ತುಳು ಚಳುವಳಿಯ ಬಗೆಗೆ ನಮ್ಮವರಲ್ಲಿ ಅನೇಕರಿಗೆ ತಪ್ಪು ಅಭಿಪ್ರಾಯಗಳಿವೆ. ತುಳುನಾಡ್ ಪ್ರಾಂತದ ರಚನೆ ಆಡಳಿತ ಹಾಗೂ ಆರ್ಥಿಕ  ನೆಲೆಯಲ್ಲಿ ಅಸಾಧ್ಯ ಎಂಬುದಾಗಿ ರಾಜಕೀಯ ವಲಯದಲ್ಲಿ ನಮ್ಮ ಚಳುವಳಿಯ ವಿರುದ್ಧ ಸೊಲ್ಲು ಕೇಳಿಬರುತ್ತಿದೆ. ತುಳು ಭಾಷೆ ಹಾಗೂ ಸಂಸ್ಕೃತಿಯ ಪುನರುಜ್ಜೀವನ ಅರ್ಥಹೀನ ಹಾಗೂ ಶಕ್ತಿಯ ದುರುಪಯೋಗ; ಈ ಶಕ್ತಿಯನ್ನು ಜನೋಪಯೋಗಿ ಕನ್ನಡದ ಮೇಲ್ಮೆಗಾಗಿ ಬಳಸಿಕೊಳ್ಳಬಹುದೆಂದು ವಾದಿಸಲಾಗುತ್ತಿದೆ. ಇಂತಹ ವಾದಗಳ ಪೊಳ್ಳುತನವನ್ನು ಬೆಳಕಿಗೆ ತರುವುದೇ ಈ ಲೇಖನದ ಉದ್ದೇಶ.

‘ತುಳುನಾಡ್‌’ ಎಂಬ ಪದವೇ ಕೆಲವೊಂದು ಆಸಕ್ತ ಚಳುವಳಿಕಾರರ ಕೃತಕ ಸೃಷ್ಟಿ ಎನ್ನಲಾಗುತ್ತಿದೆ. ಹಲವು ಶತಮಾನಗಳ ಕಾಲ ಇಲ್ಲಿ ತುಳು ಅರಸರು ಆಳೊತ್ತಿಗೆ ನಡೆಸಿದುದು  ಇತಿಹಾಸ ಓದಿದವರೆಲ್ಲರಿಗೂ ಗೊತ್ತಿದ್ದ ಸಂಗತಿ. ಕನ್ನಡ ಅರಸರುಗಳಾದ ವಿಜಯನಗರ  ಹಾಗೂ ಇಕ್ಕೇರಿ ನಾಯಕರ ಆಡಳಿತದಲ್ಲೂ ತುಳು ನಾಡಿಗೆ ಪ್ರತ್ಯೇಕ ಅಸ್ತಿತ್ವವನ್ನು ನೀಡಲಾಗಿತ್ತು. ಆದರೆ ತುಳುವಿನ ಪ್ರತ್ಯೇಕ ಅಸ್ತಿತ್ವವನ್ನು  ಹತ್ತಿಕ್ಕಿದ ಕೆಲಸ ನಡೆದದ್ದು ಬ್ರಿಟಿಷ್‌ಕಾಲದಲ್ಲಿ.

ತುಳು ಚಳವಳಿಗೆ ಮತೀಯ ಬಣ್ಣ ಹಚ್ಚಲಾಗುತ್ತಿದೆ. ತುಳು ಭಾಷೆ ಯಾವುದೇ ಮತದಾರರ ಗುತ್ತಿಗೆ ಅಲ್ಲ. ಬ್ರಾಹ್ಮಣರು, ಬ್ರಾಹ್ಮಣೇತರರು, ಹಿಂದುಗಳೂ, ಹಿಂದುವೇತರರು ತಮ್ಮ ದಿನನಿತ್ಯದ ವ್ಯವಹಾರವನ್ನು ಈ ಭಾಷೆಯಲ್ಲೇ ನಡೆಸುತ್ತಿರುವುದು ಹಗಲಿನಷ್ಟೇ ಸತ್ಯ. ಇದು ಮತೀಯ ಚಳುವಳಿ ಅಲ್ಲ; ಭಾಷಾ ಚಳುವಳಿ ಎಂಬುದನ್ನು ಎಲ್ಲರ ಗಮನಕ್ಕೆ ತರುತ್ತಿದ್ದೇನೆ.

ತುಳು, ಈ ಜಿಲ್ಲೆಯ ಬಹುಸಂಖ್ಯಾತರ ತಾಯಿನುಡಿ ಎಂಬ ಕಾರಣಕ್ಕಾಗಿ ತುಳುನಾಡ್‌ಪ್ರಾಂತದ ರಚನೆಯನ್ನು ನಾನು ಬೆಂಬಲಿಸುತ್ತೇನೆ. ಇಲ್ಲಿನ ಅನೇಕರು ಆಡಳಿತ ಭಾಷೆಯಾದ ಕನ್ನಡವನ್ನು ಪೂರ್ಣವಾಗಿ ಗ್ರಹಿಸರು; ಆಡಲೂ ಆರರು. ಸಾರ್ವಜನಿಕ ರಂಗದಲ್ಲಿ ಕನ್ನಡ ಭಾಷಾ ವ್ಯವಹಾರ ಅವರಿಗೆ ತೊಡಕೇ ಸರಿ. ೧೯೨೧ರ ಜನಗಣತಿಯಂತೆ ತುಳುವರ ಸಂಖ್ಯೆ ೫ ಲಕ್ಷ ೩೦ ಸಾವಿರ. (೧೯೭೧ರ ಜನಗಣತಿಯಂತೆ ಸು. ೧೨ ಲಕ್ಷ ಸಂ.) ಇಂದಿಗೂ ಬಹು ಸಂಖ್ಯೆಯ ತುಳುವರು ಮುಂಬಯಿ, ಮದರಾಸು, ಪ್ರಾಂತಗಳಲ್ಲೇ ವಾಸಿಸುತ್ತಾರೆ. ಕನ್ನಡ, ಕೊಂಕಣಿ, ಮಲೆಯಾಳ ಭಾಷೆಯನ್ನಾಡುವವರ ಸಂಖ್ಯೆ ದಿನೇ ದಿನೇ ಜಿಲ್ಲೆಯಲ್ಲಿ ಹೆಚ್ಚುವಂತೆ ತುಳುವರ ಸಂಖ್ಯೆ ಹೆಚ್ಚುತ್ತಿಲ್ಲ. ಇದಕ್ಕೆ ಕಾರಣಗಳನ್ನು ಹೀಗೆ ಊಹಿಸಬಹುದು: (೧) ಹೊರನಾಡಿನ ತುಳುವರು ತಾವು ಕನ್ನಡಿಗರೆಂದು ಕರೆಯಿಸಿಕೊಳ್ಳಲು ಬಯಸುತ್ತಿರುವುದು. (೨) ತುಳುವರು ತಮ್ಮ ಮನೆಯೊಳಗೆ ತುಳು ಭಾಷೆ ಆಡುವುದನ್ನು ಮರೆತಿರುವುದರ ಪರಿಣಾಮವಾಗಿ ಈ ಭಾಷೆ ಸಾಂಸ್ಕೃತಿಕವಾಗಿ ಬಡವಾಗುವುದರೊಂದಿಗೆ ರಾಜಕೀಯವಾಗಿ ಸಂಪೂರ್ಣವಾಗಿ ಮೂಲೆಗೆ ಸಂದಿದೆ. (೩) ಬಾಸೆಲ್ ಮಿಶನಿನ ಹೆಸರು ‘ಕರ್ನಾಟಕ ಮಿಶನ್’ ಎಂಬುದಾಗಿ ಪರಿವರ್ತಿತಗೊಂಡ ಹಿನ್ನೆಲೆಯಲ್ಲಿ ಬಹುಮಂದಿ ತಮ್ಮ ತಾಯಿನುಡಿಯನ್ನು ತುಳುವಿನಿಂದ ಕನ್ನಡಕ್ಕೆ ತಿರುಗಿಸಿಕೊಂಡಿರುವುದು. (೪) ತುಳುವರು ರೋಮನ್‌ಕೆಥೋಲಿಕರಾಗಿ ಮತಾಂತರಗೊಂಡಾಗ ತಮ್ಮ ತಾಯಿನುಡಿಯನ್ನು ಕೊಂಕಣಿಗೆ ಪರಿವರ್ತಿಸಿಕೊಳ್ಳುವುದು. ಮುಸ್ಲಿಮರಾಗಿ ಮತಾಂತರಗೊಂಡಾಗ ಹಿಂದೂಸ್ಥಾನಿ ಅಥವಾ ಮಲೆಯಾಳಂ ಆಡುವುದು. ಇಷ್ಟೆಲ್ಲಾ ತೊಡಕುಗಳನ್ನು ಎದುರಿಸಿಯೂ ತುಳುವರ ಸಂಖ್ಯೆ ೧೦ ಲಕ್ಷವನ್ನು ಮೀರಿದೆ. ಜಿಲ್ಲೆಯ ಕನ್ನಡಿಗರೇತರರೂ ಜನಸಾಮನ್ಯರ ಜತೆಯಲ್ಲಿ ಕಲೆಯಬೇಕಾಗಿ ಬಂದಾಗ ಅನಿವಾರ್ಯವಾಗಿ ತುಳುವನ್ನು ಕಲಿಯಬೇಕಾಗಿ ಬರುತ್ತದೆ. ೧೦ ಲಕ್ಷ ಮಂದಿ ಆಡುವ ಜನರಿಗೆ ಪ್ರತ್ಯೇಕ ಪ್ರಾಂತವನ್ನು ಬೇಡುವುದು ತಪ್ಪಾಗಲಾರದು ಎಂಬುದು ನನ್ನ ಭಾವನೆ. ಭಾರತ ಭೂಖಂಡದ ವಿಭಿನ್ನ ಭಾಷೆಗಳನ್ನು ಆಡುವವರಲ್ಲಿ ತುಳುವರಿಗೆ ೨೧ನೇ ಸ್ಥಾನ ಬರುತ್ತಿರುವುದು ಗಮನಾರ್ಹ ಸಂಗತಿ.

ಕನ್ನಡಕ್ಕಿಂತ ಬೇರೆಯಾಗಿ ನಿಲ್ಲುವ ತುಳು ಪಂಚದ್ರಾವಿಡಗಳಲ್ಲಿ ಒಂದು. ಅನೇಕರು ತುಳುವರಿಗೆ ತನ್ನದೇ ಆದ ಲಿಪಿಯಿಲ್ಲ ಎಂದು ಭಾವಿಸಿದಂತಿದೆ. ಇದು ಒಪ್ಪತಕ್ಕದ್ದಲ್ಲ. ಕನ್ನಡ ಹಾಗೂ ತೆಲುಗು ಲಿಪಿಗಳಲ್ಲಿ ಸಾಮ್ಯವಿದ್ದರೂ ಹೇಗೆ ಅವುಗಳಿಗೆ ಪ್ರತ್ಯೇಕ ಅಸ್ತಿತ್ವವಿದೆಯೋ ಹಾಗೇಯೇ ಮಲೆಯಾಳಂನ್ನು ಹೋಲುವ ಆದರೆ ಕೆಲವೊಂದು ವಿಶಿಷ್ಟ ವ್ಯತ್ಯಾಸವನ್ನು ಹೊಂದಿರುವ ತುಳು ಲಿಪಿಗೆ ಪ್ರತ್ಯೇಕ ಅಸ್ತಿತ್ವವನ್ನು ವಿದ್ವಾಂಸರು ನೀಡಬೇಕಾಗಿದೆ. ತುಳು ಭಾಷೆಯಲ್ಲಿ ಸಾಹಿತ್ಯವಿಲ್ಲ ಎಂದು ಜನ ಭಾವಿಸಿದಂತಿದೆ. ಆದರೆ ತುಳುವಿನಲ್ಲಿ ವಾಸ್ತವಿವಾಗಿ ಸಮೃದ್ಧವಾಗಿ ಸಾಹಿತ್ಯ ರಚನೆಯಿದೆ. ಲಿಖಿತ ಸಾಹಿತ್ಯ ಇಲ್ಲದಿರಬಹುದು. ಅಂದಮಾತ್ರಕ್ಕೆ ಬೆಳೆಯುತ್ತಿರುವ ತುಳು ಭಾಷೆಗೆ ಪ್ರತಿರೋಧದ ಸೊಲ್ಲನ್ನು ಎತ್ತುವುದು ನ್ಯಾಯವಲ್ಲ. ಉದಾಹರಣೆಗೆ ಒಂದು ಶತಮಾನದ ಹಿಂದಿನ ಮಲೆಯಾಳಂ ಸಾಹಿತ್ಯದ ಸ್ಥಿತಿ ಹೇಗಿತ್ತು? ಆದರೆ ಇಂದು ಅದರ ಸಾಹಿತ್ಯದ ವೈಭವ ಮುಗಿಲು ಮುಟ್ಟಿದೆ. ಹೀಗಾಗಿ ಇಂದು ಸಮೃದ್ಧ ಸಾಹಿತ್ಯ ಇಲ್ಲ ಎನ್ನುವ ಕಾರಣಕ್ಕಾಗಿ ತುಳು ಭಾಷೆಯನ್ನು ದೂರಬೇಕಿಲ್ಲ.

ತುಳು ಭಾಷೆ ಹಾಗೂ ಸಾಹಿತ್ಯದ ಪುನರುಜ್ಜೀವನಕ್ಕೂ ತುಳು ಪ್ರಾಂತದ  ಬೇಡಿಕೆಗೂ ನೇರವಾದ ಸಂಬಂಧವಿಲ್ಲ. ಆದರೆ ತುಳು ಪ್ರಾಂತ ರಚನೆಯಾಗದೆ ತುಳು ಭಾಷೆ-ಸಾಹಿತ್ಯಗಳ ಪುರೋಭಿವೃದ್ಧಿ ಆಗಲಾರದು. ಆದರೆ ತುಳು ಪ್ರಾಂತ ರಚನೆ ಸುಲಭಸಾಧ್ಯವಾದ ಕೆಲಸವಲ್ಲವೆನ್ನುವುದು ಒಪ್ಪತಕ್ಕ ವಿಚಾರ. ಕೆಲವೊಂದು ಆಡಳಿತ ಸಮಸ್ಯೆಗಳು ಎದುರಾಗಬಹುದು. ಕಾಸರಗೋಡು ತಾಲೂಕಿನ ತೆಂಕಣ ಪ್ರದೇಶದ ಮಲಯಾಳಂ ಪ್ರಭಾವ ಗಾಢವಾಗಿರುವ ಭಾಗವನ್ನು ಕೈಬಿಡಬೇಕಾಗಿ ಬರಬಹುದು. ಆದರೆ ಅಳಿಯ ಸಂತಾನ ಕಟ್ಟನ್ನು ಅನುಸರಿಸುತ್ತಿರುವ ಅವರು ಕನ್ನಡ ರಾಜ್ಯದೊಂದಿಗೆ ಸೇರ ಬಯಸದಿದ್ದಲ್ಲಿ ತಮ್ಮ ಸಾಂಸ್ಕೃತಿಕ ವಿಶಿಷ್ಟತೆಗಳನ್ನು ಉಳಿಸಿಕೊಂಡೇ ತುಳು ಪ್ರಾಂತದಲ್ಲಿ ಉಳಿಯಬಹುದು. ಹೀಗಾದಲ್ಲಿ ಆಡಳಿತಾತ್ಮಕವಾಗಿ ತುಳು ಪ್ರಾಂತ ರಚನೆ ಅಸಾಧ್ಯವಾಗಲಾರದು. ಸುಮಾರು ನಾಲ್ಕು ಲಕ್ಷ ಜನಸಂಖ್ಯೆಯಿರುವ ಬ್ರಿಟೀಷ್ ಬಲೂಚಿಸ್ತಾನ, ಸುಮಾರು ಏಳು ಲಕ್ಷ ಜನಸಂಖ್ಯೆಯಿರುವ ದೇಶೀ ರಾಜ್ಯ ಆಳ್ವಾರ್ (೨೧ರ ಜನಗಣತಿಯಂತೆ) ಸ್ವತಂತ್ರ ಪ್ರಾಂತವಾಗಬಹುದಾದರೆ ೧೦ ಲಕ್ಷ ಜನರ ಬಲವುಳ್ಳ ತುಳುನಾಡ್‌ಪ್ರಾಂತ ಆಗಬಾರದೇಕೆ?

ಆರ್ಥಿಕವಾಗಿ ತನ್ನ ಕಾಲ ಮೇಲೆ ನಿಲ್ಲಬಲ್ಲ ಸಾಮರ್ಥ್ಯ ತುಳುನಾಡ್‌ ಪ್ರಾಂತಕ್ಕಿದೆ. ಸುಮಾರು ಎರಡು ಮಿಲಿಯ ಮಿಗತೆ ಆದಾಯವನ್ನು ಹೊಂದಿರುವ ಈ ದಕ್ಷಿಣ ಕನ್ನಡ ಇಲ್ಲಿನ  ಆರ್ಥಿಕ ಮೂಲಗಳನ್ನು ಚೆನ್ನಾಗಿ ಬಳಸಿಕೊಂಡಲ್ಲಿ ಈ ರಾಜ್ಯ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. ವಿಮೆ ಹಾಗೂ ಬ್ಯಾಂಕಿಂಗ್‌ನಲ್ಲಿ ಇಂದು ಈ ಜಿಲ್ಲೆ ರಾಷ್ಟ್ರಕ್ಕೇ ಮೊದಲ ಸ್ಥಾನದಲ್ಲಿದೆ. ಬ್ರಿಟಿಷ್ ಕರ್ನಾಟಕದ ಜಿಲ್ಲೆಗಳಲ್ಲೆಲ್ಲ ಬಹಳ ಮುಂದುವರಿದ ಜಿಲ್ಲೆ ಇದು. ಮಂಗಳೂರು, ಮುಲ್ಕಿ, ಮಲ್ಪೆ, ಕುಂದಾಪುರ ಮುಂತಾದ ಬಂದರುಗಳ ಮೂಲಕ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಆಮದು-ರಫ್ತು ವ್ಯವಹಾರ ಈಗಾಗಲೇ ನಡೆಯುತ್ತಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಿಂದ ತುಳುನಾಡ್ ಪ್ರಾಂತದ ಉದಯ ಅವ್ಯವಹಾರವಲ್ಲ. ದೇಶದ ಕೆಲವೊಂದು ರಾಜ್ಯಗಳಂತೆ ನಮ್ಮ ತುಳುನಾಡ್‌ಪ್ರಾಂತ ಎಂದಿಗೂ ಕೇಂದ್ರ ಸರಕಾರಕ್ಕೆ ಹೊರೆಯಾಗದು.*

 

* ೧೯೩೦ನೇ ಇಸವಿಯಲ್ಲಿ ಎಸ್.ಯು. ಪಣಿಯಾಡಿಯವರು ಬರೆದ In Defence of a Tulunad province ಎನ್ನುವ ಲೇಖನದ ಸಂಗ್ರಹಾನುವಾದ.