ಒಂದು ವಸ್ತು, ಸ್ಥಳ, ವ್ಯಕ್ತಿ ಅಥವಾ ಪ್ರಾಣಿಪಕ್ಷಿಗಳ ಹೆಸರನ್ನು ಸೂಚಿಸುವ ಪದಕ್ಕೆ ‘ನಾಮಪದ’ ಅನ್ನುತ್ತೇವೆ. ಇದರಲ್ಲಿ ಮತ್ತೆ ರೂಢನಾಮ, ಅಂಕಿತನಾಮ, ಅನ್ವರ್ಥನಾಮ ಎಂಬ ಪ್ರಭೇದ ಬೇರಿದೆ. ಒಂದು ಅಂಕಿತನಾಮದ ವ್ಯಕ್ತಿಗಳು, ಪ್ರಾಣಿಪಕ್ಷಿಗಳು ಅಥವಾ ಸ್ಥಳಗಳು ಬಹುಸಂಖ್ಯೆಯಲ್ಲಿದ್ದಾಗ, ಅಥವಾ ಅತಿಬಳಕೆಯಲ್ಲಿದ್ದಾಗ ಅಂಥ ಅಂಕಿತನಾಮ ರೂಢನಾಮದ ಮಟ್ಟಕ್ಕಿಳಿದುಬಿಡುವುದುಂಟು. ಕಾವ್ಯದಲ್ಲಿ ಒಂದು ವ್ಯಂಗ್ಯ, ಧ್ವನಿ ಅಥವಾ ಪ್ರತಿಮೆ ಅತಿಪ್ರಯೋಗದಿಂದ ‘ರೂಢಿರ್ಲಕ್ಷಣೆ’ ಎನ್ನಿಸಿಕೊಂಡು, ತೀರಾ ಸಾಮಾನ್ಯ ವ್ಯಂಗ್ಯವಾಗಿ – ಗುಣೀಭೂತ ವ್ಯಂಗ್ಯವಾಗಿಬಿಡುತ್ತದಲ್ಲ, ಹಾಗೆ.

ಒಂದು ಮನೆಯಲ್ಲಿ ಒಂದೇ ಹೆಸರಿನ ಹಲವಾರು ಮಕ್ಕಳಿದ್ದಾಗ ಒಬ್ಬನನ್ನು ಕೂಗಿದರೆ ಇನ್ನೊಬ್ಬ ಬರಬಹುದು. ಆ ಒಬ್ಬ ಇಂಥವ ಎಂದು ಖುದ್ದಾಗಿ ಆ ಮನೆಯ ಸದಸ್ಯರು ಗುರುತಿಸಿದ್ದಿರಬೇಕು; ಅವನ ಹೆಸರು ಎಲ್ಲರ ಅಂಗೀಕಾರಮುದ್ರೆ ಪಡೆದಿರಬೇಕು. ಅವನನ್ನು ಇನ್ನೊಬ್ಬನಿಂದ  ಸುಲಭವಾಗಿ ಪ್ರತ್ಯೇಕಿಸುವ ಸಾಧನಗಳಲ್ಲಿ ಹೆಸರು ಪ್ರಾಯಃ ಬಹುಮುಖ್ಯವಾದುದು. ಸಾಮಾನ್ಯ ವ್ಯವಹಾರದಲ್ಲಿ ಅಥವಾ ತರಗತಿಯಲ್ಲಿ ಗಣಿತ ಪಾಠ ಹೇಳುವಲ್ಲಿ A B C D ಎಂದೋ X Y Z ಎಂದೋ ಅಥವಾ ಇತರ ಭಾಷೆಗಳ ಸಂಜ್ಞೆಗಳನ್ನೊ ಬಳಸುವುದುಂಟು. ಈ ಬಳಕೆಯೊಂದಿಗೆ ಸೌಲಭ್ಯದ ಪ್ರಜ್ಞೆಯೂ ಸೂಕ್ಷ್ಮವಾಗಿ ಇದ್ದಿರುತ್ತದೆ. ಅಲ್ಲದೆ ಈ ಸಂಜ್ಞೆಗಳು, ಸಂಕೇತಗಳು ಗಾತ್ರದಲ್ಲಿ ಕಿರಿದಾಗಿದ್ದು ಸ್ಮರಣಯೋಗ್ಯವಾಗಿರಬೇಕು; ಸುಲಭೋಚ್ಚಾರಣೀಯವಾಗಿರಬೇಕೆಂಬುದೂ ಸ್ಪಷ್ಟ. ಆದರೆ ಹಾಗೆ ಸಂಜ್ಞೆಗಳ ಮೂಲಕ ಮಾತಾಡುವುದು ಹೆಚ್ಚು ಕಾಲ ನಡೆಯದು. ಏಕೆಂದರೆ, ಈ ಸಂಜ್ಞೆಗಳು ಕೇವಲ ಅಮೂರ್ತ (abstract)ವಾಗಿದ್ದು, ಒಂದು ಸಂಜ್ಞೆಯೊಂದಿಗೆ ಇನ್ನೊಂದು ಸಂಜ್ಞೆಯನ್ನು ಸಂಯೋಜಿಸಿ ಅಥವಾ ಭ್ರಮಿಸಿ ಗೊಂದಲ ಏಳುವ ಸಂಭವವಿದೆ. ಆದ್ದರಿಂದ ಅಮೂರ್ತತೆಯನ್ನು ಕಡಿಮೆ ಮಾಡುವ ಉದ್ದೇಶದಿಂದಲಾದರೂ ಹೆಸರನ್ನು ಸ್ಪಷ್ಟ ಮಾತಿನಲ್ಲಿ ಸಾರುವುದು ಅವಶ್ಯ ಎಂದಂತಾಯಿತು. ಹೀಗೆ ವ್ಯಕ್ತಿ – ವಸ್ತು – ಸ್ಥಳಗಳ ಹೆಸರು ಹುಟ್ಟಿಕೊಳ್ಳುತ್ತದೆ.

ಬರೀ ಗುರುತಿಸುವಿಕೆ (identification) ಅಥವಾ ಪ್ರತ್ಯೇಕೀಕರಣ (discrimination) ಹೆಸರಿನ ಸಾರಸರ್ವಸ್ವವಾಗಿರುತ್ತಿದ್ದರೆ, ಸಂಸ್ಕೃತಿ ಅಭಿಮಾನಿಗಳಾದ ನಾವು ನೀವು ಅದರಿಂದ ಏನೂ ಪ್ರಯೋಜನ ಪಡೆಯುವಂತಹುದು ಉಳಿಯುತ್ತಿರಲಿಲ್ಲ. ನಾಮಕರಣದೊಂದಿಗೆ ನಾಮಕರಣಗೊಂಡ ವ್ಯಕ್ತಿಯ, ವಸ್ತುವಿನ ಅಥವಾ ಸ್ಥಳಗಳ ಗುಣಸ್ವರೂಪವನ್ನೂ, ಅನನ್ಯ ವೈಶಿಷ್ಟ್ಯವನ್ನೂ, ಆಂತರಿಕ ಸತ್ವವನ್ನೂ ಆ ಹೆಸರು ಸಂವಹನ ಮಾಡುತ್ತದೆ ಎಂಬುದು ಗಮನಾರ್ಹ ಸಂಗತಿ. ಎಷ್ಟು ಕವಿಗಳ ಕವಿತೆ ಚೆನ್ನಾಗಿದ್ದರೂ ಶೀರ್ಷಿಕೆ ಚೆನ್ನಾಗಿಲ್ಲ ಎಂಬ ಟೀಕೆ ತಳೆದಿಲ್ಲ! ಹೆಸರು ಆಕರ್ಷಕವಾಗಿರಬೇಕೆಂಬುದನ್ನೂ ಏಕೆ ಆಕರ್ಷಕವಾಗಿರ ಬೇಕೆಂಬುದನ್ನೂ ಮನ್ನೋವಿಜ್ಞಾನದ ಒಂದು ಶಾಖೆಯಾದ ಮಾರುಕಟ್ಟೆಯ ಅಥವಾ ಜಾಹೀರಾತಿನ ಮನೋವಿಜ್ಞಾನವು, ಉತ್ಪಾದಕ ವರ್ಗಕ್ಕೆ ಮನದಟ್ಟು ಮಾಡಿಕೊಟ್ಟಿದೆ. ಅದರಲ್ಲೂ ಈ ಪ್ರಚಾರದ ಯುಗದಲ್ಲಿ ‘ಶೀರ್ಷಿಕೆ’ (=ಹೆಸರು) ಎಷ್ಟು ಆಕರ್ಷಕವಾಗಿದ್ದರೂ ಕಡಮೆಯೆ. ವಸ್ತುವಿನ ಕುರಿತಾದ ಅತಿಶಯೋಕ್ತಿ ಇಲ್ಲಿ ಪ್ರಚಾರವೆನಿಸಿಕೊಳ್ಳುವುದಿಲ್ಲ; ಆ ವಸ್ತುವಿನ ಗುಣಸ್ವರೂಪ, ತಾಳಿಕೆ-ಬಾಳಿಕೆ ಮತ್ತು ಅದು ಅದೇ ಜಾತಿಯ ಇನ್ನೊಂದು ಹೆಸರಿನ ವಸ್ತುವಿಗಿಂತ ಏತರಲ್ಲಿ ಉತ್ಕೃಷ್ಟವಾಗಿದೆ ಎಂಬುದನ್ನು – ಬೇಕಿದ್ದರೆ ಅಂಕಿಅಂಶಗಳೊಂದಿಗೆ – ಅತ್ಯಂತ ನಿಖರವಾಗಿ, ನಿಷ್ಕೃಷ್ಟ ರೀತಿಯಲ್ಲಿ ಪರಿಚಯಿಸುವುದು, ಮತ್ತು ಆ ಮೂಲಕ ಗ್ರಾಹಕ ವರ್ಗದಲ್ಲಿ ಅದರ ಕುರಿತಾದ ಬೇಡಿಕೆಯನ್ನು ಪ್ರಚೋದಿಸುವುದು ಈ ನಾಮಕರಣದ ಮುಖ್ಯ ಗಮ್ಯ ಎಂಬುದನ್ನು ಕಂಡುಕೊಳ್ಳಬಹುದು.

ಹಾಗೆಯೇ ವ್ಯಕ್ತಿನಾಮವೂ ಕೂಡಾ. ಒಬ್ಬ ವ್ಯಕ್ತಿಯ ಹೆಸರು ಕಾಲಾನುಸಾರವಾದ, ತಂದೆ ತಾಯಿಗಳ ಸಂಸ್ಕೃತಿಯ ಮಟ್ಟ, ಅಭೀಪ್ಸೆ, ಆಶೋತ್ತರಗಳಿಂದ ನಿಯಮಿತವಾಗಿದೆ ಎಂಬಷ್ಟೆ ಗಮನೀಯ ಅಂಶ, ಅವನ ಹೆಸರು ಅವನ ಹುಟ್ಟಿನಲ್ಲೆ ನಿರ್ದೇಶಿತವಾಗಿದೆ, ನಿಯಮಿತವಾಗಿದೆ ಎಂಬುದು. ಅಂದರೆ ಅವನು ಹುಟ್ಟಿದ ದಿನ, ಮುಹೂರ್ತ, ಕರಣ, ನಕ್ಷತ್ರ ಮುಂತಾದ ‘ಸಂದರ್ಭ’ಗಳು, ಅವನ ತಂದೆ – ಅಜ್ಜಂದಿರ ಹೆಸರು, ಗುರುದೇವರ ಹೆಸರು ಇವೇ ಮುಂತಾದುವು ಅವನ ನಿರ್ದಿಷ್ಟ ನಾಮಕರಣದ ನಿಯಾಮಕ ಅಂಶಗಳು. ಇಷ್ಟೇ ಅಲ್ಲ, ಒಬ್ಬ ವ್ಯಕ್ತಿಯ ಹೆಸರು ತಿಳಿದಷ್ಟಕ್ಕೇ ಕೆಲವು ಹಿರಿಯರು ಅವನ ಜಾತಿ-ಧರ್ಮ ಮುಂತಾದವುಗಳನ್ನು ಊಹಿಸಬಲ್ಲರು. ಅಂದರೆ ವ್ಯಕ್ತಿಯ ಹೆಸರು ಹೇಗಿರಬೇಕು, ಏನನ್ನು ಸೂಚಿಸಬೇಕು ಎಂಬೀ ಕುರಿತಾದ ಮೂಲಭೂತ ವಿಚಾರಗಳಲ್ಲಿ ನಮ್ಮ ಹಿರಿಯರು ಅತ್ಯಂತ ಕರಾರುವಾಕ್ಕಾದ ಪ್ರಜ್ಞೆಯನ್ನು ಹೊಂದಿದ್ದರೆಂಬುದನ್ನು ನೆನೆಯಬೇಕು. ಇದರ ಇಂಗಿತ ಇಷ್ಟೆ : ಅವರ ಸ್ವತಃಸಿದ್ಧವಾದ ದೀರ್ಘಕಾಲದ ಅನುಭವ ಹಾಗೂ ಪರಿವೀಕ್ಷಣೆಯಿಂದ, ಒಬ್ಬ ವ್ಯಕ್ತಿಯ ಹೆಸರಿಗೂ ಅವನ ಜಾತಿ ಮತ ಶಾಖೆ ಮುಂತಾದ ಅವನ ‘ಜಾತಕ’ದ ಸಂದರ್ಭಕ್ಕೂ ನಿಕಟ ಸಂಬಂಧವಿದೆ ಎಂಬುದನ್ನು ಅವರು ಖಚಿತಪಡಿಸಿಕೊಂಡಿರುವುದು. ಇದು ಒಂದು ರೀತಿಯಲ್ಲಿ ಒಂದು ತಲೆಮಾರು ಬದುಕಿ ಬಾಳಿದ ಕಾಲದ ಸಾಂಸ್ಕೃತಿಕ ಪರಂಪರೆಯನ್ನೂ ಅದರ ಮೇಲಣ ಅದರ ವಿಶ್ವಾಸವನ್ನೂ ಸೂಚಿಸಬಲ್ಲದು – ಇದು ಅವರ ಸಂಸ್ಕೃತಿಯ ಮಟ್ಟವನ್ನೂ ಸೂಚಿಸಬಲ್ಲದು. ಆದ್ದರಿಂದ, ವ್ಯಕ್ತಿನಾಮಾಭ್ಯಾಸಿಗೆ ರಾಮ ಕೃಷ್ಣ -ಗೋವಿಂದ – ಗಣಪತಿ – ವೀರಭದ್ರ ಮುಂತಾದ ಒಂದು ವರ್ಗದ ಹೆಸರುಗಳಷ್ಟೇ ತಿಪ್ಪಯ್ಯ – ಕಲ್ಲಯ್ಯ – ಗುಂಡಪ್ಪ – ಚೋಂಗ್ಲ – ಬೋಗ್ರ – ಚೇಂತ್ರ – ಕೂಕ್ರ – ‘ನಾಯಿ’ ಮುಂತಾದ ವಿರುದ್ಧ ಧ್ರುವದ ಇನ್ನೊಂದು ವರ್ಗದ ಹೆಸರುಗಳೂ ಮಹತ್ವದವಾಗಿವೆ. ಆದ್ದರಿಂದ, ಹೆಸರು ಅಂದರೆ ಕೇವಲ ‘ಹೆಸರಿಗಾಗಿ ಹೆಸರು’ ಅಲ್ಲ ; ಅಲ್ಲದೆ, ‘What is in a name?’ ಎಂಬ ಉಪೇಕ್ಷೆಯೂ ಸಲ್ಲ.  ಹೆಸರಿನಲ್ಲಿ ಇಷ್ಟು ಶಕ್ತಿ, ಸಂಸ್ಕೃತಿಯ ಜೀವಾಳವೆನ್ನಿಸುವ ಒಂದು ‘ಭಾವಕೋಶ’ ಹುದುಗಿರುವುದರಿಂದಲೇ ನಾವು ಹೆಸರಿಗೆ ಅಷ್ಟು ಪ್ರಾಶಸ್ತ್ಯ ಸಲ್ಲಿಸುತ್ತೇವೆ, ಪೂಜ್ಯತೆ ನೀಡುತ್ತೇವೆ. ನಾಲ್ಕು ಜನರ ಜತೆಗೆ ಅಥವಾ ಎದುರು ನಮ್ಮ ಹೆಸರು ಕೇಳಿದ ಕೂಡಲೆ ಹೆಮ್ಮೆ ತಾಳುತ್ತೇವೆ ಅಥವಾ ನಮ್ಮ ಹೆಸರಿನಲ್ಲಿ ಎಲ್ಲಾದರೂ ಒಂದಕ್ಷರ  ತಪ್ಪಿ ಮುದ್ರಿತವಾಗಿದ್ದರೆ ದೊಡ್ಡ ಹಗರಣವನ್ನೇ ಎಬ್ಬಿಸಿ ಬಿಡುತ್ತೇವೆ.

ಸ್ಥಳನಾಮವೂ ಹೀಗೆಯೇ ಹುಟ್ಟಿಕೊಂಡಿತು. ವಾಕ್ಯದಲ್ಲಿ ಒಂದು ಪದದ ಅರ್ಥ ಅದರ ಸಂದರ್ಭ – ಸನ್ನಿವೇಶದಿಂದ ನಿರ್ದೇಶಿತವಾದಂತೆ, ಒಂದು ಸ್ಥಳದ ಹೆಸರು ಸಾಮಾನ್ಯವಾಗಿ ಅಲ್ಲಿನ ಭೌಗೋಳಿಕ ಸ್ಥಿತಿಗತಿಯಿಂದ, ವೈಶಿಷ್ಟ್ಯವೆನ್ನಿಸಬಲ್ಲ ಲಕ್ಷಣದಿಂದ ನಿಯಂತ್ರಿತವಾಗಿದೆ.[1] ಹಾಗಾದರೆ, ಸ್ಥಳನಾಮದ ‘ಜಾತಕ’ ಯಾವುದು? ಎಂದು ಪ್ರಶ್ನಿಸಿದರೆ, ಅದಕ್ಕೆ ಕೊಡಬಹುದಾದ ಉತ್ತರ : ‘ಸ್ಥಳವಿವರ’  (Topography). ಒಂದು ಸ್ಥಳದ ಹೆಸರಿನ ಅಧ್ಯಯನ ಮಾಡುವ ವ್ಯಕ್ತಿ ಆ ಸ್ಥಳದ ಸನ್ನಿವೇಶವನ್ನು ‘ಓದ’ ಬೇಕು. ಏಕೆಂದರೆ, ಒಂದು ನಿರ್ದಿಷ್ಟ ಕಾಲದಲ್ಲಿ ತಲೆಯೆತ್ತಿದ ಒಂದು ಹೆಸರಿನಲ್ಲಿ ಆ ಎಡೆಯ ಭೂವೈಶಿಷ್ಟ್ಯ ಅಚ್ಚೊತ್ತಿದ್ದು, ಇನ್ನೊಂದು ಎಡೆಯಿಂದ ಅದನ್ನು ಪ್ರತ್ಯೇಕಿಸಲು ಎಡೆಮಾಡಿಕೊಡುವ; ‘ಗುರುತುಪಟ್ಟಿಕೆ’ ಯಾಗಿ ಅದು ಕೆಲಸ ಮಾಡುತ್ತದೆ. ಈ ಮೂಲಭೂತ ಅಂಶವೇ ಸ್ಥಳನಾಮಗಳ ಹುಟ್ಟಿನ ಹಿಂದಿರುವ ರಹಸ್ಯವಾಗಿದೆ. ಮತ್ತು ಅವುಗಳನ್ನು ಚಿರಂಜೀವಿಗಳನ್ನಾಗಿಸುವ ಕ್ರಿಯಾಶಕ್ತಿಯಾಗಿದೆ.[2] ಕೆಲವೊಮ್ಮೆ ಕೆಲವು ಊರ ಹೆಸರುಗಳು, ಚಾರಿತ್ರಿಕ ವ್ಯಕ್ತಿಗಳು, ಅಧಿಕಾರಿಗಳು, ಕುಲಗಳು, ದೇವತೆಗಳು ಅಥವಾ ಚಾರಿತ್ರಿಕ ಮಹತ್ವದ ಘಟನೆಗಳನ್ನು ಸ್ಮರಿಸುವ ಉದ್ದೇಶದಿಂದ ಹುಟ್ಟಿರಬಹುದು. ಇಂಥ ‘ಕೃತಕ ಸ್ಥಳನಾಮ’ಗಳ ಹಿಂದೆಯೂ ಅಡಗಿರುವ ಉದ್ದೇಶ ಗುರುತಿಸುವಿಕೆಯೇ ತಾನೆ?

ಅಲ್ಲದೆ, ಸ್ಥಳನಾಮ ಶೋಧಕನು, ಪ್ರಚಲಿತ ನಾಮರೂಪವು ಗಂಗೆಯಂತೆ ಹರಿದು ಬಂದ ಮಾರ್ಗವನ್ನು ಹಿಡಿಯುತ್ತಾ, ಪ್ರಾಚೀನ, ಕೆಲವೊಮ್ಮೆ ಮೂಲ ಅಥವಾ ‘ಯಥಾರ್ಥ’ ಸ್ಥಳನಾಮದ ಮಾನಸಸರೋವರವನ್ನು ಮುಟ್ಟಬೇಕಾಗುತ್ತದೆ. ಇದೊಂದು ರೀತಿ ‘ಹಿನ್ನಡೆ ವಿಧಾನ’. ಹೀಗೆ ಮಾಡಿದಾಗ ಮಾತ್ರ ಶೋಧಕನ ವ್ಯುತ್ಪತ್ತಿ, ವಿವರಣೆ ಮುಂತಾದುವು ‘ಉಚಿತ’ವೂ, ಪ್ರಮಾಣಾರ್ಹವೂ ಆದ, ‘ಸ್ಥಳದ ಆತ್ಮವೃತ್ತಾಂತ’ವೆನಿಸುತ್ತದೆ. ಈ ದೃಷ್ಟಿಯನ್ನಿರಿಸಿಕೊಂಡಾಗ, ಸ್ಥಳನಾಮದ ಮೂಲವನ್ನು ಕಂಡು ಹುಡುಕುವುದರೊಂದಿಗೆ, ಅಲ್ಲಿ ಮೊತ್ತಮೊದಲು ನೆಲೆಸಿದ್ದಿರಬಹುದಾದ ನಿವಾಸಿಗಳ ಮೂಲವನ್ನೂ ಅವರ ಸಾಂಸ್ಕೃತಿಕ ನೆಲೆಗಟ್ಟನ್ನೂ ಪ್ರಕೃತಿ ಹಾಗೂ ಅವರ ನಡುವಣ ಸಂಬಂಧವು ಹೇಗೆ ಅವರಿಂದ ನಮಗೆ ಅನುಸ್ಯೂತವಾಗಿ ಹರಿದುಬಂದಿರುವ ಸಂಸ್ಕೃತಿಯನ್ನು ರೂಪಿಸಿದೆ ಎಂಬುದನ್ನೂ ಪತ್ತೆ ಹಚ್ಚಬಹುದು. ಇಂಥ ಶೋಧಕನಿಗೆ ಸ್ಥಳನಾಮಗಳು ಕೇವಲ ‘ನಾಮ’ಗಳಾಗದೆ, ‘ಸಾಂಸ್ಕೃತಿ ಘಟಕ’ಗಳಾಗುತ್ತವೆ; ‘ಸಂಸ್ಕೃತಿಕ ವಾಹಕ’ಗಳಾಗಿ ಕಾಣಿಸುತ್ತವೆ.

ಎಡೆವೆಸರುಗಳು ಮಾನವ ಜನಾಂಗದ ನಾಗರಿಕತೆಯ ವಿಕಾಸದ ಯಾವ ಘಟ್ಟದಲ್ಲಿ ಕಾಣಿಸಿಕೊಂಡಿತೆಂಬುದನ್ನು ಈಗ ಚರ್ಚಿಸಬೇಕು. ಆದಿಮಾನವನು ಯಾವಾಗ ಸಂಘಜೀವಿಯಾಗುವ ಅಗತ್ಯ ಮನಗಂಡನೋ, ಆಗ ಹೆಚ್ಚುಕಮ್ಮಿ ಈಗಿನ ರೂಪದ ‘ಊರು’ಗಳು ಹುಟ್ಟಿದುವು ಎಂದು ಸ್ಥೂಲವಾಗಿ ಹೇಳಬಹುದು. ಆದಿಮಾನವ ಮೂಲತಃ ಸಂಚಾರಿಯಾಗಿದ್ದು ಪಶುಪಾಲನೆಯನ್ನು ಕೈಗೊಂಡ ಮೇಲೆ, ಅಥವಾ ಆ ಸುಮಾರಿನ ಕಾಲದಲ್ಲಿ, ತಾತ್ಪೂರ್ತಿಕವಾಗಿ ಒಂದೊಂದು ಎಡೆಯಲ್ಲಿ, ಅನುಕೂಲಕರ ಸ್ಥಳವನ್ನು ಅರಸುತ್ತಾ, ನಿಂತಾಗ ಹುಟ್ಟಿಕೊಂಡ ಇಂಥ ‘ಹಟ್ಟಿ’ಗಳು ಸ್ಥಳನಾಮಗಳಲ್ಲೆಲ್ಲ ಅತ್ಯಂತ ಪ್ರಾಚೀನ ಘಟಕ ಎನ್ನಲಾಗಿದೆ.[3] ಮಾನವಶಾಸ್ತ್ರದ ಪ್ರಕಾರ ಈ ಸಿದ್ಧಾಂತವನ್ನು ಒಪ್ಪಬಹುದಾಗಿದೆ. ಒಂದು ಕಡೆ ನೆಲೆ ನಿಲ್ಲುವ (ನೆಲ), ಭದ್ರವಾಗಿ ಬೇರೂರುವ (ಊರು), ವ್ಯವಸಾಯದೊಂದಿಗೆ (ಗದ್ದೆ, ಕ್ಷೇತ್ರ, ಹೊಳೆ, ಏರಿ, ಆರ, ಆಲ, ಕಟ್ಟೆ, ಇ.) ಆಸರೆ ನಿರ್ಮಿಸಿಕೊಳ್ಳತ್ತ (ಮನೆ, ಹಳ್ಳಿ, ಗ್ರಾಮ, ಪೇಟೆ, ಪತ್ತನ ಇ.) – ಹೀಗೆ ಹಲವಾರು ಜೀವನ ವಿಕಸದ ಚಾರಿತ್ರಿಕ ಅವಸ್ಥೆ (stage)ಗಳನ್ನು ದಾಟಿಕೊಂಡ ಈ ವೃತ್ತಾಂತ ಸ್ಥಳನಾಮಗಳಲ್ಲಿ ಹರಳುಗಟ್ಟಿದೆ: ಅಳವಟ್ಟಿದೆ.[4] ಸ್ಥಳನಾಮದ ಚರಿತ್ರೆಯೆಂದರೆ ಮಾನವ ಜೀವನಕ್ಕೆ ಯೋಗ್ಯವಾದ ಪರಿಸರವನ್ನು, ಐಹಿಕ ಜೀವನದ ಸುಖಸಂತೃಪ್ತಿಗೆ ಸಾಧನವಾಗಬಲ್ಲ ಸನ್ನಿವೇಶವನ್ನು ಹುಡುಕುತ್ತ ಬಂದು, ಅಂಥ ಕಡೆ ವಲಸೆ ಹೋಗಿ ನೆಲೆಸಿದ ಮಾನವ ಜನಾಂಗದ ಲಿಖಿತ ಇತಿಹಾಸವೇ ಆಗಿದೆ.

ಎಡೆಗೆ ಹೆಸರಿತ್ತವರು ಯಾರು? ನಮಗೆ ನಾವೇ ಹೆಸರಿಟ್ಟು ಕೊಂಡಿರುವುದಿಲ್ಲ. ನಮ್ಮ ಜಾತಕಕ್ಕೆ ಅನುಗುಣವಾದ ಹೆಸರನ್ನು ನಮ್ಮ ಹಿರಿಯರು ನಾಮಕರಣ ಮಾಡುತ್ತಾರೆ ಎಂದು ತಿಳಿದಾಯಿತು. ಹಾಗೆಯೇ, ಒಂದು ಊರಿನ ಹೆಸರು ಅಲ್ಲಿ ನೆಲೆಸಿರುವ, ನೆಲೆಸಿದ್ದ ಮೂಲನಿವಾಸಿಗಳಿಂದಲೇ ಬಂದಿರದೆ, ಅವರ ಆಸುಪಾಸಿನವರಿಂದ ಬಂದಿರುವ ಸಂಭವ ಅಧಿಕ. ಏಕೆಂದರೆ ಒಂದು ಊರಿನಲ್ಲಿರುವ ಜನ, ತಮ್ಮ ಊರನ್ನು ಕುರಿತು ಆಡಿಕೊಳ್ಳುವಾಗಲೆಲ್ಲ  ‘ಇಲ್ಲಿ’, ‘ನಮ್ಮಲ್ಲಿ’, ‘ನಮ್ಮ ಊರಲ್ಲಿ’ ಮುಂತಾಗಿ ಉಲ್ಲೇಖಿಸುತ್ತಾರೆ. ಅವರಿಗೆ ಹತ್ತಿರದ ಊರವರು, ಗುರುತಿಸುವುದಕ್ಕಾಗಿ ಈ ಊರಿಗೊಂದು ಹೆಸರು ಹಚ್ಚುತ್ತಾರೆ. (ಹಾಗೆ ಹೆಸರಿಡುವಾಗ, ಸ್ಥಳದ ಭೂವಿವರಕ್ಕೆ – ಏರು ತಗ್ಗು, ನೀರು ಪಾರು, ಕಾಡು ಕೋಡು – ಮುಂ. – ಹೊಂದುವ ಹೆಸರನ್ನೆ ಕೊಡುತ್ತಿದ್ದರೆಂಬುದರಿಂದ, ಆ ಸ್ಥಳ ಆ ಹೆಸರನ್ನು ಕೊಡಿಸಿಕೊಂಡಿದ್ದು, ‘ಸ್ವನಾಮಕರಣ’ ಎನ್ನಲು ಯೋಗ್ಯವಾಗಿದೆ – ಎಂದು ಒಪ್ಪಬೇಕು.) ಈ ಹೆಸರು, ಮುಂದೆ ಆ ಸ್ಥಳ ಹಾಗೂ ಅದರ ಪರಿಸರ ಹತ್ತು ಹಲವು ರೀತಿಯಲ್ಲಿ ಪ್ರಗತಿ ಹೊಂದಿದಾಗ, ದಾಖಲೆ ಮುಂತಾದ ಲಿಖಿತ ಸಂದರ್ಭಗಳಲ್ಲಿ, ಕೆಲವೊಮ್ಮೆ ವ್ಯವಹಾರದಲ್ಲೂ ಅದೇ ಊರವರಿಂದ ಬಳಸಲ್ಪಡುತ್ತದೆ. ಈ ಮಾತಿಗೂ ಮನವಶಾಸ್ತ್ರದ ಸಮರ್ಥನೆಯಿದೆ. ಒಂದು ಸ್ಥಳನಾಮದ ಉಳಿವು ಹಾಗೂ ಶಾಶ್ವತ ಸ್ವರೂಪವನ್ನು ನಿರ್ಧರಿಸುವ ಅಂಶಗಳು ಆ ಸ್ಥಳದ ಗಾತ್ರ ಮತ್ತು ಅಲ್ಲಿನ ಜನಸಂಖ್ಯೆ. ಆದ್ದರಿಂದಲೇ, ಹೆಚ್ಚು ಚಲಾವಣೆ ಪಡೆದ ನದಿ – ಪರ್ವತ ಮತ್ತಿತರ ಪ್ರಧನ ಭೌಗೋಳಿಕ ಲಕ್ಷಣಗಳನ್ನು ಹೇಳುವ ಹೆಸರುಗಳು ಅಷ್ಟೊಂದು ದೃಢವೂ ಶಾಶ್ವತವೂ ಆಗಿ ಉಳಿದುಬಿಟ್ಟಿರುವುದು; ಕಡಿಮೆ ಜನಸಂಖ್ಯೆಯ ವ್ಯವಹಾರದಲ್ಲಿ ಚಲಾವಣೆ ಪಡೆದ ಕ್ಷೇತ್ರನಮಗಳು ಮತ್ತಿತರ ಗೌಣ ಹೆಸರುಗಳು ಶಾಶ್ವತ ಅಸ್ತಿತ್ವಕ್ಕೆ ಅವಶ್ಯವಾದ ವಿಸ್ತೃತ ಅಂಗೀಕಾರ ಪಡೆಯದಿರುವುದರಿಂದ, ಕಾಲಾಂತರದಲ್ಲಿ ಜನರ ಸ್ಮೃತಿಪುಟದಿಂದ ಈ ಹೆಸರುಗಳು ನುಸುಳಿಹೋಗಿರುವುದುಂಟು.[5] (ಇದೊಂದು ಸಾಧಾರಣೀಕರಣ. ಇದಕ್ಕೆ ಅಪವಾದವಾಗಬಲ್ಲ ದೃಷ್ಟಾಂತಗಳೂ ಇವೆ.)

ಸ್ಥಳನಾಮಗಳು ಯಾವ ಭಾಷೆಯ ಪದಗಳಿಂದ ನಿಷ್ಪನ್ನವಾಗಿರುತ್ತವೆ? ಸಾಮಾನ್ಯವಾಗಿ ಸ್ಥಳೀಯ ಭಾಷೆಯಿಂದ ಇವು ಸೂಚಿತವಾಗಿದ್ದರೂ, ತುಳುವ ಸ್ಥಳನಾಮಗಳಿಗೆ ಸೀಮಿತಗೊಳಿಸಿ ಹೇಳುವುದಾದರೆ, ಕೇವಲ ತುಳು ಪದಗಳೇ ಅಲ್ಲದೆ, ಕನ್ನಡ ಪದಗಳೂ – ಕೆಲವೊಮ್ಮೆ ದ್ರಾವಿಡ ಭಾಷೆಗಳಿಗೆ ಸಮಾನವಾದ ರೂಪಗಳೂ – ಇಲ್ಲಿ ಕಾಣಬರುತ್ತವೆ ಎಂಬುದನ್ನು ಸ್ಮರಿಸಬೇಕು. ಇವುಗಳಲ್ಲಿ ಕೆಲವಂತೂ ಅತ್ಯಂತ ಪ್ರಾಚೀನ ಪದಗಳಾಗಿದ್ದು, ಬಹುಶಃ ಮೂಲದ್ರಾವಿಡ ಪದಗಳಾಗಿದ್ದು, ಇದೀಗ ಖಿಲವಾಗಿ ಬಿಟ್ಟಿವೆ; ಇಲ್ಲವೆ ಅರ್ಥಹೀನವಾಗಿಬಿಟ್ಟಿವೆ.

ಒಂದು ಪದ ಬಳಕೆ ತಪ್ಪಿ ಅರ್ಥಹೀನವಾಗಿ ಆ ಭಾಷೆಯ ಪದವೇ ಅಲ್ಲವೇ ಎಂಬ  ಸಂಶಯ ಹುಟ್ಟಿಸಿಬಿಡುವಷ್ಟೂ ಅಪರಿಚಿತವಾಗಿಬಿಡಬಹುದು. ಸ್ಥಳನಾಮಗಳಲ್ಲಿ ಇಂಥ ಎಷ್ಟೋ ಅಪ್ರಚಲಿತ, ಅರ್ಥಹೀನ ಪದಗಳಿದ್ದರೂ ಅವು ಸಾಮಾನ್ಯವಾಗಿ ‘ಸ್ಥಿರಪಟ್ಟಿಕೆ’ಗಳಾಗಿರುವುದರಿಂದ ಹಾಗೆ ಹಾಗೆಯೇ ಬಳಸಲ್ಪಡುವುದುಂಟು.[6] ಉದಾ: ಅಜೆ ಮತ್ತು ಅದರ ಪ್ರಭೇದಗಳು; ಕಜೆ, ಅಡಕ, ಅಳಿಕೆ, ಪಳ್ಕೆ, ಆಲ (ಳ), ಆರ (ರು), ಅವರ, ಪಾಣೆ, ಮಾಣೆ, ಬಜೆ, ಕುದಿ, ಗೋಳಿ, ಕುಕ್ಕ್‌, ಪಾಡಿ, ಕಾರ್, ಗಾರ್, ಮುಂ.

ಸ್ಥಳನಾಮಗಳನ್ನು ಸ್ಥೂಲವಾಗಿ ಎರಡು ವಿಭಾಗಗಳನ್ನಾಗಿ ಗುರುತಿಸಬಹುದು ಅನ್ನುತ್ತಾನೆ J.J. Egli8. ಅವರ ಪ್ರಕಾರ ಸ್ಥಳನಾಮದಲ್ಲಿ ಎರಡು ಪ್ರಕಾರಗಳು- (i) Naturnamen (Natural Names) ಅಂದರೆ ಪ್ರಾಕೃತಿಕ ಸ್ವಭಾವ ಅಥವಾ ಗುಣಲಕ್ಷಣಗಳಿಂದ ನಿಷ್ಪನ್ನವಾದ ‘ಸ್ವಾಭಾವಿಕ ನಾಮ’ಗಳು. (ii) Kulturnamen (Cultural Names) – ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಾಮಗಳು. ಯಾವುದೇ ದೇಶದಲ್ಲಿ ಮೊದಲ ವರ್ಗದ ಸ್ಥಳನಾಮಗಳು ಅಧಿಕ ಸಂಖ್ಯೆಯಲ್ಲಿರುವುವು; ಅಲ್ಲದೆ ಬಹುಶಃ ಪ್ರಾಚೀನತರವಾಗಿರುವುವು. ಪ್ರಾಚೀನ ಕಾಲದಲ್ಲಿ ನಿಸರ್ಗದ ಶಕ್ತಿಗಳನ್ನು ಮಾನವ ಇನ್ನೂ ಪಳಗಿಸಲು ಅಥವಾ ಇದೀಗ ವಿಜ್ಞಾನಯುಗದಲ್ಲಿರುವ ನಮ್ಮಂತೆ ಪ್ರತಿಭಟಿಸಲು ತಿಳಿಯದಿದ್ದುದರಿಂದ, ಅವನು ಪ್ರಕೃತಿಗೆ ವಿಧೇಯನಾಗಿದ್ದುದು, ಅದನ್ನು ಪೂಜಿಸುತ್ತಿದ್ದುದು ಸಹಜವೇ ಆಗಿದೆ. ಸ್ಥಳನಾಮಗಳಲ್ಲೂ ಇದರ ನೆರ ಛಾಯೆ ಬಿದ್ದಿದ್ದರೆ ಅದರಲ್ಲೇನೂ ಆಚ್ಚರಿಯಿಲ್ಲ.

ತುಳುನಾಡಿನ ಉದಾಹರಣೆಗಳನ್ನೇ ಕೋಡುವುದಾದರೆ, ಗುಡ್ಡೆ ಬೆಟ್ಟ – ಪದ್ದವು – ಮಾಣೆ – ಕದರಿ – ಕುಕ್ಕ್‌- ಕೋಡು – ಕೋಡಿ – ಕುಂದ – ಕೊಂಬು – ಕುಂಜ – ಅಡಕ – ಕೋಟ – ಕುಡಿ – ಕಟ್ಟ – ಕಲ್ಲು – ಪಾದೆ – ಗಿರಿ – ಕಾ(ಗಾ)ರ್ – ಮಲೆ – ಮಾಳ (ಡ) – ಮುಂತಾದುವ ಈ ಬಗೆಯವು. ಇವು ಸೂಚಿಸುವ ಭೌಗೋಳಿಕ ಸನ್ನಿವೇಶ ಅನ್ಯತ್ರ ಕಂಡುಬಂದರೂ, ಬೇರೆ ಬೇರೆ ಪ್ರದೇಶಗಳ ಭಾಷೆಗಳ ನಡುವೆ ವ್ಯತ್ಯಾಸವಿರುವುದರಿಂದ ಇಂಥ ಸ್ಥಳನಾಮಗಳು ರೂಪತಃ ಸಂವಾದಿಯಾಗಿ ಅಥವಾ ಸಮಾನವಾಗಿ ಇರಲಾರವು; ಆದರೆ ಇವು ನಿರ್ದೇಶಿಸುವ ಅರ್ಥದ ದೃಷ್ಟಿಯಿಂದ ಪರಸ್ಪರ ಸಾಮ್ಯವಿರಬಹುದು.

ಮೇಲೆ ಉದಾಹರಿಸಿದ ಕೆಲವು ಪ್ರಕೃತಿವಾಚಕಗಳು ಸ್ಥಳನಾಮದ ಮೂಲಾಂಶ ಅಥವಾ ಘಟಕಗಳಾಗಿದ್ದು, ಅವು ಇನ್ನೊಂದು ಅಂತಹುದೇ ಸ್ಥಳೀಯ ಭೂವಾಚಕ ಅಥವಾ ‘ಗ್ರಾಮ’ ವಾಚಕ ಪ್ರತ್ಯಯದೊಂದಿಗೆ ಕೂಡಿ ಬಳಕೆಗೆ ಬರುತ್ತವೆ. ಅಂದರೆ, ಸಾಮಾನ್ಯವಾಗಿ ಸ್ಥಳನಾಮಗಳು ‘ಕೂಡುನುಡಿ’ಗಳು ಅಥವಾ ಸಮಸ್ತಪದಗಳು. ಇವುಗಳಲ್ಲಿ ಪೂರ್ವ ಭಾಗವು (Pre-position / prefix) ಸಾಮಾನ್ಯವಾಗಿ ವಿಶಿಷ್ಟಾರ್ಥವಾಗಿದ್ದರೆ, ಉತ್ತರಭಾಗವು (Post-position / suffix) ಸಾಮಾನ್ಯಾರ್ಥಕವಾಗಿರುತ್ತದೆ. ಇಂಥ ಕಡೆ ಒಂದೇ ಸ್ಥಳನಾಮ – ವಸ್ತುವಿನ ಸ್ಥಾನಾಂತರದಿಂದ ಅರ್ಥವೂ ಹೆಚ್ಚುಕಮ್ಮಿ ಯಾಗುವುದನ್ನು ಗುರುತಿಸಬೇಕು. ಉದಾ :

i.          ಅಡ್ಕ     –           ಅಡ್ಕಾರು – ಕುಡ್ತಡ್ಕ

  1. ಕಟ್ಟೆ      –           ಕಟ್ಟೆಮಾರು – ಬಿದ್ಕಲ್‌ಕಟ್ಟೆ
  2. ಕಲ್‌      –           ಕಲ್ಮಡ್ಕ – ಪಂಜಿಕಲ್‌
  3. ಕಾರ್     –           ಕಾರ್ ಕಳ – ಅಜಕಾರ್
  4. ಕುಕ್ಕ್‌     –           ಕುಕ್ಕಡೆ – ಕಾಟುಕುಕ್ಕೆ (?)
  5. ಕುಂಜ    –           ಕುಂಜತ್ತೂರು – ಬಳ್ಕುಂಜ

vii.       ಕುಂದ    –           ಕುಂದಮಂಗಲ – ಕುಳ್ಕುಂದ

  1. ಕೊಂಬು  –           ಕೊಂಬಾರು – ನರಿಕೊಂಬು

ix.        ಕೋಡಿ   –           ಕೋಡಿಂಬಾಡಿ – ಬಲ್ಯಾಯಕೋಡಿ

  1. ಕೋಡು  –           ಕೋಡಂಗಳ – ಮುಚ್ಚಿಲಕೋಡು

xi.        ಗುಡ್ಡೆ    –           ಗುಡ್ಡೆ ಅಂಗಡಿ – ಶೇಡಿಗುಡ್ಡೆ

xii.       ಪದವು   –           ಪದವಂಗಡಿ – ನೊಣಲ್‌ಪದವು

  1. ಪಾದೆ     –           ಪಾದೆಬೆಟ್ಟು – ಕಲ್ಲುಡಪಾಡೆ
  2. ಬೆಟ್ಟ     –           ಬೆಟ್ಟತ್ತೂರು – ಕುಬಲ್‌ಬೆಟ್ಟು

xv.       ಮಾಳ    –           ಮಾಳ (ಮಾಳಿಗೆ) – ಎರ್ಮಾಳ

ಸ್ಥಳನಾಮ ಸಮಸ್ತ ಪದದಲ್ಲಿ ಭೂ (ವೈಶಿಷ್ಟ್ಯ) ವಾಚಕವಾಗಿ ಇಲ್ಲವೆ ಸ್ಥಳ (ಗ್ರಾಮ) ವಾಚಕವಾಗಿ ಬರುವ ಕೆಲವು ಘಟಕಗಳು ಸ್ವತಂತ್ರವಾಗಿ ನಿಂತು ಒಂದೊಂದು ಊರ ಹೆಸರಾಗಿಬಿಟ್ಟಿರುವುದುಂಟು. ಉದಾ :

೧.         ಅಡ್ಕ     (ಮಂಗಳೂರು ತಾಲೂಕು)

೨.         ಅಳಿಕೆ     (ಪುತ್ತೂರು ತಾಲೂಕು)

೩.         ಇನ್ನ      (ಉಡುಪಿ ತಾಲೂಕು)

೪.         ಉಳಿ      (ಬಂಟ್ವಾಳ ತಾಲೂಕು)

೫.         ಕಾಡು

೬.         ಕಜೆ

೭.         ಕಾನ      (ಕಾರ್ಕಳ ತಾಲೂಕು)

೮.         ಕಾಪು     (ಉಡುಪಿ ತಾಲೂಕು)

೯.         ಕಾವು     (ಪುತ್ತೂರು ತಾಲೂಕು)

೧೦.       ಕೋಟೆ   (ಹಲವಾರಿವೆ)

೧೧.       ಕೋಡಿ   (ಹಲವಾರಿವೆ)

೧೨.       ತೋಟ   (ಹಲವಾರಿವೆ)

೧೩.       ನಾಡು

೧೪.       ಪಳ್ಳಿ     (ಕಾರ್ಕಳ ತಾಲೂಕು)

೧೫.       ಪಾಡಿ     (ಕಾಸರಗೋಡು ತಾಲೂಕು)

೧೬.       ಮೊಗರು(ಮಂಗಳೂರು ತಾಲೂಕು)

೧೭.       ಹೊಯ್ಗೆ            (ಮಂಗಳೂರು ತಾಲೂಕು)

ಇಂಥ ರೂಪಗಳು ಒಂದು ಊರಿಗೆ ಸ್ವತಂತ್ರವಾಗಿ ಬಳಕೆಗೆ ಬರಬೇಕಾದರೆ, ಇದನ್ನ ಭಾಗಶಃ ಅಂಟಿಸಿಕೊಂಡ ಉಳಿದ ಸ್ಥಳಗಳಿಗೂ ಇವುಗಳಿಗೂ ಸ್ವಲ್ಪ ಮಟ್ಟಿಗಾದರೂ ಭೂಲಕ್ಷಣದಲ್ಲಿ ಸಾಮ್ಯವಿರಬೇಕೆಂದೂ, ಶಬ್ದರೂಪದ ಮತ್ತು ಸ್ಥಳನಾಮ ಚರಿತ್ರೆಯ ಬೆಳವಣಿಗೆಯ ದೃಷ್ಟಿಯಿಂದ ಇಂಥವು ಎರಡನೆಯ ಪಂಗಡಕ್ಕಿಂತ ಬಹುಶಃ ಸ್ವಲ್ಪವಾದರೂ ಪ್ರಾಚೀನ ವಾದಂಥವು ಎಂದು ಊಹಿಸಬಹುದೇನೋ. (ಅಂದರೆ ಈ ಸ್ಥಳಗಳಿಂದ ಭಾಗಶಃ ಈ ರೂಪವನ್ನು ಹೊಂದಿದ ಸ್ಥಳಗಳಿಗೆ ಜನ ವಲಸೆ ಹೋಗಿ ಹಬ್ಬಿದರೆಂದು ಸರ್ವಥಾ ಅರ್ಥವಾಗಲಾರದು.)

ಸ್ಥಳನಾಮಗಳ ಸ್ಥಳವೈಶಿಷ್ಟ್ಯ ವಿವರಣಾತ್ಮಕ ಗುಣವನ್ನು ಹೊಂದಿರುವುದರಿಂದಸಮಸ್ತ ಪದಗಳಲ್ಲಿ ಸಂಬಂಧವಾಚಕ, ಮಧ್ಯ ಪ್ರತ್ಯಯಗಳು (infix) ಅಪರೂಪವಾಗಿಯಾದರೂ ನುಸುಳುವುದುಂಟು. ಇಂಥ ಪ್ರತ್ಯಯಗಳು ಸಾಮಾನ್ಯವಾಗಿ ಸಂಬಂಧಕಾರರ (ಷಷ್ಠೀ ವಿಭಕ್ತಿ ಪ್ರತ್ಯಯ) ವಾಗಿರುವುದು ಗಮನೀಯ ಅಂಶ. ಕೆಲವು ಉದಾ:

೧.         ಅಡ್ಕತ್ತಬೈಲು     < ಅಡ್ಕ + ತ (ತುಳು ಷಷ್ಠೀ ವಿಭಕ್ತಿ ಕ> ‘ದ’) + ಬೈಲ್‌

೨.         ಉಪ್ಪಿನಕೋಟೆ     < ಉಪ್ಪು + ನ + ಕೋಠಿ

೩.         ಕಟ್ಟೆತ್ತಿಲ            < ಕಟ್ಟೆ + ತ/ದ + ಇಲ್‌

೪.         ಚಾತಂಗಡಿ           < ಚಾ + ತ + ಅಂಗಡಿ

೫.         ಜತ್ತನಕೋಟಿ       < ಜತ್ತಿ(= ವ್ಯಕ್ತಿನಾಮ) + ಅಣ್ಣ(ಅಥವಾ ಜತ್ತಿ + ನ/ನೋ) + ಕೋಡಿ

೬.         ಜೆಪ್ಪಿನಮೊಗರು   < ಜೆಪ್ಪು + ನ + ಮೊಗರು

೭.         ತುಂಬೆತಡಕ         < ತುಂಬೆ + ತ + ಅಡ್ಕ

೮.         ಪರವೆರೆಕೋಡಿ     < ಪರವೆ (= ನಿಮ್ನವರ್ಗ) + ರೆ + ಕೋ ಡಿ

೯.         ಮಠದ ಕುದ್ರು      < ಮಠ + ದ + ಕುದ್ರು

೧೦.       ಮೈರ್ಪಾಡಿ         < ಮಯ್ಯ (= ಒಂದು ಕುಲನಾಮ) + ರ + ಪಾಡಿ

೧೧.       ಸುರತಕಲ್‌          < ಸುರು + ತ + ಕಲ್‌

ಸ್ಥಳನಾಮಗಳಲ್ಲಿ ಸಾಮಾನ್ಯವಾಗಿ ಎರಡು ಪದಗಳಿರುವುದಾದರೂ ಕೆಲವೊಮ್ಮೆ ಎರಡಕ್ಕಿಂತ ಹೆಚ್ಚು ಪದಗಳುಳ್ಳ ಅಥವಾ ಒಂದೇ ಪದದ ಸ್ಥಳನಾಮಗಳೂ ಕಾಣಿಸುವುದಿಲ್ಲ. ಎರಡಕ್ಕಿಂತ ಹೆಚ್ಚು ಪದಗಳುಳ್ಳ ಸ್ಥಳನಾಮವು ಕೆಲವೊಮ್ಮೆ ಪ್ರಧಾನ ಅಥವಾ ಗಾತ್ರದಲ್ಲಿ ದೊಡ್ಡ ಘಟಕವಾಗಿರುವ ಊರಿನ ಸಂಬಂಧವುಳ್ಳ ಅಥವಾ ಊರ ಅಂಗವಾಗಿರುವ, ಅಥವಾ ಸಮೀಪವಿರುವ ಇನ್ನೊಂದು ಕಿರಿಯ ಊರನ್ನ, ಎಡೆಯನ್ನ, ಗುರುತಿಸುವ ಉದ್ದೇಶದಿಂದ ಹೊರಟಿರುತ್ತದೆ. ಉದಾ : ಅಡೆಕಳ ಶಿರಾಡಿ[7]a, ಅಮ್ಮುಣಿಗುತ್ತು,8b ಉಬರಡ್ಕಮಿತ್ತೂರು,8c ಎರ್ಮಾಳಕಂಡೆತಡ್ಕ, ಏಂತಿಮಾರುಬೀಡು,8d ನರಿಯೂರುಬಿದಿರೆ,8e ಪೆರ್ಡೂರು ಪಳಜೆ, ಬಜಾಲ್ ಕುಡ್ತಡ್ಕ, ಮಾಣಿ, ಕೊಡಜೆಜೈಲು, ಮಿಜಾರು ಪಡ್ಯಾರು, ವಾಮಂಜೂರು ಪದವು,8f ಸಾಂತೂರ ಕೊಪ್ಲ8g ಮುಂ. ಇನ್ನು ಸಾಮಾನ್ಯವಾದಂಥವುಗಳಿಗೆ ಉದಾ : ಅಮರಮುಡ್ನೂರು – ಪಡ್ನೂರು, ಆರಂತೋಡದಡಿ, ಕಾವಳಮುಡೂರು, ಪಡೂರು, ಕೊಡಿಯಾಲಬೈಲು, ದೇವಸ್ಯಮುಡೂರು – ಪಡೂರು, ಪಾಣೆಮಂಗಳೂರು, ಬಡಮಾಜೇಕಾರು, ಮಣಿನಾಲ್ಕೂರು, ಮೂಲ್ಲೂರು, ಫಲ್ಗುಣಿ, ಹೊಸಮಜ್ಲೂರು ಇ.

ಏಕಪದ ಸ್ಥಳನಾಮಗಳಿಗೂ ಗಣನೀಯ ಪ್ರಮಾಣದ ಉದಾಹರಣೆಗಳು ದೊರಕುತ್ತವೆ. ಹಿಂದೆ ಕೊಟ್ಟಿದ್ದ ಸ್ವತಂತ್ರ ಸ್ಥಳನಾಮಗಳೊಂದಿಗೆ ಈ ಕೆಳಗಿನವುಗಳನ್ನೂ ಪರಿಶೀಲಿಸಿ. ಅಗ್ರ, ಅಡ್ಯ, ಅರ, ಇಡು, ಇಡ್ಯ, ಈರ, ಒರಿ, ಕಂಬಳ, ಕಟ್ಟೆ, ಕಬೆ (ಯಿ), ಕರಿ, ಕುಕ್ಕೆ, ಕುಳ, ಕೂವೆ, ಕೆವೆ, ಕೊಪ್ಪ, ಕೋಟ, ಕೋಣಿ, ಗಂಪ, ಗುಂಡಿ, ಚೇರು, ಜಂಗಿ, ಜೈಪ್ಪು, ಜೋಗಿ, ತುಂಬಿ, ತೆಂಕು, ದೊಂಬೆ, ದುಲ್ಲಿ, ನಟ್ಟೆ, ನಕ್ರೆ, ನಗ್ರಿ, ನಾಳ, ನೀರೆ, ನೂಜಿ, ನೆಲ್ಲಿ, ನೇರ್ಯ, ಪಂಜಿ, ಪಟ್ಟೆ, ಪಟ್ಲ, ಪಡ್ರೆ, ಪದಂ, ಪದು, ಪನ್ನೆ, ಪುಣ್ಚ, ಪೆರ್ಣೆ, ಪೆರ್ಲ, ಪೊಲ್ಯ, ಬಡಗ, ಬಲ್ಲೆ, ಬಳ್ಪ, ಬಾಜಿ, ಬಾರೆ, ಬಾರ್ಯ, ಬಾಳ, ಬಿಜೈ, ಬೆಳ್ಮ, ಬೆಳ್ವೆ, ಬೆಳ್ಳೆ, ಬೇಣ, ಬೊಬ್ಬೆ, ಬೋಳ, ಮಂಕಿ, ಮಂಚಿ, ಮಗ್ರ, ಮಜಿ, ಮಲ್ಲ, ಮಾಳ, ಮಿಂಜ, ಮುಗು, ಮೂಡ, ಮೇಣ, ವಗ್ಗ, ವದ್ವ, ಶೆಡ್ಯ, ಸಗ್ರಿ, ಸರ್ವೆ, ಸಾಗು, ಸಾಯ, ಸುಳ್ಯ, ಸುಳ್ಳ, ಸೂಡ, ಸೇವ, ಹಳ್ಳಿ, ಹುಂಡಿ, ಹೆಗ್ರ, ಹೆರ್ಗ ಮುಂ.

ಕೆಲವು  ಸ್ಥಳನಾಮಗಳು ಒಂದು ಪ್ರಕೃತಿವೈಚಿತ್ರ್ಯ, ನಿರ್ದಿಷ್ಟ ಗುರುತು, ಎಡೆ, ಘಟನೆ ಮುಂತಾದವುಗಳನ್ನು ನಿರೂಪಿಸುವ ವಿವರಣಾತ್ಮಕ ನಾಮಗಳಾಗಿವೆ. ಮೂಲತಃ ಇದು ಒಂದು ಕೇಂದ್ರವಸ್ತು ಅಥವಾ ಘಟನೆ (ವಿರಳವಾಗಿ ವ್ಯಕ್ತಿಯೂ ಇರಬಹುದು)ಯನ್ನು ಮುಖ್ಯವಾಗಿಟ್ಟುಕೊಂಡು ನಿರ್ದೇಶಿತವಾದರೂ, ಕಾಲಾಂತರದಲ್ಲಿ ನಾಗರಿಕತೆಯ ವಿಕಾಸದೊಂದಿಗೆ, ಜನವಸತಿಯ ಸಾಂದ್ರತೆ- ಹೆಚ್ಚಳದೊಂದಿಗೆ, ನೀರಿಗೆ ಬಿದ್ದ ತೈಲಬಿಂದುವಿನಂತೆ ಸುತ್ತೆಲ್ಲ ಹಬ್ಬಿ, ಆ ಸ್ಥಳನಾಮ ಸೂಚಿಸುವ ಕೇಂದ್ರವಸ್ತು ಜನರ ಸ್ಮೃತಿಪಟಲದಿಂದ ಅಳಿಸಿಹೋಗಬಹುದು.[8] ಈ ಪ್ರಕ್ರಿಯೆ ಒಂದು ರೀತಿಯಲ್ಲಿ ಸ್ಥಳನಾಮಗಳ ಉದ್ದೇಶ – ಉಗಮವನ್ನೇ ನಿರ್ದೇಶಿಸುತ್ತದೆ. ಇಂಥ ಕೆಲವು ವಿವರಣಾತ್ಮಕ ಹೆಸರುಗಳು ಹೀಗಿವೆ : ಅಂಬಾಗಿಲು[9], ಅಮ್ಮೆಂಬಳ[10], ಆಳುಗ್ಗೆಲು[11], ಉಡುಪಿ[12], ಎರುಕಡಪ್ಪು, ಕಂಗಿಲ, ಕಡಬ[13], ಕಡೇಶ್ವಾಲ್ಯ[14], ಕಣ್ವತೀರ್ಥ, ಕತ್ತಲೆಸಾರ್, ಕಲ್ಕುಡಪಾದೆ[15], ಕಲ್ಬಾವಿ, ಕಾಡು, ಕಾನ, ಕುಡಲ[16], ಕೆದುಮೂಲೆ[17],  ಕೇದಿಗೆ ಜಿಡ್ಡ[18], ಕೇದಿಲ[19], ಕೇಪಳ[20], ಕೈಕಂಬ[21], ಗುಡ್ಡೆ ಅಂಗಡಿ (ಹಲವಾರಿವೆ)[22], ಗಾಣದ ಕೊಟ್ಟಿಗೆ, ಜೋಡುಮಾರ್ಗ, ತಡೆಕಲ್ಲು, ತಣ್ಣೀರುಬಾವಿ[23], ತೆಕ್ಕಿಲ, ತೆಕ್ಕುಂಜ[24], ದರ್ಬೆ[25], ದಾಳಿಂಬ[26], ಧೂಫದಕಟ್ಟೆ[27], ನ್ಯಾಯತೋಟ[28], ನಿಂತಕಲ್ಲು[29], ನೀರ್ಮಾರ್ಗ, ನೆಕ್ಕಿದಪುಣೆ, ನೆಕ್ಕಿಲಾಡಿ[30], ಪಣೆತ್ತಾಡಿ[31], ಪೀಪಳ್ಳ[32], ಪೂಪಾಡಿಕಲ್[33], ಬಂಟಕಲ್ಲು, ಬಾಳೆಪುಣಿ[34], ಬೆದ್ರಪಣೆ[35], ಬೆದ್ರಂಬಳ್ಳ[36], ಬೊಬ್ಬೆ, ಬೊಳ್ಳಲ್[37], ಮಂಚಕಲ್ಲು, ಮುರ[38], ಮೆಕ್ಕೆಕಟ್ಟು[39], ಮುಳಿಹಿತ್ಲು, ರಾಮಪುರ[40], ಸಂಪೊಳಿ[41], ಶಂಖತೀರ್ಥ, ಶಕ್ತಿಕಲ್ಲು[42], ಸುಂಕದಕಟ್ಟೆ[43], ಸುರುತಕಲ್[44]… ಇತ್ಯಾದಿ.

 

[1] ನೋಡಿ : ‘ಸ್ವಳನಾಮ ನಿರ್ದೇಶನ’, ಭವ್ಯವಾಣಿ : ಜನವರಿ ೧೯೭೭113

[2] ‘The fundamental purpose of names is to provide a means of identification : This is  the function that dictates their formation and keeps them alive’. – Wainwright F.T., ‘Archaeology and Place-names and History’ (1962), P. 57

[3] ಜೋಶಿ ಶಂ. ಬಾ., ‘ಎಡೆಗಳು ಹೇಳುವ ಕರುನಾಡ ಕತೆ’, ಪು. ೩೪-೪೦.

[4] ವಿವರಕ್ಕೆ ನೋಡಿ : ಶಂಬಾ ಅವರ ‘ಎಡೆಗಳು…’, ‘ಹಾಲುಮತ ದರ್ಶನ’ ಹಾಗೂ ‘ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ’.

[5] Wainwright, ಅದೇ, ಪು. ೫೭ -೫೮.

[6] ‘Ordinary words fall out of use when they cease to be meaningful, but placenames remain in use for centuries after they have become meaningless as words, for they still effectively perform their basic function of identification’, ಅದೇ, ಪು. ೧೦.

[7]a ಶಿರಾಡಿ, ಗುತ್ತು, ಮಿತ್ತೂರು, ಭೀಡು, ಬಿದಿರೆ, ಪದವು, ಕೊಪ್ಪಲ – ಇವು ಈ

8b “

8c “

8d “

8e “

8f “

8g ಸ್ಥಳಗಳಲ್ಲದೆ ಬೇರೆ ಕಡೆಯೂ ಇರುವುದರಿಂದ ಅವುಗಳಿಂದ ಇದನ್ನು ಪ್ರತ್ಯೇಕಿಸಿ ಗುರುತಿಸುವ ಉದ್ದೇಶವೂ ಇಲ್ಲಿರಬಹುದು.

[8] ಸ್ಥಳನಾಮ ನಿರ್ದೇಶನ; ಪೂರ್ವೋಕ್ತ.

[9] ‘ಅಮ್ಮೆ+ಬಾಗಿಲು>ಅಂಬಾಗಿಲು – ಊರಿನ ಆರಂಭವಾಗುವ ಜಾಗದಲ್ಲಿ ಇವು ಇರುವುದರಿಂದ ‘ಮಹಾದ್ವಾರ’ ಎಂಬರ್ಥದಲ್ಲಿ ಬಂತೇ, ಅಡಿಬಾಗಿಲು > ಅಂಬಾಗಿಲು ಎಂದಾಯಿತೇ, ಹೇಳುವುದು ಕಷ್ಟ. ತುಳುನಾಡಿನಲ್ಲಿ ‘ಅಂಬಾಗಿಲು’ ಎಂಬ ಹೆಸರಿನ ಎಡೆಗಳು ಹಲವಾರಿವೆ.

[10] ಅಮ್ಮೆ + ಪಳ್ಳ – ‘ದೊಡ್ಡ ಹಳ್ಳ’ ಎಂಬಂತೆ ಇದು ನಿಷ್ಪನ್ನವಾಗಿದೆ ಎಂದು ಕೆಲವರ ಮತ.

[11] ಉಡುಪಿ ತಾಲೂಕಿನ ಹಿರಿಯಡ್ಕದಲ್ಲಿ ಸ್ವಲ್ಪವೇ ತಗ್ಗಿನಲ್ಲಿ ಈ ಬಾವಿ (ಉಗ್ಗೆಲ್‌- ಗೂವೆಲ್  : ತು.) ಇದೆ. ಒಂದೇ ಆಳಿನಷ್ಟು ಕೆಳಗೆ ಈ ಬಾವಿಯಲ್ಲಿ ನೀರು ಸಿಗುವುದು ಒಂದು ವೈಶಿಷ್ಟ್ಯವಾಗಿದೆ.

[12] ‘ಉಡುಪ’ ಎಂಬುದರ ಮೂಲರೂಪ ‘ಒಡಿಪು’ ಎಂದಾಗಿದ್ದಿರಬೇಕು. ಈಗಲೂ ರೂಢಿಯಲ್ಲಿ ಇದೇ ರೂಪ ಬಳಕೆಯಲ್ಲಿದೆ. ಮಧ್ವ ವಿಜಯದ ‘ಭಾವ ಪ್ರಕಾಶಿಕಾ’ದಲ್ಲಿ ‘ರಜತಪೀಠ’ಕ್ಕೆ ‘ಒಡಿಪು ಇತಿ ಅಪಭ್ರಷ್ಟ (=ತುಳು) ಭಾಷಾ’ ಎಂದಿದೆ. ತುಳುವಿನಲ್ಲಿ ಉಕಾರಾಂತವಾದ ಹಲವಾರು ಊರುಗಳು ಇವೆ. ಉದಾ : ಕುಡುಪು, ಮಲಪು, ಮೆಜಪು, ಬಜಪು ಇ. ‘ಉಡುಪಿ’ಯೂ ಮೂಲತಃ ಉಕಾರಂತವಾಗಿರಬೇಕೆಂಬುದಕ್ಕೆ ಶಾಸನ ಮತ್ತಿತರ ಲಿಖಿತ ಆಧಾರಗಳಲ್ಲಿ ಪ್ರಯುಕ್ತವಾಗಿರುವ ‘ಉಡುಪಿನ’ ಎಂಬ ರೂಪವೇ ಸಾಕ್ಷಿ. ‘ಒಡಿ’ಗಳಿಂದ ಆವೃತವಾದ ಒಂದು ನಿರ್ದಿಷ್ಟ ಕೇಂದ್ರ ಬಿಂದುವಿಗೆ – ಈಗಣ ನಾಲ್ಕು ಬೀದಿಯ ಭಾಗ (?) – ಈ ಹೆಸರು ಮೊದಲು ಪ್ರಚಲಿತವಾಗಿದ್ದಿರಬೇಕು. ‘ಉಡುಪ – ನಾಗ’ ಎಂಬುದರಿಂದ ಶ್ರಿಂದನಂತೇಶ್ವರ (ಅನಂತ ಮತ್ತು ಈಶ್ವರ) ದೇವರ ಉಪಾಸನೆಗೆ ಪ್ರಸಿದ್ಧವಾದ ಸ್ಥಳ ಎಂದು ಸಾಧಿಸುತ್ತ ಬಂದ ಡಾ. ಪಿ. ಗುರುರಾಜ ಭಟ್ಟರು ಇದೀಗ ‘ಅಗಲ ಕಿರಿದಾದ ಸ್ಥಳ’ ಎಂಬರ್ಥದಲ್ಲಿ ‘ಉಡುಪಿ’ ಬಂದಿರಬೇಕು ಎಂದು ಊಹಿಸುವಂತಿದೆ.

[13] ತುಳುವಿನಲ್ಲಿ ಕಡವು = ferry ಎಂದರ್ಥ. ಕಡವ, ಕಡಬ, ಕಡಂಬು ಮುಂತಾದ ಊರ ಹೆಸರುಗಳು ಬಹುಶಃ ಇದೇ ಅರ್ಥದಲ್ಲಿ – ನೀರನ್ನು ದಾಟಿದಾಗ, ಅದರ ಆಚೆಗೆ ಸಿಕ್ಕುವ ಸ್ಥಳ ಎಂಬರ್ಥದಲ್ಲಿ ಬಂದಿರಬೇಕು.

[14] ಊರಿನ ಕಡೆಯಲ್ಲಿರುವ ಶಿವಾಲಯ ಎಂದಿರಬಹುದು.

[15] ಕಲ್ಕುಡ ಒಂದು ಭೂತ. ಅದರ ‘ಸ್ಥಾನ’ ವಿರುವ ಒಂದು ಬಂಡೆ – ಎಂದು ಈ ಹೆಸರು ಬಂದಿರಬಹುದು. ಇಂಥ ದೃಷ್ಟಾಂತಗಳು ಹೆಸರುಗಳು ಎಷ್ಟು ‘ಸಾಹಜಿಕ’ವಾಗಿ ಹುಟ್ಟಿಕೊಳ್ಳುತ್ತವೆ. ಹೇಗೆ ಸಹಜ ವೈಶಿಷ್ಟ್ಯವೊಂದರ ‘ಗುರುತುಪಟ್ಟಿ’ಗಳಾಗಿರುತ್ತವೆ – ಎಂಬುದಕ್ಕೆ ತೊರುಬೆರಳಾಗಬಲ್ಲವು.

[16] ಕೂಡ+ಆಲ : ಎರಡು ನದಿಗಳು – ಫಲ್ಗುಣೀ (ಗುರುಪುರ) ಹಾಗೂ ನೇತ್ರಾವತೀ – ಕೂಡವ ಸ್ಥಳ  :  ಮಂಗಳೂರು. ಈಗಲೂ ಸ್ಥಳೀಕರು ಮಂಗಳೂರಿಗೆ ಕುಡಲ, ಕುಡ್ಲ ಎಂದೇ ಹೇಳುವುದು.

[17] ಕೆದು (ಕೆರೆ) ಇರುವ ಮೂಲೆ ಎಂದರ್ಥ.

[18] ಕೇದಿಗೆ(ಹೂ) ಬೆಳೆಯುವ ಸ್ವಲ್ಪ ಎತ್ತರದ ಸ್ಥಳ (ತಿಟ್ಟು).

[19] ಕೇದಿಲ ಅಥವಾ ಕೆದಿಲ ಎಂಬ ಹೆಸರು ಕೆದು+ಇಲ್‌=’ಕೆರೆಯ ಬಳಿಯಿರುವ ಮನೆ’ಯಿಂದ ಗುರುತಿಸಲ್ಪಟ್ಟು ಬಂದಿರಬಹುದು. ಆದರೆ, ಕೆಲವರು ಇದನ್ನ ‘ಕೇಜೆಲ್’ – ಕೆಸರು ನೀರು ಊಜುವ ಸ್ಥಳ – ಎಂದು ವ್ಯಾಖ್ಯಾನಿಸುತ್ತಾರೆ.

[20] ಕೇಪಳದ ಗಿಡಗಳ ಆಧಿಕ್ಯದಿಂದ.

[21] ಕೈಕಂಬ – ರಸ್ತೆಯನ್ನು ಸೂಚಿಸುವ ಕೈಮರವು ಊರಿನ ಹೆಸರಿನ ಮೂಲಕ್ಕೂ ಕೈಮರವಾಗಿದೆ.

[22] ಗುಡ್ಡದಲ್ಲಿ ಅಂಗಡಿಯೊಂದು ತಲೆ ಎತ್ತಿದಾಗ ಈ ಎಡೆವೆಸರು ಬಳಕೆಗೆ ಬಂದು ಪರಿಸರದಲ್ಲೆಲ್ಲಾ ವ್ಯಾಪಿಸಿಕೊಳ್ಳುತ್ತದೆ.

[23] ತಣ್ಣೀರ ಬಾವಿ – ಈ ಬಾವಿಯ ನೀರು ಅನ್ಯಾದೃಶ (unique)ಎನ್ನಿಸಿಕೊಳ್ಳುವಷ್ಟರಮಟ್ಟಿಗೆ ತಣ್ಣಗಾಗಿದ್ದು ಈ ಹೆಸರು ಆಸುಪಾಸಿನಲ್ಲಿ ಜನಪ್ರಿಯವಾಯಿತು.

[24] ತೆಕ್ಕಿಲ, ತೆಕ್ಕುಂಜ- ಇವೆರಡೂ ತೇಗದ ಮರದಿಂದ (ತು. ‘ತೆಕ್ಕ್‌’)-ತೆಕ್ಕ್‌+ ಇಲ, ತೆಕ್ಕ್‌+ ಕುಂಜ ಎಂಬಂತೆ – ಬಂದಿರಬಹುದೇನೋ.

[25] ಉಪ್ಪಿನಂಗಡಿ ಸಮೀಪ ಒಂದು, ಪುತ್ತೂರು ತಾಲೂಕಿನಲ್ಲೊಂದು – ಹೀಗೆ ಎರಡು ದರ್ಭೆಗಳೂ, ಒಂದು ಕಾಲದಲ್ಲಿ ಅಲ್ಲಿ ವಿಪುಲವಾಗಿ ಬೆಳೆಯುತ್ತಿದ್ದ ದರ್ಭೆಯಿಂದ ಹೆಸರು ಪಡೆದಿರಬೇಕು. ಹುಲ್ಲಿನಿಂದ ಊರಿಗೆ ಹೆಸರು ಬಂದಿರುವುದಕ್ಕೆ ಇನ್ನೂ ಕೆಲವು ನಿದರ್ಶನಗಳಿವೆ. ಉದಾ : ಕರ್ಕಿ (ಉ.ಕ.), ಕುದುಂಬ್ಲಾಜೆ, ಮುಂ.

[26] ‘ದಾಳಿಂಬ’ಕ್ಕೆ ಸ್ಥಳೀಕರ ಉಚ್ಚಾರ : ‘ದಾರಿಮ’ ಎಂದು. ದಾಳಿಂಬದ ಗಿಡಗಳಿಂದ ಈ ಹೆಸರು ಬಂದಿದೆ ಅನ್ನಬಹುದು.

[27] ಧೂಪದ ಮರವುಳ್ಳ ಕಟ್ಟೆ.

[28] ಈ ತೋಟಕ್ಕೆ ಸಂಬಂಧಿಸಿದಂತೆ ಏನೋ ‘ನ್ಯಾಯ’ – ವ್ಯಾಜ್ಯ ನಡೆದಿರಬೇಕು.

[29] ಕೋಡುಗಲ್ಲು ಎತ್ತರಕ್ಕೆ ನಿಂತಿರುವುದರಿಂದ.

[30] ನೆಕ್ಕಿ ಗಿಡಗಳುಳ್ಳ ಮನೆಯ ಸ್ಥಳ.

[31] ಪಣೆ (ಏತ)ಯ ಅಡಿ.

[32] ಪೀಪಳ್ಳ – ಬಹುಶಃ ಕೆಸರುಮಣ್ಣು (ಪೀಮಣ್ಣು) ಜಾಸ್ತಿಯಾಗಿರುವುದರಿಂದ ಇರಬಹುದು.

[33] ಹೂಹಾಕುವ ಕಲ್ಲು – ಇಂಥ ಕೃತಕ ಕಲ್ಲ್ಗುಡ್ಡ (ಮೊರಡಿ)ಗಳು ತುಳುನಾಡಿನಲ್ಲಿ ಹಲವಾರಿವೆ. ಎರಡು – ಮೂರು ದಾರಿ ಸೇರುವಲ್ಲಿ – ಸಾಮಾನ್ಯವಾಗಿ ಗುಡ್ಡಕಾಡುಗಳಲ್ಲಿ ಹಾದಿಹೋಕರು ಒಂದು ಸಣ್ಣ ಕಲ್ಲನ್ನು ಇಲ್ಲಿ ಎಸೆದುಹೋಗುತ್ತಿದ್ದುದು ರೂಢಿ. ಇದರ ಮಹತ್ವವನ್ನು ಯಾರೂ ಗಮನಿಸಿದಂತಿಲ್ಲ.

[34] ಬಾಳೆಗಿಡ ನೆಟ್ಟಿರುವ ಗದ್ದೆಯಂಚು.

[35] ಬಿದಿರಿನ ಏತವಿರುವ ಸ್ಥಳ.

[36] ಬಹುಶಃ ಬಿದಿರ ಹಿಂಡಿನ ಸಮೀಪದ ಹಳ್ಳ ಎಂಬಂತೆ.

[37] ಇಲ್ಲಿ ನೋಡಿದರೂ ಬಿಳಿ ಬಿಳೀ ಕಲ್ಲುಗಳು.

[38] ಮುರ – Laterite.

[39] ಇಲ್ಲಿ ಭೂತಗಳ ತೃಪ್ತಿಗಾಗಿ ಮೇಕೆಯನ್ನು ಕಟ್ಟುತ್ತಿದ್ದುದರಿಂದ ಈ ಹೆಸರು ಬಂತೆನ್ನುತ್ತಾರೆ ಕೆಲವರು. ಒಂದು ಜಾತಿಯ ಭೂಮಿ (ಮೆಕ್ಕೆ – ಫಲವತ್ತಾದ ಭೂಮಿ) ಯಲ್ಲಿರುವ ಕಟ್ಟೆ ಎಂಬರ್ಥದಲ್ಲಿ ಬಂದಿರಬಹುದು.

[40] ಉಡುಪಿ ತಾಲೂಕಿನ ‘ರಾಮಪುರ’ ಎಂಬ ಸ್ಥಳ ಅಲೆವೂರಿನ ಒಂದು ಸೀಳು ಅಷ್ಟೆ. ಇಲ್ಲೊಂದು ರಾಮಮಂದಿರ ಕೆಲವು ದಶಕಗಳ ಹಿಂದೆ ಸ್ಥಾಪನೆಯಾದ ಮೇಲೆ ಈ ಪರಿಸರಕ್ಕೆಲ್ಲಾ ಈ ಹೆಸರು ಪ್ರಚುರವಾಗಿದೆ.

[41] ಸಂಪಿಗೆ ಗಿಡಗಳಿಂದ.

[42] ಉಪ್ಪಿನಂಗಡಿಗೆ ಹೋಗುವ ಮಾರ್ಗದಲ್ಲಿ ‘ಪೆರುಮೊಗ್ರಿ’ನ ಸಮೀಪ ಒಂದೆರಡು ಫರ್ಲಾಂಗು ಸ್ಥಳಕ್ಕೆ ಈ ಹೆಸರು. ಇಲ್ಲಿ ಯಾವ ‘ಸತೀಕಲ್ಲು’ ಇದ್ದ ಹಾಗೆ ತಿಳಿದುಬಂದಿಲ್ಲ. ಹಿಂದೆ ಇಲ್ಲೊಂದು ಶಕ್ತಿ ಪರೀಕ್ಷಿಸುವ ಕಲ್ಲು ಇತ್ತೆಂದು ಹೇಳುತ್ತಾರೆ.

[43] ಸುಂಕ ಎತ್ತುವ ಕಟ್ಟೆ. ಇಂಥವು ಹಲವಾರಿವೆ.

[44] ಸುರು+ತ+ಕಲ್ : ಮಂಗಳೂರಿನಿಂದ ಉತ್ತರಕ್ಕೆ ಸಮುದ್ರ ಮಾರ್ಗವಾಗಿ ಅಂಚಿನಲ್ಲೆ ಮೊದಲು ಸಿಕ್ಕುವ ದೊಡ್ಡ ಬಂಡೆ ಇಲ್ಲಿನದು. ಈ ಬಂಡೆಯ ಮೇಲೆ ಸದಾಶಿವ ದೇವಾಲಯವಿದೆ. ಬಂಡೆಯ ಬುಡವನ್ನು ಸಮುದ್ರದ ತೆರೆಗಳು ಅಪ್ಪಳಿಸುವ ದೃಶ್ಯ ಭಿಮಬಂಧುರ. ನೋಡಿ : ‘Some interesting inscriptional Place names in South Kananra’ Souverin, Third Anual Congress of Epigraphical Society of India, March, 77.