ಪ್ರಸ್ತುತ ತುಳು ಶಾಸನವನ್ನು ಈಗ ಕೇರಳದ ಕಣ್ಣನೂರು ಜಿಲ್ಲೆಯ ಕಾಸರಗೋಡು ತಾಲೂಕಿನಲ್ಲಿರುವ (ಈಗ ಕಾಸರಗೋಡ ಜಿಲ್ಲೆ) ಅನಂತಪುರ ಗ್ರಾಮದ ಪದ್ಮನಾಭ ದೇವಸ್ಥಾನದ ಗಣೇಶ ಮಂದಿರದ ಬಳಿ ನೆಡಲಾಗಿರುವ ಒಂದು ಶಿಲಾಫಲಕದ ಮೇಲೆ ಕೊರೆಯಲಾಗಿದೆ. ಒಟ್ಟು ಹದಿನಾಲ್ಕು ಸಾಲುಗಳ ಬರೆಹ ಲಭ್ಯವಿದೆ. ಪ್ರತಿಯೊಂದು ಪಂಕ್ತಿಯ ಕೆಳಗೂ ಒಂದು ನೀಟಾದ ಗೀಟನ್ನು ಎಳೆದಿರುವುದು ಬರವಣಿಗೆಯಲ್ಲಿ ಹೆಚ್ಚಾಗಿ ಕಂಡುಬಾರದ ಒಂದು ವೈಶಿಷ್ಟ್ಯ.

ಶಾಸನದ ಲಿಪಿ

ಈ ಶಾಸನದ ಪಾಠವನ್ನು ಶಿಲೆಯ ಮೇಲೆ ಕೊರೆಯುವಲ್ಲಿ ಬಳಲಾಗಿರುವ ಲಿಪಿಯನ್ನು, ಅದು ಬಹುಮಟ್ಟಿಗೆ ಮಲೆಯಾಳಂ ಲಿಪಿಯನ್ನೇ ಹೋಲುವುದಾದರೂ, ಅದರಲ್ಲಿ ಕಂಡುಬರುವ ಕೆಲವೊಂದು ಮುಖ್ಯ ವ್ಯತ್ಯಾಸಗಳ ಆಧಾರದ ಮೇಲೆ ‘ತುಳು ಲಿಪಿ’ ಎಂದು ಹೆಸರಿಸುವುದು ತಪ್ಪಾಗದು. ಉದಾಹರಣೆಗೆ ತುಳು ಭಾಷೆಯ ಉಚ್ಚಾರಣಾ ವೈಶಿಷ್ಟ್ಯಗಳಲ್ಲೊಂದಾದ ಅರ್ಧಸ್ವರವನ್ನು ಸೂಚಿಸಲು ಆಯಾ ಅಕ್ಷರಗಳ ತಲೆಯ ಮೇಲೆ ಅರ್ಧ ಚಂದ್ರಾಕೃತಿಯನ್ನು ಕೊರೆದಿರುವುದಲ್ಲದೆ, ನಮ್ಮ ಶಾಸನದಲ್ಲಿ ಬಳಸಲಾಗಿರುವ ‘ಅ’ (೮, ೯ನೆಯ ಸಾಲುಗಳು) ‘ಎ’ (೧೧ನೆಯ ಸಾಲು) ಅಕ್ಷರಗಳ ಲಿಪಿ ಸ್ವರೂಪಗಳು ಮಲೆಯಾಳಂ ಲಿಪಿಯ ಈ ಅಕ್ಷರಗಳ ಸ್ವರೂಪಗಳಿಂದ ಭಿನ್ನವಾಗಿದೆ. ತುಳು ಲಿಪಿಯ ‘ಈ’ ಕಾರವು ಸ್ವರೂಪದಲ್ಲಿ ಗ್ರಂಥಲಿಪಿಯ ಅಕ್ಷರವನ್ನೇ ಹೋಲುವಂತಹುದು ಎಂದು ಇತರ ಅಧಾರಗಳಿಂದ ತಿಳಿದುಬರುತ್ತದೆಯಾದರೂ ಪ್ರಸಕ್ತ ಶಾಸನದ (೭ ಮತ್ತು ೧೨ನೆಯ ಸಾಲುಗಳಲ್ಲಿ) ಮಲೆಯಾಳಂ ಲಿಪಿಯ ಅಕ್ಷರವನ್ನೇ ಕೊರೆಯಲಾಗಿದೆ.

ವ್ಯಂಜನಗಳ ಪೈಕಿ, ೧, ೨, ೫, ೧೧, ೧೨, ೧೩ನೇಯ ಸಾಲುಗಳಲ್ಲಿ ಕೊರೆಯಲಾಗಿರುವ ‘ತ’ಕಾರದ  ಸ್ವರೂಪವೂ ೯ ಮತ್ತು ೧೦ನೆಯ ಸಾಲುಗಳಲ್ಲಿಯ ‘ತ’ ಕಾರದ ಸ್ವರೂಪವೂ ಭಿನ್ನವಾಗಿದೆ. ಅದರಂತೆಯೇ ೨ನೆಯ ಮತ್ತು ೧೦ನೆಯ ಸಾಲುಗಳಲ್ಲಿಯ ‘ಲ’ ಕಾರದ ಸ್ವರೂಪಗಳು ಪರಸ್ಪರ ವ್ಯತ್ಯಸ್ತವಾಗಿವೆ. ಒಂದು ಕುತೂಹಲಕಾರಿಯಾದ ಅಂಶವೆಂದರೆ, ದ್ರಾವಿಡ ಭಾಷೆಗಳ ಪೈಕಿ ಇಂದಿಗೆ ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಮಾತ್ರ ಬಳಕೆಯಲ್ಲಿರುವ ‘ೞ’ ಕಾರದ ಬಳಕೆ, ‘ಅಡ್ಡಿ’ ಎಂಬ ಪದವನ್ನು ಪ್ರಸ್ತುತ ಶಾಸನದ ೯ನೆಯ ಸಾಲಿನಲ್ಲಿ ‘ಅೞ್‌ಡಿ’ ಎಂದು ‘ಅತ್ತ್‌’ ಎಂಬ ಪದವನ್ನು ೧೦-೧೧ನೆಯ ಸಾಲುಗಳಲ್ಲಿ ‘ಅೞ್‌ತ್‌’ ಎಂದೂ ಬರೆದಿರುವುದು ಗಮನಾರ್ಹ.

ಶಾಸನದ ಭಾಷೆ

ಮೇಲೆ ಹೇಳಿರುವಂತೆ ಪ್ರಸ್ತುತ ಶಾಸನದ ಪಾಠವು ತುಳು ಭಾಷೆಯಲ್ಲಿದೆ. ಭಾಷಾ ಸ್ವರೂಪವು ತುಳುನಾಡಿನ ಕೆಳಭಾಗದ ಆಡುಮಾತಿನ ಶೈಲಿಯಲ್ಲಿದೆ. ‘ಹರಕೆ’ ಎಂಬರ್ತದ ‘ವೇನ್ದಿ ಕಾರ್ಯ’, ‘ಪ್ರತಿಷ್ಠಿತ ದೇವಪ್ರತಿಮೆ’ ಎಂಬರ್ಥದ ‘ವೈಕಿಂದೇವ’ ಮತ್ತು ‘ಅಡ್ಡಿ ಮಾಡುವವನು’ ಎಂಬರ್ಥದ ‘ಅೞ್‌ಡಿ ಕರ್ತ್ತಾವ್‌’ ಎಂಬೀ ಪ್ರಯೋಗಗಳು ಕಾಸರಗೋಡು ಪ್ರಾಂತದ ತುಳು  ಭಾಷೆಯ ಮೇಲಿನ ಮಲೆಯಾಳದ ಪ್ರಭಾವವನ್ನು ಸೂಚಿಸುವಂತಹವಾಗಿವೆ.

ಶಾಸನದ ಕಾಲ

ನಮ್ಮೀ ಶಾಸನದ ಮೊದಲ ಎರಡು ಸಾಲುಗಳಲ್ಲಿ ನೀಡಲಾಗಿರುವ ತೇದಿಯ ವಿವರಗಳು ಶಾಸನದ ಕಾಲವನ್ನೂ ನಿರ್ಣಯಿಸುವಲ್ಲಿ ಸಹಾಯಕವಾಗಿಲ್ಲ. ಆದರೂ ಲಿಪಿಶಾಸ್ತ್ರ ದೃಷ್ಟಿಯಿಂದ ಈ ಶಾಸನವು ಕ್ರಿ.ಶ. ೧೫ನೆಯ ಶತಮಾನಕ್ಕೆ ಸೇರಿದ್ದೆಂದು ಊಹಿಸಬಹುದಾಗಿದೆ.

ಶಾಸನೋಕ್ತ ವ್ಯಕ್ತಿ – ಹಾಗೂ ಸ್ಥಳನಾಮಗಳು

ಶಾಸನದಲ್ಲಿ ನಮೂದಿಸಲಾಗಿರುವ ‘ಸಂಕೇತ’ವನ್ನೂ ಹೊರಡಿಸಿದವನನ್ನೂ ೩-೪ನೆಯ ಪಂಕ್ತಿಗಳಲ್ಲಿ ‘ಜಯಸಿಂಹ ದೇವೆಋ’ ಎಂದು ಹೆಸರಿಸಲಾಗಿದೆ. ಅವನಿಗೆ ಯಾವುದೇ ಬಿರುದುಗಳನ್ನು ನೀಡಿಲ್ಲವಾಗದರೂ, ಅವನು ಬಹುಶಃ ಕುಂಬಳೆ ಅರಸು ಮನೆತನದ ರಾಜನಿದ್ದಿರಬೇಕು.

ಯಾವ ದೇವರ ಸಲುವಾಗಿ ಶಾಸನದಲ್ಲಿ ನಮೂದಿಸಲಾಗಿರುವ ದಾನವನ್ನು ಮಾಡಲಾಗಯಿತ್ತೋ, ಆ ದೇವರನ್ನು ಶಾಸನದಲ್ಲಿ ಹೇಳಿಲ್ಲ. ಅದರ ಬದಲು ಆ ದೇವರನ್ನು ‘ವೈಕಿಂದೇವ’ ಎಂದಷ್ಟೇ ಪ್ರಸ್ತಾಪಿಸಲಾಗಿದೆ. ಮಲಯಾಳಂನಲ್ಲಿ ‘ವೈ’ ಎಂದರೆ ‘ಇಡು’ ಅಥವಾ ‘ಪ್ರತಿಷ್ಠಾಪಿಸು’ ಎಂದರ್ಥ. ಅಂದ ಮೇಲೆ ವ್ಯೆಕಿಂದೇವ ಎಂದರೆ ‘ಪ್ರತಿಷ್ಠಿತ ದೇವ (ಪ್ರತಿಮೆ)’ಎಂದು ಅರ್ಥವಾಗುತ್ತದೆ. ಶಾಸನದ ಶಿಲೆಯನ್ನು ಗಣಪತಿ ಮಂದಿರದ ಬಳಿ ನೆಟ್ಟಿರುವುದರಿಂದ, ದಾನವನ್ನು ಪಡೆದ ದೇವರು ಗಣಪತಿಯೇ ಇರಬಹುದು.

ಶಾಸನ ಪಾಠದ ದಾನಭಾಗದಲ್ಲಿ ಉಕ್ತವಾಗಿರುವ ಮುಗೆರೈರ ಗ್ರಾಮವು ಅನಂತಪುರದ ಪಶ್ಚಿಮಕ್ಕೆ ಕನ್ನೂರು  ಹೊಳೆ ಉತ್ತರಕ್ಕಿರುವ ಇಂದಿನ ‘ಮೊಗರಾಲು’ ಗ್ರಾಮವಿರಬೇಕು.

ಶಾಸನ ಪಾಠ 

೧. ಸ್ವಸ್ತಿ ಶ್ರೀ ಮೀನಂಣ್ಟÈ ಬೃಹಸ್ಪತಿ –

೨. ಪ್ಪಿ ತಲೆತಿ(೦)ಗಳÈ ವೇನ್ದಿ ಕಾರ್ಯ್ಯ –

೩. ವೈಕಿಂದೇವೆಯಾಸ್ತಿಕು ಜಯಸಿಂ –

೪. ಹ ದೇವೆಋ ಮುಗೆರೈರ ಗ್ರಾಮ ಕು

೫. ತಡ್ಯ ಪರಿಹಾರೊ ಮಾತೊನುಲ

೬. ಕಾತೇಋ [೧*] ಮುಗೆರೈರ ಗ್ರಾಮೊಕಾಪಾ –

೭. ಡ್ತÈ ಕೊಂಡೇಋ [೧*] ಈ ಸಂಕೇತ ಕಾಪು

೮. ಡÈ (*) ಅಬೆ ಪಲ್ಲಿಡ್ತÈ ಒರಿಯೆ ಅಪ್ಪಿಣ್ದ

೯. ಅೞÈ ಡಿಕರ್ತ್ತಾವÈ ಒವ್ವÈ ಪಣÈ ತಿನ ವಾ

೧೦. ಗ್ರಾಮಣ್ವÈ ಪಣÈ ತಿನ ಗ್ರಾಮಂಕೆಞ್ಚÈ ಲೞÈ

೧೧. ತÈ ಗೆ ಪನ್ತಿನಾಯೆ ಎರಡÈ ಅಡÈ ತಿನಾ­-

೧೨. ಯೆ ಗ್ರಾ [ಮಂ*] ಕÈ ಪಿದೆಯಿ [೧*]ಈ ಗ್ರಾಮಣ್ಟÈತ ಸಂಖೇ-

೧೩. ತ(ನು) ಯೆನ್ತಿನಾಯೆ ಗ್ರಾಮಂಕÈ ಪಿದೆಯೆ [೧*] ಗ್ರಾ-

೧೪. ಮನ್ತ (ಸಿರಿತÈ?) ಸಾಕ್ಷಿ ………….೨

ಮೇಲಿನ ಪಾಠವನ್ನು ಈ ಕನ್ನಡದಲ್ಲಿ ಈ ಕೆಳಗಿನಂತೆ ಅರ್ಥೈಸಬಹುದಾಗಿದೆ.

ಮೀನದಲ್ಲಿ ಬೃಹಸ್ಪತಿ ಇರುವಂತಹ ತಲೆ (ಅಂದರೆ ಸಿಂಹ) ಮಾಸದಲ್ಲಿ ವೈಕಿಂದೇವರ ಆಸ್ತಿಗೆ, ಹೇಳಿಕೊಂಡ ಹರಕೆಯಂತೆ, ಮುಗೆರೈ ಗ್ರಾಮದ ಎಲ್ಲ ‘ತಡ್ಯಪರಿಹಾರ’ವನ್ನೂ ಜನಸಿಂಹ ದೇವರು ಕಾದು ಕೊಟ್ಟರು. ಮುಗೆರೈರ ಗ್ರಾಮವನ್ನು ಕಾಪಾಡಿಕೊಂಡರು. ಈ [ಮೇಲಿನ] ಸಂಕೇತವನ್ನು [ಸಂಬಂಧಿತರು] ರಕ್ಷಿಸಬೇಕು. ಅದೇ ಹಳ್ಳಿಯಿಂದ ಯಾರೊಬ್ಬನಾದರೂ [ಈ ಸಂಕೇತಕ್ಕೆ] ಅಡ್ಡಿ ಮಾಡುವವನು, ಏನು ಹೇಳಲಾಯಿತು? ಇದು ಯಾವುದೂ [ಈ ಗ್ರಾಮಕ್ಕೆ] ಅನ್ವಯಿಸುವುದಿಲ್ಲ ಎಂದು ಹೇಳಿಲಾಯಿತು, ಅಥವಾ ಎರಡು ಬಗೆದವನು, ಗ್ರಾಮದಿಂದ ಹೊರಗೆ ಈ ಗ್ರಾಮದಲ್ಲಿ ಈ ಸಂಕೇತವನ್ನು ನಿಲ್ಲಿಸಿದವನು ಗ್ರಾಮದಿಂದ ಹೊರಗೆ, ಗ್ರಾಮದ……. ಸಾಕ್ಷಿ.

೧. ಮೇಲಿನ ಪಾಠದಲ್ಲಿ ಸಂಶಯಾಸ್ಪದ ಅಕ್ಷರಗಳನ್ನು [ ] ದ ಒಳಗೂ, ಶಾಸನದಲ್ಲಿ ಕಂಡುಬಾರದ ಆದರೆ ಪಾಠವನ್ನು ಅರ್ಥೈಸುವಲ್ಲಿ ಅಗತ್ಯವೆನಿಸಿದ ಅಕ್ಷರಗಳನ್ನೂ, ಗುರುತುಗಳನ್ನೂ [*]ದ ಒಳಗೂ ನೀಡಲಾಗಿದೆ.

೨. ಕೊನೆಯ ಕೆಲವು ಅಕ್ಷರಗಳು ಅಸ್ಪಷ್ಟವಾಗಿವೆ.

೩. ‘ವೇನ್ದಿ ಕಾರ್ಯ’ ಎಂಬ ಪ್ರಯೋಗವನ್ನು ‘ವೇಣ್ದ್‌ದಿ ಕಾರ್ಯ’ಎಂದು ತೆಗೆದುಕೊಂಡಲ್ಲಿ ‘ಬೇಡಿಕೆಯ ಕಾರ್ಯ’ ಅಥವಾ ‘ಹೇಳಿಕೊಂಡ ಹರಕೆಯ ಕಾರ್ಯ’ ಎಂದು ಅರ್ಥೈಸಬಹುದಾಗಿದೆ. ಈ ಸೂಚನೆಯಿನ್ನಿತ್ತವರು ಮೈಸೂರಿನ ಶ್ರೀ ಜಿ. ಟಿ. ನಾರಾಯಣ ರಾಯರ ಶ್ರೀಮತಿಯವರು.

೪. ‘ತಡ್ಯಪರಿಹಾರ’ ಎಂಬುದು ಮುಗೆರೈರ ಗ್ರಾಮದ ಪ್ರತಿಯೊಂದು ಮನೆಯ ಮೇಲೂ ವಿಧಿಸಲಾದ, ಮಧ್ಯಯುಗೀನ ಶಾಸನದಲ್ಲಿ ‘ಮನೆವಣ’ವೆಂದು ಉಕ್ತವಾಗಿರುವ ಒಂದು ತೆರಿಗೆಯನ್ನು ಸೂಚಿಸುತ್ತದೆ.

೫. ಅಂದರೆ, ಅಂತಹ ತೆರಿಗೆಯ ಆದಾಯವನ್ನು ದೇವರಿಗೆ ದಾನವಾಗಿ ಬಿಟ್ಟುಕೊಟ್ಟರು.

‘ವೇನ್ದಿ’ ಅರ್ಥವಿಚಾರ: ಪುತ್ತೂರು ತಾಲೂಕಿನ ಆರ್ಯಾಪು ಪ್ರದೇಶದ ಗೌಡರು ಮತ್ತು ಹರಿಜನರ ಮಾತಿನಲ್ಲಿ ನೇಂದು ಎಂಬ ಧಾತುವಿಗೆ ‘ನೆನೆಸಿಕೊಳ್ಳು’, ‘ಘನೋದ್ದೇಶಸಿದ್ಧಿಗಾಗಿ ಸಂಕಲ್ಪಿಸು’ ಅಥವಾ ‘ಹರಕೆ ಹೊರು’ ಇತ್ಯಾದಿ ಅರ್ಥಗಳಿವೆ ಎಂದು ಶ್ರೀಮತಿ ಜಿ.ಟಿ. ಲಕ್ಷ್ಮೀ ನಾರಾಯಣರಾವ್‌ತಿಳಿಸುತ್ತಾರೆ. ಆದರೆ ಶಾಸನದಲ್ಲಿ ‘ವೇಂದಿ’ ಎಂಬಲ್ಲಿ ‘ವ’ಕಾರವೇ ಸರಿಯಾಗಿ ಕಾಣುವದರಿಂದ ಲಿಪಿಕಾರ ‘ನ’ ಕಾರವನ್ನು ‘ವ’ ಕಾರವಾಗಿ ಬರೆದನೋ ಅಥವಾ ವೇಂದು ಎನ್ನುವ ಪ್ರತ್ಯೇಕ ಧಾತು ಆ ಕಾಲದ ಮತ್ತು ಆ ಪ್ರದೇಶದ ಆಡುನುಡಿಯಲ್ಲಿ ಬಳಕೆಯಲ್ಲಿದ್ದಿತೋ ಎಂಬ ಬಗ್ಗೆ ಸಂಶೋಧನೆ ನಡೆಯಬೇಕಾಗಿದೆ.