ತುಳುನಾಡಿನ ಸಾಮಾಜಿಕ ಚರಿತ್ರೆಯ ಸರಿಯಾದ ಜ್ಞಾನವನ್ನು ಪಡೆಯಬೇಕಾದರೆ ಇಲ್ಲಿಯ ಸಮಾಜದಲ್ಲಿ ಯಾವ ಯಾವ ಜಾತಿ ಹಾಗೂ ವರ್ಗಗಳು ಸೇರಿಕೊಂಡಿವೆ, ಅವು ಹೇಗೆ ಅಸ್ತಿತ್ವಕ್ಕೆ ಬಂದುವು ಎಂಬುದನ್ನು ತಿಳಿದುಕೊಳ್ಳುವುದಗತ್ಯ.

ಬಿಲ್ಲವ, ಮೊಗೇರ, ತುರುವ (ತುಳುವ), ನಾಡವ, ಆಳುವ, ಅರಸ, ಆಳುವರಸ, ಸ್ಥಾನಿಕ, ಇವೆಲ್ಲ ಹೆಸರುಗಳು ಉದ್ಯೋಗವನ್ನು ಹೊಂದಿಕೊಂಡು ಬಂದ ಹೆಸರುಗಳಾದರೂ, ಆ ಉದ್ಯೋಗಗಳಲ್ಲಿ ಪ್ರಾಚೀನತೆ ಇದ್ದುದರಿಂದಲೂ, ಅವುಗಳಲ್ಲಿ ಪ್ರಾಧಾನ್ಯ ಹಾಗೂ ಅಧಿಕಾರ ಕಂಡುಬಂದುದರಿಂದಲೂ, ಅವು ಕಾಲಕ್ರಮೇಣ ಜಾತಿಗಳಾಗಿಯೇ ಮಾರ್ಪಾಡಾದುವು ಎಂಬುದಕ್ಕೆ ನಿದರ್ಶನಗಳು ಅನೇಕವಿದೆ. ಮೂಲದಲ್ಲಿ ಪ್ರತಿಯೊಂದು ಜಾತಿಯೂ ಔದ್ಯೋಗಿಕವಾಗಿ ಉಂಟಾಯಿತೆಂಬುದರಲ್ಲಿ ಸಂದೇಹವಿರಲಾರದು. ದ್ರಾವಿಡ ಶಾಖೆಗೆ ಸೇರಿದ ಈ ಬಿಲ್ಲವ, ಮೊಗೇರ, ತುಳುವ, ಕುಡುವ, ನಾಡವರಲ್ಲಿ ಪರಸ್ಪರ ಜಾತಿ ಸಂಕೀರ್ಣವಾಗಿ ಬೇರೆ ಬೇರೆ ಒಳವರ್ಗ ಯಾ ಜಾತಿಗಳು ಉತ್ಪತ್ತಿಯಾದುವುವೆಂಬುದರಲ್ಲೂ ಸಂಶಯವಿಲ್ಲ.  ಮಾತ್ರವಲ್ಲದೆ, ಈ ನಾಡಿನ ಹೊರಗಣಿಂದ ಐತಂದ ಅನೇಕ ಪಂಗಡಗಳು ನಮ್ಮ ನಾಡಿನ ಮೂಲಿಗರೊಡನೆ ಬೆರಕೆಯಾದ ದೃಷ್ಟಾಂತಗಳೂ ಕಂಡುಬರುತ್ತವೆ. ಈ ಜಾತಿ ಸಂಕೀರ್ಣತೆಯನ್ನು ತಿಳಿಯುವ ಒಂದು ಉಪಾಯವೆಂದರೆ ಈ ಪ್ರಾಮುಖ್ಯ ಜಾತಿಗಳಲ್ಲೆಲ್ಲಾ ಸಾಮಾನ್ಯವಾಗಿ ಕಂಡುಬರುವ ಕುಲಗಳ ಹೆಸರುಗಳು. ಈ ಕುಲಗಳಿಗೆ ನಾಡಿನ ಭಾಷೆಯಲ್ಲಿ ‘ಬರಿ’ ಯಾ ‘ಬಳಿ’ ಎನ್ನುತ್ತಾರೆ. ಈ ಎರಡೂ ಶಬ್ದಗಳು ತುಳು ಭಾಷೆಯವುಗಳೆಂಬುದಾಗಿ ಭ್ರಮಿಸಿಕೊಳ್ಳಬಾರದು. ಅವು ಕನ್ನಡ ಶಬ್ದಗಳೇ ಆಗಿವೆ. ಬಳಿ ಎಂದರೆ ವಂಶ; ಅಂತೆಯೇ ಬರಿ ಎಂಬ ಪದವು ಬಡಿ, ಬದಿ, ಪಕ್ಷ, ಮಗ್ಗುಲು ಎಂಬರ್ಥಗಳನ್ನಿತ್ತು ಯಾವ ವಂಶಕ್ಕೆ ಸೇರಿದ್ದು ಎಂದೇ ಸೂಚಿತಾರ್ಥವನ್ನೀಯುತ್ತದೆ. (Kittel Dictionary Pages 1082 & 1098).

ಮದ್ರಾಸು ಜಿಲ್ಲಾ ಮ್ಯಾನುವೆಲುಗಳು – ದಕ್ಷಿಣ ಕನ್ನಡ (Madras District Manuals – South Kanara) ಈ ಪುಸ್ತಕದಲ್ಲಿ ಪುಟ ೧೬ರಿಂದ ೨೫ರವರೆಗೆ ನಮ್ಮ ನಾಡಿನ ಜಾತಿ ಮತ್ತು ವಂಶಗಳ ವರ್ಗೀಕರಣವನ್ನು ಮಾಡಿದ ಕ್ರಮವನ್ನೂ, ಅದರ ವಿಮರ್ಶೆಯನ್ನೂ ಮಾಡುವುದು ಅಗತ್ಯ.

೧. ಹಿಂದಕ್ಕೆ ಸೈನಿಕ ದಳದವರೂ ಪ್ರಬಲರೂ ಆಗಿದ್ದು ಈಗ ವ್ಯವಸಾಯಗಾರರಾಗಿರುವರು. ಅಗಮುಡೈಯನ್, ಅರೆ (ಅರಿಯರು), ಎರಡಿ, ಜಂಗಾರ, ಕೊಡಗನ್ (ಕೂರ್ಗಿ), ಕ್ಷತ್ರಿಯ, ಲಂಕೆಗಾರ, ಮರಾಟ, ನಾಯರ್, ಪೊಂದಲ, ರಜಪೂತ, ರಾಜು (ರಾಝ), ಸಾಮಂತ, ಸೇರ್ವೆಗಾರ, ವೆಳಮ, ವೀಳ್ಯಕಾರ.

೨. ವ್ಯವಸಾಯಗಾರರು

ಬಾಲೋಲಿಕಾರ, ಬಂಟ, ದಖ್ನಿ, ಗತ್ತಿ, ಗಂಡ, ಹಲದವ, ಹಾಲುವಕ್ಕಿ, ಹಣಬ, ಹರೇಕಾರ, ಜೈನ, ಕಾಮತಿ, ಕಾಪು, ಮಲವ, ಮೂಡ ಮನೆ, ನಾಡವ, ನಗರಾಲು, ಪುಲುವನ್, ರೆಡ್ಡೇರು, ರಾಜಾಪುರಿ, ಶೂದ್ರ, ತೆಲುಗ, ವಕ್ಕಲಿಗ, ವೆಲ್ಲಾಲ.

೩. ಗೋಪಾಲಕರು.

ಎರುವನ್, ಗೌಳ, ಗೋಪಾಲ, ಕೊಂಡಿ, ಸಾಬಲಿ, ವಲ್ಲಭ, ಎಮ್ಮೆ ಮರಿಯವ.

೪. ಪುರೋಹಿತ ವರ್ಗ (ಬ್ರಾಹ್ಮಣರೂ, ಇತರರೂ)

ಆಚಾರ್ಯ, ಆಂಧ್ರ, ಅರ್ವತ್ತೊಕ್ಲು, ಅಷ್ಟ ಸಹಸ್ರಂ, ಬಡಗನಾಡು, ಬಾರದೇಶಿಕಾರ, ಬ್ರಹ್ಮ ಚರಣಂ, ಬ್ರಹ್ಮಮ್, ಚಿತ್ಪಾವನ, ದೇಶಸ್ಥ, ದ್ರಾವಿಡ, ಗೌಡ, ಗುಜರಾತಿ, ಹವಿಕ, ಇಂದ್ರ, ಕಮ್ಮೆ, ಕನೋಜ, ಕಂದಾವರ, ಕರಾಡಿ, ಕರ್ನಾಟಕ, ಕೊಂಕಣಸ್ಥ, ಕೋಟ, ನಾಗಪುರ, ನಂಬಿ ನಂಬದಿ, ಪಾಡಿಯ, ಪಂಚಗ್ರಾಮ, ಪೂಜಾರಿ, ಸಕಲಪುರ, ಸಾರಸ್ವತ, ಶಿವಳ್ಳಿ, ಸ್ಮಾರ್ತ, ಶ್ರೀವೈಷ್ಣವ, ತೌಲವ, ಉತ್ತರಾದಿ, ವಡಮ, ವೈದಿಕ ವತ್ತಿಮನ್, ಜಂಗಮ್, ಕಾಜಿ, ಪಿದಾರನ್.

೫. ಹೊಲದಲ್ಲಿ ಕೆಲಸ ಮಾಡುವವರು

ಆದಿಯನ್, ಬಂದಿಗುಲಾಮ, ಬಟ್ಟದ, ಭೈರ, ಚಲವಾದಿ, ಚರವ, ಚೇರುಮನ್, ಗರಸ, ಗೊಡ್ಡೇರ, ಹೊಸಳ, ಹೊಲೆಯ, ಕೂಸ, ಮಾಲ, ಮೇರ, ಮೊಯಿಲಿ, ಪಳ್ಳೀ (ಪಲ್ಲಿ, ವಣ್ಣಿಯನ್) ಪಣಿಯನ್, ಪಂಜಿ, ಪರೈಯನ್, ಪೊಳ್ವ, ರಾಣ್ಯದವ, ತಿಗಳ, ವೆಟ್ಟುವನ್.

೬. ಕಾಡು ಮತ್ತು ಗಿರಿಜನರು

ಬಿಲ್ಲರು, ಕೊರಗ, ಕುಡಿಯ, ಕುಡುಬಿ, ಮವಿಲನ್, ಮೊಡಿಕನ್, ಸವರ.

೭. ಭಕ್ತ ಯಾ ಭಜಕ ವರ್ಗ

ಅತೀತ, ಭೈರಾಗಿ, ಫಕೀರ, ಗೋಸಾಯಿ, ಹರಿದಾಸ, ಸನ್ಯಾಸಿ

೮. ದೇವಸ್ಥಾನದ ಸೇವಕರು

ಅಂಬಲ ವಾಸಿ, ಬರಿಯ, ದೇವಡಿಗ, ದೇವಾಳಿ, ಮಾಲಿ, ಪದಾರ್ಥಿ, ಪಟ್ಟಾಳಿ, ಪೊದುವಾಳ, ಸಾತಾನಿ, ಸ್ಥಾನಿಕ, ವಾರಿಯನ್.

೯. ಜೋಯಿಸರು, ವೈದ್ಯರು

ಕಣಿಸಾನ್ ಮತ್ತು ವೈದ್ಯ.

೧೦. ಕೀರ್ತನೆಕಾರರೂ, ಲಾವಣಿ ಪದಕಾರರು.

ಭಟ್ರಾಜು, ಮೇಳಕ್ಕರಸ್, ಪುರಸ, ಸಪ್ಪಳಿಗ, ವಾದ್ಯಕಾರ, ವಾಲಗದವ.

೧೧. ಕುಣಿಕೆಯವರು, ಹಾಡುಗಾರರು

ದಕ್ಕೇರ, ಕಲಾವಂತ, ಪಾರ್ವತಿಕಾರ, ಪಟ್ರ, ಮೇಳ, ಸನಿ.

೧೨. ವ್ಯಾಪಾರಸ್ಥರು ಬಜಿಲ, ಬಣಜಿಗ, ಬನಿಯ, ಬೋರ, ಚೆಟ್ಟಿ, ಗೋಪ್ತಿ, ಗುಜ್ಜರ, ಕವರಯಿ, ಭೋಜ, ಕೋಮಟ, ಲಬ್ಬಾಯಿ, ಮಣಿ ಸರಕಾರ, ಮಾಪಿಳ್ಳ, ಮಿಮಾನ್, ನವಾಯತ್‌, ನಿಮಿಸ್ಕಾರ, ವೈಶ್ಯ, ವಾಣಿ.

೧೩. ಹೊರುವವರು, ಲೊಂಬಾಡಿ

೧೪. ಅಕ್ಕಸಾಲಿಗರು

ಅಕ್ಕಸಾಲೆ, ಪೊನ್ನ ಸೆಟ್ಟಿ ಸೋನಾರ್, ತಟ್ಟನ್

೧೫. ಕಾರ್ಮಿಕರು (Artisans)

ಕಮ್ಮಾರ, ಶಿಲ್ಪಿ, ತಗರದವ.

೧೬. ಕ್ಷೌರಿಕರು

ಹಜಾಮ, ಕಾವುತೀಯನ್, ಕೆಲಸಿ (ಕ್ಷೌರಿಕ), ಮಂಗಲ, ನವುದೀಯ, ವೇಳಕ್ಕತಲವನ್.

೧೭. ಬಡಗಿ, ಮೇಸ್ತ್ರಿ, ಗಾರೆಯ ಕೆಲಸ ಮಾಡುವವರು

ಆಯಿರಿ, ಬಡಗಿ, ಚರೋಡಿ, ಚೇಷ್ಟೆಗಾರ, ಗುಡಿಗಾರ, ಕಲ್ಲುಕಟ್ಟಿ, ಮೊದಲನ್, ಮೇಸ್ತ, ಮವ್ವರಿ, ತಾಶ್ಚನ್, ಉರಳಿ.

೧೮. ದರ್ಜಿಗಳು (Tailors)

ಚೀಂಪಿಗ, ದರ್ಜಿ, ನಾಮದೇವ, ತೀಪಗಾರ್ತಿ.

೧೯. ಹುರಿಯುವವರೂ, ದೇವರಡಿಗಾರರು

(Grain – Parchers and Confectioners)

ಕೂಡ್ಲುಕಾರ, ಪೆನ್ನೆಗಾರ.

೨೦. ನೇಯ್ಗಾರರು, ಪಂಚಾಂಗಕರ್ತರು, ವರ್ಣಗಾರರು ಅಟಕರಿ, ಬಣ್ಣಗಾರ, ಬಿಳಿಮಗ್ಗ, ದೇವಾಂಗ, ಜಾಡ, ನಗಲಿಕ, ಪಟ್ಟೆಗಾರ, ಸಾಲೆ, ಸೇಣಿಯ.

೨೧. ಮಡಿವಾಳ

ಅಗಸ, ಡೋಬಿ, ಮಡಿವಾಳ, ನೆಕ್ಕಾರ, ಪರಿಯಾತ, ವಣ್ಣನ್, ವೇಲುತ್ತಿದನ್

೨೨. ಕುರುಬರು, ಕಂಬಳಿ ತಯ್ಯಾರಿಸುವವರು ಗೊಲ್ಲನ್, ಹೆಗ್ಗಡೆ, ಇದೈಯನ್ ಯಾ ಯಾದವನ್, ಕುರುಂಬನ್.

೨೩. ಎಣ್ಣೆ ತೆಗೆಯುವವರು

ಚಾಲ್ಯ ಗಾಣಿಗ, ತೇಲಿ.

೨೪. ಮಡಕೆ ತಯಾರಿಸುವವರು : ಕುಂಬಾರ, ಕೂಸವನ್.

೨೫. ಬಳೆಗಾರರು, ಗಾಜುಗಾರರು, ವಲೈಯಾಲ್ಕಾರನ್.

೨೬. ಉಪ್ಪು ತಯಾರಿಸುವವರು : ಉಪ್ಪಾರ.

೨೭. ಬೆಸ್ತರ, ದೋಣಿ ನಡೆಸುವವರು, ಪಾಲಕಿ ಹೊರುವವರು, ಅಡಿಗೆಯವರು, ಅಂಬಿಗ, ಬೆಸ್ತ, ಭಾದೆಲ, ಬೋಯ, ಗಬಿತ, ಹರಿಕಾಂತ್ರ, ಕೌಡೆಗಾರ, ಕಾರ್ವಿ, ಮರಕಾಲ, ಮೇಯನ್, ಮುಕ್ಕುವನ್, ಪಲ್ಲಿಚ್ಚನ್, ವಲ್ಲುವನ್.

೨೮. ಡೊಂಬರು

ದೊಮ್ಮಾರರು, ಬೆಟ್ಟ, ಪಯಿಲ್ವಾನ್.

೨೯. ಗುಡಿಗಾರರು, ಹಾವಾಡಿಗರು, ಪ್ರಾಣಿಗಳ ಪ್ರದರ್ಶಕರು ಹಮ್ಮಾತ.

೩೦. ಮಾಟಗಾರರು (Sorcerers) ವೇಲನ್.

೩೧. ಹಿಂದೂ ದೇಶದವರಲ್ಲದ ಅಸ್ಯಾಖಂಡದ ವಂಶೀಯರು ಅರಬರು, ಬೆಲುಚಿಯರು, ಚೀನೀಯರು, ಮೊಗಲರು, ಪಾರ್ಸಿ, ಪಠಾಣರು, ಸೈಯದರು, ಶೈಕರು.

೩೨. ಅಸ್ಯಾಖಂಡಕ್ಕೆ ಸೇರದ ವಂಶೀಯರು

ಯುರೋಪಿಯಾನರು ಮತ್ತು ಮೊರೀತಿಯನರು.

೩೩. ಯುರೇಶಿಯನರು

೩೪. ಕೌಟುಂಬಿಕ ನಾಮಗಳು

ಮುದಲಿ, ನಾಯಕ, ನಾಯಡು, ಪಿಡೈ, ಸಾಹೇಬ

೩೫. ಪ್ರಾದೇಶಿಕ, ಭಾಷಾವಾರು, ಜಾತಿಯ ಹೆಸರುಗಳು

ಹನಫಿ, ಕೆನರೀಸ್ (ಕನ್ನಡ ), ಕನೌಜ, ಕೊಂಕಣಿ, ಲಿಂಗಾಯತ, ಮುಸಲ್ಮಾನ್, ಪುದು ಇಸ್ಲಾಂ, ಶಾಫಿ, ಪೈಯ, ಸುನ್ನಿ, ಬ್ರಹ್ಮೋ, ಹಿಂದೂಸ್ಥಾನ, ಜೆಂಟೂ, ಕಚ್‌ಹಿ, ಮಲಯಾಳಿ, ತಮಲ, ತೆಲಂಗಿ, ವೈಷ್ಣವ.

೩೬. ವಿಭಾಗಿಸಲ್ಪಡದ ಜಾತಿಗಳು

ಅಂಬಲಿ, ಬಾಪಡ್ಮ, ಬಟ್ಟಲೆಕಾರ, ಬೆಲಂ, ಛಾಯಂ, ಬ್ಯಾರಿ, ಚಂಚುನಿ, ದಾಲ್ಚಿ, ದವಳ, ದ್ವಿಜ, ಹನಿಬಿ, ಹರಿಯವ, ಹೊಟ್ಟೆ, ಜಾತಿಭ್ರಷ್ಟ, ಜಿಮ್ಮೆ, ಕಲ್ಲು, ಖಂಡಿವರ, ಕ್ಷೇತ್ರವಾಸಿ, ಮಾದಿರ, ಮಲಕಬಾವುರ, ಮಲ್ಲದಾರ, ಮಣೆಗಾರ, ಮಣಿಲವ, ಮೋಕ್ಷಮಾತ, ಮೊಲ್ಲೆನಿ, ಮೂಲ್ಯ, ಮುಸಕರು, ಮುಸುಕಿನವ, ನಾರ್ಬಲಿ, ನಿರೆತು, ನಿರ್ಪಟ್ಟಂ, ನಿರುಚನ, ಪಲಯಮಾರ, ಪಾಂಡ್ರವ ಪಟ್ಟಿತ, ಸಹಿರ, ಸಾಂತಾರ, ಸಿಲಬಲಿಕೆಯವರು, ಲೇಪಟನ್, ತಿರುಮನೆ, ವಾಡಾರಿ, ವಡೆಯ, ಯೆನ್ನ ಮಾಜಿ.

ದಕ್ಷಿಣ ಕನ್ನಡ ಜಿಲ್ಲೆಯ ಗಜೆಟಯರಿನಲ್ಲಿ ಕಂಡು ಬರುವ (೧೯೦೧) ಜಾತಿ, ಪಂಗಡ ಮತ್ತು ವಂಶಗಳು ಎಂಬ ವಿಭಾಗದಲ್ಲಿ ಈ ಕೆಳಗಿನ ವರ್ಗೀಕರಣ ಕಂಡುಬರುತ್ತದೆ.

ಹಿಂದುಗಳ ಮತ್ತು ಸರ್ವಜೀವತ್ವ ಜಾತಿಗಳು

(ಅ) ತಮಿಳು :- ಚೆಟ್ಟ, ಬ್ರಹ್ಮನ್, ಶೂದ್ರ, ಪಲ್ಲ, ಕುರವನ್, ಅಂಬಟ್ಟನ್, ಪರೈಯನ್, ಇತರರು (೨೦೫೬ ಸಂಖ್ಯೆ)

(ಆ) ತೆಲುಗು :- ದೇವಾಂಗ, ಸಾಲೆ, ಜೋಗಿ, ದಾಸಾರಿ, ಗೊಲ್ಲ, ಬಂಜ, ಮಾದಿಗ, ಉಪ್ಪಾರ, ತೆಲುಗು ವೈಶ್ಯ, ಕಾಪು, ಬೋಗಂ, ದೊಮ್ಮರ, ಇತರರು (೧೬,೪೦೬ ಸಂಖ್ಯೆ)

(ಇ) ಮಲೆಯಾಳ :- ತೀಯತ್, ನಾಯರ್ ಕೊಲಯನ್, ಚೆರುಮಾನ್, ಮುಕ್ಕುವನ್, ಕಮ್ಮಲನ್, ಚಕ್ಕನ್, ಚರಿಯನ್, ಬ್ರಹ್ಮನ್, ಕಣಿಸಾನ್, ಅಂಬಲವಾಸಿ, ಪರವನ್, ವೇಲುತ್ತೆದೆನ್, ಮರಯನ್, ಮುವ್ವಾರಿ, ಮುನ್ನನ್, ಆಂಡುರನ್, ಕವಿಲೇಯನ್ ಇತರರು (೮೨,೪೬೭ ಸಂಖ್ಯೆ)

(ಈ) ಕನ್ನಡದವರು :- ಬಿಲ್ಲವ, ಬಂಟ, ಹೊಲೆಯ, ಗೌಡ, ಬ್ರಾಹ್ಮಣ, ಮೊಗೇರ, ಪಾಂಚಾಲರು, ಕುಂಬಾರ, ದೇವಡಿಗ, ಹಳೆಪೈಕ, ಗಾಣಿಗ, ಅಗಸ, ಕೋಟೆಗಾರ, ಕೆಲಸಿ, ಕೋಸಗ, ಕುಡಿಯ, ಮಲವ, ಮೊಯಿಲಿ, ಸಪ್ಪಳಿಗ, ಹೆಗ್ಗಡೆ, ಸಮಗಾರ, ವಕ್ಕಲಿಗ, ಗಟ್ಟಿ, ಕೊಟ್ಟಾರಿ, ಸ್ಥಾನಿಕ, ಪತ್ರನೇಲ,  ನಲ್ಕೆಯವ, ಚರೋಡಿ, ಬಣಜಿಗ, ಭಂಡಾರಿ, ಪೊಂಬದ, ಬಲ್ಲಾಳ, ಬೆಲ್ಲಾರ, ಹೊಸಳ, ಗುಡಿಗಾರ, ಲಿಂಗಾಯತ, ಪಾನರ, ಜಂಗಮ, ಬಲ್ಲಾಳ, ಮಾಲೆಯವ, ಕುರುಬ, ಕಬ್ಬೇರ, ಅಣ್ಣಪ್ಪನ್‌ಇತರರು (೬೭೨, ೨೨೫ ಸಂಖ್ಯೆ)

(ಉ) ಇತರರು (Other Madras Langauges) :- ಬ್ರಾಹ್ಮಣ, ಮರಾಟಿ, ರಾಜಪುರಿ, ಕುಡುಬಿ, ಕ್ಷತ್ರಿಯ, ಖಾರ್ವಿ, ಚಾಪ್ಪೆಗಾರ, ಕೊಂಕಣಿ, ಸೊನೆಗಾರ, ವಾಣಿ, ನೇಕಾರ, ಕಾಡುಕೊಂಕಣಿ, ಇತರರು (೧೪೦,೦೦೦) (ಊ) ಜೈನರು (೯೫೮೨ ಸಂಖ್ಯೆ)

ತುಳುನಾಡಿನ (ಅದರಲ್ಲೂ ದಕ್ಷಿಣ ಕನ್ನಡದ) ಸಮಾಜದಲ್ಲಿ ತೋರಿಬರುವ ಜಾತಿಗಳ ಸಹಜವಾದ ಚಿತ್ರಣವನ್ನೂ ಹಾಗೂ ರೂಪರೇಖೆ ಯನ್ನೀಯುವ ವರ್ಗೀಕರಣಗಳು ಮೇಲಿನವಲ್ಲವಾದರೂ, ಅವುಗಳಲ್ಲಿ ಅವಲಂಬಿಸಿರುವ ಕ್ರಮದಲ್ಲಿ ನ್ಯೂನತೆ ಕಂಡುಬರುವುದಾದರೂ, ‘ಬಲೆಯಂತಿರುವ’ ತುಳುವದ ಬೇರೆ ಬೇರೆ ಸಾಮಾಜಿಕ ಘಟಕಗಳ ಪರಿಚಯವನ್ನು ಸ್ಥೂಲವಾಗಿ ಮಾಡಿಕೊಳ್ಳಲು ಪ್ರಯತ್ನ ಮಾಡಲಾಗಿದೆ. ಮೊದಲನೆಯ ವರ್ಗೀಕರಣವನ್ನು ಉದ್ಯೋಗ ಯಾ ವ್ಯವಹಾರವನ್ನಲಂಬಿಸಿ ಮಾಡಿದಂತೆಯೂ, ಎರಡನೇಯದನ್ನು ಪ್ರಾದೇಶಿಕ ವಲಸೆ ಯಾ ಭಾಷೆಯ ಮೇಲೆ ಹೊಂದಿಕೊಂಡು ಮಾಡಿದಂತೆಯೆ ಕಂಡುಬರುತ್ತದೆ.

ಮೇಲಣ ವರ್ಗೀಕರಣದಲ್ಲಿ ಕಂಡುಬರುವ ಕೆಲವು ನ್ಯೂನತೆಗಳನ್ನು ತೋರಿಸುವುದು ವಿಮರ್ಶೆಗೆ ಅಗತ್ಯ.

(೧) ಆದಿಯಲ್ಲಿ ಒಂದೇ ಆಗಿದ್ದ ಜಾತಿಯು ಅನಂತರ ವಿವಿಧ ಕಸಬುಗಳನ್ನು ಮಾಡಲುದ್ಯುಕ್ತವಾಗಿ ಬೇರೆ ಬೇರೆ ಮೇಲ್ ಹೆಸರುಗಳನ್ನು ಹೇಗೆ ಪಡೆಯಿತು ಎಂಬ ವಿವರವನ್ನು ಈ ತಖ್ತೆಯು ಕೊಡುವುದಿಲ್ಲ.  ಉದಾ :- ಬಂಟರೂ, ನಾಡವರೂ ಒಂದೇ ವರ್ಗಕ್ಕೆ ಸೇರಿದವರೆಂಬುದನ್ನೂ ಅಕ್ಕಸಾಲಿಗರೂ, ಕಮ್ಮಾರರೂ, ಕಂಚುಗಾರರೂ ಮೂಲದಲ್ಲಿ ಒಂದೇ ಜಾತಿಗೆ ಸೇರಿದವರೆಂಬುದನ್ನೂ ತಿಳಿಯತಕ್ಕುದ್ದು. ಅದೇ ರೀತಿಯಲ್ಲಿ ಗಾಣಿಗ, ದೇವಾಡಿಗ, ಸಪ್ಪಳಿಗ, ಶೇರಿಗಾರ – ವರ್ಗಗಳು ಉದ್ಯೋಗಗಳನ್ನು ಹೊಂದಿಕೊಂಡು ಬೇರೆ ಬೇರೆ ಜಾತಿ ಎಂದು ತಪ್ಪಾಗಿ ತಿಳಿಯಲ್ಪಡುವ ಸಂಭವವಿದ್ದರೂ ಅವರ ಮೂಲ ಒಂದೇ ಆಗಿದೆ.

(೨) ವ್ಯಾಪಾರಸ್ಥರೂ ಒಂದು ವಿಶಿಷ್ಟ ಜಾತಿ ಎಂದು ಪರಿಗಣಿಸಲ್ಪಡುವುದು ಅಷ್ಟೊಂದು ಸಮಂಜಸವಲ್ಲ (ವೈಶ್ಯವೆಂಬುದು ಜಾತಿಯಲ್ಲ ವರ್ಣ), ವ್ಯಾಪಾರಸ್ಥರು ಒಂದು ‘Community’ (ಸಮಾಜ) ಎಂದು ಹೇಳಬಹುದೇ ವಿನಾ, ಅವರು ಒಂದು ಜಾತಿಯಾಗಲಾರರು. ಗುಜ್ಜರರು ಗುಜರಾತ್‌ದೇಶದವರು ಅವರಲ್ಲಿ ವಿವಿಧ ಜಾತಿಗಳಿವೆ. ಅಂತೆಯೇ ಹೊಲೆಯರೆಂಬವರು ಒಂದು ಜಾತಿಯಲ್ಲ. ಹೊಲೆಯ ಎಂಬ ಶಬ್ದವು, ‘ಹೊಲ’ (field)ದಿಂದ ಬಂದುದಾಗಿದೆ.

(೩) ಪಾಟಾಳಿ, ಸ್ಥಾನಿಕ, ಕೊಟ್ಟಾರಿ, ಭಂಡಾರಿ ಎಂಬೀ ಹೆಸರುಗಳು ಅಧಿಕಾರ ಸೂಚಕವಾದವುಗಳೇ ವಿನಾ ಜಾತಿ  ನಿರ್ದೇಶಕಗಳಲ್ಲ.

(೪) ಗೋವಳರೂ, ಕುರುಬರೂ ಒಂದೇ ಜಾತಿಗೆ ಸೇರಿದವರು. ಕಾಡುಕೊಂಕಣಿಯರು ಗಿರಿಜನರಲ್ಲಿ ಸೇರಿದವರಲ್ಲ.

(೫) ಹಣಬರೂ, ವೀಳ್ಯಕಾರರೂ – ಅತಿ ಪ್ರಾಚೀನ ಜನಪ್ರಭೇದಗಳೆಂಬ ವಿಷಯವು ಇದರಲ್ಲಿ ಕಂಡುಬರುವುದಿಲ್ಲ. ಹಣಬರೆಂದರೆ ಪಣಿಗಳು, ವೀಳ್ಯಕಾರರೆಂದರೆ ಬೆಳ್ಳರು.

(೬) ಕೊಡಗರೂ, ಅರೆಯರೂ, ಮರಾಟಿಯರೂ ಜಾತಿಗಳಲ್ಲ. ಅವು ಪ್ರಾದೇಶಿಕ ಹೆಸರುಗಳಿಂದ ಬಂದ ನಾಮಧೇಯಗಳು. ಅಂತೆಯೇ ಹೊಲದಲ್ಲಿ ಕೆಲಸ ಮಾಡುವವರೆಲ್ಲ ಒಂದು ಪ್ರತ್ಯೇಕ ಜಾತಿಯಾಗಲಾರದು. ಹಳೆಗಾಲದಲ್ಲೂ ಹೊಲದಲ್ಲಿ ಕೆಲಸ ಮಾಡುವವರು ಬೇರೆ ಬೇರೆ ಜಾತಿಗೆ ಸೇರಿದವರಿದ್ದರು.

(೭) ವಿಭಾಗಿಸಲ್ಪಡದ ಜಾತಿಗಳ ಹೆಸರುಗಳಲ್ಲಿ ಅನೇಕ ಹೆಸರುಗಳು ಪದವಿಯನ್ನು  ನಿರ್ದೇಶಿಸುವುವುಗಳಾಗಿವೆ ವಿನಾ, ಜಾತಿಗೆ ಸಂಬಂಧಿಸಿದುವುಗಳಲ್ಲಿ.

ಉದಾ : ದ್ವಿಜ, ಭ್ರಷ್ಟ, ಮಣೆಗಾರ, ತಿರುಮನೆ, ವಡೆಯ, ಜ್ಯಾತಿ, ಕಲ್ಲು ಕ್ಷೇತ್ರವಾಸಿ ಕಲ್ಲು ಇತ್ಯಾದಿ.

(ದಕ್ಷಿಣ ಕನ್ನಡ ಜಿಲ್ಲೆಯ ಗಜೆಟಿಯರ್ ನಲ್ಲಿ ಮಾಡಿದ ವಿಭಾಗಗಳು ಪ್ರಾದೇಶಿಕ ಹಾಗೂ ಭಾಷಾವಾರು ವಿಭಾಗಗಳು. ಅವು ಜಾತಿ ಎನ್ನುವುದು. ಯೋಗ್ಯವಲ್ಲ. ಆದರೂ ನಮ್ಮ ನಾಡಿನಲ್ಲಿ ಹೊರಗಣಿಂದ ಬಂದ ಯಾವ ಯಾವ ಪಂಗಡಗಳು ಸೇರಿಕೊಂಡು, ಬೆರಕೆಯಾಗಿ, ನಾಡಿನ ಜನರಾಗಿ ಪರಿವರ್ತಿಸಲ್ಪಟ್ಟು ಸಮಾಜವನ್ನು ಬೆಳೆಸಿದುವು ಎಂಬುದನ್ನು ಈ ತಖ್ತೆಯು ತಿಳಿಸುತ್ತದೆ).

(೮) ‘ಕನ್ನಡದವರು’ ಎಂಬ ವರ್ಗದಲ್ಲಿ ಸೇರಿಸಲ್ಪಟ್ಟ ಹೆಸರುಗಳೆಲ್ಲವೂ ನಿರ್ದಿಷ್ಟ ಜಾತಿವಾಚಕಗಳಲ್ಲವೆಂದು ತಿಳಿದು ಬರುತ್ತದೆ. ಉದಾ :- ‘ಬಲ್ಲಾಳ’ವೆಂಬ ಮೇಲ್‌ಹೆಸರು ಬ್ರಾಹ್ಮಣರಲ್ಲೂ, ಬಂಟರಲ್ಲೂ ಜೈನರಲ್ಲೂ, ಕಂಡುಬರುತ್ತದೆ. ಇದು ಪದವಿಯನ್ನಾಧರಿಸಿ ಬಂದ ಹೆಸರು. ಅಂತೆಯೇ ‘ಹೆಗ್ಗಡೆ’ ಎಂಬ ನಾಮಧೇಯವು ಬಂಟರಲ್ಲೂ, ಜೈನರಲ್ಲೂ, ಕುರುಬರಲ್ಲೂ, ಗೌಡ ಸಾರಸ್ವತರಲ್ಲೂ, ಬ್ರಾಹ್ಮಣರಲ್ಲೂ ತೋರಿಬರುತ್ತದೆ. ಕುರುಬರ ಒಂದು ವರ್ಗವೇ ಹೆಗ್ಗಡೆ. ಕೊಟ್ಟಾರಿಯು ಜೈನನಾಗಬಹುದು. ಬ್ರಾಹ್ಮಣನಿರಲೂಬಹುದು, ಬಂಟನೂ ಇರಬಹುದು. ಅಂತೆಯೇ ಭಂಢಾರಿಯು ಕೆಲಸಿಯೂ ಆಗಿರಬಹುದು. ಬಂಟನಿರಲೂಬಹುದು ಅಥವಾ ಗೌಡ ಸಾರಸ್ವತನಿರಲೂಬಹುದು. ಅದೇ ರೀತಿಯಲ್ಲಿ ಚೆಟ್ಟಿ ಎಂಬುದನ್ನು ‘ಪದವಿ’ ಹೆಸರಾಗಿ ತಿಳಿಯುವುದುತ್ತಮ. ವೈಶ್ಯವೆಂಬುದು ಜಾತಿ ಹೆಸರಲ್ಲ. ಇನ್ನೂ ಅನೇಕ ದೃಷ್ಟಾಂತಗಳನ್ನು ಕೊಡಬಹುದು.

ತುಳುನಾಡಿನ ಮೂಲಿಗರೆನಿಸುವ ಜನ ಪ್ರಭೇದಗಳು ಯಾ ಬಾತಿಗಳು ವಿಭಾಗಿಸಲ್ಪಡುವುದಾದರೆ ಈ ಕೆಳಗಿನಂತೆ ನಿರ್ಧರಿಸಬಹುದು.

೧) ಬಿಲ್ಲವ (ಉತ್ತರ ಕನ್ನಡದಲ್ಲಿ ಹಳೆ ಪೈಕ)

೨) ಮೊಗೇರ

೩) ಹೆಗ್ಗಡೆ

೪) ಕುಡಿಯರು ಯಾ ಮಲೆ ಕುಡಿಯರು

೫) ನಾಡವರು ಯಾ ಬಂಟರು

೬) ಮಡಿವಾಳ

೭) ಕೆಲಸಿ

೮) ಮೊಯಿಲಿ – ದೇವಾಡಿಗ

೯) ನಲ್ಕೆಯವರು

೧೦) ಬ್ರಾಹ್ಮಣರು, ಜೈನರು.

ಮೇಲ್ಕಾಣಿಸಿದ ವಿವಿಧ ಜಾತಿಗಳು ಈ ಕೆಳಗಿನ ಸಾಂಸ್ಕೃತಿಕ ಹಂತಗಳನ್ನು ಸೂಚಿಸಬಹುದು.

೧) ಪ್ರಥಮ ಹಂತ – ಬಿಲ್ಲವ, ಮೊಗೇರ

೨) ದ್ವಿತೀಯ ಹಂತ – ತುರುವರು, ತುಳುವರು (ಹೆಗ್ಗಡೆ)

೩) ತೃತೀಯ ಹಂತ – ಕುಡಿಯರು

೪) ಚತುರ್ಥ ಹಂತ – ಬಂಟರು, ನಾಡವರು

೫) ಆರ್ಯಿಕರಣ – ಬ್ರಾಹ್ಮಣರು, ಜೈನರು.

ಉಳಿದ ಎಲ್ಲಾ ಜಾತಿಗಳು ಕೊಂಕಣ, ತೆಲುಗು, ದ್ರಾವಿಡ (ತಮಿಳು), ಮಹಾರಾಷ್ಟ್ರ    ಮತ್ತು ಕೇರಳಗಳಿಂದ ತಂಡ, ತಂಡವಾಗಿ, ಹಂತ, ಹಂತಗಳಾಗಿ ತುಳುನಾಡಿಗೆ ಬಂದು ಯಾ ತುಳುನಾಡಿಗೆ ತರಿಸಲ್ಪಟ್ಟು ನೆಲೆನಿಂತವರಾಗಿರುವರು. ಈ ದ್ರಾವಿಡ ದೇಶಗಳ ಪ್ರಭಾವವು ನಮ್ಮ ನಾಡಿನ ಮೇಲೆ ಗಣನೀಯ ರೀತಿಯಲ್ಲಿ ಬೀರಲ್ಪಟ್ಟರೂ, ನಮ್ಮ ನಾಡಿನ ಹಲಕೆಲವು ವೈಶಿಷ್ಟ್ಯಗಳೇ ಅಳಿಯದೆ ಉಳಿದು ಬಂದ ಪಂಗಡಗಳನ್ನು ಪರಿವರ್ತಿಸಿದಂತೆ ಕಂಡುಬರುತ್ತದೆ.