ತಮ್ಮ ದೀರ್ಘ ಕಾಲದ ಇತಿಹಾಸ ಸಂಶೋಧನೆ, ಅಧ್ಯಯನ ಹಾಗೂ ಕ್ಷೇತ್ರಕಾರ್ಯಗಳ ಫಲಿತಾಂಶಗಳನ್ನು ಒಂದು ಬೃಹತ್ ಕೃತಿಯ ಮೂಲಕ ಪರಿಚಯಿಸುವ ಇವರ ಪ್ರಯತ್ನದ ಫಲವೇ Studies Tuluva History and Culture. ತುಳುನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪಗಳ ಕುರಿತ ವಿಶ್ವಕೋಶವೆಂದೇ ಪರಿಗಣಿಸಲ್ಪಡಬಹುದಾದ, ೧೯೭೫ರಲ್ಲಿ ಪ್ರಕಟಗೊಂಡ, ಈ ಕೃತಿಯಲ್ಲಿ ತಮ್ಮಲ್ಲಿರುವ ಸಮಗ್ರ ಮಾಹಿತಿಗಳನ್ನು ಒಂದೇ ಗ್ರಂಥದ ಪರಿಮಿತಿಯೊಳಗೆ ತುಂಬುವ ಅತ್ಯಂತ ಕಷ್ಟಸಾಧ್ಯವಾದ ಪ್ರಯತ್ನವನ್ನು ಕೃತಿಕಾರರು ಮಾಡಿರುವುದನ್ನು ಕಾಣಬಹುದು. ಇದರಿಂದಾಗಿ ತಾವು ಹೇಳಲುದ್ದೇಶಿಸಿದ ಎಲ್ಲ ವಿಷಯಗಳಿಗೂ ಸರಿಯಾದ ನ್ಯಾಯವನ್ನು ಸಲ್ಲಿಸಲು ಕೃತಿಕಾರರಿಗೆ ಇಲ್ಲಿ ಸಾಧ್ಯವಾಗಿಲ್ಲ ಎಂಬುದು ನಿಜವಾದರೂ, ಅದು ಕೃತಿಯ ಮೌಲ್ಯವನ್ನು ಕುಂಠಿತಗೊಳಿಸುವುದಿಲ್ಲ ಎಂಬುದೂ ಅಷ್ಟೇ ನಿಜ.

೫೫೦ ಪುಟಗಳ ಬರಹ, ೪೬೪ ಪುಟಗಳಲ್ಲಿ ಸುಮಾರು ೧೩೭೦ಕ್ಕೂ  ಮಿಕ್ಕಿ ಛಾಯಾಚಿತ್ರಗಳು ಹಾಗೂ ರೇಖಾಚಿತ್ರಗಳನ್ನು ಹೊಂದಿರುವ ಈ ಬೃಹತ್ ಗ್ರಂಥದಲ್ಲಿ ತುಳು ಪದದ ಮೂಲ, ಪ್ರಾಚೀನ ತುಳುನಾಡಿನ ಭೌಗೋಳಿಕ ವಿಸ್ತಾರ, ರಾಜಕೀಯ ಇತಿಹಾಸ, ಸಾಮಂತರ ಅರಸು ಮನೆತಗಳು, ಆಡಳಿತ, ಆರ್ಥೀಕ ಜೀವನ, ಸಮಾಜ, ಧರ್ಮ ವಾಸ್ತುಶಿಲ್ಪ, ಮೂರ್ತಿಶಿಲ್ಪ ಇತ್ಯಾದಿ ಹತ್ತು ಹಲವು ವಿವರಗಳು ಅಡಕಗೊಂಡಿವೆ. ಪ್ರಕಟಿತ ಆಕರಗಳಿಗಿಂತ ಹೆಚ್ಚಾಗಿ ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿದ ಮೂಹಿತಿಗಳನ್ನೇ ಇಲ್ಲಿ ಬಹುವಾಗಿ ಬಳಸಿಕೊಳ್ಳಲಾಗಿದೆ. ಕೃತಿಯಲ್ಲಿ ನೀಡಲಾದ ತುಳುನಾಡಿನ ರಾಜಕೀಯ ಇತಿಹಾಸದ ವಿವರಗಳು ಅಸ್ಪಷ್ಟ ಹಾಗೂ ಅಪೂರ್ಣ ಎನಿಸಿಬಹುದು. ಆದರ ಸುಮಾರು ೮೪ ಪುಟಗಳಲ್ಲಿ ನೀಡಲಾದ ಸ್ಥಳಿಕ ಅರಸು ಮನೆತನಗಳ ವಿವರಗಳು ನಿಜಕ್ಕೂ ಮಾಹಿತಿಪೂರ್ಣವಾಗಿವೆ.

ಈ ಗ್ರಂಥದ ಅತ್ಯಂತ ಮಹತ್ವದ ಹಾಗೂ ಉಪಯುಕ್ತವಾದ ಭಾಗವೆಂದರೆ ಇಲ್ಲಿ ನೀಡಲಾದ ಪ್ರಾಚೀನ ತುಳುನಾಡಿನ ಆಡಳಿತ, ಧರ್ಮ, ಸಮಾಜ, ಕಲೆ ಮತ್ತು ವಾಸ್ತುಶಿಲ್ಪದ ವಿವರಗಳು. ಈ ಅಧ್ಯಯನದ ಹಿನ್ನೆಲೆಯಲ್ಲಿ ಲಭ್ಯವಿರುವ ಎಲ್ಲ ರೀತಿಯ ಆಕರಗಳನ್ನೂ ಬಳಸಿಕೊಂಡಿರುವುದು ಉಲ್ಲೇಖನೀಯ. ಆರ್ಥಿಕ ಹಾಗೂ ಸಾಮಾಜಿಕ ಅಧ್ಯಯನದ ಹಿನ್ನೆಲೆಯಲ್ಲಿ ಗದ್ದೆಗಳ ಹೆಸರುಗಳು, ಬಳಿಗಳು, ಉಪನಾಮಗಳು ಇತ್ಯಾದಿ ಕುತೂಹಲಕರ ವಿಷಯಗಳನ್ನು ಕೃತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಧಾರ್ಮಿಕ ಇತಿಹಾಸವನ್ನು ವಿವರಿಸುವ ಸಂದರ್ಭ, ಶಿವ, ವಿಷ್ಣು, ಶಕ್ತಿ, ಗಣಪತಿ, ಸೂರ್ಯ, ಪರಶುರಾಮ ಮೊದಲಾದ ದೇವತೆಗಳ ಆರಾಧನೆಯ ಹಿನ್ನೆಲೆ ಮತ್ತು ಆರಾಧನಾ ಕೇಂದ್ರಗಳನ್ನು ಗುರುತಿಸುವ ಪ್ರಯತ್ನವನ್ನೂ ಮಾಡಲಾಗಿದೆ. ತುಳುನಾಡಿನ ದೇವಾಲಯಗಳ ಸ್ವರೂಪ ಮತ್ತು ವಾಸ್ತುಶಿಲ್ಪದ ಅಧ್ಯಯನ ಈ ಗ್ರಂಥದ ಒಂದು ಅತ್ಯಂತ ಮಹತ್ವದ ಭಾಗ ಎನ್ನಬಹುದು. ಪ್ರಥಮ ಬಾರಿಗೆ ಈ ಪ್ರದೇಶದ ದೇವಾಲಯಗಳನ್ನು ಅವುಗಳ ತಳಪಾಯ ಹಾಗೂ ರಚನಾ ವಿನ್ಯಾಸದ ಆಧಾರದಲ್ಲಿ ವಿವಿಧ ವರ್ಗಗಳಾಗಿ ವಿಂಗಡಿಸಿ ಕ್ರಮಬದ್ಧವಾಗಿ ಅಧ್ಯಯನ ಮಾಡುವ ಪ್ರಯತ್ನವನ್ನಿಲ್ಲಿ ಕಾಣಬಹುದು. ಶಿಲ್ಪಗಳನ್ನು ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ವಿಜಯನಗರ ಹಾಗೂ ಪಾಳೇಗಾರ ಶೈಲಿಯವುಗಳೆಂದು ವಿಂಗಡಿಸಲಾಗಿದೆ. ತಮ್ಮ ವ್ಯಾಪಕವಾದ ಅಧ್ಯಯನದ ಹಿನ್ನೆಲೆಯಲ್ಲಿ ಗುರುರಾಜ ಭಟ್ಟರು ಕೆಲವು ಕುತೂಹಲಕರ ವಿಚಾರಗಳನ್ನು ಗಮನಕ್ಕೆ ತಂದಿದ್ದಾರೆ.

೧. ಕ್ರಿ.ಶ. ೭ನೇ ಶತಮಾನದಿಂದ ತುಳುನಾಡಿನಲ್ಲಿ ದೇವಾಲಯಗಳ ನಿರ್ಮಾಣ ಪ್ರಾರಂಭಗೊಂಡಿರಬೇಕು.

೨. ಈ ಪ್ರದೇಶದಲ್ಲಿ ವಿಷ್ಣುವಿನ ಆರಾಧನೆ ಕ್ರಿ.ಶ. ೧೧ನೇ ಶತಮಾನಾನಂತರ ರೂಢಿಗೆ ಬಂತು.

೩. ತುಳುನಾಡಿನ ದೇವಾಲಯಗಳಲ್ಲಿ ವಿಷ್ಣುಮೂರ್ತಿ ಎಂಬ ಹೆಸರಿನಿಂದ ಆರಾಧಿಸಲ್ಪಡುವ ಎಲ್ಲ ವಿಗ್ರಹಗಳೂ ಜನಾರ್ದನ ವಿಗ್ರಹಗಳು.

೪. ಕ್ರಿ.ಶ. ೧೪ನೇ ಶತಮಾನದ ನಂತರವಷ್ಟೇ ದೇವಾಲಯಗಳ ಮಾಡಿಗೆ ತಾಮ್ರವನ್ನು ಹೊದಿಸುವ ಕ್ರಮ ರೂಢಿಗೆ ಬಂದಿರಬೇಕು.

೫. ಶಿವನನ್ನು ಮಹಾಲಿಂಗ ಎಂಬ ಹೆಸರಿನಿಂದ ಗುರುತಿಸುವ ಸಂಪ್ರದಾಯ ಈ ಪ್ರದೇಶದಲ್ಲಿ ಪ್ರಾರಂಭವಾದದ್ದು ವೀರಶೈವರ ಪ್ರಭಾವದಿಂದ. ಕ್ರಿ.ಶ. ೧೪೬೩ರ ನಂತರವಷ್ಟೇ ಈ ಸಂಪ್ರದಾಯ ಇಲ್ಲಿ ಪ್ರಚಲಿತವಾಯಿತು.

೬. ಕದ್ರಿಯ ದೇವಾಲಯ ಮೂಲತಃ ಮತ್ಸ್ಯೇಂದ್ರನಾಥನ ದೇಗುಲ. ಈಗ ಗರ್ಭಗುಡಿಯ ಹೊರಾವರಣದಲ್ಲಿ ಇರಿಸಲಾದ ಲೋಕೇಶ್ವರನ ವಿಗ್ರಹವೇ ಈ ದೇವಾಲಯದ ಗರ್ಭಗುಡಿಯಲ್ಲಿ ಆರಾಧಿಸಲ್ಪಡುತ್ತಿದ್ದ ಮೂಲವಿಗ್ರಹವಾಗಿದ್ದಿರಬೇಕು.

Studies in Tuluva History and Culture ಕೃತಿಯ ಒಂದು ಮಹತ್ವದ ಗ್ರಂಥ ಎನ್ನುವುದು ನಿಜವಾದರೂ ಅದು ಹಲವಾರು ಮಿತಿಗಳಿಂದ ಹೊರತಾಗಿಲ್ಲ. ಶಿಲ್ಪಗಳ ವರ್ಗೀಕರಣ, ಶೈಲಿಗಳ ವಿಂಗಡನೆ ಹಾಗೂ ಕಾಲನಿರ್ಣಯದ ಸಂದರ್ಭ ಲೇಖಕರು ಹಲವೆಡೆ ಎಡವಿದ್ದಾರೆ. ಒಂದು ಗ್ರಂಥದ ಮಿತಿಯೊಳಗೆ ಎಲ್ಲವನ್ನೂ ತರಬೇಕೆಂಬ ಪ್ರಯತ್ನದಿಂದಾಗಿ ಹಲವು ಮಹತ್ವದ ವಿಷಯಗಳಿಗೆ ಸರಿಯಾದ ನ್ಯಾಯವನ್ನೊದಗಿಸಲು ಇಲ್ಲಿ ಸಾಧ್ಯವಾಗಿಲ್ಲ. ಇದರಿಂದಾಗಿ ವಿಷಯದ ಆಯ್ಕೆ ಹಾಗೂ ವಿಚಾರಗಳ ಮಂಡನೆಯಲ್ಲಿ ಒಂದು ರೀತಿಯ ಅಸಮತೋಲನ ಎದ್ದು ಕಾಣಿಸಿದರೆ ಅಚ್ಚರಿಯಿಲ್ಲ. ಈ ಎಲ್ಲ ಮಿತಿಗಳ ಹೊರತಾಗಿಯೂ ಈ ಗ್ರಂಥವು ತುಳುನಾಡಿನ ಇತಿಹಾಸಾಭ್ಯಾಸಿಗಳಿಗೆ, ಅದರಲ್ಲೂ ಮುಖ್ಯವಾಗಿ ಇಲ್ಲಿನ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪದ ಅಧ್ಯಯನಾಸಕ್ತರಿಗೆ ಒಂದು ಆಕರ ಗ್ರಂಥವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಅಂಬಲಪಾಡಿ ಇತಿಹಾಸ, ಮಂದರ್ತಿಯ ಇತಿಹಾಸ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯ, ಬಾರಕೂರು, ಉಡುಪಿ ಇತಿಹಾಸ, ತುಳುನಾಡಿನ ನಾಗಮಂಡಲ, ಆಳುಪ ಅರಸರು ಮುಂತಾದ ಹತ್ತಾರು ಕಿರುಹೊತ್ತಗೆಗಳನ್ನು ಗುರುರಾಜ ಭಟ್ಟರು ಪ್ರಕಟಿಸಿದ್ದಾರೆ. ಸುಮಾರು ೫೦ರಷ್ಟು ಅಪರೂಪದ ಶಾಸನಗಳನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ಕನ್ನಡದ ಪ್ರಾಚೀನತಮ ತಾಮ್ರ ಶಾಸನ ಎಂಬ ಹೆಸರಿಗೆ ಪಾತ್ರವಾದ ಕ್ರಿ.ಶ. ೮ನೇ ಶತಮಾನಕ್ಕನ್ವಯಿಸುವ ಬೆಳ್ಮಣ್‌ತಾಮ್ರ ಶಾಸನವು ಗುರುರಾಜ ಭಟ್ಟರ ಮಹತ್ವದ ಶೋಧಗಳಲ್ಲೊಂದು.

ಮೇಲೆ ಪ್ರಸ್ತಾಪಿಸಲಾದ ಹೆಚ್ಚಿನ ಕೃತಿಗಳೂ ಇತಿಹಾಸ ಪ್ರಾರಂಭ ಕಾಲದಿಂದ ವಿಜಯನಗರದ ಆಳ್ವಿಕೆಯ ಕೊನೆಯವರೆಗಿನ ತುಳುನಾಡಿನ ಇತಿಹಾಸದ ನಿರೂಪಣೆಗಷ್ಟೇ ತಮ್ಮ ಅಧ್ಯಯನವನ್ನು ಸೀಮಿತಗೊಳಿಸಿರುವುದನ್ನು ಕಾಣುತ್ತೇವೆ. ವಿಜಯನಗರದ ಆಳ್ವಿಕೆಯ ತುಳುನಾಡಿನ ಇತಿಹಾಸವನ್ನು ಪಿಎಚ್.ಡಿ. ಸಂಶೋಧನೆಗೆ ಆಯ್ಕೆ ಮಾಡಿಕೊಂಡು ಸೂರ್ಯನಾಥ ಕಾಮತ್‌ರವರು Tuluvas in Vijayanagara Times ಎಂಬ ಪ್ರೌಢಪ್ರಬಂಧವನ್ನು ರಚಿಸಿದ್ದರೂ ಅದು ಪ್ರಕಟಗೊಂಡಿಲ್ಲ. ವಿಜಯನಗರೋತ್ತರ ತುಳುನಾಡಿನ ಇತಿಹಾಸವನ್ನು ಕುರಿತಂತೆ ವಸಂತ ಮಾಧವ ಅವರ Political History of Kanara 1565 – 1763 ಮತ್ತು ಅಬ್ಬಕ್ಕ ದೇವಿಯರು ಮತ್ತು ಬಿ. ಎಸ್. ಶಾಸ್ತ್ರಿಯವರ Studies in India Portuguese History ಹಾಗೂ ಕೆಳದಿ ಅರಸರು ಹಾಗು ಪೋರ್ಚುಗೀಸರು ಎಂಬ ಲೇಖನ ಸಂಕಲನಗಳು ಆ ಕಾಲದ ಇತಿಹಾಸಕ್ಕೆ ಸಂಬಂಧಿಸಿದಂತೆ ಪ್ರಕಟಗೊಂಡಿರುವ ಮಹತ್ವದ ಕೃತಿಗಳು. ವಿಜಯನಗರದ ಹಾಗೂ ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಹಲವಾರು ಸ್ಥಳಿಕ ಅರಸು ಮನೆತನಗಳು ತುಳುನಾಡಿನಲ್ಲಿ ಪ್ರಭಾವಶಾಲಿಗಳಾಗಿ ಮೆರೆದದ್ದನ್ನು ಕಾಣುತ್ತೇವೆ. ಈ ಅರಸು ಮನೆತನಗಳ ಇತಿಹಾಸದ ವಿವರಗಳು ಈ ಹಿಂದೆ ಸೂಚಿಸಲಾದ ಗ್ರಂಥಗಳಲ್ಲಿ ಅಡಕಗೊಂಡಿದ್ದರೂ ಅವರ ಕುರಿತಂತೆ ಪ್ರತ್ಯೇಕವಾದ ಮತ್ತು ಬಹುಮಟ್ಟಿಗೆ ಸಮಗ್ರವಾದ ವಿವರಗಳು ಲಭ್ಯವಾಗುವುದು ‘ತುಳು ಕರ್ನಾಟಕದ ಅರಸು ಮನೆತನಗಳು’ ಕೃತಿಯಲ್ಲಿ. ಕನ್ನಡ ವಿಶ್ವವಿದ್ಯಾನಿಲಯವು ಪ್ರಕಟಿಸಿರುವ ಈ ಸಂಕಲನದಲ್ಲಿ ತುಳುನಾಡನ್ನಾಳಿದ ಹನ್ನೊಂದು ಅರಸು ಮನೆತನಗಳ ವಿವರಗಳಿವೆ.

ಕ್ರಿ.ಶ.೧೬ನೇ ಶತಮಾನದ ಪ್ರಾರಂಭದಿಂದ ೧೮ನೇ ಶತಮಾನದ ಮಧ್ಯಭಾಗದವರೆಗೆ ಸುಮಾರು ಎರಡೂವರೆ ಶತಮಾನಗಳ ಅವಧಿಯಲ್ಲಿ, ತುಳುನಾಡು ಪೋರ್ಚುಗೀಸರ ರಾಜಕೀಯ ಹಾಗೂ ಧಾರ್ಮಿಕ ಪ್ರಭಾವಗಳಿಗೊಳಗಾಗಿರುವುದನ್ನು ಗಮನಿಸಬಹುದು. ಪಿಯುಸ್‌ಫಿಡೆಲಿಸ್‌ಪಿಂಟೋ ಅವರ ಇಂಗ್ಲಿಷ್‌ಹಾಗೂ ಕನ್ನಡದಲ್ಲಿ ಪ್ರಕಟವಾಗಿರುವ History of Christians in Coastal Karanataka /ಕರಾವಳಿ ಕರ್ನಾಟಕದ ಕ್ರೈಸ್ತರ ಇತಿಹಾಸ ಎಂಬ ಕೃತಿಗಳಲ್ಲಿ ಪೋರ್ಚುಗೀಸರ ಪ್ರಭಾವದ ಹಿನ್ನೆಲೆಯಲ್ಲಿ ತುಳುನಾಡಿನ ಇತಿಹಾಸವನ್ನು ಮುಖ್ಯವಾಗಿ ಕ್ರೈಸ್ತರ ಇತಿಹಾಸವನ್ನು ನಿರೂಪಿಸುವ ಪ್ರಯತ್ನವನ್ನು ಕಾಣುತ್ತೇವೆ.

ಕ್ರಿ.ಶ. ೧೫೦೦ ರಿಂದ ೧೭೬೩ರ ವರೆಗೆ ವಿಜಯನಗರ ಮತ್ತು ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ತುಳುನಾಡಿನಲ್ಲಿ ಪೋರ್ಚುಗೀಸರ ಚಟುವಟಿಕೆಗಳು ಮತ್ತು ಅವರ ರಾಜಕೀಯ ಹಾಗೂ ಆರ್ಥಿಕ ಸಂಬಂಧಗಳ ಕುರಿತ ವಿಸ್ತೃತವಾದ ಚರ್ಚೆ ಈ ಕೃತಿಗಳಲ್ಲಿದೆ. ಜೊತೆಗೆ ಕರ್ನಾಟಕ ಕರಾವಳಿಯಲ್ಲಿ ಕ್ರೈಸ್ತ ನೆಲೆಗಳ ಹುಟ್ಟು ಹಾಗೂ ಬೆಳವಣಿಗೆ ಮತ್ತು ಇಲ್ಲಿನ ಚರ್ಚ್‌ನ ಆಡಳಿತ ವ್ಯವಸ್ಥೆಯ ವಿವರಗಳೂ ಇಲ್ಲಿವೆ. ಪೋರ್ಚುಗೀಸ್‌ ಮತ್ತು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿಯ ಕಾಗದ ಪತ್ರಗಳು, ಚರ್ಚ್‌ ದಾಖಲೆಗಳು, ಶಾಸನಗಳು ಮತ್ತು ವಿದೇಶೀ ಪ್ರವಾಸಿಗಳ ಹೇಳಿಕೆಗಳನ್ನು ಬಳಸಿಕೊಂಡು ರಚಿಸಲಾದ ಈ ಕೃತಿಗಳು ಈ ದಿಶೆಯಲ್ಲಿ ಒಂದು ಉತ್ತಮ ಪ್ರಯತ್ನ ಎನ್ನಬಹುದು.

ಪಿಯುಸ್‌ ಫಿಡೆಲಿಸ್‌ ಪಿಂಟೋರವರ ಇನ್ನೊಂದು ಮಹತ್ವದ ಕೃತಿ ‘ಆಂಗ್ಲೋ ಮೈಸೂರು ಸಂಬಂಧದ ಹಿನ್ನೆಲೆಯಲ್ಲಿ ಕರಾವಳಿಯ ಕರ್ನಾಟಕದ ಕೊಂಕಣಿ ಕ್ರೈಸ್ತರು’. ೧೭೬೧ರಿಂದ ೧೭೯೯ರ ಅವಧಿಯ ಘಟನೆಗಳನ್ನು ನಿರೂಪಿಸುವ ಈ ಕೃತಿಯು Konkani Christians in Coastal Karnataka in Anglo Mysore Relations  ಎಂಬ ಶೀರ್ಷಿಕೆಯಡಿಯಲ್ಲಿ ಆಂಗ್ಲ ಭಾಷೆಯಲ್ಲೂ ಪ್ರಕಟಗೊಂಡಿದೆ. ಕೊಂಕಣಿ ಕ್ರೈಸ್ತರು ಬ್ರಿಟೀಷರು ಮತ್ತು ಹೈದರಾಲಿ, ಕೊಂಕಣಿ ಕ್ರೈಸ್ತರು ಬ್ರಿಟೀಷರು ಮತ್ತು ಟಿಪ್ಪುಸುಲ್ತಾನ್, ೧೭೮೪ರಲ್ಲಿ ಕೊಂಕಣಿ ಕ್ರೈಸ್ತರ ಬಂಧನ ಎಂಬ ಮೂರು ಮುಖ್ಯ ಅಧ್ಯಾಯಗಳನ್ನು ಹೊಂದಿರುವ ಈ ಗ್ರಂಥವು ತುಳುನಾಡಿನಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಚಟುವಟಿಕೆಗಳನ್ನು ನಿರೂಪಿಸುವ ಕೃತಿಗಳ ಕೊರತೆಯನ್ನು ಸ್ವಲ್ಪ ಮಟ್ಟಿಗೆ ತುಂಬುತ್ತದೆ ಎನ್ನಬಹುದು.

ಈ ಹಿಂದೆ ವಿಲಿಯಂ ಮಸ್ಕರೆಂಞಸ್‌ರವರು ತಮ್ಮ ‘Hyder Ali and Tipu Sultan in Canara’  ಎಂಬ ಅಪ್ರಕಟಿತ ಕೃತಿಯಲ್ಲಿ ಕರಾವಳಿ ಕರ್ನಾಟಕದಲ್ಲಿ ಟಿಪ್ಪು ಸುಲ್ತಾನನ ಚಟುವಟಿಕೆಗಳನ್ನು ಕ್ರೈಸ್ತ ವಿರೋಧ ಎಂಬ ನೆಲೆಯಲ್ಲಿ ವಿಶ್ಲೇಷಿಸಿದ್ದರೆ ಪಿಯುಸ್‌ಪಿಂಟೋರವರು ಅವುಗಳನ್ನು ಆತನ ರಾಜನೀತಿಯ ಒಂದು ಅಂಗ ಎಂಬುದಾಗಿ ಸಮರ್ಥಿಸುತ್ತಾರೆ. ಕ್ರೈಸ್ತರ ಮೇಲಿನ ಟಿಪ್ಪು ಸುಲ್ತಾನನ ಅತಿರೇಕಗಳಿಗೆ ಕ್ರೈಸ್ತರ ಇಂಗ್ಲಿಷ್‌ ಪರವಾದ ನಿಲುವೇ ಮುಖ್ಯ ಕಾರಣ ಹೊರತು ಟಿಪ್ಪು ಸುಲ್ತಾನನ ಮತಾಂಧತೆಯಲ್ಲ ಎಂಬ ಅಭಿಪ್ರಾಯ ಈ ಕೃತಿಯುದ್ದಕ್ಕೂ ವ್ಯಕ್ತವಾಗಿದೆ. ಟಿಪ್ಪುವು ಸುಮಾರು ೭೦೦೦೦ಕ್ಕೂ ಮಿಕ್ಕಿ ಕ್ರೈಸ್ತರನ್ನು ಈ ಪ್ರದೇಶದಿಂದ ಬಂಧಿಸಿ ಕೊಂಡೊಯ್ದು ಸೆರೆಯಲ್ಲಿರಿಸಿದ್ದ ಎಂಬ ಈ ಹಿಂದಿನ ಅಭಿಪ್ರಾಯಗಳನ್ನು ಪ್ರಶ್ನಿಸುವ ಪಿಂಟೋರವರು ಅತ್ಯಂತ ಹೆಚ್ಚೆಂದರೆ ೨೦ರಿಂದ ೩೦ ಸಾವಿರ ಕ್ರೈಸ್ತರನ್ನು ಆತ ಸೆರೆಯಲ್ಲಿಟ್ಟಿರಬಹುದು ಎಂದು ಆಧಾರಗಳ ಸಹಿತ ನಿರೂಪಿಸುತ್ತಾರೆ. ಕರ್ನಾಟಕ, ಕೇರಳ, ಆಂಧ್ರ, ಮತ್ತು ತಮಿಳುನಾಡುಗಳ ವಿವಿಧ ದೇವಾಲಯಗಳಿಗೆ ಟಿಪ್ಪುವು ನೀಡಿದ ದಾನಗಳ ವಿವರ ಮತ್ತು ಮಲಬಾರ್ ಹಾಗೂ ಕೊಚ್ಚಿಯ ಸುಮಾರು ೫೬ ಹಿಂದೂ ದೇವಾಲಯ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಆತನು ನೀಡಿದ ತೆರಿಗೆರಹಿತವಾದ ಭೂದಾನಗಳ ವಿವರಗಳನ್ನು ನೀಡುವ ಮೂಲಕ ಟಿಪ್ಪುವಿನ ಪರಮತ ಸಹಿಷ್ಟುತೆಯನ್ನು ಎತ್ತಿಹಿಡಿಯುವ ಪ್ರಯತ್ನ ಈ ಕೃತಿಯಲ್ಲಿ ಕಂಡುಬರುವುದು ವಿಶೇಷ.

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನ ಪತನಾನಂತರ ೧೭೯೯ ರಲ್ಲಿ ತುಳುನಾಡು ಬ್ರಿಟೀಷರ ವಶವಾಯಿತು. ೧೭೯೯ರಿಂದ ೧೮೬೦ರ ವರೆಗಿನ ಬ್ರಿಟೀಷರ ವಸಾಹತುಶಾಹಿ ಆಡಳಿತ, ಜನಹಿತಕ್ಕೆ ವ್ಯತಿರಿಕ್ತವಾಗಿದ್ದ ಈ ಆಡಳಿತದ ವಿರುದ್ಧ ಸ್ಥಳಿಕ ಅರಸರ ಮತ್ತು ರೈತರ ಬಂಡಾಯ ಇತ್ಯಾದಿಗಳ ವಿವರಗಳನ್ನು ಎನ್. ಶ್ಯಾಮ ಭಟ್‌ರವರ South Kanara 1799-1860 ಗ್ರಂಥದಲ್ಲಿ ಕಾಣಬಹುದು. ತುಳುನಾಡನ್ನು ಬ್ರಿಟೀಷರು ವಶಪಡಿಸಿಕೊಂಡದ್ದು, ಅವರು ಜಾರಿಗೊಳಿಸಿದ ಆಡಳಿತ, ಕಂದಾಯ ವ್ಯವಸ್ಥೆ, ಭೂ ಒಡೆತನ, ಗೇಣಿ ಪದ್ಧತಿ, ಕಂದಾಯ ಮೂಲಗಳು, ಅಂದಿನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಇತ್ಯಾದಿ ವಿವರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ವಸಾಹತುಶಾಹಿ ಆಡಳಿತ ನೀತಿಯ ವಿರುದ್ಧ ವಿಟ್ಲ, ಕುಂಬಳೆ ಹಾಗೂ ನೀಲೇಶ್ವರದ ಅರಸರ ಬಂಡಾಯ, ಬ್ರಿಟಿಷರು ಜಾರಿಗೆ ತಂದ ಕಂದಾಯ ವ್ಯವಸ್ಥೆಯ ವಿರುದ್ಧ ೧೮೧೦-೧೧ರಲ್ಲಿ ಮತ್ತು ೧೮೩೦-೩೧ರಲ್ಲಿ ನಡೆದ ರೈತ ಬಂಡಾಯಗಳು ಹಾಗೂ ೧೮೩೭ರಲ್ಲಿ ನಡೆದ ಕಲ್ಯಾಣಸ್ವಾಮಿಯ ಬಂಡಾಯ ಇವುಗಳ ಕುರಿತ ಸಮಗ್ರ ವಿವರಗಳು ಮತ್ತು ವಿಶ್ಲೇಷಣೆಗಳನ್ನೊಳಗೊಂಡಿರುವುದು ಈ ಗ್ರಂಥದ ವೈಶಿಷ್ಟ್ಯ. ಆಡಳಿತ, ಕಂದಾಯ, ನ್ಯಾಯಾಂಗ ವ್ಯವಸ್ಥೆ ಮೊದಲಾದುವುಗಳಿಗೆ ಸಂಬಂಧಿಸಿದ ಮೂಲದಾಖಲೆಗಳ ವಿಸ್ತೃತವಾದ ಅಧ್ಯಯನದ ಫಲವಾಗಿ ಮೂಡಿಬಂದ ‘South Kanara 1799-1860’ ಸಂಶೋಧನ ಗ್ರಂಥವು ತುಳುನಾಡಿನಲ್ಲಿ ಬ್ರಿಟಿಷರ ಆಡಳಿತಕ್ಕೆ ಸಂಬಂಧಿಸಿದಂತೆ ಪ್ರಥಮ ಕೃತಿ ಮಾತ್ರವಲ್ಲದೆ ಅತ್ಯಂತ ಮಹತ್ವದ ಕೃತಿಯೂ ಹೌದು.

ತುಳುನಾಡಿನ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರ್ಥಿಕ ಇತಿಹಾಸದ ಅಧ್ಯಯನದ ಹಿನ್ನೆಲೆಯಲ್ಲಿ ಹಲವಾರು ಕೃತಿಗಳು ರಚನೆಗೊಂಡಿರುವುದು ಗಮನಾರ್ಹ, ಈ ಎಲ್ಲ ಕೃತಿಳೂ ಬಹುಮಟ್ಟಿಗೆ ಈ ಪ್ರದೇಶದಲ್ಲಿ ಲಭ್ಯವಿರುವ ಶಾಸನಗಳನ್ನು ಆಧರಿಸಿ ರಚಿಸಲ್ಪಟ್ಟಿವೆ. ಶೈಲಾ ಟಿ. ವರ್ಮ ಅವರ ‘ತುಳುನಾಡಿನ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಈ ಗುಂಪಿಗೆ ಸೇರುವ ಒಂದು ಮಹತ್ವದ ಕೃತಿ ಆರು ಅಧ್ಯಯನಗಳನ್ನು ಹೊಂದಿರುವ ಈ ಕೃತಿಯಲ್ಲಿ ಅತ್ಯಂತ ದೀರ್ಘವಾಗಿರುವುದು ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿದ ಅಧ್ಯಾಯ. ಸಾಂಸ್ಕೃತಿಕ ಅಧ್ಯಯನಕ್ಕೆ ಸಂಬಂಧಿಸಿದ ಕೃತಿಯಲ್ಲಿ ರಾಜಕೀಯ ಇತಿಹಾಸವೇ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿರುವುದು ಪ್ರಶ್ನಾರ್ಹವೆನಿಸಿದರೂ, ಶೈಲಾರವರು ತುಳುನಾಡಿನ ರಾಜಕೀಯ ಇತಿಹಾಸವನ್ನು ವಿಭಿನ್ನ ದೃಷ್ಟಿಕೋನದಿಂದ ವಿಶ್ಲೇಷಿಸಲು ಪ್ರಯತ್ನಿಸಿರುವುದು ಸಮಾಧನಕರ ಅಂಶ.

ಪ್ರಾಚೀನ ತುಳುನಾಡಿನ ಆಡಳಿತ ವ್ಯವಸ್ಥೆ, ಸಾಮಾಜಿಕ – ಸಾಂಸ್ಕೃತಿಕ ರೂಪುರೇಷೆಗಳು ಮತ್ತು ಧರ್ಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೃತಿಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಆಡಳಿತದ ಸ್ವರೂಪ, ಅಧಿಕಾರಿ ವರ್ಗಗಳು, ವರ್ತಕ ಸಂಘಗಳು, ತೆರಿಗೆಗಳು, ವರ್ಣ ವ್ಯವಸ್ಥೆ, ಅಳಿಯ ಸಂತಾನ, ಆರಾಧನೆ, ಆಚರಣೆ, ನಂಬಿಕೆಗಳು, ಜೈನ, ವೈಷ್ಣವ, ಶೈವ ಧರ್ಮಗಳು, ದೇವಾಲಯಗಳ ಆಡಳಿತ ಮೊದಲಾದ ಮಹತ್ವದ ವಿಷಯಗಳ ಮೇಲೆ ಬೆಳಕನ್ನು ಚೆಲ್ಲುವ ಪ್ರಯತ್ನವನ್ನಿಲ್ಲಿ ಕಾಣಬಹುದು. ತುಳುನಾಡಿನ ಶಾಸನಗಳ ನೇರ ಅಧ್ಯಯನದಿಂದ ಈ ಕೃತಿಯನ್ನು ವಿವರಿಸಲಾಗಿದೆ ಎಂದು ಹೇಳಲಾಗಿದ್ದರೂ ವಿಷಯಗಳ ಆಯ್ಕೆ ಹಾಗೂ ನಿರೂಪಣೆಯಲ್ಲಿ ಕೆ.ವಿ. ರಮೇಶ್, ಪಿ. ಗುರುರಾಜ ಭಟ್, ವಸಂತಮಾಧವ, ಬಿ. ವಸಂತ ಶೆಟ್ಟಿ  ಮುಂತಾದವರ ಕೃತಿಗಳ ದಟ್ಟವಾದ ಪ್ರಭಾವವನ್ನಿಲ್ಲಿ ಗುರುತಿಸಲು ಸಾಧ್ಯ. ತುಳುನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಕುರಿತಂತೆ ಪ್ರಕಟಗೊಂಡಿರುವ ಕೃತಿಗಳು ಅತ್ಯಂತ ಕಡಿಮೆ ಎಂಬ ದೃಷ್ಟಿಯಿಂದ ಶೈಲಾ ಅವರ ಈ ಕೃತಿಯು ಒಂದು ಸ್ವಾಗತಾರ್ಹ ಪ್ರಯತ್ನ ಎನ್ನಬಹುದು.

ತುಳುನಾಡಿನ ಶಾಸನಗಳಲ್ಲಿ ಉಲ್ಲೇಖಿತವಾದ ಸ್ಥಳನಾಮಗಳು ಮತ್ತು ವ್ಯಕ್ತಿನಾಮಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನದ ಹಿನ್ನೆಲೆಯಲ್ಲಿ ರಚಿತವಾಗಿರುವ ಪಿ. ಗಣಪಯ್ಯ ಭಟ್‌ರವರ Historical and Cultural Geography and Ethnography of Tulunadu ಎಂಬ ಅಪ್ರಕಟಿತ ಪಿಎಚ್.ಡಿ. ಪ್ರಬಂಧವು ಸಾಂಸ್ಕೃತಿಕ ಇತಿಹಾಸ ಕೃತಿಗಳ ಸಾಲಿಗೆ ಒಂದು ಮಹತ್ವದ ಸೇರ್ಪಡೆಯಾಗಿದೆ. ‘ತುಳುನಾಡಿನ ಜೈನ ಶಾಸನಗಳು’ ಈ ಗುಂಪಿಗೆ ಸೇರುವ ಇನ್ನೊಂದು ಗಮನಾರ್ಹ ಕೃತಿ. ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ಈ ಸಂಕಲನವು ಈ ಪ್ರದೇಶದ ಜೈನ ಶಾಸನಗಳು, ಸ್ಮಾರಕಗಳು, ವಾಸ್ತುಶಿಲ್ಪ, ಜೈನಸಾಹಿತ್ಯ, ಜೈನ ಮಠಗಳು ಇತ್ಯಾದಿ ವಿಷಯಗಳ ಕುರಿತ ಹದಿಮೂರು ಲೇಖನಗಳನ್ನೊಳಗೊಂಡಿದೆ.

ವೈದಿಕ, ಬೌದ್ಧ, ಜೈನ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ತುಳುನಾಡನ್ನು ಪ್ರವೇಶಿಸಿ ಇಲ್ಲಿ ತಮ್ಮ ಭದ್ರವಾದ ನೆಲೆಯನ್ನು ಕಂಡುಕೊಂಡಿವೆ. ಈ ಹಿನ್ನೆಲೆಯಲ್ಲಿ ತುಳುನಾಡಿನ ಧಾರ್ಮಿಕ ಇತಿಹಾಸಕ್ಕೆ ಸಂಬಂಧಿಸಿಂತೆ ಹಲವಾರು ಕೃತಿಗಳು ಬೆಳಕು ಕಂಡಿವೆ. ಬಿ.ಎ. ಸಾಲೆತ್ತೂರು, ಕೆ.ವಿ. ರಮೇಶ್‌, ಪಿ. ಗುರುರಾಜ ಭಟ್‌ಮೊದಲಾದವರ ಗ್ರಂಥಗಳು ಇಲ್ಲಿನ ಧಾರ್ಮಿಕ ಇತಿಹಾಸಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನೊಳಗೊಂಡಿವೆ. ಜೊತೆಗೆ ಈ ವಿಷಯದ ಕುರಿತಂತೆ ವಿಶೇಷವಾದ ಅಧ್ಯಯನಗಳೂ ನಡೆದಿವೆ. ಕೆ.ಜಿ. ವಸಂತ ಮಾಧವ ಅವರ ‘Religions in Coastal Karnataka’, ಪಿ.ಎನ್. ನರಸಿಂಹಮೂರ್ತಿಯವರ ಅಪ್ರಕಟಿತ ಪ್ರಬಂಧ ‘Jainism on the Canara Coast’, ಎಸ್.ಡಿ. ಶೆಟ್ಟಿಯವರ ‘ತುಳುನಾಡಿನ ಜೈನಧರ್ಮ’, ಪಿಯುಸ್‌ಫಿಡೆಲಿಸ್ ಪಿಂಟೋರವರ ‘ಕರಾವಳಿ ಕರ್ನಾಟಕದ ಕ್ರೈಸ್ತರ ಇತಿಹಾಸ’ ಮತ್ತು ವಹಾಬ್ ದೊಡ್ಡಮನೆಯವರ ‘Muslims in Dakshina Kannada’ ಇವುಗಳು ವಿಶೇಷವಾಗಿ ಹೆಸರಿಸಬಹುದಾದ ಕೃತಿಗಳು.

ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ, ಕ್ರಿ.ಶ. ೧೫೦೦ರಿಂದ ೧೭೬೩ರ ಅವಧಿಯಲ್ಲಿ ತುಳುನಾಡಿನಲ್ಲಿ ಪ್ರಚಲಿತವಿದ್ದ ವಿವಿಧ ಧರ್ಮಗಳ ಸ್ಥಿತಿಗತಿಗಳನ್ನು ಆಧಾರಸಹಿತವಾಗಿ ನಿರೂಪಿಸುವ ಪ್ರಯತ್ನವನ್ನು ಕೆ.ಜಿ. ವಸಂತ ಮಾಧವ ಅವರ ‘Religions in Coastal Karnataka’ ಕೃತಿಯಲ್ಲಿ ಕಾಣಬಹುದು. ಸುಮಾರು ೭೦೦ರಷ್ಟು ಶಾಸನಗಳು, ಸಾಹಿತ್ಯ ಕೃತಿಗಳು, ಕಡತಗಳು ಹಾಗೂ ಪೋರ್ಚುಗೀಸ್‌ಮತ್ತು ಇತರ ದಾಖಲೆಗಳನ್ನು ಬಳಸಿಕೊಂಡು ಸುಮಾರು ಎರಡೂವರೆ ಶತಮಾನಗಳ ಅವಧಿಯ ತುಳುನಾಡಿನ ಧಾರ್ಮಿಕ ಇತಿಹಾಸವನ್ನು ಇಲ್ಲಿ ನಿರೂಪಿಸಲಾಗಿದೆ. ತುಳುನಾಡಿನಲ್ಲಿ ಹಿಂದೂ ಧರ್ಮ, ಜೈನ ಧರ್ಮ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಇತಿಹಾಸ, ವಿವಿಧ ಧಾರ್ಮಿಕ ಸಂಸ್ಥೆಗಳು, ಇಲ್ಲಿನ ಸಾಂಸ್ಕೃತಿಕ ಜೀವನದಲ್ಲಿ ವಹಿಸಿದ ಪಾತ್ರ, ನ್ಯಾಯತೀರ್ಮಾನ, ರಾಜಕೀಯ ವಿವಾದಗಳ ತೀರ್ಮಾನ, ಕೃಷಿ, ವಿದ್ಯಾಭ್ಯಾಸ ಮೊದಲಾದ ವಿಚಾರಗಳಲ್ಲಿ ಮಠಗಳ ಪಾತ್ರ, ದೇವಾಲಯಗಳ ಆಡಳಿತ, ಅದಕ್ಕೆ ಸಂಬಂಧಿಸಿದ ವಿವಿಧ ಆಧಿಕಾರಿಗಳು ಇತ್ಯಾದಿ ಹಲವು ಮಹತ್ವಪೂರ್ಣ ವಿಚಾರಗಳನ್ನು ವಿಶ್ಲೇಷಿಸುವ ಈ ಗ್ರಂಥ ಒಂದು ಉತ್ತಮ ಸಂಶೋಧನಾ ಕೃತಿ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರು ನೂರಕ್ಕೂ ಮಿಕ್ಕಿ ದೇವಾಲಯಗಳ ಸಂಕ್ಷಿಪ್ತ ವಿವರಗಳನ್ನೊಳಗೊಂಡ ಕೃತಿ ಮುರಳೀಧರ ಉಪಾಧ್ಯ ಹಿರಿಯಡಕ  ಮತ್ತು  ಪಿ.ಎನ್. ನರಸಿಂಹಮೂರ್ತಿಯವರು ಜೊತೆಯಾಗಿ ರಚಿಸಿದ ‘ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳು’. ಕೃತಿಯ ಪ್ರಾರಂಭದಲ್ಲಿರುವ ಸಂಪಾದಕೀಯ ಮತ್ತು ಪ್ರಸ್ತಾವನೆ ಅಧ್ಯಾಯಗಳನ್ನು ಈ ಪ್ರದೇಶದ ಇತಿಹಾಸ, ವಾಸ್ತುಶಿಲ್ಪ, ಧಾರ್ಮಿಕ ಸ್ಥಿತಿಗತಿ ಇತ್ಯಾದಿಗಳ ಉಪಯುಕ್ತವಾದ ನಿರೂಪಣೆಯಿದೆ. ಗ್ರಂಥದ ಕೊನೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ತಾಲೂಕಿನ ಸಾವಿರಾರು ದೇವಾಲಯಗಳು, ದೇವಸ್ಥಾನಗಳ, ಮಠಗಳ ಹಾಗೂ ಬಸದಿಗಳ ಪಟ್ಟಿಯನ್ನು ನೀಡಲಾಗಿದೆ. ಇತಿಹಾಸ ಕೃತಿಗಳ ಸಾಲಿಗೆ ಈ ಗ್ರಂಥವನ್ನು ಸೇರಿಸುವುದು ಕಷ್ಟಸಾಧ್ಯವಾದರೂ ದೇವಾಲಯಗಳ ಅಧ್ಯಯನಾಸಕ್ತರಿಗೆ ಇದೊಂದು ಉಪಯುಕ್ತ ಕೈಪಿಡಿಯಾಗಿದೆ. ಎನ್ನಬಹುದು.

ತುಳುನಾಡಿನಲ್ಲಿ ಜೈನಧರ್ಮದ ಹುಟ್ಟು, ಬೆಳವಣಿಗೆ ಹಾಗೂ ಜೈನ ಸಂಸ್ಕೃತಿ ಮತ್ತು ಪರಂಪರೆಯ ಸಮಗ್ರ ಚಿತ್ರಣವನ್ನು ಎಸ್.ಡಿ. ಶೆಟ್ಟಿಯವರ ‘ತುಳುನಾಡಿನಲ್ಲಿ ಜೈನ ಧರ್ಮ’ ಕೃತಿಯಲ್ಲಿ ಕಾಣಬಹುದು. ಗ್ರಂಥದ ಪ್ರಾರಂಭದ ಅಧ್ಯಾಯಗಳಲ್ಲಿ ತುಳುನಾಡಿನ ಭೌಗೋಳಿಕ ವ್ಯಾಪ್ತಿ, ಜೈನಧರ್ಮದ ಆಗಮನ, ವಿವಿಧ ಅರಸು ಮನೆತನಗಳ ಆಳ್ವಿಕೆಯಲ್ಲಿ ಜೈನಧರ್ಮದ ಬೆಳವಣಿಗೆ, ಸ್ಥಳಿಕ ಜೈನ ಅರಸು ಮನೆತನಗಳು ಇತ್ಯಾದಿ ವಿವರಗಳಿವೆ. ಧಾರ್ಮಿಕ ವಿಶ್ಲೇಷಣೆ, ಸಾಮಾಜಿಕ ವಿಶ್ಲೇಷಣೆ, ಜೈನ ಸಾಹಿತ್ಯ, ಜೈನ ಕಲೆಗಳು ಕುರಿತ ಅಧ್ಯಾಯಗಳಲ್ಲಿ ಈ ವಿಷಯಗಳಿಗೆ ಸಂಬಂಧಿಸಿದ ಸುದೀರ್ಘವಾದ ನಿರೂಪಣೆಯಿದೆ. ತುಳುನಾಡಿನಲ್ಲಿ ಜೈನ ಧರ್ಮದ ಸ್ವರೂಪ, ವಿವಿಧ ಪಂಗಡಗಳು, ವರ್ಣ – ಗೋತ್ರ – ಬಳಿಗಳು, ವಿವಿಧ ಸಂಸ್ಕಾರಗಳು, ದಾನಗಳು, ಆರಾಧನಾ ವಿಧಿಗಳು, ಆಚರಣೆಗಳು ಹಾಗೂ ಹಬ್ಬಗಳ ವಿವರಗಳನ್ನು ಧಾರ್ಮಿಕ ವಿಶ್ಲೇಷಣೆಯಡಿ ಯಲ್ಲಿ ದಾಖಲಿಸಲಾಗಿದ್ದರೆ ಜಾತಿಪದ್ಧತಿ, ಕುಟುಂಬ ವ್ಯವಸ್ಥೆ, ಉಡುಗೆ ತೊಡುಗೆ, ಅಳಿಯ ಸಂತಾನ, ಶವ ಸಂಸ್ಕಾರ, ನಂಬಿಕೆಗಳು, ವ್ಯಾಪಾರ, ಉದ್ಯೋಗ, ಮಠಗಳು, ಕ್ರೀಡೆಗಳು ಮೊದಲಾದ ಮಹತ್ವದ ವಿಚಾರಗಳನ್ನು ಸಾಮಾಜಿಕ ವಿಶ್ಲೇಷಣೆಯಡಿ ಚರ್ಚಿಸಲಾಗಿದೆ. ತುಳುನಾಡಿನ ಜೈನ ಸಾಹಿತ್ಯ ಹಾಗೂ ಜೈನ ವಾಸ್ತುಶಿಲ್ಪದ ಕುರಿತ ಅಧ್ಯಾಯನಗಳೂ ಅತ್ಯಂತ ಮಾಹಿತಿಪೂರ್ಣ ವಾಗಿವೆ. ಉತ್ತರ ಕನ್ನಡ ಜಿಲ್ಲೆಯ ನಗಿರೆ, ಹಾಡುವಳ್ಳಿಯನ್ನೊಳಗೊಂಡ ಭಾಗವೇ ಮೂಲ ತುಳುನಾಡು; ತುಳುಭಾಷೆಯನ್ನಾಡುವ ಜನರು ವಾಸವಾಗಿರುವುದರಿಂದ ತುಳುನಾಡು ಎಂಬ ಹೆಸರು ಈ ಪ್ರದೇಶಕ್ಕೆ ಬಂದಿರಬೇಕು; ಕ್ರಿ.ಶ. ೧-೨ನೇ ಶತಮಾನದ ಸುಮಾರಿಗೆ ಜೈನಧರ್ಮ ತುಳುನಾಡಿನಲ್ಲಿತ್ತು; ಜೈನರು ಮತಾಂತರ ಹೊಂದಿ ಬಂಟರಾಗಿರಬಹುದು – ಮೊದಲಾದ ಕೃತಿಕಾರರ ಅಭಿಪ್ರಾಯಗಳು ಪ್ರಶ್ನಾರ್ಹವೆನಿಸಿದರೂ ತುಳುನಾಡಿನಲ್ಲಿ ಜೈನಧರ್ಮದ ಸಮಗ್ರವಾದ ಮಾಹಿತಿಯನ್ನೊದಗಿಸುವಲ್ಲಿ ಅವರು ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿರುವ ಸೆವೆರಿನ್ ಸಿಲ್ವಾರವರ History of Christianity in Canara ತುಳುನಾಡಿನಲ್ಲಿ ಕ್ರೈಸ್ತ ಧರ್ಮದ ಇತಿಹಾಸ ಮತ್ತು ಬೆಳವಣಿಗೆಯನ್ನು ನಿರೂಪಿಸುವ ಪ್ರಥಮ ಕೃತಿ ಎಂಬ ಹೆಸರಿಗೆ ಪಾತ್ರವಾಗಿದೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರತ್ಯೇಕವಾಗಿ ಪ್ರಕಟಗೊಂಡಿರುವ ಪಿಯುಸ್ ಇಡೆಲಿಸ್ ಪಿಂಟೋರವರ ‘ಕರಾವಳಿ ಕರ್ನಾಟಕದ ಕ್ರೈಸ್ತರ ಇತಿಹಾಸ’ವು ಈ ಸಾಲಿಗೆ ಇತ್ತೀಚೆಗೆ ಸೇರ್ಪಡೆಗೊಂಡ ಕೃತಿಯಾಗಿದ್ದು ಇದರ ವಿವರಗಳನ್ನು ಈಗಾಗಲೇ ಚರ್ಚಿಸಲಾಗಿದೆ.

ಕ್ರೈಸ್ತ ಧರ್ಮದಂತೆಯೇ ಇಸ್ಲಾಂ ಧರ್ಮವೂ ಕೂಡ ಈ ಪ್ರದೇಶದಲ್ಲಿ ಬಹುಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದು ಇಲ್ಲಿನ ವ್ಯಾಪಾರ ವ್ಯವಹಾರಗಳ ಬೆಳವಣಿಗೆಯಲ್ಲಿ ಇವರು ಅತ್ಯಂತ ಮಹತ್ವದ ಪಾತ್ರ ವಹಿಸಿರುವುದನ್ನು ಗುರುತಿಸಬಹುದು. ಆದರೆ ತುಳುನಾಡಿನಲ್ಲಿ ಇಸ್ಲಾಂ ಧರ್ಮೀಯರ ಇತಿಹಾಸ ಮತ್ತು ಚಟುವಟಿಕೆಗಳನ್ನು ಅಧ್ಯಯನ ಮಾಡುವ ಯಾವುದೇ ಗಂಭೀರ ಪ್ರಯತ್ನಗಳು ನಡೆಯದಿರುವುದು ಆಶ್ಚರ್ಯಕರ. ಈ ಕುರಿತಂತೆ ಗಮನಕ್ಕೆ ಬರುವ ಏಕಮಾತ್ರ ಪ್ರಯತ್ನವೆಂದರೆ ವಹಾಬ್‌ದೊಡ್ಡಮನೆ ಅವರ Muslims in Dakshina Kannada.

ತುಳುನಾಡಿನಲ್ಲಿ ಮುಸ್ಲಿಮರ ಇತಿಹಾಸವನ್ನು ಕ್ರಿ.ಶ. ೭ನೆಯ ಶತಮಾನದಷ್ಟು ಹಿಂದಕ್ಕೊಯ್ಯುವ ವಹಾಬ್‌ದೊಡ್ಡಮನೆ ಅವರು ಅಲ್ಲಿಂದ ಬ್ರಿಟೀಷರ ಆಳ್ವಿಕೆಯ ಕೊನೆಯ ತನಕದ ಅವಧಿಯಲ್ಲಿ ಈ ಪ್ರದೇಶದಲ್ಲಿ ಮುಸ್ಲಿಮರ ಚಟುವಟಿಕೆಗಳ ಚಿತ್ರಣವನ್ನು ನೀಡಲು ಪ್ರಯತ್ನಿಸಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ಲೇಖಕರು ಯಾವುದೇ ಪರಿಣತ ಇತಿಹಾಸಕಾರರಿಗೆ ಕಡಿಮೆ ಇಲ್ಲದಂತೆ ಶಾಸನಗಳು, ಪ್ರಕಟಿತ ಕೃತಿಗಳು, ಕಾಗದಪತ್ರಗಳು, ವಿದೇಶಿ ದಾಖಲೆಗಳು ಹಾಗೂ ಲಭ್ಯವಿರುವ ಎಲ್ಲ ಆಕರಗಳನ್ನು ತಮ್ಮ ಕೃತಿರಚನೆಯಲ್ಲಿ ಸಮರ್ಥವಾಗಿ ಬಳಸಿಕೊಂಡಿರುವುದು ವಿಶೇಷ. ದಕ್ಷಿಣ ಕನ್ನಡದಲ್ಲಿ ಟೀಪು ಸುಲ್ತಾನರ ರಾಜಕೀಯ ಚಟುವಟಿಕೆಗಳು ಮತ್ತು ಈ ಹಿನ್ನೆಲೆಯಲ್ಲಿ ಆತನ ವ್ಯಕ್ತಿತ್ವದ ವಿಶ್ಲೇಷಣೆ ಕುರಿತಂತೆ ಕುತೂಹಲಕರ ವಿವರಗಳು ಈ ಗ್ರಂಥದಲ್ಲಿವೆ. ಬ್ಯಾರಿ, ದಖ್ಖಣಿ, ನವಾಯತ, ಮೆಮನ್, ಬೊಹ್ರಾ ಮೊದಲಾದ ವಿವಿಧ ಮುಸ್ಲಿಂ ಪಂಗಡಗಳ ಚಟುವಟಿಕೆಗಳು ಈ ಕೃತಿಯಲ್ಲಿ ಅಡಕಗೊಂಡಿವೆ. ಜೊತೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ೪೦೧ ಮಸೀದಿಗಳ ಪಟ್ಟಿಯೂ ಇಲ್ಲಿದೆ. ಗ್ರಂಥದ ಕೊನೆಯಲ್ಲಿ ಕೆಲವು ಶಾಸನಗಳ ಹಾಗೂ ಇತರ ದಾಖಲೆಗಳ ಮೂಲ ಪಠ್ಯವನ್ನು ನೀಡಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಬಹುಮಟ್ಟಿಗೆ ನಿರ್ಲಕ್ಷಿತವಾಗಿರುವ ತುಳುನಾಡಿನಲ್ಲಿ ಮುಸ್ಲಿಮರ ಇತಿಹಾಸದ ಸಮಗ್ರ ಅಧ್ಯಯನವನ್ನು ಕೈಗೊಳ್ಳುವವರಿಗೆ ಈ ಗ್ರಂಥವು ಒಂದು ಉತ್ತಮ ಮಾದರಿಯನ್ನೊದಗಿಸಿದೆ ಎಂದರೆ ಅತಿಶಯೋಕ್ತಿಯಾಗದು.

ತುಳುನಾಡಿನ ಸಾಮಾಜಿಕ – ಆರ್ಥಿಕ ಇತಿಹಾಸದ ಕುರಿತಂತೆ ನಿರ್ದಿಷ್ಟವಾಗಿ ರಚಿತವಾದ ಕೃತಿಗಳು ಸಂಖ್ಯೆಯ ದೃಷ್ಟಿಯಿಂದ ಅತ್ಯಲ್ಪ. ಇರುವ ಕೆಲವು ಕೃತಿಗಳೂ ಪಿಎಚ್.ಡಿ. ಪ್ರಬಂಧಗಳಾಗಿದ್ದು ಅವುಗಳು ಅಪ್ರಕಟಿತವಾಗಿಯೇ ಉಳಿದುಕೊಂಡಿವೆ. ಈ ಪೈಕಿ ಎಚ್.ಆ. ಕರುಣಾಕರ ಅವರ Socio economic conditions in South Kanara 1860-1956, ಬಿ. ಜಗದೀಶ ಶೆಟ್ಟಿಯವರ The Agro economic relations and Social structure in Dakshina Kannada, ಪೀಟರ್ ವಿಲ್ಸನ್ ಪ್ರಭಾಕರ್ ರವರ Basel Mission in Sounth Kanara ಮತ್ತು ಮಾಲತಿ ಮೂರ್ತಿಯವರ Trade Commerce in colonical South Kanara ಗಮನಾರ್ಹವಾದುವು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆ. ಜಿ. ವಸಂತ ಮಾಧವ ಅವರ Western Karnataka, it’s Agrarian relations ಒಂದು ಮಹತ್ವದ ಪ್ರಕಟಿತ ಕೃತಿ. ನೆರೆಯ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಉತ್ತರ ಕನ್ನಡ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಈ ಪ್ರದೇಶದಲ್ಲಿ ಕ್ರಿ.ಶ. ೧೫೦೦-೧೮೦೦ರ ಅವಧಿಯಲ್ಲಿ ರೂಪುಗೊಂಡ ಕೃಷಿಕೇಂದ್ರಿತ ಅರ್ಥ ವ್ಯವಸ್ಥೆಯ ಚಿತ್ರಣವೊಂದನ್ನು ನೀಡುವ ಪ್ರಯತ್ನವನ್ನು ಈ ಕೃತಿಯಲ್ಲಿ ಕಾಣಬಹುದು. ಕೃಷಿ ಭೂಮಿಯ ವಿಂಗಡನೆ, ಭೂ ಒಡೆತನ, ಕೃಷಿ ವಿಧಾನಗಳು, ಉತ್ಪನ್ನಗಳು, ರೈತಸಮುದಾಯ, ಭೂವ್ಯವಹಾರ, ಭೂ ಕಂದಾಯ, ಮತ್ತು ಅದರ ಸಾಮಾಜಿಕ ಪರಿಣಾಮಗಳು ಮುಂತಾದ ಅತಿ ಮಹತ್ವದ ವಿಚಾರಗಳು ಈ ಕೃತಿಯಲ್ಲಿ ಚರ್ಚಿತವಾಗಿವೆ. ಗ್ರಂಥದ ಕೊನೆಯಲ್ಲಿ ೧೧ ಶಾಸನಗಳು, ೬ ಕಾಗದ ಪತ್ರಗಳು ಹಾಗೂ ೪ ಕಡತಗಳ ಪೂರ್ಣ ಪಾಠಗಳನ್ನು ನೀಡಲಾಗಿದೆ. ಜೊತೆಗೆ ಸುಮಾರು ೪೬ ಪುಟಗಳಲ್ಲಿ ನಮೂದಿಸಲಾಗಿರುವ ಭೂಸ್ವರೂಪ, ಒಡೆತನ, ಕೃಷಿ ಆಡಳಿತ, ಕಂದಾಯ, ಬೆಳೆ, ವ್ಯವಹಾರ ಮುಂತಾದ ವಿಚಾರಗಳಿಗೆ ಸಂಬಂಧಿಸಿದ  ೪೭೫ಕ್ಕೂ ಮಿಕ್ಕಿ ಪಾರಿಭಾಷಿಕ ಪದಗಳ ಅರ್ಥ ಮತ್ತು ಆಕರಗಳ ಪಟ್ಟಿಯು ಈ ಗ್ರಂಥದ ಉಪಯುಕ್ತತೆಯನ್ನು ಹೆಚ್ಚಿಸಿದೆ. ಕೃಷಿ ಕೇಂದ್ರಿತ ಅರ್ಥ ವ್ಯವಸ್ಥೆಯೇ ಪ್ರಧಾನವಾಗಿದ್ದ ತುಳುನಾಡಿನ ಆರ್ಥಿಕ ಇತಿಹಾಸವನ್ನು ನಿರೂಪಿಸುವ ಈ ಗ್ರಂಥವು ಈ ದೃಷ್ಟಿಯಿಂದ ಒಂದು ಮಹತ್ವದ ಕೊಡುಗೆ ಎನ್ನಬಹುದು.

ಅರ್ಥವ್ಯವಸ್ಥೆಯ ಒಂದು ಭಾಗವೇ ಆಗಿರುವ ತುಳುನಾಡಿನ ನಾಣ್ಯಗಳ ಕುರಿತ ಸ್ವತಂತ್ರ ಅಧ್ಯಯನದ ಕೊರತೆಯನ್ನು ತುಂಬುವಲ್ಲಿ ಗೋವಿಂದರಾಯ ಪ್ರಭು ಮತ್ತು ಎಂ. ನಿತ್ಯಾನಂದ ಪೈ ಯವರ  The Alupas: coinage and history ಕೃತಿಯು ಬಹುಮಟ್ಟಿಗೆ ಸಫಲವಾಗಿದೆ. ತಮಿಳುನಾಡಿನ ಪಾಂಡ್ಯರ ನಾಣ್ಯಗಳೆಂದು ಈ ಹಿಂದೆ ತಪ್ಪಾಗಿ ಗುರುತಿಸಲ್ಪಟ್ಟಿದ್ದ ಜೋಡಿ ಮೀನುಗಳ ಚಿತ್ರ ಹಾಗೂ ‘ಪಾಂಡ್ಯ ಧನಂಜಯ’ ಎಂಬ ಬರಹವನ್ನು ಹೊಂದಿದ್ದ ಚಿನ್ನದ ನಾಣ್ಯಗಳನ್ನು ತುಳುನಾಡನ್ನಾಳಿದ ಆಳುಪರ ನಾಣ್ಯಗಳೆಂದು ಖಚಿತವಾಗಿ ಗುರುತಿಸುವ ಮೂಲಕ ಈ ಅಧ್ಯಯನ ವಿಭಾಗಕ್ಕೆ ಹೊಸ ಆಯಾಮವನ್ನು ನೀಡಿದವರು ಎಂ. ಮುಕುಂದ ಪ್ರಭು. ಈ ಹಿನ್ನೆಲೆಯಲ್ಲಿ ರಚಿತವಾದ ಮೇಲೆ ಉಲ್ಲೇಖಿಸಲಾದ ಕೃತಿಯು ಆಳುಪರ ನಾಣ್ಯಗಳ ಕುರಿತ ಪ್ರಥಮ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ೨೦೦ ಪುಟಗಳ ಈ ಗ್ರಂಥದ ಮೊದಲ ೯೪ ಪುಟಗಳಲ್ಲಿ ತುಳುನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನವನ್ನು ಕಾಣಬಹುದು. ಈ ಭಾಗದಲ್ಲಿ, ವಿಷಯ ಮಂಡನೆಯ ಸಂದರ್ಭ ಹಾಗೂ ಆಕರಗಳನ್ನು ಅರ್ಥೈಸಿಕೊಳ್ಳುವ ಸಂದರ್ಭ ಲೇಖಕರು ಕೆಲವೆಡೆಗಳಲ್ಲಿ ಎಡವಿದ್ದರೂ ಮುಂದಿನ ನೂರಕ್ಕೂ ಹೆಚ್ಚು ಪುಟ್ಟಗಳಲ್ಲಿ ನೀಡಲಾದ ನಾಣ್ಯಗಳ ಕುರಿತ ವಿವರಗಳು ಈ ನ್ಯೂನತೆಯನ್ನು  ತುಂಬುವಲ್ಲಿ ಶಕ್ತವಾಗಿದೆ. ಸುಮಾರು ೧೭೫ಕ್ಕೂ ಮಿಕ್ಕಿ ಆಳುಪರ ವಿವಿಧ ಚಿನ್ನದ ನಾಣ್ಯಗಳ ವರ್ಣಚಿತ್ರಗಳು, ರೇಖಾ ಚಿತ್ರಗಳು ಹಾಗೂ ಬರಹಗಳು, ಅವುಗಳ ಗಾತ್ರ, ಭಾರ ಇತ್ಯಾದಿ ಸಮಗ್ರ ವಿವರಗಳನ್ನು ಒಳಗೊಂಡಿರುವ ಈ ಕೃತಿಯು ನಾಣ್ಯ ಶಾಸ್ತ್ರದ ಅಧ್ಯಯನಕ್ಕೆ ಒಂದು ಗಮನಾರ್ಹ ಕೊಡುಗೆಯಾಗಿದೆ.

ತುಳುನಾಡಿನ ಐತಿಹಾಸಿಕ ಮಹತ್ವದ ಕೆಲವು ಸ್ಥಳಗಳ ಕುರಿತಂತೆ ರಚಿತವಾದ ಅಧ್ಯಯನ ಗ್ರಂಥಗಳು ತುಳುವ ಇತಿಹಾಸಾಧ್ಯಯನಕ್ಕೆ ಪೂರಕವಾಗಿವೆ. ಪ್ರಾಚೀನ ತುಳುನಾಡಿನ ರಾಜಧಾನಿಯಾಗಿದ್ದ ಬಾರ್ಕೂರಿನ ಇತಿಹಾಸ ಮತ್ತು ಸಂಸ್ಕೃತಿಯ ಸಮಗ್ರ ವಿವರಗಳನ್ನೊಳಗೊಂಡ ಬಿ. ವಸಂತ ಶೆಟ್ಟಿಯವರ ಅಪ್ರಕಟಿತ ಪಿಎಚ್.ಡಿ. ಪ್ರಬಂಧ Barkur : A Metropolitan city of Antiquity ಈ ದೃಷ್ಟಿಯಿಂದ ಒಂದು ಸ್ವಾಗತಾರ್ಹ ಪ್ರಯತ್ನ. ಮೋಹನ ಕೃಷ್ಣ ರೈಯವರ Urbanisation of Mangalore : A colonial experience ಮತ್ತು ವೈ ಉಮಾನಾಥ ಶೆಣೈಯವರ Region and Religion-Dharmasthala A Study ಎಂಬ ಅಪ್ರಕಟಿತ ಪಿಎಚ್‌.ಡಿ. ಪ್ರಬಂಧಗಳು ಈ ಸಾಲಿಗೆ ಸೇರುವ ಗಮನಾರ್ಹ ಕೃತಿಗಳು. ಇವಲ್ಲದೆ ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ಮಹತ್ವದ ಕ್ಷೇತ್ರಗಳಾದ ಮೂಡುಬಿದಿರೆ, ಬ್ರಹ್ಮಾವರ, ಬಾರಕೂರು, ಕಾರ್ಕಳ, ಕೋಟೇಶ್ವರ, ಪುತ್ತೂರು ಕುಂದಾಪುರ, ಮೂಲ್ಕಿ, ವರಾಂಗ, ವೇಣೂರು, ಹಟ್ಟಿಯಂಗಡಿ, ಕದ್ರಿ, ಕಾಂತಾವರ, ಬಸ್ರೂರು ಮುಂತಾದ ಸ್ಥಳಗಳ ಕುರಿತು ಪ್ರಕಟಗೊಂಡಿರುವ ಹೊತ್ತಗೆಗಳು ಸ್ಥಳೀಯ ಇತಿಹಾಸಾಭ್ಯಾಸಿಗಳಿಗೆ ಉಪಯುಕ್ತ ಮಾಹಿತಿಗಳನ್ನೊದಗಿಸುತ್ತವೆ.

ಗಡಿನಾಡಾದ ಕಾಸರಗೋಡಿನ ಇತಿಹಾಸ, ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಕೃತಿಗಳ ಪೈಕಿ ಉದಯವರ್ಮ ರಾಜ ಅವರ ‘ತುಳುನಡಿನ ಗತ ವೈಭವ’, ಉಪ್ಪಂಗಳ ರಾಮ ಭಟ್ಟರ ‘ಗಡಿನಾಡು ಕಾಸರಗೋಡು’ ಮತ್ತು ಶಿವಾನಂತ ಬೇಕಲ ಅವರ ‘ಬೇಕಲ ಕೋಟೆ, ಒಂದು ಚಾರಿತ್ರಿಕ ಅಧ್ಯಯನ’ ಇವುಗಳನ್ನು ವಿಶೇಷವಾಗಿ ಹೆಸರಿಸಬಹುದು. ತುಳುನಾಡಿನ ಒಂದು ಭಾಗವೇ ಆಗಿದ್ದ ಕಾಸರಗೋಡು ಪ್ರದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ವಿವರಗಳನ್ನೊದಗಿಸುವಲ್ಲಿ ಈ ಕೃತಿಗಳು ಸ್ವಲ್ಪ ಮಟ್ಟಿಗೆ ಸಫಲವಾಗಿವೆ.

ತುಳುನಾಡಿನ ಇತಿಹಾಸ ಮತ್ತು ಸಂಸ್ಕೃತಿಯ ಕುರಿತಂತೆ ನೂರಾರು ಲೇಖನಗಳು ವಿವಿಧ ಸ್ಮರಣ ಸಂಚಿಕೆಗಳಲ್ಲಿ ಹಾಗೂ ಅಭಿನಂದನ ಗ್ರಂಥಗಳಲ್ಲಿ ಪ್ರಕಟಗೊಂಡಿವೆ. ಕೆಲವಾರು ವಿದ್ವಾಂಸರು ತಮ್ಮ ಸಂಶೋಧನ ಲೇಖನಗಳ ಸಂಗ್ರಹವನ್ನು ಗ್ರಂಥ ರೂಪದಲ್ಲಿ ಪ್ರಕಟಿಸಿರುವುದೂ ಉಂಟು. ಇಂತಹ ಬಿಡಿ ಲೇಖನಗಳನ್ನು ಮತ್ತು ಲೇಖನ ಸಂಗ್ರಹಗಳನ್ನು ಈ ಲೇಖನದ ವ್ಯಾಪ್ತಿಯೊಳಗೆ ತರುವುದು ಸುಲಭ ಸಾಧ್ಯವಲ್ಲ. ತಮ್ಮ ಲೇಖನಗಳ ಹಾಗೂ ಕಿರು ಹೊತ್ತಗೆಗಳ ಮೂಲಕ ತುಳುನಾಡಿನ ಇತಿಹಾಸದ ವಿಭಿನ್ನ ವಿಷಯಗಳ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದ ಹವ್ಯಾಸಿ ಇತಿಹಾಸಕಾರರಾದ ಕಡವ ಶಂಭು ಶರ್ಮ, ಎಂ. ಬಾಬು, ಲೋಕನಾಥ ಶಾಸ್ತ್ರಿ, ಡಿ. ಪುಟ್ಟ ಸ್ವಾಮಿ, ಸುರತ್ಕಲ್ ವೆಂಕಟರಾಯಾಚಾರ್ಯ, ಎಂ.ಎಂ. ಪ್ರಭು, ಪು. ಶ್ರೀನಿವಾಸ ಭಟ್ಟ ಮುಂತಾದವರ ಕೊಡುಗೆಗಳನ್ನಿಲ್ಲಿ ವಿಶೇಷವಾಗಿ ಉಲ್ಲೇಖಿಸಲೇ ಬೇಕು.

ಪ್ರಸ್ತುತ ಲೇಖನದ ಸೀಮಿತ ವ್ಯಾಪ್ತಿಯಲ್ಲಿ, ತುಳುನಾಡಿನ ಇತಿಹಾಸಾಧ್ಯಯನಕ್ಕೆ ಸಂಬಂಧಿಸಿದಂತೆ ಈ ತನಕ ಬೆಳಕು ಕಂಡ ಕೃತಿಗಳನ್ನು ಸಂಕ್ಷಿಪ್ತವಾಗಿ ಅವಲೋಕಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ದೃಷ್ಟಿಯಿಂದ ಈ ಲೇಖನವು ಸಮಗ್ರವೂ ಪರಿಪೂರ್ಣವೂ ಆಗಿದೆ ಎಂಬ ಹೇಳುವಂತಿಲ್ಲ. ಕೆಲವಾರು ಮಹತ್ವದ ಕೃತಿಗಳು ಕಣ್ತಪ್ಪಿ ಹೋಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ತುಳುವ ಇತಿಹಾಸಾಧ್ಯಯನ ಕುರಿತಂತೆ ಈ ತನಕ ಉತ್ತಮವಾದ ಪ್ರಯತ್ನಗಳು ನಡೆದಿವೆ ಮತ್ತು ಈ ವಿಚಾರದಲ್ಲಿ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ವಿಪುಲವಾದ ಅವಕಾಶಗಳಿವೆ ಎನ್ನಬಹುದು.

ಅನುಬಂಧ -೧

ತುಳುವ ಇತಿಹಾಸಾಧ್ಯಯನ – ಕೆಲವು ಪಿಎಚ್.ಡಿ. ಪ್ರಬಂಧಗಳು

1. Ramesh K.V., 1965, A History of South Kanara, Karnataka University.

2. Suryanatha Kamath U., 1965, Tuluva in Vijayanagara Times, Bombay university.

3. Gururaja Bhat P. 1967. A Political and Cutural History of Tulunadu – from the earliest times upto 1600 A.D. Mysore University.

4. Shastry B.S. 1969, The Portuguese in Kanara Bombay University Vasantha Madhava K.G., 1976, A Political History of Canara 1565-1763 Karnataka University.

5. Narasimhamurthy P.N., 1983, Jainism  in canara coast Mysore University.

6. Vasantha Shetty B., 1984, Barkur-A Metropolitan city of Antiquity, Mysore Univeristy.

7. Karunakara H.R. 1985, Socioeconomic conditions in South Kanara 1860-1956 Mysore University.

8. Shyam Bhat N. 1989, South Kanara (1799-1860)- A Study in Colonial administration and regional response, Mangalore University.

9. Peter Wilson Prabhakar, 1989, Basel Mission in South Kanara Mangalore Univesity.

10. Jagadeesh Shetty B., 1992 The Agro economic relations and Social structure in Dakshina Kannada 1000-1600A.D. Mangalore University.

11. Malathy M. Moorthy 1992 Trade and Commerce in Colonial South Kanara Mangalore University.

12. Ganapayya Bhat P. 1995 Historical and cultural Geography and Ethnography of Tulunadu, Mysore University.

13. Pius Fidelis Pinto 1998 Christianity in Coastal Karnataka, 1500-1763, Mysore University.

14. ಶೈಲಾಬಾಯಿ ಯು. ೧೯೯೮ ತುಳುನಾಡಿನ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಮಂಗಳೂರು ವಿಶ್ವವಿದ್ಯಾನಿಲಯ.

15. ಎಸ್. ಡಿ. ಶೆಟ್ಟಿ ೧೯೯೯ ತುಳುನಾಡಿನ ಜೈನಧರ್ಮ-ಒಂದು ಸಾಂಸ್ಕೃತಿಕ ಅಧ್ಯಯನ ಮಂಗಳೂರು ವಿಶ್ವವಿದ್ಯಾನಿಲಯ.

16. Mohan krishna Rai K. 2003 Urbanisation of Mangalore – A Colonial Experience Mangalore University.

17. Y. Umanatha Shenoy 2004, Region and Religion- Dharmasthala, A Study Mysore University.

18. ಈ ಪ್ರಬಂಧಗಳು ಪ್ರಕಟಗೊಂಡಿವೆ.

 

ಅನುಬಂಧ – ೨

ತುಳುವ ಇತಿಹಾಸ – ಕೆಲವು ಮಹತ್ವದ ಕೃತಿಗಳು

೧. ಶೀನಪ್ಪ ಹೆಗ್ಡೆ ನಂದೊಳ್ಗೆ ಅಮುಣಿಂಜೆ ಗುತ್ತು, ೧೯೧೯, ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾನ ಪಾಂಡ್ಯರಾಯನ ಅಳಿಯಕಟ್ಟು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, ದ್ವಿತೀಯ ಮುದ್ರಣ ೧೯೮೧).

೨. ಗಣಪತಿ ರಾವ್‌ಐಗಳ್‌ಎಂ., ೧೯೨೩, ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ (ದ್ವಿತೀಯ ಮುದ್ರಣ ೨೦೦೪).

೩. Moraes George M., 1927, Mangalore Historical Sketch, Mangalore.

೪.  Saletore B.A. 1936 Ancient Karnataka vol I, History of Tuluva Oriental Book Agency Poona.

೫. ಕೇಶವ ಕೃಷ್ಣ ಕುಡ್ವ ೧೯೪೮ ದಕ್ಷಿಣ ಕನ್ನಡದ ಇತಿಹಾಸ ಮಂಗಳೂರು ಕಿಲ್ಲೆ ಎನ್. ಎಸ್. ಶೀನಪ್ಪ ಹೆಗ್ಡೆ ಎನ್. ಎ. ೧೯೫೪ ಪ್ರಾಚೀನ ತುಳುನಾಡು ಮಂಗಳೂರು.

೬. Silva, Severine 1958, 1961 History of Christianity in Canara Vol I and II Karwar.

೭. ಗುರುರಾಜ ಭಟ್ಟ ಪಿ. ೧೯೬೩ ತುಳುನಾಡು, ಭವ್ಯವಾಣಿ, ಉಡುಪಿ.

೮. ರಮೇಶ್‌ ಕೆ.ವಿ. ೧೯೬೯ ತುಳುನಾಡಿನ ಇತಿಹಾಸ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

೯. Gururaj Bhat P. 1969 Antiquities of south Kanara Udupi.

೧೦. Ramesh K.V. 1970 A History of South Kanara Karnataka University Dharwar.

ಶಾಸ್ತ್ರಿ ಬಿ.ಎಸ್. ೧೯೭೨ ಕೆಳದಿ ಅರಸರು ಹಾಗೂ ಪೋರ್ಚುಗೀಸರು ಕರ್ನಾಟಕ  ವಿ.ವಿ. ಧಾರವಾಡ.

೧೧. Gururaja Bhat P. 1975 Studies in Tuluve History and Culture Manipal.

೧೨. ಕುಶಾಲಪ್ಪ ಗೌಡ ಕೆ. ಚಿನ್ನಪ್ಪ ಗೌಡ ಕೆ. ೧೯೮೩ ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು ಧರ್ಮಸ್ಥಳ ಮಂಜುನಾಥೇಶ್ವರ ಪುಸ್ತಕ ಪ್ರಕಾಶನಮಾಲೆ, ಉಜಿರೆ.

೧೩. ರಮೇಶ್ ಕೆ.ವಿ., ಶರ್ಮ ಎಂ. ಜೆ. ೧೯೮೫ ತುಳುನಾಡಿನ ಅರಸು ಮನೆತನಗಳು ಧರ್ಮಸ್ಥಳ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ.

೧೪. Vasantha Madhava K.G. 1985 Religions in Coastal Karnataka 1500-1763 Delhi.

೧೫. Vasantha Madhava K.G. 1991 Western Karnataka, Its Agrarian Relations Delhi.

೧೬. Wahab Doddamane 1993 Muslims in Dakshina Kannada Mangalore.

೧೭. ಉಪ್ಪಂಗಳ ರಾಮಭಟ್ ೧೯೯೪ ಗಡಿನಾಡು ಕಾಸರಗೋಡು ಅಕಲಂಕ ಪ್ರಕಾಶನ, ಉಡುಪಿ.

೧೮. ಹೆರಂಜೆ ಕೃಷ್ಣಭಟ್, ಮುರಳೀಧರ ಉಪಾಧ್ಯ ಹಿರಿಯಡಕ ೧೯೯೫ ಗೋವಿಂದ ಪೈ ಸಂಶೋಧನ ಸಂಪುಟ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

ತುಳುವ ಇತಿಹಾಸ ಕೆಲವು ಮಹತ್ವದ ಕೃತಿಗಳು

೧೯. ಪುಂಡಿಕ್ಯಾ ಗಣಪಯ್ಯ ಭಟ್‌೧೯೯೭ ತೌಳವ, ಸಿಂಧೂರ ಪ್ರಕಾಶನ, ಮೂಡಬಿದಿರೆ.

೨೦. ವಸಂತ ಮಾಧವ ಕೆ. ಜಿ. ೧೯೯೮ ಅಬ್ಬಕ್ಕ ದೇವಿಯರು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ, ಮಂಗಳೂರು.

೨೧. Shyam Bhat N. 1998 South Kanara 1799-1860 Mittal Publishers, New Delhi.

೨೨. ವಸಂತ ಮಾಧವ ಕೆ.ಜಿ. ೧೯೯೮ ಕರಾವಳಿ ಕರ್ನಾಟಕದ ರಾಜಕೀಯ ಇತಿಹಾಸ ಮತ್ತು ಸಂಶೋಧನೆ, ಮಂಗಳೂರು.

೨೩. ಉದಯವರ್ಮ ರಾಜ ೧೯೯೮ ತುಳುನಾಡಿನ ಗತವೈಭವ ಕ. ಸಾ. ಪ. ಘಟಕ, ಕಾಸರಗೋಡು.

೨೪. ಶಿವಾನಂದ ಬೇಕಲ  ೧೯೯೯, ಬೇಕಲ ಕೋಟೆ, ಒಂದು ಚಾರಿತ್ರಿಕ ಅಧ್ಯಯನ ಕ.ಸಾ.ಪ. ಘಟಕ, ಕಾಸರಗೋಡು.

೨೫. Pius Fidelis Pinto 1999, History of Christians in Coastal Karnataka Samanvaya, Mangalore.

೨೬. Pius Fidelis Pinot 1999, Konkani Christians in Coastal Karnataka in Anglo Mysore Relations 1761-1799 A.D. Samanvaya, Mangalore.

೨೭. ಪಿಯುಸ್ ಫಿಡೆಲಿಸ್ ಪಿಂಟೊ ೧೯೯೯ ಕರಾವಳಿ ಕರ್ನಾಟಕದ ಕ್ರೈಸ್ತರ ಇತಿಹಾಸ ೧೫೦೦-೧೭೬೩ A.D. ಸಮನ್ವಯ, ಮಂಗಳೂರು.

೨೮. ಪಿಯುಸ್ ಫಿಡೆಲಿಸ್ ಪಿಂಟೊ ೧೯೯೯ ಆಂಗ್ಲೋ ಮೈಸೂರು ಸಂಬಂಧದ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕದ ಕೊಂಕಣಿ ಕ್ರೈಸ್ತರು, ಸಮನ್ವಯ, ಮಂಗಳೂರು.

೨೯. ಎಸ್.ಡಿ. ಶೆಡ್ಡಿ ೧೯೯೯ ತುಳುನಾಡಿನ ಜೈನ ಧರ್ಮ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

೩೦. ಮುರಳೀಧರ ಉಪಾಧ್ಯ ಹಿರಿಯಡಕ, ಪಿ.ಎನ್. ನರಸಿಂಹ ಮೂರ್ತಿ (ಸಂ) ೨೦೦೦ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳು, ಉಡುಪಿ.

೩೧. ಹೆರಂಜೆ ಕೃಷ್ಣಭಟ್; ಎಸ್.ಡಿ. ಶೆಟ್ಟಿ (ಸಂ) ೨೦೦೦ ತುಳು ಕರ್ನಾಟಕದ ಅರಸು ಮನೆತನಗಳು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೩೨. ಎಸ್.ಡಿ. ಶೆಟ್ಟಿ ೨೦೦೦ ದಕ್ಷಿಣ ಕನ್ನಡ ಜಿಲ್ಲೆಯ ಜೈನಧರ್ಮ ಪರಂಪರೆ ಮತ್ತು ಅದರ ವಿಶಿಷ್ಟ ಸಂಪ್ರದಾಯಗಳು ಉಜಿರೆ.

೩೩. ಶೈಲಾಬಾಯಿ ಯು. ೨೦೦೨, ದಕ್ಷಿಣ ಕನ್ನಡ ಜಿಲ್ಲೆಯ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಜ್ಞಾನೋದಯ ಪಬ್ಲಿಕೇಶನ್, ಬೆಂಗಳೂರು.

೩೪. ದೇವರ ಕೊಂಡಾ ರೆಡ್ಡಿ, ಜಯಪ್ರಕಾಶ ಮಾವಿನ ಕುಳಿ (ಸಂ), ೨೦೦೪ ತುಳುನಾಡಿನ ಜೈನ ಶಾಸನಗಳು ಪ್ರಸಾರಾಂಗ ಕನ್ನಡ ವಿ.ವಿ., ಹಂಪಿ.

೩೫. Govindaraya Prabhu S.; Nithyananda Pai M. 2006 The Alupas : Coinage and History, Karkala.