ಇದನ್ನೆಲ್ಲ ಪರಾಮರ್ಶಿಸುವಾಗ, ತುಳುನಾಡಿನಲ್ಲಿ ಸಾವಿರಾರು ಜನರ ಬದುಕನ್ನು ಈ ಗುಲಾಮಗಿರಿ ನುಂಗಿ ಹಾಕಿತ್ತು ಎಂದು ನೇರವಾಗಿ ಹೇಳಬಹುದು, ಸಾವಿರಾರು ಜನರ ಬದುಕು ಭಯದ ಕೂಪದಲ್ಲಿ, ದುಃಖದ ನೆರಳಲ್ಲಿ ನರಳುತ್ತಿತ್ತು. ಈ ರೀತಿಯ ಸಾಮಾಜಿಕ ಪದ್ಧತಿ, ನಿಧಾನವಾಗಿ ಪ್ರತ್ಯೇಕ ಗುಲಾಮರನ್ನು ಹೊಂದಿರುವ ಮಾಲೀಕವರ್ಗವನ್ನು ಸೃಷ್ಟಿಸಿತ್ತು. ಇವರ ಕಪಿಮುಷ್ಟಿಯಲ್ಲಿ ಗುಲಾಮರ ಬದುಕು ಹೀನಾಯ ಸ್ಥಿತಿಯಲ್ಲಿತ್ತು. ಈ  ಮಾಲೀಕರ ಮಕ್ಕಳು ಬಾಲ್ಯದಿಂದಲೇ ಈ ಗುಲಾಮರಿಂದಲೇ ತಮ್ಮ ಸೇವೆ ಮತ್ತು ಚಾಕರಿಯನ್ನು ಮಾಡಿಸಿಕೊಳ್ಳುತ್ತಿದ್ದರು ಹಾಗೂ ಅವರು ಪ್ರತಿಯೊಂದು ಹಂತದಲ್ಲೂ ತಮ್ಮ ಹೆತ್ತವರನ್ನು ಅನುಸರಿಸುತ್ತಿದ್ದರು. ತಮ್ಮ ಹೆತ್ತವರ ದೃಷ್ಟಿಕೋನವನ್ನೇ ಈ ಗುಲಾಮರ ಬಗ್ಗೆ ಪಾಲಿಸಿಕೊಂಡು ಮುಂದುವರಿಯುತ್ತಿದ್ದುದರಿಂದ ಈ ಜನ ಸಮುದಾಯವನ್ನು ನಿಕೃಷ್ಟವಾಗಿಯೇ ನೋಡಲಾಯಿತು. ಹಾಗಾಗಿ, ಅವರು ತಮ್ಮ ಬಾಲ್ಯದಿಂದಲೇ ಈ ಗುಲಾಮ ವರ್ಗವನ್ನು ದುಃಖಕ್ಕೆ ಒಳಪಡಿಸುವುದರಲ್ಲಿ ತೃಪ್ತಿ ಹೊಂದುತ್ತಿದ್ದರು. ಇನ್ನೊಂದೆಡೆ ಗುಲಾಮರ ಮಕ್ಕಳು ಶೋಚನೀಯ ಬದುಕನ್ನು ಅನುಭವಿಸುತ್ತಿದ್ದರು. ಈ ಮಕ್ಕಳು ಬೆಳೆಯುತ್ತಿದ್ದಂತೆ, ನಿರ್ಲಕ್ಷಿತ ಅಸಹಾಯಕ, ಜೀವನಪೂರ್ತಿ ಗುಲಾಮರಾಗುವ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದುದು ಸಹಜವಾಗಿತ್ತು.

[1] ಜೆ.ಜೆ. ರವೆನ್‌ ಶಾಹ್‌ರವರು ಗುಲಾಮಗಿರಿಯ ಕುರಿತು ಚರ್ಚಿಸುತ್ತಾ, ಗುಲಾಮರು ಕೇವಲ ಮಾಲೀಕರ ಆಸ್ತಿಯಾಗಿದ್ದು, ಸದಾ ಕಾಲ ಅವನ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಬದುಕುತ್ತಿದ್ದರು. ಮಾಲೀಕನು ಅವರನ್ನು ಹೇಗೂ ಬಳಸಿಕೊಳ್ಳುವ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದು, ಅವರನ್ನು ಮಾರಾಟ ಮಾಡಿ ಮೂರನೇ ವ್ಯಕ್ತಿಯ ಆಸ್ತಿಯನ್ನಾಗಿ ಪರಿವರ್ತಿಸುವ ಹಕ್ಕು ಮಾಲೀಕನಿಗಿತ್ತು ಎಂದು ಅಭಿಪ್ರಾಯ ಪಡುತ್ತಾನೆ.[2] ಹಾಗಾಗಿ ಗುಲಾಮಗಿರಿಗೆ ಯಾವುದೇ ರೀತಿಯ ಪರ್ಯಾಯ ವ್ಯಾಖ್ಯಾನವನ್ನು ರಚಿಸಿದ್ದರೂ ಕೂಡ ಅವರು ಅನುಭವಿಸಿದ ಅಮಾನವೀಯ ಬದುಕನ್ನು  ಸರಿಪಡಿಸಿದಂತಾಗುವುದಿಲ್ಲ ಮತ್ತು ಸಮಾಜ ಅವರನ್ನು ಅತ್ಯಂತ ಕ್ರೂರವಾಗಿಯೇ ನೋಡುತ್ತಿತ್ತು.

ಕೃಷಿ ಕಾರ್ಮಿಕನ ಬದುಕು ಕೂಡ ಗುಲಾಮರಿಗೆ ಹೋಲಿಸಿದರೆ, ಹಸನಾಗಿಯೇನೂ ಇರಲಿಲ್ಲ. ಇವರನ್ನು ಹೆಚ್ಚಾಗಿ ಕೃಷಿ ಪ್ರಧಾನ ಜಿಲ್ಲೆಗಳನ್ನು ಉದ್ಯೋಗಕ್ಕೆ ಬಳಸುತ್ತಿದ್ದರು., ಅವರು ಅದೇ ಕೆಲಸಕ್ಕೆ ಅರ್ಹರಾಗಿದ್ದು, ಅನಾದಿ ಕಾಲದಿಂದಲೂ ಕೃಷಿ ಭೂಮಿಗೆ ಅಂಟಿಕೊಂಡಿದ್ದರು. ಅವರು ಸಾಮಾನ್ಯವಾಗಿ ಕೃಷಿ ಭೂಮಿಯಲ್ಲಿ ನಿರಂತರವಾಗಿ ದುಡಿಯುತ್ತಿದ್ದರು. ಅಂದರೆ, ಭೂಮಿ ಹದ ಮಾಡುವುದು, ಉಳುಮೆ, ಬಿತ್ತನೆ, ಕಳೆ ಕೀಳುವುದು, ಕಟಾವು ಹಾಗೂ ಭತ್ತ ಕುಟ್ಟುವವರೆಗೆ ಮುಂದುವರಿಯುತ್ತಿತ್ತು. ಅಲ್ಲದೆ,  ಹೊಲ ಗದ್ದೆಗಳಲ್ಲಿ ಬೆಳೆಸಿದ ಫಸಲನ್ನು ಕಾಯುವುದು ಮತ್ತು ದನಕರುಗಳನ್ನು ನೋಡಿಕೊಳ್ಳುವುದು ಇವರ ಮೂಲಭೂತ ಕರ್ತವ್ಯ. ಗದ್ದೆಗಳಿಗೆ ಬೇಲಿ ಹಾಕುವುದು ಮತ್ತು ಕೃಷಿ ಉತ್ಪಾದನೆಯನ್ನು ಮಾರುಕಟ್ಟೆಗೆ ಅಥವಾ ಮಾಲೀಕನ ಮನೆಗೆ ತಲುಪಿಸುವುದು ಕೂಡ ಈ ಕಾರ್ಮಿಕರ ಕೆಲಸವಾಗಿತ್ತು.  ಬೆಳೆ ಕಟಾವು ಆದ ನಂತರ ಯಜಮಾನನ ಮನೆ ಕಟ್ಟುವುದು ಅಥವಾ ದುರಸ್ತಿ ಮಾಡಲು ಒಳ್ಳೆಯ ತಳಿಯ ಮರಗಳನ್ನು ಕಡಿಯುವುದು ಕೂಡ ಇವರ ಕೆಲಸ. ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಗದ ಜನರಿಗೆ ದಿನಪೂರ್ತಿ ದುಡಿಮೆಯಾಗಿದ್ದು ವಿರಾಮವೆಂಬುದೇ ಇರುತ್ತಿರಲಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಇವರು ಯಜಮಾನ ಎಷ್ಟು ಹೊತ್ತಿನವರೆಗೆ ಬಯಸುತ್ತಾನೋ ಅಷ್ಟು ಹೊತ್ತಿನವರೆಗೆ ದುಡಿಯ ಬೇಕಾಗಿತ್ತು.[3] ಅವರದ್ದೇ ಆದ ಸಮಯವೆಂದು ಹೇಳಲು ಈ ಕಾರ್ಮಿಕರಿಗೆ ಸ್ವಾತಂತ್ರ್ಯವಿಲ್ಲ. ಅವೆಲ್ಲವೂ ತಮ್ಮ ಯಜಮಾನನಿಗೆ ಮೀಸಲು  ದೀರ್ಘ ಕಾಲ ದುಡಿಯಬೇಕಾಗಿದ್ದ ಇವರು ವಾರದಲ್ಲಿ ಒಂದು ದಿನ ವಿರಾಮಿಕ್ಕಾಗಿ ಅಥವಾ ಪ್ರಾರ್ಥನೆಗಾಗಿ ಬಳಸಲು ಅವಕಾಶವಿರಲಿಲ್ಲ.[4] ಇವರು ಎದುರಿಸುತ್ತಿರುವ ಹೀನಾಯ ಪರಿಸ್ಥಿತಿಯನ್ನು ೧೮೧೯ರಲ್ಲಿ ಕೆನರಾದ ಕಲೆಕ್ಟರಾಗಿದ್ದ ಟಿ. ಹ್ಯಾರೀಸ್‌ರವರು ಕಂದಾಯ ಇಲಾಖೆಗೆ ಬರೆದ ಒಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.[5] ಈ ಪತ್ರದಲ್ಲಿ ಹ್ಯಾರೀಸ್‌ರವರೂ, ಕೆನರಾ ಜಿಲ್ಲೆಗಳಲ್ಲಿ ಕೃಷಿ ಕಾರ್ಮಿಕರನ್ನು ಯಜಮಾನ ಎಲ್ಲಾ ವಿಭಾಗಗಳಲ್ಲಿ ದುಡಿಸುತ್ತಿದ್ದನು. ಅಂದರೆ ಪಶು ಸಂಗೋಪನೆಯಿಂದ ಹಿಡಿದು, ಗದ್ದೆ ಉಳುವುದು, ಬಿತ್ತನೆ ಮಾಡುವುದು ಹಾಗೂ ಕೃಷಿಗೆ ಸಂಬಂಧಿಸಿದ ಎಲ್ಲಾ ಅವಶ್ಯ ಕೆಲಸಗಳನ್ನು ಮಾಲೀಕ ಮಾಡಿಸುತ್ತಿದ್ದನು ಎಂದು ಹೇಳಲಾಗಿದೆ. ಮಹಿಳೆಯರು ಭತ್ತದ ಸಸಿಯ ಕಟಾವುವನ್ನು ಮಾಡುತ್ತಿದ್ದು, ಸಸಿಯಿಂದ ಭತ್ತವನ್ನು ಅಂಗಳದಲ್ಲಿ ಬೇರ್ಪಡಿಸುವ ಕೆಲಸವನ್ನು ಮಹಿಳೆಯರು ಮತ್ತು ಗಂಡಸರು ಜೊತೆಗೂಡಿ ಮಾಡುತ್ತಿದ್ದರು. ಇವರು ಗುಂಪಾಗಿ ಕೆಲಸದಲ್ಲಿ ತೊಡಗುತ್ತಿದ್ದು, ಅವರಿಗೆ ವಹಿಸುವ ಕೆಲಸವನ್ನು ಗ್ರಾಮ ಲೆಕ್ಕಿಗರು ತನಿಖೆ ಮಾಡುತ್ತಿದ್ದರು ಎಂದ ಹ್ಯಾರೀಸ್ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಅವರ ಕೆಲಸವನ್ನು ಯಾವುದೇ ಉನ್ನತ ಅಧಿಕಾರಿ ಪರಿಶೀಲಿಸುತ್ತಿರಲಿಲ್ಲ. ಸಾಮಾನ್ಯವಾಗಿ ಕೃಷಿ ಕಾರ್ಮಿಕರ ದುಡಿಮೆ ನೀರಾವರಿ ಭೂಮಿಗೆ ಸೀಮಿತಗೊಂಡಿದ್ದು ಇವರು ಮಧ್ಯಾಹ್ನ ಊಟದ ವಿರಾಮದ ಹೊರತಾಗಿ ಸೂರ್ಯೋದಯದಿಂದ ಸೂರ್ಯಸ್ತಮಾನದವರೆಗೆ ದುಡಿಯುತ್ತಿದ್ದರು. ಗುಲಾಮನಂತೆ, ತುಳುನಾಡಿನಲ್ಲಿದ್ದ, ಕೃಷಿ ಕಾರ್ಮಿಕರಿಗೂ, ವಾರಕ್ಕೊಂದು ದಿನದ ವಿರಾಮವೂ ಇರಲಿಲ್ಲ. ಕೇವಲ ಪ್ರಮುಖ ಹಬ್ಬಗಳ ದಿವಸದಲ್ಲಿ ಮಾತ್ರ ಇವರಿಗೆ ರಜೆ ದೊರೆಯುತ್ತಿತ್ತು. ಸಾಮಾನ್ಯವಾಗಿ ವರ್ಷದ ಮೊದಲ ದಿನ, ಆಯುಧಗಳನ್ನು ಪೂಜಿಸುವ ದಿನ ಮತ್ತು ವಿಶೇಷ ಹಬ್ಬಗಳ ಆಚರಣೆ ಕೃಷಿ ಕಾರ್ಮಿಕರಿಗೆ ಬಿಡುವ ದಿನಗಳು, ಇಂಥ ದಿನ ಇದೇ ಕೆಲಸವೆಂದು ಕಾರ್ಮಿಕರಿಗೆ ಯಜಮಾನ ಸೂಚಿಸುತ್ತಿರಲಿಲ್ಲ. ಆದರೆ ಕೃಷಿ ಭೂಮಿ ಮತ್ತು ನೀರಾವರಿ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಇದೇ ಕಾರ್ಮಿಕರು ಮಾಡುವುದು ಚಾಲ್ತಿಯಲ್ಲಿರುವ ಪದ್ಧತಿ ಮತ್ತು ಅದೂ ನಿರಾತಂಕವಾಗಿ ಮುಂದುವರಿಯುತ್ತಿತ್ತು. ಹಾಗಾಗಿ ತುಳುನಾಡಿನಲ್ಲಿದ್ದ ಗುಲಾಮರ ಬದುಕಿಗಿಂತ ಕೃಷಿ ಕೂಲಿಕಾರರ ಬದುಕೇನೂ ಉನ್ನತ ಮಟ್ಟದಲ್ಲಿ ಇರಲಿಲ್ಲ.

ತುಳುನಾಡಿನ ಗುಲಾಮಗಿರಿಯ ಕುರಿತು ಆಂಗ್ಲರ ಮನೋಭಾವ

ಮದ್ರಾಸ್‌ಪ್ರೆಸಿಡೆನ್ಸಿಯಲ್ಲಿರುವ ಕೃಷಿ ಕಾರ್ಮಿಕರು ಮತ್ತು ಗುಲಾಮಗಿರಿಯ ಕುರಿತು ಸಮರ್ಪಕವಾದ ವರದಿಯು ಅತೀ ಸೂಕ್ಷ್ಮವಾದ ದಾಖಲೆಯಾಗಿ ಪ್ರಕಟವಾಗಿದ್ದುದು ಜನವರಿ ೧೮೧೮ರಲ್ಲಿ. ಅದು ಮದ್ರಾಸ್‌ ಕಂದಾಯ ಇಲಾಖೆಯು ದಾಖಲಿಸಿದ ಮಿನಿಟ್ಸ್‌ಗಳು.[6] ಈ ಮಿನಿಟ್ಸ್‌ಗಳನ್ನು ಕಂದಾಯ ಇಲಾಖೆ ಲಂಡನ್‌ನಲ್ಲಿರುವ ಕೋಟ್‌ ಆಫ್‌ ಡೈರೆಕ್ಟರ್ಸ್‌‌ಗೆ ವರದಿ ರೂಪದಲ್ಲಿ ಸಲ್ಲಿಸಿತ್ತು. ಈ ಸಮೀಕ್ಷೆಯಲ್ಲಿ  ಕಂದಾಯ ಇಲಾಖೆ, ಈ ಕರಾವಳಿ ಪ್ರದೇಶದಲ್ಲಿ ಅನೇಕ ಕೃಷಿಕರು ಸಾವಿರಾರು ಕಾರ್ಮಿಕರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದು, ಅವನ್ನು ಶೋಷಿಸುತ್ತಿದ್ದರು ಎಂಬ ವಿಚಾರವನ್ನು ಸವಿವರವಾಗಿ ವಿವರಿಸುವ ಪ್ರಯತ್ನ ಮಾಡಿದೆ. ಇಲಾಖೆಯ ದೃಷ್ಟಿಯಲ್ಲಿ ಹೆಚ್ಚಿನ ಪ್ರಮಾಣದ ಕೃಷಿ ಕೂಲಿ ಕಾರ್ಮಿಕರು ಜೀತ ಪದ್ಧತಿಗೆ ಸಿಲುಕಿದ್ದರು. ಇದೊಂದು ಬಂಧನವಾಗಿದ್ದು, ಅನೂಚಾನವಾಗಿ ಅನಾದಿ ಕಾಲದಿಂದಲೂ ಯಾವುದೇ ವಿರೋಧವನ್ನು ಎದುರಿಸದೇ ಮುಂದುವರಿದಿತ್ತು ಎಂದು ಈ ವರದಿ ಸಮರ್ಥನೆ ನೀಡುತ್ತದೆ. ಅವರ ಪರಿಸ್ಥಿತಿ, ಆಯಾಯ ಪ್ರದೇಶದಲ್ಲಿರುವವರ ಗೇಣಿಗನುಗುಣವಾಗಿ, ಭೂ ಹಿಡುವಳಿಗನುಗುಣವಾಗಿ ನಿರ್ಧರಿಸಲಾಗುತ್ತಿತ್ತು. ತುಳುನಾಡಿನಲ್ಲಿ ಸಾಮಾನ್ಯವಾಗಿ ಖಾಸಗಿ ಭೂ ಒಡೆತನ ಹೊಂದಿದ್ದ ಭೂ ಆಸ್ತಿಯಲ್ಲಿ ಗುಲಾಮರನ್ನೇ ತಮ್ಮ ಖಾಸಗಿ ಸೇವಕರನ್ನಾಗಿ ಮಾಲೀಕರು ಬಳಸಿಕೊಂಡು ಇವರ ಈ ಒಡೆಯನ ಸ್ವಂತ ಆಸ್ತಿಯೆಂದೇ ಭಾವಿಸಿ, ಗುಲಾಮರನ್ನು ಯಾವಾಗ ಬೇಕಾದರೂ ಮಾರಾಟ ಮಾಡಿ ಅದರ ಸವಿಯನ್ನು ಉಣ್ಣುವ ಸ್ವಾತಂತ್ರ್ಯ ಇತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವೊಮ್ಮೆ ತನ್ನ ಸಂತೋಷಕ್ಕೋಸ್ಕರ ಇಂತಹ ಕೃತ್ಯದಲ್ಲಿ ಯಜಮಾನನು ಪಾಲ್ಗೊಳ್ಳುತ್ತಾನೆ. ಆದರೆ ಇಲಾಖೆ, ಮುಸ್ಲಿಂ ರಾಜರ ಅಧೀನಕ್ಕೆ ಒಳಪಟ್ಟ ಪ್ರಾಂತದಲ್ಲಿರುವ  ಗುಲಾಮರು ಮತ್ತು ಕೃಷಿ ಕಾರ್ಮಿಕರು ಉನ್ನತ ಮಟ್ಟದ ಜೀವನ ನಡೆಸುತ್ತಿದ್ದು, ಒಂದಷ್ಟು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರು ಎಂದು ಸಮೀಕ್ಷೆ ಮಾಡಿದ ಇಲಾಖೆಯ ಬ್ರಿಟಿಷ್‌ ಅಧಿಕಾರಿ ಮನಸ್ಸಿಲ್ಲದ ಮನಸ್ಸಿನಲ್ಲಿ ಉಲ್ಲೇಖಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಹಿಂದೂ ಸಂಸ್ಥೆಗಳು ತೊಂದರೆಗೊಳಗಾಗದೆ, ಅಸ್ಥಿತ್ವವನ್ನು ಉಳಿಸಿಕೊಂಡಿದ್ದರೂ, ಕಾರ್ಮಿಕರ ಜೀವನ ಮಟ್ಟ ತೃಪ್ತಿಕರವಾಗಿರಲಿಲ್ಲ. ಅದೇ ರೀತಿ, ಕಂಪನಿ ಆಡಳಿತವೂ ಕೂಡ ಈ ವರ್ಗದ ಸಮಸ್ಯೆಯತ್ತ ಅಸಡ್ಡೆಯಿಂದ ನೋಡುತ್ತಿತ್ತು ಎಂದು ಪಶ್ಚಾತಾಪದಿಂದಲೇ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಅದೇ ಸಮಯದಲ್ಲಿ ಇಲಾಖೆ ಈ ಗುಲಾಮರನ್ನು ಕೃಷಿ ಕೂಲಿಕಾರರನ್ನು ಈಗಿದ್ದ ಪರಿಸ್ಥಿತಿಯಿಂದ ಬೇರ್ಪಡಿಸಿ ಅವರ ಸ್ಥಿತಿಗತಿಯಲ್ಲಿ ಸುಧಾರಣೆ ತರಲು ಅವಕಾಶಗಳೇನಾದರೂ ಇವೆಯಾ ಎಂದೂ ಯೋಚಿಸಿ ಆಶ್ಚರ್ಯಪಟ್ಟಿತ್ತು. ಇದು ತಕ್ಷಣ ಸಾಧ್ಯವಾಗದ ಕೆಲಸವೆಂದೂ, ಇಲಾಖೆ ತೀರ್ಮಾನಿಸಿ, ಇದಕ್ಕೆ ನಿರ್ದಿಷ್ಟ ಮಾಹಿತಿಯ ಕೊರತೆಯೇ ಕಾರಣವೆಂದು ಪರಿಗಣಿಸಿತು. ಬಹುಶಃ ಸರಕಾರಿ ಅಧಿಕಾರಿಗಳಿಗೆ ಈ ವರ್ಗದವರೊಂದಿಗೆ ನೇರ ಸಂಪರ್ಕ ಏರ್ಪಡಿಸಿ ಮಾಹಿತಿ ಸಂಗ್ರಹಿಸಲು ಅಸಾಧ್ಯವಾಗಿದ್ದು, ಅಂತಹ ಅಧಿಕಾರಿಗಳು ಈ ಪದ್ಧತಿಯ ಸಂಪೂರ್ಣ ನಿರ್ಮೂಲನಕ್ಕೆ ಕ್ರಮಕೈಗೊಳ್ಳಲು ಆದ ಒಂದು ಮುಖ್ಯ ತೊಡಕು ಎಂದು ವರದಿಯಲ್ಲಿ ಒಪ್ಪಿಕೊಳ್ಳಲಾಗಿತ್ತು. ಏಕೆಂದರೆ ಈ ಅಧಿಕಾರಿಗಳ ಒಂದು ಗ್ರಾಮದ ಪರಿಚಯ ಮೇಲ್ವರ್ಗಕ್ಕೆ ಸೇರಿದ ಹೆಚ್ಚಾಗಿ ಭೂ ಒಡೆಯ. ಯಜಮಾನನ ಮೂಲಕವೇ ಆಗುತ್ತಿದ್ದು, ಅಂತಹ ಸಂದರ್ಭದಲ್ಲಿ ಈ ಮಾಲೀಕರು ಹಳ್ಳಿಯ ಮನುಷ್ಯ ಮನುಷ್ಯರ ನಡುವಿನ ಸಾಮಾಜಿಕ, ಆರ್ಥಿಕ ಸಂಬಂಧದ ನಿಜಾಂಶವನ್ನು ಅವರಿಗೆ ವರದಿ ಮಾಡುತ್ತಿರಲಿಲ್ಲ. ಹಾಗಾಗಿ, ಕಂಪನಿಗೂ ಈ ಪದ್ಧತಿಯ ನಿರ್ಮೂಲನಕ್ಕೆ ಸಮರ್ಪಕವಾದ ಸುಧಾರಣೆಯನ್ನು ರಚಿಸಲು ಅಸಾಧ್ಯವಾಗಬಹುದೆಂದು ಕಂದಾಯ ಇಲಾಖೆ ತನ್ನ ವರದಿಯಲ್ಲಿ ಸಮರ್ಥಿಸಿಕೊಂಡಿತ್ತು.[7]

ತುಳುನಾಡಿನಲ್ಲಿ ಪ್ರಮುಖವಾಗಿ ಪ್ರಚಲಿತವಿದ್ದಂತಹ ಗುಲಾಮರು ಭೂವ್ಯವಸ್ಥೆಗೆ ಅಂಟಿಕೊಂಡಿದ್ದರು. ಈ ರೀತಿಯ ಗುಲಾಮರಿಗೆ ಜಮೀನ್ದಾರರು ನೀಡುತ್ತಿದ್ದ ಅವಮಾನಗಳು ಕಿರುಕುಳಗಳು ಗಮನಾರ್ಹವಾಗಿದ್ದು, ಅದರ ಕುರಿತು ವಿಪುಲ ಮಾಹಿತಿಗಳು ಬ್ರಿಟಿಷ್‌ ಅಧಿಕಾರಿಗಳ ವರದಿಗಳಲ್ಲಿ ಲಭ್ಯವಿದೆ. ೧೮೦೧ರಲ್ಲಿ ತುಳುನಾಡಿನಲ್ಲಿ ಕಲೆಕ್ಟರ್ ಆಗಿ ಸೇವೆಯಲ್ಲಿದ್ದ ರವೆನ್ ಶಾಹ ಗುಲಾಮಗಿರಿ ಪದ್ಧತಿಯ ತೀವ್ರತೆಯನ್ನು ಗಮನಿಸಿ ಈ ವರ್ಗವನ್ನು ಸುಧಾರಣೆಗೊಳಿಸುವ ಕುರಿತು ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಅವನ ದೃಷ್ಟಿಯಲ್ಲಿ ಗುಲಾಮಗಿರಿಯ ಬಗ್ಗೆ, ಅದರ ಕುಂದು ಕೊರತೆಗಳ ಬಗ್ಗೆ ಅರಿವು ಮೂಡಿಸಿದಲ್ಲಿ ಹಾಗೂ ತಮ್ಮ ಮಾಲೀಕರ ಕಪಿಮುಷ್ಟಿಯಿಂದ ತಾವೇ ಬಿಡಿಸಿಕೊಂಡು ಓಡಿ ಹೋಗಲು ಬ್ರಿಟಿಷ್‌ಸರಕಾರ ಪ್ರೋತ್ಸಾಹ ನೀಡಿದಲ್ಲಿ ಅದು ತುಳುನಾಡಿನ ಉದ್ದಗಲಕ್ಕೂ ಅಸ್ತಿತ್ವದಲ್ಲಿದ್ದಂತಹ ಸಾಂಪ್ರದಾಯಿಕ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಅಲ್ಲದೆ, ಈ ರೀತಿಯ ಪ್ರಯತ್ನಗಳಿಂದ ಅವರಿಗೆ ಹರಿದುಬರುತ್ತಿದ್ದ ಕಂದಾಯಕ್ಕೂ ಸಂಚಕಾರ ಬರಬಹುದು. ಹೆಚ್ಚಾಗಿ ಅದೇ ಮಾಲೀಕರು ಬ್ರಿಟಿಷ್‌ ಸರಕಾರಕ್ಕೆ ಕಂದಾಯ ನೀಡುವವರಾಗಿರುವುದರಿಂದ, ಅವರು ಅನುಸರಿಸಿಕೊಂಡು ಸಂಪ್ರದಾಯದಲ್ಲಿ ಬ್ರಿಟೀಷ್‌ ಸುಧಾರಕರು ಪ್ರವೇಶ ಮಾಡಿದರೆ, ಅದರಿಂದ ದುಷ್ಪರಿಣಾಮಗಳೇ ಹೆಚ್ಚು ಎಂದು ರವೆನ್‌ಶಾಹ ಅಭಿಪ್ರಾಯಪಡುತ್ತಾನೆ. ಅದೊಂದು ಇಲ್ಲಿಯ ಕಾನೂನಿನ ಚೌಕಟ್ಟಿನೊಳಗೆ ಬೆಳೆಸಿಕೊಂಡ ಪದ್ಧತಿಯಾಗಿರುವುದರಿಂದ ಅದನ್ನು ಮುಟ್ಟುವ ಅಧಿಕಾರ ನಮಗಿಲ್ಲ. ಒಂದು ವೇಳೆ ಹಸ್ತಕ್ಷೇಪವನ್ನು ಮಾಡಿದಲ್ಲಿ ತಮಗೆ ವಿಧೇಯರಾಗಿರುವ ಈ ಎಲ್ಲಾ ಮಾಲೀಕರನ್ನೇ ಕೆರಳಿಸಿದಂತಾಗುತ್ತದೆ ಎಂದು ಸಮರ್ಥಿಸಿಕೊಳ್ಳುತ್ತಾನೆ.[8] ಹಾಗಾಗಿ ಭೂಮಿಗೆ ಅಂಟಿಕೊಂಡಿದ್ದ ಈ ಗುಲಾಮತನವನ್ನು ಯಥಾವತ್ತಾಗಿ ಮುಂದುವರಿಸಲು ಪ್ರೋತ್ಸಾಹಿಸುವುದು ಒಳ್ಳೆಯದೇ ಹೊರತು, ಅದರ ನಿರ್ಮೂಲನವನ್ನು ಬೆಂಬಲಿಸುವುದಲ್ಲ ಎಂದು ಗ್ರಹಿಸಲಾಯಿತು. ಹಾಗೇನು ಮಾಡಿದಲ್ಲಿ ಸರಕಾರದ ಬೊಕ್ಕಸಕ್ಕೆ ನಷ್ಟು ಉಂಟಾಗುವುದು ಎಂದು ಹೇಳಲಾಯಿತು. ಈ ರೀತಿಯ ಆಲೋಚನೆ ಕೇವಲ ತುಳುನಾಡಿಗೆ ಸೀಮಿತವಾಗುವುದಿಲ್ಲ. ಅಂತಹ ನಿರ್ಧಾರಗಳ ಪರಿಣಾಮ ಇಡೀ ಭಾರತದಲ್ಲಿರುವ  ಹಲವು ಭಾಗಗಳಲ್ಲಿ ಇದರ ಪ್ರಭಾವ ಬೀರಬಹುದೆಂಬ ಉದ್ದೇಶದಿಂದ ಸಂಪ್ರದಾಯದೊಂದಿಗೆ ಬೆಳೆದು ಬಂದ ಗುಲಾಮಗಿರಿ ವ್ಯವಸ್ಥೆಯನ್ನು ನಿರ್ಮೂಲನ ಮಾಡುವುದರ ಬದಲಾಗಿ ಮುಂದುವರಿಸಲು ಅವಕಾಶ ಕಲ್ಪಿಸಿದರು.

ಆದಾಗ್ಯೂ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಬ್ರಿಟಿಷ್‌ ಆಡಳಿತಾಧಿಕಾರಿಗಳಲ್ಲೇ ಹಲವರು ಗುಲಾಮಗಿರಿಯನ್ನು ನಿರ್ಮೂಲನಗೊಳಿಸುವಲ್ಲಿ ಕಾನೂನಿನ ವಿಧ್ಯುಕ್ತ ಜವಾಬ್ದಾರಿಗಳನ್ನು ಬೆಂಬಲಿಸಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಗುಲಾಮಗಿರಿ ನಿರ್ಮೂಲನಾ ಪ್ರಕ್ರಿಯೆಯನ್ನು ಹೃದಯಪೂರ್ವಕವಾಗಿ ಬೆಂಬಲಿಸುತ್ತಾರೆ. ಅಂತಹವರಲ್ಲೂ ಜೆ. ರಿಚಾರ್ಡ್‌ಸನ್‌ರವರು ಪ್ರಮುಖರಾಗಿದ್ದು ಅವರು ಭಾರತದ ಉದ್ದಗಲಕ್ಕೂ ವೃದ್ಧಿಸಿದ ಗುಲಾಮಗಿರಿ ಪದ್ಧತಿಯನ್ನು ಕಟುವಾದ ಭಾಷೆಯಲ್ಲಿ ಟೀಕಿಸುತ್ತಾರೆ. ಅವರದ್ದೇ ಮಾತಿನಲ್ಲಿ ಹೇಳುವುದಾದರೆ:

The Great author of creation, matter and existence made all men equally free. By that act then can that freedom be forfeited or given up; liberty can be forfeited by no act, that does not militate against the general security and well being of society from which mankind acquires its happiness and protection, Nor has  man more right to sell, or give up the natural freedom of his person that he  has to lay down his natural life at pleasure, much less can be have any title to dispose of the liberty of another, even of this own child or wife. In times of famine some would no doubt perish but those would chiefly be the infirm and the very poor in towns, not the industrious cultivators to whom this properties in villages would have given the necessary good. If slavery had been abolished, the population would have increased much faster among the surviving freemen that it could possibly have increased with a population held in bondage[9]

ಗುಲಾಮಗಿರಿ ಪದ್ಧತಿಯ ಮುಂದುವರಿಕೆಯ ವಿಚಾರವಾಗಿ ಮಾನವ ಧರ್ಮ ಮತ್ತು ಕಾನೂನು ವ್ಯವಸ್ಥೆಗೆ ಸಂಬಂಧವೇ ಇಲ್ಲ ಎನ್ನುವುದಕ್ಕೆ ೧೮೪೧ ರಲ್ಲಿ ಉಡುಪಿಯಲ್ಲಿ ಮ್ಯಾಜಿಸ್ಟ್ರೇಟ್‌ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಚ್‌. ಎಂ. ಬ್ಲೇರ್ ರವರು ಬರೆದ  ಒಂದು ಭಾಗವನ್ನು ಇಲ್ಲಿ ಉಲ್ಲೇಖಿಸುವುದರಲ್ಲಿ ಔಚಿತ್ಯವಿದೆ:

The existing system of slavery in Kanara, having been recognised by government, it would seen absolutely that the right of the master to the services of his slave should be protected by law, and as difference of opinion seems to exist among the Mohammedan Law Officers as to whether a slave, having deserted his master and refusing to return to him, is liable to punishment by the Criminal Courts, it is desirable  that a definite rule should be established on this point, as any uncertainty on this question must seriously affect the landed interest of this province and produce a corresponding influence on the government revenue.[10]

ಕರಾವಳಿ ಪ್ರದೇಶದ ಗುಲಾಮಗಿರಿಯ ಗುಣಲಕ್ಷಣಗಳ ಬಗ್ಗೆ ಬ್ರಿಟೀಷ್‌ಅಧಿಕಾರಿ ಥಾಮಸ್ ಬಾಬರ್ ಘೋಷಿಸುವಂತೆ, ಕೆಲವು ನೈಸರ್ಗಿಕ ಅಂಶಗಳು ಗುಲಾಮರ ಹೀನಾಯ ಸ್ಥಿತಿಗೆ ಕಾರಣವಾಗುತ್ತದೆ. ಹಾಗೂ ಇದು ಇವರನ್ನು ಮತ್ತಷ್ಟು ಕೆಳ ಮಟ್ಟಕ್ಕೆ ತಳ್ಳುತ್ತದೆ ಮತ್ತು ಅವಲಂಬನೆಗೊಳಪಡಿಸುತ್ತದೆ. ಇದಕ್ಕೆ ಆಧಾರವಾಗಿ ಕೆನರಾದಲ್ಲಿ ೧೮೨೧ರಲ್ಲಿ ನಡೆದ ಒಂದು ಘಟನೆಯನ್ನು ಬಾಬರ್ನ ವರದಿಯಲ್ಲಿ ಉಲ್ಲೇಖವಾಗಿದ್ದು, ಅದನ್ನು ಉದಾಹರಣೆಯಾಗಿ ಇಲ್ಲಿ ನೀಡಬಹುದು. ಮಲೆಕುಡಿಯ ಎಂಬ ಒಂದು ಜನಾಂಗಕ್ಕೆ ಸೇರಿದ ಕೆಲವು ಉಗ್ರ ಗುಲಾಮರ ಮೇಲೆ ಮೂರು ಮಂದಿ ಪ್ರವಾಸಿಗರನ್ನು ಬರ್ಬರವಾಗಿ ಕೊಲೆ ಮಾಡಿದರೆಂಬ ಆರೋಪ ಹೊರಿಸಲಾಯಿತು. ಕೊಲೆಯಾದವರು ಒಂದು ದಂಪತಿಗಳು ಮತ್ತು ಅವರ ಮಗು. ಅವರು ಮೈಸೂರಿನಿಂದ ಧರ್ಮಸ್ಥಳಕ್ಕೆ ವಿಶೇಷ ಹಬ್ಬದ ಆಚರಣೆಯನ್ನು ವೀಕ್ಷಿಸಲು ಪ್ರವಾಸಿಗರಾಗಿ ಆ ಧಾರಿಯಲ್ಲಿ ಬರುತ್ತಿದ್ದು, ಈ ಮಲೆಕುಡಿಯ ಜನರನ್ನು ಭೇಟಿಯಾಗಿದ್ದರು. ಅವರು ಧರ್ಮಸ್ಥಳದತ್ತ ದಾರಿ ತೋರಿಸುವ ನೆಪ ಹೇಳಿ, ಕಾಡಿನೊಳಗೆ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು, ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇಂತಹ ಕೃತ್ಯದಲ್ಲಿ ಪಾಲ್ಗೊಂಡರೆ, ಅದರ ಪರಿಣಾಮಗಳೇನು ಎಂಬುದರ ಬಗ್ಗೆ ಅರಿವಿಲ್ಲದಷ್ಟು ಮೂಢರು ಈ ಗುಲಾಮರು. ನೈತಿಕವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಅವರಿಗೇನು ಶಿಕ್ಷೆ ಆಗಬಹುದೆಂಬ ಪ್ರಜ್ಞೆ ಇಲ್ಲದಂತಹವರು ಈ ಗುಲಾಮ ಸಮುದಾಯದವರು.[11] ಇದು ಅವರ ಅಮಾಯಕತೆ ಹಾಗೂ ಅನಾಗರೀಕತೆಯನ್ನು ಸೂಚಿಸುತ್ತದೆ ಎಂದು ಬಾಬರ್ ಅಭಿಪ್ರಾಯಪಡುತ್ತಾನೆ.

ಜಾತಿ ಪದ್ಧತಿಯ ಕಠೋರ ಆಚರಣೆಗಳಿಂದ ಕೂಡ ಹೃದಯವಿಲ್ಲದ, ಅನುಕಂಪವಿಲ್ಲದ ಯಜಮಾನರು ಗುಲಾಮರನ್ನು ಅಮಾನವೀಯವಾಗಿ ನೋಡಲು ಅವಕಾಶಗಳನ್ನು ಕಲ್ಪಿಸುತ್ತವೆ. ಕೆನರಾದಲ್ಲಿ ಕಲೆಕ್ಟರಾಗಿದ್ದಾಗ ಸಮೀಕ್ಷೆ ನಡೆಸಿದ ಟಿ. ಹ್ಯಾರಿಸನ್‌ರವರ ವರದಿಯಂತೆ ಕರಾವಳಿ ಪ್ರದೇಶದಲ್ಲಿ ಒಬ್ಬ ಯಜಮಾನನಿಗೆ ಆಸ್ತಿ ಇರಲಿ ಇಲ್ಲದೆ ಇರಲಿ, ಗುಲಾಮರನ್ನು ತನ್ನ ಅಧೀನಕ್ಕೆ ಒಳಪಡಿಸಿಕೊಂಡು ತನಗೆ ಬೇಕಾದ ಹಾಗೆ ಬಳಸಿಕೊಳ್ಳುವುದು, ಮಾರಾಟ ಮಾಡುವುದು ಅವನಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಮೌಲ್ಯಗಳು ಅಥವಾ ಒಬ್ಬ ಗುಲಾಮನಿಗೆ ಕಟ್ಟುವ ಬೆಲೆಯು ಮಾರುವವನ ಮತ್ತು ಕೊಳ್ಳುವವನ ನಡುವಿನ ಒಪ್ಪಂದದಂತೆ ನಡೆಯುತ್ತಿದ್ದು, ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವ್ಯತ್ಯಾಸಗಳಿದ್ದವು. ಇಲ್ಲಿ ಗುಲಾಮನ ಒಪ್ಪಿಗೆ ಪಡೆಯುವ ಆಲೋಚನೆಯ ಇರುತ್ತಿರಲಿಲ್ಲ. ಅಂದರೆ ಒಂದು ಕುಟುಂಬದ ಗುಲಾಮರಲ್ಲಿ ಯಜಮಾನ ತನಗಿಷ್ಟ ಬಂದಂತೆ ಗಂಡನನ್ನು ಒಂದು ಯಜಮಾನನಿಗೆ, ಹೆಂಡತಿಯನ್ನು ಇನ್ನೊಂದು ಯಜಮಾನನಿಗೆ ಮತ್ತು ಮಕ್ಕಳನ್ನು ಇನ್ನೊಬ್ಬನಿಗೆ ಮಾರಾಟ ಮಾಡುವ ಅಮಾನವೀಯ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಒಬ್ಬ ಬಲಿಷ್ಠ ಯುವಕನ ಮೌಲ್ಯ ಸುಮಾರು ೧೨ ರೂಪಾಯಿಯಿಂದ ೨೬ ರೂಪಾಯಿಯವರೆಗೆ ಇತ್ತು. ಮಹಿಳೆಯರಿಗೆ ೧೦ ರಿಂದ ೨೪ರವರೆಗೆ ಮತ್ತು ಮಕ್ಕಳಿಗೆ ಎಂದೂ ೪ ರೂಪಾಯಿಗಿಂತ ಕೆಳಗಿನ ಬೆಲೆ ಇರುತ್ತಿರಲಿಲ್ಲ.[12] ಗುಲಾಮಗಿರಿ ಒಂದು ಸಾಮಾಜಿಕ ಪಿಡುಗು ಎಂದು ಪರಿಗಣಿಸಿ ನ್ಯಾಯವಾದಿ ಹಾಗೂ ದಂಡಾಧಿಕಾರಿಯಾಗಿದ್ದ ರಿಚರ್ಡ್‌ಸನ್‌ರವರು ಹೀಗೆ ಹೇಳುತ್ತಾರೆ ‘Slavery, while it existed, was all the same of such a nature that it checked the improvement of human character and the develpment of human society, was productive of many concomitant evils, and impeded all other good influences at work from being effectual’.[13] ಈ ದಾಖಲೆಗಳನ್ನು ಆಧರಿಸಿ, ಕೃಷಿ ಕಾರ್ಮಿಕರು, ಗುಲಾಮರು ಕರಾವಳಿ ಪ್ರದೇಶದ ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಪ್ರದೇಶದ ಉದ್ದಗಲ್ಲಕ್ಕೂ ಹಂಚಿಹೋಗಿತ್ತು ಎಂಬುದನ್ನು  ತಿಳಿಯಬಹುದು. ಇದು ೧೯ನೇ ಶತಮಾನದ ಆರಂಭದಲ್ಲಿ ಕಂಡುಬರುವ ನೈಜ ಚಿತ್ರಣ. ಅವರಿಗೆ ನೀಡುವ ವೇತನ ಅತ್ಯಂತ ಕಡಿಮೆಯಾಗಿದ್ದು, ಶೋಷಣೆಗೊಳಪಟ್ಟಿದ್ದರು. ಭೂ ಉಳುಮೆ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಸಮಾಜದ ಮುಖ್ಯವಾಹಿನಿಗೆ ಈ ಗುಲಾಮ ಸಮುದಾಯದಿಂದ ಬಂದ ನಿರ್ದಿಷ್ಟ ಕೊಡುಗೆಯನ್ನು ಕಂಡುಕೊಳ್ಳುವ ಅಸಾಧ್ಯ. ಭಾರತದಲ್ಲಿ ಸಾಮಾನ್ಯವಾಗಿ ಗುಲಾಮಗಿರಿ ಹಲವಾರು ಪ್ರತಿಷ್ಠೆಯ ಅಂಶಗಳನ್ನು ಯಜಮಾನನ ದೃಷ್ಟಿಯಿಂದ ಹೆಚ್ಚು ಪ್ರಚಲಿತವಿದ್ದು, ಇದರ ಪ್ರಭಾವವು ತುಳುನಾಡಿನಲ್ಲಿ ವೃದ್ಧಿಸಿದ್ದುದು ಸಹಜವೇ.[14] ಕೆಲವು ಬರಹಗಾರರ ದೃಷ್ಟಿಯಲ್ಲಿ ಭೂರಹಿತ ಮತ್ತು ಕಡಿಮೆ ವೇತನ ಪಡೆಯುವ ಕೃಷಿ ಕೂಲಿ ಕಾರ್ಮಿಕರು ಒಂದು ವರ್ಗವಾಗಿ ಉಗಮವಾಗಲೂ ತೆರಿಗೆ ವಸೂಲಿ ಕ್ರಮದಲ್ಲಿ ಬ್ರಿಟಿಷ್‌ ಅಧಿಕಾರಿಗಳು ಅಳವಡಿಸಿಕೊಂಡ ಸಾಂಸ್ಥಿಕ ಮಟ್ಟದ ಬದಲಾವಣೆಗಳು ಕಾರಣವೆಂದು ಅಭಿಪ್ರಾಯ ಪಡಲಾಗಿದೆ.[15] ಈ ನಿಟ್ಟಿನಲ್ಲಿ ಬ್ರಿಟಿಷರ ಆಡಳಿತ, ಕೃಷಿ ವ್ಯವಸ್ಥೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿರುವುದರಲ್ಲಿ ಸಂಶಯವೇ ಇಲ್ಲ. ಆದರೆ, ಅವರೇ ಭೂ ರಹಿತ ಕೃಷಿ ಕೂಲಿ ಕಾರ್ಮಿಕರನ್ನು ಹುಟ್ಟು ಹಾಕಿದವರೆಂದು ಹೇಳುವುದು ತಪ್ಪಾಗುತ್ತದೆ. ಬ್ರಿಟಿಷರು ನಿಜವಾಗಿ ಇಂತಹ ಕರಾಳ ಹೀನ ವ್ಯವಸ್ಥೆಯ ಮುಂದುವರಿಕೆಗೆ ಕಡಿವಾಣ ಹಾಕಲು, ಪೋಲೀಸ್‌ವ್ಯವಸ್ಥೆಯನ್ನು ಜಾಗೃತಗೊಳಿಸಿ,  ಗುಲಾಮಗಿರಿ ಪದ್ಧತಿಯನ್ನು ಪಾಲಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಆರಂಭಿಕ ಪ್ರಯತ್ನ ಮಾಡಿದ್ದರು. ಇದು ಮದ್ರಾಸ್ ಪ್ರೆಸಿಡೆನ್ಸಿಗೆ ಒಳಪಟ್ಟ ಕೆನರಾಕ್ಕೂ ವಿಸ್ತರಿಸಿತ್ತು.[16] ಕೆನರಾದಲ್ಲಿ ಚಾಲ್ತಿಯಲ್ಲಿದ್ದ ಸಂಪ್ರದಾಯದಂತೆ, ಗುಲಾಮನು ಪ್ರಾಣ ಕಳೆದುಕೊಂಡರೆ, ಅವನ ಒಡೆಯ ಎಲ್ಲಿಯೂ ಹೊಣೆಗಾರನಾಗುವುದಿಲ್ಲ.

ಒಡೆಯನೆ, ತನ್ನ ಗುಲಾಮನನ್ನು ಕೊಂದರೂ ಕೇಳುವ ಹಕ್ಕು ಯಾರಿಗೂ ಇರಲಿಲ್ಲ. ಆದರೆ ಬ್ರಿಟಿಷರ ಕಾಲದಲ್ಲಿ ಕಾರಣವಿಲ್ಲದೆ ಒಡೆಯ ತನ್ನ ಗುಲಾಮನನ್ನು ಕೊಂದರೆ, ಅಂತಹ ಸಂದರ್ಭದಲ್ಲಿ ಅವನು ಶಿಕ್ಷಿ ಅನುಭವಿಸಬೇಕಾಗಿತ್ತು. ಈ ರೀತಿಯ ಸುಧಾರಣಾತ್ಮಕ ಕಾನೂನುಗಳ ಅನುಷ್ಠಾನದಿಂದ ೧೯ನೇ ಶತಮಾನದ ಮಧ್ಯಭಾಗದಲ್ಲಿ ಅನೇಕ ಗುಲಾಮರು ತಮ್ಮ ಒಡೆಯನಿಂದ ಬಿಡುಗಡೆಗೊಂಡ ನಿದರ್ಶನಗಳು ಬಹಳಷ್ಟಿವೆ ಮತ್ತು ಒಡೆಯರು ವಿನಾಕಾರಣ ಗುಲಾಮರಿಗೆ ಕಿರುಕುಳ ನೀಡಿದ್ದಾಗ ಅವರಿಗೆ ಶಿಕ್ಷೆ ಆಗಿರುವ ಘಟನೆಗಳು ಇವೆ.[17]

ದುರಂತವೆಂದರೆ, ರಿಚರ್ಡ್‌ಸನ್‌, ಹ್ಯಾರಿಂಗ್ಟನ್ ಮತ್ತು ಬಾಬರ್ ನಂತರ ಅಧಿಕಾರಿಗಳು ವ್ಯಕ್ತಪಡಿಸಿದ್ದ ಉದಾತ್ತ ಭಾವನೆಗಳನ್ನು ಎಲ್ಲಾ ಬ್ರಿಟಿಷ್ ಅಧಿಕಾರಿಗಳು ಹೊಂದಿರಲಿಲ್ಲ. ಗುಲಮಗಿರಿಯನ್ನು ಬೆಂಬಲಿಸುವ ಅನೇಕರ ದೃಷ್ಟಿಯಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದ ಗುಲಾಮಗಿರಿ ಅತ್ಯಂತ ಮೃದುವಾದುದು ಎಂಬುದು ವೆಸ್ಟ್‌ಇಂಡೀಸ್‌ನಲ್ಲಿರುವ ಗುಲಾಮತನದ ಅಸ್ತಿತ್ವಕ್ಕೆ ಹೋಲಿಸಿದರೆ ತಿಳಿಯುತ್ತದೆ ಎಂದು ಪ್ರತಿಪಾದಿಸುತ್ತಾರೆ. ಇನ್ನು ಕೆಲವರು ಮಾಲೀಕರು ತಮ್ಮ ಗುಲಾಮರನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಿದ್ದು, ಅವರನ್ನು ತಮ್ಮ ಕುಟುಂಬದ ಸದಸ್ಯರೆಂದೇ ಭಾವಿಸಿದ್ದರು ಎಂದು ಹೇಳುತ್ತಾರೆ. ಮಾತ್ರವಲ್ಲ ಹೆಚ್ಚಿನ ಸಂದರ್ಭದಲ್ಲಿ ಅವರ ಮದುವೆ ಖರ್ಚನ್ನು ಮಾಲೀಕರೇ ನೋಡಿಕೊಳ್ಳುತ್ತಿದ್ದು, ಗುಲಾಮರು ಒಟ್ಟಿನಲ್ಲಿ ಸಂತೋಷದ ಜೀವನ ನಡೆಸುತ್ತಿದ್ದರೆಂದು ತಿಳಿಸುತ್ತಾರೆ.

‘ಈಸ್ಟ್‌ ಇಂಡಿಯಾ ಸ್ಲೇವರಿ’ ಎಂಬ ಒಂದು ಸಂಪುಟದಲ್ಲಿ ತುಳುನಾಡಿನಲ್ಲಿ ನಡೆದ ಒಂದು ಘಟನೆಯನ್ನು ಉಲ್ಲೇಖಿಸಿ, ಒಬ್ಬ ಮಾಲೀಕ ತನ್ನ ಗುಲಾಮನಿಗೆ ಎಷ್ಟು ಹಿಂಸೆ ಕೊಡಬಲ್ಲ ಎಂಬುದನ್ನು ವಿವರಿಸುತ್ತದೆ. ಕೆನರಾದ ನ್ಯಾಯಾಲಾಯ ದಂಡಾಧಿಕಾರಿಯಾದ ಮಿಸ್ಟರ್ ವಾರ್ಡನ್, ಎರಡು ಕೇಸ್‌ಗಳನ್ನು ವಿಚಾರಣೆಗೊಳಪಡಿಸುತ್ತಾರೆ. ಎರಡೂ ಕೇಸ್‌ಗಳಲ್ಲಿ ಮಾಲೀಕ, ತನ್ನ ಗುಲಮರನ್ನು ಚಿತ್ರಹಿಂಸೆಗೆ ಒಳಪಡಿಸಿ ಹತ್ಯೆಗೈದಿದ್ದಾರೆ. ಈ ಘಟನೆ ನಡೆದಿರುವುದು ಮಂಗಳೂರಿನಲ್ಲಿ. ವಾರ್ಡನ್ ಈ ಕೇಸ್‌ಗಳನ್ನು ವಿಚಾರಿಸಿ, ಗುಲಾಮ ಪದ್ಧತಿಯ ತೀವ್ರತೆಯನ್ನು ಮತ್ತು ಇಲ್ಲಿನ ಸಂಪ್ರದಾಯದೊಂದಿಗೆ ಆ ಸಂಸ್ಥೆ ಇಟ್ಟ ಸಂಬಂಧ ಕುರಿತು ಸರಕಾರಕ್ಕೆ ಅಭಿಪ್ರಾಯ ತಿಳಿಸಬೇಕಿತ್ತು. ಅವನ ವಿಚಾರಣೆಯ ಪ್ರಕಾರ ಒಂದು ಕೇಸಿನಲ್ಲಿ ಒಂದು ಮಾಲೀಕನ ಗುಲಾಮನು ಇನ್ನೊಂದು ಮಾಲೀಕನ ಗುಲಾಮ ಮಹಿಳೆಯನ್ನು ಮದುವೆಯಾಗಿದ್ದನು. ಮದುವೆ ಆದ ನಂತರ ಈ ಎರಡೂ ಮಾಡಲೀಕರು ದಂಪತಿಗಳನ್ನು ಒಟ್ಟಿಗೆ ಜೀವಿಸಲು ಅವಕಾಶ ನೀಡದ ಕಾರಣ ಇನ್ನೊಂದು ಮಾಲಿಕನ ಜಮೀನಿನಲ್ಲಿದುಡಿಯುತ್ತಿದ್ದ ತನ್ನ ಹೆಂಡತಿಯೊಂದಿಗೆ ಅವನ ಮಾಲೀಕನಿಗೆ ಹೇಳದೆ ಕೆಲವು ದಿನಗಳನ್ನು ಕಳೆದಿದ್ದು,[18] ಕೆಲಸಕ್ಕೂ ಹಾಜರಾಗಿರಲಿಲ್ಲ. ಅದಕ್ಕಾಗಿ ಮಾಲೀಕನು ಈ ಗುಲಾಮನನ್ನು ಹಿಂಸಿಸಿ ಕೊಂದು ಬಿಟ್ಟಿದ್ದನು. ಹೆಂಡತಿಯ ಮಾಲೀಕನು ತನ್ನ ಗಂಡನೊಂದಿಗೆ ಇರಲು ಅವಕಾಶ ನೀಡದ ಕಾರಣ ಇದು ನಡೆದಿರುವುದು. ಇದನ್ನು ವಿಚಾರಣೆ ಮಾಡಿದ ಮಿಸ್ಟರ್ ವಾರ್ಡನ್, ಸರಕಾರಕ್ಕೆ ಹೀಗೆ ಸೂಚನೆ ನೀಡುತ್ತಾನೆ. ‘It was usual for the female slave to reside with her husband, suggested that under the authority of government, the obligation was to be enforced upon owners to allow their married slaves to live together’.[19] ಆದರೆ ಸರಕಾರ ಮಾತ್ರ ಇದೊಂದು ಸ್ಥಳೀಯ ಮಟ್ಟದಲ್ಲಿ ಮಾಲೀಕರು ಪಾಲಿಸಿಕೊಂಡ ವ್ಯವಸ್ಥೆ ಆದುದರಿಂದ, ಸರಕಾರವಾಗಲೀ, ಸರಕಾರದ ಪ್ರತಿನಿಧಿಯಾಗಿ ಮಂಗಳೂರಿನಲ್ಲಿ ಆಡಳಿತ ನೋಡಿಕೊಳ್ಳುವ ಅಧಿಕಾರಿಗಾಗಲಿ ವಾರ್ಡನ್‌ರವರು ಸೂಚಿಸಿದ ಸಲಹೆಯನ್ನು ಅನುಷ್ಠಾನಗೊಳಿಸುವ ಪ್ರಯತ್ನ ಮಾಡಬೇಕಾಗಿಲ್ಲ ಎಂದು ತೀರ್ಮಾನ ನೀಡಿತು.[20] ಹಾಗಾಗಿ ಮದ್ರಾಸ್ ಸರಕಾರಕ್ಕೆ ದಂಡಾಧಿಕಾರಿ ಮಿಸ್ಟರ್ ವಾರ್ಡನ್‌ ಬರೆದ ಪತ್ರ ಕಡತವನ್ನು ಸೇರಿತೆ ವಿನಾ ಅದು ಕಾನೂನು ಆಗಿ ಪರಿವರ್ತನೆಗೊಂಡಿರಲಿಲ್ಲ.

ಗುಲಾಮಗಿರಿ ಪದ್ಧತಿಯ ನಿಮೂಲನಕ್ಕೆ ಬ್ರಿಟಿಷರ ಪ್ರಯತ್ನ

೧೮೧೮ರಲ್ಲಿ ಮದ್ರಾಸ್‌ ಕಂದಾಯ ಇಲಾಖೆ, ಕರಾವಳಿ ಪ್ರದೇಶದ ಕೃಷಿಕೂಲಿ ಕಾರ್ಮಿಕರು ಮತ್ತು ಗುಲಾಮರಾಗಿ ಸೇವೆಯಲ್ಲಿದ್ದವರ ಸ್ಥಿತಿಗತಿಗಳಲ್ಲಿ ಬದಲಾವಣೆ ತರಲು ಹೊಸ ಚರ್ಚೆಯನ್ನು ಆರಂಭಿಸಿ ಈ ಸಾಮಾಜಿಕ ಪಿಡುಗನ್ನು ನಿರ್ಮೂಲನಗೊಳಿಸಲು ಕಾನೂನಿನ ಪ್ರಕಾರ ಸಾಧ್ಯವೇ ಎಂಬುದನ್ನು ಗಂಭೀರವಾಗಿ ಪರಿಗಣಿಸಿತು. ಈ ನಿಟ್ಟಿನಲ್ಲಿ ಹಲವು ಬ್ರಿಟೀಷ್ ಆಡಳಿತಾಧಿಕಾರಿಗಳು ಆಸಕ್ತಿಯನ್ನು ತೋರಿಸಿದರೂ, ಮೇಲಾಧಿಕಾರಿಗಳು ಆವರ ಸಲಹೆ ಸೂಚನೆಗಳನ್ನು ಕಾರ್ಯ ರೂಪಕ್ಕೆ ತರಲು ಯಾವುಧೆ ಆಸಕ್ತಿಯನ್ನು ತೋರಿಸಲಿಲ್ಲ. ಇಂಗ್ಲೆಂಡಿನಲ್ಲಿರುವ ಬ್ರಿಟೀಷ್‌ಆಡಳಿತ ಭಾರತದಲ್ಲಿರುವ ಈ ಸಾಮಾಜಿಕ ಸಮಸ್ಯೆಯನ್ನು ಸುಧಾರಿಸಲು ಕೈಗೆತ್ತಿಕೊಂಡ ಕಾರಣ ಭಾರತದಲ್ಲಿ  ಬ್ರಿಟಿಷ್‌ಆಡಳಿತ ಒಂದಷ್ಟು ಪ್ರಯತ್ನ ಮಾಡಲಾರಂಭಿಸಿತು. ಈಸ್ಟ್‌ ಇಂಡಿಯಾ ಚಾರ್ಟರ್ ಮುಂದುವರಿಕೆಯ ವಿಷಯ ೧೮೩೩ರಲ್ಲಿ ಬಂದಾಗ, ಬೋರ್ಡ್‌ ಆಫ್‌ ಕಂಟ್ರೋಲ್‌ನ ಅಧ್ಯಕ್ಷ ಚಾರ್ಲ್ಸ್‌ ಗ್ರಾಂಟ್‌ ಮತ್ತು ಕಾರ್ಯದರ್ಶಿ ಥೋಮಸ್ ಬ್ಯಾಬಿಂಗ್ಟನ್ ಮಕಾಲೆ ಚಾರ್ಟರ್ ಬಿಲ್‌ನಲ್ಲಿ ಗುಲಾಮ ಪದ್ಧತಿಯನ್ನು ನಿರ್ಮೂಲನ ಮಾಡಲು ನಾಲ್ಕು ವರ್ಷಗಳಲ್ಲಿ ಒಂದು ಯೋಜನೆ ರೂಪಿಸಬೇಕೆಂದು ಶರತ್ತು ಹಾಕಿದರು. ಕೋರ್ಟ್‌ಆಪ್‌ಡೈರೆಕ್ಟರ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿ, ಭಾರತಿದಲ್ಲಿರುವ ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.,

೧೮೪೩[21] ಐದನೇ ಕಾಯ್ದೆಯನ್ನು ಅನುಷ್ಠಾನಗೊಳಿಸಿ ಕಾನೂನಿನ ಪ್ರಕಾರ ಗುಲಾಮಗಿರಿಯನ್ನು ನಿರ್ಮೂಲನಗೊಳಿಸಲಾಯಿತು. ಇದರ ಪ್ರಕಾರ ಬ್ರಿಟಿಷ್‌ ನ್ಯಾಯಾಂಗವು ಗುಲಾಮರ ಸೇವೆಯನ್ನು ಪಡೆಯುವ ಹಕ್ಕು ಜಮೀನ್ದಾರರಿಗಿಲ್ಲ ಎಂದು ಎತ್ತಿ ಹಿಡಿಯಿತು. ೧೮೬೧ರಲ್ಲಿ ಪೀನಲ್ ಕೋಡನ್ನು ಪೋಷಿಸಿ, ಗುಲಾಮನಾಗಿ ಸೇವೆಯಲ್ಲಿದ್ದವರು ಶಿಕ್ಷೆಗೆ ಅರ್ಹರೆಂದು ಪರಿಗಣಿಸಿತು. ೧೮೫೫ ಮತ್ತು ೧೮೫೬ರಲ್ಲಿ  ಮದ್ರಾಸ್‌ ಸರಕಾರ ಕರಾವಳಿ ಕರ್ನಾಟಕದಲ್ಲಿ ೧೮೪೩ ಗುಲಾಮಗಿರಿ ನಿರ್ಮೂಲನ ಕಾಯ್ದೆಯ ಪರಿಣಾಮವನ್ನು ವಿಚಾರಣೆ ಮಾಡಿತು. ಆಗ ಮದ್ರಾಸ್‌ನಲ್ಲಿ ಗರ್ವನರ್ ಆಗಿ ಲಾರ್ಡ್‌‌ ಹ್ಯಾರೀಸ್ ಅಧಿಕಾರದಲ್ಲಿದ್ದು, ಉತ್ಸಾಹದಿಂದ ಕರಾವಳಿ ಜಿಲ್ಲೆಗಳಿಂದ ಗುಲಾಮಗಿರಿಯನ್ನು ಸಂಪೂರ್ಣ ನಿರ್ಮೂಲನ ಮಾಡಬೇಕೆಂಬ ಯೋಜನೆ ಇಟ್ಟುಕೊಂಡ ಕಾರಣ ೧೮೪೩ರ ಕಾಯ್ದೆಯ ಪರಿಣಾಮಗಳನ್ನು ಅತೀ ಶೀರ್ಘವಾಗಿ ವರದಿ ಮೂಲಕ ಸಲ್ಲಿಸಲು ಕೋರಿದ್ದನು.

ಮೇ ೧೮೫೫ರಲ್ಲಿ ಕೆನರಾದ ಕಲೆಕ್ಟರ್ ವರದಿಯನ್ನು ಕಳುಹಿಸಿ, ಇಲ್ಲಿರುವ ಗುಲಾಮ ಮತ್ತು ಕೃಷಿ ಕೂಲಿಕಾರ್ಮಿಕರ ಸ್ಥಿತಿಗತಿಗಳಲ್ಲಿ ಕಿಂಚಿತ್ತು ಬದಲಾವಣೆ ಕಂಡುಬಂದಿಲ್ಲ ಎಂದು ಉಲ್ಲೇಖಿಸಲಾಗಿತ್ತು. ಅನಾದಿ  ಕಾಲದಿಂದಲೂ ಇರುವ ಪದ್ಧತಿ ಯಥಾವತ್ತಾಗಿ ಮುಂದುವರಿಯಲು ಯಾವುದೇ ಅಡ್ಡಿ ಆತಂಕ ಬಂದಿರಲಿಲ್ಲ.

 

[1] From J. Richardson, Judge and Magistrate of Zillah Bundelerned, dated 23 March 1808, to the Court of Sudder Dewanny and Niyamut Adawlat, Extracts from consultation No. 27 of 15 March 1816, Judicial Criminal proceedings, Bengal Record Department.

[2] From J.G. Ravernshaw, Collector in the Southern Division of Canara, to George Garrow, Acting Secretary  to the Board of Revenue, dated 12 August 1801, Parliamentary papers (judicial) 1828, para 4, p. 550.

[3] Thomas Babes, Appendix to Report from select committee (public) 1832, vol. (E) para 4, P. 426

[4] Colonel James Welsh, Appendix to report from select committee, para 6, P. 449.

[5] Parliamentary papers, 1828, (Judicial), P. 844

[6] Minute of the Board of Revenue – In January 1818, Parliamentary papers, 1828, Vol. XXIV PP. 815-818

[7] Parliamentary papers, Vol. XXIV, OO, 816-17

[8] Extracts of a letter from the Board of Revenue to the Right Honorable Edward Lord Clieve, Governor-in-Council, dated of September 1801, Parliamentary paper (Judicial) 1828, P. 552.

[9] From J. Richardson, Judge and Magistrate of Zillah Bundelcund, dated 23 March 1808, to the court of Sudder Dewanny and Nizyamut Adawlat. Extracts from Consultation No. 27 of 15 March 1816, Judicial criminal proceedings Bengal Record Department.

[10] From H. M. Blair, Magistrate of Udappy, to the Registrar of the Provincial court of circuit, western Division, Tellicery, dated 11 February 1841 Law proceedings 2 August-20 September 1841, Imperial Record Department.

[11] Thomas Bober, Appendix to report from Select committee of the House of Commons, 1832, (public) (E) Para 29, P. 431

[12] From Thomas T. Harries, Collector of Canara to the Board of Revenue, dated 10th July 1819, parliamentary papers (Judicial), 1828, PP. 843-44

[13] From J. Richardson, Judge and Magistrate of Zillah Bundelcund, dated 23 March 1808, to the court of Sudder Dewanny and Niyamut Adawlat, Extracts from consultation No. 27 of 15 march 1816, Judicial criminal proceedings, Bengal Record Department.

[14] The Cambridge History of India explains that slavery usually in a mild form existed on the west coast and in the Tamil country. In the former area there were both predial and  personal slaves… In the later arease the slaves were predial only (apart form a certain amount of slavery ”on contract’) and the institution was already dying out in 1819.

[15] Sre Surendra J. patel, Agricultural labourers in Modern India and Pakistan (Bomboy, 1952) preface and PP. 10, 32, 63-67 and 83-86. Many writers have accepted patel’s ideas. Dharma Kumar  in land and caste in South India (Cambridge, 1965) has tried to criticise the theory but unfortunately her own ideas on agricultural labour and agrasion boundage are none too clean.

[16] Answer of Thomas H. Baber, Appendix to Report from Select Committee, (Public) IV, 1832, para (G) 7,  P. 435.

[17] Ibid, Para (G) 9, PP. 435-36

[18] Extract para 3, from Calender of Trials, first Sessions, Parliamentary Papers (Judicial) 1828, P. 936

[19] Ibid

[20] Ibid, P. 937 – Extract para 3 to the Registrar to the Court of Foujadary Adwalut, Answers of Thomas H. Baber (Public) 1832, P. 439

[21] Act V of 1843 made several provisions, but only one of them was really important. The act decreed:
1) That no slave should be sold by a publish officer to satisfy the degree of a court or in order to settle any claim from rent and revenue (This had been done in Kanara and Malabar) 2) that the states of slavery and nay right arising out of it should no longer be recognised by the British courts and Magistrates; 3) that slaves should be permitted to acquire and inherit property and 4) that assaults against slaves should be punished as if they had been committed against freemen.