ತುಳುನಾಡಿನಲ್ಲಿ ಜೈನಧರ್ಮದ ಪ್ರಗತಿ ಉತ್ತಮ ರೀತಿಯಲ್ಲಿ ನಡೆಯಿತು. ಕ್ರಿ.ಶ. ೫ನೇ ಶತಮಾನದಲ್ಲಿ ಈ ಧರ್ಮವು ಉಡುಪಿಯ ಪರಿಸರದಲ್ಲಿ ಇದ್ದಿತ್ತೆಂಬುದು ಇತ್ತೀಚೆಗಿನ ಪರ್ಕಳದಲ್ಲಿ ಸಿಕ್ಕಿದ ಶಾಸನದ ಅಧ್ಯಯನವೂ ಸೂಚಿಸಿದೆಯಾದರೂ ಈ ಧರ್ಮದ ಸ್ಪಷ್ಟ ಚಿತ್ರ ಸಿಗುವುದು ಹನ್ನೊಂದನೇ ಶತಮಾನದ ನಂತರವೇ. ಪ್ರಾರಂಭಿಕವಾಗಿ ಈ ಮತವು ಪ್ರಾಚೀನ ತುಳುನಾಡಿನ ಉತ್ತರಪ್ರದೇಶವಾದ ಚಂದಾವರ, ಗುಂಡಬಾಳ, ಕುಮಟಾ, ಹೊನ್ನಾವರ, ಗೇರುಸೊಪ್ಪೆ, ಮಂಕಿ (ಎಲ್ಲಾ ಉತ್ತರಕನ್ನಡ ಜಿಲ್ಲೆ), ಹಟ್ಟಿಯಂಗಡಿ, ಬೋಳಂಬಳ್ಳಿ, ಬಸ್ರೂರುಗಳಲ್ಲಿ ಪ್ರಚಲಿತವಾಗಿತ್ತು. ನಂತರ ವರಾಂಗ, ಮೂಡಬಿದ್ರೆ, ಕಾರ್ಕಳ, ನೆಲ್ಲಿಕಾರು, ವೇಣೂರು ಇತ್ಯಾದಿ ಸ್ಥಳಗಳಲ್ಲಿ ಈ ಧರ್ಮವು ಪ್ರಚಾರಕ್ಕೆ ಬಂತು. ಈ ಧರ್ಮವು ತುಳುನಾಡಿನಲ್ಲಿ ಪ್ರಚಾರವಾಗಲು ಮುಖ್ಯ ಕಾರಣ ರಾಜಾಶ್ರಯ. ಇಂತಹ ರಾಜಾಶ್ರಯದಲ್ಲಿ ಗಮನಾರ್ಹವಾದವುಗಳು ಶಾಂತರಸ ಅರಸ ಮತ್ತು ಹೊಯ್ಸಳರದ್ದು.

ಕ್ರಿ.ಶ. ೧೨೦೦-೧೨೩೦ರವರೆಗೆ ತುಳುನಾಡನ್ನು ಆಳಿದ ಶಾಂತರ ಮನೆತನದ ಕುಂದಣ ತುಳುನಾಡಿನಲ್ಲಿ ಜೈನ ಮತಕ್ಕೆ ಪ್ರೋತ್ಸಾಹ ನೀಡಿದನು.

ಹೊಯ್ಸಳ ಸಾಮಂತನೂ, ಕಾರ್ಕಳ ಆಡಳಿತಗಾರನೂ ಆಗಿದ್ದ ಮಹಾಮಂಡಳೇಶ್ವರ ಲೋಕನಾಥ ದೇವರಸನೂ ಜೈನ ಮತದವನಿದ್ದನು. ಅವನ ಆಳ್ವಿಕೆಯಲ್ಲಿ ಸೇರಿದ ಕ್ರಿ.ಶ. ೧೩೩೪ರ ಹಿರಿಯಂಗಡಿ ಶಾಸನವು ಅವನ ಸಹೋದರಿಯಾದ ಬೊಮ್ಮಲದೇವಿಯೂ, ಸೋಮಲದೇವಿಯೂ ಸೇರಿದಂತೆ ’ಹಲವರು’ ಕಾರ್ಕಳದ ಶಾಂತಿನಾಥ ಬಸದಿಗೆ ದಾನಗಳನನ್‌ಉ ಕೊಟ್ಟರೆಂದು ತಿಳಿಸುತ್ತದೆ.

ಇದೇ ರೀತಿ ಚಂದಾವರದ ಕದಂಬರು ತಮ್ಮ ರಾಜ್ಯಾಡಳಿತದ ಪ್ರದೇಶ (ಭಟ್ಕಳ, ಹೊನ್ನಾವರ ಮತ್ತು ಕುಮಟಾ ತಾಲೂಕುಗಳಲ್ಲಿ) ಜೈನ ಮತಕ್ಕೆ ಪ್ರೋತ್ಸಾಹ ನೀಡಿದ್ದರೆಂದು ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ. ಇದರಿಂದಾಗಿ ಕ್ರಿ.ಶ. ೧೪ನೇ ಶತಮಾನದ ಪ್ರಾರಂಭದಲ್ಲೇ ಜೈನಧರ್ಮವು ತುಳುನಾಡಿನಲ್ಲಿ ಸುಪ್ರತಿಷ್ಠಿತವಾಯಿತು.

ತುಳುನಾಡಿನಲ್ಲಿ ಮೂರನೇ ಶತಮಾನದ ಪ್ರಾರಂಭದಲ್ಲೇ ವೈಷ್ಣವಾರಧನೆ ಅಲ್ಲಲ್ಲಿ ಬೆಳಕಿಗೆ ಬಂದ ಸಂಗತಿ ಕೆಲವು ಶಾಸನಗಳಿಂದ ತಿಳಿದುಬರುತ್ತದೆ. ದೊರೆತಿರುವ ಶಾಸನಗಳಲ್ಲಿ ವೈಷ್ಣವ ದೇವತೆಗಳ ಆರಾಧನೆ ಮೊದಲಿಗೆ ಸಿಗುವುದು ಧಾರೇಶ್ವರ ದೇವಾಲಯದ ಶಾಸನದಲ್ಲಿ. ಇದರ ಕಾಲ ಕ್ರಿ.ಶ. ೧೦೮೩. ಇದರಲ್ಲಿ ಧಾರೇಶ್ವರ ದೇವರಿಗೆ ಹಲವಣ್ಣರಸನ ಹಿರಿಯ ರಾಣಿ ಪಟ್ಟಬ್ಬರಸಿ ದಾನ ಮಾಡುವಲ್ಲಿ ಅಲ್ಲಿರುವ ವಿಷ್ಣು ದೇವರಿಗೂ ದಾನ ಮಾಡಿದ ಉಲ್ಲೇಖ ಬರುತ್ತದೆ. ನಂತರ ತುಂಬೋಳಿ (೧೧೪೦) ಮತ್ತು ತಲಕೋಡ (ಹನ್ನೆರಡನೆಯ ಶತಮಾನ) ವೈಷ್ಣವ ದೇವತೆಗಳಾದ ವಿಷ್ಣು ಆರಾಧನಾ ಕೇಂದ್ರವಾಯಿತು. ಹನ್ನೆರಡನೇ ಶತಮಾನದ ಮಧ್ಯಾವಧಿಯಲ್ಲಿ ಚಂದಾವರವು ವೈಷ್ಣವ ಆರಾಧನಾ ಕೇಂದ್ರವಾಯಿತು. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ವಿಷ್ಣು ದೇವತೆ ನರಸಿಂಹನನ್ನು ಲಕ್ಷ್ಮಿಯೊಂದಿಗೆ ಸಂಯೋಜಿಸಿದ್ದು. ಇದಲ್ಲೆ ಇನ್ನೊಂದು ಸಂಗತಿ – ವಿಷ್ಣವಿನ ಅವತಾರವಾದ ನರಸಿಂಹನನ್ನು ಶಿವನೊಂದಿಗೆ ಹೊಂದಾಣಿಸದ್ದು. ಮೂಲಿಕೆ (ಮುಲ್ಕಿ) ಸಮೀಪದ ಕಾರ್ನಾಡಿನಲ್ಲಿ ವಿಷ್ಣುವಿನ ಚಿಹ್ನೆ ಇರುವ ಶಾಸನ ಸಿಕ್ಕದ್ದು ತುಳುನಾಡಿನ ವೈಷ್ಣವ ಆರಾಧನೆಯ ಇತಿಹಾಸದಲ್ಲಿ ಗಮನಿಸುವ ಸಂಗತಿಯೇ. ಈ ಶಾಸನವು ಕಾರ್ನಾಡಿನ ಹರಿಹರ ದೇವಸ್ಥಾನದ ಎದುರು ಇದೆ. ಇದರಲ್ಲಿ ವಿಷ್ಣುವಿನ ಸುತ್ತ ಮತ್ತು ಫಲಕದಲ್ಲಿ ವಿಷ್ಣುವಿನ ಮೂರ್ತಿಯ ಕೆತ್ತನೆ ಇದೆ. ಇದರ ಕಾಲ ಹನ್ನೆರಡನೇ ಶತಮಾನದ ಅಂತ್ಯಕ್ಕೆ ಸರಿಹೊಂದುತ್ತದೆ. ಶಾಸನದ ಬರಹ ಹೆಚ್ಚಿನ ಕಡೆಗಳಲ್ಲಿ ಓದಲಾರದಷ್ಟು ಹಾಳಾಗಿದೆ. ಈ ಶಾಸನ ಮತ್ತು ಬರಹಗಳನ್ನು ವೀಕ್ಷಿಸಿದಾಗ ಶಾಸನ ಇರುವ ಸ್ಥಳ ತುಳು ಮಾತನಾಡುವ ಪ್ರದೇಶದ ಪ್ರಾಚೀನ ಕೇಂದ್ರಗಳಲ್ಲಿ ಒಂದಾಗಿತ್ತು ಎಂಬ ಅಭಿಪ್ರಾಯ ಮೂಡಿಬರುತ್ತದೆ.

ಕಾಲಕ್ರಮೇಣ ಈ ವೈಷ್ಣವ ಆರಾಧನಾ ಪದ್ಧತಿ ತುಳುನಾಡಿನ ಪ್ರಮುಖ ಕೇಂದ್ರಗಳಾದ ಬಾರಕೂರು, ಬ್ರಹ್ಮಾವರ, ಮಂಗಳೂರು, ಮಂಜೇಶ್ವರ, ಕುಂಬಳೆ ಮುಂತಾದ ಸ್ಥಳಗಳಲ್ಲಿ ರೂಢಿಗೆ ಬಂತು. ತುಳುನಾಡಿನಲ್ಲಿ ವಿಷ್ಣು ಆರಾಧನೆಗೆ ಹೊಸ ಹುರುಪನ್ನು ಮಧ್ವಾಚಾರ್ಯರು ನೀಡಿದರೆಂದು ವಿದ್ವಾಂಸರು ತಿಳಿಸಿದ್ದಾರೆ ಈ ಆಚಾರ್ಯರು ಉಡುಪಿಯಲ್ಲಿ ವೈಷ್ಣವ ಪಂಥಕ್ಕೆ ನೀಡಿದ ಕೊಡುಗೆಯ ಕುರಿತು ಯಾವ ಶಾಸನದಲ್ಲೂ ಉಲ್ಲೇಖವಾಗಿಲ್ಲ. ಇದು ಆಶ್ಚರ್ಯಕರ ಸಂಗತಿ. ಇಷ್ಟಲ್ಲದೇ ಶಾಸನದಲ್ಲಿ ವಿಷ್ಣು ಆರಾಧನೆಯ ಕುರಿತಾಗಿ ಲಭ್ಯವಿರುವ ಮಾಹಿತಿ ಬಹಳ ವಿರಳ. ಉಡುಪಿ ಶ್ರೀಕೃಷ್ಣ ಮಠದ ಪ್ರಥಮ ಉಲ್ಲೇಖ ಬರುವುದು ಹದಿನಾಲ್ಕನೇ ಶತಮಾನದ ಅಂತ್ಯದಲ್ಲಿ. ಶಂಕರನಾರಾಯಣ. ಹರಿಹರ ಉಪಾಸನಾ ಪದ್ಧತಿ ಹೆಚ್ಚು ಹೆಚ್ಚು ಬಳಕೆಯಲ್ಲಿ ತುಳುನಾಡಿನಲ್ಲಿ ಕಾಣಿಸಿಕೊಂಡದ್ದು ಹದಿನಾಲ್ಕನೇ ಶತಮಾನದ ನಂತರ. ಈ ಆರಾಧನಾ ಪದ್ಧತಿಯಲ್ಲಿ ಶಿವ-ವಿಷ್ಣುವಿನ ಲಕ್ಷಣಗಳ ಸಮ್ಮಿಳನ ಇದೆ. ಕುಂದಾಪುರ ತಾಲೂಕಿನ ಮೋಗೇರಿ ಗ್ರಾಮದ ಶಂಕರನಾರಾಯಣ ದೇವಸ್ಥಾನವು ಈ ದೇವತೆಯ ಅತ್ಯಂತ ಪ್ರಾಚೀನ ಆರಾಧನಾ ಕೇಂದ್ರ. ನಂತರ ಇದೇ ತಾಲೂಕಿನ ಕೊಡಗಿ ಶಂಕರನಾರಾಯಣ ಮತ್ತು ಉಡುಪಿಯ ಕೊಡವೂರು ಶಂಕರನಾರಾಯಣ ದೇವಾಲಯ. ಕೊಡಗಿ ಮತ್ತು ಕೊಡಮಾರ ಈ ದೇವತೆಯಲ್ಲೂ ಒಂದಕ್ಕೊಂದು ಜೋಡಣೆಯಿರುವ ಎರಡು ಲಿಂಗಗಳು ಹರಿಹರನನ್ನು ನಿರ್ದೇಶಿಸುತ್ತದೆ. ಬಂಟವಾಳ ತಾಲೂಕಿನ ನಂದಾವರದಲ್ಲೂ ಲಿಂಗರೂಪದಲ್ಲಿ ಹರಿಹರನ ಆರಾಧನೆ ಇಲ್ಲಿನ ಶಂಕರನಾರಾಯಣ ದೇವಸ್ಥಾನದಲ್ಲಿದೆ.

ತ್ರಿಮೂರ್ತಿಗಳ ಆರಾಧನೆ ತುಳುನಾಡಿನಲ್ಲಿ ಬಳಕೆಗೆ ಬಂದ ಸಂಗತಿಯ ಪ್ರಥಮ ಉಲ್ಲೇಖವಿರುವುದು ಕ್ರಿ.ಶ. ೧೩೦೨ರ ಮಂಗಳೂರಿನ ಶಾಸನದಲ್ಲಿ. ಇಲ್ಲಿ ತಿಳಿಸಿದ ತ್ರಿಮೂರ್ತಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ – ಈ ದೇವತೆಗೆ ಪಿಂಡದಾನ ಅರ್ಪಿತವಾಗುತ್ತಿತೆಂದು ಇದೇ ಶಾಸನದಿಂದ ತಿಳಿಯುತ್ತದೆ. ಇದೇ ರೀತಿ ಕುಂದಾಪುರ ತಾಲೂಕಿನ ಕೆರ್ಗಾಲು ಭಗವತಿ ದೇವಸ್ಥಾನದಲ್ಲಿ ಸಿಕ್ಕಿದ ಶಾಸನ (೧೩೪೭)ದಲ್ಲಿ ತ್ರಿಮೂರ್ತಿಯವರಿಗೆ ದಾನ ನೀಡಿದ ಸಂಗತಿಯನ್ನು ತಿಳಿಸಿದೆ. ಇಲ್ಲಿ ತಿಳಿಸಿದ ತ್ರಿಮೂರ್ತಿ ಶಕ್ತಿ ದೇವಿಯರೆಂಬ ನಂಬಿಕೆ ಸ್ಥಳೀಯರಲ್ಲಿ ಇದೆ.

ಕ್ರಿ.ಶ. ೮ನೆಯ ಶತಮಾನದ ನಂತರ ಕರಾವಳಿ ಕರ್ನಾಟಕದಲ್ಲಿ ಇಸ್ಲಾಂ ಮತವು ಪ್ರಚಾರಕ್ಕೆ ಬಂತೆಂದು ವಿದೇಶೀ ಮತ್ತು ಕೆಲವು ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ. ಬಾರಕೂರು, ಮಂಗಳೂರು ನಗರಗಳಲ್ಲಿ ಮುಸ್ಲಿಮರು ವಲಸೆ ಬಂದು ಇದ್ದುದನ್ನು ಅರಬ ಪ್ರವಾಸಿಗರ ವರದಿಯಿಂದ ತಿಳಿಯುತ್ತದೆ. ಮಂಗಳೂರಿನಲ್ಲಿ ನಾಲ್ಕು ಸಾವಿರ ಮುಸಲ್ಮಾನರಿದ್ದರು. ಇವರನ್ನು ಹಿಂದುಗಳು ತಮ್ಮ ಬಂಧುಗಳಂತೆ ಕಾಣುತ್ತಾರೆ. ಇಷ್ಟಲ್ಲದೆ ಮಣೇಲ ನಗರದ ಅಧಿಕಾರಿಗಳು ನದಿಯ ಬದಿಯಲ್ಲಿ ಒಂದು ಮಸೀದಿ ಕಟ್ಟಲು ಸ್ಥಳವನ್ನು ಉಚಿತವಾಗಿ ಕೊಟ್ಟಿದ್ದರು ಎಂದು ಕ್ರಿ.ಶ. ೧೧೭೫ರಲ್ಲಿ ಬಂದ ಮುಸಲ್ಮಾನ ಧರ್ಮ ಪ್ರಚಾರಕ ಇಬ್ನಾವ ಮಸೂದಿ ತನ್ನ ವರದಿಯಲ್ಲಿ ತಿಳಿಸಿದ್ದಾನೆ. ಮುಸ್ಲಿಮರು ಕರಾವಳಿಯಲ್ಲಿ ಸಾಗರೋತ್ತರ ವ್ಯಾಪಾರದಲ್ಲಿ ನಿರತರಾಗಿ ಸ್ಥಳೀಯರ ಗೌರವ ಮತ್ತು ಆದರಗಳನ್ನು ಪಡೆಯುತ್ತಿದ್ದರು. ಇವರ ವ್ಯಾಪಾರ ಸಂಸ್ಥೆ ‘ಹುಂಜಮಾನ’ ಸ್ಥಳೀಯರಿಂದ ಗೌರವ ಮತ್ತು ಮನ್ನಣೆಯನ್ನು ಪಡೆಯಲು ಸಮರ್ಥವಾಗಿ ಕೆಲಸ ನಡೆಸುತ್ತಿತ್ತು.

ಹನ್ನೆರಡರಿಂದ ಹದಿನೈದನೇ ಶತಮಾನಗಳ ಅವಧಿಗಳಲ್ಲಿ ಜ್ಯು (ಯಹೂದೀ) ಜನಾಂಗದವರು ಮಂಗಳೂರಿನಲ್ಲಿ ನೆಲೆಸಿದ್ದರೆಂದು ಇತ್ತೀಚೆಗೆ ಬೆಳಕಿಗೆ ಬಂದ ಜ್ಯೂ (ಯಹೂದೀಯ) ವರ್ತಕರ ಪತ್ರಗಳಿಂದ ತಿಳಿಯುತ್ತದೆ. ಇವರು ತಮ್ಮ ಮತಕಟ್ಟಳೆಗಳನ್ನು ಯಾವ ಅಡಚಣೆ ಇಲ್ಲದೆ ನಡೆಸಿಕೊಂಡು ಮಂಗಳೂರು ಮತ್ತು ಕೇರಳದ ರೇವುಗಳ ವ್ಯಾಪಾರಗಳಲ್ಲಿ ನಿರತರಾಗಿದ್ದರು. (ನೋಡಿ G.D. Goieton ed. Letters of Medieval Jewish Traders, Princeton University, Princeton, 1973).

ಧಾರ್ಮಿಕ ಇತಿಹಾಸ ೧೪-೧೬ನೆಯ ಶತಮಾನಗಳಲ್ಲಿ

ಕ್ರಿ.ಶ. ೧೪ ಮತ್ತು ೧೭ನೇ ಶತಮಾನಗಳ ನಡುವೆ ಕರಾವಳಿ ಕರ್ನಾಟಕದ, ಮುಖ್ಯವಾಗಿ ತುಳುನಾಡಿನ, ಧಾರ್ಮಿಕ ಇತಿಹಾಸವು ಕರ್ನಾಟಕದ ಪ್ರಧಾನ ರಾಜಕೀಯ ಶಕ್ತಿಯಾದ ವಿಜಯನಗರ ಸಾಮ್ರಾಜ್ಯದ (೧೩೩೬ – ೧೫೬೫) ಪ್ರಗತಿಯೊಂದಿಗೆ ಹೊಂದಿಕೊಂಡಿತ್ತು. ಈ ಅರಸರುಗಳು ತುಳುನಾಡಿನ ಧಾರ್ಮಿಕ ಬೆಳವಣಿಗೆಗೆ ಉನ್ನತ ರೀತಿಯಲ್ಲಿ ಸಹಕಾರಿಯಾಗಿದ್ದರೆಂದು ಆಗಿನ ಕಾಲದ ಶಾಸನಗಳ ವಿವರಗಳು ಹೇಳುತ್ತವೆ. ‘ಹಿಂದು’ ಧರ್ಮದ ವಿಭಿನ್ನ ಶಾಖೆಗಳು ಹುಟ್ಟಿಕೊಂಡು ಅವು ರಾಜಾಶ್ರಯ ಪಡೆದು ಪ್ರಗತಿ ಪಂಥದಲ್ಲಿ ನಡೆದವು. ವೈಷ್ಣವ, ಶೈವ ಪಂಥಗಳು ಮತ್ತು ಜೈನ ಧರ್ಮಗಳು ಈ ಕಾಲದಲ್ಲೇ ಪ್ರಾಧಾನ್ಯತೆಯನ್ನು ಗಳಿಸಿಕೊಂಡಿದ್ದರ ವಿಚಾರಗಳನ್ನು ಹಲವಾರು ಶಾಸನಗಳು ನಮೂದಿಸಿವೆ. ಈ ಪಂಥ ಮತ್ತು ಧರ್ಮಗಳ ದೇವತೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ಅಸಂಖ್ಯ ಸಂಖ್ಯೆಗಳಲ್ಲಿ ಹುಟ್ಟಿಕೊಂಡವು. ಇದರೊಂದಿಗೆ ವೈಭವಪೂರಿತ ಧಾರ್ಮಿಕ ಆಚರಣೆ ಮತ್ತು ಕಟ್ಟುಕಟ್ಟಳೆಗಳು ಹುಟ್ಟಿಕೊಂಡು ಕ್ರಮೇಣ ಇವುಗಳು ಸ್ಪಷ್ಟ ರೂಪಗಳನ್ನು ಪಡೆದವು. ಇದರೊಂದಿಗೆ ಸ್ಥಳೀಯ ದೇವ – ದೇವಿಯರ ಮತ್ತು ಭೂತಾರಾಧನೆ ಪದ್ಧತಿಗಳು ಶಾಸನಗಳಲ್ಲಿ ದಾಖಲೀಕರಿಸುವಷ್ಟು ಪ್ರಾಮುಖ್ಯತೆ ಪಡೆದವು. ಇದಕ್ಕೆ ಉದಾಹರಣೆ ಕ್ರಿ.ಶ. ೧೩೭೯ರ ಕಾರ್ಕಳ, ೧೪೩೧ರ ಉಳ್ಳಾಲ, ೧೪೩೨ರ ಸುಳ್ಯ ತಾಲೂಕಿನ ಎಡಮಂಗಲ, ೧೪೯೯ರ ಕಾಪು, ೧೫೪೬ರ ಬಸ್ತೂರಿನ, ೧೫೬೪ರ ಬಾರಕೂರು ಶಾಸನಗಳು. ಕುಳಾಯಿ ದುರ್ಗಾಪರಮೇಶ್ವರಿ ದೇವಾಲಯದ ಕ್ರಿ.ಶ. ೧೪೦೪ರ ಶಿಲಾಶಾಸನದಲ್ಲಿ ಬರುವ ಪುಳುಪಿನ ದೇವ ಆರಾಧನೆಯು ತುಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ಗಮನಿಸುವ ಘಟನೆ. ಈ ದೇವಿ ಕ್ರಮೇಣ ಸ್ಥಳೀಯ ದುರ್ಗಾದೇವಿಯೊಂದಿಗೆ ಸಂಗಮವಾದ ವಿವರಗಳಿವೆ. ಇದೇ ರೀತಿ ಸಂಗಮವು ಸುಬ್ರಹ್ಮಣ್ಯ – ನಾಗ – ಸೂರ್ಯ – ನಾರಾಯಣ, ಲಕ್ಷ್ಮೀನಾರಾಯಣ. ಕೆಲವು ವೈದಿಕ ದೇವತೆಗಳ ದೈವದೋಪಾದಿಯಲ್ಲಿ ಆರಾಧನೆ ತುಳುನಾಡಿನಲ್ಲಿ ನಡೆದುಬಂದದ್ದು ವಿಜಯನಗರ ಚಕ್ರವರ್ತಿಗಳ ಆಳ್ವಿಕೆಯ ಕಾಲದಲ್ಲೇ. ಇದರಲ್ಲಿ ಬ್ರಹ್ಮನು (ಇಲ್ಲಿ ತಿಳಿಸಿದ ಬೆರ್ಮ ಚತುರ್ಮುಖ ಬ್ರಹ್ಮನಲ್ಲ. ಶಾಸನಗಳಲ್ಲಿ ಉಕ್ತವಾಗಿರುವ ಹಾಗೂ ತುಳುನಾಡಿನಲ್ಲಿ ಪ್ರಚಲಿತವಿರುವ ಬೆರ್ಮರ್ ಚತುರ್ಮುಖ ಬ್ರಹ್ಮನಲ್ಲ. ಹೆಚ್ಚಿನ ವಿವರಗಳಿಗೆ ನೋಡಿ :ತುಳುನಾಡಿನ ಬೆರ್ಮೆರ್; ಲೀಲಾಭಟ್, ಅಮೃತ ಸೋಮೇಶ್ವರ ಅಭಿನಂದನ ಗ್ರಂಥ ‘ಸಿರಿ’.) ತುಳುನಾಡಿನ ಭೂತಾರಾಧನೆಯ ಚೌಕಟ್ಟಿನಲ್ಲಿ ಸೇರ್ಪಡೆಯಾಗಿ ದೈವರೂಪದಲ್ಲಿ ಬೆರ್ಮೆ ಎಂದು ಆರಾದಿಸಲ್ಪಡುವ ಪದ್ಧತಿ ಸೋಜಿಗವಾದುದು. ಬೆಟ್ಟದೇವರು, ಚಿಕ್ಕದೇವರು, ಚಿಕ್ಕಮ್ಮ ದೇವರುಗಳ ಆರಾಧನೆ ಕುಂದಾಪುರ ಪರಿಸರದಲ್ಲಿ ಬಳಕೆ ಇದ್ದ ಸಂಗತಿಯು ಇಲ್ಲಿನ ವೊಡೇರ ಹೋಬಳಿ ಶಾಸನದಿಂದ ವ್ಯಕ್ತವಾಗುತ್ತದೆ (೧೪೦೬). ಇಲ್ಲಿ ತಿಳಿಸಿದ ಚಿಕ್ಕ ದೇವರಿಗೆ ಆಸಾಡಿ ಸೋಣೆ (ಮಳೆಯ) ತಿಂಗಳಲ್ಲಿ ರುದ್ರಪೂಝೆ ನಡೆಸುವುದನ್ನು ಹೇಳುತ್ತದೆ. ಒಟ್ಟಿನಲ್ಲಿ ವೈದಿಕ ಆರಾಧನಾ ಪದ್ಧತಿ ಸ್ಥಳೀಯ ದೈವಗಳಿಗೆ ಅಳವಡಿಸಿದ್ದು ಈ ಎರಡು ಧಾರ್ಮಿಕ ಪದ್ಧತಿಗಳ ಸಮನ್ವಯತೆಯನ್ನು ತಿಳಿಸುತ್ತದೆ ಎಂದು ಅಭಿಪ್ರಾಯ ಪಡಬಹುದು.

ಹದಿನಾಲ್ಕನೇ ಶತಮಾನದ ಅಂತ್ಯದಲ್ಲಿ ವೈಷ್ಣವ ಪಂಥವು ಉಡುಪಿಯಲ್ಲಿ ಆರಂಭವಾಗಿದ್ದರೂ ಇಲ್ಲಿ ಶೈವ ಪಂಥ ಮುಂದುವರಿದುಕೊಂಡು ಬರುತ್ತಿತ್ತು ಎಂಬುದನ್ನು ಇಲ್ಲಿನ ಒಂದು ಶಾಸನವು ತಿಳಿಸುತ್ತದೆ. ಕ್ರಿ.ಶ. ೧೩೬೬ರ ಶಾಸನದಂತೆ ‘ಶಿವನು’ ಅನಂತೇಶ್ವರನಾಗಿ ಆರಾಧನೆಗೊಳ್ಳುತ್ತಿದ್ದನು. ಈ ದೇವರ ಸೇವೆಗೆ ಮತ್ತು ಬ್ರಾಹ್ಮಣರ ಸಂತರ್ಪಣೆಗೆ ಭೂಮಿಯನ್ನು ಖರೀದಿಸಿ ದಾನ ನೀಡಲಾಯಿತೆಂಬ ವಿವರ ಇದೇ ದಾಖಲೆಯು ನೀಡುತ್ತದೆ.

ಕರಾವಳಿ ಕರ್ನಾಟಕದಲ್ಲಿ ವೀರಶೈವ ಪಂಥದ ಅಸ್ತಿತ್ವವನ್ನು ಕ್ರಿ.ಶ. ೧೩೭೩ರ ಕೋಟೇಶ್ವರ ದೇವಾಲಯದ ಶಾಸನವು ಹೇಳುತ್ತದೆ. ಈ ಶಾಸನವು ಉಭಯ ಜಂಗಮರ ಆರೋಗಣೆಗಾಗಿ ದಾನವನ್ನು ನೀಡಿದ್ದನ್ನು ತಿಳಿಸುತ್ತದೆ. ದೇವತಾ ಆರಾಧನೆಯೊಂದಿಗೆ ವೈಭವಯುಕ್ತವಾದ ಆಚರಣೆಗಳೂ ಮತ್ತು ಕೆಲವು ಕಟ್ಟುಕಟ್ಟಳೆಗಳೂ ಬೆಳೆದದ್ದು ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲೇ. ಹಬ್ಬಗಳು ಬಹಳ ವಿಜೃಂಭಣೆಯಿಂದ ನಡೆಯುವ ವಿಚಾರ ಶಾಸನಗಳಲ್ಲಿ ಉಲ್ಲೇಖವಾಗಿವೆ. ದೊರೆತಿರುವ ಶಾಸನಗಳಲ್ಲಿ ದೀಪಾವಳಿ, ಪಂಚಪರ್ವ, ಶಿವರಾತ್ರಿ, ವಸಂತ, ಯುಗಾದಿ, ವೈಶಾಖ ಹುಣ್ಣಿಮೆ, ನೂಲಹಬ್ಬ, ಬೆನಕ ಚೌತಿ, ‘ತುಡಿ’ (ತುಡಿ ಹಬ್ಬ – ಕೊಡಿಹಬ್ಬ)ಯ ಹಬ್ಬ ಇತ್ಯಾದಿ ಹಬ್ಬಗಳ ಪ್ರಸ್ತಾಪವಿದೆ. ಕ್ರಿ.ಶ. ೧೪೫೫ರ ಶಾಸನವೊಂದರಲ್ಲಿ ದೀವಳಿಗೆಗೆ ಹಬ್ಬದ ಮೂರು ದಿನ ದೀಪೋತ್ಸವ ಧರ್ಮವೆಂಬ ವಿವರಣೆಯಿದೆ. ಕ್ರಿ.ಶ. ೧೫೫೧ರ ಕೋಟೇಶ್ವರದ ‘ತುಡಿಯ ಹಬ್ಬದಲ್ಲೂ ತುಳುರಾಜ್ಯಲು ಕುಡಿದಲಿ’ ಎಂಬ ಉಲ್ಲೇಖ ಹಬ್ಬದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.

ವಿವಿಧ ಪಂಥಗಳ ಹಬ್ಬ ಆಚರಣೆಯಿಂದಾಗಿ ಧಾರ್ಮಿಕ ಸಂಸ್ಥೆಗಳು ಧಾರ್ಮಿಕ ಚಟುವಟಿಕೆಗಳ ಕೇಂದ್ರಗಳಾದವು. ಹಬ್ಬಗಳ ಆಚರಣೆ ಮತ್ತು ಧಾರ್ಮಿಕ ನಿಯಮಗಳನ್ನು ಸುಗಮವಾಗಿ ನೆರವೇರಿಸಿಕೊಂಡು ಬರಲು ಈ ಧಾರ್ಮಿಕ ಸಂಸ್ಥೆಗಳಿಗೆ ಸರಕಾರದ ಅಧಿಕಾರಿಗಳು ಮತ್ತು ಪ್ರಮುಖ ಪ್ರಜೆಗಳು ಭೂಮಿ, ಧನ ಮತ್ತು ಕನಕಗಳನ್ನು ವಿಪುಲವಾಗಿ ದಾನ ಮಾಡಿದರು. ಈ ಸಂಸ್ಥೆಗಳು ತಾವು ಪಡೆದ ಭೂಮಿಗೆ ಕೆಲವು ವಿಶಿಷ್ಟ ಹಕ್ಕುಗಳನ್ನು ಹೊಂದಿದ್ದವು. ಧಾರ್ಮಿಕ ಸಂಸ್ಥೆಗಳ ಭೂಮಿಯನ್ನು ‘ದೇವಸ್ವ’ವೆಂದು ಹೇಳಿ ಶಾಸನಗಳಲ್ಲೂ, ಕೆಲವು ಕಡತಗಳಲ್ಲೂ ದಾಖಲೆಯಾಗಿವೆ. ಇಂತಹ ದೇವಸ್ವಗಳಲ್ಲಿ ರಾಜನೂ ಸೇರಿದಂತೆ ಯಾರೊಬ್ಬರಿಗೂ ಆಯಾ ದೇವಸ್ಥಾನಗಳಿಗೆ ಸಂಬಂಧಿಸದ ಯಾವ ಕಾರ್ಯಗಳನ್ನೂ ನಡೆಸುವ ಅಧಿಕಾರವಿರಲಿಲ್ಲ. ವಿಜಯನಗರದ ಅರಸರ ಕಾಲದ ಶಾಸನಗಳಲ್ಲಿ ದೇವಸ್ವದಲ್ಲಿ “ಅರಸಿಂಗೆ ಅರಮನೆ ಕಟ್ಟುವ ಅಧಿಕಾರವಿಲ್ಲ” ಎಂಬ ಹೇಳಿಕೆಯು ಕಾಣಿಸುತ್ತದೆ. ಇದಲ್ಲದೆ ದೇವಸ್ವದಲ್ಲಿ ಮತ್ತೊಂದು ದೇವಾಲಯವನ್ನು ಕಟ್ಟುವುದಕ್ಕೂ ಅನುಮತಿಯಿಲ್ಲವೆಂಬುದನ್ನು ಶಾಸನಗಳು ಸ್ಪಷ್ಟಪಡಿಸುವುದು ಗಮನಾರ್ಹ.

ಭೂಮಿ, ಧನ – ಕನಕ ಮತ್ತು ದಾರ್ಮಿಕ ಆಚರಣೆಗಳಿಂದಾಗಿ ಧಾರ್ಮಿಕ ಸಂಸ್ಥೆಗಳು ಪ್ರಬಲವಾಗಿತ್ತಲ್ಲದೆ ಇವುಗಳ ದೈನಂದಿನ ಆಚರಣೆಗಳನ್ನು ನಡೆಸಿಕೊಂಡು ಬರಲು ಅಧಿಕಾರಿ ವರ್ಗಗಳ ಶ್ರೇಣಿ ರೂಪುಗೊಂಡಿತ್ತೆಂದು ಶಾಸನಗಳ ಅಧ್ಯಯನದಿಂದ ವ್ಯಕ್ತವಾಗುತ್ತದೆ. ಇವುಗಳಲ್ಲಿ ಗಮನಾರ್ಹ ಅಧಿಕಾರಿವರ್ಗ, ಸ್ಥಾನಿಕ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ಸ್ಥಾನಿಕ ವರ್ಗ ವಿಜಯನಗರ ಸಾಮ್ರಾಜ್ಯದ ಆಡಳಿತ ಅವಧಿಯಲ್ಲಿ ವಿಶೇಷ ಗೌರವ – ಪ್ರಭಾವ ಮತ್ತು ವಿಶಿಷ್ಟವಾದ ಹಕ್ಕುಗಳನ್ನು ಹೊಂದಿದ್ದರೆಂದು ಶಾಸನಗಳ ಅಧ್ಯಯನದಿಂದ ತಿಳಿದುಬರುತ್ತದೆ. ಇದಕ್ಕೆ ಮುಖ್ಯ ಉದಾಹರಣೆ ಕ್ರಿ.ಶ. ೧೪೦೬ರ ಕುಕ್ಕೆ ಸುಬ್ರಹ್ಮಣ್ಯ ಮತ್ತು ಬಾರಕೂರಿನ ಶಾಸನಗಳು. ಇದರೊಂದಿಗೆ ಸ್ಥಾನಿಕರು ದಾನಿಗಳಾಗಿಯೂ ಪಾತ್ರ ವಹಿಸಿದ್ದರೆಂಬುದಕ್ಕೆ ದಾಖಲೆಗಳೂ ಸಾಕಷ್ಟು ಇವೆ. ಇವರು ದೇವಾಲಯದ ಪುರೋಹಿತರ ಜೊತೆ ಆರಾಧನೆ ಮುಂತಾದ ಧಾರ್ಮಿಕ ಕರ್ತವ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದರು. ಧಾರ್ಮಿಕ ಸಂಸ್ಥೆಗಳ ಮೇಲುಸ್ತುವಾರಿಯ ಹೊಣೆಗಾರಿಕೆಯನ್ನು ಸ್ಥಾನಿಕರು ನಡೆಸುತ್ತಿದ್ದರು.

ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಧಾರ್ಮಿಕ ಸಂಸ್ಥೆಗಳು ಗ್ರಾಮದ ಆರ್ಥಿಕ ಚಟುವಟಿಕೆಗಳಲ್ಲಿ ಪ್ರಬಲ ಶಕ್ತಿಯಾದವು. ಇದಕ್ಕೆ ಮುಖ್ಯ ಕಾರಣ ಈ ಸಂಸ್ಥೆಗಳಿಗೆ ಧನ ಕನಕ ಮತ್ತು ಫಲವತ್ತಾದ ಭೂಮಿಗಳನ್ನು ಹೇರಳವಾಗಿ ಸರಕಾರದವರು ಮತ್ತು ಪ್ರಮುಖ ಪ್ರಜೆಗಳು ದಾನವನ್ನು ನೀಡುತ್ತಿದ್ದುದು. ದಾನ ಬಿಟ್ಟ ಭೂಮಿಯಲ್ಲಿ ಧಾರ್ಮಿಕ ಸಂಸ್ಥೆಗಳು ಒಕ್ಕಲುತನದ ಬೇಸಾಯವನ್ನು ನಡೆಸುತ್ತಿದ್ದವು. ಕೆಲವು ಸಂದರ್ಭಗಳಲ್ಲಿ ಧಾರ್ಮಿಕ ಸಂಸ್ಥೆಗಳು ಅಡವಿನ ಭೂಮಿಯನ್ನು ಪಡೆಯುತ್ತಿದ್ದುವು. ಇಷ್ಟಲ್ಲದೆ ದೇವಸ್ವ ಭೂಮಿಗಳಿಗೆ ಸರಕಾರದಿಂದ ರಕ್ಷಣೆ ಸಿಗುತ್ತಿತ್ತು. ಇದನ್ನು ಕುಂದಾಪುರದ ಕುಂದೇಶ್ವರ ದೇವಾಲಯದಲ್ಲಿ ದೊರೆತ ಶಿಲಾಶಾಸನ (ಕ್ರಿ.ಶ. ೧೪೨೫)ವು ದೃಢೀಕರಿಸುತ್ತದೆ. ಒಟ್ಟಿನಲ್ಲಿ ಧಾರ್ಮಿಕ ಸಂಸ್ಥೆಗಳು ಕರಾವಳಿ ಕರ್ನಾಟಕದಲ್ಲಿ ಪ್ರಮುಖ ಭೂಹಿಡುವಳಿಗಳಾಗಿ ಮಾರ್ಪಟ್ಟಿದ್ದು ವಿಜಯನಗರ ಅರಸರ ಧಾರ್ಮಿಕ ಧೋರಣೆಯಿಂದ. ಈ ಅರಸರುಗಳು ಆಗಿಂದಾಗ್ಗೆ ಧಾರ್ಮಿಕ ಸ್ಥಿತಿಗತಿಗಳಿಗೆ ಧಕ್ಕೆ ಉಂಟಾದಾಗ ಅವುಗಳಿಂದ ದೇವಾಲಯ ಮತ್ತು ಮರಗಳನ್ನು ಸಂರಕ್ಷಿಸುತ್ತಿದ್ದರು. ಇಂತಹ ಧಾರ್ಮಿಕ ಸಂದಿಗ್ಧ ಸ್ಥಿತಿಗಳು ತುಳುನಾಡಿನ ಪ್ರಮುಖ ಸ್ಥಳಗಳಾದ ಉಜಿರೆ, ಉಡುಪಿ, ಬಾರಕೂರು, ಬಸ್ರೂರು, ಕೋಟೇಶ್ವರ ಮತ್ತು ಉಪ್ಪುಗುಂದದ (ಕುಮಟಾ, ಉ.ಕ.)ಗಳಲ್ಲಿ ನಡೆದುದನ್ನು ಶಾಸನಗಳು ದಾಖಲಿಸಿದ್ದಲ್ಲದೆ, ಅವುಗಳಿಗೆ ಪರಿಹಾರವನ್ನು ವಿಜಯನಗರ ಅರಸರು ಮತ್ತು ಅವರ ಸಾಮಂತರಸರು ಮತ್ತು ಇನ್ನಿತರ ಅಧಿಕಾರಿಗಳು ಕೈಕೊಂಡದ್ದನ್ನು ಇದೇ ಶಾಸನಗಳು ವಿವರಿಸಿವೆ. ಧಾರ್ಮಿಕ ಪರಂಪರೆಗಳು ವಿಜಯನಗರ ಅರಸರ ಕಾಲದಲ್ಲಿ ಸಂರಕ್ಷಿಸಲ್ಪಟ್ಟವು. ಆದರೆ ಈ ಅರಸು ಮನೆತನದವರು ಧಾರ್ಮಿಕ ಆಚರಣೆಯಲ್ಲಿ ತೋರಿಬಂದ ಲೋಪ-ದೋಷಗಳನ್ನು ತಿದ್ದುವಲ್ಲಿ ಆಸಕ್ತಿ ನೀಡಿಲ್ಲವೆಂದು ಕೆಲವು ಇತಿಹಾಸತಜ್ಞರು ಸೂಚಿಸಿದ್ದಾರೆ. ಇದರ ಪರಿಣಾಮವಾಗಿ ಕೆಲವು ಆಚಾರ, ವಿಚಾರ ಮತ್ತು ಸಂಪ್ರದಾಯಗಳು ಯಾವುದೇ ಆತಂಕವಿಲ್ಲದೆ ನಡೆದುಬಂದವು. ಕಾಲಕ್ರಮೇಣ ಈ ಪದ್ಧತಿಗಳು ಕೆಟ್ಟ ಪದ್ಧತಿಗಳಾಗಿ ಬೆಳೆದು ದೂರದ ತುಳುನಾಡಿನ ಧಾರ್ಮಿಕ ಇತಿಹಾಸವನ್ನು ಸಂಕಟಸ್ಥಿತಿಯಲ್ಲಿ ಹಾಕಿತು. ಇವುಗಳಿಗೆಲ್ಲ ಗಮನಾರ್ಹವಾದುದು ದೇವದಾಸಿ ಪದ್ಧತಿ, ಜಾತಿ ಪದ್ಧತಿಯ ಏಣಿಶ್ರೇಣಿ ವ್ಯವಸ್ಥೆ, ಸತಿಪದ್ಧತಿ, ದೇವರಿಗೆ ಪ್ರಾಣಿಗಳನ್ನು ಬಲಿಕೊಡುವುದು, ಮಡಿ-ಮೈಲಿಗೆ, ವಿಧವೆ ಮತ್ತು ಅಸ್ಪೃಶ್ಯರನ್ನು ನೋಡಿಕೊಳ್ಳುವ ಅನಾದರ ರೀತಿಗಳು. ಈ ಎಲ್ಲಾ ಪದ್ಧತಿಗಳು ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲಿ ತುಳುನಾಡಿನಲ್ಲಿದ್ದಿತೆಂದು ವಿದೇಶೀ ಪ್ರವಾಸಿಗರ ವರದಿ ಮತ್ತು ದಾಸರ ಪದಗಳಿಂದ ತಿಳಿದುಬರುತ್ತದೆ. ಒಟ್ಟಿನಲ್ಲಿ ವೈದಿಕ ಧರ್ಮದ ಅವನತಿ ಪ್ರಾರಂಭವಾದುದು ವಿಜಯನಗರದ ಅರಸರ ಆಳ್ವಿಕೆಯ ಅಂತ್ಯಕಾಲದಲ್ಲಿಯೆಂದು ಕೆಲವು ಇತಿಹಾಸಕಾರರು ತಿಳಿಸಿದ್ದರಲ್ಲದೆ, ಇದಕ್ಕೆ ವಿಜಯನಗರ ಅರಸರ ಕೆಲವು ಧಾರ್ಮಿಕ ಧೋರಣೆಗಳು ಕಾರಣವೆಂದು ಇವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೆಲ್ಲಾ ಪುನರ್‌ಪರಿಶೀಲಿಸುವ ಕೆಲಸ ಮುಂದಿನ ಇತಿಹಾಸತಜ್ಞರಿಗೆ ಬಿಟ್ಟದ್ದು.

ವಿಜಯನಗರ ಅರಸರ ಆಳ್ವಿಕೆ ಅವಧಿಯಲ್ಲಿ ಜೈನಧರ್ಮವು ಅತ್ಯಂತ ಉನ್ನತ ಸ್ಥಿತಿ ತಲುಪಿತ್ತೆಂದು ಸಮಕಾಲೀನ ಐತಿಹಾಸಿಕ ದಾಖಲೆಗಳ (ಮುಖ್ಯವಾಗಿ ಶಾಸನ ಮತ್ತು ಸಾಹಿತ್ಯ ಕೃತಿ) ಅಧ್ಯಯನದಿಂದ ವ್ಯಕ್ತವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ವಿಜಯನಗರ ಅರಸರ ಧಾರ್ಮಿಕ ಸಮನ್ವಯ ದೃಷ್ಟಿ. ಈ ಅರಸುಗಳ ಆಡಳಿತ ಕಾಲದಲ್ಲಿ ತುಳುನಾಡಿನಲ್ಲಿ ಜೈನರು ಸ್ಥಳೀಯ ರಾಜಕೀಯ ಶಕ್ತಿಯಾಗಿ ಬೆಳೆದುಬಂದರು. ಇದರಿಂದಾಗಿ ಜೈನಧರ್ಮದವರು ಈ ಪ್ರದೇಶದಲ್ಲಿ ರಾಜಕೀಯ ಪ್ರಾಧಾನ್ಯವನ್ನು ವಿಜಯನಗರದರಸರ ಆಡಳಿತದಿಂದ ಪಡೆದರು. ಈ ತುಳುನಾಡಿನ ಜೈನ ಅರಸು ಮನೆತನದವರು ತಮ್ಮ ಮತವನ್ನು ಯಾವ ಘರ್ಷಣೆಯಾಗದ ರೀತಿಯಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಿದರು. ಇದರೊಂದಿಗೆ, ತಮ್ಮ ಮತೀಯ ಆಚರಣೆಗಳನ್ನು ನಿರಾತಂಕವಾಗಿ (ಧಾರ್ಮಿಕ ಮತ್ತು ಮತೀಯ) ನಡೆಸುವಲ್ಲಿ, ಜೈನರು ಸ್ಥಳೀಯ ಸಾಮರಸ್ಯವನ್ನುಂಟುಮಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದನ್ನು ಇಲ್ಲಿ ಗಮನಿಸಬೇಕಾದದ್ದೇ. ಅಳಿಯಕಟ್ಟಿನ ಆಚರಣೆ ಮತ್ತು ಭೂತಾರಾಧನೆ (ಆದರೆ ಜೈನರು ಭೂತ-ದೈವಗಳನ್ನು ತಮ್ಮ ತೀರ್ಥಂಕರ ಮತ್ತು ಯಕ್ಷಣಿಯರ ಸೇವಕರೆಂದು ಪರಿಗಣಿಸುತ್ತಿದ್ದರು.) ಗಳನ್ನು ಜೈನರು ಸ್ವೀಕರಿಸಿದರು. ಇವುಗಳನ್ನು ಅಂಗೀಕರಿಸುವ ಮೂಲಕವಾಗಿ ತುಳುನಾಡಿನ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯೊಂದನ್ನು ನಿರ್ಮಿಸುವಲ್ಲಿ ನೆರವಾದರು. ವಿಜಯನಗರ ಅರಸರ ಆರ್ಥಿಕ ಧೋರಣೆಗಳು ಜೈನರಿಗೆ ವರ್ತಕರಾಗುವ ಅವಕಾಶವನ್ನುಂಟುಮಾಡಿಕೊಟ್ಟಿತು. ಆಗ ಬೆಳಕಿಗೆ ಬಂದ ವರ್ತಕರ ಸಂಘಗಳು ಹೆಚ್ಚಾಗಿ ಜೈನರದಾಗಿದ್ದವು. ಈ ಜೈನವರ್ತಕ ಸಂಘದವರು ತಮ್ಮ ವ್ಯಾಪಾರ ಕೇಂದ್ರಗಳಲ್ಲಿ ತಮ್ಮ ಮತವನ್ನು ಪ್ರಚುರಗೊಳಿಸಿದರು. ಇದರಿಂದಾಗಿ ಇವರ ಧಾರ್ಮಿಕಸ ಕೇಂದ್ರಗಳಾದ ಬಸದಿ ಮತ್ತು ಮಠಗಳು ತುಳುನಾಡಿನಲ್ಲಿ ಹುಟ್ಟಿಕೊಂಡವು. ಈ ಜೈನ ಮಠಗಳು ಇಲ್ಲಿನ ಸಂಸ್ಕೃತಿ ಸಂವರ್ಧನೆಯ ದೃಷ್ಟಿಯಿಂದ ಮಹತ್ವವಾದ ಪಾತ್ರವನ್ನು ವಹಿಸಿದವು.ಈ ಮಠಗಳು ಮುಖ್ಯವಾಗಿ ಮೂಡಬಿದಿರೆಯ ಚಾರುಕೀರ್ತಿ ಭಟ್ಟಾರಕ, ಕಾರ್ಕಳದ ಲಲಿತಕೀರ್ತಿ ಭಟ್ಟಾರಕ, ವರಾಮಗದ ದೇವೇಂದ್ರ ಕೀರ್ತಿ ಭಟ್ಟಾರಕ ಮತ್ತು ಗೇರುಸೊಪ್ಪೆ – ಹಾಡುವಳ್ಳಿಯ ಅಕಲಂಕ ಮಠಗಳು ಜೈನ ಸಾಹಿತ್ಯ, ಕಲೆ ಮತ್ತು ಧರ್ಮಗಳಿಗೆ ಒಂದು ಸ್ಫುಟರೂಪಗಳನ್ನು ಕೊಟ್ಟವು. ಜೈನರದ್ದೇ ಆದ ಶಿಲ್ಪಕಲೆಗಳು ತುಳುನಾಡಿನಲ್ಲಿ ಕಾಣಿಸಿಕೊಳ್ಳಲು ಈ ಮಠಗಳ ಪ್ರೋತ್ಸಾಹವೇ ಕಾರಣ. ಜೈನರ ಅನನ್ಯ ಶಿಲ್ಪಗಳಾವುವೆಂದರೆ ಮೂಡಬಿದಿರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿ, ದಣ್ಣಾಯಕರ ಬಸದಿ (ಗುರುಗಳ ಬಸದಿ), ಕಾರ್ಕಳದ ಹಿರಿಯಂಗಡಿ ನೇಮೀಶ್ವರ ಬಸದಿ ಮತ್ತು ಚತುರ್ಮುಖ ಬಸದಿ, ಗೇರುಸೊಪ್ಪೆ ಪಾರ್ಶ್ವನಾಥ ಬಸದಿ ಮತ್ತು ಚತುರ್ಮುಖ ಬಸದಿ, ಮೂಲಿಕೆ ಸಮೀಪದ ಪಡುಪಣಂಬೂರಿನ ಅನಂತನಾಥನ ಬಸದಿ ಇತ್ಯಾದಿ. ಇಷ್ಟಲ್ಲದೇ ಹಿರಿಯಂಗಡಿ ಬೃಹತ್ ಮಾನಸ್ತಂಭ, ಪಡುಪಣಂಬೂರಿನ ಅನಂತನಾಥ ಬಸದಿಯ ಚಿತ್ರಮಯ ಮಾನಸ್ತಂಭ, ಕಾರ್ಕಳದ ಬೆಟ್ಟದ ಮೇಲಿರುವ ಬಾಹುಬಲಿ ಶಿಲ್ಪ, ಬ್ರಹ್ಮಸ್ತಂಭಗಳು, ತುಳುನಾಡಿನ ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿದವು. ತುಳುನಾಡಿನ ಉದ್ದಗಲದಲ್ಲಿ ಹೆಚ್ಚುಕಡಿಮೆ ೧೮೦ ಬಸದಿಗಳು ವಿಯನಗರದ ಕಾಲದಲ್ಲಿ ಹುಟ್ಟಿಕೊಂಡವು. ಇದು ಆ ಕಾಲದ ಜೈನಧರ್ಮದ ಸಮೃದ್ಧಿಗೆ ಸಾಕ್ಷಿಯಾಗಿದೆ. ಇಷ್ಟಲ್ಲದೆ ತುಳುನಾಡಿನ ಶಾಸನಗಳು ಜೈನ ಮತದ ಪುರೋಭಿವೃದ್ಧಿಯನ್ನು ವರ್ಣರಂಜಿತವಾಗಿ ಹೇಳುತ್ತವೆ. ಇಂತಹ ಶಾಸನಗಳು ಜೈನಕೇಂದ್ರಗಳಾದ ಮೂಡಬಿದ್ರೆ, ಕಾರ್ಕಳ, ಕಾಪು, ಭಟ್ಕಳ, ಹಾಡುವಳ್ಳಿ, ಕಾಯ್ಕಿಣಿ, ಗೇರಸೊಪ್ಪೆಗಳಲ್ಲಿವೆ. ಮೂಡಬಿದ್ರೆಯನ್ನು ಆ ಊರಿನ ಶಾಸನಗಳು ‘ಜಿನಧರ್ಮಾರಾಗರ ಉರುಜೈನ ಜೈನಾಲಯ ರಮ್ಯ ಹರ್ಮ್ಯ ಚಯದಿಂ ಚೆಲುವಾದ ಪುರಂ’ ಎಂದು ವರ್ಣಿಸುತ್ತವೆ. ಇವೇ ವರ್ಣನೆಗಳು ಕಾಯ್ಕಿಣಿ, ಗೇರಸೊಪ್ಪೆ ಮತ್ತು ಹಾಡುವಳ್ಳಿಗಳ ವೈಶಿಷ್ಟ್ಯವನ್ನು ಹೇಳುವಲ್ಲಿ ಬರುತ್ತವೆ.ಉದಾ : ಕಾಯ್ಕಿಣಿ ವಿಹಾರವು ಸಚ್ಚರಿತ್ರರಾದ ಜೈನ ಶ್ರಾವಕರಿಂದಲೂ ಶ್ರೀ ಜೈನ ಯೋಗೀಂದ್ರರಿಂದಲೂ ಬುಧ ಸೇವಾ ನಿರತರಿಂದಲೂ ಪ್ರಖ್ಯಾತ ಚತುರ್ವಿಧದಾನ ಮಾಡುವುದರಿಂದಲೂ, ಸದಾಕಾಲ ಜಿನಸ್ಮರಣೆ ಮಾಡುತ್ತಲೂ ಜಿನಕಥೆಯನ್ನು ಕೇಳುತ್ತಿರುವ ಭವ್ಯರಿಂದಲೂ ತುಂಬಿ ತುಳುಕುತ್ತಿತ್ತೆಂದು ವರ್ಣಿಸಲಾಗಿದೆ. ಸಂಗೀತಪುರವಂತೂ (ಹಾಡುವಳ್ಳಿ ಗೋಪುರ ಸತ್ರ) ಉನ್ನತ ಸೌಧಗಳಿಂದಲೂ ಸಂಪತ್ತಿನಿಂದಲೂ ಜೈನ ಗೇಹಗಳಿಂದಲೂ ಅರಸರ ಅರಮನೆಗಳಿಂದಲೂ ವಿಪುಲ ಭೋಗ – ಭಾಗ್ಯಗಳಿಂದಲೂ ಕೂಡಿಕೊಂಡು ವ್ಯಾಪಾರಿಗಳ ವ್ಯಾಪಾರಸ್ಥಾನವಾಗಿ ಮೆರೆಯುತ್ತಿರಲು, ಆ ಪುರವನ್ನು ವರ್ಣಿಸಲು ನಾಲಗೆ ಯಾರಿಗುಂಟು? ಎಂದು ಶಾಸನದಲ್ಲಿ ತಿಳಿಸಿದೆ.

ವಿಜಯನಗರ ಆಳ್ವಿಕೆಯ ಅವಧಿಯಲ್ಲಿ ತುಳುನಾಡಿನ ಜೈನರು ಕಲೆ, ಸಾಹಿತ್ಯ ಮತ್ತು ವಿದ್ಯೆಗಳಲ್ಲಿ ಆಸಕ್ತಿಯಿರಿಸಿ ಇವುಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು. ಜೈನ ಕವಿಗಳಾದ ಕಲ್ಯಾಣಕೀರ್ತಿ, ಸಾಳ್ವ, ವಾದಿ ವಿದ್ಯಾನಂತದ, ರತ್ನಾಕರವರ್ಣಿ ಮೊದಲಾದವರು ಹೊಸ ರೀತಿಯ ಕಾವ್ಯ ವ್ಯಾಖ್ಯಾನ ಶಾಸ್ತ್ರ ಗ್ರಂಥಗಳನ್ನು ರಚಿಸಿ ಜೈನ ಸಾಹಿತ್ಯಕ್ಕೆ ಒಂದು ಮೆರುಗು ನೀಡಿದರು. ಶ್ರೀಧರದೇವ (೧೫೦೦), ಸಾಳ್ವ (೧೪೯೦), ಭಟ್ಟಾಕಳಂಕರ (೧೬೦೦) ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆಯನ್ನು ನೀಡಿದವರು. ಇಷ್ಟಲ್ಲದೇ ತಾಡಪತ್ರಿಕೆಯ ಬರಹಗಾರರು (ಲಿಪಿಕಾರರು) ಅಪಾರ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಇದರಿಂದಾಗಿ ಚಿತ್ರಕಲೆ ಅಭಿವೃದ್ಧಿಗೊಂಡಿತು. ಈ ಕಲೆಯೊಂದಿಗೆ ಜೈನಕಾಷ್ಠ ಕಲೆ ಮೃಣ್ಮಯ ಮೂರ್ತಿ ನಿರ್ಮಾಣ ಕಲೆಯು ವಿಕಾಸಗೊಂಡಿತ್ತು. ಒಟ್ಟಿನಲ್ಲಿ ಜೈನಧರ್ಮವು ಇತಿಹಾಸಕಾರರ ದೃಷ್ಟಿ ಸೆಳೆಯುವಂತೆ ಸರ್ವಾಂಗೀಣ ಅಭಿವೃದ್ಧಿ ಹೊಂದಿದ್ದು ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲಿ.

ವಿಜಯನಗರ ಅರಸರ ಧಾರ್ಮಿಕ ಧೋರಣೆಯು ಇಸ್ಲಾಂ ಮತ್ತು ಕ್ರೈಸ್ತ ಮತಗಳು ಕರಾವಳಿ ಕರ್ನಾಟಕದಲ್ಲಿ ಅಭಿವೃದ್ಧಿ ಹೊಂದಲು ಅದು ಅವಕಾಶವನ್ನುಂಟುಮಾಡಿತು. ಇಸ್ಲಾಂ ಮತಸ್ಥರು ಕರಾವಳಿ ಕರ್ನಾಟಕದ ರೇವುಗಳಲ್ಲಿ ವಿಜಯನಗರದ ಸಾಗರೋತ್ತರ ವ್ಯಾಪಾರವನ್ನು ವಿಸ್ತರಿಸಿದ್ದು ಗಮನಾರ್ಹ ಸಂಗತಿ. ಈ ಸಾಮ್ರಾಜ್ಯದ ವ್ಯಾಪಾರವನ್ನು ಸುವ್ಯವಸ್ಥಿತಗೊಳಿಸಲು ಮುಸ್ಲಿಂ ವರ್ತಕರು ಪ್ರಮುಖ ಪಾತ್ರವನ್ನು ವಹಿಸಿದ್ದರು. ದೇವಾಲಯಗಳಿಗೆ ದಾನ ನೀಡುವಲ್ಲಿ ಹಂಜಮಾನ (ಮುಸ್ಲಿಂ ವರ್ತಕರ ಸಂಘ)ರು ಹಾಜರಿರುತ್ತಿದ್ದರೆಂದು ಭಟ್ಕಳ, ಬಸ್ರೂರು, ಬಾರಕೂರು, ಬೈಲೂರು (ಉಡುಪಿ ಸಮೀಪ), ಮಂಗಳೂರು ಶಾಸನಗಳಿಂದ ತಿಳಿದುಬರುತ್ತದೆ ಬಸ್ರೂರಿನಲ್ಲಿ ‘ಪಳ್ಳಿ ಮರ್ಯಾದೆ’ (ಮಸೀದಿಗೆ ನೀಡುವ ಗೌರವ) ಪಡೆಯುವಷ್ಟು ಮುಸ್ಲಿಮರು ಪ್ರಮುಖರಾಗಿದ್ದರು. ಇಷ್ಟಲ್ಲದೇ ಇಸ್ಲಾಂ ಮತಕ್ಕೆ ಗಂಡಾಂತರ ಒದಗಿದಾಗ ಈ ಮತಸ್ಥರನ್ನು ಸಂರಕ್ಷಿಸುವಲ್ಲಿ ವಿಜಯನಗರ ಅರಸರು ಮತ್ತು ಅವರ ಆಶ್ರಿತ ಅರಸರು ಮುಂದಾಗಿದ್ದರು ಈ ಸಂಗತಿಯು ಮಂಗಳೂರು ಮತ್ತು ಕಾಸರಗೋಡು (ಉ.ಕ.) ಶಾಸನಗಳಲ್ಲಿ ವ್ಯಕ್ತವಾಗಿದೆ. (ಕಾಲ ಕ್ರಮವಾಗಿ ೧೪೧೯, ೧೪೨೦).

ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಮಹಮ್ಮದೀಯರು ಆಡಳಿತದಲ್ಲೂ ಸಹಭಾಗಿಗಳಾಗಿದ್ದರು. ಈ ಸಾಮ್ರಾಜ್ಯದ ನೌಕಾದಳದಲ್ಲಿ ಮುಸ್ಲಿಂ ಮತಸ್ಥರು ಪ್ರಮುಖ ಸ್ಥಾನವನ್ನು ಪಡೆದಿದ್ದರು. ರಾಜ್ಯಪಾಲರಾಗಿ ಮುಸ್ಲಿಂರು ಭಾಗವಹಿಸಿದ ಸಂಗತಿ ಕೋಟೇಶ್ವರದಲ್ಲಿ ಸಿಕ್ಕಿದ ೧೫೫೧ರ ಶಾಸನದಿಂದ ತಿಳಿಯುತ್ತದೆ. ಬಾರಕೂರು ರಾಜ್ಯದ ರಾಜ್ಯಪಾಲಕ ಏಕದಳಖಾನ್ ಮುಸ್ಲಿಂ ಮತಸ್ಥನಾಗಿದ್ದು ಕೋಟೇಶ್ವರ ದೇವಾಲಯದಲ್ಲಿ ಪೂಜೆ ಕಟ್ಟಳೆಗಳು ನಿಂತು ಹೋದುದನ್ನು ಮತ್ತೆ ನೆಯುವಂತೆ ದಾನಗಳನ್ನು ಕೊಟ್ಟನು.

ಆದರೆ ಹದಿನಾರನೇ ಶತಮಾನದ ಮಧ್ಯಾವಧಿಯಲ್ಲಿ ತುಳುನಾಡಿನಲ್ಲಿ ನಡೆದ ಪೋರ್ಚುಗೀಜರ ಬಲವಂತದ ಚಟುವಟಿಕೆ ಮುಸ್ಲಿಂರ ಸಾಗರೋತ್ತರ ವ್ಯಾಪಾರಕ್ಕೆ ಅಡ್ಡಿಯನ್ನುಂಟುಮಾಡಿತು.

ತುಳುನಾಡಿನಲ್ಲಿ ಕ್ರೈಸ್ತ ಮತದ ಪ್ರಗತಿಯ ಸ್ಪಷ್ಟ ಮಾಹಿತಿಗಳು ಸಿಗುವುದು ವಿಜಯನಗರದ ಅರಸರ ಆಳ್ವಿಕೆಯ ಕೊನೆಯ ಹಂತದಲ್ಲಿ. ಈ ಮತಸ್ಥರನ್ನು ಕುರಿತ ಮಾಹಿತಿಗಳು ಅಲ್ಪಸ್ವಲ್ಪ ಅಲ್ಲದಿದ್ದರೂ ಇವು ಕೆಲವೇ ಪ್ರದೇಶಗಳಿಗೆ ಸೀಮಿತವಾಗಿತ್ತು. ಪೋರ್ತುಗೀಜ ದಾಖಲೆಗಳಂತೆ, ಕ್ರೈಸ್ತರ ಚಟುವಟಿಕೆಗಳು ನಡೆದದ್ದು ಕಾರವಾರ ಸಮೀಪದ ಅಂಜದ್ವೀಪ ಮತ್ತು ಮಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯ ಕ್ರೈಸ್ತರಿದ್ದರೆಂಬ ಮಾಹಿತಿ ಕೊಚ್ಚಿಯಲ್ಲಿದ್ದ ಪೋರ್ತುಗೀಜ ನಾವಿಕ ವಾಸ್ಕೋಡಿಗಾಮನಿಗೆ ತಿಳಿಯಿತು. ಇದರಂತೆ ಮಂಗಳೂರಿನಲ್ಲಿದ್ದ ಕ್ರೈಸ್ತರಿಗೆ ತಮ್ಮದೇ ಯಾವ ಗುರುಗಳು (ಬಿಶಪ್) ಇದ್ದರಲ್ಲದೇ ತಾವು ಈ ಮತದಂತೆ ಪ್ರಾರ್ಥನೆ ನಡೆಸಿ ಆಗಿಂದಾಗ್ಗೆ ಸಂತ ಥೋಮಸ್‌ನ ಗೋರಿಯನ್ನು ಸಂದರ್ಶಿಸಲು ಮದ್ರಾಸಿಗೆ ಯಾತ್ರಿಕರಾಗಿ ಹೋಗುತ್ತಿದ್ದರು. ಇದರ ನೈಜತೆಯನ್ನು ಕೆಲವು ಇತಿಹಾಸಕಾರರು ಪ್ರಶ್ನಿಸಿದರೂ, ಕ್ರೈಸ್ತಮತ ಇದ್ದಿರಬಹುದೆಂಬ ಪ್ರಬಲ ಊಹೆಯೂ ಮೂಡಿಬರುತ್ತದೆ.

ಕ್ರಿ.ಶ. ೧೫೨೬ರ ಸಮಯದಲ್ಲಿ ಪ್ರೆನ್ಸಿಸ್‌ಕನ್ ಮಿಶನರಿಗಳು ಮಂಗಳೂರಿನ ಪರಿಸರದಲ್ಲಿ ವ್ಯವಸ್ಥಿತ ರೀತಿಯಲ್ಲಿ ಕ್ರೈಸ್ತ ಮತದ ಚಟುವಟಿಕೆಗಳನ್ನು ಆರಂಭಿಸಿದರು. ಇದರ ಪರಿಣಾಮವಾಗಿ ಮಂಗಳೂರು, ಫರಂಗಿಪೇಟೆ ಮತ್ತು ಉಳ್ಳಾಲ ಈ ಸ್ಥಳಗಳಲ್ಲಿ ಈ ಮತಸ್ಥರ ಪ್ರಾರ್ಥನಾ ಮಂದಿರಗಳು ಸ್ಥಾಪಿತವಾಗಿ ಅಲ್ಲಿ ಧರ್ಮಬೋಧೆ ನಡೆಯುತ್ತಿತ್ತು. ವ್ಯಾಪಾರಕ್ಕೆ ಬಂದ ಪೋರ್ಚುಗೀಸರು ವಿಜಯನಗರ ಆಸ್ಥಾನದಲ್ಲಿ ಕ್ರೈಸ್ತಮತ ಪರಿಚಯಿಸಲು ಲೂಯಿಸ್ ಸಾಲಡೋರ್‌ನನ್ನು ಕಳುಹಿಸಿದರು. ವಿಜಯನಗರ ಅರಸರು ಈ ರಾಯಭಾರಿಯಿಂದ ಕ್ರೈಸ್ತಮತದ ತತ್ವಗಳನ್ನೇ ಆಸಕ್ತಿಯಿಂದ ಆಲಿಸಿದ್ದಲ್ಲದೇ ರಾಜನು ತನ್ನ ರಾಜ್ಯದಲ್ಲಿ ಕ್ರೈಸ್ತರಿಗೆ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಿದನು. ಆದರೆ ಈ ಮಿಶನರಿ ಎಣಿಸಿದಷ್ಟು ಕ್ರೈಸ್ತ ಮತದಲ್ಲಿ ಪ್ರಗತಿ ನಡೆಯಲಿಲ್ಲ.

ಕರಾವಳಿ ಕರ್ನಾಟಕದಲ್ಲಿ ಪೋರ್ತುಗೀಸರು ಕ್ರೈಸ್ತಮತ ಪ್ರಚಾರ ಆರಂಭಿಸಿದರು. ಆದರೆ ಇದು ರಭಸ ಹೊಂದಿಲ್ಲ. ಇದಕ್ಕೆ ಮುಖ್ಯ ಕಾರಣ ಯುರೋಪಿನಿಂದ ಬಂದ ಕ್ರೈಸ್ತ ಮಿಶನರಿಯವರು ತಾವು ಬಂದ ಸ್ಥಳಗಳಲ್ಲಿದ್ದ ಮತ ಮತ್ತು ಆಚರಣೆಗಳು (ಮುಖ್ಯವಾಗಿ ಹಿಂದು ಮತ ಪದ್ಧತಿ) ಕ್ರೈಸ್ತ ಮತದ ಅಪಭ್ರಂಶವೆಂದು ತಪ್ಪಾಗಿ ತಿಳಿದಿದ್ದರು. ಇಷ್ಟಲ್ಲದೇ ಕರಾವಳಿಯಲ್ಲಿದ್ದ ಮುಸ್ಲಿಂಯೇತರ ಜನರನ್ನು ಆದಿಕಾಲದಿಂದ ಕ್ರೈಸ್ತ ಮತದವರೇ (Primitive Christians) ಎಂದು ಭಾವಿಸಿದ್ದರು. ಆದರೆ ಇವರ ಸುಧಾರಣೆ ಆಗುವ ಅವಶ್ಯಕತೆ ಇದೆ ಎಂದು ಭಾವಿಸಿದ್ದರು. ಆದರೆ ಇವರ ಸುಧಾರಣೆ ಆಗುವ ಅವಶ್ಯಕತೆ ಇದೆ ಎಂದು ತಿಳಿದಿದ್ದರು. ಒಟ್ಟಿನಲ್ಲಿ ತಾವು ಬಂದ ಭಾರತದ ಪಶ್ಚಿಮ ಕರಾವಳಿಯಲ್ಲಿ ಸ್ವತಂತ್ರವಾದ ಧರ್ಮ ಇದೆಯೆಂದು ವಿದೇಶೀ ಕ್ರೈಸ್ತಮತಪ್ರಚಾರಕರಿಗೆ ತಿಳಿದಿಲ್ಲ. ಈ ವಿದೇಶಿಯರಿಗೆ ಇಲ್ಲಿ ತೋರಿಬಂದುದು ಇಸ್ಲಾಂ ಮತ ಮಾತ್ರ. ಈ ಇಸ್ಲಾಂ ಮತವನ್ನು ವಿದೇಶೀ ಕ್ರೈಸ್ತರು ತಮ್ಮ ಹಗೆಗಳೆಂದು ಬಗೆದು ಇವರ ಮೇಲೆ ದ್ವೇಷ ಮತ್ತು ಕ್ರೋಧ ವ್ಯಕ್ತಪಡಿಸಿದರು. ವಿದೇಶೀ ಕ್ರೈಸ್ತ ಮಿಶನರಿಗಳ ಮತಪ್ರಚಾರದ ವೈಖರಿ ಸ್ಥಳೀಯ ವಿದ್ವಾಂಸರುಗಳ ಗಮನ ಸೆಳೆಯಿತು. ಕೆಲವು ವಿದ್ವಾಂಸರುಗಳು ಕ್ರೈಸ್ತ ಮತದ ಸಿದ್ಧಾಂತಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಿದರು. ಇಂತಹ ವಿದ್ವಾಂಸರಲ್ಲಿ ಜೈನ ಗುರುವಾದ ವಿದ್ಯಾನಂದ ಒಬ್ಬನು. ಇವನು ಫರಂಗಿ ಮತಶಾಸ್ತ್ರಗಳನ್ನು ಅಧ್ಯಯನ ಮಾಡಿ ಆ ಮತದ ವಿದ್ವಾಂಸರುಗಳನ್ನು ವಾದದಲ್ಲಿ ಸೋಲಿಸಿದನೆಂಬ ಸಂಗತಿ ಹುಂಬಚ್ಚ ಪದ್ಮಾವತಿ ದೇವಿಯ ಪ್ರಾಕಾರದಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ಈ ಶಾಸನದ ಕಾಲ ೧೫೩೦. ಈ ವಾದ ವಿವಾದಗಳು ನಡೆದದ್ದು ಮೈಸೂರಿನ ಶ್ರೀರಂಗಪಟ್ಟಣದಲ್ಲಿ.

ಕ್ರಿ.ಶ. ೧೫೪೦ರ ಸಮಯದಲ್ಲಿ ಕ್ರೈಸ್ತಮತದಲ್ಲಿ ಒಂದು ಹೊಸ ಬದಲಾವಣೆಯಾಯಿತು. ಪೋಪನ ಸಾರ್ವಭೌಮತೆಯನ್ನು ಕೆಲವು ಕ್ರೈಸ್ತರು ಪ್ರಶ್ನಿಸಿದರು. ಇವರನ್ನು ಪೋಪ ಹೊರಗೆ ಹಾಕಿದ. ಈ ಹೊರಗೆ ಹಾಕಿದವರು ಪ್ರಾಟೆಸ್ಟಂಟ್‌ರಾದರು. ಇವರು ತಮ್ಮ ದೇಯಾದ ರೀತಿಯಲ್ಲಿ ಕ್ರೈಸ್ತ ಮತವನ್ನು ಪ್ರಚಾರ ಮಾಡಿದರು. ಪೋಪನ ಸಾರ್ವಭೌಮತೆಯನ್ನು ಒಪ್ಪಿಕೊಂಡು ಕ್ರೈಸ್ತರು ಕೆಥೋಲಿಕ್‌ರಾದರು. ಇವರ ಪ್ರೋತ್ಸಾಹಕರು ಪೋರ್ತುಗೀಜರು ಇದೇ ಪಂಥಕ್ಕೆ ಸೇರಿದವರು. ಈ ಕೆಥೋಲಿಕರು ಜೆಸುಯಿಟ್ ಸಂಸ್ಥೆಯ ಮೂಲಕ ಹೊಸ ಬಗೆಯಲ್ಲಿ ತಮ್ಮ ಮತಪ್ರಚಾರ ನಡೆಸಿದರು. ಈ ಸಂಸ್ಥೆಯ ನಾಯಕರಲ್ಲಿ ಒಬ್ಬನಾದ ಫ್ರಾನ್ಸಿಸ್ ಕ್ಸೇವಿಯರ್ ಹೊಸ ಹುರುಪಿನಿಂದ ಗೋವೆಯಲ್ಲಿ ತನ್ನ ಮತಪ್ರಚಾರ ಮಾಡಿದ. ಹಿಂದು ಧರ್ಮದ ಒಳತಿರುಳನ್ನು ಅರಿಯಲು ಪ್ರಯತ್ನಿಸಿದ. ಕ್ಸೇವಿಯರ್ ಕನ್ನಡ ಕರಾವಳಿಯನ್ನು ಸಂದರ್ಶಿಸದಿದ್ದರೂ ಇವನು ಇನ್ನಿತರ ಸ್ಥಳಗಳಲ್ಲಿ ನಡೆಸಿದ ಧಾರ್ಮಿಕ ಚಟುವಟಿಕೆಗಳನ್ನು ಕೇಳಿ ಕೆಲವರು ಪ್ರಭಾವಿತರಾದರು. ಇವನು ಗೋವೆಯಲ್ಲಿ ಸ್ಥಾಪಿಸಿದ ಧಾರ್ಮಿಕ ಶಾಲೆಯಲ್ಲಿ ಕರಾವಳಿ ಕರ್ನಾಟಕದ ಕೆಲವು ವಿದ್ಯಾರ್ಥಿಗಳು ಕೆಥೋಲಿಕ್ ಕ್ರೈಸ್ತಪಂಥದ ಶಾಸ್ತ್ರ ಮತ್ತು ತತ್ವಗಳ ಅಭ್ಯಾಸ ನಡೆಸಿದರು. ಇವನ ಶಿಷ್ಯರಲ್ಲಿ ಕೆಲವರನ್ನು ಕರಾವಳಿ ಕರ್ನಾಟಕದ ಬಸ್ರೂರಿಗೂ, ಭಟ್ಕಳಕ್ಕೂ ಕಳುಹಿಸಿ ಅಲ್ಲಿ ಮತಪ್ರಚಾರ ಮಾಡುವ ಪ್ರಯತ್ನ ನಡೆಸಿರುವುದಾಗಿ ಕ್ರೈಸ್ತ ಮಿಶನರಿಗಳ ದಾಖಲೆಗಳು ಹೇಳುತ್ತವೆ.

ತೀವ್ರ ರೀತಿಯಲ್ಲಿ ನಿರ್ದಿಷ್ಟ ಕ್ರೈಸ್ತ ಪಂಥದ (ಕೆಥೋಲಿಕರ) ಪ್ರಚಾರ ತುಳುನಾಡಿನಲ್ಲಿ ಹದಿನಾರನೇ ಶತಮಾನದ ಉತ್ತರಾರ್ಧದಲ್ಲಿ ನಡೆಯಿತು. ವಿಜಯನಗರ ಸಾಮ್ರಾಜ್ಯವು ತುಳುನಾಡಿನಲ್ಲಿ ಅಂತ್ಯವಾಗುವ ಕಾಲದಲ್ಲಿ (ಕ್ರಿ.ಶ. ೧೬೧೦) ಕೆಥೋಲಿಕ್ ಕ್ರೈಸ್ತರು ಉಳ್ಳಾಲ, ಮಂಜೇಶ್ವರ, ಮಂಗಳೂರು, ಬಂಟವಾಳ, ಕಲ್ಯಾಣಪುರ, ಬಾರಕೂರು, ಬಸ್ರೂರು ಮುಂತಾದ ಸ್ಥಳಗಳಲ್ಲಿ ನೆಲೆಸಿದ್ದರು. ಅವರಲ್ಲಿ ಕೆಲವರು ಕೃಷಿಯನ್ನು ಅವಲಂಬಿಸಿದ್ದರು. ಎಲ್ಲಾ ಧಾರ್ಮಿಕ ಪಂಥಗಳು ತುಳುನಾಡಿನಲ್ಲಿ ತೋರಿಬಂದು ಅವು ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲಿ ಪುರೋಭಿವೃದ್ಧಿಯನ್ನು ಹೊಂದಿವೆ. ಇದಕ್ಕೆ ಮುಖ್ಯ ಕಾರಣ ಈ ಅರಸು ಮನೆತನದವರು ಎಲ್ಲಾ ಧಾರ್ಮಿಕ ಪಂಥಗಳಿಗೆ ಸಮಾನ ಆಶ್ರಯವನ್ನು ನೀಡಿದರು. ಈ ಸಾಮ್ರಾಜ್ಯದಲ್ಲಿ ಪ್ರಜೆಯು ಯಾವ ಮತಸ್ಥನೆಂದು ಗಣನೆಗೆ ತೆಗೆದುಕೊಳ್ಳದೆ ಸರ್ವರಿಗೂ ಧಾರ್ಮಿಕ ಆಚರಣೆ ನಡೆಸಲು ಐಹಿಕ ಅವಕಾಶವನ್ನು ನೀಡಿತ್ತೆಂದು ಪ್ರವಾಸಿ ಬಾರ್ಬೋಸ್ (೧೫೧೬) ತನ್ನ ವರದಿಯಲ್ಲಿ ತಿಳಿಸಿದ್ದಾನೆ.

ಕ್ರಿ.ಶ. ೧೭-೧೮ನೇ ಶತಮಾನಗಳ ಮಧ್ಯಾವಧಿಯಲ್ಲಿ ತುಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ಇನ್ನೊಂದು ತಿರುವು ಕಂಡಿತು. ಈ ಕಾಲದಲ್ಲಿ ತುಳುನಾಡಿನ ರಾಜಕೀಯ ಶಕ್ತಿಯನ್ನು ಘಟ್ಟದ ಮೇಲಿನ ಕೆಳದಿ ನಾಯಕರು ನಿಯಂತ್ರಿಸುತ್ತಿದ್ದರು. ಇದರ ಪರಿಣಾಮವಾಗಿ ಸ್ಥಳೀಯ ಮತಸ್ಥರು ನಡೆಸುತ್ತಿದ್ದ ರಾಜಕೀಯ ನಿಯಂತ್ರಣಕ್ಕೆ ಅಡ್ಡಿ ಉಂಟಾಯಿತು. ರಾಜಕೀಯ ನಿಯಂತ್ರಣವಿಲ್ಲದೆ ತುಳುನಾಡಿನ ಕೆಲವು ಕಡೆಗಳಲ್ಲಿ ಧರ್ಮ, ಮತ ಮತ್ತು ಪಂಥಗಳು ಮತ್ತು ಅವುಗಳ ಆಚರಣೆಗಳು ನಡೆದುಬಂದವು. ರಾಜಕೀಯ ಶಕ್ತಿಯನ್ನು ಹೊಂದಿದ್ದ ಸ್ಥಳೀಯ ಅರಸು ಮನೆತನಗಳು ದಕ್ಷಿಣ ತುಳುನಾಡಿನ ಕೆಲವು ಕಡೆಗಳಲ್ಲಿ ಕೆಳದಿ ರಾಜಕೀಯ ಶಕ್ತಿಯನ್ನು ಮನ್ನಿಸಿ ತಮ್ಮ ಮತಗಳ ಆಚರಣೆಗಳನ್ನು ನಡೆಸಿಕೊಂಡು ಬಂದರು. ಇದು ತುಳುನಾಡಿನ ಧಾರ್ಮಿಕ ಇತಿಹಾಸಗಳಲ್ಲಿ ಕಂಡುಬಂದ ಒಂದು ಪ್ರಮುಖ ಘಟನೆ. ಸಾಂಪ್ರದಾಯಿಕ ಧಾರ್ಮಿಕ ಪದ್ಧತಿ ಮತ್ತು ಆಚಾರಗಳು ಸುಸಂಘಟಿತವಾದದ್ದು ಈ ಕಾಲದಲ್ಲೇ. ರಾಜಾಶ್ರಯದಿಂದ ತುಳುನಾಡಿನಲ್ಲಿ ವೀರಶೈವ ಪಂಥವು ಪ್ರಗತಿಯನ್ನು ಕಂಡಿತು. ಇವರ ವಿವಿಧ ಮಠಗಳ ಶ್ರೇಣಿಗಳು ಕೆಳದಿ ನಾಯಕರ ಆಳ್ವಿಕೆಯಲ್ಲಿರುವ ಕರಾವಳಿಯಲ್ಲಿ ಕಂಡುಕೊಂಡವು. ಈ ಧಾರ್ಮಿಕ ಸಂಸ್ಥೆಗಳ ಪ್ರಗತಿಗೆ ಕೆಳದಿ ನಾಯಕರು ಹೇರಳವಾಗಿ ಭೂ ಮತ್ತು ಧನಸಹಾಯ ಮಾಡಿದರೆಂದು ಹಲವಾರು ಶಾಸನಗಳಿಂದ ವ್ಯಕ್ತವಾಗುತ್ತದೆ. ಭಕ್ತಿಪಂಥದಿಂದ ಪ್ರೇರಿತವಾದ ವೈಷ್ಣವ ಆರಾಧನಾ ಪದ್ಧತಿ ಒಂದು ಹೊಸ ಹುರುಪಿನಿಂದ ಅಭಿವೃದ್ಧಿಯನ್ನು ಹೊಂದಿತು. ಉಡುಪಿ ಕೃಷ್ಣ ಪೊಡವಿಗೊಡೆಯನಾಗಿ ಮಾರ್ಪಾಡುಗೊಂಡದ್ದು ಕೆಳದಿ ಅರಸನ ಆಳ್ವಿಕೆಯ ಕಾಲದಲ್ಲಿ. ಈ ನಾಯಕರು ಉಡುಪಿಯಲ್ಲಿ ಕೃಷ್ಣ ಆರಾಧನೆ ಬಲಿಷ್ಠವಾಗಿ ಸುಸಂಘಟಿತವಾಗಿ ಮುಂದುವರಿಯಲು ತಕ್ಕ ಆರ್ಥಿಕ ಸಹಾಯವನ್ನು ನೀಡಿದರು. ಇದಲ್ಲದೆ, ಹಲವರು ಸಂತರು ಉಡುಪಿ ಕೃಷ್ಣನನ್ನು ಹಾಡಿ ಹೊಗಳಿದ್ದು ಈ ನಾಯಕರ ಆಳ್ವಿಕೆ ಆರಂಭ ಕಾಲದಲ್ಲೇ. ಗೋವೆಯಿಂದ ಕರಾವಳಿ ಕರ್ನಾಟಕಕ್ಕೆ ವಲಸೆ ಬಂದ ಗೌಡ ಸಾರಸ್ವತರು ಕೃಷ್ಣಭಕ್ತರಾಗಿ ಉಡುಪಿಯಲ್ಲಿ ಕೃಷ್ಣನ ಆರಾಧನೆಗೆ ಒಂದು ಹೊಸ ಶಕ್ತಿಯನ್ನು ಕೊಟ್ಟರು. ಇದರ ಪರಿಣಾಮವಾಗಿ ಉಡುಪಿಯಲ್ಲಿದ್ದ ಶಿವ ಆರಾಧನೆಯನ್ನು ಹಿಮ್ಮೆಟ್ಟಿಸಿಕೃಷ್ಣ ಆರಾಧನೆಯು ಜ್ವಲಂತವಾಗಿ ಮುಂದುವರಿಯಿತು. ಸ್ಥಳೀಯ ದೈವಗಳ ಆರಾಧನೆಯು ಹೆಚ್ಚು ಬೇಡಿಕೆಗೆ ಬಂದವು. ಸ್ಥಳೀಯ ದೇವ ಮತ್ತು ವೈದಿಕ ದೇವರುಗಳ ಆರಾಧನೆಯ ಹೊಂದಾಣಿಕೆ ಈ ಕಾಲದಲ್ಲೆ ನಡೆಯಿತು. ಇದಕ್ಕೆ ಮುಖ್ಯ ಉದಾಹರಣೆ ನಾಗಸುಬ್ರಹ್ಮಣ್ಯರೊಳಗೆ ಅಭೇದ್ಯವಾಗಿ ನಡೆಯುವ ಪೂಜೆ ಮತ್ತು ಬ್ರಹ್ಮ ಬೆರ್ಮೆ ಆಗಿ ಆರಾಧನೆಗೊಂಡದ್ದು ಇತ್ಯಾದಿ. ಸ್ಥಳೀಯ ದೈವದೊಂದಿಗೆ ವಲಸೆ ಬಂದ ದೈವಗಳ ಆರಾಧನೆಯು ಹದಿನೆಂಟನೆಯ ಶತಮಾನದ ಕಾಲದಲ್ಲಿ ತುಳುನಾಡಿನಲ್ಲಿ ನಡೆಯಿತು. ಘಟ್ಟದ ಮೇಲಿಂದ ಬಂದ ದೈವಗಳಲ್ಲದೇ ಹತ್ತಿರದ ಮಲಬಾರಿನಿಂದಲೂ ಮತ್ತು ಘಟ್ಟದ ಕೊಡಗಿನಿಂದಲೂ ಅಲ್ಲಿಯ ಜನರೊಂದಿಗೆ ದೈವಗಳು ತುಳುನಾಡಿನಲ್ಲಿ ವಲಸೆ ಬಂದು ಇಲ್ಲಿ ಈ ದೈವಗಳ ಆರಾಧನೆಗಳು ಆಕರ್ಷಕವಾಗಿ ನಡೆದವು. ಇದು ತುಳುನಾಡಿನ ಧಾರ್ಮಿಕ ಇತಿಹಾಸಕ್ಕೆ ಒಂದು ವಿಶಿಷ್ಟತೆಯನ್ನು ಕೊಟ್ಟದಲ್ಲದೇ ಇಲ್ಲಿನ ಧಾರ್ಮಿಕ ಪರಂಪರೆಯನ್ನು ಶ್ರೀಮಂತಗೊಳಿಸಿತು.

ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ತುಳುನಾಡಿನ ಉತ್ತರ ಭಾಗದಲ್ಲಿ (ಮುಖ್ಯವಾಗಿ ಕಲ್ಯಾಣಪುರದಿಂದ ಗೋಕರ್ಣದವರೆಗಿನ ಪ್ರದೇಶ) ಜೈನಮತ ಇಳಿಮುಖವನ್ನು ಕಂಡಿತು. ಇದಕ್ಕೆ ಮುಖ್ಯ ಕಾರಣ ಈ ಹಿಂದೆ ಸಿಗುತ್ತಿದ್ದ ರಾಜಾಶ್ರಯ ತಪ್ಪಿಹೋಯಿತು. ಇದರೊಂದಿಗೆ ತುಳುನಾಡಿನಜೈನ ಪಾಳೆಯಗಾರರು ತಮ್ಮ ರಾಜಕೀಯ ಶಕ್ತಿಯನ್ನು ಕಳೆದುಕೊಂಡರು. ತುಳುನಾಡಿನ (ದಕ್ಷಿಣ ಪ್ರದೇಶ)ಲ್ಲಿದ್ದ ಕೆಲವು ಜೈನ ಅರಸು ಮನೆತನಗಳು ಕೆಳದಿ ನಾಯಕರ ರಜಕೀಯ ಶಕ್ತಿಯ ಅಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉಳಿದುಕೊಂಡರು. ಹೀಗಿದ್ದರೂ ಶಾಂತ ರೀತಿಯಲ್ಲಿ ಜೈನ ಮತ ಮತ್ತು ಅದರ ಕಟ್ಟಳೆಗಳು ನಡೆಸಿಕೊಂಡು ಬರಲು ಕೆಳದಿ ನಾಯಕರು ಅಡ್ಡಿ ಮಾಡಿಲ್ಲ. ಕೆಲವು ಸಂದರ್ಭಗಳಲ್ಲಿ ಕೆಳದಿ ಅರಸರು ಜೈನ ಧಾರ್ಮಿಕ ಕಟ್ಟಳೆಗಳಿಗೆ ಪ್ರೋತ್ಸಾಹಿಸಿದರು. ಇದಕ್ಕೆ ಮುಖ್ಯ ಉದಾಹರಣೆ ಕ್ರಿ.ಶ. ೧೬೦೬, ೧೬೪೨, ೧೬೪೮ರಲ್ಲಿ ಕೆಳದಿ ಅರಸರು ಮೂಡಬಿದ್ರೆ ಜೈನ ಬಸದಿಯ ಜೀರ್ಣೋದ್ಧಾರಕ್ಕೂ ಕಾರ್ಕಳದಲ್ಲಿ ನಡೆದ ಗೊಮ್ಮಟಾಭಿಷೇಕಕ್ಕೂ ಆರ್ಥಿಕ ಸಹಾಯವನ್ನು ನೀಡಿದ್ದರೆಂದು ಸಮಕಾಲೀನ ದಾಖಲೆಗಳು ಸೂಚಿಸಿ, ಸಮರ್ಥಿಸುತ್ತವೆ.