ಭಾರತೀಯರಿಗೆ ಇತಿಹಾಸಪ್ರಜ್ಞೆ ಇಲ್ಲ. ಪ್ರಾಚೀನ ಭಾರತೀಯರು ಜ್ಞಾನದ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ಗಾಢವಾಗಿ ತೊಡಗಿಸಿಕೊಂಡಿದ್ದರೂ ಇತಿಹಾಸ ರಚನೆಯ ಬಗ್ಗೆ ಅವರು ಯಾವುದೇ ಪ್ರಯತ್ನಗಳನ್ನು ನಡೆಸಲಿಲ್ಲ ಎಂಬುದು ಸಾಮಾನ್ಯವಾಗಿ, ಅದರಲ್ಲೂ ಮುಖ್ಯವಾಗಿ ಪಾಶ್ಚಿಮಾತ್ಯ ವಿದ್ವಾಂಸರ ಕಡೆಯಿಂದ ಕೇಳಿಬರುವ ಒಂದು ಆರೋಪ. ಆದರೆ ಈ ಆರೋಪ ಸಂಪೂರ್ಣ ಆಧಾರರಹಿತವಾದದ್ದು ಎಂಬ ವಿಚಾರ ಭಾರತದ ಇತಿಹಾಸ ರಚನೆಯ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವೇದ್ಯವಾಗುವುದು ಖಂಡಿತ. ಪಾಶ್ಚಿಮಾತ್ಯರ ಪರಿಕಲ್ಪನೆಯ ಇತಿಹಾಸ ರಚನೆಯ ಸಂಪ್ರದಾಯ ಇಲ್ಲಿ ಕಂಡುಬರುವುದಿಲ್ಲ ನಿಜ. ಆದರೆ, ಇತಿಹಾಸ ರಚನೆಯ ಕುರಿತಂತೆ ಭಾರತೀಯರು ತಮ್ಮದೇ ಆದ ಪರಿಕಲ್ಪನೆಯನ್ನು ಹೊಂದಿದ್ದರು ಮಾತ್ರವಲ್ಲ, ಈ ಹಿನ್ನೆಲೆಯಲ್ಲಿ ಇತಿಹಾಸವನ್ನು ಅರಿಯುವ, ಅದನ್ನು ಅಧ್ಯಯನ ಮಾಡುವ ಪ್ರಯತ್ನಗಳನ್ನು ಕೈಗೊಂಡಿದ್ದರು ಎಂಬುದರ ಬಗ್ಗೆ ಎರಡು ಮಾತಿಲ್ಲ. ತುಳುನಾಡಿನ ಇತಿಹಾಸ ರಚನೆಗೆ ಸಂಬಂಧಿಸಿದಂತೆಯೂ ಈ ಮಾತು ಬಹುಮಟ್ಟಿಗೆ ಅನ್ವಯವಾಗುತ್ತದೆ. ಇತಿಹಾಸ ರಚನೆಯ ಪಾಶ್ಚಿಮಾತ್ಯ ವಿಧಾನಗಳು ಹಾಗೂ ಪರಿಕಲ್ಪನೆಗಳು ಈ ಪ್ರದೇಶಕ್ಕೆ ಪರಿಚಯವಾಗುವ ಪೂರ್ವದಲ್ಲೇ ಇಲ್ಲಿನ ಇತಿಹಾಸವನ್ನು ಅರಿಯುವ ಹಾಗೂ ಅರ್ಥೈಸುವ ಪ್ರಯತ್ನಗಳು ನಡೆದದ್ದನ್ನು ಕಾಣುತ್ತೇವೆ.

ತುಳುನಾಡಿನ ಇತಿಹಾಸ ರಚನೆಯ ಬೆಳವಣಿಗೆಯಲ್ಲಿ ವಿವಿಧ ಹಂತಗಳನ್ನು ಗುರುತಿಸಲು ಸಾಧ್ಯ. ತಮ್ಮ ಪ್ರದೇಶದಲ್ಲಿ ನಡೆದ ಘಟನೆಗಳನ್ನು, ಐತಿಹಾಸಿಕ ಸಂಗತಿಗಳನ್ನು ತಮ್ಮದೇ ಆದ ಸಾಂಪ್ರದಾಯಿಕ ರೀತಿಯಲ್ಲಿ ಅರ್ಥೈಸಿ ವ್ಯಾಖ್ಯಾನಿಸಲು ತುಳುವರು ಕೈಗೊಂಡು ಪ್ರಯತ್ನಗಳು ಮೊದಲನೆಯ ಹಂತ. ಸಂಸ್ಕೃತ ಭಾಷೆಯಲ್ಲಿ ರಚಿತವಾದ ಸಹ್ಯಾದ್ರಿಖಂಡ, ಕನ್ನಡದ ಗ್ರಾಮಪದ್ಧತಿ, ತುಳು ಪಾಡ್ದನಗಳು, ಐತಿಹ್ಯಗಳು ಇತ್ಯಾದಿಗಳನ್ನು ಈ ಗುಂಪಿಗೆ ಸೇರಿಸಬಹುದು.

ಕ್ರಿಸ್ತ ಶಕ ಹದಿನೆಂಟನೆಯ ಶತಮಾನದ ಕೊನೆಯಲ್ಲಿ ತುಳುನಾಡು ವಸಾಹತುಶಾಹಿ ಆಡಳಿತಕ್ಕೊಳಪಟ್ಟಿತು. ಆ ಸಂದರ್ಭ ಈ ಪ್ರದೇಶದ ಇತಿಹಾಸವನ್ನು, ಜನಜೀವನವನ್ನು ಹಾಗೂ ಆಡಳಿತ ಸಂಪ್ರದಾಯಗಳನ್ನು ಅರಿಯಬೇಕಾದ ಅನಿವಾರ್ಯತೆಯಿಂದ ಬ್ರಿಟಿಷ್ ಆಡಳಿತಗಾರರು ಕೈಗೊಂಡ ಅಧ್ಯಯನಗಳು ಇಲ್ಲಿನ ಇತಿಹಾಸ ರಚನೆಯ ದೃಷ್ಟಿಯಿಂದ ಹೊಸ ದಾರಿಯೊಂದರ ನಿರ್ಮಾಣಕ್ಕೆ ನಾಂದಿ ಹಾಡಿದವು. ಫ್ರಾನ್ಸಿಸ್  ಬುಕನನ್‌ನ ಅಧ್ಯಯನ, ಸೌತ್‌ಕೆನರಾ ಮ್ಯಾನುವಲ್, ಮೆಕಂಜಿಯ ಕೈಫಿಯತ್ತುಗಳ ಸಂಗ್ರಹ, ಇ. ಹುಲ್ಶ್‌ನ ಶಾಸನಗಳ ಸಂಗ್ರಹ ಮತ್ತು ಪ್ರಕಟಣೆ ಇತ್ಯಾದಿಗಳು ಈ ಹಂತದಲ್ಲಿ ನಡೆದ ಹಲವು ಗಮನಾರ್ಹ ಪ್ರಯತ್ನಗಳಲ್ಲಿ ಕೆಲವು.

ಈ ಎಲ್ಲ ಪ್ರಯತ್ನಗಳ ಫಲವಾಗಿ ಇಪ್ಪತ್ತನೆಯ ಶತಮಾನದ ಮಧ್ಯದ ಹೊತ್ತಿಗೆ ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ ವೈವಿಧ್ಯಮಯವಾದ ಆಕರ ಸಾಮಗ್ರಿಗಳು ಬೆಳಕು ಕಾಣುವಂತಾಯಿತು.

ಪಾಶ್ಚಿಮಾತ್ಯ ಪರಿಕಲ್ಪನೆಯ, ಪಾಶ್ಚಿಮಾತ್ಯ ಮಾದರಿಯ ವಸ್ತುನಿಷ್ಠವಾದ ಹಾಗೂ ಆಧಾರ ಸಹಿತವಾದ ಇತಿಹಾಸ ರಚನೆಗೆ ಈ ಎಲ್ಲ ಪ್ರಯತ್ನಗಳು ನಾಂದಿ ಹಾಡಿದವು ಎಂದರೆ ತಪ್ಪಾಗಲಾರದು. ಆದರೆ, ತುಳುನಾಡಿನ ಇತಿಹಾಸದ ಅಧ್ಯಯನದ ಪ್ರಥಮ ಪ್ರಯತ್ನಗಳು ನಡೆದದ್ದು ಈ ಕ್ಷೇತ್ರದಲ್ಲಿ ಯಾವುದೇ ತಜ್ಞತೆ ಹಾಗೂ ಉನ್ನತ ಪದವಿಗಳನ್ನು ಗಳಿಸಿರದಿದ್ದ ಹವ್ಯಾಸಿ ಇತಿಹಾಸಕಾರರಿಂದ ಎಂಬುದು ಗಮನಾರ್ಹ. ಇವರಿಗಿದ್ದ ಏಕಮಾತ್ರ ಅರ್ಹತೆ ಎಂದರೆ ಇತಿಹಾಸದ ಕುರಿತ ಕುತೂಹಲ ಮತ್ತು ಆಸಕ್ತಿ ಮಾತ್ರ. ತುಳುನಾಡಿನ ಇತಿಹಾಸ ಸಂಶೋಧನಾ ಕಾರ್ಯದಲ್ಲಿ ಇತಿಹಾಸತಜ್ಞರಿಗೆ ಸಮಾನಾಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಹವ್ಯಾಸಿ ಇತಿಹಾಸಕಾರರ ಪರಂಪರೆ ಇಂದಿಗೂ ಮುಂದುವರಿದಿರುವುದು ಸ್ವಾಗತಾರ್ಹ ಮತ್ತು ಉಲ್ಲೇಖನೀಯ.

ತುಳುನಾಡಿನ ಇತಿಹಾಸಕಾರರಲ್ಲಿ ಮೊದಲಿಗರು ಎಂಬ ಕೀರ್ತಿಗೆ ಪಾತ್ರರಾದವರು ಪೊಳಲಿ ಶೀನಪ್ಪ ಹೆಗ್ಗಡೆಯವರೆಂದೇ ಪ್ರಸಿದ್ಧರಾದ ನಂದಳಿಕೆ ಅಮುಣಿಂಜೆಗುತ್ತು ಶೀನಪ್ಪ ಹೆಗ್ಡೆಯವರು (೧೮೯೦-೧೯೬೬). ೧೯೧೯ರಲ್ಲಿ ಇವರು ಪ್ರಕಟಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯಕಟ್ಟು ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದ ಮೊದಲ ಕೃತಿ ಎಂದು ಗುರುತಿಸಲ್ಪಡುತ್ತದೆ. ಇದಲ್ಲದೆ ‘ಹೆಗ್ಡೇರ ತುಳುನಾಡು’  ಮತ್ತು ಎನ್.ಎಸ್. ಕಿಲ್ಲೆಯವರ ಜೊತೆಯಲ್ಲಿ ‘ಪ್ರಾಚೀನ ತುಳುನಾಡು’ ಎಂಬ ಕೃತಿಗಳನ್ನು. ಇವರು ರಚಿಸಿದ್ದಾರೆ. ಹಸ್ತಪ್ರತಿ ರೂಪದಲ್ಲಿದ್ದ ‘ಹೆಗ್ಡೇರ ತುಳುನಾಡು’ ಈಗ ಅಲಭ್ಯವಾಗಿದೆ. ಆಕರಗಳ ಅಲಭ್ಯತೆ, ಇಂಗ್ಲಿಷ್‌ಭಾಷಾಜ್ಞಾನದ ಕೊರತೆ, ಸೀಮಿತ ವಿದ್ಯಾಭ್ಯಾಸ ಇತ್ಯಾದಿ ತಮ್ಮ ಮಿತಿಗಳ ನಡುವೆಯೂ ಶೀನಪ್ಪ ಹೆಗ್ಡೆಯವರು ರಚಿಸಿದ ಕೃತಿಗಳನ್ನು ಇಂದಿನ ಅರ್ಥದಲ್ಲಿ ಪರಿಪೂರ್ಣ ಇತಿಹಾಸ ಗ್ರಂಥಗಳು ಎಂದು ಒಪ್ಪಿಕೊಳ್ಳಲು ಅಸಾಧ್ಯವಾದರೂ ಅವುಗಳ ಹಿಂದಿರುವ ಕೃತಿಕಾರನ ಶ್ರಮ, ಸಂಶೋಧನಾಸಕ್ತಿ ಮತ್ತು ಪ್ರಾಮಾಣಿಕತೆಗಳನ್ನು ಮೆಚ್ಚಲೇಬೇಕಾಗುತ್ತದೆ.

ಭೂತಾಳಪಾಂಡ್ಯನ ಅಳಿಯಕಟ್ಟು ಎಂಬ ಗ್ರಂಥ, ಗ್ರಾಮ ಪದ್ಧತಿ, ಸಹ್ಯಾದ್ರಿಖಂಡ, ಪಾಡ್ದನಗಳು, ಐತಿಹ್ಯಗಳು ಹಾಗೂ ಸ್ಥಳ ಪುರಾಣಗಳನ್ನು ತಮ್ಮ ‘ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯಕಟ್ಟು’ ಕೃತಿ ರಚನೆಗೆ ಆಕರಗಳಾಗಿ ಬಳಸಿಕೊಂಡಿರುವುದಾಗಿ ಶೀನಪ್ಪ ಹೆಗ್ಡೆಯವರು ಉಲ್ಲೇಖಿಸಿದ್ದಾರೆ. ಒಂದ ಇತಿಹಾಸ ಗ್ರಂಥವಾಗಿ ಈ ಕೃತಿಯ ಮಿತಿಯನ್ನು ಇದು ಸೂಚಿಸುತ್ತದೆ ಎಂದರೆ ತಪ್ಪಾಗದು.  ಎರಡು ಭಾಗಗಳಲ್ಲಿ ಒಟ್ಟು ೩೨ ಕಿರು ಅಧ್ಯಾಯಗಳನ್ನೊಳಗೊಂಡ ಈ ಕೃತಿಯು ಭೂತಾಳಪಾಂಡ್ಯನ ಅಳಿಯಕಟ್ಟು ಮತ್ತು ಆತನ ಕತೆಯ ಸುತ್ತವೇ ಹೆಣೆಯಲ್ಪಟ್ಟಿದೆ. ಆದ್ದರಿಂದ ಸಹಜವಾಗಿಯೇ ಇಲ್ಲಿ ಚಾರಿತ್ರಿಕ ಅಂಶಗಳು ಕಡಿಮೆ. ರಾಜಕೀಯ ಇತಿಹಾಸದ ಅಂಶಗಳು ಇಲ್ಲವೇ ಇಲ್ಲ ಎನ್ನಬಹುದು. ತುಳುನಾಡನ್ನು ಅತ್ಯಂತ ದೀರ್ಘ ಕಾಲ ಅಳಿದ ಅಳುಪ ಅರಸರ ಕುರಿತು ಇಲ್ಲಿ ಉಲ್ಲೇಖವೇ ಇಲ್ಲ. ಕೃತಿಯ ಕೊನೆಯಲ್ಲಿ ಏಳು ಶಾಸನಗಳ ವಿವರಗಳನ್ನು ನೀಡಲಾಗಿದ್ದರೂ ಕೃತಿ ರಚನೆಯಲ್ಲಿ ಅವುಗಳನ್ನು ಬಳಸಿಕೊಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಎಂಬ ಶೀರ್ಘಿಕೆಯನ್ನು ಹೊಂದಿದ್ದರೂ ಅದರ ವ್ಯಾಪ್ತಿಗೆ ಹೊರತಾದ ಭರತ ಖಂಡದ ಕ್ಷತ್ರಿಯ ರಾಜ ವಂಶಾವಳಿ, ಭರತ ಖಂಡವೆಂಬ ಹಿಂದೂಸ್ಥಾನಕ್ಕೆ ಅನ್ಯ ದೇಶದ ರಾಜರುಗಳ ಪ್ರವೇಶ ಕಾಲಗಳು ಮುಂತಾದ ವಿವರಗಳು ಈ ಕೃತಿಯಲ್ಲಿದ್ದು ಇದು ತಾವು ಸಂಗ್ರಹಿಸಿದ ಎಲ್ಲ ಮಾಹಿತಿಗಳನ್ನೂ ವಾಚಕರಿಗೆ ಒಪ್ಪಿಸಬೇಕೆನ್ನುವ ಹೆಗ್ಡೆಯವರ ಅತಿ ಉತ್ಸಾಹಕ್ಕೆ ನಿದರ್ಶನಗಳು.

ಇಷ್ಟೆಲ್ಲ ಮಿತಿಗಳ ನಡುವೆಯೂ ಈ ಕೃತಿಯು ತುಳುನಾಡಿನ ಇತಿಹಾಸಾಧ್ಯಯನಕ್ಕೆ ಶೀನಪ್ಪ ಹೆಗ್ಡೆಯವರು ನೀಡಿದ  ಮಹತ್ವದ ಕೊಡುಗೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ತುಳುನಾಡಿನ ಸ್ಥಳಿಕ ಅರಸು ಮನೆತನಗಳಾದ ಬಂಗ, ಅಜಿಲ,  ಚೌಟ, ಸಾಮಂತ ಮುಂತಾದವರ ರಾಜ್ಯ ವಿಸ್ತಾರಗಳನ್ನು ಉಲ್ಲೇಖಿಸುವ ಈ ಕೃತಿ ತುಳು ಜನಜೀವನಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕರ ವಿಚಾರಗಳನ್ನೊಳಗೊಂಡಿದೆ. ಸಾಂಪ್ರದಾಯಿಕ ಇತಿಹಾಸದ ಆಕರಗಳ ಹೊರತಾಗಿ ಐತಿಹ್ಯಗಳು, ಪಾಡ್ದನಗಳು ಮುಂತಾದವುಗಳ ಆಧಾರದಲ್ಲಿ ಇತಿಹಾಸವನ್ನು ಅರಿಯುವ ಹೆಗ್ಡೆಯವರ ಈ ಪ್ರಯತ್ನವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತಿಹಾಸ ಸಂಶೋಧನೆಯ ದೃಷ್ಟಿಯಿಂದ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದರೆ ಅತಿಶಯೋಕ್ತಿಯಾಗದು. ಈ ಹಿನ್ನೆಲೆಯಲ್ಲಿ ”ಈ ಗ್ರಂಥವು ಒಂದು ದೃಷ್ಟಿಯಿಂದ ಇಂದಿನ ಹೊಸ ರೀತಿಯ ಐತಿಹಾಸಿಕ ದೃಷ್ಟಿಕೋನದ ಮುನ್ನುಡಿಯಂತಿದೆ” ಎನ್ನುವ ಕೆ.ವಿ. ರಮೇಶ್‌ರವರ ಅಭಿಪ್ರಾಯ ನಿಜಕ್ಕೂ ಅರ್ಥಪೂರ್ಣ.

ತುಳುನಾಡಿನ ಇತಿಹಾಸ ರಚನೆಯ ಇನ್ನೊಂದು ಪ್ರಯತ್ನವನ್ನು ಶೀನಪ್ಪ ಹೆಗ್ಡೆಯವರು ಎನ್‌. ಎಸ್‌. ಕಿಲ್ಲೆಯವರ ಜೊತೆಗೂಡಿ ಪ್ರಕಟಿಸಿದ ಪ್ರಾಚೀನ ತುಳುನಾಡು (೧೯೪೫) ಕೃತಿಯಲ್ಲಿ ಕಾಣಬಹುದು. ಇದರಲ್ಲಿ ಅಡಕವಾಗಿರುವ ರಾಮಾಯಣ, ಮಹಾಭಾರತದ ಕಾಲದಲ್ಲಿ ತುಳುನಾಡು, ಪರಶುರಾಮ ಕ್ಷೇತ್ರ ಸೃಷ್ಟಿ, ಪಾಡ್ದನಗಳಲ್ಲಿ ತುಳುನಾಡು, ತುಳುವರ ಕಟ್ಟುಕಟ್ಟಳೆಗಳು ಇತ್ಯಾದಿ ಅಧ್ಯಾಯಗಳು ಈ ಕೃತಿಯ ವಿಷಯವ್ಯಾಪ್ತಿಯನ್ನು ಸೂಚಿಸುತ್ತದೆ. ಪಾಡ್ದನಗಳಲ್ಲಿ ತುಳುನಾಡು ಎಂಬುದು ಸುದೀರ್ಘವಾದ ಅಧ್ಯಾಯವಾಗಿದ್ದು, ಇದರಲ್ಲಿ ನಾಗಸಿರಿ ಕನ್ಯಗೆ, ಕೇತುಮರಕಾಲ ಸಂಧಿ, ಸಿರಿ ಅಕ್ಕೆರಸು ಪೂಂಜೆದಿ ಸಂದಿ, ಕೋಟಿ ಚೆನ್ನಯ ಕತೆ, ಗಿಂಡಿಯ ಕತೆ ಮುಂತಾದ ಪಾಡ್ದನಗಳು ಹೇಳುವ ಕತೆಳನ್ನಿಲ್ಲಿ ವಿವರವಾಗಿ ನೀಡಲಾಗಿದೆ. ಇದಕ್ಕೆ ಬದಲಾಗಿ ಈ ಪಾಡ್ದನಗಳನ್ನು ತುಳುನಾಡಿನ ಇತಿಹಾಸದ ಆಕರಗಳನ್ನಾಗಿ ಬಳಸುವ ಪ್ರಯತ್ನವನ್ನು ಲೇಖಕರು ಮಾಡಿದ್ದರೆ ಇದೊಂದು ಅಪೂರ್ವ ಗ್ರಂಥವಾಗಿ ಮೂಡಿಬರುತ್ತಿತ್ತು ಎಂಬ ಕೊರಗು ಓದುಗರನ್ನು ಕಾಡಿದರೆ ಅಚ್ಚರಿಯಲ್ಲ. ತಮ್ಮ ಈ ಹಿಂದಿನ ಕೃತಿಯಲ್ಲಿ ನೀಡಲಾದ ಕೆಲವು ವಿಚಾರಗಳನ್ನು ತಮ್ಮದೇ ಆದ ಶೈಲಿಯಲ್ಲಿ ವಿಮರ್ಶೆಯ ಒರೆಗಲ್ಲಿಗೆ ಹಚ್ಚುವ ಶೀನಪ್ಪ ಹೆಗ್ಡೆಯವರ ಪ್ರಯತ್ನವನ್ನು ‘ಪ್ರಾಚೀನ ತುಳುನಾಡು’ ಕೃತಿಯಲ್ಲಿ ಅಲ್ಲಲ್ಲಿ ಗಮನಿಸಬಹುದು.

ಶೀನಪ್ಪ ಹೆಗ್ಡೆಯವರ ಮೊದಲಿನ ಗ್ರಂಥಕ್ಕೂ ‘ಪ್ರಾಚೀನ ತುಳುನಾಡು’ ಕೃತಿಗೂ ಸುಮಾರು ೩೯ ವರ್ಷಗಳ ಅಂತರವಿದ್ದರೂ ಈ ಅವಧಿಯಲ್ಲಿ ಅವರ ಐತಿಹಾಸಿಕ ದೃಷ್ಟಿಕೋನದಲ್ಲಾಗಲೀ ಇತಿಹಾಸರಚನಾ ಅವಧಿಯಲ್ಲಿ ಅವರ ಐತಿಹಾಸಿಕ ದೃಷ್ಟಿಕೋನದಲ್ಲಾಗಲೀ ಇತಿಹಾಸರಚನಾ ವಿಧಾನದಲ್ಲಾಗಲೀ ಯಾವುದೇ ಬದಲಾವಣೆಗಳಾದಂತೆ ತೊರುವುದಿಲ್ಲ. ಈ ಕೃತಿಯ ರಚನೆಯ ಹೊತ್ತಿಗಾಗಲೇ ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಗಣಪತಿರಾವ್‌ಐಗಳ್‌, ಗೋವಿಂದ ಪೈ, ಸಾಲೆತ್ತೂರು ಮುಂತಾದವರ ಗ್ರಂಥಗಳು, ಲೇಖನಗಳು ಪ್ರಕಟಗೊಂಡಿದ್ದು ಶೀನಪ್ಪ ಹೆಗ್ಡೆಯವರು ಅವುಗಳನ್ನು ಗಮನಿಸಿದ್ದರೆಂಬುದು ಅವರ ಕೃತಿಯಲ್ಲಿ ಅವುಗಳ ಉಲ್ಲೇಖಗಳನ್ನು ಕಂಡಾಗ ಸ್ಪಷ್ಟವಾಗುತ್ತದೆ. ಹಾಗಿದ್ದರೂ ಅವುಗಳು ಹೆಗ್ಡೆಯವರ ಕೃತಿ ರಚನೆಯ ಮೇಲೆ ಯಾವುದೇ ಪ್ರಭಾವವನ್ನೂ ಬೀರಿಲ್ಲ ಎಂಬುದು ಅಚ್ಚರಿಯ ಸಂಗತಿ. ”ತುಳುನಾಡಿನ ಇತಿಹಾಸವು ತುಳುವರ ಚರಿತ್ರೆಗೆ ಆಧಾರವಾದ ಕಥೆ, ಕವನ, ಪಾಡ್ದನ, ಗಾದೆಗಳಿಂದ ಸಂಗ್ರಹಿಸಬೇಕಾಗುತ್ತದೆ” ಎನ್ನುವ ಶೀನಪ್ಪ ಹೆಗ್ಡೆಯವರ ಹೇಳಿಕೆಯು ‘ಪ್ರಾಚೀನ ತುಳುನಾಡು’ ಕೃತಿಯಲ್ಲಿ ಮಂಡಿತವಾದ ವಿಚಾರಗಳ ಇತಿಮಿತಿಗಳನ್ನು ಪರೋಕ್ಷವಾಗಿ ಸೂಚಿಸುತ್ತದೆ ಎನ್ನಬಹುದು. ಈ ಗ್ರಂಥವಲ್ಲದೆ ಕೆಲವಾರು ಚಾರಿತ್ರಿಕ ವಿಷಯಗಳನ್ನೊಳಗೊಂಡ ‘ಪುಳಿನಾಪುರ ಕ್ಷೇತ್ರ ಮಹಾತ್ಮೆ’ ಎಂಬ ಕೃತಿಯನ್ನು ಶೀನಪ್ಪ ಹೆಗ್ಡೆ ರಚಿಸಿದ್ದಾರೆ.

ಶೀನಪ್ಪ ಹೆಗ್ಡೆಯವರ ಕೃತಿಗಳಲ್ಲಿ ಚರ್ಚಿಸಲಾದ  ಇತಿಹಾಸದ ವಿವರಗಳು, ತೇದಿಗಳ ವಿವರಗಳು ಪ್ರಶ್ನಾರ್ಹವಾಗಿವೆ ಎಂಬುದು ನಿಜವಾದರೂ ಇವು ಅವರ ಕೃತಿಗಳ ಮೌಲ್ಯವನ್ನು ಕುಂಠಿತಗೊಳಿಸುವುದಿಲ್ಲ ಎಂಬುದೂ ಅಷ್ಟೇ ನಿಜ. ಇತಿಹಾಸ ರಚನೆಯ ಕುರಿತ ಆಸಕ್ತಿ, ಆಕರಗಳ ಸಂಗ್ರಹದ ಬಗೆಗಿದ್ದ ಕಾಳಜಿ, ವಿಚಾರ ಮಂಡನೆಗಳ ಹಿಂದಿರುವ ಪ್ರಾಮಾಣಿಕತೆ ಇವು ಓರ್ವ ಇತಿಹಾಸಕಾರನಗಿ ಶೀನಪ್ಪ ಹೆಗ್ಡೆಯವರಲ್ಲಿ ಗುರುತಿಸಬಹುದಾದ ಧನಾತ್ಮಕ ಅಂಶಗಳು. ತುಳುನಾಡಿನ ಇತಿಹಾಸ ರಚನೆಗೆ ಶೀನಪ್ಪ ಹೆಗ್ಡೆಯವರ ಕೊಡುಗೆಗಳನ್ನು ಸಂದರ್ಭ ಹಾಗೂ ಇತಿಹಾಸ ಗ್ರಂಥಗಳಾಗಿ ಅವರ ಕೃತಿಗಳನ್ನು ಮೌಲ್ಯಮಾಪನ ಮಾಡುವ ಸಂದರ್ಭ, ‘ಪ್ರಾಚೀನ ತುಳುನಾಡು’ ಕೃತಿಯ ಮುನ್ನುಡಿಯಲ್ಲಿ ಗೋವಿಂದ ಪೈಗಳು ಹೇಳುವ ಈ ಕೆಳಗಿನ ಮಾತುಗಳನ್ನು ಗಮನಿಸಬೇಕಾದ್ದು ಅತ್ಯಂತ ಅಗತ್ಯ. ”ಈ ಕೆಲಸವನ್ನು ಅವರು ಇಂದು ತೊಡಗದಿದ್ದರೆ ಮುಂದಣ ಸಂಶೋಧನೆಗೆ ಏಳ್ಗೆ ಇರುತ್ತಿರಲಿಲ್ಲ. ಈ ಶ್ಲಾಘನೀಯವಾದ ಆರಂಭದ ಬಗ್ಗೆ ನಾವು ಅವರಿಗೆ ಕೃತಜ್ಞರಾಗಿರಲೂಬೇಕು, ಈ ಕೆಲಸದಲ್ಲಿ ಅವರು ಮುಂದಿಗರೆಂಬುದನ್ನು ಒಪ್ಪಿಕೊಳ್ಳಲೂ ಬೇಕು”.

ಬಹುಮಟ್ಟಿಗೆ ಪುರಾಣ, ಐತಿಹ್ಯ, ಪಾಡ್ದನಗಳ ವಿವರಗಳನ್ನು ನೀಡುವುದಕ್ಕಷ್ಟೆ ಸೀಮಿತವಾಗಿದ್ದ ತುಳುನಾಡಿನ ಇತಿಹಾಸ ರಚನೆಗೆ ಹೊಸ ಆಯಾಮವನ್ನು ನೀಡಿದವರು ಮಂಜೇಶ್ವರ ಗಣಪತಿ ರಾವ್‌ಐಗಳ್‌(೧೮೮೧ – ೧೮೪೪) ಅವರು. ಐತಿಹಾಸಿಕ ದೃಷ್ಟಿಕೋನದಲ್ಲಾಗಲೀ, ಆಕರ ಸಂಗ್ರಹ ವಿಚಾರದಲ್ಲಾಗಲೀ ಅಥವಾ ಇತಿಹಾಸ ರಚನಾ ವಿಧಾನದಲ್ಲೇ ಆಗಲಿ ಐಗಳ್ ಅವರ ಕೃತಿಗಳು ಶೀನಪ್ಪ ಹೆಗ್ಡೆಯವರ ಕೃತಿಗಳಿಗಿಂತ ಸಂಪೂರ್ಣ ಭಿನ್ನವಾಗಿ ಕಂಡರೆ ಅಸಹಜವಲ್ಲ. ತುಳುನಾಡಿನ ಇತಿಹಾಸದ ಕ್ರಮಬದ್ಧವಾದ ಅಧ್ಯಯನಕ್ಕೆ ನಾಂದಿ ಹಾಡಿದವರು ಗಣಪತಿ ರಾವ್‌ಐಗಳ್ ಎಂದರೆ ಅತಿಶಯೋಕ್ತಿ ಯಾಗದು.

ಗಣಪತಿ ರಾವ್‌ ಐಗಳ್‌ ಮೂಲತಃ ಓರ್ವ ಇತಿಹಾಸಕಾರರಲ್ಲಿ. ತುಳುನಾಡಿನ ಇತಿಹಾಸವನ್ನು ರಚಿಸಲು ಅವರಿಗಿದ್ದ ಅರ್ಹತೆಗಳೆಂದರೆ ಈ ನಾಡಿನ ಇತಿಹಾಸವನ್ನರಿಯಲು ಅವರಿಗಿದ್ದ ಅದಮ್ಯ ಆಸಕ್ತಿ ಮತ್ತು ಆ ದಿಶೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವರಿಗಿದ್ದ ವಿಶೇಷ ಉತ್ಸಾಹ. ಸಂಖ್ಯೆಯ ದೃಷ್ಟಿಯಿಂದ ಐಗಳ್‌ ಅವರ ಕೃತಿಗಳು ಅಪಾರವಲ್ಲ. ‘ಸ್ಥಳ ಪುರಾಣಗಳು’ ಎಂಬ ಶೀರ್ಷೀಕೆಯಡಿಯಲ್ಲಿ ಇವರು ‘ಸುಬ್ರಹ್ಮಣ್ಯ’, ‘ಮಂಜೇಶ್ವರ’, ‘ಮಂಗಳೂರು’, ‘ಕೊಲ್ಲೂರು’, ‘ಪೊಳಲಿ’, ‘ಕುಂಬಳೆ’, ‘ಧರ್ಮಸ್ಥಳ’ ಹಾಗೂ ‘ಉದ್ಯಾವರ’ ಎಂಬ ಕಿರುಹೊತ್ತಗೆಗಳನ್ನು ರಚಿಸಿದ್ದಾರೆ. ಕೇವಲ ಸ್ಥಳಪುರಾಣಗಳು ಎಂದು ಈ ಕೃತಿಗಳನ್ನು ನಿರ್ಲಕ್ಷಿಸುವಂತಿಲ್ಲ. ಆಯಾ ಸ್ಥಳಗಳಿಗೆ ಸಂಬಂಧಿಸಿದ ಎಲ್ಲ ಆಕರಗಳನ್ನು ಈ ಕಿರುಕೃತಿಗಳಲ್ಲಿ ಮಾಡಲಾಗಿದೆ. ಉದಾಹರಣೆಗೆ, ‘ಮಂಜೇಶ್ವರ’ ಎಂಬ ೩೩ ಪುಟಗಳ ಕಿರುಹೊತ್ತಗೆಯ ರಚನೆಗೆ ಐಗಳ್ ಅವರು ೩೧ ಕರಾರುಪತ್ರಗಳನ್ನೂ ಕೆಲವು ಶಾಸನಗಳನ್ನೂ ಬಳಸಿಕೊಂಡಿರುವುದಲ್ಲದೆ ಅವುಗಳ ಪಾಠಗಳನ್ನು ಕೃತಿಯ ಕೊನೆಯಲ್ಲಿ ನೀಡಿದ್ದಾರೆ.

ತುಳುನಾಡಿನ ಒಬ್ಬ ಪ್ರಮುಖ ಇತಿಹಾಸಕಾರನಾಗಿ ಗಣಪತಿರಾವ್‌ ಐಗಳ್‌ ಗುರುತಿಸಲ್ಪಡುವುದು ಅವರ ‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ (೧೯೨೩) ಎಂಬ ಕೃತಿಯಿಂದ ತುಳುನಾಡಿನ ಇತಿಹಾಸ, ಸಂಸ್ಕೃತಿಗಳ ಅಧ್ಯಯನದ ದೃಷ್ಟಿಯಿಂದ ಇದೊಂದು ಅತ್ಯಂತ ಮೌಲಿಕ ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಗ್ರಂಥದ ಪ್ರಸ್ತಾವನೆಯಲ್ಲಿ ಕೃತಿಕಾರರೇ ಹೇಳಿಕೊಂಡಿರುವಂತೆ ಈ ಗ್ರಂಥದ ರಚನೆಗೆ ಲಭ್ಯವಿರುವ ಎಲ್ಲ ಬಗೆಯ ಆಕರಗಳನ್ನು ಬಳಸಿಕೊಳ್ಳಲಾಗಿದೆ. ಕೃತಿಯ ರಚನೆಗೆ ಆಧಾರವಾಗಿ ಬಳಸಿಕೊಳ್ಳಲಾದ ೩೭ರಷ್ಟು ವಿವಿಧ ಗ್ರಂಥಗಳ ಪಟ್ಟಿಯನ್ನು ಪ್ರಾರಂಭದಲ್ಲೇ ನೀಡಲಾಗಿದೆ. ಇವುಗಳಲ್ಲಿ ಜೆ.ಎಫ್. ಫ್ಲೀಟ್‌, ಬುಕನನ್, ಲುವಿಸ್‌ರೈಸ್‌, ರಾಬರ್ಟ್‌ಸಿವೆಲ್‌ಮುಂತಾದವರ ಕೃತಿಗಳು, ಜಿಲ್ಲಾ ಗಜೆಟಿಯರುಗಳು ಇತ್ಯಾದಿ ಹಲವು ಪ್ರಕಟಿತ ಗ್ರಂಥಗಳು ಸೇರಿಕೊಂಡಿವೆ. ಅಲ್ಲದೆ ೧೯೦೧ ರಿಂದ ೧೯೨೧ರವರೆಗಿನ ‘ಎಪಿಗ್ರಾಫಿಕಲ್ ರಿಪೋರ್ಟು’ ಗಳನ್ನು ಬಳಸಿಕೊಳ್ಳಲಾಗಿದೆ. ಮಾತ್ರವಲ್ಲದೆ, ಲಭ್ಯವಿರುವ ಸ್ಥಳ ಪುರಾಣಗಳು, ಐತಿಹ್ಯಗಳು ಹಾಗೂ ಪಾಡ್ದನಗಳನ್ನೂ ಈ ಕೃತಿರಚನೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ.

ತುಳುನಾಡಿನ ಭೌಗೋಳಿಕ ವಿವರಗಳೊಂದಿಗೆ ಪ್ರಾರಂಭವಾಗುವ ಸುಮಾರು ೪೫೦ ಪುಟಗಳ ‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ವು ಒಟ್ಟು ೩೫ ಅಧ್ಯಾಯಗಳಾಗಿ ವಿಂಗಡಿಸಲ್ಪಟ್ಟಿದೆ. ಇತಿಹಾಸಾರಂಭ ಕಾಲದಿಂದ ಬ್ರಿಟಿಷರ ಆಳ್ವಿಕೆಯ ಕಾಲದವರೆಗೆಗಿನ ವಿವರಗಳನ್ನು ಮೊದಲ ೨೩ ಅಧ್ಯಾಯಗಳಲ್ಲಿ ಕಾಣಬಹುದು. ಕೇವಲ ರಾಜಕೀಯ ಸಂಗತಿಗಳು ಮಾತ್ರವಲ್ಲದೆ ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ವಿವರಗಳೂ ಇಲ್ಲಿ ಅಡಕಗೊಂಡಿವೆ.

ತುಳುನಾಡಿನ ಇತಿಹಾಸದ ಅಧ್ಯಯನಕ್ಕೆ ಗಣಪತಿರಾವ್‌ಐಗಳ್‌ರವರ ಅತಿ ಮಹತ್ವದ ಕೊಡುಗೆ ಎಂದರೆ ಈ ಪ್ರದೇಶದ ಸ್ಥಳಿಕ ಅರಸು ಮನೆತನಗಳ ಇತಿಹಾಸ ಸಂಶೋಧನೆ. ತುಳುನಾಡಿನ ಸ್ಥಳಿಕ ಅರಸು ಮನೆತನಗಳಾದ ಬಂಗ, ಚೌಟ, ಅಜಿಲ, ಸಾಮಂತ, ಡೊಂಬ ಹೆಗ್ಗಡೆ, ಮೂಲ, ಬೈರರಸ ಒಡೆಯ, ತೊಳಹಾರ, ಹೊನ್ನೆಕಂಬಳಿ, ಬಿನ್ನಾಣಿ ಮೊದಲಾದ ೧೫ ಅರಸು ಮನೆತನಗಳ ವಿವರಗಳನ್ನು ನೀಡುವ ಮೂಲಕ ಐಗಳ್‌ರವರು ಸ್ಥಳೀಯ ಇತಿಹಾಸದ ಅಧ್ಯಯನಕ್ಕೆ ಬಲವಾದ ಅಡಿಪಾಯವನ್ನು ಹಾಕಿಕೊಟ್ಟಿದ್ದಾರೆ. ಈ ಎಲ್ಲ ಅರಸು ಮನೆತನಗಳ ವಿವರಗಳನ್ನು ಬಹುತೇಕ ಕ್ಷೇತ್ರಕಾರ್ಯಗಳ ಮೂಲಕವೇ ಇವರು ಸಂಗ್ರಹಿಸಿದ್ದಾರೆ. ಎಂಬುದು ಗಮನಾರ್ಹ. ಈ ಅರಸು ಮನೆತನಗಳ ಸಂಕ್ಷಿಪ್ತ ಇತಿಹಾಸ, ರಾಜ್ಯ ವಿಸ್ತಾರ, ಆಳಿದ ಅರಸರು,  ಪರಸ್ಪರ ಸಂಬಂಧಗಳು, ರಾಜಧಾನಿ, ಅರಮನೆ, ಕುಲದೇವರುಗಳು, ಪ್ರಮುಖ ದೇವಾಲಯಗಳು ಇತ್ಯಾದಿ ಹಲವಾರು ಕುತೂಹಲಕರ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಐಗಳ್ ಅವರ ಪ್ರಯತ್ನವನ್ನಿಲ್ಲಿ ಕಾಣಬಹುದು. ಇದಲ್ಲದೆ ಈ ಪ್ರದೇಶದ ವಿವಿಧ ನಾಡುಗಳನ್ನು ಹಾಗೂ ಇತರ ಆಡಳಿತ ಘಟಕಗಳನ್ನು ಆಳುತ್ತಿದ್ದ ಸುಮಾರು ೭೦ ಬಲ್ಲಾಳ ಹಾಗೂ ಹೆಗಡೆ ಮನೆತನಗಳ ಹಿನ್ನೆಲೆಯಲ್ಲಿ ಅವರು ವಿಶ್ಲೇಷಿಸಿದ್ದಾರೆ. ಪ್ರಾದೇಶಿಕ ಇತಿಹಾಸಾಧ್ಯಯನ ದೃಷ್ಟಿಯಿಂದ ಇದು ಅತ್ಯಂತ ಮಹತ್ವಪೂರ್ಣವಾದ ಕೊಡುಗೆ ಎಂಬುದರಲ್ಲಿ ಸಂಶಯವಿಲ್ಲ. ಈ ರೀತಿಯ ಅಧ್ಯಯನವನ್ನು ಇನ್ನೂ ಹೆಚ್ಚು ಕ್ರಮಬದ್ಧವಾಗಿ ಕೈಗೊಳ್ಳಬೇಕಾಗಿರುವುದು ಪ್ರಸ್ತುತ ಅಗತ್ಯವಾಗಿದ್ದು ಅಂತಹ ಅಧ್ಯಯನವನ್ನು ಕೈಗೆತ್ತಿಕೊಳ್ಳುವ ಸಾಧಕರಿಗೆ ಐಗಳ್‌ಅವರ ‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ ಒಂದು ಉತ್ತಮ ಮಾರ್ಗದರ್ಶಿಯಾಗಿದೆ.

‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ ‘ಆರಾಮ ಕುರ್ಚಿ ವಿದ್ಯಾಂಸ’ ನೋರ್ವನ ಕೃತಿಯಲ್ಲ. ಐಗಳ್ ಅವರೇ ಹೇಳಿಕೊಂಡಿರುವಂತೆ ಈ ಕೃತಿ ರಚನೆಗೆ ಆಕರಗಳನ್ನು ಸಂಗ್ರಹಿಸಲು ಅವರು ಸುಮಾರು ನಾಲ್ಕೈದು ವರ್ಷಗಳ ಕಾಲ ಜಿಲ್ಲೆಯ ಉದ್ದಗಲಕ್ಕೂ ಸಂಚರಿಸಿದ್ದಾರೆ. ವ್ಯಾಪಕವಾದ ಕ್ಷೇತ್ರಕಾರ್ಯದ ಮೂಲಕ ಹಲವಾರು ವಿವರಗಳನ್ನು, ಅಮೂಲ್ಯವಾದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಈ ದೃಷ್ಟಿಯಿಂದ ಐಗಳ್‌ ಅವರ ಇತಿಹಾಸರಚನಾ ವಿಧ್ಯಾನವು ಆಧುನಿಕ ಇತಿಹಾಸ ಸಂಶೋಧನಾ ವಿಧಾನಕ್ಕೆ ಅತ್ಯಂತ ಸಹಜವಾಗಿದೆ ಎನ್ನಬಹುದು.

ಶುದ್ಧ ಐತಿಹಾಸಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದರೆ ‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ ಕೃತಿಯು ದೋಷಪೂರ್ಣವಾಗಿದೆ ಎನಿಸಬಹುದು ನಿಜ. ತುಳುನಾಡನ್ನು ದೀರ್ಘಕಾಲ ಆಳಿದ ಆಳುಪ ಅರಸರ ಇತಿಹಾಸದ ವಿವಿರಗಳು ೪೫೦ ಪುಟಗಳ ಈ ಕೃತಿಯಲ್ಲಿ ಕೇವಳ ಏಳು ಪುಟಗಳಿಗಷ್ಟೇ ಸೀಮಿತವಾಗಿವೆ. ಈ ಪ್ರದೇಶದ ಇತಿಹಾಸಕ್ಕೆ ನೇರವಾಗಿ ಸಂಬಂಧಿಸಿದ ಕದಂಬ, ಚಾಳುಕ್ಯ, ಗಂಗ, ರಾಷ್ಟ್ರಕೂಟ, ಹೊಯ್ಸಳ ಮತ್ತು ವಿಜಯನಗರದ ಇತಿಹಾಸದ ವಿವರಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಇಲ್ಲಿ ನೀಡಲಾಗಿದೆ. ನಾಥ ಪಂಥದ ಹಿನ್ನೆಲೆ, ಶಂಕರಾಚಾರ್ಯರ ಜೀವನ, ಇಸ್ಲಾಂ ಧರ್ಮದ ಉಗಮ ಇತ್ಯಾದಿಗಳ ಕುರಿತು ಸುದೀರ್ಘ ವಿವರಣೆಗಳಿವೆ. ಈ ಗ್ರಂಥದಲ್ಲಿ ನೀಡಲಾದ ರಾಜರ ವಂಶಾವಳಿ, ತೇದಿಯ ವಿವರಗಳು ಇತಿಹಾಸಕಾರರಿಗೆ ಸಮ್ಮ ತಾರ್ಹವೆನಿಸದಿರ ಬಹುದು. ಈ ರೀತಿ ದೋಷಗಳ ಪಟ್ಟಿಯನ್ನು ಬೆಳೆಸುತ್ತ ಹೋಗಬಹುದು. ಆದರೆ ಐಗಳ್‌ರವರು ಮೂಲತಃ ಇತಿಹಾಸಕಾರರಲ್ಲ ಮತ್ತು ಅವರು ಈ ಕೃತಿಯನ್ನು ರಚಿಸಿದ್ದು ಸುಮಾರು ಎಂಟು ದಶಕಗಳ ಹಿಂದೆ ಎಂಬ  ಅಂಶವನ್ನಿಲ್ಲಿ ನಾವು ಮುಖ್ಯವಾಗಿ ನೆನಪಿಸಿಕೊಳ್ಳಬೇಕು. ಆಗ ಇತಿಹಾಸ ಸಂಶೋಧನೆ ಈಗಿನಷ್ಟು ಮುಂದುವರಿದಿರಲಿಲ್ಲ. ಈಗಿನಷ್ಟು ಐತಿಹಾಸಿಕ ದಾಖಲೆಗಳು ಲಭ್ಯವಿರಲಿಲ್ಲ ಮತ್ತು ಅವುಗಳ ಸಂಗ್ರಹ ಹಾಗೂ ಅಧ್ಯಯನ ವ್ಯಾಪಕವಾಗಿ ಪ್ರಾರಂಭಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಈ ನಾಡಿನ ಇತಿಹಾಸ – ಸಂಸ್ಕೃತಿಗಳ ವಿವರಗಳನ್ನು ಸಮಗ್ರವಾಗಿ ನೀಡುವುದು ಅಂದಿಗೆ ಸುಲಭಸಾಧ್ಯವಾಗಿರಲಿಲ್ಲ. ಈ ವಿಚಾರಗಳನ್ನು ಗಮನದಲ್ಲಿರಿಸಿ ಕೊಂಡು ಅವರ ಕೃತಿಗಳನ್ನವಲೋಕಿಸಿದಾಗ ಮೇಲೆ ಉಲ್ಲೇಖಿಸಲಾದ ದೋಷಗಳೆಲ್ಲ ಗೌಣ ಎನಿಸುತ್ತವೆ. ಅಲ್ಲದೆ, ಐಗಳ್‌ರವರು ಮಾಡಿದ್ದು ತುಳುನಾಡಿನ ಇತಿಹಾಸ ಸಂಶೋಧನೆಯ ಸೌಧವನ್ನು ಕಟ್ಟುವ ಕೆಲಸವನ್ನು ಅದಕ್ಕೆ ಭದ್ರವಾದ ಬುನಾದಿಯನ್ನು ಹಾಕುವ ಕೆಲಸ ಮಾತ್ರ. ಈ ದೃಷ್ಟಿಯಿಂದ ಗಣಪತಿ ರಾವ್‌ ಐಗಳ್‌ರವರನ್ನು ತುಳುನಾಡಿನ ಇತಿಹಾಸ ಸಂಶೋಧನೆಯ ಮಾರ್ಗ ಪ್ರವರ್ತಕರೆಂದರೆ ತಪ್ಪಾಗಲಾರದು.

ತುಳುನಾಡಿನ ಇತಿಹಾಸದ ಹಲವಾರು ಸೂಕ್ಷ್ಮ ವಿಚಾರಗಳನ್ನು ಆಧಾರಗಳ ಹಾಗೂ ತರ್ಕದ ಹಿನ್ನೆಲೆಯಲ್ಲಿ ಎಳೆ ಎಳೆಯಾಗಿ ವಿಶ್ಲೇಷಿಸಿ ಇತಿಹಾಸದ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಮೂಲಕ ಈ ಪ್ರದೇಶದ ಇತಿಹಾಸ ರಚನೆಯ ದೃಷ್ಟಿಯಿಂದ ಒಂದು ಹೊಸ ಪರಂಪರೆಯನ್ನು ಪ್ರಾರಂಭಿಸಿದವರು ಮಂಜೇಶ್ವರ ಗೊವಿಂದ ಪೈಯವರು (೧೮೮೩ – ೧೯೬೩). ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಗೋವಿಂದ ಪೈಗಳು ಯಾವುದೇ ಗ್ರಂಥವನ್ನು ರಚಿಸಿಲ್ಲವಾದರೂ ತಮ್ಮ ಹಲವಾರು ಮೌಲಿಕ ಲೇಖನಗಳ ಮೂಲಕ ಅವರು ಈ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿರುವುದನ್ನು ಅಲ್ಲಗಳೆಯುವಂತಿಲ್ಲ. ಜ್ಞಾನ ಪ್ರಪಂಚದ ವಿವಿಧ ರಂಗಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಗೋವಿಂದ ಪೈಯವರು ನಮಗೆ ಹೆಚ್ಚು ಪ್ರಸ್ತುತರೆನಿಸುವುದು ಇತಿಹಾಸ ಸಂಶೋಧಕರಾಗಿ.

ಗೋವಿಂದ ಪೈಯವರ ಇತಿಹಾಸ ಸಂಶೋಧನೆಯ ಹರಹನ್ನು ಈ ಲೇಖನದ ವ್ಯಾಪ್ತಿಗೆ ಸೀಮಿತಗೊಳಿಸುವುದು ಕಷ್ಟಸಾಧ್ಯ. ಅವರ ಇತಿಹಾಸ ಸಂಶೋಧನೆಯ ವ್ಯಾಪ್ತಿಯನ್ನು ಭಾರತದ ಇತಿಹಾಸ, ಕರ್ನಾಟಕದ ಇತಿಹಾಸ ಮತ್ತು ತುಳುನಾಡಿನ ಇತಿಹಾಸ ಎಂದು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ೧೯೨೭ – ೧೯೪೫ರ ಅವಧಿಯಲ್ಲಿ ತುಳುನಾಡಿನ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಸುಮಾರು ೨೧ ಲೇಖನಗಳನ್ನು ಅವರು ಪ್ರಕಟಿಸಿದರು. ಈ ಪೈಕಿ ‘ಇತಿಹಾಸದ ಇರುಳಲ್ಲಿ ತುಳುನಾಡು’, ‘ತುಳುನಾಡು ಪೂರ್ವಸ್ಮೃತಿ’, ‘ಗ್ರೀಕ್ ಪ್ರಹಸನದಲ್ಲಿ ಕನ್ನಡ ಮಾತುಗಳು’, ‘ದಕ್ಷಿಣ ಕನ್ನಡ ಜಿಲ್ಲೆಯ ಹಳೆಯ ಹೆಸರುಗಳು’, ‘ಕದಿರೆಯ ಮಂಜುನಾಥ’, ‘ಕಾರ್ಕಳ ಗೊಮ್ಮಟ ಬೆಟ್ಟದ ಮೂರು ಶಿಲಾ ಶಾಸನಗಳು’, ‘ವೇಣೂರಿನ ಕೆಲ ಶಿಲಾಲೇಖಗಳು’, ‘ಕದ್ರಿಯಲ್ಲಿರುವ ಆಲೂಪರದೊಂದು ಲೇಖ’, ‘ಅಳಿಯ ಕಟ್ಟಿನ ಪ್ರಾಚೀನತೆ’, ‘ಮಧ್ವಾಚಾರ್ಯರ ಕಾಲನಿರ್ಣಯ’- ಈ ಲೇಖನಗಳನ್ನಿಲ್ಲಿ ಮುಖ್ಯವಾಗಿ ಉಲ್ಲೇಖಿಸಬಹುದು. ಇವುಗಳಲ್ಲಿ ‘ತುಳುನಾಡು -ಪೂರ್ವಸ್ಮೃತಿ’ ಅತ್ಯಂತ ದೀರ್ಘವಾದ ಲೇಖನವಾಗಿದ್ದು ಇದು ತುಳುನಾಡಿನ ಇತಿಹಾಸ ಕುರಿತ ಗೋವಿಂದ ಪೈಯವರ ಸಮಗ್ರ ಚಿಂತನೆಗಳನ್ನು ಒಳಗೊಂಡಿದೆ.

ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವಾರು ಕುತೂಹಲಕರ ಮತ್ತು ಅಸ್ಪಷ್ಟ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಗೋವಿಂದ ಪೈಯವರ ಲೇಖನಗಳಲ್ಲಿ ಕಾಣಬಹುದು. ತುಳುನಾಡು ಎಂಬ  ಪದದ ಮೂಲವನ್ನು ವಿಶ್ಲೇಷಿಸುವ ಅವರು ‘ತುಳು’ ಎಂಬುದು ‘ತುಳೈ’ ಅಂದರೆ ನೀರಿನಲ್ಲಿ ಹುಟ್ಟುಹಾಕು, ನೀರಿನಲ್ಲಿ ಆಟವಾಡು ಎಂಬ ಅರ್ಥದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದ ಬೆಸ್ತರಿಂದ, ಮೀನುಗಾರರಿಂದ ಬಂದಿರಬೇಕು ಎಂದು ಅಭಿಪ್ರಾಯಪಡುತ್ತಾರೆ. ತುಳು ಎಂಬುದು ಜನವಾಚಕ ಪದ ಎಂಬ ಅವರ ಅಭಿಪ್ರಾಯ ಸತ್ಯಕ್ಕೆ ಸಮೀಪವಾಗಿರುವಂತೆ ತೋರುತ್ತದೆ. ಅಶೋಕನ ಎರಡನೇ ಶಿಲಾಶಾಸನದಲ್ಲಿ ಉಲ್ಲೇಖಿಸಲಾದ ‘ಸತಿಯಪುತ್ರ’ವು ತುಳುನಾಡಿಗೆ ಅನ್ವಯಿಸುತ್ತದೆ ಎಂಬ ಗೋವಿಂದ ಪೈಯವರ ವಾದ ಇಂದಿಗೂ ಪ್ರಸ್ತುತವೆನಿಸಿದೆ. ಭೂತಾಳಪಾಂಡ್ಯನ ಬಗ್ಗೆ ವಿಶ್ಲೇಷಣೆ ನಡೆಸಿರುವ ಪೈಯವರು ಆತನು ಆಳುವ ವಂಶಕ್ಕೆ ಸೇರಿದ ಓರ್ವ ಐತಿಹಾಸಿಕ ವ್ಯಕ್ತಿಯೆಂದೂ ಕ್ರಿಸ್ತಶಕಾರಂಭದ ವರ್ಷಗಳಲ್ಲಿ ಅವನು ಜೀವಿಸಿದ್ದಿರಬೇಕೆಂದೂ ವಾದಿಸುತ್ತಾರೆ. ‘ಗ್ರೀಕ್‌ ಪ್ರಹಸನದಲ್ಲಿ ಕನ್ನಡ ಮಾತುಗಳು’ ಲೇಖನದಲ್ಲಿ ಆ ಪ್ರಹಸನವು ಒಂದು ಐತಿಹಾಸಿಕ ಘಟನೆಯ ನಿರೂಪಣೆ ಎಂದು ಅರ್ಥೈಸಿರುವ ಗೋವಿಂದ ಪೈಗಳು ಅದರಲ್ಲಿ ಕನ್ನಡ ಮಾತುಗಳನ್ನು ಗುರುತಿಸುತ್ತಾರೆ! ಈ ಅಭಿಪ್ರಾಯ ಇಂದಿಗೆ ಸಮ್ಮ ತಾರ್ಹವೆನಿಸದಿದ್ದರೂ ಅದರ ಹಿಂದಿರುವ ಅವರ ವಾದದ ಸರಣಿ ನಮ್ಮ ಮೆಚ್ಚುಗೆಗೆ ಪಾತ್ರವಾಗುತ್ತದೆ. ಟಾಲೆಮಿಯ ಗ್ರಂಥದಲ್ಲಿ ಉಲ್ಲೇಖಿತವಾದ ‘ಒಲೊಖೊಯಿರ’ವನ್ನು ಆಳ್ವಖೇಡದೊಂದಿಗೆ ಸಮೀಕರಿಸುವ ಮೂಲಕ ಆಳುಪರ ಇತಿಹಾಸವನ್ನು ಕ್ರಿ.ಶ. ೩ನೇ ಶತಮಾನದಷ್ಟು ಹಿಂದಕ್ಕೊಯ್ಯುವ ಪ್ರಯತ್ನವನ್ನು ಅವರ ಲೇಖನದಲ್ಲಿ ಕಾಣಬಹುದು.

ತುಳುನಾಡಿನ ಧಾರ್ಮಿಕ ಇತಿಹಾಸದ ಕುರಿತು ಗೋವಿಂದ ಪೈಯವರು ತಮ್ಮ ಲೇಖನಗಳಲ್ಲಿ ವ್ಯಾಪಕವಾಗಿ ಚರ್ಚಿಸಿದ್ದಾರೆ. ಜೈನಧರ್ಮ, ನಾಥಪಂಥ, ವೀರಶೈವ ಹಾಗೂ ಕದ್ರಿಯ ಬೌದ್ಧ ವಿಹಾರಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಕದ್ರಿಯ ಲೋಕೇಶ್ವರ ಬಿಂಬದ ಕುರಿತಂತೆ ಚರ್ಚಿಸುವ ಅವರು ಅದು ನಾಥಪಂಥದ ಮಂಜುಘೋಷನ ವಿಗ್ರಹ ಎಂದು ತೀರ್ಮಾನಿಸುತ್ತಾರೆ. ಉಡುಪಿಯ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಲಯಗಳು ಮೂಲತಃ ಜೈನಬಸದಿಗಳು ಎನ್ನುವ ಗಣಪತಿರಾವ್‌ ಐಗಳ್‌ ಅವರ ವಾದಕ್ಕೆ ಗೋವಿಂದ ಪೈಯವರ ಸಮರ್ಥನೆ ಇದೆ. ಕದ್ರಿ, ಕಾರ್ಕಳ, ವೇಣೂರುಗಳಲ್ಲಿರುವ ಶಾಸನಗಳ ಕುರಿತು, ಅಳಿಯಕಟ್ಟು ಮುಂತಾದ ಸಾಮಾಜಿಕ ವಿಚಾರಗಳ ಬಗ್ಗೆ ಹಾಗೂ ಪ್ರಸಿದ್ಧ ವ್ಯಕ್ತಿಗಳಾದ ಮಧ್ವಾಚಾರ್ಯ, ರತ್ನಾಕರವರ್ಣಿ ಮೊದಲಾದವರ ಕಾಲ ನಿರ್ಣಯದ ಬಗ್ಗೆಯೂ ಪೈಯವರು ವಿಶೇಷವಾದ ಅಧ್ಯಯನ ನಡೆಸಿರುವುದನ್ನು ಕಾಣಬಹುದು.

ತಮ್ಮ ಲೇಖನಗಳ ರಚನೆಗೆ ಹಾಗೂ ವಾದ ಮಂಡನೆಗೆ ಪೂರಕವಾಗಿ ಗೋವಿಂದ ಪೈಯವರು ಬಳಸಿಕೊಂಡಿರುವ ಆಕರಗಳ ಸಂಖ್ಯೆ ಹಾಗೂ ವೈವಿಧ್ಯ ಅಚ್ಚರಿ ಹುಟ್ಟಿಸುವಂಥದು. ಶಾಸನಗಳು, ಐತಿಹಾಸಿಕ ದಾಖಲೆಗಳು, ವಿದೇಶಿ ಆಕರಗಳು, ಪುರಾಣಗಲು, ಪಾಡ್ದಾನಗಳು ಹೀಗೆ ಎಲ್ಲ ವಿಧದ ಆಕರಗಳನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ, ದುಡಿಸಿಕೊಂಡಿದ್ದಾರೆ. ಪ್ರತಿಯೊಂದು ಪುಟದಲ್ಲೂ ಅವರು ನೀಡುತ್ತಿದ್ದ ಅಡಿಟಿಪ್ಪಣಿಗಳ ಸಂಖ್ಯೆ ಮತ್ತು ವೈವಿಧ್ಯ ಓದುಗನಲ್ಲಿ ಒಂದು ರೀತಿಯ ಬೆರಗನ್ನೂ, ಗೊಂದಲವನ್ನೂ ಹುಟ್ಟಿಸುವುದರಲ್ಲಿ ಅನುಮಾನವಿಲ್ಲ.

ತುಳುನಾಡಿನ ಇತಿಹಾಸದ ಕುರಿತಂತೆ ಗೋವಿಂದ ಪೈಯವರ ವಿಚಾರಗಳು, ವಾದಗಳು ಹಾಗೂ ತೀರ್ಮಾನಗಳು ಸಂಪೂರ್ಣವಾಗಿ ದೋಷಮುಕ್ತವಾಗಿದೆ ಎನ್ನುವಂತಿಲ್ಲ. ಸಮ್ಮತಾರ್ಹವಲ್ಲದ ವಿಚಾರಗಳನ್ನು ಕೇವಲ ತರ್ಕದ ಆಧಾರದಲ್ಲಿ ನಿರೂಪಿಸಲು ಅವರು ನಡೆಸಿದ ಪ್ರಯತ್ನಗಳು ಕೆಲವೆಡೆ ಗಮನ ಸೆಳೆಯುತ್ತವೆ. ಶಾತವಾಹನರ ಮೂಲ ತುಳುನಾಡು ಎಂಬವಾದ, ಚುಟು-ತುಳು-ಚೌಟ ಪದಗಳ ಸಂಬಂಧದ ವಿಶ್ಲೇಷಣೆ, ಅಲುಪ ಪದದ ಮೂಲದ ಕುರಿತ ಜಿಜ್ಞಾಸೆ, ಭೂತಾಳಪಾಂಡ್ಯನ ಕುರಿತ ಚರ್ಚೆ ಇವುಗಳನ್ನಿಲ್ಲಿ ವಿಶೇಷವಾಗಿ ಉದಾಹರಿಸಬಹುದು. ಆಕರಗಳ ಉಲ್ಲೇಖದಲ್ಲಿ ಹಾಗೂ ಕಾಲಗಣನೆಯ ಸಂದರ್ಭದಲ್ಲೂ ಕೆಲವೆಡೆ ಪೈಗಳು ಎಡವಿದ್ದುಂಟು. ಉದಾಹರಣೆಗಾಗಿ, ಕಾಸರಗೋಡು ತಾಲೂಕಿನ ಅಡೂರಿನಲ್ಲಿ ಚಾಲುಕ್ಯ ಎರಡನೇ ಕೀರ್ತಿವರ್ಮನ ಶಿಲಾಶಾಸನವಿದೆ ಎಂಬ ತಪ್ಪು ಮಾಹಿತಿ ಮತ್ತು ಕದ್ರಿಯ ಲೋಕೇಶ್ವರ ಬಿಂಬದಲ್ಲಿರುವ ಆಳುಪ ಶಾಸನ ಕ್ರಿ.ಶ. ೧೦೯೬ರದು ಎಂಬ ತಪ್ಪು ಕಾಲಗಣನೆಗಳನ್ನಿಲ್ಲಿ ಪ್ರಸ್ತಾಪಿಸಬಹುದು. ಹಲವಾರು ಸಂದರ್ಭಗಳಲ್ಲಿ ಅವರು ಪೂರ್ವಗ್ರಹಿಕೆಗಳನ್ನು ಮುಂದಿಟ್ಟುಕೊಂಡು ಅದಕ್ಕೆ ತಕ್ಕಂತೆ ಆಧಾರಗಳನ್ನು ಸರಿಹೊಂದಿಸುತ್ತಾ ಹೋಗುವರು ಎಂಬ ಆರೋಪವನ್ನೂ ಕೆಲ ವಿದ್ವಾಂಸರು ಮಾಡಿದ್ದುಂಟು. ಅವರ ವಿಚಾರಮಂಡನಾ ಶೈಲಿ ಹಾಗೂ ಭಾಷಾಕ್ಲಿಷ್ಟತೆಯ ಕುರಿತೂ ಕೆಲವರು ಟೀಕಿಸಿದ್ದುಂಟು. ಆದರೆ ಇಂದಿಗೆ ಸುಮಾರು ಏಳು ದಶಕಗಳ ಪೂರ್ವದಲ್ಲೇ ಅವರು ಕೈಗೊಂಡು ಇತಿಹಾಸ ಸಂಶೋಧನೆಯ ಹರಹು, ವೈವಿಧ್ಯ ಹಾಗೂ ಅಗಾಧತೆಯನ್ನು ಗಮನಿಸಿದಾಗ ಅವರ ಕುರಿತ ಈ ಎಲ್ಲ ಆರೋಪಗಳು ಹಾಗೂ ಟೀಕೆಗಳು ಪೂರ್ವಾಗ್ರಹ ಪೀಡಿತ ಎಂದು ಅನಿಸಿದರೆ ಅಚ್ಚರಿಯಲ್ಲ. ಕೆ.ವಿ. ರಮೇಶ್‌ರವರ ಮಾತುಗಳಲ್ಲಿ ಹೇಳುವುದಾದರೆ ‘ಇತಿಹಾಸಕ್ಕೆ ಸಂಬಂಧಿಸಿದಂತೆ ತಾವು ಚರ್ಚಿಸಿರುವ ವಿಷಯಗಳನ್ನು ಕುರಿತು ಪೈಗಳು ಮುಂದೊಡ್ಡಿರುವ ಸಿದ್ಧಾಂತಗಳ ಪೈಕಿ ಹಲವು ಇಂದು ತಿರಸ್ಕೃತವಾಗಿರಬಹುದಾದರೂ, ಅವರು ತಮ್ಮದಾಗಿಸಿಕೊಂಡಿದ್ದ ಸಂಶೋಧನಾಕ್ರಮವು ಸರ್ವಥಾ ಅನುಕರಣೀಯ’.

ತುಳುನಾಡಿನ ಇತಿಹಾಸ ರಚನೆಗೆ ಗಣನೀಯವಾದ ಕೊಡುಗೆಗಳನ್ನು ನೀಡಿದ ಶೀನಪ್ಪ ಹೆಗ್ಡೆ, ಗಣಪತಿ ರಾವ್‌ಐಗಳ್‌ಮತ್ತು ಗೋವಿಂದ ಪೈಯವರು ಒಂದು ರೀತಿಯಲ್ಲಿ ಹವ್ಯಾಸಿ ಇತಿಹಾಸಕಾರರೇ ಹೊರತು ವೃತ್ತಿಪರ ಇತಿಹಾಸಕಾರರಾಗಿರಲಿಲ್ಲ. ತುಳುನಾಡಿನ ಇತಿಹಾಸದ ಕುರಿತು ಅವರಿಗಿದ್ದ ಅದಮ್ಯ ಕುತೂಹಲ ಮತ್ತು ಸಂಶೋಧನಾಸಕ್ತಿಗಳೇ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಅವರಿಗಿದ್ದ ಅರ್ಹತೆಗಳು. ಇತಿಹಾಸ ರಚನಾ ಕ್ಷೇತ್ರದಲ್ಲಿ ಇವರಿಗಿಂತ ಸಂಪೂರ್ಣ ಭಿನ್ನವಾದ ಹಿನ್ನೆಲೆಯನ್ನು ಹೊಂದಿದ್ದು, ತುಳುನಾಡಿನ ಇತಿಹಾಸ ರಚನೆಗೆ ತೊಡಗಿದ ವೃತ್ತಿಪರ ಇತಿಹಾಸಕಾರರಲ್ಲಿ ಪ್ರಥಮರೆನಿಸಿಕೊಳ್ಳುವವರು ಭಾಸ್ಕರ ಆನಂದ ಸಾಲೆತ್ತೂರು (೧೯೦೨ – ೧೯೬೩). ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಲಂಡನ್‌ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ ಪದವಿಯನ್ನು ಗಳಿಸಿದ್ದ ಇವರು ಪ್ರಾಧ್ಯಾಪಕರಾಗಿ, ರಾಷ್ಟ್ರೀಯ ಪತ್ರಾಗಾರದ ನಿರ್ದೇಶಕರಾಗಿ ಮತ್ತು ಇತಿಹಾಸ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿ ಬಹುಕಾಲ ಈ ಕ್ಷೇತ್ರದಲ್ಲಿ ದುಡಿದವರು. ತನ್ಮೂಲಕ ಇತಿಹಾಸದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಅಪಾರವಾದ ಅನುಭವವನ್ನು ಗಳಿಸಿಕೊಂಡವರು.

ಭಾಸ್ಕರ ಆನಂದ ಸಾಲೆತ್ತೂರುರವರು ೧೯೩೬ರಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಕಟಿಸಿದ ‘ಹಿಸ್ಟರಿ ಆಫ್‌ ತುಳುವ’ ಎಂಬ ಕೃತಿ ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಅತಿ ಮಹತ್ವದ ಮತ್ತು ಬಹುಮಟ್ಟಿಗೆ ಇಂದಿಗೂ ಅಧಿಕೃತವೆಂದು ಪರಿಗಣಿಸಲ್ಪಡುವ ಕೃತಿಯಾಗಿದೆ. ಹಲವಾರು ಇತಿಹಾಸ ಸಂಶೋಧಕರಿಗೆ ತುಳುನಾಡಿನ ಇತಿಹಾಸದ ಅಧ್ಯಯನಕ್ಕೆ ಪ್ರೇರಣೆ ನೀಡಿದ ಕೃತಿಯಾಗಿದೆ. ಸುಮಾರು ೬೬೦ ಪುಟಗಳ ವ್ಯಾಪ್ತಿಯನ್ನು ಹೊಂದಿರುವ ‘ಹಿಸ್ಟರಿ ಆಫ್‌ತುಳುವ’ದ ಆರು ಅಧ್ಯಾಯಗಳಲ್ಲಿ ಐತಿಹ್ಯಗಳ ಹಿನ್ನೆಲೆಯಲ್ಲಿ ತುಳುವ ಇತಿಹಾಸ, ಆಳುಪರ ಇತಿಹಾಸ, ಆಳುಪರ ರಾಜಕೀಯ ಸಂಬಂಧಗಳು, ಗ್ರಾಮ ವ್ಯವಸ್ಥೆ, ಧಾರ್ಮಿಕ ಇತಿಹಾಸ ಮತ್ತು ಪಾಡ್ದನಗಳು ಬಿಂಬಿಸುವ ತುಳು ಜನಜೀವನವನ್ನು ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ಈ ಕೃತಿಯಲ್ಲಿ ತುಳುನಾಡಿನ ರಾಜಕೀಯ ಇತಿಹಾಸದ ನಿರೂಪಣೆಯು ಇತಿಹಾಸಾರಂಭ ಕಾಲದಿಂದ ಆಳುಪ ಯುಗದ ಅಂತ್ಯದ ತನಕ ಮಾತ್ರ ಸೀಮಿತಗೊಂಡಿದೆ. ಆಳುಪರ ಇತಿಹಾಸ ಮತ್ತು ಅವರ ರಾಜಕೀಯ ಸಂಬಂಧಗಳನ್ನು ನಿರೂಪಿಸಲು ಸಾಲೆತ್ತೂರರು ಪ್ರಕಟಿತ ಶಾಸನಗಳನ್ನು ಆಕರಗಳನ್ನಾಗಿ ಬಳಸಿಕೊಂಡಿದ್ದಾರೆ. ಆಳುಪೋತ್ತರ ಕಾಲದ ರಾಜಕೀಯ ಇತಿಹಾಸದ ವಿವರಗಳು ಈ ಕೃತಿಯ ವ್ಯಾಪ್ತಿಯೊಳಗೆ ಬಂದಿಲ್ಲ. ಅಂತೆಯೇ, ತುಳುನಾಡಿನಲ್ಲಿ ಆಳ್ವಿಕೆ ನಡೆಸಿದ ಬಂಗ, ಚೌಟ, ಅಜಿಲ ಮುಂತಾದ ಸ್ಥಳಿಕ ಅರಸು ಮನೆತನಗಳ ಇತಿಹಾಸವೂ ಇಲ್ಲಿ ಪ್ರಸ್ತಾಪಗೊಂಡಿಲ್ಲ.

‘ಹಿಸ್ಟರಿ ಆಫ್‌ತುಳುವ’ ಕೃತಿಯ ಅಧ್ಯಾಯದಲ್ಲಿ ಪರಶುರಾಮನ ಐತಿಹ್ಯ, ರಾಮಾಯಣ, ಮಹಾಭಾರತ, ಪುರಾಣಗಳಲ್ಲಿ ತುಳುವರ ಉಲ್ಲೇಖಗಳು ಇತ್ಯಾದಿಗಳ ವಿಶ್ಲೇಷಣೆಯಿದೆ. ತೂಳ್‌ಎಂದರೆ ಧಾಳಿ ಮಾಡು ಎಂಬ ಅರ್ಥದ ಹಿನ್ನೆಲೆಯಲ್ಲಿ ‘ತುಳು’ ಎಂಬ ಪದದ ಮೂಲವನ್ನು ವಿಶ್ಲೇಷಿಸುತ್ತ ಅದು ತುಳುವರ ಆಕ್ರಮಣಶೀಲತೆ, ಯುದ್ಧಪ್ರಿಯತೆ ಮುಂತಾದ ಗುಣಗಳಿಂದ ಹುಟ್ಟಿರಬೇಕು ಎನ್ನುವ ಸಾಲೆತ್ತೂರರ ಅಭಿಪ್ರಾಯ ಸ್ವೀಕಾರಾರ್ಹ ಎನಿಸುವುದಿಲ್ಲ. ಅಶೋಕನ ಎರಡನೇ ಶಿಲಾಶಾಸನದಲ್ಲಿ ಉಲ್ಲೇಖಿಸಲಾದ ‘ಸತಿಯ ಪುತ್ರ’ವು ತುಳುನಾಡಿರಬೇಕು ಎಂಬ ಅಭಿಪ್ರಾಯಕ್ಕೆ ಸಾಲೆತ್ತೂರರ ಸಹಮತವಿಲ್ಲ.

ಆಳುಪರ ಇತಿಹಾಸ ಮತ್ತು ದಕ್ಷಿಣ ಭಾರತದ ವಿವಿಧ ರಾಜ ಮನೆತನಗಳಾದ ಕದಂಬ, ಚಾಲುಕ್ಯ, ಚೋಳ, ಪಾಂಡ್ಯ, ರಾಷ್ಟ್ರಕೂಟ, ಶಾಂತರ ಮತ್ತು ಹೊಯ್ಸಳರ ಜೊತೆಗೆ ಆಳುಪರಿಗಿದ್ದ ರಾಜಕೀಯ ಸಂಬಂಧವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಮುಂದಿನ ಎರಡು ಅಧ್ಯಾಯಗಳು ಬಹಳ ಮಹತ್ವಪೂರ್ಣವಾದುವು. ಚಾಳುಕ್ಯ ಮಂಗಳೇಶನ ಮಹಾಕೂಟ ಶಾಸನದಲ್ಲಿ ಉಲ್ಲೇಖಗೊಂಡಿರುವ ‘ಆಳುಕ’ ಪದವನ್ನಾಧರಿಸಿ ‘ಆಳುಕ’ ಎಂಬುದು ಆದಿಶೇಷನ ಇನ್ನೊಂದು ಹೆಸರು ಎಂಬ ಹಿನ್ನೆಲೆಯಲ್ಲಿ ಆಳುಪರು ನಾಗಮೂಲದವರು ಎಂದು ಸಾಲೆತ್ತೂರರು ಅಭಿಪ್ರಾಯಪಡುತ್ತಾರೆ. ಆದರೆ ಆಳುಪರನ್ನು ನಾಗರೊಂದಿಗೆ ಗುರುತಿಸಲು ಅವರು ನೀಡುವ ಶಾಸನಾಧಾರಗಳು ಕ್ರಿ.ಶ. ೧೪ನೇ ಶತಮಾನದವು! ಶಾಸನಗಳ ಆಧಾರದಲ್ಲಿ ಸುಮಾರು ೩೧ಕ್ಕೂ ಹೆಚ್ಚು ಆಳುಪ ಅರಸರನ್ನು ಗುರುತಿಸುವ ಸಾಲೆತ್ತೂರರು ಆ ಅರಸರ ರಾಜಕೀಯ ಚಟುವಟಿಕೆಗಳು, ಆಡಳಿತ, ರಾಜಧಾನಿಗಳು, ನಗರ – ಗ್ರಾಮಾಡಳಿತ, ಸೈನ್ಯ, ಕಂದಾಯ, ರಾಜಕೀಯ ಸಂಬಂಧಗಳು ಇತ್ಯಾದಿ ಸಮಸ್ತ ವಿವರಗಳನ್ನು ಸುಮಾರು ೨೪೦ ಪುಟಗಳಲ್ಲಿ ಈ ಎರಡು ಅಧ್ಯಾಯಗಳಲ್ಲಿ ತೆರೆದಿರಿಸಿದ್ದಾರೆ.

ಆಳುಪ ಅರಸರ ವಂಶಾವಳಿಯನ್ನು ಗುರುತಿಸುವಲ್ಲಿ ಹಾಗೂ ಅವರ ಆಳ್ವಿಕೆಯ ಕಾಲವನ್ನು ನಿರ್ಧರಿಸುವಲ್ಲಿ ಹಲವೆಡೆ ಸಾಲೆತ್ತೂರರು ಎಡವಿದ್ದಾರೆ. ಕಿಗ್ಗ ಶಾಸನದಲ್ಲಿ ಉಲ್ಲೇಖಿತನಾಗಿರುವ ಕುಂದವರ್ಮನನ್ನು ಆಳುಪ ಅರಸ ಎಂದು ತಪ್ಪಾಗಿ ಗುರುತಿಸಿರುವುದು, ಕ್ರಿ.ಶ. ೯ನೇ ಶತಮಾನಕ್ಕನ್ವಯಿಸುವ ಉದ್ಯಾವರ ಶಾಸನವನ್ನು ಕ್ರಿ.ಶ. ೬ನೇ ಶತಮಾನದ್ದೆಂದು ತಪ್ಪಾಗಿ ಗುರುತಿಸಿ ಅದರಲ್ಲಿ ಉಲ್ಲೇಖಿತನಾಗಿ ಮಾರಮ್ಮ ಆಳುವರಸನಿಗೆ ವಂಶಾವಳಿಯಲ್ಲಿ ಮೊದಲಿನ ಸ್ಥಾನವನ್ನು ನೀಡಿರುವುದು, ಒಂದನೇ ಕುಲಶೇಖರನ ಮಂಗಳೂರು ಮತ್ತು ಮೂಡುಬಿದಿರೆ ಶಾಸನಗಳ ತೇದಿಗಳನ್ನು ತಪ್ಪಾಗಿ ಅರ್ಥೈಸಿ ಆತನನ್ನು ಆಳುಪರ ಕೊನೆಯ ಅರಸ ಎಂಬುದಾಗಿ ಸೂಚಿಸಿರುವುದು, ಶಾಸನಗಳಲ್ಲಿ ಬರುವ ಜಗದೇವರಸ, ನೂರ್ಮಡಿ ಚಕ್ರವರ್ತಿ, ವಿಬುಧವಸು ಮುಂತಾದ ಹೆಸರುಗಳನ್ನು ಆಳುಪ ಅರಸರ ಹೆಸರುಗಳೆಂದು ತಪ್ಪಾಗಿ ನಮೂದಿಸಿರುವುದು ಇತ್ಯಾದಿಗಳನ್ನು ಇಲ್ಲಿ ಉದಾಹರಣೆಗಳಾಗಿ ಕೊಡಬಹುದು. ಆಳುಪರ ವಂಶಾವಳಿಯನ್ನು ನಿರೂಪಿಸುವ ಸಂದರ್ಭ ಯಾವುದೋ ಅರಸನ ಶಾಸನವನ್ನು ಇನ್ಯಾವುದೋ ಅರಸನಿಗೆ ಅನ್ವಯಿಸಿ ವ್ಯಾಖ್ಯಾನಿಸಿರುವ ಪ್ರಮಾದವೂ ಈ ಗ್ರಂಥದ ಹಲವೆಡೆಗಳಲ್ಲಿ ಕಂಡುಬರುತ್ತದೆ. ಈ ಎಲ್ಲ ದೋಷಗಳ ನಡುವೆಯೂ ಈ ಗ್ರಂಥವು ಆಳುಪರ ಇತಿಹಾಸದ ಅಧ್ಯಯನಕ್ಕೆ ನೀಡಿದ ಒಂದು ಮೌಲಿಕವಾದ ಕೊಡುಗೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಗ್ರಾಮಪದ್ಧತಿಯನ್ನಾಧರಿಸಿ ನಡೆಸಿದ ತುಳುವರ ಗ್ರಾಮವ್ಯವಸ್ಥೆಯ ಕುರಿತ ಅಧ್ಯಯನ ಮುಂದಿನ ಅಧ್ಯಾಯನ ಮುಖ್ಯ ವಸ್ತು. ತುಳುವರ ೩೨ ಗ್ರಾಮಗಳು, ಆ ಗ್ರಾಮಗಳಲ್ಲಿನ ಕುಟುಂಬಗಳ ಐತಿಹಾಸಿಕತೆ ಇತ್ಯಾದಿ ವಿಷಯಗಳನ್ನಿಲ್ಲಿ ವಿಶ್ಲೇಷಿಸಲಾಗಿದೆ. ಗ್ರಂಥದ ಐದನೇ ಅಧ್ಯಾಯದಲ್ಲಿ ತುಳುನಾಡಿನ ಧಾರ್ಮಿಕ ಇತಿಹಾಸದ ವಿವರಗಳಿದ್ದು ಇದರಲ್ಲಿ ಭೂತಾರಾಧನೆ, ನಾಗಾರಾಧನೆ, ಬೌದ್ಧ ಧರ್ಮ, ಶೈವ ಧರ್ಮ, ಜೈನಧರ್ಮ ಹಾಗೂ ವೈಷ್ಣವ ಧರ್ಮಗಳ ಕುರಿತು ವಿವರವಾದ ಚರ್ಚೆ ಇದೆ. ಬೌದ್ಧ ಧರ್ಮವು ತುಳುನಾಡಿನಲ್ಲಿ ವ್ಯಾಪಕವಾಗಿ ಅಸ್ತಿತ್ವದಲ್ಲಿತ್ತೆಂದು ನಿರೂಪಿಸುವ ಉತ್ಸಾಹದಲ್ಲಿ ಸಾಲೆತ್ತೂರರು ಈ ಪ್ರದೇಶದ ಹೆಚ್ಚಿನ ಎಲ್ಲಾ ಶಾಸ್ತಾ ಹಾಗೂ ದುರ್ಗಾ ದೇವಲಾಯಗಳು ಮೂಲತಃ ಬೌದ್ಧ ಧರ್ಮದ ಕೇಂದ್ರಗಳಾಗಿದ್ದವು ಎಂದು ವಾದಿಸುತ್ತಾರೆ.

ಪಾಡ್ದನಗಳ ಆಧಾರದಲ್ಲಿ ತುಳುವರ ಜನಜೀವನವನ್ನು ಚಿತ್ರಿಸುವ ಈ ಗ್ರಂಥದ ಆರನೇ ಅಧ್ಯಾಯವು ತುಳುನಾಡಿನ ಸಾಮಾಜಿಕ ಇತಿಹಾಸದ ಅಧ್ಯಯನಕ್ಕೆ ಸಾಲೆತ್ತೂರರು ನೀಡಿದ ಒಂದು ಅಪೂರ್ವವಾದ ಕೊಡುಗೆ ಎಂಬುದರಲ್ಲಿ ಸಂಶಯವಿಲ್ಲ. ಪಾಡ್ದನಗಳಂತಹ ಕ್ಲಿಷ್ಟ ಹಾಗೂ ಅಸ್ಪಷ್ಟ ಆಕರಗಳ ಆಧಾರದಲ್ಲಿ ತುಳುವ ಜನಜೀವನದ ವಿವಿಧ ಮುಖಗಳನ್ನು ಸಮಗ್ರವಾಗಿ ಪರಿಚಯಿಸುವ ಸಾಲೆತ್ತೂರರ ಈ ಪ್ರಯತ್ನ ನಿಜಕ್ಕೂ ಪ್ರಶಂಸಾರ್ಹವಾಗಿದೆ, ಅನುಕರಣೀಯವಾಗಿದೆ. ಮೌಖಿಕ ಸಾಹಿತ್ಯವನ್ನು ಇತಿಹಾಸ ರಚನೆಗೆ ಹೇಗೆ ಉಪಯೋಗಿಸಲು ಸಾಧ್ಯ ಎಂಬ ಪ್ರಶ್ನೆಗೆ ತಮ್ಮ ಕೃತಿಯ ಮೂಲಕ ಸಮರ್ಪಕವಾದ ಉತ್ತರವನ್ನು ನೀಡಿದ್ದಾರೆ. ತುಳುವರ ಕೃಷಿ, ವ್ಯಾಪಾರ, ಉಡುಗೆ ತೊಡುಗೆಗಳು, ಯುದ್ಧ, ಮನರಂಜನೆ, ಸಂಚಾರ ಮಾಧ್ಯಮಗಳು, ಕಂದಾಯ, ಶಿಕ್ಷಣ, ನಡವಳಿಕೆಗಳು ಇತ್ಯಾದಿ ಎಲ್ಲ ವಿಚಾರಗಳೂ ಈ ಅಧ್ಯಯನದ ವ್ಯಾಪ್ತಿಯೊಳಗೆ ಬಂದಿವೆ. ಆಳರಸರ ಇತಿಹಾಸವಲ್ಲದೆ  ಜನಸಾಮಾನ್ಯರ ಇತಿಹಾಸದ ಕಡೆಗೂ ದೃಷ್ಟಿ ಹರಿಸುವ ಇತಿಹಾಸಾಧ್ಯಯನದ ಹೊಸ ದೃಷ್ಟಿಕೋನದ ಪ್ರಾರಂಭವನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

‘ಹಿಸ್ಟರಿ ಆಫ್ ತುಳುವ’ ತುಳುವ ಇತಿಹಾಸವನ್ನು ಕುರಿತು ಆಂಗ್ಲ ಭಾಷೆಯಲ್ಲಿ ಪ್ರಕಟವಾದ ಮೊದಲ ಕೃತಿ. ಈ ಗ್ರಂಥದಿಂದಾಗಿ ಕರ್ನಾಟಕದ ಹೊರಗಿನವರಿಗೂ ತುಳುನಾಡಿನ ಇತಿಹಾಸದ ಪರಿಚಯವಾಗುವಂತಾಯಿತು. ಮಾತ್ರವಲ್ಲ, ಈ ಗ್ರಂಥವು ತುಳುನಾಡಿನ ಇತಿಹಾಸದ ಸಂಶೋಧಕರಿಗೆ ಉತ್ತಮ ಮಾದರಿಯನ್ನು ಒದಗಿಸಿತು. ಈ ಗ್ರಂಥವಲ್ಲದೆ ಈ ಪ್ರದೇಶದ ಇತಿಹಾಸಕ್ಕೆ ಸಂಬಂಧಿಸಿದಂತೆ ಕೆಲವಾರು ಬಿಡಿ ಲೇಖನಗಳನ್ನು ಸಾಲೆತ್ತೂರರು ಪ್ರಕಟಿಸಿದ್ದಾರೆ. ತಮ್ಮ ಗ್ರಂಥ ಹಾಗೂ ಲೇಖನಗಳ ಮೂಲಕ ಭಾಸ್ಕರ ಆನಂದ ಸಾಲೆತ್ತೂರು ಅವರು ತುಳುನಾಡಿನ ಇತಿಹಾಸದ ಹಲವಾರು ವಿಷಯಗಳ ಮೇಲೆ ಹೊಸ ಬೆಳಕನ್ನು ಚೆಲ್ಲಿದ್ದಾರೆ, ಹಲವಾರು ಅಸ್ಪಷ್ಟ ವಿಚಾರಗಳನ್ನು ಸ್ಪಷ್ಟಗೊಳಿಸಿದ್ದಾರೆ, ತನ್ಮೂಲಕ ತುಳುನಾಡಿನ ಇತಿಹಾಸಾಧ್ಯಯನಕ್ಕೆ ಅನುಪಮವಾದ ಕೊಡುಗೆಗಳನ್ನು ನೀಡಿದ್ದಾರೆ.

ಇಪ್ಪತ್ತನೆಯ ಶತಮಾನದ ಮಧ್ಯಭಾಗದ ಸುಮಾರಿಗೆ ತುಳುನಾಡಿನ ಸುಶಿಕ್ಷಿತ ವರ್ಗದಲ್ಲಿ ಹಲವರಿಗೆ ಇಲ್ಲಿನ ಇತಿಹಾಸ, ಸಂಸ್ಕೃತಿ ಕುರಿತು ವಿಶೇಷವಾದ ಆಸಕ್ತಿ ಮೂಡಿದಂತೆ ತೋರುತ್ತದೆ. ಈ ಪೈಕಿ ಪ್ರಾತಿನಿಧಿಕವಾಗಿ ಹೆಸರಿಸಬಲ್ಲವರು ಕಾರ್ಕಳ ಕೇಶವ ಕೃಷ್ಣಕುಡ್ವರು (೧೮೯೨ – ೧೯೪೯).  ಅಂದಿನ ಸರಕಾರದಲ್ಲಿ ರೆವೆನ್ಯೂ ಇನ್ಸ್‌ಪೆಕ್ಟರ್ ಮತ್ತು ತಹಶೀಲ್ದಾರರಾಗಿ ಕೆಲಸ ಮಾಡಿದ ಕೇಶವ ಕೃಷ್ಣ ಕುಡ್ವರು ೧೯೪೮ರಲ್ಲಿ ಪ್ರಕಟಿಸಿದ ‘ದಕ್ಷಿಣ ಕನ್ನಡದ ಇತಿಹಾಸ’ (ತುಳುವ ಚರಿತ್ರೆ)ವು ತುಳುನಾಡಿನ ಇತಿಹಾಸವನ್ನು ಪರಿಚಯಿಸುವ ಸರಳವಾದ ಕೃತಿ. ಹದಿನೇಳು ಅಧ್ಯಾಯಗಳುಳ್ಳ ಸುಮಾರು ೧೨೫ ಪುಟಗಳ ಈ ಕೃತಿಯು ಇತಿಹಾಸಾರಂಭ ಕಾಲದಿಂದ ಬ್ರಿಟಿಷರ ಆಳ್ವಿಕೆಯ ಕೊನೆಯ ತನಕದ ತುಳುನಾಡಿನ ಇತಿಹಾಸದ ವಿವರಗಳನ್ನೊಳಗೊಂಡಿದೆ. ಎಲ್ಲ ವಿಷಯಗಳನ್ನೂ ಈ ಗ್ರಂಥದೊಳಗೆ ಅಳವಡಿಸಿಕೊಲ್ಳುವ ಲೇಖಕರ ಉತ್ಸಾಹದಿಂದಾಗಿ ಯಾವುದೇ ವಿಷಯದ ಕುರಿತ ಹೆಚ್ಚಿನ ವಿಶ್ಲೇಷಣೆ ಅವರಿಗೆ ಸಾಧ್ಯವಾಗಿಲ್ಲ. ಈ ಕೃತಿರಚನೆಗೆ ಯಾವುದೇ ಆಕರಗಳನ್ನು ನೇರವಾಗಿ ಸೂಚಿಸಿಲ್ಲವಾದರೂ ಇದು ಬಹುಮಟ್ಟಿಗೆ ಗಣಪತಿ ರಾವ್‌ಐಗಳ್‌ಮತ್ತು ಸಾಲೆತ್ತೂರರ ಗ್ರಂಥಗಳನ್ನಾಧರಿಸಿ ರಚಿತವಾದ ಕೃತಿ ಎಂಬುದು ಸ್ಪಷ್ಟ. ತಾನೊಂದು ಅತ್ಯಂತ ಪ್ರೌಢವಾದ ಇತಿಹಾಸ ಕೃತಿಯನ್ನು ರಚಿಸುತ್ತಿದ್ದೇನೆಂಬ ಭ್ರಮೆಯೂ ಕುಡ್ವರಿಗಿರಲಿಲ್ಲ. ಗ್ರಂಥದ ಪ್ರಸ್ತಾವನೆಯಲ್ಲಿ ಅವರು ಹೇಳಿದ ‘ತುಳುವದ ಮಹಾಜನರು ತಮ್ಮ ಮಕ್ಕಳಿಗೆ ಹೇಳಲಿಕ್ಕಾದರೂ ಸಹಾಯವಾಗಲೆಂದು ನಾನು ಈ ಕೃತಿಯನ್ನು ಬರೆದಿದ್ದಾಗಿರುತ್ತದೆ’ ಎನ್ನುವ ಮಾತುಗಳು ಕೃತಿ ರಚನೆಯ ಹಿಂದಿನ ಅವರ ಉದ್ದೇಶ ಮತ್ತು ಅದರ ಮಿತಿಗಳನ್ನು ಸ್ಪಷ್ಟಪಡಿಸುತ್ತವೆ. ಹಾಗಿದ್ದರೂ, ತುಳುನಾಡಿನ ಇತಿಹಾಸದ ಸಮಗ್ರ ವಿವರಗಳನ್ನು ಸಂಕ್ಷಿಪ್ತವಾಗಿ ಹಾಗೂ ಸರಳವಾಗಿ ಪರಿಚಯಿಸುವ ಈ ಕೃತಿಯ ಮೂಲಕ ಇತಿಹಾಸ ಕುತೂಹಲಿಗಳಿಗೆ ಒಂದು ಉತ್ತಮ ಕೈಪಿಡಿಯನ್ನೊದಗಿಸುವಲ್ಲಿ ಕೇಶವ ಕೃಷ್ಣ ಕುಡ್ವರು ಸಫಲರಾಗಿದ್ದಾರೆ ಎನ್ನಬಹುದು.

ತುಳುನಾಡಿನ ಇತಿಹಾಸ ರಚನೆಗೆ ಒಂದು ರೀತಿಯ ಅಧಿಕೃತತೆ, ಖಚಿತತೆ ಮತ್ತು ಕ್ರಮಬದ್ಧತೆ ಒದಗಿಬಂದದ್ದು ೧೯೬೦ರ ದಶಕದಲ್ಲಿ. ೧೯೬೦ರಿಂದೀಚೆಗೆ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ತುಳುನಾಡಿನ ಇತಿಹಾಸದ ಅಧ್ಯಯನವನ್ನು ಕೈಗೆತ್ತಿಕೊಂಡು ಅದರ ಕುರಿತು ಕ್ರಮಬದ್ಧವಾದ ಸಂಶೋಧನೆ ನಡೆಸಿ ಇತಿಹಾಸ ರಚನಾ ವಿಧಾನದ ಅಧಿಕೃತ ಚೌಕಟ್ಟಿನೊಳಗೆ ತಮ್ಮ ಅಧ್ಯಯನದ ಫಲಿತಾಂಶಗಳನ್ನು ಕ್ರೋಡೀಕರಿಸಿ ಮಂಡಿಸುವ ಹಲವಾರು ಪ್ರಯತ್ನಗಳು ನಡೆದಿರುವುದನ್ನು ಗಮನಿಸಬಹುದು. ೧೯೬೫ – ೭೦ರ ಅವಧಿಯಲ್ಲಿ ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಕೆ.ವಿ. ರಮೇಶ್, ಸೂರ್ಯನಾಥ ಕಾಮತ್‌, ಪಿ. ಗುರುರಾಜ ಭಟ್‌ಮತ್ತು ಬಿ.ಎಸ್. ಶಾಸ್ತ್ರಿ ಹೀಗೆ ನಾಲ್ಕು ಮಂದಿ ವಿದ್ವಾಂಸರ ಪಿಎಚ್.ಡಿ. ಪ್ರಬಂಧಗಳು ಮಂಡಿತವಾಗಿರುವುದು ಗಮನಾರ್ಹ. ಈ ಪೈಕಿ ಪ್ರಕಟಣೆಯ ಭಾಗ್ಯ ಒದಗಿಬಂದದ್ದು ಕೆ.ವಿ. ರಮೇಶ್‌ರವರ ಪ್ರಬಂಧಕ್ಕೆ ಮಾತ್ರ.

ತುಳುನಾಡಿನ ಇತಿಹಾಸ ರಚನೆಗೆ ಹೊಸ ಆಯಾಮವನ್ನು ನೀಡಿದ್ದು ಕೆ.ವಿ. ರಮೇಶ್‌ ಅವರ A History of South Kanara. ಇದು ರಮೇಶ್‌ರವರ ಪಿಎಚ್‌.ಡಿ. ಪ್ರಬಂಧದ ಪ್ರಕಟಿತ ರೂಪ. ೧೯೬೩-೬೫ರ ಮಧ್ಯೆ ಇವರು ನಡೆಸಿದ ಆಳವಾದ ಸಂಶೋಧನೆಯ ಫಲವಾಗಿ ರೂಪುಗೊಂಡ ಈ ಕೃತಿಯು ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದ ಪ್ರಥಮ ಪಿಎಚ್.ಡಿ. ಪ್ರಬಂಧವೂ ಹೌದು. ವಸ್ತುನಿಷ್ಠವಾದ ಹಾಗೂ ಖಚಿತವಾದ ವಿವರಣೆಗಳು ಈ ಕೃತಿಯ ವೈಶಿಷ್ಟ್ಯ. ಸಂಪೂರ್ಣವಾಗಿ ಶಾಸನಗಳನ್ನೇ ಆಧರಿಸಿ ರಚಿಸಲಾಗಿರುವ ಈ ಕೃತಿಯ ರಚನೆಗೆ ತುಳುನಾಡಿನೊಳಗಿನ ಸುಮಾರು ೫೦೦ರಷ್ಟು ಶಾಸನಗಳನ್ನು ಹಾಗೂ ಇಲ್ಲಿನ ಇತಿಹಾಸಕ್ಕೆ ಪೂರಕ ಮಾಹಿತಿ ಗಳನ್ನೊದಗಿಸುವ ಇತರ ಶಾಸನಗಳನ್ನು ಆಕರಗಳನ್ನಾಗಿ ಬಳಸಿಕೊಳ್ಳಲಾಗಿದೆ.

ಇತಿಹಾಸಾರಂಭ ಕಾಲದಿಂದ ವಿಜಯನಗರದ ಆಳ್ವಿಕೆಯ ಕೊನೆಯ ತನಕ ಅಂದರೆ ಕ್ರಿ.ಶ. ೧೫೬೫ರ ತನಕದ, ದಕ್ಷಿಣ ಕನ್ನಡ ಜಿಲ್ಲೆಯ (ತುಳುನಾಡಿನ) ಇತಿಹಾಸದ ಅಧ್ಯಯನ ಈ ಗ್ರಂಥದ ಉದ್ದೇಶ. ಇದಕ್ಕೆ ಪೂರಕವಾಗಿ ಆ ಕಾಲದ ಆಡಳಿತ, ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ವ್ಯವಸ್ಥೆಗಳ ಚಿತ್ರಣವೂ ಈ ಕೃತಿಯಲ್ಲಿದೆ. ಒಟ್ಟು ಹತ್ತು ಅಧ್ಯಾಯಗಳನ್ನೊಳಗೊಂಡ ಈ ಕೃತಿಯನ್ನು ಪ್ರಸ್ತಾವನೆ – ರಾಜಕೀಯ ಇತಿಹಾಸ – ಆಡಳಿತ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ವಿವರಗಳು – ಈ ರೀತಿ ಮೂರು ವಿಭಾಗಗಳಾಗಿ ವಿಂಗಡಿಸಬಹುದು. ತುಳುನಾಡಿನ ಇತಿಹಾಸದ ವಿವಿಧ ಘಟನೆಗಳಿಗೆ, ಅದರಲ್ಲೂ ಮುಖ್ಯವಾಗಿ ಆಳುಪರ ಇತಿಹಾಸಕ್ಕೆ ನಿರ್ದಿಷ್ಟವಾದ ಕಾಲಮಾನದ ಚೌಕಟ್ಟನ್ನು ಒದಗಿಸಿರುವುದು ಈ ಕೃತಿಯ ವೈಶಿಷ್ಟ್ಯ. ತುಳುನಾಡಿನ್ನು ದೀರ್ಘ ಕಾಲ ಆಳಿದ ಆಳುಪ ಅರಸರ ವಂಶಾವಳಿ, ಅವರ ಆಳ್ವಿಕೆಯ ಕಾಲ ಮತ್ತು ಅವರ ಸಾಧನೆಗಳ ವಿವರಗಳನ್ನು ಸಮಗ್ರವಾಗಿ ಹಾಗೂ ಅತ್ಯಂತ ವಸ್ತುನಿಷ್ಠಾವಾಗಿ ಈ ಕೃತಿಯಲ್ಲಿ ವಿಶ್ಲೇಷಿಸಿ ವಿವರಿಸಲಾಗಿದೆ. ಒಂದನೆಯ ಆಳುವರಸನಿಂದಾರಂಭಿಸಿ ಇಮ್ಮಡಿ ವೀರಪಾಂಡ್ಯನವರೆಗೆ ಆಳಿದ ೩೦ ಮಂದಿ ಆಳುಪ ಅರಸರ ವ್ಯಕ್ತಿತ್ವ ಹಾಗೂ ಸಾಧನೆಗಳ ವಿವರಗಳು ಇಲ್ಲಿವೆ. ತುಳುನಾಡಿನ ಇತಿಹಾಸ ರಚನೆಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಕೊಡುಗೆ ಎಂದರೆ ಅತಿಶಯೋಕ್ತಿಯಾಗಲಾರದು.

ತುಳುನಾಡಿನ ಭೂಭಾಗವು ಪರಶುರಾನ ಕೊಡಲಿಯಿಂದ ಸೃಷ್ಟಿಯಾದ ಪ್ರದೇಶ ಎಂಬ ಐತಿಹ್ಯವನ್ನು ಹೊಸ ದೃಷ್ಟಿಕೋನದಿಂದ ವಿಶ್ಲೇಷಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಪರಶುರಾಮನ ಕೊಡಲಿ ಎಂಬುದು ಕಬ್ಬಿಣಯುಗದ ಜನರ ಕೊಡಲಿಗಳ ಸಂಕೇತವಾಗಿರಬಹುದು ಹಾಗೂ ಕಾಡುಗಳಿಂದ ತುಂಬಿದ್ದ ಈ ಪ್ರದೇಶವನ್ನು ತಮ್ಮ ಕೊಡಲಿಗಳ ಸಹಾಯದಿಂದ ವಾಸಯೋಗ್ಯವನ್ನಾಗಿಸಿದ  ಅವರ ಪ್ರಯತ್ನವನ್ನು ಈ ಐತಿಹ್ಯವು ಸಂಕೇತಿಸುತ್ತಿರಬಹುದು ಎಂಬ ರಮೇಶ್‌ರವರ ಅಭಿಪ್ರಾಯವನ್ನು ತುಳುನಾಡಿನ ವಿವಿಧ ಭಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದ ಕಬ್ಬಣಯುಗದ ಅವಶೇಷಗಳು ಪುಷ್ಟೀಕರಿಸಿವೆ.

ಕ್ರಿಸ್ತಶಕ ಮೊದಲ ಮೂರು ಶತಮಾನಗಳ ಅವಧಿಯಲ್ಲಿ ರಚಿತವಾದದ್ದೆಂದು ನಂಬಲಾಗುವ ತಮಿಳು ಸಂಗಮ್‌ ಸಾಹಿತ್ಯದಲ್ಲಿ ಬರುವ ವಿವರಣೆಗಳನ್ನು ತುಳುನಾಡಿನ ಇತಿಹಾಸದ ಆರಂಭದ ಕಾಲವನ್ನು ಪುನಾರಚಿಸುವಲ್ಲಿ ಆಕರಗಳನ್ನಾಗಿ ಅತ್ಯಂತ ಸಮರ್ಥವಾಗಿ ಬಳಸಿಕೊಂಡಿರುವುದು ‘A History of South Kanara’ ಕೃತಿಯ ಇನ್ನೊಂದು ವೈಶಿಷ್ಟ್ಯ. ಸಂಗಂ  ಸಾಹಿತ್ಯದ ಅಗನಾನೂರು, ಪುರನಾನೂರು, ನಟ್ರಣೈ ಮತ್ತು  ಸುಕುರಂದೊಗೈ ಎಂಬ ಸಂಕಲನಗಳಲ್ಲಿರುವ ಉಲ್ಲೇಖಗಳನ್ನು ಆಧರಿಸಿ ತುಳುನಾಡಿನ ಮೂಲನಿವಾಸಿಗಳಾದ ಕೋಶರ್ ಸಮುದಾಯದ ಬಗ್ಗೆ ಮತ್ತು ತುಳುನಾಡನ್ನಾಳಿದ ಪ್ರಥಮ ಅರಸ ನನ್ನನ್‌ ಎಂಬವನ ಬಗ್ಗೆ ನೀಡಲಾದ ಸಾಕಷ್ಟು ವಿವರಗಳನ್ನು ಇಲ್ಲಿ ಗಮನಿಸಬಹುದು. ‘ತುಳುನಾಡು’ ಎಂಬ ಪದ ಪ್ರಥಮವಾಗಿ ಉಲ್ಲೇಖಿಸಲ್ಪಟ್ಟಿರುವುದು ತಮಿಳ್‌ ಸಂಗಮ್‌ ಸಾಹಿತ್ಯದಲ್ಲಿ ಎಂಬ ಕುತೂಹಲಕರ ಮಾಹಿತಿಯೂ ಇಲ್ಲಿದೆ.

ಅಶೋಕನ ಎರಡನೆಯ ಶಿಲಾಶಾಸನದಲ್ಲಿ ಪ್ರಸ್ತಾಪಿಸಲಾದ ‘ಸತಿಯಪುತ್ರ’ ಎಂಬುದು ತುಳುನಾಡಿಗೆ ಅನ್ವಯಿಸುವ ಹೆಸರು ಎಂಬ ವಿನ್ಸೆಂಟ್‌ ಸ್ಮಿತ್‌ ಅವರ ಅಭಿಪ್ರಾಯವನ್ನು ತಮ್ಮ ತರ್ಕಬದ್ಧವಾದ ಹಾಗೂ ಆಧಾರಸಹಿತವಾದ ವಾದಗಳ ಮೂಲಕ ಈ ಕೃತಿಯಲ್ಲಿ ರಮೇಶ್‌ರವರು ಸಮರ್ಥಿಸಿದ್ದಾರೆ. ವಿಜಯನಗರದ ಆಳ್ವಿಕೆ ವಿವರಗಳನ್ನು ನೀಡುವ ಸಂದರ್ಭ ಕ್ರಿ.ಶ. ೧೩೪೫ರಿಂದ ಕ್ರಿ.ಶ. ಸುಮಾರು ೧೫೬೨ರ ತನಕ ಬಾರಕೂರು ಮತ್ತು ಮಂಗಳೂರು ರಾಜ್ಯಗಳ ಆಡಳಿತವನ್ನು ನಡೆಸಿದ ಸುಮಾರು ೧೦೦ ಮಂದಿ ವಿಜಯನಗರದ ರಾಜ್ಯಪಾಲರ ಹೆಸರುಗಳು ಮತ್ತು ಅವರ ಆಡಳಿತ ಕಾಲಾವಧಿಯನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ತುಳುನಾಡಿನ ವಿವಿಧ ಪ್ರದೇಶಗಳನ್ನಾಳಿದ ಬಂಗ, ಚೌಟ, ಅಜಿಲ ಮುಂತಾದ ಸ್ಥಳಿಕ ಅರಸು ಮನೆತನಗಳ ಇತಿಹಾಸವೂ ಈ ಕೃತಿಯಲ್ಲಿ ಅಡಕಗೊಂಡಿದೆ. ತುಳುನಾಡಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಇತಿಹಾಸದ ಪುನಾರಚನೆಗೆ ಲಭ್ಯವಿರುವ ಎಲ್ಲ ಶಾಸನಗಳನ್ನೂ ಈ ಕೃತಿರಚನೆಯಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಲಿಪಿಶಾಸ್ತ್ರ ಹಾಗೂ ಇತರ ಆಧಾರಗಳ ಹಿನ್ನೆಲೆಯಲ್ಲಿ ಈ ಎಲ್ಲ ಶಾಸನಗಳ ತೇದಿಗಳನ್ನು ನಿರ್ದಿಷ್ಟವಾಗಿ ಗುರುತಿಸಲು ಪ್ರಯತ್ನಿಸಿರುವುದು ಈ ಗ್ರಂಥದ ಒಂದು ಧನಾತ್ಮಕ ಅಂಶ.

ಸಾಹಿತ್ಯ ಮತ್ತು ಇತರ ಆಕರಗಳನ್ನು ಪರಿಗಣಿಸದೆ ಕೇವಲ ಶಾಸನಗಳನ್ನಷ್ಟೇ ಆಧರಿಸಿ A History of South Kanara ರಚಿತವಾಗಿರುವುದು ಈ ಕೃತಿಯ ವೈಶಿಷ್ಟ್ಯದ ಜೊತೆಗೆ ಅದರ ಮಿತಿಯೂ ಹೌದು. ಈ ಗ್ರಂಥವನ್ನು ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದ ನಿರೂಪಣೆ ಎನ್ನುವ ಬದಲು ಇಲ್ಲಿನ ಇತಿಹಾಸದ ಒಂದು ಪರಾಮರ್ಶನ ಗ್ರಂಥವಾಗಿ ಇದನ್ನು ಪರಿಗಣಿಸುವುದು ಉಚಿತ ಎಂದು ಕೃತಿಯ ಪ್ರಸ್ತಾವನೆಯಲ್ಲಿ ರಮೇಶ್‌ರವರು ನೀಡಿರುವ ಹೇಳಿಕೆ ಇದರ ಇತಿಮಿತಿಗಳ ಕುರಿತು ಅವರಿಗಿದ್ದ ಎಚ್ಚರವನ್ನು ಪರೋಕ್ಷವಾಗಿ ಸೂಚಿಸುತ್ತದೆ. ಅದೇನೇ ಇದ್ದರೂ, ಈ ಗ್ರಂಥವು ಇತಿಹಾಸ ರಚನೆಯ ಶಿಸ್ತಿಗೆ ಸಂಪೂರ್ಣ ಬದ್ಧವಾದ ಹಾಗೂ ತುಳುನಾಡಿನ ಇತಿಹಾಸದ ಕುರಿತಂತೆ ಅತ್ಯಂತ ವಸ್ತುನಿಷ್ಠವಾದ ಮತ್ತು ಮೌಲಿಕವಾದ ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ರಮೇಶ್‌ರವರ ಈ ಕೃತಿಯ ಇತಿಹಾಸ ರಚನೆಗೆ ಸಂಬಂಧಿಸಿದಂತೆ ಇಂದಿಗೂ ಒಂದು ಮಾದರಿಯಾಗಿ ಉಳಿದುಕೊಂಡಿರುವುದು ಇದರ ಪ್ರಸ್ತುತತೆ ಹಾಗೂ ಮಹತ್ವಕ್ಕೆ ನಿದರ್ಶನ.

A History of South Kanara ಪ್ರಕಟವಾಗುವ ಒಂದು ವರ್ಷ ಪೂರ್ವದಲ್ಲಿ ಪ್ರಕಟಗೊಂಡ ರಮೇಶ್‌ರವರ ‘ತುಳುನಾಡಿನ ಇತಿಹಾಸ’ವು ಮೇಲೆ ಸೂಚಿಸಲಾದ ಅವರ ಗ್ರಂಥದ ಸಂಕ್ಷಿಪ್ತ ಆವೃತ್ತಿ ಎನ್ನಬಹುದು. ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ  ಕನ್ನಡ ಭಾಷೆಯಲ್ಲಿ ಉತ್ತಮ ಕೃತಿಗಳ ಅಲಭ್ಯತೆಯ ಕೊರತೆಯನ್ನು ತುಂಬುವಲ್ಲಿ ಈ ಕೃತಿಯು ಬಹುಮಟ್ಟಿಗೆ ಸಫಲವಾಗಿದೆ. ೧೯೮೫ರಲ್ಲಿ ಎಂ.ಜೆ. ಶರ್ಮ ಅವರ ಜೊತೆಯಲ್ಲಿ ಕೆ.ವಿ. ರಮೇಶ್‌ ರಚಿಸಿದ ‘ತುಳುನಾಡಿನ ಅರಸು ಮನೆತನಗಳು’ ಒಂದು ರೀತಿಯಲ್ಲಿ ‘ತುಳುನಾಡಿನ ಇತಿಹಾಸ’ದ ಪರಿಷ್ಕೃತ ಆವೃತ್ತಿ ಎನ್ನಬಹುದು. ಬೆಳ್ಮಣ್‌ ಶಾಸನವೂ ಸೇರಿದಂತೆ ನಂತರ ಬೆಳಕಿಗೆ ಬಂದ ಹಲವಾರು ಶಾಸನಗಳನ್ನು ಪೂರಕ ಆಕರಗಳನ್ನಾಗಿ ಬಳಸಿಕೊಂಡು ಈ ಕೃತಿಯನ್ನು ರಚಿಸಲಾಗಿದೆ. ಈ ಹಿಂದಿನ ಕೃತಿಗಳನ್ನು ತುಳುನಾಡಿನ ಸ್ಥಳಿಕ ಅರಸು ಮನೆತನಗಳ ಇತಿಹಾಸವನ್ನು ವಿಜಯನಗರ ಕಾಲದ ತುಳುನಾಡಿನ ಒಟ್ಟು ರಾಜಕೀಯ ಇತಿಹಾಸದ ವಿವರಣೆಗಳ ಮಧ್ಯೆ ಸಂದರ್ಭಕ್ಕೆ ತಕ್ಕಂತೆ ಅಲ್ಲಲ್ಲಿ ಉಲ್ಲೇಖಿಸಿರುವುದು ಸಾಮಾನ್ಯ ಓದುಗರಿಗೆ ಗೊಂದಲವನ್ನುಂಟು ಮಾಡುವಂತಿತ್ತು. ಆದರೆ ತುಳುನಾಡಿನ ಅರಸು ಮನೆತನಗಳು ಗ್ರಂಥದಲ್ಲಿ ಸ್ಥಳಿಕ ಅರಸು ಮನೆತನಗಳ ವಿವರಗಳನ್ನು ಪ್ರತ್ಯೇಕವಾಗಿ ನೀಡಿರುವುದು ಅತ್ಯಂತ ಸ್ವಾಗತಾರ್ಹ.

ಈ ಕೃತಿಗಳಲ್ಲದೆ ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ ರಮೇಶ್‌ರವರ ಹತ್ತಾರು ಲೇಖನಗಳು ವಿವಿಧ ಪಂಡಿತ ಪತ್ರಿಕೆಗಳಲ್ಲಿ, ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಪ್ರಕಟಗೊಂಡಿದೆ. ತುಳುನಾಡಿನ ಇತಿಹಾಸವನ್ನು ಕುರಿತಂತೆ ಉತ್ತಮ ಹಾಗೂ ಮೌಲಿಕ ಗ್ರಂಥಗಳನ್ನು ರಚಿಸುವ ಮೂಲಕ ಮತ್ತು ಹಲವಾರು ಲೇಖನಗಳನ್ನು ಪ್ರಕಟಿಸುವ ಮೂಲಕ ರಮೇಶ್‌ರವರು ಈ ಪ್ರದೇಶದ ಇತಿಹಾಸದ ಸಂಶೋಧನೆ ಮತ್ತು ಅಧ್ಯಯನಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿದ್ದಾರೆಂದರೆ ತಪ್ಪಾಗದು.

ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ‘ದಂತಕತೆ’ಯಾಗಿರುವ ಪಿ. ಗುರುರಾಜ ಭಟ್ಟರ (೧೯೨೪ – ೧೯೭೮) ಕೃತಿಗಳಲ್ಲಿ ತುಳುನಾಡಿನ ಇತಿಹಾಸ, ಸಂಸ್ಕೃತಿಯ ವಿಭಿನ್ನ ಮುಖಗಳ ಅಧ್ಯಯನದ ಪ್ರಥಮ ಪ್ರಯತ್ನಗಳನ್ನು ಕಾಣಬಹುದು. ಗಣಪತಿ ರಾವ್‌ ಐಗಳ್‌ ಅವರ ಕೃತಿಯಿಂದ ಪ್ರೇರಣೆಯನ್ನು ಪಡೆದು ಇತಿಹಾಸ ಸಂಶೋಧನಾ ಕ್ಷೇತ್ರವನ್ನು ಆಕಸ್ಮಿಕವಾಗಿ ಪ್ರವೇಶಿಸಿದ ಗುರುರಾಜ ಭಟ್ಟರು ಇತಿಹಾಸಾರಂಭ ಕಾಲದಿಂದ ವಿಜಯನಗದ ಆಳ್ವಿಕೆಯ ಕೊನೆಯವರೆಗಿನ ತುಳುನಾಡಿನ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನವನ್ನು ತಮ್ಮ ಪಿಎಚ್.ಡಿ. ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವ ಮೂಲಕ ಈ ಕ್ಷೇತ್ರಕ್ಕೆ ಅಧಿಕೃತವಾಗಿ ಪದಾರ್ಪಣೆಗೈದರು. ಸುಮಾರು ಎರಡು ದಶಕಗಳ ತಮ್ಮ ಅಧ್ಯಯನಾವಧಿಯಲ್ಲಿ ಇವರು ತುಳುನಾಡಿನ ಇತಿಹಾಸ, ಶಾಸನಗಳು, ವಾಸ್ತುಶಿಲ್ಪ ಮೊದಲಾದ ವಿಷಯಗಳ ಕುರಿತು ವ್ಯಾಪಕವಾದ ಕ್ಷೇತ್ರಕಾರ್ಯಾಧರಿತ ಸಂಶೋಧನೆಯನ್ನು ಕೈಗೊಂಡು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ೭೦೦ರಷ್ಟು ಲೇಖನಗಳನ್ನು ಮತ್ತು ಕಿರುಹೊತ್ತಗೆಗಳೂ ಸೇರಿದಂತೆ ೧೪ರಷ್ಟು ಕೃತಿಗಳನ್ನೂ ರಚಿಸಿದ್ದಾರೆ.

೧೯೬೩ರಲ್ಲಿ ಪ್ರಕಟಗೊಂಡ ತುಳುನಾಡು ಗುರುರಾಜ ಭಟ್ಟರ ಪ್ರಥಮ ಕೃತಿ. ತುಳುನಾಡಿನ ಸಾಮಾಜಿಕ ಇತಿಹಾಸಕ್ಕೆ ಸಂಬಂಧಿಸಿದ ೧೫ ಲೇಖನಗಳು ಈ ಕೃತಿಯಲ್ಲಿವೆ. ತುಳುವರೆಂದರೆ ಯಾರು, ತುಳುವರ ಹುಟ್ಟು, ಸ್ಥಳನಾಮಗಳು ಹೇಳುವ ತುಳುನಾಡಿನ ಕತೆ, ನಾಡವರ (ಬಂಟರ) ಮೂಲ, ತುಳುನಾಡಿನಲ್ಲಿ ಬ್ರಾಹ್ಮಣ್ಯ ಇತ್ಯಾದಿ ಲೇಖನಗಳ ಶೀರ್ಷಿಕೆಗಳು ಈ ಕೃತಿಯು ಒಳಗೊಂಡಿರುವ ವಿಷಯಗಳನ್ನು ಸೂಚಿಸುತ್ತವೆ. ಶಂ.ಬಾ. ಜೋಶಿ, ಗೋವಿಂದ ಪೈ. ಪಂಜೆ ಮಂಗೇಶರಾವ್, ಶೀನಪ್ಪ ಹೆಗ್ಡೆ ಮತ್ತು ಗಣಪತಿರಾವ್ ಐಗಳ್‌ರವರ ಕೃತಿಗಳ ದಟ್ಟವಾದ ಪ್ರಭಾವವು ಈ ಲೇಖನಗಳಲ್ಲಿ ಎದ್ದು ತೋರುತ್ತದೆ.

ತುಳುನಾಡಿನ ಇತಿಹಾಸ ರಚನೆಗೆ ಹೊಸ ದಾರಿಯೊಂದನ್ನು ತೋರಿಸಿಕೊಟ್ಟವರು ಪಿ. ಗುರುರಾಜ ಭಟ್ಟರು. ಆ ತನಕ, ಪ್ರಾಯಶಃ ಅವರ ನಂತರವೂ ಯಾರೂ ತೊಡಗಿಸಿಕೊಳ್ಳದ, ತೊಡಗಿಸಿಕೊಳ್ಳಲು ಹಿಂಜರಿಯುವ, ಅತ್ಯಂತ ಕ್ಲಿಷ್ಟ ಹಾಗೂ ತ್ರಾಸದಾಯಕವಾದ ಸಂಶೋಧನಾ ವಿಭಾಗವಾದ ಕಲೆ ಮತ್ತು ವಾಸ್ತು ಶಿಲ್ಪಗಳ ಅಧ್ಯಯನ ಗುರುರಾಜ ಭಟ್ಟರ ಕೃತಿಗಳಿಗೆ ಸೀಮಿತ. ಆ ತನಕ ಬಂದ ಹೆಚ್ಚಿನ ಕೃತಿಗಳೂ ಲಭ್ಯವಿರುವ ಆಕರಗಳ ವಿಶ್ಲೇಷಣೆಗಳಿಗಷ್ಟೇ ಸೀಮಿತವಾಗಿದ್ದರೆ ಗುರುರಾಜ ಭಟ್ಟರ ಕೃತಿಗಳು ಬಹುಮಟ್ಟಿಗೆ ಕ್ಷೇತ್ರಕಾರ್ಯಾಧರಿತವಾಗಿರುವುದು ಗಮನಾರ್ಹ. ೧೯೬೯ರಲ್ಲಿ ಪ್ರಕಟಗೊಂಡ ‘Antiquities of South Kanara’ ಈ ದಿಶೆಯಲ್ಲಿ ಇವರ ಪ್ರಾರಂಭದ ಪ್ರಯತ್ನಗಳ ಫಲವಾಗಿ ಮೂಡಿಬಂದ ಕೃತಿ. ಈ ಗ್ರಂಥದಲ್ಲಿ ತುಳುನಾಡಿನ ಸುಮಾರು ೬೧ ಸ್ಥಳಗಳಲ್ಲಿರುವ ಪ್ರಾಚೀನ ಅವಶೇಷಗಳನ್ನು ದಾಖಲೀಕರಿಸಲಾಗಿದೆ. ತುಳುನಾಡಿನ ಪ್ರಾಗೈತಿಹಾಸಿಕ ಸಂಶೋಧನೆಗೆ ಈ ಕೃತಿಯು ದಿಕ್ಸೂಚಿಯಾಗಿ ಒದಗಿಬಂದದ್ದು ವಿಶೇಷ. ಬಂಟ್ವಾಳ ತಾಲೂಕಿನ ಬಡಗ ಕಜೆಕಾರಿನಲ್ಲಿರುವ ಬೃಹತ್ ಶಿಲಾಯುಗ ಸಂಸ್ಕೃತಿಯ ಅವಶೇಷಗಳು ಪ್ರಥಮ ಬಾರಿಗೆ ಬೆಳಕು ಕಂಡದ್ದು ಈ ಕೃತಿಯ ಮೂಲಕ.