ಮೇಲಿನ ಅಂಶಕ್ಕೆ ಸಂಬಂಧಿಸಿದ್ದಾದರೂ, ಪ್ರತ್ಯೇಕ ಪರಿಗಣನೆಗೆ, ಚರ್ಚೆಗೆ ಯೋಗ್ಯವಾದ ಇನ್ನೊಂದು ಅಂಶವೆಂದರೆ ಸಾಪೇಕ್ಷ ಸ್ಥಳನಾಮಗಳು. ಒಂದು ಊರು ಸರ್ವತೋಮುಖವಾಗಿ ಬೆಳೆಯುತ್ತ ಬಂದಂತೆ, ಅದರೆ ಆಡಳಿತದ ಸೌಲಭ್ಯಕ್ಕಾಗಿ ವಿಂಗಡಿಸ ಬೇಕಾಗುತ್ತದೆ. ಈ ವಿಂಗಡನೆ ಅಧಿಕೃತವಾಗಿ ನಡೆಯಬಹುದು; ಇಲ್ಲವೆ ಜನರೇ ಸ್ವತಃ ತಮ್ಮ ಅನುಕೂಲಕ್ಕಾಗಿ ವ್ಯವಹಾರದಲ್ಲಿ ತಂದಿರಬಹುದು. ಮೂಲನಾಮಕ್ಕೆ ಕೆಲವು ಸಾಪೇಕ್ಷ ಪದಗಳನ್ನು ಇಲ್ಲವೆ ಪ್ರತ್ಯಯಗಳನ್ನು (Relative prefixes) ಹಚ್ಚುವುದರಿಂದ ಸಾಮಾನ್ಯವಾಗಿ ಇಂಥ ವಿಭಾಗಗಳು ತಲೆದೋರುತ್ತವೆ. ಅಂಥ ಪ್ರತ್ಯಯಗಳಿಗೆ ಉದಾ : ಹಿರಿ -ಕಿರಿ, ಮೂಡು – ಪಡು, ತೆಂಕು – ಬಡಗು, ಹಳೆ – ಹೊಸ, ನಡು – ಬದಿ, ಇ. ಇವುಗಳಲ್ಲಿ ಸಾಮಾನ್ಯವಾಗಿ ಸ್ಥಳನಾಮದ ಮೂಲಾರ್ಥವು ವಿಸ್ತರಿಸಿಕೊಳ್ಳುವ ವಿಧಾನವನ್ನು ಹೀಗೆ ಗುರುತಿಸಬಹುದು :

ಬಿದಿರೆ (ತುಳು : ಬೆದ್ರ – ಈಗಿನ ಮೂಡಬಿದಿರೆ) : ಕಾರ್ಕಳ ತಾಲೂಕು

ಮೂಡು : ಬಿದಿರೆ (ಯ) ಮೂಡು = ಮೂಡುಬಿದಿರೆ ಬಿದಿರು > ಬೆದ್ರ / ಬಿದಿರೆ (ಕ.)

ಪಡು : ಬಿದಿರೆ (ಯ) ಪಡು : ಪಡುಬಿದಿರೆ

‘ಕಾಲರೇಖೆ’ (Time line)ಯ ರೂಪದಲ್ಲಿ ಈ ನಾಮರೂಪದ ‘ಅರ್ಥಲಂಬನ’ (Expansion of the original sense)ವನ್ನು ಹೀಗೆ ರೇಖಿಸಬಹುದು.

unknown ಬೆದ್ರ (ತು.) w :  ಮೂಡುಬಿದಿರೆ up-to-date

ಬಿ                                 (ವೇಣುಪುರ)
ದಿ         A————>—————>————–B
ರು        Past   ಬಿದುರೆ / ಬಿದಿರೆ        E : ಪಡುಬಿದುರೆ

ಈ ಕಾಲರೇಖೆ (A-B)ಯ ಪ್ರಕಾರ ‘ಮೂಡು’ ಎನ್ನುವುದು ಕೇವಲ ದಿಗ್ವಾಚಕ ಪ್ರತ್ಯಯವಾಗಿರದೆ, ಪ್ರಾಚೀನತೆಯನ್ನೂ ನಿರ್ದೇಶಿಸುತ್ತದೆ : ಮೂಡುಬಿದುರೆಯೇ ಮೂಲಸ್ಥಳ ; ಪಡುಬಿದುರೆ ಅರ್ವಾಚೀನವಾದುದು. ಸಾಮಾನ್ಯವಾಗಿ ತಿಳಿಯಲಾಗಿರುವಂತೆ ಬಿದಿರಿನ ಆಧಿಕ್ಯದಿಂದ ಈ ಹೆಸರು ಹುಟ್ಟಿತೆಂಬುದೂ, ಈಗಲೂ ತುಳು ಭಾಷೆಯಲ್ಲಿ ಮೂಡಬಿದ್ರೆಯ ಹೆಸರು ಹೇಳುವಾಗಲೆಲ್ಲ ಬಳಸುವ ‘ಬೆದ್ರ’ ಎಂಬ ರೂಪವೂ, ಶಾಸನ ಮತ್ತಿತರ ಲಿಖಿತಾಧಾರಗಳಲ್ಲಿ ಕಾಣಿಸಿಕೊಂಡ ವೇಣುಪುರ, ವಂಶಪುರ ಮುಂತಾದ ಪರ್ಯಾಯ ನಾಮಗಳೂ, ಮೂಡಬಿದ್ರೆಯ ಪ್ರಾಚೀನತೆಯನ್ನು ಸಾರುವಂತಿವೆ: ಬಿದಿರಿಗೂ ಆ ಹೆಸರಿಗೂ ಇರುವ ಸಂಬಂಧವನ್ನು ಸಮರ್ಥಿಸುವಂತಿದೆ. ಈ ದಿಗ್ವಾಚಕವು ಇಂಥ ಕಡೆ ಪ್ರಾಚೀನತೆಯನ್ನು ನಿರ್ದೇಶಿಸಲಿಕ್ಕಾಗಿಯೆ ಕಾಣಿಸಿಕೊಳ್ಳುವ ಒಂದು ದೃಷ್ಟಾಂತ

[1] : ಮೂಡಪಣಂಬೂರು ಮತ್ತು ಪಡುಪಣಂಬೂರು. ‘ಪಡುವಪಣಂಬೂರು’, ‘ಮೂಡಪಣಂಬೂರಿ’ಗೆ ಪಡುವಲಾಗಿ ಇಲ್ಲ; ಬಡಗಲಾಗಿದೆ. ಈ ಅರ್ಥವಿಸ್ತಾರವು ‘ಪಣಂಬೂರು’ ಎಂಬ ಊರು ಕಾಲಾಂತರದಲ್ಲಿ ಹಬ್ಬಿಕೊಂಡ ವಿಸ್ತಾರವನ್ನೂ ಸೂಚಿಸುತ್ತದೆ.

ಸ್ಥಳನಾಮಕರಣದಲ್ಲಿನ ಸಾಪೇಕ್ಷ ದೃಷ್ಟಿಯ ಬಗ್ಗೆ ಇನ್ನೊಂದ ಮಾತು. ಒಂದು ಸ್ಥಳನಾಮ ಎತ್ತರದ ಭೂಸ್ಥಿತಿಯನ್ನು ಸೂಚಿಸಬಹುದು. ಆದರೆ ಇಂಥದೇ ಭೂಸ್ಥಿತಿಯುಳ್ಳ ಇನ್ನೊಂದು ಸ್ಥಳಕ್ಕಿಂತ ಇದು ಎಷ್ಟು ಹೆಚ್ಚು ಅಥವಾ ಕಡಿಮೆ ಎತ್ತರವಾಗಿದೆ ಎಂಬ ನಿಷ್ಕೃಷ್ಟ ಅರಿವು ನಮಗಾಗಲಾರದು. ಆಸುಪಾಸಿನ ಊರುಗಳಿಗಿಂತ ಅಥವಾ ಅವುಗಳ ‘ದೃಷ್ಟಿ’ ಯಿಂದ, ಇದು ಸ್ವಲ್ಪ ಮಟ್ಟಿಗೆ ಎತ್ತರವಾಗಿರುತ್ತದೆ ಎಂದಷ್ಟೇ ಹೇಳಬಹುದು. ಹೀಗೆ ಸಮಾನ ಸ್ಥಳನಾಮರೂಪಗಳಲ್ಲಿ ವ್ಯತ್ಯಾಸ ಕಂಡುಬರಬಹುದಾದ್ದು ಅಂಶದಲ್ಲಿಯೇ ಹೊರತು ರೂಪದಲ್ಲಿ ಅಲ್ಲ (difference is one of degrees, not of kind)[2] ಎಂಬುದನ್ನು ಗಟ್ಟಿ ಮಾಡಿಕೊಳ್ಳಬೇಕು. ಅಲ್ಲದೆ, ಉನ್ನತ ಭೂಸ್ಥಿತಿವಾಚಕಗಳೇ ಹಲವಾರಿದ್ದಾಗ ಆ ಒಂದು ಇನ್ನೊಂದಕ್ಕಿಂತ ಎಷ್ಟರಮಟ್ಟಿಗೆ ಬೇರಾಗಿದೆ – ಅವುಗಳಲ್ಲಿ ಒಂದೊಂದು ಎತ್ತರದ ಯಾವ ಅಂಶಗಳನ್ನು ಸೂಚಿಸುತ್ತದೆ ಎಂದು ಹೇಳುವುದೂ ಅಷ್ಟೇ ಕಷ್ಟ. ಉದಾಹರಣೆಗೆ, ಕುಕ್ಕ್‌- ಮಾಣ್‌ಕಾರ್ ಇವು ಮೂರೂ ಎತ್ತರವನ್ನು ಹೇಳುವ ಸ್ಥಳನಾಮಗಳು[3] ಎಂದು ಒಪ್ಪಿಕೊಂಡಲ್ಲಿ, ಇವು ಮೂರು ಸಮಾನ ಎತ್ತರವನ್ನು ಸೂಚಿಸುವ ಪದಗಳೇ? ಇಲ್ಲವಾದಲ್ಲಿ ಒಂದು ಇನ್ನೊಂದಕ್ಕಿಂತ ಎಷ್ಟು ಕಡಿಮೆ ಅಥವಾ ಹೆಚ್ಚು ಉನ್ನತವಾಗಿದೆ? ಎಂಬೀ ಸೂಕ್ಷ್ಮವ್ಯತ್ಯಾಸದ ನಿರ್ಣಯ ಅವುಗಳ ಭೂಸನ್ನಿವೇಶದ ಅತ್ಯಂತ ನಿಕಟ ಪರಿಶೀಲನೆಯಿಂದಲೂ, ಅಂಥ ಅದಗಳ ಸಾಧಿತರೂಪಗಳ ಅರ್ಥನಿರ್ಣಯದಿಂದಲೂ ಕೈಗೂಡೀತು.

ತುಲುನಾಡಿನ ಸ್ಥಳನಾಮಗಳ ಯಾದಿಯನ್ನು ಪರಿಶೀಲಿಸಿದಾಗ ಎದ್ದು ಕಾಣುವ ಒಂದು ವೈಶಿಷ್ಟ್ಯವೆಂದರೆ, ವೈವಿಧ್ಯಪೂರ್ಣ ಪ್ರಕೃತಿಸಂಪತ್ತು (ಜಲ – ವನ್ಯ – ಪಶುಪಕ್ಷಿ ಇ.). ನಮ್ಮ ಜನರನ್ನು ಆ ಎಡೆಗೆ ಹೆಸರಿಡಲು ಪ್ರೇರೇಪಿಸಿದಂತೆ, ವ್ಯಕ್ತಿಗಳು, ದೈವ ದೇವತೆಗಳು ಅಥವಾ ಇತರ ಸಾಂಸ್ಕೃತಿಕ ಘಟನೆಗಳು ಅಷ್ಟಾಗಿ ಅವರ ಗಮನ ಸೇಳೆದಿಲ್ಲ ಎಂಬುದು ಸ್ವಭಾವತಃ ಕರ್ತವ್ಯಮಗ್ನರೂ ಶಾಂತ ಸ್ವಭಾವಿಗಳೂ ಆದ ತುಳುವರು ಯುದ್ಧ, ಅರಸರ ವಂಶ ಸ್ಥಾಪನೆ – ಪತನ ಮತ್ತಿತರ ರಾಜಕೀಯ ಘಟನೆಗಳು ನಡೆದಾಗಲೂ, ದಿಗ್ವಿಜಯಿಗಳು ಅಥವಾ ತಮ್ಮ ಅರಸರ ಅಥವಾ ನಾಯಕರ ವ್ಯಕ್ತಿಪೂಜೆ ಅಷ್ಟಾಗಿ ನಡೆಸುತ್ತಿರಲಿಲ್ಲ ಎಂಬುದಕ್ಕೆ ಪ್ರಾಯಶಃ ಸ್ಥಳನಾಮಗಳೂ ಸಾಕ್ಷಿ ನುಡಿಯಬಲ್ಲವು. ವ್ಯಕ್ತಿ ಸ್ಮಾರಕಾಂಶವುಳ್ಳ ಸ್ಥಳನಾಮಗಳು ಏನಿದ್ದರೂ ಅಲ್ಪಸಂಖ್ಯೆಯವು.[4] ಅಲ್ಲದೆ ಕಾಲದ ದೃಷ್ಟಿಯಿಂದ ಈಚಿನವು- ಇತ್ತೀಚೆಗೆ ಜನರ ಮನೋಧರ್ಮ ಬದಲಾಗಿ, ವ್ಯಕ್ತಿಪೂಜೆಯಯ ಅಂಶ ಅವರ ಜೀವನದಲ್ಲಿ ಬೆರೆತಂತೆ ಕಂಡರೂ, ದೊಡ್ಡ ಊರಿಗೆ ಒಬ್ಬ ವ್ಯಕ್ತಿಯ ಹೆಸರು ಕೊಡದೆ ಕೇರಿಗೆ ಅಥವಾ ಒಂದು ಮನೆಯಡಿಗೆ – ಗುರುತಿಸಲಿಕ್ಕಾಗಿ – ಹೆಸರು ಇಟ್ಟಿರುವುದೂ ಸಹ ಜನರ ಜೀವನದೃಷ್ಟಿಯನ್ನು ಬಿಂಬಿಸಬಲ್ಲದು. ವ್ಯಕ್ತ್ಯಂಸವುಳ್ಳ ಹೆಸರುಗಳಿಗೆ ಕೆಲವು ಉದಾ: ಅಂಗರಜೆ, ಅಪ್ಪುಮೂಲೆ, ಕಾಶಿಪಟ್ಣ, ಕುಞೆಮೂಲೆ, ಕುಲಶೇಕರ, ಜತ್ತನಕೋಡಿ, ಚಾತ್ರಬೆಟ್ಟು, ತಿಪ್ಪಕೋಡಿ, ದಾದುಕೋಡಿ, ದಾಮರ್ಸಕಟ್ಟೆ, ನಂದನಕುದ್ರು, ನಂದಳಿಕೆ, ನಂದಾವರ, ಪೆಂಡ್ಲಂಟ್‌ಪೇಟೆ, ಬಿರ್ಕನಟ್ಟೆ, ಬೈರನಕೋಟೆ, ಮಾಬುಕಳ, ವೆಲೆನ್ಸಿಯಾ, ಶಂಕರಪ್ಪನಕೊಡ್ಲು, ಶಂಕರಪುರ, ಸಬ್ಬಣಕೋಡಿ, ಸೂಟರ್ ಪೇಟೆ ಮುಂ.

ತುಳುನಾಡಿನ ಕೆಲವು ಊರ ಹೆಸರುಗಳಿಗೆ ಒಂದಕ್ಕಿಂತ ಹೆಚ್ಚು ರೂಪ ಬಳಕೆಯಲ್ಲಿರುವುದಿದೆ. ಇವುಗಳಲ್ಲಿ ಒಂದು ಜನಪ್ರಿಯ ವ್ಯವಹಾರದ ರೂಪವಾದರೆ, ಇನ್ನೊಂದು ಸಾಮಾನ್ಯವಾಗಿ ಸ್ಥಳೀಕರ ಆಡುಮಾತಿನ (ತುಳು) ರೂಪ – ಕೆಲವೊಮ್ಮೆ ಭ್ರಷ್ಟರೂಪ ಕೂಡ. ಉದಾ : ಅದಮಾರ್ – ದಮ್ಮರ್, ಉಡುಪಿ – ಒಡಿಪು / ಒಡ್ಪು, ಉಪ್ಪಿನಂಗಡಿ – ಉಬಾರ್, ಕಾರ್ಕಳ – ಕಾರ್ಲ, ಪಾಣೆಮಂಗಳೂರು – ಪಾಣೇರ್, ಬೆಳ್ತಂಗಡಿ – ಬೊಳ್ತೇರ್, ಮುಂಡುಕೂರು – ಮುಂಡೇರ್, ತಿಬರೂರು – ತಿಬಾರ್ ಮುಂ. ಈ ಕೆಲವು ರೂಪಾಂತರಗಳು ತುಳುಭಾಷೆಯ ಧ್ವನಿವ್ಯತ್ಯಾಸಕ್ಕೆ ಅನುಗುಣವಾಗಿಯೇ ಇವೆ. ಇನ್ನೂ ಕೆಲವು ರೂಪಗಳು ಪ್ರಾಯಃ ಬೇರೆಯೇ ಒಂದು ಕೇಂದ್ರ ಭಾಗವನ್ನು ಉದ್ದೇಶಿಸಿ ಹೊರಟವಾಗಿದ್ದು, ಈಗ ಹೆಚ್ಚು ಕಮ್ಮಿ ಒಂದೇ ಸ್ಥಳವನ್ನು ಸೂಚಿಸುವಂತೆ ಬಳಕೆಯಾಗುತ್ತಿವೆ. ಉದಾ : ಮಂಗಳೂರು – ಕುಡಲ, ರಜತಪೀಠ – ಉಡುಪಿ, ಇ.

ಉಳಿದ ಪ್ರದೇಶಗಳಲ್ಲೆಂತೊ ಅಂತೆ, ತುಳುನಾಡಿನಲ್ಲೂ ಬ್ರಾಹ್ಮಣ ಅಥವಾ ಉನ್ನತವರ್ಗದಿಂದ, ವಿದ್ವಾಂಸರಿಂದ, ಎಷ್ಟೋ ‘ಪ್ರಾಕೃತ’ (Natural or Native) ಹೆಸರುಗಳು ಸಂಸ್ಕೃತೀಕೃತವಾಗಿವೆ; ಪರಿಷ್ಕೃತವಾಗಿವೆ. ಹೀಗೆ ಸಂಸ್ಕೃತೀಕರಣ ನಡೆದಾಗ ಕೆಲವೊಮ್ಮೆ ಮೂಲರೂಪದ ಅರ್ಥವೇ ಹೊರಬಿದ್ದರೂ, ಅದು ಕಠಿನ ಸಂಸ್ಕೃತ ಭಾಷೆಯಲ್ಲಿದ್ದು ಜನಸಾಮಾನ್ಯರ ಬುದ್ಧಿಗೆ ನಿಲುಕುವಂತಿಲ್ಲ.[5] ಉದಾ : ಕೊಡಿಪಾಡಿ – ಪ್ರಾಗ್ರ್ಯವಾಡ, ಇಡೆತುದೆ – ಸರಿದಂತರಾಖ್ಯಪುರ, ಬಾಳೆಕುದ್ರು – ರಂಭಾದ್ವೀಪ, ಇ. ಇನ್ನು ಕೆಲವು ಪರಿಷ್ಕೃತ ರೂಪಗಳು ಮೂಲಾರ್ಥವನ್ನು ಸಂಪೂರ್ಣ ಮರೆಸಿಬಿಟ್ಟಿವೆ. ಉದಾ : ಕದಿರೆ – ಕದಳೀವನ, ಸುವರ್ಣಕದಳಿ ಇ. ಕೊಲ್ಲೂರು – ಕುವಲಯಪುರ, ಉಡುಪಿ – ರೌಪ್ಯಪೀಠಪುರ, ರಜತಪೀಠಪುರ, ಇ. ಬಾರಕೂರು – ಬಾರಹಕನ್ಯಾಪುರ, ವಾರಕೂಲ, ‘ದ್ವಾರಕ'(?) ಇ.

ಇನ್ನೊಂದು ಸ್ವಾರಸ್ಯದ ಸಂಗತಿಯೆಂದರೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸ್ಥಳಗಳಿಗೆ ಒಂದೇ ಹೆಸರು ರೂಢವಾಗಿರುವುದು. ಇದು ಸಾಮಾನ್ಯವಾಗಿ ಭೂಲಕ್ಷಣಗಳ ಸಾಮ್ಯದಿಂದಲೆ ಅಥವಾ ದೈವನಾಮಗಳಿಂದ ಬಂದಿರುವ ಹಾಗೆ ಕಾಣುವುದರಿಂದ, ಉದ್ದೇಶಿತ ಕೈವಾಡವಾಗಿರದೆ, ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿ ಕಂಡುಬರುತ್ತದೆ. ಉದಾ : ಪುತ್ತೂರು (ಉ. ತಾ., ಪು.ತಾ, ಮಂ. ತಾ.), ಮಂಚಿ (ಉ. ತಾ, ಬಂ. ತಾ,) ಸೋಮೇಶ್ವರ (ಉ. ತಾ., ಕಾ.ತಾ., ಮಂ. ತಾ.), ಬೈಲೂರು (ಉ. ತಾ., ಕಾ. ತಾ., ಕುಂ. ತಾ.) ಇತ್ಯಾದಿ.[6]

ಇದುವರೆಗೆ ಸ್ಥಳನಾಮಗಳ ಸ್ಥೂಲರೂಪವನ್ನು ವಿವೇಚಿಸಲಾಯಿತು. ಇದೀಗ ತುಳುನಾಡಿನ ಸ್ಥಳನಾಮ ಘಟಕಗಳನ್ನು ಒಂದೆಡೆ ಕೊಡುವುದು ಉಪಯುಕ್ತವೆಂಬುದರಿಂದ ಇವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇಲ್ಲಿ ಒಂದೆರಡು ಮುಖ್ಯಾಂಶಗಳನ್ನು ಇಲ್ಲಿ ಕೊಡುವ ಸ್ಥಳನಾಮಾಂಶಗಳು ತಮ್ಮ ಸ್ಥಾನಬಲದ ವ್ಯತ್ಯಾಸದೊಂದಿಗೆ ಅರ್ಥದಲ್ಲೂ ವ್ಯತ್ಯಾಸವನ್ನುಂಟು ಮಾಡಬಲ್ಲವು; ಒಂದೇ ಅರ್ಥವನ್ನು ಕೊಡುವ ಹಲವಾರು ರೂಪಗಳಿರಬಹುದು; ಒಂದು ರೂಪ ಇನ್ನೊಂದರಿಂದ ನಿಷ್ಪನ್ನವಾಗಿರಬಹುದು; ಕೆಲಮಟ್ಟಿಗೆ ಅವುಗಳ ಮೂಲ ರೂಪ ಉಚ್ಚಾರ ಹಾಗೂ ಧ್ವನಿವ್ಯತ್ಯಾಸಕ್ಕೆ ಒಳಗಾಗಿ ಬದಲಾಗಿರಬಹುದು; ಬೇರೆ ರೂಪ ಸಿಗುತ್ತಿರಬಹುದು.

ಈಗ ಅಂಥ ವಸ್ತುಗಳಿಗೆ ಕೆಲವು ಉದಾಹರಣೆಗಳು :

ಅಂಕ, ಅಂಕಿ, ಅಂಕಿಲ ನೇರಂಕಿ, ಪಾರೆಂಕಿ, ಪೆರ್ಣಂಕಿಲ
ಅಂಗೆ ಕುರುಡಂಗೆ, ಪೆಜಕೊಡಂಗೆ, ಮೂಲೆಂಗಿ
ಅಂಗಡಿ ಕೊಪ್ಪಲಂಗಡಿ, ಉಪ್ಪಿನಂಗಡಿ, ಮುರತಂಗಡಿ
ಅಂಗಳ ಉಬ್ರಂಗಳ, ಕೈರಂಗಳ
ಅಂಜ (-ಜೆ, -ಜಿ) ಬಾಳಂಜ, ಕರ್ಪಂಜೆ, ಬೊಳಂಜಿ
ಅಜ ( -ಜೆ, -ಜಿ) ಬೊಳ್ಳಜ, ಕೊಣಾಜೆ, ಮಾವಜಿ
ಅಡಕ, ಅಡಿಕ, ಅಡುಕ, ಅಡ್ಕ ಆಲಡ್ಕ, ಬಣತ್ತಡ್ಕ, ಬೆಂಗಡುಕ
ಅಡಿ, ಅಡಿ ಅಚ್ಚಡ, ಕೊಕ್ಕಡ, ಬೀಜಾಡಿ, ಅಥಡಿ
ಅಣ, ಅಣಿ, ಅಣೆ ಕೊಂಡಾಣ, ನೆಟ್ಟಣೆ
ಅಂಬ(ಬಿ)ಲ, ಅಂಬ್ಲ ಕೋಂಡಿಂಬಳ, ಕಡಂಬಿಲ
ಅಂಬ, ಅಂಬೆ, ಅಂಬಿ ಕಡಂಬು, ಕೊಳಂಬೆ, ಮಡಂಬು, ಕೋಟೆಕೊಳಂಬಿ
ಅರ, ಅರಿ, ಅರೆ ಬಂಟರ, ಸಗರಿ
ಅರ್ಣೆ ಪೆರ್ಣೆ, ಮಾರ್ಣೆ
ಅರ್ಸೆ ಆವರ್ಸೆ, ತಗ್ಗರ್ಸೆ
ಅಳ(ಳಿ)ಕೆ ಅಳಿಕೆ, ಅರಸಳಿಕೆ, ಚಂದಳಿಕೆ
ಅರ್, ಅರ, ಆರು, ಆರಿ, ಆರೆ ಪಿಲಾರ್, ಉಪ್ಪಾರ, ಕೊಂಬಾರು, ಚಿತ್ತಾರಿ ಬೆಳ್ಳಾರೆ, ಚೆಳ್ಳಾಯಿರು
ಆಲ್, ಆಲ, ಆಲು, ಆಲೆ (ಳೆ)ಆಲಿ, ಆಳ ಉರ್ವಾಲ್‌, ಅಂಬಾಲ, ತೋಡಾಲು ನಾವಳೆ ಪಣಿಯಾಳ
ಇಂಜ, ಇಂಜೆ, ಇಜ, ಇಜೆ ಕೆದಿಂಜ, ಸೂರಿಂಜೆ, ಅಣಜೆ
ಇಲ, ಇಳ ಇಳಂತಿಲ, ಬತಿಲೆ, ನೆಡ್ಚಿಲು, ಕಾಮಿಳ
ಈರ, ಈರಿ, ಈರೆ ಈರ
ಈಶ್ವರ ಸೋಮೇಶ್ವರ, ಮಂಜೇಶ್ವರ, ಪಾಂಡೇಶ್ವರ
ಉಂಜ, ಉಂಜೆ, ಉಜ ಕೆಮ್ಮುಂಜೆ, ಯರ್ಮುಂಜ
ಉಂಬೆ ಮಡುಂಬು, ಕೊಡುಂಬೆ
ಉಳಿ, ಉಳಿಯು ಉಳಿಗ್ರಾಮ, ಉಳ್ಳನಡ್ಕ
ಏರಿ ಏಳೇರಿ, ಕೊಡೇರಿ, ಮುಳ್ಳೇರಿಯ
ಏಳ, ಏಳಿ, ಏಳೆ ಹಾಂತ್ರೇಲು, ಕೊಡ್ಯೇಲು
ಒಕ್ಕಲು, ಒಕ್ಲು ಐವತ್ತೊಕ್ಲು, ಹೊಸೊಕ್ಲು
ಕಜ, ಕಜೆ, ಪಾರ್ಪ ಕಜೆ, ಅರ್ತಿಕಜೆ
ಕಟ್ಟ, ಕಟ್ಟೆ, ಕಟ್ಟು ಬಾಳ್ಕಟ್ಟು, ಬಿಕರ್ನಕಟ್ಟೆ, ಮೆಕ್ಕೆಕಟ್ಟು
ಕಡ, ಕಟ್ಟೆ ಕಡಪು ಕಾರ್ಕಡ, ಪಾವೊರು ಕಡವು, ಕಡವ, ಎರುಕಡಪ್ಪು
ಕಂಡ(-ಡೆ), ಕ (ಖ) ಖಂಡಿಗೆ ಅರಖಂಡಗ, ಬೈಕಂಡೆ, ಖಂಡಿಗೆ
ಕಂಬ ವೀರಕಂಬ, ಕೈಕಂಬ
ಕಂಬಳ, ಕಂಬ್ಳ ಕಿನ್ನಿಕಂಬ್ಳ, ಕನ್ನಡಿಕಂಬ್ಳ
ಕಯ ಅಪ್ಪಂಗಯ, ಎರ್ಮೆಕಯ
ಕರಿ, ಕರ, ಕರೆ ಯಾನೆಕರ, ಪಡುಕರೆ
ಕಲಂ, ಕಲ್ಲು ಕೊರಡ್ಕಲ್, ಬಗ್ಗೆಡಿಕಲ್ಲು
ಕಳ, ಕಳ್ಳ ಐಕಳ, ಕರ್ಕಳ
ಕಾಟು, ಕಾಟೆ ಕಾಟುಕುಕ್ಕೆ, ಕಾಟಿಪಳ್ಳ
ಕಾಡು, ಕಾನ್ ಕೀರಿಕ್ಕಾಡು, ತೊಡ್ಕಿಕಾನ
ಕಾರ್, ಕಾರ, ಕಾರು, ಕಾರೆ ಎಕ್ಕಾರ್, ಮಣಿಕ್ಕಾರ, ಕೋಡಿಂಗಾರು, ಬೀಡಕಾರೆ
ಕಾಲ್, ಕಾಲ ತಲೆಕಾಲ
ಕಿ(ಕೆ)ದು, ಕೆರೆ ಇಡ್ಕಿದು, ಕಟ್ಟೆಂಗೆರೆ
ಕುಕ್ಕ್‌, ಕುಕ್ಕೆ ಕುಕ್ಯಾಡಿ, ಕುಕ್ಕೆಹಳ್ಳಿ
ಕುಂಜ, ಕುಂಜೆ, ಕುಂಜಿ ಕುತ್ಕುಂಜ, ಹೆಗ್ಗುಂಜೆ, ಪೀಕುಂಜಿ
ಕುಡೇಲು ಕುಂಟುಕುಡೇಲು, ಪಿಲಿಕುಡೇಲು
ಕುಣಿ(-ಳಿ) ಕುಂಡೆಂಕುಳಿ, ಗುರ್ಪುರಗುಣಿ
ಕುಂದ ಕುಳ್ಕುಂದ, ಕುಂದಾಪುರ, ನವಿಲ್ಕುಂದ
ಕುದುರು, ಕುದ್ರು ಪೀಕುದುರು, ಅಂಕುದ್ರು
ಕೂಡ್ಲ, ಕೂಡ್ಲು (ಕೋ)ಡ್ಲು ಕೂಡ್ಲಮೊಗರು, ಅಂಬರಗೊಡ್ಲು
ಕೇಜ ಬಂಡಕೇಜ
ಕೇರಿ ಮಾಯರಕೇರಿ, ಬೊಬ್ಬೆಕೇರಿ
ಕೋಡಿ ಹಾಲೆಕೋಡಿ
ಕೊಂಬು ನವಿಲ್ಕೊಂಬು ನರಿಕೊಂಬು, ಕೊಂಬೈಲ್‌
ಕೊಪ್ಪ, ಕೊಪ್ಲ ಸಾಂತುರುಕೊಪ್ಲ
ಕೊಮ್ಮೆ ಮೈರ್ ಕೊಮ್ಮೆ
ಕೊಟ್ಟಿಗೆ ಗಾಣದ ಕೊಟ್ಟಿಗೆ
ಕೋಟೆ, ಕೋಟು ಕೋಟೆ, ಬೈರನ ಕೋಟೆ
ಕೋಡ ಮುಚ್ಲುಕೋಡು, ಕೋರಕೋಡು
ಕೋಡಿ ಆಳ್ವಕೋಡಿ, ಉಳೆಕೋಡಿ
ಕೋಣೆ, ಕೋಣಿ ಕಮ್ಮಾರಕೋಣ, ಕೋಣಿ, ಕಂಬದಕೋಣೆ
ಕೋಲು ಕುಟ್ಟುಕೋಲು, ಮಂಡೆಕೋಲು
ಗಡಿ, ಗಡು ಕಾರ್ಗಡಿ, ಕಾನ್ಯಗಡು
ಗದ್ದೆ ಕೆಸರ್ಗದ್ದ, ವಂದಗದ್ದೆ
ಗಳ, ಗಾಳ ಚೆಂಗಳ, ಪಾಂಗಾಳ
ಗಾರ್, ಗಾರ, ಗಾರು ಪಾಡಿಗಾರ್, ಕಿಳಿಂಗಾರು
ಗ್ರಾಮ ಸಾಲಿಗ್ರಾಮ, ತುಂಬೆಗ್ರಾಮ
ಗಿರಿ ಕುಮಾರಗಿರಿ, ಭದ್ರಗಿರಿ
ಗುಂಡಿ ಬರೆಗುಂಡಿ, ಉಮೆಗುಂಡಿ
ಗುಡ್ಡ, ಗುಡ್ಡೆ ಶೇಡಿಗುಡ್ಡ, ಕಬರಗುಡ್ಡೆ
ಗುತ್ತು ಕಜಾರಗುತ್ತು, ಮೈರ್ಗುತ್ತು
ಗುಳಿ, ಗುಣಿ ಬಲಂಗುರಿ, ಬಲಿಪಗುಳಿ
ಗೋಡು ಕಾಡಂಗೋಡು, ಕಾಸರಗೋಡು
ಗೋಳಿ ಅಸೈಗೋಳಿ, ತೌಡುಗೋಳಿ
ಚರ, ಚಾರ, ಚಾರು ಚಾರ, ಮಂಡೆಚಾರು, ಅಂಗಡಿಚಾರು
ಚಳ್ಳ ದೇವಚಳ್ಳ
ಜರ, ಜಾರ, ಜಾರು ದಾಜರ, ಶಿಲೆಂಜಾರು, ಕಣಜಾರು
ಜಾಲ್, ಜಾಲು ಕಾಪೆಜಾಲ, ಕೈಪುಂಜಾಲ್, ಹೇರಂಜಾಲು
ಜಿಡ್ಡ ಕೇದಿಗೆಜಿಡ್ಡ
ತಟ್ಟು, ತಿಟ್ಟು ಕೋಟತಟ್ಟು, ಗೋಳಿತಿಟ್ಟು
ತೀರ್ಥ ಕಣ್ವತೀರ್ಥ, ಬಾಣತೀರ್ಥ
ತೋಟ ನ್ಯಾಯತೋಟ, ಬಾಪು ತೋಟ
ತೋಡ, ತೋಡಿ, ತೋಡು ಅರಂತೋಡು, ಈಳಂತೋಡಿ
ನಗರ ವಿದ್ಯಾನಗರ, ಹಾಲಿನಗರ
ನಡ, ನಡು ನಡಾ, ನಡುಗೋಡು
ನದಿ ಸೀತಾನದಿ, ಸುವರ್ಣನದಿ
ನಾಡ, ನಾಡು ನೈನಾಡ್‌, ಕುರ್ನಾಡು
ನೀರ್, ನೀರು ಪಳ್ನೀರ್, ಎಡನೀರು, ನೀರೆ
ನೂಜಿ ನೂಜಿಬಾಳ್ತಿಲ, ತಾಳಿತ್ತನೂಜಿ, ನೂಜಿ
ನೆಲೆ ಬಿಳಿನೆಲೆ
ಪಂಜ ಪಂಜ, ಕರ್ಪಂಜ,
ಪಟ್ಟಣ, ಪಟ್ಣ ಬುಕ್ಕಪಟ್ಟಣ, ಮಾಲಾರಪಟ್ಣ
ಪದವು ಕಕ್ಕಿಪದವು, ನೊಣಲ್‌ಪದವು
ಪಳ್ಳಿ, ಹಳ್ಳಿ ನಯಂಪಳ್ಳಿ, ಬಣ್ಣಂಪಳ್ಳಿ, ಹಾಲು ಹಳ್ಳಿ
ಪಳ್ಕೆ ಮಂಜರಪಳ್ಕೆ, ಕುಂಟಲಪಳ್ಕೆ
ಪಾಡಿ ಕುಕ್ಕಿಪಾಡಿ, ಮುಟ್ಲುಪಾಡಿ
ಪಾದೆ, ಪಾರ್, ಪಾರೆ ಆರಂಪಾದೆ, ಮೆಣಸಿನಪಾರೆ, ತೋನ್ಸೆಪಾರ್
ಪಾಲು ಬಂಗೇರಪಾಲು, ಬಾಗುಪಾಲು
ಪುಣಿ ಬಾಗ್ಪುಣಿ, ನೆಕ್ಕಿದಪುಣಿ
ಪುರ ಕಾಳಾಪುರ, ಕಲ್ಯಾಣಪುರ
ಪೇಟೆ ತೋಳದಪೇಟೆ, ಫರಂಗಿಪೇಟೆ
ಬಡ, ಬಡಾ ಎರ್ಮಾಳಬಡಾ
ಬದಿ, ಬರಿ ಬದಿಯಡ್ಕ, ಬರಿಮಾರು
ಬಳ, ಬಳ್ಳ ಆಮ್ಮೆಂಬಳ, ಕೋಡಿಂಬಳ
ಬಗಿಲು, ಬಾಗ್ಲು ಅಂಬಾಗಿಲು, ಸಿರಿಬಾಗಿಲು
ಬಿದಿರೆ, ಬಿದ್ರೆ ಚಿಲ್ಬಿದ್ರೆ, ಮೂಡಬಿದ್ರೆ
ಬೀಡು, ಬೂಡು ಓಂತಿಮಾರುಬೀಡು, ಬೂಡುತಮಕ್ಕಿ
ಬೆಟ್ಟ, ಬೊಟ್ಟು ಕುಡಂಬೆಟ್ಟು, ಗುಜ್ಜಾರಬೆಟ್ಟು
ಬೇರು ತುಂಬಿಬೇರು, ಬಸ್ರೀಬೇರು
ಬೇಳ ಬೇಳ, ಬೇಲಾಡಿ
ಬೈಲ್, ಬೈಲು ಅರಿಬೈಲ್, ಕೊಳ್ಕೆಬೈಲು, ಬೈಲೆ
ಬೋಡಿ ಆರಂಬೋಡಿ
ಭಾಗ್‌ ಬಲ್ಲಾಳ್‌ಭಾಗ್‌, ಶಿವಭಾಗ್‌
ಭಾಗ ಪಡುಭಾಗ
ಮಂಕಿ ಮಂಕಿ, ಪೆರ್ಮಂಕಿ
ಮಂಚಿ ಮಂಚಿ
ಮಕ್ಕಿ ಅರಸಿನಮಕ್ಕಿ, ಹೆಮ್ಮೆಕ್ಕಿ
ಮಂಗಲ, ಮಂಗಿಲ ಕುಮಾರಮಂಗಿಲ, ಪಿಮಂಗಲ
ಮಂಜ, ಮಜಲು ಬಳ್ಳಮಂಜ, ಕನಕಮಜಲು
ಮಟ,ಮಟ್ಟು ಮಟ್ಟು, ಮಟ್ಟೆಕೋಲು (?)
ಮಠ ಭಂಡಿಮಠ, ಹೊಸ್ಮಠ
ಮಂಡೆ ಮಂಡೆಕೋಲು
ಮಣ್ಣು ಕೆಮ್ಮಣ್ಣು, ಬೆಳ್ಮಣ್ಣು
ಮನೆ ಕೊಂದಲ್ಮನೆ, ಮುಂಗ್ಲಿಮನೆ
ಮರ ಪಡುಮರ, ಸಾಲ್ಮರ
ಮಲೆ ಪಿದಮಲೆ, ಬಂಟಮಲೆ
ಮಾಡ, ಮಾಡಿ ಮಾಡಾವು, ಕಲ್ಮಾಡಿ
ಮಾಣೆ, ಮಾಣಿ ಮಾಣಿ, ಮಾಣಾಯಿ
ಮಾರ್, ಮಾರು ಪುಚ್ಚೆಮಾರ್, ಹೊಸ್ಮಾರು
ಮಾರ್ಗ ಜೋಡುಮಾರ್ಗ, ನೀರ್ಮಾರ್ಗ
ಮಾಳ ಎರ್ಮಾಳ, ದಾದಸ್ತಮಾಳ
ಮಾಲು ಪಂಚಮಾಲ್, ದೋಣಿಮಾಲು
ಮುಂಡ ಪೆರ್ಮಂಡೆ, ಮುಂಡಕೂರು
ಮುಡಿ ಏಳ್ಮುಡಿ, ಪತ್ತುಮುಡಿ
ಮೂಲ ಕಜೆಮೂಲ, ಕೊಂಡಮೂಲ
ಮೂಲೆ ಕೋಟೆಮೂಲೆ, ಶೇಡಿಮೂಲೆ
ಮೊಗರು, ಮೊಗ್ರು ಅಜಿಲಮೊಗರು, ಕೊಲ್ಲಮೊಗ್ರು
ಮೊಗೆ ಎಡಮೊಗೆ, ಮೊಗೇರಿ
ಲಚ್ಚಿಲು ಪುರುಷಲಚ್ಚಿಲು, ಪಳಿವಲಚ್ಚಿಲು
ವರ, ವಾರ ಏನಾವರ, ನೀಲಾವರ
ಶೆಡ್ಡೆ, ಶೇಡಿ ಪಡುಶೆಡ್ಡೆ, ಮೂಡುಶೆಡ್ಡೆ
ಶ್ವಾಲ್ಯ ಕಡೇಶ್ವಾಲ್ಯ
ಸಂಕ ಕಾಲ್ಸಂಕ
ಸಾರ್ ಕತ್ತಲೆಸಾರ್
ಸಾಲು ನಡ್ಸಾಲು, ಬೆಜಕ್ರೆ ಸಾಲು
ಸುಂಕ ಕೈಸುಂಕ, ಸುಂಕದಕಟ್ಟೆ
ಸ್ಥಳ ಧರ್ಮಸ್ಥಳ, ನೆಲ್ಲಿಸ್ಥಳ
ಹಡ, ಹಾಡಿ ಹೊಸಡು, ಎಡಹಾಡಿ, ಬಂಗ್ಲೆಹಾಡಿ
ಹಿತ್ತಿಲು, ಹಿತ್ಲು ಕುಟುಂಬಿಹಿತ್ಲು, ಸಸಿಹಿತ್ಲು
ಹೊಳೆ ಅಂದಹೊಳೆ, ಹಳ್ಳಿಹೊಳೆ

ಇತ್ಯಾದಿ ಇತ್ಯಾದಿ*

 

[1] ಈ ಕುರಿತು ನನ್ನ ಗಮನ ಸೆಳೆದವರು ಜಿಲ್ಲೆಯ ಖ್ಯಾತ ಸಂಶೋಧಕ ವಿದ್ವಾನ್ ಕೆ. ವೆಂಕಟರಾಯಚಾರ್ಯ, ಸುರತ್ಕಲ್ ಅವರು.

[2] ನೋಡಿ : ‘ಕುಕ್ಕೆ : ಸ್ಥಳನಾಮರೂಪನಿಷ್ಪತ್ತಿ ; ಯುಗಪುರುಷ, ಎಪ್ರಿಲ್, ೭೭.

[3] ‘ಕೆಲವು ಪ್ರಮುಖ ಭೂ ಸ್ಥಿತಿವಾಚಕಗಳು’ ಎಂಬ ಅಧ್ಯಾಯ ನೋಡಿ.

[4] ನೋಡಿ : ‘Certain Important Trends in Toponomy of Tulunadu’, ಅಖಿಲ ಭಾರತ ದ್ರಾವಿಡ ಭಾಷಾ ವಿಜ್ಞಾನಿಕೂಟದ ೭ನೇ ವಾರ್ಷಿಕಾಧಿವೇಶನದಲ್ಲಿ ಮಂಡಿಸಿದ ಪ್ರಬಂಧ.

[5] ವಿವರಕ್ಕೆ ನೋಡಿ : ‘ಸ್ಥಳನಾಮಗಳಲ್ಲಿ ಸಂಸ್ಕೃತೀಕರಣ’, ಮಾನವಿಕ ಕರ್ನಾಟಕ, ೬ -೪, ೭೬.

[6] ತುಳುವರ ‘ಸ್ಥಳನಾಮ ಸಮೀಕ್ಷೆ’, ಭವ್ಯವಾಣಿ, ಜುಲೈ, ೭೭.

* ಈ ಯಾದಿ ಸ್ವಯಂಪೂರ್ಣವಾಗಿಲ್ಲ.