ಹಲವಾರು  ಭಾಷೆಗಳೆಂಬ ಹೂಗಳರಳಿರುವ ಭಾರತವೆಂಬ ಉದ್ಯಾನದಲ್ಲಿರುವ ಉದ್ಯಾನದಲ್ಲಿರುವ ಸಣ್ಣ ಹೂವಾದರೂ ಸುಂದರವಾದ ಹೂವು ಈ ತುಳುಭಾಷೆ. ಕರ್ನಾಟಕದ ೧೯ ಜಿಲ್ಲೆಗಳಲ್ಲಿ ಕರಾವಳಿ ತೀರದ ದಕ್ಷಿಣ ಕನ್ನಡವು ತನ್ನ ಪ್ರಾಕೃತಿಕ ಸಂಪತ್ತು, ಸಾಂಸ್ಕೃತಿಕ ಸಂಪತ್ತು ಹಾಗೂ ಜನಸಂಪತ್ತುಗಳಿಂದಾಗಿ ಖ್ಯಾತವಾಗಿದೆ. ಅಲ್ಲಿನ ಜನರು ರಾಜ್ಯಭಾಷೆಯೆಂದು ಕನ್ನಡಕ್ಕೇ ಮೊದಲ ಸ್ಥಾನವಿತ್ತಿದ್ದರೂ, ಬಹುಸಂಖ್ಯಾತರು ತಮ್ಮ ಮನೆ ಮನಗಳಲ್ಲಿ ತಮ್ಮ ತಾಯಿನುಡಿಯಾದ ತುಳುಭಾಷೆಯ ಬಗೆಗೆ ವಿಶೇಷ ಪ್ರೀತ್ಯಾದರವುಳ್ಳವರು.

ಪಂಚದ್ರಾವಿಡ ಭಾಷೆಗಳಲ್ಲಿ ಸುಂದರವೂ ಸಮೃದ್ಧವೂ ಸಮೃದ್ಧವೂ ಆದ ತುಳುಬಾಷೆಯನ್ನಾಡುವ ಜನರು ಕಾಸರಗೋಡಿನ ಚಂದ್ರಗಿರಿ ನದಿಯಿಂದ, ಉಡುಪಿಯ ಕಲ್ಯಾಣಪುರ ನದಿವರೆಗೆ, ಪಶ್ಚಿಮ ಘಟ್ಟಗಳಿಂದ ಕಡಲ ತಡಿವರೆಗೆ ವ್ಯಾಪಿಸಿದ್ದು, ಈ ಪ್ರದೇಶವನ್ನು ತುಳುನಾಡೆಂದು ಕರೆಯುವರು. ಇಲ್ಲಿನ ಜನರು ಆಚಾರ-ವಿಚಾರ-ನಡೆ-ನುಡಿ ಚಿಂತನ, ಸಂಸ್ಕೃತಿಗಳಲ್ಲೊಂದು ಸ್ವಂತಿಕೆಯಿದ್ದು, ವೈಶಿಷ್ಟ್ಯಪೂರ್ವವಾದ ಮೌಲಿಕತೆಯನ್ನು ಪಡೆದು, ಕನ್ನಡ ನಾಡಿನ ಹಿರಿಮೆ – ಗರಿಮೆಗಳನ್ನು ವರ್ಧಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ ತುಳುನಾಡಿನ ಇತಿಹಾಸದ ಪುಟಗಳನ್ನು ಸ್ಮರಿಸಿದರೆ, ಕರ್ನಾಟಕದ ಹೆಮ್ಮೆಯ ವಿಜಯನಗರದ ಜನತೆಗೆ ಸಂಬಂಧವಿತ್ತೆಂದೂ ತಿಳಿದುಬರುತ್ತದೆ. ಅಂತೆಯೇ ತುಳುನಾಡಿನಾದ್ಯಂತ ಬಂಗರು, ಅಜಿಲರು, ಚೌಟರು, ಸಾಮಂತರು ಮೊದಲಾಗಿ ಹಲವು ವಂಶಗಳು ಆಡಳಿತ ನಡೆಸಿದ್ದು, ಅಲ್ಲಲ್ಲಿ ಅವರಿಗೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳು ದೊರೆಯುತ್ತವೆ. ಉಳ್ಳಾಲದ ರಾಣಿ ಅಬ್ಬಕ್ಕನಂತೂ ವಿದೇಶೀಯರ ಆಕ್ರಮಣದೆದುರು ಸಿಡಿದೆದ್ದು, ದೇಶಪ್ರೇಮವನ್ನು ಮೆರೆದ ರಾಣಿ. ಇಲ್ಲಿಯ ಹಲವು ಅರಸುಮನೆತನಗಳು ಸಾಹಿತ್ಯ, ಕಲೆ, ಸಂಸ್ಕೃತಿ, ದೇವಾಲಯಗಳಿಗೆ ಸಾಕಷ್ಟು ಪ್ರೋತ್ಸಾಹ – ಬೆಂಬಲಗಳನ್ನು ನೀಡಿದವುಗಳಾಗಿವೆ.

ಧಾರ್ಮಿಕ ದೃಷ್ಟಿಯಿಂದ ನೋಡದರೆ ನಾಡಿನ ಧಾರ್ಮಿಕ ಇತಿಹಾಸದಲ್ಲಿ ತುಳುನಾಡಿನ ಪಾತ್ರ ಅತ್ಯಂತ ಮಹತ್ವಪೂರ್ವವಾಗಿದೆ. ಉಡುಪಿ, ಕಟೀಲು, ಸುಬ್ರಹ್ಮಣ್ಯ, ಧರ್ಮಸ್ಥಳಗಳಂತಹ ಪವಿತ್ರ ಕ್ಷೇತ್ರಗಳು ಇಲ್ಲಿವೆ. ಶಿವಾರಾಧನೆ, ಶಕ್ತ್ಯಾರಾಧನೆ, ಭೂತಾರಾಧನೆ, ನಾಗಾರಾಧನೆ, ಸೂರ್ಯಾರಾಧನೆ, ದ್ವೈತ, ಅದ್ವೈತ ಮೊದಲಾದ ಸಂಪ್ರದಾಯಗಳೂ ಇಲ್ಲಿ ಚಿಗುರೊಡೆದು ಜನರ ಮೇಲೆ ಪ್ರಭಾವ ಬೀರಿದ್ದವು. ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿ, ಆಧ್ಯಾತ್ಮಿಕ ಲೋಕಕ್ಕೆ ಹೊಸ ಬೆಳಕನ್ನಿತ್ತ ಮಧ್ವಾಚಾರ್ಯರೂ ತುಳುನಾಡಿನವರು. ಕನಕದಾಸರಿಗೊಲಿದ ಶ್ರೀಕೃಷ್ಣನ ‘ಕನಕನ ಕಿಂಡಿ’ಯ ಪವಾಡ ನಡೆದುದು ಉಡುಪಿಯಲ್ಲಿ, ಜೈನ ಧರ್ಮದ ಪ್ರಚಾರ ಪ್ರಸಾರದಿಂದಾಗಿ ಹಲವು ಬಸದಿಗಳೂ ಸ್ಥಾಪಿತವಾದವು. ಅದೇ ರೀತಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಪ್ರಚಾರವೂ ನಡೆದು ಹಲವಾರು ಇಗರ್ಜಿಗಳೂ, ಮಸೀದಿಗಳೂ, ಪ್ರಾರ್ಥನಾ ಮಂದಿರಗಳೂ ನೆಲೆಗೊಂಡವು.

ಒಂದು ದೃಷ್ಟಿಯಿಂದ ನೋಡಿದರೆ, ಇಡೀ ಭಾರತಕ್ಕೇ ಸರ್ವಧರ್ಮ ಸಮನ್ವಯದ ತತ್ವದ ಆದರ್ಶವನ್ನು ಎತ್ತಿ ತೋರಿಸಿದ ಪ್ರದೇಶ ತುಳುನಾಡೆಂದರೆ ತಪ್ಪಾಗದು. ಅಲ್ಲಿ ಹಲವಾರು ಅರಮನೆಗಳ ಜೈನ ಮನೆತನದವರು ಹಿಂದೂ ದೇವಾಲಯಗಳಿಗೆ ಆಸರೆ ನೀಡುತ್ತಾ ಬಂದವರು. ಅವರ ಆಡಳಿತೆಯಲ್ಲಿ ಈ ದೇವಾಲಯಗಳ ಉತ್ಸವಗಳು, ಭೂತ ದೈವಗಳ ಪರ್ವ ಕೋಲಗಳು ವಿಶೇಷ ಭಕ್ತಿ ಶ್ರದ್ಧೆಗಳಿಂದ, ವಿಧಿವತ್ತಾಗಿ ನಡೆದುಕೊಂಡು ಬಂದಿವೆ. ಇಲ್ಲಿ ರಥೋತ್ಸವ, ದೈವಗಳ ಕೋಲ ಮೊದಲಾದ ಸಂದರ್ಭಗಳಲ್ಲಿ ಊರಿನ ಎಲ್ಲಾ ಜನರೂ ಜಾತಿ – ಮತಗಳ ಭೇದವಿಲ್ಲದೆ ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಂಡು, ಸಮಭಾವದಿಂದ ಸಹಭಾಗಿಗಳಾಗಿ ಧರ್ಮಸಹಿಷ್ಣುತೆಗೆ ಮಾದರಿಯಾಗಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಈ ತುಳುನಾಡಿನ ಪರಂಪರೆಯನ್ನು ಗುರುತಿಸಬಹುದು. ಇಲ್ಲಿ ಆರಾಧನೆಗೊಳ್ಳುವ ಭಗವಂತ ಮಂಜುನಾಥ ಸ್ವಾಮಿ ಎಂದರೆ ಶಿವ, ಅರ್ಚಕರು ವೈಷ್ಣವರು, ಆಡಳಿತ ನಡೆಸುವ ಹೆಗ್ಗಡೆಯವರು ಜೈನ ಮತಾವಲಂಬಿಗಳು. ಹೀಗೆ ಧರ್ಮ ಸಮನ್ವಯದ ಪರಂಪರೆಯನ್ನು ಇಡೀ ರಾಷ್ಟ್ರಕ್ಕೇ ಎತ್ತಿ ತೋರಿಸಿದ ತುಳುವರು ಸಹ ಅಸ್ತಿತ್ವಕ್ಕೆ ಮಾದರಿಯೆನಿಸಿದ್ದಾರೆ.

ಇವೆಲ್ಲ ಇದ್ದರೂ, ತುಳುವರ ಧಾರ್ಮಿಕತೆಯು ಅವರನ್ನು ನಿರ್ವೀರ್ಯರನ್ನಾಗಿ ಮಾಡಿಲ್ಲವೆಂಬುದನ್ನು, ನಾವಿಲ್ಲಿ ಸ್ಮರಿಸಬೇಕಾಗಿದೆ. ತುಳುವರು ಯಾವುದೇ ಒಂದು ಕಾರ್ಯಕ್ಕೆ ಹೊರಡುವಾಗ, ತಾವು ನಂಬಿದ ದೈವದೊಡನೆ ‘ನಾನು ಮಾಡುವ ಕಾರ್ಯದಲ್ಲಿ, ಕೈಗೊಂಡ ಸಾಹಸ ವೃತ್ತಿಯಲ್ಲಿ ಜಯವನ್ನು ಕೊಡು. ನೀನು ನನ್ನ ಬೆನ್ನ ಹಿಂದಿದ್ದು ನನ್ನನ್ನು ರಕ್ಷಿಸು’ ಎಂದು ದೈವಕ್ಕೆ ದೀಪ ಹಚ್ಚಿಟ್ಟು ಪ್ರಾರ್ಥಿಸುವರು. ಕಂಬಳಕ್ಕೆ, ಕೋರ್ಟಿನ ವ್ಯವಹಾರಕ್ಕೆ, ಲೌಕಿಕ ಕಾರ್ಯಗಳಿಗೆ, ವ್ಯಾಪರಕ್ಕೆ ಹೊರಡುವಾಗ ತಾನು ನಂಬಿದಂತಹ ದೈವ ತನ್ನನ್ನು ಕಾಪಾಡಲೇ ಬೇಕೆಂಬ ದೃಢವಿಶ್ವಾಸ ಹಾಗೂ ಸ್ಥೈರ್ಯದಿಂದ ಹೊರಡುವರು. ತನ್ನ ಕೆಲಸವಾದರೆ,  ಮತ್ತೆ ಬಂದು ಹರಿಕೆ ಕೊಡುವೆವೆಂಬ ಅವಿಶ್ವಾಸದ ಪ್ರವೃತ್ತಿಯವರಲ್ಲ. ಇಂತಹ ಅಚಲವಾದ ಶ್ರದ್ಧೆ, ಸ್ಥೈರ್ಯ, ಸಾಹಸಗಳಿಂದ ಕಾರ್ಯಾರಂಭ ಮಾಡುವ ಪ್ರವೃತ್ತಿಯು ಇಲ್ಲಿ ಜನರನ್ನು ಇಂದಿಗೂ ಮುನ್ನಡೆಸುತ್ತಾ ಬಂದಿದೆ.

ದೇವರು – ದೈವಗಳನ್ನು ನಂಬುವುದೆಂದರೆ ತುಳುವರ ಪಾಲಿಗೆ ಸತ್ಯವೆನ್ನೇ ನಂಬಿದ ಹಾಗೆ. ಯಾವುದೇ ಅನ್ಯಾಯ, ತೊಂದರೆಗಳುಂಟಾದಾಗ ‘ದೇವರು – ಇಲ್ಲವೇ ದೈವ ನೋಡಿಕೊಳ್ಳಲಿ’ – ಎಂದರೆ ಸತ್ಯದ ಬಗ್ಗೆ ಮೊರೆಯಿಟ್ಟಂತೆ. ಇಂತಹ ಸಂದರ್ಭಗಳಲ್ಲಿ ‘ಸ್ವಾಮಿ’ ‘ಸತ್ಯ’, ‘ದೈವ’ ನೋಡಿಕೊಳ್ಳುತ್ತಾನೆಂಬ ಮಾತು ಬಂದಾಗ ಪೂರ್ಣ ರಕ್ಷಣೆಯ ಭಾರವನ್ನು ಸತ್ಯಕ್ಕೊಪ್ಪಿಸಿದಂತೆಯೇ. ಅಂತಹ ವ್ಯಕ್ತಿಯ ಮೇಲೆ ಕೈ ಮಾಡಲು ಇತರರಿಗೂ ಧೈರ್ಯ ಬರುವುದಿಲ್ಲ. ಸತ್ಯವನ್ನೇ ದೇವರೆಂದು ನಂಬುವುದು ಇಲ್ಲಿನ ಪರಿಪಾಟಿಯೇ ಆಗಿದೆ. ಭಗವಂತನೆಂದರೆ ನಿತ್ಯ ನೂತನ, ಚಿರಂತನ ಸತ್ಯವೆಂಬ ಆಧ್ಯಾತ್ಮಿಕ ತತ್ವವು ಇಲ್ಲಿನ ಜನಸಾಮಾನ್ಯರಲ್ಲೂ ಸರಳವಾಗಿ ಗೋಚರವಾಗುತ್ತದೆ. ಸತ್ಯವು ಧರ್ಮವೆನ್ನುವ ತಕ್ಕಡಿಯನ್ನು ಹಿಡಿದು ಕುಳಿತಿದೆಯೆಂಬ ಮನೋಭಾವವು ತುಳುನಾಡಿನ ಸಾಮಾನ್ಯ ಜನರಲ್ಲೂ ಹಾಸುಹೊಕ್ಕಾಗಿ ಪರಿಣಮಿಸಿದೆ.

ಇಲ್ಲಿನ ಸಾಹಸ ಪ್ರವೃತ್ತಿಯ ವೀರರು ಜನಜೀವನದಲ್ಲಿ ಎಷ್ಟೊಂದು ಗೌರವ, ಮಾನ್ಯತೆಗಳನ್ನು ಹೊಂದಿದ್ದರೆಂಬುದಕ್ಕೆ ಇಲ್ಲಿ ಕೋಟಿ ಚೆನ್ನಯರು ನಿದರ್ಶನ. ಅವರು ತೋರಿದ ಧೈರ್ಯ, ಸಾಹಸ, ನಿಷ್ಠೆ, ಸತ್ಯ – ಪ್ರೇಮಗಳಿಂದಾಗಿ ಅವರನ್ನು ದೈವತ್ವಕ್ಕೇರಿಸಿ, ಅವರನ್ನು ಆರಾಧಿಸುವ ಪರಂಪರೆಯೂ ನಮ್ಮಲ್ಲಿದೆ. ತುಳುನಾಡಿನ ಹಲವೆಡೆಗಳಲ್ಲಿ ಅವರ ಆರಾಧನಾ ಮಂದಿರಗಳಿವೆ. ಇಲ್ಲಿನ ಹಲವಾರು ಭೂತದೈವಗಳ ಬಗೆಗೆ ಆಳವಾದ ಅಧ್ಯಯನ ನಡೆಸಿದರೆ ಹಲವಾರು ಐತಿಹಾಸಿಕ, ಪ್ರಾಗೈತಿಹಾಸಿಕ ಸಂಗತಿಗಳೂ ಗೋಚರವಾಗುವ ಸಾಧ್ಯತೆಗಳೂ ಇವೆ.

ತುಳುನಾಡಿನ ದೇವಾಲಯ, ಬಸದಿ, ಮಸೀದಿ, ಇಗರ್ಜಿಗಳು ವಾಸ್ತುಶಿಲ್ಪ ಹಾಗೂ ಶಿಲ್ಪಕಲೆ, ಕೆತ್ತನೆಯ ಕೆಲಸಗಳಿಂದಾಗಿ ಪ್ರಸಿದ್ಧವಾಗಿವೆ. ಉಡುಪಿ, ಪುತ್ತೂರು ಮೊದಲಾದ ಊರುಗಳ ದೇವಸ್ಥಾನಗಳು, ಕಾರ್ಕಳ, ಮೂಡಬಿದ್ರೆ ಮೊದಲಾದ ಬಸದಿಗಳು, ಮಂಗಳೂರು – ಅತ್ತೂರುಗಳ ಇಗರ್ಜಿಗಳು, ಉಳ್ಳಾಲ – ಮಂಗಳೂರುಗಳ ಮಸೀದಿಗಳು ಪ್ರಸಿದ್ಧವಾಗಿವೆ. ಕಾರ್ಕಳ, ವೇಣೂರು, ಧರ್ಮಸ್ಥಳಗಳಲ್ಲಿರುವ ಬಾಹುಬಲಿಯ ಏಕಶಿಲಾ ಮೂರ್ತಿಗಳು ರಾಷ್ಟ್ರದಾದ್ಯಂತದಿಂದ ಜನರನ್ನು ಆಕರ್ಷಿಸುತ್ತಿದೆ. ಕಾರ್ಕಳದ ಶಿಲ್ಪ – ಇಪ್ಪತ್ತನೇ ಶತಮಾನದಲ್ಲೂ ಜಪಾನು ದೇಶಕ್ಕೆ ೬೭ ಅಡಿಗಳೆತ್ತರದ ‘ಅವಲೋಕಿತೇಶ್ವರ’ ಮೂರ್ತಿಯನ್ನೂ, ಧರ್ಮಸ್ಥಳ – ಫಿರೋಜಾಬಾದ್‌ಗಳಿಗೆಂದು ಎರಡು ಗೊಮ್ಮಟ ಮೂರ್ತಿಗಳನ್ನು ಕೆತ್ತಿ ‘ಇತಿಹಾಸ’ ನಿರ್ಮಿಸಿದ ಮಹಾ ಶಿಲ್ಪಿ – ಶ್ರೀ ರೆಂಜಾಳ ಗೋಪಾಲ ಶೆಣೈ – ಅವರು ತುಳುನಾಡಿನವರು. ಅವರ ಮಹಾ ಸಾಧನೆಗೆ ಕೀರ್ತಿ ಗೌರವಗಳನ್ನು ನಾಡು ಅವರಿಗೆ ಸಲ್ಪಿಸಿಲ್ಲವೆಂಬುದೊಂದು ವಿಷಾದದ ಸಂಗತಿಯೇ ಆಗಿದೆ.

ವ್ಯವಸಾಯ ಕ್ಷೇತ್ರದಲ್ಲೂ ತುಳುನಾಡು ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಬೆಳೆಯುವ ಅಡಿಕೆ, ತೆಂಗು, ಭತ್ತ ಮತ್ತಿತರ ಬೆಳೆಗಳು, ಇಲ್ಲಿಯ ಮಣ್ಣು, ಹವಾಮಾನ, ಮಳೆ ಇತ್ಯಾದಿಗಳ ಪ್ರಾಕೃತಿಕ ಸಮತೋಲನಕ್ಕೆ ಅನುಗುಣವಾಗಿದ್ದು, ಹೆಚ್ಚಿನ ಜನರು ಮಣ್ಣಿನ ಮಕ್ಕಳೇ ಆಗಿದ್ದಾರೆ. ಪ್ರಕೃತಿ ಮಾತೆಯ ವಿಶೇಷ ಅನುಗ್ರಹದಿಂದಾಗಿ, ಪರಶುರಾಮ ಸೃಷ್ಟಿಯೆನಿಸಿದ ಈ ಮಣ್ಣಿನ ಗುಣವು ತುಳುವರ ಎಲ್ಲಾ ಚಟುವಟಿಕೆಗಳಿಗೆ ಪ್ರೇರಕವೇ ಆಗಿದೆ. ಇನ್ನು ತುಳುನಾಡಿನ ಭೂಸಂಪತ್ತು, ವನಸಂಪತ್ತು, ಜಲಸಂಪತ್ತು, ಕರಾವಳಿ ತೀರದ ಸಮುದ್ರ ಸಂಪತ್ತು ಎಲ್ಲವು ಪ್ರಶಸ್ತವೇ ಆಗಿವೆ. ಇವುಗಳ ಪೂರ್ತಿ ಸದುಪಯೋಗ ನಡೆಯಬೇಕಾಗಿದೆ.

ದೇಶಪ್ರೇಮ, ರಾಷ್ಟ್ರಪ್ರೇಮದಲ್ಲಿ ತುಳುನಾಡಿನವರು ಹಿಂದೆ ಬಿದ್ದಿಲ್ಲ. ಕಾರ್ನಾಡು ಸದಾಶಿವ ರಾಯರು, ಕುದ್ಮುಲ್ ರಂಗರಾಯರು, ಮಲ್ಯರು, ದಾಮೋದರ ಬಂಗೇರ, ಎ.ಬಿ. ಶೆಟ್ಟಿ, ಎಚ್.ವಿ. ಕಾಮತ್‌, ಟಿ.ಎಂ.ಎ. ಪೈ ಮೊದಲಾದವರು ರಾಷ್ಟ್ರದಾದ್ಯಂತ ಹೆಸರು ಗಳಿಸಿದ ನೇತಾರರು. ಉಪ್ಪಿನ ಸತ್ಯಾಗ್ರಹದಲ್ಲಿ ಹಾಗೂ ಇತರ ಸ್ವಾತಂತ್ರ್ಯ ಆಂದೋಲನಗಳಲ್ಲಿ ಜೈಲು ಸೇರಿದವರು. ತುಳುನಾಡಿನ ನೂರಾರು ರಾಷ್ಟ್ರಾಭಿಮಾನಿಗಳು ಸೇರಿದ್ದಾರೆ. ದಿ| ಟಿ.ಎ. ಪೈಯವರು ತಮ್ಮ ಸ್ವಂತ ಪ್ರಯತ್ನದಿಂದ ರಾಷ್ಟ್ರದ ರಾಜಕೀಯ ದೆತ್ತರಕ್ಕೇರಿದ ಮುಂದಾಳು. ಆಹಾರ ನಿಗಮ, ಜೀವವಿಮಾ ನಿಗಮ, ಸಿಂಡಿಕೇಟ್‌ಬ್ಯಾಂಕುಗಳ ಅಧ್ಯಕ್ಷರಾಗಿ, ರೈಲ್ವೆ, ಉದ್ದಿಮೆ ಖಾತೆಗಳ ಸಚಿವರಾಗಿ ತಮ್ಮ ದಕ್ಷತೆಯನ್ನು ಮೆರೆದ ಅವರು ನಮ್ಮ ತುಳುನಾಡಿನವರು.

ಸಾಹಿತ್ಯ ಕ್ಷೇತ್ರದಲ್ಲಿ ತುಳುವರ ಕೊಡುಗೆ ಅಮೂಲ್ಯವಾದುದಾಗಿದೆ. ರತ್ನಾಕರವರ್ಣಿ, ಚದುರ ಚಂದ್ರಮ, ಪಾರ್ತಿಸುಬ್ಬ, ಮುದ್ದಣ – ಮೊದಲಾದವರು ಹಿಂದಿನ ಕಾಲದಲ್ಲಿ, ಕಾರಂತ, ಕಡೆಂಗೋಡ್ಲು, ಪಂಜೆ, ಸೇಡಿಯಾಪು, ಮುಳಿಯ, ತೆಕ್ಕುಂಜ, ಉಗ್ರಾಣ – ಮೊದಲಾದವರು ಇಂದಿನ ಕಾಲದಲ್ಲಿ ಕನ್ನಡಕ್ಕೆ ನೀಡಿದ ಸಾಹಿತ್ಯ ಸಂಪತ್ತಿನ ಬೆಳೆಯನ್ನು ಕನ್ನಡಿಗರು ಅರಿತೇ ಇದ್ದಾರೆ. ತುಳುವಿಗೂ ತನ್ನದೇ ಆದ ಸಾರ್ವತ್ರಿಕವಾದ ಒಂದು ಲಿಪಿಯಿರುತ್ತಿದ್ದರೆ ತುಳುವಿನಲ್ಲೂ ಕೂಡಾ ಗ್ರಂಥಸ್ಥ ಸಾಹಿತ್ಯವೂ ವಿಪುಲವಾಗಿ ನಿರ್ಮಾಣವಾಗುತ್ತಿತ್ತೋ ಏನೋ?

ಭಾಷಾ ವಿಜ್ಞಾನದ ದೃಷ್ಟಿಯಿಂದ ಸಾಕಷ್ಟು ಸಮೃದ್ಧವಾದ ತುಳುಭಾಷೆಯು ಕನ್ನಡ, ಸಂಸ್ಕೃತ, ಅರಬ್ಬಿ, ಫಾರಸಿ, ಉರ್ದು, ಪೋರ್ಚುಗೀಸ್, ಕೊಂಕಣಿ, ಮರಾಠಿ, ಇಂಗ್ಲೀಷ ಮೊದಲಾದ ಭಾಷೆಗಳಿಂದ ಶಬ್ದಗಳನ್ನು ಸ್ವೀಕರಿಸಿ, ಸಾಕಷ್ಟು ಪ್ರಬುದ್ಧವಾಗಿವೆ. ಆದರೆ ತುಳುವಿನ ಮೂಲ ಶುದ್ಧರೂಪ  ಇಂದಿಗೂ ಉಳಿದಿದ್ದರೆ ಅದು ಆಧುನಿಕ ನಾಗರಿಕತೆಯ ಸಂಸ್ಕೃತಿಯಿಂದ ದೂರವುಳಿದಿರುವ ದಳಿತ ವರ್ಗದವರಲ್ಲಿ ಮಾತ್ರ. ಮಾಯಿಲ, ಮುಂಡಾಲ, ಮೇರ, ಮಾದಿಗ, ರಾಣೆ, ಪರವ, ಪಂಬದ, ನಲಿಕೆ, ಹೊಲೆಯ ಮೊದಲಾದವರ ತುಳು ಇಂದಿಗೂ ತನ್ನ ಮೂಲರೂಪದಲ್ಲೇ ಉಳಿದುಕೊಂಡಿದೆ. ಇತರರ ತುಳುಭಾಷೆ ಅನ್ಯಭಾಷೆಗಳ ಸಂಪರ್ಕದಿಂದಾಗಿ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಾ ಬಂದಿದ್ದರೆ, ಅವರ ಆಡುನುಡಿಯಲ್ಲಿ ಇಂದಿಗೂ ಮೂಲದ ಸೊಗಡನ್ನು ಸವಿಯಬಹುದಾಗಿದೆ. ಒಂದು ದೃಷ್ಟಿಯಲ್ಲಿ ನಮ್ಮ ಭಾಷೆಯ ಮೂಲ ಸೌಂದರ್ಯದ ಸಂರಕ್ಷಕರು ಅವರೇ ಆದುದರಿಂದ ನಾವು ಅವರಿಗೆ ಋಣಿಗಳಾಗಿರಬೇಕಾಗಿದೆ.

ತುಳುವರು ಹಿಂದಿನಿಂದಲೂ ಇತರ ಭಾಷೆಗಳವರ ಆಡಳಿತಕ್ಕೊಳ ಪಟ್ಟಿದ್ದು ದರಿಂದಾಗಿ ತುಳುವಿಗೆ ಪ್ರಬಲವಾದ ರಾಜಾಶ್ರಯ ದೊರೆಯದಿದ್ದುದರಿಂದಾಗಿ ತುಳುವರು ತಮ್ಮ ಭಾಷಾ ಸಾಹಿತ್ಯದ ಬೆಳವಣಿಗೆಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗಿಲ್ಲ. ತಮ್ಮ ಭಾಷೆಗಾಗಿ ಹೋರಾಡುವ ಮನೋಧರ್ಮದ ಬದಲು, ಸಹಿಷ್ಣುತೆಯನ್ನು ಪ್ರಧಾನ ಗುಣವಾಗಿ ಪಡೆದಿದ್ದ ತುಳುವರು, ಇತರ ಭಾಷೆಗಳನ್ನೇ ಅವಲಂಬಿಸುವ ಪರಿಸ್ಥಿತಿಯುಂಟಾಯಿತು. ಇತರ ಭಾಷಾ ಸಂಪರ್ಕದಿಂದ ತುಳುವರು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಸತ್ವಯುತವಾದ ಕೃತಿಗಳನ್ನು ನೀಡಲು ಸಮರ್ಥರಾದರು ಹಾಗೂ ತಮ್ಮ ಸ್ವಂತಿಕೆಯನ್ನುಳಿಸಿ ಕೊಂಡು ಬಂದುದರಿಂದಾಗಿ, ‘ಮಂಗಳೂರು ಕನ್ನಡ’ವೆಂಬ ಪ್ರಾದೇಶಿಕತೆಯೂ ಕನ್ನಡದಲ್ಲಿ ಕಾಣಿಸಿಕೊಂಡಿತು. ಬೆಂಗಳೂರಿನಂತಹ ನಗರದಲ್ಲಿ ತಮಿಳು, ತೆಲುಗು ಭಾಷೆಗಳ ಒತ್ತಡಕ್ಕೆ ಕನ್ನಡವು ಮಣಿದಷ್ಟು ತುಳುನಾಡಿನಲ್ಲಿ ಮಣಿದಿಲ್ಲವೆಂಬುದು ಇಲ್ಲಿ ಗಮನಾರ್ಹ. ಆದರೆ ಇತರ ಭಾಷೆಗಳ ಬಗೆಗೆ ತುಳುವರ ಸಹಿಷ್ಣುತಾಭಾವ ಕೆಲವೊಮ್ಮೆ ತಪ್ಪುಕಲ್ಪನೆಗೂ ಕಾರಣವಾಯಿತು ಎಂಬುದನ್ನೂ ನಾವು ಮರೆಯುವಂತಿಲ್ಲ.

ಹೇಗಿದ್ದರೂ ತುಳುನಾಡಿನಲ್ಲಿ ಜಾನಪದ ಸತ್ವ, ಮೌಲ್ಯಗಳುಳ್ಳ ಸಾಂಸ್ಕೃತಿಕ ಸಂಪತ್ತು ಸಾಕಷ್ಟಿದೆ. ಹಳ್ಳಿಗಳಲ್ಲಿರುವ ಓದುಬರಹ ತಿಳಿಯದ ಜನರ ಪಾಡ್ದನ, ಸಂಧಿ, ಜೋಗುಳ, ಒಗಟು, ಗಾದೆ, ಕಥೆಗಳು, ನಮ್ಮ ಯಕ್ಷಗಾನ, ನಮ್ಮ ಕಂಬಳ, ನಮ್ಮ ಹಳ್ಳಿಯ ತುಳುಜನರ ಮದ್ದುಗಳು, ಗದ್ದೆಯಲ್ಲಿ ನೇಜಿ ನೆಡುವ ಹೆಂಗಸರು ಹಾಡುವ ಲೇಲೆ ಹಾಡುಗಳು ಇವೆಲ್ಲವೂ ನಮ್ಮ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾಗಿದೆ. ತುಳುನಾಡಿನ ಯಕ್ಷಗಾನ ಕಲೆಯಾದರೋ ಜನಜೀವನದ ಮೇಲೆ ದಟ್ಟವಾದ ಪ್ರಭಾವವನ್ನು ಬೀರಿದ್ದು, ಹಿಂದಿನ ದಿನದಿಂದಲೂ, ಜನತೆಗೆ ಪ್ರಾಚೀನ ಪ್ರರಾಣಾದಿಗಳ ಅಮೂಲ್ಯ ಸಂದೇಶದ ರಸಪಾಕವನ್ನು ಹಂಚಿ, ಬದುಕಿಗೆ ಮಾರ್ಗದರ್ಶನ ನೀಡಿದ ಕಲೆಯಾಗಿದೆ. ತುಳುವರು ಪೋಷಿಸಿಕೊಂಡು ಬಂದ ಈ ಕಲೆಯು ಇಂದು ರಾಷ್ಟ್ರೀಯ ಅಂತರ್ ರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿವೆಯಾದರೂ ಇದರ ಮೂಲ ಪ್ರೋತ್ಸಾಹಕರು ಇಲ್ಲಿನ ಜನಸಾಮಾನ್ಯರೇ ಎಂಬುದನ್ನು ನಾವು ಸ್ಮರಿಸಲೇಬೇಕು.

ತುಳುಭಾಷೆಗೊಂದು ಲಿಪಿಯಿದ್ದರೂ ನಾವು ಇಂದಿಗೆ ತುಳು ಬರೆಹಗಳಲ್ಲಿ ಕನ್ನಡ ಲಿಪಿಯನ್ನೇ ಬಳಸುತ್ತಿದ್ದೇವೆ. ಇದು ಸೂಕ್ತವೂ ಆಗಿದೆ. ೧೭ನೇ ಶತಮಾನದಲ್ಲಿ ವಿಷ್ಣು ಕವಿಯೆಂಬಾತ ತುಳುವಿನಲ್ಲಿ ಭಾಗವತ ಬರೆದಿದ್ದನೆಂದೂ, ಕೆಲವೆಡೆಗಳಲ್ಲಿ ಶಾಸನಪತ್ರಗಳಲ್ಲಿ ತುಳು ಸಾಹಿತ್ಯವಿದೆಯೆಂದೂ ತಿಳಿದುಬರುತ್ತದೆ. ೧೯ನೇ ಶತಮಾನದ ಆರಂಭದಲ್ಲಿ ಬಾಸೆಲ್ ಮಿಶನ್ನಿನವರು ತುಳುವಿಗಾಗಿ ಸಾಕಷ್ಟು ಕೆಲಸ ಮಾಡಿದರು. ಅವರು ತುಳುವನ್ನು ತಮ್ಮ ಮತಪ್ರಚಾರಕ್ಕಾಗಿ ಬಳಸಿದರೂ, ತುಳುವಿನ ಮುದ್ರಣ, ತುಳು ನಿಘಂಟು, ತುಳು ವ್ಯಾಕರಣಗಳನ್ನಿತ್ತವರು ಅವರೇ ಆಗಿದ್ದಾರೆ. ಮುಂದೆ ಇಪ್ಪತ್ತನೇ ಶತಮಾನದಲ್ಲಿ ಎಸ್‌.ಯು. ಪಣಿಯಾಡಿ ಪೊಳಲಿ ಶೀನಪ್ಪ ಹೆಗ್ಡೆ ಎನ್‌.ಎಸ್‌.ಕಿಲ್ಲೆ, ಕೆಮ್ತೂರು ದೊಡ್ಡಣ್ಣ ಶೆಟ್ಟಿ ಮೊದಲಾದವರು ತುಳು ಸಾಹಿತ್ಯ ರಚನೆ ಮಾಡಿ ತುಳುವಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ.

ತುಳುಕೂಟಗಳ ಮೂಲಕ ತುಳುವರ ಸಂಘಟನೆಯ ಪ್ರಯತ್ನ ನಡೆದಂತೆಯೇ ಉಡುಪಿಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಕು.ಶಿ. ಹರಿದಾಸ ಭಟ್ಟರ ಮಾರ್ಗದರ್ಶನದಲ್ಲಿ ‘ಬೃಹತ್‌- ತುಳು ನಿಘಂಟು ಯೋಜನೆ’ ಪೂರ್ಣವಾಗಿದೆ. ಇಂತಹ ಅಪೂರ್ವ ಸಾಹಸದ ಕಾರ್ಯಕ್ರಮವನ್ನಾರಂಭಿಸಿದವರೂ, ಇದನ್ನು ಪ್ರೋತ್ಸಾಹಿಸಿದ ಸರಕಾರದವರೂ, ಅಕಾಡೆಮಿಯವರೂ ತುಳುನಾಡಿಗೊಂದು ದೊಡ್ಡ ಉಪಕಾರ ಮಾಡಿದ್ದಾರೆ. ಇಂತಹ ಯೋಜನೆಗಳನ್ನು ತಮ್ಮ ಜನತೆಯೂ ಹೆಚ್ಚು ಬೆಂಬಲಿಸುವುದು ಅತ್ಯಗತ್ಯ.

ಮಂಜಯ್ಯ ಹೆಗ್ಗಡೆಯವರು ತುಳುವಿನಲ್ಲಿ ಧರ್ಮದ ಬಗೆಗೆ ಕೆಲವು ಪುಸ್ತಕಗಳನ್ನು ಸಹ ಹಿಂದೆಯೇ ಬರೆದು ಪ್ರಕಟಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳವೂ ತುಳು ಸಂಸ್ಕೃತಿ, ಭಾಷೆ, ಸಾಹಿತ್ಯ ಕಲೆಗಳ ಪೋಷಣೆಗೆ ತನ್ನದೇ ಆದ ವಿಧಾನದಿಂದ ನೆರವಾಗುತ್ತಾ ಬಂದಿದೆ. ತುಳು ನಾಟಕ, ಲೇಖನ ಸ್ಪರ್ಧೆಯನ್ನು ಏರ್ಪಡಿಸಿ, ಪ್ರತೀ ವರ್ಷವೂ ಬಹುಮಾನವನ್ನು ನೀಡಲಾಗುತ್ತಿದೆ. ಧರ್ಮಸ್ಥಳ ಸಮ್ಮೇಳನದಲ್ಲಿ ತುಳುಭಾಷೆ – ಸಾಹಿತ್ಯಗಳ ಬಗೆಗೆ ಉಪನ್ಯಾಸಗಳನ್ನೇರ್ಪಡಿಸಲಾಗಿದೆಯಲ್ಲದೆ, ಆಗಾಗ್ಗೆ ತುಳು ನಾಟಕಗಳ ಪ್ರದರ್ಶನಕ್ಕೆ ಜಿಲ್ಲೆಯ ಹವ್ಯಾಸಿ ಸಂಸ್ಥೆಗಳಿಗೆ ಅವಕಾಶ ಕೊಡಲಾಗುತ್ತಿದೆ.

ತುಳುನಾಡಿನ ಜನರು ಸಹಾಸ ಪ್ರವೃತ್ತಿಯವರು. ಕೆಲವರು ಬ್ಯಾಂಕುಗಳನ್ನು ಕಟ್ಟಿದರು. ಹಲವರು ಹೊಟೇಲುಗಳನ್ನು ನಡೆಸಿದ್ದರು. ಸುಪ್ರಸಿದ್ಧ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆದರ್ಶವನ್ನು ಮರೆದವರು.

ತುಳುವರ ಇನ್ನೊಂದು ವೈಶಿಷ್ಟ್ಯವೆಂದರೆ ಯಾವುದೇ ಕಾರ್ಯವನ್ನೂ ಸರಕಾರವೇ ಮಾಡಬೇಕೆಂದು ಕಾಯದೆ, ಪ್ರಯತ್ನದಿಂದ ಕಾರ್ಯಾರಂಭ ಮಾಡವವರು. ಶಿಕ್ಷಣ ರಂಗದಲ್ಲಿ ಸಾವಿರಾರು ವೈದ್ಯಕೀಯ, ತಾಂತ್ರಿಕ ಕಾನೂನು ಪದವೀಧರರನ್ನು ನಾಡಿಗಿತ್ತ ಮಣಿಪಾಲದ ಶಿಕ್ಷಣ ಸಂಸ್ಥೆಗಳ ಸಂಕೀರ್ಣವು ಟಿ.ಎಂ.ಎ. ಪೈಯವರ ಸಾಹಸದ ಕೂಸು. ಈ ಮಹನೀಯರು ಜನಸಮುದಾಯದ ಬೆಂಬಲವಿದ್ದರೆ ಭಾಷಾ ಅಲ್ಪ ಸಂಖ್ಯಾಕರೂ, ಸರಕಾರದಿಂದಲೇ ಗ್ರಾಮೀಣ ಪ್ರದೇಶದ ಉದ್ಧಾರವಾಗಬೇಕೆಂಬ ಭಾವನೆಯನ್ನು ಮೀರಿ ನಿಂತು, ಜನರಿಂದ ಜನರಿಗಾಗಿ ಉಚ್ಚ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಆದರ್ಶಪ್ರಾಯರೆನಿಸಿದ್ದರು. ಅವರು ಪ್ರಾರಂಭಿಸಿದ ಸಿಂಡಿಕೇಟ್‌ಬ್ಯಾಂಕು ಶ್ರೀಸಾಮಾನ್ಯರ ನಾಲ್ಕಾಣೆ ಸಂಗ್ರಹದಿಂದಲೇ ಆರಂಭವಾಗಿ ಇಂದು ದೇಶದ ಪ್ರಮುಖ ಬ್ಯಾಂಕುಗಳಲ್ಲೊಂದಾಗಿದೆ. ಅದೇ ರೀತಿ ಮಣಿಪಾಲದ ವಿದ್ಯಾ ಸಂಸ್ಥೆಗಳು ಶಿಕ್ಷಣದ ಖರ್ಚನ್ನು ಭರಿಸಬಲ್ಲ ಹೆತ್ತವರ ಸಹಕಾರದ ತತ್ವದ ನೆಲೆಯಲ್ಲಿ ಆರಂಭವಾಗಿದೆ. ಇಂದು ಎಲ್ಲಾ ವರ್ಗದ ಜನರಿಗೂ ಪ್ರಯೋಜನಕಾರಿಯಾದ ಸಂಸ್ಥೆಗಳಾಗಿವೆ. ಅತ್ಯಂತ ಹಿಂದುಳಿದ ಪ್ರದೇಶದಲ್ಲೂ  ಕಾಲೇಜು ಸ್ಥಾಪನೆ ಸಾಧ್ಯವೆಂದು ತೋರಿಸಿದ ಆ ಮಹನೀಯರನ್ನು ತುಳುನಾಡಿನ ಭವಿಷ್ಯತ್ತನ್ನು ಉಜ್ವಲಗೊಳಿಸಲು ನೆರವಾದವರೆಂದು ಸ್ಮರಿಸಲೇಬೇಕಾಗಿದೆ.

ತುಳುನಾಡು ಸಣ್ಣ ಪ್ರದೇಶವಾದರೂ ಕೆನರಾ, ಸಿಂಡಿಕೇಟ್, ಕಾರ್ಪೊರೇಷನ್, ವಿಜಯಾ, ಕರ್ಣಾಟಕ ಬ್ಯಾಂಕುಗಳೆಂಬ ೫ ಬ್ಯಾಂಕುಗಳ ಜನ್ಮಭೂಮಿಯಾಗಿದ್ದು ನಾಡಿನ ಆರ್ಥಿಕಾಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದೆ. ಬಡತನದ ಅನಿವಾರ್ಯತೆಯಿಂದಾಗಿ ಸ್ವಗ್ರಾಮವನ್ನು ತೊರೆದು ಪರವೂರುಗಳಿಗೆ ತೆರಳಿ, ಅಲ್ಲಿ ವಿವಿಧ ವೃತ್ತಿಗಳನ್ನು ಕೈಗೊಂಡು, ತಮ್ಮ ಕೌಶಲ ಸಾಮರ್ಥ್ಯಗಳನ್ನು ಮರೆದವರು. ಇಂದು ಮುಂಬೈಯ ೬ ಲಕ್ಷ ಜನ ಕನ್ನಡಿಗರಲ್ಲಿ ಸುಮಾರು ೪ ಲಕ್ಷ ಜನ ತುಳುವರೇ ಇದ್ದಾರೆ. ಭಾರತದಲ್ಲೂ ಈ ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ತುಳುವರಿದ್ದಾರೆ. ತಾವಿರುವ ಊರಿನ ಸನ್ನಿವೇಶ, ಪರಿಸರಗಳಿಗೆ ಹೊಂದಿಕೊಂಡಿದ್ದೂ, ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅಲ್ಲಿಂದ ಸಾಕಷ್ಟು ಹಣವನ್ನು ಉಳಿಸಿ ತಮ್ಮ ಊರಿಗೆ ಕಳುಹಿಸಿ ಕೊಟ್ಟು ಕರಾವಳಿ ಜಿಲ್ಲೆಯ ಆರ್ಥಿಕ ಪ್ರಗತಿಗೆ ನೆರವಾಗುತ್ತಿದ್ದಾರೆ. ಮಂಗಳೂರು ಬಂದರು ಹಾಗೂ ಹಾಸನ – ಮಂಗಳೂರು ರೈಲು ಮಾರ್ಗ – ಇವು ಶ್ರೀನಿವಾಸ ಮಲ್ಯರ ಪ್ರಯತ್ನದಿಂದ ದೊರೆತಿದ್ದು ಕರ್ನಾಟಕದ ಭಾಗ್ಯದ ಬಾಗಿಲನ್ನು ತೆರೆಯಲು ನೆರವಾಗಿದೆ.

ಇಷ್ಟೆಲ್ಲ ಸಾಹಸ ಪ್ರವೃತ್ತಿಯ ಜನರಿದ್ದೂ, ತುಳುನಾಡಿನಲ್ಲಿ ನಡೆದಂತಹ ಔದ್ಯೋಗಿಕ ಪ್ರಗತಿ ಸಾಲದು, ಇಲ್ಲಿಯ ಬ್ಯಾಂಕುಗಳು, ಆರ್ಥಿಕತೆಗಳನ್ನು ಗಮನಿಸಿದರೆ, ಪ್ರಾಕೃತಿಕ ಹಿನ್ನೆಲೆ, ಜನಸಂಪತ್ತನ್ನು ಗಮನಿಸಿದರೆ, ತೀವ್ರವಾದ ಔದ್ಯೋಗೀಕರಣ ನಡೆಯಲೇಬೇಕಾಗಿದೆ. ತುಳುವ ಯುವಕರು ತಮ್ಮ ಶಿಕ್ಷಣ ಪೂರೈಸಿದೊಡನೆ ಉದ್ಯೋಗಾನ್ವೇಷಣೆಗಾಗಿ, ಬೇರೆ ನಗರ, ಬೇರೆ ರಾಜ್ಯಗಳಿಗೆ ತೆರಳಬೇಕಾದ  ಪರಿಸ್ಥಿತಿಯಿದೆ. ಔದ್ಯೋಗೀಕರಣದ ಬಗ್ಗೆ ತುಳುವರೂ, ಸರಕಾರವೂ ಹೆಚ್ಚು ಮುತುವರ್ಜಿ ವಹಿಸಬೇಕಾಗಿದೆ. ತುಳುನಾಡಿನ ಸಂಸ್ಕೃತಿ ಇಲ್ಲಿಯ ಯಕ್ಷಗಾನ, ನಮ್ಮ  ಕಂಬಳ, ಭೂತದ ಕೋಲ, ನಮ್ಮ ಶಿಲ್ಪಕಲೆ, ನಮ್ಮ ದೇವಾಲಯ – ಮೊದಲಾದವುಗಳು ಪರಂಪರೆಯ ರಕ್ಷಣೆಯ ಬಗ್ಗೆ ಸರಕಾರದ ನೆರವು ಬೇಕಾಗಿದೆ. ನಮ್ಮ ಸಂಧಿ, ಪಾಡ್ಡನ, ಬೇಸಾಯದ  ಹಾಡುಗಳನ್ನು ಅರಿತ  ಜನರು, ಆಧುನಿಕ ಶಿಕ್ಷಣ ಮತ್ತು ನಾಗರಿಕತೆಗಳು ಧಾಳಿಯಿಂದಾಗಿ ಮರೆಯುವಂತಾಗುವ ಮುನ್ನ ಅವುಗಳನ್ನು ಧ್ವನಿಮುದ್ರಿಸಿ ರಕ್ಷಿಸುವ ಕಾರ್ಯ ನಡೆಯಬೇಕು. ಇದಕ್ಕೆ ನಮ್ಮ ಸರಕಾರದ ಸರ್ವ ವಿಧದ ಬೆಂಬಲ ಪ್ರೋತ್ಸಾಹಗಳು ಸಿಗುವಂತಾಗಬೇಕು. ನಮ್ಮ ಯಕ್ಷಗಾನ ಕಲಾವಿದರಿಗೆ ಹೆಚ್ಚಿನ ಮಾಸಾಶನದ ಸೌಲಭ್ಯಗಳನ್ನೊದಗಿಸಿ, ಸರಕಾರ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ. ಅದೇ ರೀತಿ ನಮ್ಮ ಕಂಬಳಗಳ ಬಗ್ಗೆ ಸರಕಾರದ ಹೆಚ್ಚಿನ ಬೆಂಬಲ ಬೇಕಾಗಿದೆ. ಅಲ್ಲಲ್ಲಿ ಕಂಬಳಗಳು ನಡೆಯುತ್ತಿದ್ದರೂ, ಜಾನಪದ ಕ್ರೀಡೆಯಾದ ಈ ಕಂಬಳವು ಲಾಭದಾಯಕವಾಗಿಲ್ಲ; ಅದಕ್ಕೆ ಸುಸಜ್ಜಿತ ಸ್ಟೇಡಿಯಂ ಸ್ಥಾಪನೆ ಮಾಡಿ, ಪ್ರೋತ್ಸಾಹಿಸಿದರೆ, ಈ ತುಳುನಾಡಿನ ವಿಶಿಷ್ಟ ಕ್ರೀಡೆಯೊಂದು ಸಾಕಷ್ಟು  ಮನೋರಂಜನೆಯನ್ನು ನೀಡುತ್ತಾ ಬದುಕಿ ಬಾಳಲು ಸಾಧ್ಯ.

ತುಳುಭಾಷೆಯಲ್ಲಿ ಆರಂಭವಾದ ‘ತುಳುಸಿರಿ, ತುಳುಕೂಟ, ತುಳುವೆರೆ ಬಂಧು ತುಳುನಾಡು’ ಮೊದಲಾದ ಪತ್ರಿಕೆಗಳು ಸದ್ಯ ಬದುಕಿ ಉಳಿದಿಲ್ಲ. ತುಳು ಪತ್ರಿಕೆಗಳು ಹಾಗೂ ತುಳು ಪುಸ್ತಕಗಳ ಪ್ರಕಟಣೆಗೆ ಸರಕಾರದ ನೆರವು, ಜನತೆಯ ಪ್ರೋತ್ಸಾಹ ಸಿಗಬೇಕು. ತುಳುನಾಡು, ತುಳುಭಾಷೆಯ ಬಗ್ಗೆ ಕನ್ನಡದಲ್ಲಿ ಹಲವರು ಸಂಶೋಧನೆ ನಡೆಸಿದ್ದಾರೆ. ಅಂತಹ ಸಂಶೋಧನೆ ಇನ್ನಷ್ಟು ವ್ಯಾಪಕವಾಗಿ, ಇನ್ನಷ್ಟು  ಆಳವಾಗಿ ಸುಸಂಘಟಿತವಾಗಿ ನಡೆಯಬೇಕು.

ನಮ್ಮ ತುಳುನಾಡಿನ ಶಾಲಾ ಕಾಲೇಜುಗಳ ಯುವಕ ಮಂಡಲಗಳ ವಾರ್ಷಿಕೋತ್ಸವಗಳಲ್ಲಿ ತುಳು ನಾಟಕಗಳಿದ್ದೇ ತೀರಬೇಕು – ಅನ್ನು ವಂತಹ ಸ್ಥಿತಿಯಿದೆ. ಆದರೆ ಈ ನಾಟಕಗಳಲ್ಲಿ ಹೆಚ್ಚಿನವುಗಳಿಗೆ ಮುದ್ರಣಾವಕಾಶ ದೊರೆಯುತ್ತಿಲ್ಲ. ಅದೇ ರೀತಿ ತುಳುವಿನ ಚಲನಚಿತ್ರಿಗಳೂ ಸೀಮಿತ ಪ್ರದರ್ಶನಾವಕಾಶದಿಂದಾಗಿ ಲಾಭ ಗಳಿಸಲಾರದೆ ಹಿಂದೆ ಬಿದ್ದಿವೆ. ಈ ಕ್ಷೇತ್ರಗಳಲ್ಲೂ ಸರಕಾರದ ನೆರವು ನಮ್ಮ ತುಳು ನಾಟಕ – ತುಳು ಸಿನೆಮಾಗಳಿಗೆ ಹೆಚ್ಚು ಔದಾರ್ಯವನ್ನು ತೋರಬೇಕಾಗಿದೆ. ತುಳು ಸಿನಿಮಾಗಳು ಕೇವಲ ಒಂದೇ ಜಿಲ್ಲೆಯಲ್ಲಿ ನಡೆಯುವವುಗಳಾಗಿರುವುದರಿಂದ ಇವುಗಳಿಗೆ ಹೆಚ್ಚಿನ ಸಹಾಯಧನ ಹಾಗೂ ಮನೋರಂಜನಕರ ವಿನಾಯಿತಿಯ ಸೌಲಭ್ಯವೊದಗಿಸಲು ಸರಕಾರ ಮುಂದೆ ಬರಬೇಕಾಗಿದೆ. ಇದು ಪ್ರಾದೇಶಿಕ ಸಂಸ್ಕೃತಿಯ ದೃಷ್ಟಿಯಿಂದ ಸೂಕ್ತವೇ ಆಗಿದೆ.

ನಮ್ಮ ಮಂಗಳೂರಿಗೆ ಆಕಾಶವಾಣಿ ಬಂದಿದೆ. ಆದರೆ ತುಳುವಿನಲ್ಲಿ ಜನರು ಸುದ್ದಿ ಕೇಳುವಂತಹ ಭಾಗ್ಯ ಪಡೆದಿಲ್ಲ. ಕೊಂಕಣಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾನ್ಯತೆ ದೊರಕಿದಂತೆ, ತುಳುವಿಗೂ ದೊರೆತು ದೂರದರ್ಶನ, ಆಕಾಶವಾಣಿಗಳಲ್ಲೂ ‘ತುಳು’ ಭಾಷೆಗೆ ಯೋಗ್ಯ ಗೌರವ ಸಲ್ಲುವಂತಾಗಬೇಕು.