ತುಳುನಾಡಿನಲ್ಲಿರುವ ಬಹಳ ಹಳೆಯ, ಅಂದರೆ ಸು. ೧೪೦೦ ವರ್ಷಗಳ ಹಿಂದಣ, ಶಾಸನಗಳ ಲಿಪಿಯೂ ಭಾಷೆಯೂ (ತುಳುವಿಗೆ ಸ್ವತಂತ್ರ ಲಿಪಿ ಇದ್ದರೂ) ತುಳುವಾಗಿರದೆ ಕನ್ನಡವೇ ಆಗಿರುವುದರಿಂದಲೂ, ಅದಕ್ಕೂ ಮೇಲಾಗಿ ಮತ್ತೂ ಸಾಕಷ್ಟು ಹಿಂದಣ ಮೇಲೆ ಕಂಡಿರುವ ಕ್ರಿ.ಶ. ೨ನೆಯ ಶತಕದ ಗ್ರೀಕ ಪ್ರಹಸನದಲ್ಲಿ ತುಳು ಮಾತುಗಳಲ್ಲದೆ ಕನ್ನಡ ಮಾತುಗಳೇ ಇರುವುದರಿಂದಲೂ, ಈ ದೇಶದ ನಾಡ ನುಡಿ ಅತೀವ ಪ್ರಾಗಾರಭ್ಯ ತುಳು ಭಾಷೆಯೇ ಆಗಿದ್ದರೂ, ರಾಜಭಾಷೆ ಹೇಗೂ ಹಿಂದಿನ ಕಾಲದಿಂದಲೇ ಕನ್ನಡವಾಗಿತ್ತೆಂದು ಒಪ್ಪಿಕೊಳ್ಳಬೇಕು. ಕನ್ನಡ ಲಿಪಿಯಾದರೊ ಅಶೋಕನ ಶಾಸನಗಳು ಕೆತ್ತಲ್ಪಟ್ಟಿರುವ ೨ ಬಗೆಯ ಬರೆಹಗಳಲ್ಲಿ ಒಂದಾದ ಬ್ರಾಹ್ಮೀ ಎಂಬ ಲಿಪಿಯಿಂದ ಹುಟ್ಟಿತೆಂದು ನಿಷ್ಕೃಷ್ಟವಾಗಿ ಗೊತ್ತು ಹಚ್ಚಲ್ಪಟ್ಟಿದೆ.

ಸನಾತನ ಧರ್ಮ

ಈ ಲೇಖದ ಆರಂಭದಲ್ಲಿ ಐತರೇಯ ಬ್ರಾಹ್ಮಣದಿಂದ ಮಾಡಿರುವ ಉದ್ಧಾರದಿಂದ ಆ ಕಾಲಕ್ಕೆ ಸಾಕಷ್ಟು ಹಿಂದಿನಿಂದಲೇ ದಕ್ಷಿಣಾಪಥದಲ್ಲಿ ಆರ್ಯರ ನೆಲೆವೀಡುಗಳು ಇದ್ದುವೆಂದೂ, ಆತಏವ ಸನಾತನ ಧರ್ಮವು ಇಲ್ಲಿ ಪಸರಿಸಿತ್ತು ಹಾಗೂ ಪಸರಿಸುತ್ತಿತ್ತು ಎಂದೂ ತಿಳಿಯುತ್ತದಷ್ಟೇ. ಈಗ, ಹಳೆಯ ಧರ್ಮವು ಎಲ್ಲೆಲ್ಲೆಲ್ಲ ನೆಲತಿದೆಯೊ ಮುಖ್ಯವಾಗಿ ಎಲ್ಲೆಲ್ಲಿ ಪ್ರಬಲವಾಗಿದೆಯೋ, ಅಲ್ಲಲ್ಲಿಗೆ ತಾನೆ ಹೊಸ ಧರ್ಮದ ಪ್ರಚಾರಕರು ಹೋಗಿ, ಆ ಹಳೆಯ ಧರ್ಮದ ಎಡೆಯಲ್ಲಿ ತಮ್ಮ ಹೊಸ ಧರ್ಮವನ್ನು ಬಿತ್ತುತ್ತಿರುವುದೂ ಹಬ್ಬಿಸುತ್ತಿರುವುದೂ ತೀರ ಮನುಷ್ಯ ಸ್ವಭಾವೋಚಿತ ಎಂದು ಬೇರೆ ಹೇಳಬೇಡ. ಅಶೋಕನ ಮೇಲೆ ಕಂಡಿರುವ ಡನೆಯ ಶಿಲಾಲೇಖದಿಂದ ಆತನು ಚೋಳರ, ಪಾಂಡ್ಯರ, ಸಾತಿಯಪುತ್ರರ ಮತ್ತು ಕೇರಳ ಪುತ್ರರ ದೇಶಗಳಲ್ಲಿ –

ಸರ್ವತ್ರ ದೇವಾನಂ ಪ್ರಿಯಸ ಪ್ರಿಯದಸಿನೋ ರಾಞೋ ದ್ವೇ
ಚಿಕೀಛ ಕತಾ ಮನುಸಚಕೀಛಾ ಚ ಪಸುಚಿಕೀಛಾ ಚ

ಅಂದರೆ ದೇವತೆಗಳಿಗೆ ಪ್ರಿಯನಾದ ಪ್ರಿಯದರ್ಶಿ ಎಂಬ ಅಶೋಕ ರಾಜನು ಮನುಷ್ಯರ ಹಾಗೂ ಪಶುಗಳ ಚಿಕಿತ್ಸೆಯನ್ನು ನಡೆಸುವ ಏರ್ಪಾಡನ್ನು ಮಾಡಿದನು ಎಂದು ತಿಳಿಯುವುದರಿಂದ, ಆ ದೇಶಗಳಲ್ಲಿ ಮನುಷ್ಯರಿಗೂ ಪಶುಗಳಿಗೂ ಉಪಯೋಗಿಯಾದ ಚಿಕಿತ್ಸಾಲಯಗಳನ್ನು ನಿರ್ಮಿಸಿದಾತನು ತಾನು ಕೆಯ್ಯೊಂದ ಬೌದ್ಧಧರ್ಮವನ್ನು ಅಲ್ಲಿ ಸಾರಲಿಕ್ಕೂ ತನ್ನ ಧರ್ಮ ಮಹಾಮಾತ್ರರನ್ನು ಪ್ರಾಯಶಃ ಆ ಮುಂಚೆಯೇ ಅಲ್ಲಿಗೆ ಕಳುಹಿಸಿರಬೇಕು, ಅರ್ಥಾತ್ ಆ ದೇಶಗಳಲ್ಲಿ ಬೌದ್ಧ ಧರ್ಮವನ್ನು ಆತನು ಸಾರಿಸುತ್ತಿದ್ದ ಕಾರಣವೇ ಅಲ್ಲಿಯ ಮಂದಿಯ ಸೌಕರ್ಯದ ಬಗ್ಗೆ ಆ ಚಿಕಿತ್ಸಾಲಯಗಳನ್ನು ಅಲ್ಲಲ್ಲಿ ಸ್ಥಾಪಿಸಿರಬೇಕು ಎಂದು ಸುಲಭವಾಗಿ ಅನುಮೇಯಿಸಲಾಗುತ್ತದೆ. ಹಾಗಾದರೆ ಅಶೋಕನ ಕಾಲಕ್ಕೆ ಬಹಳ ಹಿಂದಣಿಂದಲೇ ಅಂದರೆ ಕನಿಷ್ಠ ಪಕ್ಷಕ್ಕೆ ಕ್ರಿ.ಪೂ. ೧೦೦೦ದಿಂದಲೇ, ತುಳುನಾಡಿನಲ್ಲಿ ಸನಾತನ ಧರ್ಮವು ಹಬ್ಬಿಯೇ ಅಲ್ಲ, ಪ್ರಬಲವಾಗಿಯೂ ಇದ್ದಿರಬೇಕು. ಹಾಗೂ ಅದರೊಂದಿಗೆ ಸಹಜವಾಗಿ ಆ ನಾಡಿನ ಸ್ಥಾನೀಯ ವಿವಿಧ ಆರಾಧನೆಗಳೂ ದೇಶಾಚಾರಗಳೂ ಸಂಗಡಿಸಿದ್ದು, ಅವೂ ಕ್ರಮೇಣ ಸನಾತನ ಧರ್ಮದ್ದೇ ಅಂಗವಾಗಿ ಪರಿಣಮಿಸಿ, ಎರಡೂ ಒಡಗೂಡಿ ಅನಿಷ್ಠಿಸಲ್ಪಡುತ್ತಿರಬೇಕು, ಏಕೆಂದರೆ ಸನಾತನ ಧರ್ಮದಲ್ಲಿ ಅಂದೂ ಇಂದೂ ಬೇರೆ ಯಾವ ವಿಶ್ವಾಸವನ್ನೂ ಯಾವ ಆಚಾರವನ್ನೂ ಒಳಕೊಳ್ಳತಕ್ಕಂತೆ ವಿಪುಲವಾದ ಅವಕಾಶ ಇದ್ದೇ ಇದೆ.

ಬೌದ್ಧದರ್ಮ

ಅಶೋಕನು ದಕ್ಷಿಣ ಭಾರತದಲ್ಲಿ ಪಶು – ಮಾನುಷರ ಬಗ್ಗೆ ಚಿಕಿತ್ಸಾಲಯಗಳನ್ನು ನಿರ್ಮಿಸಿದನೇ ಅಲ್ಲ, ಅದರ ಆಯಾ ದೇಶಗಳಲ್ಲಿ ಬೌದ್ಧಧರ್ಮವನ್ನು ಸಾರಲಿಕ್ಕೆ ಥೇರ (=ಸಂ. ಸ್ಥವಿರ)ರೆಂಬ ಮಹಾಮಾತ್ರರನ್ನು, ಅಂದರೆ ಧರ್ಮೋಪದೇಶಕರನ್ನು ಕಳಿಸಿದನೆಂದೂ ಸಿಂಹಲದ್ವೀಪೊದ (Ceylon) ಮಹಾವಂಸ (=ಸಂ. ಮಹಾವಂಶ) ಎಂಬ ಪಾಲಿಭಾಷೆಯ ಐತಿಹಾಸಿಕ ಕಾವ್ಯದಲ್ಲಿ (XII) ಹೇಳಿರುವಲ್ಲಿ ಈ ಎರಡು ಮೂರಾದರೂ ದೇಶನಾಮಗಳಿವೆ.

ಅಪೇಸಯಿ ಮಹಾದೇವತ್ಥೇರಂ ಮಹಿಸಮಂಡಲಂ || ೩ ||
ವನವಾಸಿಂ ಅಪೇಸೇಸಿ ಥೇರಂ ರಕ್ಷಿತ ನಾಮಕಂ |
ತಥಾಪರಾಂತಕಂ ಯೋನ ಧಮ್ಮರಕ್ಷಿತ ನಾಮಕಂ || ೪||

ಅಂದರೆ ಮಹಾದೇವ ಎಂಬ ಧರ್ಮೋಪದೇಶಕನನ್ನು ಮಹಿಷ ಮಂಡಲಕ್ಕೂ (=ಮೈಸೂರು ದೇಶ), ರಕ್ಷಿತನನ್ನು (ಉತ್ತರ ಕನ್ನಡ ಜಿಲ್ಲೆಯ) ಬನವಾಸಿ ದೇಶಕ್ಕೂ, ಯವನನಾದ (ಅಂದರೆ ಗ್ರೀಕ ದೇಶವದನಾದ) ಧರ್ಮರಕ್ಷಿತನನ್ನು (ಠಾಣಾ ಜಿಲ್ಲೆಯಿಂದ ರತ್ನಗಿರಿ ಜಿಲ್ಲೆಯ ಅಥವಾ ಗೋವೆಯ ವರೆಗಣ ಪಶ್ಚಿಮ ಕರಾವಳಿಯ) ಅಪರಾಂತಕ್ಕೂ ಆತನು ಕಳಿಸಿದನು. ತುಳುನಾಡಿಗೆ ಹೀಗೆ ೨ – ೩ ಕಡೆಗಳಲ್ಲೂ ಇಷ್ಟು ನಿಕಟವಾದ ದೇಶಗಳಲ್ಲಿ ಬೌದ್ಧಧರ್ಮದ ಪ್ರಚಾರವಾಗತೊಡಗಿತೆಂದರೆ, ಅದಿನ್ನು ತುಳುನಾಡನ್ನು ಸೇರಲಿಕ್ಕೆ ಶಾನೆ. ಹೊತ್ತು ಬೇಡ. ಹೇಗೂ ಅಶೋಕನ ಕ್ರಿ.ಪೂ. ೩ನೆಯ ಶತಕದಿಂದ ಕ್ರಿ.ಶ. ೧ನೆಯ ಶತಮಾನದೊಳಗೆ ಆ ಧರ್ಮವು ಇಲ್ಲಿ ಕೆಲವೆಡೆಗಳಲ್ಲಾದರೂ ಇದ್ದಿರಬೇಕು.

ಕ್ರಿ.ಶ. ೧ನೆಯ ಶತಮಾನದಲ್ಲಿ ಬೌದ್ಧಧರ್ಮವು ಭಿನ್ನವಾಗಿ ಮಹಾಯಾನವೆಂದೂ ಹೀನಯಾನವೆಂದೂ ಎರಡು ಶಾಖೆಗಳಾದವು. ಮಹಾಯಾನವು ಸನಾತನ ಧರ್ಮದ ಭಗವದ್ಗೀತೆಗೂ, ಅದಕ್ಕಿಂತ ಹೆಚ್ಚಾಗಿ ಶೈವಧರ್ಮಕ್ಕೂ ಋಣಿಯಾಗಿದ್ದು, ಅದರಲ್ಲಿ ಸನಾತನ ಧರ್ಮದೋಪಾದಿಯಲ್ಲಿ ಭಕ್ತಿಗೆ ತುಂಬ ಪ್ರಾಧಾನ್ಯವಿದೆ[1]. ಹೀನಯಾನವು ಭಾರತದಲ್ಲಿ ಪಸರಿಸಲಾಗದೆ ಸಿಂಹಲದ್ವೀಪದಲ್ಲಿ ನೆಲಸಿತಾದರೆ, ಮಹಾಯಾನವು ಭಾರತದಲ್ಲಿ ಅಲ್ಲಲ್ಲೆಲ್ಲ ಹಬ್ಬಿತು. ಮಹಾಯಾನದಲ್ಲಿ ಬೋಧಿಸತ್ವರಿಗೆ ಬುದ್ಧನಿಗಿಂತ ಹೆಚ್ಚಿಗೆ ಅಲ್ಲವಾದರೆ, ಬುದ್ಧನಷ್ಟೇ ಆದರೂ ಪ್ರಾಶಸ್ತ್ಯವಿದೆ. ಬೋಧಿಸತ್ವರೆಂದರೆ ಬುದ್ಧರಾದ ವ್ಯಕ್ತಿಗಳಲಲ. ಈಗಲೂ ಜೀವಂತವಾಗಿರುವ ಹಾಗೂ ಮುಂದಕ್ಕೆ ಬುದ್ಧರಾಗಲಿಕ್ಕಿರುವ ದೇವತಾಕಲ್ಪರಾದ ವ್ಯಕ್ತಿಗಳು. ಆ ಹಲವರಲ್ಲಿ ಪ್ರಸಿದ್ಧರಾದವರೆಂದರೆ ೧. ಮೈತ್ರೇಯ, ೨. ಅವಲೋಕಿತೇಶ್ವರ ಅಥವಾ ಲೋಕೇಶ್ವರ ಮತ್ತು ೩. ಮಂಜುಶ್ರೀ ಅಥವಾ ಮಂಜುಘೋಷ. ತುಳುನಾಡಿನಲ್ಲಿ ಈ ಬೋಧಿಸತ್ತ್ಯರಲ್ಲಿ ಮಂಜುಶ್ರೀಯ (ಹಾಗೂ ಮುಂದೆ ತಿಳಿವಂತೆ ಅವಲೋಕಿತೇಶ್ವರನು) ಆರಾಧನೆ ಬಳಕೆಯಲ್ಲಿ ಇದ್ದಂತೆ, ಆತಏವ ಮಹಾಯಾನ ಬೌದ್ಧಧರ್ಮವು ನೆಲಸಿದ್ದ ನಿದರ್ಶನ ಹೀಗದೆ –

ಮಂಗಳೂರಿನ ಕದಿರೆಯ ದೇವಾಲಯದಲ್ಲಿ ಅರ್ಚಿಸಲ್ಪಡುವ ಶಿವಲಿಂಗದ ಹೆಸರು ಮಂಜುನಾಥ ಎಂದು. ಆದರೆ ಮಂಜುನಾಥ ಎಂಬ ಹೆಸರು ಶ್ರೀ ಶಿವನಿಗೆ ಇದ್ದಿರುವಂತೆ ಯಾವ ಕೋಶದಲ್ಲಿಯೂ ಇಲ್ಲ, ಯಾವ ಪ್ರಾಚೀನ ಶಿವಸಹಸ್ರನಾಮದಲ್ಲಿಯೂ ಇದ್ದೀತೆಂದು ನಾನು ಭಾವಿಸುವುದಿಲ್ಲ. ಅಥವಾ ಹೆಚ್ಚೇಕೆ? ನಾನು ಬಲ್ಲಷ್ಟರ ಮಟ್ಟಿಗೆ ಸನಾತನ ಧರ್ಮದ ಯಾವ ದೇವತೆಗೂ ಮಂಜುನಾಥ ಎಂದು ಹೆಸರಿಲ್ಲ. ಇಡೀ ಭಾರತ ವರ್ಷದಲ್ಲಿ ಮಂಜುನಾಥ ಎಂಬ ಹೆಸರಿನ ಶಿವಲಿಂಗ ಕದಿರೆಯದೊಂದೇ. (ತುಳುನಾಡಿನ ಧರ್ಮಸ್ಥಳದಲ್ಲಿಯ ಶಿವಲಿಂಗದ ಮಂಜುನಾಥ ಎಂದು ಹೆಸರು ಕದಿರೆಯ ಮಂಜುನಾಥನಿಂದಲೇ ಉಂಟಾಯಿತೆಂದು ಮೇಲೆ ಕಂಡಿರುವಷ್ಟೆ.) ಹಾಗಾದರೆ ಅದಕ್ಕೆ ಆ ಹೆಸರು ಹೇಗೆ ಬಂತು? ಎಂದು ವಿಚಾರಿಸಿದರೆ, ಮಂಜುಶ್ರೀಯೂ ಮಂಜುಘೋಷನೂ ಎಂಬ ಬೋಧಿಸತ್ತ್ವನಿಗೆ ಮಾತ್ರ ಮಂಜುನಾಥ ಎಂದೂ ಹೆಸರಿರುವಂತೆ ಮಹಾಯಾನದ ಗ್ರಂಥಗಳಿಂದ ತಿಳಿಯುತ್ತದೆ. ಉದಾ. ನೇಪಾಳದ (Nepal) ಬೌದ್ಧಕವಿ ಅಮೃತಾನಂದನ ‘(ನ್ಯೆಪಾಲೀಯ ದೇವತಾ) ಕಲ್ಯಾಣ ಪಂಚವಿಂಶತಿಕಾ’ ಎಂಬ ಸ್ತೋತ್ರದ ೨೪ನೆಯ ಸ್ರಗ್ಧರೆಯಲ್ಲಿ –

ಶೀರ್ಷಾತ್ ಪ್ರಾಗತ್ಯ ಯೋsಸೌ ಸಹಿತಪರಿಜನಶ್ಚಂದ್ರಹಾಸಾಸಿನಾದ್ರಿಂ
ಛಿತ್ವಾ ಶೋಷೇ ಹ್ರದೇsಸ್ಮಿನ್ ಪುರವರಮಕರೋಲ್ಲೋಕವಾಸಾಯ ರಮ್ಯಮ್ |
ಸ್ವಸ್ಥೀಭೂತಾಬ್ಜಸಂಸ್ಥಂ ಸಕಲ ಜಿನವರಂ ಪ್ರಾಭಜನ್ ಮಂಜುನಾಥಃ
ಕಲ್ಯಾಣಂ ವಃ ಕ್ರಿಯಾತ್ಸ ಕ್ವಚಿದಪಿ ಸರತಾಂ ತೀಷ್ಠತಾಂ ನೌಮ್ಯಹಂ ತಮ್* || ೨೪ ||

ಹಾಗೂ ಮುಂದೆ ತಿಳಿವಂತೆ ಕದಿರೆಯ ಆ ಶಿವಾಲಯದಲ್ಲಿರುವ ಲೋಕೇಶ್ವರ ಎಂಬ ಕಂಚಿನ ಮೂರ್ತಿಯ ಪೀಠದಲ್ಲಿರುವ ಕ್ರಿ.ಶ. ೧೦೬೮ನೆಯ ಶಾಸನದಲ್ಲಿ –

ಶ್ರೀ ಕುಂದವರ್ಮಾ ಗುಣವಾನಾಳುಪೇಂದ್ರೋ ಮಹೀಪತಿಃ |
ಪಾದಾರವಿಂದ ಭ್ರಮರೋ ಬಾಲಚಂದ್ರ ಶಿಖಾಮಣೇಃ || ೬ ||
ಲೋಕೇಶ್ವರಸ್ಯ ದೇವಸ್ಯ ಪ್ರತಿಷ್ಠಾಮಕರೋತ್ಪ್ರಭುಃ |
ಶ್ರೀಮತ್ ಕದಿರಿಕಾ ನಾಮ್ನಿ ವಿಹಾರೇ ಸುಮನೋಹರೇ || ೯ ||

ಎಂದಿರುವಲ್ಲಿ ಆ ದೇವಾಲಯವನ್ನು ವಿಹಾರ ಎಂದರೆ, ವಿಹಾರ ಎಂದು ಬೌದ್ಧರ ದೇವಾಲಯಗಳಿಗೇ ಹೊರತು ಮಿಕ್ಕವರ ದೇವಾಲಯಗಳಿಗೆ ಸರ್ವಥಾ ಹೆಸರಿಲ್ಲ. ಆತಏವ ಕದಿರೆಯ ಶಿವಾಲಯವು ಯಾವೊಮ್ಮೆ ಮಂಜುನಾಥನೆಂಬ ಬೋಧಿಸತ್ತ್ವ ಮಂಜುಶ್ರೀಯದೇ ವಿಗ್ರಹವಿದ್ದ ವಿಹಾರವಾಗಿರಬೇಕೆಂದು ಸ್ವಯಮೇವ ಸಿದ್ಧವಾಗುತ್ತದೆ. ಇದಲ್ಲದೆ ಆ ಶಿವಾಲಯವನ್ನು ಒಳಹೋಗುವಾಗ ಬಲಗಡೆಯಲ್ಲಿ (ಅಲ್ಲಿಯ ಅರ್ಚಕರು ವ್ಯಾಸನ ವಿಗ್ರಹವೆಂಬ) ಬಹಳ ಚೆಲುವಾದ ಒಂದು ಕಂಚಿನ ವಿಗ್ರಹವಿದೆ. ಅದರ ಮೈಯ್ಯಲ್ಲಿ ಒಂದೂ ಆಭರಣವಿಲ್ಲ, ಅದಕ್ಕೆ ಪ್ರಭಾವಳಿ ಇಲ್ಲ; ಅದು ಕೇಶರಚನೆಯಲ್ಲೂ ಇತರ ಎಲ್ಲಾ ವಿಷಯಗಳಲ್ಲೂ ಪ್ರತ್ಯಂಗುಲವೂ ಸಾಕ್ಷಾತ್ ಬುದ್ಧನದೇ ವಿಗ್ರಹ ಎಂಬ ರವಷ್ಟೂ ಸಂಶಯವಿಲ್ಲ. ಕದಿರೆಯ ಗುಡ್ಡದಲ್ಲಿರು ಪಂಚ ಪಾಂಡವರ ಗುಹೆಗಳೆಂಬ ಗವಿಗಳೂ ಅಲ್ಲಿ ಬೌದ್ಧಭಿಕ್ಷುಗಳು ವಾಸಿಸುತ್ತಿದ್ದರೆಂಬುದಕ್ಕೆ ಉತ್ತಮವಾದ ನಿದರ್ಶನವಾಗಿದೆ.

ಕ್ರಿ.ಶ. ೭೧೨ರಲ್ಲಿ ಅರಬರು ಸಿಂಧು ದೇಶವನ್ನು (Sindh) ಗೆದ್ದುಕೊಳ್ಳುವ ಕೊಂಚ ಹಿಂದಿನಿಂದಲೇ ಪಶ್ಚಿಮ ಭಾರತದಲ್ಲಿ ಗ್ಲಾನವಾಗುತ್ತಲಿದ್ದ ಮಹಾಯಾನವು ಆಮೇಲೆ ಬೇಗಬೇಗನೆ ಸಮಗ್ರ ಭಾರತದಿಂದ ನಷ್ಟವಾಯಿತು. ಆತಏವ ಕದಿರೆಯಲ್ಲಿಯ ಮಂಜುಶ್ರೀಯ ವಿಹಾರವು ಕ್ರಿ.ಶ. ೧ರಿಂದ ೬ನೆಯ ಶತಕದೊಳಗೆ ಯಾವೊಂದು ನಿರ್ಮಿತವಾಗಿದ್ದು, ೭ – ೮ನೆಯ ಶತಮಾನದಿಂದ ಆಚಿರೇಣ ತುಳುನಾಡಿನಲ್ಲೂ ಬೌದ್ಧಧರ್ಮವು ನಿಸ್ಯೇಷವಾಗಿ ಅಳಿದುಹೋಗಿ ಆ ವಿಹಾರವು ಹಾಳು ಬೀಳುತ್ತಲೇ, ಆ ವಿಹಾರದಲ್ಲಿ ಮಂಜುಶ್ರೀಯ ವಿಗ್ರವಿದ್ದ ಎಡೆಯಲ್ಲಿ ಮುಂದೆ ತಿಳಿದಂತೆ ಬೌದ್ಧರ ಪ್ರತ್ಯನಂತರದವರು ಶಿವಲಿಂಗವನ್ನು ಪ್ರತಿಷ್ಠಿಸಿರಬೇಕು, ಹಾಗೂ ಮಂಜುಶ್ರೀ ಅಥವಾ ಮಂಜುಘೋಷನೆಂದು ಲೋಕಪ್ರಸಿದ್ಧವಾದ ಆ ಬೋಧಿಸತ್ತ್ವನ ‘ಶ್ರೀ’ ಹಾಗೂ ‘ಘೋಷ’ ಎಂಬ ಪರಪದಗಳುಳ್ಳ ಹೆಸರುಗಳು ಶಿವನಾಮಧೇಯವಾಗ ಸಲ್ಲದೆ, ಅಥವಾ ಅವನ್ನು ಶಿವನಾಮಧೇಯವಾಗತಕ್ಕಂತೆ ಯೋಜಿಸಿಕೊಳ್ಳಲಾರದೆ, ‘ನಾಥ’ ಎಂಬ ಪರಪದವುಳ್ಳ ಹೆಸರುಗಳಾದರೊ ಶಿವನಿಗೆ ಬೇಕಾದಷ್ಟು ಇದ್ದು (ಉದಾ. ಕೇದಾರನಾಥ, ವಿಶ್ವನಾಥ, ವೈದ್ಯನಾಥ, ಸೋಮನಾಥ ಇಇ), ಮಂಜುಶ್ರೀಯ ಮಂಜುನಾಥ ಎಂಬ ಹೆಸರು ಆ ಕಾರಣ ಉಭಯಥಾ ನೇರಾಗಿ ಹವಣಿಸುವುದರಿಂದ ಆ ಶಿವಲಿಂಗಕ್ಕೆ ಮಂಜುನಾಥ ಎಂದು ಹೆಸರಿಕ್ಕಿರಬೇಕು ಎಂದು ಖಂಡಿತವಾಗಿ ನಿರ್ಧರಿಸಲಾಗುತ್ತದೆ.[2]ಹೀಗೆ ಮಂಗಳೂರಿನಲ್ಲಿ ಹೆಚ್ಚು ಕಡಿಮೆ ೧೨೦೦ ವರ್ಷಗಳ ಹಿಂದೆ ವರೆಗೆ ಕೆಲವಾದರೂ ಶತಮಾನಗಳ ಮಟ್ಟಿಗೆ ಮಹಾಯಾನ ಬೌದ್ದಧರ್ಮವು ಅಸ್ತಿತ್ವದಲ್ಲಿ ಇತ್ತೆಂದು ವ್ಯಕ್ತವಾಗುತ್ತದೆ. ತುಳುನಾಡಿನಲ್ಲಿ ಮಿಕ್ಕೆಲ್ಲಿಯೂ ಆ ಧರ್ಮವಿತ್ತೊ ಎಂದು ಕಂಡುಹಿಡಿಯತಕ್ಕಂತೆ ಈವರೆಗೆ ಕುರುಹು ಕಾಣಿಸಿಲ್ಲ.

ಜೈನಧರ್ಮ

ಜೈನಧರ್ಮವು ದಕ್ಷಿಣಾಪಥಕ್ಕೆ ಇಳಿತಂದುದನ್ನು ಕುರಿತು ಬರೆಯಲ್ಪಟ್ಟಿರುವ ಜೈನ ಗ್ರಂಥಗಳಲ್ಲಿ (‘ವೊಡ್ಡಾರಾಧನೆ’ಯನ್ನು ಬಿಟ್ಟರೆ) ಪ್ರಾಯಶಃ ಮೊತ್ತಮೊದಲನೆಯದಾದ, ಕ್ರಿ.ಶ. ೯೩೧ರಲ್ಲಿ ರಚಿತವಾದ ಹರಿಷೇಣ ಸಂಸ್ಕೃತ ಬೃಹತ್ಕಥಾಕೋಶದಲ್ಲಿ ಜೈನರ ಅಂತಿಮ ತೀರ್ಥಂಕರನಾದ ಶ್ರೀ ಮಹಾವೀರನ ನಿರ್ವಾಣವಾದ ಕೆಲಕಾಲಾನಂತರ ಚತುರ್ಥ ಶ್ರುತಕೇವಲಿಯಾದ ಗೋವರ್ಧನಚಾರ್ಯನು ಪೂರ್ವ ಭಾರತದ ಪೌಂಡ್ರವರ್ಧನ ದೇಶದಲ್ಲಿಯ ಕೋಟಿಪುರ ಎಂಬ ಊರಿನ ಭದ್ರಬಾಹು ಎಂಬಾತನಿಗೆ ದೀಕ್ಷೆ ಇತ್ತನೆಂದೂ, ತನ್ನ ಗುರುವಿನ ಮರಣಾನಂತರ ಪಂಚಮ ಶ್ರುತಕೇವಲಿಯಾದ ಭದ್ರಬಾಹು ಜೈನ ಸಂಘವನ್ನು ಒಡಗೂಡಿ ಅಲ್ಲಲ್ಲಿ ವಿಹರಿಸುತ್ತ ಕೊನಗೆ ಜೈನ ಶ್ರಾವಕನಾದ ಚಂದ್ರಗುಪ್ತನೆಂಬ ಅರಸನು ಆಳುತ್ತಿದ್ದ ಮಧ್ಯಭಾರತದ ಉಜ್ಜಯಿನಿಗೆ ಬಂದು ಅಲ್ಲಿ ಕೆಲಕಾಲ ಉಳಕೊಂಡನೆಂದೂ, ತಾನು ನಿಮಿತ್ತಜ್ಞನಾಗಿದ್ದ ಕಾರಣ ಆ ದೇಶದಲ್ಲಿ ೧೨ ವರ್ಷಗಳ ಕ್ಷಾಮವು ಬೇಗನೆ ಒದಗಲಿಕ್ಕಿದೆ ಎಂದು ಆತನು ಮುಂಗಂಡು ತಾನು ಅಲ್ಲಿಯೇ ಉಳಕೊಂಡು ತನ್ನೊಂದಿಗಿದ್ದ ಸಂಘವನ್ನು ದಕ್ಷಿಣ ಭಾರತಕ್ಕೆ ಹೋಗುವಂತೆ ಆಜ್ಞಾಪಿಸಿದನೆಂದೂ, ಆಗ್ಗೆ ಅರಸನಾದ ಚಂದ್ರಗುಪ್ತನು ಭದ್ರಬಾಹುವಿನಿಂದ ದೀಕ್ಷೆಗೊಂಡು ವಿಶಾಖಾಚಾರ್ಯನೆಂದು ಹೆಸರಾಂತು ಆ ಸಂಘದೊಡನೆ ಕರ್ನಾಟಕದ ಪ್ರಾಂತವಾದ ಪುನ್ನಾಟ ದೇಶಕ್ಕೆ ತೆರಳಿದನೆಂದೂ, ಆ ಬರಗಾಲ ತೀರುತ್ತಲೆ (ಚಂದ್ರಗುಪ್ತ -) ವಿಶಾಖಾಚಾರ್ಯನು ಆ ಸಂಘದೊಂದಿಗೆ ಮಧ್ಯದೇಶಕ್ಕೆ ಮರಳಿದನೆಂದೂ, ತನ್ಮಧ್ಯೇ ಭದ್ರಬಾಹು ಸಮಾಧಿ ಮರಣ ಹೊಂದಿದನೆಂದೂ, ಹೀಗೆ ಭದ್ರಬಾಹುವಿನ ಚರಿತ್ರವನ್ನು ಹೇಳಿರುವಲ್ಲಿ ಜೈನಧರ್ಮವು ಕರ್ಣಾಟಕಕ್ಕೆ ಬಂದ ವಿಷಯವನ್ನೂ ಪ್ರಾಸಂಗಿಕವಾಗಿ ನಿವೇದಿಸಿರುತ್ತದೆ. ಇದೇ ಆಖ್ಯಾಯಿಕೆಯುಳ್ಳ ಹಾಗೂ ಹರಿಷೇಣನಿಗಿಂತ ಬಹಳ ಈಚೆಯ ಇತರ ಗ್ರಂಥಗಳಲ್ಲಿ ಆ ಕಥೆಯ ಪಾಂಡುಲೇಖವು ಹೆಚ್ಚು ಕಡಿಮೆ ಇದೇ ರೀತಿಯಾಗಿದ್ದರೂ, ಕೆಲವು ವಿಷಯಗಳು ವ್ಯತಿರಿಕ್ತವಾಗಿವೆ. ಅವಲ್ಲಿ ಮುಖ್ಯವಾದ ವ್ಯತ್ಯಾಸಗಳು ಇವೆರಡು -(೧) ಭದ್ರಬಾಹು ಉಜ್ಜಯಿನಿಯಲ್ಲಿ ಅಲ್ಲ, ಕರ್ಣಾಟಕಕ್ಕೆ ಬರುವ ದಾರಿಯಲ್ಲಿ ಕಾಲವಾಗುತ್ತಾನೆ; (೨) ಚಂದ್ರಗುಪ್ತನೂ ವಿಶಾಖಾಚಾರ್ಯನೂ ತೀರ ಅನ್ಯಾನ್ಯರಾದ ಇಬ್ಬರು ವ್ಯಕ್ತಿಗಳಲ್ಲದೆ ಒಬ್ಬನಲ್ಲ; ಅವರಲ್ಲಿ ವಿಶಾಖಾರ್ಯನು ಭದ್ರಬಾಹುವಿನ ಆಜ್ಞಾನುಸಾರವಾಗಿ ಜೈನಸಂಘವನ್ನು ಚೋಳ-ಪಾಂಡ್ಯ ದೇಶಗಳಿಗೆ ಕೊಂಡೊಯ್ದು ಬರಗಾಲ ಮುಗಿದ ಬಳಿಕ ಮಧ್ಯ ದೇಶಕ್ಕೆ ಮರಳುತ್ತಾನೆ. ಚಂದ್ರಗುಪ್ತನಾದರೊ ಭದ್ರಬಾಹುವಿನ ಬಳಿಯಲ್ಲೇ ಇದ್ದುಕೊಂಡು ಆತನನ್ನು ಆರಯ್ಸುತ್ತ ಆತನ ಕಾಲಾನಂತರವೂ ಆತನ ಪದಲಾಂಛನಗಳನ್ನು ಪೂಜಿಸುತ್ತಾ ತಾನೂ ಅಲ್ಲಿಯೇ ಕಾಲವಾಗುತ್ತಾನೆ. ಕ್ರಿ.ಶ. ಸು. ೬೫೦ರದೆಂಬ ಶ್ರವಣಬೆಳ್ಗೊಳದ ಶಾಸನದಲ್ಲಿ[3] ಹಾಗೂ ಕ್ರಿ.ಶ. ಸು. ೯೦೦ರವೆಂಬ ಶ್ರೀರಂಗಪಟ್ಟಣದ ಶಾಸನದಲ್ಲಿ[4], ಆತಏವ ಹರಿಷೇಣನ ಬೃಹತ್ಕಥಾಕೋಶಕ್ಕಿಂತ ಹಿಂದಣ ಆ ಲೇಖಗಳಲ್ಲಿ, ಭದ್ರಬಾಹುವಿನ ಹೆಸರೂ ಇದೆ, ಚಂದರಗುಪ್ತ ಮುನಿಯ ಹೆಸರೂ ಇದೆ, ಅವರ ಚರಣ ಮುದ್ರಾಂಕಿತವಾದ ಕೞ್ಬಪ್ಪು ಎಂಬ ಶ್ರವಣಬೆಳ್ಗೊಳದ ಹೆಸರೂ ಇದೆ.

ಆದರೆ ಭದ್ರಬಾಹುವಿನ ಶಿಷ್ಯನಾಗಿದ್ದ ಉಜ್ಜಯನಿಯ ಅರಸನಾದ ಚಂದ್ರಗುಪ್ತನನ್ನು ಮೌರ್ಯ ವಂಶಸ್ಥಾಪಕನಾದ ಅದೇ ಹೆಸರಿನ ಸಮ್ರಾಟ್ ಚಂದ್ರಗುಪ್ತನೊಂದಿಗೆ ಸಮೀಕರಿಸಿರುವುದನ್ನು ಮಾತ್ರ ಸರ್ವಥಾ ಒಪ್ಪಲಾಗುವುದಿಲ್ಲ. ಏಕೆಂದರೆ – (೧) ನಂದರ ರಾಜ್ಯಬಾರವನ್ನು ಕೆಡವಿ ಅವರ ಪಾಟಲೀಪುತ್ರ ಅಥವಾ ಪಾಟಲೀಪುರದ ಸಿಂಹಾಸನವನ್ನೇರಿದ ಆ ಮೌರ್ಯ ಸಾರ್ವಭೌಮನು ಆಬಳಿಕ ಹೇಗೂ ಪಾಟಲೀಪುರದಲ್ಲಿ ಆಳುತ್ತಿದ್ದನಷ್ಟೇ, ಆ ಮುಂಚೆ (ಯುವರಾಜನಾಗಿಯೇ ಆದರೂ?) ಎಲ್ಲಿಯೂ ಆಳಿಲ್ಲದ ಆತನು ಉಜ್ಜಯಿನಿಯಲ್ಲಿ ಎಂದಿಗೂ ಆಳುತ್ತಿರಲಿಲ್ಲ; (೨) ಬುದ್ಧನಿಗಿಂತ ಹಿಂದಣ ಕಾಲದಿಂದ ಕ್ರಿ.ಶ. ಸು. ೬೫೦೦ವರೆಗೆ ಉತ್ತರ ಭಾರತದಲ್ಲಿ ಆಗಿಹೋದ ಸಾಮ್ರಾಜ್ಯಗಳ ಪರಂಪರೆಯನ್ನು ಹೇಳಿರುವ ಹಾಗೂ ಸಂಸ್ಕೃತದಿಂದ ತಿಬ್ಬತೀಯ (Tibetan) ಭಾಷೆಯಲ್ಲಿ ಕ್ರಿ.ಶ. ಸು. ೧೦೬೦ರಲ್ಲಿ ಅನುವದಿಸಲ್ಪಟ್ಟಿರುವ, ಆತಏವ ಪ್ರಾಯಶಃ ಕ್ರಿ.ಶ. ೯ ಅಥವಾ ೧೦ನೆಯ ಶತಕದಲ್ಲಿ ರಚಿತವಾಗಿರಬೇಕಾದ ಮಹಾಯಾನ ಶಾಖೆಯ ‘ಆರ್ಯ ಮಂಜುಶ್ರೀ ಮೂಲಕಲ್ಪ’ ಎಂಬ ಸಂಸ್ಕೃತ ಗ್ರಂಥದ[5] ೫೩ನೆಯ ಪಟಲವಿಸರದಲ್ಲಿ ಮೌರ್ಯವಂಶ ಸ್ಥಾಪಕನಾದ ಚಂದ್ರಗುಪ್ತ ಚಕ್ರವರ್ತಿಯ ಅಂತ್ಯಕಾಲವನ್ನು ಕುರಿತು ಹೀಗೆಂದದೆ –

ನಂದೋsಪಿ ನೃಪತಿಃ ಶ್ರೀಮಾಂ(ನ್) ಪೂರ್ವಕರ್ಮಾಪರಾಧತಃ |
ವಿರಾಗಯಾಮಾಸ ಮಂತ್ರೀಣಾಂ ನಗರೇ ಪಾಟಲಾಹ್ವಯೇ || ೪೩೪ ||
ತಸ್ಯ ರಾಜ್ಞೋsಪರ ಖ್ಯಾತಃ ಚಂದ್ರಗುಪ್ತೋ ಭವಿಷ್ಯತಿ || ೪೩೯ ||
ಮಹಾಯೋ(ಭೋ)ಗೀ ಸತ್ಯಸಂಧಶ್ಚ ಧರ್ಮಾತ್ಮಾ ಸ ಮಹೀಪತಿಃ || ೪೪೦ ||
ಅಕಲ್ಯಾಣಮಿತ್ರಮಾಗಮ್ಯ ಕೃತಂ ಪ್ರಾಣಿವಧಂ ಬಹು |
ತೇನ ಕರ್ಮವಿಪಾಕೇನ ವಿಷಸ್ಫೋಟೈಃ ಸ ಮೂರ್ಛಿತಃ || ೪೪೧ ||
ಅರ್ಧರಾತ್ರೇ ರುದಿತ್ವಾಸೌಪುತ್ರಂ ಸ್ಥಾಪಯೇ (ಪುತ್ರಮಸ್ಥಾಪಯ)ದ್ಫುವಿ|
ಬಿಂದುವಾ(ಸಾ)ರ ಸಮಾಕ್ಯಾತಂ ಬಾಲಂ (ಚ?) ದುಷ್ಟ ಮಂತ್ರಿಣಮ್ || ೪೪೨ ||
ತತೋsಸೌ ಚಂದ್ರಗುಪ್ತಸ್ಯ (ಶ್ಚ) ಚ್ಯುತಃ ಕಾಲಗತೋ ಭುವಿ |
ಪ್ರೇತಲೋಕಂ ತದಾ ಲೇಭೇ ಗತಿಂ ಮಾನುಷವರ್ಜಿತಾಮ್ || ೪೪೩ ||

ಇದರಿಂದ ನಂದನೆಂಬ ಅರಸನ ಬಳಿಕ ಆತನ ಪಾಟಲನಗರಕ್ಕೆ ಅಂದರೆ ಪಾಟಲಪುರಕ್ಕೆ ತಾನು ಅರಸನಾದ ಚಂದ್ರಗುಪ್ತನು ವಿಷದ ಬೊಕ್ಕೆಗಳು ಎದ್ದೊ ಇಲ್ಲವೆ ಸಿಡುಬಾಗಿಯೊ (ವಿಸ್ಫೋಟಕ = ಸಿಡುಬು) ಮೂರ್ಛಿತನಾಗಿ, ತಾನಿನ್ನು ಬದುಕೆನೆಂದು ಅರಿತು ಸರಿರಾತ್ರಿಯಲ್ಲಿ ತನ್ನ ಮಗನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ತಾನು ಕಾಲವಾಗಿ ಪ್ರೇತಲೋಕಕ್ಕೆ ಸರಿದನೆಂದು ತಿಳಿಯುವುದರಿಂದ, ಆತನು ರಾಜ್ಯಭಾರದಲ್ಲಿ ಇದ್ದಿರುವಂದೇ, ಆತಏವ ಪಾಟಲೀಪುರದಲ್ಲಿಯೇ ಕಾಲವಾಗಿರಬೇಕು. ಈ ಕಾರಣ ಭದ್ರಬಾಹುವಿನ ಜತೆಯಲ್ಲಿ ಅಥವಾ ಆತನ ಆದೇಶದಿಂದ ಕರ್ಣಾಟಕಕ್ಕೆ ಬಂದ, ಹೇಗೂ ಭದ್ರಬಾಹುವಿನ ಸಮಕಾಲಿಕನಾಗಿದ್ದ ಚಂದ್ರಗುಪ್ತನು ಸರ್ವಥಾ ಮೌರ್ಯವಂಶ ಸ್ಥಾಪಕನಾದ ಸನಾಮ ಸಮ್ರಾಜನಲ್ಲ.

ಕರ್ಣಾಟಕಕ್ಕೆ ಬಂದ ಜೈನಸಂಘವು ಉಜ್ಜಯಿನಿಯಿಂದ ಹೊರಟಿತೆಂದು ಮಾತ್ರವಲ್ಲ, ಅಲ್ಲಿಯ ಅರಸನಾದ ಚಂದ್ರಗುಪ್ತನ ಜತೆಯಲ್ಲಿ ತಾನೆ ಕರ್ಣಾಟಕಕ್ಕೆ ಬಂತೆಂಬ ಕಾರಣ, ಅದು ಪ್ರಾಯಶಃ ರಾಜಾಶ್ರಯದಲ್ಲಿ ಇತ್ತ ಕಡೆಗೆ ಬಂದಿರಬೇಕೆಂದು ಊಹಿಸಬಹುದು. ಈಗ ಮೇಲಣ ಜೈನಗ್ರಂಥಗಳಲ್ಲಿಯ ಆ ಕಥೆಯನ್ನು ಒತ್ತಟ್ಟಿಗಿಟ್ಟು, ಅವೆಲ್ಲವುಗಳಿಗಿಂತಸ ಹಿಂದಣ, ಹಾಗೂ ಕ್ರಿ.ಶ. ಸು. ೬ನೆಯ ಶತಕದಿಂದ ಈಚೆಯದಲ್ಲವೆಂದು ನಾನು ಅನ್ಯತ್ರ ನಿಶ್ಚಯಿಸಿರುವ,[6] ಬಹಳ ಹಳೆಯ ಕನ್ನಡದಲ್ಲಿ ಬರೆಯಲ್ಪಟ್ಟಿರುವ ವೊಡ್ಡಾರಾಧನೆ ಎಂಬ ಜೈನ ಗದ್ಯ ಗ್ರಂಥದಲ್ಲಿಯ ಭದ್ರಬಾಹು ಭಟ್ಟಾರರ ಕಥೆಯಲ್ಲಿ ೪ನೆಯ ಶ್ರುತಕೇವಲಿಯಾದ ಗೋವರ್ಧನಾಚಾರ್ಯನು ಪುರವರ್ಧನ ದೇಶದಲ್ಲಿಯ ಕುಂಡಿನೀ ನಗರದ ಭದ್ರಬಾಹುವಿಗೆ ದೀಕ್ಷೆ ಇತ್ತನೆಂದೂ, ತನ್ನ ಗುರುವಿನ ಮರಣಾನಂತರ ೫ನೆಯ ಶ್ರುತಕೇವಲಿಯಾದ ಭದ್ರಬಾಹು ಹಿರಿದಾದ ಜೈನ ಋಷಿ ಸಮುದಾಯದೊಂದಿಗೆ ಉಜ್ಜಯನಿಗೆ ಬಂದನೆಂದೂ, ಆಗ್ಗೆ ಮೌರ್ಯ ಸಮ್ರಾಜನಾದ ಚಂದ್ರಗುಪ್ತನ ಮೊಮ್ಮಗನಾದ ಅಶೋಕ ಚಕ್ರವರ್ತಿಯ ಮೊಮ್ಮಗನಾದ ಸಂಪ್ರತಿ ಚಂದ್ರಗುಪ್ತನೆಂಬ ಅರಸನು ಉಜ್ಜಯನಿಯಲ್ಲಿ ಆಳುತ್ತಿದ್ದನೆಂದೂ, ಆತನು ಒಮ್ಮೆ ಕಂಡ ೧೬ ದುಃಸ್ವಪ್ನಗಳನ್ನು ಭದ್ರಬಾಹು ಅರ್ಥವಿಸಿ ಆ ಮಧ್ಯದೇಶದಲ್ಲಿ ಬೇಗನೆ ೧೨ ವರ್ಷಗಳ ಬರಗಾಲ ಬರಲಿಕ್ಕಿದೆ ಎಂದು ಅರಸನಿಗೆ ಅರುಹುತ್ತಲೆ, ಸಂಪ್ರತಿ ಚಂದ್ರಗುಪ್ತನು ಅಂದೇ ತನ್ನ ಮಗನಿಗೆ ಪಟ್ಟ ಕಟ್ಟಿ ತಾನು ಭದ್ರಬಾಹುವಿನಿಂದ ದೀಕ್ಷೆಯಾಂತು, ಆತನು ದಕ್ಷಿಣಾಪಥಕ್ಕೆ ಹೋಗಬೇಕೆಂದು ಬೋಧಿಸಿದ ಮೇರೆಗೆ ಆತನ ಜತೆಯಲ್ಲಿ ಹೊರಟು, ಕೊನೆಗೆ ಕಱ್ಬಪ್ಪು ಎಂಬ ಈಗಣ ಶ್ರವಣಬೆಳ್ಗೊಳಕ್ಕೆ ಬಂದಾಗ ಭದ್ರಬಾಹು ತನ್ನ ಮರಣ ಸಮೀಪಿಸಿತೆಂದು ಅರಿತು ತನ್ನೊಂದಿಗೆ ಇದ್ದ ಜೈನಸಂಘವನ್ನು ವಿಶಾಖಾಚಾರ್ಯನ ಜತೆಯಲ್ಲಿ ದ್ರವಿಡ ದೇಶಕ್ಕೆ ಅಟ್ಟಿದನೆಂದೂ, ಆಗ್ಗೆ ಚಂದ್ರಗುಪ್ತ ಮುನಿ ಎಂದಾದ ಸಂಪ್ರತಿ ಚಂದ್ರಗುಪ್ತನಾದರೊ ಅಲ್ಲಿಂದ ಮೆಟ್ಟು ಮಿಸುಕದೆ ಗುರುವಿನ ಬಳಿಯಲ್ಲೇ ಉಳಕೊಂಡು ಗುರುವನ್ನು ಶುಶ್ರೂಷಿಸುತ ಹಾಗೆಯೇ ಕೆಲ ಕಾಲಾನಂತರ ಭದ್ರಬಾಹು ದಿವಂಗತನಾಗುತ್ತಲೇ ಆ ಚಂದ್ರಗುಪ್ತ ಮುನಿ ಅವನ ನಿಸಿದಿಗೆಯನ್ನು ವಂದಿಸುತ್ತ ಅಲ್ಲಿದ್ದಾಗ ತಮಿಳುನಾಡಿಗೆ ಹೋದ ಸಂಘವು ಕಱ್ಬಪ್ಪಿಗೆ ಮರಳಿ ಅಲ್ಲಿಂದ ಮಧ್ಯ ದೇಶಕ್ಕೆ ತೆರಳಿತೆಂದೂ, ಚಂದ್ರಗುಪ್ತ ಮುನಿ ಆಮೇಲೆ ಸಂನ್ಯಸನ ವಿಧಾನದಿಂದ ಸಮಾಧಿಯನ್ನು ಸಾಧಿಸಿದನೆಂದೂ ಹೇಳಿದೆ.

ಹಾಗಾದರೆ ಪೂರ್ವತಮವಾದ ಈ ಕಥೆಯಿಂದ ಭದ್ರಬಾಹುವಿನ ಜತೆಯಲ್ಲಿ ಕರ್ಣಾಟಕಕ್ಕೆ ಇಳಿತಂದ ಜೈನಸಂಘದೊಂದಿಗೆ ಬಂದ ಅರಸನು ಮೌರ್ಯವಂಶ ಸ್ಥಾಪಕನಾದ ಚಂದ್ರಗುಪ್ತನಲ್ಲ, ಅವನ ಮೊಮ್ಮಗ ಅಶೋಕನ ಮೊಮ್ಮಗನಾದ ಉಜ್ಜಯನಿಯ ಸಂಪ್ರತಿ ಚಂದ್ರಗುಪ್ತನೆಂದು ನಿಷ್ಕೃಷ್ಟವಾಗಿ ತಿಳಿಯುತ್ತದೆ. ಮತ್ತೂ ಅಶೋಕನು ಕಾಲವಾಗುತ್ತಲೆ ಅವನ ಒಬ್ಬ ಮೊಮ್ಮಗನಾದ ದಶರಥನೆಂಬವನು ಅವನ ಉತ್ತರಾಧಿಕಾರಿಯಾಗಿ ಪಾಟಲೀಪುರದಲ್ಲಿ ಪಟ್ಟಾಭಿಷಿಕ್ತನಾದಾಗ, ಅವನ ಮತ್ತೊಬ್ಬ ಮೊಮ್ಮಗನಾದ ಸಂಪ್ರತಿ ಎಂಬಾತನು ಪ್ರಾಯಶಃ ಅಶೋಕನ ಆಳಿಕೆಯಿಂದಲೇ ತೊಡಗಿ ರಾಜಪ್ರತಿನಿಧಿಯಾಗಿ ಉಜ್ಜಯನಿಯಲ್ಲಿ ಆಳುತ್ತಿದ್ದನೆಂದೂ, ಅಶೋಕನು ಹೇಗೆ ಬೌದ್ಧಧರ್ಮ ಪ್ರವರ್ತಕನಾಗಿದ್ದನೊ ಹಾಗೆಯೇ ಸಂಪ್ರತಿ ಜೈನಧರ್ಮ ಪ್ರವರ್ತಕನಾಗಿದ್ದನೆಂದೂ ಇತಿಹಾಸದಿಂದ ತಿಳಿಯುತ್ತದೆ. [7] ಅಶೋಕನ ಮೊಮ್ಮಗನಾದ ಈ ಸಂಪ್ರತಿ ಎಂಬಾತನೂ ವೊಡ್ಡಾರಾಧನೆಯಲ್ಲಿ ಅಶೋಕನ ಮೊಮ್ಮಗನೆಂದಿರುವ ಸಂಪ್ರತಿ ಚಂದ್ರಗುಪ್ತನೂ ಒಬ್ಬನೇ ಎಂದು ಬೇರೆ ಹೇಳಬೇಕೆಂದಿಲ್ಲ.

ಅಶೋಕನು ಕ್ರಿ.ಪೂ. ೨೩೯ – ೨೩೮ರಲ್ಲಿ ಕಾಲವಾದನೆಂಬುದರಿಂದ, ಅದಕ್ಕೂ ಮುಂಚಿನಿಂದ ಅಲ್ಲವಾದರೆ ಆವಂದಿನಿಂದಲಾದರೂ ಉಜ್ಜಯಿನಿಯಲ್ಲಿ ಆಳತೊಡಗಿದ ಸಂಪ್ರತಿ ಚಂದ್ರಗುಪ್ತನು ಕ್ರಿ.ಪೂ.ಸು. ೨೩೦ರಿಂದ ಈಚೆ ಭದ್ರಬಾಹುವಿಂದ ಚಂದ್ರಗುಪ್ತ ಮುನಿಯಾಗಿ ದೀಕ್ಷೆಗೊಂಡು ಆತನ ಜತೆಯಲ್ಲಿ ಹೊರಟು ಕ್ರಮೇಣ ೨ – ೩ ವರ್ಷಗಳಲ್ಲಿ ಕರ್ಣಾಟಕಕ್ಕೆ ಬಂದಿರಬೇಕೆಂದು, ಅಂದರೆ ಜೈನಧರ್ಮವು ಹೇಗೂ ಕ್ರಿ.ಪೂ. ೩ನೆಯ ಶತಕ ಮುಗಿವ ಮುಂಚೆಯೇ ಕರ್ಣಾಟಕಕ್ಕೆ ಬಂದಿರಬೇಕೆಂದು ನಿಶ್ಚಯಿಸಬಹುದು.[8] ಆತಏವ ಆ ಮುಂದೆ ಕ್ರಿ.ಪೂ. ೨ ಅಥವಾ ೧ನೆಯ ಶತಕದೊಳಗೆ ಕರ್ಣಾಟಕದಲ್ಲಿ ಜೈನಧರ್ಮ ದಿನೇ ದಿನೇ ವೃದ್ಧಿಯಾಗುತ್ತ ಬಂದಿತೆಂದರೆ, ಅಲ್ಲಿಂದ ೧೦೦ – ೨೦೦ ವರ್ಷಗಳೊಳಗೆ, ಅಂದರೆ ಹೆಚ್ಚಾದರೆ ಕ್ರಿ.ಶ. ೨ನೆಯ ಶತಕದೊಳಗೆ ತುಳುನಾಡಿನಲ್ಲೂ ಬಂದು ನೆಲೆಸಿರಬೇಕೆಂದು ಭಾವಿಸಬಹುದು.

ನಾಥಪಂಥ

ಪಡುಮೊಗವಾಗಿರುವ ಕದಿರೆಯ ಶ್ರೀ ಮಂಜುನಾಥ ದೇವಾಲಯವನ್ನು ಒಳಹೋಗುವಾಗ ಎಡಗಡೆಯಲ್ಲಿ ಮೂಡುಮೊಗವಾಗಿ ಇರಿಸಿರುವ ೩ ಮೋರೆಗಳೂ, ೬ ಕೆಯ್ಗಳೂ ಉಳ್ಳ, ಪದ್ಮಾಸನದಲ್ಲಿ ಮಂಡಿಸಿರುವ ಬಹಳ ಸುಂದರವಾದೊಂದು ಕಂಚಿನ ವಿಗ್ರಹವಿದೆ[9]. ಅಲ್ಲಿಯ ಅರ್ಚಕರು ಅದನ್ನು ಬ್ರಹ್ಮನ ವಿಗ್ರಹವೆನ್ನುತ್ತಾರೆ. ಅದರ ವಕ್ಷಃಸ್ಥಲದಲ್ಲಿಯೂ ತೋಳುಗಳಲ್ಲಿಯೂ ಮಣಿಕಟ್ಟುಗಳಲ್ಲಿಯೂ ಅನೇಕ ಆಭರಣಗಳಿವೆ. ಕೊರಳಲ್ಲಿ ಯಜ್ಞೋಪವೀತವೂ ಇದೆ, ಹಣೆಯಲ್ಲಿ ತಿಲಕವೂ ಇದೆ. ಅದರ ಮೇಲ್ಗೆಯ್ಗಳಲ್ಲಿ ತಾವರೆಯ ಮೊಗ್ಗುಗಳಿವೆ, ಕೆಳಗಡೆಯ ಬಲಗೈಯನ್ನು ವರದ ಮುದ್ರೆಯಲ್ಲಿ ಬಲ ಮೊಳಕಾಲಲ್ಲಿ ಮಡಗಿದೆ, ಎಡಗೈ ವ್ಯಾಖ್ಯಾನ ಮುದ್ರೆಯನ್ನೂ ಪ್ರದರ್ಶಿಸುತ್ತದೆ. ತಲೆಯಲ್ಲಿ ಜಟೆ ಇದ್ದು ಅದನ್ನು ತ್ರಿವಳಿಯಾಗಿ ಮಕುಟದಂತೆ ಕಟ್ಟಿದೆ. ಆ ವಿಗ್ರಹದ ಹೆಗಲಿನ ಹಿಂಗಡೆಯ ಪ್ರಭಾವಳಿ ಅದರ ತಲೆಗಳನ್ನು ಬಳಸಿ ಬರುತ್ತದೆ. ಆ ಪ್ರಭಾವಳಿಯ ಎರಡೂ ಪಕ್ಕಗಳಲ್ಲಿ ಬೇರೆ ಎರಡು ಮೂರ್ತಿಗಳಿವೆ. ಅವಲ್ಲಿ ಒಂದು ಗಂಡು, ಒಂದು ಹೆಣ್ಣು; ಅವು ಆ ಪ್ರಧಾನ ವಿಗ್ರಹದ ಅನುಚರರಾಗಿರಬೇಕು. ವಿಶೇಷವೆಂದರೆ, ಆ ಮೂಲ ವಿಗ್ರಹದ ಜಟಾಮಕುಟದಲ್ಲೂ ಪ್ರಬಾವಳಿಯಲ್ಲೂ ಜನಿವಾರ ತೊಟ್ಟು, ಪದ್ಮಾಸನವನ್ನು ಕಟ್ಟಿ, ಕೆಯ್ಗಳನ್ನು ಮಡಿಲಲ್ಲಿ ಒಂದರ ಮೇಲೆ ಒಂದಿಟ್ಟು ಧ್ಯಾನಾಸಕ್ತನಾಗಿ ಕುಳಿತಿರುವ ಒಬ್ಬನೇ ಯೋಗಿಯ ಅನ್ಯಾನ್ಯ ೨ ಚಿಕ್ಕ ಮೂರ್ತಿಗಳಿವೆ.

ಆ ಪ್ರತಿಮೆಯ ಪೀಠದಲ್ಲಿ ಗ್ರಂಥಾಕ್ಷರಗಳಲ್ಲಿ ಕೆತ್ತಿರುವ ೯ ಶ್ಲೋಕಗಳುಳ್ಳ ೪ ಪಂಕ್ತಿಯದೊಂದು ಸಂಸ್ಕೃತ ಶಾಸನವಿದೆ.[10]ಅದರ ೬ನೆಯ ಹಾಗೂ ಕೊನೆಯ ೯ನೆಯ ಶ್ಲೋಕಗಳಿಂದ ಚಂದ್ರಮೌಳೀಶ್ವರನಾದ ಶ್ರೀ ಶಿವನ ಭಕ್ತನಾದ ಕುಂದವರ್ಮನೆಂಬ ಆಳುಪ ವಂಶೀಯ ಅರಸನು ಲೋಕೇಶ್ವರನೆಂಬ ದೇವ ಆ ಮೂರ್ತಿಯನ್ನು ಕದಿರೆ ಎಂಬ ಅಥವಾ ಕದಿರೆಯ ಮನೋಹರವಾದ ವಿಹಾರದಲ್ಲಿ ಪ್ರತಿಷ್ಠಿಸಿದನೆಂದು ವ್ಯಕ್ತವಾಗುತ್ತದೆ –

ಶ್ರೀ ಕುಂದವರ್ಮಾ ಗುಣವಾನಾಳುಪೇಂದ್ರೋ ಮಹೀಪತಿಃ |
ಪಾದಾರವಿಂದ ಭ್ರಮರೋ ಬಾಲಚಂದ್ರ ಶಿಖಾಮಣೇಃ || ೬||
ಲೋಕೇಶ್ವರಸ್ಯ ದೇವಸ್ಯ ಪ್ರತಿಷ್ಠಾಮಕರೋತ್ಪ್ರಭುಃ |
ಶ್ರೀಮತ್ ಕದಿರಿಕಾ ನಾಮ್ನಿ ವಿಹಾರೇ ಸುಮನೋಹರೇ || ೯ ||

ಅದರ ಪ್ರತಿಷ್ಠಾಕಾಲವನ್ನು ಕುರಿತು ಅದೇ ಶಾಸನದಲ್ಲಿ ಹೀಗದೆ –

ಕಲೌ ವರ್ಷ ಸಹಸ್ರಾಣಾಮತಿಕ್ರಾಂತೇ ಚತುಷ್ಟಯೇ |
ಪುನರಬ್ದ ಗತೇ ಚೈವಾಷ್ಟ ಷಷ್ಟ್ಯಾ ಸಮನ್ವಿತೇ || ೭ ||
ಗತೇಷು ನವ ಮಾಸೇಷು ಕನ್ಯಾಯಾಂ ಸಂಸ್ಥಿತೇ ಗುರೌ|
ಪಶ್ಚಿಮೇಹನಿ ರೋಹಿಣ್ಯಾಂ ಮುಹೂರ್ತ್ತೇ ಶುಭಲಕ್ಷಣೇ || ೮ ||

ಅಂದರೆ ಕಲಿಯುಗದ ೪೦೬೮ ವರ್ಷಗಳು ಕಳೆದು ೪೦೬೯ನೆಯ ವರ್ಷ ನಡೆಯುತ್ತಿದ್ದಾಗ, ಗುರು ಕನ್ಯಾರಾಶಿಯಲ್ಲಿ ಇದ್ದಾಗ, ೯ ತಿಂಗಳು ಮುಗಿದು ೧೦ನೆಯ ತಿಂಗಳು ಸಲುತ್ತಿರುವಾಗ, ರೋಹಿಣೀ ನಕ್ಷತ್ರದಂದಿನ ಸಾಯಂಕಾಲದ ಹೊತ್ತಿನಲ್ಲಿ ಆ ಪ್ರತಿಷ್ಠೆಯಾಯಿತು. ಆದರೆ ಕಲಿಯುಗದ ೪೦೬೮ ವರ್ಷಗಳು ಕಳೆದು ೪೦೬೯ನೆಯ ವರ್ಷವಾದ ಕರಇ.ಶ. ೯೬೭ – ೬೮ರಲ್ಲಿ, ೯೬೭ರ ಮೇ ತಿಂಗಳಿಂದ ೯೬೮ರ ಮೇ ತಿಂಗಳವರೆಗೆ ಗುರು ಕನ್ಯಾರಾಶಿಯಲ್ಲಿ ಇದ್ದಿರಲಿಲ್ಲ. ಅಲ್ಲಿಂದ ೭ ರಾಶಿಗೆ ಮುಂದೆ ಮೇಷರಾಶಿಯಲ್ಲಿ ಇದ್ದುದರಿಂದ ಈ ಒಕ್ಕಣೆಯಲ್ಲಿ ನಿಶ್ಚಯವಾಗಿ ಎಲ್ಲಿಯೋ ತಪ್ಪಿರಬೇಕು. ಈಗ ಆವಂದಿನ ಗ್ರಂಥಾಕ್ಷರದಲ್ಲಿ ಗ-ಕಾರಕ್ಕೂ ಶ-ಕಾರಕ್ಕೂ ಭಾರಿ ರೂಪಸಾದೃಶ್ಯವಿರುವುದರಿಂದ, ಆ ಶಾಸನದ ೭ನೆಯ ಶ್ಲೋಕದಲ್ಲಿ –

ಪುನರಬ್ಬ ಗತೇ ಚೈವಾಷ್ಟಷಷ್ಟ್ಯಾ ಸಮನ್ವಿತೇ || ೭ ||

ಎಂದಿರುವಲ್ಲಿ ‘ಗತೇ’ ಎಂಬುದನ್ನು ಪ್ರಾಯಶಃ ‘ಶತೇ’ ಎಂಬುದರ ಬದಲಾಗಿ ತಪ್ಪಾಗಿ ಕೊರೆದಿರಬೇಕೆಂದು ಸಾಹಜಿಕವಾಗಿ ಹೊಳೆಯುತ್ತದೆ. ಆ ಮೇರೆಗೆ ಆ ಗ-ಕಾರವನ್ನು ಶ-ಕಾರವಾಗಿ ಮಾರ್ಪಡಿಸುತ್ತಲೆ, ಆ ಚರಣದ ಪಾಠವು –

ಪುನರಬ್ದ ಶತೇಚೈವ ಅಷ್ಟಷಷ್ಟ್ಯಾ[11] ಸಮನ್ವಿತೇ || ೭ ||

ಎಂದಾಗಿ, ಆ ಪ್ರತಿಷ್ಠೆ ಕಲಿಯುಗದ (೪೦೬೮) ವರ್ಷಗಳು ಕಳೆದ ಮೇಲಣ ೪೧೬೯ನೆಯ ವರ್ಷದಲ್ಲಿ = ಕ್ರಿ.ಶ. ೧೦೬೭ – ೧೦೬೮ರಲ್ಲಿ ಆಯಿತೆಂದು ವ್ಯಕ್ತವಾಗುತ್ತದೆ. ಕ್ರಿ.ಶ. ೧೦೬೭ರ ಅಗೋಸ್ತಿನಿಂದ ೧೦೬೮ರ ಅಗೋಸ್ತಿನವರೆಗೆ ಗುರು ಕನ್ಯಾರಾಶಿಯಲ್ಲೇ ಇದ್ದುದರಿಂದ, ಆ ವರ್ಷದ ೧೦ನೆಯ ತಿಂಗಳಲ್ಲಿ, ಅಂದರೆ ಸೌರ ಮಕರಮಾಸದಲ್ಲಿ (=ಚಾಂದ್ರ ಮಾಘ ಮಾಸದಲ್ಲಿ) ರೋಹಿಣೀ ನಕ್ಷತ್ರವಿದ್ದಂದು ಆದ ಆ ಪ್ರತಿಷ್ಠೆ ಕ್ರಿ.ಶ. ೧೦೬೮ರ ಜನವರಿ ೧೬ನೆಯ ತಾರೀಕು (ಮಾಘ ಶುದ್ಧ ೯) ಬುಧವಾರ ಆಯಿತೆಂದು ಸಿದ್ಧವಾಗುತ್ತದೆ.[12]

ಈ ಶಾಸನದಲ್ಲಿ ಆ ವಿಗ್ರಹವನ್ನು ಲೋಕೇಶ್ವರ ದೇವನೆಂದು ಹೇಳಿದೆಯಲ್ಲ? ಲೋಕೇಶ್ವರನೆಂದರೆ ಯಾರು? ಲೋಕೇಶ್ವರನೆಂದು ಸನಾತನ ಧರ್ಮದ ಬ್ರಹ್ಮ, ವಿಷ್ಣು ಹಾಗೂ ಶಿವ, ಇವರಲ್ಲಿಯ ಪ್ರತ್ಯೇಕ ದೇವನಿಗೆ ಹೆಸರಿದ್ದರೂ[13]ಈ ಪ್ರತಿಮೆಯಲ್ಲಿ ರೂಪಿತವಾದ ದೇವತೆಯಾದರೊ ಬ್ರಹ್ಮನೂ ಅಲ್ಲ, ವಿಷ್ಣುವೂ ಅಲ್ಲ, ಶಿವನೂ ಅಲ್ಲ. ಏಕೆಂದರೆ ಬ್ರಹ್ಮನಾದರೆ ಇದಕ್ಕೆ ೪ ಮೋರೆ ಇರುತ್ತಿತ್ತು. ವಿಷ್ಣುವಾದರೆ ಮೋರೆಯೊಂದೇ ಇದ್ದು ಕೈ ೪ ಇರುತ್ತಿತ್ತು. ಶಿವನಾದರೆ ಒಂದೊ ಅಯ್ದೊ ಮೋರೆಗಳು ಇರುತ್ತಿತ್ತು. ಹಾಗೂ ತ್ರಿಮೂರ್ತಿಯಾಗಿದ್ದ ಪಕ್ಷದಲ್ಲಿ ೪ ಕೆಯ್ಗಳಿದ್ದು, ಅವಲ್ಲಿ ಆಯಾ ದೇವತೆಯ ಒಂದೊಂದು ಲಾಂಛನದಂತೆ ಒಂದರಲ್ಲಿ ಬ್ರಹ್ಮನ ಕಮಂಡಲವೂ, ಇನ್ನೊಂದರಲ್ಲಿ ವಿಷ್ಣುವಿನ ಚಕ್ರವೂ. ಮತ್ತೊಂದರಲ್ಲಿ ಶಿವನ ತ್ರಿಶೂಲವೂ ಇರಬೇಕಾಗಿತ್ತು. ಇದಕ್ಕೆ ಹಾಗೆ ಏನೂ ಇಲ್ಲದೆ, ಚಂದ್ರಲೇಖೆ ಇಲ್ಲದ ಜಟಾಮಕುಟವೂ ಇದೆ, ೬ ಕೆಯ್ಗಳೂ ಇವೆ, ಅವಲ್ಲಿಯ ೨ ಕೆಯ್ಗಳು ಕಮಲದ ಮುಗುಳುಗಳನ್ನು ಹಿಡಕೊಂಡಿವೆ. ಮತ್ತೆರಡರಲ್ಲಿ ಒಂದು ಕೈ ಬೌದ್ಧ ದೇವತೆಗಳಂತೆ ವ್ಯಾಖ್ಯಾನ ಮುದ್ರೆಯಲ್ಲಿದೆ.

ಆದರೆ ಇದು ಬುದ್ಧನ ವಿಗ್ರಹವೂ ಅಲ್ಲ. ಏಕೆಂದರೆ ಬುದ್ಧನ ಯಾವ ಮೂರ್ತಿಯಲ್ಲೂ ಒಂದಕ್ಕಿಂತ ಹೆಚ್ಚು ಮುಖಗಳು ಇಲ್ಲ, ಎರಡಕ್ಕಿಂತ ಹೆಚ್ಚು ಕೆಯ್ಗಳೂ ಇಲ್ಲ, ಮೈಯಲ್ಲಿ ಒಂದೇ ಒಂದಾದರೂ ಆಭರಣವೂ ಇಲ್ಲ, ಅದರ ಕೇಶರಚನೆಯೂ ಈ ವಿಧವಾಗಿ ಮಕುಟಾಕೃತಿಯಾಗಿಯೂ ಇಲ್ಲ. ಇದೆಲ್ಲಕ್ಕಿಂತ ಮೇಲಾಗಿ, ತ್ರಿಮೂರ್ತಿಯ ಯಾವ ದೇವತೆಯ ಮೂರ್ತಿಯಲ್ಲಿಯೂ, ಹಾಗೆಯೇ ಬುದ್ಧನ ಯಾವ ಮೂರ್ತಿಯಲ್ಲಿಯೂ ಈ ವಿಗ್ರಹದ ಜಡೆಯಲ್ಲಿ ಹಾಗೂ ಪ್ರಭಾವಳಿಯಲ್ಲಿ ಇರುವಂಥಾ ಆ ಯೋಗಿಯ ಚಿಕ್ಕ ಮೂರ್ತಿಯೂ ಸರ್ವಥಾ ಇಲ್ಲ. ಇರಲೂ ಇಲ್ಲ.ಲೋಕೇಶ್ವರನ ವಿಗ್ರಹವಿರುವುದೇ ಕೋಣೆಯಲ್ಲಿ ಒಳಹೋಗುವಾಗ ಬಲಗಡೆಯಲ್ಲಿ ಪ್ರಭಾವಳಿ ಇಲ್ಲದಿರುವ ವ್ಯಾಸ (ದೆಂಬ) ವಿಗ್ರಹದ ಜಡೆಯಲ್ಲಿ ಈ ಬಗೆಯ ಚಿಕ್ಕ ಮೂರ್ತಿ ಇಲ್ಲ. ಅದರ ಬಲಗೈ ವ್ಯಾಖ್ಯಾನ ಮುದ್ರಯಲ್ಲಿದೆ, ಎಡಗೈಯ್ಯನ್ನು ಪದ್ಮಾಸನ ಕಟ್ಟಿಕೊಂಡಿರುವ ಕಾಲುಗಳಲ್ಲಿ ಮಡಗಿದೆ. ಅದು ಸ್ವಯಂ ಬುದ್ಧನ ವಿಗ್ರಹವೆಂದು ಕಂಡಿತವೇ ಸರಿ.

 

[1] Kem : Mannual of Indian Buddhism (KIB), ಪು. ೧೨೨ ಮತ್ತು ೧೨೪.

* ಅರ್ಥ – ಯಾವಾತನು ತನ್ನ ಪರಿಜನರಿಂದ ಒಡಗೂಡಿ ಶೀರ್ಷ (ಪರ್ವತ)ದಿಂದ ಬಂದು ತನ್ನ ಚಂದ್ರಹಾಸ (=ಖಡ್ಗ)ದಿಂದ ಪರ್ವತವನ್ನು ಛೇದಿಸಿ, ಬತ್ತಿಹೋದ ಸರೋವರದಲ್ಲಿ ವಾಸಿಸಲಿಕ್ಕೆ ರಮ್ಯವಾದ ಉತ್ತಮ ಪಟ್ಟಣವನ್ನು ನಿರ್ಮಿಸಿ, ತನಗೆ ತಾನೇ ಆಧಾರವಾಗಿರುವ ಕಮಲದಲ್ಲಿ ಮಂಡಿಸಿರುವ ಜಿನ (=ಬುದ್ಧ)ರೆಲ್ಲರಲ್ಲಿ ಶ್ರೇಷ್ಠನಾದವನನ್ನು ಪೂಜಿಸಿದನೊ, ಆ ಮಂಜುನಾಥನು (ಅಂದರೆ ಮಂಜುಶ್ರೀ ಅಥವಾ ಮಜುಘೋಷನೆಂಬ ಬೋಧಿಸತ್ತ್ವನು) ನೀವು ಎತ್ತ ಸರಿಯುತ್ತಿದ್ದರೂ ಎಲ್ಲಿ ನಿಂತಿದ್ದರೂ ನಿಮಗೆ ಕಲ್ಯಾಣವನ್ನು ಮಾಡಲಿ! ನಾನು ಆತನನ್ನು ವಂದಿಸುತ್ತೇನೆ.

[2] ಈ ಕುರಿತು ಕೂಲಂಕಷವಾಗಿ ತಿಳಿಯಬೇಕೆಂದುಳ್ಳವರು ಮಂಗಳೂರಿನ ‘ಪ್ರಭಾತ’ ವಿಶೇಷಾಂಕದಲ್ಲಿ (೧೯೬\೪೭) ಪ್ರಕಟವಾದ ‘ಕದಿರೆಯ ಮಂಜುನಾಥ’ ಎಂಬ ನನ್ನ ಲೇಖನವನ್ನು (ಪು. ೨೬-೩೨) ಓದುವುದು.

[3] E.C.II ಶ್ರವಣಬೆಳ್ಗೊಳ ೩೧.

[4] E.C.III, ಶ್ರೀರಂಗಪಟ್ಟಣ ೧೪೭ ಮತ್ತು ೧೪೮.

[5] Trivandrum Sanskrit Series, ೮೪, ಆರ್ಯ ಮಂಜುಶ್ರೀ ಮೂಲಕಲ್ಪ (ತೃತೀಯ ಭಾಗ, ಪು. ೬೧೨ – ೬೧೩.

[6] ಮೂರು ಉಪನ್ಯಾಸಗಳು (ಧಾರವಾಡ), ಪು. ೧೧೧ – ೧೧೫.

[7] CHI.I, ಪು. ೧೬೬; Early History of India, ಪು. ೨೦೨ -೨೦೩; Vincent Smith : Asoka ಪು. ೨೨೬;Oxford History of India, ಪು. ೧೧೭.

[8] ‘ಕರ್ಣಾಟಕಕ್ಕೆ ಜೈನಧರ್ಮದ ಆಗಮನ’ ವನ್ನು ವಿಸ್ತಾರವಾಗಿ ತಿಳಿಯಬೇಕೆಂದಿರುವವರು ‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ಯಲ್ಲಿ ಸಂಪುಟ ೨೬, ಪುಟ ೧ – ೨೧ ಮತ್ತು ೧೦೮ -೧೪೪) ಪ್ರಕಟವಾದ ಅದೇ ಹೆಸರಿನ ನನ್ನ ಲೇಖನವನ್ನು ನೋಡುವುದು.

[9] ಈ ವಿಗ್ರಹದ ಚಿತ್ರದ ಬಗ್ಗೆ Madras Epigraphical Report for 1931ರಲ್ಲಿ ೧ನೆಯ ಚಿತ್ರವನ್ನೂ (Plate I, No.1) ಶ್ರೀ ಶ್ರೀ ಗಣಪತಿ ಅಯ್ಗಳರ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ದ ೭೦ನೆಯ ಪುಟದಲ್ಲಿಯ ಚಿತ್ರವನ್ನೂ ನೋಡುವುದು.

[10] SII, VII, ನಂ. ೧೯೧.

[11] ‘ಚೈವಾಷ್ಟ ಷಷ್ಟ್ಯಾ’ ಎಂದಿದ್ದರೆ ಈ ಶ್ಲೋಕದ ಪ್ರಸ್ತಾರದಲ್ಲಿ ಒಂದು ಅಕ್ಷರ……. ಯಾಗುವುದರಿಂದ ಅದರ ಸಂಧಿ ಬಿಡಿಸಿ, ಅದನ್ನು ‘ಚೈವ ಅಷ್ಟಷಷಷ್ಟ್ಯಾ’ ಎಂದು ವಿಂಗಡಿಸಬೇಕು.

[12] ಪುಣೆಯ (Poona) ‘New Indian Antiquary’ ಯಲ್ಲಿ ಪ್ರಕಟವಾಗಲಿಕ್ಕಿರುವ Date of Gorakhanah ಎಂಬ ನನ್ನ ಇಂಗ್ಲೀಷು ಲೇಖದಲ್ಲಿ ಕದಿರೆಯಲ್ಲಿರುವ ಈ ಮೂರ್ತಿಯನ್ನೂ, ಈ ಶಾಸನವನ್ನೂ, ನಾಥಪಂಥವು ಮೊದಲಾದುದನ್ನು ಕುರಿತು ಕೂಲಂಕಷವಾಗಿ ಹೇಳಿರುತ್ತೇನೆ.

[13] ಶಬ್ದಕಲ್ಪದ್ರುಮ ಭಾಗ IV (ಯ-ವ) ಪು. ೨೩೧ – ೩೨; ‘ಲೋಕನಾಥ’, ‘ಲೋಕೇಶ’ ಮತ್ತು ‘ಲೋಕೇಶ್ವರ’ಗಳನ್ನು ನೋಡಿ.