೧೦. ಕಪಾರ ಹೊರತು ಉಳಿದ ಪಾಠಗಳಲ್ಲಿ ಈ ಮೀನುಗಳು ಹಿಡಿಯಲ್ಪಟ್ಟು ಮತ್ತೆ ಮನೆಗೆ ಬರುತ್ತವೆ. ಕಪಾರಲ್ಲಿ ತಂಗಿಗೆ ಸೂರ್ಯನಿಂದ ಒಂದು ಮಗುವಾಗುತ್ತದೆ.

೧೧. ತಪಾ ತುಪಾರಲ್ಲಿ ಹೊರಗೆಸೆಯಲ್ಪಟ್ಟ ಮೀನುಗಳು ಹರಿವೆ ಮತ್ತು ಬಸಲೆಗಳಾಗಿ ಪರಿವರ್ತನೆ ಹೊಂದುತ್ತವೆ. ಕಪಾರಲ್ಲಿ ಮೀನುಗಳು ದಾಳಿಂಬೆ ಮತ್ತು ನೆಗ್ಗಿಮುಳ್ಳುಗಳಾಗಿ ಪರಿವರ್ತನೆ ಹೊಂದುತ್ತವೆ. ಕಪಾರಲ್ಲಿ ತಂಗಿಯು ಮಗು ಮತ್ತು ಗಂಡನಾದ ಸೂರ್ಯನೊಂದಿಗೆ ತನ್ನ ತವರಿಗೆ ಬರುತ್ತಾಳೆ. ಆದರೆ ತವರು ಮನೆಯಲ್ಲಿ ಆಕೆಗೆ ತಂದೆ-ತಾಯಿಯರ ಭೇಟಿ ಆಗುವುದಿಲ್ಲ. ನಿರಾಶೆಗೊಂಡ ಆಕೆ ಸೂರ್ಯಲೋಕಕ್ಕೆ ಹಿಂದಿರುಗುತ್ತಾಳೆ. ಕಪಾರ ಕಥೆ ಇಲ್ಲಿಗೆ ಮುಕ್ತಾಯವಾಗುತ್ತದೆ.

೧೨. ತುಪಾರಲ್ಲಿ ಹರಿವೆ ಮತ್ತು ಬಸಲೆಯನ್ನು ಮತ್ತೆ ಹೊರಗೆಸೆಯಲಾಗಿದೆ. ಅಲ್ಲಿಗೆ ಆ ಪಾಠದ ಕಥೆ ಮುಗಿದಿದೆ. ತುಪಾ೩ ರಲ್ಲಿ ಮತ್ತೆ ಅವು ಕೆಸುವಾಗಿ ಪರಿವತ್ನೆ ಹೊಂದುತ್ತವೆ. ಕೆಸುವೂ ಹೊರಗೆಸೆಯಲ್ಪಟ್ಟು ‘ತಿಮರೆ’ಯಾಗಿ ಪರಿವರ್ತಿತವಾಗುತ್ತದೆ. ತಿಮರೆ ಅಂತಿಮವಾಗಿ ಹೊಳೆಗೆ ಎಸೆಯಲ್ಪಡುತ್ತದೆ.

೧೩. ತಪಾ ಅತ್ಯಂತ ದೀರ್ಘವಾದ ಕಥೆಯಾಗಿದ್ದರೆ ತುಪಾ೪ ಅತ್ಯಂತ ಚಿಕ್ಕ ಕಥೆಯಾಗಿದೆ. ಈ ಪಾಠವು ಕಪಾರೊಂದಿಗೆ ಅನೇಕ ಸಮಾನ ಅಂಶಗಳನ್ನು ಹೊಂದಿದೆ.

ಪಾಠಗಳಲ್ಲಿರುವ ಈ ಸಮಾನ ಮತ್ತು ಭಿನ್ನ ಅಂಶಗಳು ಕಥೆಯ ಅರ್ಥವನನ್ನು ಗ್ರಹಿಸಲು ಸಹಾಯಮಾಡುತ್ತವೆ. ಅದಕ್ಕೂ ಮುನ್ನ ಈ ಕಥೆಯು ನಿರೂಪಿತವಾಗುವ ಸಂದರ್ಭವನ್ನು ಪರಿಶೀಲಿಸಬೇಕು.

ಕನ್ನಡದಲ್ಲಿ ಉಪಲಬ್ಧವಿರುವ ಕಥೆಗಳನ್ನು ಯಾವಾಗ ಹೇಳಿತ್ತಿದ್ದರೋ ನಮಗೆ ತಿಳಿಯದು. ಅದನ್ನು ಸಂಗ್ರಹಿಸಿಕೊಟ್ಟವರು ಆ ಬಗ್ಗೆ ಯಾವ ವಿವರಗಳನ್ನು ನಮಗೆ ನೀಡಿಲ್ಲ ಆದರೆ ತುಳುವಿನ ಸಂದರ್ಭ ಮಾತ್ರ ಸ್ಪಷ್ಟವಾಗಿ ತಿಳಿದಿದೆ.

ಈ ಕಥೆಯನ್ನು ವೈಯುಕ್ತಿಕವಾಗಿ ನಾನು ಕೇಳಿದ್ದು ನನ್ನ ತಾಯಿಯಿಂದ, ರಾತ್ರಿಯ ಊಟದ ಅನಂತರ ನಾವೆಲ್ಲರೂ ಅಡುಗೆ ಕೋಣೆಯಲ್ಲಿ ಮಲಗಿಕೊಂಡಿರುವಾಗ, ತಾಯಿ ಈ ಕಥೆಯನ್ನು ಹೇಳುತ್ತಿದ್ದರು. ನನ್ನ ಅಣ್ಣ ಒಂದು ಬದಿಯಲ್ಲಿ ನಾನು ಮಧ್ಯದಲ್ಲಿ ನನ್ನ ಚಿಕ್ಕ ತಂಗಿ ಇನ್ನೊಂದು ಬದಿಯಲ್ಲಿ ಮಲಗುತ್ತಿದ್ದೆವು. ತಾಯಿಯು ತಂಗಿಗೆ ತಾಗಿಕೊಂಡು ಮಲಗುತ್ತಿದ್ದಳು. ಕಂಬಳಿಯ ಹೊದಿಕೆಯಡಿಯಲ್ಲಿ ನಾವೆಲ್ಲ ಪಿಳಿ ಪಿಳಿ ಕಣ್ಣು ಬಿಡುತ್ತ ಕಥೆ ಕೇಳುತ್ತಿದ್ದೆವು. ಒಮ್ಮೊಮ್ಮೆ ಕಥೆ ಹೇಳುತ್ತಿರುವಾಗಲೇ ನಮ್ಮಲ್ಲಿ ಸಣ್ಣ ಸಣ್ಣ ಜಗಳಗಳಾಗುತ್ತಿದ್ದುದೂ ಉಂಟು. ಪರಸ್ಪರ ಒದ್ದುಕೊಳ್ಳುವುದು, ಚಿವುಟಿಕೊಳ್ಳುವುದು ಇತ್ಯಾದಿ ನಾವು ದಿನಾ ಮಾಡುತ್ತಿದ್ದ ಕೆಲಸ. ಈ ಪೀಕಲಾಟ ಜಾಸ್ತಿ ಆದಾಗ ತಾಯಿ ಕಥೆಯನ್ನು ನಿಲ್ಲಿಸುತ್ತಿದ್ದರು. ನಾವೆಲ್ಲ ಯಥಾಪ್ರಕಾರ ಮತ್ತೆ ಶಿಸ್ತಿಗೆ ಒಳಪಟ್ಟು ಮಲಗಿದ ಮೇಲೆಯೆ ಕಥೆ ಮುಂದುವರಿಯುತ್ತಿತ್ತು. ಇಂಥ ಕಡೆ ಕಥೆಯು ನಮ್ಮನ್ನು ಹದ್ದುಬಸ್ತಿನಲ್ಲಿಟ್ಟು ನಿದ್ರೆ ಮಾಡಿಸಲು ಒಂದು ತಂತ್ರದಂತೆ ಕೆಲಸ ಮಾಡುತ್ತಿತ್ತು. ಏನಿದ್ದರೂ ಅಡುಗೆ ಮನೆಯ ಈ ವಾತಾವರಣ ಇತರೆಡೆಗಳಲ್ಲಿಯೂ ಸಾಮಾನ್ಯವಾಗಿರುವ ಅಂಶ ಮತ್ತು ಈ ಅಂಶವು ಎ.ಕೆ. ರಾಮಾನುಜನ್ ಅವರು ಹೇಳಿರುವ ‘ಊಟದ ಸಮಯದ ಕಥೆ’ಗಳಿಗಿಂತ ಭಿನ್ನ (೧೯೮೬:೪೬). ಒಟ್ಟಾರೆಯಾಗಿ ತುಳುನಾಡನ್ನು ಗಮನದಲ್ಲಿರಿಸಿಕೊಂಡರೆ ಈ ಕಥೆಯು ಸಂದರ್ಭವನ್ನು ಹೀಗೆ ರೇಖಿಸಬಹುದು:

ಕಥೆಯ ಅರ್ಥವನ್ನು ಮತ್ತು ರಚನೆಯ ಗುಣವನ್ನು ತಿಳಿಯಬೇಕಾದರೆ ಈ ಸಂದರ್ಭದ ಪರಿಶೀಲನೆ ಅಗತ್ಯ. ಕಥೆಯ ಯಾವೊಂದು ಸಂದರ್ಭದಲ್ಲಿ ಬದಲಾವಣೆ ಉಂಟಾದರೂ ಅದರಿಂದ ಕಥೆಯ ರಚನೆ ಮತ್ತು ಅರ್ಥದ ಮೇಲೆ ಪರಿಣಾಮ ಉಂಟಾಗುತ್ತದೆ. ಪಾಠಾಂತರಗಳಿಗೆ ಮೂಲ ಕಾರಣವೇ ಸಂದರ್ಭದಲ್ಲಾಗುವ ಬದಲಾವಣೆ. ಈ ಅರ್ಥದಲ್ಲಿ ಸ್ಥಿರೀಕೃತವಾದ ಮೌಲ್ಯ ವಿನ್ಯಾಸವೊಂದನ್ನು ಯಾವೊಂದು ಕಥೆಯೂ ಹೊಂದಿಸಲಾರದು. ಅದು ಸದಾ ಪರಿವರ್ತನಶೀಲ. ಆಶಯಗಳ ಪರಿಶೀಲನೆಯಲ್ಲಿ ಸ್ಪಷ್ಟವಾಗುವ ವಿಚಾರವಿದು.

13_42_TSC-KUH

ಬಾಳೆ ಮೀನು-ಮುಗುಡು ಮೀನು ಕಥೆಯ ವಿವಿಧ ಪಾಠಗಳ ಮುಖ್ಯ ಘಟ್ಟಗಳು
  ತುಪಾ ತುಪಾ ತುಪಾ ತುಪಾ ಕಪಾ ಕಪಾ
ಬಡದಂಪತಿಗಳಿಗೆ ೭ ಮಕ್ಕಳು: ೬ ಗಂಡು ೧ ಹೆಣ್ಣು ಬಡದಂಪತಿಗಳಿಗೆ ೭ ಮಕ್ಕಳು: ೬ ಗಂಡು ೧ ಹೆಣ್ಣು ಬಡದಂಪತಿಗಳಿಗೆ ೨ ಮಕ್ಕಳು: ೧ ಗಂಡು ೧ ಹೆಣ್ಣು ಬಡದಂಪತಿಗಳಿಗೆ ೨ ಮಕ್ಕಳು: ಹಿರಿಯವರು ಮಗಳು, ಕಿರಿಯವ ಮಗ ಗುಲಗಂಜಿ ತಿಂದ ರಾಣಿಗೆ ಮಗಳು ಜನಿಸಿದ್ದು ಬಡದಂಪತಿಗಳಿಗೆ ೨ ಮಕ್ಕಳು: ೧ ಗಂಡು ಒಂದು ಹೆಣ್ಣು
ಅಣ್ಣ ಹೂ ತಂದಿಟ್ಟು ಮುಡಿದವರನ್ನು ಮದುವೆ ಆಗುವೆ ಎಂದದ್ದು ಅಣ್ಣ ಹೂ ತಂದಿಟ್ಟು ಮುಡಿದವರನ್ನು ಮದುವೆ ಆಗುವೆ ಎಂದದ್ದು ಅಣ್ಣ ಹೂ ತಂದಿಟ್ಟು ಮುಡಿದವರನ್ನು ಮದುವೆ ಆಗುವೆ ಎಂದದ್ದು ತಮ್ಮ ಹೂ ತಂದಿಟ್ಟು ಮದುವೆ ಆಗಿವೆ ಎಂದದ್ದು ಗುಲಗಂಜಿ ಮಗಳನ್ನು ಅಣ್ಣ ನೋಡಿಯೇ ಮದುವೆಯಾಗಲು ನಿರ್ಧರಿಸಿದ್ದು ಹೊಳೆಯಿಂದ ಕೂದಲು ತಂದು ಆ ಕೂದಲವಳನ್ನೇ ಮದುವೆಯಾಗುವೆ ಎಂದ
ಮದುವೆ ತಯಾರಿ ಮದುವೆ ತಯಾರಿ ಮದುವೆ ತಯಾರಿ ಮದುವೆ ತಯಾರಿ ಮದುವೆ ತಯಾರಿ ಮದುವೆ ತಯಾರಿ
ಎರಡು ಇಲಿಗಳ ಸಹಾಯದಿಂದ ತಂಗಿ ತಪ್ಪಿಸಿಕೊಂಡದ್ದು ತಂಗಿ ತಾನೆ ಮನೆಯಿಂದ ಹೊರಗೆ ಓಡಿದಳು ತಂಗಿ ತಾನೇ ಮನೆಯಿಂದ ಹೊರಗೆ ಓಡಿದಳು ಇಲಿಯ ಸಹಾಯದಿಂದ ತಂಗಿ ಮನೆಯಿಂದ ತಪ್ಪಿಸಿಕೊಂಡಿದ್ದು ತಾನಾಗಿಯೇ ಮನೆಯಿಂದ ಓಡಿದಳು ತಾನಾಗಿಯೇ ಮನೆ ಯಿಂದ ಓಡಿದಳು
ಆಕೆ ಜಮನೇರಳೆ ಮರವನ್ನೇರಿ ಕುಳಿತದ್ದು ಜಮನೇರಳೆ ಮರವನ್ನೇರಿ ಕುಳಿತಳು ತಾನೇ ತಿಂದೆಸೆದ ಗೊರಟಿನಿಂದ ಹುಟ್ಟಿದ ಮಾವಿನ ಮರವನ್ನೇರಿದ್ದು ಜಮನೇರಳೆ ಮರವನ್ನು ಏರಿದಳು ನೀರಂಜಿ ಮರವನ್ನು ಏರಿದಳು ಅಶ್ವತ್ಥ ಮರವನ್ನು ಏರಿದಳು
ಆಕೆಯ ಕಣ್ಣೀರಿನಿಂದ ಕೆರೆ ಸೃಷ್ಟಿಯಾಯಿತು ಆಕೆಯ ಕಣ್ಣೀರಿನಿಂದ ಕೆರೆ ಸೃಷ್ಟಿಯಾಯಿತು ಈಗಾಗಲೇ ಅಲ್ಲಿ ಒಂದು ಕೆರೆ ಇದೆ ಕೆರೆಯ ಉಲ್ಲೇಖವೇ ಇಲ್ಲ ಈಗಾಗಲೇ ಒಂದು ಕೆರೆಯಿದೆ ಕೆರೆಯ ಉಲ್ಲೇಖವೇ ಇಲ್ಲ
ರಕ್ತ ಸಂಬಂಧಿಗಳು ಆಕೆಯನ್ನು ಕೆಳಗಿಳಿಯುವಂತೆ ಬೇಡುವುದು ರಕ್ತ ಸಂಬಂಧಿಗಳು ಕೆಳಗಿಯುವಂತೆ ಬೇಡುವುದು  ರಕ್ತ ಸಂಬಂಧಿಗಳು ಕೆಳಗಿಳಿಯುವಂತೆ ಬೇಡುವುದು ರಕ್ತ ಸಂಬಂಧಿಗಳು ಕೆಳಗಿಳಿಯುವಂತೆ ಬೇಡುವುದು ರಕ್ತ ಸಂಬಂಧಿಗಳು ಕೆಳಗಿಳಿಯುವಂತೆ ಬೇಡುವುದು ರಕ್ತ ಸಂಬಂಧಿಗಳು ಕೆಳಗಿಳಿಯುವಂತೆ ಬೇಡುವುದು
ಅಣ್ಣ ಮರವನ್ನೇರಿ ಆಕೆಯನ್ನು ಬೆನ್ನಟ್ಟುವುದು ಅಣ್ಣ ಮರವನ್ನೇರಿ ಆಕೆಯನ್ನು ಬೆನ್ನಟ್ಟುವುದು ಅಣ್ಣ ಮರವನ್ನೇರಿ ಆಕೆಯನ್ನು ಬೆನ್ನಟ್ಟುವುದು ತಮ್ಮ ಮರವೇರುವುದಿಲ್ಲ. ಸೂರ್ಯ ಲೋಕದಿಂದ ಆಕೆಗೆ ನೂಲು ಸಿಗುತ್ತದೆ. ಅಣ್ಣ ಮರವೇರಿ ಆಕೆಯನ್ನು ಬೆನ್ನಟ್ಟುತ್ತಾನೆ ಅಣ್ಣ ಮರವನ್ನು ತುಂಡರಿಸುತ್ತಾನೆ.
ಇಬ್ಬರೂ ಕೆರೆಗೆ ಹಾರಿ ಮೀನುಗಳಾಗುತ್ತಾರೆ ಇಬ್ಬರೂ ಕೆರೆಗೆ ಹಾರಿ ಮೀನುಗಳಾಗುತ್ತಾರೆ ಇಬ್ಬರೂ ಕೆರೆಗೆ ಹಾರಿ ಮೀನುಗಳಾಗುತ್ತಾರೆ ನೂಲನ್ನು ಹಿಡಿದು ಕೊಂಡು ಸೂರ್ಯ ಲೋಕ ಸೇರಿ ಸೂರ್ಯ ನನ್ನೇ ಮದುವೆಯಾಗುವಳು ಇಬ್ಬರೂ ಕೆರೆಗೆ ಹಾರಿ ಮೀನುಗಳಾಗುತ್ತಾರೆ. ಅಣ್ಣ ಸಾಯುತ್ತಾನೆ. ತಂಗಿ ಸೂರ್ಯಲೋಕ ಸೇರಿ ಸೂರ್ಯನನ್ನು ಮದುವೆಯಾಗುತ್ತಾಳೆ
೧೦ ನಲಿಕೆಯವನು ಮೀನನ್ನು ಹಿಡಿದು ಮನೆಗೆ ತರುತ್ತಾನೆ ಮೀನನ್ನು ಹಿಡಿದು ಮನೆಗೆ ತರಲಾಗುವುದು ಮೀನನ್ನು ಮನೆಗೆ ತರಲಾಗುವುದು ……… ಮೀನನ್ನು ಹಿಡಿದು ಮನೆಗೆ ತರಲಾಗುವುದು ತಂಗಿ ಸೂರ್ಯನಿಂದ ಮಗುವನ್ನು ಪಡೆಯುತ್ತಾಳೆ
೧೧ ಮೀನನ್ನು ಬೇಯಿಸಿದಾಗ ಬಿಳಿ ನೊರೆ, ರಕ್ತ ಪಿಸುಗುಟ್ಟು ಹೇಳಿದ್ದು ಬೇಯಿಸಿದಾಗ ಬಿಳಿ ನೊರೆ, ರಕ್ತ, ಪಿಸುಗುಟ್ಟುವಿಕೆ ಕೇಳಿದ್ದು ಬೇಯಿಸಿದಾಗ ಬಿಳಿ ನೊರೆ, ರಕ್ತ, ಪಿಸುಗುಟ್ಟುವಿಕೆ ಕೇಳಿದ್ದು ……… ಮೀನುಗಳನ್ನು ಬೇಯಿಸಿ ತಿನ್ನಲಾಗಿದೆ. ಮಗುವಿನ ಸಹಿತ ತಂಗಿ ತವರು ಮನೆಗೆ ಹಿಂದಿರುಗಿದ್ದು
೧೨ ಮೀನನ್ನು ಹೊರ ಗೆಸೆದಾಗ ಅಲ್ಲಿ ಹರಿವೆ, ಬಸಲೆ ಹುಟ್ಟಿದ್ದು ಹೊರಗೆ ಎಸೆಯಲಾಗುವುದು ಮೀನುಗಳನ್ನು ಹೊರಗೆ ಎಸೆಯಲಾಗುವುದು, ಹರಿವೆ, ಬಸಲೆ ಹುಟ್ಟಿದ್ದು ……… ಮೀನಿನ ಮುಳ್ಳುಗಳನ್ನು ಹೊರಗೆ ಎಸೆದಾಗ ಅಲ್ಲಿ ನೆಗ್ಗಿ ಮುಳ್ಳು, ದಾಳಿಂಬೆ ಹೂ ಹುಟ್ಟಿದ್ದು ಅವಳು ಬರುವಾಗ ತಂದೆ ತಾಯಂದಿರು ನಿದ್ರಿಸಿದ ಕಾರಣ ಭೇಟಿಯಾಗಲಿಲ್ಲ.
೧೩ ಹರಿವೆ ಮತ್ತು ಬಸಲೆಯನ್ನು ಬೇಯಿಸಿದಾಗ ಮತ್ತೆ ನೊರೆ, ರಕ್ತ ಕಾಣಿಸಿದ್ದು ……… ಹರಿವೆ ಮತ್ತು ಬಸಲೆಯನ್ನು ಬೇಯಿಸಿದಾಗ ನೊರೆ, ರಕ್ತ ಕಾಣಿಸಿದ್ದು ……… ಜನರು ಅಣ್ಣನಿಗೆ ಬೈದರು, ತಂಗಿಯನ್ನು ಹೂಗಳಿದರು ತಂಗಿ ಮಗುವಿನ ಸಹಿತ ಸೂರ್ಯ ಲೋಕಕ್ಕೆ ಹೋಗುವಳು
೧೪ ಹರಿವೆ ಮತ್ತು ಬಸಲೆಯನ್ನು ಹೊರ ಗೆಸೆಯಲಾಗುವುದು ……… ಹರಿವೆ ಮತ್ತು ಬಸಲೆ ಯನ್ನು ಹೊರಗೆಸೆಯಲಾಗುವುದು ಅಲ್ಲಿ ‘ಕೆಸು’ ಹುಟ್ಟಿದ್ದು ……… ……… ………
೧೫ ……… ……… ಕೆಸುವನ್ನು ಬೇಯಿಸಿದಾಗ ‘ತಿಮಾರೆ’ ಹುಟ್ಟಿದ್ದು ……… ……… ………
೧೬ ……… ……… ‘ತಿಮಾರೆ’ಯನ್ನು ನದಿಗೆ ಎಸೆಯಲಾಗುವುದು ……… ……… ………

ಕಥೆಯು ಮೇಲ್ಕೋಟಕ್ಕೆ ಅಣ್ಣ ತಂಗಿಯರ ಲೈಂಗಿಕ ಸಂಬಂಧದ ನಿಷೇಧದ ಕುರಿತಾಗಿದೆ ಎಂಬುದು ಸ್ಪಷ್ಟ. ಅಗಮ್ಯ ಗಮನವು (incest) ನಿಷಿದ್ಧವಾಗಿರುವ ಸಮಾಜದಲ್ಲಿ ಈ ಕಥೆಯು ಜನಪ್ರಿಯವಾಗಿರಬೇಕು, ಇಲ್ಲವೇ ಅಗಮ್ಯ ಗಮನದ ಅವಕಾಶವಿರುವೆಡೆ, ಅದನ್ನು ನಿಯಂತ್ರಿಸಲು ಈ ಕಥೆ ಹೆಣಗುತ್ತಿರಬೇಕು. ಈ ಕಥೆಯನ್ನು ಅಥವಾ ಈ ವರ್ಗಕ್ಕೆ ಸೇರಿದ ಕಥೆಗಳನ್ನು ಅಭ್ಯಾಸ ಮಾಡಿದ ವಿದ್ವಾಂಸರು ಹೆಚ್ಚು ಕಡಿಮೆ ಇದೇ ವಾದವನ್ನು ಮುಂದಿಟ್ಟಿದ್ದಾರೆ. ‘ಸನ್ಯ ಕಿ ಸಾರ್’ ಕಥೆಯನ್ನು ಮನಶ್ಯಾಸ್ತ್ರೀಯ ಚೌಕಟ್ಟಿನಲ್ಲಿ ಅಭ್ಯಾಸ ಮಾಡಿದ ಕ್ಲಾಸ್‌ ಮತ್ತು ಕೊರೋಮ್ ಅವರು ಅಗಮ್ಯ ಗಮನದ ಭಯವೇ ಇಂಥ ಕಥೆಗಳ ಹುಟ್ಟಿಗೆ ಕಾರಣ ಎಂದು ಹೇಳಿದ್ದಾರೆ. (೧೯೮೮:೭೦). ಕನ್ನಡದಲ್ಲಿ ಈ ವರ್ಗಕ್ಕೆ ಸೇರಿದ ಎರಡು ಕಥೆಗಳನ್ನು ವಿಶ್ಲೇಷಿಸುವ ಪ್ರಯತ್ನ ನಡೆದಿದೆ. ಹಿ.ಶಿ. ರಾಮಚಂದ್ರೇಗೌಡರು ಕಥೆಯ ಆಶಯಗಳನ್ನು ಅಷ್ಟಾಗಿ ಗಮನಿಸದೆ, ತಂಗಿಯ ಅಸಹಜವಾದ ಹುಟ್ಟನ್ನು ಮಾತ್ರ ಗಮನಿಸಿದ್ದಾರೆ. (೧೯೮೨:೫೭೫). ಸಂಧ್ಯಾ ರೆಡ್ಡಿಯವರು ಅಗಮ್ಯ ಗಮನದ ನಿಷೇಧವೇ ಈ ಕಥೆಯ ಪ್ರಧಾನ ಉದ್ದೇಶ ಎಂದು ತರ್ಕಿಸಿದ್ದಾರೆ (೧೯೮೨:೧೫೬). ಇವರಿಬ್ಬರೂ ಈ ಕಥೆಯ ಜೀವಾಳವಾದ ಪ್ರತೀಕದ ಗುಣವನ್ನಾಗಲೀ, ಇಂಥ ಕಥೆಗಳಿಗೆ ಅನಿವಾರ್ಯವಾದ ಪಾಠಾಂತರದ ಗುಣವನ್ನಾಗಲೀ ಗಮನಿಸಲಿಲ್ಲ. ಇವರಿಬ್ಬರ ಪ್ರಯತ್ನ ಬಹುಮಟ್ಟಿಗೆ ಕಥೆಯು ಯಾವ ವರ್ಗಕ್ಕೆ ಸೇರುತ್ತದೆ ಎಂದು ನಿಷ್ಕರ್ಷೆ ಮಾಡುವುದಕ್ಕೆ ಬದ್ಧವಾಗಿದೆ. ಜವಾಹರಲಾಲ ಹಂಡೂ ಅವರು ಈ ಕಥೆಯನ್ನು ವಿಶ್ಲೇಷಿಸುತ್ತಾ ಕಥೆಯಲ್ಲಿ ಕಂಡು ಬರುವ ವಿರೋಧ ದ್ವಂದ್ವ ಗುಣವನ್ನು ಸರಿಯಾಗಿ ಗ್ರಹಿಸಿದ್ದಾರೆ. ಇವರ ಉದ್ದೇಶವೂ ಕಥೆ ರಾಚನಿಕ ವಿಶ್ಲೇಷಣೆ ನಡೆಸುವುದಾಗಿದ್ದು, ಲೆವಿಸ್ಟ್ರಾನ್‌ನ ಪ್ರಸ್ತುತತೆಯನ್ನು ಮನಗಾಣಿಸುವುದಾಗಿತ್ತು.

ಮೇಲೆ ಹೇಳಿದ ಎಲ್ಲ ವಿದ್ವಾಂಸರ ಪ್ರಯತ್ನಗಳೂ ತುಂಬ ಸೀಮಿತವಾದ ಉದ್ದೇಶವನ್ನು ಹೊಂದಿದೆ. ಬಹು ಜನರಿಗೆ ಕಥೆಯ ಕಾರ್ಯ (Function)ದ ಬಗ್ಗೆಯೇ ಆಸಕ್ತಿ. ಈ ನಿಟ್ಟಿನಲ್ಲಿ ಕಥೆಯನ್ನ ಅರ್ಥ ಮಾಡಿಕೊಳ್ಳುವುದು ಬಹಳ ಸುಲಭವೂ ಹೌದು. ಹಾಕೆಂದರೆ ಕಥೆಯು ಮೇಲ್ನೋಟದಲ್ಲಿಯೇ ಅಣ್ಣ-ತಂಗಿಯರ ಲೈಂಗಿಕ ಸಂಬಂಧವನ್ನು ನಿರಾಕರಿಸುತ್ತದೆ. ಈ ಕಥೆಯಲ್ಲಿರುವ ಅಪೂರ್ವವಾದ ನಿರೂಪಣೆ ಮತ್ತು ಪ್ರತೀಕ ಶೈಲಿಯನ್ನು ಯಾವ ವಿದ್ವಾಂಸರೂ ಗಮನಿಸಿಲ್ಲ. ಮೇಲಾಗಿ ಕಥೆಯ ಕಾರ್ಯದ ಶೋಧದ ಅವಸರದಲ್ಲಿ ಅವರೆಲ್ಲ ಕಥೆಯ ವಿಶಿಷ್ಟ ಗುಣವನ್ನು ಗೌಣಗೊಳಿಸಿದ್ದಾರೆ.

‘ಬಾಳೆ ಮೀನು- ಮುಗುಡು ಮೀನು’ ಕಥೆಯಲ್ಲಿ ಪ್ರಧಾನವಾಗಿ ಎರಡು ಲೋಕಗಳಿವೆ.

೧. ಮಾನವ ನಿರ್ಮಿತ ಲೋಕ

೨. ಪ್ರಕೃತಿ ನಿರ್ಮಿತ ಲೋಕ

ಕಥೆಯು ಈ ಎರಡೂ ಲೋಕಗಳ ಆಂತರಿಕ ಸಂಬಂಧ ಮತ್ತು ಸಂಘರ್ಷದ ಕುರಿತು ಅಪೂರ್ವ ಎನ್ನಬಹುದಾದ ವಿವರಗಳನ್ನು ನೀಡುತ್ತದೆ. ಮೊದಲನೆಯದಾದ ಮಾನವನಿರ್ಮಿತ ಜಗತ್ತಿನಲ್ಲಿ ತಂದೆ, ತಾಯಿ, ಅಣ್ಣ, ತಂಗಿ, ಅತ್ತಿಗೆಯರಲ್ಲದೆ, ಅವರು ವಾಸಿವು ಮನೆಯೂ ಇದೆ. ಎರಡನೆಯದಾದ ಪ್ರಕೃತಿ ನಿರ್ಮಿತ ಲೋಕದಲ್ಲಿ ಮರ, ಕೆರೆ, ಮೀನು, ಬಸಲೆ, ಹರಿವೆಗಳಿವೆ. ಇದನ್ನು ಸ್ಥೂಲವಾಗಿ ಸಸ್ಯ ವರ್ಗ ಮತ್ತು ಪ್ರಾಣಿ ವರ್ಗ ಎಂದು ಎರಡು ರೀತಿಯಿಂದ ವಿಭಜಿಸಿಕೊಳ್ಳಬಹುದು. ಮೊದಲನೆಯದು ಎರಡನೆಯದರಿಂದಲೂ ಎರಡನೆಯರು ಮೊದಲನೆಯದರಿಂದಲೂ ಪ್ರಭಾವಕ್ಕೆ ಒಳಗಾಗುತ್ತದೆ. ಈ ಪರಭಾವವು ಒಂದರ ಮೇಲೆ ಇನ್ನೊಂದು ಹಿಡಿತ ಸಾಧಿಸಲು ಯತ್ನಿಸುವ ಹೋರಾಟವಾಗಿ ಮಾರ್ಪಡುತ್ತದೆ. ಕಥೆಯಲ್ಲಿ ಪ್ರಕೃತಿಯೇ ಮಾನವ ಲೋಕದ ಮೇಲೆ ದಿಗ್ವಿಜಯ ಸಾಧಿಸುತ್ತದೆ. ಈ ಅರ್ಥದಲ್ಲಿ ಕಥೆಯ ಪ್ರಗತಿಶೀಲತೆಯೂ ಮುಖ್ಯವಾಗುತ್ತದೆ.

ಕಥೆ ಆರಂಭವಾಗುವುದು ಮಾನವ ನಿರ್ಮಿತ ಜಗತ್ತಿನಲ್ಲಿ ಈ ಜಗತ್ತಿನಲ್ಲಿ ಒಂದು ಮನೆಯಿದೆ, ಮನೆಯಲ್ಲಿ ವಾಸಿಸುವ ತಂದೆ-ತಾಯಿಯರಿದ್ದಾರೆ. ಮತ್ತು ಅವರಿಗೆ ಮಕ್ಕಳೂ ಇದ್ದಾರೆ. ಈ ಒಂದು ಘಟಕವನ್ನು ‘ಸಾಂಸ್ಕೃತಿಕ ಶಿಷ್ಟ’ ಎಂದು ಕರೆಯಬಹುದು. ಇಲ್ಲಿ ಶಿಷ್ಟವು ತನಗೆ ಅಗತ್ಯವಾದ ನಡಾವಳಿಗಳನ್ನು ರೂಪಿಸಿರುತ್ತದೆ. ಈ ನಡಾವಳಿಗಳು ಮಾನವ ಶಿಷ್ಟದ ಕೇಂದ್ರ ಉದ್ದೇಶಕ್ಕೆ ಬದ್ದವಾಗಿದ್ದುಕೊಂಡೇ ಕ್ರಿಯಾಶೀಲವಾಗುತ್ತದೆ. ಇಂಥ ಕಡೆ ಅಣ್ಣನೊಬ್ಬ ತಂಗಿಯನ್ನು ಮದುವೆಯಾಗ ಬಯಸುತ್ತಾನೆ. ಈ ಬಯಕೆಯು ಮನೆಯ ಸಾಂಸ್ಕೃತಕ-ಮಾನವ ಶಿಷ್ಟಕ್ಕೆ ವಿರೋಧವಾಗಿರುವುದರಿಂದ, ಮಾನವ ನಿರ್ಮಿತ ಜಗತ್ತಿಗೆ ‘ಪರಿಶಿಷ್ಟ’ವಾಗುತ್ತದೆ. ಶಿಷ್ಟವೂ ಪರಿಶಿಷ್ಟವನ್ನು ತನ್ನ ಆಂತರಿಕ ಜಗತ್ತಿನಿಂದ ದೂರ ತಳ್ಳುವುದರ ಮೂಲಕ ತನ್ನ ತನವನ್ನು ಸದಾ ಕಾಯ್ದುಕೊಂಡಿರುತ್ತದೆ. ಮನೆಯ ಉಳಿವಿಗೆ ಅವಶ್ಯಕವಾದ ಕ್ರಿಯೆ ಇದು. ಈ ಪ್ರಕ್ರಿಯೆ ಜನಾಂಗದಿಂದ ಜನಾಂಗಕ್ಕೆ ಬದಲಾಗುತ್ತಾ ಇರುತ್ತದೆ. ಪ್ರತಿ ಜನಾಂಗದಲ್ಲಿಯೂ ಶಿಷ್ಟ-ಪರಿಶಿಷ್ಟರ ಬಗ್ಗೆ ತಮ್ಮದೇ ಆದ ಕಲ್ಪನೆಯಿದೆ. ಕಥೆಯಲ್ಲಿ ಶಿಷ್ಟದ ಎಡೆಯಲ್ಲಿ ಜನಿಸಿದ ಪಿರಶಿಷ್ಟಾತ್ಮಕವಾದ ಚಿಂತನೆಯಿಂದಾಗಿ ತಂಗಿಯು ಮನೆಬಿಟ್ಟು, ಪ್ರಾಣಿಯೊಂದರ ಸಹಾಯದಿಂದ ಪ್ರಕೃತಿ ನಿರ್ಮಿತ ಜಗತ್ತಿಗೆ ಹೊರಟುಬಿಡುತ್ತಾಳೆ. ಅಂದರೆ ಪರೋಕ್ಷವಾಗಿ ಮನೆಯ ಶಿಷ್ಟವನ್ನು ಉಳಿಸುತ್ತಾಳೆ. ಮನೆಗೆ ಪರಿಶಿಷ್ಟವಾದ ವಾತಾವರಣಕ್ಕೆ ಸೇರಿಕೊಳ್ಳುತ್ತಾಳೆ.

ತಂಗಿಯು ಮಾನವ ನಿರ್ಮಿತ ಲೋಕದಿಂದ ಪ್ರಕೃತಿಯ ಮಡಿಲಿಗೆ ಹಿಂದಿರುಗುವಾಗ, ಪ್ರಕೃತಿ ಆಕೆಯನ್ನು ಎರಡು ರೀತಿಯಿಂದ ರಕ್ಷಿಸುತ್ತದೆ. ಮೊದಲನೆಯದಾಗಿ ಪ್ರಕೃತಿ ಶಿಷ್ಟದ ಭಾಗವಾಗಿರುವ ಪ್ರಾಣಿ ವರ್ಗದ ಇಲಿಯೊಂದು ಆಕೆಗೆ ದಾರಿ ಕೊರೆದು ಕೊಡುತ್ತದೆ. ಎರಡನೆಯದಾಗಿ ಸಸ್ಯವರ್ಗಕ್ಕೆ ಸೇರಿದ ಮರವೊಂದು ಆಕೆಗೆ ಆಸರೆ ನೀಡುತ್ತದೆ. ಅಂದರೆ ಪ್ರಕೃತಿಯು ಇಲ್ಲಿ ತನ್ನ ಸಮಗ್ರತೆಯಲ್ಲಿಯೇ ಹೆಚ್ಚಿನ ರಕ್ಷಣೆಯ ಜವಾಬ್ದಾರಿಯನ್ನು ಹೊರುತ್ತದೆ ಮತ್ತು ಪ್ರಕೃತಿಯ ಮಡಿಲಲ್ಲಿ ‘ತಾನು ಕ್ಷೇಮ’ ಎಂದು ತಂಗಿಯೂ ಭಾವಿಸುತ್ತಾಳೆ. ಮರವನ್ನೇರುವ ಕ್ರಿಯೆಯಲ್ಲಿ ನೆಲವನ್ನು ಬಿಡುವ ಆಕೆ ಆ ಕ್ಷಣದಲ್ಲಿ ಪ್ರಕೃತಿಯೊಂದಿಗೆ ಒಂದಾಗುತ್ತಾಳೆ. ಈ ಹಂತದಲ್ಲಿ ಮಾನವ ಶಿಷ್ಟದ ಗುಣಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ತಂಗಿ, ಆ ಮೂಲಕವೇ ಮಾನವನ ಮೌಲ್ಯ ವ್ಯವಸ್ಥೆಗೆ ಒಂದು ಸವಾಲಾಗುತ್ತಾಳೆ. ಕೆಲವು ಪಾಠಗಳಲ್ಲಿ ತಂಗಿಯ ವಿನಂತಿಯ ಮೇರೆಗೆ ಮರವು ಆಕಾಶದಷ್ಟೆತ್ತರಕ್ಕೆ ಬೆಳೆದು ಬಿಟ್ಟು ಪ್ರಕೃತಿಯ ಭೂಮತ್ವವನ್ನು ಸಾದರಪಡಿಸುತ್ತದೆ.

ಹೀಗೆ ತಂಗಿಯು ಪ್ರಕೃತಿಯ ಮಡಿಲಲ್ಲಿ ಕ್ಷೇಮವಾಗಿದ್ದರೂ ಮಾನವ ಲೋಕ ಆಕೆಯನ್ನು ಹಾಗೆ ಉಳಿಯಲು ಬಿಡುವುದಿಲ್ಲ. ಹಿಂಬಾಲಿಸುತ್ತದೆ. ತನ್ನ ಲೋಕದ ಎಲ್ಲ ಶಕ್ತಿಗಳನ್ನೂ ಅದು ಈ ಹಂತದಲ್ಲಿ ಬಳಸಿಕೊಳ್ಳುತ್ತದೆ. ಆದರೆ ತಂಗಿ ಹಿಂದಿರುಗುವುದಿಲ್ಲ. ಕೊನೆಗೆ ಮದುಮಗನೇ ಬಂದು ಕರೆಯುತ್ತಾನೆ. ಮರವನ್ನು ಏರುತ್ತಾನೆ. ಮರದ ಕೊಂಬೆ ರೆಂಬೆಗಳು, ಎಲೆಚಿಗುರುಗಳೂ ತಂಗಿಯನ್ನುರಕ್ಷಿಸಲು ಯತ್ನಿಸುತ್ತವೆ. ಆದರೆ ಅದು ವಿಫಲವಾದಾಗ ತಂಗಿಯು ನೀರಿಗೆ ಹಾರುತ್ತಾಳೆ. ಅದೂ ಪ್ರಕೃತಿಯ ಭಾಗವೇ ಆಗಿದೆ. ತಂಗಿಯ ಕಣ್ಣೀರಿನಿಂದಲೇ ಕೆರೆ ರಚಿತವಾಯಿತು ಎಂಬ ಪಾಠದಲ್ಲಿಯೂ ‘ಪ್ರಕೃತಿಯ ಭಾಗವಾದ ಆಕೆ ಸೃಷ್ಟಿಸಿದ ಕೆರೆ’ ಎಂಬುದೇ ಹೆಚ್ಚು ಸಮಂಜಸವಾಗಿ ಧ್ವನಿಸುತ್ತದೆ. ನೀರಿಗೆ ಬಿದ್ದ ಆಕೆ ತೆಳ್ಳಗಿನ, ಬೆಳ್ಳಗಿನ ಬಾಳೆ ಮೀನಾಗುತ್ತಾಳೆ. ನೀರಿಗೆ ಬಿದ್ದ ಅಣ್ಣ ಕರ್ರಗಿನ, ಸೊಕ್ಕಿದ, ಉದ್ದ ಮೀಸೆಯುಳ್ಳ ಮುಗುಡು ಮೀನಾಗುತ್ತಾನೆ. ಇಲ್ಲಿಯೂ ಪ್ರಕೃತಿಯು ಈ ಭಿನ್ನತೆಯನ್ನೂ ಕಾಪಾಡುವುದರ ಮೂಲಕ ಸ್ತ್ರೀಯು ರಕ್ಷಣೆ ಮಾಡುತ್ತದೆ. ಮನುಷ್ಯನಿಂದ ಮೀನಾಗಿ ರೂಪಾಂತರ ಹೊಂದುವ ಪ್ರಕ್ರಿಯೆಯು ಭಿನ್ನತೆಯನ್ನು ಉಳಿಸುವ ತಂತ್ರವಷ್ಟೇ ಆಗಿದೆ. ವಾಸ್ತವವಾಗಿ ಇಂಥ ಕಡೆ ಕಥೆ ಹೆಚ್ಚು ಬೆಳೆದಿಲ್ಲ.

ಕಥೆಯು ನಿಜವಾಗಿಯೂ ಬೆಳೆಯುವುದು ಮುಂದೆ ನಲಿಕೆಯವನ ಪ್ರದೇಶದಿಂದ. ಆತ ಈ ಮೀನುಗಳನ್ನು ಹಿಡಿದು ಮತ್ತೆ ಮನೆಯೊಳಕ್ಕೆ ಅಂದರೆ ಮಾನವ ನಿರ್ಮಿತ ಲೋಕಕ್ಕೆ ತರುತ್ತಾನೆ. ಪರಿಶಿಷ್ಟವು ಶಿಷ್ಟದೊಳಗೆ ಪ್ರವೇಶಿಸುವ ಈ ಕೆಲಸವನ್ನು ತಂಗಿ ಪ್ರತಿಭಟಿಸುತ್ತಾಳೆ. ‘ಒಟ್ಟಿಗೆ ಹಾಕಬೇಡ, ಒಂದೆ ಕತ್ತಿಯಲ್ಲಿ ತುಂಡರಿಸಬೇಡ, ಒಟ್ಟಿಗೆ ಬೇಯಿಸಬೇಡ’ ಎಂದ ಆಕೆ ಕೂಗಿ ಕೂಗಿ ಹೇಳುತ್ತಾಳೆ. ಆದರೆ ಮಾನವ ಲೋಕಕ್ಕೆ ಅದನ್ನು ಕೇಳಿಸಿಕೊಳ್ಳುವ ಶಕ್ತಿಯಾಗಲೀ, ತಾಳ್ಮೆಯಾಗಲೀ ಇಲ್ಲ. ಅದು ವಿರೋಧವನ್ನು ನಗಣ್ಯ ಮಾಡಿ, ಅಣ್ಣ-ತಂಗಿಯರನ್ನು ಒಟ್ಟಿಗೆ ಬೆಸೆಯುತ್ತದೆ. ಪರಿಣಾಮವಾಗಿ ಪಾತ್ರೆಯಲ್ಲಿ ಬಿಳಿನೊರೆ ಮತ್ತು ರಕ್ತ ಕಾಣಿಸುತ್ತದೆ. ಮನೆಯ ಶಿಷ್ಟವು ಇದರಿಂದ ಬೆಚ್ಚುತ್ತದೆ. ಬೆದರಿದ ನಲಿಕೆಯವರು ಎರಡು ಮೀನುಗಳನ್ನು ಮತ್ತೆ ಹೊರಕ್ಕೆ ಎಸೆಯುತ್ತಾನೆ. ತಂಗಿ ಮತ್ತೆ ಹಿಂದಿನಂತೆಯೇ ಪ್ರಕೃತಿಯನ್ನು ಉಳಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಕಥೆ ಇಲ್ಲಿಗೆ ಮುಕ್ತಾಯ ಹೊಂದುತ್ತದೆ. ಒಂದೆರಡು ಪಾಠಗಳಲ್ಲಿ ನಲಿಕೆಯವನು ಮತ್ತೆ ಬಸಲೆ ಮುಕ್ತಾಯ ಹೊಂದುತ್ತದೆ. ಒಂದೆರಡು ಪಾಠಗಳಲ್ಲಿ ನಲಿಕೆಯವನು ಮತ್ತೆ ಬಸಲೆ ಮತ್ತು ಹರಿವೆಯನ್ನು ಒಟ್ಟಿಗೆ ಬೇಯಿಸುತ್ತಾನೆ. ಆದರೆ ಹಿಂದಿನಂತೆ ಮತ್ತೆ ಬಿಳಿನೊರೆ, ರಕ್ತ ಕಾಣಿಸಿಕೊಳ್ಳುತ್ತದೆ. ಅದನ್ನು ಆತ ಹೊರಕ್ಕೆ ಎಸೆಯುತ್ತಾನೆ. ಮುಂದೆ ಇಂಥ ಆಶಯಗಳು ಪುನರಾವರ್ತನೆ ಹೊಂದಿದರೂ ಅದು ಕತೆಯನ್ನು ಬೆಳೆಸುವುದಿಲ್ಲ.

ಕಥೆಯ ಉದ್ದಕ್ಕೂ ಸಂಸ್ಕೃತಿ-ಪ್ರಕೃತಿಗಳು ಮುಖಾಮುಖಿಯಾದದ್ದು ಸ್ಪಷ್ಟ. ಹೆಣ್ಣು ಪ್ರಕೃತಿಯ ಮಡಿಲಲ್ಲಿ ರಕ್ಷಣೆಯನ್ನು ಬೇಡುತ್ತಾಳೆ. ಪ್ರಕೃತಿ ಅದನ್ನು ನೀಡುತ್ತದೆ ಕೂಡಾ. ಆದರೆ ಕಥೆಗೆ ಇದೊಂದೆ ಆಯಾಮವಲ್ಲ. ಪ್ರಕೃತಿಯ ದಿಗ್ವಿಜಯವೂ ಮಾನವ ಪ್ರಕೃತಿಯ ದಿಗ್ವಿಜಯವೂ ಆಗಿಬಿಡುವ ಅಸಾಮಾನ್ಯ ಘಟನೆಯೂ ಕಥೆಯಲ್ಲಿದೆ. ಕಾಮವು ಮಾನವ ಪ್ರಕೃತಿಯ ಅಂಗ ಹೌದಾದರೆ, ಅದು ಇಲ್ಲಿ ಜಯಸಾಧಿಸಿದೆ. ಈ ನಿಟ್ಟಿನಲ್ಲಿ ಇಡೀ ಕಥೆಯು ಒಂದು ಅದ್ಭುತವಾದ ಪ್ರತೀಕದಂತೆ ಕೆಲಸ ಮಾಡುತ್ತಿದೆ. ಇದನ್ನು ಸ್ವಲ್ಪ ವಿವರವಾಗಿ ನೋಡಬೇಕು.

ಅಣ್ಣನು ತಂಗಿಯನ್ನು ಮದುವೆಯಾಗಬಯಸುವುದು ಕಥೆಯ ಮುಖ್ಯ ಆಶಯಗಳಲ್ಲಿ ಒಂದು. ಮದುವೆಯ ಲೈಂಗಿಕ ಚಟುವಟಿಕೆಗಳಿಗೆ ಅಧಿಕೃತತೆಯನ್ನು ತಂದು ಕೊಡುವ ಒಂದು ವ್ಯವಸ್ಥೆ. ಆದರೆ ಈ ವ್ಯವಸ್ಥೆಯಲ್ಲಿ ‘ಬಂಧುತ್ವ’ದ ರೀತಿನೀತಿಗಳು ನಷ್ಟವಾಗಬಾರದು. ಅದಕ್ಕಾಗಿ ತಂಗಿಯು ಅಣ್ಣನನ್ನು ಮನೆಯಿಂದ ಹೊರಗೆ ಬರುವಂತೆ ಮಾಡುತ್ತಾಳೆ. ಇಲ್ಲಿ ತಂಗಿಯ ಲೈಂಗಿಕ ತುಡಿತವೇ ಕಾಣುತ್ತದೆ. ಅತ್ತಿಗೆಯರೆಲ್ಲ ಬೇಡವೆಂದರೂ ಆಕೆಯೇ ಅಣ್ಣ ತಂದಿತ್ತ ಹೂವನ್ನು ಮುಡಿದ ಘಟನೆ ನನ್ನ ಮೇಲಿನ ಹೇಳಿಕೆಯನ್ನು ಸಮರ್ಥಿಸುವ ಅಂಶ. ಆಕೆ ಪ್ರಕೃತಿಗೆ ಹಿಂದಿರುಗುವಲ್ಲಿ ಮಾನವತ್ವವು ನಷ್ಟವಾದ ಸೂಚನೆಯಿದೆ. ಏಕೆಂದರೆ ಪ್ರಕೃತಿಯ ಘಟಕಗಳಾದ ಪ್ರಾಣಿವರ್ಗ ಮತ್ತು ಸಸ್ಯವರ್ಗದಲ್ಲಿ ಲೈಂಗಿಕತೆಗೆ ಬಂಧುತ್ವವು ಅಡ್ಡಿ ಉಂಟುಮಾಡಲಾರದು. ಹೀಗಾಗಿ ಅಣ್ಣ-ತಂಗಿಯರ ಲೈಂಗಿಕ ಸಮಾಗಮಕ್ಕೆ ಪ್ರಕೃತಿಯು ಪ್ರಶಸ್ತವಾದ ಸ್ಥಳವಾಗಿ ಬಿಡುತ್ತದೆ. ಮುಂದೆ ತಂಗಿಯು ಮರವೇರುತ್ತಾಳೆ. ಒಂದು ಪಾಠದಲ್ಲಿಯಂತೂ ಮರವು ಆಕೆಯ ಬೇಡಿಕೆಯಂತೆ ಬೆಳೆಯುತ್ತಲೇ ಇರುತ್ತದೆ. ಪ್ರಾಯ್ಡ್‌ನ ಪ್ರಕಾರ ಮರವು ಲೈಂಗಿಕತೆಗೆ ಪೂರಕವಾದ ಅಂಶ, ಎಷ್ಟೋ ಬಾರಿ ಅದು ಗಂಡಿನ ಜನನಾಂಗವನ್ನೇ ಸಂಕೇತಿಸುತ್ತದೆ. ಅದನ್ನು ಅಪ್ಪಿಕೊಂಡ ತಂಗಿಯು, ಅದರ ಮೂಲೆ ಮೂಲೆಗಳಲ್ಲಿ ಸಂಚರಿಸುವುದರ ಮೂಲಕ ‘ಮರದ’ ಪೂರ್ಣ ಲಾಭವನ್ನು ಪಡೆಯುತ್ತಾಳೆ. ಕೊನೆಗೆ ಆಕೆ ಕೆರೆಗೆ ಹಾರುತ್ತಾಳೆ. ಮನಶ್ಯಾಸ್ತ್ರಜ್ಞರ ಪ್ರಕಾರ ನೀರಿಗೆ ಹಾರುವ ಕ್ರಿಯೆಯು ಲೈಂಗಿಕ ಆಹ್ವಾನಕ್ಕೆ ಸಂಕೇತ. ಇಲ್ಲಿ ಕಥೆಯು ಲೈಂಗಿಕ ಆಸಕ್ತಿಯ ಮತ್ತು ಪರಸ್ಪರ ಬೆಸೆಯುವ ಕ್ರಿಯೆಯನ್ನು ಹಂತ ಹಂತವಾಗಿ ವಿವರಿಸುತ್ತದೆ. ಈ ಕ್ರಿಯೆಯ ಚಾಲಕ ಶಕ್ತಿ ತಂಗಿಯೇ ಅನ್ನುವುದು ಗಮನಾರ್ಹ. ಮುಂದೆ ನಲಿಕೆಯವನ ಮೂಲಕ ಮೀನುಗಳು ಮತ್ತೆ ಮತ್ತೆ ಮನೆಯೊಳಕ್ಕೆ ಬಂದು ಪಾತ್ರಯಲ್ಲಿ ಒಂದಾಗುತ್ತವೆ. ಪಾತ್ರಯಲ್ಲಿ ಕಾಣುವ ಬಿಳಿನೊರೆ, ರಕ್ತವೂ ಸಂಭೋಗದ ಅರ್ಥವನ್ನೇ ಧ್ವನಿಸುತ್ತದೆ. ಇಲ್ಲಿ ಪುನರಾವರ್ತನೆಗೊಳ್ಳುವ ‘ಕುಚು ಕುಚು’ ಶಬ್ದವೂ ನನ್ನ ವಾದಕ್ಕೆ ಪೂರಕವಾದುದು. ತಂಗಿಯು ರೂಪಾಂತರ ಹೊಂದುವಾಗ ತಿನ್ನಬಹುದಾದ ವಸ್ತುವಾಗಿಯೇ ರೂಪೀಕರಣಗೊಳ್ಳುವುದೂ ಗಮನಾರ್ಹ. ಮನಶ್ಯಾಸ್ತ್ರಜ್ಞರ ಪ್ರಕಾರ ತಿನ್ನುವ ವಸ್ತು-ಹಸಿವನ್ನು ತನ್ಮೂಲಕ ಕಾಮವನ್ನೇ ಸಂಕೇತಿಸುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಕಥೆಯು ಉತ್ತರಾರ್ಧವು ಸಂಪೂರ್ಣವಾಗಿ ಲೈಂಗಿಕ ಚಟುವಟಿಕೆಗೇ ಮೀಸಲಾದಂತಿದೆ.

ಕಥೆಯ ಪ್ರತೀಕ ಗುಣ ಅದ್ಭುತವಾಗಿರುವುದು ಮೇಲೆ ಹೇಳಿದ ಕಾರಣಕ್ಕೆ. ಪರಸ್ಪರ ವಿರೋಧ ಅನ್ನಬಹುದಾದ ಎರಡು ಗುಣಗಳನ್ನು ಅದು ತನ್ನ ಒಡಲಲ್ಲಿ ಧರಿಸಿದೆ. ಪ್ರತೀಕವೊಂದರ ಈ ಬಗೆಯ ವಿರೋಧ ದ್ವಂದ್ವ ಗುಣವು ಬಹಳ ಅಪೂರ್ವವಾದುದು.

ಕನ್ನಡದ ಮತ್ತು ತುಳು ಪಾಠಗಳನ್ನು ತೌಲನಿಕವಾಗಿ ಇಟ್ಟು ನೋಡಿದರೆ ಗಮನಾರ್ಹವಾದ ಒಂದು ವ್ಯತ್ಯಾಸ ಎದ್ದು ಕಾಣುತ್ತದೆ. ತುಳುವಿನ ಬಹುತೇಕ ಪಾಠಗಳಲ್ಲಿ ಮನೆಯಿಂದ ಹೊರಕ್ಕೆ ಹೋದ ತಂಗಿ, ರೂಪಾಂತರ ಹೊಂದಿಯಾದರೂ ಮತ್ತೆ ಮನೆಯ ಒಳಕ್ಕೆ ಬರುತ್ತಾಳೆ. ಕನ್ನಡದ ಪಾಠಗಳಲ್ಲಿ ಆಕೆ ಮತ್ತು ಮನೆಯ ಒಳಕ್ಕೆ ಬರುತ್ತಾಳೆ. ಕನ್ನಡದ ಪಾಠಗಳಲ್ಲಿ ಆಕೆ ಮತ್ತು ಮನೆಯ ಒಳಕ್ಕೆ ಬರುವುದರ ಉಲ್ಲೇಖ ಇಲ್ಲವೆಂಬಷ್ಟು ಕಡಿಮೆ ನನ್ನ ವೈಯಕ್ತಿಕ ಸಂಗ್ರಹದ ೨೧ ಕಥೆಗಳಲ್ಲಿ ಕೇವಲ ಒಂದೇ ಒಂದು ತುಳು ಪಾಠದಲ್ಲಿ ತಂಗಿ ಮನೆಯ ಒಳಗೆ ಬರುವುದಿಲ್ಲ.

[1] ಕನ್ನಡ ಪಾಠಗಳಲ್ಲಿ ಕೇವಲ ಒಂದರಲ್ಲಿ ಆತ್ರ ಆಕೆ ಮನೆಯ ಒಳಕ್ಕೆ ದಾಳಿಂಬೆ ಹೂವಾಗಿ ಪರಿವರ್ತನೆ ಹೊಂದಿ ಬರುತ್ತಾಳೆ. ಇದನ್ನು ಅಪವಾದವೆಂದು ಗ್ರಹಿಸಿದರೆ, ಉಳಿದೆಲ್ಲ ಪಾಠಗಳಲ್ಲಿಯೂ ಸಮಾನ ಎನ್ನಬಹುದಾದ ಅಂಶ ಪ್ರಕಟವಾಗಿದೆ. ಹಿಂದೆ ಹೇಳಿದ ಕಪಾ ರಲ್ಲಿ ತಂಗಿಯು ನೇರವಾಗಿ ಸೂರ್ಯಲೋಕಕ್ಕೆ ಹೋಗಿ ಸೂರ್ಯನನ್ನು ಮದುವೆಯಾಗುತ್ತಾಳೆ. ಮತ್ತು ಸೂರ್ಯನಿಂದ ಆಕೆಗೆ ಒಂದು ಮಗುವಾಗುತ್ತದೆ. ಸ್ವಲ್ಪ ಸಮಯದ ಅನಂತರ ಆಕೆ ತನ್ನ ಗಂಡ ಮತ್ತು ಮಗುವಿನೊಂದಿಗೆ ತವರಿಗೆ ಬರುತ್ತಾಳೆ. ಆದರೆ ಆಕೆ ಬರುವ ಹೊತ್ತಿಗೆ ತವರಿನ ಎಲ್ಲರೂ ಗಾಢವಾದ ನಿದ್ರೆಯಲ್ಲಿ ಮುಳುಗಿರುತ್ತಾರೆ. ಆಕೆ ಅವರನ್ನು ಭೇಟಿ ಮಾಡದೆ ಹಿಂದಿರುಗುತ್ತಾಳೆ. ಅಂದರೆ ಈ ಕಥೆಯಲ್ಲಿ ಮನೆಯಿಂದ ಹೊರಟ ತಂಗಿಗೆ ಮತ್ತೆ ಮನೆಯಲ್ಲಿ ಸ್ಥಾನವನ್ನು ನಿರಾಕರಿಸಲಾಗಿದೆ.

ತುಳುವಿನ ಪಾಠಗಳಲ್ಲಿ ಮನೆಯಿಂದ ಹೊರಟ ತಂಗಿ ರೂಪಾಂತರ ಹೊಂದಿ ಮನೆಗೆ ಮತ್ತೆ ಬರುವುದು ಮತ್ತು ಕನ್ನಡದ ಪಾಠಗಳಲ್ಲಿ ಮನೆಯಿಂದ ಹೊರಟ ತಂಗಿ ಮನೆಗೆ ಮತ್ತೆ ಬಾರದೇ ಇರುವುದಕ್ಕೆ ನಿರ್ದಿಷ್ಟವಾದ ಕಾರಣಗಳಿರಲೇ ಬೇಕು. ನನಗನ್ನಿಸಿದ ಹಾಗೆ ತುಳುನಾಡಿನ ಹೊರಗಿನ ಕುಟುಂಬ ರಚನೆಯೇ ಕಥೆಯ ಈ ಭಾಗವನ್ನು ನಿಯಂತ್ರಿಸಿರಬೇಕು. ತುಳುನಾಡಿನಲ್ಲಿ ಮಾತೃ ಪ್ರಧಾನವಾದ ಕುಟುಂಬ ವ್ಯವಸ್ಥೆಯಿದೆ. ಈ ವ್ಯವಸ್ಥೆಯಲ್ಲಿ ಮದುವೆಯಾದ ಹೆಣ್ಣು ಮತ್ತೆ ತನ್ನ ಮನೆಗೆ ಹಿಂದಿರುಗುತ್ತಾಳೆ. ಆಕೆಯ ಲೈಂಗಿಕ ಚಟುವಟಿಕೆಗಳು ತನ್ನ ಮನೆಯಲ್ಲಿಯೇ ನಡೆಯುತ್ತವೆ. ಆದರೆ ತುಳುನಾಡಿನಿಂದ ಹೊರಗಡೆಗೆ ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯಿದೆ. ಅಲ್ಲಿ ಮದುವೆಯಾದ ಹೆಣ್ಣು ತಾನು ಹುಟ್ಟಿದ ಮನೆಗೆ ಹಿಂದಿರುಗುವ ಹಾಗೆ ಇಲ್ಲ. ಆಕೆ ಗಂಡನ ಮನೆ ಸೇರುತ್ತಾಳೆ. ಅವಳ ಲೈಂಗಿಕ ಚಟುವಟಿಕೆಗಳ ಸ್ಥಳವೂ ಅದೇ ಆಗಿದೆ. ಇದು ಹೌದಾದರೆ ಬಾಳೆ ಮೀನು-ಮುಗುಡು ಮೀನು ಕತೆಯ ತುಳು ಮತ್ತು ಕನ್ನಡ ಪಾಠಾಂತಗಳು ಕ್ರಮವಾಗಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಮತ್ತು ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯ ರೂಪಕದಂತೆ ತೋರುತ್ತದೆ. ಕತೆಯ ಕಾರ್ಯವೂ ಈ ಎರಡು ಕುಟುಂಬ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರುತ್ತದೆ ಎಂದು ತರ್ಕಿಸಲು ಸಾಧ್ಯವಿದೆ.

ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಅಣ್ಣ-ತಂಗಿಯರು ಹೆಚ್ಚು ಕಾಲ ಒಟ್ಟಿಗೇ ಒಂದು ಸೂರಡಿಯಲ್ಲಿ ಬದುಕುತ್ತಾರೆ. ಇಂಥ ಕಡೆ ಅಗಮ್ಯ ಗಮನದ ಅವಕಾಶ ಇತರೆಡೆಗಳಲ್ಲಿರುವುದಕ್ಕಿಂತ ಹೆಚ್ಚು ಇರುತ್ತದೆ. ಹೀಗಾಗಿ ನಿಷೇಧವೂ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತದೆ. ಬಹುಶಃ ಈ ಕಾರಣಕ್ಕೇ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಿರುವ ತುಳು ನಾಡಿನಲ್ಲಿ ಈ ಕಥೆಯು ಅತ್ಯಂತ ಜನಪ್ರಿಯವಾಗಿದೆ. ಕಥೆಯ ಪಾಠಾಂತರಗಳು ಇಲ್ಲಿ ಸಿಕ್ಕಷ್ಟು ಬೇರೆಡೆಗಳಲ್ಲಿ ಸಿಗುವುದಿಲ್ಲ.

ಕಥೆಯನ್ನು ಮಕ್ಕಳಿಗೆ ನಿರೂಪಿಸುವವಳು ತಾಯಿ. ಇದೂ ಸಹಜವೇ ಸರಿ. ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಮನೆಯ ಶಕ್ತಿ ತಾಯಿ. ಅಧಿಕಾರವೂ ಅವಳ ಕೈಯಲ್ಲಿರುತ್ತದೆ. ಮನೆಯ ಮೌಲ್ಯ ವಿನ್ಯಾಸವನ್ನು ರೂಪಿಸುವವಳೂ ಬಹಮಟ್ಟಿಗೆ ಆಕೆ. ಕತೆಯನ್ನು ನಿರೂಪಿಸುವ ಸಂದರ್ಭವೂ ರಾತ್ರಿ. ಅದೂ ಗಂಡು- ಹೆಣ್ಣು ಮಕ್ಕಳೆಲ್ಲ ಒಟ್ಟಿಗೇ ಮಲಗಿರುವಾಗ ಇಂಥ ಕಡೆ ಅಗಮ್ಯಗಮನ ನಿಷೇಧದ ಕತೆಯನ್ನ ಹೇಳಿ, ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನು ಉಂಟುಮಾಡುವ ಕೆಲಸವನ್ನು ಆಕೆ ಮಾಡುತ್ತಾಳೆ. ರಾತ್ರಿಯ ಅರೆನಿದ್ರೆಯ ಅರೆ ಎಚ್ಚರದ ಕಾಲದಲ್ಲಿ ಈ ಕಥೆಯು ಉಂಟು ಮಾಡಬಹುದಾದ ಪರಿಣಾಮದ ತೀವ್ರತೆಯೂ ಅಗಾಧವಾದುದು.

ಕತೆಯ ನಾಯಕಿ ತಂಗಿ ಮತ್ತು ನಾಯಕ ಅಣ್ಣ, ಇಬ್ಬರೂ ಆ ಮನೆಯಲ್ಲಿ ಪ್ರಾಯದಲ್ಲಿ ಅತ್ಯಂತ ಕಿರಿಯರು. ಬಹುತೇಕ ಜನಪದ ಕತೆಗಳಲ್ಲಿನ ಸಾಮಾನ್ಯ ಅಂಶವಿದು. ಕಿರಿಯ ಮಗನೇ ಅಥವಾ ಮಗಳೇ ಸಾಹಸವನ್ನು ಮೆರೆಯುತ್ತಾರೆ. ಕಥೆಯನ್ನು ನಿರೂಪಿಸುವವರ ಮನಸ್ಸಿಗೆ ಸಂಬಂಧಿಸಿದ ವಿಷಯವಿದು. ಕಥೆಯನ್ನು ನಿರೂಪಿಸುವವರು ಇಲ್ಲಿ ತಾಯಿ. ಆದರೆ ಕೆಲವೆಡೆಗಳಲ್ಲಿ ಅಜ್ಜಿ. ಅಜ್ಜಿ ಮತ್ತು ತಾಯಿಯ ದೃಷ್ಟಿಯಿಂದ ಸಾವಿಗೆ ಅತ್ಯಂತ ದೂರದಲ್ಲಿರುವವರೆದರೆ ಆ ಮನೆಯಲ್ಲಿನ ಅತ್ಯಂತ ಕಿರಿಯರು. ಸಾವಿನಿಂದ ದೂರದಲ್ಲಿರುವವರೇ ಸಾಹಸಗಳನ್ನು ಮೆರೆಯಬಲ್ಲರು. ಮೇಲಾಗಿ ಇದು ನಿರೂಪಕರು ಸಾವನ್ನು ಮೀರಲು ನಡೆಸುವ ಪ್ರಯತ್ನದಂತೆಯೂ ಭಾಸವಾಗುತ್ತದೆ. ಕಿರಿಯರು ಲೈಂಗಿಕ ವಿಷಯಗಳನ್ನು ಹೆಚ್ಚು ಬಲಿಷ್ಠರಾಗಿರುವುದೂ ಇದಕ್ಕೆ ಇನ್ನೊಂದು ಕಾರಣವಿರಬಹುದು.

ಕತೆಯು ನಿರೂಪಿತವಾಗುವುದು ಅಡುಗೆ ಮನೆಯಲ್ಲಿ. ಹಸಿವನ್ನು ತೀರಿಸುವ ಸಾಮಗ್ರಿಗಳ ಉತ್ಪಾದನೆ ನಡೆಯುವುದು ಅಲ್ಲಿಯೇ. ತಿನ್ನಬಹುದಾದ ವಸ್ತುಗಳ ಉತ್ಪಾದನೆ ನಡೆಯುವ ಸ್ಥಳವೇ ಮದುವೆಯ ಕೇಂದ್ರ ಸ್ಥಳವಾಗುದನ್ನು ನಾನು ಬೇರೊಂದೆಡೆಯಲ್ಲಿ ಚರ್ಚಿಸಿದ್ದೇನೆ. (ಪುರುಷೋತ್ತಮ ಬಿಳಿಮಲೆ ೧೯೮೭) ಮದುವೆಗೆ ಸಂಬಂಧಿಸಿದ ಅನೇಕ ಆಚರಣೆಗಳು ನಡೆವ ಸ್ಥಳವದು. ಈ ನಿಟ್ಟಿನಲ್ಲಿ ಕಥೆ ನಿರೂಪಿತವಾಗುವ ಸ್ಥಳಕ್ಕೂ ಕಥೆಯ ಆಶಯಕ್ಕೂ ಗಾಢವಾದ ಸಂಬಂಧವಿರುವುದು ಸ್ಪಷಷ್ಟವಾಗುತ್ತದೆ. ಭೋಜನ ಮತ್ತು ಭೋಗ ಪದಗಳ ಧಾತು ಒಂದೇ ಆಗಿರುವುದು ಇಲ್ಲಿ ಗಮನಾರ್ಹ.

ಮೇಲೆ ವಿವರಿಸಲಾದ ತುಳು ಕಥೆಯು ಜಗತ್ತಿನ ಇತರೆಡೆಯ ಕಥೆಗಳಿಗಿಂತ, ಐತಿಹ್ಯಗಳಿಗಿಂತ, ನಿಷಿದ್ಧಗಳಿಗಿಂತ ತುಂಬಾ ಭಿನ್ನವಾಗಿದೆ. ಬಲ್ಗೇರಿಯಾದ ಜನಪದ ಕಥೆಯೊಂದರಲ್ಲಿ ಅಣ್ಣನು ತಂಗಿಯನ್ನು ಮದುವೆಯಾಗಬಯಸುತ್ತಾನೆ. ಆಗ ಪ್ರಕೃತಿ ಮುನಿದು ಬಗೆಬಗೆಯ ಉತ್ಪಾತಗಳನ್ನು ಉಂಟು ಮಾಡುತ್ತದೆ. ಇದಕ್ಕೆ ಹೆದರಿದ ಅಣ್ಣ-ತಂಗಿಯರು ಮದುವೆಯ ಪ್ರಸ್ತಾಪವನ್ನು ಕೈಬಿಡುತ್ತಾರೆ. ಕೇರೀಲಿಯನ್-ಒಲೋನೇಶಿಯನ್ ಕಥೆಯೊಂದರಲ್ಲಿ ೧೭ ವರ್ಷದ ಅಣ್ಣನು ತನ್ನ ತಂಗಿಯನ್ನು ಪ್ರೇಮಿಸುತ್ತಾನೆ. ಆದರೆ ತಂಗಿಯು ಅದನ್ನು ತಿರಸ್ಕರಿಸುತ್ತಾಳೆ. ಇದರಿಂದ ಖೇದಗೊಂಡ ಅಣ್ಣನು ಕಾಡಿಗೆ ತೆರಳಿ ತನ್ನ ತಲೆಯನ್ನು ತುಂಡರಿಸಿಕೊಳ್ಳುತ್ತಾನೆ.[2] ಹೀಗೆ ತಲೆಯನ್ನು ತುಂಡರಿಸಿಕೊಳ್ಳುವ ಕತೆ ಇತರೆಡೆಗಳಲ್ಲಿಯೂ ಪ್ರಚಲಿತವಿದ್ದು, ಮನಶ್ಯಾಸ್ತ್ರಜ್ಞರನ್ನ ತನ್ನತ್ತ ಆಕರ್ಷಿಸಿದೆ. ಈ ವಿಧದ ಕತೆಗಳನ್ನು ವಿಶ್ಲೇಷಿಸಿದ ಅಲೆನ್ ಡಂಡೆಸರು ತಲೆಯನ್ನು ತುಂಡರಿಸುವ ಕ್ರಿಯೆಯು ಗಂಡಿನ ಲೈಂಗಿಕ ಛೇದನವನ್ನೇ ಹೇಳುತ್ತದೆ ಎಂದು ವಾದಿಸಿದ್ದಾರೆ.

ಭಾರತೀಯ ವೈದಿಕ ಪುರಾಣಗಳಲ್ಲಿಯೂ ಅಗಮ್ಯ ಗಮನಕ್ಕೆ ಸಂಬಂಧಿಸಿದ ಕತೆಗಳಿವೆ. ಯಜುರ್ವೇದಲ್ಲಿ ಯಮಿಯು ತನ್ನ ಅಣ್ಣನಾದ ಯಮನನ್ನು ಸಂಭೋಗಕ್ಕೆ ಆಹ್ವಾನಿಸುವುದು, ಬ್ರಹ್ಮನು ತನ್ನ ಮಗಳಾದ ಸರಸ್ವತಿಯನ್ನು ಮದುವೆಯಾಗುವುದು, ಮಹಾಭಾರತದಲ್ಲಿ ಸೂರ್ಯ ಮತ್ತು ಸೂರ್ಯನ ಮಗನಾದ ಯಮನಿಂದ ಕುಂತಿಯು ಮಕ್ಕಳನ್ನು ಪಡೆಯುವುದು ಇದಕ್ಕೆ ಉದಾಹರಣೆಗಳಾಗಿವೆ. ಹೀಗೆ ನೋಡಿದರೆ ಜಗತ್ತಿನಾದ್ಯಂತ ಶಿಷ್ಟ ಮತ್ತು ಜನಪದ ಸಾಹಿತ್ಯದಲ್ಲಿ ಅಗಮ್ಯ ಗಮನಕ್ಕೆ ಸಂಬಂಧಿಸಿದ ಕಥೆಗಳಿವೆ ಎಂಬುದು ಖಚಿತವಾಗುತ್ತದೆ.

ಇದುವರೆಗೆ ನಡೆಸಿದ ಚರ್ಚೆಯನ್ನು ಈ ಕೆಳಗಿನಂತೆ ಸಂಗ್ರಹಿಸಿ ಕೊಡಬಹುದು:

೧. ಜನಪದ ಕಥೆಯೊಂದನ್ನು ಅಭ್ಯಾಸಮಾಡುವಾಗ ಸಾಧ್ಯವಿದ್ದಷ್ಟು ಅದರ ವಿವಿಧ ಪಾಠಗಳನ್ನು ಸಂಗ್ರಹಿಸಬೇಕು. ಆ ಎಲ್ಲಾ ಪಾಠಗಳ ನಿರೂಪಣೆಯ ಸಂದರ್ಭವನ್ನು ಬಹಳ ಎಚ್ಚರಿಕೆಯಿಂದ ದಾಖಲಿಸಿಕೊಳ್ಳಬೇಕು. ಈ ಹಂತದಲ್ಲಿ ನಾವು ಇದುವರೆಗೆ ಅಲಕ್ಷಿಸಿಕೊಂಡು ಬಂದ ಬಂಧುತ್ವದ ಸಂದರ್ಭವನ್ನೂ ದಾಖಲಿಸಬೇಕು.

೨. ಪ್ರಕೃತಿಯು ಹೆಣ್ಣನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಹೊರುತ್ತದೆ. ಈ ಹಂತದಲ್ಲಿ ಅದು ಗಂಡೇ ಪ್ರಾಧಾನ್ಯವಾಗಿರುವ ಸಂಸ್ಕೃತಿಯ ಕೆಲವು ನಡಾವಳಿಗಳನ್ನು ವಿರೋಧಿಸುತ್ತದೆ.

೩. ಜನಪದ ಕಥೆಯಲ್ಲಿ ಪ್ರತೀತವಾಗುವ ಪ್ರತೀಕ ಗುಣವನ್ನು ಸರಳವಾಗಿ ಗ್ರಹಿಸಲಾಗದು. ಅದಕ್ಕೆ ವಿರೋಧ ದ್ವಂದ್ವ ಗುಣವೂ ಪ್ರಾಪ್ತಿಸುತ್ತದೆ. ಇದು ಜನಪದರ ಸೇಜನಶೀಲತೆಯ ಪರಮೋಚ್ಚ ಸಾಧನೆ ಎಂಬಂತೆ ತೋರುವುದೂ ಇದೆ.

ಒಂದು ಸಂಸ್ಕೃತಿಯ ನಿದಿಷ್ಟ ಅವಶ್ಯಕತೆಯನ್ನು ಪೂರೈಸಲು ಹುಟ್ಟಿಕೊಳ್ಳುವ ಇಂಥ ಕಥೆಗಳು ನಿಧಾನವಾಗಿ ಸಂಸ್ಕೃತಿಯನ್ನೇ ನಿಯಂತ್ರಿಸುವಷ್ಟು ಬಲಶಾಲಿಯಾಗಿ ಬೆಳೆಯುತ್ತವೆ. ಈ ಅಂಶ ಕಥೆಯ ಕಾರ್ಯಕ್ಕೆ ಸಂಬಂಧಿಸಿದೆ.

 

[1] ಜವಾಹರಲಾಲ ಹಂಡೋ ಅವರು ಆರ್.ಆರ್.ಸಿ. ಉಡುಪಿಯಲ್ಲಿ ಮಾಡಿದ ಭಾಷಣ ೮-೫-೧೯೮೮. ಈಚೆಗೆ ಇದು ಪ್ರಕಟವಾಗಿದೆ. ನೋಡಿ Hando 1989:115

[2] ಈ ವಿಧಧ ಕಥೆಗಳಿಗಾಗಿ ನೋಡಿರಿ BREWSTER GM 1972