕು ಊರಿನ ಹೆಣ್ಣುಗಳನ್ನು ಕರೆದರು. ನಡು ಅಂಗಳದಲ್ಲಿ ಮಂಡಲ ಹಾಕಿಸಿದರು.  ನಾಲ್ಕು ಮಣ್ಣಿನ ಮೊಗೆಗಳಲ್ಲಿ ನೀರು ಇರಿಸಿದರು. ನಾಲ್ಕು ಕಲಶ ಕಟ್ಟಿಸಿದರು. ನಾರೆಬ್ಬಿಸಿ ಕಟ್ಟಿದ  ತೆಂಗಿನಕಾಯಿ ಇರಿಸಿದರು. ಹಾಕಿದ ಮಂಡಲಕ್ಕೆ ಬಲಗಾಲು ಮೊದಲಿಟ್ಟು ಸುತ್ತು ಬರಿಸಿದರು.  ತೆಂಗಿನಕಾಯಿ ಜೋಡಿಸಿ ಕಟ್ಟಿದುದರಲ್ಲಿ ಕುಳ್ಳಿರಿಸಿದರು. ನಾಲ್ಕು ಹೆಣ್ಣುಗಳು ನಾಲ್ಕು ಕಲಶ ಹಿಡಿದರು.  ತಲೆಗೆ ನೀರು ಹಿಡಿದರು. ಗೆಂದಾಳಿ ಸೀಯಾಳದ ನೀರು ಎರೆದರು. ಸೀಗೆ ಅರಸಿನ ಹಾಕಿ ಮಡಿವಾಳಗಿತ್ತಿ  ಮಿಯಿಸಿದಳು.

ಬಹಿಷ್ಠೆಯಾದಾಗ

‘ಬೂಡುಗು ದೂರ ಕರಿಯಗ್‌ ಮುಟ್ಟ ಕುಳ್ಯೆರ್‌. ನೂಲು ಪಾಡಿ ಕಟ್ಲೆಡ್‌ ಅಂದಾಂಡ, ಮೂಜಿ ತಡೆವು ನಾಲೆಟ್  ಮಿಯೆರೆ ಪೋಪುನೆ, ಒಕ್ಕೆತ್ತಿರಿ ಕಟ್ಟ್‌ಡ್‌ ರಡ್ಡ್‌ ತಡೆವು ಮೂಜೆಟ್‌ ಮಿಯೆರೆ, ನಮ್ಮ ಜಾತಿ ಕಟ್ಲೆಡ್‌ ಮೂಜಿ  ತಡೆವು ನಾಲೆಡ್‌ ಮಿಯೆರೆ… ಮರಾಯಿಡ್‌ ಸೀಗೆ ಬಾಗೆ ಸರೊಳಿ, ದುಂಬುಡು ಸಂಗೀತ, ಪಿರವುಡು  ಪಾಸಡಿ…. [ಪುರುಸೆರೆ ಸಂಧಿ]

ಬೀಡಿಗೆ ದೂರ ಹೊಳೆ ಬದಿಗೆ ದೂರ ಹೊಳೆಬದಿಗೆ ಸಮೀಪ ಕೂತರು. ನೂಲು ಹಾಕಿದವರ  ಕಟ್ಟಳೆಯಲ್ಲಾದರೆ ಮೂರು ದಿನ ತಡೆದು ನಾಲ್ಕರಲ್ಲಿ ಮೀಯಲು ಹೋಗುವುದು. ಬಂಟರ ಕಟ್ಟಿನಲ್ಲಿ ಎರಡು  ದಿನ ತಡೆದು ನಾಲ್ಕರಲ್ಲಿ ಮಿಯಲು ಹೋಗುವುದು. ಬಂಟರ ಕಟ್ಟಿನಲ್ಲಿ ಎರಡು ಮೂರರಲ್ಲಿ ಮಿಯುವುದು  ನಮ್ಮ ಜಾತಿ ಕಟ್ಟಳೆಯಲ್ಲಿ ಮೂರು ದಿನ ತಡೆದು ನಾಲ್ಕರಲ್ಲಿ ಮಿಯುವುದು…. ಮರಿಗೆಯಲ್ಲಿ ಸೀಗೆ, ಬಾಗೆ.  ಸರೊಳಿ, ಮುಂದೆ ಸಂಗೀತ, ಹಿಂದೆ ಓರಗೆಯವರು….

ಹೀಗೆ ಮಡ್ಯಲ ಕರಿಯಕ್ಕೆ ತೆರಳುವ ಸಡಗರ. ಅಲ್ಲಿ ‘ಮಡ್ಯೊಳ್ತಿ’ ‘ಅಬ್ಬಕ್ಕ’ ಅಥವಾ ‘ಚೆಲುವೆ’ಯ ಸಹಾಯದಿಂದ ‘ಮೈಲೆ’ ಕಳೆದು ಮಡಿಯಾಗುತ್ತಾಳೆ. ಹೊಳೆಯ ಮೀನುಗಳಿಗೆ ಕಳಮೆ ಅಕ್ಕಿಯನ್ನು ಇಕ್ಕಿ ಸಂತಾನದ ಆಸೆಯನ್ನು ವ್ಯಕ್ತಗೊಳಿಸುವ ಸಂಗತಿ ಇಂಥ ಸಂದರ್ಭದಲ್ಲಿ ಸಾಮಾನ್ಯ.

ಸೀಮಂತ        

‘ಏಳ್ ತಿಂಗೊಳುಡು ಬಯಕೆದ ಮದ್ಮೆ ಕರಿಪೊಡಾಂಡ್‌. ಪೂ ಮುಡಿತ್ತ್‌ದ್‌ ಪೂತ ಮದ್ಮೆ. ಪೊರಿ ಪೊತ್ತುದು  ಪೊರಿತ ಮದ್ಮೆ. ಅಡ್ಯೆ ಸುಡು ಅಡ್ಡೆ ಸಮ್ಮನ ಆವೊಡಾಂಡ್‌. ಬಯಕೆದ ಮದ್ಮೆ ಕರಿಪೊಡು ಬಾಯಿತ ಅಗ್ಗಿನ  ದೆಪ್ಪೊಡಾಂಡ್‌… ಆಜಿ ಮುಡಿತ್ತಾಡೆಗ್‌ ಅಂಗಣ ಕೆತ್ತಾಯೆರ್. ಮೂಜಿ ಮುಡಿತ್ತಾಡೆಗ್‌ ದಿಕ್ಕೆಲ್  ಪಾಡ್ಪಾಯೆರ್.  ಪಂಚಲೆಡ್ ಪಾಪಾಯೆರ್. ಮುಂಡಲೆಡ್‌ ಬೇಪಾಯೆರ್. ಅಂಗರೆ ವಾರೊಟು ಸಿಂಗಂತ  ರಾಸಿಡ್‌ ಬೊಳ್ಳಿ ಉದಿಪ್ಪುಗೆ, ಬೊಳ್ಳರ ಮಾಣಿಗೊ ಸರದನಿ ಕೊರ್ನಗ ಜನಮಾನಿ ಕೂಡುಂಡುಗೆ, ಬಯಕೆದ  ಮದ್ಮೆಗ್‌ ಮೂರ್ತ ಬತ್ತ್ಂಡ್‌. ಇರ್ವೆರ್‌ ಸಗಾಯಡಿಕುಳು ಪರಕೊಡಿ ಮಾಪಾಯೆರ್. ಪೊಸ ಪಟ್ಟೆ ಸೀರೆ  ತುತ್ತಾಯೆರೆ. ಪಟ್ಟೆ ರವಕೆ ಪಾಡ್ಪಾಯೆರ್, ಪೂ ಮುಡಿಪಾಯೆರ್, ಬಂಗಾರ್ಡ್‌ ಸಿಂಗಾರ ಮಳ್ತೆರ್‌, ಬೊಳ್ಳಿಡ್‌ ಬೊಳ್ಳೆನ ಮಲ್ತೆರ್‌ ಮತ್ತುಡು ದೇಸೆ ಪಾಡೊಂದೆರ್‌, ಪಕಳೊಡು ಆರತಿ ಮಲ್ಪಾಯೆರ್ ಕೊಟ್ಟು ಮಣೆ ದೀದ್‌ ಉಣ್ಯೆರೆ ಕುಳ್ಳಯೆರ್. ಬಂಗ ಬಾರೆದ ಕೊಡಿಯಿರೆ ಪಾಡ್ದ್‌ ಬಳಸ್ಯೆರ್‌, ಸಭೆಕ್ ನೀರ್‌ದೀಯೆರ್‌, ವಣಸ್‌ ಬಲ್ಮಣ ಆಂಡ್‌’ [ಬಾಮಕುಮಾರ ಸಂಧಿ]

ಏಳು ತಿಂಗಳಲ್ಲಿ ಸೀಮಂತ ಜರಗಿಸಬೇಕಾಯಿತು. ಹೂ ಮುಡಿಸಿ ಹೂವಿನ ಮದುವೆ, ಅರಳು ಹುರಿದು  ಅರಳು ಮದುವೆ, ರೊಟ್ಟಿ ಸುಟ್ಟು ರೊಟ್ಟಿ ಸಮ್ಮಾನ ಆಗಬೇಕು. ಬಯಕೆಯ ಮದುವೆ ನಡೆಸಬೇಕು.  ಬಾಯಿಯ ಅತ್ಯಾಶೆ ಕಳೆಯಬೇಕು… ಆರು ಮುಡಿಯಷ್ಟಕ್ಕೆ ಅಂಗಳ ಕೆತ್ತಿಸಿದರು. ಮೂರು ಮುಡಿಯಷ್ಟಕ್ಕೆ  ಒಲೆ ಹಾಕಿಸಿದರು. ಪಂಚವಳ್ಳಿ ವೀಳ್ಯದಿಂದ ಬೀಸಿದರು. ಮುಂಡವಳ್ಳಿ ವೀಳ್ಯವನ್ನು ಹೊದಿಸಿದರು.  ಮಂಗಳವಾರ ಸಿಂಹ ರಾಶಿಯಲ್ಲಿ ಬೆಳ್ಳಿ ಉದಯವಾದಾಗ, ಬೊಳ್ಳೆರೆ ಮಾಣಿಗ ಹಕ್ಕಿ ಸ್ವರ ಕೊಡುವಾಗ  ಮಂದಿ ಸೇರಿತಂತೆ, ಬಯಕೆಯ ಮದುವೆಯ ಮೂಹೂರ್ತ ಒದಗಿತು. ಇಬ್ಬರು ಸಂಗಾತಿಗಲು ಹಳೆಯ  ಬಟ್ಟೆ ಕಳೆದು ಹೊಸ ಪಟ್ಟೆ ಸೀರೆ ಉಡಿಸಿದರು.ಪಟ್ಟೆಯ ರವಕೆ ಹಾಕಿಸಿದರು. ಹೂ ಮುಡಿಸಿದರು.  ಬಂಗಾರದಿಂದ ಸಿಂಗಾರ ಮಾಡಿದರು. ಬೆಳ್ಳಿಯಿಂದ ಬೆಳ್ಳಗೆ ಮಾಡಿದರು. ಮುತ್ತಿನ ಸೇಸೆ ಹಾಕಿದರು.  ಹವಳದ ಆರತಿ ಮಾಡಿಸಿದರು. ಎತ್ತರದ ಮಣೆ ಇಟ್ಟು ಉಣ್ಣಲು ಕುಳ್ಳಿರಿಸಿದರು. ಬಂಗಬಾಳೆಯ  ಕೊಡಿಯೆಲೆ ಹಾಕಿ ಬಳಸಿದರು. ಸಭೆಗೆ ನೀರು ಇಟ್ಟರು. ಊಟ ಉಪಚಾರ ಆಯಿತು.

ಪ್ರಥಮ ಕ್ಷೌರ

‘ಬಾರೆ ಕಡ್ತೆರ್‌ಬಾರೆ ಮಂಟಪೊ ಮಳ್ತೆರ್, ಕುಕ್ಕು ಕಡ್ತೆರ್‌ ಸೋರಣೊ ದೀಯೆರ್‌. ಮಿತ್ತ್‌ಕೊಡಿ  ಪಾಡ್‌ಂಡ್‌. ತಿರ್ತ್‌ದಳ್ಯ ಪಾಡ್‌ಂಡ್‌, ನಾಲ್ ಕಮ್ಮೊ ಪೊದ್ದಿಂಡ್‌, ಜಾತಿ ಸಂಗತೆರ್‌ಕೂಡ್ದು ಬಲಿ  ಬರ್ಪುಡಿಯೆರ್. ಕುಳ್ಳಾದ್‌ದೇಸೆ ಆಂಡ್. ದುಂಬು ಕೆಲೆಸಿ ದೇಸ ಪಾಡಿಯೆ. ಸಾಯಿನ ಬೈದ್ಯೆ ಪಾಡಿಯೆ.  ಸಾಂಕಣ ಅಪ್ಪೆ ಸಾಯಿನ ಬೈದ್ಯೆತಿ ಪಾಡಿಯಳ್. ದತ್ತ ಕೆನ್ನಿ ಪತ್ತ್‌ದ್‌ ಬಲತ್ತ ಕೆನ್ನಿ ಬೇಲೆ ಮಳ್ತೆ. ಬಲತ್ತ ಕೆನ್ನಿ  ಪತ್ತ್‌ದಂ ದತ್ತ ಕೆನ್ನಿದ ಬೇಲೆ ಬೆಂದೆ. ತಿಗಲೆಡ್ ಸೂರ್ಯ ಚಂದ್ರೆ ಬೇಲೆ ಬೆಂದೆ. ಪಿರಾವುಡು ಭೀಮಾರ್ಜುನ  ಬೇಲೆ ಬೆಂದೆ…. ಪಕಲೊಟು ಆರತಿ ಮುತ್ತುಡು ದೇಸೆ ಆಂಡ್‌… ಕೆಲೆಸಿ ಮುಟ್ಟಿನೆಕ್ ಸುದ್ದ ಆವೊಡು.  ಬೊಟ್ಟುದ ಸರೊಳಿ, ಬೈಲ್ದ ಸಂಪು, ಉರ್ದುದ ಸಲಾಯಿ, ಪದೆಂಗಿದ ಕೋಡು, ಸೀಗೆ ಬಾಗೆ ಕೊಂಬಾಗೆ  ಕೋಡಾಗೆ ಸಾರ ಕಂದೆಲ್ ಬೆಂದ್ರ್‌, ಸಾರ ಕಂದೆಲ್ ಚಂಡಿರ್‌, ಚಂಡೀರ್‌ಡ್ದ್‌ ಸಂಪಾಯೆರೆ ಬೆನ್ನೀರ್‌ಡ್ದ್‌ ಬೆಪ್ಪಾಯೆರ್‌’ (ಕೋಟಿ ಚೆನ್ನಯ)

ಬಾಳೆ ಕಡಿದು ಬಾಳೆ ಮಂಟಪ ಮಾಡಿದರು. ಮಾವು ಕಡಿದರು, ತೋರಣವಿಟ್ಟರು. ಮೇಲೆ ಮೇಲು ಬಟ್ಟೆ  ಹಾಕಿದರು. ಕೆಳಗೆ ಮಡಿ ಬಟ್ಟೆ ಹಾಕಿದರು. ನಾಲ್ಕು ಕಂಬ ಹೊದ್ದಿದ್ದುವು. ಜಾತಿ ಬಾಂಧವರು ಕೂಡಿ ಪ್ರದಕ್ಷಿಣೆ  ಬರಿಸಿದರು. ಕುಳ್ಳಿರಿಸಿ ಸೇಸೆ ಆಯಿತು. ಮೊದಲು ಕ್ಷೌರಿಕ ಸೇಸೆ ಹಾಕಿದ. ಸಾಯಿನ ಬೈದ್ಯೆ ಹಾಕಿದ ಸಾಕು  ತಾಯಿ ಸಾಯಿನ ಬೈದ್ಯತಿ ಹಾಕಿದಳು. ಎಡದ ಕೆನ್ನೆ ಹಿಡಿದು ಬಲಕೆನ್ನೆಯ ಕೆಲಸ ಮಾಡಿದ. ಬಲಕೆನ್ನೆ  ಹಿಡಿದು ಎಡಕೆನ್ನೆಯ ಕೆಲಸ ಮಾಡಿದ. ಎದೆಯಲ್ಲಿ ಸೂರ್ಯ ಚಂದ್ರ ರಚನೆ ಮಾಡಿದ. ಹಿಂದೆ  ಭೀಮಾರ್ಜುನ ಕೃತಿ ಮಾಡಿದ. ಹವಳದಲ್ಲಿ ಆರತಿ, ಮುತ್ತಿನಲ್ಲಿ ಸೇಸೆ ಆಯಿತು. ಕ್ಷೌರಿಕ ಮುಟ್ಟಿದುದಕ್ಕೆ  ಶುದ್ಧವಾಗಬೇಕು. ಬೆಟ್ಟು ಜಾಗೆಯ ಸರೊಳಿ, ಬೈಲಿನ ತಂಪು ಉದ್ದಿನ ಬೇಳೆ, ಹೆಸರಿನ ಕೋಡು, ಸೀಗೆ,  ಬಾಗೆ, ಕೊಂಬಾಗೆ, ಕೋಡಾಗೆ, ಸಾವಿರ ಕೊಡ ಬಿಸಿನೀರು, ಸಾವಿರ ಕೊಡ ತಣ್ಣೀರು ತಣ್ಮೀರಲ್ಲಿ  ತಂಪಾದರು. ಬಿಸಿನೀರಿನಿಂದ ಬಿಸುಪಾದರು.

ಮದುವೆ

ಬಾಲ್ಯ ವಿವಾಹವೂ ಕೆಲವೊಂದು ಸಂದರ್ಭಗಳಲ್ಲಿ ಪ್ರಚಲಿತವಿತ್ತೆಂದು ‘ಬಾಯಿತಕೂಳಿ ದೆಪ್ಯಾರ ದುಂಬು  ಕೊರ್ತುಂಡು’ (ಬಾಯಿಯ ಹಲ್ಲು ತೆಗೆಯುವ ಮೊದಲು ಕೊಟ್ಟಿದ್ದೆ) ಗಿರಿ ಕುಂಟು ತುತ್ತ್ಯರೆ ತೆರಿಪುಜಿ’ ಸಡಲಿದ  ಬಟ್ಟೆಯನ್ನು ಉಡಲು ತಿಳಿಯುವುದಿಲ್ಲ) ‘ತೊಟ್ಟಿಲ್‌ಗ್‌ಪೂತ ಎಲಸ್ತ್ರ ಕಟ್ಟ್‌ಪೋತೆ’ (ತೊಟ್ಟಿಲಿಗೆ ಹೂವಿನ  ಎಲವಸ್ತ್ರ ಕಟ್ಟಿ ಹೋಗಿದ್ದಾನೆ-

ಇಂಥ ಮಾತುಗಳಿಂದ ವ್ಯಕ್ತವಾಗುತ್ತದೆ. ವಿವಾಹಕ್ಕೆ ಪೂರ್ವದಲ್ಲಿ ಋತುಮಾತಿಯಾದರೆ ಅಂಥ ಬಾಲೆಯ ಕಣ್ಣು ಕಟ್ಟಿ ಕಾಡಿನಲ್ಲಿ ಬಿಡಬೇಕೇಂಬ ನಿರ್ಬಂಧ ಬ್ರಾಹ್ಮಣ ಸಮಾಜದಲ್ಲಿ ಇತ್ತೆಂಬ ಪ್ರಸ್ತಾಪ ‘ದೇಯಿ ಬೈದ್ಯೆತಿ’ ಸಂಧಿನಲ್ಲಿ ಕಾಣಿಸಿದರೂ ಇಂಥ ಪದ್ಧತಿಯ ಸಾರ್ವತ್ರಿಕತೆಗೆ ಚರಿತ್ರೆಯ ಪುಷ್ಠಿ ದೊರಕುವುದಿಲ್ಲವೆನ್ನಬೇಕು.

ಪ್ರೇಮ ವಿವಾಹ (ಬಾಮಕುಮಾರನ ಸಂಧಿಯಲ್ಲಿ ಈಶ್ವರ-ಮೈಸಗ) ‘ಜಾತಿಡ್‌ನಲ್ವೆರ್‌ಕೂಡ್ಯೆರ್‌, ಪೊಣ್ಣ ಪಾತೆರಿಯರೆ ಪೋಯೆರ್‌’ (ಜಾತಿಯಲ್ಲಿ ನಾಲ್ವರು ಕೂಡಿದರು. ಹೆಣ್ಣಿನ ಮಾತಾಡಲು ಹೋದರು) ಎಂದು ತೊಡಗುವ ಸಾಂಪ್ರದಾಯಿಕ ಮದುವೆ, ಬಲಾತ್ಕಾರದ ಮದುವೆ ಇತ್ಯಾದಿ ನಾನಾ ರೀತಿಯ ವಿವರಗಳಿಗೆ ಕೊರತೆಯಿಲ್ಲ. ಒಂದು ಮದುವೆಯ ಭಾಗಶಃ ವರ್ಣನೆ.

‘ಲತ್ತ್‌ಪಿಂಗಾರದ ಅರಿ ಕುಡ್ತು ಬತ್ತಿನೆಂಗೆ ಪೊಣ್ಣ ಕೋಡಿಡ್ ದಿಬ್ಬಣದ ಮಂದೆ ನಿರೆದ್‌ ಬರ್ಪುಂಡೆ, ಪಿಜಿನ್  ದಾರೆ ಪತ್ತಿನೆಂಗೆ ಆಣ ಕೋಡಿಡ್‌ ದಿಬ್ಬಣದ ಮಂದೆ ನಿರೆದ್‌ ಬತ್ತ್ಂಡ್. ಪಯಣದ ಬೆಡಿ, ಸೊನ್ನೆದ  ಕೊಂಬು, ಗುರ್ಬಿಲೆ ನಾಟಕ ಸೂಳೆಲೆ ಮೇಳ, ಕೆಲೆಂಜಿದ ರಾಗ, ಉಮಿಲ್‌ದ ಪದ, ತಾರಾಯಿದ  ತಪ್ಪಂಗಾಯಿ, ಬಜ್ಜಿಯಿದ ದೂದು, ಡೊಂಬೆರೆ ಆಟದ ಗೌಜಿ ಲಕ್ಕ್ಂಡ್… ಎದ್ರ್‌ಗ್‌ ಆರತಿ ಕೊಂಡು  ಬತ್ತೆರ್‌. ಕಾರ್‌ಗ್‌ ನೀರ್‌ ಕೊರಿಯೆರ್‌, ದಿಬ್ಬಣೊದೊಂಪ ಪೊಗ್ಗುಂಡು. ಉಣಸ್‌ ದುಂಬೋ ದಾರ  ದುಂಬೋಂದ್‌ ಕೇಂಡೆರ್‌. ಉಣಸ್‌ ಬಲ್ಮಣ ಆಂಡ್‌. ಬೊಳ್ಳಿ ಏರ್ದ್‌ ಬೊಳ್ಕಿರಾನಗ ಬೊಳೆರಿ ಮಾಣಿಗ  ಸರದಿ ಕೊರ್ನಾಗ ಮದಿಮಾಳೆನ್ ಜಪ್ಪುಡಾದ್‌ ಕೈಟ್‌ನೆ ಪತ್ತೊಂದು ದೊಂಪ ಪೊಗ್ಗೆಯೆರ್. ದಾರೆ ಮಂಟಪ  ಸಿಂಗರಿದ್‌ ಮಂಟಮೆಡ್‌ ಕುಲ್ಲಾಯೆರ್‌. ಆಣಗ ಪೊಣ್ಣಗ ಕೈಮುಟ್ಟು ಕೈದಾರೆ, ಮೆಯ್ ಮುಟ್ಟು ಮೆಯ್ ದೇಸೆ  ಆಂಡ್‌. ದಾರೆ ಮಂಟಮೆಡ್ದ್‌ ಲಕ್ಕಯೆರೆ. ಪೊಣ್ಣು ಒಚ್ಚಿದ್‌ ಕೊರಿಯೆರ್‌’

ಎಳೆ ಸಿಂಗಾರದ ಅಕ್ಕಿ ಕೊಡಹಿ ಬಂದಂತೆ ಹೆಣ್ಣಿನ ಕಡೆಯಲ್ಲಿ ದಿಬ್ಬಣದ ಮಂದಿ ತುಂಬಿದರು. ಇರುವೆ ಧಾರೆ  ಹಿಡಿದಂತೆ ಗಂಡಿನ ಕಡೆಯಲ್ಲಿ ಮಂದಿ ನೆರೆದರು. ಪಯಣದ ಸಿಡಿಮದ್ದು, ಸನ್ನೆಯ ಕೊಂಬು, ಗುಬ್ಬಿಗಳ  ನಾಟಕ, ಸೂಳೆಯರ ಮೇಳ, ನೊಣದ ರಾಗ, ಸೊಳ್ಳೆಯ ಪದ, ತೆಂಗಿನ ತಪ್ಪಂಗಾಯಿ, ಅಡಕೆಯ ಜೂಜು,  ಡೊಂಬರ ಆಟದ ಗದ್ದಲ ಎದ್ದಿತು… ಎದುರಿಗೆ ಆರತಿ ತಂದರು. ಕಾಲಿಗೆ ನೀರಿತ್ತರು. ದಿಬ್ಬಣ ಚಪ್ಪರ  ಹೊಕ್ಕಿತು. ಊಟ ಮೊದಲೋ ಧಾರೆ ಮೊದಲೋ ಎಂದು ಕೇಳಿದರು. ಊಟ ಉಪಚಾರವಾಯಿತು. ಬೆಳ್ಳಿ  ಏರಿ ಬೆಳಕಾದಾಗ, ಬೊಳೆರಿ ಮಾಣಿಗ ಹಕ್ಕಿದನಿ ತೋರಿದಾಗ, ಮದುಮಗಳನ್ನು ಇಳಿಸಿ, ಕೈ  ಹಿಡಿದುಕೊಂಡು ಚಪ್ಪರ ಹೊಗಿಸಿದರು. ಧಾರಾ ಮಂಟಪವನ್ನು ಸಿಂಗರಿಸಿ, ಮದುಮಗ ಮದುಮಗಳನ್ನು  ಪಾವಡೆ ಬಟ್ಟೆಯ ಮೇಲೆ ಪ್ರದಕ್ಷಿಣೆ ಬರಿಸಿ, ಧಾರೆಯ ಮಂಟಪದಲ್ಲಿ ಕುಳ್ಳಿರಿಸಿದರು. ಗಂಡಿಗೂ ಹೆಣ್ಣಿಗೂ ಕೈ  ಮುಟ್ಟಿ ಕೈಧಾರೆ, ಮೆಯ್‌ಮುಟ್ಟಿ ಮೆಯ್‌ಸೇಸೆ ಆಯಿತು. ಧಾರೆಯ ಮಂಟಪದಿಂದ ಎಬ್ಬಿಸಿದರು. ಹೆಣ್ಣನ್ನು  ಒಪ್ಪಿಸಿಕೊಟ್ಟರು.

ವಿವಾಹ ವಿಚ್ಷೇದನ (‘ಬರ‘ ಹೇಳುವುದು)

ಹಿಂದೆ ವಿವಾಹ ವಿಚ್ಚೇದನವೂ ಒಮ್ಮೊಮ್ಮೆ ನಡೆಯುತ್ತಿತ್ತು. ಗಂಡನು ಹೆಂಡತಿಯನ್ನು ಬಿಡುವುದಿದ್ದರೆ ಆತನೇ ಅವಳನ್ನು ಕರೆತಂದು ತವರಲ್ಲಿ ಬಿಡಬೇಕಾಗಿತ್ತು. ಅಥವಾ ಆಕೆಯ ಹಿರಿಯರು ಬಂದು ಕರೆದುಕೊಂಡು ಹೋಗಬೇಕಾಗಿತ್ತು. ವಸ್ತ್ರವನ್ನು ಹರಿಯುವುದರ ಮೂಲಕ ಸಂಬಂಧವು ಹರಿದುದನ್ನು ಸೂಚಿಸಲಾಗುತ್ತಿತ್ತು. ‘ಬತ್ತ್‌(ಬಸ್ತ್) ಕಟ್ಟ್‌ದ್ ಬರ ಪಣ್ಪಾವುನ’ (ವಸ್ತು ಕಟ್ಟಿ ವಿಚ್ಚೇದ ಹೇಳುವುದು) ಎಂಬುದರಲ್ಲಿ ತೆರವನ್ನು ಹಿಂದಿರುಗಿಸಬೇಕೆಂಬ ಮಾತು ಬರುತ್ತದೆ. ಸಿರಿ ತನ್ನ ಮೂಗಿನ ಮೂಗುತಿ, ಕೊರಳ ಕೀಲಬಂದಿ, ಸೊಂಟದ ನೇವಳ ತೆಗೆದೊಗೆದು ಬರಹೇಳಿಸುತ್ತಾಳೆ.

ಅನಿವಾರ್ಯ ಪ್ರಸಂಗಗಳಲ್ಲಿ ಹೆಣ್ಣು ಗಂಡನನ್ನು ಬಿಡಬಾರದೆಂದೇನೂ ಇರಲಿಲ್ಲ. ‘ಅಕ್ಕೆರಸು ಪೂಂಜೆದಿ’ಯಲ್ಲಿ ನಾವು ಅಂತ ದಿಟ್ಟ ಹೆಣ್ಣನ್ನು ಕಾಣುತ್ತೇವೆ. ಹೊಣೆ ಗೇಡಿಯಾಗಿ ದಾರಿಗೆ ಬಾರದ ವ್ಯಭಿಚಾರಿ ಗಂಡನನ್ನು ಆಕೆ ತ್ಯಜಿಸುತ್ತಾಳೆ. ಮಾತ್ರವಲ್ಲ ಆರು ಮದುವೆಯಾಗುತ್ತಾಳೆ. ಅಲ್ಲದೆ ಕಾರಣಿಕದ ಗರತಿ ಎಂಬ ಗೌರವಕ್ಕೂ ಪಾತ್ರಳಾಗುತ್ತಾಳೆ.

ಅಂತ್ಯ ಸಂಸ್ಕಾರ

ದಾರುಣ ಘಟನೆಯಾದ ಸಾವನ್ನು ಪಾಡ್ದನಕಾರರು ಗಂಭೀರವಾಗಿ ಚಿತ್ರಿಸಿದ್ದಾರೆ. ಶವದ ಅಂತ್ಯ ಸಂಸ್ಕಾರವನ್ನು ಗೌರವಪೂರ್ವಕ ಮಾಡುತ್ತಿದ್ದ ಚಿತ್ರಗಳು ಸಿಗುತ್ತವೆ.

‘ಆಯೆರೆ ಕುಕ್ಕು, ಈಯೆರೆ ಪಿಲ ಕಡ್ತೆರ್‌, ಅಸನಂದ ಕೋಡಿಡ್‌ ಮಸನಂದ ಕಾಟ ಒಯ್ತೆರ್… ಎಣ್ಣೆ ಸೀಗೆ  ಮಂಜೊಳು ಪುಣಕ್ ಪೂಜ್ಯೆರ್‌, ಪೊಣ್ಣುಲು ಬೆಚ್ಚ ನೀರ್ಡ್‌ ಮಿಪಯೆರ್‌. ಕಾಟೊಗು ಮೂಜಿ ಸುತ್ತು ಬತ್ತ್‌ದ್‌ ಕೊಲ್ಲಿದ ನೀರ್‌ ಬುಡ್ಯರೆ, ಕಾಯೊನು ಬುಡ್ಲ ಕೈಲಾಸ ಸೇರ್ಲ ಎಂದರ್‌. ಮೂಜಿ ಸರ್ತಿ ಅರಿನೀರ್‌ ಬುಡ್ಯೆರ್.  ಪೆದಂಬು ಸೂ ಕೊರ್ಯೆರ್‌. ಐಯಲ್ಲ ಬೊನ್ಯ ಮಲ್ತೆರ್‌. ಅಕ್ಕಾಸೊಗು ಪುಗೆ ಬುಡ್ಯೆರ್‌ (ಪಂರ್ದೆದಿ, ಪರವಿತಿ  ಮಂಗಣೆ)

ಆಚೆ ಕರೆಯಲ್ಲಿ ಮಾವು. ಈಚೆ ಕರೆಯಲ್ಲಿ ಹಲಸು ಕಡಿದರು. ಅಸನಂದ (?) ಮೂಲೆಯಲ್ಲಿ ಮಸಣದ  ಚಿತೆಯನ್ನು ಹೂಡಿದರು…. ಎಣ್ಣೆ ಸೀಗೆ ಅರಸಿನ ಶವಕ್ಕೆ ಪೂಸಿದರು. ಹೆಣ್ಣುಗಳ ಬಿಸಿನೀರಲ್ಲಿ ಮಿಯಿಸಿದರು.  ಕಾಷ್ಠಕ್ಕೆ ಮೂರು ಸುತುತು ಬಂದು ಕೊಲ್ಲಿಯ (?) ನೀರು ಬಿಟ್ಟರು. ಕಾಯ ಬಿಡು. ಕೈಲಾಸ ಸೇರು  ಎಂದರು. ಮೂರು ಸಲ ಅಕ್ಕಿ ನೀರು ಬಿಟ್ಟರು. ಅಪಸವ್ಯವಾಗಿ ಬೆಂಕಿ ಕೊಟ್ಟರು. ಐದು ಬಳ್ಳ ಬೂದಿ  ಮಾಡಿದರು. ಆಕಾಶಕ್ಕೆ ಹೊಗ ಬಿಟ್ಟರು.

‘ದುಕ್ಕದ ಗಂಜಿ ಉಂಡೆರ್’ ಎಂಬಲ್ಲಿ ಶೋಕಾರಚಣೆಯ ಸೂಚನೆ ಸಿಗುತ್ತದೆ. ‘ಏಳನೇ ದಿನೊಟು ಸಾವಾಂಡ ಕರಿತ್ತೆರ್ (ಏಳನೆಯ ದಿನದಲ್ಲಿ ಬೊಜ್ಜ ಜರಗಿಸಿದರು) ‘ಅಮ್ಮೆರ್‌ಸೈತಿ ಸೂತಕ ಪದ್ರಾಡ್‌ದಿನೊ (ತಂದೆ ಸತ್ತ ಸೂತಕ ಹನ್ನೆರಡು ದಿವಸ) ಹೀಗೆ ಮೃತ ಸೂತಕ ಹಾಗೂ ಉತ್ತರ ಕ್ರಿಯೆಯ ಅವಧಿ ಬೇರೆ ಬೇರೆಯಾದುದಿದೆ.

ಸುಟ್ಟ ಸ್ಥಳದಲ್ಲಿ ದೂಪೆ ಅಥವಾ ಗೋರಿ ಕಟ್ಟುವ ಉಲ್ಲೇಖವೂ ಇದೆ. ಉತ್ತರ ಕ್ರಿಯೆಯನ್ನು ಮಾಡಿದವರು. ಸತ್ತವರ ಆಸ್ತಿಪಾಸ್ತಿಗಳಿಗೆ ಹಕ್ಕುದಾರರಾಗುವರೆಂಬ ವಾಡಿಕೆಯಿದ್ದುದರಿಂದ ಸೂಡದ ಶಂಕರಾಳ್ವ ಅಜ್ಜ ಬಿರ್ಮಾಳ್ವನ ಚಿತೆಗೆ ಒಂದಿಷ್ಟು ಗಂಧದ ಕಟ್ಟಿಗೆ ತಂದು ಹಾಕಿ ತಾನೂ ಶವ ಸಂಸ್ಕಾರದಲ್ಲಿ ಪಾಲುಗೊಂಡಿದ್ದೇನೆಂದೂ ತನಗೆ ಬೀಡಿನ ‘ಗಡಿ’ ಸಿಗಬೇಕೆಂದೂ ಊರ ಮುಖಂಡರ ಮೂಲಕ ವಾದ ಹೂಡುತ್ತಾನೆ. ಅಜ್ಜನ ಉತ್ತರ ಕ್ರಿಯೆಯನ್ನು ಆತ ನಡೆಸಲು ಸಿರಿ ಅವಕಾಶ ಕೊಡುವುದಿಲ್ಲ ಎಂಬ ಮಾತು ಪ್ರತ್ಯೇಕ!

ಒಟ್ಟಿನಲ್ಲಿ ತುಳುನಾಡಿನ ಸಂಸ್ಕೃತಿ ಪರಂಪರೆಯಲ್ಲಿ ಹಲವಾರು ವಿಶಿಷ್ಟ ಎಳೆಗಳು ಕೂಡಿದ್ದು, ಅದನ್ನು ಐತಿಹಾಸಿಕ ಆಧಾರಗಳಿಗಿಂತಲೂ ಹೆಚ್ಚು ಸಚಿತ್ರವಾಗಿ ರೋಚಕವಾಗಿ ಹಾಗೂ ನಿಸ್ಸಂಕೋಚ ನಿರಂಬಳವಾಗಿ ಪಾಡ್ದನ ಪ್ರಪಂಚವು ನಿರೂಪಿಸುತ್ತದೆನ್ನಬಹುದು. ಇವುಗಳ ಕೂಲಂಕಷ ಅಧ್ಯಯನದಿಂದ ತುಳುನಾಡಿನ ಇತಿಹಾಸ, ಸಾಹಿತ್ಯಗಳಿಗೆ ಸಬಲತೆ ನೀಡುವ ಕಾಯಕ ಇನ್ನು ವ್ಯಾಪಕವಾಗಿ ನಡೆಯಬೇಕಾಗಿದೆ.